ಕಂದ

ಮಕ್ಕಳಿಗೆ ಮಹತ್ವವನ್ನು ಕಲ್ಪಿಸಿರುವ ನಮ್ಮ ಭಾರತದಲ್ಲಿ ಅವರ ಬಾಳನ್ನು ಸರಿಯಾಗಿ ರೂಪಿಸುವ ಕಾರ್ಯ ಸ್ವಲ್ಪವೂ ಸಮರ್ಪಕವಾಗಿಲ್ಲ. ಅವರ ಸರ್ವತೋಮುಖವಾದ ಬೆಳವಣಿಗೆಗೆ ಸಾಧಕವಾಗುವ ಸಾಹಿತ್ಯ ಸಾಮಾಗ್ರಿ ಹೆಚ್ಚುಹೆಚ್ಚಾಗಿ ನಮ್ಮ ದೇಶದಲ್ಲಿ ಬೆಳೆದು ಬರಬೇಕು. ಪರದೇಶಗಳಲ್ಲಿ, ಅದರಲ್ಲಿಯೂ ಅಮೇರಿಕ, ರಷ್ಯಾ ದೇಶಗಳಲ್ಲಿ, ಮಕ್ಕಳ ಪುಸ್ತಕಗಳನ್ನು ಒದಗಿಸುವುದರಲ್ಲಿ ಅಲ್ಲಿನ ಹಿರಿಯರು ಎಷ್ಟೋ ಶ್ರದ್ಧೆ, ಆಸಕ್ತಿಗಳನ್ನು ತೋರಿಸುತ್ತಾರೆ!

ಒಳ್ಳೆಯ ಪುಸ್ತಕಗಳು ಪ್ರಕಟವಾಗದ ಹೊರತು ಕೊಳ್ಳುವವರ ಸಂಖ್ಯೆ ಬೆಳೆಯುವುದಿಲ್ಲ, ಕೊಳ್ಳುವವರು ಹೆಚ್ಚದ ಹೊರತು ಒಳ್ಳೆಯ ಪುಸ್ತಕಗಳು ಪ್ರಕಟವಾಗುವುದಿಲ್ಲ! ಈ ಜಟಿಲ ಸಮಸ್ಯೆಯನ್ನು ಬಿಡಿಸುವ ಧೈರ್ಯದಿಂದ ಮುನ್ನುಗ್ಗುತ್ತಿರುವ ಈ `` ಕಂದನ ಕಾವ್ಯಮಾಲೆ'' ಅಭಿನಂದನಾರ್ಹವಾದುದು. ಶಿಶು ಸಾಹಿತ್ಯ ಸಂಘದ ಬುದ್ಧಿಶಕ್ತಿಯಾಗಿ, ಹೃದಯದ ಮಿಡಿತವಾಗಿ, ಆತ್ಮವಾಗಿ, ದುಡಿಯುತ್ತಿರುವ ಶ್ರೀಮಾನ್ ಎಸ್. ನಾಗೇಶರಾಯರ ಈ ಉದ್ಯಮಕ್ಕಾಗಿ ನಾನು ಅವರನ್ನು ನಾಡಿನ ಕಂದರ ಪರವಾಗಿ ವಂದಿಸುತ್ತೇನೆ. ಕನ್ನಡಿಗರ ಉದಾರಾಶ್ರಯ ದೊರೆತು, ಅವರ ಈ ಸ್ತುತ್ಯಕಾರ್ಯ ಯಶಸ್ವಿಯಾಗಲೆಂದು ಹಾರೈಸುತ್ತೇನೆ.