ಕರ್ನಾಟಕ ಗತವೈಭವ

೧ನೆಯ ಪ್ರಕರಣ
–ಈ ಮೃತವಾದ ಕರ್ನಾಟಕದಿಂದೇನು ?

ಕಾರ್ಪಣ್ಯದೋಷೋಪಹತಃ ಸ್ವಭಾವಃ |
ಪೃಚ್ಛಾಮಿ ತ್ವಾಂ ಧರ್ಮಸಮ್ಮೂಢಚೇತಾಃ ||
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ |
ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ -ಗೀತೆ ೨-೩

ಕಕ್ಕುಲತೆಯಿಂ ಕೆಟ್ಟ ಚಿತ್ತದಿ | ಸೊಕ್ಕಿ ಧರ್ಮದ ನೆಲೆಯ ಕಾಣದ |
ಚಿಕ್ಕವನು ನಾ ನಿಮ್ಮ ಕೇಳುವೆ ಲೇಸದಾವುದನು ||

ಸಿಕ್ಕರಿಯೆ ಪೇಳೆನಗೆ ನೀ ಹಿಂ | ದಿಕ್ಕಿಕೋ ಮರೆವೊಕ್ಕನೆನ್ನನು |
ಮಕ್ಕಳೋಪಾದಿಯಲ್ಲಿ ರಕ್ಷಿಸಿ ಕಾಯಬೇಕೆಂದ ||
-ನಾಗರಸ


ನಮ್ಮ ಭಾರತ ಭೂಮಿಯ ಈಗಿನ ಸ್ಥಿತಿಯನ್ನು ಕಂಡು, ತಳಮಳಗೊಂಡು, ಅದರ ಉದ್ಧಾರಾರ್ಥವಾಗಿ ಹಲವು ಪುಣ್ಯಾತ್ಮರು ಹಲವು ಬಗೆಗಳಿಂದ ಪ್ರಯತ್ನ ಪಡುತ್ತಿರುವರಷ್ಟೇ! ಈ ಬಗೆಯ ಪ್ರಯತ್ನಗಳಲ್ಲಿ, ನಮ್ಮ ದೇಶದ ಬುದ್ಧಿ ಸಾಮರ್ಥ್ಯವನ್ನೂ, ವೈಭವವನ್ನೂ, ಜನರ ನೆನಪಿಗೆ ತಂದುಕೊಟ್ಟು ಅವರಲ್ಲಿ ತಮ್ಮ ಪೂರ್ವಜರ ವಿಷಯವಾಗಿಯೂ, ಪೂರ್ವಸಂಸ್ಕೃತಿಯ ವಿಷಯವಾಗಿಯೂ, ಪೂರ್ವದ ಘನತೆಯ ವಿಷಯವಾಗಿಯೂ ಸಾನಂದಶ್ಚರ್ಯವಾದ ಅಭಿಮಾನವನ್ನು ಹುಟ್ಟಿಸುವುದೂ ಒಂದು ಮುಖ್ಯವಾದ ಉಪಾಯವಾಗಿದೆ. ಚಂದ್ರಗುಪ್ತ, ಅಶೋಕ, ಶಿವಾಜಿ ಮುಂತಾದ ಅರಸರ ಮಹಾಕಾರ್ಯಗಳನ್ನೂ ರಾಜನೀತಿಯ ಚಾತುರ್ಯವನ್ನೂ ಕೇಳಿ ಯಾವ ಭಾರತೀಯನು ಪುಲಕಿತನಾಗಲಿಕ್ಕಿಲ್ಲ! ಬುದ್ಧ, ಶಂಕರ, ರಾಮಾನುಜ ಮುಂತಾದ ಮಹಾತ್ಮರ ಪುಣ್ಯ ಚರಿತೆಗಳು ಯಾವ ಪಾಮರನ ಹೃದಯವನ್ನು ಪವಿತ್ರ ಮಾಡಲಿಕ್ಕಿಲ್ಲ! ಸಾರಾಂಶ : ಭಾರತೀಯರಲ್ಲಿ ತಮ್ಮ ಪೂರ್ವಜರ ವಿಷಯವಾಗಿ ಅಭಿಮಾನವನ್ನು ಹುಟ್ಟಿಸಿ ಮುಂದೆ ವೈಭವವನ್ನು ಪಡೆಯಲು ಉತ್ತೇಜಕವಾಗುವದಕ್ಕೆ ಇತಿಹಾಸಕ್ಕಿಂತ ಬೇರೆ ಸುಲಭ ಸಾಧನವಿಲ್ಲ, ಅಷ್ಟೇ ಅಲ್ಲ, ನಮ್ಮಲ್ಲಿಯ ಆತ್ಮವಿಶ್ವಾಸವೆಲ್ಲವೂ ಅಳಿದುಹೋಗಿ, ನಾವು ಹೀಗೆ ನೈರಾಶ್ಯವಾದಿಗಳಾಗುವದಕ್ಕೂ, ದುರ್ಬಲರಂತೆ ಪ್ರತಿಯೊಂದರಲ್ಲಿ ಪರರ ಮೋರೆಯ ಕಡೆಗೆ ನೋಡುವದಕ್ಕೂ, ನಮ್ಮಲ್ಲಿಯ ಚೈತನ್ಯಜ್ಯೋತಿಯು ನಂದಿಹೋಗುವದಕ್ಕೂ ನಮ್ಮ ಇತಿಹಾಸಜ್ಞಾನದ ಅಭಾವವೇ-ಅಲ್ಲ-ವಿಪರ್ಯಾಸವೇ ಮೂಲಕಾರಣ. ಸಿರಾಜಉದ್ದೌಲನ ಕತ್ತಲೆ ಕೋಣೆಯ ಕಥೆಯು ನಮ್ಮ ಜನರ ವಿಷಯವಾಗಿ ನಮ್ಮವರಲ್ಲಿಯೂ ಪರಕೀಯರಲ್ಲಿಯೂ ಎಂತಹ ತಿರಸ್ಕಾರ ಬುದ್ಧಿಯನ್ನು ಹುಟ್ಟಿಸಿತ್ತು! ಆದರೆ ಅದೆಲ್ಲವೂ ಕೇವಲ ಕಟ್ಟುಕಥೆಯೆಂದು ತಿಳಿದು ಬಂದಿರುವದರಿಂದ, ಈಗ ನಮಗೆಷ್ಟು ಸಮಾಧಾನವಾಗಿದೆ! ೧೮೫೭ನೆಯ ಇಸ್ವಿಯ ದಂಗೆಯಲ್ಲಿ ಪ್ರಸಿದ್ಧಿಗೆ ಬಂದ ನಾನಾಸಾಹೇಬನು ಒಬ್ಬ ದೊಡ್ಡ ರಾಕ್ಷಸನೆಂದು ನಮ್ಮ ಕಲ್ಪನೆಯಾಗಿತ್ತಲ್ಲವೆ? ಆದರ ಇತ್ತೀಚೆಗೆ ಗೊತ್ತಾಗಿರುವ ಸಂಗತಿಗಳಿಂದ ಆ ನಮ್ಮ ಪೂರ್ವದ ಕಲ್ಪನೆಯಲ್ಲಿ ಬಲುಮಟ್ಟಿಗೆ ಬದಲು ಮಾಡಬೇಕಾಗಿರುವುದಲ್ಲವೆ? ಆದುದರಿಂದ ಕಾಲನ ದವಡೆಯಲ್ಲಿ ಸಿಕ್ಕು ಒದ್ದಾಡುತ್ತಿರುವ ನಮ್ಮೀ ಜನ್ಮಭೂಮಿಯನ್ನು ಉದ್ಧರಿಸಲಿಕ್ಕೆ ಹೆಣಗುತ್ತಿರುವ ಪುಣ್ಯಾತ್ಮರಿಗೆ ಅವರ ಗತವೈಭವವೇ ಗತಿಯು. ನಮ್ಮೀ ದುರವಸ್ಥೆಯಲ್ಲಿ ಅದೊಂದೇ ನಮಗೆ ಸಂತಸದ ವಿಷಯವು. ಈ ಗತವೈಭವದ ಸ್ಮರಣೆಯು ನಮ್ಮನ್ನು ಈಗಿನ ನಿರಾಶಾಯುಕ್ತವಾದ ಸ್ಥಿತಿಯಿಂದ ಒಮ್ಮೆಯೇ ಎತ್ತಿಕೊಂಡು, ಕೆಲಹೊತ್ತಿನವರೆಗಾದರೂ ಉತ್ಸಾಹಯುಕ್ತ ವಾತಾವರಣದೊಳಗೆ ತೂಗಾಡಿಸುತ್ತಿರುವದೆಂಬುದಕ್ಕೆ ಏನೂ ಸಂದೇಹವಿಲ್ಲ! ನಮ್ಮ ಪೂರ್ವಜರ ಬಗ್ಗೆ ನಮ್ಮಲ್ಲಿ ಯೋಗ್ಯವಾದ ಅಭಿಮಾನವನ್ನು ಹುಟ್ಟಿಸುವದಕ್ಕೂ, ಅವರ ವಿಷಯವಾಗಿ ನಮ್ಮಲ್ಲಿ ನಿಷ್ಕಾರಣವಾಗಿ ನೆಲೆಗೊಂಡಿರುವ ತಪ್ಪು ತಿಳಿವಳಿಕೆಗಳನ್ನು ಅಡಗಿಸಲಿಕ್ಕೂ, ನಮ್ಮ ದೇಶದ ನಿಜವಾದ ಇತಿಹಾಸವನ್ನು ನಮ್ಮ ಜನರೇ ಅಭಿಮಾನಪೂರ್ವಕವಾಗಿ ಬರೆಯುವುದು, ರಾಷ್ಟ್ರದ ಪ್ರಗತಿಗೆ ಅತ್ಯಂತ ಅವಶ್ಯವಾದ ಸಂಗತಿಯಾಗಿದೆ.

ಆದರೆ ಈ ಕಾರ್ಯವು ಕೈಗೂಡುವುದೆಂತು! ಹಿಂದುಸ್ಥಾನವು ವಿಶಾಲವಾದ ದೇಶವಾಗಿದ್ದು ಇದರಲ್ಲಿ ನಾನಾ ಜನಾಂಗಗಳು, ನಾನಾ ಧರ್ಮಗಳು ನಾನಾ ಜಾತಿಗಳು ಸೇರಿರುತ್ತವೆ. ಹಿಂದುಸ್ಥಾನದ ಇತಿಹಾಸವೆಂದರೆ ಇವೆಲ್ಲವುಗಳ ಒಟ್ಟುಗೂಡಿದ ಇತಿಹಾಸವೂ, ಆದುದರಿಂದ ಈ ದೇಶದ ಇತಿಹಾಸವನ್ನು ಬರೆವ ಕೆಲಸವು ಅತ್ಯಂತ ಕಠಿಣವಾಗಿದೆ. ಆದರೆ ಅವಶ್ಯವಿದ್ದಲ್ಲಿ ರಾಷ್ಟ್ರವನ್ನು ಭಾಷಾತತ್ವದ ಮೇಲೆ ವಿಭಾಗಿಸಿ, ಆಯಾ ಭಾಷಾಪ್ರಾಂತದ ಜನರು ಗುಂಪಾಗಿ ಸೇರಿ, ತಮ್ಮ ತಮ್ಮ ಉನ್ನತಿಯನ್ನು ಮಾಡಿಕೊಳ್ಳುವುದು ರಾಷ್ಟ್ರೀಯತ್ವಕ್ಕೆ ಪೋಷಕವಾದ ಉಪಾಯವೆಂದೂ, ರಾಷ್ಟ್ರೋದ್ಧಾರಕ್ಕೆ ಅನುಕೂಲವಾದ ಸಂಗತಿಯೆಂದೂ, ಬೇರೆ ವಿಧವಾಗಿ ಭೇದಗಳನ್ನು ಕಲ್ಪಿಸುವುದಾಗಲಿ, ಇದಕ್ಕಿಂತ ಚಿಕ್ಕ ಚಿಕ್ಕ ವಿಭಾಗಗಳನ್ನು ಮಾಡುವುದಾಗಲಿ, ಅನಾವಶ್ಯಕವೂ, ರಾಷ್ಟ್ರೀಯತ್ವಕ್ಕೆ ವಿಘಾತಕವೂ ಆಗಿರುವದೆಂದು, ಇತ್ತಿತ್ತ ವಿಚಕ್ಷಣರಾದ ವಿದ್ವಾಂಸರು ಸಿದ್ಧಾಂತಪಡಿಸಿದ್ದಾರೆ. ಹಿಂದಕ್ಕೆ ಬಂಗಾಲವನ್ನು ಇಬ್ಭಾಗ ಮಾಡಿದಾಗ ನಮ್ಮ ವಂಗಬಂಧುಗಳು ಹುಯಿಲ(ಗದ್ದಲ)ನ್ನೆಬ್ಬಿಸಿದುದಕ್ಕೂ ಇದೇ ಕಾರಣ. ಆಂಧ್ರರು(ತೆಲುಗರು) ತಮಗೆ ಬೇರೊಂದು ಇಲಾಖೆಯೂ, ವಿಶ್ವವಿದ್ಯಾಲಯವೂ ಬೇಕೆಂದು ಅನೇಕ ವರ್ಷಗಳಿಂದ ಕೂಗಿಕೊಳ್ಳುತ್ತಿರುವುದರ ಗುಟ್ಟಾದರೂ ಇದೇ ಅಲ್ಲವೇ? ಮಹಾರಾಷ್ಟ್ರದ ಬಂಧುಗಳು ವಾಙ್ಮಯದ ಅಭಿವೃದ್ಧಿಗಾಗಿಯೂ, ತಮ್ಮ ರಾಜಕೀಯ ಉನ್ನತಿಗಾಗಿಯೂ ಬೇರೆ ಪ್ರಾಂತಕ್ಕೆ ಸಂಬಂಧಪಟ್ಟವರಾಗಿದ್ದ ತಮ್ಮ ಭಾಷಾ ಬಂಧುಗಳನ್ನೊಡಗೂಡಿಯೇ ಕೆಲಸ ಮಾಡಲಿಕ್ಕೆ ಮುಂದುವರಿಯುವದರ ಇಂಗಿತವೂ ಇದೇ. ಆದುದರಿಂದ ಇದೇ ತತ್ವವನ್ನನುಸರಿಸಿ, ಬೇರೆ ಬೇರೆ ಭಾಷಾಪ್ರಾಂತಗಳ ಇತಿಹಾಸವು ಮೊದಲು ಬೇರೆ ಬೇರೆಯಾಗಿ ಬರೆಯಲ್ಪಡಬೇಕು. ಹೀಗೆ ಮಾಡಿದರೆ ಮಾತ್ರ ಬೇರೆ ಬೇರೆ ಪ್ರಾಂತಗಳೊಳಗಿನ ಜೀವಾಳದ ಎಳೆಯು ಒಂದೇ ಆಗಿರುವದರಿಂದ, ಆ ಎಳೆಯಲ್ಲಿ ಆಯಾ ಇತಿಹಾಸಗಳನ್ನು ಪೋಣಿಸಿ ಇಡೀ ಹಿಂದು ದೇಶದ ಇತಿಹಾಸವನ್ನು ಬರೆಯುವ ಪ್ರಚಂಡಕಾರ್ಯವು ಅತಿಶಯವಾಗಿ ಸುಲಭವಾಗುವುದೆಂದು ನಮ್ಮ ದೃಢಾಭಿಪ್ರಾಯವು. ಏಕೆಂದರೆ, ಹಿಮಾಲಯದಿಂದ ರಾಮೇಶ್ವರದವರೆಗೆ, ಆರ್ಯರಲ್ಲಿ, ಆರ್ಯರ ರಕ್ತದಲ್ಲಿ, ಆರ್ಯರ ಸಂಸ್ಕೃತಿಯಲ್ಲಿ, ಒಂದು ವಿಧವಾದ ಸಾಮ್ಯವೂ, ಸೌಹಾರ್ದವೂ ಕಂಡುಬರುತ್ತವೆ! ಪೌರಾಣಿಕವಾದ ಶ್ರೀರಾಮಕೃಷ್ಣಾದ್ಯವತಾರಗಳ ವಿಷಯದಲ್ಲಿ ಅಸೇತುಹಿಮಾಚಲದವರೆಗೆ ಒಂದೇ ಬಗೆಯ ಪೂಜ್ಯಭಾವವು ತೋರಿಬರುತ್ತದಲ್ಲವೇ? ಇದೇ ತರಹದ ಪೂಜ್ಯಭಾವವೂ, ಅಭಿಮಾನವೂ, ಅನುರಾಗವೂ ನಮ್ಮ ಐತಿಹಾಸಿಕ ಪುರುಷರ ವಿಷಯದಲ್ಲಿಯೂ ನಮ್ಮಲ್ಲಿ ಹುಟ್ಟುವುದೇ ರಾಷ್ಟ್ರೀಯತ್ವದ ಪರಿಣತವಸ್ಥೆ. ಅಂತಹ ಪರಿಸ್ಥಿತಿಯುಂಟಾಗಬೇಕಾದರೆ, ನಾವು ನಮ್ಮ ಪ್ರಾಂತಗಳಲ್ಲಿ ಮಹಾಕಾರ್ಯಗಳನ್ನೆಸಗಿದ ಮಹಾಪುರುಷರ ವಿಷಯವಾಗಿ ಅಭಿಮಾನವನ್ನು ತಾಳಿ, ಅವರ ಉತ್ಸವಗಳನ್ನು ಎಡೆಬಿಡದೆ ನಡೆಯಿಸಿ, ಅವರನ್ನು ರಾಷ್ಟ್ರೀಯ ಮಹಾಪುರುಷರ ಪಂಕ್ತಿಯಲ್ಲಿ ಕುಳ್ಳಿರಿಸಬೇಕು. ನಮ್ಮ ಸತ್ಪುರುಷರ ಅಭಿಮಾನವು ನಮಗೇ ಇಲ್ಲದ ಬಳಿಕ ಮಿಕ್ಕ ಪ್ರಾಂತದವರಿಗೆ ಅವರ ವಿಷಯವಾಗಿ ಅಭಿಮಾನ ಹುಟ್ಟುವುದು ಹೇಗೆ? ಶ್ರೀ ರಾಮದಾಸ, ಶ್ರೀ ಶಿವಾಜಿ ಇವರ ಹೆಸರುಗಳನ್ನು ಕೇಳಿದೊಡನೆಯೆ ಮಹಾರಾಷ್ಟ್ರೀಯರ ಹೃದಯದಲ್ಲಿ ಆನಂದವು ಉಕ್ಕೇರುವಂತೆ ಅದು ಆಂಧ್ರರಲ್ಲಿ ಅಥವಾ ಬಂಗಾಲಿಯರಲ್ಲಿ ಈಗ ಉಕ್ಕೇರುವುದೇನು? ಪ್ರತಾಪರುದ್ರದೇವ, ನನ್ನಯಭಟ್ಟ ಮುಂತಾದವರ ಹೆಸರುಗಳು ಆಂಧ್ರರಿಗೆ ಈಗ ಕೊಡುವಷ್ಟು ಅಭಿಮಾನವನ್ನೂ, ಉತ್ಸಾಹವನ್ನೂ, ಮರಾಠಿಗರಿಗೆ ಕೊಡುವುವೋ? ಒಟ್ಟಿಗೆ, ರಾಷ್ಟ್ರೀಯತ್ವವು ಪೂರ್ಣವಾಗಿ ನೆಲೆಗೊಳ್ಳುವುದಕ್ಕೆ ಆಯಾ ಪ್ರಾಂತದ ಜನರು ಮೊದಲು ತಮ್ಮ ಮಹಾಪುರುಷರ ವೈಭವವನ್ನು ಸ್ಮರಿಸಿ, ತಮ್ಮ ಮನಸ್ಸನ್ನು ಆನಂದಸಾಗರದಲ್ಲಿ ಎಡೆಬಿಡದೆ ಓಲಾಡಿಸಬೇಕು. ಅವರ ಮೂರ್ತಿಗಳನ್ನು ತಮ್ಮ ಕಣ್ಣುಮುಂದಿಟ್ಟುಕೊಂಡು ಧ್ಯಾನಿಸಬೇಕು.

ಮಿಕ್ಕ ಪ್ರಾಂತಗಳೊಳಗಿನ ಪ್ರಯತ್ನಗಳೆಲ್ಲವೂ ಈ ಮಾರ್ಗದಿಂದಲೇ ನಡೆದಿರುವುದಿಲ್ಲವೆ? ನಮ್ಮ ಪೂರ್ವಿಕರು ಮೊದಲು ಇಂತಿಂತಹ ಮಹಾಕೃತ್ಯಗಳನ್ನು ಮಾಡಿದರು; ತಮ್ಮ ಮೈಯಲ್ಲೆಲ್ಲ ಇಂತಿಂತಹ ಮಹಾ ಮಹಾ ವೀರರ ರಕ್ತವು ಹರಿಯುತ್ತಿದೆ; ತಮ್ಮ ನಾಡು ಇಂತಹ ಪುಣ್ಯಪುರುಷರ ಪಾದಧೂಳಿಯಿಂದ ಪಾವನವಾಗಿದೆ ಎಂದು ಮುಂತಾಗಿ ಹೇಳಿ ಪ್ರತಿಯೊಂದು ಭಾಷೆಯವರು ತಮ್ಮ ಜನರನ್ನು ರಾಷ್ಟ್ರಕಾರ್ಯಕ್ಕೆ ಹುರಿಗೊಳಿಸುತ್ತಿದ್ದಾರೆ;
ಯಾವ ದೇಶವು ಒಂದು ಕಾಲಕ್ಕೆ ಶ್ರೀರಾಮಚಂದ್ರ, ಚಂದ್ರಗುಪ್ತ, ಅಶೋಕ, ಹರ್ಷವರ್ಧನ, ಪೃಥ್ವೀರಾಜರಂತಹ ಮಹಾ ಧಾರ್ಮಿಕರಾಜರಿಗೆ ತವರುಮನೆಯಾಯಿತೋ, ಯಾವ ನಮ್ಮ ದೇಶವು ತುಳಸೀದಾಸ, ಕಬೀರದಾಸರಂಥ ಭಗವದ್ಭಕ್ತರಿಗೆ ಜನ್ಮ ಕೊಟ್ಟಿತೋ, ಆ ಹಿಂದೀರಾಷ್ಟ್ರವು ಎಂದಾದರೂ ಪ್ರಗತಿಯಲ್ಲಿ ಹಿಂದುಳಿದೀತೇ ಎಂದು ಹಿಂದೀ ಬಂಧುಗಳು ತಮ್ಮ ಮಂದಿಯನ್ನು ಪ್ರೇರೇಪಿಸುತ್ತಾರೆ;
ಪ್ರತಾಪಾದಿತ್ಯನಂತಹ ಪ್ರತಾಪಿಯು ನಮ್ಮ ರಾಷ್ಟ್ರವನ್ನು ಅಲಂಕರಿಸಿರಲು, ಚೈತನ್ಯನಂಥ ಧರ್ಮವೀರನು ನಮ್ಮಲ್ಲಿ ಚೈತನ್ಯವನ್ನು ತುಂಬಿರಲು ನಾವು ತಲೆ ಬಗ್ಗಿಸಿ ಸುಮ್ಮನೆ ಕುಳಿತುಕೊಳ್ಳಬೇಕೆ? ಅಂತಹ ವೀರಪುರುಷರು ಮುಂದೆಯೂ, ನಮ್ಮಲ್ಲಿ ಮೈದೋರಲಾರರೇ ಎಂದು ಮುಂತಾಗಿ ಹೊಗಳಿ ಬಂಗಾಲಿಗಳು ತಮ್ಮವರ ಬೆನ್ನು ಚಪ್ಪರಿಸುತ್ತಿರುವರು!
ರಾಜರಾಜನರೇಂದ್ರ, ಪ್ರತಾಪರುದ್ರದೇವ, ಕೃಷ್ಣದೇವರಾಯ ಮುಂತಾದ ರಣವೀರರು ನಮ್ಮ ಪೂರ್ವಜರೇ ಅಲ್ಲವೇ? ಆಪಸ್ತಂಬ, ಕುಮಾರಿಲ ಭಟ್ಟ, ಅಪ್ಪಯ್ಯದೀಕ್ಷಿತ ಇವರೇ ಮೊದಲಾದ ವಿದ್ವನ್ಮಣಿಗಳು ನಮ್ಮ ದೇಶದಲ್ಲಿ ಹುಟ್ಟಲಿಲ್ಲವೇ? ಹೀಗಿದ್ದ ಬಳಿಕ ಆಂಧ್ರರಾದ ನಾವು ಅಳುವುದೇತಕ್ಕೆ! ಎಂದು ಆಂಧ್ರರು ತಮ್ಮ ಜನರಲ್ಲಿ ಪರಿಪರಿಯಾಗಿ ಆವೇಶ ತುಂಬುತ್ತಿದ್ದಾರೆ!
ನಮ್ಮದು ಬಹು ಪ್ರಾಚೀನ ಭಾಷೆ; ಚೇರ, ಚೋಳ, ಪಾಂಡ್ಯ ರಾಜ್ಯಗಳು, ರಾಮಾಯಣ-ಮಹಾಭಾರತ ಕಾಲದಿಂದಲೂ ಖ್ಯಾತಿಗೊಂಡಿವೆ. ರಾಜರಾಜ, ಕುಲೋತ್ತುಂಗ ಮುಂತಾದ ಮಹಾವೀರರು ನಮ್ಮ ಅರಸರು. ರಾಮಾನುಜ, ವೇದಾಂತದೇಶಿಕರಂಥ ಧರ್ಮಮಾರ್ತಾಂಡರು ನಮ್ಮ ಮಾರ್ಗದರ್ಶಕರು ಎಂದಮೇಲೆ ದೇವದೂತರಾದ ಇಂತಹ ಅಂಶಪುರುಷರ ಹೆಸರೆತ್ತಿ ನಾವು ರಾಷ್ಟ್ರೋದ್ಧಾರವನ್ನು ಮಾಡಲಾರೆವೇ! ಎಂದು ತಮಿಳರು ಆಲಸ್ಯವನ್ನು ತಳ್ಳಿ ತಲೆಯೆತ್ತಲಾರಂಭಿಸಿದ್ದಾರೆ. ಇತ್ತ ನಮ್ಮ ನೆರೆಹೊರೆಯವರಾದ ಮರಾಠದವರಂತೂ ಶ್ರೀ ರಾಮದಾಸ, ಶ್ರೀ ಶಿವಾಜಿ ಮಹಾರಾಜರ ಭಜನೆಗಳಿಂದಲೂ ಉತ್ಸವಗಳಿಂದಲೂ ತಮ್ಮ ರಾಷ್ಟ್ರವನ್ನೇ ತುಂಬಿಟ್ಟಿದ್ದಾರೆ.
ಜ್ಞಾನೇಶ್ವರ-ರಾಮದಾಸರಂಥ ಸಾಧುಗಳು ನಮ್ಮಲ್ಲಿ ಜನಿಸಿರಲು, ಶಿವಾಜಿ-ಬಾಜೀರಾಯರಂಥ ವೀರಾಗ್ರೇಸರರು ನಮ್ಮಲ್ಲಿ ಉದಯಿಸಿರಲು, ರಾಷ್ಟ್ರಗಳ ಏರಾಟಿಕೆಯಲ್ಲಿ ನಾವೇಕೆ ಹಿಂದುಳಿದೇವು? ನಾವೇನು ಕಡಿಮೆಯವರೇ? ನಮ್ಮಿಂದ ರಾಷ್ಟ್ರೋನ್ನತಿಯಾಗದಂತಿದೆಯೇ? ಎಂದು ಮರಾಠರು ಮೈಯುಬ್ಬಿಸಿ ಮುಂದುಮುಂದಕ್ಕೆ ಸರಿಯುತ್ತಿದ್ದಾರೆ. ಗುರ್ಜರರೂ ಸುಮ್ಮನೆ ಕುಳಿತಿಲ್ಲ.
ಭಾರತೀಯರಿಗೆಲ್ಲ ಅತ್ಯಂತ ಪೂಜ್ಯನಾದ ಶ್ರೀ ಕೃಷ್ಣನು ನಮ್ಮ ಭೂಮಿಯಲ್ಲಿಯೇ ವಾಸಿಸಿದ್ದಲ್ಲವೇ? ಅವನ ದ್ವಾರಕೆಯು ಇಗೋ, ಇದೇ ಅಲ್ಲವೇ? ಆ ಕೃಷ್ಣನ ವಂಶಜರಾದ ನಾವು ಕೈಲಾಗದವರೇ? ವನರಾಜ, ಮೂಲರಾಜ, ಸಿದ್ಧರಾಜ ಅವರು ನಮ್ಮಲ್ಲಿಯೇ ಆಳಲಿಲ್ಲವೇ? ಶ್ರೀವಲ್ಲಭಾಚಾರ್ಯರ ಅಭಿಮಾನವು ನಮಗೆ ಇರಬೇಡವೇ? ಗುರ್ಜರರಾದ ನಾವು ಲುಪ್ತವಾದ ನಮ್ಮ ಗೌರವವನ್ನು ಮರಳಿ ಪಡೆಯಲಾರೆವೇ? ಎಂದು ಹೇಳಿ ಗುರ್ಜರರು ತಮ್ಮ ರಾಷ್ಟ್ರವನ್ನು ಉನ್ನತಿಯ ಮಾರ್ಗಕ್ಕೆ ಹಚ್ಚಿರುವರು, ಈ ಬಗೆಯಾಗಿ ಪ್ರತಿಯೊಂದು ಭಾಷೆಯವರೂ, ತಮ್ಮ ತಮ್ಮ ಪ್ರಾಂತಗಳ ಇತಿಹಾಸವನ್ನು ಅಭಿಮಾನಪೂರ್ವಕವಾಗಿ ಅಭ್ಯಾಸ ಮಾಡಿ, ತಮ್ಮ ಜನರನ್ನು ಚೇತನಗೊಳಿಸುತ್ತಿರಲು, ನಮ್ಮ ಕರ್ನಾಟಕದವರೋ! ಛೇ ಕರ್ನಾಟಕವೆಲ್ಲಿದೆ? ಕರ್ನಾಟಕವು ಜಗತ್ತಿನ ನಾಟ್ಯರಂಗದಿಂದ ಎಂದೋ ನಾಮಶೇಷವಾಗಿ ಹೋಗಿದೆ! ಇನ್ನು ಎಲ್ಲಿಯ ಕರ್ನಾಟಕ? ನಾಲ್ಕಾರು ಕಡೆಗೆ ಹರಿದು ಹಂಚಿಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವವರಾರು? ಅಷ್ಟೊಂದು ಅಭಿಮಾನವು ನಮ್ಮಲ್ಲಿ ಎಲ್ಲುಂಟು? ಮಿಕ್ಕ ಕಡೆಯಲ್ಲೂ ನಮ್ಮ ಭಾಷಾಬಂಧುಗಳು ವಾಸಿಸುವರು; ಅವರ ರಕ್ತವೂ ನಮ್ಮ ರಕ್ತವೂ ಒಂದೇ; ನಮ್ಮ ಪೂರ್ವಜರೇ ಅವರ ಪೂರ್ವಜರು; ನಮ್ಮ ಅರಸರೂ ಅವರ ಅರಸರೂ ಒಂದೇ; ನಮ್ಮ ಕವಿಗಳೇ ಅವರ ಕವಿಗಳು; ಎಂಬ ಸ್ವಾಭಿಮಾನವು ಕೂಡ ಯಾರಲ್ಲಿ ಇನ್ನೂ ಅಂಕುರಿಸಿಲ್ಲವೋ. ಅವರಿಂದ ಯಾವ ಕಾರ್ಯವಾದೀತು? ಅಂತಹರು ಕೂಪಮಂಡೂಕನ್ಯಾಯದಿಂದ ಸಂಕುಚಿತ ವಿಚಾರಗಳುಳ್ಳವರಾದರೆ ಆಶ್ಚರ್ಯವೇನು? ಆದರೆ ಪ್ರತಿಯೊಂದು ನಾಡಿನವರ ನಾಲಗೆಯ ಮೇಲೆ ತಮ್ಮ ಪೂರ್ವಜರ ನಾಲ್ಕಾರು ಹೆಸರುಗಳಾದರೂ ಅಭಿಮಾನದಿಂದ ನಲಿದಾಡುತ್ತಿರಲು ಕನ್ನಡಿಗರ ನಾಲಗೆಗೆ ಚಟ್ಟನೆ ಒಂದಾದರೂ ಹೆಸರು ಬರದಿರುವುದು ತೀರ ಲಜ್ಜಾಸ್ಪದವಾದ ಸಂಗತಿಯಾಗಿದೆ! ಹಿಂದುಸ್ಥಾನದಲ್ಲಿಯ ಪ್ರತಿಯೊಂದು ಭಾಷೆಯಾದರೋ ತಮ್ಮ ಪೂರ್ವಜರ ಇತಿಹಾಸವನ್ನು ಉತ್ಸಾಹದಿಂದ ಸಂಶೋಧಿಸುತ್ತಿರಲು, ಕರ್ನಾಟಕವು ಮಾತ್ರ ಇನ್ನೂ ಕುಂಭಕರ್ಣ ನಿದ್ರೆಯಲ್ಲಿಯೇ ಇದೆ, ಇದೆಂಥ ದುಃಖದ ನೋಟ!ಆದರೆ ಹೀಗಾಗುವುದಕ್ಕೆ ಕಾರಣವೇನಿರಬಹುದು? ಅದಕ್ಕೆ ನಮ್ಮ ಇತಿಹಾಸ ಜ್ಞಾನದ ಅಭಾವವೇ ಮೂಲ ಕಾರಣವೆಂದು ನಮ್ಮ ಅಭಿಪ್ರಾಯ.
ನಮ್ಮಲ್ಲಿ ಬಲಾಢ್ಯರಾದ ಅರಸರಿರಲಿಲ್ಲ; ನಮ್ಮಲ್ಲಿ ಘನಪಂಡಿತರಿರಲಿಲ್ಲ; ನಾವು ಎಂದಿಗೂ ಹೇಡಿಗಳೇ, ಎಂದಿಗೂ ದಡ್ದರೇ, ಅಂದ ಬಳಿಕ ಮುಂದಿನ ಆಶೆಯಾದರೂ ನಮಗೆಲ್ಲಿಯದು? ಎಂದು ನಮ್ಮ ಜನರ ಅಭಿಪ್ರಾಯ. ಆದುದರಿಂದಲೇ ಅವರು ಕೇಳುವದೇನೆಂದರೆ,ನಮ್ಮ ಕರ್ನಾಟಕದ ವಿಷಯಕ್ಕೆ ಅಭಿಮಾನಪಡತಕ್ಕ ಸಂಗತಿಗಳೇನಿವೆ? ನಮ್ಮದೇನು ರಾಷ್ಟ್ರವೇ? ನಮಗೇನು ಇತಿಹಾಸವಿದೆಯೇ? ನಮ್ಮ ಕರ್ನಾಟಕವು ಎಂದಾದರೂ ವಾಙ್ಮಯವನ್ನು ಕಂಡಿತ್ತೋ? ಅದಕ್ಕೆ ಅರಸರೇನಾದರೂ ಇದ್ದರೋ? ನಮಗೆ ವಿಶಿಷ್ಟವಾದ ಸಂಸ್ಕೃತಿಯುಂಟೋ? ಹೀಗಿಲ್ಲದ ಬಳಿಕ. ಅಂಥ ಸತ್ತ ಕರ್ಣಾಟಕವನ್ನು ಹೊತ್ತುಕೊಂಡು ಹೋಗುವದೆಂತು? ಆ ನಮ್ಮ ಕೊರಳೊಳಗಿನ ಗುದಿಗೆಯನ್ನು ಹರಿದೊಗೆದು ಮಿಕ್ಕ ಜನಾಂಗಗಳಲ್ಲಿ ಬೆರೆತು ಹೋಗುವುದೇ ಸರಿಯಲ್ಲವೇ?
ಇಷ್ಟೇ ಅಲ್ಲ, ಕೆಲವರಿಗಂತೂ ಕರ್ನಾಟಕಸ್ಥರೆಂದು ಹೇಳಿಕೊಳ್ಳುವುದಕ್ಕೂ ಕೂಡ ನಾಚಿಕೆ ಬರುತ್ತಿದೆ. ಆದುದರಿಂದ ಅವರು ನಮ್ಮ ಜನರಿಗೆ ಉಪದೇಶಿಸುವದೇನೆಂದರೆ ಕನ್ನಡಿಗರೇ! ಇಗೋ, ಇಲ್ಲಿ ನಮ್ಮ ನೆರೆಹೊರೆಯವರಾದ ಮರಾಠರು, ತೆಲುಗರು, ತಮಿಳರು ವೇಗದಿಂದ ಸುಧಾರಣೆಯ ಮಾರ್ಗವನ್ನು ಆಕ್ರಮಿಸಹತ್ತಿದ್ದಾರೆ. ನಾವು ನಮ್ಮ ಕರ್ನಾಟಕತ್ವವನ್ನು ಸುಟ್ಟು ಬೂದಿ ಮಾಡಿ, ನೀರಿನಲ್ಲಿ ಕಲಸಿ ಬಿಡೋಣ. ನೀವು ಇಲ್ಲದ ಸಲ್ಲದ ವಿಚಾರಗಳನ್ನು ತೆಗೆದು ಹೊಸ ಆಟವನ್ನು ಹೂಡಬೇಡಿರಿ, ಸುಮ್ಮನೆ ಆ ಕರ್ನಾಟಕದ ಹೆಸರಿನಿಂದ ಏಕೆ ತೊಳಲಾಡುತ್ತೀರಿ? ಹೋಗಲಿ ಆ ಕರ್ನಾಟಕವು! ಏನೋ, ಕನ್ನಡ ನುಡಿಯು ನಮ್ಮನ್ನು ಬಿಡದು. ಅಷ್ಟರಮಟ್ಟಿಗೆ ಬೇಕಾದರೆ ಕರ್ನಾಟಕರೆನ್ನಿಸಿಕೊಳ್ಳಿರಿ.
ಈ ಬಗೆಯಾಗಿ ಕರ್ನಾಟಕರು ವಿಷಾದಗೊಂಡು ಒಂದೇ ಸಮನೆ ಒರಲಹತ್ತಿದ್ದಾರೆ. ಹೀಗಾದ ಮೇಲೆ ಮಹಾವಿಭೂತಿಗಳ ನಾಮಾವಳಿಯು ನಲಿದಾಡುವದೆಂತು? ಇವರಲ್ಲಿ ರಾಷ್ಟ್ರೀಯ ವಿಭೂತಿಗಳ ಉತ್ಸವಗಳಾಗುವದೆಂತು? ಪೂರ್ವಜರ ಅಭಿಮಾನವೇ ಇಲ್ಲದಂತಹರು ತಮ್ಮ ಜನರಲ್ಲಿ ರಾಷ್ಟ್ರೀಯತ್ವದ ಭಾವನೆಗಳನ್ನು ಬಿತ್ತುವದೆಂತು? ಇಂತಹ ಜನರಲ್ಲಿ ನಿಜವಾದ ರಾಷ್ಟ್ರಾಭಿಮಾನವು ಎಂದಾದರೂ ಮೊಳೆದೋರುವುದೋ? ಯಾವ ಕರ್ನಾಟಕಸ್ಥರಿಗೆ ತಮ್ಮ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನವುಂಟಾಗುವುದಿಲ್ಲವೋ, ಯಾರು ತಮ್ಮ ಜನರ ಮಹಾಕಾರ್ಯಗಳ ಜ್ಞಾನವಿಲ್ಲದೆ ಇನ್ನೂ ಕಗ್ಗತ್ತಲೆಯಲ್ಲಿ ಅಲೆದಾಡುತ್ತಿರುವರೋ ಅಂಥ ಜನರ ಭಾಷಾವೃಕ್ಷವು ಕೂಡ ಭರದಿಂದ ಬೆಳೆಯದಿದ್ದರೆ ಸೋಜಿಗವೇನು? ಕನ್ನಡಿಗರೇ, ನಿಮ್ಮ ಈ ವಿಷಾದವನ್ನು ಹೋಗಲಾಡಿಸಿ, ನಿಮ್ಮ ಮೇಲಿನ ನಿರಭಿಮಾನತೆಯ ಮುಸುಕನ್ನು ಹಾರಹೊಡೆಯಲಿಕ್ಕೆ ನೀವು ನಿಮ್ಮ ಇತಿಹಾಸಕ್ಕೇ ಶರಣು ಹೋಗಿರಿ. ನಿಮ್ಮ ಮಂದದೃಷ್ಟಿಗೆ ಅದೇ ಮೇಲಾದ ಅಂಜನ.


೨ನೆಯ ಪ್ರಕರಣ

ಕರ್ನಾಟಕವು ಮೃತರಾಷ್ಟ್ರವೇ?

ಕ್ಲೈಬ್ಯಂ ಮಾ ಸ್ಮಗಮಃ ಪಾರ್ಥ ನೈತತ್ವಯ್ಯುಪಪದ್ಯತೇ
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ || -ಗೀತೆ ೨,೩

ಅರಿಭಯಂಕರ ನೀ ನಪುಂಸಕ | ರಿರವನೈದಲು ಬೇಡ, ನಿನಗಿದು |
ದೊರಕಲಾಗದು ಧೀರತನಕಿದು ಹಾನಿಕರವಹುದು ||
ಮರುಳೆ, ಬಡಮನದಿಂದ ಹೆದರದೆ | ಮರುಳತನವನ್ನು ಬಿಟ್ಟು ಕದನಕೆ |
ಭರವಸದಲೇಳೆನಲು ಕೃಷ್ಣಗೆ ಪಾರ್ಥನಿಂತೆಂದ ||
-ನಾಗರಸ

ಕಳೆದ ಪ್ರಕರಣದಲ್ಲಿ, ನಾವು ನಮ್ಮ ಮಿಕ್ಕ ರಾಷ್ಟ್ರಬಂಧುಗಳಲ್ಲಿ ಉಂಟಾಗಿರುವ ಪೂರ್ವಸ್ಥಿತಿಯ ತಿಳಿವಳಿಕೆಯನ್ನೂ, ಸದ್ಯಸ್ಥಿತಿಯ ವಿಷಯದಲ್ಲಿ ಅವರು ನಡೆಯಿಸಿರುವ ಪಶ್ಚಾತ್ತಾಪಪೂರ್ವಕವಾದ ಉನ್ನತಿಯ ಕ್ರಮವನ್ನೂ, ನಾವು ಮಾತ್ರ ಎಳ್ಳಷ್ಟೂ ಸದ್ದಿಲ್ಲದೆ ಮಲಗಿರುವ ಶೋಚನೀಯವೂ ಲಜ್ಜಾಸ್ಪದವೂ ಆದ ಸಂಗತಿಯನ್ನೂ ಅರಿಕೆ ಮಾಡಿಕೊಂಡೆವು. ಆದರೆ ನಿಜವಾಗಿಯೂ ಕನ್ನಡಿಗರಾದ ನಾವು ಹೀಗೆ ವಿಷಾದಗೊಂಡು ಹತಾಶರಾಗಲಿಕ್ಕೆ ಏನಾದರೂ ಕಾರಣವುಂಟೋ? ಎಂಬುದನ್ನು ನಾವೀ ಪ್ರಕರಣದಲ್ಲಿ ಯೋಚಿಸುವ.

ವಾಚಕರೇ, ತಿಪ್ಪೆ ಹೋಗಿ ಉಪ್ಪರಿಗೆಯಾದ ಕಥೆಗಳೂ, ಅರಮನೆ ಹೋಗಿ ಸೆರೆಮನೆಯಾದ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಒಂದೆರಡು ಇರುತ್ತವೆಯೋ! ಅಹಹ! ಚಕ್ರನೇಮಿಕ್ರಮೇಣ,ಅಂದರೆ ಗಾಲಿಯ ಹಲ್ಲುಗಳಂತೆ ತಿರುಗುತ್ತಿರುವ ಈ ಕಾಲನ ಅದ್ಭುತವಾದ ಕೃತಿಯನ್ನು ನಿರೀಕ್ಷಿಸಿದ ಹಾಗೆ ಮನಸ್ಸೆಲ್ಲವೂ ಅಗಾಧವಾದ ದುಃಖ ಸಮುದ್ರದಲ್ಲಿ ಮನುಷ್ಯನ ಸ್ವಭಾವಕ್ಕನುಗುಣವಾಗಿಯೇ ಇದೆ. ಆದರೆ, ಕ್ಷಣಿಕವಾದ ಈ ಹೃದಯದೌರ್ಬಲ್ಯವನ್ನೂ ವಿಮೂಢಸ್ಥಿತಿಯನ್ನೂ ನಾವು ಕೊನೆಯ ವರೆಗೂ ಹಾಗೆಯೇ ದೃಢವಾಗಿಟ್ಟುಕೊಂಡು ಹೇಡಿಗಳಂತೆ ಅಳುತ್ತ ಕುಳಿತರೆ ಮಾತ್ರ ಅದು ಅಕ್ಷಮ್ಯವಾದ ತಪ್ಪಾಗುವದು; ಮತ್ತು ಈ ನಮ್ಮ ತಪ್ಪಿಗಾಗಿ ನಮಗೆ-ಅಷ್ಟೇ ಅಲ್ಲದೆ ನಮ್ಮ ಮಕ್ಕಳುಮರಿಗಳಿಗೂ ಸಹ ನಮ್ಮ ಹೆಸರಿನಿಂದ ಕಲ್ಲೊಡೆಯುತ್ತ ಕುಳ್ಳಿರುವ ಪ್ರಸಂಗ ಬಾರದೇ ಇರದು! ವೈಭವಶಿಖರವನ್ನಡರಿದ ಯಾವ ಜನಾಂಗಕ್ಕೂ ಒಮ್ಮಿಲ್ಲೊಮ್ಮೆ ಇಂಥ ದುರವಸ್ಥೆ ಬಂದೇ ತೀರಬೇಕಾಗಿ ಸೃಷ್ಟಿಯ ನಿಯಮವಿರುವದೆಂದು ಪ್ರಾಚೀನ ಇತಿಹಾಸವು ಈ ವಿಷಯದಲ್ಲಿ ನಮ್ಮನ್ನು ಸಂತಯಿಸಲಿಕ್ಕೆ ಕಾಯ್ದುಕೊಂಡು ನಿಂತಿದೆ. ನಾವು ಜಾಣರಾದರೆ ಆ ಪ್ರಾಚೀನ ಇತಿಹಾಸದ ಅನುಭವದ ಮಾತನ್ನು ಕೇಳಿ ನಮ್ಮ ಅಳ್ಳೆದೆಯನ್ನು ಕಲ್ಲೆದೆಯಾಗಿ ಮಾಡಲು ಪ್ರಯತ್ನಿಸಬೇಕು. ರಾಷ್ಟ್ರಕ್ಕೆ ಬಿಕ್ಕಟ್ಟಿನ ಸ್ಥಿತಿ ಒದಗಿದಾಗ. ಆ ರಾಷ್ಟ್ರೀಯರು ಕೇವಲ ಕೌಟುಂಬಿಕ ಅತಏವ ಸಂಕುಚಿತವಾದ ನಮ್ಮ ವಿಚಾರಗಳನ್ನು ವಿಶಾಲಗೊಳಿಸಿ, ಮನೆಮಾರುಗಳನ್ನು ಕಸಕ್ಕಿಂತ ಕಡೆಮಾಡಿ, ಹೆಂಡಿರು ಮಕ್ಕಳನ್ನು ದೂರೀಕರಿಸಿ ಕ್ಷಣಹೊತ್ತು ಧೀರರಾಗಲಿಕ್ಕೆ ಬೇಕು. ಹೃದಯದೌರ್ಬಲ್ಯವು ಯಾರಿಗೆ ಉಚಿತವು? ಮೃತರಾಷ್ಟ್ರಕ್ಕೆ! ಯಾವ ರಾಷ್ಟ್ರದೊಳಗಿನ ನಾಡಿಗಳ ಚಲನೆಯೆಲ್ಲವೂ ನಿಂತುಹೋಗಿ ಜೀವಕಳೆ ಇರುವದಿಲ್ಲವೋ, ಯಾವ ದೇಶದ ಇತಿಹಾಸದಲ್ಲಿ ವೈಭವದ, ಪರಾಕ್ರಮದ, ಬುದ್ಧಿವಂತಿಕೆಯ ಸಂಗತಿಗಳು ಎಂದಿಗೂ ಶೂನ್ಯವಾಗಿರುವವೋ, ಯಾವ ನಾಡು ನಾಮಮಾತ್ರಕ್ಕೆ ಮನುಷ್ಯರಿಂದ ತುಂಬಿರುವದೋ, ಅಂಥ ನಾಡಿನವರು ಹೀಗೆ ಅಪ್ಪುಗೈ ಹಾಕಿಕೊಂಡು ಕುಳಿತರೆ ಒಂದು ವೇಳೆ ಸರಿದೋರಬಹುದು. ಏಕೆಂದರೆ ದೇಶದಲ್ಲಿ ಎಂದಿಗೂ ಜೀವಂತತನದ ಕುರುಹುಗಳೇ ಇಲ್ಲದ ಮೇಲೆ, ಆ ದೇಶದವರಿಂದ ಮುಂದೆ ಎಂದಾದರೂ ಮಹಾಕಾರ್ಯಗಳಾಗುವವೆಂದರೆ ಒಂದು ವೇಳೆ ಸಂದೇಹವುಂಟಾಗಬಹುದು. ಆದರೆ ಯಾವ ರಾಷ್ಟ್ರವು ಇತಿಹಾಸರಂಗದೊಳಗೆ ಬಹು ಗೌರವದಿಂದ ಎಡೆಬಿಡದೆ ಸಾವಿರಾರು ವರ್ಷಗಳ ತನಕ ಮೆರೆಯಿತೋ, ಯಾವುದರ ಹೆಸರು ಸುವರ್ಣಾಕ್ಷರಗಳಿಂದ ಬರೆಯಲ್ಪಡಲಿಕ್ಕೆ ಯೋಗ್ಯವೋ, ಅಂಥ ರಾಷ್ಟ್ರವೂ ಕಾಲನಿಂದ ಗ್ರಸ್ತವಾಗಿ ನಿದ್ರಿತವಾಗಿದ್ದರೂ, ಅದು ಇಂದಿಲ್ಲದಿದ್ದರೆ ನಾಳೆಯಾದರೂ ತನ್ನ ಕಳೆದುಕೊಂಡ ವೈಭವವನ್ನು ಸಂಪಾದಿಸಿಯೇ ತೀರುವದೆಂಬುದು ನಿರ್ವಿದವಾದ ಸಂಗತಿಯು, ಸಾರಾಂಶ: ಒಮ್ಮೆ ಜೀವಂತವಾಗಿದ್ದ ರಾಷ್ಟ್ರವು ಎಂದೂ ಮೃತವಾಗದು. ಅದು ನಿದ್ದೆ ಹೋಗಿರಬಹುದು; ಗಾಬರಿಗೊಂಡು ಕಕ್ಕಾವಿಕ್ಕಿಯಾದ ನಮ್ಮ ಕಣ್ಣಿಗೆ ಅದು ಮೃತವಾದಂತೆ ತೋರಬಹುದು. ಆದರೆ ಸೂಕ್ಷ್ಮವಾಗಿಯೂ ಕೂಲಂಕಷವಾಗಿಯೂ ವಿಚಾರಿಸಿದರೆ, ನಮ್ಮ ಭ್ರಮೆಯು ಬಯಲಾಗಿ, ಅದರಲ್ಲಿ ವೈಭವದ ಬೀಜಗಳು ಇನ್ನೂ ಅಚ್ಚಳಿಯದೆ ಇರುವವಾಗಿ ನಿದರ್ಶನಕ್ಕೆ ಬಾರದಿರದು.

ಇದು ಸಾಮಾನ್ಯ ವಿಚಾರವಾಯಿತು. ನಮ್ಮ ಜನ್ಮಭೂಮಿಯಾದ ಕನ್ನಡನಾಡಿನ ಸದ್ಯದ ಅವಸ್ಥೆ ಏನು? ಅದು ಮೃತರಾಷ್ಟ್ರವೋ, ಜೀವಂತರಾಷ್ಟ್ರವೋ ಎಂಬುದನ್ನು ನಾವಿನ್ನು ತಿಳಿಯಲು ಮುಂದುವರಿಯುವ. ಕನ್ನಡಿಗರೇ! ನಾವು ನಿಮ್ಮ ಕೈಯಲ್ಲಿ ಕಡ್ಡೀ ಕೊಟ್ಟು ಸಾರಿ ದೂರಿ ಹೇಳುವದೇನೆಂದರೆ, ನಮ್ಮ ಕರ್ನಾಟಕವು ಮೃತರಾಷ್ಟ್ರವಲ್ಲ; ಅದು ಜೀವಂತ ರಾಷ್ಟ್ರವು. ಅಷ್ಟೇಕೆ, ಅದೊಂದು ಪ್ರತಿಭಾ ಸಂಪನ್ನವಾದ ರಾಷ್ಟ್ರವು. ೧೦೦೦-೧೫೦೦ ವರ್ಷಗಳವರೆಗೆ ಅವ್ಯಾಹತವಾಗಿ ಹಿಂದುದೇಶದ ಇತಿಹಾಸದಲ್ಲಿ ವೈಭವದಿಂದ ಮೆರೆದ ರಾಷ್ಟ್ರವೆಂದರೆ ಕರ್ನಾಟಕವೊಂದೇ! ಉತ್ತರ ಹಿಂದುಸ್ಥಾನದಂಥ ಬಲವಾದ ರಾಷ್ಟ್ರದ ಇತಿಹಾಸ ಕೂಡ ಹರ್ಷವರ್ಧನನ ಕಾಲದಲ್ಲಿ ಲುಪ್ತವಾಗಿ ಹೋಯಿತು. ಆದರೆ ದಕ್ಷಿಣದಲ್ಲಿ ನಮ್ಮ ಕರ್ನಾಟಕವು ಮಾತ್ರ ಪೂರ್ವದಿಂದ ನಡೆದು ಬಂದ ತನ್ನ ವೈಭವವನ್ನು ಸ್ವಲ್ಪವಾದರೂ ಕುಂದಿಸದೆ, ತಿರುಗಿ ಹಬ್ಬುವಂತೆ ಮಾಡಿ, ಮುಂದೆ ಸಾವಿರಾರು ವರ್ಷಗಳವರೆಗೆ ತನ್ನ ಘನತೆಯನ್ನು ಅತ್ಯಂತ ದಕ್ಷತೆಯಿಂದ ಕಾಪಾಡಿಕೊಂಡಿದೆ. ಈ ಕರ್ನಾಟಕದಲ್ಲಿಯೇ ಜಗತ್ತನ್ನೆಲ್ಲ ಆಶ್ಚರ್ಯಗೊಳಿಸುವಂಥ, ಅನ್ಯಾದೃಶವಾದ ಕಟ್ಟಡಗಳು ಹುಟ್ಟಿವೆ. ಈ ಕರ್ನಾಟಕದಲ್ಲಿಯೇ ಇತರ ವಾಙ್ಮಯಗಳನ್ನು ಮೀರಿಸುವ ಗ್ರಂಥಗಳು ನಿರ್ಮಾಣವಾಗಿವೆ. ಈ ನಮ್ಮ ಕರ್ನಾಟಕದ ಸುಧಾರಣೆಯು ವಿಶಿಷ್ಟಬಗೆಯದಾಗಿರುವದರಿಂದಲೇ ಗಾಯನಶಾಸ್ತ್ರದಲ್ಲಿ ಕರ್ನಾಟಕವೆಂಬುದೊಂದು ಹೊಸ ಪದ್ಧತಿಯೇ ರೂಢವಾಗಿದೆ. ಸಾರಾಂಶ: ನಮ್ಮ ಅರಸರು ದೊಡ್ಡವರಿದ್ದರು; ನಮ್ಮ ರಾಜ್ಯವು ವಿಸ್ತಾರವಾಗಿ ಹಬ್ಬಿತ್ತು; ನಮ್ಮ ವೈಭವವು ಅತಿಶಯವಾದ ಘನತೆಗೇರಿತ್ತು; ಆ ಕಾಲಕ್ಕೆ ಹಿಂದುಸ್ಥಾನದಲ್ಲಿ ಕರ್ನಾಟಕವನ್ನು ಹಿಂದೆ ಹಾಕುವ ರಾಷ್ಟ್ರವು ಯಾವುದೂ ಇರಲಿಲ್ಲ. ಕರ್ನಾಟಕದೊಳಗಿರುವಷ್ಟು ದೊಡ್ಡ ಪಟ್ಟಣಗಳು ಹಿಂದುದೇಶದಲ್ಲಿ ಇರಲಿಲ್ಲ. ಕರ್ನಾಟಕದಲ್ಲಿರುವಷ್ಟು ವಿದ್ವಾಂಸರು ಬೇರೆ ಕಡೆಯಲ್ಲಿರಲಿಲ್ಲ. ಕರ್ನಾಟಕದಷ್ಟು ಸಂಪನ್ನವಾದ ವಾಙ್ಮಯವೂ ಮಿಕ್ಕ ಕಡೆಯಲ್ಲಿರಲಿಲ್ಲ. ಕರ್ನಾಟಕದಲ್ಲಿರುವಂಥ ಕಟ್ಟಡಗಳು ಹಿಂದುದೇಶದ ಕಣ್ಣುಮುಂದಿರಲಿಲ್ಲ. ಹೀಗಿದ್ದು, ನಾವು ಅದಕ್ಕೆ ಮೃತವೆಂದು ಕರೆಯುವುದೆಂತು?

ಕನ್ನಡಿಗರೇ! ನಿಮ್ಮ ಸುತ್ತುಮುತ್ತಲೂ ದೃಷ್ಟಿಯನ್ನು ಚೆಲ್ಲಿದರೆ ಅಲ್ಲಲ್ಲಿ ನಿಮ್ಮ ಪ್ರಾಚೀನ ಕರ್ನಾಟಕದ ಸಂಪನ್ನತೆಯ ದೇದೀಪ್ಯಮಾನವಾದ ಹೆಗ್ಗುರುತುಗಳು ಕಣ್ಣಿಗೆ ಕಟ್ಟದಿರಲಾರವು; ಆ ನಾಡಿನಲ್ಲಿ ಹುಟ್ಟಿ ಬೆಳೆದು ದಿಗಂತ ಕೀರ್ತಿಯನ್ನು ಪಡೆದ ರಾಜಕಾರ್ಯಧುರಂಧರರ, ಮೇಧಾವಿಗಳ ಮತ್ತು ರಾಜಗುರುಗಳ ಜೀವನಚರಿತ್ರೆಯನ್ನೋದಿದರೆ, ನಿಮ್ಮ ಜೀವನದ ಒಗಟೆಯು ಸಹಜವಾಗಿ ಒಡೆಯದೆ ನಿಲ್ಲದು; ಆ ನಾಡಿನ ಪ್ರಾಚೀನ ಸಂಪತ್ತಿಗೂ, ಕಲಾಕೌಶಲ್ಯಕ್ಕೂ ಸಾಕ್ಷಿಯಾಗಿ ನಿಂತಿರುವ ಗುಡಿಗೋಪುರಗಳನ್ನು ನೋಡಿದರೆ, ಇಂತಹ ಅಮಾನುಷ ಕಾರ್ಯಗಳನ್ನು ಸುಲಭವಾಗಿ ನೆರವೇರಿಸಿದ ರಾಷ್ಟ್ರದ ಹೆಗ್ಗಳಿಕೆಯು ಸಹಜವಾಗಿ ಗೊತ್ತಾಗುವದು. ಇಂಥ ರಾಷ್ಟ್ರವು ಮೃತವಾಗಿರುವುದೆಂದು ಕಲ್ಪನೆ ಮಾಡುವುದಾದರೂ ಹೇಗೆ! ಕನ್ನಡಿಗರೇ! ಕರ್ನಾಟಕವು ಮೃತರಾಷ್ಟ್ರವಲ್ಲ. ಅದು ಸ್ವಭಾವಚೈತನ್ಯಪೂರ್ಣವಾದ ರಾಷ್ಟ್ರವು. ಕಾಲಾನುಸಾರವಾಗಿ ಅದು ಮೇಲು ಕೀಳು ಸ್ಥಿತಿಗೆ ಈಡಾಗಿರಬಹುದು. ಆದರೆ ಅದರಲ್ಲಿರುವ ಚೈತನ್ಯಶಕ್ತಿಯು ಮಾತ್ರ ಯಾವ ಕೃತ್ರಿಮೋಪಾಯಗಳಿಂದಲೂ ಕುಂದಲಾರದು. ಈಗ ಅದು ತನ್ನ ಆಲಸ್ಯದ ಮೂಲಕ, ತನ್ನ ಜನರ ಹೇಡಿತನದ ಮೂಲಕ, ತನ್ನ ಕಡುತರವಾದ ದೈವದುರ್ವಿಲಾಸದ ಮೂಲಕ, ಸಾಲದುದಕ್ಕೆ ಸುತ್ತಲಿನ ಬಿಕ್ಕಟ್ಟಾದ ಪರಿಸ್ಥಿತಿಯ ಮೂಲಕ, ವಿಲಕ್ಷಣವಾದ ನಿದ್ರೆಗೀಡಾಗಿರುವದೇನೋ ಸರಿ! ಆದರೆ ಇಂಥ ಸಂದುಕಟ್ಟಿನಲ್ಲಿ, ತಾನು ಸತ್ತಿರದೆ ಜೀವಂತವಾಗಿರುವದೆಂಬ ತಿಳಿವನ್ನು ಮಾತ್ರ ನಾವು ಆ ರಾಷ್ಟ್ರದ ಮನಸ್ಸಿನಲ್ಲಿ ಚೆನ್ನಾಗಿ ಬಿಂಬಿಸಿದರೆ ಸಾಕು. ಅದೇ, ಅದನ್ನು ಅಡಬಡಿಸಿ ಎಚ್ಚರಗೊಳ್ಳುವಂತೆ ಮಾಡುವುದು; ಅಲ್ಲದೆ ತನ್ನ ಸಾಂಪ್ರತದ ಹೀನಸ್ಥಿತಿಯ ಬಗ್ಗೆ ಪರಾಕಾಷ್ಠೆಯ ಉದ್ವೇಗವನ್ನು ಉಂಟುಮಾಡುವುದು. ಸಾರಾಂಶ: ರಾಷ್ಟ್ರಕ್ಕೂ ಮನುಷ್ಯನಂತೆ ಆತ್ಮವಿರುವ ಕಾರಣ, ವೇದಾಂತಶಾಸ್ತ್ರವನ್ನೋದಿ ಆತ್ಮನ ಅಮೃತತ್ವವನ್ನೂ ಅವ್ಯಯತ್ವವನ್ನೂ ಆವಿಕಾರತ್ವವನ್ನೂ ತಿಳಿದುಕೊಂಡಿರುವ ಮನುಷ್ಯನು ಹೇಗೆ ದುಃಖಿಸದೆ, ಎದೆಗುಂದದೆ, ಧೀರನಾಗಿಯೂ ವೀರನಾಗಿಯೂ ಇರುವನೋ ಹಾಗೆಯೇ ತನ್ನ ಜೀವದ್ದೆಶೆಯನ್ನು ಅರಿತುಕೊಂಡ ರಾಷ್ಟ್ರವು ಎಂತಹ ಕಷ್ಟಪರಂಪರೆಗಳಿಗೂ ಅಂಜದೆ, ಅಳುಕದೆ ಇರುವುದು. ಆದರೆ ಈಗ ನಮ್ಮ ಸ್ಥಿತಿಯು ಹಾಗೆಲ್ಲಿದೆ? ಕನ್ನಡಿಗರಾದ ನಾವು ಈ ನಿತ್ಯತತ್ತ್ವವನ್ನು ಎಂದರೆ ಕರ್ನಾಟಕತ್ವವನ್ನು ಮರೆತು ಈಗಿರುವ ನಮ್ಮ ಕ್ಷಣಿಕವಾದ ಅವಸ್ಥೆಯೇ ಕೊನೆಯವರೆಗೂ ಇರುವದೆಂಬ ಭ್ರಾಮಕ ಭಾವನೆಯಿಂದ ಕೈಕಾಲು ಕಳೆದುಕೊಂಡು ಕುಳಿತಿರುವೆವಲ್ಲಾ! ಅದೇ, ನಾವು ನಮ್ಮ ಗತವೈಭವದ ನಮ್ಮ ಪ್ರಾಚೀನ ಸಂಸ್ಕೃತಿಯ ಹೃದಯಂಗಮವಾದ ಮೇಲ್ಮೆಯನ್ನು ಮನಸ್ಸಿನಲ್ಲಿ ನೆಡುವಂತೆ ಅರಿತವರಾಗಿದ್ದರೆ, ನಮ್ಮ ಕರ್ನಾಟಕವು ಭಾರತೀಯ ಇತಿಹಾಸದ ನಾಟ್ಯರಂಗದೊಳಗೆ ಕೈಕೊಂಡ ಪಾತ್ರದ ಬಲ್ಮೆಯು ನಮ್ಮ ಮಸುಕಾದ ಮನಸ್ಸಿನಲ್ಲಿ ಮೂಡಿದ್ದರೆ, ಇತಿಹಾಸವನ್ನು, ಈಗಿನಂತೆ ನಾವು ಜೋಲುಬಿದ್ದ ಮತ್ತು ಬಾಡಿದ ಮೋರೆಯವರಾಗಿ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ! ಒಳ್ಳೆಯದು! ಆದದ್ದಾಯಿತು! ಈಗಲಾದರೂ ಕಣ್ದೆರೆದು ನಾವು ನಮ್ಮ `ಕರ್ನಾಟಕತ್ವವನ್ನು ಅರಿತು ನಮ್ಮ ಮುಂದಣ ಮಾರ್ಗವನ್ನು ತಿದ್ದಿಕೊಂಡರೆ, ಜಗತ್ತಿನಲ್ಲಿ ನಗೆಗೀಡಾಗದೆ, ನಮ್ಮ ಮಾನವನ್ನು ನಾವು ಕಾಯ್ದುಕೊಂಡಂತಾಗುವುದು. ಇದೀಗ ನಮ್ಮೆಲ್ಲರ ಶ್ರೇಷ್ಠವಾದ ಕರ್ತವ್ಯವು.

ಹಾಗಾದರೆ ಆ `ಕರ್ನಾಟಕತ್ವವನ್ನು ಅರಿತುಕೊಳ್ಳುವದೆಂತು! ಅದೇನು ಕಣ್ಣಿಗೆ ಕಾಣುವದೊ! ಕಿವಿಗೆ ಕೇಳುವದೋ! ಕೈಗೆ ಸ್ಪರ್ಶಿಸುವದೋ! ಮೂಗಿಗೆ ಮೂಸುವದೋ! ಇಲ್ಲ, ಇಲ್ಲ. ಹಾಗಿದ್ದರೆ ಈ ಕಾರ್ಯವು ಎಷ್ಟೊಂದು ಸುಲಭಸಾಧ್ಯವಾಗಬಹುದಾಗಿತ್ತು! ಆಮೇಲೆ ಈ ತರಹದ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ; ಹಾಗಿರುವುದಿಲ್ಲವೆಂದೇ! ಪ್ರತಿಯೊಬ್ಬನು ಅದನ್ನು ಜ್ಞಾನದೃಷ್ಟಿಯಿಂದಲೇ ಕಂಡುಹಿಡಿದು, ಅದರ ಅಸ್ತಿತ್ವವನ್ನು ಹೃನ್ಮಂದಿರದಲ್ಲಿ ಚಿಂತಿಸಬೇಕಾಗಿದೆ! ಆದರೆ ಆಹಾ! ಈ ದೃಷ್ಟಿಯಿಲ್ಲದಿರುವದರಿಂದಲೇ ನಾವು ಕಣ್ಣಿದ್ದು ಕುರುಡರೂ, ಕಿವಿಯಿದ್ದು ಕಿವುಡರೂ, ಆಗಿದ್ದೇವೆ! ನಮ್ಮ ಸುತ್ತಲೂ ಎಲ್ಲೆಲ್ಲಿಯೂ ಇತಿಹಾಸದ ರಾಶಿಯೇ ಒಟ್ಟಿದ್ದೂ, ನಮಗೆ ಇತಿಹಾಸವೇ ಇಲ್ಲವೆಂದು ಸುಮ್ಮನೆ ಅರಚಿಕೊಳ್ಳುತ್ತಿದ್ದೇವೆ! ಇದೋ! ಇಲ್ಲಿ ನಮ್ಮಿದಿರಿಗೆ ಮೈಗೊಂಡು ನಿಂತಿರುವ ಈ ಕೋಟೆ-ಕೊತ್ತಳಗಳು ನಮ್ಮ ಗತವೈಭವದ ಹೆಗ್ಗುರುತುಗಳಲ್ಲವೇ? ಅದೋ! ಅಲ್ಲಿ ಕಾಣುತ್ತಿರುವ ಸುಂದರವಾದ ಭವ್ಯ ದೇವಾಲಯಗಳು ನಮ್ಮ ಇತಿಹಾಸದ ಪವಿತ್ರ ರಕ್ಷಾಭಾಂಡಾರಗಳಲ್ಲವೇ! ಜಗತ್ತಿನಲ್ಲೆ ಹೆಸರು ಪಡೆದಿರುವ ದ್ವೈತ, ಅದ್ವೈತ, ವಿಶಿಷ್ಟಾದ್ವೈತವೆಂಬೀ ಮತಗಳು ಕರ್ನಾಟಕಸ್ಥರ ಹೆಸರನ್ನು ಎಂದಾದರೂ ಮರೆಯಿಸುವವೇ! ಕೋಣನ ಮುಂದೆ ಕಿನ್ನರಿಯನ್ನು ಬಾರಿಸಿದಂತೆ ಇವೆಲ್ಲವೂ ನಮ್ಮ ಮನಸ್ಸಿನಲ್ಲಿ ಕಿಂಚಿತ್ತಾದರೂ ಸ್ಫೂರ್ತಿಯನ್ನುಂಟುಮಾಡುವದಿಲ್ಲವಲ್ಲ! ಕರ್ನಾಟಕವು ನಮ್ಮ ಹುಟ್ಟುನಾಡು; ಅದನ್ನಾಳಿದ ಅರಸರು ನಮ್ಮವರು; ಸಂಕಟಕಾಲದಲ್ಲಿ ಅದರ ಜೋಕೆಗಾಗಿ ಕಾದ ನೀರಿನಂತೆ ತಮ್ಮ ಮೈನೆತ್ತರನ್ನು ಬಸಿದಂಥ ಕಾದಾಳುಗಳು ನಮ್ಮ ವೀರ ಬಂಧುಗಳು; ಅನೇಕ ಶತಮಾನಗಳು ಸಂದು ಹೋದರೂ ದಿಕ್ಕು ದಿಕ್ಕುಗಳಲ್ಲಿ ತಮ್ಮ ಕೈಗಾರಿಕೆಯ ಸೊಕ್ಕಿನಿಂದ ಮೊಗವೆತ್ತಿಕೊಂಡು ನಿಂತಿರುವ ಗುಡಿ ಗೋಪುರಗಳು ನಮ್ಮ ಪುರಾತನ ಶಿಲ್ಪಶಾಸ್ತ್ರದ ಮಾದರಿಗಳು-ಎಂಬ ಅಭಿಮಾನವು ನಮ್ಮ ಮನೋಭೂಮಿಕೆಯಲ್ಲಿ ಎಲ್ಲಿಯವರೆಗೆ ಅಂಕುರಿಸುವದಿಲ್ಲವೋ, ಅಲ್ಲಿಯವರೆಗೆ ಅವೆಲ್ಲ ನಮ್ಮನ್ನು ಕಣ್ಣೆತ್ತಿ ನೋಡಲಾರವು! ನಮ್ಮನ್ನು ಸಮೀಪಿಸಲಾರವು! ನಮಗೆ ಬೋಧಿಸಲಾರವು! ನಮ್ಮನ್ನು ಪ್ರೇರಿಸಲಾರವು! ಎಂದ ಮೇಲೆ, ಸವಿಸವಿಯೂಟಗಳನ್ನುಂಡು ವೀಳ್ಯವನ್ನು ಮೆಲ್ಲುತ್ತಲೂ, ಚಕ್ಕಂದವಾಡುತ್ತಲೂ ಕೇವಲ ತಾಮಸವೃತ್ತಿಯಿಂದ ಕಾಲಕಳೆಯುತ್ತಿರುವ ನಮ್ಮಂಥ ವಿಚಾರಶೂನ್ಯರಾದ ಕನ್ನಡಿಗರಲ್ಲಿ ಅವುಗಳ ನೋಟದಿಂದ ಉಚ್ಚಭಾವನೆಗಳು ಉಕ್ಕಿ ಬರುವ ಮಾತಂತೂ ದೂರವೇ ಸರಿ! ಕನ್ನಡಿಯಲ್ಲಿ ನಮ್ಮ ಮುಖವು ಕಾಣಿಸಬೇಕಾದರೆ ಅದು ಸ್ವಚ್ಛವಾಗಿರಬೇಕು. ಹಾಗೆಯೇ ಇಂಥ ಉದಾತ್ತ ಕಲ್ಪನೆಗಳು ನಮ್ಮಲ್ಲಿ ಮೂಡಬೇಕಾದರೆ, ನಮ್ಮ ಮನಸ್ಸು ಶುದ್ಧವೂ ಸಾತ್ವಿಕಾಹಂಕಾರದಿಂದೊಡಗೂಡಿದ್ದೂ ಇರಬೇಕು. ಯಾವ ಮನುಷ್ಯನಲ್ಲಿ ಸಾತ್ವಿಕಾಹಂಕಾರದ ಕಿರಣಗಳು ಕಾಣಬರುವುದಿಲ್ಲವೋ ಅವನ ಬಾಳು ಬಾಳಲ್ಲ. ಅದು ಭೂಭಾರವು.
ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಧೀಂಕಿಡುವುದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ, ತಳಮಳಿಸುವುದಿಲ್ಲವೋ, ರೋಮ ರಂಧ್ರಗಳಲ್ಲಿ ಕೂಡ `ಕರ್ನಾಟಕವೆಂಬ ಸೊಲ್ಲು ಹೊರಡುವದಿಲ್ಲವೋ, ಅದು ಹೃದಯವಲ್ಲ; ಕಲ್ಲಿನ ಬಂಡೆ! ದೇಹವಲ್ಲ; ಮೋಟುಮರ! ಇಂಥ ಚೇತನವಿಲ್ಲದಿರುವ ಜನರಿಗೆ ಕಣ್ಣೀರಿಡುತ್ತಿರುವ ಆ ಕನ್ನಡ ತಾಯಿಯ ಗೋಳಿನಿಂದೇನು! ಕಳಚಿ ಬೀಳುತ್ತಿರುವ ಆ ಗುಡಿಗೋಪುರಗಳಿಂದೇನು! ಬಾಯಿಯಿಲ್ಲದ ಉಚ್ಚಧ್ವನಿಯಿಂದ ಕೂಗುತ್ತಿರುವ ಆ ವಾಙ್ಮಯದಿಂದೇನು! ಕಾಡುಬೀಡುಗಳಲ್ಲಿ ಕೇಳುವವರಿಲ್ಲದೆ ಸುಮ್ಮನೆ ಗಂಟಲು ಹರಿದುಕೊಂಡು ಕೂಗಿ ಹೊಗಳುಭಟ್ಟರಂತೆ ತಮ್ಮ ವೀರರನ್ನೂ, ವೀರಸತಿಯರನ್ನೂ ಹೊಗಳುತ್ತಿರುವ ಆ ವೀರಗಲ್ಲು, ಮಹಾಸತಿ ಕಲ್ಲುಗಳಿಂದೇನು! ಆದುದರಿಂದ, ಎಲೈ ಕನ್ನಡಿಗರೇ! ನೀವು ಕರ್ನಾಟಕಾಭಿಮಾನ ದೇವತೆಯನ್ನು ಪ್ರಸನ್ನೀಕರಿಸಿಕೊಂಡು, ಅವಳ ಅಮರತ್ವವನ್ನು ಜ್ಞಾನದೃಷ್ಟಿಯಿಂದ ಕಂಡುಹಿಡಿದು, ಅವಳ ಇತಿಹಾಸವನ್ನು ಆದ್ಯಂತವಾಗಿ ಪರಿಶೀಲಿಸಿ, ಕನ್ನಡಿಗರೆಂಬ ನಿಮ್ಮ ಹೆಸರನ್ನು ಸಾರ್ಥಕಪಡಿಸಿಕೊಳ್ಳಿರಿ.

೩ನೆಯ ಪ್ರಕರಣ

ಕರ್ನಾಟಕ-ವಿಸ್ತಾರ


ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯವಿಲೀನವಿಶದವಿಷಯವಿಶೇಷಂ ||
-ನೃಪತುಂಗ


ವಾಚಕರೇ! ಹಿಂದಿನ ಪ್ರಕರಣದಲ್ಲಿ ನಾವು ನಿಮಗೆ ಕರ್ನಾಟಕದ ಇತಿಹಾಸವನ್ನು ಅಭ್ಯಸಿಸಲಿಕ್ಕೆ ಹೇಳಿರುವೆವಷ್ಟೇ! ಆದರೆ ಕರ್ನಾಟಕವೆಂದರೇನು? ಅದರ ವ್ಯಾಪ್ತಿಯೆಷ್ಟು?ಎಂಬುದೇ ಮೊದಲು ಮನಸ್ಸಿನಲ್ಲಿರದಿದ್ದರೆ, ಅದರ ಇತಿಹಾಸವನ್ನು ಅಭ್ಯಸಿಸುವ ಬಗೆ ಹೇಗೆ? ಕರ್ನಾಟಕವೆಂದರೆ, ಮುಂಬಯಿ ಇಲಾಖೆಯಲ್ಲಿರುವ ಧಾರವಾಡ, ಬೆಳಗಾವಿ, ವಿಜಾಪುರ, ಕಾರವಾರ ಈ ನಾಲ್ಕು ಜಿಲ್ಲೆಗಳು; ಮದ್ರಾಸ ಇಲಾಖೆಗೆ ಸೇರಿರುವ ಬಳ್ಳಾರಿ, ಅನಂತಪುರ, ಮಂಗಳೂರು ಈ ಜಿಲ್ಹೆಗಳು; ಹೈದರಾಬಾದ ಸಂಸ್ಥಾನಕ್ಕೆ ಹೊಂದಿದ ರಾಯಚೂರು, ಕಲಬುರ್ಗಿ, ಬೀದರ ಮೊದಲಾದವುಗಳು; ಇದೇ ಮೈಸೂರು ಸಂಸ್ಥಾನ; ಸಾಂಗಲಿ, ಮಿರಜಿ, ಜಮಖಂಡಿ, ಕೊಲ್ಲಾಪೂರ, ಕುರಂದವಾಡ, ಮುಧೋಳ, ರಾಮದುರ್ಗ ಸಂಸ್ಥಾನಗಳೊಳಗಿನ ಕೆಲವು ಭಾಗಗಳು; ಕೊಡಗು ಪ್ರಾಂತ-ಇವಿಷ್ಟೇ ಎಂದು ನಮ್ಮ ಕಲ್ಪನೆ, ಈ ತಪ್ಪು ತಿಳಿವಳಿಕೆಯನ್ನು ನೀವು ನಿಮ್ಮ ತಲೆಯೊಳಗಿಂದ ಮೊದಲು ಕಿತ್ತುಹಾಕಿರಿ! ಹಿಂದಿನ ಕರ್ನಾಟಕವು ಕರಗುತ್ತ ಕರಗುತ್ತ ಹೋಗಿ, ಈಗ ಅದರ ಕಾಲುಪಾಲು ಮಾತ್ರ ಉಳಿದುಕೊಂಡಿದೆ. ಅದರ ಕೆಲವು ಭಾಗವು ಮಹಾರಾಷ್ಟ್ರಕ್ಕೂ, ಕೆಲವು ಭಾಗವು ತೆಲುಗು ಸೀಮೆಗೂ, ಕೆಲವು ಭಾಗವು ತಮಿಳು ಮುಂತಾದ ಭಾಷೆಗಳನ್ನಾಡುವ ಸೀಮೆಗೂ ಸೇರಿಹೋಗಿದೆ. ಆದುದರಿಂದ ನಾವು ಈ ಪ್ರಕರಣದಲ್ಲಿ ಹಿಂದಕ್ಕೆ ಕನ್ನಡ ಭಾಷೆಯ ವಿಸ್ತಾರವು ಎಲ್ಲಿಯವರೆಗಿತ್ತೆಂಬುದನ್ನು ಹೇಳುವವರಿದ್ದೇವೆ.

ಹಿಂದಕ್ಕೆ ಕರ್ನಾಟಕ ಮತ್ತು ಕನ್ನಡ ಭಾಷೆಯ ಪ್ರದೇಶ ಇವೆರಡೂ ಸಮಾನಾರ್ಥಕ ಶಬ್ದಗಳಾಗಿರಲಿಲ್ಲ. ಕನ್ನಡ ಭಾಷೆಯನ್ನಾಡುವ ಪ್ರದೇಶಗಳಲ್ಲಿ `ಕರ್ನಾಟಕ, ಮಹಾರಾಷ್ಟ್ರ, ಲಾಟ, ಕುಂತಳ, ಕೊಂಕಣ, ಇವೇ ಮುಂತಾದ ಭಾಗಗಳಿದ್ದವು. ಆದರೆ ಮುಂದೆ ಬರಬರುತ್ತ `ಕರ್ನಾಟಕವೆಂಬ ಭಾಗವೇ ಹೆಚ್ಚು ಪ್ರಬಲವಾದುದರಿಂದ ಅದೇ ಹೆಸರು ಕನ್ನಡದೇಶಕ್ಕೆಲ್ಲ ರೂಢವಾಯಿತು. ಮತ್ತು ಇತಿಹಾಸ ದೃಷ್ಟಿಯಿಂದ ನೋಡಿದರೆ, ಕನ್ನಡ ದೇಶಕ್ಕೆ `ಕರ್ನಾಟಕವೆಂಬ ಹೆಸರೇ ಒಪ್ಪುತ್ತದೆಂದು ಕಂಡುಬರುವುದು. ಏಕೆಂದರೆ, ಕನ್ನಡ ಭಾಷೆಗೆ ಕರ್ನಾಟಕ ಅಥವಾ `ಕರ್ಣಾಟಕ'ವೆಂಬ ಹೆಸರು ಬಹು ಪುರಾತನ ಕಾಲದಿಂದಲೂ ನಡೆದುಬಂದಿದೆ. ಮಹಾಭಾರತದಲ್ಲಿಯೂ ಕೂಡ ಕರ್ನಾಟಕದ ಉಲ್ಲೇಖವು ಬಂದಿದೆ. ಕನ್ನಡಿಗರು ತಮ್ಮ ವೈಭವದ ಕಾಲದಲ್ಲಿ ತಮ್ಮನ್ನು `ಕರ್ನಾಟಕ'ರೆಂತಲೇ ಹೇಳಿಕೊಳ್ಳುತ್ತಿದ್ದರು. ಚಾಲುಕ್ಯರ ದಂಡಿಗೆ `ಕರ್ನಾಟಕ ಬಲವೆಂಬ ಹೆಸರಿರುವುದಾಗಿ ಶಿಲಾಲಿಪಿಯಿಂದ ತಿಳಿದುಬರುತ್ತಿದೆ. ವಿಜಯನಗರದ ಸಾಮ್ರಾಜ್ಯ ಸ್ಥಾಪಕರಾದ ವಿದ್ಯಾರಣ್ಯರಿಗೆ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯರೆಂಬ ಬಿರುದಿತ್ತು. ಮೈಸೂರು ಸಂಸ್ಥಾನದ ಮಹಾರಾಜರಿಗೆ `ಕರ್ನಾಟಕದ ಅರಸರೆಂದೆನ್ನುವರಲ್ಲದೆ, ಮೈಸೂರು ಮಹಾರಾಜರೆಂದೆನ್ನುವುದಿಲ್ಲವೆಂಬುದನ್ನು ಮೈಸೂರಿನವರು ಮರೆಯಕೂಡದು. ಇವೆಲ್ಲ ಸಂಗತಿಗಳನ್ನು ಮನಸ್ಸಿನಲ್ಲಿ ತಂದುಕೊಂಡರೆ, ಭಾಷಾದೃಷ್ಟಿಯಿಂದಲೂ ರಾಜ್ಯ ವಿಸ್ತಾರದ ದೃಷ್ಟಿಯಿಂದಲೂ ಸಾರ್ಥಕವಾದ ಈ ಕರ್ನಾಟಕ ಅಥವಾ `ಕರ್ಣಾಟಕವೆಂಬ ಹೆಸರನ್ನೇ ಕನ್ನಡಿಗರೆಲ್ಲರೂ ಅಭಿಮಾನಪೂರ್ವಕವಾಗಿ ಎತ್ತಿಕೊಂಡಿರುವುದೇನೂ ಆಶ್ಚರ್ಯವಲ್ಲ.

ಇರಲಿ; ಇನ್ನು ಕನ್ನಡ ಭಾಷೆಯು ಹಿಂದೆ ಎಲ್ಲಿಯವರೆಗೆ ಹಬ್ಬಿತ್ತೆಂಬುದನ್ನು ವಿಚಾರ ಮಾಡುವ. ೯ನೆಯ ಶತಮಾನದಲ್ಲಿ ಅದು ಉತ್ತರದಲ್ಲಿ ಗೋದಾವರಿಯಿಂದ ದಕ್ಷಿಣಕ್ಕೆ ಕಾವೇರಿಯವರೆಗೆ ಹಬ್ಬಿತ್ತೆಂಬುದಕ್ಕೆ ನೃಪತುಂಗನ ಕವಿರಾಜಮಾರ್ಗದಲ್ಲಂತೂ ಬಲವಾದ ಪ್ರಮಾಣವಿದೆ (ಶಿರೋಲೇಖದ ಪದ್ಯವನ್ನು ನೋಡಿರಿ.) ಇದೇ ವಿಧಾನವನ್ನು ೧೬ನೆಯ ಶತಮಾನದಲ್ಲಿಯ ನಂಜುಂಡನೆಂಬ ಕವಿಯು ತನ್ನ `ಪರದಾರಸೋದರ ರಾಮನಾಥ ಚರಿತವೆಂಬ ಗ್ರಂಥದ ಎರಡನೆಯ ಸಂಧಿಯಲ್ಲಿ
ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳಯಂ |
ಭಾವಿಸ ಕರ್ನಾಟಕ ಜನಪದವದನಾವನೊಲಿದು ಬಣ್ಣಿಸುವನು ||

ಎಂಬುದಾಗಿ ಬಲಪಡಿಸುವನು. ಸಾರಾಂಶ: ಕರ್ನಾಟಕದ ವ್ಯಾಪ್ತಿಯು ಆಗಿನ ಕಾಲಕ್ಕೆ ಕಾವೇರಿಯಿಂದ ಗೋದಾವರಿಯವರೆಗೆ ಇತ್ತೆಂಬುದು ಸ್ಪಷ್ಟವಾಗುತ್ತದೆ. ಆದರೆ ಈ ಪದ್ಯಗಳನ್ನು ಅನೇಕರು ಓದಿದ್ದರೂ, ಕನ್ನಡ ನಾಡಿನ ಚತುಸ್ಸೀಮೆಯನ್ನು ಇದುವರೆಗೂ ಯಾರೂ ಗೊತ್ತು ಮಾಡಿರುವುದಿಲ್ಲ. ವಿಜಯನಗರದ ಸಾಮ್ರಾಜ್ಯದ ಕಾಲಕ್ಕೆ ಕರ್ನಾಟಕದ ಸೀಮೆಯು ದಕ್ಷಿಣಕ್ಕೆ ಮುಳುಬಾಯಿಯ(ಮುಳಬಾಗಿಲು)ವರೆಗೆ ಹರಡಿತ್ತೆಂಬುದು ಬುಕ್ಕರಾಯನ ಸೊಸೆಯಾದ ಗಂಗಾದೇವಿಯು ರಚಿಸಿದ ಕಾವ್ಯದೊಳಗಿನ ಕೆಳಗಿನ ಈ ಶ್ಲೋಕದಿಂದ ಗೊತ್ತಾಗುವುದು.

ಅಥ ಲಂಘಿತಕರ್ನಾಟಃ ಪಂಚಷ್ಟೇರೇವ ವಾಸರೈಃ |
ಪ್ರಾಪತ್ ಕಂಪಮಹೀಪಾಲಃ ಕಂಟಕಾನನಪತ್ತನಮ್ ||
-ವೀರ ಕಂಪರಾಯ ಚರಿತ, ೪-೪೭

ಸಾರಾಂಶ: ಐದು ದಿವಸದ ದಾರಿಯನ್ನು ನಡೆದ ಬಳಿಕ ಕಂಪಮಹೀಪಾಲನು ಕರ್ನಾಟಕವನ್ನು ದಾಟಿ ಕಂಟಕಾನನ (ಮುಳಬಾಗಿಲು) ಪಟ್ಟಣವನ್ನು ತಲ್ಪಿದನು. ಆದುದರಿಂದ ಹಿಂದಕ್ಕೂ ಕೂಡ ಕನ್ನಡನಾಡಿನ ಗಡಿಯು ಕಾವೇರಿಯ ನದಿಯವರೆಗೆ ಹಬ್ಬಿರಬಹುದೆಂಬುದಕ್ಕೆ ಸಂದೇಹವೆ ಇಲ್ಲ. ಈಗ ಕೂಡ ಅಲ್ಲಿಯವರೆಗೆ ಕನ್ನಡ ನುಡಿಯು ಪ್ರಚಾರದಲ್ಲಿರುವದರಿಂದ, ಕನ್ನಡನಾಡಿನ ದಕ್ಷಿಣ ಗಡಿಯ ನಿಷ್ಕರ್ಷೆಯಾದಂತಾ
ತು. ಇನ್ನು ಪೂರ್ವಕ್ಕೆ ಕಾವೇರಿನದಿಯ ನಡುವಿನಿಂದ ಉತ್ತರಕ್ಕೆ ಸುಮಾರು ಗೋದಾವರೀ ನದಿಯ ಮುಖದವರೆಗೆ ಗೆರೆಯನ್ನೆಳೆದರೆ ಅದು ಕನ್ನಡನಾದಿನ ಪೂರ್ವ ಸೀಮೆಯಾಗಬಹುದು. ಇದಲ್ಲದೆ, ಮಾಮೂಲನಾರ್ ಎಂಬ ತಮಿಳು ಕವಿಯು ಬರೆದ ಕುರುಂಟೋಕಾಯಿ ಎಂಬುದೊಂದು ತಮಿಳು ಪುಸ್ತಕದಲ್ಲಿ ತಮಿಳುಭಾಷೆಯ ಸೀಮೆಯನ್ನು ವರ್ಣಿಸುವುದರ ಮೇಲಿಂದ ಕನ್ನಡ ಭಾಷೆಯ ಆಗ್ನೇಯ ಗಡಿಯು ಪುಲಿಕೋಟ್ (ಪಳವೇರ್ಕಾಡು) ಎಂಬ ಪಟ್ಟಣದವರೆಗೆ ಇತ್ತೆಂದು ಊಹಿಸಲಿಕ್ಕೆ ಆಸ್ಪದವಾಗಿದೆ. ಪಶ್ಚಿಮದಿಕ್ಕಿನಲ್ಲಿ ಅರಬೀಸಮುದ್ರವೇ ಕೊನೆಯ ಸೀಮೆಯಾಗಿತ್ತೆಂಬುದು ಕೊಂಕಣದಲ್ಲಿ ದೊರೆಯುವ ಶಿಲಾಲಿಪಿಗಳಿಂದ ಗೊತ್ತಾಗುತ್ತದೆ. ಇನ್ನು ವಾಯವ್ಯ ಮತ್ತು ಉತ್ತರದ ಗಡಿಗಳನ್ನು ನಿಶ್ಚಯಿಸುವುದು ಮಾತ್ರ ಬಹು ಕಠಿಣವಾದ ಕೆಲಸವಾಗಿದೆ. ಏಕೆಂದರೆ, ಅತ್ತಕಡೆಯಿಂದ ಮರಾಠರ ದಾಳಿಯು ನಮ್ಮ ನಾಡಿನ ಮೇಲೆ ಬಲವಾಗಿ ಬಿದ್ದು, ಅದನ್ನು ಬಲು ಕೆಳಕ್ಕೆ ಒತ್ತಿದೆ. ಹೀಗೆ ನಿಜವಾದ ಕರ್ನಾಟಕವೆಲ್ಲವೂ ಮಹಾರಾಷ್ಟ್ರಮಯವಾಗಿರುವುದರಿಂದ, ಉತ್ತರಕ್ಕೆ ಗೋದಾವರಿಯವರೆಗೆ ನಮ್ಮ ಕನ್ನಡನಾಡು ಹಬ್ಬಿತ್ತೆಂದು ಹೇಳಿದರೆ, ನಮ್ಮ ಕನ್ನಡಿಗರು ಅದು ಸುಳ್ಳೆಂದೇ ಭಾವಿಸುವರು. ಈಗಿನ ಮಹಾರಾಷ್ಟ್ರದ ಪೂರ್ವಕ್ಕೆ ತೆಲಗು ದೇಶದಲ್ಲಿ ಗೋದಾವರಿಯ ತೀರದವರೆಗೆ ಕನ್ನಡನಾಡು ಹಿಂದಕ್ಕೆ ಹಬ್ಬಿದ್ದರೂ ಹಬ್ಬಿರಬಹುದು; ಮಹಾರಾಷ್ಟ್ರದಲ್ಲಿ ಮಾತ್ರ ಕನ್ನಡದ ಪ್ರವೇಶವಿರಲಿಲ್ಲವೆಂದು ಅನೇಕರು ಇನ್ನೂ ನಂಬುತ್ತಾರೆ. ಆದರೆ ಈ ವಿಷಯವನ್ನು ಚೆನ್ನಾಗಿ ಅಭ್ಯಾಸ ಮಾಡಿದ ನಮ್ಮ ಪರಮ ಸ್ನೇಹಿತರಾದ ನಾರಾಯಣ ಶ್ರೀನಿವಾಸ ರಾಜಪುರೋಹಿತ ಇವರು `ಜ್ಞಾನೇಶ್ವರಿಯಲ್ಲಿ ಕನ್ನಡ ಶಬ್ದಗಳು ತುಂಬಿರುತ್ತವೆಂದೂ, ಗೋವೆಯಲ್ಲಿಯ ಲೆಕ್ಕಪತ್ರಗಳು ಮೊನ್ನೆ ಮೊನ್ನಿನವರೆಗೆ ಕನ್ನಡದಲ್ಲಿಯೆ ಇದ್ದುವೆಂದೂ, ಪಂಢರಪುರದ ಶ್ರೀವಿಠ್ಠಲನು ಮುಖ್ಯವಾಗಿ ಕನ್ನಡಿಗರ ದೇವತೆಯೇ ಎಂದೂ, ಪಂಢರಪುರದ ಸುತ್ತಲಿನ ಪ್ರದೇಶವು ಕನ್ನಡವೇ ಎಂದೂ, ಈಗ ೨೭ ವರ್ಷಗಳ ಕೆಳಗೆಯೇ ಮರಾಠೀ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಪ್ರಸಿದ್ಧ ಕೇಸರೀ ಪತ್ರದಲ್ಲಿ ಮಹಾರಾಷ್ಟ್ರ ವ ಕರ್ನಾಟಕ ಎಂಬ ಲೇಖನಮಾಲೆಯಲ್ಲಿ ಸಪ್ರಮಾಣವಾಗಿ ಸಾಧಿಸಿರುವರು. ಆದರೆ ಇದೇ ವಿಷಯವನ್ನು ವ್ಯಾಸಂಗ ಮಾಡುತ್ತಿರುವಾಗ, ನಮಗೆ ಗೊತ್ತಾದ ಕೆಲವು ಮಹತ್ವದ ಹೆಚ್ಚಿನ ಸಂಗತಿಗಳನ್ನು ಇಲ್ಲಿ ನಾವು ಹೇಳುವೆವು. ಇತಿಹಾಸ ಸಂಶೋಧಕರು ಆ ಮಾರ್ಗದಿಂದ ಮುಂದೆ ಸಾಗಿ, ಹೆಚ್ಚಿನ ಶೋಧಗಳನ್ನು ಮಾಡಿ, ಈಗಿನ ಮಹಾರಾಷ್ಟ್ರ ಭಾಷೆಯ ನಾಡಿನಲ್ಲಿ, ಕನ್ನಡಿಗರ ರಾಜ್ಯವಿಸ್ತಾರವಿದ್ದುದಲ್ಲದೆ, ಕನ್ನಡ ಭಾಷಾವಿಸ್ತಾರವು ಕೂಡ ಇತ್ತೆಂಬ ನಮ್ಮ ವಿಧಾನವನ್ನು ಹೆಚ್ಚಿಗೆ ಬಲಪಡಿಸಬೇಕೆಂದು ನಮ್ಮ ಪ್ರಾರ್ಥನೆ. ನಮಗೆ ಗೊತ್ತಾದ ಸಂಗತಿಗಳು ಯಾವುವೆಂದರೆ: (೧) ಮಹಾರಾಷ್ಟ್ರ ಭಾಷೆಯಲ್ಲಿ ಊರಿನ ಹೆಸರುಗಳು ಬಹುತರವಾಗಿ ಕನ್ನಡದ ಹೆಸರುಗಳೇ ಇರುತ್ತವೆಂಬುದನ್ನು ಕೇಳಿ, ಕನ್ನಡಿಗರಿಗೆ ಆನಂದವೂ ಆಶ್ಚರ್ಯವೂ ಆಗದಿರದು, ಕೆಂದೂರು ಎಂಬ ಶುದ್ಧ ಕನ್ನಡ ಹೆಸರಿನ ಊರು ಪುಣೆಯ ಹತ್ತರ ಇರುತ್ತದೆ. ಇದಲ್ಲದೆ, ಠಾಣಾ, ಕುಲಾಬಾ, ರತ್ನಾಗಿರಿ ಮುಂತದ ಮರಾಠೀ ಜಿಲ್ಹೆಗಳಲ್ಲಿಯೂ, ಕನ್ನಡ ಹೆಸರಿನ ಗ್ರಾಮಗಳು ತುಂಬಿರುತ್ತವೆ. ಉದಾಹರಣೆಗಾಗಿ ಪೊಯನಾಡು, ಶಿರೋಳ, ಕಲ್ಲಮಠ, ದೇವರಕೊಪ್ಪ, ಅಕ್ಕಲಕೊಪ್ಪ, ಉಳವಿ, ಅತ್ತಿಗೇರೆ, ಮೊಸಳೆ, ನೇರೂರು, ಪಾಳೆ, ದೇವೂರು, ಡೋಣಿ, ನಿರ್ಗಡೆ, ಕಣಕವಲ್ಲಿ, ಬ್ರಹ್ಮನಾಳ, ಗಾಣಗಾಪುರ, ಕುರಡೀವಾಡಿ, ಕಳಸ ಇವೇ ಮುಂತಾದ ಗ್ರಾಮಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತವೆ. ಮಹಾರಾಷ್ಟ್ರದಲ್ಲಿಯ ಸುಮಾರು ಅರ್ಧಕ್ಕಿಂತ ಹೆಚ್ಚು ಊರ ಹೆಸರುಗಳು ಕನ್ನಡವಿರುತ್ತವೆಂದು ಮಹಾರಾಷ್ಟ್ರದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀ ರಾಜವಾಡೆಯವರು ಮೊನ್ನೆ ಮೊನ್ನೆ ಒಪ್ಪಿಕೊಂಡಿದ್ದಾರೆ. (೨) ಅಣ್ಣಂಭಟ್ಟ, ಕೃಷ್ಣಂಭಟ್ಟ ಮುಂತಾದ ಅಲ್ಲಿ ರೂಢವಿರುವ ಹೆಸರುಗಳೊಳಗಿನ ಮಕಾರವು ಕನ್ನಡ ಪ್ರತ್ಯಯವಾಗಿದೆ. (೩) ಸಾತಾರಾ ಮುಂತಾದ ಸ್ಥಳಗಳಲ್ಲಿಯ ಜೈನರು ಬುನಾದಿಯಿಂದಲೂ ಕನ್ನಡ ಭಾಷೆಯನ್ನು ಆಡುತ್ತಾರೆ. (೪) ಕರ್ನಾಟಕದಲ್ಲಿಯ ಹಲವು ಮನೆತನದ ಕುಲದೇವತೆಗಳು ಮಹಾರಾಷ್ಟ್ರದಲ್ಲಿವೆ. ಧೌಮನರಸಿಂಹ, ನೀರಾನರಸಿಂಹ, ಕೋಹಳೆನರಸಿಂಹ, ತುಳಜಾಭವಾನಿ ಇವೇ ಅವು. (೫) ಕರ್ನಾಟಕದಲ್ಲಿಯ ಗುಡಿಗಳೊಳಗಿನ ಆಚಾರ-ಪದ್ಧತಿಗಳೇ ಮಹಾರಾಷ್ಟ್ರದಲ್ಲಿಯೂ ಕಂಡುಬರುತ್ತವೆ. ನಮ್ಮ ಮಿತ್ರರಾದ ಶ್ರೀ ರಾಜಪುರೋಹಿತರು ದೇವರಗುಡ್ಡದಲ್ಲಿಯ ಗುಡಿಗೂ, ಜೇಜೂರಿನಲ್ಲಿರುವ ಗುಡಿಗೂ ಇರುವ ಸಾಮ್ಯವನ್ನು ಸಿದ್ಧಪಡಿಸಿರುವರು. ಅದರಂತೆಯೇ ಚಿಪಳೂಣದ ಹತ್ತಿರಿರುವ ಪರಶುರಾಮ-ರೇಣುಕಾ ಗುಡಿಯು ಸವದತ್ತಿಯ ಎಲ್ಲಮ್ಮನ ಗುಡಿಗೆ ಸಾಮ್ಯವಾಗಿರುತ್ತದೆ. (೬) ಮುಂಬಯಿಯ ಸುತ್ತಮುತ್ತಲಿನ ದೇಶವನ್ನು ಆಳುತ್ತಿದ್ದ ಶಿಲಾಹಾರ ಅರಸರು ಕನ್ನಡಿಗರಾಗಿದ್ದಾರೆಂದು ಮುಂಬಯಿ ಗ್ಯಾಝಿಟಿಯರ (Bombay Gazetteer) ದಲ್ಲಿ ಉಲ್ಲೇಖವಿದೆ. (೭) ಕೊಲ್ಲಾಪುರದ ಅರಸುಮನೆತನದ ಲಗ್ನಗಳಲ್ಲಿ ಬಿಸಿಲೂಟ ಎಂಬುವ ಪದ್ಧತಿಯು ಉಂಟಂತೆ. (೮) ಹಿಂದೂ ದೇಶದ ಬ್ರಾಹ್ಮಣರಲ್ಲಿ ಪಂಚದ್ರಾವಿಡರೆಂತಲೂ, ಪಂಚಗೌಡರೆಂತಲೂ ವರ್ಗಗಳು ಉಂಟು. ಮಹಾರಾಷ್ಟ್ರದೊಳಗಿನ ಕೊಂಕಣಸ್ಥ ಮತ್ತು ದೇಶಸ್ಥ ಬ್ರಾಹ್ಮಣರು ಪಂಚದ್ರಾವಿಡರಲ್ಲಿ ಸೇರಿರುತ್ತಾರೆ. ಇದಕ್ಕೆ ಕಾರಣವೇನಿರಬಹುದು? (೯) ಸಾವಂತವಾಡಿಯಿಂದ ಕೊಂಕಣಕ್ಕೆ ಹೋಗುವ ಮಾರ್ಗಕ್ಕೆ ದೊಡಾಮಾರ್ಗ (ದೊಡ್ಡ ಮಾರ್ಗ) ಎಂದು ಈಗಲೂ ಕರೆಯುತ್ತಾರೆ. (೧೦) ಕೊಂಕಣದಲ್ಲಿಯ ಮಹಾರಾಷ್ಟ್ರ ಭಾಷೆಯಲ್ಲಿ 'ಮಣೆ','ನಿಚ್ಚಣೆ' ಮುಂತಾದ ಕನ್ನಡ ಹೆಸರುಗಳಿರುತ್ತವೆ. (೧೧) ಜಕಣಾಚಾರ್ಯರು ಕಟ್ಟಿದ ಕಟ್ಟಡಗಳು ಮಹಾರಾಷ್ಟ್ರದಲ್ಲಿಯೂ ಇವೆ. ಅವುಗಳಿಗೆ ಅವರು ಹೇಮಾಡಪಂತೀ ಗುಡಿಗಳೆಂದೂ ಹೇಳುತ್ತಾರೆ. (೧೨) ಇನ್ನೂ ಮಹತ್ವವುಳ್ಳ ಸಂಗತಿಯೇನೆಂದರೆ, ಮಧ್ಯ ಮಹಾರಾಷ್ಟ್ರದಲ್ಲಿ ಕನ್ನಡ ಶಿಲಾಶಾಸನಗಳೂ, ವೀರಗಲ್ಲುಗಳೂ ದೊರೆತಿವೆ. ಸಾತಾರಾ ಜಿಲ್ಹೆಯ ಮಸವಡ ಎಂಬ ಗ್ರಾಮದಲ್ಲಿ ಒಂದು ಕನ್ನಡ ಶಿಲಾಶಾಸನವು ದೊರೆತಿದೆ. ಇದಲ್ಲದೆ, ಈ ವಿಷಯವನ್ನು ಕುರಿತು ನಾವು ವ್ಯಾಸಂಗ ಮಾಡುವಾಗ, ಕುಲಾಬಾ ಜಿಲ್ಹೆಯ 'ಚೌಲ' ಎಂಬ ಗ್ರಾಮದಲ್ಲಿ ಕನ್ನಡ ಶಿಲಾಲಿಪಿಯೊಂದು ಸಿಂಕ್ಲೇಯರ ಸಾಹೇಬರಿಗೆ (W.S.Sinelair)೧೮೭೪ನೆಯ ಫೆಬ್ರುವರಿಯಲ್ಲಿ ದೊರೆತಂತೆ ಇಂಡಿಯನ್ ಎಂಟಿಕ್ವೇರಿ (Indian Antiquary)ಯ ೭ನೆಯ ಸಂಪುಟದ ೨೩೪ನೆಯ ಪುಟದಲ್ಲಿ ಉಲ್ಲೇಖವಿರುವದಾಗಿ ನಾವು ಓದಿರುವೆವು. ವಾಚಕರ ಅವಲೋಕನಾರ್ಥವಾಗಿ ಅದರ ಕೆಲವು ಭಾಗವನ್ನು ಇಲ್ಲಿ ಕೊಡುತ್ತೇವೆ."Between the temples and cenotaph the toddy-drawers,whetting their knifes at the time of my visit upon a loose slab, bearing a Kanarese inscription a thing of itself (philologically speaking) very remarkable in so thoroughy Maratha country, as in North Konkan. A little money and a good deal of diplomacy enabled me to place it in the collection of the Bombay Branch of the Royal Asiatic Society, where it has remained unheeded, from that day to this upon a landing place, where scholars passed it every week."
ಸಾರಾಂಶ:
ನಾನು ಅಲ್ಲಿಗೆ ಹೋದಾಗ, ಅಲ್ಲಿರುವ ಗುಡಿ ಮತ್ತು ಸಮಾಧಿಗಳ ನಡುವೆ ಹೆಂಡ ತೆಗೆಯುವವರು ಒಂದು ಕಲ್ಲಿಗೆ ತಮ್ಮ ಚೂರಿಗಳನ್ನು ಮಸೆಯುತ್ತಾ ಕುಳಿತುಕೊಂಡುದನ್ನು ಕಂಡೆನು, ನೋಡುವಷ್ಟರಲ್ಲಿ ಆ ಕಲ್ಲು ಕನ್ನಡ ಶಿಲಾಲೇಖವಾಗಿತ್ತು. ಉತ್ತರ ಕೊಂಕಣದಂಥ ನಡುಮಹಾರಾಷ್ಟ್ರದಲ್ಲಿ, ಈ ತರಹದ ಕನ್ನಡ ಶಿಲಾಲೇಖವು ದೊರೆತುದು ಭಾಷಾಶಾಸ್ತ್ರದ ದೃಷ್ಟಿಯಿಂದ ನಿಜವಾಗಿ ಮಹತ್ವದ ಸಂಗತಿಯಲ್ಲವೇ? ಸ್ವಲ್ಪ ಹಣವನ್ನೂ ಬಹಳ ಯುಕ್ತಿಯನ್ನು ವಿನಿಯೋಗಿಸಿ ನಾನು ಆ ಶಿಲಾಲೇಖವನ್ನು ಸಂಪಾದಿಸಿ ಅದನ್ನು ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಮುಂಬಯಿ ಶಾಖೆಯಲ್ಲಿರುವ, ವಸ್ತು ಸಂಗ್ರಹಗಳಲ್ಲಿ ಇಟ್ಟೆ. ಅಂದಿನಿಂದ ಇಂದಿನವರೆಗೆ ಅದು ಪಂಡಿತರು ಪ್ರತಿವಾರ ಹಾಯ್ದು ಹೋಗುವ ದಾರಿಯ ಹತ್ತಿರವೇ ಹೊರಳಾಡುತ್ತ ಬಿದ್ದಿದೆ!
ಕನ್ನಡಿಗರೇ, ಇಂಥ ಮಹತ್ವದ ಶಿಲಾಲಿಪಿಯು ಬೆಳಕಿಗೆ ಬಂದು ಮೂರು ತಪಗಳಾಗಿ ಹೋದರೂ, ಅದು ಕನ್ನಡಿಗರಿಗೆ ಮಾತ್ರ ಕಾಣದಿರುವುದು ಏತರ ಹೆಗ್ಗುರುತು? ಈ ಶಿಲಾಲೇಖವನ್ನು ನೋಡಬೇಕೆಂಬ ಅಪೇಕ್ಷೆಯಿಂದ ನಾವು ಮುಂಬಯಿಯಲ್ಲಿ ನಾಲ್ಕು ದಿವಸಗಳವರೆಗೆ ಅದನ್ನು ಹುಡುಕಿದರೂ ಅದು ನಮಗೆ ದೊರೆಯದೇಹೋಯಿತು. ಆ ಸಂಸ್ಥೆಯ ಪಟ್ಟಿ (catalogue) ಯಲ್ಲಿಯೂ ಅದರ ಹೆಸರು ಸೇರಿದಂತೆ ತೋರಲಿಲ್ಲ. ಸಂಶೋಧಕರು ಈ ವಿಷಯದಲ್ಲಿ ಹೆಚ್ಚು ಶ್ರಮವಹಿಸಬೇಕೆಂದು ನಮ್ಮ ಪ್ರಾರ್ಥನೆ.

(೧೩) ೧೯೧೫ನೆಯ ಇಸ್ವಿಯ ಮೇ ತಿಂಗಳಿನಲ್ಲಿ ನಾವು ಈ ವಿಷಯವನ್ನೇ ತಲೆಯಲ್ಲಿ ತುಂಬಿಕೊಂಡು ಕನ್ನಡಿಗರಿಗೆ ಅತ್ಯಂತ ಅಭಿಮಾನಾಸ್ಪದವಾದ ವೇರೊಳಿನ ಮೇಣಬಸ್ತಿಗಳನ್ನೂ, ಮೇಣಗುಡಿಗಳನ್ನೂ ನೋಡಲಿಕ್ಕೆ ಹೋಗಿದ್ದೆವು. ಆ ಕಾಲಕ್ಕೆ ಅಲ್ಲೇನಾದರೂ ಕನ್ನಡ ಶಿಲಾಲಿಪಿಯು ದೊರೆಯುತ್ತದೇನು ಎಂದು ಹುಡುಕುತ್ತಿರಲು, ನಮಗೆ ೩ನೆಯ ನಂಬರಿನ ಮೇಣಬಸ್ತಿಯ ಕಂಬದ ಮೇಲೆ ಕನ್ನಡ ಅಕ್ಷರದ ಶಿಲಾಲಿಪಿಯೊಂದು ಕಣ್ಣಿಗೆ ಬಿದ್ದಿತು. ಆಗ ನಮಗಾದ ಆನಂದವನ್ನು ಬಣ್ಣಿಸಲಳವಲ್ಲ. ವೇರೂಳ ಗ್ರಾಮವಿದ್ದ ತಾಲೂಕಿಗೆ ಕನ್ನಡವೆಂಬ ಹೆಸರು. ಸಾರಾಂಶ: ಇಂಥ ಶಿಲಾಲಿಪಿಗಳ ಶೋಧದಿಂದ ನಮ್ಮ ಕನ್ನಡಭಾಷೆಯು ಎಲ್ಲಿಯವರೆಗೆ ತನ್ನ ಕಾಲು ಚಾಚಿತ್ತೆಂಬುದು ವಾಚಕರ ಗಮನಕ್ಕೆ ಬಾರದಿರದು. ಆದರೆ ಆ ಕಾರ್ಯವು ಕನ್ನಡಿಗರಿಗಲ್ಲದೆ ಮತ್ತಾರಿಗೆ ಸಾಧ್ಯವು?

(೧೪) ಸಾತಾರೆಯ ಹತ್ತರ ಯವತೇಶ್ವರದಲ್ಲಿ ಜಕಣಾಚಾರ್ಯರ ಕಟ್ಟಿನದೊಂದು ಗುಡಿಯುಂಟು. ಆ ಗುಡಿಯ ಹತ್ತರ ಶಿಲಾಲೇಖವನ್ನು ಹುಡುಕುವಷ್ಟರಲ್ಲಿ ಸಮೀಪದ ಹೊಲದಲ್ಲೊಂದು ವೀರಗಲ್ಲು ದೊರೆಯಿತು. ಮರಾಠರಿಗೆ ಈ ವೀರಗಲ್ಲುಗಳ ಕಲ್ಪನೆಯಿಲ್ಲ.

ಈ ಬಗೆಯಾಗಿ ನಮಗೆ ಗೊತ್ತಾದ ಸಂಗತಿಗಳನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ಕೊಟ್ಟಿರುವೆವು, ಇವುಗಳಿಂದ ಯಾವ ನಿಶ್ಚಿತವಾದ ಸಿದ್ಧಾಂತವನ್ನೂ ತೆಗೆಯಲು ನಾವು ಈಗ ಧೈರ್ಯಗೊಳ್ಳುವುದಿಲ್ಲ. ಆಗಿನ ಕಾಲದ ಭಾಷಾವಿಸ್ತಾರವನ್ನಷ್ಟೇ ವರ್ಣಿಸುವುದು ಈಗಿನ ನಮ್ಮ ಉದ್ದೇಶವಿರುವುದರಿಂದ ಇಷ್ಟೊಂದು ವಿಸ್ತಾರವಾದ ಪ್ರದೇಶದಲ್ಲಿ ನಮ್ಮ ಕನ್ನಡ ಭಾಷೆಯು ತನ್ನ ವರ್ಚಸ್ಸನ್ನು ಹರಡಿತ್ತೆಂಬುದನ್ನು ಮೇಲೆ ಹೇಳಿದ್ದೇವೆ. ಇದರಿಂದ, ಕಠೋರವಾಗಿರುವ ಕನ್ನಡಿಗರ ಮನಸ್ಸಿನಲ್ಲಿ ಕನ್ನಡ ಭಾಷೆಯಲ್ಲಿಯ ಪೂಜ್ಯಬುದ್ಧಿಯೂ ಅಭಿಮಾನವೂ ಹೆಚ್ಚು ಘನವಾದರೆ, ನಮ್ಮ ಕಾರ್ಯವು ಕೈಗೂಡಿದಂತಾಯಿತು.

ಕನ್ನಡಿಗರೇ! ಈಗಿನ ಭಾಷಾವಿಸ್ತಾರಕ್ಕೂ, ಹಿಂದಿನ ಭಾಷಾವಿಸ್ತಾರಕ್ಕೂ ಹೋಲಿಸಿ ನೋಡಿರಿ. ಸದ್ಯಕ್ಕೆ ಕನ್ನಡ ಭಾಷೆಯು ಉತ್ತರದಲ್ಲಿ ಸಾಂಗಲಿಯವರೆಗೆ ಮಾತ್ರ ಹಾಗೂ ಹೀಗು, ಆಧುನಿಕ ಶಿಕ್ಷಣದ ಗಾಳಿಯು ಸೋಂಕದಿರುವಂಥ ಹಲ ಕೆಲವು ಜನರ ಬಾಯಿಯಲ್ಲಿ ಆಡುತ್ತಿರಬಹುದು. ಅದೂ ಕ್ರಮೇಣ ಮರಾಠೀಭಾಷೆಯ ಉರುಬಿಗೆ ಸಿಲುಕಿ, ಮೈಮುಚ್ಚಿಕೊಳ್ಳುತ್ತಲಿದೆ. ವಾಚಕರೇ, ನಮ್ಮ ದುರ್ದೈವದಿಂದಲೋ, ನಮ್ಮ ಮಾತೃಭಾಷೆಯ ದುರ್ದೈವದಿಂದಲೋ, ಒಂದು ಕಾಲಕ್ಕೆ ಕನ್ನಡನಾಡಿಗೆಲ್ಲ ದಿಗ್ದಂತಿಗಳಾಗಿ ಬಾಳಿದ ಪೊನ್ನ, ರನ್ನ ಮುಂತಾದವರು ಹುಟ್ಟಿದ ಊರುಗಳೇ ಪರಭಾಷೆಯಿಂದ ವ್ಯಾಪಿಸಲ್ಪಟ್ಟಿರುತ್ತವೆ. ಕನ್ನಡ ತಾಯ್ನುಡಿಯ ಕೊರಳಿಗೆ ಕೈಹಾಕಿ ದಬ್ಬುತ್ತಿರುವ ಈ ನೋಟವು ಯಾವ ಕನ್ನಡಿಗನ ಹೃದಯವನ್ನು ಕರಗಿಸದೆ ಇರದು? ಕನ್ನಡನಾಡೆಲ್ಲವೂ ಮಹಾರಾಷ್ಟ್ರಮಯವಾಗುತ್ತಿರುವುದು ಎಂಥ ಔದಾಸೀನ್ಯದ ಲಕ್ಷಣವು! ಪೂರ್ವಕ್ಕಿರುವ ಬಳ್ಳಾರಿಯಂಥ ಶುದ್ಧ ಕನ್ನಡ ಜಿಲ್ಲೆಯು ಕೂಡ, ಕನ್ನಡಿಗರ ನಿರಭಿಮಾನತೆಯ ಮೂಲಕ ತೆಲುಗಿನವರ ಇರುಕಿನಲ್ಲಿ ಸಿಕ್ಕಿಕೊಂಡು ಬಾಯ್ಬಿಡುತ್ತಿರುವ ನೋಟವು ಕನ್ನಡಿಗರ ಶೋಕಭಾರವನ್ನು ಇಮ್ಮಡಿಗೊಳಿಸದೆ ಇರದು. ಈ ಬಗೆಯಾಗಿ ನಮ್ಮ ಕಣ್ಣೆದುರಿಗೇನೇ ನಮ್ಮ ಭಾಷೆಯನ್ನು ಪರಭಾಷೆಗಳು ಕೆಳಗೆ ದೂಡುತ್ತಿರಲು,ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಸಾಹಿತ್ಯ ಪರಿಷತ್ ಮುಂತಾದ ಸಂಸ್ಥೆಗಳು ಇನ್ನೂ ಕಣ್ಣುಮುಚ್ಚಿಯೇ ಕುಳಿತಿರುವುದನ್ನು ಕೇಳಿ ಯಾವ ಕನ್ನಡಿಗನ ಮನಸ್ಸು ವ್ಯಸನಾಕ್ರಾಂತವಾಗಲಿಕ್ಕಿಲ್ಲ? ಕೊಡಗು, ನೀಲಗಿರಿ ಪ್ರಾಂತಗಳ ಜನರು ಕನ್ನಡಿಗರೇ ಇರುವರೆಂಬ ಜ್ಞಾನವೂ ನಮಗೆ ಇರಬಾರದೋ? ಧಿಕ್ಕಾರವಿರಲಿ ನಮ್ಮ ಔದಾಸೀನ್ಯಕ್ಕೆ!

ಕನ್ನಡಿಗರೇ! ಉಜ್ವಲವಾದ ನಿಮ್ಮ ಭಾಷೆಯು ಒಂದಾನೊಂದು ಕಾಲಕ್ಕೆ ಉತ್ತರದಲ್ಲಿ ಬಹುದೂರದವರೆಗೆ ಮನೆ ಮಾಡಿಕೊಂಡಿತ್ತೆಂಬ ಸಂಗತಿಯು ನಿಮ್ಮ ಹೃದಯವನ್ನು ಸ್ಫೂರ್ತಿಗೊಳಿಸಲಿ.

೪ನೆಯ ಪ್ರಕರಣ

ಕರ್ನಾಟಕ ವಿಭೂತಿಗಳು

ನಾಂತೋsಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ
ಏಷತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ || -ಗೀತೆ, ೧೦,೪೦

ಎಲೆ ಪರಂತಪ ದಿವ್ಯವೆನಿಸುವ |
ಹಲವು ಬಗೆಯ ವಿಭೂತಿವಿಭವಕೆ |
ಸಲೆ ಮೊದಲು ಕಡೆಯಿಲ್ಲವೆನ್ನಯ ಯೋಗಮಾಯೆಗಳ ||
ಚೆಲುವೆನಿಸುವ ವಿಭೂತಿವಿಸ್ತರ |
ಜಲಧಿಯೊಳು ನಾಂ ನಿನಗೆ ಪೇಳ್ದೆನು ||
-ನಾಗರಸ


ನಾವು ಹಿಂದಿನ ಪ್ರಕರಣದಲ್ಲಿ ವರ್ಣಿಸಿದ ಕರ್ನಾಟಕದ ವ್ಯಾಪ್ತಿಯನ್ನು ಓದಿ, ಅಹುದು; ನಿಮ್ಮ ಕರ್ನಾಟಕವು ಅಲ್ಲಿಂದ ಇಲ್ಲಿಯವರೆಗೆ ಹಬ್ಬಿರಬಹುದು. ಹಾಗಿದ್ದ ಮಾತ್ರಕ್ಕೆ ನೀವು ಅದರ ವಿಷಯವಾಗಿ ಅಭಿಮಾನಪಡುವುದು ಸರಿಯಾದೀತೋ? ಬರಿಯ ವಿಸ್ತಾರವನ್ನಷ್ಟೇ ತೆಗೆದುಕೊಂಡರೆ, ಆಫ್ರಿಕೆಯೊಳಗಿನ ಸಹರಾಬೈಲು ವಿಸ್ತಾರದಲ್ಲೇನು ಕಡಿಮೆಯಾಗಿರುವುದು? ನಿಮ್ಮ ಕರ್ನಾಟಕವೂ ಹಾಗೇ ಇದ್ದರೆ ಅದರಲ್ಲಿ ಯಾರಿಗೆ ತಾನೇ ಅಭಿಮಾನವುಂಟಾಗಬೇಕು? ನಮ್ಮಲ್ಲಿ ದೊಡ್ಡ ದೊಡ್ಡ ಅರಸರಾಗಿ ಹೋದರು, ಕವಿಪುಂಗವರಾಗಿ ಹೋದರು, ಧರ್ಮಸ್ಥಾಪಕರಾಗಿ ಹೋದರು ಎಂದು ಸಾಮಾನ್ಯವಾಗಿ ಹೇಳಿದ ಮಾತ್ರಕ್ಕೆ ತೀರಿತೆ? ಅವರು ಯಾರು? ಅವರು ಮಾಡಿದ ಮಹಾಕಾರ್ಯಗಳು ಯಾವುವು? ಎಂಬ ಜ್ಞಾನವು ನಮಗೆ ಬೇಡವೋ? ಹಾಗೆ ಜ್ಞಾನವಿಲ್ಲದಿದ್ದರೆ ಅದು ಒಣ ಅಭಿಮಾನವಾಗುವುದು ಎಂದು ಹಲವರು ಆಕ್ಷೇಪಿಸಬಹುದು. ಆದುದರಿಂದ ಹಾಗೆ ಅಭಿಮಾನಪಡಲಿಕ್ಕೆ ಯೋಗ್ಯವಾದ ಸಂಗತಿಗಳಾವುವೆಂಬುದನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸುವೆವು.

ವಾಚಕರೇ! ತನ್ನ ಜನಾಂಗವು ರಾಮಾಯಣ ಮಹಾಭಾರತ ಕಾಲದಿಂದಲೂ ಮೊನ್ನೆ ಮೊನ್ನಿನವರೆಗೆ ಹೆಸರುವಾಸಿಯಾಗಿತ್ತೆಂದು ಹೇಳಿದರೆ, ಯಾವನಿಗೆ ತಾನೇ ಆನಂದವಾಗಲಿಕ್ಕಿಲ್ಲ? ನಿಮ್ಮ ಕರ್ನಾಟಕವು ಅದೇ ಪ್ರಕಾರದ ರಾಷ್ಟ್ರವೆಂದು ತಿಳಿಯಿರಿ, ನಿಮ್ಮ ಕರ್ನಾಟಕವು ಶ್ರೀರಾಮಚಂದ್ರನ ಪಾದಧೂಳಿಯಿಂದ ಪಾವನವಾಗಿದೆ. ಶ್ರೀರಾಮಚಂದ್ರನು ಸುಗ್ರೀವನೊಡನೆ ಸಖ್ಯ ಬೆಳೆಸಿದ ಆ ಕಿಷ್ಕಿಂಧೆಯು (ಆನೆಗೊಂದಿ) ಇದೇ ಕರ್ನಾಟಕದಲ್ಲಿಯೇ ಉಂಟು. ಮಹಾಭಾರತ ಕಾಲದಲ್ಲಿ, ಚಂದ್ರಹಾಸನು ಈ ಕುಂತಲ ದೇಶದಲ್ಲಿಯೇ ರಾಜ್ಯವಾಳಿದನು. ಪೌರಾಣಿಕ ಕಾಲವನ್ನು ಬಿಟ್ಟು, ಐತಿಹಾಸಿಕ ಕಾಲಕ್ಕೆ ಇಳಿದರೂ, ಆಂಧ್ರ ಭೃತ್ಯ, ಕದಂಬ ಮುಂತಾದ ಬಲಾಢ್ಯ ರಾಜವಂಶಗಳು ಕ್ರಿಸ್ತಶಕದ ಆರಂಭಕ್ಕೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ವೈಭವದಿಂದ ಆಳಿರುತ್ತವೆ. ಆರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಕೊನೆಯ ಭಾಗದವರೆಗಂತೂ ನಿಮ್ಮ ಈ ಕರ್ನಾಟಕವು, ದಕ್ಷಿಣ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವೆನಿಸಿ, ಅತ್ಯಂತ ಗೌರವದಿಂದ ಮೆರೆದಿರುತ್ತದೆ. ನಿಮ್ಮ ಅರಸರು ಚೇರ, ಚೋಳ, ಪಾಂಡ್ಯ, ಗುರ್ಜರ, ಮಾಳವ ಮುಂತಾದ ಪರರಾಜರನ್ನು ಸದೆಬಡಿದು, ಅವರ ರಾಜ್ಯಗಳನ್ನು ಪಾದಾಕ್ರಾಂತವನ್ನಾಗಿ ಮಾಡಿಕೊಂಡು ಮತ್ತು ಮೌರ್ಯ, ಕಲಚುರ್ಯ ಮುಂತಾದ ಚಿಕ್ಕ ಚಿಕ್ಕ ಕನ್ನಡರಾಜ್ಯಗಳನ್ನು ತಮ್ಮಲ್ಲಿ ವಿಲೀನಮಾಡಿಕೊಂಡು ಸಾರ್ವಭೌಮರಾಗಿ ಆಳಿದ್ದರೆಂದು ಹೇಳಿದರೆ, ಅದು ನಿಮಗೆ ಕನಸಾಗಿ ತೋರುವುದಿಲ್ಲವೇ? ಇದು ಕನಸಲ್ಲ-ನನಸು. ನಿಮ್ಮ ಪೂರ್ವಜರು ಒಂದಾನೊಂದು ಕಾಲಕ್ಕೆ, ಉತ್ತರದಲ್ಲಿ ಬಂಗಾಲ ಆಸಾಮಗಳವರೆಗೂ ದಕ್ಷಿಣದಲ್ಲಿ ಸಿಂಹಲದ್ವೀಪದ ವರೆಗೂ ತಮ್ಮ ರಾಜ್ಯವನ್ನು ಹಬ್ಬಿಸಿದ್ದರು. ಇಷ್ಟೇ ಅಲ್ಲ; ಕರ್ನಾಟಕ ವಂಶವೃಕ್ಷದ ಅಗಿಗಳು ಗುಜರಾಥ ನೇಪಾಳಗಳಲ್ಲಿಯೂ ನಾಟಿದ್ದುವು. ಬಾದಾಮಿಯ ಚಾಲುಕ್ಯ ಅರಸನಾದ ನಿಮ್ಮ ಸತ್ಯಾಶ್ರಯ ಶ್ರೀಪುಲಿಕೇಶಿಯು (೭ ನೆಯ ಶತಕ) ಉತ್ತರ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವರ್ತಿಯಾಗಿದ್ದ ಹರ್ಷವರ್ಧನನನ್ನು ಸೋಲಿಸಿ `ಪರಮೇಶ್ವರ ನೆಂಬ ಘನವಾದ ಬಿರುದನ್ನು ಪಡೆದಿರುವನು. ಮಳಖೇಡದ ರಾಷ್ಟ್ರಕೂಟ ಅರಸನಾದ ೩ನೆಯ ಗೋವಿಂದನು (೯ನೆಯ ಶತಕ) ತನ್ನ ವಿರುದ್ಧವಾಗಿ ಬಂಡಾಯವನ್ನು ಹೂಡಿದ ಹನ್ನೆರಡು ಜನ ಅರಸರನ್ನು ಬಗ್ಗುಬಡಿದು, ಗುರ್ಜರ, ಮಾಳವ, ಮಧ್ಯಪ್ರಾಂತ ಇವೇ ಮೊದಲಾದ ನಾಡುಗಳನ್ನು ಗೆದ್ದು, ಪೂರ್ವಚಾಲುಕ್ಯರ ಅರಸನನ್ನು ಹಣ್ಣಿಗೆ ತಂದು, ಅವನಿಗೆ ತನ್ನ ಕೋಟೆ ಕೊತ್ತಳಗಳನ್ನು ಕಟ್ಟಲು ಹಚ್ಚಿದ ಸಂಗತಿಯೇನು ಸಾಧಾರಣವಾಯಿತೇ? ಕರ್ನಾಟಕರು ಪ್ರತಿದಿನವೂ ಸ್ಮರಿಸಬೇಕಾಗಿರುವ ಆ ರಾಷ್ಟ್ರಕೂಟರ ಅಮೋಘವರ್ಷನು ಅಥವಾ ನೃಪತುಂಗನು (೯ನೆಯ ಶತಕ) ಯಾವ ದೇಶಕ್ಕೆ ಭೂಷಣವೆನಿಸಲಾರನು? ೬೦ ವರ್ಷಗಳವರೆಗೆ ಎಡೆಬಿಡದೆ ಆಳಿದ ಈ ನೃಪತುಂಗನೇ ಅಲ್ಲವೇ ಕನ್ನಡಿಗರ ಕವಿರಾಜಮಾರ್ಗವೆಂಬ ಅಲಂಕಾರ ಗ್ರಂಥವನ್ನು ಬರೆದವನು? ಪ್ರತಿಯೊಬ್ಬ ಆರ್ಯಪುತ್ರನಿಗೂ ಗೊತ್ತಿರುವ ಆ ಪ್ರಸಿದ್ಧ ಭೋಜರಾಜನ ಕಕ್ಕನಾದ ಶೂರ-ಧೀರ ಮುಂಜನನ್ನು ಸೆರೆಹಿಡಿದು ತಂದವನು, ನಮ್ಮ ಕರ್ನಾಟಕದ ತೈಲಪನೇ (೧೦ನೆಯ ಶತಕ). ಮೇಲ್ಗಡೆಗೆ ಗುರ್ಜರ, ಮಾಳವ ಮುಂತಾದ ಅರಸರನ್ನು ಗೆದ್ದು, ವಿಂಧ್ಯಪರ್ವತದವರೆಗೆ ರಾಜ್ಯವನ್ನು ಪಾದಾಕ್ರಾಂತವಾಗಿ ಮಾಡಿಕೊಂಡು, ಬಂಗಾಲದ ಮೇಲೆ ದಾಳೀ ಮಾಡಿ. ಈಶಾನ್ಯ ದಿಕ್ಕಿನಲ್ಲಿ ಆಸಾಮದಲ್ಲಿಯೂ, ಕೆಳಗಡಗೆ ಕೇರಳ-ಚೋಳ-ಪಾಂಡ್ಯ ಮುಂತಾದ ಅರಸರನ್ನು ಮುರಿಬಡೆದು, ಸಮುದ್ರದವರೆಗೆ ರಾಜ್ಯವನ್ನು ಹಬ್ಬಿಸಿ ದಕ್ಷಿಣದಲ್ಲಿ ಸಿಂಹಲದ್ವೀಪದಲ್ಲಿಯೂ ಕರ್ನಾಟಕದ ವಿಜಯಪತಾಕೆಯನ್ನೂರಿದ ಆ ರಣಧೀರನೂ ರಾಜ್ಯತಂತ್ರಪ್ರವೀಣನೂ ವಿದ್ಯಾಪಕ್ಷಪಾತಿಯೂ ಆದ ಮಹಾಬಲಾಢ್ಯ ವಿಕ್ರಮಾದಿತ್ಯನೆಂಬ (೧೧ನೆಯ ಶತಕ) ಶಕಪುರುಷನ ಅರಿವು ಕೂಡ ಕನ್ನಡಿಗರಿಗೆ ಈಗ ಇರದಿದ್ದರೂ, ಅವನ ಹೆಸರನ್ನು ಕರ್ನಾಟಕ ಇತಿಹಾಸವು ಆಚಂದ್ರಾರ್ಕವಾಗಿ ಮರೆಯಲಾರದು. ಗಂಗ, ಕದಂಬ, ಶಿಲಾಹಾರ, ಯಾದವ ಮುಂತಾದ ಅರಸರು ಇವನಿಗೆ ದಾಸಾನುದಾಸರಾಗಿದ್ದರು. ಬಿಲ್ಹಣ, ವಿಜ್ಞಾನೇಶ್ವರ ಮುಂತಾದ ಕವಿವರರು ಏಕಛತ್ರಾಧಿಪತಿಯಾದ ಈತನ ಆಸ್ಥಾನವನ್ನಲಂಕರಿಸಿದ್ದರು; ಕರ್ನಾಟಕಸ್ಥರೇ! ಪುಲಿಕೇಶಿ, ನೃಪತುಂಗ, ಗೋವಿಂದ, ತೈಲಪ, ವಿಕ್ರಮಾದಿತ್ಯರಂಥ ಮಹಾಮಹಿಮರಾದ ರಾಜರು ನಿಮ್ಮ ಪಾಲಿಗೆ ಬಂದಿದ್ದುದು ಘನವಾದ ಪುಣ್ಯವೆಂದು ಭಾವಿಸಿರಿ. ಅಷ್ಟೇಕೆ? ನಿಮ್ಮ ಹರಿಹರ ಬುಕ್ಕರಾಯರೇನು (೧೪ನೆಯ ಶತಕ) ಕಡಿಮೆ ಪ್ರತಾಪಿಗಳೋ? ಉತ್ತರ ಹಿಂದುಸ್ಥಾನವೆಲ್ಲವೂ ತಮ್ಮ ಗಂಟಲಲ್ಲಿ ಇಳಿಯಿತೆಂಬ ಗರ್ವದಿಂದ ದಕ್ಷಿಣ ಹಿಂದುಸ್ಥಾನವನ್ನು ಕೂಡ ನುಂಗಿ ನೀರು ಕುಡಿಯಬೇಕೆಂದು ಮುಸಲ್ಮಾನರು ಹವಣಿಸಿದ ಸಮಯದಲ್ಲಿ ಆರ್ಯಧರ್ಮವನ್ನೂ, ಆರ್ಯಸಂಸ್ಕೃತಿಯನ್ನೂ, ಆರ್ಯ ವೈಭವವನ್ನೂ ಅವರ ಬಾಯಿಯೊಳಗಿಂದ ಬದುಕಿಸಿದ ಬಂಟರು ಇವರೇ ಅಲ್ಲವೇ? ಚದರಿ ಹೋದ ಕದಂಬ, ಹೊಯ್ಸಳ, ಗಂಗ ಇವರೇ ಮೊದಲಾದ ಅರಸರೆಲ್ಲರನ್ನೂ, ಒಟ್ಟುಗೂಡಿಸಿ ಹಿಂದುಮಾತೆಯ ಮರ್ಯಾದೆಯನ್ನು ಕಾಯ್ದವರಾರು? ಅಷ್ಟದಿಗ್ಗಜಗಳೆಂದು ಕರೆಯಲ್ಪಡುವ ವಿಖ್ಯಾತರಾದ ಪಂಡಿತಜನರಿಗೆ ಆಶ್ರಯಕೊಟ್ಟ ಆ ವೈಭವಶಾಲಿಯಾದ ವಿಜಯನಗರದ ಕೃಷ್ಣದೇವರಾಯನು, ನಮ್ಮ ಅರಸನೆಂಬುದು ಕರ್ನಾಟಕಸ್ಥರಿಗೆ ಗೊತ್ತಾಗಬಾರದೆ? ಸಾರಾಂಶ: ಗಂಗ, ಕದಂಬ, ಚಾಳುಕ್ಯ, ರಾಷ್ಟ್ರಕೂಟ, ಹೊಯ್ಸಳ, ಯಾದವ, ವಿಜಯನಗರ ಮುಂತಾದ ಅರಸರು ಭಿನ್ನಭಿನ್ನ ಕಾಲಕ್ಕೆ ಬೇರೆ ಬೇರೆ ಹೆಸರುಗಳನ್ನು ಧರಿಸಿಕೊಂಡಿದ್ದರೂ ಅವರೆಲ್ಲರೂ ಶುದ್ಧ ಕನ್ನಡಿಗರೇ! ಅವರೂ ನಮ್ಮಂತೆಯೇ ಕನ್ನಡ ನುಡಿಯನ್ನೇ ಆಡುತ್ತಿದ್ದರು! ಈ ಕರ್ನಾಟಕವೇ ಅವರ ಜನ್ಮಭೂಮಿ. ಪೂರ್ವದ ಚಾಲುಕ್ಯರ ರಾಜಧಾನಿಯಾದ ಬಾದಾಮಿಯೂ, ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡವೂ, ಕೊನೆಯ ಚಾಲುಕ್ಯವಂಶದ ರಾಜಧಾನಿಯಾದ ಕಲ್ಯಾಣವೂ, ವಿಜಯನಗರದ ಅರಸರ ರಾಜಧಾನಿಯಾದ ವಿಜಯನಗರವೂ-ಇವೆಲ್ಲ ಕೇವಲ ಕರ್ನಾಟಕದ ಪಟ್ಟಣಗಳೇ. ಆ ನಿಮ್ಮ ಅರಸರೆಲ್ಲರೂ ಈ `ಕಾಡುಕಗ್ಗಾದ ಕನ್ನಡ ಭಾಷೆಯನ್ನಾಡುವದು ಅಪಮಾನಕರವೆಂದು ತಿಳಿಯಲಿಲ್ಲ! ಹೀಗೆ ನಿಮ್ಮಲ್ಲಿ ಶೂರರೂ ವೀರರೂ ಆದ ಅರಸರ ಪರಂಪರೆಯು ಬಲು ಪುರಾತನದಿಂದ ಅವಿಚ್ಛಿನ್ನವಾಗಿ ನಡೆದು ಬಂದಿರಲು, ನೀವು ಹತವೀರ್ಯರಾಗಲು ಕಾರಣವೇನು?

ಇನ್ನು ನಮ್ಮಲ್ಲಿಯ ಬುದ್ಧಿಶಾಲಿಗಳ ನಾಮಾವಳಿಯನ್ನು ಹೇಳೋಣವೇ? ಅದಕ್ಕಂತೂ ನೆಲೆಯೇ ಇಲ್ಲ. ಇಂದಿಗೆ ಜಗತ್ತಿನಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲ್ಪಟ್ಟಿರುವ, ಅದ್ವೈತ-ವಿಶಿಷ್ಟಾದ್ವೈತ ದ್ವೈತಗಳೆಂಬ ಮೂರು ಮತಗಳ ಸ್ಥಾಪನಾಚಾರ್ಯರಿಗೆ ಈ ನಮ್ಮ ಪವಿತ್ರ ಭೂಮಿಯೆ ಕಾರ್ಯ ಕ್ಷೇತ್ರವಾಗಿತ್ತು. ಶಂಕರಾಚಾರ್ಯರ ಶೃಂಗೇರಿ, ಕೂಡಲಿ, ಹಂಪೆ, ಸಂಕೇಶ್ವರ, ಶಿವಗಂಗಾ ಮುಂತಾದ ಮಠಗಳು ಈ ಕರ್ನಾಟಕದಲ್ಲಿಯೇ ಇರುತ್ತವೆ. ಚೋಳರಾಜನ ಅನಿವಾರ್ಯವಾದ ಹಿಂಸೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ, ಶ್ರೀರಾಮಾನುಜಾಚಾರ್ಯರು ಕನ್ನಡ ಅರಸನಾದ ವಿಷ್ಣುವರ್ಧನನನ್ನು ಆಶ್ರಯಿಸಿ ತಮ್ಮ ಮತಪ್ರಸಾರಣೆಯನ್ನು ಮಾಡಿದರು. ಮಧ್ವಾಚಾರ್ಯರಿಗೆ ನಿಮ್ಮ ಕರ್ನಾಟಕವೇ ತವರು ಮನೆ. ವೀರಶೈವ ಮತೋದ್ಧಾರಕನಾದ ಬಸವೇಶ್ವರನಂತೂ ಕನ್ನಡಿಗನೇ. ಜೈನಮತ ಪ್ರಖ್ಯಾತ ಗುರುಗಳಾದ ಪೂಜ್ಯಪಾದ, ಜಿನಸೇನ, ಗುಣಭದ್ರ, ಮುಂತಾದವರು ನಮ್ಮ ಕನ್ನಡನಾಡಿನಲ್ಲಿಯೇ ಬಾಳಿಬದುಕಿದರು. ಚಾಲುಕ್ಯ ವಿಕ್ರಮಾದಿತ್ಯನ ಓಲಗದಲ್ಲಿ ವಿದ್ಯಾಪತಿಯಾಗಿದ್ದ ಬಿಲ್ಹಣನೂ, ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ, ಪ್ರಸಿದ್ಧ ವೇದಾಂತಿಯಾದ ಸಾಯಣನೂ, ಪ್ರಖ್ಯಾತ ಜ್ಯೋತಿಷಿಯಾದ ಭಾಸ್ಕರಾಚಾರ್ಯನೂ, ಇವರೆಲ್ಲರಿಗೂ ಮುಕುಟಮಣಿಯಂತಿರುವ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯರೆಂಬ ಬಿರುದುಳ್ಳ ಜಗದ್ವಿಖ್ಯಾತರಾದ ಶ್ರೀ ವಿದ್ಯಾರಣ್ಯರೂ, ಇವರೆಲ್ಲರೂ ಕನ್ನಡ ತಾಯಿಯ ಮುದ್ದು ಮಕ್ಕಳೇ ಅಲ್ಲವೇ? ಕಳೆದ ಅನೇಕ ಶತಮಾನಗಳಿಂದ ಕರ್ನಾಟಕ ವಾಙ್ಮಯವೆಂಬ ಗಗನಮಂಡಲದೊಳಗೆ ದಿವ್ಯ ನಕ್ಷತ್ರಗಳಂತೆ ಬೆಳಗುತ್ತಿರುವ ಆದಿಕವಿ ಪಂಪ, ಪೊನ್ನ, ರನ್ನ, ಜನ್ನ ಮೊದಲಾದ ವಾಙ್ಮಯ ಪ್ರಭುಗಳು ಕೇವಲ ಕನ್ನಡಿಗರೆ! ಪರಮ ಭಗವದ್ಭಕ್ತರಾದ ಪುರಂದರದಾಸ, ಕನಕದಾಸ ಮುಂತಾದ ದಾಸಶ್ರೇಷ್ಠರಿಗೆ, ಅಲ್ಲಮಪ್ರಭು, ಬಸವ ಮುಂತಾದ ಶರಣ ಶ್ರೇಷ್ಠರಿಗೆ ಈ ನಮ್ಮ ಬಡ ಕರ್ನಾಟಕವೇ ಜನ್ಮಭೂಮಿ. ಇಷ್ಟೇ ಅಲ್ಲ, ಕನ್ನಡಿಗರೆ! ನಮ್ಮ ಭಾಗ್ಯವನ್ನು ಎಷ್ಟೆಂದು ಹೇಳಬೇಕು! ನಿಮ್ಮ ಅರಸರು ಸ್ವಂತ ಕವಿಗಳಾಗಿದ್ದರು. ಗಂಗ ಅರಸರಲ್ಲಿ ಮಾಧವ, ದುರ್ವಿನೀತ ಮುಂತಾದ ಅನೇಕ ರಾಜರು ಅಶ್ವಶಾಸ್ತ್ರ, ಕಿರಾತಾರ್ಜುನ ಟೀಕೆ ದತ್ತಸೂತ್ರ ಮುಂತಾದ ಮಹತ್ವದ ಪುಸ್ತಕಗಳನ್ನು ಬರೆದಿರುವರು. ರಾಷ್ಟ್ರಕೂಟರ ಪ್ರಖ್ಯಾತ ಅರಸನಾದ ನೃಪತುಂಗನು `ಕವಿರಾಜಮಾರ್ಗವೆಂಬ ಪ್ರಸಿದ್ಧವಾದ ಅಲಂಕಾರ ಶಾಸ್ತ್ರದ ಗ್ರಂಥವನ್ನು ಬರೆದಿರುವನು. ಚಾಲುಕ್ಯ ವಂಶದ ಅರಸನಾದ ಸೋಮೇಶ್ವರನೆಂಬುವನು ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥ ಚಿಂತಾಮಣಿ ಎಂಬ ರಾಜಕೀಯ ಗ್ರಂಥವನ್ನು ಬರೆದನು. ಇಂಥ ರಾಜಕವಿಗಳೂ ವರಕವಿಗಳೂ ನಿಮ್ಮಲ್ಲಿ ಹುಟ್ಟಿರಲು ನೀವು ನಿಮ್ಮ ಕರ್ನಾಟಕಕ್ಕೆ ಹೆಸರಿಡುವದೇಕೆ?

ಕರ್ನಾಟಕದ ಸ್ತ್ರೀಯರೆಂದರೆ ಕಡಿಮೆ ಪ್ರಸಿದ್ಧರೆ? ನಮ್ಮ ಕರ್ನಾಟಕದ ಸ್ತ್ರೀಯರ ಹೆಸರುಗಳೂ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಷ್ಟು ಉಜ್ವಲವಾಗಿವೆ. ಸುಪ್ರಸಿದ್ದ ಪುಲಿಕೇಶಿ ಮಹಾರಾಜನ ಹಿರಿಯ ಸೊಸೆಯಾದ `ಜಯಮಹಾದೇವಿಯು ಅಬಲೆಯಾದರೂ ರಾಜ್ಯಭಾರವನ್ನು ಬಹು ಚಾತುರ್ಯದಿಂದ ತೂಗಿಸಿಕೊಂಡು ಹೋಗಲಿಲ್ಲವೆ? ಪಶ್ಚಿಮ ಚಾಲುಕ್ಯರ ೨ನೆಯ ಸೋಮೇಶ್ವರನ `ಪಿರಿಯರಸಿಯಾದ ಮೈರಾಳದೇವಿಯು ಆಗಿನ ಕಾಲಕ್ಕೆ ಮುಂಬಯಿ ಪ್ರಾಂತದಷ್ಟು ದೊಡ್ಡದಾದ ಬನವಾಸಿ ಪ್ರಾಂತವನ್ನಾಳಿರುವುದು ಕರ್ನಾಟಕ ಸ್ತ್ರೀಸಮಾಜಕ್ಕೆ ಎಷ್ಟು ಗೌರವಾಸ್ಪದವಾದ ಸಂಗತಿ! ಪಶ್ಚಿಮ ಚಾಲುಕ್ಯರ ೩ನೆಯ ಜಯಸಿಂಹನ ತಂಗಿಯರಾದ
ಅಕ್ಕಾದೇವಿಯರ್ ಕಿಸುನಾಡ ಪಟ್ಟಮಂ ಸುಖಸಂಕಾಥಾವಿನೋದದಿಂ ಆಳುತ್ತಿರೆ ಆಗಿನ ಕಾಲಕ್ಕೆ ಗೋಕಾವಿಯಲ್ಲೆದ್ದ ಬಂಡಾಯವನ್ನು ಮುರಿದೊತ್ತಿ, ರಣಭೈರವಿ ಎಂಬ ತಮ್ಮ ಅಭಿಧಾನವನ್ನು ಸಾರ್ಥಕಗೊಳಿಸಿದ ಸಂಗತಿಯನ್ನು ಕೇಳಿದೊಡನೆ ಯಾವ ಕನ್ನಡಿಗನ ಮುಂದೆ ಆ ವೀರಾಂಗನೆಯ ಚಿತ್ರವು ಬಂದು ನಿಲ್ಲದೆ ಇದ್ದೀತು? ಅಕ್ಕಮಹಾದೇವಿ, ಕಂತಿ, ನೀಲಮ್ಮ, ಹೊನ್ನಮ್ಮ, ಗಿರಿಯಮ್ಮ ಇವರು ರಚಿಸಿದ ಪ್ರಸಾದ ಸಂಪಾದನೆ ಹದಿಬದೆಯಧರ್ಮ,ಚಂದ್ರಹಾಸಚರಿತ್ರೆ ಇವೇ ಮೊದಲಾದ ಗ್ರಂಥರತ್ನಗಳು, ಕನ್ನಡಿತಿಯರಿಗೆ ಆಮರಣವೂ ಆದರ್ಶವಾಗದೆ ಇರವು. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಕಣ್ಣಿಗೆ ಬಿದ್ದಿರುವ `ವೀರಕಂಪರಾಯ ಚರಿತವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯದ ಕರ್ತ್ರಿಯೂ, ಶುದ್ಧ ಕರ್ನಾಟಕ ರಾಜಪುತ್ರಿಯೇ. ಅವಳ ಹೆಸರು ಗಂಗಾದೇವಿ. ಇವಳು ವಿಜಯನಗರದ ಪ್ರಖ್ಯಾತ ಅರಸನಾದ ಬುಕ್ಕರಾಯನ ಸಾಕ್ಷಾತ್ ಸೊಸೆ. ಸಾರಾಂಶ: ಕನ್ನಡಿಗರಾದ ಕರ್ನಾಟಕ ವರಕವಿಗಳನ್ನು ನಿತ್ಯದಲ್ಲಿ ಸ್ಮರಿಸಿ, ಅವರ ಅಡಿಯಲ್ಲಿ ಕುಳಿತು, ಈಗಿನ ಕವಿಗಳು ಕವಿತೆಯ ಸ್ಫೂರ್ತಿಯನ್ನು ಪಡೆಯಬೇಕು!

ಬಲುಮಾತಿನಿಂದೇನು! ಪುಲಿಕೇಶಿ, ಗೋವಿಂದ, ನೃಪತುಂಗ, ತೈಲಪ, ವಿಕ್ರಮ ಇವರೇ ನಮ್ಮ ಶಿವಾಜೀ ಬಾಜೀರಾಯ ಮುಂತಾದವರು. ವಿದ್ಯಾರಣ್ಯರೇ ನಮ್ಮ ರಾಮದಾಸರು. ಪಂಪ, ರನ್ನ, ಲಕ್ಷ್ಮೀಶ, ಷಡಕ್ಷರಿಗಳೇ ನಮ್ಮ ಮೋರೋಪಂತ, ಮುಕ್ತೇಶ್ವರರು. ಕೃಷ್ಣದೇವರಾಯನೇ ನಮ್ಮ ಅಕಬರನು. ಹೊನ್ನಮ್ಮ, ಗಿರಿಯಮ್ಮ ಇವರೇ ಮುಕ್ತಾಬಾಯಿ, ಮೀರಾಬಾಯಿಯವರು. ವಿಜಯಮಹಾದೇವಿ, ಮೈರಾಳದೇವಿಯರೇ ನಮ್ಮ ತಾರಾಬಾಯಿ, ಅಹಲ್ಯಾಬಾಯಿಯವರು. ಅಕ್ಕಾ-ದೇವಿ, ಕಿತ್ತೂರಿನ ಚೆನ್ನಮ್ಮ ಇವರೇ ನಮ್ಮ ಝಾಂಸಿ ಲಕ್ಷ್ಮೀಬಾಯಿಯವರು. ವಾಚಕರೇ, ಈ ವಿಧವಾಗಿ ನಮ್ಮ ಪ್ರಾಚೀನ ಇತಿಹಾಸವು ಮಹಾಪುರುಷರಿಂದಲೂ, ಮಹಾಸತಿಯರಿಂದಲೂ ತುಂಬಿಕೊಂಡಿದ್ದು, ಕನ್ನಡಿಗರಾದ ನಮಗೆ ಮಾತ್ರ ಅದು ಕಾದಂಬರಿಯಂತೆ ಕಾಣುತ್ತಿರುವುದು ಎಂತಹ ದೈವದುರ್ವಿಲಾಸ! ಈ ನಿಮ್ಮ ವಿಭೂತಿಗಳ ನಾಮಾವಳಿಯನ್ನು ಕೇಳಿ ಕನ್ನಡಿಗರೇ! ಇನ್ನಾದರೂ ಕಣ್ದೆರೆಯಿರಿ!

ನಮ್ಮ ಕರ್ನಾಟಕದ ಅರಸರು ಈ ದೇಶದಲ್ಲಿ ಮಾತ್ರವೇ ಪ್ರಖ್ಯಾತರೆಂತಲ್ಲ. ಅವರು ಇರಾಣ ಮುಂತಾದ ಪರದೇಶದ ಚಕ್ರವರ್ತಿಗಳ ಕಡೆಗೆ ಕೂಡ ತಮ್ಮ ರಾಯಭಾರಿಗಳನ್ನು ಕಳುಹುತ್ತಿದ್ದರೆಂದು ಹೇಳಿದರೆ ಕನ್ನಡಿಗರಿಗೆ ಅದು ಕನಸಿನಂತೆ ಭಾಸವಾಗಬಹುದು. ಆದರೆ ಕನ್ನಡಿಗರೇ! ಅದು ಕನಸಲ್ಲ. ಈ ಪುಲಿಕೇಶಿಯೇ ತನ್ನ ರಾಯಭಾರಿಗಳನ್ನು ಇರಾಣದ ಅರಸರ ಕಡೆಗೆ ಕಳುಹಿಸಿದ್ದನು. ಮರಳಿ ಇರಾಣದ ಅರಸನು ತನ್ನ ರಾಯಭಾರಿಗಳನ್ನು ನಮ್ಮ ಬಾದಾಮಿಯ ಪುಲಿಕೇಶಿಯ ಒಡ್ಡೋಲಗಕ್ಕೆ ಕಳುಹಿಸಿದ್ದನು. ಇದರ ಪ್ರತ್ಯಕ್ಷ ಚಿತ್ರವು ಉತ್ತರದಲ್ಲಿರುವ ಅಜಂತೆಯ ಗವಿಯೊಳಗೆ ಈಗಲೂ ಸ್ಪಷ್ಟವಾಗಿ ಕಂಗೊಳಿಸುತ್ತಿದೆ. ಕನ್ನಡಿಗರು ಆ ತಮ್ಮ ಸಾರ್ವಭೌಮನ ಚಿತ್ರವನ್ನು ಒಮ್ಮೆಯಾದರೂ ಕಣ್ಣಾರೆ ಕಂಡು ಧನ್ಯರಾಗಬಾರದೇ? ಸುಮಾರು ೧೩೦೦ ವರ್ಷಗಳ ಹಿಂದಿನ ಈ ಚಿತ್ರವು ಕರ್ನಾಟಕರಿಗೆ ದೊರೆತಿದ್ದುದು ಅವರ ಮಹತ್ ಪುಣ್ಯವಲ್ಲವೇ!

ಕನ್ನಡಿಗರೇ! ನಿಮ್ಮ ಜನರು ಮಾಡಿದ ಅತ್ಯದ್ಭುತ ಕಾರ್ಯಗಳ ಕಡೆಗೆ ಇನ್ನು ನಿಮ್ಮನ್ನು ಒಯ್ಯುತ್ತೇವೆ. ಹಿಂದುಸ್ಥಾನದೊಳಗಿನ-ಅಲ್ಲ-ಜಗತ್ತಿನೊಳಗಿನ ಸೋಜಿಗವಾದ ಮತ್ತು ಅದ್ಭುತವಾದ, ಕಲ್ಲಿನೊಳಗೆ ಕೊರೆದ ಅಖಂಡ ದೇವಾಲಯವೆಂದರೆ, ವೇರೂಳಿನ ಕೈಲಾಸ ದೇವಾಲಯವು. ಈ ದೇವಾಲಯವನ್ನು ಕನ್ನಡಿಗನಾದ ಕೃಷ್ಣನೆಂದೊಬ್ಬ ರಾಷ್ಟ್ರಕೂಟದ ಅರಸನು ಕಟ್ಟಿಸಿದನೆಂದರೆ ಅಹುದೋ, ಅಲ್ಲವೋ, ಎಂದು ನಿಮ್ಮ ಮನಸ್ಸು ಸಂಶಯಗ್ರಸ್ತವಾಗಬಹುದಲ್ಲವೇ! ಬಾದಾಮಿಯ ಮೇಣಬಸ್ತಿಗಳೂ, ಕಾರ್ಲೆಯ ಅತ್ಯಂತ ಮನೋಹರವಾದ ಚೈತ್ಯಾಲಯವೂ, ಅಜಂತೆಯೊಳಗಿನ ನಿತಾಂತ ಸುಂದರವಾದ ಚಿತ್ರಗಳೂ, ಇವೆಲ್ಲವೂ ನಿಮ್ಮ ಕನ್ನಡನಾಡಿನ ಕಲ್ಲುಕುಟಿಗರ ಕೈಗಾರಿಕೆಗಳೇ! ಕರ್ನಾಟಕದೊಳಗಿನ ಶ್ರವಣಬೆಳಗುಳದ ಗೊಮ್ಮಟೇಶ್ವರನ ಭವ್ಯವೂ, ರಮಣೀಯವೂ ಆದ ಮೂರ್ತಿಯು ಸಾವಿರಾರು ಮೈಲುಗಳ ಮೇಲಿರುವ ಜಪಾನ ಮತ್ತು ಚೀನದೇಶಗಳ ಜನರನ್ನು ಸಹ ಸೂಜಿಗಲ್ಲಿನಂತೆ ಎಳೆಯಹತ್ತಿರುವುದಿಲ್ಲವೇ! ಲಂಡನ್ನಿನಷ್ಟು ವಿಸ್ತೀರ್ಣವಾದ ಪಟ್ಟಣವು ಲೋಕದಲ್ಲಿ ಇದ್ದಿಲ್ಲವೆಂತಲೇ ನಿಮ್ಮ ತಿಳಿವಳಿಕೆಯಲ್ಲವೇ! ಆದರೆ ಈಗ ಹಾಳಾಗಿರುವ ವಿಜಯನಗರದೊಳಗೆ ಹಿಂದಕ್ಕೆ ೫೦-೬೦ ಲಕ್ಷ ಜನರು ವಾಸಿಸುತ್ತಿದ್ದರೆಂದು ವಿದ್ವಾಂಸರು ತರ್ಕ ತಟ್ಟುತ್ತಾರೆ. ನೋಡಿದ ಕಡೆಯಲ್ಲೆಲ್ಲ ವಿಶಾಲವಾದ ರಾಜಬೀದಿಗಳಿಂದಲೂ, ಉನ್ನತವಾದ ಗೋಪುರಗಳಿಂದಲೂ, ಸುಂದರವಾದ ಗುಡಿಗಳಿಂದಲೂ, ಭವ್ಯವಾದ ಕೋಟೆ ಕೊತ್ತಳಗಳಿಂದಲೂ, ಜೀರ್ಣವಾದ ರಮ್ಯೋದ್ಯಾನಗಳಿಂದಲೂ ತುಂಬಿಕೊಂಡಿದ್ದು, ಈಗ ಕುರುಹಿಗೆ ಮಾತ್ರ ಉಳಿದಿರುವ ಆ ಕರ್ನಾಟಕ ರಾಜಧಾನಿಯನ್ನು ನೋಡಿ ಕಣ್ಣೀರು ಸುರಿಸದ ಪಾಪಿ ಯಾರು?

ಕನ್ನಡಿಗರೇ! ನಿಮ್ಮ ಭಾಗ್ಯವನ್ನು ಎಷ್ಟೆಂದು ವರ್ಣಿಸಬೇಕು? ಜಗದೊಳಗೆಲ್ಲ ಸೌಂದರ್ಯಾತಿಶಯದಿಂದ ಮೆರೆಯುತ್ತಿರುವ ಬೇಲೂರಿನ ಚೆನ್ನಕೇಶವನ ದೇವಾಲಯವನ್ನೂ, ಒಂದೇಸಮನಾಗಿ ೮೬ ವರುಷಗಳವರೆಗೆ ಕಟ್ಟಿದರೂ ಪೂರ್ಣವಾಗದೆ ಇರುವ ಅತ್ಯಂತ ಸುಂದರವಾದ ಹೊಯ್ಸಳೇಶ್ವರನ ಗುಡಿಯನ್ನೂ, ನಿಮ್ಮ ಕನ್ನಡಿಗರ ಅಲ್ಲಿಯ ಅತಿ ಕುಶಲವಾದ ಕುಸುರು ಕೆಲಸವನ್ನೂ ಕಂಡು, ಆ ಕಾಲದ ವೈಭವವನ್ನೂ ಬುದ್ಧಿವಂತಿಕೆಯನ್ನೂ ನೆನೆಸಿ, ಉಸುರ್ಗರೆಯದ ಮನುಷ್ಯನಾವನು? ಈ ಗುಡಿಗಳು ಸೌಂದರ್ಯದ ಕಳಸಗಳೆಂದರೂ ಸಲ್ಲುವುದು.

ಕನ್ನಡಿಗರೇ! ನಮ್ಮ ಇತಿಹಾಸದಲ್ಲಿ ಮತ್ತೊಂದು ವಿಶೇಷವುಂಟು. ಯಾವುದೆಂದರೆ, ಅನೇಕ ಭಾಷಾಪ್ರಾಂತಗಳಲ್ಲಾಗಿರುವಂತೆ ನಮ್ಮ ಭಾಷೆಯಲ್ಲಿ ಅದಲು-ಬದಲುಗಳಾಗಲಿಲ್ಲ. ಹಿಂದಕ್ಕೆ ನಮ್ಮ ಅರಸರೂ ವಿದ್ವಾಂಸರೂ ಆಡುತ್ತಿದ್ದ ಭಾಷೆಯನ್ನೇ ನಾವೀಗ ಆಡುತ್ತೇವೆ. ಕನ್ನಡ ತಮಿಳುಗಳ ಹೊರ್ತು ಇತರ ಜನಾಂಗಗಳೆಲ್ಲವೂ ಬಹುಮಟ್ಟಿಗೆ ಬದಲಾಯಿಸಿ ಹೋಗಿವೆ. ಉತ್ತರ ಹಿಂದುಸ್ಥಾನದ ಅಶೋಕ, ಚಂದ್ರಗುಪ್ತ ಇವರು ಆಡುತ್ತಿದ್ದ ಭಾಷೆಯೇ ಬೇರೆ. ಮರಾಠರಿಗೂ ಬಂಗಾಲರಿಗೂ ತಮ್ಮ ದೇಶಗಳ ಪ್ರಾಚೀನ ರಾಜರು ಮರಾಠಿ, ಬಂಗಾಲಿ ಭಾಷೆಯನ್ನೇ ಆಡುತ್ತಿದ್ದರೆಂದು ಹೇಳಲಿಕ್ಕೆ ಬರಲಾರದು. ಆದರೆ ಕನ್ನಡಿಗರು ಮಾತ್ರ ನಮ್ಮ ಹಿಂದಿನ ಅರಸರೆಲ್ಲರೂ ಈ ಕನ್ನಡ ಭಾಷೆಯನ್ನೇ ಆಡುತ್ತಿದ್ದರೆಂದು ಎದೆ ತಟ್ಟಿ ಹೇಳಬಹುದು. ಈ ತರದ ಅಭಿಮಾನವು ಮತ್ತಾರಿಗೆ ಶಕ್ಯವು?

ಇನ್ನು ಕರ್ನಾಟಕದೊಳಗೆ ಒಂದು ಕಾಲಕ್ಕೆ ಮೆರೆದು, ಕರ್ನಾಟಕಕ್ಕೆ ತಿಲಕಪ್ರಾಯವಾಗಿರುವ ಪಟ್ಟಣಗಳ ವಿಷಯವನ್ನು ಹೇಳಿ ಈ ಪ್ರಕರಣವನ್ನು ಮುಗಿಸುವೆವು. ಇವುಗಳ ಪ್ರಾಚೀನ ವೈಭವವನ್ನು ಲಕ್ಷ್ಯಕ್ಕೆ ತಂದುಕೊಂಡರೆ ಇವಕ್ಕೆ ಐತಿಹಾಸಿಕ `ಕ್ಷೇತ್ರಗಳೆಂದು ಹೇಳುವುದು ಯುಕ್ತವಾಗುವುದು. ಧಾರ್ಮಿಕ ದೃಷ್ಟಿಯಿಂದ ಕ್ಷೇತ್ರತೀರ್ಥಗಳಿಗೆ ಎಷ್ಟು ಪ್ರಾಶಸ್ತ್ಯವೋ, ಇತಿಹಾಸ ದೃಷ್ಟಿಯಿಂದ ಇವಕ್ಕೆ ಅಷ್ಟೇ ಪ್ರಾಶಸ್ತ್ಯವು. ಆದುದರಿಂದ ಕನ್ನಡಿಗರೇ, ನಿಮ್ಮ ಐತಿಹಾಸಿಕ ಕ್ಷೇತ್ರಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಳಖೇಡ, ಕಲ್ಯಾಣ, ಅಜಂತಾ, ವೇರೂಳ, ಹಳೇಬೀಡು (ದ್ವಾರಸಮುದ್ರ), ಲಕ್ಕುಂಡಿ, ಹಂಪೆ ಇವೇ ಮುಂತಾದ ದರ್ಶನೀಯವಾದ ಸ್ಥಳಗಳನ್ನು ನೋಡಿ ನಿಮ್ಮ ಕಣ್ಣುಗಳ ಪಾರಣೆಯನ್ನು ತೀರಿಸಿಕೊಳ್ಳಿರಿ; ಮತ್ತು ಕೃತಜ್ಞರಾಗಿರಿ.


೫ನೆಯ ಪ್ರಕರಣ

ಸಾಧನ ಸಾಮಗ್ರಿ

ವಾಚಕರೇ, ಹಿಂದಿನ ಪ್ರಕರಣದಲ್ಲಿ, ಕರ್ನಾಟಕದೊಳಗೆ ಬಾಳಿದ ಬಲಾಢ್ಯರಾದ ಅರಸರನ್ನೂ ಧರ್ಮಸ್ಥಾಪಕರಾದ ಆಚಾರ್ಯರನ್ನೂ, ತೇಜೋವಿಶಿಷ್ಟರಾದ ತತ್ವಜ್ಞಾನಿಗಳನ್ನೂ, ಪ್ರತಿಭಾಸಂಪನ್ನರಾದ ವರಕವಿಗಳನ್ನೂ, ಕವಯಿತ್ರಿಯರನ್ನೂ, ವೀರ್ಯವತಿಯರಾದ ವೀರಾಂಗನೆಯರನ್ನೂ, ನಾವು ಕಟ್ಟಿದ ಕಟ್ಟಡಗಳನ್ನೂ ಒಂದರ ಹಿಂದೊಂದು ನಿಮ್ಮ ಅವಲೋಕನಕ್ಕೆ ತಂದುಕೊಟ್ಟೆವು. ಈ ನಾಮಾವಳಿಯು ನಿಮ್ಮ ನೆನಪಿನಲ್ಲಿರಬೇಕಾದರೆ ಅವರು ಯಾವಾಗ ಹುಟ್ಟಿದರು, ಯಾವಾಗ ಪ್ರಬಲಸ್ಥಿತಿಗೆ ಬಂದರು
ಇವೇ ಮುಂತಾದ ಸಂಗತಿಗಳ ಜ್ಞಾನವಿರುವುದು ಅವಶ್ಯವಿದೆ. ನಾವು ಹಿಂದೆ ಹೇಳಿದ ಸಂಗತಿಗಳಿಂದ ನಮ್ಮ ಕನ್ನಡಿಗರಲ್ಲಿ ಕರ್ನಾಟಕದ ಬಗ್ಗೆ ಸಕೌತುಕವಾದ ಅಭಿಮಾನವೂ, ಕರ್ನಾಟಕ ಇತಿಹಾಸದ ಬಗ್ಗೆ ಜಿಜ್ಞಾಸೆಯು ಹುಟ್ಟಿರಬಹುದೆಂದು ಕಲ್ಪನೆ ಮಾಡಿದರೂ ಆ ಜಿಜ್ಞಾಸೆಯನ್ನು ತಣಿಸುವಂಥ ಇತಿಹಾಸವೆಲ್ಲಿದೆ? ಆ ತೆರನಾದ ಕನ್ನಡಿಗರ ಆದ್ಯಂತವಾದ ಇತಿಹಾಸವು ಹೊಸತಾಗಿ ಇನ್ನೂ ನಿರ್ಮಾಣವಾಗಬೇಕಾಗಿದೆ. ಕರ್ನಾಟಕದ ನಿಜವಾದ ಸ್ಥಿತಿಯನ್ನರಿತು, ಅಂತಹದೊಂದು ಇತಿಹಾಸವನ್ನು ಬರೆವುದೂ. ಅದು ಕರ್ನಾಟಕದ ಏಳ್ಗೆಗೆ ಹೇಗೆ ಸಾಧನವಾಗುತ್ತದೆಂಬುದನ್ನು ಅರಿತುಕೊಳ್ಳುವುದೂ, ಇವೇ ಈಗ ಕನ್ನಡಿಗರ ಪ್ರಥಮ ಕರ್ತವ್ಯಗಳು. ಸದ್ಯಕ್ಕೆ `ಕರ್ನಾಟಕ'ವೆಂಬ ಶಬ್ದವು ನಮ್ಮ ಕಿವಿಗೆ ಬಿದ್ದ ಕೂಡಲೆ ಅದರ ಬಗ್ಗೆ ನಮ್ಮ ಮನಸ್ಸಿನಲ್ಲಿ ಮಸುಮಸುಕಾದ ವಿಚಾರಗಳು ಮಾತ್ರ ತಲೆದೋರುತ್ತವೆ. ನಾವು ಕರ್ನಾಟಕರು ಏಕೆ? `ಕರ್ನಾಟಕ'ರೆಂದೆನಿಸಿಕೊಳ್ಳುವುದರಲ್ಲಿ ನಾವೇಕೆ ಹೆಮ್ಮೆ ಪಡಬೇಕು? ಇವೇ ಮುಂತಾದ ಪ್ರಶ್ನೆಗಳಿಗೆ ನಮ್ಮ ಹತ್ತಿರ ಸರಿಯಾದ ಉತ್ತರವಿರುವುದಿಲ್ಲ. ಆದುದರಿಂದ, ನಮ್ಮ ಮನದಲ್ಲಿ ಈಗ ಮುಖಹಾಳಾಗಿ ನೆಲೆಗೊಂಡಿರುವ ಕಲ್ಪನೆಗಳು ಢಾಳವಾಗಿ ಮೂಡಿ, ಕರ್ನಾಟಕದ ಪ್ರಕಾಶಮಾನವಾದ ಚಿತ್ರವು ನಮ್ಮ ಕಣ್ಣಿನ ಮುಂದೆ ಎದ್ದುಕಾಣಬೇಕಾದರೆ, ನಾವು ನಮ್ಮ ನಾಡಿನ ಇತಿಹಾಸವನ್ನು ಅಭಿಮಾನಪೂರ್ವಕವಾಗಿ ಪ್ರತಿಯೊಂದು ಸಂಗತಿಯೂ ಗೊತ್ತಾಗುವಂತೆ ಅಭ್ಯಾಸ ಮಾಡಬೇಕು. ಕರ್ನಾಟಕದ ನಿಜವಾದ ಮಹಾತ್ಮ್ಯವನ್ನು ತಿಳಿಯಲಿಕ್ಕೆ ಅದರ ನಿಜವಾದ ಇತಿಹಾಸವೇ ದಾರಿಯು.

ಆದರೆ, ಕನ್ನಡಿಗರ ದುರದೃಷ್ಟವಶದಿಂದ, ಆ ಇತಿಹಾಸವನ್ನು ಹೊರಗೆಡಹುವುದಕ್ಕೆ ಬೇಕಾಗುವ ಸಾಧನಗಳು ಈಗ ಸಾಕಾದಷ್ಟು ದೊರೆಯುವದಿಲ್ಲ. ಒಂದು ವೇಳೆ ಎಲ್ಲಿಯೋ ಒಂದೆರಡು ದೊರೆತರೂ ಅವು ಹರಕುಮುರುಕುಗಳು. ಈ ತಪ್ಪು ಯಾರದು? ಮೊದಲೇ ಕರ್ನಾಟಕದ ವೈಭವವು ನಷ್ಟಹೊಂದಿ ಮುನ್ನೂರು ನಾನೂರು ವರ್ಷಗಳಾಗಿವೆ. ಮೇಲಾಗಿ ಪರಕೀಯ ಜನರು ಆಗಿನ ಕಾಲದ ತಮ್ಮ ಹಗೆಗಳ ಮೇಲಿನ ಡಂಕಿನಿಂದ ಅವರ ವೈಭವ ಚಿಹ್ನೆಗಳನ್ನು ತುಂಡರಿಸಿದ್ದಾರೆ. ಇಂಥ ಸ್ಥಿತಿಯಲ್ಲಿ ಕೂಡ, ಉಳಿದಷ್ಟು ಸಾಮಗ್ರಿಯನ್ನು ಕಲೆಹಾಕುವ ಬುದ್ಧಿಯು ನಮ್ಮಲ್ಲಿದ್ದರೆ ಇತಿಹಾಸಕ್ಕೆ ಎಷ್ಟೋ ಸಹಾಯವಾಗಬಹುದಿತ್ತು. ಆದರೆ ನಮ್ಮಲ್ಲಿ ಅಂಥ ಬುದ್ಧಿಯೂ ವಿಶೇಷವಾಗಿ ಹುಟ್ಟಲಿಲ್ಲ. ಅಂದ ಬಳಿಕ, ಈಗ ನಮ್ಮ ಹತ್ತರ ಆದ್ಯಂತವಾದ ಇತಿಹಾಸವನ್ನು ಬರೆಯುವುದಕ್ಕೆ ಬೇಕಾದಷ್ಟು ಸಾಧನಗಳಿಲ್ಲದ ತಪ್ಪು ನಮ್ಮದೇ ಅಲ್ಲವೇ? ಕನ್ನಡಿಗರೇ! ಇನ್ನಾದರೂ ಏಳಿರಿ! ಸಾಧ್ಯವಾದಷ್ಟು ಸಾಧನಗಳನ್ನು ಕಲೆ ಹಾಕಿದರೂ ಎಷ್ಟೋ ಕಾರ್ಯವಾಗುವಂತಿದೆ! ಏಕೆಂದರೆ, ಈ ನಿಮ್ಮ ನಿರಭಿಮಾನತೆಯನ್ನು ನಿಮ್ಮ ಪೂರ್ವಜರು ಮೊದಲೇ ಕಂಡುಹಿಡಿದುದರಿಂದಲೋ ಏನೋ ಅವರು ತಮ್ಮ ವೈಭವದ ಕುರುಹುಗಳನ್ನು ಶಾಶ್ವತವಾಗಿ ಶಿಲಾಲಿಪಿ, ಕಟ್ಟಡ ಮುಂತಾದುವುಗಳಲ್ಲಿ ಇಟ್ಟು ಹೋಗಿದ್ದಾರೆ. ೧೦೦೦-೧೫೦೦ ವರ್ಷಗಳವರೆಗೆ ಆಳಿದ ಕರ್ನಾಟಕದಂಥ ವೈಭವಶಾಲಿಯಾದ ರಾಷ್ಟ್ರವೆಂದರೇನು? ಹಿಂದುಸ್ಥಾನದ ದೊಡ್ಡ ದೊಡ್ಡ ಇತಿಹಾಸ ಗ್ರಂಥಗಳಲ್ಲಿ ಕೂಡ ಅದರ ಚರಿತ್ರೆಯ ಪಾಲಿಗೆ ಹತ್ತೆಂಟು ಪುಟಗಳೇ ಬರುವುದೆಂದರೇನು! ಕನ್ನಡಿಗರೇ ಇದು ಅಪಮಾನಕರವಲ್ಲವೆ? ಈ ಕುಂದಕವನ್ನು ಹೋಗಲಾಡಿಸುವುದು ನಿಮ್ಮ ಕರ್ತವ್ಯವಲ್ಲವೇ?

ನಮ್ಮ ಪೂರ್ವಜರು ಬಿಟ್ಟು ಹೋದ ಸಾಧನಸಾಮಗ್ರಿಯು ಶಾಶ್ವತವಾಗಿದೆ ಹೇಳಿದೆವಷ್ಟೆ! ಆ ಸಾಧನಗಳು ಯಾವುವೆಂಬುದನ್ನು ಇನ್ನು ನೋಡುವ. ಅಂಥ ಸಾಧನಯೆಂದು ವಿಪುಲವಾಗಿರದಿದ್ದರೂ, ಸ್ವದೇಶಭಕ್ತಿಯಿಂದ ಪ್ರೇರಿತನಾದವನಿಗೆ ಇತಿಹಾಸವನ್ನು ಬರೆಯುವುದಕ್ಕೆ ಸಾಕಾಗುವಷ್ಟು ಇರುತ್ತವೆಂದು ಕಂಡುಬರುವುದು. ಅಂಥವನಿಗೆ ಕರ್ನಾಟಕದೊಳಗೆ ಎಲ್ಲಿ ನೋಡಿದರೂ ಇತಿಹಾಸ ಸಾಮಗ್ರಿಯ ರಾಶಿಗಳು ಅಲ್ಲಲ್ಲಿಗೆ ಒಟ್ಟಿರುವುದಾಗಿ ಕಾಣುವವು. ಏಕೆಂದರೆ ನಮ್ಮ ನಾಡಿನಲ್ಲಿ ಎತ್ತ ನೋಡಿದರತ್ತ ಶಿಲಾಲಿಪಿಗಳು ಹರಡಿಕೊಂಡಿರುವವು. ಇಲ್ಲಿ ದೊರೆಯುವಷ್ಟು ಶಿಲಾಲಿಪಿಗಳು ಬೇರೆ ಯಾವ ಕಡೆಗೂ ದೊರೆಯುವುದಿಲ್ಲ. ನಮ್ಮ ನಾಡು ಶಿಲಾಲಿಪಿಗಳ ತವರುಮನೆಯೆಂದರೂ ಸಲ್ಲುವುದು. ಕರ್ನಾಟಕದೊಳಗೆ ಕಲ್ಲುಗುಡಿಯಿಲ್ಲದ ಊರಿಲ್ಲ; ಶಿಲಾಲಿಪಿಯಿಲ್ಲದ ಗುಡಿಯಿಲ್ಲ; ನಮ್ಮ ಅರಸರ ಔದಾರ್ಯವನ್ನೂ ದಾನಶೌಂಡತ್ವವನ್ನೂ ಹೊಗಳದ ಶಿಲಾಲಿಪಿಯಿಲ್ಲ. ನಮ್ಮ ಸುದೈವದಿಂದ ಮೈಸೂರಿನ ಸರಕಾರದವರು ತಮ್ಮ ಪ್ರಾಂತದ ಮಟ್ಟಿಗೆ ಏಕಾಗಲೊಲ್ಲದು ತಮ್ಮ ದೇಶದ ಮೂಲೆ ಕೊಂಪೆಗಳನ್ನು ಸಹ ಹುಡುಕಿ, ಸುಮಾರು ೮೦೦೦ ಶಿಲಾಲಿಪಿ ಮತ್ತು ತಾಮ್ರಶಾಸನಗಳನ್ನು ಅಚ್ಚು ಹಾಕಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿಯೂ ಕನಿಷ್ಠ ೭-೮ ಸಾವಿರ ಶಿಲಾಲೇಖಗಳು ಸಿಕ್ಕಬಹುದು. ಧಾರವಾಡದ ಒಂದೇ ಜಿಲ್ಹೆಯಲ್ಲಿರುವ ಒಟ್ಟು ೧೦೦-೧೧೦ ದೊಡ್ಡ ಗ್ರಾಮದೊಳಗೆ ನಾಲ್ಕೆಂಟು ಗ್ರಾಮಗಳನ್ನು ಮಾತ್ರವೇ ಬಿಟ್ಟು ಉಳಿದ ಎಲ್ಲ ಗ್ರಾಮಗಳಲ್ಲಿ ಶಿಲಾಲಿಪಿಗಳು ದೊರೆಯುತ್ತವೆ. ಲಕ್ಕುಂಡಿ, ಅಣ್ಣಿಗೇರಿ ಮುಂತಾದ ಗ್ರಾಮಗಳಲ್ಲಂತೂ ೨೦-೩೦ ಶಿಲಾಲಿಪಿಗಳು ಒಂದೊಂದೇ ಊರಿನಲ್ಲಿ ದೊರೆಯುತ್ತವೆ. ಸಾರಾಂಶ: ನಮ್ಮ ನಾಡು ಶಿಲಾಲಿಪಿಮಯವಾಗಿರುವುದೆಂದರೂ ಅತ್ಯುಕ್ತಿಯಾಗದು! ಎಂದೂ ಸವೆಯದಂಥ ಮೂಲಧನವು ನಮ್ಮಲ್ಲಿರಲು ಅದರ ಅವಸ್ಥೆ ಏನಾಗಿರುವುದು, ನೋಡಿದಿರೋ? ಅಕಟಕಟ! ಅದು ನೆನಪಾದೊಡನೆಯೇ ಎದೆ ಹಾರುತ್ತದೆ! ನಮ್ಮಲ್ಲಿ 'ನಾ ನೀ 'ಎಂದೆನ್ನುವ ವಿದ್ವಾಂಸರಿಗೂ ಅವುಗಳ ಮೇಲ್ಮೆಯು ಚೆನ್ನಾಗಿ ಹೊಳೆದಿರುವುದಿಲ್ಲ. ಸಾಮಾನ್ಯ ಜನರ ಮಾತಂತೂ ದೂರವೆ! ಸಾಮಾನ್ಯ ಜನರಲ್ಲಿ ಕೆಲವರು ಅವುಗಳ ಮೇಲೆ ಎಣ್ಣೆ ಸುರಿಯುತ್ತಾರೆ; ಮತ್ತೆ ಕೆಲವರು ಅವಕ್ಕೆ ಬಣ್ಣ ಬಳಿಯುತ್ತಾರೆ; ಬೇರೆ ಕೆಲವು ಹುಡುಗರು ತಮ್ಮ ಸ್ವಭಾವಾನುಗುಣವಾಗಿ ಅದನ್ನು ಮನಬಂದಂತೆ ಕಟೆದು ಕೆಡಿಸುತ್ತಾರೆ. ಹೀಗಾದ ಶಿಲಾಶಾಸನಗಳನ್ನು ಸಾವಿರಗಟ್ಲೆ ನೋಡಬಹುದು. ಅವುಗಳ ಮಹತ್ವವನ್ನರಿತವರಾದ ಸರ್ ಜಾರ್ಜ್ ಇಲಿಯೆಟ್, ಡಾ. ಫ್ಲೀಟ್, ಡಾ. ರೈಸ್ ಇವರಂಥ ಯುರೋಪೀಯ ಬಂಧುಗಳು ಮಾತ್ರ ಸಾವಿರಾರು ಲಿಪಿಗಳನ್ನು ಶ್ರಮಪಟ್ಟು ಉದ್ಧರಿಸಿದ್ದಾರೆ. ತೀರಿತು! ಮಿಕ್ಕವುಗಳೆಲ್ಲ ಹಾಗೇ ಮಣ್ಣುಮುಕ್ಕುತ್ತ ಬಿದ್ದುಕೊಂಡಿವೆ. ಅವುಗಳ ದುರವಸ್ಥೆ ಕಂಡು ಯಾವ ಇತಿಹಾಸಾಭಿಮಾನಿಯ ಕಣ್ಣುಗಳು ಅಶ್ರುಗಳಿಂದ ತುಂಬಿ ತುಳಕದೆ ಇರಲಾರವು? ಹೀಗೆ ಇನ್ನೆಷ್ಟು, ಮಣ್ಣಿನಲ್ಲಿ ಹುಗಿದು ಹೋಗಿರುವುವೋ ದೇವರೇ ಬಲ್ಲ! ಅನೇಕ ಶಿಲಾಲಿಪಿಗಳು ತಿಪ್ಪೆಯಲ್ಲಿ ಹೊರಳಾಡುವುದನ್ನೂ, ಬಾವಿಗಳಿಗೆ ಪಾವಟಿಗೆಗಳಾಗಿ ಬಿದ್ದಿರುವುದನ್ನೂ ಗುಡಿ-ಗುಂಡಾರಗಳಿಗೆ ತೊಲೆ-ಜಂತೆಗಳಾಗಿರುವದನ್ನೂ ಪ್ರಸ್ತುತ ಲೇಖಕನು ಕಣ್ಣಾರೆ ಕಂಡಿದ್ದಾನೆ! ಆದರೆ ಏನು! ಅವುಗಳನ್ನುದ್ದರಿಸುವ ಕಾರ್ಯವು ಒಬ್ಬಿಬ್ಬರಿಂದ ಸುಲಭ ಸಾಧ್ಯವೋ? ಮೈಸೂರ ಸರಕಾರದವರಂತೆ ನಮ್ಮ ಸರಕಾರದವರ ಮನಸ್ಸಿನಲ್ಲಿ ಬಂದಾಗಲೇ ಆ ಕೆಲಸವು ಸುಲಭಸಾಧ್ಯವು. ಆದರೆ ಅಂಥ ಕಾಲವು ಬರುವವರೆಗೆ ನಾವು ಸುಮ್ಮನಿರಬೇಕೋ? ಇಲ್ಲ. ನಾವು ಸಂಘಶಕ್ತಿಯಿಂದ ಆದಷ್ಟು ಮಟ್ಟಿಗೆ ಅವುಗಳನ್ನು ಕಾಲನ ಬಾಯಿಯಿಂದಲಾದರೂ ಉಳಿಸಿಕೊಂಡು ಮುದ್ರಿಸಿ ಇಡಬೇಕು. ಸುಲಭ ಸಾಧನಗಳುಳ್ಳ ಮಹಾರಾಷ್ಟ್ರ ಬಂಧುಗಳಿಗೆ ತಮ್ಮ ಇತಿಹಾಸವನ್ನು ಸಂಶೋಧಿಸಲಿಕ್ಕೆ ಪ್ರಸಿದ್ಧ ಶೋಧಕರಾದ ಶ್ರೀ ರಾಜವಾಡೆಯಂಥ ನೂರಾರು ಜನರು ಬೇಕಾಗಿರುವರು. ಇನ್ನು ನಮ್ಮ ಇತಿಹಾಸಕ್ಕೆ ಎಷ್ಟು ರಾಜವಾಡೆಯವರು ಬೇಕಾಗುವರೆಂಬುದನ್ನು ನೀವೇ ಕಲ್ಪಿಸಿರಿ. ಅಂಥ ಜನರು ಹುಟ್ಟಿದ ದಿವಸವೇ ಕರ್ನಾಟಕಕ್ಕೆ ಮಂಗಲ ದಿವಸವು. ಅವರು ಯಾವಾಗ ಹುಟ್ಟುವರೋ ಹುಟ್ಟಲಿ! ಸದ್ಯಕ್ಕಂತೂ ನಾವು ಶಿಲಾಲಿಪಿಗಳನ್ನು ಮೆಟ್ಟಿ ತುಳಿಯುತ್ತಿದ್ದೇವೆ. ಯಾವ ಶಿಲಾಲಿಪಿಗಳನ್ನು ರಾಜರು ಮಹಾರಾಜರು ಪವಿತ್ರ ವಸ್ತುಗಳೆಂದು ಸಂರಕ್ಷಿಸುತ್ತಿದ್ದರೋ ಅವುಗಳಿಗೆ ಹಾದಿಹೋಕರು ಸಹ ವ್ಯಸನಪಡುವ ದುಃಸ್ಥಿತಿಯು ಬಂದೊದಗಿದೆ. ಕರ್ನಾಟಕ ಇತಿಹಾಸಕ್ಕೆ ಮುಖ್ಯ ಸಾಧನವಾದ ಇವುಗಳನ್ನು ಉದ್ಧರಿಸುವುದೇ ಕನ್ನಡಿಗನ ಮೊದಲನೆಯ ಕಾರ್ಯವು.

ಕರ್ನಾಟಕ ಇತಿಹಾಸದ ಎರಡನೆಯ ಸಾಧನವಾವುದೆಂದರೆ ತಾಮ್ರಪಟಗಳು. ಇವೂ ಶಿಲಾಲಿಪಿಯಷ್ಟೇ ಮಹತ್ವದವಾಗಿರುತ್ತವೆ. ಇವುಗಳ ದಪ್ಪ ತಾಮ್ರದ ತಗಡುಗಳ ಮೇಲೆ ಸುವಾಚ್ಯವಾದ ಅಕ್ಷರಗಳು ಕೆತ್ತಲ್ಪಟ್ಟು, ನಾಲ್ಕಾರು ತಗಡುಗಳಲ್ಲಿ ರಂಧ್ರ ಕೊರೆದು ತಾಮ್ರದ ಬಳೆಗಳಲ್ಲಿ ಪೋಣಿಸಲ್ಪಟ್ಟಿರುತ್ತವೆ. ಈ ತಾಮ್ರಪಟಗಳೆಲ್ಲವೂ ಭೂದಾನದ ಸನದುಗಳೇ ಸರಿ. ಇಂಥ ನೂರಾರು ದೊರೆಯಬಹುದು. ಈಗ ಅವು ಬ್ರಾಹ್ಮಣರ ಮನೆಯಲ್ಲಿ ನೆಲಮನೆಯಲ್ಲಾಗಲಿ ದೇವರ ಜಗುಲಿಗಳ ಮೇಲಾಗಲಿ ಬಿದ್ದಿರುತ್ತವೆ. ಅನೇಕ ಮಠಗಳಲ್ಲಿ ಅವನ್ನು ಜನರು ಪೂಜೆ ಮಾಡುತ್ತಾರೆ. ಇಂಥ ತಾಮ್ರ ಶಾಸನಗಳನ್ನು ಇತಿಹಾಸ ಸಂಶೋಧಕರು ಹುಡುಕಿ ತೆಗೆಯಬೇಕು.

ಕರ್ನಾಟಕ ಇತಿಹಾಸವನ್ನು ಸಾರುವ ಮೂರನೆಯ ಸಾಧನವಾವುದೆಂದರೆ ವೀರಗಲ್ಲುಗಳು, ಮಾಸತಿಕಲ್ಲುಗಳು.ವೀರಗಲ್ಲುಗಳೆಂದರೆ ವೀರರು ಮಡಿದ ಸ್ಥಳಗಳಲ್ಲಿ ಅವರ ಸ್ಮಾರಕಕ್ಕೆಂದು ನಟ್ಟ ಕಲ್ಲುಗಳು. ಇವುಗಳ ಮೇಲೆ ಆಯಾ ವೀರರ ಮೂರ್ತಿಗಳನ್ನು ಕಟೆದಿದ್ದು ದೇವದೂತರು ಅವರನ್ನು ವಿಮಾನಗಳಲ್ಲಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವಂತೆ ಚಿತ್ರ ತೋರಿಸಿರುತ್ತದೆ. ಕೆಲವು ವೀರಗಲ್ಲುಗಳ ಮೇಲೆ ನಡುನಡುವೆ ಅಕ್ಷರಗಳಿರುತ್ತವೆ. ಮಹಾಸತಿಕಲ್ಲುಗಳೆಂದರೆ ಪತಿವ್ರತೆಯರು ವೀರರಾದ ತಮ್ಮ ಪತಿಗಳೊಡನೆ ಸಹಗಮನ ಮಾಡಿದ ಸ್ಥಳದಲ್ಲಿ ಅವರ ಸ್ಮಾರಕಾರ್ಥವಾಗಿ ನಿಲ್ಲಿಸಿದ ಕಲ್ಲುಗಳು. ಇದಕ್ಕೆ ಹಳ್ಳಿವಾಡದ ಜನರು ಮಾಸ್ತಿಕಲ್ಲು ಎಂದೆನ್ನುತ್ತಾರೆ. ಇಂಥ ಕಲ್ಲುಗಳಲ್ಲಿ ಕೆಲವುಗಳ ಮೇಲೆ ಒಂದು ಒಂದು ಕೈಯಾಕಾರದ ಗುರುತು ಮಾತ್ರ ಇರುತ್ತದೆ. ಈ ವೀರಗಲ್ಲು ಮಹಾಸತಿಗಲ್ಲುಗಳಿಂದಲೂ ಕೆಲವು ಮಟ್ಟಿಗೆ ಇತಿಹಾಸಕ್ಕೆ ಸಹಾಯವಾಗುವುದು.

ನಾಲ್ಕನೆಯ ಸಾಧನವಾವುದೆಂದರೆ ನಾಣ್ಯಗಳು. ಈ ನಾಣ್ಯಗಳಿಂದ ಆಯಾ ಕಾಲದ ಅರಸರ ಹೆಸರು ಇತ್ಯಾದಿಗಳು ವ್ಯಕ್ತವಾಗುತ್ತವೆ.

ಐದನೆಯ ಮಹತ್ವದ ಸಾಧನವೆಂದರೆ ಪೂರ್ವಕಾಲದ ಕಟ್ಟಡಗಳು. ದಕ್ಷಿಣ ಹಿಂದುಸ್ಥಾನದಲ್ಲಿರುವಂಥ ಭವ್ಯವಾದ ಗುಡಿಗಳು ಇಡೀ ಹಿಂದುಸ್ಥಾನದಲ್ಲಿಯೇ ಇಲ್ಲ. ಇದರ ಕಾರಣವೇನೆಂದರೆ ನಮ್ಮ ದೇಶದಲ್ಲಿ ಶಿಲ್ಪಕಲೆಯು ಅತ್ಯಂತ ಪರಿಣತಾವಸ್ಥೆಯನ್ನು ಪಡೆದಷ್ಟು ಅದು ಮತ್ತಾವ ದೇಶದಲ್ಲಿಯೂ ಪಡೆದಿರಲಿಲ್ಲ. ಇದರ ಸತ್ಯತೆಯು, ನಮ್ಮಲ್ಲಿಯ ಮನೋಹರವಾದ ಅಸಂಖ್ಯ ದೇವಾಲಯಗಳನ್ನು ನೋಡಿದರೆ ಗೊತ್ತಾಗುವುದು. ಡಾ. ಫರ್ಗ್ಯುಸನ್ರೆಂಬವರು ಈ ದೇಶವನ್ನೆಲ್ಲಾ ಸಂಚಾರಮಾಡಿ, ಈ ಕಟ್ಟಡಗಳ ಆಮೂಲಾಗ್ರವಾದ ಇತಿಹಾಸವನ್ನು ಬರೆದಿಟ್ಟಿದ್ದಾರೆ. ಈ ಕಟ್ಟಡಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇಂಥ ಗುಡಿಯು ಸುಮಾರು ಇಂಥ ಅರಸರ ಆಳಿಕೆಯಲ್ಲಿಯೇ ಹುಟ್ಟಿತೆಂದು ನಿರ್ಧರಿಸಲಿಕ್ಕೆ ಬರುತ್ತದೆಂದು ಡಾ. ಫರ್ಗ್ಯುಸನ್ ಇವರು ಹೇಳುತ್ತಾರೆ. ಇದಲ್ಲದೆ, ಆ ಗುಡಿಗಳ ಮೇಲೆ ಕೊರೆದಿರುವ ಚಿತ್ರಗಳಿಂದ ಆ ಕಾಲದ ಜನರ ಕಲಾಕೌಶಲ್ಯ, ಉಡಿಗೆ,ತೊಡಿಗೆ, ಸಮಾಜಸ್ಥಿತಿ, ಆಯುಧ, ವಾಹನ ಇವೇ ಮೊದಲಾದವುಗಳು ತಿಳಿದುಬರುತ್ತವೆ. ಕರ್ನಾಟಕದ ಅರಸರನ್ನು ಒಂದು ವೇಳೆ ಮರೆಯಬಹುದು; ಕರ್ನಾಟಕದ ವಿದ್ವನ್ಮಣಿಗಳು ಒಂದು ವೇಳೆ ನಮ್ಮ ಸ್ಮೃತಿಪಥದಿಂದ ದೂರವಾದಾರು; ಕರ್ನಾಟಕ ವಾಙ್ಮಯವು ಒಂದು ವೇಳೆ ಹುಳ ತಿಂದು ಹಾಳಾಗಿ ಹೋದೀತು! ಆದರೆ ಗುಡ್ಡ ಬೆಟ್ಟಗಳ ಬಂಡೆಗಳಲ್ಲಿ ಕೊರೆಯಲ್ಪಟ್ಟ ಅಖಂಡವಾದ ಕೃತ್ರಿಮ ಗವಿಗಳೂ, ಅಲೌಕಿಕವಾದ ಕಲಾಕೌಶಲ್ಯದಿಂದ ಯುಕ್ತವಾದ ದೇವಾಲಯಗಳೂ ಮಾತ್ರ ನಮ್ಮ ವೈಭವವನ್ನೂ ಜಾಣ್ಮೆಯನ್ನೂ ಸಂಪತ್ತಿಯನ್ನೂ ಜಗತ್ತಿಗೆಲ್ಲ ಪ್ರದರ್ಶಿಸುತ್ತ ಪ್ರಾಚೀನ ಕಾಲದ ಮಳೆಗಾಳಿಗಳ ಆಘಾತಗಳಿಗೆ ಮೈಗೊಟ್ಟು ಯುಗಾಂತ್ಯದವರೆಗೆ ನಿಲ್ಲುವದರಲ್ಲೇನೂ ಸಂದೇಹವಿಲ್ಲ.

ಆರನೆಯ ಸಾಧನವಾವುದೆಂದರೆ ವಾಙ್ಮಯ. ತಾಳೆಯೋಲೆಗಳನ್ನೇ ಆಗಿನ ಕಾಲಕ್ಕೆ ಬರಹಕ್ಕೆ ಬಳಸುತ್ತಿದ್ದುದರಿಂದ ನಮ್ಮ ವಾಙ್ಮಯವೆಲ್ಲವೂ ತಾಳೆಯೋಲೆಗಳಲ್ಲಿ ಅಡಕವಾಗಿದೆ. ಆದರೆ ಆ ತಾಳೆಯೋಲೆಗಳು ಈಗ ದುರ್ಲಭವಾಗಿವೆ. ತಮ್ಮ ವಾಙ್ಮಯವನ್ನು ಸಮೃದ್ಧಿಪಡಿಸಬೇಕೆಂದು ಕುತೂಹಲವುಳ್ಳವರಾದ ಪಕ್ಷಕ್ಕೆ ಕನ್ನಡಿಗರು ಮೊದಲು ಆ ಹಳೆಯ ತಾಳೆಯೋಲೆಗಳನ್ನು ಗೆದ್ದಲು ಹುಳಗಳ ಬಾಯಿಯಿಂದ ಬದುಕಿಸಬೇಕು. ಹಿಂದಿನ ಕಾಲದ ವಾಙ್ಮಯ ಸಂಪತ್ತೆಲ್ಲವೂ ಸುದೈವದಿಂದ ನಮ್ಮ ಕೈಸೇರಿದರೆ, ಅದರ ಆಧಾರದಿಂದ ಈಗಿನವರೆಗೆ ನಡೆದುಬಂದ ಕನ್ನಡ ಭಾಷೆಯ ಇತಿಹಾಸವನ್ನೂ ಅದರ ಬೆಳವಣಿಗೆಯನ್ನೂ ಗೊತ್ತುಹಿಡಿಯಬಹುದು. ಅಲ್ಲದೆ. ಅದು ರಾಜಕೀಯ ಇತಿಹಾಸ ಸಂಶೋಧನಕ್ಕೂ ನೆರವಾಗುವುದು.ಕವಿರಾಜಮಾರ್ಗ, ರಾಜಶೇಖರ ವಿಳಾಸ, ಚೆನ್ನಬಸವಪುರಾಣ ಮುಂತಾದ ಗ್ರಂಥಗಳನ್ನು ಇತಿಹಾಸ ದೃಷ್ಟಿಯಿಂದ ಓದಲಿಕ್ಕೆ ಕನ್ನಡಿಗರು ಮೊದಲು ಮಾಡಬೇಕು. ಆದರೆ ಆ ದೃಷ್ಟಿಯಿಂದ ಕನ್ನಡ ವಾಙ್ಮಯವನ್ನು ವ್ಯಾಸಂಗಮಾಡುವ ಇತಿಹಾಸ ಭಕ್ತರು ನಮ್ಮಲ್ಲಿ ಎಷ್ಟು ಜನರಿದ್ದಾರೆ? ನಮ್ಮ ಪರಮ ಮಿತ್ರರಾದ ರಾ. ರಾಜಪುರೋಹಿತರವರು ಪಂಢರಪುರದ ಇತಿಹಾಸವನ್ನು ಈ ಕನ್ನಡ ವಾಙ್ಮಯದ ಆಧಾರದಿಂದಲೇ ತೆಗೆದಿರುವರು. ಬಿಲ್ಹಣನ `ವಿಕ್ರಮಾಂಕದೇವ ಚರಿತವೆಂಬ ಸಂಸ್ಕೃತ ಕಾವ್ಯವು ಕರ್ನಾಟಕ ಚಕ್ರವರ್ತಿಯಾದ ಚಾಲುಕ್ಯ ವಿಕ್ರಮನ ಜೀವನಚರಿತ್ರವೇ ಆಗಿರುವುದು. ಸಾರಾಂಶ: ನಮ್ಮ ವಾಙ್ಮಯವು ಇತಿಹಾಸದ ಒಂದು ದೊಡ್ಡ ಬೊಕ್ಕಸವೇ ಆಗಿದೆ. ಈ ಬೊಕ್ಕಸದ ಮುದ್ರೆಯನ್ನು ತೆಗೆದು ಅದರೊಳಗಿರುವ ವಸ್ತುಗಳನ್ನು ಪರೀಕ್ಷಿಸದಿದ್ದರೆ ಅದಾರ ತಪ್ಪು?

ಏಳನೆಯ ಮಹತ್ವದ ಸಾಧನವಾವುದೆಂದರೆ ಪರದೇಶೀಯ ಪ್ರವಾಸಿಕರು ಬರೆದಿಟ್ಟ ಬರಹಗಳು. ಟಾಲೇಮಿ, ಹುಯೆನತ್ಸಾಂಗ, ಫಾಹೈನ, ಅಲಬುರ್ನಿ, ಇಬ್ನಬತೂತ, ಮಾರ್ಕೋಪೋಲೋ, ಅಬ್ದುಲ ರಜಾಕ ಮುಂತಾದವರ ಉಲ್ಲೇಖಗಳಿಂದ ನಮ್ಮ ಇತಿಹಾಸಜ್ಞಾನಕ್ಕೆ ಹೆಚ್ಚು ಬೆಳಕು ದೊರೆಯುವದು. ಚೀನದೇಶದ ಪ್ರವಾಸಿಯಾದ ಹುಯೆನತ್ಸಾಂಗನು ಬರೆದ ಬಾದಾಮಿಯ ೨ನೆಯ ಪುಲಿಕೇಶಿಯ ವರ್ಣನೆಯನ್ನೂ, ಅಬ್ದುಲ ರಜಾಕನು ಬರೆದ ವಿಜಯನಗರದ ವರ್ಣನೆಯನ್ನೂ ಓದಿದರೆ ನಾವು ಈ ಪುಸ್ತಕದಲ್ಲಿ ಅಡಿಗಡಿಗೆ ಹೇಳಿರುವ ನಮ್ಮ ವೈಭವದಲ್ಲಿ ಅತಿಶಯೋಕ್ತಿಯಿಲ್ಲೆಂಬುದೂ ನಮ್ಮ ಅಭಿಮಾನವು ಪಕ್ಷಪಾತ ಮೂಲಕವಾದುದಲ್ಲವೆಂಬುದೂ ಮನದಟ್ಟಾಗುವದು.

ಕಡಿಮೆಯಲ್ಲದ ಎಂಟನೆಯ ಸಾಧನವಾವುದೆಂದರೆ ಪರಂಪರಾಗತವಾದ ಕಥೆಗಳು, ಸ್ಥಳ ಮಹಾತ್ಮ್ಯಗಳು, ಆಚಾರಗಳು ಮತ್ತು ಧಾರ್ಮಿಕ ವಿಚಾರಗಳು. ಇವುಗಳ ಮಹತ್ವವು ಅಷ್ಟಿಷ್ಟೆಂದು ಹೇಳಲಿಕ್ಕಾಗದು. ಪ್ರತಿಯೊಂದು ಪ್ರಸಿದ್ಧವಾದ ಸ್ಥಳಕ್ಕೆ `ಸ್ಥಳ ಪುರಾಣವೊಂದು ಇದ್ದೇ ಇರುತ್ತದೆ. ಅದನ್ನು ಇತಿಹಾಸ ದೃಷ್ಟಿಯಿಂದ ಶೋಧಿಸಿದರೆ ಆ ಊರಿನ ಉತ್ಪತ್ತಿ, ಅದರ ಹಳೆಯ ಹೆಸರು ಮುಂತಾದವುಗಳು ಗೊತ್ತಾಗುವವು. ಕಥೆಗಳನ್ನೂ ಆಚಾರ ವಿಚಾರಗಳನ್ನೂ ಪರೀಕ್ಷಿಸಿ ಅವುಗಳಲ್ಲಿರುವ ಹೊಟ್ಟನ್ನು ಹಾರುಹೊಡೆದರೆ, ಒಳಗೆ ಒಂದೆರಡು ಗಟ್ಟಿಕಾಳುಗಳು ಹೊರಟೇ ಹೊರಡುವವು.

ಒಂಭತ್ತನೆಯ ಮಹತ್ವದ ಸಾಧನವೆಂದರೆ ಭೂಮಿಯ ಅಗೆತ, ಚಂದ್ರವಳ್ಳಿ, ಹೆರಕಲ್ಲ, ಮಾಸ್ಕಿ ಮುಂತಾದ ಅನೇಕ ಸ್ಥಳಗಳಲ್ಲಿ ಐತಿಹಾಸಿಕ ಸಾಮಗ್ರಿಗಳು, ಶಿಲಾಯುಗ ಲೋಹಯುಗಗಳ ಕುರುಹುಗಳು ದೊರೆಯುತ್ತವೆ.

ಸಾರಾಂಶ: ಈ ಸಾಧನ ಸಾಮಗ್ರಿಯನ್ನೆಲ್ಲ ಕೂಡಿಹಾಕುವದೇ ಇತಿಹಾಸ ಸಂಶೋಧಕರ ಮೊದಲನೆಯ ಕೆಲಸವು. ಈ ಸಾಧನ ಸಾಮಗ್ರಿಯನ್ನೆಲ್ಲ ಕಲೆಹಾಕಿ ಕಡೆದರೆ ಬೆಣ್ಣೆ ಹೊರಡದೆ ಇರುವುದೇ? ಆದರೆ ಮನೆಯ ಕೆಲಸವನ್ನು ಬದಿಗಿರಿಸಿ, ಅದನ್ನು ಕಣ್ತೆರೆದು ನೋಡುವವರಾರು? ಇದು ರುಕ್ಷವಾದ ವಿಷಯವೆಂದು ಕಲಿತವರೂ ಇದನ್ನು ಹಳಿಯುತ್ತಾರೆ; ಏಕೆಂದರೆ, ಇದರಿಂದ ಹಣ ಪ್ರಾಪ್ತಿಯಿಲ್ಲ; ಗೌರವ ಪ್ರಾಪ್ತಿಯಿಲ್ಲ; ಅಧಿಕಾರ ಪ್ರಾಪ್ತಿಯಿಲ್ಲ. ಮೇಲಾಗಿ ಶಾಲೆಯಲ್ಲಿ ಈಗ ಕಲಿಯುವ ವಿದ್ಯೆಯು ಇಲ್ಲಿ ಬಹಳ ಮಟ್ಟಿಗೆ ಉಪಯೋಗವಾಗುವದಿಲ್ಲ. ಇಷ್ಟೇ ಅಲ್ಲ; ಈಗ ನಮಗೆ ಶಾಲೆಯಲ್ಲಿ ಸಿಕ್ಕುವ ವಿದ್ಯೆಯಿಂದ ಸಂಶೋಧನಕ್ಕೆ ದಾರಿ ಯಾವುದೆಂಬುದೂ ತಿಳಿಯುವದಿಲ್ಲ. ಈ ಬಗೆಯಾಗಿ ಈ ವಿಷಯವು ರುಕ್ಷವಾಗಿರುವದಲ್ಲದೆ ಕಠಿಣವೂ ಆಗಿದೆ. ಅನೇಕ ಸಾಮಗ್ರಿಗಳನ್ನು ಓದಿ, ಅಣಿಮಾಡಿಟ್ಟುಕೊಂಡರೂ ಒಮ್ಮೊಮ್ಮೆ ಇತಿಹಾಸದ ಒಂದು ಕಣವು ಕೂಡ ಕಾಣದೆ ಹೋಗಬಹುದು! ಹೀಗೆ ಎಲ್ಲೆಡೆಯಲ್ಲಿಯೂ ನಿರಾಶೆಯೇ ಬಲಿತುಕೊಂಡಿರುವ ಇಂತಹ ಸ್ಥಿತಿಯಲ್ಲಿ ಕೇವಲ ದೇಶಭಕ್ತಿಯಿಂದ ಪ್ರೇರಿತರಾಗಿ, ಯಾವದೊಂದು ಮೂರ್ತ ಪರಿಣಾಮವನ್ನು ಪಡೆಯುವೆವೆಂಬ ಆಶೆ ಹಿಡಿಯದೇ ದುಡಿಯುವಂಥವರೇ ಮುಂದಾಳುಗಳಾಗಿ ಇತಿಹಾಸ ಮಂದಿರಕ್ಕೆ ತಳಹದಿಯನ್ನು ಹಾಕಲಿಕ್ಕೇ ಬೇಕು. ಅದರ ಮೇಲೆ ಕಟ್ಟಡವನ್ನೇರಿಸುವ ಕಾರ್ಯವನ್ನು ಮುಂದೆ ಯಾರಾದರೂ ಕೈಕೊಳ್ಳಬಹುದು. ಈ ತಳಹದಿಯನ್ನು ಹಾಕುವ ಕಾರ್ಯದ ಮಹತ್ವವು ಎಂದರೆ ಸಂಶೋಧನ ಕಾರ್ಯದ ಮಹತ್ವವು ಸಾಮಾನ್ಯ ಜನರಿಗೆ ಬೇಗನೆ ತಿಳಿಯುವದಿಲ್ಲವಾದುದರಿಂದ, ಬಲ್ಲವರು ಅದನ್ನು ತಿಳಿಯಹೇಳಿ ಕಾರ್ಯಕ್ಕೆ ಪ್ರಾರಂಭಿಸಬೇಕು. ಈಗಿನ ಸಂಶೋಧಕರ ಅದೃಶ್ಯವಾದ ಆಸ್ತಿವಾರದ ಮೇಲೆಯೇ ಮುಂದೆ ಭವ್ಯವಾಗಿ ಕಾಣಿಸುವ ಸುಂದರವಾದ ಮಂದಿರವು ಕಾಣತಕ್ಕುದಿರುತ್ತದೆ. ಸೇತುಬಂಧನದ ಕಾರ್ಯವೇನು ಚಿಕ್ಕದೋ? ಆದರೆ ರಾಮ ಭಕ್ತಿಯಿಂದ ಪ್ರೇರಿತವಾದ ಅಳಿಲುಗಳು ಒಂದೊಂದೇ ಮಳಲ ಕಣವನ್ನು ತಂದು ಹಾಕಿ, ಆ ಪ್ರಚಂಡ ಕಾರ್ಯಕ್ಕೆ ನೆರವಾಗಲಿಲ್ಲವೆ? ಆ `ಅಳಿಲಭಕ್ತಿಯನ್ನು ನೆನಪಿಗೆ ತಂದುಕೊಂಡು, ಸಾವಿರಾರು ಇತಿಹಾಸ ಸಂಶೋಧಕರು ನಿರಪೇಕ್ಷ ಬುದ್ಧಿಯಿಂದಲೂ ಯಾವದೊಂದು ಮೂರ್ತ ಪರಿಣಾಮವನ್ನು ತಾವೇ ನೋಡಬೇಕೆಂದು ಅಪೇಕ್ಷಿಸದೆಯೂ ಹೆಣಗಿದರೆ ಮಾತ್ರ ಭೂತಕಾಲ ಮತ್ತು ವರ್ತಮಾನ ಇವುಗಳ ನಡುವಿನ ಈ ಸೇತುಬಂಧನವು ಸಿದ್ಧವಾಗಿ ಅದರ ಮೇಲಿಂದ ಭವಿಷ್ಯತ್ಕಾಲಕ್ಕೆ ಹೋಗುವದಕ್ಕೂ ನಮಗೆ ಮಾರ್ಗವಾಗುವುದು. ಸಾರಾಂಶ: ಇತಿಹಾಸ ಸಂಶೋಧನ ಕಾರ್ಯವು ಅವಸರದಿಂದಾಗತಕ್ಕ ಕಾರ್ಯವಲ್ಲ ಇದು ಸಾವಧಾನದಿಂದಲೂ, ಪ್ರಯತ್ನ ಸಾತತ್ಯದಿಂದಲೂ, ಕ್ರಮದಿಂದಲೂ ಸಾಧ್ಯವಾಗತಕ್ಕ ಕಾರ್ಯವು. ಹಿಂದೆ ಹೇಳಿದಂತೆ, ಇಲ್ಲಿ ಅಧಿಕಾರ ಲೋಲುಪರಿಗೆ ಆಸ್ಪದವಿರುವದಿಲ್ಲ; ಹಣದಾಶೆಯವರಿಗೆ ಆಸರವಿಲ್ಲ; ಕೀರ್ತಿ ಕಾಂಕ್ಷಿಗಳಿಗೆ ಇಂಬಿಲ್ಲ; ಇಂಥವರು ಇತ್ತ ಇಣಿಕಿ ಸಹ ನೋಡಕೂಡದು. ಯಾರಿಗೆ ಕರುಳು ಕರಗಿದರೂ, ನೆತ್ತರೊಣಗಿದರೂ, ಮೈಮುರಿದರೂ ಹಿಂಜರಿಯದೆ ದುಡಿಯುವಷ್ಟು ಅಪಾರವಾದ ಉತ್ಸಾಹ ಶಕ್ತಿಯಿರುವದೋ, ಯಾರು ರಾಷ್ಟ್ರದ ಸೇವೆ ಮಾಡುವೆವೆಂಬದೊಂದೇ ಸಂತೋಷದಿಂದ ಕೈ ಹಾಕುವರೋ ಅವರು ಮಾತ್ರ ಈ ಕ್ಷೇತ್ರದಲ್ಲಿ ಕಾಲಿಡಲು ಅರ್ಹರು. ರಾಷ್ಟ್ರದಲ್ಲಿ ಈಗ ನವಜೀವನವು ಸಂಚರಿಸುತ್ತಿರುವದರಿಂದ, ಇಂಥ ಸ್ವಾರ್ಥತ್ಯಾಗಿಗಳ ಸಂಖ್ಯೆಯು ಕರ್ನಾಟಕದೊಳಗೆ ನೂರ್ಮಡಿಯಾಗಿ ಬೇಗನೆ ಬೆಳೆಯಲೆಂದು ಹರಕೆಯಿಟ್ಟು ಮುಂದೆ ಸಾಗುವೆವು.


೬ನೆಯ ಪ್ರಕರಣ

ಚಾಲುಕ್ಯರ ಪೂರ್ವದ ಕರ್ನಾಟಕದ ಇತಿಹಾಸ
(೫ನೆಯ ಶತಕದವರೆಗೆ)

ನಾಲ್ಕನೆಯ ಪ್ರಕರಣದಲ್ಲಿ ಕರ್ನಾಟಕದ ಇತಿಹಾಸದ ಮಹಿಮಾತಿಶಯವನ್ನು ವರ್ಣಿಸಿ, ಐದನೆಯದರಲ್ಲಿ ಕರ್ನಾಟಕ ಇತಿಹಾಸದ ಸಾಧನಸಂಪತ್ತಿಯನ್ನು ಹೇಳಿರುವೆವಷ್ಟೆ. ಆದರೆ ಈ ಮಹಿಮಾತಿಶಯವು ಚೆನ್ನಾಗಿ ಮನಸ್ಸಿನಲ್ಲಿ ನಟ್ಟು, ಆ ಸಾಧನಸಂಪತ್ತಿಯನ್ನು ಯೋಗ್ಯವಾಗಿ ಉಪಯೋಗ ಮಾಡಿಕೊಳ್ಳುವ ಸಾಮರ್ಥ್ಯವು ನಮ್ಮಲ್ಲಿ ಬರಬೇಕಾದರೆ, ನಾವು ಕರ್ನಾಟಕದ ಸಂಕ್ಷಿಪ್ತ ಇತಿಹಾಸವನ್ನು ಈಗ ಗೊತ್ತಿದ್ದ ಮಟ್ಟಿಗೆ ಅರಿತುಕೊಳ್ಳವದು ಅವಶ್ಯವಾಗಿದೆ. ಈಗ ನಮ್ಮಲ್ಲಿಯ ಸುಶಿಕ್ಷಿತರಿಗೂ ಕೂಡ, ಕರ್ನಾಟಕದ ಪ್ರಸಿದ್ಧ ಅರಸರು ಯಾರು, ಅವರು ಯಾವಾಗ ಆಳಿದರು, ಸಾರ್ವಭೌಮ ರಾಜರ ಮನೆತನಗಳು ಯಾವುವು, ಮಾಂಡಲಿಕರ ಮನೆತನಗಳು ಯಾವುವು ಎಂಬ ಕಲ್ಪನೆಯು ಕೂಡ ಚೆನ್ನಾಗಿ ತೋರಿರುವದಿಲ್ಲ. ಚಾಲುಕ್ಯ ವಿಕ್ರಮನೆಂದರೆ ಪ್ರಸಿದ್ಧ ಶಕಕರ್ತನಾದ ಉತ್ತರ ಪ್ರಾಂತದ ವಿಕ್ರಮಾದಿತ್ಯನೆಂದೇ ಇಂದಿಗೂ ಅನೇಕರ ಭಾವನೆ, ಪುಲಿಕೇಶಿಯೆಂಬುದು ಅರಸನ ಹೆಸರೋ, ಅರಸು ಮನೆತನದ ಹೆಸರೋ, ಇದು ಕೂಡ ಗೊತ್ತಿರುವದಿಲ್ಲ. ಚಾಲುಕ್ಯರು ಬಾದಾಮಿಯಲ್ಲಿ ಆಳಿದರೋ ಲಕ್ಷ್ಮೇಶ್ವರದಲ್ಲಿ ಆಳಿದರೋ ಎಂಬುದನ್ನು ಅನೇಕರು ಅರಿಯರು. ಹೀಗೆ ನಿಜಸ್ಥಿತಿಯಿರುವದರಿಂದ, ಅಲ್ಲೊಂದು ಇಲ್ಲೊಂದು ಹರಡಿರುವ ಸಾಧನಸಾಮಗ್ರಿಯನ್ನು ತಲೆಯಲ್ಲಿ ಹಾಕಿಕೊಳ್ಳುವದು ಸಾಮಾನ್ಯ ಜನರಿಗೆ ಕಠಿಣ ಕಾರ್ಯವಾಗಿರುತ್ತದೆಂಬುದು ನನ್ನ ಅನುಭವಕ್ಕೆ ಬಂದಿದೆ. ಆದುದರಿಂದ, ಮೊದಲಿನಿಂದ ಕೊನೆಯವರೆಗೆ ಕರ್ನಾಟಕದ ಇತಿಹಾಸದ ಮಹತ್ವದ ಸಂಗತಿಗಳನ್ನು ಇಲ್ಲಿ ಸಂಕ್ಷೇಪವಾಗಿ ಹೇಳಿಬಿಟ್ಟರೆ ಹೊಸದಾಗಿ ದೊರೆತ ಸಾಧನಗಳ ಪ್ರಯೋಜನ ಮಾಡಿಕೊಳ್ಳುವದಕ್ಕೆ ಅನುಕೂಲವಾಗುತ್ತದೆ. ಅರಸರ ಆಳಿಕೆಗಳ ಕ್ರಮವಾದ ಇತಿಹಾಸವನ್ನು ಹೇಳುವದೇ ಈಗ ನಡೆದು ಬಂದ ಪದ್ದತಿ. ಅದಕ್ಕನುಸಾರವಾಗಿ, ಸಾಮಾನ್ಯ ವಾಚಕರು ಕೂಡ ನೆನಪಿನಲ್ಲಿಡಬಹುದಾದ ಮತ್ತು ಪ್ರತಿಯೊಬ್ಬ ಕನ್ನಡಿಗನೂ ಅವಶ್ಯವಾಗಿ ಕಲಿಯತಕ್ಕ ಸಂಗತಿಗಳನ್ನಷ್ಟೇ ಹೇಳಿ, ಅತಿ ಪ್ರಾಚೀನಕಾಲದಿಂದ ಕೊನೆಯವರೆಗಿನ ಇತಿಹಾಸ ಕ್ಷೇತ್ರದಲ್ಲಿ ನಮ್ಮ ವಾಚಕರನ್ನು ಮೋಟಾರ ವೇಗದಿಂದ ಅಡ್ಡಾಡಿಸಿಕೊಂಡು ಬರುತ್ತೇವೆ.

ರಾಮಾಯಣ ಕಾಲದಲ್ಲಿ ನರ್ಮದೆಯ ದಕ್ಷಿಣಕ್ಕೆ ದಂಡಕಾರಣ್ಯವೆಂಬ ಮಹಾ ಕಾಂತಾರವಿತ್ತು. ಕರ್ನಾಟಕದಲ್ಲಿ ಆಗ ಬೆಳೆದ ಅಡವಿಗೆ ಮತಂಗವನವೆಂದು ಹೆಸರು. ಅದರಲ್ಲಿ ಮತಂಗ, ಗಾಲವ, ಜಮದಗ್ನಿ ಮುಂತಾದ ಋಷಿಗಳು ತಪಶ್ಚರ್ಯ ಮಾಡುತ್ತಿದ್ದರು. ಆದರೆ ಆ ಕಾಲದಲ್ಲಿ ಕೂಡ ಸುಗ್ರೀವನ ರಾಜಧಾನಿಯಾದ ಕಿಷ್ಕಿಂಧಾ ಪಟ್ಟಣವು ಭರಭರಾಟಿಯಲ್ಲಿ ಇದ್ದೇಇತ್ತು. ಈಗಿನ ಹಂಪೆ ಅಥವಾ ಪಂಪಾ ಪಟ್ಟಣವೇ ಆ ಕಿಷ್ಕಿಂಧೆ. ಈಗಿನಂತೆ ಆಗಲೂ ಕೂಡ ಅದೊಂದು ಕ್ಷೇತ್ರವೆಂದೆಣಿಸಲ್ಪಡುತ್ತಿತ್ತು. ವಿಜಯನಗರವೆಂದರೂ ಇದೇ! ಸಾರಾಂಶ: ಈ ಪಟ್ಟಣವು ಕರ್ನಾಟಕದಲ್ಲಿ ಅತಿ ಪ್ರಾಚೀನ ಕಾಲದಿಂದ ಪ್ರಸಿದ್ಧವು. ಕರ್ನಾಟಕದ ವೈಭವದ ಸಮಾಧಿಯೂ ಇಲ್ಲಿಯೇ ಆಯಿತು. ಯಾಕೆಂದರೆ, ಕನ್ನಡ ನಾಡಿನ ಕೊನೆಯ ಅರಸರಾದ ವಿಜಯನಗರದ ರಾಜರು ಇದೇ ಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳಿದರು. ೧೫೬೫ರಲ್ಲಿ ತಾಳಿಕೋಟೆ ಕಾಳಗದಲ್ಲಿ (ಈ ಕಾಳಗದ ನಿಜವಾದ ಹೆಸರು ರಾಕ್ಷಸ ತಂಗಡಿಗಿ ಕಾಳಗ, ಏಕೆಂದರೆ ರಾಕ್ಷಸ-ತಂಗಡಗಿ ಊರುಗಳ ಹತ್ತರ ಆ ಕಾಳಗವಾಗಿದೆ.) ಅವರು ಸೋತುದರಿಂದ ಅವರ ವೈಭವವೆಲ್ಲವೂ ಮಣ್ಣುಪಾಲಾಯಿತು. ಇರಲಿ. ಗೋಕರ್ಣದ ಮಹಾಬಳೇಶ್ವರ ಲಿಂಗವು ರಾವಣನಿಂದ ಸ್ಥಾಪಿತವಾಯಿತೆಂದು ಕಥೆಯುಂಟು. ಈ ದೇವಸ್ಥಾನದ ಉಲ್ಲೇಖವು ರಾಮಾಯಣ ಕಾಲದಲ್ಲಿಯೂ ಇರುತ್ತದೆ. ಇದು ರಾಮಾಯಣ ಕಾಲದ ಸ್ಥಿತಿಯಾಯಿತು.

ಮಹಾಭಾರತದ ಕಾಲದೊಳಗೆ ಕರ್ನಾಟಕದೊಳಗೆ ಹಲಕೆಲವು ರಾಜ್ಯಗಳು ನೆಲೆಗೊಂಡಿದ್ದವು. ಕರವೀರಪುರ (ಕೊಲ್ಹಾಪುರ)ದಲ್ಲಿ ಶೃಗಾಲ ವಾಸುದೇವನೆಂಬ ಅರಸನು ಆಳುತ್ತಿದ್ದನು. ಕೃಷ್ಣನು ಅವನನ್ನು ಕೊಂದು ಅವರ ರಾಜ್ಯಕ್ಕೆ ಸೇರಿದ ಗೋಮಾಂತಕ ಪ್ರಾಂತವನ್ನು ತನ್ನ ಕೈವಶ ಮಾಡಿಕೊಂಡನು. ಮತ್ಸ್ಯಪುರದಲ್ಲಿ ವಿರಾಟನೆಂಬ ರಾಜನು ರಾಜ್ಯ ಮಾಡುತ್ತಿದ್ದನು. ಶಾಲಿವಾಹನ ಶಕದ ೧೨ನೆಯ ಶತಮಾನದಲ್ಲಿಯೂ, ಹಾನಗಲ್ಲಿಗೆ ವಿರಾಟಕೋಟೆಯೆಂಬ ಹೆಸರಿತ್ತೆಂದು ಆ ಕಾಲದ ಲಿಪಿಗಳಿಂದ ತಿಳಿಯುತ್ತದೆ. ಹಾನಗಲ್ಲಿನಲ್ಲಿ ಹಳೇ ಕೋಟೆಯನ್ನೂ ಕೀಚಕನ ಗರಡೀಮನೆಯನ್ನೂ ಜನರು ಈಗಲೂ ತೋರಿಸುತ್ತಾರೆ. ವಿರಾಟ ರಾಜ್ಯದ ದಕ್ಷಿಣಕ್ಕೆ ಅದಕ್ಕೆ ಹೊಂದಿ, ಸುಶರ್ಮನೆಂಬ ಅರಸನ ತ್ರಿಗರ್ತ ದೇಶದ ರಾಜ್ಯವಿತ್ತೆಂದು ವಿರಾಟಪರ್ವದಲ್ಲಿ ಹೇಳಿದೆ. ತ್ರಿಗರ್ತವೆಂದರೆ ಮೂರು ದಿಕ್ಕುಗಳಲ್ಲಿ ತಗ್ಗುಳ್ಳ ಸೀಮೆಯೆಂಬರ್ಥವು. ಈ ವರ್ಣನೆಯು ಮೈಸೂರ ಸೀಮೆಗೆ ಸರಿಹೊಂದುತ್ತದೆ. ಒಟ್ಟಿಗೆ ಕೌರವ ಪಾಂಡವರ ಕಾಲದಲ್ಲಿ ಗೋಮಂತಕ, ಮತ್ಸ್ಯ, ತ್ರಿಗರ್ತ ಈ ಮೂರು ರಾಷ್ಟ್ರಗಳೂ ಕರ್ನಾಟಕದಲ್ಲಿದ್ದುವೆಂದು ಊಹೆಯಾಗುತ್ತದೆ. ಆನೆಗೊಂದಿಯೆಂಬುದೇ ಮಹಾಭಾರತದಲ್ಲಿಯ ಉಪಪ್ಲಾವ. ಮಹಾಭಾರತದ ಭೀಷ್ಮಪರ್ವದಲ್ಲಿ ಕರ್ನಾಟಕದ ಹೆಸರು ಬಂದಿದೆ.

ಕರ್ಣಾಟಕ ಮಹಿಷಕಾ ವಿಕಲ್ಪಾ ಮೂಷಕಾಸ್ತಥಾ |

ಝಿಲ್ಲಿಕಾಃ ಕುಂತಲಾಶ್ಚೈವ ಸೌಹೃದಾ ನಭಕಾನನಾಃ || - ಭೀಷ್ಮಪರ್ವ ೯-೫೯


ಪಾಂಡವರ ಕಾಲದಿಂದ ಶಾಲಿವಾಹನ ಶಕದ ಆರಂಭದವರೆಗೆ ಕರ್ನಾಟಕದ ಇತಿಹಾಸವು ತಿಳಿದಿಲ್ಲ. ಈ ಅವಧಿಯಲ್ಲಿ ಕರ್ನಾಟಕಕ್ಕೆ ಕುಂತಳ, ನಾಟ, ಲಾಟ ಮುಂತಾದ ಹೆಸರು ಪ್ರಾಪ್ತವಾಗಿದ್ದುವು. ಕುಂತಳ ದೇಶದಲ್ಲಿ ಚಂದ್ರಹಾಸನೆಂಬ ಅರಸನು ಆಳಿದ ಕಥೆಯು ಪುರಾಣ ಪ್ರಸಿದ್ಧವಾಗಿದೆ. ಈ ಅವಧಿಯಲ್ಲಿಯೇ ಈಜಿಪ್ತ ಗ್ರೀಸ ದೇಶಗಳ ವ್ಯಾಪಾರಸ್ಥರು ಕರ್ನಾಟಕಕ್ಕೆ ಆಗಾಗ್ಗೆ ಬರುತ್ತಿದ್ದರೆಂದು ತೋರುತ್ತದೆ. ಈಜಿಪ್ತ ದೇಶದಲ್ಲಿ ಟಾಲೇಮಿ ಎಂಬೊಬ್ಬ ಗ್ರಂಥಕರ್ತನು ಕ್ರಿ. ಶ. ೧೫೦ನೆಯ ವರ್ಷದಲ್ಲಿ ಇದ್ದನು. ಅವನು ಆ ಕಾಲಕ್ಕೆ ವ್ಯಾಪಾರಕ್ಕೋಸ್ಕರ ಹಿಂದುಸ್ಥಾನದ ಪಶ್ಚಿಮ ಸಮುದ್ರ ತೀರಕ್ಕೆ ಬರುತ್ತಿದ್ದ ವರ್ತಕರನ್ನು ಕೇಳಿ ಆರ್ಯಕ ಎಂಬ ದೇಶದೊಳಗಿನ ೫ ಗ್ರಾಮಗಳ ಹೆಸರನ್ನು ಬರೆದಿಟ್ಟಿದ್ದಾನೆ. ಅವು ಯಾವುವೆಂದರೆ: ಬದಯಾಮೇಯಿ,ಇಂಡಿ, ಕಲ್ಲಿಗೇರಿ, ಮೊದೋಗಲ್ಲ, ಪತರ್ಗಲ. ಇವು ಕ್ರಮವಾಗಿ ಬಾದಾಮಿ, ಇಂಡೀ, ಕಲಕೇರಿ, ಮುದಗಲ್ಲು, ಪಟ್ಟದಕಲ್ಲು ಮುಂತಾದ ಊರುಗಳು. ಬನವಾಸಿಯ ಹೆಸರೂ ಹೊನ್ನಾವರ ಮತ್ತು ಮಿರ್ಜಾನ್ ಬಂದರಗಳ ಹೆಸರೂ ಅದರಲ್ಲಿ ಉಕ್ತವಾಗಿವೆ. ಎರಡನೆಯ ಶತಮಾನದಲ್ಲಿ ಹುಟ್ಟಿದ ಅಹನಾನೂರ ಎಂಬ ತಮಿಳು ಗ್ರಂಥದಲ್ಲಿ ಎರುಮೈನಾಡಿನ ಎಂದರೆ ಮಹಿಷ ಮಂಡಲ (ಮೈಸೂರ ದೇಶ)ದ ಅರಸನು ಪಾಂಡ್ಯ ರಾಜನೊಡನೆ ಯುದ್ಧವಾಡಿದಂತೆ ಉಲ್ಲೇಖವಿದೆ. ೫ನೆಯ ಶತಮಾನದ ಆದಿಭಾಗದಲ್ಲಿದ್ದ ವರಾಹಮಿಹಿರಾಚಾರ್ಯರ ಗ್ರಂಥದಲ್ಲಿಯೂ ಕರ್ನಾಟಕ ಎಂಬ ಶಬ್ದವು ಬಂದಿದೆ. ಆದರೆ ಇವೆಲ್ಲವುಗಳಿಂದ ಹೆಚ್ಚಿನ ಐತಿಹಾಸಿಕ ಸಂಗತಿಗಳೇನೂ ಗೊತ್ತಾಗುವುದಿಲ್ಲ. ಇರಲಿ.

ಹಿಂದುಸ್ಥಾನದ ವಿಷಯವಾಗಿ ನಮಗೆ ಗೊತ್ತಿದ್ದ ಇತಿಹಾಸವು ನಂದಚಂದ್ರಗುಪ್ತರ ಕಾಲದಿಂದ ಎಂದರೆ ಕ್ರಿ. ಪೂ. ದಲ್ಲಿ ೪-೫ ಶತಮಾನಗಳಿಂದ ಪ್ರಾರಂಭವಾಗುತ್ತದೆಂದು ಹೇಳಬಹುದು. ಚಂದ್ರಗುಪ್ತನು ಕ್ರಿ.ಪೂ. ೩೨೧ರಲ್ಲಿ ಆಳಿದನೆಂಬ ಸಂಗತಿಯೇ ಎಲ್ಲಕ್ಕೂ ಪ್ರಾಚೀನವಾದ ಮತ್ತು ವಿಶ್ವಸನೀಯವಾದ ಐತಿಹಾಸಿಕ ಸಂಗತಿಯು. ಹಿಂದುಸ್ಥಾನದ ಪ್ರಾಚೀನ ಇತಿಹಾಸದಲ್ಲಿ ಮುಖ್ಯವಾಗಿ ಎರಡು ಭಾಗಗಳನ್ನು ಮಾಡಬಹುದು. ಒಂದು ಉತ್ತರ ಹಿಂದುಸ್ಥಾನದ ಎಂದರೆ ವಿಂಧ್ಯದ ಉತ್ತರದ ಇತಿಹಾಸ, ಮತ್ತೊಂದು ದಕ್ಷಿಣ ಹಿಂದುಸ್ಥಾನದ ಅಥವಾ ದಕ್ಷಿಣಾಪಥದ ಇತಿಹಾಸ. ಇವೆರಡು ಇತಿಹಾಸಗಳು ಭಿನ್ನ ಭಿನ್ನವಿರುತ್ತವೆ. ಇವೆರಡರ ಸುಧಾರಣೆಯು ಬೇರೆ. ಇವೆರಡಕ್ಕೂ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯಿರುತ್ತದೆ. ಆದರೂ ದಕ್ಷಿಣಾಪಥದ ಇತಿಹಾಸದ ಸಂಬಂಧವು ನಡುನಡುವೆ ಉತ್ತರ ಹಿಂದುಸ್ಥಾನದ ಕೂಡ ಬಂದಿರುವದರಿಂದ ನಾವು ಉತ್ತರ ಹಿಂದುಸ್ಥಾನದಲ್ಲಿ ಯಾವ ಯಾವ ರಾಜವಂಶಗಳು ಆಗಿಹೋದವೆಂಬುದನ್ನು ಸ್ವಲ್ಪದರಲ್ಲಿ ಹೇಳುತ್ತೇವೆ.

ನಂದರೆಂಬ ಅರಸರನ್ನು ಸೋಲಿಸಿ ಚಂದ್ರಗುಪ್ತನು ಚಾಣಕ್ಯನೆಂಬವನ ಸಹಾಯದಿಂದ ರಾಜ್ಯಪದವನ್ನು ಪಡೆದು ಕ್ರಿ. ಪೂ. ೩೨೧ರಲ್ಲಿ ಪಟ್ಟವೇರಿದ ಸಂಗತಿಯನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುವರು. ಈ ಚಂದ್ರಗುಪ್ತನು ಮೌರ್ಯವಂಶದವನು. ಈ ಮೌರ್ಯವಂಶವು ಮುಂದೆ ಕ್ರಿ. ಪೂ. ೧೮೪ರವರೆಗೆ ಆಳಿತು. ಚಂದ್ರಗುಪ್ತನ ಮೊಮ್ಮಗನೇ ಅಶೋಕನು. ಅವನು ಕ್ರಿ. ಪೂ. ದಲ್ಲಿ ೨೭೩ ರಿಂದ ೨೩೨ರವರೆಗೆ ಅಂದರೆ, ೪೧ ವರ್ಷ ಆಳಿದನು. ಇವನ ಕಾಲಕ್ಕೆ ರಾಜ್ಯವಿಸ್ತಾರವು ಅತಿಶಯ ದೊಡ್ಡದಾಗಿತ್ತು. ಉತ್ತರ ಹಿಂದುಸ್ಥಾನವೆಲ್ಲ ಇವನ ವಶದಲ್ಲಿ ಇದ್ದುದಲ್ಲದೆ, ಪಶ್ಚಿಮಕ್ಕೆ ಅಫಗಾಣಿಸ್ಥಾನವೂ ಇವನ ಅಧೀನದಲ್ಲಿಯೇ ಇತ್ತು. ದಕ್ಷಿಣದಲ್ಲಿ ಮೈಸೂರ ಪ್ರಾಂತದವರೆಗೆ ಇವನ ರಾಜ್ಯವು ಹಬ್ಬಿತ್ತು. ಈ ಹೆಸರಾದ ಅಶೋಕನ ವಂಶದವನಾದ ಬೃಹದ್ರಥನನ್ನು ಕೊಂದು ಪುಷ್ಯಮಿತ್ರನೆಂಬ ಅವನ ಬ್ರಾಹ್ಮಣ ಸೇನಾಪತಿಯು ಸುಂಗ ವಂಶವನ್ನು ಸ್ಥಾಪಿಸಿದನು. ಈ ವಂಶವು ಕ್ರಿ. ಪೂ. ದ ೧೮೪ ರಿಂದ ೭೨ರವರೆಗೆ ಆಳಿತು. ಆಮೇಲೆ ಆಂಧ್ರರೆಂಬ ತೆಂಕಣಿಗರು ಅಲ್ಲಿ ಆಳುತ್ತಿದ್ದರು. ಇವರು ಕ್ರಿ. ಶ. ದ ಅನಂತರ ೩ನೆಯ ಶತಮಾನದಲ್ಲಿ ಮಾಯವಾದರು. ಈ ಅವಧಿಯಲ್ಲಿಯೇ ಪೇಶಾವರದಲ್ಲಿ ಕನಿಷ್ಕನೆಂಬ ಬಲಾಢ್ಯ ಅರಸನು ಕ್ರಿ. ಶ. ೧೨೩ರವರೆಗೆ ಆಳಿದನು. ಮುಂದೆ ಉತ್ತರದಲ್ಲಿ ಚಂದ್ರಗುಪ್ತನೆಂಬವನು ೩೨೦ನೆಯ ಇಸ್ವಿಯಲ್ಲಿ ಗುಪ್ತವಂಶವನ್ನು ಸ್ಥಾಪಿಸಿದನು. ಈ ಗುಪ್ತವಂಶದ ಸಮುದ್ರಗುಪ್ತನೆಂಬುವನು ಅತ್ಯಂತ ಪರಾಕ್ರಮಿಯು. ಇವನನ್ನು ಹಿಂದುಸ್ಥಾನದ ನೆಪೋಲಿಯನ್ನನೆಂದು ಹೇಳುತ್ತಾರೆ. ಅವನು ೩೭೫ರಲ್ಲಿ ಮರಣ ಹೊಂದಿದನು. ಈ ಗುಪ್ತ ವಂಶವು ಉತ್ತರದಲ್ಲಿ ೪೮೦ನೆಯ ಇಸವಿಯವರೆಗೆ ಪ್ರಬಲವಾಗಿತ್ತು, ಈ ಗುಪ್ತವಂಶವು ಪರದೇಶಿಯರಾದ ಹೂಣರಿಂದ ಹಾಳಾಗಿ ಮಗಧ ದೇಶದ ರಾಜಕೀಯ ವರ್ಚಸ್ಸು ಹೊರಟು ಹೋಯಿತು. ಮುಂದೆ ಉತ್ತರದಲ್ಲಿ ಸಾರ್ವಭೌಮನಾದ ಅರಸನೆಂದರೆ ಕನೋಜದ ಶಿಲಾದಿತ್ಯ ಹರ್ಷವರ್ಧನನೇ. ಅವನು ಕ್ರಿ. ಶ. ೬೦೬ ರಿಂದ ೬೪೮ರವರೆಗೆ ಆಳಿದನು. ಅವನನ್ನು ಕರ್ನಾಟಕದ ೨ನೆಯ ಪುಲಿಕೇಶಿಯು ಸೋಲಿಸಿದಂದಿನಿಂದ ಉತ್ತರ ಹಿಂದುಸ್ಥಾನದ ಉಜ್ವಲ ಇತಿಹಾಸವು ಮುಗಿಯಿತು. ಉತ್ತರದಲ್ಲಿ ಮುಂದೆ ಸಾರ್ವಭೌಮರಾಗಲಿಲ್ಲ. ಇರಲಿ. ಈ ಮೇರೆಗೆ ಉತ್ತರ ಹಿಂದುಸ್ಥಾನದ ವೈಭವದ ಇತಿಹಾಸವು ಕ್ರಿ. ಪೂ. ದ ೩೨೧ ರಿಂದ ಅಂದರೆ ಚಂದ್ರಗುಪ್ತನ ಕಾಲದಿಂದ ಕ್ರಿ. ಶ. ೬೪೨ರವರೆಗೆ ಅಂದರೆ ಹರ್ಷವರ್ಧನನ ಮರಣದವರೆಗೆ ಸುಮಾರು ೯೦೦ ವರ್ಷ ನಡೆಯಿತೆಂದು ಹೇಳಬಹುದು.

ಈ ಪ್ರಕಾರ, ಉತ್ತರ ಹಿಂದುಸ್ಥಾನದ ಇತಿಹಾಸದ ಸ್ವಲ್ಪ ಕಲ್ಪನೆಯನ್ನು ಮಾಡಿಕೊಟ್ಟಿರುವೆವಷ್ಟೇ. ಇನ್ನು ಈ ಇತಿಹಾಸದ ಸಂಬಂಧವು ನಮ್ಮ ಕರ್ನಾಟಕದ ಇತಿಹಾಸಕ್ಕೆ ಯಾವ ಯಾವ ಕಾಲಕ್ಕೆ ಉಂಟಾಗುತ್ತದೆಂಬುದನ್ನು ಹೇಳುತ್ತೇವೆ.

ನಂದರು ಈ ಕುಂತಳ ದೇಶವನ್ನು ಒಂದಾನೊಂದು ಕಾಲಕ್ಕೆ ಎಂದರೆ ಕ್ರಿ. ಪೂ. ದ ೪ನೆಯ ಶತಮಾನದಲ್ಲಿ ಆಳಿದಂತೆ ತೋರುತ್ತದೆ. ೧೨ನೆಯ ಶತಮಾನದ ಶಿಲಾಲಿಪಿಗಳಲ್ಲಿ ನಂದರು ಕುಂತಳ ದೇಶವನ್ನು ಆಳಿದಂತೆ ಬರೆದಿರುತ್ತದೆ. ಅಶೋಕನ ಕಾಲದಲ್ಲಿ ಈ ದೇಶವು ಅವನ ವಂಶದಲ್ಲಿದ್ದಂತೆ ಅವನ ಲೇಖಗಳೇ ಹೇಳುತ್ತಿರುವುದರಿಂದಲೂ, ಅಶೋಕನು ಕಲಿಂಗ ದೇಶದ ಹೊರತು ಬೇರೆ ಯಾವ ಹೊಸ ದೇಶವನ್ನು ಆಕ್ರಮಿಸಲಿಲ್ಲವಾದುದರಿಂದಲೂ ಚಂದ್ರಗುಪ್ತನ ಕಾಲದಲ್ಲಿಯೇ ಈ ದೇಶವು ಅವನ ವಶವಾಯಿತೆಂದು ಊಹಿಸಲಿಕ್ಕೆ ಆಸ್ಪದವಿರುತ್ತದೆ. ಮೇಲಾಗಿ ಚಂದ್ರಗುಪ್ತನು ತನ್ನ ಗುರುವಾದ ಭದ್ರಬಾಹುವನ್ನು ಕರೆದುಕೊಂಡು ದಕ್ಷಿಣ ದೇಶಕ್ಕೆ ಬಂದಿದ್ದನೆಂದೂ ಅವರೀರ್ವರು ಮೈಸೂರ ಪ್ರಾಂತದ ಚಂದ್ರಗಿರಿಯಲ್ಲಿ ತಪಶ್ಚರ್ಯ ಮಾಡಿದರೆಂದೂ ಇತ್ತಕಡೆಯ ಆರನೆಯ ಶತಮಾನದ ಕೆಲವು ಶಿಲಾಲಿಪಿಗಳಿಂದ ಗೊತ್ತಾಗಿರುವ ಸಂಗತಿಯು ಮೇಲಿನ ಊಹೆಗೆ ಮುಂದೆ ಪುಷ್ಟಿಯನ್ನು ಕೊಡುತ್ತದೆ. ಅಶೋಕನ ಕಾಲದಲ್ಲಂತೂ ಈ ದೇಶವು ಅವನ ಅಧೀನದಲ್ಲಿತ್ತೆಂಬುದನ್ನು ಇಲ್ಲಿ ದೊರೆಯುವ ಅವನ ಶಿಲಾಶಾಸನಗಳೇ ಹೇಳುತ್ತವೆ. ಆ ಶಾಸನಗಳು ಮೊಳಕಾಲ್ಮುರು ತಾಲೂಕಿನಲ್ಲಿಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಗುಡ್ಡಗಳಲ್ಲಿ ದೊರೆಯುತ್ತವೆ. ರಾಯಚೂರ ಜಿಲ್ಹೆಯೊಳಗಿನ ಲಿಂಗಸೂರ ತಾಲ್ಲೂಕು ಪೈಕಿ ಮಸಗಿ ಎಂಬಲ್ಲಿಯೂ ಒಂದು ಶಾಸನವು ಮೊನ್ನೆ ಮೊನ್ನೆ ಸಿಕ್ಕಿರುತ್ತದೆ. ಅಶೋಕನ ಕಾಲಕ್ಕೆ ಬನವಾಸಿಯಲ್ಲಿ ಕದಂಬ ಅರಸರಿದ್ದರು. ಅಶೋಕನು (ಕ್ರಿ.ಪೂ. ೨೩೧) ರಕ್ಷಿತನೆಂಬ ಧರ್ಮೊಪದೇಶಕನನ್ನು ಬನವಾಸಿಗೂ, ಮಹಾದೇವನೆಂಬವನನ್ನು ಮಹಿಷಮಂಡಲಕ್ಕೂ ಕಳುಹಿರುವುದಾಗಿ ಆಧಾರ ದೊರೆಯುತ್ತವೆ.

ಮುಂದೆ ನಾಲ್ಕನೆಯ ಶತಮಾನದಲ್ಲಿ ಗುಪ್ತವಂಶದ ಸಮುದ್ರಗುಪ್ತನೆಂಬವನು ಹಿಂದುಸ್ಥಾನವನ್ನೆಲ್ಲ ಪಾದಾಕ್ರಾಂತ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹೋಗಿ ಕರ್ನಾಟಕದೊಳಗಿನ ೧೧ ರಾಜ್ಯಗಳಲ್ಲಿ ಹಾಯ್ದು ಉತ್ತರಕ್ಕೆ ತೆರಳಿದನು. ಸಮುದ್ರಗುಪ್ತನ ತರುವಾಯ ಕರ್ನಾಟಕಕ್ಕೆ ಸಂಬಂಧಪಟ್ಟ ಉತ್ತರದ ಸಾರ್ವಭೌಮ ರಾಜನೆಂದರೆ ಹರ್ಷವರ್ಧನನೇ. ಕರ್ನಾಟಕದ ಪ್ರಖ್ಯಾತ ರಾಜನಾದ ೨ನೆಯ ಪುಲಿಕೇಶಿಯು ಕ್ರಿ.ಶ. ೬೩೪ರಲ್ಲಿ ಸೋಲಿಸಿದ ಹರ್ಷವರ್ಧನನು ಇವನೇ.

ಈ ಮೇರೆಗೆ, ಉತ್ತರದಲ್ಲಿ ಮೌರ್ಯರೂ, ಸುಂಗರೂ, ಆಂಧ್ರರೂ, ಗುಪ್ತರೂ ಅತಿ ಬಲಾಢ್ಯರಾಗಿ ಆಳುತ್ತಿದ್ದಾಗ. ನಮ್ಮ ದೇಶದಲ್ಲಿ ಕದಂಬ ಮುಂತಾದ ಚಿಕ್ಕ ಚಿಕ್ಕ ರಾಜ್ಯಗಳು ಮಾತ್ರ ಅಲ್ಲಲ್ಲಿ ಆಳುತ್ತಿದ್ದವು. ಆದರೆ ದಕ್ಷಿಣಾಪಥದ ವೈಭವದ ಇತಿಹಾಸವು ಹೀಗೆ ತಡವಾಗಿ ಪ್ರಾರಂಭವಾದರೂ ಅದು ಮುಂದೆ ಅನೇಕ ಶತಮಾನಗಳವರೆಗೆ ಬಾಳಿತೆಂಬುದನ್ನು ಮರೆಯಕೂಡದು. ಕ್ರಿ.ಶ. ಪ್ರಾರಂಭಕ್ಕೆ ಈ ದೇಶದ ಕೆಲವು ಭಾಗದಲ್ಲಿ ಆಂಧ್ರಭೃತ್ಯರು ಆಳುತ್ತಿದ್ದರು. ಇವರ ರಾಜ್ಯವು ಕೃಷ್ಣಾ ಮತ್ತು ಗೋದಾವರೀ ನದಿಗಳ ಮುಖದವರೆಗೆ ಹಬ್ಬಿತ್ತು. ಆದರೆ ಕರ್ನಾಟಕವೆಲ್ಲವೂ ಇವರ ವಶವಾಗಲಿಲ್ಲ. ರಾಷ್ಟ್ರಕೂಟ, ಪಲ್ಲವ, ಗಂಗ, ಬಾಣ, ಕದಂಬ ಮುಂತಾದ ಚಿಕ್ಕ ಚಿಕ್ಕ ರಾಜ್ಯಗಳು ಆಗ ಈ ದೇಶದಲ್ಲಿ ಆಳುತ್ತಿದ್ದಂತೆ ತೋರುತ್ತದೆ. ಆಂಧ್ರಭೃತ್ಯರು ಕ್ರಿ.ಶ. ೨೨೫ರವರೆಗೆ ಆಳಿದರು. ಮುಂದೆ ಸುಮಾರು ೧೦೦ ವರ್ಷಗಳ ಇತಿಹಾಸವು ಚೆನ್ನಾಗಿ ಗೊತ್ತಾಗುವುದಿಲ್ಲ. ಆಗ ಕ್ಷತ್ರಪರೆಂಬ ಪರದೇಶಸ್ಥರು ಪ್ರಬಲವಾದಂತೆ ತೋರುತ್ತದೆ. ಮುಂದೆ ೫ನೆಯ ಶತಮಾನದಲ್ಲಿ ಚಾಲುಕ್ಯರು ತಲೆಯೆತ್ತಿದರು. ಈ ಚಾಲುಕ್ಯರು ಮುಂದೆ ಇಡೀ ಕರ್ನಾಟಕವನ್ನೆಲ್ಲ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡದ್ದರಿಂದ ಕರ್ನಾಟಕದ ವೈಭವದ ಇತಿಹಾಸವು ಅಲ್ಲಿಂದ ಪ್ರಾರಂಭವಾಗುತ್ತದೆ. ಆದರೆ ಅವರ ಇತಿಹಾಸವನ್ನು ಪ್ರಾರಂಭಮಾಡುವ ಮೊದಲು ಕದಂಬ, ಗಂಗರ ವಿಷಯವಾಗಿ ಸಂಕ್ಷೇಪವಾಗಿ ಹೇಳುವದು ಅವಶ್ಯವಿದೆ. ಏಕೆಂದರೆ ಇವು ಕರ್ನಾಟಕದಲ್ಲಿ ಎಲ್ಲಕ್ಕೂ ಹಳೆಯ ರಾಜವಂಶಗಳು.


ಕದಂಬರು

ಕದಂಬರ ವಿಷಯಕವಾಗಿ ಗೊತ್ತಿರುವ ಸಂಗತಿಗಳೆಂದರೆ, ಇವರ ಮೂಲಪುರುಷನು ಮಯೂರ ಶರ್ಮನು. ಇವನು ಸೊರಬ ತಾಲೂಕಿನ ಸ್ಥಾನಗುಂಡೂರ ಅಥವಾ ತಾಳಗುಂದ ಎಂಬಲ್ಲಿಯ ಬ್ರಾಹ್ಮಣನು. ಇವನು ಕಂಚಿಗೆ ವೇದಾಧ್ಯಯನಕ್ಕಾಗಿ ಹೋದಾಗ ಅಲ್ಲಿಯ ಪಲ್ಲವ ಅರಸನಿಂದ ಅವಮಾನಿತನಾದುದರಿಂದ ಕ್ಷತ್ರಿಯ ಧರ್ಮವನ್ನು ಸ್ವೀಕರಿಸಿ ಬನವಾಸಿಯಲ್ಲಿ ಕದಂಬರಾಜ್ಯವನ್ನು ಸ್ಥಾಪಿಸಿದನು. ಈ ಕದಂಬರು ೩ನೆಯ ಶತಮಾನದಿಂದ ೬ನೆಯ ಶತಮಾನದವರೆಗೆ ಸ್ವತಂತ್ರವಾಗಿ ಆಳಿದರು. ಈ ವಂಶದಲ್ಲಿ ಕಾಕುತ್ಸ್ಥವರ್ಮ, ಕೃಷ್ಣವರ್ಮ ಮುಂತಾದ ಅರಸರು ಪ್ರಬಲರಾಗಿದ್ದರು. ಮುಂದೆ ಚಾಲುಕ್ಯರು ೬ನೆಯ ಶತಮಾನದಲ್ಲಿ ಇವರ ಸ್ವಾತಂತ್ರ್ಯವನ್ನು ಹರಣ ಮಾಡಿದರು. ಮುಂದೆ ಈ ಕದಂಬರು ಅನೇಕ ಶತಮಾನಗಳವರೆಗೆ ಮಾಂಡಲಿಕ ಅರಸರಾಗಿ ಆಳಿದರು.


kadamba vamshavali

kadamba Map

ಗಂಗರು

ಮೈಸೂರ ಸರಕಾರದವರು ತಮ್ಮ ಪ್ರಾಂತದ ಶಿಲಾಲಿಪಿಗಳನ್ನು ಹೊರಗೆಡುಹಿರುವದರಿಂದ, ಆ ಪ್ರಾಂತದಲ್ಲಿ ಹಿಂದಕ್ಕೆ ಆಳಿದ ಗಂಗವಂಶದ ವಿಷಯವಾಗಿ ನಮ್ಮ ಹೆಚ್ಚಿಗೆ ಸಂಗತಿಗಳು ಗೊತ್ತಾಗಿವೆ. ಅವರು ಸಾರ್ವಭೌಮ ಅರಸರಲ್ಲದಿದ್ದರೂ ಅವರಲ್ಲಿ ಅನೇಕ ಪ್ರಸಿದ್ಧ ರಾಜರು ಆಳಿರುವರು. ಗಂಗರು ಮೈಸೂರಿನಲ್ಲಿ ೨ನೆಯ ಶತಮಾನದಿಂದ ೧೧ನೆಯ ಶತಮಾನದವರೆಗೆ ಆಳಿದರು. ಅವರ ರಾಜ್ಯಕ್ಕೆ ಗಂಗವಾಡಿ ಎಂದು ಹೆಸರು. ಕೋಲಾರ, ತಲಕಾಡುಗಳೇ ಅವರ ರಾಜಧಾನಿಗಳು. ಮಾಧವ ಅಥವಾ ಕೊಂಗುಣಿವರ್ಮನು ಇವರ ಮೂಲಪುರುಷನು. ಈ ವಂಶದಲ್ಲಿ ಹರಿವರ್ಮ, ಅವನೀತ, ದುರ್ವಿನೀತ, ಶಿವಮಾರ, ಶ್ರೀಪುರುಷ ಮುಂತಾದ ಅರಸರು ಪ್ರಬಲರಾಗಿದ್ದರು. ಅವರಲ್ಲಿ ಶ್ರೀಪುರುಷನೇ ಶ್ರೇಷ್ಠನು (೭೨೬-೭೭೬). ಈ ವಂಶದಲ್ಲಿ ಅನೇಕ ಅರಸರು ಗ್ರಂಥಕರ್ತರಾಗಿದ್ದರು. ಆ ವಿಷಯವನ್ನು ಮುಂದೆ ಹೇಳುವೆವು. ರಾಚಮಲ್ಲನೆಂಬ ಈ ವಂಶದ ಅರಸನ ಕಾಲದಲ್ಲಿ ಅವನ ಮಂತ್ರಿಯಾದ ಚಾಮುಂಡರಾಯನು ಶ್ರವಣಬೆಳಗುಳದ ಅತ್ಯಂತ ಭವ್ಯವಾದ ಗೋಮಟೇಶ್ವರ ಎಂಬ ಜೈನ ಮೂರ್ತಿಯನ್ನು ೯೮೩ರಲ್ಲಿ ಸ್ಥಾಪಿಸಿದನು. ಈ ಗಂಗರು ನಡುನಡುವೆ ಚಾಲುಕ್ಯ ರಾಷ್ಟ್ರಕೂಟರಿಗೆ ಮಾಂಡಲಿಕರಾಗಿದ್ದರು. ಮುಂದೆ ಈ ರಾಜ್ಯವು ಚೋಳರಾಜ್ಯದಲ್ಲಿ ಲೀನವಾಯಿತು.

ganga vamshavali

Ganga Map

೭ನೆಯ ಪ್ರಕರಣ

ಬಾದಾಮಿಯ ಚಾಲುಕ್ಯರು
(೫೫೦-೭೫೭)


ಈ ಚಾಲುಕ್ಯರೇ ಇಡೀ ಕರ್ನಾಟಕಕ್ಕೆ ಸಾರ್ವಭೌಮರಾಗಿ ಮೊದಲು ಆಳಿದ ಅರಸರು. ಈ ವಂಶದ ೯ ಜನ ಅರಸರು ಬಾದಾಮಿಯಲ್ಲಿ ಬಹು ವೈಭವದಿಂದ ಸುಮಾರು ೨೦೦ ವರ್ಷಗಳವರೆಗೆ ಆಳಿದರು. ಹಾರೀತ ಋಷಿಯು ದೇವತೆಗಳಿಗೆ ಅರ್ಘ್ಯೊದಕವನ್ನು ಕೊಡುವಾಗ, ಅವನ ಚುಲಕದಿಂದ ಎಂದರೆ ಬೊಗಸೆಯೊಳಗಿಂದ ಒಬ್ಬ ವೀರಪುರುಷನು ಹುಟ್ಟಿದನಂತೆ. ಚಾಲುಕ್ಯರು ತಾವು ಆ ವೀರಪುರುಷನ ವಂಶಜರೆಂದು ಹೇಳಿಕೊಳ್ಳುತ್ತಾರೆ. ಆದುದರಿಂದ ಇವರಿಗೆ ಹಾರೀತಪುತ್ರರೆಂದೆನ್ನುತ್ತಾರೆ. ಇವರ ಗೋತ್ರ ಮಾನವ್ಯ; ಕುಲದೇವತೆ ವಿಷ್ಣು; ವಂಶ ಚಂದ್ರವಂಶ. ಇವರು ಮೊದಲು ಉತ್ತರದವರು. ನರ್ಮದೆಯನ್ನು ದಾಟಿ ಮೊದಲು ಬಂದವನು ಜಯಸಿಂಹನು. ಇವನು ರಾಷ್ಟ್ರಕೂಟರ ಅರಸನಾದ ಇಂದ್ರನನ್ನು ಸೋಲಿಸಿ, ಮುಂದೆ ದಕ್ಷಿಣಕ್ಕೆ ಸಾಗಿ, ಕಂಚಿಯಲ್ಲಿರುವ ಪಲ್ಲವವಂಶದ ತ್ರಿಲೋಚನ ಪಲ್ಲವನೊಡನೆ ಕಾದಿದನು; ಆದರೆ ಆ ಯುದ್ಧದಲ್ಲಿ ತಾನೇ ಮಡಿದನು. ಆಗ ಗರ್ಭಿಣಿಯಾಗಿದ್ದ ಅವನ ಹೆಂಡತಿಯು ವಿಷ್ಣುಸೋಮಾಜಿಯೆಂಬ ಒಬ್ಬ ಬ್ರಾಹ್ಮಣನನ್ನು ಆಶ್ರಯಿಸಿದಳು. ಅಲ್ಲಿ ಅವಳಿಗೆ ರಾಜಸಿಂಹನೆಂಬ ಮಗನು ಹುಟ್ಟಿದನು. ಅವನು ದೊಡ್ಡವನಾದ ಬಳಿಕ ಪಲ್ಲವರೊಡನೆ ಕಾದಿ, ಅವರನ್ನು ಸೋಲಿಸಿ, ಆ ವಂಶದ ರಾಜಪುತ್ರಿಯನ್ನು ಮದುವೆಯಾದನು. ಆದರೆ ಅವನ ಇತಿಹಾಸವು ನಮಗೆ ವಿಶೇಷವಾಗಿ ತಿಳಿದಿಲ್ಲ. ಇವನ ಮಗನಾದ ಪುಲಿಕೇಶಿಯೇ ಈ ಚಾಲುಕ್ಯವಂಶದ ಮೊದಲನೆಯ ಪ್ರಖ್ಯಾತರಾಜನು. ಇವನ ರಾಜಧಾನಿಯು ಮೊದಲು "ಇಂದುಕಾಂತ" ಅಥವಾ ಅಜಂತೆಯಲ್ಲಿದ್ದಿತು. ಆದರೆ ಮುಂದೆ ಈ ಪುಲಿಕೇಶಿಯು ಪಲ್ಲವರನ್ನು ಬಗ್ಗು ಬಡಿದು ವಾತಾಪಿ ಅಥವಾ ಬಾದಾಮಿಯನ್ನು ಅವರಿಂದ ಸೆಳೆದುಕೊಂಡು, ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದನು. ಇವನು ಸಾರ್ವಭೌಮತ್ವಸೂಚಕವಾದ ಅಶ್ವಮೇಧ ಯಜ್ಞವನ್ನು ಮಾಡಿ ದಿಗಂತ ಕೀರ್ತಿಯನ್ನು ಪಡೆದನು. ಇವನ ಮಗನಾದ ಮಂಗಳೇಶನು (೫೯೭-೬೦೮) ಮಹಾಕೋಟೇಶ್ವರನ ಭಕ್ತನು. ಬಾದಾಮಿಯಲ್ಲಿಯ ಎಲ್ಲಕ್ಕೂ ದೊಡ್ಡದಾದ ಮೂರನೆಯ ವೈಷ್ಣವ ಗವಿಯನ್ನು ಕೊರೆಯಿಸಿದವನು ಇದೇ ಮಂಗಳೀಶನು.

chalukya vamshavali

chalukya Map

ಇವನ ತರುವಾಯ ಪ್ರೌಢಪ್ರತಾಪಿಯಾದ ೨ನೆಯ ಪುಲಿಕೇಶಿಯು ಪಟ್ಟವೇರಿದನು (೬೦೯-೬೪೨). ಈ ೨ನೆಯ ಪುಲಿಕೇಶಿಯು ಕರ್ನಾಟಕದ ಗಂಗ, ಕದಂಬ, ಪಲ್ಲವ ಮುಂತಾದ ಅರಸರನ್ನು ಗೆದ್ದುದಲ್ಲದೆ, ಕರ್ನಾಟಕವನ್ನು ದಾಟಿ ಹೋಗಿ, ಉತ್ತರದಲ್ಲಿ ಆಳುತ್ತಿದ್ದ ಕೋಸಲ, ಕಲಿಂಗ, ಮೌರ್ಯ ಮುಂತಾದ ಅರಸರನ್ನೂ, ದಕ್ಷಿಣದಲ್ಲಿಯ ಪಾಂಡ್ಯ, ಚೋಳ, ಕೇರಳ, ಮೊದಲಾದ ಅರಸರನ್ನೂ ಪಾದಾಕ್ರಾಂತರನ್ನಾಗಿ ಮಾಡಿದನು. ನೂರು ಹಡಗುಗಳುಳ್ಳ ಹಡಗುಪಡೆಯೊಂದಿಗೆ ಪಶ್ಚಿಮ ಸಮುದ್ರದಲ್ಲಿ ಸೈನ್ಯವನ್ನು ಸಾಗಿಸಿ ಉತ್ತರಕ್ಕೆ ಮುಂಬಯಿ ಹತ್ತರ ಇರುವ "ಪುರಿ" ಎಂಬ ಪಟ್ಟವನ್ನು ತೆಗೆದುಕೊಂಡನು. ಆದರೆ ಈ ಪುಲಿಕೇಶಿಯು ಮಾಡಿದ ಎಲ್ಲಕ್ಕೂ ಮಹತ್ವದ ಕಾರ್ಯವೆಂದರೆ, ಉತ್ತರ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವರ್ತಿಯಾಗಿದ್ದ ಕನೋಜದ ಅರಸನಾದ ಹರ್ಷವರ್ಧನನನ್ನು ನರ್ಮದೆಯ ದಂಡೆಯ ಮೇಲೆ ಸಂಪೂರ್ಣವಾಗಿ ಸೋಲಿಸಿದುದೇ. ಆಗ ಅವನು ಪರಮೇಶ್ವರ ಎಂಬ ಬಿರುದನ್ನು ಧರಿಸಿ, ಅಶ್ವಮೇಧಯಾಗವನ್ನು ಮಾಡಿದನು. ಹರ್ಷವರ್ಧನನು ಇವನ ಮೇಲೆ ದಂಡೆತ್ತಿ ಬಂದಾಗ ಅವನ ಸೈನ್ಯದಲ್ಲಿ ಬರೀ ಆನೆಗಳೇ ಅರವತ್ತು ಸಾವಿರವಿದ್ದವು. ಎಂದ ಮೇಲೆ ಅವನ ಕುದುರೆ-ಕಾಲಾಳುಗಳ ಸೈನ್ಯವು ಎಷ್ಟಿತ್ತೆಂಬುದನ್ನು ನೀವೇ ಊಹಿಸಿರಿ. ಅಂದಿನಿಂದ ಉತ್ತರ ಹಿಂದುಸ್ಥಾನದ ಇತಿಹಾಸವು ಮುಗ್ಗಿತು. ಕರ್ನಾಟಕದ ಇತಿಹಾಸಕ್ಕೆ ಕಳೆಯೇರುತ್ತ ಹೋಯಿತು. ಇವನ ರಾಜ್ಯವಿಸ್ತಾರವು ನರ್ಮದೆಯಿಂದ ದಕ್ಷಿಣಕ್ಕೆ ಇಡೀ ದಕ್ಷಿಣಾಪಥವನ್ನೇ ಆಕ್ರಮಿಸಿತ್ತು. ಪೂರ್ವ, ಪಶ್ಚಿಮ, ದಕ್ಷಿಣ ಸಮುದ್ರದ ನಡುವಿನ ನಾಡೆಲ್ಲವೂ ಇವನ ಕೈಸೇರಿತ್ತು. ಹ್ಯೂಯೆನತ್ಸಾಂಗನೆಂಬ ಚೀನದೇಶದ ಪ್ರವಾಸಿಯು ೬೩೯ನೆಯ ಇಸ್ವಿಯ ಸುಮಾರಿಗೆ ಈ ಪುಲಿಕೇಶಿಯ ರಾಜ್ಯದೊಳಗೆ ಸಂಚಾರ ಮಾಡಿದನು. ಅವನು ನಮ್ಮ ಈ ಕರ್ನಾಟಕವನ್ನೂ ಪುಲಿಕೇಶಿಯ ಆಗಿನ ಪ್ರಜೆಗಳನ್ನೂ, ಅವರ ನಡೆ-ನುಡಿಗಳನ್ನೂ ಅತ್ಯಂತ ಸುಂದರವಾಗಿ ವರ್ಣಿಸಿದ್ದಾನೆ. (ಮುಂದೆ ವೈಭವ ವರ್ಣನೆಯ ೧೨ನೆಯ ಪ್ರಕರಣ ನೋಡಿರಿ.) ಪ್ರತಿಯೊಬ್ಬ ಕನ್ನಡಿಗನು ಅದನ್ನು ತನ್ನೆದೆಯ ಮೇಲೆ ಬರೆದಿಟ್ಟುಕೊಳ್ಳಬೇಕು. ಈ ಪುಲಿಕೇಶಿಯಂಥ ವೈಭವಸಂಪನ್ನರಾದ ಅರಸರು ಹಿಂದುಸ್ಥಾನದ ಇತಿಹಾಸದಲ್ಲಿ ಬೆರಳಿನಿಂದೆಣಿಸುವಷ್ಟು ಸಹ ಸಿಕ್ಕುವುದು ಅಪೂರ್ವ. ಅವನ ವರ್ಚಸ್ಸು ಇರಾಣ ಮುಂತಾದ ಪರರಾಷ್ಟ್ರಗಳ ಮೇಲೆಯೂ ಇತ್ತೆಂದು ಗೊತ್ತಾಗುತ್ತದೆ. ಅರಬೀ ಭಾಷೆಯ ಒಂದು ಪುಸ್ತಕದಲ್ಲಿ ಈತನು ಇರಾಣದ ಅರಸನಾದ ಖುಸ್ರುವಿನ ಕಡೆಗೆ ತನ್ನ ರಾಯಭಾರಿಯನ್ನು ಕಳುಹಿದ್ದನೆಂದು ಉಲ್ಲೇಖವಿದೆ. ಮೇಲಾಗಿ, ಇರಾಣದ ರಾಯಭಾರಿಗಳು ಇವನ ಒಡ್ಡೋಲಗಕ್ಕೆ ಬಂದಿದ್ದರೆಂಬುದು ಅಜಂತೆಯಲ್ಲಿನ ಗವಿಯೊಳಗಿನ ಒಂದು ಚಿತ್ರದಿಂದ ಗೊತ್ತಾಗುತ್ತದೆ. ಈ ಪುಲಿಕೇಶಿಯ ಪ್ರತ್ಯಕ್ಷ ದರ್ಶನವು ಆ ಚಿತ್ರದಲ್ಲಿ ಕನ್ನಡಿಗರಿಗೆ ಆಗುವಂತಿದೆ. ಕನ್ನಡಿಗರ ದುರ್ದೈವದಿಂದ, ಅದರಲ್ಲಿಯ ಪುಲಿಕೇಶಿಯ ಮುಖವನ್ನೇ ಯಾವನೋ ಒಬ್ಬ ದುಷ್ಟನು ಕೆಡಿಸಿರುವನು. ಆದರೆ ಅದೇ ಅಜಂತೆಯಲ್ಲಿರುವ ಮತ್ತೊಂದು ಗವಿಯಲ್ಲಿ ಒಂದು ರಾಜವಿಲಾಸ ನೌಕೆಯ ಚಿತ್ರವಿದ್ದು, ಅದರಲ್ಲಿಯ ಮೂರ್ತಿಯು ಪುಲಿಕೇಶಿಯದೇ ಇರಬಹುದೆಂದು ನಮಗೆ ತೋರುತ್ತದೆ. ಇರಲಿ. ಮುಖ್ಯವಾಗಿ ಹೇಳುವುದೇನೆಂದರೆ, ಈ ಪುಲಿಕೇಶಿಯ ಹೆಸರನ್ನು ಯಾವ ಕನ್ನಡಿಗನೂ ಎಂದಿಗೂ ಮರೆಯಕೂಡದು. ಇವನ ಪರಾಕ್ರಮದ ಮತ್ತು ರಾಜನೀತಿಯ ಕೃತ್ಯಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ! ಇವನ ಕಾಲದಲ್ಲಿ ಇವನ ಹಿರಿಯ ಸೊಸೆಯಾದ ವಿಜಯಭಟ್ಟಾರಿಕಾ ಎಂಬವಳು ಸಾವಂತವಾಡಿಯನ್ನಾಳಿದಳು. ಪುಲಿಕೇಶಿಯ ಮಗನ ಆಳಿಕೆಯಲ್ಲಿ ದಕ್ಷಿಣ ಗುಜರಾಥದಲ್ಲಿ ಚಾಲುಕ್ಯರದೊಂದು ಶಾಖೆಯು ಸ್ಥಾಪಿಸಲ್ಪಟ್ಟಿತು. ಇವನ ಮಗ, ಮೊಮ್ಮಗ, ಮರಿಮಕ್ಕಳು, ಇವರೆಲ್ಲ ಶೂರರಾದ ಅರಸರೇ. ಅವರು, ಈ ವಂಶದ ಹುಟ್ಟು ಹಗೆಗಳಾದ ಪಲ್ಲವರೊಡನೆಯೂ, ಚೋಳ, ಪಾಂಡ್ಯ, ಹೈಹಯ ಮುಂತಾದವರೊಡನೆಯೂ ಕಲಿತನದಿಂದ, ಕಾದಿ ಚಾಲುಕ್ಯವಂಶದ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿರುವರು. ಆದರೆ ಇತಿಹಾಸವನ್ನು ಕೊಡುವುದು ನಮ್ಮ ಮುಖ್ಯ ಉದ್ದೇಶವಿರದೆ, ವೈಭವವನ್ನು ಕಣ್ಣೆದುರಿಗೆ ತಂದಿಡುವುದೇ ನಮ್ಮ ಮುಖ್ಯ ಮನೋಗತವಿರುವುದರಿಂದ, ನಾವು ಹೆಚ್ಚಿನ ಸಂಗತಿಗಳನ್ನು ಇಲ್ಲಿ ಹೇಳುವದಿಲ್ಲ. ಈ ಮಹಾಪುಲಿಕೇಶಿಯಿಂದ ನಾಲ್ಕನೆಯ ತಲೆಯವನಾದ ೨ನೆಯ ವಿಕ್ರಮಾದಿತ್ಯನು ತನ್ನ ವಂಶಕ್ಕೆ ಪೂರ್ವದಿಂದಲೂ ಶತ್ರುಗಳಾದ ಪಲ್ಲವರೊಡನೆ ಹೋರಾಡಿ, ಮಾಣಿಕ್ಯದ ರಾಶಿಯನ್ನೂ, ಗಜತುರಗಗಳನ್ನೂ ಯಥೇಚ್ಛವಾಗಿ ತೆಗೆದುಕೊಂಡು ಅವರ ರಾಜಧಾನಿಯಾದ ಕಂಚಿಯನ್ನು ಹೊಕ್ಕ ಸಂಗತಿಯು ಮಾತ್ರ ನೆನಪಿನಲ್ಲಿಡತಕ್ಕುದಾಗಿದೆ. ಏಕೆಂದರೆ, ಈ ವಿಕ್ರಮಾದಿತ್ಯನು ಮಿಕ್ಕವರಂತೆ ಆ ಪಟ್ಟಣವನ್ನು ಹಾಳು ಮಾಡದೆ, ದೇವಬ್ರಾಹ್ಮಣರಿಗೂ, ಬಡಬಗ್ಗರಿಗೂ ಅನೇಕ ದಾನ ಮುಂತಾದವುಗಳನ್ನು ಮಾಡಿ ಅಲ್ಲಿಯ ರಾಜಸಿಂಹೇಶ್ವರ ಮುಂತಾದ ದೇವಾಲಯಗಳನ್ನು ಉದ್ಧರಿಸಿದನು. ಇವನ ಹೆಂಡತಿಯಾದ ಲೋಕಮಹಾದೇವಿಯೆಂಬವಳು ಈತನ ಈ ಜಯದ ಸೂಚನಾರ್ಥವಾಗಿ ಪಟ್ಟದಕಲ್ಲಿನಲ್ಲಿ ವಿರೂಪಾಕ್ಷನ ಅತಿ ವಿಸ್ತಾರವಾದ ದೇವಾಲಯವನ್ನು (೬೫೬ ಶಕ) ಕಟ್ಟಿಸಿದಳು. ಇವಳು ಈ ಕಾಲದಲ್ಲಿ "ಕಿಸುವೊಳಲ್" ಎಂದರೆ ಪಟ್ಟದಕಲ್ಲಿನಲ್ಲಿ ಆಳುತ್ತಿದ್ದಳು. ಆದರೆ, ಇವನ ಮಗನ ಕಾಲಕ್ಕೆ, ಏಳೆಂಟು ತಲೆಗಳಿಂದ ಅವಿಚ್ಛಿನ್ನವಾಗಿ ನಡೆಯುತ್ತ ಕೈವಶವಾಗಿದ್ದ ರಾಜ್ಯಲಕ್ಷ್ಮಿಯು ಈ ವಂಶವನ್ನು ಬಿಟ್ಟು ಹೋದಳು. ರಾಷ್ಟ್ರಕೂಟರ ಅರಸನಾದ ದಂತಿವರ್ಮನೆಂಬವನು ಇವರ ರಾಜ್ಯವನ್ನು ಸೆಳೆದುಕೊಂಡು, ರಾಷ್ಟ್ರಕೂಟ ವಂಶವನ್ನು ಸ್ಥಾಪಿಸಿದನು.

ಈ ಬಗೆಯಾಗಿ, ಕರ್ನಾಟಕವನ್ನೆಲ್ಲ ಒಂದೇ ಛತ್ರದ ಕೆಳಗೆ ತಂದು, ಕರ್ನಾಟಕದ ಕೀರ್ತಿಯನ್ನು ದಶದಿಕ್ಕುಗಳಲ್ಲಿ ಪಸರಿಸುವಂತೆ ಮಾಡಿದ ಈ ಚಾಲುಕ್ಯರು ಕೆಲವು ಕಾಲ ಇತಿಹಾಸದಿಂದ ಮರೆಯಾದರು. ಆದರೆ ಚಾಲುಕ್ಯರು ಮುಳುಗಿದರೂ, ಕರ್ನಾಟಕದ ವೈಭವವು ಮುಳುಗಲಿಲ್ಲ. ಏಕೆಂದರೆ, ಇವರ ತರುವಾಯ ಬಂದ ಅರಸರೂ ಕರ್ನಾಟಕಸ್ಥರೇ. ಅವರೂ ಏಕಛತ್ರಾಧಿಪತಿಗಳೇ. ಇರಲಿ. ಅವರ ಇತಿಹಾಸವನ್ನು ಮುಂದಿನ ಪ್ರಕರಣದಲ್ಲಿ ಕೊಡುವೆವು. ಈ ಚಾಲುಕ್ಯವಂಶದ ೨ನೆಯ ಪುಲಿಕೇಶಿ, ಅವನ ಸೊಸೆಯಾದ "ವಿಜಯಭಟ್ಟಾರಿಕೆ" ಮತ್ತು ೨ನೆಯ ವಿಕ್ರಮಾದಿತ್ಯನ ಹೆಂಡತಿಯಾದ "ಲೋಕಮಹಾದೇವಿ" ಮುಂತಾದವರು ಕನ್ನಡಿಗರ ಸ್ಮೃತಿಪಥದಿಂದ ಮರೆಯಾಗುವುದೆಂತು! ಹುಯೆನತ್ಸಾಂಗನು ವರ್ಣಿಸಿದ ಕನ್ನಡಿಗರ ಸ್ವಭಾವವೂ, ಶೌರ್ಯವೂ, ಕನ್ನಡಿಗರಲ್ಲಿದ್ದ ಅವರ ವಿಷಯದಲ್ಲಿಯ ಅನಾದರವನ್ನು ಓಡಿಸಲಾರವೇ! ಬಾದಾಮಿಯ ಗವಿಗಳೂ, ಅಜಂತೆಯಲ್ಲಿಯ ಅತ್ಯಂತ ಸುಂದರವಾದ ಚಿತ್ರಗಳೂ ಈ ಚಾಲುಕ್ಯವಂಶ ದೀಪಕನನ್ನು ಕನ್ನಡಿಗರ ಕಣ್ಣೆದುರಿಗೆ ಥಟ್ಟನೆ ತಂದಿರಿಸದೆ ಇರವು. ಪ್ರಸಿದ್ಧ ಜೈನಕವಿಯಾದ `ರವಿಕೀರ್ತಿಯು ೨ನೆಯ ಪುಲಿಕೇಶಿಯ ಸಂಬಂಧವಾಗಿ ಐಹೊಳೆಯಲ್ಲಿ ಶಿಲಾಲೇಖವನ್ನು ಬರೆದಿಟ್ಟು ಕನ್ನಡಿಗರ ವೈಭವಕ್ಕೆ ಸಾಕ್ಷಿಯಾಗಿ ನಿಂತಿರುತ್ತಾನೆ. ಕನ್ನಡಿಗರು ಆ ಲೇಖವನ್ನೇ ಕಣ್ದೆರೆದು ನೋಡದಿದ್ದರೆ ಅವನೇನು ಮಾಡಿಯಾನು?


೮ನೆಯ ಪ್ರಕರಣ

ರಾಷ್ಟ್ರಕೂಟರು
(೭೫೭-೯೭೩)



ಶ್ರೀತಳ್ತುರದೊಳ್ಕೌಸ್ತುಭ
ಜಾತದ್ಯುತಿ ಬಳಸಿ ಕಾಂಡಪಟದಂತಿರೆ ಸಂ
ಪ್ರೀತಿಯನಾವನನಗಲ
ಳ್ನೀತಿನಿರಂತರನುದಾರನಾ ನೃಪತುಂಗ ||
-ಕವಿರಾಜಮಾರ್ಗ


ವಾಚಕರೇ, ಬಾದಾಮಿಯ ಚಾಲುಕ್ಯರು ಇಡೀ ಕರ್ನಾಟಕವನ್ನೆ ತಮ್ಮ ಅಂಕಿತವಾಗಿ ಮಾಡಿಕೊಂಡು, ಕರ್ನಾಟಕ ಸಾಮ್ರಾಜ್ಯವನ್ನು ಕರ್ನಾಟಕದ ಹೊರಗೂ ಬಹಳ ದೂರದವರೆಗೆ ಹಬ್ಬಿಸಿದ ಸಂಗತಿಯನ್ನು ಹೋದ ಪ್ರಕರಣದಲ್ಲಿ ಹೇಳಿರುವೆವಷ್ಟೆ. ಈ ಬಗೆಯಾಗಿ ಚಾಲುಕ್ಯರು ಬಿತ್ತಿದ ಕರ್ನಾಟಕ ಸಾರ್ವಭೌಮತ್ವದ ಬೀಜವನ್ನು ರಾಷ್ಟ್ರಕೂಟರು ವೃಕ್ಷವಾಗಿ ಬೆಳೆಸಿದರು. ಚಾಲುಕ್ಯರು ಹೋಗಿ ರಾಷ್ಟ್ರಕೂಟರು ಬಂದರೂ ಕರ್ನಾಟಕ ವೈಭವವು ಕನ್ನಡಿಗರ ಕೈಬಿಟ್ಟು ಹೋಗಲಿಲ್ಲ. ಏಕೆಂದರೆ, ರಾಷ್ಟ್ರಕೂಟರೂ ಕನ್ನಡಿಗರೇ, ಅವರೂ ತಮ್ಮ ರಾಜಧಾನಿಯನ್ನು ಕರ್ನಾಟಕದಲ್ಲಿಯೇ ಸ್ಥಾಪಿಸಿದರು. ಅವರೂ ಕನ್ನಡ ಭಾಷೆಯನ್ನೇ ಬೆಳೆಸಿದರು. ಆದುದರಿಂದ ಚಾಲುಕ್ಯರ ಕಾಲದಲ್ಲಿ ಮೇಲ್ಮೆಗೆ ಬಂದ ಕರ್ನಾಟಕ ಸಾರ್ವಭೌಮತ್ವವು ರಾಷ್ಟ್ರಕೂಟರ ಕಾಲದಲ್ಲಿಯೂ ಅವ್ಯಾಹತವಾಗಿ ಮುಂದಕ್ಕೆ ಸಾಗಿತು.

rashtrakuta vamshavali

rashtrakutas Map

ಈ ರಾಷ್ಟ್ರಕೂಟ ವಂಶದ ಮೊದಲನೆಯ ಅರಸನೂ ಚಾಲುಕ್ಯರಂತೆ ಮೊದಲಿಗೆ ಉತ್ತರದಿಂದ ಬಂದವನು. ದಂತಿದುರ್ಗ ನೆಂಬವನು ಉತ್ತರದಿಂದ ಬಂದು ಬಾದಾಮಿಯ ಚಾಲುಕ್ಯರ ಕೊನೆಯ ಅರಸನಾದ ಕೀರ್ತಿವರ್ಮನೆಂಬವನನ್ನು ಸೋಲಿಸಿ, ಅವನ ರಾಜ್ಯವನ್ನು ಕಸಿದುಕೊಂಡನು. ಅವನು ಕಂಚಿ, ಕಲಿಂಗ, ಕೋಸಲ, ಶ್ರೀಶೈಲ, ಮಾಳವ, ಲಾಟ, ಟಂಕ ಮುಂತಾದ ರಾಜ್ಯಗಳನ್ನು ಗೆದ್ದನೆಂತಲೂ, ಉಜ್ಜಯಿನಿಯಲ್ಲಿ ಸುವರ್ಣ, ರತ್ನ ಮುಂತಾದವುಗಳನ್ನು ವಿಪುಲವಾಗಿ ದಾನ ಮಾಡಿದನೆಂತಲೂ ಉಲ್ಲೇಖವಿದೆ.

ದಂತಿದುರ್ಗನ ತರುವಾಯ, ಕೃಷ್ಣರಾಜ ಅಥವಾ ಶುಭತುಂಗನೂ (೭೬೦-೭೭೦) ಪಟ್ಟವನ್ನೇರಿ ಚಾಲುಕ್ಯರನ್ನು ಪುನಃ ಸಂಪೂರ್ಣವಾಗಿ ಸೋಲಿಸಿ ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ದೃಢವಾಗಿ ನಿಲ್ಲಿಸಿದನು. ಜಗತ್ತಿನೊಳಗಿನ ಪ್ರವಾಸಿಕರೆಲ್ಲರನ್ನು ಅತಿಶಯವಾಗಿ ಬೆರಗುಗೊಳಿಸುವಂಥ ವೇರೂಳಿನಲ್ಲಿಯ ಅತ್ಯದ್ಭುತವಾದ ಕೈಲಾಸವೆಂಬ ಅಖಂಡವಾದ ಕಲ್ಲಿನ ಗುಡಿಯನ್ನು ಕೊರೆಸಿದವನು ಇದೇ ಕೃಷ್ಣರಾಜನು. (ವೈಭವ ವರ್ಣನೆಯ ೧೨ನೆಯ ಪ್ರಕರಣವನ್ನು ನೋಡಿರಿ.)

ಇವನ ತರುವಾಯ ಧ್ರುವನು ಹೆಸರುವಾಸಿಯಾದ ಅರಸನು. ಇವನಿಗೆ ನಿರುಪಮ, ಕಲಿವಲ್ಲಭ್ ಎಂದೂ ಹೆಸರುಗಳಿದ್ದವು. ಇವನು ಪಲ್ಲವರನ್ನೂ ಗಂಗರನ್ನೂ ಗೆದ್ದು ಅವರಿಂದ ಕಪ್ಪವನ್ನು ತೆಗೆದುಕೊಂಡನಲ್ಲದೆ ಉತ್ತರದಲ್ಲಿ ಅಲ್ಹಾಬಾದದ ಹತ್ತಿರವಿರುವ ಕೌಶಾಂಬಿಯಲ್ಲಿ ಆಳುತ್ತಿದ್ದ ವತ್ಸ ಅರಸನ ಮೇಲೆ ದಂಡೆತ್ತಿ ಹೋಗಿ, ಅವನನ್ನು ಕಾಡಿಗೆ ಅಟ್ಟಿ ಅವನಿಂದ ರಾಜ್ಯಛತ್ರಗಳನ್ನು ಕಸಿದುಕೊಂಡನು.

ಆನಂತರ ೩ನೆಯ ಗೋವಿಂದನು ಬಲಾಢ್ಯ ಅರಸನು. ಸಿಂಹಾಸನವನ್ನೇರಿದ ಕೂಡಲೆ ಒಳಸಂಚು ಮಾಡಿದ್ದ ಹನ್ನೆರಡು ಜನ ಅರಸರನ್ನು ಇವನೊಬ್ಬನೇ ಬಗ್ಗು ಬಡಿದನು. ಅನಂತರ ಇವನು ಗುರ್ಜರ, ಮಾಳವದೇಶಗಳನ್ನು ತೆಗೆದುಕೊಂಡನು. ಅಲ್ಲಿಂದ ವಿಂಧ್ಯಪರ್ವತಕ್ಕೆ ಸಾಗಿಹೋಗಿ ಮಾರಾಶ್ವರನೆಂಬ ಅರಸನನ್ನು ವಶಮಾಡಿಕೊಂಡನು. ಮುಂದೆ ಅವನು ದಕ್ಷಿಣಕ್ಕೆ ತುಂಗಭದ್ರೆಯ ಕಡೆಗೆ ಹೊರಳಿ ಪಲ್ಲವರನ್ನು ಗೆದ್ದು, ವೆಂಗಿದೇಶದ ಅರಸರನ್ನು (ಪೂರ್ವ ಚಾಲುಕ್ಯರ ಅರಸನನ್ನು) ದಾಸಾನುದಾಸನನ್ನಾಗಿ ಮಾಡಿಕೊಂಡು ಅವನ ಕೈಯಿಂದ ತನ್ನ ಕೋಟೆಯ ಗೋಡೆಗಳನ್ನು ಕಟ್ಟಿಸಿಕೊಂಡನು. ಈತನ ವಿಜಯ ಯಾತ್ರೆಯು ೮೦೪ನೆಯ ಇಸ್ವಿಯ ಸುಮಾರಿಗೆ ಮುಗಿಯಿತು. ಸಾರಾಂಶ: ಈ ಮೂರನೆಯ ಗೋವಿಂದನು ರಾಷ್ಟ್ರಕೂಟ ಅರಸರೊಳಗೆ ಅತ್ಯಂತ ಶೂರನಾದ ಅರಸನು. ಈತನ ಕಾಲಕ್ಕೆ ರಾಷ್ಟ್ರಕೂಟರ ರಾಜ್ಯವಿಸ್ತಾರವು ಉತ್ತರದಲ್ಲಿ ಮಾಳವಾ ದೇಶದಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹಬ್ಬಿತ್ತು. ನರ್ಮದೆಯಿಂದ ತುಂಗಭದ್ರೆಯವರೆಗಿನ ಪೂರ್ವ ಪಶ್ಚಿಮ ಸಮುದ್ರಗಳ ನಡುವಿನ ಪ್ರದೇಶವಂತೂ ಪ್ರತ್ಯಕ್ಷವಾಗಿ ಈತನ ಅಧೀನದಲ್ಲಿಯೇ ಇತ್ತು. ಮಿಕ್ಕ ಪ್ರದೇಶದಲ್ಲಿ ಈತನ ವರ್ಚಸ್ಸು ನಡೆಯುತ್ತಿತ್ತು.

ಈ ಗೋವಿಂದನ ಮಗನೇ ಕನ್ನಡಿಗರೆಲ್ಲರಿಗೂ ಪರಿಚಿತನಾದ ಅಮೋಘವರ್ಷ ಅಥವಾ ನೃಪತುಂಗನು; ಉಪಲಬ್ಧವಿರುವ ಕನ್ನಡ ಗ್ರಂಥಗಳಲ್ಲಿ ಎಲ್ಲಕ್ಕೂ ಹಳೆಯದಾದ `"ಕವಿರಾಜಮಾರ್ಗ"ವೆಂಬ ಪ್ರಖ್ಯಾತ ಗ್ರಂಥದ ಕರ್ತನು ಈತನೇ. ಗುಣಭದ್ರನ ಗುರುವೂ ಆದಿಪುರಾಣವೆಂಬ ಜೈನ ಗ್ರಂಥದ ಕರ್ತನೂ ಆದ ಜಿನಸೇನನು ಈ ನೃಪತುಂಗನ ಗುರು. ಮುಂಬಯಿ ಹತ್ತರಿರುವ ಕಾನ್ಹೇರಿಯ ಶಿಲಾಲಿಪಿಗಳಲ್ಲಿ, ಅಲ್ಲಿಯ ಶಿಲಾಹಾರರು ಈ ನೃಪತುಂಗನ ಮಾಂಡಲಿಕರಾಗಿದ್ದಂತೆ ಉಲ್ಲೇಖವಿದೆ. ಈ ಅಮೋಘವರ್ಷನು ಮಳಖೇಡದಲ್ಲಿ ಕರ್ನಾಟಕ ಸಿಂಹಾಸನದ ಮೇಲೆ ಒಟ್ಟಿಗೆ ೬೩ ವರ್ಷಗಳವರೆಗೆ ಕುಳಿತು ಅತ್ಯಂತ ವೈಭವದಿಂದ ರಾಜ್ಯವಾಳಿದನು. ಇಂಥವನನ್ನು ಕನ್ನಡಿಗರು ಮರೆಯುವುದು ಹೇಗೆ?

ಆದರೆ ಚಾಲುಕ್ಯರ ವಂಶದಲ್ಲಿ ಅತ್ಯಂತ ಪ್ರಸಿದ್ಧನಾದ ೨ನೆಯ ಪುಲಿಕೇಶಿಯ ತರುವಾಯದಲ್ಲಿ ಒಬ್ಬರಿಗಿಂತ ಒಬ್ಬರು ದೊಡ್ಡ ದೊಡ್ಡ ಅರಸರು ಆಗಿಹೋದಂತೆ ಈ ರಾಷ್ಟ್ರಕೂಟರಲ್ಲಿ ಆಗಲಿಲ್ಲ. ಅಮೋಘವರ್ಷನ ತರುವಾಯದಲ್ಲಿ ಪಟ್ಟವೇರಿದ ಒಬ್ಬಿಬ್ಬ ಅರಸರು ಶೂರರಾಗಿ ಹೋದರೂ ಅವರು ಬಹಳ ದಿವಸ ಆಳಲಿಲ್ಲ. ಮುಂದೆ ರಾಷ್ಟ್ರಕೂಟ ಅರಸರ ಹುಟ್ಟುಹಗೆಗಳಾದ ಚಾಲುಕ್ಯರು ಪ್ರಬಲರಾಗಿ ಅವರಲ್ಲಿ ತೈಲಪನೆಂಬವನು ಈ ರಾಷ್ಟ್ರಕೂಟವಂಶದ ಅರಸನಾದ ಕರ್ಕನೆಂಬವನನ್ನು ಸಂಪೂರ್ಣವಾಗಿ ಸೋಲಿಸಿ, ರಾಜ್ಯವನ್ನು ಸೆಳೆದುಕೊಂಡು, ಪುನಃ ಚಾಲುಕ್ಯ ವಂಶವನ್ನು ಸ್ಥಾಪಿಸಿದನು (೯೭೨). ಈ ಮೇರೆಗೆ ನೃಪತುಂಗ ಅಥವಾ ಅಮೋಘವರ್ಷನ ತರುವಾಯ ಸುಮಾರು ನೂರು ವರ್ಷಗಳಲ್ಲಿಯೇ ಈ ವಂಶವು ಲಯಹೊಂದಿತು.


೯ನೆಯ ಪ್ರಕರಣ

ಕಲ್ಯಾಣದ ಚಾಲುಕ್ಯರು
(೯೭೩-೧೧೮೧)



ಶ್ರೀವಲ್ಲಭನಹಿತಜಯ | ಶ್ರೀವಲ್ಲಭನೆನಿಸಿ ವಿಕ್ರಮಾದಿತ್ಯಂಗಂ |
ಶ್ರೀವಧುವೊಲೆಸೆವ ಬೊಂಥಾ | ದೇವಿಗವಾದಂ ತನೂಭವಂ ತೈಲನೃಪಂ ||
-ಗದುಗಿನ ಶಿಲಾಲೇಖ

ಆಸೇತೋಃ ಕೀರ್ತಿರಾಶೇ ರಘುಕುಲತಿಲಕಸ್ಯಾಚ ಶೈಲಾದಿರಾಜಾ |
ದಾಚ ಪ್ರತ್ಯಕ್ಪ್ರಯೋಧೇಶ್ಚಟುಲತಿಮಿಕುಲೋತ್ತುಂಗರಿಂಗತ್ತರಂಗಾತ್ ||
ಆಚ ಪ್ರಥ್ವೀಸಮುದ್ರಾ ನ್ಛತನೃಪತಿಶಿರೋರತ್ನ ಭಾಭಾಸುರಾಂಘ್ರೀಃ |
ಪಾಯಾಚಂದ್ರತಾರಂ ಜಯದಿದಮಖಿಲಂ ವಿಕ್ರಮಾದಿತ್ಯದೇವಃ ||
- ಮಿತಾಕ್ಷರ (ವಿಜ್ಞಾನೇಶ್ವರ)

ಅಥ ಸುರಪಥವಲ್ಗದ್ದಿವ್ಯಭೇರೀನಿನಾದಂ |
ಪ್ರಶಮಿತವರಿತಾಪಂ ಭರ್ತೃಲಾಭಾತ್ ಪೃಥಿವ್ಯಾಃ ||
ಅಲಭತ ಚಿರಚಿತ್ತಾ ಚಾಂತ ಚಾಲುಕ್ಯಲಕ್ಷ್ಮೀಃ |
ಕ್ಲಮುಷಮಭಿಷೇಕಂ ವಿಕ್ರಮಾದಿತ್ಯದೇವಃ ||
-ವಿಕ್ರಮಾಂಕದೇವ ಚರಿತ (ಬಿಲ್ಹಣಕೃತ)


ಕನ್ನಡಿಗರೇ, ಈ ಪ್ರಕರಣದಲ್ಲಿ ನಾವು ನಿಮ್ಮ ರಾಜವೈಭವದ ಪರಮಾವಧಿಯನ್ನು ವರ್ಣಿಸುವೆವು. ಈ ಕಲ್ಯಾಣ ಚಾಲುಕ್ಯರ ಕಾಲವೆಂದರೆ ಕರ್ನಾಟಕ ವೈಭವಸೂರ್ಯನ ಮಧ್ನಾಹ್ನಕಾಲವು. ಬಾದಾಮಿಯ ಚಾಲುಕ್ಯರು ಬಿತ್ತಿದ ಬೀಜವು ರಾಷ್ಟ್ರಕೂಟರ ಕಾಲದಲ್ಲಿ ವೃಕ್ಷವಾಗಿ ಬೆಳೆದು, ಅದರ ಸವಿಯಾದ ಫಲಗಳು ಈ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ತಿನ್ನಲಿಕ್ಕೆ ದೊರೆತವು. ಇವರ ಕಾಲದಲ್ಲಿ ಕನ್ನಡಿಗರ ಕೀರ್ತಿಯು ದಶದಿಕ್ಕುಗಳಲ್ಲಿ ಹಬ್ಬಿತು. ಕನ್ನಡಿಗರ ಧ್ವಜಪತಾಕೆಯು ಈಶಾನ್ಯಕ್ಕೆ ಆಸಾಮಪ್ರಾಂತದಲ್ಲಿ ಊರಲ್ಪಟ್ಟಿತು. ಕರ್ನಾಟಕ ಅರಸರು ಅನೇಕ ಕವಿಪುಂಗವರಿಗೂ ವಿದ್ವಜ್ಜರಿಗೂ ಆಶ್ರಯದಾತರಾದರು. ಈ ಬಗೆಯಾಗಿ ಕನ್ನಡಿಗರಿಗೆ ಅತ್ಯಂತ ಅಭಿಮಾನಸ್ಪದವಾದ ಈ ಚಾಲುಕ್ಯರ ಇತಿಹಾಸವನ್ನು ಇಲ್ಲಿ ಕೊಡುವೆವು.

ಈ ಚಾಲುಕ್ಯವಂಶದ ಮೂಲಪುರುಷನು ತೈಲಪನು. ಇವನು ಚೋಳ ಅರಸನನ್ನೂ ಚೇದಿ (ಬುಂದೇಲಖಂಡ) ಅರಸನನ್ನೂ ಗೆದ್ದನು. ಈ ತೈಲಪನು ಗುಜರಾಥ ಚಾಲುಕ್ಯವಂಶದ ಮೂಲ ಪುರುಷನಾದ ಮೂಲರಾಜನ ಮೇಲೆ ಬಾರಪ್ಪನೆಂಬವನನ್ನು ಕಳುಹಿಸಿದನು. ಆತನು ಮೂಲರಾಜನನ್ನು ಸೋಲಿಸಿದನು. ಆಮೇಲೆ ತೈಲಪನು ಮಾಳವ ದೇಶದ ಮೇಲೆ ದಾಳಿಯಿಟ್ಟನು. ಭಾರತೀಯರೆಲ್ಲರಿಗೂ ಅತಿ ಪರಿಚಿತನಾದ ಪ್ರಸಿದ್ಧ ಭೋಜರಾಜನ ಕಕ್ಕನಾದ ಮುಂಜನೆಂಬವನೇ ಆಗ ಮಾಳವಾಧಿಪತಿಯಾಗಿದ್ದನು. ಈ ಮುಂಜನು ದೊಡ್ಡಸೈನ್ಯದೊಂದಿಗೆ ಗೋದಾವರಿಯನ್ನು ದಾಟಿ ಬಂದು ತೈಲಪನನ್ನು ಕೆಣಕಿದನು. ಆದರೆ ತೈಲಪನು ಅವನನ್ನು ಸೋಲಿಸಿ, ಸೆರೆ ಹಿಡಿದನು. ಮುಂಜನು ತಪ್ಪಿಸಿಕೊಳ್ಳಲಿಕ್ಕೆ ಯತ್ನಿಸಿದ್ದರಿಂದ ತೈಲಪನು ಆತನ ತಲೆ ಹಾರಿಸಿದನು. ಈತನ ಮಾಂಡಲಿಕನೊಬ್ಬನು ಸವದತ್ತಿಯಲ್ಲಿ ಜೈನಗುಡಿಗೆ ಭೂಮಿದಾನ ಕೊಟ್ಟಿರುತ್ತಾನೆ. ತೈಲಪನ ಹೆಂಡತಿಯ ಹೆಸರು ಜಾಕವ್ವೆ. ಇವಳು ತೈಲಪನು ಮುರಿದ ರಾಷ್ಟ್ರಕೂಟ ವಂಶದ ರಾಜಪುತ್ರಿಯು.

kalyanachalukya vamshavali

kalyanachalukya Map

ತೈಲಪನ ತರುವಾಯ (೧೦೪೦) ಈ ವಂಶದ ದೊಡ್ಡ ಅರಸನು ಸೋಮೇಶ್ವರ ಅಹವಮಲ್ಲನು. ಪಟ್ಟವೇರಿದ ಕೂಡಲೆ ಇವನು ಚೋಳರೊಡನೆ ಕಾದಬೇಕಾಯಿತು. ಅವರನ್ನು ಗೆದ್ದ ನಂತರ ಉತ್ತರಕ್ಕೆ ತೆರಳಿ ಭೋಜನ ರಾಜಧಾನಿಯಾದ ಧಾರಾಪಟ್ಟಣವನ್ನು ತೆಗೆದುಕೊಂಡನು. ಚೇದಿ ಅರಸನಾದ ಕರ್ಣನನ್ನು ಹಿಡಿದು ಕೊಂದನು. ಅಲ್ಲಿಂದ ಹೊರಟು ಪಶ್ಚಿಮದ ಸಮುದ್ರದ ಕಡೆಗೆ ತಿರುಗಿ ಅಲ್ಲಿಯ ಅರಸನನ್ನು ಗೆದ್ದು, ವಿಜಯಸ್ತಂಭವನ್ನು ಊರಿ, ಸಮುದ್ರಮಾರ್ಗದಿಂದ ದಕ್ಷಿಣಕ್ಕೆ ಇಳಿದು ಬಂದನು. ಮುಂದೆ ಚೋಳರ ರಾಜಧಾನಿಯಾದ ಕಂಚಿಯನ್ನು ತೆಗೆದುಕೊಂಡು, ಆ ಅರಸನನ್ನು ಓಡಿಸಿದನು. ಈ ಸೋಮೇಶ್ವರನು ಉತ್ತರದಲ್ಲಿ ಕನ್ಯಾಕುಬ್ಜ ಅಂದರೆ ಕನೋಜದ ಅರಸನನ್ನು ಗೆದ್ದುದರಿಂದ ಅವನು ಓಡಿಹೋಗಿ ಅಡವಿಯನ್ನು ಆಶ್ರಯಿಸಬೇಕಾಯಿತು. ಸೋಮೇಶ್ವರನೇ ಕಲ್ಯಾಣ ಪಟ್ಟಣವನ್ನು ಸ್ಥಾಪಿಸಿ ಅದನ್ನು ರಾಜಧಾನಿಯನ್ನಾಗಿ ಮಾಡಿದನು. ಇವನಿಗೆ ಸೋಮೇಶ್ವರ, ವಿಕ್ರಮಾದಿತ್ಯ ಮತ್ತು ಜಯಸಿಂಹ ಹೀಗೆ ಮೂರು ಮಂದಿ ಮಕ್ಕಳು. ೨ನೆಯ ಮಗನಾದ ವಿಕ್ರಮಾದಿತ್ಯನು ಇವರೆಲ್ಲರೊಳಗೆ ಚತುರನೂ ವಿದ್ವಾಂಸನೂ ಆಗಿದ್ದನು. ಅವನನ್ನೇ ಯುವರಾಜನನ್ನಾಗಿ ಮಾಡಬೇಕೆಂದು ಸೋಮೇಶ್ವರನ ಇಚ್ಛೆ. ಆದರೆ ವಿಕ್ರಮಾದಿತ್ಯನು ತನ್ನ ಅಣ್ಣನ ಹಕ್ಕನ್ನು ಮುಳುಗಿಸಲು ಇಚ್ಛಿಸಲಿಲ್ಲ. ಆದರೂ ತಂದೆಗೆ ಆತನ ಸಮರ ಸಾಹಸಗಳಲ್ಲಿ ಸಹಾಯ ಮಾಡಿದವನು ವಿಕ್ರಮನೇ. ಈ ವಿಕ್ರಮನು ಮೊದಲು ಚೋಳರನ್ನು ಗೆದ್ದು ಆ ರಾಜ್ಯವನ್ನು ತನ್ನ ರಾಜ್ಯಕ್ಕೆ ಕೂಡಿಸಿಕೊಂಡನು. ಮಾಳವದ ಅರಸನಿಗೆ ಸಹಾಯ ಮಾಡಿ, ಅವನು ಕಳೆದುಕೊಂಡ ಪಟ್ಟವನ್ನು ಅವನಿಗೆ ಕೊಡಿಸಿದನು. ಬಂಗಾಲ ಆಸಾಮ ಪ್ರಾಂತಗಳ ಮೇಲೆ ದಾಳೀ ಇಟ್ಟನು. ಕೇರಳರನ್ನು ಕೆಣಕಿದನು. ಸಿಂಹಳದ್ವೀಪದ ಅರಸನು ಇವನಿಗೆ ಶರಣಾಗತನಾದನು. ಕಂಚಿಯನ್ನು ಕೈವಶ ಮಾಡಿಕೊಂಡನು. ಅಲ್ಲಿಂದ ವೆಂಗೀ ದೇಶ ಅಂದರೆ ತೆಲುಗು ದೇಶದ ಕಡೆಗೆ ಹೊರಳಿದನು. ಹೀಗೆ ವಿಕ್ರಮಾದಿತ್ಯನು ಒಂದೇ ಸವನೆ ರಾಜ್ಯಗಳನ್ನು ಗೆಲ್ಲುತ್ತ ಸಾಗಿರಲು, ಇತ್ತ ಅವನ ತಂದೆಯಾದ ಸೋಮೇಶ್ವರನಿಗೆ ವಿಷಮಜ್ವರ ಹುಟ್ಟಿತು. ಇನ್ನು ತನಗೆ ಬದುಕುವ ಆಶೆಯಿಲ್ಲವೆಂದು ತಿಳಿದ ಕೂಡಲೆ ಅವನು ತುಂಗಭದ್ರೆಯ ಬದಿಗೆ ಬಂದು, ಸುವರ್ಣ ದಾನ ಮೊದಲಾದವುಗಳನ್ನು ಮಾಡಿ ನದಿಯಲ್ಲಿ ಹೋಗಿ ಮುಳುಗಿ ಸತ್ತುಹೋದನು. ಅಹವಮಲ್ಲನು ವಿದ್ಯಾಪಕ್ಷಪಾತಿಯು; ವಿದ್ವಾಂಸರಿಗೆ ಆಶ್ರಯದಾತನು. ಇವನ ಸದ್ಗುಣಗಳ ಮೂಲಕ ಕವಿಗಳು ಇವನನ್ನು ತಮ್ಮ ಕಾವ್ಯದಲ್ಲಿ ನಾಯಕನನ್ನಾಗಿ ಮಾಡಿರುವರೆಂದು ಬಿಲ್ಹಣನು ಇವನನ್ನು ವರ್ಣಿಸಿದ್ದಾನೆ.

ಇವನ ತರುವಾಯ ಇವನ ಹಿರಿಯ ಮಗನಾದ ಎರಡನೆಯ ಸೋಮೇಶ್ವರನು ಪಟ್ಟವೇರಿದನು. ಇವನಿಗೆ ಭುವನೈಕಮಲ್ಲನೆಂದು ಹೆಸರು. ವಿಕ್ರಮಾದಿತ್ಯನು, ತಮ್ಮ ತಂದೆಯು ಸತ್ತ ಸುದ್ದಿಯನ್ನು ಕೇಳಿ, ರಾಜಧಾನಿಗೆ ಬಂದು ತಾನು ತಂದ ಸುಲಿಗೆಯನ್ನೆಲ್ಲ ಅಣ್ಣನ ವಶಕ್ಕೆ ಒಪ್ಪಿಸಿದನು. ಆದರೆ ಈ ಸೋಮೇಶ್ವರನ ಆಳಿಕೆಯು ಪ್ರಜೆಗಳಿಗೆ ಸುಖಕರವಾಗಲಿಲ್ಲ. ಅವನು ತನ್ನ ಮಂತ್ರಿಗಳ ಮಾತನ್ನೂ ಕೇಳಲಿಲ್ಲ. ತನ್ನ ಕುಶಲ ತಮ್ಮನಾದ ವಿಕ್ರಮಾದಿತ್ಯನ ಉಪದೇಶಕ್ಕೂ ಕಿವಿಗೊಡಲಿಲ್ಲ. ಮನ ಬಂದಂತೆ ವರ್ತಿಸಿ ಪ್ರಜೆಗಳನ್ನು ಅಸಂತುಷ್ಟಪಡಿಸಿದನು. ಇಷ್ಟೇ ಅಲ್ಲ, ತನ್ನ ತಮ್ಮನಾದ ವಿಕ್ರಮಾದಿತ್ಯನಿಗೆ ವಿರುದ್ಧವಾಗಿಯೇ ಪ್ರಯತ್ನ ನಡೆಸಿದನು. ಈ ಸಂಗತಿಯನ್ನು ತಿಳಿದುಕೊಂಡ ವಿಕ್ರಮಾದಿತ್ಯನು ದೊಡ್ಡದೊಂದು ಸೈನ್ಯದೊಡನೆ ತನ್ನ ತಮ್ಮನಾದ ಜಯಸಿಂಹನನ್ನು ಕರೆದುಕೊಂಡು ರಾಜಧಾನಿಯನ್ನು ಬಿಟ್ಟನು. ಸೋಮೇಶ್ವರನು ತಮ್ಮನನ್ನು ಹಿಡಿಯಲಿಕ್ಕೆ ಸೈನ್ಯ ಕಳುಹಿದನು. ಆದರೆ ವಿಕ್ರಮನು ಅದನ್ನು ನುಚ್ಚುನುರಿಯಾಗಿ ಮಾಡಿದನು. ಅನಂತರ ವಿಕ್ರಮನು ಕದಂಬರನ್ನು ಕೂಡಿಕೊಂಡು ಅವರ ಅರಸನಾದ ಜಯಕೇಶಿಯಿಂದ ವಿಪುಲವಾಗಿ ಧನಕನಕಾದಿಗಳನ್ನು ತೆಗೆದುಕೊಂಡು ಚೋಳರಾಜ್ಯದ ಕಡೆಗೆ ತಿರುಗಿದನು. ಸೋಮೇಶ್ವರನ ಆಳಿಕೆಗೆ ಜನರು ಮೊದಲೇ ಬೇಸತ್ತುದರಿಂದ, ವಿಕ್ರಮನು ಹೋದಹೋದಲ್ಲಿ, ಮಾಂಡಲಿಕ ಅರಸರು ಅವನನ್ನು ಗೌರವಿಸುತ್ತ ಬಂದರು. ಆಳುಪ, ಕೇರಳ, ಮುಂತಾದ ರಾಜ್ಯಗಳ ಅರಸರು ಈ ಬಗೆಯಾಗಿ ವಿಕ್ರಮನಿಗೆ ನೆರವಾದುದರಿಂದ, ಅವನು ಧೈರ್ಯದಿಂದ ಚೋಳರಾಜ್ಯದ ದಾರೀ ಹಿಡಿದು ಅಲ್ಲಿಗೆ ಬಂದು ಸೈನ್ಯದೊಂದಿಗೆ ತಲ್ಪಿದನು. ಅಲ್ಲಿಯ ಅರಸನು ವಿಕ್ರಮನೊಡನೆ ಸಂಧಿಯನ್ನು ಮಾಡಬೇಕೆಂದು ಕುತೂಹಲವುಳ್ಳವನಾಗಿ, ತನ್ನ ಮಗಳನ್ನು ಅವನಿಗೆ ಮದುವೆ ಮಾಡಲು ಇಚ್ಛಿಸಿದನು. ವಿಕ್ರಮನು ಬಹು ಧೂರ್ತನು. ಅವನು ಈ ಸುಸಂಧಿಯನ್ನು ಕಳೆದುಕೊಳ್ಳದೆ ಆ ಚೋಳ ರಾಜಪುತ್ರಿಯನ್ನು ಮದುವೆ ಮಾಡಿಕೊಂಡು ಅವಳೊಡನೆ ತುಂಗಭದ್ರಾ ನದಿಯ ತೀರಕ್ಕೆ ಬಂದು ತಳವೂರಿದನು. ಕೆಲವು ದಿವಸಗಳಲ್ಲಿಯೇ ಚೋಳರಾಜ್ಯದಲ್ಲಿ ದೊಡ್ಡಕ್ರಾಂತಿಯಾಯಿತು. ವಿಕ್ರಮನ ಮಾವನು ಮಡಿದನು. ಒಡನೆಯೆ ವಿಕ್ರಮನು ಕಂಚಿಗೆ ಹೋಗಿ ತನ್ನ ಬೀಗನನ್ನು ಪಟ್ಟಕ್ಕೆ ಕುಳ್ಳಿರಿಸಿದನು. ಆದರೆ ವಿಕ್ರಮನು ಮರಳಿ ಬಂದಕೂಡಲೆ, ವೆಂಗಿದೇಶದ ಅರಸನಾದ ಕುಲೋತ್ತುಂಗ ಅಥವಾ ರಾಜಿಗನೆಂಬ ಮಹಾಪ್ರತಾಪಿಯು ವಿಕ್ರಮನ ಬೀಗನನ್ನು ಗಾದಿಯಿಂದ ತಳ್ಳಿ ಚೋಳಸಿಂಹಾಸನವನ್ನು ಆಕ್ರಮಿಸಿದನು. ಇನ್ನು ವಿಕ್ರಮನು ತನ್ನ ಮೇಲೆ ಏರಿಬರುವನೆಂದು ತಿಳಿದು ಆ ರಾಜಿಗನು ವಿಕ್ರಮನ ಅಣ್ಣನಾದ ಸೋಮೇಶ್ವರನ ಕಿವಿಯೂದಿ ಅವನನ್ನು ವಿಕ್ರಮನಿಗೆ ವಿರುದ್ಧವಾಗಿ ನಿಲ್ಲಿಸಿದನು. ಈ ಹೊತ್ತಿನಲ್ಲಿ ವಿಕ್ರಮನು ತೋರಿಸಿದ ಶೌರ್ಯ-ಧೈರ್ಯಗಳು ವಿಲಕ್ಷಣವಾಗಿದ್ದವು. ಇತ್ತ ಮೇಲ್ಗಡೆಯಿಂದ ತನ್ನ ಅಣ್ಣನಾದ ಸೋಮೇಶ್ವರನು ಬೆನ್ನಟ್ಟಿ ಬರುತ್ತಿದ್ದನು. ಅತ್ತ ರಾಜಿಗನ ಸೈನ್ಯವು ದಕ್ಷಿಣದಿಂದ ವಿಕ್ರಮನನ್ನು ಮೇಲಕ್ಕೊತ್ತಬೇಕೆಂದು ಹವಣಿಸಿತು. ಆದರೆ ವಿಕ್ರಮನು ತನ್ನ ಅಣ್ಣನನ್ನು ಅಲಕ್ಷಿಸಿ, ರಾಜಿಗನ ಸೈನ್ಯವನ್ನು ಸೋಲಿಸಬೇಕೆಂದು ದಕ್ಷಿಣಕ್ಕೆ ಸಾಗಿದನು. ರಾಜಿಗನ ಸೈನ್ಯದ ಹತ್ತಿರ ಬಂದು ತಲ್ಪುವಷ್ಟರಲ್ಲಿ ಅಣ್ಣನ ಸೈನ್ಯವು ವಿಕ್ರಮನ ಸೈನ್ಯದ ಬೆನ್ನು ಹಿಂದೆ ಬಂದು ನಿಂತಿತು. ವಿಕ್ರಮನು ಈ ಆತ್ಮಘಾತಕದ ಕೃತ್ಯವು ಸರಿಯಲ್ಲವೆಂದು ತನ್ನ ಅಣ್ಣನಿಗೆ ಉಪದೇಶಿಸಿದನು. ಆದರೆ ಸೋಮೇಶ್ವರನಿಗೆ ಅದನ್ನು ಆಲಿಸುವಷ್ಟು ಬುದ್ಧಿಯು ಎಲ್ಲಿತ್ತು? ಆದುದರಿಂದ ನಿರುಪಾಯನಾಗಿ ಅತ್ಯಂತ ಧೈರ್ಯ ತಾಳಿ, ಬೆನ್ನಹಿಂದಿನ ಮತ್ತು ಬೆನ್ನಮುಂದಿನ-ಹೀಗೆ ಎರಡೂ ಕಡೆಯ ಸೈನ್ಯಗಳೊಂದಿಗೆ ಒಮ್ಮೆಲೆ ಯುದ್ಧ ಮಾಡುವುದನ್ನೇ ನಿಶ್ಚಯಿಸಿದನು. ಮತ್ತು ರಾಜಿಗನ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿದುದರಿಂದ ರಾಜಿಗನು ಪಲಾಯನಸೂತ್ರವನ್ನು ಹೇಳಿದನು. ಇತ್ತ ಸೋಮೇಶ್ವರನನ್ನಂತೂ ಸೆರೆಯಾಳಾಗಿಯೇ ಹಿಡಿದನು. ಮುಂದೆ ಅವನನ್ನು ಸಿಂಹಾಸನದಿಂದ ತಳ್ಳಿ, ತಾನೇ ಪಟ್ಟವೇರಿ ರಾಜ್ಯವಾಳಲು ಪ್ರಾರಂಭಿಸಿದನು.

ಈ ಬಗೆಯಾಗಿ ಈ ವಿಕ್ರಮನು ತನ್ನ ತಂದೆಯ ಕಾಲಕ್ಕೂ ಅಣ್ಣನ ಕಾಲಕ್ಕೂ ತಾನೇ ಯಾವತ್ತೂ ಶೂರಕೃತ್ಯಗಳನ್ನು ಮಾಡಿ ಹೆಸರುವಾಸಿಯಾಗಿ ೧೦೭೬ನೆಯ ಇಸವಿಯಲ್ಲಿ ಪಟ್ಟವೇರಿದನು. ಇವನೇ ಕನ್ನಡಿಗರೆಲ್ಲರಿಗೂ ಅತ್ಯಂತ ಅಭಿಮಾನಾಸ್ಪದನಾದ ಅರಸನು. ಇವನು ನಮ್ಮ ಅರಸರೊಳಗೆ ಎಲ್ಲಕ್ಕೂ ಶ್ರೇಷ್ಠವಾದ ಅರಸನು. ಇವನ ಕಾಲಕ್ಕೆ ಕರ್ನಾಟಕದ ರಾಜ್ಯವಿಸ್ತಾರವು ಪರಮಾವಧಿಯನ್ನು ಮುಟ್ಟಿತು. ಇವನು ವಿದ್ಯಾಪಕ್ಷಪಾತಿಯಾದುದರಿಂದ ವಿದ್ವಾಂಸರೆಲ್ಲರೂ ಇವನನ್ನೇ ಆಶ್ರಯಿಸಿದರು. ಬಿಲ್ಹಣನು ಇವನ ಆಸ್ಥಾನದಲ್ಲಿ ವಿದ್ಯಾಪತಿಯಾಗಿದ್ದನು. ಇವನೇ `"ವಿಕ್ರಮಾಂಕದೇವ ಚರಿತ"ವೆಂಬ ಇವನ ವಿಷಯವಾದ ಕಾವ್ಯವನ್ನು ಬರೆದಿರುವನು.

ಈ ವಿಕ್ರಮನಿಗೆ ಚಾಲುಕ್ಯವಿಕ್ರಮ ಅಥವಾ ತ್ರಿಭುವನಮಲ್ಲನೆಂದು ಹೆಸರು. ಕಲಿವಿಕ್ರಮ ಪೆರ್ಮಾಡಿರಾಯನೆಂದೂ ಬಿರುದುಗಳುಂಟು. ಈತನು ತಾನು ಪಟ್ಟವೇರಿದ ಕೂಡಲೇ, ತನ್ನದೊಂದು ಬೇರೆ ಶಕವನ್ನು ಪ್ರಾರಂಭಿಸಿದನು. ಆದರೆ ಅವನ ತರುವಾಯದಲ್ಲಿ ಆಗಿ ಹೋದ ಅರಸರು ಅವನಂತೆ ಬಲಾಢ್ಯರಾಗಿಲ್ಲದ್ದರಿಂದ ಆ ಶಕವು ಮುಂದೆ ಬಹಳ ದಿವಸ ಬಾಳಲಿಲ್ಲ. ಇರಲಿ. ವಿಕ್ರಮನು ಅರಸನಾದ ನಂತರ ಕರ್ಹಾಡಕ್ಕೆ ಹೋಗಿ ಅಲ್ಲಿಯ ಅರಸನ ಮಗಳಾದ ಚಂದ್ರಲೇಖ ಅಥವಾ ಚಂದಲಾದೇವಿಯನ್ನು ಮದುವೆಯಾದನು. ಇವಳು ಅತ್ಯಂತ ಸುಂದರಿಯು. ವಿಕ್ರಮನು ಪಟ್ಟವೇರಿದ ನಂತರ, ಅವನ ತಮ್ಮನಾದ ಜಯಸಿಂಹನಿಗೆ ದುರಾಶೆ ಹುಟ್ಟಿ ಅವನು ಅಣ್ಣನಿಗೆ ವಿರುದ್ಧವಾಗಿ ಬನವಾಸಿಯಲ್ಲಿ ಒಳಸಂಚು ಹೂಡಿದನು. ಚಾಲುಕ್ಯ ವಿಕ್ರಮನು ಅವನಿಗೆ ಹಾಗೆ ಮಾಡಬೇಡವೆಂದು ಒಳ್ಳೆಯ ರೀತಿಯಿಂದ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಜಯಸಿಂಹನು ತನ್ನದೊಂದು ಸೈನ್ಯವನ್ನೇ ಸಿದ್ಧಪಡಿಸಿ ಕೃಷ್ಣೆಯ ದಡಕ್ಕೆ ಬಂದು ತಳವೂರಿದನು. ಅಲ್ಲಿ ಅಣ್ಣ-ತಮ್ಮಂದಿರ ನಡುವೆ ಭಯಂಕರ ಕಾಳಗವೆಸಗಿತು. ಜಯಸಿಂಹನು ಓಡಿ ಅಡವಿಯ ಪಾಲಾದನು. ಮುಂದೆ ವಿಕ್ರಮನ ಸೈನ್ಯದವರು ಅವನನ್ನು ಹಿಡಿದು ವಿಕ್ರಮನೆದುರಿಗೆ ತಂದರು. ವಿಕ್ರಮನು ಅವನನ್ನು ಕ್ಷಮಿಸಿ ಬಿಟ್ಟುಕೊಟ್ಟನು. ಮುಂದೆ ಅನೇಕ ವರ್ಷಗಳವರೆಗೆ ವಿಕ್ರಮನು ಶಾಂತಿಯಿಂದ ರಾಜ್ಯವಾಳಿದನು. ಅವನ ಆಳ್ವಿಕೆಯ ಕೊನೆಯ ಭಾಗದಲ್ಲಿ ಹೊಯ್ಸಳರ ವಿಷ್ಣುವರ್ಧನನೆಂಬುವನು ಬಂಡಾಯವನ್ನೆಬ್ಬಿಸಿದನು. ಆದರೆ ವಿಕ್ರಮನ ಸರದಾರನಾದ ಅಚ್ಚ ಅಥವಾ ಅಚ್ಚಿಗನೆಂಬುವನು ಆ ಬಂಡಾಯವನ್ನು ತಗ್ಗಿಸಿ, ಪಾಂಡ್ಯ, ಕೊಂಕಣ ಮುಂತಾದ ಅರಸರನ್ನು ಮುರಿದನು. ಚೋಳ ಅರಸನ ಕೂಡ ವಿಕ್ರಮನು ಸ್ವಂತ ತಾನೇ ಯುದ್ಧ ಮಾಡಿ ಅವನನ್ನು ಸೋಲಿಸಿದನು. ಅನಂತರ ಕಲ್ಯಾಣಕ್ಕೆ ಬಂದು ವಿಕ್ರಮಪುರವೆಂಬ ತನ್ನ ಹೆಸರಿನದೊಂದು ಪಟ್ಟಣವನ್ನು ಸ್ಥಾಪಿಸಿದನು. ಇವನಿಗೆ ೧೬ ಮಂದಿ ಮಾಂಡಲಿಕ ರಾಜರಿದ್ದರು.

ಈತನ ಆಳಿಕೆಯು ಪ್ರಜೆಗಳಿಗೆ ಅತ್ಯಂತ ಸುಖಕರವಾಗಿತ್ತು. ಬಡಬಗ್ಗರಿಗೆ ಈತನು ಆಶ್ರಯದಾತನು. ಮಿತಾಕ್ಷರಿಯ ಕರ್ತನಾದ ವಿಜ್ಞಾನೇಶ್ವರನು ಇವನ ಹತ್ತಿರವೇ ಇದ್ದನು. ಈತನ ರಾಜ್ಯ ವರ್ಣನೆಯನ್ನು ನಾವು ಮುಂದೆ ವೈಭವವರ್ಣನೆಯ (೧೨ನೆಯ) ಪ್ರಕರಣದಲ್ಲಿ ಕೊಟ್ಟಿರುವೆವು. ಅದನ್ನು ಓದಿ ಯಾವ ಕನ್ನಡಿಗನ ಹೃದಯವು ತಾನೇ ಆನಂದದಿಂದ ಉಕ್ಕೇರುವದಿಲ್ಲ? ಯಾವ ಮನಸ್ಸು ತಾನೇ ಅಭಿಮಾನವನ್ನು ತಾಳುವುದಿಲ್ಲ?

ಚಾಲುಕ್ಯ ವಿಕ್ರಮನ ತರುವಾಯ, ಈತನ ಮಗನಾದ ೩ನೆಯ ಸೋಮೇಶ್ವರನು ಪಟ್ಟವೇರಿ ೧೧ ವರ್ಷ ಆಳಿದನು. ಅಷ್ಟರಲ್ಲಿಯೇ ಈತನು ಆಂಧ್ರ, ದ್ರಾವಿಡ, ಮಗಧ, ನೇಪಾಳ ದೇಶಗಳ ಅರಸರನ್ನು ಗೆದ್ದನೆಂದೂ ವಿದ್ವಾಂಸರಿಂದ ಹೊಗಳಲ್ಪಟ್ಟನೆಂದೂ ವರ್ಣನೆಯುಂಟು. ಸೋಮೇಶ್ವರನು ಸ್ವತಃ ಗ್ರಂಥಕರ್ತನು. ಈ ಸೋಮೇಶ್ವರನು ಸಂಸ್ಕೃತದಲ್ಲಿ ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥ ಚಿಂತಾಮಣಿಯೆಂಬ ಒಂದು ರಾಜಕೀಯ ಗ್ರಂಥವನ್ನು ಬರೆದನು. ಅದರಲ್ಲಿ, ರಾಜ್ಯವನ್ನು ಹೇಗೆ ಗಳಿಸಬೇಕು, ಗೆದ್ದ ರಾಜ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಅರಸರು ಎಂತೆಂತಹ ವಿಲಾಸಗಳನ್ನು ಉಪಭೋಗಿಸಬೇಕು, ಇವೇ ಮೊದಲಾದ ವಿಷಯಗಳೂ ಬೇಟೆ ಮುಂತಾದ ವಿಷಯಗಳೂ ಇರುತ್ತವೆ. ಈತನು ಬಹಳ ವಿದ್ವಾಂಸನಾದುದರಿಂದ ಈತನಿಗೆ `ಸರ್ವಜ್ಞಭೂಪನೆಂದು ಬಿರುದು.

ಈತನ ತರುವಾಯದ ಅರಸರು ನಿರ್ಬಲರಾಗಿದ್ದುದರಿಂದ ಮಾಂಡಲಿಕರಾಜರೇ ಸ್ವತಂತ್ರರಾಗುತ್ತ ಬಂದರು. ೨ನೆಯ ತೈಲಪನ ಕಾಲಕ್ಕೆ ಮಾಂಡಲಿಕ ರಾಜನಾದ ಬಿಜ್ಜಣನೆಂಬವನು ಕೊಲ್ಹಾಪುರ, ಕಾಕತೇಯ ಮುಂತಾದ ಅರಸರ ಸಹಾಯದಿಂದ ಚಾಲುಕ್ಯರ ತೈಲಪನನ್ನು ತಳ್ಳಿದನು. ತೈಲಪನು ಕಲ್ಯಾಣವನ್ನು ಬಿಟ್ಟು ಅಣ್ಣಿಗೇರಿಯನ್ನು ರಾಜಧಾನಿಯನ್ನಾಗಿ ಮಾಡಿದನು. ಬಿಜ್ಜಳನು ಅಲ್ಲಿಂದಲೂ ತೈಲಪನನ್ನು ಓಡಿಸಿದುದರಿಂದ ಅವನು ಬನವಾಸಿಗೆ ಓಡಿದನು. ಚಾಲುಕ್ಯರ ಸಿಂಹಾಸನವನ್ನು ಬಿಜ್ಜಳನ ವಂಶದವರು ಆಕ್ರಮಿಸಿದರು. ಆದರೆ ಆ ವಂಶವೂ ಬಹಳ ದಿನ ಬಾಳಲಿಲ್ಲ. ಬೊಮ್ಮನೆಂಬ ಸರದಾರನ ಸಹಾಯದಿಂದ ೪ನೆಯ ಸೋಮೇಶ್ವರನು ಪುನಃ ಕೆಲವು ದಿವಸ ರಾಜ್ಯವಾಳಿದನು. ಆದರೆ ಹೊಯ್ಸಳರು ಪ್ರಬಲರಾಗಿ ಚಾಲುಕ್ಯರ ವಂಶವನ್ನು ಮುರಿದರು.


೧೦ನೆಯ ಪ್ರಕರಣ

ಕಲಚೂರ್ಯ-ಯಾದವ ಮುಂತಾದವರು
(೧೧೫೬-೧೧೮೩)
ಕಲಚೂರ್ಯರು


ಬಿಜ್ಜಳನು ಮೊದಲು ರಾಷ್ಟ್ರಕೂಟರ ಮಹಾಮಂಡಲೇಶ್ವರನಾಗಿದ್ದಂತೆ ತೋರುತ್ತದೆ. ಈತನು ಚಾಲುಕ್ಯರ ಕೊನೆಯ ಅರಸನಾದ ತೈಲಪನನ್ನು ಓಡಿಸಿ ಸಾರ್ವಭೌಮನಾದ ಸಂಗತಿಯನ್ನು ಹೋದ ಪ್ರಕರಣದಲ್ಲಿ ಹೇಳಿರುವೆವಷ್ಟೇ! ಆದರೆ ಬಿಜ್ಜಳನು ಈ ಸಾರ್ವಭೌಮ ಪದವಿಯನ್ನು ಬಹಳ ದಿನ ಅನುಭವಿಸಲಿಲ್ಲ. ಕಲ್ಯಾಣದಲ್ಲುಂಟಾದ ಧರ್ಮಕ್ರಾಂತಿಯ ಗೊಂದಲದಲ್ಲಿ ಅವನು ತನ್ನ ಜೀವಕ್ಕೆ ಎರವಾಗ ಬೇಕಾಯಿತು. ಈ ಧರ್ಮಕ್ರಾಂತಿಯ ವಿವರವನ್ನು ಕೆಳಗೆ ಕೊಟ್ಟಿದೆ.

ವಿಜಾಪುರ ಜಿಲ್ಹಾ ಬಾಗೇವಾಡಿಯಲ್ಲಿ ಮಂಡಿಗೆಯ ಮಾದಿರಾಜನೆಂಬೊಬ್ಬ ಆರಾಧ್ಯ ಬ್ರಾಹ್ಮಣನಿದ್ದನು. ಅವನ ಮಗನೇ ಬಸವನು. ಬಿಜ್ಜಳನ ಮಂತ್ರಿಯಾದ ಬಲದೇವನು ಈ ಬಸವನ ಸೋದರಮಾವನು. ಬಸವನು ಬಲದೇವನ ಮಗಳಾದ ಗಂಗಾಂಬಿಕೆ ಎಂಬವಳನ್ನು ಮದುವೆಯಾಗಿದ್ದನು. ಬಲದೇವನು ಮರಣ ಹೊಂದಿದ ಬಳಿಕ, ಬಿಜ್ಜಳನು ಬಸವನನ್ನು ತನ್ನ ಮಂತ್ರಿಯನ್ನಾಗಿ ನಿಯಮಿಸಿಕೊಂಡನು. ಬಸವನಿಗೆ ನಾಗಾಂಬಿಕಾ ಎಂಬೊಬ್ಬ ಅಕ್ಕನಿದ್ದಳು. ಇವಳ ಹೊಟ್ಟೆಯಿಂದ ಚೆನ್ನಬಸವೇಶನು ಹುಟ್ಟಿದನು. ಬಸವನು ಲಿಂಗಾಯತ ಧರ್ಮವನ್ನು ಬೆಳೆಯಿಸಿ, ಬಹುಜನ ಜೈನರನ್ನು ತನ್ನ ಮತಕ್ಕೆ ಸೇರಿಸಿಕೊಂಡದ್ದರಿಂದ ಬಿಜ್ಜಳನಿಗೂ ಅವನಿಗೂ ಬೇಸರುಂಟಾಯಿತು. ಬಸವನ ಗುರುವಾದ ಅಲ್ಲಮಪ್ರಭು ಶ್ರೀಶೈಲಕ್ಕೆ ಹೋಗಿ ಐಕ್ಯನಾಗಲು, ಬಸವನು ಸಹ ಕಪ್ಪಡಿಯ ಸಂಗಮನಾಥದಲ್ಲಿ ಐಕ್ಯಗೊಂಡನು. ಬಳಿಕ ಬಿಜ್ಜಳನು ಚೆನ್ನಬಸವೇಶನಿಗೆ ಮಂತ್ರಿಪದವಿಯನ್ನು ಕೊಟ್ಟನು. ಲಿಂಗಾಯತ ಮತಸ್ಥರಾದ ಹರಳಯ್ಯ, ಮಧುವಯ್ಯ ಎಂಬಿಬ್ಬರು ಬೇರೆ ಬೇರೆ ಕುಲದವರು ಪರಸ್ಪರ ಬಾಂಧವ್ಯವನ್ನು ಬೆಳಿಸಿದರೆಂಬ ಕಾರಣದಿಂದ ಬಿಜ್ಜಳನು ಅವರನ್ನು ಆನೆ ಕಾಲಿಗೆ ಕಟ್ಟಿ ಎಳಿಸಲು, ದೊರೆಯನ್ನು ಶಿಕ್ಷಿಸಬೇಕೆಂದು ಜಗದೇವ-ಬೊಮ್ಮಯ್ಯರು ಸಂಕಲ್ಪಿಸಿ, ಚೆನ್ನಬಸವೇಶನ ಅಪ್ಪಣೆಯನ್ನು ಪಡೆದು, ದೊರೆಯ ಬಳಿಯಲ್ಲಿ ದೀವಟಿಗೆಯ ಉದ್ಯೋಗವನ್ನು ಸ್ವೀಕರಿಸಿದರು. ಮುಂದೆ ಹೊತ್ತು ಸಾಧಿಸಿ, ಜಗದೇವ-ಮಲ್ಲಯ್ಯ-ಬೊಮ್ಮಯ್ಯರು ಅರಸನನ್ನು ಇರಿದು ಕೊಂದರು. ಇದರಿಂದ ಪಟ್ಟಣದಲ್ಲಿ ಹಾಹಾಕಾರವೆದ್ದಿತು. ಈ ಸುದ್ದಿಯನ್ನು ಕೇಳಿ, ಚೆನ್ನಬಸವನು ಇಲ್ಲಿರುವುದು ತಕ್ಕದ್ದಲ್ಲೆಂದೆಣಿಸಿ, ಶಿವಶರಣರೊಡನೆ ಉಳವಿಗೆ ಹೊರಟನು. ಅಳಿಯ ಬಿಜ್ಜಳನು ಮಹಾಸೇನೆಯೊಂದಿಗೆ ಬಂದು, ಅವರ ಮೇಲೆ ಬಿದ್ದು ಅಪಜಯಪಟ್ಟು ಹಿಂದಿರುಗಿದನು. ಬಳಿಕ ಚೆನ್ನಬಸವನು ತನ್ನ ಸಂಗಡಿಗರೊಡನೆ ಉಳವಿಯ ಮಹಾಮನೆಗೆ ಹೋಗಿ ಅಲ್ಲಿಯೇ ಬಯಲಾದನು.

ಜೈನರ ಕಥೆಯು ಇದರಿಂದ ಬಿನ್ನವಾಗಿದೆ. ಅವರು ಬಿಜ್ಜಳನನ್ನು ಕೊಂದ ದೋಷವನ್ನು ಬಸವನ ಮೇಲೆ ಹೊರಿಸುತ್ತಾರೆ. ಆದರೆ ಅದು ಏನೇ ಇರಲಿ, ಬಸವ, ಚೆನ್ನಬಸವೇಶರು ಧಾರ್ಮಿಕ ಗುರುಗಳಿದ್ದಂತೆಯೇ ರಾಜಕಾರಣಪಟುಗಳೂ ಇದ್ದರೆಂದು ಮಾತ್ರ ನಿರ್ವಿವಾದವಾಗಿ ಹೇಳಬಹುದು. ಸಮಜಸುಧಾರಣೆಯನ್ನು ಮಾಡಲಿಚ್ಛಿಸುವವರೆಲ್ಲರೂ ಲಿಂಗಾಯತ ಧರ್ಮದವರು ಸ್ವೀಕರಿಸಿದ ಪದ್ಧತಿಯನ್ನು ಸೂಕ್ಷ್ಮವಾಗಿಯೂ, ಕೂಲಂಕಷವಾಗಿಯೂ ಅಭ್ಯಾಸ ಮಾಡುವಂತಿದೆ. ಧರ್ಮಕ್ಕೂ ರಾಜಕಾರಣಕ್ಕೂ ಹಾಕಿರುವ ಈ ತಳಕು ನಮ್ಮ ಕರ್ನಾಟಕ ಇತಿಹಾಸದಲ್ಲಿ ಪದೇ ಪದೇ ಕಾಣಬರುತ್ತದೆ.

ಬಿಜ್ಜಳನ ಮರಣದ ನಂತರ ಈ ಕಲಚೂರ್ಯ ವಂಶವು ಬಹಳ ದಿವಸ ಬಾಳಲಿಲ್ಲ.

devagiri_yadava vamshavali

devagiri_yadava Map

ಚಾಲುಕ್ಯರ ಅಳಿಗಾಲಕ್ಕೆ ಆರಂಭವಾದಾಗ, ಹೊಯ್ಸಳ ಯಾದವರ ಅರಸನಾದ ವಿಷ್ಣುವರ್ಧನನು ಕೃಷ್ಣಾನದಿಯ ಹತ್ತಿರವಿರುವ ಚಾಲುಕ್ಯರ ಸೀಮೆಯನ್ನು ಕಿತ್ತುಕೊಳ್ಳಲಿಕ್ಕೆ ಪ್ರಯತ್ನಿಸಿದ್ದನು. ಆದರೆ ಆಗಿನ ಚಾಲುಕ್ಯರ ಅರಸನು ಪ್ರಬಲನಾಗಿದ್ದುದರಿಂದ ವಿಷ್ಣುವರ್ಧನನ ಆಟವು ಸಾಗಲಿಲ್ಲ. ಮುಂದೆ ಚಾಲುಕ್ಯವಂಶವು ಅಡಗಿ, ಕಲಚೂರಿ ವಂಶವು ಕೂಡ ನಷ್ಟವಾಗಿ ರಾಜ್ಯದಲ್ಲಿ ಗೊಂದಲವೆದ್ದಾಗ, ವಿಷ್ಣುವರ್ಧನನ ಮೊಮ್ಮಗನಾದ ವೀರಬಲ್ಲಾಳನು ಬೊಮ್ಮನೊಡನೆ ಕಾಳಗಮಾಡಿ, ಕೆಲವು ಸೀಮೆಯನ್ನು ತೆಗೆದುಕೊಂಡನು. ಇದೇ ಸಂಧಿಯನ್ನು ಸಾಧಿಸಿ, ಉತ್ತರದಲ್ಲಿಯೂ ಯಾದವರು ಸುತ್ತು ಮುತ್ತಲೂ ತಮ್ಮ ಕಾಲು ಚಾಚಿದರು. ಭಿಲ್ಲಮನು ರಾಜ್ಯ ವಿಸ್ತಾರವನ್ನು ಮಾಡಿ ಕಲ್ಯಾಣದ ಅರಸೊತ್ತಿಗೆಯನ್ನು ಎತ್ತಿಹಾಕಿದನು. ಅವನು ಕೃಷ್ಣೆಯ ಉತ್ತರಕ್ಕಿರುವ ಸೀಮೆಗೆಲ್ಲ ಅರಸನಾಗಿ, ೧೧೮೭ನೆಯ ಇಸವಿಯಲ್ಲಿ ದೇವಗಿರಿ ಪಟ್ಟಣವನ್ನು ಸ್ಥಾಪಿಸಿ ಅಲ್ಲಿ ಆಳತೊಡಗಿದನು. ಇತ್ತ ಹೊಯ್ಸಳ ಅರಸನಾದ ವೀರಬಲ್ಲಾಳನು ಉತ್ತರಕ್ಕೆ ಕೈಚಾಚುತ್ತಿದ್ದನು. ಈ ಮೇರೆಗೆ ಹೊಯ್ಸಳ ಯಾದವರಿಗೂ ದೇವಗಿರಿ ಯಾದವರಿಗೂ ಕೃಷ್ಣೆಯ ಹತ್ತಿರವಿರುವ ಸೀಮೆಯ ಒಡೆತನಕ್ಕಾಗಿ ಮೇಲಿಂದ ಮೇಲೆ ಕಾಳಗಗಳೆದ್ದವು. ಕೊನೆಗೆ ಲಕ್ಕುಂಡಿಯಲ್ಲಾದ ದೊಡ್ಡ ಕಾಳಗದಲ್ಲಿ ಹೊಯ್ಸಳ ಅರಸನಾದ ವೀರಬಲ್ಲಾಳನು ಭಿಲ್ಲಮನ ಮಗನಾದ ಜೈತ್ರಸಿಂಹನನ್ನು ಸಂಪೂರ್ಣವಾಗಿ ಸೋಲಿಸಿ, ಕುಂತಳ ದೇಶಕ್ಕೆ ಅಧಿಪತಿಯಾದನು. ಭಿಲ್ಲಮನ ತರುವಾಯ ೧೧೧೩ನೆಯ ಶಕದಲ್ಲಿ ಅವನ ಮಗನಾದ ಜೈತೃಪಾಲನು ಅಥವಾ ಜೈತುಗಿಯು ಪಟ್ಟವೇರಿದನು. ಪ್ರಸಿದ್ಧ ಜೋತಿಷ್ಕನಾದ ಭಾಸ್ಕರಾಚಾರ್ಯನ ಮಗನಾದ ಲಕ್ಷ್ಮೀಧರನು ಈ ಜೈತೃಪಾಲನ ಆಸ್ಥಾನದಲ್ಲಿ ಪಂಡಿತನಾಗಿದ್ದನು.

ಅನಂತರ ಅವನ ಮಗನಾದ ಸಿಂಘಣನು ಅರಸನಾದನು. ದೇವಗಿರಿ ಯಾದವರೊಳಗೆ ಇವನೇ ಶ್ರೇಷ್ಠನು. ಈತನು ಮಾಳವ ಮುಂತಾದ ಅರಸರನ್ನು ಗೆದ್ದನು. ಮಧುರೆಯ ಮತ್ತು ಕಾಶಿಯ ಅರಸರು ಇವನಿಂದ ಕೊಲ್ಲಲ್ಪಟ್ಟರು. ಈತನು ಹೊಯ್ಸಳರನ್ನು ಗೆದ್ದು ಉತ್ತರ ಸೀಮೆಯನ್ನು ಸೆಳೆದುಕೊಂಡನು. ಸಿಂಘಣನು ಗುಜರಾಥದ ಮೇಲೂ ಅನೇಕಾವರ್ತಿ ದಾಳಿಗಳನ್ನು ಮಾಡಿದನು. ಈ ಸಿಂಘಣನ ಮಗನಾದ ರಾಮನು, ಗುಜರಾಥದಲ್ಲಿ ಆಳುತ್ತಿರುವಾಗ ಒಂದು ಕಾಳಗದಲ್ಲಿ ಮಡಿದನು. ಆಗ ಅವನ ಮಗ ಚಿಕ್ಕವನಾಗಿದ್ದುದರಿಂದ ಅವನ ತಂಗಿಯಾದ ಲಕ್ಷ್ಮಿಯು, ಆ ದೇಶವನ್ನು ಕೆಲವು ಕಾಲಪರ್ಯಂತ ಆಳಿದಳು. ಸಿಂಘಣನು `"ಚಿಕ್ಕ"ನೆಂಬವನ ಮಗನಾದ ಬಿಜ್ಜಣನನ್ನು ದಕ್ಷಿಣ ದೇಶಕ್ಕೆ ಅಧಿಕಾರಿಯನ್ನಾಗಿ ನೇಮಿಸಿದ್ದನು. ಈ ಬಿಜ್ಜಣನು ರಟ್ಟರನ್ನೂ, ಕದಂಬರನ್ನೂ, ಗುತ್ತರನ್ನೂ, ಪಾಂಡ್ಯರನ್ನೂ ಗೆದ್ದು, ಹೊಯ್ಸಳರಾಜ್ಯವನ್ನು ತೆಗೆದುಕೊಂಡು ಕಾವೇರಿ ನದಿಯ ದಡದಲ್ಲಿ ತನ್ನ ವಿಜಯ ಸ್ತಂಭವನ್ನೂರಿದನು. ಆದುದರಿಂದ ಈ ಸಿಂಘಣನ ಕಾಲದಲ್ಲಿ ಕೆಲಕಾಲವು ರಾಜ್ಯದ ವಿಸ್ತಾರವು ಅತಿಶಯವಾಗಿ ಇದ್ದಂತೆ ತೋರುತ್ತದೆ. ಸಿಂಘಣನಿಗೆ ಪೃಥ್ವೀವಲ್ಲಭನೆಂದು ಬಿರುದು ಇತ್ತು. ದೇವಗಿರಿ ಯಾದವರು ತಾವು ವಿಷ್ಣುವಂಶೋದ್ಭವರೆಂದೂ, ದ್ವಾರಾವತೀಪುರವರಾಧೀಶ್ವರರೆಂದೂ ಹೇಳಿಕೊಳ್ಳುವರು. ಭಾಸ್ಕರಾಚಾರ್ಯರ ಮೊಮ್ಮಗನಾದ ಚಂಗದೇವನು ಸಿಂಘಣನ ಆಸ್ಥಾನದಲ್ಲಿ ಜ್ಯೋತಿಷ್ಕನಾಗಿದ್ದನು.

ಆನಂತರಲ್ಲಿ ಮಹಾದೇವನೇ ಹೆಸರಾದ ಅರಸನು. ಈತನು ತೆಲಂಗ, ಗುರ್ಜರ, ಕರ್ನಾಟಕ, ಕೊಂಕಣ ಮುಂತಾದ ಅರಸರನ್ನು ಗೆದ್ದನು. ಕರ್ನಾಟಕವೆಂದರೆ ಹೊಯ್ಸಳ ಅರಸರು.

ಈ ವಂಶದ ಕೊನೆಯ ಅರಸನು ರಾಮಚಂದ್ರನು (೧೨೬೧-೧೩೦೯). ರಾಮಚಂದ್ರನ ರಾಜ್ಯವು ಮೈಸೂರಿನವರೆಗೆ ಹಬ್ಬಿತ್ತು. ಪ್ರಸಿದ್ಧ ಧರ್ಮಶಾಸ್ತ್ರಕಾರನಾದ ಹೇಮಾದ್ರಿಯು, ಮಹಾದೇವ ಮತ್ತು ರಾಮಚಂದ್ರ ಇವರ ಆಳಿಕೆಯಲ್ಲಿ ಮಂತ್ರಿಯಾಗಿದ್ದನು. ೧೨೯೬ನೆಯ ಇಸವಿಯಲ್ಲಿ ಅಲ್ಲಾವುದ್ದೀನ ಖಿಲಜಿಯು ರಾಮಚಂದ್ರನನ್ನು ಸೋಲಿಸಿದನು. ಆನಂತರ ಮಲಿಕಾಫರನು ರಾಮಚಂದ್ರನನ್ನು ಕೊಂದು ದೇವಗಿರಿಯನ್ನು ವಶಮಾಡಿಕೊಂಡನು.

ಹೊಯ್ಸಳ ಯಾದವರು

(೧೦೦೬-೧೩೪೬)

ಚೋಳರು ಗಂಗರಾಜ್ಯವನ್ನು ೧೦೦೪ರಲ್ಲಿ ಮುರಿದ ನಂತರ ಮೈಸೂರಿನ ಪಶ್ಚಿಮದಲ್ಲಿ ಹೊಯ್ಸಳರು ತಲೆಯೆತ್ತಿದರು. ಮುಂದೆ ಅವರು ೧೦೦೬ರಲ್ಲಿ ಚೋಳರನ್ನು ಚದುರಿಸಿ ತಾವೇ ರಾಜರಾಗಿ ೧೪ನೆಯ ಶತಮಾನದವರೆಗೆ ಆಳಿದರು. ಈ ವಂಶದ ಮೂಲಪುರುಷನು ಸಳನೆಂಬವನು. ಈತನು ಸುದತ್ತನೆಂದೊಬ್ಬ ಬ್ರಾಹ್ಮಣ ಯತಿಯಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದಾಗ, ಒಮ್ಮೆ ವಾಸಂತಿಕಾದೇವಿಯ ಗುಡಿಗೆ ಪೂಜೆಗೆ ಹೋಗಿದ್ದನು, ಆಗ ಅಲ್ಲಿ ಒಂದು ದೊಡ್ಡ ಹುಲಿಯು ಬಂದಿತು. ಕೂಡಲೆ ಆ ಯತಿಯು ತನ್ನ ಕೈಯೊಳಗಿನ ಬೆತ್ತವನ್ನು ಅವನಿಗೆ ಕೊಟ್ಟು ಆ ಹುಲಿಯನ್ನು `"ಹೊಯ್ಯ"ಲಿಕ್ಕೆ ಹೇಳಿದನು. ಸಳನು ಆ ಮೇರೆಗೆ ಅದನ್ನು ಕೊಂದನು. ಅಂದಿನಿಂದ ಅವನ ವಂಶಕ್ಕೆ ಹೊಯ್ಸಳವೆಂದು ಹೆಸರು ಬಂತು. ಈ ಸಳನು ಹುಲಿ ಹೊಡೆಯುವ ಚಿತ್ರಗಳನ್ನೊಳಗೊಂಡ ಕಟ್ಟಡಗಳೆಲ್ಲವು ಈ ವಂಶದವರವೇ.

hoysala vamshavali

hoysala Map

ಕೆಳಗೆ ತಂಜಾವೂರದಿಂದ ಮೇಲ್ಗಡೆ ಸೊಲ್ಲಾಪುರದವರೆಗೆ ಈ ವಂಶದ ಲೇಖಗಳು ದೊರೆಯುತ್ತವೆ. ಹೊಯ್ಸಳರು ಮೊದಲು ಕಲ್ಯಾಣ ಚಾಲುಕ್ಯರ ಮಾಂಡಲಿಕರಾಗಿದ್ದರು. ಆದರೆ ಮುಂದೆ ವಿಷ್ಣುವರ್ಧನನ ಕಾಲದಲ್ಲಿ ಇವರು ಸ್ವತಂತ್ರರಾಗಿ ಆಳುತ್ತಿದ್ದರು. ಇವರ ರಾಜಧಾನಿಯು ಮೊದಲು ಬೇಲೂರು, ಅನಂತರ ಹಳೇಬೀಡು ಅಥವಾ ದ್ವಾರಸಮುದ್ರ.

ಈ ವಂಶದಲ್ಲಿ ವಿನಯಾದಿತ್ಯ, ವಿಷ್ಣುವರ್ಧನ, ವೀರಬಲ್ಲಾಳ ಇವರೇ ಬಲವಾದ ಅರಸರು.

ಬಿಟ್ಟಿದೇವ ಅಥವಾ ವಿಷ್ಣುವರ್ಧನನು ಈ ವಂಶಕ್ಕೆ ಮೊದಲು ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟವನು. ಇವನು ರಾಮಾನುಜಾಚಾರ್ಯರ ಉಪದೇಶದಿಂದ ಜೈನಮತವನ್ನು ಬಿಟ್ಟು ಶ್ರೀವೈಷ್ಣವ ಮತವನ್ನಂಗೀಕರಿಸಿದ ಸಂಗತಿಯು ಎಲ್ಲರಿಗೂ ತಿಳಿದೇ ಇದೆ. ಈತನು ಮೈಸೂರ ಪ್ರಾಂತದಿಂದ ಚೋಳರನ್ನು ಹೊಡೆದಟ್ಟಿದನು. ಈತನು ಶೂರನಾದ ಅರಸನಾಗಿದ್ದನು. ತಳಕಾಡು, ಉಚ್ಚಂಗಿ, ಬನವಾಸಿ ಮುಂತಾದ ನಾಡುಗಳ ಅರಸರನ್ನು ಗೆದ್ದನು. ತಳಕಾಡು, ದ್ವಾರಸಮುದ್ರ, ಬಂಕಾಪುರ ಮುಂತಾದವುಗಳು ಬೇರೆ ಬೇರೆ ಕಾಲಕ್ಕೆ ಈತನ ರಾಜಧಾನಿಗಳಾಗಿದ್ದುವು.

೨ನೆಯ ಬಲ್ಲಾಳ ಅಥವಾ ವೀರಬಲ್ಲಾಳನೇ ಈತನ ತರುವಾಯದ ಪ್ರಸಿದ್ಧ ರಾಜನು. ಈತನು ೧೧೭೩ನೆಯ ಇಸವಿಯ ಜುಲೈ ೨೨ನೆಯ ದಿವಸ ದ್ವಾರಸಮುದ್ರದಲ್ಲಿ ಪಟ್ಟವೇರಿದನು. ಈತನು ಚಂಗಾಳ, ಉಚ್ಚಂಗಿಯ ಪಾಂಡ್ಯ, ಕಲಚೂರ್ಯ ಮುಂತಾದ ಅರಸರನ್ನು ಸೋಲಿಸಿದನು. ಆದರೆ ಎಲ್ಲಕ್ಕೂ ಮೇಲಾದ ಈತನ ಶೂರತನದ ಕೃತ್ಯವಾವುದೆಂದರೆ, ಸೇವುಣ ಅಂದರೆ ದೇವಗಿರಿ ಯಾದವರ ದೊಡ್ಡ ಸೈನ್ಯವನ್ನು ಸೊರಟೂರಿನಲ್ಲಿ ಸೋಲಿಸಿದ್ದುದು. ಈ ಸೈನ್ಯದಲ್ಲಿ ಎರಡು ಲಕ್ಷ ಕಾಲಾಳುಗಳಿದ್ದರು. ೧೧೯೩ರಲ್ಲಿ ಇವನು ಲಕ್ಕುಂಡಿಯಲ್ಲಿ ವಾಸವಾಗಿದ್ದನು. ಆದರೆ ಮುಂದೆ ರಾಣೆಬೆನ್ನೂರ ತಾಲೂಕಿನಲ್ಲಿರುವ ಹುಲ್ಲೂರ ಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಈತನು ೪೭ ವರ್ಷಗಳವರೆಗೆ ವೈಭವದಿಂದ ಆಳಿ ೧೨೨೦ರಲ್ಲಿ ಮಡಿದನು. ಈತನು ಮಡಿದ ಕೂಡಲೆ ಈತನ ಪರಮ ಭಕ್ತನಾದ ಲಕ್ಷ್ಮಣನೆಂಬವನೂ ಇವನ ಹೆಂಡತಿಯೂ ಒಂದುಸಾವಿರ ಜನ ವೀರರೂ ಈತನ ಮೇಲಿನ ಪ್ರೇಮಾತಿಶಯದ ಮೂಲಕ ಆತ್ಮಹತ್ಯೆಯನ್ನು ಮಾಡಿಕೊಂಡರು!

ಈತನ ತರುವಾಯದಲ್ಲಿ ಪಟ್ಟವೇರಿದ ೨ನೆಯ ನರಸಿಂಹನೂ ಪರಾಕ್ರಮಿಯಾದ ಅರಸನೇ. ಇವನು ಅನೇಕ ರಾಜ್ಯಗಳನ್ನು ಗೆದ್ದು ರಾಮೇಶ್ವರದಲ್ಲಿ ವಿಜಯಸ್ತಂಭವನ್ನೂರಿದನು. ಈತನು ದೇವಗಿರಿ ಯಾದವರನ್ನು ಸೋಲಿಸಿದನು.

ಈ ನರಸಿಂಹನ ಮಗನಾದ ಸೋಮೇಶ್ವರನೂ ಶೂರನೇ; ಆದರೆ ಈ ಸೋಮೇಶ್ವರನ ಮರಣದ ನಂತರ ಈ ರಾಜ್ಯಗಳಲ್ಲಿ ಎರಡು ವಿಭಾಗಗಳಾಗಿ ಕನ್ನಡ ರಾಜ್ಯವು ೩ನೆಯ ನರಸಿಂಹನ ಪಾಲಿಗೆ ಬಂದಿತು. ತಮಿಳು ರಾಜ್ಯವು ರಾಮನಾಥನೆಂಬ ಅವನ ತಮ್ಮನ ಪಾಲಿಗೆ ಹೋಯಿತು. ೩ನೆಯ ನರಸಿಂಹನು ದೇವಗಿರಿ ಯಾದವರನ್ನು ಬೆಳವಡಿಯಲ್ಲಿ ಸೋಲಿಸಿದನು. ಆದರೆ ಮುಂದೆ ೩ನೆಯ ಬಲ್ಲಾಳನ ಕಾಲಕ್ಕೆ ಇವರ ರಾಜ್ಯದಲ್ಲಿ ಮುಸಲ್ಮಾನರ ಪ್ರವೇಶವಾಗಿ ಇವರ ವಂಶವು ನಷ್ಟವಾಯಿತು.

ಕೊಲ್ಲಾಪುರದ ಶಿಲಾಹಾರರು

ಇಲ್ಲಿಯವರೆಗೆ ನಾವು ಸ್ವತಂತ್ರ ರಾಜವಂಶಗಳನ್ನು ಹೇಳಿದೆವು. ಇನ್ನು ಮುಂದೆ ಸಾಗುವ ಮೊದಲು, ರಾಷ್ಟ್ರಕೂಟರ ಕಾಲಕ್ಕೂ ಚಾಲುಕ್ಯರ ಕಾಲಕ್ಕೂ ಪ್ರಾಬಲ್ಯಕ್ಕೆ ಬಂದ ಕೆಲವು ಮಾಂಡಲಿಕ ರಾಜವಂಶಗಳನ್ನು ಕುರಿತು ಹೇಳುವೆವು.

ಒಟ್ಟು ಶಿಲಾಹಾರ ಮನೆತನಗಳು ಮೂರು. ಅವೆಲ್ಲ ರಾಷ್ಟ್ರಕೂಟರ ಕಾಲದಲ್ಲಿ ತಲೆಯಿತ್ತಿದುವು. ಉತ್ತರ ಕೊಂಕಣದಲ್ಲಿ ೧೪೦೦ ಹಳ್ಳಿಗಳಿದ್ದವು. ಪುರಿ ಎಂಬುದು ಈ ಉತ್ತರ ಕೊಂಕಣದ ಶಿಲಾಹಾರ ವಂಶದ ರಾಜಧಾನಿಯು. ರಾಷ್ಟ್ರಕೂಟರ ಅರಸನಾದ ಅಮೋಘವರ್ಷ ಅಥವಾ ನೃಪತುಂಗ (೮೧೫-೮೭೩) ನ ಕಾಲಕ್ಕೆ ಅಲ್ಲಿ ಫುಲ್ಲಶಕ್ತಿ ಎಂಬವನು ಅವನ ಮಾಂಡಲಿಕನಾಗಿ ಆಳುತ್ತಿದ್ದನು. ದಕ್ಷಿಣ ಕೊಂಕಣದ ಶಿಲಾಹಾರದ ರಾಜಧಾನಿಯು ಖಾರೆಪಟ್ಟಣವಾಗಿತ್ತು. ಈ ಶಿಲಾಹಾರರು ಅಷ್ಟು ಪ್ರಸಿದ್ಧರಾಗಿರಲಿಲ್ಲ. ಕೊಲ್ಲಾಪುರದ ಶಿಲಾಹಾರ ವಂಶವೇ ಮೂರನೆಯ ಶಿಲಾಹಾರ ವಂಶ. ಕೊಲ್ಲಾಪುರ, ಮಿರಜ, ಕರ್ಹಾಡ ಪ್ರಾಂತಗಳು ಇವರ ವಶದಲ್ಲಿದ್ದವು. ಇದು ಎಲ್ಲಕ್ಕೂ ಈಚೆಯ ಮನೆತನವು. ರಾಷ್ಟ್ರಕೂಟ ವಂಶವು ಹಾಳಾಗುವ ಕೊನೆಕೊನೆಗೆ ಈ ಮನೆತನವು ಉದಯಕ್ಕೆ ಬಂದಿತು. ಇವರ ವಂಶಾವಳಿಯನ್ನು ಇಲ್ಲಿ ಕೊಟ್ಟಿದೆ.

jattiga vamshavali

ಗಂಡರಾದಿತ್ಯನೆಂಬವನು ಪ್ರಸಿದ್ಧ ರಾಜನು. ಮಿರಜ ಸಂಸ್ಥಾನದಲ್ಲಿಯ ಇರಕೂಡಿಯಲ್ಲಿ "ಗಂಡಸಮುದ್ರ"ವೆಂಬ ಸರೋವರವನ್ನು ಕಟ್ಟಿಸಿದನು.

ಸವದತ್ತಿಯ ರಟ್ಟರು

ರಾಷ್ಟ್ರಕೂಟರ ಕಾಲದಲ್ಲಿಯೂ ಚಾಲುಕ್ಯರ ಕಾಲದಲ್ಲಿಯೂ ರಟ್ಟರು ಮಾಂಡಲಿಕ ರಾಜರಾಗಿದ್ದರು. ಅವರು ಮುಂದೆ ಕೆಲವು ದಿವಸ ಸ್ವತಂತ್ರರಾಗಿ ಆಳಿದರು. ಆನಂತರ ದೇವಗಿರಿಯ ಯಾದವರಿಗೆ ತುತ್ತಾದರು. ಇವರ ರಾಜಧಾನಿಯು ಮೊದಲು ಸುಗಂಧವರ್ತಿ ಅಥವಾ ಸವದತ್ತಿಯಲ್ಲಿ ಇತ್ತು. ಮುಂದೆ ವೇಣುಗ್ರಾಮಕ್ಕೆ ಅಥವಾ ಬೆಳಗಾಂವಿಗೆ ಅದನ್ನು ನೂಕಿದರು. ಇವರ ಶಿಲಾಲೇಖಗಳು ಸೊಗಲ, ನೇಸರಗಿ, ಕೊಣ್ಣೂರು, ರಾಯಭಾಗ ಮುಂತಾದ ಊರುಗಳಲ್ಲಿ ದೊರೆಯುತ್ತವೆ. ಇವರು ಲತ್ತನೂರ ಪುರವರಾಧೀಶ್ವರರೆಂದು ಹೇಳಿಕೊಳ್ಳುತ್ತಾರೆ. ಇವರು ಜೈನರು. ಸುವರ್ಣಗರುಡ ಧ್ವಜವು ಇವರ ಪತಾಕೆಯು. ಇವರು ಸಿಂಧೂರ ಲಾಂಛನರು. ಇವರ ವಂಶಾವಳಿಯನ್ನು ಕೆಳಗೆ ಕಾಣಿಸಿದೆ.

rattiga vamshavali

ಈ ಬಗೆಯಾಗಿ ನಾವು ಈ ಪ್ರಕರಣದಲ್ಲಿ ಕಲಚೂರ್ಯ, ಯಾದವ ಮುಂತಾದ ಅನೇಕ ರಾಜವಂಶಗಳನ್ನು ಹೇಳಿದೆವು. ಕಲ್ಯಾಣ ಚಾಲುಕ್ಯರ ನಂತರ ಕಲಚೂರ್ಯರು ಅವರ ರಾಜ್ಯಕ್ಕೆ ಅರಸರಾಗಿ ಆಳಿದರೂ ಅವರು ಬಹಳ ದಿವಸ ಆಳಲಿಲ್ಲ. ಮುಂದೆ ಆ ರಾಜ್ಯಕ್ಕೆ ಎರಡು ತುಂಡಾಗಿ ಉತ್ತರದ ಅರ್ಧಭಾಗವು ದೇವಗಿರಿ ಯಾದವರ ವಶಕ್ಕೂ ದಕ್ಷಿಣದ ಅರ್ಧಭಾಗವು ಹೊಯ್ಸಳ ಯಾದವರ ವಶಕ್ಕೂ ಹೋಯಿತೆಂದು ಸ್ಥೂಲಮಾನದಿಂದ ಹೇಳಬಹುದು. ಮುಂದೆ ಇವುಗಳಲ್ಲಿ ಉತ್ತರಭಾಗವು ಹಿಂದೂ ಜನರ ಕೈಬಿಟ್ಟುಹೋಯಿತು. ದಕ್ಷಿಣಭಾಗಕ್ಕೆ ವಿಜಯನಗರದ ಅರಸರು ಒಡೆಯರಾದರು. ಇರಲಿ. ಅವರ ಇತಿಹಾಸವನ್ನು ಮುಂದೆ ಕೊಡುವೆವು. ಸದ್ಯಕ್ಕೆ ಹೇಳುವುದೇನೆಂದರೆ, ಇವೆರಡೂ ವಂಶಗಳೂ ಸ್ವತಂತ್ರ ರಾಜವಂಶಗಳು. ಮಿಕ್ಕವುಗಳು ಎಂದರೆ ರಟ್ಟ, ಶಿಲಾಹಾರ, ಕದಂಬ ಮುಂತಾದವುಗಳು ಮಾಂಡಲಿಕ ರಾಜವಂಶಗಳೆಂಬುದನ್ನು ವಾಚಕರು ಮರೆಯಕೂಡದು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕದಂಬರಲ್ಲಿ ಎರಡು ಶಾಖೆಗಳಿದ್ದಂತೆ ಕಂಡುಬರುತ್ತದೆ. ಬನವಾಸಿ ಹಾನಗಲ್ಲ ಕದಂಬರ ಶಾಖೆಯೇ ಮೊದಲನೆಯದು. ಗೋವೆ ಅಥವಾ ಹಲಸಗಿಯ ಕದಂಬರ ಶಾಖೆಯೇ ಎರಡನೆಯದು. ಮೊದಲನೆಯ ಶಾಖೆಯಲ್ಲಿ ಕೀರ್ತಿವರ್ಮ, ಶಾಂತಿವರ್ಮ, ಮಲ್ಲಿಕಾರ್ಜುನ, ಕಾಮದೇವ, ಸೋಮದೇವ ಮುಂತಾದ ಮಾಂಡಲಿಕ ರಾಜರು ಪ್ರಬಲರಾಗಿದ್ದು ಅವರು ಚಾಲುಕ್ಯರಿಗೆ ಅನೇಕ ಮಹತ್ವದ ಪ್ರಸಂಗಗಳಲ್ಲಿ ಸಹಾಯ ಮಾಡಿದ್ದಾರೆ. ಎರಡನೆಯ ಶಾಖೆಯ ರಾಜಧಾನಿಯು ಕೆಲವು ಕಾಲ ಗೋವೆಯಲ್ಲಿಯೂ ಕೆಲವು ಕಲ ಹಲಸಗಿಯಲ್ಲಿಯೂ ಇತ್ತು. ಇವರಲ್ಲಿಯೂ ವಿಜಯಾದಿತ್ಯ, ಜಯಕೇಶಿ ಮುಂತಾದವರು ಚಾಲುಕ್ಯರ ಮಾಂಡಲಿಕರಾಗಿ ಹೆಸರಿಗೆ ಬಂದರು.

ಸಾರಾಂಶ: ಈ ಪ್ರಕರಣದಲ್ಲಿ ಹೇಳಿದ ರಾಜವಂಶಗಳಲ್ಲಿ ಕಲಚೂರ್ಯ, ದೇವಗಿರಿ ಯಾದವ, ಮತ್ತು ಹೊಯ್ಸಳ ಯಾದವ ಈ ವಂಶಗಳು ಸ್ವತಂತ್ರವಾಗಿ ಆಳಿದ ವಂಶಗಳೆಂಬುದನ್ನೂ ಶಿಲಾಹಾರ, ರಟ್ಟ, ಕದಂಬ ಮುಂತಾದವುಗಳು ಮಾಂಡಲಿಕರಾಜರ ಮನೆತನಗಳೆಂಬುದನ್ನೂ ವಾಚಕರು ನೆನಪಿನಲ್ಲಿಡಬೇಕು.


೧೧ನೆಯ ಪ್ರಕರಣ

ವಿಜಯನಗರದ ಅರಸರು

vijayanagara vamshavali

vijayanagara Map


ಕರ್ಣಾಟಲೋಕನಯನೋತ್ಸವಪೂರ್ಣಚಂದ್ರಃ |
ಸಾಕಂ ತಯಾ ಹೃದಯಸಮ್ಮತಯಾ ನರೇಂದ್ರಃ ||
ಕಾಲೋಚಿತಾನ್ಯನುಭವನ್ ಕ್ರಮಶಃ ಸುಖಾನಿ |
ವೀರಶ್ಚಿರಾಯ ವಿಜಯಾಪುರಮಧ್ಯವಾಸೀತ್ ||
-ಗಂಗಾದೇವಿ


ಕರ್ನಾಟಕದ ಕೊನೆಯ ರಾಜಮನೆತನವೇ ವಿಜಯನಗರವು. ಬಾದಾಮಿಯ ಚಾಲುಕ್ಯರನ್ನು ಕರ್ನಾಟಕ-ಸಿಂಹಾಸನ ಸ್ಥಾಪನಾಚಾರ್ಯರೆಂದು ಕರೆಯಬಹುದು. ಏಕೆಂದರೆ ಚಾಲುಕ್ಯರಿಗಿಂತ ಮೊದಲು ಕದಂಬ, ಗಂಗ ಮುಂತಾದ ಬೇರೆ ಬೇರೆ ರಾಜ್ಯಗಳು ಕರ್ನಾಟಕದಲ್ಲಿ ಆಳಿಹೋಗಿದ್ದರೂ, ಇಡೀ ಕರ್ನಾಟಕವು ಒಬ್ಬನೇ ಅರಸನ ಏಕಛತ್ರಾದಿಪತ್ಯಕ್ಕೆ ಬಾದಾಮಿಯ ಚಾಲುಕ್ಯರ ಕಾಲದಲ್ಲಿಯೇ ಒಳಪಟ್ಟಿತ್ತು. ಆಗ ಸ್ಥಾಪಿತವಾದ ಏಕಛತ್ರಾಧಿಪತ್ಯವು ರಾಷ್ಟ್ರಕೂಟರ ಕಾಲಕ್ಕೂ ಪುನಃ ಕಲ್ಯಾಣ ಚಾಲುಕ್ಯರ ಕಾಲಕ್ಕೂ ಅವಿಚ್ಛಿನ್ನವಾಗಿ ನಡೆಯಿತು. ಮುಂದೆ ಅದು ಎರಡು ಹೋಳುಗಳಾಗಿ, ಉತ್ತರದ ಅರ್ಧಭಾಗವು ದೇವಗಿರಿ ಯಾದವರ ವಶವಾಯಿತೆಂದೂ ದಕ್ಷಿಣದ ಅರ್ಧಭಾಗವು ಹೊಯ್ಸಳ ಯಾದವರ ವಶಕ್ಕೆ ಹೋಯಿತೆಂದೂ ಸ್ಥೂಲಮಾನದಿಂದ ಹೇಳಬಹುದು. ಮುಂದೆ ಮುಸಲ್ಮಾನರು ದೇವಗಿರಿ ಯಾದವರನ್ನು ಸೋಲಿಸಿ ಉತ್ತರದ ಅರ್ಧಭಾಗವನ್ನು ನುಂಗಿದರು. ದಕ್ಷಿಣದ ಅರ್ಧಭಾಗವನ್ನು ನುಂಗುವ ಹಂಚಿಕೆಯಲ್ಲಿದ್ದರು. ಮುಸಲ್ಮಾನರ ಮೊದಲನೆಯ ಪ್ರಹಾರವು ದೇವಗಿರಿ ಯಾದವರಿಗೂ ವರಂಗಲ್ಲ ಕಾಕತೇಯ ಅರಸರಿಗೂ ತಗಲಿತು. ಆ ಪೆಟ್ಟು ತಗಲುವವರೆಗೆ ಮಿಕ್ಕ ಅರಸರು ಎಚ್ಚರಗೊಳ್ಳಲಿಲ್ಲ. ಆದರೆ ಆ ಪೆಟ್ಟು ಬಡಿದ ಕೂಡಲೆ ದಕ್ಷಿಣ ಹಿಂದುಸ್ಥಾನದಲ್ಲಿ ಹಾಹಾಕಾರವೆದ್ದಿತು. ಮುಸಲ್ಮಾನರು ಪ್ರಬಲರಾದ ಶತ್ರುಗಳಾದುದರಿಂದ, ಒಬ್ಬೊಬ್ಬರೇ ಅವರೆದುರಿಗೆ ನಿಂತರೆ ನಡೆಯಲಾರದೆಂದು ಬಗೆದು, ಎಲ್ಲರೂ ಒಕ್ಕಟ್ಟಾಗಿ ನಿಲ್ಲುವುದು ಅವಶ್ಯವೆಂಬ ಕಲ್ಪನೆಯು ಉದ್ಭವಿಸಿತು. ಈ ಕಲ್ಪನೆಯ ಮೂಲೋತ್ಪಾದಕರೇ ಶ್ರೀ ವಿದ್ಯಾರಣ್ಯರು. ಚದುರಿ ಹೋದ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಟ್ಟುಗೂಡಿಸಿ ಮುಸಲ್ಮಾನರೆದುರಿಗೆ ಒಕ್ಕಟ್ಟಿನಿಂದ ನಿಲ್ಲುವಂತೆ ಮಾಡಿದುದೇ ಶ್ರೀ ವಿದ್ಯಾರಣ್ಯರು ಮಾಡಿದ ಮಹತ್ವದ ಕೆಲಸ. ಪರದೇಶೀಯ ಶತ್ರುಗಳಿಗೆ ಇದಿರಾಗಬೇಕಾದರೆ ನಾವು ನಮ್ಮ ಒಳಜಗಳಗಳೆಲ್ಲವನ್ನೂ ಮರೆತುಬಿಡಬೇಕೆಂಬ ತತ್ವವನ್ನು ಹಿಂದುಸ್ಥಾನದ ಇತಿಹಾಸದಲ್ಲಿ ಎಲ್ಲಕ್ಕೂ ಮೊದಲಿಗೆ ಶ್ರೀ ವಿದ್ಯಾರಣ್ಯರೇ ಕಲಿಸಿದರು.

ಈ ತತ್ವವನ್ನರಿಯದ ಮೂಲಕವೇ ಉತ್ತರ ಹಿಂದುಸ್ಥಾನವು ಮುಸಲ್ಮಾನರ ಅಂಕಿತವಾಯಿತು. ಮುಂದೆ ಈ ತತ್ವವನ್ನು ಮರೆತ ಮುಸಲ್ಮಾನರು ವಿಜಯನಗರದ ಬಲಾಢ್ಯರಾದ ಅರಸರೊಡನೆ ಸುಮಾರು ಎರಡು ಶತಮಾನಗಳವರೆಗೆ ಎಡೆಬಿಡದೆ ಕಾದಬೇಕಾಯಿತು. ಈ ತತ್ವವನ್ನು ಮುಸಲ್ಮಾನರು ಕಂಡುಹಿಡಿದು, ತಮ್ಮ ತಪ್ಪನ್ನು ತಿದ್ದುಕೊಂಡು ಒಕ್ಕಟ್ಟಿನಿಂದ ಕಾದಿದುದರಿಂದಲೇ ಅವರಿಗೆ ವಿಜಯನಗರವನ್ನು ಪಾತಾಳಕ್ಕೆ ಮೆಟ್ಟುವುದಕ್ಕೆ ಸಾಧ್ಯವಾಯಿತು. ಇರಲಿ! ಸುಮಾರು ಎರಡು ಶತಮಾನಗಳವರೆಗೆ ವಿಜಯ ನಗರದ ಅರಸರು ಮುಸಲ್ಮಾನರ ಪ್ರವಾಹವನ್ನು ಕೃಷ್ಣೆಯ ದಕ್ಷಿಣಕ್ಕೆ ಬರಗೊಡದಂತೆ ಹೇಗೆ ತಡೆದುಹಿಡಿದರೆಂಬುದರ ಇತಿಹಾಸವು ಅತ್ಯಂತ ಮನೋರಂಜಕವಾಗಿದೆ. ಈ ದೃಷ್ಟಿಯಿಂದ ನೋಡಲು, ವಿಜಯನಗರ ರಾಜ್ಯವು ಹಿಂದಿನ ರಾಜ್ಯಗಳಷ್ಟು ವಿಸ್ತಾರವನ್ನು ಹೊಂದಿರದಿದ್ದರೂ ಅದಕ್ಕಿಂತ ಹೆಚ್ಚು ಮಹತ್ವವುಳ್ಳದ್ದಾಗಿದೆ. ಏಕೆಂದರೆ ದಕ್ಷಿಣ ಹಿಂದುಸ್ಥಾನಕ್ಕೆ ಅತ್ಯಂತ ದುರ್ಘಟವಾದ ಸಂಕಟಕಾಲವೊದಗಿದಾಗ ಅದನ್ನು ರಕ್ಷಿಸಿದ್ದೇನೂ ಕಡಿಮೆಯ ಕಾರ್ಯವಲ್ಲ. ವಿಜಯನಗರದ ಅರಸರು ತಮ್ಮ ಪೂರ್ವವೈಭವವನ್ನು ಅಚ್ಚಳಿಯದೆ ಕಾಯ್ದುಕೊಂಡರೆಂಬುದು ಕರ್ನಾಟಕಸ್ಥರಿಗೆ ನಿಜವಾಗಿಯೂ ಅತ್ಯಂತ ಗೌರವಾಸ್ಪದವಾದ ಸಂಗತಿಯಾಗಿದೆ.

ಶ್ರೀವಿದ್ಯಾರಣ್ಯರು ಹುಕ್ಕಬುಕ್ಕರನ್ನು ಪ್ರೋತ್ಸಾಹಿಸಿ, ಈ ಸ್ವರಾಜ್ಯ ಸ್ಥಾಪನೆಯ ಕಾರ್ಯವನ್ನು ಕೊನೆಗಾಣಿಸಿದರು. ಶ್ರೀ ವಿದ್ಯಾರಣ್ಯರು ಆಗ ಶೃಂಗೇರಿಯಲ್ಲಿ ಶಂಕರಾಚಾರ್ಯರ ಸ್ಥಾನಾಪನ್ನರಾಗಿದ್ದರು. ಆದರೆ ದೇಶಕ್ಕೆ ಇಂಥ ವಿಪತ್ತು ಬಂದೊದಗಿದಾಗ ಸುಮ್ಮನೆ ಮೂಗು ಹಿಡಿದುಕೊಂಡು ಕುಳ್ಳಿರುವುದು ಮಾತ್ರವೇ ತಮ್ಮ ಕರ್ತವ್ಯವಲ್ಲವೆಂದೂ ಆ ತಮ್ಮ ಧರ್ಮರಕ್ಷಣಾರ್ಥವಾಗಿಯೇ ಸ್ವರಾಜ್ಯವನ್ನು ಸ್ಥಾಪಿಸುವುದು ತಮ್ಮ ಆದ್ಯಕರ್ತವ್ಯವೆಂದೂ ಆಲೋಚಿಸಿ, ಅವರು ವಿಜಯನಗರದಲ್ಲಿ ರಾಜ್ಯವನ್ನು ಸ್ಥಾಪಿಸಿದರು.

ಸಂಗಮ ವಂಶ (೧೩೩೬-೧೪೭೮): ವಿಜಯನಗರದಲ್ಲಿ ಒಟ್ಟು ಮೂರು ವಂಶಗಳು ರಾಜ್ಯವಾಳಿದವು. ಮೊದಲನೆಯ ವಂಶವು ಸಂಗಮ ವಂಶವು. ಇದರಲ್ಲಿ ಒಂಬತ್ತು ಜನ ಅರಸರು ಆಗಿಹೋದರು. ಇವರು ಯಾದವರು. ಇವರ ಕುಲದೇವತೆ ವಿರೂಪಾಕ್ಷನು. ಬುಕ್ಕರಾಯನೇ ಈ ವಂಶದಲ್ಲಿ ಪ್ರಬಲನಾದ ಮೊದಲನೆಯ ರಾಜನು (೧೩೫೪-೧೩೭೭). ವಿಜಯನಗರದಲ್ಲಿಯ ಕೋಟೆ ಕೊತ್ತಳಗಳನ್ನು ಕಟ್ಟಿಸಿದವನು ಇವನೇ. ಇವನಿಗೆ "ಭಾಷೆಗೆ ತಪ್ಪುವ ರಾಯರ ಗಂಡ","ಪೂರ್ವ-ಪಶ್ಚಿಮ-ದಕ್ಷಿಣ ಸಮುದ್ರಾಧೀಶ್ವರ" ಎಂಬ ಬಿರುದುಗಳಿದ್ದವು. ೧೩೬೮ನೆಯ ಇಸವಿಯಲ್ಲಿ ಈತನು ಜೈನರಿಗೂ ಶ್ರೀ ವೈಷ್ಣವರಿಗೂ ಉಂಟಾದ ಜಗಳವನ್ನು ತೀರಿಸಿದ ಕಥೆಯು ಮನೋವೇಧಕವಾಗಿದೆ. (೧೪ನೆಯ ಪ್ರಕರಣ ನೋಡಿರಿ.) ಅದರಿಂದ ಈ ಅರಸನು ಧರ್ಮ ವಿಷಯದಲ್ಲಿ ಎಷ್ಟು ಸಮಬುದ್ಧಿಯುಳ್ಳವನಿದ್ದನೆಂಬುದು ಗೊತ್ತಾಗುತ್ತದೆ. ಈ ಬುಕ್ಕರಾಯನ ಸೊಸೆಯಾದ ಗಂಗಾದೇವಿಯೆಂಬವಳು "ವೀರಕಂಪಣರಾಯ ಚರಿತ"ವೆಂಬ ಅತ್ಯಂತ ಸರಸವಾದ ಸಂಸ್ಕೃತ ಕಾವ್ಯವೊಂದನ್ನು ರಚಿಸಿದ್ದಾಳೆ. ಅದು ಮುದ್ರಿತವಾಗಿದೆ. ಬುಕ್ಕರಾಯಪಟ್ಟಣ ಮುಂತಾದ ಇವನ ಹೆಸರಿನ ಊರುಗಳು ಈಗಲೂ ಪ್ರಸಿದ್ಧವಿರುತ್ತವೆ. ಇವನ ಮಗನಾದ ಹರಿಹರನು ವಿದ್ವಾಂಸರಿಗೆ ಬಹಳ ಆಶ್ರಯ ಕೊಡುತ್ತಿದ್ದನು. ಈ ೩ನೆಯ ಹರಿಹರರಾಯನನ್ನು ಕರ್ನಾಟಕ ವಿದ್ಯಾ ವಿಲಾಸನೆಂದು ಕರೆಯುತ್ತಿದ್ದರು. ಈ ಹರಿಹರನ ಕಾಲದಲ್ಲಿ ಗುಂಡನೆಂಬ ಸೇನಾನಾಯಕನು ಅನೇಕ ಶೂರಕೃತ್ಯಗಳನ್ನು ಮಾಡಿದನು. ಹರಿಹರನು ೩೦-೮-೧೪೦೪ನೆಯ ಇಸವಿಯಲ್ಲಿ ಮರಣ ಹೊಂದಿದನು.

ಎರಡನೆಯ ದೇವರಾಯನಿಗೆ ಪ್ರೌಢದೇವರಾಯನೆಂದೂ ಹೆಸರುಂಟು. ಈತನು ಧೂರ್ತವಿಚಾರಮಾಡಿ ತನ್ನ ಸೈನ್ಯದಲ್ಲಿ ಮುಸಲ್ಮಾನರನ್ನಿಟ್ಟುಕೊಂಡು ತನ್ನ ಸೈನಿಕರಿಗೆ ಯುದ್ಧಕಲೆಯನ್ನು ಕಲಿಸಿದನು. ಈತನು ೨೪-೫-೧೪೪೬ರಲ್ಲಿ ಸತ್ತನು. ಇವನ ತರುವಾಯ ಸಂಗಮವಂಶವು ಕುಗ್ಗಿತು. ಮುಂದೆ ವಿಜಯನಗರದ ೨ನೆಯ ವಂಶವು ಎದ್ದಿತು.

ಸಾಳ್ವಮನೆತನ (೧೪೭೯-೧೪೯೬): ಸಂಗಮ ಮನೆತನದ ಕೊನೆಯ ಅರಸನಾದ ವಿರೂಪಾಕ್ಷನ ಮುಖ್ಯ ಸರದಾರನಾದ ಸಾಳ್ವ ನರಸಿಂಹನು ವಿಜಯನಗರದ ಪಟ್ಟವನ್ನು ಸೆಳೆದುಕೊಂಡು ಅರಸನಾದನು. ಮುಸಲ್ಮಾನರಿಗೂ, ವಿಜಯನಗರದ ಅರಸರಿಗೂ ಕೃಷ್ಣಾ-ತುಂಗಭದ್ರಾ ನದಿಗಳ ನಡುವಿನ ಸೀಮೆಗಾಗಿ ಆಗಾಗ ಯುದ್ಧಗಳಾಗುತ್ತಿದ್ದವು. ಈ ಯುದ್ಧಗಳಲ್ಲಿ ಸಾಳ್ವನರಸಿಂಹನು ಪರಾಕ್ರಮವನ್ನು ತೋರಿಸಿ ಅತ್ಯಂತ ಪ್ರಬಲನಾಗಿದ್ದನು. ಆದುದರಿಂದಲೇ ಇವನಿಗೆ ಸಿಂಹಾಸನವನ್ನು ಎತ್ತಿಹಾಕುವುದಕ್ಕೆ ಸಾಧ್ಯವಾಯಿತು. ಆದರೆ ಈತನ ವಂಶಜರು ಬಹಳ ದಿವಸ ಆಳಲಿಲ್ಲ. ಈತನ ಮಗನಾದ ಇಮ್ಮಡಿ ನರಸಿಂಹನನ್ನು ನರಸ ಅಥವಾ ನರಸಿಂಗನೆಂಬ ಅವನ ಸೇನಾಧಿಪತಿಯು ೧೪೯೬ನೆಯ ಇಸವಿಯಲ್ಲಿ ಕೊಂದು ಹಾಕಿದಂತೆ ತೋರುತ್ತದೆ.

ನರಸ ಮನೆತನ (೧೪೯೬-೧೫೬೭): ಈ ನರಸನು ತುಳುವನು; ಬಲು ಶೂರನು. ಈತನು ಚೇರ-ಚೋಳ-ಪಾಂಡ್ಯ ದೇಶಗಳನ್ನು ಗೆದ್ದನು. ಈತನ ತರುವಾಯ ಈತನ ಮೂರು ಮಂದಿ ಮಕ್ಕಳು ಒಬ್ಬರ ಹಿಂದೊಬ್ಬರು ಪಟ್ಟವೇರಿದರು. ಆದರೆ ಅವರಲ್ಲಿ ೨ನೆಯವನಾದ ಕೃಷ್ಣದೇವರಾಯನೇ ಅತ್ಯಂತ ಪ್ರತಾಪಶಾಲಿಯು. ಈತನು ಪಟ್ಟವೇರಿದ ಕೂಡಲೆ ಮುಸಲ್ಮಾನರೊಡನೆ ಕಾಳಗಕ್ಕೆ ನಿಂತನು. ಈತನ ಆಳಿಕೆಯಲ್ಲಿ ಮುಸಲ್ಮಾನರು ಇವನೊಡನೆ ಅನೇಕ ಕಾಳಗಗಳನ್ನು ಮಾಡಿದರೂ, ಅವರಿಗೆ ಒಂದರಲ್ಲಿಯೂ ಜಯವು ಸಿಕ್ಕಲಿಲ್ಲ. ಕೃಷ್ಣರಾಯನು ಮಹಾಪರಾಕ್ರಮಿಯಾಗಿದ್ದುದಲ್ಲದೆ, ವಿದ್ಯೆ-ಕಲಾಕೌಶಲ್ಯ-ಔದಾರ್ಯಗಳಲ್ಲಿಯೂ ಬಹಳ ವಿಖ್ಯಾತನಾಗಿದ್ದನು. ಈತನು ಸ್ವತಃ ತೆಲುಗು ಭಾಷೆಯಲ್ಲಿ ಗ್ರಂಥವನ್ನು ಬರೆದಿರುವನು, ಇವನಿಗೆ ಆಂಧ್ರಭೋಜನೆಂದು ಕರೆಯುತ್ತಿದ್ದರು. ಇವನು ತೆಲುಗು ಮನುಷ್ಯನೆಂದು ಕೆಲವರ ಕಲ್ಪನೆ. ಆದರೆ ಇದು ತಪ್ಪೆಂದು ತೋರುತ್ತದೆ. ಇವನು ತೆಲುಗು ಭಾಷೆಯಲ್ಲಿ "ಅಮುಕ್ತಮಾಲ್ಯದ" ಅಥವಾ "ವಿಷ್ಣುಚಿತ್ತೀಯ" ಎಂಬ ಗ್ರಂಥವನ್ನು ರಚಿಸಿರುವನೆಂಬುದರಿಂದ ಇವನು ತೆಲುಗು ಮನುಷ್ಯನೆಂದು ಜನರು ಊಹಿಸಿರುವಂತೆ ತೋರುತ್ತದೆ. ಆದರೆ ಆ ಪುಸ್ತಕವು ಏಕೆ ಬರೆಯಲ್ಪಟ್ಟಿತೆಂಬುದಕ್ಕೆ ಅದರ ಪ್ರಾರಂಭದಲ್ಲಿ ಕೊಟ್ಟ ಕಥೆಯನ್ನು ಓದಿದರೆ ಅವನು ನಿಜವಾಗಿಯೇ ಕನ್ನಡ ಮನುಷ್ಯನೆಂದು ಹೇಳಲಿಕ್ಕೆ ಆಸ್ಪದವಿದೆ. ಅದು ಹೀಗೆ ಇದೆ:

ಕೃಷ್ಣರಾಯನು ಶ್ರೀಕುಲವೆಂಬ ಆಂಧ್ರಗ್ರಾಮಕ್ಕೆ ಹೋದಾಗ ಅಲ್ಲಿಯ ವಿಷ್ಣು ದೇವರು ಏಕಾದಶಿಯ ದಿವಸ ಆ ರಾಜನ ಕನಸಿನಲ್ಲಿ ಬಂದು ಆತನಿಗೆ ತೆಲುಗು ಭಾಷೆಯಲ್ಲಿ ಒಂದು ಕಾವ್ಯವನ್ನು ಬರೆದು ಅದನ್ನು ತಿರುಪತಿಯ ಶ್ರೀ ವೆಂಕಟರಮಣ ದೇವರಿಗೆ ಸಮರ್ಪಿಸಲಿಕ್ಕೆ ಹೇಳಿದನಂತೆ! ಆಗ ತೆಲುಗು ಭಾಷೆಯಲ್ಲಿಯೇ `"ಕನ್ನಡರಾಯ"ನು ಏಕೆ ಗ್ರಂಥವನ್ನು ಬರೆಯಬೇಕೆಂಬುದಕ್ಕೆ ಆ ದೇವರು ಕೆಲವು ಕಾರಣಗಳನ್ನು ಹೇಳಿದನು. ಅವು ಯಾವುವೆಂದರೆ:
(೧) ಇದು ತೆಲುಗು ದೇಶ, (೨) ನಾನು ತೆಲುಗು ದೇವರು, (೩) ತೆಲುಗು ಭಾಷೆ ಸಾಮಾನ್ಯ ಭಾಷೆಯಲ್ಲ, (೪) ಅನೇಕ ದೇಶ ಭಾಷೆಗಳನ್ನು ಬಲ್ಲವನಾದ ನಿನಗೆ ತೆಲುಗು ಭಾಷೆಯೂ ಲೇಸಾದ ಭಾಷೆಯೆಂಬುದು ಗೊತ್ತುಂಟು.
ಆದರೆ ಇಷ್ಟರಿಂದ ಆತನ ಮಾತೃಭಾಷೆಯು ತೆಲುಗು ಆಗಿತ್ತೆಂದು ಊಹಿಸಲಾಗದು. ತದ್ವಿರುದ್ಧವಾಗಿ (೧) ತೆಲುಗು ದೇವರು ಆತನಿಗೆ `"ಕನ್ನಡರಾಯ"ನೆಂದು ಕರೆದಿರುವನು. (೨) ಕೃಷ್ಣರಾಯನು ತೆಲುಗು ಭಾಷೆಯವನೇ ಆಗಿದ್ದರೆ ಆತನಿಗೆ ತೆಲುಗು ಭಾಷೆಯಲ್ಲಿಯೇ ಗ್ರಂಥದನ್ನು ಬರೆಯಬೇಕೆಂದು ಬೇರೆ ಹೇಳುವ ಪ್ರಯೋಜನವಿರಲಿಲ್ಲ. (೩) ವಿಜಯನಗರದ ರಾಜ್ಯವು ಬಹುತರವಾಗಿ ಕನ್ನಡ ರಾಜ್ಯ. (೪) ರಾಜಧಾನಿಯಾದ ವಿಜಯನಗರ ಪಟ್ಟಣದ ಮುಖ್ಯ ಭಾಷೆ ಕನ್ನಡ. (೫) ಕೃಷ್ಣರಾಯನಿಗೆ ಕನ್ನಡರಾಜ್ಯರಮಾರಮಣ ಎಂದು ಬಿರುದಿತ್ತು. ಇವೇ ಮುಂತಾದ ಕಾರಣಗಳ ಮೂಲಕ ರಾಯನ ಮಾತೃಭಾಷೆಯು ಕನ್ನಡವೇ ಆಗಿತ್ತೆಂದು ಊಹಿಸಲಿಕ್ಕೆ ಬಲವಾದ ಆಸ್ಪದವುಂಟಾಗಿದೆ. ಇರಲಿ.

ಶ್ರೀವಿದ್ಯಾರಣ್ಯರಂತೆಯೇ ಧರ್ಮ ಮತ್ತು ರಾಜಕಾರಣಗಳೆಂಬ ಉಭಯ ವಿಷಯಗಳಲ್ಲಿಯೂ ಅತ್ಯಂತ ನಿಷ್ಣಾತರಾದ ಶ್ರೀ ವ್ಯಾಸರಾಯ ಸ್ವಾಮಿಗಳು ಈ ನರಸ ಮನೆತನದ ಕುಲಗುರುಗಳು. ಶ್ರೀ ವ್ಯಾಸರಾಯರು ಬಾಲ್ಯದಲ್ಲಿಯೇ ಸನ್ಯಾಸ ಸ್ವೀಕರಿಸಿದರು. ತಮ್ಮ ಗುರುಗಳಾದ ಶ್ರೀಪಾದರಾಯರ ಅಪ್ಪಣೆಯ ಮೇರೆಗೆ ಅವರು ಲೋಕೋಪಕಾರ್ಯಕ್ಕೋಸ್ಕರ ರಾಜಸಭೆಯನ್ನಲಂಕರಿಸಿದರು. ವಿಜಯನಗರದಲ್ಲಿ ಅವರ ವರ್ಚಸ್ಸು ವಿಶೇಷವಾಗಿತ್ತು. ಕೃಷ್ಣದೇವರಾಯನು ಅವರನ್ನು ಬಂಗಾರದ ಪೀಠದಲ್ಲಿ ಕುಳ್ಳಿರಿಸಿ ಅವರಿಗೆ ಮುತ್ತು ಮಾಣಿಕ್ಯಗಳಿಂದ ಅಭಿಷೇಕ ಮಾಡಿದನು. ಅವನು ಅವರಿಗೆ ತನ್ನ ಕುಲದೇವತೆಯೆಂದು ಕರೆಯುತ್ತಿದ್ದನು. ಬಂಗಾಲ, ಆಸಾಮುಗಳ ತುಂಬ ಹಬ್ಬಿರುವ ಚೈತನ್ಯಪಂಥಕ್ಕೆ ಈ ವ್ಯಾಸಯೋಗಿಗಳೇ ಕಾರಣರು. ಅವರು ೧೪೪೬ನೆಯ ಇಸ್ವಿಯಲ್ಲಿ ಹುಟ್ಟಿ ೧೫೩೯ರಲ್ಲಿ ಮಡಿದರು. ಅಂದರೆ ೯೩ವರ್ಷ ಬಾಳಿದರು. ಇವರ ಸಹಾಯದಿಂದಲೇ ನರಸನು ವಿಜಯನಗರದಲ್ಲಿ ಸಿಂಹಾಸನವನ್ನು ಸ್ಥಾಪಿಸಿದನು. ಇವರು ಒಂದು ಕಠಿಣ ಪ್ರಸಂಗದಲ್ಲಿ ಸಿಂಹಾಸನವನ್ನೇರಿ ಪ್ರತ್ಯಕ್ಷ ಆಳಿದರೆಂದೂ ನಂಬಿಗೆಯುಂಟು. ಅದಕ್ಕನುಸಾರವಾಗಿ ಶ್ರೀ ವ್ಯಾಸರಾಯರ ಮಠದಲ್ಲಿ ಪ್ರತಿನಿತ್ಯ ರಾಜಸಭೆಯು ನೆರೆಯಿಸಲ್ಪಟ್ಟು, ಈ ಪೀಠದ ಸ್ವಾಮಿಗಳಿಗೆ ಕರ್ನಾಟಕ ಸಿಂಹಾಸನಗತಪ್ರಭೋ ಎಂದು "ಪರಾಕು" ಹೇಳಲ್ಪಡುತ್ತದೆ. ಇರಲಿ.

ಕೃಷ್ಣದೇವರಾಯನ ಕಾಲಕ್ಕೆ ವಿಜಯನಗರದ ಸಾಮ್ರಾಜ್ಯವು ಪರಮಾವಧಿಯ ಘನತೆಗೇರಿತ್ತು. ಆದರೆ ನಮ್ಮ ಮಿಕ್ಕ ರಾಜ್ಯಗಳಂತೆ ಇದಕ್ಕೂ ಮುಂದೆ ಬಲಾಢ್ಯರಾದ ರಾಜರು ದೊರೆಯದುದರಿಂದ, ಇದು ಒಮ್ಮೆಲೆ ನೆಲಕ್ಕೆ ಕುಕ್ಕರಿಸಿತು. ಇರಲಿ. ಈ ಕೃಷ್ಣರಾಯನು ಅತ್ಯಂತ ಉದಾತ್ತಗುಣಗಳುಳ್ಳವನಾದುದರಿಂದ ತನ್ನ ದೇಶದಲ್ಲಿಯ ಮುಸಲ್ಮಾನ ಪ್ರಜೆಗಳನ್ನು ಎಷ್ಟು ಸಮಭಾವನೆಯಿಂದ ನೋಡುತ್ತಿದ್ದನೆಂದರೆ, ಮುಸಲ್ಮಾನರ ಸಲುವಾಗಿ ಒಂದು ಕುರಾನವನ್ನಿಟ್ಟು ಅದಕ್ಕೇನೇ ಸಲಾಂ ಮಾಡಲಿಕ್ಕೆ ಹೇಳುತ್ತಿದ್ದನು. ಈತನು ದರಬಾರಿನಲ್ಲಿ ಅಷ್ಟದಿಗ್ಗಜಗಳೆಂಬ ಎಂಟು ಮಂದಿ ಮಹಾಪಂಡಿತರಿದ್ದರು. ತೆನ್ನಾಲಿ ರಾಮಕೃಷ್ಣನೂ ಅಪ್ಪಯ್ಯ ದೀಕ್ಷಿತರೂ ಅವರೊಳಗಿನವರೇ. ಈತನ ಕಾಲಕ್ಕೆ ಪರದೇಶೀಯ ಪ್ರವಾಸಿಕರು ವಿಜಯನಗರದ ವೈಭವವನ್ನು ಬಲು ಸುಂದರವಾಗಿ ವರ್ಣಿಸಿದ್ದಾರೆ. (ಮುಂದೆ ೧೨ನೆಯ ಪ್ರಕರಣವನ್ನು ನೋಡಿರಿ.)

ಅಚ್ಯುತರಾಯನೆಂಬ ಮುಂದಿನ ಅರಸನು ೧೫೩೯ನೆಯ ಇಸವಿಯಲ್ಲಿ "ಆನಂದನಿಧಿ"ಎಂಬ ದೊಡ್ಡ ದಾನವನ್ನು ಮಾಡಿದನು.

ಆದರೆ ಅವನ ತರುವಾಯ ವಿಜಯನಗರದ ರಾಜ್ಯವು ಬಹಳ ದಿವಸ ಬಾಳಲಿಲ್ಲ. ಕಡೆಯಲ್ಲಿ ಸದಾಶಿವರಾಯನ ಆಳಿಕೆಯಲ್ಲಿ ಕೃಷ್ಣದೇವರಾಯನ ಅಳಿಯನಾದ ರಾಮರಾಜನೆಂಬವನ ಕೈಯಲ್ಲಿ ರಾಜ್ಯಸೂತ್ರಗಳಿದ್ದುವು. ವಿಜಾಪುರ, ಗೋವಳಕೊಂಡ, ಅಹಮ್ಮದನಗರ, ಬೀದರ ಈ ನಾಲ್ಕು ರಾಜ್ಯಗಳ ಬಾದಶಹರೂ ಒಕ್ಕಟ್ಟಾಗಿ ಒಳಸಂಚು ಮಾಡಿ ಅವನೊಡನೆ ಯುದ್ಧಕ್ಕೆ ಅನುವಾದರು. ರಾಮರಾಜನು ಅತ್ಯಂತ ಶೂರನಾಗಿದ್ದನು. ಅವನಿಗೆ ಆಗ ೯೬ ವರ್ಷವಾಗಿತ್ತು. ಇಂಥ ಮುಪ್ಪಿನ ಮುದುಕನಾದರೂ ಅವನು ೩೦ ವರ್ಷದ ತರುಣನಂತೆ ಉತ್ಸಾಹವುಳ್ಳವನಾಗಿದ್ದನಂತೆ! ಅವನು ತನ್ನ ದೊಡ್ಡ ಸೈನ್ಯದೊಂದಿಗೆ ರಕ್ಕಸ-ತಂಗಡಿಗಿ ಎಂಬ ಗ್ರಾಮಗಳ ಹತ್ತಿರ ಮುಸಲ್ಮಾನರ ಮಹಾ ಸೈನ್ಯಕ್ಕೆ ಇದಿರಾದನು. ಅಲ್ಲಿ ೧೫೬೫ನೆಯ ಇಸವಿಯ ಜನವರಿ ೨೩ರಲ್ಲಿ ಅತ್ಯಂತ ತುಮುಲ ಕಾಳಗವೆಸಗಿತು. ರಾಮರಾಜನ ಪಕ್ಷದ ವೆಂಕಟಾದ್ರಿಯೂ, ಇಳೋತ್ತಮ ರಾಜನೂ ಬಹು ಪರಾಕ್ರಮದಿಂದ ಹೋರಾಡಿ ಹಗೆಗಳನ್ನು ಓಡಿಸುವ ಸಂಧಿಯಲ್ಲಿ, ರಾಮರಾಜನು ತಾನು ಮೇಣೆಯಲ್ಲಿ ಕುಳಿತು ತನ್ನ ಸೈನ್ಯದವರಿಗೆ ಧೈರ್ಯ ಕೊಡುವುದಕ್ಕಾಗಿ ತಿರುಗಾಡುತ್ತಿದ್ದನು. ಅಷ್ಟರೊಳಗೆ ಶತ್ರುಗಳ ಮದ್ದಾನೆ ಮೈಮೇಲೆ ಬಿದ್ದುದನ್ನು ನೋಡಿ ಭೋಯಿಗಳು ಅಂಜಿ ತಮ್ಮ ಜೀವದಾಸೆಯಿಂದ ಮೇಣೆಯನ್ನು ಚೆಲ್ಲಿ ಓಡಿಹೋಗಲಾಗಿ ನಿಜಾಮಶಹನು ರಾಮರಾಜನನ್ನು ಸೆರೆಹಿಡಿದು ಅಲ್ಲಿಯೇ ಅವನ ತಲೆಯನ್ನು ಕೊಯ್ದು ಭಲ್ಯಕ್ಕೆ ಚುಚ್ಚಿ ಸೈನ್ಯದೊಳಗೆ ತಿರುಗಿಸಿದನು. ಅದನ್ನು ನೋಡಿ ವಿಜಯನಗರದ ದಂಡಿನವರು ಧೈರ್ಯಗುಂದಿ ಬೆನ್ನುತೋರಿಸಿದರು. ಆಗ ಮುಸಲ್ಮಾನರು ಮಾಡಿದ ಕೊಲೆಗೆ ಆಳವಿಲ್ಲ; ರಕ್ತದ ಕಾಲುವೆಗಳು ಹರಿದವು. ಈ ಮೇರೆಗೆ ಜಯವಾದ ಕೂಡಲೆ ಮುಸಲ್ಮಾನರು ನೆಟ್ಟಗೆ ವಿಜಯನಗರಕ್ಕೆ ಸಾಗಿ, ತಮಗೆ ಜಯ ಸಿಕ್ಕೇ ಸಿಕ್ಕುವುದೆಂಬ ಭರವಸೆಯಿಂದ ಮೈಮರೆತಿದ್ದ ಪಟ್ಟಣದ ನಿವಾಸಿಗಳನ್ನೆಲ್ಲ ಕೈಗೆ ಸಿಕ್ಕಿದಂತೆ ಕೊಂದು, ಪಟ್ಟಣವನ್ನು ಯಥೇಚ್ಛವಾಗಿ ಸುಲಿಗೆ ಮಾಡಿದರು.

ಈ ಮೇರೆಗೆ ಸುಮಾರು ೨೩೦ ವರ್ಷ ಘನತೆಯಿಂದ ಮೆರೆದ ವೈಭವ ಸಂಪನ್ನ ರಾಜ್ಯವು ಆಕಸ್ಮಿಕ ಕಾರಣದಿಂದ ಅರ್ಧ ನಿಮಿಷದಲ್ಲಿ ಮಾಯವಾಯಿತು. ತೀರಿತು. ಅಂದಿಗೆ ಕರ್ನಾಟಕದ ವೈಭವಕ್ಕೆ ಕೊನೆಯಾಯಿತು! ಕರ್ನಾಟಕದೇವಿಯ ಹಣೆಯ ಕುಂಕುಮವು ಅಳಿಸಿತು! ಕೊರಳ ಮಂಗಳಸೂತ್ರವು ಹೆಚ್ಚಿತು! ಕರ್ನಾಟಕದ ಸಂಪತ್ತಿಯು ಸಮಾಧಿ ಹೊಂದಿತು! ಕರ್ನಾಟಕದ ವಿದ್ಯಾನಿಧಿಯು ಅಡಗಿಹೋಯಿತು! ಕರ್ನಾಟಕದ ಪ್ರತಾಪ ಸೂರ್ಯನು ಅಸ್ತನಾದನು. ಸಾರಾಂಶವೇನೆಂದರೆ: ಅಂದಿನಿಂದ ಇಂದಿನವರೆಗೆ ಕರ್ನಾಟಕರಾದ ನಾವು ಇತಿಹಾಸದಿಂದ ನಾಮಶೇಷರಾಗಿ ಹೋಗಿರುವೆವು! ಕರ್ನಾಟಕರೇ, ನಾವು ಪೂರ್ವವೈಭವವನ್ನು ಪಡೆಯಲು ಪ್ರಯತ್ನಿಸುವ ಕಾಲವು ಇನ್ನೂ ಪ್ರಾಪ್ತವಾಗಿಲ್ಲವೋ? ವಿಚಾರ ಮಾಡಿರಿ.


೧೨ನೆಯ ಪ್ರಕರಣ

ವೈಭವ ವರ್ಣನೆ


ಹಿಂದಿನ ಕೆಲವು ಪ್ರಕರಣಗಳಲ್ಲಿ ಕರ್ನಾಟಕದ ಇತಿಹಾಸದೊಳಗಿನ ಮಹತ್ವದ ಸಂಗತಿಗಳನ್ನು ಸಂಕ್ಷೇಪವಾಗಿ ಹೇಳಿರುವೆವಷ್ಟೆ. ಇನ್ನು ಈ ಪ್ರಕರಣದಲ್ಲಿ ನಾವು ನಮ್ಮ ಕರ್ನಾಟಕ ದೇಶವನ್ನೂ ರಾಜಧಾನಿಗಳನ್ನೂ ವರ್ಣಿಸುವೆವು. ನಾವು ನಮ್ಮ ಸ್ವಕಪೋಲಕಲ್ಪಿತವಾದ ವರ್ಣನೆಗಳನ್ನು ಇಲ್ಲಿ ಕೊಡುವುದಿಲ್ಲ. ನಮ್ಮ ಕರ್ನಾಟಕದ ರಾಜರನ್ನೂ, ಪಟ್ಟಣಗಳನ್ನೂ ಕುರಿತು ಪರದೇಶೀಯ ಪ್ರವಾಸಿಕರೂ ಪ್ರಾಚೀನಕಾಲದ ಕವಿಗಳೂ ಮಾಡಿದ ವರ್ಣನೆಗಳನ್ನು ಮಾತ್ರವೇ ಇಲ್ಲಿ ಕೊಡುವೆವು.

ಕರ್ನಾಟಕದಲ್ಲಿ ಎಲ್ಲಕ್ಕೂ ಹಳೆಯ ಅರಸುಮನೆತನವು ಕದಂಬರದು. ಇವರ ರಾಜಧಾನಿ ಬನವಾಸಿ. ಕದಂಬರಾಳಿದ ದೇಶವನ್ನು ಬನವಾಸಿದೇಶವೆಂದೂ ಕರೆಯುತ್ತಿದ್ದರು. ಈ ಬನವಾಸಿ ದೇಶವನ್ನು ಕನ್ನಡ ಭಾಷೆಯ ಪ್ರಖ್ಯಾತ ಕವಿಯಾದ ಆದಿಪಂಪನು ತನ್ನ ಭಾರತದಲ್ಲಿ ಈ ಬಗೆಯಾಗಿ ವರ್ಣಿಸಿರುವನು:

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೆಯ್ದೊದಮಿಂಪನಾಳ್ವಗೇ
ಯಂ ಕಿವಿವೊಕ್ಕಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಕೆಳೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ



"ದಕ್ಷಿಣದ ಮಲಯಮಾರುತವು ನನ್ನ ಮೈಗೆ ಸುಳಿದರೂ, ಉತ್ತಮವಾದ ಸ್ತೋತ್ರ ಮಿಶ್ರಿತವಾದ ಸುಭಾಷಿತಗಳನ್ನು ಶ್ರವಣ ಮಾಡಿದರೂ, ಇಂಪಾದ ಗಾಯನವು ಕಿವಿಗೆ ಬಿದ್ದರೂ, ಅದೇ ಆಗ ಅರಳಿದ ಮಲ್ಲಿಗೆಯ ಮೊಗ್ಗೆಗಳನ್ನು ಕಂಡರೂ, ಕಾಂತಾಸಮಾಗಮದ ಸಂತೋಷವುಂಟಾದರೂ, ವಸಂತೋತ್ಸವವನ್ನು ಅನುಭವಿಸಿದರೂ (ಮುಖ್ಯವಾಗಿ). ಎಂಥ ಸುಖಗಳನ್ನು ಅನುಭವಿಸುತ್ತಿದ್ದಾಗ್ಯೂ, ಯಾರು ಎಷ್ಟೇ ಪ್ರತಿಬಂಧ ಮಾಡಿದರೂ ನನ್ನ ಮನಸ್ಸು ಆ ಬನವಾಸಿ ದೇಶವನ್ನು ಸ್ಮರಿಸದೆ ನಿಲ್ಲದು."

ಬಾದಾಮಿಯ ಚಾಲುಕ್ಯವಂಶದ ಪ್ರಖ್ಯಾತ ರಾಜನಾದ ೨ನೆಯ ಪುಲಿಕೇಶಿಯ ಆಳಿಕೆಯಲ್ಲಿ ಹುಯೆನತ್ಸಾಂಗ ಎಂಬೊಬ್ಬ ಚೀನೀ ಪ್ರವಾಸಿಯು ೬೨೯ ರಿಂದ ೬೪೫ನೆಯ ಇಸವಿಯವರೆಗೆ ಹಿಂದುಸ್ಥಾನದಲ್ಲೆಲ್ಲಾ ಸಂಚರಿಸಿದನು. ಆತನು ಪುಲಿಕೇಶಿಯ ರಾಜ್ಯವನ್ನೂ ಪ್ರಜೆಗಳನ್ನೂ ಕುರಿತು ಬರೆದಿರುವುದೇನೆಂದರೆ:

ಈ ಮಹಾರಾಷ್ಟ್ರ (ದೊಡ್ಡ ರಾಷ್ಟ್ರ)ದ ರಾಜ್ಯದ ಸುತ್ತಳತೆಯು ಸುಮಾರು ೬೦೦೦ ಲಾಯಿ (೧೨೦೦ ಮೈಲು) ಉಂಟು. ರಾಜಧಾನಿಯು ಪಶ್ಚಿಮ ಭಾಗದಲ್ಲಿ ಒಂದು ದೊಡ್ಡ ಹೊಳೆಯ ಸಮೀಪದಲ್ಲಿ ಇರುತ್ತದೆ. (ಇದು ಬಾದಾಮಿಯೇ ಎಂದು ಡಾ. ಬರ್ಗೆಸ ಇವರು ಅಭಿಪ್ರಾಯ ಪಟ್ಟಿರುತ್ತಾರೆ. ಮಲಪ್ರಭೆಯೇ ಆ ಹೊಳೆ). ಇದರ ಸುತ್ತಳತೆ ಸುಮಾರು ೬೦ ಲಾಯಿ. ಭೂಮಿಯು ಕಸುವುಳ್ಳದ್ದೂ ಫಲವತ್ತಾಗಿಯೂ ಇದ್ದು ಅದರಲ್ಲಿ ಧಾನ್ಯಗಳು ವಿಪುಲವಾಗಿ ಬೆಳೆಯುತ್ತವೆ. ಹವೆಯು ಉಷ್ಣ; ಜನರು ನಿಷ್ಕಪಟಿಗಳೂ ಸಜ್ಜನರೂ ಸತ್ಯವಂತರೂ ಆಗಿರುತ್ತಾರೆ; ಇವರ ನಿಲುವಿಕೆ ಎತ್ತರ; ನಡತೆಯಲ್ಲಿ ಛಲವೂ ಅಭಿಮಾನವೂ ಹೆಚ್ಚು; ಮಾಡಿದ ಉಪಕಾರವನ್ನೆಂದಿಗೂ ಮರೆಯರು; ಅಪಕಾರ ಮಾಡಿದವರನ್ನು ಮಾತ್ರ ಮೆಟ್ಟದೆ ಬಿಡರು. ಅಪಮಾನವನ್ನು ಪರಿಹರಿಸುವುದಕ್ಕಾಗಿ ತಮ್ಮ ಜೀವವನ್ನೂ ಲೆಕ್ಕಿಸರು. ಸಂಕಟ ಕಾಲದಲ್ಲಿ ಮೊರೆಹೊಕ್ಕವರನ್ನು ಸಂರಕ್ಷಿಸುವುದಕ್ಕಾಗಿ ಯತ್ನಿಸುವಾಗ ಇವರು ತಮ್ಮನ್ನೂ ಕೂಡ ಮರೆತುಬಿಡುವರು. ಹಗೆ ತೀರಿಸುವುದಿದ್ದಾಗ ಇವರು ಮೊದಲು ಆ ಹಗೆಗೆ ಸೂಚನೆಯನ್ನು ಕೊಡಲಿಕ್ಕೆ ಎಂದೂ ಮರೆಯುವುದಿಲ್ಲ. ಆ ಸೂಚನೆಯನ್ನು ಕೊಟ್ಟ ಬಳಿಕ ಇಬ್ಬರೂ ಜಗಳಾಡತಕ್ಕವರು. ಢಾಲು ಭಾಲೆಗಳನ್ನು ತೆಗೆದುಕೊಂಡು ಜಗಳಕ್ಕೆ ಹೊರಡುವರು. ರಣಭೂಮಿಯಿಂದ ಓಡಿಹೋಗುವವರನ್ನು ಇವರು ಬೆನ್ನಟ್ಟುವರು. ಆದರೆ ಮೊರೆ ಹೊಕ್ಕವರನ್ನು ಕಡಿಯುವುದಿಲ್ಲ. ದಳವಾಯಿಯು ಯುದ್ಧದಲ್ಲಿ ಸೋತು ಬಂದರೆ ಅರಸರು ಅವನಿಗೆ ದೇಹದಂಡನೆಯನ್ನು ಮಾಡುವುದಿಲ್ಲ; ಸೀರೆಯನ್ನುಡಿಸಿ ಮೆರೆಸುವನು. ಅದರಿಂದ ಆ ಸೋತ ದಳವಾಯಿಯು ತಾನಾಗಿಯೇ ಪ್ರಾಣಕೊಡುವನು. ಈ ಸಂಸ್ಥಾನದಲ್ಲಿ ಎದೆಗುಂದದ ವೀರಾಳುಗಳು ಸಾವಿರಾರು ಮಂದಿಯುಂಟು. ಇವರು ಮುಂಭಾಗದಲ್ಲಿಯ ರಣಭೇರಿಯ ನಾದವನ್ನನುಸರಿಸಿ ಹೆಜ್ಜೆಯಿಕ್ಕುವರು. ಸಾವಿರಾರು ಮದ್ದಾನೆಗಳಿಂದಲೂ ಕಾಲಾಳುಗಳಿಂದಲೂ ಕೂಡಿದ ಈ ಸೇನಾ ಸಮೂಹವನ್ನು ಇದಿರಿಸುವ ಎದೆ ಯಾರಿಗುಂಟು? ಇಂಥ ಅನುಪಮವಾದ ಸೇನಾ ಬಲವೂ ಗಜಬಲವೂ ಉಳ್ಳ ಈ ಅರಸರು ದರ್ಪದಿಂದ ನೆರೆಹೊರೆಯ ರಾಜರನ್ನೆಲ್ಲ ಧಿಕ್ಕರಿಸುವುದರಲ್ಲಿ ಸೋಜಿಗವೇನು? ಈ ಅರಸನು ಕ್ಷತ್ರಿಯ ಕುಲದವನು. ಈತನ ಹೆಸರು ಪುಲಿಕೇಶಿ. ಇವನ ವಿಚಾರಗಳು ಉದಾತ್ತ ಮತ್ತು ಗಂಭೀರವಾದವುಗಳು; ಪ್ರಜೆಗಳ ಮೇಲೆ ಇವನಿಗೆ ಬಲು ಪ್ರೀತಿ. ಇವನು ಕೊಡುಗೈದೊರೆ ಎಂದು ಹೆಸರುಗೊಂಡಿರುವನು; ಈತನ ಪ್ರಜೆಗಳು ಅತ್ಯಂತ ರಾಜನಿಷ್ಠರಾಗಿ ಈತನ ಸೇವೆಯಲ್ಲಿ ತತ್ಪರರಾಗಿರುವರು. ಚಕ್ರವರ್ತಿಯಾದ ಹರ್ಷವರ್ಧನನು ಅನೇಕ ರಾಜ್ಯಗಳನ್ನು ಗೆದ್ದಿರುವನು; ನೆರೆಹೊರೆಯವರೂ ದೂರದೂರಿನ ದೇಶದವರೂ ಈ ಹರ್ಷವರ್ಧನನಿಗೆ ಅಂಜಿ ನಡುಗುವರು. ಆದರೆ ಈ ಪುಲಿಕೇಶಿಯ ಪ್ರಜೆಗಳು ಮಾತ್ರ ಆತನನ್ನು ಲೆಕ್ಕಿಸಿರುವುದಿಲ್ಲ. ಆ ಹರ್ಷವರ್ಧನನು ಇವರನ್ನು ಸೋಲಿಸುವುದಕ್ಕಾಗಿ ಪಂಚನದಗಳ ಎಲ್ಲ ಸೈನ್ಯವನ್ನೂ ಕಲೆ ಹಾಕಿದ್ದಾನೆ. ತನ್ನ ರಾಜ್ಯದೊಳಗಿನ ಅತಿರಥಿ ಮಹಾರಥಿಗಳನ್ನೆಲ್ಲ ಕರೆಯಿಸಿಕೊಂಡಿದ್ದಾನೆ; ಇಷ್ಟೆಲ್ಲ ಬಲವಾದ ಸೇನಾಸಾಮಗ್ರಿಗಳನ್ನಳವಡಿಸಿಕೊಂಡು ಹರ್ಷವರ್ಧನನು ತಾನೇ ಸ್ವತಃ ಇವನ ಮೇಲೆ ದಂಡೆತ್ತಿ ಬಂದಿದ್ದಾನೆ. ಆದರೂ ಇವರನ್ನು ಮುರಿಯಬಡೆಯುವುದು ಅವನಿಂದಾಗಲಿಲ್ಲ. ಇದರ ಮೇಲಿಂದ ಈ ನಾಡಿನ ಜನರ ಕ್ಷಾತ್ರತೇಜವು ಎಷ್ಟೆಂಬುದು ಗೊತ್ತಾಗುವುದು. ಜನರು ವಿದ್ಯಾವಂತರು. ಇವರಲ್ಲಿ ನಾಸ್ತಿಕರೂ ಆಸ್ತಿಕರೂ ಇರುವರು. ಈ ರಾಜ್ಯದಲ್ಲಿ ನೂರು ಮಠಗಳುಂಟು. ಅದರೊಳಗೆ ಸುಮಾರು ೫೦೦೦ ಬೌದ್ಧ ಭಿಕ್ಷುಗಳಿದ್ದಾರೆ. ಅವರೊಳಗೆ ಮಹಾಯಾನ ಪಂಥದವರೂ ಇರುವರು.

ವಾಚಕರೇ, ಈ ರೀತಿಯಾಗಿ ಇನ್ನೂ ಹೆಚ್ಚಿಗೆ ವರ್ಣನೆಯಿರುವದು. ವಿಸ್ತಾರಭಯದಿಂದ ನಾವು ಅದನ್ನು ಇಲ್ಲಿ ಕೊಟ್ಟಿಲ್ಲ. ಕರ್ನಾಟಕಸ್ಥರೇ, ಈ ಮೇಲಿನ ವರ್ಣನೆಯನ್ನು ಓದಿ ಯಾವ ಕರ್ನಾಟಕಸ್ಥನಿಗೆ ತನ್ನ ಪೂರ್ವಜರ ಬಗ್ಗೆ ಸಕೌತುಕವಾದ ಅಭಿಮಾನವುಂಟಾಗುವದಿಲ್ಲ? ಕನ್ನಡಿಗರೇ, ನಿಮ್ಮ ಪೂರ್ವಜರ ಆ ಧೀರೋದಾತ್ತವಾದ ಸ್ವಭಾವಕ್ಕೆ ಈಗಿನ ನಿರ್ಬಲ ಸ್ವಭಾವವನ್ನು ಹೋಲಿಸಿ ನೋಡಿರಿ.

ಇನ್ನು ಚಾಲುಕ್ಯರ ಅನಂತರದಲ್ಲಿ ರಾಷ್ಟ್ರಕೂಟ ವಂಶದ ರಾಜಧಾನಿಯಾದ ಮಳಖೇಡ ಪಟ್ಟಣದ ವರ್ಣನೆಯನ್ನು ಇಲ್ಲಿ ಕೊಡುವೆವು. ವರ್ಧಾ ಮತ್ತು ಕರ್ಹಾಡಗಳಲ್ಲಿ ಸಿಕ್ಕಿದ ತಾಮ್ರಶಾಸನಗಳಲ್ಲಿ ಈ ಕೆಳಗಿನ ಶ್ಲೋಕವು ದೊರೆಯುತ್ತದೆ:

ತತ್ಸೂನುರಾನತನೃಪೋ ನೃಪತುಂಗದೇವಃ ||
ಸೋಭೂತ್ ಸ್ವಸೈನ್ಯಭರಭಂಗುರಿತಾಹಿರಾಜಃ ||
ಯೋ ಮಾನ್ಯಖೇಟಮಮರೇಂದ್ರಪುರೋಪಹಾಸಿ ||
ಗೀರ್ವಾಣಗರ್ವಮಿವ ಖರ್ವಯಿತಂ ವ್ಯಧತ್ತ ||
-- ವರ್ಧಾ ಮತ್ತು ಕರ್ಹಾಡ ತಾಮ್ರಶಾಸನ


ತನ್ನ ಮಹಾಸೈನ್ಯದಿಂದ ಅಹಿರಾಜನನ್ನು ಹಣ್ಣಿಗೆ ತಂದಂಥ ಮತ್ತು ನೃಪತಿಗಳಿಂದ ನಮಿಸಲ್ಪಡುವಂಥ ಅವನ ಮಗನಾದ ನೃಪತುಂಗದೇವನು ದೇವತೆಗಳ ಗರ್ವವನ್ನು ಖಂಡಿಸುವ ಉದ್ದೇಶದಿಂದಲೋ ಏನೋ ತನ್ನ ರಾಜಧಾನಿಯಾದ (ಮಾನ್ಯಖೇಟ) ಮಳಖೇಡಪುರವನ್ನು ದೇವತೆಗಳ ಅಮರಾವತಿಯ ಪಟ್ಟಣವನ್ನು ಕೂಡ ನಾಚಿಸುವಂತೆ ಬೆಳೆಸಿದನು ಎಂಬುದಾಗಿ ಇದರಲ್ಲಿ ವರ್ಣಿಸಿರುತ್ತದೆ.

ಸಾಲೋಟಗಿಯ ಶಿಲಾಲೇಖದಲ್ಲಿ, ಈ ಪಟ್ಟಣವು ಸುಂದರವಾದ ಭವ್ಯಮಂದಿರಗಳಿಂದ ತುಂಬಿತ್ತೆಂದೂ ನದಿಯ ದಂಡೆಯ ಮೇಲೆ ವೀರಾಂಗನೆಯರ ಮುಖಕಮಲಗಳೇ ಕಾಣುತ್ತಿದ್ದವೆಂದೂ ವರ್ಣನೆಯುಂಟು.

ಇನ್ನು, ನಾವು ಕರ್ನಾಟಕದ ಅರಸರೆಲ್ಲರೊಳಗೆ ಶ್ರೇಷ್ಠನಾದ ಚಾಲುಕ್ಯ ವಿಕ್ರಮಭೂಪತಿಯ ವರ್ಣನೆಯನ್ನು ಕೊಡುವೆವು. ಕವಿವರನಾದ ಬಿಲ್ಹಣನು ಈ ವಿಕ್ರಮದೇವನ ಚರಿತ್ರೆಯ ಬಗ್ಗೆ ಸ್ವತಂತ್ರವಾದ ಒಂದು ಸಂಸ್ಕೃತ ಕಾವ್ಯವನ್ನೇ ರಚಿಸಿರುವನು; ಅದರೊಳಗೆ ಒಂದೇ ಶ್ಲೋಕವನ್ನು ಇಲ್ಲಿ ಉದ್ಧರಿಸುತ್ತೇವೆ:

ಜನೈರವಜ್ಞಾತಕವಾಟಮುದ್ರಣೈಃ ಕ್ಷಪಾಸುರಕ್ಷಾಮಿಮುಖೈರಸುಪ್ಯತ
ಕರಾ ವಿಶಂತಿ ಸ್ವಗವಾಕ್ಷವರ್ತ್ಮಸು ಕ್ಷಪಾಪತೇಶ್ಛಿದ್ರಪಥೈರ್ನತಸ್ಕರಾಃ ||
--ವಿಕ್ರಮಾಂಕದೇವ ಚರಿತ ೧೭-೭


ಎಂದರೆ ಜನರು ರಾತ್ರಿಯಲ್ಲಿ ತಮ್ಮ ಬಾಗಿಲುಗಳನ್ನು ಕೂಡ ಮುಚ್ಚುತ್ತಿರಲಿಲ್ಲ; ಅವರಿಗೆ ಕಳ್ಳರ ಭೀತಿಯೇ ಇಲ್ಲ. ಕಳ್ಳರಿಗೆ ಬದಲು ಚಂದ್ರಕಿರಣಗಳು ಅವರ ಗೃಹಗಳನ್ನು ಪ್ರವೇಶಿಸುತ್ತಿದ್ದವು. ಸಾರಾಂಶ: ಈಗ ರಾಮೇಶ್ವರದಿಂದ ಕಾಶಿಯವರೆಗೆ, ಕೋಲಿಗೆ ಬಂಗಾರ ತೂಗಹಾಕಿಕೊಂಡು ಹೋದರೂ ಅಂಜಿಕೆಯಿಲ್ಲವೆಂದು ಜನರು ನುಡಿಯುವಂತೆ, ಆಗ ಚಾಲುಕ್ಯ ವಿಕ್ರಮನ ಕಾಲದಲ್ಲಿ ಶಾಂತತೆಯು ಪೂರ್ಣವಾಗಿ ನೆಲೆಗೊಂಡಿತ್ತೆಂಬುದನ್ನು ಮೇಲೆ ಹೇಳಿದಂತೆ ವರ್ಣಿಸುತ್ತಿದ್ದರು. ಹಿಂದೆ ನಮ್ಮ ದೇಶದಲ್ಲಿ ಶಾಂತತೆಯೇ ಇರಲಿಲ್ಲ; ಎಲ್ಲಿ ನೋಡಿದಲ್ಲಿ ಅರಾಜಕತೆಯೇ ಇತ್ತು ಎಂದು ತಲೆಯೊಳಗೆ ತಪ್ಪು ಕಲ್ಪನೆಯನ್ನು ಹಾಕಿಕೊಂಡಿರುವ ನಮ್ಮ ಸುಶಿಕ್ಷಿತರ ತಲೆಯೊಳಗೂ ಮೇಲಿನ ವಾಕ್ಯದಿಂದ ಪ್ರಕಾಶಕಿರಣಗಳು ಬೀಳುವುವೆಂದು ಆಶೆಯಿದೆ. ಬಿಲ್ಹಣನು ಬರೆದುದು ಕೇವಲ ಕವಿಕಲ್ಪನೆಯಲ್ಲವೆಂದು ಚಾಲುಕ್ಯವಿಕ್ರಮನ ಮಿಕ್ಕ ಇತಿಹಾಸವನ್ನೋದಿದರೆ ಮನವರಿಕೆಯಾಗುವುದು. ಆತನು ಪಟ್ಟವೇರುವ ಪೂರ್ವದಲ್ಲಿಯೇ ಅನೇಕಾನೇಕ ರಾಜ್ಯಗಳನ್ನು ಗೆದ್ದನು. ಪಟ್ಟವೇರಿದ ನಂತರ ೫೦ ವರ್ಷಗಳವರೆಗೆ ಅವನ ರಾಜ್ಯದಲ್ಲಿ ಪೂರ್ಣ ಶಾಂತತೆಯು ನೆಲೆಗೊಂಡಿತ್ತು. ಅವನ ಕಾಲಕ್ಕೆ ಆಗಿಹೋದ ಗ್ರಂಥಗಳನ್ನು ನೋಡಲು, ಅಂಥ ಗ್ರಂಥಗಳು ಪೂರ್ಣ ಶಾಂತತೆಯು ನೆಲೆಗೊಂಡ ಕಾಲದಲ್ಲಲ್ಲದೆ ಮಿಕ್ಕ ಕಾಲಕ್ಕೆ ಆಗುವುದು ಶಕ್ಯವಿಲ್ಲವೆಂದೂ ಗೊತ್ತಾಗುವುದು. ಅದೇ ಕಾಲದ ಮತ್ತೊಬ್ಬ ಪಂಡಿತನು ನಮ್ಮ ಈ ಕರ್ನಾಟಕದ ಅರಸರನ್ನು ವರ್ಣಿಸುವುದನ್ನು ಆಲಿಸಿರಿ. ವಿಜ್ಞಾನೇಶ್ವರನು ತನ್ನ ಪ್ರಸಿದ್ಧ ಪುಸ್ತಕವಾದ "ಮಿತಾಕ್ಷರಾ" ಎಂಬ ಧರ್ಮಶಾಸ್ತ್ರ ಗ್ರಂಥದ ಕೊನೆಗೆ ಬರೆದಿರುವುದೇನೆಂದರೆ:

ನಾಸೀದಸ್ತಿ ಭವಿಷ್ಯತಿ ಕ್ಷಿತಿತಲೇ ಕಲ್ಯಾಣಕಲ್ಪಂ ಪುರಂ
ನೋ ದ್ರಷ್ಟಃ ಶ್ರುತ ಏವ ವಾ ಕ್ಷಿತಿಪತಿಃ ಶ್ರೀವಿಕ್ರಮಾರ್ಕೊಪಮಃ
ವಿಜ್ಞಾನೇಶ್ವರಪಂಡಿತೋ ನ ಭವತೇ ಕಿಂಚಾನ್ಯದನ್ಯೋಪಮಂ
ಆಕಲ್ಪಂ ಸ್ಥಿರಮಸ್ತು ಕಲ್ಪಲತಿಕಾಕಲ್ಪಂ ತದೇತತ್ರಯಂ ||


ಪೃಥ್ವಿಯ ಮೇಲೆ ಕಲ್ಯಾಣದಂಥ ಮತ್ತೊಂದು ಪಟ್ಟಣವು ಹಿಂದೆ ಇದ್ದಿಲ್ಲ. ಈಗಲೂ ಇಲ್ಲ. ಮುಂದೆಯೂ ಹುಟ್ಟುವುದಿಲ್ಲ; ವಿಕ್ರಮಾರ್ಕನಂಥ ಪ್ರತಾಪಶಾಲಿಯಾದ ಅರಸನು ಜಗತ್ತಿನೊಳಗೆ ಬೇರೊಬ್ಬರೂ ಇಲ್ಲ___ಮುಂತಾಗಿ ವರ್ಣಿಸಿದುದೇನು ಸಾಮಾನ್ಯ ವರ್ಣನೆಯೇ? ಕನ್ನಡಿಗರೇ, ನಿಮ್ಮ ಅರಸನ ಸ್ತುತಿಯನ್ನು ನಿತ್ಯದಲ್ಲಿ ಪಾರಾಯಣ ಮಾಡಿ ಪುಣ್ಯ ಕಟ್ಟಿಕೊಳ್ಳಿರಿ.

ಆದರೆ ನಮ್ಮ ಅರಸರ ವರ್ಣನೆಗಳನ್ನು ಆದ್ಯಂತವಾಗಿ ಕೊಡುವುದು ನಮ್ಮ ಉದ್ದೇಶವಲ್ಲ. ಕನ್ನಡಿಗರಲ್ಲಿ ಬೇರೂರಿದ ಕೆಲವು ಭ್ರಾಮಕ ಕಲ್ಪನೆಗಳನ್ನು ಹೊಡೆದೋಡಿಸಲಿಕ್ಕೆ ದಿಗ್ದರ್ಶನಾರ್ಥವಾಗಿ ನಾವು ಇವನ್ನು ಇಲ್ಲಿ ಕೊಟ್ಟಿರುವೆವು.

ಇನ್ನು, ಕನ್ನಡಿಗರ ಕೊನೆಯ ರಾಜಧಾನಿಯಾದ ವಿಜಯನಗರದ ವೈಭವವನ್ನು ಸಂಗ್ರಹವಾಗಿ ವರ್ಣಿಸುವೆವು. ಇರಾಣದ ರಾಯಭಾರಿಗಳೂ ಯುರೋಪಿಯ ಪ್ರವಾಸಿಗಳೂ ವಿಜಯನಗರದ ರಾಜ್ಯಕ್ಕೆ ಬಂದು ಆ ಪಟ್ಟಣವನ್ನು ನೋಡಿ ಬೆರೆಗಾಗಿ ಬೆರಳು ಕಚ್ಚಿರುವರು.

ನಿಕೋಲಿಸ್ ಕೊಂಟಿ ಎಂದೊಬ್ಬ ಇಟಲಿದೇಶದ ಪ್ರವಾಸಿಯು ೧೪೨೦ನೆಯ ಇಸವಿಯಲ್ಲಿ ಈ ಪಟ್ಟಣಕ್ಕೆ ಬಂದಿದ್ದನು. ಅವನು ಹೇಳಿದ ವರ್ಣನೆಯ ಸಾರಾಂಶವನ್ನು ಕೊಡುತ್ತೇವೆ:

ಈ ಪಟ್ಟಣದ ಸುತ್ತಳತೆಯು ೬೦ ಮೈಲು ಇರುತ್ತದೆ. ಈ ಒಂದೇ ಪಟ್ಟಣದಲ್ಲಿ ೯೦,೦೦೦ ಸೈನಿಕರಿರುವರು. ಈ ಪಟ್ಟಣಕ್ಕೆ ಪ್ರಚಂಡವಾದ ಅಗಸೆ ಬಾಗಿಲುಗಳುಳ್ಳ ಏಳು ಸುತ್ತಿನ ಭದ್ರವಾದ ಕೋಟೆಯಿರುವುದು. ನೀರಿನ ವಿಪುಲತೆಯಿರುವುದರಿಂದ ಎಲ್ಲಿ ನೋಡಿದರೂ ಸುಂದರವಾದ ಬನಗಳೂ ಭತ್ತದ ಮತ್ತು ಕಬ್ಬಿನ ತೋಟಗಳೂ ಕಂಗೊಳಿಸುವವು. ಅಲ್ಲಲ್ಲಿ ಭವ್ಯವಾದ ಸುಂದರ ದೇವಾಲಯಗಳೂ ಅವಕ್ಕೆ ಹೊಂದಿ ಮಹಾಪಾಠಶಾಲೆಗಳೂ ವಿದ್ಯಾಲಯಗಳೂ ತುಂಬಿವೆ.

ಅಬ್ದುಲ ರಜಕನೆಂಬ ಇರಾಣದ ರಾಯಭಾರಿಯು ೧೪೪೨ನೆಯ ಇಸ್ವಿಯಲ್ಲಿ ಇಲ್ಲಿಗೆ ಬಂದಿದ್ದನು. ಆತನು ಈ ಪಟ್ಟಣವನ್ನು ಬಲು ಸುಂದರವಾಗಿ ಬಣ್ಣಿಸಿರುವನು.

ಈ ವಿಜಯನಗರದ ರಾಯನ ಕಾಲದಲ್ಲಿ ೬೦೦ ಬಂದರುಗಳುಂಟು. ಎಡೆಬಿಡದೆ ಮೂರು ತಿಂಗಳೂ ಪ್ರವಾಸ ಮಾಡುವಷ್ಟು ಈ ರಾಜ್ಯ ವಿಸ್ತಾರವಿದೆ. ಈ ರಾಜನ ಹತ್ತಿರ ೧೧ ಲಕ್ಷ ಸೈನ್ಯವಿರುತ್ತದೆ. ಇಂಥ ವೈಭವ ಸಂಪನ್ನನಾದ ಬೇರೆ ಅರಸನನ್ನು ಕಾಣುವುದು ದುರ್ಲಭ. ಈ ವಿಜಯನಗರಕ್ಕೆ ಸರಿಗಟ್ಟುವ ಪಟ್ಟಣವನ್ನು ಕಣ್ಣುಗಳು ನೋಡಿಲ್ಲ. ಕಿವಿಗಳು ಕೇಳಿಲ್ಲ. ಅರಮನೆಯ ಮಗ್ಗಲಿಗೆ ಪಗಡಿಯ ಪಟದಂತ ಇದಿರು ಬದುರಾಗಿ ನಾಲ್ಕು ಪೇಟೆಯ ಸಾಲುಗಳಿರುತ್ತವೆ. ಉತ್ತರಕ್ಕೆ ರಾಯನ ಅರಮನೆಯ ಮುಖಮಂಟಪವಿರುತ್ತದೆ. ಅರಮನೆಯ ಎರಡೂ ಮಗ್ಗಲಿಗೂ ಭವ್ಯವೂ ಎತ್ತರವೂ ಆದ ಉಪ್ಪರಿಗೆಯ ಸಾಲುಗಳು ಕಂಗೊಳಿಸುತ್ತವೆ. ಅರಮನೆಯ ಸಭಾಮಂಟಪವು ಇವೆಲ್ಲಕ್ಕೂ ಎತ್ತರವಾಗಿ ಭವ್ಯವಾಗಿರುತ್ತದೆ. ಪೇಟೆಯ ಬೀದಿಗಳು ಅತ್ಯಂತ ವಿಶಾಲವಾದವೂ ಉದ್ದವಾದವೂ ಇರುತ್ತವೆ. ಈ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಗುಲಾಬೀ ಹೂಗಳ ಸುಗ್ಗಿ. ಇಲ್ಲಿಯ ಜನರಿಗೆ ಅವುಗಳ ಮೇಲೆ ಬಲು ಪ್ರೀತಿ. ಊಟವಿಲ್ಲದಿದ್ದರು ಅವರಿಗೆ ಸಾಗೀತು, ಆದರೆ ಈ ಹೂವುಗಳಿಲ್ಲದೆ ಸಾಗುವುದಿಲ್ಲ. ಮುತ್ತು-ರತ್ನ-ಪಚ್ಚ-ವಜ್ರಗಳ ವ್ಯಾಪಾರವು ಪ್ರತಿನಿತ್ಯವೂ ನಡೆಯುತ್ತದೆ. ಎಲ್ಲಿ ನೋಡಿದರೂ, ಅಂದವಾದ ಕಲ್ಲುಗಳಿಂದ ಕಟ್ಟಲ್ಪಟ್ಟ ನೀರು-ಕಾಲುವೆಗಳು ಜುಳುಜುಳು ಹರಿಯುತ್ತವೆ. ಅರಮನೆಯಲ್ಲಿ ಅನೇಕ ನೆಲಮನೆಗಳುಂಟು. ಅವೆಲ್ಲವುಗಳಲ್ಲಿ ನಾಣ್ಯದ ಬೊಕ್ಕಸಗಳು ತುಂಬಿವೆ. ದಿವಾಣಖಾನೆಯ ಇದಿರಿಗೆ ಆನೆಯ ಸಾಲುಗಳು ಉಂಟು. ಪ್ರತಿಯೊಂದು ಆನೆಗೆ ನಿಲ್ಲಲಿಕ್ಕೆ ಒಂದು ದೊಡ್ಡ ಕಟ್ಟಡ ಇರುತ್ತದೆ. ಟಂಕಸಾಲೆಯ ಮುಂದೆ ಪಟ್ಟಣದ ಮುಖ್ಯಾಧಿಕಾರಸ್ಥನ ಮನೆಯುಂಟು. ಅಲ್ಲಿ ೧೨,೦೦೦ ಕಾವಲುಗಾರರಿದ್ದಾರೆ.

ಈ ಅಬ್ದುಲರಜಕನು ಪಟ್ಟಣದಲ್ಲಿ ಒಮ್ಮೆ ಉತ್ಸವ ನಡೆದುದನ್ನು ನೋಡಿ, ಈ ರೀತಿಯಾಗಿ ವರ್ಣಿಸಿರುವನು:

ರಾಯನ ಅಪ್ಪಣೆಯ ಮೇರೆಗೆ ರಾಜ್ಯದೊಳಗಿನ ಮುಖ್ಯ ಮುಖ್ಯ ಸರದಾರರೂ, ರಾಜಪುತ್ರರೂ, ಚಕಚಕಿಸುವ ಅಂಬಾರೆಗಳನ್ನೊಡಗೂಡಿದ ಸಾವಿರಾರು ಆನೆಗಳನ್ನೇರಿ ಅರಮನೆಗೆ ಬಂದಿರುವರು. ಕೆಳಗಿನಿಂದ ಮೇಲ್ತುದಿಯವರೆಗೆ ಸುಂದರವಾದ ಚಿತ್ರಗಳಿಂದ ಮುಚ್ಚಿದ ಅಂತಸ್ತುಗಳುಳ್ಳ ಡೇರೆಗಳಲ್ಲಿ ಇವರು ಇಳಿದುಕೊಂಡಿರುವರು. ಆ ಡೇರೆಗಳಲ್ಲಿ ಹಲವು ಡೇರೆಗಳು ತಿರುಗಿಸಿದತ್ತ ತಿರುಗುತ್ತವೆ. ಆ ಡೇರೆಯಲ್ಲಿ ಪ್ರತಿಯೊಂದು ಕ್ಷಣಕ್ಕೂ ಹೊಸ ಸಭಾಮಂಟಪಗಳು ದೃಷ್ಟಿಗೆ ಬೀಳುತ್ತಿದ್ದುವು. ಇವೆಲ್ಲವುಗಳ ಮುಂದೆ ೯ ಅಂತಸ್ತುಗಳುಳ್ಳ ಸುಂದರವಾದ ಒಂದು ದೊಡ್ಡ ಡೇರೆಯುಂತು. ಈ ಡೇರೆಯಲ್ಲಿ ೯ನೆಯ ಉಪ್ಪರಿಗೆಯಲ್ಲಿ ರಾಯನ ರತ್ನಖಚಿತವಾದ ಬಂಗಾರದ ಸಿಂಹಾಸನವು ಕಂಗೊಳಿಸುತ್ತದೆ. ೧೦ ಗಜ (೩೦ ಚಚೌಕ ಫೂಟು) ಉದ್ದಗಲವುಳ್ಳ ನಡುವಿನ ಸಭಾಮಂಟಪಕ್ಕೆ ನನ್ನನ್ನು ಕರೆದೊಯ್ದರು. ಆ ಸಭಾಮಂಟಪದ ಗೋಡೆಗಳೂ ಮೇಲ್ಬದಿಯೂ ಬೆಲೆಯುಳ್ಳ ಮುತ್ತು ರತ್ನಗಳಿಂದ ಕೆತ್ತಲ್ಪಟ್ಟ ಬಂಗಾರದ ನಕ್ಷತ್ರಗಳಿಂದ ತುಂಬಾ ಮುಚ್ಚಲ್ಪಟ್ಟಿದ್ದುವು. ಅದರ ತಗಡುಗಳು ಕತ್ತಿಯ ಅಲಗಿನಷ್ಟು ದಪ್ಪವಾಗಿ ಬಂಗಾರದ ಮೊಳೆಗಳಿಂದ ಗಟ್ಟಿಯಾಗಿ ಕೂಡಿಸಲ್ಪಟ್ಟಿದ್ದುವು.

ದುಯಾರ್ಟ ಬಾರ್ಬೊಸಾ ಎಂಬ ಪೋರ್ತುಗೀಸ್ ಪ್ರವಾಸಿಯು ೧೫೩೪ರಲ್ಲಿ ಇಲ್ಲಿಗೆ ಬಂದಿದ್ದನು. ಅವನೂ ಹೀಗೇಯೇ ಬಣ್ಣಿಸಿರುವನು:

ಈ ಪಟ್ಟಣದಲ್ಲಿ ಅಸಂಖ್ಯಾತ ಜನರುಂಟು. ಅರಮನೆಗಳೂ ಅಸಂಖ್ಯಾತವಾಗಿವೆ; ಇಲ್ಲಿ ಎಲ್ಲ ತರದ ಜನಾಂಗಗಳ ಮತ್ತು ಜಾತಿಗಳ ಜನರ ಮುಖಗಳನ್ನು ನೋಡಬಹುದು. ಇಲ್ಲಿಗೆ ಪೇಗೂ ಮತ್ತು ಸಿಂಹಲ ದ್ವೀಪದಿಂದ ವಜ್ರಗಳು ಬರುತ್ತವೆ.

ನನಿಝನೆಂಬ ಮತ್ತೊಬ್ಬ ಪೋರ್ತುಗೀಸ್ ಪ್ರವಾಸಿಯೂ ಹೀಗೆಯೇ ವರ್ಣಿಸಿರುವನು.

ವೇಮಸನೆಂಬ ಪೋರ್ತುಗೀಸ್ ಪ್ರವಾಸಿಯು ೧೫೨೦ರಲ್ಲಿ ಎಂದರೆ ಈ ವೈಭವದ ಪರಮಾವಧಿಯ ಕಾಲದಲ್ಲಿ ಇಲ್ಲಿಗೆ ಬಂದಿದ್ದನು. ಅವನು ವಿಜಯನಗರ ಪಟ್ಟಣವನ್ನು ಅತಿ ವಿಸ್ತಾರವಾಗಿ ವರ್ಣಿಸಿರುವನು. ಅದರಿಂದ ಇಂಥ ಪೇಟೆಯು ಇಂಥ ಕಡೆಯೇ ಇತ್ತೆಂದೂ, ಇಂಥ ಗುಡಿಯು ಇಲ್ಲಿಯೇ ಇತ್ತೆಂದೂ ಈಗಲೂ ಗೊತ್ತು ಹಿಡಿಯಬಹುದು. ಅದರ ಸ್ವಲ್ಪ ಸಾರಾಂಶವನ್ನು ಇಲ್ಲಿ ಕೊಡದಿರಲಾರೆವು:

ಈ ಪಟ್ಟಣದ ವಿಸ್ತಾರವನ್ನು ನಾನು ಏನೆಂದು ಬಣ್ಣಿಸಲಿ! ಒಮ್ಮೆಯೇ ಇಡೀ ಪಟ್ಟಣವನ್ನು ಕಂಡರಷ್ಟೇ; ಇದನ್ನು ನಾನು ಚೆನ್ನಾಗಿ ಬಣ್ಣಿಸಲಾದೀತು! ಆದರೂ ನಾನು ಒಂದು ಗುಡ್ಡವನ್ನೇರಿ ನೋಡಿದೆನು. ಆಗ ನನ್ನ ಕಣ್ಣಿಗೆ ಬಿದ್ದ ಭಾಗವೇ ರೋಮ್ ಪಟ್ಟಣದಷ್ಟು ವಿಶಾಲವೂ ಅತ್ಯಂತ ಮನೋಹರವೂ ಆಗಿದೆ. ಅಲ್ಲಿ ನಿಬಿಡವಾದ ಗಿಡಗಳ ಸಾಲುಗಳು ಅಂದವಾಗಿ ಕಂಡವು. ಅಲ್ಲಲ್ಲಿಗೆ ಅನೇಕ ಸರೋವರಗಳು ಕಂಗೊಳಿಸುತ್ತವೆ. ಅರಮನೆಯ ಸಮೀಪದಲ್ಲಿಯೇ ತೆಂಗಿನ ಬನಗಳೂ ಫಲಭರಿತವಾದ ತೋಟಗಳೂ ತುಂಬಿವೆ. ಅಲ್ಲಲ್ಲಿಗೆ ನಿರ್ಮಲವಾಗಿ ಹರಿಯುವ ಝರಿಗಳಿಂದಲೂ, ಹಸರು ಬಳ್ಳಿಗಳಿಂದಲೂ ಲಿಂಬಿ, ದ್ರಾಕ್ಷಿ, ಕಿತ್ತಳೆ, ಅಂಜೀರು ಮುಂತಾದ ಫಲವೃಕ್ಷಗಳಿಂದಲೂ ಈ ಪಟ್ಟಣವು ಬಹು ಶೋಭಾಯಮಾನವಾಗಿದೆ. ಈ ಪಟ್ಟಣದಲ್ಲಿ ಜನಸಂಖ್ಯೆಯು ಅಪರಿಮಿತವಾಗಿದೆ. ವರ್ತಕರು ಮುತ್ತು-ರತ್ನ-ಹವಳ-ಮಾಣಿಕ-ವಜ್ರಗಳ ವ್ಯಾಪಾರವನ್ನು ಮಿತಿಮೀರಿ ಮಾಡುತ್ತಾರೆ. ಪ್ರತಿ ಶುಕ್ರವಾರಕ್ಕೊಮ್ಮೆ ದೊಡ್ಡ ಸಂತೆಯಾಗುತ್ತದೆ. ಆದರೆ ಪ್ರತಿಯೊಂದು ದಿನವೂ ಬೇರೆ ಬೇರೆ ಬೀದಿಗಳಲ್ಲಿ ಸಂತೆಗಳು ಕೂಡಿಯೇ ಕೂಡುತ್ತವೆ. ಈ ಪಟ್ಟಣದಲ್ಲಿ ಇಂಥ ಸರಕುಗಳು ಸಿಕ್ಕುವುದಿಲ್ಲವೆಂದಿಲ್ಲ. ಹಣ್ಣು-ಹಂಪಲ ಕಾಯಿಪಲ್ಯಗಳ ರಾಶಿಯನ್ನು ನೋಡಿದರೆ ಕಣ್ಣು ತಿರುಗುತ್ತವೆ. ಅಂಗಡಿ ಮುಂತಾದವುಗಳಲ್ಲದೆ, ಜನರು ವಾಸಿಸುವ ಮನೆಗಳೇ ಈ ಪಟ್ಟಣದಲ್ಲಿ ಒಂದು ಲಕ್ಷ ಇವೆ. ಈ ರಾಯನು ೨೦ ಲಕ್ಷ ಸೈನ್ಯವನ್ನು ಕೂಡಿಸಬಲ್ಲನು. ಇವನ ಸೈನಿಕರನ್ನು ನಾನು ನೋಡಿದೆನು. ಆ ಸೈನಿಕರಲ್ಲಿ ಹೇಡಿಯೊಬ್ಬನೂ ನನಗೆ ಕಾಣಬರಲಿಲ್ಲ.

ವಾಚಕರೇ, ದಕ್ಷಿಣೋತ್ತರ ೧೪ ಮೈಲು, ಪೂರ್ವಪಶ್ಚಿಮ ೧೦ ಮೈಲು ವಿಸ್ತಾರವುಳ್ಳ ಈ ಪಟ್ಟಣದ ವೈಭವವನ್ನು ಸಾಕದಷ್ಟು ಬಣ್ಣಿಸುವುದೆಂತು! ಅಲ್ಲಿಯ ಪ್ರತಿಯೊಂದು ಬೀದಿಯು ಮುಂಬಯಿಯಲ್ಲಿರುವ ಎಲ್ಲಕ್ಕೂ ದೊಡ್ಡ ಬೀದಿಗಿಂತ ಅಗಲವೂ ಸರಳವೂ ಚೆಂದವೂ ಆಗಿದೆ. ಪ್ರತಿಯೊಂದರ ಮಗ್ಗಲಿಗೆ ಒಂದು ಸುಂದರವಾದ ಸರೋವರವಿತ್ತು. ಈಗಲೂ ಆ ಹಾಳು ಪಟ್ಟಣದ ಕುರುಹುಗಳನ್ನು ಕಾಣಬಹುದು. ಆದುದರಿಂದ ಅದನ್ನು ಪ್ರತಿಯೊಬ್ಬ ಕನ್ನಡಿಗನೂ ಸ್ವತಃ ನೋಡಿಯೇ ತೃಪ್ತಿಗೊಂಡು ಸ್ಫೂರ್ತಿಗೊಳ್ಳಬೇಕು. ಈ ಪಟ್ಟಣವನ್ನು ನೋಡದವನು ಕನ್ನಡಿಗನೇ ಅಲ್ಲವೆಂದು ಹೇಳಬಹುದು.

ಈ ಪಟ್ಟಣಗಳಲ್ಲದೆ ಇನ್ನೂ ಅನೇಕ ಪಟ್ಟಣಗಳ ವರ್ಣನೆಯನ್ನೂ ಕೊಡಬಹುದು. ಹಳೇಬೀಡು ಅಥವಾ ದ್ವಾರಸಮುದ್ರವು ೫ ಮೈಲು ಉದ್ದವಿತ್ತು; ಅದೊಂದೇ ಪಟ್ಟಣದಲ್ಲಿ ೭೭೦ ಗುಡಿಗಳಿದ್ದವಂತೆ. ಐಹೊಳೆಯು ವ್ಯಾಪಾರದ ಪಡುಮೂಲೆಯಿತ್ತೆಂದು ವರ್ಣನೆಗಳಿವೆ. ಬಳ್ಳೆಗಾವಿ, ದೇವಗಿರಿ, ತೇರದಾಳ, ಪಟ್ಟದಕಲ್ಲು ಮುಂತಾದ ಅನೇಕ ಪಟ್ಟಣಗಳ ವರ್ಣನೆಯನ್ನು ನಾವು ಪುಸ್ತಕಗಳಲ್ಲಿ ಓದಬಹುದು. ಕನ್ನಡಿಗರೇ, ಅವನ್ನು ಓದಿ ಆನಂದಪಡೆಯಿರಿ.


೧೩ನೆಯ ಪ್ರಕರಣ

ಕರ್ನಾಟಕದ ಕಟ್ಟಡಗಳು

"Nothing is more admirable in the great movements in India than the consummate skill and imagination with which, inspite of the extraordinary wealth of detail, every part of the whole is perfectly adjusted in its place and so balanced that aesthetical unity is always perfectly observed." -Mr. Havell

ಸಾರಾಂಶ: ಹಿಂದುದೇಶದ ಕಟ್ಟಡಗಳಲ್ಲಿ ವಿಶೇಷವಾಗಿ ಆಶ್ಚರ್ಯ ಪಡತಕ್ಕ ಸಂಗತಿಯೇನೆಂದರೆ___ಚಿತ್ರಗಳಲ್ಲಿ ಅತಿ ಸೂಕ್ಷ್ಮವಾದ ಕೆತ್ತಿಗೆಯ ಕೆಲಸವು ಕಂಡು ಬರುತ್ತದೆ. ಆದರೆ ಈ ಕೆತ್ತಿಗೆಯ ಕೆಲಸವು ಆಯಾ ಚಿತ್ರಕ್ಕೆ ಒಪ್ಪುವಂತೆ, ಯೋಗ್ಯವಾದ ಸ್ಥಳದಲ್ಲಿಯೇ ಕೊರೆಯಲ್ಪಟ್ಟಿರುವುದರಿಂದ ಆ ಚಿತ್ರದ ಒಟ್ಟು ಸೌಂದರ್ಯಕ್ಕೆ ಅದರಿಂದ ತಿಲಪ್ರಾಯವೂ ಕುಂದುಂಟಾಗಿರುವುದಿಲ್ಲ. ಹೀಗೆ ಮಾಡುವುದರಲ್ಲಿ ಅವರು ತೋರಿಸಿದ ಚಾತುರ್ಯವೂ ಕಲ್ಪಕತೆಯೂ ಉತ್ತಮವಾಗಿವೆ.

_ಹ್ಯಾವೆಲ್

"All architecture is but the expression of the national life and character"

_Ruskin

ಶಿಲ್ಪಕಲೆಯೆಲ್ಲವೂ ರಾಷ್ಟ್ರೀಯ ಜೀವನದ ಮತ್ತು ರಾಷ್ಟ್ರಸ್ವಭಾವದ ಆದರ್ಶವೇ ಆಗಿರುತ್ತದೆ.

_ರಸ್ಕಿನ್

"The craft traditions of South India form a priceless record of great civilization, to which the whole world is deeply indebted. No civilization ancient or modern has produced a higher culture, no other has succeeded better in making religion the philosophy of life, and no other has contributed so much to human knowledge."

__Mr.Havell

ಸಾರಾಂಶ: ದಕ್ಷಿಣ ಹಿಂದುಸ್ಥಾನದಲ್ಲಿಯ ಪರಂಪರಾಗತವಾದ ಕೈಗಾರಿಕೆಯ ಕೆಲಸಗಳು ಉಚ್ಚ ಸುಧಾರಣೆಯ ಉತ್ತಮವಾದ ಸಾಕ್ಷಿಗಳಾಗಿವೆ. ಈ ಬಗ್ಗೆ ಇಡೀ ಜಗತ್ತೆ ಅವುಗಳಿಗೆ ಅತ್ಯಂತ ಋಣಿಯಾಗಿದೆ. ಪ್ರಾಚೀನ ಸುಧಾರಣೆಯಲ್ಲಿಯೇ ಆಗಲಿ, ಆರ್ವಾಚಿನ ಸುಧಾರಣೆಯಲ್ಲಿಯೇ ಆಗಲಿ, ಅಷ್ಟೊಂದು ಉನ್ನತವಾದ ಸಂಸ್ಕೃತಿಯನ್ನು ಬೇರಾವುದೂ ಹುಟ್ಟಿಸಿರುವದಿಲ್ಲ; ಧರ್ಮವನ್ನು ಆಯುಷ್ಯದ ಇತಿ ಕರ್ತವ್ಯತೆಯಾಗಿ ಮಾಡುವುದರಲ್ಲಿ ಅದರಷ್ಟು ಸಿದ್ಧಿಯನ್ನು ಬೇರಾವ ಸುಧಾರಣೆಯೂ ಪಡೆಯುವುದಿಲ್ಲ; ಅಲ್ಲದೆ, ಮಾನವ ಜ್ಞಾನಭಂಡಾರಕ್ಕೆ ಅದರಿಂದಾದಷ್ಟು ಸಹಾಯವು ಬೇರಾವುದರಿಂದಲೂ ಆಗಿರುವುದಿಲ್ಲ.

___ಹ್ಯಾವೆಲ್

ಅತಿ ಪ್ರಾಚೀನ ಕಾಲದಿಂದ ಇಂದಿನವರೆಗಿನ ಇತಿಹಾಸವನ್ನು ನೋಡಿದರೆ, ಉನ್ನತ ಶಿಖರವನ್ನು ತಲ್ಪಿದ ಪ್ರತಿಯೊಂದು ರಾಷ್ಟ್ರವೂ ಶಿಲ್ಪಕಲೆಯಲ್ಲಿ ತನ್ನ ಪ್ರಾವೀಣ್ಯವನ್ನು ತೋರಿಸಿರುತ್ತದೆಂದು ಕಂಡುಬರುವುದು. ಮಿಕ್ಕ ಕಲೆಗಳ ಕುರುಹುಗಳು ಕಾಲದಿಂದ ಸ್ವಲ್ಪಾವಧಿಯಲ್ಲಿ ಅಳಿಸಿಹೋಗುವಂತೆ ಈ ಕಲೆಯ ಪರಿಣಾಮಗಳು ಅಳಿಸಿ ಹೋಗುವುದಿಲ್ಲ. ಆದುದರಿಂದ ಶಿಲ್ಪಕಲೆಯು ಇತಿಹಾಸಕ್ಕೆ ಪ್ರಧಾನವಾದ ಅಂಗವಾಗಿದೆ. ನಮ್ಮ ಕರ್ನಾಟಕದ ವೈಭವವು ಈಗ ಹಾಳಾಗಿ ಹೋಗಿರುವುದರಿಂದ ಅದನ್ನು ಈಗ ಒಂದು ಸ್ಮಶಾನಕ್ಕೆ ಹೋಲಿಸಬಹುದು. ಇಲ್ಲಿ ನಮ್ಮ ಹಿಂದಿನ ವೈಭವವೆಲ್ಲವೂ ತಾಳೀ ಕೋಟೆಯ ಕಾಳಗದಲ್ಲಿ ಸುಟ್ಟು ಬೂದಿಯಾಗಿ ಹೋಗಿದೆ. ಎಲ್ಲಿ ನೋಡಿದರೂ ಹಾಳು ಸುರಿಯುತ್ತದೆ. ಇಂಥ ಸ್ಥಿತಿಯಲ್ಲಿ ಸ್ಮಶಾನಭೂಮಿಯಲ್ಲಿ ದೊರೆಯುವ ಎಲುಬು ಮುಂತಾದ ಅವಶೇಷಗಳಿಂದಲೇ ಅಲ್ಲಿ ಸುಟ್ಟು ಬೂದಿಯಾಗಿ ಹೋದ ಜನರ ಮೈಕಟ್ಟು, ನಿಲುವಿಕೆ ಮುಂತಾದವುಗಳ ಬಗ್ಗೆ ಕಲ್ಪನೆಗಳನ್ನು ಮಾಡುವಂತೆ ನಾವು ನಮ್ಮ ಪೂರ್ವವೈಭವದ ಅವಶೇಷಗಳಾದ ಈ ಕಟ್ಟಡಗಳಿಂದಲೇ ನಮ್ಮ ಪೂರ್ವಜರ ಸಾಮರ್ಥ್ಯದ ಕಲ್ಪನೆಯನ್ನು ಮಾಡಬೇಕಾಗಿದೆ. ಆದುದರಿಂದ ನಮ್ಮ ಕರ್ನಾಟಕ-ಶಿಲ್ಪಕಲೆಯ ಇತಿಹಾಸವನ್ನು ಇಲ್ಲಿ ಸಂಕ್ಷೇಪವಾಗಿ ವರ್ಣಿಸುವೆವು.

ಜೈನ ಮತ್ತು ಬುದ್ಧರ ಕಾಲದಲ್ಲಿ ವಿಹಾರಗಳನ್ನೂ ಚೈತ್ಯಾಲಯಗಳನ್ನೂ ಕಲ್ಲುಗಳಲ್ಲಿ ಕೊರೆಯುವ ಸಂಪ್ರದಾಯವಿತ್ತು. ಈ ಕೊರೆದ ಕಲ್ಗುಡಿಗಳು ನಮ್ಮ ದೇಶದಲ್ಲಿ ವಿಪುಲವಾಗಿರುವವು. ಹಿಂದುಸ್ಥಾನದಲ್ಲಿರುವ ಈ ತರದ ಗುಡಿಗಳಲ್ಲಿ ಹತ್ತರಲ್ಲಿ ಒಂಬತ್ತು ಪಾಲು ಗುಡಿಗಳು ಈ ಪಶ್ಚಿಮ ಹಿಂದುಸ್ಥಾನದಲ್ಲಿಯೇ ಇರುವವು. ಪಶ್ಚಿಮ ಘಟ್ಟದ ಮಾರ್ಗಗಳ ನೆರೆಯಲ್ಲಿಯ ಗುಡ್ಡದ ಸಾಲುಗಳಲ್ಲಿ ಇಂಥ ಗುಡಿಗಳು ನೂರಾರು ಇರುವವು. ನಾಸಿಕ, ಕಾರ್ಲೆ, ಅಜಂತಾ, ಕಾನ್ಹೇರಿ, ಭಾಜಾ, ನಾನಘಾಟ, ಕೂಡ, ಜುನ್ನರ ಮುಂತಾದ ಸ್ಥಳಗಳಲ್ಲಿ ಈ ಮಾದರಿಯ ಗುಡಿಗಳು ತುಂಬಿವೆ. ಈ ತರದ ಹಲವು ಕೊರೆದ ಕಲ್ಗುಡಿಗಳಲ್ಲಿ ಲಿಪಿಗಳೂ ಇರುತ್ತವೆ. ಕಾರ್ಲೆ ಮತ್ತು ನಾಸಿಕ ಗುಡಿಗಳೇ ಅತ್ಯಂತ ಪ್ರಾಚೀನವಾದವುಗಳು.

ಇವುಗಳ ತರುವಾಯದ ಗುಡಿಗಳೆಂದರೆ, ಇವೇ ಗವಿಗಳ ಮಾದರಿಯ ಮೇಲೆ ಕಟ್ಟಿದ ಗುಡಿಗಳು, ಈ ತರದ ಗುಡಿಗಳು ಐಹೊಳೆ, ಪಟ್ಟದಕಲ್ಲು, ಬಾದಾಮಿಗಳಲ್ಲಿ ದೊರೆಯುತ್ತವೆ. ಇವು ಪೂರ್ಣ ಗುಡಿಗಳೂ ಅಲ್ಲ, ಗವಿಗಳೂ ಅಲ್ಲ.

ಈ ಅಖಂಡವಾದ ಕಲ್ಲುಗುಡಿಗಳಲ್ಲಿ ಕಾರ್ಲೆ, ಕಾನ್ಹೇರಿ, ಅಜಂತಾ ಇವುಗಳಲ್ಲಿಯ ಹಲವು ಗುಡಿಗಳು ನಮ್ಮ ಕರ್ನಾಟಕರಾಜರ ಆಳಿಕೆಯಲ್ಲಿಯೇ ಕೊರೆಯಲ್ಪಟ್ಟಿವೆ ಎಂಬ ಸಂಗತಿಯು ನೆನಪಿನಲ್ಲಿಡತಕ್ಕುದಾಗಿದೆ. ಕಾರ್ಲೆಯೊಳಗಿನ ದೊಡ್ಡ ಸುಂದರವಾದ ಚೈತ್ಯಾಲಯವನ್ನು ಕದಂಬ ಅರಸರ ಆಳಿಕೆಯಲ್ಲಿ ಧನಶೆಟ್ಟಿಯೆಂದೊಬ್ಬ ಧನವಂತನು ಕೊರಿಸಿದನಂತೆ. ಕಾನ್ಹೇರಿಯಲ್ಲಿ ನೂರಾರು ವಿಹಾರಗಳನ್ನು ರಾಷ್ಟ್ರಕೂಟ ಅರಸನಾದ ಅಮೋಘವರ್ಷ ಅಥವಾ ನೃಪತುಂಗ ಸಾರ್ವಭೌಮನು ಚಕ್ರವರ್ತಿಯಾಗಿದ್ದಾಗ ಅವನ ಮಾಂಡಲಿಕ ಅರಸನಾದ ಶಿಲಾಹಾರರು ಕೊರಿಸಿದರೆಂದು ಆ ಗವಿಗಳಲ್ಲಿ ಉಲ್ಲೇಖವಿದೆ. ಅಜಂತೆಯಲ್ಲಿಯ ಗುಡಿಗಳೂ ಅವುಗಳೊಳಗಿನ ಅತ್ಯಂತ ಸುಂದರವಾದ ಚಿತ್ರಗಳೂ ಬಹುತರವಾಗಿ ಬಾದಾಮಿಯ ಚಾಲುಕ್ಯರೊಳಗೆ ಅತ್ಯಂತ ಪ್ರಸಿದ್ಧನಾದ ೨ನೆಯ ಪುಲಿಕೇಶಿಯ ಕಾಲದಲ್ಲಿ ಹುಟ್ಟಿರುತ್ತದೆ.

ಬಾದಾಮಿಯ ಪ್ರಸಿದ್ಧ ವೈಷ್ಣವ ಗವಿಯನ್ನು ೨ನೆಯ ಪುಲಿಕೇಶಿಯ ಕಕ್ಕನಾದ ಮಂಗಲೇಶನೆಂಬವನು ೫೦೦ನೆಯ ಶಕದಲ್ಲಿ ಕೊರಿಸಿದನು. ಈ ಗುಡಿಯೊಳಗಿನ ಚಿತ್ರಗಳು ಬಲು ಸುಂದರವಾಗಿವೆ. ಐಹೊಳೆಯಲ್ಲಿ ಚಿಕ್ಕ ದೊಡ್ಡ ಸುಂದರವಾದ ದೇವಾಲಯಗಳು ತುಂಬಿರುತ್ತವೆ. ಇದೇ ಐಹೊಳೆಯಲ್ಲಿಯ ಒಂದು ಜೈನಗುಡಿಯಲ್ಲಿ ಅತ್ಯಂತ ಪ್ರಸಿದ್ಧವಾದ ದೊಡ್ಡ ಶಿಲಾಲಿಪಿಯು ಇಂದಿಗೂ ಅಚ್ಚಳಿಯದೆ ಉಳಿದಿರುತ್ತದೆ. ಇದರಿಂದ ದೊರೆತಷ್ಟು ಐತಿಹಾಸಿಕ ಮಾಹಿತಿಯು ಮಿಕ್ಕ ಯಾವ ಶಿಲಾಲಿಪಿಯಿಂದಲೂ ದೊರೆತಿಲ್ಲ. ೨ನೆಯ ಪುಲಿಕೇಶಿಯ ಮತ್ತು ಅವನ ಪೂರ್ವಜರ ವಿಷಯಕ್ಕೆ ಆ ಲಿಪಿಯು ಮಹತ್ವದ ಸಂಗತಿಯನ್ನು ವಿವರಿಸುತ್ತದೆ. ಪಟ್ಟದಕಲ್ಲೊಳಗೆ ಒಂದೇ ಕಡೆಗೆ ಸಾಲಾಗಿ ೮-೯ ಒಂದಕ್ಕಿಂತ ಒಂದು ಸುಂದರವಾದ ದೇವಾಲಯಗಳು ನೋಡತಕ್ಕವಾಗಿವೆ. ಅವುಗಳಲ್ಲೆಲ್ಲ ವಿರೂಪಾಕ್ಷ ದೇವಾಲಯವು ದೊಡ್ಡದು. ಇದನ್ನು ೨ನೆಯ ಪುಲಿಕೇಶಿಯ ವಂಶಜನಾದ ವಿಕ್ರಮಾದಿತ್ಯನೆಂಬವನ ಹೆಂಡತಿಯಾದ ಲೋಕಮಹಾದೇವಿಯು ೬೫೬ನೆಯ ಶಕದಲ್ಲಿ ತನ್ನ ಗಂಡನು ಪಲ್ಲವರನ್ನು ಸೋಲಿಸಿದ್ದರ ಸೂಚನಾರ್ಥವಾಗಿ ಕಟ್ಟಿಸಿದಳು. ಈ ದೇವಾಲಯಗಳಲ್ಲದೆ ಇಟಗಿ, ಲಕ್ಕುಂಡಿ, ಲಕ್ಷ್ಮೇಶ್ವರ, ಹಾನಗಲ್ಲ, ಕುಕನೂರ ಮುಂತಾದ ಅನೇಕ ಸ್ಥಳಗಳಲ್ಲಿಯೂ ದೇವಾಲಯಗಳು ನೋಡತಕ್ಕವಾಗಿವೆ. ಈ ತರದ ಗುಡಿಗಳಿಗೆ ಚಾಲುಕ್ಯಪದ್ಧತಿಯ ಕಟ್ಟಡಗಳೆಂದು ಕರೆಯುವ ವಾಡಿಕೆಯುಂಟು. ಈ ಪದ್ಧತಿಯ ಗುಡಿಗಳ ವಿಷಯವಾಗಿ ಪ್ರಸಿದ್ಧ ಶಿಲ್ಪಶಾಸ್ತ್ರಜ್ಞನಾದ ಡಾ. ಫರ್ಗ್ಯುಸನ್ ಎಂಬನು ಹೇಳುವುದೇನೆಂದರೆ:

"The area over which the style extended includes Mysore and all the Kanarese Country, its birth place in the west-eastwards its southern limit was the Tungabhadra and Krishna rivers; and on the North it perhaps extended to a line drawn from the South end of the Chilka lake towards Nagpur, and thence Westwards and Southwards to the coast. The Dharwar District may be regarded as the cradle of the style."

ಸಾರಾಂಶ: ಈ ಚಾಲುಕ್ಯ ಪದ್ಧತಿಯ ಗುಡಿಗಳು ಅವುಗಳ ಉಗಮಸ್ಥಾನಗಳಾದ ಮೈಸೂರು ಪ್ರಾಂತದಲ್ಲಿಯೂ ಮಿಕ್ಕ ಕರ್ನಾಟಕದಲ್ಲಿಯೂ ವಿಶೇಷವಾಗಿ ಕಂಡುಬರುತ್ತವೆ. ಪೂರ್ವದಿಕ್ಕಿಗೆ ತುಂಗಭದ್ರಾ ಮತ್ತು ಕೃಷ್ಣಾನದಿಗಳೇ ಅವುಗಳ ದಕ್ಷಿಣ ಗಡಿಯು ಚಿಲ್ಕ ಸರೋವರದ ದಕ್ಷಿಣ ತುದಿಯಿಂದ ಮೇಲೆ ಉತ್ತರಕ್ಕೆ ನಾಗಪುರದವರೆಗೂ ಅಲ್ಲಿಂದ ಪಶ್ಚಿಮಕ್ಕೂ ದಕ್ಷಿಣಕ್ಕೂ ಸಮುದ್ರ ತೀರದವರೆಗು ಈ ಗುಡಿಗಳು ತುಂಬಿರುತ್ತವೆ.

ಧಾರವಾಡ ಜಿಲ್ಲೆಯಂತೂ ಇಂಥ ಗುಡಿಗಳ ಹುಟ್ಟುಭೂಮಿಯೇ ಆಗಿದೆ.

ಕರ್ನಾಟಕ ರಾಜರು ಆಳಿದ ಪ್ರದೇಶವೆಲ್ಲವೂ ಈ ಚಾಲುಕ್ಯಪದ್ಧತಿಯ ಗುಡಿಗಳಿಂದ ತುಂಬಿದೆ. ಆದುದರಿಂದ ಕರ್ನಾಟಕವು ಇಂಥ ಗುಡಿಗಳ ಆಗರವೆಂದೂ ಧಾರವಾಡ ಜಿಲ್ಲೆಯು ತವರುಮನೆಯೆಂದೂ ಹೇಳಬಹುದು. ಈ ಪದ್ಧತಿಗೆ ಚಾಲುಕ್ಯ ಪದ್ಧತಿಯೆನ್ನಬೇಕೋ ಬೇಡವೋ ಎಂಬ ವಾದದಲ್ಲಿ ನಾವು ಪ್ರವರ್ತಿಸುವದಿಲ್ಲ, ಚಾಲುಕ್ಯರೂ ರಾಷ್ಟ್ರಕೂಟರೂ ಹೊಸ ಚಾಲುಕ್ಯರೂ ಹೊಯ್ಸಳರೂ ಕರ್ನಾಟಕರೇ ಆಗಿರುವುದರಿಂದ ಅವರು ಕಟ್ಟಿದ ಗುಡಿಗಳ ಪದ್ಧತಿಗೆ ಇತಿಹಾಸ ದೃಷ್ಟಿಯಿಂದ ಕರ್ನಾಟಕ ಪದ್ಧತಿ ಯೆಂದೇ ಕರೆಯಬಹುದು.

ಈ ನಮ್ಮ ಕಟ್ಟಡಗಳಲ್ಲಿ ಅತ್ಯಂತ ಪ್ರಸಿದ್ಧವಾದ ಕೆಲವು ದೇವಾಲಯಗಳ ವರ್ಣನೆಯನ್ನು ನಾವು ಇದರಡಿ ಕೊಡುತ್ತೇವೆ.

ಜಗತ್ತಿನೊಳಗೆಲ್ಲ ಅತ್ಯಂತ ಅದ್ಭುತ ಕೃತ್ಯವೆಂದು ಹೆಸರುಗೊಂಡು, ಪರದೇಶೀಯ ಪ್ರವಾಸಿಕರನ್ನೂ ಶಿಲ್ಪಜ್ಞರನ್ನೂ ತನ್ನ ಕಡೆಗೆ ಎಡೆಬಿಡದೆ ಎಳೆದುಕೊಂಡು ಬರುವ ದೇವಾಲಯವಾವುದೆಂದರೆ, ನಾಸಿಕದ ಉತ್ತರದಲ್ಲಿ ಮೊಗಲಾಯಿಯೊಳಗೆ `"ಕನ್ನಡ"ವೆಂಬ ತಾಲೂಕಿನಲ್ಲಿ ವೇರೂಳ ಎಂಬ ಗ್ರಾಮದೊಳಗಿನ ಕೈಲಾಸವೆಂಬ ದೇವಾಲಯವು. ಒಂದು ದೊಡ್ಡ ಗುಡ್ಡವನ್ನೇ ಪೂರ್ಣವಾಗಿ ಕೊರೆದು ವಿಸ್ತೀರ್ಣವಾಗಿರುವ ಈ ಅಖಂಡವಾದ ಸುಂದರ ದೇವಾಲಯವನ್ನು ನಿರ್ಮಿಸಿರುತ್ತಾರೆ. ದೂರದಿಂದ ನೋಡಿದರೆ ಕಟ್ಟಿಸಿದ ಗುಡಿಯೆಂದೇ ಭಾಸವಾಗುತ್ತದೆ. ವೇರೂಳ ಗುಡ್ಡದಲ್ಲಿ ಸಾಲಾಗಿ ಸುಮಾರು ೩೪ ದೊಡ್ಡ ದೊಡ್ಡ ಕೊರೆದ ಗುಡಿಗಳುಂಟು. ಇಷ್ಟು ವಿಸ್ತೀರ್ಣವಾದ ಸಭಾಮಂಟಪಗಳನ್ನು ಕರ್ನಾಟಕದ ಶಿಲ್ಪಿಗರು ಹೇಗೆ ಕಡಿದರೆಂಬುದೇ ಅತ್ಯಂತ ಆಶ್ಚರ್ಯಜನಕವಾದ ಸಂಗತಿಯಾಗಿದೆ. ಕೊರೆದು ತೆಗೆದ ಒಳಗಿನ ಕಲ್ಲುಬಂಡೆಗಳು ಒಂದು ದೊಡ್ಡ ಗುಡ್ಡವೇ ಆಗಬಹುದು. ಅವೆಲ್ಲವನ್ನೂ ಹೇಗೆ ತೆಗೆದರೋ ಅವು ಈಗ ಎಲ್ಲಿವೆಯೋ ಮುಂತಾದ ಸಂಗತಿಗಳು ಊಹಿಸಲಶಕ್ಯವಾಗಿವೆ. ಈ ೩೪ ಗುಡಿಗಳಲ್ಲಿ ಕೈಲಾಸ ಗುಡಿಯೇ ಅತ್ಯಂತ ಸುಂದರವಾದದ್ದೂ ಭವ್ಯವಾದದ್ದೂ ಆಗಿದೆ. ಇದನ್ನು ನಮ್ಮ ರಾಷ್ಟ್ರಕೂಟ ಅರಸನಾದ ಕೃಷ್ಣ (೭೫೩-೭೭೫) ನೆಂಬುವನು ಕೊರೆಸಿದನು. ಬಡೋದೆಯಲ್ಲಿ ಸಿಕ್ಕಿದ ತಾಮ್ರಪಟಗಳಲ್ಲಿ ಈ ಗುಡಿಯ ವರ್ಣನೆಯು ದೊರೆಯುತ್ತದೆ.
ಈ ಗುಡಿಯು "ಸ್ವಯಂಭೂ" ಗುಡಿಯೇ ಸರಿ: ಇದು ಮನುಷ್ಯ ಕೃತಿಯಾಗಿರಲಾರದು. ಮಾನವರಿಗೆ ಇಂಥ ಅದ್ಭುತ ಗುಡಿಯನ್ನು ಕಟ್ಟುವ ಶಕ್ತಿಯೆಲ್ಲಿ? ಎಂದು ಅಲ್ಲಿ ವರ್ಣನೆಯುಂಟು. ವಿಶ್ವಕರ್ಮನೆಂಬ ಶಿಲ್ಪಿಗನು ಇದನ್ನು ಕೊರೆದನಂತೆ. ಈ ಗುಡಿಯನ್ನು ಕೊರೆದ ಮೇಲೆ ಅವನಿಗೆ ಅತ್ಯಂತ ಆನಂದವಾಗಿ, ಇಂಥ ಗುಡಿಯನ್ನು ತಾನು ಹೇಗೆ ರಚಿಸಿದೆನೆಂಬುದು ತನಗೇ ತಿಳಿಯದಷ್ಟು ಆಶ್ಚರ್ಯವಾಯಿತಂತೆ!

ಈ ದೇವಾಲಯವನ್ನು ನೋಡಿದ ಕೂಡಲೆ, ಮನುಷ್ಯನ ಮನಸ್ಸು ಮೊದಲು ದಂಗುಬಡೆದು, ಆಶ್ಚರ್ಯ-ಆನಂದಾದಿ ಮನೋವೃತ್ತಿಗಳು ಅಲ್ಲಿ ಉಕ್ಕೇರಿ, ನೋಡುವವನು ನೋಡುವುದನ್ನು ಬಿಟ್ಟು ಸ್ವಸ್ಥವಾಗಿ ನಿಲ್ಲುತ್ತಾನೆ ಮತ್ತು ನಿಂತಲ್ಲಿಯೇ ನಿಂತು, ಮೇಲೆ ಕೆಳಗೆ ಹಿಂದು ಮುಂದೆ ನೋಡಿ ಅಬ್ಬಬ್ಬ ಇದು ಏನು ಅದ್ಭುತ ಕೃತಿ! ಎಂದು ಉದ್ಗಾರ ತೆಗೆಯುತ್ತಾನೆ. ಕೆಲವು ಹೊತ್ತಿನ ಮೇಲೆ ಅವನು ಅದನ್ನು ನೋಡಲಿಕ್ಕೆ ಮುಂದಕ್ಕೆ ಒಂದೊಂದೇ ಹೆಜ್ಜೆಯನ್ನಿಕ್ಕುತ್ತಾನೆ. ಆ ದೇವಾಲಯದ ಶೋಭೆಯನ್ನೂ ಭವ್ಯತೆಯನ್ನೂ ವಿಶಾಲತೆಯನ್ನೂ ನೋಡಿ ಅವನ ಮನಸ್ಸಿನಲ್ಲಿ ಅದನ್ನು ಕಟ್ಟಿದ ಕುಶಲ ಶಿಲ್ಪಿಗರ ವಿಷಯದಲ್ಲಿ ಪೂಜ್ಯ ಬುದ್ಧಿಯೂ ಅದರವೂ ಪ್ರತಿ ಕ್ಷಣಕ್ಕೆ ಬೆಳೆಯುತ್ತಾ ಹೋಗುತ್ತವೆ. ಈ ದೇವಾಲಯದಲ್ಲಿ ಒಳಗಡೆ ಮೇಲ್ಬದಿಯಲ್ಲಿ ಅಲ್ಲಲ್ಲಿಗೆ ಸುಂದರವಾಗಿ ಬಣ್ಣವು ಇಂದಿಗೂ ಅಚ್ಚಳಿಯದೆ ಉಳಿದಿರುತ್ತದೆ. ಈ ಗುಡಿಯು ಹುಟ್ಟಿ ಈಗ ಸುಮಾರು ೧೨೦೦ ವರ್ಷಗಳಾದವು. ಅಂದ ಮೇಲೆ ಅಷ್ಟು ಹಿಂದಿನ ಬಣ್ಣವನ್ನು ನೋಡಿ ಕರ್ನಾಟಕದವರಿಗೆ ಆನಂದವಾಗಲಿಕ್ಕಿಲ್ಲವೊ? ಮನೆಯಲ್ಲಿ ಕುಳಿತು ನೀವು ಎಷ್ಟೇ ಅದ್ಭುತ ದೇವಾಲಯವನ್ನು ಹುಟ್ಟಿಸಬೇಕೆಂದು ಮನಸ್ಸಿನಲ್ಲಿ ಮಂಡಿಗೆ ಮಾಡಿದರೂ ಇಂಥ ಅದ್ಭುತ ಮಂಡಿಗೆಯನ್ನು ಮಾಡಲಾರಿರಿ. ಒಬ್ಬ ಗಣಿತಜ್ಞನು ಈ ಕೈಲಾಸ ಮತ್ತು ಅದರ ಹತ್ತರಿರುವ ಗುಡಿಗಳನ್ನು ನೋಡಿ ಲೆಕ್ಕ ಹಾಕಿ, ಈ ಗುಡಿಗಳನ್ನು ಕೊರೆಯಲಿಕ್ಕೆ ೪೮ ಲಕ್ಷ ಜನರು ಒಂದೇ ಸಮನಾಗಿ ೨೧ ವರುಷಗಳವರೆಗೆ ಕೆಲಸ ಮಾಡಬೇಕಾದೀತು ಎಂದೆನ್ನುತ್ತಾನೆ! ಇರಲಿ.

ಕೃಷ್ಣರಾಜನು ಸ್ವತಃ ತಾನೇ ಅಲ್ಲಿಯ ಲಿಂಗವನ್ನು ಮಾಣಿಕ-ರತ್ನ ಮುಂತಾದ ಅಸಂಖ್ಯಾತವಾದ ಆಭರಣಗಳಿಂದ ಅಲಂಕರಿಸಿದನಂತೆ. ಸಾರಾಂಶ: ಈ ಗುಡಿಯ ವರ್ಣನೆಯನ್ನು ಬಾಯಿಯಿಂದ ಹೇಳುವುದು ಅಥವಾ ಲೆಕ್ಕಣಿಕೆಯಿಂದ ವರ್ಣಿಸುವುದು ಶಕ್ಯವಿಲ್ಲ. ಅದನ್ನು ಕಣ್ಣಿನಿಂದ ನೋಡಬೇಕು. ಎಷ್ಟು ನೋಡಿದರೂ ಕಣ್ಣುಗಳಿಗೆ ತೃಪ್ತಿಯಾಗುವುದಿಲ್ಲ. ಇದೇ ಗುಡಿಯನ್ನು ನೋಡಲಿಕ್ಕೆ ನಾನು ಹೋದಾಗ ಈ ಗುಡಿಗಳ ಸಾಲಿನಲ್ಲಿರುವ ಒಂದು ಗುಡಿಯಲ್ಲಿ ನಮ್ಮ ಕಣ್ಣಿಗೆ ಕನ್ನಡ ಶಿಲಾಲೇಖವೊಂದು ದೃಷ್ಟಿಗೆ ಬಿದ್ದಿರುವ ಸಂಗತಿಯನ್ನು ಹಿಂದೆ ಉಲ್ಲೇಖಿಸಿದ್ದೇನೆ, ಕನ್ನಡಿಗರೇ, ಈ ಕೈಲಾಸವನ್ನು ಕಣ್ಣಿನಿಂದ ನೋಡಿ ಧನ್ಯರಾಗಬಾರದೇ?

"In the arehitecture of the various caves is to be read a remarkbly extended record of the history of the development of the art, during a period of five to eight centuries."

"ಆ ಕೊರೆದ ಗವಿಗಳಲ್ಲಿಯ ಶಿಲ್ಪದಲ್ಲಿ ಐದನೆಯ ಶತಮಾನದಿಂದ ಎಂಟನೆಯ ಶತಮನದವರೆಗೆ ಶಿಲ್ಪಕಲೆಯು ಹೇಗೆ ಅಭಿವೃದ್ಧಿಯನ್ನು ಹೊಂದಿತೆಂಬುದು ಚೆನ್ನಾಗಿ ಗೊತ್ತಾಗುತ್ತದೆ."

೨ನೆಯ ಪುಲಿಕೇಶಿಯ ಚಿತ್ರವು ದೊರೆತುದು ಇದೇ ಗುಡಿಗಳಲ್ಲಿಯೇ.

ಇನ್ನು ಪಶ್ಚಿಮ ಚಾಲುಕ್ಯರ ಕಾಲಕ್ಕೆ ಕಟ್ಟಲ್ಪಟ್ಟ ಒಂದು ಗುಡಿಯನ್ನು ವರ್ಣಿಸುವೆವು. ಚಾಲುಕ್ಯ ವಿಕ್ರಮನ ಕಾಲಕ್ಕೆ ಇಟಗಿಯಲ್ಲಿ ಅವನ ಮಹಾಪ್ರಧಾನನೂ ದಂಡನಾಯಕನೂ ಕನ್ನಡಸಂಧಿವಿಗ್ರಹಿಯೂ ಆದ ಮಹಾದೇವನೆಂಬವನು ಸುಂದರವಾದ ಮಹಾದೇವರ ಗುಡಿಯೊಂದನ್ನು ಕಟ್ಟಿಸಿ ಇಟಗಿಯೊಳಗಿನ ನಾಲ್ಕು ನೂರು ಮಹಾಜನರಿಗೆ ಭೂಮಿಗಳನ್ನು ದಾನವಾಗಿ ಕೊಟ್ಟನು. ಈ ಗುಡಿಯಲ್ಲಿಯ ಶಿಲಾಲೇಖದಲ್ಲಿ ಈ ಗುಡಿಗೆ "ದೇವಾಲಯ ಚಕ್ರವರ್ತಿ" ಎಂದು ಹೆಸರಿದೆ. ಈ ಗುಡಿಯ ವಿಷಯದಲ್ಲಿ ಫರ್ಗ್ಯುಸನ್ನನು ಹೇಳಿರುವುದೇನೆಂದರೆ:

"Must be regarded as one of the most highly finished and architecturally perfect of the Chalukyan shrines, that have come down to us. In the opinion of the late Meadows Taylor the carving of the some of the pillars and of the lintels and arehitraves of the doors is quite beyond description. No chiselled work in silver and goldpossibly be finer."

ಸಾರಾಂಶ: ಸಂಪೂರ್ಣವಾಗಿಯೂ, ಶಿಲ್ಪ ಶಾಸ್ತ್ರದೃಷ್ಟಿಯಿಂದ ಅತ್ಯಂತ ಸುಂದರವಾಗಿಯೂ ಕಟ್ಟಲ್ಪಟ್ಟ ಚಾಲುಕ್ಯ ಪದ್ಧತಿಯ ಗುಡಿಗಳಲ್ಲಿ ಇದನ್ನು ಗಣನೆ ಮಾಡಬೇಕು. ಕೆಲವು ಕಂಬಗಳ ಛಾವಣಿಗಳ ಮತ್ತು ಬೋದುಗೆಗಳ ಕೆತ್ತಿಗೆಯಂತೂ ಮಿ. ಮಿಡೋ ಟೇಲರ್ ಇವರು ಹೇಳುವಂತೆ ವರ್ಣಿಸಲಳವಲ್ಲದಷ್ಟು ಅಪ್ರತಿಮವಾಗಿದೆ. ಬೆಳ್ಳಿಬಂಗಾರಗಳಲ್ಲಿ ಕೂಡ ಅಷ್ಟು ಸುಂದರವಾದ ಕೆತ್ತಿಗೆಯನ್ನು ಕೆತ್ತುವುದು ಅಸಾಧ್ಯವು.

ಡಾ. ಫರ್ಗ್ಯುಸನ್ನನಂಥ ಶಿಲ್ಪಶಾಸ್ತ್ರಜ್ಞನು ಈ ಗುಡಿಯ ಶಿಲ್ಪಕಲೆಯು ಪೂರ್ಣತ್ವವನ್ನು ಹೊಂದಿರುತ್ತದೆಂದೂ, ಮಿಡೋ ಟೇಲರನಂಥವರು ಬೆಳ್ಳಿ ಬಂಗಾರಗಳಲ್ಲಿ ಕೂಡ ಇಷ್ಟು ಕುಸುರಿ ಕೆಲಸವನ್ನು ಕೆತ್ತುವುದು ಅಶಕ್ಯವೆಂದೂ ವರ್ಣಿಸುವಂಥ ಗುಡಿಯನ್ನು ನಮ್ಮ ಕರ್ನಾಟಕಸ್ಥನೊಬ್ಬನು ಕಟ್ಟಿಸಿರಲು ಅದರ ಅಭಿಮಾನವು ನಮಗೆ ಏನೂ ಇರಬೇಡವೆ?

ಪೂರ್ವಚಾಲುಕ್ಯರು ಪ್ರಾರಂಭಿಸಿದ ಶಿಲ್ಪಶಾಸ್ತ್ರವು ಹೊಯ್ಸಳ ಬಲ್ಲಾಳರ ಕಾಲಕ್ಕೆ ಪರಿಣತಿಯನ್ನು ಹೊಂದಿತೆಂದು ಹೇಳಬಹುದು. ಹಳೇಬೀಡು ಅಥವಾ ದ್ವಾರಸಮುದ್ರ ಮತ್ತು ಬೇಲೂರಿನಲ್ಲಿಯ ದೇವಾಲಯಗಳೆಂದರೆ ಇಡೀ ಹಿಂದುಸ್ಥಾನದಲ್ಲಿ ಇರುವ ಯಾವತ್ತೂ ಗುಡಿಗಳಲ್ಲಿ ಅತ್ಯಂತ ಸುಂದರವಾದವುಗಳೆಂದು ಹೇಳಬಹುದು. ಅಷ್ಟೇಕೆ? ಪೃಥ್ವಿಯಲ್ಲಿಯ ಅತ್ಯಂತ ಸುಂದರವಾದ ಗುಡಿಗಳಲ್ಲಿಯೇ ಇವು ಎಣಿಸಲ್ಪಟ್ಟಿವೆ. ಡಾ. ಫರ್ಗ್ಯುಸನ್ನನು ಇವುಗಳ ವಿಷಯವಾಗಿ ಬರೆದಿರುವುದೇನೆಂದರೆ:

"There are many buildings in India, which are unsurpassed for delicacy of detail, by any in the world; but the temples at Belur and Halebid surpass even these, for freedom of handling and richness of fancy. The amount of labour which each facet, of this porch (Belur) displays is such as I believe never was bestowed on any surface of equal extent in any building in the world.'"

ಇದರ ಸಾರಾಂಶವೇನೆಂದರೆ: ಹಿಂದುಸ್ಥಾನದಲ್ಲಿ, ಪೃಥ್ವಿಯಲ್ಲಿಯ ಮಿಕ್ಕ ಗುಡಿಗಳನ್ನು ಅತ್ಯಂತ ಸೂಕ್ಷ್ಮವಾದ ಕೆಲಸದಲ್ಲಿ ಮೀರಿಸುವಂಥ ಅನೇಕ ಗುಡಿಗಳುಂಟು. ಅವುಗಳಲ್ಲಿಯೂ ಬೇಲೂರು ಮತ್ತು ಹಳೇಬೀಡುಗಳಲ್ಲಿಯ ಗುಡಿಗಳೇ ಶ್ರೇಷ್ಠವಾದವುಗಳು. ಇಷ್ಟು ಕುಸುರಿನ ಕೆಲಸವು ಪೃಥ್ವಿಯಲ್ಲಿಯ ಮಿಕ್ಕ ಯಾವ ಗುಡಿಯಲ್ಲಿಯೂ ಕಂಡುಬರುವುದಿಲ್ಲ.

ಹಳೇಬೀಡಿನ ಗುಡಿಯ ವಿಷಯದಲ್ಲಿ ಅವನು ಹೇಳಿರುವುದೇನಂದರೆ:

"It may probably be considered, as one of the most marvellous exhibitions of human labour to be found even in the patient east. No two facets of the temples are the same, every convolution of every seroll is different. No two canopies in the whole building are alike; and every part exhibits joyous exuberance of fancy scorning every mechanical restraint."

ಸಾರಾಂಶ: "ಮಾನವ ಕೃತಿಗಳಲ್ಲಿ ಇದೊಂದು ಆಶ್ಚರ್ಯಜನಕವಾದ ಕೃತಿಯೆಂದೇ ಹೇಳಬಹುದು. ಗುಡಿಗಳಲ್ಲಿ, ಒಂದು ಚಿತ್ರದ ಮೇಲ್ಮೈಯಂತೆ ಮತ್ತೊಂದು ಚಿತ್ರದ ಮೇಲ್ಮೈಯಿರುವುದಿಲ್ಲ; ಪ್ರತಿಯೊಂದು ಸುಳುವಿನ ತಿರುಪುಗಳು ಬೇರೆ ಬೇರೆ ಇರುತ್ತವೆ. ಒಂದರಂತೆ ಒಂದು ಗುಮಟವಿಲ್ಲ. ಕೈವಾಡದವರು ಪ್ರತಿಯೊಂದು ಕಡೆಗೂ ಕೈ ಬಿಗಿಹಿಡಿಯದೆ ಕೆಲಸ ಮಾಡಿರುವುದರಿಂದ ಎಲ್ಲಿ ನೋಡಿದರೂ ಸುಂದರವಾದ ಶಿಲ್ಪಕಲೆಯ ಸುಗ್ಗಿಯೇ ದೃಷ್ಟಿಗೋಚರವಾಗುತ್ತದೆ."

ಎಂದು ಮುಂತಾಗಿ ಮಾಡಿದ ವರ್ಣನೆಯನ್ನು ಕನ್ನಡಿಗರು ಮರೆಯುವದು ಹೇಗೆ?

ಹಳೇಬೀಡಿನ ಹೊಯ್ಸಳೇಶ್ವರನ ಮತ್ತು ಕೇದಾರೇಶ್ವರನ ಗುಡಿಗಳ ವಿಷಯವಾಗಿ ಅವನು ಮತ್ತೂ ಬರೆದಿರುವದೇನೆಂದರೆ:

"The great temple, had it been completed, is one of the buildings on which the advocate of Hindu arechitecture would desire to take his stand---and if carved out with the richness of detail, exhibited in Kedareshwar, would be made up a whole, which would be difficult to rival anywhere. The Kedareshwar temple is one of the most exquisite specimens of Chalukyan architecture in existence, and one of the most typical."

ಸಾರಾಂಶ: ಈ ಗುಡಿಯು ಪೂರ್ಣವಾಗಿ ಕಟ್ಟಲ್ಪಟ್ಟಿದ್ದರೆ, ಹಿಂದೂ ಶಿಲ್ಪಕಲೆಯ ಪುರಸ್ಕರ್ತರು ಆಧಾರಭೂತವಾಗಿ ತೆಗೆದುಕೊಳ್ಳುವ ಗುಡಿಗಳಲ್ಲಿ ಇದು ಒಂದಾಗುತ್ತಿತ್ತು. ಮತ್ತು ಕೇದಾರೇಶ್ವರ ಗುಡಿಯಲ್ಲಿಯಂತೆ ಇಲ್ಲಿಯೂ ಅತ್ಯಂತ ಸೂಕ್ಷ್ಮವಾದ ಕೆಲಸವು ಮಾಡಲ್ಪಟ್ಟಿದ್ದರಂತೂ ಈ ಗುಡಿಯಂಥ ಸುಂದರವಾದ ಮತ್ತೊಂದು ಗುಡಿಯನ್ನು ಜಗತ್ತಿನಲ್ಲಿ ಕಾಣುವುದೇ ದುರ್ಲಭವಾಗುತ್ತಿತ್ತು. ಕೇದಾರೇಶ್ವರ ಗುಡಿಯು ಚಾಲುಕ್ಯಪದ್ಧತಿಯ ಗುಡಿಗಳಲ್ಲಿ ಅತ್ಯಂತ ಸುಂದರವಾದುದೆಂದು ಹೇಳಬಹುದು.

ಹೊಯ್ಸಳೇಶ್ವರ ಗುಡಿಯನ್ನು ಕಟ್ಟುವ ಕೆಲಸವು ೮೬ ವರ್ಷಗಳವರೆಗೆ ಒಂದೇ ಸಮನಾಗಿ ನಡೆದಿತ್ತಂತೆ! ಆದರೂ ಅದು ಮುಗಿದಿರುವದಿಲ್ಲ. ಈ ಗುಡಿಯು ಮುಗಿದಿದ್ದರೆ, ಇಂಥ ಗುಡಿಯು ಜಗತ್ತಿನಲ್ಲಿ ಮತ್ತೊಂದು ಇರುತ್ತಿರಲಿಲ್ಲವೆಂದು ನಿರ್ವಿವಾದವಾಗಿ ಹೇಳಬಹುದಾಗಿತ್ತು. ಕರ್ನಾಟಕರೆ! ನಿಮ್ಮ ಪೂರ್ವಜರ ವೈಭವವನ್ನು ಕೇಳಿ ನಿಮಗೆ ಆನಂದವುಂಟಾಗದೋ? ಇಂಥ ಮಹತ್ಕೃತ್ಯಗಳು ಶಾಂತತೆಯಿಲ್ಲದೆ ಜರಗುವವೇನು? ಆದರೂ ಬ್ರಿಟಿಷ ರಾಜರು ಬರುವ ಮೊದಲು ದೇಶದಲ್ಲಿ ಶಾಂತತೆಯಿರಲಿಲ್ಲ. ಎಲ್ಲಿ ನೋಡಿದರೂ ಅರಾಜಕತೆಯಿತ್ತೆಂದು ನಮಗೆ ಆಗದವರು ಹೇಳುತ್ತಾರೆ. ನಾವು ಬಾಯಿಮುಚ್ಚಿಕೊಂಡು ಕೇಳುತ್ತೇವೆ. ಇಂಥ ದುರ್ಬಲತನಕ್ಕೇನೆನ್ನಬೇಕು?

ಈ ಬಗೆಯಾಗಿ, ಹಳೆಯ ಚಾಲುಕ್ಯ, ರಾಷ್ಟ್ರಕೂಟ, ಹೊಸಚಾಲುಕ್ಯ, ಹೊಯ್ಸಳ ಮುಂತಾದ ಅರಸರ ಕಾಲದ ಒಂದೊಂದೇ ವರ್ಣನೆಯನ್ನು ಕೊಟ್ಟದ್ದಾಯಿತು. ಇನ್ನು ಕೊನೆಯ ವಂಶವಾದ ವಿಜಯನಗರದ ಕಾಲದಲ್ಲಿಯ ಕಟ್ಟಡವೊಂದನ್ನು ಕುರಿತು ತುಸು ಹೇಳಿ ಈ ಬೆಳೆದ ಪ್ರಕರಣವನ್ನು ಮುಗಿಸುವೆವು.

ಹಂಪೆ ಅಥವಾ ವಿಜಯನಗರವನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು. ಅಲ್ಲಿ ಸುಮಾರು ೨೦೦೦ ಗುಡಿಗಳಿದ್ದುವಂತೆ! ಆ ಪಟ್ಟಣದೊಳಗಿನ ಅತ್ಯಂತ ಪ್ರಸಿದ್ಧವಾದ ವಿಜಯವಿಠ್ಠಲನ ಗುಡಿಯೊಂದನ್ನೇ ಇಲ್ಲಿ ವರ್ಣಿಸುವೆವು. ಈ ಗುಡಿಯು ವೇರೂಳದ ಕೈಲಾಸ ಗುಡಿಯನ್ನು ಹೋಲುತ್ತದೆ. ಈ ದೇವಾಲಯವನ್ನು ಕಟ್ಟುವ ಕೆಲಸವು ಕೃಷ್ಣದೇವರಾಯನ ಕಾಲಕ್ಕೆ ಪ್ರಾರಂಭವಾಯಿತು. ಮುಂದೆ ಅಚ್ಯುತರಾಯ ಮತ್ತು ಸದಾಶಿವರಾಯನ ಕಾಲದಲ್ಲಿಯೂ ಆ ಕಟ್ಟಡದ ಕೆಲಸವು ನಡೆಯುತ್ತಲೇ ಇತ್ತು. ಆದರೆ ೧೫೬೫ನೆಯ ಇಸವಿಯಲ್ಲಿ ತಾಳೀಕೋಟೆಯ ಕಾಳಗವಾದುದರಿಂದ ಗುಡಿಯ ಕಟ್ಟುವಿಕೆಯು ಅಲ್ಲಿಗೆ ನಿಂತುಹೋಯಿತು. ಮದ್ರಾಸ ಆರ್ಕಿಯಾಲಾಜಿಕಲ್ ಸರ್ವೆಯ ಸುಪರಿಂಟೆಂಡೆಂಟರಾದ ಮಿ. ರೇ ಎಂಬುವರು ಇದನ್ನು ವರ್ಣಿಸಿರುವದೇನೆಂದರೆ:

"It shows the extreme limit in florid magnificence to which the style advanced. The building is wholly in granite and carved with a, boldness and expression of power no where surpassed in the buildings of its class."

ಸಾರಾಂಶ: ಈ ತರದ ಕಟ್ಟಿನ ಗುಡಿಗಳಲ್ಲಿ ಹೂಬಳ್ಳಿಗಳ ಸುಳುವುಗಳನ್ನು ಕೆತ್ತುವ ಕೆಲಸವು ಎಷ್ಟು ಪರಿಣತಾವಸ್ಥೆಯನ್ನು ಹೊಂದಿತೆಂಬುದಕ್ಕೆ ಈ ಗುಡಿಯು ಉತ್ಕೃಷ್ಟವಾದ ಉದಾಹರಣೆಯಾಗಿದೆ. ಗುಡಿಯು ಅಚ್ಚ ಕರೆ ಕಲ್ಲಿನದು. ಈ ತರದ ಗುಡಿಗಳಲ್ಲಿ, ಇಷ್ಟು ಗಂಭೀರವಾಗಿ ಎದ್ದು ಕಾಣಿಸುವ ಗುಡಿಯು ಬೇರೆಲ್ಲಿಯೂ ಕಾಣಬರುವುದಿಲ್ಲ.

ಈ ಮೇಲೆ ವರ್ಣಿಸಿದ ಗುಡಿಗಳಲ್ಲದೆ ಕರ್ನಾಟಕ ರಾಜರೂ ಮತ್ತು ಧನವಂತರೂ ಕಟ್ಟಿಸಿದ ಎಷ್ಟೋ ಗುಡಿಗಳು ನೋಡತಕ್ಕವಾಗಿವೆ. ಕಾರ್ಲೆ, ಕಾನ್ಹೇರಿ, ಲಕ್ಕುಂಡಿ, ಐಹೊಳೆ, ಪಟ್ಟದಕಲ್ಲು ಮುಂತಾದ ಸ್ಥಳಗಳನ್ನು ಕರ್ನಾಟಕಸ್ಥರು ನೋಡಿ ಆನಂದಪಡಬೇಕು. ನಾವು ಮೇಲೆ ವರ್ಣಿಸಿದ ಗುಡಿಗಳನ್ನು ನೋಡದಿದ್ದರೆ "ಕರ್ನಾಟಕ"ರೆಂಬ ನಾಮವನ್ನು ಧರಿಸುವುದಕ್ಕೂ ನಾವು ಅರ್ಹರಿರುವುದಿಲ್ಲ. ಆ ಪ್ರತಿಯೊಂದು ಗುಡಿಗೂ ಆ ಪದ್ಧತಿಯಿಂದ ಕಟ್ಟಿದ ಗುಡಿಗಳಲ್ಲಿ ಎಲ್ಲಕ್ಕೂ ಶ್ರೇಷ್ಠವೆಂದೇ ತಜ್ಞರು ಮಾನ್ಯತಾಪತ್ರವನ್ನು ಕೊಟ್ಟಿರುವರು. ಮತ್ತು ತಮ್ಮ ಲೆಕ್ಕಣಿಕೆಯಲ್ಲಿದ್ದಷ್ಟು ಸಾಮರ್ಥ್ಯದಿಂದ ಅದನ್ನು ವರ್ಣಿಸಿರುವರು.

ಇನ್ನು ಕೊನೆಗೆ ಶಿಲ್ಪಶಾಸ್ತ್ರಾಚಾರ್ಯರಾದ ಜಕಣಾಚಾರ್ಯರ ಕಥೆಯನ್ನು ಹೇಳಿ ಈ ಬೆಳೆದ ಪ್ರಕರಣವನ್ನು ಮುಗಿಸುವೆವು.

ಜಕಣಾಚಾರ್ಯರು ತುಮಕೂರ ಜಿಲ್ಹೆಯಲ್ಲಿಯ ಕೈದಾಳವೆಂಬ ಗ್ರಾಮದವರು, ಅವರು ಪ್ರಸಿದ್ಧ ಜ್ಯೋತಿಷ್ಕರು. ಅವರಿಗೆ ಮಗನು ಹುಟ್ಟಿದಾಗ ಅವರು ಅವನ ಕುಂಡಲಿಯನ್ನು ಪರೀಕ್ಷಿಸಲು ಆತನು ವ್ಯಭಿಚಾರಕ್ಕೆ ಹುಟ್ಟಿದವನೆಂದು ಅವರಿಗೆ ತಿಳಿದು ಬಂದಿತು. ಕೂಡಲೆ, ಅವರು ವೈರಾಗ್ಯವನ್ನು ತಾಳಿ ಮನೆ ಬಿಟ್ಟು ಹೊರಟರು. ಅವರು ಶಿಲ್ಪಕಲಾ ಪ್ರವೀಣರಾಗಿದ್ದುದರಿಂದ ಹೋದ ಹೋದಲ್ಲಿ ಗುಡಿಗಳನ್ನು ಕಟ್ಟುತ್ತ ಕೊನೆಗೆ ಬೇಲೂರಿಗೆ ಬರಲು, ಅಲ್ಲಿಯ ಅರಸನಾದ ವಿಷ್ಣುವರ್ಧನನು ಅವರಿಂದ ಚೆನ್ನಕೇಶವನ ದೇವಾಲಯವೊಂದನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಚೆನ್ನಕೇಶವನ ಸುಂದರವಾದ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಬೇಕೆನ್ನುವಷ್ಟರಲ್ಲಿ, ಹದಿನಾರು ವರ್ಷದ ಹುಡುಗನೊಬ್ಬನು ಆ ಉತ್ಸವಕ್ಕೆ ಬಂದು, ಆ ಚೆನ್ನಕೇಶವ ಮೂರ್ತಿಯು ಅಶುದ್ಧವಾದ ಕಲ್ಲಿನಿಂದ ಮಾಡಲ್ಪಟ್ಟಿರುವದೆಂದೂ, ಅದು ಪ್ರಾಣಪ್ರತಿಷ್ಠಾಪನೆಗೆ ಯೋಗ್ಯವಿಲ್ಲವೆಂದೂ ಪ್ರತಿಪಾದಿಸಿದನು. ಆಗ ಅವರಿಬ್ಬರಲ್ಲಿ ವಾದ ನಡೆಯಿತು. ಅದು ಅಶುದ್ಧವೆಂದು ತೋರಿಸಿಕೊಟ್ಟರೆ ತಮ್ಮ ಬಲಗೈಯನ್ನೇ ಕಡಿದುಕೊಂಡುಬಿಡುವೆನೆಂದು ಜಕಣಾಚಾರ್ಯರು ಹೇಳಿದರು. ಆಗ ಆ ಹುಡುಗನು ಆ ಮೂರ್ತಿಯ ನಾಭಿಕಮಲದ ಹತ್ತರ ತುಸು ಮಳಲೂ ನೀರೂ ಒಂದು ಕಪ್ಪೆಯೂ ಇರುವುದೆಂದೂ, ಆದಕಾರಣ ಅದು ಅಶುದ್ಧವೆಂದೂ ಆ ಮೂರ್ತಿಯನ್ನು ಒಡೆದು ಪರೀಕ್ಷಿಸಬಹುದೆಂದೂ ಹೇಳಿದನು. ಆ ಹುಡುಗನ ಮಾತನ್ನು ನಂಬಿ, ಆ ಸುಂದರವಾದ ಮೂರ್ತಿಯನ್ನು ಒಡೆಯುವುದು ಹೇಗೆ? ಆದುದರಿಂದ ಅವನ ಮಾತನ್ನು ಯಾರೂ ಆಲಿಸಲಿಲ್ಲ. ಆ ಮೂರ್ತಿಯಲ್ಲಿ ತಾನು ಹೇಳುವಂತೆ ನೀರು ಮುಂತಾದವು ಇರುವುವೆಂಬ ಬಗೆ ತಮಗೆ ವಿಶ್ವಾಸ ಹುಟ್ಟಿಸಿದರೆ ಮಾತ್ರ, ತಾವು ಅದನ್ನು ಒಡೆಯಬಹುದೆಂದು ಜನರು ಆ ಹುಡುಗನಿಗೆ ಹೇಳಿದರು. ಆಗ ಆ ಬಾಲಕನು ತುಸು ವಿಚಾರ ಮಾಡಿ "ನೀವು ಈ ಮೂರ್ತಿಯ ಶರೀರಕ್ಕೆಲ್ಲ ಗಂಧವನ್ನು ತೊಡೆದು ನೋಡಿರಿ. ಅಂದರೆ ನಾಭಿಕಮಲದ ಹತ್ತಿರ ಒಳಗೆ ನೀರಿರುವದರಿಂದ ಗಂಧವು ಹಸಿಯುಳಿದು ಮಿಕ್ಕಕಡೆಗೆ ಒಣಗುವುದು. ಅಲ್ಲಿ ನೀರಿರುವದಕ್ಕೆ ಅದೇ ಗುರುತು" ಎಂದು ಉತ್ತರವನ್ನಿತ್ತನು. ನೆರೆದ ಜನರಿಗೆ ಆ ಮಾತು ಸರಿದೋರಿ ಅವನು ಹೇಳಿದಂತೆ ಮಾಡಿದರು. ನಾಭಿಕಮಲದ ಹತ್ತಿರ ತೊಡೆದ ಗಂಧವು ಆರಲಿಲ್ಲ. ಆಗ ಅವನು ಶಿಲಾಶಾಸ್ತ್ರದಲ್ಲಿ ನಿಪುಣನಿರುವನೆಂಬ ಭರವಸೆಯುಂಟಾಗಿ ಅವರು ಆ ಮೂರ್ತಿಯ ನಾಭಿಕಮಲವನ್ನು ಒಡೆದು ನೋಡಲಾಗಿ ಅವನು ಹೇಳಿದಂತೆ ಒಳಗೆ ಕಪ್ಪೆ, ನೀರು ಮುಂತಾದವು ಕಂಡುಬಂದವು. ಅಲ್ಲಿಯ ಮಹಾಜನರಿಗೆಲ್ಲರಿಗೂ ಅತ್ಯಂತ ವಿಸ್ಮಯವುಂಟಾಗಿ ಆ ಬಾಲಕನ ಕುಲಗೋತ್ರಗಳನ್ನು ಕೇಳಿದರು. ಅವನು, ತಾನು ಅದೇ ಜಕಣಾಚಾರ್ಯರ ಮಗನಾದ ಡಂಕಣಾಚಾರ್ಯನೆಂದೂ ತಮ್ಮ ತಂದೆಯು ಒಂದು ಕಡೆಗೆ ಜ್ಯೋತಿಷ್ಯ ಗಣನೆಯಲ್ಲಿ ತಪ್ಪಿ, ನಿಷ್ಕಾರಣವಾಗಿ ತನ್ನ ತಾಯಿಯ ಮೇಲೆ ವ್ಯಭಿಚಾರವನ್ನು ಆರೋಪಿಸಿದರೆಂದೂ ಹೇಳಿದನು. ಆಗ ತಂದೆ ಮಕ್ಕಳಿಬ್ಬರನ್ನೂ ಅರಸನು ಸನ್ಮಾನಿಸಿ, ತಂದೆಮಕ್ಕಳಿಬ್ಬರೂ ಕೂಡಿ ಉಭಯ ಚಾತುರ್ಯದಿಂದ ಹೊಸದೊಂದು ಅತ್ಯಂತ ಸುಂದರವಾದ ಗುಡಿಯನ್ನು ನಿರ್ಮಾಣ ಮಾಡಬೇಕೆಂದು ವಿಜ್ಞಾಪಿಸಿದನು. ಅದಕ್ಕೆ ಒಪ್ಪಿ, ಅವರಿಬ್ಬರೂ ಬೇಲೂರಿನಲ್ಲಿರುವ ಈಗಿನ ಚೆನ್ನಕೇಶವ ದೇವಾಲಯವನ್ನು ನಿರ್ಮಿಸಿದರು. ಬೇಲೂರಿನಲ್ಲಿ ಈಗ ಎರಡು ಗುಡಿಗಳುಂಟು. ಮೊದಲನೆಯ ಗುಡಿಯಲ್ಲಿಯ ಚೆನ್ನಕೇಶವ ಮೂರ್ತಿಯು ನಾಭಿಕಮಲದ ಹತ್ತರ ಭಿನ್ನವಾಗಿದೆ. ಮತ್ತು ಆ ಗುಡಿಯ ಹತ್ತರವೇ ಈಗಿನ ಹೊಸ ಗುಡಿಯು ನಿಂತಿದೆ. ಇದರಿಂದ ಮೇಲಿನ ಕಥೆಗೆ ಪುಷ್ಟಿ ದೊರೆಯುತ್ತದೆ. ಮುಂದೆ ಜಕಣಾಚಾರ್ಯರು ತಮ್ಮ ಹುಟ್ಟಿದ ಊರಾಗಿರುವ ಕೈದಾಳದಲ್ಲಿ ಕೇಶವನ ಗುಡಿಯೊಂದನ್ನು ಕಟ್ಟಿಸಿದ ಕೂಡಲೆ ಅವರ ಕೈಯು ಮತ್ತೆ ಚಿಗುರಿತಂತೆ.

ಇರಲಿ, ಕರ್ನಾಟಕ ಪ್ರಾಚೀನ ಶಿಲ್ಪಿಗರಲ್ಲಿ ದಾಸೋಜ, ಮಲ್ಲೋಜ, ನಾನೋಜ ಮುಂತಾದ ಹೆಸರುಗಳು ಬಹಳ ದೊರೆಯುತ್ತವೆ. ಇವರ ಕುಲಜಾತಿಗಳನ್ನು ಸಂಶೋಧಕರೇ ಗೊತ್ತುಹಚ್ಚಬೇಕು.

ಕನ್ನಡಿಗರೇ! ಈ ನಮ್ಮ ಕಟ್ಟಡಗಳನ್ನು ನೋಡಿ ಧನ್ಯರಾಗಬಾರದೇ!


೧೪ನೆಯ ಪ್ರಕರಣ

ಧಾರ್ಮಿಕ ಉನ್ನತಿ


ಕನ್ನಡಿಗರೇ, ಕರ್ನಾಟಕ ಅರಸರ ಕಾಲದಲ್ಲಿ ಧರ್ಮಜಾಗೃತಿಯು ಎಷ್ಟರಮಟ್ಟಿಗೆ ಆಗಿತ್ತೆಂಬುದನ್ನು ನಾವು ಸ್ವಲ್ಪದರಲ್ಲಿಯೇ ಹೇಳುವೆವು. ಈ ಪ್ರಕರಣದಲ್ಲಿ ಮೂರೇ ವಿಷಯಗಳನ್ನು ಕುರಿತು ಹೇಳತಕ್ಕವರಿದ್ದೇವೆ. ಅವು ಯಾವುವೆಂದರೆ (೧) ನಮ್ಮಲ್ಲಿಯ ಧಾರ್ಮಿಕ ಗುರುಗಳು ರಾಜಕಾರಣವನ್ನು ಧಿಕ್ಕರಿಸಲಿಲ್ಲವೆಂಬುದು. (೨) ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ವೀರಶೈವ ಮುಂತಾದ ಪ್ರಬಲ ಮತಗಳ ಉತ್ಪತ್ತಿಗೂ ಹೆಚ್ಚಳಕ್ಕೂ ಕರ್ನಾಟಕವೇ ಹುಟ್ಟುಭೂಮಿಯೆಂಬುದು. (೩) ನಮ್ಮ ಅರಸರು ಪರಧರ್ಮಸಹಿಷ್ಣುತೆಯುಳ್ಳವರಾಗಿದ್ದರೆಂಬುದು.

ಸಾಮಾನ್ಯವಾಗಿ ಸಮಾಲೋಚಿಸಿದರೆ ಹಿಂದುಸ್ಥಾನದೊಳಗಣ ರಾಜ್ಯಗಳೆಲ್ಲವೂ ಮೊದಲು ಧಾರ್ಮಿಕ ಪುರುಷರಿಂದಲೇ ಉಗಮ ಹೊಂದಿರುವವು ಅಥವಾ ಪೋಷಿಸಲ್ಪಟ್ಟಿರುವವು ಎಂದು ಕಂಡುಬರುವುದು. ಶ್ರೀರಾಮಚಂದ್ರನಿಗೆ ವಸಿಷ್ಠ ವಿಶ್ವಾಮಿತ್ರರೇ ರಾಜಕೀಯ ಗುರುಗಳು; ಅರ್ಜುನನಿಗೆ ಶ್ರೀಕೃಷ್ಣನೂ, ಯುಧಿಷ್ಠಿರನಿಗೆ ಭೀಷ್ಮಾಚಾರ್ಯರೂ ರಾಜನೀತಿಯ ಉದ್ಬೋಧಕರಾಗಿದ್ದರು. ಇಹಲೋಕದ ಸುಖಕ್ಕೆ ಮೆಚ್ಚಿ ಮರುಳಾಗದ ಪಂಡಿತರೇ ರಾಜವೈಭವವನ್ನು ಬೆಳಿಸಲಿಕ್ಕೆ ರಾಜರಿಗೆ ಸಹಾಯಕರ್ತರೂ ಉಪದೇಶಕರೂ ಆದರು. ಇವರು ತಮ್ಮ ಸುತ್ತಲೂ ಸಂಪತ್ತಿಯ ರಾಶಿಯು ಒಟ್ಟಿದ್ದರೂ, ಮತ್ತು ಆ ರಾಶಿಯನ್ನು ಹುಟ್ಟಿಸುವುದಕ್ಕೆ ತಾವೇ ಕಾರಣರಾಗಿದ್ದರೂ, ಅದರೊಳಗೆ ತಮ್ಮ ಮನಸ್ಸನ್ನು ತೊಡಗಿಸಿ ಅಂಧರಾಗಿರಲಿಲ್ಲ. ಆದುದರಿಂದಲೇ ಅವರು ಮಾಡಿದ ಉಪದೇಶವು ಸ್ವಾರ್ಥಬುದ್ಧಿಯಿಂದ ಅಲಿಪ್ತವಾಗಿ ಉಳಿಯುತ್ತಿತ್ತು. ಇದೊಂದು ಹಿಂದುದೇಶದ ವೈಲಕ್ಷಣ್ಯವೆಂದೇ ಹೇಳಬೇಕು. ಬ್ರಾಹ್ಮಣರಾಗಲಿ ಬೇರೆ ಧಾರ್ಮಿಕ ಗುರುಗಳಾಗಲಿ ರಾಜಕೀಯ ಅವನತಿಯ ಕಾಲಕ್ಕೆ ಅದಕ್ಕೆ ಸಹಾಯವನ್ನಿತ್ತು ಮತ್ತು "ಶಾಪಾದಪಿ ಶರಾದಪಿ" ಎಂಬಂತೆ ಸಮಯ ಬಂದರೆ ತಾವೇ ಕೈಯಲ್ಲಿ ಖಡ್ಗ ಧರಿಸಲಿಕ್ಕೂ ಮುಂದಾಗಿರುವಂಥ ಸಂಗತಿಗಳು ನಮ್ಮ ಭಾರತೀಯ ಇತಿಹಾಸದಲ್ಲೇನೂ ಒಂದೆರಡಿಲ್ಲ; ಪ್ರಸ್ತುತಕ್ಕೆ ನಮಗೆ ಕೇವಲ ಕರ್ನಾಟಕದ ವಿಚಾರವೇ ಕರ್ತವ್ಯವಿರುವದರಿಂದ ಆ ದೃಷ್ಟಿಯಿಂದಲೇ ನಾವು ಅದನ್ನು ವಿಮರ್ಶಿಸೋಣ.

ಕರ್ನಾಟಕದೊಳಗೆಲ್ಲ ಕದಂಬರು ಬಹಳ ಪ್ರಾಚೀನದ ಅರಸು ಮನೆತನದವರು. ಈ ವಂಶದ ಮೂಲಪುರುಷನು ಮಯೂರಶರ್ಮನೆಂಬ ಬ್ರಾಹ್ಮಣನು. ಇವನು ವೇದಾಧ್ಯಯನ ಮಾಡಬೇಕೆಂಬ ಅಪೇಕ್ಷೆಯಿಂದ ಕಂಚಿಗೆ ಹೋಗಿರಲು, ಪಲ್ಲವರ ಅಶ್ವ ಸಂಸ್ಥೆಯಿಂದ ಅವಮಾನಿತನಾದನು ಮತ್ತು "ಕ್ಷತ್ರಿಯ ರಾಜರು ಬ್ರಾಹ್ಮಣರಿಗೆ ಅವಮಾನ ಮಾಡುವುದಕ್ಕೆ ಅವರೇನು ಹೆಚ್ಚಿನವರು" ಎಂದು ಅವನ ಮನಸ್ಸಿನಲ್ಲಿ ಉದ್ಭವಿಸಿ ಅವನು ಕ್ಷತ್ರಿಯವೃತ್ತಿಯನ್ನು ಕೈಕೊಂಡನು, ಸಾರಾಂಶ: ಆ ಅಪಮಾನವೇ ಅವನ ಕ್ಷತ್ರಿಯವೃತ್ತಿಗೆ ಬೀಜವಾಯಿತು. ಇದರಿಂದ ಮೊದಲು ವೇದ ಪಠಿಸುತ್ತಿರುವವನು ಒಮ್ಮಿಂದೊಮ್ಮೆ ಶಸ್ತ್ರಧಾರಿಯಾಗಿ ಅದೇ ಪಲ್ಲವರಾಜರನ್ನು ಸೋಲಿಸಿ "ಕದಂಬ" ವಂಶವನ್ನು ಸ್ಥಾಪಿಸಿದನು. ಕದಂಬರ ಸಮಕಾಲೀನರಾದ "ಗಂಗ" ಅರಸರಿಗೆ ಜೈನರು ಗುರುಗಳಾಗಿದ್ದರು. ಸಿಂಹನಂದಿಯೆಂಬ ಜೈನಗುರುವು ದಡ್ಡಿಗನ ಅಥವಾ ೨ನೆಯ ಮಾಧವನ ಗುರುವಾಗಿದ್ದನು. ಇವನೇ ಗಂಗರಾಜ್ಯ ವಂಶದ ಆಸ್ತಿವಾರವನ್ನು ಹಾಕಿದನು. ಅದೇ ಮೇರೆಗೆ ಶಬ್ದಾವತಾರವೆಂಬ ವ್ಯಾಕರಣ ಗ್ರಂಥವನ್ನು ರಚಿಸಿದ ಪೂಜ್ಯಪಾದನೆಂಬವನು ದುರ್ವಿನೀತನ ಗುರುವಾಗಿದ್ದನು.

ಚಾಲುಕ್ಯರ ಅರಸನಾದ ರಾಜಸಿಂಹನಿಗೆ ಆಶ್ರಯ ಕೊಟ್ಟವನೂ ವಿಷ್ಣುಗೋಪನೆಂಬ ಬ್ರಾಹ್ಮಣನೇ. ರಾಜಸಿಂಹನ ತಂದೆಯಾದ ಜಯಸಿಂಹನು ಪಲ್ಲವರೊಡನೆ ಕಾದಿ ಮಡಿದ ಕಾಲಕ್ಕೆ ಅವನ ಹೆಂಡತಿಯು ಬಸುರಾಗಿದ್ದಳು, ಅವಳಿಗೆ ಈ ವಿಷ್ಣುಗೋಪನು ಆಶ್ರಯವನ್ನಿತ್ತು ರಾಜಸಿಂಹನನ್ನು ದೊಡ್ಡವನನ್ನಾಗಿ ಮಾಡಿದನು. ಈ ರಾಜಸಿಂಹನೇ ಚಾಲುಕ್ಯರಾಜ್ಯವನ್ನು ಮರಳಿ ಸ್ಥಾಪಿಸಿದನು. ಮತ್ತು ತನ್ನನ್ನು ರಕ್ಷಿಸಿದ ವಿಷ್ಣುಗೋಪನ ಸ್ಮರಣಾರ್ಥವಾಗಿ ವಿಷ್ಣುವರ್ಧನನೆಂದು ಹೆಸರಿಟ್ಟುಕೊಂಡನು.

ರಾಷ್ಟ್ರಕೂಟರ ಪ್ರಖ್ಯಾತ ರಾಜನಾದ ನೃಪತುಂಗನ ಗುರು, ಆದಿಪುರಾಣ ಕರ್ತನಾದ ಜಿನಸೇನನೆಂಬಾತನು. ಹೊಯ್ಸಳ ರಾಜ್ಯವು "ಸುದತ್ತ"ನೆಂಬ ಸಂನ್ಯಾಸಿಯ ಪ್ರೇರಣೆಯಿಂದಲೇ ಸ್ಥಾಪಿತವಾಯಿತು. ಈ ವಂಶಕ್ಕೆ ಸಂಬಂಧಪಟ್ಟ ವಿಷ್ಣುವರ್ಧನ ಅಥವಾ ಬಿಟ್ಟಿದೇವನಿಗೆ ರಾಮಾನುಜಾಚಾರ್ಯರೇ ಗುರುಗಳು. ಬಿಜ್ಜಳನ ಕಾಲದಲ್ಲಿ ಶ್ರೀಬಸವೇಶ್ವರನೆಂಬ ಧಾರ್ಮಿಕ ಪುರುಷನೇ ರಾಜ್ಯ ಸೂತ್ರಗಳನ್ನು ನಡೆಸುತ್ತಿದ್ದನು. ಶ್ರೀ ವಿದ್ಯಾರಭ್ಯರು ತಮ್ಮ ಜಗದ್ಗುರು ಪೀಠವನ್ನು ಸಹ ತ್ಯಾಗಮಾಡಿ ಹಕ್ಕಬುಕ್ಕರ ಸಹಾಯಾರ್ಥವಾಗಿ ಧಾವಿಸಿ, ವಿಜಯನಗರದ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದ ಸಂಗತಿಯೂ ಈ ತತ್ವವನ್ನೇ ಬಲಪಡಿಸುತ್ತದೆ. ಈ ಕಾರಣದಿಂದಲೇ ಅವರಿಗೆ "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ"ರೆಂದು ಗೌರವದ ಬಿರುದು ಪ್ರಾಪ್ತವಾಯಿತು. ಈ ವಿದ್ಯಾರಣ್ಯರು ಮೂರು ತಲೆಯವರೆಗೆ ರಾಜಕೀಯ ಗುರುಗಳಾಗಿ, ಅಡೆತಡೆಯಿಲ್ಲದೆ ರಾಜ್ಯಸೂತ್ರಗಳನ್ನು ನಡೆಯಿಸಿದರೂ ತಾವು ರಾಜವೈಭವದಿಂದ ಅಲಿಪ್ತರೇ ಇದ್ದರು. ಅದೇ ಮೇರೆಗೆ ವಿಜಯನಗರದ "ಕ್ರಿಯಾಶಕ್ತಿ ಪಂಡಿತ"ರೆಂಬವರೂ ಗುರುಗಳಾಗಿದ್ದರು. ಶ್ರೀ ವ್ಯಾಸರಾಯ ಸ್ವಾಮಿಗಳು ಸತತವಾಗಿ ನರಸ, ನರಸಿಂಹ, ಕೃಷ್ಣದೇವರಾಯ, ಅಚ್ಯುತರಾಯ, ಮುಂತಾದ ಆರು ಜನ ಚಕ್ರಾಧೀಶ್ವರರಿಗೆ ರಾಜಗುರುಗಳಾದ ವಿಷಯ ಕರ್ನಾಟಕಕ್ಕೆ ಮಾತ್ರವೇ ಅಲ್ಲ, ಇಡೀ ಜಗತ್ತಿಗೇನೇ ಅಪೂರ್ವವಾದ ಸಂಗತಿ. ಕೃಷ್ಣದೇವರಾಯನಿಗೆ ಶ್ರೀವ್ಯಾಸರಾಯಸ್ವಾಮಿಗಳು ರಾಜಗುರುಗಳಾಗಿದ್ದರು. ಒಂದು ಕಠಿಣ ಪ್ರಸಂಗದಲ್ಲಿ, ಅವರು ಸ್ವತಃ ವಿಜಯನಗರದ ರಾಜ್ಯವನ್ನು ಕೆಲಕಾಲ ಆಳಿದಂತೆ ತೋರುತ್ತದೆ. ಅವರಿಗೆ "ಕರ್ನಾಟಕ ಸಿಂಹಾಸನಗತ ಪ್ರಭು" ಎಂದು ಬಿರುದಿತ್ತು. ಸಾರಾಂಶ: ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ನೆನಪಿಡತಕ್ಕ ಮೊದಲನೆಯ ಸಂಗತಿಯೆಂದರೆ, ದೇಶಕ್ಕೆ ಸಂಕಟವೊದಗಿದಾಗ, ಸಾಮಾನ್ಯತಃ ಐಹಿಕ ಸುಖದಿಂದ ಅಲಿಪ್ತರಾಗಿರುವವರೇ___"ಆಚರಿತುಂ, ಶಕ್ಯಂ ಸಮ್ಯಗ್ರಾಜ್ಯಾದಿ ಲೌಕಿಕಂ" ಎಂಬಂತೆ ರಾಜ್ಯ ನಡಿಸಬಲ್ಲರು. ವಿದ್ಯಾರಣ್ಯರು ಯೋಗ್ಯ ಜನರಿಗೆ ಕ್ಷಾತ್ರತೇಜವನ್ನು ಪ್ರಕಟಗೊಳಿಸುವಂತೆ ಪ್ರೇರಿಸಿ, ರಾಜ್ಯಗಳನ್ನು ಸ್ಥಾಪಿಸಿ, ತಾವು ಮಾತ್ರ ವಿಷಯಸುಖದಲ್ಲಿ ತೊಡಕಿಕೊಳ್ಳದೆ ವಿದ್ಯಾವ್ಯಾಸಂಗದಲ್ಲಿ ಜನ್ಮವನ್ನು ಕಳೆಯುತ್ತಿದ್ದರು. ರಾಜಕೀಯ ವಿಷಯಕ್ಕೂ ಧರ್ಮಕ್ಕೂ ಏನೇನೂ ಸಂಬಂಧವಿಲ್ಲವೆಂದು ಕೊಚ್ಚುವವರು ಈ ನಮ್ಮ ಪೂರ್ವಪರಂಪರೆಯನ್ನು ಲಕ್ಷ್ಯದಲ್ಲಿಡಬೇಕು.

ಧಾರ್ಮಿಕ ಇತಿಹಾಸದಲ್ಲಿಯ ಎರಡನೆಯ ಮಹತ್ವದ ಸಂಗತಿಯೇನೆಂದರೆ, ದ್ವೈತ, ವಿಶಿಷ್ಟಾದ್ವೈತ, ವೀರಶೈವ ಮುಂತಾದ ಪ್ರಬಲ ಮತಗಳಿಗೆ ಕರ್ನಾಟಕವೇ ತವರುಮನೆಯಾಗಿತ್ತೆಂಬುದು. ಕ್ರಿಸ್ತ ಶಕದ ಪ್ರಾರಂಭಕ್ಕೆ ಇಲ್ಲಿ ಬೌದ್ಧಧರ್ಮವು ಪ್ರಬಲವಾಗಿತ್ತೆಂದೂ, ಅನಂತರ ಅನೇಕ ನೂರು ವರ್ಷಗಳವರೆಗೆ ಜೈನಧರ್ಮವು ಹಬ್ಬಿಕೊಂಡಿತ್ತೆಂದೂ, ಅನಂತರ ಶೈವಧರ್ಮಕ್ಕೆ ಉಕ್ಕು ಬಂದಿತೆಂದೂ, ಕೊನೆಗೆ ವೈಷ್ಣವಧರ್ಮವು ಹೆಚ್ಚಿತೆಂದೂ ಸಾಮಾನ್ಯವಾಗಿ ಹೇಳಬಹುದು. ಆದರೆ ದಕ್ಷಿಣ ಹಿಂದುಸ್ಥಾನದಲ್ಲಿ ಯಾವಾಗಲೂ ಬೌದ್ಧಧರ್ಮಕ್ಕಿಂತಲೂ ಜೈನಧರ್ಮವೆ ಪ್ರಬಲವಾಗಿತ್ತು. ಕರ್ನಾಟಕದ ಮೊದಲಿನ ಕವಿಶ್ರೇಷ್ಠರೂ ನೃಪಶ್ರೇಷ್ಠರೂ ಜೈನಧರ್ಮದವರೇ ಆಗಿದ್ದರು.

ಜೈನಮತವನ್ನು ಸಮಂತಭದ್ರನು ೨ನೆಯ ಶತಮಾನದಲ್ಲಿಯೂ, ಅಕಲಂಕನು ೮ ಅಥವಾ ೯ ನೆಯ ಶತಮಾನದಲ್ಲಿಯೂ ಬೋಧಿಸಿದರು. ಜೈನರ ಪ್ರಮುಖ ಗ್ರಂಥಗಳಿಗೆಲ್ಲ ನೃಪತುಂಗನ ಗುರುವಾದ ಜಿನಸೇನಾಚಾರ್ಯರೆ ಪ್ರಣೇತಾರರು. ತರ್ಕಶಾಸ್ತ್ರದ ಪಾರಂಗತನಾದ ಲಕುಲೀಶನು ಶೈವೋಪಾಸನೆಯನ್ನು ಪ್ರಚುರಗೊಳಿಸಿದನು. ಇವನು ಒಂದನೆಯ ಶತಮಾನದಲ್ಲಿದ್ದನೆಂದು ಹೇಳುತ್ತಾರೆ. ಶಂಕರಾಚಾರ್ಯರು ೮ನೆಯ ಶತಕದಲ್ಲಿದ್ದರು. ೧೨ನೆಯ ಶತಮಾನದಲ್ಲಿ ರಾಮಾನುಜಾಚಾರ್ಯರ ಉದಯವು. ೧೨ನೆಯ ಶತಮಾನದ ಮಧ್ಯಭಾಗದಲ್ಲಿ ವೀರಶೈವ ಮತವು ಬಸವೇಶ್ವರ, ಚೆನ್ನಬಸವರಿಂದ ಉದ್ಧರಿಸಲ್ಪಟ್ಟಿತು. ೧೩ನೆಯ ಶತಮಾನದಲ್ಲಿ ಮಧ್ವಾಚಾರ್ಯರು ದ್ವೈತಮತವನ್ನು ಸ್ಥಾಪಿಸಿದರು. ಇದರ ಮೇಲಿಂದ ಈಗ ಭರತಖಂಡದಲ್ಲೆಲ್ಲ ಪ್ರಾಮುಖ್ಯ ಹೊಂದಿ ಪ್ರಚಲಿತವಿರುವ ಅನೇಕ ಮತಪಂಥಗಳು ಮೊದಲು ಕರ್ನಾಟಕದಲ್ಲಿಯೇ ಹುಟ್ಟಿದುವೆಂಬುದನ್ನು ಒಡೆದು ಹೇಳಬೇಕಾದುದಿಲ್ಲ. ಒಂದು ಬಗೆಯಿಂದ ನೋಡಲು, ಇಡೀ ಹಿಂದು ದೇಶವೇ ಧರ್ಮಾಚಾರ್ಯರ ವಿಷಯದಲ್ಲಿ ಕರ್ಣಾಟಕಕ್ಕೆ ಋಣಿಯಾಗಿರುವದೆಂದರೂ ಅತಿಶಯೋಕ್ತಿ ದೋಷಬಾರದು. ತಮ್ಮ ನಾಡಿನ ಈ ಅಸಾಧಾರಣವಾದ ಧಾರ್ಮಿಕ ಸಂಪತ್ತಿಗಾಗಿ ಕನ್ನಡಿಗರು ಅಭಿಮಾನಪಡುವುದು ಯಥಾರ್ಥವಾಗದೇ?

ಇನ್ನು, ಅರಸರ ಪರಧರ್ಮಸಹಿಷ್ಣುತೆಯನ್ನು ವರ್ಣಿಸುವ. ಇದು ನಮ್ಮ ರಾಷ್ಟ್ರೀಯ ಸದ್ಗುಣವಾಗಿದೆ. ತಮ್ಮ ಬುದ್ಧಿಸಾಮರ್ಥ್ಯದಿಂದ ಮಾತ್ರವೇ ನಮ್ಮ ಧರ್ಮಗುರುಗಳು ಜನರ ಮೇಲೆ ತಮ್ಮ ವರ್ಚಸ್ಸನ್ನು ಕೂಡಿಸುತ್ತಿದ್ದರು. ಅಲ್ಲದೆ, ಮಿಕ್ಕ ಯಾವ ಉಪಾಯಗಳನ್ನೂ ಅವರು ಅವಲಂಬಿಸಲಿಲ್ಲ. ನಮ್ಮ ಅರಸರೂ, ತಮ್ಮ ಪ್ರಜೆಗಳು ತಮಗೆ ಇಷ್ಟತೋರಿದ ಧರ್ಮವನ್ನೇ ಅನುಸರಿಸಬೇಕೆಂದು ಕಟ್ಟು ಮಾಡಿದ್ದರು; ಹೀಗಿರುವದರಿಂದ ಆಯಾ ಕಾಲದ ರಾಜರು ಜೈನರೇ ಆಗಿರಲಿ, ಬೌದ್ಧರೇ ಆಗಿರಲಿ, ಶೈವರೇ ಆಗಿರಲಿ, ಅಥವಾ ವೈಷ್ಣವರೇ ಆಗಿರಲಿ, ಪ್ರತಿಯೊಂದು ಧರ್ಮದವರನ್ನು ಸಮಾನವಾಗಿಯೇ ಭಾವಿಸುತ್ತಿದ್ದರು. ಈ ಅವರ ಧರ್ಮೌದಾರ್ಯದ ದೆಸೆಯಿಂದ ಇಂತಿಂಥ ರಾಜರು ಇಂತಿಂಥ ಧರ್ಮದವರಾಗಿದ್ದರೆಂಬುದನ್ನು ನಿಷ್ಕರ್ಷಿಸುವದೇ ಕಷ್ಟವಾಗಿರುತ್ತದೆ. ಆದರೂ ಕದಂಬರು ವೈದಿಕ ಧರ್ಮದವರು, ಗಂಗರು ಜೈನರು, ಬಾದಾಮಿಯ ಚಾಲುಕ್ಯರು ವೈಷ್ಣವರೆಂದೂ, ರಾಷ್ಟ್ರಕೂಟರಲ್ಲಿ ಕೆಲವರು ಶೈವರು ಕೆಲವರು ಜೈನರೆಂದೂ, ಕಲ್ಯಾಣ ಚಾಲುಕ್ಯರಲ್ಲಿ ಕೆಲವರು ಶೈವರು ಕೆಲವರು ವೈಷ್ಣವರೆಂದೂ, ವಿಜಯನಗರದ ಅರಸಲ್ಲಿಯೂ ಕೆಲವರು ಶೈವರು, ಕೆಲವರು ವೈಷ್ಣವರೆಂದೂ ಸ್ಥೂಲಮಾನದಿಂದ ಹೇಳಬಹುದು. ಅದು ಹೇಗೇ ಇರಲಿ! ಎಲ್ಲರೂ ಅತ್ಯಂತ ಪರಧರ್ಮಸಹಿಷ್ಣುಗಳಾಗಿದ್ದರೆಂಬುದಂತೂ ನಿರ್ವಿವಾದವೇ! ಜಿನ, ವಿಷ್ಣು, ಶಿವ ಈ ಮೂರ್ತಿಗಳು ಒಂದೆಡೆಯಲ್ಲಿ ಸ್ಥಾಪಿತವಾದ ಉದಾಹರಣೆಗಳುಂಟು. ಅದೇ ಮೇರೆಗೆ ಬ್ರಹ್ಮ, ವಿಷ್ಣು, ಮಹೇಶ್ವರರ ಮೂರ್ತಿಗಳನ್ನು ಒಂದೆಡೆಯಲ್ಲಿ ಕಾಣಬಹುದು.

ಈ ಕೆಳಗಿನ ಶ್ಲೋಕವು ನಮ್ಮ ಧಾರ್ಮಿಕ ಸಹಿಷ್ಣುತೆಯನ್ನು ಚೆನ್ನಾಗಿ ಹೊರಪಡಿಸುತ್ತದೆ:

ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ ||
ಬೌದ್ಧಾಃ ಬುದ್ಧ ಇತಿ ಪ್ರಮಾಣಪಟವಃ ಕರ್ತೆತಿ ನೈಯಾಯಿಕಾಃ ||
ಅರ್ಹಚ್ಚೇತಿ ಹ ಜೈನಶಾಸನಕಪರಾಃ ಕರ್ಮೆತಿ ಮೀಮಾಂಸಕಾಃ ||
ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವಸ್ಸರ್ವದಾ ||


ಸಾರಾಂಶ: "ಶೈವರು ಶಿವನೆಂದೂ ವೇದಾಂತಿಗಳು ಬ್ರಹ್ಮನೆಂದೂ ಬೌದ್ಧರು ಬುದ್ಧನೆಂದೂ ಪ್ರಮಾಣಪಟುಗಳಾದ ನೈಯಾಯಿಕರು ಕರ್ತನೆಂದೂ ಜೈನರು ಅರ್ಹನೆಂದೂ ಮೀಮಾಂಸಕರು ಕರ್ಮನೆಂದೂ___ಹೀಗೆ ನಾನಾ ಜನರು ನಾನಾ ವಿಧವಾಗಿ ಉಪಾಸನೆಗೈಯುವ ಶ್ರೀ ಕೇಶವನು ನಮಗೆ ಸದಾ ವಾಂಛಿತಫಲವನ್ನೀಯಲಿ."

ಇದು ಬೇಲೂರಲ್ಲಿಯ ಒಂದು ಶಿಲಾಲೇಖದೊಳಗಿನ ಶ್ಲೋಕ.

ಧರ್ಮಸಹಿಷ್ಣುತೆಯ ಮತ್ತೊಂದು ಬೋಧಪ್ರದವಾದ ಉದಾಹರಣೆಯನ್ನು ಕೊಟ್ಟು ಈ ಪ್ರಕರಣವನ್ನು ಮುಗಿಸುವೆವು.

೧೩೬೮ನೆಯ ವರ್ಷದಲ್ಲಿ ವಿಜಯನಗರದೊಳಗೆ ಬುಕ್ಕಮಹಾರಾಯನು ಆಳುತ್ತಿರಲು, ಜೈನರು ವೈಷ್ಣವರಿಂದ ತಮ್ಮ ಧರ್ಮಾಚರಣಕ್ಕೆ ವ್ಯತ್ಯಯವುಂಟಾಗುವುದೆಂದು ಅವನಿಗೆ ದೂರು ಹೇಳಿಕೊಂಡರು. ಆಗ ಬುಕ್ಕರಾಯನು ಎರಡೂ ಪಂಥದ ಮುಖಂಡರನ್ನು ಕರೆಯಿಸಿ,
ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮದಂತೆ ನಡೆಯಬೇಕು. ಒಬ್ಬರು ಮತ್ತೊಬ್ಬರ ಧರ್ಮಾಚರಣೆಗೆ ಅಡ್ಡ ಬರಬಾರದು
ಎಂದು ವಿಧಿಸಿದನು. ಅಲ್ಲದೆ ಅವನು ಸ್ವತಃ ಜೈನರ ಕೈಯಲ್ಲಿ ವೈಷ್ಣವರ ಕೈಯನ್ನು ಕೊಡಿಸಿ ಉಭಯತರಿಗೂ ತಮ್ಮ ಧರ್ಮಕ್ಕನುಸಾರವಾಗಿಯೇ ವರ್ತಿಸಲು ಬೋಧಿಸಿದನು. ಇದಕ್ಕಿಂತ ಪರಧರ್ಮ ಸಹಿಷ್ಣುತೆಯು ಸಿಕ್ಕುವುದೇ? ಈ ಸದ್ಗುಣವು ನಮ್ಮ ಅರಸರಿಗೆ ಪೂರ್ಣವಾಗಿ ಗೊತ್ತಿತ್ತು. ಜಾತಿಜಾತಿಗಳಲ್ಲಿ ಅವರು ಎಂದೂ ದ್ವೇಷವನ್ನು ಬೆಳಿಸಲಿಲ್ಲ. ಬುದ್ಧಿವಂತರು ಕೇವಲ ತಮ್ಮ ಬುದ್ಧಿಬಲದಿಂದಲೇ ಜನರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಬೇಕೆಂಬ ತತ್ತ್ವವನ್ನು ಅವರು ಅರಿತವರಾಗಿದ್ದರು.

ಇರಲಿ, ಕನ್ನಡಿಗರೇ, ಈಗ ಆ ಧಾರ್ಮಿಕ ಸಂಪತ್ತು ಎಲ್ಲಿ ಉಳಿದಿದೆ? ನಾವು ನಾಮಮಾತ್ರಕ್ಕೆ ಶೈವರೂ ವೈಷ್ಣವರೂ ಆಗಿದ್ದೇವೆ. ಇದು ಅನುಕಂಪನೀಯವಲ್ಲವೋ?


೧೫ನೆಯ ಪ್ರಕರಣ

ವಾಙ್ಮಯ ವೈಭವ

"No scheme of self government however benevolently or generously it may be bestowed upon us, will ever make us a self-governing nation, if we have no respect for language our mothers speak"


"ಯಾರು ಎಷ್ಟೇ ಪರೋಪಕಾರ ಬುದ್ಧಿಯಿಂದ ಅಥವಾ ಉದಾರ ಬುದ್ಧಿಯಿಂದ ಯಾವ ತರದ ಸ್ವರಾಜ್ಯವನ್ನೇ ನಮಗೆ ಕೊಡಲಿ, ನಮ್ಮ ತಾಯಂದಿರಾಡುವ ಭಾಷೆಯ ವಿಷಯದಲ್ಲಿ ನಮ್ಮ ಮನದಲ್ಲಿ ಅದರ ಬುದ್ಧಿಯಿಲ್ಲದಿದ್ದರೆ ನಾವು ನಿಜವಾದ ಸ್ವರಾಜ್ಯ ಭೋಗಿಗಳಾಗಲಾರೆವು."

___ಮಹಾತ್ಮಾ ಗಾಂಧಿ

ಕ್ರಿ.ಶ. ೧೫೦ರಲ್ಲಿ ಹಿಂದುಸ್ಥಾನಕ್ಕೆ ಬಂದ ಪ್ರಖ್ಯಾತ ಪ್ರವಾಸಿಯಾದ ಟಾಲೇಮಿಯು ಬಾದಾಮಿ, ಇಂಡಿ, ಕಲಕೇರಿ, ಪಟ್ಟದಕಲ್ಲು ಇವೇ ಮುಂತಾದ ಕರ್ನಾಟಕದ ಪಟ್ಟಣಗಳ ಹೆಸರುಗಳನ್ನು ಹೇಳಿರುವನು. ಮೇಲ್ಕಂಡ ಹೆಸರುಗಳು ಕನ್ನಡವಾಗಿರುವುದರಿಂದ ಕನ್ನಡ ಭಾಷೆಯು ಆಗಿನ ಕಾಲದಲ್ಲಿ ಒಳ್ಳೇ ಊರ್ಜಿತ ಸ್ಥಿತಿಯಲ್ಲಿ ಇರುವದಾಗಿ ಸ್ಪಷ್ಟವಾಗುತ್ತದೆ. ೨ನೆಯ ಶತಮಾನದಲ್ಲಿ ಮಾಮುಲನಾರ ಎಂಬ ಕವಿಯಿಂದ ರಚಿತವಾದ "ಅಹನಾನೂರ" ಎಂಬ ಗ್ರಂಥದಲ್ಲಿ ಮಹಿಷಮಂಡಲವೆಂಬುದಕ್ಕೆ ಪರ್ಯಾಯದಿಂದ "ಎರಮೈ ನಾಡು" ಎಂಬ ಮೈಸೂರ ದೇಶದ ಹೆಸರು ಉಕ್ತವಾಗಿದೆ. ಅಲ್ಲದೆ, ಕೆಳಗಣ ಇಜಿಪ್ತ ದೇಶದಲ್ಲಿಯ "ಅಕ್ಸಿರಿಂಕಸನ್" ಎಂಬ ಸ್ಥಳದಲ್ಲಿ ದೊರೆತ ಕ್ರಿ.ಶ. ೨ನೆಯ ಶತಮಾನದಲ್ಲಿ ರಚಿತವಾದ ಒಂದು ಗ್ರೀಕ್ ನಾಟಕದಲ್ಲಿ ಕೆಲವು ಕನ್ನಡ ಶಬ್ದಗಳುಳ್ಳ ವಾಕ್ಯವು ದೊರೆಯುತ್ತದೆ. ಆ ವಾಕ್ಯವು ಯಾವುದೆಂದರೆ:

"ಬೇರೆ ಕೊಂಚ ಮಧುಪಾತ್ರಕ್ಕೆ ಹಾಕಿ, ಪಾನಂ ಬೇರೆತ್ತಿ ಕಟ್ಟಿ ಮಧುವಂ ಬೇರೆತ್ತುವೆನ್."

ನೃಪತುಂಗನ ಕಾಲದಿಂದಲೂ ಕನ್ನಡದೊಳಗೆ ಹಳೆಗನ್ನಡ-ಹೊಸಗನ್ನಡವೆಂಬ ಭೇದವು ಇರುವದಂತೂ ಸರಿಯಷ್ಟೇ! ಈ ಕಾಲಕ್ಕೆ ಕನ್ನಡಭಾಷೆಯು ಯಾವುದೋ ಒಂದು ಹಳೆಯ ಅವಸ್ಥೆಯಿಂದ ಹೊಸದಾದ ಅವಸ್ಥೆಗೆ ಹೆಜ್ಜೆಯಿಕ್ಕಿತೆಂದು ಊಹಿಸಲಿಕ್ಕೆ ಅವಕಾಶವಾಗಿದೆ. ಹಳೆಗನ್ನಡವು ಹೋಗಿ ಹೊಸಗನ್ನಡವು ಹುಟ್ಟುವದಕ್ಕೆ ಮುಂಚೆ ೭-೮ ಶತಮಾನಗಳು ಕಳೆದು ಹೋಗಿರಬೇಕು. ಸಾರಾಂಶ: ಕನ್ನಡ ಭಾಷೆಯು ೨ನೆಯ ಶತಮಾನದಲ್ಲಿ ಒಳ್ಳೇ ಘನತೆಗೇರಿತ್ತೆಂದು ಹೇಳಬಹುದು. ಮುಂದೆ ೩ ರಿಂದ ೫ನೆಯ ಶತಮಾನದಲ್ಲಿ ಗಂಗ ಅರಸರ ಆಳಿಕೆಯಲ್ಲಿಯೂ, ಕದಂಬ ಅರಸರ ಕಾಲದಲ್ಲಿಯೂ ಬಾಳಿದ ಸಮಂತಭದ್ರ, ಕವಿಪರಮೇಷ್ಠಿ, ಪೂಜ್ಯಪಾದ, ದುರ್ವಿನೀತ ಮುಂತಾದ ಮಹಾ ಮಹಾಪ್ರಾಸಾದಿಕ ಕವಿಗಳ ಗ್ರಂಥಗಳಿಂದಲೂ ಇದೇ ವ್ಯಕ್ತವಾಗುತ್ತದೆ.

ಚಾಲುಕ್ಯರ ಆಳಿಕೆಯಲ್ಲಿಯೂ ಕನ್ನಡನುಡಿಯ ಅಭಿವೃದ್ಧಿಯ ಲಕ್ಷಣಗಳು ದೃಗ್ಗೋಚರವಾಗುತ್ತವೆ. ಇವರ ಕಾಲಕ್ಕೆ ಶ್ರೀವರ್ಧದೇವ, ವಿಮಲ, ಉದಯ, ನಾಗಾರ್ಜುನ ಮುಂತಾದ ಕವೀಶ್ವರರು ಜನಿಸಿದರು. ಹಾನಗಲ್ಲ ತಾಲೂಕ ಆಡೂರಿನಲ್ಲಿಯ ಶಿಲಾಲಿಪಿಯ ಕನ್ನಡ ಅಕ್ಷರಗಳು ಅತಿಶಯ ಪ್ರಾಚೀನವಾದುವು, ಅದು ಸುಮಾರು ೫೬೬ನೆಯ ಇಸವಿಯ ಶಿಲಾಲಿಪಿಯು.

ರಾಷ್ಟ್ರಕೂಟರ ಕಾಲಕ್ಕಂತೂ ಕನ್ನಡ ನುಡಿಗೆ ಮತ್ತಿಷ್ಟು ಹೆಚ್ಚಿನ ಪ್ರಾಶಸ್ತ್ಯವು ಪ್ರಾಪ್ತವಾಯಿತು. ರಾಷ್ಟ್ರಕೂಟರ ಅರಸನಾದ ನೃಪತುಂಗ ಸ್ವತಃ ವಾಙ್ಮಯಪ್ರಭುವಾಗಿದ್ದನಲ್ಲದೆ ಕನ್ನಡಕ್ಕೆ ಒಳ್ಳೇ ಆಶ್ರಯದಾತನಾಗಿದ್ದನು. ಇವನು ಬರೆದ "ಕವಿರಾಜಮಾರ್ಗ" ಎಂಬ ಅಲಂಕಾರ ಗ್ರಂಥವು ಈಗ ಉಪಲಬ್ಧವಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು (೯ನೆಯ ಶಕ). ಈ ನೃಪತುಂಗನು ಸಂಸ್ಕೃತದಲ್ಲಿಯೂ "ಪ್ರಶ್ನೋತ್ತರಮಾಲಾ" ಎಂಬ ಗ್ರಂಥವನ್ನು ರಚಿಸಿರುವನು. ಈ ಗ್ರಂಥವು ತಿಬೇಟ ಭಾಷೆಯಲ್ಲಿ ಪರಿವರ್ತಿತವಾಗಿರುವ ಸಂಗತಿಯನ್ನು "ಸಿಫಸ" ಎಂಬವರು ಗೊತ್ತುಹಿಡಿದಿದ್ದಾರೆ. ಕನ್ನಡನಾಡು, ಕನ್ನಡಿಗರು, ಕನ್ನಡ ಭಾಷೆ-ಇವುಗಳ ಬಗ್ಗೆ ನೃಪತುಂಗನಲ್ಲಿರುವ ಆದರಾತಿಶಯವು ಅವನ ಗ್ರಂಥದಿಂದ ಚೆನ್ನಾಗಿ ತೋರ್ಪಡುತ್ತದೆ. ಇವನ ಕಾಲದಲ್ಲಿದ್ದ ಬಂಕೇಶನೆಂಬ ಸೇನಾಪತಿಯ ಹೆಂಡತಿ "ವಿಜಯಾ" ಎಂಬವಳು ಒಂದು ಸಂಸ್ಕೃತ ಕಾವ್ಯವನ್ನು ಬರೆದಿರುವುದಾಗಿ ತಿಳಿದುಬರುತ್ತದೆ. ಅದರೊಳಗಿನ ಒಂದು ಶ್ಲೋಕವನ್ನು ಇಲ್ಲಿ ಉದ್ಧರಿಸುವೆವು:

"ಸರಸ್ವತೀವ ಕರ್ಣಾಟೀ ವಿಜಯಾಂಕಾ ಜಯತ್ಯಸೌ ಯಾತ ವೈದರ್ಭಗಿರಾಂ ವಾಸಃ ಕಾಲಿದಾಸಾದನಂತರಮ್ ||

"ಕಾಳಿದಾಸನ ತರುವಾಯ ವೈದರ್ಭಶೈಲಿಗೆ ಆಶ್ರಯ ಕೊಟ್ಟ ವಿಜಯಾ ಎಂಬ ಬಿರುದುಳ್ಳ ಕರ್ನಾಟಿಯು, ಪ್ರತಿ ಸರಸ್ವತಿಯಂತೆ ಮೆರೆಯುತ್ತಿರುವಳು." ಹಲಾಯುಧನು" ರಚಿಸಿದ ಕವಿರಹಸ್ಯ ಎಂಬ ಗ್ರಂಥಕ್ಕೆ ರಾಷ್ಟ್ರಕೂಟರ ಅರಸನಾದ ಕೃಷ್ಣನೇ ನಾಯಕನಾಗಿದ್ದಾನೆ. ಪ್ರಸಿದ್ಧ ಜೈನಕವಿಗಳಾದ ಜಿನಸೇನ, ಅಕಲಂಕ, ಗುಣನಂದಿ, ಪೊನ್ನ ಮತ್ತು ಗುಣಭದ್ರ ಇವರೆಲ್ಲರೂ ರಾಷ್ಟ್ರಕೂಟರ ಆಸ್ಥಾನ ಪಂಡಿತರಾಗಿದ್ದರು.

ಹೊಸ ಚಾಲುಕ್ಯರ ಆಡಳಿತದಲ್ಲಿ ಕನ್ನಡ ಭಾಷೆಯು ಮತ್ತಿಷ್ಟು ಹೆಚ್ಚು ಪ್ರಬಲ ಸ್ಥಿತಿಗೆ ಬಂದಿತು. ಇವರ ಕಾಲಕ್ಕೆ ಕರ್ನಾಟಕದ ರಾಜ್ಯವಿಸ್ತಾರವು ಪರಮಾವಧಿಯನ್ನು ಹೊಂದಿದಂತೆ ಭಾಷೆಯೂ ಪರಿಣತಾವಸ್ಥೆಯನ್ನು ಹೊಂದಿತು. ಕರ್ನಟಕದ ಮಹಾ ಮಹಾ ಕವಿಗಳೆಲ್ಲರೂ ಸಾಧಾರಣವಾಗಿ ಇವರ ಆಳಿಕೆಯಲ್ಲಿಯೇ ಹೆಸರಿಗೆ ಬಂದರು. ರಾಷ್ಟ್ರಕೂಟರ ಅಂತ್ಯಕಾಲಕ್ಕೆ ಎಂದರೆ ಚಾಲುಕ್ಯರ ಆಳಿಕೆಯ ಆರಂಭಕ್ಕೆ ಉತ್ತರ ಹಿಂದುಸ್ಥಾನದಲ್ಲಿ ಬಲಾಢ್ಯರಾದ ಅರಸರಿರಲಿಲ್ಲ. ಹೀಗಿರುವುದರಿಂದ ಪ್ರಖ್ಯಾತ ಕವಿಯಾದ ಬಿಲ್ಹಣನು ಆಶ್ರಯಕ್ಕಾಗಿ ಅಲೆಯುತ್ತ ಅಲೆಯುತ್ತ, ಹಿಂದುಸ್ಥಾನವನ್ನೆಲ್ಲ ಸುತ್ತಿ ಕೊನೆಗೆ ದಕ್ಷಿಣದಲ್ಲಿ ಆಳುತ್ತಿರುವ ಚಾಲುಕ್ಯ ವಿಕ್ರಮನ ಆಸ್ಥಾನಕ್ಕೆ ಬಂದು ಅಲ್ಲಿ ನಿಂತನು. ಅವನಿಗೆ "ವಿದ್ಯಾಪತಿ" ಎಂದು ಬಿರುದುಂಟು. ಧರ್ಮಶಾಸ್ತ್ರಕಾರನಾದ ವಿಜ್ಞಾನೇಶ್ವರನೂ ಈತನ ಹತ್ತರವೇ ಇದ್ದನು. ಅವನು "ಮಿತಾಕ್ಷರಾ' ಎಂಬ ಪ್ರಸಿದ್ಧ ಧರ್ಮಶಾಸ್ತ್ರ ಗ್ರಂಥವನ್ನು ಬರೆದಿರುವನು. ಅದು ಮುಂಬಯಿ ಇಲಾಖೆಯ ಕೋರ್ಟುಗಳಲ್ಲಿಯೂ ಹಿಂದುಸ್ಥಾನದ ಮಿಕ್ಕ ಅನೇಕ ಭಾಗಗಳಲ್ಲಿಯೂ, ಹಿಂದುಧರ್ಮಕ್ಕೆ ಪ್ರಮಾಣಗ್ರಂಥವಾಗಿದೆ. ಕನ್ನಡ ಭಾಷೆಯ ಕವಿಗಳಲ್ಲಿ, ಆದಿಪಂಪ, ರನ್ನ, ಚಂದ್ರರಾಜ, ದುರ್ಗಸಿಂಹ, ಕೀರ್ತಿವರ್ಮ, ನಾಗವರ್ಮ ಇವರೇ ಮುಖಂಡರು. ಆಗಿನ ಕಾಲಕ್ಕೆ ಅರಸರು ಕನ್ನಡ ಕವಿಗಳನ್ನು ನಾನಾ ಬಗೆಯಿಂದ ಬಹುಮಾನಿಸುತ್ತಿದ್ದರು. ಕನ್ನಡ ಕವಿರತ್ನತ್ರಯರಲ್ಲಿ (ಆದಿಪಂಪ, ಪೊನ್ನ, ರನ್ನ) ಒಬ್ಬನಾದ ರನ್ನನಿಗೆ ತೈಲಪನು ಛತ್ರಚಾಮರಾದಿ ರಾಜಚಿಹ್ನಗಳನ್ನು ಸಲ್ಲಿಸಿ ಮನ್ನಣೆ ಮಾಡಿದನು. ಚಾಲುಕ್ಯ ವಿಕ್ರಮನ ಮಗನಾದ ೩ನೆಯ ಸೋಮೇಶ್ವರನು `"ಮಾನಸೋಲ್ಲಾಸ"ವೆಂಬ ಸಂಸ್ಕೃತ ಗ್ರಂಥವನ್ನು ರಚಿಸಿದನು. ಇದರಿಂದ ಅನೇಕ ರಾಜಕೀಯ ಸಂಗತಿಗಳು ತಿಳಿಯುವಂತಿವೆ. ಇದರಲ್ಲಿ, ರಾಜ್ಯ ಸಂಪಾದಿಸುವ ಬಗೆ, ರಾಜ್ಯ ಕಾಯ್ದುಕೊಳ್ಳುವ ಬಗೆ, ರಾಜವಿಲಾಸ ವರ್ಣನೆ ಮುಂತಾದ ವಿಷಯಗಳಿವೆ, ಅರಸರು ರಾಜನೀತಿ, ಜ್ಯೋತಿಷ, ಫಲಜ್ಯೋತಿಷ, ಭಾಷಾಶಾಸ್ತ್ರ, ಅಲಂಕಾರಶಾಸ್ತ್ರ, ಕಾವ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಅಶ್ವವಿದ್ಯೆ ಮುಂತಾದವುಗಳಲ್ಲಿ ನಿಷ್ಣಾತರಾಗಿರಬೇಕೆಂದು ಇದರಲ್ಲಿ ಹೇಳಿದೆ. ಈ ಅರಸನು ವಿದ್ಯಾವಂತನಾದುದರಿಂದ "ಸರ್ವಜ್ಞಭೂಪ"ನೆಂದು ಹೆಸರಿತ್ತು.

ಹೊಯ್ಸಳ ಅರಸರ ರಾಜ್ಯಕಾರಭಾರದಲ್ಲಿಯೂ ಅಭಿನವಪಂಪ, ಕಂತಿ, ರಾಜಾದಿತ್ಯ, ಸುಮನೋಬಾಣ, ಮಲ್ಲಿಕಾರ್ಜುನ, ರುದ್ರಭಟ್ಟ, ಜನ್ನ, ಕೇಶಿರಾಜ ಇತ್ಯಾದಿ ರತ್ನಗಳು ಕರ್ನಾಟಕಕ್ಕೆ ಲಭಿಸಿದುವು. ವಿಜಯನಗರದ ಕಾಲಕ್ಕೆ ವೇದಾಂತ, ನ್ಯಾಯ, ಮೀಮಾಂಸಾ, ಆಯುರ್ವೇದ, ನೀತಿ, ಯುದ್ಧಕಲೆ, ರಸಾಯನ ಇಂಥ ಅನೇಕ ಬಗೆಯ ಶಾಸ್ತ್ರಗಳಿಗೂ ವೇದಗಳಿಗೂ ವ್ಯಾಖ್ಯಾನ ಬರೆಯುವಂಥ ವಿದ್ಯಾರಣ್ಯರು ಜನ್ಮವೆತ್ತಿದರು. ಈ ಕಾಲಕ್ಕೆ ಬಾಳಿದ ಕನ್ನಡ ಕವಿಗಳು ಮಧುರ, ಮಂಗರಸ, ಗದಗಿನ ಕುಮಾರವ್ಯಾಸ, ನಿತ್ಯಾತ್ಮಶುಕ, ಲಕ್ಕಣ ದಂಡೇಶ ಇವರಲ್ಲದೆ ಪುರಂದರದಾಸ, ವ್ಯಾಸರಾಯರಂಥ ಧಾರ್ಮಿಕ ಸತ್ಪುರುಷರು ಉದಯಿಸಿದರು. ಕೃಷ್ಣರಾಯನ ಆಸ್ಥಾನವಂತೂ ಅಷ್ಟದಿಗ್ಗಜಗಳಿಂದ ಶೋಭಿಸುತ್ತಿತ್ತು. ಕರ್ನಾಟಕ ಕವಿಗಳನೇಕರು ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳಲ್ಲಿಯೂ ಪಂಡಿತರಾದುದರಿಂದ ಅವರಿಗೆ ಉಭಯಕವಿಚಕ್ರವರ್ತಿ ಎಂಬ ಬಿರುದಿತ್ತು.

ಅನೇಕ ಅರಸರು ಸ್ವತಃ ಕನ್ನಡ ಕವಿಗಳಾಗಿದ್ದರು. ೩ನೆಯ ಶತಮಾನದಲ್ಲಿ ಗಂಗ ಅರಸನಾದ ೨ನೆಯ ಮಾಧವನು "ದತ್ತಕಸೂತ್ರ ವೃತ್ತಿ" ಎಂಬ ಗ್ರಂಥವನ್ನು ಬರೆದನು. ೫ನೆಯ ಶತಮಾನದಲ್ಲಿ ದುರ್ವಿನೀತನೆಂಬ ಗಂಗ ಅರಸನು ಶಬ್ದಾವತಾರವನ್ನೂ ಪೈಶಾಚ ಭಾಷೆಯಲ್ಲಿದ್ದ ಬೃಹತ್ಕಥೆಗೆ ಸಂಸ್ಕೃತ ಪರಿವರ್ತನವನ್ನೂ ಭಾರವಿಯ ಕಿರಾತಾರ್ಜುನೀಯ ೧೫ನೆಯ ಸರ್ಗಕ್ಕೆ ಕನ್ನಡ ಟೀಕೆಯನ್ನೂ ಬರೆದನು. ಅಲ್ಲದೆ ಕನ್ನಡದಲ್ಲಿ ಒಂದು ಗದ್ಯಗ್ರಂಥವನ್ನು ಬರೆದಂತೆ ತಿಳಿಯುತ್ತದೆ. ಆದರೆ ಇದು ಉಪಲಬ್ಧವಿಲ್ಲ. ೮ನೆಯ ಶತಮಾನದಲ್ಲಿ ಗಂಗರಸನಾದ ಶ್ರೀಪುರುಷನೆಂಬನು ಗಜಶಾಸ್ತ್ರವೆಂಬ ಗ್ರಂಥವನ್ನು ರಚಿಸಿದ್ದನಂತೆ! ಅವನ ಮಗನಾದ ಶಿವಮಾರನೆಂಬವನು "ಗಜಾಷ್ಟಕ"ವೆಂಬ ಗ್ರಂಥವನ್ನು ರಚಿಸಿದನು. ಇವನು ನಾಟಕಾದಿಗಳಲ್ಲಿ ಪ್ರಮಾಣಪ್ರವೀಣನೆಂದೆನಿಸಿಕೊಂಡನು. ಅಲ್ಲದೆ ಆನೆ-ಕುದುರೆಗಳನ್ನು ಶಿಕ್ಷಿಸುವುದರಲ್ಲಿಯೂ ಇವನ ಗ್ರಂಥವನ್ನೇ ಪ್ರಮಾಣವಾಗಿ ಹಿಡಿಯುತ್ತಿದ್ದರಂತೆ!

ನಮ್ಮ ಕರ್ನಾಟಕ ಹೆಂಗಸರು ವಾಙ್ಮಯಕ್ಕೆ ಮಾಡಿದ ಸೇವೆಯೂ ಮಿಕ್ಕ ಯಾರಿಗಿಂತಲೂ ಕಡಿಮೆಯಾಗಿರುವುದಿಲ್ಲ. ಕಂತಿ, ಹೊನ್ನಮ್ಮ ಮುಂತಾದ ಕವಯಿತ್ರಿಯರು ಕನ್ನಡಿಗರಿಗೆ ಗೊತ್ತೇಇರುವದರಿಂದ ಅವರ ಹೆಸರನ್ನು ಇಲ್ಲಿ ಪುನಃ ಹೇಳುವದಿಲ್ಲ. ಆದರೆ ಕರ್ನಾಟಕ ರಾಜಪ್ರಿಯಾ, ಕರ್ಣಾಟೀ, ನಾಗಮ್ಮ, ವಿಜ್ಜಿಕಾ ಮುಂತಾದ ಹೆಂಗಸರು ಸಂಸ್ಕೃತ ಕವಯಿತ್ರಿಯರಾಗಿದ್ದರು. ಮೊನ್ನೆ ಮೊನ್ನೆ ಜಗತ್ತಿಗೆ ಗೊತ್ತಾದ ವಿಜಯನಗರದ ಬುಕ್ಕ ಮಹಾರಾಯನ ಹಿರಿಯ ಸೊಸೆಯಾದ ಗಂಗಾದೇವಿಯೆಂಬವಳು ಅತಿಶಯ ಪ್ರತಿಭಾಸಂಪನ್ನಳಾದ ಸಂಸ್ಕೃತ ಕವಯಿತ್ರಿಯಾಗಿದ್ದಳೆಂದು ಹೇಳಿದರೆ ಯಾವ ಕನ್ನಡಿಗನಿಗೆ ಆನಂದವಾಗಲಿಕ್ಕಿಲ್ಲ? ಇವಳು ತನ್ನ ಗಂಡನಾದ ಕಂಪಣನು ಮಧುರೆಯ ಮೇಲೆ ದಂಡೆತ್ತಿಹೋದ ಸಂಗತಿಯನ್ನು "ಮಧುರಾವಿಜಯಂ ಅಥವಾ ವೀರಕಂಪರಾಯ ಚರಿತಂ" ಎಂಬ ಪೌಢಶೈಲಿಯಿಂದ ಯುಕ್ತವಾದ ಕಾವ್ಯದಲ್ಲಿ ವರ್ಣಿಸಿರುವಳು.

ಸಾರಾಂಶ: ಸಂಸ್ಕೃತ, ಕನ್ನಡ ವಾಙ್ಮಯಕ್ಕೆ ನಮ್ಮ ಕರ್ಣಾಟಸ್ಥರು ಮಾಡಿದ ಸೇವೆಯು ಅಷ್ಟಿಷ್ಟೆಂದು ಹೇಳಲಳವಲ್ಲ.

ಕರ್ನಾಟಕದಲ್ಲಿ ಅನೇಕ ಕಡೆ ವಿದ್ಯಾಲಯಗಳಿದ್ದವು. ವಿಜಯನಗರ, ಬಳ್ಳೆಗಾವಿ, ಐಹೊಳೆ ಮುಂತಾದ ಪಟ್ಟಣಗಳಲ್ಲಿ ವಿಶ್ವವಿದ್ಯಾಲಯಗಳಿದ್ದವು. ಆದರೆ ಅವುಗಳ ವರ್ಣನೆಯನ್ನು ಕೊಡಲು ಇಲ್ಲಿ ಅವಕಾಶವಿಲ್ಲ. ಒಂದೇ ವಿದ್ಯಾಲಯವನ್ನು ಕುರಿತು ತುಸು ಹೇಳುವೆವು.

ಇಂಡಿ ತಾಲೂಕಿಗೆ ಸೇರಿದ ಸಾಲೋಟಗಿ ಎಂಬಲ್ಲಿ ನೃಪತುಂಗನ ಕಾಲಕ್ಕೆ ಚಕ್ರಾಯುಧನೆಂಬವನು ಒಂದು ವಿದ್ಯಾಲಯವನ್ನು ಸ್ಥಾಪಿಸಿದ್ದನು. ಅವನು ವಿದ್ಯಾರ್ಥಿಗಳಿಗೆ ೫೦೦ "ನಿವರ್ತನ" ಭೂಮಿಯನ್ನು ದಾನವಾಗಿ ಕೊಟ್ಟಿದ್ದನು! ಅಲ್ಲದೆ, ಅವರು ವಾಸಿಸಲಿಕ್ಕೆ ೨೭ ಮನೆಗಳನ್ನು ಕೊಟ್ಟಿದ್ದನು ಮತ್ತು ಊರಲ್ಲಿ ಮದುವೆ ಮುಂಜಿಗಳಾದರೆ ಆ ಶಾಲೆಗೆ ಜನರು ಇಂತಿಷ್ಟು ಹಣವನ್ನು ಕೊಡಬೇಕೆಂದು ಕಟ್ಟುಮಾಡಿದ್ದನು. (ಶಾಲಾ ವಿದ್ಯಾರ್ಥಿ ಸಂಘಾಯ ಸುದ್ರವ್ಯಾಣಿ ದ್ವಿಜಾತಿಭಿಃ! ಪಂಚಪುಷ್ಪಾಣಿ ದೇಯಾನಿ ವಿವಾಹೇ ಸತಿಸಜ್ಜನೈಃ ||) ಅಧ್ಯಾಪಕರಿಗೆ ಇರಲಿಕ್ಕೆ ಮನೆಯೂ ಅವರ ಉಪಜೀವನಕ್ಕಾಗಿ ಹೊಲವೂ ಕೊಡಲ್ಪಟ್ಟಿದ್ದುವು. ಇದೇ ಬಗೆಯಾಗಿ ಅನೇಕ ವಿದ್ಯಾಲಯಗಳ ವರ್ಣನೆಗಳನ್ನು ನಾವು ಕಲೆ ಹಾಕಬಹುದು.

ಈ ಮೇರೆಗೆ ನಾವು ವಾಙ್ಮಯ ವೈಭವವನ್ನು ಸಂಕ್ಷೇಪವಾಗಿ ವರ್ಣಿಸಿರುವೆವು. ಮೊದಲು ಮೊದಲು ಸಂಸ್ಕೃತದ ಪ್ರಾಬಲ್ಯವಿದ್ದುದರಿಂದ, ಕನ್ನಡ ವಾಙ್ಮಯವು ಅದರೊಡನೆ ಕಾದಬೇಕಾಯಿತು. ಬ್ರಾಹ್ಮಣರ ಗ್ರಂಥಗಳೆಲ್ಲವೂ ಅನೇಕ ನೂರು ವರ್ಷಗಳವರೆಗೆ ಸಂಸ್ಕೃತದಲ್ಲಿಯೇ ಇದ್ದುವು. ಆದರೆ ಬೌದ್ಧ-ಜೈನ ಧರ್ಮಗಳು ವೈದಿಕಧರ್ಮದಿಂದ ಸಿಡಿದು ನಿಂತುದರಿಂದ, ವೈದಿಕಧರ್ಮದ ಮುಖ್ಯ ಭಾಷೆಯಿಂದ ಸಂಸ್ಕೃತದಲ್ಲಿ ಅವರು ಗ್ರಂಥಗಳನ್ನು ಬರೆಯದೆ ದೇಶಭಾಷೆಯಲ್ಲಿ ಬರೆಯತೊಡಗಿದರು. ಮುಂದೆ ಬರಬರುತ್ತ ವೈದಿಕಧರ್ಮದಲ್ಲಿ ಸುಧಾರಕರಾಗಿ ಉದ್ಭವಿಸಿದ ವೀರಶೈವ ಧರ್ಮದವರೂ ಜೈನ ಬೌದ್ಧರನ್ನೇ ಅನುಕರಣ ಮಾಡಿದರು. ಆದರೆ ಮುಂದೆ ಬ್ರಾಹ್ಮಣರೂ ಕೆಲವಂಶದಿಂದ ಈ ದೇಶಭಾಷೆಯ ಪ್ರಾಬಲ್ಯ ಪ್ರವಾಹದ ಸೆಳವಿಗೆ ಸಿಲ್ಕಿ ಹರಿದು ಬಂದರು. ಅವರೂ ತಮ್ಮ ಧರ್ಮವಿಷಯಗಳನ್ನು ಕೂಡ ಪ್ರಾಕೃತದಲ್ಲಿ ಬರೆಯತೊಡಗಿದರೆಂಬುದು ಶ್ರೀಪುರಂದರದಾಸ ಮುಂತಾದವರ ಆಚರಣೆಯಿಂದ ಗೊತ್ತಾಗುತ್ತದೆ. ಈ ಮೇರೆಗೆ ಕನ್ನಡ ವಾಙ್ಮಯವು ಸಂಸ್ಕೃತದೊಡನೆ ಮಾಡಿದ ಯುದ್ಧದ ಕಥೆಯು ಮನೋರಂಜಕವಾಗಿದೆ. ಆದರೆ ಅದನ್ನು ಇಲ್ಲಿ ದಿಗ್ದರ್ಶನ ಮಾಡುವದಕ್ಕಿಂತ ಹೆಚ್ಚಿಗೆ ಹೇಳುವದಕ್ಕೆ ಅವಕಾಶವಿಲ್ಲ. ಇಷ್ಟಾದರೂ ಇದು ಪ್ರೇಮಯುದ್ಧವೇ ಆಗಿತ್ತು. ಏಕೆಂದರೆ ಸಂಸ್ಕೃತ ಭಾಷೆಯ ವಿಷಯಕ್ಕಿರುವ ಆದರವು ಅದರಿಂದ ತಿಲಪ್ರಾಯವೂ ಕಡಿಮೆಯಾಗಲಿಲ್ಲ. ಇಷ್ಟೇ ಅಲ್ಲ; ಅನೇಕ ಜೈನ, ಬೌದ್ಧ, ವೀರಶೈವ ಧರ್ಮದವರೂ ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಿದರು.

ಶಿಲಾಲಿಪಿ, ತಾಮ್ರಪಟಗಳ ವಿಷಯವಾಗಿಯೂ ಸಾಮಾನ್ಯವಾಗಿ ಇದೇ ಪ್ರಕಾರದ ವಿಧಾನವನ್ನು ಮಾಡಬಹುದು. ಪ್ರಾಚೀನ ಶಿಲಾಲೇಖಗಳೆಲ್ಲವೂ ಸಂಸ್ಕೃತದಲ್ಲಿಯೇ ಇವೆ, ಬರಬರುತ್ತ ಅವುಗಳಲ್ಲಿ, ಕನ್ನಡ ಅಕ್ಷರ ಮತ್ತು ಶಬ್ದಗಳ ಪ್ರವೇಶವಾಗಿದೆ. ಅನಂತರ, ಅವು ಕನ್ನಡ ಮತ್ತು ಸಂಸ್ಕೃತ ಮಿಶ್ರವಾದವು. ಕೊನೆಗೆ ಪೂರ್ಣ ಕನ್ನಡ ಶಿಲಾಲೇಖಗಳೇ ಹೆಚ್ಚಾದವು. ಕದಂಬರ ಕಾಲದ ತಾಮ್ರಪಟಗಳು (ಅವರ ಶಿಲಾಲಿಪಿಗಳು ಕಡಿಮೆ) ಸಂಸ್ಕೃತದಲ್ಲಿ ಇರುತ್ತವೆ. ಚಾಲುಕ್ಯರ ಶಿಲಾಲಿಪಿಗಳಲ್ಲಿ ಅಲ್ಲಿಷ್ಟು ಇಲ್ಲಿಷ್ಟು ಕನ್ನಡ ಅಕ್ಷರಗಳೂ ಶಬ್ದಗಳೂ ದೊರೆಯುತ್ತವೆ. ರಾಷ್ಟ್ರಕೂಟರ ಕಾಲದಲ್ಲಿ ಕನ್ನಡ ಶಿಲಾಲಿಪಿಗಳು ದೊರೆಯುತ್ತವೆ. ಕೊನೆಗೆ ಹೊಸ ಚಾಲುಕ್ಯರ ಕಾಲದಲ್ಲಂತೂ ಶಿಲಾಲಿಪಿಗಳು ಬಹುತರವಾಗಿ ಕನ್ನಡ ಭಾಷೆಯಲ್ಲಿಯೇ ಇರುತ್ತವೆ. ಕೊನೆಗೆ ತಮ್ಮ ಕನ್ನಡ ಭಾಷೆಯ ವರ್ಚಸ್ಸು ಧರ್ಮಕ್ಷೇತ್ರದಲ್ಲಿಯೂ ಹೇಗೆ ಪ್ರಸ್ತಾಪಿತವಾಗಿತ್ತೆಂಬುದಕ್ಕೆ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರದಲ್ಲಿ ಎರಡು ಶ್ಲೋಕಗಳನ್ನು ಕೊಟ್ಟು ಈ ಪ್ರಕರಣವನ್ನು ಮುಗಿಸುತ್ತೇವೆ. ಅವು ಯಾವುವೆಂದರೆ:


ಆದರ್ಶವ ಗತಾಕ್ಷ ಭಾಷಾ | ಭೇದದಿಂದಲಿ ಕರೆಯಲದನು ನಿ |
ಷೇಧಗೈದವಲೋಕಿಸದೆ ಬಿಡುವರೆ ವಿವೇಕಿಗಳು ||
ಮಾಧವನ ಗುಣ ಪೇಳ್ವ ಪ್ರಾಕೃತ | ವಾದರೂ ಸರಿ. ಕೇಳಿ ಪರಮಾ |
ಹ್ಲಾದಬಡದಿಪ್ಪರೆ ನಿರಂತರ ಬಲ್ಲ ಕವಿಜನರು ||೧೬,-,೩೪

ಭಾಸ್ಕರನ ಮಂಡಲವ ಕಂಡು ನ | ಮಸ್ಕರಿಸಿ ಮೋದಿಸದೆ ದ್ವೇಷದಿ |
ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ ||
ಸಂಸ್ಕೃತವಿದಲ್ಲೆಂದು ಕುಹಕ ತಿ | ರಸ್ಕರಿಸಲೇನಹುದು ಭಕ್ತಿಪು |
ರಸ್ಸರದಿ ಕೇಳ್ವರಿಗೆ ಒಲಿದನು ಪುಷ್ಕರಾಕ್ಷಸಖಾ ||೧೬,-೩೫

ಅನೇಕ ಕನ್ನಡಿಗರು ತೆಲುಗು ಭಾಷೆಯಲ್ಲಿ ಪಂಡಿತರಾಗಿ ತೆಲುಗು ಭಾಷೆಯಲ್ಲಿ ಗ್ರಂಥಗಳನ್ನು ಬರೆದರೂ ಅವರಿಗೆ ತಾವು ಕರ್ನಾಟಕರೆಂದೆನಿಸಿಕೊಳ್ಳುವದಕ್ಕೆ ತಿಲಾಂಶದಲ್ಲಿಯೂ ನಾಚಿಕೆಯುಂಟಾಗುತ್ತಿರಲಿಲ್ಲ. ಇಷ್ಟೇ ಅಲ್ಲ, ತಾವು ಕರ್ನಾಟಕರೇ ಎಂದು ಘಂಟಾಘೋಷವಾಗಿ ಸಾರುತ್ತಿದ್ದರು. ಶ್ರೀನಾಥನೆಂಬ ತೆಲುಗು ಕವಿಯು ವಿಜಯನಗರದ ರಾಜನಾದ ಹರಿಹರರಾಯನ ಕಾಲಕ್ಕೆ ಪ್ರಸಿದ್ಧಿಗೆ ಬಂದನು. ಇವನು ತಾನು ಬರೆದ "ಭೀಮೇಶ್ವರ ಪುರಾಣ"ವೆಂಬ ತೆಲುಗು ಗ್ರಂಥದಲ್ಲಿ ಬರೆದಿರುವದೇನಂದರೆ ``ಪ್ರೌಢಿಗರೆಕಿಂಪ ಸಂಸ್ಕೃತ ಭಾಷೆಯೆಂಡ್ರು | ಪಲುಕು ನುಡಿಕಾರಮುನನಾಂಧ್ರ ಭಾಷೆಯೆಂಡ್ರು | ಯೌವರೇ ಮನ್ನನಂಡ್ರು | ನಾಕೇಮಿ ಕೊರತ | ನಾ ಕವಿತ್ವಮಂಬು ನಿಜಮು ಕರ್ನಾಟ ಭಾಷಾ || ||

ಸಾರಾಂಶ: "ನನ್ನ ಕವಿತೆಯ ಪ್ರೌಢಿ ನೋಡಿದರೆ ಅದು ಸಂಸ್ಕೃತ ಭಾಷೆಯೆನ್ನುವರು. ಮಾತಿನ ರೀತಿಯನ್ನು ನೋಡಿದರೆ ತೆಲುಗು ಭಾಷೆಯೆನ್ನುವರು; ಯಾರು ಏನೇ ಎನವಲ್ಲರು! ನನಗೇನು ಕೊರತೆ! ನನ್ನ ಕವಿತ್ವವು ನಿಜವಾಗಿ ಕರ್ನಾಟಕ ಭಾಷೆ" ಅಹಹ ಎಂಥ ಕರ್ನಾಟಕಾಭಿಮಾನವು!!

ಕನ್ನಡಿಗರೇ, ಇಂಥಿಂಥವರು ಕನ್ನಡವನ್ನು ಗೌರವಿಸಿರಲು ನಾವು ಅದನ್ನು ತಿರಸ್ಕರಿಸುವುದುಚಿತವೇ?


೧೬ನೆಯ ಪ್ರಕರಣ

ಉಪಸಂಹಾರ


ಕನ್ನಡಿಗರೇ! ಈ ಬಗೆಯಾಗಿ ನಮ್ಮೆಲ್ಲರಿಗೂ ಅತ್ಯಂತ ಪ್ರಿಯವಾಗಿರುವ ಈ ಕರ್ನಾಟಕದ ಗತ ವೈಭವವನ್ನು ವಿಹಂಗಮದೃಷ್ಟಿಯಿಂದ ಅಲ್ಲ-ಆಕಾಶಯಾನದೃಷ್ಟಿಯಿಂದ ನಾವು ನಿಮ್ಮ ಅವಲೋಕನಕ್ಕೆ ತಂದುಕೊಟ್ಟಿರುವೆವು. ಇನ್ನೂ ಅನೇಕ ಸಂಗತಿಗಳು ಹೇಳದೆ ಉಳಿದಿರುತ್ತವೆ. ಆಗಿನ ಕಾಲದ ಬಂದರುಗಳು, ನಾಣ್ಯಗಳು, ರಾಜ್ಯಪದ್ಧತಿ, ವ್ಯಾಪಾರೋದ್ಯೋಗ, ರೀತಿ ನೀತಿ ಮುಂತಾದ ಅನೇಕ ಮಹತ್ವದ ವಿಷಯಗಳ ಬಗ್ಗೆ ಅನೇಕ ಬೋಧಪ್ರದವಾದ ಮತ್ತು ಅಭಿಮಾನಾಸ್ಪದವಾದ ಸಂಗತಿಗಳನ್ನು ನಾವು ನಮ್ಮ ಇತಿಹಾಸದಲ್ಲಿ ಕಾಣಬಹುದು. ಆದರೆ ಪ್ರಬಂಧವು ಈಗಾಗಲೇ ಅನಪೇಕ್ಷಿತವಾಗಿ ಬೆಳೆದಿರುವುದರಿಂದ, ಅವುಗಳ ಬಗ್ಗೆ ನಮಗೆ ಗೊತ್ತಾಗಿರುವ ಅಲ್ಪ ಸ್ವಲ್ಪ ಸಂಗತಿಗಳನ್ನೂ ಹೇಳದೆ ಕೈ ಬಿಗಿ ಹಿಡಿಯಬೇಕಾಗಿರುತ್ತದೆ.

ಬರೀ ಅರಸರ ನಾಮಾವಳಿಯನ್ನೂ, ರಾಜವಂಶಗಳ ಪರಂಪರೆಯನ್ನೂ, ಹಲಕೆಲವು ಸಂಗತಿಗಳ ತಿಥಿ ವಾರಗಳನ್ನೂ, ಕೆಲವು ಪುಸ್ತಕ ಮತ್ತು ಕವಿಗಳ ಹೆಸರುಗಳನ್ನೂ ಹೇಳಿದ ಮಾತ್ರಕ್ಕೆ ಇತಿಹಾಸವಾಗಲಿಲ್ಲವೆಂಬುದನ್ನು ನಾವೂ ಸಂಪೂರ್ಣವಾಗಿ ಅರಿತಿರುವೆವು. ನಮ್ಮ ಪೂರ್ವಜರು ಇಷ್ಟೊಂದು ವೈಭವವನ್ನು ಹೇಗೆ ಪಡೆದರು, ಅವರ ವಿಚಾರಗಳ ಉತ್ಕ್ರಾಂತಿಯು ಯಾವ ಬಗೆಯಿಂದ ಆಯಿತು, ಅವರ ಧರ್ಮವು ಏಕೆ ಉನ್ನತಿಯನ್ನು ಹೊಂದಿತು, ಅವರ ವಿಚಾರಗಳು ಏಕೆ ವಿಕಸಿತವಾಗಿದ್ದವು? - ಇವೇ ಮೊದಲಾದ ಸಂಗತಿಗಳನ್ನು ಸಾದ್ಯಂತವಾಗಿ ವಿವರಿಸುವದೇ ನಿಜವಾದ ಇತಿಹಾಸವು. ಆದರೆ ಇಂಥ ಇತಿಹಾಸವನ್ನು ಬರೆಯುವುದು ನಮ್ಮ ಉದ್ದೇಶವಲ್ಲ. ಅದು ನಮಗೆ ಇಷ್ಟರಲ್ಲಿ ಸಾಧ್ಯವೂ ಇಲ್ಲ. ಕನ್ನಡಿಗರಲ್ಲಿ ಅಭಿಮಾನವೂ ಕುತೂಹಲವೂ ಜಿಜ್ಞಾಸೆಯೂ ಜಾಗೃತವಾಗಲಿಕ್ಕೆ ಹಿಂದೆ ಹೇಳಿದ ಸಂಗತಿಗಳು ಸಾಕೆಂದೂ ಹೆಚ್ಚಿಗೆ ಹೇಳುವದರಿಂದ ಅಪಚನವಾಗಬಹುದೆಂದೂ ನಾವು ಬಗೆಯುತ್ತೇವೆ. ನಮ್ಮ ಇತಿಹಾಸದ ಬಗ್ಗೆ ಈ ಮುಖ್ಯ ಸಂಗತಿಗಳಾದರೂ ಗೊತ್ತಿರದಿದ್ದರೆ, ನಾವು "ಸುಶಿಕ್ಷಿತ"ರೆಂಬ ನಾಮಾಭಿಧಾನಕ್ಕೂ ಅರ್ಹರಲ್ಲವೆಂದು ನಮ್ಮ ಭಾವನೆ.

ಹಿಂದುಸ್ಥಾನವು ಒಂದು ಸಣ್ಣ ಜಗತ್ತೇ ಇರುತ್ತದೆ. ಇದರಲ್ಲಿ ನಾನಾ ತರದ ಜನಾಂಗಗಳೂ ಭಾಷೆಗಳೂ ಇರುವುದರಿಂದ ಒಂದು ಭಾಗದ ಇತಿಹಾಸವು ಮತ್ತೊಂದು ಭಾಗದ ಇತಿಹಾಸದಲ್ಲಿ ತೊಡಕಿಕೊಂಡಿರುತ್ತದೆ. ಉದಾ: ಮಹಾರಾಷ್ಟ್ರದ ಇತಿಹಾಸವು ನಮ್ಮ ಇತಿಹಾಸದಲ್ಲಿ ತೊಡಕಿಕೊಂಡಿದೆ. ಆದಕಾರಣ, ಆಯಾ ಭಾಷೆಯ ಜನರು ತಮ್ಮ ಇತಿಹಾಸವನ್ನೂ ಅಭ್ಯಾಸ ಮಾಡುವದಲ್ಲದೆ, ಮಿಕ್ಕ ಇತಿಹಾಸವನ್ನೂ ಮಾಡಬೇಕಾಗುವದು. ಅದಕ್ಕಾಗಿ ಬೇರೆ ಬೇರೆ ಪ್ರಾಂತಿಕ ಇತಿಹಾಸ ಮಂಡಲಗಳಲ್ಲದೆ ರಾಷ್ಟ್ರೀಯ ಮಂಡಲವೊಂದನ್ನು ವಿದ್ವಾಂಸರು ಏರ್ಪಡಿಸಬೇಕೆಂದು ನಮ್ಮ ನಮ್ರ ಸೂಚನೆ.

ಆದರೆ, ಕರ್ನಾಟಕಸ್ಥರೇ! ನಾವು ನಮ್ಮ ರಾಷ್ಟ್ರೀಯ ಧ್ಯೇಯವನ್ನು ಮಾತ್ರ ಎಂದೆಂದಿಗೂ, ಕಣ್ಣುಮುಂದಿನಿಂದ ಕೀಳಬಾರದು. "ನಮ್ಮ ಪೂರ್ವಜರು ದೊಡ್ಡವರಾಗಿದ್ದರು; ವಿದ್ವಾಂಸರಾಗಿದ್ದರು; ಬಲಾಢ್ಯರಾಗಿದ್ದರು. ಅವರ ವೈಭವವು ಅಪಾರವಾಗಿತ್ತು" ಎಂದು ಮುಂತಾಗಿ ಒರಲುತ್ತ ಕುಳಿತಮಾತ್ರಕ್ಕೆ ಕಾರ್ಯವಾಗಲಿಲ್ಲ. ಆ ವಿಚಾರಗಳಿಂದ ನಾವು ಉತ್ಸಾಹಗೊಂಡು ವರ್ತಮಾನಕಾಲದ ಹೀನಸ್ಥಿತಿಯನ್ನು ದೂರಮಾಡಬೇಕೆಂದು ಪ್ರತಿಜ್ಞೆಮಾಡಿ ಭವಿಷ್ಯಕಾಲದ ಧ್ಯೇಯವನ್ನು ಪಡೆಯಲಿಕ್ಕೆ ಈ ಇತಿಹಾಸದ ಸಹಾಯವನ್ನು ಪಡೆದರಲ್ಲವೇ ಇದರ ಪ್ರಯೋಜನವು? ಹಿಂದಿನ ವೈಭವವನ್ನು ನೆನೆಸುವುದೇ ನಿರರ್ಥಕವೆಂದು ತಿಳಿಯುವದು ಎಷ್ಟು ಹೆಡ್ಡತನವೋ, ಅಷ್ಟೇ ಹಿಂದಿನ ವೈಭವವನ್ನು ನೆನೆಸಿ ಮುಳು ಮುಳು ಆಳುತ್ತ ಕೈಕಾಲು ಕಳೆದುಕೊಂಡು ಕುಳ್ಳಿರುವುದೂ ತಿರಸ್ಕರಣೀಯವು. ಹಿಂದಿನ ಇತಿಹಾಸದ ಪ್ರಯೋಜನವನ್ನು ಮುಂದಿನ ರಾಷ್ಟ್ರೀಯ ಉನ್ನತಿಗಾಗಿ ಏರ್ಪಡಿಸಿಕೊಳ್ಳುವದೇ ಜಾಣತನದ ಮಾರ್ಗವು. ನಾವು ಸುಧಾರಣೆಯ ಉಚ್ಚ ಶಿಖರದಿಂದ ಈಗ ಪತಿತರಾಗಿರುವೆವಲ್ಲವೆ? ಹಾಗೆ ಪತಿತರಾಗುವುದಕ್ಕೆ ಬೇಕಾಗುವ ವಿಘಾತಕ ಬೀಜಗಳು ನಮ್ಮಲ್ಲಿ ಈಗ ಬೀಡು ಬಿಟ್ಟಿಕೊಂಡಿರುವವು. ಅವುಗಳನ್ನು ಕಂಡುಹಿಡಿದು ಕಿತ್ತುಹಾಕುವದಕ್ಕೆ ಇತಿಹಾಸವೇ ಔಷಧವು.

ಆದುದರಿಂದ ಕೊನೆಗೆ ನಮ್ಮ ಕನ್ನಡ ಬಾಂಧವರಿಗೆ ಕೈಜೋಡಿಸಿ ಪುನಃ ಪುನಃ ಹೇಳುವದೇನಂದರೆ-ಕನ್ನಡಿಗರೇ, ನಾವು ನಮ್ಮ ಆಲಸ್ಯವನ್ನು ತಳ್ಳೋಣ; ಭ್ರಾಮಕ ಕಲ್ಪನೆಗಳನ್ನು ಬಿಟ್ಟುಬಿಡೋಣ; ಮತ್ತು ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿಳಿದ ನಮ್ಮ ಕರ್ನಾಟಕದ ಆರ್ಯಸಂಸ್ಕೃತಿಯನ್ನು ನಾವು ಉದ್ಧರಿಸದೆ ಇನ್ನಾರು ಉದ್ಧರಿಸುವವರು? ಕನ್ನಡಿಗರು ಹೇಡಿಗಳು, ಹಿಂದುಳಿದವರು, ಅಭಿಮಾನಶೂನ್ಯರು-ಎಂದು ಮೊದಲಾದ ಕರ್ಣಕಟುವಾದ ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವನೀ ಮಾತ್ರೆಯನ್ನು ಹಾಕಿ ಚೇತನಗೊಳಿಸೋಣ. ನಮ್ಮ ಆಶಾವೃಕ್ಷವನ್ನು ಕೊಳೆಯಿಸಿ ಬಿಡುವಂಥ ಹುಳುಗಳನ್ನು ಕೊಲ್ಲಲು ಇತಿಹಾಸವೇ ಮದ್ದು. ಕನ್ನಡಿಗರೇ, "ಕರ್ನಾಟಕ"ವೆಂಬ ಒಂದು ಶಬ್ದದಲ್ಲಿ, ಎಂಥ ಅದ್ಭುತವಾದ ಮಾಂತ್ರಿಕ ಶಕ್ತಿಯು ತುಂಬಿರುತ್ತದೆಂಬುದನ್ನು ಲಕ್ಷ್ಯಕ್ಕೆ ತನ್ನಿರಿ! ಕರ್ನಾಟಕದ ಅರಸರು ಹೋದರು! ಕವಿಗಳು ಹೋದರು! ಸಂಪತ್ತು ಹೋಯಿತು! ವೈಭವವು ಹೋಯಿತು! ಆದರೆ "ಕರ್ನಾಟಕ"ವೆಂಬ ಶಬ್ದವು ಮಾತ್ರ ಇನ್ನೂ ಉಳಿದಿದೆ. ಅದು ದ್ರೌಪದಿಯ ಅಕ್ಷಯಪಾತ್ರೆಯೊಳಗಿನ ಅಗುಳಿನಂತಿರುತ್ತದೆ. ಶ್ರೀಕೃಷ್ಣಪರಮಾತ್ಮನ ಕೃಪೆಯಿಂದ ನಾವು ಇದೊಂದು ಅಗುಳಿನಿಂದ ಸಾವಿರಾರು ಜನರ ಹಸಿವೆಯನ್ನು ಹಿಂಗಿಸಬಹುದು. ಆದಕಾರಣ, ಕನ್ನಡಿಗರೇ, ಕರ್ನಾಟಕ ಸಂಸ್ಕೃತಿಯೆಂಬ ಗುಪ್ತಗಾಮಿನಿಯಾದ ಗಂಗೆಯನ್ನು ಮೇಲಕ್ಕೆ ಎತ್ತಿ ತರೋಣ! ಏಳಿರಿ, ಇದೀಗ ನಮ್ಮ ಮುಖ್ಯ ಕರ್ತವ್ಯವು.

ಆದುದರಿಂದ, ಕನ್ನಡಿಗರೇ, ಇನ್ನು ಅರ್ಜುನನು ತನ್ನ ಮೋಹವನ್ನು ದೂರೀಕರಿಸಿ ಶ್ರೀಕೃಷ್ಣ ಪರಮಾತ್ಮನಿಗೆ ಉತ್ತರವಿತ್ತಂತೆ, ನಾವು ರಾಷ್ಟ್ರದೇವತೆಗೆ ಹೀಗೆಂದು ಹೇಳುವ:



ನಷ್ಟೋ ಮೋಹಃ ಸ್ಮತಿರ್ಲಬ್ದಾತ್ವತ್ಪ್ರಸಾದನ್ಮಯಾಚ್ಯುತ
ಸ್ಥಿತೋಹ:ಗತಸಂದೇಹಃ ಕರಿಷ್ಯೇ ವಚನಂ ತವ ||
__ಗೀತೆ ೧೮ - ೭೩

ದೇವ ಬಿನ್ನಹ ನಿಮ್ಮ ಕಾರು
ಣ್ಯಾವಲೋಕನಂದಿಂದಲೆನ್ನ ಗು
ಣಾವಲಂಬನದಜ್ಞತನ ನೆರೆ ಕೆಟ್ಟುದದರಿಂದ
ಜೀವಭಾವವನುಳಿದು ನಿಜ ಸಂ
ಭಾವಿಸಿತು ಸಂದೇಹ ಬೀತುದು
ದೇವ ನೀ ಹೇಳಿದುದ ಮಾಡುವೆನೆಂದನಾ ಪಾರ್ಥ ||


ಶ್ರೀಕೃಷ್ಣಾರ್ಪಣಮಸ್ತು

ಪೂರಕ ಪ್ರಕರಣ

ಕರ್ನಾಟಕ-ಇತಿಹಾಸ-ಸಂಶೋಧನ


ವಾಚಕರೇ, ಕರ್ನಾಟಕ ಇತಿಹಾಸದ ವಿಷಯವಾಗಿ ಸಾಮಾನ್ಯವಾಗಿ ಹೇಳಬೇಕಾದುದೆಲ್ಲವನ್ನು ಹೇಳಿದೆವು. ಇನ್ನು, ಈ ಮುಂದಿನ ಪ್ರಕರಣದಲ್ಲಿ, ಕರ್ನಾಟಕ ಇತಿಹಾಸ ಸಂಶೋಧನದ ಕಾರ್ಯಕ್ಕೆ ಅವಶ್ಯವಾಗಿ ಗೊತ್ತಿರಬೇಕಾಗಿರುವ ಕೆಲವು ಸಂಗತಿಗಳನ್ನು ಇಲ್ಲಿ ನಿವೇದಿಸಿ, ಸಂಶೋಧಕರು ಯಾವ ಮಾರ್ಗದಿಂದ ಸಾಗಬೇಕೆಂಬ ಬಗ್ಗೆ ನಮಗೆ ಗೊತ್ತಿದ್ದ ಮಟ್ಟಿಗೆ ಕೆಲವು ಸೂಚನೆಗಳನ್ನು ಮಾಡಿರುವೆವು. ಏಕೆಂದರೆ ಹಾಗೆ ಮಾಡದಿದ್ದರೆ, ಸಂಶೋಧಕರು ದಾರಿ ತಪ್ಪಿ ಅಡವಿಗೆ ಬೀಳುವ ಸಂಭವವುಂಟು.

ಹಿಂದೆ ೫ನೆಯ ಪ್ರಕರಣದಲ್ಲಿ ಇತಿಹಾಸಕ್ಕೆ ಉಪಲಬ್ಧವಾಗಬಹುದಾದ ಸಾಧನ-ಸಂಪತ್ತಿಯನ್ನು ಹೇಳಿರುವೆವಷ್ಟೇ. ಈ ಸಾಧನಸಾಮಗ್ರಿಯಲ್ಲಿ ಸ್ಥೂಲವಾಗಿ ಎರಡು ವರ್ಗಗಳನ್ನು ಮಾಡಬಹುದು: (೧) ಪ್ರಾಚೀನ ವಸ್ತು ಸಂಶೋಧನ (೨) ಹಿಂದಿನ ವಾಙ್ಞಯ ಸಂಶೋಧನ. ಇವುಗಳಲ್ಲಿ ಎರಡನೆಯದರ ಬಗ್ಗೆ ಹೆಚ್ಚಿಗೆ ಹೇಳುವ ಕಾರಣವಿಲ್ಲ. ಚೆನ್ನಬಸವಪುರಾಣ, ಕನಕದಾಸ - ಪುರಂದರದಾಸರ ಪದಗಳು ಮುಂತಾದವುಗಳನ್ನು ಇತಿಹಾಸದ ದೃಷ್ಟಿಯಿಂದ ಓದಿ, ಅವುಗಳಲ್ಲಿ ದೊರೆಯುವ ಇತಿಹಾಸದ ಅಂಶವನ್ನು ಒಂದೆಡೆಗೆ ಕೂಡಿಸಿಟ್ಟರೆ, ಕರ್ನಾಟಕದ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಉಪಯೋಗವಾಗಬಹುದು. ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ಕನ್ನಡ ಮತ್ತು ಸಂಸ್ಕೃತ ಪುಸ್ತಕಗಳನ್ನು ಕಾಲಕ್ರಮವಾಗಿ ಒಂದೊಂದು ತೆಗೆದುಕೊಂಡರೆ ಹೆಚ್ಚು ಒಳ್ಳೆಯದು. ಇಂಥಿಂಥ ಪುಸ್ತಕದಲ್ಲಿಯೇ ನಮ್ಮ ಇತಿಹಾಸದ ಅಂಶವು ದೊರೆಯುತ್ತದೆಂದು ಹೇಳುವುದು ಶಕ್ಯವಿಲ್ಲ. ಆದರೂ ಹಿಂದಿನ ಪ್ರಕರಣದಲ್ಲಿ ಹೇಳಿದ ಇತಿಹಾಸದಿಂದ ಯಾವ ದೃಷ್ಟಿಯಿಂದ ಆ ವಾಙ್ಮಯ ಓದಬೇಕಾಗುವುದೆಂಬುದು ಗೊತ್ತಾಗಿರಬಹುದು. ಯಾವುದೊಂದು ಪುಸ್ತಕವನ್ನೋದಿದ ಕೂಡಲೆ, ಅದರೊಳಗೆ ನಮ್ಮ ಅರಸರ ಹೆಸರುಗಳುಂಟೇ, ಕರ್ನಾಟಕದ ಸುಧಾರಣೆಗೆ ಕೈಕೊಟ್ಟ ಜನರ ನಾಮನಿರ್ದೆಶವಿರುವುದೇ, ಆ ಪುಸ್ತಕವು ಎಂದು ಹುಟ್ಟಿತೆಂಬುದರ ಬಗ್ಗೆ ಅದರಲ್ಲಿ ಏನಾದರೂ ಆಧಾರವುಂಟೇ?-ಇವೇ ಮುಂತಾದ ಸಂಗತಿಗಳನ್ನು ಟಿಪ್ಪಣಿಮಾಡಿ ಇಟ್ಟುಕೊಳ್ಳಬೇಕು. ಪುಸ್ತಕದ ಆರಂಭಕ್ಕೂ ಕೊನೆಗೂ ಗ್ರಂಥಕರ್ತರು ತಮ್ಮ ಕುಲಗೋತ್ರಗಳನ್ನು ಹೇಳಿಡುವ ಸಂಪ್ರದಾಯವಿರುತ್ತದೆ. ಆದುದರಿಂದ ಅತ್ತ ಲಕ್ಷ್ಯವಿಡಬೇಕು.

ಇನ್ನು ಎರಡನೆಯ ವರ್ಗದ ವಿಷಯವಾಗಿ ಎಂದರೆ ಪುರಾಣವಸ್ತು ಸಂಶೋಧನದ ವಿಷಯವಾಗಿ ಮಾತ್ರ ಹೆಚ್ಚು ವಿಸ್ತರಿಸಿ ಹೇಳುವ ಅವಶ್ಯವಿದೆ. ಏಕೆಂದರೆ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ಲಿಪಿಗಳೂ ಲೇಖಗಳೂ ಒಂದೇ ಕಡೆಗೆ ಸಂಕಲಿತವಾಗಿ ದೊರೆಯುವದಿಲ್ಲ. ಅವು ಅನೇಕ ಪುಸ್ತಕಗಳಲ್ಲಿ ಹರಡಿರುತ್ತವೆ. ಮತ್ತು ಇಂದಿನವರೆಗೆ ಆಗಿಹೋದ ಪ್ರಯತ್ನಗಳ ಜ್ಞಾನವಿರದಿದ್ದರೆ, ನಮಗೆ ನಿಷ್ಕಾರಣವಾಗಿ ಶ್ರಮವುಂಟಾಗುವ ಸಂಭವವುಂಟೆಂದು ನಮ್ಮ ಸ್ವಂತ ಅನುಭವಕ್ಕೆ ಬಂದಿದೆ. ಇಂದಿನವರೆಗೆ ಎಷ್ಟು ಶಿಲಾಲಿಪಿಗಳು ಎಲ್ಲೆಲ್ಲಿ ಮುದ್ರಿತವಾಗಿವೆ, ಅವುಗಳ ಅರ್ಥವನ್ನು ಗೊತ್ತುಹಚ್ಚಿರುವರೇ ಇಲ್ಲವೇ? ಇಲ್ಲದಿದ್ದರೆ ಅವುಗಳ ಸಂಗ್ರಹವು ಯಾರ ಹತ್ತರವುಂಟು, ಶಿಲಾಲಿಪಿಗಳು ಯಾವ ಯಾವ ಸ್ಥಳದಲ್ಲಿ ಸಿಕ್ಕುತ್ತವೆ?ಇವೇ ಮುಂತಾದ ವಿಷಯಗಳನ್ನು ಕುರಿತು ಸವಿಸ್ತಾರವಾದ ಪುಸ್ತಕವೊಂದನ್ನು ರಚಿಸಿದರೆ ಮುಂದಿನ ಸಂಶೋಧಕರಿಗೆ ಮಾರ್ಗದರ್ಶಿಯಾಗುವದು. ಅದರ ಕಾರ್ಯವನ್ನು ತೃಪ್ತಿಕರವಾಗಿ ಮುಂದೆ ಯಾರು ಮಾಡುವರೋ ಮಾಡಲಿ, ಸದ್ಯಕ್ಕೆ ಹತ್ತು ಹನ್ನೆರಡು ವರುಷಗಳಲ್ಲಿ ಆಗಿಷ್ಟು ಈಗಿಷ್ಟು ಮಾಡಿದ ಅಭ್ಯಾಸದಿಂದ ನಮಗೆ ಪುಸ್ತಕಗಳಲ್ಲಿ ದೊರೆತ ಸಂಗತಿಗಳನ್ನು ಇಲ್ಲಿ ಅತಿ ಸಂಕ್ಷೇಪವಾಗಿ ಹೇಳಿಡುವೆವು.

"ಕರ್ನಾಟಕ"ವೆಂಬ ಶಬ್ದವನ್ನುಚ್ಚರಿಸಿದೊಡನೆಯೆ ಮೈ ಮುಳ್ಳಿಡುವಷ್ಟು ರಾಷ್ಟ್ರೀಯತ್ವವು ನಮ್ಮ ಕನ್ನಡಿಗರಲ್ಲಿ ಇಷ್ಟು ದಿವಸ ವಿಕಾಸವಾಗಲಿಲ್ಲವೆಂಬ ಕಾರಣದಿಂದಲೋ, ಕರ್ನಾಟಕವು ತುಂಡು ತುಂಡಾಗಿ ಹೋಗಿ ಅಖಂಡ ಕರ್ನಾಟಕವು ಕಣ್ಣಿದಿರಿಗೆ ನಿಲ್ಲುವದಿಲ್ಲೆಂಬ ಕಾರಣದಿಂದಲೋ, ನಮ್ಮ ಕನ್ನಡಿಗರು ತಮ್ಮ ಇತಿಹಾಸವನ್ನು ಕುರಿತು ಮೂಕಭಾವವನ್ನೇ ಅವಲಂಬಿಸಿದ್ದಾರೆ. ಮುಂಬಯಿ ಕರ್ನಾಟಕದವರು ಸಮೀಪದಲ್ಲಿರುವ ಮರಾಠೀ ಬಂಧುಗಳ ಅಭಿಮಾನಪೂರ್ವಕವಾದ ರಾಷ್ಟ್ರೀಯ ಪ್ರಯತ್ನಗಳಿಂದ ಜಾಗರೂಕರಾಗಿ ತಮ್ಮ ಭಾಷಾವಿಷಯದಲ್ಲಿ ಕೆಲಮಟ್ಟಿಗೆ ಅಭಿಮಾನಗೊಂಡವರಾದರೂ ಆ ಅಭಿಮಾನವು ಭಾಷಾಕ್ಷೇತ್ರವನ್ನು ಮಾತ್ರವೇ ವ್ಯಾಪಿಸಿಕೊಂಡಿರುವದಲ್ಲದೆ, ಹೆಚ್ಚು ವಿಸ್ತಾರವಾದ ಸ್ವರೂಪವು ಅದಕ್ಕೆ ಇಂದಿನವರೆಗೆ ಪ್ರಾಪ್ತವಾಗಿಲ್ಲ. ಉತ್ತರ ಕರ್ನಾಟಕದ ಬಿಕ್ಕಟ್ಟಿನ ಪರಿಸ್ಥಿತಿಯೇ ಇದಕ್ಕೆ ಕಾರಣವಾಗಿರಬಹುದು. ಅಥವಾ ಕಾಲವು ಅನುಕೂಲವಿರಲಿಲ್ಲವೆಂದು ಹೇಳಬಹುದು. ಅದು ಏನೇ ಇರಲಿ; ಹಿಂದಿನ ೫೦-೬೦ ವರ್ಷಗಳಲ್ಲಿ, ಕರ್ನಾಟಕದಲ್ಲಿ ಪಂಡಿತರೇನೋ ಅನೇಕರು ಆಗಿಹೋದರು; ವಿದ್ವಾಂಸರೇನೋ ಕಡಿಮೆಯಾಗಲಿಲ್ಲ. ಭಾಷಾಭಿಮಾನಿಗಳೂ ಬಗೆಬಗೆಯಾಗಿ ತಲೆದೋರಿದರು; ಆದರೆ ನಮ್ಮೀ ಕರ್ನಾಟಕವನ್ನು ಅಭಿಮಾನಕ್ಕೆ ಜೀವನವಾದ ಇತಿಹಾಸದೃಷ್ಟಿಯಿಂದ ಯಾರೂ ಅಭ್ಯಾಸ ಮಾಡಲಿಲ್ಲ. ಇದರ ಪರಿಣಾಮವೇನಾಯಿತೆಂದರೆ, ಕರ್ನಾಟಕರ ಮನಸ್ಸಿನಲ್ಲಿ ಭಾಷಾಭಿಮಾನವು ಕೆಲಮಟ್ಟಿಗೆ ಬೇರೂರಿದರೂ, ಅದು ವೃಕ್ಷವಾಗಿ ಬೆಳೆಯಲಿಕ್ಕೆ ಬೇಕಾದ ಇತಿಹಾಸ ಜೀವನವು ಅವರಿಗೆ ದೊರೆಯದಿದ್ದುದರಿಂದ, ಆ ಬೇರು ಕಸುವಿಲ್ಲದೆ ಒಣಗಹತ್ತಿತು. ಇರಲಿ! ಇದು ಕನ್ನಡಿಗರ ಸ್ಥಿತಿಯಾಯಿತು. ಇನ್ನು ಕನ್ನಡಿಗರೇ ಈ ವಿಷಯದಲ್ಲಿ ಉದಾಸೀನರಾಗಿದ್ದ ಬಳಿಕ, ಅದನ್ನು ಕಣ್ಣೆತ್ತಿ ನೋಡುವವರಾರು! ತಮ್ಮ ಜನರ ಇತಿಹಾಸವು ತಮಗೆ ಹೇಗೆ ಕಾಣುವುದು ಶಕ್ಯವಿದೆಯೇ, ಹಾಗೆ ಅದು ಪರಕೀಯರಿಗೆ ಕಾಣುವುದು ಶಕ್ಯವಿಲ್ಲವಷ್ಟೇ! ಆದುದರಿಂದ ಪರಕೀಯರು ನಮ್ಮ ಇತಿಹಾಸವನ್ನು ಸ್ವಾಭಿಮಾನದೃಷ್ಟಿಯಿಂದ ಅಭ್ಯಾಸ ಮಾಡಿಲ್ಲವೆಂದು ಹೇಳಿದರೆ ಆಶ್ಚರ್ಯವೇನು? ಆದರೆ ಕೆಲವು ಯುರೋಪೀಯ ವಿದ್ವಾಂಸರು ಪುರಾತನ ವಸ್ತು ಸಂಶೋಧನ ಕಾರ್ಯದಲ್ಲಿ ತೊಡಗಿದಾಗ ಅವರಿಗೆ ನಮ್ಮ ಇತಿಹಾಸದ ಸಂಗತಿಗಳು ಗೊತ್ತಾಗಿ, ಅವರು ಅವುಗಳನ್ನು ಕುತೂಹಲದಿಂದ ಸಂಗ್ರಹಿಸಿರುವರು. ಅವರ ಈ ಪ್ರಯತ್ನಗಳ ವಿಷಯವಾಗಿ ನಾವು ಅವರ ಉಪಕಾರವನ್ನು ಎಷ್ಟು ಸ್ಮರಿಸಿದರೂ ತೀರದು. ಅವರ ಅ ಪ್ರಯತ್ನಗಳೇ ನಮ್ಮ ಇತಿಹಾಸಾಭ್ಯಾಸಕ್ಕೆ ಮೂಲಾಕ್ಷರಗಳಾಗಿವೆ. ಈ ವಿದ್ವಾಂಸರು ಪುರಾಣವಸ್ತುಗಳನ್ನು ಸಂಶೋಧಿಸುವಾಗ ಕೆಲವರಿಗೆ ಶಿಲಾಲಿಪಿಗಳು ದೊರೆತವು. ಕೆಲವರ ಲಕ್ಷ್ಯವು ನಮ್ಮಲ್ಲಿಯ ನಾಣ್ಯಗಳ ಕಡೆಗೆ ಎಳೆಯಿತು. ಕಟ್ಟಡಗಳು ಕೆಲವರ ಮನಸ್ಸನ್ನು ಆಕರ್ಷಿಸಿದವು; ಅವರು ಆಯಾ ವಿಷಯಗಳಲ್ಲಿ ಪರಿಶ್ರಮಪಟ್ಟು ಅನೇಕ ಪುಸ್ತಕಗಳನ್ನು ಬರೆದಿರುವರು. ಯುರೋಪೀಯ ಜನರ ಇತಿಹಾಸ ದೃಷ್ಟಿಯು ಈ ಮೊದಲೇ ಎಚ್ಚರಗೊಂಡಿರುವದರಿಂದ, ಮತ್ತು ಹೊಸ ವಸ್ತುಗಳನ್ನು ಕಂಡೊಡನೆಯೇ ಅವುಗಳನ್ನು ಲಕ್ಷ್ಯಪೂರ್ವಕವಾಗಿ ಪರಿಶೋಧಿಸುವ ಪರಿಪಾಠವು ಅವರಿಗೆ ಮೊದಲಿನಿಂದ ಇದ್ದುದರಿಂದ, ಅವರು ತಮ್ಮ ಬುದ್ಧಿ ಸಾಮರ್ಥವನ್ನು ವೆಚ್ಚಮಾಡಿ, ಅವುಗಳನ್ನು ಅಭ್ಯಾಸಮಾಡಿ ಅವುಗಳಿಂದ ನಿಷ್ಪನ್ನವಾಗುವ ಸಂಗತಿಗಳನ್ನು ತಿಳಿಯಲು ಮನಗೊಂಡವರಾದರು. ಸಾರಾಂಶ: ಆಂಗ್ಲಪಂಡಿತರ ಕುತೂಹಲವೇ ನಮ್ಮ ಇತಿಹಾಸ ಸಂಶೋಧನದ ಆಕಸ್ಮಿಕವಾದ ಮೂಲವು. ಈ ಹೊತ್ತಿನವರೆಗೆ ಅವರು ಮಾಡಿದ ಪ್ರಯತ್ನಗಳ ಫಲವನ್ನೇ ಮೂಲಧನವನ್ನಾಗಿಟ್ಟುಕೊಂಡು ಮುಂದಿನ ಇತಿಹಾಸವನ್ನು, ನಿಜವಾದ ಕರ್ನಾಟಕದ ಅಭಿಮಾನದಿಂದ ಅಭ್ಯಾಸ ಮಾಡಬೇಕಾಗಿದೆ. ಆದರೆ, ಕರ್ನಾಟಕಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಕುರಿತು ಹೇಳುವ ಮೊದಲು, ಹಿಂದುಸ್ಥಾನದ ಇತಿಹಾಸದ ಬಗ್ಗೆ ಯಾರು ಯಾರು ಈ ಮಾರ್ಗದಿಂದ ಪ್ರಯತ್ನ ಮಾಡಿದರೆಂಬುದನ್ನು ತಿಳಿದುಕೊಳ್ಳಬೇಕು.

ಈ ವಿಷಯವಾಗಿ ಖಾಸಗೀ ರೀತಿಯಿಂದ ಪ್ರಯತ್ನ ಮಾಡಿದವರಲ್ಲಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಗಳೇ ಮುಖ್ಯವಾದವುಗಳು. ಬಂಗಾಲ ರಾಯಲ್ ಏಶಿಯಾಟಿಕ್ ಸೊಸಾಯಿಟಿಯು ೧೭೭೫ರಲ್ಲಿ ಸ್ಠಾಪಿತವಾಯಿತು. ಮುಂಬಯಿ ಸಂಸ್ಥೆಯು ೧೮೦೪ನೆಯ ಇಸವಿಯಲ್ಲಿ ಸ್ಥಾಪಿತವಾಯಿತು. ೧೮೧೮ನೆಯ ಇಸ್ವಿಯಲ್ಲಿ ಮದ್ರಾಸ ಸಂಸ್ಥೆಯು ಸ್ಥಾಪಿತವಾಯಿತು. ೧೮೨೫ನೆಯ ಇಸ್ವಿಯಲ್ಲಿ ಲಂಡನ್ ಸೊಸಾಯಿಟಿಯು ಸ್ಥಾಪಿತವಾಗಿ, ಮೊದಲು ಬೇರೆ ಬೇರೆ ಹೆಸರುಗಳಿಂದ ಕೆಲಸ ಮಾಡುತ್ತಿದ್ದ ಇವೆಲ್ಲ ಸಂಸ್ಥೆಗಳು ಆ ಲಂಡನದ ಮುಖ್ಯಸಂಸ್ಥೆಗೆ ಶಾಖೆಗಳಾಗಿ ಮಾಡಲ್ಪಟ್ಟವು. ಫರ್ಗುಸನ್, ಪ್ರಿನ್ಸೆಪ್, ಇಲಿಯಟ್ ಮುಂತಾದ ಅನೇಕ ವಿದ್ವಾಂಸರು ಆಯಾ ಸಂಸ್ಥೆಗಳಿಂದ ಹೊರಡಿಸಲ್ಪಟ್ಟ ಮಾಸಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿರುವರು. ಆದರೆ ಶಿಲಾಲಿಪಿ, ತಾಮ್ರಶಾಸನಗಳನ್ನು ಸಂಶೋಧಿಸುವುದೊಂದೇ ಆ ಸಂಸ್ಥೆಯ ಕೆಲಸವಿರಲಿಲ್ಲ. ಪೌರ್ವಾತ್ಯ ದೇಶಗಳಿಗೆ ಸಂಬಂಧಿಸಿದ ಯಾವದೇ ವಸ್ತುವಿರಲಿ, ಯಾವದೇ ಜ್ಞಾನವಿರಲಿ, ಅವೆಲ್ಲವನ್ನು ಸಂಶೋಧಿಸುವುದು ಅವರ ಕೆಲಸವಾಗಿತ್ತು. ಆದಕಾರಣ, ನಮ್ಮ ದೇಶದ ಭೂಗರ್ಭಶಾಸ್ತ್ರ, ಪ್ರಕೃತಿಶಾಸ್ತ್ರ, ಮುಂತಾದ ನಾನಾ ತರದ ವಿಷಯಗಳ ಮೇಲೆ ಲೇಖಗಳು ಬಹುತರವಾಗಿ ಮುಂಬಯಿ ಸಂಸ್ಥೆಯವರು ತೆಗೆದ ಮಾಸ ಪತ್ರಿಕೆಯಲ್ಲಿಯೇ ವಿಶೇಷವಾಗಿ ದೊರೆಯುತ್ತವೆ. ಅದನ್ನು ವಿಸ್ತಾರವಾಗಿ ಮುಂದೆ ಕೊಡುವೆವು. ಸದ್ಯಕ್ಕೆ ನೆನಪಿನಲ್ಲಿಡತಕ್ಕ ಸಂಗತಿಯೇನಂದರೆ, ಈ ಸಂಸ್ಥೆಗಳಿಂದ ಹೊರಡುವ ಮಾಸಪತ್ರಿಕೆಗಳನ್ನು ಸಂಶೋಧಕರು ಆದಷ್ಟು ಮಟ್ಟಿಗೆ ಸಂಗ್ರಹಿಸಬೇಕೆಂಬುದು.

೧೮೭೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ ಎಂಬೊಬ್ಬ ವಿದ್ವಾಂಸರು ಇಂಡಿಯನ್ ಆಂಟಿಕ್ವರಿ "Indian Antiquary" ಎಂಬ ಸ್ವತಂತ್ರವಾದ ಮಾಸಪತ್ರಿಕೆಯನ್ನು ತೆಗೆದರು. ಅಂದಿನಿಂದ ಪುರಾಣ ವಸ್ತು ಸಂಶೋಧನ ವಿಷಯಕವಾದ ಲೇಖಗಳೆಲ್ಲವೂ ಈ ಮಾಸಪತ್ರಿಕೆಯಲ್ಲಿಯೇ ಹೆಚ್ಚಾಗಿ ಬರುತ್ತವೆ. ಈ ಮಾಸಪತ್ರಿಕೆಯಲ್ಲಿ ಶಿಲಾಲಿಪಿ ಮುಂತಾದುವುಗಳ ವಿಷಯಕ್ಕೆ ಲೇಖಗಳು ಬಂದಂತೆ ಮಿಕ್ಕ ವಿಷಯಗಳ ಸಂಬಂಧದಿಂದಲೂ ಲೇಖಗಳು ಬರುತ್ತವೆ. ಆದರೆ ಲಿಪಿಗಳನ್ನು ಸಂಶೋಧಿಸುವ ಕೆಲಸವು ಬೆಳೆದುದರಿಂದ ಸರಕಾರದವರು ಈ ಇಂಡಿಯನ್ ಆಂಟಿಕ್ವರಿ (Indian Antiquary) ಮಾಸಪತ್ರಿಕೆಯ ಜೊತೆಗೆ ಎಪಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಸ್ವತಂತ್ರವಾದ ಪತ್ರಿಕೆಯನ್ನು ೧೮೯೧ನೆಯ ಇಸ್ವಿಯಿಂದ ಹೊರಡಿಸಹತ್ತಿರುವರು. ಇದರಲ್ಲಿ ಕೇವಲ ಲಿಪಿಗಳೇ ದೊರೆಯುತ್ತವೆ. ಇವೆರಡು ಪತ್ರಿಕೆಗಳು ಇನ್ನೂ ನಡೆಯುತ್ತವೆ. ಇವು ಸಂಶೋಧಕರಿಗೆ ಅವಶ್ಯವಾದ ಪುಸ್ತಕಗಳು.

ಮೈಸೂರ ಸರಕಾರದವರಂತೂ ತಮ್ಮ ಪ್ರಾಂತದ ಶಿಲಾಲಿಪಿ ಮುಂತಾದುವುಗಳನ್ನು ಸಂಪೂರ್ಣವಾಗಿ ಸಂಶೋಧಿಸಿ ಅಚ್ಚು ಹಾಕಿದ್ದಾರೆ. ಈಗ ೧೯೧೭ರವರೆಗೆ ಒಟ್ಟು ೧೨ ಪುಸ್ತಕಗಳು ಹೊರಬಿದ್ದಿವೆ. ಇದಲ್ಲದೆ ಈ ಖಾತೆಯವರು ಪ್ರತಿವರುಷವೂ ಹೊಸ ಶೋಧಗಳನ್ನು ಮಾಡುತ್ತಿದ್ದಾರೆ. ಅವೆಲ್ಲಾ ಪುಸ್ತಕಗಳೂ ನಮ್ಮ ಇತಿಹಾಸಕ್ಕೆ ಸಂಬಂಧಪಟ್ಟವುಗಳೇ ಆಗಿರುವುದರಿಂದ ಅವೆಲ್ಲವೂ ಓದತಕ್ಕವುಗಳೇ.

ಇತ್ತಿತ್ತ ತಿರುವಾಂಕೂರು ಮತ್ತು ನಿಜಾಮ ಸರಕಾರದವರೂ ಈ ಪುರಾಣವಸ್ತು ಸಂಶೋಧನದ (Archaeology) ಬೇರೆ ಖಾತೆಯನ್ನೇ ಏರ್ಪಡಿಸಿದ್ದಾರೆ. ನಿಜಾಮ ಇಲಾಖೆಯಲ್ಲಿಯೂ ಹೊಸದಾಗಿ ಈ ಸಂಬಂಧದಿಂದ ಒಂದು ಖಾತೆಯು ನಿರ್ಮಿತವಾಗಿದೆ.

ಇನ್ನು ಈ ವಿಷಯವನ್ನು ನಮ್ಮ ಸರಕಾರದವರು ಹೇಗೆ ಕೈಕೊಂಡರೆಂಬುದನ್ನು ಇಲ್ಲಿ ಸಂಕ್ಷೇಪವಾಗಿ ಕೊಡುವೆವು. ಪುರಾಣವಸ್ತು ಸಂಶೋಧನಕ್ಕೆ (Arcaeology)Dr. Burgess ಇವರ ಇಂಪೀರಿಯಲ್ ಸೀರಿಸ್ (Imperial Series) ಮತ್ತು ಜನರಲ್ ಕನ್ನಿಂಗ್ಹ್ಯಾಮ್ (General Cunningham) ಇವರ ಡಿಸ್ಟ್ರಿಕ್ಟ ರಿಪೋರ್ಟ್ಸ (District Reports) ಇವು ಮೊದಲನೆಯ ಪುಸ್ತಕಗಳು. ಆದರೆ ಡಾ. ಬರ್ಗೆಸ್ (Dr. Burgess) ಇವರು ಈ ವಿಷಯವನ್ನು ಸಂಶೋಧಿಸುವ ಉದ್ದೇಶದಿಂದಲೇ ನೇಮಿಸಲ್ಪಟ್ಟಿದ್ದರೂ, ಅವರು ಇಡೀ ಹಿಂದುಸ್ಥಾನದಲ್ಲಿ ಕೆಲಸ ಮಾಡಲಿಲ್ಲ. ದಿ ಬುದ್ಧಿಸ್ಟ್ ಕೇವ್ಹಸ್ ಆಫ್ ವೆಸ್ಟರ್ನ್ ಇಂಡಿಯಾ ಮತ್ತು ದಿ ಆಂಟಿಕ್ವಿಟಿಸ್ ಆಫ್ ಬೀದರ್ ಆಂಡ್ ಔರಂಗಬಾದ ಡಿಸ್ಟ್ರಿಕ್ಟ್ (The Buddist Caves of Western India; The antiquities of Bidar and Aurangabad Districts) ಇವೇ ಮುಂತಾದ ಅವರ ಪುಸ್ತಕಗಳ ಮೇಲಿಂದ ನಾವು ಮೇಲೆ ಹೇಳಿದ್ದರ ಸತ್ಯತೆಯು ಕಂಡುಬರುವುದು. ಅವರ ರಿಪೋರ್ಟುಗಳು ಕಾಲಕಾಲಕ್ಕೆ ಹೊರಡುತ್ತಿರಲಿಲ್ಲ. ಸಾಕಷ್ಟು ಸಲಕರಣೆಗಳು ಕೂಡಿದನಂತರ ಒಂದೊಂದು ಪುಸ್ತಕವು ಬೈಲಿಗೆ ಬರುತ್ತಿತ್ತು. ೧೮೭೪ನೇ ಇಸವಿಯಿಂದ ೧೯೦೨ನೇ ಇಸವಿಯವರೆಗೆ ಅಂದರೆ ೨೯ ವರ್ಷಗಳಲ್ಲಿ ೩೨ ಪುಸ್ತಕಗಳು ಹೊರಬಿದ್ದಿರುತ್ತವೆ. ಅದಕ್ಕೆ ವ್ಹಾಲ್ಯುಮ್ಸ್ ಆಫ್ ದಿ ಇಂಪೀರಿಯಲ್ ಸೀರಿಸ್ (Volumes of the Imperial Series) ಎಂದೆನ್ನುತ್ತಾರೆ. ಒಮ್ಮೊಮ್ಮೆ ಒಂದೇ ವರ್ಷದಲ್ಲಿ ೫ ಪುಸ್ತಕಗಳು ಹೊರಬಿದ್ದವು. ಡಾ. ಬರ್ಗೆಸ್ (Dr. Burgess) ಇವರ ಜೊತೆಗೆ ಮತ್ತೆ ೯ ಜನರು ಕೆಲಸ ಮಾಡುವವರಿದ್ದರು. ಅಂದರೆ ಈ ೩೨ ಪುಸ್ತಕಗಳಲ್ಲಿ ಡಾ. ಬರ್ಗೆಸ್ (Dr. Burgess) ಇವರೊಬ್ಬರೇ ಬರೆದಿರುತ್ತಾರೆ.

ಜನರಲ್ ಕನ್ನಿಂಗ್ಹ್ಯಾಮ್ (General Cunningham) ಇವರ ಡಿಸ್ಟ್ರಿಕ್ಟ ರಿಪೋರ್ಟುಗಳೆಂದರೆ ಇವರು ತಮ್ಮ ಪ್ರವಾಸದಲ್ಲಿ ತೆಗೆದುಕೊಂಡ ಟಿಪ್ಪಣಿಗಳು. ೧೮೬೨ ರಿಂದ ೧೮೮೪ರವರೆಗೆ ಇಂಥ ರಿಪೋರ್ಟುಗಳು ಮುದ್ರಿಸಲ್ಪಟ್ಟಿವೆ. ಇವು ಡಾ. ಬರ್ಗೆಸ್ (Dr. Burgess) ಇವರ ರಿಪೋರ್ಟುಗಳಿಗಿಂತ ಹೆಚ್ಚು ವಿಸ್ತೃತವಾಗಿರುತ್ತವೆ. ಆದರೆ ಇವರ ರಿಪೋರ್ಟುಗಳು, ಮಧ್ಯ ಮತ್ತು ಉತ್ತರ ಹಿಂದುಸ್ಥಾನಕ್ಕೆ ಸಂಬಂಧಿಸಿರುತ್ತವೆ. ಆದುದರಿಂದ ಕರ್ನಾಟಕದ ಇತಿಹಾಸದ ವಿಷಯವಾಗಿ ಪ್ರತ್ಯಕ್ಷವಾಗಿ ಏನೂ ಮಾಹಿತಿಯು ಈ ಬರ್ಗೆಸ್ ಮತ್ತು ಕನ್ನಿಂಗ್ಹ್ಯಾಮ್ ಇವರ ರಿಪೋರ್ಟುಗಳಲ್ಲಿ ಸಿಕ್ಕುವದಿಲ್ಲ.

ಸರಕಾರದವರು ಪುರಾತನವಸ್ತು ಸಂಶೋಧನ ವಿಷಯಕ್ಕಾಗಿ ಎಲ್ಲಕ್ಕೂ ಮೊದಲು ಮಾಡಿದ ಪ್ರಯತ್ನವೆಂದರೆ ೧೮೬೨ನೆಯ ಇಸ್ವಿಯಲ್ಲಿ ಜನರಲ್ ಕನ್ನಿಂಗ್ಹ್ಯಾಮ್ (General Cunningham) ಇವರನ್ನು ಡಾಯರೆಕ್ಟರ್ ಆಫ್ ಆರ್ಕಿಯಾಲಾಜಿ (Director of Archaeology) ಎಂಬ ಹುದ್ದೆಗೆ ನೇಮಿಸಿದುದು. ಅಂದಿನಿಂದಲೇ ನಮ್ಮ ಸರಕಾರದ ಈ ಖಾತೆ ಪ್ರಾರಂಭವಾಗಿರುತ್ತದೆ. ಅವರನ್ನು ನೇಮಿಸುವಾಗ ಈ ಶಾಖೆಯನ್ನು ಶಾಶ್ವತವಾಗಿ ಇಡುವುದು ಸರಕಾರದವರ ಉದ್ದೇಶವಿರಲಿಲ್ಲವೆಂಬುದು ಈ ಮುಂದಿನ ಉದ್ಗಾರಗಳ ಮೇಲಿಂದ ಗೊತ್ತಾಗುವುದು:

"To make an accurate description of such remains as most deserve notice with the history of them, so far as it is traceable and record the traditions that are retained regarding them"

ಸಾರಾಂಶ: "ಐತಿಹಾಸಿಕ ಅವಶೇಷಗಳನ್ನು ಅವುಗಳ ಇತಿಹಾಸ ಸಹಿತವಾಗಿ ಗೊತ್ತಿದ್ದ ಮಟ್ಟಿಗೆ ಚೆನ್ನಾಗಿ ವರ್ಣಿಸಿ, ಅವುಗಳ ವಿಷಯಕ್ಕೆ ಪ್ರಚಲಿತವಿರುವ ದಂತಕಥೆಗಳನ್ನು ಸಂಗ್ರಹಿಸುವುದು" ಎಂದು ಸರಕಾರದವರು ಗೊತ್ತುಪಡಿಸಿದ್ದರು. ಆದರೆ ೧೮೬೨ ರಿಂದ ೧೮೭೧ರವರೆಗೆ ಕೆಲಸ ಮಾಡಿದರೂ ಈ ಕೆಲಸವು ಮುಗಿಯದಿದ್ದುದರಿಂದ ಆ ವರ್ಷ ಡಾಯರೆಕ್ಟರ ಜನರಲ್ ಆಫ್ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (Director General of Archaeological Survey of India) ಎಂಬುದೊಂದು ಹೊಸ ಹುದ್ದೆಯು ನಿರ್ಮಿತವಾಗಿ, ಅವನು ಮುಂದೆ ಹೇಳಿದಂತೆ ಕೆಲಸ ಮಾಡತಕ್ಕುದೆಂದು ಗೊತ್ತಾಯಿತು. ಅದೇನೆಂದರೆ:

"To Superintend a complete search over the whole country and make a systematic record and description of all architectural and other remains that are remarkable alike for their antiquity, or their beauty of their historieal interest.

ಸಾರಾಂಶ: "ದೇಶದಲ್ಲೆಲ್ಲ ಸಂಚರಿಸಿ, ಪ್ರಾಚೀನತೆ, ಸೌಂದರ್ಯ ಅಥವಾ ಐತಿಹಾಸಿಕ ಮಹತ್ವ ಇವುಗಳ ಬಗ್ಗೆ ಖ್ಯಾತಿಗೊಂಡಿರುವ, ಶಿಲ್ಪಕಲೆಯ ಮತ್ತು ಮಿಕ್ಕ ಅವಶೇಷಗಳನ್ನು ಸಂಗ್ರಹಿಸುವದೂ ಚೆನ್ನಾಗಿ ಅವುಗಳ ವರ್ಣನೆಯನ್ನು ಬರೆಯುವದು." ಆದರೆ ಈ ಮೇರೆಗೆ ಇಡೀ ಹಿಂದುಸ್ಥಾನದಲ್ಲಿ ಅವರು ಅನೇಕ ಕೆಲಸ ಮಾಡಬೇಕೆಂದು ಗೊತ್ತಾದರೂ ಅವರು ಪ್ರಾಯಶಃ ಉತ್ತರ ಹಿಂದುಸ್ಥಾನದಲ್ಲಿ ಮಾತ್ರವೇ ಕೆಲಸ ಮಾಡಿರುತ್ತಾರೆ.

ಮುಂಬಯಿ ಮದ್ರಾಸ ಇಲಾಖೆಗಳಲ್ಲಿ ೧೮೭೪ನೆಯ ಇಸವಿಯವರೆಗೆ ಆರ್ಕಿಯಾಲಾಜಿಕಲ್ ಸರ್ವೆ (Archaeological Survey) ಪ್ರಾರಂಭವಾಗಿರಲಿಲ್ಲ. ಆಗ ಹಳೆಯ ಇಮಾರತುಗಳನ್ನು ರಕ್ಷಿಸುವದು, ಅಥವಾ ದುರಸ್ತ ಮಾಡುವದು ಇವರ ಕೆಲಸವಾಗಿರಲಿಲ್ಲ. ಅದು ಪ್ರಾಂತಿಕ ಸರಕಾರದವರ ಕೆಲಸವೆಂದು ಸರಕಾರದವರ ತಿಳಿವಳಿಕೆಯಾಗಿತ್ತು. ಪ್ರಾಂತಿಕ ಸರಕಾರದವರ ಲಕ್ಷ್ಯದಲ್ಲಿ ಈ ಕಟ್ಟಡಗಳ ಸಂರಕ್ಷಣೆಯ ವಿಷಯವು ಚೆನ್ನಾಗಿ ಬಾರದುದೇನೂ ಆಶ್ಚರ್ಯವಲ್ಲ. ಆದ್ದರಿಂದ, ದೊಡ್ಡ ದೊಡ್ಡ ಸುಂದರವಾದ ಕಟ್ಟಡಗಳು ಕೂಡ ಬಿದ್ದು ಹೋಗಹತ್ತಿದವು, ಈ ಮಾತು ಲಾರ್ಡ್ಲಿಟನ್ (Lord Lytton) ಇವರ ಲಕ್ಷ್ಯದಲ್ಲಿ ೧೮೭೪ನೆಯ ಇಸ್ವಿಯಲ್ಲಿ ಮೊದಲಿಗೆ ಬಂದಿತು. ಅವರು ಹೇಳಿದ್ದೇನಂದರೆ:

"The preservation of the National Antiquities and work of art ought not to be exclusively left to the charge of Local Governments, which may not always be alive to the importance of such a duty. Lt.~Governors who combine aesthetic culture with administrative energy are not likely to be very common and I cannot conceive any claim upon the administrative initative & financial resources of the supreme Government more essentially imperial than this."

ಸಾರಾಂಶ: "ರಾಷ್ಟ್ರೀಯ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಕಾರ್ಯವನ್ನು ಸ್ಥಾನಿಕ ಸರಕಾರಗಳ ಕಡೆಗೆ ಒಪ್ಪಿಸುವುದು ಯೋಗ್ಯವಾಗಲಾರದು. ಯಾಕೆಂದರೆ ಅವರಿಗೆ ಅವುಗಳ ಮಹತ್ವವು ಚೆನ್ನಾಗಿ ಲಕ್ಷ್ಯದಲ್ಲಿ ಬರುವ ಸಂಭವವಿಲ್ಲ. ಸೌಂದರ್ಯದ ಅಭಿರುಚಿ. ರಾಜಕಾರಸ್ಥಾನದ ಶಕ್ತಿ ಇವೆರಡೂ ಉಳ್ಳ ಲೆಫ್ಟಿನೆಂಟ ಗರ್ವನರ ಜನರು ತೀರ ಕಡಿಮೆ. ಇದಲ್ಲದೆ ಇದು ವರಿಷ್ಠ ಸರಕಾರದವರು ತಾವೇ ಕೈಕೊಂಡು ತಮ್ಮ ಹಣವನ್ನು ವೆಚ್ಚ ಮಾಡಿ ಮಾಡತಕ್ಕ ವಿಷಯವು." ಇದರ ಪರಿಣಾಮವೇನಾಯಿತೆಂದರೆ ಮುಂದೆ ಕ್ಯುರೇಟರ್ ಆಫ್ ಏನ್ಶೆಂಟ್ ಮೊನ್ಯೂಮೆಂಟ್ಸ್ (Curator of Ancient Monuments) ಎಂಬ ಅಧಿಕಾರಿಯು ನೇಮಿಸಲ್ಪಡಬೇಕೆಂದು ಹಿಂದುಸ್ಥಾನ ಸರಕಾರದವರು ಇಂಗ್ಲಂಡಿಗೆ ಸೂಚಿಸಿದರು. ಅದಕ್ಕೆ ಆಗ ಸೆಕ್ರೆಟರಿ ಆಫ್ ಸ್ಟೇಟ್ (Secretary of State) ಇವರು ಒಪ್ಪಲಿಲ್ಲ. ಮುಂದೆ, ೧೮೯೧ನೆಯ ಇಸವಿಯಲ್ಲಿ ಮಾತ್ರ ಮೇಜರ್ ಕೋಲ್ (Major Kole. R. E.) ಇವರು ಕ್ಯುರೇಟರ್ ಆಫ್ ಏನ್ಶೆಂಟ್ ಮಾನ್ಯೂಮೆಂಟ್ಸ್ (Curator of ancient monuments) ಎಂಬ ಹುದ್ದೆಯ ಮೇಲೆ ಮೂರು ವರ್ಷಗಳ ಮಟ್ಟಿಗೆ ನೇಮಕವಾದರು, ಅವರು ತಮ್ಮ ಕೆಲಸವನ್ನು ಮೂರು ಪುಸ್ತಕಗಳ ರೂಪದಿಂದ ಪ್ರಕಟಿಸಿದರು. ಅವಕ್ಕೆ ಮೇಜರ್ ಕೋಲ್ ಇವರ ಮೂರು ವ್ಹಾಲ್ಯುಮಗಳು (Major Kole's three volumes) ಎಂದೆನ್ನುತ್ತಾರೆ. ಇದಲ್ಲದೆ ಪ್ರಿಝರ್ವೆಶನ್ ಆಫ್ ನ್ಯಾಷನಲ್ ಮೊನ್ಯುಮೆಂಟ್ಸ್, (Preservation of National Monuments in India) ಎಂಬ ರಿಪೋರ್ಟುಗಳನ್ನು ಬರೆದರು. ಈ ರಿಪೋರ್ಟುಗಳು ಬಹಳ ಮಹತ್ವವುಳ್ಳವುಗಳಾಗಿವೆ.

೧೮೯೫ನೆಯ ಇಸವಿಯಲ್ಲಿ ಜನರಲ್ ಕನ್ನಿಂಗ್ ಹ್ಯಾಮ್ (General Cunningham) ಇವರು ಕೆಲಸದಿಂದ ನಿವೃತ್ತರಾದರು. ಆಗ ಡಾ. ಬರ್ಗೆಸ್ (Dr. Burgess) ಇವರು ಆ ಕೆಲಸಕ್ಕೆ ನೇಮಿಸಲ್ಪಟ್ಟರು. ಆಗ ಒಟ್ಟು ಐದು ಸರ್ವೆ ಕ್ಷೇತ್ರಗಳು ಮಾಡಲ್ಪಟ್ಟವು: (೧) ಮದ್ರಾಸ, (೨) ಮುಂಬಯಿ, (೩) ಪಂಜಾಬ (ಸಿಂಧ ಮತ್ತು ರಜಪುತಸ್ಥಾನ ಸಹಿತ), (೪) ವಾಯವ್ಯ ಪ್ರಾಂತ (ಮಧ್ಯಪ್ರಾಂತ ಸಹಿತ), (೫) ಬಂಗಾಲ (ಆಸಾಮ ಸಹಿತ).

ಇಷ್ಟಾದರೂ ಈ ಖಾತೆಯನ್ನು ಖಾಯಂ ಮಾಡುವ ವಿಚಾರವು ಸ್ಥಿರವಾಗಲಿಲ್ಲ. ಡಾ. ಹೂಲ್ಝ (Dr. Hultzch) ಎಂಬವರು ೧೮೮೬ನೆಯ ಇಸವಿಯಲ್ಲಿ ಎಪಿಗ್ರಾಫಿಸ್ಟ್ (Epigraphist) ಅಂದರೆ ಶಿಲಾಲಿಪಿಗಳ ಶೋಧನ ಕೆಲಸಕ್ಕೆ ನೇಮಿಸಲ್ಪಟ್ಟಿದ್ದರು. ಆದರೆ ೧೮೮೯ನೆಯ ಇಸವಿಯಲ್ಲಿ ಇವರು ಕೆಲಸದಿಂದ ನಿವೃತ್ತರಾದೊಡನೆಯೇ ಈ ಖಾತೆಯಲ್ಲಿ ಅವ್ಯವಸ್ಥೆಯಾಯಿತು. ಏಕೆಂದರೆ, ಅದೇ ಕಾಲಕ್ಕೆ ಸರಕಾರದವರು ಖರ್ಚು ಕಡಿಮೆ ಮಾಡುವ ಧೋರಣವನ್ನು ಸ್ವೀಕರಿಸಿದ್ದರು. ಆದ್ದರಿಂದ ಡಾಯರೆಕ್ಟರ್ ಜನರಲ್ ಆಫ್ ಆರ್ಕಿಯಾಲಜಿ (Director General of Archaeology) ಹುದ್ದೆಗೆ ಯಾರನ್ನೂ ನೇಮಿಸಲೇ ಇಲ್ಲ. ಆದ್ದರಿಂದ ೧೮೯೦ ರಿಂದ ೧೮೯೫ರವರೆಗೆ ಈ ಖಾತೆಯಲ್ಲಿ ವಿಶೇಷ ಕೆಲಸವೇನೂ ಆಗಲಿಲ್ಲ.

೧೮೯೫ನೆಯ ಇಸವಿಯಲ್ಲಿ ಪುನಃ ವಿಚಾರ ನಡೆಯಿತು. ಮೂರು ವರ್ಷ ವಿಚಾರ ನಡೆದು. ೧೮೯೭ನೆಯ ಇಸವಿಯಲ್ಲಿ ಕಾನ್ಸರ್ವೆಶನ್ (Conservation) ಎಂದರೆ ಕಟ್ಟಡ ಮುಂತಾದವುಗಳನ್ನು ರಕ್ಷಿಸುವ ಕೆಲಸವು ರೀಸರ್ಚ್ (Research) ಎಂದರೆ ಹೊಸ ಶೋಧಕ್ಕಿಂತ ಮಹತ್ವದ ಕೆಲಸವೆಂದು ನಿರ್ಧರಿಸಲ್ಪಟ್ಟಿತು. ಆಗ ಪುನಃ ಐದು ಸರ್ವೆಕ್ಷೇತ್ರಗಳು ಏರ್ಪಟ್ಟವು: (೧) ಮದ್ರಾಸ (ಕೊಡಗು ಸಹಿತ), (೨) ಮುಂಬಯಿ (ಸಿಂಧ ಮತ್ತು ವರ್ಹಾಡ ಸಹಿತ). (೩) ಪಂಜಾಬ (ಬಲೂಚಿಸ್ಥಾನ, ಅಜಮೀರ ಇವುಗಳು ಸಹಿತ), (೪) ವಾಯುವ್ಯ ಪ್ರಾಂತ (ಮಧ್ಯಪ್ರಾಂತ ಸಹಿತ), (೫) ಬಂಗಾಲ (ಆಸಾಮ ಸಹಿತ) ಈ ಇಲಾಖೆಗಳೇ ಇನ್ನೂ ಇರುತ್ತವೆ. ಪ್ರತಿಯೊಂದು ಇಲಾಖೆಯ ಮುಖ್ಯಸ್ಥನ ವೇತನವು ಹಿಂದುಸ್ಥಾನ ಸರಕಾರದಿಂದ ಕೊಡಲ್ಪಡುತ್ತದೆ. ಆದರೆ ಅವನು ಪ್ರಾಂತಿಕ ಸರಕಾರಕ್ಕೆ ತಾಬೇದಾರನಾಗಿರುತ್ತಾನೆ.

೧೮೯೦ ನೆಯ ಇಸವಿಯಲ್ಲಿ ಲಾರ್ಡ್ ಕರ್ಜನರು ಈ ವಿಷಯದಲ್ಲಿ ಒಂದು ಹೊಸ ಘಟನೆಯನ್ನು ಸಿದ್ಧಮಾಡಿದಾಗ ಡಾಯರೆಕ್ಟರ್ ಜನರಲ್ (Director General) ರವರು ಐದು ವರ್ಷಗಳವರೆಗೆ ನೇಮಿಸಲ್ಪಟ್ಟರು. ಇಷ್ಟು ದಿವಸ ದೇಶೀ ಸಂಸ್ಥಾನಗಳನ್ನು ಈ ಕಾರ್ಯಕ್ಷೇತ್ರದಲ್ಲಿ ಸೇರಿಸಿರಲಿಲ್ಲ. ಆದರೆ ೧೯೦೧ನೆಯ ಜೂನ ೪ರಂದು ಹೊಸ ಹುಕುಮು ಹೊರಟು ದೇಶೀ ಸಂಸ್ಥಾನಗಳೂ ಈ ಖಾತೆಗೆ ಕೂಡಿಸಲ್ಪಟ್ಟುವು. ೧೯೦೧-೧೯೦೩ರಲ್ಲಿ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯ ವಾರ್ಷಿಕ ರಿಪೋರ್ಟು (Archaeological Survey of India - Annual Reports) ಗಳು ಪ್ರಾರಂಭವಾದವು. ಮೊದಲನೆಯ ರಿಪೋರ್ಟು ಅಂದರೆ ೧೯೦೧-೧೯೦೩ನೆಯ ಇಸವಿ ರಿಪೋರ್ಟು ೧೯೦೪ರಲ್ಲಿ ಮುದ್ರಿತವಾಗಿರುತ್ತದೆ. ಆಗಿನಿಂದ ಈ ರಿಪೋರ್ಟುಗಳು ಪ್ರತಿವರ್ಷ ಹೊರಡುತ್ತಿದ್ದು ಇದರಲ್ಲಿ ಇಡೀ ಹಿಂದುಸ್ಥಾನದಲ್ಲಿ ಆಯಾ ವರ್ಷದಲ್ಲಿ ಆದ ಕೆಲಸದ ಮಾಹಿತಿಯು ಸಂಗ್ರಹಿಸಲ್ಪಟ್ಟಿರುವದರಿಂದ ಈ ರಿಪೋರ್ಟುಗಳು ಬಹಳ ಮಹತ್ವವುಳ್ಳವುಗಳಾಗಿವೆ. ಇದಲ್ಲದೆ, ಪ್ರತಿಯೊಂದು ಇಲಾಖೆಯವರು ತಮ್ಮ ತಮ್ಮ ಚಿಕ್ಕ ಚಿಕ್ಕ ರಿಪೋರ್ಟುಗಳನ್ನು ಮುದ್ರಿಸುತ್ತಿರುವರು. ಈ ವಿಷಯದಲ್ಲಿ ಲಾರ್ಡ ಕರ್ಜನ್ ಸಾಹೇಬರು ತೆಗೆದ ಉದ್ಗಾರಗಳು ಲಕ್ಷ್ಯದಲ್ಲಿಡತಕ್ಕವಾಗಿವೆ. ಅವೇನಂದರೆ:

"It is in the exploration and study of purely Indians remains, in the probing of archaic mounds, in the excavation of old Indian cities, and in the copying and reading of ancient inscriptions that a good deal of Indian History is known to us, and can be read by all; but a curtain of dark and romantic mystery hangs over the earlier chapters, of which we are only slowly beginning to lift the corners."

ಸಾರಾಂಶ: ಐತಿಹಾಸಿಕ ಅವಶೇಷಗಳನ್ನೂ ಕೃತ್ರಿಮ ದಿನ್ನೆಗಳನ್ನೂ ಸಂಶೋಧಿಸಿ ಅಭ್ಯಾಸ ಮಾಡುವದರಿಂದಲೂ ಪುರಾತನ ಪಟ್ಟಣಗಳನ್ನು ಅಗಿದು ನೋಡುವದರಿಂದಲೂ ಶಿಲಾಲಿಪಿಗಳನ್ನು ಮುದ್ರಿಸಿ ಅವನ್ನು ಓದಿ ತಿಳಿದುಕೊಳ್ಳುವದರಿಂದಲೂ, ನಮಗೆ ಹಿಂದುಸ್ಥಾನ ದೇಶದ ಎಷ್ಟೋ ಇತಿಹಾಸವು ಗೊತ್ತಾಗಿದೆ. ಮತ್ತು ಇನ್ನೂ ಹೆಚ್ಚಿಗೆ ಗೊತ್ತಾಗುವ ಸಂಭವವಿದೆ. ತೀರ ಪ್ರಾಚೀನ ಸಂಗತಿಗಳ ಮೇಲೆ ಇನ್ನೂ ಬಲವಾದ ಕಟ್ಟುಕಥೆಗಳ ಮುಸುಕಿನ ತೆರೆಯು ಬಿದ್ದಿದೆ. ಈಗೀಗ ಮಾತ್ರ ಆ ಮುಸುಕಿನ ತೆರೆಯ ಮೂಲೆಗಳೇನೋ ತೆರೆಯಲಾರಂಭಿಸಿವೆ. ಇದೇ ವಿಷಯವಾಗಿ ಅವರು ಮತ್ತೂ ಹೇಳಿರುವುದೇನಂದರೆ:

"We owe duty to our fore runners as well as to our contemporaries, and to out decendents-nay-our duty to the two latter classes in itself demands, the recognition of an obligation to the former, since, we are the custodians of our own age, of that which has been bequeathed to us by an earlier; and since posterity will rightly blame us if owing to our neglect, they failed to reap the same advantages, that we have been privileged to enjoy; moreover, how can we expect at the hands of futurity any consideration for the productions of our own time if indeed any are worthy of such, unless we have ourselves shown a like respect to the hand work which our predecessors produced."

ಸಾರಾಂಶ: ನಮ್ಮ ಪೂರ್ವಜರ ಸರೀಕದವರ ಮತ್ತು ವಂಶಜರ ಸಂಬಂಧದಿಂದ ನಾವು ಮಾಡತಕ್ಕದ್ದೊಂದು ಕರ್ತವ್ಯವಿದೆ___ಅಲ್ಲ, ಕೊನೆಯ ಇಬ್ಬರ ವಿಷಯವಾಗಿ ನಾವು ಮಾಡಬೇಕಾಗಿರುವ ಕರ್ತವ್ಯವೇ ನಾವು ನಮ್ಮ ಪೂರ್ವಜರ ವಿಷಯವಾಗಿ ಮಾಡತಕ್ಕ ಕರ್ತವ್ಯವಾವುದೆಂಬುದನ್ನು ತೋರಿಸಿಕೊಡುತ್ತದೆ. ಏಕೆಂದರೆ ನಮ್ಮ ಹಿಂದಿನವರು ಮಾಡಿದ ಕೆಲಸಗಳ ಇಡಿಗಂಟು ನಮ್ಮ ಕಡೆಗೆ ಬಂದಿರುತ್ತದೆ. ಅದನ್ನು ನಾವು ಯೋಗ್ಯ ರೀತಿಯಿಂದ ನಮ್ಮ ವಂಶಜರಿಗೆ ಒಪ್ಪಿಸದಿದ್ದ ಮೂಲಕ ನಾವು ಅನುಭೋಗಿಸುವ ಅದರ ಲಾಭಗಳಿಗೆ ಅವರು ಎರವಾದರೆ ಆ ದೋಷಕ್ಕೆ ನಾವು ಪಾತ್ರರಲ್ಲವೇ? ಇದೂ ಅಲ್ಲದೆ, ನಾವೇ ನಮ್ಮ ಪೂರ್ವಜರ ಕೃತಿಗಳ ಬಗ್ಗೆ ಯೋಗ್ಯವಾದ ಅಭಿಮಾನವನ್ನು ತಾಳದಿದ್ದರೆ ನಮ್ಮ ಕೃತಿಗಳ ಬಗ್ಗೆ (ಅಂಥ ಅಭಿಮಾನ ತಾಳಲಿಕ್ಕೆ ಯೋಗ್ಯವಾದವುಗಳು ಇದ್ದರೆ) ನಮ್ಮ ವಂಶಜರ ಅಭಿಮಾನ ತಾಳಿಯಾರೆಂದು ಆಶಿಸುವದು ಹೇಗೆ?

ಈ ಪ್ರಕಾರವಾಗಿ, ಇತಿಹಾಸದ ಬಗ್ಗೆ ಯಾವ ಸಂಸ್ಥೆಗಳು ಹಿಂದಕ್ಕೆ ಪ್ರಯತ್ನ ಪಟ್ಟವೆಂಬುದನ್ನೂ, ಈಗ ಯಾವವು ಪ್ರಯತ್ನ ಪಡುತ್ತಿರುವುವೆಂಬುದನ್ನೂ ಹೇಳಿದೆವು.

ಇನ್ನು ಅವರ ಪ್ರಯತ್ನಗಳ ಪರಿಣಾಮವು ಏನಾಗಿರುವದೆಂಬುದರ ವಿಷಯಕ್ಕೆ, ಕರ್ನಾಟಕಕ್ಕೆ ಸಂಬಂಧಿಸಿದ ಸಂಗತಿಗಳನ್ನಷ್ಟೇ ವಿಶೇಷವಾಗಿ ಹೇಳುವೆವು.

ಈ ವಿಷಯವಾಗಿ ಎಲ್ಲಕ್ಕೂ ಮೊದಲು ವಿಶೇಷವಾಗಿ ಪ್ರಯತ್ನ ಮಾಡಿದವರೆಂದರೆ ಸರ್ ಜೇಮ್ಸ್ ಫರ್ಗ್ಯುಸನ್ (೧೮೦೮-೧೮೮೬) ಎಂಬವರು. ಇವರು ೧೮೩೪ನೆಯ ಇಸವಿಯಿಂದ ೧೮೪೫ರವರೆಗೆ ಹಿಂದುಸ್ಥಾನದಲ್ಲೆಲ್ಲ ತಿರುಗಾಡಿ, ಗುಡ್ಡದಲ್ಲಿ ಕೊರೆದ ಗುಡಿಗಳನ್ನೂ, ಮಿಕ್ಕ ಕಟ್ಟಡಗಳನ್ನೂ ಶಾಸ್ತ್ರೀಯ ರೀತಿಯಿಂದ ಶೋಧನ ಮಾಡಿದರು. ಕೇವಲ ಇತಿಹಾಸ ದೃಷ್ಟಿಯಿಂದಲ್ಲದಿದ್ದರೂ ಶಿಲ್ಪಶಾಸ್ತ್ರ ದೃಷ್ಟಿಯಿಂದ ಇವರು ಇವುಗಳನ್ನು ಅವಲೋಕಿಸಿ ಪುಸ್ತಕವನ್ನು ಬರೆದರು. ಇವರು ನೋಡದೆ ಇದ್ದ ಕಟ್ಟಡಗಳೇ ಇಲ್ಲ. ರೇಲ್ವೆ ಸ್ಟೇಶನದಿಂದ ಬಹು ದೂರದಲ್ಲಿರುವ ಹಳ್ಳಿಪಳ್ಳಿಗಳಲ್ಲಿ ಸಹ ಹೋಗಿ ಇವರು ಕಟ್ಟಡಗಳ ಚಿತ್ರವನ್ನು ತೆಗೆದುಕೊಂಡು ಅದರಿಂದ ಇತಿಹಾಸಕ್ಕೆ ಹೇಗೆ ಸಹಾಯವಾಗುತ್ತದೆಂಬುದನ್ನು ಸಪ್ರಮಾಣದಲ್ಲಿ ತೋರಿಸಿಕೊಟ್ಟಿರುವರು. ಇವರು ಕರ್ನಾಟಕದಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಲಕ್ಕುಂಡಿ, ಇಟಗಿ ಮುಂತಾದ ಅನೇಕ ಸ್ಥಳಗಳನ್ನು ನೋಡಿ ಅಲ್ಲಿಯ ಕಟ್ಟಡಗಳನ್ನು ವರ್ಗಿಕರಿಸಿದ್ದಾರೆ. ಇವರ ಶೋಧದಿಂದಲೇ ಹುರುಪುಗೊಂಡು ರಾಯಲ್ ಏಶಿಯಾಟಿಕ್ ಸೊಸಾಯಿಟಿಯವರು, ಇಂಗ್ಲಂಡಿನಲ್ಲಿಯ ಕೋರ್ಟ್ ಆಫ್ ಡಾಯರೆಕ್ಟರರಿಗೆ ಬರೆದು ಅಜಂತಾ ಗವಿಯೊಳಗಿನ ಚಿತ್ರಗಳನ್ನು ತೆಗೆಯಲಿಕ್ಕೆ ಹಚ್ಚಿದರು. ಆ ಮೇರೆಗೆ ರಾಬರ್ಟ್ಗಿಲ್ ಎಂಬವರು ೧೨ ವರ್ಷ ಶ್ರಮಪಟ್ಟು ಅಜಂತೆಯೊಳಗಿನ ಚಿತ್ರಗಳನ್ನು ನಕ್ಷೆ ತೆಗೆದುಕೊಂಡರು. ಆದರೆ ಕನ್ನಡಿಗರ ದುರ್ದೈವದಿಂದ ಅವೆಲ್ಲವೂ ೧೮೫೬ ನೆಯ ಡಿಶೆಂಬರ ತಿಂಗಳಲ್ಲಿ ಕ್ರಿಷ್ಟಲ್ ಪ್ಯಾಲೇಸಿಗೆ ಬೆಂಕಿಹತ್ತಿ ಸುಟ್ಟುಹೋದವು. ೧೮೪೮ ನೆಯ ಇಸವಿಯಲ್ಲಿ ಡಾ. ವಿಲ್ಸನ್ ಎಂಬರ ಅಧ್ಯಕ್ಷತೆಯಲ್ಲಿ ಕೇವ್ಹ್ ಟೆಂಪಲ್ ಕಮಿಶನ್ (Cave-temple Commission) ನೇಮಿಸಲ್ಪಟ್ಟಿತು. ಈ ಕಮೀಶನದವರು ೧೮೫೦-೧೮೫೧ ಇಸವಿಗಳಲ್ಲಿ ಪಶ್ಚಿಮ ಹಿಂದುಸ್ಥಾನದಲ್ಲಿರುವ ಬೌದ್ಧರ, ಬ್ರಾಹ್ಮಣರ ಮತ್ತು ಜೈನರ ಗವಿ-ಗುಡಿಗಳ ಮಠಗಳ ಅವಶೇಷಗಳ ವಿಷಯಕ್ಕೆ (Two memoiers of the Cave-temples and monasteries and other ancient Buddhist, Brahmanical and Jain Remains of Western India ಎಂಬೆರಡು ಪುಸ್ತಕಗಳನ್ನು ಪ್ರಸಿದ್ಧಪಡಿಸಿದರು. ಮುಂದೆ, ಸರ್ ಬಾರ್ಟಲ್ ಫ್ರೀರ್ (Sir Bartle Frere) ಇವರು ಮುಂಬಯಿ ಗವರ್ನರರಿದ್ದಾಗ ಇತ್ತ ಕಡೆಯ ಚಿತ್ರಗಳ ತಸಬೀರು ತೆಗೆಯುವದಕ್ಕಾಗಿ ಒಂದು ಕಮಿಟಿಯು ನೇಮಿಸಲ್ಪಟ್ಟಿತು. ಈ ಕಮಿಟಿಯವರು ಡಾ. ಫರ್ಗ್ಯುಸನ್ ಇವರ ಸಹಾಯದಿಂದ ಮೂರು ಪುಸ್ತಕಗಳನ್ನು ತೆಗೆದರು. ಅವು ಯಾವುವೆಂದರೆ: (೧) ಅಹ್ಮದಾಬಾದ, (೨) ಬಿಜಾಪುರ, (೩) ಮೈಸೂರು ಮತ್ತು ಧಾರವಾಡ. ಡಾ. ಫರ್ಗ್ಯುಸನ್ ಇವರಿಗೆ ಸರಕಾರದವರ ಸಹಾಯವು ಇರಲಿಲ್ಲ. ಆದರೂ ಇವರು ಇಷ್ಟು ವಿಲಕ್ಷಣವಾದ ಕೆಲಸವನ್ನು ಮಾಡಿದುದು ನಿಜವಾಗಿಯೇ ಆಶ್ಚರ್ಯಕರವಾದ ಸಂಗತಿಯು. ಇವರು ಬರೆದ ಶಿಲ್ಪಕಲೆಯ ಇತಿಹಾಸ (History of arehitecture) ಎಂಬುದು ಈ ಹೊತ್ತಿಗೂ ಪ್ರಮಾಣಗ್ರಂಥವಾಗಿದೆ. ಸುಮಾರು ೬೦ ವರ್ಷಗಳ ಕೆಳಗೆ ಎಂ. ವಿವೆನ್ ಡಿ ಸೆಂಟ ಮಾರ್ಟಿನ್ (M. Viven De St. Martin) ಎಂಬವನು ಹುಯನ್ತ್ಸಾಂಗನು ಹಿಂದುಸ್ಥಾನದಲ್ಲಿ ಯಾವ ಹಾದಿಯಿಂದ ಪ್ರವಾಸ ಮಾಡಿದನೆಂಬುದನ್ನು ಅವನ ಪುಸ್ತಕದ ಮೇಲಿಂದ ಗೊತ್ತುಹಚ್ಚಿದನು. ಮುಂದೆ ಪ್ರೊ. ವಿಲ್ಸನ್ (Prof. Wilson) ಕರ್ನಲ್ ಯೂಲ್ (Co. yule) ಮತ್ತು ಜನರಲ್ ಕನ್ನಿಂಗ್ಹ್ಯಾಮ್ ಮುಂತಾದವರೂ ಈ ವಿಷಯದಲ್ಲಿ ಸುಧಾರಣೆ ಮಾಡಿದರು.

ಆದರೆ ಹೀಗೆ ಅಲ್ಲೊಂದು ಇಲ್ಲೊಂದು ಪ್ರಯತ್ನಗಳು ವಿರಳವಾಗಿ ನಡೆದಿದ್ದರೂ ಈ ವಿಷಯವನ್ನು ಕ್ರಮವಾಗಿ ಅಭ್ಯಾಸ ಮಾಡುವುದಕ್ಕೆ ೧೮೭೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ ಇವರು (Indian Antiquary) ಎಂಬ ಮಾಸಪತ್ರಿಕೆಯನ್ನು ತೆಗೆದಂದಿನಿಂದ ಪ್ರಾರಂಭವಾಯಿತೆಂದು ಹೇಳಬಹುದು. ಡಾ. ಬರ್ಗೆಸ್ ಇವರು ೧೩ ವರ್ಷ ಆ ಮಾಸ ಪತ್ರಿಕೆಯನ್ನು ನಡಿಸಿದರು. ಈ ಅವಧಿಯಲ್ಲಿ ಸುಮಾರು ೨೬೦ ಶಿಲಾಲಿಪಿಗಳು ಮುದ್ರಿಸಲ್ಪಟ್ಟಿವೆ. ಮುಂದೆ ಡಾ. ಫ್ಲೀಟ್ ಮತ್ತು ರಿಚಾರ್ಡ್ ಟೆಂಪಲ್ (Dr. Fleet & Sir Richard Temple) ಇವರು ಅದಕ್ಕೆ ಸಂಪಾದಕರಾದರು.

೧೮೭೪ನೆಯ ಇಸವಿಯಲ್ಲಿ ಮುಂಬಯಿ ಇಲಾಖೆಯ ಆರ್ಕಿಯಾಲಾಜಿಕಲ್ ಸರ್ವೆಗೆ ಪ್ರಾರಂಭವಾಗಿ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಸ್ಥಳಗಳಲ್ಲಿಯ ೫೬ ಚಿತ್ರಗಳುಳ್ಳ ರಿಪೋರ್ಟು ಮುದ್ರಿತವಾಯಿತು. ೧೮೮೯ನೆಯ ಇಸವಿಯಲ್ಲಿ ವೇರೂಳ, ಅಜಂತಾ, ಕಾರ್ಲೆ, ಕಾನ್ಹೇರಿ, ಜುನ್ನರ, ಭಾಜಾ ಮುಂತಾದ ಸ್ಥಳಗಳಲ್ಲಿಯ ಗುಡಿಗಳ ವಿವರವುಳ್ಳ ಒಂದು ಪುಸ್ತಕವು ಹೊರಡಿಸಲ್ಪಟ್ಟಿತು. ೧೮೯೬ನೆಯ ಇಸವಿಯಲ್ಲಿ ಬಳ್ಳಾರಿ ಜಿಲ್ಹೆಯಲ್ಲಿಯ ಚಾಲುಕ್ಯರ ಗುಡಿಗಳ ವಿಷಯಕ್ಕೆ ೧೧೪ ಪ್ಲೇಟುಗಳುಳ್ಳ ಒಂದು ರಿಪೋರ್ಟು ಮುದ್ರಿತವಾಗಿದೆ. ೧೮೯೭ನೆಯ ಇಸವಿಯಲ್ಲಿ ಮಿ. ಕೌಜನ್ಸ್ (Mr. Cousens) ಇವರು ಮುಂಬಯಿ ಇಲಾಖೆಯಲ್ಲಿಯ "ಮೊನ್ಯುಮೆಂಟಲ್ ಆಂಟಿ ಕ್ವಿಟೀಜ್" (Monumental Antiquities) ಎಂಬ ಹೊಸಪಟ್ಟಿಯನ್ನು ತಯಾರಿಸಿದ್ದಾರೆ. ಅವರು ಇದೇ ವಿಷಯವಾಗಿ ಹೊಸದೊಂದು ಪುಸ್ತಕವನ್ನು ಬರೆಯಹತ್ತಿದ್ದಾರೆ. ಅಜಂತಾ ಗವಿಯಲ್ಲಿಯ ಚಿತ್ರಗಳು ೧೮೫೬ನೆಯ ಇಸವಿಯಲ್ಲಿ ಸುಟ್ಟುಹೋದ ಸಂಗತಿಯನ್ನು ನಾವು ಮೇಲೆ ತಿಳಿಸಿರುವೆವಷ್ಟೆ. ಆದರೆ ಮುಂದೆ ಪುನಃ ಜಾನ್ ಗ್ರಿಫಿತ್ (John Griffith) ಎಂಬವರು ಪುನಃ ಅವುಗಳನ್ನು ಪರಿಶ್ರಮಪಟ್ಟು ತೆಗೆದುಕೊಂಡಿದ್ದರು. ಆದರೆ ನಮ್ಮ ಕಡುತರವಾದ ದುರ್ದೈವದಿಂದ ಅವರು ತೆಗೆದುಕೊಂಡ ೩೦೪ ಚಿತ್ರಗಳಲ್ಲಿ ೧೭೫ ಚಿಕ್ಕ ದೊಡ್ಡ ಚಿತ್ರಗಳು ನಾಶವಾದವು. ಇಲ್ಲವೆ ಕೆಟ್ಟು ಹೋದವು. ಇತ್ತ ಕಡೆಗೆ ಮಿ. ಗ್ರಿಫಿತ್ ಇವರು ೧೫೯ ಪ್ಲೇಟುಗಳುಳ್ಳ ಆ ವಿಷಯಕವಾದ ಒಂದು ಪುಸ್ತಕವನ್ನು ಮುದ್ರಿಸಿದ್ದಾರೆ.

೧೮೭೨ನೆಯ ಇಸವಿಯಲ್ಲಿ ಇಂಡಿಯನ್ ಆಂಟಿಕ್ವರಿ ಎಂಬ ಮಾಸಪತ್ರಿಕೆಯನ್ನು ಡಾ. ಬರ್ಗೆಸ್ ಇವರು ಪ್ರಾರಂಭ ಮಾಡುವ ಪೂರ್ವದಲ್ಲಿ ಬಹುಶಃ ಎಲ್ಲ ಲಿಪಿಗಳನ್ನು ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಮುಂಬಯಿ ಇಲಾಖೆಯವರೇ ಮುದ್ರಿಸಿರುತ್ತಾರೆಂದು ಹೇಳಿರುವೆವಷ್ಟೇ. ಅವರು ಮುದ್ರಿಸಿರುವ ಲೇಖಗಳ ವಿವರವನ್ನು ಇಲ್ಲಿ ಕೊಡುವೆವು. ಮುಂಬಯಿ ಇಲಾಖೆಯಲ್ಲಿ ಎಲ್ಲಕ್ಕೂ ಪುರಾತನ ಲಿಪಿಗಳೆಂದರೆ ಅಶೋಕನ ಜುನಾಗಡದಲ್ಲಿಯ ಲಿಪಿಗಳು (ಕ್ರಿ. ಶ. ಪೂ. ೨೪೫). ಅವು ಒಂದನೇ ಸಂಪುಟದಲ್ಲಿ ಮುದ್ರಿತವಾಗಿವೆ. ಅನಂತರದ ಲಿಪಿಗಳೆಂದರೆ ಗುಡ್ಡದ ಗವಿಯೊಳಗಿನ ಲಿಪಿಗಳು. ಈ ಲಿಪಿಗಳು ಶಾತವಾಹನ ಅಥವಾ ಶಾಲಿವಾಹನ ಮನೆತನಕ್ಕೆ ಸಂಬಂಧಿಸಿರುತ್ತವೆ. ಇವು ನಾಸಿಕ, ಕಾರ್ಲೆ, ನಾನಘಾಟ, ಕಾನ್ಹೇರಿ, ಭಾಜಾ, ಜುನ್ನರ, ಕೂಡ ಮುಂತಾದ ಸ್ಥಳಗಳಲ್ಲಿ ದೊರೆಯುತ್ತವೆ. ಅವುಗಳೊಳಗಿನ ಎಲ್ಲಕ್ಕೂ ಪುರಾತನ ಲಿಪಿಗಳೆಂದರೆ ನಾಸಿಕದ ಲಿಪಿಗಳು. ಈ ಲಿಪಿಗಳಲ್ಲಿ ಶಾತವಾಹನ ಮನೆತನಕ್ಕೆ ಸೇರಿದ ಕೃಷ್ಣರಾಜನ ಹೆಸರು ದೊರೆಯುತ್ತದೆ. ಕಾನ್ಹೇರಿ, ನಾಸಿಕ, ಭಾಜಾ ಮತ್ತು ಕೂಡ ಇಲ್ಲಿಯ ಲೇಖನಗಳನ್ನು ಲೆಫ್ಟಿನೆಂಟ್ ಬ್ರ್ಯಾಟ್ (Lient. Brat) ಎಂಬವರು ೧೮೫೪ನೆಯ ಇಸವಿಯಲ್ಲಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಮುಂಬಯಿ ಶಾಖೆಯ ಮಾಸಪತ್ರಿಕೆಯ ೫ನೆಯ ಸಂಪುಟ (vol. 5) ದಲ್ಲಿ ಮುದ್ರಿಸಿರುತ್ತಾರೆ. ಆರನೆಯದರಲ್ಲಿ ಕಾನ್ಹೇರಿಯ ವಿಷಯಕ್ಕೆ ಉತ್ತಮವಾದ ಲೇಖಗಳು ಮುದ್ರಿತವಾಗಿವೆ. ೭ನೆಯದರಲ್ಲಿ ನಾಸಿಕದ ಲೇಖಗಳಿವೆ. ೮ನೆಯದರಲ್ಲಿ ಬಾಡ್ಸಾ ವಿಷಯಕ ಲೇಖಗಳಿವೆ. ಶಾತವಾಹನರು ೨ನೆಯ ಶತಮಾನದವರೆಗೆ ಆಳಿದರು. ಮುಂದೆ ೫ನೆಯ ಶತಮಾನದವರೆಗೆ ಯಾರು ಆಳಿದರೆಂಬುದು ಚೆನ್ನಾಗಿ ಗೊತ್ತಾಗುವದಿಲ್ಲ. ಬಹಳವಾಗಿ ತ್ರೈಕೂಟರೆಂಬವರು ಆಳಿದಂತೆ ತೋರುತ್ತದೆ. ಅವರದೊಂದು ತಾಮ್ರಶಾಸನವು ಕಾನ್ಹೇರಿಯಲ್ಲಿ ದೊರೆತಿದ್ದು, ಅದು ೫ನೆಯ ಸಂಪುಟದಲ್ಲಿ ಮುದ್ರಿತವಾಗಿದೆ. ಮತ್ತೊಂದು ೧೬ನೆಯದರಲ್ಲಿ ಮುದ್ರಿತವಾಗಿದೆ.

ಇನ್ನು ಚಾಲುಕ್ಯರ ವಿಷಯವಾಗಿ ಈ ಸೊಸಾಯಿಟಿಯ ಮಾಸಪತ್ರಿಕೆಯಲ್ಲಿ ಯಾವ ಲೇಖಗಳಿರುತ್ತವೆಂಬುದನ್ನು ನೋಡುವ. ೧ನೆಯ ಸಂಪುಟದಲ್ಲಿ ಚಾಲುಕ್ಯ ವಿಷ್ಣುವರ್ಧನನ ತಾಮ್ರಶಾಸನವು ಮುದ್ರಿತವಾಗಿದೆ. ಅದರಲ್ಲಿಯೇ ಪುಲಿಕೇಶಿಯ ತಮ್ಮನಾದ ಜಯಸಿಂಹನೆಂಬನ ಮಗನಾದ ನಾಗವರ್ಧನನ ತಾಮ್ರಶಾಸನವು ಮುದ್ರಿತವಾಗಿದೆ. ೧೮೫೧ನೆಯ ಇಸವಿಯಲ್ಲಿ ನೇರೂರಲ್ಲಿ ದೊರೆತ ಎರಡು ತಾಮ್ರಶಾಸನಗಳೂ ೯ನೆಯದರಲ್ಲಿ ಮುದ್ರಿತವಾಗಿವೆ. ಅವುಗಳಲ್ಲಿ ಒಂದು ಚಾಲುಕ್ಯರ ೯ನೆಯ ಅರಸನಾದ ವಿಜಯಾದಿತ್ಯನದು; ಮತ್ತೊಂದು ಪುಲಿಕೇಶಿಯ ಮಗನಾದ ಚಂದ್ರಾದಿತ್ಯನೆಂಬವನ ಹೆಂಡತಿಯಾದ ವಿಜಯಭಟ್ಟಾರಿಕಾ ಎಂಬವಳದು. ಇದೇ ವಿಜಯಭಟ್ಟಾರಿಕೆಯ ಕೋಚೇರಮ್ದಲ್ಲಿ ದೊರೆತ ಮತ್ತೊಂದು ತಾಮ್ರಶಾಸನವು ೯ನೆಯದರಲ್ಲಿ ಮುದ್ರಿತವಾಗಿದೆ. ೧೦ನೆಯದರಲ್ಲಿ ರೇವತಿ ದ್ವೀಪದಿಂದ ಸತ್ಯಾಶ್ರಯನು (ಪುಲಿಕೇಶಿಯು) ಮತ್ತು ರಾಜೇಂದ್ರವರ್ಮನೆಂಬವನು ೫೧೭ನೆಯ ಶಕದಲ್ಲಿ ಕೊರಿಸಿದ ತಾಮ್ರಶಾಸನವು ಅಚ್ಚುಹಾಕಲ್ಪಟ್ಟಿದೆ. ೯ನೆಯದರಲ್ಲಿ ಡಾ. ಭಾವುದಾಜಿಯವರು ಧಾರವಾಡ ಮತ್ತು ಮೈಸೂರ ಶಿಲಾಲೇಖಗಳ ಬಗ್ಗೆ ಬರೆದಿರುವರು. ೧೪ನೆಯ ಸಂಪುಟದಲ್ಲಿ ಹಿಂದಕ್ಕೆ ಹೇಳಿದ ನಾಗವರ್ಧನನ ತಾಮ್ರಶಾಸನದ ಸುಧಾರಿಸಿದ ಆವೃತ್ತಿಯು ಪ್ರಸಿದ್ಧವಾಗಿದೆ. ೧೬ನೆಯದರಲ್ಲಿ ಡಾ. ಫ್ಲೀಟ್ರವರ ಚಾಲುಕ್ಯರ ಗುಜರಾಥದಲ್ಲಿಯ ಶಾಖೆಯ ಅರಸನಾದ ೨ನೆಯ ಪುಲಿಕೇಶಿಯ ಮಗನಾದ ಆದಿತ್ಯವರ್ಮನ ತಾಮ್ರಶಾಸನವು ಮುದ್ರಿತವಾಗಿದೆ. ಇದಲ್ಲದೆ ಒಂದನೆಯ ವಿಕ್ರಮಾದಿತ್ಯನ ಮೂರು ತಾಮ್ರಶಾಸನಗಳೂ ವಿಜಯಾದಿತ್ಯನ ಒಂದು ತಾಮ್ರಶಾಸನವೂ ಮುದ್ರಿತವಾಗಿವೆ.

ರಾಷ್ಟ್ರಕೂಟರು: ೨ನೆಯ ಸಂಪುಟದಲ್ಲಿ ಸಾಮನಗಡದಲ್ಲಿ ಸಿಕ್ಕಿದ ತಾಮ್ರಶಾಸನವು (೯೭೫ ಶಕ) ಮುದ್ರಿತವಾಗಿದೆ. ೩ನೆಯದರಲ್ಲಿ, ರಾಷ್ಟ್ರಕೂಟರ ೧೫ನೆಯ ಅರಸನಾದ ೪ನೆಯ ಗೋವಿಂದನೆಂಬವನ, ೮೫೫ನೆಯ ಶಕದ ಸಾಂಗಲಿಯಲ್ಲಿ ದೊರೆತ ತಾಮ್ರದ ಶಾಸನವು ಮುದ್ರಿತವಾಗಿದೆ. ೧೮ನೆಯ ಸಂಪುಟದಲ್ಲಿ ೮೬೨ನೆಯ ಶಕದ ೩ನೆಯ ಕೃಷ್ಣನೆಂಬವನ, ದೇವಳೆಯಲ್ಲಿ ದೊರೆತ ತಾಮ್ರಶಾಸನವು ಮತ್ತು ೧೩ನೆಯ ಅರಸನಾದ ೩ನೆಯ ಇಂದ್ರನ ನವಸರಿಯಲ್ಲಿ ದೊರೆತ ೮೩೬ನೆಯ ಶಕದ ಶಾಸನವೂ ಮುದ್ರಿತವಾಗಿವೆ. ೧೦ನೆಯ ಸಂಪುಟದಲ್ಲಿ, ಮಾಂಡಲಿಕ ಅರಸನಾದ ಪೃಥ್ವಿವರ್ಮನೆಂಬವನು ಸುಗಂಧವರ್ತಿ (ಸವದತ್ತಿ)ಯನ್ನು ೮೯೭ನೆಯ ಶಕದಲ್ಲಿ ಜೈನಗುಡಿಗೆ ದಾನಕೊಟ್ಟ ಶಿಲಾಲೇಖವೂ ಮತ್ತೂ ಒಂದು ೮೩೪ನೆಯ ಶಕದಲ್ಲಿ ಮುಳಗುಂದದ ಜೈನಗುಡಿ ಕಟ್ಟಿದ ಶಿಲಾಲೇಖಗಳೂ ಮುದ್ರಿತವಾಗಿವೆ. ೧ನೆಯ ಸಂಪುಟದಲ್ಲಿ ಖಾರೆ ಪಟ್ಟಣದಲ್ಲಿಯ ಶಾಸನವು ೧೮೪೩ನೆಯ ಇಸವಿಯಲ್ಲಿ ಮುದ್ರಿತವಾಯಿತು.

ಚಾಲುಕ್ಯರು: ಇವರ ಶಿಲಾಲೇಖಗಳು ಈ ಮಾಸಪತ್ರಿಕೆಯಲ್ಲಿ ಬಹಳವಾಗಿ ದೊರೆಯುವದಿಲ್ಲ. ೯ನೆಯ ಸಂಪುಟದಲ್ಲಿ ತ್ರಿಭುವನಮಲ್ಲ ವಿಕ್ರಮಾದಿತ್ಯನ ಶಿಲಾಲೇಖವಿದೆ. ೧೦ನೆಯದರಲ್ಲಿ ತೈಲಪದೇವನ ಮಾಂಡಲಿಕ ಅರಸನಾದ ಶಾಂತಿವರ್ಮನೆಂಬವನು ೯೦೨ನೆಯ ಶಕದಲ್ಲಿ ಸವದತ್ತಿಯಲ್ಲಿ ಜೈನಗುಡಿಗೆ ಕೊಟ್ಟ ತಾಮ್ರಶಾಸನವುಂಟು. ಮತ್ತೊಂದರಲ್ಲಿ ಕಾರ್ತವೀರ್ಯನ ಹೆಸರು ಇರುತ್ತದೆ. ೩ನೆಯದರಲ್ಲಿ ತ್ರಿಭುವನಮಲ್ಲನ ಮಾಂಡಲಿಕನಾದ ಸೇನನೆಂಬವನ ಹೆಸರುಂಟು. ೧೧ನೆಯದರಲ್ಲಿ ಡಾ. ಫ್ಲೀಟ ಇವರು ಸಿಂಧ ವಂಶದ ಶಿಲಾಲೇಖಗಳನ್ನು ಮುದ್ರಿಸಿದ್ದಾರೆ. ಈ ಸಿಂಧ ವಂಶದ ಶಿಲಾಲೇಖಗಳು ೨-೩-೪ನೆಯ ಸಂಪುಟಗಳಲ್ಲಿಯೂ ಉಂಟು.

ಕಲಚೂರ್ಯರು: ಕಲಚೂರಿಯ ಬಿಜ್ಜಳನ ಮಗನಾದ ಸೋಮನೆಂಬವನ ತಾಮ್ರಶಾಸನವು ೧೮ನೆಯ ಸಂಪುಟದಲ್ಲಿ ಮುದ್ರಿತವಾಗಿದೆ. ೨ನೆಯದರಲ್ಲಿ ಯಾದವರ ೭ ಶಿಲಾಲೇಖಗಳು ಮುದ್ರಿತವಾಗಿವೆ. ೯ನೆಯದರಲ್ಲಿ ೧ ಮುದ್ರಿತವಾಗಿದೆ. ಮತ್ತು ೧೫ನೆಯ ಸಂಪುಟದಲ್ಲಿಯೂ ಯಾದವರ ಒಂದು ಲೇಖವು ಮುದ್ರಿತವಾಗಿದೆ. ಕೊಲ್ಹಾಪುರ ಶಿಲಾಹಾರ ವಂಶದಲ್ಲಿ ೧೫ ಮಂದಿ ಅರಸರು ಆಳಿದರು. ಅವರ ಶಿಲಾಲೇಖಗಳು ೨-೩-೧೩ ನೆಯ ಸಂಪುಟದಲ್ಲಿ ಅಚ್ಚಾಗಿವೆ.

ಈ ಮಾಸಪತ್ರಿಕೆಯೊಳಗಿನ ಲೇಖಗಳಲ್ಲದೆ ಮತ್ತೆ ಕೆಲವರ ಪ್ರಯತ್ನಗಳಿಂದ ಕರ್ನಾಟಕಕ್ಕೆ ಅತಿಶಯವಾಗಿ ಸಹಾಯವಾಗಿದೆ. ಈ ಬಗೆಯಾಗಿ ಪ್ರಯತ್ನ ಮಾಡಿದವರಲ್ಲಿ ಸರ್ ವಾಲ್ಟರ್ ಇಲಿಯಟ್ (Sir Walter Elliot) ಎಂಬವರೇ ಮೊದಲನೆಯವರು. ಇವರು ಮದ್ರಾಸ ಇಲಾಖೆಯಲ್ಲಿ ಸರಕಾರೀ ಅಧಿಕಾರಸ್ಥರಾಗಿದ್ದರು. ಇವರು ೭-೮ ವರ್ಷ ಸತತ ಶ್ರಮಪಟ್ಟು ಕರ್ನಾಟಕಪ್ರಾಂತ, ನಿಜಾಮ ರಾಜ್ಯದ ಪಶ್ಚಿಮಭಾಗ ಮತ್ತು ಮೈಸೂರ ಪ್ರಾಂತದ ಉತ್ತರಭಾಗ ಈ ಮೂರು ಪ್ರದೇಶಗಳೊಳಗಿನ ಸುಮಾರು ೧೩೦೦ ಶಿಲೆಯ ಮತ್ತು ತಾಮ್ರಶಾಸನಗಳ ಲೇಖಗಳನ್ನು ಕೂಡಿಹಾಕಿದರು. ಅವುಗಳಲ್ಲಿ ಸ್ವಚ್ಛವಾದ ೫೯೫ ಲೇಖಗಳನ್ನು ಬೇರೆ ತೆಗೆದು, ಒಂದೊಂದರ ನಾಲ್ಕು ನಾಲ್ಕು ಪ್ರತಿಗಳನ್ನು ಮಾಡಿಸಿದರು. ಅವುಗಳಲ್ಲೊಂದು ಎಡಿನ್ಬರೋ ಪಟ್ಟಣದಲ್ಲಿರುವ ವಿಶ್ವ ವಿದ್ಯಾಲಯದ ಪುಸ್ತಕಾಲಯ (Edinborough University) ದಲ್ಲಿ ಕರ್ನಾಟಕದ ಲೇಖಗಳು (Karnataka Inscriptions) ಎಂಬ ಹೆಸರಿನಿಂದ ಎರಡು ಸಂಪುಟಗಳಾಗಿ ಈಗ್ಯೂ ಇರುತ್ತವೆ. ಮತ್ತೊಂದು ಲಂಡನ ಪಟ್ಟಣದಲ್ಲಿರುವ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ (Royal Asiatic Society, London) ಲಾಯಬ್ರರಿಯಲ್ಲಿ ಇರುತ್ತದೆ. ಮಿಕ್ಕ ಎರಡು ಪ್ರತಿಗಳ ಅವಸ್ಥೆಯೇನಾಗಿದೆಯೋ ಗೊತ್ತೇಇಲ್ಲ. ಸರ್ ವಾಲ್ಟರ್ ಇಲಿಯಟ್ ಇವರು ಈ ೫೯೫ ಲೇಖಗಳ ಇತ್ಯರ್ಥವನ್ನು ತೆಗೆದು ಒಂದು ಪ್ರಬಂಧವನ್ನು ಬರೆದು, ಅವರು ಅದನ್ನು ಲಂಡನ್ ಸೊಸಾಯಿಟಿಯ ಮುಂದೆ ೧೮೩೬ನೆಯ ಇಸವಿಯ ಜುಲೈ ತಿಂಗಳಲ್ಲಿ ಓದಿದರು. ಅದು ಹಿಂದು ಶಿಲಾ ಲೇಖಗಳು (Hindu Inscriptions) ಎಂಬ ಹೆಸರಿನಿಂದ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಹಳೆಯ ಮಾಸಪತ್ರಿಕೆಗಳ ನಾಲ್ಕನೆಯ ಸಂಪುಟದ ೧ನೇ ಪುಟದಲ್ಲಿ (Journal of the Royal Asiatic Society old Series Vol. IV Pages I & C) ಮುದ್ರಿತವಾಗಿದೆ. ಮುಂದೆ ಅದರಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ ಅವರು ವಾಙ್ಮಯ ಶಾಸ್ತ್ರ ಮತ್ತು ಇವುಗಳ ಸಂಬಂಧಪಟ್ಟ ಮದ್ರಾಸ ಜರ್ನಲಿನ ೭ನೆಯ ಸಂಪುಟದ ೧೯೩ನೆಯ ಪುಟ (Madras Journal of the Literature and Science Vol. VII Page 193) ದಲ್ಲಿ ಪ್ರಸಿದ್ಧಗೊಳಿಸಿರುವರು.

ಅನಂತರ ಕರ್ನಲ್ ಮೆಕೆಂಝಿ ಸಾಹೇಬರು ದಕ್ಷಿಣ ಹಿಂದುಸ್ಥಾನದೊಳಗಿನ ಅನೇಕ ಪ್ರಾಚೀನ ಶಿಲಾಲೇಖಗಳನ್ನೂ ತಾಮ್ರಪಟಗಳನ್ನೂ ಮುದ್ರಣ ತೆಗೆದುಕೊಂಡು ದೊಡ್ಡ ಸಂಗ್ರಹ ಮಾಡಿರುವರು. ಅದು ಇನ್ನೂ ಪ್ರಸಿದ್ಧವಾದಂತೆ ತೋರಲಿಲ್ಲ.

ಇತ್ತ ಮೈಸೂರಿನಲ್ಲಿ ಮೈಸೂರ ಸರಕಾರದವರು, ಮೇಜರ್ ಡಿಕ್ಸನ್ (Major Dixon) ಇವರು ತೆಗೆದುಕೊಂಡ ತಸಬೀರುಗಳನ್ನು ಮುದ್ರಿಸಿದರು. ಮೇಜರ್ ಡಿಕ್ಸನ್ ಸಾಹೇಬರು ಮೈಸೂರ ಸರಕಾರದ ಆಶ್ರಯದಿಂದ ಚಿತ್ರಕಲ್ಲುದುರ್ಗ, ಬಳ್ಳಿಗಾಂವಿ, ಹರಿಹರ ಮುಂತಾದವುಗಳಲ್ಲಿಯ ಸುಮಾರು ೯೦ ಲೇಖಗಳನ್ನು ೧೮೬೫ನೆಯ ಇಸವಿಯಲ್ಲಿ ಪ್ರಸಿದ್ಧಪಡಿಸಿದರು.

ಡಾ. ಪಿಗು ಮತ್ತು ಕರ್ನಲ್ ಬ್ರಿಗ್ಸ್ ಈ ಉಭಯತರು ಧಾರವಾಡ ಮತ್ತು ಮೈಸೂರ ಪ್ರಾಂತದೊಳಗಿನ ಸುಮಾರು ೬೦ ಶಿಲಾಲೇಖಗಳ ತಸಬೀರು ತೆಗೆದುಕೊಂಡಿದ್ದರು. ಅವುಗಳ ಆಧಾರದಿಂದ ಮಿ. ಹೋಪ್ ಎಂಬವರು ಸರಕಾರದವರ ಸಹಾಯದಿಂದ ಧಾರವಾಡ ಮತ್ತು ಮೈಸೂರುಗಳಲ್ಲಿಯ ಶಿಲಾಲೇಖಗಳು (Inscriptions in Dharwar and Mysore) ಎಂಬ ಪುಸ್ತಕದಲ್ಲಿ ೬೪ ಶಿಲಾಲಿಪಿಗಳ ತಸಬೀರುಗಳನ್ನು ಮುದ್ರಿಸಿದರು. ಆದರೆ ಇದರ ಹತ್ತೇ ಪ್ರತಿಗಳು ಮುದ್ರಿತವಾಗಿದ್ದವು. ಅವು ಇರುವ ವಿವರ: (೧) ರಾಯಲ್ ಏಶಿಯಾಟಿಕ್ ಲಾಯಬ್ರರಿ ಲಂಡನ್ (Royal Asiatic library London). (೨) ಸೊಸಾಯಿಟಿ ಏಶಿಯಾಟಿಕ್ ಪ್ಯಾರಿಸ್ (Society Asiatic Paris) (೩) ರಾಯಲ್ ಓರಿಯಂಟಲ್ ಸೊಸಾಯಿಟಿ ಲೀಪ್ಸಿಕ್ (Royal Oriental Society Leepzic) (೪) ಇಂಡಿಯಾ ಆಫೀಸ್ ಲಾಯಬ್ರರಿ ಲಂಡನ್ (India office Library London) (೫) ಮಿಸ್ ಥಾಮಸ್ (Mis Thomas). ಮಿಕ್ಕ ಪ್ರತಿಗಳು ಮುಂಬಯಿಗೆ ಕಳುಹಿಸಿಕೊಡಲ್ಪಟ್ಟಿದ್ದವು. ಅವುಗಳ ಪತ್ತೆ ಇಲ್ಲ.

ಆದರೆ ಮೇಲೆ ಹೇಳಿದ ಸಂಗ್ರಹಗಳು ದೊರೆಯಲಿಕ್ಕೆ ಕಠಿಣವಾದುದರಿಂದ ಅವುಗಳನ್ನು ಒಟ್ಟಿಗೆ ಕೂಡಿಸಿ ಕ್ರಮವಾಗಿ ಒಂದೇ ಗ್ರಂಥದಲ್ಲಿ ಇಂಡಿಯಾ ಆಫೀಸ್ (India Office)ನ ವತಿಯಿಂದ ೧೮೭೮ನೆಯ ಇಸವಿಯಲ್ಲಿ ಡಾ. ಫ್ಲೀಟ್ ಎಂಬವರು ಮುದ್ರಿಸಿದರು. ಈ ಪುಸ್ತಕದ ಹೆಸರು (Pali Sanskirt and Old Kanarese Inscriptions from the Bombay Presidency and Parts of the Madras Presidency and Mysore) ಮುಂಬಯಿ ಇಲಾಖೆಯ ಮತ್ತು ಮದ್ರಾಸ ಇಲಾಖೆಯ ಮೈಸೂರು ಪ್ರಾಂತದ ಕೆಲವು ಭಾಗಗಳಲ್ಲಿಯ ಪಾಲೀ, ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳಲ್ಲಿರುವ ಲೇಖಗಳು. ಆದರೆ ಇದರ ಒಂಬತ್ತೇ ಪ್ರತಿಗಳು ಮುದ್ರಿತವಾಗಿದ್ದವು. ಅವು ಮುಂದೆ ಹೇಳಿದ ಸ್ಥಳಗಳಲ್ಲಿ ಇರುತ್ತವೆ: (೧) ಇಂಡಿಯಾ ಆಫೀಸ್, ಲಂಡನ್ (India Office, London) (೨) ಬ್ರಿಟಿಷ್ ಮ್ಯುಝಿಯಮ್, ಲಂಡನ್ (British Museum London) (೩) ರಾಯಲ್ ಏಶಿಯಾಟಿಕ್ ಸೊಸಾಯಿಟಿ, ಲಂಡನ್ (Royal Asiatic Society London), (೪) ಮುಂಬಯಿ ಸೆಕ್ರೆಟರಿಯೇಟ್ (The Bombay Secretariat) (೫) ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಮುಂಬಯಿ ಶಾಖೆ (The Bombay branch of the Royal Asiatic Society) (೬) ಆನ್. ಮಿ. ಗಿಬ್ಸ್ (Hon. Mr. Gibbs) (೭) ಡಾ. ಬರ್ಗೆಸ್ (೮) ಡಾ. ಫ್ಲೀಟ್ (೯) ಬಾಡ್ಲಿಯನ್ ಲಾಯಬ್ರರಿ (Bodlean Library)

ಪ್ರೊ. ಡಾವುಸನ್ (Pro. Dowson) ಎಂಬವರು ರಾಯಲ್ ಏಶಿಯಾಟಿಕ್ ಸೊಸಾಯಿಟಿ (Journal of the Royal Asiatic Society) ಯ ಮಾಸಪತ್ರಿಕೆಯಲ್ಲಿ ಹಲಕೆಲವು ಲಿಪಿಗಳನ್ನು ಅಚ್ಚು ಹಾಕಿಸಿದ್ದಾರೆ. ಅಲ್ಲದೆ, ಅವರು ದಕ್ಷಿಣದೊಳಗಿನ ಚಾಳುಕ್ಯರಾಜರ ವಿಷಯಕ್ಕೆ ಆ ಸೊಸಾಯಿಟಿಯ ಒಂದನೆಯ ವ್ಹಾಲ್ಯೂಮ (New Series) ದಲ್ಲಿ ಒಂದು ಲೇಖನವನ್ನು ಬರೆದಿರುವರು. ಇದಲ್ಲದೆ, ಪಂಡಿತ ಬಾಳಗಂಗಾಧರಶಾಸ್ತ್ರಿ, ಸರ್ ಲಿ ಗ್ರಾಂಡ, ಜೇಕಬ ಮತ್ತು ಕ್ಯಾಪ್ಟನ್ ಜರ್ವಿಸ ಇವರು ಚಾಲುಕ್ಯರ ವಿಷಯವಾಗಿ ಕೆಲವು ಲೇಖಗಳನ್ನು ಮುದ್ರಿಸಿದ್ದಾರೆ. (Journal Bom. R. As. Vol. II-III J.R.A.S. Vol. IX) ಮುಂಬಯಿ ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ಸಂಪುಟ ೨, ೩; ಮತ್ತು ರಾಯಲ್ ಏಶಿಯಾಟಿಕ್ ಸೊಸಾಯಿಟಿಯ ೯ನೆಯ ಸಂಪುಟಗಳಲ್ಲಿ ಮಿಸ್ಟರ ನ್ಯಾಥೆನ್ ಇವರು ಚಾಲುಕ್ಯರ ವಂಶಾವಳಿಯನ್ನು ಪ್ರಸಿದ್ಧಗೊಳಿಸಿದ್ದಾರೆ (J.R.A.S. Vol. V. 345). ಪಂಡಿತ ಕಾಶೀನಾಥ ತೆಲಂಗ ಇವರು ತೈಲಪನ ಪೂರ್ವದಲ್ಲಿ ಆದ ಚಾಲುಕ್ಯರ ವಿಷಯವಾಗಿ ಒಂದು ನಿಬಂಧವನ್ನು ಬರೆದು ಅದನ್ನು ಮುಂಬಯಿ ಸೊಸಾಯಿಟಿಯ ಜರ್ನಲಿನಲ್ಲಿ ಮುದ್ರಿಸಿದ್ದಾರೆ. (Jour. B.R.A.S. Vol X. 348-867). ಡಾ. ಟೇಲರ್ ಎಂಬವರು ಟ್ರಾನ್ಸ್ಝಾಕ್ಯನ್ಸ್ ಆಫ್ ಲಿಟರರಿ ಸೊಸಾಯಿಟಿ ಮುಂಬಯಿ (Transactions of the Literary Society of Bombay) ಎಂಬುದರಲ್ಲಿಯೂ ಅನೇಕ ಲೇಖಗಳನ್ನು ಬರೆದಿರುವರು.

ಆದರೆ ಇವೆಲ್ಲ ತೀರ ಅಪರೂಪವಾದ ಪ್ರಯತ್ನಗಳು. ಒಂದೇ ಸಮನಾಗಿ ನಡೆದವುಗಳಲ್ಲ. ೧೮೮೨ನೆಯ ಇಸವಿಯಲ್ಲಿ ಡಾ. ಬರ್ಗೆಸ್ ಇವರು ಇಂಡಿಯನ್ ಆಂಟಿಕ್ವರಿ ಎಂಬ ಮಾಸಪತ್ರಿಕೆಯನ್ನು ತೆಗೆದಂದಿನಿಂದ ಈ ವಿಷಯವು ಒಂದೇ ಸಮನಾಗಿ ಚರ್ಚಿಸಲ್ಪಡಹತ್ತಿರುತ್ತದೆ. ಡಾ. ಬುಲ್ಹರ್, ಪ್ರೊ. ಇಂಗ್ಲಿಂಗ್. ಮಿ. ಕಿಟೆಲ್, ಮಿ. ಕೆನ್, ರೆ. ಪೋಕ್ಸ್, ಡಾ. ಭಂಡಾರಕರ್, ಪ್ರೊ. ಭಗವಾನ್ ಲಾಲ್ ಇಂದ್ರಜಿ, ಮಿ. ಪಂಡಿತ್, ಮಿ. ತೆಲಂಗ್, ಪ್ರೊ. ಪಾಠಕ್, ಡಾ. ಫ್ಲೀಟ್ ಇವರೇ ಮುಂತಾದವರು ಈ ವಿಷಯವಾಗಿ ಲೇಖಗಳನ್ನು ಬರೆದಿರುವರು. ಇವೆಲ್ಲವುಗಳಲ್ಲಿ ಡಾ. ಫ್ಲೀಟರು ಶೋಧಿಸಿದ ಲಿಪಿಗಳೇ ಹೆಚ್ಚು. ೧೮೭೯ನೆಯ ಇಸವಿಯಲ್ಲಿ ಮಿ. ರಾಯಿಸ್ (Mr. Rice) ಇವರು ಡಿಕ್ಸನ್ (Dixon) ಇವರ ಸಂಗ್ರಹವನ್ನೂ ತಮ್ಮ ಸಂಗ್ರಹವನ್ನೂ ಒಟ್ಟುಗೂಡಿಸಿ ಮೈಸೂರಿನ ಲೇಖಗಳು (Mysore Inscripitons>) ಎಂಬ ಪುಸ್ತಕವನ್ನು ಮುದ್ರಿಸಿದ್ದಾರೆ.

ಇಂಡಿಯನ್ ಆಂಟಿಕ್ವರಿ ಎಂಬ ಮಾಸಪತ್ರಿಕೆಯು ಹೊರಡುವ ಪೂರ್ವದಲ್ಲಿಯ ಲೇಖಗಳು ಅಲ್ಲೊಂದು ಇಲ್ಲೊಂದು ಇರುವದರಿಂದ ವಾಚಕರಿಗೆ ಅವುಗಳನ್ನು ಕೈಲಾದ ಮಟ್ಟಿಗೆ ಗೊತ್ತು ಮಾಡಿಕೊಟ್ಟಿರುವೆವು. ಆ ಮಾಸಪತ್ರಿಕೆಯಲ್ಲಿ ಕರ್ನಾಟಕದ ಇತಿಹಾಸದ ವಿಷಯವಾಗಿ ಎಷ್ಟು ಲಿಪಿಗಳು ಮತ್ತು ಯಾವ ಲೇಖಗಳು ಬಂದಿರುತ್ತವೆಂಬುದರ ಯಾದಿಯನ್ನು ಮಾಡಬೇಕೆಂದು ಹವಣಿಸಿದ್ದೆವು. ಆದರೆ ಅದನ್ನು ತಯಾರಿಸಲಿಕ್ಕೆ ಕಾಲಾವಧಿಯು ಬೇಕು. ಮತ್ತು ಇತಿಹಾಸವನ್ನು ಅಭ್ಯಾಸ ಮಾಡುವವರಿಗೆ ಕೆಲವು ಮಟ್ಟಿಗಾದರೂ ಅನುಕೂಲವಾಗಬೇಕೆಂದು ನಮ್ಮ ಮಿತ್ರರ ಸೂಚನೆಯ ಮೇರೆಗೆ ಈ ಪುಸ್ತಕವನ್ನು ಅವಸರದಿಂದ ಅಪೂರ್ಣಾವಸ್ಥೆಯಲ್ಲಿಯೇ ತೆಗೆದಿರುವೆವು.

ಕೊನೆಗೆ ಸೂಚಿಸುವುದೇನೆಂದರೆ "ಎಪಿಗ್ರಾಫಿಯಾ ಇಂಡಿಕಾ (Epigraphia Indica) ಎಂಬ ಪತ್ರಿಕೆಯ ೭ನೆಯ ಸಂಪುಟದಲ್ಲಿ, ದಕ್ಷಿಣದಲ್ಲಿಯ ಯಾವತ್ತೂ ಶಿಲಾಲಿಪಿಗಳ ಪಟ್ಟಿಯೊಂದನ್ನು ಪ್ರೊ. ಕಿಲಹಾರ್ನ್ ಇವರು ಅತ್ಯಂತ ಪರಿಶ್ರಮಪಟ್ಟು ಮುದ್ರಿಸಿರುವರು. ಈ ಮುಂದಿನ ಪಟ್ಟಿಯೊಂದನ್ನು ಯಾರಾದರೂ ವಿದ್ವಾಂಸರು ತಯಾರಿಸಿದರೆ ನಮ್ಮ ಇತಿಹಾಸಕ್ಕೆ ದೊಡ್ಡ ಉಪಕಾರ ಮಾಡಿದಂತಾಗುವದು. ಇತಿಹಾಸವನ್ನು ಅಭ್ಯಾಸಮಾಡಲಿಚ್ಛಿಸುವವರು, ಈ ಪಟ್ಟಿಯನ್ನು ಕಣ್ಣುಮುಂದಿಟ್ಟುಕೊಂಡೇ ಅಭ್ಯಾಸ ಮಾಡಬೇಕು. ಇದೊಂದು ಸಂಗತಿಯು ಗೊತ್ತಿರದ ಮೂಲಕ ನಮ್ಮ ಎಷ್ಟೋ ಶ್ರಮವು ನಿರರ್ಥಕವಾಗಿರುತ್ತದೆ. ಆದುದರಿಂದ ನಾವು ಈ ಸಂಗತಿಯನ್ನು ಬೇಕೆಂದು ವಾಚಕರ ಧ್ಯಾನಕ್ಕೆ ತಂದುಕೊಟ್ಟಿದ್ದೇವೆ.

ಇನ್ನು ಕರ್ನಾಟಕದ ಇತಿಹಾಸಕ್ಕೆ ಅತ್ಯಂತ ಅವಶ್ಯವಾದ ಬೇರೆ ಪುಸ್ತಕಗಳಾವುವೆಂದರೆ:


  1. ಡಾ. ಫ್ಲೀಟ್ ಇವರು ೧೮೮೧ನೆಯ ಇಸವಿಯಲ್ಲಿ ಬರೆದ ಮುಂಬಯಿ ಇಲಾಖೆಯಲ್ಲಿಯ ಕನ್ನಡ ರಾಜಮನೆತನಗಳು (The Dynasties of the Kanarese District of Bombay Presidency).

  2. ಡಾ. ಭಾಂಡಾರಕರ ಇವರು ೧೮೮೪ನೆಯ ಇಸವಿಯಲ್ಲಿ ಬರೆದ ದಕ್ಷಿಣಾಪಥದ ಪ್ರಾಚೀನ ಇತಿಹಾಸ (The Early History of the Dekkan).

  3. ಸಿವೆಲ್ರ ಮರೆತುಹೋದ ಸಾಮ್ರಾಜ್ಯ (Forgotten Empire by Sewell).

  4. ಬಿ. ಸೂರ್ಯನಾರಾಯಣರಾಯರ "ಎಂದೂ ಮರೆಯದ ಸಾಮ್ರಾಜ್ಯ" (The never to be forgotten Empire by B. Suryanarayanrao).

  5. ರಾ. ವೆಂಕಟರಂಗೋ ಕಟ್ಟಿಯವರು ಭಾಷಾಂತರಿಸಿದ "ಕರ್ನಾಟಕ ಗ್ಯಾಝಿಟಿಯರ್".

  6. "ಮೈಸೂರ ಗ್ಯಾಝಿಟಿಯರ್" ಇವೇ ಮೊದಲಾದವುಗಳು.


ಕರ್ನಾಟಕದ ಹಳೆಯ ಇತಿಹಾಸವನ್ನು ಇತಿಹಾಸ ದೃಷ್ಟಿಯಿಂದ ಅಭಿಮಾನ ಪೂರ್ವಕವಾಗಿ ಡಾ. ಭಾಂಡಾರಕರರು ಮೊದಲು ಬರೆದರು. ಡಾ. ಫ್ಲೀಟರು ಕೇವಲ ಕನ್ನಡ ಪ್ರಾಂತದ ಇತಿಹಾಸವನ್ನು ಬರೆದಿದ್ದರೂ ಅವರು ಅದನ್ನು ಶಿಲಾಲಿಪಿಗಳ ದೃಷ್ಟಿಯಿಂದ ಮಾತ್ರವೇ ಶೋಧಿಸಿರುವರು. ಅವರು ತಮ್ಮ ಇತಿಹಾಸದಲ್ಲಿ ಒಟ್ಟು ಸುಮಾರು ೨೦೦ ಶಿಲಾಲಿಪಿಗಳಿಂದ ಹೊರಡುವ ಇತಿಹಾಸವನ್ನು ಸಂಗ್ರಹಿಸಿದ್ದಾರೆ. ಡಾ. ಫ್ಲೀಟರು ನಮ್ಮ ಇತಿಹಾಸಕ್ಕೆ ಮಾಡಿದ ಉಪಕಾರವನ್ನು ಅಷ್ಟಿಷ್ಟೆಂದು ಹೇಳಲಳವಲ್ಲ. ಇವರು ಈ ಪ್ರಾಂತದ ಕಮಿಶನರಾಗಿದ್ದರು. ಇವರು ತಾವು ಹೋದ ಹೋದಲ್ಲಿ ಕಂಡ ಶಿಲಾಲಿಪಿಗಳ ಮುದ್ರೆಗಳನ್ನು ತೆಗೆದುಕೊಂಡಿರುವರು. ಅವರು ಈ ಇತಿಹಾಸವನ್ನು ಬರೆದು ಮೂರು ತಪಗಳಾಗಿ ಹೋದರೂ ಇಂದಿನವರೆಗೂ ಯಾವ ಕನ್ನಡಿಗನೂ ಅತ್ತ ಸ್ವಾಭಿಮಾನದಿಂದ ದೃಷ್ಟಿ ತಿರುಗಿಸಲಿಲ್ಲವೆಂಬುದಕ್ಕಿಂತ ಹೆಚ್ಚು ಕರುಣಾಸ್ಪದವಾದ ಸಂಗತಿಯು ಮತ್ತಾವುದಿದೆ?

ಡಾ. ಭಾಂಡಾರಕರರವರು ಬರೆದ ಪುಸ್ತಕವು ಕನ್ನಡಿಗರಿಗೆ ಬಹಳ ಬೆಲೆಯುಳ್ಳದ್ದಾಗಿದೆ. ಆದರೆ ಡಾ. ರವರು ಕರ್ನಾಟಕದ ಅಭಿಮಾನದಿಂದ ಅದನ್ನು ಬರೆಯಲಿಕ್ಕೆ ಪ್ರವರ್ತಿಸಿಲ್ಲವೆಂಬುದನ್ನು ಮರೆಯಕೂಡದು. ಈ ಕಾರಣಕ್ಕೋಸ್ಕರವೇ ಈ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೂ ಓದಿದರೂ ಅದು ಕರ್ನಾಟಕಕ್ಕೆ ತಿಲಾಂಶವಾದರೂ ಸಂಬಂಧಿಸಿರಬಹುದೆಂಬ ಕಲ್ಪನೆಯೇ ಮನಸ್ಸಿನಲ್ಲಿ ಮೂಡುವುದಿಲ್ಲ. ಇಷ್ಟೇ ಅಲ್ಲ, ಅದನ್ನು ಓದುವವರಿಗೆ ಅದು ಮಹಾರಾಷ್ಟ್ರದ ಇತಿಹಾಸವೆಂತಲೇ ಭಾಸವಾಗುತ್ತದೆ. ಆದುದರಿಂದ ಅದನ್ನೋದುವ ಕನ್ನಡಿಗರು, ಡಾಕ್ಟರವರು ಆ ಪುಸ್ತಕವನ್ನು ತಮ್ಮ ಪ್ರಾಂತದ ಇತಿಹಾಸವೆಂಬ ದೃಷ್ಟಿಯಿಂದ ಬರೆದಿದ್ದರೂ ಅದು ಮುಖ್ಯವಾದ ಕರ್ನಾಟಕದ ಇತಿಹಾಸವೇ ಆಗಿರುತ್ತದೆಂಬ ಭಾವನೆಯನ್ನು ಮನಸ್ಸಿನಲ್ಲಿ ದೃಢವಾಗಿಟ್ಟುಕೊಂಡು ಅದನ್ನು ಓದಬೇಕೆಂದು ನಾವು ಒತ್ತಾಯದಿಂದ ಸೂಚಿಸುತ್ತೇವೆ. ಇರಲಿ. ಕರ್ನಾಟಕದ ಹಳೆಯ ಇತಿಹಾಸಕ್ಕೆ ಈಗ ಆಧಾರಭೂತವಾಗಿರುವ ಇವೆರಡು ಗ್ರಂಥಗಳ ಕರ್ತರಿಗೆ ನಾವೆಲ್ಲರೂ ಅತ್ಯಂತ ಋಣಿಗಳಾಗಿದ್ದೇವೆ.

ರಾ. ಬಿ. ಸೂರ್ಯನಾರಾಯಣರಾವ್ ಮತ್ತು ಮಿ. ಸಿವೆಲ್ ಸಾಹೇಬರು ಬರೆದ ವಿಜಯನಗರದ ಇತಿಹಾಸಗಳು ಕನ್ನಡಿಗರಿಗೆ ಸಾಮಾನ್ಯತಃ ಗೊತ್ತಿರುವುದರಿಂದ ಅವುಗಳ ಬಗ್ಗೆ ಹೆಚ್ಚಿಗೆ ಬರೆಯುವ ಕಾರಣವಿಲ್ಲ.

ಶುದ್ಧ ಕನ್ನಡಿಗರಲ್ಲಿ ಕೇವಲ ಕರ್ನಾಟಕದ ಅಭಿಮಾನದಿಂದ ಈ ವಿಷಯವನ್ನು ಅಭ್ಯಾಸ ಮಾಡಿದವರು ನಮಗೆ ಪೂಜ್ಯರಾದ ರಾ. ವೆಂಕಟರಂಗೊ ಕಟ್ಟಿ ಎಂಬವರೇ! ಇವರು ತಮ್ಮ ಉತ್ಕಟವಾದ ದೇಶಾಭಿಮಾನದಿಂದ ಕರ್ನಾಟಕದ ಸೇವೆಯನ್ನು ಮಾಡಿರುವದರಿಂದ ಇವರ ಹೆಸರನ್ನು ಯಾವ ಕನ್ನಡಿಗನೂ ಮರೆಯುವಂತಿಲ್ಲ. ಇವರು ಸರಕಾರೀ ನವಕರಿಯಲ್ಲಿದ್ದಾಗ ಸರಕಾರದವರ ಅಪ್ಪಣೆಯ ಮೇರೆಗೆ ಕರ್ನಾಟಕ ಗ್ಯಾಝಿಟಿಯರನ್ನು ಕನ್ನಡದಲ್ಲಿ ಸರಸವಾಗಿ ಭಾಷಾಂತರಿಸಿರುವರು. ಇದು ನಮ್ಮ ಇತಿಹಾಸವನ್ನು ಅಭ್ಯಾಸ ಮಾಡುವವರಿಗೆ ಅವಶ್ಯವಾದ ಪುಸ್ತಕವು. ಇದಲ್ಲದೆ ಇವರು ಚಿಕ್ಕದೊಂದು ಕರ್ನಾಟಕದ ಇತಿಹಾಸವನ್ನು ಬರೆದಿರುವರು.

ರಾ. ಪಾಠಕರಿಗೆ ಶಿಲಾಲಿಪಿಗಳ ಮೇಲೆ ಬಲು ಪ್ರೀತಿ. ಇವರು ೨೫-೩೦ ವರ್ಷಗಳಿಂದ ಈ ಲಿಪಿ ಶೋಧನದ ಕೆಲಸವನ್ನು ಆಗಾಗ ಮಾಡುತ್ತ ಬಂದಿರುತ್ತಾರೆ. ಈಗಲೂ ಅವರು ಆ ವ್ಯವಸಾಯವನ್ನು ಬಿಟ್ಟಿಲ್ಲ.

ಇರಲಿ. ಇಲ್ಲಿಯವರೆಗೆ ಕರ್ನಾಟಕದ ಇತಿಹಾಸದ ಬಗ್ಗೆ ಪ್ರತ್ಯಕ್ಷವಾಗಿಯಾಗಲಿ, ಅಪ್ರತ್ಯಕ್ಷವಾಗಿಯಾಗಲಿ ಯಾರು ಪ್ರಯತ್ನಪಟ್ಟರೆಂಬುದನ್ನೂ ಪಡುತ್ತಿರುವರೆಂಬುದನ್ನೂ ನಿವೇದಿಸಿರುವೆವು. ಇವರೆಲ್ಲರ ಪ್ರಯತ್ನಗಳ ಫಲವನ್ನು ಗೊತ್ತುಮಾಡಿಕೊಂಡು, ಕೇವಲ ಇತಿಹಾಸದ ಅಭಿಮಾನದಿಂದ ಪ್ರೇರಿತರಾದ ಜನರು ಮುಂದೆ ಬಂದು ಈ ಕಾರ್ಯವನ್ನು ಕೈಕೊಳ್ಳಬೇಕೆಂದು ನಮ್ಮ ಪ್ರಾರ್ಥನೆ.


class="center_bold">

ಪೂರಕ ಪ್ರಕರಣ ೨

ಲಿಪಿಗಳ ಮುದ್ರಣ ಪದ್ಧತಿ


ವಾಚಕರೇ! ನಾವು ಈ ಪ್ರಕರಣದಲ್ಲಿ ಶಿಲಾಲಿಪಿ ಮತ್ತು ತಾಮ್ರಶಾಸನಗಳ ಮುದ್ರೆಗಳನ್ನು ತೆಗೆದುಕೊಳ್ಳುವ ರೀತಿಯನ್ನು ಹೇಳುವೆವು. ಶಿಲಾಲಿಪಿಗಳನ್ನು ಓದುವುದು ತುಸು ಕಠಿಣ ಕಾರ್ಯವು. ಆದರೆ ಅವುಗಳನ್ನು ಕಾಗದದ ಮೇಲೆ ಮುದ್ರಿಸಿಕೊಳ್ಳುವುದು ಅಷ್ಟೊಂದು ಕಠಿಣವಾದ ಕೆಲಸವಲ್ಲ. ಸ್ವಲ್ಪ ಅಭ್ಯಾಸದಿಂದ ಅದನ್ನು ಪ್ರತಿಯೊಬ್ಬನೂ ಕಲಿಯಬಹುದು. ಮೇಲಾಗಿ, ಈಗಿನ ಪರಿಸ್ಥಿತಿಯಲ್ಲಿ ಶಿಲಾಲಿಪಿಗಳನ್ನು ಓದುವುದಕ್ಕಿಂತ ಲಿಪಿಗಳನ್ನು ಸಂಗ್ರಹಿಸುವ ಕೆಲಸವು ಹೆಚ್ಚು ಮಹತ್ವದಾಗಿದೆ. ಶೋಧನ (research) ಕ್ಕಿಂತ ರಕ್ಷಣವು (Conservation) ಹೆಚ್ಚು ಮಹತ್ವವುಳ್ಳದ್ದೆಂದೇ ಅನೇಕ ವರ್ಷಗಳ ಅನುಭವದಿಂದ ಗೊತ್ತಾಗಿದೆ. ಆದುದರಿಂದ ನಾವು ನಮ್ಮ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬಿದ್ದಿರುವ ಶಿಲಾಲಿಪಿಗಳನ್ನು ಮೊದಲು ರಕ್ಷಿಸಬೇಕು. ಮತ್ತು ಅವುಗಳ ಮುದ್ರಣವನ್ನು ತೆಗೆದು, ಇತಿಹಾಸ-ಮಂಡಲದಂಥ ಒಂದು ಸಂಸ್ಥೆಯಲ್ಲಿ ಸಂಗ್ರಹಿಸಿಟ್ಟರೆ, ಇಂದಿಲ್ಲ ನಾಳೆ ಯಾವ ಪುಣ್ಯಾತ್ಮನಾದರೂ ಅವುಗಳನ್ನು ಓದಿ ಸಾರವನ್ನು ತೆಗೆದಾನು. ಆದರೆ ಈ ವಿಷಯದಲ್ಲಿ ಇಲ್ಲಿಯವರೆಗೆ ಆದ ಕೆಲಸವನ್ನು ನಾವು ಮೊದಲು ಅರಿತುಕೊಳ್ಳದೆ ಕೆಲಸಕ್ಕೆ ಪ್ರವೃತ್ತರಾದರೆ ನಿಷ್ಕಾರಣವಾಗಿ ಶ್ರಮವೂ ವೆಚ್ಚವೂ ಬೆಳೆಯುವದು. ಆದಕಾರಣ ಮುದ್ರಣದ ರೀತಿಯನ್ನು ಹೇಳುವ ಪೂರ್ವದಲ್ಲಿ ಎಷ್ಟು ಶಿಲಾ ಲಿಪಿಗಳು ಮುದ್ರಿತವಾಗಿರುತ್ತವೆಂಬುದನ್ನು ಹೇಳುವೆವು. ನಮ್ಮ ಸುದೈವದಿಂದ ೧೯೦೫ನೆಯ ಇಸವಿಯವರೆಗೆ ಮುದ್ರಿತವಾದ ಶಿಲಾಲೇಖಗಳದೊಂದು ಸಂಪೂರ್ಣ ಪಟ್ಟಿಯನ್ನು ಪ್ರೊ. ಕಿಲಹಾರ್ನ್ ಎಂಬವರು ಎಪಿಗ್ರಾಫಿಯಾ ಇಂಡಿಕಾ (Epigraphia Indica) ಪತ್ರಿಕೆಯ ೭ನೆಯ ಸಂಪುಟದ ಕೊನೆಯಲ್ಲಿ ಕೊಟ್ಟಿರುತ್ತಾರೆ. ಇದರಲ್ಲಿ, ಸುಮಾರು ೧೦೦೦ ಶಾಸನಗಳ ಯಾದಿಯು ಇರುತ್ತದೆ. ಅವುಗಳಲ್ಲಿ ೨೧೦ ತಾಮ್ರಶಾಸನಗಳೂ ೮೯೦ ಶಿಲಾಶಾಸನಗಳೂ ಇರುತ್ತವೆ. (೩೨೦ ಕನ್ನಡ, ೨೯೦ ಸಂಸ್ಕೃತ, ೯೦ ಕನ್ನಡ-ಸಂಸ್ಕೃತಮಿಶ್ರ, ಮಿಕ್ಕವು ತೆಲುಗು ಮುಂತಾದವುಗಳು) ಮುಂದಿನ ಪಟ್ಟಿಯನ್ನು ಮಾತ್ರ ತಯಾರಿಸಬೇಕಾಗಿದೆ. ಇದಲ್ಲದೆ ಡಾ. ಫ್ಲೀಟ್ ಸಾಹೇಬರು ತೆಗೆದುಕೊಂಡ ೫೦೦-೬೦೦ ಮುದ್ರಣಗಳ ಸಂಗ್ರಹವು ಪುಣೆಯಲ್ಲಿ ಆರ್ಕಿಯಾಲಜಿಕಲ್ ಡಿಪಾರ್ಟಮೆಂಟಿನ ಒಂದು ಕೊಠಡಿಯಲ್ಲಿ ಬಿದ್ದಿರುವುದನ್ನು ನಾವು ಸ್ವತಃ ನೋಡಿದ್ದೇವೆ. ಅದರ ಪಟ್ಟಿಯು ಅಲ್ಲಿ ದೊರೆಯಲಿಲ್ಲ. ಆ ಪಟ್ಟಿಯೊಂದನ್ನು ಸಿದ್ಧಮಾಡಿದರೆ, ಯಾವ ಯಾವ ಶಿಲಾಲಿಪಿಗಳು ಮುದ್ರಿತವಾಗಿವೆಯೆಂಬುದನ್ನು ತಿಳಿದುಕೊಳ್ಳಲಿಕ್ಕೆ ಅನುಕೂಲವಾಗುವುದು. ಇಷ್ಟು ಮಾಹಿತಿಯು ದೊರೆಯಬೇಕಾದರೆ ನಮಗೆ ಪ್ರಯಾಸವಾದುದರಿಂದ ಮುಂದೆ ಮಾರ್ಗದರ್ಶಿಯಾಗಬೇಕೆಂದು ನಾವು ಈ ಮಾಹಿತಿಯನ್ನು ಇಲ್ಲಿ ನಮೂದಿಸಿ ಇಟ್ಟಿರುವೆವು.

ಲಿಪಿಗಳನ್ನು ಓದುವ ಕೆಲಸಕ್ಕೆ ಏನಾದರೂ ಹಂಚಿಕೆಯುಂಟೋ ಎಂಬ ಬಗ್ಗೆ ನಾವು ಬಹಳ ಶೋಧಿಸಿದ್ದೇವೆ. ಆದರೆ ಅದು ಕೇವಲ ಅಭ್ಯಾಸದಿಂದಲೇ ಸಾಧ್ಯವಾಗತಕ್ಕುದೆಂದು ಅನೇಕ ತಜ್ಞರ ಮತವುಂಟು. ಆದರೂ ತೀರ ಹಿಂದಿನ ಅಕ್ಷರಗಳ ಸರಣಿಯು ಹೇಗಿತ್ತೆಂಬುದು ಕೆಲಮಟ್ಟಿಗೆ ಮುಂದೆ ಕಾಣಿಸಿದ ಪುಸ್ತಕಗಳಿಂದ ಗೊತ್ತಾಗುವದು. (೧) (English Translation of Buhler's Indische Palaeographie and the tables called Tafels) (೨) ಭಾರತೀಯ ಪ್ರಾಚೀನ ಲಿಪಿಮಾಲಾ ಎಂಬ ಹಿಂದೀ ಪುಸ್ತಕದಲ್ಲಿ ಕನ್ನಡ ಅಕ್ಷರಗಳ ಅನೇಕ ಮಾದರಿಗಳು ಕೊಡಲ್ಪಟ್ಟಿವೆ.

ಮೇಲೆ ಹೇಳಿದ ಸೂಚನೆಗಳನ್ನು ಲಕ್ಷ್ಯದಲ್ಲಿಟ್ಟು ಮುಂದಿನ ರೀತಿಯಂತೆ ಮುದ್ರಣಗಳನ್ನು ತೆಗೆದುಕೊಳ್ಳಬೇಕು. ಈ ಕೆಲಸಕ್ಕೆ ಇಂಗ್ಲಿಷ್ ಜ್ಞಾನವು ಬೇಕೆಬೇಕೆಂತಲೂ ಇಲ್ಲ. ಈ ವಿಷಯದ ಕಡೆಗೆ ಕನ್ನಡ ಅಧ್ಯಾಪಕರ ಲಕ್ಷ್ಯವು ವೇಧಿಸಿದರೆ ನಮ್ಮ ಕಾರ್ಯವು ಸುಲಭವಾಗಿ ಆಗಬಹುದಾಗಿದೆ.

ಮುದ್ರಣದ ರೀತಿ

(೧) ಮೊದಲು, ಕಲ್ಲಿನಲ್ಲಿ ಕೂತಂಥ ಮಣ್ಣು, ಸುಣ್ಣ, ಎಣ್ಣೆ ಮುಂತಾದುವನ್ನು ಮೆಲ್ಲನೆ ಮೊಳೆಗಳಿಂದ ತೆಗೆದು ಕಲ್ಲನ್ನು ಚೆನ್ನಾಗಿ ತೊಳೆಯಬೇಕು. ಹೀಗೆ ಮಾಡುವಾಗ, ಅಕ್ಷರಗಳು ನಿಚ್ಚಳವಾಗಿ ಕಾಣಬೇಕೆಂದು ಯಾವ ಸಾಮಾನುಗಳನ್ನೂ ಕಲ್ಲಿಗೆ ಒತ್ತಿ ತಿಕ್ಕಬಾರದು. ಅಕ್ಷರಗಳು ನೆಟ್ಟಗೆ ಕಾಣಿಸಬೇಕೆಂದು ಕಲ್ಲಿಗೆ ಮಸಿಹಚ್ಚಿ ಕಪ್ಪು ಮಾಡಬಾರದು. ಇದರಿಂದ ಅಕ್ಷರಗಳು ತಿಳಿಯುವವೆಂದು ನಿಮಗೆ ಮೊದಲು ತೋರಿದರೂ ಅದು ಕಲ್ಲನ್ನು ಕೆಡಿಸಿಬಿಡುವುದಲ್ಲದೆ, ಮುಂದೆ, ನೋಡುವವರಿಗೂ ತೊಂದರೆಯುಂಟು.

(೨) ಪ್ರಥಮತಃ ವೃತ್ತಪತ್ರಿಕೆಗಳಿಗೆ ಬಳಸುವ ಉತ್ತಮ ತರದ ಕಾಗದವನ್ನು ತೆಗೆದುಕೊಂಡು ಅದನ್ನು ಕೆಲವು ನಿಮಿಷ ನೀರಿನಲ್ಲಿ ತೊಯಿಸಬೇಕು. ಹುರುಬರಕಾದ ಲಿಪಿಗಳಿಗೆ ದೇಶೀಯ ಕಾಗದಗಳನ್ನು ಬಳಸಬೇಕು. ಆ ಕಾಗದವನ್ನು ನೀರಿನಲ್ಲಿ ತೊಯಿಸಲೇಬೇಕು; ಫುಲಸ್ಕೇಪ್ ಕಾಗದಗಳು ಸಾಮಾನ್ಯವಾಗಿ ಎಲ್ಲತರದ ಲಿಪಿಕಲ್ಲುಗಳಿಗೂ ಉಪಯೋಗಕ್ಕೆ ಬರುತ್ತವೆ.

(೩) ಆ ತೊಯಿಸಿದ ಕಾಗದವನ್ನು, ಅತ್ತಿತ್ತ ಸರಿದಾಡದಂತೆ ಒಂದೇ ಸಮನಾಗಿ ಆ ಲಿಪಿಕಲ್ಲಿನ ಮೇಲೆ ಇಡಬೇಕು. ನಡುನಡುವೆ ಮಡಿಕೆ ಬೀಳಗೊಡಬಾರದು. ಆ ತೊಯಿಸಿದ ಕಾಗದವು ಆಗ ಕಲ್ಲಿಗೆ ಅಂಟಿಕೊಳ್ಳುವದು.

(೪) ಕೂಡಲೆ, ಬಿರುಸಾದ ಕುಂಚವನ್ನಾದರೂ ವಸ್ತ್ರವನ್ನಾದರೂ ತೆಗೆದುಕೊಂಡು, ಗಾಳಿಯಿಂದ ಹಾರದೆ ಕಾಗದವು ಕಲ್ಲಿಗೆ ಅಚ್ಚುಕಟ್ಟಾಗಿ ಹತ್ತಿಕೊಳ್ಳುವಂತೆ ಮೆಲ್ಲಗೆ ಜಾಣತನದಿಂದ ಒತ್ತಬೇಕು. ಆ ಕಾಗದವೆಲ್ಲ ಸಂದಿಗೊಂದಿ ಸಹ ಬಿಡದಂತೆ ಕಲ್ಲಿಗೆ ಸರಿಯಾಗುವಂತೆ ಹಗುರಾಗಿ ಒತ್ತುತ್ತಿರಬೇಕು. ಅಕ್ಷರಗಳು ಆಳವಾಗಿ ಕೊರೆಯಲ್ಪಟ್ಟಿದ್ದರೆ ಅಥವಾ ಮೇಲ್ಬದಿಯು ಡೊಂಕಾಗಿದ್ದರೆ ಕಾಗದಕ್ಕೆ ಅನೇಕ ಕಡೆಗೆ ರಂಧ್ರಗಳು ಬೀಳುವವು. ಹೀಗಾದ ಪಕ್ಷಕ್ಕೆ, ಆ ಕಾಗದದ ಮೇಲೆ ಮತ್ತೊಂದು, ಅದು ಹರಿಯಹತ್ತಿದರೆ ಮತ್ತೂ ಒಂದು ಕಾಗದವನ್ನು ಮೊದಲಿನಂತೆಯೇ ತೋಯಿಸಿ ಹಾಕಿ ಒತ್ತಬೇಕು.

(೫) ಒತ್ತುವ ಕ್ರಮವು ಮುಗಿದೊಡನೆಯೆ ಕಾಗದವನ್ನು ತೆಗೆಯಬಾರದು. ಒಣಗಿದ ಕೂಡಲೆ ಅದು ತನ್ನಷ್ಟಕ್ಕೆ ತಾನೇ ಕಳಚಿ ಬೀಳುವುದು. ಅದೆಲ್ಲ ಮುಗಿದ ನಂತರ ನಿಮ್ಮ ಕಾಗದವು ಮುದ್ರಿಸಿದಂತಾಗುವುದು. ಈ ಕಾಗದವು ಒಣಗಿರುವ ಕಾರಣ, ಅದು ಬಹು ಬಿರುಸಾಗಿದ್ದು ಎಷ್ಟು ಒತ್ತಿದರೂ ಹಾಗೇ ಇರುತ್ತದೆ. ಆಮೇಲೆ ಅದನ್ನು ಸುರುಳಿ ಸುತ್ತಿಟ್ಟು, ಅದು ಒದ್ದೆಯಾಗದಂತೆ ಎಚ್ಚರವಿಡಬೇಕು.

(೬) ಕಾಗದವು ಕಲ್ಲಿಗೆಲ್ಲ ಸಾಕಾಗುವಷ್ಟು ದೊಡ್ಡದಾಗಿರದಿದ್ದರೆ, ಮೇಲೆ ಹೇಳಿದ ರೀತಿಯಲ್ಲಿಯೇ ಕಲ್ಲುಗಳ ಒಂದೊಂದೇ ಭಾಗವನ್ನು ಅಳತೆ ಮಾಡಿ ತೆಗೆದುಕೊಳ್ಳಬೇಕು. ಆದರೆ ಈ ಮುದ್ರಣವಾದ ಕೂಡಲೆ ಆಯಾ ಕಾಗದಗಳಿಗೆ ನಂಬರುಗಳನ್ನು ಹಾಕಿ ಜೋಡಿಸಿ ಅದರ ಮೇಲೆ ಅದು ಇಂಥ ಗುಡಿಯಲ್ಲಿ ಇಂಥ ದಿಕ್ಕಿಗಿರುವ ಶಿಲಾಲೇಖವೆಂದು ಮುಂತಾಗಿ ಬರೆಯುವದಕ್ಕೆ ಮರೆಯಬಾರದು.

(೭) ಮಿಕ್ಕ ಯಂತ್ರಗಳ ಕೆಲಸದಂತೆ ಈ ಕೆಲಸವನ್ನು ಮಾಡಲಿಕ್ಕೂ ರೂಢಿಯು ಬೇಕಾಗುತ್ತದೆ. ಪ್ರತಿಯೊಂದರ ಮೂರು ನಾಲ್ಕು ಮುದ್ರಣಗಳನ್ನು ತೆಗೆದುಕೊಂಡರೆ ಅಕ್ಷರಗಳ ತಪ್ಪುಗಳನ್ನು ತಿಳಿಯಲಿಕ್ಕೂ, ಅವುಗಳನ್ನು ತಿದ್ದಲಿಕ್ಕೂ ಅನುಕೂಲವಾಗುವುದಾದುದರಿಂದ ಬೇರೆ ಬೇರೆ ಮೂರು ನಾಲ್ಕು ಪ್ರತಿಗಳನ್ನು ಮುದ್ರಿಸಿಕೊಳ್ಳುವುದು ಒಳ್ಳೆಯದು.

೨ನೆಯ ರೀತಿ: ಈ ರೀತಿಯೂ ಮೇಲಿನಂತೆಯೇ ಇದ್ದರೂ ಯೋಗ್ಯವಾದ ಮತ್ತು ಹದನಾದ ಉಪಕರಣಗಳೂ ಅನುಭವವೂ ಇದ್ದರೆ, ಇದರಲ್ಲಿ ಮುದ್ರೆಗಳು ಹೆಚ್ಚು ಸ್ಫುಟವಾಗಿ ಮೂಡುವವು. ಮೊದಲು ಮುದ್ರಕರ ರೋಲರ್ ಒಂದನ್ನು ತೆಗೆದುಕೊಂಡು ಅದಕ್ಕೆ ಮಸಿ ಹಚ್ಚಿ, ಕಲ್ಲು ಸ್ವಲ್ಪ ತಣ್ಣಗಿರುವಾಗಲೇ (ಆದರೆ ಒದ್ದೆಯಲ್ಲ) ಅದರ ಮೇಲೆ ಉರುಳಿಸಬೇಕು. ಚರ್ಮಸಹಿತವಾದ ಉಣ್ಣೆಯ ಕುಂಚದಿಂದ ಅದನ್ನು ಮೆಲ್ಲಗೆ ಒತ್ತಿದರೆ, ಮಸಿ ಹತ್ತದಿರುವಲ್ಲಿ ಮಸಿ ಹತ್ತುವುದು, ಮತ್ತು ಮಸಿ ಹೆಚ್ಚು ಹತ್ತಿದ ಸ್ಥಳವು ಬೆಳ್ಳಗಾಗುವುದು. ಇದರಿಂದ ಸೂಕ್ಷ್ಮಕೆಲಸವು ಬಹು ಸೊಗಸಾಗುವದು. ಆಮೇಲೆ ಪೂರ್ವದಂತೆ ಕಾಗದವನ್ನು ಕಲ್ಲಿನ ಮೇಲೆ ಒಣಗಲಿಕ್ಕೆ ಬಿಡಬೇಕು. ಮತ್ತು ಏನಾದೀತೋ ಎಂದು ಸಂಶಯ ತೆಗೆದುಕೊಳ್ಳದೆ ಸುರುಳಿಯಾಗಿ ಸುತ್ತಬೇಕು. ಇದಕ್ಕಾಗಿ ಬೇಕಾಗುವ ಮಸಿಗಾಗಿ ಪರ್ಶಿಯನ್ ಮಸಿಯನ್ನಾದರೂ ಕಾಡಿಗೆ ಅಂಟು ಮತ್ತು ನೀರಿನಿಂದ ಕೂಡಿದ ಮಸಿಯನ್ನಾದರೂ ಬಳಸಬಹುದು. ಹೆಚ್ಚು ಮಸಿಯನ್ನು ಹಾಕಿದರೆ ಮುದ್ರೆಯು ಕೆಡುವುದು. ಆದುದರಿಂದ ಸರಿಯಾಗಿ ಬೇಕಾದಷ್ಟು ಮಸಿಯನ್ನೇ ಹಾಕಬೇಕು. ಅದರಂತೆ `ರೂಲರ
ನ್ನು ಒತ್ತುವಾಗ ಅದನ್ನು ಒಂದೇ ಸಮನಾಗಿ ಉರುಳಿಸಬೇಕು. ಎಂದರೆ ಅಕ್ಷರಗಳ ಸಂದಿಯಲ್ಲಿ ಮಸಿಹೋಗದೆ ಅಕ್ಷರಗಳು ಬೆಳ್ಳಗೆ ಉಳಿಯುವವು. ಮಿಕ್ಕ ಕಡೆಗೆ ಮಸಿ ಹತ್ತುವುದು.

೩ನೆಯ ರೀತಿ: ಈ ರೀತಿಯು ಬಹಳ ಸುಲಭವಾಗಿರುತ್ತದೆ. ವಿಶೇಷ ಖರ್ಚೂ ಬೇಡ. ಇದು ಮೇಲಿನ ರೀತಿಯಂತೆಯೇ ಇರುತ್ತದೆ. ಲಿಪಿಗಳಿಗೆ ಒದ್ದೆಯ ಕಾಗದವನ್ನು ಅಂಟಿಸಿ, ಬಿರುಸಾದ ಕುಂಚಿನಿಂದ ಮೆಲ್ಲಗೆ ಅಕ್ಷರಗಳ ಮೇಲೆ ಬಡಿಯಬೇಕು. ಅಂದರೆ ಅಕ್ಷರಗಳ ಸಂದಿಯಲ್ಲಿ ಆ ಒದ್ದೆಯ ಕಾಗದವು ಹೋಗಿ ಕೂಡುವುದು. ಕೂಡಲೆ ಚರ್ಮದ ಪ್ಯಾಡ್ ಒಂದನ್ನು ತೆಗೆದುಕೊಂಡು ಅದಕ್ಕೆ ಎರಡನೆಯ ರೀತಿಯಲ್ಲಿ ಹೇಳಿದಂತೆ ತಯಾರು ಮಾಡಿದ ಕಾಡಿಗೆಯ ಮಸಿಯನ್ನು ಹಚ್ಚಿ, ಆ ಒದ್ದೆಯ ಕಾಗದದ ಮೇಲೆ ಬಡಿಯಬೇಕು. ಹಾಗೆ ಮಾಡಿದರೆ ಅಕ್ಷರಗಳ ಸಂದಿಯಲ್ಲಿ ಕುಳಿತ ಕಾಗದಕ್ಕೆ ಮಸಿಯು ಹತ್ತದೆ ಮಿಕ್ಕ ಕಡೆಗೆಲ್ಲ ಮಸಿ ಹತ್ತುವುದು. ಅಕ್ಷರಗಳು ಬೆಳ್ಳಗಾಗಿ ಕಾಣುವವು, ಕಾಡಿಗೆಯಲ್ಲಿ ಅಂಟು ಬಹಳ ಹಾಕಬಾರದು. ಕಾಡಿಗೆಯು ಹಾರಿ ಹೋಗಬಾರದೆಂದು ಸ್ವಲ್ಪ ಅಂಟು ಹಾಕಬೇಕಾಗುತ್ತದೆ. ರಬ್ಬರ ಸ್ಟಾಂಪು ಒತ್ತುವಂತೆ ಆ ಒದ್ದೆಯ ಕಾಗದದ ಮೇಲೆ ಮೆಲ್ಲಗೆ ಹಚ್ಚಬೇಕು.

ತಾಮ್ರಶಾಸನದ ಮುದ್ರಣ: ಮೊದಲು ತಾಮ್ರಪಟವನ್ನು ಸಬಕಾರ ಹಚ್ಚಿ ಚೆನ್ನಾಗಿ ತೊಳೆಯಬೇಕು. ಅದರಿಂದ ಸ್ವಚ್ಛವಾಗದಿದ್ದರೆ ನೈಟ್ರಿಕ್ ಆಸಿಡ್ನ ನೀರನ್ನು ಸ್ವಲ್ಪ ಹಾಕಬೇಕು. ಈ ನೀರನ್ನು ಹೆಚ್ಚು ಹಾಕಿದರೆ ಶಾಸನವು ಕೆಡುವ ಸಂಭವವಿದೆ. ಆ ಶಾಸನವು ಒಣಗಿದ ನಂತರ ಮುದ್ರಿಸುವ ಮಸಿಯನ್ನು ಕುಂಚಿನಿಂದ ಮೆಲ್ಲಗೆ ಬಳೆಯಬೇಕು. ಇದಕ್ಕಾಗಿಯೇ ಒಂದು ದೊಡ್ದ ಕುಂಚವನ್ನು ಮಾಡಿಸಬೇಕು. ಅಥವಾ ಒಂದು ಕಾಚಿನ ತುಣಕನ್ನು ತೆಗೆದುಕೊಂಡು, ಅದರ ಮೇಲೆ ಮಸಿಯನ್ನು ಹಾಕಿ, ಅದನ್ನೆಲ್ಲ ಅದಕ್ಕೆ ಚೆನ್ನಾಗಿ ಒಂದೂ ಕಡೆಗೆ ಬಿಡದಂತೆ ಹಚ್ಚಬೇಕು. ಡ್ರಾಯಿಂಗ್ ಪೇಪರದಂಥ ದಪ್ಪಾದ ಮೆತ್ತಗಿನ ಕಾಗದವೇ ಒಳ್ಳೆಯದು. ಕಾಗದವನ್ನು ತಾಮ್ರಪಟಕ್ಕಿಂತ ಹೆಚ್ಚು ದೊಡ್ಡದಾಗಿ ಕತ್ತರಿಸಿ, ಸ್ವಲ್ಪ ನೀರು ಸಿಂಪಡಿಸಿ, ಅದರ ಮೇಲ್ಭಾಗವನ್ನು ಶಾಸನದ ಮೇಲೆ ಹಾಕಿ, ಕಾಗದವನ್ನು ಹಿಮ್ಮಗ್ಗಲಿಗೆ ಮಡಿಚಬೇಕು. ಹೀಗೆ ಮಾಡಿದರೆ, ಆ ಶಾಸನವು ಅತ್ತಿತ್ತ ಅಲುಗಾಡುವುದಿಲ್ಲ. ಶಾಸನಕ್ಕೆ ಬಳೆಯಿದ್ದರೆ, ಆ ಕಾಗದದೊಳಗೆ ಬಳೆ ಹಾಯುವಂತಹದೊಂದು ರಂಧ್ರವನ್ನು ಮಾಡಬೇಕು. ಮೇಲ್ಭಾಗವನ್ನು ಬಿರುಸಾದ ಸ್ವಚ್ಛ ಕಾಗದದಿಂದ ಮೆಲ್ಲಗೆ ಒತ್ತಬೇಕು. ಒತ್ತದೆ ಇರುವ ಸ್ಥಳದಲ್ಲಿ ಒಂದು ಹಸಿ ಬಟ್ಟೆಯನ್ನು ಯಾವಾಗಲೂ ಮಡಿಚಿ ಇಡಬೇಕು. ಆಮೇಲೆ ಧಕ್ಕೆಯಾಗದಂತೆ ಕಾಗದವನ್ನು ತೆಗೆದು ಒಣಗಲಿಕ್ಕೆ ಇಡಬೇಕು. ಮುದ್ರೆಗಳು ಹಿಮ್ಮೈ ಆಗಿರುತ್ತವೆ. ಆದರೆ ಪೋಟೋ ತೆಗೆದುಕೊಂಡರೆ ಅವು ಮತ್ತೆ ಮುಮ್ಮೈ ಆಗುತ್ತವೆ. ಮಸಿಯ ಕಲೆಗಳು ಪೂರ್ಣವಾಗಿ ಹೋಗಬೇಕಾದರೆ ಟರ್ಪಂಟಾಯಿನನ್ನು ಸ್ವಲ್ಪ ಹಚ್ಚಿ, ಆಮೇಲೆ ಶಾಸನವನ್ನು ಸಬಕಾರದಿಂದ ತೊಳೆಯಬೇಕು. ಹಾಗೆ ಮಾಡಿದರೆ ಅದು ಸ್ವಚ್ಛವಾಗುವುದು.

ಮೇಲೆ ಹೇಳಿದ ರೀತಿಗಳಲ್ಲದೆ ಮಿಕ್ಕ ರೀತಿಗಳುಂಟು. ಆದರೆ ಅವಕ್ಕೆ ಬಹಳ ವೆಚ್ಚ ತಗಲುವದರಿಂದ ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಆದರೆ, ತಾಮ್ರಶಾಸನವನ್ನು ಆರ್ಕಿಯಾಲಾಜಿಕಲ್ ಖಾತೆಯವರ ಕಡೆಗೆ ಕಳಿಸುವದೇ ಒಳ್ಳೆಯದು. ಅವರು ಅದರ ತಸಬೀರು ತೆಗೆದುಕೊಂಡು ತಿರುಗಿ ಕಳಿಸುವರು.


class="center_bold">

ಕಲ್ಯಾಣ ಚಾಲುಕ್ಯರ ವಂಶಾವಳಿ (ಸುಧಾರಿಸಿದ್ದು)

ಅನುಬಂಧ

ಪರಿಷ್ಕೃತ ಜ್ಞಾನ ಸಾಮಗ್ರಿ

ಕರ್ನಾಟಕದಲ್ಲಿ ಇತಿಹಾಸ ಸಂಶೋಧನೆಯ ಪ್ರಗತಿ


ಶ್ರೀ ಆಲೂರ ವೆಂಕಟರಾಯರ "ಕರ್ನಾಟಕ ಗತವೈಭವ" ಹತ್ತನೆಯ ಆವೃತ್ತಿಯನ್ನು ಹೊಂದಿದೆಯೆಂದಾಗ, ಅದರ ಜನಪ್ರಿಯತೆಗೆ ಬೇರೆ ಸಾಕ್ಷಿ ಬೇಕಿಲ್ಲ. ಓದುಗರು ಬಲ್ಲಂತೆ ಈ ಗ್ರಂಥ ಬರಿ ಹಿಂದಿನ ಆಗುಹೋಗುಗಳನ್ನು ವಿವರಿಸುವಂಥದಲ್ಲ. ಕೆಚ್ಚಿನ ಭಾಷೆಯಿಂದ ಕನ್ನಡಿಗರ ಅಭಿಮಾನವನ್ನು ಬಡಿದೆಬ್ಬಿಸಿ, ಹಿಂದಿನ ವೈಭವದ ಬೆಳಕಿನಲ್ಲಿ ಮುನ್ನುಗ್ಗಲು ಪ್ರೇರೇಪಿಸುವ ಗ್ರಂಥ. ಇಂಥ ಗ್ರಂಥವನ್ನು ಪರಿಷ್ಕರಿಸುವದು ಸಾಹಸವೇ. ಆದರೂ ಇದರ ಉಪಯುಕ್ತತೆ ಹೆಚ್ಚಾಗಲೆಂಬ ಅಪೇಕ್ಷೆಯಿಂದ ಇದು ಪ್ರಕಟವಾದಂದಿನಿಂದ ಕಳೆದ ೫೦ ವರ್ಷಗಳಲ್ಲಿ-ಕನ್ನಡ ಸಂಶೋಧನೆಯಲ್ಲಿ ಆದ ಪ್ರಗತಿಯನ್ನು ಈ ಗ್ರಂಥಕ್ಕೆ ಪೂರಕವಾಗಿ, ಸ್ಥೂಲವಾಗಿ ವಿವರಿಸಲಾಗಿದೆ.

ಪ್ರಸ್ತುತ ಗ್ರಂಥದ ೫ನೆಯ ಪ್ರಕರಣದಲ್ಲಿ ಶ್ರೀಯುತರು ಇತಿಹಾಸ ರಚನೆಯ ಸಾಧನ ಸಾಮಗ್ರಿಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ. ಮತ್ತು ಈ ಸಾಧನ ಸಾಮಗ್ರಿಗಳ ಸಂಶೋಧನೆಯಲ್ಲಿ ನಡೆದ ಕೆಲಸದ ಬಗ್ಗೆ "ಕರ್ನಾಟಕ_ಇತಿಹಾಸ_ಸಂಶೋಧನ" ಎಂಬ ಪೂರಕ ಪ್ರಕರಣದಲ್ಲಿ ವಿವೇಚಿಸಿದ್ದಾರೆ. ಅಲ್ಲಿಂದಾಚೆ ಈ ಕ್ಷೇತ್ರದಲ್ಲಿ ಗಮನಾರ್ಹವಾದ ಪ್ರಗತಿಯಾಗಿದೆ. ಅದನ್ನಿಲ್ಲಿ ಅವಲೋಕಿಸಲಾಗಿದೆ.

ಭೂ-ಶೋಧನೆ

ಇತಿಹಾಸ ಪೂರ್ವಕಾಲದ ಜನಜೀವನದ ಬಗ್ಗೆ ತಿಳಿವಳಿಕೆಯನ್ನುಂಟುಮಾಡಿಕೊಡುವಲ್ಲಿ, ಭೂಶೋಧನೆ ಅಂದರೆ ಭೂಮಿಯನ್ನಗೆದು (Excavation) ಅಲ್ಲಿ ದೊರೆತ ಸಾಮಗ್ರಿಗಳನ್ನು ಪರಿಶೀಲಿಸುವದು ಮುಖ್ಯವಾದ ಸಾಧನ. ಹರಪ್ಪಾ, ಮೊಹೊಂಜೋದಾರೋಗಳಲ್ಲಿ ಅಗೆತದಿಂದ ಹೊಸದೊಂದು ಸಂಸ್ಕೃತಿಯು ಬೆಳಕಿಗೆ ಬಂದದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕರ್ನಾಟಕದಲ್ಲಿ ಈ ರೀತಿಯ ದೊಡ್ಡ ಪ್ರಮಾಣದ ಭೂ-ಶೋಧನೆ ನಡೆದಿಲ್ಲವೇನೋ ಸರಿಯೇ. ಆದರೂ ಕೆಲವೆಡೆಗಳಲ್ಲಿ ನಡೆಯಿಸಿದ ಉತ್ಖನನದಿಂದ ಕ್ರಿ. ಪೂ. ೨ಸಾವಿರ ವರ್ಷಗಳ ಹಿಂದಿನ ಮಾನವನ ಜೀವನದ ಬಗ್ಗೆ ಹೊಸ ವಿಷಯಗಳು ತಿಳಿದು ಬಂದಿವೆ. ಇಂಥ ಕೆಲವು ಉತ್ಖನನಗಳನ್ನು ಇಲ್ಲಿ ಹೆಸರಿಸಬಹುದು. ಮೈಸೂರು ಪುರಾತತ್ವ ಶಾಖೆಯು ನಡೆಸಿದ ಟಿ. ನರಸೀಪುರದ ಬಳಿಯ ಉತ್ಖನನ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆ ಮತ್ತು ಪುಣೆಯ ಡೆಕ್ಕನ್ ಕಾಲೇಜ್ ಸಂಶೋಧನ ಸಂಸ್ಥೆ ಇವುಗಳು ಕೂಡಿ ನಡೆಯಿಸಿದ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟ, ಸಂಗನ ಕಲ್ಲುಗಳಲ್ಲಿಯ ಉತ್ಖನನ, ಮತ್ತು ಇದೇ ಕನ್ನಡ ಸಂಶೋಧನ ಸಂಸ್ಥೆಯು ನಡೆಯಿಸಿದ ಹಿರೇಕೆರೂರ ತಾಲೂಕಿನಲ್ಲಿಯ ಹಳ್ಳೂರ ಬಳಿಯ ಉತ್ಖನನ, ತೀರ ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಗ್ರಾಮದ ಬಳಿಯಲ್ಲಿ ಐತಿಹಾಸಿಕ ದೃಷ್ಟಿಯಿಂದ ಮಹತ್ವವಿರುವ ಸ್ಥಾನವನ್ನು ಕಂಡುಹಿಡಿಯಲಾಗಿದೆ. ಬೌದ್ಧಧರ್ಮದ ನೆಲೆಯಾಗಿದ್ದ ಈ ಸ್ಥಳದಲ್ಲಿ ದೊರೆತ ಕ್ರಿ. ಶ. ೧-೨ನೆಯ ಶತಮಾನದ ಶಾಸನಗಳು, ದೊಡ್ಡಗಾತ್ರದ ಇಟ್ಟಗಿಗಳು, ಮಡಕೆಯ ಚೂರುಗಳು ಮುಂತಾದವುಗಳ ಪರಿಶೀಲನೆಯಿಂದ ಇಲ್ಲಿ ಉತ್ಖನನವನ್ನು ನಡೆಯಿಸಿದಾಗ, ಮಹತ್ವಪೂರ್ಣವಾದ ಅಂಶಗಳು ಬೆಳಕಿಗೆ ಬರುತ್ತವೆಯೆಂಬುದು ಸ್ಪಷ್ಟವಾಗುತ್ತದೆ.

ಶಾಸನಗಳ ಶೋಧನೆ, ಸಂಗ್ರಹ

ನಾಡಿನ ಇತಿಹಾಸ ರಚನೆಗೆ ಶಾಸನಗಳ ಮಹತ್ವ ಎಷ್ಟೆಂಬುದನ್ನು ಬೇರೆ ಹೇಳಬೇಕಾಗಿಲ್ಲ. ಹಾಗೆ ನೋಡಿದರೆ, ನಮ್ಮ ಇತಿಹಾಸದ ಕಟ್ಟಡ ನಿಲ್ಲುವದು ಶಾಸನಗಳ ಅಡಿಪಾಯದ ಮೇಲೆಯೇ ಎಂದು ಹೇಳಬಹುದು. ಈ ಕ್ಷೇತ್ರದಲ್ಲಿ ಅಂದರೆ ಶಾಸನಗಳ ಶೋಧನೆ ಮತ್ತು ಸಂಗ್ರಹಗಳ ಕಾರ್ಯದಲ್ಲಿ ಬಹಳಷ್ಟು ಪ್ರಗತಿಯಾಗಿದೆಯೆಂದು ಹೇಳಲಡ್ಡಿಯಿಲ್ಲ.

ಭಾರತದಲ್ಲಿ ಶಾಸನಗಳ ಸಂಗ್ರಹ ಮತ್ತು ಅಭ್ಯಾಸದ ಕಾರ್ಯವು ೧೯ ನೇ ಶತಮಾನದ ಕೊನೆಯ ಭಾಗದಿಂದಲೇ ಆರಂಭವಾಯಿತು. ಕನ್ನಡ ನಾಡಿನ ಶಾಸನಗಳ ವಿಷಯವಾಗಿಯೂ ಇದೇ ಮಾತನ್ನು ಹೇಳಬಹುದು. ಈ ಕಾಲಕ್ಕೆ ಅಂದಿನ ಮೈಸೂರು ಸಂಸ್ಥಾನದಲ್ಲಿ ಪುರಾತತ್ವ ವಿಭಾಗದ ಮುಖ್ಯಾಧಿಕಾರಿಗಳಾದ ಲುಯಿ ರೈಸರು ಈ ಬೃಹತ್ ಕಾರ್ಯವನ್ನು ಕೈಕೊಂಡರು. ಅಲ್ಲಿಯ ಎಲ್ಲ ಜಿಲ್ಲೆಗಳಲ್ಲಿಯ ಶಾಸನಗಳನ್ನು ಸಂಗ್ರಹಿಸಿ. ಅವುಗಳನ್ನು ಕನ್ನಡ ಮತ್ತು ರೋಮನ್ ಲಿಪಿಗಳಲ್ಲಿ ಪೂರ್ತಿಪಾಠ ಮತ್ತು ಇಂಗ್ಲಿಷ್ ಭಾಷಾಂತರಗಳೊಂದಿಗೆ ೧೨ ಸಂಪುಟಗಳಲ್ಲಿ (Epigraphia Carnatica) ಪ್ರಕಟಿಸಿದರು. ಕನ್ನಡ ನಾಡಿನ ಇತಿಹಾಸದ ಅಭ್ಯಾಸಿಗಳಿಗೆ ಇದೊಂದು ಅಮೂಲ್ಯ ನಿಧಿಯಾಗಿದೆಯೆಂಬುದು ಎಲ್ಲರಿಗೂ ತಿಳಿದ ವಿಷಯವೇ. ತದನಂತರ ಇದೇ ಮಾಲಿಕೆಯಲ್ಲಿ ಇನ್ನೂ ಎರಡು ಸಂಪುಟಗಳು ಹೊರಬಂದವು. ಈಗ ಕೆಲವು ವರ್ಷಗಳ ಹಿಂದೆ ಮತ್ತೊಂದು ಸಂಪುಟವು ಪ್ರಕಟವಾಯಿತು. ಇವೆಲ್ಲ ಸಂಪುಟಗಳ ಮೂಲಕ ಬೆಳಕು ಕಂಡ ಒಟ್ಟು ಶಾಸನಗಳ ಸಂಖ್ಯೆ ೯,೦೦೦ ಕ್ಕೂ ಮೇಲ್ಪಟ್ಟು.

ಇದೇ ಕಾಲಕ್ಕೆ ಉತ್ತರ ಕರ್ನಾಟಕದಲ್ಲಿಯ ಶಾಸನಗಳ ಸಂಗ್ರಹ ಕಾರ್ಯ ನಡೆಯಿತು. ಆದರೆ ಈ ಪ್ರಯತ್ನವು ಮೈಸೂರಿನಲ್ಲಿಯಂತೆ ಸುಸಂಘಟಿತವಾಗಿರದೆ ಹೆಚ್ಚು ಕಡಿಮೆ ವೈಯಕ್ತಿಕವಾಗಿದ್ದಿತು. ಡಾ. ಫ್ಲೀಟರು, ತಮ್ಮ "ಕನ್ನಡ ಜಿಲ್ಲೆಗಳ ಅರಸು ಮನೆತನಗಳು" (Dynasties of Kanarese Districts) ಎಂಬ ಗ್ರಂಥಕ್ಕೋಸುಗ ಉತ್ತರ ಕರ್ನಾಟಕ ಮತ್ತು ಹೈದರಾಬಾದದ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸಿ, ಅನೇಕ ಶಾಸನಗಳನ್ನು ಸಂಗ್ರಹಿಸಿ, ಅವುಗಳ ಆಧಾರದಿಂದಲೇ ತಮ್ಮ ಗ್ರಂಥವನ್ನು ರಚಿಸಿದರು. ಈ ಎಲ್ಲ ಶಾಸನಗಳು (Sanskrit, Prakrit and Old Canarese Inscriptions) ಎಂಬ ಸಂಪುಟದಲ್ಲಿ ಮುದ್ರಿತವಾಗಿದ್ದು, ಆ ಸಂಪುಟವೀಗ ಉಪಲಬ್ಧವಿಲ್ಲದಾಗಿದೆ.

ಮೈಸೂರಿನಲ್ಲಿಯಂತೆ ಉತ್ತರ ಕರ್ನಾಟಕದಲ್ಲಿಯೂ ಇಂಥ ಕಾರ್ಯ ನಡೆಯುವದು ಅಗತ್ಯವಿದ್ದಿತು. ಇದನ್ನು ಮನಗಂಡು ಅಂದಿನ ಇತಿಹಾಸತಜ್ಞರೂ ಅಭಿಮಾನಿಗಳೂ ಆದ ಆಲೂರ ವೆಂಕಟರಾಯರು ಮೊದಲಾದ ಮುಖಂಡರು ಈ ದಿಶೆಯಲ್ಲಿ ಸತತ ಪ್ರಯತ್ನ ನಡೆಸಿದರು. ಇವರ ಪ್ರಯತ್ನದ ಫಲವಾಗಿ ಕೇಂದ್ರ ಸರಕಾರದ ಪುರಾತತ್ವ ವಿಭಾಗದ ಶಾಸನಶಾಖೆಯವರು ಇಲ್ಲಿಯ ಪ್ರತಿಯೊಂದು ತಾಲೂಕಿನ ಪ್ರತಿಯೊಂದು ಹಳ್ಳಿಗೆ ಹೋಗಿ ಅಲ್ಲಿಯ ಶಾಸನಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೈಕೊಂಡರು. ಈ ಕಾರ್ಯವು ೧೯೨೬ ರಷ್ಟು ಹಿಂದೆಯೇ ಆರಂಭವಾದರೂ ಇಂದಿಗೂ ಅರ್ಧದಷ್ಟು ಮಾತ್ರ ಪೂರೈಸಿದೆ. ದೇಶವು ಸ್ವತಂತ್ರವಾಗಿ ಹಿಂದಿನ ಹೈದರಾಬಾದವು ವಿಲೀನಗೊಂಡಾಗ, ಕೇಂದ್ರ ಶಾಸನ ಶಾಖೆಯು ಅಲ್ಲಿಗೂ ತನ್ನ ಕಾರ್ಯವ್ಯಾಪ್ತಿಯನ್ನು ಬೆಳೆಸಿತು. ಪರಿಣಾಮವಾಗಿ ರಾಯಚೂರ ಜಿಲ್ಲೆಯ ಲಿಂಗಸುಗೂರು, ಮಾನ್ವಿ ತಾಲೂಕುಗಳಲ್ಲಿಯ ಶಾಸನಗಳೆಲ್ಲ ಇಂದು ಸಂಗ್ರಹಿತವಾಗಿವೆ. ಕೇಂದ್ರ ಶಾಸನ ಶಾಖೆಯವರಿಂದ ಇಲ್ಲಿಯವರೆಗೆ ಸಂಗ್ರಹಿಸಲ್ಪಟ್ಟ ಕನ್ನಡ ಶಾಸನಗಳ ಸಂಖ್ಯೆ ಸುಮಾರು ೭,೦೦೦.

ಇದಿಷ್ಟು ಕೇಂದ್ರ ಸರಕಾರದವರಿಂದ ನಡೆದ ಕಾರ್ಯವಾದರೆ, ಪ್ರಾದೇಶಿಕ ಸರಕಾರಗಳೂ ಈ ದಿಶೆಯಲ್ಲಿ ಕೆಲಸ ಮಾಡಿದವು. ರೈಸರ ನಂತರ ಅಂದಿನ ಮೈಸೂರು ಸರಕಾರದ ಪುರಾತತ್ವ ವಿಭಾಗವು ಶಾಸನಗಳ ಸಂಗ್ರಹ ಕಾರ್ಯವನ್ನು ಅಲ್ಪ ಸ್ವಲ್ಪವಾಗಿ ಮುಂದುವರಿಸಿತು. ಕರ್ನಾಟಕದ ಭಾಷೆ ಸಾಹಿತ್ಯಗಳ ಸಂಶೋಧನೆಯನ್ನು ನಡೆಸಲು ಈ ಭಾಗದಲ್ಲಿ ಸಂಸ್ಥೆಯೊಂದು ಅಗತ್ಯವೆಂಬುದನ್ನು ಮನಗಂಡು, ಅಂದಿನ ಮುಂಬಯಿ ಸರಕಾರದವರು ೧೯೩೯ ರಲ್ಲಿ ಕನ್ನಡ ಸಂಶೋಧನ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಿದರು. ಅಂದಿನಿಂದ ಈ ಸಂಸ್ಥೆಯು ಶಾಸನಸಂಗ್ರಹ ಕಾರ್ಯವನ್ನು ನಡೆಸಿದೆ. ಇಲ್ಲಿಯವರೆಗೆ ಈ ಸಂಸ್ಥೆಯಲ್ಲಿ ಸುಮಾರು ಎರಡು ಸಾವಿರದಷ್ಟು ಶಾಸನಗಳು ಸಂಗ್ರಹಿಸಲ್ಪಟ್ಟಿವೆ.

ಇಂಥ ಸಂಸ್ಥೆಗಳಷ್ಟೇ ಅಲ್ಲದೆ, ಕೆಲವು ವಿದ್ವಾಂಸರು ಇತಿಹಾಸ ಸಂಶೋಧನೆಯಲ್ಲಿ ಆಸ್ಥೆಯಿಂದ, ವೈಯಕ್ತಿಕ ಪ್ರಯತ್ನದಿಂದ ಶಾಸನಗಳ ಶೋಧನ ಮತ್ತು ಪ್ರಕಾಶನ ಕಾರ್ಯಗಳನ್ನು ಕೈಕೊಂಡಿದ್ದಾರೆ. ಇಂಥವರಲ್ಲಿ ದಿ. ನಾ. ಶ್ರೀ. ರಾಜಪುರೋಹಿತರು, ಪ್ರೊ. ಕುಂದಣಗಾರರು, ಡಾ. ನಂದೀಮಠ, ಡಾ. ಪಾಂಡುರಂಗರಾವ ದೇಸಾಯಿ ಇವರನ್ನು ಉಲ್ಲೇಖಿಸಬಹುದು. ಡಾ. ಪಾಂಡರಂಗರಾಯರು ಹಿಂದೆ ಕೇಂದ್ರ ಶಾಸನ ಶಾಖೆಗೆ ಮತ್ತು ಸದ್ಯ ಕನ್ನಡ ಸಂಶೋಧನ ಸಂಸ್ಥೆಗೆ ಸಂಬಂಧಿಸಿದವರಾದರೂ ಅದಕ್ಕೂ ಹಿಂದೆಯೇ ಸ್ವಯಂ ಪ್ರೇರಣೆಯಿಂದ ಅನೇಕ ಶಾಸನಗಳನ್ನು ಶೋಧಿಸಿ ಪ್ರಕಟಿಸಿದ್ದಾರೆ.

ಈ ಎಲ್ಲ ಪ್ರಯತ್ನಗಳಿಂದ ಇಂದು ಆಯಾ ಭಾಗಗಳಲ್ಲಿ ಶೇಖರಿಸಲಾದ ಶಾಸನಗಳ ಸಂಖ್ಯೆ, ಹಳೆಯ ಮೈಸೂರು ಸಂಸ್ಥಾನದಲ್ಲಿಯವನ್ನು ಹಿಡಿದು ಒಟ್ಟು ಸುಮಾರು ೧೮,೦೦೦ ಆಗುವದು. ಇವೆಲ್ಲ ಶಾಸನಗಳು ನಮ್ಮ ನಾಡಿನ ಇತಿಹಾಸದ ಅಮೂಲ್ಯ ನಿಧಿಯಾಗಿವೆ. ಹೀಗೆ ಬಹುಸಂಖ್ಯೆಯಲ್ಲಿ ಶಾಸನಗಳು ದೊರೆತದ್ದರಿಂದಲೇ ಬೇರೆ ಬೇರೆ ರಾಜಮನೆತನಗಳ ಚರಿತ್ರೆಯನ್ನು ರಚಿಸುವದು ಸಾಧ್ಯವಾಗಿದೆ. ಉದಾಹರಣೆಗೆ ಹೊಯ್ಸಳ ವಂಶದ ಚರಿತ್ರೆಯನ್ನು ಬರೆಯುವದು ರೈಸರ (Epigraphia Carnatica) ದಲ್ಲಿಯ ಶಾಸನಗಳ ಆಧಾರದಿಂದಲೇ ಸಾಧ್ಯವಾಗಿದೆ. ಅದೇ ರೀತಿಯಾಗಿ ಕರ್ನಾಟಕದಲ್ಲಿ ಹೆಸರಾಂತ ಚಾಲುಕ್ಯ ಮನೆತನದ ಚರಿತ್ರೆ ದೊರೆಯುವದೂ ನಮಗೆ ಈವರೆಗೆ ದೊರೆತ ಶಾಸನಗಳಿಂದಲೇ ಎಂದು ಹೇಳಬಹುದು. ಕರ್ನಾಟಕ, ಮಹಾರಾಷ್ಟ್ರಗಳೆರಡರಲ್ಲಿಯೂ ತಮ್ಮ ರಾಜ್ಯವನ್ನು ವಿಸ್ತರಿಸಿದ ಯಾದವ ಅಥವಾ ಸೇವುಣ ವಂಶದ ಬಗ್ಗೆ ವಿವರಗಳು, ಅವರ ನಾಡು, ನುಡಿ, ಹುಟ್ಟು ಮುಂತಾದವುಗಳ ಬಗೆಗೆ ಸ್ಪಷ್ಟವಾದ ಸಂಗತಿಗಳು ಇತ್ತೀಚೆಗೆ ದೊರೆತ ಅನೇಕ ಶಾಸನಗಳಿಂದಲೇ ಉಪಲಬ್ಧವಾಗಿವೆ. ಈ ವರೆಗೆ ತಿಳಿದ ವಿಷಯಗಳ ಮೇಲೆ ಹೆಚ್ಚು ಬೆಳಕು ಬೀರುವ ಶಾಸನಗಳು ಕೆಲವಾದರೆ, ಇನ್ನೂ ಕೆಲವು ಹೊಸ-ವಿಷಯಗಳನ್ನು ಹೊರಗೆಡಹುತ್ತವೆ. ಗೋವೆಯ ಭಾಗದಲ್ಲಿ ೬-೭ ಶತಮಾನಗಳಲ್ಲಿ ಮೌರ್ಯ ಮತ್ತು ಭೋಜ ಮನೆತನಗಳು ಆಳುತ್ತಿದ್ದುದು, ಕೊಂಕಣ ಮತ್ತು ಕರಾಡಗಳ ಶಿಲಾಹಾರರಲ್ಲದೆ ಅದೇ ಮನೆತನದ ಇನ್ನೂ ಕೆಲವು ಶಾಖೆಗಳು ರಾಯಚೂರು, ಬೀದರ ಜಿಲ್ಲೆಗಳಲ್ಲಿ ಕದಂಬರ ಮನೆತನದ ಶಾಖೆಗಳು ಅಧಿಕಾರದಲ್ಲಿದ್ದುದು, ಕನ್ನಡ ಸಂಸ್ಕೃತಗಳಲ್ಲಿ ಶಾಸನಗಬ್ಬಗಳನ್ನು ರಚಿಸಿದ ಕವಿಗಳ ವಿಷಯಗಳು, ಇತ್ಯಾದಿಯಾಗಿ ಅನೇಕ ಮಹತ್ವದ ವಿಷಯಗಳು ನಮಗೆ ಇತ್ತೀಚೆಗೆ ದೊರೆತ ಶಾಸನಗಳಿಂದ ತಿಳಿದು ಬಂದಿವೆ.

ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಗೋದಾವರಿ ತೀರದ ನಾಂದೇಡ ಜಿಲ್ಲೆಯಲ್ಲಿ ಅನೇಕ ಕನ್ನಡ ಶಾಸನಗಳು ದೊರೆತದ್ದು ಪ್ರಾಚೀನ ಕರ್ನಾಟಕದ ವಿಸ್ತಾರವನ್ನು ಸೂಚಿಸುವ ಮಹತ್ವದ ಶಾಸನಗಳಾಗಿವೆ. ಈ ಪುಸ್ತಕದ ೩ನೆಯ ಪ್ರಕರಣದಲ್ಲಿ ವೆಂಕಟರಾಯರು ಈ ಬಗ್ಗೆ ವಿವೇಚಿಸುತ್ತ ಮಹಾರಾಷ್ಟ್ರದಲ್ಲಿಯ ಅನೇಕ ಕನ್ನಡದ ಕುರುಹುಗಳನ್ನು ವಿವರಿಸಿದ್ದಾರೆ. ಅವುಗಳಿಗೆ ಈ ಶಾಸನಗಳನ್ನು ಸೇರಿಸಬಹುದು. ಗೋದಾವರಿ ಪರಿಸರದಲ್ಲಿ ದೊರೆತ ಈ ಶಾಸನಗಳು ಕನ್ನಡನಾಡಿನ ವಿಸ್ತಾರದ ಬಗ್ಗೆ ಪ್ರಬಲ ಆಧಾರಗಳಾಗಿದ್ದು ಅದು ಗೋದಾವರಿಯವರೆಗೆ ಹಬ್ಬಿತ್ತೆಂಬ ನೃಪತುಂಗನ ಹೇಳಿಕೆಯನ್ನು ದೃಢಪಡಿಸುತ್ತವೆ.

ಶಾಸನ ಪ್ರಕಾಶನ

ಹೀಗೆ ಸಂಗ್ರಹಿತವಾದ ಶಾಸನಗಳಲ್ಲಿ ಅರ್ಧದಷ್ಟು ಮಾತ್ರ ಪ್ರಕಟವಾಗಿವೆ. ರೈಸರು ಶೇಖರಿಸಿದ ೯,೦೦೦ ಕ್ಕೂ ಮೇಲ್ಪಟ್ಟ ಶಾಸನಗಳನ್ನು ಅವರು ೧೨ ಸಂಪುಟಗಳಲ್ಲಿ ಪ್ರಕಟಿಸಿದ ವಿಷಯವನ್ನು ಈಗಾಗಲೇ ತಿಳಿಸಿದೆ, ತದನಂತರ ಅದೇ ಮಾಲಿಕೆಯಲ್ಲಿ ಇನ್ನೂ ಮೂರು ಸಂಪುಟಗಳು ಪ್ರಕಟವಾದವು. ಕೇಂದ್ರ ಸರಕಾರದ ಶಾಸನ ಶಾಖೆಯಲ್ಲಿ ಸಂಗ್ರಹಿಸಲ್ಪಟ್ಟ ಶಾಸನಗಳ ಸಾರಾಂಶಗಳು ಆಯಾ ವರ್ಷಗಳ ವಾರ್ಷಿಕ ವರದಿಗಳಲ್ಲಿ ಕೊಡಲ್ಪಟ್ಟಿದ್ದರೂ ಸುಮಾರು ೧೫೦೦ ಶಾಸನಗಳ ಪೂರ್ತಿ ಪಾಠ ಮಾತ್ರ ಪ್ರಕಾಶಿತವಾಗಿವೆ. ಇವುಗಳಲ್ಲಿ ಸುಮಾರು ೧೦೦೦ ಮುಂಬಯಿ ಕರ್ನಾಟಕ ಅಂದರೆ ಈಗಿನ ಉತ್ತರ ಕರ್ನಾಟಕದ ಭಾಗದವುಗಳಾದರೆ ಉಳಿದವು ಬಳ್ಳಾರಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮದ್ರಾಸ, ಆಂಧ್ರ ಪ್ರಾಂತದವು. ಮುಂಬಯಿ ಕರ್ನಾಟಕದ ಸುಮಾರು ೪೦೦ ಶಾಸನಗಳನ್ನೊಳಗೊಂಡ ಸಂಪುಟ ಅಚ್ಚಿನಲ್ಲಿದ್ದು ಅವು ಶೀಘ್ರದಲ್ಲಿಯೇ ವಿದ್ವಾಂಸರ ಕೈಸೇರಲಿದೆ. ಕನ್ನಡ ಸಂಶೋಧನ ಸಂಸ್ಥೆಯಲ್ಲಿಯ ಶಾಸನಗಳಲ್ಲಿ ಸುಮಾರು ೬೮೦ ಶಾಸನಗಳ ಸಾರಾಂಶಗಳು ಪ್ರಕಟವಾಗಿವೆ. ಇಲ್ಲಿಯವರೆಗೆ ನಾಲ್ಕು ಸಂಪುಟಗಳಲ್ಲಿ ೧೮೩ ಶಾಸನಗಳ ಪೂರ್ತಿ ಪಾಠಗಳು ಒದಗಿಸಲ್ಪಟ್ಟಿವೆ. ಇನ್ನುಳಿದ ಶಾಸನಗಳ ಪೂರ್ತಿ ಪಾಠಗಳನ್ನೂ ಟಿಪ್ಪಣಿಗಳೊಂದಿಗೆ ಪ್ರಕಟಿಸುವ ಸಿದ್ಧತೆ ನಡೆದಿದೆ.

ಗ್ರಂಥರೂಪವಾಗಿ ಶಾಸನಗಳನ್ನು ಪ್ರಕಟಿಸಿದ ವ್ಯಕ್ತಿಗತ ವಿದ್ವಾಂಸರಲ್ಲಿ ಕುಂದಣಗಾರರು ೧೯೩೯ರಲ್ಲಿ "Inscriptions in Northern Karnataka and Kolhapur State" ಎಂಬ ಹೆಸರಿನಿಂದ ಶಾಸನಗಳನ್ನು ಬೆಳಕಿಗೆ ತಂದರು. ಡಾ. ಪಾಂಡುರಂಗರಾವ ದೇಸಾಯಿಯವರು "ಶಾಸನ ಪರಿಚಯ" "A Corpus of Inscriptions of Kannada Districts in Hyderabad State' `Kannada Inscriptions from Andhra Pradesh" ಮತ್ತು "Select Inscriptions", ಎಂಬ ಗ್ರಂಥಗಳ ಮೂಲಕ ಬಹಳಷ್ತು ಶಾಸನಗಳ ಪಾಠಗಳನ್ನೊದಗಿಸಿದ್ದಾರೆ. ಮತ್ತು ಇವರ Jainism in Sourth India and `Some Jaina Epigraphs' ಎಂಬ ಗ್ರಂಥದಲ್ಲಿಯೂ ೫೩ ಶಾಸನಗಳ ಪೂರ್ತಿಪಾಠ ಮತ್ತು ಭಾಷಾಂತರಗಳು ಇವೆ.

ಇದೇ ವರ್ಷ ಪ್ರಕಟವಾದ ಡಾ. ಶ್ರೀನಿವಾಸ ರಿತ್ತಿ ಮತ್ತು ಜಿ. ಸಿ. ಶೇಳಕೆ ಅವರ "Inscriptions from Nanded District" ಎಂಬ ಗ್ರಂಥದಲ್ಲಿ ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ ೪೨ ಶಾಸನಗಳಿವೆ.

ಇವಲ್ಲದೆ "Karnatak University Journal" ಮುಂತಾದ ನಿಯತಕಾಲಿಕಗಳಲ್ಲಿ ಆಗಾಗ ಕನ್ನಡ ಶಾಸನಗಳು ಪ್ರಕಟವಾಗುತ್ತಿದ್ದು, ಇತಿಹಾಸದ ಅಭ್ಯಾಸಿಗಳಿಗೆ ಸಾಮಗ್ರಿಯನ್ನೊದಗಿಸುತ್ತವೆ.

ಕೇವಲ ಶಾಸನಗಳನ್ನು ಪ್ರಕಟಿಸುವ ನಿಯತಕಾಲಿಕವೆಂದರೆ ಭಾರತ ಸರಕಾರದ Epigraphia Indica ಒಂದೇ, ಇದರಲ್ಲಿ ಅನೇಕ ಕನ್ನಡ ಶಾಸನಗಳು ಪ್ರಕಟವಾಗಿವೆ. ವೆಂಕಟರಾಯರು ೧ನೇ ಪೂರಕ ಪ್ರಕರಣದಲ್ಲಿ ಉಲ್ಲೇಖಿಸಿದ Indian Antiquary ಬಹು ಹಿಂದೆಯೇ ನಿಂತಿತು. ತದನಂತರ Indian Antiquary---New Series ಎಂಬ ಪತ್ರಿಕೆ ಪ್ರಾರಂಭವಾಗಿ ಕೆಲ ವರ್ಷಗಳಲ್ಲಿ ಅದೂ ನಿಂತಿತು. ಇತ್ತೀಚೆಗೆ ೧೯೬೪ರಿಂದ ಇದೇ ಹೆಸರಿನ ಪತ್ರಿಕೆ ಮುಂಬೈಯಿಂದ ಪ್ರಕಟವಾಗುತ್ತಿದ್ದು ಅದರಲ್ಲಿ ಇಲ್ಲಿಯವರೆಗೆ ಯಾವ ಶಾಸನಗಳೂ ಪ್ರಕಟಿತವಾಗಿಲ್ಲ.

ಚರಿತ್ರರಚನೆ

ನಾಡಿನ ತುಂಬೆಲ್ಲ ಐತಿಹಾಸಿಕ ಅವಶೇಷಗಳು, ಸಾಮಗ್ರಿಗಳು ಹರಡಿದ್ದರೂ, ಅವುಗಳಲ್ಲೆಷ್ಟೋ ಭಾಗವು ಈಗ ಪ್ರಕಾಶಿತವಾಗಿದ್ದರೂ ಕನ್ನಡ ನಾಡಿನ ಸಮಗ್ರ ಚರಿತ್ರೆಯೊಂದು ಇನ್ನೂ ಬೆಳಕಿಗೆ ಬಂದಿಲ್ಲ. ೧೯ನೆಯ ಶತಮಾನದ ಕೊನೆಯಲ್ಲಿಯೇ ಇಂಥ ಪ್ರಯತ್ನಗಳು ಆರಂಭವಾದವು. ಆಗ ಪ್ರಕಟವಾದ ಡಾ. ಫ್ಲೀಟರ ಮತ್ತು ಭಾಂಡಾರಕರರ Dynasties of Canarese Districts ಇವುಗಳನ್ನು ವೆಂಕಟರಾಯರು ಉಲ್ಲೇಖಿಸಿದ್ದಾರೆ. ಡಾ. ರೈಸರ Mysore and Coorg from Inscriptions ಎಂಬ ಗ್ರಂಥವನ್ನೂ ಇಲ್ಲಿ ಹೆಸರಿಸಬಹುದು. ಇವು ನಾಡಿನ ರಾಜಕೀಯ ಇತಿಹಾಸದ ಸ್ಥೂಲಕಲ್ಪನೆಯನ್ನು ಕೊಡುತ್ತವೆಯಾದರೂ ಅವು ಸಮಗ್ರಚಿತ್ರವನ್ನು ರೂಪಿಸಲಾರವು. ೧೯೨೬ರಲ್ಲಿ ಧಾರವಾಡದ ರಾ. ಹ. ದೇಶಪಾಂಡೆಯವರು "ಕರ್ನಾಟಕ ಸಾಮ್ರಾಜ್ಯ"ವನ್ನು ಬರೆಯಲುತೊಡಗಿದರು. ಎರಡು ಸಂಪುಟಗಳಲ್ಲಿ ೧೨ನೆಯ ಶತಮಾನದವರೆಗೆ ಇತಿಹಾಸವನ್ನು ನಿರೂಪಿಸಲು ಶಕ್ತರಾದರು. ಇದರ ಮುಂದಿನ ಭಾಗವು ಇನ್ನೂ ಹಸ್ತಪ್ರತಿಯಾಗಿಯೇ ಉಳಿದಿದೆ. ಶ್ರೀ ರಾಜಪುರೋಹಿತರು ರಚಿಸಿದ ಕರ್ನಾಟಕ ಇತಿಹಾಸದ ಚಿಕ್ಕ ಸಂಪುಟವನ್ನು ನಾವು ಇಲ್ಲಿ ಗಮನಿಸಬಹುದು. ಶಾಸನಗಳ ಆಧಾರದ ಮೇಲೆ ಪ್ರಮಾಣಬದ್ಧವಾದ ಒಂದು ಚರಿತ್ರ ಗ್ರಂಥವನ್ನು ಒದಗಿಸಲು ಇದೇ ಕಾಲಕ್ಕಾಗಿಯೇ, ಶಾಸನತಜ್ಞರಾದ ಶ್ರೀ ನೆಲಮಂಗಲ ಲಕ್ಷ್ಮೀನಾರಾಯಣರಾಯರು ಮತ್ತು ಪಂಚಮುಖಿಯವರು ತೊಡಗಿದರು. ಅವರ ಪ್ರಯತ್ನದ ಫಲವಾಗಿ ೧೯೪೬ರಲ್ಲಿ "ಕರ್ನಾಟಕದ ಅರಸು ಮನೆತನಗಳು" ಎಂಬ ಗ್ರಂಥವು ಹೊರಬಂದಿತು. ಆದರೆ ಈ ಗ್ರಂಥದ ವ್ಯಾಪ್ತಿ ಕ್ರಿ. ಶ. ೮ನೆಯ ಶತಮಾನಕ್ಕೆ ಮಾತ್ರ ಸೀಮಿತವಾಗಿದೆ. ಇದೇ ವರ್ಷ ಪ್ರಕಟವಾದ ಇನ್ನೊಂದು ಗ್ರಂಥವೆಂದರೆ ಡಾ. ಮುಗಳಿಯವರ Heritage of Karnataka ಎಂಬುದು. ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸದ ದಿಗ್ದರ್ಶನವನ್ನು ನಾವು ಇಲ್ಲಿ ಕಾಣಬಹುದು. ಇತ್ತೀಚೆಗೆ ದಕ್ಷಿಣ ಭಾರತ ಪುಸ್ತಕ ಸಂಸ್ಥೆಯವರಿಂದ ಪ್ರಕಾಶಿತವಾದ, ಎಂ. ವಿ. ಕೃಷ್ಣರಾಯರ "ಕರ್ನಾಟಕದ ಚರಿತ್ರೆ" ಕರ್ನಾಟಕದ ಸಂಕ್ಷಿಪ್ತ ಇತಿಹಾಸ ಮಾತ್ರ.

ಹೀಗೆ ಪ್ರಮಾಣಭೂತವಾದ ಸಮಗ್ರ ಚರಿತ್ರೆಯ ಕೊರತೆ ಇಂದಿಗೂ ಇದ್ದೇ ಇದೆ. ಈ ಕೊರತೆಯನ್ನು ಮನಗಂಡೇ ಇಂಥ ಗ್ರಂಥರಚನೆಯಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ಮೈಸೂರ ಸರಕಾರದವರು ಯೋಜಿಸಿದ Karnataka Through The Ages ಎಂಬುದು ಮತ್ತು ಶ್ರೀ ಪಂಚಮುಖಿಯವರು ಯೋಜಿಸಿದ ಸಂಪುಟಗಳು ಇವನ್ನು ಇಲ್ಲಿ ಉದಾಹರಿಸಬಹುದು. ೧೦ನೆಯ ಶತಮಾನದವರೆಗಿನ ಇತಿಹಾಸವನ್ನೊಳಗೊಂಡ ಶ್ರೀ ಪಂಚಮುಖಿಯವರ ಒಂದು ಸಂಪುಟ ಇದೀಗ ಪ್ರಕಟವಾಗಿದೆ. ಮೊನ್ನೆ ಮೊನ್ನೆ ಡಾ. ತಿಪ್ಪೇರುದ್ರಸ್ವಾಮಿಯವರ "ಕರ್ನಾಟಕ ಸಂಸ್ಕೃತಿ ಸಮೀಕ್ಷೆ" ಎಂಬ ಇನ್ನೊಂದು ಗ್ರಂಥ ಪ್ರಕಟವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆಯು ಈ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು ಈಗಾಗಲೇ ಬಹುಮಟ್ಟಿಗೆ ಪ್ರಗತಿಯನ್ನು ಸಾಧಿಸಿದೆ. ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯನ್ನೊಳಗೊಂಡ ಸಂಪುಟವೊಂದು ಶೀಘ್ರದಲ್ಲಿಯೇ ಹೊರಬರಲಿದೆ.

ಕರ್ನಾಟಕದ ಬೇರೆಬೇರೆ ರಾಜಮನೆತನಗಳನ್ನು ಕುರಿತು ಬಿಡಿಬಿಡಿಯಾದ ಅಭ್ಯಾಸಗಳೂ ಕೆಲಮಟ್ಟಿಗೆ ನಡೆದಿವೆ. ೧೯೩೧ರಲ್ಲಿ ಪ್ರಕಟವಾದ ಜಿ. ಎಂ. ಮೊರೇಸರ "ಕದಂಬ ಕುಲ" ವಿವಿಧ ಕದಂಬ ಮನೆತನಗಳನ್ನು ಕುರಿತಾದ ಅಭ್ಯಾಸವಾಗಿದೆ. ಎಂ. ವಿ. ಕೃಷ್ಣರಾಯರ ತಳಕಾಡಿನ ಗಂಗರನ್ನೂ ಇಲ್ಲಿ ಹೆಸರಿಸಬಹುದು. ಡಾ. ದೇಸಾಯಿ ಪಾಂಡುರಂಗರಾಯರ "ವಿಜಯನಗರ ಸಾಮ್ರಾಜ್ಯ" ಹಿಂದೆಯೇ ಪ್ರಕಾಶಿತವಾಗಿದ್ದರೂ ಇಂದಿಗೂ ಆಧಾರಗ್ರಂಥವಾಗಿದೆ. ಅವರದೇ ಆದ "ಕರ್ನಾಟಕದ ಕಲಚೂರಿಗಳು" ಕಲಚುರಿ ಮನೆತನದ ಅಭ್ಯಾಸಪೂರ್ಣ ಕೃತಿಯಾಗಿದೆ. ಡಾ. ಸಾಲೆತೊರೆಯವರ ಎರಡು ಸಂಪುಟಗಳು ವಿಜಯನಗರದ ಆಳಿಕೆಯ ವಿವರಗಳನ್ನೆಲ್ಲ ಒಳಗೊಂಡಿದೆ. ೧೯೩೪ರಷ್ಟು ಹಿಂದೆ" ಡಾ. ಆಳ್ತೇಕರರು ರಾಷ್ಟ್ರಕೂಟ ಮನೆತನದ ಬಗ್ಗೆ ತಮ್ಮ ಅಭ್ಯಾಸಪೂರ್ಣವಾದ ಗ್ರಂಥವನ್ನು ಪ್ರಕಟಿಸಿದರು. ೧೯೫೦ರಲ್ಲಿ ಡಾ. ಕೋಹಿಲೋ ಅವರು ಮತ್ತು ೧೯೫೭ರಲ್ಲಿ ಡಾ. ಡೆರೆಟ್ ಅವರು ಹೊಯ್ಸಳ ವಂಶದ ಚರಿತ್ರೆಯನ್ನೊದಗಿಸಿದರು. ಡಾ. ಬಿ. ಆರ್. ಗೋಪಾಲ ಅವರು ಸಿದ್ಧಪಡಿಸಿದ ಕಲ್ಯಾಣದ ಚಾಲುಕ್ಯ ಮನೆತನದ ಆರಂಭದಿಂದ ಕ್ರಿ. ಶ. ೧೦೭೬ರವರೆಗಿನ ಚರಿತ್ರೆ ಇನ್ನೂ ಪ್ರಕಟವಾಗಬೇಕಾಗಿದೆ. ಇದೇರೀತಿ ಡಾ. ಶ್ರೀನಿವಾಸ ರಿತ್ತಿಯವರ ಸೇವುಣರು ಅಥವಾ ದೇವಗಿರಿ ಯಾದವರು ಎಂಬ ಪ್ರಬಂಧ ಇತ್ತೀಚೆಗೆ ದೊರೆತ ಶಾಸನಗಳ ಕೂಲಂಕಷ ಪರಿಶೋಧನೆಯಿಂದ ಕಂಡುಬಂದ ಹೊಸ ವಿಷಯಗಳನ್ನೊಳಗೊಂಡ ಚರಿತ್ರಗಂಥವಾಗಿದ್ದು ಇನ್ನೂ ಪ್ರಕಾಶಿತವಾಗಬೇಕಾಗಿದೆ. ವಿಜಯನಗರದ ಬಗೆಗೆ ಅನೇಕ ಗ್ರಂಥಗಳಿದ್ದರೂ ಕನ್ನಡದಲ್ಲಿಯ ಸಾಮಗ್ರಿಗಳನ್ನು ಪರಿಶೋಧಿಸಿ ವಿಜಯನಗರದ ಚರಿತ್ರೆಯನ್ನು ಬರೆಯುವ ಪ್ರಯತ್ನ ಸ್ವಾಗತಾರ್ಹವೇ ಆಗಿದೆ.

ಇದಲ್ಲದೆ ಕರ್ನಾಟಕದ ಚರಿತ್ರೆಯ ಅಂಶಗಳು ನಮಗೆ ಭಾರತೀಯ ಇತಿಹಾಸಗಳ ಸಂಪುಟಗಳಲ್ಲಿಯೂ ಲೇಖನ ಸಂಗ್ರಹಗಳಲ್ಲಿಯೂ ದೊರೆಯುತ್ತವೆ. ಭಾರತೀಯ ವಿದ್ಯಾಭವನದ A History and Culture of Indian People ಎಂಬ ಸಂಪುಟಗಳನ್ನೂ ಯಾಝುದಾನಿಯವರಿಂದ ಸಂಪಾದಿತ Early History of Deccan ಎಂಬ ಗ್ರಂಥದ ಸಂಪುಟಗಳನ್ನೂ ಎಂ.ವಿ. ಕೃಷ್ಣರಾಯರ Glimpses of Karnataka ಮತ್ತು ದಿವಾಕರ ರಂಗರಾಯರ ೬೦ನೆಯ ಹುಟ್ಟುಹಬ್ಬದ ನಿಮಿತ್ತ ಪ್ರಕಟಿಸಿದ Karnataka Darshana ಎಂಬ ಗ್ರಂಥವನ್ನೂ ಇಲ್ಲಿ ಹೆಸರಿಸಬಹುದು. ವಿವಿಧ ನಿಯತಕಾಲಿಕೆಗಳಲ್ಲಿ ಆಗಾಗ ಬಂದ ಲೇಖನಗಳಂತೂ ಸರಿಯೇ. ಹೀಗೆ ಕರ್ನಾಟಕದ ಚರಿತ್ರೆ ನಮಗೆ ಸದ್ಯಕ್ಕೆ ಈ ವಿಧವಾಗಿ ದೊರೆಯುತ್ತಿದ್ದರೂ ಕರ್ನಟಕದ ಜನಜೀವನದ ಪೂರ್ಣಚಿತ್ರವನ್ನೊದಗಿಸುವ ಪ್ರಮಾಣ ಭೂತವಾದ ಆಧಾರಗ್ರಂಥಗಳು ಅಗತ್ಯವಾಗಿವೆ ಎಂಬುದು ನಿರ್ವಿವಾದ.

ಕಾರ್ಯವ್ಯಾಪ್ತಿ

ಹೀಗೆ ಸಂಶೋಧನ ಕ್ಷೇತ್ರದಲ್ಲಿ ಎಷ್ಟೋ ಪ್ರಗತಿಯಾಗಿದ್ದರೂ ಇನ್ನೂ ಸಾಧಿಸಬೇಕಾದ ಕಾರ್ಯಬಹಳಷ್ಟಿದೆ. ಭೂ-ಶೋಧನೆಯ ದೃಷ್ಟಿಯಿಂದ ಮಹತ್ವದ ಸ್ಥಳಗಳಲ್ಲಿ ಅನ್ವೇಷಣೆ (Exploration) ನಡೆಯಿಸಿ, ಉತ್ಖನನಗಳನ್ನು ಕೈಕೊಳ್ಳಬೇಕಾಗಿದೆ. ಆಗ ಇತಿಹಾಸಪೂರ್ವಕಾಲದ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯುತ್ತದೆ. ಶಾಸನಗಳ ಸಂಗ್ರಹಣೆಯ ಕಾರ್ಯವು ತ್ವರಿತಗತಿಯಿಂದ ಸಾಗಬೇಕಾಗಿದೆ. ಮೈಸೂರು ವಿಭಾಗದಲ್ಲಿ ಈ ಕಾರ್ಯ ಹಿಂದೆಯೇ ಬಹುಮಟ್ಟಿಗೆ ಪೂರೈಸಿದ್ದರೂ, ಉಳಿದ ಭಾಗಗಳಲ್ಲಿ ಸಂಗ್ರಹಿಸದೆ ಉಳಿದ ಶಾಸನಗಳು ಹೇರಳವಾಗಿವೆ. ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಶಾಸನಗಳು ಪ್ರಕಾಶಿತವಾಗಿದ್ದರೂ ಅಲ್ಲಿ ಇನ್ನೂ ಅನೇಕ ಹೊಸ ಶಾಸನಗಳು ದೊರೆಯುತ್ತವೆ. ಧಾರವಾಡ, ಬೆಳಗಾಂವ, ಕಾರವಾರ ಜಿಲ್ಲೆಗಳಲ್ಲಿಯ ಶಾಸನಗಳ ಸಂಗ್ರಹಣೆಯೂ ಪೂರ್ಣವಾಗಿಲ್ಲ. ರಾಯಚೂರು, ಕಲಬುರ್ಗಿ, ಬೀದರ ಜಿಲ್ಲೆಗಳಲ್ಲಿಯಂತೂ ಬಹಳಷ್ಟು ಮಹತ್ವದ ಶಾಸನಗಳು ದೊರೆಯುತ್ತವೆಂಬುದು ಅನುಭವದ ಮಾತಾಗಿದೆ. ಈ ಎಲ್ಲ ಭಾಗಗಳನ್ನು ಪರಿಶೋಧಿಸಿದಾಗ ನಮಗೆ ಏಳೆಂಟು ಸಾವಿರದಷ್ಟು ಶಾಸನಗಳು ದೊರೆಯುವದರಲ್ಲಿ ಸಂದೇಹವಿಲ್ಲ. ಇವೆಲ್ಲವುಗಳನ್ನು ಸಂಗ್ರಹಿಸಿ, ಶೋಧಿಸಿ, ಪ್ರಕಟಿಸಿದಾಗ ಚರಿತ್ರೆಯ ಅಭ್ಯಾಸಗಳಿಗೆ ಅಮೂಲ್ಯ ನಿಧಿ ದೊರೆತಂತಾಗುತ್ತದೆ. ನಾಣ್ಯಗಳ ಸಂಗ್ರಹಣೆ ಮತ್ತು ವ್ಯವಸ್ಥಿತವಾದ ಅಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ತಾಡೋಲೆಯ, ಕಾಗದದ, ಹಸ್ತಪ್ರತಿಗಳಲ್ಲಿಯ ಕಾವ್ಯಗಳನ್ನು ಸಂಶೋಧಿಸಿ ಐತಿಹಾಸಿಕ ಸಾಮಗ್ರಿಯನ್ನು ಕಲೆಹಾಕುವದು ಅಷ್ಟೇ ಮಹತ್ವದ ವಿಷಯವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯ ಪ್ರಾಚೀನ ದೇವಾಲಯಗಳ ಪಟ್ಟಿಯನ್ನು ತಯಾರಿಸಿ ಅವುಗಳನ್ನು ವಾಸ್ತುಶಿಲ್ಪ (Architecture) ಮತ್ತು ಕಲೆಯ ದೃಷ್ಟಿಯಿಂದ ಅಭ್ಯಸಿಸಬೇಕಾದ ಕಾರ್ಯ ಇನ್ನೂ ಆರಂಭವಾಗಬೇಕಾಗಿದೆ. ಈ ಎಲ್ಲ ಕಾರ್ಯಗಳನ್ನು ಸಾಧಿಸಿದಾಗ ಕನ್ನಡ ಸಂಸ್ಕೃತಿಯ ಪೂರ್ಣ ಚಿತ್ರವನ್ನು ಬಿಡಿಸುವುದು ಸಾಧ್ಯವಾಗುತ್ತದೆ.


ಆಲೂರು ವೆಂಕಟರಾಯರು

(೧೮೮೦ - ೧೯೬೪)


ಇಪ್ಪತ್ತನೇ ಶತಮಾನದ ಮೊದಲ ಹಂತದಲ್ಲಿ ಇಡೀ ಭಾರತದಾದ್ಯಂತ ಸ್ವಾತಂತ್ರ್ಯ ಹೋರಾಟದ ಬಿಸಿ ಹರಡಿತ್ತು. ಒಂದೂವರೆ ಶತಕಕ್ಕಿಂತ ಹೆಚ್ಚಿನ ಕಾಲ ನಿಶ್ಚೇಷ್ಟಿತ ಅವಸ್ಥೆಯಲ್ಲಿದ್ದ ಭಾರತೀಯರನ್ನು ಜಾಗೃತರನ್ನಾಗಿ ಮಾಡಲು ಬಹಳಷ್ಟು ಸಮಾಜಸುಧಾರಕರು, ಸಂತರು, ಬುದ್ಧಿಜೀವಿಗಳು ಸತತ ಪ್ರಯತ್ನ ನಡೆಸಿದರು. ಲಾಲ-ಬಾಲ-ಪಾಲ ಅವರ ಪ್ರಭಾವ ಶಿಕ್ಷಿತರ ಮೇಲೆ ಬಹುವಾಗಿತ್ತು. ಭಾರತದಲ್ಲಿ ಕ್ರಾಂತಿಯಾಗಬೇಕಿದ್ದರೆ ಪ್ರತಿ ಒಬ್ಬರೂ ದೇಶಕಾರ್ಯದಲ್ಲಿ ಭಾಗವಹಿಸಬೇಕು ಆಗಲೇ ಅದು ಇದಕ್ಕಾಗಿ ದೇಶದಲ್ಲಿ ಪ್ರವಾಸ ಕೈಕೊಂಡು ಜನರಲ್ಲಿ ಜಾಗೃತಿ ತರಿಸಬೇಕು ಎಂದು ಬಾಲ ಗಂಗಾಧರ ಟಿಳಕರು ಹೇಳುತ್ತಿದ್ದರು. ಸ್ವರಾಜ್ಯ, ಸ್ವದೇಶಿ, ಬಹಿಷ್ಕಾರ ಹಾಗೂ ರಾಷ್ಟ್ರೀಯ ಶಿಕ್ಷಣ ಈ ನಾಲ್ಕು ಸೂತ್ರಗಳನ್ನು ಆನ್ನಿ ಬೆಸನ್ಟರ ಸಹಕಾರದಿಂದ ಭಾರತದಲ್ಲೆಲ್ಲ ಹರಡಲು ಹಾಗೂ ಪ್ರತಿಯೊಬ್ಬ ಭಾರತೀಯರ ಮನದಲ್ಲಿ ಬಿಂಬಿಸಲು ಇಡೀ ದೇಶದ ಪರ್ಯಟನೆ ಕೈಕೊಂಡರು. ಇದರ ಪರಿಣಾಮವು ದೇಶದ ಅನೇಕ ಯುವಪೀಳಿಗೆಯ ಮೇಲೆ ಆಯಿತು. ಉತ್ತರ ಕರ್ನಾಟಕದ ಆಲೂರ ವೆಂಕಟರಾಯರು ಅವರಲ್ಲಿ ಪ್ರಮುಖರು.

ಆಲೂರ ವೆಂಕಟರಾಯರು ಧಾರವಾಡದಲ್ಲಿ ಹುಟ್ಟಿ, ಉನ್ನತ ಶಿಕ್ಷಣಕ್ಕೋಸ್ಕರ ಪುಣೆಯಲ್ಲಿ ಕೆಲ ಕಾಲ ಸ್ಥಾಯಿಯಾದರು. ಆಗ ಪುಣೆ ರಾಷ್ಟ್ರೀಯ ಚಳುವಳಿಯ ಕೇಂದ್ರ ಬಿಂದು ಆಗಿತ್ತು. ವೀರ ಸಾವರಕರ್, ಸೇನಾಪತಿ ಬಾಪಟ್ ಇಂತಹ ಕ್ರಾಂತಿಕಾರಿ ಸಹಾಧ್ಯಾಯಿಗಳ ಸಾಂಗತ್ಯ, ಭಾಟೆ, ಕರ್ವೆ, ರಾಜವಾಡೆಯವರ ಉಪನ್ಯಾಸಗಳಿಂದ ಪ್ರಭಾವಿತರಾಗಿದ್ದರು. ರಾಜಕೀಯ ಕ್ಷೇತ್ರಗಳಲ್ಲಿ ಗೋಖಲೆ ಹಾಗೂ ಟಿಳಕರಂತಹ ಅಸೀಮ ದೇಶಭಕ್ತರು ತಮ್ಮ ವಿಚಾರ ಹಾಗೂ ಕೃತಿಗಳಿಂದ ಆಗಲೇ ಜನಪ್ರಿಯರಾಗಿದ್ದರು. ಇಂಥವರ ಪ್ರಭಾವಕ್ಕೆ ಬಹಳಷ್ಟು ವಿದ್ಯಾವಂತ ಯುವಪೀಳಿಗೆ ಸಿಕ್ಕಿ ಹಾಕಿಕೊಂಡದ್ದಲ್ಲಿ ಆಶ್ಚರ್ಯವೇನಿಲ್ಲ. ವಿದ್ಯಾವಂತರು ತಮ್ಮ ದೇಶದ ಭವಿಷ್ಯ ಹಾಗೂ ಅಭ್ಯುದಯಕ್ಕೋಸ್ಕರ ಚಿಂತನ ಹಾಗೂ ಕಾರ್ಯ ಮಾಡಬೇಕೆಂಬ ಅವರ ಘೋಷಣೆ ಯುವಕರನ್ನು ತಟ್ಟೆಬ್ಬಿಸಿತು. ಆಲೂರರು ಅದಕ್ಕೆ ಅಪವಾದವಿರಲಿಲ್ಲ. ಓದು ಮುಗಿದ ಮೇಲೆ ದೇಶಕಾರ್ಯ ಹೇಗೆ ಮತ್ತು ಯಾವ ಪ್ರಕಾರ ಮಾಡಬೇಕು ಎಂಬ ಪ್ರಶ್ನೆ ಎಲ್ಲರಿಗೂ ಕಾಡತೊಡಗಿತ್ತು. ಒಮ್ಮೆ ಪುಣೆಯ ಸಾರ್ವಜನಿಕ ಸಭೆಯಲ್ಲಿ ಆಲೂರರು ಗೋಖಲೆಯವರಿಗೆ ಯಾವ ತರಹದ ದೇಶಕಾರ್ಯ ಕೈಗೊಳ್ಳಬೇಕೆಂದು ಪ್ರಶ್ನಿಸಿದಾಗ ಗೋಖಲೆಯವರು ದೇಶ ಸೇವೆಯ ಅನೇಕ ಪ್ರಕಾರಗಳನ್ನು ಸೂಚಿಸಿದ್ದರು. ವಕೀಲಿವೃತ್ತಿ ಮಾಡಬಹುದು, ಶಿಕ್ಷಕರಾಗಿ ವಿದ್ಯಾರ್ಜನೆ ಮಾಡಬಹುದು, ಬಹರಗಾರ, ಪತ್ರಿಕಾಕರ್ತರಾಗಿ, ಇತಿಹಾಸಕಾರರಾಗಿ ಜನಗಳಲ್ಲಿ ದೇಶಾಭಿಮಾನ, ತಮ್ಮ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಜ್ಞಾನ ನೀಡಬಹುದು, ರಾಷ್ಟ್ರೀಯ ಪಾಠಶಾಲೆಗಳನ್ನು ಪ್ರಾರಂಭಿಸಬಹುದು ಇತ್ಯಾದಿ. ಆರ್ಥಿಕ ಸಾಮಾಜಿಕ ಮತ್ತು ರಾಜಕೀಯವಾಗಿ ಭಾರತೀಯ ಸಮಾಜವನ್ನು ಯುವ ಜನರು ಹೊಸದಾಗಿ ಕಟ್ಟಬೇಕು ಎಂಬ ಈ ಮಾತುಗಳು ಆಲೂರರಿಗೆ ವೇದ ವಾಕ್ಯಗಳಾದವು. ಆಲೂರರು ಮೇಲೆ ಸೂಚಿಸಿದ ಎಲ್ಲ ಕ್ಷೇತ್ರದಲ್ಲಿ ಕೈ ಹಾಕಿದವರು. ಆಡು ಮುಟ್ಟದ ಗಿಡವಿಲ್ಲ ಆಲೂರರು ಮೆಟ್ಟದ ಕ್ಷೇತ್ರವಿಲ್ಲ ಎಂಬ ಗಾದೆ ಅವರು ಜೀವಂತವಾಗಿದ್ದಾಗಲೇ ಪಸರಿಸಿತ್ತು.

ರಾಜಕೀಯ ರಂಗದಲ್ಲಿ ಆಲೂರರ ಕೊಡುಗೆ

ಸ್ವಾತಂತ್ರ್ಯ ಯಜ್ಞದಲ್ಲಿ ಸೆಳೆಯಲ್ಪಟ್ಟ ಆಲೂರ ವೆಂಕಟರಾಯರು ತನ್ನ ಆಯುಷ್ಯ ಈ ಸೆಳುವಿನಲ್ಲಿ ಬದಲಾಯಿತು. ಆಗಿನಿಂದ ಒಂದು ಕ್ಷಣವನ್ನು ಬುದ್ಧಿಪೂರ್ವಕವಾಗಿ ವ್ಯರ್ಥ ಕಳೆದಿಲ್ಲ ಎಂದು ಹೇಳುತ್ತಾರೆ. ೧೯೦೫ ರಲ್ಲಿ ಎಲ್. ಎಲ್. ಬಿ ಮಾಡಿ ಧಾರವಾಡದಲ್ಲಿ ಆಗ ತಾನೆ ವಕೀಲಿ ವೃತ್ತಿ ಪ್ರಾರಂಭಿಸಿದವರು ವಕೀಲಿ ಬಿಟ್ಟು ಸ್ವದೇಶಿ ಚಳುವಳಿಯಲ್ಲಿ ಧುಮುಕಿದರು. ಮಹಾರಾಷ್ಟ್ರದಲ್ಲಿ ಟಿಳಕರು ಕೈಗೊಂಡ ಕಾರ್ಯವನ್ನು ಕನ್ನಡ ಪ್ರಾಂತದಲ್ಲಿ ಅಲೂರರು ಮುಂದುವರೆಸಿದರು. ಸ್ವರಾಜ್ಯದ ಮಹತಿಯನ್ನು ಜನರಲ್ಲಿ ಬಿಂಬಿಸಿದರು. ನಮ್ಮ ಉದ್ಯೋಗಗಳಿಗೆ ಬೆಂಬಲ ಕೊಡಲು ಸ್ವದೇಶಿ ವಸ್ತುಗಳ ಬಳಕೆ, ವಿದೇಶಿ ವಸ್ತುಗಳ ಬಹಿಷ್ಕಾರ ಹಾಗೂ ಇದರ ಹಿಂದಿನ ಆರ್ಥಿಕ ಹಿನ್ನೆಲೆಯನ್ನು ವಿವರಿಸಿದರು. ತರುಣ ಜನಾಂಗಕ್ಕೆ ಸ್ವತಂತ್ರ ಜೀವನೋಪಾಯ ಒದಗಿಸಲು ರಾಷ್ಟ್ರೀಯ ಶಿಕ್ಷಣದಿಂದ ಮಾತ್ರ ಸಾಧ್ಯ. ಆಂಗ್ಲ ಶಿಕ್ಷಣವು ಆಡಳಿತ ಯಂತ್ರಕ್ಕೆ ಸಿಬ್ಬಂದಿಯನ್ನು ತಯಾರಿಸುವ ಒಂದು ಕಾರಖಾನೆಯಂತೆ. ಇದರಿಂದ ನಮ್ಮ ದೇಶದ ಏಳಿಗೆಯಾಗದು. ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಭಾಷೆ ಇವುಗಳ ಜ್ಞಾನ ಜನರಲ್ಲಿ ಬೆಳೆಸಲು ರಾಷ್ಟ್ರೀಯ ಶಾಲೆಗಳ ನಿರ್ಮಾಣದ ಅವಶ್ಯಕತೆಯನ್ನು ಬಿಂಬಿಸಿದರು, ಅಷ್ಟೇ ಅಲ್ಲ ಸ್ವಾವಲಂಬನೆಗೆ ಅಗತ್ಯವಾದ ಪಠ್ಯಕ್ರಮಗಳನ್ನು ಕೂಡ ನಾವೇ ರೂಪಿಸಿ ನಮ್ಮ ಮಕ್ಕಳಿಗೆ ಓದು ಕಲಿಸಬಹುದು ಎಂದು ಹೇಳಿ ಅದನ್ನು ಕಾರ್ಯರೂಪಕ್ಕೆ ತಂದರು. ಕೈಗಾರಿಕೆ ಹಾಗೂ ಕಸುಬು ಇವುಗಳನ್ನು ಶಿಕ್ಷಣದ ವಿಷಯಗಳನ್ನಾಗಿ ಮಾಡಲು ಕಡ್ಡಿಪೆಟ್ಟಿಗೆ ತಯಾರಿಕೆ, ಬಡತನ, ಹೆಣಿಗೆ, ಹೊಲಿಗೆ, ಮುದ್ರಣ ಇತ್ಯಾದಿ ಕಸಬುಗಳನ್ನು ಇಂಥಹ ರಾಷ್ಟ್ರೀಯ ಶಾಲೆಗಳಲ್ಲಿ ಕಲಿಸುತ್ತಿದ್ದರು. ಆಲೂರರ ಎರಡು ವರ್ಷದ ಸತತ ಪ್ರಯತ್ನದಿಂದ ೧೯೦೯ ರಲ್ಲಿ ಕರ್ನಾಟಕ ನೂತನ ವಿದ್ಯಾಲಯದ ಸ್ಥಾಪನೆ ಧಾರವಾಡದಲ್ಲಿ ಆಯಿತು. ಬೇಂದ್ರೆ, ಶಂಬಾ ಜೋಶಿ, ರಂಗನಾಥ ದಿವಾಕರ ಇವರು ಅಧ್ಯಾಪಕರಾಗಿದ್ದರು.

ಟಿಳಕರಂತೆ ಆಲೂರರು ಕೂಡ ತೀವ್ರಗಾಮಿಗಳು. ಸೂರತ್ ಕಾಂಗ್ರೆಸ್ಸಿನಲ್ಲಿ ಟಿಳಕರ ಪರವಾಗಿ ನಿಂತವರು. ಹೋಮ್ರೂಲ್ ಲೀಗಿಗೆ ಆಲೂರರು ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಪ್ರಾಂತಿಕ ರಾಜಕೀಯ ಪರಿಷತ್ತಿನ ನಿರ್ಮಾಣಕ್ಕಾಗಿ ದಿನ ರಾತ್ರಿ ದುಡಿದರು. ಇದಕ್ಕೆ ಬೇರೆ ಸಹೋದ್ಯೋಗಿಗಳ ಸಹಮತವಿರಲಿಲ್ಲ. ಆದರೆ ೧೯೧೭ ರಲ್ಲಿ ಗುಜರಾತ ಪ್ರಾಂತಿಕ ರಾಜಕೀಯ ಪರಿಷತ್ತು ಸೇರಿದಾಗ, ಕರ್ನಾಟಕಕ್ಕೆ ಕೂಡ ಇದರ ಲಾಭ ಸಿಗುವ ಆಸೆ ಚಿಗುರಿತು. ಅವರ ಪ್ರಯತ್ನದ ಫಲವಾಗಿ ಧಾರವಾಡದಲ್ಲಿ ಪ್ರಥಮ ಕರ್ನಾಟಕ ರಾಜಕೀಯ ಪರಿಷತ್ತು ವಿ.ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ೧೯೨೦ ರಲ್ಲಿ ಸೇರಿತು. ಹೀಗೆ ಸ್ವಾತಂತ್ರ್ಯ ಚಳುವಳಿಯನ್ನು ಆಲೂರರು ಉತ್ತರ ಕರ್ನಾಟಕಕ್ಕೆ ಎಳೆದು ತಂದರು.

ಆಲೂರರ ಸಾರ್ವಜನಿಕ ಭಾಷಣಗಳು ಜನರಲ್ಲಿ ಸ್ಫೂರ್ತಿ, ಉತ್ಸಾಹ ತಂದವು. ರಾಷ್ಟ್ರ ಪ್ರೇಮ, ಸ್ವದೇಶಿ, ಸ್ವರಾಜ್ಯದ ಕಲ್ಪನೆಗಳಿಗೆ ಮೂರ್ತಿರೂಪ ತರುವ ಮಾರ್ಗ ತೋರಿಸಿದರು. ಜನಜಾಗೃತಿ ತಂದರು.

ಆಲೂರರು ಕಂಡ ಕರ್ನಾಟಕ

ಬ್ರಿಟಿಶರು ತಾವು ಗೆದ್ದ ಪ್ರದೇಶಗಳನ್ನು ಆಡಳಿತದ ಸೌಕರ್ಯಕ್ಕೋಸ್ಕರ ವಿವೇಚನೆಯಿಲ್ಲದೇ ವಿಭಜಿಸಿದರು. ಅವರು ಭೌಗೋಳಿಕ, ಐತಿಹಾಸಿಕ, ಭಾಷಿಕ ಭಿನ್ನತೆಯನ್ನು ಗಮನಿಸಲೇ ಇಲ್ಲ. ಕನ್ನಡಿಗರು ಮುಂಬೈ-ಕರ್ನಾಟಕ, ಹೈದರಾಬಾದ-ಕರ್ನಾಟಕ ಹಾಗೂ ಮದ್ರಾಸ ಭಾಗಗಳಲ್ಲಿ ಹರಡಿದ್ದರು. ಇದರ ಪರಿಣಾಮವಾಗಿ ಕನ್ನಡಿಗರು ಪರಭಾಷಾ ದಬ್ಬಾಳಿಕೆಯಲ್ಲಿ ತಮ್ಮತನ ಉಳಿಸಿಕೊಳ್ಳಲು ಬಹಳಷ್ಟು ಪರದಾಡಬೇಕಾಯಿತು. ಬಹುಭಾಷಾ ಪ್ರಾಂತದಲ್ಲಿ, ಅಲ್ಪಭಾಷಿಕರಿಗೆ ಸರಕಾರದಿಂದಾಗಲೀ ಅಥವಾ ಬೇರೆ ಸಂಘ ಸಂಸ್ಥೆಗಳಿಂದಾಗಲೀ ಯಾವ ಸಹಾಯ ಹಾಗೂ ಸೌಕರ್ಯಗಳು ದೊರಕಲಿಲ್ಲ.

ಕನ್ನಡ ಭಾಷೆಯ ಹಾಗೂ ಇತಿಹಾಸದ ಅಭ್ಯಾಸ ಮಾಡಿದ ಆಲೂರರು ಕರ್ನಾಟಕದ ಸಾಂಸ್ಕೃತಿಕ ವ್ಯಾಪ್ತಿ ಈಗಿನ ಮಹಾರಾಷ್ಟ್ರದ ಉತ್ತರಕ್ಕೆ ಹರಿಯುವ ಗೋದಾವರಿಯವರೆಗೆ ಹಬ್ಬಿತ್ತು ಎಂದು ನಂಜುಂಡ ಕವಿಯ "ರಾಮನಾಥ ಚರಿತೆ" ಯಲ್ಲಿಯ ಎರಡನೆಯ ಸಂಧಿಯ ಪುರಾವೆ ಕೊಟ್ಟು ತಮ್ಮ ಬರವಣಿಗೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಕರ್ನಾಟಕದ ಆಗ್ನೇಯದ ಸೀಮೆ ಪಿಲಿಕೊಟ್ವರೆಗೆ ಹಬ್ಬಿತ್ತೆಂದು ಮಾಮುಲ್ನಾರ್ ಎಂಬ ತಮಿಳು ಕವಿಯು ಬರೆದ "ಕುರುಂಟೋಕಾಯಿ" ವೆಂಬ ಗ್ರಂಥದಆಧಾರ ಕೊಡುತ್ತಾರೆ. ಮತ್ತು ದಕ್ಷಿಣದ ಸೀಮೆ ಮುಳುಬಾಗಿಲವರೆಗೆ ಹರಡಿತ್ತು ಎನ್ನಲು ಗಂಗಾದೇವಿಯ ಕಂಪರಾಯಚರಿತೆಯನ್ನು ಉದ್ಧರಿಸುತ್ತಾರೆ. ಹೀಗೆ ಇನ್ನೂ ಅನೇಕ ಸಾಹಿತ್ಯದ ಆಧಾರದ ಮೇಲೆ ಕರ್ನಾಟಕ ಬಲ ಎಂದರೆ ಕರ್ನಾಟಕದವರ ಸೈನ್ಯದ ಬಲದ ಗತ್ತು ದೂರ ದೂರದವರೆಗೆ ಪಸರಿಸಿತ್ತು ಎಂದು ಹೇಳಿ ಕನ್ನಡಿಗರ ಗಡಿ ವ್ಯಾಪ್ತಿ ಹಾಗೂ ಕನ್ನಡ ಭಾಷೆಯ ವ್ಯಾಪ್ತಿ ಚಾಲುಕ್ಯ-ರಾಷ್ಟ್ರಕೂಟರ ಕಾಲದಿಂದ ಗೋದಾವರಿಯವರೆಗೆ ಹಬ್ಬಿತ್ತು ಎಂದು ಕವಿರಾಜಮಾರ್ಗದ ಸಾಕ್ಷಿ ಪುರಾವೆಗಳೊಂದಿಗೆ ಸ್ಪಷ್ಟ ಪಡಿಸುತ್ತಾರೆ. ಈಗಿನ ಮಹಾರಾಷ್ಟ್ರದ ಹಳ್ಳಿ ಪಳ್ಳಿಗಳಲ್ಲಿ ಕನ್ನಡ ಭಾಷೆಯು ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ. ಊರಿನ ಹೆಸರುಗಳು ಉರ್-ಉರು, ಪಾಳ್ಯ, ಕೊಪ್ಪ ಎಂದು ಕೊನೆಗೊಳ್ಳುತ್ತವೆ. ಇವೆಲ್ಲ ಕನ್ನಡ ಹೆಸರುಗಳೆಂದು ಪ್ರಸಿದ್ಧ ಮರಾಠಿ ಇತಿಹಾಸಕಾರರಾದ ಶ್ರೀ ರಾಜವಾಡೆಯವರೂ ಕೂಡ ಒಪ್ಪಿಕೊಂಡಿದ್ದಾರೆ. ಕೊಲ್ಲಾಪುರದ ಅರಸುಮನೆತನಗಳಲ್ಲಿ "ಬಿಸಿಲೂಟದ" ಪದ್ಧತಿ ಇದೆ. ಜಕಣಾಚಾರ್ಯನು ಕಟ್ಟಿದ ಗುಡಿಗಳನ್ನು ಮರಾಠಿಗರು ಹೆಮ್ಮಾಡಪಂಥಿ ಎನ್ನುತ್ತಾರೆ. ಅಷ್ಟೇ ಅಲ್ಲ, ಟಿಳಕರು ಕೂಡ ಕನ್ನಡವು ಮುಂಚೆ ಮಹಾರಾಷ್ಟ್ರದ ಭಾಷೆ ಆಗಿತ್ತು, ಇತ್ತೀಚೆಗೆ ಮೊದಲ ಭಾಷೆಯನ್ನು ಬಿಟ್ಟು ಮರಾಠಿಯನ್ನು ಅಳವಡಿಸಿಕೊಂಡಿದ್ದಾರೆ ಎಂದು ಜನವರಿ ಒಂದು ೧೯೦೭ ರ ಗುಲಬರ್ಗಾದ ಗುರ್ಲಹೊಸೂರಿನಲ್ಲಿ ಮಾಡಿದ ಭಾಷಣದಲ್ಲಿ ಒಪ್ಪಿಕೊಂಡಿದ್ದಾರೆ. ಹೀಗೆ ಆಲೂರರು ಹಲವಾರು ಸಾಕ್ಷಿಗಳನ್ನು ಆಧರಿಸಿ ಕನ್ನಡಿಗರು ತಮ್ಮ ಶ್ರೀಮಂತ ಸಂಸ್ಕೃತಿಯ ಬಾವುಟವನ್ನು ಮಹಾರಾಷ್ಟ್ರದ ಉತ್ತರದವರೆಗೆ ಹಾರಿಸಿದ್ದರು ಎಂದು ಅಭಿಮಾನದಿಂದ ಬರೆಯುತ್ತಾರೆ.

ಆಲೂರರ ಸಮಕಾಲೀನರಾದ ನಾರಾಯಣ ಶ್ರೀನಿವಾಸ ರಾಜಪುರೋಹಿತರು ಕೂಡ ತಮ್ಮ ಜೀವಮಾನದಲ್ಲಿ ಅನೇಕ ಸಂಶೋಧಾತ್ಮಕ ಪ್ರಬಂಧಗಳನ್ನು ಬರೆದು ಪ್ರಾಚೀನ ಕರ್ನಾಟಕದ ಕನ್ನಡಿಗರ ಮುನ್ನಡೆಯನ್ನು ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಪತ್ರಿಕೆಯಾದ ಕೇಸರಿಯಲ್ಲಿ ಪ್ರಕಟಿಸಿದರು. ಒಂದು ಕಾಲದಲ್ಲಿ ಭಾರತದ ಅರ್ಧಕ್ಕಿಂತ ಹೆಚ್ಚು ಪ್ರದೇಶವನ್ನು ತಮ್ಮ ಶೌರ್ಯ ಧೈರ್ಯದಿಂದ ಆಳಿ ಮೆರೆದ ಕನ್ನಡಿಗರು ಈಗ ಅಭಿಮಾನಶೂನ್ಯರಾಗಿದ್ದನ್ನು ಕಂಡು ಅವರನ್ನು ಎಚ್ಚರಿಸಿ ರಾಷ್ಟ್ರ ಕಟ್ಟುವ ಕೆಲಸಕ್ಕೆ ಅಣಿ ಮಾಡಿದರು ಆಲೂರರು.

ಕರ್ನಾಟಕದ ಏಕೀಕರಣ ಹಾಗೂ ಸ್ಥಾಪನೆಯಲ್ಲಿ ಆಲೂರರದು ಸಿಂಹದ ಪಾಲಿದೆ. ಒಡೆದ ಕನ್ನಡಿಯಂತಿದ್ದ ಕರ್ನಾಟಕಕ್ಕೆ ಅಖಂಡತ್ವದ ಕಲ್ಪನೆ ಕೊಟ್ಟವರೇ ಆಲೂರರು. ಅವರು ಕರ್ನಾಟಕದ ಭೂಪಟದಲ್ಲಿ ತುಂಡು ತುಂಡಾದರೂ ಕೂಡ ಚೈತನ್ಯಯುಕ್ತವಾದ ಕನ್ನಡಿಗರ ಆರಾಧ್ಯ ದೈವತವನ್ನು ಕಂಡರು. ಅದನ್ನು ಪೂಜಿಸಿದರು, ಪ್ರೀತಿಸಿದರು, ಅದರ ಏಳಿಗೆಗಾಗಿ ಅವಿರತ ಶ್ರಮಿಸಿದರು ಮತ್ತು ಇದೇ ಭಾವನೆಯನ್ನು ಪ್ರತಿಯೊಬ್ಬ ಕನ್ನಡಿಗನಲ್ಲಿ ಜಾಗೃತ ಮಾಡಲು ಪ್ರಯಾಸಪಟ್ಟರು. ಕರ್ನಾಟಕದ ಭೂಪಟವು ಬರೀ ರೇಖಾಕೃತಿಯಲ್ಲಿ ಚೈತನ್ಯದಾಯಕ ಮೂರ್ತಿ ಎಂದು ಭಾವಿಸಿದರು ಹಾಗೂ ಈ ಭಾವನೆಯನ್ನು ಜನರಲ್ಲಿ ಪ್ರೇರೇಪಿಸಿದರು.

ಆಲೂರರು "ಕರ್ನಾಟಕತ್ವ"ದ ಕುರಿತು ಶ್ರಮಿಸುತ್ತಿದ್ದಾಗ ಕೆಲವು ಕರ್ನಾಟಕದ ಮುಖಂಡರಾದ ಕೌಜಲಗಿ ಶ್ರೀನಿವಾಸರಾಯರು ಹಾಗೂ ಗಂಗಾಧರರಾವ ದೇಶಪಾಂಡೆಯವರು ಪ್ರಾಂತೀಯತೆ ರಾಷ್ಟ್ರೀಯ ಐಕ್ಯತೆಗೆ ಘಾತಕ ಎಂಬುದಾಗಿ ವಾದಿಸಿದರು. ಅದಕ್ಕೆ ಉತ್ತರವಾಗಿ ಆಲೂರರು ಲೇಖನಗಳ ಮಾಲಿಕೆಯನ್ನು ಬರೆದರು. ಕರ್ನಾಟಕದ ಸೇವೆಯೇ ದೇಶ ಸೇವೆ ಎಂದು ಸಾರಿದರು. ಮುಂದೆ ತಮ್ಮ ಬರಹಗಳಲ್ಲಿ ಆಲೂರರು "ಕರ್ನಾಟಕಾಂತರ್ಯಾಮಿಯಾದ ಭಾರತಿ ದೇವಿಗೆ ನವೋ, ಭಾರತಾಂತರ್ಯಾಮಿಯಾದ ಭೂದೇವಿಗೆ ನಮೋ" ಎಂದು ಹೇಳಿ, ವಿಶ್ವ, ಭಾರತ ಹಾಗೂ ಕರ್ನಾಟಕಗಳ ಪರಸ್ಪರ ಸಂಬಂಧವನ್ನು ವ್ಯಾವಹಾರಿಕವಾಗಿ, ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ ವಿವರಿಸಿದ್ದಾರೆ. ಕರ್ನಾಟಕತ್ವವು ಇದು ಸಂಕುಚಿತ ಕಲ್ಪನೆಯಲ್ಲ ಎಂದು ಅವರು ಧೃಢವಾಗಿ ನಂಬಿದ್ದರು. ಹೇಗೆ ಪರಮಾತ್ಮನ ವಿಶ್ವಶಕ್ತಿಯು ಇಡೀ ವಿಶ್ವದಲ್ಲಿ ಅಡಗಿಕೊಂಡಿದೆಯೋ, ಅದೇ ತರಹ ವಿಶ್ವದ ಒಂದು ಭಾಗವಾದ ಭಾರತದಲ್ಲಿ, ವಿಶ್ವಶಕ್ತಿಯ ಅಂಶ ಅಡಗಿದೆ, ಹಾಗೆಯೆ ಕರ್ನಾಟಕತ್ವದಲ್ಲಿ ಕೂಡ ಆ ಶಕ್ತಿ ಕಾಣಿಸುತ್ತದೆ. ವಿವಿಧ ಪ್ರಾಂತಗಳು ನಿರ್ಮಾಣ ಆದರೂ ಕೂಡ ಅವುಗಳಲ್ಲಿ ನಾವು ಆ ವಿಶಿಷ್ಟ ಶಕ್ತಿಯನ್ನು ಕಂಡು ಹಿಡಿದು ರಾಷ್ಟ್ರೀಯತೆಯನ್ನು ಕಾಣಬೇಕು ಎಂದು ಅವರು ನಂಬಿದ್ದರು. ಕರ್ನಾಟಕದಲ್ಲಿ ಭಾರತವಿದೆ ಎಂಬ ಅವರ ಕಲ್ಪನೆ ಅದ್ವೈತಪರವಾದದ್ದು. ವಿಶ್ವವೇ ದೇವಾಂಶ ಸಂಭೂತವಾದಾಗ, ಭಾರತವೇನು, ಕರ್ನಾಟಕವೇನು ಇವೆಲ್ಲದರಲ್ಲಿ ದೈವತ್ವ ಇದ್ದೇ ಇದೆ. ಹಾಗಾದರೆ ಕರ್ನಾಟಕ ಏಕೀಕರಣಕ್ಕಾಗಿ ಯಾಕೆ ಪರದಾಡಿದರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಕಾರಣ ಜನರಲ್ಲಿ ಕನ್ನಡ ಭಾಷೆಯ, ತಮ್ಮ ಸಂಸ್ಕೃತಿಯ ಅಭಿಮಾನವನ್ನು ಜಾಗೃತಗೊಳಿಸಲು ಆಗ ಅದು ಅತಿ ಅವಶ್ಯವಾಗಿತ್ತು. ಕನ್ನಡಿಗರೇ ಕರ್ನಾಟಕದ ಹಾಗೂ ಕನ್ನಡದ ಸೇವೆ ಮಾಡದಿದ್ದರೆ ಇನ್ನಾರು ಮಾಡುವರು? ಕುವೆಂಪು ವಿರಚಿತ ಕವನ "ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಇದೇ ತತ್ವವನ್ನು ಒಳಗೊಂಡಿದೆ. ಕರ್ನಾಟಕವು ಭಾರತೀಯತೆಯಿಂದ ಬೇರ್ಪಟ್ಟ ವಿಷಯವಾಗಿರಲಿಲ್ಲ. ಕನ್ನಡ ಸಾಂಸ್ಕೃತಿಕ ಸಿರಿವಂತಿಕೆಯನ್ನು ಎತ್ತಿ ಹಿಡಿಯುವದು ಮತ್ತು ಅದರ ಬಗ್ಗೆ ಜನ ಜಾಗೃತಿ ಮೂಡಿಸುವದು ರಾಷ್ಟ್ರಾಭಿಮಾನದ ದ್ಯೋತಕವಾಗಿತ್ತು.

ಕರ್ನಾಟಕದ ಜೋಸೆಫ್ ಮ್ಯಾಜ್ಜಿನಿ ಆಲೂರರು

೧೯ನೆಯ ಶತಮಾನದ ಯುರೋಪ ಖಂಡದಲ್ಲಿಯ ಅನೇಕ ರಾಜಕೀಯ ಆಗು ಹೋಗುಗಳಲ್ಲಿ ಇಟಲಿಯ ಏಕೀಕರಣ ಒಂದು ಮಹತ್ವದ ಘಟನೆಯೆಂದು ಇತಿಹಾಸಕಾರರ ಮತ. ನೆಪೋಲಿಯನ್ ಬೊನಾಪಾರ್ಟೆಯನ್ನು ಸೋಲಿಸಿದ ವಿಜೇತ ರಾಷ್ಟ್ರಗಳು ತಮ್ಮತಮ್ಮಲ್ಲಿ ಇಟಲಿಯ ಪ್ರದೇಶಗಳನ್ನು ಹಂಚಿಕೊಂಡರು. ಹೀಗಾಗಿ ೧೮೪೮ ರಲ್ಲಿ ಇಟಲಿ ವಿಧ ವಿಧ ಪರಕೀಯ ರಾಜಮಹಾರಾಜರು ಆಳುವ ಸಣ್ಣ ಪುಟ್ಟ ರಾಜ್ಯಗಳ ಒಂದು ಸಮೂಹವಾಗಿತ್ತು. ಈ ಸಮೂಹದಲ್ಲಿ ಯಾವಪ್ರಕಾರದ ಏಕತೆ ಇರಲಿಲ್ಲ-ಭೌಗೋಳಿಕ, ರಾಜಕೀಯ, ಭಾಷಿಕ, ಐತಿಹಾಸಿಕ ಇತ್ಯಾದಿ. ಅಂತಹ ಸಮಯದಲ್ಲಿ ಜೊಸೆಫ್ ಮ್ಯಾಜಿನಿಯೆಂಬ ತರುಣನು ಮುಂದೆ ಬಂದು ಜನರಲ್ಲಿ ಏಕೀಕರಣದ ಹಾಗೂ ಸ್ವಾತಂತ್ರ್ಯದ ಜಾಗೃತಿ ತಂದ ಮಹಾಪುರುಷ. ಕರ್ನಾಟಕಕ್ಕೆ ಕೂಡ-ಭೌಗೋಳಿಕ, ರಾಜಕೀಯ, ಭಾಷಿಕ, ಐತಿಹಾಸಿಕ ಐಕ್ಯತೆಯ ಅಭಾವವಿತ್ತು. ಮ್ಯಾಜಿನಿಯಂತೆ ಆಲೂರರು ಜನರಲ್ಲಿ ರಾಷ್ಟ್ರೀಯತೆಯ ಹಾಗೂ ಕನ್ನಡಿಗರ ಏಕೀಕರಣದ ಅರಿವು ತರಲು ಬಹಳ ಹೆಣಗಾಡಿದ ಜೀವ.

ಆಲೂರರು ಹಂಪಿಯ ತೀರ್ಥಯಾತ್ರೆಗೆ ಹೋದಾಗ ವಿಜಯನಗರದ ಭವ್ಯ ಸಾಮ್ರಾಜ್ಯದ ಅವಶೇಷಗಳನ್ನು ಕಂಡು, ಅದು ಕರ್ನಾಟಕದಲ್ಲಿತ್ತು ಹಾಗೂ ಇದನ್ನಾಳಿದ ಕೃಷ್ಣದೇವರಾಯನಂತಹ ಧೀಮಂತ ಸಾಮ್ರಾಟನು ಕರ್ನಾಟಕವನ್ನು ಆಳಿದವನು ಎಂಬ ಸತ್ಯದ ಅರಿವು ಅವರ ಜೀವನದ ಪರಿವರ್ತನೆಯ ದಿನ ಹೌದು. ಅದು ಕರ್ನಾಟಕದ ಪರಿವರ್ತನೆಯ ದಿನ ಕೂಡ, ಆ ಕ್ಷಣದಿಂದ ಶುರುವಾಯಿತು ಕರ್ನಾಟಕದ ಏಕೀಕರಣದ ಆಲೋಚನೆ.

ರಾಜಕೀಯ ಜಾಗೃತಿ ಹಾಗೂ ಸಾಂಸ್ಕೃತಿಕ ಉತ್ಸಾಹದಿಂದ ತುಂಬಿ ತುಳುಕುತ್ತಿದ್ದ ಪುಣೆಯಿಂದ ಮರಳಿದ ಆಲೂರರಿಗೆ ಕಂಡದ್ದು ಮಲಗಿ ನಿದ್ರಿಸುತ್ತಿದ್ದ ಧಾರವಾಡವನ್ನು ಕನ್ನಡ ಭಾಷೆಯ ಬಗ್ಗೆ ಇರುವ ಅನಾಸ್ಥೆ ಕಂಡು ಮರುಗಿದರು. ಮುಂಬೈ-ಕರ್ನಾಟಕ, ಪ್ರಾಂತದಲ್ಲಿರುವ ಕನ್ನಡಿಗರು ಮರಾಠಿಗರ ಪೊಳ್ಳು ಅಹಂಕಾರಕ್ಕೆ ತುತ್ತಾಗಿದ್ದರು. ತಮ್ಮ ಇತಿಹಾಸ, ಸಂಸ್ಕೃತಿ, ಭಾಷೆ, ಸಂಗೀತ, ಕಲೆ ಇತ್ಯಾದಿ ಅತಿಶಯ ಶ್ರೀಮಂತವಾಗಿದೆ ಎಂದು ಹೆಮ್ಮೆ ಪಡುವ ಮರಾಠಿಗರ ಮುಂದೆ ಕನ್ನಡಿಗರಿಗೆ ತಾವು ಕ್ಷುಲ್ಲಕರು, ತಮಗೆ ಹೆಮ್ಮೆ ಪಡಲು ಏನೂ ಇಲ್ಲವೆಂಬ ಭಾವನೆ ಬರತೊಡಗಿತು. ಬಂಗಾಲಕ್ಕೆ ಮಹಾರಾಷ್ಟ್ರಕ್ಕೆ ಉಜ್ವಲ ಇತಿಹಾಸವಿದೆ ಅನೇಕ ಸಂತರು, ರಾಷ್ಟ್ರ ಕಟ್ಟುವರು ಆಗಿ ಹೋಗಿದ್ದಾರೆ, ಆದರೆ ಕರ್ನಾಟಕದಲ್ಲಿ ಇಂತಹದೇನು ಇಲ್ಲೆಂದು ಕೀಳುತನ ಭಾವಿಸಿದರು. ಇಂತಹ ಪರಿಸ್ಥಿತಿಯಲ್ಲಿ ಕನ್ನಡಾಭಿಮಾನ, ತಮ್ಮ ಇತಿಹಾಸ ಹಾಗೂ ಸಂಸ್ಕೃತಿಯ ಅರಿವು ಹುಟ್ಟಿಸುವದೇ ತಮ್ಮ ಕರ್ತವ್ಯವೆಂದೆಣಿಸಿ ಆಲೂರರು ಕಾರ್ಯವೃತ್ತರಾದರು.

ಆಲೂರರು ಇಟಲಿಯ ಜೊಸೆಫ್ ಮ್ಯಾಜಿನಿಯಂತೆ ವಿವಿಧ ಭಾಗಗಳಲ್ಲಿ ಹಂಚಿಹೋದ ಕರ್ನಾಟಕದ ಜನರ ಮನದಲ್ಲಿ ಕರ್ನಾಟಕದ ಅಖಂಡತೆಯ ಕಲ್ಪನೆಯನ್ನು ಮೂಡಿಸಲು ಶತ ಪ್ರಯತ್ನ ಮಾಡಿದರು. ರಾಜ್ಯದ ಐಕ್ಯತೆಗೆ ಬೇಕಾಗುವ ಎಲ್ಲ ಸಾಧನೆಗಳನ್ನು ಪೂರೈಸಿದರು. ಕರ್ನಾಟಕದ ಏಕೀಕರಣದ ಅಡಿಗಲ್ಲು ಹಾಕಿದರು. ಮುಂದೆ ಈ ಕಾರ್ಯವನ್ನು ಮುಂದುವರೆಸಿದವರು ಅನೇಕರು. ವಿಚಾರವಾದಿ ಹಾಗೂ ಧ್ಯೇಯವಾದಿ ಆದ ಮ್ಯಾಜಿನಿಯ ಬರಹಗಳು ರಾಷ್ಟ್ರೀಯತ್ವದ ಸಾಹಿತ್ಯದಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಬರಹಗಳಿಂದ ಪ್ರೇರಿತರಾಗಿ ಅನೇಕ ಸ್ವಾತಂತ್ರ್ಯ ಯೋಧರು ೨೦ನೆಯ ಶತಮಾನದಲ್ಲಿ ತಮ್ಮ ತಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮಗಳಿಗೆ ಕಾರಣೀಭೂತರಾದರು. ಮುಂದೆ ಗೆರೆಬಾಲ್ಡಿ ಹಾಗೂ ಕವೂರ್ ಯುದ್ಧ ಹಾಗೂ ಕೂಟನೀತಿಯಿಂದ ಇಟಲಿಯ ಏಕೀಕರಣ ಸಾಧ್ಯ ಮಾಡಿದರು. ಅದೇ ತರಹ ಅಲೂರರು ಹಾಕಿಕೊಟ್ಟ ಹಾದಿಯಲ್ಲಿ ಕರ್ನಾಟಕದ ವೀರ ಸೈನಿಕರು ಅಹಿಂಸಾತ್ಮಕ (ಇದು ಗಾಂಧೀವಾದ) ರೀತಿಯಲ್ಲಿ ಕರ್ನಾಟಕದ ಏಕೀಕರಣ ಸಾಧ್ಯಮಾಡಿದರು. ಆಲೂರರ ಕರ್ನಾಟಕ ಗತವೈಭವ ಹಾಗೂ ಅವರ ಅನೇಕ ಕೃತಿಗಳಿಂದ ಕರ್ನಾಟಕದ ಸ್ವಾತಂತ್ರ ಯೋಧರು ಪ್ರೇರಿತರಾಗಿದ್ದಾರೆಂದು ಸೂರ್ಯನಾಥ ಕಾಮತರು ತಮ್ಮ ಬರಹಗಳಲ್ಲಿ ಹಾಗೂ ಭಾಷಣಗಳಲ್ಲಿ ಹೇಳಿದ್ದಾರೆ.

ಕರ್ನಾಟಕದ ಏಕೀಕರಣವನ್ನು ಕಾರ್ಯರೂಪಕ್ಕೆ ತರಲು ೧೯೧೬ರಲ್ಲಿ ಕರ್ನಾಟಕ ಸಭೆಯನ್ನು ಧಾರವಾಡದಲ್ಲಿ ಆಲೂರರು ಸ್ಥಾಪಿಸಿದರು. ಪ್ರತಿ ವರ್ಷ ಆಲೂರರ ಮಾರ್ಗದರ್ಶನದಲ್ಲಿ ಕೂಡುತ್ತಿದ್ದ ಈ ಸಭೆ ೧೯೨೦ ರ ಸುಮಾರಿಗೆ ಕನ್ನಡಿಗರನ್ನು ಸಂಘಟಿಸಿ, ನಾಗಪೂರ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಲು ಅಣಿಮಾಡಿತು. ಆಲೂರರ ಸಹಯೋಗಿಯಾದ ಕಡಪ ರಾಘವೇಂದ್ರರಾಯರು ಕರ್ನಾಟಕದಾದ್ಯಂತ ಪ್ರವಾಸ ಕೈಕೊಂಡು ಜನರನ್ನು ಹುರಿದೆಬ್ಬಿಸಿದರು. ಇವರುಗಳ ಪ್ರಯತ್ನದಿಂದ ೮೦೦ ಸ್ವಯಂಸೇವಕರು ಕರ್ನಾಟಕವನ್ನು ಪ್ರತಿನಿಧಿಸಿದರು. ಈ ಅಧಿವೇಶನದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಕಾಂಗ್ರೆಸ್ ಕಮಿಟಿ ಏರ್ಪಡಿಸುವ ಪರವಾನಗಿ ಕೊಟ್ಟರು. ಇದು ಏಕೀಕರಣದ ದಿಶೆಯಲ್ಲಿ ಆದ ಒಂದು ಮಹತ್ವಪೂರ್ಣ ನಿರ್ಣಯ. ೧೯೨೦ ರಲ್ಲಿ ಪ್ರಥಮ ಕರ್ನಾಟಕ ರಾಜಕೀಯ ಪರಿಷತ್ತು ವಿ.ಪಿ. ಮಾಧವರಾವರ ಅಧ್ಯಕ್ಷತೆಯಲ್ಲಿ ಸೇರಿತು. ಆಗಿನಿಂದ ಲೆಕ್ಕವಿಲ್ಲದಷ್ಟು ಖಾದಿ, ಆಯುರ್ವೆದ, ಇತಿಹಾಸ, ಉದ್ಯೋಗ, ವಾಣಿಜ್ಯ, ಪತ್ರಿಕಾರಂಗ, ಕ್ರೀಡೆ ಮುಂತಾದ ಅನೇಕ ಕ್ಷೇತ್ರಗಳಿಗೆ ಸಂಬಂಧಪಟ್ಟ ಸಭೆ ಸಮಾರಂಭಗಳು ಕರ್ನಾಟಕತ್ವವನ್ನು ಸಾರಿದವು ಮತ್ತು ಅಖಂಡ ಕರ್ನಾಟಕದ ಕಲ್ಪನೆಗೆ ಚಾಲನೆ ದೊರಕಿತು. ೧೯೨೪ ರ ಬೆಳಗಾವಿ ಅಧಿವೇಶನವು ಏಕೀಕರಣದ ಚಳುವಳಿಗೆ ಇನ್ನೊಂದು ದಾಪುಗಾಲು ಹಾಕಿತು. ಅಧಿವೇಶನದ ಜಾಗಕ್ಕೆ ವಿಜಯನಗರ ಎಂದು ಕರೆದು, ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಯ ಸಿರಿವಂತಿಕೆಯನ್ನು ಬಹಳ ಚೆನ್ನಾಗಿ ಪ್ರದರ್ಶಿಸಿದರು. ಕರ್ನಾಟಕದ ಜನರಿಗೂ ಹಾಗೂ ಅನ್ಯರಿಗೂ ಇದೊಂದು ಕರ್ನಾಟಕವನ್ನು ಅರಿತುಕೊಳ್ಳುವ ಒಂದು ಒಳ್ಳೆಯ-ಸಂದರ್ಭವಾಯಿತು. ಇದೇ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣರಾಯರು ಬರೆದ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಎಂಬ ಕವಿತೆಯನ್ನು ಗಂಗೂಬಾಯಿ ಹಾನಗಲ್ ಅವರು ಹಾಡಿದರು. ಇದು ಮುಂದೆ ಕನ್ನಡ ನಾಡಿನ ರಾಷ್ಟ್ರಗೀತೆಯಾಯಿತು. ಹೀಗೆ ಆಲೂರರು ಹಾಕಿಕೊಟ್ಟ ದಿಶೆಯಲ್ಲಿ ಮುಂದೆ ಕರ್ನಾಟಕದ ಪುಢಾರಿಗಳು ಮಹೋನ್ನತವಾದ ಕಾರ್ಯವನ್ನು ಮುಂದುವರೆಸಿಕೊಂಡು ಬಂದು ಏಕೀಕರಣವನ್ನು ಸಾಧ್ಯ ಮಾಡಿದರು.

ಟಿಳಕರು ಗಣೇಶೋತ್ಸವ ಮಹಾರಾಷ್ಟ್ರದಲ್ಲಿ ಪ್ರಾರಂಭಿಸಿದ ಮಾದರಿಯಲ್ಲಿ ಕರ್ನಾಟಕದಲ್ಲಿ ದಸರಾ ಹಾಗೂ ನಾಡಹಬ್ಬ, ಪಂಪೋತ್ಸವ, ವ್ಯಾಸೋತ್ಸವ, ಕುಮಾರವ್ಯಾಸ ಉತ್ಸವ, ವಿಜಯನಗರೋತ್ಸವ, ವಿದ್ಯಾರಣ್ಯ ಉತ್ಸವ, ಬಸವೇಶ್ವರ ಉತ್ಸವ ಮುಂತಾದ ಉತ್ಸವಗಳನ್ನು ಮಾಡಲು ಪ್ರೋತ್ಸಾಹಿಸಿದರು. ಕನ್ನಡಿಗರಲ್ಲಿ ಏಕತೆಯ ಭಾವತರಲು ದೇಶಿ ಆಟಗಳು, ಭಾಷಣಗಳು, ಸ್ಪರ್ಧೆಗಳು ನಡೆಯಿಸಲು ಒತ್ತಾಯಿಸಿದರು. ಬೆಂಗಳೂರು, ಗದಗ, ಹುಬ್ಬಳ್ಳಿ ಮುಂತಾದ ಊರುಗಳಲ್ಲಿ ಛೇಂಬರ್ ಆಫ್ ಕಾಮರ್ಸ್ ಸ್ಥಾಪನೆಗೆ ನಾಂದಿ ಹಾಕಿದರು. ಕರ್ನಾಟಕದ ಸರ್ವಾಂಗೀಣ ಪೋಷಣೆಗೆ ಹಾಗೂ ಉನ್ನತಿಗೆ ಬೇಕಾಗುವ ಎಲ್ಲದರ ಬಗ್ಗೆ ಚಿಂತನೆ, ಕಳಕಳಿ ಅಷ್ಟೇ ಅಲ್ಲ ಅವುಗಳನ್ನು ಕಾರ್ಯರೂಪಕ್ಕೆ ತರಲು ಅವಿರತವಾಗಿ ಹೆಣಗಾಡಿದರು. ಇದೇ ಕಾರಣಕ್ಕಾಗಿ ದ.ರಾ.ಬೇಂದ್ರೆಯವರು ಆಲೂರರನ್ನು ಕರ್ನಾಟಕ ಪ್ರಾಣೋಪಾಸಕರೆಂದು ಕರೆಯುತ್ತಾರೆ. ಕರ್ನಾಟಕದ ಬಗ್ಗೆ ಇಷ್ಟು ಚಿಂತನೆ ಹಾಗೂ ಕೆಲಸವನ್ನು ನಿಷ್ಟೆಯಿಂದ ಮಾಡಿದವರು ಇವರೊಬ್ಬರೇ ಅನ್ನುತ್ತಾರೆ.

ಆಲೂರರ ಸಾಹಿತ್ಯ/ಸಾಂಸ್ಕೃತಿಕ ಕೊಡುಗೆ

ಕನ್ನಡದ ಅಭಿಮಾನ ಆಲೂರರಿಗೆ ವಿದ್ಯಾರ್ಥಿ ದೆಸೆಯಿಂದಲೇ ಇತ್ತು. ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕನ್ನಡಿಗರನ್ನು ಒಟ್ಟುಗೂಡಿಸಿ ಕನ್ನಡ ನಾಟಕಗಳನ್ನು ಕೂಡಿಸುತ್ತಿದ್ದರು. ಕಾಲೇಜು ವಾಚನಾಲಯದಲ್ಲಿ ಕನ್ನಡ ಪುಸ್ತಕಗಳನ್ನು ಇಡಬೇಕೆಂದು ಬೇಡಿಕೆ ಇತ್ತರು. ಧಾರವಾಡಕ್ಕೆ ಬಂದ ಮೇಲೆ ಅಲ್ಲಿ ಕನ್ನಡ ವಾತಾವರಣ ನಿರ್ಮಿಸಲು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಅವರ ಮುಂದಾಳುತನದಲ್ಲಿ ಕನ್ನಡ ನಾಟಕ, ಸಮ್ಮೇಳನಗಳು, ಸಂಗೀತ ಕಛೇರಿಗಳು ಹಾಗೂ ಕಲಾ ಪ್ರದರ್ಶನಗಳು ಜನ ಸಾಮಾನ್ಯರಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು, ಗೌರವ ತರಲು ಬಹಳ ಸಹಾಯವಾದವು.

ಮೊದಲನೆಯದಾಗಿ ವಿದ್ಯಾವರ್ಧಕ ಸಂಘದ ಕಾರ್ಯಭಾರ ಹೊತ್ತರು. ಈ ಸಂಸ್ಥೆಯನ್ನು ೧೮೯೦ ರಲ್ಲಿ ರಾ.ಹ. ದೇಶಪಾಂಡೆಯವರು ಧಾರವಾಡದಲ್ಲಿ ಸ್ಥಾಪಿಸಿದ್ದರು. ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಈ ಸಂಸ್ಥೆ ಕನ್ನಡ ಗ್ರಂಥ ಪ್ರಕಾಶನ, ನಿಯತಕಾಲಿಕ ಪ್ರಕಟಣೆ, ಲೇಖಕರಿಗೆ ಪ್ರೋತ್ಸಾಹ ಇವು ಮುಖ್ಯವಾಗಿ ನಡೆಯುತ್ತಿದ್ದವು. ಮರಾಠಿ ಪ್ರಭಾವದ ಕಾರಣ ಕನ್ನಡದಲ್ಲಿ ಉತ್ತಮ ಗ್ರಂಥಗಳು ಇಲ್ಲದ್ದು ಕಂಡುಕೊಂಡರು, ಹಾಗೂ ಕನ್ನಡದಲ್ಲಿ ಏಕರೂಪತೆ ಇಲ್ಲದೇ ಇರುವದು ಗ್ರಂಥ ಪ್ರಚಾರಕ್ಕೆ ದೊಡ್ಡ ಆತಂಕವೆಂದೆಣಿಸಿ ಏಕರೂಪತೆ ತರಲು ಏಕಾಂಗಿಯಾಗಿ ಶ್ರಮಿಸಿದರು. ಅವರ ಶ್ರಮದ ಪರಿಣಾಮವಾಗಿ ೧೯೦೭ ರಲ್ಲಿ ಕರ್ನಾಟಕಸಂಘದ ವಾರ್ಷಿಕ ಅಧಿವೇಶನದ ಅಂಗವಾಗಿ ಧಾರವಾಡದಲ್ಲಿ ಪ್ರಥಮ ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸಿದರು. ಈ ಸಮ್ಮೇಳನಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದ ಗ್ರಂಥಕರ್ತರು, ವಿದ್ಯಾಧಿಕಾರಿಗಳು, ಶಿಕ್ಷಕರು ಸೇರಿ, ಎಲ್ಲರಿಗೂ ಸಮ್ಮತವಾಗುವ ರೀತಿಯಲ್ಲಿ ಗ್ರಂಥಗಳ ರಚನೆಯಾಗಬೇಕು ಹಾಗೂ "ಕರ್ನಾಟಕ ಗ್ರಂಥಮಾಲೆ" ಎಂಬ ಹೆಸರಿನ ಪ್ರಕಾಶಕ ಸಂಸ್ಥೆಯನ್ನು ಪ್ರಾರಂಭಿಸುವ ತೀರ್ಮಾನ ಮಾಡಲಾಯಿತು. ಮರುವರುಷ ಮತ್ತೆ ಧಾರವಾಡದಲ್ಲಿ ಸಮ್ಮೇಳನ ಸೇರಿತು. ಬೆಂಗಳೂರಿನಲ್ಲಿ ಸಮ್ಮೇಳನ ಜರುಗಬೇಕೆಂದು ಆಲೂರರು ಆರು ವರ್ಷ ಪ್ರಯತ್ನ ನಡೆಸಿದರು. ಇದರ ಫಲವಾಗಿ ೧೯೧೫ ರಲ್ಲಿ ದಿವಾನ ವಿಶ್ವೇಶ್ವರಯ್ಯರ ಹೆಸರಿನ ಬಲದಿಂದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಲನದ ರೂಪಗೊಂಡಿತು. ಈಗಿನ ಸಾಹಿತ್ಯ ಪರಿಷತ್ತಿಗೆ ಮಾತೃ ಸ್ವರೂಪವಾಯಿತು. ೧೯೦೮ ರಲ್ಲಿ ಕರ್ನಾಟಕ ಗ್ರಂಥ ಪ್ರಸಾರಕ ಮಂಡಲ ಸ್ಥಾಪನೆಗೆ ಆಲೂರರು ಕಾರಣಕರ್ತರಾದರು. ಇವರದೇ ಆದ ಶಿಕ್ಷಣ ಮೀಮಾಂಸೆ ಹಾಗೂ ಸಂಸಾರ ಸುಖ ಎಂಬ ಎರಡು ಕೃತಿಗಳು ಮುದ್ರಿಸಲ್ಪಟ್ಟವು. ಮುಂದೆ ಹೊಸ ಗ್ರಂಥಗಳು ಬರದೇ ಇದ್ದದ್ದರಿಂದ ಮುದ್ರಣ ನಿಂತುಹೋಯಿತು.

ಧಾರವಾಡದ ನಾಗರಿಕರಿಗೆ ಮಹತ್ವದ ರಾಜಕೀಯ ಗ್ರಂಥಗಳು ಲಭಿಸಬೇಕೆಂಬ ಉದ್ದೇಶ ಇಟ್ಟುಕೊಂಡು ವಾಚನಾಲಯಗಳನ್ನು ಪ್ರಾರಂಭಿಸಿದರು. ಅವರ ಪ್ರಕಾರ ವಾಚನಾಲಯಗಳು ರಾಜಕಾರಣ ಹಾಗೂ ವಾಙ್ಞಯಗಳನ್ನು ಜೋಡಿಸುವ ಕೊಂಡಿ, ಎಲ್ಲ ಕಡೆ ಸ್ಥಾಪಿಸಿದರೆ ಅಖಂಡತೆ ನಿರ್ಮಾಣವಾಗಿ ಏಕೀಕರಣಕ್ಕೆ ಸುಲಭವಾಗುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಇದೇ ಉದ್ದೇಶದಿಂದ ಇಡೀ ಕರ್ನಾಟಕದಲ್ಲಿ ವಾಚನಾಲಯಗಳ ಜಾಳಿಗೆಯನ್ನೇ ಹಬ್ಬಿಸುವ ಯೋಜನೆ ಹಾಕಿಕೊಂಡಿದ್ದರು. ಮುಂದೆ ಮುನ್ನಡೆ ಸಾಧಿಸಿದ ಮೈಸೂರು ಸಂಸ್ಥಾನದಲ್ಲಿ ಕೂಡ ಆಲೂರರ ವಾಚನಾಲಯ ಪ್ರಚಾರದಿಂದ ಪ್ರಭಾವಿತರಾಗಿ ಸಂಸ್ಥಾನದಲ್ಲಿ ವಾಚನಾಲಯಗಳು ಊರು, ಜಿಲ್ಲೆ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ಸ್ಥಾಪನೆ ಮಾಡಲಾಯಿತು.

ಆಲೂರರ ಪತ್ರಿಕಾ ಪ್ರಪಂಚ

ಗೋಖಲೆ, ರಾನಡೆ ಹಾಗೂ ಟಿಳಕರ ಪುಣೆಯ ಶಕ್ತಿಯುತ ಪತ್ರಿಕಾ ಪ್ರಪಂಚದಿಂದ ಧಾರವಾಡಕ್ಕೆ ಬರುತ್ತಲೇ ಆಲೂರರ ಉತ್ಸಾಹ ತಣ್ಣಗಾಯಿತು. ಕಾರಣ ಇಲ್ಲಿ ಎಲ್ಲೆಡೆ ಉತ್ಸಾಹವಿಹೀನ ವಾತಾವರಣವಿತ್ತು. ಕನ್ನಡ ಭಾಷೆಗೆ ಇದ್ದ ನಿರಾದರ, ಆತ್ಮವಿಶ್ವಾಸ ಅಳಿದು ಹೋದ ಮುಂದಾಳುತನವಿಲ್ಲದ ಜನರ ಮಧ್ಯದಲ್ಲಿ ಆಲೂರರು ಕನ್ನಡದ ವಾತಾವರಣವನ್ನು ಬೆಳೆಸಲು ಪಣತೊಟ್ಟರು. ಧಾರವಾಡದ ವಿದ್ಯಾವರ್ಧಕ ಸಂಘದ ವಾಚನಾಲಯದಲ್ಲಿ ಆಲೂರರು ಹೊಕ್ಕಾಗ ಪುಸ್ತಕಗಳ ಮೇಲಿನ ಧೂಳು ಕಂಡು ರಾನಡೆಯವರು ಹೇಳಿದ, ಪುಸ್ತಕಗಳ ಮೇಲಿನ ಧೂಳು ಜಾಡಿಸಿ, ಗ್ರಂಥ ಸಂಗ್ರಹಣೆ ಮಾಡುವದು ಕೂಡ ಒಂದು ದೇಶ ಕಾರ್ಯ ಎಂಬ ಮಾತು ನೆನಪಿನಲ್ಲಿ ಬಂತೆಂದು ಹೇಳುತ್ತಾರೆ. ಸಂಘದ ಕಾರ್ಯಭಾರವನ್ನು ತಾವೇ ಹೊತ್ತರು.

ಮುಂಬೈ-ಕರ್ನಾಟಕ ಪ್ರಾಂತದ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಬಿಜಾಪುರ, ಹಾಗು ಉತ್ತರ ಮತ್ತು ದಕ್ಷಿಣ ಸೋಲಾಪುರದ ತಾಲ್ಲೂಕುಗಳು, ಮಂಗಳವಾಡೆ ಮತ್ತು ಅಕ್ಕಪಕ್ಕದ ಕನ್ನಡ ಮಾತಾಡುವ ಪ್ರದೇಶಗಳಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲ. ಎಲ್ಲರಿಗೂ ಮರಾಠಿ ಕಲಿಯಬೇಕಾಗುತ್ತಿತ್ತು. ಕನ್ನಡದಲ್ಲಿ ಗ್ರಂಥಗಳು ಬರದೇ ಇರುವದಕ್ಕೆ ಮರಾಠಿಗೆ ಇರುವ ಪ್ರಾಧಾನ್ಯವೇ ಕಾರಣವಾಗಿತ್ತು.

ಆಲೂರರ ಸತತ ಪ್ರಯತ್ನದಿಂದ ೧೯೦೭ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಅಧಿವೇಶನದ ಅಂಗವಾಗಿ, ಧಾರವಾಡದಲ್ಲಿ ಪ್ರಥಮ ಕನ್ನಡ ಗ್ರಂಥಕರ್ತರ ಸಮ್ಮೇಳನ ಸೇರಿಸಿ, ಎಲ್ಲ ಭಾಗದವರು ಒಪ್ಪುವ ರೀತಿಯಲ್ಲಿ ಗ್ರಂಥಗಳನ್ನು ರಚಿಸಿ ಕರ್ನಾಟಕ ಗ್ರಂಥ ಮಾಲೆ ಎಂಬ ಹೆಸರಿನಿಂದ ಪ್ರಕಟಿಸತಕ್ಕದ್ದು ಎಂಬ ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಅಧಿವೇಶನಗಳು ಪ್ರತಿವರ್ಷ ಜರುಗಿ, ಕೊನೆಗೆ ೧೯೧೫ರಲ್ಲಿ ಅಖಿಲ ಕರ್ನಾಟಕ ಸಾಹಿತ್ಯ ಪರಿಷತ್ತಿನ ರೂಪದಲ್ಲಿ ನಡೆದು, ಈಗಿನ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಯಾಯಿತು. ಈ ಸಮ್ಮೇಳನವನ್ನು ಆಲೂರರು ಧಾರವಾಡದಿಂದ ನಡೆಸಿದರು. ಇದರ ವಿವರ ಅವರೇ ಬರೆದ ವಾಗ್ಭೂಷಣದ ಸಂಚಿಕೆಯಲ್ಲಿ ಇದೆ. ೧೯೨೦ ರ ಸುಮಾರಿಗೆ ಆಲೂರರು ಆರು ಕನ್ನಡ ಪತ್ರಿಕೆಗಳನ್ನು ನಡೆಸುತ್ತಿದ್ದರು. ಲೋಕಬಂಧು, ಚಂದ್ರೋದಯ ಪತ್ರಿಕೆಗಳಿಗೆ ಸ್ಫೂರ್ತಿದಾಯಕ ಲೇಖನಗಳನ್ನು ಬರೆಯುತ್ತಿದ್ದರು. ಕರ್ನಾಟಕ ಪತ್ರ, ಕರ್ನಾಟಕ ವೃತ್ತ ಹಾಗೂ ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯ ಲೇಖನಗಳನ್ನು ಪೂರೈಸುತ್ತಿದ್ದರು. ಕರ್ನಾಟಕ ವೃತ್ತದಲ್ಲಿ ಅರವಿಂದ ಘೋಷರ ಪತ್ರಗಳ ಭಾಷಾಂತರವನ್ನು ಪ್ರಕಟಿಸಿ ಓದುಗರಿಗೆ ಬಂಗಾಲದ ಈ ಅಪೂರ್ವ ಕ್ರಾಂತಿಕಾರಿಯ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ಕೇಸರಿಯಲ್ಲಿ ಟಿಳಕರ ಮರಾಠಿ ಕೇಸರಿಯ ಲೇಖನಗಳನ್ನು ಭಾಷಾಂತರಿಸಿ ರಾಷ್ಟ್ರೀಯ ವಿಚಾರ ಹಾಗೂ ಜನ ಜಾಗೃತಿಗೆ ಸಹಾಯಕರಾದರು.

ಕರ್ಮವೀರ ಪತ್ರಿಕೆಯಲ್ಲಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಗಂಭೀರ ಚಿಂತನೆ ಮಾಡಿದ್ದಾರೆ. ೧೯೨೧ ರಲ್ಲಿ ಧಾರವಾಡದ ಗೋಲಿಬಾರು ಪ್ರಕರಣದಲ್ಲಿ ಮೂವರು ಸ್ವಯಂಸೇವಕರು ಸತ್ತಾಗ ಆಲೂರರ ಕರ್ಮವೀರದಲ್ಲಿಯ "ಭೂರಕ್ಕಸಾಯ ಸ್ವಾಹಾ" ವೆಂಬ ಲೇಖನ ಬಹಳ ಪ್ರಸಿದ್ಧಿ ಪಡೆಯಿತು.

"ಜಯಕರ್ನಾಟಕ" ಈ ಮಾಸಪತ್ರಿಕೆಯಲ್ಲಿ ಕರ್ನಾಟಕದ ಅನೇಕ ಭಾಗಗಳಿಂದ ಲೇಖಕರು ಕರ್ನಾಟಕದ ಸಾಮಾಜಿಕ, ಆರ್ಥಿಕ, ಸಮಸ್ಯೆಗಳನ್ನು ಕುರಿತು, ಸಣ್ಣ ಕತೆ, ಧಾರ್ಮಿಕ ಚಿಂತನೆ, ಸಾಹಿತ್ಯ ವಿಮರ್ಶೆಗಳ ಬಗ್ಗೆ ಬರೆಯುತ್ತಿದ್ದರು. ಈ ಪತ್ರಿಕೆ ಎಷ್ಟು ಪ್ರಸಿದ್ಧಿ ಪಡೆದಿತ್ತೆಂದರೆ ಮರಾಠಿ ವಿಶ್ವಕೋಶದ ಸಂಪಾದಕರಾದ ಹಾಗೂ ಮರಾಠಿ ಸಾರಸ್ವತ ಲೋಕದಲ್ಲಿ ಮನ್ನಣೆ ಪಡೆದ ಡಾ. ಕೇತಕರರು ಹೊಗಳಿ ಇಂಥಹ ಮಾಸಪತ್ರಿಕೆ ಮರಾಠಿಯಲ್ಲಿಯೂ ಇಲ್ಲವೆಂದು ಹೇಳಿದ್ದಾರೆ. ಈ ಮಾತನ್ನು ಆಲೂರರು ಕರ್ನಾಟಕತ್ವದ ವಿಕಾಸದಲ್ಲಿ ಹೇಳಿಕೊಂಡಿದ್ದಾರೆ.

ಗ್ರಂಥಕರ್ತರು/ಇತಿಹಾಸಕಾರರು

ಮರಾಠಿಯ ಪ್ರಭಾವದ ಕಾರಣದಿಂದಾಗಿ ಆಗಿನ ಬಾಂಬೆ ಕರ್ನಾಟಕದಲ್ಲಿ ಕನ್ನಡ ಗ್ರಂಥ ರಚನೆಗೆ ಆಸ್ಪದವಿರಲಿಲ್ಲವೆಂದು ಈ ಹಿಂದೆ ಹೇಳಿದೆ. ಜನರಲ್ಲಿ ದೇಶ ಭಕ್ತಿ ಮೂಡಿಸಲು, ತಮ್ಮ ಘನ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ನೀಡಲು ಕನ್ನಡದಲ್ಲಿ ಬರವಣಿಗೆ ಅತ್ಯಂತ ಅವಶ್ಯಕವಾಗಿತ್ತು. ಆಲೂರರು ಪ್ರಾರಂಭಿಸಿದ ಕರ್ನಾಟಕ ಗ್ರಂಥಮಾಲೆ ಹಾಗೂ ಕರ್ನಾಟಕ ಗ್ರಂಥ ಪ್ರಸಾರಕ ಮಂಡಲವೆಂಬ ಸಹಕಾರಿ ಪ್ರಕಾಶನ ಸಂಸ್ಥೆಗಳು ಈ ಅಭಾವವನ್ನು ತುಂಬಿಕೊಟ್ಟವು. ಆಲೂರರು ತಮ್ಮ ಜೀವಮಾನದಲ್ಲಿ ಅನೇಕ ಗ್ರಂಥಗಳನ್ನು ಬರೆದರು. ಅವುಗಳಲ್ಲಿ ಪ್ರಕಟಿತ ಗ್ರಂಥಗಳು ಸುಮಾರು ಇಪ್ಪತ್ತು-ಇಪ್ಪತ್ತೈದು ಇರಬಹುದು.

೧೯೦೯ ರಲ್ಲಿ "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯ"

ಪ್ರಕಟಿತವಾಯಿತು. ವಿಜಯನಗರ ರಾಜ್ಯ ಸಂಸ್ಥಾಪನೆಗೆ ವಿದ್ಯಾರಣ್ಯರ

ಕೊಡುಗೆಯನ್ನು ಸವಿಸ್ತಾರವಾಗಿ ವರ್ಣಿಸಿದ್ದಾರೆ. ತದನಂತರದ ಸಂಶೋಧನಗಳ ನಂತರ ಹೆಚ್ಚಿನ ಮಾಹಿತಿ ಈಗ ಉಪಲಬ್ಧವಾಗಿದೆ.

ವೆಂ.ನ. ಮಗದಾಳರೊಂದಿಗೆ ಕೂಡಿ "ಶಿಕ್ಷಣ ಮೀಮಾಂಸೆ" ಯನ್ನು ೧೯೧೧ ರಲ್ಲಿ ಆಲೂರರು ಹೊರತಂದರು. ಅವರ ಜನಪ್ರಿಯ ಗ್ರಂಥವಾದ "ಕರ್ನಾಟಕ ಗತವೈಭವ" ೧೯೧೭ ರಂದು ಬೆಳಕಿಗೆ ಬಂದಿತು. ಇದು ಮುಖ್ಯವಾಗಿ ಕರ್ನಾಟಕದ ಇತಿಹಾಸವನ್ನು ಕನ್ನಡಿಗರ ಮುಂದೆ ಇಡಲು ಬರೆದ ಗ್ರಂಥ. ಕರ್ನಾಟಕವು ಚೈತನ್ಯಯುಕ್ತವಾದ ಘನ ಸಂಸ್ಕೃತಿ ಪಡೆದ ರಾಷ್ಟ್ರವೆಂದು ಪುರಾವೆ ಸಹಿತ ಪ್ರತಿಪಾದಿಸಿದ್ದಾರೆ. ಈ ಗ್ರಂಥವು ಮುಂದೆ ಉತ್ತರ ಕರ್ನಾಟಕದ ಅನೇಕ ಸ್ವಾತಂತ್ರ್ಯ ಯೋಧರ ಮತ್ತು ಚಳುವಳಿಗಾರರಿಗೆ ಪ್ರೇರಕ ಹಾಗೂ ಸ್ಫೂರ್ತಿದಾಯಕವಾಯಿತು ಎಂದು ಸೂರ್ಯನಾಥ ಕಾಮತರು ತಮ್ಮ "ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು" ಎಂಬ ಗ್ರಂಥದಲ್ಲಿ ನಮೂದಿಸಿದ್ದಾರೆ.

ಅದೇ ವರ್ಷ "ನಾವು ಈಗ ಬೇಡುವ ಸ್ವರಾಜ್ಯ" ಪ್ರಕಟಿತವಾಯಿತು.

೧೯೨೦ ರಲ್ಲಿ ಸುಖವೂ ಶಾಂತಿಯೂ ಭಾಗ ೧ ಹಾಗೂ ಭಾಗ ೨ ಹೊರಬಂದಿತು.

ಆಲೂರರು "ಸ್ವಾತಂತ್ರ್ಯ ಸಂಗ್ರಾಮ" ಬರೆದು ತಮ್ಮ ಪೂರ್ವಜರು ಹೇಗೆ ಧೈರ್ಯಸ್ಥೈರ್ಯದಿಂದ ಆಂಗ್ಲ ಸಾಮ್ರಾಜ್ಯದ ವಿರುದ್ಧ ಸಂಘರ್ಷ ಮಾಡಿದ ಬಗ್ಗೆ ತಿಳಿಸಿ ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತ ಮಾಡಿದ್ದಾರೆ.

೧೯೨೮ ರಲ್ಲಿ ಪ್ರಕಟಿಸಲಾದ "ರಾಷ್ಟ್ರೀಯತ್ವದ ಮೀಮಾಂಸೆ" ಎಂಬ ಈ ಕಿರು ಗ್ರಂಥವು ಆಧ್ಯಾತ್ಮ, ವೇದಾಂತ, ಭಾರತೀಯ ತತ್ವಜ್ಞಾನ, ಸಂಸ್ಕೃತಿ ಹಾಗೂ ಪರಂಪರೆಯನ್ನು ತಳಹದಿಯಾಗಿಟ್ಟುಕೊಂಡು ರಾಷ್ಟ್ರೀಯತ್ವದ ಪ್ರತಿಪಾದನೆ ಮಾಡುತ್ತದೆ. ಆಲೂರರು ರಾಷ್ಟ್ರವನ್ನು ಪುರುಷನಿಗೆ ಹೋಲಿಸುತ್ತಾರೆ. ಒಂದು ಜೀವಕ್ಕೆ, ಮನಸ್ಸು, ದೇಹ ಮತ್ತು ಆತ್ಮವು ಹೇಗೆ ಮುಖ್ಯವಾದ ಘಟಕವೋ ಹಾಗೆ ಒಂದು ರಾಷ್ಟ್ರಕ್ಕೆ ಇವು ಮೂರು ಇಲ್ಲದಿದ್ದರೆ ರಾಷ್ಟ್ರವೆನಿಸಲಾರದು. ರಾಷ್ಟ್ರಕ್ಕೆ ಸಮಾಜವೇ ದೇಹ, ದೇಶ ಮತ್ತು ಸಂಸ್ಕೃತಿ ಮನಸ್ಸು ಹಾಗು ಇವುಗಳ ಏಕಸೂತ್ರತೆ ಒಂದೇ ಜೀವವಾಗಿ ಎಲ್ಲರಲ್ಲಿ ಸಂಚರಿಸಬೇಕು. ಇದೇ ಆಲೂರರು ಹೇಳುವ ಆತ್ಮ.

"ಕರ್ನಾಟಕದ ವೀರರತ್ನಗಳು" ಈ ಹೊತ್ತಿಗೆಯಲ್ಲಿ ಶೂರ ವೀರ ಅರಸರ, ಸೇನಾಪತಿಗಳ ಬಗ್ಗೆ ಮಾಹಿತಿ ಕೊಟ್ಟು ಕನ್ನಡಿಗರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

ಆಲೂರರ ಮನಸ್ಸು ಕೊನೆ-ಕೊನೆಗೆ ತತ್ವಜ್ಞಾನದತ್ತ ಸೆಳೆದ ಕಾರಣ ೧೯೩೪ ರಿಂದ ೧೯೫೭ ರ ಕಾಲದಲ್ಲಿ "ಗೀತಾ ಪ್ರಕಾಶ", "ಗೀತಾ ಪರಿಮಳ", "ಗೀತಾ ಸಂದೇಶ", "ಗೀತಾ ಭಾವ ಪ್ರದೀಪ" ಎರಡು ಭಾಗಗಳಲ್ಲಿ, "ಶ್ರೀಮಧ್ವಾಚಾರ್ಯರ ಮೂಲಸಿದ್ಧಾಂತ" ಹಾಗೂ "ಮಧ್ವಸಿದ್ಧಾಂತ ಪ್ರವೇಶಿಕಾ" ಇತ್ಯಾದಿ ಹಾಗೂ ಇನ್ನೂ ಅನೇಕ ಮಧ್ವಸಿದ್ಧಾಂತದ ಮೇಲೆ ಗ್ರಂಥಗಳು ಹೊರಬಂದವು. ಗೀತೆಯ ಕುರಿತು ಚಿಂತನವನ್ನವರು ೧೯೩೧ ರಲ್ಲಿ ಕಲಘಟಗಿಯಲ್ಲಿನ ಕಾರಾಗೃಹದಲ್ಲಿದ್ದಾಗ ಮಾಡಿದರು.

"ನನ್ನ ಜೀವನ ಸ್ಮೃತಿಗಳು" ಇದು ಪೂರ್ವರಂಗ ಹಾಗೂ ಉತ್ತರ ರಂಗ ಎರಡು ಭಾಗಗಳಲ್ಲಿ ೧೯೪೦ ಹಾಗೂ ೪೧ ರಲ್ಲಿ ಪ್ರಕಟಿಸಲಾಯಿತು. ಈ ಗ್ರಂಥದಲ್ಲಿ ಕರ್ನಾಟಕತ್ವದ ವಿಶ್ಲೇಷಣೆ ಮಾಡುತ್ತಾರೆ. ಅವರ ಪ್ರಕಾರ ಕರ್ನಾಟಕತ್ವವು ಕೂಡ ವಸುಧೈವ ಕುಟುಂಬಕವಾಗಿದೆ. ಅದು ಸಂಕುಚಿತವಲ್ಲದೇ ವಿಸ್ತೃತ ಅರ್ಥವನ್ನೊಳಗೊಂಡಿದೆ. ಕರ್ನಾಟಕದ ಸರ್ವಾಂಗೀಣ ಉನ್ನತಿಯು ಕರ್ನಾಟಕ ದೇವಿಯ ಉಪಾಸನೆಯ ಬಲದಿಂದಲೇ ಭರತ ಖಂಡ ಹಾಗೂ ವಿಶ್ವದಲ್ಲಿ ಸಾಧ್ಯವಾಗಬಲ್ಲದೆಂದು ಭರವಸೆ ತನಗಿದೆಯೆಂದು ಅವರು ಬರೆಯುತ್ತಾರೆ.

ಕರ್ನಾಟಕದ ಬಗ್ಗೆ ಚಿಂತನೆಯಿಂದ ಅವರು ಮುಕ್ತರಾಗಲಿಲ್ಲ, ಅವರನ್ನು ಅದು ಸದಾ ಕಾಡಿಸಿತು. ತಮ್ಮ ಚಿಂತನೆಗಳನ್ನು ಅವರು ಕರ್ನಾಟಕತ್ವದ ಸೂತ್ರಗಳು ಹಾಗೂ ಕರ್ನಾಟಕತ್ವದ ವಿಕಾಸ ಈ ಪುಸ್ತಕಗಳಲ್ಲಿ ಮೂಡಿಸಿದರು. ಅವು ೧೯೫೦ ಹಾಗೂ ೧೯೫೭ ರಲ್ಲಿ ಪ್ರಕಟಗೊಂಡವು.

ಕರ್ನಾಟಕ ಗತವೈಭವದ ಕರ್ತರು

೧೯ನೇ ಶತಮಾನದ ಕೊನೆಯ ಹಾಗೂ ೨೦ ರ ಮೊದಲ ವರುಷಗಳ ಕಾಲದಲ್ಲಿ ಆಂಗ್ಲ ಆಡಳಿತದ ಪರಿಣಾಮವಾಗಿ ಭಾರತೀಯ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಈ ಕ್ಷೇತ್ರಗಳಲ್ಲಿ ಪುನರುತ್ಥಾನವಾಯಿತು. ಜನರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಲು ನಮ್ಮ ದೇಶದ ಐತಿಹಾಸಿಕ ಹಿರಿಮೆ ಹಾಗೂ ವೈಭವಪೂರ್ಣ ಸಂಸ್ಕೃತಿಯನ್ನು ಬಿತ್ತರಿಸಲು ಪ್ರಾಂತೀಯ ಭಾಷೆಗಳಲ್ಲಿ ದೇಶದ ಇತಿಹಾಸ ರಚನೆಯ ಕಾರ್ಯಕ್ರಮವು ಅತೀ ಅಗತ್ಯವಾಗಿತ್ತು. ಮಹದೇವ ಗೋವಿಂದ ರಾನಡೆಯವರು ಮರಾಠಿಯಲ್ಲಿ "ಮರಾಠಾ ಸತ್ತೆಯ ಉದಯ" ವೆಂಬ ಪುಸ್ತಕವನ್ನು ಬರೆದರು. ಜನರಲ್ಲಿ ಮರಾಠಾ ಸಾಮ್ರಾಜ್ಯದ ಉದಯ, ಶಿವಾಜಿ ಮಹಾರಾಜರ ಸಾಹಸಪೂರ್ಣವಾದ ಇತಿಹಾಸದ ಅರಿವು ಮೂಡಲು, ಹಾಗೂ ಈ ಇತಿಹಾಸದಿಂದ ಜನರಲ್ಲಿ ಉತ್ಸಾಹತುಂಬಿ ಬ್ರಿಟಿಶ ಸಾಮ್ರಾಜ್ಯದ ವಿರುದ್ಧ ಹೋರಾಡುವ ಧೈರ್ಯ ಬರಲು ಬರೆದ ಪುಸ್ತಕವಿದು.

ಅದೇ ಪ್ರಕಾರ ನಾಲ್ಕು ದಿಕ್ಕುಗಳಲ್ಲಿ ಹಂಚಿಹೋದ ಕನ್ನಡಿಗರನ್ನು ಒಂದು ಕಡೆ ತರಲು, ಸ್ವಾಭಿಮಾನಶೂನ್ಯರಾಗಿ, ತಮ್ಮ ವ್ಯಕ್ತಿತ್ವವನ್ನೇ ಕಳಕೊಂಡು ನಿರಾಶರಾಗಿದ್ದ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಲು, ತಮ್ಮ ನಾಡಿನ ಸಾಮರ್ಥ್ಯ, ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ವೈಭವದ ಕಲ್ಪನೆ ಕೊಡಲು ಆಲೂರರು ಕರ್ನಾಟಕ ಗತವೈಭವವೆಂಬ ಕಿರಿದಾದರೂ ಅಷ್ಟೇ ಪ್ರಭಾವಶಾಲಿಯಾದ ಪುಸ್ತಕವನ್ನು ಬರೆದರು.

ಮೊದಲೆರಡು ಪ್ರಕರಣಗಳಲ್ಲಿ ಕರ್ನಾಟಕವು ಮೃತರಾಷ್ಟ್ರವಲ್ಲವೆಂದು ಕಳಕಳಿಯಿಂದ ಸಾರಿ ಹೇಳುತ್ತಾರೆ. ಮೂರನೆಯ ಪ್ರಕರಣದಲ್ಲಿ ಪ್ರಾಚೀನ ಸಾಹಿತ್ಯ ಹಾಗೂ ಶಾಸನಗಳ ಆಧಾರದ ಮೇಲೆ ಕರ್ನಾಟಕದ ವಿಸ್ತಾರವು ದಕ್ಷಿಣಕ್ಕೆ ಮುಳುಬಾಗಿಲವರೆಗೆ, ಆಗ್ನೇಯದಲ್ಲಿ ಪುಲಿಕೋಟೆಯವರೆಗೆ ಹಾಗೂ ಉತ್ತರದಲ್ಲಿ ಗೋದಾವರಿಯವರೆಗೆ ಹರಡಿತ್ತು ಎಂದು ಸಿದ್ಧಪಡಿಸುತ್ತಾರೆ. ಹಿಂದಿನ ಕರ್ನಾಟಕ ಈಗ ಕರಗಿ ಹೋಗಿ ಬರೀ ಕಾಲು ಭಾಗ ಮಾತ್ರ ಉಳಿದುಕೊಂಡಿದೆ ಎಂದು ಹೇಳುತ್ತಾ "ಕರ್ನಾಟಕ" ಈ ಹೆಸರಿನ ಜನ್ಮ ಕನ್ನಡ ಭಾಷೆಯ ವ್ಯಾಪ್ತಿಯ ಬಗ್ಗೆ ಕೂಡ ವಿವರಣೆ ಕೊಡುತ್ತಾರೆ. ಈಗಿನ ಮಹಾರಾಷ್ಟ್ರದಲ್ಲಿ ಬಹಳಷ್ಟು ಕನ್ನಡ ಶಬ್ದಗಳು ಇನ್ನೂ ಆಚರಣೆಯಲ್ಲಿವೆ ಎಂದು ರಾಜಪುರೋಹಿತರು ೩೨ ವರ್ಷಗಳ ಹಿಂದೆ ಕೇಸರಿ ಪತ್ರಿಕೆಯಲ್ಲಿ "ಮಹಾರಾಷ್ಟ್ರ ವ ಕರ್ನಾಟಕ" ವೆಂಬ ಲೇಖನಮಾಲೆಯಲ್ಲಿ ಬರೆದಿದ್ದರು. (ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಲೇಖಕರ ಪ್ರಬಂಧವನ್ನು ಕ್ವಾರ್ಟೆರ್ಲಿ ಜರ್ನಲ್ ಆಫ್ ದ ಮಿಥಿಕ್ ಸೊಸಾಯ್ಟಿ, ನಲ್ಲಿ ನೋಡಬಹುದು) ತಮಗೆ ಗೊತ್ತಿರುವ ಕೆಲ ಮಹತ್ವದ ವಿಷಯಗಳನ್ನು ಓದುಗರ ಮುಂದೆ ಇಟ್ಟು ಸಂಶೋಧಕರು ಮುಂದೆ ಕೆಲಸ ಮಾಡಬೇಕು ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಕನ್ನಡ ವೀರಗಲ್ಲುಗಳು ಸಿಕ್ಕಿವೆ, ಮರಾಠರಿಗೆ ವೀರಗಲ್ಲಿನ ಕಲ್ಪನೆಯಿಲ್ಲ ಹೀಗಾಗಿ ಅವು ಕನ್ನಡಿಗರದೇ ಎಂದು ಹೇಳಬಹುದು. ಅಲ್ಲಿಯ ಊರುಗಳು, ಪಟ್ಟಣಗಳು, ಮರಾಠಿಗರ ಕುಲದೇವತೆಗಳು, ಎಷ್ಟೋ ಜನರ ಹೆಸರುಗಳು ಎಲ್ಲ ಕನ್ನಡದಲ್ಲಿವೆ. ಈ ಆಧಾರದ ಮೇಲೆ ಕನ್ನಡಿಗರು ಈಗಿನ ಮಹಾರಾಷ್ಟ್ರದಲ್ಲಿ ಹರಡಿದ್ದರು ಹಾಗೂ ಕರ್ನಾಟಕದ ವ್ಯಾಪ್ತಿ ಗೋದಾವರಿಯವರೆಗೆ ಹರಡಿತ್ತು ಎಂದು ಖಡಾಖಂಡಿತವಾಗಿ ಆಲೂರರು ಬರೆಯುತ್ತಾರೆ.

ಕರ್ನಾಟಕ ವಿಭೂತಿಗಳು ಎನ್ನುವ ತಮ್ಮ ನಾಲ್ಕನೆಯ ಪ್ರಕರಣದಲ್ಲಿ ಆಲೂರರು ಕರ್ನಾಟಕದ ವೈಭವದಿಂದ ಮೆರೆದ ಅರಸರು, ಆಳರಸರು, ಕವಿಗಳು, ತತ್ವಜ್ಞಾನಿಗಳು, ಲೇಖಕರು, ಸಂತರು, ಸಮಾಜ ಸುಧಾರಕರು ಮುಂತಾದವರುಗಳ ಬಗ್ಗೆ ಕನ್ನಡಿಗರಲ್ಲಿ ಮಾಹಿತಿ ಕೊಡುತ್ತಾರೆ.

ಐದನೆಯ ಪ್ರಕರಣದಲ್ಲಿ ಆಲೂರರು ಹೆಚ್ಚಿನ ಚಾರಿತ್ರಿಕ ದಾಖಲೆಗಳು ಇಲ್ಲದ ಕಾಲದಲ್ಲಿ ಸಾಧನ ಸಾಮಗ್ರಿಗಳನ್ನು ವಿಂಗಡಿಸಿ ಕ್ರಮಬದ್ಧವಾಗಿ ವರ್ಗಿಕರಣ ಮಾಡಿರುತ್ತಾರೆ. ಸಾಧನ ಸಾಮಗ್ರಿಗಳನ್ನು ಕಲೆ ಹಾಕುವದು, ನಶಿಸಲು ಕೊಡದೆ ಉಳಿಸಿಕೊಳ್ಳುವದು ಕೂಡ ರಾಷ್ಟ್ರಸೇವೆ ಎಂದು ನಂಬಿದ್ದರು. ಸರಕಾರದಿಂದ ಈ ಸಾಧನ ಸಾಮಗ್ರಿಗಳನ್ನು ರಕ್ಷಿಸಲು ಆಗದಿದ್ದರೆ, ಸಂಘ ಶಕ್ತಿಯಿಂದ ಶಿಲಾ ಲಿಪಿಗಳನ್ನು ಉಳಿಸಿ, ಮುದ್ರಿಸುವ ಪ್ರಯತ್ನ ಮಾಡಬೇಕು ಎಂದು ಕಳಕಳಿಯಿಂದ ಬರೆಯುತ್ತಾರೆ. ಆಲೂರರ ಪ್ರಕಾರ ಇತಿಹಾಸ ಅಧ್ಯಯನದ ಸಾಧನ ಸಾಮಗ್ರಿಗಳನ್ನು ಈ ಪ್ರಕಾರ ವಿಂಗಡಿಸಬಹುದು ಶಿಲಾಶಾಸನ, ತಾಮ್ರಪಟಗಳು, ಮಾಸತಿ ಕಲ್ಲುಗಳು, ನಾಣ್ಯಗಳು, ಪೂರ್ವಕಾಲದ ಕಟ್ಟಡಗಳು, ವಾಙ್ಮಯ, ಪರದೇಶಿ ಪ್ರವಾಸಿಕರು ಬರೆದ ಬರಹಗಳು, ಪರಂಪರಾಗತವಾದ ಕತೆಗಳು, ಸ್ಥಳ ಮಹಾತ್ಮ್ಯಗಳು, ಆಚಾರಗಳು ಮತ್ತು ಧಾರ್ಮಿಕ ವಿಚಾರಗಳು. ಕೊನೆಯದಾಗಿ ಭೂಮಿಯ ಅಗೆತ. ತೊಂಬತ್ತು ವರ್ಷಗಳ ನಂತರವೂ ಇವೇ ಐತಿಹಾಸಿಕ ದಾಖಲೆಗೆ ಆಲೂರರು ಹೆಸರಿಸಿದ ಸಾಧನ ಸಾಮಗ್ರಿಗಳು, ಅದೇ ರೂಪದಲ್ಲಿ ಸಂಶೋಧಕ ಜಗತ್ತು ಸ್ವೀಕರಿಸಿದ್ದು ಆಲೂರರ ಮುಂದಾಲೋಚನೆಗೆ ದ್ಯೋತಕವಾಗಿದೆ. ಮೇಲ್ಕಾಣಿಸಿದ ಅಧಿಕೃತ ಕರ್ನಾಟಕದ ಇತಿಹಾಸದ ಮೂಲ ಪುರುಷರೇ ಆಲೂರರು.

ಆರನೆಯದಿಂದ ಹನ್ನೊಂದು ಪ್ರಕರಣದವರೆಗೆ ಒಂದೊಂದಾಗಿ ಕರ್ನಾಟಕ ಅರಸುಮನೆತನಗಳ ಬಗ್ಗೆ ವಿವರ ಕೊಡುತ್ತಾರೆ. ಅವರು ತೊಂಬತ್ತು ವರ್ಷಗಳ ಹಿಂದೆ ಕೊಟ್ಟ ಮುಖ್ಯವಾದ ಅರಸು ಮನೆತನಗಳ ವಂಶಾವಳಿಗಳಲ್ಲಿ ಅಷ್ಟೇನು ಮಹತ್ವದ ಬದಲಾವಣೆಗಳು ಸಂಭವಿಸಿಲ್ಲ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ರಾಷ್ಟ್ರಕೂಟರ ಅರಸುಮನೆತನದಲ್ಲಿ ಮಾತ್ರ, ಆಲೂರರು ಅಮೋಘವರ್ಷನ ತರುವಾಯ ಪ್ರಬಲ ರಾಜರು ಇರಲಿಲ್ಲ, ಹೀಗಾಗಿ ನೂರು ವರ್ಷಗಳಲ್ಲಿಯೇ ರಾಷ್ಟ್ರಕೂಟ ವಂಶ ಕೊನೆಗೊಂಡಿತು ಎಂದು ಹೇಳುತ್ತಾರೆ. ಆದರೆ ತದನಂತರ ಬಹಳಷ್ಟು ಸಾಧನ ಸಾಮಗ್ರಿಗಳು, ಮುಖ್ಯವಾಗಿ ಶಿಲಾಲಿಪಿಗಳು ಸಿಕ್ಕಿ ಅಮೋಘವರ್ಷನ ತರುವಾಯ ಬಂದ ಮೂರನೇ ಇಂದ್ರ, ಮೂರನೇ ಕೃಷ್ಣ ಇವರು ಪ್ರಬಲರಾಗಿದ್ದರು, ಮೊದಲಿನವನು ಉತ್ತರಭಾರತದಲ್ಲಿ ಹಾಗೂ ಕೊನೆಯವನು ದಕ್ಷಿಣ ಭಾರತದಲ್ಲಿ, ಸಿಂಹಳದ ತನಕ ರಾಷ್ಟ್ರಕೂಟರ ಜಯಭೇರಿ ಹೊಡೆದರು. ಈ ಮಾತಿಗೆ ಕರ್ಹಾಡ, ದೇವಾಲಿ, ಸಾಂಜನ, ಜೂರಾ, ನೀಲಕಂಠಿ, ಕೊಳಗಲ್ ಮುಂತಾದ ತಾಮ್ರಪಟಗಳು ಮತ್ತು ರಾಮೇಶ್ವರದಲ್ಲಿಯ ವಿಜಯ ಗೋಪುರ, ಸೋಮದೇವ ಸೂರಿಯ ಯಶಸ್ತಿಲಕ ಎಂಬ ಗ್ರಂಥ ಸಾಕ್ಷಿಗಳಾಗಿವೆ. (ಪುಟ ೯೨, ).

ಪ್ರಕರಣ ಹನ್ನೆರಡರಲ್ಲಿ ಕರ್ನಾಟಕದ ವೈಭವದ ವರ್ಣನೆ ಬರುತ್ತದೆ. ಕರ್ನಾಟಕದಾದ್ಯಂತ ಕಲಾತ್ಮಕವಾದ ಗುಹ್ಯಾಂತರ ಮತ್ತು ಗುಡಿ ಗೋಪುರಗಳನ್ನು ಕದಂಬರ ಕಾಲದಿಂದ ವಿಜಯನಗರದ ಕಾಲ, ಮತ್ತು ಅದರ ನಂತರದ ಕಾಲದವರೆಗೆ ಅಂದರೆ ೪ನೆಯ ಶತಮಾನದಿಂದ ೧೭ ರ ವರೆಗೆ ಕಂಡು ಬರುತ್ತವೆ.

ಕರ್ನಾಟಕವು ಅನೇಕ ಧರ್ಮಗಳ ಸಂಗಮವಾಗಿತ್ತು. ಜೈನ ಧರ್ಮಕ್ಕೆ ಕೊಟ್ಟಷ್ಟು ಮಾನಸನ್ಮಾನಗಳು ಬೇರೆ ಯಾವ ರಾಜ್ಯದಲ್ಲೂ ಇರಲಿಕ್ಕಿಲ್ಲ, ಜೈನ ಕವಿರತ್ನಗಳು, ಅರಸರು, ರಾಣಿಯರು, ಸಾಹಿತ್ಯ ಪೋಷಕರು, ಗಣಿತಜ್ಞರು, ತತ್ವಜ್ಞಾನಿಗಳು, ವೀರ ಯೋಧರು, ಶಿಲ್ಪಿಗಳು ಹಾಗೂ ಇನ್ನೂ ಅನೇಕ ಕ್ಷೇತ್ರಗಳಲ್ಲಿ ನಿಪುಣರಾದವರು ಕರ್ನಾಟಕದ ಸಾಂಸ್ಕೃತಿಕ ಉನ್ನತಿಗಾಗಿ ತಮ್ಮ ಕೊಡುಗೆ ನೀಡಿದ್ದಾರೆ. ಇಲ್ಲಿ ಶೈವರು, ವೈಷ್ಣವರು, ಜೈನರು, ಬೌದ್ಧರು, ಕೊನೆಗೆ ಮುಸಲ್ಮಾನರು, ಕ್ರೈಸ್ತಧರ್ಮದವರು ಎಲ್ಲರೂ ಸುಖ ಶಾಂತಿಯಿಂದ ಇದ್ದರು ಎನ್ನುವದಕ್ಕೆ ಬೇಕಾದಷ್ಟು ಪುರಾವೆಗಳು ಇವೆ.

ಸಂಶೋಧಕರಾಗಿ ಅಲೂರರು

ಇತಿಹಾಸ ಮತ್ತು ಸಂಶೋಧನೆಯಲ್ಲಿಯ ಆಸಕ್ತಿ ಆಲೂರರನ್ನು ಕರ್ನಾಟಕದಾದ್ಯಂತ ತಿರುಗಾಡಿಸಿತು. ಐತಿಹಾಸಿಕ ಸ್ಥಳಗಳನ್ನು ಅವರು ಹಲವು ಸಲ ಭೇಟಿಕೊಟ್ಟಿದ್ದಾರೆ. ಅಣ್ಣಿಗೆರೆ, ಲಕ್ಕುಂಡಿ, ಗುಡಗೆರೆ, ಲಕ್ಷ್ಮೇಶ್ವರ, ಬಂಕಾಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ವೇರೂಳ್, ಹಳೇಬೀಡು, ಬೇಲೂರು, ಶ್ರವಣಬೆಳಗೊಳ, ಕಾರ್ಕಳ, ಕೈದಾಳ, ಮೂಡಬಿದ್ರೆ, ಕಾರ್ಲೆ, ಕಾನ್ಹೆರಿ, ಚಿತ್ರದುರ್ಗ, ಗೋವೆ, ಮಳಖೇಡ, ಸೇಡಂ?, ಎರಗೊಳ, ನಾಗ್ವಿ, ಕೊಲ್ಲಾಪುರ ಇತ್ಯಾದಿ. ಇಲ್ಲಿಯ ವೀರಗಲ್ಲುಗಳ, ಶಿಲಾಶಾಸನಗಳ, ಮಾಸ್ತಿಕಲ್ಲುಗಳು, ನಾಣ್ಯಗಳು, ದೇವಸ್ಥಾನಗಳ ಅಭ್ಯಸನ ಮಾಡಿದರು. ಈ ಐತಿಹಾಸಿಕ ದಾಖಲೆಗಳ ಮಹತ್ವ ಹಾಗೂ ರಕ್ಷಣೆಯ ಬಗ್ಗೆ ಕೂಲಂಕುಶವಾಗಿ ತಮ್ಮ "ಕರ್ನಾಟಕ ಗತವೈಭವದ" ಉಪಸಂಹಾರದಲ್ಲಿ ಬರೆದಿದ್ದಾರೆ. ಪೂರಕ ಪ್ರಕರಣದಲ್ಲಿ ಲಿಪಿಗಳ ಮುದ್ರಣ ಪದ್ಧತಿಯನ್ನು ವಿವರಿಸಿದ್ದಾರೆ. ಅನುಬಂಧದಲ್ಲಿ ಕರ್ನಾಟಕ ಇತಿಹಾಸದಲ್ಲಿ ಆದ ಸಂಶೋಧನೆಯ ಪ್ರಗತಿ, ಭೂ ಶೋಧನೆ, ಶಾಸನಗಳ ಶೋಧನೆ, ಅವುಗಳ ಸಂಗ್ರಹ, ಪ್ರಕಾಶನ, ಹಾಗೂ ಈ ಸಾಧನ ಸಾಮಗ್ರಿಗಳ ಆಧಾರದ ಮೇಲೆ ಚರಿತ್ರ ರಚನೆ ಇವುಗಳ ವಿವರಣೆ ಕೊಟ್ಟಿದ್ದಾರೆ.

ಆಲೂರರು ಪುಣೆಯಲ್ಲಿಯ ಭಾರತ ಇತಿಹಾಸ ಸಂಶೋಧನ ಮಂಡಲದ ಸದಸ್ಯರಾಗಿದ್ದರು. ಈ ಸಂಸ್ಥೆಯು ಮಹಾರಾಷ್ಟ್ರದ ಇತಿಹಾಸ ಸಂಶೋಧನೆ ಹಾಗೂ ಇತಿಹಾಸ ರಚನೆಗೆ ಎಷ್ಟು ಆಸ್ಪದ ಕೊಟ್ಟಿದೆ ಎಂದು ಕಂಡುಕೊಂಡಿದ್ದಾರೆ. ಅದೇ ತರಹ ಕರ್ನಾಟಕದ ಇತಿಹಾಸ ಮತ್ತು ಸಂಶೋಧನೆಗೆ ಪ್ರತ್ಯೇಕವಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸುವ ಯೋಚನೆ ಅವರ ಮನಸ್ಸಿನಲ್ಲಿ ಇತ್ತು. ಅದು "ಕರ್ನಾಟಕ ಇತಿಹಾಸ ಸಂಶೋಧನ ಮಂಡಲ"ದ ರೂಪದಲ್ಲಿ ಧಾರವಾಡದಲ್ಲಿ ೧೯೧೪ರ ದಸರೆಯ ಶುಭ ಅವಸರದಲ್ಲಿ ಸ್ಥಾಪಿತವಾಯಿತು. ರಾಜಪುರೋಹಿತರು, ಸಾ.ಲಿ. ರಾಮಚಂದ್ರರಾಯರು, ಮೊಹರೆ ಹಣಮಂತರಾಯರು, ರುಕ್ಮಾಂಗದರಾವ ದೇಶಪಾಂಡೆಯವರು, ಡಂಬಳ್ ಮುಂತಾದ ಹುಮ್ಮಸ್ಸಿನ ಇತಿಹಾಸ ಪ್ರಿಯರು ಈ ಸಂಸ್ಥೆಯಲ್ಲಿ ದುಡಿದರು. ಕರ್ನಾಟಕ ಗತ ವೈಭವದ ಪ್ರಕಟಣೆ ಈ ಸಂಸ್ಥೆಯಿಂದಲೇ ಆಯಿತು. ಆಲೂರರ ಸತತ ಪ್ರಯತ್ನದಿಂದ ಕೇಂದ್ರ ಸರಕಾರದ ಪುರಾತತ್ವ ವಿಭಾಗವು ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಶಾಸನಗಳ ಸರ್ವೆ ಮಾಡಿ, ಶಾಸನಗಳ ಅಭ್ಯಾಸಕ್ಕೆ ಮಾರ್ಗದರ್ಶನ ಹಾಕಿ ಕೊಟ್ಟಿತು. ಈ ಮಂಡಲವು "ಪ್ರಾಚೀನ ಕರ್ನಾಟಕ"ವೆಂಬ ಷಣ್ಮಾಸಿಕವನ್ನು ಪ್ರಕಟಿಸಿ ಇತಿಹಾಸ ಪ್ರಿಯರಿಗೆ ಹೊಸ ಶೋಧಗಳ ಬಗ್ಗೆ ಮಾಹಿತಿ ಕೊಟ್ಟಿತು. ಇಂತಹ ರಚನಾತ್ಮಕ ಕಾರ್ಯಗಳಿಂದ ಕರ್ನಾಟಕ ಐತಿಹಾಸಿಕ ಸಂಶೋಧನೆಗೆ ಹಾಗೂ ಚರಿತ್ರೆ ರಚನೆಗೆ ಆಲೂರರು ಅಡಿಪಾಯ ಹಾಕಿದರು ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

"ಕರ್ನಾಟಕ ಗತವೈಭವ"ದ ನಂತರದ ಸಂಶೋಧನೆ

ಆಲೂರರು ಕರ್ನಾಟಕ ಗತವೈಭವದಲ್ಲಿ ಕರ್ನಾಟಕ ಇತಿಹಾಸದ ಸಂಶೋಧನೆಯ ಕಾರ್ಯ ಎಷ್ಟು ಆಗಬೇಕಿತ್ತೊ ಅಷ್ಟು ಆಗಿಲ್ಲವೆಂದು ವಿಷಾದಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಏನೇನೂ ಆಗಿಲ್ಲವೆಂದು ಮುಂದಿನ ಪೀಳಿಗೆಯವರು ಉತ್ಸಾಹದಿಂದ ಸಂಶೋಧನೆಯ ಕೆಲಸ ಕೈಗೊಳ್ಳಬೇಕೆಂದು ಕಳಕಳಿಯಿಂದ ಹೇಳುತ್ತಾರೆ. ಇನ್ನು ಆಲೂರರ ಕರ್ನಾಟಕ ಗತವೈಭವ ಬರೆದ ಈ ತೊಂಬತ್ತು ವರ್ಷಗಳಲ್ಲಿ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಸಂಶೋಧನೆ ಹಾಗೂ ಬರವಣಿಗೆ ಸಾಕಷ್ಟು ಆಗಿದೆಯಾ ಎಂದು ಕಂಡುಕೊಳ್ಳಬೇಕು. ಭೂಶೋಧನೆಯಲ್ಲಿ ಮೈಸೂರು ಪುರಾತತ್ವ ಶಾಖೆಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆ ಮತ್ತು ಪುಣೆಯ ಡೆಕ್ಕನ ಕಾಲೇಜು ಸಂಶೋಧನ ಸಂಸ್ಥೆ ಇವರ ಸತತ ಪ್ರಯತ್ನದ ಮೂಲಕ ಬಹಳಷ್ಟು ಉತ್ಖನನದ ಕೆಲಸಗಳು ನಡೆದು ಮಹತ್ವಪೂರ್ಣ ಅಂಶಗಳು ಬೆಳಕಿಗೆ ಬಂದಿವೆ.

ಕರ್ನಾಟಕಕ್ಕೆ ಸಂಬಂಧಪಟ್ಟ ಶಿಲಾಶಾಸನಗಳು ೧೯೮೦ ವರೆಗೆ ೩೦,೦೦೦ ದಷ್ಟು ಎಪಿಗ್ರಾಫಿಯಾ ಇಂಡಿಕಾ, ಇಂಡಿಯನ್ ಎಂಟಿಕ್ವೆರಿ, ಎಪಿಗ್ರಾಪಿಯಾ ಕರ್ನಾಟಿಕಾ, ಸೌತ್ ಇಂಡಿಯನ್ ಇನ್ಸ್ಕ್ರಿಷ್ಶನ್ಸ್, ಮೈಸೂರು ಆರ್ಕಿಯೊಲೊಜಿಕಲ್ ರಿಪೋರ್ಟ್ಸ್ ಮುಂತಾದವುಗಳಲ್ಲಿ ಪ್ರಕಟಿಸಲ್ಪಟ್ಟಿವೆ.

ಅಶೋಕನ ಕಾಲದ ೧೦ ಕ್ಕಿಂತ ಹೆಚ್ಚು ಪ್ರಶಸ್ತಿಗಳು ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ (ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರ, ಮಾಸ್ಕಿ, ಪಾಲಕಿಗುಂಡು, ಗವೀಮಠ, ನಿಟ್ಟೂರು, ಸನ್ನತಿ, ಉದಯಗೊಳ್ಳ, ಎರ್ರಗುಡಿ ಮುಂತಾದ ಪ್ರದೇಶಗಳಲ್ಲಿ ಸಿಕ್ಕಿವೆ.)

ರಾಷ್ಟ್ರಕೂಟರ ಕಾಲದ ಬಹಳಷ್ಟು ಮಾಹಿತಿ ಶಿಲಾಶಾಸನಗಳಿಂದ ಗೊತ್ತಾಗುತ್ತದೆ. ಆ ಕಾಲದ ದಂತಿದುರ್ಗನ ಸಾಮನಗಡ, ಅಮೋಘವರ್ಷನ ಸಾಂಜನ, ಮೊದಲನೇ ಕೃಷ್ಣನ ತಲೆಗಾಂಮ ತಾಮ್ರಪಟ, ಧ್ರುವನ ಜೆಟವಾಯಿ ಮೂರನೇ ಗೋವಿಂದನ ಬ್ರಿಟಿಷ್ ಮ್ಯೂಜಿಯಂ ತಾಮ್ರಪಟ ಹೀಗೆ ಸುಮಾರು ಶಾಸನಗಳು ಉಪಲಬ್ಧವಾಗಿರುವದರಿಂದ ಕರ್ನಾಟಕ ಇತಿಹಾಸದ ಸಂಶೋಧನೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ ಎನ್ನಬಹುದು. ವಿಜಯನಗರ ಕಾಲದ ೫೦೦೦ ಶಿಲಾಶಾಸನಗಳನ್ನು ಪತ್ತೆ ಹಚ್ಚಲಾಗಿದೆ, ಅವುಗಳಲ್ಲಿ ೩೦೦ ತಾಮ್ರಪಟಗಳಾಗಿವೆ.

ಇದೇ ಕಾಲದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಇತಿಹಾಸದ ಹೆಚ್ಚಿನ ಮಾಹಿತಿ ಚಿನ್ನ, ಬೆಳ್ಳಿ, ಹಾಗೂ ತಾಮ್ರದ ನಾಣ್ಯಗಳ ಶೋಧನೆಯಿಂದ ಆಗುತ್ತದೆ. ಹೈದರ್ ಮತ್ತು ಟಿಪ್ಪುವಿನ ಕಾಲದ ಪರ್ಶಿಯನ್ ಸಂಕೇತವಿರುವ ಚಿನ್ನ, ಬೆಳ್ಳಿ, ಹಾಗೂ ತಾಮ್ರದ ನಾಣ್ಯಗಳು ಸಿಕ್ಕಿವೆ. ಚಿದಾನಂದ ಮೂರ್ತಿಯವರ "ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ" ವಿದ್ವತ್ಪೂರ್ಣ ಕೃತಿಯಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರೀಸರ್ಚ್ ಈ ಸಂಸ್ಥೆಯನ್ನು ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲ ವಿಷಯಗಳ ಮೇಲೆ ಸಂಶೋಧನೆ ಮಾಡಲು ೧೯೭೦ ರಲ್ಲಿ ಸ್ಥಾಪಿಸಲಾಯಿತು. ಈ ವರೆಗೆ ಭಾರತದ ಇತಿಹಾಸ ಮತ್ತು ಬೇರೆ ಬೇರೆ ರಾಜ್ಯಗಳ ಇತಿಹಾಸ, ಕರ್ನಾಟಕವನ್ನು ಒಳಗೊಂಡು ಅನೇಕ ಪುಸ್ತಕಗಳನ್ನು ಪ್ರಕಟಿಸಿದೆ. ರಿತ್ತಿಯವರು ಸಂಪಾದಿಸಿದ "ವಿಜಯನಗರದ ಅರಸರ ಶಾಸನಗಳು" ಎಂಬ ಸಂಶೋಧನಾತ್ಮಕ ಪುಸ್ತಕವನ್ನು ಐ ಸಿ ಎಚ್ ಆರ್ ಐದು ಭಾಗಗಳಲ್ಲಿ ಪ್ರಕಟಿಸಿದೆ.

ಡಾ. ಪಾಂಡುರಂಗರಾವ ದೇಸಾಯಿಯವರು ಕಲಚೂರಿ ವಂಶದ ಕುರಿತು ಹಾಗೂ ಕರ್ನಾಟಕದ ಇತಿಹಾಸವೆಂಬ ಶಾಸನಾಧಾರಿತ ಗ್ರಂಥಗಳನ್ನು ತಯಾರಿಸಿದರು. ಅವರದೇ ಇದು ದೇಸಾಯಿಯವರ ಮಹತ್ವದ ಗ್ರಂಥವಾಗಿದೆ. ಕ.ವಿ. ರಮೇಶರವರು ಪಶ್ಚಿಮ ಗಂಗರ ಶಿಲಾಶಾಸನಗಳ ಮೇಲೆ ಹಾಗೂ , ಸೊಲ್ಲಾಪುರ ಜಿಲ್ಲೆಯ ಶಾಸನಗಳ ಮೇಲೆ ರಿತ್ತಿಯವರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಬಾ.ರಾ. ಗೋಪಾಲರು ಸಂಪಾದಿಸಿದ ೪೨೭ ಶಿಲಾಶಾಸನಗಳನ್ನೊಳಗೊಂಡ ವಿಜಯನಗರದ ಶಿಲಾಶಾಸನಗಳ ಮೊದಲನೆ ಭಾಗ ೧೯೮೫ ರಲ್ಲಿ, ಎರಡನೇ ಭಾಗದಲ್ಲಿ ೭೯೬ ಶಿಲಾಶಾಸನಗಳನ್ನು, ೧೯೯೦ ರಲ್ಲಿ ಮೂರನೇ ಭಾಗವನ್ನೂ ಹಾಗೂ ನಾಲ್ಕನೆಯದನ್ನು ೧೯೯೬ ರಲ್ಲಿ ಪ್ರಕಟಗೊಂಡವು. ಜಿ.ಎಸ್. ದೀಕ್ಷಿತರು ಶೇಷಶಾಸ್ತ್ರಿಯವರ `ಕರ್ನಾಟಕದ ವೀರಗಲ್ಲುಗಳು, ಸೂರ್ಯನಾಥ ಕಾಮತರ ಕರ್ನಾಟಕದ ಇತಿಹಾಸ ಹಾಗು ಅವರು ಸಂಪಾದಿಸಿದ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳ ಗ್ಯಾಜೆಟೀಯರ್ಗಳು, ಕರ್ನಾಟಕದ ಇತಿಹಾಸದ ಬರವಣಿಗೆಯಲ್ಲಿ ಮೈಲಿಗಲ್ಲುಗಳಾಗಿವೆ.

೧೯೮೫ ಜಿ. ಎಸ್. ದೀಕ್ಷಿತರವರ ಮಾರ್ಗದರ್ಶನದಲ್ಲಿ ಸೂರ್ಯನಾಥ ಕಾಮತರು ಹಾಗೂ ಅವರ ಅನೇಕ ಇತಿಹಾಸದ ಅಭಿಮಾನಿಗಳು ಕರ್ನಾಟಕ ಇತಿಹಾಸ ಅಕ್ಯಾಡೆಮಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಪ್ರತಿ ವರ್ಷ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮೂರು ದಿನದ ಸಂಶೋಧನಾತ್ಮಕ ವಿಚಾರ ಗೋಷ್ಠಿಯನ್ನು ನೆರವೇರಿಸುತ್ತದೆ, ಮತ್ತು ಅವುಗಳನ್ನು ಇತಿಹಾಸ ದರ್ಶನವೆಂಬ ವಾರ್ಷಿಕ ಜರ್ನಲ್ನಲ್ಲಿ ಪ್ರಕಟಿಸುತ್ತದೆ. ಈ ಗೋಷ್ಠಿಯಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದಿಂದ ಬಂದ ಇತಿಹಾಸ ತಜ್ಞರು, ಸಂಶೋಧಕರು, ಶಾಸನ ತಜ್ಞರು, ಪ್ರಾಚ್ಯ ವಸ್ತು ಸಂಶೋಧಕರು ಹಾಗೂ ಇತಿಹಾಸ ಪ್ರಿಯರು ಭಾಗವಹಿಸಿ ತಮ್ಮ ತಮ್ಮ ಸಂಶೋಧನೆಗಳ ಬಗ್ಗೆ ವಿಚಾರ ವಿನಿಮಯ ಮಾಡಲು ಅವಕಾಶ ಮಾಡಿಕೊಡುತ್ತದೆ. ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಂಶೋಧಕ ವರ್ಗವು ಪ್ರತಿ ವರ್ಷ ತಮ್ಮ ತಮ್ಮ ಭಾಗಗಳಿಂದ ಅನೇಕ ಶಿಲಾಶಾಸನಗಳನ್ನು ಕಂಡು ಹಿಡಿದು ಅವುಗಳ ಅಭ್ಯಸನ ಮಾಡಿ ಹೊಸ ಮಾಹಿತಿ ಶೇಖರಿಸಿ ಇತಿಹಾಸ ರಚನೆಗೆ ಪೂರಕರಾಗಿದ್ದಾರೆ. ಹೀಗಾಗಿ ಇತಿಹಾಸದ ಸಂಶೋಧನೆ ನಿರಂತರವಾಗಿ, ಹೆಚ್ಚುಹೆಚ್ಚಾಗಿ ನಡೆಯುವ ಭರವಸೆ ಇದೆ. ಇದರಿಂದ ಆಲೂರರ ಆತ್ಮಕ್ಕೆ ಸ್ವಲ್ಪವಾದರೂ ಶಾಂತಿ ಸಿಕ್ಕಿರಲು ಸಾಕು. ತಮ್ಮ ಗತವೈಭವದ ಉಪಸಂಹಾರದಲ್ಲಿ ಕರ್ನಾಟಕ ಇತಿಹಾಸ ಸಂಶೋಧನೆಯೆಂಬ ಪ್ರಕರಣದಲ್ಲಿ ಬಹಳ ಕಳಕಳಿಯಿಂದ ಮುಂದಿನ ಪೀಳಿಗೆಯವರು ಸಂಶೋಧನೆಯ ಕಾರ್ಯವನ್ನು ಕೈಕೊಳ್ಳಬೇಕು, ಇದರಲ್ಲಿ ಹಣ ಪ್ರಾಪ್ತಿಯಿಲ್ಲ, ಗೌರವವಿಲ್ಲ ಆದರೂ ಇದನ್ನು ರಾಷ್ಟ್ರ ಸೇವೆ, ದೇಶ ಸೇವೆಯೆಂದು ಇತಿಹಾಸ ಪ್ರೇಮಿಗಳು ಮಾಡಬೇಕಾದ ಕರ್ತವ್ಯವೆಂದು ಹೇಳುತ್ತಾರೆ.

ಬೃಹತ್ತರ ಕರ್ನಾಟಕ

ಆಲೂರರ "ಕರ್ನಾಟಕ ಗತವೈಭವ"ದಲ್ಲಿ ಉಲ್ಲೇಖಿಸಿದ ಕರ್ನಾಟಕದ ಗಡಿ ಪ್ರದೇಶದಲ್ಲಿ ಕೈಕೊಂಡ ಸಂಶೋಧನ ಮತ್ತು ವಾಙ್ಮಯದಲ್ಲಿಯ ಹೊಸ ಹೊಸ ಶೋಧಗಳಿಂದ ಬಹಳಷ್ಟು ಮಾಹಿತಿ ಲಭಿಸಲು ಸಾಧ್ಯತೆಯಿದೆ. ಡಾ. ಪಾಂಡುರಂಗರಾವ ದೇಸಾಯಿಯವರು ೧೯೭೦ ರಲ್ಲಿ ಸಂಪಾದಿಸಿದ ಕರ್ನಾಟಕದ ಇತಿಹಾಸದಲ್ಲಿ ಕರ್ನಾಟಕದಿಂದಾಚೆಗೆ ಹಬ್ಬಿದ ಕನ್ನಡಿಗರ ಸಾಹಸಪೂರ್ಣವಾದ ವಿಷಯಗಳು ಗಮನಕ್ಕೆ ಬರುತ್ತವೆ. ರಾಷ್ಟ್ರಕೂಟ ಚಕ್ರವರ್ತಿಗಳು ಈಗಿನ ಉತ್ತರ ಭಾರತ, ಪೂರ್ವಕ್ಕೆ ಬಂಗಾಲ, ಬಿಹಾರ ಹಾಗೂ ಪಶ್ಚಿಮಕ್ಕೆ ರಾಜಸ್ತಾನದವರೆಗೆ ತಮ್ಮ ಸೈನ್ಯದೊಂದಿಗೆ ಅನೇಕ ಸಲ ಹೋಗಿ ತಮ್ಮ ಪ್ರಭಾವವನ್ನು ಬೀರಿದರು. ರಾಷ್ಟ್ರಕೂಟ ವಂಶಕ್ಕೆ ಸೇರಿದ ಆದರೆ ಅಷ್ಟು ಹೆಸರುವಾಸಿಯಲ್ಲದ ಅಧೀನ ರಾಜರು ೯ ನೇ ಶತಮಾನದಲ್ಲಿ ಸಾತಾರ ಪ್ರದೇಶದಲ್ಲಿ, ಬಿಹಾರದಲ್ಲಿ, ಗುಜರಾತಿಯಲ್ಲಿ ರಾಜ್ಯವಾಳಿದರೆಂದು ಶಾಸನಗಳ ಆಧಾರದ ಮೇಲೆ ಸಿದ್ಧಪಡಿಸಿದ್ದಾರೆ. ಪಾಲರ ರಾಜ್ಯದಲ್ಲಿ ರಾಷ್ಟ್ರಕೂಟರ ಪ್ರಭಾವ ಬಹಳಷ್ಟು ಇತ್ತು, ಕರ್ನಾಟಕದ ಯೋಧರು ಬಂಗಾಲದ ಸೈನ್ಯದಲ್ಲಿ ಭರ್ತಿ ಆಗುತ್ತಿದ್ದರು. ಮಧ್ಯಪ್ರದೇಶದ ಬಸ್ತರ ಪ್ರದೇಶದಲ್ಲಿ ೧೧ ರಿಂದ ೧೩ ನೇ ಶತಮಾನದಲ್ಲಿ ನಾಗವಂಶದ ಚಿಂದಕರ (ಉತ್ತರ ಕರ್ನಾಟಕವನ್ನು ಆಳಿದ ಸೇಂದ್ರಕರು) ಅಧೀನರಾಗಿ ಆಳಿದರು. ಇವರ ಹೆಸರುಗಳು ಕನ್ನಡಿಗರ ಹೆಸರುಗಳಾಗಿವೆ. ಬಂಗಾಲದ ಸೇನರ ಸಂಸ್ಥಾಪಕನಾದ ವೀರಸೇನನು ದಕ್ಷಿಣದವನೆಂದು, ಕರ್ನಾಟಕ ಕ್ಷತ್ರಿಯರ ಆಭೂಷಣನೆಂದೂ ಕರೆಯಲ್ಪಟ್ಟಿದ್ದಾನೆ. ಬಿಹಾರದಲ್ಲಿ ದೊರೆತ "ಸರಸ್ವತಿ ಹೃದಯಾಲಂಕಾರ ಹಾರ" ವೆಂಬ ಶಾಸ್ತ್ರೀಯ ಗ್ರಂಥವು ಮಿಥಿಲೆಯ ನಾನ್ಯದೇವ (೧೦೯೭-೧೧೪೭)ನನ್ನು ಕರ್ನಾಟಕ ಕುಲದ ಆಭೂಷಣನೆಂದು ವರ್ಣಿಸುತ್ತದೆ (ಪುಟ ೨೧೪) ಎಂದು ದೇಸಾಯಿಯವರು ಹೇಳುತ್ತಾರೆ.

ಆರ್.ಸಿ. ಮಜುಮದಾರ ಅವರ, ೧೯೯೬ ರಲ್ಲಿ ಪ್ರಕಟಿಸಿದ ದಲ್ಲಿ (ಪುಟ ೧೦) ಕಾಂಬೋಜದ ಅಂದರೆ ಈಗಿನ ಕೊಚ್ಚಿನ ಚೈನಾ ರಾಜರು ಕೌಂಡಿನ್ಯ ಗೋತ್ರಕ್ಕೆ ಸೇರಿದವರು ಎಂದು ಹೇಳುತ್ತಾರೆ. ಅದಕ್ಕೆ ಮೈಸೂರಿನಲ್ಲಿ ಸಿಕ್ಕ ಒಂದು ಶಿಲಾಶಾಸನವನ್ನು ಆಧರಿಸಿ ಕೌಂಡಿಣ್ಯ ಗೋತ್ರದ ಬ್ರಾಹ್ಮಣರು ಕರ್ನಾಟಕ ಹಾಗೂ ಭಾರತದ ವಾಯುವ್ಯ ದಿಶೆಯಲ್ಲಿದ್ದ ಜನರು ಎಂದು ಹೇಳಿ ಇವರಲ್ಲಿಯ ಕೆಲ ಸಾಹಸಿಗರು ಏಷಿಯಾದ ನೈಋತ್ಯದಲ್ಲಿರುವ ಕಾಂಬೋಜದಲ್ಲಿ ರಾಜ್ಯ ಮಾಡಿ ಅಲ್ಲಿಯ ಬುಡಕಟ್ಟಿನ ಜನರನ್ನು ತಕ್ಕ ಮಟ್ಟಿಗೆ ಸುಸಂಸ್ಕೃತರನ್ನಾಗಿ ಮಾಡಿದರು ಎಂದು ಮಜುಮದಾರರ ಹೇಳಿಕೆ. ಅಲ್ಲಿಯ ದೇವಸ್ಥಾನಗಳು ಬಾದಾಮಿ ಚಾಲುಕ್ಯರ ವೇಸರ ಪದ್ಧತಿಯಲ್ಲಿವೆ ಎಂದು ಸ್ಪಷ್ಟಿಸುತ್ತಾರೆ. ಹೀಗೆ ಆಲೂರರ "ಕರ್ನಾಟಕ ಗತವೈಭವ"ದ ನಂತರ ಸಾಕಷ್ಟು ಸಂಶೋಧನೆಗಳು ಆಗಿ ಹೆಚ್ಚಿನ ಮಾಹಿತಿ ಸಿಕ್ಕು ಕರ್ನಾಟಕದ ರಾಜಕೀಯ ಪ್ರಭಾವದ ವ್ಯಾಪ್ತಿ ಈಗಿನ ಬಂಗಾಲ, ಹಾಗೂ ನೈಋತ್ಯ ಏಷಿಯಾವರೆಗೆ ಹಬ್ಬಿತ್ತೆಂದು ಗೊತ್ತಾಗುತ್ತದೆ.

ಏಕೀಕರಣದ ನಂತರ ಕರ್ನಾಟಕದ ಈಗಿನ ಭೌಗೋಳಿಕ ವಿಸ್ತಾರ

ಫಜಲ್ ಅಲಿ ಕಮಿಷನ್ ಮಂಜೂರು ಮಾಡಿದ ಕರ್ನಾಟಕ ರಾಜ್ಯದ ರಚನೆಯ ಕನಸು ೧೯೫೬, ನವೆಂಬರ ಒಂದರಂದು ನನಸಾಯಿತು. ಈ ಹೊಸ ರಾಜ್ಯದಲ್ಲಿ ೧) ಬಳ್ಳಾರಿ ಸಹಿತ ಮೈಸೂರು ರಾಜ್ಯ, ೨) ಮುಂಬಯಿ ಪ್ರದೇಶದಿಂದ ಚಂದಗಡ ತಾಲ್ಲೂಕ ಬಿಟ್ಟು ಬೆಳಗಾವಿ ಜಿಲ್ಲೆ ಮತ್ತು ಇಡೀ ಧಾರವಾಡ, ಬಿಜಾಪುರ ಹಾಗೂ ಉತ್ತರಕನ್ನಡ ಜಿಲ್ಲೆಗಳು, ೩) ಮದ್ರಾಸ ಪ್ರದೇಶದಿಂದ ಕಾಸರಗೋಡು ತಾಲ್ಲೂಕು ಮತ್ತು ಅಮಿನದೀವಿ ದ್ವೀಪ ಬಿಟ್ಟು, ಉಳಿದ ದಕ್ಷಿಣ ಕನ್ನಡ ಜಿಲ್ಲೆ, ಕೊಯಮತ್ತೂರು ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕು ೪) ಇಡೀ ಕೊಡಗು ೫) ಹೈದರಾಬಾದ ರಾಜ್ಯದ ಈ ಕೆಳಗಿನ ಜಿಲ್ಲೆಗಳು: ಕೊಡನಗಲ್ ಮತ್ತು ತಂದೂರ್ ತಾಲ್ಲೂಕುಗಳನ್ನು ಬಿಟ್ಟು ಗುಲಬರ್ಗಾ ಜಿಲ್ಲೆ; ಆಲಮಪುರ ಮತ್ತು ಗಡವಲ್ ತಾಲ್ಲೂಕು ಬಿಟ್ಟು ರಾಯಚೂರು ಜಿಲ್ಲೆ; ಬೀದರ ಜಿಲ್ಲೆಯ ಬೀದರ, ಭಾಲ್ಕಿ, ಔರಾದ ಮತ್ತು ಹುಮನಾಬಾದ ತಾಲ್ಲೂಕುಗಳು ಸಮಾವೇಶವಾದವು. ಈ ರಾಜ್ಯಕ್ಕೆ "ಮೈಸೂರು" ಎಂದು ನಾಮಕರಣವಾಯಿತು. ಆಲೂರರ ಕನಸು ನನಸಾಯಿತು. ಆದರೆ "ಮೈಸೂರು" ಕರ್ನಾಟಕದ ಒಂದು ಚಿಕ್ಕ ಭಾಗ ಮಾತ್ರ, ಇಡೀ ಕನ್ನಡ ನಾಡನ್ನು ಸಮಾವೇಶ ಮಾಡುವದಿಲ್ಲ ಮತ್ತು "ಕರ್ನಾಟಕ" ಈ ಹೆಸರು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಹಾಗೂ ಪರದೇಶಗಳಲ್ಲೂ ಪ್ರಚಲಿತವಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ಜನರಿಗೆ ಈ ನಾಮಕರಣದಿಂದ ನಿರಾಶೆಯಾಯಿತು. ಕೊನೆಗೆ ೧೯೭೩ ನವೆಂಬರ್ ಒಂದನೇ ತಾರೀಖಿಗೆ ಬಹು ಜನರ ಇಚ್ಚೆಯಂತೆ "ಕರ್ನಾಟಕ"ವೆಂದು ಕರೆಯಲ್ಪಟ್ಟಿತು. ಇಷ್ಟಾದರೂ ಕರ್ನಾಟಕದ ಇತಿಹಾಸ ಓದಿದವರಿಗೆ ಕರ್ನಾಟಕದ ಸೀಮೆ ಇದಿಷ್ಟೇನಾ ಎಂಬ ದೊಡ್ಡ ಪ್ರಶ್ನೆ ಕಾಡುತ್ತದೆ. ಆಲೂರರು ಸಾಧಾರವಾಗಿ ತೋರಿಸಿಕೊಟ್ಟ ಕರ್ನಾಟಕದ ಗಡಿ ವಿಸ್ತೀರ್ಣ ಐತಿಹಾಸಿಕವಾಗಿ ಬಹು ದೊಡ್ಡದು. ಆದರೆ ಸ್ವಾತಂತ್ರ್ಯದ ನಂತರ ಒದಗಿದ್ದು ಕುಂಠಿತ ಕರ್ನಾಟಕ, ಆಲೂರರು ಗತವೈಭವದ ಎರಡನೆಯ ಅಧ್ಯಾಯದಲ್ಲಿ ಈ ಪ್ರಶ್ನೆಯನ್ನು ಹಿಡಿದು ಬಹಳಷ್ಟು ಚಿಂತನೆ ಮಾಡಿದ್ದಾರೆ.

ಮಾರ್ಗದರ್ಶಕರು

ಆಲೂರರಿಗೆ "ಕರ್ನಾಟಕದ ಕುಲ ಪುರೋಹಿತ"ರೆಂದು ಕೊಟ್ಟ ನಾಮಧೇಯ ಬಹಳ ಯೋಗ್ಯವಾದದ್ದು. ಪರಿಹಾಸದಲ್ಲಿ ಅವರಿಗೆ ಕುಲಪುರೋಹಿತರೆಂದು ಕರೆದದ್ದು ಸಾರ್ಥಕವಾಯಿತು. ಪುರೋಹಿತರಂತೆ ಕಾರ್ಯ ಪ್ರಾರಂಭಿಸಿ, ಬೇರೆ ಯಜಮಾನರಿಗೆ ಒಪ್ಪಿಸಿ ಹೋಗುವವರು ಎಂದು ಮೈಸೂರಿನಲ್ಲಿ ಸೇರಿದ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೆಂದು ವೆಂಕಟರಾಯರ ಆಯ್ಕೆಯಾದಾಗ ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಅವರಿಗೆ ಜೀವನ ಬಹಳ ಚಿಕ್ಕದಾಗಿದೆ ಹಾಗೂ ಮಾಡಲು ಕೆಲಸಗಳು ಬೇಕಾದಷ್ಟಿವೆ ಎಂದು ಅನಿಸಿರಬೇಕು. ಹೀಗಾಗಿ ಎಲ್ಲ ಕ್ಷೇತ್ರದಲ್ಲಿ ನ್ಯೂನತೆ ಕಂಡು ಅವುಗಳಲ್ಲಿ ಪ್ರಗತಿ ಸಾಧಿಸುವ ಛಲವಿತ್ತು. ದುಡಿಯಲು ಯಾರೂ ಇಲ್ಲದಾಗ ತಾವೇ ಸ್ವತಃ ಅದರ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದರು. ಅವರ ಸಂಗಾತಿಗಳು ಬಂದಕೂಡಲೇ ಅವರಿಗೆ ಒಪ್ಪಿಸಿ ಇವರಿಗೋಸ್ಕರ ಕಾಯುತ್ತಿರುವ ಇನ್ನೊಂದು ಕೆಲಸವನ್ನು ವಹಿಸಲು ತತ್ಪರರಾಗುತ್ತಿದ್ದರು. ಅವರು ನಾಯಕರಾಗಲು ಆಶಿಸಿದವರೇ ಅಲ್ಲ, ಕೇವಲ ಮಾರ್ಗದರ್ಶಕರಾಗಿದ್ದರು. ಸಾರ್ವಜನಿಕ ಕಾರ್ಯ ಮಾಡಬೇಕಾದ ಪ್ರಸಂಗದಲ್ಲಿ ಸ್ಪರ್ಧೆ ಇರಕೂಡದು ಎನ್ನುವ ಅಭಿಪ್ರಾಯದವರು ಅವರು. ಅವರ ಕೆಲಸದ ಒತ್ತಡವನ್ನು ಸಪ್ತರ್ಷಿಗಳೆಂದು ಪ್ರಸಿದ್ಧರಾದ ದೇಸಾಯಿ, ಹನುಮಂತರಾಯರು, ಎ.ಎಫ್.ಆಯ್. ಪಠಾಣ, ಜೋಗ ವಿಶ್ವನಾಥರಾಯರು, ಪುಣೆಕರ ನರಸಿಂಹಾಚಾರ್ಯರು, ಹೊಸಕೇರಿ ಅಣ್ಣಾಚಾರ್ಯರು, ಜಠಾರ್ ಬಳವಂತರಾಯರು, ಮುದವೀಡು ವೆಂಕಟರಾಯರು, ಮುದವೀಡು ಕೃಷ್ಣರಾಯರು, ನಾರಾಯಣ ರಾಜಪುರೋಹಿತರು, ಕಡಪಾ ರಾಘವೇಂದ್ರ ರಾಯರು ಮುಂತಾದವರು ಹಂಚಿಕೊಂಡರು. ಅವರ ಜೀವನದ ಆಗು ಹೋಗುಗಳನ್ನು ಪರಿಶೀಲಿಸಿದಾಗ ಆಲೂರರ ಕಣ್ಣು ಹಾಯದ ಕ್ಷೇತ್ರವಿಲ್ಲ ರಾಷ್ಟ್ರೀಯ ಚಳುವಳಿಯಲ್ಲಿ ಟಿಳಕರ ಅನುಯಾಯಿಯಾಗಿ, ಆಮೇಲೆ ಕನ್ನಡ ಚಳುವಳಿ, ವಾಚನಾಲಯ ಚಳುವಳಿ, ವಾಙ್ಮಯ, ಧಾರ್ಮಿಕ ಸಾಹಿತ್ಯ, ಪತ್ರಿಕಾ ಪ್ರಪಂಚ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಕೂಡ ವ್ಯಾಪಾರ, ಕೃಷಿ, ಉದ್ಯೋಗ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಸಾರಿಗೆ, ಆಡಳಿತದ ಸಮಸ್ಯೆಗಳು ಇಂತಹ ಅನೇಕ ಆರ್ಥಿಕ ಹಾಗೂ ಸಾಮಾಜಿಕ ರಂಗದಲ್ಲಿ ಕೂಡ ಅವರು ಕೆಲಸ ಮಾಡಿದ್ದಾರೆ ಎಂದು ಅವರ ಜೀವನ ಚರಿತ್ರೆಯಿಂದ ತಿಳಿಯುತ್ತದೆ. "ನನ್ನ ಔದ್ಯೋಗಿಕ ಚಟುವಟಿಕೆಗಳು" ಎಂಬ ಶೀರ್ಷಿಕೆಯುಳ್ಳ ಲೇಖನದಲ್ಲಿ ಕೆಲವು ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿ ಸಾಧಿಸಬೇಕಾದರೆ ಈ ಎಲ್ಲ ವಿಷಯಗಳ ತಜ್ಞರು ವರ್ಷಕ್ಕೊಮ್ಮೆಯಾದರೂ ಸೇರಿ ಆಯಾ ಕ್ಷೇತ್ರಗಳಲ್ಲಿಯ ವಿಕಾಸ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿ ಕೆಲಸ ಮಾಡಬೇಕು. ಎಂದು ಬಲವಾಗಿ ನಂಬಿದ್ದರು.

ಆಲೂರರು ಬಹಳಷ್ಟು ಕ್ಷೇತ್ರಗಳಲ್ಲಿ ಕೈ ಹಾಕಿ ಯಾವುದೇ ಒಂದರಲ್ಲಿ ಅವರಿಗೆ ಮುಂದಾಳುತನದ ಪ್ರಸಿದ್ಧಿ ಸಿಗಲಿಲ್ಲವೆಂಬ ಅಪಸ್ವರ ಕೇಳಿ ಬರುತ್ತದೆ. ಆದರೆ ಹರಡಿ ಹಂಚಿ ಹೋದ ಕರ್ನಾಟಕಕ್ಕೆ ಒಬ್ಬರಾದರೂ ಮುಂದೆ ಬಂದು ನೇತೃತ್ವ ವಹಿಸುವವರು ಆಗ ಇರಲಿಲ್ಲ. ಅಂಥಹ ಪರಿಸ್ಥಿತಿಯಲ್ಲಿ ಕರ್ನಾಟಕದ ಇತಿಹಾಸ ಹಾಗೂ ಸಾಂಸ್ಕೃತಿಕ ಜಾಗೃತಿ ಹಾಗೂ ಏಕೀಕರಣಕ್ಕಾಗಿ ಏಕಾಕಿಯಾಗಿ ಶ್ರಮಿಸಿದವರು ಆಲೂರರು. ಬಹು ದೊಡ್ಡ ಸಂಘಟಕರಾಗಿದ್ದು. ಪ್ರತಿಯೊಂದು ಕ್ಷೇತ್ರದಲ್ಲಿ ಉತ್ಸಾಹಿ ಯುವ / ತಂಡವನ್ನೇ ತಮ್ಮ ಜೀವನದುದ್ದಕ್ಕು ತಯಾರಿಸುತ್ತಾ ಬಂದರು. ರಾಷ್ಟ್ರೀಯ ಚಳುವಳಿಕಾರರ ತಂಡ, ಕರ್ನಾಟಕ ಏಕೀಕರಣಕ್ಕೋಸ್ಕರ ದುಡಿಯುವವರ ತಂಡ, ಕನ್ನಡ ಲೇಖಕರ, ಪತ್ರಿಕೋದ್ಯಮಿಗಳ, ಸಂಶೋಧಕರ ತಂಡ ಹೀಗೆ ಅನೇಕ ರಾಷ್ಟ್ರಸೇವಾಕರ್ತರ ಸೇನೆಯನ್ನೆ ಆಲೂರರು ಕಟ್ಟಿದರು. ಇದು ಸಾಮಾನ್ಯ ಕೊಡುಗೆಯಲ್ಲ. ಅವರಿಗೆ ಅಧಿಕಾರದ ಲಾಲಸೆ ಇಲ್ಲ, ಬರಿ ನಿಸ್ವಾರ್ಥ ಭಾವನೆಯಿಂದ ವಿವಿಧ ವಿಷಯಗಳ ಮೇಲೆ ಚಿಂತನೆಯಷ್ಟೇ ಅಲ್ಲ ಮೊದಲಿಗರಾಗಿ ಕೆಲಸ ಮಾಡಿದ್ದಾರೆ. ಈ ತರಹ ಮುಂದಿನ ಪೀಳಿಗೆಯವರಿಗೆ ಪ್ರಚೋದಿಸಿದ ಆಲೂರರನ್ನು ಈಗಲಾದರೂ ಕನ್ನಡಿಗರು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ.


Table of Contents