ಸಾಕ್ಷಿ
ಸಾಹಿತ್ಯ ಸಂಸ್ಕೃತಿಗಳ ವಿಚಾರ ವಿಮರ್ಶೆಯ ವೇದಿಕೆ
ಗೋಪಾಲಕೃಷ್ಣ ಅಡಿಗರು ನವ್ಯ ಚಳುವಳಿಗೆ ಹೇಗೋ ಅವರ ‘ಸಾಕ್ಷಿ’ ಸಾಹಿತ್ಯ ಪತ್ರಿಕೆಗಳ ಪಂಕ್ತಿಯಲ್ಲಿ ಹಾಗೆ. ಅಡಿಗರನ್ನು ಬಿಟ್ಟು ಕನ್ನಡದ ನವ್ಯ ಕಾವ್ಯದ ಚರ್ಚೆ ಸಾಧ್ಯವಿಲ್ಲ. ಹಾಗೆಯೇ ಸಾಕ್ಷಿಯನ್ನು ಬಿಟ್ಟೂ ನವ್ಯ ಕಾವ್ಯದ ಚರ್ಚೆ ಸಾಧ್ಯವಿಲ್ಲ. ಯಾಕೆಂದರೆ ನವ್ಯ ಕಾವ್ಯದ ಹೊಸ ಹೊಸ ಸೃಷ್ಟಿಗಳಿಗೆ ವೇದಿಕೆಯಾದದ್ದು ‘ಸಾಕ್ಷಿ.’ ನವ್ಯ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ವಿವಾದಗಳಿಗೆ ಅಭಿವ್ಯಕ್ತಿಯ ಮಾಧ್ಯಮವೂ ‘ಸಾಕ್ಷಿ’ಯಾಗಿತ್ತು. ಹಾಗೆಯೇ ಅಡಿಗರು ತಮ್ಮ ವಿಚಾರ ಪೂರಿತ ಸಂಪಾದಕೀಯಗಳ ಮೂಲಕ ಕನ್ನಡ ನವ್ಯ ಕಾವ್ಯಕ್ಕೊಂದು ಸ್ಪಷ್ಟತೆ ಹಾಗೂ ಹಿರಿಮೆ ತಂದುಕೊಟ್ಟಿದ್ದು ಸಾಕ್ಷಿಯ ಮೂಲಕ. ನವ್ಯ ಕಾವ್ಯ ಬೆಳದಂತೆ ಸಾಕ್ಷಿಯೂ ಬೆಳೆಯಿತು. ಎಪ್ಪತ್ತರ ದಶಕದ ಕೊನೆಯಲ್ಲಿ ಕ್ರಮೇಣ ಜನರಲ್ಲಿ ನವ್ಯ ಸಾಹಿತ್ಯದ ಮೇಲಿನ ಆಸಕ್ತಿ, ಕಳಕಳಿ, ಒಲವು ಕಡಿಮೆಯಾದಂತೆಲ್ಲ ಚಳುವಳಿಯ ಮುಖವಾಣಿಯಾದ ಸಾಕ್ಷಿಯೂ ಕೂಡಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಸಾಕ್ಷಿ ಆರಂಭವಾದುದು ೧೯೬೨ರಲ್ಲಿ ತ್ರೈಮಾಸಿಕವಾಗಿ, ಗೋಪಾಲಕೃಷ್ಣ ಅಡಿಗರು ಅದರ ಸಂಪಾದಕರು. ಹೆಗ್ಗೋಡಿನ ‘ಅಕ್ಷರ ಪ್ರಕಾಶನ ಸಾಗರ’ ಸಾಕ್ಷಿಯ ಪ್ರಕಾಶಕರು. ಸಾಕ್ಷಿಯ ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಗೋಪಾಲಕೃಷ್ಣ ಅಡಿಗರು ಹೀಗೆ ನುಡಿದಿದ್ದಾರೆ. ‘. . . ಕೃತಿನಿಷ್ಠ ವಿಮರ್ಶೆಗೂ ವಸ್ತುನಿಷ್ಠ ವಿಚಾರಕ್ಕೂ ಒಂದು ವೇದಿಕೆಯಾಗುವ ಹಾಗೆ ‘ಸಾಕ್ಷಿ’ ಎಂಬ ಪತ್ರಿಕೆಯೊಂದನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮಲ್ಲಿ ಅನೇಕರನ್ನು ಹಲವಾರು ವರ್ಷಗಳಿಂದ ಕಾಡುತ್ತ ಬಂದಿದೆ. ಈ ಕೆಲಸಕ್ಕೆ ಮುಖ್ಯವಾದ ಆತಂಕಗಳು ಎರಡು. ಪತ್ರಿಕೆಯನ್ನು ಹೊರಡಿಸಿ ನಡೆಸಿಕೊಂಡು ಬರಲು ತಕ್ಕ ಅರ್ಥಾನುಕೂಲದ ಮತ್ತು ಜನಪ್ರಿಯವಾಗಲಾರದ ಈ ಸಾಹಸದಿಂದ ಬರುವ ಅರ್ಥನಷ್ಟವನ್ನು ಭರಿಸುವ ಶಕ್ತಿಯ ಅಭಾವ, ಅದಕ್ಕಿಂತ ಹೆಚ್ಚಾಗಿ ಚೆನ್ನಾಗಿ ಯೋಚಿಸಿ ಹೊಣೆಗಾರಿಕೆಯೊಡನೆ ತಕ್ಕಕಾಲಕ್ಕೆ ಉತ್ತಮ ಲೇಖನಗಳನ್ನು ಬರೆದುಕೊಡಬಲ್ಲ ಲೇಖಕರ ಸಹಕಾರದ ಅಗತ್ಯ . . . ಇದು ಯಾವುದೇ ಒಂದು ವ್ಯಕ್ತಿಯ, ಗುಂಪಿನ ಅಥವಾ ಪಂಥದ ಮುಖವಾಣಿಯಾಗಲು ಬಯಸುವುದಿಲ್ಲ. ಎಲ್ಲ ಬಗೆಯ ವಿಚಾರಗಳಿಗೂ ಸಿದ್ಧಾಂತಗಳ ಮಂಡನೆಗೂ ಇಲ್ಲಿ ಯಾವಾಗಲೂ ಅವಕಾಶ ಉಂಟು.’ ಸಾಕ್ಷಿ ಕನ್ನಡದಲ್ಲಿ ನವ್ಯ ಸಾಹಿತ್ಯಕ್ಕೆ ನೀರೆರೆದು ಪೋಷಿಸಿತಾದರೂ ಸಾಹಿತಿಗಳ ಗುಂಪುಗಾರಿಕೆಯಲ್ಲಿ ಬಸವಳಿಯಿತು. ನವ್ಯರಲ್ಲಿ ಹೊಸ ಹೊಸ ಪತ್ರಿಭೆಗಳನ್ನು ಪರಿಚಯಿಸಿತಾದರೂ ಜನಸಾಮಾನ್ಯ ಕನ್ನಡಿಗರ ಮಧ್ಯೆ ತನ್ನ ಪರಿಚಯವನ್ನು ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಯಿತು. ಪತ್ರಿಕೆಯನ್ನು ಆರಂಭಿಸುವಾಗ ಅಡಿಗರಿಗಿದ್ದ ಆತಂಕಗಳು ನಿಜವಾಗಿ ಪತ್ರಿಕೆಯ ಆರ್ಥಿಕ ನಷ್ಟ ಹಾಗೂ ಸಮರ್ಥ ಲೇಖನಗಳ ಕೊರತೆ ಹೊರಲಾರದ ಹೊರೆಯೆನಿಸಿದವು. ನವೋದಯ ಸಾಹಿತ್ಯದ ಜನಪ್ರಿಯತೆಯಿಂದಾಗಿ ಪತ್ರಿಕೆಗೆ ಕೆಲವಾದರೂ ಚಂದಾದಾರರ ಬಲವಿತ್ತು. ಮೊದಲಿಂದಲೂ ನವ್ಯಕಾವ್ಯ ಜನರಿಂದ ದೂರವೇ ಉಳಿದಿದ್ದರಿಂದ ಕೊಂಡು ಓದುವ ಚಂದಾದಾರರ ಬೆಂಬಲ ಸಾಕ್ಷಿಗೆ ಇರಲಿಲ್ಲ. ಅದನ್ನೇ ಸಾಕ್ಷಿಯ ೩೬ನೇ ಸಂಚಿಕೆಯಲ್ಲಿ ಸಂಪಾದಕ ಅಡಿಗರು ಎತ್ತಿ ಹೇಳುತ್ತಾರೆ. ‘ಕೂತು ಕಷ್ಟಪಟ್ಟು ಬರೆಯುವವರ, ಲೇಖನವನ್ನೇ ವೃತ್ತಿಮಾಡಿಕೊಳ್ಳಲು ಸಾಧ್ಯವಾಗದಿರುವ ಧೀಮಂತರ ಸಂಖ್ಯೆ ಕಡಿಮೆಯಾಗುವುದರಿಂದ ನಮ್ಮ ಉದ್ದೇಶಕ್ಕೆ ತಕ್ಕಂತೆ ಸಂಚಿಕೆಯನ್ನು ತರಲಾಗಿಲ್ಲ. . . ಸಂಭಾವನೆಯನ್ನು ಕೊಡುವುದು ಸಾಧ್ಯವಿಲ್ಲವಾಗಿ ಬಂದ ಲೇಖನಗಳನ್ನೇ ಪ್ರಕಟಿಸದೇ ಬೇರೆ ದಾರಿಯಿಲ್ಲ. ಕಥೆ, ಕವನ ಬಿಟ್ಟರೆ ಬೇರೆ ಪ್ರಕಾರದ ಬರಹಗಳೂ ಕಡಿಮೆಯೇ . . . ಸಂಚಿಕೆಯನ್ನು ನಿಲ್ಲಿಸದೇ ಬೇರೆ ದಾರಿಯಿಲ್ಲ’. ತ್ರೈಮಾಸಿಕಪತ್ರಿಕೆಯಾಗಿ ಆರಂಭಗೊಂಡ ‘ಸಾಕ್ಷಿ’ ಸ್ವಲ್ಪ ಕಾಲದ ನಂತರ ಅನಿಯತಕಾಲಿಕವಾಯಿತು. ೩೬ ಸಂಚಿಕೆಗಳ ನಂತರ ನಿಂತೇ ಹೋಯಿತು. ಹಲವು ವರ್ಷಗಳ ನಂತರ ನಿಂತೇ ಹೋಯಿತು. ಹಲವು ವರ್ಷಗಳ ನಂತರ ಸಾಗರದಿಂದ ಮತ್ತೆ ಮರುಹುಟ್ಟು ಪಡೆದು ಒಂದು ಸಂಚಿಕೆ ಮಾತ್ರ ಹೊರಬಂತು. ಅಡಿಗರ ಸ್ನೇಹಿತರಾಗಿದ್ದ ಅರೇಕಲ್ಲು ಪ್ರಭಾಕರ್ ತಮ್ಮ ಸಾಗರ ಮುದ್ರಣದಲ್ಲಿ ಸಾಕ್ಷಿಯನ್ನು ಮುದ್ರಿಸಿದರು. ಆದರೆ ಸಾಕ್ಷಿ ಮುಂದುವರೆಯಲಿಲ್ಲ. ಕನ್ನಡ ಸಾಹಿತ್ಯ ಪತ್ರಿಕೆಗಳ ಸೋಲುಗೆಲವಿಗೆ ಸಾಕ್ಷಿಯಾಗಿ ‘ಸಾಕ್ಷ’ ಇತಿಹಾಸ ಸೇರಿತು. ಸಾಕ್ಷಿಯ ಸಾಧನೆಗಳಿಗೆ ಗೋಪಾಲಕೃಷ್ಣ ಅಡಿಗರಷ್ಟೇ ಹೆಗ್ಗೋಡಿನ ಕೆ. ವಿ. ಸುಬ್ಬಣ್ಣ ಅವರೂ ಹೆಗಲುಕೊಟ್ಟವರು. ಅಡಿಗರು ಸಂಪಾದಕರಾದರೆ ಸುಬ್ಬಣ್ಣ ಅವರೂ ಹೆಗಲುಕೊಟ್ಟವರು. ಅಡಿಗರು ಸಂಪಾದಕರಾದರೆ ಸುಬ್ಬಣ್ಣ ಸಂಚಾಲಕರು. ಈ ಬಗ್ಗೆ ಸಾಕ್ಷಿ ೧೩ರಲ್ಲಿ ಸಂಪಾದಕನ ಮಾತು ಗಮನಾರ್ಹವಾದುದು. ‘ಆರ್ಥಿಕವಾಗಿ ಸಾಕ್ಷಿ ಹೆಚ್ಚು ಕಡಿಮೆ ತನ್ನ ಕಾಲ ಮೇಲೆ ತಾನು ನಿಲ್ಲಲು ಸಮರ್ಥವಾಗಿರುವುದು ಒಂದು ಬಗೆಯ ಸಿದ್ದಿಯೇ ಸರಿ. ಆಸ್ಥಾನಬಲವಿಲ್ಲದೆ. ಭಿನ್ನಮತ ಪತ್ರಿಪಾದಕವಾದೊಂದು ನಿಯತಕಾಲಿಕೆ ಬದುದಕುವುದು ಸಾಧ್ಯವಿದೆ ಎಂಬ ಅನುಭವ ತುಂಬ ಭರವೆಸೆ ಹುಟ್ಟಿಸುಂಥದು. ಈ ಸ್ಥಿತಿಯ ಸಾಧನೆಗೆ ಸಂಪಾದಕರ ಪರಿಶ್ರಮ ಕಾರಣವಲ್ಲ. ತುಂಬ ಚಿಕ್ಕವರಂತೆ ಕಾಣುವ ಒಬ್ಬ ದೊಡ್ಡ ಮನುಷ್ಯರ ಸಂಚಾಲಕ ಶಕ್ತಿಯೇ ಕಾರಣ ಎಂಬುದಾಗಿ ಹೇಳಲೇಬೇಕು. ಸಂಪಾದಕನ ಆಲಸ್ಯ, ವಿಳಂಬ ಎಲ್ಲವನ್ನೂ ಮೀರಿ ನಿಂತು ಕರ್ತವ್ಯನಿಷ್ಠವಾಗಿ ಕೆಲಸವನ್ನು ನೆರವೇರಿಸಬಲ್ಲ ಶಕ್ತಿ ಇದು ನಿಸ್ಪೃಹವಾಗಿ, ನಿರಹಂಕಾರಿಯಾಗಿ.’ ಮನ್ವಂತರ ಈ ಪತ್ರಿಕೆಯು ಕನ್ನಡ ‘ಸಾಹಿತ್ಯ ವಾರ್ಷಿಕ’ವೆಂದು ಕರೆದುಕೊಂಡದ್ದು ವಿಶೇಷ. ಧಾರವಾಡದ ಗೆಳೆಯರ ಗುಂಪಿನ ಕೊಡುಗೆ ಇದು. ಬೇಂದ್ರೆಯವರ ಹಿರಿತನದಲ್ಲಿ ಧಾರವಾಡದಲ್ಲಿ ಗೆಳೆಯರ ಗುಂಪೊಂದು ಸೃಷ್ಟಿಯಾಗಿ ಮನೋಹರ ಗ್ರಂಥಮಾಲೆಯ ಅಟ್ಟದ ಮೇಲೆ ನಿರಂತರ ಸಾಹಿತ್ಯಿಕ ಚಿಂತನ - ಚರ್ಚೆಗಳನ್ನು ನಡೆಸುತ್ತಾ ಕನ್ನಡದಲ್ಲಿ ನವೋದಯ ಸಾಹಿತ್ಯಕ್ಕೆ ನೀರೆರೆದುದು ಈಗ ಇತಿಹಾಸ. ಇದೇ ‘ಮನೋಹರ ಗ್ರಂಥಮಾಲೆ’ಯ ಸೋದರ ಪ್ರಕಾಶನವಾಗಿ ‘ಮನ್ವಂತರ’ ವಾರ್ಷಿಕ ‘ಪುಸ್ತಕ ಪತ್ರಿಕೆ’ ೧೯೬೨ರಿಂದ ಆರಂಭಗೊಂಡಿತು. ಮನ್ವಂತರದ ಮೊದಲ ಸಂಪಾದಕೀಯದಲ್ಲಿ ಸಂಪಾದಕರು ಹೀಗೆ ನುಡಿಯುತ್ತಾರೆ : "ಇಲ್ಲಿಯವರೆಗೆ ಕೇವಲ ಲಿಖಿತ ಸಾಹಿತ್ಯವನ್ನಷ್ಟೇ ಪ್ರಕಟಿಸುತ್ತಾ ಬಂದ ಮನೋಹರ ಗ್ರಂಥಮಾಲೆ ಜೊತೆಯಾಗಿ ವಿಮರ್ಶೆಯನ್ನು ಕೊಡಬೇಕೆಂದು ಮಾಡಿದ ಯೋಜನೆ ‘ಮನ್ವಂತರ’ದ ಹುಟ್ಟಿಗೆ ಕಾರಣವಾಗಿದೆ. ಕನ್ನಡದಲ್ಲಿ ಸಾಕಷ್ಟು ವಿಮರ್ಶೆ ಬಂದಿದೆ. ಆದರೆ ಸಾಹಿತ್ಯ ವಿಮರ್ಶೆಯ ಗೊತ್ತು-ಗುರಿಗಳು, ಮಿತಿ-ವ್ಯಾಪ್ತಿಗಳು ಇನ್ನೂ ನಿರ್ಣಾಯಕವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿಮರ್ಶೆಯ ಸಬಲವಾದ ಮಾಧ್ಯಮವಾಗಬಲ್ಲ ಭಾಷೆ ಮೊದಲು ರೂಪುಗೊಳ್ಳಬೇಕಾಗಿದೆ. ನಮ್ಮ ಎಷ್ಟೋ ವಿಮೆರ್ಶಯೇ ತತ್ವಾರಗಳು ಇನ್ನೂ ಅಮೂರ್ತತೆಯ ಗರ್ಭದಲ್ಲಿ ಹುದುಗಿಕೊಂಡಿವೆ. ಈ ಕೆಲಸಗಳು ಮನ್ವಂತರದ ಕಣ್ಣಮುಂದಿವೆ. ಹತ್ತು ವರ್ಷ - ವರ್ಷಕ್ಕೊಂದು ವಿಮರ್ಶಾ ಪುಸ್ತಕವಾಗಿ ಮನ್ವಂತರ ಪ್ರಕಟಗೊಂಡಿತು. ಅದಕ್ಕೆ ನಿಯತಕಾಲಿಕತೆ ಇತ್ತು. ಒಂದು ಸಂಚಿಕೆಯಿಂದ ಇನ್ನೊಂದಕ್ಕೆ ಮುಂದುವರಿಯುವಿಕೆ ಇತ್ತು. ಮನೋಹರ ಗ್ರಂಥಮಾಲೆಯ ಖಾಯಂ ಚಂದಾದಾರರಿಗೆ ಕಡಿಮೆ ಬೆಲೆಗೆ ‘ಮನ್ವಂತರ’ವನ್ನು ನೀಡಲಾಗುತ್ತಿತ್ತು. ‘ಮನ್ವಂತರ’ದ ಪ್ರತೀ ಸಂಚಿಕೆಯಲ್ಲೂ ಹಿಂದಿನ ವರ್ಷ ಪ್ರಕಟವಾದ ಕನ್ನಡ ಪುಸ್ತಕಗಳ ವಿಮರ್ಶೆ-ಸಮೀಕ್ಷೆ ಇರುತ್ತಿತ್ತು. ಹೀಗಾಗಿ ಆ ಹತ್ತು ವರ್ಷದ ಕಾಲ ಘಟ್ಟದ (೧೯೬೨ರಿಂದ ೧೯೭೨) ಸಾಹಿತ್ಯ ಬೆಲವಣಿಗೆಗೆ ‘ಮನ್ವಂತರ’ ಒಂದು ದಾಖಲೆಯಾಗಿ ನಿಲ್ಲುತ್ತದೆ. ಮುಖ್ಯವಾಗಿ ವಿಮರ್ಶೆಗೇ ಒತ್ತುಕೊಡುವ ಸಂಪ್ರದಾಯದ ‘ಮನ್ವಂತರ’ನವ್ಯ ಸಾಹಿತ್ಯದ ಸಾಧನೆ ಸಿದ್ಧಿಗಳನ್ನು ವಿಮರ್ಶಿಸಿದ್ದು ಹಾಗೂ ರೂಪುರೇಶಗಳನ್ನು ನಿರ್ಧರಿಸಿದ್ದು ದೊಡ್ಡಸಾಧನೆ. ಆದರೂ ಅಧ್ಯಯನಶೀಲ ಬರಹಗಾರರ ಕೊರತೆಯಿಂದಾಗಿ ‘ಮನ್ವಂತರ’ ನಿಲ್ಲಬೇಕಾಗಿ ಬಂತು.