ಮುನ್ನುಡಿ

ನಿಮ್ಮೊಡನೆಈ ಪುಸ್ತಕ ಪ್ರಕಟಣೆಯ ಹಿಂದೆ ಹೇಳಲೇಬೇಕಾದ ಕಥೆಯೊಂದಿದೆಇಸ್ವಿ ೨೦೦೦ದ ನವೆಂಬರ್‍ ಐದನೇ ತಾರೀಖು. ಸಾಗರ ಕನ್ನಡ ಸಾಹಿತ್ಯ ಪರಿಷತ್ ಸಧ್ಯಕ್ಷರಾದ ಟಿ. ಮಹಾಬಲೇಶ್ವರ ಭಟ್ಟರ ಬೇದೂರು ಮನೆಯಲ್ಲಿ ಊಟ ಮಾಡುತ್ತಿದ್ದೆವು. ‘ಇದ್ದೇವು’ ಎನ್ನುವುದರಲ್ಲಿ ಡಾ. ಹಾ. ಮಾ ನಾಯಕರು, ಪುತ್ತೂರು ಕರ್ನಾಟಕ ಸಂಘದಅಧ್ಯಕ್ಷರಾದ ಬೋಳಂತಕೋಡಿ ಈಶ್ವರ ಭಟ್ಟರು, ಪ್ರೊ, ಎಸ್. ಎನ್. ಹೆಗೆಡೆ, ಪ್ರೊ. ವಿ.ಬಿ. ಅರ್ತಿಕಜೆ, ಪುತ್ತೂರಿನ ಪುರಂದರ ಭಟ್ಟರು ಮುಂತಾದವರಿದ್ದೆವು. ಸ್ವಲ್ಪ ದೂರದಲ್ಲಿ ಟೇಬಲ್ ಮೇಲೆ ಊಟಮಾಡುತ್ತಿದ್ದ ನಾಯಕರು ಬೋಳಂತಕೋಡಿಯವರನ್ನು ಉದ್ದೇಶಿಸಿ ಭಟ್ಟರೇ ನಿಮ್ಮಿಂದ ಒಂದು ಕೆಲಸವಾಗಬೇಕು ಎಂದರು. ಕುತೂಹಲದಿಂದ ಬೋಳಂತ ಕೋಡಿಯವರು ‘ಏನದು?’ ಎಂದರು. ‘ವಾನಳ್ಳಿಯವರ ಪಿಎಚ್‌ಡಿ ಪ್ರಬಂಧ ಪ್ರಕಟಿಸಬೇಕು’ ಎಂದು ನಾಯಕರು ನುಡಿದಾಗ ನನಗೆ ಒಂಥರಾ ಸಂಕೋಚ. ಒಂಥರಾ ಹೆದರಿಕೆ. ಬೋಳಂತ ಕೋಡಿಯವರು ಏನು ಹೇಳುತ್ತಾರೋ ಎಂಬ ಆತಂಕ.ಮರುಮಾತಾಡದೇ ಬೋಳಂತಕೋಡಿಯವರು `ನೀವ ಹೇಳಿದ ಮೇಲೆ ಆಯ್ತು' ಎಂದು ಬಿಟ್ಟರು.ಊಟವಾದದ್ದೇ ತಡ, ಬೋಳಂತಕೋಡಿಯವರು ಪುಸ್ತಕದ ನೀಲನಕ್ಷೆ ತಯಾರಿಸಿ ಬಿಟ್ಟರು. 'ಮೈಸೂರಿನಲ್ಲೇ ಮುದ್ರಿಸಿ, ಕೆಲಸ ಚೆನ್ನಾಗಿ ಆಗಲಿ, ೨೦೦೧ರ ಹೆಸರು ಹಾಕಿ' ಮುಂತಾಗಿ ಸೂಚನೆಗಳನ್ನೂ ಕೊಟ್ಟಾಯ್ತು. ಅಲ್ಲಿಗೆ ನಾನು ಕನಸು ಮಾತ್ರ ಕಂಡಿದ್ದ ಕೆಲಸವೊಂದು ಕ್ಷಣಮಾತ್ರದಲ್ಲಿ ಕೈಗೊಡುವ ಹಂತಕ್ಕೆ ಬಂದುಬಿಟ್ಟಿತು. 'ಬೆನ್ನುಡಿ ಯಾರಿಂದ ಬರೆಸುತ್ತೀರಿ ?' ಬೋಳಂತಕೋಡಿಯವರ ಪ್ರಶ್ನೆ. ನಾನು ಅಳುಕುತ್ತ ಹೇಳಿದೆ : 'ಮನಸು ಮಾಡಿದರೆ ನಾಯಕರೇ ಬರೆದಾರು. ' ತಕ್ಷಣ ಹಾಮಾನಾ ಮರುನುಡಿದರು 'ಬೆನ್ನುಡಿಯನ್ನೇನೊ ಬರೆಯಬಹುದು ಆದರೆ ಅದಕ್ಕಾಗಿ ನಿಮ್ಮ ಮಹಾಪ್ರಬಂಧವನ್ನು ಓದಬೇಕಲ್ಲ ?'ಆಗ ಬೋಳಂತಕೋಡಿಯವರು ಜಾಗೃತರಾದರು. 'ಅಂದರೆ ನೀವು ಓದಿದೇ ಪಿಎಚ್‌ಡಿ ಪ್ರಬಂಧ ಪ್ರಕಟಮಾಡಲು ನನಗೆ ಹೇಳಿದ್ದು ಯಾವ ಧೈರ್ಯದಿಂದ ?' ಅವರ ಪ್ರಶ್ನೆ. ಅದಕ್ಕೂ ಹಾ ಮಾ ನಾಯಕರ ಬಳಿ ಉತ್ತರವಿತ್ತು. 'ರೀ ಭಟ್ರೇ, ಗೊರೂರು ರಾಮಸ್ವಾಮಿ ಅಯ್ಯಂಗಾರರ ಪ್ರಬಂಧವೊಂದರಲ್ಲಿ ಒಂದು ಕತೆ ಇದೆ. ಒಂದು ಎಮ್ಮೆ ನೀರಲ್ಲಿ ಮುಳುಗಿಕೊಂಡಿರುತ್ತೆ. ಕೋಡು ಮಾತ್ರ ನೀರಿನ ಮೇಲಿರುತ್ತೆ. ಎಮ್ಮೆ ವ್ಯಾಪಾರಿಯೊಬ್ಬ ಕೋಡು ನೋಡಿಯೇ ಎಮ್ಮೆಯ ದರ ನಿಗದಿಮಾಡುತ್ತಾನೆ. ನಾನೂ ಹಾಗೆಯೇ. ವಾನಳ್ಳಿಯವರನ್ನು ನೋಡಿಯೇ ಅವರ ಪ್ರಬಂಧವನ್ನು ಮುದ್ರಿಸಲು ಶಿಫಾರಸು ಮಾಡಿದ್ದೇನೆ. 'ನನ್ನ ಕಣ್ಣು ತುಂಬಿ ಬಂತು. ಹಾ ಮಾ ನಾಯಕರು ಅನಪೇಕ್ಷಿತವಾಗಿ ತೋರಿದ ವಿಶ್ವಾಸದ ಭಾರಕ್ಕೆ ಕುಗ್ಗಿ ಹೋದೆ. ನಾವು ಸಾಗರದಿಂದ ಒಟ್ಟಿಗೆ ಕಾರಲ್ಲಿ ಬಂದೆವು. ಬರುವಾಗ ಅವರು ನುಡಿದರು 'ಶಕ್ತಿ ಪ್ರೆಸ್ಸಿನಲ್ಲೇ ಮುದ್ರಿಸಿ. ನಾನು ಶ್ರೀನಿವಾಸಮೂರ್ತಿಗಳಿಗೆ ಹೇಳ್ತೇನೆ.ಛಾಯಾಚಿತ್ರಗಳನ್ನೂ ಮುದ್ರಿಸಿ, ಅನಗತ್ಯ ಭಾಗಗಳನ್ನು ಕೈಬಿಡಿ.' ನಾವು ಸಾಗರದಿಂದ ವಾಪಸ್ಸು ಬಂದದ್ದು ಸೋಮವಾರ ಸಂಜೆ. ಮುಂದಿನ ಶುಕ್ರವಾರ ರಾತ್ರಿ ನಾಯಕರು ಸುದ್ದಿ ಹೇಳಿದೇ ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟರು. ಈ ಆಘಾತ ದಿಂದ ಹೊರಬರಲು ನನಗೆ ವಾರದಮೇಲೆ ಬೇಕಾಯ್ತು. ಪ್ರಬಂಧ ಪ್ರಕಟಣೆಯ ನೆನಪಾದಾಗಲೆಲ್ಲ ಹಾಮಾನಾ ಕಣ್ಣೆದುರು ನಿಲ್ಲುತ್ತಿದ್ದರು. ಪ್ರಬಂಧ ಪ್ರಕಟಣೆಯ ಯೋಚನೆ ಕೈಬಿಟ್ಟಿದ್ದೆ.ಹೀಗೊಂದು ರಾತ್ರಿ ಪುತ್ತೂರಿನಿಂದ ಫೋನು ಬಂತು. ಪುಸ್ತಕದ ಕೆಲಸ ಎಲ್ಲಿಯವರೆಗೆ ಬಂತೆಂದು ಬೋಳಂತಕೋಡಿಯವರ ಪ್ರಶ್ನೆ. 'ಹಾಮಾನಾ ಸಂಸ್ಮರಣ ಕಾರ್ಯಕ್ರಮ ಮಾಡುವಾಗ ಅವರ ಕೊನೆಯ ಆಸೆಯಾದ ಈ ಪುಸ್ತಕ ಬಿಡುಗಡೆ ಮಾಡೋಣ , ಸಿದ್ಧಗೊಳಿಸಿ' ಎಂದರು. ನಿದ್ದೆಯಿಂದ ಎಚ್ಚತ್ತವನಂತೆ ಮರುದಿನ ಹಾಮಾನಾ ಹೇಳಿದ್ದ ಶಕ್ತಿ ಪ್ರೆಸ್ಸನ್ನು ಹುಡುಕಿ ಹೋದೆ. ಜೊತೆಯಲ್ಲಿ ಹಿರಿಯರಾದ ಡಾ. ಎನ್.ಎಸ್. ತಾರಾನಾಥರಿದ್ದರು. ಶಕ್ತಿ ಪ್ರೆಸ್ಸಿಗೆ ಹೋದರೆ ಅಲ್ಲಿ ಇನ್ನೊಂದು ಆಘಾತ ಕಾದಿತ್ತು. ಪ್ರೆಸ್ಸಿನ ಶ್ರೀನಿವಾಸಮೂರ್ತಿ, " ಹಾಮಾನಾ ಸಾಯುವ ಹಿಂದಿನ ದಿನ ಫೋನುಮಾಡಿ ಈ ಪುಸ್ತಕದ ಬಗ್ಗೆ ಹೇಳಿದರು, 'ವಾನಳ್ಳಿಯವರು ಬರುತ್ತಾರೆ, ನನ್ನ ಕೆಲಸವೆಂದು ಮಾಡಿಕೊಡಬೇಕು' ಎಂದೂ ಹೇಳಿದರು, ಅದೇ ಅವರು ನನ್ನ ಜೊತೆ ಆಡಿದ ಕೊನೇ ಮಾತು" ಎಂದರು. ಆಕಸ್ಮಿಕವಾಗಿ ಸಾವು ಎದುರಾದಾಗಲೂ, ಸಾಯುವ ಮುನ್ನ ಹಾಮಾನಾ ತಾವು ವಹಿಸಿಕೊಂಡ ಕೆಲಸವನ್ನು ಮಾಡಿಮುಗಿಸುತ್ತಾರೆಂದು ಕನಸಲ್ಲೂ ಯೋಚಿಸಿರಲಿಲ್ಲ. ಇಷ್ಟುದಿನ ಸುಮ್ಮನಿದ್ದ ಬಗ್ಗೆ ಅಪರಾಧೀ ಭಾವ ನನ್ನನ್ನು ಮುತ್ತಿಕೊಂಡಿತು. ಎಂದೆಂದೂ ತೀರಿಸಲಾಗದ ಋಣವನ್ನು ಹೆಗಲ ಮೇಲಿರಿಸಿ ಹಾಮಾನಾ ಹೋಗಿಬಿಟ್ಟರೆನಿಸುತ್ತದೆ. ಅವರ ಕೊನೇ ಆಸೆಯನ್ನು ನೆರೆವೇರಿಸುವ ಸಣ್ಣ ಪ್ರಯತ್ನವೇ ಈ ಪುಸ್ತಕ. ಇಂದಿನ ಕಾಲದ ಹೆಚ್ಚಿನ ಪಿಎಚ್‌ಡಿ ಪ್ರಬಂಧಗಳಿಗೆ ಪುಸ್ತಕ ರೂಪದಲ್ಲಿ ಸಾರ್ವಜನಿಕರೆದುರು ತೆರೆದುಕೊಳ್ಳುವ ಯೋಗವಿರುವುದಿಲ್ಲ. ಕೆಲವಕ್ಕೆ ಆ ಯೋಗ್ಯತೆಯೂ ಇರುವುದಿಲ್ಲ ಎಂಬ ಮಾತಿದೆ. ನನ್ನ ಕೃತಿಗೆ ಅಂಥ ಯೋಗ್ಯತೆ ಇದೆಯೋ ಗೊತ್ತಿಲ್ಲ. ಆದರೆ ಪ್ರಕಟಣೆಯ ಯೋಗ ಪಡೆದಿರುವುದರಿಂದ ನಿಮ್ಮೆದುರಿಗಿದೆ. ಡಾ. ನಾಡಿಗ ಕೃಷ್ಣಮೂರ್ತಿಯವರ ಇಂಗ್ಲಿಷ್ ಪ್ರಬಂಧ ಕನ್ನಡಕ್ಕೆ ಅನುವಾದಗೊಂಡು ಪ್ರಕಟಗೊಂಡಿದ್ದು ಬಿಟ್ಟರೆ ಕನ್ನಡದಲ್ಲಿ ಮುದ್ರಣಗೊಂಡ ಪ್ರಪ್ರಥಮ ಪತ್ರಿಕೋದ್ಯಮ ಪಿಎಚ್‌.ಡಿ. ಪ್ರಬಂಧ ಇದೇ ಇರಬೇಕು. ಇದು ನಾನು ಪತ್ರಿಕೋದ್ಯಮ ಅಧ್ಯಾಪಕನಾಗಿ ಮೈಸೂರು ವಿಶ್ವವಿದ್ಯಾನಿಲಯವನ್ನು ಸೇರಿಕೊಂಡ ಮೇಲೆ ಸುಮಾರು ಮೂರುವರೆ ವರ್ಷಗಳು ಸತತ ದುಡಿದುದರ ಫಲ. ವೃತ್ತಿಯ ಕಾರಣದಿಂದ ಪಿಎಚ್‌.ಡಿ ಮಾಡಲೇ ಬೇಕಾಗಿ ಬಂದಾಗ ನನಗೆ ಇಷ್ಟವಾದ ಕನ್ನಡ ಪತ್ರಿಕೋದ್ಯಮವನ್ನೇ ಅಧ್ಯಯನಕ್ಕೆ ಆಯ್ದುಕೊಂಡೆ. ೧೫೦ ವರ್ಷಗಳ (೧೮೪೩ರಿಂದ ೧೯೯೩) ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ಸ್ಥೂಲವಾಗಿ ಕನ್ನಡ ವಿಶೇಷಾಸಕ್ತಿ ಪತ್ರಕಾಲೋಕವನ್ನೂ ನಿಖರವಾಗಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಹರವನ್ನೂ ಗುರುತಿಸಿ ದಾಖಲಿಸುವುದನ್ನೂ ನನ್ನ ಗುರಿಯಾಗಿ ಸ್ವೀಕರಿಸಿದೆ. ಮುಖ್ಯವಾಗಿ ಈ ರೀತಿಯ ಪತ್ರಿಕೆಗಳಿಗೆ ಸೂಕ್ತ ಆಕರಗಳಿಲ್ಲ. ಅವುಗಳ ದಾಖಲೆಯೇ ಆಗಿರುವುದಿಲ್ಲ. ಆದರೂ ಕರ್ನಾಟಕದ ಉದ್ದಗಲಕ್ಕೆ ಓಡಾಡಿ ನನ್ನ ಮಿತಿಯಲ್ಲಿ ಪ್ರಮಾಣಿಕ ಪ್ರಯತ್ನಮಾಡಿ ಹುಡುಕಿದಾಗ ೧೮೩ ಪತ್ರಿಕೆಗಳ ದಾಖಲೆ ದೊರೆಯಿತು. ಕನ್ನಡದಲ್ಲಿ ಕಲೆ-ಸಾಹಿತ್ಯ ಪತ್ರಿಕೆಗಳ ಕುರಿತು ಒಂದೆಡೆ ಸೂಕ್ತ ಮಾಹಿತಿಯೇ ಲಭ್ಯವಿರಲಿಲ್ಲವಾಗಿ ಕನ್ನಡ ಪತ್ರಿಕೋದ್ಯಮ ಸಾಹಿತ್ಯಕ್ಕೆ ಇದೊಂದು ಕಿರುಕಾಣಿಕೆಯೆಂದು ನಂಬಿಕೊಂಡಿದ್ದೇನೆ. ನನಗೆ ಗೊತ್ತಿದೆ. ನನ್ನ ಪ್ರಯತ್ನವನ್ನು ಮೀರಿಯೂ ಕೆಲ ಪತ್ರಿಕೆಗಳು ಇಲ್ಲಿ ದಾಖಲಾಗದೇ ಹೋಗಿವೆ. ಈ ತೆರನ ಸಂಶೋಧನೆಗೆ ಪೂರ್ಣತೆಯೆಂಬುದಿಲ್ಲವೆನಿಸುತ್ತದೆ. ಆದರೂ ಇಲ್ಲಿ ದಾಖಲಿಸದೇ ಬಿಟ್ಟು ಹೋದ ಪತ್ರಿಕೆಗಳಿಗಾಗಿ ವಿಷಾದಿಸುತೇನೆ ಹಾಗೂ ಸಂಬಂಧಿಸಿದವರು ನನ್ನ ಗಮನಕ್ಕೆ ತಂದರೆ ಮುಂದಿನ ದಿನಗಳಲ್ಲಿ ಈ ಪತ್ರಿಕೆಗಳ ಪಟ್ಟಿ ಅವನ್ನೂ ಸೇರಿಸುತ್ತೇನೆ. ಮಾಹಿತಿ ಸಿದ್ಧಪಡಿಸುವಲ್ಲಿ ಉಳಿದಿರಬಹುದಾದ ಅಪೂರ್ಣತೆಯ ಮಿತಿಯನ್ನೂ ವಿನಮ್ರವಾಗಿ ಒಪ್ಪಿಕೊಳ್ಳುತ್ತೇನೆ.ಈ ಪ್ರಬಂಧದ ಮೂಲರೂಪ ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್‌ಡಿ. ಗಾಗಿ ರಚಿಸಿ ಅರ್ಪಿಸಿದ್ದು. ಅದರ ಶೀರ್ಷಿಕೆ ವಿಶೇಷಾಸಕ್ತಿ ನಿಯತಕಾಲಿಕಗಳು : 'ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸ್ಥಿತಿಗತಿ ಮತ್ತು ವೃತ್ತಿಪರತೆಯ ಅಧ್ಯಯನ' ಎಂಬುದಾಗಿತ್ತು. ಇದನ್ನು ಪುಸ್ತಕ ರೂಪದಲ್ಲಿ ತರುವಾಗ ಕಲೆ-ಸಾಹಿತ್ಯ ಪತ್ರಿಕೆಗಳ ಭಾಗಕ್ಕಷ್ಟೇ ಒತ್ತುಕೊಟ್ಟು ವಿಶೇಷಾಸಕ್ತಿ ಪತ್ರಿಕೆಗಳಿಗೆ ಸಂಬಂಧಿಸಿದ ಅಧ್ಯಾಯವನ್ನು ಕೈಬಿಟ್ಟಿದ್ದೇನೆ. ನೂರಕ್ಕೂ ಹೆಚ್ಚಿದ್ದ ಛಾಯಚಿತ್ರಗಳಲ್ಲಿ ಕೆಲವನ್ನು ಮಾತ್ರ ಸೇರಿಸಲು ಸಾಧ್ಯವಾಗಿದೆ. ಹೀಗಾಗಿ ಇದು ನನ್ನ ಪಿಎಚ್.ಡಿ ಪ್ರಬಂಧದ ಪೂರ್ಣರೂಪ ಎಂದು ದಯಮಾಡಿ ಭಾವಿಸಬಾರದು. ಈ ಪ್ರಬಂಧ ರಚನೆಗೆ ಮಾರ್ಗದರ್ಶಕರು ಪ್ರೊ. ಎನ್. ಉಷಾರಾಣಿಯವರು. ನನ್ನ ವೃತ್ತಿಯ ತಿರುವುಗಳಲ್ಲಿ ಅವರ ಪಾತ್ರ ಬಹುವಿಧವಾದುದು. ಈ ಸಂದರ್ಭದಲ್ಲಿ ಅವರನ್ನು ಗೌರವಾದರಗಳಿಂದ ನೆನೆಯುತ್ತೇನೆ. ನಾನು ಪಿಎಚ್.ಡಿ ಮಾಡುವಾಗ ಸೂಕ್ತ ಸಲಹೆಗಳನ್ನಿತ್ತು, ಪತ್ರಿಕೆಗಳ ಬಗ್ಗೆ ಮಾಹಿತಿಯನ್ನಿತ್ತು ಅನೇಕ ಹಿರಿಯರು ಹರಸಿದ್ದಾರೆ. ಡಾ. ಶ್ರೀನಿವಾಸ ಹಾವನೂರ, ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ, ಪ್ರೊ. ಜಿ. ಎಚ್. ನಾಯಕ, ಡಾ. ಅರವಿಂದ ಮಾಲಗತ್ತಿ, ಡಾ. ಎನ್. ಎಸ್. ತಾರಾನಾಥ, ಪ್ರೊ. ಕೆ. ಎಸ್ ದೇಶಪಾಂಡೆ, ಎನ್ಕೆ ಕುಲಕರ್ಣಿ, ಜಿ. ಎಸ್ ಭಟ್ಟ, ಮೋಹನ ಹೆಗಡೆ ಬಂದಗದ್ದೆ ಮುಂತಾಗಿ ಪಟ್ಟಿ ಬೆಳೆಯುತ್ತದೆ. ಪ್ರಬಂಧವು ಪುಸ್ತಕ ರೂಪ ಪಡೆಯುತ್ತಿರುವ ಸಂದರ್ಭದಲ್ಲಿ ಅವರನ್ನು ವಿನಯಪೂರ್ವಕ ನೆನೆಯುತ್ತೇನೆ. ಈ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ತರುವ ಸಾಹಸ ಮಾಡಿರುವ ಪುತ್ತೂರು ವಿವೇಕಾನಂದ ಕಾಲೇಜು ಶಿವರಾಮ ಕಾರಂತ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ಬೋಳಂತ ಕೋಡಿ ಈಶ್ವರಭಟ್ಟರು ಹಾಗೂ ಕೇಂದ್ರದ ಇತರ ಸದಸ್ಯರಿಗೆ ನನ್ನ ವಂದನೆ. ಗೆಳೆಯ ಡಾ. ಎಚ್. ಜಿ. ಶ್ರೀಧರ, ಹಿರಿಯರಾದ ಡಾ. ಎನ್. ಎಸ್. ತಾರಾನಾಥ, ಅಂದವಾಗಿ ಮುದ್ರಿಸಿಕೊಟ್ಟ ಶಕ್ತಿ ಪ್ರೆಸ್ಸಿನ ಶ್ರೀನಿವಾಸಮೂರ್ತಿಗಳಿಗೆ ಎಷ್ಟು ವಂದನೆ ಹೇಳಿದರೂ ಕಡಿಮೆ ! ಕೊಂಡು ಓದುವ ನಿಮ್ಮನ್ನು ಮರೆಯಲಾದೀತೆ ?

ಪ್ರಸ್ತಾವನೆ

ಮಾನವನ ಬೆಳವಣಿಗೆಯ ಮೂಲ

ಜಗತ್ತು ಇಪ್ಪತ್ತೊಂದನೇ ಶತಮಾನದ ತಿರುವಿನಲ್ಲಿದೆ. ಮಾನವನ ಉಗಮವಾದ ಬಳಿಕ ಇಂಥ ತಿರುವುಗಳೆಷ್ಟಾದವೋ ಖಚಿತವಾದ ಲೆಕ್ಕವಿಲ್ಲ. ವಿಕಾಸವಾದದ ಪಥದಲ್ಲಿ ಕಟ್ಟಕಡೆಯ ಜೀವ ಮಾನವ. ಮಂಗ - ಮಾನವನಾಗಿ ಬೆಳೆದುದು. ‘ಹಾಗೆ’ ಬೆಳದು ಮಾನವ ‘ಹೀಗಿರ’ ಲಿಲ್ಲ ಎಂಬುದು ನಿಜ. ಅಂದರೆ ಮಂಗ- ಮಾನವನಾಗಿ ಬೆಳೆದದ್ದು ಎಷ್ಟು ವಿಶೇಷವೋ ಆದಿಮಾನವ ಆಧುನಿಕ ಮಾನವನಾಗಿ ಬೆಳದ ಬಗೆಯೂ ಅಷ್ಟೇ ವಿಶೇಷ. ಅದೊಂದು ರೋಚಕವಾದ ಇತಿಹಾಸ. ಮಾನವನನ್ನು ಅಭಿವೃದ್ಧಿಯ ಹಾದಿಯಲ್ಲಿ ಇಷ್ಟೊಂದು ದೂರ ಎಳೆದು ತಂದ ಶಕ್ತಿಗೆ ಯಾವುದೋ ಪಾರಮಾರ್ಥಿಕ ಸ್ವರೂಪವನ್ನು ಹೊರಿಸಬೇಕಿಲ್ಲ. ವಿಚಾರಸಿದರೆ ಯಾರಿಗೂ ತಿಳಿಯಬಹುದಾದ ‘ತಣಿಯದ ಕುತೂಹಲ, ಕಂಡರಿಯದ ಸಂತೃಪ್ತು’ ಮಾನವನನ್ನು ಈ ಮಟ್ಟಕ್ಕೆ ಎಳೆದು ತಂದಿತು ಎನ್ನಬಹುದು. ವಿಕಾಸದ ಹಾಗೂ ಅಭಿವೃದ್ಧಿಯ ಯಾವುದಾದರೂ ಒಂದು ಹಂತದಲ್ಲಿ ಮನುಷ್ಯ ತೃಪ್ತನಾಗಿಬಿಟ್ಟಿದ್ದರೆ. ನಿನ್ನೆಗಳಿಗಿಂತ ತನ್ನ ನಾಳೆಗಳನ್ನು ಉತ್ತಮಪಡಿಸಿಕೊಳ್ಳುವ ಪ್ರವೃತ್ತಿಗೆ ಹೋಗದಿದ್ದರೆ ಜಗತ್ತು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಅಗತ್ಯವೇ ಅನ್ವೇಷಣೆಯ ತಾಯಿ. ಉದಾಹರಣೆಗೆ ಮಾನವನ ಉತ್ಕೃಷ್ಟ ಆವಿಷ್ಕಾರಗಳಲ್ಲಿ ಚಕ್ರವೂ ಒಂದು. ಚಕ್ರದಿಂದಾಗಿಯೇ ಮಾನವನ ಅಭಿವೃದ್ಧಿಯ ಚಕ್ರ ತಿರುಗಿತು ಎನ್ನುತ್ತಾರೆ. ಇಂದಿನ ಎಲ್ಲ ಯಂತ್ರಗಳ ಕೆಲಸ ಕಾರ್ಯಗಳಿಗೂ ಚಕ್ರ ಬೇಕು. ಈ ಚಕ್ರಗಳ ಸಹಾಯದಿಂದ ಭೂಮಿಯ ಮೇಲೆ ಚಲಿಸುವುದನ್ನು ಕಲಿತ ಮಾನವ ಅಷ್ಟಕ್ಕೆ ತೃಪ್ತನಾಗಲಿಲ್ಲ. ಅವನಿಗೆ ನೀರ ಮೇಲೆ ತೇಲುವ ವಿದ್ಯೆ ಬೇಕೆನಿಸಿತು. ಗಾಳಿಯಲ್ಲಿ ಹಾರುವುದು ಅಗತ್ಯವೆನಿಸಿತು. ಈ ಅಗತ್ಯಗಳನ್ನು ಮನಗಂಡು ನಿರಂತರ ಪ್ರಯತ್ನಶೀಲನಾಗುವುದರಿಂದ ಮಾನವನಿಗೆ ನೀರ ಮೇಲೆ ತೇಲುವ ದೋಣಿ, ಹಡಗುಗುಳನ್ನೂ, ಇನ್ನೂ ಮುಂದಕ್ಕೆ ಸಾಗಿ ನೀರಿನ ಒಳಗೇ ಸಾಗುವ ಸಬ್‌ಮೆರಿನ್‌ಗಳನ್ನೂ ಆವಿಷ್ಕರಿಸುವುದು ಸಾಧ್ಯಾವಾಯಿತು. ಅನೇಕ ವಿಜ್ಙಾನಿಗಳ ನಿರಂತರ ಪ್ರಯೋಗಗಳ ಫಲವಾಗಿ ವಿಮಾನಗಳು, ಹೆಲಿಕಾಫ್ಟರುಗಳು, ನಿಯತ್ತಾಗಿ ವೈರಿಯ ಜಾಗಕ್ಕೆ ನೆಗೆಯುವ ಸ್ಕಡ್‌ಗಳು, ಕ್ಷಿಪಣಿಗಳು ಸಿದ್ಧವಾದವು. ಈ ಮುನ್ನ ವಿಫಲವಾದ ಒಂದೊಂದು ಪ್ರಯೋಗಗಳ ಸಂದರ್ಭದಲ್ಲೂ ಮನುಷ್ಯ ‘ಸಾಕಪ್ಪ’ ಎಂದು ವಿಶ್ರಮಿಸಿಬಿಟ್ಟಿದ್ದರೆ, ಮರಳಿ ಯತ್ನವ ಮಾಡುವ ಛಲವನ್ನೇ ತೋರದಿರುತ್ತಿದ್ದರೆ ಜಗತ್ತಿನಲ್ಲಿ ಇಂಥ ಸಾಧನೆಗಳಾಗುತ್ತಿರಲಿಲ್ಲ. ಇರುವುದರಲ್ಲಿ ಕಾಣದ ಸಂತೃಪ್ತಿ ಮನುಷ್ಯನ ಬೆಳವಣಿಗೆಗಳ ಮೂಲ. ಕನ್ನಡದ ಹಿಡಿಯ ಕವಿ ಗೋಪಾಲಕೃಷ್ಣ ಅಡಿಗರು ಹೇಳುವ ಹಾಗೆ ಇರುವುದೆಲ್ಲವ ಬಿಟ್ಟು ಇರದುದಕ್ಕಾಗಿ ತುಡಿವುದೇ ಜೀವನ.ಸಂವಹನ ಮಾನವನ ಮೂಲಭೂತ ತುಡಿತಗಳಲ್ಲಿ ಸಂವಹನವೂ ಒಂದು. ಹಸಿವು, ನಿದ್ದೆ, ನೀರಡಿಕೆಗಳ ಹಾಗೇ ಜೀವಿಗೆ ಸಂವಹನ. ಸಂವಹನದ ತರ್ಕದ ಪ್ರಕಾರ ಜೀವಿಯೊಬ್ಬನಿಗೆ ಸಂವಹನ ಮಾಡದಿರಲು ಸಾಧ್ಯವೇ ಇಲ್ಲ. ಅಂದರೆ ಮಗು ಹುಟ್ಟಿದಾರಭ್ಯ ಮುದಕನಾಗಿ ಸಾಯುವವರೆಗೆ ಏನು ಮಾಡಿದರೂ ಅದು ಸಂವಹನವೇ. ಸಂವಹನ ಮನುಷ್ಯನ ಮೂಲಭೂತ ವ್ಯವಹಾರ. ಮಗುವಿಗೆ ಹಿರಿಯರು ಕೊಡುವ ಕ್ರೂರ ಶಿಕ್ಷೆಗಳಲ್ಲಿ ಟೂ ಬಿಡುವುದು ಅಂದರೆ ಮಾತನಾಡದಿರುವುದು ಅಥವಾ ಏಕಾಂಗಿಯಾಗಿ ಕೋಣೆಯಲ್ಲಿ ಕೂಡಿಹಾಕುವುದು ಮಗು ಬಯಸದಿರುವ ಶಿಕ್ಷೆಗಳು. ಯಾಕೆಂದರೆ ಸಂವಹನ ವಿಮುಖತೆ ಮಗುವಿನ ಮನಸ್ಸಲ್ಲೂ ಉಂಟುಮಾಡುವ ಭಯ, ಸಂಕಟ ಮನುಷ್ಯ ದೊಡ್ಡವನಾದಾಗಲೂ ಮುಂದುವರಿಯುತ್ತದೆ. ಜೈಲಿಗೆ ಕಳಿಸುವುದೆಂದರೆ ಈ ಸಂವಹನದಿಂದ ಹೊರಗಿಡುವುದು ಎಂತಲೇ ಅರ್ಥ. ಅದಕ್ಕೆ ಮನುಷ್ಯರಿಗೆ ಜೈಲಿಗೆಗ ಹೋಗಲು ಭಯ. ಅಲ್ಲಿ ಕೊಡುವ ದೈಹಿಕ ಶಿಕ್ಷೆಗಿಂತ ಹೊರಪ್ರಪಂಚ ದೊಡನೆ ಯಾವುದೇ ಸಂವಹನವಿಲ್ಲದಂತೇ ಪ್ರತ್ಯೇಕಿಸುವಲ್ಲಿ ಬೀರುವ ಮಾನಸಿಕ ಪರಿಣಾಮವೇ ಭೀಕರವಾದೀತೆಂದು ಯಾರಾದರೂ ಊಹಿಸಬಹುದು.ಆದಿಮಾನವನಿಗೆ ಆಧುನಿಕ ಸಂವಹನ ವಿಧಾನಗಳು ಕರಗತವಾಗಿರಲಿಲ್ಲ. ಮನುಷ್ಯನ ಜೋತೆ ಸಂವಹನ ಬೆಳೆಯಿತೋ ಸಂವಹನದಿಂದಾಗಿ ಮನುಷ್ಯ ಬೆಳೆದನೋ ವಿಭಾಗಿಸುವುದು ಕಷ್ಟ. ಅಂತೂ ಸಂವಹನ ಮನುಷ್ಯನಿಂದ ಮನುಷ್ಯನಿಗಾಗಿ ಮನುಷ್ಯನದೇ ಆಗಿ ಬೆಳೆಯಿತು ಎಂಬುದು ನಿರ್ವಿವಾದ.ಮನುಷ್ಯನ ಭಾವನೆಗಳಿಗೆ ಮೂರ್ತರೂಪ ಕೊಡುವ ಮಾಧ್ಯಮವಾಗಿ ಸಂವಹನ ಬೆಳೆದು ಬಂತು. ಇದು ಮೊದಲು ಧ್ವನಿ ಸಂಕೇತ, ಚಿತ್ರಗಳ ರೂಪದಲ್ಲಿತ್ತು (Non verbal form of Communication) ನಂತರ ನಿಖರವಾದ ಭಾಷೆ ಹಾಗೂ ಬರಹದ ರೂಪ ತಾಳಿತೆಂಬುದು ಮಾನವ ಚರಿತ್ರೆಯ ಅಧ್ಯಯನದಿಂದ ತಿಳಿದುಬರುತ್ತದೆ. ಭಾಷೆ ಹಾಗೂ ಬರಹ ಜೊತೆಗೆ ಸಂಕೇತ ಹೀಗೆ ಮೂರು ವಿಧಗಳು ಮಾನವನ ಸಂವಹನದ ಬತ್ತಳಿಕೆಗೆ ಸಿಕ್ಕ ಹೊಸ ಬಾಣಗಳಾದವು. ತನ್ನ ಇಚ್ಛಾನುಸಾರ ಬೇಕಾದದ್ದನ್ನು ಬೇಕಾದಾಗ ಬಳಸುವ, ಸಂಕೇತವನ್ನೂ ಶಬ್ದವನ್ನೂ ಏಕಕಾಲಕ್ಕೆ ಬಳಸಿ ಸಂವಹನವನ್ನು ಇನ್ನೂ ಪರಿಣಾಮಕಾರಿಯಾಗಿಸುವ ಕಲೆ ಮಾನವನಿಗೆ ಸಿದ್ಧಿಸಿತು.ಕೇವಲ ಧ್ವನಿಯ ಏರಿಳಿತಗಳಲ್ಲಿ ವ್ಯಕ್ತವಾಗುತ್ತಿದ್ದ ‘ಭಾಷೆ’ ಎಂಬ ಸಂವಹನ ಮಾಧ್ಯಮಕ್ಕೆ ಬರಹದಿಂದಾಗಿ ಹೊಸ ಆಯಾಮ ಬಂದುದು ನಿಜವಾದರೂ ಬರೆಯುವುದೆಲ್ಲಿ ಎಂಬುದು ಪ್ರಶ್ನೆಯಾಗಿತ್ತು. ತಾನು ಜೀವಿಸುತ್ತಿದ್ದ ಗುಹೆಗಳ ಗೋಡೆಗಳ ಮೇಲೆ ಬರೆದುದಾಯ್ತು. ಚಿತ್ರ ಬಿಡಿಸಿದ್ದಾಯ್ತು. ಸಿಕ್ಕ ಸಿಕ್ಕ ಕಲ್ಲು ಬಂಡೆಗಳ ಕೊರೆದು ಮುಗಿಯಿತು. ಮಾನವನಿಗೆ ಸಮಾಧಾನವಾಗಲಿಲ್ಲ. ಯಾಕೆಂದರೆ ಹೀಗೆ ಬರೆದುದನ್ನು ದೂರದಲ್ಲಿರುವ ಗೆಳೆಯನಿಗೋ ಅಳಿಯನಿಗೋ ತಲುಪಿಸಲು ಸಾಧ್ಯವಿರಲಿಲ್ಲ. ಇದಕ್ಕೆ ಚಲನಶೀಲ ಭಿತ್ತಿಯೊಂದರ ಅಗತ್ಯವಿತ್ತು ಹಾಗೂ ಈ ಭಿತ್ತಿಯನ್ನು ಉಪಯೋಗಿಸಿ ಒಂದೇ ಬರಹದ ಹೆಚ್ಚು ಪ್ರತಿಗಳನ್ನು ಮಾಡುಲು ಕಲೆ ಕರಗತವಾಗಬೇಕಿತ್ತು. ಅಂದಿನ ಅಗತ್ಯಕ್ಕೆ ಉತ್ತರವಾಗಿ ಬಂದದ್ದು ಕಾಗದ ಹಾಗೂ ಕಾಗದವನ್ನು ಬಳಸಿ ಕಲ್ಲಚ್ಚಿನಿಂದ ಹೆಚ್ಚು ಪ್ರತಿಗಳನ್ನು ತೆಗೆಯುವ ಉಪಾಯ ಕೈ ಸೇರಿತು.ಸಂವಹನದ ಸಾಧ್ಯತೆಯ ದಿಗಂತವನ್ನು ವಿಸ್ತರಿಸಿದ್ದು ಗುಟೆನ್‌ಬರ್ಗ್‌ ೧೪೪೦ರಲ್ಲಿ ಕಂಡು ಹಿಡಿದ ಅಚ್ಚು ಮೊಳೆಗಳ ಮುದ್ರಣಯಂತ್ರ. ಅಂದರೆ ಅದಕ್ಕೂ ಮೊದಲು ಮುದ್ರಣ ಕಲೆ ಇರಲಿಲ್ಲವೆಂತಲ್ಲ. ಡಾ. ನಾಡಿಗ್ ಕೃಷ್ಣಮೂರ್ತಿಯವರು ಅಭಿಪ್ರಾಯ ಪಡುವ ಹಾಗೆ ಮುದ್ರಣ ಕಲೆಯನ್ನು ಕಂಡುಹಿಡಿದ ಮೊದಲಿಗರು ಚೈನಾದೇಶದವರು. ಕ್ರಿ. ಶ. ೮೬೮ರಲ್ಲಿ ‘ಹಿರಾಕ ಸೂತ್ರ’ವನ್ನು ಪ್ರಪಥಮವಾಗಿ ಮುದ್ರಿಸಲಾಯಿತು. ಆದರೆ ಚಲಿಸುವ ಅಚ್ಚಿನ ಮೊಳೆಗಳನ್ನು ಉಪಯೋಗಿಸಿ ಗುಟೆನ್‌ಬರ್ಗ್‌ನೇ ಮೊದಲಬಾರಿಗೆ ಪುಸ್ತಕವನ್ನು ಮುದ್ರಿಸಿದನೆಂದು ನಂಬಲಾಗಿದೆ. ಈ ಚಲಿಸುವ ಮೊಳೆಗಳ ಮುದ್ರಣಯಂತ್ರವು ಮುಂದೆ ಮುದ್ರಣದಲ್ಲಿ ಮಹತ್ತರ ಕ್ರಾಂತಿಗೆ ಕಾರಣವಾಗಿ ಇಂದು ಮುದ್ರಣದಲ್ಲಿ ಆಗಿರುವ ಸಂಶೋದನೆಗಳಿಗೆಲ್ಲ ಅಡಿಪಾಯ ಹಾಕಿತು.ಮಾನವ ಸಂವಹನದ ಅಭೀಪ್ಸೆಗೆ ಹೊಸ ಮಾರ್ಗವನ್ನೊದಗಿಸಿದ್ದು ಮುದ್ರಣ. ಮೊದಲ ಮುದ್ರಿತ ಪುಸ್ತಕವೇ ‘ಹಿರಾಕ ಸೂತ್ರ’ ಎಂಬುದುನ್ನು ಗಮನಿಸಿದರೆ, ಮುದ್ರಣ ಯಂತ್ರಗಳು ಆರಂಭದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಸಂಬಂಧಪಟ್ಟ ಸಾಹಿತ್ಯವನ್ನು ಮುದ್ರಿಸುವಲ್ಲಿ ನಿರತವಾಗಿದ್ದವು ಎನ್ನಬಹುದು. ಮುದ್ರಣ ಯಂತ್ರ ಬಂದಾಕ್ಷಣ ಪತ್ರಿಕೆಗಳೇನೂ ಮೊದಲಿಗೆ ಮುದ್ರಣಗೊಳ್ಳಲಿಲ್ಲ. ಇಂದು ನಮ್ಮೆದುರಿರುವ ಪತ್ರಿಕೆಗಳ ಕಲ್ಪನೆಯೂ ಆಗ ಇರಲಿಲ್ಲ. ಧಾರ್ಮಿಕ ಸಾಹಿತ್ಯವನ್ನು ಮುದ್ರಿಸುವ ಹಂತದ ಬಳಿಕ ಮುದ್ರಣ ಯಂತ್ರಗಳು ಪ್ರಬಂಧದಂಥ ಸಾಹಿತ್ಯ ಪುಸ್ತಕಗಳನ್ನುಮುದ್ರಿಸತೊಡಗಿದದ್ದು ಅವು ಇಂಗ್ಲೆಂಡಿನ ಕಾಫೀ ಹೌಸುಗಳಲ್ಲಿ ಬಹಳ ಜನಪ್ರಿಯವಾದುದು ಹಾಗೂ ಅಂದಿನ ಪ್ರಸಿದ್ಧ ಪ್ರಬಂಧಕಾರರುಗಳಿಗೆ ಈ ಕಾಫಿ ಹೌಸಿನ ಸುದ್ದಿ ಪುಸ್ತಕಗಳೇ ವೇದಿಕೆಯಾಗಿದ್ದು ಇಂಗ್ಲೆಂಡಿನ ಪತ್ರಿಕೋದ್ಯಮ ಚರಿತ್ರೆಯಿಂದ ತಿಳಿದು ಬರುವ ವಿಚಾರ. ಹಾಗೆ ಮೊತ್ತ ಮೊದಲ ‘ಸುದ್ದಿಪುಸ್ತಕ’ ಪ್ರಕಟವಾದುದು ೧೬೨೨ರಲ್ಲಿ. ಈ ಸುದ್ದಿ ಪುಸ್ತಕಗಳಿಗೆ ಮುಂದುವರೆಯುವಿಕೆಗಳಿದ್ದವು. ಆದರೆ ನಿಗದಿತವಧಿಯೆಂಬುದಿರಲಿಲ್ಲ. ಯಾವಾಗಲೋ ಪ್ರಕಟಗೊಳ್ಳುವ ಸುದ್ದಿ ಪುಸ್ತಕಗಳು ಒಂದು, ಎರಡು, ಮೂರು ಹೀಗೆ ಮುಂದುವರಿಯುವಿಕೆಯನ್ನು ಹೊಂದಿದ್ದವು. ಹೀಗಾಗಿ ಇವುಗಳನ್ನು ಪತ್ರಿಕೆಗಳೆಂದು ಒಪ್ಪಲಾಗದಿದ್ದರೂ ಪತ್ರಿಕೆಯ ಮೂಲರೂಪಗಳೆಂದು ಭಾವಿಸಬಹುದು. ಅವು ‘ಕೋ ಆರಂಟೋ’ ಡರ್ನಲ್ಸ್, ಇಂಟೆಲಿಜನ್ಸ್‌ಸ್, ಅಕ್ಕರೆನ್ಸಸ್ ಮುಂತಾದ ಹೆಸರುಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಮೊದಲ ಸುದ್ದಿ ಪುಸ್ತಕ ಮೇ ೨೩, ೧೬೨೨ ದಿನಾಂಕ ಹೊಂದಿರುವ ನಿಕೋಲಾಸ್ ಬೌರ್ನ್‌ ಮತ್ತು ಥಾಮಸ್ ಆರ್ಚರ್‍ ಅವರು ಹೊರತಂದ "Weekly news from Italy, Germany and Hungary translated out of Dutch copie" ಎಂಬ ದೀರ್ಘ ಶೀರ್ಷಿಕೆ ಹೊಂದಿತ್ತು. ಪತ್ರಿಕೋದ್ಯಮದ ಹುಟ್ಟು ಬೆಳವಣಿಗೆಯಲ್ಲಿ ಗಮನಿಸಬೇಕಾದ ಅಂಶ ಒಂದಿದೆ. ವೃತ್ತ ಪತ್ರಿಕೆಯ ಪೂರ್ವರೂಪ ಸುದ್ದಿ ಪುಸ್ತಕಗಳು. ಇವುಗಳಿಗಿಂತ ಮೊದಲು ಕರಪತ್ರಗಳ ರೂಪದಲ್ಲಿ ಪ್ರಕಟವಾಗುತ್ತಿದ್ದ ಸುದ್ದಿ ಪತ್ರಗಳಲ್ಲೂ ಸತ್ಯವನ್ನು ಆಧರಿಸಿದ ಸುದ್ದಿಯನ್ನು ಪ್ರಕಟಿಸಲು ಜಾಗವಿರುವ ಹಾಗೆ ಮನರಂಜನೆಗೂ ಸ್ಥಾನವಿತ್ತು. ಪತ್ರಿಕೆಗಳ ಆರಂಭದಿಂದಲೂ ಪತ್ರಿಕೆಗಳು ಸುದ್ದಿಯ ವಾಹಕಗಳಾಗಿ ಕೆಲಸಮಾಡುವಂತೆಯೇ ಮನರಂಜನೆಯ ಮಾಧ್ಯಮಗಳಾಗಿಯೂ ಕೆಲಸ ಮಾಡಿವೆ. ಉದಾಹರಣೆಗೆ ಇಂಗ್ಲೆಂಡಿನಲ್ಲಿ ೧೭೧೫ ರಷ್ಟು ಹಿಂದೆಯೇ ಹೊರಬಂದ ‘ಸ್ಪೆಕ್ಟೇಟರ್‍’ ಎಂಬ ದಿನಪತ್ರಿಕೆ ಆ ಕಾಲದ ಪ್ರಸಿದ್ಧ ಪ್ರಬಂಧಕಾರರುಗಳನ್ನು ರೂಪಿಸಿತು. ಸ್ಟೀಲ್, ಅಡಿಸನ್, ಡೇನಿಯಲ್ ಡೀಪೋಯ್ ಮುಂತಾದವರಿಗೆ ವೇದಿಕೆಯಾಗಿತ್ತು. ಸ್ಪಕ್ಟೇಟರ್‌ನಲ್ಲಿ ಪ್ರಕಟವಾಗುತ್ತಿದ್ದ ಪ್ರಬಂಧಗಳು ಇಂಗ್ಲೀಷ್ ಸಹಾತ್ಯದ ಮುಖ್ಯ ತೊರೆಯಾಗಿ ಬೆಳದವು. ಇಂಗ್ಲೆಂಡಿನ ಕಾಫಿ ಹೌಸ್‌ನಲ್ಲಿ ಪ್ರಚಾರದಲ್ಲಿದ್ದ ಪತ್ರಿಕೆಗಳಲ್ಲಿ ಗುಲ್ಲು, ಗಾಸಿಪ್ ಸುದ್ದಿಗಳಿಗೆ ಇದ್ದ ಸ್ಥಾನವೇ ಮನರಂಜನಾತ್ಮಕ ಬರಹಗಳಿಗೂ ಇದ್ದವು. ಪತ್ರಿಕೋದ್ಯಮದ ಆರಂಭದಲ್ಲೇ ಗುರುತಿಸಿಕೊಂಡ ಈ ಹೆಜ್ಜೆ ಇಂದಿನ ಯಾವುದೇ ಪತ್ರಿಕೆ ತೆಗೆದುಕೊಂಡರೂ ನಿಚ್ಚಳವಾಗಿ ಪಾದ ಊರಿದೆ. ಇಂದು ಮನರಂಜನೆಯ ವಸ್ತುಗಳನ್ನು ನಿರಾಕರಿಸಿ ಸುದ್ದಿಯನ್ನು ಹಾಗೂ ಗಂಭೀರ ಲೇಖನವನ್ನು ಮಾತ್ರ ಪ್ರಕಟಿಸುವ ಪತ್ರಿಕೆ ಇಲ್ಲವೆನ್ನಬಹುದು. ಕಥೆಗಳು, ಪ್ರಬಂಧಗಳು, ಹಾಸ್ಯ ಬರಹಗಳು, ಕಾವ್ಯಗಳು, ವ್ಯಂಗ್ಯ ಚಿತ್ರಗಳು ಇಂದು ದಿನಪತ್ರಿಕೆಗಳಿಂದ ಹಿಡಿದು ಎಲ್ಲ ಪತ್ರಿಕೆಗಳಿಗೂ ಬೇಕಾದ ಸರಕುಗಳಾಗಿವೆ.ಪತ್ರಿಕೋದ್ಯಮ ಬೆಳದ ಹಾಗೆ ಕವಲಾಗಿ ಒಡೆದದ್ದನ್ನು ಕಾಣಬಹುದು. ದಿನಪತ್ರಿಕೆಗಳು ಆರಂಭವಾದ ಮೇಲೆ ಮೂಲತಃ ಸುದ್ದಿವಾಹಕಗಳಾದವು. ದಿನನಿತ್ಯ ಜಗತ್ತಿನಲ್ಲಿ ನಡೆಯುವ ಘಟನೆಗಳಿಗೆ ದಾಖಲೆಗಳಾದವು. ‘ಇಂದಿನ ದಿನಪತ್ರಿಕೆ ನಿನ್ನೆಯ ಚರಿತ್ರೆ’ ಎನ್ನುತ್ತಾರೆ. ಅಂದರೆ ನಿನ್ನೆ ನಡೆದ ಸಂಗತಿಗಳಿಗೆಲ್ಲಾ ಅದು ಸಾಕ್ಷಿ. ಈಚಿನ ವರ್ಷಗಳಲ್ಲಿ ಸುದ್ದಿ ವ್ಯಾಖ್ಯಾನದಲ್ಲಿ ಆದ ಬದಲಾವಣೆ-ಈಗ ಸುದ್ದಿ - ನಡೆದ ಘಟನೆ ಮಾತ್ರವಲ್ಲ, ನಡೆಯುತ್ತಿರುವ ಘಟನೆಯೂ ಆಗಬಹುದು!ಸುದ್ದಿ ನೀಡಲು ದಿನಪತ್ರಿಕೆಗಳಿರುವಾಗ ವರ/ಪಕ್ಷ/ಮಾಸಪತ್ರಿಕೆಗಳ ಸ್ವರೂಪ ಬೇರೆ ಆಗಬೇಕಾಯಿತು. ಸುದ್ದಿ ನೀಡುವಲ್ಲಿ ಇವು ದಿನಪತ್ರಿಕೆಗಳೊಂದಿಗೆ ಸ್ಪರ್ಧಿಸಲಾರವು. ಹೀಗಾಗಿ ಸುದ್ದಿಯ ಮೌಲ್ಯಗಳಿಗಿಂತ ಭಿನ್ನವಾದ ಮೌಲ್ಯಗಳಿಗಾಗಿ ಓದಬೇಕಾದ ಸರಕುಗಳನ್ನು ನೀಡಲಾರಂಭಿಸಿದವು. ನಿಯತಕಾಲಿಕಗಳೆನಿಸಿಕೊಳ್ಳುವ ವಾರ, ಪಕ್ಷ, ಮಾಸ, ತ್ರೈಮಾಸ, ಚತುರ್ಮಾಸ, ಅರ್ಧವಾರ್ಷಿಕ ಮತ್ತು ವಾರ್ಷಿಕವೆಂದು ಘೋಷಿಸಿಕೊಂಡು, ಹೀಗೆ ಘೋಷಿತ ಅವಧಿಗೊಮ್ಮೆ ಪ್ರಕಟವಾಗುವ ಪತ್ರಿಕೆಗಳು ಮುಖ್ಯವಾಗಿ ಮನರಂಜನೆಯ ವಾಹಕಗಳಾದುದು ಹೀಗೆ.ನಿಯತಕಾಲಕೆಗಳು‘ಮ್ಯಾಗಜಿನ್’ ಎಂಬ ಇಂಗ್ಲಿಷ್ ಪದವನ್ನು ಕನ್ನಡದಲ್ಲಿ ನಿಯತಕಾಲಿಕವೆಂದು ಕರೆಯಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ಕನ್ನಡ ನಿಘಂಟು ‘ಮ್ಯಾಗಜಿನ್’ ಎಂಬ ಪದವನ್ನು ಹೀಗೆ ವಿವರಿಸುತ್ತದೆ: ಯುದ್ಧಕಾಲದಲ್ಲಿ ಸೈನ್ಯಕ್ಕೆ, ಆಯುಧಗಳನ್ನು, ಮದ್ದು ಗುಂಡುಗಳನ್ನು, ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿರುವ ಕೋಠಿ; ಬಂದೂಕು ಮದ್ದಿನ ಅಥವಾ ಇತರ ಸ್ಪೋಟಕ ವಸ್ತುಗಳ ಉಗ್ರಾಣ (ಹಲವರು ಬರೆದ ಲೇಖನಗಳನ್ನೊಳಗೊಂಡು) ನಿಯತಕಾಲಿಕ ಲೇಖನ ಸಂಗ್ರಹ ಪ್ರಕಟನೆ; ಸಂಕೀರ್ಣ ಪತ್ರಿಕೆ. ಸಂಕೀರ್ಣ ಪತ್ರಿಕೆ ಎಂಬುದನ್ನು ವ್ಯಾಖ್ಯಾನಿಸುವುದೂ ಸಂಕೀರ್ಣವಾದ ಕೆಲಸವೇ. ಕನ್ನಡದಲ್ಲಿ ನಿಯತಕಾಲಿಕಗಳಿಗೆ ಸಂಕೀರ್ಣ ಪತ್ರಿಕೆಗಳು ಎಂಬ ವಿವರಣೆ ಯಾಕೆ ಬಂತೋ ನಿಖರವಾಗಿ ಹೇಳುವುದು ಕಷ್ಟ. ಬಹುಶಃ ನಿಯತಕಾಲಿಕಗಲು ಸುದ್ದಿ, ಕಥೆ, ಕವನ, ಪ್ರಬಂಧ, ಲೇಖನ, ವೈಂಗ್ಯಚಿತ್ರ, ವಿಡಂಬನೆ ಮುಂತಾಗಿ ಸಾಧ್ಯವಿರುವ ಎಲ್ಲಾ ವಿಧದ ಬರವಣಿಗೆಗಳ ಕೋಠಿಯಾಗಿರುವುದರಿಂದ ಅದರ ಚೌಕಟ್ಟಿನ ನಿರ್ಮಾಣ ಸಂಕೀರ್ಣವಾಗಿರುವುದರಿಂದ ಸಂಕೀರ್ಣ ಪತ್ರಿಕೆಗಳು ಎಂಬ ಬಿರುದು ಬಂತೆಂದು ಹೂಹಿಸಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ರತ್ನಕೋಶ’ವು ಸಂಕೀರ್ಣ ಎಂಬುದನ್ನು ಗುಣವಾಚಕವಾಗಿಯೂ ಬೆರೆತ, ಮಿಶ್ರವಾದ, ಕಿಕ್ಕರಿದ, ಜಟಿಲವಾದ ವಿಧವಿಧವಾದ ಎಂಬುದಾಗಿಯೂ ವಿವರಿಸುತ್ತದೆ.ಮೇಲಿನ ಅರ್ಥಗಳಲ್ಲಿ ‘ವಿಧವಿಧವಾದ’ ಎಂಬ ಅರ್ಥ ನಿಯತಕಾಲಿಕಗಳ ಒಳಗಿನ ಹೂರಣಕ್ಕೆ ಹೋಲುವಂತೆ ತೋರುತ್ತದೆ. ಸಂಕೀರ್ಣವನ್ನು ‘ವಿಧವಿಧವಾದ’ ಎಂಬ ವಿವರಣೆಯ ಸಹಾಯದಿಂದ ವಿವರಿಸುವುದು ಸೂಕ್ತವೆನಿಸುತ್ತದೆ.ಮನಷ್ಯನಿಗೆ ಆಸಕ್ತಿದಾಯಕವಾದ ವಿಧವಿಧವಾದ ವಸ್ತುಗಳನ್ನು ಓದಲು ಒದಗಿಸುವುದು ನಿಯತಕಾಲಿಕಗಳು. ಮನುಷ್ಯನಿಗೆ ೬೪ ವಿದ್ಯೆಗಳಿವೆಯೆನ್ನುತ್ತಾರೆ. ನವರಸಗಳನ್ನು ಆರೋಪಿಸಲಾಗುತ್ತದೆ. ಆಯಾ ಸಂದರ್ಭ-ಅನುಕೂಲಕ್ಕೆ ತಕ್ಕ ಹಾಗೆ ಮನುಷ್ಯರಿಗೆ ಅಥವಾ ಓದುಗರಿಗೆ ಬೇಕಾಗಿದ್ದುದನ್ನು ನೀಡುವುದು ಸಂಕೀರ್ಣ ಪತ್ರಿಕೆಗಳ ಕೆಲಸ. ಈ ಅರ್ಥದಲ್ಲಿ ‘ಮ್ಯಾಗಜಿನ್’ ನಿಜಕ್ಕೂ ‘ವಿಷಯಗಳ ಕೋಠಿ’ ವಸ್ತುಗಳ ಭಂಡಾರ. ಆಸಕ್ತಿಗಳ ಉಗ್ರಾಣ. ಒಂದೇ ಮನೆಯಲ್ಲಿರುವ ಅನೇಕ ಜನ ತಮಗೆ ಬೇಕುಬೇಕಾದ ವಿಷಯಗಳನ್ನು ಒಂದೇ ಹೊತ್ತಗೆಯೊಳಗಡೆ ಓದುವ ಸಾಧ್ಯತೆ ಮ್ಯಾಗಜಿನ್ ಅಥವಾ ನಿಯತಕಾಲಿಕೆಗಳ ವಿಶೇಷ.ಎಡ್ವರ್ಡ್‌ ಕೇರ್‍ ಎಂಬಾತ ೧೭೩೧ರಲ್ಲಿ ತನ್ನ ನಿಯತಕಾಲಿಕವನ್ನು ‘ಜಂಟ್ಲ್‌ಮನ್ಸ್‌ ಮ್ಯಾಗಜಿನ್’ (Gentleman's Magazine) ಎಂದು ಕರೆದ. ಈ ಹೆಸರು ಮುಂದೆ ಪರಂಪರೆಯೊಂದನ್ನು ಸೃಷ್ಟಿಸಬಹುದೆಂದು ಎಡ್ವರ್ಡ್‌ ಕೇರ್‍ ಯೋಚಿಸಿರಲಿಕ್ಕಿಲ್ಲ. ಅಲ್ಲಿಂದ ಮೊದಲಾಗಿ ನಿಯತಕಾಲಿಕೆಗಳಿಗೆ ಮ್ಯಾಗಜಿನ್ ಎಂಬ ಪದ ಗಂಟುಬಿತ್ತು. ಅನ್ವರ್ಥಕ ಶಬ್ದವಾಗಿ ಉಳಿದುಕೊಂಡಿತು.ಅಲ್ಲಿಂದ ಮುಂದಕ್ಕೆ ನಿಜ ಅರ್ಥದಲ್ಲಿ ವಸ್ತು-ವಿಷಯಗಳ ಕೋಠಿಗಳಾಗಿ ಮ್ಯಾಗಜಿನ್ನುಗಳು ಬೆಳೆದವು. ವಾಸ್ತವವಾಗಿ ಪತ್ರಿಕೋದ್ಯಮದಲ್ಲಿ ಬಂದ ಮೊದಲ ಪ್ರಕಟಣೆಗಳು ದಿನ ಪತ್ರಿಕೆಗಳಾಗಿರಲಿಲ್ಲ. ಭಾರತದಲ್ಲಿ ಹಿಕ್ಕೀಸ್ ಗೆಜೆಟ್ ಎಂಬುದು ಪಕ್ಷ ಪತ್ರಿಕೆಯಾಗಿತ್ತು. ಇತರ ದೇಶಗಳಲ್ಲೂ ಬಂದ ಮೊದಲ ಪತ್ರಿಕೆಗಳು ನಿಯತಕಾಲಿಕಗಳೇ ನಿಯತಕಾಲಿಕೆಗಳೆಂದು ಕರೆದುಕೊಂಡರೂ ನಿಯತವಾಗಿ ಪ್ರಕಟಗೊಳ್ಳುತ್ತಿರಲಿಲ್ಲ ಅಷ್ಟೇ. ನಿಯತಕಾಲಿಕಗಳು ಪ್ರೌಢಾವಸ್ಥೆಗೆ ಬಂದಮೇಲಷ್ಟೇ ದಿನಪತ್ರಿಕೆಗಳು ಉದಯವಾದವು.ಅಂದರೆ ಜಗತ್ತಿನಲ್ಲಿ ದಿನಪತ್ರಿಕೆಗಳ ಚರಿತ್ರೆಗಿಂತ ನಿಯತಕಾಲಿಕಗಳ ಚರಿತ್ರ ದೀರ್ಘವಾಗಿದೆ. ನಿಯತಕಾಲಿಕಗಳು ದಿನಪತ್ರಿಕೆಗಳೊಟ್ಟಿಗೆ ಸಮಸಮವಾಗಿ ಬೆಳೆದುದರಿಂದ ಚರಿತ್ರೆಯಲ್ಲೂ ಎರಡರ ನಡುವೆ ಸ್ಪಷ್ಟಭಿನ್ನತೆಗಳಿವೆ. ದಿನಪತ್ರಿಕೋದ್ಯಮಕ್ಕಿಂತ ಭಿನ್ನವಾಗಿ ಆದರೆ ಪ್ರಮುಖವಾಗಿ, ಸಮೃದ್ಧವಾಗಿ ಬೆಳದ ನಿಯತಕಾಲಿಕ ಪತ್ರಿಕೋದ್ಯಮ ಇಂದು ಪತ್ರಿಕೋದ್ಯಮದ ಪ್ರಮುಖ ಕವಲು. ಜಗತ್ತಿನ ಪತ್ರಿಕೋದ್ಯಮ ಚರಿತ್ರೆಯನ್ನು ಪರಿಶೀಲಿಸಿದರೆ ಈಗ ದಿನಪತ್ರಿಕೆಗಳದೇ ಪ್ರಬಲ್ಯ. ಸುದ್ದಿಯ ವಾಹಕಗಳಾದ್ದರಿಂದ ವಿಶೇಷ ಮಣೆ. ಹೆಚ್ಚಿನ ಮನ್ನಣೆ. ದಿನಪತ್ರಿಕೆಗಳಲ್ಲಿ ಬಂದ ಸುದ್ದಿ ಕ್ಷಣಮಾತ್ರದಲ್ಲಿ ಜಗತ್ತನ್ನು ಅಲುಗಾಡಿಸಬಲ್ಲದು. ಮರುದಿನವೇ ಆ ಸುದ್ದಿಯ ಪ್ರಭಾವ ತಿಳಿಯಬಹುದು. ಆದರೆ ನಿಯತಕಾಲಿಕದ ಪ್ರಕಟಣೆ ನಿಯಮಿತ ಅವಧಿಗೆ ಮಾತ್ರ. ಹೀಗಾಗಿ ಬಿಸಿ ಬಿಸಿ ಸುದ್ದಿಗೆ ದಿನಪತ್ರಿಕೆಗಳೇ ಬೇಕು. ಅವುಗಳ ಪ್ರಭಾವ-ಪರಿಣಾಮ ಎರಡೂ ತೀವ್ರ.ದಿನಪತ್ರಿಕೆಗಳ ಸ್ವರೂಪ ಹಾಗೂ ಗುಣವಿಶೇಷಗಲನ್ನು ಹೀಗೆ ಗುರುತಿಸಬಹುದು.

  • ಸಾಮಾನ್ಯವಾಗಿ ಡೆಮಿ ಅಥವಾ ಅರ್ಧ ಡೆಮಿ ಆಕಾರಗಳಲ್ಲಿ ದಿನಪತ್ರಿಕೆಗಳು ಪ್ರಕಟಗೊಳ್ಳುತ್ತವೆ.
  • ದಿನಪತ್ರಿಕೆಗಳು ೨೪ ಗಂಟೆಗೊಮ್ಮೆ ಹೊಸ ಸಂಚಿಕೆಯನ್ನು ಪ್ರಕಟಿಸುವುದರಿಂದ ಈ ಅವಧಿಯಲ್ಲಿ ಜಗತ್ತಿನಲ್ಲಿ ನಡೆದ ಹಾಗೂ ನಡೆಯುತ್ತಿರುವ ಸುದ್ದಿಮೌಲ್ಯವುಳ್ಳ ವಸ್ತುಗಳಿಗೆ ಪ್ರಕಟಣೆಯಲ್ಲಿ ಮಹತ್ತ್ವ ನೀಡುತ್ತವೆ.
  • ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿ ಹಾಗೂ ಲೇಖನದ ನಡುವೆ ಇರುವ ವ್ಯತ್ಯಾಸವನ್ನು ಓದುಗರಿಗೆ ಸ್ಪಷ್ಟಪಡಿಸುತ್ತವೆ.
  • ಸುದ್ದಿ ವಸ್ತುನಿಷ್ಠವಾಗಿ ಬರೆದಿರುವುದೆಂದು ಸ್ಪಷ್ಟಪಡಿಸುವ ಸಲುವಾಗಿ ಸುದ್ದಿ ಬರೆದವರಿಗೆ ಹೆಸರು ನೀಡುವ ಸಂಪ್ರದಾಯ ಇರುವುದಿಲ್ಲ. ಸುದ್ದಿ ವ್ಯಕ್ತಿನಿಷ್ಠವಾಗಿ ಬರೆದ ಸಂದರ್ಭಗಳಲ್ಲಿ ಮಾತ್ರ ವರದಿಗಾರರ ಹೆಸರನ್ನು ಸೂಚಿಸಲಾಗುತ್ತದೆ.
  • ದಿನಪತ್ರಿಕೆಗಳು ಸಾಮಾನ್ಯ ಸುದ್ದಿ ಬರವಣಿಗೆಯಲ್ಲಿ ಸಮಕಾಲೀನ ಸುದ್ದಿ ಬರವಣಿಗೆಯ ವಿಧಾನವನ್ನು ಪಾಲಿಸುತ್ತವೆ.
  • ಸಮಕಾಲೀನ ಸುದ್ದಿಗಳನ್ನು ನಿರ್ಭಾವುಕವಾಗಿ ಪ್ರಕಟಿಸುವ ದಿನಪತ್ರಿಕೆಗಳು ಸಮಕಾಲೀನ ಸಂಗತಿಗಳ ಮೇಲೆ ಪತ್ರಿಕೆಯ ಅಭಿಪ್ರಾಯಗಳನ್ನು ಸಂಪಾದಕೀಯ ಪುಟದಲ್ಲಿ ವ್ಯಕ್ತಪಡಿಸುತ್ತವೆ.
  • ಸುದ್ದಿಯ ಮಹತ್ತ್ವದ ಚಿತ್ರಗಳನ್ನು ಪ್ರಾಧನ್ಯತೆ ನೀಡಿ ಪ್ರಕಟಿಸುತ್ತವೆ.ದಿನಪತ್ರಿಕೆಗಳು ಸುದ್ದಿ ನೀಡುವುದಷ್ಟೇ ಅಲ್ಲ, ಸಮಕಾಲೀನ ವಿಚಾರಗಳಿಗೆ ಓದುಗರ ಸ್ಪಂದನವನ್ನೂ ‘ವಾಚಕರವಾಣಿ’, ‘ಓದುಗರ ಓಲೆ’, ‘ಸಹೃದಯ ಸ್ಪಂದನ’ ಮುಂತಾದ ಹೆಸರಿನ ಅಂಕಣಗಳ ಮೂಲಕ ದಾಖಲಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ಜನರ ಹಾಗೂ ಸರ್ಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತವೆ.ಸುದ್ದಿಯನ್ನು ಆದಷ್ಟು ಬೇಗ ಓದುಗರಿಗೆ ತಲುಪಿಸಬೇಕೆಂಬುದು ದಿನಪತ್ರಿಎಗಳ ಧಾವಂತ. ಅದಕ್ಕೆ ಬೆಳಗಿನ ದಿನಪತ್ರಿಕೆಗಳ ಜೊತೆ ಮಧ್ಯಾಹ್ನದ ಸಂಜೆಯ ದಿನಪತ್ರಿಕೆಗಳೂ ಹೊರಬರುತ್ತವೆ. ದಿನಪತ್ರಿಕೆಗಳು ಗಂಟೆಗೊಮ್ಮೆ ಹೊಸ ಆವೃತ್ತಿಯನ್ನು ಪ್ರಕಟಿಸುವ ದಿನಗಳು ಬಂದಿವೆ.ಮ್ಯಾಗಜಿನ್‌ಗಳ ಸ್ವರೂಪ ಹಾಗೂ ಗುಣ ವಿಶೇಷಗಳನ್ನು ಹೀಗೆ ಗುರುತಿಸಬಹುದು.
  • ಮ್ಯಾಗಜಿನ್‌ಗಳು ಡೆಮಿ ಆಕಾರದಿಂದ ಮಡಿಕೆ ಹೊಂದಿ ಭಿನ್ನ ಆಕಾರಗಳನ್ನು ಪಡೆಯುತ್ತವೆ.
  • ದೈನಂದಿನ ಸುದ್ದಿಗಳನ್ನು ಪ್ರಕಟಿಸದೇ ಸುದ್ದಿಯ ಮೇಲಿನ ವ್ಯಾಖ್ಯಾನ, ವಿಮರ್ಶೆಗಳನ್ನು ಪ್ರಕಟಿಸುತ್ತವೆ. ಮ್ಯಾಗಜಿನ್ಗಳಲ್ಲಿ ಪ್ರಕಟಗೊಳ್ಳುವ ವಸ್ತುಗಳು ದಿನಾ ಬಾಡುವ ಸುದ್ದಿಗಳಲ್ಲ. ಹೆಚ್ಚು ದಿನ ಕುತೂಹಲದಿಂದ ಓದಬಲ್ಲ ಸಂಗತಿಗಳು..ಮ್ಯಾಗಜಿನ್ನುಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿನಿಷ್ಠ ಬರಹಗಳನ್ನೇ ಪ್ರಕಟಿಸಲಾಗುತ್ತದೆ.
  • ಮ್ಯಾಗಜಿನ್ ಬರಹಗಳಿಗೆ, ಬರೆದವರ ಹೆಸರು ನೀಡಲಾಗುತ್ತದೆ.
  • ಮ್ಯಾಗಜಿನ್ ಬರಹಗಳು ಬರವಣಿಗೆಯ ಸ್ವಾತಂತ್ಯ್ರವನ್ನು ಅನುಭವಿಸಿ ಬರೆದವುಗಳು. ಸುದ್ದಿ ಬರವಣಿಗೆಯ ಚೌಕಟ್ಟು ಮ್ಯಾಗಜಿನ್ ಬರವಣಿಗೆಯನ್ನು ನಿರ್ಬಂಧಿಸುವುದಿಲ್ಲ.
  • ಮ್ಯಾಗಜಿನ್‌ಗಳು ವೈವಿಧ್ಯಮಯ ವಿಷಯಗಳ ಹೊತ್ತಿಗೆಗಳಾಗಿ ಪ್ರಕಟಗೊಳ್ಳುತ್ತವೆ.
  • ವೈವಿಧ್ಯ, ಸೃಜನಶೀಲತೆ, ಕಲಾತ್ಮಕತೆ ಮ್ಯಾಗಜಿನ್ನುಗಳ ಗುಣಗಳು.

ನಿಯತಕಾಲಿಕಗಳು ದಿನಪತ್ರಿಕೆಗಳ ಹಾಗೆ ಸುದ್ದಿಯ ಮುಖ್ಯ ವಾಹಕಗಳಲ್ಲ. ಸುದ್ದಿಯ ಮೇಲಿನ ವ್ಯಾಖ್ಯಾನ, ಆಳ ವಿಶ್ಲೇಷಣೆ ನಿಯತಕಾಲಿಕಗಳಲ್ಲಿ ನಡೆಯುವುದಾದರೂ, ಅವುಗಳ ಮುಖ್ಯ ಆಸಕ್ತಿ ಎಲ್ಲರೂ ಓದಿ ಖುಷಿಪಡಬಹುದಾದ ವಿಷಯಗಳ ಕಡೆಗೆ ಸುದ್ದಿಗಿಂತ ಹೆಚ್ಚಾಗಿ ಹಸಿರಾಗಿ ಉಳಿಯಬಲ್ಲ ವಸ್ತುಗಳ ಕಡೆಗೆ.ಅಂಕಿ ಅಂಶ ರೆಜಿಸ್ಟ್ರಾರ್‍ ಆಫ್ ನ್ಯೂಸ್‌ಪೇಪರ್ಸ್ ಆಫ್ ಇಂಡಿಯಾ (RNI) ಯವರ ೧೯೯೬ರ ವರದಿಯ ಪ್ರಕಾರ ಭಾರತ ದೇಶದಲ್ಲಿ ಒಟ್ಟೂ ೩೭,೨೫೪ ಪತ್ರಿಕೆಗಳು ಪ್ರಕಟವಾಗುತ್ತಿದ್ದು ಅವುಗಳಲ್ಲಿ ೪೨೩೬ ದಿನಪತ್ರಿಕೆಗಳು ಹಾಗೂ ೩೩,೦೧೮ ನಿಯತಕಾಲಿಕಗಳು. ಸರಿಯಾಗಿ ಒಂದು ನೂರು ಭಾಷೆಗಳಲ್ಲಿ ಪತ್ರಿಕೆಗಳು ಪ್ರಕಟಗೊಳ್ಳುತ್ತಿವೆ. ಕರ್ನಾಟಕದಲ್ಲಿ ಒಟ್ಟೂ ೧೮೫೯ ಪತ್ರಿಕೆಗಳು ಪ್ರಕಟಣೆಯಲ್ಲಿದ್ದರೆ ಅವುಗಳಲ್ಲಿ ಕನ್ನಡ ಪತ್ರಿಕೆಗಳ ಸಂಖ್ಯೆ ೧೨೮೯. ಇವುಗಳಲ್ಲಿ ೨೫೮ ಕನ್ನಡ ದಿನಪತ್ರಿಕೆಗಳು ಹಾಗೂ ೧೦೩೧ ನಿಯತಕಾಲಿಕಗಳು. ನಿಯತಕಾಲಿಗಳಲ್ಲಿ ಅರ್ಧವಾರ, ವಾರ, ಪಕ್ಷ, ಮಾಸ, ದ್ವೈಮಾಸಿಕ, ತ್ರೈಮಾಸಿಕ, ಷಾಣ್ಮಾಸಿಕಗಳೂ ಹಾಗೂ ವಾರ್ಷಿಕ ಪತ್ರಿಕೆಗಳೂ ಸೇರಿವೆ.ಭಾರತದಲ್ಲಿ ಅತಿ ಹೆಚ್ಚು ಪ್ರಸಾರದ ದಿನಪತ್ರಿಕೆ ಬೆಂಗಾಲಿಯ ‘ಆನಂದ ಬಜಾರ್‍’ ಪತ್ರಿಕೆಯಾಗಿದ್ದು ದಿನಕ್ಕೆ ೪,೮೯,೨೬೧ ಪ್ರತಿಗಳು ಮಾರಾಟಗೊಳ್ಳುತ್ತವೆ. ಅತಿ ಹೆಚ್ಚು ಪ್ರಸಾರದ ನಿಯತಕಾಲಿಕ ‘ಮಲೆಯಾಳ ಮನೋರಮಾ’ ಎಂಬ ವಾರಪತ್ರಿಕೆ ೧೨,೪೯,೧೦೩ ಪ್ರಸಾರ ಹೊಂದಿದೆ.ಕನ್ನಡದಲ್ಲಿ ಅತಿ ಹೆಚ್ಚು ಪ್ರಸಾರದ ದಿನಪತ್ರಿಕೆ ‘ಪ್ರಜಾವಣಿ’ ಯ ಪ್ರಸಾರ ೨,೧೩,೮೫೧. ಅತಿ ಹೆಚ್ಚು ಪ್ರಸಾರದ ನಿಯತಕಾಲಿಕ ‘ಸುದಾ’ ದ ಪ್ರಸಾರ ೧,೪೩,೪೦೯. ದಿನಪತ್ರಿಕೋದ್ಯಮದಿಂದ ಭಿನ್ನವಾಗಿ ಮ್ಯಾಗಜಿನ್ ಪತ್ರಿಕೋದ್ಯಮ ಬೆಳೆದಂತೆ ಮ್ಯಾಗಜಿನ್ ಪತ್ರಿಕೋದ್ಯಮದಲ್ಲೂ ಎರಡು ಕವಲುಗಳುಂಟಾದವು. ಸಾಮಾನ್ಯ ಆಸಕ್ತಿಯ ನಿಯತಕಾಲಿಕಗಳದು ಒಂದು ಕವಲಾದರೆ ವಿಶೇಷಾಸಕ್ತಿ ನಿಯತಕಾಲಿಕಗಳದ್ದು ಇನ್ನೊಂದು ಕವಲು. ವೈವಿಧ್ಯಮಯ ವಿಷಯಗಳ ತೆರೆದ ಅಂಗಡಿಯನ್ನೆಬಹುದಾದ ಸಾಮಾನ್ಯ ಆಸಕ್ತಿ ನಿಯತಕಾಲಿಕಗಳು ತಮ್ಮೊಳಗೆ ‘ಎಲ್ಲರೂ’ ಓದಬಹುದಾದ ಸಾಮಗ್ರಿಗಳನ್ನು ಒಳಗೊಂಡಿರುತ್ತವೆ. ಕನ್ನಡದಲ್ಲಿ ತರಂಗ ‘ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಹಿಕ’ ಎಂದು ಘೋಷಿಸಿ ಕೊಂಡಿರುವ ತರಹ. ಒಂದು ಕುಟುಂಬದಲ್ಲಿ ಬೇರೆ ಬೇರೆ ತಲೆಮಾರಿನವರು, ಆಸಕ್ತಿಯವರು, ನಂಬಿಕೆಗಳವರು ಇರಬಹುದು. ಅವರೆಲ್ಲರೂ ಓದುವಂತಾಗಲು ಎಲ್ಲರ ಆಸಕ್ತಿಗಳನ್ನು ಪೂರೈಸಬಲ್ಲ ವಸ್ತು ಮ್ಯಾಗಜಿನ್‌ನಲ್ಲಿ ಇರಬೇಕು. ಇವನ್ನೇ ಸಂಶೋಧಕನು ಸರ್ವಸಾಂಬಾರ (all spice) ಪತ್ರಿಕೆಗಳೆಂದು ಕರೆಯುವುದು.ಇದು ‘ಸ್ಪೆಷಲೈಸೇಶನ್‌’ಗಳ ಯುಗ. ನಿಯತಕಾಲಿಕ ಪತ್ರಿಕೋದ್ಯಮಕ್ಕೂ ಸ್ಪೆಷಲೈಸೇಶನ್ ಕಾಲಿಟ್ಟಿತು.ನಮ್ಮಲ್ಲಿ ಕಣ್ಣಿಗೇ ಬೇರೆ ವೈದ್ಯರು, ಕಿವಿಗೇ ಬೇರೆ ವೈದ್ಯರು, ನರಸಂಬಂಧೀ ರೋಗಗಳಿಗೆ ಬೇರೆ ವೈದ್ಯರು ಇರುವ ಹಾಗೆ ಕಂಪ್ಯೂಟರ್‌ಗಳಿಗೆ ಪತ್ರಿಕೆಗಳು ಬೇರೆ, ಆರೋಗ್ಯ ಪತ್ರಿಕೆಗಳು ಬೇರೆ, ಲೈಂಗಿಕ ಪತ್ರಿಕೆಗಳು ಬೇರೆ, ಹೀಗೆ ಘೋಷಿಸಿಕೊಂಡ ವಿಷಯಗಳ ಆಳಅಗಲಗಳನ್ನು ಪರಿಚಯಿಸುವ, ಅವುಗಳ ಮೇಲಷ್ಟೇ ತಮ್ಮ ಗಮನವನ್ನು ಕೇಂದ್ರೀಕರಿಸುವ ಪತ್ರಿಕೆಗಳನ್ನು ವಿಶೇಷಾಸಕ್ತಿ ನಿಯತಕಾಲಿಕೆಗಳು ಎನ್ನುತ್ತೇವೆ. ಈಗ ಮ್ಯಾಗಜಿನ್ ಲೋಕದಲ್ಲಿ ಸಾಮಾನ್ಯಸಕ್ತಿ ಪತ್ರಕೆಗಳದೂ ವಿಶೇಷಾಸಕ್ತಿ ಪತ್ರಿಕೆಗಳದೂ ಸ್ಪಷ್ಟ ವಿಂಗಡಣೆ. ಅವುಗಳ ಗುರಿಯೂ ಬೇರೆ, ದಾರಿಯೂ ಬೇರೆ.ಅಮೇರಿಕದಲ್ಲಿ ಮ್ಯಾಗಜಿನ್‌ಗಳನ್ನು ಮಾಸ್ ಮ್ಯಾಗಜಿನ್ (Mass Magazine) ಮತ್ತು ಕ್ಲಾಸ್ ಮ್ಯಾಗಜಿನ್ (Class Magazine) ಎಂದು ವಿಂಗಡಿಸುವ ಪರಿಪಾಠವಿದೆ. ಸಮೂಹ ಅಥವಾ ಕ್ಲಾಸ್ ಅಥವಾ ವರ್ಗ ಮ್ಯಾಗಜಿನ್‌ಗಳು ವಿಶೇಷ ಗುಂಪುಗಳನ್ನು, ವಿಶಿಷ್ಟ ಆಸಕ್ತಿಯ ಸಮುದಾಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತವೆ.ಮ್ಯಾಗಜಿನ್ನುಗಳನ್ನು ಗ್ರಾಹಕ ಮ್ಯಾಗಜಿನ್‌ಗಳು (Consumer Magazines) ಹಾಗೂ ವಿಶೇಷಾಸಕ್ತಿ ಮ್ಯಾಗಜಿನ್‌ಗಳು (Specialised Interest Magazines) ಎಮಬುದಾಗಿ ಆರ್‍. ಇ. ವೂಲ್‌ಸ್ಲೇಯವರು ತಮ್ಮ ‘ಮ್ಯಾಗಜಿನ್ ವರ್ಲ್ಡ್’ ಪುಸ್ತಕದಲ್ಲಿ ವಿಭಾಗಿಸುತ್ತಾರೆ. ಸಮೂಹ ಪತ್ರಿಕೆಗಳು ಅಥವಾ ಗ್ರಾಹಕ ಪತ್ರಿಕೆಗಳು ಮೂಲಭೂತವಾಗಿ ವ್ಯಕ್ತಿಗಳ ಉದ್ಯೋಗ, ಆದಾಯ, ವಯಸ್ಸು, ಆರೋಗ್ಯ ಇವು ಯಾವ ಭೇದಗಳನ್ನೂ ಪರಿಗಣಿಸದೇ ಎಲ್ಲಾ ಗಂಡು ಮತ್ತು ಹೆಣ್ಣುಗಳಿಗೆ ಸ್ಪಂದಿಸುತ್ತವೆ. ಸಮಸ್ತ ಜನರನ್ನೂ ಅನುಲಕ್ಷಿಸಿ ಸಮಗ್ರ ವಿಷಯಗಳನ್ನೂ ಒಳಗೊಂಡಿರುತ್ತವೆ. ವರ್ಗ ಮ್ಯಾಗಜಿನ್ನುಗಳು ಅಥವಾ ವಿಶೇಷಾಸಕ್ತಿ ನಿಯತಕಾಲಿಕಗಳನ್ನು ಸಣ್ಣ, ವಿಶೇಷ ಗುಂಪುಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಹೊರಡಿಸಲಾಗುತ್ರದೆ. ಆ ವಿಶೇಷ ಗುಂಪುಗಳ ಆಸಕ್ತಿಗಳು ಬಹು ಸಂಖ್ಯಾತ ಜನರ ಆಸಕ್ತಿಗಳಾಗಿರುವುದಿಲ್ಲ. ಇಂಗ್ಲೆಂಡಿನಲ್ಲಿ ೧೭೦೪ರಲ್ಲಿ ಆರಂಭವಾದ ‘ದಿ ರವ್ಯೂ’ ಇದು ನ್ಯೂಸ್ ಪೇಪರ್‍ ಮ್ಯಾಗಜಿನ್ ಎಂದು ಕರೆಸಿಕೊಂಡು ಸುದ್ದಿ ಪತ್ರಿಕೆ ಹಾಗೂ ಮ್ಯಾಗಜಿನ್ನುಗಳ ನಡುವಿನ ಕೊಂಡಿಯಾಗಿತ್ತು.ವಿಶೇಷಾಸಕ್ತಿ ನಿಯತಕಾಲಿಕ ವಿಶೇಷಾಸಕ್ತಿ ನಿಯತಕಾಲಿಕಗಳ ಹೆಸರೇ ಹೇಳುವ ಹಾಗೆ ಅವು ಸಾಮಾನ್ಯ ಓದುಗರಿಗಲ್ಲ. ಸಾಮಾನ್ಯ ಮ್ಯಾಗಜಿನ್ನುಗಳಿಗಿರುವ ಪ್ರಸಾರವನ್ನು ಅವು ನಿರೀಕ್ಷಿಸಲಾಗದು. ಹಾಗಂತ ಇವು ವಿಶೇಷ ಜನಗಳಿಗೆ ಎಂಬ ಅರ್ಥವಲ್ಲ. ಜನಸಾಮಾನ್ಯರಲ್ಲಿ ಇರುವ ವಿಶೇಷ ಆಸಕ್ತಿಗಳನ್ನೂ ಈ ಪತ್ರಿಕೆಗಳು ತೃಪ್ತಿಪಡಿಸುತ್ತವೆ.ಸಾಮಾನ್ಯ ಆಸಕ್ತಿಯ ಪತ್ರಿಕೆಗಳಲ್ಲಿ ವೈವಿಧ್ಯಗಳಿರುವುದರಿಂದ ಜನರಿಗೆ ಬೇಕಾದ ವಸ್ತು ಮಾಹಿತಿ ಅಲ್ಲಿ ದೊರೆಯುತ್ತವೆ. ಯಾವುದಾದರೊಂದು ವಿಷಯದ ಬಗ್ಗೆ ವಿಶೇಷ ಮಾಹಿತಿ ಬೇಕಾದಾಗ ವಿಶೇಷಾಸಕ್ತಿ ನಿಯತಕಾಲಿಕಗಳೇ ಬೇಕು.ಯಾವುದಾದರೊಂದು ವಿಷಯದ ಬಗ್ಗೆ ಸಾಮಾನ್ಯಾಸಕ್ತಿ ಪತ್ರಿಕೆ ನೀಡಿದ ವಿಚಾರದಿಂದ ತೃಪ್ತರಾಗದ ಜನ ಅದೇ ವಸ್ತುವಿನ ವಿಶೇಷಾಸಕ್ತಿ ಪತ್ರಿಕೆಯತ್ತ ಹೊರಳುವುದು ಸಾಮಾನ್ಯ. ಉದಾಹರಣೆಗೆ ಸಿಹಿ ಮೂತ್ರರೋಗದ ಬಗ್ಗೆ ಸಾಮಾನ್ಯ ಆಸಕ್ತಿ ಪತ್ರಿಕೆಗಳೂ ಲೇಖನ ಬರೆದಾವು. ಆದರೆ ಬೆಂಗಳೂರಿನಿಂದ ಹೊರಡುವ ‘ಡಯಾಬಿಟೀಸ್ ಸಮಾಚಾರ’ ಪತ್ರಿಕೆಯನ್ನು ನಿಯತವಾಗಿ ಓದುವುದರಿಂದ ಡಯಾಬಿಟೀಸ್ ಬಗ್ಗೆ ಹೆಚ್ಚಿನ ವಿವರಗಳು ತಿಳಿಯಬಹುದು. ಈ ವಿಶೇಷಾಸಕ್ತಿ ನಿಯತಕಾಲಿಕಗಳಲ್ಲಿ ಎದ್ದು ಕಾಣುವು ಗುಣ ವಿಶೇಷವೆಂದರೆ ಕಡಿಮೆ ಪ್ರಸಾರ - ಇದರಿಂದಾಗಿ ಜಾಹೀರಾತುಗಳ ಅಲಭ್ಯತೆ, ಪ್ರಸಾರವೂ ಇಲ್ಲದ ಜಾಹೀರಾತೂ ಸಿಕ್ಕದ ಪತ್ರಿಕೆ ಬಹಳ ಕಾಲ ನಡೆಯದಿರುವುದು. ಇಂದು ಹುಟ್ಟು ನಾಳೆ ಸಾಯುವ ವಿಶೇಷಾಸಕ್ತಿ ನಿಯತಕಾಲಿಕೆಗಳಿಗೆ ಲೆಕ್ಕವೇ ಇಲ್ಲ. ಹೆಚ್ಚಿನ ಉಮೇದಿನಿಂದ ಆರಂಭಗೊಳ್ಳುವ ಅನೇಕ ಪತ್ರಿಕೆಗಳು ರಿಜಿಸ್ಟರ್‍ ಆಗುವ ಮೊದಲೇ ಸಾವನ್ನಪ್ಪುವ ಅನೇಕ ಸಂದರ್ಭಗಳಿರುತ್ತವೆ. ಇಲ್ಲಿ ಮರೆಯಬಾರದ ಒಂದು ಅಂಶ - ಇಂಥ ವಿಶೇಷಾಸಕ್ತಿ ನಿಯತಕಾಲಿಕಗಳು ಬಹು ಕಾಲ ಯಶಸ್ವೀ ಬದುಕು ಬಾಳಲಿಕ್ಕಿಲ್ಲ. ಆದರೆ ಬದುಕಿದಷ್ಟು ಕಾಲ ಆಯಾ ಕ್ಷೇತ್ರದ ಆಸಕ್ತರಿಗೆ ಆಹಾರ ಒದಗಿಸುತ್ತವೆ. ಅವು ಉಳಿದರೂ ಇಲ್ಲವಾದರೂ ಅದೊಂದು ದಾಖಲೆ. ವಿಶೇಷಾಸಕ್ತಿ ನಿಯತಕಾಲಿಕವೊಂದು ಯಶಸ್ವಿಯಾಗಿ ನಡೆಯಿತೇ ಎಂಬುದು ಮುಖ್ಯವಲ್ಲ. ಯಾಕೆಂದರೆ ಅದು ಹೇಗೆ ನಡೆದರೂ ಅದೊಂದು ಮೈಲಿಗಲ್ಲು . ಪತ್ರಿಕೋದ್ಯಮ ಚರಿತ್ರೆಯಲ್ಲಿ ದಾಖಲಾಗುವ ಪ್ರಯೋಗ.ಮನುಷ್ಯನ ಆಸಕ್ತಿಯ ಹರಹು ವಿಸ್ತಾರವಾದುದು. ಅದೇ ಕಾರಣಕ್ಕೆ ವಿಶೇಷ ಆಸಕ್ತಿಗಳನ್ನು ಪ್ರತಿನಿಧಿಸುವ ಪತ್ರಿಕೆಗಳ ಹಾಗೂ ಅವುಗಳ ಕ್ಷೇತ್ರಗಳ ಪಟ್ಟಿ ದಿನದಿನಕ್ಕೂ ಬೆಳಯುತ್ತದೆ. ಹಿಂದೆಲ್ಲ ಒಂದು ವಿಶೇಷಾಸಕ್ತಿ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಪತ್ರಿಕೆಗಳನ್ನು ಹೊರಡಿಸಲಾಗುತ್ತಿತ್ತು. ಜಾನಪದ, ಕ್ರೀಡೆ, ಶಿಕ್ಷಣ, ಕಾನೂನು, ಮುಂತಾಗಿ, ಈಗ ಮನುಷ್ಯನ ಚಟುವಟಿಕೆಗಳು ಬೆಳದಹಾಗೆ ವಿಶೇಷಾಸಕ್ತಿ ಕ್ಷೇತ್ರಗಳಲ್ಲೇ ವಿಪರೀತ ಕವಲುಗಳು ಹೊರಚಾಚಿವೆ. ಹಿಂದೆ ಕೃಷಿಗೆ ಸಂಬಂಧಿಸಿದ ಪತ್ರಿಕೆಯನ್ನೆವಿಶೇಷಾಸಕ್ತಿ ಪತ್ರಿಕೆಯೆಂದರಾಗಿತ್ತು. ಈಗ ಕೃಷ್ಟಿಯಲ್ಲೂ ಯಾವ ಕೃಷಿ ಎಂಬ ಪ್ರಶ್ನೆ ಮೂಡುತ್ತದೆ. ಸಾವಯವ ಕೃಷಿಯ ಹಾದಿ ಬೇರೆ, ರಾಸಾಯನಿಕ ಕೃಷಿಯ ಹಾದಿ ಬೇರೆ. ಅಡಿಕೆಗೆ ಬೇರೆ ಪತ್ರಿಕೆ. ಸಾಂಬಾರ ಕೃಷಿಗಾಗಿ ‘ಸ್ಪೈಸ್ ಇಂಡಿಯಾ’ ಪತ್ರಿಕೆ ಇದೆ. ರೇಶ್ಮೆ ಮಂಡಳಿ ರೇಶ್ಮೆ ಬೆಳೆಗಾರರಿಗೇ ಪ್ರತ್ಯೇಕ ‘ರೇಶ್ಮೆ ಪತ್ರಿಕೆ’ ತರುತ್ತದೆ. ಕೃಷಿ ಮಾರುಕಟ್ಟೆಗೇ ಮೀಸಲಾಗಿ ‘ಕೃಷಿಪೇಟೆ’ ಇದೆ. ಅಂದರೆ ಮನುಷ್ಯ ಅಭಿವೃದ್ಧಿ ಹೊಂದಿದಂತೆಲ್ಲ ಅವನ ಆಶಯ, ಅಭಿವ್ಯಕ್ತಿಗಳು ಸಂಕೀರ್ಣಗೊಳ್ಳುತ್ತವೆ. ಅವುಗಳನ್ನು ಘೋಷಿಸುವ ಸಂಕೀರ್ಣ ಪತ್ರಿಕೆಗಳೂ ಹುಟ್ಟಿಕೊಳ್ಳುತ್ತವೆ.ಕನ್ನಡ ಪತ್ರಿಕೋದ್ಯಮಕನ್ನಡದಲ್ಲಿ ಪತ್ರಿಕೋದ್ಯಮ ಆರಂಭಗೊಂಡದ್ದು ೧೮೪೩ರಲ್ಲಿ. ‘ಮಂಗಳೂರು ಸಮಾಚಾರ’ ಕನ್ನಡದ ಮೊತ್ತಮೊದಲ ಪತ್ರಿಕೆ ಎಂಬುದರಲ್ಲಿ ಈಗ ಯಾವುದೇ ಸಂಶಯ ಉಳಿದಿಲ್ಲ. ಈ ಹಿಂದೆ ನಾಡಿಗ ಕೃಷ್ಣಮೂರ್ತಿಯವರು ಭಾರತೀಯ ಪತ್ರಿಕೋದ್ಯಮ ಕುರಿತ ಪ್ರೌಢಗ್ರಂಥದಲ್ಲಿ ‘ಕನ್ನಡ ಸಮಾಚಾರ’ ವೇ ಮೊದಲ ಪತ್ರಿಕೆಯೊಂದೂ, ಅದು ಬಳ್ಳಾರಿಯಲ್ಲಿ ೧೮೧೨ರಲ್ಲಿ ಪ್ರಕಟವಾಗಿ ಅನಂತರ ಅದರ ಸ್ಥಾಪಕರಾದ ಜರ್ಮನ್ ಪಾದ್ರಿಗಳು ಮಂಗಳೂರಿಗೆ ಹೋಗಿ ನೆಲೆಸಿದ್ದರಿಂದ ಪತ್ರಿಕೆಯನ್ನು ಮಂಗಳೂರಿಗೆ ತೆಗೆದುಕೊಂಡು ಹೋದರು ಎಂದು ವಾದಿಸಿದ್ದರು. ಬಳ್ಳಾರಿಯ ‘ಕಂನಡ ಸಮಾಚಾರ’ವೇ ಕನ್ನಡ ನಾಡಿನ ಪ್ರಥಮ ಪತ್ರಿಕೆಯೆಂದು ಘಂಟಾಘೋಷವಾಗಿ ಹೇಳಬಹುದು ಎಂದಿದ್ದರು.ಅನಂತರ ಈ ಕುರಿತು ಅಧ್ಯಯನ ನಡೆಸಿದ ಶ್ರೀನಿವಾಸ ಹಾವನೂರು ಅವರು ೧೮೪೩ರಲ್ಲಿ ಮಂಗಳೂರಿನಲ್ಲಿ ಆರಂಭಗೊಂಡ ‘ಮಂಗಳೂರ ಸಮಾಚಾರ’ ವೇ ಕನ್ನಡದಲ್ಲಿ ಮೊದಲ ಪತ್ರಿಕೆಯೆಂದು ಸಾಧಿಸಿ ತೋರಿಸಿದ್ದಾರೆ."ಪ್ರಕೃತ ಇದುವರೆಗೆ ಅಲಭ್ಯವಿದ್ದ ‘ಮಂಗಳೂರ ಸಮಚಾರ’ ಪತ್ರಿಕೆಯ ಪ್ರಥಮ ಸಂಪುಟವನ್ನು ವಿಧೇಶದಿಂದ ತರಿಸಲಾಗಿದ್ದು ಅದರ ಮೊದಲ ಸಂಚಿಕೆಯಿಂದ ಪತ್ರಿಕೆಯು ೧೮೪೩ರಲ್ಲಿ ಆರಂಭವಾದ ವಿಷಯ ಮತ್ತು ಅದರ ಕೊನೆಯ ಸಂಚಿಕೆಯಿಂದ ಅದು ‘ಕನ್ನಡ ಸಮಾಚಾರ’ ವೆಂಬ ಹೆಸರನ್ನು ತಳೆದು ೧೮೪೪ ರಿಂದ ಬಳ್ಳಾರಿಯಿಂದ ಹೊರಬರ ತೊಡಗಿದ ವಿಷಯ ಇವು ನಿಚ್ಚಲವಾಗಿ ತಿಳಿದುಬಂದಿದೆ."ಹಾವನೂರು ಅವರ ಸಂಶೋಧನೆಗೆ ಇಂದು ಅಧಿಕೃತ ಮಾನ್ಯತೆ ದೊರಕಿದೆ. ೧೮೪೩ರಿಂದ ಕನ್ನಡ ಪತ್ರಿಕೋದ್ಯಮವನ್ನು ಗುರುತಿಸುವ ಪರಿಪಾಠ ಬೆಳೆದುಬಂದಿದೆ. ಇದನ್ನೇ ಆಧಾರ ವಾಗಿಟ್ಟುಕೊಂಡು ೧೯೮೮ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯು ೧೪೫ನೇ ಕನ್ನಡ ಪತ್ರಿಕೋದ್ಯಮ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿತು. ಆಗ ಜಿ. ನಾರಾಯಣ ಅಕಾಡಮಿಯ ಅಧ್ಯಕ್ಷರಾಗಿದ್ದರು. ‘ಮಂಗಳೂರ ಸಮಾಚಾರ’ ಹಾಗೂ ಅದರ ಸಂಸ್ಥಾಪಕ ಕನ್ನಡದ ಮೊದಲ ಸಂಪಾದಕ ರೆವರೆಂಡ್ ಫಾದರ್‍ ಹರ್ಮನ್ ಮೊಯ್‌ಗ್ಲಿಂಗನ ಗೌರವಾರ್ಥವಾಗಿ ೧೪೫ನೇ ಪತ್ರಿಕೋದ್ಯಮ ವರ್ಷಾಚರಣೆಯನ್ನು ಮಂಗಳೂರಿನಿಂದಲೇ ಆರಂಭಿಸಲಾಯ್ತು. ಹೀಗೆ ನಿರ್ಣಯಿತವಾದಂತೆ ೧೯೯೮ರ ಹೊತ್ತಿಗೆ ೧೫೫ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಪತ್ರಿಕೋದ್ಯಮ ಇತರ ಭಾಷೆ ಹಾಗೂ ದೇಶೀಯ ಪತ್ರಿಕೋದ್ಯಮಗಳಂತೇ ಏಳು ಬೀಳುಗಳನ್ನು ಕಂಡು ಬೆಳದಿದೆ. ನಾಡಿಗ ಕೃಷ್ಣಮೂರ್ತಿಯವರ ಸಮಗ್ರ ಪ್ರಬಂಧ ಸ್ಪಷ್ಟಪಡಿಸುವ ಹಾಗೆ ಸ್ವಾತಂತ್ಯ್ರ ಚಳುವಳಿಯಲ್ಲಿ ದೇಶದ ಎಲ್ಲಾ ಭಾಷಾ ಪತ್ರಿಕೆಗಳೂ ಪಾಲ್ಗೊಂಡವು. ಹೆಚ್ಚು ಕಡಿಮೆ ಇಲ್ಲದ ಹಾಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದವು. ವೈವಿಧ್ಯತೆಯಲ್ಲಿ ಏಕತೆ ಭಾರತದ ಸೊಬಗು ಎಂಬುದನ್ನು ಸಮರ್ಥಿಸುವಂತೆ ಬೇರೆ ಬೇರೆ ಭಾಷೆಯ ಜನಗಳ ಪತ್ರಿಕೆಗಳೂ ಭಾರತದ ಸ್ವಾತಂತ್ಯ್ರದ ಪರವಾಗಿ ನಿಂತವು.ಸ್ವಾತಂತ್ಯ್ರೋತ್ತರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದ ಮೇಲೆ ಎಲ್ಲಾ ಭಾಷೆಗಳಲ್ಲೂ ಪತ್ರಿಕೆಗಳು ಏಳ್ಗೆಯನ್ನು ಕಾಣುತ್ತಿವೆ.ಪ್ರತಿಯೊಂದು ಭಾಷೆಯಲ್ಲೂ ಸುದ್ದಿ ಮೂಲವಾದ ದಿನಪತ್ರಿಕೆಗಳು ಹಾಗೂ ವೈವಿಧ್ಯಮಯ ವಿಷಯಗಳ ಕೋಠಿಯಾದ ಮ್ಯಾಗಜಿನ್ನುಗಳೂ ಬೆಳದಿವೆ. ಮ್ಯಾಗಜಿನ್ನುಗಳಲ್ಲೂ ಪ್ರಪಂಚದಾದ್ಯಂತ ಕಂಡುಬರುವ ಪ್ರಬೇಧಗಳಾದ ಸಮೂಹ ನಿಯತಕಾಲಿಕಗಳು ಹಾಗೂ ವರ್ಗ ನಿಯತಕಾಲಿಕಗಳು ನಮ್ಮಲ್ಲೂ ಬೆಳೆದಿವೆ. ಮಾನವನ ಆಸಕ್ತಿಯ ಒಂದೊಂದೇ ಕೇಂದ್ರಗಳನ್ನು ತಲಸ್ಪರ್ಶಿಯಾಗಿ ತಲುಪುವ ಏಕ ಆಸಕ್ತಿಯ ಪತ್ರಿಕೆಗಳು ಇಲ್ಲಿ ಹುಲುಸಾಗಿ ಬೆಳದಿವೆ.ಕನ್ನಡ ಪತ್ರಿಕೋದ್ಯಮ ಆರಂಭವಾದುದು ಪಾಕ್ಷಿಕದಿಂದ. ೧೯ನೇ ಶತಮಾನದಲ್ಲಿ ಬಂದ ಹೆಚ್ಚಿನ ಪತ್ರಿಕೆಗಳು ಮ್ಯಾಗಜಿನ್ನುಗಳೇ. ಇಂದಿನ ಮ್ಯಾಗಜಿನ್ನುಗಳಲ್ಲಿ ಬರುವ ವಿಷಯ ವೈವಿಧ್ಯಕ್ಕೂ ಶತಮಾನಕ್ಕೂ ಹಿಂದಿನ ಮ್ಯಾಗಜಿನ್ನುಗಳಿಗೂ ವೈತ್ಯಾಸವಿದೆ. ಮೂಲತಃ ಆಗ ಆಧುನಿಕ ಕನ್ನಡವೇ ಈ ರೂಪವನ್ನು ಪಡೆದುಕೊಂಡು ಗದ್ಯ ಪ್ರಧಾನವಾಗಿ ಬೆಳೆದಿರಲಿಲ್ಲ. ಆಗ ಮ್ಯಾಗಜಿನ್ನುಗಳು ಅಂದಿನ ಶೈಲಿ ಹಾಗೂ ಸಂದರ್ಭಗಳಿಗನುಗುಣವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದವು.ಕನ್ನಡ ಮ್ಯಾಗಜಿನ್ನಗಳ ಬೆಳವಣಿಗೆಯಲ್ಲಿ ಒಂದು ಕವಲು ಕ್ರೈಸ್ತ ಮಿಶನರಿಗಳದು. ‘ಮಂಗಳೂರ ಸಮಾಚರ’, ‘ಕಂನಡ ಸಮಾಚಾರ’, ಕ್ರೈಸ್ತ ಸಭಾ ಪತ್ರ’, ‘ಬಾಲ ಪತ್ರ’ ಮುಂತಾದವು ಕ್ರೈಸ್ತ ಮಿಶನರಿಗಳು ಹೊರತಂದ ನಿಯತಕಾಲಿಕಗಳು. ಅವುಗಳಲ್ಲಿ ಜನರಲ್ಲಿ ಅರಿವನ್ನು ಹೆಚ್ಚಿಸುವ ಉದ್ದೇಶದ ಜೊತೆಗೆ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವ ಉದ್ದೇಶಗಳೂ ಇರುತ್ತಿದ್ದವು.ಕ್ರೈಸ್ತ ಮಿಶನರಿಗಳ ಪತ್ರಿಕೆಗಳಿಗೆ ಭಿನ್ನವಾಗಿ ದೇಶೀಯ ಜನರಿಂದ ಪ್ರಕಟವಾದ ಮ್ಯಾಗಜಿನ್ನುಗಳಲ್ಲಿ ಶಿಕ್ಷಣ ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಬಂದ ‘ಜೀವನ ಶಿಕ್ಷಣ’, ‘ಕನ್ನಡ ಜ್ಞಾನ ಭೋದಕ’ ಸುದ್ದಿ ವಿಮರ್ಶೆಯ ಪತ್ರಿಕೆಗಳಾಗಿ ಬಂದ ‘ವೃಂತ್ತಾಂತ ಪತ್ರಿಕೆ’, ‘ವೃತ್ತಾಂತ ಚಿಂತಾಮಣಿ’, ಮುಂತಾದ ಪತ್ರಿಕೆಗಳು, ಕನ್ನಡ ಮ್ಯಾಗಜಿನ್ನುಗಳ ಬೆಳವಣಿಗೆಯ ಮೂಲ ಆಸಕ್ತಿಗಳನ್ನು ಬಿಂಬಿಸುತ್ತವೆ.ಬೆಳವಣಿಗೆಯ ಹಂತದಲ್ಲಿ ಕನ್ನಡ ಮ್ಯಾಗಜಿನ್ನುಗಳು ಯಾವೊಂದು ಆಸಕ್ತಿಗಳಿಗೆ ಸೀಮಿತಗೊಳಿಸಕೊಳ್ಳದೇ ಒಳ್ಳೆಯ ಜೀವನವನ್ನು ಬೋಧಿಸುವ ವಿಷಯಗಳನ್ನೆಲ್ಲಾ ಪ್ರಕಟಿಸುತ್ತಿದ್ದವು. ಪ್ರಾಚೀನ ಕಾವ್ಯಗಳನ್ನು ಪ್ರಕಟಿಸುವ ಪತ್ರಿಕೆಗಳೂ, ಆಧ್ಯಾತ್ಮಿಕ ವಿಚಾರಗಳನ್ನು ಬೋಧಿಸುವ ಪತ್ರಿಕೆಗಲೂ ಇದ್ದವು. ಮೊದಲಿಗೆ ಪತ್ರಿಕೆ ತರುವುದೇ ಮುಖ್ಯವಾದುದು, ಬರಬರುತ್ತಾ ಪತ್ರಿಕೆಗಳಲ್ಲಿ ಏನು ಪ್ರಕಟಿಸಬೇಕೆಂಬುದು ಮುಖ್ಯವಾಯ್ತು. ಪತ್ರಿಕೆಗಳಲ್ಲಿ ಎಲ್ಲ ಮಾದರಿಯ ಬರಹಗಳು ಪ್ರಕಟಗೊಳ್ಳುವ ಬದಲು ಆಯ್ಕೆಗೆ ಮೊದಲಾಯ್ತು. ಎಲ್ಲ ವರ್ಗಗಳ, ಎಲ್ಲ ವಯಸ್ಸಿನ, ಎಲ್ಲ ಆಸಕ್ತಿಯ ಜನರನ್ನೂ ಸಮಾಧಾನಪಡಿಸುವ ಮ್ಯಾಗಜಿನ್ನುಗಳು ಒಂದು ಕವಲಾಗಿ ಬೆಳೆದರೆ ವಿಷಯಗಳ ಆಯ್ಕೆಯಲ್ಲಿ ಘೋಷಿತ ಚೌಕಟ್ಟಿಗೆ ಬದ್ಧವಾದ, ಸೀಮಿತ ಆಸಕ್ತಿಯ ಘೋಷಣೆ ಮಾಡುವ ಮ್ಯಾಗಜಿನ್ನುಗಳೂ ಕನ್ನಡದಲ್ಲಿ ಬೆಳದವು.ಕನ್ನಡದಲ್ಲಿ ೧೮೬೮ರಷ್ಟು ಹಿಂದೆಯೇ ಕಾನೂನಿಗೆ ಸಂಬಂಧಿಸಿದ ಪತ್ರಿಕೆ ಬಂದಿದೆ. ಉಭಯ ಗೋಪಾಲಕೃಷ್ಣ ಎಂಬುವರು ‘ನ್ಯಾಯ ಸಂಗ್ರಹ’ವೆಂಬ ನ್ಯಾಯಾಂಗ ವಿಷಯಗಳಿಗೆ ಸಂಬಂಧಿಸಿದ ಪಾಕ್ಷಿಕ ಹೊರಡಿಸಿದ್ದರು. ಕನ್ನಡದಲ್ಲಿ ವಿಶೇಷಾಕ್ತಿ ನಿಯತಕಾಲಿಕೆಗಳಿಗೆ ಸುದೀರ್ಘ ಚರಿತ್ರೆಯಿರುವುದಕ್ಕೆ ಇದೇ ಸಾಕ್ಷಿ.ಆಧ್ಯಾತ್ಮ ಮತ್ತು ಸಾಹಿತ್ಯ ಪತ್ರಿಕೆಗಳಂತೂ ಕನ್ನಡ ಪತ್ರಿಕೋದ್ಯಮದ ಆಧಾರಸ್ತಂಭಗಳಂತೆ ಬೆಳೆದಿವೆ. ಶ್ರೀನಿವಾಸ ಹಾವನೂರರು ಹೇಳುವ ಹಾಗೆ_"ಹತ್ತೊಂಬತ್ತನೆಯ ಶತಮಾನದ ಪತ್ರಿಕೆಗಳನ್ನು ಇಡಿಯಾಗಿ ಪರಿಶೀಲಿದಾಗ ಅವುಗಳ ಪ್ರಕಟನೆಯಲ್ಲಿ ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯಕ ಎಂಬ ನಾಲ್ಕು ಬಗೆಯ ಉದ್ದೇಶಗಳು ಮುಖ್ಯವಾಗಿ ಕಂಡುಬರುತ್ತವೆ. ಪಾಶ್ಚಾತ್ಯ ಸಂಪರ್ಕದಿಂದಾಗಿ ಬೆಳಕಿಗೆ ಬಂದ ಅನೇಕ ವಿಷಯಗಳನ್ನು ಜೊತೆಗೆ ಸ್ವದೇಶದಲ್ಲಿಯ ವ್ಯಕ್ತಿ-ಸಂಗತಿಗಳ ಪರಿಚಯವನ್ನು ಮಾಡಿಕೊಡುವುದೇ ಶೈಕ್ಷಣಿಕ ಮುಖವೆಂದು ಬಗೆಯತಕ್ಕದ್ದು. ಪ್ರಚಲಿತ ಸುದ್ದಿಗಳನ್ನು ಕೊಟ್ಟು ಬ್ರಿಟಿಷ್ ಆಡಳಿತವನ್ನು ವಿಮರ್ಶಿಸುತ್ತಾ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸಿದ ಪ್ರಯತ್ನವೇ ರಾಜಕೀಯ ಮುಖ. ಧಾರ್ಮಿಕ ಉದ್ದೇಶದಲ್ಲಿ ಕ್ರಿಶ್ಚಿಯನ್ ಮತ ಪ್ರಸಾರ ಹಾಗೂ ಹಿಂದೂ ಧರ್ಮದ ಆಚರಣೆಯಲ್ಲಿ ಸುಧಾರಣೆ ಇವೆರಡೂ ಪ್ರತಿಪಾದನೆಗಳನ್ನು ಕಾಣಬಹುದು. ಸಾಹಿತ್ಯಕ ಉದ್ದೇಶದಲ್ಲಿ ಲಲಿತ ಸಾಹಿತ್ಯ ರಚನೆ ಗೌಣವಾಗಿದ್ದಿತು. ಆದರೆ ಹಳೆಯ ಕಾವ್ಯಗಳನ್ನು ಪರಿಷ್ಕರಿಸಿ ಪತ್ರಿಕೆಗಳ ಮೂಲಕ ಪ್ರಕಟಿಸುವ ಕಾರ್ಯವು ವ್ಯಾಪಕವಾಗಿ ಎಲ್ಲ ಭಾಷೆಗಳಲ್ಲೂ ನಡೆಯಿತು. ಕನ್ನಡ ಪತ್ರಿಕೋದ್ಯಮದ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿದ ಕೆ. ವಿ. ನಾಗರಾಜರವರ ಪ್ರಕಾರ ೧೯ನೇ ಶತಮಾನದಲ್ಲಿ ಕನ್ನಡದಲ್ಲಿ ಒಟ್ಟು ೯೧ ಪತ್ರಿಕೆಗಳು ಪ್ರಕಟಗೊಂಡಿವೆ. ಅವುಗಳಲ್ಲಿ ದಿನ ಪತ್ರಿಕೆಗಳ ಸಂಖ್ಯೆ ೩ ಮಾತ್ರ. ಉಳಿದವುಗಳು ನಿಯತಕಾಲಿಕಗಳು.ಕರ್ನಾಟಕ ರಾಜ್ಯ ಗೆಜೆಟಿಯರ್‌ನಲ್ಲಿ ದಾಖಲಾಗಿರುವ ೧೯ನೇ ಶತಮಾನದ ಪತ್ರಿಕೆಗಳು ೭೯ಮಾತ್ರ. ಅವುಗಳಲ್ಲಿ ಐದು ದಿನಪತ್ರಿಕೆಗಳಾದರೆ ಇತರೆಲ್ಲಾ ಪತ್ರಿಕೆಗಳು ನಿಯತಕಾಲಿಕಗಳು.ಹತ್ತೊಂಬತ್ತನೇ ಶತಮಾನದಲ್ಲೇ ಸ್ಪಷ್ಟವಾಗಿ ವಿಶೇಷಾಸಕ್ತಿ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡ ನಿಯತಕಾಲಿಕಗಳು ಇಪ್ಪತ್ತನೇ ಶತಮಾನದಲ್ಲೂ ಆ ಪ್ರವೃತ್ತಿಯನ್ನು ಮುಂದುವರೆಸಿದವು. ೨೦ನೇ ಶತಮಾನದ ಪೂರ್ವಾರ್ಧದ ಒಂದು ವಿಶೇಷವೆಂದರೆ ಭಾರತೀಯರು ಸ್ವಾತಂತ್ಯ್ರದ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗಾಗಿ ಯಾವ ಚಟುವಟಿಕೆಗಳೂ ಸ್ವಾತಂತ್ಯ್ರದ ಪ್ರಭಾವದಿಂದ ಮುಕ್ತವಾಗಿರಲಿಲ್ಲ. ಈ ಅವಧಿಯ ಪತ್ರಿಕೋದ್ಯಮ ಅದು ಸಾಮಾನ್ಯಾಸಕ್ತಿಯದಿರಲಿ, ವಿಶೇಶಾಸಕ್ತಿಯದಿರಲಿ, ಸ್ವಾತಂತ್ಯ್ರದ ಭಾವನೆಗಳನ್ನು ಒಳಗೊಂಡೇ ಇತ್ತು.ಆಗಸ್ಟ್ ೧೫, ೧೯೪೭ರಂದು ನವ ಭಾರತ ದೇಶ ಉದಯವಾಯಿತು. ಜನವರಿ ೨೬, ೧೯೫೦ರಂದು ಸರ್ವತಂತ್ರ ಸ್ವತಂತ್ರ ಗಣರಾಜ್ಯ ಸ್ಥಾಪನೆಯಾಯ್ತ. ನಾವಾಗಿ ರಚಿಸಿಕೊಂಡ ಸಂವಿಧಾನ ನಮ್ಮನ್ನು ಆಳತೊಡಗಿತು.ಭಾರತ ಸಂವಿಧಾನದ ೧೯(೧)(ಎ) ವಿಧಿ ಅಭಿವ್ಯಕ್ತಿ ಸ್ವಾತಂತ್ಯ್ರಕ್ಕೆ ಸಂಬಂಧಿಸಿದ್ದಾಗಿದೆ. ಈ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬರೂ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಅನುಭವಿಸುತ್ತಾರೆ. ಅಭಿವ್ಯಕ್ತಿ ಸ್ವಾತ್ಯ್ರವೇ ನಮ್ಮ ಎಲ್ಲಾ ಕಲಾ ಮಾಧ್ಯಮಗಳ ಪ್ರಕಟಣೆಗೆ, ಪತ್ರಿಕೆ ನಡೆಸುವುದಕ್ಕೆ ಮೂಲಭೂತವಾದ ಸ್ವಾತಂತ್ಯ್ರ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಪತ್ರಿಕೆ ಆರಂಭಿಸಲು ಹಕ್ಕುದಾರರು. (ಅಂದರೆ ವಿದೇಶೀ ಪ್ರಜೆಗಳಿಗೆ ಈ ಅವಕಾಶವಿಲ್ಲ.) ಈ ಸವಲತ್ತನ್ನು ಉಪಯೋಗಿಸಿಕೊಂಡು ಸ್ವಾತಂತ್ಯ್ರೋತ್ತರ ಭಾರತದಲ್ಲಿ ಪತ್ರಿಕೋದ್ಯಮ ಹುಲುಸಾಗಿ ಬೆಳೆಯಿತು. ಉದ್ಯಮವಾಗಿ ಬೆಳೆಯಿತು. ಪತ್ರಿಕೆಯ ಎಲ್ಲಾ ವಿಭಾಗಗಳಲ್ಲೂ ಮಾರ್ಪಾಡುಗಳಾದವು. ಆಧುನೀಕತೆಯ ಪದಾರ್ಪಣೆಯಾಯ್ತು. ಈ ಎಲ್ಲಾ ಬೆಳವಣಿಗೆಗಳ ಜೊತೆ ವಿಶೇಷಾಸಕ್ತಿ ನಿಯತಕಾಲಿಕ ಪ್ರಕಾರವೂ ಎಷ್ಟು ವೈವಿಧ್ಯಮಯವಾಗಿ ಬೆಳೆಯಿತೆಂದರೆ ಕನ್ನಡದಲ್ಲೂ, ಪತ್ರಕೋದ್ಯಮದಲ್ಲೂ ಈ ತೆರನ ಬೆಳವಣಿಗೆಯನ್ನು ಗುರುತಿಸಬಹುದು. ಜಾಗತಿಕ ಮಟ್ಟದಲ್ಲಿ, ದೇಶಮಟ್ಟದಲ್ಲಿ ಆಯಾಕಾಲದಲ್ಲಿ ಕಂಡು ಬಂದ ಚಳುವಳಿಗಳ ಪರಿಣಾಮ ಕನ್ನಡದ ಸಂದರ್ಭದಲ್ಲೂ ಆಗಿದೆ. ಇಂಗ್ಲಿಷ್ ಕಾವ್ಯದಲ್ಲಿ ಕಂಡು ಬಂದ ‘ರೋಮ್ಯಾಂಟಿಕ್ ಯುಗ್’ ಕನ್ನಡದಲ್ಲಿ ನವೋದಯ ಕಾವ್ಯಕ್ಕೆ ಕಾರಣವಾದುದನ್ನು ಈ ಹಿನ್ನಲೆಯಲ್ಲಿ ನೋಡಬಹುದು. ದೇಶೀಯ ಚಳುವಳಿ ನಡೆದಾಗ ಕರ್ನಾಟಕದ ಪತ್ರಿಕೆಗಳು ತಮ್ಮ ಕಾಣಿಕೆ ಅರ್ಪಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಕನ್ನಡದಲ್ಲಿ ಬಂದ ವಿಶೇಷಾಸಕ್ತಿ ನಿಯತಕಾಲಿಕಗಳತ್ತ ಪಕ್ಷಿ ನೋಟ ಬೀರಿದರೂ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಯುವಜನಕ್ಕೆ, ಯುವತಿಯರಿಗೆ, ನವಸಾಕ್ಷರರಿಗೆ, ಮಹಿಳೆಯರಿಗೆ, ಮೀಸಲಾದ ಪತ್ರಿಕೆಗಳಲ್ಲದೇ, ಕ್ರೀಡೆಗೆ, ಸಾಹಿತ್ಯಕ್ಕೆ, ಸಾಹಿತ್ಯದಲ್ಲಿ ಕಾವ್ಯಕ್ಕೆ, ನಾಟಕಕ್ಕೆ , ವಿಚಾರಕ್ಕೆ, ವಿಮರ್ಶೆಗೆ, ಮೀಸಲಾದ ಪತ್ರಿಕೆಗಳು, ಜಾನಪದ, ಸಂಗೀತ, ಕೃಷಿ, ವಿಜ್ಞಾನ, ಸಂಶೋದನೆ ಹೀಗೆ ಜಾಗತಿಕ ರಂಗದಲ್ಲಿ ಹೇಗೋ ಕನ್ನಡ ಪತ್ರಿಕೋದ್ಯಮದಲ್ಲೂ ವಿಶೇಷಾಸಕ್ತಿ ಪತ್ರಿಕೆಗಳ ಮಹಾಪೂರವೇ ಹರಿದಿರುವುದು ಕಂಡುಬರುತ್ತದೆ. ಅಂದರೆ ಕನ್ನಡದಲ್ಲಿ ನಿಯತಕಾಲಿಕ ಪತ್ರಿಕೋದ್ಯಮವೂ ಅದರಲ್ಲಿ ವಿಶೇಷಾಸಕ್ತಿ ಪತ್ರಿಕೆಗಳ ಪ್ರಕಾರವೂ ವಿಪುಲವಾಗಿ ಸಮೃದ್ಧವಾಗಿ ಬೆಳೆದುಬಂದಿದೆಯೆಂಬುದಕ್ಕೆ ಬೇರೆ ಯಾವ ಸಾಕ್ಷ್ಯಾಧಾರಗಳೂ ಬೇಕಾಗುವುದಿಲ್ಲ.ಅಧ್ಯಯನದ ಸಮರ್ಥನೆ ವಿಷಾದನೀಯ ಸಂಗತಿಯೆಂದರೆ ೧೫೫ ವರ್ಷಗಳ ಇತಿಹಾಸವಿರುವ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಮುಖ ಕವಲಾಗಿ ಚಿಗುರೊಡೆದ ಈ ವಿಶೇಶಾಸಕ್ತಿ ನಿಯತಕಾಲಿಕಗಳ ಬಗ್ಗೆ ಯಾವುದೇ ವಿಸ್ತೃತ ಅಧ್ಯಯನ ನಡೆಯದಿರುವುದು. ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಕನ್ನಡ ಸಾಹಿತ್ಯಕ್ಕಿದ್ದರೂ ಇಲ್ಲಿನ ಸಾಹಿತ್ಯ ಪತ್ರಿಕೆಗಳ ಸಮಗ್ರ ಅಧ್ಯಯನ ಈವರೆಗೂ ನಡೆದಿಲ್ಲ. ಈ ಬಗ್ಗೆ ಆಸಕ್ತರಾದವರಿಗೆ ಓದಲು, ಪರಾಮರ್ಶಿಸಲು ಸಾಮಗ್ರಿಗಳೇ ಲಭ್ಯವಿಲ್ಲ. ಕರ್ನಾಟಕದಲ್ಲಿ ಜೀವಮಾನ ಪರ್ಯಂತ ಪತ್ರಿಕೆಗಳನ್ನು ಸಂಗ್ರಹಿಸಿ ರಾಶಿ ಕಟ್ಟಿದವರಿದ್ದಾರೆ. ಬಿ. ವಿ. ಮೂರ್ತಿ ಮೇಗರವಳ್ಳಿ, ಮೋಹನ ಹೆಗಡೆ ಬಂದಗದ್ದೆ, ಪಂಢಾರಿ ಚಲ್ಲಪ್ಪನ್ ಚನ್ನಪಟ್ಟಣ, ಉಮೇಶ್ ರಾವ್ ಎಕ್ಕಾರು ಮುಂತಾದ ಹವ್ಯಾಸಿ ಪತ್ರಿಕಾ ಸಂಗ್ರಾಹಕರುಗಳಲ್ಲಿ ಪತ್ರಿಕೆಗಳ ಪ್ರತಿಗಳು ಲಭ್ಯವಿದೆಯೇ ವಿನಾ ಅವುಗಳು ಅಧ್ಯಯನಕ್ಕೆ ಉಪಯುಕ್ತವಾಗುವುದಿಲ್ಲ. ಅದಕ್ಕಿಂತ ಮುಖ್ಯವಾದ ಕೊರತೆಯೆಂದರೆ ಎಷ್ಟೋ ವೇಳೆ ಈ ವಿಶೇಷಾಸಕ್ತಿ ನಿಯತಕಾಲಿಕಗಳು ರಿಜಿಸ್ಟರ್‍ ಆಗುವ ಮೊದಲೇ ಸಾಯುತ್ತವೆ. ಹೀಗಾಗಿ ಪತ್ರಿಕೆಯೊಂದು ಬಂದು ಹೋದುದರ ದಾಖಲೆಯೇ ಉಳಿಯುವುದಿಲ್ಲ. ಸಾರ್ವಜನಿಕರ ನೆನಪೂ ಸಂಪಾದಕರ ದೇಹವೂ ನಶ್ವರ. ಆದರೆ ಆ ಒಂದು ವಿಶೇಷಾಸಕ್ತಿ ಪತ್ರಿಕೆ ದಾಗಳಾಗದೇ ಹೋಗುವುದು ಮುಂದಿನ ಜನಾಂಗಕ್ಕೂ ಪತ್ರಿಕೋದ್ಯಮ ಇತಿಹಾಸಕ್ಕೂ ಆಗುವ ನಷ್ಟ. ಒಂದು ಉದಾಹರಣೆ ನೋಡಿ: ಮಂಗಳೂರಿನ ಪಿ. ಗೋಪಾಲಕೃಷ್ಣ ಎಂಬುವರು ಜಾಹೀರಾತಿಗಾಗಿಯೇ ಪತ್ರಿಕೆಯೊಂದನ್ನು ತಂದರು. ಅದರಲ್ಲಿ ಜಾಹೀರಾತು ಬಿಟ್ಟು ಬೇರೇನೂ ಇರುತ್ತಿರಲಿಲ್ಲ. ಈ ಪತ್ರಿಕೆಯನ್ನು ಸಂತೆಯಲ್ಲಿ, ಪೇಟೆಯಲ್ಲಿ ನೀಂತು ಪುಕ್ಕಟೆ ವಿತರಿಸುತ್ತಿದ್ದರು. ಈಗ ಪ್ರಕಟಗೊಳ್ಳುತ್ತಿರುವ Ad Magazineಗಿಂತ ಒಂದು ಹೆಜ್ಜೆ ಮುಂದೆ ಇಟ್ಟ ಪ್ರಯೋಗ ೩೦ ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ನಡೆಯಿತು. ಈಗ ಗೋಪಾಲಕೃಷ್ಣರವರು ತೀರಿಕೊಂಡಿದ್ದಾರೆ. ಅದರ ಬಗ್ಗೆ ಹೇಳುವವರೂ ಯಾರಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೆ ವಿನೂತನವಾಗಿದ್ದ ಈ ಪ್ರಯೋಗ ದಾಖಲಾಗದೇ ಹೋಗುವುದು ಕನ್ನಡ ಪತ್ರಿಕೋದ್ಯಮದ ಹಾಗೂ ಒಟ್ಟಾರೆ ಕನ್ನಡದ ಜೀವನಾನುಭವ ಭಂಡಾರದ ನಷ್ಟವಾಗಿ ಪರಿಣಮಿಸುತ್ತದೆ. ಮೂಲತಃ ಕನ್ನಡ ಪತ್ರಿಕೋದ್ಯಮದ ಚರಿತ್ರೆ ಬಿಟ್ಟರೆ ಅದರ ವಿವಿಧ ಆಯಾಮ-ಮಜಲುಗಳ ಕುರಿತು ಈವರೆಗೂ ಸಂಶೋಧನೆಯಾದುದಿಲ್ಲ. ಮೇಲುನೋಟಕ್ಕೆ ಸಾಕಷ್ಟು ವೈವಿಧ್ಯಗಳು ಹಾಗೂ ಸಮೃದ್ಧ ಬೆಳೆಗಳು ಕಂಡುಬರುವ ಕನ್ನಡ ನಿಯತಕಾಲಿಕಗಳ ಬಗ್ಗೆ ಈವರೆಗೆ ಯಾವ ಅಧ್ಯಯನಗಳೂ ನಡೆದಿಲ್ಲ. ಹೀಗಿರುವಾಗ ನಿಯತಕಾಲಿಕ ಪತ್ರಿಕೋದ್ಯಮದ ಮತ್ತೊಂದು ಕವಲಾದ ವಿಶೇಷಾಸಕ್ತಿ ನಿಯತಕಾಲಿಕಗಳ ಬಗ್ಗೆ ಏನೇನೂ ಕೆಲಸ ನಡೆದಿಲ್ಲವೆಂದರೆ ತಪ್ಪಲ್ಲ. ಹೀಗಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಶಾಶ್ವತವಾದ ಕೊಡುಗೆಯಾಗಲೆಂಬ ಮಹತ್ವಾಕಾಂಕ್ಷೆಯಿಂದ ಸಂಶೋಧನೆಗಾಗಿ ಕನ್ನಡದಲ್ಲಿ ವಿಶೇಷಾಸಕ್ತಿ ನಿಯತಕಾಲಿಕಗಳನ್ನು ಆಯ್ದು ಕೊಳ್ಳಲಾಗಿದೆ. ವಿಶೇಷಾಸಕ್ತಿ ನಿಯತಕಾಲಿಕೆಗಳ ಲೋಕ ಬಹಳ ವಿಸ್ತಾರವಾದುದು. ಅದರಲ್ಲಿ ತಲಸ್ಪರ್ಶಿ ಅಧ್ಯಯನ ಸಾಧ್ಯವಾಗಬೇಕು ಎಂಬ ಕಾರಣದಿಂದ ವಿಶೇಷಾಸಕ್ತಿ ನಿಯತಕಾಲಿಕಗಳ ಪೈಕಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳನ್ನೇ ಅದ್ಯಯನಕ್ಕೆ ಆಯ್ದುಕೊಳ್ಳಲಾಗಿದೆ. ಕಲೆ ಹಾಗೂ ಸಾಹಿತ್ಯ-ಎರಡೂ ಕ್ಷೇತ್ರಗಳು ಪತ್ರಿಕೋದ್ಯಮಕ್ಕೆ ತೀರಾ ಹತ್ತಿರದ ಸಂಬಂಧಿಗಳು. ಕಲೆ ಮತ್ತು ಸಾಹಿತ್ಯ ಇಲ್ಲದೇ ಪತ್ರಿಕೋದ್ಯಮವೂ ಇಲ್ಲ. ಇವುಗಳ ನಡುವೆ ಎಂಥಾ ಅಭೇದಗಳೆಂದರೆ ಕಲಾತ್ಮಕವಲ್ಲದ, ಸಾಹಿತ್ಯಕ ಮೌಲ್ಯವಿಲ್ಲದ ಬರಹಗಳಿಗೆ ಪತ್ರಿಕೋದ್ಯಮದಲ್ಲೂ ಸ್ಥಾನವಿಲ್ಲ. ಉತ್ಕೃಷ್ಟ ಪತ್ರಿಕಾ ಬರಹಗಳಿಗೆ ಸಾಹಿತ್ಯದ ಸರಿಸಮ ಸ್ಥಾನ. ಇವತ್ತು ‘ಪತ್ರಿಕಾ ಸಾಹಿತ್ಯ’ ಸಾಹಿತ್ಯದ ಅವಿಭಾಜ್ಯ ಅಂಗ.ಕಲಾ ಪತ್ರಿಕಗಳು ಮೂಲತಃ ಲಲಿತಕಲೆಗಳಿಗೆ ಮೀಸಲಾದವುಗಳು. ಸಾಹಿತ್ಯವೂ ಲಲಿತ ಕಲೆಗಳ ಒಂದು ಪ್ರಕಾರ. ಆದರೆ ಜೀವನದ ಎಲ್ಲ ರಂಗವನ್ನೂ ವ್ಯಾಪಿಸಿ ಹರಡಿರುವ ವಿಶಾಲ ಪ್ರಕಾರವಾದ್ದರಿಂದ ಕನ್ನಡವನ್ನೂ ಸೇರಿಸಿ ಆಧುನಿಕ ಸಾಹಿತ್ಯದಲ್ಲೆಲ್ಲ ಸಾಹಿತ್ಯ ಪತ್ರಿಕೆಗಳು ಲಲಿತಕಲೆಗಳ ವ್ಯಾಪ್ತಿಯನ್ನೂ ಮೀರಿ ಸ್ವತಂತ್ರವಾಗಿ ಬೇರುಬಿಟ್ಟಿವೆ. ಬೆಳೆದಿವೆ. ಸಾಹಿತ್ಯ ಪತ್ರಿಕೆಗಳು ಸಂಖ್ಯೆಯ ದೃಷ್ಟಿಯಿಂದ ಬಹಳ ಇವೆ.‘ಸಾಹಿತ್ಯದ ಲೇಖನಗಳನ್ನು ಪುರವಣಿಗೆಗಳಲ್ಲಿಯೇ ಹೆಚ್ಚಾಗಿ ಪ್ರಕಟಿಸುವ ದಿನ ಪತ್ರಿಕೆಗಳನ್ನೂ ಸಾಹಿತ್ಯ ವಿಷಯಗಳನ್ನು ಪ್ರಕಟಿಸಿಯೂ ಸಾಹಿತ್ಯೇತರವಾದ ನಾನಾ ವಿಷಯಗಳಿಗೆ ಗಮನಕೊಡುವ ವಾತ ಪತ್ರಿಕೆಗಳನ್ನೂ ಧಾರ್ಮಿಕ ಅಥವಾ ಆದ್ಯಾತ್ಮಿಕ ವಿಷಯಗಳಿಗೆ, ಬರಿಯ ನಗೆ ಬರಹಗಳು, ಕಥೆ ಕಾದಂಬರಿಗಳಿಗೆ, ಚಲನಚಿತ್ರ ವಾರ್ತೆಗಳಿಗೆ, ಶಿಶುಸಾಹಿತ್ಯ, ವಯಸ್ಕರ ಶಿಕ್ಷಣ ಮುಂತಾದವುಗಳಿಗೆ ಪ್ರಾಮುಖ್ಯ ಕೊಡುವ ಮಾಸಪತ್ರಿಕೆಗಳು ಕೆಲವನ್ನು ಬಿಟ್ಟರೆ ಉಳಿಯುವ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮುಂತಾದ ಕಾಲ ನಿಯಮದ ಪತ್ರಿಕೆಗಳನ್ನು ಸಾಹಿತ್ಯ ಪ್ರಧಾನ ಪತ್ರಿಕೆಗಳೆಂದು ಒಟ್ಟಿನಲ್ಲಿ ಕರೆಯಬಹುದು, ’ ಎಂಬ ಡಾ. ಟಿ. ವಿ ವೆಂಕಟಾಚಲ ಶಾಸ್ತ್ರಿಗಳ ವ್ಯಾಖ್ಯಾನ ಸಂಶೋಧಕನ ಗಮನದಲ್ಲಿದೆ.ಹೀಗಾಗಿ ಕಲೆ ಹಾಗೂ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳನ್ನೇ ವಿಶೇಷಾಸಕ್ತಿ ನಿಯತಕಾಲಿಕಗಳ ಪೈಕಿ ಅಧ್ಯಯನಕ್ಕೆ ಆರಿಸಲಾಗಿದೆ. ಈ ಅಧ್ಯಯನ ಕನ್ನಡದಲ್ಲಿ ಈವರೆಗೆ ಬಂದ ವಿಶೇಷಾಸಕ್ತಿ ನಿಯತಕಾಲಿಕಗಳು ಪ್ರತಿನಿಧಿಸುವ ಆಸಕ್ತಿಗಳಿಗೆ ಸಾಕ್ಷಿಯಾಗಿ, ಕನ್ನಡ ಕಲೆ- ಸಾಹಿತ್ಯದ ಹಿರಿಮೆ-ಗರಿಮೆಗಳ ದಾಖಲೆಯಾಗಿಯೂ, ಮುಂದೆ ಈ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆಗಳಿಗೆ ಮಾರ್ಗದರ್ಶಿಯೂ ಆಗಬೇಕೆಂಬುದು ಒತ್ತಾಸೆ. ಇಂಥದೊಂದು ಸಂಶೋಧನೆ ಇತರ ಭಾಷೆಗಳಲ್ಲಿ ಬಂದ ವಿಶೇಷಾಸಕ್ತಿ ಪತ್ರಿಕೋದ್ಯಮದ ಜೊತೆ ಕನ್ನಡದ ವಿಶೇಷಾಸಕ್ತಿ ಪತ್ರಿಕೋದ್ಯಮದ ಸಾಧನೆ-ಸಿದ್ಧಿಗಳನ್ನು ಹೋಲಿಸಲು, ಆಯಾ ಭಾಷೆಯ ಸಾಹಿತ್ಯ-ಕಲೆಯ ಪತ್ರಿಕೆಗಳ ಜೊತೆ ಕನ್ನಡದ ಕಲೆ-ಸಾಹಿತ್ಯ ಪತ್ರಿಕೆಗಳನ್ನು ತೂಗಿ ನೋಡಲು, ತನ್ಮೂಲಕ ಕನ್ನಡದ ಸ್ಥಾನವನ್ನು ನಿರ್ಧರಿಸಲು ಸಹಾಯಕವಾಗುತ್ತದೆ.

ಟಿಪ್ಪಣಿಗಳು

  • ೧. ಗೋಪಾಲಕೃಷ್ಣ ಅಡಿಗರ ಕವನ ‘ಯಾವ ಮೋಹನ ಮುರಳಿ ಕರೆಯಿತೋ’ : ಅಡಿಗರ ಸಮಗ್ರ ಸಾಹಿತ್ಯ ಸಂಪುಟ ೧, ಐಬಿಎಚ್‌ ಪ್ರಕಾಶನ, ಬೆಂಗಳೂರು ೯, ೧೯೮೭, ಪುಟ ೮೬
  • ೨. ನಾಡಿಗ ಕೃಷ್ಣಮೂರ್ತಿ ‘ಭಾರತೀಯ ಪತ್ರಿಕೋದ್ಯಮ’ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೬೯, ಪುಟ ೧೧.
  • ೩. ಇಂಗ್ಲಿಷ್ ಕನ್ನಡ ನಿಘಂಟು : ಮೈಸೂರು ವಿಶ್ವವಿದ್ಯಾನಿಲಯ, ೧೯೭೭, ಪುಟ ೬೯೯.
  • ೪. ಕನ್ನಡ ರತ್ನಕೋಶ : ಕನ್ನಡ ಸಾಹಿತ್ಯ ಪರಿಷತ್ತು, ೧೯೭೭, ಪುಟ ೨೪೮.
  • ೫. ಪ್ರೆಸ್ ಇನ್ ಇಂಡಿಯಾ ೧೯೯೬ : ರೆಜಿಸ್ಟ್ರಾರ್‍ ಆಫ್ ನ್ಯೂಸ್‌ಪೇಪರ್ಸ್ ಆಫ್ ಇಂಡಿಯಾ, ನ್ಯೂ ಡೆಲ್ಲ, ೧೯೯೭, ಪುಟ ೨೧೯-೨೨೦
  • ೬. ದಿ ವರ್ಲ್ಡ್ ಬುಕ್ ಎನ್‌ಸೈಕ್ಲೋಪಿಡಿಯಾ, ಸಂಪುಟ ೧೨, ಪುಟ ೫೪, ೧೯೬೩.
  • ೭. ರೊನಾಲ್ಡ್ ಈ ವುಲ್ಸ್‌‌ಲೇ, ಮ್ಯಾಗಜಿನ್ ವರ್ಲ್ಡ್‌, ೧೯೬೫, ಪುಟ ೫ ಮತ್ತು ೬
  • ೮. ಶ್ರೀನಿವಾಸ ಹಾವನೂರ, ಹೊಸಗನ್ನಡದ ಅರುಣೋದಯ : ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೪, ಪುಟ ೪೮೦.
  • ೯. ನಾಡಿಗ ಕೃಷ್ಣಮೂರ್ತಿ, ‘ಭಾರತೀಯ ಪತ್ರಿಕೋದ್ಯಮ’ : ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೬೫ ಪುಟ ೩೯೦
  • ೧೦. ಹೊಸಗನ್ನಡದ ಅರುಣೋದಯ, ಪೂವೋಕ್ತ, ಪುಟ ೪೮೦
  • ೧೧. ‘ನ್ಯಾಯ ಸಂಗ್ರಹ’ : ಸಂಪಾದಕರು ಉಭಯ ಗೋಪಾಲಕೃಷ್ಣ, ಮಂಗಳೂರು. ಆಧಾರ : ಕರ್ನಾಟಕ ರಾಜ್ಯ ಗೆಜೆಟಿಯರ್‍, ಸಂಪುಟ ೩.
  • ೧೨. ಶ್ರೀನಿವಾಸ ಹಾವನೂರ ಹೊಸಗನ್ನಡದ ಅರುಣೋದಯ : ೧೯೭೪, ಪೂರ್ವೋಕ್ತ, ಪುಟ ೪೭೯.
  • ೧೩. ಕೆ. ವಿ ನಾಗರಾಜ : ಹಿಸ್ಟರಿ ಆಫ್ ಕನ್ನಡ ಜರ್ನಲಿಸಮ್ - ಎನ್ ಅನಲೆಟಿಕಲ್ ಸ್ಟಡಿ - ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿರುವ ಪ್ರೌಢ ಪ್ರಬಂಧ, ೧೯೮೭, ಪುಟ ೬೦-೬೮
  • ೧೪. ಕರ್ನಾಟಕ ರಾಜ್ಯ ಗೆಜೆಟಿಯರ್‍, ಭಾಗ ೩, ಪುಟ ೯೩೦-೯೬೭.
  • ೧೫. ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ, ಹೊಸಗನ್ನಡದ ಸಾಹಿತ್ಯದ ಕೆಲವು ನೋಟಗಳು, ಅಪರ್ಣಾ ಪ್ರಕಾಶನ, ಮೈಸೂರು, ೧೯೮೨, ಪುಟ ೨೬.

ಅಧ್ಯಯನದ ರೂಪುರೇಷೆ

ಅಧ್ಯಯನದ ಉದ್ದೇಶಗಳು

ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದ ನಿಯತಕಾಲಿಕಗಳ ಅಧ್ಯಯನಕ್ಕೆ (ಅ) ಸ್ಥೂಲ ಉದ್ದೇಶಗಳು; (ಆ) ನಿಖರ ಉದ್ದೇಶಗಳು, ಎಂಬುದಾಗಿ ಎರಡು ರೀತಿಯ ಉದ್ದೇಶಗಳನ್ನು ಗುರುತಿಸಲಾಗಿದೆ.ಸ್ಥೂಲ ಉದ್ದೇಶ

  • ೧. ವಿಶೇಷಾಸಕ್ತಿ ನಿಯತಕಾಲಿಕಗಳ ಗುಣಲಕ್ಷಣಗಳನ್ನೂ ವ್ಯಾಪ್ತಿ-ಮಿತಿಗಳನ್ನೂ ಅರ್ಥ ಮಾಡಿಕೊಳ್ಳುವುದ.
  • ೨. ಕನ್ನಡದಲ್ಲಿ ಆಗಿಹೋದ ಹಾಗೂ ಅಸ್ತಿತ್ವದಲ್ಲಿರುವ ವಿಶೇಷಾಸಕ್ತಿ ನಿಯತಕಾಲಿಕಗಳಲ್ಲಿ ವೈವಿಧ್ಯಗಳನ್ನು ದಾಖಲಿಸುವುದು.
  • ೩. ಒಟ್ಟಾರೆಯಾಗಿ ಕನ್ನಡದ ವಿಶೇಷಾಸಕ್ತಿ ನಿಯತಕಾಲಿಕಗಳ ಸ್ಥಿತಿಗತಿ-ವೃತ್ತಿಪರತೆಯ ಸ್ಥೂಲ ಅಧ್ಯಯನ.ನಿಖರ ಉದ್ದೇಶ
  • ೧. ಕನ್ನಡದಲ್ಲಿ ಪ್ರಕಟಗೊಂಡ ಹಾಗೂ ಪ್ರಕಟಗೊಳ್ಳುತ್ತಿರುವ ಕಲಾ ಪತ್ರಿಕೆಗಳ ಪಟ್ಟಿ ಸಿದ್ಧಮಾಡುವುದು.
  • ೨. ಕನ್ನಡದಲ್ಲಿ ಪ್ರಕಟಗೊಂಡ ಹಾಗೂ ಪ್ರಕಟಗೊಂಡ ಹಾಗೂ ಪ್ರಕಟಗೊಳ್ಳುತ್ತಿರುವ ಸಾಹಿತ್ಯ ಪತ್ರಿಕೆಗಳ ಪಟ್ಟಿ ಸಿದ್ಧಮಾಡುವುದು.
  • ೩. ಕನ್ನಡದ ಕಲಾ ಪತ್ರಿಕೆಗಳ ಸ್ಥಿತಿಗತಿ-ವೃತ್ತಿಪರತೆಯ ಅಧ್ಯಯನ.
  • ೪. ಕನ್ನಡದ ಸಾಹಿತ್ಯ ಪತ್ರಿಕೆಗಳ ಸ್ಥಿತಿಗತಿ ಮತ್ತು ವೃತ್ತಿಪರತೆಯ ಅಧ್ಯಯನ.ಅಧಯನ ವಿಧಾನ

ಕನ್ನಡದಲ್ಲಿ ಕಲೆ ಹಾಗೂ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸ್ಥಿತಿಗತಿ-ವೃತ್ತಿಪರತೆಯ ಮೂಲಕ ನಡೆಸುತ್ತಿರುವ ಅವುಗಳ ಚರಿತ್ರೆಯ ಅಧ್ಯಯನ ಮಾನವಿಕ ಸಂಶೋಧನಾ ವಿಧಾನಗಳಲ್ಲಿ ‘ಐತಿಹಾಸಿಕ ಸಂಶೋಧನೆ’ ಎಂಬುದಾಗಿ ಕರೆಸಿಕೊಳ್ಳುತ್ತದೆ.‘ಏನಾಗಿತ್ತು ? ಏನು ನಡೆದಿತ್ತು ? ಹೇಗಿತ್ತು ? ಎಂಬ ಪ್ರಶ್ನೆಗಳನ್ನೆತ್ತಿಕೊಂಡು ಗತಕಾಲದ ಘಟನಾವಳಿಗಳನ್ನು ಶೋಧಿಸುವುದು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು, ದಾಖಲಸುವುದು ಮತ್ತು ವ್ಯಾಖ್ಯಾನಕ್ಕೆ, ಒಳಪಡಿಸುವುದು ಐತಿಹಾಸಿಕ ಸಂಶೋಧನೆಯ ವೈಶಿಷ್ಟ್ಯ ಎಂದು ಈ ಬಗೆಯ ಸಂಶೋಧನೆಯನ್ನು ವ್ಯಾಖ್ಯಾನಿಸಲಾಗಿದೆ.‘ಐತಿಹಾಸಿಕ ಸಂಶೋಧನೆಯು ಹೆಸರೇ ಸೂಚಿಸುವಂತೆ ಒಂದು ವಿಷಯದ ಅಥವಾ ಒಂದು ಸಮಸ್ಯೆಯ ಕಾಲಕ್ರಮಾನುಗತ ಅಭ್ಯಾಸವಾಗಿದೆ. ಅಂದರೆ ಒಂದು ವಿಷಯದ ಅಥವಾ ಒಂದು ಸಮಸ್ಯೆಯ ಕಾಲಕ್ರಮಾನುಗತ ಅಭ್ಯಾಸವಾಗಿದೆ. ಅಂದರೆ ಒಂದು ವಿಷಯ ಕಾಲ ಕಾಲಕ್ಕೆ ಲೋಪ, ಆಗಮ, ಆದೇಶಗಳಿಗೆ ತುತ್ತಾಗುತ್ತ ಬಂದುದರ ಶೋಧವಾಗಿರುತ್ತದೆ. ವಿವರಣಾತ್ಮಕ ಸಂಶೋಧನೆ ಒಂದು ಹಂತದ ಅಭ್ಯಾಸವಾಗಿದ್ದರೆ, ಇಂಥ ಅನೇಕ ಹಂತಗಳ ಅಭ್ಯಾಸವಾಗಿದ್ದರೆ, ಇಂಥ ಅನೇಕ ಹಂತಗಳ ಅಭ್ಯಾಸದ ಸರಮಾಲೆಯಾಗಿದೆ, ಐತಿಹಾಸಿಕ ಸಂಶೋಧನೆ.’ಐತಿಹಾಸಿಕ ಸಂಶೋಧನೆಯು ಎಲ್ಲಾ ವಿಧವಾದ ಸಂಶೋಧನೆಗಳಿಗೆ ಮಾರ್ಗದರ್ಶಕ ನಿದ್ದಂತೆ. ಚಾರಿತ್ರಿಕ ಪರಿವೀಕ್ಷಣೆ ಇಲ್ಲದೆ ಯಾವುದೇ ಅಧ್ಯಯನವೂ ಪರಿಪೂರ್ಣವೆಂದು ಹೇಳಲಾಗದು. ಯಾಕೆಂದರೆ ಯಾವುದೇ ಸಮಾಜದ ಸಾಮಾಜಿಕ, ರಾಜಕೀಯ ಬೆಳವಣಿಗೆಗಳ ಮೌಲ್ಯಮಾಪಕವೇ ಐತಿಹಾಸಿಕ ಸಂಶೋಧನೆ’ ಎಂಬುದಾಗಿ ಕೆ.ವಿ. ನಾಗರಾಜ್‌ರವರು ತಮ್ಮ ಕನ್ನಡ ಪತ್ರಿಕೋದ್ಯಮ ಕುರಿತ ಪೌಢಪ್ರಬಂಧದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡದಲ್ಲಿ ಆಗಿ ಹೋದ ಮತ್ತು ಈಗಿರುವ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳನ್ನು ದಾಖಲಿಸುವುದೇ ಈ ಸಂಶೋಧನೆಯ ಉದ್ದೇಶವಾಗಿರುವುದರಿಂದ ಐತಿಹಾಸಿಕ ಸಂಶೋಧನಾ ವಿಧಾನವನ್ನು ಈ ಅಧ್ಯಯನಕ್ಕೆ ಅಳವಡಿಸಿಕೊಳ್ಳಲಾಗಿದೆ.ಅಧ್ಯಯನದ ಹಂತಗಳು ಈ ಅಧ್ಯಯನವನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ. ಮೊದಲ ಹಂತ ೧೮೪೯ರಿಂದ ೧೯೯೩ ರವರೆಗಿನ ೧೫೦ ವರ್ಷಗಳ ಕನ್ನಡ ಪತ್ರಿಕೋದ್ಯಮದಲ್ಲಿ ಆಗಿಹೋದ ಪತ್ರಿಕೆಗಳನ್ನು ಗುರುತು ಮಾಡುವುದು. ಎರಡನೇ ಹಂತ ಈಗ ಪ್ರಕಟಣೆಯಲ್ಲಿರುವ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಸ್ಥಿತಿಗತಿ ವೃತ್ತಿಪರತೆಯ ಸ್ಥೂಲ ಸಮೀಕ್ಷೆ ನಡೆಸುವುದು.ಮೊದಲ ಹಂತ ಅಧ್ಯಯನದ ಮೊದಲ ಹಂತದಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಕಲೆ ಹಾಗೂ ಸಾಹಿತ್ಯ ಪತ್ರಿಕೆಗಳ ಕುರಿತು ಮಾಹಿತಿಯನ್ನು ಈ ಕೆಳಗಿನ ಮೂಲಗಳಿಂದ ಸಂಗ್ರಹಿಸಲಾಯಿತು.

  • ೧. ವಿಶ್ವಕೋಶಗಳು
  • ೨. ಸರ್ಕಾರಿ ಗೆಜೆಟ್ಟುಗಳು.
  • ೩. ಜಿಲ್ಲೆ ಹಾಗೂ ತಾಲ್ಲೂಕು ದರ್ಶನ ಪುಸ್ತಕಗಳು
  • ೪. ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಈವರೆಗೆ ಬಂದ ಪುಸ್ತಕಗಳು.
  • ೫. ಕನ್ನಡ ಪತ್ರಿಕೋದ್ಯಮ ಕುರಿತು ಈವರೆಗ ಬಂದ ಪುಸ್ತಕಗಳು.
  • ೬. ರಾಜ್ಯದ ಪತ್ರಿಕಾ ಸಂಗ್ರಾಹಕರುಗಳು.
  • ೭. ಕಲಾವಿದರು ಹಾಗೂ ಸಾಹಿತಿಗಳು ನೀಡುವ ಮಾಹಿತಿಗಳು.ಎರಡನೇ ಹಂತ

ಎರಡನೇ ಹಂತದಲ್ಲಿ ಈಗ ಪ್ರಕಟಣೆಯಲ್ಲಿದೆನ್ನಬಹುದಾದ ಪತ್ರಿಕೆಗಳ ಸಂಗ್ರಹ ಮಾಡಲಾಯಿತು. ಇದಕ್ಕಾಗಿ ಕರ್ನಾಟಕದ ಉದ್ದಗಲಕ್ಕೆ ಸಂಚರಿಸಿ ಆಯಾ ಭಾಗದ ಸಾಹಿತಿಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಯ್ತು.ಕಲೆ ಹಾಗೂ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸಂಪಾದಕರುಗಳನ್ನು ಸಂಪರ್ಕಿಸಿ, ಸಿದ್ಧಪಡಿಸಿದ ಪ್ರಶ್ನಾವಳಿಗೆ ಉತ್ತರ ಪಡೆದುಕೊಳ್ಳಲಾಯಿತು. (ಅನುಬಂಧ ನೋಡಿ) ಈ ಪ್ರಶ್ನಾವಳಿಯಲ್ಲಿ

  • ೧. ಪತ್ರಿಕೆಯು ಮೀಸಲೆಂದು ಘೋಷಿಸುವ ಆಸಕ್ತಿ
  • ೨. ಪತ್ರಿಕೆ ಪ್ರಕಟವಾಗುವ ಅವಧಿ
  • ೩. ಪತ್ರಿಕೆಯ ಆಕಾರ
  • ೪. ಪತ್ರಿಕೆಯ ಚಂದಾದರ
  • ೫. ಸಾಮಾನ್ಯವಾಗಿ ಪುಟಗಳ ಸಂಖ್ಯೆ
  • ೬. ಮುದ್ರಣ ವಿಧಾನ
  • ೭. ಜಾಹೀರಾತು ದರ
  • ೮. ಪತ್ರಿಕೆ ಆರಂಭಿಸುವಾಗ ಸಂಪಾದಕರಿಗೆ ಪತ್ರಿಕೋದ್ಯಮದ ಅನುಭವವಿತ್ತೇ ?
  • ೯. ಪತ್ರಿಕೆಯ ಪ್ರಸಾರ
  • ೧೦. ಪ್ರಸರಣ ವಿಧಾನ
  • ೧೧. ಕನ್ನಡದಲ್ಲಿ ವಿಶೇಷಾಸಕ್ತಿ ನಿಯತಕಾಲಿಕಗಳ ಭವಿಷ್ಯದ ಬಗ್ಗೆ ಸಂಪಾದಕರ ಅಭಿಪ್ರಾಯ.
  • ೧೨. ಪತ್ರಿಕೆಯ ಆದಾಯ-ವೆಚ್ಚ

ಈ ಮೇಲಿನ ವಿಷಯಗಳ ಬಗ್ಗೆ ಸಂಪಾದಕರುಗಳಿಂದ ಮಾಹಿತಿ ಸಂಗ್ರಹಿಸಲಾಯಿತು. ಎರಡು ಹಂತಗಳಲ್ಲಿ ಕೈಗೊಂಡ ಈ ಅಧ್ಯಯನದ ಫಲವಾಗಿ ಈ ಸಂಶೋಧನಾ ಪ್ರಬಂಧ ರಚನೆಗೊಂಡಿದೆ.ಅಧ್ಯಯನ ಅವಧಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಆರಂಭವಾದುದು ೧೮೪೩ರಲ್ಲಿ. ಅಂದರೆ ೧೯೯೩ನೇ ವರ್ಷಕ್ಕೆ ಕನ್ನಡ ಪತ್ರಿಕೋದ್ಯಮಕ್ಕೆ ೧೫೦ ವರ್ಷ ತುಂಬುತ್ತದೆ. ಯಾವುದೇ ಪತ್ರಿಕೋದ್ಯಮದ ಸಾಧನೆ-ಸಿದ್ಧಗಳನ್ನು ಅಳೆಯಲು ಒಂದೂವರೆ ಶತಮಾನದ ಮೈಲುಗಲ್ಲು ಮಹತ್ತ್ವದ ಕಾಲ ಘಟ್ಟ. ಅದಕ್ಕಾಗಿ ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಪ್ರಸ್ತುತ ಅಧ್ಯನಕ್ಕೆ ೧೮೪೩ರಿಂದ ೧೯೯೩ರ ಅವಧಿಯ ೧೫೦ ವರ್ಷದ ಕಾಲಮಾನವನ್ನು ಹಾಗೂ ಅಷ್ಟನ್ನು ಮಾತ್ರ ಗಮನಿಸಲಾಗಿದೆ. ಕನ್ನಡ ಪತ್ರಿಕೋದ್ಯಮದ ೧೫೦ ವರ್ಷಗಳನ್ನು ಮೂರು ಅವಧಿಯಾಗಿ ವಿಂಗಡಿಸಿ ಪ್ರಸ್ತುತ ಅಧ್ಯಯನ ಕೈಗೊಳ್ಳಲಾಗಿದೆ. ಮೊದಲ ಅವಧಿ - ೧೮೪೩ ರಿಂದ ೧೯೦೦ ಎರಡನೇ ಅವಧಿ - ೧೯೦೧ ರಿಂದ ೧೯೫೬ ಮೂರನೇ ಅವಧಿ - ೧೯೫೭ ರಿಂದ ೧೯೯೩. ೧೮೪೩ ಕನ್ನಡ ಪತ್ರಿಕೋದ್ಯಮ ಆರಂಭಿಕ ವರ್ಷವೆಂಬ ಕಾರಣವಾದರೆ ೧೯೦೦ಕ್ಕೆ ೧೯ನೇ ಶತಮಾನ ಕೊನೆಗೊಳ್ಳುತ್ತದೆ. ೧೯೦೧ರಿಂದ ಆರಂಭಗೊಂಡ ಹೊಸ ಶತಮಾನದಲ್ಲಿ ೧೯೫೬ನೇ ಇಸ್ವಿ ಮಹತ್ವದ ವರ್ಷ. ಯಾಕೆಂದರೆ ೧೯೫೬ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು. ಕನ್ನಡ ಕಲೆ-ಸಾಹಿತ್ಯ-ಸಂಸ್ಕೃತಿಗಳೆಲ್ಲ ಗರಿಗಟ್ಟಲು ಆಸ್ಪದವಾಯ್ತ. ೧೯೯೩ಕ್ಕೆ ೧೫೦ ವರ್ಷ ತುಂಬಿತು. ಹೀಗಾಗಿ ೧೯೦೦,೧೯೫೬ ಹಾಗೂ ೧೯೯೩ಗಳನ್ನು ಆಧಾರಗಳಾಗಿಟ್ಟು ವಿಂಗಡಣೆ ಮಾಡಲಾಗಿದೆ. ಒಟ್ಟಾರೆ ೧೫೦ ವರ್ಷಗಳ ಕನ್ನಡ ಪತ್ರಿಕೋದ್ಯಮದಲ್ಲಿ ಕಲೆ-ಸಾಹಿತ್ಯ ಪತ್ರಿಕೆಗಳ ಇತಿಹಾಸವನ್ನು ಇಲ್ಲಿ ಅಧ್ಯಯನ ಮಾಡಲಾಗಿದೆ.ಬಳಸಿರುವ ಪದಗಳ ವ್ಯಾಖ್ಯಾನ ಈ ಅಧ್ಯಯನದ ಉದ್ದಕ್ಕೂ ಬರುವ ಕೆಲವು ಮುಖ್ಯ ಪದಗಳನ್ನು ಸಂಶೋಧಕ ಗ್ರಹಿಸಿರುವ ಹಾಗೂ ಬಳಸಿರುವ ರೀತಿಯನ್ನು ಹೀಗೆ ವ್ಯಾಖ್ಯಾನಿಸಬಹುದು. ವಿಶೇಷಾಸಕ್ತಿ ಪತ್ರಿಕೆಗಳು : ಯಾವುದಾದರೂ ಒಂದು ಆಸಕ್ತಿಗೆ, ಹವ್ಯಾಸಕ್ಕೆ, ಕ್ಷೇತ್ರಕ್ಕೆ ಅಥವಾ ವರ್ಗಕ್ಕೆ ಸಂಬಂಧಿಸಿದ ಲೇಖನಗಳನ್ನೇ ಪ್ರಕಟಿಸುವ ಅಥವಾ ಅಂಥ ಸಾಮಗ್ರಿಗಳಿಗೆ ಹೆಚ್ಚಿನ ಪುಟಗಳನ್ನು ಮೀಸಲಿರಿಸುವ ನಿಯತಕಾಲಿಕ.ಸಾಹಿತ್ಯ ಪತ್ರಿಕೆಗಳು : ಲಲಿತ ಸಾಹಿತ್ಯ ಅಥವಾ ಸೃಜನಶೀಲ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳು. ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ ಮತ್ತು ಕಾವ್ಯ ಮುಂತಾಗಿ ಸೃಜನಾತ್ಮಕ ಸಾಹಿತ್ಯದ ಪುರೋಭಿವೃದ್ಧಿಗೆ ಮೀಸಲಾದ ನಿಯತಕಾಲಿಕಗಳು.ಕಲಾ ಪತ್ರಿಕೆಗಳು : ಲಲಿತಕಲೆಗಳಿಗೆ (ಸಾಹಿತ್ಯವನ್ನು ಬಿಟ್ಟು) ಮೀಸಲಾದ ಪತ್ರಿಕೆಗಳು. ಶಿಲ್ಪಕಲೆ, ಚಿತ್ರಕಲೆ, ನಾಟಕ, ನೃತ್ಯ, ಸಂಗೀತ. ಸಿನಿಮಾ ಕಲೆ-ತಂತ್ರಗಳ ಸಮಾಗಮವಾದ್ದರಿಂದ ಸಿನಿಮಾ ಪತ್ರಿಕೆಗಳನ್ನು ಗಮನಿಸಿಲ್ಲ. ಕಲಾ ಪತ್ರಿಕೆಗಳಲ್ಲಿ ಜಾನಪದಕ್ಕೆ ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಪತ್ರಿಕೆಗಳೂ ಸೇರಿವೆ.ಸ್ಥಿತಿಗತಿ : ಈ ಅಧ್ಯಯನದಲ್ಲಿ ಸ್ಥಿತಿಗತಿ ವೃತ್ತಿಪರತೆಯೆಂಬ ಪದ ಪುಂಜವನ್ನು ಕಲಾ ಮತ್ತು ಸಾಹಿತ್ಯ ಪತ್ರಿಕೆಗಳ ಚರಿತ್ರೆಯನ್ನು ಹಾಗೂ ಕನ್ನಡದ ಸಾಂಸ್ಕೃತಿಕ ಸಂದರ್ಭಕ್ಕೆ ಅವುಗಳ ಕೊಡುಗೆಯನ್ನು ದಾಖಲಿಸಲಿಕ್ಕಷ್ಟೇ ಬಳಸಲಾಗಿದೆ. ‘ಸ್ಥಿತಿಗತಿ’ ಈ ಪತ್ರಿಕೆಗಳ ನಿನ್ನೆ-ಇಂದು-ನಾಳೆಗಳನ್ನು ಸೂಚಿಸುತ್ತದೆ. ವೃತ್ತಿಪರತೆ : ವೃತ್ತಿಪರತೆ ‘ಪತ್ರಿಕೆ’ಯಾಗಿ ಅವುಗಳ ಸಾಧನೆ-ಸಿದ್ಧಿಗಳನ್ನು ಒಳಗೊಳ್ಳುತ್ತದೆ. ಒಟ್ಟಾರೆ ಕಲೆ-ಸಾಹಿತ್ಯ ಪತ್ರಿಕೆಗಳು ನಡೆದು ಬಂದ ದಾರಿಯ ಅವಲೋಕನಕ್ಕೆ ಸೀಮಿತವಾಗಿ ಈ ಪದಗಳನ್ನು ಬಳಸಲಾಗಿದೆ. ನಿಯತಕಾಲಿಕ : ನಿಯತವಾಗಿ ನಿರ್ದಿಷ್ಟ ಕಾಲದಲ್ಲಿ ಹೊರಬರುವ ಪತ್ರಿಕೆಯೇ ನಿಯತ ಕಾಲಿಕ.ಸಂಶೋಧನೆಯ ನಡುವೆ ಎದುರಿಸಿದ ಸಮಸ್ಯೆಗಳು ಹಾಗೂ ಕಂಡುಕೊಂಡ ಪರಿಹಾರೋಪಾಯಗಳು ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳನ್ನು ಗುರುತಿಸಿ ದಾಖಲಿಸುವುದಲ್ಲದೇ ಅವುಗಳ ಸ್ಥಿತಿಗತಿ ಮತ್ತು ವೃತ್ತಿಪರತೆಯ ಅಧ್ಯಯನ ಮಾಡಲು ನಿರ್ಧರಿಸಿ ವಿಷಯದ ಆಳಕ್ಕೆ ಇಳಿದ ಮೇಲೆ ಈ ಅಧ್ಯಯನಕ್ಕೆ ಅನೇಕ ಪ್ರಾಯೋಗಿಕ ಸವಾಲುಗಳಿರುವುದು ಗೋಚರವಾಯ್ತು. ಮೊತ್ತ ಮೊದಲು ಎದುರಿಸಿದ ಸಮಸ್ಯ ವಿಶೇಷಾಸಕ್ತಿ ನಿಯತಕಾಲಿಕಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದ್ದು.ನಮ್ಮಲ್ಲಿ ಪ್ರಕಟವಾಗುವ ನಿಯತಕಾಲಿಕಗಳನ್ನು ಸಾಮಾನ್ಯಸಕ್ತಿ ಹಾಗೂ ವಿಶೇಷಾಸಕ್ತಿ ನಿಯತಕಾಲಿಕಗಳೆಂದು ಸ್ಥೂಲವಾಗಿ ಗುರುತಿಸುವ, ವಿಂಗಡಿಸುವ ಪರಿಪಾಠವಿದೆ. ಆದರೆ ಇವುಗಳ ನಡುವೆ ನಿರ್ಧಾರಾತ್ಮಕ ಗೆರೆ ಎಳೆಯುವುದು ಕಷ್ಟವೆಂದು ಸಂಶೋಧನೆ ನಡೆಸಿದಂತೆಲ್ಲಾ ಸ್ಪಷ್ಟವಾಯಿತು. ಉದಾಹರಣೆಗೆ ಸಾಮಾನ್ಯಸಕ್ತಿ ನಿಯತಕಾಲಿಕೆಗಳು ಉಳಿದೆಲ್ಲ ವಸ್ತುಗಳ ಜೊತೆಗೆ ಸಾಹಿತ್ಯವನ್ನೂ ಪ್ರಕಟಿಸುವುದು ಸಾಮಾನ್ಯ. ಆದರೆ ಯಾವುದೋ ಒಂದು ವಿಶೇಷ ಆಸಕ್ತಿಗೆ ಮೀಸಲೆಂದು ಘೋಷಿಸಿಕೊಂಡು ಪತ್ರಿಕೆಯೂ ಒಳಗಡೆ ಎಲ್ಲಾ ರೀತಿಯ ವಸ್ತುಗಳನ್ನೂ ಸೇರಿಸುತ್ತದೆ. ಉದಾಹರಣೆಗೆ ಸೊರಬದಲ್ಲಿ ‘ಅಗ್ನಿಪಥ’ವೆಂಬ ಮಾಸಪತ್ರಿಕೆಯೊಂದು ‘ಪರಿಸರಕ್ಕೆ ಮೀಸಲಾದ ಮಾಸಪತ್ರಿಕೆ’ಯೆಂದು ತಲೆ ಬರಹದ ಅಡಿಯಲ್ಲೇ ಘೋಷಿಸಿಕೊಂಡಿದೆ. ವಾಸ್ತವವಾಗಿ ಅದು ಎಲ್ಲಾ ರೀತಿಯ ವಸ್ತುಗಳನ್ನೂ ಪ್ರಕಟಿಸುತ್ತದೆ. ಈ ಸಮಸ್ಯೆ ಎಲ್ಲಾ ವಿಶೇಷಾಸಕ್ತಿ ಪತ್ರಿಕೆಗಳಲ್ಲಿವೆ. ಹೊನ್ನಾವರದಲ್ಲಿ ಸಾಹಿತ್ಯ, ಲಲಿತಕಲೆಗಳಿಗೆ ಮೀಸಲೆಂದು ಘೋಷಿಸಿಕೊಂಡ ‘ಶೃಂಗಾರ’ ಪತ್ರಿಕೆಯಲ್ಲಿ ಅವಿಷ್ಟೇ ಇರುವುದಿಲ್ಲ. ಊರ ರಾಜಕೀಯ, ಸಂಪಾದಕರ ಜಗಳಗಳೂ ಇರುತ್ತವೆಯೆಂದು ಓದುಗರು ಹೇಳುತ್ತಾರೆ. ಹೀಗಿರುವಾಗ ಯಾವುದೇ ಪತ್ರಿಕೆಯನ್ನು ವಿಶೇಷಾಸಕ್ತಿ ಪತ್ರಿಕೆಯೆಂದು ಗುರುತಿಸುವುದು ಹೇಗೆ ? ಮುಖ್ಯವಾಗಿ ಅದು ಸಾಹಿತ್ಯ ಅಥವಾ ಕಲೆಗೇ ಮೀಸಲಾದ ಪತ್ರಿಕೆಯೆಂದು ವ್ಯಾಖ್ಯಾನಿಸುವುದು ಹೇಗೆ ? ಎಂಬ ಪ್ರಶ್ನೆ ಎದುರಾಯಿತು.ಇದಕ್ಕೆ ಮಾನವಿಕ ಸಂಶೋಧನಾ ವಿಧಾನಗಳ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲಾಯಿತು. ಒಂದು ಪತ್ರಿಕೆಯ ಯಾವುದೇ ಮೂರು ಸಂಚಿಕೆಗಳನ್ನು ತೆರೆದು ನೋಡಿದಾಗ ಶೇ. ೬೦ರಷ್ಟು ವಿಷಯಗಳು (ಅಥವಾ ಅದಕ್ಕೂ ಮೇಲ್ಪಟ್ಟು) ಸಾಹಿತ್ಯಕ್ಕೆ ಅಥವಾ ಕಲೆಗೆ ಸಂಬಂಧಿಸಿದವುಗಳಾಗಿದ್ದರೆ ಅಂಥ ಪತ್ರಿಕೆಯನ್ನು ಮಾತ್ರ ವಿಶೇಷಾಸಕ್ತಿ ಪತ್ರಿಕೆಯೆಂದು ಪರಿಗಣಿಸಲಾಗಿದೆ.ಯಾವುದೇ ಪತ್ರಿಕೆ ಹಾಗೆ ಘೋಷಿಸಿಕೊಂಡಿಲ್ಲವಾದರೂ ಮುಖ್ಯವಾಗಿ ಕಲೆ ಹಾಗೂ ಸಾಹಿತ್ಯಕ್ಕೆ ಮಾತ್ರ ತನ್ನ ಚೌಕಟ್ಟನ್ನು ಸೀಮಿತಗೊಳಿಸಿಕೊಳ್ಳುವುದು ಮೇಲು ನೋಟಕ್ಕೆ ಕಂಡು ಬಂದರೆ ಅವುಗಳನ್ನು ಪರಿಗಣಿಸುವುದು.ಸಾಮಾನ್ಯ ಪತ್ರಿಕೆಗಳು ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ವರ್ಷಕ್ಕೊಮ್ಮೆಯೋ ತರುವ ವಿಶೇಷಾಂಕಗಳನ್ನು ವಿಶೇಷಾಸಕ್ತಿ ನಿಯತಕಾಲಿಕಗಳ ಸಾಲಿನಲ್ಲಿ ಪರಿಗಣಿಸದಿರುವುದು. ಉದಾಹರಣೆಗೆ ‘ಪ್ರಜಾವಾಣಿ’, ‘ಕನ್ನಡ ಪ್ರಭ’ದಂಥ ಪತ್ರಿಕೆಗಳು ತರುವ ಸಾಪ್ತಾಹಿಕ ಪುರವಣಿಗಳು ಹಾಗೂ ವಾರ್ಷಿಕ ವಿಶೇಷಾಂಕಗಳು ಸಾಹಿತ್ಯಿಕ ಮೌಲ್ಯವುಳ್ಳ ಬರಹಗಳನ್ನೇ ಹೆಚ್ಚಾಗಿ ಪ್ರಕಟಿಸಿದರೂ ಅವುಗಳನ್ನು ಪ್ರತ್ಯೇಕ ಸಾಹಿತ್ಯ ನಿಯತಕಾಲಿಕಗಳಾಗಿ ಪರಿಗಣಿಸಲಾಗಿಲ್ಲ.ಅಂದರೆ ಪ್ರತ್ಯೇಕ ಹೆಸರು, ಸಂಪುಟ, ಸಂಚಿಕೆಗಳ ಲೆಕ್ಕ ಇರುವ, ಮಾಸಿಕಗಳು ಹಾಗೂ ಅದಕ್ಕಿಂತ ಹೆಚ್ಚಿನ ನಿಗದಿತ ಅವಧಿಯಲ್ಲಿ ಪ್ರಕಟವಾಗುವ, ಸಾಹಿತ್ಯಿಕ ಮೌಲ್ಯವಿರುವ ಅಥವಾ ಕಲೆಗೆ ಸಂಬಂಧಿಸಿದ ವಿಷಯಗಳನ್ನೇ ಶೇ. ೬೦ಕ್ಕಿಂತ ಹೆಚ್ಚು ಹೊಂದಿರುವ ನಿಯತಕಾಲಿಕಗಳನ್ನು ಅಧ್ಯಯನಕ್ಕಾಗಿ ಹಾಗೂ ದಾಖಲೆಗಾಗಿ ಇಲ್ಲಿ ಪರಿಗಣಿಸಲಾಗಿದೆ.ನೋಂದಾವಣಿಯ ಸಮಸ್ಯೆ ಭಾರತದಲ್ಲಿ ಪ್ರಕಟವಾಗುವ ಪತ್ರಿಕೆಗಳೆಲ್ಲ ನವದೆಹಲಿಯ ಪತ್ರಿಕಾ ರೆಜಿಸ್ಟ್ರಾರ್‍ ಅವರಲ್ಲಿ ಹೆಸರನ್ನು ನೋಂದಾಯಿಸಿರಬೇಕೆಂಬ ನಿಯಮವಿದೆ. ಹೀಗೆ ನೋಂದಾವಣೆಗೊಂಡ ಪತ್ರಿಕೆಗಳಿಗೆ ಮಾತ್ರ ಸರ್ಕಾರಿ ಜಾಹೀರಾತು ಸಿಗಲು ಸಾಧ್ಯ. ಹಾಗೆಯೇ ಅಂಚೆಯಲ್ಲಿ ಪತ್ರಿಕೆಗಳನ್ನು ಕಳುಹಿಸಲು ರಿಯಾಯಿತಿ ಸಿಗಬೇಕಾದರೆ ಪತ್ರಿಕೆ ನೋಂದಾವಣೆಗೊಂಡಿರಲೇ ಬೇಕು.ಆದರೆ ವಿಶೇಷಾಸಕ್ತಿ ಪತ್ರಿಕೆಗಳ ಸಮಸ್ಯೆಯೆಂದರೆ ಕೆಲವು ಎಷ್ಟು ಅಲ್ಪಾಯುಗಳೆಂದರೆ ನೋಂದಾವಣೆಗೊಳ್ಳುವ ಮೊದಲೇ ಅಸುನೀಗುತ್ತವೆ. ಸಂಪಾದಕರ ಆಸಕ್ತಿ, ಹುರುಪು ಹಾಗೂ ಜೇಬಿನ ಸಾಧ್ಯತೆಗನುಗುಣವಾಗಿ ಪ್ರಕಟಗೊಳ್ಳುವ ಈ ಪತ್ರಿಕೆಗಳು ಒಂದರೆಡು ಸಂಚಿಕೆಗಳು ಬಂದು ನಿಂತು ಹೋಗುವ ಸಾಧ್ಯತೆ ಇರುತ್ತವೆ. ಅಂಥ ಪತ್ರಿಕೆಗಳನ್ನು ಇನ್ನೂ ನೋಂದಾವಣೆ ಮಾಡಿರುವುದಿಲ್ಲ. ಆಮೇಲೆ ನೋಂದಾವಣೆಯೇ ಆಗುವುದಿಲ್ಲ. ಒಂದೋ ಎರಡೋ ಸಂಚಿಕೆಗಳಲ್ಲೇ ಕೊನೆಗೊಳ್ಳುವ ಇಂಥ ಪತ್ರಿಕೆಗಳ ಆಯುಸ್ಸು ಕಡಿಮೆಯಾದರೂ ಸಾಹಿತ್ಯ ಪತ್ರಿಕೆಗಳ ಚರಿತ್ರೆಯ ದೃಷ್ಟಿಯಿಂದ ಆ ಪತ್ರಿಕೆ ನೋಂದಾವಣೆಗೊಂಡಿರಲಿ ಬಿಡಲಿ, ಒಂದೆರಡೇ ಸಂಚಿಕೆ ಬರಲಿ, ಅದರ ಕೊಡುಗೆಯನ್ನು ಅಲ್ಲಗಳೆಯಲಾಗದು. ಸಾಹಿತ್ಯಪತ್ರಿಕೆಗಳ ಚರಿತ್ರೆಯಲ್ಲಿ ಅಲ್ಪಾಯುವಾದ, ನೋಂದಾವಣೆಯನ್ನೂ ಮಾಡಿರದ ಅಂಥ ಪತ್ರಿಕೆಗಳನ್ನು ಸೇರಿಸಲೇಬೇಕಾಗುತ್ತದೆ.ಈ ಕಾರಣದಿಂದ ಪತ್ರಿಕೆ ನೋಂದಾವಣೆಗೊಂಡಿದೆಯೋ ಇಲ್ಲವೋ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೇ ಅದು ಎಷ್ಟೇ ಸಂಚಿಕೆಗಳಲ್ಲಿ ಓದುಗರೆದುರು ತೆರೆದುಕೊಂಡಿದ್ದರೂ ಅದನ್ನು ಆಯಾ ಪತ್ರಿಕೆಗಳ ಸಾಲಿಗೆ ಸೇರಿಸಿ ಅಭ್ಯಸಿಸಲಾಗಿದೆ.ಇನ್ನು ಕೆಲವು ಖಾಸಗೀ ಸಂಸ್ಥೆಗಳ ಅಥವಾ ವ್ಯಕ್ತಿಗಳ ಪತ್ರಿಕೆಯಾಗಿದ್ದು ಬಹುಕಾಲದಿಂದ ಪ್ರಕಟವಾಗುತ್ತಿದ್ದರೂ ನೋಂದಾವಣೆ ಮಾಡಿಸುವ ಗೋಜಿಗೇ ಹೊಗಿರುವುದಿಲ್ಲ. ಉದಾಹರಣೆಗೆ ‘ನೀನಾಸಂ ಮಾತುಕತೆ’ಯೆಂಬುದು ನೀನಾಸಂ ಹೆಗ್ಗೋಡು-ಸಾಗರ-ಕರ್ನಾಟಕ ಇಲ್ಲಿಂದ ಬರುತ್ತಿರುವ ಮಾಸಿಕ ವಾರ್ತಾ ಪತ್ರ. ಇದು ನೀನಾಸಂ ಚಟುವಟಿಕೆಗಳನ್ನಷ್ಟೇ ಅಲ್ಲ ಸಾಹಿತ್ಯಿಕ ಲೇಖನಗಳನ್ನು ಪ್ರಕಟಿಸುತ್ತದೆ. ‘ನೀನಾಸಂ’ ಸಂಸ್ಥೆಯೇ ನಾಟಕ-ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಯಾದ್ದರಿಂದ ಇಲ್ಲಿಯ ‘ವಾರ್ತಾಪತ್ರ’ದಲ್ಲಿ ಸಹಜವಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಸಂಗತಿಗಳೇ ತುಂಬಿಕೊಂಡಿರುತ್ತವೆ. ಇದನ್ನು ಶುದ್ಧ ಕಲೆ ಅಥವಾ ಸಾಹಿತ್ಯಿಕ ಪತ್ರಿಕೆಯೆಂದು ಕರೆಯಲಾಗದಿದ್ದರೂ ಆ ಪತ್ರಿಕೆಗಳ ಪಟ್ಟಿಯಿಂದ ಬಿಡಲಾಗದು. ಅದು ಖಾಸಗೀ ಪ್ರಸಾರಕ್ಕಾಗಿ ಮಾತ್ರ ಇರುವ ಪತ್ರಿಕೆಯೆಂಬುದು ಕಲಾ ಪತ್ರಿಕೆ ‘ಅಲ್ಲ’ವೆನ್ನಲು ಸಕಾರಣವಾಗದು. ಈ ಹಿನ್ನಲೆಯಲ್ಲಿ ನೋಂದಾವಣೆಗೊಳ್ಳದ ಆದರೆ ಸಾಹಿತ್ಯಿಕವೆನ್ನಬಹುದಾದ, ಖಾಸಗೀ ವ್ಯಕ್ತಿ ಅಥವಾ ಸಂಸ್ಥೆಗಳು ಹೊರತರುವ, ಸಾಹಿತ್ಯ-ಕಲೆಗೆ ಜಾಗಕೊಡುವ ಪತ್ರಿಕೆಗಳನ್ನು ಅಧ್ಯಯನಕ್ಕೆ ಸ್ವೀಕರಿಸಿ ಅವುಗಳನ್ನು ಈ ವಿಶೇಷಾಸಕ್ತಿ ಪತ್ರಿಕೆಗಳ ಸಾಲಿಗೆ ಸೇರಿಸಲಾಗಿದೆ.ಕೈಬರಹದ ಪತ್ರಿಕೆಗಳು ಮುದ್ರಣಯಂತ್ರ ಬಂದ ಮೇಲೆ ಪತ್ರಿಕೋದ್ಯಮದಲ್ಲಿ ಮಹತ್ ಕ್ರಾಂತಿಯಾದುದು ನಿಜ. ಆದರೆ ಮುದ್ರಣಕ್ಕೂ ಮೊದಲು ಪತ್ರಿಕೆಗಳೇ ಇರಲಿಲ್ಲವೆನ್ನಲಾಗದು. ಆಗ ಕೈಬರಹದ ಪತ್ರಿಕೆಗಳು ಪ್ರಚಲಿತವಾಗಿದ್ದವು. ಇಂಥ ಪತ್ರಿಕೆಗಳನ್ನು ಬರೆಯುವುದಕ್ಕಾಗಿ ಒಳ್ಳೆಯ ಕೈಬರಹವಿರುವವರಿಗೂ ಬೇಡಿಕೆ ಇತ್ತಂತೆ. ಹಾಗೆ ಒಳ್ಳೆಯ ಅಕ್ಷರಗಳಲ್ಲಿ ಚಂದಾಗಿ ಬರೆಯುತ್ತಿದ್ದವರಿಂದ ‘ವಾಕಿಯಾ ನಾವಿಸ್’, ‘ಕಾಫಿಯಾ ನಾವಿಸ್’, ‘ಸವಾಹಿಯಾ ನಾವಿಸ್’ ಎಂಬ ವಾರ್ತಾ ಪತ್ರಗಳನ್ನು ಔರಂಗಜೇಬನ ಕಾಲದಲ್ಲಿ ಬರೆಸಲಾಗುತ್ತಿತ್ತೆಂದು ನಾಡಿಗ ಕೃಷ್ಣಮೂರ್ತಿ ಬರೆಯುತ್ತಾರೆ. ಮುದ್ರಣಯಂತ್ರಗಳು ಪ್ರಚಾರಕ್ಕೆ ಬಂದ ಮೇಲೂ ಕೈಬರಹದ ಪತ್ರಿಕೆಗಳು ಮಾಯಾವಾಗಲಿಲ್ಲ. ಅಲ್ಲೊಂದು ಇಲ್ಲೊಂದು ಪತ್ರಿಕೆಗಳು ನಿಯತವಾಗಿ ಎಲ್ಲಾ ಭಾಷೆಗಳಲ್ಲೂ ಬರುತ್ತವೆ. ಅವು ಸಾಹಿತ್ಯಕ್ಕೆ ಮೀಸಲಿರಬಹುದು. ವಿದ್ಯಾರ್ಥಿಗಳಿಗೆ ಮೀಸಲಿರಬಹುದು. ಇತರ ಯಾವುದೋ ನಿರ್ದಿಷ್ಟ ಸಮುದಾಯದ ಅಭಿವ್ಯಕ್ತಿ ಮಾಧ್ಯಮವಾಗಿ ಹೊರಬರುತ್ತಿರಬಹುದು. ಅಂತೂ ಮುದ್ರಣ ಯಂತ್ರ ಬಂದ ನಾಲ್ಕೈದು ಶತಮಾನಗಳ ಬಳಿಕವೂ ಕೈಬರಹದ ಪತ್ರಿಕೆಗಳು ಹೊರಬರುತ್ತಿವೆ. ನೆರಳಚ್ಚು ಪ್ರತಿ (xerox) ತೆಗೆಯುವ ಆವಿಷ್ಕಾರ ಬಂದ ಮೇಲೆ ಈಗ ತಪ್ಪಿಲ್ಲದಂತೆ, ಎಲ್ಲರೂ ಓದುವಂತೆ ಬರೆದು ಜೆರಾಕ್ಸ್ ಮಾಡಿಸುವ ಸಂಪ್ರದಾಯವೂ ಬಳಕೆಯಲ್ಲಿದೆ. ಹಾಗೆ ಕೆಲವೇ ಪ್ರತಿಗಳನ್ನು ಜೆರಾಕ್ಸ್ ಮಾಡಿ ಹಂಚುತ್ತಾರೆ.ಕನ್ನಡದಲ್ಲಿ ಅನೇಕ ಸಾಹಿತ್ಯ ಹಾಗೂ ಕಲಾ ಪತ್ರಿಕೆಗಳಿಗೆ ಇಂದಿಗೂ ಮುದ್ರಣದ ಯೋಗಬಂದಿಲ್ಲ. ಕೆಲವು ಶಾಶ್ವತವಾಗಿ ಕೈಬರಹದ ಪತ್ರಿಕೆಗಳು ಬಂದು ಹೋಗಿವೆ. ಕೆಲವು ನೆರಳಚ್ಚು ಪ್ರತಿಗಳಾಗಿ ಚಲಾವಣೆಗೊಳ್ಳುತ್ತವೆ.ಮುದ್ರಣಗೊಳ್ಳದ ಇಂಥ ಪತ್ರಿಕೆಗಳು ಯಾವ ದಾಖಲೆಗೂ ಸಿಗುವುದಿಲ್ಲ. ಪತ್ರಿಕಾ ರಿಜಿಸ್ಟಾರ್‍ ಅವರ ಬಳಿ ನೋಂದಾವಣೆಗೊಂಡಿರುವುದಿಲ್ಲ. ಸಂಗ್ರಾಹಕರ ಬಳಿ ಸಂಗ್ರಹಗೊಂಡಿರುವುದಿಲ್ಲ. ತಮ್ಮ ಮಿತಿಯಲ್ಲಿ ಸಾಹಿತ್ಯ ಅಥವಾ ಕಲಾ ಸೇವೆ ಮಾಡುವ ಇಂಥ ಪತ್ರಿಕೆಗಳನ್ನು ಮುದ್ರಣಗೊಂಡಿಲ್ಲ ಅಥವಾ ನೋಂದಾವಣೆಗೊಂಡಿಲ್ಲದ ಕಾರಣದಿಂದ ಪಟ್ಟಿಯಿಂದ ಹೊರಗಿಡುವುದು ಸಮಂಜಸವಾಗಲಾರದು. ಆದರೆ ಅಂಥ ಮುದ್ರಿತವಲ್ಲದ ಪತ್ರಿಕೆಗಳನ್ನು ಸೇರಿಸುತ್ತಾ ಹೋದರೆ ಎಲ್ಲೆಲ್ಲಿ ಯಾವ ಪತ್ರಿಕೆ ಇತ್ತೆಂದು ನಿಖರವಾಗಿ ಹೇಳಿ ಮುಗಿಸುವುದು ಅಸಾದ್ಯ.ಹೀಗಾಗಿ ಸಂಶೋಧನೆಯ ಚೌಕಟ್ಟಿಗೊಲಪಡುವ ಹಾಗೆ ಮೂಲತಃ ಮುದ್ರಿತ ಸಾಹಿತ್ಯಕ ಹಾಗೂ ಕಲಾ ಪತ್ರಿಕೆಗಳನ್ನು ಪರಿಶೀಲಿಸುವುದೆಂದೂ ಮುದ್ರಣಗೊಳ್ಳದ ಆದರೆ ಒಂದು ಕಾಲ ಘಟ್ಟದಲ್ಲಿ ನಿಯತವಾಗಿ ಪ್ರಕಟಗೊಂಡು ಹೆಸರು ಮಾಡಿದ, ಅಥವಾ ಸಮಕಾಲೀನವಾಗಿ ಪ್ರಕಟಗೊಳ್ಳುತ್ತಿರುವ ಪತ್ರಿಕೆ ಇದ್ದರೆ ಅಂಥ ಕೈ ಬರಹದ, ನೆರಳಚ್ಚು ಮಾಡಿದ ಪ್ರತಿಕೆಗಳನ್ನೂ ಪರಿಶೀಲಿಸುವುದೆಂದು ನಿರ್ಣಯಿಸಲಾಯಿತು. ಆ ಪ್ರಕಾರ ಸಂಶೋಧನೆಗೆ ಮುಖ್ಯವಾಗಿ ಮುದ್ರಿತ ಪತ್ರಿಕೆಗಳನ್ನಷ್ಟೇ ಪರಿಗಣಿಸಲಾಗಿದೆ. ಮುದ್ರಿತ ಹಸ್ತ ಬರಹದ ಪತ್ರಿಕೆಗಳ ಪೈಕಿ ಕೈಗೆ ಸಿಕ್ಕವುಗಳನ್ನು ದಾಖಲಿಸಲಾಗಿದೆ.ಗತಿಸಿದ ಪತ್ರಿಕೆಗಳು ಭೂತಕಾಲಕ್ಕೆ ಹೋದ ಪತ್ರಿಕೆಗಳ ಹುಟ್ಟು ಯಾವಾಗ, ನಿಂತದ್ದು ಯಾವಾಗ, ನಡುವೆಯೂ ನಿಯತವಾಗಿ ಪತ್ರಿಕೆ ಬರುತ್ತಿತ್ತೇ ಎಂಬ ವಿಷಯಗಳಿಗೆ ಸರಿಯುತ್ತರ ಸಿಗುವುದು ದುರ್ಲಭ. ಹಾಗೆ ನಿಖರವಾಗಿ ಹೇಳುವವರು ಯಾರೂ ಇರುವುದಿಲ್ಲ. ಈ ಬಗ್ಗೆ ಸಂಶೋಧನೆಗಳೂ ನಡೆದಿಲ್ಲವಾದ್ದರಿಂದ ಒಂದೊಂದು ಪತ್ರಿಕೆಯ ಬಗ್ಗೆ ಸೂಕ್ತ ಮಾಹಿತಿ ಪಡೆಯುವುದು ಕಷ್ಟವಾಯ್ತು. ಅಂಥ ಮಾಹಿತಿ ದುರ್ಲಭವಾದ ಸಂದರ್ಭಗಳಲ್ಲಿ ಪರಿಶೀಲನೆಗೆ ದೊರೆತ ಪ್ರತಿಯಲ್ಲಿ ಸೂಚಿಸಿರುವ ಸಂಪುಟ, ಸಂಚಿಕೆಯ ಆಧಾರದಲ್ಲಿ ಪತ್ರಿಕೆಯ ಹುಟ್ಟನ್ನು ಲೆಕ್ಕ ಹಾಕಾಲಾಗಿದೆ. ಉದಾಹರಣೆಗೆ ಒಂದು ಪತ್ರಿಕೆ ೧೯೪೮ರ ಆಗಸ್ಟ್ ತಿಂಗಳಲ್ಲಿ ಸಂಪುಟ ೨೦ ಎಂದು ಬರೆದಿದ್ದರೆ ಅದರ ಹುಟ್ಟನ್ನು ೧೯೨೮ ಎಂದು ನಮೂದಿಸಲಾಗಿದೆ.ಹೆಚ್ಚಿನ ವಿಶೇಷಾಸಕ್ತಿ ನಿಯತಕಾಲಿಕಗಳ ಸ್ಥಿತಿಯೆಂದರೆ ಹುಟ್ಟಿದ್ದು ಸುದ್ದಿಯಾಗುತ್ತದೆ. ಆಮೇಲೆ ಸದ್ದಿಲ್ಲದಂತೆ ಮರೆಯಾಗಿ ಬಿಡುತ್ತವೆ. ಇನ್ನಿಲ್ಲವೆಂದು ನಂಬಿದ ಪತ್ರಿಕೆ ಏಕಾಏಕಿ ಮತ್ತೆ ಒಂದು ಸಂಚಿಕೆ ಬಂದು ಮಾಯವಾಗಿ ಬಿಡುವ ಸಂದರ್ಭಗಳೂ ಇರುತ್ತವೆ.ಇವುಗಳನ್ನೆಲ್ಲಾ ಗಮನಿಸಿ ಈ ಚಾರಿತ್ರಿಕ ಸಂಶೋಧನೆಯಲ್ಲಿ ಪತ್ರಿಕೆಯ ಹುಟ್ಟನ್ನು ದಾಖಲಿಸಲು ಸಾಧ್ಯವಾದ ರೀತಿಯಲ್ಲಿ ಯಾವಾಗ ಪ್ರಕಟಣೆ ನಿಲ್ಲಿಸಿತು ಎಂದು ದಾಖಲಿಸಲು ಸಾಧ್ಯವಾಗಿಲ್ಲ. ಪತ್ರಿಕೆಯ ಸಂಪಾದಕರುಗಳು ಇನ್ನೂ ಬದುಕಿರುವಾಗಲಂತೂ ಹಾಗೆ ಹೇಳುವುದು ಅಪರಾಧವಾಗಿ ಕಾಣುತ್ತದೆ. ಪತ್ರಿಕೆ ನಿಂತಿದ್ದರೂ ಯಾವಾಗಲೆಂದು ಗುರುತಿಸುವುದು ಬಹಳ ಕಷ್ಟದ ಕೆಲಸ. ಆಗಿಹೋದ ಪತ್ರಿಕೆಗಳ ಬಗೆಗಂತೂ ನಿಖರವಾದ ಮಾಹಿತಿ ದೊರೆಯುವುದಿಲ್ಲ. ಅಂಥ ಸಂದರ್ಭಗಳಲ್ಲಿ ಯಾವಾಗ ಹುಟ್ಟಿತು ಹಾಗೂ ಸಾಧಾರಣ ಎಷ್ಟು ವರ್ಷ ನಡೆಯಿತು. ಯಾರು ಸಂಪಾದಕರಾಗಿದ್ದರು ಎಂಬುದನ್ನು ಮಾತ್ರ ಸೂಚಿಸಲಾಗಿದೆ. ಎಷ್ಟು ವರ್ಷ ನಡೆಯಿತು ಎಂಬುದೂ ತಿಳಿಯದು ಸಂದರ್ಭಗಳಲ್ಲಿ ಆರಂಭದ ವರ್ಷಗಳಷ್ಟನ್ನೇ ದಾಖಲಿಸಲಾಗಿದೆ.೧೫೦ ವರ್ಷಗಲ ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ಆಗಿಹೋದ ಸಾಹಿತ್ಯಿಕ ಪತ್ರಿಕೆಗಳ ಬಹಳಷ್ಟು ಮಾದರಿಗಳು ಇಂದು ನೋಡಲಿಕ್ಕೂ ಸಿಗುವುದಿಲ್ಲ. ಹೀಗಾಗಿ ನಿಜ ಅರ್ಥದಲ್ಲಿ ಅವು ಸಾಹಿತ್ಯಿಕ ಪತ್ರಿಕೆಗಳಾಗಿದ್ದವೋ ಇಲ್ಲವೋ ಎಂಬ ಸಂದಗ್ಧಿದ ಸಂದರ್ಭದಲ್ಲಿ ಈ ಹಿಂದೆ ಬಂದಿರುವ ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯ ಚರಿತ್ರೆಕಾರರ ನಿರ್ಣಯ ಶಿಫಾರಸ್ಸುಗಳನ್ನು ಸಾಕ್ಷಿಯಾಗಿ ಭಾವಿಸಿ ಲಭ್ಯವಿಲ್ಲದ ಸಾಹಿತ್ಯಿಕ ಪತ್ರಿಕೆಗಲ ಗುಣ - ಮಾಪನ ಮಾಡಲಾಗಿದೆ.ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ಎಷ್ಟು ಹತ್ತಿರದ ಸಂಬಂಧವೆಂದರೆ ಸಾಹಿತ್ಯಕ್ಕೆ ಸ್ಥಾನನೀಡದ ಪತ್ರಿಕೆಗಳೇ ಇಲ್ಲವೆನ್ನಬೇಕು. ನಮ್ಮ ದಿನಪತ್ರಿಕೆಗಳು, ಸಾಮಾನ್ಯ ಆಸಕ್ತಿಯ ವಾರಪತ್ರಿಕೆಗಳೂ ಸಾಹಿತ್ಯಕ್ಕೆ ಮಹತ್ತ್ವದ ಸ್ಥಾನ ನೀಡುತ್ತವೆ. ಆದರೆ ಅಂಥ ಸಾಮಾನ್ಯ ಸಕ್ತಿಯ, ಜನಪ್ರಿಯ ಪತ್ರಿಕೆಗಳನ್ನೂ, ಎಲ್ಲಾ ಬಗೆಯ ವಿಷಯಗಳ ಸಂಗ್ರಹದಂತಿರುವ ಡೈಜೆಸ್ಟುಗಳನ್ನೂ ಈ ಅಧ್ಯಯನದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕನ್ನಡ ಪತ್ರಿಕೋದ್ಯಮ ಕುರಿತು ಈವರೆಗೆ ಆಗಿರುವ ಅಧ್ಯಯನಗಳು, ಅದರಲ್ಲಿ ಕಲೆ ಹಾಗೂ ಸಾಹಿತ್ಯ ನಿಯತಕಾಲಿಕಗಳನ್ನು ಕುರಿತು ದೊರೆಯುವ ಮಾಹಿತಿಗಳು ಭಾರತ ಪತ್ರಿಕೋದ್ಯಮಕ್ಕೆ ಈಗ ೨೧೯ ವರ್ಷಗಳ ಇತಿಹಾಸವಿದೆ. ಈ ಪ್ರಬಂಧ ಬರೆಯುತ್ತಿರುವ ಹೊತ್ತಿಗೆ (೧೯೯೮) ಕನ್ನಡ ಪತ್ರಿಕೋದ್ಯಮಕ್ಕೆ ೧೫೫ ವರ್ಷಗಳು ಸಂದಿವೆ. ಇಷ್ಟಾಗಿಯೂ ಕನ್ನಡ ಪತ್ರಿಕೋದ್ಯಮದ ಕುರಿತು ನಡೆದ ಸಂಶೋಧನಗಳು ಹಾಗೂ ಗಂಭೀರ ಅಧ್ಯಯನಗಳು ಕಡಿಮೆಯೆಂದೇ ಹೇಳಬಹುದು.೧. ಭಾರತೀಯ ಪತ್ರಿಕೋದ್ಯಮ ಕುರಿತು ನಾಡಿಗ್ ಕೃಷ್ಣಮೂರ್ತಿಯವರು ಮಾಡಿದ ವಿಸ್ತೃತ ಅಧ್ಯಯನವು ಈ ದಿಸೆಯಲ್ಲಿ ಮೊದಲಿನದೆನ್ನಬೇಕು (‘ಬಾರತೀಯ ಪತ್ರಿಕೋದ್ಯಮ’: ನಾಡಿಗ ಕೃಷ್ಣಮೂರ್ತಿ : ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ಮೊದಲ ಮುದ್ರಣ ೧೯೬೯). ಈ ಪುಸ್ತಕದಲ್ಲಿ ಭಾರತೀಯ ಪತ್ರಿಕೋದ್ಯಮದ ಹುಟ್ಟು ಬೆಲವಣಿಗೆಯನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ಅಶೋಕನ ಕಾಲದಿಂದ ಹಿಡಿದು ನೆಹರೂ ಕಾಲದವರೆಗೆ ಭಾರತದಲ್ಲಿ ಪತ್ರಿಕೋದ್ಯಮವೆಂದು ಕರೆಸಿಕೊಳ್ಳವು ಚಟುವಟಿಕೆಗಳನ್ನು ದಾಖಲಿಸಲಾಗಿದೆ. ೧೯೮೦ರಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿಯ ‘ಬೆಂಗಾಲ್ ಗಜೆಟ್’ನಿಂದ ಆರಂಭಗೊಂಡು ಸ್ವಾತಂತ್ಯ್ರಪೂರ್ವ ಹಾಗೂ ಸ್ವಾತಂತ್ಯ್ರೋತ್ತರ ಭಾರತದಲ್ಲಿ ಪತ್ರಿಕೋದ್ಯಮದ ಘಟನಾವಳಿಗಳನ್ನೂ ಈ ಅಧ್ಯಯನದಲ್ಲಿ ದಾಖಲಿಸಲಾಗಿದೆ. ಭಾಗ ಒಂದರಲ್ಲಿ ಭಾರತೀಯ ಪತ್ರಿಕೋದ್ಯಮದ ಚರಿತ್ರೆಯನ್ನೂ, ಭಾಗ ಎರಡರಲ್ಲಿ ಇಂಗ್ಲೀಷ್ ದಿನಪತ್ರಿಕೆಗಳ ಇತಿಹಾಸವನ್ನೂ ಭಾಗ ಮೂರರಲ್ಲಿ ದೇಶಭಾಷಾ ಪತ್ರಿಕೆಗಳ ಚರಿತ್ರೆಯನ್ನೂ ವಿಸ್ತಾರವಾಗಿ ದಾಖಲಿಸುವ ನಾಡಿಗ ಕೃಷ್ಣಮೂರ್ತಿಯವರು ಭಾಗ ನಾಲ್ಕರವಲ್ಲಿ ಭಾರತದ ಸಂಕೀರ್ಣ ಪತ್ರಿಕೆಗಳ ಕುರಿತು ಪ್ರಸ್ತಾಪಿಸುತ್ತಾರೆ. ಮೂಲತಃ ಸಂಕೀರ್ಣಪತ್ರಿಕೆಗಳ ಸಾಮಾನ್ಯ ಲಕ್ಷಣಗಳನ್ನು ಕುರಿತು ನಾಡಿಗರು ನೀಡುವ ವ್ಯಾಖ್ಯಾನಗಳು ಈ ಅಧ್ಯಯನಕ್ಕೆ ನೆರವಾಗುತ್ತವೆ. ಅಲ್ಲದೇ ಅದೇ ಅದ್ಯಾಯದಲ್ಲಿ ವೈಶಿಷ್ಟ್ಯಪೂರ್ಣ ಸಂಕೀರ್ಣ ಪತ್ರಿಕೆಗಳನ್ನೂ ಕುರಿತೂ ಪ್ರತ್ಯೇಕ ವಿವರಣೆ ಲಭ್ಯವಿದೆ. ಹೀಗಾಗಿ ಈ ಅಧ್ಯಾಯ ವಿಶೇಷಾಸಕ್ತಿ ನಿಯತಕಾಲಿಕಗಳ ಈ ಅಧ್ಯಯನಕ್ಕೆ ಆಕಾರವಾಗುತ್ತದೆ.೨. ಕೆ. ವಿ. ನಾಗಾರಾಜ್‌ರವರು ಕನ್ನಡ ಪತ್ರಿಕೋದ್ಯಮದ ವಿಶ್ಲೇಷಣಾತ್ಮಕ ಅಧ್ಯಯನ ಮಾಡಿದ್ದಾರೆ (History of Kannada Journalism - An Analytical Study - Athesis submitted to University of Mysore for the award of Ph.D. in Journalism and Mass Communication). ಕನ್ನಡ ಪತ್ರಿಕೋದ್ಯಮ ಕುರಿತು ಈ ವಿಶ್ಲೇಷಣಾತ್ಮಕ ಪ್ರಬಂಧದಲ್ಲಿ ಕನ್ನಡ ಪತ್ರಿಕೋದ್ಯಮದ ಹುಟ್ಟು, ಬೆಳವಣಿಗೆ, ಸ್ವಾತಂತ್ರ ಚಳುವಳಿ ಹಾಗೂ ಕರ್ನಾಟಕ ಏಕೀಕರಣಗಳ ಸಂದರ್ಭದಲ್ಲಿ ಪತ್ರಿಕೆಗಳ ಪಾತ್ರವನ್ನು ವಿಶ್ಲೇಷಿಸಲಾಗಿದೆ. ರಾಜ್ಯ ಉದಯವಾದ ಬಳಿಕ ರಾಜಕೀಯ ಹಾಗೂ ಪತ್ರಿಕೆಗಳ ಸಂಬಂಧ ಬೆಳೆದು ಬಂದ ಬಗೆಯನ್ನು ಚರ್ಚಿಸಲಾಗಿದೆ. ಕನ್ನಡದಲ್ಲಿ ಸಂಕೀರ್ಣ ಪತ್ರಿಕೆಗಳ ಬೆಳವಣಿಗೆಯ ಕುರಿತೂ ಈ ಅಧ್ಯಯನ ಗಮನ ಹರಿಸಿದೆ. ವಿಶೇಷಾಸಕ್ತಿ ಪತ್ರಿಕೆಗಳ ಕುರಿತು ವಿರಳ ಮಾಹಿತಿ ಲಭ್ಯವಿದ್ದು ಪ್ರಸ್ತುತದ ಕಲೆ ಸಾಹಿತ್ಯ ಪತ್ರಿಕೆಗಳ ಕುರಿತ ಸಂಶೋಧನೆಗೆ ಈ ಅಧ್ಯಯನ ಸಹಕಾರಿಯಾಗಿದೆ. ೩. ರಾ. ಯ. ಧಾರವಾಡಕರ ಅವರು ‘ಹೊಸಗನ್ನಡದ ಉದಯ ಕಾಲ’ ಕುರಿತು ಮಾಡಿರುವ ಸಂಶೋಧನೆ ಕನ್ನಡದ ಆಧುನಿಕ ಸಂದರ್ಭಕ್ಕೆ ಆರಂಭಿಕ ನೆಲಗಟ್ಟನ್ನು ನೀಡಿದವರ ಕೆಲಸಗಳನ್ನು ದಾಖಲಿಸುತ್ತದೆ. ಈ ಅಧ್ಯಯನವು ಮೂಲತಃ ಉತ್ತರ ಕರ್ನಾಟಕವನ್ನು ಲಕ್ಷ್ಯದಲ್ಲಿಟ್ಟುಕೊಂಡು ಮಾಡಿದುದಾಗಿದೆ. ಕನ್ನಡದ ಕೆಲಸಕ್ಕೂ ಸಾಹಿತ್ಯ ಕೆಲಸಕ್ಕೂ ಅವಿನಾಬಾವ ಸಂಬಂಧವಿದೆ. ಹಾಗೆಯೇ ಸಾಹಿತ್ಯಕ್ಕೂ ಪತ್ರಿಕೋದ್ಯಮಕ್ಕೂ ಈ ಸಂಬಂಧವಿದೆ. ಹೀಗಾಗಿ ಕನ್ನಡ ಕಟ್ಟುವ ಕೆಲಸವನ್ನು ಸಾಹಿತ್ಯಿಕ ಕೆಲಸದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಧಾರವಾಡಕರ ಅವರ ಸಂಶೋಧನೆ ಮುಖ್ಯವಾಗಿ ೧೯ನೇ ಶತಮಾನದಲ್ಲಿ ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸುತ್ತದೆ. ಹೀಗೆ ಕನ್ನಡವನ್ನು ಬೆಳೆಸಿದವರಲ್ಲಿ ಸಾಹಿತಿಗಳ ಹಗೂ ಸಾಹಿತ್ಯಿಕ ಪತ್ರಿಕೆಗಳ ಪ್ರಸ್ತಾಪವನ್ನು ವಿವರವಾಗಿ ಧಾರವಾಡಕರ ಅವರು ಮಾಡಿದ್ದಾರೆ. ಆ ಕಾಲದ ಪತ್ರಿಕೆಗಳು ಮೂಲತಃ ನಿಯತಕಾಲಿಕಗಳಾಗಿದ್ದು ಸಾಹಿತ್ಯಿಕ ಪತ್ರಿಕೆಗಳೇ ಆಗಿದ್ದವು ಎಂಬ ಅಂಶವನ್ನು ಅವರು ಎತ್ತಿತೋರಿಸಿದ್ದಾರೆ. (‘ಹೊಸಗನ್ನಡದ ಉದಯ ಕಾಲ’ ರಾ. ಯ ಧಾರವಾಡಕರ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೬೬).೪. ‘ಹೊಸಗನ್ನಡದ ಉದಯಕಾಲ’ ದ ಬಳಿಕ ‘ಹೊಸಗನ್ನಡದ ಅರುಣೋದಯ’ ಕುರಿತು ಸಮಗ್ರ ಸಂಶೋಧನೆ ನಡೆದದ್ದು ಕನ್ನಡದ ಪುಣ್ಯ. ಶ್ರೀನಿವಾಸ ಹಾವನೂರ ಅವರು ಈ ಸಂಶೋಧನೆ ನಡೆಸಿದವರು. ಧಾತವಾಡಕರ ಹಾಗೂ ಹಾವನೂರ ಅವರು ನಡೆಸಿದ ಸಂಶೋಧನೆಗಳು ಮುಂದಿನ ಅಧ್ಯಯನಗಳಿಗೆಲ್ಲ ಆಕರ ಗ್ರಂಥಗಳಾಗಿ ನಿಲ್ಲವ ಬಹುಮುಖ್ಯ ಸಂಶೋಧನೆಗಳು. ಕನ್ನಡ ಸಾಹಿತ್ಯ ಸಂದರ್ಭಕ್ಕೆ ಮಾತ್ರವಲ್ಲ ಒಟ್ಟಾರೆ ಕನ್ನಡನಾಡು ನುಡಿಗೆ ಈ ಸಂಶೋಧನೆಯಿಂದ ಮಹದುಪಕಾರವಾಗಿದೆ. ಹಾವನೂರ ಅವರ ಸಂಶೋಧನೆಯ ಕೊಡುಗೆಗಳ ಬಗ್ಗೆ ಹಾ. ಮಾ. ನಾಯಕರು ಈ ಪುಸ್ತಕದ ಮುನ್ನುಡಿಯಲ್ಲಿ ಹೇಳುವುದಿಷ್ಟು: "ಕನ್ನಡ ಭಾಷೆ ಸಾಹಿತ್ಯ ಸಂಬಂಧವಾದ ಸಂಶೋಧನೆಯ ಕ್ಷೇತ್ರದಲ್ಲಿ ‘ಹೊಸಗನ್ನಡ ಅರಣೋದಯ’ದ ಪ್ರಕಟಣೆ ಅತ್ಯಂತ ಮಹತ್ತ್ವಪೂರ್ಣವಾದ ಘಟನೆಯೆಂದು ನಾನು ಭಾವಿಸುತ್ತೇನೆ. ಒಂದು ನಿರ್ದಿಷ್ಟ ಕಾಲಾವಧಿಯ ನಮ್ಮ ಸಾಹಿತ್ಯದ ಹಿನ್ನೆಲೆಯ ಚರಿತ್ರೆ ಇಷ್ಟು ವ್ಯಾಪಕವಾಗಿ, ಹೊಸ ಹೊಸ ವಿಚಾರಗಳನ್ನು ತುಂಬಿ ಕೊಂಡು ಇದುವರೆಗೆ ಪ್ರಕಟವಾಗಿರಲಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಗೆ ಡಾ. ಹಾವನೂರರ ಈ ಗ್ರಂಥ ಹೊಸ ಆಯಾಮಗಳನ್ನು ಜೋಡಿಸುತ್ತದೆ."ಕನ್ನಡ ಸಾಹಿತ್ಯ ಚರಿತ್ರೆಗೆ ಮಾತ್ರವಲ್ಲ ಪತ್ರಿಕೋದ್ಯಮ ಚರಿತ್ರೆಗೂ ಹಾವನೂರರ ಈ ಅಧ್ಯಯನ ಮಹತ್ತ್ವದ ಕೊಡುಗೆಯನ್ನಲು ಅವರು ಕನ್ನಡದ ಮೊದಲ ಪತ್ರಿಕೆಯನ್ನು ನಿಖರವಾಗಿ ಗುರುತಿಸಿದ್ದು ಒಂದು ಕಾರಣವಾದರೆ ಇತರ ಕಾರಣಗಳು ಇಂತಿವೆ. ಮಿಶನರಿಗಳ ಸಾಹಿತ್ಯ ಕಾರ್ಯದ ಬಗ್ಗೆ ಪ್ರತ್ಯೇಕ ಅಧ್ಯಾಯ ಹೊಂದಿರುವ ಇವರ ಅಧ್ಯಯನ ಹರ್ಮನ್ ಮೂಗ್ಲಿಂಗನ್ ಕೊಡುಗೆಗಳನ್ನು ವಿಶದಪಡಿಸುತ್ತದೆ. ಉತ್ತರಾರ್ಧದಲ್ಲಿ ೧೯ನೇ ಶತಮಾನದ ಪತ್ರಿಕಾ ಪ್ರಪಂಚದ ಬಗ್ಗೆ ೩೦ ಪುಟಗಳಷ್ಟು ದೀರ್ಘವಾದ ವಿವರಣೆ ‘ಪತ್ರಿಕಾ ಪ್ರಪಂಚ’ವೆಂಬ ಅಧ್ಯಾಯದಲ್ಲಿದೆ. ಇವೆಲ್ಲ ಕನ್ನಡದ ಸಾಹಿತ್ಯಿಕ ಪತ್ರಿಕೆಗಳ ಬಗ್ಗೆ ಅಧ್ಯಯನಕ್ಕೆ ಆಕರವಾಗಿದೆ. ಅರಿವನ್ನು ಹೆಚ್ಚಿಸಿದೆ.೫. ಕೆರೋಡಿ ಸುಬ್ಬರಾಯರ ಜೀವನ ಸಾಧನೆ ಕುರಿತು ಹಾ. ತಿ. ಕೃಷ್ಣೇಗೌಡರು ಪ್ರೌಢ ಅಧ್ಯಯನ ಮಾಡಿದ್ದಾರೆ. (‘ಕರೋಡಿ ಸುಬ್ಬರಾಯರ ಜೀವನ ಸಾಧನೆ’ ಹಾ. ತಿ. ಕೃಷ್ಣೇಗೌಡ, ಚೈತ್ರ ಪಲ್ಲವಿ, ಮೈಸೂರು, ೧೯೮೯). ಅವರ ಈ ಅಧ್ಯಯನದಿಂದಾಗಿ ಕನ್ನಡ ಸಾಹಿತ್ಯ ಮರೆತುಬಿಡುವ ಸಾಧ್ಯತೆಯಿದ್ದ ೧೯ನೇ ಶತಮಾನದ ಮುಖ್ಯ ಲೇಖಕರ ಸಾಧನೆಗಳನ್ನು ಒಂದೆಡೆ ದಾಖಲಿಸಿದಂತಾಗಿದೆ. ಹಾ. ತಿ. ಕೃಷ್ಣೇಗೌಡರು ಕೆರೋಡಿ ಸುಬ್ಬರಾಯರ ಜೀವನ ಸಾಧನೆಯನ್ನು ವಿವರಿಸುವಾಗ ಆ ಕಾಲದ ಸಾಹಿತ್ಯಪತ್ರಿಕೆಗಳ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಕೆರೋಡಿಯವರು ಸಾಹಿತ್ಯಿಕ ಪತ್ರಿಕೆಯೊಂದರ ಸಂಪದಕರಾಗಿದ್ದರು. ಹೀಗಾಗಿ ಅವರ ಪತ್ರಿಕೆ ‘ಸುವಾಸಿನಿ’ಯ ಕುರಿತು ಬರೆಯುವಾಗ ಆಗಿನ ಸಮಕಾಲೀನ ಪತ್ರಿಕೋದ್ಯಮ ಚರಿತ್ರೆಯ ಬಗ್ಗೆ ಕೂಲಂಕಶ ವಿಮರ್ಶೆ ನಡೆಸಿದ್ದಾರೆ. ೧೮೪೩ರಿಂದ ೧೯೦೦ರವರೆಗಿನ ದಕ್ಷಿಣ ಕನ್ನಡದ ಪತ್ರಿಕೋದ್ಯಮದ ಬಗೆಗೆ ಪ್ರತ್ಯೇಕ ಅಧ್ಯಯನವೇ ಅವರ ಗ್ರಂಥದಲ್ಲಿ ಸೇರಿಕೊಂಡಿದೆ. ಇದು ಈವರೆಗಿನ ಇತರ ಎಲ್ಲಾ ಅಧ್ಯಯನಗಳಿಗಿಂತ ಭಿನ್ನವಾಗಿ ಕನ್ನಡ ಪತ್ರಿಕೋದ್ಯಮದ ಆರಂಭ ಕಾಲದ ಸಾಹಿತ್ಯಿಕ ಪತ್ರಿಕೆಗಳನ್ನು ಗುರುತಿಸಿ ಅವುಗಳ ಸಾಧನೆ ಸಿದ್ಧಿಗಳನ್ನು ದಾಖಲಿಸಿರುವುದರಿಂದ ಕನ್ನಡ ಸಾಹಿತ್ಯಪತ್ರಿಕೆಗಳ ಕುರಿತು ಅಧ್ಯಯನ ಮಾಡುವ ಯಾರಿಗೇ ಆಗಲಿ ಹಾ. ತಿ. ಕೃಷ್ಣೇಗೌಡರ ಅಧ್ಯಯನ ಕೆಲವು ಹಂತರದವರೆಗೆ ಮಾರ್ಗದರ್ಶಿ ಯಾಗಬಲ್ಲದು.೬. ಸಮಕಾಲೀನ ಭಾರತೀಯ ಸಾಹಿತ್ಯ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಯು ೧೯೬೮ರಲ್ಲಿ ಬೃಹತ್ ಗ್ರಂಥವನ್ನು ಭಾರತೀಯ ಭಾಷೆಗಳಲ್ಲಿ ಹೊರತಂದಿತು. ಕನ್ನಡದಲ್ಲಿ ಈ ಗ್ರಂಥ ಸಂಪಾದಿಸಿದವರು ಪು.ತಿ. ನರಸಿಂಹಾಚಾರ್‍ ಅವರು. ಇದರಲ್ಲಿ ಸಂವಿಧಾನದಲ್ಲಿ ಉಲೇಖಿಸಲಾಗಿರುವ ಎಲ್ಲಾ ಭಾರತೀಯ ಭಾಷೆಗಳಲ್ಲಿ ಆಧುನಿಕ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಸ್ಥೂಲವಾಗಿ ಚಿತ್ರಿಸಲಾಗಿದೆ. ಸಾಹಿತ್ಯ ಚರಿತ್ರೆ ಬರೆಯುವಾಗ ಸಾಹಿತ್ಯಿಕ ಪತ್ರಿಕೆಗಳ ಕೊಡುಗೆಯನ್ನು ಮರೆಯಲಾಗದು. ಹೀಗಾಗಿ ಬೇರೆ ಬೇರೆ ಭಾಷೆಗಳಲ್ಲಿ ಸಾಹಿತ್ಯಿಕ ಪತ್ರಿಕೆಗಳ ಸ್ವರೂಪದ ಬಗೆಗೆ ಅಲ್ಲಲ್ಲಿ ವಿವರಣೆಗಳು ಇಣುಕುತ್ತವೆ. ಉದಾಹರಣೆಗೆ ಅಸ್ಸಾಮೀ ಸಾಹಿತ್ಯ ಕುರಿತು ಬರೆಯುವಾಗ ಲೇಖಕರು ಅಲ್ಲಿನ ಸಾಹಿತ್ಯ ಪತ್ರಿಕೆಗಳ ಬಗೆಗೂ ಬರೆಯುತ್ತಾರೆ. "ಅಸ್ಸಾಮಿನ ಮೊದಲ ಸಾಹಿತ್ಯ ಪತ್ರಿಕೆ ‘ಜೊಗಕಿ’ (ಮಿಣುಕು ಹುಳು) ಎಂಬ ಹೆಸರಿನಲ್ಲಿ ೧೮೮೯ರಲ್ಲಿ ಹೊರಬಂತು. ಆಗ ಕಲ್ಕತ್ತಾದ ಕಾಲೇಜುಗಳಲ್ಲಿ ಓದುತ್ತಿದ್ದ ಅಸ್ಸಾಮೀ ತರುಣರ ಪ್ರಯತ್ನದ ಫಲವಿದು. ಇದಕ್ಕೆ ಇಂಗ್ಲೀಷಿನ ರೋಮ್ಯಾಂಟಿಕ್ ಚಳುವಳಿಯ ಪ್ರಭಾವವಿತ್ತು. ಇದು ಅಸ್ಸಾಮೀ ಸಾಹಿತ್ಯದ ಪುನರುಜ್ಜೀವನಕ್ಕೆ ಮೂಲವಾಯ್ತು."ಹೀಗೆ ಪ್ರತಿಯೊಂದು ಭಾಷೆಯ ಚರಿತ್ರೆಯನ್ನು ಬರೆಯುವಾಗಲೂ ಸಾಹಿತ್ಯ ಪತ್ರಿಕೆಗಳ ಬಗ್ಗೆ ಉಲ್ಲೇಖ ಬಂದಿದೆ. ಈ ಅಧ್ಯಯನದಿಂದ ಸಂಶೋಧಕನಿಗೆ ವಿವಿಧ ಭಾಷೆಗಳ ಸಾಹಿತ್ಯ ಪತ್ರಿಕೆಗಳ ಬಗ್ಗೆ ಅರಿಯಲು ಸಹಕಾರಿಯಾಗಿದೆ. ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬುದು ಎಂ. ಎಸ್. ಸುಂಕಾಪುರ ಅವರು ಕರ್ನಾಟ ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿಗಾಗಿ ಒಪ್ಪಿಸಿದ ಪ್ರೌಢ ಪ್ರಬಂಧ. ಇದರಲ್ಲಿ ‘ಗದ್ಯ ಸಾಹಿತ್ಯ’ ಎಂಬ ವಿಭಾಗದಲ್ಲಿ ೨೧೦ ರಿಂದ ೩೧೪ ಪುಟಗಳವರೆಗೆ ‘ವೃತ್ತಪತ್ರಿಕೆ’, ವ್ಯಂಗ್ಯ ಚಿತ್ರಗಳು ಎಂಬ ಉಪ ವಿಭಾಗವೊಂದಿದೆ. ಅದರಲ್ಲಿ ವೃತ್ತಪತ್ರಿಕೆಗಳಲ್ಲಿ ಹಾಸ್ಯದ ಸ್ಥಾನವನ್ನು ಪ್ರಸ್ತಾಪಿಸಲಾಗಿದೆ. ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಹಾಸ್ಯಕ್ಕಿರುವ ಸ್ಥಾನವನ್ನು ವಿವರಿಸಿ ಹಾಸ್ಯ ಮಾಸಪತ್ರಿಕೆಗಳನ್ನು ಪಟ್ಟಿಮಾಡಿದ್ದಾರೆ. ಇದು ಹಾಸ್ಯಸಾಹಿತ್ಯದ ಪತ್ರಿಕೆಗಳ ಪಟ್ಟಿ ಮಾಡಲು ನೆರವಾಗಿದೆ.೮. ಕರ್ನಾಟಕ ಸಾಹಿತ್ಯ ಅಕಾಡೆಮಿಯು ೧೯೯೩ರಲ್ಲಿ ಕನ್ನಡದಲ್ಲಿ ಸಾಹಿತ್ಯಿಕ ಪತ್ರಿಕೆಗಳು ಎಂಬ ಕುರಿತಾಗಿ ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ನಾಡಿನ ಸಾಹಿತ್ಯ ಪತ್ರಿಕೆಗಳ ಸಂಪಾದಕರು, ಪತ್ರಕರ್ತರುಗಳು ಈ ಸಂಕಿರಣದಲ್ಲಿ ಭಾಗವಹಿಸಿದ್ದರು. ಈ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಒಳಗೊಂಡಂತೆ ‘ಕನ್ನಡ ಸಾಹಿತ್ಯ ಪತ್ರಿಕೆ’ಗಳು ಇತಿಹಾಸ ವರ್ತಮಾನ ಎಂಬ ಹೆಸರಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕವೊಂದನ್ನು ಪ್ರಕಟಿಸಿದೆ. (೧೯೯೩ ಕ್ರೌನ್ ಅಷ್ಟದಳ ಆಕಾರ, ಪುಟಗಳು ೪+೮೨).ಬಹುಶಃ ಕನ್ನಡದ ಸಾಹಿತ್ಯಿಕ ಪತ್ರಿಕೆಗಳ ಕುರಿತು ಇಡಿಯಾಗಿ ಬಂದ ಮೊದಲ ಪುಸ್ತಕ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿರುವ ಈ ಪುಸ್ತಕ. ಸಾಹಿತ್ಯಕ ಪತ್ರಿಕೆಗಳ ಕುರಿತ ಸಮಗ್ರ ಸಂಶೋಧನೆಗೆ ಈ ಪುಸ್ತಕ ಅಡಿಗಲ್ಲು ಹಾಕಿಕೊಡುತ್ತದೆ. ಸಂಶೋಧಕ ಸಂಗ್ರಹಿಸಿರುವ ಮಾಹಿತಿಯನ್ನು ಒರೆಗೆ ಹಚ್ಚಿನೋಡಲು ಒರೆಗಲ್ಲಾಗಿ ಕೆಲಸ ಮಾಡುತ್ತದೆ.ಈ ಪುಸ್ತಕದ ಕೊರೆತೆಯೆಂದರೆ ವಿವರ ವಿಸ್ತೃತವಾಗಿಲ್ಲ. ವಿಚಾರ ಸಂಕಿರಣಕ್ಕಾಗಿ ಸಿದ್ಧ ಮಾಡಿದ್ದ ಪ್ರಬಂಧಗಳಾಗಿರುವುದರಿಂದ ಸೀಮಿತವಾದ ಉದ್ದೇಶಗಳನ್ನು ಹೊಂದಿದೆ. ಏನೇ ಇರಲಿ ಸಾಹಿತ್ಯ ಪತ್ರಿಕೆಗಳ ಕುರಿತು ಕನ್ನಡದಲ್ಲಿ ಬಂದ ಈ ಮೊದಲ ಪುಸ್ತಕ ಸದರಿ ಸಂಶೋಧನೆಗೆ ಬಹು ಮುಖ್ಯ ಆಕರ ಗ್ರಂಥ. ಸಂಶೋಧನೆ ಹೇಗೆ ನಡೆಯಬೇಕೆಂಬುದರ ಕುರಿತು ಮಾರ್ಗಸೂಚಿಯಾಗಿ ಕೆಲಸ ಮಾಡುವ ಸಾಧ್ಯತೆಯುಳ್ಳ ಪುಸ್ತಕವಾಗಿದೆ.೧೦. ‘ಚಿತ್ರಗುಪ್ತ ಸ್ಮರಣೆ’ ಎಂಬುದು ಎಚ್. ಕೆ. ವೀರಣ್ಣಗೌಡರ ಸ್ಮಾರಕ ಗ್ರಂಥ. ಈ ಗ್ರಂಥದಲ್ಲಿ ವೀರಣ್ಣಗೌಡರ ಜೀವನ ಸಾಧನೆಗಳ ಬಗ್ಗೆ ಭಾಗ ೧ರಲ್ಲಿ ಮಾಹಿತಿಗಳಿವೆ. ಭಾಗ ೨ ಹಾಗೂ ೩ರಲ್ಲಿ ವಿಶೇಷಾಸಕ್ತಿ ಪತ್ರಿಕೆಗಳ ಗೆಗೂ ಕರ್ನಾಟದಕ ಬೇರೆ ಬೇರೆ ಜಿಲ್ಲೆಗಳ ಪತ್ರಿಕೆಗಳ ಬಗೆಗೂ ಮಾಹಿತಿಗಳಿವೆ. ಈ ಪುಸ್ತಕವು ವಿಶೇಷಾಸಕ್ತಿ ಪತ್ರಿಕೆಗಳ ಬಗ್ಗೆ ಸಂಶೋಧನೆ ನಡೆಸುವವರಿಗೆ ಅಮೂಲ್ಯ ಆಕರ ಗ್ರಂಥವಾಗಿದೆ.ಕನ್ನಡ ಕಲೆ, ಸಾಹಿತ್ಯ ಹಾಗೂ ಒಟ್ಟೂ ಸಾಂಸ್ಕೃತಿಕ ಬೆಳವಣಿಗೆ ಕನ್ನಡದ ಕಲೆ, ಸಾಹಿತ್ಯ ಪತ್ರಿಕೆಗಳ ಅಧ್ಯಯನಕ್ಕೆ ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು, ರಂ. ಶ್ರೀ. ಮುಗಳಿ, ಕೆ. ವೆಂಕಟರಾಮಪ್ಪ ಮುಂತಾದ ವಿದ್ವಾಂಸರು ಪ್ರಕಟಿಸಿರುವ ಕನ್ನಡ ಸಾಹಿತ್ಯ ಚರಿತ್ರೆ ಪುಸ್ತಕಗಳು ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿಯ ಅವಲೋಕನಕ್ಕೆ ಲಭ್ಯವಾದವು. ಕೀತೀನಾಥ ಕುರ್ತುಕೋಟಿಯವರ ‘ಯುಗಧರ್‍ಮ ಮತ್ತು ಸಾಹಿತ್ಯ ವಿಕಾಸ’ ಪುಸ್ತಕ ಹಾಗೂ ಧಾರವಾಡದ ಮನೋಹರ ಗ್ರಂಥ ಮಾಲೆ ಪ್ರಕಟಿಸಿರುವ ‘ನಡೆದು ಬಂದ ದಾರಿ’ಯ ಮೂರು ಸಂಪುಟಗಳು ಕನ್ನಡ ಸಾಹಿತ್ಯ ಪತ್ರಿಕೆಗಳ ಅಧ್ಯಯನಕ್ಕೂ ಉಪಯುಕ್ತವಾದವು. ಕನ್ನಡ ಸಾಹಿತ್ಯ ಹಾಗೂ ಸಾಹಿತ್ಯ ಪತ್ರಿಕೆಗಳು ಸರಿಸಮವಾಗಿ ಹಂತಹಂತವಾಗಿ ಬೆಳೆದು ಬಗೆಯನ್ನು, ಕನ್ನಡ ಸಾಹಿತ್ಯದ ಮುಖ್ಯ ವಾಹಿನಿಗಳಾದ ನವೋದಯ, ಪ್ರಗತಿಶೀಲ, ನವ್ಯ, ಸಂದರ್ಭಗಳಲ್ಲಿ ಸಾಹಿತ್ಯ ಪತ್ರಿಕೆಗಳ ಪಾತ್ರವನ್ನು ‘ನಡೆದು ಬಂದ ದಾರಿ’ ದಾಖಲಿಸುತ್ತದೆ. ಆಗಿನ್ನೂ ದಲಿತ ಬಂಡಾಯ ತಲೆಯೆತ್ತಿರಲಿಲ್ಲ. ‘ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ’ ಎಂಬ ಪ್ರೊ. ಎಸ್. ಅನಂತ ನಾರಾಯಣರ ಕೃತಿಯಲ್ಲಿ ನವೋದಯದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪತ್ರಿಕೆಗಳು ನವೋದಯದ ಸಂವರ್ಧನೆಗೆ ಹೇಗೆ ನೆರವಾದವು ಎಂಬ ಬಗೆಗೆ ಸಾದರ್ಭಿಕ ವಿವರಣೆಗಳು ದಕ್ಕುತ್ತವೆ. ಇವುಗಳ ಅಧ್ಯಯನ ಕನ್ನಡ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಒಟ್ಟೂ ಕೊಡುಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾದವು.ಈ ಮೇಲಿ ಪುಸ್ತಕಗಳ ಅಧ್ಯಯನದಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಕನ್ನಡ ಸಾಹಿತ್ಯ-ಪತ್ರಿಕೋದ್ಯಮಗಳ ಕುರಿತು ಅನೇಕ ವಿದ್ವಾಂಸರು ಅಧ್ಯಯನ ನಡೆಸಿದ್ದರೂ ಅವು ಬೇರೆ ಯಾವುದೋ ಅಧ್ಯಯನಗಳ ಕಿರು ಪ್ರಸ್ತಾಪಗಳಾಗಿ ಬಂದಿವೆ. ಕನ್ನಡದ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ವಿಸ್ತೃತ ಅಧ್ಯಯನವಂತೂ ಯಾರೂ ತುಳಿಯದ ಹಾದಿಯಾಗಿ ಉಳಿದಿದೆ. ಕನ್ನಡ ಪತ್ರಿಕೋದ್ಯಮಕ್ಕೆ ೧೫೫ ವರ್ಷಗಳು ಗತಿಸಿದ್ದರೂ ಅದರಲ್ಲಿ ವಿಶೇಷಾಸಕ್ತಿ ಪತ್ರಿಕೆಗಳ, ಅದರಲ್ಲೂ ಮುಖ್ಯವಾಗಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಈ ಅಧ್ಯಯನ ಅತ್ಯಂತ ಹೊಸದು ಮತ್ತು ತಾಜಾ. ಅಧ್ಯಯನದ ಇತಿಮಿತಿ ಕನ್ನಡದ ಒಟ್ಟೂ ಸಾಂಸ್ಕೃತಿಕ ಸಂದರ್ಭಕ್ಕೆ ಉಪಯುಕ್ತ ಕೊಡುಗೆಯಾಗಲೆಂಬ ಹೆಬ್ಬಾಸೆಯಿಂದ ಈ ಅಧ್ಯಯನವನ್ನು ಕೈಗೆತ್ತಿಕೊಂಡು ಈವರೆಗೆ ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ದಾಖಲಾಗದೇ ಉಳಿದುಹೋಗಿದ್ದ ಅನೇಕ ಪತ್ರಿಕೆಗಳನ್ನು ದಾಖಲೆಗೆ ಸೇರಿಸುವಲ್ಲಿ, ಕನ್ನಡ ಕಲೆ ಹಾಗೂ ಸಾಹಿತ್ಯ ಪತ್ರಿಕೆಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಈ ಅಧ್ಯಯನ ಯಶಸ್ವಿಯಾಗಿದೆಯೆಂಬುದು ಸಂಶೋಧಕನ ನಂಬುಗೆ. ಈ ಅಧ್ಯಯನದಿಂದಾಗಿ ಕನ್ನಡ ವಿಶೇಷಾಸಕ್ತಿ ಪತ್ರಿಕೆಗಳ ವ್ಯಾಪ್ತಿ ಹಾಗೂ ವೈವಿಧ್ಯಸ್ಥೋಲವಾಗಿ ಅಳತೆಗೆ ಸಿಗುವಂತಾಗಿದೆ. ಮುಖ್ಯವಾಗಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಸಂಖ್ಯೆ-ಸಾಧನೆ-ಸಿದ್ಧಿಗಳನ್ನು ಅರಿಯಲು ಅನುಕೂಲವಾಗಿದೆ.ಕನ್ನಡದ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಬಗ್ಗೆ ಬಹುತೇಕ ಸಮಗ್ರ ದಾಖಲೆ ಒದಗಿಸಬೇಕೆಂಬ ಉದ್ದೇಶದಿಂದ ಅಧ್ಯಯನ ಕೈಗೊಂಡರೂ ಅಧ್ಯಯನದ ವೇಳೆ ಹಾಗೂ ಪ್ರಬಂಧ ಮಂಡಿಸುವ ಹಂತದಲ್ಲಿ ಸಂಶೋಧಕನಿಗೆ ಅಧ್ಯಯನದಲ್ಲಿರಬಹುದಾದ ಕೆಲವು ನ್ಯೂನತೆಗಳು - ಇತಿಮಿತಿಗಳು ಗಮನಕ್ಕೆ ಬಂದಿವೆ. ಅವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.೧. ೧೮೪೩ರಿಂದ ೧೯೯೩ರವರೆಗಿನ ೧೫೦ ವರ್ಷಗಳ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಯಾವುದೇ ಕಲೆ-ಸಾಹಿತ್ಯ ಪತ್ರಿಕೆ ಅಧ್ಯಯನದಿಂದ ತಪ್ಪಿಸಿಕೊಂಡು ಹೊರಗುಳಿಯಬಾರದೆಂದು ಸಾಧ್ಯವಿರುವ ಎಲ್ಲಾ ಎಚ್ಚರಿಕೆ ವಹಿಸಲಾಗಿದೆ. ಆದರೂ ಸಂಶೋಧಕ ಗಮನಿಸಿದ ಹಾಗೂ ಪರಿಶೀಲಿಸಿದ ಆಕರ ಸಾಮಗ್ರಿಗಳಲ್ಲೂ ಪ್ರಸ್ತಾಪಿತವಾಗದೇ, ಸಂಪರ್ಕಸಿದ ಸಂಪನ್ಮೂಲ ವ್ಯಕ್ತಿಗಳಿಂದಲೂ ಮಾಹಿತಿ ದೊರೆಯದೇ ಕೆಲವು ಪತ್ರಿಕೆಗಳು ಇನ್ನೂ ಉಳಿದಿರಬಹುದು.೨. ಈಗಾಗಲೇ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಅಧ್ಯಯನಗಳ ಸಂದರ್ಭದಲ್ಲಿ ಉಲ್ಲೇಖಗೊಂಡಿರುವ ಪತ್ರಿಕೆಗಳ ಬಗ್ಗೆ ಹೆಚ್ಚು ಮಾಹಿತಿಗಳೂ, ಎಲ್ಲೂ ದಾಖಲಾಗದೇ, ಅವುಗಳ ಪ್ರತಿಗಳೂ ಸಂಶೋಧಕನ ಪರಿಶೀಲನೆಗೆ ದೊರೆಯದ ಪತ್ರಿಕೆಗಳ ಬಗ್ಗೆ ಕಡಿಮೆ ಮಾಹಿತಿಗಳೂ ಈ ಅಧ್ಯಯನದಲ್ಲಿ ಕಾಣಿಸಿಕೊಂಡಿವೆ. ಇವು ಕೆಲವು ಪತ್ರಿಕೆಗಳ ಮೇಲಿನ ವ್ಯಾಮೋಹದಿಂದಾಗಲೀ ಇನ್ನು ಕೆಲವು ಪತ್ರಿಕೆಗಳ ಬಗೆಗಿನ ಉಪೇಕ್ಷೆಯಿಂದಾಗಲೀ ಆದುದಲ್ಲ. ಕೆಲವು ಪತ್ರಿಕೆಗಳ ಬಗ್ಗೆ ದೊರೆ ಮಾಹಿತಿಯೇ ಕಡಿಮೆ ಎಂದು ವಿಷಾದದಿಂದ ಹೇಳಬೇಕಾಗಿದೆ.೩. ಕೆಲವು ಪತ್ರಿಕೆಗಳನ್ನು ಕಲಾ-ಸಾಹಿತ್ಯ ಪತ್ರಿಕೆಗಳ ಯೊಂದಿಗೆ ಸೇರಿಸುವುದೋ ಬೇಡವೋ ಎಂಬ ನಿಷ್ಕರ್ಷ ಬಹಳ ಸಂಕೀರ್ಣವೆಂಬುದು ಸಂಶೋಧಕನ ಅರಿವಿಗೆ ಬಂದ ಅನುಭವ. ಪತ್ರಿಕೆಗಳು ಸಂಪಾದಕರು ಬದಲಾದಾಗಲೆಲ್ಲ ತಮ್ಮ ಆಸಕ್ತಿಗಳನ್ನೂ ಬದಲಾಯಿಸುತ್ತವೆ. ಕೆಲವು ಕಾಲ ವಿಶೇಷಾಸಕ್ತಿಯನ್ನೇ ಪೋಷಿಸುವ ಪತ್ರಿಕೆ ಬರಬರುತ್ತಾ ಸಾಮಾನ್ಯಾಸಕ್ತಿ ಪತ್ರಿಕೆಯಾಗಿ ಪರಿವರ್ತಿವಾಗಿಬಿಡುವ ಸಂದರ್ಭಗಳೂ ಇವೆ.ಪತ್ರಿಕೆಯೊಂದು ಅಧ್ಯಾತ್ಮ ಪತ್ರಿಕೆಯೋ, ಸಾಹಿತ್ಯ ಪತ್ರಿಕೆಯೋ, ಶೈಕ್ಷಣಿಕ ಪತ್ರಿಕೆಯೋ ಎಂದು ವಿಭಾಗಿಸುವುದಂತೂ ಬಹಳ ಕಷ್ಟದ ಕೆಲಸ. ಶೈಕ್ಷಣಿಕ ಪತ್ರಿಕೆಯೇ ಹೆಚ್ಚು ಸಾಹಿತ್ಯಿಕವಾಗುವ, ಸಾಹಿತ್ಯ ಪತ್ರಿಕೆಯೇ ಹೆಚ್ಚು ಸಾಮಾನ್ಯ ಆಸಕ್ತಿಯದೆನಿಸುವ ಸಂದರ್ಭಗಳೂ ಇವೆ. ಇವುಗಳ ನಡುವೆ ಕೂದಲೆಳೆಯ ಅಂತರವೆಂಬುದು ಸಂಶೋಧಕನ ಅರಿವಿಗೆ ಬಂದಿದೆ. ೪. ಸಾಹಿತ್ಯ ಅಥವಾ ಕಲಾ ಪತ್ರಿಕೆಯೆಂದು ಬೇರೆ ಸಂದರ್ಭಗಳಲ್ಲಿ ಉಲ್ಲೇಖಗೊಂಡ ಪತ್ರಿಕೆಗಳ ಬಗ್ಗೆ, ಅವನ್ನು ಸಮರ್ಥಿಸುವ ಆಧಾರ ಸಿಗದ ಸಂದರ್ಭಗಳಲ್ಲಿ ಪತ್ರಿಕೆಯ ಬಗೆಗೆ ಉಲ್ಲೇಖಗೊಂಡ ಮಾಹಿತಿಯನ್ನಷ್ಟೇ ಆಕರಗಳ ಸಮೇತ ದಾಖಲಿಸಲಾಗಿದೆ.೫. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹಳೆಯ ಪತ್ರಿಕೆಗಳನ್ನು ಬೈಂಡ್ ಮಾಡಿಸುವಾಗ ಪತ್ರಿಕೆಯ ಮುಖ ಪುಟವನ್ನು ಕಿತ್ತು ಹಾಕಿ ಬೈಂಡು ಮಾಡುವ ಕೆಟ್ಟ ಪದ್ಧತಿ ಇದೆ. ಈಗ ಪ್ರಕಟಣೆಯಲ್ಲಿಲ್ಲದ ಅಂಥ ಪತ್ರಿಕೆಗಳ ಮುಖ ಪುಟ ನೋಡಲು, ಛಾಯಚಿತ್ರ ತೆಗೆದುಕೊಳ್ಳಲು ಬೇರೆ ಪ್ರತಿಗಳು ಸಿಗುವುದಿಲ್ಲ. ಅಂಥ ಸಂದರ್ಬಗಳಲ್ಲಿ ಪತ್ರಿಕೆಯ ಬೈಂಡಾದ ಒಳ ಪುಟವನ್ನೇ ದಾಖಲೆಗಾಗಿ ಛಾಯಾಚಿತ್ರ ಮಾಡಲಾಗಿದೆ.ಇವಿಷ್ಟು ಸಂಶೋಧಕನ ಗಮನಕ್ಕೆ ಬಂದಂತೆ ಅಧ್ಯಯನದ ಇತಿಮಿತಿಗಳು.

ಟಿಪ್ಪಣಿಗಳು

  • ೧. ಮಹಾಬಲೇಶ್ವರ ರಾವ್, ಸಂಶೋಧನ ಮಾರ್ಗ, ನವಕರ್ನಾಟಕ ಪ್ರಕಾಶನ, ೧೯೯೬, ಪುಟ ೧೪
  • ೨. ಡಾ. ಕಲಬುರ್ಗಿ ಎಂ. ಎಂ. ಕನ್ನಡ ಸಂಶೋಧನಾ ಶಾಸ್ತ್ರ, ಸೌಜನ್ಯ ಪ್ರಕಾಶನ, ಧಾರವಾಡ, ೧೯೯೨, ಪುಟ ೬೫
  • ೩. ಕೆ. ವಿ. ನಾಗರಾಜ : ಹಿಸ್ಟರಿ ಆಫ್ ಕನ್ನಡ ಜರ್ನಲಿಸಮ್ - ಎನ್ ಅನಲೆಟಿಕಲ್ ಸ್ಟಡಿ-ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿರುವ ಪ್ರೌಢ ಪ್ರಬಂಧ, ೧೯೮೭, ಪುಟ ೧೧.
  • ೪. ಕೃಷ್ಣಮೂರ್ತಿ ನಾಡಿಗ, ಭಾರತೀಯ ಪತ್ರಿಕೋದ್ಯಮ : ಪೂರ್ವೋಕ್ತ.
  • ೫. ಶ್ರೀನಿವಾಸ ಹಾವನೂರ ‘ಹೊಸಗನ್ನಡ ಸಾಹಿತ್ಯದ ಅರುಣೋದಯ’, ಅವರ ಪುಸ್ತಕದಲ್ಲಿ ಹಾ. ಮಾ. ನಾ. ಮುನ್ನುಡಿ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ೧೯೭೪, ಪು. ೭
  • ೬. ಪು. ತಿ. ನರಸಿಂಹಾಚಾರ್‍, ‘ಭಾರತೀಯ ಸಾಹಿತ್ಯ ಸಮೀಕ್ಷೆ’ ಕೇಂದ್ರ ಸಾಹಿತ್ಯ ಅಕಾಡಮಿ, ನವದೆಹಲಿ, ೧೯೬೮.
  • ೭. ಹ. ಕ. ರಾಜೇಗೌಡ, (ಸಂ) ‘ಚಿತ್ರಗುಪ್ತ ಸ್ಮರಣೆ’, ಎಚ್. ಕೆ. ವೀರಣ್ಣಗೌಡ ಸ್ಮಾರಕ ಪ್ರಕಾಶನ, ಮದ್ದೂರು, ಮಂಡ್ಯ ಜಿಲ್ಲೆ, ೧೯೯೪.

ಕನ್ನಡದಲ್ಲಿ ಕಲೆಗೆ ಮೀಸಲಾದ ಪತ್ರಿಕೆಗಳು

ಕಲೆಯ ವಿಂಗಡಣೆ

ವಿಶಾಲ ಅರ್ಥದಲ್ಲಿ ಕಲೆಯನ್ನು ಎರಡು ವಿಧವಾಗಿ ವಿಂಗಡಿಸಬಹುದು.

  • ೧. ಲಲಿತ ಕಲೆ
  • ೨. ಪ್ರಯೋಜಕ ಕಲೆ

ಸೃಷ್ಟಿಯ ಆರಂಭದಿಂದಲೂ ಮಾನವನು ಸಂಸ್ಕೃತಿಯನ್ನು ಶಾಶ್ವತಗೊಳಿಸಲು ಆಯ್ದುಕೊಂಡ ಮಾರ್ಗ ಕಲೆ. ಕಲೆಯ ಅಭಿವ್ಯಕ್ತಿಯ ಮಾರ್ಗ ಹಲವು ಕಲಾಕಾರನ ಸಾಮರ್ಥ್ಯವನ್ನವಲಂಬಿಸಿ ಅವನ ಸಂಸ್ಕೃತಿ, ಸಭ್ಯತೆ, ಅವನ ಪ್ರತಿಭೆಯ ಪ್ರತೀಕವಾಗಿ ಅಭಿವ್ಯಕ್ತಗೊಳ್ಳುತ್ತದೆ. ಕಲೆಯಲ್ಲಿ ಲಲಿತ ಕಲೆ, ಪ್ರಯೋಜಕ ಕಲೆಯೆಂದು ಎರಡು ಭೇದಗಳನ್ನಿಟ್ಟುಕೊಂಡು ಅವುಗಳ ಗುರಿಯನ್ನು ಸ್ಪಷ್ಟಪಡಿಸಿಕೊಂಡು ‘ಕವಿ’ ರಚನೆಗೆ ತೊಡಗುತ್ತಾನೆ. . . . ಲಲಿತ ಕಲೆಗಳ ಗುರಿ ಜನ್ಮತಃ ಆನಂದ. ಪ್ರಯೋಜನೆಯ ಕಡೆಗೆ ಕಲಾವಿದನು ಲಕ್ಷಿಸಬೇಕಿಲ್ಲ. ಪ್ರಯೋಜಕ ಕಲೆಗಳ ಗುರಿಯೇ (ಜೀವನ ನಿರ್ವಹಣೆಯ) ದಾರಿಯಾಗುವುದು, ಪ್ರಯೋಜನಕಾರಿಯಾಗುವುದು.ಮಾನವನ ಮನಸ್ಸಿಗೆ ಖುಷಿ ನೀಡುವ, ಹಾಯೆನಿಸುವ ಭಾವನೆಗಳನ್ನು ಬಿತ್ತುವ ಸೃಷ್ಟಿಗಳನ್ನು, ಸೌಂದರ್ಯೋಪಾಸನೆಯೇ ಮುಖ್ಯವಾದ ಕಾರ್ಯಗಳನ್ನು ‘ಲಲಿತಕಲೆ’ಗಳನ್ನಬಹುದು. ಇದರಲ್ಲಿ ಆಧುನಿಕ ಅಭಿವ್ಯಕ್ತಿ ಮಾಧ್ಯಮಗಳಾದ ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನಾಟಕ ಹಾಗೂ ರಂಗದ ಮೇಲೆ ಅಭಿನಯಿಸುವ ಇತರ ನಾಟ್ಯಪ್ರಕಾರಗಳೂ ಸೇರಿಕೊಳ್ಳುತ್ತವೆ. ಲಲಿತಕಲೆಗಳನ್ನು ಪ್ರದರ್ಶಿಸುವವನನನ್ನು ‘ಕಲಾವಿದ’ ಎನ್ನಲಾಗುತ್ತದೆ. ಕೌಶಲ್ಯಗಳಿಗೆ ಹೆಚ್ಚಿನ ಒತ್ತು ಇದ್ದದು ಬರಬರುತ್ತಾ ಸೃಜನಶೀಲತೆಯತ್ತ ಹೊರಳಿ ಆಧುನಿಕ ಸಮಾಜದಲ್ಲಿ ಕಲೆ ಎಂದರೆ ಒರಿಜಿನಲ್ - ಮೂಲ ಸೃಷ್ಟಿ ಎಂಬ ಅರ್ಥವನ್ನು ಪಡೆದುಕೊಂಡಿದೆ. ಉದಾಹರಣೆಗೆ ಯುದ್ಧ ವರಸೆಯನ್ನು ಶಿಸ್ತುಬದ್ಧವಾಗಿ ಅಭ್ಯಾಸ ಮಾಡಿ ಪ್ರಯೋಗಿಸುವಲ್ಲಿ ಯಶಸ್ವಿಯಾದವನು ಶ್ರೇಷ್ಠ ಕಲೆಗಾರ ಎನಿಸಿಕೊಳ್ಳುತ್ತಿದ್ದ. ಆದರೆ ಇಂದು ಶಾಸ್ತ್ರೀಯ ಯುದ್ಧವರಸೆಯನ್ನು ಪ್ರದರ್ಶಿಸುವಾತನಿಗಿಂತ ಅದಕ್ಕೆ ತನ್ನದಾದ ಹೊಸ ವರಸೆಯನ್ನು ಸೇರಿಸುವಾತ ಕಲಿ-ಕಲಾವಿದ ಎನಿಸಿಕೊಳ್ಳುತ್ತಾನೆ. ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಾಸಮಾಡಿ ಅಷ್ಟನ್ನೇ ಪ್ರದರ್ಶಿಸುವವನಿಗಿಂತ ಭರತನಾಟ್ಯ ಪ್ರದರ್ಶನದಲ್ಲಿ ತನ್ನದೇ ಭಿನ್ನ ಛಾಪು ಮೂಡಿಸುವಾತ ಉತ್ತಮ ಕಲಾವಿದನೆನಿಸಕೊಳ್ಳುತ್ತಾನೆ. ಅಷ್ಟರಮಟ್ಟಿಗೆ ಕಲೆ-ಒರಿಜಿನಲ್-ಯಾರೂ ಮಾಡದ ಸೃಷ್ಟಿ ಎನಿಸಿಕೊಂಡಿದೆ. ಜಪಾನೀ ಬೌದ್ಧ ಸನ್ಯಾಸಿ ಕುಕೈ-ಪರಿಪೂರ್ಣತೆಯನ್ನು ಯಾವುದು ಅನಾವರಣಗೊಳಿಸುವುದೋ ಅದೇ ಕಲೆ ಎಂಬುದಾಗಿ ವ್ಯಾಖ್ಯಾನಿಸಿರುವುದು ಗಮನಿಸಬೇಕಾದ್ದು. ಮಾಡಿದ್ದನ್ನೇ ಮಾಡುವುದು ಕಲೆಯಲ್ಲ. ಅನುಕರಣೆಯೂ ಕಲೆಯಲ್ಲ. ಇಂದ್ರಿಯ ಗೋಚರವಾಗಿ ಮನಸ್ಸಿಗೆ ಸುಖ ನೀಡುವ ವಿದ್ಯೆ ಕಲೆಯಾದರೆ ಇಂದ್ರಿಯಗಳನ್ನು, ಅಂಗಾಂಗಗಳನ್ನು ಬಳಸಿಕೊಂಡು ನಮ್ಮೊಳಗಿನ ಸಾಧ್ಯತೆಯನ್ನೂ ಸಾಮರ್ಥ್ಯವನ್ನೂ ಹೊರಹಾಕುವುದು ಕಲೆ, ವ್ಯಕ್ತಿಯ ಕಲಾತ್ಮಕ ಅಭಿವ್ಯಕ್ತಿಯೇ ಕಲೆ.ಕಲೆ ಪುನಃ ಸೃಷ್ಟಿಯಲ್ಲ, ಅದು ಬಿಡುವಿನ ವೇಳೆಯಲ್ಲಿ ಕಲಿಯುವಂಥದಲ್ಲ. ಗಂಭೀರವಾಗಿ ತೆಗೆದುಕೊಂಡು ತಿಳಿಯಬೇಕಾದುದಾಗಿದೆಯೆಂದು ರಸ್ಕಿನ್ (೧೮೧೯-೧೯೦೦) ಹೇಳುತ್ತಾನೆ. ಕುಂಬಾರಿಕೆ, ಕಮ್ಮಾರಿಕೆ, ಬಡಿಗತನ, ಬಂಗಾರ ಮಾಡುವ ಕೆಲಸ ಇವೇ ಮುಂತಾದ ಜೀವನ ನಿರ್ವಹಣಾ ಮಾಧ್ಯಮಗಳಾದ ವಿದ್ಯೆಗಳನ್ನು ಪ್ರಯೋಜಕ ಕಲೆಗಳು ಎನ್ನುತ್ತೇವೆ. ಕುಲಾವಿ ಹೊಲಿಯುವುದು ಹೇಗೆ ವಿದ್ಯೆಯೋ ಹಾಗೆ ಕಲೆಯೂ ಹೌದು. ಹೊಲಿಯುವವರೆಲ್ಲರೂ ಒಳ್ಳೆಯ ದರ್ಜಿಗಳಲ್ಲ. ಬರೆಯುವವರೆಲ್ಲರೂ ಒಳ್ಳೆಯ ಸಾಹಿತಿಗಳಲ್ಲ, ಚಿತ್ರ ಬಿಡಿಸುವವರೆಲ್ಲ ಶ್ರೇಷ್ಠ ಕಲಾವಿದರಾಗಬೇಕಿಲ್ಲ. ಹೀಗಾಗಿ ಪ್ರಯೋಜಕ ವಿದ್ಯೆಯನ್ನು ಕಲಾತ್ಮಕವಾಗಿ ಬಳಸಲು ಬೆಳಸಲು ಸಾಧ್ಯ. ಮೂಲತಃ ಬದುಕು ಸಾಗಿಸಲು ನೆರವಾಗುವ ೬೪ ವಿದ್ಯೆಗಳನ್ನು ಕುಶಲಕಲೆಗಳೆಂದೂ ಪ್ರಯೋಜಕ ಕಲೇಗಳೆಂದೂ ಕರೆಯಲಾಗುತ್ತದೆ. ಇಂಥ ಕಲೆಯನ್ನು ಬಳಸುವಾತ, ಪ್ರಕಟಪಡಿಸುವಾತ ಕುಶಲ ಕರ್ಮಿ (artisan) ಎಂದು ಕರೆಸಿಕೊಳ್ಳುತ್ತಾನೆ. ವಿಶಾಲ ಅರ್ಥದಲ್ಲಿ ಕಲಾವಿದನೂ ಕುಶಲಕರ್ಮಿಯೂ ಸಮಾನರು. ಇಬ್ಬರೂ ಕಲೆಯನ್ನು ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಂಡವರು.ಕಲೆಯನ್ನು ಇನ್ನೊಂದು ರೀತಿಯಾಗಿ ವಿಂಗಡಿಸುವ ಪರಿಪಾಠ ಕಲಾ ಅಧ್ಯಯನ ಕ್ರಮದಲ್ಲಿದೆ. ಈ ವಿಧಾನ ಮೂಲತಃ ಕಲೆಯನ್ನು ಕಲೆಯಾಗಿ, ಮಾನವನ ಸೃಜನ ಶೀಲ ಅಭಿವ್ಯಕ್ತಿಯ ಮಾಧ್ಯಮವಾಗಿ ನೋಡುತ್ತದೆ. ಆ ಪ್ರಕಾರ ಕಲೆಗಳಲ್ಲಿ ಎರಡು ವಿಧ : ೧. ಪ್ರದರ್ಶಕ ಕಲೆ ೨. ಲಲಿತಕಲೆಪ್ರದರ್ಶಕ ಕಲೆಯೆಂದರೆ ಮೂಲತಃ ಅಭಿನಯ ಮೂಲವಾದುದು. ದೈಹಿಕ ಅಂಗಾಂಗಗಳನ್ನು ಬಳಸಿ ರಂಗದ ಮೇಲೆ ಪ್ರದರ್ಶನ ಮಾಡುವ ಕಲೆ ಪ್ರದರ್ಶಕ ಕಲೆ. ನಾಟಕ, ಭರತನಾಟ್ಯ, ಯಕ್ಷಗಾನ, ಭೂತಕಾಲ, ಮುಂತಾಗಿ ರಂಗದ ಮೇಲೆ ಕಲಾವಿದರು ಹಾಡುವ, ಕುಣಿಯುವ, ಅಭಿನಯಿಸುವ ಮಾಧ್ಯಮಗಳೆಲ್ಲಾ ಪ್ರದರ್ಶಕ ಕಲೆಗಳು, ಪ್ರದರ್ಶಕ ಕಲೆಗಳ ವಿಶೇಷವೆಂದರೆ ಕಲಾವಿದನಿಲ್ಲದೆ ಕಲೆಯಿಲ್ಲ ಮತ್ತು ಕಲಾ ಪ್ರದರ್ಶನದ ಒಂದು ಸಂದರ್ಭತಪ್ಪಿದರೆ ಮತ್ತೆ ಎಂದೆಂದೂ ಆ ಪ್ರದರ್ಶನ ಪುನರಾವರ್ತನೆಗೊಳ್ಳುವುದಿಲ್ಲ. ಇಲ್ಲಿ ಪ್ರತಿಯೊಂದು ಪ್ರದರ್ಶನವೂ ಹೊಸತು, ಒರಿಜಿನಲ್. ಅದೇ ಕಲಾವಿದರು ಅದೇ ನಾಟಕವನ್ನು ಅಭಿನಯಿಸಿದರೆ ಕೂಡಾ ಇಲ್ಲಿ ಅಭಿವ್ಯಕ್ತಿಗೊಳ್ಳುವ ಕಲೆ ಭಿನ್ನವಾದುದು, ಅದಕ್ಕೇ ಒಂದು ನಾಟಕದ ಎರಡು ಪ್ರದರ್ಶನಗಳಿದ್ದರೂ ಪ್ರೇಕ್ಷಕರಿಗೆ ಅವು ನೀಡುವ ಪರಿಣಾಮ ಒಂದೇ ಆಗಿರುವುದಿಲ್ಲ.ಇಲ್ಲಿ ಕಲಾವಿದರಿಲ್ಲದೇ ಪ್ರದರ್ಶನವಿಲ್ಲ ಎಂಬುದೂ ಗಮನಿಸಬೇಕಾದುದು. ಪ್ರದರ್ಶಕ ಕಲೆಗಳಲ್ಲಿ ಕಲಾವಿದ ಎದುರಿಗೆ ಜೀವಂತ ಇದ್ದಾನೆ. ಅವನ ಇಂದ್ರಿಯಗಳನ್ನೆಲ್ಲಾ ಬಳಸಿ, ಹಾವಭಾವದ ಮೂಲಕ ತನ್ನ ಅನುಭವವನ್ನು ಆಸಕ್ತ ಪ್ರೇಕ್ಷಕರಿಗೆ ಹಂಚುತ್ತಾನೆ. ಪ್ರೇಕ್ಷಕರು ಹಾಗೂ ಕಲಾವಿದರ ಮಧ್ಯ ನೇರ ಸಂಪರ್ಕ ಉಂಟಾಗಿ ಕಲೆ ನೀಡಬೇಕಾದ ಅನುಭವವನ್ನೋ ಆನಂದವನ್ನೋ ನೀಡುತ್ತದೆ. ನಾಟಕ ಪ್ರೇಕ್ಷಕರನ್ನು ಮುಟ್ಟಲಿಲ್ಲ ಎಂದರೆ ಇಂಥ ಸಂವಹನ ಸಾಧ್ಯವಾಗಲಿಲ್ಲ ಎಂಬುದೇ ಅರ್ಥ. ಆಗ ಪ್ರದರ್ಶಕ ಕಲೆ ವಿಫಲಗೊಂಡಂತೆ.ಪ್ರದರ್ಶಕ ಕಲೆಯನ್ನುಳಿದು ಇತರ ಕಲೆಗಳು ಲಲಿತ ಕಲೆಗಳು. ಚಿತ್ರಕಲೆ, ಶಿಲ್ಪಕಲೆ ಮುಂತಾಗಿ, ಇವುಗಳಿಗೆ ಕಲಾವಿದ ಪ್ರದರ್ಶನದ ಸಂದರ್ಭದಲ್ಲಿ ಪ್ರೇಕ್ಷಕನೊಡನೆ ಸಂವಾದಿಯಾಗಿ ಇರಲೇಬೇಕಾದ ಪ್ರಮೇಯವಿಲ್ಲ. ಚಿತ್ರ ಎದುರಿಗಿದ್ದರೆ ಸಾಕು, ಕಲಾವಿದ ದೈಹಿಕವಾಗಿ ಎದುರಿಗಿರಬೇಕಿಲ್ಲ, ಚಿತ್ರದಿಂದ ಸೌಂದರ್ಯಾನುಭೂತಿಯನ್ನು ಪಡೆಯುವುದಕ್ಕೆ. ರಾಜಾರವಿರ್ಮನ ಕುಂಚದ ಕಲಾ ವೈಭವ ನಮ್ಮೆದುರಿಗಿರುವಾಗ ರವಿವರ್ಮ ದೈಹಿಕವಾಗಿ ಅಳಿದಿದ್ದರೂ ಕಲೆಯ ಮೂಲಕ ಸದಾ ಜೀವಂತವಾಗಿ ಇರುತ್ತಾನೆ.ಪ್ರದರ್ಶಕ ಕಲೆಗಳಲ್ಲೂ ಲಲಿತ ಕಲೆಗಳಲ್ಲೂ ಇರುವ ಸಾಮ್ಯವೆಂದರೆ ಇವು ಅಚ್ಚ ಕಲೆಗಳು. ಕಲಾವಿದ ತನ್ನ ಸ್ವಂತಿಕೆಯ ಮೂಲಕ ಪ್ರೇಕ್ಷಕರಿಗೆ ಆನಂದ ನೀಡುತ್ತಾನೆ. ಸೌಂದರ್ಯ ಹಾಗೂ ಆನಂದ ಈ ಕಲೆಗಳ ಸಂವಹನದ ಉದ್ದೇಶ.ರಂಗಭೂಮಿ, ಚಿತ್ರಕಲೆ, ಸಂಗೀತ, ನೃತ್ಯ, ಜಾನಪದ ಕಲಾ ಪ್ರಕಾರಗಳಿಗೆ, ಪ್ರದರ್ಶಕ ಹಾಗೂ ಒಟ್ಟಾರೆ ಲಲಿತಕಲಾ ಪ್ರಕಾರಗಳಿಗೆ ಮೀಸಲಾಗಿ ಬಂದ ಪತ್ರಿಕೆಗಳನ್ನು ಇಲ್ಲಿ ‘ಕಲಾ ಪತ್ರಿಕೆಗಳು’ ಎಂಬ ಅಭಿದಾನದಡಿ ಅಭ್ಯಸಿಸಲಾಗಿದೆ. ೧೯ನೇ ಶತಮಾನದಲ್ಲಿ ಕಲಾ ಪತ್ರಿಕೆಗಳು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅಂದರೆ ೧೮೪೩ರಲ್ಲಿ ಕನ್ನಡದ ಮೊದಲ ಪತ್ರಿಕೆ ಹೊರಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೯ನೇ ಶತಮಾನದಲ್ಲಿ ನಡೆದ ಪತ್ರಕೋದ್ಯಮ ಚಟುವಟಿಕೆಗಳನ್ನು ಪಟ್ಟಿಮಾಡುವ ಹಾ. ತಿ. ಕೃಷ್ಣೇಗೌಡರು ‘ಈ ಕಾಲಾವಧಿಯಲ್ಲಿ ಸುಮಾರು ಹತ್ತು ಪತ್ರಿಕೆಗಳು ಪ್ರಕಟವಾಗಿವೆ. ಮಂಗಳೂರ ಸಮಾಚಾರ, ಕಂನಡ ವಾರ್ತಿಕ, ವಿಚಿತ್ರ ವರ್ತಮಾನ ಸಂಗ್ರಹ, ಇಂಡಿಯಾ ಮತ್ತು ಅನ್ಯ ದೇಶದ ವಾರ್ತಿಕ, ನ್ಯಾಯ ಸಂಗ್ರಹ, ಕ್ರೈಸ್ತ ಸಭಾಪತ್ರ, ಸುಬೋಧಿನೀ, ಸುದರ್ಶನ, ಸತ್ಯದೀಪಿಕೆ, ಸರ್ವೋದಯ ಪ್ರಕಾಶ’ ಎಂದು ಗುರುತಿಸುತ್ತಾರೆ. ೧೯ನೇ ಶತಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ ಪತ್ರಿಕೆಗಳ ಸ್ಥೂಲ ನೋಟವೇ ಅಂದಿನ ಪತ್ರಿಕೋದ್ಯಮದ ಆದ್ಯತೆಗಳನ್ನೂ, ಸ್ವರೂಪಗಳನ್ನೂ ವಿವರಿಸುತ್ತವೆ. ಮದ್ರಾಸು, ಮುಂಬೈ ಹಾಗೂ ಹೈದರಾಬಾದು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಇಂದಿನ ಕನ್ನಡ ನಾಡಿನ ಒಟ್ಟೊ ಪತ್ರಿಕೋದ್ಯಮದ ಚಟುವಟಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೋದ್ಯಮ ಚಟುವಟಿಕೆಗಳಿಂದ ಭಿನ್ನವಾಗಿರಲಿಲ್ಲ.ಮೂಲತಃ ೧೯ನೇ ಶತಮಾನದಲ್ಲಿ ಕನ್ನಡ ಪತ್ರಿಕೋದ್ಯಮ ಆರಂಭದ ಹಂತದಲ್ಲಿತ್ತು. ಮುದ್ರಿತ ಪತ್ರಿಕೆಯ ಕಲ್ಪನೆಯೇ ಕನ್ನಡ ಜನರಿಗೆ ಹೊಸದಾಗಿದ್ದು ಆಧುನಿಕ ಅರ್ಥದಲ್ಲಿ ಸುದ್ದಿ, ಲೇಖನಗಳ ಪ್ರಕಟನೆ ವೃತ್ತಿಪರವಾಗಿರಲಿಲ್ಲ.ಕ್ರೈಸ್ತ ಮಿಶನರಿಗಳ ಪತ್ರಿಕೆಗಳಿಗೆ ನೇರವಾಗಿಯೋ ಪರೋಕ್ಷವಾಗಿಯೋ ಕ್ರೈಸ್ತ ಮತ ಪ್ರಚಾರ ಹಾಗೂ ಧರ್ಮದ ತಳಹದಿಯನ್ನು ವಿಸ್ತರಿಸುವ ಉದ್ದೇಶಗಳಿದ್ದವು.ಸುಬುದ್ಧಿ ಪ್ರಕಾಶ (೧೮೪೯) ಜ್ಞಾನ ಪ್ರಕಾಶ (೧೮೫೫) ಕನ್ನಡ ಜ್ಞಾನ ಬೋಧಕ (೧೮೬೩) ಈ ಮಾದರಿಯ ಪತ್ರಿಕೆಗಳಿಗೆ ಹೊಸ ಮಾಧ್ಯಮವನ್ನು ಬಳಸಿ ಜ್ಞಾನ ಪ್ರಸಾರ ಮುಖ್ಯ ಉದ್ದೇಶವಾಗಿತ್ತು. ಮಠ ಪತ್ರಿಕೆ (೧೮೬೫) ಶೋಧಕ (೧೮೭೫) ದಂಥ ಪತ್ರಿಕೆಗಳಿಗೆ ಜನರಿಗೆ ಹಾಗೂ ಶಿಕ್ಷಕರಿಗೆ ಸಾಮಾನ್ಯ ಶಿಕ್ಷಣ ನೀಡುವ ಉದ್ದೇಶಗಳಿದ್ದವು. ನ್ಯಾಯ ಸಂಗ್ರಹ (೧೮೯೬) ನಿಬಂಧಮಾಲೆ (೧೮೮೦) ವಿಜ್ಞಾನ ದೀಪಿಕೆ (೧೮೯೪) ಈ ಪತ್ರಿಕೆಗಳು ಶತಮಾನದ ತಿರುವಿನಲ್ಲಿ ಕನ್ನಡ ಪತ್ರಿಕೆಗಳು ನಿಧಾನವಾಗಿ ಪ್ರಬುದ್ಧತೆಯತ್ತ ಸಾಗುವುದನ್ನೂ, ಸಾಮಾನ್ಯ ಆಸಕ್ತಿ ಮತ್ತು ವಿಶೇಷಾಸಕ್ತಿ ಓದುಗರತ್ತ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿಕೊಂಡು ಮುಂದುವರೆಯುವುದನ್ನೂ ಖಚಿತಪಡಿಸುತ್ತವೆ.ಕಲಾಪತ್ರಿಕೆ ಇಷ್ಟಾಗಿಯೂ ೧೯ನೇ ಶತಮಾನದಲ್ಲಿ ಕಲೆಗೆ ಮೀಸಲೆಂದು ಘೋಷಿಸಿಕೊಂಡು ಪತ್ರಿಕೆಯ ಸುಳಿವು ಸಿಗುವುದಿಲ್ಲ. ಈವರೆಗೆ ಕನ್ನಡ ಪತ್ರಿಕೋದ್ಯಮ ಕುರಿತು ಬಂದಿರುವ ಚರಿತ್ರೆಯನ್ನು ತಿರುವಿಹಾಕಿದಾಗ ಅಥವಾ ಈ ಸಂಬಂಧ ಲಭ್ಯವಿರುವ ಚಾರಿತ್ರಿಕ ದಾಖಲೆಗಳನ್ನು ಪರಿಶೀಲಿಸಿದಾಗಲೂ ಲಲಿತಕಲೆಗಳಿಗೆ ಮೀಸಲಾದ ಪತ್ರಿಕೆಯೊಂದು ೧೯ನೇ ಶತಮಾನದಲ್ಲಿ ಪ್ರಕಟಗೊಂಡುದ್ದು ಕಂಡು ಬರುವುದಿಲ್ಲ.೧೮೭೫ರಲ್ಲಿ ವೆಂಕಟರಂಗೋ ಕಟ್ಟಿಯವರು ಆರಂಭಿಸಿದ ‘ಶೋಧಕ ಪತ್ರಿಕೆ ಇತಿಹಾಸ, ಶಾಸ್ತ್ರ ಕಲಾ ಕೌಶಲ್ಯಾದಿಗಳ ಸಂಗ್ರಹ’ವೆಂದು ಕರೆದುಕೊಳ್ಳುವುದರ ಮೂಲಕವೇ ತನ್ನದು ವಿಶೇಷಾಸಕ್ತಿ ನಿಯತಕಾಲಿಕವಲ್ಲ ಎಂಬುದನ್ನೂ ಸಾಬೀತುಪಡಿಸಿತ್ತು.ಸಾಹಿತ್ಯದ ವೇದಿಕೆಯಾಗಿ ಪತ್ರಿಕೆಯನ್ನು ಬಳಸಿಕೊಳ್ಳುವ ಸಂಪ್ರದಾಯ ೧೯ನೇ ಶತಮಾನದ ಕೊನೆಯ ದಶಕದಲ್ಲಿ ವಿಪುಲವಾಗಿ ಬೆಳೆದು ಬಂದಿರುತ್ತದೆ. ೨೦ನೇ ಶತಮಾನದಲ್ಲಿ ಬಂದ ಸಾಹಿತ್ಯಿಕ ಪತ್ರಿಕೆಗಳಿಗೆಲ್ಲ ಬುನಾದಿ ಹಾಕಿಕೊಟ್ಟ ಮಾರ್ಗದರ್ಶಿ ಸಾಹಿತ್ಯ ಪತ್ರಿಕೆಗಳು ೧೯ನೇ ಶತಮಾನದಲ್ಲೇ ಕಂಡುಬಂದವು. ಆದರೆ ಕಲೆಯ ಮಾಧ್ಯಮಕ್ಕೆ ಮೀಸಲಾಗಿ ಪತ್ರಿಕೆಗಳನ್ನು ಹೊರಡಿಸಬಹುದೆಂಬ ಕಲ್ಪನೆ ೧೯ನೇ ಶತಮಾನದ ಕನ್ನಡದ ಸಂಪಾದಕರುಗಳಿಗೆ ನಿಲುಕದ್ದಾಗಿ ತೋರುತ್ತದೆ.೨೦ನೇ ಶತಮಾನದಲ್ಲಿ ಕಲಾ ಪತ್ರಿಕೆಗಳು (೧೯೦೧ ರಿಂದ ೧೯೫೬ರವರೆಗೆ) ನಾರಾಯಣ ರಾಜಪುರೋಹಿತರೆಂಬುವರು ೧೯೧೯ರಲ್ಲಿ ಕನ್ನಡದಲ್ಲಿ ಸುಮಾರು ೪೦-೪೨ ಪತ್ರಿಕೆಗಳಿರುವುದಾಗಿ ಹೇಳುತ್ತಾರೆ. ಅವುಗಳಲ್ಲಿ ಶಿಕ್ಷಣಕ್ಕೆ ಮೀಸಲಾಗಿ ೫, ಕಾವ್ಯಕ್ಕೆ ೨, ಭಾಷೆಗೆ ೧, ಕಾನೂನಿಗೆ ೧, ಧಾರ್ಮಿಕ ವಿಷಯಗಳಿಗೆ ಮೀಸಲಾಗಿ ೫ ಪತ್ರಿಕೆಗಳೂ, ಕಥೆ-ಕಾದಂಬರಿ ಪ್ರಕಾರಕ್ಕೆ ೨, ವೈದ್ಯಕೀಯಕ್ಕೆ ೧, ಹಾಸ್ಯಕ್ಕೆ ಮೀಸಲಾಗಿ ೧ ಮತ್ತು ಕೃಷಿಗೆ ಮೀಸಲಾಗಿ ೨ ಪತ್ರಿಕೆಗಳಿರುವುದಾಗಿಯೂ ಬರೆಯುತ್ತಾರೆ. ವ್ಯಾಪಾರ, ಕೈಗಾರಿಕೆ, ರಾಜಕೀಯ, ಅಧ್ಯಾತ್ಮ, ಕ್ರೀಡೆ, ದೈಹಿಕ ಶಿಕ್ಷಣ, ನೃತ್ಯ, ವಿಮರ್ಶೆಯಂಥ ಕ್ಷೇತ್ರಕ್ಕೆ ಮೀಸಲಾಗಿ ಯಾವುದೇ ಪತ್ರಿಕೆಗಳಿಲ್ಲದಿರುವ ಬಗ್ಗೆ ಅವರು ವಿಷಾದಿಸಿರುವುದನ್ನೂ ಗಮನಿಸಬೇಕು.ನಾರಾಯಣ ರಾಜಪುರೋಹಿತರ ಲೇಖನ ಚಾರಿತ್ರಿಕವಾಗಿ ಮುಖ್ಯವಾದುದು. ೧೯೧೯ರಲ್ಲೂ ನೃತ್ಯ, ವಿಮರ್ಶೆಗಳಿಗೆ ಪತ್ರಿಕೆಗಳಿಲ್ಲದಿರುವುದನ್ನು ಅವರು ಗುರುತಿಸುವುದನ್ನು ಸಾಹಿತ್ಯವನ್ನುಳಿದು ನಾಟಕ ಚಿತ್ರಕಲೆಯೇ ಮುಂತಾದ ಕಲಾತ್ಮಕ ಪ್ರಕಾರಗಳಿಗೆ ಮೀಸಲಾಗಿ ಪತ್ರಿಕೆಗಳಿರುವ ಬಗ್ಗೆ ಪ್ರಸ್ತಾಪವನ್ನು ಮಾಡದ್ದು ೨೦ನೇ ಶತಮಾನದ ಮೊದಲೆರಡು ದಶಕಗಳಲ್ಲೂ ಕಲೆಗೆ ಮೀಸಲಾಗಿ ಪತ್ರಿಕೆ ಬಾರದಿರುವ ಸಂಶೋಧಕನ ಸಂಶಯಕ್ಕೆ ಸಮರ್ಥನೆಯಾಗಿ ನಿಲ್ಲುತ್ತದೆ.‘ರಂಗಭೂಮಿ’ ಕನ್ನಡದಲ್ಲಿ ಕಲೆಗೆ ಮೀಸಲಾಗಿ ಅಥವಾ ಕಲೆಯ ಪ್ರಕಾರಗಳಾದ ಸಂಗೀತ, ನಾಟಕ, ನೃತ್ಯ ಮುಂತಾದವುಗಳಿಗೆ ಮೀಸಲಾದ ಮೊದಲ ಪತ್ರಿಕೆಯೆಂದು ಗುರುತಿಸಬಹುದದದ್ದು ದ. ಕೃ.ಭಾರದ್ವಾಜರ ರಂಗಭೂಮಿ. ೧೯೨೫ರಲ್ಲಿ ನಾಟಕ ಕಲೆಗೆ ಮೀಸಲಾಗಿ ಭಾರತದ್ವಾಜರು ಈ ಮಾಸಿಕವನ್ನು ಹೊರಡಿಸಿದರು. ಹಿರಿಯ ನಾಟಕಕಾರರೂ ಗರೂಡನಾಟಕ ಕಂಪನಿಯ ಮಾಲಿಕರೂ ಆಗಿದ್ದ ಗರೂಡ ಸದಾಶಿವರಾಯರು ಅದಕ್ಕೆ ಆರ್ಥಿಕ ಸಹಾಯ ಮಾಡಿದರು. ಆದರೂ ಪತ್ರಿಕೆ ಆರ್ಥಿಕ ಸಂಕಷ್ಟದಿಂದ ಹೊರಬರಲಿಲ್ಲ. ಒಂದು ವರ್ಷದಲ್ಲಿ ಮುಚ್ಚಿಹೋಯಿತು. ಬೆಂಗಳೂರಿನ ಅಮೆಚೂರ್‍ ಡ್ರಮಾಟಿಸ್ಟ್ ಅಸೋಸಿಯೇಶನ್‌ನವರು ಈ ಪತ್ರಿಕೆಗೆ ೧೯೩೨ರಲ್ಲಿ ಪುನರುಜ್ಜೀವನ ಕೊಡಿಸಿದರು. ಆದರೂ ೧೯೩೪ರಲ್ಲಿ ಅದು ಶಾಶ್ವತವಾಗಿ ಮುಚ್ಚಿಹೋಯಿತು.ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ದ. ಕೃ. ಭಾರದ್ವಾಜರದು ದಾಖಲಾಗಬೇಕಾದ ಸಾಹಸ. ೧೮೯೧ರ ಡಿಸೆಂಬರ್‍ ೨೯ರಂದು ಹುಟ್ಟಿದ ಭಾರದ್ವಾಜರು ಹಲವು ಪತ್ರಿಕೆಗಳ ಜೊತೆ ಸಂಪರ್ಕವಿವರಿಸಿಕೊಂಡಿದ್ದರು. ೧೯೧೫ರಲ್ಲಿ ಒಕ್ಕಲಿಗ ಮಾಸಿಕ ಉಸಂಪಾದಕರಾದವರು ನಂತರ ‘ಸಂಸ್ಕೃತ ರೀಸರ್ಚ್’ ಎಂಬ ಆಂಗ್ಲ-ಸಂಸ್ಕೃತ ದ್ವಿಭಾಷಾ ತ್ರೈಮಾಸಿಕ ಹೊರ ತಂದರು. ೧೯೧೮ರಲ್ಲಿ ‘ಭಕ್ತಿ ಸಂದೇಶ’ವನ್ನೂ ೧೯೨೦ರಲ್ಲಿ ‘ತಿಲಕ ಸಂದೇಶ’ವನ್ನೂ ಹೊರಡಿಸಿದರು. ಈ ನಡುವೆ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ‘ಅಸಹಕಾರ’ ಪತ್ರಿಕೆಯನ್ನೂ ಹುಟ್ಟುಹಾಕಿದರು. ಭಾರದ್ವಾಜರ ಪತ್ರಿಕಾ ಹೋರಾಟಗಳಲ್ಲಿ ‘ರಂಗಭೂಮಿ’ ಗೆ ಮೀಸಲಾದ ಮಾಸಿಕ ‘ರಂಗಭೂಮಿ’ಯಾದರೆ ಮಕ್ಕಳಿಗಾಗಿ ಮೀಸಲಾದುದು ‘ಮಕ್ಕಳ ಪುಸ್ತಕ’ (೧೯೨೬-೨೮).‘ರಂಗಭೂಮಿ’ಯು ‘ನುರಕ್ಕೂ ಮಿಗಿಲಾದ ಪುಟಗಳನ್ನು ಹೊತ್ತು ಕೃತಿ ಹಾಗೂ ರಂಗ ಪ್ರಯೋಗ, ವಿಮರ್ಶೆ, ರಂಗ ಸಂಶೋಧನೆ, ವ್ಯಕ್ತಿ ಪರಿಚಯ - ಸಂದರ್ಶನ ಮೊದಲಾದ ಎಲ್ಲ ರಂಗ ಪ್ರಕಾರಗಳನ್ನೊಳಗೊಂಡು ಜನಾದರಣೀಯವಾಗಿ ಮೆರೆಯಿತು. ಅಲ್ಲದೆ ಸಮಕಾಲೀನ ಕನ್ನಡ ವೃತ್ತ ಮತ್ತು ಹವ್ಯಾಸಿ ರಂಗೇತಿಹಾಸದ ಆಧಾರ ಭಂಡಾರವಾಗಿದ್ದಿತು.‘ರಂಗಭೂಮಿ’ಯನ್ನು ‘ಲಲಿತಕಲೆ ಸಾಹಿತ್ಯ ಸಂಬಂಧವಾದ ಸಚಿತ್ರ ಮಾಸಿಕವಹಿ’ ಎಂಬುದಾಗಿ ಕರೆಯಲಾಗಿತ್ತು. ಸಪ್ರೆಂಬರ್‍ ೧೯೨೫ರಲ್ಲಿ ಮೊದಲ ಸಂಪುಟದ ಮೊದಲ ಸಂಚಿಕೆ ಪ್ರಕಟಗೊಂಡಿತು. ವಾರ್ಷಿಕ ವರ್ಗಣೆ ೩-೮-೦ ಎಂದು ಕರೆಯಲಾಗಿದ್ದು. ಸಪ್ಟೆಂಬರ್‍ ೧೯೨೫ರಿಂದ ಆಗಸ್ಟ್ ೧೯೨೬ರವರೆಗಿನ ಒಂದು ವರ್ಷದ ಬೈಂಡಾದ ಸಂಪುಟವನ್ನು ಮಾರಾಟಕ್ಕೆ ಬಿಡಲಾಗಿದ್ದು ಅದರ ಬೆಲೆಯನ್ನು ೪-೦-೦ ಎಂದು ನಮೂದಿಸಲಾಗಿತ್ತು. ಪತ್ರಿಕೆಯ ಮೊದಲ ಪುಟದಲ್ಲಿ ‘ನಾಟ್ಯಂ ಭಿನ್ನರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್’ ಎಂಬ ಕಾಳಿದಾಸನ ಉಕ್ತಿಯನ್ನು ಪ್ರತೀ ಸಂಚಿಕೆಯಲ್ಲಿ ಉದ್ದರಿಸಲಾಗುತ್ತಿತ್ತ.ಮೊದಲ ಸಂಚಿಕೆಯ ಎರಡನೇ ಪುಟದಲ್ಲಿ ‘ರಂಗಭೂಮಿಯ ಆತ್ಮನಿವೇದನ’ ಎಂಬ ಪ್ರಥಮ ಪರುಷ ಏಕವಚನದ ಮನವಿಯೊಂದು ಇಂತಿದೆ. ‘ವಾಚಕ ಮಹಾಶಯ, ನಾನು ತಿಂಗಳಿಗೊಂದು ಬಾರಿ ನಿಮ್ಮ ಭೇಟಿಗಾಗಿ ಬರಲು ನಿಶ್ಚಿಯಿಸಿರುವೆನು. ಬಂದಾಗ ನನಗೊದಗಿರುವ ದುಸ್ಥಿರಿಯ ನಿವರಣೆಯ ಉಪಾಯ ಸೂಚಿಸುವೆನು. ನಾನು ಸರ್ವ ವಿಧದಲ್ಲಿಯೂ ನಿಮ್ಮ ಅಂತಃಕರಣವಾಸಿಯಾಗಿ ನಿಮ್ಮ ಸೇವೆಮಾಡಬೇಕೆಂದು ಹೊರಟಿರುವೆನು. ಆದರೆ ನಾನು ಈಗಿನ ಮುದ್ದಾದ ಸ್ವರೂಪದಲ್ಲಿ ಪ್ರತಿ ತಿಂಗಳಲ್ಲಿಯೂ ನಿಮ್ಮ ಬಳಿಗೆ ಬಂದು ಸೇರಲು ನನ್ನ ವಸನಾದಿ ಅಲಂಕಾರಗಳಿಗೆ ಹೆಚ್ಚು ಬೆಲೆಯಾಗುವುದೆಂದು ನನ್ನನ್ನು ನೋಡಿದರೆ ನೀವು ತಿಳಿಯಬಹುದು. ಆದರೆ ಅದರಲ್ಲೊಂದು ಭಾಗವಾದ ಮೂರೇ ಮೂರು ರೂಪಾಯಿ ಖರ್ಚನ್ನು ನೀವು ಕೊಡುವುದ ಮಾತ್ರವಲ್ಲ ನಿಮ್ಮ ಮಿತ್ರರಿಂದಲೂ ಬಂಧುಗಳಿಂದಲೂ ಸಹಾಯಮಾಡಿಸಬೇಕಾಗಿ ಪ್ರಾರ್ಥಿಸುವೆನು. ಇಂತು ಬಿನ್ನವಿಸುವ ಶ್ರೀರಂಗಭೂಮಿ

ಮೊದಲ ಸಂಚಿಕೆ ೨೪ ಪುಟಗಳು. ಮುಂದೆಯೂ ರಂಗಭೂಮಿ ಅದಕ್ಕೆ ಮಾತ್ರವೇ ತನ್ನ ಆಸಕ್ತಿಯನ್ನು ಸೀಮಿತಗೊಳಿಸಿಕೊಳ್ಳದೇ ಎಲ್ಲ ಬಗೆಯ ಕಲಾ ಪ್ರಕಾರಗಳಿಗೆ ಸ್ಥಳ ನೀಡುತ್ತಿತ್ತು. ಒಂದು ದಶಕಕ್ಕೂ ಮೀರಿ ಈ ಪತ್ರಿಕೆ ಯಶಸ್ವಿಯಾಗಿ ಪ್ರಸರಣಗೊಂಡಿತೆಂದು ಡಾ. ಎಚ್. ಎ. ಪಾರ್ಶ್ವನಾಥ್ ನುಡಿಯುತ್ತಾರೆ. ಆದರೆ ವಾಸ್ತವಾಗಿ ಡಿ. ಕೆ. ಭಾರದ್ವಾಜರು ಏಕಾಂಗಿಯಾಗಿ ಈ ಪತ್ರಿಕೆ ನಡೆಸಿದ್ದು ೧೯೨೫-೨೬ರಲ್ಲಿ. ಅಂದರೆ ಒಂದು ವರ್ಷ ಮಾತ್ರ. ನಂತರ ಅಮೆಚೂರ್‍ ಡ್ರಾಮಾ ಅಸೋಸಿಯೇಶನ್‌ನವರ ಪ್ರಯತ್ನದಿಂದ ೧೯೩೨ರಿಂದ ೧೯೩೪ರವರೆಗೆ ನಡೆಯಿತು. ಅಂದರೆ ಒಟ್ಟೂ ‘ರಂಗಭೂಮಿ’ ಹತ್ತು ವರ್ಷಗಳ ಜೀವಿತಾವಧಿಯಿದ್ದರೂ ಸತತವಾಗಿ ಅದ ಹೊರಬಂದಿದ್ದು ಎರಡು-ಮೂರು ವರ್ಷ ಮಾತ್ರ. ಆದರೆ ‘ರಂಗಭೂಮಿ’ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ದಾರಿ ತುಳಿಯುವ ಮೂಲಕ ಎಂದೆಂದಿಗೂ ಮಾದರಿಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಅವರಿಗೆ ಕನ್ನಡದಲ್ಲಿ ಕಲಾ ಪ್ರಕಾರಕ್ಕೆ, ಮುಖ್ಯವಾಗಿ ನಾಟಕ ಕಲೆಗೆ ಮೀಸಲಾಗಿ ಪತ್ರಿಕೆಯೇ ಬಂದುದಿಲ್ಲ.‘ರಂಗಭೂಮಿ’ಯಲ್ಲಿ ಪ್ರಕಟಗೊಂಡ ಲೇಖನಗಳ ಮೇಲೆ ಕಣ್ಣಾಡಿಸಿದರೂ ಅವುಗಳ ಮಹತ್ತ್ವವನ್ನು ತಿಳಿಯಬಹುದು. ೧೯೨೫ರ ಅಕ್ಟೋಬರ್‍ -ನವೆಂಬರ್‍ -ಡಿಸೆಂಬರ್‍ ಸಂಚಿಕೆಗಳಲ್ಲಿ ಶಾಂತಕವಿಗಳ ನಾಟಕ ಪ್ರೇಮದ ಕುರಿತು ಹುಯಿಲಗೋಳ ನಾರಾಯಣರಾಯರ ಲೇಖನವೂ, ಕೆರೋಡಿ ಸುಬ್ಬರಾಯ ಮತ್ತು ಎಂ. ಜಿ. ವೆಂಕಟೇಶಯ್ಯನವರ ಕನ್ನಡ ರಂಗಭೂಮಿ ಇತಿಹಾಸ ಲೇಖನಗಳೂ ಪ್ರಕಟಗೊಂಡಿವೆ. ಆ ಕಾಲದ ರಂಗನಟರಿಗೆ ಹಾಗೂ ರಂಗಭೂಮಿಯ ಸಂಬಂಧ ಇಟ್ಟುಕೊಂಡವರಿಗೆಲ್ಲ ರಂಗಭೂಮಿ ಪತ್ರಿಕೆ ಪ್ರಚಾರದಲ್ಲಿತ್ತು. ಆರ್ಥಿಕವಾಗಿ ಇದು ಯಶಸ್ವಿಯಾಗದಿದ್ದರೂ ದ. ಕೃ. ಭಾರದ್ವಾಜರ ಆಸಕ್ತಿಯ ಹರಹುಗಳನ್ನು ಗಮನಿಸಿದರೆ ರಂಗಭೂಮಿಗಾಗಿ ಅವರ ಕೊಡುಗೆ ಮಹತ್ತ್ವದ್ದೆನಿಸುತ್ತದೆ. ೧೯೨೬ರಲ್ಲೇ ‘ಮೈಸೂರು ರಂಗಭೂಮಿ’ ಪತ್ರಿಕೆಯೊಂದು ಇದ್ದುದಾಗಿ ಕಂಡು ಬರುತ್ತದೆ. ಆದರೆ ಬೇರೆಲ್ಲೂ ಇದು ದಾಖಲಾಗಿಲ್ಲ. ಯಾರು ಸಂಪಾದಕರಾಗಿದ್ದರು ಎಂಬುದೂ ತಿಳಿದಿಲ್ಲ. ಭಾರದ್ವಾಜರ ರಂಗಭೂಮಿ (೧೯೨೫)ಯಿಂದ ಪ್ರೇರಿತರಾಗಿ ರಂಗಾಸಕ್ತರು ಯಾರೋ ಈ ಪತ್ರಿಕೆಯ ಪ್ರಯತ್ನ ಮಾಡಿರಬಹುದೆಂದು ನಂಬಬಹುದು.ಕನ್ನಡ ರಂಗಭೂಮಿಯಲ್ಲಿ ಬಹುಕಾಲ ನಿಂತ ರಂಗಪತ್ತಿಕೆಗಳು ಕಡಿಮಾಯದರೂ ಅಲ್ಲಲ್ಲಿ ಆಗೀಗ ಬಂದು ಹೋದ ರಂಗ ಪತ್ರಿಕೆಗಳ ಪಟ್ಟಿ ದೀರ್ಘವಾಗಿಯೇ ಇದೆ. ಬಳ್ಳಾರಿಯ ಕನ್ನಡ ನಾಟಕ ಕಲಾ ಪರಿಷ್ಯತ್ತಿನ ಕಲಾ (೧೯೩೦) ಅಂಥ ಒಂದು ಪತ್ರಿಕೆ. ಬಳ್ಳಾರಿಯಿಂದ ಕನ್ನಡ ನಾಟಕ ‘ಕಲಾ’ ಪರಿಷದ್ ಎಂಬ ಸಂಸ್ಥೆಯ ಆಶ್ರಯದಲ್ಲಿ ‘ಕಲಾ’ ಎಂಬ ಅಭಿದಾನವನ್ನು ಹೊತ್ತು ಮಾಸಪತ್ರಿಕೆಯೊಂದು ಹೊರಬಂದ ಬಗ್ಗೆ ಡಾ. ಎಚ್. ವಿ. ಪಾರ್ಶ್ವನಾಥ್ ‘ರಂಗಸಂಗ’ ಪುಸ್ತಕದಲ್ಲಿ ಬರೆಯುತ್ತಾರೆ. ಇದೇ ಹೊತ್ತಿಗೆ ಬೆಂಗಳೂರಿನಿಂದಲೂ ಕಲಾ ಹೆಸರಿನ ಪತ್ರಿಕೆ ‘ಕಲಾ ಮಂದಿರಂ’ ಅವರಿಂದ ಪ್ರಕಾಶನಗೊಂಡಿತು.‘ಕಲಾ’ ಕನ್ನಡದಲ್ಲಿ ಬಂದ ಕಲಾ ಪತ್ರಿಕೆಗಳ ಪೈಕಿ ಗುಣಮಟ್ಟದ ದೃಷ್ಟಿಯಿಂದ ಹಾಗೂ ಚಾರಿತ್ರಿಕವಾಗಿ ಮಹತ್ತ್ವದ ಸ್ಥಾನಗಳಿದ್ದು ಕಲಾ ಮಂದಿರಂನ ಅ. ನ. ಸುಬ್ಬರಾಯರು ಪ್ರಕಟಿಸಿದ ‘ಕಲಾ’ ಪತ್ರಿಕೆ. ಲಲಿತಕಲೆಗಳಿಗೆ ಮೀಸಲಾಗಿದ್ದ ಈ ಮಾಸಪತ್ರಿಕೆ ೧೯೩೦ರ ಮಾರ್ಚ್ ತಿಂಗಳಲ್ಲಿ ಆರಂಭವಾಗಿ ನಡುನಡುವೆ ನಿಯತವಾಗಿ ಪ್ರಕಟಗೊಳ್ಳದಿದ್ದರೂ ಒಟ್ಟೂ ೨೬ ವರ್ಷ ಬದುಕಿ ದಾಖಲೆ ಮಾಡಿದೆ. ಕಲಾ ಪತ್ರಿಕೆಯ ಮೊದಲಸಂಚಿಕೆಯಲ್ಲಿ ‘ಕಲೆಯ ಖನಿಯಂತಿದ್ದ ಕರ್ನಾಟಕದಲ್ಲಿ ಕಲೆಗಳು ಗಳಿತಾವಸ್ಥೆಯಲ್ಲಿದ್ದು ತಕ್ಕ ವ್ಯವಸಾಯವಿಲ್ಲದೆ ಸೊರಗುತ್ತಿವೆ. ಜನಸಾಮಾನ್ಯರಲ್ಲಿ ಕಲಾಭಿಮಾನವೂ ಉದ್ಯೋಗತತ್ಪರತೆಯೂ ಅಳಿಸಿಹೋಗಿರುವುದು. ಇಂಥ ಪರಿಸ್ಥಿತಿಯಿಂದ ಪಾರಾಗಿ ಕರ್ನಾಟಕದ ಕೀರ್ತಿಯನ್ನುಳಿಸಲು ವಿದ್ಯಾವಂತರೂ ಕಲಾಭಿಮಾನಿಗಳೂ ನಡೆಸಬೇಕಾದ ಕಾರ್ಯಗಳು ಅನೇಕವಿದೆ ಎಂಬುದನ್ನು ಮನಗಂಡು ಈ ಕ್ಷೇತ್ರದಲ್ಲಿ ಅಳಿಲು ಭಕ್ತಿ ಮಳಲು ಸೇವೆಮಾಡಲು ಈ ಪತ್ರಿಕೆಯನ್ನು ಸ್ಥಾಪಿಸುತ್ತಿದ್ದೇವೆ’ ಎಂಬುದಾಗಿ ಸಂಪಾದಕ ಅ. ನ. ಸುಬ್ಬರಾಯರು ನುಡಿದ್ದಾರೆ. ಪತ್ರಿಕೆಯನ್ನು ವಿದ್ಯಾ, ಲಲಿತಕಲೆ, ರಂಗಭೂಮಿ ಮತ್ತು ಕುಶಲ ವಿದ್ಯೆಗಳ ಮಾಸಪತ್ರಿಕೆ ಎಂದು ಕರೆಯಲಾಗಿತ್ತು. ಮೂಲತಃ ಅ. ನ. ಸುಬ್ಬರಾಯರು ಕಲಾವಿದರಾದ್ದರಿಂದ ಪತ್ರಿಕೆಯ ಒಲವು ಚಿತ್ರಕಲೆಯ ಕಡೆಗಿತ್ತು. ಆ ಕಾಲದ ಮಹಾನ್ ಲೇಖಕರೆಲ್ಲ ಕಲಾ ಪತ್ರಿಕೆಯ ಲೇಖಕರ ಬಳಗಕ್ಕೆ ಸೇರಿದವರಾಗಿದ್ದರು. ‘ಅ. ನ. ಸುಬ್ಬರಾಯರು ಭಾರತೀಯ ಕಲೆಯ ವಿವಿಧ ಸಂಪ್ರದಾಯಗಳನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ಕಲಾ ಎಂಬ ಮಾಸಪತ್ರಿಕೆ ಹೊರಡಿಸಿದರು. ೧೯೩೦ರಲ್ಲಿ ಆರಂಭವಾದ ಈ ಪತ್ರಿಕೆ ಸುಮಾರು ೨೬ ವರ್ಷ ನಡೆಯಿತು’ ಎಂದು ಡಾ. ವಿಜಯಾ ನುಡಿಯುತ್ತಾರೆ.ಬಿ. ವಿ. ಕೃಷ್ಣಮೂರ್ತಿಯವರ ಸಂಪಾದಕತ್ವದಲ್ಲಿ ಕಲಾನಿವೇದನ ಎಂಬ ಪತ್ರಿಕೆ ೧೯೨೯ರಲ್ಲಿ ಪ್ರಕಟಗೊಂಡಿತು. ಆರ್‍. ಜಿ. ಶೆಣೈಯವರ ಸಂಪಾದಕತ್ವದಲ್ಲಿ ‘ಕಲಾ ಚಂದ್ರ’ ಎಂಬ ವಾರಪತ್ರಿಕೆ ಕಾರ್ಕಳದಿಂದ ೧೯೩೩ರಲ್ಲಿ ಪ್ರಕಟಗೊಂಡು. ಎರಡು ವರ್ಷ ಅಂದರೆ ೧೯೩೫ ರವರೆಗೆ ಪ್ರಕಟಣೆಯಲ್ಲಿದ್ದುದಾಗಿ ತಿಳಿದುಬರುತ್ತದೆ. ೧೯೪೭ರಲ್ಲಿ ಮಂಗಳೂರಿನಿಂದ ಎಂ. ಎಸ್. ಶೆಟ್ಟಿಯವರ ಸಂಪಾದಕತ್ವದಲ್ಲಿ ‘ಕಲಾವಿದ’ ಎಂಬ ಮಾಸಪತ್ರಿಕೆ ಪ್ರಕಟಗೊಂಡಿತು. ಈ ಮೇಲಿನ ಮೂರು ಪತ್ರಿಕೆಗಳು ‘ಕಲಾ’ ಎಂಬ ಅಭಿದಾನವನ್ನು ಬಳಸಿಕೊಂಡಿದ್ದರೂ ವಾಸ್ತವವಾಗಿ ಕಲೆಗೆ ಮೀಸಲಾದ ಪತ್ರಿಕೆಗಳೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಕರ್ನಾಟಕ ರಾಜ್ಯ ಗೆಜೆಟಿಯರಿನಲ್ಲಿ ಈ ಪತ್ರಿಕೆಗಳ ದಾಖಲೆ ಸಿಕ್ಕುವುದು ಬಿಟ್ಟರೆ ಹೆಚ್ಚಿನ ವಿಷಯಗಳು ದೊರೆಯುತ್ತಿಲ್ಲ.ತಮಾಷ್ ‘ತಮಾಷಾ’ ಮರಾಠಿಯಲ್ಲಿ ಜನಪ್ರಿಯ ನಾಟ್ಯರೂಪ. ಮರಾಠಿಯ ರಂಗಭೂಮಿಯ ಹಾಗೆ ತಮಾಷ್ ರಂಗಭೂಮಿಯೂ ಪ್ರಸಿದ್ಧವಾಗಿದೆ.‘ತಮಾಷ್’ ಎಂಬ ಹೆಸರು ಹೊತ್ತ ಮಾಸ ಪತ್ರಿಕೆಯೊಂದು ಕನ್ನಡದಲ್ಲಿ ೧೯೪೨ರಲ್ಲಿ ಪ್ರಕಟಗೊಂಡು ಒಂದು ದಶಕಕ್ಕೂ ಹೆಚ್ಚುಕಾಲ ನಡೆದು ೧೯೫೩ರಲ್ಲಿ ನಿಂತುಹೋಗಿದ್ದು ದಾಖಲಾಗಬೇಕು. ‘ತಮಾಷ್’ ಹಾಸ್ಯ ಪತ್ರಿಕೆಯಲ್ಲ. ಅಚ್ಚ ಕಲಾ ಪತ್ರಿಕೆ. (ಲಲಿತ ಕಲೆಗೆ) ರಂಗಭೂಮಿಗೆ ಮೀಸಲಾದ ಏಕೈಕ ಮಾಸಪತ್ರಕೆಯೆಂದು ತನ್ನನ್ನು ಕರೆದುಕೊಂಡಿತ್ತು. ‘ತಮಾಷ್’ ಪತ್ರಿಕೆಯ ಸ್ಥಾಪಕರು ಹಾಗೂ ಸಂಪಾದಕರು ಎ. ಎಸ್. ಮಾಧವರಾಯರು. ಅವರು ವೃತ್ತಿರಂಗಭೂಮಿಯ ಹಿರಿಯ ನಟರು. ಹಾಸ್ಯ ನಟರಾದ ಮಹಮದ್ ಪೀರರ ಜೊತೆ ಪಾಲ್ಗೊಳ್ಳುತ್ತಿದ್ದ ಮಾಧವರಾಯರು ಸದಭಿರುಚಿಯ ಹಾಸ್ಯ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.ವೃತ್ತಿ ರಂಗಭೂಮಿಗೆ ಮೀಸಲಾಗಿಯೇ ಮಾಧವರಾಯರು ‘ತಮಾಷ್’ ಪತ್ರಿಕೆಯನ್ನು ೧೯೪೨ರ ಏಪ್ರಿಲ್‌ನಲ್ಲಿ ಹೊರತಂದರು. ಆಗ ಅದು ವಾರಪತ್ರಿಕೆಯಾಗಿದ್ದಿರಬೇಕು. ಆಗಿನ ಪತ್ರಿಕೆಯ ಬಗ್ಗೆ ಹೆಚ್ಚಿನ ವಿವರಗಳು ಅಲಭ್ಯ. ಮಾಧವರಾಯರು ಔಷಧ ಕಂಪನಿಯ ಪ್ರತಿನಿಧಿಯಾಗಿ ಬೆಂಗಳೂರಿಗೆ ಹೋದ ಮೇಲೆ ಪತ್ರಿಕೆಯೂ ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆಗೊಂಡು ಮಾಧವರಾಯರ ತಮ್ಮ ಅನಂತಪದ್ಮನಾಭರಿಂದ ನಡೆಸಲ್ಪಡುತ್ತಿತ್ತು. ೧೯೫೩ರವರೆಗೆ ಹೀಗೇ ನಡೆದುಕೊಂಡು ಬಂತು.ನಂತರ ಮಾಧವರಾಯರು ಗದಗ ಸೇರಿದ ಮೇಲೆ ೧೯೬೧ರಲ್ಲಿ ‘ತಮಾಷ್’ ಮರುಹುಟ್ಟು ಪಡೆಯಿತು. ಈಗ ಅದು ಮಾಸಪತ್ರಿಕೆ. ೧/೪ ಕ್ರೌನ್ ಆಕಾರದ ೩೦/೩೬ ಪುಟಗಳ ಸಂಚಿಕೆ. ‘ಪ್ರತಿ ಸಂಚಿಕೆಯಲ್ಲೂ ಸಂಪಾದಕೀಯ, ಪ್ರಶ್ನೋತ್ತರ, ತಿಪ್ಪ ನೋಡಿದ ನಾಟಕ, ಬೆಪ್ಪನೂ ನಾಟಕ ನೋಡಿದ ಹಾಗೂ ಮಾಸ ಭವಿಷ್ಯಗಳು ಸ್ಥಿರಶೀರ್ಷಕೆಗಳಾಗಿದ್ದವು. ಶಿಲ್ಪ ಸಂಗೀತ, ನಾಣ್ಯದ ಬಗ್ಗೆ ಲೇಖನಗಳು ವಿಮರ್ಶೆಗಳು ಪ್ರಕಟವಾಗಿವೆ. ಅಂದಿನ ವೃತ್ತಿ ನಾಟಕಗಳು ಕಂಪನಿಗಳು ಎಲ್ಲಿ ಮೊಕ್ಕಾಂ ಮಾಡಿವೆ ? ಪ್ರದರ್ಶಿಸುತ್ತಿರುವ ನಾಟಕಗಳು ಯಾವುವು ? ಎಂಬ ಸುದ್ದಿಯೂ ಇರುತ್ತಿತ್ತು. ತಿಪ್ಪ ನೋಡಿದ ನಾಟಕ ಹಾಗೂ ಬೆಪ್ಪನೂ ನಾಟಕ ನೋಡಿದ ಎಂಬ ಶೀರ್ಷಿಕೆಗಳ ಬರಹಗಳಲ್ಲಿ ಅಂದಿನ ನಾಟಕ ವಸ್ತು, ಪ್ರಯೋಗಾಂಶಗಳ ಲೋಪ ದೋಷಗಳ ವಿಡಂಬನೆಯನ್ನು ಕಾಣಬಹುದಾಗಿದೆ.ಮಾಧವರಾಯರಿಗೆ ಜೀವನದ ಹಲವು ಕ್ಷೇತ್ರಗಳ ವ್ಯಕ್ತಿ, ಸಂಸ್ಥೆಗಳ ಸಂಪರ್ಕವಿತ್ತು. ಹೀಗಾಗಿ ಪುಸ್ತಕ ಮಾರಾಟಗಾರರು, ಚಲನಚಿತ್ರ ಸಂಸ್ಥೆಗಳವರು, ನಾಟಕ ಸೀನರಿಗಳ ಮಾಲೀಕರು ಮುಂತಾದವರು ‘ತಮಾಷ್’ ಪತ್ರಿಕೆಗೆ ಜಾಹೀರಾತು ನೀಡಿ ಪೋಷಿಸುತ್ತಿದ್ದರು. ಹೀಗಾಗಿ ಪತ್ರಿಕೆ ಲೇಖನ ಹಾಗೂ ಜಾಹೀರಾತುಗಳಿಂದ ಮೈದುಂಬಿ ಪ್ರಕಟಗೊಳ್ಳುತ್ತಿತ್ತು.ಎರಡನೇ ಬಾರಿ ‘ತಮಾಷ್’ ಎಷ್ಟು ವರ್ಷ ಮುಂದುವರೆಯಿತೋ ಸ್ಪಷ್ಟವಾಗಿಲ್ಲ. ಕನಿಷ್ಟ ಎರಡು ಮೂರು ವರ್ಷ ಪ್ರಕಟಗೊಂಡಂತಿದೆ. ಪತ್ರಿಕೆಯಿಂದಾಗಿ ಮಾಧವರಾಯರು ‘ತಮಾಷ್ ಮಾಧವರಾಯರು’ ಎಂದೇ ಕನ್ನಡ ರಂಗಭೂಮಿಯಲ್ಲಿ ಹೆಸರು ಉಳಿಸಿಕೊಂಡರು.ಸಂಗೀತಪತ್ರಿಕೆ : ‘ಗಾನವಾಹಿನಿ’ ಕಲೆಯಲ್ಲಿ ಸಂಗೀತಕ್ಕೆ ಮಹತ್ತ್ವದ ಸ್ಥಾನ. ಮನಸ್ಸನ್ನು ಮುದಗೊಳಿಸಲು ಸಂಗೀತ ಬೇಕು. ಸಂಗೀತ ಶಬ್ದವೇ ಸೂಚಿಸುವಂತೆ ಮಧುರವಾದ ಹಾಡು. ಯಾವುದೇ ಭಾಷೆಯ ಹಂಗಿಲ್ಲದೇ ಋಣವಿಲ್ಲದೇ ಸಂಗೀತ ಹೃದಯಗಳನ್ನು ಮುಟ್ಟಬಲ್ಲದು. ಅದಕ್ಕೆ ಸಂಗೀತವನ್ನುuniversal language ಎನ್ನಲಾಗುತ್ತದೆ. ಸಂಗೀತ ಮುಖ್ಯವಾಗಿ ಭಾವನೆಗಳ ಸಂವಾಹಕ. ಮಧ್ಯಯುಗದಲ್ಲಿ ಸಂಗೀತವು ಕಂಠಪಾಠದ ಹಾಡುಗಳ ರೂಪದಲ್ಲಿತ್ತು. ಸಂಗೀತಗಾರರು ರೋಮನ್ ಚರ್ಚಿನ ಹಾಡುಗಳನ್ನು ಗುಣಗುಣಿಸುತ್ತಾ ಯುತೋಪನ್ನು ಸುತ್ತುತ್ತಿದ್ದರು. ಮೊದಮೊದಲು ಸಂಗೀತಕ್ಕೆ ತಾಳ ಮಾತ್ರ ಇತ್ತು. ಕಾಲಾನುಕ್ರಮದಲ್ಲಿ ತಾಳದ ಜೊತೆ ಲಯ ಸೇರಿಕೊಂಡಿತು. ಮಾಧುರ್ಯ ಇನ್ನೂ ಮುಂದಕ್ಕೆ ಮಿಳಿತಗೊಂಡಿತು.ಸಂಗೀತಕ್ಕೆ ಭಾಷೆಗಳ ಹಂಗಿಲ್ಲದೇ ಭಾವನೆಗಳನ್ನು ಉದ್ದೀಪನಗೊಳಿಸುವ ಶಕ್ತಿ ಇದೆ. ಬಹುಸಂಖ್ಯಾತ ಭಾರತೀಯರಿಗೆ ಜನಗಣಮನ ಹಾಡಿನ ಅರ್ಥ ಗೊತ್ತಿರದಿದ್ದರೂ ಅದು ರಾಷ್ಟ್ರಗೀತೆಯೆಂಬ ತಿಳುವಳಿಕೆ ಇರುವುದರಿಂದ ಅದನ್ನು ಹಾಡಿದಾಗ ರಾಷ್ಟ್ರಪ್ರೇಮ ಜಾಗೃತಗೊಳ್ಳುತ್ತದೆ.ಸಂಗೀತವು ರಚನಕಾರರು, ನಿರ್ವಾಹಕರು ಮತ್ತು ಕೇಳುಗರು ಈ ಮೂವರನ್ನು ಒಳಗೊಳ್ಳುವ ಸಂವಹನ ಮಾಧ್ಯಮ. ಸಂಗೀತ ಸಂವಹನಕ್ಕೆ ನಾಲ್ಕು ದಾರಿಗಳಿವೆ. ೧. ಶಬ್ಧ, ೨. ಸಾಹಿತ್ಯ, ೩. ರೂಪ, ೪. ನೃತ್ಯ. ಗದ್ದಲದ ವಿರುದ್ಧ ಪದವೆ ಸಂಗೀತ ಎಂಬ ಹೆಲ್ಮ್ ಹೋಲ್ಟ್ಜ್ ಎಂಬಾತ ವ್ಯಾಖ್ಯಾನಿಸಿದ್ದಾನೆ. ಸಂಗೀತವು ಆಂತರಿಕ ಮನಸಿನ ಅಭಿವ್ಯಕ್ತಿಯಾಗಿದ್ದು ರಚನೆಯ ತಂತ್ರದ ಮೂಲಕ ಭಾವನೆಗಳನ್ನು ಸ್ಫುರಿಸುತ್ತದೆ. ಸಂಗೀತ ಹೊರ ಗೆಡಹುವ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶ್ರೋತೃ ಇದೇ ಭಾವನೆಗಳಿಗೆ ಸ್ಪಂದಿಸುವವನಾಗಿರಬೇಕು.ಮೂಲತಃ ಹಾಡುವ, ನುಡಿಸುವ, ನರ್ತಿಸುವ ಮೂಲಕ ಸಂವಹನ ಮಾಡುವ ಮಾಧ್ಯಮವಾದ ಸಂಗೀತಕ್ಕೂ ಪತ್ರಿಕೆಗಳ ನಂಟಿದೆ. ಸಂಗೀತ ಕ್ಷೇತ್ರ ವಿಸ್ತಾರವಾಗಿದ್ದು ರಚನೆಕಾರರು, ಸಾಧಕರು ಹಾಗೂ ಶ್ರೋತೃಗಳನ್ನೊಳಗೊಂಡ ಲೋಕ ಬಹು ದೊಡ್ಡದು. ಸಂಗೀತಕ್ಕೆ ಭಾಷೆಯ ಭೇದ ಇಲ್ಲದಿದ್ದರೂ ಸಂಗೀತ ತಲುಪುವ ಶ್ರೋತೃಗಡಣದಲ್ಲಿ ಭಾಷಾ ಪ್ರಭೇದಗಳಿರುವುದರಿಂದ ಪ್ರತಿಯೊಂದು ಭಾಷೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕಗಳೂ ಪತ್ರಕೆಗಳೂ ಪ್ರಕಟಗೊಂಡಿವೆ.ಲಲಿತಕಲೆಗಳ ಅವಿಭಾಜ್ಯ ಅಂಗವಾದ ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಾಹತ್ಯ ಸಮೃದ್ಧವಾಗಿದೆ. ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನೀ ಸಂಗೀತಗಳೆರಡೂ ಪ್ರಚಲಿತವೂ ಜನಪ್ರಿಯವೂ ಆಗಿರುವ ಕರ್ನಾಟಕದಲ್ಲಿ ಈ ಪ್ರಕಾರಗಳ ಮೂಲ ಪಾಠಗಳೂ, ಮಿಮಾಂಸೆಗಳೂ, ಹಿರಿಯ ಕಲಾವಿದರುಗಳ ಜೀವನ ಚಿತ್ರಣಗಳೂ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ದಿವಂಗತರಾದ ಮಲ್ಲಿಕಾರ್ಜುನ ಮನ್ಸೂರ, ಬಸವರಾಜರಾಜಗುರು, ಹಾಗೂ ಹಿಂದೂಸ್ಥಾನೀ ಸಂಗೀತದ ಇಂದಿನ ಹಿರಿಯ ತಾರೆಗಳಾದ ಭೀಮಸೇನ್ ಜೋಷಿ, ಗಂಗೂಬಾಯಿ ಹಾನಗಲ್, ಮಾಧವಗುಡಿ ಇವರೆಲ್ಲರ ಪ್ರಭಾವದಿಂದ ಕನ್ನಡದಲ್ಲಿ ಸಂಗೀತದ ವಾತಾವರಣವಿದೆ. ಸಂಗೀತ ಶಾಲೆಗಳಿವೆ. ಶ್ರದ್ಧಾವಂತ ಶಿಕ್ಷಕರೂ ವಿದ್ಯಾರ್ಥಿಗಳೂ ಇದ್ದಾರೆ. ಕರ್ನಾಟಕವು ಸಂಗೀತ ಕಲೆಯ ಸಮೃದ್ಧ ನೆಲವೆಂದೇ ಖ್ಯಾತವಾಗಿದೆ. ಆದರೆ ಸಂಗೀತ ಪತ್ರಿಕೆಗಳ ದೃಷ್ಟಿಯಿಂದ ಕಳೆದ ೧೫೦ ವರ್ಷಗಳ ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯೇನೂ ಆಗಲಿಲ್ಲ. ೧೯೫೦ರಲ್ಲಿ ಮಂಡ್ಯದಿಂದ ಬಂದ ಗಾನ ವಾಹಿನಿ, ೧೯೫೪ರಲ್ಲಿ ಬೆಂಗಳೂರಿನಿಂದ ಬಂದ ‘ಗಾಯನ ಗಂಗಾ’ ಪತ್ರಿಕೆ ಇಂದಿಗೂ ಸಂಗೀತ ಕಲೆಗೆ ಮೀಸಲಾಗಿ ಬಂದ ಗಮನಾರ್ಹ ಪತ್ರಿಕೆಗಳು. ‘ಗಾನವಾಹಿನಿ’ ಪತ್ರಿಕೆ, ‘ಗಾಯನ ಸಾಮ್ರಾಜ್ಯ’ ಎಂಬ ಮಾಸಿಕವೊಂದು ಬೆಂಗಳೂರಿನಿಂದಲೂ ಬಂದುದಾಗಿ ರಾಜ್ಯ ಗೆಜೆಟಿಯರಿನಲ್ಲಿ ಹೇಳಲಾಗಿದೆ.ಗಾನವಾಹಿನಿ ‘ಗಾಯನ ಗಂಗಾ’ ಬಹುಕಾಲ ಬಾಳಿ ಬದುಕಿದ ಏಕೈಕ ಸಂಗೀತ ಪತ್ರಿಕೆಯಾದರೂ ‘ಗಾಯನ ಗಂಗಾ’ ಸಂಗೀತಕ್ಕೆ ಮೀಸಲಾಗಿ ಕನ್ನಡದ ಮೊದಲ ಪ್ರಯತ್ನವೇನೂ ಅಲ್ಲ. ‘ಗಾನವಾಹಿನಿ’ ಎಂಬ ಹೆಸರಿನ ಪತ್ರಿಕೆಯೊಂದು ‘ಗಾಯನ ಗಂಗಾ’ಕ್ಕಿಂತ ನಾಲ್ಕು ವರ್ಷ ಮೊದಲು ಅಂದರೆ ೧೯೫೦ರಲ್ಲಿ ಮಂಡ್ಯದಿಂದ ಪ್ರಕಟವಾಗಿದೆ. ಇದು ಮಾಸಪತ್ರಿಕೆಯಾಗಿತ್ತು. ಕೆ. ಎಸ್. ಚಂದ್ರಶೇಖರಯ್ಯನವರು ಈ ಪತ್ರಿಕೆಯ ಸಂಪಾದಕರು. ಚಂದ್ರಶೇಖರಯ್ಯನವರು ಮಂಡ್ಯದ ಶ್ರೀ ಸದ್ಗುರು ಸಂಗೀತ ಪಾಠಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತ್ರಿಕೆ ೧/೮ ಡೆಮಿ ಆಕಾರದಲ್ಲಿದ್ದು ದ್ವೈಮಾಸಿಕವಾಗಿತ್ತು. ೩೨ ಪುಟಗಳಿರುತ್ತಿದ್ದವು. ಜುಲೈ - ಆಗಸ್ಟ್ ೧೯೫೬ರ ಸಂಚಿಕೆಯಲ್ಲಿ ಜಾಹೀರಾತು ದರಗಳನ್ನು ಘೋಷಿಸಿದ್ದು ಅದು ಇಂಗ್ಲೀಷಿನಲ್ಲಿದೆ.‘ಗಾನವಾಹಿನಿ’ ಹೆಸರಿನ ಕೆಳಗೆ ‘ತಾಳನೋಹರಿ ! ಕೇಳನೋ ! ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ’ ಎಂಬ ಪುರಂದರದಾಸರ ವಾಣಿಯನ್ನು ಪ್ರತಿ ಸಾರಿಯೂ ಅಚ್ಚುಮಾಡಲಾಗುತ್ತಿತ್ತು. ವಾರ್ಷಿಕ ಚಂದಾ ೧೯೫೬ರಲ್ಲಿ ಐದು ರೂಪಾಯಿ ಇದ್ದು, ಬಿಡಿ ಪತ್ರಿಕೆಗೆ ಆರು ಆಣೆ ಎಂದು ಸಾರಲಾಗಿದೆ. ಡಿಸೆಂಬರ್‍ ೧೯೫೬ಕ್ಕೆ ಧನ್ವಂತರಿ ಜಯಂತಿ ಉತ್ಸವದ ನೆನಪಿನ ವಿಶೇಷ ಸಂಚಿಕೆ ಹೊರತರಲಾಗಿದ್ದು ನಾಲ್ಕು ವರ್ಣಗಳ ಧನ್ವಂತರೀ ದೇವಿಯ ವಿಶೇಷ ವರ್ಣಚಿತ್ರವನ್ನು ಆ ತಿಂಗಳು ಪ್ರಕಟಿಸಲಾಗಿದೆ. ಗಾನವಾಹಿನಿಯ ವಿಶೇಷಾಂಕ ಹೊರತರುವ ಸಂದರ್ಭದಲ್ಲಿ (ಡಿಸೆಂಬರ್‍ ೧೯೫೬) ಸಂಗೀತ ಕಲೆಯ ಕುರಿತಾಗಿ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯನ್ನು ನಡೆಸಿದ ಹೆಗ್ಗಳಿಕೆಯೂ ‘ಗಾನವಾಹಿನಿ’ಗೆ ಇದೆ.ಹತ್ತು ವರ್ಷ ನಿರಂತರವಾಗಿ ನಡೆದ ಗಾನವಾಹಿನಿ ನಂತರ ನಿಂತಿತು. ತನ್ನೆಲ್ಲಾ ಪ್ರಯತ್ನಗಳ ನಡುವೆಯೂ ‘ಗಾನವಾಹಿನಿ’ ಸ್ವಯಂ ಬಲದಿಂದ ನಡೆಯದಿರುವುದರ ಬಗ್ಗೆ ಚಂದ್ರಶೇಖರಯ್ಯನವರಿಗೆ ಅತೀವ ವಿಷಾದವಿತ್ತು. ಅದನ್ನು ಅವರು ಪತ್ರಿಕೆಗೆ ಐದು ವರ್ಷವಾಗಿದ್ದಾಗಲೇ ಹೀಗೆ ತೋಡಿಕೊಂಡಿದ್ದಾರೆ:‘ಕೇವಲ ಸಾಂಸ್ಕೃತಿಕ ಜೀವನಕ್ಕೆ ಸಂಬಂಧ ಪಟ್ಟ ವಿಷಯಗಳನ್ನು ವಿಮರ್ಶಿಸಿ ಕಿವಿಗೆ ಕೇಳಿಸಿದರೂ ಕಣ್ಣಿಗೆ ಕಾಣದ ಕಲೆಯ ಬಗ್ಗೆ ಟೀಕೆ ಟಿಪ್ಪಣಿಗಳೂ, ಸುದ್ದಿ ಸಂಗ್ರಹಗಳೂ ವಿಮರ್ಶೆ ವಿವರಗಳೂ ಲೇಖನಗಳೂ ಇತ್ಯಾದಿಗಳ ಪ್ರಕಟಣೆಗಾಗಿ ಮೀಸಲಾಗಿರುವ ಗಾನವಾಹಿನಿಯು ಮಾರುಕಟ್ಟೆಯ ಮೂರುಕಾಸಿನ ಪತ್ರಿಕೆಯಂತೆ ಮಾರಾಟವಾಗುವ ಭಾಗ್ಯ ಪಡೆದಿಲ್ಲ. ಪತ್ರಿಕಾ ಪ್ರಪಂಚದ ಪರಿಪಾಟಲಿನ ಪಾಡನ್ನು ಪ್ರತ್ಯಕ್ಷವಾಗಿ ಅನುಭವಿಸಿದವರಿಗೆ ಮಾತ್ರ ಪ್ರಕಟಣೆಯ ಬವಣೇ ಅರ್ಥವಾದೀತು. ಪತ್ರಿಕಾ ಪ್ರಕಟಣೆಗೆ ಬೇಕಾದ ಮುದ್ರಣ ಸೌಕರ್ಯ, ಕಾಗದ ಇವೆರಡೂ ಪ್ರಕಾಶನ ಸಂಸಾರಕ್ಕೆ ಸೇರಿದ ಎರಡು ಆನೆಗಳು. ಈ ಆನೆಗಳಿಗೆ ಬೇಕಾದ ಆಹಾರ ಸಾಮಗ್ರಿ ಕಾಲಕಾಲಕ್ಕೆ ಒದಗಿಸವುದು ಮುಖ್ಯ ಸಮಸ್ಯೆ. ಇವೆಲ್ಲಕ್ಕೂ ಬೇಕಾದ ಹಣ ಸೌಲಭ್ಯವೊಂದಿಲ್ಲದಿದ್ದರೆ ಕಾಲು ಮುರಿದ ಕುಂಟೆತ್ತಿನಂತೆ ಎಡುವುತ್ತಾ ಬೀಳುತ್ತಾ ಕುಂಟಿಸಿಕೊಂಡು ನಡೆಯುವಂತಾಗುತ್ತದೆ.ಗಾನವಾಹಿನಿಯ ಪ್ರತಿ ತಿಂಗಳ ಒಟ್ಟು ಖರ್ಚು ಸುಮಾರು ಒಂದು ನೂರಕ್ಕೆ ಕಮ್ಮಿ ಇಲ್ಲದಂತೆ ಆಗುತ್ತದೆ. ಈ ಖರ್ಚಿನ ಅರ್ಧಭಾಗ ಮಾತ್ರ ಸರ್ಕಾರಿ ಮತ್ತು ಇತರ ಖಾಸಗಿ ಜಾಹೀರಾತಿನಿಂದಲೂ ಕೇವಲ ಹತ್ತಾರು ಮಂದಿ ಅಭಿಮಾನಶಾಲಿಗಳಾದ ಚಂದಾದಾರರಿಂದಲೂ ದೊರೆತು ಉಳಿದ ಅರ್ಧ ಖರ್ಚು ‘ಗಾನವಾಹಿನಿ’ ಸಂಪಾದಕರ ಪಾಲಿಗೆ ಬೀಳುತ್ತದೆ. ಪ್ರತಿ ತಿಂಗಳು ಸರಾಸರಿ ೩೦ ರೂಪಾಯಿಗೆ ಕಮ್ಮಿ ಇಲ್ಲದೆ ಸಂಗೀತ ಮಾಸ ಪತ್ರಿಕೆಗೆ ತಮ್ಮ ತನುಮನದ ಜೊತೆಗೆ ಧನವನ್ನೂ ಕೊಟ್ಟು ಸಂಗೀತ ಕಲಾ ಸೇವೆಯನ್ನು ಮಾಡುತ್ತಿರುವ ಕಲಾಬಿಮಾನದ ಹುಚ್ಚು ಎಲ್ಲಿಯವರೆಗೂ ಇರುತ್ತದೋ ಅವರೆಗೂ ಸಂಗೀತ ಮಾಸ ಪತ್ರಿಕೆ ನಡೆದು, ಹುಚ್ಚುಬಿಟ್ಟ ಮರುಘಳಿಗೆಯಲ್ಲಿ ‘ಗಾನವಾಹಿನಿ’ಯ ಮಂಗಳ ಹಾಡುವಂತಾಗುವುದೋ ಎಂಬ ಭೀತಿಯುಂಟಾಗಿದೆ.’ಸಂಪಾದಕ ಚಂದ್ರಶೇಖರಯ್ಯನವರ ಆತಂಕ ನಿಜವಾಗಿ ಪತ್ರಿಕೆಯು ನಿಂತಿತು. ಆದರೆ ಅವರು ಬರೆದ ಮೇಲಿನ ಸಂಪಾದಕೀಐ ಮಾತ್ರ ಈ ಮಾದರಿಯ ವಿಶೇಷಸಕ್ತಿ ಪತ್ರಿಕೆಗಳ ಸ್ಥಿತಿಗತಿ ವೃತ್ತಿಪರತೆ ಮೇಲೆ ಬರೆದ ಭಾಷ್ಯದಂತಿದೆ. ಗಾಯನ ಗಂಗಾ ‘ಕನ್ನಡ ನಾಡಿನ ಏಕೈಕ ಸಂಗೀತ ಮಾಸಪತ್ರಿಕೆ’ ಎಂಬ ಹೆಮ್ಮೆಯ ‘ಗಾಯನ ಗಂಗಾ’ ಆರಂಭವಾದುದು ಅರವಿಂದ ಸಂಗೀತ ವಿದ್ಯಾಲಯದ ವತಿಯಿಂದ ನಡೆಸಲ್ಪಡುವ ಈ ಪತ್ರಿಕೆಗೆ ಗವಾಯಿ ಪರಂಪತೆಯ ಹಿರಿಯ ಸಂಗೀತ ವಿದ್ವಾಂಸರಾದ ಪಂಡಿತ ಆರ್‍. ವಿ. ಶೇಷಾದ್ರಿ ಗವಾಯಿಗಳು ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರು.‘ಗಾಯನ ಗಂಗಾ’ ಸಂಗೀತ ಸಾಹಿತ್ಯ ಪತ್ರಿಕೆ. ಅಂದರೆ ಸಂಗೀತಕ್ಕೆ ಸಂಬಂಧಿಸಿದ ಸಾಹಿತ್ಯ ಸಾಮಗ್ರಿಗಳಿಗೆ ಈ ಪತ್ರಿಕೆಯಲ್ಲಿ ಆದ್ಯತೆ ನೀಡಿ ಪ್ರಕಟಿಸಲಾಗುತ್ತದೆ. ಕನ್ನಡ ನಾಡಿನ ಪ್ರಾಚೀನ ಹಾಗೂ ಅರ್ವಾಚೀನ ಸಂಗೀತ ವಿದ್ವಾಂಸರು ಹಾಗೂ ಹಿರಿ ಕಿರಿಯ ಕಲಾವಿದರ ಪರಿಚಯಗಳನ್ನೂ ಇದು ಒಳಗೊಂಡಿರುತ್ತದೆ. ಕನ್ನಡದಲ್ಲಿ ಸಂಗೀತ ಪತ್ರಿಕೆಯೊಂದರ ಕೊರತೆಯನ್ನು ಇದು ನೀಗಿಸಿದೆ ಎಂಬುದಾಗಿ ಮೊದಲ ಸಂಚಿಕೆಯಲ್ಲಿ ಸಂಪಾದಕ ಗವಾಯಿಯವರು ಹೇಳಿಕೊಂಡಿದ್ದರು.ಗಾಯನ ಗಂಗಾ ಸಂಗೀತದ ಅನನ್ಯ ಪತ್ರಿಕೆ ಮಾತ್ರವಲ್ಲ ಸಾಂಸ್ಕೃತಿಕ ರಂಗದಲ್ಲಿ ಅತಿ ಹೆಚ್ಚು ವರ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಪತ್ರಿಕೆ ಸದ್ದಿಲ್ಲದೇ ತನ್ನ ಪಾಡಿಗೆ ತಾನು ಕನ್ನಡದ ಸೇವೆಯನ್ನು ಗೈದಿದೆ. ೧೯೮೨ರಲ್ಲಿ ‘ಗಾಯನ ಗಂಗಾ’ ಪತ್ರಿಕೆಯ ರಜತೋತ್ಸವ ಸಂಚಿಕೆಯೂ ಹೊರಬಂದಿದೆ. ೫೪ ಪುಟಗಳ ೧/೮ ಡೆಮಿ ಆಕಾರದ ಗಾಯನ ಗಂಗಾ ಮುಖ್ಯವಾಗಿ ಬೆಂಗಳೂರಿನ ಹಾಗೂ ಸ್ಥೂಲವಾಗಿ ರಾಜ್ಯದ್ಯಂತದ ಸಂಗೀರ/ಸಾಂಸ್ಕೃತಿಕ ಮಹತ್ವದ ಸುದ್ದಿಗಳನ್ನು ಪ್ರಕಟಿಸುತ್ತದೆ. ಹಾಗಂತ ಕರ್ನಾಟಕ ಸಂಗೀತವನ್ನೇನೂ ಪತ್ರಿಕೆ ಕಡೆಗಣಿಸಿಲ್ಲ. ಹಾಗೆಯೇ ಕಲಾವಿದರ ಪರಿಚಯಗಳನ್ನೂ ಮಾಡಿಕೊಡುತ್ತದೆ ಸಂಗೀತ ಸಮ್ಮೇಳನಗಳಲ್ಲೇ ಆದರೂ ಅದರ ವರದಿ ಪ್ರಕಟಿಸುತ್ತದೆ. ೧೯೮೨ರಲ್ಲಿ ಗಾಯನ ಗಂಗಾದ ಬಿಡಿ ಪತ್ರಿಯ ಬೆಲೆ ೧.೫೦ ರೂಪಾಯಿ.ಕಲಾ ಪತ್ರಿಕೆಗಳು ಕನ್ನಡ ಜನಮಾನಸದಲ್ಲಿ ಮರೆಯಲಾಗದ ಗುರುತು ಮಾಡ ತೊಡಗಿದ್ದು ಸ್ವಾತಂತ್ಯ್ರದ ಬಳಿಕವೇ. ೧೯೫೪ ಧಾರವಾಡದ ಬಳಿಯ ಹಂಸಭಾವಿಯಿಂದ ‘ನೃತ್ಯಭಾರತ’ವೆಂಬ ನೃತ್ಯಕ್ಕೆ ಮೀಸಲಾದ ಪತ್ರಿಕೆ ಪ್ರಕಟಗೊಂಡರೆ ಅದೇ ಹೊತ್ತಿಗೆ ಧಾರವಾಡದಿಂದ ‘ನೃತ್ಯಭಾರತಿ’ ಪ್ರಕಟವಾಗಿದೆ.‘ನೃತ್ಯಭಾರತಿ’ಗೆ ನಾಟ್ಯಾಚಾರ್ಯ ಮಲ್ಲಾರಿ ಎಂ. ಕುಲಕರ್ಣಿಯವರು ಸಂಪಾದಕರಾಗಿದ್ದರು. ನೃತ್ಯಭಾರತಕ್ಕೆ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿಯವರು ಕಾರಣರು. ಈ ಪತ್ರಿಕೆಗಳ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ದೊರೆಯುತ್ತಿಲ್ಲ. ಕರ್ನಾಟಕ ರಾಜ್ಯ ಗೆಜೆಟಿಯರ್‍ ನಲ್ಲಿ ಮಾತ್ರ ಪ್ರತ್ಯೇಕವಗಿ ಈ ಪತ್ರಿಕೆಗಳ ಉಲ್ಲೇಖವಿದ್ದು ಬೇರೆಲ್ಲೂ ಈ ಪತ್ರಿಕೆಗಳ ಪ್ರಸ್ತಾಪ ದೊರೆಯುತ್ತಿಲ್ಲ.‘ಯಕ್ಷಗಾನ’ ಯಕ್ಷಗಾನವು ಕರ್ನಾಟಕದ ಜನಪ್ರಿಯ ಜನಪದ ಕಲೆ ಎನಿಸಿಕೊಂಡಿದೆ. ದೇಶವಿದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆದು ಕರ್ನಾಟಕಕ್ಕೆ ಯಕ್ಷಗಾನದಿಂದಾಗಿ ವಿಶೇಷ ಗೌರವ ದಕ್ಕಿದೆ.ಯಕ್ಷಗಾನದಲ್ಲಿ ಮೂಡಲಪಾಯ, ಪಡುವಲಪಾಯವೆಂಬುದು ಪ್ರಾದೇಶಿಕ ಯಕ್ಷಗಾನ ತಿಟ್ಟುಗಳ ವರ್ಗೀಕರಣವಾಗಿದ್ದು ಕರಾವಳಿ ಮಲೆನಾಡು ಭಾಗಗಳ ಯಕ್ಷಗಾನ ಪಡುವಲ ಪಾಯವೆನಿಸಿದೆ. ಮುಖ್ಯವಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನವು ಉದ್ಯಮವಾಗಿ ಬೆಳದು, ಕಲೆಯಾಗಿ ಉಳಿದು ಹತ್ತಾರು ತಂಡಗಳ ನೂರಾರು ಕಲಾವಿದರಿಗೆ ಜೀವನ ಮಾಧ್ಯಮವಾಗಿದೆ. ಈ ಭಾಗದ ಜನರಿಗೆ ಚಂಡೆಯ ಸಪ್ಪಳ ಕೇಳಿದರೆ ಮೈನವಿರೇಳುತ್ತದೆ. ಅಲ್ಲಿಯ ಜನಸಾಮಾನ್ಯರ ಬದುಕೂ ಯಕ್ಷಗಾನದೊಡನೆ ಹಾಸುಹೊಕ್ಕಾಗಿದೆ.ಹೀಗೆ ಯಕ್ಷಗಾನವು ಜನಮನ್ನಣೆ ಪಡೆದ ಕಲೆಯೂ ಉದ್ಯಮವೂ ಆಗಿರುವುದರಿಂದ ಯಕ್ಷಗಾನಕ್ಕೇ ಮೀಸಲಾಗಿ ಕನ್ನಡದಲ್ಲಿ ಪತ್ರಿಕೆಗಳು ಬಂದಿವೆ. ಅವುಗಳಲ್ಲೆಲ್ಲ ಹಿರಿಯ ಭಾಗವತ ಕಡತೋಕಾ ಮಂಜುನಾಥ ಭಾಗವತರ ‘ಯಕ್ಷಗಾನ’ ಪತ್ರಿಕೆ ಪ್ರಸಿದ್ಧವಾದುದು. ೧೯೫೬ರಲ್ಲಿ ಉತ್ತರ ಕನ್ನಡ ಜಿಲ್ಲೆಯ ತುಡಗುಣಿ ಎಂಬ ಹಳ್ಳಿಯಿಂದ ಸಂಪಾದಿಸಲ್ಪಟ್ಟ ಈ ಪತ್ರಿಕೆ, ಎರಡನೇ ಸಂಚಿಕೆಯಿಂದಲೇ ಕೊಂಡು ಓದುವವರ ಬರವನ್ನೂ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಒಳ್ಳೆಯ ಲೇಖನಗಳ ಕೊರತೆಯನ್ನೂ ಎದುರಿಸಿತು. ಕಷ್ಟಪಟ್ಟು ಮಂಜುನಾಥ ಭಾಗವತರು ಮೂರುವರೆ ವರ್ಷ ಪತ್ರಿಕೆಯನ್ನು ನಡೆಸಿದರು. ೧/೮ ಡೆಮಿ ಆಕಾರದ ಪತ್ರಿಕೆ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಆದ್ಯತೆ ಮೇರೆಗೆ ಪ್ರಕಟಿಸುತ್ತಿತ್ತು.ವಿಶೇಷವೆಂದರೆ ‘ಯಕ್ಷಗಾನ’ ಮಾಸಪತ್ರಿಕೆ ನಿಂತುಹೋದ ೨೦ ವರ್ಷಗಳ ಬಳಿಕ ಅದು ಮರುಹುಟ್ಟು ಪಡೆಯಿತು. ಸಾಹಿತ್ಯ ಕಲಾ ಪತ್ರಿಕೆಗಳು ಯಾವುದನ್ನೂ ಭೂತಕಾಲಕ್ಕೆ ಸೇರಿಸಲಾಗದೆಂಬುದಕ್ಕೆ ‘ಯಕ್ಷಗಾನ’ದ ಉದಾಹರಣೆ ನಿದರ್ಶನವಾಗಬಲ್ಲದು. ಇಂದು ಪ್ರಕಟಣೆಯಲ್ಲಿದೆಯೆಂದು ಭಾವಿಸಿದ ಪತ್ರಿಕೆ ಮುಂದಿನ ತಿಂಗಳು ಏಕಾ ಏಕಿ ನಿಂತುಬಿಡುವುದು, ಹತ್ತಾರು ವರ್ಷಗಳಿಂದ ಪ್ರಕಟಣೆ ನಿಲ್ಲಿಸಿದ್ದ ಪತ್ರಿಕೆ ಧುತ್ತನೇ ಪ್ರಕಟಗೊಳ್ಳವುದೂ ಸಾಧ್ಯ. ಎಪ್ಪತ್ತರ ದಶಕದಲ್ಲಿ ಮರುಹುಟ್ಟು ಪಡೆದ ‘ಯಕ್ಷಗಾನ’ ಪತ್ರಿಕೆಗೆ ಯಲ್ಲಾಪುರದ ಯುವಕ ಎ. ಎಂ. ವೈದ್ಯ ಸಂಪಾದಕರಾಗಿದ್ದರು. ವೈದ್ಯರು ಸ್ವತಃ ಯಕ್ಷಗಾನ ಕಲಾವಿದರು. ತಾಳ ಮದ್ದಳೆಯ ಅರ್ಥಧಾರಿಗಳು. ಯಲ್ಲಾಪುರದಲ್ಲಿ ಸ್ವಂತ ಮುದ್ರಣಾಲಯವನ್ನು ಹೊಂದಿದ್ದು ಯಕ್ಷಗಾನ ಪತ್ರಿಕೆಗೆ ಮರುಜೀವ ಕೊಡಲು ಪ್ರೇರಣೆಯಾಯ್ತು. ಆದರೂ ಓದುಗರ ಕೊರತೆ, ಜಾಹೀರಾತುದಾರರಿಲ್ಲದೇ ಪತ್ರಿಕೆ ಒಂದು ವರ್ಷ ಮಾತ್ರ ನಡೆದು ನಿಂತಿತು. ಸದ್ಯಕ್ಕೆ ಯಕ್ಷಗಾನ ಪತ್ರಿಕೆ ನಿಂತಿದೆ ಎನ್ನಬಹುದು. "ಜಿಲ್ಲೆಯ ಹೆಮ್ಮೆಯ ಕಲೆಯಾದ ‘ಯಕ್ಷಗಾನ’ ರಂಗ ಪರಿಕರಗಳನ್ನು ಕುರಿತು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಪರಿಣಿತರು ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಭಾವಗೀತೆ, ಯಕ್ಷಗಾನಕ್ಕೆ ಸಂಬಂಧಪಟ್ಟ ವಿವಿಧ ವಾರ್ತೆಗಳು, ಗ್ರಂಥ ಸಮೀಕ್ಷೆ, ಮಾಸಭವಿಷ್ಯ ಮುಂತಾದವುಗಳು ಪತ್ರಿಕೆಯ ಇನ್ನಿತರ ಆಕರ್ಷಕ ಅಂಶಗಳು. ಯಕ್ಷಗಾನ ಕಲಾವಿಮರ್ಶೆಗಾಗಿಯೇ ಮೀಸಲಾದ, ಅಪೂರ್ವವಾದ ಈ ಪತ್ರಿಕೆ ವಿರಮಿಸಿದ್ದು ಯಕ್ಷಗಾನ ಕಲಾಲೋಕಕ್ಕೆ ತುಂಬಲಾರದ ಹಾನಿಯೆಂದು ವ್ಯಸನದಿಂದ ಹೇಳಬೇಕಾಗುತ್ತದೆ" ಎಂಬ ಎನ್. ಆರ್‍. ನಾಯಕರ ಮಾತುಗಳು ಒಪ್ಪುವಂತದ್ದು.ಕಲಾ ಪತ್ರಿಕಗೆಗಳು : ೧೯೫೭ರಿಂದ ೧೯೯೩ರವರೆಗೆ ‘ಶೃಂಗಾರ’ನಿರ್ದಿಷ್ಟವಾಗಿ ಒಂದೇ ಒಂದು ಕಲೆಗೆ ಸೀಮಿತಗೊಳಿಸಿಕೊಳ್ಳದೇ ವಿಶಾಲವಾದ ತಳಹದಿಯ ಮೇಲೆ ಲಲಿತಕಲೆಯ ಎಲ್ಲಾ ಪ್ರಕಾರಗಳನ್ನೂ ಒಳಗೊಂಡ ಪೂರ್ಣಪ್ರಮಾಣದ ಕನ್ನಡ ಕಲಾ ಪತ್ರಿಕೆಗಳು ಬಂದುದು ೬೦ರ ದಶಕದಲ್ಲಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ೧೯೬೨ರ ಜನವರಿಯಲ್ಲಿ ಮೊದಲ ಸಂಚಿಕೆ ಹೊರಬಂದ ‘ಶೃಂಗಾರ’ ಪತ್ರಿಕೆ ‘ಸಾಹಿತ್ಯ ಸಂಗೀತ’ ಮುಂತಾದ ಲಲಿತಕಲೆಗಳಿಗಾಗಿ ಈ ತ್ರೈಮಾಸಿಕವೆಂದು ಮುಖಪುಟದಲ್ಲಿ ಘೋಷಿಸಿಕೊಂಡಿತು. ೧/೮ಡೆಮಿ ಆಕಾರದ ಪತ್ರಿಕೆ ೭೬ ಪುಟಗಳನ್ನೊಳಗೊಂಡು ಮಾರಾಟದ ಬೆಲೆ ೬೦ ನಯಾ ಪೈಸೆಯೆಂದು ಹೇಳಲ್ಪಟ್ಟಿತ್ತು.ಜನವರಿ ೨೬, ೧೯೬೨ರ ಮೊದಲ ಸಂಚಿಕೆಯಲ್ಲಿ ಸಂಪಾದಕರು ಲಲಿತಕಲೆಗಳ ಈ ಪತ್ರಿಕೆಗೆ ಶೃಂಗಾರವೆಂಬ ಹೆಸರನ್ನಿಟ್ಟಿದ್ದಕ್ಕೆ ಈ ಕೆಳಗಿನ ಸಮರ್ಥನೆ ನೀಡಿದ್ದಾರೆ.‘ಇದಕ್ಕೆ ಶೃಂಗಾರವೆಂಬ ಹೆಸರು ಸರಿಯಲ್ಲವೆಂದು ಕೆಲ ಮಡಿವಂತಿಕೆಯ ಅಭಿಪ್ರಾಯ ಅಲ್ಲಲ್ಲಿ ಕೇಳಿ ಬಂತು. ಅದಕ್ಕೆ ಕಾರಣವೆಂದರೆ ಶೃಂಗಾರವು ಅಶ್ಲೀಲವೆಂದು ತಿಳಿದಿದ್ದೇ ಆಗಿದೆ. ಆದರೆ ಶೃಂಗಾರವು ಅಶ್ಲೀಲವಲ್ಲ. "ಶೃಂಗಾರಶ್ಯುಚಿರುಜ್ವಲ:" - ಶೃಂಗಾರವು ಶುಚಿಯುಳ್ಳದ್ದು, ಉಜ್ಜ್ವಲವುಳ್ಳದ್ದು. ಇದಕ್ಕೆ ನಾವು ರುಚಿಯುಳ್ಳದ್ದು ಎಂಬುದನ್ನೂ ಧೈರ್ಯವಾಗಿ ಸೇರಿಸಬಹುದಷ್ಟೇ. ಶುಚಿ, ರುಚಿ, ಉಜ್ವಲ ಈ ಮೂರು ಶೃಂಗಾರದಲ್ಲಿದೆಯೆಂದು ಬಳಿಕ ಮತ್ತೇನು ಬೇಕು ? ಇದು ರಸರಾಜ, ಶೋಭೆ, ಚಲುವುಗಳನ್ನೂ ಸೂಚಿಸುತ್ತದೆ. ಲಲಿತಕಲೆಗಳಿಗೆ ಸಂಬಂಧಿಸಿದ ಈ ಪತ್ರಿಕೆಗೆ ಈ ಕಾರಣದಿಂದ ಶೃಂಗಾರವೆಂಬ ಹೆಸರು ಅತ್ಯಂತ ಶೋಭಿಸುತ್ತದೆಂಬುದೇ ನಮ್ಮ ಅಭಿಪ್ರಾಯ.’ಶೃಂಗಾರ ಮೊದಲ ಸಂಚಿಕೆಯಲ್ಲಿ ‘ಶೃಂಗಾರಕ್ಕೆ ದೇಣಿಗೆ ನೀಡಿದವರ ಪಟ್ಟಿ ಪ್ರಕಟಿಸಲಾಗಿದೆ. ಮಂಗಳೂರು ನಶ್ಶ, ಮೂವತ್ತು ಮಾರ್ಕಿನ ಬೀಡಿ, ರಾಣಿ ಬನಿಯನ್ನುಗಳು ಹಾಗೂ ಗರ್ಜನೆ, ಜನತಾ, ಮುಂತಾದ ಪತ್ರಿಕೆಗಳ ಜಾಹೀರಾತುಗಳಿವೆ. ಶೃಂಗಾರದ ವಾರ್ಷಿಕ ಚಂದಾ ಎರಡು ರೂಪಾಯಿ, ಮೊದಲ ಸಂಚಿಕೆಯ ಲೇಖನಗಳು ಶೃಂಗಾರವು ಘೋಷಣೆಗೆ ತಕ್ಕಂತೆ ಲಲಿತಕಲೆಗಳಿಗೆ ಸ್ಥಳ ಒದಗಿಸಿರುವ ಬಗ್ಗೆ ಪುರಾವೆ ನೀಡುತ್ತದೆ. ಸಂಪಾದಕರ ಮಾತು, ಕಲೆ, ಕವನ, ಸಂಗೀತ, ತಾಳಮದ್ದಳೆಗಳ ಬಗ್ಗೆ ಲೇಖನ, ‘ಲಲಿತ ಸಾಹಿತ್ಯ ಮತ್ತು ಮಹಾಕಲ್ಪನೆಗಳು’ ಮುಂತಾದ ಬರಹಗಳಿವೆ. ತ್ರೈಮಾಸಿಕ ರಾಶಿ ಭವಿಷ್ಯವೂ ಆಕರ್ಷಣೆ ಹೆಚ್ಚಿಸಲು ಸೇರಿಸಲಾಗಿದೆ.ಅದ್ಧೂರಿಯಿಂದ ಆರಂಭವಾದ ಶೃಂಗಾರ ಮುಂದಿನ ಸಂಚಿಕೆಗಳಲ್ಲಿ ಹೆಸರಿಗೆ ಲಲಿತಕಲೆಗಳ ತ್ರೈಮಾಸಕವಾಗಿ ಉಳಿದು ಎರಡು ವರ್ಷಗಳಲ್ಲಿ ನಿಂತುಹೋಯಿತು.‘ಇಂದ್ರ ಧನುಷ್’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳು ಊಟದ ರುಚಿ ಹೆಚ್ಚಿಸುವ ಉಪ್ಪಿನಕಾಯಿಯಂತೆ. ವ್ಯಂಗ್ಯ ಚಿತ್ರಗಳು ಎಲ್ಲ ವಯಸ್ಸಿನ ಎಲ್ಲ ಆಸಕ್ತಿಯ ಓದುಗರನ್ನೂ ತಲುಪುವುದರಿಂದ ಎಲ್ಲ ರೀತಿಯ ಪತ್ರಿಕೆಗಳೂ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸುತ್ತವೆ.ಆದರೆ ವ್ಯಂಗ್ಯಚಿತ್ರಕ್ಕಾಗಿಯೇ ಮೀಸಲಾಗಿ ಪತ್ರಿಕೆಗಳು ಬಂದ ಉದಾಹರಣೆಗಳೂ ಇವೆ. ಕನ್ನಡದಲ್ಲಿ ಸಂಶೋಧಕನ ಗಮನಕ್ಕೆ ಬಂದ ಹಾಗೆ ಚಿತ್ರಕ್ಕೆ ಮೀಸಲಾಗಿ ಬಂದ ಮೊದಲ ಪತ್ರಿಕೆ ‘ಇಂದ್ರ ಧನುಸ್’.‘ಇಂದ್ರ ಧನುಸ್‌’ ನ ಸಂಪಾದಕರು ಕನ್ನಡ ಪತ್ರಿಕೆಗಳಲ್ಲಿ ‘ಶಿಂಬಣ್ಣ’ ಎಂದು ಪ್ರಖ್ಯಾತಿ ಪಡೆದಿದ್ದ ಕೆ. ರಾಮಕೃಷ್ಣನವರು. ರಾಮಕೃಷ್ಣನವರ ಪ್ರತಿಭೆ ಹೊರಬಂದಿದ್ದು ಅಂದಿನ ಮದ್ರಾಸಿನ ‘ಕಲ್ಕಿ’ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರಕಾರರಾಗಿದ್ದಾಗ. ಮದ್ರಾಸು ಬಿಟ್ಟು ಹುಟ್ಟೂರಾದ ಪುತ್ತೂರಿಗೆ ಬಂದು ನೆಲೆಸಿದ ಕೆ. ರಾಮಕೃಷ್ಣರು ಮಂಗಳೂರಿನ ದಿನಪತ್ರಿಕೆ ‘ನವಭಾರತ’ದಲ್ಲಿ ದೈನಂದಿನ ವ್ಯಂಗ್ಯಚಿತ್ರ ‘ಶಿಂಗಣ್ಣ’ ಬರೆಯಲಾರಂಭಿಸಿದರು. ಅದು ಅವರಿಗೆ ಕನ್ನಡ ಪತ್ರಿಕೋದ್ಯಮದಲ್ಲಿ ವಿಶೇಷ ಸ್ಥಾನ ಕಲ್ಪಿಸಿತು. ನಂತರ ೧೯೬೨ರಲ್ಲಿ ಕೆ. ರಾಮಕೃಷ್ಣ ‘ಇಂಧ್ರ ಧನುಸ್’ ಆರಂಭಿಸಿದರು. ಶಿವರಾಮ ಕಾರಂತರು ‘ಇಂಧ್ರ ಧನುಸ್’ ಪತ್ರಿಕೆಗೆ ತಿಂಗಳಿಗೊಂದು ಲೇಖನ ಬರೆದು ಕೊಡುತ್ತಿದ್ದರು. ರೇಖಾಚಿತ್ರಗಳನ್ನು ಬ್ಲಾಕ್ ಮಾಡಿಸಿ ಪುತ್ತೂರಿನಲ್ಲಿಯೇ ಮುದ್ರಿಸಲಾಗುತ್ತಿತ್ತು. ಪತ್ರಿಕೆ ಜನಪ್ರಿಯವಾಯಿತಾದರೂ ಕೊಂಡು ಓದುವವರ ಸಂಖ್ಯೆ ಹೆಚ್ಚಿಲ್ಲದ ‘ಪತ್ರಿಕೆ’ ಒಂದೇ ವರ್ಷದಲ್ಲಿ ಸ್ಥಗಿತಗೊಂಡಿತು. ಬೇರೆ ಪತ್ರಿಕೆಗೆ ‘ಕಾಟೂನ್’ ಬರೆದುಕೊಟ್ಟು ಸಂಭಾವನೆ ಪಡೆಯುವುದೇ ತಲೆಬಿಸಿಯಿಲ್ಲದ ಕೆಲಸವೆಂದು ಅರಿತ ರಾಮಕೃಷ್ಣನವರು ಮತ್ತೆ ‘ಇಂಧ್ರ ಧನುಸ್’ ಎತ್ತುವ ಪ್ರಯತ್ನ ಮಾಡಲಿಲ್ಲ.‘ನುಡಿಜೇನು’ ಜಾನಪದ ಕಲೆಗೆ ಮೀಸಲಾಗಿ ಕನ್ನಡದಲ್ಲಿ ಬಂದ ಬೆರಳೆಣಿಕೆಯ ಪತ್ರಿಕೆಗಳ ಸಾಲಿಗೆ ‘ನುಡಿಜೇನು’ ಅರ್ಹಸೇರ್ಪಡೆ.‘ಜಾನಪದ ಸಾಹಿತ್ಯ ಪ್ರಕಟನೆಗೇ ಹೆಚ್ಚಿನ ಮಹತ್ವಕೊಟ್ಟು ಅಳಿದುಹೋಗುತ್ತಿರುವ ಜಾನಪದ ಸಾಹಿತ್ಯ ಕಲೆಗಳನ್ನು ಬದುಕಿಸಿಕೊಳ್ಳುವ ಹೇತುವಿನಿಂದ "ನುಡಿಜೇನು" ಮಾಸಪತ್ರಿಕೆಯನ್ನು ಭಾವಿಕೇರಿಯಿಂದ ಗಾಯಕರಾದ ಬಿ. ಹೊನ್ನಪ್ಪನವರು ೧೯೬೯ರಿಂದ ಹೊರಡಿಸುತ್ತ ಬಂದಿದ್ದಾರೆ. ಆರ್ಥಿಕ ಅಡಚಣೆಯಿಂದ ತತ್ತರಿಸುತ್ತಿದ್ದರೂ ಎದೆಗೆಡದೆ ಬಿ. ಹೊನ್ನಪ್ಪನವರು ಪತ್ರಿಕೆಯನ್ನು ಕಷ್ಟಪಟ್ಟು ನಡೆಸಿಕೊಂಡು ಬರುತ್ತಿದ್ದಾರೆ.’ ಎಂಬುದಾಗಿ ಎನ್. ಆರ್‍. ನಾಯಕರು ಅಭಿಪ್ರಾಯಪಡುತ್ತಾರೆ.‘ನುಡಿಜೇನು’ ಪತ್ರಿಕೆಯಲ್ಲಿ ಜಾನಪದ ಕತೆ ಕವನಗಳು, ಜಾನಪದ ವಿಚಾರಗಳಲ್ಲದೆ ಸುದ್ದಿ ಸಮಾಚಾರ, ಚಿಟುಕ, ಕವನ ಚಿಕ್ಕ ಚಿಕ್ಕ ಪ್ರಬಂಧಗಳೂ ಪ್ರಕಟಗೊಳ್ಳುತ್ತವೆ.‘ನಾಟ್ಯಭಾರತೀ’ ಬೆಂಗಳೂರಿನ ಅಸೋಸಿಯೇಟೆಡ್ ಅಮೆಚೂರ್‍ ಆರ್ಟಿಸ್ಟ್ ಸಂಸ್ಥೆಯು ೧೯೬೯ರಲ್ಲಿ ಆರಂಭಿಸಿ ನಾಕೈದು ವರ್ಷ ನಡೆಸಿದ ದ್ವೈಮಾಸಿಕ ನಾಟ್ಯ ಭಾರತೀಯ ಮೊದಲ ಸಂಚಿಕೆ ಫೆಬ್ರುವರಿ ೧೯೬೯ರಲ್ಲಿ ಪ್ರಕಟಗೊಂಡಿತು. ೧/೮ ಡೆಮಿ ಆಕಾರದ, ೩೮ ಪುಟಗಳ ಈ ಸಂಚಿಕೆಗೆ ಸಂಪಾದಕರನ್ನಾಗಿ ಸಂಸ್ಥೆಯ ಯಾರನ್ನೂ ಹೆಸರಿಸಿಲ್ಲ.ಮೊದಲ ಸಂಚಿಕೆಯ ಹಿಂಬದಿ ಪುಟದಲ್ಲಿ ‘ನಿಬೇದನ’ ಎಂಬ ‘ನೃತ್ಯ ಭಾರತೀ’ಯ ಅಧ್ವರ್ಯುಗಳ ನಿವೇದನೆಯಲ್ಲಿ ಹೀಗೆ ಬರೆಯಲಾಗಿದೆ ‘. . . ನಾಟಕದ ಚಿಂತನೆಯ ಬಗ್ಗೆಉಪಯುಕ್ತ ಸ್ಪಷ್ಟ ಹೆಜ್ಜೆಯಾಗಿರುವ ಈ ಪ್ರಯತ್ನದ ಉಳಿವಿನ ಬಗ್ಗೆ ಸಹೃದಯರಾಗಿ ಕ್ರಿಯಾಶೀಲರಾಗಿ ನಾಟ್ಯ ಪ್ರೇಮಿಗಳೂ ಸಂಘ ಸಂಸ್ಥೆಗಳೂ ಚಂದಾದಾರರಾಗಿ ರಚನಾತ್ಮಕ ನೆರವನ್ನು ನೀಡುವರೆಂದು ನಂಬಿರುವ ನಾಟ್ಯ ಭಾರತೀ’ ಎನ್ನಲಾಗಿದೆ. ಮೊದಲ ಸಂಚಿಕೆಗೆ ಶ್ರೀರಂಗರು ಶುಭಹರಸಿ ಕಳಿಸಿರುವ ನುಡಿಗಳಿವೆ. ಅದರಲ್ಲಿ ಶ್ರೀರಂಗರು ‘ಬೆಂಗಳೂರಿನ ಅಸೋಸಿಯೇಟೆಡ್ ಅಮೆಚೂರ್‍ ಅರ್ಟಿಸ್ಟ್ಸ್ ಸಂಸ್ಥೆಯು "ನಾಟ್ಯ ಭಾರತೀ" ಎಂಬ ದ್ವೈಮಾಸಿಕವನ್ನು ಪ್ರಕಟಿಸುವುದು ಸ್ವಾಗತಾರ್ಹ ಪ್ರಯತ್ನವಾಗಿದೆ. ರಂಗಭೂಮಿಯ ಬಗ್ಗೆ ಅಭ್ಯಾಸ, ವಿಮರ್ಶೆ, ವಿಚಾರ ವಿನಿಯಮಕ್ಕೆ ಅವಕಾಶಗಳನ್ನು ಒದಗಿಸಿಕೊಟ್ಟು ಈ ದ್ವೈಮಾಸಿಕ ಕನ್ನಡ ರಂಗಭೂಮಿಯ ಚಳವಳಕ್ಕೆ ಪೋಷಕವಾಗಲಿ ಎಂದು ಹಾರೈಸುತ್ತೇನೆ.’ ಎಂದಿದ್ದಾರೆ.‘ನಾಟ್ಯ ಭಾರತೀ’ ರಂಗಭೂಮಿ ಹಾಗೂ ಒಟ್ಟಾರೆ ಕಲಾ ರಂಗಗಳ ಹಿಂದಿನ, ಇಂದಿನ ಸ್ಥಿತಿಗತಿಯ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತಿತ್ತು. ಈ ಕ್ಷೇತ್ರದ ಸಾಧಕರ ಪರಿಚಯ ಮಾಡಿಕೊಡುತ್ತಿತ್ತು. ‘ನಾಟ್ಯ ಭಾರತೀ’ಯ ಮೊದಲ ಸಂಚಿಕೆಯ ಹೊರಣ ಪತ್ರಿಕೆಯ ಮೂಲೋದ್ದೇಶಗಳನ್ನು ಸ್ಪಷ್ಟಪಡಿಸುವಂತಿದೆ.ಕನ್ನಡದ ಕಲಾ ಪತ್ರಿಕೆಗಳ ಪೈಕಿ ‘ನಾಟ್ಯ ಭಾರತೀ’ಯ ಸೇವೆ ಸ್ಮರಣೀಯವಾದುದು. ನಾಕೈದು ವರ್ಷ ನಾಟ್ಯ ಭಾರತೀ ಪ್ರಕಟಣೆಯಲ್ಲಿತ್ತು. ಆಗ ಈ ಕ್ಷೇತ್ರದ ಆಸಕ್ತರು ಗಂಭೀರವಾಗಿ ಪರಿಗಣಿಸುವ ಪತ್ರಿಕೆಯಾಗಿತ್ತು.‘ಮೂಡಲಪಾಯ’ ಯಕ್ಷಗಾನದಲ್ಲಿ ಮೂಡಲಪಾಯ, ಪಡುವಲಪಾಯ ಎಂಬ ಎರಡು ಪ್ರಕಾರಗಳು ಪಡುವಲಪಾಯ ಕರ್ನಾಟಕದ ಪಶ್ಚಿಮ ಭಾಗದ (ಉತ್ತರ ಕನ್ನಡ-ದಕ್ಷಿಣ ಕನ್ನಡ ಮುಂತಾಗಿ) ಯಕ್ಷಗಾನ ಸಂಪ್ರದಾಯದ ಹೆಸರಾದರೆ ಮೂಡಲಪಾಯದ ಕರ್ನಾಟಕದ ಪೂರ್ವ ಭಾಗದ ಅಂದರೆ ಕೋಲಾರ, ಬೆಂಗಳೂರು, ತುಮಕೂರು ಮುಂತಾದ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಯಕ್ಷಗಾನ ಸಂಪ್ರದಾಯ.ನಶಿಸಿಹೋಗುತ್ತಿದ್ದ ಮೂಡಲಪಾಯ ಯಕ್ಷಗಾನಕ್ಕೆ ಕಾಯಕಲ್ಪ ನೀಡಿದವರಾಗಿ ಡಾ. ಜೀ. ಶಂ ಪರಮಶಿವಯ್ಯನವರನ್ನು ಹೆಸರಿಸಲಾಗುತ್ತಿದೆ. ೧೯೬೯ರಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನ ಕೊನೇಹಳ್ಳಿಯಲ್ಲಿ ‘ಮೂಡಲಪಾಯ ಯಕ್ಷಗಾನ ಟ್ರಸ್ಟ್’ ಸ್ಥಾಪಿತವಾಗುವುದುರಲ್ಲಿ ಜೀ. ಶಂ ಪರಮಶಿವಯ್ಯನವರ ವಿಶೇಷ ಪರಿಶ್ರಮವಿತ್ತು.ಹೀಗೆ ಸ್ಥಾಪಿತವಾದ ಟ್ರಸ್ಟಿನ ವತಿಯಿಂದ ‘ಮೂಡಲಪಾಯ’ ಪತ್ರಿಕೆಯೊಂದು ಅನಿಯತಕಾಲಿಕವಾಗಿ ಸ್ಥಾಪನೆಗೊಂಡಿತು.ಮೂಖ್ಯವಾಗಿ ಮೂಡಲಪಾಯದ ವಿಚಾರವನ್ನು ನಾಡಿನ ವಿವಿಧ ಮೂಲೆಗಳಿಗೆ ಮುಟ್ಟಿಸುವಲ್ಲಿ ಹಾಗೂ ವಿದ್ವಾಂಸರ ಮತ್ತು ಆಸಕ್ತರ ಗಮನವನ್ನು ಅದರತ್ತ ಸೆಲೆಯುವಲ್ಲಿ ಈ ಪತ್ರಿಕೆ ಕೆಲಸಮಾಡಿದ ರೀತಿ ವಿಶಿಷ್ಟವಾದುದು. ಇದರ ಕೀರ್ತಿ ಮುಖ್ಯವಾಗಿ ಅದರ ಕೇಂದ್ರಶಕ್ತಿಯಾದ ಡಾ. ಜೀ. ಶಂ ಪರಮಶಿವಯ್ಯನವರಿಗೆ ಸಲ್ಲುವಂತಹದು. ‘ಮೂಡಲಪಾಯ’ ಪತ್ರಿಕೆ ಸಂಪಾದಕಮಂಡಲಿಯಲ್ಲಿ ಡಾ. ಜೀ. ಶಂ ಪರಮಶಿವಯ್ಯನವರು ಪ್ರಧಾನ ಸಂಪಾದಕರಾಗಿ, ಪಿ. ಆರ್‍. ತಿಪ್ಪೇಸ್ವಾಮಿ, ಹ. ಕ. ರಾಜೇಗೌಡ ಮತ್ತು ಡಿ. ಕೆ. ರಾಜೇಂದ್ರ ಅವರ ಸಂಪಾದಕತ್ವದಲ್ಲಿ ಹೊರ ಬಂದವು.‘ಮೂಡಲಪಾಯ’ ಪತ್ರಿಕೆ ಎರಡು ಸಂಚಿಕೆಗಿಂತ ಮುಂದುವರೆಯಲಿಲ್ಲ. ನಶಿಸುತ್ತಿದ್ದ ಕಲಾ ಪ್ರಕಾರವೊಂದಕ್ಕೆ ಮರು ಜೀವ ಕೊಡುವ ಯತ್ನವೊಂದರ ಭಾಗವಾಗಿ ಬಂದ ‘ಮೂಡಲಪಾಯ’ಕ್ಕೆ ಮರುಜೀವ ಬರಲಿಲ್ಲ.‘ಕಲಾದರ್ಶನ’ ಕನ್ನಡದಲ್ಲಿ ಲಲಿತಕಲೆಗಳಿಗೆ ಮೀಸಲಾಗಿ ೨೭ ವರ್ಷಗಳಿಂದ ಸತತವಾಗಿ ಪ್ರಕಟಗೊಳ್ಳುತ್ತಿರುವ ಏಕೈಕ ಮಾಸಿಕ ಮಂಗಳೂರಿನ ‘ಕಲಾದರ್ಶನ’, ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಶಿಕ್ಷಣ, ಸಂಶೋಧನೆಗಳಿಗೆ ಮೀಸಲಾದ ಮಾಸಪತ್ರಿಕೆ. ‘ಕಲಾದರ್ಶನ’ ಸ್ಥಾಪನೆಗೊಂಡದ್ದು ೧೯೭೧ರಲ್ಲಿ ಶ್ರೀರಾಮನವಿಮಿಯ ದಿನ. ಸ್ಥಾಪಕ ಸಂಪಾದಕರಾದ ವಿ. ಬಿ. ಹೊಸಮನೆಯವರು ರಾಜ್ಯದ ಹಿರಿಯ ಪತ್ರಕರ್ತರುಗಳಲ್ಲಿ ಒಬ್ಬರು. ಇಂದಿಗೂ ಅವರೇ ಕಲಾದರ್ಶನ ಸಾರಥಿ, ಸರ್ವಸ್ವವೂ ಅವರೇ. ಆದರೆ ಕಲಾದರ್ಶನ ಹೆಸರಿಗೆ ಅನ್ವರ್ಥವಾಗಿ ಕೇವಲ ಕಲಾದರ್ಶನವಾಗಿ ಉಳಿದಿಲ್ಲವೆಂಬುದನ್ನೂ ಗಮನಿಸಬೇಕು. ಈ ಪತ್ರಿಕೆಯ ಯಾವ ಸಂಚಿಕೆಯನ್ನು ತೆರೆದು ನೋಡಿದರೂ ಸಾಮಾನ್ಯ ಆಸಕ್ತಿಯ ಪತ್ರಿಕೆಗಳಲ್ಲಿ ಸಾಮಾನ್ಯವಗಿ ಕಂಡು ಬರುವ ರಾಜಕೀಯ ಆರೋಗ್ಯ, ಹಾಗೂ ಮಾನವಾಸಕ್ತಿಯ ಎಲ್ಲ ಮುಖಗಳ ಲೇಖನಗಳಿರುತ್ತವೆ.ಉದಾಹರಣೆಗೆ ಸಂಪುಟ ೨೬ ಸಂಚಿಕೆ ೨ರಲ್ಲಿ ಬಂದ ಲೇಖನಗಳ ಪಟ್ಟಿ ಹೀಗಿದೆ.

ಕಲಾದರ್ಶನ : ಚಿಂತನೆ : ಸಮಾಜ ಸಂಘಟನೆಯಿಂದಲೇ ದೇಶರಕ್ಷಣೆ

ಅಂತರಂಗದ ನುಡಿ : ರಾಜಕೀಯ ರಥ ಚಕ್ರಗಳು

ಲೇಖನ : ಪ್ರಜಾಪ್ರಭುತ್ವ ತತ್ತ್ವದ ಸತ್ತ್ವ ಪರೀಕ್ಷೆ

ಶಂಕರ ಜಯಂತಿ ವಿಶೇಷ : ಪೂಜನೀಯ ಜಗದ್ಗುರು ಶಂಕರಾಚಾರ್ಯರು

ಆಧ್ಯಾತ್ಮ ರಾಮಾಯಣ : ಯುದ್ಧ ಕಾಂಡ

ಕನ್ನಡ ದ್ವಿಪದಿಯಲ್ಲಿ ರಘವಂಶ ಮಹಾಕಾವಯ

ಲೇಖನ : ವ್ಯಾಧಿಗೆ ಮೂಲ ಮನಸ್ಸಿನ ಒತ್ತಡ

ಲೇಖನ : ನಾಯಕತ್ವ ಮತ್ತು ಸಹನಾಗುಣ

ಕ್ಯಾಸೆಟ್ ವಿಮರ್ಶೆ

ಲೇಖನ : ಕನ್ನಡದ ಬೆಳವಣಿಗೆಗೆ ಮಾಧ್ಯಮಗಳ ನೆರವು

ಪರಿಚಯ : ಕಲಾವಿದ

ರಾಮನವಮಿ ವಿಶೇಷ ಲೇಖನ : ಶ್ರೀತ್ಯಾಗರಾಜರು

ಕಲಾದರ್ಶನ :ಬೌದ್ಧಿಕ ಸ್ಪರ್ಧೆ

ಕಲಾದರ್ಶನ : ಧಾರ್ಮಿಕ ಸ್ಪರ್ಧೆ

ಕಲಾದರ್ಶನ : ಚೌಕಬಂಧ

ಕವನ : ರಸಧ್ವನಿ

ಆರೋಗ್ಯ ಲೇಖನ : ಕುಂಬಳಕಾಯಿ ಪ್ರಯೋಜನಕಾರಿ

ಮೇಲಿನ ವಿಷಯಗಳನ್ನು ಗಮನಿಸಿದಾಗ ಕಲಾದರ್ಶನ ೨೭ ವರ್ಷ ಸತತವಾಗಿ ಹೊರಬರುತ್ತಿರುವುದು ಹೆಮ್ಮೆಯ ಸಂಗತಿಯಾದರೂ ಅದು ಕೇವಲ ವಿಶೇಷಾಸಕ್ತಿ ಪತ್ರಿಕೆಯಾಗಿ ಉಳಿದಿಲ್ಲವೆಂಬುದನ್ನು ಎತ್ತಿ ಹೇಳಬೇಕಾಗುತ್ತದೆ. ‘ನಿಷಾದ’ - ‘ಕಲಾವಿಕಾಸ’೭೦ರ ದಶಕದಲ್ಲಿ ಬಂದ ಎರಡು ಪತ್ರಿಕೆಗಳನ್ನು ಹೆಸರಿಸಬೇಕು. ಒಂದು -೧೯೭೨ರಲ್ಲಿ ರವೀಶ್ ಕಾಸರವಳ್ಳಿ ಹೊರತಂದ ‘ನಿಷಾದ’ ಮಾಸಿಕ. ವೃತ್ತಿಯಲ್ಲಿ ವೈದ್ಯರಾಗಿದ್ದು ಚಿತ್ರಕಲೆ, ಛಾಯಚಿತ್ರಕಲೆ, ಸಿನಿಮಾ, ಲೇಖನ ಮುಂತಾದವುಗಳ ಬಗ್ಗೆ ಅತೀವ ಒಲವು ಇರಿಸಿಕೊಂಡಿದ್ದ ಡಾ. ರವೀಶ್ ಕಾಸರವಳ್ಳ ‘ನಿಷಾದ’ ಎಂಬ ಕಲಾ ಮಾಸಿಕ ಹೊರಡಿಸಿದರು. ‘ನಿಷಾದ’ ದ ಕೆಲವು ಸಂಚಿಕೆಗಳು ಮಾತ್ರ ಪ್ರಕಟವಾಗಿ ಸರಿಯಾದ ಪ್ರೋತ್ಸಾಹದ ಕೊರತೆಯಿಂದಾಗಿ ನಿಂತುಹೋಯಿತು. ನಾಟಕ, ಚಿತ್ರಕಲೆ ಮುಂತಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಅ. ಲ. ನರಸಿಂಹನ್ ೧೯೭೯ರಲ್ಲಿ ಹೊರತಂದ ಪತ್ರಿಕೆ ‘ಕಲಾ ವಿಕಾಸ’. ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್‌‌ನ ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿಕೊಂಡು ಅ. ಲ. ನರಸಿಂಹನ್‌ರವರ ನೇತೃತ್ವದಲ್ಲಿ ‘ಕಲಾ ವಿಕಾಸ’ವನ್ನು ಹೊರತರುತ್ತಿದ್ದರು. ಪತ್ರಿಕೆ ಐದಾರು ವರ್ಷ ಪ್ರಕಟಣೆಯಲ್ಲಿತ್ತು. ಸಂಶೋಧಕನ ಗಮನಕ್ಕೆ ಬಂದಂತೆ ಕನ್ನಡದಲ್ಲಿ ಚಿತ್ರಕಲೆಯ ಜೊತೆ ಶಿಲ್ಪಕಲೆಗೆ ಮೀಸಲಾಗಿ ಬಂದ ಪತ್ರಿಕೆ ಇದೊಂದೇ.ಮಡಿಕೇರಿಯಿಂದ ೧೯೭೮ರಲ್ಲಿ ಹೊರಬಂದ ‘ಸ್ಪಂದನ’ ಮುಖ್ಯವಾಗಿ ಸಾಂಸ್ಕೃತಿಕ ಪತ್ರಿಕೆಯಾದರೂ ಸ್ಪಂದನದ ಒಲವು ಕಲೆಗಳ ಕಡೆಗಿತ್ತು. ಎನ್. ಆರ್‍. ರಮೇಶ್, ಎಂ. ಎನ್. ಮಧ್ಯಸ್ಥ, ಡಿ. ಬಿ. ರಾಮಚಂದ್ರಾಚಾರ್‍ ಇವರುಗಳು ಈ ತ್ರೈಮಾಸಿಕ ಸಾಂಸ್ಕೃತಿಕ ಪತ್ರಿಕೆಯ ಕಾರಣ ಕರ್ತರಾಗಿದ್ದರು. ಕೆಲವುಸಂಚಿಕೆಗಳಲ್ಲೇ ಪತ್ರಿಕೆ ನಿಂತಿತು.‘ಸಮುದಾಯ ವಾರ್ತಾಪತ್ರ’ ಸಮುದಾಯವು ಎಡಪಂಥೀಯ ವಿಚಾರಧಾರೆಗೆ ಒಪ್ಪಿಕೊಂಡ ನಾಟಕ ತಂಡ. ಸಮುದಾಯವು ತಂಡವೂ ಹೌದು ಚಳುವಳಿಯೂ ಹೌದು. ಸಮುದಾಯಕ್ಕೆ ಕೇಂದ್ರ ಮಂಡಳಿಯೊಂದಿರುವುದಲ್ಲದೇ ಜಿಲ್ಲೆ ತಾಲೂಕುವಾರು ಸಮುದಾಯದ ಶಾಖೆಗಳಿದ್ದು ಸಮುದಾಯ ಸಂಘಟನೆ ಕರ್ನಾಟಕದಲ್ಲಿ ವಿಸ್ತೃತ ನೆಲೆಯನ್ನು ಹೊಂದಿದೆ. ಸಮುದಾಯ ಕೇಂದ್ರ ತಂಡ ಬೆಂಗಳೂರಿನಲ್ಲಿದೆ. ಮೈಸೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ಗುಲ್ಬರ್ಗಾ ಮುಂತಾದ ಕಡೆಗಳಲ್ಲೂ ಸಮುದಾಯ ತಂಡ ರಂಗ ಸಂಬಂಧೀ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತವೆ. ಆ ಚಟುವಟಿಕೆಗಳ ದಾಖಲೆಗಾಗಿ ‘ಸಮುದಾಯ ವಾರ್ತಾಪತ್ರ’ವನ್ನು ೧೯೭೮ರಲ್ಲಿ ಆರಂಭಿಸಲಾಯಿತು. ಆಗ ಅದು ಸೈಕ್ಲೋಸ್ಟೈಲ್ ರೂಪದಲ್ಲಿದ್ದು ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ವಾರ್ತಾಪತ್ರದ ಸಂಪಾದಕರಾಗಿದ್ದರು. ೧೯೭೯ರಲ್ಲಿ ಅದು ಮುದ್ರಣರೂಪಕ್ಕೆ ಬಂದಾಗ ಎಸ್. ಮಾಲತಿಯವರನ್ನು ಸಂಪಾದಕರನ್ನಾಗಿ ಹೆಸರಿಸಲಾಗಿತ್ತು. ಸಿ. ಜಿ. ಕೃಷ್ಣಸ್ವಾಮಿ ಈ ಪತ್ರಿಕೆಗೆ ಪ್ರಕಾಶಕರು. ರಂಗಭೂಮಿ ಕುರಿತಾದ ಲೇಖನಗಳು, ರಂಗಕೃತಿ ಹಾಗೂ ನಾಟಕಗಳ ವಿಮರ್ಶೆಗಳು, ಜನಪರ ಕಾಳಜಿಯ ಬರಹಗಳು, ಕಥೆ ಕವನ ಹೀಗೆ ಹತ್ತಾರು ವಿಷಯಗಳನ್ನು ಒಳಗೊಂಡು ಸಾಂಸ್ಕೃತಿಕ ವಲಯದ ಗಂಭೀರ ಪತ್ರಿಕೆಯಾಗಿ ‘ಸಮುದಾಯ ವಾರ್ತಾಪತ್ರ’ ರೂಪುಗೊಂಡಿತು. ಸುಮಾರು ೪೦೦ ಜನ ಚಂದಾದರರನ್ನು ಹೊಂದಿದ್ದ ಈ ಪತ್ರಿಕೆಗೆ ನಿರ್ದೇಶಕ ಜನಾರ್ದನ್. ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ರಾಮಚಂದ್ರದೇವ, ರಂಗತಜ್ಞ ಗಂಗಾಧರ ಮೂರ್ತಿ ಅನು ಕ್ರಮವಾಗಿ ಪತ್ರಿಕೆಯ ಸಂಪಾದಕತ್ವದ ಜವಾಬ್ದಾರಿ ವಹಿಸಿಕೊಂಡರು. ಹೆಚ್ಚಿನ ಖರ್ಚು ಆದರೆ ಹೆಚ್ಚದ ಚಂದಾದಾರರಿಂದಾಗಿ ಆರ್ಥಿಕವಾಗಿ ಪತ್ರಿಕೆ ಮುಗ್ಗರಿಸಿ ೧೯೮೫ರ ನಂತರ ನಿಂತು ಹೋಯಿತು. ‘ರಂಗಮಂಟಪ’ ಮೈಸೂರು ಮಹಾರಾಜಾ ಕಾಲೇಜಿನ ಕಲಾ ಬಳಗದ ಶ್ರೇಷ್ಠ ನಟ ಸ್ತ್ರೀ ಪಾತ್ರ ಪ್ರವೀಣರಾದ ಬಿ. ಕೃಷ್ಣ (ತುಪ್ಪ) ಅವರ ಸಂಪಾದಕತ್ವದಲ್ಲಿ ಏಪ್ರಿಲ್ ೧೯೭೨ರಲ್ಲಿ ‘ರಂಗ ಮಂಟಪ’ವೆಂಗ ತ್ರೈಮಾಸಿಕವು ಬೆಳಕು ಕಂಡು ರಂಗಪತ್ರಿಕೆಗಳ ಪರಂಪರೆಯಲ್ಲಿಯೇ ಓದುಗರ ಮನವನ್ನು ಸೊರೆಗೊಂಡು ದಶಕದ ಸಾಧನೆಯಾಗಿ ಮೆರೆಯಿತು. ಇದರ ಉಗಮವನ್ನು ಸ್ವಾಗತಿಸುತ್ತಾ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಮಾಜಿ ಉಪಾಧ್ಯಕ್ಷ ಕೆ. ಪಿ. ಎಸ್. ಮೆನನ್ ಅವರು ಈ ರೀತಿ ಹಾರೈಸಿದರು."The release of Rangamantapa is not only the commendable endeavour but the scope of the magazine seems carefully worked out. Kannada does not lag behind its sister states in India in the field of theatre arts. The proposed magazine should be of help to connosienns and laymen alike."‘ಸೂತ್ರಧಾರ’ ಸಂಸ್ಥೆಗಳ ಪ್ರಕಟನೆಯಾಗಿ ಹೊರಹೊಮ್ಮಿದ ಸಾಹಸಗಳಲ್ಲಿ ಬೆಂಗಳೂರಿನ ಕಾರ್‍ಯನಿರತ ಹವ್ಯಾಸಿ ತಂಡಗಳಲ್ಲಿ ಒಂದಾದ ‘ಸೂತ್ರಧಾರ’ ತಂಡದಿಂದ ಹೊರತರುತ್ತಿದ್ದ ‘ಸೂತ್ರಧಾರ’ವನ್ನು ಗಮನಿಸಬೇಕು. ‘ಸೂತ್ರಧಾರ’ವು ಬೆಂಗಳೂರಿನ ಸೂತ್ರಧಾರ ನಾಟಕ ತಂಡದ ಮುಖವಾಣಿಯೂ ವಾರ್ತಾಪತ್ರವೂ ಆಗಿ ೧೯೭೯ರಲ್ಲಿ ಮಾಸಿಕವಾಗಿ ಹೊರಬಂತು. ಆರಂಭದಲ್ಲಿ ಪೋಸ್ಟ್ ಕಾರ್ಡ ಅಳತೆಯಲ್ಲಿ ಪ್ರಾರಂಭವಾಗಿ ನಂತರ ಇನ್‌ಲ್ಯಾಂಡ್ ಮಾದರಿಗೆ ಪರಿವರ್ತನೆಗೊಂಡು ನಂತರ ೧/೪ ಡೆಮಿ ಅಳತೆಯಲ್ಲಿ ಬಂದುದು ಸೂತ್ರದಾರದ ವಿಶೇಷ. ಸೂತ್ರಧಾರಕ್ಕೆ ಕೆ. ಬಿ. ಸಿದ್ಧಾಂತಿ, ಎ. ಪುರುಷೋತ್ತಮ, ಮಾಲಿ, ರಾಜನ್ ಹುಣಸವಾಡಿ, ಪಾಲ್ ಸುದರ್ಶನ, ನಾರಾಯಣ ರಾಯಚೂರ್‍, ಅ. ನ. ರಮೇಶ್ ಮುಂತಾದವರು ಕ್ರಿಯಾಶೀಲತೆಯ ಬೆಂಬಲವಿತ್ತಾದರೂ ರಾಮಯ್ಯನವರು ಸಂಪಾದಕರಾಗಿ ಸೂತ್ರಧಾರ ರಾಮಯ್ಯನೆಂದೇ ಹೆಸರಾದರು. ಮಾಲತಿ ಇದರ ಸ್ಥಾಪಕರು.ಸೂತ್ರಧಾರ ರಾಮಯ್ಯನವರು ಸಂದರ್ಶನದ ವೇಳೆ ಹೇಳಿದಂತೆ ಸೂತ್ರಧಾರ ೧೩ವರ್ಷ ನಡೆಯಿತಾದರೂ ಮಧ್ಯೆ ಮಧ್ಯೆ ‘ರಜ’ತೋತ್ಸವ ಆಚರಿಸುತ್ತಿತ್ತು. ೧೯೭೪ರ ಏಪ್ರಿಲ್‌ನಲ್ಲಿ ಕೊನೆಯ ಸಂಚಿಕೆ ಬಂತು. ಈ ಅವಧಿಯಲ್ಲಿ ಹಾಸ್ಯನಾಟಕಗಳ ಬಗ್ಗೆ ಸ್ಟೇಜ್ ಬಗ್ಗೆ, ಮಕ್ಕಳ ನಾಟಕಗಳು ಹಾಗೂ ಮಹಿಳಾ ನಾಟಕಗಳ ಬಗ್ಗೆ ಹೀಗೆ ನಾಲ್ಕು ವಿಶೇಷಾಂಕಗಳನ್ನು ತಂದ ಹೆಗ್ಗಳಿಕೆ ‘ಸೂತ್ರಧಾರ’ಕ್ಕೆ.ಸಂಪಾದಕರು ಹೇಳುವಂತೆ ಸೂತ್ರಧಾರ ತಂಡದವರೆಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಾದ್ದರಿಂದ ನಾಟಕ ಹೇಗೋ ಹಾಗೆಯೇ ನಾಟಕ ತಂಡದ ಪತ್ರಿಕೆ ತರುವುದು ಅವರಿಗೆ ಹವ್ಯಾಸವಾದ್ದರಿಂದ ವೃತ್ತಿಪರವಾಗಿ, ನಿಗದಿತವಾಗಿ ಪತ್ರಿಕೆಯನ್ನು ತರಲು ಸಾಧ್ಯವಾಗಲಿಲ್ಲ. ಚಂದಾದಾರರ ಸರಿಯಾದ ಜಾಲವಿರಲಿಲ್ಲ. ದುಡ್ಡು ಕೊಡುವವರಿದ್ದರೂ ಚಂದಾ ಸಂಗ್ರಹಿಸುವವರೇ ಇರಲಿಲ್ಲ. ನಾಟಕ ನೋಡಲು ಬಂದವರಿಗೆ ಸೂತ್ರಧಾರವನ್ನು ಹಂಚುವ ಪರಿಪಾಠವಿತ್ತ. ಸ್ನೇಹಿತರ ಬಳಗದಿಂದ ೫೦ ರಿಂದ ೧೦೦ ರೂಪಾಯಿ ಚಂದಾ ವಸೂಲು ಮಾಡಲಾಗುತ್ತಿತ್ತು. ಸೂತ್ರದಾರದ ಬಗ್ಗೆ ಸದ್ಭಾವನೆ ಉಳ್ಳವರಿಂದ ಜಾಹೀರಾತು ಕೇಳಲಾಗುತ್ತಿತ್ತು. ಪುಟವೊಂದಕ್ಕೆ ಒಂದು ಸಾವಿರ ರೂಪಾಯಿ ಜಾಹೀರಾತು ದರವಿತ್ತು. ‘ಸೂತ್ರಧಾರ’ದ ಸಂಚಿಕೆಗಳು ಲಾಭ ತರದಿದ್ದರೂ ಬಹಳ ಜನಪ್ರಿಯವಾಗಿದ್ದವು. ಸಂಪಾದಕೀಯ ಪುಟವಿತ್ತು. ‘ಸುದ್ದಿಜೀವಿಗಳು’ ಮತ್ತು ‘ಮೆಟ್ಟಿಲ ಮಹಿಮೆ’ ಖಾಯಂ ಅಂಕಣಗಳಾಗಿದ್ದವು. ಮೆಟ್ಟಿಲ ಮಹಿಮೆಯ ಕಾರಣದಿಂದ ಖಾಯಂ ಓದುಗರು ಹಿಂದಿನಿಂದ ಪತ್ರಿಕೆಯನ್ನು ಓದುತ್ತಿದ್ದರು. ಕರ್ನಾಟಕ ನಾಟಕ ಅಕಾಡೆಮಿಯು ಸೂತ್ರಧಾರಕ್ಕಾಗಿ ಪ್ರತಿವರ್ಷ ಸಹಾಯಧನ ನೀಡುತ್ತಿತ್ತು.ಸೂತ್ರಧಾರದ ಸಂಪಾದಕ ರಾಮಯ್ಯನವರು ಹೇಳುವಂತೆ ಪತ್ರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು. ನಿಯತವಾಗಿ ತರಲೇಬೇಕೆಂದು ಹಠದಿಂದ ಕೆಲಸ ಮಾಡುವವರು ಯಾರೂ ಇರದ್ದರಿಂದ ಪತ್ರಿಕೆ ಬದುಕಲಿಲ್ಲ. ಇದನ್ನೇ ವೃತ್ತಿಯಾಗಿ ಮಾಡಿಕೊಂಡು ಶ್ರಮಪಟ್ಟು ದುಡಿದರೆ ಇಬ್ಬರಿಗೆ ಕೆಲಸ ಕೊಟ್ಟು ಲಾಭದಾಯಕವಾಗಿ ತರಬಹುದು. ಮಾಸಿಕವಾಗಿ ದಾಖಲಿಸಲಾಗಿದ್ದ ಸೂತ್ರಧಾರ ಈಗ ಕೆಲ ವರ್ಷಗಳಿಂದ ಪ್ರಕಟಗೊಂಡಿಲ್ಲವಾದರೂ ಸತ್ತೇ ಹೋಯಿತೆಂದು ಹೇಳುವಂತಿಲ್ಲ. ಯಾಕೆಂದರೆ ತಾವು ಹಾಗೂ ಸೂತ್ರಧಾರ ತಂಡದವರು ಮನಸ್ಸು ಮಾಡಿದರೆ ಮತ್ತೊಂದು ಸಂಚಿಕೆಯನ್ನು ಸದ್ಯವೇ ತರಲು ಸಾಧ್ಯ ಎನ್ನುತ್ತಾರೆ ಸಂಪಾದಕರು. ಸಂಪಾದಕರ ಅಭಿಪ್ರಾಯ ಕನ್ನಡದ ಎಲ್ಲಾ ಸಾಹಿತ್ಯಕ, ಸಾಂಸ್ಕೃತಿಕ, ಪತ್ರಿಕೆಗಳ ಸ್ಥಿತಿಗತಿ ಹಾಗೂ ವೃತ್ತಿಪರತೆಯನ್ನು ಬಿಂಬಿಸುವಂತೆ ಪ್ರತಿನಿಧಿಸುವಂತೆ ಇದೆ. ಈಗ ಪ್ರಕಟಣೆಯಲ್ಲಿಲ್ಲದ ಯಾವ ಸಾಹಿತ್ಯ ಪತ್ರಿಕೆಯನ್ನಾಗಲೀ ಭೂತಕಾಲಕ್ಕೆ ತಳ್ಳುವಂತಿಲ್ಲ. ಯಾಕೆಂದರೆ ಸಂಬಂಧಿಸಿದವರು ಮನಸ್ಸು ಮಾಡಿದರೆ ಮತ್ತೆ ಹೊರ ಬರಬಹುದು. ಈ ಪತ್ರಿಕೆಗಳು ಅದರ ಅಧ್ವರ್ಯಗಳ ಮನಸ್ಸನ್ನೇ ಅವಲಂಬಿಸಿವೆ.‘ಜಾನಪದ’ ಕರ್ನಾಟಕದಲ್ಲಿ ಜಾನಪದ ಸಂಬಂಧವಾಗಿ ಪ್ರಕಟಗೊಂಡ ಕೆಲವೇ ಪತ್ರಿಕೆಗಳ ಪೈಕಿ ‘ಜಾನಪದ’ಕ್ಕೆ ಮಹತ್ವದ ಸ್ಥಾನವಿದೆ. ಗಾತ್ರ, ಆಕಾರ, ರೂಪ, ಸತ್ವಗಳ ದೃಷ್ಟಿಯಿಂದ ಪರಿಪೂರ್ಣವಾಗಿ ‘ಜಾನಪದ’ಕ್ಕೆ ಮೀಸಲಾದ ಪತ್ರಿಕೆ ‘ಜಾನಪದ’ವೆಂದು ಹೇಳಬಹುದು.‘ಜಾನಪದ’ ಪತ್ರಿಕೆ ಪ್ರಕಟಗೊಂಡಿದ್ದು ೧೯೭೫ರಲ್ಲಿ ಕರ್ನಾಟಕದ ಜಾನಪದ ಚಟುವಟಿಕೆಗಳಿಗೆ ಸರಿಯಾದ ರೂಪುಕೊಡುವ ದೃಷ್ಟಿಯಿಂದ ೧೯೭೮ರಲ್ಲಿ ಸ್ಥಾಪನೆಗೊಂಡ ‘ಕರ್ನಾಟಕ ಜಾನಪದ ಪರಿಷತ್ತು’, ‘ಜಾನಪದ ಪತ್ರಿಕೆ’ಯನ್ನು ಆರಂಭಿಸಿತು. ಷಾಣ್ಮಾಸಿಕ ಪತ್ರಿಕೆಯಾಗಿ ಹೊರಬಂದ ‘ಜಾನಪದ’ದ ಸಂಪಾದಕೀಯ ತಂಡದಲ್ಲಿ ಕರ್ನಾಟಕದಲ್ಲಿ ಜಾನಪದದ ಶಾಸ್ತ್ರೀಯ ಅಧ್ಯಯನ ಹಾಗೂ ಏಳಿಗೆಗೆ ಕಾರಣರಾದ ಸಾಹಿತಿ ವಿದ್ವಾಂಸರುಗಳಿದ್ದರು. ಪ್ರೊ. ದೇ. ಜವರೇಗೌಡರು ಜಾನಪದದ ಪ್ರಧಾನ ಸಂಪಾದಕರು, ಡಾ. ಹಾ. ಮಾ. ನಾಯಕ ಹಾಗೂ ಡಾ. ಜೀ. ಶಂ. ಪರಮಶಿವಯ್ಯನವರು ಸಂಪಾದಕರುಗಳು. ಗೊರೂರು ರಾಮಸ್ವಾಮಿ ಅಯ್ಯಂಗಾರ್‍, ಸಿಂಪಿ ಲಿಂಗಣ್ಣ ಹಾಗೂ ಪಿ. ಆರ್‍. ತಿಪ್ಪೇಸ್ವಾಮಿಯವರು ಸಂಪಾದಕ ಮಂಡಳಿಯ ಇತರ ಸದಸ್ಯರು. ಗೋ. ರು. ಚನ್ನಬಸಪ್ಪನವರು ವ್ಯವಸ್ಥಾಪಕ ಸಂಪಾದಕರು. ಜಾನಪದ ಪತ್ರಿಕೆಯ ಮೊದಲ ಸಂಪಾದಕೀಯದಲ್ಲಿ ಸಂಪಾದಕರು ಹೀಗೆ ನುಡಿಯುತ್ತಾರೆ. ‘ಕರ್ನಾಟಕ ಜಾನಪದ ಪರಿಷತ್ತು ತನ್ನ ಧ್ಯೇಯಧೋರಣೆಗಳಲ್ಲಿ ವಿಸ್ತಾರವಾದ, ವ್ಯಾಪಕವಾದ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದೆ. ನಾಡಿನ ಸಮಗ್ರ ಜಾನಪದ ವಿದ್ವಾಂಸರ, ಸಾಹಿತ್ಯಾಭಿಮಾನಿಗಳ ಸಹಕಾರದ ಜೊತೆಗೆ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಂಡು ಕಾರ್ಯಮಗ್ನವಾಗಲು ಈಗ ಪ್ರಕಟವಾಗುತ್ತಿರುವ ಜಾನಪದ ಪತ್ರಿಕೆ ನಾಂದಿಯಾಗುತ್ತದೆ. ಭಾರತೀಯ ಭಾಷೆಗಳಲ್ಲಿ ಜಾನಪದ ಅಧ್ಯಯನಕ್ಕೆ ಮೀಸಲಾದ ಪತ್ರಿಕೆ ಬಹುಶಃ ಇದೊಂದೇ ಎಂದು ತೋರುತ್ತದೆ. ಉತ್ತಮ ವಿದ್ವಾಂಸರಿಂದ ಜಾನಪದ ವಿಷಯಗಳ ಮೇಲೆ ಸಂಶೋಧ ನಾತ್ಮಕ ವಿಮರ್ಶಾತ್ಮಕ ಲೇಕನಗಳನ್ನೂ ಇತರ ಸಂಗ್ರಹಗಳನ್ನೂ ಜಾನಪದ ಕೃತಿ ಪರಿಚಯವನ್ನು ಮಾಡುವುದರ ಜೊತೆಗೆ ಜಾನಪದ ಸಂಗ್ರಾಹಕರಿಗೆ, ವಿದ್ಯಾರ್ಥಿಗಳಿಗೆ, ಜಾನಪದ ಅಭಿಮಾನಿಗಳಿಗೆ ಈ ನಿಟ್ಟಿನಲ್ಲಿ ಉತ್ತಮ ಸ್ಪೊರ್ತಿಯನ್ನು, ಮಾರ್ಗದರ್ಶನವನ್ನು ನೀಡಲು ನೆರವಾಗುವುದೆಂದು ಆಶಿಸಲಾಗಿದೆ. ‘ಜಾನಪದ’ ಪತ್ರಿಕೆಯ ಆರು ಪತ್ರಿಕೆಗಳು ಮೈತುಂಬಿಕೊಂಡು ಸಕಾಲಕ್ಕೆ ಬಂದವು. ೧೯೭೮ರಲ್ಲಿ ಎಂಟನೆಯ ಸಂಚಿಕೆ ಬಂದಾಗ ‘ಅರಿಕೆ’ಯಲ್ಲಿ ಸಂಪಾದಕರು ಕಳೆದ ಮೂರ್‍ನಾಲ್ಕು ವರ್ಷ ‘ಜಾನಪದ’ ನಿಲ್ಲಬೇಕಾಗಿ ಬಂದ ಪರಿಸ್ಥಿತಿಯನ್ನು ವಿವರಿಸುತ್ತ ‘ಕರ್ನಾಟಕದಲ್ಲಿ ಜಾನಪದ ಅಧ್ಯಯನಕ್ಕೆ ಒಳ್ಳೆಯ ಸ್ಫೂರ್ತಿಯನ್ನು ನೀಡಿದ್ದಇಂತಹ ಉನ್ನತ ಮಟ್ಟದ ಸಂಶೋಧನ ಪತ್ರಿಕೆ ಪ್ರಕಟವಾಗದಿದ್ದುದಕ್ಕೆ ನಾವು ವಿಷಾದಿಸುತ್ತೇವೆ. ಇನ್ನೂ ಮುಂದೆ ಈ ಪತ್ರಿಕೆಯನ್ನು ಒಂದು ವ್ಯವಸ್ಥಿತ ರೂಪದಲ್ಲಿ ತರಲು ಪ್ರಯತ್ನಿಸಲಾಗುತ್ತದೆ.’ ಎಂದರು. ಆದರೆ ‘ಜಾನಪದ’ಕ್ಕೆ ಮರಳಿ ಚಾಲನೆ ಕೊಡುವ ಪ್ರಯತ್ನ ಫಲಕಾರಿಯಾಗಿಲಿಲ್ಲ. ಎರಡನೇಬಾರಿ ‘ಜಾನಪದ’ದ ಎರಡು ಸಂಚಿಕೆಗಳು ಮಾತ್ರ ಬಂದಿವೆ.‘ಜಾನಪದ ಜಗತ್ತು’ ಕರ್ನಾಟಕ ಜಾನಪದ ಪರಿಷತ್ತಿನ ತ್ರೈಮಾಸಿಕ ಪತ್ರಿಕೆ ‘ಜಾನಪದ ಜಗತ್ತು’ ಕಳೆದ ೧೯ ವರ್ಷಗಳಿಂದ ನಿರಂತರವಾಗಿ ಪ್ರಕಟಣೆಯಲ್ಲಿರುವ ಏಕೈಕ ಜಾನಪದ ಪತ್ರಿಕೆ. ‘ಜಾನಪದಕ್ಕೆ ಮೀಸಲಾದ ಪತ್ರಿಕೆ’ ಎಂಬುದು ಈ ಪತ್ರಿಕೆಯ ಘೋಷಣೆ. ೧/೪ ಆಕಾರದ ಈ ಪತ್ರಿಕೆಯ ಪ್ರಧಾನ ಸಂಪಾದಕರು ಎಚ್. ಎಲ್. ನಾಗೇಗೌಡರು. ಸಂಪಾದಕರು ಡಿ. ಲಿಂಗಯ್ಯನವರು. (ಗಮನಿಸಿದ ಸಂಚಿಕೆ, ಸಂಪುಟ ೧೬, ಸಂಚಿಕೆ ೪, ೧೯೯೫). ‘ಮುರುಗ, ಮಲ್ಲಿಗೆ, ಜಾಜಿ ಮುಡಿಯ ಬನ್ನಿ’, ‘ಸಿರಿಗಂಧ ಸೂಸ್ಯಾವೆ’ ಖಾಯಂ ಅಂಕಣಗಳು. ೩೨ ಪುಟಗಳ ಈ ಪತ್ರಿಕೆಗೆ ಚಂದಾದರ ಎಷ್ಟೆಂಬುದನ್ನು ೧೯೯೫ರ ಸದರಿ ಸಂಚಿಕೆಯಲ್ಲಿ ನಮೂದಿಸಲಾಗಿಲ್ಲ. ಸಂಪೂರ್ಣವಾಗಿ ಜಾನಪದಕ್ಕೆ ಸಂಬಂಧಿಸಿದ ಲೇಖನಗಳನ್ನು ಮಾತ್ರ ಶಿಸ್ತುಬದ್ಧವಾಗಿ ಹೊರತರಲಾಗುವ ಈ ಪತ್ರಿಕೆ ‘ಕನಾಟಕ ಜಾನಪದ ಪರಿಷತ್ತಿನ’ ಆಶ್ರಯದಿಂದಾಗಿ ನಿರಂತರವಾಗಿ ನಡೆಯುವುದು ಸಾಧ್ಯವಾಗಿದೆಯೆನ್ನಬಹುದು.ಇಷ್ಟಾದರೂ ಈ ಪತ್ರಿಕೆ ತನ್ನ ನಡೆಯಲ್ಲಿ ಏಳುಬೀಳುಗಳನ್ನು ಎದುರಿಸಿದ್ದು ಮರೆಯುವಂಥದ್ದಲ್ಲ. ೧೯೭೯ರಲ್ಲಿ ಆರಂಭವಾದ ಈ ಪತ್ರಿಕೆಯ ಪ್ರಧಾನ ಸಂಪಾದಕ ಎಚ್. ಎಲ್ ನಾಗೇಗೌಡರು ೧೯೮೨ರ ಸಂಯುಕ್ತ ಸಂಚಿಕೆಯ ಕೊನೆಯ ಪುಟಗಳ ಮಾತಿನಲ್ಲಿ ಹೀಗೆನ್ನುತ್ತಾರೆ. "ನಮ್ಮ ಪತ್ರಿಕೆಗೆ ಮೂರು ವರ್ಷಗಳು ತುಂಬಿದವು. ಮೊದಲೆರಡು ವರ್ಷ ಇದನ್ನು ಎರಡು ತಿಂಗಳಿಗೊಂದರಂತೆ ತಂದೆವು. ಮೂರನೇಯ ವರ್ಷ ಮೂರು ತಿಂಗಳಿಗೊಂದರಂತೆ ತಂದೆವು. ಇಷ್ಟು ಉತ್ತಮವಾದ ವಿಷಯ, ಓರಣ ಮುದ್ರಣಗಲನ್ನುಳ್ಳ ಪತ್ರಿಕೆಗೆ ತಕ್ಕ ಪ್ರೋತ್ಸಾಹ ಇಲ್ಲದಿರುವುದು ವ್ಯಸನದ ಸಂಗತಿ. ಕೇವಲ ಜಾಹೀರಾತುಗಳಿಂದ ಎಷ್ಟು ದಿನ ಪತ್ರಿಕೆ ನಡೆಸಲು ಸಾಧ್ಯ? ಕೊಡುವವರು ಯಾರು ? ಎಷ್ಟು ಕೊಟ್ಟಾರು ? ಪತ್ರಿಕೆಯನ್ನು ನಿಲ್ಲಿಸುವ ಅಲೋಚನೆ ಮಾಡಿದೆವು. ಆದರೆ ಟ್ರಸ್ಟಿನ ಆಡಳಿತ ಮಂಡಳಿಯು ಇತ್ತೀಚೆಗೆ ಸಭೆಸೇರಿ ಪತ್ರಿಕೆ ನಿಲ್ಲಿಸುವುದು ಬೇಡ, ಇಂಥ ಪತ್ರಿಕೆ ಆರು ತಿಂಗಳಿಗೊಂದರಂತೆ ಬಂದರೂ ಚಿಂತೆಯಿಲ್ಲ. ಮುಂದುವರೆಸಿಕೊಂಡು ಹೋಗಬೇಕೆಂದು ತೀರ್ಮಾನ ಕೈಗೊಂಡರು. ಈ ತೀರ್ಮಾನದಂತೆ ೧೯೮೩ನೆಯ ಜನವರಿಯಿಂದ ವರ್ಷಕ್ಕೆ ಎರಡು ಪತ್ರಿಕೆಗಳನ್ನು ಪ್ರಕಟಿಸಲಾಗುವುದು."‘ರಂಗತೋರಣ’ ಕನ್ನಡದಲ್ಲಿ ಪ್ರಕಟಗೊಂಡ ಹಾಗೂ ಈವರೆಗೆ ಪ್ರಕಟಗೊಳ್ಳುತ್ತಿರುವ ರಂಗಪತ್ರಿಕೆಗಳಲ್ಲಿ ಕಳೆದ ೧೩ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಏಕೈಕ ಪತ್ರಿಕೆಯೆಂದರೆ ಧಾರವಾಡದ ‘ರಂಗತೋರಣ’. ಕ್ರೋಧನ ಸಂವತ್ಸರದ ಅಕ್ಷಯ ತೃತೀಯ ದಿನದಂದು ಅಂದರೆ ಏಪ್ರಿಲ್ ೨೩, ೧೯೮೫ರಂದು ಆರಂಭಗೊಂಡ ‘ರಂಗತೋರಣ’ ನಾಟಕಕ್ಕಾಗಿ ಮೀಸಲಾದ ಮಾಸಿಕ ವೆಂದು ಘಂಟಾಘೋಷವಾಗಿ ಹೇಳಿಕೊಂಡು, ಅಕ್ಷರಶಃ ಪತ್ರಿಕೆಯಲ್ಲಿ ಪಾಲಿಸಿಕೊಂಡು ಬರುತ್ತಿದೆ. ಧಾರವಾಡದ ಹಿರಿಯ ನಾಟಕ ಕರ್ಮಿ ವಿರೂಪಾಕ್ಷ ನಾಯಕರು ಈ ಪತ್ರಿಕೆಯ ಸಂಪಾದಕರು ಹಾಗೂ ಬಂಡೂಕುಲಕರ್ಣಿ ನಿರ್ವಾಹಕರು.ರಂಗತೋರಣದ ವೈಶಿಷ್ಟೈವೆಂದರೆ ಸಂಪಾದಕರು ಸಂದರ್ಶನದ ವೇಳೆ ತಿಳಿಸಿದಂತೆ ಕಳೆದ ೧೩ ವರ್ಷಗಳಿಂದಲೂ ತಪ್ಪದೇ ಪ್ರತಿ ತಿಂಗಳು ಒಂದನೇ ತಾರೀಖಿಗೆ ‘ರಂಗತೋರಣ’ ಹೊರಬಂದಿರುವುದು. ಯಾವುದೇ ರಂಗ ಪತ್ರಿಕೆಗೂ ಈ ದಾಖಲೆಯಿಲ್ಲ. ಅವರೇ ಹೇಳುವಂತೆ ಪ್ರತಿ ತಿಂಗಳು ಪತ್ರಿಕೆ ತಪ್ಪದೇ ಬರುತ್ತಿದೆ ಎಂದಾಕ್ಷಣ ಪತ್ರಿಕೆ ತನ್ನ ಕಾಲ ಮೇಲೆ ತಾನು ನಿಂತು ನಡೆಯುತ್ತಿದೆಯೆಂಬ ಅರ್ಥವಲ್ಲ. ಪ್ರತಿ ತಿಂಗಳು ಪತ್ರಿಕೆಗೆ ಹಣ ಹೊಂದಿಸುವ ಕಷ್ಟ, ಅಷ್ಟೇ ಮುಖ್ಯವಾಗಿ ಲೇಖನಗಳನ್ನು ಹೊಂದಿಸುವ ಕಷ್ಟ ಸಂಪಾದಕರಿಗೆ ಎದುರಾಗಿದೆ. ವಿರೂಪಾಕ್ಷ ನಾಯಕರು ಹೇಳುವಂತೆ ರಂಗಭೂಮಿಗೆ ಮೀಸಲಾದ ಪತ್ರಿಕೆಯೊಂದಕ್ಕೆ ಹಣವನ್ನಾದರೂ ಕೈಯಿಂದ ಹಾಕಬಹುದು ಆದರೆ ನಾಟಕಕ್ಕೆ ಸಂಬಂಧಿಸಿದ ಲೇಖನಗಳನ್ನು ಸಂಗ್ರಹಿಸುವುದೇ ದೊಡ್ಡ ಸಾಹಸ. ‘ರಂಗತೋರಣ’ ತಪ್ಪದೇ ಪ್ರಕಟಗೊಳ್ಳುತ್ತಿದ್ದರೂ ಸ್ವಾವಲಂಬನೆ ಸಾಧ್ಯವಾಗಿಲ್ಲ. ಪತ್ರಿಕೆಯ ಬರವಣಿಗೆ ಹಾಗೂ ಲೇಖನ ಸಂಗ್ರಹ ಕೆಲಸವನ್ನು ವಿರೂಪಾಕ್ಷ ನಾಯಕರು ತಮ್ಮ ಸ್ನೇಹಿತರಾದ ಬಂಡೂ ಕುಲಕರ್ಣಿ, ಬಾಳಣ್ಣಾ ಶೀಗೇಹಳ್ಳಿ ಮುಂತಾದವರ ಸಹಾಯದಿಂದ ಮಾಡುತ್ತಾರೆ. ಲೆಟರ್‍ ಪ್ರೆಸ್‌ನಲ್ಲಿ ಪ್ರಿಂಟಾಗುತ್ತದೆ. ಚಂದಾದಾರರ ವಿಳಾಸ ಬರೆದು ಕಳುಹಿಸುವ ಕೆಲಸವನ್ನು ಮನೆಯವರೆಲ್ಲಾ ಮಾಡುತ್ತಾರೆ. ಪ್ರತಿಕೆಗಾಗಿ ಯಾರೊಬ್ಬರೂ ನೇಮಕಗೊಂಡಿಲ್ಲ. ಕಾಡಿ ಬೇಡಿ ಲೇಖನಗಳನ್ನು ಪಡೆದರೂ ಪ್ರಕಟಿತ ಲೇಖನಕ್ಕೆ ಸಂಭಾವನೆಯನ್ನು ಲೇಖಕರಿಗೆ ಕೊಡಲು ಈವರೆಗೂ ಸಾಧ್ಯವಾಗಿಲ್ಲ. ಚಂದಾದಾರರು ಸರಿಯಾಗಿ ಹಣ ಕಳಿಸುವುದಿಲ್ಲ. ಹಾಗಂತ ಪತ್ರಿಕೆ ಕಳಿಸುವುದು ನಿಲ್ಲಿಸಿದರೆ ಪ್ರಸಾರವೇ ಕಡಿಮೆಯಾಗಿ ಬಿಡುತ್ತದೆ. ಹೀಗಾಗಿ ಒಮ್ಮೆ ಚಂದಾದಾರರಾದವರಿಗೆ ಪತ್ರಿಕೆಯನ್ನು ಕಳಿಸಿ, ಹಣವನ್ನು ಕಳಿಸುವಂತೆ ಮೇಲಿಂದ ಮೇಲೆ ಕಾರ್ಡು ಬರೆಯಲಾಗುತ್ತದೆ. ಚಂದಾದಾರರು ಕೊಟ್ಟಾಗ ಹಣ ಪಡೆಯಲಾಗುತ್ತದೆ. ಅಂತೂ ಎರಡು ಸಾವಿರ ಪ್ರತಿಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಪತ್ರಿಕೆಯ ಮೂಲಕ ಹಾಗೂ ರಂಗಭೂಮಿಗೆ ವಿರೂಪಾಕ್ಷ ನಾಯಕರು ನೀಡಿದ ಒಟ್ಟು ಕೊಡುಗೆಯನ್ನು ಗುರುತಿಸಿ ರಾಜ್ಯ ನಾಟಕ ಅಕಾಡಮಿಯು ವಿರೂಪಾಕ್ಷ ನಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ರಂಗತೋರಣವು ಹವ್ಯಾಸಿ ರಂಗಭೂಮಿಗೆ ಹೇಗೋ ವೃತ್ತಿ ರಂಗ ಭೂಮಿಗೂ ಹಾಗೆಯೇ ಆದ್ಯತೆ ನೀಡಿ ಲೇಖನಗಳನ್ನು ಪ್ರಕಟಿಸುತ್ತದೆ. ರಂಗತೋರಣದ ನೂರನೆಯ ಸಂಚಿಕೆಯನ್ನು ೧೯೯೩ರಲ್ಲಿ ವೃತ್ತಿ ಕಲಾವಿದೆಯರ ವಿಶೇಷಾಂಕವನ್ನಾಗಿ ಹೊರತರಲಾಗಿತ್ತು. ಮುಖ್ಯವಾಗಿ ಉತ್ತರ ಕರ್ನಾಟಕದ ರಂಗಭೂಮಿಯ ಚಟುವಟಿಕೆಗಳನ್ನು ದಾಖಲಿಸಲು ‘ರಂಗತೋರಣ’ವು ಸಮರ್ಪಕ ವೇದಿಕೆಯಾಗಿ ಉಳಿದುಕೊಂಡಿದೆ. ಆದರೆ ಪತ್ರಿಕೆ ಆರಂಭಗೊಂಡು ಹದಿಮೂರು ವರ್ಷಗಳ ಬಳಿಕವೂ ಪತ್ರಿಕೆ ಸ್ವಾವಲಂಬಿಯಾಗದೇ, ತಾನು ‘ರಂಗತೋರಣದ ವಿರೂಪಾಕ್ಷ ನಾಯಕ’ ಜನ ಗುರುತಿಸಿದ್ದು ಸಾರ್ಥಕವಾಗಬೇಕು ಎಂಬ ನಾಯಕರ ಹಠಕ್ಕಾಗಿ ಮಾತ್ರವೇ ಪತ್ರಿಕೆ ಉಳಿದುಕೊಂಡಿರುವುದು ಉಲ್ಲೇಖಿಸಬೇಕಾದ ವಿಷಯ.ಒಟ್ಟಾರೆ ಸಂಖ್ಯೆಯಲ್ಲಿ ಇನ್ನೂ ಅನೇಕ ಪತ್ರಿಕೆಗಳು ರಂಗಭೂಮಿಗೆ ಮೀಸಲೆಂದು ಘೋಷಿಸಿಕೊಂಡು ಕನ್ನಡದಲ್ಲಿ ಬಂದಿವೆ. ಇವುಗಳಲ್ಲಿ ಹೆಚ್ಚಿನವು ನೋಂದಣಿ ಕೂಡಾ ಮಾಡಿಸಲಿಲ್ಲ ಅಥವಾ ಅದಕ್ಕೂ ಮೊದಲೇ ಸಾವನ್ನಪ್ಪಿವೆ. ‘ಮಾತುಕತೆ’ ಹೀಗೆ ಸಂಸ್ಥೆಗಳ ಮುಖವಾಣಿಯಾಗಿ ಹಾಗೂ ಆ ಸಂಸ್ಥೆಯ ಚಟುವಟಿಕೆಗಳ ದಾಖಲೆಗಾಗಿ ರಂಗಭೂಮಿಗೆ ಸಂಬಂಧಿಸಿದ ಸಂಸ್ಥೆಗಳಿಂದ ಹೊರಬರುತ್ತಿರುವ ಪತ್ರಿಕೆಗಳಲ್ಲಿ ನೀನಾಸಂ ಮಾತುಕತೆ ಪ್ರತ್ಯೇಕವಾಗಿ ನಿಲ್ಲುತ್ತದೆ. ೧೯೮೫ರಲ್ಲಿ ಆರಂಭವಾದ ಖಾಸಗಿ ಪ್ರಸಾರದ ಈ ಪತ್ರಿಕೆಗೆ ಯಶವಂತ ಜಾಧವ್ ಸಂಪಾದಕರು. ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಹಳ್ಳಿ. ನೀನಾಸಂ ಎಂದು ಕೊಡಲೇ ನೆನಪಿಗೆ ಬರುವುದು ಅದರ ಅಧ್ವರ್ಯ ಕೆ. ವಿ. ಸುಬ್ಬಣ್ಣನವರುದು. ನೀನಾಸಂ ನಾಟಕ ಶಾಲೆ, ನೀನಾಸಂ ರಂಗ ಮಂದಿರ, ನೀನಾಸಂ ಸಂಸ್ಕೃತಿ ಶಿಬಿರ, ನೀನಾಸಂ ತಿರುಗಾಟ, ಒಟ್ಟಾರೆ ಕನ್ನಡ ಸಾಂಸ್ಕೃತಿಕ ನಕ್ಷೆಯಲ್ಲಿ ಹೆಗ್ಗೋಡು ಎಂಬ ಹಳ್ಳಿಗೆ ಸ್ಥಾನವಿರುವ ಹಾಗೇ ನೀನಾಸಂಗೆ ವಿಶಿಷ್ಟ ಸ್ಥಾನವಿದೆ. ಹಳ್ಳಿಯಲ್ಲಿದ್ದುಕೊಂಡು ರಂಗಭೂಮಿಗೆ ಕೆ. ವಿ. ಸುಬ್ಬಣ್ಣ ಸಲ್ಲಿಸಿದ ಸೇವೆಗಾಗಿ ಅವರಿಗೆ ಮ್ಯಾಗ್‌ಸೆಸೇ ಪ್ರಶಸ್ತಿ ಪ್ರಾಪ್ತವಾಗಿದೆ. ನಿರಂತರವಾಗಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನೀನಾಸಂನಲ್ಲಿ ನಡೆಯುವ ಕೆಲಸಗಳನ್ನು ಆಸಕ್ತರು ಹಾಗೂ ಸ್ನೇಹಿತರಿಗೆ ತಲುಪಿಸುವ ಉದ್ದೇಶದಿಂದ ಆರಂಭವಾದ ಮಾತುಕತೆ ಇಂದು ರಂಗಭೂಮಿಯ ಪತ್ರಿಕೆಯೇ ಎಂದು ಕರೆಯಬಹುದಾದಷ್ಟರ ಮಟ್ಟಿಗೆ ತನ್ನ ಸೀಮಿತ ಚೌಕಟ್ಟಿನಲ್ಲಿ ಶಿಸ್ತಿನ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಒಂದು ಸಂಸ್ಥೆಯ ‘ಮಾತುಕತೆ’ಯಾದರೂ ನೀನಾಸಂನ ಈ ಖಾಸಗೀ ಪ್ರಸಾರದ ಪತ್ರಿಕೆಯನ್ನು ರಂಗಭೂಮಿಯ ಪತ್ರಿಕೆಯೆಂದೇ ರಂಗವಲಯಗಳಲ್ಲಿ ಗುರುತಿಸಲಾಗುತ್ತಿದೆ. ಡಾ. ಎಚ್. ಎ. ಪಾರ್ಶ್ವನಾಥರ ಮಾತುಗಳನ್ನು ಈ ಹಿನ್ನಲೆಯಲ್ಲಿ ಗಮನಿಸಬಹುದು. ‘ಇಂಡಿಯಾದ ಪ್ರಮುಖ ರಂಗ ಶಿಕ್ಷಣ ಕೇಂದ್ರಗಳಲ್ಲೊಂದಾದ ಹೆಗ್ಗೋಡಿನ ನೀಲಕಂಠೇಶ್ವರ ನಾಟಕ ಸಂಘಟವು (ನೀನಾಸಂ) ಸಹೃದಯರ ಮಧ್ಯೆ ಸಂಪರ್ಕದ ಇನ್ನೊಂದು ಸಾಧನವಾಗಿ ಮತ್ತು ಸಂಷಕದ ಎಲ್ಲ ಸಾಧನಗಳನ್ನು ಸಮರ್ಥವಾಗಿ ದುಡಿಸಿಕೊಂಡು ಹೊಸ ಸಮಾಜ ನಿರ್ಮಿಸುವ ಪ್ರಯತ್ನದಲ್ಲಿ ತನ್ನ ಅಳಿಲುಗೆಯ್ಮೆ ಸಲ್ಲಿಸುವ ಹಂಬಲವನ್ನೊತ್ತಿ ‘ಮಾತುಕತೆ’ ಎಂಬ ಖಾಸಗೀ ಪ್ರಸಾರದ ಕುಶಲ ಸಂಭಾಷಣೆಯ ತ್ರೈಮಾಸಿಕವನ್ನು ಫೆಬ್ರವರಿ ೧೯೮೭ರ ಲಾಗಾಯ್ತು ಜಶವಂತ ಜಾಧವ್ ಅವರ ಸಂಪಾದಕತ್ವದಲ್ಲಿ ಪ್ರಕಟಿಸುತ್ತದೆ.‘ಜಾನಪದ ಗಂಗೋತ್ರಿ’ಈಗ ಪ್ರಕಟಣೆಯಲ್ಲಿರುವ ಪತ್ರಿಕೆಗಳಲ್ಲಿ ‘ಜಾನಪದ ಗಂಗೊತ್ರಿ’ ವರ್ಣಮಯ ಮುಖಪುಟವನ್ನು ಹೊಂದಿ, ವಿದ್ವತ್‌ಪೂರ್ಣ ಲೇಖನಗಳನ್ನು ಒಳಗೊಂಡು ಬರುತ್ತಿರುವ ತ್ರೈಮಾಸಿಕ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಆಶ್ರಯದಲ್ಲಿ ಹೊರಬರುತ್ತಿರುವ ಜಾನಪದ ಗಂಗೋತ್ರಿ ಪ್ರಕಟಣೆಯನ್ನಾರಂಭಿಸಿದ್ದು ೧೯೮೬ರಲ್ಲಿ. ೧/೮ ಡೆಮಿ ಆಕಾರದ ಸುಮಾರು ೯೬-೧೨೦ ಪುಟಗಳ ಪತ್ರಿಕೆಗೆ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಅಧ್ಯಕ್ಷರು ಪ್ರಧಾನ ಸಂಪಾದಕರು. ಇದರ ಮೊದಲ ಸಂಪಾದಕರು ಅಕಾಡಮಿಯ ಮಾಜಿ ಸದಸ್ಯ ಹ. ಕ.ರಾಜೇಗೌಡರು. ಸರ್ಕಾರಿ ಅನುದಾನಿತ ಸಂಸ್ಥೆಯಾದ ಜಾನಪದ ಮತ್ತು ಯಕ್ಷಗಾನ ಅಕಾಡಮಿಯೇ ಜಾನಪದ ಗಂಗೋತ್ರಿಯ ಪ್ರಕಾಶನ ಸಂಸ್ಥೆಯಾದ್ದರಿಂದ ಚಂದಾದಾರರ ಸಹಕಾರದ ಮೇಲೆ ಪತ್ರಿಕೆ ನಡೆಯುವ ಸ್ಥಿತಿಯಿಲ್ಲ. ಹೀಗಾಗಿಯೇ ಪತ್ರಿಕೆಗೆ ಸಮಾರ್ಪಕವಾದ ಹಾಗೂ ವೃತ್ತಿಪರವಾದ ಮಾರಾಟ ವ್ಯವಸ್ಥೆ ಇಲ್ಲದಿದ್ದರೂ ಕಳೆದ ೧೨ ವರ್ಷಗಳಿಂದ (೧೯೮೬-೯೮) ಪ್ರಕಟಣೆಯಲ್ಲಿರುವುದು ಸಾಧ್ಯವಾಗದೆ. ಜಾನಪದಕ್ಕೆ ಸಂಬಂಧಪಟ್ಟ ಲೇಖನಗಳೂ, ಅಕಾಡಮಿಯ ಚಟುವಟಿಕೆಗಳೂ ಇಲ್ಲಿ ಬೆಳಕು ಕಾಣುತ್ತವೆ. ‘ಪ್ರಸಂಗ’ ಉಡುಪಿಯ ಯಕ್ಷಗಾನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಹೊರತರಲಾಗುವ ದ್ವಿಭಾಷಾ ಪತ್ರಿಕೆ ಪ್ರಸಂಗವು ಮೂಲತಃ ಸಂಸ್ಥೆಯ ವಾರ್ತಾಪತ್ರ. ಸಂಸ್ಥೆಯ ಜಾನಪದಕ್ಕೆ ಸಂಬಂಧಿಸಿದ ಚಟುವಟಿಕೆಗಳ ವರದಿ ಮಾಡುವುದರ ಜೊತೆಗೆ ಜಾನಪದಕ್ಕೆ ಸಂಬಂಧಿಸಿದ ಇತರ ವಿಷಯಗಳನ್ನೂ ಪ್ರಕಟಿಸುವುದುರಿಂದ ಜಾನಪದ ಪತ್ರಿಕೆಗಳ ಸಾಲಿನಲ್ಲಿ ಸೇರಿಸಬಹುದಾಗಿದೆ. ‘ಕ್ಯಾನ್ವಾಸ್’ ಕ್ಯಾನ್ವಾಸ್ ‘ಕಲಾ ಮ್ಯಾಧ್ಯಮಗಳ ಚಿಂತನೆಗೆ ಮೀಸಲಾದ ಏಕೈಕ ದ್ವೈಮಾಸಿಕ’ವೆಂದು ತನ್ನನ್ನು ಕರೆದುಕೊಂಡಿದ್ದು ೧೯೮೯ರ ಡಿಸೆಂಬರ್‌ನಲ್ಲಿ ಮೊದಲ ಸಂಚಿಕೆ ಬೆಳಕು ಕಂಡಿತು. ಎಂ. ಎಸ್. ಮೂರ್ತಿ ಸಂಪಾದಕರಾಗಿದ್ದು ವೇಣುಗೋಪಾಲ ಸೊರಬ, ನಾ. ಸೂರ್ಯ ನಾರಾಯಣ ರಾವ್ ಹಾಗೂ ರತ್ನ ಎಸ್ ಮೂರ್ತಿ ಸಹಕಾರ ನೀಡುತ್ತಿದ್ದರು. ಸಂಪುಟ ೨ರ ಜುಲೈ ಆಗಸ್ಟ್ ೧೯೯೧ರ ಸಂಚಿಕೆಯನ್ನೂ ೨, ೩, ೪ ಹೀಗೆ ಸಂಯುಕ್ತ ಸಂಚಿಕೆಯಾಗಿ ಹೊರತಂದ ಸಂಪಾದಕರು ಪತ್ರಿಕೆ ನಡೆಸುವ ಕಷ್ಟವನ್ನು ‘ಓದುಗರಲ್ಲಿ’ ಎಂಬ ಮೂಲಕ ತೋಡಿಕೊಂಡಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಸೀಮಿತ ಓದುಗರ ಸಹಕಾರವನ್ನೇ ನಂಬಿ ಪತ್ರಿಕೆ ತರುವುದು ಕಷ್ಟಕರವಾದುದು. ಹಾಗಾಗಿ ‘ಕ್ಯಾನ್ವಾಸ್’ ಸಂಚಿಕೆ ಸಂಯುಕ್ತ ಸಂಚಿಕೆಯಾಗಿ ಬರುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದ್ದೇ. ಆದರೆ ಹಣವಿಲ್ಲದೇ ಪತ್ರಿಕೆ ಮಾಡಾಲಾಗದು. ದಯವಿಟ್ಟು ಈ ಬಗ್ಗೆ ಎಲ್ಲ ಓದುಗರೂ ನಿರ್ಧಾರ ತಳೆದು ಹಣಕಳಿಸಿ ಊಳಿದವರೂ ಚಂದಾದಾರರಾಗಲು ತಿಳಿಸಿ ಸಹಕರಿಸಿ ಎಂದು ವಿನಂತಿಸುತ್ತಿದ್ದೇವೆ.ಹಾಗೇ ಇದುವರೆಗೂ ‘ಕ್ಯಾನ್ವಾಸ್’ ನಂತಹ ಪತ್ರಿಕೆ ಜೀವಂತವಿರಲು ಕಾರಣರಾದ ಕೆಲವೆ ಮಿತ್ರರು ತಮ್ಮ ಚಂದಾ ನೀಡಿದ್ದಾರೆ ಮತ್ತು ಅದಕ್ಕಿಂತಲೂ ಅಮೂಲ್ಯವಾದ ಆತ್ಮೀಯತೆಯಿಂದ ನಮ್ಮೊಂದಿಗಿದ್ದಾರೆ. ಅವರಲ್ಲಿ ಕ್ಯಾನ್ವಾಸ್ ತಡವಾದುದುಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ.ಸಂಪಾದಕರ ಮನವಿ ಫಲನೀಡಲಿಲ್ಲ. ಹಣವಿಲ್ಲದೇ ಪತ್ರಿಕೆಯನ್ನು ನಿಯತವಾಗಿ ಹೊರ ತರಲಾಗುತ್ತಿಲ್ಲ. ಆದರೂ ಕಲಾ ಮಾಧ್ಯಮಗಳ ಚಿಂತನೆಗೆ ‘ಕ್ಯಾನ್ವಾಸ್’ ಮುಖ್ಯ ವೇದಿಕೆ ಯಾಗುವುದನ್ನು ಗಮನಿಸಬೇಕು. ಸಂಪುಟ ೨ರ ೨, ೩, ೪ ಸಂಯುಕ್ತ ಸಂಚಿಕೆಗಳಲ್ಲಿ ಬಂದ ವಿಷಯಗಳನ್ನು ಈ ನಿಟ್ಟಿನಲ್ಲಿ ಗಮನಿಸಬೇಕು. ಗ್ಯಾಲರಿ ಅಂಕಣದಲ್ಲಿ ಬೆಂಗಳೂರಿನ ಆರ್ಟ್‌ಗ್ಯಾಲರಿಗಳ ವಿವರಗಳಿವೆ. ‘ಭಾವಚಿತ್ರ’ದಲ್ಲಿ ಕಲಾವಿದ ವಾಸುದೇವ್ ಅವರ ಆತ್ಮ ಕಥನ, ಅಂಕಣದಲ್ಲಿ ‘ಪ್ರತಿಸೃಷ್ಟಿಯ ಅಂತರ’ ತಿಂಗಳ ಲೇಖನ ಶೀರ್ಷಿಕೆಯಡಿ ಕಟ್ಟಂಗೇರಿ ಕೃಷ್ಣಹೆಬ್ಬಾರ ‘ಕಲೆ ಮತ್ತು ಬದುಕು’ ಪುಸ್ತಕದ ವಿಮರ್ಶೆ, ಕಲಾಕೃತಿಗಳನ್ನು ನೋಡುವುದು ಹೇಗೆ ? ಎಂಬ ಲೇಖನ, ‘ಸೃಷ್ಟಿ’ ಅಂಕಣದಲ್ಲಿ ಕವನ, ಇವಿಷ್ಟು ಸರಕುಗಳಿವೆ. ಗ್ಯಾಲರಿ, ಭಾವಚಿತ್ರ, ಚಿಂತನ, ಅಂಕಣ, ಸುದ್ದಿ, ಹತ್ತು ಪ್ರಶ್ನೆಗಳು, ಸಿಂಚನ, ಉದ್ಯಮಗಳಲ್ಲಿ ಹಾಗೂ ಸೃಷ್ಟಿ ಇವು ಕ್ಯಾನ್ವಾಸ್‌ನಲ್ಲಿರುವ ಅಂಕಣಗಳು. ಕ್ರೌನ್ ಆಕಾರದ ಪತ್ರಿಕೆಯ ವಾರ್ಷಿಕ ಚಂದಾ ೧೯೮೯ರಲ್ಲಿ ೫೦ ರೂಪಾಯಿ. ೩೨ ಪುಟಗಳ ಕ್ಯಾನ್ವಾಸಿಗೆ ಅರ್ಧ, ಕಾಲು ಪುಟದ ಜಾಹೀರಾತುಗಳು ಶುಭಾಶಯ ರೂಪದಲ್ಲಿ ದೊರೆತಿವೆ. ಮೊದಲ ಸಂಚಿಕೆಯಲ್ಲಿ ಹಿರಿಯ ಕಲಾವಿದ ವಾಸುದೇವ್‌ರವರು ಕ್ಯಾನ್ವಾಸ್‌ಗಾಗಿ ರಚಿಸಿದ ‘ಸೆಂಗ್ರಾಫ್‌ ಚಿತ್ರವನ್ನು ಮುದ್ರಿಸಲಾಗಿದೆ.ಮೊದಲ ಸಂಚಿಕೆಗೆ ಶುಭಾಶಯ ರೂಪದಲ್ಲಿ ಡಾ. ಕಾಸರವಳ್ಳಿ ಜಿ. ರವೀಶ್‌ರವರು ಬರೆದ ಪತ್ರ ಕಲಾ ಪತ್ರಿಕೆಗಳ ಸ್ಥಿತಿಗತಿಗೆ ಕನ್ನಡಿ ಹಿಡಿಯುವಂತಿದೆ. ಅದರಲ್ಲಿ ಅವರು ‘ಹತ್ತು ವರ್ಷಗಳ ಹಿಂದೆ ನಾನು ಚಿತ್ರಕಲೆಗೆಂದೇ ಮಾಡೆಲ್ ಆದ ಪತ್ರಿಕೆ ಹೊರಡಿಸುತ್ತಿದ್ದೆ. ಆಮೇಲೆ ಭ್ರಮನಿರಸನವಾಗಿ ಕೈ ಬಿಟ್ಟೆ. ನಮ್ಮ ಜನಸಾಮಾನ್ಯರಿಗಿರುವಷ್ಟು ಕಾಳಜಿ ಕಲಾವಿದರಿಗಿಲ್ಲ. ಆಳಿದ ಮೇಲೆ ಅಂಥ ಪತ್ರಿಕೆಗಳಿಗೆ ಅರ್ಥವಿಲ್ಲ ಎನಿಸಿತು ಎಂದಿದ್ದಾರೆ. ‘ರಾಶಿ’

‘ರಾಶಿ’ ಎಂಬುದು ತುಳು ಜಾನಪದ ಕುರಿತಂತೆ ಕನ್ನಡದಲ್ಲಿ ಪ್ರಕಟಗೊಳ್ಳುವ ಪತ್ರಿಕೆ. ೧೯೮೯ರಲ್ಲಿ ಆರಂಭವಾದ ಈ ಪತ್ರಿಕೆಗೆ ಗಣನಾಥ ಎಕ್ಕಾರು ಹಾಗೂ ಪದ್ಮನಾಭ ಭಟ್ ಎಕ್ಕಾರು ಸಂಪಾದಕರು. ಕ್ರೌನ್ ೧/೪ ಆಕಾರದ ಈ ಪತ್ರಿಕೆಗೆ ೧೯೯೦ರಲ್ಲಿ ವಾರ್ಷಿಕ ಚಂದಾ ೨೦ ರೂಪಾಯಿ.ರಾಶಿ ಸಂಪುಟ ೧, ಸಂಚಿಕೆ ೧೨ರಲ್ಲಿ ‘ನಿಮ್ಮ ಅಂತರಂಗದೊಂದಿಗೆ’ ಎಂಬ ಸಂಪಾದಕೀಯದಲ್ಲಿ ಹೇಳುವ ಮಾತು ಒಟ್ಟೂ ನಮ್ಮ ಕಲೆ ಸಾಹಿತ್ಯ ಪತ್ರಿಕೋದ್ಯಮದ ದೃಷ್ಟಿಯಿಂದ ಗಮನಾರ್ಹವಾದುದು. ‘ಕಳೆದ ವರ್ಷ ಪ್ರಕಟಣೆಯಲ್ಲಿ ತುಸು ಅವ್ಯವಸ್ಥೆಯೂ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಪತ್ರಿಕೋದ್ಯಮವೇ ನಮ್ಮ ಉದ್ಯೋಗವಲ್ಲ. ಕೇವಲ ಆಸಕ್ತಿ ಮಾತ್ರ ಎಂಬುದರಿಂದ ಇಂಥ ತಪ್ಪುಗಳು ಕ್ಷಮ್ಯವೆಂದೇ ನಮ್ಮ ನಂಬಿಕೆ. ‘ಭರತರಂಗ ಚೇತನ’ ‘ಭರತರಂಗ ಚೇತನ’ವೆಂಬುದು ಮೈಸೂರಿನಿಂದ ೧೯೯೨ನೇ ಜನವರಿ ತಿಂಗಳಲ್ಲಿ ಆರಂಭಗೊಂಡ ಕಲಾ ಮಾಸ ಪತ್ರಿಕೆ. ರಂಗ ನಿರ್ದೇಶಕ ಹಾಗೂ ನಟ ಆರ್‍. ಜಯರಾಂ ಇದರ ಸಂಪಾದಕರು. ಹಿರಿಯ ಕಲಾವಿದ ಹಾಗೂ ಅಂದಿನ ಲಲಿತಕಲಾ ಅಕಾಡಮಿಯ ಅಧ್ಯಕ್ಷರಾದ ಪಿ. ಆರ್‍. ತಿಪ್ಪೇಸ್ವಾಮಿಯವರನ್ನು ಗೌರವ ಸಂಪಾದಕರೆಂದು ಹೆಸರಿಸಲಾಗಿತ್ತು. ಕೆಲವು ಸಂಚಿಕೆಗಳು ಮಾತ್ರ ನಿಯತವಾಗಿ ಹೊರಬಂದವು.‘ಸಂಕುಲ’ ‘ಸಂಕುಲ’-ಕನ್ನಡ ಕಲಾ ಪತ್ರಿಕೆಗಳ ಚರಿತ್ರೆಯಲ್ಲೇ ವರ್ಣರಂಜಿತ ಪುಟಗಳಿಂದೊಡಗೂಡಿ ಬಂದ ಏಕೈಕ ಪತ್ರಿಕೆ. ೧೯೯೩ರಲ್ಲಿ ಮೊದಲ ಸಂಚಿಕೆ ಬಂದ ಸಂಕುಲ - ‘ಲಲಿತ ಕಲೆಗಳ ಮಾಸಿಕ’ಕ್ಕೆ ಬೆಂಗಳೂರಿನ ಪತ್ರಿಕೋದ್ಯಮ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹಿರಿಯರಾದ ಡಾ. ವಿಜಯಾ ಸಂಪಾದಕರು. ೧/೪ ಡೆಮಿ ಗಾತ್ರದ ಬಹುವರ್ಣದ, ಆರ್ಟ್ ಪೇಪರಿನ ಮುಖಪುಟ-ಹಿಂಬದಿ ಪುಟ, ಕಲಾ ಪತ್ರಿಕೆಯೊಂದು ಇಷ್ಟು ಶ್ರೀಮಂತವಾಗಿ ಸಮೃದ್ಧವಾಗಿ ಹೊರಬರಲು ಸಾಧ್ಯವೇ ಎಂದು ಓದುಗರು ಹುಬ್ಬೇರಿಸುವಂತೆ ಮಾಡಿತು. ಸಂಪಾದಕಿ ವಿಜಯಾ ಅವರಿಗೆ ಪತ್ರಿಕೋದ್ಯಮದ ಎಲ್ಲ ಮುಖಗಳ ಪರಿಚಯವಿದೆ. ಸಂಕುಲ ಎಲ್ಲಾ ಕಲೆಗಳಿಗೂ ಸಮಾನ ಆದ್ಯತೆಯನ್ನು ನೀಡುತ್ತಾ ಬಂದಿದೆ. ಇಂಥಾ ಪತ್ರಿಕೆಗಳನ್ನು ನಡೆಸಿದರೆ ಕೈ ಸುಟ್ಟುಕೊಳ್ಳವುದು ಖಂಡಿತವೆಂದು ಗೊತ್ತಿದ್ದರೂ ಹಠದಿಂದ ಐದು ವರ್ಷ ನಡೆಸುವುದಾಗಿ ಸಂಪಾದಕರು ಸಂದರ್ಶನದ ವೇಳೆ ನುಡಿದರು. ಸಂಪಾದಕರಿಗೆ ಅವರದ್ದೇ ಆದ ಮುದ್ರಣಾಲಯವೂ ಪ್ರಕಾಶನವೂ ಇರುವುದು ಇಷ್ಟು ಕಾಲವಾದರೂ ಪತ್ರಿಕೆಯನ್ನು ನಡೆಸಲು ಸಹಾಯಮಾಡಿತ್ತೆನ್ನಬೇಕು. ಸಿನಿಮಾ ಲೋಕದ ಜಾಹೀರಾತು ಹಾಗೂ ಆರ್ಥಿಕ ಸಹಾಯ, ಸಂಪಾದಕೀಯ ಪ್ರಭಾವದಿಂದಾಗಿ ಈ ಪತ್ರಿಕೆಗೆ ದಕ್ಕಿದ್ದು ಪತ್ರಿಕೆ ಉಳಿಯಲು ಕಾರಣವಾಗಿದೆ. ‘ತಿಲ್ಲಾನ’ ಮೈಸೂರು ನಗರದ ಗಾನಭಾರತಿ (ರಿ) ಸಂಸ್ಥೆಯ ಮಾಸಿಕ ವಾರ್ತಾಪತ್ರ ತಿಲ್ಲಾನ ‘ಸಂಗೀತ ನೃತ್ಯ ನಾಟಕ ಸಾಹಿತ್ಯ ಸಂಕೀರ್ಣ’ ಎಂಬುದಾಗಿ ತನ್ನ ಚೌಕಟ್ಟನ್ನು ಸ್ಪಷ್ಟೀಕರಿಸಿಕೊಂಡಿದೆ. ಮೂಲತಃ ಆಯ ತಿಂಗಳಲ್ಲಿ ಗಾನಭಾರತೀಯ ವೀಣೆ ಶೇಷಣ್ಣ ಭವನದಲ್ಲಿ ನಡೆಯುವ ಸಂಗೀತ ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮುನ್ನೋಟ ನೀಡುವ ‘ತಿಲ್ಲಾನ’ ಅದರ ಜೊತೆಗೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನೂ ಪ್ರಕಟಿಸುತ್ತದೆ. ಗಾನಭಾರತಿ ಸಂಸ್ಥೆಯ ಆಶ್ರಯ ಇರುವುದರಿಂದ ೧೯೯೩ ರಿಂದ ನಿರಂತರವಾಗಿ ಮಾಸಪತ್ರಿಕೆ ಹೊರ ಬರುತ್ತಿದೆ. ‘ರಸಪ್ರಶ್ನೆ’, ರಾಗಗಳ ಪರಿಚಯ ನೀಡುವ ‘ರಾಗದರ್ಶನ’ ಹಾಗೂ ‘ಸಂಗೀತಜ್ಞಾನವಾಹಿನಿ’ ಎಂಬ ಖಾಯಂ ಅಂಕಣಗಳಿವೆ. ಡೆಮಿ ೧/೮ ಆಕಾರದ ೧೨ ಪುಟಗಳ ಈ ವಾರ್ತಾಪತ್ರ ಕನ್ನಡದ ವಿಶಿಷ್ಟ ಕಲಾ ಪತ್ರಿಕೆಯಾಗಿ ರೂಪಗೊಂಡಿದೆ. ‘ತಿಲ್ಲಾನ’ ಭಾಷೆಯ ಬಗ್ಗೆ ಮಡಿಂತಿಕೆ ಇಲ್ಲದೇ ಇಂಗ್ಲೀಷ್ ಬರಹಗಳನ್ನೂ ಪ್ರಕಟಿಸುತ್ತದೆ. ಜಾಹೀರಾತುಗಳನ್ನೂ ಆಹ್ವಾನಿಸಿದೆ. ಗಾನಭಾರತಿಯ ಸದಸ್ಯರಿಗೆ ಈ ಮಾಸಿಕ ಪತ್ರಿಕೆ ಉಚಿತವಾಗಿ ದೊರೆಯುತ್ತದೆ. ತನ್ನ ಸೀಮಿತ ವಲಯದಲ್ಲಿ ತಿಲ್ಲಾನ ಮಾಡುವ ಕಲಾ ಸೇವೆ ದಾಖಲೆಗೆ ಯೋಗ್ಯವಾದುದು.‘ಪರಿಕರ’ಕರ್ನಾಟಕ ಸರ್ಕಾರದ ‘ರಂಗಾಯಣ’ ರೆಪರ್ಟರಿ ಮೈಸೂರಿನ ವಿಶ್ವ ಕನ್ನಡ ಕಲಾ ಮಂದಿರದಲ್ಲಿ ನೆಲೆಗೊಂಡ ಸಂಸ್ಥೆ. ನಾಟಕ ಕರ್ನಾಟಕ ರಂಗಾಯಣ ತನ್ನ ನಾಟಕಗಳು ಹಾಗೂ ನಾಟಕ ಸಂಬಂಧೀ ಚಟುವಟಿಕೆಗಳಿಂದ ರಾಜ್ಯಾದ್ಯಂತ ಪ್ರಸಿದ್ಧವಾಗಿದೆ.‘ರಂಗಾಯಣ’ದ ಅಂಗವಾಗಿ ‘ಪರಿಕರ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಿ ‘ಪರಿಕರ’ ಎಂಬ ರಂಗಭೂಮಿ ತ್ರೈಮಾಸಿಕ ಪತ್ರಿಕೆಯನ್ನು ನಡೆಸುವ ಪ್ರಯತ್ನ ೧೯೯೩ ರಲ್ಲಿ ನಡೆಯಿತು. ‘ಪರಿಕರ’ದ ಪ್ರಧಾನ ಸಂಪಾದಕರಾಗಿ ಹಿರಿಯ ವಿಮರ್ಶಕ ಶ್ರೀ ಕೀರ್ತಿನಾಥ ಕುರ್ತುಕೋಟಿಯವರನ್ನು ಹೆಸರಿಸಲಾಗಿದ್ದು ಸಂಪಾದಕರೆಂದು ಶ್ರೀ ರಮೇಶ್, ಶ್ರೀ ಉಮೇಶ್ ಹಾಗೂ ಶ್ರೀ ಹಾ. ಸಾ. ಕೃ. ಅವರನ್ನು ಗುರುತಿಸಲಾಗಿತ್ತು. ಶ್ರೀ ಜಯತೀರ್ಥ ಜೋಷಿಯವರು ವ್ಯವಸ್ಥಾಪಕ ಸಂಪಾದಕರು. ಶ್ರೀ ಬಿ. ವಿ. ಕಾರಂತ, ಶ್ರೀ ನ. ರತ್ನ. ಶ್ರೀ ಬಾ. ಕಿ. ನ. ಡಾ. ಮುರುಳಿಸಿದ್ದಪ್ಪ, ಶ್ರೀ ಎಸ್. ಜಿ. ವಾಸುದೇವ ಹಾಗೂ ಶ್ರೀ ಗಿರೀಶ ಕಾಸರವಳ್ಳಿಯವರನ್ನು ಸಲಹಾ ಸಂಪಾದಕರುಗಳನ್ನಾಗಿ ಹೆಸರಿಸಲಾಗಿತ್ತು.ಎ-೪ ಆಕಾರದ ೪೬ ಪುಟಗಳ ‘ಪರಿಕರ’ ಚತುರ್ವರ್ಣ ಬಣ್ಣದ ಮುಖಪುಟ ಹೊಂದಿತ್ತು. ಒಳ ಪುಟಗಳಲ್ಲೂ ರೇಖಾ ಚಿತ್ರ, ಛಾಯಾಚಿತ್ರಗಳೂ ಪತ್ರಿಕೆಯ ಅಂದವನ್ನು ಹೆಚ್ಚಿಸುವಂತಿದ್ದವು. ವಾರ್ಷಿಕ ಚಂದಾ ೬೦ ರೂಪಾಯಿ. ಸಂಘ ಸಂಸ್ಥೆಗಳಿಗೆ ೮೦ ರೂಪಾಯಿ. ಆಜೀವ ಸದಸ್ಯತ್ವ ೫೦೦ ರೂಪಾಯಿ. ಮೂರನೇ ಸಂಚಿಕೆಯಲ್ಲಿ ಅಜೀವ ಚಂದಾದಾರರಾದ ೫೭ ಜನರ ಹೆಸರು ಪ್ರಕಟಿಸಲಾಗಿದೆ. ಆದರೆ ‘ಪರಿಕರ’ ಪ್ರಕಟವಾದುದು ಮೂರೇ ಸಂಚಿಕೆ. ಮೂರೇ ಮೂರು ಸಂಚಿಕೆ ಪ್ರಕಟವಾದರೂ ರಂಗಭೂಮಿಯ ದೃಷ್ಟಿಯಿಂದ ಬಹುಮುಖ್ಯ ಚರ್ಚೆಗಳನ್ನು ‘ಪರಿಕರ’ ಕೈಗೆತ್ತಿಕೊಂಡಿತ್ತು. ‘ಪರಿಕರ’ ಸಂಚಿಕೆಯಲ್ಲಿ ಪ್ರಕಟವಾದ ಲೇಖನಗಳು ಸಮಕಾಲೀನ ರಂಗಭೂಮಿಯ ಅನೇಕ ಮಜಲುಗಳ ಮೇಲೆ ಬೆಳಕು ಚೆಲ್ಲುವಂತಿದ್ದವು. ಅಂದವಾದ ಮುದ್ರಣ, ಆಕರ್ಷಕ ವಿನ್ಯಾಸಗಳಿಂದ ಅಚ್ಚುಕಟ್ಟಾಗಿ ಮೂರು ಸಂಚಿಕೆಗಳಲ್ಲಿ ಓದುಗರ ಕೈಸೇರಿದ ಪರಿಕರ ನಂತರ ಮುಂದುವರೆಯಲಿಲ್ಲ. ಯಾವುದೇ ಸೂಚನೆ ನೀಡದೇ ನಿಂತುಹೋಯಿತು. ಒಟ್ಟಾರೆಯಾಗಿ ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಕಲಾ ಪತ್ರಿಕೆಗಳು ಪ್ರಕಟಗೊಂಡಿವೆ ಎನ್ನಬಹುದು. ಕನ್ನಡ ಕಲಾ ಪತ್ರಿಕೆಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ ಕಲೆಗೆ ಮೀಸಲೆಂದು ಘೊಷಿಸಿಕೊಂಡ ಪತ್ರಿಕೆಗಳ ಪೈಕಿ ಸದ್ಯಕ್ಕೆ ನಿಯತವಾಗಿ ಬರುವ ಪತ್ರಿಕೆ ಕೈ ಬೆರಳೆಣಿಕೆಯವು. ೧೫೦ ವರ್ಷದ ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ಯಾವ ಕಲಾ ಪತ್ರಿಕೆಯೂ ಸ್ವಾವಲಂಬನೆಯ ಸ್ಥಿತಿಗೆ ಬರಲಿಲ್ಲ. ಹೀಗಾಗಿ ಕನ್ನಡದ ಕಲಾ ಪತ್ರಿಕೆಗಳ ಸ್ಥಿತಿ ಆಶಾದಾಯಕವಾಗಿಲ್ಲ.

ಟಿಪ್ಪಣಿಗಳು

  • ೧. ಸರೋಜಿನಿ ಚವಲಾರ, ಪಾಶ್ಚಾತ್ಯ ಸಾಹಿತ್ಯ ಮಾರ್ಗ, ೧೯೯೧, ಪುಟ ೧೦೨
  • ೨. ಸರೋಜಿನಿ ಚವಲಾರ, ಪಾಶ್ಚಾತ್ಯ ಸಾಹಿತ್ಯ ಮಾರ್ಗ, ಪೂವೋಕ್ತ, ಪುಟ ೧೦೭
  • ೩. ನಾರಾಯಣ ರಾಜಪುರೋಹಿತರ ಲೇಖನ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ ೪, ಸಂಚಿಕೆ ೩, ೧೯೧೯, ಪುಟ ೧೨೯-೧೩೬
  • ೪. ಮೇಲಿನದೇ.
  • ೫. ಡಾ. ಎಚ್. ಎ. ಪಾರ್ಶ್ವನಾಥ, ರಂಗಸಂಗ, ನಿತಿನ್ ಪ್ರಕಾಶನ, ಮೈಸೂರು, ಪುಟ ೧೦೪
  • ೬. ರಂಗಭೂಮಿ, ಸಂಪುಟ ೧, ಸಂಚಿಕೆ ೧, ಸಪ್ಟೆಂಬರ್‍ ೧೯೨೫, ಪುಟ ೩
  • ೭. ಡಾ. ಎಚ್. ಎ. ಪಾರ್ಶ್ವನಾಥ, ರಂಗಸಂಗ, ಪೂರ್ವೋಕ್ತ, ಪುಟ ೧೦೫
  • ೮. ಮೇಲಿನದೇ
  • ೯. ಮೇಲಿನದೇ.
  • ೧೦. ಅ. ನ. ಸುಬ್ಬರಾಯರ ಸಂಪಾದಕೀಯ, ‘ಕಲಾ’ ಪತ್ರಿಕೆ, ಸಂಪುಟ ೧, ಸಂಚಿಕೆ ೧.
  • ೧೧. ಡಾ. ವಿಜಯಾ, ಅ. ನ. ಸುಬ್ಬರಾಯರು, ಐಬಿಎಚ್ ಪ್ರಕಾಸನ, ೧೯೮೪,ಪುಟ ೨೬
  • ೧೨. ಕರ್ನಾಟಕರಾಜ್ಯ ಗೆಜೆಟಿಯರು, ಸಂ. ಸೂರ್ಯನಾಥ ಕಾಮತ್, ಭಾಗ ಮೂರು, ಕರ್ನಾಟಕ ಸರ್ಕಾರ, ೧೯೬೮, ಪುಟ ೩೧೪
  • ೧೩. ನಾಗಚಂದ್ರ, ‘ಚಿತ್ರಗುಪ್ತ ಸ್ಮರಣೆ’ ಪುಸ್ತಕದಲ್ಲಿ ರಂಗ ಪತ್ರಿಕೆಗಳು ಲೇಖನ, ಪೂರ್ವೋಕ್ತ. ಪುಟ ೨೧೪
  • ೧೪. ಸಂಪಾದಕೀಯ, ‘ಗಾನ ವಾಹಿನಿ’, ಸಪ್ಟೆಂಬರ್‍ ೧೯೫೬, ಪುಟ ೧-೫
  • ೧೫. ಮೇಲಿನದೇ.
  • ೧೬. ಕರ್ನಾಟಕ ರಾಜ್ಯ ಗೆಜೆಟಿಯರ್‍, ಸಂ. ಸೂರ್ಯನಾಥ ಕಾಮತ, ಪೂರ್ವೋಕ್ತ, ಪುಟ ೩೨೪
  • ೧೭. ಎನ್. ಆರ್‍. ನಾಯಕ, ‘ಚಿತ್ರಗುಪ್ತ ಸ್ಮರಣೆ’ ಪುಸ್ತಕದಲ್ಲಿ ‘ಉತ್ತರ ಕನ್ನಡ ಜಿಲ್ಲಾ ಪತ್ರಿಕೆಗಳು ಲೇಖನ, ಪೂರ್ವೋಕ್ತ ಪುಟ ೪೯೭
  • ೧೮. ‘ಶೃಂಗಾರ’ ಪತ್ರಿಕೆಯ ಸಂಪಾದಕೀಯ, ಸಂಪುಟ ೧, ಸಂಚಿಕೆ ೧, ಜನವರಿ ೧೯೬೨, ಪುಟ ೩
  • ೧೯. ‘ಚಿತ್ರಗುಪ್ತ ಸ್ಮರಣೆ’ ಪುಸ್ತಕದಲ್ಲಿ ಡಾ. ಎನ್. ಆರ್‍. ನಾಯಕರ ಲೇಖನ, ಪೊರ್ವೋಕ್ತ, ಪುಟ ೫೦೨
  • ೨೦. ಶ್ರೀರಂಗರ ಶುಭೇಚ್ಛಗಳು ‘ನಾಟ್ಯ ಭಾರತೀ’ ಸಂಪುಟ ೧, ಸಂಚಿಕೆ ೧, ಫೆಬ್ರವರಿ ೧೯೬೭, ಪು. ೨.
  • ೨೧. ಉಧೃತ : ಡಾ. ಎಚ್. ಎ. ಪಾರ್ಶ್ವನಾಥ್, ರಂಗಸಂಗ, ಪೊರ್ವೋಕ್ತ, ಪುಟ ೧೦೭
  • ೨೨. ‘ಜಾನಪದ’ , ಸಂಪುಟ ೧, ಸಂಚಿಕೆ ೧, ೧೯೭೫, ಸಂಪಾದಕೀಯ.
  • ೨೩. ಡಿ. ಕೆ. ರಾಜೇಂದ್ರರ ಲೇಖನ, ಚಿತ್ರಗುಪ್ತ ಸ್ಮರಣೆ ಪುಸ್ತಕದಲ್ಲಿ ಪೂರ್ವೋಕ್ತ, ಪುಟ ೨೫೪.
  • ೨೪. ಡಿ. ಕೆ. ರಾಜೇಂದ್ರ, ‘ಚಿತ್ರಗುಪ್ತ ಸ್ಮರಣೆ’, ಪುಸ್ತಕದಲ್ಲಿ ಲೇಖನ, ಪೂರ್ವೋಕ್ತ, ಪುಟ ೨೫೫-೨೫೬.
  • ೨೫. ಡಾ. ಎಚ್. ಎ. ಪಾರ್ಶ್ವನಾಥ, ರಂಗಸಂಗ ಪೂರ್ವೋಕ್ತ, ಪುಟ ೧೧೦
  • ೨೬. ‘ಕ್ಯಾನ್ವಾಸ್’ ಸಂಪುಟ ೩, ಸಂಚಿಕೆ ೨, ೩, ೪, ರಲ್ಲಿ ‘ಓದುಗರಲ್ಲಿ ವಿನಂತಿ’, ಪುಟ ೧೦
  • ೨೭. ಡಾ. ಕಾಸರವಳ್ಳಿ ಜಿ. ರವೀಶರ ಪ್ರತಿಕ್ರಿಯೆ. ‘ಕ್ಯಾನ್ವಾಸ್’ ಸಂಪುಟ ೧, ಸಂಚಿಕೆ ೧, ಪುಟ ೫
  • ೨೮. ‘ರಾಶಿ’ ಸಂಪಾದಕೀಯ ಸಂಪುಟ ೧, ಸಂಚಿಕೆ ೧, ೨ ಮೇ, ೧೯೯೦, ಪುಟ ೧

ಕನ್ನಡದಲ್ಲಿ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳು

ಸಾಹಿತ್ಯದಲ್ಲಿ ಪ್ರಭೇದಗಳು

ಸಾಹಿತ್ಯವು ಮೂಲತಃ ಸೌಂದರ್ಯದ ಉಪಾಸನೆಯ ಪರಿಕರ. ಸೌಂದರ್ಯಾನುಭವದ ಸಾಧನ. ಸಾಹಿತ್ಯದ ಉದ್ದೇಶವನ್ನು ಎರಡು ವಿಧದಿಂದ ಗುರುತಿಸಲಾಗುತ್ತದೆ.

  • ೧. ಬುದ್ಧಿ ಪ್ರಚೋದಕ ಸಾಹಿತ್ಯ
  • ೨. ಭಾವ ಪ್ರಚೋದಕ ಸಾಹಿತ್ಯ.

ಪಾಶ್ಚಾತ್ಯಾ ಸಾಹಿತಿ ಡಿಕ್ವೆನ್ಸಿಯು ‘ಲಿಟರೆಚರ್‍’ (Literature) ಎಂಬುದುನ್ನು ಜ್ಞಾನ ಸಾಹಿತ್ಯವೆಂದೂ ಪೊಯೆಟ್ರಿ ಅಥವಾ ಕಾವ್ಯವನ್ನು ಭಾವ ಸಾಹಿತ್ಯವೆಂದೂ ಕರೆಯುತ್ತಾನೆ. ಬುದ್ಧಿ ಪ್ರಚೋದಕ ಸಾಹಿತ್ಯವು ನಿರ್ದಿಷ್ಟ ವಸ್ತುಗಳನ್ನು ಒಳಗೊಂಡು ಅದರ ವಸ್ತುನಿಷ್ಠ ವಿಶ್ಲೇಷಣೆಯನ್ನು ಮಾಡುವ ಮೂಲಕ ಓದುಗರ ಅರಿವಿನ ಸೀಮೆಯನ್ನು ವಿಸ್ತರಿಸುತ್ತದೆ. ಜ್ಞಾನದ ದಾಹವನ್ನು ತೀರಿಸುತ್ತದೆ. ವಿಜ್ಞಾನ ಬರಹ, ಪತ್ರಿಕಾ ಸಾಹಿತ್ಯ, ಭೊಗೋಳ ಪಠ್ಯಪುಸ್ತಕ, ಸಂವಿಧಾನ ಪರಿಚಯ ಪುಸ್ತಕಗಳು ಬುದ್ಧಿ ಪ್ರಚೋದಕ ಸಾಹಿತ್ಯದ ಉದಾಹರಣೆಗಳು. ಇಂಥ ಬರಹಗಳಲ್ಲಿ ಕಾಲ್ಪನಿಕ ಕಥೆಗಳಿಗೆ ಆಸ್ಪದವಿಲ್ಲ. ವಸ್ತುವು ನಿರ್ದಿಷ್ಟವೂ, ಸ್ಪಷ್ಟವೂ ಸತ್ಯವೂ ಆಗಿರುತ್ತದೆ. ಓದುಗರಿಗೆ ಸಂಬಂಧಿಸಿದ ವಿಷಯದ ಮೇಲೆ ಹೆಚ್ಚಿನ ಅರಿವು ಮೂಡಿಸುವುದರಿಂದ ಇವುಗಳನ್ನು ಜ್ಞಾನ ಸಾಹಿತ್ಯವೆಂದು ಕರೆಯಲಾಗುತ್ತದೆ.ಕವನ, ಕಥೆ ಕಾದಂಬರಿ ಪ್ರಬಂಧ-ಇವು ಭಾವ ಸಾಹಿತ್ಯದ ಉದಾಹರಣೆಗಳು. ಮೂಲತಃ ಮನುಷ್ಯನ ಭಾವ ಪ್ರಪಂಚವನ್ನು ಕೆದುಕುವುದರಿಂದ ಹಾಗೂ ಕರುಣಾರಸ, ರೌದ್ರ, ಭೀಭತ್ಸ ಮುಂತಾದ ನಾನಾ ರಸೋತ್ಪತ್ತಿಗೆ ಕಾರಣವಾಗುವುದರಿಂದ ಇವನ್ನು ಭಾವಸಾಹಿತ್ಯವೆನ್ನಲಾಗುತ್ತದೆ. ಒಂದು ಭಾಷೆಯ ಹೆಗ್ಗಳಿಕೆ ಭಾವಸಾಹಿತ್ಯದಲ್ಲಷ್ಟೇ ವಿಪುಲವಾಗಿ ಕೃಷಿ ನಡೆದರೆ ಸಾಲದು. ಮಾನವಿಕ, ವಿಜ್ಞಾನ, ತಂತ್ರಜ್ಞಾನ ಮುಂತಾದ ವಿಶೇಷ ಕ್ಷೇತ್ರಾಧ್ಯಯನದ ಪುಸ್ತಕಗಳೂ ಬರಬೇಕು. ಆಯಾ ವಿಶೇಷಾಸಕ್ತಿ ಕ್ಷೇತ್ರಗಳನ್ನು ಪರಿಚಯಿಸುವ ಗಂಭೀರ ಅಧ್ಯಯನಕ್ಕೆ ಒಳಪಡುವ ವಿಷಯಗಳಲ್ಲೆಲ್ಲಾ ಸಾಹಿತ್ಯರಚನೆ ಆಗಬೇಕು.ಬುದ್ಧಿ ಪ್ರಚೋದಕ ಸಾಹಿತ್ಯ ನಿರ್ದಿಷ್ಟವಾದುದು. ಭಾವ ಪ್ರಚೋದಕ ಸಾಹಿತ್ಯ ಕಲ್ಪನೆಗೆ ಇಂಬುನೀಡುವಂಥದ್ದು. ಸಾಹಿತಿಯ ಸಹೃದಯತೆ ಭಾವ ಪ್ರಚೋದಕ ಸಾಹಿತ್ಯ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದರೆ ಬುದ್ಧಿಮತ್ತೆ, ಓದು, ಅನುಭವಗಳಿಂದ ಬಂದ ಜ್ಞಾನ, ಬುದ್ಧಿ ಪ್ರಚೋದಕ ಸಾಹಿತ್ಯ ರಚನೆಯಲ್ಲಿ ಸಹಾಯಕವಾಗುತ್ತದೆ.ಬುದ್ಧಿ ಪ್ರಚೋದಕ ಸಾಹಿತ್ಯವನ್ನು ಸೃಜನೇತರವೆಂದೂ, ಭಾವ ಪ್ರಚೋದಕ ಸೃಜನೇತರವೆಂದೂ, ಭಾವ ಪ್ರಚೋದಕ ಸಾಹಿತ್ಯವನ್ನು ಸೃಜನಶೀಲವೆಂದೂ, ಕರೆಯಬಹುದು. ಸಾಹಿತ್ಯವೆಂದರೆ ಸೃಜನಶಿಲ ಸಾಹಿತ್ಯವೇ ಎನ್ನುವ ಮಟ್ಟಿಗೆ ಸಾಹಿತ್ಯದಲ್ಲಿ ಭಾವಪ್ರಚೋದಕ ಸಾಹಿತ್ಯದ್ದೇ ಮೇಲುಗೈ. ಭಾವ ಪ್ರಚೋದಕ ಸಾಹಿತ್ಯ ಕಲಾತ್ಮಕವಾಗಿ ಸೌಂದರ್ಯವನ್ನು ಅಭಿವ್ಯಕ್ತಿಸಿ ಮನಸ್ಸನ್ನು ಮುದಗೊಳಿಸುವತ್ತ ಲಕ್ಷ್ಯವಿಡುತ್ತದೆ. ಭಾವ ಸಾಹಿತ್ಯ ನಿಷ್ಠುರ ಸತ್ಯವಲ್ಲ. ಅಂಕಿಅಂಶಗಳ ಯಥಾವತ್ ವರದಿಯಲ್ಲ. ಬರಹಗಾರ ತನ್ನ ಕಲ್ಪನೆ ಅನುಭವಗಳನ್ನು ಹದವಾಗಿ ಬೆರಸಿ ಕಲಾತ್ಮಕವಾಗಿ ಪೋಣಿಸಿರುವ ಹಾರ. ಅದು ಮೂಲಭೂತ ಅಭಿವ್ಯಕ್ತಿ. ವ್ಯಕ್ತಿಯ ಸೃಜನ ಶೀಲತೆಯ ಪ್ರದರ್ಶನ. ಭಾವ ಪ್ರಚೋದಕ ಸಾಹಿತ್ಯವು ಪ್ರಕಟಗೊಳ್ಳುವ ರೀತಿ ಬಹು ವಿಧವಾದುದು. ಕಥೆ, ಕಾದಂಬರಿ, ಕವನ, ಪ್ರಬಂಧಗಳು ಕೆಲವು ಮಾದರಿಗಳು. ಹಿಂದೆ ಪೊಯೆಟ್ರಿ ಅಥವಾ ಕಾವ್ಯವೆಂದೇ ಕರೆಸಿಕೊಳ್ಳುತ್ತಿದ್ದ ಈ ಪ್ರಕಾರಗಳು ಕಾಲಾನುಕ್ರಮದಲ್ಲಿ ಸ್ವತಂತ್ರ ಮಾಧ್ಯಮಗಳಾಗಿ ಬೆಲೆದಿವೆ. ಜಗತ್ತಿನಲ್ಲಿ ಸಾಹಿತ್ಯ ಅಭಿವೃದ್ಧಿಗೊಂಡ ಭಾಷೆಗಳಲ್ಲೆಲ್ಲಾ ಸಾಹಿತ್ಯದ ನಾನಾ ಪ್ರಭೇದಗಳು ಬೆಳದಿವೆ. ಕನ್ನಡವೂ ಇದಕ್ಕೆ ಹೊರತಲ್ಲ. ಕನ್ನಡದಲ್ಲಿ ಮಾನವಿಕ, ವಿಜ್ಞಾನ, ವ್ಯಾಪಾರ, ತಂತ್ರಜ್ಞಾನಗಳನ್ನೊಳಗೊಂಡು ಹತ್ತು ಹಲವು ಕ್ಷೇತ್ರಗಳಲ್ಲಿ ಸಾಹಿತ್ಯ ಬೆಳದಿದೆ. ಅಂತೆಯೇ ಸೃಜನಶೀಲ ಸಾಹಿತ್ಯ ಪ್ರಕಾರಗಳಲ್ಲೂ ಸಮೃದ್ಧ ಬೆಳೆ ಬಂದಿದೆ. ಜಗತ್ತಿನ ಯಾವುದೇ ಭಾಷೆಯ ಶ್ರೇಷ್ಠ ಸಾಹಿತ್ಯಕ್ಕೆ ಹೋಲಿಸಬಲ್ಲ ಸಾಹಿತ್ಯ ರಚನೆ ಕನ್ನಡದಲ್ಲಿ ಈವರೆಗೆ ನಡೆದಿದೆ.

ಸಾಹಿತ್ಯ ಮತ್ತು ಪತ್ರಿಕೆಗಳು

‘ಸಾಹಿತ್ಯ’ ಅಭಿವ್ಯಕ್ತಿಯ ಒಂದು ಮಾಧ್ಯಮವಾದರೆ ಪತ್ರಿಕೆಗಳು ಸಾಹಿತ್ಯದ ವಾಹಕಗಳು. ಪತ್ರಿಕೆಗಳ ಹುಟ್ಟಿನಿಂದಲೂ ಸಾಹಿತ್ಯಕ್ಕೂ ಪತ್ರಿಕೆಗಳಿಗೂ ಬಿಡಿಸಲಾರದ ನಂಟು. ಅವಿನಾಭಾವ ಸಂಬಂಧ. ಪತ್ರಿಕೋದ್ಯಮದ ಮೂಲ ಸ್ವರೂಪಗಳಾದ ಇಂಗ್ಲೆಂಡಿನ ಕಾಫಿ ಗೌಸಿನ ಸುದ್ದಿ ಮ್ಯಾಗಜಿನ್ನುಗಳಿಂದಲೇ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಆದ್ಯತೆ ನೀಡುವ ಸಂಪ್ರದಾಯ ಪ್ರಾರಂಭ. ವಿವಿಧ ದೇಶಗಳಲ್ಲಿ ಒಂದೊಂದಾಗಿ ಪತ್ರಿಕೋದ್ಯಮ ಮೊದಲಾದಾಗ ನಿಯತಕಾಲಿಕಗಳೇ ಮೊದಲ ಪ್ರಯತ್ನಗಳು. ನಿಯತಕಾಲಿಕಗಳು ಸೃದೃಢವಾಗಿ ನೆಲೆನಿಂತು ಮೇಲಷ್ಟೇ ದಿನಪತ್ರಿಕೆಗಳು ರೂಪಗೊಳ್ಳುವುದನ್ನು ಕಾಣುತ್ತೇವೆ. ಇಂದು ಜಗತ್ತಿನಲ್ಲಿ ಪತ್ರಿಕೋದ್ಯಮವು ವಿಶಾಲವಾಗಿಯೂ ವೈವಿಧ್ಯಮಯವಾಗಿಯೂ ಬೆಳದಿದೆ. ಆದರೆ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಇದ್ದ ಪ್ರಾಧ್ಯಾನ್ಯ ಕಡಿಮೆಯಾಗಲಿಲ್ಲ. ನಿಯತ ಕಾಲಿಕಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಸಾಹಿತ್ಯ ಪ್ರೀತಿ, ಸುದ್ದಿ ಪ್ರಧಾನವಾದ ದಿನ ಪತ್ರಿಕೆಗಳಿಗೂ ಹಬ್ಬಿ ಇಂದು ನಿಯತಕಾಲಿಕಗಳೂ ದಿನಪತ್ರಿಕೆಗಳೂ ಸರಿಸಮವಾಗಿ ಸಾಹಿತ್ಯ ಸೇವೆಯಲ್ಲಿ ತೊಡಗುತ್ತಿರುವುದನ್ನು ಕಾಣುತ್ತೇವೆ.ಕವನ, ಕಥೆ, ಪ್ರಬಂಧಗಳನ್ನು ಪ್ರಕಟಿಸುವುದು, ಕಾದಂಬರಿಗಳನ್ನು ಧಾರವಾಹಿಗಳನ್ನಾಗಿ ಪ್ರಕಟಿಸುವುದು, ಸಾಹಿತ್ಯ ಕೃತಿಗಳ ವಿಮರ್ಶೆ ಮಾಡಿಸುವುದು, ಸಾಹಿತಿಗಳ ಸಂದರ್ಶನ, ಅಭಿಪ್ರಾಯ ವಿನಿಯಮ, ಜೀವನ ಚಿತ್ರಣಗಳನ್ನು ಬರೆಸುವುದು ಇವೇ ಮುಂತಾದ ಸಾಂಪ್ರಾದಾಯಿಕ ಸಾಹಿತ್ಯ ಸೇವೆಯನ್ನು ನಿಯತಕಾಲಿಕಗಳೂ ದಿನಪತ್ರಿಕೆಗಳೂ, ಅವುಗಳ ವಿಶೇಷ ಪುರವಣೆಗಳೂ ಮಾಡುತ್ತಿವೆ. ಆಯಾ ಭಾಷೆಗಳಲ್ಲಿ ಕಾಲ ಕಾಲಕ್ಕೆ ಸಾಹಿತ್ಯವು ಪಡೆದುಕೊಳ್ಳುವ ತಿರುವುಗಳನ್ನೂ ಬೆಳವಣಿಗೆಗಳನ್ನೂ ಈ ಪುರವಣಿಗಳು ಪ್ರಕಟಿಸುತ್ತಿವೆ.ಈ ಮೇಲೆನ ಮಾತುಗಳಿಗೆ ಕನ್ನಡ ಪತ್ರಿಕೋದ್ಯಮವೂ ಸಾಕ್ಷಿ. ಆಧುನಿಕ ಕನ್ನಡ ಸಾಹಿತ್ಯ ಬೆಳದು ಬಂದ ಅವಧಿಯಲ್ಲೇ ಸರಿಸಮವಾಗಿ ಕನ್ನಡ ಪತ್ರಿಕೋದ್ಯಮವೂ ಬೆಳೆದು ಬಂತು. ಇಪ್ಪತ್ತನೇ ಶತಮಾನದ ಆದಿಯವರೆಗೂ ಹೊಸಗನ್ನಡ ಸಾಹಿತ್ಯವು ಅರುಣೋದಯದ ಹೊಸ್ತಿಲಿಲ್ಲಿದ್ದು ೧೯ನೇ ಶತಮಾನವನ್ನು ಹೊಸಗನ್ನಡ ಸಾಹಿತ್ಯದ ಉದಯ ಕಾಲವನ್ನೆಲಾಗುತ್ತದೆ. ಇದೇ ಉದಯಕಾಲದಲ್ಲೇ ಅಂದರೆ ೧೯ನೇ ಶತಮಾನದಲ್ಲೇ ಕನ್ನಡ ಪತ್ರಿಕೋದ್ಯಮವೂ ಉದಯವಾಯಿತು. (೧೮೪೩) ಅಲ್ಲಿಂದ ಮುಂದಕ್ಕೆ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಷ್ಟೆಂದರೆ ಆಯಾ ಕಾಲದ ಪ್ರಮುಖ ಸಾಹಿತಿಗಳು ಹಾಗೂ ಅವರ ಕೃತಿಗಳೂ ಪತ್ರಿಕೆಗಳ ಮೂಲಕವೇ ಬೆಳಕು ಕಂಡವು. ಪತ್ರಿಕೆಗಳ ಮೂಲಕವೇ ಸಾಹಿತ್ಯ ಜನರನ್ನು ತಲುಪಿತು. ಆದಾಗಿಯೂ ಕನ್ನಡ ಪತ್ರಿಕೆಗಳು ಮಾಡುತ್ತಿರುವ ಸಾಹಿತ್ಯ ಸೇವೆಯನ್ನು ಸ್ಥೂಲವಾಗಿ ಈ ಕೆಳಗಿನಂತೆ ಗುರುತಿಸಬಹುದು.

  • ೧. ದಿನ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೇ ಆಗಿರುವ ಸಂದರ್ಭದಲ್ಲಿಯೂ ಸಣ್ಣ ಕಥೆ, ಕಾವ್ಯ ಪ್ರಬಂಧ, ವಿಮೆರ್ಶೆ, ಹಾಸ್ಯ ಬರಹಗಳು, ಮುಂತಾದವುಗಳನ್ನು ತಪ್ಪದೇ ಪ್ರಕಟಿಸುವವು. ದಿನಪತ್ರಿಕೆಗಳ ವಾರದ ಪುರವಣೆಗಳು ಸಾಹಿತ್ಯ ಸಂಚಿಕೆಗಳೇ ಎನಿಸುವಷ್ಟು ಸಾಹಿತ್ಯ ಸಮೃದ್ಧವಾಗಿ ಹೊರಬರುವುವು.
  • ೨. ಕಾದಂಬರಿಗಳು ಧಾರವಾಹಿಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳವುವು. ಹಿಂದೆ ನಿಯತಕಾಲಿಕಗಳಿಗಷ್ಟೇ ಧಾರವಾಹಿಗಳು ಸೀಮಿತವಾಗಿದ್ದವು. ಈಗ ದಿನಪತ್ರಿಕೆಗಳೂ ಧಾರಾವಾಹಿಗಳನ್ನು ಪ್ರಕಟಿಸುತ್ತವೆ.
  • ೩. ಸಾಹಿತಿಗಳ ಅಂಕಣಗಳನ್ನು ಪ್ರಕಟಿಸುವ ಮೂಲಕ ಅಂಕಣ ಸಾಹಿತ್ಯವೇ ಕನ್ನಡದಲ್ಲಿ ಪ್ರತ್ಯೇಕ ಸಮೃದ್ಧ ಸಾಹಿತ್ಯ ಪ್ರಕಾರವಾಗಿ ಬೆಳೆಯಲು ಕಾರಣವಾಗಿರುವುದು.
  • ೪. ಪತ್ರಿಕೆಗಳು ಏರ್ಪಡಿಸುವ ಸಾಹಿತ್ಯ ಸ್ಪರ್ಧೆಗಳು ಹೊಸತಲೆಮಾರಿನ ಬರಹಗಾರರನ್ನು ಹೆಕ್ಕಿ ತೆಗೆಯಲು ಅನುಕೂಲಕರವಾಗುವುವು.
  • ೫. ದೀಪಾವಳಿ, ಯುಗಾದಿ, ಸಂಕ್ರಾಂತಿ ಮುಂತಾದ ಹಬ್ಬದ ಸಂದರ್ಭಗಳಲ್ಲಿ ನಮ್ಮ ಪತ್ರಿಕೆಗಳು ಹೊರತರುವ ವಿಶೇಷಾಂಕಗಳು ಸಾಹಿತ್ಯ ಸಂಪುಟಗಳೇ ಎಂದು ಕರೆಯಬಹುದಾದಷ್ಟು ಸಾಹಿತ್ಯ ಸಮೃದ್ಧವಾಗಿರುವವು.
  • ೬. ಕಾಲಕಾಲಕ್ಕೆ ಪ್ರಶ್ನೆ ಮಾಲಿಕೆಗಳನ್ನು ಏರ್ಪಡಿಸಿ ಒಂದೇ ರೀತಿಯ ಪ್ರಶ್ನೆಗಳಿಗೆ ಸಾಹಿತಿಗಳಂದ ಉತ್ತರಗಳನ್ನು ಬರೆಯಿಸಿ ಸಾಹಿತ್ಯ ಪಡೆದುಕೊಳ್ಳುವ ತಿರುವುಗಳಿಗೆ ಸೈದ್ಧಾಂತಿಕ ರೂಪ ನೀಡುವುದು.
  • ೭. ಪತ್ರಿಕೆಗಳೇ ಸಾಹಿತ್ಯ ಪ್ರಕಾಶನದ ಸಂಸ್ಥೆಗಳಾಗಿ ಕೆಲಸ ಮಾಡುವುದು, ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದು.
  • ೮. ನವ ಪ್ರಕಾಶನಗಳ ಪಟ್ಟಿಯನ್ನು ಪ್ರಕಟಿಸಿ ಓದುಗರಿಗೆ ಹೊಸ ಕೃತಿ ಹೊರಬಂದುದರ ಬಗ್ಗೆ ತಿಳಿಯಲು ಅನುವುಮಾಡಿಕೊಡುವುದು.
  • ೯. ಪುಸ್ತಕಗಳ ಸಮೀಕ್ಷೆ, ವಿಮರ್ಶೆಗಳನ್ನು ತಜ್ಞರಿಂದ ಬರೆಯಿಸುವುದು.
  • ೧೦. ಓದುಗರಿಗೆ ವಿಮರ್ಶಾ ಸ್ಪರ್ದೆಗಳನ್ನು ಏರ್ಪಡಿಸುವುದು.
  • ೧೧. ಚಿತ್ರ ಕವನ ಸ್ಪರ್ಧೆ ಹಾಗೂ ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವಂಥ ಸ್ಪರ್ದೆಗಳ ಮೂಲಕ ಓದುಗರ ಸೃಜನಶೀಲತೆಯನ್ನು ಹೆಚ್ಚಿಸುವುದು.
  • ೧೨. ಇವೆಲ್ಲಾ ಸಾಮಾನ್ಯ ಆಸಕ್ತಿಯ ಪತ್ರಿಕೆಗಳ ಮಾತಾದರೆ, ಸಾಹಿತ್ಯಕ್ಕೇ ಮೀಸಲಾಗಿ ನಿಯತಕಾಲಿಕಗಳನ್ನು ಹೊರಡಿಸುವುದೂ ಕನ್ನಡ ಪತ್ರಿಕೋದ್ಯಮ ಮಾಡುವ ಸಾಹಿತ್ಯ ಸೇವೆಯ ಒಂದು ಮಾದರಿ.

ಈ ಮೇಲಿನ ಉದಾಹರಣೆಗಳನ್ನು ಕನ್ನಡದಲ್ಲಿ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಒಂದಕ್ಕೊಂದು ಪೂರಕವಾಗಿ, ಅಕ್ಷರ ಅಭಿವ್ಯಕ್ತಿಯ ಪ್ರಬಲ ಮಾಧ್ಯಮವಾಗಿ ಬೆಳದಿರುವುದನ್ನು ಸೂಚಿಸುತ್ತವೆ. ಸಾಹಿತ್ಯ ಮತ್ತು ಪತ್ರಿಕೋದ್ಯಮಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬುದಕ್ಕೆ ಕನ್ನಡದಲ್ಲಿ ಸಾಕಷ್ಟು ಪುರಾವೆ ಒದಗಿಸುತ್ತವೆ. ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ಸಾಹಿತ್ಯಕ್ಕೆ ಆಸ್ಪದ ನೀಡುವುದು ಒಂದು ವಿಧವಾದರೆ, ಸಾಹಿತ್ಯಕ್ಕೇ ಮೀಸಲಾಗಿ ಬರುವ ಪತ್ರಿಕೆಗಳ ಸಾಹಿತ್ಯ ಸೇವೆ ಇನ್ನೊಂದು ವಿಧ. ಇನ್ನು ಮುಂದಿನ ಪುಟಗಳಲ್ಲಿ ಕನ್ನಡ ಪತ್ರಿಕೋದ್ಯಮದ ೧೫೦ ವರ್ಷಗಳ ಚರಿತ್ರೆಯಲ್ಲಿ ಸಾಹಿತ್ಯಕ್ಕೇ ಮೀಸಲಾಗಿ ಪ್ರಕಟಗೊಂಡ ಪತ್ರಿಕೆಗಳನ್ನು ಪರಿಚಯಮಾಡಿಕೊಡಲಾಗುವುದು. ಈವರೆಗೆ ಪತ್ರಿಕೆಗಳು ಸಾಹಿತ್ಯವನ್ನು ಪೋಷಿಸುವ ಸಾಮಾನ್ಯ ಮಾರ್ಗಗಳನ್ನು ಪರೀಕ್ಷಿಸಲಾಯ್ತು. ಸಾಹಿತಿಗಳು ಪತ್ರಿಕೆಗಳನ್ನು ಪೋಷಿಸುವ ಸಾಧ್ಯತೆಗಳನ್ನು ಇನ್ನು ಮುಂದೆ ವಿಶ್ಲೇಷಿಸಲಾಗಿದೆ.

  • ಸಾಹಿತ್ಯ, ಪತ್ರಿಕೆಯ ಪುಟಗಳಿಗೆ ವೈವಿಧ್ಯಮಯ ಓದುವ ಸರಕನ್ನು ಒದಗಿಸುತ್ತದೆ. ಸಾಹಿತಿಗಳು ನೀಡುವ ಕಥೆ, ಕವನ ಧಾರಾವಾಹಿಗಳು ಪತ್ರಿಕೆಗಳನ್ನು ಸಾಹಿತ್ಯದಿಂದ ಸಮೃದ್ಧಗೊಳಿಸುವುದಷ್ಟೇ ಅಲ್ಲ ಪತ್ರಿಕೆಗಳ ಬರಹಗಳಲ್ಲಿ ಏಕತಾನತೆಯನ್ನು ಹೋಗಲಾಡಿಸುತ್ತವೆ. ಆಕರ್ಷಣೆಯನ್ನು ಹೆಚ್ಚಿಸುತ್ತವೆ.
  • ಆಯಾ ಭಾಷೆಯ ಸಾಹಿತಿಗಳು ಪತ್ರಿಕೋದ್ಯಮದೊಂದಿಗೆ ಸಹಜ ಸಂಬಂಧ ಹೊಂದಿರುತ್ತಾರೆ. ಪತ್ರಿಕೆಗಳು ಸಾಹಿತಿಗಳ ಬರಹಗಳಿಂದ ಉಪಕೃತಗೊಳ್ಳುತ್ತವೆ. ಉದಾಹರಣೆಗೆ ಕನ್ನಡ ಸಾಹಿತ್ಯದ ಮೇರು ವ್ಯಕ್ತಿಗಳನೇಕರು ಪತ್ರಿಕೋದ್ಯಮದೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಕುವೆಂಪು ‘ಪ್ರಬುದ್ಧ ಕರ್ನಾಟಕ’ಕ್ಕೂ ಬೇಂದ್ರೆ ‘ಸ್ವಧರ್ಮ’ಕ್ಕೆ ಹಾಗೂ ‘ಜೀವನ’ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಶಿವರಾಮ ಕಾರಂತರು ‘ವಂಸತ’ಕ್ಕೆ, ಮಾಸ್ತಿವೆಂಕಟೇಶ ಅಯ್ಯಂಗಾರರು ‘ಜೀವನ’ಕ್ಕೆ ಬೆಟಗೇರಿ ಕೃಷ್ಣಶರ್ಮರು ‘ಜಯಂತಿ’ಗೆ ಸಂಪಾದಕರು. ಗೋಪಾಲಕೃಷ್ಣ ಅಡಿಗರು ‘ಸಾಕ್ಷಿ’ಗೂ, ಪಿ. ಲಂಕೇಶರು ‘ಲಂಕೇಶ ಪತ್ರಿಕೆ’ಗೂ, ಅನಂತಮೂರ್ತಿಯವರು ‘ರುಜುವಾತು’ ಪತ್ರಿಕೆಗೂ ಸಂಪಾದಕರು. ಈಚಿನ ಸಾಹಿತಿಗಳ ಪೈಕಿ ಬಿ. ವಿ. ವೈಕುಂಟರಾಜು, ರವಿಬೆಳಗೆರೆ ಇವರುಗಳು ಸಾಹಿತಿಗಳಾಗಿರವಂತೆ ಸಂಪಾದಕರುಗಳೂ ಹೌದು.
  • ಸಾಹಿತಿಗಳು ತಮ್ಮ ಅಂಕಣಗಳಿಂದ ಪತ್ರಿಕೆಗಳನ್ನು ಸಮೃದ್ಧಗೊಳಿಸುತ್ತಾರೆ. ಕನ್ನಡ ಸಾಹಿತ್ಯದ ಉದಾಹರಣೆಯನ್ನೇ ತೆಗೆದುಕೊಂಡರೆ ನಮ್ಮ ಪ್ರಖ್ಯಾತ ಅಂಕಣಕಾರರು ಸಾಹಿತಿಗಳಾಗಿರುವುದು ವಿಶೇಷ. ಸಾಹಿತಿಗಳಾಗಿರದೇ ಅಂಕಣಕಾರರಾಗಿ ಯಶಸ್ಸ ಗಳಿಸಿಕೊಮಡವರು ವಿರಳ. ಕನ್ನಡದಲ್ಲಿ ಪ್ರಗತಿಶೀಲ ಸಾಹಿತಿ ‘ನಿರಂಜನ’ ಪ್ರಸಿದ್ಧ ಅಂಕಣಕಾರರಾಗಿದ್ದರು. ಹಾ. ಮಾ. ನಾಯಕ, ಕು. ಶಿ. ಹರಿದಾಸ ಭಟ್ಟ, ರಾಮಚಂದ್ರದೇವ ಇವರುಗಳು ಮೂಲತಃ ಸಾಹಿತಿಗಳಾಗಿದ್ದು ಈಗ ಚಾಲ್ತಿಯಲ್ಲಿರುವ ಅಂಕಣಕಾರರು. ಅವರ ಅಂಕಣಗಳು ನಮ್ಮ ಪತ್ರಿಕೆಗಳ ಶೋಭೆ ಹೆಚ್ಚಿಸುವ ವಸ್ತುಗಳು.
  • ಸಾಹಿತಿಗಳು ಬಳಸುವ ಭಾಷೆ, ಬರವಣಿಗೆಯಲ್ಲಿ ಬಳಕೆಗೆ ತರುವ ಶಬ್ದಗಳು ಸಮಾಕಾಲೀನ ಪತ್ರಿಕೆಗಳಲ್ಲೂ ಬಳಕೆಗೊಂಡು ಭಾಷೆಗೆ ಚಾಲನೆ ನೀಡುತ್ತವೆ. ಪತ್ರಿಕಾ ಬರಹಗಳಿಗೆ ಹೊಸತನವನ್ನು ನೀಡುತ್ತವೆ. ಸಾಹಿತ್ಯ ಪತ್ರಿಕೆಗಳು ಸಾಹಿತ್ಯ ಹಾಗೂ ಪತ್ರಿಕೋದ್ಯಮಗಳು ಸೇರುವ ಬಿಂದುಗಳು. ಸಾಹಿತಿಗಳೇ ಸಹಜವಾಗಿ ಸಾಹಿತ್ಯ ಪತ್ರಿಕೆಗಳ ಅಧ್ವರ್ಯಗಳಾಗಿರುತ್ತಾರೆ. ಸಾಹಿತಿಗಳಿಂದ ಸಾಹಿತ್ಯಾಸಕ್ತರಿಗಾಗಿ ಬರುವ ಪತ್ರಿಕೆಗಳು ಸಾಹಿತ್ಯ ಪತ್ರಿಕೆಗಳಾಗಿರುತ್ತವೆ. ಸಾಹಿತ್ಯವು ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನು ಸಾಹಿತ್ಯ ಪತ್ರಿಕೆಗಳ ಮೂಲಕ ಒದಗಿಸುವುದನ್ನೂ ಪತ್ರಿಕೆಗಳಿಗೆ ಸಾಹಿತ್ಯದಿಂದಾಗುವ ಲಾಭವೆಂದು ಪರಿಗಣಿಸಬಹುದು.

ಹತ್ತೊಂಬತ್ತನೇ ಶತಮಾನದ ಸಾಹಿತ್ಯ ಪತ್ರಿಕೆಗಳು

ಕನ್ನಡದಲ್ಲಿ ಮೊದಲ ಪತ್ರಿಕೆ ದಾಖಲಾದುದು ೧೮೪೩ರಲ್ಲಿ. ಮುಂಬೈ, ಮದ್ರಾಸು, ಹೈದರಾಬಾದು ಹಾಗೂ ಮೈಸೂರು ಪ್ರಾಂತ್ಯಗಳಿಗೆ ಸೇರಿದ ಕನ್ನಡ ನಾಡಿನಲ್ಲಿ ೧೮೪೩ರ ಬಳಿಕ ಪತ್ರಕೋದ್ಯಮ ಚಟುವಟಿಕೆಗಳು ನಿಧಾನವಾಗಿ ತೆರೆದುಕೊಂಡವು. ಇವು ಆರಂಭಕಾಲದ ಹೆಜ್ಜೆಗಳು. ಆದರೆ ೧೯ನೇ ಶತಮಾನದಲ್ಲಿ ಸಾಹಿತ್ಯ ಪತ್ರಿಕೆಗಳ ಕೆಲಸ ಅಷ್ಟಾಗಿ ನಡೆಯಲಿಲ್ಲ ಎಂಬುದು ನಿಜ. ಅದಕ್ಕೆ ೧೯ನೇ ಶತಮಾನದ ಭಾರತದ ಹಾಗೂ ಕನ್ನಡದ ಒಟ್ಟೂ ಸಾಮಾಜಿಕ, ಸಾಂಸ್ಕೃತಿಕ ವಾತಾವರಣವೂ ಉತ್ತೇಜಕವಾಗಿರಲಿಲ್ಲ ಎಂಬುದುನ್ನು ಗಮನಿಸಬೇಕು. ಭಾರತದಲ್ಲಿ ೧೮ ಮತ್ತು ೧೯ನೇ ಶತಮಾನಗಳು ಕತ್ತಲೆಯ ಕಾಲ. ಭಾರತದಲ್ಲಿ ವಿಧೇಶೀಯರ ಆಧಿಪತ್ಯ ಸಂಪೂರ್ಣವಾಗಿ ನೆಲೆಗೊಂಡು ಭಾರತದ ಪ್ರಮುಖ ಉತ್ಪಾದನೆಗಳು ವಿದೇಶೀಯರಿಗೆ ಕಡಿಮೆ ಬೆಲೆಗೆ ಮಾರಾಟಗೊಂಡು ಭಾರತೀಯರ ಸಂಸ್ಕೃತಿ, ಸ್ವಾಭಿಮಾನ ಮಾನವ ಸಂಪನ್ಮೂಲಗಳು ಒಟ್ಟಾರೆ ತುಳಿತಕ್ಕೊಳಗಾದ ಕಾಲ. ನಮ್ಮ ಕಿವಿಗಳಿಗೆ ಕಲಾವಿದರಿಗೆ ರಾಜಾಶ್ರಯವೆಂಬ ಮಾಮರದ ಆಸರೆಯಿರುವುದು ಭಾರತದ ಸಂಪ್ರದಾಯ. ಆದರೆ ಆಳರಸರುಗಳು ತಮ್ಮ ರಾಜ್ಯ ಅಧಿಕಾರಗಳನ್ನು ಕಳೆದುಕೊಂಡು ಬ್ರಿಟಿಷರ ಕಾಲೊತ್ತಬೇಕಾದ ಸಾಂಸ್ಕೃತಿಕ ವಾತಾವರಣ ನುಚ್ಚುನೂರಾಯಿತು. ‘ಹದಿನೆಂಟನೆಯ ಶತಮಾನದ ಕರ್ನಾಟಕದಲ್ಲಿ ಬಲಿಷ್ಠವಾದ ರಾಜಮನೆತನವಾವುದೂ ಆಳುತ್ತಿರಲಿಲ್ಲ. ಸಾಲದಕ್ಕೆ ಪೇಶ್ವೇ ನಿಜಾಮ ಮುಂತಾದ ಅನ್ಯ ಭಾಷಿಕರ ರಾಜಸತ್ತೆಯಲ್ಲಿ ಕನ್ನಡದ ಅನೇಕ ಪ್ರದೇಶಗಳು ಸಿಕ್ಕಿಕೊಂಡಿದ್ದವು. ಕವಿ ಬಳ್ಳಿಗಳಿಗೆ ಬಿದಿರಿನ ಹಂದರವನ್ನದರೂ ಒದಗಿಸಿದ್ದ ಮೈಸೂರಲ್ಲಿ ಚಿಕ್ಕದೇವರಾಜನ ಯೋಗ್ಯತೆಯುಳ್ಳ ಅರಸು ಮುಂದಿನ ಒಂದು ಶತಮಾನದವರೆಗೂ ಹೊರಡಲಿಲ್ಲ. ಹೈದರ ಟೀಪೂಸುಲ್ತಾನರ ರಾಜ್ಯಭಾರದಲ್ಲಿ ನಡೆದ ಸಂಸ್ಕೃತಿ ಸಂವರ್ಧನೆಯು ಹೇಳಿಕೊಳ್ಳುವಂತಹದೇನಲ್ಲ.’ ಹೀಗಾಗಿ ಕರ್ನಾಟದಲ್ಲಿ ಶರಣರು, ದಾಸರು ಮತ್ತು ಸರ್ವಜ್ಞರಂತಹ ಸ್ವತಂತ್ರ ಮನೋವೃತ್ತಿಯ ಕೆಲವರನ್ನು ಬಿಟ್ಟರೆ ೧೮ನೇ ಶತಮಾನದಲ್ಲಿ ಈ ಕರಿನೆರಳು ೧೯ನೇ ಶತಮಾನದ ಸಾಹಿತ್ಯ ನಿರ್ಮಿತಿಯ ಮೇಲೂ ವ್ಯಾಪಿಸಿತು. ೧೯ನೇ ಶತಮಾನದಲ್ಲಿ ಬ್ರಿಟಿಷರ ಆಧಿಪತ್ಯ ಅತಿಕ್ರಮಣಗಳ ವಿರುದ್ಧ ಹೊಯ್ದಾಟ, ಅಸಹನೆ ಆರಂಭವಾಗಿ ಮೊದಲ ಸ್ವಾತಂತ್ಯ್ರ ಸಂಗ್ರಾಮ (೧೮೫೭) ನಡೆದು ೧೮೮೫ರಲ್ಲಿ ಅಖಿಲಭಾರತ ಕಾಂಗ್ರೆಸ್ ಜನ್ಮತಾಳುವುದನ್ನು ಕಾಣುತ್ತೇವೆ. ಆಂತರಿಕ ತುಮುಲ ಹೊಯ್ದಾಟಗಳಲ್ಲೇ ತುಂಬಿಹೋದ ಈ ಶತಮಾನದಲ್ಲಿ ಸಹಜವಾಗಿಯೇ ಸಾಹಿತ್ಯವು ಸಮೃದ್ಧವಾಗಿ ಅರಳಲಿಲ್ಲ. ಆದರೆ ಆಡಳಿತ, ವ್ಯವಹಾರ, ಮುದ್ರಣಯಂತ್ರ, ಕ್ರಿಸ್ತಮತ ಪ್ರಚಾರ ಮತ್ತು ಹೊಸ ಶಿಕ್ಷಣ ಪದ್ಧತಿಯ ಮೂಲಕ ೧೯ನೇ ಶತಮಾನದಲ್ಲಿ ಭಾರತಕ್ಕೆ ಪಾಶ್ಚಾತ್ಯಸಂಪರ್ಕವು ಪ್ರಬಲವಾಗಿ ಉಂಟಾಗಿ ಹೊಸ ರೀತಿಯ ವಿಚಾರ ಸರಣಿ, ಸ್ವಾತಂತ್ರ್‍ಯದ ಹಂಬಲ ಭಾರತೀಯ ಮೈ- ಮನಸ್ಸುಗಳನ್ನು ವ್ಯಾಪಿಸಲು ಆತಂಭಿಸಿತು. ೧೯ನೇ ಶತಮಾನ ಒಂದು ರೀತಿಯಲ್ಲಿ ಭಾರತೀಯ ಸಾಂಸ್ಕೃತಿಕ ಪುನರುಜ್ಜೀವನ ಆರಂಭಗೊಂಡು ಕಾಲ ಈ ಪುನರುಜ್ಜೀವನಕ್ಕೆ ಒದಗಿ ಬಂದ ಅಮ್ಯುಲ್ಯ ಸಾಮಗ್ರಿ ಮುದ್ರಣಯಂತ್ರ. ಭಾರತಕ್ಕೆ ಮುದ್ರಣ ಯಂತ್ರ ಕ್ರಿ. ಶ. ೧೬ನೇ ಶತಮಾನಾಂತ್ಯದಲ್ಲಿ ಬ್ರಿಟಿಷರು ಇಂಗ್ಲಿಷ್ ಮುದ್ರಣ ಯಂತ್ರಗಳನ್ನು ತಂದು ಕಲ್ಕತ್ತಾದಲ್ಲಿ ಇಟ್ಟರು. ಅನಂತರ ಐವತ್ತು ವರ್ಷಗಳಲ್ಲಿ ಬೊಂಬಾಯಿ ಮತ್ತು ಮದ್ರಾಸುಗಳಲ್ಲೂ ಇಡಲ್ಪಟ್ಟವು. . . ಹಿಂದೂಸ್ಥಾನದ ಭಾಷೆಗಳ ಅಕ್ಷರಗಳನ್ನು ಮೊದಲ ಬಾರಿಗೆ ಅಚ್ಚಿನ ಮೊಳೆಗಳಲ್ಲಿ ಉರುಳಿಸಿದವರನು ಕ್ರಿ. ಶ. ೧೫೫೬ರಲ್ಲಿ ಗೋವಾದಲ್ಲಿ ಇದ್ದ ಬಸ್ಟಾಮಂಟ್ (Bustamante) ಎಂಬ ಸ್ಪೇಯಿನ್ ದೇಶದವನು. ಅನಂತರ ೧೫೭೮ರಲ್ಲಿ ಸ್ಪೇಯಿನ್ ದೇಶದ ಇನ್ನೋರ್ವ ಜೆ. ಗೊನ್‌ಸಾಲ್ವೇಸ್ (Gonsalves) ಎಂಬುವನು ಕೊಚ್ಚಿನ್‌ನಲ್ಲಿ ನೆಲೆಸಿ ತಮಿಳು ಅಕ್ಷರದ ಅಚ್ಚು ಮೊಳೆಗಳನ್ನು ಕಂಡುಹಿಡಿದನು. ತಮಿಳು ಅಕ್ಷರಗಳನ್ನು ಕೊರೆದಿದ್ದ ಜೆ. ಗೋನ್‌ಸಾಲ್ವೇಸನೇ ಕನ್ನಡ ಲಿಪಿಗಳ ಅಚ್ಚು ಮೊಳೆಗಳನ್ನು ತಯಾರಿಸಲು ತೊಡಗಿದನು. ಆದರೆ ಅವನಿಗೆ ಕನ್ನಡ ಅಕ್ಷರಗಳು ಸ್ವಲ್ಪ ಬಿಗುಡಾಗಿ ತೋರಿದ್ದರಿಂದ ಆ ಕೆಲಸವನ್ನು ಅಲ್ಲಿಯೇ ಬಿಟ್ಟಿದ್ದನು. ಸುಮಾರು ಒಂದು ನೂರು ವರ್ಷಗಳು ನಂತರ ಜಾನ್‌ಗಿಲ್‌ಕ್ರಿಷ್ಟ್ ಎಂಬಾತನು ಕನ್ನಡ ಅಚ್ಚು ಮೊಳೆಗಳ ನಿರ್ಮಾಣದಲ್ಲಿ ಯಶಸ್ವಿಯಾದನು. ಪರಿಣಾಮವಾಗಿ ೧೭೯೦ರ ಕಾಲಕ್ಕೆ ಬಂಗಾಳದ ಶ್ರೀರಾಮಪುರ ಮುದ್ರಾಣಾಲಯದಲ್ಲಿ ಕನ್ನಡ ಮುದ್ರಣವನ್ನು ಪ್ರಾರಂಭಿಸಿದರು. ಸುಮಾರು ೧೮೧೫ರಲ್ಲಿ ಹಳೆ ಮೈಸೂರು ಸರ್ಕಾರವು ಬೆಂಗಳೂರಿನಲ್ಲಿ ಸರ್ಕಾರಿ ಮುದ್ರಾಣಾಲಯವೊಂದನ್ನು ಸ್ಥಾಪಿಸಿ ಕನ್ನಡ ಮತ್ತು ಇಂಗ್ಲಿಷ್ ಮುದ್ರಣ ಕೆಲಸಗಳನ್ನು ನಡೆಸತೊಡಗಿತು. ಖಾಸಗೀ ಮುದ್ರಣಾಲಯಗಳ ಪೈಕಿ ಲಂಡನ್ ಮಿಶನ್ ಸೂಸೈಟಿ ಸಂಸ್ಥೆಯವರು ೧೮೨೦ರಲ್ಲಿ ಬಳ್ಳಾರಿಯಲ್ಲಿ ಸ್ಥಾಪಿಸಿದ ಛಾಪಾಖಾನೆಯೇ ಮೊದಲಿನದು. ೧೮೬೫ರ ಹೊತ್ತಿಗೆ ಹಲವು ಸ್ಥಳಗಳಲ್ಲಿ ಮುದ್ರಣಾಲಯಗಳು ಕಾಣಿಸಿಕೊಂಡು ಕನ್ನಡ ಬೈಬಲುಗ್ರಂಥಗಳೂ ಸಾಹಿತ್ಯ ಗ್ರಂಥಗಳೂ ಬಹು ಸಂಖ್ಯೆಯಲ್ಲಿ ಮುದ್ರಣವಾಗಲಾರಂಭಿಸಿದವು. ಬೇರೆ ದೇಶದಲ್ಲಿ ಹೇಗೂ ಭಾರತದಲ್ಲೂ ಹಾಗೆ ಮುದ್ರಣಯಂತ್ರ ಬಂದಾಗಿನಿಂದ ಶೈಕ್ಷಣಿಕ-ಸಾಹಿತ್ಯ ರಂಗಗಳಲ್ಲಿ ಕ್ರಾಂತಿಯನ್ನುಂಟು ಮಾಡಿತು. ಅದೇ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರವೂ ಮಿಶನರಿಗಳೂ ಭಾರತಕ್ಕೆ ಆಧುನಿಕ ಶಿಕ್ಷಣವನ್ನು ತಂದರು. ಇಂಗ್ಲಿಷ್ ಭಾಷೆ ದೇಶದ ಮೂಲೆ ಮೂಲೆಗಳನ್ನೂ ವ್ಯಾಪಿಸಿತು. ಬ್ರಿಟಿಷರು ನೀಡಲಾರಂಭಿಸಿದ ಶಿಕ್ಷಣವೇ ಭಾರತೀಯರಲ್ಲಿ ವಿಚಾರ ಶಕ್ತಿಯನ್ನು ಪ್ರೇರೇಪಿಸಿ ಸ್ವಾತಂತ್ಯ್ರದ ಕನಸನ್ನು ಬಿತ್ತಿ, ಹೋರಾಟಕ್ಕೆ ಸಜ್ಜುಗೊಳಿಸಿದ್ದು ಈಗ ಇತಿಹಾಸ. ಈ ಹಿನ್ನಲೆಯಲ್ಲಿ ಕನ್ನಡದಲ್ಲಿ ೧೯ನೇ ಶತಮಾನದಲ್ಲಿ ನಡೆದ ಶಿಕ್ಷಣ-ಸಾಹಿತ್ಯ-ಪತ್ರಿಕೋದ್ಯಮಗಳ ಬೆಲವಣಿಗೆಯನ್ನು ಗಮನಿಸಬೇಕು. ೧೮೪೩ರಿಂದ ಆರಂಭಿಸಿ ಮುಖ್ಯವಾಗಿ ಆ ಶತಮಾನದ ಉತ್ತರಾರ್ಧದ ಪತ್ರಿಕೋದ್ಯಮ ಚಟುವಟಿಕೆಗಳನ್ನು ಪರಿಶೀಲಿಸಿದರೆ ಒಂದು ಕ್ರಿಸ್ತ ಮಿಶನರಿಗಳ ಧಾರ್ಮಿಕ ಉದ್ದೇಶದ ಪತ್ರಿಕೆಗಳಾದರೆ ಎರಡು ಹಿಂದೂಗಳ ಶಿಕ್ಷಣ ಪ್ರಚಾರದ ಉದ್ದೇಶದ ಪತ್ರಿಕೆಗಳು ಎದ್ದು ಕಾಣುತ್ತವೆ. ಮಂಗಳೂರ ಸಮಾಚಾರ (೧೮೪೩) ಕ್ರೈಸ್ತಸಭಾಪತ್ರ (೧೮೬೮) ಪತ್ರಿಕೆಗಳು ಮೊದಲ ಮಾದರಿಯವು. ವೆಂಕಟರಂಗೋ ಕಟ್ಟಿಯ ಕನ್ನಡ ‘ಜ್ಞಾನಬೋಧಕ’ (೧೮೬೭) ಹಾಗೂ ಡೆಪ್ಯೂಟಿ ಚನ್ನಬಸಪ್ಪನವರ ‘ಕನ್ನಡ ಶಾಲಾ ಪತ್ರಿಕೆ’ (೧೮೬೭) ಎರಡನೇ ಮಾದರಿಯ ಪತ್ರಿಕೆಗಳು. ೧೯ನೇ ಶತಮಾನದ ಉತ್ತರಾರ್ಧದಲ್ಲಿ ಬಂದ ಹೆಚ್ಚಿನ ಪತ್ರಿಕೆಗಳನ್ನು ಹೀಗೆ ಧಾರ್ಮಿಕ ಅಥವಾ ಶಿಕ್ಷಣ ಜ್ಞಾನ ಪ್ರಸಾರದ ಪತ್ರಿಕೆಗಳು ಗುಂಪಿಗೆ ಸೇರಿಸಬಹುದು. ಕನ್ನಡ ಪತ್ರಿಕೋದ್ಯಮದ ನಡೆಯಲ್ಲಿ ಸ್ಪಷ್ಟವಾದ ಎರಡು ಘಟ್ಟಗಳನ್ನು ಶ್ರೀನಿವಾಸ ಹಾವನೂರು ಅವರು ತಮ್ಮ ‘ಹೊಸಗನ್ನಡದ ಅರುಣೋದಯ’ ಸಂಶೋಧನಾತ್ಮಕ ಪ್ರಬಂಧದಲ್ಲಿ ಗುರುತಿಸುತ್ತಾರೆ. ೧೮೪೩ರಿಂದ ೧೮೮೨ರವರೆಗಿನದು ಪ್ರಥಮ ಘಟ್ಟ. ಪತ್ರಿಕೋದ್ಯಮ ಮೆಲ್ಲನೆ ತಲೆಯೆತ್ತಿದ್ದ ಕಾಲ. ಈ ಕಾಲದ ಪತ್ರಿಕೆಗಳಿಗೆ ಜನರಿಗೆ ಸುದ್ದಿಯನ್ನು ಕೊಡುವುದು, ಜ್ಞಾನವನ್ನು ಹೆಚ್ಚಿಸುವುದು ಇವೇ ಮುಖ್ಯ ಉದ್ದೇಶವಾಗಿದ್ದಿತು. ೧೮೮೦ರ ದಶಕದಲ್ಲಿ ಆರಂಭಗೊಳ್ಳುವ ಎರಡನೇ ಘಟ್ಟ ೧೯೨೦ರ ದಶಕದಲ್ಲಿ ಭಾರತದಲ್ಲಿ ಗಾಂಧೀಯುಗ ಆರಂಭವಾಗುವವರೆಗೂ ಮುಂದುವರಿಯುವುದೆನ್ನಲು ಅಡ್ಡಿಯಿಲ್ಲ. ಈ ಅವಧಿಯಲ್ಲಿ ಕನ್ನಡ ಪತ್ರಿಕೋದ್ಯಮ ಕಾಲೂರಿ ನಡೆಯುವ ಹಂತ ತಲುಪಿ ಪತ್ರಿಕೆಗಳನ್ನು ಹೊರಡಿಸುವುದು ಒಂದು ಪರಂಪರೆಯಾಗಿ ಮುಂದುವರೆಯಿತು. ಪತ್ರಿಕೆಗಳ ಕೆಲಸ ವರ್ತಮಾನವನ್ನು ಸಂಗ್ರಹಿಸಿ ಪ್ರಕಟಿಸುವುದು. ಜನರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುವುದಷ್ಟೇ ಅಲ್ಲ, ಸಾಹಿತ್ಯದ ಸಂಸ್ಕಾರ ನೀಡುವುದೂ ಆಗಿದೆ ಎಂಬ ಭಾವನೆ ಬೆಳದು ಉಚ್ಚ ಮಟ್ಟದ ಸಾಹಿತ್ಯಕ ಪತ್ರಿಕೆಗಳು ಎರಡನೇ ಘಟ್ಟದಲ್ಲಿ ಆರಂಭಗೊಳ್ಳುವುದನ್ನು ಕಾಣುತ್ತೇವೆ.

‘ಕನ್ನಡ ಸಚಿತ್ರ ಸಾಹಿತ್ಯ ಪತ್ರಿಕೆ’

೧೯ನೇ ಶತಮಾನದಲ್ಲಿ ಪ್ರಕಟಗೊಂಡ ಪತ್ರಿಕೆಗಳ ಪೈಕಿ ೧೮೫೯ರಲ್ಲಿ ಮಂಗಳೂರಿನಲ್ಲಿ ಪ್ರಕಾಶಿತವಾದ ‘ಸಚಿತ್ರ ಕನ್ನಡ ಸಾಹಿತ್ಯ ಪತ್ರಿಕೆ’ ಇದರ ಶೀರ್ಷಿಕೆಯಿಂದ ಗಮನ ಸೆಳೆಯುತ್ತದೆ. ಮಂಗಳೂರಿನಲ್ಲಿದ್ದ ‘ಬಾಂಬೆ ಕ್ಯಾನರೀಸ್ ವರ್ನಾಕ್ಯುಲರ್‍ ಸೂಸೈಟಿಯ’ ಆಶ್ರಯದಲ್ಲಿ ನಡೆಸುತ್ತಿದ್ದ ಈ ಪತ್ರಿಕೆ ರೆ || ಜಾನ್‌ಮೆಕ್ ಎಂಬುವರು ಸ್ಥಾಪಕರು. ಕನ್ನಡಿಗರಿಗೆ ಕಿಟಲ್ ಶಬ್ಧಕೋಶ ನೀಡಿದ ರೆ | ಫಾ | ಕಿಟಲ್ ಸಹಾಯಕರು. ಪ್ರತೀ ತಿಂಗಳು ೧೦-೧೨ ಪೂರ್ಣ ಪುಟಗಳೀಂದ ಬೈಬಲ್‌ಗೆ ಸಂಬಂಧಿಸಿದ ಲೇಖನಗಳನ್ನು ಸಚಿತ್ರವಾಗಿ ಪ್ರಕಟಿಸಲಾಗುತ್ತಿತ್ತು. ೧೮೫೯ರಿಂದ ೧೮೬೩ರವರೆಗೆ ಅಂದರೆ ನಾಲ್ಕು ವರ್ಷ ನಡೆದ ಈ ಪತ್ರಿಕೆಯನ್ನು ಕನ್ನಡ ಸಾಹಿತ್ಯ ಪತ್ರಿಕೆಗಳ ಸಾಲಿಗೆ ಸೇರಿಸಲಾಗದು. ಯಾಕೆಂದರೆ ‘ದಿ ಇಲ್ಲಸ್ಟ್ರೇಟೆಡ್ ಕ್ಯಾನರೀಸ್ ಜರ್ನಲ್’ ಅಥವಾ ‘ಸಚಿತ್ರ ವರ್ತಮಾನ ಸಂಗ್ರಹ’ ಎಂಬುದಾಗಿಯೂ ಕರೆಯಲ್ಪಟ್ಟ ಈ ಪತ್ರಿಕೆಯಲ್ಲಿ ಸಾಮಾನ್ಯಾಸಕ್ತಿಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಎಲ್ಲ ಸಂಗತಿಗಳೂ ಪ್ರಕಟಗೊಳ್ಳುತ್ತಿದ್ದವು.

‘ಕನ್ನಡ ಸಚಿತ್ರಸಾಹಿತ್ಯ ಪತರಿಕೆ’ಗೆ ಸಮಕಾಲೀನವಾಗಿ "ಕರ್ಣಾಟಕ ವಾಗ್ವಿದಾಯಿನಿ"ಯೂ ಪ್ರಸಿದ್ಧವಾಗಿತ್ತು. ಆಗ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕನಾಗಿ ೧೮೪೦ ರಿಂದ ೧೮೭೦ರವರೆಗೂ ಶ್ರಮಿಸಿದ, ಸಾಹಿತಿ, ವಿದ್ವಾಂಸ, ವಿದ್ಯಾತಜ್ಞ, ನಿಘಂಟುಗಾರ, ವ್ಯಾಕರಣಗಾರ ಎಂದೆಲ್ಲಾ ಪ್ರಸಿದ್ಧನಾಗಿದ್ದರೆ | ಜಾನ್‌ಗೇರೆಟ್ ಈ ಪತ್ರಿಕೆಯ ಸ್ಥಾಪಕರಾಗಿದ್ದರು. ರೆ | ಫಾ | ಹರ್ಮನ್ ಮೂಗ್ಲಿಂಗ್ ಕೂಡಾ ಈ ಪತ್ರಿಕೆಯ ಹಿನ್ನೆಲೆಯಲ್ಲಿದ್ದರು. ಮುಖ್ಯವಾಗಿ ಶಿಕ್ಷಣಕ್ಕೇ ಹೆಚ್ಚು ಒತ್ತುಕೊಡುತ್ತಿದ್ದ ‘ವಾಗ್ವಿದಾಯಿನಿ’ ಯಲ್ಲಿ ಅನೇಕ ವಿದ್ವತ್ ಪೂರ್ಣಲೇಖನಗಳು ಗೇರೆಟ್ಟ್‌ನಿಂದ ರಚಿಸಲ್ಪಟ್ಟವು. ವಿದೇಶೀಯರಿಂದ ನಡೆಸಲ್ಪಟ್ಟ ಈ ಎರಡೂ ಪತ್ರಿಕೆಗಳು ಸೃಷ್ಟ್ಯಾತ್ಮಕ ಸಾಹಿತ್ಯ ಪತ್ರಿಕೆಗಳಾಗಿರಲಿಲ್ಲ. ಹೀಗಾಗಿ ಅವುಗಳನ್ನು ಕನ್ನಡ ಸಾಹಿತ್ಯ ಪತ್ರಿಕೆಗಳ ಸಾಲಿನಲ್ಲಿ ಸೇರಿಸಲಾಗದು. ಹತ್ತೊಂಬತ್ತನೇ ಶತಮಾನದಲ್ಲಿ ಕನ್ನಡದಲ್ಲಿ ಪ್ರಕಟಗೊಂಡ ಪತ್ರಿಕೆಗಳನ್ನೆಲ್ಲಾ ಶೋಧಿಸಿದರೂ ಸಾಹಿತ್ಯಕ್ಕೆ ಮೀಸಲೆಂದು ಘೋಷಿಸಿಕೊಂಡು ಪ್ರಯತ್ನ ಕಾಣುವುದಿಲ್ಲ. ಹಾಗೆ ಘೋಷಿಸಿಕೊಳ್ಳುವ ಸಂಪ್ರದಾಯ ೨೦ನೇ ಶತಮಾನಕ್ಕೆ ಸೇರಿದ್ದು. ಆದರೆ ೧೯ನೇ ಶತಮಾನದಲ್ಲಿ ಪ್ರಕಟಗೊಂಡ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಟ್ಟು ಪತ್ರಿಕೆಗಳು ಅನೇಕ ಇವೆ. ಹಾಗಿ ಕರೆದುಕೊಳ್ಳದಿದ್ದರೂ ಪರಿಪೂರ್ಣ ಸಾಹಿತ್ಯ ಪತ್ರಿಕೆಯೆಂದು ಕರೆಯಬಹುದಾದ ನಿಯತಕಾಲಿಕಗಳು ೧೯ನೇ ಶತಮಾನದ ಅಂತಿಮ ಪಾದದಲ್ಲಿ ದಾಖಲಾಗಿವೆ. ಆ ಕಾಲದ ಪತ್ರಿಕೆಗಳನ್ನು ಸಾಹಿತ್ಯ ಪತ್ರಿಕೆಗಳು ಹಾಗೂ ಸಾಹಿತ್ಯ ಪತ್ರಿಕೆಗಳಿಗೆ ಭೂಮಿಕೆ ಸಿದ್ಧಮಾಡಿದ ಪತ್ರಿಕೆಗಳು ಎಂಬುದಾಗಿ ವಿಭಾಗಿಸಬಹುದು. ಭೂಮಿಕೆ ಸಿದ್ಧಮಾಡಿದ ಪತ್ರಿಕೆಗಳು ಪೂರ್ಣ ಪ್ರಮಾಣದ ನಿಯತಕಾಲಿಕಗಳಲ್ಲ. ಕರ್ನಾಟಕ ಭಾಷಾ ಸೇವಕ (೧೮೯೧), ಕರ್ನಾಟಕ ಕಾವ್ಯ ಮಂಜರಿ (೧೮೯೨), ಕರ್ಣಾಟಕ ಗ್ರಂಥ ಮಾಲಾ (೧೮೯೩), ಕಾವ್ಯಕಲ್ಪದ್ರುಮ (೧೮೯೭)ಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಈ ಪತ್ರಿಕೆಗಳು ತಮ್ಮ ಸಮಕಾಲೀನ ಪತ್ರಿಕೆಗಳಿಗಿಂತ ಭಿನ್ನವಾಗಿ ಹಾಗೂ ಸಾಹಿತ್ಯಕ್ಕೆ ಹತ್ತಿರವಾಗಿ ನಿಂತವು ಎನ್ನುವುದು ವಿಶೇಷ.

‘ಕರ್ನಾಟಕ ಭಾಷಾ ಸೇವಕ’

ಕರ್ನಾಟಕ ಭಾಷಾಸೇವಕ (೧೮೯೧) ವಿಜಾಪುರದಿಂದ ಪ್ರಕಟಗೊಂಡ ಪತ್ರಿಕೆ. ವಿಜಾಪುರ ಹೈಸ್ಕೂಲಿನ ಮೂವರು ತರುಣ ಶಿಕ್ಷಕರಾದ ಶೇಷಗಿರಿರಾವ್ ಕೊಣ್ಣೂರ, ಹಣಮಂತರಾವ್‌ಸಗರ ಹಾಗೂ ಕೃಷ್ಣರಾವ್ ಹುನಗುಂದ ಎಂಬುವರು ಭಾಷಾಸೇವಕಕ್ಕಾಗಿ ದುಡಿದವರು. ಈ ಮೂವರಿಗೆ ಪ್ರಾಚೀನ ಕಾವ್ಯಗಳನ್ನು ಸರಳಗನ್ನಡದಲ್ಲಿ ಓದುಗರಿಗೆ ನೀಡುವ ಅಭಿಲಾಷೆ ಇತ್ತು. ಆ ಪ್ರಕಾರವಾಗಿ ಕೊಣ್ಣೂರ ಶೇಷಗಿರಿರಾಯರು ಶಕುಂತಲೆ ದುಷ್ಯಂತರ ಕಥೆಯನ್ನು ಆಧರಿಸಿ ‘ಕೇಡುತಂದ ಉಂಗುರ’ವೆಂಬ ಕಥೆಯನ್ನು ಬರೆದರು. ಸಗರ ಹಣಮಂತರಾವ್ ‘Loves of Heaven’ ಎಂಬುದರ ಭಾಷಾಂತರ ‘ಅಂತಃಪುರದ ರಹಸ್ಯ’ ಬರೆದರು. ಕೃಷ್ಣರಾವ್ ಹುನಗುಂದ ಅವರು ‘ಮಾಲತೀಮಾಧವ’ ಕಥೆಯ ಅನುವಾದ ‘ಕರುಹಿನ ಬಕುಳಹಾರ’ ಎಂಬ ಬರಹವನ್ನು ಕರ್ನಾಟಕ ಭಾಷಾಸೇವಕದಲ್ಲಿ ಪ್ರಕಟಿಸಿದರು. ಹೀಗೆ ಪ್ರಾಚೀನ ಕಾವ್ಯಗಳ ಕನ್ನಡ ಭಾಷಾಂತರ ಅಥವಾ ರೂಪಾಂತರಗಳ ಜೊತೆಗೆ, ಶಕ್ಷಿಕರಿಗೆ, ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಸ್ತುಗಳು ಭಾಷಾಸೇವಕದಲ್ಲಿ ಪ್ರಕಟಗೊಂಡವು.

‘ಕರ್ಣಾಟಕ ಕಾವ್ಯಮಂಜರಿ’

‘ಕರ್ಣಾಟಕ ಕಾವ್ಯಮಂಜರಿ’ ಪ್ರಾಚೀನ ಕಾವ್ಯಗಳ ಪ್ರಕಟಣೆಗೇ ಮೀಸಲಾದ ಪತ್ರಿಕೆಯಾಗಿತ್ತು. ಈ ಮುನ್ನ ಹಳಗನ್ನಡ ವಾಙ್ಮಯವನ್ನು ಹೊರತರುವಲ್ಲಿ ಮಿಶನರಿಗಳೂ ಕೆಲವು ಸರಕಾರೀ ಅಧಿಕಾರಿಗಳೂ ಕೆಲಸ ಮಾಡಿದ್ದೇನೋ ನಿಜ. ಆದರೆ ಲಭ್ಯವಿರುವ ನೂರಾರು ಹಳಗನ್ನಡ ಕಾವ್ಯಗಳ ಸವಿಯನ್ನು ಕನ್ನಡ ವಾಚಕರಿಗೆ ಉಣಿಸಬೇಕೆಂಬ ಆಸೆಯಿಂದ ಹೊರಟವರು ಎಂ. ವಿ. ರಾಮಾನುಜಯ್ಯಂಗಾರ್‍ (೧೮೬೨-೧೯೩೮) ಹಾಗೂ ಎಸ್. ಜಿ. ನರಸಿಂಹಾಚಾರ್‍ (?- ೧೯೧೧). ‘ನಾನಾವಿಧ ಪ್ರಾಚೀನ ಕಾವ್ಯನಾಟಕಚ್ಛಂದೋಲಂಕಾರ ವ್ಯಾಕರಣ, ನಿಘಂಟು ವೈದ್ಯ.... ಸೂಪಶಿಲ್ಪ ಗ್ರಂಥಸಂಗ್ರಹದ ಮಾಸಪತ್ರಿಕೆ’ ಎಂಬುದಾಗಿ ಅಭಿದಾನವನ್ನು ಕರ್ಣಾಟಕ ಕಾವ್ಯಮಂಜರಿಗೆ ನೀಡಲಾಗಿತ್ತು. ಮಂಜರಿಯಲ್ಲಿ ಒಂದೊಂದು ಪ್ರಾಚೀನ ಕಾವ್ಯಗಳು ಪ್ರಕಟಗೊಂಡಾಗಲೂ ಮುಂಬಯಿ, ಮದ್ರಾಸ್, ಮೈಸೂರು ಸೀಮೆಗಳಲ್ಲಿಯ ಮೇಲ್ದರ್ಜೆಯ ಕನ್ನಡ ಪರೀಕ್ಷೆಗಳಿಗೆ ಅವು ಪಠ್ಯಗಳಾಗುತ್ತಿದ್ದವೆನ್ನಲಾಗುತ್ತಿದೆ. ೧೮೯೨ ರಿಂದ ಆರು ವರ್ಷಗಳವರೆಗೆ ಸತತವಾಗಿ ಪ್ರಕಟಗೊಂಡ ಈ ಮಾಲೆಯು ತಡೆದು ನಿಂತಿತು. ಮತ್ತೆ ಎರಡು ವರ್ಷಗಳ ಬಳಿಕ ‘ಕರ್ಣಾಟಕ ಕಾವ್ಯ ಕಲಾನಿಧಿ’ ಎಂಬ ಹೆಸರಿನಲ್ಲಿ ಆರಂಭವಾಗಿ ಕಾಲು ಶತಮಾನ ಮುಂದುವರೆಯಿತು. ‘ಕಾವ್ಯಮಂರಿ’ ಹಾಗೂ ‘ಕಾವ್ಯಕಲಾನಿಧಿ’ಗಳು ಪ್ರಾಚೀನ ಕನ್ನಡ ಕಾವ್ಯಗಳ ಅಭ್ಯಾಸಿಗಳಿಗೆ ಅಕ್ಷಯನಿಧಯಂತಿತ್ತು. ಎಂ. ಎ. ರಾಮಾನುಜ ಅಯ್ಯಂಗಾರ್‌ರವರು ಕಾಲು ಶತಮಾನ ಅವಿಶ್ರಾಂತವಾಗಿ ಈ ಪತ್ರಿಕೆ ತಂದರು. ಮುದ್ದಣನ ರಾಮಾಶ್ವಮೇಧವೆಂಬ ಪ್ರೌಢಕಾವ್ಯ ಧಾರಾವಾಹಿಯಾಗಿ ಮೊತ್ತಮೊದಲ ಪ್ರಕಟಗೊಂಡಿದ್ದು ‘ಕಾವ್ಯಕಲಾನಿಧಿ’ಯಲ್ಲಿ. ಇದರಿಂದಾಗಿಯೇ ನಂದಳಿಕೆಯ ಲಕ್ಷ್ಮೀನಾರಯಣಪ್ಪ ಮುದ್ದಣನಾಗಿ ಕನ್ನಡ ಸಾಹಿತ್ಯದಲ್ಲಿ ಚಿರಕಾಲ ನಿಲ್ಲುವ ಹೆಸರು ಮಾಡಲು ಸಾಧ್ಯವಾಯ್ತು.

‘ಕರ್ಣಾಟಕ ಗ್ರಂಥಮಾಲ’

ಮೈಸೂರಿನ ಗ್ರಾಜ್ಯುಯೇಟ್ ಟ್ರೈಡಿಂಗ್ ಅಸೋಸಿಯೇಶನ್ (ಜಿ. ಟಿ. ಎ) ೧೯ನೇ ಶತಮಾನದ ಕೊನೇಭಾಗದಲ್ಲಿ ಆರಂಭಿಸಿದ ಕನ್ನಡದ ಕೈಂಕರ್ಯ, ಕನ್ನಡ ಭಾಷೆ ಹಾಗೂ ಸಾಹಿತ್ಯ ಬೆಳವಣಿಗೆಗಲ ದೃಷ್ಟಿಯಿಂದ ಮಹತ್ತರವಾದುದು. ಮುದ್ರಿತ ಗ್ರಂಥಗಳ ಪ್ರಸಾರವು ಜಿ. ಟಿ. ಎ. ದವರ ಪ್ರಾರಂಭದ ಉದ್ದೇಶವಾದರೂ ನಂತರ ತಮ್ಮದೇ ಅಚ್ಚುಕೂಟವನ್ನು ಸ್ಥಾಪಿಸಿ ಗ್ರಂಥಗಳನ್ನು ಪ್ರಕಟಿಸಿದರು. ಈ ಪ್ರಕಟಣೆಗಳನ್ನು ‘ಕರ್ಣಾಟಕ ಗ್ರಂಥಮಾಲಾ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇಂಗ್ಲಿಷ್, ಬಂಗಾಲಿ, ಸಂಸ್ಕೃತ ಗ್ರಂಥಗಳನ್ನು ಅನುವಾದಿಸಿ ಈ ಗ್ರಂಥಮಾಲೆಯಲ್ಲಿ ಅನುಕ್ರಮವಾಗಿ ಪ್ರಕಟಿಸಲಾಗುತ್ತಿತ್ತು. ಎಲ್. ಜಯರಾವ್, ಎಂ ಶಾಮರಾವ್, ಬಿ. ಸುಬ್ಬರಾಯರು ಮತ್ತು ಅಪ್ಪಣ್ಣಶೆಟ್ಟಿ ಎಂಬುವರು ಈ ಗ್ರಂಥಮಾಲೆಯ ಅಧ್ವರ್ಯಗಳೆಂದು ಗುರುತಿಸಲಾಗಿದೆ. ಭಾರತದ ವಿವಿಧ ಭಾಷಾವಾಙ್ಮಯಗಳ ವಾರ್ಷಿಕ ಸಮೀಕ್ಷೆ ‘ಕರ್ಣಾಟಕ ಕಾವ್ಯಮಂಜರಿ’ ಹಾಗೂ ‘ಕರ್ಣಾಟಕ ಗ್ರಂಥಮಾಲ’ಗಳ ಸಾಹಿತ್ಯ ಸೇವೆಯ ಬಗ್ಗೆ ೧೮೯೩ರಲ್ಲಿ ಹೀಗೆ ಹೇಳುತ್ತದೆ. ‘The promoters of the Grantha Mala and Kavya Manjari are doing excellent srvice by concentrating the efforts of modern educated men and pandits desirous to improve and enrich modern Kannada literature ’

‘ಕಾವ್ಯಕಲ್ಪದ್ರುಮ’

ಕೊಮ್ಮಂದೂರು ಶ್ರೀನಿವಾಸ ಅಯ್ಯಂಗಾರ್‍ ಅವರು ಸ್ಥಾಪಿಸಿದ ದ್ವಿಭಾಷಾ ಪತ್ರಿಕೆ ‘ಕಾವ್ಯಕಲ್ಪದ್ರುಮ’ ಕನ್ನಡ ಮತ್ತು ಸಂಸ್ಕೃತದಲ್ಲಿ ಪ್ರಕಟಗೊಳ್ಳುತ್ತಿತ್ತು. ಸಂಸ್ಕೃತ ಕಾವ್ಯ ನಾಟಕಗಳ ಪ್ರಕಟಣೆ ಹಾಗೂ ಅನುವಾದ ಶ್ರೀನಿವಾಸ ಅಯ್ಯಂಗಾರ್‍ ಅವರ ಉದ್ದೇಶವಾಗಿತ್ತು. ಆಗಿನ ಕಾಲದ ಇತರ ಪತ್ರಿಕೆಗಳಿಗೆ ಹೋಲಿಸಿದರೆ ಭಿನ್ನಮಾರ್ಗ ತುಳಿದ ಈ ಪತ್ರಿಕೆಗಳು ನಿಜ ಅರ್ಥದಲ್ಲಿ ನಿಯತಕಾಲಿಕಗಳಾಗಿರಲಿಲ್ಲ. ಇಡಿಯಾದ ಕಾವ್ಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದವು. ಆದರೆ ಕನ್ನಡದಲ್ಲಿ ಮುಂದೆ ಬರುವ ಸಾಹಿತ್ಯ ಪತ್ರಿಕೆಗಳಿಗೆ ಭೂಮಿಕೆ ಸಿದ್ಧಮಾಡಿಕೊಟ್ಟ ಪತ್ರಿಕೆಗಳೆಂದು ಈ ಪತ್ರಿಕೆಗಳನ್ನು ಕರೆಯಬಹುದುದು. ಹೀಗೆ ಕನ್ನಡ ಸಾಹಿತ್ಯಕ್ಕೆ ಒತ್ತುಕೊಡುವ ಹಾಗೂ ಪೂರ್ಣವಾಗಿ ಸಾಹಿತ್ಯ ವಿಷಯಗಳಿಂದಲೇ ತುಂಬಿಕೊಳ್ಳುವ ಪರಿಪೂರ್ಣ ನಿಯತಕಾಲಿಕವೂಂದು ಪ್ರಕಟಗೊಂಡುದು ೧೮೯೬ರಲ್ಲಿ, ಅದು ‘ವ್ಯಾಗ್ಭೂಷಣ’ದ ಮೂಲಕ. ‘ಕನ್ನಡ ಸಾಹಿತ್ಯದ ಬೆಳವಣಿಗೆಗೆ ನೇರವಾಗಿ ನೆರವಾಗಿರುವುವು ಮಾಸಪತ್ರಿಕೆಗಳು, ತ್ರೈ ಮಾಸಿಕ ಪತ್ರಿಕೆಗಳು. ಇವು ಸಾಹಿತ್ಯಕ್ಕೇ ಮೀಸಲಾದ ಪತ್ರಿಕೆಗಳು. ಈ ನಿಟ್ಟಿನಲ್ಲಿ ಧಾರವಾಡದ ‘ವಾಗ್ಭೂಷಣ’ ಮೊದಲಿನದು.’

‘ವಾಗ್ಭೂಷಣ’

ಮುಂಬೈ ಕರ್ನಾಟಕದಲ್ಲಿ ಕನ್ನಡದ ಪರಿಸ್ಥಿತಿ ಮೈಸೂರು ರಾಜ್ಯದ ಪರಿಸ್ಥಿತಿಗಿಂತ ಸದಾ ಭಿನ್ನವಾದುದು. ಮೈಸೂರು ರಾಜ್ಯದಲ್ಲಿ ಕನ್ನಡ ಅರಸು ಮನೆತನದವರೇ ಆಳರಸರು. ಹೀಗಾಗಿ ಕನ್ನಡದ ಕೆಲಸಗಳು ಏರಿಳಿತಗಳ ಮಧ್ಯೆಯೂ ಚಲನೆಯಲ್ಲಿರುತ್ತಿದ್ದವು. ಆದರೆ ಮುಂಬೈ ಕರ್ನಾಟಕದ ಪರಿಸ್ಥಿತಿ ಬೇರೆ. ಇಲ್ಲಿಯ ಕನ್ನಡಿಗರಿಗೆ ಮರಾಠಿಯ ವಾತಾವರಣದಲ್ಲಿ ಬದುಕಬೇಕಾದ ಸ್ಥಿತಿ. ತಮ್ಮ ನೆಲದಲ್ಲೇ ಅನಾಥ ಪ್ರಜ್ಞೆ ಅನುಭವಿಸುವ ಸಂಕಟ. ಈ ಸಂಕಟವೇ ನಿಧಾನವಾಗಿಯಾದರೂ ಕನ್ನಡಿಗರಲ್ಲಿ ಸ್ವಾಭಿಮಾನ ಜಾಗೃತಗೊಳ್ಳಲು ಕಾರಣವಾಯ್ತು. ಕೆಲವು ಬ್ರಿಟಿಷ್ ಅಧಿಕಾರಿಗಳ ಹಾಗೂ ಮಿಶಿನರಿಗಳ ಪ್ರಯತ್ನದ ಫಲವೂ ಸೇರಿಕೊಂಡು ಕನ್ನಡನಾಡು-ನುಡಿಯ ಬಗ್ಗೆ ಜನರಿಗೆ ಅಭಿಮಾನವುಂಟಾಗಿ ಅದರ ಪುನರುಜ್ಜೀವನಕ್ಕಾಗಿ ಹೋರಾಡುವ ಸಂಕಲ್ಪ ಮೂಡಿಸಿತು. ಈ ಜಾಗೃತಿಯ ಫಲವೇ ೧೮೯೦ ರಲ್ಲಿ ಧಾರವಾಡದಲ್ಲಿ ಸ್ಥಾಪನೆಗೊಂಡ ಕರ್ನಾಟಕ ವಿದ್ಯಾವರ್ಧಕ ಸಂಘ. ನಾಡು-ನುಡಿಗಳ ಸೇವೆಯನ್ನೇ ಉದ್ದೇಶವಾಗಿಟ್ಟುಕೊಂಡು ಹುಟ್ಟಿದ ಸಂಸ್ಥೆ ಈ ಸಂಘದ ಸ್ಥಾಪನೆಯ ವಿಚಾರ ಮೊದಲು ಹೊಳೆದದ್ದು ರಾ. ಹ. ದೇಶಪಾಂಡೆಯವರಿಗೆ-೧೮೮೭ರಲ್ಲಿ. ಎರಡು ವರ್ಷ ಸತತವಾಗಿ ಭಿಕ್ಷಾಪಾತ್ರೆ ಹಿಡಿದು ಸಂಘಕ್ಕಾಗಿ ನಿಧಿ ಸಂಗ್ರಹ ಮಾಡಿದರು. ಶಾಮರಾಯ ಕಾಯ್ಕಣಿ ಸಂಘದ ಮೊದಲ ಅಧ್ಯಕರಾದರೆ ರಾ. ಹ. ದೇಶಪಾಂಡೆಯವರು ಮೊದಲ ಕಾರ್ಯದರ್ಶಿಯವರು.

ವಿದ್ಯಾವರ್ಧಕ ಸಂಘದ ಉದ್ದೇಶಗಳೂ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದುದು ೧೮೯೦ನೆಯ ಇಸವಿ ಜುಲೈ ೨೦ರಂದು

  • ೧. ಕನ್ನಡವನ್ನು ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವುದಕ್ಕೆ ಉತ್ತೇಜನವನ್ನು ಕೊಡುವುದು.
  • ೨. ಕನ್ನಡದಲ್ಲಿ ಗ್ರಂಥಗಳನ್ನು ಹೊಸದಾಗಿ ಬರೆದು, ಬೇರೆ ಭಾಷೆಯಿಂದ ಪರಿವರ್ತಿಸಿ, ಪ್ರಾಚೀನ ಗ್ರಂಥಗಳನ್ನು ಪರಿಶೋಧಿಸಿ ಪ್ರಕಟಿಸುವುದು
  • ೩. ಈ ಕೆಲಸವನ್ನು ಮಾಡುವ ವಿದ್ವಾಂಸರಿಗೆ ಸಹಾಯವನ್ನು ಕೊಡುವುದು.
  • ೪. ಇವೆಲ್ಲ ಕಾರ್ಯಗಳಿಗೆ ಸಹಕಾರಿಯಾಗಲು ಸಂಘದಿಂದ ಒಂದು ನಿಯತ ಕಾಲಿಕೆಯನ್ನು ಪ್ರಕಟಿಸುವುದು. ಮತ್ತು
  • ೫. ಧಾರವಾಡದಲ್ಲಿ ಒಂದು ಪುಸ್ತಕಾಲಯವನ್ನು ಸ್ಥಾಪಿಸುವುದು-ಇವು ಸಂಘದ ಉದ್ದೇಶಗಳೆಂದು ಸಾರಲಾಯಿತು.

ಈ ಉದ್ದೇಶಗಳಲ್ಲಿ ಹೇಳಿರುವಂತೆಯೇ ೧೮೯೬ರಲ್ಲಿ ಸಂಘವು ‘ವಾಗ್ಭೂಷಣ’ವೆಂಬ ಮಾಸಪತ್ರಿಕೆಯನ್ನು ಆರಂಭಿಸಿತು. ಕನ್ನಡಕ್ಕಾಗಿ ದುಡಿದ ಪಾಶ್ಚಾತ್ಯ ಮಹನೀಯರುಗಳಾದ ಬಿ. ಎಲ್. ರೈಸ್, ಫರ್ಡಿನೆಂಡ್ ಕಿಟ್ಟೆಲ್, ಫ್ಲೀಟ್ ಮುಂತಾದವರು ಸದಸ್ಯರು. ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ಎಸ್. ಒ. ನಂದೀಮಠ, ಟಿ. ಕೆ. ತುಕೋಳ್, ಕೆ. ಜಿ. ಕುಂದಣಗಾರ, ಎ. ಆರ್‍. ಕೃಷ್ಣಶಾಸ್ತ್ರಿ ಮುಂತಾದ ಕನ್ನಡದ ದಿಗ್ಗಜಗಳೂ ಕರ್ನಾಟಕ ವಿದ್ಯಾವರ್ಧಕ ಸಂಘದ ಸದಸ್ಯರಾಗಿದ್ದರು. ಕನ್ನಡ ಭಾಷೆಯ ಪುನರುಜ್ಜೀವನ, ಉಪನ್ಯಾಸಮಾಲೆ, ಸಾಹಿತ್ಯ ಪರೀಕ್ಷೆಗಳನ್ನು ನಡೆಸುವುದು, ಬೃಹತ್ ಗ್ರಂಥಾಲಯ, ಇವೆಲ್ಲ ಕರ್ನಾಟಕ ವಿದ್ಯಾವರ್ಧಕ ಸಂಘದ ಹೆಗ್ಗಳಿಕೆ ೧೯೦೦ ರಿಂದ ೧೯೪೦ರ ಅವಧಿಯಲ್ಲಿ ಕರ್ನಾಟಕ ಸಂಘವು ೧೭೫ ಗ್ರಂಥಕಾರರಿಗೆ ೧೮,೯೯೦ ರೂಪಾಯಿಗಳ ಸಂಭಾವನೆ ನೀಡಿ ೪೨೩ ಪುಸ್ತಕಗಳನ್ನು ಬರೆಯಲು ಪ್ರೋತ್ಸಾಹಿಸಿತು. ೨೦-೭-೧೮೯೦ರಲ್ಲಿ ನಡೆದ ಸಂಘದ ಮೊದಲ ಸಭೆಯಲ್ಲಿ ಸಂಘಕ್ಕೆ ಬರುವ ಹಣದ ಶೇಕಡಾ ೩೦ರಷ್ಟು ಗ್ರಂಥಸಂಗ್ರಹಕ್ಕೆ ಮೀಸಲಿಡುವ ನಿರ್ಣಯ ಮಾಡಿ ಅಂದೇ ಗ್ರಂಥ ಸಂಗ್ರಹಕ್ಕೆ ಆರಂಭಿಸಿತು. ನಾಡಹಬ್ಬ ಆಚರಣೆಯನ್ನು ಜನಪ್ರಿಯಗೊಳಿಸುವುದು, ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಗೊಳ್ಳುವಲ್ಲಿ ಹಾಗೂ ಕರ್ನಾಟಕ ಏಕೀಕರಣದ ಕನಸು ಸಾಕಾರಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಇನ್ನೊಂದು ಮಹತ್ತರವಾದ ಕೊಡುಗೆ ಕನ್ನಡಕ್ಕೊಂದು ಪೂರ್ಣ ಪ್ರಮಾಣದ ಸಾಹಿತ್ಯ ಪತ್ರಿಕೆಯನ್ನು ಒದಗಿಸಿದ್ದು. ಅದುವೇ ‘ವಾಗ್ಭೂಷಣ’. ಮೂಲತಃ ಕರ್ನಾಟಕ ವಿದ್ಯಾವರ್ಧಕ ಸಂಘದ ಮುಖವಾಣಿಯಾದ ‘ವಾಗ್ಭೂಷಣ’ ಪತ್ರಿಕೆಗೆ ಕರ್ನಾಟಕ ಹಾಗೂ ಮೈಸೂರು ಸೀಮೆಯ ಗ್ರಂಥಸ್ಥ ಭಾಷೆಯನ್ನು ಒಗ್ಗೂಡಿಸುವ ಉದ್ದೇಶ. ಹಳಗನ್ನಡದ ಗ್ರಂಥ ಪರಿಶೋಧನೆ, ಪರಿಷ್ಕರಣೆ ಹಾಗೂ ಹೊಸಗನ್ನಡ ಸಾಹಿತ್ಯ ನಿರ್ಮಾತೃಗಳಿಗೆ ಈ ಪತ್ರಿಕೆ ಕೊಟ್ಟ ಪ್ರೋತ್ಸಾಹ ಕಡಿಮೆಯದಲ್ಲ. ಈ ಪತ್ರಿಕೆಯಲ್ಲಿ ಸಂಘದ ವಿವಿಧ ಇತರ ಲೇಖನಗಳು ಜೊತೆಗೆ ಗ್ರಂಥಾವಳಿಯ ಭಾಗಗಳಿರುತ್ತಿದ್ದವು. ಕರ್ನಾಟಕ ಗ್ರಂಥಮಾಲೆಯಂತೆ ಹೊಸಲೇಖಕರನ್ನು ಬೆಳಕಿಗೆ ತರುವ ವಿಷಯದಲ್ಲೂ ‘ವಾಗ್ಭೂಷಣ’ ವಿಶೇಷ ಪ್ರಯತ್ನ ಮಾಡಿದೆ. ‘ಸಂಘದ ಇನಾಮಿನ ಆಸೆಗೆ ಬರೆದವರೂ ಇದ್ದರು. ‘ವಾಗ್ಭೂಷಣ’ದ ಮೂಲಕ ಹೊರಬಂದ ಅನೇಕ ಕೃತಿಗಳು ಪ್ರಗತಿಪರ ದೃಷ್ಟಿಯನ್ನಿಟ್ಟು ಸ್ವಂತಂತ್ರ ವಿಚಾರಧಾರೆಯಿಂದ ಬರೆದವುಗಳಾಗಿದ್ದವು’ ಎಂದು ಶ್ರೀನಿವಾಸ ಹಾವನೂರರು ಅಭಿಪ್ರಾಯ ಪಡುತ್ತಾರೆ. ಒಟ್ಟಾರೆ ಕನ್ನಡಕ್ಕಾಗಿ ದುಡಿಯುವ ಸಂಘವೊಂದರ ಮುಖವಾಣಿಯಾಗಿ ಆರಂಭಗೊಂಡ ‘ವಾಗ್ಭೂಷಣ’ ಆರ್ಥಿಕ ಸಂಕಷ್ಟಗಳಿಂದಾಗಿ ೧೯೧೦ರ ನಂತರ ನಿಂತು ಹೋಯಿತು. ಮತ್ತೆ ೧೯೩೮ರಲ್ಲಿ ಪುನರಾರಂಭಗೊಂಡು ೧೯೭೩ರವರೆಗೂ ಮುಂದುವರೆದು ನಿಂತಿತು. ಭಾಷಾ ಭೇದವಿಲ್ಲದೆ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ-ಎಲ್ಲ ಭಾಷೆಗಳ ಸಾಹಿತ್ಯದ ಪರಿಚಯವನ್ನು ‘ವಾಗ್ಭೂಷಣ’ ಮಾಡಿಸುತ್ತಿತ್ತು. ಆ ಕಾಲದ ಸಾಮಾಜಿಕ ಸಮಸ್ಯೆಗಳಿಗೂ ಪತ್ರಿಕೆ ಕುರುಡಾಗಿರಲಿಲ್ಲ. ಸಾಹಿತ್ಯ ಪ್ರೇಮದೊಡನೆ ರಾಷ್ಟ್ರಪ್ರೇಮದ ಬೀಜಗಳನ್ನು ‘ವಾಗ್ಭೂಷಣ’ ಬಿತ್ತಿತು. ‘ವಾಗ್ಭೂಷಣ’ದ ಕೊಡುಗೆ ಕುರಿತು ಕನ್ನಡದ ಹಿರಿಯ ವಿದ್ವಾಂಸ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು ಹೀಗೆ ಬರೆಯುತ್ತಾರೆ :‘. . . . ವಿಮರ್ಶೆ, ಸಂಶೋಧನೆ, ವ್ಯಾಖ್ಯಾನ, ಪರಿಷ್ಕರಣ, ಹೊಸ ಸಾಹಿತ್ಯದ ನಿರ್ಮಿತಿ ಮುಂತಾದವುಗಳಿಗೆ ಮೀಸಲಾಗಿದ್ದ ‘ವಾಗ್ಭೂಷಣ’ ಒಳ್ಳೆಯ ಸಾಹಿತ್ಯ ಪತ್ರಿಕೆಯಾಗಿತ್ತೆಂದು ಅದರ ಹಳೆಯ ಸಂಚಿಕೆಗಳ ಪರಿಶೀಲನೆಯಿಂದ ತಿಳಿಯುತ್ತದೆ. ವಾಗ್ಭೂಷಣದ ಪ್ರಕಾಶಕರ ವರಸೆ ನೋಡಿ : "ಅಖಿಲ ಕರ್ನಾಟಕದಲ್ಲಿ ಸುಪ್ರಸಿದ್ಧವಾದ ಮಾಸಪತ್ರಿಕೆ. ಚಿಕ್ಕ ಚರಿತ್ರೆಗಳೂ, ಚೊಕ್ಕಟವಾದ ಲೇಖನಗಳೂ, ಕನ್ನಡದ ಹೆಚ್ಚಳಕ್ಕಾಗಿ ಬರೆದ ಬರಹಗಳೂ ಇದರಲ್ಲಿ ಮಿನುಗುವವು. ಮಿಕ್ಕ ಸಿಕ್ಕ ಸಿಕ್ಕ ಲೇಖನಗಳಿಗೆ ಸ್ಥಳ ಸಿಕ್ಕವುದಿಲ್ಲ. . . ಕನ್ನಡದಲ್ಲಿ ಅದರ ಬುದ್ಧಯುಳ್ಳವರಿಗೆಲ್ಲ ಆದರಣೀಯವಾಗಿರುವುದ." ‘ವಾಗ್ಭೂಷಣ’ದ ಮೇ ೧೯೭೩ರ ಸಂಚಿಕೆಯಲ್ಲಿ ‘ವಾಗ್ಭೂಷಣ’ ಸಾಂಸ್ಕೃತಿಕ ಪತ್ರಿಕೆಯಾಗಿದ್ದು ಸಾಂಸ್ಕೃತಿಕ ಜೀವನಮಟ್ಟವನ್ನು ಎತ್ತರಿಸುವಲ್ಲಿ ಉಪಯುಕ್ತವಾಗಬಲ್ಲ ಎಲ್ಲ ಬಗೆಯ ಲೇಖನಗಳನ್ನು ಪ್ರಕಟಿಸುವ ಧ್ಯೇಯವನ್ನಿರಿಸಿಕೊಂಡಿದೆ. ಸಿದ್ಧಹಸ್ತರಾದ ಹಿರಿಯ ಸಾಹಿತಿಗಳ ಲೇಖನಗಳನ್ನು ಪ್ರಕಟಿಸುವುದರ ಜೊತೆಗೆ ಯೋಗ್ಯತಾ ಸಂಪನ್ನ ಉದಯೋನ್ಮಖ ಕಿರಿಯ ಸಾಹಿತಿಗಳ ಲೇಖನಗಳನ್ನೂ ಪ್ರಕಟಿಸಿ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ‘ವಾಗ್ಭೂಷಣ’ ಹೊಂದಿದೆ" ಎಂಬುದಾಗಿ ತಿಳಿಸಲಾಗಿದೆ. ಪತ್ರಿಕೆಯ ಲೇಖಕರಿಗೆ ಪತ್ರಿಕೆಯ ಒಂದು ಪ್ರತಿ ಹಾಗೂ ಪ್ರಕಟಿತ ಲೇಖನದ ೨೫ ಬಿಡಿ ಪ್ರತಿಗಳನ್ನು ಉಚಿತವಾಗಿ ಕೊಡುವುದಾಗಿಯೂ ಈ ಸಂಚಿಕೆಯಲ್ಲಿಯೂ ಈ ಸಂಚಿಕೆಯಲ್ಲಿ ತಿಳಿಸಲಾಗಿದೆ. ೧೯೭೩ರಲ್ಲಿ ‘ವಾಗ್ಭೂಷಣ’ದ ಸಂಪಾದಕ ಮಂಡಳಿ ಈ ಕೆಳಗಿನಂತೆ ರಚಿತವಾಗಿತ್ತು.

ಅಧ್ಯಕ್ಷರು : ಪಾಟೀಲ ಪುಟ್ಟಪ್ಪ

ಕಾರ್ಯಧ್ಯಕ್ಷರು : ಸ. ಸ. ಮಾಳವಾಡ

ಮುಖ್ಯ ಸಂಪಾದಕರು : ಎನ್ಕೆ ಕುಲಕರ್ಣಿ, ಕೆ. ಎಸ್. ದೇಶಪಾಂಡೆ

ಒಂಬತ್ತು ಜನ ಸದಸ್ಯರಿದ್ದ ಈ ಮಂಡಳಿಗೆ ಎಂ. ಎನ್. ಹುದ್ದಾರ ಹಾಗೂ ಬಿ. ಜಿ. ಕುಲಕರ್ಣಿಯವರನ್ನು ಕಾರ್ಯದರ್ಶಿಗಳಾಗಿ ಹೆಸರಿಸಲಾಗಿದೆ. ೧೯೭೩ರಲ್ಲಿ ವಾರ್ಷಿಕ ಚಂದಾ ವಿದ್ಯಾ ವರ್ಧಕ ಸಂಘದ ಆಜೀವ ಸದಸ್ಯರಿಗೆ ೧೫ ರೂಪಾಯಿ ಹಾಗೂ ವಿದ್ಯಾರ್ಥಿಗಳಿಗೆ ೧೦ ರೂಪಾಯಿ. ಇತರರಿಗೆ ೨೦ ರೂಪಾಯಿ. ‘ವಾಗ್ಭೂಷಣ’ ಜಾಹೀರಾತು ದರ ೧೯೭೩ರಲ್ಲಿ ಇಂತಿದೆ. ಹೊದಿಕೆಯ ಕೊನೆಯ ಪುಟ ೨೫೦ ರೂಪಾಯಿ ಒಳಪುಟ ೧೫೦ ರೂಪಾಯಿ. ಒಂದು ಸಾವಿರ ಪ್ರತಿಗಳನ್ನು ಈ ಸಂಚಿಕೆಗೆ ಮುದ್ರಸಲಾಗಿದೆ. ೧/೮ಡೆಮಿ ಆಕಾರದಲ್ಲಿ ೨೪೨ ಪುಟಗಳ ಲೇಖನಗಳನ್ನೂ ಆರು ಪುಟಗಳ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಆದರೆ ೧೯೭೩ರಲ್ಲಿ ಕೊನೆಯಬಾರಿಗೆ ಪ್ರಕಟಗೊಂಡ ‘ವಾಗ್ಭೂಷಣ’ವು ಸಂಪಾದಕೀಯದಲ್ಲಿ ಹೀಗೆ ಹೇಳಿಕೊಂಡಿದೆ. ‘೨೦೦ ಪುಟಗಳಿಗೂ ಮಿಕ್ಕಿದ ಈ ವಿಶೇಷ ಸಂಚಿಕೆ ಸುಮಾರು ಮೂರು ದಶಕಗಳ ನಂತರ ಮತ್ತೆ ಕನ್ನಡ ವಾಚಕರ ಕೈ ಸೇರುತ್ತಿದೆ. ಇನ್ನೂ ಮುಂದೇಯೂ ‘ವಾಗ್ಭೂಷಣ’ ನಿಯತಕಾಲಿಕವಾಗಿ ಅಲ್ಲದಿದ್ದರೂ ವರ್ಷಕ್ಕೊಮ್ಮೆಯಾದರೂ ಬೆಳಕಿಗೆ ಬಂದು ಕನ್ನಡದ ಬಾವುಟವನ್ನು ಎತ್ತಿ ಹಿಡಿಯಬೇಕೆಂಬುದು ನಮ್ಮ ಅಭಿಲಾಷೆ’ ಆದರೆ ವಾಗ್ಭೂಷಣದ ಅಭಿಲಾಷೆ ಕನಸಾಗಿಯೇ ಉಳಿದುಹೋದುದು ಕನ್ನಡಿಗರ ದುರ್ದೈವ ಎನ್ನಬೇಕಾಗಿದೆ.

‘ಸುವಾಸಿನಿ’

‘ಸುವಾಸಿನಿ’ ೧೯೦೦ರ ಜುಲೈ ಒಂದರಂದು ಆರಂಭವಾಯಿತು. ಬೋಳಾರು ವಿಠಲರಾವ್ ಎಂಬುವವರು ಈ ಪತ್ರಿಕೆಯ ವ್ಯವಸ್ಥಾಪಕರು. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಬೆನಗಲ್ ರಾಮರಾಯರು ‘ಸುವಾಸಿನಿ’ಯ ಸಂಪಾದಕರು. ಮಂಗಳೂರಿನಿಂದ ಹೊರಡುತ್ತಿದ್ದ ಪತ್ರಿಕೆ ಅಲ್ಲಿನ ಬಾಸೆಲ್ ಮಿಶನ್ ಟ್ರಸ್ಟಿನಲ್ಲಿ ಮುದ್ರಣಗೊಳ್ಳುತ್ತಿತ್ತು. ‘ವಿದ್ಯಾವರ್ಧನ, ತತ್ವಶಾಸ್ತ್ರ ಕಲಾಕೌಶಲ ಈ ವಿಷಯಗಳನ್ನು ವರ್ಣಿಸುವಂಥಾ ಮಾಸಿಕ ವಹಿ’ ಎಂಬ ಘೋಷವಾಕ್ಯವನ್ನು ‘ಸುವಾಸಿನಿ’ ಹೊತ್ತಿತ್ತು. ಪತ್ರಿಕೆಯ ಉದ್ದೇಶವನ್ನು ಸಂಪಾದಕರು ಮೊದಲು ಸಂಚಿಕೆಯ ‘ಸ್ಫುಟವಿಷಯ’ ಎಂಬ ಸಂಪಾದಕೀಯ ನುಡಿಯಲ್ಲಿ ಬರೆದಿರುವ ರೀತಿ ಆಕರ್ಷವಾಗಿದೆ. "ನಿಮ್ಮ ಮನಸ್ಸನ್ನು ಹೇಗೆ ರಂಜಿಸುವೆನೆಂದು ಕೇಳುವಿರೋ, ನನ್ನ ಚತುರೋಕ್ತಿಗಳಿಂದ ಸರ್ವರನ್ನು ನಗಿಸುವೆನು. ಲೇಖನಗಳಿಂದಲೂ ಉಪನ್ಯಾಸಗಳಿಂದಲೂ ಲೋಕದ ಜ್ಞಾನವನ್ನು ವರ್ಧಿಸುವೆನು. ಕಥಾಗಳಿಂದ ನೀತಿಯನ್ನುಪದೇಶಿಸುವೆನು, ನಿಮಗೆ ಬೇಸರ ಬಾರದಂತೆ ಬೇರೆ ಬೇರೆ ವಿಚಿತ್ರ ವಿಷಯಗಳನ್ನು ಹೇಳುವೆನು. ‘ಕ್ರೌನ್ ಕ್ವಾರ್ಟೊ’ ಆಕಾರದಲ್ಲಿ ೧೬ ಪುಟಗಳಿಂದ ಮೈದುಂಬಿ ಬರುತ್ತಿದ್ದ ಸುವಾಸಿನಿ ಪತ್ರಿಕೆಯಲ್ಲಿ ಚಿಕ್ಕ ಕಥೆಗಳು, ಕವನಗಳು, ಚಾರಿತ್ರಿಕ ವಿಷಯಗಳನ್ನು, ಕಾದಂಬರಿಗಳು, ಪ್ರಬಂಧಗಳು ಪ್ರಕಟವಾಗುತ್ತಿದ್ದುದರ ಜೊತೆಗೆ ಸ್ಫುಟವಿಷಯ ಎಂಬ ಸಂಪಾದಕೀಯ, ವಿವಿಧ ವಿಷಯ ಸಂಗ್ರಹ, ಸಂಕ್ಷಿಪ್ತ ಸಮಾಚಾರ, ಹಾಸ್ಯರ್ಣವ ಎಂಬ ಸ್ಥಿರ ಶೀರ್ಷಿಕೆಗಳಿರುತ್ತಿದ್ದವು. ಹಾಸ್ಯಾರ್ಣವ ಅಂಕಣದಲ್ಲಿ ಮೇಲ್ಮಟ್ಟದ ಹಾಸ್ಯವನ್ನು ಸಂಪಾದಕರೇ ಬರೆಯುತ್ತಿದ್ದರು. ನೂತನ ರೀತಿಯನ್ನು ಅನುಸರಿಸಿ ಬರೆದ ಚಿಕ್ಕ ಕಲ್ಪನಾ ಕಥೆಗಳಿಗೂ, ಸ್ತೀಯರು ಬರೆದು ಕಳುಹಿಸಿದ ಲೇಖನಗಳಿಗೂ ಎಲ್ಲವುಗಳಿಗಿಂತ ಮುಂದಾಗಿ ಸ್ಥಳ ಕೊಡುವೆವು ಎಂದು ಸಾರಿದ್ದಾರೆ. ಸುವಾಸಿನಿಯ ಸಂಪಾದಕ ಬೆನಗಲ್ ರಾಮರಾಯರು (೧೮೭೬-೧೯೪೩) ಇಪ್ಪತ್ತನೆಯ ಶತಮಾನದ ಮೊದಲಾರ್ಧದಲ್ಲಿ ಕನ್ನಡವನ್ನು ಕಟ್ಟಿದ ಮಹನೀಯರುಗಳಲ್ಲಿ ಒಬ್ಬರು. ಪತ್ರಿಕೋದ್ಯಮ, ಭಾಷಾ ಸುಧಾರಣೆ, ಗ್ರಂಥರಚನೆ ಮುಂತಾದ ರಂಗಗಳಲ್ಲಿ ಅವರು ಉತ್ಸಾಹದಿಂದ ಕಾರ್ಯವೆಸಗಿದರು. ಮದ್ರಾಸು ವಿಶ್ವವಿದ್ಯಾಲಯದ ಎಂ. ಎ. ಪದವಿಗಾಗಿ ಅವರು ಸಾದರಪಡಿಸಿದ Remaossamce in Modern Kannada ಎಂಬ ಪ್ರಬಂಧವು ಪುಸ್ತಕ ರಚಿಸಿದ್ದ ರಾಮರಾಯರು ತೆಲುಗಿನ ಹಿರಿಯ ಲೇಖಕ ವೀರೇಶಲಿಂಗಂ ಪಂತಲು ಅವರ ‘ವಿದ್ಯಾವರ್ಧನ, ತತ್ವಶಾಸ್ತ್ರ ಕಲಾಕೌಶಲ’ ‘ಕಲಹಪ್ರಿಯಾ’ ಪ್ರಹಸನ ಹಾಗೂ ‘ಸತ್ಯರಾಜ ಪೂರ್ವದೇಶ ಯಾತ್ರೆ (ಭಾಗ ೧)’ ಕೃತಿಗಳನ್ನು ಕನ್ನಡೀಕರಿಸಿದ್ದಾರೆ. ಹಾ. ತಿ. ಕೃಷ್ಣೇಗೌಡರು ಹೇಳುವ ಹಾಗೆ ‘ಸುವಾಸಿನಿ’ ಮೇಲ್ಮಟ್ಟದ ಸಾಹಿತ್ಯಿಕ ಪತ್ರಿಕೆಯಾಗಿದ್ದರಿಂದ ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬರಹಗಾರರಲ್ಲದೇ ನಾಡಿನ ನಾನಾ ಭಾಗಗಳಿಂದ ಲೇಖಕರು ಬರೆಯುತ್ತಿದ್ದರು. . . ಕನ್ನಡದ ‘ಸಣ್ಣಕಥೆ’ ಎಂಬ ಸಾಹಿತ್ಯ ಪ್ರಕಾರ ಉಗಮಿಸಿದ್ದು ಈ ಪತ್ರಿಕೆಯಲ್ಲಿ. ಕನ್ನಡ ಸಣ್ಣ ಕಥೆಗಳ ಜನಕರೆಂದು ಹೆಸರಾಗಿರುವ ಪಂಜೆ ಮಂಗೇಶರಾಯರ (ಪತ್ರಿಕೆಯಲ್ಲಿ ರಾ. ಮ. ಪ. ಎಂಬ ಹೆಸರಿನಲ್ಲಿ) ‘ನನ್ನ ಚಿಕ್ಕ ತಾಯಿ’, ‘ನನ್ನ ಚಿಕ್ಕ ತಂದೆ’ , ‘ನನ್ನ ಹೆಂಡತಿ’, ‘ನನ್ನ ಚಿಕ್ಕ ತಂದೆಯವರ ಉಯಿಲು’, ‘ಚಂಡಿಕಾ ರಹಸ್ಯ’, ‘ಸಮಾಜ’ ಮೊದಲಾದ ಚಿಕ್ಕ ಕಥೆಗಳೂ ‘ಕಬ್ಬಿಣದ ಬುದ್ಧಿವಾದ’, ‘ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ’ ಮುಂತಾದ ಸರಸ ಸುಂದರ ಕವಿತೆಗಳೂ ಈ ಪತ್ರಿಕೆಯಲ್ಲಿ ಬೆಳಕು ಕಂಡಿವೆ. ಬೆನಗಲ್ ರಾಮರಾಯರ ‘ರಮಾಮಾಧವ’, ಬಿ. ವೆಂಕಟಾಚಾರ್ಯರ ‘ಉನ್ಮಾದಿನಿ’ ಕಾದಂಬರಿಗಳೂ ಈ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. ಹೊಸಗನ್ನಡದ ಆದ್ಯ ಪ್ರಬಂಧಗಳೆಂದು ಕರೆಯಬಹುದಾದ, ಲಾಲಿತ್ಯದಿಂದ ಕೂಡಿದ ಎಂ. ಎನ್. ಶ್ರೀನಿವಾಸರಾಯರ ‘ಮೋಡ ಮೊಳೆಯುವ ಬಿತ್ತು’ ಮುಂತಾದ ಲಲಿತ ಪ್ರಬಂಧಗಳು ಈ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇಂದಿನ ಕಾಲದ ಸಾಹಿತ್ಯ ಪತ್ರಿಕೆಗಳು ‘ಸುವಾಸಿನಿ’ಯಿಂದ ಬಹಳಷ್ಟನ್ನು ಪಿತ್ರಾರ್ಜಿತವಾಗಿ ಪಡೆದುಕೊಂಡಿವೆ ಎಂಬುದಕ್ಕೆ ಇಂದಿನ ನಮ್ಮ ಪತ್ರಿಕೆಗಳು ಸುವಾಸಿನಿಯ ಸಾಮಗ್ರಿಯನ್ನೇ ಇಂದಿಗೂ ಬಳಸುತ್ತಿರುವುದು ಸಾಕ್ಷಿ. ಸುವಾಸಿನಿಯಲ್ಲಿ ಇಂದಿನ ಪತ್ರಿಕೆಗಳಲ್ಲಿ ಕಂಡುಬರುವ ಗ್ರಂಥ ವಿಮರ್ಶೆಯೂ ಇತ್ತು. ಜುಲೈ ೧೯೦೦ರಲ್ಲಿ ಆರಂಭಗೊಂಡ ‘ಸುವಾಸಿನಿ’, ಆರ್ಥಿಕ ಆಡಚಣೆಯ ಪರಿಣಾಮವಾಗಿ ೧೧ ಸಂಚಿಕೆಗಳ ತರುವಾಯ ೧೯೦೧ರ ಮೇ ತಿಂಗಳಲ್ಲಿ ನಿಂತುಹೋಯಿತು. ಪುನಃ ೧೦-೧೧ ತಿಂಗಳ ಬಳಿಕೆ ೧೯೦೨ರ ಜೂನ್ ತಿಂಗಳನಲ್ಲಿ ಮರುಹುಟ್ಟು ಪಡೆಯಿತು. ಈ ಸಂಚಿಕೆಯ ಕ್ಷಮಾಪಣೆ ಎಂಬ ಸಂಪಾದಕೀಯದಲ್ಲಿ ಸಂಪಾದಕರು ಓದುಗರಿಗೆ ಮಾಡಿಕೊಳ್ಳುವ ಅರಿಕೆ ಹೀಗಿದೆ : "ನಮ್ಮ ದುರಾದೃಷ್ಟದಿಂದ ಸುವಾಸಿನಿಯ ೧೧ನೆಯ ಸಂಚಿಕೆಯು ಹೊರಟು ೧೦-೧೧ ತಿಂಗಳು ಕಳೆದ ಮೇಲೆ ಈ ಹನ್ನರಡನೆಯ ಸಂಚಿಕೆಯನ್ನು ಕಳುಹಿಸಬೇಕಾಯಿತು. ಇದರ ಕಾರಣಗಳನ್ನು ಇಲ್ಲಿ ಕೊಟ್ಟು ಪ್ರಯೋಜನವಗಲಾರದು. ಆದರೂ ಇತರ ಕಾರಣಗಳೊಡನೆ ಧನಾಭಾವವೂ ಒಂದಾಗಿತ್ತೆಂಬುದನ್ನು ನಮ್ಮ ಸೂಕ್ಷ್ಮ ಪಾಠಕರು ತಿಳಿಯದೆ ಹೋಗಲಾರರು. . . ಸ್ತ್ರೀವಿದ್ಯಾಭ್ಯಾಸವನ್ನು ಪ್ರೋತ್ಸಾಹಗೊಳಿಸಿ ಅದರೊಂದಿಗೆ ದೇಶಭಾಷೆಯನ್ನೂ ಅಭಿವೃದ್ಧಿಗೆ ತರತಕ್ಕ ಪತ್ರಿಕೆಯು ಕನ್ನಡದಲ್ಲಿ ಇದೊಂದೇ ಆಗಿರುವುದರಿಂದ, ಇದನ್ನು ಬಿಡಿಸಿ ನಡೆಯಿಸಬೇಕೆಂದೂ, ತಮ್ಮಿಂದಾದಮಟ್ಟಿಗೆ ಸಹಾಯವನ್ನು ಮಾಡದೆ ಇರಲಾರೆವೆಂದೂ ನಮ್ಮ ಮಿತ್ರರನೇಕರು ನಮಗೆ ಆಗಾಗ್ಗೆ ಬರೆಯುತ್ತಲೇ ಇರುವುದರಿಂದ ಈ ಪತ್ರಿಕೆಯನ್ನು ಕಡಿಮೆಯ ಪಕ್ಷಕ್ಕೆ ಇನ್ನೊಂದು ವರ್ಷದವರೆಗಾದರೂ ನಡೆಯಿಸಬೇಕೆಂದು ನಾವು ಉದ್ದೇಶಿಸಿರುವೆವು." ಜೂನ್ ೧೯೦೨ರಲ್ಲಿ ಪುನರಾರಂಭಗೊಂಡ ‘ಸುವಾಸಿನಿ’ ೧೯೦೩ರ ಜುಲೈನಿಂದ ಅಸ್ತಂಗತವಾಯಿತು. ವಿಶೇಷವೆಂದರೆ ಕನ್ನಡ ಓದುಗರ ಮನಸ್ಸಿನಲ್ಲಿ ಕ್ಷಣಿಕವಾದರೂ ಪ್ರಬಲ ಮುದ್ರೆಯನ್ನೊತ್ತಿ ಮಾಯವಾಗಿದ್ದ ‘ಸುವಾಸಿನಿ’ ೧೯೨೫ರ ಅಕ್ಟೋಬರ್‍ ತಿಂಗಳಿನಿಂದ ಅಂದರೆ ೨೨ ವರ್ಷಗಳ ತರುವಾಯ ಮತ್ತೆ ಚಿಗುರಿತು ! ಸುವಾಸಿನಿಯನ್ನು ಈ ಮೊದಲು ಆರಂಭಿಸಿದ ಬೋಳಾರು ವಿಠಲರಾಯರೇ ೧೯೨೫ರಲ್ಲಿ ಅದರ ಪ್ರಕಾಶಕರಾಗಿದ್ದರು. ಆದರೆ ಬೆನಗಲ್ ರಾಮರಾಯರ ಬದಲಿಗೆ ಕಡೇಕಾರು ರಾಜಗೋಪಾಲರಾಯರು (‘ಶ್ರೀಕೃಷ್ಣ ಸೂಕ್ತಿ’ಯ ಸಂಪಾದಕರು) ಸಂಪಾದನೆಯ ಜವಬ್ದಾರಿ ವಹಿಸಿದರು. ಎಂ. ನಾರಾಯಣ ಪ್ರಭು ಅವರ ಸರಸ್ವತೀ ಮುದ್ರಾಣಾಲಯದಲ್ಲಿ ಮುದ್ರಣಗೊಳ್ಳುತ್ತಿತ್ತು. ಈ ಹೊತ್ತಿಗೆ ಹೊಸಗನ್ನಡ ಸಾಹಿತ್ಯ ಚಟುವಟಿಕೆಗಳು ಗರಿಗೆದರಿತ್ತಾದ್ದರಿಂದ ಎಲ್ಲ ಪ್ರಕಾರದ ಬರಹಗಳೂ ಈ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಅಲ್ಲದೇ ಆಗ ಸುವಾಸಿನಿಗೆ ೧೯೨೫ರಲ್ಲಿ ಪ್ರತಿಸ್ಪರ್ಧಿ ಸಾಹಿತ್ಯಕ ಪತ್ರಿಕೆಗಳೂ ಇದ್ದವು. ಆದರೂ ಮೂರು ವರ್ಷ ಸತತವಗಿ ಪ್ರಕಟಗೊಂಡ ‘ಸುವಾಸಿನಿ’ ತದನಂತರ ನಿಂತುಹೋಯಿತೆಂದು ತಿಳಿದು ಬರುತ್ತದೆ. ಒಟ್ಟಿನಲ್ಲಿ ‘ಸುವಾಸಿನಿ’ಗೆ ಹೊಸಗನ್ನಡ ಸಾಹಿತ್ಯವನ್ನು ಹುಟ್ಟುಹಾಕಿದ, ನವೋದಯವನ್ನು ನಿರ್ಮಿಸುವಲ್ಲಿ ಭದ್ರ ಬುನಾದಿ ಹಾಕಿದ ಬಹುಮುಖ್ಯ ಸಾಹಿತ್ಯಿಕ ಪತ್ರಿಕೆ ಎಂಬ ಬಿರುದು ಸಂಪೂರ್ಣವಾಗಿ ಸಲ್ಲುತ್ತದೆ.

೨೦ನೇ ಶತಮಾನದಲ್ಲಿ ಸಾಹಿತ್ಯ ಪತ್ರಿಕೆಗಳು (೧೯೦೧-೧೯೫೬)

ಸುವಾಸಿನಿ ತೋರಿಸಿಕೊಟ್ಟ ಮಾರ್ಗದಲ್ಲೇ ಸಾಹಿತ್ಯ ಸೇವೆಗೆ ಮುಡಿಪಾದ ಪತ್ರಿಕೆಗಳು ೨೦ನೇ ಶತಮಾನದ ಮೊದಲ ದಶಕದಲ್ಲಿ ಇನ್ನೂ ಕೆಲವು ಬಂದವು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸೃಷ್ಟ್ಯಾತ್ಮಕ ಸಾಹಿತ್ಯಕ್ಕೇ ಪತ್ರಿಕೆಗಳನ್ನು ಮೀಸಲಿರಿಸುವ ಸಂಪ್ರದಾಯ ಇನ್ನೂ ಬೆಳೆದಿರಲಿಲ್ಲ. ವಿಚಾರ, ಕಲೆ, ವಿದ್ವತ್ ವಿಷಯಗಳ ಸಾಹಿತ್ಯವನ್ನು, ಸೃಜನಾತ್ಮಕ ಸಾಹಿತ್ಯವನ್ನು, ಅಭೇದ ಕಲ್ಪಿಸಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಈ ಕಾರಣದಿಂದ ಈ ಪತ್ರಿಕೆಗಳನ್ನು ಪಕ್ಕಾ ಸಾಹಿತ್ಯ ಪತ್ರಿಕೆಗಳೆಂದು ಕರೆಯುವಂತಿಲ್ಲ. ಆದರೆ ಕನ್ನಡ ಸಾಹಿತ್ಯದ ಮುನ್ನಡೆಯಲ್ಲಿ ಇವುಗಳ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ.

‘ಕನ್ನಡ ನುಡಿಗನ್ನಡಿ’

ಮದ್ರಾಸಿನಿಂದ (ಈಗಿನ ಚನ್ನೈ) ೧೯೦೩ರ ಡಿಸೆಂಬರ್‌ನಲ್ಲಿ ಆರಂಭಗೊಂಡು ಐದು ತಿಂಗಳು ನಡೆದು ನಿಂತು, ಮತ್ತೆ ೧೯೦೬ರಲ್ಲಿ ಆರಂಭವಾಗಿ ೧೯೦೭ರ ಡಿಸೆಂಬರ್‌ನಲ್ಲಿ ಅಂತ್ಯ ಕಂಡ ‘ಕನ್ನಡ ನುಡಿಗನ್ನಡಿ’ ಪತ್ರಿಕೆ ಮದ್ರಾಸು ಪ್ರಾಂತ್ಯದಿಂದ ಪ್ರಕಟವಾದ ಮೊದಲ ಪತ್ರಿಕೆಯೂ ಹೌದು. ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರು ಆರಂಭದಲ್ಲಿ ಈ ಪತ್ರಿಕೆಯ ಸಂಪಾದಕರಾಗಿದ್ದರು. ಅನಂತರ ಎಚ್. ಚನ್ನಕೇಶವ ಅಯ್ಯಂಗಾರ್‍ ೧೯೦೬ರ ನವೆಂಬರ್‍ ನಲ್ಲಿ ನುಡಿಗನ್ನಡಿಯ ಸಂಪಾದಕರಾದರು. ನಂತರ ಉನ್ನತ ವ್ಯಾಸಂಗಕ್ಕೋಸ್ಕರ ತೆರಳಿದ ಚನ್ನಕೇಶವ ಅಯ್ಯಂಗಾರ್‍ ಅವರ ಸ್ಥಾನದಲ್ಲಿ ಜುಲೈ ೧೯೦೭ನೆ ಸಂಚಿಕೆಯಿಂದ ಎಂ. ಎ. ಶ್ರೀನಿವಾಸಯ್ಯಂಗಾರ್‍ ಅವರು ಸಂಪಾದಕರಾಗಿ ವಹಿಸಿಕೊಂಡರು. ‘ಕನ್ನಡ ನುಡಿಗನ್ನಡಿ’ಯ ಕೊನೆಯ ಸಂಚಿಕೆ ನವೆಂಬರ್‍ ಡಿಸೆಂಬರ್‍ ೧೯೦೭ರಲ್ಲಿ ಪ್ರಕಟಗೊಂಡಿದೆ. ಆ ಸಂಚಿಕೆಯಲ್ಲಿ ಕನ್ನಡ ನುಡಿಗನ್ನಡಿಯ ಪ್ರಾರ್ಥನೆ ಎಂಬುದಾಗಿ ಪ್ರಥಮ ಪುರುಷ ಏಕವಚನದ ಬರಹವೊಂದಿದ್ದು ಅದು ಆಕರ್ಷಕವಾಗಿದೆ. "ವಾಚಕ ಮಹಾಶಯರೇ ನಾನು ಈ ರೂಪದಲ್ಲಿ ಬಂದು ಇಂದಿಗೆ ಒಂದು ವರ್ಷ ವಾಯಿತು. . .ನಾನು ಜನ್ಮವೆತ್ತಿದ ಕೂಡಲೇ ಪೂಜ್ಯರಾದ ಸಜ್ಜನರೆಲ್ಲರೂ ನನ್ನನ್ನು ಅತ್ಯಂತ ಪ್ರೀತಿ ವಾತ್ಸಲ್ಯಗಳಿಂದ ಆದರಿಸಿ ಮುದ್ದಿಸಿದರು. ನನ್ನ ಸಹವಾಸಕ್ಕೆ ಸಿಕ್ಕಿದ ಪರಕೀಯಾವ ತಾರಿಗಳಾದ ಕೆಂಬೂತಗಳನ್ನು ಸ್ವಕೀಯರನ್ನಾಗಿ ಮಾಡಿದೆನು. ಮೂರನೆಯ ಮಾಸದಲ್ಲಿ ನನ್ನ ಮಿತ್ರ ಬಾಂಧವರು ನನಗೆ ಮತ್ತಷ್ಟು ಕಾಂತಿ ಕೊಟ್ಟರು. ಐದನೆಯ ತಿಂಗಳಲ್ಲಿ ವರ್ಣೋತ್ಕರ್ಷವಾಯಿತು. ಆರನೆಯ ತಿಂಗಳಲ್ಲಿ ನನ್ನ ವೈಭವವು ಪ್ರಜ್ವಲಿಸಿತು." "ಆಶ್ರಯದಾತರೇ, ನಿಮಗೆ ನಾನು ಹೇಗೆ ತಾನೇ ಹೇಳಲಿ ? ಒಂದು ಕಡೆ ವ್ಯಸನವು ಮೂಡುತ್ತಿದೆ. ಮತ್ತೊಂದು ಕಡೆ ಸಂತೊಷವು ಉಕ್ಕಿ ಬರುತ್ತಿದೆ. ಇನ್ನು ಮುಂದೆ ನಿಮ್ಮನ್ನು ಸಂದರ್ಶಿಸುವ ಭಾಗ್ಯ ಎಲ್ಲಿಂದ ಪಡೆಯಲಿ ? ನಿಮ್ಮನ್ನು ಬಿಟ್ಟು ಹೋಗಬೇಕೆಂದರೆ ನನಗೆ ಸ್ವಲ್ಪವೂ ಮನಸ್ಸು ಬರುವುದಿಲ್ಲ. ಇದಕ್ಕೆ ನಾನೇನು ಮಾಡಲಿ ? ನನಗೆ ಪ್ರತಿಯಾಗಿ ನನ್ನ ಸ್ಥಾನದಲ್ಲಿ ವೀರಕೇಸರಿಯನ್ನು ಇಟ್ಟು ಹೊರಟು ಹೋಗುತ್ತೇನೆ. ‘ನುಡಿಗನ್ನಡಿ’ ಪತ್ರಿಕೆಗೆ ಮದರಾಸಿನ ಪ್ರಸಿದ್ದ ವ್ಯಾಪಾರಿಗಳಾಗಿದ್ದ ತುಲಸೀದಾಸ್ ರಾಮದಾಸ್ ಪ್ರಕಾಶಕರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ‘ಕನ್ನಡ ಸಾಹಿತ್ಯ ಪತ್ರಿಕೆಗಳು’ ಪುಸ್ತಕದಲ್ಲಿ ಅವರನ್ನೇ ಸಂಪಾದಕರೆನ್ನಲಾಗಿದೆ. ವಾರ್ಷಿಕ ಚಂದಾ ಒಂದು ರೂಪಾಯಿ ಹದಿನಾಲ್ಕು ಆಣೆಗಳಿದ್ದು ಬಿಡಿ ಪತ್ರಿಕೆಗೆ ಮೂರು ಆಣೆ. ಡೆಮಿ ಅಷ್ಟ ದಳ ಆಕಾರದ ೨೬ ಪುಟಗಳ ನುಡಿಗನ್ನಡಿಯ ವಿಶೇಷವೆಂದರೆ ತಿಂಗಳಿಗೆ ನಾಲ್ಕು ಸಾವಿರದಿಂದ ಏಳು ಸಾವಿರ ಪ್ರತಿಗಳವರೆಗೂ ಮುದ್ರಿಸಿ ಹಂಚಿದ ಸಾಧನೆ ಉಲ್ಲೇಖನೀಯ. ಆ ಕಾಲದಲ್ಲಿ ಕನ್ನಡದ ಯಾವುದೇ ಪತ್ರಿಕೆ ಒಂದು ಸಾವಿರ ಪ್ರತಿಗಳನ್ನು ಅಚ್ಚು ಹಾಕಿಸುವುದೂ ಕಷ್ಟವೇ ಆಗಿತ್ತು. ಕನ್ನಡ ನುಡಿಗನ್ನಡಿ ಅಕ್ಷರಶಃ ಸಾಹಿತ್ಯ ಪತ್ರಿಕೆಯಲ್ಲ. ಆದರೆ ಪತ್ರಿಕೆಯ ಮುಖಪುಟದಲ್ಲಿ ಸಾಹಿತ್ಯ, ರಾಜಕೀಯ, ಸಮಾಜಶಾಸ್ತ್ರ, ವಿಜ್ಞಾನ, ಕಲೆ ಮತ್ತು ಧರ್ಮಕ್ಕೆ ಮೀಸಲಾದ ಮಾಸಿಕವೆಂದು ಇಂಗ್ಲೀಷ್ ಘೋಷವಾಕ್ಯವಿರುತ್ತಿತ್ತು. ಇಂದಿನ ಸಾಮಾನ್ಯ ಆಸಕ್ತಿ ಮ್ಯಾಗಜಿನ್ನುಗಳಲ್ಲಿ ಇರುವುದೂ ಇವುಗಳೇ. ಆದರೆ ಆಗ ಸಾಮಾನ್ಯ ಆಸಕ್ತಿ, ವಿಶೇಷಾಸಕ್ತಿ ಪತ್ರಿಕೆಗಳ ನಡುವೆ ಅಭೇದವಿದ್ದುದನ್ನು ಗಮನಿಸಬೇಕು. ಆದರೂ ಸಾಹಿತ್ಯ ಪತ್ರಿಕೆಗಳ ಸಾಲಿನಲ್ಲಿ ನುಡಿಗನ್ನಡಿಯನ್ನು ಯಾಕೆ ಪ್ರಸ್ತಾಪಿಸಬೇಕೆಂದರೆ ಕನ್ನಡದ ಸಾಹಿತ್ಯಿಕ ನಿಯತಕಾಲಿಕಗಳು ಆರಂಭಿಕ ಹಂತದಲ್ಲಿ ಹೇಗಿದ್ದವು ಎಂಬುದಕ್ಕೆ ನುಡಿಗನ್ನಡಿ ಮಾದರಿಯಾಗುವುದರಿಂದ ನುಡಿಗನ್ನಡಿ ಪತ್ರಿಕೆಯು ಚಂದಾದಾರರಿಗೆ ಆಗಿನ ಕಾಲದಲ್ಲಿ ನೀಡುತ್ತಿದ್ದ ಸೌಲಭ್ಯ, ಹಾಗೆ ನೀಡಯೂ ಸ್ವಾವಲಂಬನೆ ಸಾಧಿಸದೇ ಮುಚ್ಚಬೇಕಾಗಿ ಬಂದ ಪರಿಸ್ಥಿತಿ ಕನ್ನಡ ಪತ್ರಿಕೆಗಳ ಸ್ಥಿತಿಗತಿ ವೃತ್ತಿ ಪರತೆಗೆ ಕನ್ನಡಿ ಹಿಡಿಯುತ್ತದೆ. ನುಡಿಗನ್ನಡಿಯ ಸಂಪಾದಕರು ಚಂದಾದಾರರಿಗೆ ಬಹುಮಾನ ಕೊಡುವ ಪರಿಪಾಠವಿಟ್ಟುಕೊಂಡಿದ್ದರು. ಬಹುಮಾನದ ಬೆಲೆ ಒಂದು ರೂಪಾಯಿ ಎಂಟು ಆಣೆ. ಚಂದಾ ಹಣ ಒಂದು ರೂಪಾಯಿ ಹದಿನಾಲ್ಕು ಆಣೆಗಳು. ಸಂಪಾದಕರು ನೀಡುತ್ತಿದ್ದ ಬಹುಮಾನಗಳ ಪಟ್ಟಿಯೂ ಆಕರ್ಷಕವಾಗಿದೆ. ಬಹುಮಾನ ಗೆದ್ದವರಿಗೆ, ಪುದುಚೇರಿ ಕಾಲ್ಗೊಲಸು ಒಂದು ಜತೆ, ಜರ್ಮನ್ ಸಿಲ್ವರ್‍ ಗಟ್ಟಿ ಕಾಲ್ಗಡಗ ಒಂದು ಜೊತೆ, ಮೈಸೂರು ದೇಶದ ಸುಂದರವಾದ ಕೈ ಕಪ್ಪುಗಳು ಒಂದು ಜೊತೆ, ಮೈಸೂರು ದೇಶದ ಒಂದು ಡಾಬು, ಒಂದು ಪನ್ನೀರು ಚೆಂಬು, ಒಂದು ಗಂಧದ ಬಟ್ಲು, ಒಂದು ರಬ್ಬರ್‍ ಸ್ಟಾಂಪು, ಒಂದು ಸದಾ ಟೈಂಪೀಸು ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದು ಕೊಳ್ಳುವ ಸ್ವಾತಂತ್ಯ್ರ ಬಹುಮಾನ ಗೆದ್ದವರಿಗಿರುತ್ತಿತ್ತು. ಸಂಪಾದಕರ ಈ ಬಹುಮಾನ ಯೋಜನೆ ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲನದೆನಿಸುತ್ತದೆ. ಇಷ್ಟೆಲ್ಲ ಪ್ರಯತ್ನ ಮಾಡಿಯೂ ನುಡಿಗನ್ನಡಿ ಪತ್ರಿಕೆಯನ್ನು ಅಖಿಲ ಕರ್ನಾಟಕ ಮಟ್ಟದಲ್ಲಿ ಜನಪ್ರಿಯಗೊಳಿಸಬೇಕೆಂಬ ಸಂಪಾದಕರ ಪ್ರಯತ್ನಕೈಗೊಡದೇ ೧೯೦೭ರ ಡಿಸೆಂಬರ್‌ನಲ್ಲಿ ಪತ್ರಿಕೆ ನಿಂತಿತು. ‘ಕನ್ನಡ ನುಡಿಗನ್ನಡಿ’ ಸಾಹಿತ್ಯ ಪತ್ರಿಕೆಯೆಂದು ಘೋಷಿಸಿಕೊಳ್ಳದಿದ್ದರೂ ಸಾಹಿತ್ಯ ಪತ್ರಿಕೆಗಳ ಸಾಲಿನಿಂದ ನುಡಿಗನ್ನಡಿಯನ್ನು ಬಿಡಲಾಗದು. ಕನ್ನಡ ಸಾಹಿತ್ಯವು ಗದ್ಯಕ್ಕೆ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಬರುತ್ತಿದ್ದ ಲೇಖನಗಳ ಮಾದರಿಗಾಗಿ ಕನ್ನಡ ನುಡಿಗನ್ನಡಿ ಸಾಕ್ಷಿ ಹೇಳುತ್ತದೆ.

‘ಸದ್ಬೋಧ ಚಂದ್ರಿಕೆ’

ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪತ್ರಿಕೆಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ‘ಸದ್ಭೋಧ ಚಂದ್ರಿಕೆ’ ಪ್ರಕಟಣೆಯನ್ನಾರಂಭಿಸಿದ್ದು ೧೯೦೪ರಲ್ಲಿ. ಗದಗ ಸಮೀಪದ ಅಗಡಿ ಆನಂದವನ ಆಶ್ರಮದ ಆಶ್ರಯದಲ್ಲಿ ಇಂದಿಗೂ ಮುನ್ನಡೆದಿರುವ ‘ಸದ್ಬೋದ ಚಂದ್ರಿಕೆ’ಯ ಚರಿತ್ರೆ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಅವಿಭಾಜ್ಯ ಅಂಗ ಕನ್ನಡಿಗರಲ್ಲಿ ವಾಚಾನಾಭಿರುಚಿ ಬೆಳಸಬೇಕು ಎಂಬ ದ್ಯೇಯದಿಂದ ಸೌಮ್ಯನಾಮ ಸಂತ್ಸರದ ಚೈತ್ರ ಬಹುಳ ಪಂಚಮಿಯಂದು ಆನಂದನವನದ ಶೇಷಾಚಲ ಸ್ವಾಮಿಗಳ ಜನ್ಮದಿನೋತ್ಸವದಂದು ಸದ್ಬೋಧ ಚಂದ್ರಿಕೆಯ ಪ್ರಥಮ ಸಂಚಿಕೆ ಬಿಡುಗಡೆಯಾಗಿತ್ತು. ವಾಯ್. ಜಿ. ಕುಲಕರ್ಣ ಎಂಬುವವರನ್ನು ಸಂಪಾದಕರನ್ನಾಗಿ ಹೆಸರಿಸಲಾಗಿತ್ತು. ಗಳಗನಾಥರು ಎಂದು ಕನ್ನಡ ಸಾಹಿತ್ಯದಲ್ಲಿ ಖ್ಯಾತರಾದ ವೆಂಕಟೇಶ ತಿರುಕೋ ಕುಲಕರ್ಣಿಯವರು ಚಂದ್ರಿಕೆಯ ಯಶಸ್ಸಿಗೆ ಆರಂಭದಿಂದ ಕೆಲಸ ಮಾಡಿದವರು. ಆದರೆ ಅವರು ಸರ್ಕಾರೀ ಶಾಲೆಯ ಶಿಕ್ಷಕರಾದುದರಿಂದ ಅವರ ಹೆಸರನ್ನು ಸಂಪಾದಕರೆಂದು ಬಳಸಿರಲಿಲ್ಲ. ಸಂಪಾದಕರು ಭಕ್ತಪರ ನೀತಿ ಲೇನಗಳನ್ನು ಬರೆದರೆ ಗಳಗನಾಥರು ಐತಿಹಾಸಿಕ ಕಾದಂಬರಿಗಳನ್ನು ಬರೆಯುತ್ತಿದ್ದರು. ಚಂದ್ರಿಕೆಯ ವೈವಿಧ್ಯಮಯ ಸಾಹಿತ್ಯ ಸಾಮಗ್ರಿಗಳಿಂದಾಗಿ ಪತ್ರಿಕೆಯು ಬಹು ಬೇಗ ಜನಪ್ರಿಯವಾಯಿತು. ‘ಸದ್ಭೋಧ ಚಂದ್ರಿಕೆ’ ಹುಟ್ಟಿದ ಸಮಯದಲ್ಲಿ ಕನ್ನಡ ಸಾಹಿತ್ಯ ಎದುರಿಸುತ್ತಿದ್ದ ಬಿಕ್ಕಟ್ಟನ್ನು ಗಮನಿಸಬೇಕು. ಹಳಗನ್ನಡ ಕಡಿಮೆಯಾಗಿ ಹೊಸಗನ್ನಡದಲ್ಲಿ ಸಾಹಿತ್ಯ ನಿರ್ಮಾಣಕ್ಕೆ ಸರಿದಾರಿ ನಿರ್ಮಾಣವಾಗದ ಸ್ಥಿತಿ ಅದು. ಆಗ ಕನ್ನಡ ಸಾಹಿತ್ಯಕ್ಕೆ, ಜನಕ್ಕೆ ಹತ್ತಿರವಾದ ಹೊಸ ಭಾಷೆಯನ್ನು, ಕನ್ನಡಿಗರಲ್ಲಿ ವಾಚನಾಭಿರುಚಿಯನ್ನು ಬೆಳಸಲು ಸದ್ಬೋಧ ಚಂದ್ರಿಕೆ ಮಹತ್ತರ ಪಾತ್ರವಹಿಸಿತೆನ್ನಬಹುದು. ಸದ್ಬೋಧ ಚಂದ್ರಿಕೆಯನ್ನು ಗದಗದಿಂದ ಹೊರತರುವ ಸಾಹಸ ಎಷ್ಟು ಕಷ್ಟಕರವಾಗಿತ್ತೆಂಬುದನ್ನು ಆನಂದವನ ಸ್ಮರಣ ಸಂಚಿಕೆಯಲ್ಲಿ ವಿವರಿಸಲಾಗಿದೆ. "ಪ್ರತಿ ತಿಂಗಳೂ ಒಂದು ವಾರ ಕಾಲ ಹುಬ್ಬಳ್ಳಿಯಲ್ಲಿ ನಿಂತು ಶ್ರೀಕೃಷ್ಣ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಮುದ್ರಿಸಿಕೊಂಡು ವಾಯ್. ಜಿ. ಕುಲಕರ್ಣಿಯವರು ಬರಬೇಕು. ಅಷ್ಟೇ ಶ್ರಮವಹಿಸಿ ಚಂದಾದಾರರ ವಿಳಾಸ ಬರೆದು ಚಕ್ಕಡಿ ಗಾಡಿಯಲ್ಲಿ ಹೇರಿಕೊಂಡು ಹೋಗಿ ಹಾವೇರಿಗೆ ತಲುಪಿಸಬೇಕು. ಇದನ್ನು ಎರಡು ವರ್ಷಗಳವರೆಗೆ ಸತತ ಮಾಡಿದರು. ಅರಣ್ಯದ ಮಧ್ಯದಲ್ಲಿರುವ ಆನಂದವನದಲ್ಲಿ ಆಧುನಿಕ ಸೌಕರ್ಯ ಯಾವುದೂ ಇರಲಿಲ್ಲ. ಇರಡನೇ ವರ್ಷದಲ್ಲಿ ಚಂದಾದಾರರೂ ಒಂದು ಸಾವಿರ ತಲುಪಿದರು. ಕನ್ನಡದಲ್ಲಿ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರತೀ ತಿಂಗಳೂ ಕೊಡುವ ನವೀನ ಪದ್ಧತಿ ಚಂದ್ರಕೆಯಿಂದಲೇ ಆರಂಭವಾಯಿತು." ಚಂದ್ರಿಕೆಯ ಪ್ರಸಾರದ ಬಗ್ಗೆ ಸಂಪಾದಕರು ಕೊಡುವ ನಿಖರ ಲೆಕ್ಕ ಕನ್ನಡ ಸಾಹಿತ್ಯ ಪತ್ರಿಕೆಗಳ ಚರಿತ್ರೆಯಲ್ಲಿ ಅನನ್ಯವಾದುದೆನಿಸುತ್ತದೆ. ಚಂದ್ರಿಕೆಯ ಪ್ರಸಾರವು ೨೭ ಜಿಲ್ಲೆಗಳಲ್ಲಿ ೧೬೦ ಸಬ್‌ ಪೋಸ್ಟುಗಳಲ್ಲಿ ೧೨೦೦ ಊರುಗಳಲ್ಲಿ ಇದ್ದಿತು. ಜಾತಿಯ ಪ್ರಕಾರ ಲೆಕ್ಕ ಬೇಕೆ? ಇಕೊಳ್ಳಿ ೨೨೦೦ ಜನ ಬ್ರಾಹ್ಮಣರು, ೧೨೦೦ ವೀರಶೈವರು, ೫೦ ಮುಸಲ್ಮಾನರು, ೨೫ ಕ್ರೈಸ್ತರು, ೫೨೫ ಕುರುಬರು ಇತ್ಯಾದಿ ಚಂದಾದಾರರಿದ್ದರು. ಉದ್ಯೋಗದ ದೃಷ್ಟಿಯಿಂದ ೧೭೦೦ ಜನ ನೌಕರರು, ೨೩೦೦ ಜನ ವ್ಯಾಪಾರಸ್ಥರು ಹಾಗೂ ಕೃಷಿಕರು. ಹಾಗೂ ಕೃಷಿಕರು. ೧೨೫ ಜನ ಹೆಣ್ಣು ಮಕ್ಕಳು ಚಂದಾದಾರರು. ಪತ್ರಿಕೆಯ ಚಂದಾದಾರರ ಬಗ್ಗೆ ಈ ತೆರನ ನಿಖರ ಲೆಕ್ಕ ಬೇರೆ ಯಾವ ಪತ್ರಿಕೆಯೂ ಇಟ್ಟ ಉದಾಹರಣೆ ಇಲ್ಲ. ನವೋದಯ ಕಾಲದ ಹಿರಿಯ ಬರಹಗಾರರುಗಳು ಸದ್ಬೋಧ ಚಂದ್ರಿಕೆಯಿಂದ ಪ್ರೇರಿತರಾದವರು. ಬೆಟಗೇರಿ ಕೃಷ್ಣಶರ್ಮರು ಚಂದ್ರಿಕೆಯ ಕಾದಂಬರಿಗಳನ್ನು ಎರಡೆರಡು ಬಾರಿ ಓದುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಶ್ರೀರಂಗರಂತೂ ಚಂದ್ರಿಕೆಯನ್ನು ಮುಂಚಿತವಾಗಿ ತಂದುಕೊಡಲೆಂದು ಊರಿನ ಪೋಸ್ಟ್‌ಮನ್ನನಿಗೆ ಚಹದ ಕಾಣಿಕೆ ಆಗಾಗ ನೀಡುತ್ತಿದ್ದರಂತೆ. ಬಸವಾರಜ ಕಟ್ಟೀಮನಿಯವರು ಕಾದಂಬರಿಕಾರರಾಗಲು ಮೂಲಪ್ರೇರಣೆ ಒದಗಿಸಿದೆಯನ್ನಲಾದ ಗಳಗನಾಥರ ಕಾದಂಬರಿ ‘ಪದ್ಮನಯನ’ ಚಂದ್ರಿಕೆಯಲ್ಲೇ ಪ್ರಕಟವಾಗಿದ್ದು. ೧೯೨೮ರ ಜೂನ್ ಸಂಚಿಕೆಗೆ ೬ ಸಾವಿರ ಚಂದಾದಾರರಿದ್ದುದು ಸದ್ಬೋಧ ಚಂದ್ರಿಕೆಯ ದಾಖಲೆ. ಇಂದಿಗೂ ಕನ್ನಡ ಸಾಹಿತ್ಯ ಪತ್ರಿಕೆಗಳು ಒಂದು ಸಾವಿರ ಚಂದಾ ಸಂಖ್ಯೆ ಪಡೆಯುವುದು ಅಪರೂಪದ ಸಾಧನೆ ಎನಿಸುವ ಸ್ಥಿತಿ ಇರುವಾಗ ಚಂದ್ರಿಕೆಗೆ ೧೯೨೮ರಲ್ಲಿ ಆರು ಸಾವಿರ ಚಂದಾದಾರರು ದೊರೆತಿದ್ದು ಕನ್ನಡ ವಿಶೇಷಾಸಕ್ತಿ ಪತ್ರಿಕೆಗಳ ಚರಿತ್ರೆಯಲ್ಲಿ ಒಂದು ಮೈಲುಗಲ್ಲು. ಡೆಮಿ ಅಷ್ಟದಳ ಆಕಾರದಲ್ಲಿ ಸಾಮಾನ್ಯ ೪೦ ಪುಟಗಳನ್ನು ಹೊಂದಿ ಪ್ರಕಟಗೊಳ್ಳುತ್ತಿದ್ದ ಚಂದ್ರಿಕೆ, ಇವತ್ತಿಗೂ ಇದೇ ನಿಯತವಾಗಿ ಪ್ರಕಟಗೊಳ್ಳುತ್ತಿದೆ. ಆದರೆ ಒಂದು ಕಾಲದಲ್ಲಿ ತನ್ನ ಧಾರಾವಾಹಿಗಳಿಂದಲೇ ಪ್ರಸಿದ್ಧವಾಗಿದ್ದ ಚಂದ್ರಿಕೆ ಆಧುನಿಕ ಕಾಲದಲ್ಲಿ ಸ್ಪರ್ಧೆಯನ್ನೆದುರಿಸಲು ಸೋತಿದೆಯೆನ್ನಬೇಕು. ಅಲ್ಲದೇ ಈಗಿನ ‘ಸದ್ಭೋಧ ಚಂದ್ರಿಕೆ’ ಮುಖ್ಯವಾಗಿ ಆಧ್ಯಾತ್ಮ ಪತ್ರಿಕೆಯಾಗಿ ಉಳಿದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿ ಈಚಿನ ಒಂದು ಸಂಚಿಕೆಯ ವಿಷಯಾನುಕ್ರಮಣಿಕೆಯನ್ನು ಗಮನಿಸಬಹುದು. ‘ಸದ್ಬೋಧ ಚಂದ್ರಕೆ’ಯ ಸಂಪುಟ ೮೮ ಸಂಚಿಕೆ ೧೧ ಫೆಬ್ರವರಿ ೧೯೯೬ರಲ್ಲಿ ಪ್ರಕಟಗೊಂಡಿದ್ದು ಅದರ ‘ಒಳನೋಟ’ ಆಗಿದೆ.

  • ೧. ಪರಮ ಪೂಜ್ಯ ಶ್ರೀ ಚಿದಂಬರ ಮೂರ್ತಿ ಚಕ್ರವರ್ತಿಗಳವರ ೫೮ನೆಯ ನೆಮಿವರ್ಧಂತ್ಯುತ್ಸವ
  • ೨. ಗಳಗನಾಥ ಬಹುಮಾನ ವಿತರಣಾ ಸಮಾರಂಭ
  • ೩. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಲೇಖನ
  • ೪. ನವಗ್ರಹ ಪೂಜೆ ಹಾಗೂ ಅಶ್ವತ್ಥ ಪೂಜೆಗಳ ಮಹತ್ವ
  • ೫. ಮಾನಸಿಕ ಆರೋಗ್ಯ
  • ೬. ಶ್ರೀ ಶೇಷಾಚಲ ಸದ್ಗುರು ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನ
  • ೭. ಅಗಡಿ ಶಾಲೆಗೆ ನೂತನ ಪ್ರವೇಶ ದ್ವಾರ
  • ೮. ಕುಮುದಿನಿ- ಧಾರಾವಾಹಿ.
  • ೯. ಮಹತ್ವದ ದಿವಸ

ಈ ವಿಷಯಾನುಕ್ರಮಣಿಕೆಯನ್ನು ಗಮನಿಸಿದರೆ ವರ್ತಮಾನದಲ್ಲಿ ಸದ್ಬೋಧ ಚಂದ್ರಿಕೆ ‘ಸಾಹಿತ್ಯ’ ಪತ್ರಿಕೆಯಾಗಿ ಉಳಿದಿಲ್ಲ. ಆದರೆ "ಸದ್ಭೂಧ ಚಂದ್ರಿಕೆಯು ನವೋದಯ ಕಾಲದಲ್ಲಿ ಕನ್ನಡಿಗರಲ್ಲಿ ವಾಚನಾಭಿರುಚಿಯನ್ನೂ ಸಾಹಿತ್ಯಾಭಿರುಚಿಯನ್ನೂ ಬೆಳಸುವುದರಲ್ಲಿ ಯಶಸ್ಸನ್ನು ಸಂಪಾದಿಸಿತು ಹಾಗೂ ಸಾಹಿತ್ಯದ ಮುಖಾಂತರ ಸದ್ಭೋಧವನ್ನು ನೀಡಿ ಜನರಲ್ಲಿ ಸದಭಿರುಚಿಯನ್ನು ಹುಟ್ಟಿಸಿತು" ಎಂಬುದು ಮರೆಯಬಾರದ ಸಂಗತಿ. ಸದ್ಭೋಧ ಚಂದ್ರಕೆಯ ಈಗಿನ ಸಂಪಾದಕರು ಚಿದಂಬರ ಮೂರ್ತಿ. ವ್ಯವಸ್ಥಾಪಕರು ಎಚ್. ಜಿ. ಚಕ್ರವರ್ತಿ. ೧೯೯೬ರಲ್ಲಿ ವಾರ್ಷಿಕ ವರ್ಗಣೆ ೫೦ ರೂಪಾಯಿಗಳು.

‘ವಿಕಟ ಪ್ರತಾಪ’

ಕನ್ನಡದಲ್ಲಿ ಬಂದ ಹಾಸ್ಯ ಪತ್ರಿಕೆಗಳ ಸಾಲಿನಲ್ಲಿ ಆರಂಭದಲ್ಲೇ ಬಂದ ಪತ್ರಿಕೆ ‘ವಿಕಟ ಪ್ರತಾಪ’. ‘ಕನ್ನಡ ನುಡಿಗನ್ನಡಿ’ ಪತ್ರಿಕೆಯಲ್ಲಿ ಬರುತ್ತಿದ್ದ ‘ವಿಕಟಪ್ರತಾಪ’ದ ಜಾಹೀರಾತು ಹೀಗಿದೆ : "ಸಚಿತ್ರವೂ ವಿಚಿತ್ರವೂ ಆದ ಮಾಸ ಪತ್ರಿಕೆ. ವಾಗ್ದಾನ :- ಅಧಮರಿಂದ ಉತ್ತಮರಿಗುಂಟಾದ ತಾಪ, ಸಜ್ಜನರಲ್ಲಿ ವಿಪ್ರಲಾಪ, ಅನಾಥರ ವಿಲಾಪ ಸೋಮಾರಿಗಳ ಪ್ರಲಾಪ, ಕಾಮಿನಿಯರ ಸಲ್ಲಾಪ, ರಸಿಕರ ಆಲಾಪ, ಜಾರರ ಅಪಾಲಾಪ, ಮಾನಿನಿಗಳ ಕೋಪ ಈ ಕಲಾಪಗಳ ಬಿತ್ತರಗಳಿಂದೊಪ್ಪಿರುವುದು ನಮ್ಮ ವಿಕಟಪ್ರತಾಪ." ಹಾಸ್ಯರಸದಿಂದ ಕೂಡಿ ಅನೇಕ ಪ್ರೌಢ ವಿದ್ವಾಂಸರ ಲೇಖನಗಳಿಂದ ಪ್ರಕಾಶಿಸುವ ‘ವಿಕಟಪ್ರತಾಪ’ಕ್ಕೆ ೧೯೦೭ರಲ್ಲಿ ವಾರ್ಷಿಕ ಚಂದಾ ಅಂಚೆ ವೆಚ್ಚ ಸೇರಿ ಒಂದು ರೂಪಾಯಿ ಆಗಿತ್ತು. ‘ವಿಕಟ ಪ್ರತಾಪ’ ಮುಖಪುಟದಲ್ಲಿ ಗರುಡನಂತೆ ರೆಕ್ಕೆಯಿರುವ ಉದ್ದ ಮೀಸೆಯ, ದೊಡ್ಡ ಹೊಟ್ಟೆಯ ಯೋಧನೊಬ್ಬ ಗದೆಯಂಥ ಪೆನ್ನು ಹಿಡಿದು ‘ಜಯ’ ಎಂಬ ಬಾವುಟ ಹಿಡಿದು ಹೊರಟ ಚಿತ್ರವಿರುತ್ತಿತ್ತು. ಬೆಂಗಳೂರಿನ ಅರಳೆಪೇಟೆಯಲ್ಲಿ ‘ವಿಕಟ ಪ್ರತಾಪ’ ಕಛೇರಿ ಇತ್ತು. ‘ವಿಕಟ ಪ್ರತಾಪ’ ಆರಂಭಗೊಂಡಿದ್ದು ೧೯೦೫ರಲ್ಲಿ. ಚನ್ನಕೇಶವ ಅಯ್ಯಂಗಾರ್‍ ಸಂಪಾದಕರು ಹಾಗೂ ಬಿ. ಬಸಪ್ಪ ಶೆಟ್ಟಿ ಪ್ರಕಾಶಕರು. ಮೈಸೂರು ಸರ್ಕಾರವು ಪತ್ರಿಕೆಯಲ್ಲಿ ಬಂದ ಬರಹವೊಂದರ ಸಂಬಂಧ ಪತ್ರಿಕೆಗೆ ನೋಟೀಸು ನೀಡಿದ್ದರಿಂದ ಪತ್ರಿಕೆಯನ್ನು ಬೆಂಗಳೂರಿನಿಂದ ತಮಿಳುನಾಡಿನ ಕುಪ್ಪಂಗೆ ವರ್ಗಾಯಿಸಲಾಯಿತು. ಅಲ್ಲಿ ಪಿ. ಎಂ. ಚಕ್ರಪಾಣಯ್ಯನವರ ಸಂಪಾದಕತ್ವದಲ್ಲಿ ಪತ್ರಿಕೆ ಆರು ತಿಂಗಳು ನಡೆಯಿತು.

‘ಶ್ರೀಕೃಷ್ಣಸೂಕ್ತಿ’

ಶ್ರೀ ಕೃಷ್ಣಸೂಕ್ತಿ ೧೯೦೬ರ ಜನವರಿಯಲ್ಲಿ ಮಾಸಪತ್ರಿಕೆಯಾಗಿ ಜನ್ಮ ತಳೆಯಿತು. ಮರದ ಕೆಳಗೆ ಹಸುವೊಂದನ್ನು ಒರಗಿ ಕೊಳಲು ನುಡಿಸುತ್ತಿರುವ ಕೃಷ್ಣನ ಚಿತ್ರ ಮುಖಪುಟದಲ್ಲಿ ಪ್ರತೀ ಸಂಚಿಕೆಯಲ್ಲೂ ಶೋಭಿಸುತ್ತಿತ್ತು. ಈ ಚಿತ್ರದ ಕೆಳಗೆ (‘ಎ ಹೈ ಕ್ಲಾಸ್ ಮಂಥ್ಲಿ ಜರ್ನಲ್ ಇನ್ ಕೆನರೀಸ್’) ಎಂಬ ಇಂಗ್ಲಿಷ್ ಘೋಷವಾಕ್ಯವಿತ್ತು. ಪತ್ರಿಕೆಯ ಒಳ ಪುಟದ ಆರಂಭದ ಮೇಲ್ತುದಿಯಲ್ಲಿ ಶ್ರೀಕೃಷ್ಣಸೂಕ್ತಿಯೆಂಬ ಬರಹ, ಅದರ ಕೆಳಗೆ ಕಾಲೇ ವರ್ಷತು ಪರ್ಜನ್ಯಃ ಪ್ರಥಿವೀ ಸಸ್ಯ ಶಾಲಿನೀ ದೇ ಸ್ಯಾತ್ ಕ್ಷೋಭರಹಿತಃ ಸದ್ಭಕ್ತಾಃ ಸಂತು ನಿರ್ಭಯಾಃ ಎಂಬ ಶ್ಲೋಕವಿರುತ್ತಿತ್ತು. ಡೆಮಿ ೧/೮ ಆಕಾರದ ೨೪ ಪುಟಗಳ ಪತ್ರಿಕೆಯು ಬಿಡಿ ಸಂಚಿಕೆಗೆ ಎರಡು ಆಣೆಗಳು. ವಾರ್ಷಿಕ ಚಂದಾ ಹಣ ಒಂದೂವರೆ ರೂಪಾಯಿಗಳು. "ನಮ್ಮ ಸ್ವದೇಶ ಧರ್ಮ ಶಾಸ್ತ್ರ ಸಮ್ಮತವಾದ ಕಾರಣ ಸಮೇತವಾಗಿಯೂ ಈಗ ಪ್ರಚಾರಕ್ಕೆ ಬಂದಿರುವ ಪಾಶ್ಚಿಮಾತ್ಯದ ಭೌತಿಕ ಶಾಸ್ತ್ರಧಾರಿತವಾಗಿಯೂ ಇರುವಂತೆ ಯಥಾ ವಿಹಿತವಾಗಿ ವರ್ಣಾಶ್ರಮ ಧರ್ಮ ವಿಚಾರಗಳು, ನಮ್ಮ ದೇಶದ ಪ್ರಕೃತಿ ಸ್ಥಿತಿಗತಿ ದುರಾಚಾರ ವ್ಯವಹಾರಗಳು, ಕ್ಷಾಮ ರೋಗಾದಿ ದುಷ್ಕಾಲ ಸೂಚಕ ಈತಿ ಬಾಧೆಗಲು, ತತ್ವವಿಚಾರ ಪ್ರದಾಯಕಗಳಾದ ಶೋಧನೆಗಳು, ಕೃಷಿ ಕೈಗಾರಿಕೆ ಮೊದಲಾದ ಉದ್ಯೋಗ ಕ್ರಮಗಳು ಇವೆ ಮುಂತಾಗಿ ಅನೇಕ ವಿಷಯಗಳನ್ನು ವರ್ಣಿಸುವೆವು" ಎಂಬುದಾಗಿ ಸಂಪಾದಕ ಕೆರೋಡಿ ಸುಬ್ಬರಾಯರು ಪತ್ರಿಕೆಯ ಮೂರನೇ ಸಂಚಿಕೆಯಲ್ಲಿ ವಿಶದವಾಗಿ ವಿವರಿಸಿದ್ದಾರೆ. ಈ ವಿವರಣೆಯಿಂದಾಗಿ ಸಂಪಾದಕರ ಉದ್ದೇಶ ಇದನ್ನು ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯನ್ನಾಗಿ ಮಾಡುವುದಾಗಿರಲಿಲ್ಲ ಎಂಬುದೂ ಸ್ಪಷ್ಟವಾಗುತ್ತದೆ. ಪತ್ರಿಕೆಯ ಆರ್ಥಿಕ ಸ್ಥಿತಿ ಸುಧಾರಿಸಲಿಲ್ಲ. ಚಂದಾದಾರರಿಗೆ ಸಂಪಾದಕರ ಕೋರಿಕೆ ಫಳ ನೀಡಲಿಲ್ಲ. ಒಂದು ವರ್ಷದಲ್ಲಿ ಕೈ ಸುಟ್ಟುಕೊಂಡು ಪತ್ರಿಕೆಯನ್ನು ನಿಲ್ಲಿಸಬೇಕಾಗಿ ಬಂದುದಕ್ಕೆ ಸಂಪಾದಕರು ಹೀಗೆ ಹೇಳಿಕೊಂಡಿದ್ದಾರೆ. "ಈ ಪತ್ರಿಕಾವೃತ್ತಿಯಿಂದ ನಮ್ಮ ಪ್ರಯೋಜನವಂತಿರಲಿ ತನ್ನನ್ನು ಕೊಂಡು ತಾನು ಹೋಗುವ ಸ್ಥಿತಿಯಲ್ಲದಿದ್ದರೆ ನಮ್ಮ ಪುಣ್ಯೋದಯವೆಂದು ಭಾವಿಸುತ್ತಿದ್ದೆವು. ಆ ಮಾತಂತಿರಲಿ, ಹತ್ತೆಂಟು ರೂಪಾಯಿ ಮಾತ್ರ ನಷ್ಟವಾಗುವ ಸಂಗತಿಯಾಗಿದ್ದರೂ ಚಿಂತೆಯಿರಲಿಲ್ಲ ಶಾಂತಚಿತ್ತರಾಗಿ ತಾಳಿಕೊಂಡು ವಿಷಯಾಂತರಗಳನ್ನು ವರ್ಣಿಸುತ್ತಿದ್ದೆವಲ್ಲದೆ ಸ್ವ ವಿಷಯವನ್ನು ಇಷ್ಟುಮಟ್ಟಿಗೆ ವಿಸ್ತರಿಸುತ್ತಿರಲಿಲ್ಲ. ಪ್ರಾರಂಭದ ವರ್ಷದಲ್ಲಿಯೇ ನೂರಾರು ರೂಪಾಯಿ ಕೈ ಬಿಟ್ಟ ಕಾರಣ ಈ ಹನ್ನೆರಡನೆಯ ಸಂಚಿಕೆಯಲ್ಲಿ ನಮ್ಮ ಭಾರತದ ಹತ್ತಂಬತ್ತನೆಯ ಪರ್ವವನ್ನು ಪ್ರಕಟಿಸಬೇಕಾಯಿತು." ಇಂದಿನ ವಿಶೇಷಾಸಕ್ತಿ.ಮಾಸಿಕಗಳ ಸ್ಥಿತಿಯೂ ಶ್ರೀಕೃಷ್ಣಸೂಕ್ತಿಯ ಅಂದಿನ ಸ್ಥಿತಿಗಿಂತ ಭಿನ್ನವಾಗಿಲ್ಲ. ಹೆಚ್ಚಿನ ಪತ್ರಿಕೆಗಳು ‘ಹತ್ತೊಂಬತ್ತನೆಯ ಪರ್ವವನ್ನು ಪ್ರಕಟಿಸಲಿಕ್ಕೂ ಬದುಕಿರುವುದಿಲ್ಲ’ ಎಂಬುದನ್ನು ಗಮನಿಸಬೇಕು. ಆದರೂ ಶ್ರೀಕೃಷ್ಣಸೂಕ್ತಿ ನಿಲ್ಲಲಿಲ್ಲ. ಎರಡನೆಯ ವರ್ಷಕ್ಕೂ (೧೯೦೭) ಮುಂದುವರೆದು ೧೯೦೭ರ ಏಪ್ರಿಲ್‌ನಲ್ಲಿ ಕಡೇಕಾರು ರಾಜಗೋಪಾಲಕೃಷ್ಣರಾಯರು ಸಂಪಾದಕರಲ್ಲೊಬ್ಬರಾಗಿ ಶ್ರೀಕೃಷ್ಣಸೂಕ್ತಿಯನ್ನು ಸೇರಿಕೊಂಡರು. ರಾಜಗೋಪಾಲ ಕೃಷ್ಣರಾಯರು ಪತ್ರಿಕೆಯ ಸ್ವರೂಪವನ್ನೇ ಬಹಳಷ್ಟು ಬದಲಾಯಿಸಿದರು. ಹಾಸ್ಯಲಹರಿ, ಗ್ರಂಥ ವಿಮರ್ಶೆ, ವಿವಿಧ ವಿಷಯಾವಳಿ, ಪತ್ರಾಂತರಭಿಪ್ರಾಯ ಮುಂತಾದ ಹೊಸ ಅಂಕಣಗಳು ಸೇರಿಕೊಂಡವು. ಅದುವರೆಗೆ ಉಡುಪಿಯ ಹಿಂದೂ ಮುದ್ರಾಣಾಲಯದಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆ ಮಂಗಳೂರಿನ ಧರ್ಮಪ್ರಕಾಶ ಮುದ್ರಣಾಲಯದಲ್ಲಿ ಅಚ್ಚಾಗತೊಡಗಿತು. ಪತ್ರಿಕೆ ಮೂರನೆಯ ವರ್ಷಕ್ಕ ಕಾಲಿಟ್ಟಾಗ ಉತ್ತರ ಕನ್ನಡದಿಂದ ಪ್ರಕಟವಾಗುತ್ತಿದ್ದ ವಿನೋದಿನಿ (ಸಂಪಾದಕರು : ಕೆ. ವಿನಾಯಕ ಶಾಸ್ತ್ರಿ) ಶ್ರೀ ಕೃಷ್ಣಸೂಕ್ತಿಯೊಂದಿಗೆ ವಿಲೀನವಾಯಿತು. ಅಲ್ಲಿಂದ ಮುಂದೆ ‘ಸವಿನೋದವಾದ ಶ್ರೀಕೃಷ್ಣಸೂಕ್ತಿಯೊಂದಿಗೆ ವಿಲೀನವಾಯಿತು. ಅಲ್ಲಿಂದ ಮುಂದೆ ‘ಸವಿನೋದವಾದ ಶ್ರೀಕೃಷ್ಣಸೂಕ್ತಿ’ ಎಂಬ ಹೊಸ ಹೆಸರು ಪಡೆಯಿತು. ೧೯೦೫ರಿಂದ ೧೯೧೦ರವರೆಗೆ ಸೂಕ್ತಿಯ ಉಚ್ಛ್ರಾಯ ಕಾಲ ಕರ್ನಾಟಕದ ಸದಭಿರುಚಿಯ ಜನಪ್ರಿಯ ಮಾಸಪತ್ರಿಕೆಯಾಗಿ ‘ಸವಿನೋದ ಶ್ರೀಕೃಷ್ಣಸೂಕ್ತಿ’ ಹೆಸರಾಯಿತು. ಈಗ ಗೊತ್ತಿಲ್ಲದ ಕಾರಣಗಳಿಗಾಗಿ ೧೯೧೦ ಡಿಸೆಂಬರ್‌ನಲ್ಲಿ ಪತ್ರಿಕೆಯ ಪ್ರಕಟಣೆ ನಿಂತಿತು. ಸುಮಾರು ಮೂರು ವರ್ಷಗಳ ಅಜ್ಞಾತವಾಸದ ಬಳಿಕ ೧೯೧೩ ಜುಲೈ ತಿಂಗಳಿನಿಂದ ಮತ್ತೆ ಪ್ರಕಟಣೆ ಆರಂಭಿಸಿತು. ಪುಟಗಳ ಸಂಖ್ಯೆ ೩೨ರಿಂದ ೪೮ಕ್ಕೆ ಏರಿಸಲ್ಪಟ್ಟು, ಪತ್ರಿಕೆಯ ಮುದ್ರಣ ಕಾರ್ಯ ಮಂಗಳೂರಿನ ಧರ್ಮಪ್ರಕಾಶ ಮುದ್ರಣಾಲಯದಿಂದ ಉಡುಪಿಯ ಸದಾನಂದ ಕೋ ಆಪರೇಟಿವ್ ಪ್ರಿಂಟಿಂಗ್ ವರ್ಕ್ಸ್ ಕಂಪನಿಗೆ ವರ್ಗಾಯಿಸಲ್ಪಟ್ಟಿತು. ಆಗ ಆರಂಭವಾದ ಮೊದಲನೇ ಮಹಾಯುದ್ಧದ ಪರಿಣಾಮವಾಗಿ ಕಾಗದದ ಅಭಾವ, ಏರಿದ ಮುದ್ರಣ ವೆಚ್ಚಗಳಿಂದ ೧೯೧೫ ಜೂನ್ ತಿಂಗಳಿನಿಂದ ಮತ್ತೆ ಶ್ರೀಕೃಷ್ಣ ಸೂಕ್ತಿ ನಿಂತಿತು. ೧೯೧೬ರ ಏಪ್ರಿಲ್ ತಿಂಗಳಿನಿಂದ ಪುನರಾರಂಭಗೊಂಡರೂ ೧೯೧೬ರ ಅಕ್ಟೋಬರ್‌ನಲ್ಲಿ ಮತ್ತೆ ನಿಂತಿತು. ಪುನಃ ಏಳು ತಿಂಗಳು ಅಜ್ಞಾತವಾಸವನ್ನನುಭವಿಸಿ ೧೯೧೭ ಜೂನ್‌ನಿಂದ ಮತ್ತೆ ಪ್ರತ್ಯಕ್ಷವಾದ ಸೂಕ್ತಿ ಕೇವಲ ಎರಡೇ ತಿಂಗಳೂ ನಡೆದು ಜುಲೈ ತಿಂಗಳಲ್ಲಿ ಆ ವರ್ಷದ ಕಂತಿನಲ್ಲಿ ಉಳಿದಿದ್ದ ಮೂರು ಸಂಚಿಕೆಗಳನ್ನು ಒಟ್ಟಿಗೆ ಪ್ರಕಟಿಸಿ, ತನ್ನ ಆಯುಷ್ಯದ ಎಂಟು ವರ್ಷಗಳನ್ನು ಪೂರೈಸಿ ನಿಂತುಹೋಯಿತು. ಇಲ್ಲಿ ಗಮನಿಸಬೇಕಾದುದೆಂದರೆ ಕಷ್ಟವಾದರೂ ಚಂದಾದಾರರಿಂದ ಪಡೆದ ಹಣಕ್ಕೆ ಸಂಚಿಕೆಗಳನ್ನು ನೀಡಬೇಕೆಂಬ ಬಗ್ಗೆ ಸಂಪಾದಕರಿಗೆ ಇರುವ ಕಾಳಜಿ. ಕನ್ನಡ ಪತ್ರಿಕಾಲೋಕದ ವೈಶಿಷ್ಟ್ಯಗಳಲ್ಲಿ ಒಂದಾಗಿ ಶ್ರೀಕೃಷ್ಣ ಸೂಕ್ತಿ ಮೂವತ್ತು ವರ್ಷಗಳ ಬಳಿಕ ಮತ್ತೊಮ್ಮೆ ಹುಟ್ಟಿ ಬಂತು. ಈಗಲೂ ಕಡೇಕಾರು ರಾಜಗೋಪಾಲಾಚಾರ್ಯರೇ ಸಂಪಾದಕರಾಗಿದ್ದು ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ‘ಸಾಹಿತ್ಯ ಪ್ರಕಾಶನ ಸಮಿತಿ, ಉಡುಪಿ’ ಪ್ರಕಾಶಿಸುತ್ತಿತ್ತು. ಈಗ ಶ್ರೀಕೃಷ್ಣಸೂಕ್ತಿಯ ಪುಟಗಳು ಅವರತ್ತಕ್ಕೇರಿ ವಿಷಯ ವೈವಿಧ್ಯದಿಂದ ಮೈದುಂಬಿಕೊಂಡಿತು. ಈ ಕಂತಿನಲ್ಲಿ ಒಂದು ವರ್ಷ ನಡೆದು ೧೯೪೮ ಆಗಸ್ಟ್‌ನಲ್ಲಿ ಶ್ರೀ ಜಯಂತಿ ವಿಶೇಷಾಂಕ ತಂದು ಶಾಶ್ವತವಾಗಿ ಮುಚ್ಚಿಹೋಯಿತು. ‘ಶ್ರೀಕೃಷ್ಣಸೂಕ್ತಿ’ಯನ್ನು ಕನ್ನಡದ ಧಾರ್ಮಿಕ ಪತ್ರಿಕೆಗಳ ಸಾಲಿಗೆ ಸೇರಿಸುವುದೋ ಸಾಹಿತ್ಯ ಪತ್ರಿಕೆಗಳ ಸಾಲಿಗೋ ಎಂಬ ಸಂಶಯ ವ್ಯಕ್ತವಾಗುವ ಸಾಧ್ಯತೆಯಿದೆ. ಗೋವನ್ನು ಒರಗಿನಿಂತು ಕೊಳಲನೂದುವ ಕೃಷ್ಣನ ಮುಖಪುಟ ಹೊತ್ತ ಬರುತ್ತಿದ್ದ ‘ಶ್ರೀಕೃಷ್ಣಸೂಕ್ತಿ’ ಆರಂಭದಲ್ಲಿ ಧಾರ್ಮಿಕ ಪತ್ರಿಕೆಯೇ ಆಗಿತ್ತನ್ನಬಹುದು. ಆದರೆ ನಂತರದಲ್ಲಿ ಅದು ಸಾಹಿತ್ಯ ಪತ್ರಿಕೆಯಾಗಿ ಸುಧಾರಿಸುತ್ತ ನಡೆಯಿತು. ಆ ಕಾಲದ ಪ್ರಸಿದ್ಧ ಲೇಖಕರುಗಳು ‘ಶ್ರೀಕೃಷ್ಣಸೂಕ್ತಿ’ಯಲ್ಲಿ ಬರೆಯುತ್ತಿದ್ದರು ಹಾಗೂ ಅದನ್ನು ತಪ್ಪದೇ ಓದುತ್ತಿದ್ದರು. ಅಂದು ರಾಜಕೀಯವಾಗಿ ಹರಿದು ಹಂಚಿಹೋಗಿದ್ದ ಕರ್ಣಾಟಕವನ್ನು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಒಂದುಗೂಡಿಸುವಲ್ಲಿ ಸೂಕ್ತಿಯ ಪಾತ್ರ ಮಹತ್ವದ್ದಾಗಿದೆ. ‘ಶ್ರೀಕೃಷ್ಣ ಸೂಕ್ತಿಯಲ್ಲಿ ಹೊಸಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಸಾಹಿತ್ಯ ಪ್ರಕಾರಗಳೂ ಪ್ರಕಟವಾಗಿವೆ. ಇದರಲ್ಲಿ ಸ್ವತಂತ್ರ ಹಾಗೂ ಅನುವಾದಿತ ಸಾಹಿತ್ಯಗಲೆರಡೂ ಇವೆ. ಕಾದಂಬರಿಗಳು, ನಾಟಕಗಳು, ಧಾರವಾಹಿಯಾಗಿ ಪ್ರಕಟವಾಗಿವೆ. ವೈಚಾರಿಕ ಲೇಖನಗಳಿಗೂ ಇದರಲ್ಲಿ ಎಡೆ ದೊರೆತಿತ್ತು. ಅನುವಾದಗಳಲ್ಲಿ ಬಂಗಾಳಿಯಿಂದ ಕನ್ನಡಕ್ಕೆ ಹೆಚ್ಚಿನ ಕೃತಿಗಳು ಬಂದಿವೆ. ಅನೇಕ ಇಂಗ್ಲಿಷ್ ಕವನಗಳ ಅನುವಾದಗಳು ಹಗೂ ಮೂಲದೊಂದಿಗೆ ಅನುವಾದಿತ ಕವನಗಳೂ ಪ್ರಕಟವಾಗಿವೆ. ಒಟ್ಟಿನಲ್ಲಿ ಅಂದಿಗೆ ಕನ್ನಡಿಗರ ಅಭಿರುಚಿಯನ್ನು ತಿದ್ದಿ ಬೆಳಸುವಲ್ಲಿ ಇವೆಲ್ಲವೂ ಅಪಾರವಾಗಿ ನೆರವಾಗಿವೆ’ ಎಂಬ ಟಿ. ಕೆ. ಇಂದೂಬಾಯಿಯವರ ಅಭಿಪ್ರಾಯ ಒಪ್ಪುವಂತಹದು. ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ಶ್ರೀಕೃಷ್ಣಸೂಕ್ತಿಯನ್ನು ಅಪ್ಪಟ ಸಾಹಿತ್ಯಿಕ ಪತ್ರಿಕೆಯಾಗಿ ಯಾರೂ ಪರಿಗಣಿಸುವುದಿಲ್ಲ. ಅದರ ಆರಂಭದಲ್ಲಿ ಧಾರ್ಮಿಕ ವಿಷಯಗಳಿಗೇ ಆದ್ಯತೆ ಕೊಡುತ್ತಿತ್ತೆಂಬ ಆರೋಪಕ್ಕೊಳಗಾಗಿದ್ದರೂ ನಂತರ ತನ್ನ ಬೆಳವಣಿಗೆಯ ಹಾದಿಯಲ್ಲಿ ದಿನದಿಂದ ದಿನಕ್ಕೆ ಸಾಹಿತ್ಯಿಕ ಪತ್ರಿಕೆಯಾಗಿ ಸುಧಾರಿಸುತ್ತಾ ಹೋಯಿತು. ನಾನಾ ಚೂರುಗಳಾಗಿ ಹಂಚಿಹೋಗಿದ್ದ ಕರ್ನಾಟಕದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಅಖಿಲ ಕರ್ನಾಟದ ಮಟ್ಟದಲ್ಲಿ ಸಂಬಂಧ ಸೇತುವೆಯೊಂದನ್ನು ನಿರ್ಮಿಸುವಲ್ಲಿ ‘ಸೂಕ್ತಿ’ ಅಪಾರವಾಗಿ ಶ್ರಮಿಸಿತು ಎಂದು ಹಾ. ತಿ. ಕೃಷ್ಣೇಗೌಡರು ಅಭಿಪ್ರಾಯಪಡುತ್ತಾರೆ. ಶ್ರೀಕೃಷ್ಣಸೂಕ್ತಿ ಸಾಹಿತ್ಯಕ ಪತ್ರಿಕೆಯೆಂದು ಘೋಷಿಸಿಕೊಳ್ಳದಿದ್ದರೂ ಹೊಸಗನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ನೀರೆರೆಯಿತು. ಕಾದಂಬರಿ, ಕಥೆ, ಕವನ, ಪ್ರಬಂಧ, ನಾಟಕ ಮೊದಲಾದ ಸಾಹಿತ್ಯ ಪ್ರಕಾರಗಳ ಸವಿಯನ್ನು ಆ ಕಾಲದ ಓದುಗರಿಗೆ ದೊರಕಿಸಿಕೊಟ್ಟಿತು. ಸಮಕಾಲೀನ ಸಾಹಿತಿಗಳೆಲ್ಲರೂ ಶ್ರೀಕೃಷ್ಣ ಸೂಕ್ತಿಯ ಬರಹಗಾರರಾಗಿದ್ದರು. ಹೀಗಾಗಿ ಹೊಸಗನ್ನಡದ ಬೆಳವಣಿಗೆಯ ಹಂತದಲ್ಲಿ ಕನ್ನಡ ಸಾಹಿತ್ಯಕ್ಕೆ ಶ್ರೀಕೃಷ್ಣಸೂಕ್ತಿ ನೀಡಿದ ಕೊಡುಗೆಯನ್ನು ಮರೆಯಲಾಗದು.

‘ಅವಕಾಶತೋಷಿಣಿ’

ಈ ದಶಕದ ಸಾಹಿತ್ಯ ಪತ್ರಿಕೆಗಳ ಪೈಕಿ ಗಮನಿಸಬೇಕಾದುದು ಅವಕಾಶತೋಷಿಣಿ, ಇದರ ಹೆಸರು ನೋಡಿದರೆ ಸಾಹಿತ್ಯ ಪತ್ರಿಕೆಯೆನಿಸುವುದಿಲ್ಲ. ಯಾಕಾಗಿ ಈ ಹೆಸರು ನೀಡಲಾಯಿತೆಂಬ ಬಗೆಗೂ ವಿವರಣೆ ಲಭ್ಯವಿಲ್ಲ. ಬಿ. ವೆಂಕಟಾಚಾರ್ಯರು ಇದರ ಸಂಪಾದಕರು. ಬಂಗಾಳ ವಿಭಜನೆಯ ಪರಿಣಾಮವಾಗಿ ದೇಶದ್ಯಂತ ಬಂಗಾಳವು ಸುದ್ದಿ ಮಾಡಿದ ಸದರ್ಭದಲ್ಲೇ ಬಂಗಾಳ ಸಾಹಿತ್ಯವೂ ಇತರ ಭಾಷೆಗಳ ಮೇಲೆ ಪ್ರಭಾವ ಬೀರಲು ತೊಡಗಿದ್ದಕ್ಕೆ ‘ಅವಕಾಶತೋಷಿಣಿ’ ಉದಾಹರಣೆ. ಕನ್ನಡ ಸಾಹಿತ್ಯಕ್ಕೆ ಬಂಗಾಳ ಸಾಹಿತ್ಯವನ್ನು ತಂದ ಪತ್ರಿಕೆ ಅವಕಾಶ ತೋಷಿಣಿ (೧೯೦೬-೦೭). ಒಂದಾದ ಮೇಲೊಂದರಂತೆ ಬಂಗಾಲಿ ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡು ಜನಪ್ರಿಯವಾಗಿದ್ದನ್ನು ಕಂಡ ಬಿ. ವೆಂಕಟಾಚಾರ್ಯರು ಬಂಗಾಲಿ ಕಾದಂಬರಿಗಳ ಪ್ರಕಟನೆಗಾಗಿಯೇ ‘ಅವಕಾಶತೋಷಿಣಿ’ ಮಾಸಪತ್ರಿಕೆಯನ್ನು ಪ್ರಕಟಿಸಿದರು. ಈ ಪತ್ರಿಕೆ ಒಂದೇ ವರ್ಷ ಬದುಕಿತು. (೧೯೦೬-೦೭) ಆದರೆ ಕನ್ನಡ ಕಾದಂಬರೀ ಪ್ರಕಾರ ಮುನ್ನಡೆಯಲು, ಗೊತ್ತಿಲ್ಲದೇ ತನ್ನ ಪ್ರಭಾವ ಬೀರಿತು. ಎರಡನೇ ದಶಕ ಇಪ್ಪತ್ತನೇ ಶತಮಾನದ ಎರಡನೇ ದಶಕ ಕನ್ನಡ ಪತ್ರಿಕೋದ್ಯಮದ ವಿಕಾಸದ ಹಾದಿಯಲ್ಲಿ ಮುಖ್ಯವಾದ ಘಟ್ಟ. ಮೈಸೂರು ಸಂಸ್ಥಾನದಲ್ಲಿ ೧೯೦೮ನೇ ಇಸವಿಯ ಪತ್ರಿಕಾ ಶಾಸನದ ಕೆಲವು ವಿಧಿಗಳು ೧೯೧೦ರ ನಂತರ ಸಡಿಲಗೊಂಡವು. ೧೯೧೨ರಲ್ಲಿ ಸರ್‍. ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿ ಬಂದುದು ಕನ್ನಡ ಪತ್ರಿಕೋದ್ಯಮದ ಸುದೈವವಾಗಿ ಪರಿಣಮಿಸಿತು. ಪತ್ರಿಕಾ ಸ್ವಾತಂತ್ಯ್ರದ ಪ್ರತಿಪಾದಕರಾದ ವಿಶ್ವೇಶ್ವರಯ್ಯನವರು ಕನ್ನಡ ಪತ್ರಿಕೆಗಳು ಬೆಳೆಯಲು ಉತ್ತೇಜನ ಕೊಟ್ಟರು. ತಮ್ಮನ್ನು ಟೀಕಿಸಿದ ಪತ್ರಿಕೆಗಳ ಮೇಲೆ ಪ್ರತೀಕಾರವನ್ನು ಕೈಗೊಳ್ಳುವ ಮನಸ್ಸು ಮಾಡಲಿಲ್ಲ. ಬ್ರಿಟಿಷ್ ರೆಸಿಡೆಂಟರ ಒಲವಿದ್ದಾಗಲೂ ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸಲು ವಿಶ್ವೇಶ್ವರಯ್ಯನವರು ಒಪ್ಪಲಿಲ. ವಿಶ್ವೇಶ್ವರಯ್ಯನವರು ನಂತರ ದಿವಾನರಾಗಿ ಬಂದ ಸರ್‍ ಮಿರ್ಜಾ ಇಸ್ಮಾಯಿಲ್ಲರೂ ವಿಶಾಲಹೃದಯಿಗಳೂ ಪತ್ರಿಕೋದ್ಯಮ ಸ್ವಾತಂತ್ಯ್ರದ ಬಗ್ಗೆ ಗೌರವವುಳ್ಳವರಾಗಿದ್ದರು. ಈ ಎರಡು ದಿವಾನರುಗಳ ಅವಧಿಯಲ್ಲಿ ಮೈಸೂರು ಸಂಸ್ಥಾನದ ಭಾಗಗಳಲ್ಲಿ ಪತ್ರಿಕೋದ್ಯಮ ವಿಪುಲಾಗಿ ಬೆಳೆಯಲು ಅವಕಾಶವಾಗಿ ೨೦ನೇ ಶತಮಾನದ ಎರಡನೇ ದಶಕದಲ್ಲಿ ಮೈಸೂರು ಪ್ರಾಂತ್ಯದಲ್ಲಿ ವಿಪರೀತವೆನಿಸುವಷ್ಟು ಸಂಖ್ಯೆಯಲ್ಲಿ ಪತ್ರಿಕೆಗಳು ಹೊರಬಂದುದನ್ನು ಕಾಣುತ್ತೇವೆ. ಈ ಅವಕಾಶ ಮುಂಬೈ,ಮದ್ರಾಸು ಹಾಗೂ ಹೈದ್ರಾಬಾದ ಸರ್ಕಾರಗಳಡಿ ಹರಿದು ಹಂಚಿಹೋಗಿದ್ದ ಕನ್ನಡದ ಇತರ ಪ್ರಾಂತ್ಯಗಳವರಿಗೆ ಇರಲಿಲ್ಲವಾಗಿ ಹಾಗೂ ಪ್ರಥಮ ಮಹಾಯುದ್ಧದ ಕರಿ ನೆರಳು ಪತ್ರಿಕೋದ್ಯಮದ ಮೇಲೂ ಬಿದ್ದ ಪರಿಣಾಮವಾಗಿ ಮೈಸೂರು ಪ್ರಾಂತ್ಯವನ್ನು ಬಿಟ್ಟರೆ ಇತರ ಪ್ರಾಂತ್ಯಗಳಲ್ಲಿ ಈ ದಶಕದಲ್ಲಿ ಪತ್ರಿಕೋದ್ಯಮ ಅಂಥ ಆಶಾದಾಯಕ ಬೆಳವಣಿಗೆಯನ್ನೇನೂ ಕಾಣಲಿಲ್ಲ. ಸಾಮಾನ್ಯ ಆಸಕ್ತಿಯ ಪತ್ರಿಕೋದ್ಯಮದ ಈ ಸ್ಥಿತಿಯನ್ನೆ ಸಂಕೀರ್ಣ ಪತ್ರಕೋದ್ಯಮದಲ್ಲೂ ಕಾಣುತ್ತೇವೆ.

‘ವಿಕಟವಿನೋದಿನಿ’

ಕನ್ನಡದ ಹಾಸ್ಯ ಪತ್ರಿಕೆಗಳ ಪೈಕಿ ಅತಿ ದೀರ್ಘಕಾಲ ಪ್ರಕಟವಾದ ಕೀರ್ತಿ ‘ವಿಕಟವಿನೋದಿನಿ’ಗೆ ಸಲ್ಲುತ್ತದೆ. ‘ವಿಕಟ ಪ್ರತಾಪ’ವನ್ನು ಈ ಹಿಂದೆ ಪ್ರಕಾಶಿಸಿದ್ದ ಬಸಪ್ಪ ಶೆಟ್ಟಿಯವರೇ ೧೯೧೧ರಲ್ಲಿ ವಿಕಟ ವಿನೋದಿನಿಯನ್ನು ಸ್ಥಾಪಿಸಿದರು. ಎನ್. ಶಿವರಾಮ ಶಾಸ್ತ್ರಿಯವರು ಈ ಪತ್ರಿಕೆಗೆ ಸಂಪಾದಕರಾಗಿದ್ದರು. ನಿರಂತರವಾಗಿ ೫೩ ವರ್ಷ ಪ್ರಕಣೆಯಲ್ಲಿದ್ದು ೧೯೬೪ರಲ್ಲಿ ‘ವಿಕಟ ವಿನೋದಿನಿಯು’ ಪ್ರಕಟಣೆಯನ್ನು ನಿಲ್ಲಿಸಿತು. ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಪ್ರೌಢ ಪ್ರಬಂಧದಲ್ಲಿ ಎಂ. ಎಸ್. ಸುಂಕಾಪುರ್‍ ಅವರು ವಿಕಟ ವಿನೋದಿನಿಯ ಬಗೆಗೆ ಹೀಗೆ ಬರೆಯುತ್ತಾರೆ : ‘ವಿಕಟ ವಿನೋದಿನಿ’ಯು ಹಾಸ್ಯರಸ ಪ್ರಧಾನವಾದ ಒಂದು ಮಾಸಪತ್ರಿಕೆ. ಈ ಪತ್ರಿಕೆ ಈಗಾಗಲೇದುಡಿಯ ಹತ್ತಿ ೪೭ ವರ್ಷಗಳೆಂದರೆ ಅದರ ಹಳೆಯತನವನ್ನು ಹೇಳುವುದೇ ಬೇಡ. ಅದು ಎಂತಹ ಆರ್ಥಿಕ ಮುಗ್ಗಟ್ಟು ಬಂದರೂ ಧೈರ್ಯದಿಂದ ಮುಂದೆ ಸಾಗಿ ತನ್ನ ವಿಕಟನಗೆಯನ್ನು ಬೀರುತ್ತಲೇ ಬಂದಿದೆ. ಮುಖಚಿತ್ರದಲ್ಲಿ ಸ್ವಾರಸ್ಯವಾದ ಹಾಸ್ಯ ಯಾವಗಲೂ ಲಾಸ್ಯವಾಡುವುದನ್ನು ಕಾಣುತ್ತೇವೆ. ಸರಸ ಹಾಸ್ಯವನ್ನೂ ವಿಡಂಬನೆಯ ವಿವಿಧ ಪ್ರಕಾರಗಳನ್ನೂ ವ್ಯಕ್ತಪಡಿಸುವ ಲೇಖನಗಳು ಈ ಪತ್ರಿಕೆಯಲ್ಲಿ ಸಾಕಷ್ಟು ಸಿಗುತ್ತವೆ. ‘ವಿಕಟಾವಲೋಕನ’ವನ್ನೋದುತ್ತಲೇ ಓದುಗನು ನಗೆಗಡಲಲ್ಲಿ ಮುಳುಗಿ ಏಳುತ್ತಾನೆ. ಸಂಪಾದಕರು ರಸಿಕ ಬರಹಗಾರರಾದುದೇ ಇದಕ್ಕೆ ಕಾರಣ. ‘ವಿಕಟ ವಿಮರ್ಶಾವಳಿ’ಯಲ್ಲಿ ನಗೆ ಹನಿಯ ತುಂತುರುಗಳು ಭರದಿಂದ ಸಿಡಿಯುವುದನ್ನು ಅರಿಯುತ್ತೇವೆ. ಪ್ರತಿ ತಿಂಗಳು ನಾಲ್ಕಾರು ತಲೆಹರಟೆಗಳನ್ನು ಈ ಪತ್ರಿಕೆ ನೀಡುತ್ತ ಬಂದಿದೆ. ಪ್ರಹಸನ, ವಿನೋದ ವಿಹಾರ, ನಕಲಿ, ತಮಾಷೆ ಬೇಕಿದ್ದರೆ ಈ ಪತ್ರಿಕೆಯನ್ನು ಕೊಂಡು ಇಲ್ಲವೆ ಕದ್ದಾದರೂ ಓದಬೇಕು.

‘ಸಚಿತ್ರ ಭಾರತ’

ಹೊಸಗನ್ನಡ ಸಾಹಿತ್ಯವನ್ನು ಕಟ್ಟಿದ ಮೊದಲಿಗರಲ್ಲಿ ಒಬ್ಬರಾದ ಕೆರೂರು ವಾಸುದೇವಾ ಚಾರ್ಯರು ೧೯೧೩ರಿಂದ ೧೯೧೭ರವರೆಗೆ ನಡೆಸಿದ ಪತ್ರಿಕೆ ‘ಸಚಿತ್ರ ಭಾರತ’. ಮೂರು ವರ್ಷಗಳ ಕಾಲ ನಡೆದು ನಿಂತ ಈ ಪತ್ರಿಕೆಯಲ್ಲಿ ಪೌರಾಣಿಕ ಕಥೆಗಳೂ, ಕೆರೂರು ಅವರ ಕಾದಂಬರಿಗಳೂ ಧಾರಾವಾಹಿಗಳಾಗಿ ಪ್ರಕಟಗೊಳ್ಳುತ್ತಿದ್ದವು. ‘ಕೆರೂರು ವಾಸುದೇವಾ ಚಾರ್ಯರು ೩೬ ಸಂಪೂರ್ಣ ಕತೆಗಳನ್ನೂ ಅನೇಕ ನಿಬಂಧ ಮತ್ತು ಲೇಖನಗಳನ್ನೂ ‘ಸಚಿತ್ರ ಭಾರತ’ದ ಮೂಲಕ ಪ್ರಕಟಿಸಿದ್ದಾರೆ. ೧೯೧೭ರಲ್ಲಿ ‘ಸಚಿತ್ರ ಭಾರತ’ವು ನಿಂತು ಹೋದ ಮೇಲೆ ‘ಶುಭೋದಯ’ವೆಂಬ ಪತ್ರಿಕೆಯನ್ನು ಹೊರಡಿಸಿ ತಾವು ೧೯೨೧ರಲ್ಲಿ ಸ್ವರ್ಗಸ್ಥರಾಗುವವರೆಗೆ ಸಮಾಜದ ಆಶೆ ಆಕಾಂಕ್ಷೆಗಳ, ರೀತಿ ನೀತಿಗಳು ರಾಜಕೀಯ ವಾತಾವರಣಗಳ ಮೇಲೆ ಪರಿಣಾಮಕಾರಿಯಾದ ಅನೇಕ ಬರಹಗಳನ್ನು ಬರೆದಿದ್ದಾರೆ, ಎಂಬುದಾಗಿ ‘ಸಾಹಿತ್ಯ ಭಾರತಿ’ಯಲ್ಲಿ ಎಸ್. ಅನಂತರಂಗಾಚಾರ್‍ ದಾಖಲಿಸುತ್ತಾರೆ. ‘ಸಚಿತ್ರ ಭಾರತ’ದ ಸಂಸ್ಥಾಪಕರು ಬಿಂದೂರಾವ್ ಮುತಾಲಿಕ ದೇಸಾಯಿ, ಇವರು ಕೆರೂರು ವಾಸುದೇವಾಚಾರ್ಯರ ಜೊತೆಗಾರರಾಗಿದ್ದರಿಂದ ಆಚಾರ್ಯರು ಸಚಿತ್ರ ಭಾರತವನ್ನು ನಂತರ ಶುಭೋದಯ (೧೯೧೭)ವೆಂಬ ಸಾಮಾಜಿಕ ರಾಜಕೀಯ ಸಂಗತಿಗಳಿಗೆ ಮೀಸಲಾದ ಪತ್ರಿಕೆಯನ್ನು ನಡೆಸಲು ಸಾಧ್ಯವಾಯ್ತು. ಕ್ರೌನ್ ಆಕಾರದ ‘ಸಚಿತ್ರ ಭಾರತ’ಕ್ಕೆ ೧೯೧೩ರಲ್ಲಿ ವಾರ್ಷಿಕ ಚಂದಾ ರೂ. ೨-೬-೦. ‘ಸಚಿತ್ರಭಾರತ’ವು ವಿಶೇಷವಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಮಾಸ ಪತ್ರಿಕೆ. ಸಚಿತ್ರ ಭಾರತ ನಿಜವಾಗಿಯೂ ಸಚಿತ್ರ ಭಾರತ ಸಚಿತ್ರವಾದ ಪತ್ರಿಕೆ ಎಂಬುದಾಗಿ ಎಸ್. ಬಿ. ನರಗುಂದಕರ್‍ ಅಭಿಪ್ರಾಯ ಪಡುತ್ತಾರೆ.

‘ಕಾದಂಬರೀ ಸಂಗ್ರಹ’

‘ಕಾದಂಬರೀ ಸಂಗ್ರಹ’ ಹೆಸರೇ ಸೂಚಿಸುವಂತೆ ಕಾದಂಬರಿಗಾಗಿ ಮೀಸಲಾಗಿ ಬಂದ ಮಾಲೆ. ಮುಖ್ಯವಾಗಿ ಬಂಗಾಲಿಯಿಂದ ಭಾಷಾಂತರಗೊಂಡ ಕಾದಂಬರಿಗಳು ಪ್ರಕಟಗೊಂಡವು. ೧೯೧೩-೧೯೧೪ರಲ್ಲಿ ಚಾಮರಾಜನಗರದಲ್ಲಿ ಇದು ಪ್ರಕಟಣೆ ಆರಂಭಿಸಿದ್ದು ವಿಶೇಷ. ಯಾಕೆಂದರೆ ಮೈಸೂರು ಪತ್ರಿಕಾ ಕೇಂದ್ರ ಸ್ಥಾನವಾಗಿದ್ದ ಮೈಸೂರು ಪ್ರಾಂತ್ಯದಲ್ಲಿ ಚಾಮರಾಜನಗರದಂಥ ಹಿಂದುಳಿದ ಪ್ರದೇಶಗಳಲ್ಲಿ ಪತ್ರಿಕಾ ವ್ಯವಸಾಯ ಹುಲುಸಾಗಿ ಬೆಳದಿರಲಿಲ್ಲ. ಅಲ್ಲಿ ‘ಕಾದಂಬರೀ ಸಂಗ್ರಹ’ವೆಂಬ ಭಿನ್ನಮಾದರಿಯ ಸಾಹಿತ್ಯ ಮಾಲೆ ಹುಟ್ಟಿ ೨೫ ವರ್ಷಗಳ ಕಾಲ (೧೯೩೮) ನಡೆದುದು ವಿಶೇಷ. ಕೆ. ವೆಂಕಟ್ರಮಣ ಶಾಸ್ತ್ರಿ ಎಂಬುವವರು ಇದರ ಸಂಪಾದಕರಾಗಿದ್ದವರು.

‘ಕವಿತಾ’

‘ಕವಿತಾ’ ಮತ್ತು ‘ಪ್ರಭಾತ’ ಹೆಸರಿಸಬೇಕಾದ ಸಾಹಿತ್ಯ ಪತ್ರಿಕೆಗಳು. ಬೆಲಗಾವಿಯಿಂದ ಎಸ್. ಎಮ್. ದೇಸಾಯಿ ರುದ್ರಾಪುರ ಎಂಬುವರ ಸಂಪಾದಕತ್ವದಲ್ಲಿ ‘ಕವಿತಾ’ ಎಂಬ ತ್ರೈಮಾಸಿಕ ಪ್ರಕಟವಾದುದನ್ನು ಕರ್ನಾಟಕ ರಾಜ್ಯ ಗೆಜೆಟಿಯರ್‍ ದಾಖಲಿಸುತ್ತದೆ. ‘ಕವಿತಾ’ ಮತ್ತು ‘ಪ್ರಭಾತ’ ತದ್ರೂಪಿ ಮಾಸಿಕಗಳು. ಕವನಕ್ಕೇ ಇವು ಮೀಸಲು. ಇಡೀ ಪತ್ರಿಕೆ ಕವನ ರೂಪದಲ್ಲಿರುವುದು ಇಲ್ಲಿಯ ವಿಶೇಷ. ಕವಿತಾ (೧೯೧೯) ಪತ್ರಿಕೆಗೆ ವಾಯ್. ಬಿ. ಜಠಾರ ಸಂಪಾದಕರೆಂದು ಕರ್ನಾಟಕ ವಿ. ವಿ.ಗೆ ಸಲ್ಲಿಸಲಾದ ಧಾರವಾಡ ಜಿಲ್ಲೆಯ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಬಂಧದಲ್ಲಿ ಹೇಳಲಾಗಿದೆ. ಗದ್ಯದ ಒಂದು ವಾಕ್ಯವೂ ಈ ಪತ್ರಿಕೆಯಲ್ಲಿರಲಿಲ್ಲ ಎಂಬುದನ್ನು ಗಮನಿಸಬೇಕು. ಉದಯೋನ್ಮುಖ ಕವಿಗಳಿಗೆ ಈ ಪತ್ರಿಕೆ ಅವಕಾಶ ನೀಡಿತು. ಬೇಂದ್ರೆ, ಶಾಂತಕವಿ, ಚೆನ್ನಕೃಷ್ಣಯ್ಯ, ಕಡೇಕೋಡಿ ಮುಂತಾದ ನವೋದಯ ಕಾಲದ ಆರಂಭ ಪುರುಷರು ‘ಕವಿತಾ’ ಪತ್ರಿಕೆಗೆ ಕವನ ಬರೆದರು.

‘ಪ್ರಭಾತ’

‘ಪ್ರಭಾತ’ ಕವಿತೆಯ ಮಾಸ ಪುಸ್ತಕವು ಎಂದು ಘೋಷಿಸಿಕೊಂಡಿತ್ತು. ವಾಯ್. ಬಿ. ಜಾಠಾರ ಇದರ ಸಂಪಾದಕರು. ೧೯೧೮ರ ಸೆಪ್ಟೆಂಬರ್‍ ೧೫ನೇ ತಾರೀಖು ಸಂಪುಟ ಒಂದು ಹಾಗೂ ಸಂಚಿಕೆ ಎರಡು ಹೊರಬಂದಿದೆ. ವಾರ್ಷಿಕ ಚಂದಾ ಎರಡು ರೂಪಾಯಿ ಹಾಗೂ ಬಿಡಿ ಸಂಚಿಕೆ ನಾಲ್ಕು ಆಣೆ ಎಂದು ಮುದ್ರಿಸಲಾಗಿದೆ. ‘ಪ್ರಭಾತ’ದಲ್ಲಿ ಪ್ರಕಟವಾದ ಶ್ರೀ ಭಾರತ ವನೌಷಧಿ ಸಂಗ್ರಹಾಲಯದ ಒಂದು ಜಾಹೀರಾತು, ಪದ್ಯ ರೂಪದಲ್ಲಿ ಇಂತಿದೆ.

ದುಡ್ಡಿಗೆ ದುಡ್ಡು ಮಾಡಲಾಸದಾ ಸುಖ ಬೇಡಲಪೇಕ್ಷೆಯಿರ್ದೋಡೆ ಕಡ್ಡಿಯ ಕಷ್ಟ ಸೋಪದೆ ವೃಥಾ ಮರೆ ಮೋಸಕೆ ಸಿಕ್ಕು ಬೀಳದೆ ಜಾಢ್ಯವ ದೂಡಬಲ್ಲ ಸುಜನೋಚಿತ ಮೂಲಿಕೆಯೌಷದಂಗಳಂ ‘ದುಡ್ಡಿನ ಕಾರ್ಡಿನಾರ್ಡರವ ನಮ್ಮ ವಿಳಾಸಕೆ ಮಾಡಿ ಬೇಡಿರೆ’

ಇಲ್ಲಿ ಮನಿಯಾರ್ಡರ್‍ ಎಂಬುದನ್ನೂ ಕಾವ್ಯಾತ್ಮಕವಾಗಿ ‘ದುಡ್ಡಿನ ಕಾರ್ಡಿನಾರ್ಡರವ’ ಎಂದು ನುಡಿದಿದ್ದಾರೆ. ಸಾಮಾನ್ಯ ಸಾಹಿತ್ಯಿಕ ಪತ್ರಿಕೆಗಳೇ ದಡ ಹತ್ತದ ಸ್ಥಿತಿಯಲ್ಲಿರುವಾಗ ಕವಿತೆಗಳ ಮಾಸಿಕವನ್ನೇ ಹೊರಡಿಸುವ ಧೈರ್ಯ ಮಾಡಿದ ಸಂಪಾದಕ ವಾಯ್. ಬಿ. ಜಾಥರ್‍ ಅವರನ್ನು ಮೆಚ್ಚಬೇಕು. ಇಡೀ ಪತ್ರಿಕೆಯನ್ನು ಕಾವ್ಯಮಯವನ್ನಾಗಿ ಮಾಡಿದ ಜಾಠಾರ ಅವರ ಕಾವ್ಯ ಪ್ರೇಮ ವಿಶೇಷವಾದುದು. ಕವಿತಾ’ ಮತ್ತು ‘ಪ್ರಭಾತ’ ಬಹಳ ಕಾಲ ನಡೆಯಲಿಲ್ಲ. ಆದರೆ ಕನ್ನಡ ಸಾಹಿತ್ಯ ಪತ್ರಿಕೆಗಳ ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದ್ದು ಸುಳ್ಳಲ್ಲ. ‘ಪ್ರಭಾತ’ ಪತ್ರಿಕೆಯ ಕುರಿತು ರಾ. ಯ. ಧಾರವಾಡಕರ ಅವರು ಲೇಖನವೊಂದರಲ್ಲಿ ಹೀಗೆ ನುಡಿದಿದ್ದಾರೆ :

ಹೊಸಗನ್ನಡ ನವೋದಯ ಕಾಲದಲ್ಲಿ ‘ಪ್ರಭಾತ’ ಪತ್ರಿಕೆಗೆ ವಿಶಿಷ್ಟವಾದ ಸ್ಥಾನವಿದೆ. ಮೊದಲನೆಯದಾಗಿ ಅಂದಿನ ಕಾಲಕ್ಕೆ ಕೇವಲ ಕವಿತೆಗಾಗಿ ಮೀಸಲಾದ ಮಾಸಪತ್ರಿಕೆಯೆಂದರೆ ಪ್ರಭಾತ. ಇದರ ಮೂಲಕ ಹೊಸಗನ್ನಡ ಕಾವ್ಯಪರಂಪರೆಯ ಪ್ರಭಾತವೇ ಆಯಿತೆಂದು ಹೇಳಿದರೂ ಅತಿಶಯೋಕ್ತಿಯಲ್ಲ. ಪ್ರಭಾತ ಪತ್ರಿಕೆ ಅನ್ವರ್ಥಕವಾಗಿಯೇ ಕನ್ನಡ ಸಾಹಿತ್ಯ ಜಗೃತಿಯ ಪ್ರಭಾತವಾಗಿದೆ. ಇಲ್ಲಿಯ ಕವಿಜನಕೂಜನದ ಸಮಾರಂಭದಲ್ಲಿ ಹಳೆಯ ತಲೆಮಾರಿನ ನೂತನ ಕವಿಗಳನ್ನೂ, ಸುದೈವದಿಂದ ಇಂದು ನಮ್ಮೂಡನಿದ್ದು ಕನ್ನಡ ಸೇವೆಯನ್ನು ಅಖಂಡವಾಗಿ ಮಾಡುತ್ತಿರುವ ಇಂದಿನ ಸುಪ್ರಸಿದ್ಧ ಕವಿಗಳ ಪ್ರಥಮ ಪ್ರಯತ್ನಗಳ ದಟ್ಟ ಹೆಜ್ಜೆಯನ್ನು ಕಾಣುತ್ತಿದ್ದೇವೆ. ಹಳೆಯ ತಲೆಮಾರಿನ ಹಿರಿಯರು, ಹೊಸಬರಿಗೆ ಕಾವ್ಯ ದೀವಿಟಿಗೆಯನ್ನು ಕೊಟ್ಟು ಅವರನ್ನು ಈ ಪ್ರಭಾತ ಸಮಯದಲ್ಲಿ ಮುಂದುಕಳಿಸಿದ್ದಾರೆ. ಈ ಪತ್ರಿಕೆಯ ಸಂಪಾದಕರು ಯಶವಂತರಾವ ಭಾಷ್ಕರರಾವ ಜಠಾರ ಇವರು. ಇವರೂ ಸಾಹಿತ್ಯ ಪ್ರೇಮಿಗಳಾಗಿದ್ದರಲ್ಲದೆ ಸ್ವತಃ ಕವಿಗಳೂ ಆಗಿದ್ದರೂ. ಇವರು ಜೈಮಿನಿ ಭಾರತದ ಮೊದಲನೆಯ ಸಂಧಿಯನ್ನು ವಾರ್ಧಕ ಷಟ್ಪದಿಯಲ್ಲಿ ಸನ್ ೧೯೧೯ರಲ್ಲಿ ಮರಾಠಿ ಭಾಷೆಗೆ ಅನುವಾದ ಮಾಡಿದರು. ಪತ್ರಿಕೆ ಪ್ರತಿ ತಿಂಗಳು ೧೫ನೇಯ ತಾರೀಖಿಗೆ ಹೊರಡುತ್ತಿತ್ತು. ಚಂದಾ ೨ ರೂ ಮಾತ್ರ. ". . . ಕನ್ನಡಿಗರ ಸಹಾಯಕ್ಕಾಗಿ ಇವರೆಲ್ಲ ಕವಿಗಳು ಪ್ರಾರ್ಥಿಸಿದರೂ ಸಾಕಷ್ಟು ಚಂದಾದಾರರು ಸಿಗದ್ದರಿಂದ ‘ಪ್ರಭಾತ’ ಪತ್ರಿಕೆ ಕೇವಲ ಎರಡು ವರ್ಷ ಮಾತ್ರ ನಡೆದು ಸನ್ ೧೯೨೦ರಲ್ಲಿ ನಿಂತು ಹೋಯಿತು. ಪ್ರಭಾತದಲ್ಲಿ ಆ ಕಾಲದ ಖ್ಯಾತ ಲೇಖಕರಾಗಿದ್ದ ಶಾಂತಕವಿಗಳು, ಕಾವ್ಯಾನಂದ ಪುಣೇಕರ, ವಲ್ಲಭ ಮಹಲಿಂಗ ತಟ್ಟಿ, ಬಸವಾರ್ಯ, ಕಿತ್ತೂರ, ಕನ್ನಡ ವಾಮನ, ಕರಿಬಸವ ಶಾಸ್ತ್ರಿ, ಎಂ. ಎಸ್. ರೈನಾಪೂರ, ಶ್ರೀನಿವಾಸ ಕಟ್ಟಿ, ದ. ರಾ. ಬೇಂದ್ರೆ, ಕೃಷ್ಣಶರ್ಮ ಬೆಟಗೇರಿ ಮೊದಲಾದವರೆಲ್ಲರೂ ಕವಿತೆಗಲನ್ನು ಬರೆಯುತ್ತಿದ್ದರು. ೧೯೨೧ರಲ್ಲಿ ಮೇ ತಿಂಗಳಿನಲ್ಲಿ ಯಶವಂತರಾಯರು ಧೃತಿಗೆಡದೆ ಪುನಃ ಇದನ್ನು ಪ್ರಾತಂಭಿಸಿದರು, ಆದರೆ ಜನರಿಂದ ಪುರಸ್ಕಾರ ದೊರೆಯದ್ದರಿಂದ ಸುಮಾರು ೨ ವರ್ಷ ಮಾತ್ರ ನಡೆದು ಕೊನೆಗೆ ನಿಂತು ಹೋಯಿತು. ಕನ್ನಡದ ನಿಯತಕಾಲಿಕ ಪತ್ರಿಕೋದ್ಯಮದಲ್ಲಿ ಮಹತ್ತರ ಹೆಜ್ಜೆಗಳಾದ ಮೂರು ಪತ್ರಿಕೆಗಳನ್ನು ಸಾದರ್ಭಿಕವಾಗಿ ಇಲ್ಲಿ ಹೆಸರಿಸಬಹುದು. ಡಿ. ವಿ. ಗುಂಡಪ್ಪನವರ ‘ಕರ್ನಾಟಕ ಜೀವನ’, ನಂಜನಗೂಡು ತಿರುಮಲಾಂಬರವರ ‘ಕರ್ನಾಟಕ ನಂದಿನಿ’ ಹಾಗೂ ಆರ್‍. ಕಲ್ಯಾಣಮ್ಮನವರ ‘ಸರಸ್ವತಿ’ ಈ ಮೂರು ಪತ್ರಿಕೆಗಳು ೨೦ನೇ ಶತಮಾನದ ಎರಡನೇ ದಶಕದಲ್ಲಿ ಪ್ರಾರಂಭಗೊಂಡವು. ಡಿ. ವಿ. ಗುಂಡಪ್ಪನವರು ಕನ್ನಡ ಸಾಹಿತ್ಯದ ಮೇರು ವ್ಯಕ್ತಿಗಳಲ್ಲಿ ಒಬ್ಬರು. ಅವರ ಪತ್ರಿಕೆಗೆ ಸಾಹಿತ್ಯದ ಸೊಗಡು ಇದ್ದಿತದರೂ ಅದು ಶುದ್ಧ ವೈಚಾರಿಕ ಪತ್ರಿಕೆಯೆಂದೇ ಕರೆಸಿಕೊಂಡಿತ್ತು. ಸೌಜನ್ಯಾಭಿವೃದ್ಧಿ ಇವುಗಳಿಗೆ ಮೀಸಲಾದ್ದು ಎಂದು ಮುಖಪುಟದಲ್ಲಿ ಘೋಷಿಸಿಕೊಂಡಿತ್ತು. ಸರಸ್ವತಿ ಪತ್ರಿಕೆಗೆ ವೀಣಾಪಾಣಿ ಸರಸ್ವತಿಯ ಮುಖಪುಟವಿರುತ್ತಿತ್ತು. ಸ್ತ್ರೀಯರು ಎಲ್ಲಿ ಸನ್ಮಾನಿಸಲ್ಪಡುವರೋ ಅಲ್ಲಿ ಸಮಸ್ತ ದೇವತೆಗಳೂ ಸುಪ್ರಸನ್ನವಾಗುವರು ಎಂಬ ಮನಸ್ಮೃತಿಯ ಮಾತನ್ನು ಉದ್ಧರಿಸಲಾಗುತ್ತಿತ್ತು. ಈ ಮೇಲಿನ ಮೂರು ಪತ್ರಿಕೆಗಳು ಅಚ್ಚ ಸಾಹಿತ್ಯ ಪತ್ರಿಕೆಗಳಲ್ಲ. ಈ ದಶಕದಲ್ಲಿ ಪ್ರಕಟಗೊಂಡ ಮುಖ್ಯ ಪತ್ರಿಕೆಗಳೆಂದು ಸಾಂದರ್ಭಿಕವಾಗಿ ಮಾತ್ರ ಪ್ರಸ್ತಾಪಿಸಲಾಗಿದೆ.

‘ಕನ್ನಡ ಕೋಗಿಲೆ’

ಈ ದಶಕದಲ್ಲಿ ಗಮನಿಸಬೇಕಾದ ಸಾಹಿತ್ಯಕ ಪತ್ರಿಕೆ ‘ಕನ್ನಡ ಕೋಗಿಲೆ’ ೧೯೧೬ರ ಏಪ್ರಿಲ್ ತಿಂಗಳಿನಲ್ಲಿ ಮಂಗಳೂರಿನಿಂದ ಆರಂಭವಾಯಿತು. ಪಿ. ಭೋಜರಾವ್ ಹಾಗೂ ಮುಳಿಯ ತಿಮ್ಮಪ್ಪಯ್ಯನವರು ಪತ್ರಿಕೆಯ ಸಂಪಾದಕರು. ‘ಕನ್ನಡ ಸಹಕಾರದಿಂದ ಘೋಷಿಸಲ್ಪಡುವ ಕನ್ನಡ ಕೋಗಿಲೆ’ ಎಂಬುದು ತ್ರಿಕೆಯ ಶೀರ್ಷಕೆಯಲ್ಲಿ ಹೇಳಲಾಗಿತ್ತು. ‘ಚಂದಾ ಕಡಿಮೆ-ಅಂದಾ ಹೆಚ್ಚು’ ಎಂಬುದು ‘ಕನ್ನಡ ಕೋಗಿಲೆ’ಯ ಜನಪ್ರಿಯ ಘೋಷಣೆ. ಕಥೆ ಕವನ, ಕಾದಂಬರಿ, ವಿಚಾರ, ವಿಮರ್ಶೆ ಮುಂತಾದ ಸಾಹಿತ್ಯ ವಿಷಯಗಳು ‘ಕನ್ನಡ ಕೋಗಿಲೆ’ಯಲ್ಲಿ ಪ್ರಕಟವಾಗುತ್ತಿದ್ದವು. ಆ ಕಾಲದ ಹಿರಿಯ ಸಾಹಿತಿಗಳಾದ ಎಂ. ಗೋವಿಂದ ಪೈ, ಉಗ್ರಾಣ ಮಂಗೇಶ ರಾವ್, ಪಾವಂಜೆ ಗೋಪಾಲಕೃಷ್ಣಯ್ಯ ಮೊದಲಾದ ಲೇಖಕರು ಈ ಪತ್ರಿಕೆಗೆ ಆಗಾಗ ಬರೆಯುತ್ತಿದ್ದರು. ‘ವಾಙ್ಮಯ’ ಎಂಬುದು ಸಾಹಿತ್ಯ ವಿಷಯಗಳಿಗೆ ಸಂಬಂಧಿಸಿದ ವಿಷಯಗಳು ಚರ್ಚೆಗೊಳ್ಳುತ್ತಿದ್ದ ಅಂಕಣ. ‘ಕನ್ನಡ ಕೋಗಿಲೆ’ ಡೆಮಿ ಅಷ್ಟದಳ ಆಕಾರದ ಪತ್ರಿಕೆ. ೧೯೧೭ರಲ್ಲಿ ವಾರ್ಷಿಕ ಚಂದಾ ಪೋಷಕರಿಗೆ ರೂ ೮-೦-೦ ಹಾಗೂ ಪ್ರೋತ್ಸಾಹಕರಿಗೆ ರೂ ೧-೮-೦ ಎಂಬುದಾಗಿ ಸಾರಲಾಗಿತ್ತು. ಪ್ರೋತ್ಸಾಹಕರು ಯಾರು ಎಂಬುದು ಸ್ಪಷ್ಟವಿರಲಿಲ್ಲ ಬಿಡಿ ಸಂಚಿಕೆಗೆ ೦-೨-೬ ಎನ್ನಲಾಗಿತ್ತು. ಸಂಪುಟ ೨ ಸಂಚಿಕೆ ೮ ನವೆಂಬರ್‍ ೧೯೧೭ರಲ್ಲಿ ಪ್ರಕಟವಾಗಿದ್ದು ಅದರಲ್ಲಿ ‘ಸಿಂಹಾವಲೋಕನ’ ಎಂಬ ಬರಹದಲ್ಲಿ ಸಂಪಾದಕರು ಹೀಗೆ ಬರೆಯುತ್ತಾರೆ. ವಾಙ್ಮೆಯ, ಧರ್ಮ, ಶಾಸ್ತ್ರಗಳೆಂಬ ನಾಲ್ಕು ಉದ್ದೇಶಗಳನ್ನು ಮುಂದಿಟ್ಟುಕೊಂಡು, ನಾವು ಈ ಪವಿತ್ರ ಕಾರ್ಯಕ್ಕೆ ಕೈ ಹಾಕಿರುವುದು. ಅವುಗಳೊಳಗೆ, ನಾವು ಪ್ರಕಟಿಸಿದ ವಾಙ್ಮಯದಲ್ಲಿ ಸೇರಿದುವೆಂದರೆ - ಸಾಧಾರಣವಾಗಿ ಪ್ರತಿ ತಿಂಗಳಲ್ಲಿಯೂ ಸರಲ ಶೈಲಿಯಿಂದ ಪ್ರಕಟಿತವಾದ ಚಿಕ್ಕ ಚಿಕ್ಕ ಹಲವು ಖಂಡ ಪದ್ಯಗಳು. ಅವುಗಳೊಳಗೆ ‘ಕನಕಾಂಗಿ’ ‘ಬಡಹುಡಿಗಿ’ ಎಂಬ ಕಥಾತ್ಮಕವಾದ ಖಂಡಕಾವ್ಯಗಳೇ ಮೇಲಾದವು. ಹಾಗೆಯೇ ‘ಭರತನ ಭವಿತವ್ಯತೆ’ ‘ಪಂಡಿತ ರಾಜನು’ ಮೊದಲಾದ ಲೇಖಮಾಲಿಕೆಗಳೂ, ಕಾವ್ಯದೇವಿಯ ಪರಿಷತ್ತು ಮುಂತಾದ ಸರಸ ಸುಂದರ ಹಲವು ಲೇಖನಗಳೂ. ಇನ್ನು ಸಣ್ಣ ಸಣ್ಣ ಕಾದಂಬರಿಗಳು ಕೆಲವು. ‘ನಡೆತೆಯ ನಾಡು’ ಎಂಬ ಗದ್ಯ ಕಾವ್ಯವೆ ಗದ್ಯಗಳೊಳಗೆ ಉಚ್ಛತರಗತಿಯದು. ಆಂಡಯ್ಯನ ‘ಕಬ್ಬಿಗರ ಕಾವ್ಯ’ದ ಮೇಲೆ ತಲೆಯೆತ್ತಿದ ಇಂಥ ಕಾವ್ಯಗಳೆಂದರೆ, ‘ಕಾದಂಬರೀ ಸಂಗ್ರಹ’ದಲ್ಲಿ ಹೊರಬಂದ ನಮ್ಮ ‘ಸೊಬಗಿನ ಬಳ್ಳಿ’ ಒಂದು. ಇದು ಎರಡು. ಅವುಗಳಲ್ಲಿಯೂ ನಡೆತೆಯ ನಾಡು, ಹೊಸಗನ್ನಡ ಗದ್ಯದಲ್ಲೇ ಪ್ರಕಟವಾಗಿರುವುದು ಮನನೀಯವಾಗಿದೆ. ಧಾರ್ಮಿಕ ವಿಷಯವೆಂದರೆ ‘ಭರತ ಖಂಡದ ಚಿತ್ರವಿದ್ಯೆ’ ಎಂಬ ಲೇಖ ಮಾಲಿಕೆ. ‘ಬ್ರಹ್ಮಚರ್ಯ’, ‘ಮೂರ್ತಿ ಪೂಜೆ’, ‘ನಿಷ್ಕಾಮಕರ್ಮ’ವೆಂಬ ಲೇಖಾಂಕವು ಅವುಗಳೊಳಗೆ, ಭರತಖಂಡದ ಚಿತ್ರವಿದೆ, ಅಭಿಪ್ರಾಯದಿಂದಲೂ, ನಿಷ್ಕಾಮಕರ್ಮವು ಸ್ಪಷ್ಟವಾಗಿಯೂ ಧಾರ್ಮಿಕ ವಿಷಯಗಲನ್ನೂ ಬೋಧಿಸುವುವು. ಇನ್ನೂ ಈ ಪರವಾಗಿ ಚಿಕ್ಕ ಪುಟ್ಟ ಲೇಖಗಳಿವೆ. ಸಮಾಜ ಸಂಬಂಧವಾದವುಗಳೆಂದರೆ - ಕಾಂಗ್ರಿ ಗುರುಕುಲಪರವಾದ ಲೇಖ, ವಿವೇಕಾನಂದರ ಜೀವನ ಚರಿತೆ, ‘ಕೃಷ್ಣಜನ್ಮ’ ಮೊದಲಾದವು. ಶಾಸ್ತ್ರನಿಯಾಮಕಗಳೆಂದರೆ - ‘ಹಿಮದೂ ಧರ್ಮ ಶಾಸ್ತ್ರವೂ ಹಿಂದೂ ವೈದಶಾಸ್ತ್ರವೂ’ ಎಂಬ ಲೇಖನಮಾಲೆ. ‘ಲೋಕಪ್ರಸಿದ್ಧ ವೈದ್ಯರು ಯಾರು?’ ಎಂಬ ವ್ಯಾಯಾಮ ವಿಷಯಕವಾದ ಲೇಖ ಮೊದಲಾದವು. ಇವೆಲ್ಲವೂ, ಆಯಾ ವಿಷಯಗಳಲ್ಲಿ ಕೃತಪರಿಶ್ರಮರಾದವರಿಂದಲೆ ಬರೆಯಲ್ಪಟ್ಟವುಗಳು. ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ನಾವು ಪ್ರಯತ್ನಿಸಿದುದು ‘ಮಂಡೂಕಪ್ಲುತಿ’ಯಂತೆ ಮೇಲಿಂದ ಮೇಲೆ ಆಯಿತಲ್ಲದೆ, ಇನ್ನೂ ಸರಿಯಾಗಿ ನೆಲೆಗೊಳ್ಳುವಂತೆ ಆಗಲಿಲ್ಲವೆಂಬುದು ನಮಗೇ ಗೊತ್ತಿದೆ. ಕೋಗಿಲೆ, ಚೆನ್ನಾಗಿ ಬಲಿಯದಿರುವುದಾದರೂ, ತನ್ನ ಪಕ್ಷ ಬಲದಿಂದ ಕಾಲ ಕಾಲಕ್ಕೆ ಸರಿಯಾಗಿ ವಾಚಕರನ್ನು ‘ಪತ್ರಂ ಪುಷ್ಪಂ ಫಲಂ ತೋಯಂ’ ಎಂಬಂತೆ ತೃಪ್ತಿಪಡಿಸಿರುತ್ತದೆಯೆಂದು ಮಾತ್ರ ಹೇಳುತ್ತೇವೆ. ‘ಆಗಾಗ ತಲೆಯೆತ್ತಿ ಅವಲಕ್ಷಣ ಹೇಳುವ ಧೂಮಕೇತುಗಳಂತಿರದೆ, ಕೋಗಿಲೆ, ಸಕಾಲದಲ್ಲಿ ಚಿತ್ತರಂಜನ ಮಾಡುತ್ತಿದೆ.’ ಎಂದು ಹಲವು ಮಹನೀಯರು ತಿಳಿಸಿರುವುದಕ್ಕೆ ಕೃತಜ್ಞರಾಗಿರುವೆವು. ಬರುವ ಸಂಚಿಕೆ ಮೊದಲ್ಗೊಂಡು ಸರಲ ಶೈಲಿಯ ಕಾದಂಬರಿಗಳನ್ನೂ, ದಕ್ಷಿಣಕನ್ನಡ ಇತರ ಕನ್ನಡಗಳ ಜಾಗೃತಿ ಮೊದಲಾದ ವಿಮರ್ಶಕ ಲೇಖಗಳನ್ನೂ, ವಿಶೇಷ ವರ್ತಮಾನಗಳನ್ನೂ ಉದ್ದೇಶಭಂಗವಾಗದಂತೆ ವಾಚಕರಿಗೆ ಸಮರ್ಪಿಸತಕ್ಕವರಿದ್ದೇವೆ. ‘ಕನ್ನಡ ಕೋಗಿಲೆ’ ನಾಲ್ಕು ವರ್ಷ ಬದುಕಿತ್ತು. ಮಂಗಳೂರಿನಿಂದ ಪ್ರಕಟವಾದರೂ ಕರ್ನಾಟಕದಾದ್ಯಂತ ಪ್ರಸಾರದಲ್ಲಿತ್ತು. ಸಾಹಿತಿಗಳ ವಲಯದಲ್ಲಿ ಬಹಳ ಪ್ರಭಾವ ಹೊಂದಿತ್ತು.

‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’

ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶಗಳನ್ನೇ ಪತ್ರಿಕೆಯ ಮೂಲಕ ಸಾಧಿಸಲು ಹೊರಟ ಪತ್ರಿಕೆ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’. ೧೯೧೬ರ ಏಪ್ರಿಲ್‌ನಲ್ಲಿ ಮೊದಲ ಸಂಚಿಕೆ ಹೊರಬಂತು. ಕನ್ನಡ ನಾಡು ನುಡಿ ಸಂಸ್ಕೃತಿಗಳ ಪುನರುಜ್ಜೀವನ, ಜ್ಞಾನಪ್ರಸಾರ, ಕನ್ನಡ ಏಕೀಕರಣದ ಬಗ್ಗೆ ಪ್ರಚಾರ, ವಿದ್ವತ್ ಪ್ರೌಢಿಮೆಯಿಂದ ಕೂಡಿದ ಲೇಖನಗಳ ಪ್ರಕಟಣೆ ‘ಸಾಹಿತ್ಯ ಪರಿಷತ್ ಪತ್ರಿಕೆ’ ಉದ್ದೇಶಗಳೆಂದು ಮೊದಲ ಸಂಚಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ತ್ರೈಮಾಸಿಕವಾಗಿ ಆರಂಭವಾದ ಈ ಪತ್ರಿಕೆಗೆ ಕೆಲವು ವರ್ಷ ನಾಟ್ಯ ಸರಸ್ವತಿಯ ದೊಡ್ಡ ಚಿತ್ರವು ಮುಖಪುಟವನ್ನು ಅಲಂಕರಿಸುತ್ತಿತ್ತು. ನಂತರ ಸಾಹಿತ್ಯ ಪರಿಷತ್ತಿಗೆ ನೂತನ ಕಟ್ಟಡವನ್ನು ಕಟ್ಟಿದ ಬಳಿಕ ಪರಿಷತ್ತಿನ ಕಟ್ಟಡದ ಛಾಯಚಿತ್ರವನ್ನೇ ಪತ್ರಿಕೆಯ ಮುಖಪುಟಕ್ಕೆ ಖಾಯಂ ಆಗಿ ಬಳಸಲಾಗುತ್ತಿದೆ. ಪ್ರತೀ ಲೇಖನಗಳ ಸಂಕ್ಷಿಪ್ತ ಇಂಗ್ಲೀಷ್ ಅನುವಾದವೂ, ಪ್ರಕಟವಾಗುವ ಎಲ್ಲ ಲೇಖನಗಳಿಗೆ ಇರುವುದು ಈ ಪತ್ರಿಕೆಯ ವಿಶೇಷವಾಗಿರುತ್ತಿತ್ತು. ಇತರ ಭಾಷೀಯರಿಗೆ ಸಾಹಿತ್ಯ ಪರಿಷತ್ ಪತ್ರಿಕೆಯ ವಿಷಯ ಗೊತ್ತಾಗಲಿ ಎಂದು ಹಾಗೆ ಮಾಡುತ್ತಿದ್ದರು. ಈಗ ಪರಿಷತ್ ಪತ್ರಿಕೆಯ ವಿಷಯ ಗೊತ್ತಾಗಲಿ ಎಂದು ಹಾಗೆ ಮಾಡುತ್ತಿದ್ದರು. ಈಗ ಪರಿಷತ್ ಪತ್ರಿಕೆ ಷಾಣ್ಮಾಸಿಕವಾಗಿ ಹೊರಬರುತ್ತಿದೆ. ಸಾಹಿತ್ಯ ಪರಿಷತ್ತು ಎರಡು ಪತ್ರಿಕೆಗಳನ್ನು ಹೊರತರುತ್ತಿದ್ದು ‘ಕನ್ನಡ ನುಡಿ’ ಎಂಬುದು ಪರಿಷತ್ತಿನ ಚಟುವಟಿಕೆಗಳ ಹಾಗೂ ಸಾಹಿತ್ಯ ಸಂಬಂಧೀ ಚಟುವಟಿಕೆಗಳ ಪ್ರಕಣೆಗೇ ಮೀಸಲು. ಪರಿಷತ್ ಪತ್ರಿಕೆ ಮಾತ್ರ ಪ್ರಾಚೀನ ಕಾವ್ಯಗಳ ವಿಶ್ಲೇಷಣೆಗೆ ಹೊಸ ಸಾಹಿತ್ಯದ ಬೆಳವಣಿಗೆಗೆ ಆಧಾರ ರೂಪೀ ಲೇಖನಗಳ ಪ್ರಕಟಣೆಗಳಿಗೆ ಮೀಸಲು. ಈಚಿನ ವರ್ಷಗಳಲ್ಲಿ ಸಾಹಿತ್ಯ ಪರಿಷತ್ ಪತ್ರಿಕೆ ತನ್ನ ಮೆರಗನ್ನು ಕಳೆದುಕೊಂಡು ದಾಖಲೆಗಷ್ಟೇ ಹೊರಬರುತ್ತಿದೆ. "ಕನ್ನಡ ನುಡಿ ಸಾಹಿತ್ಯ ಪರಿಷತ್ತಿನ ಅಂತರ್ವಾಣಿ ಬಹಿರ್ವಾಣಿಗಳಾಗಿ ಮೆರೆಯುತ್ತಿರುವಾಗ ಪರಿಷತ್ಪತ್ರಿಕೆ ಮಾತ್ರ ಕನ್ನಡ ಸಾಹಿತ್ಯದ ಹಾಗೂ ವಿದ್ವತ್ತಿನ ಸ್ವರೂಪವಾಣಿಯಾಗಿ ಇಂದಿನವರೆಗೆ ಬಾಳಿ ಬಂದಿದೆ. ತನ್ನ ಪ್ರಾರಂಭದಲ್ಲಿ ಇದು ಗಣ್ಯ ವಿದ್ವಾಂಸರ ಲೇಖನಗಳಿಂದ ಕೂಡಿದ ತ್ರೈಮಾಸಿಕ ಪತ್ರಿಕೆಯಾಗಿತ್ತು. ಮತ್ತೆ ೧೯೪೧ರಿಂದ ಷಾಣ್ಮಾಸಿಕವಾಗಿ ಪರಿವರ್ತನೆಗೊಂಡು, ೧೯೪೩ರಲ್ಲಿ ಪುನಃ ತ್ರೈಮಾಸಿಕವಾಗಿ ೧೯೫೧ರಿಂದ ಈಚೆಗೆ ಷಾಣ್ಮಾಸಿಕವಾಗಿಯೇ ಪ್ರಕಟವಾಗುತ್ತಿದೆ. . . ಆರಂಭದಿಂದಲೂ ಪರಿಷತ್ ಪತ್ರಿಕೆ ಜಿಜ್ಞಾಸುಗಳಿಗೆ ಆಡುಂಬೊಲ, ರತ್ನ ಭಂಡಾರ. ಪ್ರಾಚೀನ ಕವಿ ಕಾವ್ಯ ಪರಿಚಯ-ವಿಮರ್ಶೆ-ಭಾಷೆ-ವ್ಯಾಕರಣ-ಛಂದಸ್ಸು ಇದರ ಕುರಿತು ಆಕರ ಸಂಪುಟವಾಗಿದೆ. ಪೂರ್ವ- ಪಶ್ಚಿಮ-ದಕ್ಷಿಣ-ಉತ್ತರ ಕರ್ನಾಟಕ ಭಾಷಾ ಭೇದಗಳ ಏಕೀಕರಣಕ್ಕೆ ಪ್ರಯೋಗ ಮಾಧ್ಯಮವಾಗಿತ್ತು ಅಂದಿನ ಪರಿಷತ್ ಪತ್ರಿಕೆ. ತನ್ನ ಉಪಯುಕ್ತತೆಯಿಂದಾಗಿಯೂ ಸಾಂಸ್ಥಿಕ ಹಾಗೂ ವ್ಯವಹಾರಿಕ ಸಮಸ್ಯೆಗಳಿಂದ ಪರಿಷತ್ ಪತ್ರಿಕೆಯು ನಿಯತವಾಗಿ ತಪ್ಪದೇ ಹೊರಬರಲಿಲ್ಲ. ೧೯೭೭ನೇ ಇಸ್ವಿ ಜೂನ್ ಹಾಗೂ ಡಿಸೆಂಬರಿಗೆ ಸಂಯುಕ್ತ ಸಂಚಿಕೆಗಳನ್ನು ಹೊರ ತರಬೇಕಾದ ವಿಷಾದ ಹೊಂದಿದೆ ಸಂಪಾದಕ ಟಿ. ಕೇಶವಭಟ್ಟರು ಹೀಗೆ ಬರೆಯುತ್ತಾರೆ :

‘ಸಕಾಲದಲ್ಲಿ ಬೇರೆ ಬೇರೆಯಾಗಿ ಪ್ರಕಟವಾಗಬೇಕಿದ್ದ ಈ ಸಂಪುಟ -೬೨ ಇದೀಗ ಕಾರಣಾಂತರದಿಂದ ವಿಳಂಬವಾಗಿ ಬರುವಂತೆ ಆಗಿಹೋಯಿತು. ಮುಂದಿನ ಸಂಪುಟ-ಸಂಚಿಕೆಗಳ ಸಕಾಲದಲ್ಲಿ ಹೊರಬರುವುದನ್ನು ನಿರೀಕ್ಷಿಸಬಹುದು.’ಕನ್ನಡ ಸಾಹಿತ್ಯ ಪರಿಷತ್ತಿನ ಷಾಣ್ಮಾಸಿಕ ಪತ್ರಿಕೆ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’. ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಪುನರುಜ್ಜೀವನ, ಜ್ಞಾನಪ್ರಸಾರ, ಕನ್ನಡ ಏಕೀಕರಣದ ಬಗ್ಗೆ ಪ್ರಚಾರ, ವಿದ್ವತ್ ಪ್ರೌಢಿಮೆಯಿಂದ ಕೂಡಿದ ಲೇಖನಗಳ ಪ್ರಕಟನೆ ಮೊದಲಾದವು ಈ ಪತ್ರಿಕೆಯ ಧ್ಯೇಯಗಳು. ಈ ಪತ್ರಿಕೆಯ ಮೂಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ ಎಂಬುದಾಗಿತ್ತು. ೧೯೩೮ರಲ್ಲಿ ಬಿ. ಎಂ. ಶ್ರೀಕಂಠಯ್ಯನವರು ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೆಸರನ್ನು ಮೇಲಿನಂತೆ ಬದಲಾಯಿತು. ಮೊದಲ ಸಂಚಿಕೆಯಲ್ಲಿ ನೂರು ಪುಟಗಳಿದ್ದವು. ಪತ್ರಿಕೆ ಡಿಮೈ ಅಷ್ಟದಳ ಆಕಾರದಲ್ಲಿತ್ತು. ಆರಂಭದಲ್ಲಿ ತ್ರೈಮಾಸಿಕವಾಗಿದ್ದ ಪತ್ರಿಕೆ ನಂತರ ಷಾಣ್ಮಾಸಿಕವಾಯಿತು. ಆರಂಭದಲ್ಲಿ ಅದಕ್ಕಾಗಿ ನಿಯಮಿತವಾಗಿದ್ದ ಸಂಪಾದಕ ಮಂಡಳಿ ಪತ್ರಿಕೆಯನ್ನು ನಡೆಸುತ್ತಿತ್ತು. ನಂತರ ಪ್ರತ್ಯೇಕ ಸಂಪಾದಕರನ್ನು ನೇಮಿಸುವ ವ್ಯವಸ್ಥೆ ಜಾರಿಯಲ್ಲಿ ಬಂದು ಬೆಳ್ಳಾವೆ ವೆಂಕಟ ನಾರಾಯಣಪ್ಪ, ಎಂ. ಆರ್‍. ಶ್ರೀನಿವಾಸಮೂರ್ತಿ, ಡಿ. ಎಲ್. ನರಸಿಂಹಾಚಾರ್‍ ಮುಂತಾದ ಹಿರಿಯ ವಿದ್ವಾಂಸರು ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಇಂದು ಗ್ರಂಥರೂಪದಲ್ಲಿ ಬಂದಿರುವ ಅನೇಕ ಕೃತಿಗಳು ಇಡಿಯಾಗಿ ಪರಿಷತ್ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಅವು ಪತ್ರಿಕೆ ಕನ್ನಡ ಸಾಹಿತ್ಯ ನಿರ್ಮಿತಿಯ ಅಂಗವೇ ಆಗಿರುವುದನ್ನು ತೋರಿಸುತ್ತದೆ. ಕನ್ನಡಕ್ಕೆ ಸಂಬಂಧಿಸಿದ ವಿದ್ವತ್‌ಪೂರ್ಣ ಬರಹಗಳಿಗೆ ಇಂದಿಗೂ ಪರಿಷತ್ ಪತ್ರಿಕೆಯ ಸಂಚಿಕೆಗಳು ಆಕರಗಳಾಗುತ್ತವೆ.

'ಪ್ರಬುದ್ಧ ಕರ್ನಾಟಕ'

ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಆರಂಭಗೊಂಡು ಇಂದಿಗೂ ಕನ್ನಡ ಸಾಹಿತ್ಯ ಪತ್ರಿಕೆಗಳ ಸಾಲಿನಲ್ಲಿ ಮಹತ್ವದ ಪತ್ರಿಕೆಯಾಗಿ ಕನ್ನಡ ಸಾಹಿತ್ಯವನ್ನು ಬೆಳಸುವ ಕೈಂಕರ್ಯದಲ್ಲಿ ಪಾಲುದಾರನಾಗಿ ಉಳಿದಿರುವ ಇನ್ನೊಂದು ಪತ್ರಿಕೆ ‘ಪ್ರಬುದ್ಧ ಕರ್ನಾಟಕ’ ಕನ್ನಡ ಸಾಹಿತ್ಯದ ಪ್ರಬುದ್ಧ ಸಾಹಿತ್ಯಕ ಪತ್ರಿಕೆ. ‘ಪ್ರಬುದ್ಧ ಕರ್ನಾಟಕ’ವು ಹುಟ್ಟಿದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ ಮತ್ತು ಅದರ ಅಂಗವಾಗಿ. ೧೯೧೮ರಲ್ಲಿ ಆರಂಭವಾದ ಪತ್ರಿಕೆ ನಡುನಡುವೆ ಅನಿಯತಕಾಲಿಕವಾದ ಅನೇಕ ಸಂದರ್ಭಗಳನ್ನು ಹೊರತುಪಡಿಸಿ ಇವತ್ತಿಗೆ ಮೈಸೂರು ವಿಶ್ವವಿದ್ಯಾನಿಲಯದ ತ್ರೈಮಾಸಿಕ ಪತ್ರಿಕೆಯಾಗಿ ಹೊರಬರುತ್ತಿದೆ. ‘ಪ್ರಬುದ್ಧ ಕರ್ನಾಟಕ’ವು ಹುಟ್ಟುವಾಗಲೇ ಸಾಹಿತ್ಯ ಪತ್ರಿಕೆಯಾಗಿರಬೇಕೆಂದು ನಿಶ್ಚಯಿಸಿಕೊಂಡೇ ಹುಟ್ಟಿದ ಪತ್ರಿಕೆ. ‘ಪ್ರಬುದ್ಧ ಕರ್ನಾಟಕ’ದ ಮೊದಲನೆಯ ಸಂಚಿಕೆಯ ಆರಂಭದ ಪ್ರಸ್ತಾವನಾ ಲೇಖನದಲ್ಲಿ ಹೀಗೆ ಹೇಳಲಾಗಿದೆ. "ಸಾಹಿತ್ಯವು ಜನಗಳಿಗೆ ಬೇಕಿಲ್ಲವೆಂದು ನಾವು ನಂಬಲಾರೆವು. ಇದರಲ್ಲಿ ಅವರಿಗೆ ಇರುವ ಆಸಕ್ತಿಯಿಂದಲೇ ಉತ್ತಮವಾದ ಸಾಹಿತ್ಯಕ್ಕೆ ಶಾಶ್ವತವಾಗಿ ನಿಲ್ಲುವ ಸಾಮರ್ಥ್ಯ ಬಂದಿದೆ. . . ನಮ್ಮ ಮುಖ್ಯ ಕೆಲಸವೆಂದರೆ ಕಾವ್ಯಸೃಷ್ಟಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೊಡುವುದ. . . ಒಟ್ಟಿನಲ್ಲಿ ಯಾವುದರಿಂದ ನಮ್ಮ ದೇಶವು ಉತ್ಸಾಹಗೊಂಡು ಜಿವಕಳೆಯಿಂದ ತುಂಬಬಹುದೋ, ಯಾವುದರಿಂದ ಗ್ರಂಥಗಳ ರಸಸ್ವಾದನೆ ಮಾಡಿ ಆನಂದವನ್ನುಪಡೆಯಬಹುದೋ ಯಾವುದರಿಂದ ಕನ್ನಡ ಕಾವ್ಯ ಮಾತೆಯು ಶ್ರೇಷ್ಠವಾದ ರೀತಿಯಲ್ಲಿ ಬೆಲೆಯಬಹುದೆಂದು, ನಮಗೆ ದೃಢವಾದ ನಂಬಿಕೆಯಿದೆಯೋ ಅಂಥ ವಿಷಯಗಳನ್ನೇ ಕನ್ನಡಿಗರಿಗೆ ಕಾಣಿಕೆಯಾಗಿ ತಂದು ಒಪ್ಪಿಸುವ ಕೆಲಸವನ್ನು ‘ಪ್ರಬುದ್ಧ ಕರ್ನಾಟಕ’ಕ್ಕೆ ಒಪ್ಪಿಸಿದ್ದೇವೆ. ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳ ಸಹಕಾರದಲ್ಲಿ ಸಾಹಿತ್ಯಿಕ ಪತ್ರಿಕೆಯೊಂದನ್ನು ನಡೆಸುವ ಕಷ್ಟ ನಷ್ಟಗಳ ಬಗ್ಗೆ ಸಂಪಾದಕ ಎ. ಆರ್‍. ಕೃಷ್ಣಶಾಸ್ತ್ರಿಗಳಿಗೆ ಸ್ಪಷ್ಟ ಕಲ್ಪನೆಯಿತ್ತು. ಆ ಬಗ್ಗೆ ಅವರು ಬರೆಯುತ್ತಾರೆ - "ಪತ್ರಿಕೆಗಳಿಗೆ ಲೇಖನವನ್ನು ಒದಗಿಸಿಕೊಡುವುದು ಬಹುಕಷ್ಟ. ಆ ಕಷ್ಟವನ್ನು ಬಲ್ಲವರೇ ಬಲ್ಲರು. ಮದುವೆ ಮಾಡಿ ನೋಡು, ಮನೆಕಟ್ಟಿ ನೋಡು ಎಂಬ ಗಾದೆಗೆ ಪತ್ರಿಕೆ ನಡೆಸಿ ನೋಡು ಎಂದು ಮೂರನೆಯ ವಾಕ್ಯವೊಂದನ್ನು ಸೇರಿಸಬೇಕೆಂದು ತೋರುತ್ತದೆ. . . . ಇಂದಿಗೂ ‘ಪ್ರಬುದ್ಧ ಕರ್ನಾಟಕ’ಕ್ಕೆ ಬೆಳ್ಳಿ ಇಲ್ಲ, ಬಂಗಾರವಿಲ್ಲ. ಅದರ ಲೇಖಕರಿಗೆ ಅದು ಇಷ್ಟು ದಿನವಾದರೂ ಒಂದು ಬಿಡಿಗಾಸನ್ನೂ ಸಂಭಾವನೆಯಾಗಿ ಕೊಟ್ಟಿಲ್ಲ. ‘ಪ್ರಬುದ್ಧ ಕರ್ನಾಟಕ’ ಹುಟ್ಟಿನಿಂದಲೂ ಕರ್ನಾಟಕದಲ್ಲಿ ಭಿನ್ನ ಮಾದರಿಯ ಪತ್ರಿಕೆ ಎನಿಸಿಕೊಂಡಿತು. ಅದು ಹೊರಬರುವ ಕಾಲನಿಯಮವೇ ಹೊಸ ರೀತಿಯದಾಗಿತ್ತು. ಯುಗಾದಿಯ ಹಬ್ಬ, ವಿನಾಯಕನ ಹಬ್ಬ, ದೀಪಾವಳಿಯ ಹಬ್ಬ, ವರ್ಷದ ಈ ಮೂರು ದೊಡ್ಡ ಹಬ್ಬಗಳಲ್ಲಿ ಅದು ಬರಬೇಕೆಂದು ಮೊದಲು ನಿರ್ಧರಿತವಾಗಿತ್ತು. ಮೂರನೆಯ ವರ್ಷದಿಂದ ಸಂಪುಟಕ್ಕೆ ನಾಲ್ಕು ಸಂಚಿಕೆಗಳಾಗಿ ಕಾಮನ ಹಬ್ಬದ ಸಂದರ್ಭಕ್ಕೂ ಹೊರಬರತೊಡಗಿತು. ಮುಖ್ಯವಾಗಿ ವಿದ್ಯಾರ್ಥಿಗಳ ಹಸಕಾರದಿಂದಲೇ ಈ ಪತ್ರಿಕೆ ಹೊರಬರಬೇಕಾಗಿತ್ತಾದ್ದರಿಂದ ವಿನಾಯಕನ ಹಬ್ಬದಿಂದ ಯುಗಾದಿವರೆಗಿನ ಸರಿಸುಮಾರು ಎಂಟು ತಿಂಗಳಲ್ಲೇ ನಾಲ್ಕು ಸಂಚಿಕೆಯನ್ನು ಹೊರತಂದು, ವಿದ್ಯಾರ್ಥಿಗಳಿಲ್ಲದ ರಜಾ ಕಾಲದಲ್ಲಿ ಉಸಿರಾಡಲು ಅವಕಾಶ ಮಾಡಿಕೊಳ್ಳುವುದು ಸಂಪಾದಕರಿಗೆ ಅಗತ್ಯವಾಗಿತ್ತು. ಮೊದಲನೆಯ ವರ್ಷದಲ್ಲಿ ೧೨ ಸಂಚಿಕೆಗಳನ್ನು ಓದುಗರಿಗೆ ನೀಡುವುದರೊಂದಿಗೆ ಆರಂಭವಾದ ಪ್ರಬುದ್ಧ ಕರ್ನಾಟಕ ನಂತರ ವರ್ಷ ವರ್ಷಕ್ಕೂ ತನ್ನ ಪುಟಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು. ಅಂದ, ಚೆಂದ, ಗಾತ್ರಗಳಲ್ಲಿ ಪ್ರಬುದ್ಧ ಕರ್ನಾಟಕವು ಸತತವಾಗಿ ಬೆಳದರೂ ಅದರ ಚಂದಾದಾರರ ಸಂಖ್ಯೆ ಬೆಳೆಯಲಿಲ್ಲ. ೧೯೩೨-೩೩ ರ ವೇಳೆ ೭೨೬ ಇದ್ದ ಚಂದಾದಾರರು ೧೯೪೩-೪೪ರಲ್ಲಿ ಅಂದರೆ ಹನ್ನೆರಡು ವರ್ಷಗಳ ತರುವಾಯವೂ ೭೮೯ ಇದ್ದರು. ವರ್ಷಕ್ಕೆ ಕನಿಷ್ಠ ೫೦೦ ಪುಟಗಳ ಸಾಹಿತ್ಯವನ್ನು ಓದುಗರಿಗೆ ಉಣಬಡಿಸುತ್ತಿದ್ದ ಪ್ರಬುದ್ಧ ಕರ್ನಾಟಕದ ಚಂದಾದಾರರ ಸಂಖ್ಯೆ ಮಾತ್ರ ಒಂದು ಸಾವಿರವನ್ನು ಎಂದೂ ದಾಟಲಿಲ್ಲ ಎಂಬುದು ಪತ್ರಿಕೆಯ ಸ್ಥಿತಿಯ ಬಗ್ಗೆ ನುಡಿಯಬಲ್ಲದು. ‘ಪ್ರಬುದ್ಧ ಕರ್ನಾಟಕ’ದ ಆರ್ಥಿಕ ಸ್ಥಿತಿಯ ಬಗ್ಗೆ ಸ್ಥಾಪಕ ಸಂಪಾದಕ ಎ. ಆರ್‍. ಕೃಷ್ಣಶಾಸ್ತ್ರಿಗಳು ಬರೆಯುತ್ತಾರೆ : "ಪ್ರಬುದ್ಧ ಕರ್ಣಾಟಕವು ಕರ್ಣಾಟಕ ಸಂಘದ ಆಶ್ರಯದಲ್ಲಿ ನಡೆದಷ್ಟು ದಿವಸವೂ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡೇ ಜೀವಿಸಬೇಕೆಂಬ ನೀತಿಯನ್ನು ವಿಶ್ವವಿದ್ಯಾನಿಲಯವು ಅನುಸರಿಸಿದ್ದರೆ ಪ್ರಬುದ್ಧ ಕರ್ಣಾಟಕವು ಇಂದು ಈ ಬೆಳವಣಿಗೆಯ ರೂಪದಲ್ಲಿರುತ್ತಿರಲಿಲ್ಲ. . . ‘ಪ್ರಬುದ್ಧ ಕರ್ನಾಟಕ’ದ ಕೆಲಸಕ್ಕೆ ಯಾರೂ ಒಂದು ಕಾಸನ್ನುಸಂಬಲವಾಗಿಯಾಗಲೀ ಸಂಭಾವನೆಯಾಗಲೀ ಪಡೆಯುತ್ತಿಲ್ಲ. ಆದರೂ ಪ್ರಬುದ್ಧ ಕರ್ನಾಟಕವು ಒಟ್ಟಿನ ಮೇಲೆ ವಿಶ್ವವಿದ್ಯಾನಿಲಯಕ್ಕೆ ಈಚಿನ ವರ್ಷಗಳಲ್ಲಿ ಒಂದು ಖರ್ಚಿನ ಬಾಬೇ ಆಗಿದೆ. ಇಂಥ ಯಾವುದೊಂದು ಪತ್ರಿಕೆಯೂ ಯಾವ ಕಾಲದಲ್ಲಿಯೂ ತನ್ನ ಸಂಪಾದನೆಯ ಮೇಲೇ ತಾನು ನಡೆದು ಬಂದಿಲ್ಲ ಎಂಬುದು ನಿಜವಾದರೂ ಕನ್ನಡಿಗರು ಈ ಅಂಕಿ-ಅಂಶಗಳನ್ನು ನೋಡಿ ತಲೆತಗ್ಗಿಸಬೇಕೆಂದು ತೋರುತ್ತದೆ. . .

ವರ್ಷ ಆದಾಯ(ರೂ) ವೆಚ್ಚ(ರೂ)
೧೯೩೨-೩೩ ೧೯೫೨ ೧೭೩೨
೧೯೩೩-೩೪ ೧೯೨೮ ೧೯೫೪
೧೯೪೨-೪೩ ೧೯೩೭ ೩೦೭೪
೧೯೪೩-೪೪ ೨೯೪೭ ೩೬೩೨

ಇಂದಿಗೂ ಕನ್ನಡದಲ್ಲಿ ಬರುತ್ತಿರುವ ಯಾವುದೇ ಸಾಹಿತ್ಯಿಕ ಪತ್ರಿಕೆಯ ಆದಾಯ - ವೆಚ್ಚದ ಪಟ್ಟಿ ಈ ಸಂಪ್ರದಾಯವನ್ನೇ ಮುಂದುವರೆಸಿದೆಯೆಂದುನಿರ್ಭಿಡೆಯಿಂದ ಹೇಳಬಹುದು. ‘ಪ್ರಬುದ್ಧ ಕರ್ಣಾಟಕ’ದ ಮುಂದಿನ ೨೫ ವರ್ಷಗಳ ಆರ್ಥಿಕ ಸ್ಥಿತಿಯ ಬಗ್ಗೆ ಪ್ರಬುದ್ಧ ಕರ್ಣಾಟಕಕ್ಕೆ ೫೦ ತುಂಬಿದ ಸಂದರ್ಭದಲ್ಲಿ ಅದರ ಸಂಪಾದಕರಾಗಿದ್ದ ಡಾ. ಹಾ. ಮಾ. ನಾಯಕರು ಒಂದೆಡೆ ಹೀಗೆ ಬರೆಯುತ್ತಾರೆ :

‘ಪ್ರಬುದ್ಧ ಕರ್ಣಾಟಕ’ ಈಗ ಎಲ್ಲರಿಗೂ ತಿಳಿದಿರುವಂತೆ ವಿಶ್ವವಿದ್ಯಾನಿಲಯದ ಪ್ರಕಟಣೆ. ಆರಂಭದಲ್ಲಿ ಅದು ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ಪ್ರಕಟವಾಗುತ್ತಿತ್ತು. ನೂರು ಜನ ವಿದ್ಯಾರ್ಥಿಗಳಿಂದ ತಲ ಒಂದು ರೂಪಾಯಿ ಮುಂಗಡ ಸಂಗ್ರಹಿಸಿ ಕೃಷ್ಣಶಾಸ್ತ್ರಿಗಳ ಮೊದಲ ಸಂಚಿಕೆಯನ್ನು ಪ್ರಕಟಿಸಿದರು. ಆಗ ಆರ್ಥಿಕ ಅಡಚಣೆಗಳು ಬಹಳ ಇದ್ದವು. . . ಆಗ ಬಿ. ಎಂ. ಶ್ರೀಕಂಠಯ್ಯನವರ ಪ್ರಯತ್ನದ ಫಲವಾಗಿ ಡಾ. ಮೆಟ್‌ಕಾಫ್ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ ವಿಶ್ವವಿದ್ಯಾನಿಲಯವೇ ಪ್ರಬುದ್ಧ ಕರ್ಣಾಟಕದ ಪ್ರಕಟಣೆಯನ್ನು ವಹಿಸಿಕೊಂಡಿತು. ಇದು ೧೯೩೨ರಲ್ಲಿ. ಅಲ್ಲಿಂದ ಮುಂದೆ ವಿಶ್ವವಿದ್ಯಾನಿಲಯ ಈ ಪತ್ರಿಕೆಯನ್ನು ಸಂಪಾದಕ ಮಂಡಳಿಯೊಂದರ ನೇತೃತ್ವದಲ್ಲಿ ಬಹು ಉದಾರವಾಗಿ ಪ್ರಕಟಿಸಿಕೊಂಡು ಬಂದಿದೆ. ಆರ್ಥಿಕ ದೃಷ್ಟಿಯಿಂದ ಯಾವ ವರ್ಷದಲ್ಲೂ ಅದು ಲಾಭದಾಯಕವಾಗಿಲ್ಲ ಆದರೆ ಅದು ವಿಶ್ವವಿದ್ಯಾನಿಲಯದ ಹೆಮ್ಮ. ಪತ್ರಿಕೆಯ ಮೊದಲನೆಯ ಸಂಪುಟದಲ್ಲಿ ೧೨೦ ಪುಟಗಳಿದ್ದರೆ ಐವತ್ತನೆಯ ವರ್ಷದ ಸಂಪುಟದಲ್ಲಿ ೧೨೦೦ ಪುಟಗಳಿವೆ. ಇದು ವಿಶ್ವವಿದ್ಯಾನಿಲಯ ‘ಪ್ರಬುದ್ಧ ಕರ್ನಾಟಕ’ದ ವಿಷಯದಲ್ಲಿ ಬೆಳಸಿಕೊಂಡು ಬಂದ ಉದಾರ ನೀತಿಯ ಫಲ ಅಷ್ಟೆ. ವಾಸ್ತವವಾಗಿ ‘ಪ್ರಬುದ್ಧ ಕಣಾಟಕ’ವನ್ನು ಸಕಾಲದಲ್ಲಿ ಶ್ರೀಮಂತವಾಗಿ ಪ್ರಕಟಿಸಲು ಅಡೆತಡೆಗಳಿದ್ದರೆ ಅದು ಖಂಡಿತ ಹಣಕಾಸಿನದಲ್ಲ. ಚೆನ್ನಾದ ಒಂದು ಪಂಡಿತ ಪತ್ರಿಕೆಯನ್ನು ಹಣಕಾಸಿನ ಬೆಂಬಲವಷ್ಟರಿಂದಲೇ ನಡೆಸಿಕೊಂಡು ಬರುವುದು ಸಾಧ್ಯವಿಲ್ಲ. ಈಗ ಪ್ರಬುದ್ಧ ಕರ್ನಾಟಕವು ೭೫ನೇ ವರ್ಷವನ್ನು ಪೂರೈಸಿ ೮೦ನೇ ವರ್ಷಕ್ಕೆ ಕಾಲಿಟ್ಟಿದೆ. ಅದರ ಇತಿಹಾಸದ ಉದ್ದಕ್ಕೂ ಶುದ್ಧ ಸಾಹಿತ್ಯಿಕ ಪತ್ರಿಕೆಯಾಗಿ ಉಳಿದುಕೊಂಡಿದೆ. ಈ ಪತ್ರಿಕೆ ನಮ್ಮ ಸಾಹಿತ್ಯ ಇತಿಹಾಸದಲ್ಲಿ ವಹಿಸಿದ ಪಾತ್ರವನ್ನು ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‍ ಅವರು ಒಂದು ಕಡೆ ಮನೋಜ್ಞಾವಾಗಿ ವರ್ಣಿಸಿದ್ದಾರೆ. "ಹೊಸ ಸಾಹಿತ್ಯದ ಮುಂಬರಿವಿಗೆ ಪ್ರಬುದ್ಧ ಕರ್ನಾಟಕ ಯಾವ ವಿವರದಲ್ಲಿ ಯಾವ ಯಾವ ರೀತಿಯಲ್ಲಿ ನೆರವಾಯಿತು ಎನ್ನವುದನ್ನು ಸೂಕ್ಷ್ಮವಾಗಿ ಸೂಚಿಸಬಹುದು. ಮೊದಲಾಗಿ ಪತ್ರಿಕೆ ಹೊಸಗನ್ನಡದ ಗದ್ಯ ಹೊಸಕಾಲದ ವಿಷಯಗಳನ್ನು ನಿರೂಪಿಸುವುದರಲ್ಲಿ ಯಾವ ಆಕಾರದಲ್ಲಿರಬೇಕು ಎನ್ನುವುದು ನಿರ್ಧಾರವಾಗುವುದಕ್ಕೆ ನೆರವಾಯಿತು. . . ಈ ಪತ್ರಿಕೆ ಹೊಸ ಲೇಖಕನು ಯಾವ ಯಾವ ತರದ ಕೆಲಸವನ್ನು ಮಾಡಬಹುದು ಎಂಬುದನ್ನು ಉದಾಹರಿಸುವಂತೆ ಹಲವು ತರದ ವಿಷಯಗಳನ್ನು ಒಳಗೊಂಡಿತು. ಪ್ರೌಢ ವಿದ್ಯೆಯನ್ನು ಪಡೆದ ಕನ್ನಡ ತರುಣರು ಕನ್ನಡದ ಜನಕ್ಕಾಗಿ ಸ್ವತಂತ್ರ ಲೇಖನಗಳನ್ನು ಬರೆಯಬೇಕು ಎಂಬ ಒಂದು ಸಂಪ್ರದಾಯವನ್ನು ನಿರ್ಮಿಸಿತು. . . ಮಿಗಿಲಾಗಿ ಕನ್ನಡದ ಹೊಸ ವಿಮರ್ಶನ ಪದ್ಧತಿಯನ್ನು ಬೆಳಸಿತು. ಅಂತೂ ಪ್ರಾರಂಭದಲ್ಲಿ ಕಿರು ತೊರೆಯಾಗಿ ಕಾಣಿಸಿಕೊಂಡ ಈ ಪತ್ರಿಕೆ ಇಂದು ಮಹಾಪೂರವಾಗಿ ಪರಿಣಮಿಸಿದೆ: . . . . ಈವರೆಗಿನ ಅದರ ಒಟ್ಟೂ ಸಂಖ್ಯೆ ೩೩೧೫೦ಕ್ಕೆ ವಿಕ್ಕಿದ್ದು. ಒಂದೊಂದು ಸಂಪುಟದ ಸರಾಸರಿ ಪುಟ ಸಂಖ್ಯೆ ಸುಮಾರು ೬೬೩, ಸುಮಾರು ೫೬೦ ಲೇಖಕರು ಹೆಚ್ಚು ಕಡಿಮೆ ೨೯೫೯ ಲೇಖನಗಳನ್ನು ಬರೆದಿದ್ದಾರೆ. . . ಈ ಒಂದು ಪತ್ರಿಕೆ ನಡೆಸಿರುವ ವಿಕ್ರಮವನ್ನು ಮೇಲೆ ಸೂಚಿಸಿರುವ ಯಾವ ಆಂಗ್ಲ ಪತ್ರಿಕೆಯೂ ಸಾಧಿಸಿಲ್ಲವೆಂದೇ ಹೇಳಬಹುದು. ಪ್ರಬುದ್ಧ ಕರ್ಣಾಟಕದ ೮೦ ವರ್ಷಗಳ ಬದುಕು ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಉಲ್ಲೇಖಕ್ಕೆ ಅರ್ಹವಾದ ಸಾರ್ಥಕ ಬದುಕು. ‘ಒಂದು ಮಾಸ ಪತ್ರಿಕೆ ಪ್ರಬಲ ಬೋಧನ ಮಾಧ್ಯಮವಾಗಿರುವಂತೆ, ನವೋನವವಾದ ಚಲ ವಿಶ್ವಕೋಶವಾಗಿರುವಂತೆ. . . ತನ್ನ ನಾಡಿನ ಭಾಷೆ ಸಾಹಿತ್ಯಗಳ ತುಂಬ ಬೆಳವಣಿಗೆಗೆ ಪ್ರೇರಕ ಹಾಗೂ ಆಶ್ರಯಶಕ್ತಿಯಾಗಿರುತ್ತದೆ. ಆಂಗ್ಲ ಸಾಹಿತ್ಯದ ಇತಿಹಾಸ ಬಲ್ಲವರಿಗೆ ಈ ಮಾತು ಹೊಸದಲ್ಲ. . . ಕನ್ನಡನಾಡಿನ ಅನೇಕ ಪತ್ರಿಕೆಗಳು ಇಂಥದೇ ಮಹತ್ಕಾರ್ಯವನ್ನು ಅಲ್ಲಿಯಷ್ಟೇ ಶ್ರದ್ಧೆಯಿಂದ ಸುಸುಮರ್ಥವಾಗಿ ಸಾಧಿಸುತ್ತಿವೆ. ಅವುಗಳಿಗೆಲ್ಲ ‘ಪ್ರಬುದ್ಧ ಕರ್ನಾಟ’ ನಾಯಕ ಸ್ಥಾನದಲ್ಲಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಎಂದು ದೇಜಗೌ ಅವರು ಪ್ರಬುದ್ಧ ಕರ್ನಾಟಕದ ಚಿನ್ನದ ಸಂಚಿಕೆಯಲ್ಲಿ ಪ್ರಧಾನ ಸಂಪಾದಕೀಯ ಬರೆಯುತ್ತಾ ಉದ್ಗರಿಸುವುದು ಅನುಮೋದನೀಯ. ಪ್ರಬುದ್ಧ ಕರ್ನಾಟಕದ ಚಿನ್ನದ ಹಬ್ಬದ ಹೊತ್ತಿಗೆ (೧೯೬೯) ಈ ಪತ್ರಿಕೆಯ ಲೇಖಕರ ಸಂಖ್ಯೆ ೫೬೦. ಆ ವೇಳೆಗೆ ಪ್ರಕಟವಾದ ಸಾಹಿತ್ಯ ಲೇಖನಗಳು ೫೨೮, ಕವಿತೆಗಳು ೮೮೪, ನಾಟಕಗಳು ೪೯, ಸಣ್ಣ ಕಥೆ ಪ್ರಬಂಧ ಇತ್ಯಾದಿ ೨೪೪, ಇತಿಹಾಸ ಲೇಖನಗಳು ೪೪, ವಿಜ್ಞಾನ, ರಾಜನೀತಿ ಇತ್ಯಾದಿ ೨೫೦, ಪುಸ್ತಕ ವಿಮರ್ಶೆ ೮೫೬, ಚಿತ್ರಪಟಗಳು ೨೯೧, ಕರ್ನಾಟಕದ ಕಿಡಿಗಳು ೪೭ ಪ್ರಕಟವಾದವು. ಲೇಖನಗಳು ಲೇಖನಮಾಲೆಗಳಿಂದ ಪ್ರಕಟವಾದ ಗ್ರಂಥಗಳ ಸಂಖ್ಯೆ ಸುಮಾರು ೫೭. ಪ್ರಾಚೀನ ಸಾಹಿತ್ಯ, ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರ, ವಿಗಡವಿಕ್ರಮರಾಯ, ವಿದ್ಯಾರಣ್ಯರ ಸಮಕಾಲೀನರು, ಗದಾಯುದ್ಧ ನಾಟಕ, ಭಕ್ತಿಭಂಡಾರಿ ಬಸವಣ್ಣನವರು, ಮೈಸೂರು ದೇಶದ ವಾಸ್ತುಶಿಲ್ಪ, ಸುಬ್ಬಣ್ನ, ಪಂಪಾಯಾತ್ರೆ, ಅಶ್ವತ್ಥಾಮನ್, ಅಂತಿಗೊನೆ, ಮಲೆನಾಡಿನ ಚಿತ್ರಗಳು, ನಂಬಿಯಣ್ಣನ ರಗಳೆ, ಮೈಸೂರು ಮಲ್ಲಿಗೆ, ಅಹಲ್ಯೆ, ಹಗಲುಗನಸುಗಳು, ಭಾಸಕವಿ, ಜಗತ್ತುಗಳ ಹುಟ್ಟು, ಸಾವು, ಆನಂದವರ್ಧನನ ಕಾವ್ಯಮೀಮಾಂಸೆ ಇವುಗಳಲ್ಲಿ ಕೆಲವು. ಮೊದಲು ವರ್ಷಕ್ಕೆ ಮೂರು ಸಂಚಿಕೆಗಳಂತೆ ಪ್ರಕಟವಾಗುತ್ತಿದ್ದುದು. ಮೂರನೆಯ ವರ್ಷದಿಂದ ನಾಲ್ಕು ಸಂಚಿಕೆಗಳಾಗಿ ವಿನಾಯಕ ಹಬ್ಬ, ದೀಪಾವಳಿ, ಸಂಕ್ರಾಂತಿ ಮತ್ತು ಕಾಮನ ಹಬ್ಬಗಳಲ್ಲಿ ಹೊರಬರಲಾರಂಭಿಸಿತು. ಮುಂದೆ ೩೨ನೇ ಸಂಪುಟದಿಂದ ಚೈತ್ರ. ಆಷಾಢ, ಅಶ್ವಯುಜ ಮತ್ತು ಪುಷ್ಯ ಸಂಚಿಕೆಗಳಾಗಿ ಬರತೊಡಗಿತು. ಮೈಸೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ‘ಪ್ರಬುದ್ಧ ಕರ್ಣಾಟಕ’ದ ಸಾಹಿತ್ಯ ಸೇವೆ ಮುಂದುವರೆದಿದೆ. ಮೂರನೇ ದಶಕ ಇಪ್ಪತ್ತನೇ ಶತಮಾನದ ಮೂರನೇ ದಶಕ-ಭಾರತದಲ್ಲೂ ಕರ್ನಾಟಕದಲ್ಲೂ ಮಹತ್ವ ಪೂರ್ಣ ಬೆಳವಣಿಗೆಗಳಾದ ಘಟ್ಟ. ದೇಶ ಮಟ್ಟದಲ್ಲಿ ಸ್ವಾತಂತ್ಯ್ರ ಚಳುವಳಿಯ ಹಾದಿಯಲ್ಲಿ ತಿಲಕರ ಪ್ರಭಾವ ಮುಗಿದು ಗಾಂಧೀಯುಗ ನಿಚ್ಚಳವಾಗಿ ತೆರೆದುಕೊಂಡು ಕಾಲ. ಸ್ವಾತಂತ್ಯ್ರ ಚಳುವಳಿಯ ಉದ್ದೇಶ ಸ್ವರಾಜ್ಯವೆಂಬುದು ಸ್ಪಷ್ಟಗೊಂಡು ದೇಶದ ಎಲ್ಲ ಭಾಗಗಳು, ಪ್ರಾಂತ್ಯಗಳೂ ಗಾಂಧಿಯ ಹಿಂದೆ ಸ್ವಾತಂತ್ಯ್ರದತ್ತ ನಡಿಗೆಗೆ ಸಿದ್ಧಗೊಂಡವು. ಇಡೀ ದೇಶಕ್ಕೆ ಚಳವಳಿ ನಿಜ ಅರ್ಥದಲ್ಲಿ ವ್ಯಾಪಿಸಿ ಮನೆಮನೆಯಲ್ಲಿ ಅದುವೇ ಮಾತಾಯಿತು. ಸ್ವಾತಂತ್ಯ್ರ ಹೋತಾಟದ ಸಾಹಸಗಳು, ಅಭೀಷ್ಟಗಳು ಕಥೆ-ಕವನ-ಹಾಡುಗಳ ರೂಪದಲ್ಲಿ ವ್ಯಕ್ತಗೊಂಡವು. ದೇಶಿಯ ಪತ್ರಿಕೋದ್ಯಮ ಸ್ಪಷ್ಟವಾಗಿ ಬ್ರಿಟಿಷರ ವಿರುದ್ಧ ಹಾಗೂ ಚಳವಳಿಯ ಪರ ಗುರುತಿಸಿಕೊಂಡಿತು. ಇತ್ತ ಪತ್ರಿಕೋದ್ಯಮದಲ್ಲೂ ಅದರ ಪ್ರಭಾವವನ್ನು ಗುರುತಿಸುವ ಜೊತೆಗೆ ಪತ್ರಿಕೆಗಳು ಬೇರೆ ಬೇರೆ ವಿಶೇಷಾಸಕ್ತಿಗಳಲ್ಲಿ ನಿಶ್ಚಿತ ದಾರಿಗಳನ್ನು ರೂಪಿಸಿಕೊಂಡು ಪ್ರಬುದ್ಧವಾಗಿ ಹೊರಬರುವ ಹಂತವನ್ನು ಕಾಣುತ್ತೇವೆ. ಸಾಮಾನ್ಯ ಆಸಕ್ತಿಗಳ ಪತ್ರಿಕೆಗಳಲ್ಲೂ ರಾಜಕೀಯದತ್ತ ವಾಲುವ ಪತ್ರಿಕೆಗಳನ್ನೂ ಸಾಹಿತ್ಯದತ್ತ ಹೆಚ್ಚು ಒಲವು ಉಳಿಸಿಕೊಳ್ಳುವ ಪತ್ರಿಕೆಗಳನ್ನೂ ನಿಚ್ಚಳವಾಗಿ ಈ ದಶಕದಲ್ಲಿ ಗುರುತಿಸಿಕೊಳ್ಳಬಹುದು. ಸಾಹಿತ್ಯ ಪತ್ರಿಕೆಗಳ ದೃಷ್ಟಿಯಿಂದ ಈ ದಶಕದಲ್ಲಾದ ಮಹತ್ತರ ಬೆಳವಣಿಗೆಗಳನ್ನು ಹೀಗೆ ಗುರುತಿಸಬಹುದು.

  • ೧. ಕನ್ನಡದಲ್ಲಿ ‘ನವೋದಯ ಕಾವ್ಯ’ ಪ್ರವರ್ಧಮಾನಕ್ಕೆ ಬಂದ ಈ ಅವಧಿಯಲ್ಲಿ ಈ ಕಾವ್ಯವನ್ನು ಪೋಷಿಸುವ ಪತ್ರಿಕೆಗಳೂ ಪ್ರಕಟಗೊಂಡವು.
  • ೨. ವೀರಶೈವ ಸಾಹಿತ್ಯಿಕ ಪತ್ರಿಕೆಗಳ ಪ್ರತ್ಯೇಕ ಮಾರ್ಗ ಈ ದಶಕದಲ್ಲಿ ತೆರೆದುಕೊಂಡಿತು. ಮುಂದೆ ಕನ್ನಡದಲ್ಲಿ ವೀರಶೈವ ಸಾಹಿತ್ಯಿಕ ಪತ್ರಿಕೆಗಳೇ ವಿಸ್ತೃತ ಅಧ್ಯಯನವನ್ನು ಬಯಸುವಷ್ಟು ವಿಪುಲವಾಗಿ ಪ್ರಕಟಗೊಂಡಿವೆ.
  • ೩. ಕಲೆಗೆ ಮೀಸಲಾಗಿ ಪತ್ರಿಕೆಗಳು ಹೊರಬರುವ ಸಂಪ್ರದಾಯವೊಂದು ಈ ಅವಧಿಯಲ್ಲಿ ಬೆಳದು ಬಂದಿತು.
  • ೪. ಕಥೆಗಳಿಗೆ ಮೀಸಲಾಗಿ ಪತ್ರಿಕೆಗಳು ಹೊರಬರುವ ಸಂಪ್ರದಾಯವೊಂದು ಈ ಅವಧಿಯಲ್ಲಿ ಬೆಳದು ಬಂದಿತು.
  • ೫. ವಿನೋದ ಸಾಹಿತ್ಯ, ಮಕ್ಕಳ ಸಾಹಿತ್ಯ ಪತ್ರಿಕೆಗಳೂ ಈ ಅವಧಿಯಲ್ಲಿ ಸಮೃದ್ಧಗೊಂಡವು.

ಸಾಹಿತ್ಯ ಪ್ರಧಾನವಾಗಿ ಈ ದಶಕದಲ್ಲಿ ಬಂದ ಪತ್ರಿಕೆಗಳನ್ನು ಹೀಗೆ ಗುರುತಿಸಬಹುದು.

'ಪ್ರೇಮ'

‘ಪ್ರೇಮ’ ೧೯೨೩ರಲ್ಲೇ ಪಂಡಿತ ತಾರಾನಾಥರು ಹೊರತರುತ್ತಿದ್ದ ದ್ವಿಭಾಷಾ ತ್ರೈಮಾಸಿಕ, ನಂತರ ಮಾಸಿಕ. ಮೂರು ದಶಕ ಕನ್ನಡ ಓದುಗರನ್ನು ತಲುಪಿದ ‘ಪ್ರೇಮ’ವನ್ನು ಅಚ್ಚ ಸಾಹಿತ್ಯಿಕ ಪತ್ರಿಕೆಯೆಂದಾಗಲೀ ಕಲಾಪತ್ರಿಕೆಯೆಂದಾಗಲೀ ಕರೆಯುವಂತಿಲ್ಲ. ವಿವಿಧ ಆಸಕ್ತಿಯ, ವಿವಿಧ ರಂಗಗಳ ದಿಗ್ಗಜರಾಗಿದ್ದ ತಾರಾನಾಥರ ವಿಶೇಷಾಸಕ್ತಿಗಳೆಲ್ಲಾ ಪ್ರೇಮಾ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲೂ ಕನ್ನಡದಲ್ಲೂ ಪ್ರಕಟಗೊಳ್ಳುತ್ತಿದ್ದವು. ಆದರೆ ಸಹೃದಯರಾಗಿದ್ದ ತಾರಾನಾಥರು ಸಾಹಿತ್ಯ-ಕಲೆಗಳಿಗೆ ತಪ್ಪದೇ ಪುಟಗಳನ್ನು ಮೀಸಲಿಡುತ್ತಿದ್ದರು. ಆಗಿನ ಕಾಲದ ಬೇರೆಲ್ಲಾ ಪತ್ರಿಕೆಗಳಗಿಂತ ‘ಪ್ರೇಮ’ದಲ್ಲಿ ಕಲೆ, ಸಂಸ್ಕೃತಿಯ ಪ್ರೇಮ ಎದ್ದು ಕಾಣುತ್ತಿದ್ದುದರಿಂದ ಕಲಾ ಪತ್ರಿಕೆಗಳಿಗೆ ಸ್ಫೂರ್ತಿಕೊಟ್ಟ ಪತ್ರಿಕೆ ಇದೆಂದು ಭಾವಿಸಬಹುದು. ರಂಗಭೂಮಿಯ ಸುದ್ದಿಗಳಿಗೂ ಪ್ರೇಮದಲ್ಲಿ ಆದ್ಯತೆ ನೀಡಲಾಗುತ್ತಿತ್ತು. ೧೨-೧೦-೧೯೩೩ಕ್ಕೆ ಸಂಪುಟ ೧೦, ಸಂಚಿಕೆ ೧ ಬಂದಿದೆ. ಅದರಲ್ಲಿ, ‘ಪ್ರೇಮವು ಕನ್ನಡಿಗರ ಸೇವೆಗೆ ನಿಂತು ಇದೀಗ ಒಂಬತ್ತು ವರ್ಷಗಳು ಮುಗಿದವು. ಆದರೆ ವರ್ಷಗಳು ಒಂಬತ್ತಾದರೂ ಸೇವೆಯ ಅದರ ಗುರಿಯನ್ನು ಸಾಕಷ್ಟು ಮುಟ್ಟಲಿಲ್ಲ. ಬೆಳೆಯಲೂ ಇಲ್ಲ, ವಿಸ್ತರಿಸಲೂ ಇಲ್ಲ. ಅದರ ವೃದ್ಧಿಗೆ ಬಂದ ಅಡೆತಡೆಗಳು ಒಂದಲ್ಲ ಎರಡಲ್ಲ. ಅಚ್ಚುಗಾರರ ಸ್ವೇಚ್ಛಾ ಪ್ರವರ್ತನೆ, ಚಂದಾದಾರರ ತಾತ್ಸಾರ ಇನ್ನೊಂದು ಕಡೆ, ಅಂಚೆಗಾರರ ಮರ್ಜಿ ಮಗದೊಂದು ಕಡೆ ಈ ಕೊರೆತೆಗಳೆಲ್ಲ ಸರ್ವೇ ಸಾಮಾನ್ಯವೇನೋ ಅಥವಾ ಪ್ರೇಮದ ದುರ್ದೈವ ಲಕ್ಷಣಗಳೋ ಇನ್ನೂ ತಿಳಿಯದು’ ಎನ್ನುತ್ತ ತುಂಗಭದ್ರೆಯ ಹಳ್ಳಿಯಿಂದ ಕನ್ನಡದ ಪತ್ರಿಕೆಯನ್ನು ಧಾರವಾಡಕ್ಕೆ ಸ್ಥಳಾಂತರಿಸುತ್ತಾರೆ. ಧಾರವಾಡದ ಕನ್ನಡ ಅಮೆಚೂರ್‍ ನಾಟ್ಯ ಸಂಘದ ಮಿತ್ರರು ಇದರ ವ್ಯವಸ್ಥಾಪನೆ ವಹಿಸಿಕೊಳ್ಳುತ್ತಾರೆ ಎಂಬುದಾಗಿ ಬರೆಯಲಾಗಿದೆ. ‘ಪ್ರೇಮದ’ ಉದ್ದೇಶವು ಜನಸೇವೆ, ಧನಸೇವೆಯಲ್ಲ. ಸಣ್ಣ ಕತೆ, ಒಂದಂಕಿನ ನಾಟಕ, ಸಾಹಿತ್ಯ ವಿಷಯದ ಚರ್ಚೆ ತಪ್ಪದೇ ಬರುವುವು. ಡೆಮಿ ೧/೮ ಆಕಾರದ ಪತ್ರಿಕೆಯಲ್ಲಿ ೮೦-೧೦೦ ಪುಟಗಳು ಇರುವವು. ‘ಪ್ರೇಮವು’ ತನ್ನ ಅರ್ಹತೆಯಿಂದಲೇ ಬದುಕಬೇಕಲ್ಲದೇ ವಾಚಕರ ಔದಾರ್ಯದಿಂದ ಕೊಡದು ಎಂಬುದೇ ಪ್ರೇಮದ ಉತ್ಕಟೇಚ್ಛೆ. ‘ಪ್ರೇಮ’ ಪಂಡಿತ ತಾರಾನಾಥರು ಹೊಸಪೇಟೆಯಿಂದ ಆರಂಭಿಸಿದ ವೈವಿಧ್ಯಮಯ ಆಸಕ್ತಿಗಳ ಮಾಸಿಕ. ಇಂಗ್ಲಿಷು ಹಾಗೂ ಕನ್ನಡ ದ್ವಿಭಾಷಾ ಮಾಸಿಕ ಇದಾಗಿತ್ತು. ಧಾರಾವಾಹಿ, ಸಣ್ಣಕತೆಗಳು, ನಾಟಕಗಳು ‘ಪ್ರೇಮ’ದಲ್ಲಿ ಖಾಯಂ ಆಗಿ ಪ್ರಕಟವಾಗುತ್ತಿದ್ದವು. ತಾರಾನಾಥರಿಗೆ ಆಯುರ್ವೇದ ಆಸಕ್ತಿಯ ಕ್ಷೇತ್ರ. ಹೀಗಾಗಿ ಆರೋಗ್ಯ ಭಾಗ್ಯದಂಥ ಲೇಖನಗಳೂ ಪ್ರೇಮದಲ್ಲಿದ್ದವು. ಒಂಬತ್ತು ವರ್ಷ ತಾರಾನಾಥರು ಹಾಗೂ ಹೀಗೂ ನಡೆಸಿದ ಮೇಲೆ ಅಕ್ಟೋಬರ್‍ ೧೫ ೧೯೩೩ರಿಂದ ಕನ್ನಡ ಹವ್ಯಾಸಿ ನಾಟ್ಯ ಸಂಘದವರು ಈ ಪತ್ರಿಕೆಯನ್ನು ವಹಿಸಿಕೊಂಡರು. ಪತ್ರಿಕೆ ನಂತರ ನಿಂತುಹೋಯಿತು.

'ವಸಂತ'

‘ವಸಂತ’ ಕರ್ನಾಟಕದ ಮೇರು ಸಾಹಿತಿ ಶಿವರಾಮ ಕಾರಂತರು ಕೆಲಕಾಲ ನಡೆಸಿಕೈಸುಟ್ಟುಕೊಂಡು ಈ ಕನ್ನಡಿಗರ ಔದಾಸೀನ್ಯವನ್ನು ಪ್ರತಿಭಟಿಸಿ ನಿಲ್ಲಿಸಿದ ಮಾಸಪತ್ರಿಕೆ. ಕಾರಂತರು ಪುತ್ತೂರಿನಲ್ಲಿದ್ದಾಗ ೧೯೨೩ರ ಡಿಸೆಮಬರ್‍ ತಿಂಗಳಲ್ಲಿ ಈ ಪತ್ರಿಕೆಯನ್ನು ಚಾಲನೆಗೆ ತಂದರು. ಇಪ್ಪತ್ತು ಪುಟಗಳ ಪತ್ರಿಕೆಯು ಸಚಿತ್ರವೂ ರಂಜಿನೀಯವೂ ಆಗಿರುತ್ತಿತ್ತು. ವಾರ್ಷಿಕ ಚಂದಾಹಣ ಮೂರು ರೂಪಾಯಿ. ಪತ್ರಿಕೆಯಲ್ಲಿ ಕಥೆ, ಕಾದಂಬರಿ, ಕವನಗಳಿಗೆ ಆದ್ಯತೆ ನೀಡಲಾಗುತ್ತಿತ್ತು. ಶಿವರಾಮ ಕಾರಂತರ ಆಸಕ್ತಿಯ ಹರಹು ವಿಶಾಲವಾದುದು. ಸಹಜವಾಗಿಯೇ ಅವರು ಸಂಪಾದಿಸುತ್ತಿದ್ದ ಪತ್ರಿಕೆಯಲ್ಲಿ ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ ಚರಿತ್ರೆ ಮುಂತಾದ ಲಲಿತ ಕಲೆಗಳಿಗೆ ಸಂಬಂಧಿಸಿದ ಲೇಖಣಗಳೆಲ್ಲಾ ಚಿತ್ರ ಸಮೇತ ಪ್ರಕಟಗೊಳ್ಳುತ್ತಿದ್ದವು. ಶಿವರಾಮ ಕಾರಂತರ ಮೊದಲ ಕೆಲವು ಕಾದಂಬರಿಗಳಾದ ‘ದೇವ ದೂತರ’, ‘ಸೂಳೆಸಂಸಾರ’, ‘ವಿಚಿತ್ರಕೂಟ’ ಮುಂತಾದವುಗಳು ಮೊದಲ ಬಾರಿಗೆ ವಸಂತದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ಪತ್ರಿಕೆಯಲ್ಲಿ ಕಾರಂತರ ಉಮೇದು ಹಾಗೂ ಪ್ರತಿಭೆಯ ಎರಕವಿತ್ತು. ಆದರೆ ವ್ಯವಹಾರ ಜಾಣ್ಮೆ ಇರಲಿಲ್ಲ. ಪತ್ರಿಕೆಯನ್ನು ಮಾರಾಟಮಾಡುವ ಜಾಲವಿರಲಿಲ್ಲ. ಕಾರಂತರು ಹೋದಲ್ಲೆಲ್ಲ ಕೆಲವು ಸಂಚಿಕೆಗಳನ್ನು ಖರ್ಚಾಗುವುದನ್ನು ಬಿಟ್ಟರೆ ವ್ಯವಸ್ಥಿತ ವಿತರಣಾ ವ್ಯವಸ್ಥೆಯಾಗಲೀ ಅದಕ್ಕೆ ಪ್ರತ್ಯೇಕ ಕೈಗಳಾಗಲೀ ಇರಲಿಲ್ಲ. ಎಷ್ಟೆಲ್ಲಾ ಕೆಲಸವನ್ನು ಮಾಡುತ್ತಿದ್ದ ಕಾರಂತ ಕೈಗಳೆ ‘ವಸಂತ’ದ ಮಾರಾಟವನ್ನು ಮಾಡಬೇಕಿತ್ತು. ಹಣಕಾಸಿನ ತೊಂದರೆಯಿಂದ ಎರಡು ವರ್ಷ ಕಾಲ ನಡೆದು ಪತ್ರಿಕೆ ನಿಂತಿತು. ಈ ಬಗ್ಗೆ ಸಂಪಾದಕರು ಹೀಗೆ ನುಡಿಯುತ್ತಾರೆ. "ನಮ್ಮ ಕರ್ಣಾಟಕ ಭಾಷೆ ವ್ಯವಸಾಯವು ಧನಾರ್ಜನೆಯ ದೃಷ್ಟಿಯಿಂದ ನಡೆಯುತ್ತಿರುವುದೋ ಎಂದು ನೀವೇ ಊಹಿಸಿರಿ. ಕನ್ನಡ ನಾಡಿನಲ್ಲಿ ಪತ್ರಿಕೆಗಳು ದ್ರವ್ಯಾರ್ಜನೆಗಾಗಿ ನಡೆಯುತ್ತಿರುವುದೆಂದು ಹೇಳುವುದಾದರೆ ಇಂದು ಕರ್ನಾಟಕ ಪತ್ರಿಕೆಗಳಲ್ಲಿ ಒಂದೆರಡೂ ಸಹ ನಲಿದಾಡುತ್ತಿರಲಿಲ್ಲವೆಂದು ಹೇಳಬಹುದು. ಶಿವರಾಮ ಕಾರಂತರೂ ಈ ಮಾತು ಬರೆದುದು ೧೯೨೪ರಲ್ಲಿ. ೭೦-೭೫ವರ್ಷಗಳ ಬಳಿಕ ಕನ್ನಡದಲ್ಲಿ ಆದ ಬದಲಾವಣೆಯನ್ನು ಗಮನಿಸುವುದಾದರೆ ದಿನಪತ್ರಿಕೆಗಳು, ಸಾಮಾನ್ಯ ಆಸಕ್ತಿಯ ನಿಯತಕಾಲಿಕಗಳು ದ್ರವ್ಯರ್ಜನೆಗಾಗಿ ಇಂದು ನಡೆಯುತ್ತಿಲ್ಲವೆಂದು ಹೇಳಲಾಗದು. ವಿಶೇಷಾಸಕ್ತಿಯ, ಅದರಲ್ಲೂ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದ ಪುಟ್ಟ ಪತ್ರಿಕೆಗಳ (little magazines) ಸ್ಥಿತಿ ಮಾತ್ರ ಇಂದಿಗೂ ಬದಲಾಗಿಲ್ಲವೆಂದು ಹೇಳಬಹುದು. ಇಂದು ದ್ರವ್ಯಾರ್ಜನೆಗಾಗಿಯೇ ನಡೆಯುತ್ತಿರುವ ಒಂದೇ ಒಂದುಸಾಹಿತ್ಯ ಅಥವಾ ಕಲಾ ಪತ್ರಿಕೆಯನ್ನು ಹುಡುಕುವುದೂ ಸಾಧ್ಯವಿಲ್ಲ. ಇದು ಯಾವ ಕಾಲದಲ್ಲೂ ಇರಲಿಲ್ಲ ಎಂಬುದೂ ಸತ್ಯ. ‘ವಸಂತ’ ಪತ್ರಿಕೆ ೧೯೨೭ರ ಹೊತ್ತಿಗೆ ಪಕ್ಷ ಪತ್ರಿಕೆಯಾಗಿ ಎರಡು ವರ್ಷ ನಡೆದು ೧೯೨೯ರ ಜುಲೈನಿಂದ ಮತ್ತೆ ಮಾಸಪತ್ರಿಕೆಯಾಗಿ ಕುಂದಾಪುರದಿಂದ ಕೆಲವು ಕಾಲ ಪ್ರಕಟವಾದಂತೆ ತಿಳಿದು ಬರುತ್ತದೆ. ಶಿವರಾಮಕಾರಂತರ ಇತರ ಸಾಧನೆಗಳ ಹಾಗೆ ‘ವಸಂತ’ದ ಪತ್ರಿಕೋದ್ಯಮದ ಬಗ್ಗೆ ಸರಿಯಾದ ದಾಖಲೆಗಳೇ ಇಲ್ಲ. ‘ವಸಂತ’ದ ಪ್ರತಿಗಳು ನೋಡಲೂ ಸಿಗುತ್ತಿಲ್ಲ. ಇದು ಕನ್ನಡ ಪತ್ರಿಕೋದ್ಯಮದ ದಾಖಲಾತಿಯ ಕೊರತೆಯನ್ನು ಸೂಚಿಸುತ್ತದೆ.

'ಜಯಕರ್ನಾಟದ'

ಕರ್ನಾಟಕ ಕುಲಪುರೋಹಿತರೆನಿಸಿಕೊಂಡಿರುವ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಟಿಂಕಕಟ್ಟಿ ದುಡಿದವರು. ಅವರ ಅಭೀಷ್ಟದ ಈಡೇರಿಕೆಗಾಗಿ ಮಧ್ಯಮವೊಂದು ಆಲೂರು ವೆಂಕಟರಾಯರಿಗೆ ಬೇಕಿತ್ತು. ಅದು ‘ಜಯಕರ್ನಾಟಕ’ದ ಮೂಲಕ ಅವರಿಗೆ ದೊರಕಿತು. ‘ಜಯಕರ್ನಾಟಕ’ ಹೆಸರೇ ಸೂಚಿಸುವಂತೆ ಕನ್ನಡವೇ ಅದಕ್ಕೆ ಉಸಿರು, ಹರಿದು ಹಂಚಿಹೋಗಿದ್ದ ಕನ್ನಡ ಭಾವನೆಗಳನ್ನು ಭಾವನಾತ್ಮಕವಾಗಿ ಒಂದುಗೊಡಿಸಲು ಬೇಕಾದ ಲೇಖನಗಳೇ ‘ಜಯಕರ್ನಾಟಕ’ದ ವಸ್ತು. ಅದೊಂದು ಪತ್ರಿಕೆಯೆನ್ನುವುದಕ್ಕಿಂತ ಆಲೂರು ವೆಂಕಟರಾಯರ ಕೈಯೊಳಗಿನ ಆಯುಧವಾಗಿತ್ತು. ಧಾರವಾಡದಿಂದ ೧೯೨೩ರಲ್ಲಿ ಆರಂಭಗೊಂಡು ‘ಜಯಕರ್ನಾಟಕ’ ಮೊದಲು ಮಾಸಪತ್ರಿಕೆಯಾಗಿದ್ದು ಕರ್ನಾಟಕದ ಏಕೀಕರಣ ಚಳುವಳಿ ಮುಂದಾವರೆದಂತೆಲ್ಲಾ ವಾರಪತ್ರಿಕೆಯಾಗಿ ಪರಿವರ್ತನೆಗೊಂಡಿತು. ‘ಕರ್ನಾಟಕದ ವಾಸ್ತುವಿದ್ಯೆಯಿಂದ ಹಿಡಿದು ಶರಣರ ತಿಳಿನಡೆ, ಧರ್ಮಶಾಸ್ತ್ರದ ಉತ್ಪತ್ತಿಯ ವಿಚಾರ, ಮುಸಲ್ಮಾನರ ಮೂರ್ತಿಭಂಜಕತ್ವದ ಮರ್ಮ, ಚಿತ್ರದುರ್ಗದ ಇತಿಹಾಸ, ವಿದೇಶಿ ಭಾಂಡವಲ್ಲವು ನಮ್ಮ ಕೊರಳಿಗೆ ಉರುಳು, ಹೀಗೆ ರಾಷ್ಟ್ರಪ್ರೇಮ, ಪರಂಪರೆ, ಇತಿಹಾಸ, ಸಾಹಿತ್ಯ ಎಲ್ಲವನ್ನೂ ಒಳಗೊಂಡಿತ್ತು. ಸಾಹಿತ್ಯವು ಜೀವನಕ್ಕೆ ಹತ್ತಿರವಾಗಿರಬೇಕು ಎಂದೇ ನಂಬಿದ್ದ ಆಲೂರು ವೆಂಕಟರಾಯರು ನಂಬಿದಂತೇ ಪತ್ರಿಕೆ ನಡೆಸಿದರು. ಪತ್ರಿಕೆ ಎಂದೂ ಆರ್ಥಿಕವಾಗಿ ಸಬಲವಾಗಿರಲಿಲ್ಲ. ಆಲೂರರ ಅನನ್ಯ ಹಠ ಮಾತ್ರ ಜಯಕರ್ನಾಟವನ್ನು ೧೯೫೧ರವರೆಗೂ ಬದುಕಿಸಿತು. ವಾರಪತ್ರಿಕೆಯಾಗಿದ್ದೂ ಸಾಹಿತ್ಯಿಕ ಪತ್ರಿಕೆಗಳ ಸಾಲಿಗೆ ಸೇರಬಹುದಾಗಿದ್ದು ಜಯಕರ್ನಾಟಕದ ವಿಶೇಷ. ಜಯಕರ್ನಾಟಕವನ್ನು ದ. ರಾ. ಬೇಂದ್ರೆಯವರ ಗೆಳೆಯರ ಗುಂಪು ೧೯೩೦ರಲ್ಲಿ ವಹಿಸಿಕೊಂಡು ನಾಲ್ಕು ವರ್ಷ ನಡೆಸಿತು. ಬೆಳಗಾವಿ ರಾಮಚಂದ್ರರಾವ್ ಎಂಬುವರು ಇದರ ಪ್ರಕಾಶಕರೆಂದು ಹೆಸರಿಸಲಾಗಿತ್ತು. ಅವರು ಪತ್ರಿಕೆಯಿಂದಾಗಿ ನಷ್ಟಹೊಂದಿ ಸ. ಸ. ಬಸವನಾಳ ಸಹೋದರರಿಗೆ ಜಯಕರ್ನಾಟಕವನ್ನು ವಹಿಸಿಕೊಟ್ಟರು. ಸ. ಸ. ಬಸನಾಳರು ಈ ಭಾಗದ ಹಿರಿಯ ಸಾಹಿತಿಗಳು ಹಾಗೂ ಪ್ರಾಧ್ಯಾಪಕರಾಗಿದ್ದರು. ೧೯೫೯ರಲ್ಲಿ ಸ. ಸ. ಬಸವನಾಳರು ತೀರಿಕೊಳ್ಳುವವರೆಗೆ ಪತ್ರಿಕೆ ಸುಸೂತ್ರವಾಗಿಯೇ ನಡೆಯಿತು. ಸ. ಸ. ಬಸವನಾಳರ ಬಳಿಕ ನಾಲ್ಕು ವರ್ಷ ಮಾತ್ರ ಈ ಪತ್ರಿಕೆಯನ್ನು ನಡೆಸಲು ವಿ. ಸಿ. ಬಸವನಾಳರಿಗೆ ಸಾಧ್ಯವಾಯಿತು. ಅಲ್ಲಿಗೆ ಜಯಕರ್ನಾಟಕವು ಶಾಶ್ವತವಾಗಿ ನಿಂತಿತು.

'ಕರ್ನಾಟಕ ಕೇಸರೀ'

‘ಕರ್ನಾಟ ಕೇಸರೀ’ ಎಂಬ ಪತ್ರಿಕೆ ೧೯೨೮ರ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಎರಡು ವರ್ಷ ನಡೆಯಿತು. ಮಂಜೇಶ್ವರ ಅನಂತರಾವ್ ಎಂಬುವವರು ಪುತ್ತೂರಿನಿಂದ ಇದನ್ನು ಸಂಪಾದಿಸಿ ಪ್ರಕಟಿಸಿದರು. ‘ಸಾಹಿತ್ಯ - ವಿಜ್ಞಾನ- ಕಲಾ ಇತ್ಯಾದಿ ಸಾರ್ವತ್ರಿಕ ಹಂತದ ಮನರಂಜನೀಯ ವಿಷಯವನ್ನೊಳಗೊಂಡ ತಿಳಿಗನ್ನಡ ಸಚಿತ್ರ ಮಾಸಪತ್ರಿಕೆ’ ಎಂಬುದು ಸಂಪಾದಕರು ನೀಡಿದ ಒಕ್ಕಣೆ, ೨೪ ಪುಟಗಳ ಸಂಚಿಕೆಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಿಗೇ ಹೆಚ್ಚಿನ ಪುಟಗಳನ್ನು ಮೀಸಲಿಡಲಾಗುತ್ತಿತ್ತು. ಒಂದು ಸಂಚಿಕೆಯಿಂದ ಮುಂದಿನ ಸಂಚಿಕೆಗೆ ಪುಟ ಸಂಖ್ಯೆಯನ್ನು ಮುಂದುವರೆಸಲಾಗುತ್ತಿತ್ತು. ನಾಲ್ಕಾಣೆಗೆ ಬಿಡಿ ಸಂಚಿಕೆ ಮಾರಾಟವಾಗುತ್ತಿದ್ದ ಈ ಪತ್ರಿಕೆಗೆ ಸಾಹಿತ್ಯ ಪ್ರಸಾರವೇ ಮುಖ್ಯ ಧ್ಯೇಯವಾಗಿತ್ತು.

'ಕಥಾಂಜಲಿ'

‘ಕಥಾ’ ಹಾಗೂ ‘ಕಥಾಂಜಲಿ’ ಸಾಹಿತ್ಯಿಕ ಪತ್ರಿಕೆಗಳಿಗೆ ಹೊರ ರೂಪಕಪಟ್ಟ ಪ್ರಯತ್ನಗಳು. ಇವೆರಡೂ ಬೆಂಗಳೂರಿನಿಂದ ಪ್ರಕಟಗೊಂಡ ಪತ್ರಿಕೆಗಳೇ. ‘ಕಥಾ’ ಪತ್ರಿಕೆಗೆ ಸಂಪಾದಕರು ಯಾರೆಂಬುದು ಸ್ಪಷ್ಟವಿಲ್ಲ. ಕಥಾಂಜಲಿಗೆ ಕನ್ನಡದ ಮೊದಲ ಸಾಲಿನ ಕಾದಂಬರಿಕಾರ ಅ. ನ. ಕೃಷ್ಣರಾಯರು ಸಂಪಾದಕರು. ಅವರು ತಮ್ಮ ಆತ್ಮಕತೆ ‘ಬರಹಗಾರನ ಬದುಕು’ ಪುಸ್ತಕದಲ್ಲಿ ‘ಕಥಾಂಜಲಿ’ ಪತ್ರಿಕೆ ನಡೆಸಿದ್ದನ್ನು ನೆನೆಸಿಕೊಳ್ಳುವುದು ಹೀಗೆ :

‘ದ. ಕೃ. ಭಾರದ್ವಾಜ, ಜಿ. ಪಿ. ರಾಜರತ್ನಂ. ರಾ. ಶಿ. ಕೆ. ಗೋಪಾಲಕೃಷ್ಣರಾವ್, ಆನಂದ, ಮ. ನ. ಮೂರ್ತಿ ಮೊದಲಾದ ಮಿತ್ರರು ಯಾವ ಫಲಾಪೇಕ್ಷಯೂ ಇಲ್ಲದೇ ನನಗೆ ನೆರವಾದರೂ, ‘ಕಥಾಂಜಲಿ’ ಕೀರ್ತಿ ಗಳಿಸಿತು. ಓದುಗರನ್ನೂ ಗಳಿಸಿತು. ಆದರೆ ಚಂದಾದಾರರನ್ನು ಗಳಿಸಲಿಲ್ಲ. ನಾನು ಒಂದು ಸಾವಿರ ಪ್ರತಿ ಅಚ್ಚು ಹಾಕಿಸುತ್ತಿದ್ದೆ. ಅದಕ್ಕೆ ಚಂದಾದಾರರಾಗಿದ್ದವರು ೧೫೦ ಜನ. ಸುಮಾರು ೩೦೦ ಪತ್ರಿಗಳನ್ನು ಬಿಟ್ಟಿ ಹಂಚುತ್ತಿದ್ದೆ. ಪ್ರತೀ ತಿಂಗಳೂ ೫೫೦ ಪತ್ರಿಕೆಗಳು ನನ್ನ ಮನೆಯಲ್ಲಿ ಶೇಖರವಾಗುತ್ತಿದ್ದವು. ಮುದ್ರಣ, ಕಾಗದ, ಅಂಚೆ, ಗುಮಾಸ್ತರ ಸಂಬಳ ತೆತ್ತು ನನ್ನ ತಂದೆಯವರು ದಣಿದಿದ್ದರು. ಪತ್ರಿಕೆ ನಿಲ್ಲಿಸಿಬಿಡಲು ನಾನು ಯೋಚಿಸುತ್ತಿದ್ದಾಗ ಬಿ. ಎನ್. ಗುಪ್ತರು ಬೆಂಗಳೂರಿಗೆ ಬಂದರು ದ. ಕೃ ಭಾರದ್ವಾಜರ ಮೂಲಕ ಅವರ ಪರಿಚಯವಾಯ್ತು. ಗುಪ್ತರಿಗೆ ‘ಕಥಾಂಜಲಿ’ ಒಪ್ಪಿಸಿ ನಾನು ಕೈ ತೊಳದುಕೊಂಡೆ, ಕಥಾಂಜಲಿಯಿಂದ ನನಗೆ ನಷ್ಟವೇ ಆಗಿತ್ತು. ಆದರೆ ಈ ಪತ್ರಿಕೆ ಕನ್ನಡ ಸಾಹಿತ್ಯದ ಒಂದು ಮೈಲಿಗಲ್ಲಾಗಿ ಅನೇಕ ಹೊಸ ಲೇಖಕರನ್ನು ಬೆಳಕಿಗೆ ತಂದಿತು. ಆನಂದ, ರಾಶಿ, ಗೋಪಾಲಕೃಷ್ಣರಾಯ, ಶ್ರೀನಾಥ, ದ. ಕೃ. ಭಾರದ್ವಾಜ, ಮ. ನ. ಮೂರ್ತಿ. ರಾಜರತ್ನಂ ಇವರ ಉತ್ತಮ ಕಥೆಗಳು ಕಥಾಂಜಲಿಯಲ್ಲಿ ಪ್ರಕಟವಾದವು. ಕಥಾಂಜಲಿ ಹೊಸಗನ್ನಡ ಸಾಹಿತ್ಯಯುಗದ ಹರಿಕಾರನಾಯಿತು. ‘ಕಥಾಂಜಲಿ’ ಕಥೆಗಳಿಗೇ ಮೀಸಲಾದ ಮಾಸಿಕವಾಗಿತ್ತು. ಅ. ನ. ಕೃ.ರವರ ಕಥೆಗಳಲ್ಲದೇ ಆ ಕಾಲದ ಹೊಸ ಹಳೆ ಕಥೆಗಾರರೆಲ್ಲ ‘ಕಥಾಂಜಲಿ’ಗೆ ಬರೆದರು. ಸಾಹಿತ್ಯ ಪತ್ರಿಕೆಗಳಿಗೆ ಹೊಸ ತಿರುವು ನೀಡಿದ ಸಾಧನೆ ‘ಕಥಾಂಜಲಿ’ಯದಯ. ಅದರ ಮಾದರಿಯನ್ನೇ ಅನುಸರಿಸಿ ಮುಂದೆ ‘ಕಥಾಕುಂಜ’, ‘ಕಥಾಚಂದ್ರಿಕೆ’, ‘ಕಥಾವಲಿ’, ‘ಕಥಾಸಂಗ್ರಹ’ ಮುಂತಾದ ‘ಕಥಾಮೀಸಲು’ ಪತ್ರಿಕೆಗಳು ಹೊರಬಂದವು. ‘ಕಥಾಂಜಲಿ’ಯನನ್‌ಉ ಆರಂಭಿಸುವಾಗ ತಮ್ಮ ಧ್ಯೇಯೋದ್ಧೇಶಗಳನ್ನು ಅ. ನ. ಕೃಷ್ಣರಾಯರು ಹೀಗೆ ಸ್ಪಷ್ಟಪಡಿಸಿದ್ದಾರೆ :

‘ನಮ್ಮ ಕನ್ನಡ ನಾಡಿನಲ್ಲಿ . . . ಕೇವಲ ಸಣ್ಣ ಕಥೆಗಳಿಗಾಗಿಯೇ ಸಮರ್ಪಿಸಲ್ಪಟ್ಟು ಒಂದು ನಿಯುಕ್ತ ಆದರ್ಶವನ್ನಿಟ್ಟುಕೊಂಡು ಹೊರಟಿರುವ ಪತ್ರಿಕೆಯ ಕೊರತೆ ಬಹುಕಾಲದಿಂದಲೂ ಇತ್ತು. ನಮ್ಮಲ್ಲಿ ಸರ್ವತೋಮುಖವಾದ ಬೆಳೆ ಬೆಳೆದು ಕುಯಿಲಿಗೆ ಸಿದ್ಧವಾಗಿದ್ದರೂ ಅದನ್ನು ಕುಯ್ದು ನಾಡಿಗರಿಗೆ ಹಂಚುವವರಿಲ್ಲವಲ್ಲ ಎಂದು ಅನಿಸುತ್ತಲೇ ಇದ್ದಿತು. ಈ ಅಂತಸ್ತಾಪವನ್ನು ದೂರಮಾಡಿ, ಸನ್ಮಿತ್ರರ ಸಹಾಯ - ಸ್ಫೂರ್ತಿಗಳಿಂದ ಹುರಿಗೊಂಡು ನಾವು ಈ ಕೆಲಸಕ್ಕೆ ಉದ್ಯುಕ್ತರಾಗಿರುವೆವು. . . ಸಣ್ಣ ಕಥೆಗಳಲ್ಲಿ ನಾನಾ ಬಗೆಗಳುಂಟು, ಸಂಪ್ರದಾಯಗಳುಂಟು, ಶೈಲಿಗಳುಂಟು. ನಾನು ಯಾವ ಒಂದು ಶೈಲಿ ಸಂಪ್ರದಾಯಕ್ಕೂ ತಾಳಿ ಕಟ್ಟುವುದಿಲ್ಲ. ಎಲ್ಲವುಗಳ ಪರಿಚಯಾನುಭವವನ್ನು ಕನ್ನಡಿಗರಿಗೆ ಮಾಡಿಸಿಕೊಡಬೇಕೆಂಬುದೇ ನಮ್ಮಿಚ್ಛೆ. ಸ್ವಕಪೋಲಕಲ್ಪಿತವಾದ ಕನ್ನಡಿಗರ ಕಥೆಗಳಿಗೆ ಪ್ರಾಧಾನ್ಯ ಕೊಟ್ಟು ಅನಂತರ ಇತರ ಭಾಷೆಗಳಲ್ಲಿನ ಕಥೆಗಳ ಪರಿಚಯವನ್ನು ಮಾಡಿಕೊಡುತ್ತೇವೆ. ‘ಕಥಾಂಜಲಿ’ಗೆ ಮೊದಲ ೧೪ ತಿಂಗಳು ಅ. ನ. ಕೃ. ಸಂಪಾದಕರಾಗಿದ್ದರು. ನಂತರ ಬಿ. ಎನ್. ಗುಪ್ತಾ ಇದರ ಪ್ರಕಾಶನದ ಜವಾಬ್ದಾರಿ ವಹಿಸಿಕೊಂಡರು. ನಂತರ ಮಾ. ನಾ. ಚೌಡಪ್ಪ, ಶ್ರೀನಾಥ, ಎಸ್. ವೆಂಕಟಾಚಲಪತಿ ಮತ್ತು ನಾಡಿಗೇರ ಕೃಷ್ಣರಾಯ ಇವರು ಸಂಪಾದಕರಾಗಿದ್ದು ೧೯೩೧ರ ಕೊನೆಯವರೆಗೆ ‘ಕಥಾಂಜಲಿ’ ನಿಯತವಾಗಿ ಪ್ರಕಟಗೊಂಡು ನಿಂತಿತು. ಅನಂತರ ೧೯೩೭ರ ಮಧ್ಯ ಭಾಗದಿಂದ ೧೯೪೧ರ ಅಂತ್ಯದವರೆಗೆ ಪ್ರಕಟನೆಯಲ್ಲಿತ್ತು. ಕಥಾಂಜಲಿಯ ಸಾಧನೆಯನ್ನು ಕುರಿತು ಅನಕೃ ಅವರೇ ಮುಂಬೈ ಆಕಾಶವಾಣಿಗೆ ಮಾಡಿದ ಭಾಷಣದಲ್ಲಿ ‘ಕಥಾಂಜಲಿ’ಯ ಕೊಡುಗೆಯೆಂದರೆ ಹೊಸ ಲೇಖಕರ ವಿಕಾಸಕ್ಕೆ ನೆರವಾಯಿತು. ಸುಮಾರು ೫೦ ಜನ ಲೇಖಕರು ಕಥಾಂಜಲಿಯಿಂದ ಮುಂದಕ್ಕೆ ಬಂದರು. ಸಣ್ಣ ಕಥೆಗಳ ಸೃಷ್ಟಿಗೂ ಕಥನ ಕಲೆಯ ನವವಿಜ್ಞಾನದ ಉದಯಕ್ಕೂ ಕಥಾಂಜಲಿ ಬಹಳ ಹೆಣಗಿತು’ ಎಂದಿದ್ದಾರೆ.

ನಾಲ್ಕನೇ ದಶಕದ ಸಾಹಿತ್ಯ ಪತ್ರಿಕೆಗಳ : (೧೯೩೧ ರಿಂದ ೧೯೪೦)

ಇಪ್ಪತ್ತನೇ ಶತಮಾನದ ನಾಲ್ಕನೇ ದಶಕದಲ್ಲಿ ಅಂದರೆ ೧೯೩೧ರಿಂದ ೧೯೪೦ ರವರೆಗೆ ಕನ್ನಡದಲ್ಲಿ ಸಾಹಿತ್ಯಕ್ಕೆ ಮೀಸಲಾಗಿ ಬಂದ ಪತ್ರಿಕೆಗಳೆಂದು ಈ ಕೆಳಗಿನವುಗಳನ್ನು ಗುರುತಿಸಬಹುದು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ‘ಕಾದಂಬರೀ ಸಂಗ್ರಹ’ವೆಂಬ ವಿಶಿಷ್ಟ ಸಾಹಿತ್ಯ ಪತ್ರಿಕೆ ತಂದು ಚಾಮರಾಜನಗರದಲ್ಲಿ ಪತ್ರಿಕೋದ್ಯಮ ಸಾಹಸವನ್ನು ದಾಖಲಿಸಿದ್ದ ಸಿ. ವೆಂಕಟ್ರಮಣ ಶಾಸ್ತ್ರಿಗಳೇ ‘ಆರ್ಯಧರ್ಮ ಸಂಗ್ರಹ’ವನ್ನು ೧೯೩೭ರಲ್ಲಿ ಹೊರತಂದುದು ವಿಶೇಷ. ‘ಆರ್ಯಧರ್ಮಸಂಗ್ರಹ’ ಹೆಸರು ಭಿನ್ನವಾಗಿ ತೋರಿದರೂ ಇವತ್ತಿನ ಸಾಹಿತ್ಯ ಪತ್ರಿಕೆಗಳ ಹೂರಣವನ್ನೇ ಒಳಗೊಂಡಿದ್ದು ವಿಶೇಷವಾಗಿತ್ತು. ‘ಭಾರತೀಯ ಇತಿಹಾಸ ಕಥಾವಳಿ’ ಎಂಬ ಪತ್ರಿಕೆಯನ್ನು ಬೆಂಗಳೂರಿನಿಂದ ಕೆ. ಆರ್‍. ಸೇತುರಾಮನ್ ಎಂಬುವರು ೧೯೩೩ರಲ್ಲಿ ಹೊರತಂದರು. ಪತ್ರಿಕೆಯ ಇತರ ವಿವರಗಳು ಲಭ್ಯವಿಲ್ಲ. ಮೈಸೂರಿನಿಂದ ೧೯೩೫ರಲ್ಲಿ ಎಸ್. ಎಲ್. ಶ್ರೀಂಕಂಠಯ್ಯ ಎಂಬುವರು ‘ಗರಿಕೆ’ ಎಂಬ ಮಾಸಿಕವನ್ನು ಹೊರತಂದರು. ಇದು ಮೈಸೂರಿನ ಶಾರದಾವಿಲಾಸ ವಿದ್ಯಾಲಯದ ಪ್ರತಿಭೆಯ ಸೃಷ್ಟಿಯಾಗಿತ್ತು.

'ಕತೆಗಾರ'

ಈ ದಶಕದಲ್ಲಿ ಸಣ್ಣ ಕಥೆಗಳ ಜನಪ್ರಿಯ ವಾಹಕಗಳಾಗಿ ಪತ್ರಿಕೆಗಳು ಒಂದಾದ ಮೇಲೊಂದರಂತೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಹೊರಬಂದುದನ್ನು ಕಾಣುತ್ತೇವೆ ಇವಕ್ಕೆಲ್ಲ ಹಿಂದಿನ ದಶಕದಲ್ಲಿ ಅ. ನ. ಕೃಷ್ಣರಾಯರು ಸ್ಥಾಪಿಸಿದ್ದ ‘ಕಥಾಂಜಲಿ’ ಮಾದರಿ ಹಾಕಿಕೊಟ್ಟಿರಬೇಕು. ಅಲ್ಲದೆ ಕನ್ನಡ ಕಥಾ ಪ್ರಕಾರವು ಅಂದು ಬಾಲ್ಯದ ಘಟ್ಟವನ್ನು ದಾಟಿ ಬಲಾಢ್ಯವಾಗಿ ಬೆಳದಿತ್ತು. ಪಂಜೆ ಮಂಗೇಶರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್‍ ಅವರುಗಳಿಂದ ಸಂಸ್ಕಾರ ಪಡೆದ ಆಧುನಿಕ ಸಣ್ಣ ಕಥಾ ಪ್ರಕಾರ ಆಶ್ವತ್ಥ, ಆನಂದ, ಬೆಟಗೇರಿ ಕೃಷ್ಣಶರ್ಮ, ಮುಂತಾದವರುಗಳಿಂದ ಹುಲುಸಾಗಿ ಬೆಳೆದು ಕಥೆಗಳಿಗಾಗಿಯೇ ಪತ್ರಿಕೆಗಳು ಹುಟ್ಟುಲು ಕಾರಣವಾದವು. ಕನ್ನಡದಲ್ಲಿ ಕಥೆಗಳಿಗೇ ಮೀಸಲಾಗಿ ಹುಟ್ಟಿದಷ್ಟು ಪತ್ರಿಕೆಗಳು ಬೇರೆ ಯಾವ ಸಾಹಿತ್ಯ ಪ್ರಕಾರಕ್ಕೂ ಹುಟ್ಟಲಿಲ್ಲ ಎಂಬುದು ಕನ್ನಡ ಕಥಾ ಪ್ರಕಾರದ ಜನಪ್ರಿಯತೆಯನ್ನು ಸಾಬೀತುಗೊಳಿಸುತ್ತದೆ. ಈ ದಶಕದಲ್ಲಿ ಮೊದಲಿಗೆ ಬಂದ ಕಥೆಗಳ ಪತ್ರಿಕೆ ‘ಕತೆಗಾರ’ ಬೆಂಗಳೂರಲ್ಲಿ ೧೯೩೨ರಲ್ಲಿ ಮಾ. ನಾ. ಗೋಪಾಲರಾವ್ ಹಾಗೂ ಜಿ. ಎ. ನರಸಿಂಹಮೂರ್ತಿ ಅವರುಗಳಿಂದ ಸಂಪಾದಿಸಲ್ಪಟ್ಟಿತ್ತು. ಹುಬ್ಬಳ್ಳಿಯಿಂದ ೧೯೩೪ರಲ್ಲಿ ‘ಕಥಾಂಜಲಿ’ ಬಂತು. ಎಂ. ವಿ. ಕೃಷ್ಣಯ್ಯ ಎಂಬುವರು ಸಂಪಾದಕರು. ‘ಕತೆಗಾರ’ ಕರ್ನಾಟಕ ನೂತನ ಕಥಾವಾಹಿನಿ ಎಂಬುದಾಗಿ ಕರೆದುಕೊಂಡಿತ್ತು. ಕ್ರೌನ್ ೧/೪ ಆಕಾರದಲ್ಲಿ ಬರುತ್ತಿದ್ದ ಪತ್ರಿಕೆಯಲ್ಲಿ ಜಾಹೀರಾತು, ವ್ಯಂಗ್ಯಚಿತ್ರಗಳೂ ಇದ್ದವು. ೧೯೩೪ ರಲ್ಲಿ ವಾರ್ಷಿಕಚಂದಾ ಒಂದು ರೂಪಾಯಿ ಎಂಟು ಆಣೆ. ಬಿಡಿ ಸಂಚಿಕೆಯ ಬೆಲೆ ೨ ಆಣೆ. ‘ಸಾಹಿತ್ಯ ಪರಿಚಯ’ ಅಂಕಣದಲ್ಲಿ ಪುಸ್ತಕ ವಿಮರ್ಶೆ ಇರುತ್ತಿತ್ತು. ೪೨ ಪುಟಗಳ ಈ ಪತ್ರಿಕೆ ಬೆಂಗಳೂರು ಸಿಟಿ ಬಳೇಪೇಟೆ ರಾಮಮನೋಹರ ಪ್ರೆಸ್‌ನಲ್ಲಿ ಮುದ್ರಿಸಲ್ಪಡುತ್ತಿತ್ತು. ಹೆಚ್ಚಿನ ಪುಟಗಳು ಜನಪ್ರಿಯ ಕಥೆಗಳಿಂದ ತುಂಬಿದ್ದರೂ, ಪ್ರಬಂಧ, ಹರಟೆಗಳೂ ಇರುತ್ತಿದ್ದವು. ಆ ಕಾಲದ ಹಿರಿಯ ಲೇಖಕರುಗಳ ಕಥೆಗಳೂ ಪ್ರಕಟಗೊಳ್ಳುತ್ತಿದ್ದವು. ಬೆಳಗಾವಿಯಿಂದ ಅದೇ ವರ್ಷ ‘ಕಥಾಕುಂಜ’ ಹೊರಬಂತು. ಪ್ಯಾಟಿ ಶ್ಯಾಮರಾವ್ ಸಂಪಾದಕರು. ಸಿ. ಎಸ್. ಕುಲಕರ್ಣಿ ಎಂಬುವರು ‘ಕಥಾಕುಸುಮಾವಳಿ’ಯನ್ನು ಹುಬ್ಬಳ್ಳಿಯಿಂದ ೧೯೩೮ರಲ್ಲಿ ಹೊರತಂದರೆ ಅದೇ ವರ್ಷ ಬೆಂಗಳೂರಿನಿಂದ ಬಿ. ಎಸ್. ಶರ್ಮ ‘ಕಥಾಪ್ರೇಮಿ’ಯನ್ನು ಪ್ರಕಟಿಸಿದರು. ಈ ಮೇಲಿನ ಎಲ್ಲಾ ಪತ್ರಿಕೆಗಳು ಸಣ್ಣ ಕಥಾ ಸಾಹಿತ್ಯಕ್ಕೆ ಮೀಸಲಾಗಿದ್ದವು.

'ನಗುವನಂದ'

‘ಸಂತೋಷಂ ಜನಯೇತ್ ಪ್ರಾಜ್ಞಂ ತದೇವೇರ್ಶ್ವರ ಪೂಜನಂ’ ಎಂಬ ಧ್ಯೇಯವಾಕ್ಕದೊಡನೆ ಸುಮಾರು ೨೫ ವರ್ಷಗಳ ಕಾಲ ಕನ್ನಡಿಗರ ಮನಸ್ಸನ್ನು ಸದಭಿರುಚಿಯ ಹಾಸ್ಯದಿಂದ ರಂಜಿಸಿದ ಪತ್ರಿಕೆ ‘ನಗುವನಂದ’. ಜಿ. ಎಸ್. ಕೃಷ್ಣರಾಯರು ಬೆಂಗಳೂರಿನಿಂದ ೧೯೩೩ರ ಜನವರಿಯಲ್ಲಿ ನಗುವನಂದವನ್ನು ಹೊರಡಿಸಿದರು. ಈ ಪತ್ರಿಕೆ ಸುಬೋಧ ರಾಮರಾಯರ ಸಹಾಯ ಸಹಕಾರಗಳಿಂದ ಸುಬೋಧ ಮುದ್ರಣಾಲಯದಲ್ಲಿ ಮುದ್ರಣಗೊಳ್ಳುತ್ತಿತ್ತು. ೧೯೪೯ರವೆರಗೂ ನಗುವನಂದವನ್ನು ಜಿ. ಎಸ್. ಕೃಷ್ಣರಾಯರು ನೋಡಿಕೊಂಡು ೧೯೪೯ರಿಂದ ಬೇರೆ ಬೇರೆ ಕೈಗಳಿಗೆ ದಾಟಿ ಮತ್ತೆ ೧೯೬೩ರ ವೇಳೆಗೆ ಮತ್ತೆ ಕೃಷ್ಣರಾಯರ ತೆಕ್ಕೆಗೆ ನಗುವನಂದ ಬಂದಿತು. ಮತ್ತೆ ಕೆಲ ಕಾಲ ರಂಜನಾ ಪಬ್ಲಿಕೇಶನ್ಸ್ ಸಂಸ್ಥೆಯ ವತಿಯಿಂದ ಇದು ದೀಪಾವಳಿಯ ಕಾಲದಲ್ಲಿ ಮಾತ್ರ ವಾರ್ಷಿಕವಾಗಿ ಪ್ರಕಟವಾಗಿ ನಾಲ್ಕು ವರ್ಷಗಳ ಬಳಿಕ ನಿಂತಿತು. ವಿ. ಜಿ. ಕೃಷ್ಣಮೂರ್ತಿ ಎರಡು ದಶಕ ‘ನಗುವನಂದ’ಕ್ಕೆ ಅಂಕಣವನ್ನು ಬರೆಯುತ್ತಿದ್ದರು. ರಾಘವೇಂದ್ರ ಚಿತ್ರಕಾರರಾಗಿದ್ದರು. ಗೂರೂರು ರಾಮಸ್ವಾಮಿ ಅಯ್ಯಂಗಾರ್‍, ನಾ. ಕಸ್ತೂರಿ. ಜಿ. ಪುರುಷೋತ್ತಮರಾವ್, ಎಂ. ವಿ. ಪ್ರಭು, ಸುಪುತ್ರ, ಡಿ. ಕೆ. ಭಾರದ್ವಾಜ್, ವೈ. ಕೆ. ತಿಮ್ಮರಸಯ್ಯ. ನಾಡಿಗೇರ ಕೃಷ್ಣರಾಯ. ಬಿ. ಎಚ್. ಶ್ರೀಧರ. ಸೇವಿ ನಮಿರಾಜಮಲ್ಲ. ನವಗಿರಿಂದ ಮುಂತಾದ ಲೇಖಕರ ಪಡೆಯೇ ಪತ್ರಿಕೆಗಿತ್ತು. ಡೆಮಿ ೧/೪ ಆಕಾರದಲ್ಲಿ ಮಾಸಪತ್ರಿಕೆಯಾಗಿದ್ದ ನಗುವನಂದ ೧೯೫೧ರಲ್ಲಿ ವಾರ ಪತ್ರಿಕೆಯಾದಾಗ ಡೆಮಿ ೧/೮ ಆಕಾರಕ್ಕೆ ತಿರುಗಿತು. ನಗೆಮಲ್ಲಿಗೆ, ಸಮಾಧಿಯ ಅಗ್ನಿಕುಂಡ, ಉಪಕಥಾವಳಿ ಅವುಗಳು ಜನಪ್ರಿಯ ವಿಭಾಗಗಳಾಗಿದ್ದವು. ೧೯೬೩ ರಲ್ಲಿ ೬.೮೦೦ ಪ್ರಸಾರ ಹೊಂದಿದ್ದು ನಗುವನಂದದ ಹೆಗ್ಗಳಿಕೆ.

'ಕಥಾಕುಂಜ'

‘ಕಥಾಕುಂಜ’ವನ್ನು ಪ್ಯಾಟಿ ಶ್ಯಾಮರಾಯರು ಸಣ್ಣಕತೆಗಳ ಮಾಸಪತ್ರಿಕೆ, ಬೆಳಗಾವಿ ಎಂದು ಕರೆದರು. ಬಿಡಿಪ್ರತಿಯ ಬೆಲೆ ೦-೨-೦ ಇದ್ದು ವಾರ್ಷಿಕ ಚಂದಾ ೧-೨-೦ಇತ್ತು. ಇದು ೧೯೩೫ನೇ ಜನವರಿಯಲ್ಲಿ ಹೊರಬಂತು. ೧೯೩೭ನೇ ಫಬ್ರುವರಿಯ ಸಂಚಿಕೆಯನ್ನು ವಿಜಯನಗರ ಸಾಮ್ರಾಜ್ಯೋತ್ಸವ ಮತ್ತು ಕರ್ನಾಟಕ ಏಕೀಕರಣಗಳ ವಿಶೇಷಾಂಕವಾಗಿ ಹೊರಡಿಸಲಾಗುತ್ತಿತ್ತು. ಕರ್ನಾಟಕ ಏಕೀಕರಣವಾಗುವ ಮೊಕಲೇ ಏಕೀಕರಣ ವಿಶೇಷಾಂಕ ಹೊರಡಿಸಿದ್ದನ್ನು ಕಂಡರೆ ಪ್ಯಾಟಿ ಶ್ಯಾಮರಾಯರು ಕನ್ನಡ ಪ್ರೀತಿಯನ್ನು ಅರ್ಥಮಾಡಿಕೊಳ್ಳಬಹುದು. ಈ ಪತ್ರಿಕೆಯು ೧೯೩೯ರ ಆರಂಭದಲ್ಲಿ ನಿಂತಿತು. ಆದರೆ ಇದು ಮುಂದೆ ಕೆಲಕಾಲ ಕಥಾಕುಂಜ ಗ್ರಂಥಮಾಲೆಯಾಗಿ ಹೊರಟಿದ್ದಾಗಿ ಅಂತರಂಗ ಪತ್ರಿಕೆಯಲ್ಲಿ ಜಾಹೀರಾತೋಂದು ತಿಳಿಸುತ್ತದೆ.

'ಕಥಾವಳಿ'

‘ಕಥಾವಳಿ’ ಮಾಸಪತ್ರಿಕೆ ೧೯೩೭ರಲ್ಲಿ ಬೆಂಗಳೂರಿನಿಂದ ವಿ. ಗುಪ್ತಾ ಎನ್ನುವವರಿಂದ ಸಂಪಾದಿಸಲ್ಪಟ್ಟಿತು. ಕಥಾವಳಿಯನ್ನು Uptodate Kannada monthly magazine, A treasure of short stories, fun, pichures, film news, art plates along with regular features. Kathavali's Dasara number reaches 5000 homes ಎಂಬುದಾಗಿ ‘ಅಂತರಂಗ’ ಪತ್ರಿಕೆಯಲ್ಲಿ ನೀಡಿದ ಜಾಹೀರಾತು ತಿಳಿಸುತ್ತದೆ. ಕಥಾವಳಿಯ ಜಾಹೀರಾತು ದರ ಪೂರ್ಣ ಪುಟಕ್ಕೆ ೨೦ ರೂಪಾಯಿಗಳೆಂದು ಅರ್ಧ ಪುಟಕ್ಕೆ ೧೨ ರೂಪಾಯಿಗಳೆಂದೂ ತಿಳಿಸಲಾಗಿದೆ.

'ಜಿವನ'

‘ಜೀವನ’ ಕನ್ನಡ ಸಾಹಿತ್ಯದಲ್ಲಿ ಬಹುದೀರ್ಘ ಕಾಲ ಸಾಹಿತ್ಯಿಕ ಪತ್ರಿಕೆಯಾಗಿ ಮೆರೆದ ನಿಯತಕಾಲಿಕ. ಕನ್ನಡ ಸಾಹಿತಿಗಳ ಸಂಪಾದನೆ - ಪಾಲನೆ - ಪೋಷಣೆಯನ್ನು ತನ್ನ ಜೀವಿತದುದ್ದಕ್ಕೂ ಪಡೆದ ‘ಜೀವನ’ ಮುಖ್ಯವಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‍ ಅವರ ಹೆಸರಿನ ಜೊತೆಯೇ ಗುರುತಿಸಿಕೊಂಡಿತು. ‘ಉತ್ತಮ ರೀತಿಯ ಸಾಹಿತ್ಯ ದೃಷ್ಟಿಯ ಕನ್ನಡ ಮಾಸಪತ್ರಿಕೆ’ ಎಂಬುದು ‘ಜೀವನ’ ಘೋಷಿಸಿಕೊಂಡ ರೀತಿ. ‘ಜೀವನ’ಕ್ಕೆ ಸಂಪಾದಕರಾದ ಕನ್ನಡ ಸಾಹಿತಿಗಳ ದೊಡ್ಡ ಪಡೆಯೇ ಇದೆ. ೧೯೪೦ರಲ್ಲಿ ಧಾರವಾಡದಲ್ಲಿ ‘ಜೀವನ’ ಆರಂಭವಾದಾಗ ದ. ರಾ. ಬೇಂದ್ರೆ ಇದರ ಸಂಪಾದಕರು. ಜೀವನ ಸಂಪುಟ ೧ ಸಂಚಿಕೆ ೧ ರಲ್ಲಿ ‘ಜೀವನ’ - ‘ಕರ್ನಾಟಕದ ಸರ್ವಾಂಗ ವಿಚಾರ ಪರಪೂರ್ಣವಾದ ಮಾಸಪತ್ರಿಕೆ’ ಎಂದು ಹೇಳಲಾಗಿದೆ. ‘ಸಂಸ್ಕೃತಿಯ ವಿನಯದೃಷ್ಟಿ, ಸಾಹಿತ್ಯದ ರಸದೃಷ್ಟಿ, ಕಲೆಯ ಶೃಂಗಾರ ದೃಷ್ಟಿ, ಧರ್ಮ ಶಾಸ್ತ್ರದ ವಿವೇಕ ದೃಷ್ಟಿ, ಇತಿಹಾಸದ ಪುರುಷಾರ್ಥ ದೃಷ್ಟಿ, ಅರ್ಥಶಾಸ್ತ್ರದ ವ್ಯವಹಾರ ದೃಷ್ಟಿ, ಮಹಾನುಭಾವರ ಸಮರಸ ದೃಷ್ಟಿ, ಈ ನವದೃಷ್ಟಿಯಿಂದ ನೋಡಿದಾಗಲೆ ಜೀವನವು ನಿತ್ಯ ನೂತನವಾಗುವುದು’ ಎಂಬುದಾಗಿ ಸಂಪಾದಕ ಕವಿ ದ. ರಾ. ಬೇಂದ್ರೆ ನುಡಿಯುತ್ತಾರೆ. ಆರಂಭದಲ್ಲಿ ‘ಜೀವನ’ದ ಬೆಲೆ ಆರು ಆಣೆ. ವಾರ್ಷಿಕ ವರ್ಗಣೆ ೪ ರೂಪಾಯಿ. ಜಿ. ಬಿ. ಜೋಶಿ ಪ್ರಕಾಶಕರಾಗಿದ್ದರು. ನಾಲ್ಕು ವರ್ಷ ಧಾರವಾಡದಲ್ಲಿ ‘ಜೀವನ’ ನಡೆದ ಮೇಲೆ ಸಂಪುಟ ೫, ಸಂಚಿಕೆ ೧ ಮೇ ೧೯೪೪ಕ್ಕೆ ಬೆಂಗಳೂರಿಗೆ ವರ್ಗಾವಣೆಗೊಂಡು, ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಸಂಪಾದಕರಾಗಿ ‘ಜೀವನ’ವನ್ನು ವಹಿಸಿಕೊಂಡರು. ಮೇ ೧೯೪೪ರಲ್ಲಿ ತಮ್ಮ ಸಂಪಾದಕತ್ವದ ಮೊದಲ ಸಂಚಿಕೆಯಲ್ಲಿ ‘ಹೊಸ ಸಂಪಾದಕನ ಬಿನ್ನಹ’ ಎಂಬುದಾಗಿ ಮಾಸ್ತಿಯವರು ಬರೆದಿರುವುದು ವಾಚನೀಯವಾಗಿದೆ :

‘ಇದು ಜೀವನ ಪತ್ರಿಕೆಯ ಐದನೆಯ ವರ್ಷ. ಈವರೆಗೆ ಅದು ಧಾರವಾಡದಲ್ಲಿ ನನ್ನ ಗೆಳೆಯರಾದ ಶ್ರೀ ಗೋಕಾಕ, ಮುಗಳಿ, ಬೇಂದ್ರೆ ಇವರ ಸಂಪಾದಕತ್ವದಲ್ಲಿ ಪ್ರಕಟವಾಯಿತು. ಈಚೆಗೆ ಗೆಳೆಯ ಗೋವಿಂದಾರ್ಯ ಜೋಷಿ ಇವರು ಇದರ ವ್ಯವಸ್ಥೆಯನ್ನು ವಹಿಸಿಕೊಂಡಿದ್ದರು. ಸದ್ಯದಲ್ಲಿ ಯುದ್ಧದ ಕಾರಣದಿಂದ ಒದಗಿರುವ ಕಾಗದದ ಬರದಿಂದ ಪತ್ರಿಕೆಯನ್ನು ಧಾರವಾಡದಲ್ಲಿ ನಡೆಸುವುದು ಕಷ್ಟವಾಯಿತು. . . ಮೊದಲು ಮಾಸಪತ್ರಿಕೆಯಾಗಿ ಹೊರಟ ಜೀವನ ಈಚೆಗೆ ತ್ರೈಮಾಸಿಕವಾಯಿತು. ಇನ್ನೂ ಮುಂದೆ ತ್ರೈಮಾಸಿಕವಾಗಿಯೂ ನಡೆಯುವುದು ಕಷ್ಟವೆನ್ನುವ ಸ್ಥಿತಿಗೆ ಬಂದಿತು. ಮೈಸೂರಿನಲ್ಲಿ ಕಾಗದಕ್ಕೆ ಇಷ್ಟು ತೀರ ಕಷ್ಟವಿಲ್ಲವೆಂದು ನಮ್ಮಲ್ಲೆಲ್ಲ ಒಂದು ತಿಳುವಳಿಕೆ. ಇದರಿಂದ ಪತ್ರಿಕೆಯನ್ನು ಬೆಂಗಳೂರಿನಿಂದ ಹೊರಡುತ್ತಿದೆ. ಮಾಸ್ತಿಯವರು ಹೇಳುವಂತೆ ‘ಜೀವನ’ ಅವರದೇ ಕನಸಿನ ಕೂಸು. ಆದರೆ ಸರ್ಕಾರಿ ಅಧಿಕಾರಿಯಾದುದರಿಂದ ಪತ್ರಿಕೆ ತರುವಂತಿರಲಿಲ್ಲ. ಈ ವಿಷಯವನ್ನು ಧಾರವಾಡದ ಗೆಳೆಯರ ಬಳಿ ಲೋಕಾಭಿರಾಮವಾಗಿ ಮಾತನಾಡುವಾಗ ಪ್ರಸ್ತಾಪಿಸಿದ್ದೇ ಕಾರಣವಾಗಿ ಅವರು ಜೀವನವೆಂಬ ಅಭಿಧಾನದಿಂದ ಪತ್ರಿಕೆ ಆರಂಭಿಸಿಯೇ ಬಿಟ್ಟರು. ಆರ್ಥಿಕ ಸಂಕಷ್ಟಗಳಿಂದ ನಾಲ್ಕು ವರ್ಷ ಹಾಗೂ ಹೀಗೂ ನಡೆದು ನಿಲ್ಲುವ ಹಂತದಲ್ಲಿದ್ದಾಗ ಮಾಸ್ತಿಯವರಿಗೆ ಸೇವೆಯಿಂದ ನಿವೃತ್ತಿಯಾಗಿ ಪತ್ರಿಕೆ ಅವರ ಪಾಲಿಗೇ ಬಂತು. ಮಾಸ್ತಿ ಹೇಳುತ್ತಾರೆ : ಮನುಷ್ಯನ ಆಯುಷ್ಯದಂತೆ ಪತ್ರಿಕೆಯ ಆಯುಷ್ಯವೂ ಅನಿಶ್ಚಿತ. ಸಾಧ್ಯವಾದಷ್ಟು ಕಾಲ ಇದನ್ನು ನಡೆಸಬೇಕೆಂದು ಆಶೆಯೇನೋ ಉಂಟು. ಮಾಸ್ತಿಯವರ ಆಶೆ ವ್ಯರ್ಥವಾಗಲಿಲ್ಲ. ಮುಂದಿನ ೨೫ ವರ್ಷಗಳ ಕಾಲ ಅಖಂಡವಾಗಿ ಮಾಸ್ತಿಯವರ ಸಂಪಾದಕತ್ವ ಜೀವನಕ್ಕೆ ಸಿಕ್ಕಿತು. ಈ ಜಂಘಾಬಲವೇ ‘ಜೀವನ’ವನ್ನು ಕನ್ನಡದ ಅತ್ಯುಚ್ಚ ಸದಭಿರುಚಿಯ ಮಾಸಿಕವಾಗಿ, ನಂತರ ವಾರಪತ್ರಿಕೆಯನ್ನಾಗಿ ಬೆಳಸಿತು. ‘ಜೀವನ’ ಹಣಸಂಪಾದನೆಯ ದೃಷ್ಟಿಯಿಂದ ಸ್ವಯಂ ಕಾಲಮೇಲೆ ನಿಲ್ಲುವಂತೆ ಎಂದೂ ಆಗದಿದ್ದರೂ ಮಾಸ್ತಿಯವರ ಶಿಸ್ತು. ಸೃಜನಶೀಲತೆ, ಜೀವನ ಪ್ರೀತಿ ಜೀವನವನ್ನು ಉಳಿಸಿತು-ಬೆಳಸಿತು. ‘ಜೀವನ’ ಎಂದಿಗೂ ಕಷ್ಟ ಕಾರ್ಪಣ್ಯಗಳಿಂದ ಹೊರಬರಲಿಲ್ಲ. ಆದರೆ ಮಾಸ್ತಿ ಎದೆಗುಂದಲಿಲ್ಲ. ಅವರ ನಿರ್ಭಿಡಯ ಸಂಪಾದಕೀಯಗಳು ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲೊಂದು ಮೈಲಿಗಲ್ಲು. ಮಾಸ್ತಿಯವರ ‘ಜೀವನ’ ಸಂಪಾದಕೀಯದ ಸಂಪುಟಗಳು ಪ್ರತ್ಯೇಕವಾಗಿ ಪ್ರಕಟವಾಗಿವೆ. ಕನ್ನಡದಲ್ಲಿ ಹಾಗೆ ಸಂಪಾದಕೀಯ ಲೇಖನಗಳ ಸಂಗ್ರಹ ತಂದುದು ಮಾಸ್ತಿಯವರೇ ಮೊದಲಿಗರಿರಬೇಕು. ಇಂದು ಮಾಸ್ತಿಯವರ ‘ಜೀವನ’ ಸಂಪಾದಕೀಯಗಳ ಓದು ಸಾಹಿತ್ಯ ಚರಿತ್ರೆಯ ಭಾಗವೇ ಆಗಿದೆ. ‘ಜೀವನ’ ಪತ್ರಿಕೆಯ ಸಂಪುಟ ೧೩ ಸಂಚಿಕೆ ೩ ರಲ್ಲಿ ಪತ್ರಿಕೆಯ ವಿಚಾರ ಎಂಬುದಾಗಿ ಸಂಪಾದಕರು ಬರೆಯುತ್ತಾರೆ. ಜೀವನ ಚರಿತ್ರೆಯನ್ನು ಇದುವರೆಗೆ ಬೆಂಗಳೂರು ಪ್ರೆಸ್ಸಿನಲ್ಲಿ ಅಚ್ಚು ಮಾಡಿಸುತ್ತ ಬಂದಿದೆ. ಬೆಂಗಳೂರು ಪ್ರೆಸ್ಸಿನ ಕೆಲಸ ಒಟ್ಟಿನಲ್ಲಿ ತುಂಬ ಚೆನ್ನಾಗಿರುತ್ತದೆ. ಆದರೆ ಪ್ರೆಸ್ಸಿನ ಬಿಲ್ಲು ದೊಡ್ಡದಾಗಿರುತ್ತದೆ. ಜೀವನ ಪತ್ರಿಕೆಯ ಈಗಿನ ಸ್ಥಿತಿಯಲ್ಲಿ ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡರೆ ಮಾತ್ರ ಅದನ್ನು ನಡೆಸಬಹುದು. ಈ ಕಾರಣದಿಂದ ಪತ್ರಿಕೆಯ ಅಚ್ಚಿನ ಕೆಲಸವನ್ನು ಬೇರೆಯ ಅಚ್ಚಿನ ಮನೆಗೆ ತೆಗೆದುಕೊಂಡು ಹೋಗಿದೆ. ಈ ಸಂಚಿಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕಂಠಯ್ಯ ಅಚ್ಚುಕೊಟದಲ್ಲಿ ಅಚ್ಚಾಗಿದೆ. ಇಪ್ಪತ್ತೈದು ವರ್ಷ ಜೀವನವನ್ನು ನಡೆಸಿದ ಮಾಸ್ತಿ ನಿವೃತ್ತಿ ಹೊಂದಲು ಬಯಸಿ ೧೯೬೫ರ ಜುಲೈನಲ್ಲಿ ‘ಜೀವನ’ವನ್ನು ಸಂಪಾದಕ ಮಂಡಳಿಗೆ ಬಿಟ್ಟುಕೊಡುತ್ತಾರೆ. ಹೊಸ ಸಂಪಾದಕ ಮಂಡಳಿಯಲ್ಲಿ ೧. ಎಚ್. ಪಿ. ಕಪಿನೀಪತಿ ಭಟ್ಟ - ಅಧ್ಯಕ್ಷರು ೨. ಜಿ. ಪಿ. ರಾಜರತ್ನಂ ೩. ಟಿ. ಎಲ್. ಶ್ರೀನಿವಾಸಾಚಾರ್ಯ, ೪. ಬಿ. ಗೋಪಾಲನಾರಾಯಣ. ೫. ಕೆ. ಗೋಪಾಲಕೃಷ್ಣರಾಯ ಸಂಪಾದಕರು ಇವಿಷ್ಟು ಜನರಿದ್ದಾರೆ. ಹೊಸ ಸಂಪಾದಕ ಮಂಡಳಿ ‘ಜೀವನ’ವನ್ನು ವಹಿಸಿಕೊಂಡು ಸಂಪಾದಕರು ಸಂಪಾದಕೀಯದಲ್ಲಿ ‘ಇಂತಹ ಪತ್ರಿಕೆಗಳಿಗೆ ಈ ದೇಶದಲ್ಲೇ ಇಲ್ಲ ಎಲ್ಲಾ ದೇಶಗಳಲ್ಲಿರುವವರನ್ನೂ ತೂಗಿಸಿಕೊಂಡು ಹೋಗುವುದೇ ಕಷ್ಟವಾಗುತ್ತದೆ. ಸಂಪಾದಕ ಮಂಡಲಿಯವರು ಕೈಯಿಂದ ಹಣ ಹಾಕದೇ ಕೈಲಾದ ಸೇವೆ ಮಾಡಿ ಸಲ್ಲಿಸುವಂತೆ ಆದರೆ ಸಾಕು ಎಂದಿದ್ದಾರೆ. ಜುಲೈ ೧೯೬೫ಕ್ಕೆ ‘ಜೀವನ’ ಸಂಪಾದಕತ್ವದ ಜವಾಬ್ದಾರಿ ಹೊತ್ತುಕೊಳ್ಳುವ ಕೆ. ಗೋಪಾಲಕೃಷ್ಣರಾಯರು ಸೆಪ್ಟಂಬರ್‍ ೧೯೬೭ರವರೆಗೆ ‘ಜೀವನ’ವನ್ನು ನೋಡಿಕೊಳ್ಳುತ್ತಾರೆ. ಅಕ್ಟೋಬರ್‍ ೮ರಂದು. ಕೆ. ಗೋಪಾಲಕೃಷ್ಣರಾಯರು ನಿಧನರಾದರು. ಮತ್ತೆ ಮೂರು ತಿಂಗಳು ಪತ್ರಿಕೆ ಬರಲಿಲ್ಲ. ಅವರ ಮರಣಾನಂತರ ಜನವರಿ ೧೯೬೮ರಿಂದ ಸಿದ್ಧವನಹಳ್ಳಿ ಕೃಷ್ಣಶರ್ಮರ ಸಂಪಾದಕತ್ವದಲ್ಲಿ ‘ಜೀವನ’ ಹೊರಬಂತು. ಪತ್ರಿಕೆಯ ಕಾರ್ಯಲಯವು ‘ಜೀವನ ಕಾರ್ಯಲಯ, ಬಸವನಗುಡಿ ಬೆಂಗಳೂರು-೪ ಇಲ್ಲಿಂದ ಗಾಂಧೀ ಸಾಹಿತ್ಯ ಸಂಘ ಮಲ್ಲೇಶ್ವರ ಬೆಂಗಳೂರು-೩ ಇಲ್ಲಿಗೆ ಬದಲಾಯಿತು. ಅನಾರೋಗ್ಯದ ಕಾರಣ ಸಿದ್ಧವನಹಳ್ಳಿ ಕೃಷ್ಣಶರ್ಮರು ಒಂಬತ್ತು ತಿಂಗಳು ಮಾತ್ರ ಸಂಪಾದಕರಾಗಿ ಮುಂದುವರಿಯುವುದು ಸಾಧ್ಯವಾಯ್ತು. ನವೆಂಬರ್‍ ಹಾಗೂ ಡಿಸೆಂಬರ್‍ ೧೯೬೮ರ ಸಂಚಿಕೆಗಳು ಹೊರಬರಲಿಲ್ಲ. ಜನವರಿ ೧೯೬೯ರಿಂದ ಹಂ. ಪ. ನಾಗರಾಜಯ್ಯನವರು ‘ಜೀವನ’ ಪತ್ರಿಕೆಯ ಸಂಪಾದಕೀಯ ಜವಬ್ದಾರಿ ಹೊತ್ತುಕೊಂಡರು. ಅಲ್ಲಿಂದ ೧೯೭೪ರ ಜನವರಿ ಸಂಚಿಕೆ ೩೪ನೇ ಸಂಪುಟಕ್ಕೆ ಕಾಲಿರಿಸಿದಾಗಲೂ ಹಂ. ಪ. ನಾ. ಸಂಪಾದಕರು. ಆ ಹೊತ್ತಿಗೆ ದೇಶದಲ್ಲಿ ತುರ್ತುಸ್ಥಿತಿ ಧುತ್ತನೆ ಎದುರಾಗಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಪತ್ರಿಕಾ ಸೆನ್ಸಾರ್‌ಶಿಪ್ ಜಾರಿಗೆ ಬಂತು. ಈ ರಾಜಕೀಯ ಸ್ಥತ್ಯಂತರಗಳಲ್ಲಿ ಶುದ್ಧ ಸಾಹಿತ್ಯಿಕ ಸದಭಿರುಚಿಯ ಪತ್ರಿಕೆ ‘ಜೀವನ’ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲಾಗದೆ ನಿಂತುಹೋಯಿತು. ಆದರೂ ೩೫ ವರ್ಷ ಕನ್ನಡ ಸಾಹಿತ್ಯಿಕ ಪರಿಸರದ ದೊಡ್ಡ ಧ್ವನಿಯಾಗಿ, ಹಿರಿಯ-ಕಿರಿಯ- ಲೇಖಕರಿಗೆ ವೇದಿಕೆಯಾಗಿ, ಕನ್ನಡಿಗರ ಸದಭಿರುಚಿಯ ಕಾಪಿಟ್ಟ ಪತ್ರಿಕೆಯಾಗಿ ‘ಜೀವನ’ ಉಳಿದುಕೊಂಡಿತ್ತು. ಸ್ವಂತ-ಕಾರ್ಯಾಲಯ-ಸಂಪಾದಕರು-ಸಹಾಯಕರುಗಳನ್ನು ಹೊಂದಿ, ಸಂಪಾದಕರುಗಳ ಬದಲಾವಣೆಯ ವೇಳೆ ಮಾತ್ರ ೩ ತಿಂಗಳು ರಜಾ ತೆಗೆದುಕೊಂಡಿದ್ದು ಬಿಟ್ಟರೆ, ಇಷ್ಟು ದೀರ್ಘಾವಧಿ ವ್ಯವಸ್ಥಿತವಾಗಿ ಹಾಗೂ ಪತ್ರಿಕೆಯೊಂದು ವೃತ್ತಿಪರವಾಗಿ ಹೊರಬಂದ ಉದಾಹರಣೆ ಕನ್ನಡದಲ್ಲಿ ಜೀವನ ಒಂದೇ. ಹೀಗಾಗಿ ಅದಕ್ಕೆ ಸಾಹಿತ್ಯ ಪತ್ರಿಕೆಗಳ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ. ‘ಜೀವನ’ ಪತ್ರಿಕೆ ‘ಜೀವನ ಸಾಹಿತ್ಯ ಗ್ರಂಥಮಾಲೆ’ಯನ್ನು ಸ್ಥಾಪಿಸಿ ಸಾಹಿತ್ಯ ಸೇವೆ ಮಾಡಿದ್ದನ್ನೂ ದಾಖಲಿಸಬೇಕು. ಜೀವನ ಕಾರ್ಯಲಯದಿಂದ ಈ ಗ್ರಂಥಮಾಲೆಯನ್ನು ಹೊರಡಿಸುತ್ತಿತ್ತು. ಕ್ರೌನ್ ೧/೮ ಆಕಾರದ ಕನಿಷ್ಠ ೫೦೦ ಪುಟಗಳ ಸಾಹಿತ್ಯವನ್ನು ಪ್ರತಿ ವರ್ಷ ಒದಗಿಸಲಾಗುತ್ತಿತ್ತು. ಜೀವನ ಪತ್ರಿಕೆಯ ಖಾಯಂ ಚಂದಾದಾರರಿಗೆ ವಾರ್ಷಿಕ ವರ್ಗಣೆ ಆರು ರೂಪಾಯಿ, ಇತರರಿಗೆ ಏಳೊವರೆ ರೂಪಾಯಿ. ಜೀವನ ಸಾಹಿತ್ಯ ಗ್ರಂಥಮಾಲೆ ಹಾಕಿಕೊಟ್ಟ ಈ ಸಂಪ್ರದಾಯವನ್ನು ಧಾರವಾಡದ ಮನೋಹರ ಗ್ರಂಥಮಾಲೆ ಇಂದಿಗೂ ಮುಂದುವರೆಸುತ್ತಿರುವುದನ್ನು ಗಮನಿಸಬೇಕು. ‘ಜೀವನ’ ಪತ್ರಿಕೆಯ ನಿರೀಕ್ಷೆ ಹಿತ-ಮಿತ. ಸಂಪಾದಕ ಮಂಡಳಿಯವರು ಕೈಸುಟ್ಟುಕೊಳ್ಳದೇ ಕೈಯಿಂದ ಹಣ ಹಾಕದೇ ಕೈಲಾದ ಸೇವೆ ಸಲ್ಲಿಸುವಂತೆ ಆದರೆ ಸಾಕು ಎನ್ನುವುದು ಅವರ ಸಂಕಲ್ಪ. ಯಾವತ್ತು ಈ ಆಶಯವೂ ಕೈಗೊಡಲಿಲ್ಲವೋ ‘ಜೀವನ’ ನಿಶ್ಚಲಗೊಂಡಿತೆಂದು ನಂಬಬಹುದು.

'ಜಯಂತಿ'

‘ಜಯಂತಿ’. ಬೆಟಗೇರಿ ಕೃಷ್ಣಶರ್ಮರವರು ೧೯೩೮ರಲ್ಲಿ ಆರಂಭಿಸಿದ ಸಾಮಾನ್ಯ ಆಸಕ್ತಿಯ ಮಾಸಿಕ. ಮೊದಲು ಮಾಸಿಕವಾಗಿದ್ದು ಜನಪ್ರಿಯತೆಯಿಂದಾಗಿ ವಾರಪತ್ರಿಕೆಯಾಯ್ತು. ವಾರ ಪತ್ರಿಕೆಯಾದ ಮೇಲಂತೂ ಸರ್ವ ಆಸಕ್ತಿಗಳನ್ನೂ ಪೋಷಿಸುವ, ಇಂದಿನ ಸುಧಾ, ತರಂಗ ಪತ್ರಿಕೆಗಳಿಗೆ ಅಭಿನ್ನವಾಗಿ ವಸ್ತುಗಳನ್ನು ಹೊಂದಿ ಜಯಂತಿ ಪ್ರಕಟಗೊಳ್ಳುತ್ತಿತ್ತು. ಆದರೂ ಜಯಂತಿಯ ಸಂಪಾದಕರಾದ ಬೆಟಗೇರಿಯವರು ಮೂಲತಃ ಸಾಹಿತಿಗಳು, ಸಣ್ಣ ಕಥೆಗಾರರು. ಹೀಗಾಗಿ ಸಾಹಿತ್ಯಿಕ ವಾಸನೆ ಪತ್ರಿಕೆಗೆ ಹೆಚ್ಚಾಗಿತ್ತು. ೧೯೬೪ರಲ್ಲಿ ಜಯಂತಿ ಪತ್ರಿಕೆ ನಿಂತಿತು. ಕವಿಭೂಷಣ ಎನಿಸಿಕೊಂಡಿರುವ ಬೆಟಗೇರಿ ಕೃಷ್ಣಶರ್ಮರು ಸಂಪಾದಕರಾಗಿ ಕಾಲುಶತಮಾನಕ್ಕೂ ಹೆಚ್ಚು ನಡೆಸಿದ ‘ಜಯಂತಿ’ ೧೯೩೮ರ ಮೇ ತಿಂಗಳಿನಲ್ಲಿ ಧಾರವಾಡದಿಂದ ಪ್ರಕಟಣೆಯನ್ನಾರಂಭಿಸಿತು. ವಿ. ವೈ. ಜಠಾರ. ಶಂಕರರಾವ್ ಜಠಾರ, ಪಿ. ಡಿ. ದೇಶಪಾಂಡೆ, ಮಾಧವರಾವ್ ಪಾಟೀಲ ಮುಂತಾದವರು ಪತ್ರಿಕೆಯ ಹಿನ್ನಲೆಯಲ್ಲಿದ್ದರು. ಮೊದಲು ಮೂರು ವರ್ಷ ಬೆಟಗೇರಿಯವರು ಜೊತೆ ಮಾಧವರಾವ್ ಪಾಟೀಲರನ್ನೂ ಸಂಪಾದಕರೆಂದು ಹೆಸರಿಸಲಾಗುತ್ತಿತ್ತು. ೧೯೪೧ ರಿಂದ ಶರ್ಮರೇ ಪೂರ್ಣ ಒಡೆತನ ಪಡೆದುಕೊಂಡು ೧೯೬೧ರ ಜುಲೈವರೆಗೆ ನಡೆಸಿದರು. ಆ ವರ್ಷದ ಸೆಪ್ಟೆಂಬರ್‌ನಿಂದ ಸಿ. ಎನ್. ಕುಲಕರ್ಣಿ ಇದನ್ನು ವಹಿಸಿಕೊಂಡರು. ಅಲ್ಲಿಂದ ಮುಂದಕ್ಕೆ ಹೊರಡಿ, ರಾಮಚಂದ್ರ ಕೊಟ್ಟಲಗಿಯವರು ಸಂಪಾದಕರಾಗಿದ್ದರು. ೧೯೬೪ರಲ್ಲಿ ಪತ್ರಿಕೆ ನಿಂತಿತು. ಡೆಮಿ ೧/೪ ಚತುಷ್ಟಮದ ಆಕಾರದ ೬೪ ಪುಟಗಳ ಪತ್ರಿಕೆ ನಂತರ ೮೦ ಪುಟಗಳಿಗೇರಿ ಕೊನೆಗೆ ೪೮ಕ್ಕಿಳಿಯಿತು. ಆರಂಭದಲ್ಲಿ ಪತ್ರಿಕೆಯ ಬೆಲೆ ನಾಲ್ಕು ಆಣೆ, ಪತ್ರಿಕೆ ನಿಲ್ಲುವ ವೇಳೆಗೆ ಅದರ ಬೆಲೆ ಎಂಟು ಆಣೆ. ವಾರ್ಷಿಕ ಚಂದಾ ೩ ರೂಗಳಿಂದ ೬ ರೂಗಳವರೆಗೆ ಏರಿತ್ತು. ನಿಲ್ಲುವ ಹಂತದಲ್ಲಿ ಪತ್ರಿಕೆಯ ಪ್ರಸಾರ ಒಂದು ಸಾವಿರವೂ ಇರಲಿಲ್ಲ. ‘ವಿಮರ್ಶೆಯ ಶಿಕ್ಷಣರಂಗ’ ಜಯಂತಿಯ ವಿಶೇಷ ಅಂಕಣ. ಓದುಗರಿಗೆ ವಿಮರ್ಶೆಯ ಶಿಕ್ಷಣ ನೀಡುವುದು ವಿಶೇಷ. ಲಲಿತ ಸಾಹಿತ್ಯವನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದ ಜಯಂತಿ ಒಂದು ಶ್ರೇಷ್ಠ ದರ್ಜೆಯ ಮಾಸಪತ್ರಿಕೆಯೆನಿಸಿ ಕನ್ನಡಕ್ಕೆ ವಿಶೇಷ ರೀತಿಯಲ್ಲಿ ಸೇವೆ ಸಲ್ಲಿಸಿತು. " ಜಯಂತಿ ನನ್ನ ಜೀವನದ ಯೋಗಕ್ಷೇಮವನ್ನು ನೋಡುವಂತಹ ಸಾಮರ್ಥ್ಯವನ್ನು ಎಂದೂ ಪಡೆಯಲಿಲ್ಲ. ಕೊನೆಯವರೆಗೂ ಅದರ ಯೋಗಕ್ಷೇಮವನ್ನು ನಾನು ನೋಡಬೇಕಾಯಿತು. ಕೊನೆಕೊನೆಯ ಏಳು ವರ್ಷಗಳ ಅವಧಿಯಲ್ಲಂತೂ ದೈವ ನನ್ನ ಸತ್ವಪರೀಕ್ಷೆಯನ್ನೇ ಮಾಡಿತೆಂದು ಹೇಳಬಹುದು. ನಿಜವಾಗಿಯೂ ನನಗೆ ಸಹಧರ್ಮಿಯಾಗಿದ್ದ ನನ್ನ ಹೆಂಡತಿಯನ್ನು ಕ್ಷಯರೋಗ ಅಂಟಿಕೊಂಡಿತು. ಆಕೆಯನ್ನು ಜಯಂತಿಯನ್ನೂ ಬದುಕಿಸಿಕೊಳ್ಳಬೇಕೆಂಬ ನನ್ನ ಪ್ರಯತ್ನ ನನ್ನನ್ನು ಸಾಲಗಾರನನ್ನಾಗಿಯೂ ಮಾಡಿತು. ನನ್ನ ಆರೋಗ್ಯತೆಯನ್ನು ಮೀರಿ ನಾನು ರೋಗ ಚಿಕಿತ್ಸೆಗಾಗಿ ಹಣದ ಹೊಳೆ ಹರಿಸಿದರೂ ಹೆಂಡತಿಯನ್ನು ಬದುಕಿಸಿಕೊಳ್ಳಲಾರದಾದೆ. . . ಜಯಂತಿಯಿಂದ ನಿವೃತ್ತನಾಗುವುದಕ್ಕೆ ಹೆಂಡತಿಯ ಅಗಲಿಕೆಯೂ ಒಂದು ಕಾರಣವೆನ್ನಬಹುದು." ಇದು ೨೩ ವರ್ಷ ಆರು ತಿಂಗಳು ಜಯಂತಿಯ ಸಂಪಾದಕರಾಗಿದ್ದ ಬೆಟಗೇರಿಯವರು ಪತ್ರಿಕೆಯನ್ನು ಬಿಡುವಾಗ ತನ್ನ ನೋವನ್ನು ತೋಡಿಕೊಂಡ ರೀತಿ.

'ಕನ್ನಡ ನುಡಿ'

ಸಾಂಸ್ಥಿಕ ಪ್ರಯತ್ನಗಳಲ್ಲಿ ಮುಖ್ಯವಾದ ‘ಕನ್ನಡನುಡಿ’ ೧೯೩೮ರಲ್ಲೇ ಆರಂಭವಾದುದು. ಕನ್ನಡ ಸಾಹಿತ್ಯ ಪರಿಷತ್ತು ಪ್ರಾಚೀನ ಗ್ರಂಥಗಳು ಹಾಗೂ ವಿದ್ವತ್ ವಿಚಾರಗಳ ಪ್ರಕಟಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯೆಂಬ ಷಾಣ್ಮಾಸಿಕ ಪತ್ರಿಕೆಯನ್ನು ಹೊರಡಿಸುವಂತೆಯೇ ಸಾಹಿತ್ಯ ಪರಿಷತ್ತಿನ ಚಟುವಟಿಕೆಯನ್ನು ದಾಖಲಿಸುವ ಸಲುವಾಗಿ, ಸಾಹಿತ್ಯ ಪರೀಕ್ಷೆಗಳು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸುವ ಸಲುವಾಗಿ ‘ಕನ್ನಡ ನುಡಿ’ ಎಂಬ ಮಾಸಿಕವನ್ನು ಹೊರತರುತ್ತಿದೆ. ‘ಕನ್ನಡನುಡಿ’ಗೆ ಪ್ರತ್ಯೇಕ ಸಂಪಾದಕರಿದ್ದಾರೆ. ಸಾಹಿತ್ಯ ಪರಿಷತ್ ಸಿಬ್ಬಂದಿಯೇ ಕನ್ನಡನುಡಿಯ ವ್ಯವಹರವನ್ನು ನೋಡಿಕೊಳ್ಳುತ್ತಾರೆ. ಸರಿಯಾದ ಪ್ರಚಾರವಿಲ್ಲದೇ, ಅದನ್ನು ತನ್ನ ಕಾಲ ಮೇಲೆ ತಾನು ನಿಲ್ಲುವ ಹಾಗೆ ಬೆಳಸಬೇಕಾದ ಬದ್ಧತೆಯಿಲ್ಲದೇ ಅಂತೂ ಸಾಹಿತ್ಯ ಪರಿಷತ್ತಿನ ಬಂಡವಾಳವನ್ನು ಬಳಿಸಿಕೊಂಡು ಇಂದಿಗೂ ಹೊರಬರುತ್ತಿದೆ. ನಾಲ್ಕು ಕೋಟಿ ಕನ್ನಡಿಗರ ಸಾಹಿತ್ಯ ಪರಿಷತ್ತಿನ ಪತ್ರಿಕೆಗಳು ಸಾವಿರ ಮನೆಗಳನ್ನೂ ತಲುಪುತ್ತಿಲ್ಲ. ಗದಗದಿಂದ ತಟ್ಟಿ ಕೃಷ್ಣರಾವ್ ಅವರ ಸಂಪಾದಕತ್ವದಲ್ಲಿ ಹೊರಬಂದ ಪ್ರಸಾದ (೧೯೩೯), ಬೆಂಗಳೂರಿನಿಂದ ೧೯೩೯ರಲ್ಲಿ ಎ. ನಾರಾಯಣ ಅಯ್ಯಂಗಾರ್‍ ಅವರ ಸಂಪಾದಕತ್ವದಲ್ಲಿ ಬಂದ ಪ್ರತಿಭಾ, ಮುಂದಿನ ವರ್ಷ ಅದೇ ಹೆಸರಿನಿಂದ ಧಾರವಾಡದಲ್ಲಿ ಬಾಲಚಂದ್ರ ಘಾಣೇಕರ ಅವರ ಸಂಪಾದಕತ್ವದಲ್ಲಿ ಬಂದ ಪ್ರತಿಭಾ ಪತ್ರಿಕೆ, ತೀರ್ಥಹಳ್ಳಿಯಿಂದ ಕೂಡಲಿ ಚಿದಮಬರಮ್ ಅವರ ಸಂಪಾದಕತ್ವದಲ್ಲಿ ಹೊರಬಂದ ವಿಚಾರವಾಹಿನಿ, ಇವೆಲ್ಲ ಆ ಕಾಲದಲ್ಲಿ ಬಂದು ಹೋದ ಇನ್ನಷ್ಟು ಸಾಹಿತ್ಯಿಕ ಪತ್ರಿಕೆಗಳು.

ಸಾಹಿತ್ಯ ಪತ್ರಿಕೆಗಳು (೧೯೪೧ ರಿಂದ ೧೯೫೬ ರವರೆಗೆ)

ಇಪ್ಪತ್ತನೇ ಶತಮಾನದ ನಾಲ್ಕನೇ ದಶಕದ ಆರಂಭದಿಂದ ೧೯೫೬ರವರೆಗೆ ಅಂದರೆ ಕರ್ನಾಟಕ ರಾಜ್ಯ ಉದಯವಾಗುವವರೆಗಿನ ಅವಧಿ ಭಾರತದೇಶದಲ್ಲಿ ಬಹಳ ಮಹತ್ವದ ದಿನಗಳು. ೧೯೪೦ರ ವೇಳೆಯೆಂದರೆ ಸ್ವಾತಂತ್ಯ್ರ ಚಳುವಳಿ ಉಚ್ಚ್ರಾಯ ಸ್ಥಿತಿಯನ್ನು ತಲುಪಿದ್ದ ಕಾಲ. ೧೯೪೨ರಲ್ಲಿ ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿದರು. ದೇಶಾದ್ಯಂತ ಭಾರತ ಬಿಟ್ಟು ತೊಲಗಿ ಚಳವಳಿ ಬಿರುಸಿನಿಂದ ಸಾಗಿದಂತೆ ಕನ್ನಡ ನೆಲ ಅದಕ್ಕೆ ಹೊರತಾಗಿರಲಿಲ್ಲ. ಗಾಂಧೀಜಿಯವರ ನೇತೃತ್ವದಲ್ಲಿ ಭಾರತೀಯರ ನಿರಂತರ ಹೋರಾಟದ ಫಲವಾಗಿ ೧೯೪೭ರ ಆಗಸ್ಟ್ ೧೫ ರಂದು ದೇಶಕ್ಕೆ ಸ್ವಾತಂತ್ಯ್ರ ಬಂತು. ಬ್ರಿಟಿಷರ ಸಂಕೋಲೆಗಳಿಂದ ಭಾರತ ಮುಕ್ತವಾಯಿತು. ಹೊಸ ಬದುಕಿನ ಪರಿಣಾಮ ಭಾರತೀಯ ಪತ್ರಿಕೆಗಳ ಮೇಲೂ ಆಯಿತು. ಭಾರತ ಸ್ವತಂತ್ರಗೊಂಡು ತರುವಾಯವೂ ಕನ್ನಡಿಗರು ಇನ್ನೊಂದು ಸಂಗ್ರಾಮಕ್ಕೆ ಸಿದ್ಧಗೊಳ್ಳಬೇಕಾಯಿತು. ಅದು ಭಾಷಾವಾರು ಪ್ರಾಂತ್ಯಗಳ ರಚನೆಯ ಭಾರತ ಸರ್ಕಾರದ ತೀರ್ಮಾನದಂತೆ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಸಿ ಕನ್ನಡ ರಾಜ್ಯವೊಂದನ್ನು ಸಂಘಟಿಸುವ ಕೆಲಸ. ಅದಕ್ಕಾಗಿ ೧೯೪೭ರಿಂದ ೧೯೫೬ರವರೆಗೂ ಕಾಯಬೇಕಾಯ್ತು. ಆಲೂರು ವೆಂಕಟರಾಯರು, ಹರ್ಡೀಕರ ಮಂಜಪ್ಪ, ರಂಗನಾಥ ದಿವಾಕರ ಮುಂತಾದ ಹಿರಿಯರ ಪ್ರಯತ್ನಗಳು ಫಲಕಾರಿಯಾಗಿ ೧೯೫೬ರ ನವೆಂಬರ್‍ ಒಂದರಂದು ಪುನರ್‌ರಚಿತ ಮೈಸೂರು ರಾಜ್ಯ ಸ್ಥಾಪನೆಯಾಯಿತು. ಕಾವೇರಿಯಿಂದ ಗೋದಾವರಿವರೆಗೂ ಹಬ್ಬಿದ್ದ ರಾಜ್ಯವೆಂಬ ಖ್ಯಾತಿ ಉಳಿಯದಿದ್ದರೂ ಬಾಂಬೇ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸು ಕರ್ನಾಟಕವೆಂಬ ಭಾಗಗಳು ಮೂಲ ಮೈಸೂರು ಸಂಸ್ಥಾನದ ಜೊತೆ ಮಿಲನಗೊಂಡು ಮೈಸೂರು ರಾಜ್ಯ ಸ್ಥಾಪನೆಯಾಯ್ತು. ೧೯೭೩ರ ನವೆಂಬರ್‍ ಒಂದರಂದು ಮೈಸೂರು ರಾಜ್ಯಕ್ಕೆ ಸಮಸ್ತ ಭಾಗಗಳನ್ನು ಪ್ರಿತಿನಿಧಿಸುವ ಹಾಗೆ ಕರ್ನಾಟಕವೆಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸುರವರು ನಾಮಕರಣ ಮಾಡಿದರು. ಹೀಗೆ ಕರ್ನಾಟಕ ರಾಜ್ಯ ಉದಯವಾಯಿತು. ರಾಜಕೀಯ ಬೆಳವಣಿಗೆಗಳಿಗಾಗಿ ಹೇಗೋ ಸಾಹಿತ್ಯಿಕ ಬೆಳವಣಿಗೆಗಳ ದೃಷ್ಟಿಯಿಂದಲೂ ೧೯೪೦ ರಿಂದ ೧೯೫೬ರವರೆಗಿನ ಘಟ್ಟ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾದುದು. ಕುವೆಂಪು, ಬೇಂದ್ರೆ, ಪು. ತಿ. ನ. ಆದಿಯಾಗಿ ಕನ್ನಡದಲ್ಲಿ ನವೋದಯ ಕವಿಗಳು ಕನ್ನಡ ಕಾವ್ಯವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದ ಮೇಲೆ ಜನ ಹೊಸ ಅಭಿವ್ಯಕ್ತಿಗಾಗಿ ಹಾತೊರಯುತ್ತಿದ್ದರು. ೪೦ರ ದಶಕದಲ್ಲಿ ಪ್ರಗತಿಶೀಲ ಸಾಹಿತಿಗಳೆನಿಸಿಕೊಂಡವರೂ ವಿಪುಲವಾಗಿ ಸಾಹಿತ್ಯ ರಚನೆ ಮಾಡಿ ಸಾಹಿತ್ಯವನ್ನು ಮನೆಮನೆಗೆ ತಲುಪಿಸಲು ಶ್ರಮಪಟ್ಟರು. ಪ್ರಗತಿಶೀಲರ ಮಹತ್ವದ ಕೊಡುಗೆಯೆಂದರೆ ಪುಸ್ತಕಗಳಲ್ಲಿ, ಕಪಾಟುಗಳಲ್ಲಿ ಬಂಧಿತವಾಗಿದ್ದ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪಿಸುವ ಮೂಲಕ ಕನ್ನಡ ಸಾಹಿತ್ಯ ಓದುಗರ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು, ಚಂದ್ರ, ತಾರೆ, ಆಕಾಶ, ಹೂವು, ಹಕ್ಕಿಗಳಲ್ಲಿ ಅಲೆಯುತ್ತಿದ್ದ ನವೋದಯ ಸಾಹಿತ್ಯಕ್ಕೆ (ಮುಖ್ಯವಾಗಿ ಕಾವ್ಯಕ್ಕೆ) ಭಿನ್ನವಾಗಿ ಜನಸಾಮಾನ್ಯರ, ಬಡ ಮಧ್ಯಮ ವರ್ಗದ ಜನರ ಜೀವನದ ಸುಖ ದುಃಖಗಳನ್ನು ಚಿತ್ರಿಸಿದ್ದು, ಅನಕೃ, ಬಸವರಾಜ ಕಟ್ಟೀಮನಿ, ನಿರಂಜನ ಮುಂತಾದ ಪ್ರಗತಿಶೀಲ ಸಾಹಿತಿಗಳೆನಿಸಿಕೊಂಡವರು ಕನ್ನಡದಲ್ಲಿ ವಿಪುಲವಾಗಿ ಬರೆದರು. ಬರವಣಿಗೆಯನ್ನೇ ಜೀವನ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದರು. ಹೀಗಾಗಿ ಜನಪ್ರಿಯವಾಗುವ ಧಾಟಿಯಲ್ಲಿ ಬರೆಯುವುದು ಹಾಗೂ ಬರೆದುದನ್ನು ಹೆಚ್ಚು ಜನಕ್ಕೆ ತಲುಪಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಹೀಗೆ ಸಾಹಿತ್ಯವನ್ನು ಜನರ ಬಳಿಗೆ ಒಯ್ಯಲು ಪ್ರಗತಿಶೀಲರು ಬಳಸಿಕೊಂಡ ಮಾರ್ಗ ಪತ್ರಿಕೆಗಳು. ಸಾಮಾನ್ಯ ಆಸಕ್ತಿಯ ಪತ್ರಿಕೆಗಳ ಮೂಲಕ ಕಥೆಗಳನ್ನೋ ಧಾರಾವಾಹಿಗಳನ್ನೋ ಪ್ರಕಾಶಿಸುವುದು ಒಂದು ರೀತಿಯದಾದರೆ ಕಥೆ ಕಾದಂಬರಿಗಳಿಗಾಗಿಯೇ ಪತ್ರಿಕೆಗಳನ್ನು ತರುವುದು ಪ್ರಗತಿಶೀಲರು ವಿಪುಲವಾಗಿ ಬಳಸಿಕೊಂಡ ಮತ್ತೊಂದು ಮಾರ್ಗ. ಈ ಕಾರಣದಿಂದಲೇ ಕಥಾಂಜಲಿ, ಕಥೆಗಾರ, ಕಥಾವಳಿ, ಕಥಾಸಂಗ್ರಹ. . . ಮುಖ್ಯವಾಗಿ ೧೯೩೦ರಿಂದ ೫೦ರ ಅವಧಿಯಲ್ಲಿ ಅಂದರೆ ನವೋದಯದವರು ಹಾಗೂ ಪ್ರಗತಿಶೀಲರು ಕ್ರಿಯಾಶೀಲವಾಗಿದ್ದ ಅವಧಿಯಲ್ಲೇ ಹೊರಬಂದವು. ಈ ದೃಷ್ಟಿಯಲ್ಲಿ ನೋಡಿದಾಗ ಕನ್ನಡ ಸಾಹಿತ್ಯಿಕ ಪತ್ರಿಕೆಗಳ ದೃಷ್ಟಿಯಿಂದ ೨೦ ನೇ ಶತಮಾನದ ಪ್ರಥಮಾರ್ಧ, ಸಂಖ್ಯೆಯ ದೃಷ್ಟಿಯಿಂದಲೂ ಜನಪ್ರಿಯತೆಯ ದೃಷ್ಟಿಯಿಂದಲೂ ಬಹಳ ಪ್ರಮುಖ ಘಟ್ಟ. ಕನ್ನಡ ಸಾಹಿತ್ಯ ನವೋದಯ, ಪ್ರಗತಿಶೀಲ ಸಾಹಿತ್ಯದ ಉಚ್ಛ್ರಾಯ ಸ್ಥಿತಿಯನ್ನು ಈ ಅವಧಿಯಲ್ಲಿ ಕಂಡ ಹಾಗೆ ಅದಕ್ಕೆ ಸಂಬಂದಿಸಿದ ಸಾಹಿತ್ಯ ಪತ್ರಿಕೆಗಳಿಗೂ ಈ ಅವಧಿ ಪ್ರಸಿದ್ಧಿ ತಂದ ಕಾಲ. ಇಪ್ಪತ್ತನೇ ಶತಮಾನದ ಮೊದಲಾರ್ಧ ಮುಗಿಯುವ ಹೊತ್ತಿಗೆ ದೇಶದಲ್ಲೆಡೆ ಹೊಸತನ. ಸ್ವಾತಂತ್ಯ್ರದ ಜೀವನ. ಕನ್ನಡಿಗರಿಗೆ ಇಮ್ಮಡಿ ಹುಮ್ಮಸ್ಸು ಯಾಕೆಂದರೆ ಸ್ವಾತಂತ್ಯ್ರದೊಟ್ಟಿಗೇ ಕನ್ನಡ ರಾಜ್ಯದ ಪುನರುತ್ಥಾನವೂ ಘಟಿಸಿತು (೧೯೫೬). ಹೊಸದೇಶ, ಹೊಸ ರಾಜ್ಯಕ್ಕೆ ಪೂರಕವಾಗಿ ಸಾಹಿತ್ಯದಲ್ಲೂ ಹೊಸತನ ಮೂಡಿ ಬಂತು. ೧೯೫೦ರ ನಂತರ ಕನ್ನಡದಲ್ಲಿ ನವೋದಯ ಹಾಗೂ ಪ್ರಗತಿಶೀಲರ ಆಧಿಪತ್ಯ ಅಳಿದು ನವ್ಯ ಅಡಿಯಿಟ್ಟಿತು. ಈ ಸಾಂದರ್ಭಿಕ ಹಿನ್ನಲೆಯಲ್ಲಿ ೧೯೪೦ರಿಂದ ೧೯೫೬ ರವರೆಗಿನ ಅವಧಿಯಲ್ಲಿ ಬಂದ ಕನ್ನಡ ಸಾಹಿತ್ಯ ಪತ್ರಿಕೆಗಳನ್ನು ಗಮನಿಸಬೇಕು. ಕನ್ನಡ ಜನಪ್ರಿಯ ಡೈಜೆಸ್ಟ್ ‘ಕಸ್ತೂರಿ’ ಈ ಅವಧಿಯಲ್ಲೇ ಆರಂಭವಾದುದು ಎಂಬುದನ್ನು ಸಾಂದರ್ಭಿಕವಾಗಿ ಹೆಸರಿಸಬಹುದು. ಜನರಿಗೆ ಕುತೂಹಲದ ಓದು ಒದಗಿಸುವ ಎಲ್ಲ ಮಾದರಿಯ ಬರಹಗಳನ್ನು ಪ್ರಕಟಿಸುವ ಕಸ್ತೂರಿಯನ್ನು ಅಚ್ಚ ಸಾಹಿತ್ಯಿಕ ಪತ್ರಿಕೆಯಾಗಿ ಸ್ವೀಕರಿಸಲಾಗದು.

'ಕೊರವಂಜಿ'

ತಿಳಿನಗೆಯ ಲೇಖನಗಳಿಗೆ ಮೀಸಲಾದ ಮಾಸಿಕವೆಂಬುದು ಕೊರವಂಜಿಯ ಘೋಷಣೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಎಂ. ಶಿವರಾಂ ಕೊರವಂಜಿಯ ಸಂಪಾದಕರು. ಆಯಾ ಕಾಲದ ಬೆಳವಣಿಗೆಯನ್ನು ರಾಜಕೀಯ ಸಾಮಾಜಿಕ ಸಂಗತಿಗಳನ್ನು ವ್ಯಂಗ್ಯ ವಿಡಂಬನೆಗಳಿಗೆ ಒಳಪಡಿಸುವುದು, ಹಾಸ್ಯಮಾಡುವುದು, ಕಣಿ ಹೇಳುವುದು ಕೊರವಂಜಿಯ ಧಾಟಿ. ಕನ್ನಡ ಪತ್ರಿಕೆಗಳಲ್ಲಿ ಇಂದು ಕಂಡು ಬರುವ ಹಾಸ್ಯ ಧಾಟಿಯ ಲೇಖನಗಳಿಗೂ ಲಘು ಬರಹಗಳಿಗೂ ಪರಂಪರೆಯೊಂದನ್ನು ನಿರ್ಮಾಣ ಮಾಡಿದ್ದು ಕೊರವಂಜಿಯ ಸಾಧನೆಗಳಲ್ಲಿ ಒಂದು. ಚುಟುಕು, ಅಣಕವಾಡು, ಲಘುಪದ್ಯ, ಕಿರು ನಾಟಕ, ಮತ್ತು ಹರಟೆಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೀರ್ತಿ ‘ಕೊರವಂಜಿ’ಗೆ ಸೇರಬೇಕು. ಚಿತ್ರಭಾನು ಸಂವತ್ಸರದ ಯುಗಾದಿಯ ದಿನ ಕೊರವಂಜಿಯ ಮೊದಲ ಸಂಚಿಕೆ ಹೊರ ಬಂತು (೧೯೪೨). ನಾ. ಕಸ್ತೂರಿಯವರು ಕೊರವಂಜಿಯ ಸಿದ್ಧತೆಯಲ್ಲಿ ಸಹಾಯಮಾಡುತ್ತಿದ್ದರು. ಹೆಸರಾಂತ ವೈಂಗ್ಯಚಿತ್ರಕಾರ ಆರ್‍. ಕೆ. ಲಕ್ಷ್ಮಣ್ ಕೆಲವು ಕಾಲ ‘ಕೊರವಂಜಿ’ಯಲ್ಲಿ ವ್ಯಂಗ್ಯಚಿತ್ರ ಬರೆಯುತ್ತಿದ್ದರು. ಹಾಸ್ಯ ಸಾಹಿತಿಗಳಾದ ಅ. ರಾ. ಸೇತುರಾಮ್. ದಾಶರಥಿ ದೀಕ್ಷಿತ್. ಟಿ. ಸುನಂದಮ್ಮ, ರಾಮಿ, ಕೇಫ ಮುಂತಾದವರು ಕೊರವಂಜಿಯ ಮೂಲಕ ಚಲಾವಣೆಗೆ ಬಂದರು. ಜೀವನದಲ್ಲಿ ಅಗತ್ಯವಾದ ಕೊಂಕುದೃಷ್ಟಿಯನ್ನು ಕನ್ನಡಿಗರಲ್ಲಿ ಪ್ರಚಾರ ಮಾಡುವುದು ಕೊರವಂಜಿಯ ಉದ್ದೇಶವೆಂದು ಹೇಳಲಾಗಿತ್ತು. ಲೋಕದ ಯಾವುದೇ ವಾರ್ತೆಯನ್ನಾಗಲೀ ಸಮಾಜದ ಯಾವುದೇ ಘಟನೆಯನ್ನಾಗಲೀ ತಿಳಿಯಾದ, ನವುರಾದ ಹಾಸ್ಯದ ಹಿನ್ನೆಲೆಯಲ್ಲಿ ಕಣಿ ಹೇಳುವಂತೆ ವರದಿ ಮಾಡುತ್ತಿದ್ದದುಕೊರಂವಂಜಿಯ ವೈಶಿಷ್ಟ್ಯವಾಗಿತ್ತು. ಪ್ರಪಂಚದ ಬೇರೆ ಬೇರೆ ಭಾಷಾ ಸಾಹಿತ್ಯದಲ್ಲಿ ಹೊಸದಾಗಿ ಬಂದ ಹಾಸ್ಯ ಪ್ರಕಾರಗಳನ್ನು ತಟ್ಟನೆ ಕನ್ನಡಕ್ಕೆ ಅಳವಡಿಸಿಕೊಂಡಿದ್ದು. . . ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ವಿಸ್ತಾರಗೊಳಿಸಿದ್ದು, ವೈವಿಧ್ಯಮಯಗೊಳಿಸಿದ್ದು ಕೊರವಂಜಿಯ ಮಹತ್ತರ ಸಾಧನೆ. ಪ್ರಪಂಚದ ಇತರ ಭಾಷೆಗಳ ಹಾಸ್ಯ ಸಾಹಿತ್ಯಕ್ಕೆ ಸಮವಾಗಿ, ಒಮ್ಮೊಮ್ಮೆ ಅವುಗಳನ್ನು ಮೀರಿಸಬಲ್ಲ ಲೇಖನಗಳನ್ನು ಪ್ರಕಟಿಸಿದ ‘ಕೊರವಂಜ’ ಕನ್ನಡ ಹಾಸ್ಯ ಸಾಹಿತ್ಯ ಪ್ರಕಾರಕ್ಕೆ ಹೊಸ ಹೊಸ ಆಯಾಮಗಳನ್ನು ಒದಗಿಸಿ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕಾದ ಸಮಯದಲ್ಲಿಯೇ ಕಾಡಿಗೋಡಿ ಕಣ್ಮರೆಯಾಯಿತು. ಇಪ್ಪತ್ತೈದು ವರ್ಷಗಳಷ್ಟು ದೀರ್ಘ ಅವಧಿಯಲ್ಲಿ ಪ್ರತೀ ತಿಂಗಳು ಒಂದನೇ ತಾರೀಖು ತಪ್ಪದೇ ಪ್ರಕಟಗೊಂಡಿದ್ದು ಕೊರವಂಜಿಯ ಹೆಗ್ಗಳಿಕೆ. ಆದರೆ ೧೯೬೭ರಲ್ಲಿ ಬೆಳ್ಳಿ ಹಬ್ಬದ ಬಳಿಕ ಕೊರವಂಜಿ ನಿಂತುಹೋಯಿತು. ನಂತರ ೧೯೭೩ರಲ್ಲಿ ಮತ್ತೆ ಕೊರವಂಜಿಯನ್ನು ಡಿ. ಜಿ. ರವಿಕುಮಾರ್‍ ಮತ್ತು ಗೆಳೆಯರು ಹೊರತಂದರು. ಆದರೆ ಈ ಬಾರಿ ಐದು ವರ್ಷ ಮಾತ್ರ ಈ ಪ್ರಯತ್ನ ಮುಂದುವರೆಯಿತು. ೧೯೭೩ರಲ್ಲಿ ಕೊರವಂಜಿಯ ಕಡೆಯ ಸಂಚಿಕೆ ಹೊರ ಬಂದಿತು.

'ನವಶಕ್ತಿ'

ಉಡುಪಿಯಿಂದ ‘ನವಶಕ್ತಿ’ ಪತ್ರಿಕೆ ೧೯೩೮ರಲ್ಲಿ ಹೊರಬಂತು. ಇದಕ್ಕೆ ಪಿ. ಎನ್. ಪಿ ರಾಮಾಚಾರ್‍ ಸಂಪಾದಕರಾಗಿದ್ದರು. ದಕ್ಷಿಣ ಕರ್ನಾಟಕದಿಂದ ಸಾರಸ್ವತ ಸಮಾರಾಧನೆಯ ಮಹೋದ್ಧೇಶದಿಂದ ಹೊರಟ ಮಾಸಪತ್ರಿಕೆಯೆಂದು ‘ನವಶಕ್ತಿ’ ಕರೆಸಿಕೊಂಡಿತ್ತು. ೧೯೪೨ರಲ್ಲಿ ಹೊರಬಂದ ಇನ್ನೊಂದು ಪತ್ರಿಕೆ ‘ಕಥಾಚಂದ್ರಿಕೆ’ಗೆ ಜಿ. ಎಸ್. ಕೃಷ್ಣರಾವ್ ಸಂಪಾದಕರಾಗಿದ್ದರು. ಬೆಂಗಳೂರಿನಿಂದ ಹೊರಬಂದ ಈ ಪತ್ರಿಕೆ ಮಾಸಿಕವಾಗಿತ್ತು. ಸಣ್ಣ ಕಥೆಗಳ ಸಂಗ್ರಹವಾಗಿತ್ತು. ಒಂದು ವರ್ಷ ಮಾತ್ರ ಕಥಾಚಂದ್ರಿಕೆ ಪ್ರಕಟಗೊಂಡಿತು. ‘ಶ್ರೀ’ ಎಂಬ ಏಕಾಕ್ಷರದ ಶೀರ್ಷಿಕೆಯನ್ನು ಹೊತ್ತು ಧಾರವಾಡದಿಂದ ಸಾಹಿತ್ಯ ಮಾಸಿಕವೊಂದು ೧೯೪೭ರಲ್ಲಿ ಪ್ರಕಟವಾಯಿತು. ವಿ. ಕೆ. ಶಹಾಪುರ ಇದರ ಸಂಪಾದಕರಾಗಿದ್ದರು. ಮಹಾವೀರ ಪತ್ರಿಕೆಯೂ ಧಾರವಾಡದಿಂದಲೇ ೧೯೫೦ರಲ್ಲಿ ಪ್ರಕಟವಾದುದು. ನೆಗಳೂರು ರಂಗನಾಥ ಇದರ ಸಂಪಾದಕರು. ಗುಡ್ಡೇತೋಟದ ಜಿ. ಎಸ್. ಸುಬ್ಬರಾವ್ ಅವರ ಪ್ರಯತ್ನದ ಫಲವಾಗಿ ‘ಮಿತ್ರ’ ಎಂಬ ಮಾಸಿಕ ೧೯೫೦ರಲ್ಲಿ ಪ್ರಕಟಗೊಮಡಿತು. ‘ಶೋಭಾ’ ಎಂಬ ತ್ರೈಮಾಸಿಕವು ಮಂಗಳೂರಿನಿಂದ ೧೯೫೦ ರಲ್ಲಿ ಪ್ರಕಟಗೊಂಡ ಉಲ್ಲೇಖಗಳಿದ್ದು ಎಸ್. ಪಿ. ಭಟ್ ಎಂಬುವರು ಸಂಪಾದಕರಾಗಿದ್ದರು. ೧೯೫೦ರಲ್ಲೇ ಪ್ರಕಟಗೊಂಡ ಇತರ ಪತ್ರಿಕೆಗಳೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ವದಿಂದ ಪ್ರಕಟಗೊಂಡ ‘ವೀಣಾ’ ಹಾಗೂ ಉಡುಪಿಯಿಂದ ನಂದಳಿಕೆ ವಿಠಲರಾವ್ ಎಂಬುವರಿಂದ ಸಂಪಾದಿಸಿ ಪ್ರಕಾಶಿಲ್ಪಟ್ಟ ‘ವಿಮರ್ಶಕ’, ಈ ಪತ್ರಿಕೆಯು ಮೊದಲು ಮಾಸಿಕವಾಗಿಯೂ ಕೆಲವು ಸಂಚಿಕೆಗಳ ಬಳಿಕ ಪಾಕ್ಷಿಕವಾಗಿಯೂ ಪ್ರಕಟಗೊಂಡು ಒಂದೇ ವರ್ಷದಲ್ಲಿ ನಿಂತುಹೋಯಿತು. ‘ವೀಣಾ’ ಪತ್ರಿಕೆಗೆ ಶಂಕರ ನಾರಾಯಣ ರಾವ್ ಸಂಪಾದಕರು. ಈ ಮೇಳಿನ ಪತ್ರಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿಲ್ಲ.

'ಪುಸ್ತಕ ಪ್ರಪಂಚ'

ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಕೇಂದ್ರ ಸಮಿತಿ ಮೈಸೂರಿನಲ್ಲಿದೆ. ಈ ಸಮಿತಿಯ ಅಂಗವಾಗಿ ೧೯೪೩ರಿಂದ ನಿರಂತರವಾಗಿ ಸದ್ದಿಲ್ಲದೇ ಕನ್ನಡ ಸಾಹಿತ್ಯ, ಭಾಷಾಸೇವೆ ನಡೆಯುತ್ತಿರುವ ಮಾಧ್ಯಮಗಳಲ್ಲಿ ‘ಪುಸ್ತಕ ಪ್ರಪಂಚ’ವೊಂದು. ‘ಪುಸ್ತಕ ಪ್ರಪಂಚ’ವನ್ನು ವಯಸ್ಕರ ಶಿಕ್ಷಣ ಸಮಿತಿ ಪ್ರಕಟಿಸುವುದಾದರೂ ಅದು ಪ್ರಕಟಿಸುತ್ತಿರುವ ‘ಪುಸ್ತಕ ಪ್ರಪಂಚ’ ಕನ್ನಡ ಬಲ್ಲ ಎಲ್ಲರಿಗಾಗಿ. ಅದರಲ್ಲಿ ಸಾಹಿತ್ಯ, ಜನಪದ ಜನ ಜೀವನಕ್ಕೆ ಸಂಬಂಧಿಸಿದ ಲೇಖನಗಳಿರುತ್ತವೆ. ಕತೆ-ಕವನ, ಪ್ರಬಂಧಗಳಿರುತ್ತವೆ. ಮಹತ್ವದ ಸಾಹಿತಿಯ ಪರಿಚಯ, ಅವರ ಸಾಧನೆಗಳ ಸಮೀಕ್ಷೆ, ಕೃತಿಗಳ ವಿಮೆರ್ಶೆ ಪುಸ್ತಕ ಪ್ರಪಂಚ ಪ್ರತೀ ಸಂಚಿಕೆಯಲ್ಲೂ ತಪ್ಪದೇ ಮಾಡುವ ಕೆಲಸ. ಬೇರೆ ಭಾಷೆಯ ಮಹತ್ವದ ಲೇಖಕರನ್ನು ಕನ್ನಡಿಗರಿಗೆ ಪರಿಚಯಿಸುವ ಸಂಪತ್ರದಾಯವೂ ಪುಸ್ತಕ ಪ್ರಪಂಚದಲ್ಲಿದೆ. ಯಾವ ಪಂಥಕ್ಕಾಗಲೀ ಗುಂಪಿಗಾಗಲೀ ಕಟ್ಟುಬೀಳದೇ ನವೋದಯ, ನವ್ಯ, ದಲಿತ ಬಂಡಾಯದ ಬರಹಗಳಿಗೆಲ್ಲ ಯಾವುದೇ ಭೇದ ಭಾವ ತೊರದೇ ‘ಪುಸ್ತಕ ಪ್ರಪಂಚ’ ಪ್ರಕಟವಾಗುತ್ತದೆ. ೧/೮ ಡೆಮಿ ಆಕಾರದ ಪತ್ರಿಕೆಗೆ ಸಾಮಾನ್ಯವಾಗಿ ೮೦ ಪುಟಗಳು. ವಿಶೇಷ ಸಂಚಿಕೆಗಳಿಗೆ ಹೆಚ್ಚಿನ ಪುಟಗಳೂ ಇರುತ್ತವೆ. ಲೇಖಕರಿಗೆ ಕಿರು ಸಂಭಾವನೆ ನೀಡುವ ಸಂಪ್ರದಾಯವೂ ಪುಸ್ತಕ ಪ್ರಪಂಚದ ಬಗ್ಗೆ ಉಲ್ಲೇಖನೀಯವಾದುದು. ಡಾ. ದೇ.ಜವರೇಗೌಡ ಪುಸ್ತಕ ಪ್ರಪಂಚದ ಪ್ರಧಾನ ಸಂಪಾದಕರು. ಶ್ರೀ ಕೃಷ್ಣ ಆಲನಹಳ್ಳಿ ಗೌರವ ಸಂಪಾದಕರಾಗಿ ಮಲೆಯಾಳಂ ಲೇಖಕ ವೈಕಂಮಹಮದ್ ಬಷೀರ್‍ ಅವರನ್ನು ಕುರಿತಂತೆ ವಿಶೇಷಾಂಕ ತಂದಿದ್ದರು. ಕನ್ನಡದ ಹೆಸರಾಂತ ಸಾಹಿತಿಗಳು ಅನೇಕರು ಕಳೆದ ಐದು ದಶಕಗಳಲ್ಲಿ ಬೇರೆ ಬೇರೆ ಅವಧಿಗಳಲ್ಲಿ ಪುಸ್ತಕ ಪ್ರಪಂಚದ ಸಂಪಾದಕ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಲಿಯೋ ಟಾಲ್‌ಸ್ಟಾಯ್‌ರವರ ಮಹಾ ಕಾದಂಬರಿ ಯುದ್ಧ ಮತ್ತು ಶಾಂತಿ (War and Peace) ಪ್ರೋ. ದೇಜಗೌರವರು ಅನುವಾದಿಸಿದ್ದು ಪುಸ್ತಕ ಪ್ರಪಂಚದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕನ್ನಡದ ಲೇಖಕರುಗಳೆಲ್ಲ ಒಂದಲ್ಲಾ ಒಂದು ಸಂದರ್ಭದಲ್ಲಿ ಪುಸ್ತಕ ಪ್ರಪಂಚಕ್ಕೆ ಬರೆದಿರುತ್ತಾರೆ. ಈ ರಾಶಿಯಲ್ಲಿ ‘ಪುಸ್ತಕ ಪ್ರಪಂಚ’ವು ೧೯೪೩ರಿಂದ ಕನ್ನಡ ಸಾಹಿತ್ಯದ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದೆಯೆನ್ನಬಹುದು. ಪುಸ್ತಕ ಪ್ರಪಂಚಕ್ಕೆ ಸರ್ಕಾರಿ ಅನುದಾನಿತ ಸಂಸ್ಥೆಯಾದ ವಯಸ್ಕರ ಶಿಕ್ಷಣ ಸಮಿತಿಯ ಆಶ್ರಯವಿರುವುದರಿಂದ ಪತ್ರಿಕೆಯ ಲಾಭ ನಷ್ಟ ಮುಖ್ಯವಾಗದೇ ಪತ್ರಿಕೆ ಪ್ರಕಟಗೊಳ್ಳುತ್ತಿದೆ. ಈ ಸ್ಥಿತಿ ವ್ಯಕ್ತಿಗತ ಸಾಹಸಗಳಾದ ಪತ್ರಿಕೆಗಳಲ್ಲಿ ಕಂಡುಬರುವುದಿಲ್ಲ.

'ನವಚೇತನ'

ಸಾಹಿತ್ಯ ಮತ್ತು ಸಂಸ್ಕೃತಿಗಳೇ ವಿಶೇಷ ಪ್ರಾಮುಖ್ಯತೆಯನ್ನು ಕೊಟ್ಟು ಉಚ್ಛಮಟ್ಟದ ಸಾಹಿತ್ಯವನ್ನು ಜನತೆಗೆ ಒದಗಿಸುವ ಮನೀಷೆಯಿಂದ ರಾ. ವೆ. ವಾಲಗಳ್ಳಿಯವರು ‘ನವ ಚೇತನ’ವೆನ್ನುವ ಮಾಸಪತ್ರಿಕೆಯನ್ನು ೧೯೪೪ರಲ್ಲಿ ಶಿರಿಸಿಯ ಲಕ್ಷ್ಮೀನಾರಾಯಣ ಪ್ರೆಸ್ಸಿನಲ್ಲಿ ಮುದ್ರಿಸಿದರು. ಪತ್ರಿಕೆಯ ಸಂಪಾದಕರು ಜಿ. ಜಿ. ಹೆಗಡೆಯವರು. ಸುಪ್ರಸಿದ್ಧ ಸಾಹಿತಿಗಳಾದ ಬೇಂದ್ರೆ, ಕಾರಂತ, ಗೋಕಾಕ, ಮುಗಳಿ, ಶ್ರೀರಂಗ, ಅ. ನ. ಕೃ., ತಾರಾನಾಥ ಮುಂತಾದವರು ಪತ್ರಿಕೆಗೆ ಬರೆಯುತ್ತಿದ್ದುದು ಪತ್ರಿಕೆ ಉನ್ನತ ಗುಣಪಟ್ಟದಿಂದ ನಾಡಿನ ವಿದ್ವಾಂಸರ ಹೊಗಳಿಕೆಗೆ ಪಾತ್ರವಾಗಿತ್ತು. ಸಂಪಾದಕ ವಾಲಗಳ್ಳಿಯವರ ಬಳಿ ಉತ್ಸಾಹವೇನೋ ಇತ್ತು. ಆದರೆ ಹಣವಿರಲಿಲ್ಲ. ದತ್ತೋಬರಾಮ ಮರಾಠೆಯೆಂಬುವವರು ನವಚೇತನವನ್ನು ಮುನ್ನಡೆಸಲು ವಾಲಗಳ್ಳಿಯವರಿಗೆ ಸಹಾಯ ನೀಡಿದರಾದರೂ ಪತ್ರಿಕೆ ಹೆಚ್ಚು ಕಾಲ ನಡೆಯಲಿಲ್ಲ. ನವಚೇತನ ೧೯೪೪ರಿಂದ ಒಟ್ಟೂ ಮೂರ್‍ನಾಲ್ಕು ವರ್ಷ ಬದುಕಿದ್ದಾಗಿ ತಿಳಿದು ಬರುತ್ತಿದೆ. ೧೯೪೮ರಲ್ಲಿ ನವಚೇತನವನ್ನು ವಾರಪತ್ರಿಕೆಯಾಗಿ ಹೊರಡಿಸಲಾಯಿತು. ಮಾಸಪತ್ರಿಕೆಯಾಗಿದ್ದಾಗ ಸಾಹಿತ್ಯವೇ ಮುಖ್ಯ ಆಸಕ್ತಿಯಾಗಿದ್ದ ಪತ್ರಿಕೆ ವಾರಪತ್ರಿಕೆಯಾಗಿ ಪರಿವರ್ತನೆ ಹೊಂದಿದಾಗ ರಾಜಕೀಯ, ಸಾಮಾಜಿಕ ವಿಚಾರಗಳ ಜೊತೆ ವಾರಭವಿಷ್ಯವನ್ನೂ ಪ್ರಕಟಿಸ ತೊಡಗಿ ತನ್ನ ಮೂಲ ಆಶಯವನ್ನು ಕಳೆದುಕೊಂಡಿತು.

'ಶಕ್ತಿ'

(೧೯೫೦)

‘ಉತ್ತಮ ಕನ್ನಡ ಸಾಹಿತ್ಯ ಮಾಸಪತ್ರಿಕೆ’ ಎಂಬುದಾಗಿ ತನ್ನನ್ನು ಕರೆದುಕೊಂಡ ‘ಶಕ್ತಿ’ ಮೈಸೂರಿನಿಂದ ಏಪ್ರಿಲ್ ೧೯೫೦ರಲ್ಲಿ ಪ್ರಕಟಣೆಯನ್ನಾರಂಭಿಸಿ ಹದಿಮೂರು ವರ್ಷ ಸಾಹಿತ್ಯ ಸೇವೆ ಗೈದಿದ್ದು ನಿಜವಾದರೂ ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯದಲ್ಲಿ ಈವರೆಗೆ ಸೂಕ್ತವಾಗಿ ಪ್ರಸ್ತಾಪಿತವಾಗದ ಸಂಗತಿ. ವಿಶೇಷವೆಂದರೆ ಇದರ ಸಂಪಾದಕಿ ಮತ್ತು ಪ್ರಕಾಶಕಿ ಎಲ್. ವಿ. ಕಾವೇರಮ್ಮ ಎಂಬ ಮಹಿಳೆ, ಮೈಸೂರಿನ ಒಂಟಿಕೊಪ್ಪಲಿನಲ್ಲಿ ‘ಶಕ್ತಿ’ಯ ಕಾರ್ಯಲಯವಿತ್ತು. ಕ್ರೌನ್ ಆಕಾರದ ೩೬-೪೮ ಪುಟಗಳ ಶಕ್ತಿ ಸದಭಿರುಚಿಯ ಸಾಹಿತ್ಯ ಪತ್ರಿಕೆಯಾಗಿತ್ತು. ಶಕ್ತಿಯ ಸಂಪುಟ ೧ ಸಂಚಿಕೆ ೧ರಲ್ಲಿ ‘ಬಿನ್ನಹ’ ಎಂಬ ಬರಹದಲ್ಲಿ ‘ಸಂಪಾದಕಿ’ ಹೇಳುವ ಮಾತುಗಳು ಸಾಹಿತ್ಯ ಪತ್ರಿಕೆಗಳ ಜವಾಬ್ದಾರಿಗಳಿಗೆ ಬರೆದ ಭಾಷ್ಯದಂತಿದೆ. ಬಿನ್ನಹ ಹೊಸ ಬೆಳಕು, ಹೊಸ ಉತ್ಸಾಹ, ಹೊಸ ಭಾವನೆ, ಹೊಸ ವಿಚಾರ, ಹೊಸ ಸಂಶೋಧನೆಗಳಿಂದ ಪರಿಪೂರ್ಣತೆಯನ್ನು ಹೊಂದಿದ ಹೊಸ ನಾಡನ್ನು ಕಟ್ಟುವ ಸುಯೋಗ ಭಾರತಕ್ಕೆ ಬಂದಂತೆ ಕನ್ನಡ ನಾಡಿಗೂ ಬಂದಿದೆ. ನೂರಾರು ವರ್ಷಗಳ ದಾಸ್ಯದ ದೌರ್ಬಲ್ಯದಿಂದ ಬಳಲಿದ ಜನಾಂಗ ಆ ಸುಯೋಗವನ್ನು ಉಪಯೋಗಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಅವರ ಅಶಕ್ತತೆಯನ್ನು ತುಂಬುವುದಕ್ಕಾಗಿ ಅನುಭವಿಗಳು, ತಜ್ಞರು, ವಿಚಾರಶೀಲರಾದ ಸಾಹಿತಿಗಳು, ವಿಜ್ಞಾನಿಗಳು, ತಪಸ್ಸು ಮಾಡಿ ಸಿದ್ಧ ಮಾಡಿದ ಅಂದರೆ ಬುದ್ಧಿಯಿಂದ ಭಟ್ಟಿ ಇಳಿಸಿದ ವಿಚಾರ ಲೇಖನಗಳೆಂಬ ಸಮ್ಮಿಶ್ರಣ ಶಕ್ತಿವರ್ಧಕ ಔಷಧಿ ಅತ್ಯಗತ್ಯವಾಗಿ ಬೇಕಾಗಿದೆ. ಈ ಬಗೆಯ ಔಷಧಿಯನ್ನು ಒದಗಿಸಲು ಸಾಹಿತ್ಯ ಕ್ಷೇತ್ರದ ನಾನಾ ಶಾಖೆಗಳು ನಾನಾ ರೂಪದಲ್ಲಿ ಕೆಲಸ ಮಾಡುತ್ತಿವೆ. ಅದರಲ್ಲಿ ಪತ್ರಿಕೆಯೂ ಒಂದು ಅಂಗವಾಗಿದೆ. ಈ ನಮ್ಮ "ಶಕ್ತಿ" ಪತ್ರಿಕೆಯು ವಾಚಕರ ಆತ್ಮ, ಬುದ್ಧ, ದೇಹ, ಬಾಳು ಇವುಗಳ ಸರ್ವತೋಮುಖವಾದ ಬೆಳವಣಿಗೆಗೆ ಬೇಕಾದ ವಿಚಾರ ಲೇಖನಗಳ ಸಂಮಿಶ್ರಣವನ್ನು ಒದಗಿಸಿಕೊಡಲು ತನ್ನ ಶಕ್ತಿ ಇದ್ದಷ್ಟು ಪ್ರಯತ್ನಿಸುತ್ತದೆ. ಈ ಪ್ರಯತ್ನವು ಸಫಲವಾಗಬೇಕಾದರೆ, ನಾಡಿನ ಹಿರಿಯ ಸಾಹಿತಿಗಳು, ವಿಜ್ಞಾನಿಗಳು, ಸಹೃದಯರಾದ ವಾಚಕರು, ಲೇಖಕರೂ ಆ ನೆರವು ನೀಡಿ ‘ಶಕ್ತಿ’ ಪತ್ರಿಕೆಯ ಉದ್ದೇಶವನ್ನು ತುಂಬಿಕೊಡುವುದರ ಮೂಲಕ ಪತ್ರಿಕೆಯ ಅರ್ಥವನ್ನು ಸಾರ್ಥಕ ಪಡಿಸುವರೆಂದು ನಂಬಿದ್ದೇನೆ. ಈ ಸಂಚಿಕೆಗೆ ಔದಾರ್‍ಯ ತೋರಿ, ವಿಶ್ವಾಸದಿಂದ ಲೇಖನಗಳನ್ನು ಕಳುಹಿಸಿದ ಬಂಧುಗಳೆಲ್ಲರಿಗೂ ನನ್ನ ಕೃತಜ್ಞತೆ. ಇದರಲ್ಲಿರುವ ಒಂದೆರಡು ಲೇಖನ ಆಗಲೇ ಅಚ್ಚಾಗಿದೆ, ದೋಷ ನನದೇ. ‘ಶಕ್ತಿ’ ಪತ್ರಿಕೆಯು ಕೆಲವು ತಿಂಗಳ ಹಿಂದೆಯೇ ಪ್ರಕಟವಾಗಬೇಕಿತ್ತು. ಕೆಲವು ಅನಿವಾರ್ಯಗಳ ಅಡಚಣೆಯಿಂದ ಲೇಖಕರಿಗೆ ಸೂಚಿಸಿದಂತೆ ಮುದ್ರಿಸುವುದಾಗಲಿಲ್ಲ. ಈ ನಿಧಾನದಿಂದ ಆದ ತಪ್ಪಿಗೆ ಮನ್ನಣೆ ಬೇಡುವೆನು. ಈ ಸಂಚಿಕೆ ಜನರ ಪರಿಸ್ಥಿತಿ, ಅಭಿರುಚಿ, ಅಭಿವೃದ್ಧಿಗೆ ತಕ್ಕಂತೆ ಸಾಕಷ್ಟು ರೂಪವನ್ನು ಹೊಂದಿಲ್ಲ. ಅಲ್ಲದೆ ಲೇಖನಗಳು ಸಂದರ್ಭಕ್ಕೆ ತಕ್ಕಂತೆ ಆದಷ್ಟು ಚಿತ್ರಗಳಿಂದ ರಂಜಿಸಿಬೇಕೆಂಬ ನನ್ನ ಅಭಿಲಾಷೆಯೂ ಕೈಗೂಡಿಲ್ಲ. ಈ ಎಲ್ಲ ಕುಂದುಕೊರತೆಗಳನ್ನೂ ದಿನೇ ದಿನೇ ನಿವಾರಿಸಿ ಇದ್ದಷ್ಟು ಪ್ರಯತ್ನಿಸುತ್ತೇನೆ. ನನ್ನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವೂ ಆತ್ಯಗತ್ಯ. ‘ಶಕ್ತಿ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಸುಬ್ಬಣ್ಣ ರಂಗನಾಥ ಎಕ್ಕಂಡಿ, ಪು. ತಿ. ನ. ಗೋಪಾಲಕೃಷ್ಣ ಅಡಿಗ, ಬಿ. ಎಚ್. ಶ್ರೀಧರ ಅವರ ಕವನಗಳೂ, ಬಿಳಿಗಿರಿ, ವಸಂತಾದೇವಿ, ದತ್ತಾತ್ರೇಯ ಕುಲಕರ್ಣಿ, ಡಾ. ಕೆ. ಕೃಷ್ಣಮೂರ್ತಿ, ರಂ. ಶ್ರೀ. ಮುಗಳಿ, ಶ್ರೀಮತಿ ಗ್ರೇಸ್ ಪಿಚ್ಚುಮುತ್ತು ಮತ್ತು ಅ. ನ. ಕೃ. ಅವರ ಗದ್ಯ ಬರಹಗಳೂ ಇವೆ. ಶಕ್ತಿಯ ಮುಂದಿನ ಸಂಚಿಕೆಗಳೂ ಇದೇ ರೀತಿ ಸಾಹಿತಿಗಳ ಬರಹಗಳಿಂದಲೇ ಮೈದುಂಬಿ ಬಂದಿವೆ. ೧೯೬೩ರಲ್ಲಿ ‘ಶಕ್ತಿ’ಯ ಕೊನೆಯ ಸಂಚಿಕೆ ಬಂದಿರುವಂತಿದೆ. ಮಹಿಳಾ ಸಂಪಾದಕತ್ವದಲ್ಲಿ ಶುದ್ಧ ಸಾಹಿತ್ಯ ಪತ್ರಿಕೆ ಹದಿಮೂರು ವರ್ಷ ಬಾಳಿದ್ದು ಕನ್ನಡದಲ್ಲಿ ಮಹತ್ತರ ಸಾಧನೆ. ಎಲ್. ವಿ. ಕಾವೇರಮ್ಮನವರ ಹಿನ್ನೆಲೆ, ಇತರ ಬರಹಗಳು ಹಾಗೂ ಅವರ ಬದುಕಿನ ವಿಷಯಗಳು ಪ್ರಚಾರದಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಸಂದರ್ಭದಲ್ಲಿ ಕಾವೇರಮ್ಮನವರ ಸ್ಥಾನ ಹಾಗೂ ಕೊಡುಗೆಗಳ ಬಗ್ಗೆ ಗಮನ ಹರಿಯುವುದು ಅಗತ್ಯವಾಗಿದೆ.

'ವಿನೋದ'

ಹೆಚ್ಚುಕಡಿಮೆ ಅರ್ಧಶತಮಾನದಿಂದ ಕನ್ನಡಿಗರಿಗೆ ಸದ್ದಿಲ್ಲದೇ ಸದಭಿರುಚಿಯ ಹಾಸ್ಯ ಸಮಾರಾಧನೆಯನ್ನು ಉಣಬಡಿಸುತ್ತಾ ಬಂದಿರುವ ಪತ್ರಿಕೆ ‘ವಿನೊದ’. ಕನ್ನಡ ಸಾಹಿತ್ಯ ಪರಿಷತ್ತು. ಕರ್ನಾಟಕ ಪತ್ರಿಕಾ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಘನತೆವೆತ್ತ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ದೇಶಹಳ್ಳಿ ಜಿ. ನಾರಾಯಣ ‘ವಿನೋದ’ ಮಾಸಪತ್ರಿಕೆಯ ಸಂಸ್ಥಾಪಕರು ಹಾಗೂ ಸಂಪಾದಕರು. ‘ವಿನೋದ’ ಹುಟ್ಟಿದ್ದು ೧೯೫೧ರಲ್ಲಿ ಕನ್ನಡ ಜನತೆಯಲ್ಲಿ ಹಾಸ್ಯಪ್ರಜ್ಞೆಯನ್ನು ಜೀವಂತವಾಗಿರಿಸಿಕೊಂಡು ಬರುವ ಉಷ್ಣ ವಾಹಕವಾಗಬೇಕೆಂಬುದು ವಿನೋದದ ಹೆಬ್ಬಾಸೆ. ಜೀವನ ಸಮಸ್ಯೆಗಳನ್ನು ಹಾಸ್ಯರೂಪದಲ್ಲಿ ಚಿತ್ರಿಸಿ ಅದಕ್ಕೆ ಪರಿಹಾರಗಳನ್ನು, ಸೂಕ್ತ ಸಲಹೆಗಳನ್ನು ಹಾಸ್ಯ ರೂಪದಲ್ಲಿ ಹೇಳುವುದೇ ಪತ್ರಿಕೆ ಧ್ಯೇಯ. ೧/೮ಡೆಮಿ ಆಕಾರದ ವಿನೋದದಲ್ಲಿ ಸಾಮಾನ್ಯವಾಗಿ ೩೬/೪೦ ಪುಟಗಳು. "ಕುಡಿನೋಟ, ವ್ಯಂಗ್ಯನೋಟ, ಚುಟುಕಗಳು, ಅಣಕವಾಡು, ಹಾಸ್ಯದ ಹೋಲ್ಡಾನ್, ವಿನೋದ ಗೀತೆಗಳು, ನವೀನ ಗಾದೆಗಳು ಹೀಗೆ ವಿವಿಧ ಬಗೆಯ ಲೇಖನಗಳು ‘ವಿನೋದ’ದಲ್ಲಿ ಪ್ರಕಟವಾಗುತ್ತಿವೆ. ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹಾಸ್ಯರೂಪದಲ್ಲಿ ಬಿಂಬಿಸುವ ಬಳಗವೂ ದೊಡ್ಡದು. ಶ್ರೀರಂಗ, ರಾಶಿ, ಬೀಚಿ, ಗೊರೂರು, ನಾಡಿಗೇರೆ, ನಿರಂಜನ, ದಾಶರಥಿ ದೀಕ್ಷಿತ, ಬುಳ್ಳ, ಎನ್ಕೆ ಮುಂತಾದವರಲ್ಲದೆ ಹಿರಿಯ ಕಿರಿಯ ಲೇಖಕಿಯರೂ ಬಳಗದಲ್ಲಿದ್ದಾರೆ. ನಾಡಿಗ್, ವಿಠಲಪ್ರಭು, ಪ್ರೇಮಕುಮಾರ್‍, ಚಂದ್ರಕಾಂತ್, ಶ್ರೀನಿವಾಸಲು ಮುಂತಾದವರು ವ್ಯಂಗ್ಯಚಿತ್ರಗಳೂ ಪತ್ರಿಕೆಗೆ ವಿಶೇಷ ಕಳೆಯನ್ನು ಕೊಡುತ್ತಿದೆ.‘ವಿನೋದ’ ಪತ್ರಿಕೆಯು ಪ್ರತಿ ವರ್ಷ ಸ್ವಾತಂತ್ಯ್ರೋತ್ಸವ ಸಂದರ್ಭದಲ್ಲಿ ವಿಶೇಷ ವಾರ್ಷಿಕ ಸಂಚಿಕೆಯನ್ನು ಹೊರತರುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಈವರೆಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ಹಾಸ್ಯಲೇಖನಗಳಲ್ಲಿ ಆಯ್ದ ಬರಹಗಳನ್ನು ಜಿ. ನಾರಾಯಣರು ‘ವಿನೋದಲಹರಿ’ ಎಂಬ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ವಿನೋದ ವಾಹಿನಿ, ಹಾಗೂ ವಿನೋದ ಚಿತ್ರಗಳು ಎಂಬ ವ್ಯಂಗ್ಯ ಚಿತ್ರ ಸಂಕಲನಗಳೂ ಬಂದಿವೆ. ‘ನೀವು ಓದಲೇಬೇಕಾದ ಹಾಸ್ಯ ಪ್ರಧಾನ ಕನ್ನಡ ಮಾಸಪತ್ರಿಕೆ’ ಎಂಬ ಅಭಿಧಾನ ವಿನೊದಕ್ಕೆ ಚೆನ್ನಾಗಿ ಒಪ್ಪುತ್ತದೆ.

'ಹಂಸ'

ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮುದ್ರಿತ ಸಾಹಿತ್ಯ ಪತ್ರಿಕೆಗಳದ್ದೊಂದೇ ಅಲ್ಲ. ಕೈ ಬರಹದ ಸಾಹಿತ್ಯ ಪತ್ರಿಕೆಗಳ ಪಾತ್ರವೂ ಇದೆ. ಹಂಸ ಮೈಸೂರು ಜಿಲ್ಲೆಯ ಕೃಷ್ಣರಾಜನಗರದಲ್ಲಿ ದಾಖಲಾದ ಅಂಥ ಒಂದು ಕೈ ಬರಹದ ಸಾಹಿತ್ಯ ಪತ್ರಿಕೆ. ‘ಹಂಸ’ ಒಂದು ಸಾಹಿತ್ಯ ಪತ್ರಿಕೆಯಾಗಿ ಗರಿಬಿಚ್ಚಿ ನಲಿದು ಆನಂದ ತಂದ ಸಂಗತಿ ಅನೇಕರಿಗೆ ತಿಳಿದಿಲ್ಲ. ಈ ಕೈ ಬರಹದ ಹಂಸ ಪತ್ರಿಕೆಯ ಸಂಪಾದಕರು ರಾಮಕೃಷ್ಣ ಸೋಮಯಾಜಿ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದ ರಾಮಕೃಷ್ಣ ಸೋಮಾಯಾಜಿ ಮತ್ತು ಗೆಳೆಯ ಹಂಸವನ್ನು ೧೯೫೧ರ ಡಿಸೆಂಬರ್‍ ಮಾಸದಲ್ಲಿ ಪ್ರಾರಂಭಿಸಿದರು. ಹಂಸವನ್ನು ಆರಂಭಿಸಿದಾಗ ಸಂಪಾದಕರು ಹಗಲು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಲೇಖಕರು ಕಳುಹಿಸಿದ ಕಥೆ, ಕವನ ಮತ್ತು ಇತರ ಬರಹಗಳನ್ನು ತಾವೇ ಸುಂದರವಾಗಿ ಬರೆಯಬೇಕಾಗಿತ್ತು. ‘ಹಂಸ’ದ ಕೆಲಸದಲ್ಲಿ ಭುಜಕ್ಕೆ ಭುಜಕೊಟ್ಟು ದುಡಿದವರು ಈಗ ದಿವಂಗತರಾಗಿರುವ ವಿದ್ವಾನ್ ಬಾಲಗಣಪತಿ ಭಟ್ಟ, ಚಿತ್ರಕಲಾವಿದ ಕೃಷ್ನರಾವ್, ಮಾಜಿ ಪುರಸಭಾಧ್ಯಕ್ಷ ವಕೀಲ ದೂಲಿ ಸತ್ಯನಾರಾಯಣ ಮುಂತಾದವರು. ಒಟ್ಟು ಹತ್ತು ಸಂಚಿಕೆಗಳನ್ನು ಹೊರತಂದರೂ ಏಳು ಸಂಚಿಕೆಗಳು ಉಳಿದಿವೆ. ಹಂಸ ಕೈಬರಹದ ಪತ್ರಿಕೆಯಾಗಿದ್ದರೂ, ಅದರ ಸಾಹತ್ಯ ಸೇವೆ ವಿಶಿಷ್ಠವಾದುದು. ಪ್ರಸಿದ್ಧ ಲೇಖಕರಿಂದ ಲೇಖನಗಳನ್ನು ತರಿಸಿಕೊಂಡು ಸೋಮಯಾಜಿಗಳು ಗುಂಡಾಗಿ ಬರೆದು ಆಸಕ್ತರಿಗೆ ಒದಲು ನೀಡುತ್ತಿದ್ದರು. ಗೋವಿಂದ ಪೈ, ಶಿವರಾಮಕಾರಂತ, ದ. ರಾ. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮುಂತಾದ ಹಿರಿಯರ ಬರಹಗಳೂ ‘ಹಂಸ’ದಲ್ಲಿ ಬೆಳಕು ಕಂಡಿವೆ. ‘ಹಂಸ’ ಪತ್ರಿಕೆಯ ಬಳಗ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ದೆಯನ್ನು ಏರ್ಪಡಿಸಿ ಬಹುಮಾನ ನೀಡಿದೆ. ಹಂಸ ೧/೪ ಡೆಮಿ ಪುಸ್ತಕದ ಆಕಾರದಲ್ಲಿತ್ತು. ಸುಂದರ ಮುಖಚಿತ್ರವಿರುತ್ತಿತ್ತು. ಖ್ಯಾತ ಕಲಾವಿದ ಪಿ. ಆರ್‍. ತಿಪ್ಪೇಸ್ವಾಮಿಯವರು ಹಂಸಕ್ಕೆ ಮುಖಪುಟ ಮಾಡಿಕೊಟ್ಟಿದ್ದರು. ಪ್ರತಿಯೊಂದು ಸಂಚಿಕೆಯ ಮುಖಚಿತ್ರದಲ್ಲಿ ‘ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಕದಾಚನ’ ಎಂಬ ಭಗವದ್ಗೀತೆಯ ನುಡಿಯನ್ನು ಬರೆಯಲಾಗುತ್ತಿತ್ತು. ಹಂಸದಲ್ಲಿ ಸಣ್ಣ ಕಥೆ, ಕವನ, ಹಾಸ್ಯ ಬರಹ, ಲಘು ಪ್ರಬಂಧ ಸೇರಿದಂತೆ ವಿವಿಧ ರೀತಿಯ ಬರಹಗಳು ಪ್ರಕಟಗೊಂಡವು. ಬೆಮಗಳೂರಿನ ಚಿತ್ರಗುಪ್ತ ವಾರಪತ್ರಿಕೆಯು ಏರ್ಪಡಿಸಿದ್ದ ಲಿಖಿತ ಪತ್ರಿಕಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಂಸ ಬಹುಮಾನ ಪಡೆಯಿತು. ಹಂಸದ ಪತ್ರಿಕಾ ಬಳಗ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಸಾಹಿತಿಗಳೂ ಪಾಲ್ಗೊಂಡಿದ್ದರು. ಎಲೆ ಮರೆಯ ಕಾಯಂತೆ ಹಂಸ ಸಾಹಿತ್ಯಸೇವೆ ಮಾಡಿ ಹತ್ತು ಸಂಚಿಕೆಗಳ ಬಳಿಕ ನಿರ್ಗಮಿಸಿತು. ಹಂಸಕ್ಕೆ ಸಂಖ್ಯೆಯ ಮುಂದುವರಿಕೆ ಇತ್ತು. ಆದರೆ ನಿಯತಕಾಲಿಕತೆ ಇರಲಿಲ್ಲ. ಕೈ ಬರಹದಲ್ಲಿದ್ದುಕೊಂಡೂ ಕೃಷ್ಣರಾಜನಗರದ ಸಾಹಿತ್ಯ ಸಂದರ್ಭದಲ್ಲಿ ಮಹತ್ತರ ಕೊಡುಗೆ ನೀಡಿದ್ದು ಹಂಸದ ಸಾಧನೆ. ‘ಮೊದಲನೆಯ ವರುಷದಲ್ಲಿ ಹಂಸಕ್ಕೆ ರೆಕ್ಕೆಗಳು ಮೂಡಿದ್ದವು. ಅರ್ಥಾತ್ ಐದು ಸಂಚಿಕೆಗಳನ್ನು ತಂದಿದ್ದೇವು. ಎರಡನೇ ವರುಷ ಮೂರು ಸಂಚಿಕೆಗಳನ್ನು ಮಾತ್ರ ತರಲು ಸಾಧ್ಯಾವಾಯತು. ಮೂರನೇ ವರ್ಷದಲ್ಲಿ ಕೇವಲ ಒಂದೇ ಸಂಚಿಕೆ ಬಂದಿದೆ. ಆರಂಭಶೂರ ಎಂತ ಯಾರಾದಾರೂ ಅನ್ನಬಹುದು. ಆದರೆ ಮುಖ್ಯ ಕಾರಣ, ಲೇಖನಗಳ ಅಭಾವ, ಎರಡನೆಯ ಕಾರಣ ಸಂಪಾದಕನ ಅನಿವಾರ್ಯ ತೊಂದರೆಗಳು. ಒಟ್ಟಿನಲ್ಲಿ ಕನ್ನಡಮ್ಮನಿಗೆ ನಮ್ಮ ಸೇವೆ ತಡವಾಗಿ ಸಲ್ಲುತ್ತಿದೆ. ಎಂದು ಬನ್ನೈಸುವ ಸಂಪಾದಕರ ಸ್ಥಿತಿ ನಮ್ಮ ಎಲ್ಲ ಮುದ್ರಿತ ಸಾಹಿತ್ಯ ಪತ್ರಿಕೆಗಳಗಿಂತ ‘ಹಂಸ’ ಭಿನ್ನವಾಗಿರಲಿಲ್ಲವೆಂಬುದನ್ನು ಸೂಚಿಸುತ್ತದೆ.

'ಕಥಾಸಂಗ್ರಹ'

ಅಂಕೋಲ ತಾಲ್ಲೂಕಿನ ಸಣ್ಣ ಹಳ್ಳಿ ಹಿಚಕಡದಿಂದ ವಾಮನ ಅನಂತ ಹೊದಿಕೆಯವರು ಈ ಪತ್ರಿಕೆಯ ಕಾರಣೀಪುರುಷರು. ಹಲವು ಆಸಕ್ತಿಗಳ ಸಂಗಮದಂತಿದ್ದ ವಾಮನ ಹೊದಿಕೆಯವರು ಭೂದಾನ ಚಳುವಳಿಯಿಂದ ಪ್ರೇರಿತರಾಗಿ ‘ಭೂದಾನ ಸರ್ವೋದಯ’ ಎಂಬ ಪತ್ರಿಕೆಯನ್ನು ‘ಪಂಚಾವೃತ’ ‘ಸವೋದಯ ಶಾಲಾ ಪತ್ರಿಕೆ’ ಎಂಬ ಪತ್ರಿಕೆಗಳನ್ನೂ ಪ್ರಕಟಿಸಿದ ದಾಖಲೆಗಳಿವೆ. ‘ಸಾಹಿತ್ಯ ಪ್ರಗತಿ’ ಎಂಬುದು ಬೆಂಗಳೂರಿನ ಶಾರದಾ ಪ್ರಕಟನಾಲಯದ ಮುಖವಾಣಿಯಾದ ಪತ್ರಿಕೆ ೧೯೫೩ರಲ್ಲಿ ಬೆಳಕು ಕಂಡಿತು. ಆರ್‍. ಬಸವರಾಜ್ ಸಂಪಾದಕರು.

'ಆಶಾಜ್ಯೋತಿ'

ಹಿರಿಯ ಸಾಹಿತಿ ಎಂ. ಎನ್. ಕಾಮತರ ಪತ್ರಿಕೋದ್ಯಮ ಸಾಹಸದ ಫಲ ‘ಆಶಾಜ್ಯೋತಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಕೆಲವೇ ಸಂಚಿಕೆ ಹೊರಬಂತು. ಈ ಮೇಲಿನ ಪತ್ರಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿಲ್ಲ. ಲೇಖಕ ಹಿರಿಯ ಕಥೆಗಾರ, ನಾಟಕಕಾರ ಶಾ. ಬಾಲೂರಾವ್ ಕರ್ನಾಟಕ ಲೇಖಕರ ಸಂಘದ ಆಶ್ರಯದಲ್ಲಿ ಹೊರತಂದ ಮಾಸಪತ್ರಿಕೆ ‘ಲೇಖಕ’ ೧೯೫೩ರಲ್ಲಿ ಆರಂಭವಾಗಿ ಒಂದು ವರ್ಷ ಮಾತ್ರ ಪ್ರಕಟಣೆಯಲ್ಲಿತ್ತು. ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪತ್ರಿಕೆ ಇದಾಗಿತ್ತು. ಇಪ್ಪತ್ತನೇ ಶತಮಾನದಲ್ಲಿ ಸಾಹಿತ್ಯ ಪತ್ರಿಕೆಗಳು (೧೯೫೭-೧೯೯೩) ಆಧುನಿಕ ಕನ್ನಡ ಸಾಹಿತ್ಯದ ಮುಖ್ಯ ಮಜಲುಗಳೆಂದು ಗುರುತಿಸಲ್ಪಡುವ ನವೋದಯ ಹಾಗೂ ಪ್ರಗತಿಶೀಲ ಪಂಥಗಳು ಇಪ್ಪತ್ತನೇ ಶತಮಾನದ ಮಧ್ಯಭಾಗದ ಹೊತ್ತಿಗೆ ತಮ್ಮ ಉಚ್ಛಾಯ ಸ್ಥಿತಿಯನ್ನು ತಲುಪಿ ಇಳಿಕೆಯ ಹಂತವನ್ನು ಕಂಡಿದ್ದವು. ನವೋದಯ ಕವಿಗಳು ಹಾಗೂ ಪ್ರಗತಿಶೀಲ ಸಾಹಿತಿಗಳು ತಮ್ಮ ಸೃಜನಶೀಲತೆಯನ್ನು ಉಳಿಸಿಕೊಂಡಿದ್ದರಾದರೂ ಆ ಕಾಲಮಾನದ ಶ್ರೇಷ್ಠ ಕೃತಿಗಳು ಆಗಲೇ ಹೊರಬಂದಿದ್ದವು. ಸಹಜವಾಗಿಯೇ ಹೊಸ ಅಭಿವ್ಯಕ್ತಿಯ ತುಡಿತ ಕಂಡು ಬಂದಿತ್ತು. ಸಾಹಿತ್ಯ ನಿರ್ಮಿತಿಯ ಹೊಸ ದಾರಿಗಾಗಿ ಸೃಜನಶೀಲ ಮನಸ್ಸುಗಳು ತಹತದಲ್ಲಿದ್ದವು. ಸರಿ ಸುಮಾರು ಇದೇ ಸಂದರ್ಭದಲ್ಲಿಯೇ ದೇಶಕ್ಕೆ ಸ್ವಾತಂತ್ಯ್ರ ಬಂತು. ಕನ್ನಡಕ್ಕೆ ಭೌತಿಕ ನಿರ್ದಿಷ್ಟ ನೆಲೆ ಸಿಕ್ಕಿತು. ಇವೆಲ್ಲವುಗಳ ಪರಿಣಾಮವಾಗಿ ಕನ್ನಡ ಸಾಹಿತ್ಯಕ್ಕೆ ನವ್ಯ ಬಂತು ನವೋದಯ, ಪ್ರಗತಿಶೀಲ ಪಂಥಗಳು ಗತಿಶೀಲತೆ ಕಳೆದುಕೊಂಡವು. ನವೋದಯ, ಪ್ರಗತಿಶೀಲ ಸಂದರ್ಭಗಳಲ್ಲಿ ಸಾಹಿತ್ಯ ನಿರ್ಮಿತಿ ಹಾಗೂ ಪ್ರಸರಣಕ್ಕೆ ವೇದಿಕೆಗಳಾಗಿದ್ದ ಮುಖ್ಯ ಸಾಹಿತ್ಯ ಪತ್ರಕೆಗಳಾದ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’, ‘ಪ್ರಬುದ್ಧ ಕರ್ನಾಟಕ’, ಜೀವನ, ಜಯಂತಿ, ಜಯಕರ್ನಾಟಕ, ಕಥಾಂಜಲಿ, ಕಥಾವಳಿ, ಮುಂತಾದ ಪತ್ರಿಕೆಗಳೂ ಈ ಹೊತ್ತಿಗೆ ತಮ್ಮ ಮೊನಚು ಕಳೆದುಕೊಂಡಿದ್ದವು. ಅನೇಕ ಪತ್ರಿಕೆಗಳು ಪ್ರಕಟಣೆ ನಿಲ್ಲಿಸಿದ್ದರೆ, ಪ್ರಕಟಣೆಯಲ್ಲಿದ್ದ ಪತ್ರಿಕೆಗಳೂ ಅನಿಯತಕಾಲಿಕಗಳಾಗುತ್ತ ತಮ್ಮ ಛಾಪು ಮೂಡಿಸಲು ವಿಫಲವಾಗುತ್ತಲಿದ್ದವು. ಈ ಸಂದರ್ಭದಲ್ಲಿ ನವ್ಯ ಬಂತು. ನವ್ಯತೆ ಬಂದುದು ಕನ್ನಡ ಸಾಹಿತ್ಯಕ್ಕೆ ಹೇಗೋ ಸಾಹಿತ್ಯ ಪತ್ರಿಕೆಗಳಿಗೂ ಹಾಗೇ ಎನ್ನಬಹುದು. ನವ್ಯದ ಸಂದರ್ಭದಲ್ಲಿ ವಿಶೇಷವಾಗಿ ಸಾಹಿತ್ಯ ಪತ್ರಿಕೆಗಳು ಪ್ರಸಾರ ಕಡಿಮೆಯಾದರೂ ಪರಿಣಾಮ ಕಡಿಮೆಯಲ್ಲ ಎಂಬ ತತ್ತ್ವವನ್ನು ಅಕ್ಷರಶಃ ಸಾಧಿಸಿತೋರಿಸಿದವು. ಸಾಹಿತ್ಯಿಕ ಚರ್ಚೆಗಳು, ಜಗಳಗಳು, ಹೊಸ ತರ್ಕಗಳು ಹುಟ್ಟಿಕೊಳ್ಳುವುದರಲ್ಲಿ ಸಾಹಿತ್ಯ ಪತ್ರಿಕೆಗಳು ಮಹತ್ತರ ಪಾತ್ರ ವಹಿಸುತ್ತಿದ್ದವು. ಈ ಸಂಗತಿಗಳನ್ನು ಮುಂದಿನ ಅಧ್ಯಾಯದಲ್ಲಿ ಸವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. ಸಾಕ್ಷಿ. ರುಜುವಾತು, ಸಮನ್ವಯ, ಸಂಕೀರ್ಣ, ಶೂದ್ರ ಮುಂತಾದ ಪತ್ರಿಕೆಗಳು ನವ್ಯ ಚಳುವಳಿಯ ಮುಂಚೂಣೆಯಲ್ಲಿದ್ದು. ನವ್ಯದ ಅವಧಿಯೆಂದು ಕರೆಯಬಹುದಾದ ಸಂದರ್ಭದಲ್ಲಿ ಪ್ರಭಾವ ಬೀರಿದ ಕೆಲವು ಪತ್ರಿಕೆಗಳು. ಈ ಶತಮಾನದ ಮಧ್ಯಭಾಗದಿಂದ ಆರಂಭವಾಗಿ ೧೯೭೫-೭೭ರವರೆಗೂ ಭಾರತದ ಒಟ್ಟೂ ಸದರ್ಭದಲ್ಲಿ, ಅಂತೆಯೇ ಕನ್ನಡ ಸಂದರ್ಭದಲ್ಲಿ ಒಂದು ಘಟ್ಟ. ೧೯೭೫ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಆಂತರಿಕ ತುರ್ತುಸ್ಥಿತಿ ಘೋಷಣೆಯಾಯ್ತು. ಅಭಿವ್ಯಕ್ತಿ ಸ್ವಾತಂತ್ಯ್ರಕ್ಕೆ ಧಕ್ಕೆ ಬಂತು. ಪತ್ರಿಕೆಗಳೂ ಕೂಡ ಪೂರ್ವ ಪರಿಶೀಲನೆಗೆ ಒಳಗಾಗಬೇಕಾಯಿತು. ಸ್ವತಂತ್ರ ಭಾರತದ ಚರಿತ್ರೆಯಲ್ಲೇ ೧೯೭೫ರವರೆಗಿನದು ಒಂದು ಘಟ್ಟ. ಕನ್ನಡ ಸಾಹಿತ್ಯದಲ್ಲೂ ಸಾಮಾನ್ಯವಾಗಿ ತುರ್ತುಸ್ಥಿತಿಯ ಅಂತ್ಯದವರೆಗೂ ನವ್ಯರ ಕಾಲವೆಂದೇ ಗುರುತಿಸಬಹುದು. ತುರ್ತು ಸ್ಥಿತಿ ಕಳೆದ ಮೇಲಷ್ಟೇ ೮೦ರ ದಶಕದ ಆರಂಭದಲ್ಲಿ ಕನ್ನಡ ಸಾಹಿತ್ಯ ಹೊಸದಾರಿಯತ್ತ ಹೊರಳುತ್ತದೆ. ಅಲ್ಲಿಯವರೆಗೆ ಅಂದರೆ ನವ್ಯ ಸಾಹಿತ್ಯವು ಕನ್ನಡದಲ್ಲಿ ಬಹುವಾಗಿ ಮೆರೆದ ಅವಧಿಯಲ್ಲಿ ಸ್ಪಷ್ಟವಾಗಿ ೧೯೭೫ರಿಂದ ೧೯೭೭ರವರೆಗೆ ಕನ್ನಡದಲ್ಲಿ ಪ್ರಕಟಗೊಂಡ ಸಾಹಿತ್ಯ ಪತ್ರಿಕೆಗಳನ್ನು ಈ ಕೆಳಗಿನಂತೆ ಗುರುತಿಸಬಹುದು. ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ೪೦ಕ್ಕೂ ಹೆಚ್ಚು ಸಾಹಿತ್ಯ ಪತ್ರಿಕೆಗಳು ಕನ್ನಡದಲ್ಲಿ ದಾಖಲೆಮಾಡಿದ್ದು ಬಿಟ್ಟರೆ ಹೆಚ್ಚು ಕಾಲ ಜೀವಂತ ಉಳಿದ ದಾಖಲೆಗಳಿಲ್ಲ. ಒಂದೋ ಎರಡೋ ಸಂಚಿಕೆಗಳನ್ನು ಹೊರತಂದ ಪತ್ರಿಕೆಗಳೇ ಹೆಚ್ಚಿನವು. ಅಂಥವುಗಳಲ್ಲಿ ಎಸ್. ಪದ್ಮನಾಭ ನಾಯರ್‍ ಅವರ ‘ಪರಾಗ’ ೧೯೫೮ರಲ್ಲಿ ಹೊರ ಬಂತು. ಮೊದಲು ಮಾಸಿಕವಾಗಿಯೂ ಕೆಲವು ಸಂಚಿಕೆಗಳಲ್ಲಿ ಪಾಕ್ಷಿಕವಾಗಿಯೂ ಪರಿವರ್ತನೆಗೊಂಡಿತು. ‘ಶಾರದಾ’ ಎಂಬ ಪತ್ರಿಕೆ ೧೯೫೯ರಲ್ಲಿ ಬೆಳಗಾವಿಯಿಂದ ಪ್ರಕಟಗೊಂಡಿತ್ತು. ಪ್ರಭಾಕರ ಆನಗೋಳ ಎಂಬುವರು ಈ ಮಾಸಪತ್ರಿಕೆಯ ಸಂಪಾದಕರು. ನಾಲ್ಕು ಸಂಚಿಕೆಗಳು ನಿಯತವಾಗಿ ಬಂದ ಈ ಮಾಸಪತ್ರಿಕೆ ನಂತರ ನಿಂತುಹೋಯಿತು. ‘ಹೊಂಬೆಳಕು’ ೧೯೬೧ರಲ್ಲಿ ಬೆಂಗಳೂರಿನಿಂದ ಹೊರಟ ಮಾಸಪತ್ರಿಕೆ. ಕೊ. ಶ್ರೀ. ಅಯ್ಯಂಗಾರ್‍ ಅವರು ಸಂಪಾದಕರು. ಈ ಮೇಲಿನ ಮೂರು ಪತ್ರಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

'ಸಾಕ್ಷಿ'

ಗೋಪಾಲಕೃಷ್ಣ ಅಡಿಗರು ನವ್ಯ ಚಳುವಳಿಗೆ ಹೇಗೋ ಅವರ ‘ಸಾಕ್ಷಿ’ ಸಾಹಿತ್ಯ ಪತ್ರಿಕೆಗಳ ಪಂಕ್ತಿಯಲ್ಲಿ ಹಾಗೆ. ಅಡಿಗರನ್ನು ಬಿಟ್ಟು ಕನ್ನಡದ ನವ್ಯ ಕಾವ್ಯದ ಚರ್ಚೆ ಸಾಧ್ಯವಿಲ್ಲ. ಹಾಗೆಯೇ ಸಾಕ್ಷಿಯನ್ನು ಬಿಟ್ಟೂ ನವ್ಯ ಕಾವ್ಯದ ಚರ್ಚೆ ಸಾಧ್ಯವಿಲ್ಲ. ಯಾಕೆಂದರೆ ನವ್ಯ ಕಾವ್ಯದ ಹೊಸ ಹೊಸ ಸೃಷ್ಟಿಗಳಿಗೆ ವೇದಿಕೆಯಾದದ್ದು ‘ಸಾಕ್ಷಿ.’ ನವ್ಯ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ವಿವಾದಗಳಿಗೆ ಅಭಿವ್ಯಕ್ತಿಯ ಮಾಧ್ಯಮವೂ ‘ಸಾಕ್ಷಿ’ಯಾಗಿತ್ತು. ಹಾಗೆಯೇ ಅಡಿಗರು ತಮ್ಮ ವಿಚಾರ ಪೂರಿತ ಸಂಪಾದಕೀಯಗಳ ಮೂಲಕ ಕನ್ನಡ ನವ್ಯ ಕಾವ್ಯಕ್ಕೊಂದು ಸ್ಪಷ್ಟತೆ ಹಾಗೂ ಹಿರಿಮೆ ತಂದುಕೊಟ್ಟಿದ್ದು ಸಾಕ್ಷಿಯ ಮೂಲಕ. ನವ್ಯ ಕಾವ್ಯ ಬೆಳದಂತೆ ಸಾಕ್ಷಿಯೂ ಬೆಳೆಯಿತು. ಎಪ್ಪತ್ತರ ದಶಕದ ಕೊನೆಯಲ್ಲಿ ಕ್ರಮೇಣ ಜನರಲ್ಲಿ ನವ್ಯ ಸಾಹಿತ್ಯದ ಮೇಲಿನ ಆಸಕ್ತಿ, ಕಳಕಳಿ, ಒಲವು ಕಡಿಮೆಯಾದಂತೆಲ್ಲ ಚಳುವಳಿಯ ಮುಖವಾಣಿಯಾದ ಸಾಕ್ಷಿಯೂ ಕೂಡಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯಿತು. ಸಾಕ್ಷಿ ಆರಂಭವಾದುದು ೧೯೬೨ರಲ್ಲಿ ತ್ರೈಮಾಸಿಕವಾಗಿ, ಗೋಪಾಲಕೃಷ್ಣ ಅಡಿಗರು ಅದರ ಸಂಪಾದಕರು. ಹೆಗ್ಗೋಡಿನ ‘ಅಕ್ಷರ ಪ್ರಕಾಶನ ಸಾಗರ’ ಸಾಕ್ಷಿಯ ಪ್ರಕಾಶಕರು. ಸಾಕ್ಷಿಯ ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಗೋಪಾಲಕೃಷ್ಣ ಅಡಿಗರು ಹೀಗೆ ನುಡಿದಿದ್ದಾರೆ. ‘. . . ಕೃತಿನಿಷ್ಠ ವಿಮರ್ಶೆಗೂ ವಸ್ತುನಿಷ್ಠ ವಿಚಾರಕ್ಕೂ ಒಂದು ವೇದಿಕೆಯಾಗುವ ಹಾಗೆ ‘ಸಾಕ್ಷಿ’ ಎಂಬ ಪತ್ರಿಕೆಯೊಂದನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮಲ್ಲಿ ಅನೇಕರನ್ನು ಹಲವಾರು ವರ್ಷಗಳಿಂದ ಕಾಡುತ್ತ ಬಂದಿದೆ. ಈ ಕೆಲಸಕ್ಕೆ ಮುಖ್ಯವಾದ ಆತಂಕಗಳು ಎರಡು. ಪತ್ರಿಕೆಯನ್ನು ಹೊರಡಿಸಿ ನಡೆಸಿಕೊಂಡು ಬರಲು ತಕ್ಕ ಅರ್ಥಾನುಕೂಲದ ಮತ್ತು ಜನಪ್ರಿಯವಾಗಲಾರದ ಈ ಸಾಹಸದಿಂದ ಬರುವ ಅರ್ಥನಷ್ಟವನ್ನು ಭರಿಸುವ ಶಕ್ತಿಯ ಅಭಾವ, ಅದಕ್ಕಿಂತ ಹೆಚ್ಚಾಗಿ ಚೆನ್ನಾಗಿ ಯೋಚಿಸಿ ಹೊಣೆಗಾರಿಕೆಯೊಡನೆ ತಕ್ಕಕಾಲಕ್ಕೆ ಉತ್ತಮ ಲೇಖನಗಳನ್ನು ಬರೆದುಕೊಡಬಲ್ಲ ಲೇಖಕರ ಸಹಕಾರದ ಅಗತ್ಯ . . . ಇದು ಯಾವುದೇ ಒಂದು ವ್ಯಕ್ತಿಯ, ಗುಂಪಿನ ಅಥವಾ ಪಂಥದ ಮುಖವಾಣಿಯಾಗಲು ಬಯಸುವುದಿಲ್ಲ. ಎಲ್ಲ ಬಗೆಯ ವಿಚಾರಗಳಿಗೂ ಸಿದ್ಧಾಂತಗಳ ಮಂಡನೆಗೂ ಇಲ್ಲಿ ಯಾವಾಗಲೂ ಅವಕಾಶ ಉಂಟು.’ ಸಾಕ್ಷಿ ಕನ್ನಡದಲ್ಲಿ ನವ್ಯ ಸಾಹಿತ್ಯಕ್ಕೆ ನೀರೆರೆದು ಪೋಷಿಸಿತಾದರೂ ಸಾಹಿತಿಗಳ ಗುಂಪುಗಾರಿಕೆಯಲ್ಲಿ ಬಸವಳಿಯಿತು. ನವ್ಯರಲ್ಲಿ ಹೊಸ ಹೊಸ ಪತ್ರಿಭೆಗಳನ್ನು ಪರಿಚಯಿಸಿತಾದರೂ ಜನಸಾಮಾನ್ಯ ಕನ್ನಡಿಗರ ಮಧ್ಯೆ ತನ್ನ ಪರಿಚಯವನ್ನು ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಯಿತು. ಪತ್ರಿಕೆಯನ್ನು ಆರಂಭಿಸುವಾಗ ಅಡಿಗರಿಗಿದ್ದ ಆತಂಕಗಳು ನಿಜವಾಗಿ ಪತ್ರಿಕೆಯ ಆರ್ಥಿಕ ನಷ್ಟ ಹಾಗೂ ಸಮರ್ಥ ಲೇಖನಗಳ ಕೊರತೆ ಹೊರಲಾರದ ಹೊರೆಯೆನಿಸಿದವು. ನವೋದಯ ಸಾಹಿತ್ಯದ ಜನಪ್ರಿಯತೆಯಿಂದಾಗಿ ಪತ್ರಿಕೆಗೆ ಕೆಲವಾದರೂ ಚಂದಾದಾರರ ಬಲವಿತ್ತು. ಮೊದಲಿಂದಲೂ ನವ್ಯಕಾವ್ಯ ಜನರಿಂದ ದೂರವೇ ಉಳಿದಿದ್ದರಿಂದ ಕೊಂಡು ಓದುವ ಚಂದಾದಾರರ ಬೆಂಬಲ ಸಾಕ್ಷಿಗೆ ಇರಲಿಲ್ಲ. ಅದನ್ನೇ ಸಾಕ್ಷಿಯ ೩೬ನೇ ಸಂಚಿಕೆಯಲ್ಲಿ ಸಂಪಾದಕ ಅಡಿಗರು ಎತ್ತಿ ಹೇಳುತ್ತಾರೆ. ‘ಕೂತು ಕಷ್ಟಪಟ್ಟು ಬರೆಯುವವರ, ಲೇಖನವನ್ನೇ ವೃತ್ತಿಮಾಡಿಕೊಳ್ಳಲು ಸಾಧ್ಯವಾಗದಿರುವ ಧೀಮಂತರ ಸಂಖ್ಯೆ ಕಡಿಮೆಯಾಗುವುದರಿಂದ ನಮ್ಮ ಉದ್ದೇಶಕ್ಕೆ ತಕ್ಕಂತೆ ಸಂಚಿಕೆಯನ್ನು ತರಲಾಗಿಲ್ಲ. . . ಸಂಭಾವನೆಯನ್ನು ಕೊಡುವುದು ಸಾಧ್ಯವಿಲ್ಲವಾಗಿ ಬಂದ ಲೇಖನಗಳನ್ನೇ ಪ್ರಕಟಿಸದೇ ಬೇರೆ ದಾರಿಯಿಲ್ಲ. ಕಥೆ, ಕವನ ಬಿಟ್ಟರೆ ಬೇರೆ ಪ್ರಕಾರದ ಬರಹಗಳೂ ಕಡಿಮೆಯೇ . . . ಸಂಚಿಕೆಯನ್ನು ನಿಲ್ಲಿಸದೇ ಬೇರೆ ದಾರಿಯಿಲ್ಲ’. ತ್ರೈಮಾಸಿಕಪತ್ರಿಕೆಯಾಗಿ ಆರಂಭಗೊಂಡ ‘ಸಾಕ್ಷಿ’ ಸ್ವಲ್ಪ ಕಾಲದ ನಂತರ ಅನಿಯತಕಾಲಿಕವಾಯಿತು. ೩೬ ಸಂಚಿಕೆಗಳ ನಂತರ ನಿಂತೇ ಹೋಯಿತು. ಹಲವು ವರ್ಷಗಳ ನಂತರ ನಿಂತೇ ಹೋಯಿತು. ಹಲವು ವರ್ಷಗಳ ನಂತರ ಸಾಗರದಿಂದ ಮತ್ತೆ ಮರುಹುಟ್ಟು ಪಡೆದು ಒಂದು ಸಂಚಿಕೆ ಮಾತ್ರ ಹೊರಬಂತು. ಅಡಿಗರ ಸ್ನೇಹಿತರಾಗಿದ್ದ ಅರೇಕಲ್ಲು ಪ್ರಭಾಕರ್‍ ತಮ್ಮ ಸಾಗರ ಮುದ್ರಣದಲ್ಲಿ ಸಾಕ್ಷಿಯನ್ನು ಮುದ್ರಿಸಿದರು. ಆದರೆ ಸಾಕ್ಷಿ ಮುಂದುವರೆಯಲಿಲ್ಲ. ಕನ್ನಡ ಸಾಹಿತ್ಯ ಪತ್ರಿಕೆಗಳ ಸೋಲುಗೆಲವಿಗೆ ಸಾಕ್ಷಿಯಾಗಿ ‘ಸಾಕ್ಷ’ ಇತಿಹಾಸ ಸೇರಿತು. ಸಾಕ್ಷಿಯ ಸಾಧನೆಗಳಿಗೆ ಗೋಪಾಲಕೃಷ್ಣ ಅಡಿಗರಷ್ಟೇ ಹೆಗ್ಗೋಡಿನ ಕೆ. ವಿ. ಸುಬ್ಬಣ್ಣ ಅವರೂ ಹೆಗಲುಕೊಟ್ಟವರು. ಅಡಿಗರು ಸಂಪಾದಕರಾದರೆ ಸುಬ್ಬಣ್ಣ ಅವರೂ ಹೆಗಲುಕೊಟ್ಟವರು. ಅಡಿಗರು ಸಂಪಾದಕರಾದರೆ ಸುಬ್ಬಣ್ಣ ಸಂಚಾಲಕರು. ಈ ಬಗ್ಗೆ ಸಾಕ್ಷಿ ೧೩ರಲ್ಲಿ ಸಂಪಾದಕನ ಮಾತು ಗಮನಾರ್ಹವಾದುದು. ‘ಆರ್ಥಿಕವಾಗಿ ಸಾಕ್ಷಿ ಹೆಚ್ಚು ಕಡಿಮೆ ತನ್ನ ಕಾಲ ಮೇಲೆ ತಾನು ನಿಲ್ಲಲು ಸಮರ್ಥವಾಗಿರುವುದು ಒಂದು ಬಗೆಯ ಸಿದ್ದಿಯೇ ಸರಿ. ಆಸ್ಥಾನಬಲವಿಲ್ಲದೆ. ಭಿನ್ನಮತ ಪತ್ರಿಪಾದಕವಾದೊಂದು ನಿಯತಕಾಲಿಕೆ ಬದುದಕುವುದು ಸಾಧ್ಯವಿದೆ ಎಂಬ ಅನುಭವ ತುಂಬ ಭರವೆಸೆ ಹುಟ್ಟಿಸುಂಥದು. ಈ ಸ್ಥಿತಿಯ ಸಾಧನೆಗೆ ಸಂಪಾದಕರ ಪರಿಶ್ರಮ ಕಾರಣವಲ್ಲ. ತುಂಬ ಚಿಕ್ಕವರಂತೆ ಕಾಣುವ ಒಬ್ಬ ದೊಡ್ಡ ಮನುಷ್ಯರ ಸಂಚಾಲಕ ಶಕ್ತಿಯೇ ಕಾರಣ ಎಂಬುದಾಗಿ ಹೇಳಲೇಬೇಕು. ಸಂಪಾದಕನ ಆಲಸ್ಯ, ವಿಳಂಬ ಎಲ್ಲವನ್ನೂ ಮೀರಿ ನಿಂತು ಕರ್ತವ್ಯನಿಷ್ಠವಾಗಿ ಕೆಲಸವನ್ನು ನೆರವೇರಿಸಬಲ್ಲ ಶಕ್ತಿ ಇದು ನಿಸ್ಪೃಹವಾಗಿ, ನಿರಹಂಕಾರಿಯಾಗಿ.’ ಮನ್ವಂತರ ಈ ಪತ್ರಿಕೆಯು ಕನ್ನಡ ‘ಸಾಹಿತ್ಯ ವಾರ್ಷಿಕ’ವೆಂದು ಕರೆದುಕೊಂಡದ್ದು ವಿಶೇಷ. ಧಾರವಾಡದ ಗೆಳೆಯರ ಗುಂಪಿನ ಕೊಡುಗೆ ಇದು. ಬೇಂದ್ರೆಯವರ ಹಿರಿತನದಲ್ಲಿ ಧಾರವಾಡದಲ್ಲಿ ಗೆಳೆಯರ ಗುಂಪೊಂದು ಸೃಷ್ಟಿಯಾಗಿ ಮನೋಹರ ಗ್ರಂಥಮಾಲೆಯ ಅಟ್ಟದ ಮೇಲೆ ನಿರಂತರ ಸಾಹಿತ್ಯಿಕ ಚಿಂತನ - ಚರ್ಚೆಗಳನ್ನು ನಡೆಸುತ್ತಾ ಕನ್ನಡದಲ್ಲಿ ನವೋದಯ ಸಾಹಿತ್ಯಕ್ಕೆ ನೀರೆರೆದುದು ಈಗ ಇತಿಹಾಸ. ಇದೇ ‘ಮನೋಹರ ಗ್ರಂಥಮಾಲೆ’ಯ ಸೋದರ ಪ್ರಕಾಶನವಾಗಿ ‘ಮನ್ವಂತರ’ ವಾರ್ಷಿಕ ‘ಪುಸ್ತಕ ಪತ್ರಿಕೆ’ ೧೯೬೨ರಿಂದ ಆರಂಭಗೊಂಡಿತು. ಮನ್ವಂತರದ ಮೊದಲ ಸಂಪಾದಕೀಯದಲ್ಲಿ ಸಂಪಾದಕರು ಹೀಗೆ ನುಡಿಯುತ್ತಾರೆ : "ಇಲ್ಲಿಯವರೆಗೆ ಕೇವಲ ಲಿಖಿತ ಸಾಹಿತ್ಯವನ್ನಷ್ಟೇ ಪ್ರಕಟಿಸುತ್ತಾ ಬಂದ ಮನೋಹರ ಗ್ರಂಥಮಾಲೆ ಜೊತೆಯಾಗಿ ವಿಮರ್ಶೆಯನ್ನು ಕೊಡಬೇಕೆಂದು ಮಾಡಿದ ಯೋಜನೆ ‘ಮನ್ವಂತರ’ದ ಹುಟ್ಟಿಗೆ ಕಾರಣವಾಗಿದೆ. ಕನ್ನಡದಲ್ಲಿ ಸಾಕಷ್ಟು ವಿಮರ್ಶೆ ಬಂದಿದೆ. ಆದರೆ ಸಾಹಿತ್ಯ ವಿಮರ್ಶೆಯ ಗೊತ್ತು-ಗುರಿಗಳು, ಮಿತಿ-ವ್ಯಾಪ್ತಿಗಳು ಇನ್ನೂ ನಿರ್ಣಾಯಕವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವಿಮರ್ಶೆಯ ಸಬಲವಾದ ಮಾಧ್ಯಮವಾಗಬಲ್ಲ ಭಾಷೆ ಮೊದಲು ರೂಪುಗೊಳ್ಳಬೇಕಾಗಿದೆ. ನಮ್ಮ ಎಷ್ಟೋ ವಿಮೆರ್ಶಯೇ ತತ್ವಾರಗಳು ಇನ್ನೂ ಅಮೂರ್ತತೆಯ ಗರ್ಭದಲ್ಲಿ ಹುದುಗಿಕೊಂಡಿವೆ. ಈ ಕೆಲಸಗಳು ಮನ್ವಂತರದ ಕಣ್ಣಮುಂದಿವೆ. ಹತ್ತು ವರ್ಷ - ವರ್ಷಕ್ಕೊಂದು ವಿಮರ್ಶಾ ಪುಸ್ತಕವಾಗಿ ಮನ್ವಂತರ ಪ್ರಕಟಗೊಂಡಿತು. ಅದಕ್ಕೆ ನಿಯತಕಾಲಿಕತೆ ಇತ್ತು. ಒಂದು ಸಂಚಿಕೆಯಿಂದ ಇನ್ನೊಂದಕ್ಕೆ ಮುಂದುವರಿಯುವಿಕೆ ಇತ್ತು. ಮನೋಹರ ಗ್ರಂಥಮಾಲೆಯ ಖಾಯಂ ಚಂದಾದಾರರಿಗೆ ಕಡಿಮೆ ಬೆಲೆಗೆ ‘ಮನ್ವಂತರ’ವನ್ನು ನೀಡಲಾಗುತ್ತಿತ್ತು. ‘ಮನ್ವಂತರ’ದ ಪ್ರತೀ ಸಂಚಿಕೆಯಲ್ಲೂ ಹಿಂದಿನ ವರ್ಷ ಪ್ರಕಟವಾದ ಕನ್ನಡ ಪುಸ್ತಕಗಳ ವಿಮರ್ಶೆ-ಸಮೀಕ್ಷೆ ಇರುತ್ತಿತ್ತು. ಹೀಗಾಗಿ ಆ ಹತ್ತು ವರ್ಷದ ಕಾಲ ಘಟ್ಟದ (೧೯೬೨ರಿಂದ ೧೯೭೨) ಸಾಹಿತ್ಯ ಬೆಲವಣಿಗೆಗೆ ‘ಮನ್ವಂತರ’ ಒಂದು ದಾಖಲೆಯಾಗಿ ನಿಲ್ಲುತ್ತದೆ. ಮುಖ್ಯವಾಗಿ ವಿಮರ್ಶೆಗೇ ಒತ್ತುಕೊಡುವ ಸಂಪ್ರದಾಯದ ‘ಮನ್ವಂತರ’ನವ್ಯ ಸಾಹಿತ್ಯದ ಸಾಧನೆ ಸಿದ್ಧಿಗಳನ್ನು ವಿಮರ್ಶಿಸಿದ್ದು ಹಾಗೂ ರೂಪುರೇಶಗಳನ್ನು ನಿರ್ಧರಿಸಿದ್ದು ದೊಡ್ಡಸಾಧನೆ. ಆದರೂ ಅಧ್ಯಯನಶೀಲ ಬರಹಗಾರರ ಕೊರತೆಯಿಂದಾಗಿ ‘ಮನ್ವಂತರ’ ನಿಲ್ಲಬೇಕಾಗಿ ಬಂತು.

ಕವಿತಾ

‘ಕವಿತಾ’ ‘ಕವನ ಮತ್ತು ಕಾವ್ಯ ವಿಮರ್ಶೆಗಳ ಋತು ಪತ್ರಿಕೆ.’ ಕನ್ನಡ ಸಾಹಿತ್ಯ ಪತ್ರಿಕೆಗಳ ಚರಿತ್ರೆಯಲ್ಲಿ ಒಂದು ದಶಕದಷ್ಟು ಹೆಚ್ಚು ಕಾಲ ಬದುಕಿದ್ದ ‘ಕವಿತಾ’ ಪತ್ರಿಕೆಗೆ ವಿಶೇಷ ಸ್ಥಾನವಿದೆ. ‘ಕವಿತಾ’ ಪತ್ರಿಕೆಯ ಸಂಪುಟ-ಸಂಚಿಕೆ ಎಂಬುದರ ಬದಲಾಗಿ ಹೂವು-ಎಸಳು ಎಂದು ಕರೆಯುತ್ತಿದ್ದುದು ವಿಶೇಷ. ಅನೇಕ ಎಸಳುಗಳು ಕೂಡಿ ಒಂದು ಹೂವಾಗುವಂತೆ ಒಂದು ಸಂಪುಟಕ್ಕೆ ಅನೇಕ ಸಂಚಿಕೆಗಳು. ದ್ವೈಮಾಸಿಕವಾಗಿದ್ದ ಈ ಪತ್ರಿಕೆಯನ್ನು ಋತು ಪತ್ರಿಕೆ ಎಂದು ಕರೆದದ್ದೂ ಅನನ್ಯ. ‘ಕವಿತಾ’ಕ್ಕೆ ಬಾ. ಕಿ. ನ. ಪ್ರಧಾನ ಸಂಪಾದಕರು. ಸಂಪಾದಕ ಮಂಡಳಿಯಲ್ಲಿ ಘನಶ್ಯಾಮ, ಕಿರಣ ಮತ್ತು ರಾಮಾನುಜ ಇದ್ದರು. ‘ಗೆಳೆಯರ ಪ್ರಕಾಶನ’ ಎಂಬುದಾಗಿ ಪ್ರಕಾಶವನ್ನು ಹೆಸರಿಸಲಾಗಿತ್ತು. ೧೯೬೪ರಲ್ಲಿ ಕವಿತಾದ ವಾರ್ಷಿಕ ಚಂದಾ ಮೂರು ರೂಪಾಯಿ ಹಾಗೂ ಬಿಡಿ ಸಂಚಿಕೆಯ ಬೆಲೆ ೫೦ ನಯಾಪೈಸೆ. ೧/೮ ಡೆಮಿ ಆಕಾರದ ೬೪ ಪುಟಗಳ ‘ಕವಿತಾ’ದ ಎರಡನೇ ಎಸಳಿನಲ್ಲಿ ೧೩ ಕವಿಗಳ ಕವನಗಳೂ ನಾಲ್ಕು ಕಾವ್ಯ ವಿಮರ್ಶಾ ಲೇಖನಗಳೂ ಇವೆ. ವಿಲಿಯಂ ಷೇಕ್ಸ್‌ಪಿಯರನ ಅಮೂಲ್ಯ ರೇಖಾಚಿತ್ರವನ್ನೂ ಇದು ಒಳಗೊಂಡಿದ್ದು ಈ ಸಂಚಿಕೆ ಷೇಕ್ಸ್‌ಪಿಯರ್‌ನಿಗೆ ಅರ್ಪಿತವಾಗಿದೆ. ಹಿಂಬದಿಯ ಒಳಪುಟದಲ್ಲಿ ‘ಕವಿತಾ ಮತ್ತು ನಾವು’ ಎಂಬುದಾಗಿ ಸಂಪಾದಕರು ಬರೆಯುತ್ತಾರೆ :

ವಿಶೇಷವೆಂದರೆ ಕವಿತಾ ಪತ್ರಿಕೆಯ ಮೊದಲ ಸಂಚಿಕೆಯನ್ನು ಇಡಿಯಾಗಿ ಸಂಚಿಕೆ ಎರಡರಲ್ಲಿ ಪಿ. ಶ್ರೀನಿವಾಸರಾವ್ ಅವರು ವಿಮರ್ಶೆಸಿದ್ದಾರೆ. ಅದರಲ್ಲಿ ‘. . . . ಸಿನಿಮಾ, ದಿನಪತ್ರಿಕೆ, ವಾರಪತ್ರಿಕೆ ಇತ್ಯಾದಿ ಜನಜಂಗುಳಿ ಮಾಧ್ಯಮಗಳು (mass media) ಬದುಕಿನ ಮೌಲ್ಯಗಳನ್ನು ನಿರ್ಮಾಲ ಮಾಡುತ್ತಿರುವ ಈ ಇಪ್ಪತ್ತನೇ ಶತಮಾನದಲ್ಲಿ ಸಂಸ್ಕೃತಿಯನ್ನು ಕಾಪಾಡುವ ಒಂದೇ ದಾರಿ ಈ ಪುಟ್ಟ ಪುಟ್ಟ ನಾಗರಿಕ ಪತ್ರಿಕೆಗಳು (little journals) ಇಂಗ್ಲೇಂಡಿನಲ್ಲಿ F.R.Leavis ನಡೆಸಿದ Scrutiny ಪತ್ರಿಕೆ ಮಾಡಿದ ಕೆಲಸ ಸಾಹಿತ್ಯಾ ಭ್ಯಾಸಿಗಳಿಗೆಲ್ಲ ಗೊತ್ತಿರುವ ವಿಷಯ. ‘ಕವಿತಾ’ ಆ ರೀತಿಯ ‘ಸಂಜೀವಿನಿ’ಯಾಗಿ ಕೆಲಸ ಮಾಡಲಿ ಎಂದು ಹರಸಿದ್ದಾರೆ. ಬೆಂಗಳೂರಿನ ಗೆಳೆಯರ ಪ್ರಕಾಶನದ ಶ್ರಮವಾಗಿ ಎರಡು ವರ್ಷ ಪ್ರಕಟಗೊಂಡ ‘ಕವಿತಾ’ ಹೊಸವ್ಯವಸ್ಥೆಗೆ ಒಳಪಟ್ಟಿದ್ದು ಅಕ್ಟೋಬರ್‍ ೧೯೬೭ರಲ್ಲಿ. ಬೆಂಗಳೂರಿನಿಂದ ಸಾಗರಕ್ಕೆ ಕವಿತಾ ಪತ್ರಿಕೆ ವರ್ಗಾವಣೆಗೊಂಡು ಸಾಗರದಿಂದ ಗೋಪಾಲಕೃಷ್ಣ ಅಡಿಗರು ಹೊರತರುತ್ತಿದ್ದ ‘ಸಾಕ್ಷಿ’ಯ ಜೊತೆ ಲೀನವಾಗಿ ‘ಸಾಕ್ಷಿ ಮತ್ತು ಕವಿತಾ’ ಆಯಿತು. ಅದನ್ನು ಸಂಪಾದಕ ಬಾ. ಕಿ. ನ. ಹೀಗೆ ವಿವರಿಸುತ್ತಾರೆ. "‘ಕವಿತಾ’ ಇದೀಗ ಮತ್ತೊಮ್ಮ ಹೊಸ ವ್ಯವಸ್ಥೆಯಲ್ಲಿ ಪ್ರಕಟವಾಗಲಿಕ್ಕೆ ಪ್ರಾರಂಭವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎಡವುತ್ತ ಕೆಲವು ಸಂಚಿಕೆಗಳು ಪ್ರಕಟಗೊಂಡವು. ಆ ಸಾಹಸಕ್ಕೆ ಕಾರಣರಾದ ಎಲ್ಲ ಗೆಳೆಯರಿಗೂ ಕೃತಜ್ಞತೆಗಲು. . . ಕವಿತಾವು ಕ್ರಮವಾಗಿ ಮೂರು ತಿಂಗಳಿಗೆ ಒಂದಾವರ್ತಿ ಪ್ರಕಟವಾಗುತ್ತದೆ. (ಮೊದಲು ದ್ವೈಮಾಸಿಕವಾಗಿತ್ತು) ಇಲ್ಲಿ ಕವನಗಳಿಗೇ ಹೆಚ್ಚು ಪ್ರಾತಿನಿಧ್ಯ, ಹೀಗೆಂದು ಗದ್ಯವನ್ನೂ ಬಿಟ್ಟಿಲ್ಲ. ಕವಿತಾ ಮತ್ತು ಸಾಕ್ಷಿ ಒಟ್ಟಿಗೆ ಪ್ರಕಟವಾಗುತ್ತಿದೆ. ಈ ಹೊಸ ವ್ಯವಸ್ಥೆಯಲ್ಲಿ ಪ್ರಕಟವಾಗುವಂತೆ ಮುಖ್ಯ ಕಾರಣರಾದ ಶ್ರೀ ಕೆ. ವಿ. ಸುಬ್ಬಣ್ಣ. ಶ್ರೀ ಪ್ರಭಾಕರ ಹಾಗೂ ಶ್ರೀ ಗೋಪಾಲಕೃಷ್ಣ ಅಡಿಗರಿಗೆ ನಾನು ಕೃತಜ್ಞನಾಗಿದ್ದೇನೆ. ಹೊಸ ವ್ಯವಸ್ಥೆಯಲ್ಲಿ ಕೆಲವು ವರ್ಷಸಾಗಿ ಆದರೂ ಕುಂಟುತ್ತಾ ದಶಕ ಪೂರೈಸಿ ‘ಕವಿತಾ’ ನಿಂತುಹೋಯಿತು. ಹತ್ತು ವರ್ಷಗಳ ‘ಕವಿತಾ’ ಪತ್ರಿಕೆಯ ಮಹತ್ವದ ಸಾಧನೆಯೆಂದರೆ ಕನ್ನಡದ ಆಗಿನ ಪ್ರಸಿದ್ಧ ಕವಿಗಳೆಲ್ಲಾ ‘ಕವಿತಾ’ಗೆ ಬರೆದರು. ಹೊಸ ಕವಿಗಳು ಕವಿತಾ ಪತ್ರಿಕೆಯ ಮೂಲಕ ಪ್ರಚಾರ ಪಡೆದರು. ಕನ್ನಡದಲ್ಲಿ ಹೊಸ ಕಾವ್ಯಮಾರ್ಗ ಬೇರು ಬಿಡಲು ಹಾಗೂ ನವ್ಯ ಕಾವ್ಯದ ಬಗ್ಗೆ ಸಾಕಷ್ಟು ಬಿಸಿ ಬಿಸಿ ಚರ್ಚೆಯಾಗಲು ‘ಕವಿತಾ’ ಕಾರಣವಾಯ್ತು.

ಲಹರಿ

ಮೈಸೂರಿನಿಂದ ಪೂರ್ಣಚಂದ್ರ ತೇಜಸ್ವಿ ಹಾಗೂ ಬಿ. ಎನ್. ಶ್ರೀರಾಮ ಇವರುಗಳ ಸಂಪಾದಕತ್ತ್ವದಲ್ಲಿ ಲಹರಿ ಮಾಸಿಕ ಆರಂಭವಾಗಿ ಆರು ಸಂಚಿಕೆಗಳನ್ನು ಮಾತ್ರ ಹೊರ ತಂದಿತು. ಕಾವ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟ ಈ ಪತ್ರಿಕೆಯಲ್ಲಿ ಹಲವು ಪಾಶ್ಚಿಮಾತ್ಯ ವಿದ್ವಾಂಸರ ಲೇಖನಗಳ ಅನುವಾದಗಳೂ ಪ್ರಕಟವಾಗಿವೆ. ಜೂನ್ ೧೯೬೪ಕ್ಕೆ ಲಹರಿಯ ಮೂರನೇ ಸಂಚಿಕೆ ಪ್ರಕಟವಾಗಿದೆ. ಕನ್ನಡ ನಾಡಿನ ಲೇಖಕರೆಲ್ಲ ಕವಿತೆ, ಕಿರುಗವನ ಇತ್ಯಾದಿಗಳನ್ನು ಈ ಪ್ರಗತಿಪರ ಪ್ರಯತ್ನಕ್ಕೆ ಸಾಫಲ್ಯತೆ ಒದಗುವಂತೆ ಮಾಡಲು ಕಳಿಸಿಕೊಡಬೇಕಾಗಿ ಅದರಲ್ಲಿ ಸಂಪಾದಕರು ವಿನಂತಿಸಿದ್ದಾರೆ. ‘ಲಹರಿ’ಯ ನಂತರ ಕನ್ನಡದಲ್ಲಿ ಬಂದ ಮತ್ತೆರಡು ಸಾಹಿತ್ಯ ಪತ್ರಿಕೆಗಳು ‘ಕಾವೇರಿ’ ಮತ್ತು ‘ಜ್ಞಾನಭಾರತಿ.’ ‘ಕಾವೇರಿ’ ೧೯೬೪ರಲ್ಲೂ ‘ಜ್ಞಾನಭಾರತಿ’ ೧೯೬೫ರಲ್ಲೂ ಹೊರಬಂದವು. ‘ಕಾವೇರಿ’ಗೆ ಎ. ಆರ್‍. ಆಚಾರ್ಯ ಸಂಪಾದಕರು. ಮಳಗಿ ಮುಂತೇಳ್ವರ ಎಂಬುವರು ಜ್ಞಾನಭಾರತಿಗೆ ಸಂಪಾದಕರ. ಜ್ಞಾನಭಾರತಿ ಮಾಸಿಕವಾಗಿ ಎರಡು ವರ್ಷ ಬದುಕಿದ್ದಂತೆ ತೋರುತ್ತದೆ.

ಸಂಕ್ರಮಣ

ಕನ್ನಡದ ಬಹುಮುಖ್ಯ ಸಾಹಿತ್ಯಕ ಮಾಸಿಕ ಸಂಕ್ರಮಣ ೧೯೬೫ರಲ್ಲಿ ಜನ್ಮ ತಾಳಿತು. ಕನ್ನಡ ಸಾಹಿತ್ಯದಲ್ಲಿ ತಮ್ಮ ಚಾಟಿಯಂಥ ಮಾತು ಹಾಗೂ ಬರಹಗಳಿಂದ ವಿಶಿಷ್ಟ ಸ್ಥಾನ ಪಡೆದಿರುವ ಚಂದ್ರಶೇಖರ ಪಾಟೀಲರು ಮುನ್ನೆಲೆ ಹಿನ್ನೆಲೆಗಳಲ್ಲಿ ನಿಂತು ಕಳೆದ ೩೩ವರ್ಷಗಳಿಂದ ಸತತವಾಗಿ ನಡೆಯಿಸಿಕೊಂಡು ಬರುತ್ತಿರುವ ಮಾಸಪತ್ರಿಕೆ ‘ಸಂಕ್ರಮಣ’. ನವ್ಯ ಸಾಹಿತ್ಯ ಸಂದರ್ಭದಲ್ಲೇ ಹುಟ್ಟಿದ ಸಂಕ್ರಮಣ, ನವ್ಯೋತ್ತರ ಸಾಹಿತ್ಯ ಚಟುವಟಿಕೆಗಳಿಗೂ ನೀಡಿದ ಕೊಡುಗೆ ಮಹತ್ವಪೂರ್ಣ. ನವ್ಯ ಸಾಹಿತ್ಯ ಚಳುವಳಿಗೆ ಇಂಗ್ಲಿಷ್ ಮೇಷ್ಟ್ರುಗಳೇ ಮುಂದಾಳಾಗಿದ್ದುದು ಈಗ ಇತಿಹಾಸ. ಧಾರವಾಡದ ಇಂಗ್ಲೀಷ್ ಉಪನ್ಯಾಸಕರುಗಳಾದ ಚಂದ್ರಶೇಖರ ಪಾಟೀಲ ಹಾಗೂ ಗಿರಡ್ಡಿ ಗೋವಿಂದರಾಜ ಅವರುಗಳು ಹಿಂದೀ ಉಪನ್ಯಾಸಕ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಜೊತೆ ಸೇರಿಕೊಂಡು ಸಂಕ್ರಮಣ ಸಾಹಸವನ್ನು ಆರಂಭಿಸಿದರು. ಮೂಲತಃ ಸಾಹಿತ್ಯಾಸಕ್ತರೂ ಸಮಾನ ಮನಸ್ಕರೂ ಆಗಿದ್ದ ಈ ಮೂವರಿಗೆ ಸಾಹಿತ್ಯಿಕ ವೇದಿಕೆಯೊಂದರ ಅಗತ್ಯವನ್ನು ಸಂಕ್ರಮಣ ಪೂರೈಸಿತು. ಆರಂಭದಲ್ಲಿ ನವ್ಯ ಸಾಹಿತ್ಯದ ಮುಖವಾಣಿಯಂತೆಯೇ ‘ಸಂಕ್ರಮಣ’ ಪ್ರಕಟಗೊಳ್ಳುತ್ತಿತ್ತು. ಆದರೆ ಮೂವರು ಬುದ್ಧಿಜೀವಿಗಳು ಒಂದುಗೂಡಿ ಪತ್ರಿಕೆ ತರುವುದು ಕಷ್ಟದ ಕೆಲಸವೆಂಬುದು ಅವರಿಗೆ ಅರಿವಾಯ್ತು. ಕಾಲಾನುಕ್ರಮದಲ್ಲಿ ಗಿರಡ್ಡಿ ಗೋವಿಂದರಾಜ ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರುಗಳು ಸಂಕ್ರಮಣದಿಂದ ದೂರು ಸರಿದರು. ಚಂದ್ರಶೇಖರ ಪಾಟೀಲ (ಚಂಪಾ)ರಿಗೆ ಪತ್ರಿಕೆ ನಡೆಸುವ ಸವಾಲು ಎದುರಾಯ್ತು. ಮಹಾ ಜಿಗುಟು ಮನುಷ್ಯ ಚಂಪಾ ಹಟ ಬಿಡಲಿಲ್ಲ. ಸಂಕ್ರಮಣದ ಸಾರಥ್ಯವಹಿಸಿ. ಹೆಂಡತಿ ನೀಲಾ ಪಾಟೀಲರನ್ನು ಸಂಪಾದಕಿಯೆಂದು ಘೋಷಿಸಿ ತಾವು ಹಿನ್ನೆಲೆಯಲ್ಲಿ ನಿಂತು ಪತ್ರಿಕೆ ನಡೆಸತೊಡಗಿದರು. ಇಂದಿಗೂ ಸಂಕ್ರಮಣಕ್ಕೆ ನೀಲಾ ಪಾಟೀಲರೇ ಸಂಪಾದಕರು. ಎಲ್ಲಿಯೂ ಚಂದ್ರಶೇಖರ ಪಾಟೀಲರ ಹೆಸರಿಲ್ಲ. ಆದರೂ ಜನ ಸಂಕ್ರಮಣವನ್ನು ಚಂಪಾ ಪತ್ರಿಕೆಯೆಂದೇ ಗುರುತಿಸುತ್ತಾರೆ. ಆರಂಭದಲ್ಲಿ ಚಂದ್ರಶೇಖರ ಪಾಟೀಲರು ನವ್ಯ ಸಾಹಿತಿಯಾಗಿದ್ದರು. ಸಹಜವಾಗಿಯೇ ‘ಸಂಕ್ರಮಣ’ನವ್ಯ ಸಾಹಿತ್ಯವನ್ನು ಪೋಷಿಸುವ ಪತ್ರಿಕೆಯಾಗಿ ಬೆಳೆಯಿತು. ಕಾಲದ ಅಗತ್ಯವನ್ನು ಮನಗಂಡು ಚಂಪಾ ದಾರಿ ಬದಲಿಸಿದರು. ಇದ್ದ ವ್ಯವಸ್ಥೆಗೆ ತಿರುಗಿಬಿದ್ದು ಬಂಡಾಯಗಾರರಾದರು. ಕನ್ನಡ ಬಂಡಾಯ ಸಾಹಿತ್ಯದ ಮುಂಚೂಣಿಯಲ್ಲಿ ಉಳಿದರು. ಸಂಕ್ರಮಣ ಕೂಡಾ ಬಂಡಾಯ ಸಾಹಿತಿಗಳ ವೇದಿಕೆಯಾಯಿತು. ೧೯೯೮ರಲ್ಲಿ ಚಂದ್ರಶೇಖರ ಪಾಟೀಲರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು. ವ್ಯವಸ್ಥೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ವ್ಯಕ್ತಿ ಈಗ ವ್ಯವಸ್ಥೆಯ ಭಾಗವೇ ಆಗಿದ್ದಾರೆ. ಈ ಕಾರಣದಿಂದಾಗಿಯೇ ಸಂಕ್ರಮಣ ಸ್ಥಿತ್ಯಂತರಗಳನ್ನು ಕಂಡಿದೆ. ಆದರೆ ಇಂದಿಗೂ ತಪ್ಪದೇ ಕನ್ನಡದಲ್ಲಿ ಬರುತ್ತಿರುವ ಏಕೈಕ ಸಾಹಿತ್ಯಿಕ ಪತ್ರಿಕೆ ಎಂಬ ಹೆಗ್ಗಳಿಕೆ ಸಂಕ್ರಮಣಕ್ಕೆ. ನವ್ಯ ಹಾಗೂ ನವ್ಯೋತ್ತರ ಬೆಲವಣಿಗೆಯಲ್ಲಿ ಸಂಕ್ರಮಣದ ಪಾತ್ರ ಗಮನಾರ್ಹವಾದುದು. ಪ್ರತೀ ವರ್ಷವೂ ಸಂಕ್ರಮಣವು ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಕಥೆ. ಕವನ, ಲಲಿತ ಪ್ರಬಂಧ ಹಾಗೂ ಹನಿಗವನ ಪ್ರಕಾರಳಲ್ಲಿ ಸ್ಪರ್ಧೆ ನಡೆಯುತ್ತದೆ. ಕನ್ನಡದ ಹೊಸ ಬರಹಗಾರರಿಗೆ ಸಂಕ್ರಮಣ ಸ್ಪರ್ಧೆ ಪ್ರತಿಷ್ಠೆಯದಾಗಿದೆ. ಸಂಕ್ರಮಣ ಪತ್ರಿಕೆಯಲ್ಲಿ ಬಹುಮಾನಿತ ಬರಹಗಳನ್ನು ಪ್ರಕಟಿಸಲಗುತ್ತದೆ. ಹೀಗೆ ಈಚಿನ ೩೦ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಬೆಳೆವಣಿಗೆಯಲ್ಲಿ ಸಂಕ್ರಮಣದ ಕಾಣಿಕೆ ಇದೆ. ಸಂಕ್ರಮಣ ಸಾಹಿತ್ಯ ಪ್ರಕಾರಗಳ ನಡುವಿನ ಚರ್ಚೆಗಳಿಗಷ್ಟೇ ಅಲ್ಲ, ಸಾಹಿತಿಗಳ ನಡುವಿನ ಚರ್ಚೆ ಜಗಳಗಳಿಗೂ ವೇದಿಕೆಯಾಗಿದ್ದೂ ಕನ್ನಡ ಸಾಹಿತ್ಯದಲ್ಲಿ ದಾಖಲಾಗುವಂತಹುದು. ಚಂಪಾ-ಲಂಕೇಶ, ಚಂಪಾ-ಶೂದ್ರ ಮುಂತದ ಜಗಳಗಳು ಓದುಗರಿಗೆ ರಂಜನೆ ನೀಡಿದವು. ಅತಿಯಾದಾಗ ಅಸಹ್ಯಹುಟ್ಟಿಸಿದವು. ಮೂವತ್ಮೂರು ವರ್ಷದಿಂದ ಹೊರ ಬರುತ್ತಿರುವ ಹೆಗ್ಗಳಿಕೆಯಿರುವ ಸಂಕ್ರಮಣ ವ್ಯಾವಹಾರಿಕವಾಗಿ ಲಾಭದಾಯಕವೇನಲ್ಲ. ಈವರೆಗೆ ಸಂಕ್ರಮಣಕ್ಕಾಗಿ ಪ್ರತ್ಯೇಕ ನೌಕರರು ಯಾರು ಇಲ್ಲ. ನೀಲಾ ಪಾಟೀಲರೇ ಚಂದಾದಾರರ ಯಾದಿ ನೋಡಿಕೊಳ್ಳುತ್ತಾರೆ. ಪತ್ರಿಕೆಯನ್ನು ಪೋಸ್ಟ್ ಮಾಡುತ್ತಾರೆ. ಲೇಖನಗಳ ಆಯ್ಕೆ, ಕರಡು ತಿದ್ದವುದು ಚಂಪಾರವರು ನೋಡಿಕೊಳ್ಳುತ್ತಾರೆ. ಇಷ್ಟಾಗಿಯೂ ಈ ಮೂರು ದಶಕಗಳಲ್ಲಿ ತಿಂಗಳ ಲೆಕ್ಕ ತಪ್ಪಿ ಸಂಯುಕ್ತ ಸಂಚಿಕೆಗಳೂ ಬಂದಿವೆ. ಚಂದ್ರಶೇಖರ ಪಾಟೀಲರವರು ೧೯೮೩ರಲ್ಲಿ ಸಂಕ್ರಮಣವನ್ನು ವಾರಪತ್ರಿಕೆಯನ್ನಾಗಿ ಮಾಡಹೊರಟ್ಟಿದ್ದರು. ಕೆಲವೇ ಸಂಚಿಕೆಗಳಲ್ಲಿ ಕೈ ಸುಟ್ಟುಕೊಂಡು ನಿಲ್ಲಿಸಿಬಿಟ್ಟರು. ಯಥಾ ಪ್ರಕಾರ ಮಾಸಪತ್ರಿಕೆಯನ್ನು ಮುಂದುವರೆಸಿದರು. ಡೆಮಿ ೧/೪ ಆಕಾರಕ್ಕೂ ಬದಲಾಗಿದ್ದ ‘ಸಂಕ್ರಮಣ’ ಈಗ ಮೊದಲಿನ ಆಕಾರಕ್ಕೆ ಅಂಟಿಕೊಂಡಿದೆ. "೧೯೬೪ ಧಾರವಾಡದಿಂದ ಒಂದು ಕಿರುಪತ್ರಿಕೆಯಾಗಿ ಪ್ರಾರಂಭವಾದ ಸಂಕ್ರಮಣ ಅರವತ್ತು- ಎಪ್ಪತ್ತು -ಎಂಬತ್ತರ ದಶಕಗಳನ್ನು ದಾಟಿ ಈಗ ತೊಂಬತ್ತರ ದಶಕದವರೆಗೂ ಮುಂದುವರೆಯಬಹುದೆಂದು ಯಾರೂ (ಅದನ್ನು ಆಗ ಸುರುಮಾಡಿದವರೂ ಕೂಡ) ನಿರೀಕ್ಷಿಸಿರಲಿಲ್ಲ. ಆದರೆ ಸಮಕಾಲೀನ ಬದುಕಿನ ಕ್ರಿಯೆ-ಪ್ರಕಿಯೆಗಳಿಗೆ ಜೀವಂತವಾಗಿ ಸ್ಪಂದಿಸುತ್ತಲೇ ಬಂದಿರುವ ಸಂಕ್ರಮಣ. ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿ ಮುಂದುವರಿಯುವುದು ಒಂದು ರೀತಿಯಿಂದ ಅನಿವಾರ್ಯವೇ ಆಗಿತ್ತು. ಮೊದಲು ಕೇವಲ ಶಾಹಿತ್ಯ ಸೃಷ್ಟಿಗೆ ಮತ್ತು ಸಾಹಿತ್ಯ ವಿಮೆರ್ಶಗೆ ಸೀಮಿತವಾಗಿದ್ದ ಪತ್ರಿಕೆ ೧೯೭೪-೭೫ರ ನಂತರದ ಘಟ್ಟದಲ್ಲಿ ಸಾಹಿತ್ಯ ಸೃಷ್ಟಿಗೆ ಮೂಲ ಪರಿಕರವೂ ಕಣ್ನೇತಿಯೂ ಆದ ಸಮಕಾಲೀನ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಗುಹೋಗುಗಳಿಗೆ ಬಿಂಬವಾಗುವುದಿಲ್ಲದೇ ಅನೇಕ ನೆಲೆಗಳಲ್ಲಿ ಹಲವಾರು ಜನಪರ ಎನ್ನಬಹುದಾದ ಚಳವಳಿಗಳಿಗೂ ಪ್ರಚೋದಕ ಸಾಧನೆಯಾಗಿ ಪರಿವರ್ತಿಸಿಕೊಂಡಿದ್ದು ಎಲ್ಲರೂ ಬಲ್ಲ ಇತಿಹಾಸವೇ ಆಗಿದೆ. ಪ್ರಸಾರದ ದೃಷ್ಟಿಯಿಂದ ‘ಸಂಕ್ರಮಣ’ ಅಷ್ಟೇನೂ ದೊಡ್ಡ ಪತ್ರಿಕೆಯಲ್ಲ. ಇವತ್ತಿಗೂ ಎರಡೂವರೆ ದಶಕಗಳ ನಂತರವೂ ಪ್ರಸಾರ ೧೫೦೦ರ ಅಂಕಿಯನ್ನು ದಾಟಿಲ್ಲ. ಆದರೆ ಇದರಲ್ಲಿ ಪ್ರಕಟವಾಗುವ ಲೇಖನಗಳು ಕನ್ನಡ ಅಕ್ಷರ ಲೋಕದ ಅನೇಕ ಮುಖ್ಯಸ್ತರಗಳಲ್ಲಿ ಪ್ರತಿಸ್ಪಂದಿಸಿ ಪ್ರತಿಕ್ರಿಯೆ ಪಡೆಯುತ್ತ ಒಟ್ಟಾರೆ ಒಂದು ವೈಚಾರಿಕ ವಾತಾವರಣ ನಿರ್ಮಿಸುವಲ್ಲ, ಅಭಿಪ್ರಾಯ ರೂಪಿಸುವಲ್ಲಿ ಸಾಕಷ್ಟು ಯಶಸ್ವಿಯಾಗುತ್ತಿದೆ. ಪ್ರತಿಷ್ಠಾನಿತ ಸಾಹಿತಿಗಳಿಗಿಂತ ಹೆಚ್ಚಾಗಿ ಹೊಸ ಲೇಖಕರ ಮೇಲೆಯೇ ಪತ್ರಿಕೆ ಹೆಚ್ಚು ಒತ್ತು ಕೊಡುತ್ತಾ ಬಂದಿರುವುದರಿಂದ ಪೀಳಿಗೆಯಿಂದ ಪೀಳಿಗೆಗೆ ಸಂಕ್ರಮಣದ ಪುಟಗಳಿಂದ ಮೂಡಿಬರುವ ಲೇಖಕರ ಸಂಖ್ಯೆ ಹೆಚ್ಚಾಗುತ್ತಿದೆ.

ಸಮೀಕ್ಷಕ ‘ಸಾಹಿತ್ಯ ಸಂಸ್ಕೃತಿಗೆ ಮೀಸಲಾದ ವಿಚಾರ ವೇದಿಕೆ’ ಎಂಬುದಾಗಿ ತನ್ನನ್ನು ಕರೆದುಕೊಂಡು ‘ಸಮೀಕ್ಷಕ’ ಮೈಸೂರಿನಿಂದ ಪ್ರಕಟವಾದುದು ೧೯೬೫ರಲ್ಲಿ. ಡಿಸೆಂಬರ್‍ ೧, ೧೯೬೫ಕ್ಕೆ ‘ಸಮೀಕ್ಷಕ’ದ ಕ್ರೌನ್ ಆಕಾರದ ೬೪ ಪುಟಗಳ ಮೊದಲ ಸಂಚಿಕೆ ಪ್ರಕಟಗೊಂಡಿತು. ವಿಶೇಷವೆಂದರೆ ಆಗಿನ್ನೂ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎರಡನೇ ಬಿ. ಎ. ವಿದ್ಯಾರ್ಥಿಯಾಗಿದ್ದ ಶ್ರೀಕೃಷ್ಣ ಆಲನಹಳ್ಳಿ ಈ ಪತ್ರಿಕೆಯ ಸಂಪಾದಕರೂ ಪ್ರಕಾಶಕರೂ ಆಗಿದ್ದುದು. ಆಗ ಮಾನಸಗಂಗೋತ್ರಿಯ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಜಿ.ಎಚ್.ನಾಯಕ್ ಹಾಗೂ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಎಚ್. ಎಂ. ಚನ್ನಯ್ಯನವರನ್ನು ಸಲಹೆಗಾರರನ್ನಾಗಿ ಹೆಸರಿಸಲಾಗಿತ್ತು. ಮೊದಲ ಸಂಚಿಕೆಯಲ್ಲಿ ತಮ್ಮ ‘ಎರಡು ಮಾತು’ಗಳಲ್ಲಿ ಸಂಪಾದಕರು ಹೀಗೆ ನುಡಿಯುತ್ತಾರೆ. ಕನ್ನಡದಲ್ಲಿ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಗಂಭೀರವಾಗಿ ವಿವೇಚಿಸಿ ಜವಬ್ದಾರಿಯುತವಾಗಿ ಬರೆದ ಲೇಖನಗಳನ್ನು ಅಚ್ಚುಮಾಡುವ ಪತ್ರಿಕೆಗಳು ಅತಿವಿರಳ. ಹೆಚ್ಚಿನ ಪತ್ರಿಕೆಗಳು ಲಘು ಲೇಖನಗಳ ಮತ್ತು ಮನರಂಜನೆಯಂತಹ ಸಾಮಾನ್ಯ ಅಭಿರುಚಿಯ ವ್ಯವಸಾಯಕ್ಕೆ ಮಾತ್ರ ತೊಡಗಿವೆ. ವ್ಯೆಯಕ್ತಿಕ ರಾಗ ದ್ವೇಷಾದಿಗಳಿಗೆ ಎಡಕೊಡದೆ ಕೇವಲ ಕೃತಿ ಮತ್ತು ಕಾವ್ಯ ನಿಷ್ಠವಾದ ವಿಮರ್ಶೆ ಮತ್ತು ಮೌಲ್ಯ ನಿರ್ಧಾರಣೆಯ ಕೆಲಸ ನಮ್ಮ ಪ್ರಾಚೀನ ಸಾಹಿತ್ಯದ ಬಗ್ಗೆ ಆಗಬೇಕಾದ್ದಿನ್ನೂ ಇರುವ ಹಾಗೆ ನಮ್ಮ ಇತ್ತೀಚಿನ ಸಾಹಿತ್ಯದ ಬಗ್ಗೆಯೂ ಆಗಬೇಕಾಗಿದೆ. ಇದಕ್ಕೆ ತಕ್ಕ ವೇದಿಕೆಯಾಗಿ ಈಗಾಗಲೇ ಸಾಕ್ಷಿ, ಲಹರಿ, ಕವಿತಾ, ಸಂಕ್ರಮಣ ಮತ್ತು ಮನ್ವಂತರಗಳು ಗಮನಾರ್ಹ ಕೆಲಸಮಾಡುತ್ತಿವೆ ಇಂತಹ ಪತ್ರಿಕೆಗಳು ಎಷ್ಟು ಬಂದರೂ ಅವುಗಳ ಅಗತ್ಯವಿದ್ದೇ ಇದೆ. ಈ ನಿಟ್ಟಿನಲ್ಲಿ ಸಮೀಕ್ಷಕ ಇವುಗಳಿಗೆ ಪೂರಕವಾಗಿ ಹೊರಬರುತ್ತಿದೆ. ಸಮೀಕ್ಷಕದಲ್ಲಿ ಮುಖ್ಯವಾಗಿ ವಿಮರ್ಶಾತ್ಮಕ, ವಿವೇಚನಾತ್ಮಕ ಲೇಖನಗಳಿಗೆ ಹೆಚ್ಚಿನ ಅವಕಾಶವಿದ್ದರೂ ಜೊತೆಗೆ ಸೃಷ್ಟ್ಯಾತ್ಮಕ ಕವನ, ಕತೆ, ಪ್ರಬಂಧಗಳಿಗೂ ಎಡೆಯುಂಟು. ಮೊದಲ ಸಂಚಿಕೆಯಲ್ಲಿ ‘ಸಮೀಕ್ಷಕ’ದ ಪ್ರದ್ಯಾತೃಗಳು ಎಂಬುದಾಗಿ ಹನ್ನೆರಡು ಜನರನ್ನು ಹೆಸರಿಸಲಾಗಿದೆ. ಸಣ್ಣ ಕಥೆ, ಕವನಗಳು, ಲಘು ಪ್ರಬಂಧ, ಪ್ರತಿಕ್ರಿಯಾತ್ಮಕ ಲೇಖನಗಳು ಇವೆ. ಇಲ್ಲಿನ ‘ಒಂದು ಪ್ರತಿಕ್ರಿ’ಯಲ್ಲಿ ಯು. ಆರ್‍. ಅನಂತಮೂರ್ತಿಯವರು ‘ಕಾಮಿ ಒಂದು ಪ್ರತಿಕ್ರಿಯೆ’ ಹಾಗೂ ಎಚ್. ಎಂ. ಚನ್ನಯ್ಯನವರ ‘ದ್ಯಾವಾ ಪೃಥವೀ’ ಒಂದು ಪ್ರತಿಕ್ರಿಯೆಗಳಿವೆ. ಈ ಲೇಖನಗಳು ೬೦-೭೦ರ ದಶಕದಲ್ಲಿ ನಡೆಯುತ್ತಿದ್ದ ಆರೋಗ್ಯಪೂರ್ಣ ಸಾಹಿತ್ಯ ಸಂವಾದಗಳಿಗೆ ಸಾಕ್ಷಿಯಾಗಿದೆ. ಸಮೀಕ್ಷಕದ ಮೊದಲ ಸಂಚಿಕೆಯಲ್ಲಿ ಪ್ರಕಟವಾದ ಎಲ್ಲ ಕವನಗಳು ನವ್ಯ ಆಗಿರುವುದನ್ನು ಗಮನಿಸಿದರೆ ಸಮೀಕ್ಷಕ ನವ್ಯ ಮಾರ್ಗದ ಕೃತಿಗಳಿಗೆ ನೀಡದ ಪ್ರೋತ್ಸಾಹವನ್ನು ಅರ್ಥಮಾಡಿಕೊಳ್ಳಬಹುದು. ಸಮೀಕ್ಷಕ ಒಂದು ವರ್ಷಕ್ಕೆ ಮೀಗಿಲಾಗಿ ಬಾಳಲಿಲ್ಲ. ಆದರೆ ಕನ್ನಡ ಸಾಹಿತ್ಯದ ಬೆಳವಣಿಗೆ ಹಂತಗಳ ಕುರಿತು ಮಾತನಾಡುವಾಗ ಸಮೀಕ್ಷಕದಂಥ ಕಿರು ಸಾಹಿತ್ಯ ಪತ್ರಿಕೆಯನ್ನು ಕಡೆಗಣಿಸುವಂತಿಲ್ಲ.

ಸಂಕೀರ್ಣ

ಬೆಂಗಳೂರಿನ ಸೆಂಟ್ರಲ್ ಕಾಲೇಜು ಕನ್ನಡ ಸಂಘ ಕನ್ನಡ ಸಾಹಿತ್ಯಕ್ಕೆ ಪ್ರತಿಭೆಗಳನ್ನು ಧಾರೆಯೆರೆದ ವೇದಿಕೆಯಾಗಿ ಬೆಳಗಿದೆ. ಹಿಂದೆ ಇಲ್ಲಿ ಆರಂಭಗೊಂಡ ‘ಪ್ರಬುದ್ಧ ಕರ್ನಾಟಕ’ವು ಮೈಸೂರು ವಿಶ್ವ ವಿದ್ಯಾನಿಲಯದ ತೆಕ್ಕೆಗೆ ಸೇರಿ ನವೋದಯ ಸಾಹಿತ್ಯದ ವಕ್ತಾರನಾದುದನ್ನು ಈ ಹಿಂದೆಯೇ ಚರ್ಚಿಸಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿಗಳಿಗೆ ಸಾಹಿತ್ಯ ಪತ್ರಿಕೆಯೊಂದನ್ನು ಆರಂಭಿಸಿ ಉದಯೋನ್ಮಖ ಸಾಹಿತಿಗಳಿಗೆ ವೇದಿಕೆಯಾಗಿ ಬೆಳಸುವ ಹಂಬಲ ತೀವ್ರವಾಗಿತ್ತು. ಅದರ ಮೊತ್ತವಾಗಿ ವಿದ್ಯಾರ್ಥಿಗಳೇ ಸೇರಿ ‘ಸಂಕೀರ್ಣ ಪ್ರಕಾಶನ’ ಎಂಬ ಸಂಸ್ಥೆ ಸ್ಥಾಪಿಸಿಕೊಂಡು ‘ಸಂಕೀರ್ಣ’ ಮಾಸಿಕ ಆರಂಭಿಸಿದರು. ‘ಸಂಕೀರ್ಣ’ ಕನ್ನಡ ಸಾಹಿತ್ಯ ಮಾಸಿಕವೆಂದು ಕರೆಸಿಕೊಂಡಿತ್ತು. ಕ್ರೌನ್ ಕ್ವಾಟೋ ಆಕಾರದ ೬೪ಪುಟಗಳ ಪತ್ರಿಕೆಗೆ ಜಿ. ಎ. ವಿಶ್ವೇಶ್ವರ ಸಂಪಾದಕರು. ಡಿ. ವಿ. ರಾಜಶೇಖರ ಹಾಗೂ ಎಸ್. ಎಸ್. ಹಿರೇಮಠರು ಸಹ ಸಂಪಾದಕರು ಮೇ ೧೯೭೧ಕ್ಕೆ ಸಂಕೀರ್ಣವಾದ ಒಂಬತ್ತನೇ ಸಂಚಿಕೆ ಪ್ರಕಟವಾಗಿದ್ದು ವಾರ್ಷಿಕ ಚಂದಾದರ ೧೦ ರೂಪಾಯಿಗಳಾಗಿದ್ದವು. ಎರಡು ವರ್ಷ ಬಾಳಿದ ಸಂಕೀರ್ಣ ವಿದ್ಯಾರ್ಥಿ, ಲೇಖಕರು ಸಮಕಾಲೀನ ಸಾಹಿತ್ಯ ಲೋಕಕ್ಕೆ ಪ್ರವೇಶಿಸುವ ಮಾಧ್ಯಮವಾಯಿತು. ‘ಸಂಕೀರ್ಣ’ದ ನಂತರ ಈ ನಡುವೆ ಕನಿಷ್ಟ ಐದು ಪತ್ರಿಕೆಗಳು ಸಾಹಿತ್ಯದ ಬಲವುಳ್ಳವುಗಳಾಗಿ ಪ್ರಕಟಗೊಂಡಿವೆ. ಅಜಂತಪತ್ರಿಕೆಗೆ ಕತೆಗಾರ ಎಂ. ವ್ಯಾಸ ಹಾಗೂ ಶುಭಾಕರ ಶಾನುಭೋಗ ಅವರು ಸಂಪಾದಕರಾಗಿದ್ದರು. ‘ಆನಂದ’ವೆಂಬ ಹೆಸರಿನ ಎರಡು ಪತ್ರಿಕೆಗಳು ಏಕಕಾಲಕ್ಕೆ ಪ್ರಕಟಗೊಂಡುದು ವಿಶೇಷ (೧೯೬೬) ಎರಡೂ ಮಾಸ ಪತ್ರಿಕೆಗಳು ಹಾಗೂ ಕೆಲವೇ ಸಂಚಿಕೆಗಳಲ್ಲಿ ಕೊನೆಗೊಂಡವು.

ದಕ್ಷಿಣ ಕನ್ನಡದಿಂದ ಪ್ರಕಟವಾದ ‘ಆನಂದ’ ಮಾಸಪತ್ರಿಕೆಗೆ ಹಿರಿಯ ಸಾಹಿತಿ ಎಂ. ಎನ್. ಕಾಮತರು ಸಂಪಾದಕರು. ಒಂದು ವರ್ಷ ಮಾತ್ರ ಈ ಪತ್ರಿಕೆ ಪ್ರಕಟಗೊಂಡಿತು.

‘ಜ್ಞಾನಸುಧಾ’ ಎಂಬುದು ದೇವುಡು ಸದಾಶಿವ ಅವರು ಬೆಂಗಳೂರಿನಿಂದ ಹೊರತರುತ್ತಿದ್ದ ತ್ರೈಮಾಸಿಕ. ೧೯೬೭ರಿಂದ ೭೦ರವರೆಗೆ ಪತ್ರಿಕೆ ಅಸ್ತಿತ್ವದಲ್ಲಿತ್ತು. ಮೇಲಿನ ಪತ್ರಿಕೆಗಳ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಲಿಲ್ಲ.

ಪ್ರಜ್ಞೆ

೧೯೬೮ರಲ್ಲಿ ಧಾರವಾಡದಿಂದ ಪ್ರಕಟಗೊಂಡ ದ್ವೈಮಾಸಿಕ ಪತ್ರಿಕೆ. ಮಾಧವ ಕುಲಕರ್ಣಿಯವರು, ನಂತರ ಶ್ರೀನಿವಾಸ ಜೋಷಿಯವರು ಪ್ರಜ್ಞೆಗೆ ಸಂಪಾದಕರಾಗಿದ್ದರು. ಕೆಲವು ಸಂಚಿಕೆಗಳಷ್ಟೇ ಪ್ರಕಟವಾದವು.

ಸಮನ್ವಯ

ನವ್ಯ ಸಾಹಿತ್ಯ ಸಂದರ್ಭದಲ್ಲಿ ಹೊರಬಂದರೂ ನವೋದಯ ನವ್ಯ ಪ್ರಕಾರಗಳೆರಡಕ್ಕೂ ಚರ್ಚೆಯ ವೇದಿಕೆಯಾದುದು ಸಮನ್ವಯ. ಈ ತ್ರೈಮಾಸಿಕ ಪತ್ರಿಕೆ ಹೊರಬಂದುದು ೧೯೬೮ರಲ್ಲಿ. ಸಾಹಿತ್ಯದ ವಿವಿಧ ನಿಲುವುಗಳಿಗೆಲ್ಲ ಇದೊಂದು ವೇದಿಕೆ ಎಂಬುದು ಸಮನ್ವಯ ಪತ್ರಿಕೆಯ ಘೋಷಣೆ. ‘ಸಮನ್ವಯ’ ತ್ರೈಮಾಸಿಕದ ಮೊದಲ ಸಂಚಿಕೆ ಹೊರಬಂದಾಗ, ಹಿರಿಯ ಪತ್ರಕರ್ತ ಹಾಗೂ ಲೇಖಕರಾಗಿದ್ದ ಪ. ಸು. ಭಟ್ಟರನ್ನು ಸಮನ್ವಯದ ವ್ಯವಸ್ಥಾಪಕ ಸಂಪಾದಕರೆಂದು ಹೆಸರಿಸಲಾಗಿತ್ತು. ಸಮನ್ವಯ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ನವೋದಯ, ನವ್ಯಗಳ ಸಮನ್ವಯಕಾರರೆಂದೇ ಹೆಸರು ಮಾಡಿರುವ ಜೆ. ಎಸ್. ಶಿವರುದ್ರಪ್ಪ, ಹೇಮಂತ ಕುಲಕರ್ಣಿ, ಚಿ. ನ. ಮಂಗಳಾ ಅವರುಗಳಿದ್ದರು. ನವ್ಯ ಕಾವ್ಯದ ಯುಗಪ್ರವರ್ತಕರೆನಿಸಿದ ವಿನಾಯಕ (ವಿ. ಕೃ. ಗೋಕಾಕ) ಸಮನ್ವಯ ಮಂಡಳಿಯ ಅಧ್ಯಕ್ಷರು. ಸಮನ್ವಯದ ಮೊದಲ ಸಂಚಿಕೆಯಲ್ಲಿ ಸಂಪಾದಕ ಮಂಡಳಿ ಮಾಡಿದ ಸಮನ್ವಯ ಘೋಷಣೆಗೆ ಸರ್ವಕಾಲಿಕ ಮೌಲ್ಯವಿದೆ. ಯಾವ ಸಂದರ್ಭದಲ್ಲಿ ಸಾಹಿತ್ಯ ಪತ್ರಿಕೆಯಾಗಿ ಸಮನ್ವಯವನ್ನು ಹೊರತರಬೇಕಾಯಿತೆಂಬ ಬಗ್ಗೆ ಉಲ್ಲೇಖಗಳಿವೆ. ಸಮನ್ವಯ ದೃಷ್ಟಿ ಎಂದರೆ ಸಮಸ್ತ ವೈವಿಧ್ಯಗಳನ್ನೆಲ್ಲಾ ಒಂದು ಏಕತಾನತೆಗೆ ತರುವ ಪ್ರಯತ್ನವಲ್ಲ ಅಥವಾ ಎಲ್ಲವನ್ನು ಸದ್ದಿಲ್ಲದೆ ಒಪ್ಪಿಕೊಂಡು ಸಂತೈಸಿಕೊಳ್ಳುವ ಸುಲಭ ಸಮಾಧಾನ ತಂತ್ರವೂ ಅಲ್ಲ. ಪತ್ರಿಯೊಂದು ವೈವಿಧ್ಯವನ್ನು ಅಹಂ ಇದ್ದಂತೆಯೇ ಸಹಾನುಭೂತಿಯಿಂದ ಗೌರವಿಸಿ, ಅದರ ಇತಿಮಿತಿಗಳನ್ನು ನಿಷ್ಪಕ್ಷಪಾತವಾದ ಮತ್ತು ವಿಚಾರ ಪೂರ್ಣವಾದ ದೃಷ್ಟಿಯಿಂದ ಪರಿಶೀಲಿಸಿ, ಎಲ್ಲದರ ಉತ್ತಮಾಂಶಗಳನ್ನು ಸ್ವೀಕರಿಸಿ ವ್ಯಕ್ತಿತ್ವ ವಿಕಾಸವನ್ನು ಯಾವುದರಲ್ಲಿಯೂ ಕಳೆದುಕೊಳ್ಳದಂಥ ಮಾನಸಿಕ ಆರೋಗ್ಯವನ್ನು ಸಾಧಿಸುವ ಒಂದು ಪ್ರಯತ್ನ ಎಂದು ಅರ್ಥ. ಹೀಗಾಗಿ ಸಮನ್ವಯವು ವ್ಯಕ್ತಿ ವಿಶಿಷ್ಟವಾದ ಎಲ್ಲಾ ದೃಷ್ಟಿಗಳನ್ನೂ ಗೌರವಿಸುತ್ತದೆ. ಸಾಹಿತ್ಯ ನಿರ್ಮಿತಿಯ ವೈಲಕ್ಷಣ್ಯಗಳನ್ನು ಅದರ ಪ್ರೇರಣೆ, ಪ್ರಚೋದನೆ ಎಲ್ಲಿಂದಲೇ ಬಂದರು ಪರೀಕ್ಷಿಸಿ ಒಪ್ಪಿಕೊಳ್ಳುತ್ತದೆ. ಏಕೆಂದರೆ ಸಮನ್ವಯವು ಪಕ್ಷಾತೀತ. ಸಮನ್ವಯ ಮೊದಲ ಸಂಚಿಕೆಯಲ್ಲಿ ಪ್ರೊ. ವಿ. ಕೆ. ಗೋಕಾಕ, ಪ್ರೊ. ರಾಜ್‌ನಾಥ್, ಡಾ. ಜಿ. ಎಸ್. ಶಿವರುದ್ರಪ್ಪ. ಶಂಕರ ಮೊಕಾಶಿ ಪುಣೇಕರ, ರಂಜನಭಟ್ಟ, ಹೇಮಂತ, ವಿ. ಜಿ. ಭಟ್ಟ, ಸುಬ್ಬಣ್ಣ, ರಂಗಚಾರ್‍ಯ ಎಕ್ಕುಂಡಿ ಹಾಗೂ ನಿರಂಜನ ಅವರ ಲೇಖನಗಳಿವೆ. ಪುತಿನ, ಗಂಗಾಧರ ಚಿತ್ತಾಲ, ಎಸ್. ಎಲ್. ಬೈರಪ್ಪನವರ ಕೃತಿ ವಿಮೆರ್ಶೆಗಳಿವೆ. ಅಂದರೆ ಸಮನ್ವಯ ಬಾಳಿದ್ದು ಎರಡೇ ವರ್ಷಗಳಾದರೂ ಅಲ್ಲಿ ಬರೆಯುತ್ತಿದ್ದ ಲೇಖಕರುಗಳು ಕನ್ನಡದಲ್ಲಿ ಖ್ಯಾತಿವೇತ್ತರಾದುದರಿಂದ ಸಾಕಷ್ಟು ಗಮನ ಸೆಳೆಯುತ್ತಿತ್ತೆಂದು ಧಾರಾಳವಾಗಿ ಹೇಳಬಹುದು. ಸಮನ್ವಯಕ್ಕೆ ವಾರ್ಷಿಕ ಚಂದಾ ೧೦ ರೂಪಾಯಿ, ಬಿಡಿ ಸಂಚಿಕೆಗೆ ೩ ರೂಪಾಯಿ ಇದ್ದಿತು. (೧೯೬೭) ಸಂಚಿಕೆಯಿಂದ ಸಂಚಿಕೆಗೆ ಸಮನ್ವಯ ಸಂಪಾದಕ ಮಂಡಳಿಯಿಂದ ಕೆಲವರು ಹೊರ ಹೋದರೆ ಕೆಲವರು ಒಳಬರುತ್ತಿದ್ದರು. ಡೆಮಿ ೧/೪ ಆಕಾರದಲ್ಲಿ ಮುದ್ರಣಗೊಳ್ಳುತ್ತಿದ್ದ ಸಮನ್ವಯವು ಎರಡು ವರ್ಷ ನಡೆಯಿತು. ಗಣ್ಯ ಸಾಹಿತಿಗಳ ಗಡಣವೇ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿದ್ದರೂ ಅವರ್‍ಯಾರಿಗೂ ಪತ್ರಿಕೆಯೊಂದನ್ನು ನಡೆಸಿದ ವ್ಯಾವಹಾರಿಕ ಅನುಭವವಿರಲಿಲ್ಲ. ಹೀಗಾಗಿ ಎರಡು ವರ್ಷಗಳಲ್ಲಿ ಆರ್ಥಿಕವಾಗಿ ಕೈಸುಟ್ಟುಕೊಂಡು ಪತ್ರಿಕೆ ನಿಲ್ಲಿಸಬೇಕಾಯ್ತು.

ಚಿಗುರೆಲೆ

ಮಂಡ್ಯದಿಂದ ಪ್ರಕಟಗೊಂಡ ಪತ್ರಿಕೆಗಳ ಪೈಕಿ ಸಾಹಿತ್ಯ ಪತ್ರಿಕೆಗಳು ವಿರಳ. ಚಿಗುರೆಲೆ ಅಂಥದೊಂದು ಮಾಸಿಕ. ಪಂಡಿತ ಮ. ಮಲ್ಲಪ್ಪ ಚಿಗುರೆಲೆ ಮಾಸಪತ್ರಿಕೆಯ ಸಂಪಾದಕರು. ೧೯೬೯ರಲ್ಲಿ ಪ್ರಕಾಶನಗೊಂಡ ‘ಚಿಗುರೆಲೆ’ ಪ್ರಕಟನೇಯಲ್ಲಿದ್ದುದು ಒಂದು ವರ್ಷ ಮಾತ್ರ. ಕಥೆ ಕವನ, ಚಟುಕ, ಧಾರವಾಹಿ, ವೈಚಾರಿಕ ಲೇಖನಗಳನ್ನೊಳಗೊಂಡ ‘ಚಿಗುರೆಲೆ’ ಮಾಸಪತ್ರಿಕೆಯಾಗಿ ಪ್ರಕಟವಾದ ತರುಣದಲ್ಲೇ ಜನಪ್ರಿಯತೆ ಗಳಿಸಿಕೊಂಡಿತ್ತು. ಪಂಡಿತ ಮ. ಮಲ್ಲಪ್ಪನವರು ಶ್ರಮವಹಿಸಿ ತರುತ್ತಿದ್ದರು. ಈ ಪತ್ರಿಕೆಯ ಉಳಿವಿಗಾಗಿ ಕೈ ಕಚ್ಚಿದರೂ ಸಹಿಸಿಕೊಂಡರು. ಕ್ರೌನ್ ಆಕಾರದ ಚಿಗುರೆಲೆ ೮೦ರಿಂದ ೧೨೦ರವರೆಗೆ ಪುಟಗಳನ್ನು ಒಳಗೊಂಡಿತ್ತು. ಸ್ವತಃ ಐವತ್ತಕ್ಕೂ ಹೆಚ್ಚುಕೃತಿಗಳನ್ನು ಬರೆದಿರುವ ಪಂಡಿತ ಮಲ್ಲಪ್ಪನವರಿಗೆ ಪತ್ರಿಕೋದ್ಯಮದ ಅನುಭವವಿರಲಿಲ್ಲ. ಆದರೂ ಪತ್ರಿಕೆ ತರುವ ಉಮೇದಿನಿಂದ ೧೦-೧೨ ಸಂಚಿಕೆಗಳನ್ನು ಹೊರತಂದರು. ‘ಚಿಗುರೆಲೆ’ ಅಲ್ಪಾಯುವಾದರೂ ಸಾಹಿತ್ಯ ಪತ್ರಿಕೆಗಳ ಸಮೃದ್ಧಿಯನ್ನೇನೂ ಕಾಣದ ಮಂಡ್ಯ ಜಿಲ್ಲೆಯಲ್ಲಿ ಮೂಖ್ಯವಾದುದು.

ಪ್ರತೀಕ

ಹೈದರಬಾದು ಕರ್ನಾಟಕ ಭಾಗಗಳು ಸಾಂಸ್ಕೃತಿಕವಾಗಿ ಶ್ರೀಮಂತವಾದರೂ ಕಲೆ, ಸಾಹಿತ್ಯ ಪತ್ರಿಕೆಗಳ ದೃಷ್ಟಿಯಿಂದ ಅಂಥಾ ಸಮೃದ್ಧಿಯೇನೂ ಕಾಣಲಿಲ್ಲ. ನಿಜಾಮರ ಆಡಳಿತ ಕಾಲದಲ್ಲಿ ಇಲ್ಲಿ ಕನ್ನಡದ ಉಸಿರೇ ಕಟ್ಟಿದಂತಾಗಿತ್ತು. ಹೈದ್ರಾಬಾದು ಕರ್ನಾಟಕ ಭಾಗವು ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಇನ್ನೂ ಹಿಂದುಳಿದಿದೆ. ೯೦ರ ದಶಕದಲ್ಲಿ ಕನ್ನಡದ ಹೊಸ ತಲೆಮಾರಿನ ಅನೇಕ ಕಥೆಗಾರರು ಈ ಭಾಗದಲ್ಲಿ ಕಾಣಿಸಿಕೊಂಡಿರುವುದೊಂದು ವಿಶೇಷ. ಆದರೆ ಸಾಹಿತ್ಯ ಪತ್ರಿಕೆಗಳ ಚಟುವಟಿಕೆ ಬೀದರ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಬಿಜಾಪುರಗಳನ್ನೊಳಗೊಂಡ ಹೈದರಾಬಾದ್, ಕರ್ನಾಟಕ ಭಾಗದಲ್ಲಿ ಇನ್ನೂ ಹಿಂದುಳಿದೆವೆ. ಹೀಗಿರುವಾಗ ರಾಯಚೂರಿನಲ್ಲಿ ೧೯೬೮ರಲ್ಲಿ ಪ್ರಾರಂಭವಾದ ‘ಪ್ರತೀಕ’ ಈ ಭಾಗದ ಅಂತಃಸತ್ವದ ಪ್ರತೀಕವಾಯಿತು. ತ್ರೈಮಾಸಿಕ ಪತ್ರಿಕೆಯಾಗಿದ್ದ ‘ಪ್ರತೀಕ’ ಐದು ಸಂಚಿಕೆಗೆ ಕೊನೆಯಾಯಿತು. ‘ಪ್ರತೀಕ’ ನವ್ಯ ಸಾಹಿತ್ಯಕ್ಕೆ ಒತ್ತುಕೊಟ್ಟು ಸಾಹಿತ್ಯಿಕ ತ್ರೈಮಾಸಿಕ. ಈ ಪ್ರದೇಶದ ಹೆಸರಾಂತ ಸಾಹಿತಿಗಳಾದ ಶಾಂತರಸ, ಜಯತೀರ್ಥ ರಾಜಪುರೋಹಿತ, ಚಂದ್ರಕಾಂತ ಕುಸುನೂರು, ರಾಜಶೇಖರ ನೀರಮಾನ್ವಿ ಹಾಗೂ ವೈ.ಕೆ. ಚಂದ್ರಶೇಖರ ಅವರುಗಳು ಈ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿದ್ದರು. ನಿರ್ಭಿಡೆಯ ವಿಮೆರ್ಶೆಗೆ ಹೆಸರಾಗಿದ್ದಂತೆ ಹಲವು ಹೊಸ ತನ್ನಕ್ಕೂ ಹೆಸರಾಗಿತ್ತು. ಕನ್ನಡ ನಾಡಿನ ಹಳೆ ಹೊಸ ಪೀಳಿಗೆಯ ಎಲ್ಲ ಸತ್ವಸ್ಥ ಬರಹಗಾರರ ಲೇಖನಗಳನ್ನು ಅದು ಪ್ರಕಟಿಸಿತು. ೧೯೬೯ರ ಜುಲೈನಲ್ಲಿ ಪ್ರಕಟವಾದ ಪ್ರತೀಕದ ಕಥಾ ವಿಶೇಷಾಂಕ ಒಂದು ವಿನೂತನ ಕೊಡುಗೆ ಎಂಬುದಾಗಿ ಶಾಂತರಸರು ಪತ್ರೀಕವನ್ನು ನೆನೆಸಿಕೊಳ್ಳುತ್ತಾರೆ.

ಮುಂಗಾರು

‘ಮುಂಗಾರು’ ಎಪ್ಪತ್ತರ ದಶಕದಲ್ಲಿ ಒಮ್ಮೆ ಮಿಂಚಿ ಮಾಯವಾದ ಪತ್ರಿಕೆ. ಮೈಸೂರಿನ ಸ್ನಾತಕೋತ್ತರ ಕೇಂದ್ರವೊಂದು ಮಂಗಳೂರಿನಲ್ಲಿ ಆರಂಭವಾದಾಗ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಪ್ರಾಧ್ಯಾಪಕರಾಗಿ ಮಂಗಳೂರಿಗೆ ತೆರಳಿದರು. ಅವರ ಜೊತೆ ಎಚ್. ಜಿ. ಲಕ್ಕಪ್ಪ ಗೌಡ, ಗುಂಡ್ಮಿ ಚಂದ್ರಶೇಖರ ಐತಾಳ, ಬಿ. ಎ. ವಿವೇಕ ರೈ ಅವರುಗಳೂ ಇದ್ದರು. ಎಸ್. ವಿ. ಪರಮೇಶ್ವರ ಭಟ್ಟರು ಸಲಹೆಗಾರರಾಗಿದ್ದು. ಸ್ನಾತಕೋತ್ತರ ಕೇಂದ್ರದ ಮೇಲಿನ ಮೂವರು ಕನ್ನಡ ಅಧ್ಯಾಪಕರುಗಳೂ ಸಂಪಾದಕ ಸಮಿತಿಯಲ್ಲಿದ್ದ ‘ಮುಂಗಾರು’, ಕನ್ನಡ ವಿಭಾಗದ ಪತ್ರಿಕೆಯೆಂಬ ಭಾವನೆ ಬರುವಂತಿತ್ತು. ಆಗಸ್ಟ್ ೧೯೭೨ರಲ್ಲಿ ತ್ರೈಮಾಸಿಕದ ಮೊದಲ ಸಂಚಿಕೆ ಹೊರಬಂತು. ಕ್ರೌನ್ ಆಕಾರದ ೭೬ ಪುಟಗಳ ಪತ್ರಿಕೆಯ ವಾರ್ಷಿಕ ಚಂದಾ, ಐದು ರೂಪಾಯಿ. ಮುಂಗಾರಿನ ಮೊದಲ ಸಂಪಾದಕೀಯ ‘ನಮ್ಮ ಮಾತು’ವಿನಲ್ಲಿ ಕನ್ನಡದಲ್ಲಿ ರಮ್ಯ, ನವ್ಯಗಳ ನಡುವೆ ನಡೆದ ತಿಕ್ಕಾಟವನ್ನೂ ಇದರಿಂದಾಗಿ ಪಕ್ಷ ಪಂಥಗಳ ಹೆಸರಿನಲ್ಲಿ ವಿಮರ್ಶೆ ನಡೆದು ಮೌಲ್ಯ ನಿರ್ಣಯ ಏರುಪೇರಾಗುತ್ತಿರುವ ಬಗ್ಗೆ ವಿಷಾದ ಸೂಚಿಸಲಾಗಿದೆ. ಅತಿರೇಕಕ್ಕೆ ಹೋದ ಈ ಘರ್ಷಣೆಯ ಕುರುಕ್ಷೇತ್ರದ ಕಿಡಿಹೊಗೆಗಳ ಕತ್ತಲಲ್ಲಿ ನೈಜ ಸಹೃದಯ ನೈಜಕಾವ್ಯ ತಲೆಮರೆಸಿಕೊಳ್ಳುತ್ತವೆ. ಇಂಥ ಕ್ಷುಲ್ಲಕ ಜಗಳಗಳಿಂದ ನಮ್ಮ ಸಾಹಿತ್ಯಕ್ಕೆ ಸಲ್ಲಬೇಕಾದ ಸ್ಥಾನಮಾನ ದೂರಕದೇ ಹೋಗುತ್ತದೆ ಎನ್ನುತ್ತಾರೆ ಸಂಪಾದಕರು. ‘ಈ ಪೂರ್ವಗ್ರಹ ಪಕ್ಷಪಾತಗಳ ಶನಿದೊಗಲನ್ನು ಹರಿದೂಗೆದು ಶುದ್ಧ ಸಾಹಿತ್ಯ ವಿಚಾರಗಳ ವೇದಿಕೆಯಾಗುವ ಹಿರಿಯ ಹಂಬಲವನ್ನು ಹೊತ್ತು ‘ಮುಂಗಾರು’ ಜನ್ಮ ತಾಳಿದೆ. ಪ್ರಾಚೀನ-ನವೀನ-ರಮ್ಯ-ಹಿರಿಯ-ಕಿರಿಯ ಎಂಬ ಭೇದವಿಲ್ಲದೆ ನಿರ್ಮಲವೂ ಪ್ರಬುದ್ಧವೂ ಸ್ವೋಪಜ್ಞವೂ ಆದ ಎಲ್ಲ ಮೌಲಿಕ ಅನಿಸಿಕೆಗಳ ನಾಲಿಗೆಯಾಗುವ ಉದ್ದೇಶವನ್ನು ಮುಂಗಾರು ಹೊಂದಿದೆ. ನಾಡಿನ ಪ್ರತಿಭಾವಂತ ಲೇಖಕರು, ಸಹೃದಯರು ಲೇಖನಗಳನ್ನೂ ಧನಸಹಾಯವನ್ನೂ ನೀಡುವ ಹಾಗೂ ಓದುವ ಇದನ್ನು ತಮ್ಮ ದಾಗಿಸಿಕೊಂಡು ಧನಸಯಾವನ್ನೂ ನೀಡುವ ಹಾಗೂ ಓದುವ ಮೂಲಕ ಇದನ್ನು ತಮ್ಮದಾಗಿಸಿಕೊಂಡು ಬೆಳೆಯಿಸಬೇಕೆಂದು ಪ್ರಾರ್ಥಿಸುತ್ತೇವೆ. ಲೇಖಕರುಗಳು ಲೇಖನವನ್ನಲ್ಲದೇ ಪತ್ರಿಕೆ ನಡೆಯಲು ಧನಸಹಾಯವನ್ನೂ ಮಾಡಬೇಕೆಂದು ಕರೆಕೊಟ್ಟಿರುವುದು ವಿಶೇಷ. ಆದರೂ ‘ಮುಂಗಾರು’ ಕರಾವಳಿಯ ಮುಂಗಾರು ಕ್ಷೀಣಿಸುವಂತೆ ಕೆಲವೇ ಸಂಚಿಕೆಗಳಿಗೆ ಮುಕ್ತಾಯ ಹಾಡಿತು. ಆದರೆ ನವ್ಯ ನವ್ಯೋತ್ತರ ಮುಂತಾದ ಘರ್ಷಣೆಗಳಲ್ಲಿ ಸಾಹಿತಿಗಳು ತೊಡಗಿದಾಗ ಯಾವುದನ್ನೂ ಬಯಸದ, ‘ನಿರ್ಮಲ, ಪ್ರಬುದ್ಧ ಮೌಲಿಕ ಸಾಹಿತ್ಯವನ್ನು’ ಪ್ರಕಟಿಸುವ ಅಭಿಲಾಷೆಯ ಸಾಹಿತಿಗಳೂ ಇದ್ದರೆಂಬುದಕ್ಕೆ ಮುಂಗಾರು ಸಾಕ್ಷಿ ನುಡಿಯಿತು.

ಪರಂಪರೆ

ಎಪ್ಪತ್ತರ ದಶಕದಲ್ಲಿ ಬಂದ ಇನ್ನೊಂದು ಪತ್ರಿಕೆ ಪರಂಪರೆ (೧೯೭೨) ಸಂಪಾದಕರು ಸಿ. ಪಿ. ಕೆ. ಎಂದೇ ಕನ್ನಡ ಸಾಹಿತ್ಯದಲ್ಲಿ ಖ್ಯಾತರಾದ ಸಿ. ಪಿ. ಕೃಷ್ಣ ಕುಮಾರ, ಜೀ. ಶಂ. ಪರಮಶಿವಯ್ಯ ಹಾಗೂ ಸುಧಾಕರ. ಪರಂಪರೆಯ ಆರು ಸಂಚಿಕೆಗಳು ಮಾತ್ರ ಹೊರ ಬಂದವು. ಸ್ನೇಹಿತರು ಒಟ್ಟಾಗಿ ಪತ್ರಿಕೆ ಮಾಡಿದ ಮೇಲೆ ಯಾರು ಮುಂದುವರೆಸಬೇಕೆಂಬ ನಿರ್ಣಯವಾಗಿರಲಿಲ್ಲ. ಯಾರು ಮುಂದುವರೆಸಬೇಕೆಂದು ಸ್ಪಷ್ಟವಾಗದೇ ನಿಂತು ಹೋಯಿತು ಎನ್ನುತ್ತಾರೆ. ಸಿ. ಪಿ. ಕೆ. ಯವರು. ಪತ್ರಿಕೆಯ ಮಾರಾಟದ ಬಗ್ಗೆ ಮುಂದಿನ ಸಂಚಿಕೆಗಳ ತಯಾರಿಯ ಬಗ್ಗೆ ಪೂರ್ವಸಿದ್ಧತೆ ಇಲ್ಲದೇ ಪತ್ರಿಕೆ ತಂದು ಕೈಸುಟ್ಟುಕೊಂಡ ಮತ್ತೊಂದು ಪ್ರಕರಣವಿದು. ಡೆಮಿ ೧/೮ ಆಕಾರದ, ಈ ಪತ್ರಿಕೆ ನೋಂದಾವಣಿಗೊಳ್ಳದೇ ನಿಂತುಹೋಯಿತು. ೧೯೭೨ರಲ್ಲಿ ಎರಡು ಪತ್ರಿಕೆಗಳು ಸಂಸ್ಥೆಗಳ ಪ್ರಕಟಣೆಗಳಾಗಿ ಪ್ರಕಟಗೊಂಡು ಇಂದಿಗೂ ಮುಂದುವರೆದಿವೆ. ಬೆಂಗಳೂರು ವಿಶ್ವವಿದ್ಯಾನಿಲಯದ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ‘ಸಾಧನೆ’ ಕರ್ನಾಟಕ ವಿಶ್ವವಿದ್ಯಾನಿಲಯದ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆ ‘ಕರ್ನಾಟಕ ಭಾರತೀ’. ‘ಸಾಧನೆ’ ತ್ರೈಮಾಸಿಕಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಸಂಪಾದಕ ಸಮಿತಿಯ ಅಧ್ಯಕ್ಷರು. ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರು ಪ್ರಧಾನ ಸಂಪಾದಕರು, ೧/೮ ಡೆಮಿ ಆಕಾರದ ಪತ್ರಿಕೆ ಸಾಹಿತ್ಯಿಕ ಲೇಖನಗಳು, ಕವನ, ಪ್ರಬಂಧಗಳಲ್ಲದೇ ಚರಿತ್ರೇ, ಜಾನಪದ ಮುಂತಾಗಿ ವಿವಿಧ ಕ್ಷೇತ್ರಗಳ ಅಧ್ಯಯನಶೀಲ ಲೇಖನಗಳನ್ನು ಒಳಗೊಂಡಿರುತ್ತೇ ಜನವರಿ ೯೬ಕ್ಕೆ ‘ಸಾಧನೆ’ಯ ರಜತೋತ್ಸವ ಸಂಚಿಕೆ ಪ್ರಕಟವಾಗಿದೆ.

ಕರ್ನಾಟಕ ಭಾರತೀ

‘ಕರ್ನಾಟಕ ಭಾರತೀಯು ಸೃಜನ, ವಿಮರ್ಶನ, ಸಂಶೋಧನ, ಸಾಹಿತ್ಯದ ಅಭಿವೃದ್ಧಿಗಾಗಿ ಮೀಸಲಾದುದು’ ಎಂದು ಘೋಷಿಸಲಾಗಿದೆ. ಕರ್ನಾಟಕ ಭಾರತೀಗೆ ಪ್ರತ್ಯೇಕ ಸಂಪಾದಕ ಮಂಡಳಿಯಿದ್ದು ಕಾಲಕಾಲಕ್ಕೆ ಪುನರಚೆಗೊಳ್ಳುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಾಶಕರು. ಕರ್ನಾಟಕ ಭಾರತೀ ಮೌಲಿಕ ಸಂಶೋಧನಾ ಲೇಖನಗಳಿಗಾಗಿ ಪ್ರಸಿದ್ಧವಾಗಿದೆ.

ಅಕಾವ್ಯ

ಕಾವ್ಯಕ್ಕೆ ಹೊಸತಿರುವು ಕೊಡಲು ಬದ್ಧವಾಗಿರುವ ವೇದಿಕ ಎಂಬುದಾಗಿ ತನ್ನನ್ನು ಕರೆದುಕೊಂಡು ಪತ್ರಿಕೆಯ ಹೆಸರು ‘ಅಕಾವ್ಯ’, ಸಂಪಾದಕರು ಚಂದ್ರಶೇಖರ ಕಂಬಾರ, ಸಿಂಹಕೊಳ್ಳೆಗಾಲ ಹಾಗೂ ದೊಡ್ಡ ರಂಗೇಗೌಡ. ೧/೮ ಡೆಮಿ ಆಕಾರದ, ೩೨ಪುಟಗಳ ಅಕಾವ್ಯ ಹೊರಬಂದಿದ್ದು ೧೯೭೩ರಲ್ಲಿ. ಅಕಾವ್ಯದ ಉದ್ದೇಶಗಳ ಬಗ್ಗೆ ಎರಡನೇ ಸಂಚಿಕೆಯಲ್ಲಿ ‘ಅಕಾವ್ಯ ಮತ್ತು ನಾವು’ ಎಂಬುದಾಗಿ ಸಂಪಾದಕರು ಬರೆದಿರುವ ಮಾತುಗಳು ತಮ್ಮ ಪತ್ರಿಕೆಯ ಪ್ರಣಾಳಿಕೆಯಂತಿದೆ. ‘ಅಕಾವ್ಯವನ್ನು ನಾವು ಆರಂಭಿಸಿದ್ದು ಕಾವ್ಯ ಕ್ಷೇತ್ರದಲ್ಲಿ ಹೊಸ ರೀತಿಯ ಪ್ರಯೋಗಗಳನ್ನು ಬೆಳಕಿಗೆ ತರಲಿಕ್ಕಾಗಿ ಮಾತ್ರ. ಒಳ್ಳಯ ಕಾವ್ಯವನ್ನು ಬರೆಯುವ ಎಲ್ಲ ಬರಹಗಾರರಿಗೆ ಇಲ್ಲಿ ಸ್ಥಾನ ಕೊಡುವುದೇ ನಮ್ಮ ಉದ್ದೇಶ. ಈ ಹೊತ್ತಿನ ಕನ್ನಡ ಕಾವ್ಯದ ಏಕತಾನತೆ ಮುರಿಯುವ ಸಲುವಾಗ ಕಾವ್ಯರಂಗವನ್ನು ಕಸಿ ಮಾಡುವ ಉತ್ಸಾಹಿಗಳಿಗೆ ಇದು ಒಂದು ವೇದಿಕೆ. ಅದನ್ನು ಉಪಯೋಗಿಸಿಕೊಳ್ಳುವ ಹೊಣೆಗಾರಿಕೆ ಯುವಕರ ಮೇಲಿದೆ. ಮೊದಲ ಸಂಚಿಕೆಯಲ್ಲಿ ಪ್ರಕಟಿಸಿದ ಲೇಖನವನ್ನೇ ಪ್ರಸ್ತಾಪಿಸುತ್ತ ನಮ್ಮ ಪತ್ರಿಕೆಯ ಬಗ್ಗೆ ಇಲ್ಲದ ವಿಷರೋಷ ಕಾರುವುದರಲ್ಲೇ ಕೆಲವರು ತೃಪ್ತರಾಗಿದ್ದಾರೆ. ಮುಖ್ಯವಾಗಿ ಅಕಾವ್ಯದ ಕಾಳಜಿ ಕಾವ್ಯದೊಂದಿಗೇ ಹೊರತು ಬೇರೇನಿಲ್ಲ. ಉತ್ತಮ ವಿಮಶಾತ್ಮಕ ಲೇಖನಗಳ ಕೊರತೆ ಯಾವುದೇ ಸಾಹಿತ್ಯ ಪತ್ರಿಕೆ ನಡೆಸುವವರಿಗೆ ತಪ್ಪಿದ್ದಲ್ಲ. ತನ್ನ ಸೀಮಿತ ವಲಯದೊಳಗೇ ವಿಭಿನ್ನ ಜಾಡೋಂದನ್ನು ತುಳಿಯುವಾಸೆ ಅಕಾವ್ಯಕ್ಕೆ ಇದೆ. ಪ್ರಚಲಿತ ಕಾವ್ಯವರ್ಗದಿಂದ ಬದಲಾದ ಸಮರ್ಥ ಹೊಸ ದನಿಗಳಿಗೆ ಇಲ್ಲಿ ಯಾವತ್ತೂ ಸ್ವಾಗತ. ಪೂರೈಕೆಯ ಜವಾಬ್ದಾರಿ ಸಮಕಾಲೀನ ಕವಿಗಳದ್ದೇ ಆಗಿದೆ. ಈ ಅನಿವಾರ್ಯ ಹಿನ್ನಲೆ ಅಕಾವ್ಯದ ಹುಟ್ಟಿನಲ್ಲಿದೆ ಎಂಬುದನ್ನು ಸಾಹಿತ್ಯಾಸಕ್ತರು ಗಮನಿಸಬೇಕೆಂಬುದೇ ನಮ್ಮ ಕಳಕಳಿ’. ಪರಿಶೀಲನೆಗೆ ದೊರೆತ ಎರಡನೇ ಸಂಚಿಕೆಯಲ್ಲಿ ಪತ್ರಿಕೆಯ ಮುದ್ರಣದ ವರ್ಷವಾಗಲೀ, ಅದು ಮಾಸಿಕವೋ ದ್ವೈಮಾಸಿಕವೋ ಎಂಬುದಕ್ಕಾಗಲೀ ಯಾವುದೇ ವಿವರಣೆ ಇಲ್ಲ. ಹೀಗಾಗಿ ಅಕಾವ್ಯದ ಆ ಸಂಚಿಕೆ ಯಾವಾಗ ಪ್ರಕಟಗೊಂಡಿತೆಂಬುದೇ ಈಗ ಅರ್ಥವಾಗದು. ಹನ್ನೆರಡು ಪ್ರಕಟಣೆಗಳಿಗೆ ಹತ್ತು ರೂಪಾಯಿ ಚಂದಾ ಎನ್ನಲಾಗಿದೆ. ಸಂಚಿಕೆಯು ಹಿಮನಾ ಮುದ್ರಣದಲ್ಲಿ ಮುದ್ರಣಗೊಂಡಿದೆ. ಕಾವ್ಯಕ್ಕೆ ಒತ್ತು ಕೊಟ್ಟು, ಕಾವ್ಯ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗಳಿಗೆ ‘ಅಕಾವ್ಯ’ ವೇದಿಕಯಾಗಿದ್ದು ನಿಜ. ಆದರೆ ವರ್ಷಕ್ಕೆ ಮೇಲ್ಪಟ್ಟು ಬಾಳಿದಂತಿಲ್ಲ.

ನೇತಿ

‘ನೇತಿ’ ವಿಚಾರ, ವಿಮರ್ಶೆಗಳಿಗೆ ಮೀಸಲಾದ ತ್ರೈಮಾಸಿಕ, ಸಂಪಾದಕರು ರಾಮಚಂದ್ರದೇವ ಹಾಗೂ ಡಿ. ಎಸ್. ಶ್ರೀಕಂಠಮೂರ್ತಿ, ಏಪ್ರಿಲ್ ೧೯೭೩ರಲ್ಲಿ ನೇತಿಯ ಪ್ರಥಮ ಸಂಚಿಕೆ ಹೊರಬಂದಿದೆ. ೧/೮ ಡೆಮಿ ಆಕಾರ, ನಾಲ್ಕು ಸಂಚಿಕೆಗಳಿಗೆ ವಾರ್ಷಿಕ ಚಂದಾ ಹತ್ತು ರೂಪಾಯಿ. ‘ನೇತಿ’ಯ ಅರ್ಥ, ಉದ್ದೇಶಗಳನ್ನು ಮೊದಲು ಸಂಚಿಕೆಯಲ್ಲಿ ಸಂಪಾದಕರು ಹೀಗೆ ವಿವರಿಸಿದ್ದಾರೆ. ‘ಬೆಳೆಯುತ್ತಿರುವ ವ್ಯಕ್ತಿ ಒಂದು ಹಂತಕ್ಕೆ ತಲುಪುತ್ತಿರುವ ಹಾಗೇ ಅವನಿಗನ್ನಿಸುವುದು ತನ್ನ ಬೆಳವಣಿಗೆಯ ಕೊನೆ ಇದಲ್ಲ. ಇದಕ್ಕೆ ವಿರುದ್ಧವಾದದ್ದು ಅಥವಾ ಮೀರಿದ್ದು ಇರಬಹುದು ಎಂದು ಅದಲ್ಲ ಅಥವಾ ಇದೇ ಅಲ್ಲ ಎನ್ನುವ ನೇತಿಯ ಈ ಭಾವನೆ ಮತ್ತೆ ವ್ಯಕ್ತಿಯನ್ನು ಶೋಧನೆಯಲ್ಲಿ ತೊಡಗಿಸುತ್ತದೆ. ಸದ್ಯದ ಹಂತವನ್ನು ಅಪೂರ್ಣವೆಂದು ಅನುಮಾನಿಸುವುದು ಮುಂದಿನ ಹುಡುಕಾಟಕ್ಕಾಗಿ. ಆದ್ದರಿಂದ ನಿರಂತರ ಸ್ಪಂದನದ ನೇತಿಯ ಸ್ಥಿತಿಬೆಳಯುವ ವ್ಯಕ್ತಿಗೆ ಇರಲೇಬೇಕಾದ ಇತ್ಯಾತ್ಮಕ ಗುಣವಾಗುತ್ತದೆ. ನೇತಿ ಅನ್ನಿಸದೆ ಹೋದಾಗ ಬೆಳವಣಿಗೆ ನಿಂತುಹೋಗಿ ಮನಸ್ಸು ಕೊಳೆಯತೊಡಗುತ್ತದೆ. ಸದ್ಯಕ್ಕೆ ಗೊತ್ತಿದ್ದನ್ನು ಒಪ್ಪಕೊಂಡೊ, ಅನುಮಾನಿಸುತ್ತಾ ಕಾತರವಿಲ್ಲದೆ ಸಂಪೂರ್ಣ ವಿರುದ್ಧ ರೀತಿಯ ಯೋಚನೆಗೆ ಪ್ರಜ್ಞೆಯ ಆವಾಸವನ್ನು ತೆರೆದಿಡುವಂಥದು, ಒಳಗೊಳ್ಳುವಂಥದ್ದು ನೇತಿಯ ಈ ಸ್ಥಿತಿ. ೮೦ ‘. . . ಶಾಶ್ವತವಾದ ಮೌಲ್ಯಗಳಿರಬೇಕು. ಈ ಮೌಲ್ಯಗಳ ನಿರಂತರ ಉಳಿವಿಗಾಗಿ ಹೋರಾಡಬೇಕಾಗಿದೆ ಎಂದು ನೇತಿ ತಿಳಿದಿದೆ. ಈ ಶಾಶ್ವತ ಮೌಲ್ಯಗಳ ಕಡೆಗೆ ಕೈ ಚಾಚುತ್ತಿರುವವನೇ ನೇತಿ ಎನ್ನುತ್ತಾ ಹುಡುಕುವ ಅನ್ವೇಷಕ. ಬಹುಶಃ ಜೀವಂತಿಕೆಯ ಸಜೀವ ಚಿಹ್ನೆ ಇದು. ಈ ರೀತಿಯಾಗಿ ಸಜೀವವಾಗಿರುವುದು ಉತ್ತಮ ಲೇಖನಗಳ ಬರಗಾಲದಿಂದ ಅಸಾಧ್ಯವಾದ ದಿವಸ ನೇತಿ ತನ್ನ ಕೊನೆಯುಸಿರನ್ನೆಳೆಯುತ್ತದೆ. ಯಾಕೆಂದರೆ ಆಗ ಬದುಕುವುದಕ್ಕೆ ಈ ಪತ್ರಿಕೆಗೆ ಯಾವ ನೈತಿಕ ಹಕ್ಕೂ ಇರುವುದಿಲ್ಲ. ಹೀಗೆ ಹೇಳಿದ ‘ನೇತಿ’ ಪ್ರಕಟಗೊಂಡಿದ್ದು ಒಂದು ವರ್ಷ ಮಾತ್ರ.

ದಲಿತ

‘ಯಾವುದೇ ಜಾತಿ ಮತ ಕುಲಗೋತ್ರ ಗಣಿಸದೆ ದೀನದಲಿತರ ಕಷ್ಟನಷ್ಟ ಶೋಷಣೆ ಇವುಗಳ ಸಮರ್ಥ ಅಭಿವ್ಯಕ್ತಿಯ ಸಾಹಿತ್ಯಕ್ಕೆ, ವೈಚಾರಿಕ ಬರಹಗಳಿಗೆ ದಲಿತದಲ್ಲಿ ಸ್ಥಾನವಿದೆ’ ಎಂಬುದು ‘ದಲಿತ’ದ ಘೋಷಣೆ ‘ದಲಿತ’ ಪತ್ರಿಕೆಯ ಸಂಪಾದಕರು ಬುದ್ದಣ್ಣ ಹಿಂಗಮಿರೆ, ಸೋಮಶೇಖರ ಇಮ್ರಾಪೂರ ಹಾಗೂ ಚೆನ್ನಣ್ಣ ವಾಲೀಕಾರ ಅವರು. ಡೆಮಿ ೧/೮ ಆಕಾರದ, ೫೨ ಪುಟಗಳ ‘ದಲಿತ’ ೧೯೭೪ರಲ್ಲಿ ಹೊರಬಂದಿತು. ಆಗಿನ್ನೂ ನವ್ಯ ಹಳತಾಗುತ್ತಾ ಬಂದ ನವ್ಯ ಸಾಹಿತ್ಯದ ಬಗ್ಗೆ ಕನ್ನಡದ ಹೊಸ ಬರಹಗಾರರಿಗೆ ಒಂದು ತರಹದ ರೇಜಿಗೆ ಬಂದು ಹೊಸ ರೀತಿಯ ಅಭಿವ್ಯಕ್ತಿಗಾಗಿ ತುಡಿಯುತ್ತಿದ್ದ ದಿನಗಳು. ಬುದ್ದಣ್ಣ ಹಿಂಗಮಿರೆ, ಸೋಮಶೇಖರ ಇಮ್ರಾಪೂರ ಹಾಗೂ ಚೆನ್ನಣ್ಣ ವಾಲೀಕಾರ, ಈ ಮೂವರೂ ಮುಂದೆ ದಲಿತ-ಬಂಡಾಯದ ಪ್ರಮುಖ ಸಾಹಿತಿಗಳಾಗಿ ಬೆಳದವರು. ‘ದಲಿತ’ ಪತ್ರಿಕೆಯ ಮೂಲಕ ತಮ್ಮ ಮುಂದಿನ ಸೃಷ್ಟಿ, ನಿಷ್ಠೆಗಳಿಗೆ ಮುನ್ನೋಟ ನೀಡಿದರು. ‘ದಲಿತ’ ಪತ್ರಿಕೆ ಅನಿಯತಕಾಲಿಕವಾಗಿತ್ತು. ಮೇ ೧೯೭೪ಕ್ಕೆ ‘ದಲಿತ’-೨’ ಹೊರಬಂತು. ಹುಬ್ಬಳ್ಳಿಯ ಬಿ. ಎಂ. ತಮ್ಮೀನಕಟ್ಟಿ ಇದರ ಪ್ರಕಾಶಕರು. ದಲಿತ - ೨ ರಲ್ಲಿ ದಲಿತ ಪತ್ರಿಕೆಯ ಬೆಲೆಯಾಗಲೀ ಚಂದಾದರವಾಗಲೀ ಪ್ರಸ್ತಾಪವಾಗಿಲ್ಲ.

ವರ್ತಮಾನ

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಿಂದ ೧೯೭೪ರಲ್ಲಿ ಪ್ರಕಟಗೊಂಡ ಸಾಹಿತ್ಯಿಕ ಮಾಸಿಕ ‘ವರ್ತಮಾನ’ ಹೊರಬಂದುದು ಎರಡೇ ಎರಡು ಸಂಚಿಕೆಗಳು. ಉಜಿರೆಯ ಎಸ್. ಡಿ. ಎಂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಜಿ. ಎಸ್. ಅವಧಾನಿಯವರು ‘ವರ್ತಮಾನ’ದ ಸಂಪಾದಕರು. ಪ್ರೋತ್ಸಾಹಕರ ವಾತಾವರಣದ ಕೊರತೆಯಿಂದಾಗಿ ಪತ್ರಿಕೆ ಮುಂದುವರೆಯಲಿಲ್ಲವೆಂದು ಅವಧಾನಿಯವರು ನೆನೆಸಿಕೊಳ್ಳುತ್ತಾರೆ.

ಮಣ್ಣಿನ ಬದುಕು

‘ಸತ್ಯ ಮತ್ತು ಸೌಂದರ್ಯಗಳ ಅನ್ವೇಷಣೆಗೆ ಮೀಸಲಾದ ಅನಿಯತಕಾಲಿಕ’ ಎಂದು ಕರೆದುಕೊಂಡ ‘ಮಣ್ಣಿನ ಬದುಕು’ ಪ್ರಕಟಗೊಂಡದ್ದು ಜೂನ್ ೧೯೭೪ರಲ್ಲಿ. ಮೈಸೂರಿನಿಂದ ಹೊರಟ ಈ ಪತ್ರಿಕೆಗೆ ವಸಂತ ರಾಜಪ್ಪ ಸಂಪಾದಕರು. ೧/೮ಡೆಮಿ ಆಕಾರದ ಮೊದಲ ಸಂಚಿಕೆಯಲ್ಲಿ ೬೪ಪುಟಗಳಿದ್ದವು. ಅನಿಯತಕಾಲಿಕವೆಂದು ಕರೆದುಕೊಂಡರೂ ಹನ್ನೆರಡು ಪ್ರಕಟಣೆಗಳಿಗೆ ಹದಿನೈದು ರೂಪಾಯಿ ಎಂದು ದರ ನಿಗದಿ ಮಾಡಲಾಗಿತ್ತು. ‘ಕನ್ನಡದಲ್ಲಿ ಪ್ರಕಟವಾಗುತ್ತಿರುವ ನಿಯತ ಮತ್ತು ಅನಿಯತಕಾಲಿಕಗಳಲ್ಲಿ ಕೆಲವು ತೀರಲಘುವಾದ ಅಂದರೆ ವಿಚಾರ ಪ್ರಚೋದಕವಲ್ಲದ ಮತ್ತೆ ಕೆಲವು ಗಂಭೀರವಾದ ಅಂದರೆ ಜನಸಾಮಾನ್ಯರಿಗೆ ನಿಲುಕದ ವಿಚಾರಗಳನ್ನು ಹೊತ್ತುಕೊಂಡು ಹುಟ್ಟುತ್ತಿರುವುದೇ ಹೆಚ್ಚು ಇವುಗಳ ಮಧ್ಯಂತರದ ಪರಿಸ್ಥಿತಿಯನ್ನು ತುಂಬಿಕೊಡಲು ಪ್ರಯತ್ನಿಸುತ್ತದೆ ಮಣ್ಣಿನ ಬದುಕು.’ಜಾತಿ-ಕುಲ-ಗೋತ್ರಗಳ ಕಟ್ಟುಪಾಡುಗಳಿಲ್ಲದೆ ನಿರ್ಮಲವಾದ ನಿರ್ವಿಕಾರವಾದ ವಿಚಾರ ವೇದಿಕೆಯಾಗಿ ‘ಮಣ್ಣಿನ ಬದುಕು’ಅನ್ನು ರೂಪಿಸುವ ಹೊಣೆಗಾರಿಕೆಯನ್ನು ನಾಡಿನ ವಿಚಾರವಂತರು ಹೊತ್ತುಕೊಳ್ಳವರೆಂಬ ಭರವಸೆ ನಮಗಿದೆ. ‘ಮಣ್ಣಿನ ಬದುಕು’ವಿನ ಮೊದಲೆರಡು ಸಂಚಿಕೆಗಳನ್ನು ಗಮನಿಸಿದರೆ ಕುವೆಂಪುರವರ ವೈಚಾರಿಕತೆಯಿಂದ ಸಂಪಾದಕರು ಪ್ರಭಾವಿತರಾಗಿರುವಂತೆ ಕಾಣುತ್ತದೆ. ಮೊದಲ ಸಂಚಿಕೆಯಲ್ಲಿ ಕುವೆಂಪುರವರ ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ ಎಂಬ ಲೇಖನವೂ ಎರಡನೇ ಸಂಚಿಕೆಯಲ್ಲಿ ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎಂಬ ಲೇಖನವೂ ಪ್ರಕಟಗೊಂಡಿದೆ. ಎರಡನೇ ಸಂಚಿಕೆಯಲ್ಲಿ ಕುವೆಂಪುರವರ ಛಾಯಚಿತ್ರವೇ ಮುಖಪುಟವನ್ನಲಂಕರಿಸಿದೆ. ೭೦ರ ದಶಕದ ಬೇರಾವ ಪತ್ರಿಕೆಗಳೂ ಈ ರೀತಿ ವ್ಯಕ್ತಿಗಳ ಛಾಯಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸುವ ಸಂಪ್ರದಾಯವಿರಲಿಲ್ಲ. ಹೀಗಾಗಿ ‘ಮಣ್ಣಿನ ಬದುಕು’ ಬೇರೆ ಪತ್ರಿಕೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಮಣ್ಣಿನ ಬದುಕು ಮೂರು ಸಂಚಿಕೆಗಳ ಬಳಿಕ ಮುಂದುವರೆಯಲಿಲ್ಲ.

ಶೂದ್ರ

ಕನ್ನಡ ಸಾಹಿತ್ಯ ಪತ್ರಿಕೆಗಳ ಸಾಲಿನಲ್ಲಿ ‘ಶೂದ್ರ’ಕ್ಕೆ ವಿಶೇಷ ಸ್ಥಾನವಿದೆ. ಅದರ ಸಂಪಾದಕರಾದ ಶ್ರೀನಿವಾಸ, ‘ಶೂದ್ರ ಶ್ರೀನವಾಸ’ ಎಂಬುದಾಗಿಯೇ ಸಾಹಿತ್ಯಿಕ ವಲಯದಲ್ಲಿ ಪರಿಚಿತರಾದದ್ದು ಪತ್ರಿಕೆಯ ದಸೆಯಿಂದಾಗಿ, ಎರಡು ದಶಕಗಳಿಗೂ ಮಿಕ್ಕಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಬದುಕಿನ ಘಟನಾವಳಿಗಳಿಗೆ ತನ್ನದೇ ಮಿತಿಯಲ್ಲಿ ಸಾಕ್ಷಿಯಾಗಿ, ವೇದಿಕೆಯಾಗಿ ‘ಶೂದ್ರ’ ದಾಖಲೆಮಾಡಿದೆ. ಶೂದ್ರ ಆರಂಭಗೊಂಡದ್ದು ೧೯೭೫ರಲ್ಲಿ. ಮುಕ್ತ ಚರ್ಚೆಗಾಗಿ ‘ಶೂದ್ರ-ತಿಂಗಳ ಪತ್ರಿಕೆ’ ಎಂಬುದು ಪತ್ರಿಕೆಯ ಘೋಷಣೆ. ಕ್ರೌನ್ ಆಕಾರದ, ಶೂದ್ರದಲ್ಲಿ ಸಾಮಾನ್ಯ ೫೪ ಪುಟಗಳಿರುತ್ತವೆ. ೧೯೯೦ನೇ ಇಸ್ವಿಯಲ್ಲಿ ಶೂದ್ರದ ವಾರ್ಷಿಕ ಚಂದಾ ಹಣ ೪೫ ರೂಪಾಯಿ ಹಾಗೂ ಆಜೀವ ಚಂದಾ ೪೦೦ ರೂಗಳು. ಶೂದ್ರದ ಸಹಾಯಕ ಸಂಪಾದಕರುಗಳೆಂದು ನಿರ್ಮಲಾರೆಡ್ಡಿ, ಉತ್ತನೂರು ರಾಜಮ್ಮ ವಿ ಶೆಟ್ಟಿ, ಕೆ ಎನ್ ಅರುಣ್, ಸ. ರಘುನೀಲಾ, ಜರಗನಹಳ್ಳಿ ಶಿವಶಂಕರ್‍ ಹಾಗೂ ಎಲ್. ಎಸ್. ಮುಕುಂದರಾಜ್ ಅವರುಗಳ ಹೆಸರುಗಳಿವೆ. ‘ಶೂದ್ರ ಪತ್ರಿಕೆ’ಯ ಅಜೀವ ಚಂದಾ ಹಣವನ್ನು ನಾಲ್ಕು ಕಂತುಗಳಲ್ಲಿ ಕೊಡುವ ಅವಕಾಶವಿದೆ. ಆದರೆ ಈ ಅವಕಾಶವನ್ನು ಬಳಸಿಕೊಂಡು ಓದುಗರು ಚಂದಾದ ರೀತಿಯಲ್ಲಿ ನಾಲ್ಕೈದು ಕಂತುಗಳಲ್ಲಿ ಕೊಡುವರೆಂಬ ಬಗ್ಗೆ ಸಂಪಾದಕರು ಪ್ರತಿಬಾರಿಯೂ ವಿಷಾದ ವ್ಯಕ್ತಪಡಿಸುತ್ತಾರೆ. ‘ನೀವು ಕಳಿಸುವ ಚಂದ ಶೂದ್ರದ ಬೆಳವಣಿಗೆಯ ಸಂಕೇತ’ ಎಂಬುದಾಗಿ ಕಳಕಳಿಯ ಮನವಿಯನ್ನು ಪ್ರತೀ ಸಂಚಿಕೆಯಲ್ಲೂ ಮಾಡಲಾಗುತ್ತದೆ. ಸಾಮಾನ್ಯವಾಗಿ ಎರಡು ಮೂರು ಗಂಭೀರ ಲೇಖನಗಳು, ಒಂದಿಷ್ಟು ಕವನಗಳು, ಕನಸಿಗೊಂದು ಕಣ್ಣು, ಈಗ ಕಂಡ ಪುಸ್ತಕಗಳು, ಒಳನೋಟ ಇವು ಸಾಮಾನ್ಯವಾಗಿ ಶೂದ್ರ ಓದುಗರಿಗೆ ನೀಡುವ ಸಾಮಗ್ರಿಗಳು. ‘ಕನಸಿಗೊಂದು ಕಣ್ಣು’ ಎಂಬುದು ಸಂಪಾದಕರ ಅಂಕಣ. ಜನಪ್ರಿಯವಾದುದು. ಗಾಂಧಿ, ಅಂಬೇಡ್ಕರ್‍, ಬುದ್ಧ, ಬಸವಣ್ಣ, ಲೋಹಿಯಾ, ಮುಂತಾದ ಮಹಾನ್ ವ್ಯಕ್ತಿಗಳು ಪ್ರತಿಯೊಬ್ಬರ ಬಗ್ಗೆ ವಿಶೇಷಾಂಕವನ್ನೂ ಶೂದ್ರ ತನ್ನ ಓದುಗರಿಗೆ ನೀಡಿದೆ. ಶೂದ್ರಕ್ಕೆ ಕರ್ನಾಟಕವಾರ್ತೆಯ ಜಾಹೀರಾತುಗಳು ದೊರೆಯುತ್ತವೆ. ಆಗಾಗ ಸ್ನೇಹಿತರ ಅರ್ಧ ಅಥವಾ ಕಾಲು ಪುಟದ ಶುಭಾಶಯದ ಜಾಹೀರಾತುಗಳೂ ಸಿಗುತ್ತವೆ. ಎರಡು ದಶಕ ‘ಶೂದ್ರ’ ಚಲಾವಣೆಯಲ್ಲಿದ್ದರೂ ಸ್ವಾಲಂಬನೆ ಸಾಧಿಸಿಲ್ಲ. ತಿಂಗಳಿಗೊಂದು ಸಂಚಿಕೆಯನ್ನು ನಿರಂತರವಾಗಿ ಕೊಡಲಾಗದ ಸಂದರ್ಭದಲ್ಲಿ ಎರಡು ಮೂರು ಸಂಚಿಕೆಗಳನ್ನು ಸೇರಿಸಿ ಒಂದೇ ಪ್ರಕಟಣೆ ಹೊರಡಿಸುವ ಸಂಭವ ಪ್ರತಿವರ್ಷವೂ ಇದೆ. ಸುಮಾರು ನವ್ಯದ ಸಂದರ್ಭದಲ್ಲೇ ಜನ್ಮ ತಾಳಿದ ಶೂದ್ರ ಅಲ್ಲಿಂದ ಮುಂದಿನ ದಲಿತ-ಬಂಡಾಯ ಸಾಹಿತ್ಯಕ್ಕೆ ಸಾಕ್ಷಿಯಾಗಿ ಜೊತೆಯಾಗಿಯೇ ಬೆಳದಿದೆ. ಆದರೂ ಸಂಪಾದಕರ ಶ್ರದ್ಧೆ ಹಾಗೂ ಮಹತ್ವಾಕಾಂಕ್ಷೆಗಳಿಂದಾಗಿ ಶೂದ್ರ ಇಷ್ಟು ಕಾಲ ಪ್ರಕಟಗೊಂಡಿತೇ ವಿನಾ ಚಂದಾದಾರರ ಅಥವಾ ಓದುಗರ ಬೆಂಬಲದಿಂದಲ್ಲ. ಇಪ್ಪತ್ತು ವರ್ಷಗಳ ಬಳಿಕವೂ ಒಂದು ಸಾವಿರ ಚಂದಾದಾರರೂ ಶೂದ್ರಕ್ಕಿಲ್ಲ. ಆದರೂ ವಿಳಾಸ ಇರುವವರೆಗೆಲ್ಲ ಸಂಪಾದಕರು ಪತ್ರಿಕೆ ಕಳಿಸುತ್ತಾರೆ. ನಂತರ ಚಂದಾಕ್ಕಾಗಿ ಪತ್ರ ಬರೆಯುತ್ತಾರೆ. ಚಂದಾ ಹಣವನ್ನು ನಿಗದಿತವಾಗಿ ಕೊಟ್ಟವರಿಗೆ ಮಾತ್ರವೇ ‘ಶೂದ್ರ’ ತಲುಪಿಸುವುದಾದರೆ ಹೆಚ್ಚಿನ ಸಂಚಿಕೆಯನ್ನು ಪತ್ರಿಕಾಲಯದಲ್ಲೇ ಇರಿಸಿಕೊಳ್ಳಬೇಕಾದ ಸ್ಥಿತಿಯಿಂದ ‘ಶೂದ್ರ’ ಹೊರಬಂದಿಲ್ಲ. ಶೂದ್ರದ ಪರಿಸ್ಥಿತಿ ಕನ್ನಡದ ಸಾಹಿತ್ಯ ಪತ್ರಿಕೆಗಳ ಒಟ್ಟೂ ಪರಿಸ್ಥಿಯನ್ನೇ ಬಿಂಬಿಸುತ್ತದೆ.

ಒಡನಾಡಿ

ಮೈಸೂರಿನ ವಿಕಾಸ ಪ್ರಕಾಶನದಿಂದ ಎರಡು ತಿಂಗಳಿಗೊಮ್ಮೆ ಪ್ರಕಟವಾಗುವ ಪತ್ರಿಕೆ ‘ಒಡನಾಡಿ’ಯ ಮೊದಲ ಸಂಚಿಕೆ ಪ್ರಕಟವದದ್ದು ಮೇ ೧೯೭೫ರಲ್ಲಿ.ಆಗ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಅಧ್ಯಾಪಕರಾಗಿದ್ದ ಬಿ. ದಾಮೋದರ ರಾವ್ ಒಡನಾಡಿಯ ಸಂಪಾದಕರು. ಒಡನಾಡಿಯ ಸಲಹಾ ಸಮಿತಿಯಲ್ಲಿ ಯು. ಆರ್‍. ಅನಂತಮೂರ್ತಿ, ಹೆಚ್. ಜಿ. ಸಣ್ಣಗುಡ್ಡಯ್ಯ, ಬಿ. ಕೃಷ್ಣಮೂರ್ತಿ, ವಿ. ಕೆ. ನಟರಾಜ್ ಹಾಗೂ ಬಿ. ಕೆ. ಚಂದ್ರಶೇಖರ್‍ ಅವರುಗಳ ಹೆಸರಿತ್ತು. ಒಡನಾಡಿ ೧/೮ ಡೆಮಿ ಆಕಾರದ ಪತ್ರಿಕೆ, ೭೨ ಪುಟಗಳು. ವಿಶೇಷವೆಂದರೆ ಎರಡನೇ ಸಂಚಿಕೆ ೭೩ನೇ ಪುಟದಿಂದ ಆರಂಭವಾಗಿ ೧೪೪ರವರೆಗೆ ಸಾಗಿದೆ. ಅಂದರೆ ಪತ್ರಿಕೆಯ ಪುಟಗಣನೆಯನ್ನು ಒಂದು ಸಂಚಿಕೆಯಿಂದ ಇನ್ನೊಂದಕ್ಕೆ ಮುಂದುವರೆಸಲಾಗಿದೆ. ಎರಡನೇ ಸಂಚಿಕೆಯ ಹಿಂಬದಿ ಮುಖ ಪುಟದಲ್ಲಿ ಈ ಕೆಳಗಿನ ಘೋಷಣೆಗಳಿವೆ. . ಶೋಷಣೆಯಿಂದ ಮುಕ್ತವಾದ ಸಮಾಜದ ಸೃಷ್ಟಿಯಲ್ಲಿ ನಂಬಿಕೆಯನ್ನಿಟ್ಟು ‘ಒಡನಾಡಿ’ ಹೊರಟಿದೆ. ವಿದ್ಯಾಸಂಸ್ಥೆಗಳಲ್ಲಿರುವ ಜನರಿಗೂ ಅವುಗಳ ಹೊರಗಿರುವ ಜನರಿಗೂ ನಡುವೆ ಸಂವಾದವನ್ನು ಸಾಧ್ಯವಾಗಿಸುವುದು ‘ಒಡನಾಡಿ’ ಮಾಡಬಹುದಾದ ಸದ್ಯದ ಕೆಲಸಗಳಲ್ಲಿ ಒಂದಾಗಿದೆ. ಭಾರತೀಯ ಪರಿಸರದಲ್ಲಿ ವೈಜ್ಞಾನಿಕ ದೃಷ್ಟಿಯುಳ್ಳ ಸಮಾಜವಾದವನ್ನು ವಿವೇಚಿಸುವ ಉದ್ದೇಶವನ್ನು ‘ಒಡನಾಡಿ’ ಇಟ್ಟುಕೊಂಡಿದೆ. ಭಾರತದ ಅರ್ಥ ವ್ಯವಸ್ಥೆ, ರಾಜಕೀಯ ಧೋರಣೆಗಳು, ಸಾಹಿತ್ಯ ಪರಂಪರೆ, ಸಂಸ್ಕೃತಿ ಹಾಗೂ ಭಾಷೆ, ಜಾತಿ ಇಂಥ ಸಾಮಾಜಿಕ ನೆಲೆಗಳು ಮತ್ತು ಭಾರತೀಯ ಮನಸ್ಸಿನ ಮೇಲೆ ಗಾಢ ಪರಿಣಾಮ ಮಾಡಿರುವ ಒಟ್ಟೂ ಅನುಭವ, ಇವುಗಳ ವಿಶ್ಲೇಷಣೆಯನ್ನು ‘ಒಡನಾಡಿ’ ಮಾಡಬೇಕೆಂದಿದೆ. ಮೂಲಭೂತ ಗುರಿಗಳ ಬಗ್ಗೆ ಓದುಗರ ಅರಿವನ್ನು ಹೆಚ್ಚಿಸುವುದು ಮತ್ತು ಸಾಮಾಜಿಕ ಬದಲಾವಣೆಯ ಕ್ರಿಯೆಯಲ್ಲಿ ಅವರು ಪಾಲುಗೊಳ್ಳುವುದನ್ನು ಸಾಧ್ಯವಾಗಿಸುವುದ. ಇವು ಒಡನಾಡಿಯ ಮುಖ್ಯ ಉದ್ದೇಶಗಳು. ಒಟ್ಟಾರೆಯಾಗಿ ಸಮಾಜದ ಆರೋಗ್ಯ ಪೂರ್ಣ ಬದುಕನ್ನು ಪೋಷಿಸುವ ಸಾಂಸ್ಕೃತಿಕ ಪತ್ರಿಕೆ ‘ಒಡನಾಡಿ’ಯಾಗಿತ್ತು. ಒಡನಾಡಿಯಲ್ಲಿ ಕತೆ, ಕವನಗಳ ಬದಲು ಶುದ್ಧ ವೈಚಾರಿಕ, ಸಾಂಸ್ಕೃತಿಕ ಲೇಖನಗಳು ಪ್ರಕಟಗೊಳ್ಲುತ್ತಿದ್ದವು. ೧೯೭೫ರಲ್ಲಿ ವಾರ್ಷಿಕ ಚಂದಾ ಹತ್ತು ರೂಪಾಯಿ ಹಾಗೂ ಬಿಡಿ ಪ್ರತಿಯ ಬೆಲೆ ಎರಡು ರೂಪಾಯಿ ಇತ್ತು. ಶುದ್ಧ ಸಾಹಿತ್ಯ ಪತ್ರಿಕೆಯಲ್ಲದಿದ್ದರೂ ಸಾಲಿನಿಂದ ಒಡನಾಡಿಯನ್ನು ಬಿಡುವಂತಿಲ್ಲ. ‘ಒಡನಾಡಿ’ಯು ಕೆಲವು ಸಂಚಿಕೆಗಳಲ್ಲೇ ಪ್ರಕಟಣೆ ನಿಲ್ಲಿಸಿತು.

ಕಾದಂಬರಿ

ಬೆಂಗಳೂರಿನಿಂದ ೧೯೭೭ರಲ್ಲಿ ಹೊರಡಿಸಲ್ಪಟ್ಟ ಮಾಸಪತ್ರಿಕೆಯೊಂದರ ಹೆಸರೇ ‘ಕಾದಂಬರಿ’. ಆದರೆ ಪತ್ರಿಕೆ ಕಾದಂಬರಿಗಳಿಗಾಗಿಯೇ ಮೀಸಲಾಗಿತ್ತೆಂದೇನೊ ಅರ್ಥವಲ್ಲ. ಅದರಲ್ಲಿ ಸಣ್ಣ ಕಥೆಗಳೂ, ಹರಟೆಗಳೂ, ಪ್ರಕಟಗೊಳ್ಳುತ್ತಿದ್ದವು. ಜನಪ್ರಿಯ ಮಾದರಿಯ ಕಥೆ, ಕಾದಂಬರಿಗಳಿಂದಾಗಿಯೇ ಈ ಪತ್ರಿಕೆ ಜನಪ್ರಿಯವಾಗಿತ್ತು. ‘ಕಾದಂಬರಿ’ಗೆ ಎಸ್. ರಾಮಸ್ವಾಮಿಯವರು ಸಂಪಾದಕರಾದರೆ ಜಿ. ಎಸ್. ರಾಮರಾವ್ ಅವರನ್ನು ಮುದ್ರಕ/ ಪ್ರಕಾಶಕರೆಂದು ಹೆಸರಿಸಲಾಗಿದೆ. ಜೂನ್ ೧೯೭೯ಕ್ಕೆ ಎರಡನೇ ಸಂಪುಟದ ಹತ್ತನೇ ಸಂಚಿಕೆ ಬಂದಿದೆ. ೧/೮ಡೆಮಿ ಆಕಾರದ ೯೬ ಪುಟಗಳ ಪತ್ರಿಕೆಯ ಬೆಲೆ ೧.೫೦ ರೂಪಾಯಿ. ಇತರ ಸಾಹಿತ್ಯ ಪತ್ರಿಕೆಗಳನ್ನು ‘ಕಾಂದಬರಿ’ಯ ಜೊತೆ ಹೋಲಿಸಿದರೆ ಎದ್ದು ಕಾಣುವ ಭಿನ್ನತೆಯೆಂದರೆ ಕಾದಂಬರಿಗೆ ಪತ್ರಿಕೆ ಅಂಗಡಿಗಳಲ್ಲಿ ಮಾರಾಟವಾಗುವ ಸಾಧ್ಯತೆಯಿತ್ತು. ಸಾಮಾನ್ಯ ಆಸಕ್ತಿಯ ಪತ್ರಿಕೆಗಳಲ್ಲಿ ಕಂಡುಬರುವ ಜನಪ್ರಿಯ ಕತೆ, ಕಾದಂಬರಿಗಳಿಂದಲೇ ಈ ಪತ್ರಿಕೆ ಇಡಿಯಾಗಿ ತುಂಬಿರುತ್ತಿದ್ದುದರಿಂದ ಪತ್ರಿಕೆಗೆ ಬೇಡಿಕೆಯಿತ್ತು. ಕಾದಂಬರಿಗಳನ್ನು ಧಾರವಾಹಿಗಳಾಗಿ ಪ್ರತೀ ಸಂಚಿಕೆಯಲ್ಲೂ ಪ್ರಕಟಿಸುತ್ತಿದ್ದುದ್ದರಿಂದ ನಿಯತ ಓದುಗರಿದ್ದರು. ಕಾದಂಬರಿ ಬರುವುದನ್ನೇ ಕಾಯುತ್ತಿದ್ದರು. ಕನಿಷ್ಠ ಮೂರು ವರ್ಷ ಕಾದಂಬರಿ ನಿಯತವಾಗಿ ಪ್ರಕಟಗೊಂಡಿತು. ದೇಶದಲ್ಲಿ ತುರ್ತು ಸ್ಥಿತಿಯನ್ನು ಹಿಂತೆಗೆದುಕೊಂಡಾಗಿ ಏಕಕಾಲಕ್ಕೆ ಅನೇಕ ಸಾಹಿತ್ಯ ಪತ್ರಿಕೆಗಳು ಉದಯವಾದವು. ಅವು ಯಾವುವೂ ಹೆಚ್ಚುಕಾಲ ಬಾಳಿ ಬದುಕಲಿಲ್ಲವಾದರೂ ದೇಶದ ವಿಶಿಷ್ಟ ಕಾಲಘಟ್ಟವೊಂದರ ಸಾದರ್ಭಿಕ ಪ್ರತಿಕ್ರಿಯೆಗಳಾಗಿ ಬಂದ ಈ ಪತ್ರಿಕೆಗಳು ಉಲ್ಲೇಖನೀಯ.

‘ಕಾಲಗತಿ’ ಎಂಬುದು ಸಂಶೋಧನೆಗಾಗಿ ಮೀಸಲಾದ ತ್ರೈಮಾಸಿಕ ಪತ್ರಿಕೆ ೧೯೭೭ರಲ್ಲಿ ಪ್ರಕಟಗೊಂಡಿತು. ಶ್ರೀಜ್ಯೋತಿ ಹುಣಸೂರು ಎಂಬುವರು ಇದರ ಸಂಪಾದಕರು. ಇದೇ ವರ್ಷ ರಾಜೇಂದ್ರ ಪಾಟೀಲ ಎಂಬವರು ‘ಕಾವ್ಯಶ್ರೀ’ ಎಂಬ ತ್ರೈಮಾಸಿಕ ಹೊರಡಿಸಿದರು. ಈ ಪತ್ರಿಕೆಗಳು ಬಂದು ಹೋದುದೇ ಸಾಧನೆ.

ಪುಸ್ತಕ ಪುರವಣೆ

‘ಪುಸ್ತಕ ಪುರವಣಿ’ ಎಂಬುದು ೧೯೭೭ರಲ್ಲಿ. ಮೈಸೂರಿನಿಂದ ಪ್ರಕಟಗೊಂಡ ವಿಶಿಷ್ಟ ಮಾಸಪತ್ರಿಕೆ. ಹೊಸ ಪುಸ್ತಕಗಳ ಸಮೀಕ್ಷೆ, ವಿಮರ್ಶೆ, ಗ್ರಂಥೋದ್ಯಮಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಚರ್ಚೆ ಮುಂತಾದವು ‘ಪುಸ್ತಕ ಪುರವಣಿ’ಯ ಹೊರಣವಾಗಿತ್ತು. ‘ಸಾಹಿತ್ಯ ಮತ್ತು ಗ್ರಂಥಸೂಚಿ ನಿಯತಕಾಲಿಕ’ವೆಂದು ಕರೆದುಕೊಳ್ಳುತ್ತಿದ್ದ ಪುಸ್ತಕ ಪುರವಣಿಗೆ ಡಿ. ವಿಜಯ ಹಾಗೂ ಸತ್ಯನಾರಾಯಣ ಅವರುಗಳು ಸಂಪಾದಕರೆಂದು ಹೆಸರಿಸಲಾಗಿತ್ತು. ಸ. ರ. ಸುದರ್ಶನ ವ್ಯವಸ್ಥಾಪಕ ಸಂಪಾದಕರು. ಮೈಸೂರಿನ ಚೇತನ ಕನ್ನಡಸಂಘ ಪ್ರಕಟಿಸುತ್ತಿದ್ದ ಈ ಪತ್ರಿಕೆ ೬ ವರ್ಷ ಜೀವಂತವಿತ್ತು.

ಬದುಕು

‘ಬದುಕು’ ಚಿತ್ರದುರ್ಗದಿಂದ ೧೯೭೭-೭೮ರ ಅವಧಿಯಲ್ಲಿ ಬಂದ ದ್ವೈಮಾಸಿಕ ಪತ್ರಿಕೆ. ಸೃಜನಶೀಲ ಬರಹಗಳ ದ್ವೈಮಾಸಿಕ ಸಂಕಲನ ಎಂಬುದಾಗಿ ‘ಬದುಕು’ ತನ್ನನ್ನು ಕರೆದುಕೊಂಡಿತ್ತು. ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರಾಗಿ ತುರ್ತುಸ್ಥಿತಿಯ ವೇಳೆ ಒಂದೊವರೆ ತಿಂಗಳೂ ಜೈಲುವಾಸವನ್ನು ಅನುಭವಿಸಿದ್ದ ಮಂಗ್ಳೂರ ವಿಜಯ ಬದುಕು ಪತ್ರಿಕೆಯ ಸಂಪಾದಕರು. ವಿಜಯ ಹೇಳುವ ಹಾಗೆ ಜೈಲಿಂದ ಹೊರಬಂದ ಮೇಲೆ ಏನು ಮಾಡುವುದೆಂಬ ಚಿಂತೆ ಎದುರಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಹಾಗೆ ಭೂಗತವಾಗುವ ಮನಸ್ಸಿರಲಿಲ್ಲ. ರಾಜಕೀಯಕ್ಕೆ ಮುಕ್ತವಾಗಿ ಒಡ್ಡಿಕೊಳ್ಳಲೂ ಸಾಧ್ಯಾವಿರಲಿಲ್ಲ. ಆಗ ಗೆಳೆಯರ ಜೊತೆ ಕುಳಿತು ಸಾಹಿತ್ಯಿಕ ಚಟುವಟಿಕೆಗಳನ್ನಾದರೂ ಮಾಡುವ ಉದ್ದೇಶದಿಂದ ಬದುಕು ಬರಹ ವೇದಿಕೆ ಸ್ಥಾಪಿತವಾಯಿತು. ಈ ವೇದಿಕೆಯ ಆಶ್ರಯದಲ್ಲಿ ಬೇರೆ ಬೇರೆ ಊರುಗಳಲ್ಲಿ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಅಷ್ಟರಲ್ಲಿ ತೃಪ್ತಿ ಸಿಗದಿದ್ದಾಗ ‘ಬದುಕು’ ದ್ವೈಮಾಸಿಕ ಹೊರಬಂತು.ಡಮಿ ೧/೪ ಆಕಾರದ, ೪೮ ಪುಟಗಳ ಈ ದ್ವೈಮಾಸಿಕದಲ್ಲಿ ಆರಂಭದಲ್ಲಿ ಬರೇ ಸೃಜನಶೀಲ ಸಾಹಿತ್ಯಬರಹಗಳಿದ್ದವು. ನಂತರ ವೈಚಾರಿಕ ಬರಹಗಳೇ ಹೆಚ್ಚಾದವು. ಚಲಂ ಬೆನ್ನೂರ್‌ಕರ್‍, ಚಂದ್ರಶೇಖರ ತಾಳ್ಯ, ಎಸ್. ಆರ್‍. ಪರಶುರಾಮ ಇವರುಗಳು ಸಂಪಾದಕ ಮಂಡಳಿಯಲ್ಲಿದ್ದರು. ಒಂದು ಸಾವಿರ ಪ್ರತಿಯನ್ನು ಅಚ್ಚು ಹಾಕಿಸಿ ದುಡ್ಡು ಕೊಟ್ಟವರಿಗೂ ಅರ್ಧಕೊಟ್ಟವರಿಗೂ, ಏನೂ ಕೊಡದವರಿಗೂ, ಓದಲು ಹಂಚಲಾಗುತ್ತಿತ್ತು. ಇದರ ವಾರ್ಷಿಕ ಚಂದಾ ೧೦ ರೂಪಾಯಿ, ಬಿಡಿ ಸಂಚಿಕೆ ೨ ರೂಪಾಯಿ. ಚಂದಾದಿಂದ ಪತ್ರಿಕೆ ಬದುಕುತ್ತಿರಲಿಲ್ಲ. ಜಾಹೀರಾತು ಇರಲಿಲ್ಲ. ಗೆಳೆಯರು ಸೇರಿಕೊಂಡು ಹಣ ಹಾಕುತ್ತಿದ್ದರು. ಚಲಂ ಬೆನ್ನೂರ್‌ಕರ್‍ ಅವರದೇ ಮುಖ್ಯಪಾಲು. ಪತ್ರಿಕೆ ಇನ್ನೂ ಕೆಲಕಾಲ ನಡೆಯಬಹುದಿತ್ತು. ಆದರೆ ‘ಎಲ್ಲಾರೂ ಬಂದ್ರೆ ನಾನೂ ಬರ್‍ತೀನಿ’ ಅನ್ನುವ ಮನೋಭಾವ ಎಲ್ಲಾರಲ್ಲೂ ಇತ್ತು. ಯಾರೂ ಮುಂದಾಗಿ ಮಾಡುವ ಪ್ರವೃತ್ತಿಯವರಿರಲಿಲ್ಲ. ಚಲಂ. ಬೆನ್ನೂರ್‌ಕರ್‍ ‘ನಾನೇ ಮಾಡ್ತೀನಿ ಅಂದ್ರೆ ನೀವು ಒಪ್ಪಲ್ಲ, ನೀವೂ ಮಾಡಲ್ಲ’ ಎಂಚು ವಿಷಾದದಿಂದ ಗೆಳೆಯರಿಗೆ ಹೇಳುತ್ತಿದ್ದರು. ಅಂತೂ ಎಲ್ಲರೂ ಸೇರಿ ಕೆಲಸಮಾಡಲಾಗದೇ ಎಂಟು ಸಂಚಿಕೆ ಬಂದ ಮೇಲೆ ಬದುಕು ಬದುಕಲಿಲ್ಲ. ಕೊನೇ ಸಂಚಿಕೆ ಮಾತ್ರ ಡೆಮಿ ೧/೪ ಆಕಾರದಲ್ಲಿ ಬಂದಿತ್ತು ೩೨ ಪುಟಗಳಿದ್ದವು. ಮಂಗ್ಳೂರ ವಿಜಯ ಹೇಳುವ ಹಾಗೆ ‘ಇಂಥ ಪತ್ರಿಕೆಗಳನ್ನು ಲಾಭಕ್ಕಾಗಿ ತರೋಲ್ಲ. ಖಾಯಾಲಿಗಾಗಿ.’ ದಿನಕಳೆದಂತೆ ಪತ್ರಿಕೆಯನ್ನು ಉಳಿಸಿಕೊಳ್ಳಬೇಕಾದರೆ ಮರ್ಯಾದೆ ಬಿಟ್ಟು ಯಾರ ಬಳಿಯಾದರೂ ಹಲ್ಲುಗಿಂಜ ಬೇಕಾಗುತ್ತದೆ. ಇದೆಲ್ಲ ಸ್ವಲ್ಪಕಾಲ. ಎಷ್ಟು ದಿನ ಬೇರೆಯವರು ದುಡ್ಡು ಕೊಡಲು ಸಾಧ್ಯ ? ಆಗ ಪತ್ರಿಕೆ ನಿಲ್ಲುತ್ತದೆ. ‘ಮರ್ಯಾದೆಯೂ ಉಳಿಯಲಿಲ್ಲ ಪತ್ರಿಕೆಯೂ ಉಳಿಯಲಿಲ್ಲ’ ಎಂಬಂತಾಗುತ್ತದೆ. ಇದು ಖಯಾಲಿಗಾಗಿ ಸಾಹಿತ್ಯ ಪತ್ರಿಕೆ ನಡೆಸುವ ಎಲ್ಲಾ ಸಂಪಾದಕರ ಅನುಭವ.

ಸಾಹಿತ್ಯ ಪತ್ರಿಕೆಗಳು (೧೯೭೮ ರಿಂದ ೧೯೯೩ ರವರೆಗೆ)

ಆಂತರಿಕ ತುರ್ತು ಪರಿಸ್ಥಿತಿ ಇಡೀ ಭಾರತದ ಜನಜೀವನದ ಮೇಲೆ ಮಾಸದ ನೆನಪು ಮೂಡಿಸಿದ ಘಟ್ಟ. ತುರ್ತು ಪರಿಸ್ಥಿಯ ಎರಡು ವರ್ಷಗಳಲ್ಲಿ ಭಾರತದ ಮುಖ್ಯವಾಹಿನಿ ಪತ್ರಿಕೋದ್ಯಮ ದಬ್ಬಾಳಿಕೆಯನ್ನು ಎದುರಿಸಬೇಕಾಯಿತು. ಅಂದಿನ ಸರ್ಕಾರದ ವಿರುದ್ಧ ಒಂದಕ್ಷರವನ್ನೂ ಬಳಸಬಾರದೆಂಬ ನಿರ್ಬಂಧ ಪ್ರಕಟಣೆಗೆ ಪೂರ್ವದಲ್ಲಿ ಪತ್ರಿಕೆಯನ್ನು ಪರಿಶೀಲನಾಧಿಕಾರಿಗೆ ಒಪ್ಪಿಸಬೇಕಾದ ಪರಿಸ್ಥಿತಿ. ಇಂಥ ಪರಿಶೀಲನಾಧಿಕಾರಿಗಳ ಮರ್ಜಿಗೆ ಒಳಗಾಗಿ ಪತ್ರಿಕೆಗಳು ಬೇಳಕು ಕಾಣಬೇಕಾಗಿದ್ದವು. ತುರ್ತು ಪರಿಸ್ಥಿತಿಯ ಪೆಟ್ಟು ಹೆಚ್ಚಾಗಿ ಬಿದ್ದದು ಮುಖ್ಯವಾಹಿನಿ ಪತ್ರಿಕೆಗಳ ಮೇಲೆ. ಅದೂ ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ತೋರಿದ ಸಂಯಮದಿಂದಾಗಿ ಉತ್ತರ ಭಾರತದ ಹಾಗೆ ಕರ್ನಾಟಕದಲ್ಲಿ ತುರ್ತು ಸ್ಥಿತಿಯ ಅತಿರೇಕಗಳು ಕಡಿಮೆ ಎಂಬ ಭಾವನೆ ಇದೆ. ಸಾಹಿತ್ಯ ಪತ್ರಿಕೆಗಳು ಮೂಲತಃ ರಾಜಕೀಯ ಸುದ್ದಿ-ಲೇಖನ-ವಿಮರ್ಶೆಗಳ ಪ್ರಕಟಣೆಗೆ ಹೋಗುವುದಿಲ್ಲ. ಮೇಲಾಗಿ ಇವು ನಿಯತಕಾಲಿಕಗಳು, ಹೀಗಾಗಿ ನೇರವಾಗಿ ಸಾಹಿತ್ಯ ಪತ್ರಿಕೆಗಳ ಮೇಲೆ ತುರ್ತು ಪರಿಸ್ಥಿತಿಯ ತೀವ್ರ ಪರಿಣಾಮ ಆದಂತಿಲ್ಲ. ಬದಲಾಗಿ ತುರ್ತು ಪರಿಸ್ಥಿತಿಯ ಅವಧಿಯಲ್ಲೇ (೧೯೭೫-೭೭) ರಲ್ಲಿ ಕನಿಷ್ಠ ಏಳು ಸಾಹಿತ್ಯ ಪ್ರಧಾನ ಪತ್ರಿಕೆಗಳು ಜನ್ಮ ತಳೆದಿವೆ. ತುರ್ತು ಸ್ಥಿತಿಯ ಬಳಿಕ ದೇಶದಲ್ಲಿ ಮಹತ್ತರ ರಾಜಕೀಯ ಸ್ಥಿತ್ಯಂತರಗಳಾದವು. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಅಧಿಕಾರ ಅಳಿದು ಜನತಾ ಪಕ್ಷ ಅಧಿಕಾರಕ್ಕೆ ಬಂತು. ಹೆಚ್ಚೂ ಕಡಿಮೆ ತುರ್ತು ಸ್ಥಿತಿಯ ಹಾಗೂ ಆ ದಶಕದ ಮುಕ್ತಾಯದ ಕೊನೆಯವರಗೂ ನವ್ಯ ಸಾಹಿತ್ಯ ಪ್ರಕಾರ ಕನ್ನಡದಲ್ಲಿ ಚಲಾವಣೆಯಲ್ಲಿತ್ತು. ಅಷ್ಟರಲ್ಲಾಗಲೇ ದಲಿತ ಬಂಡಾಯ. ಸಾಹಿತ್ಯ ಚಳುವಳಿಯ ದನಿಗಳು ಕೇಳಲಾರಂಭಿಸಿದ್ದವು. ತುರ್ತು ಸ್ಥಿತಿಯ ಬಳಿಕ ವಂತೂ ಈ ಹೊಸಹಾದಿ ನಿಚ್ಚಳವಾಯಿತು. ಈಗ ಕನ್ನಡದಲ್ಲಿ ದಲಿತ ಬಂಡಾಯದ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತವೆ. ‘ದಲಿತ’, ‘ಶೋಷಿತ’, ‘ಪಂಚಮ’ದಂಥ ಪತ್ರಿಕೆಗಳು ಸಾಹಿತ್ಯದಲ್ಲಿ ಹೊಸ ಚಳುವಳಿಯನ್ನು ಈ ಮುಂದುವರಿದು ಅನೇಕ ಸಾಹಿತ್ಯ ಪತ್ರಿಕೆಗಳ ಹುಟ್ಟಿಗೆ ಕಾರಣವಾದವು. ದಲಿತ ಪ್ರಜ್ಞೆಯ ಜೊತೆಗೆ ಬಂಡಾಯ ಪ್ರಜ್ಞೆಯೂ ಸೇರಿಕೊಂಡು ಹೊಸ ಮಾದರಿಯ ಸಾಹಿತ್ಯ ನಿರ್ಮಿತಿಗೆ ಕಾರಣವಾದುದನ್ನು ಆರನೇ ಅಧ್ಯಾಯದಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ. ‘ದಲಿತ ಚಳುವಳಿಯ ಜೊತೆಜೊತೆಗೇ ಜನ್ಮ ತಾಳಿದ ಮತ್ತೊಂದು ಚಳುವಳಿ ಬಂಡಾಯ ಸಾಹಿತ್ಯದ್ದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಕಟವಾದ ಕವನ ಸಂಕಲನಗಳಲ್ಲಿ ಇದರ ಆರಂಭದ ಸೂಚನೆಗಳನ್ನು ಗುರುತಿಸಬಹುದಾದರೂ ಇದಕ್ಕೊಂದು ತಾತ್ವಿಕ ನೆಲೆಗಟ್ಟು ರೂಪುಗೊಂಡದ್ದು ನಂತರದ (೧೯೭೯) ಬಂಡಾಯ ಸಾಹಿತ್ಯ ಸಮ್ಮೇಳನದಲ್‌ಇ.’ ಹೀಗೆ ಸಾಮಾನ್ಯವಾಗಿ ತುರ್ತು ಸ್ಥಿತಿಯ ಬಳಿಕ ಪ್ರವರ್ಧಮಾನಕ್ಕೆ ಬಂದುದೆಂದು ಗುರುತಿಸಲಾಗುವ ಬಂಡಾಯ, ದಲಿತ ಚಳುವಳಿಗಳನ್ನು ಪೋಷಿಸುವ, ಅದಕ್ಕೆ ಮುಖವಾಣಿಗಳಾದ ಪತ್ರಿಕೆಗಳು ಈ ಅವಧಿಯಲ್ಲಿ ಬಂದಿವೆ. ಈ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಸಾಹಿತ್ಯ ಸೇವೆಯೊಂದನ್ನೇ ಪ್ರಧಾನವಾಗಿಟ್ಟುಕೊಂಡು ಪ್ರಕಟಣೆಯಲ್ಲಿರುವ ಪತ್ರಿಕೆಗಳೂ ಇವೆ. ಸಾಹಿತ್ಯದ ಒಂದೊಂದೇ ಪ್ರಕಾರಕ್ಕೆ ಆಸಕ್ತಿಯನ್ನು ಸೀಮಿತಗೊಳಿಸಿಕೊಂಡ ಪತ್ರಿಕೆಗಳೂ ನೋಡಸಿಕ್ಕುತ್ತವೆ. ಈ ಹಿನ್ನಲೆಯಲ್ಲಿ ತುರ್ತು ಸ್ಥಿತಿಯ ಬಳಿಕದ ಅಂದರೆ ೧೯೭೮ರಿಂದ ೧೯೯೩ರವರೆಗಿನ ಸಾಹಿತ್ಯ ಪತ್ರಿಕೆಗಳ ಸಮೀಕ್ಷೆ ಈ ಮುಂದೆ ಮಾಡಲಾಗಿದೆ.

ಗ್ರಂಥಲೋಕ

ಕನ್ನಡದಲ್ಲಿ ಪುಸ್ತಕೋದ್ಯಮಕ್ಕೆ ಮೀಸಲಾಗಿ ಐದಾರು ಪತ್ರಿಕೆಗಳು ಬಂದ ದಾಕಲೆಯಿದ್ದು ಅವುಗಳಲ್ಲೆಲ್ಲಾ ಗ್ರಂಥಲೋಕಕ್ಕೆ ವಿಶಿಷ್ಟ ಸ್ಥಾನ. ವೈಯಕ್ತಿಕ ಪ್ರಯತ್ನವಾಗಿ ಅತಿ ಹೆಚ್ಚು ಕಾಲ ನಡೆದ, ಪುಸ್ತಕೋದ್ಯಮಕ್ಕೆ ಮೀಸಲಾದ ಪತ್ರಿಕೆ ‘ಗ್ರಂಥಲೋಕ’. ಅದು ಆರಂಭಗೊಂಡಿದ್ದು ೧೯೭೮ರಲ್ಲಿ. ‘ಗ್ರಂಥಲೋಕ’ದ ಸಂಪಾದಕರು ಆರ್‍. ಎಲ್. ಅನಂತರಾಮಯ್ಯನವರು, ಸಲಹೆಗಾರರೆಂದು ಡಾ. ಹಾ. ಮಾ.ನಾಯಕರನ್ನೂ ಸಹಾಕರೆಂದು ರಾ. ಶೆ. ಪೂರ್ಣಾನಂದ, ಬಾ. ವೇ. ಶ್ರೀಧರ, ಡಾ. ಎನ್. ಎಸ್. ತಾರಾನಾಥ ಹಾಗೂ ವೈ. ಪಿ. ವಿಜಯಕುಮಾರ ಅವರುಗಳನ್ನು ಹೆಸರಿಸಲಾಗಿತ್ತು. (ಕ್ವಾಟೋ) ಆಕಾರದ ‘ಗ್ರಂಥಲೋಕ’ಕ್ಕೆ ಸಾಮಾನ್ಯವಾಗಿ ೧೬ ಪುಟಗಳು. ಗ್ರಂಥಲೋಕದ ಮೂಸೆಯಲ್ಲಿ, ಪುಸ್ತಕಸುದ್ದಿ, ಸೂಚಿಗಳು, ಖಾಯಂ ಅಂಕಣಗಳಾಗಿದ್ದವು. ವಾರ್ಷಿಕ ಚಂದಾ ೧೯೮೬ರಲ್ಲಿ ೧೫ ರೂಪಾಯಿ ಇದ್ದರೆ ಪೋಷಕ ನಿಧಿ ಎಂಬುದಾಗಿ ೧೫೦ ರೂಪಾಯಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಗ್ರಂಥಲೋಕದ ಸಾಧನೆ ಸಿದ್ಧಿಗಳ ಬಗ್ಗೆ ಲೇಖಕ ಸದಾಶಿವ ಎಣ್ಣೆಹೊಳೆ ಬರೆಯುತ್ತಾರೆ. ‘ಏನಿಲ್ಲವೆಂದರು ಹದಿನೈದು ಸಾವಿರ ಕನ್ನಡ ಕೃತಿಗಳ ವರ್ಗಿಕೃತ ಗ್ರಂಥಸೂಚಿಯನ್ನು ಈ ಪತ್ರಿಕೆ ನೀಡಿದೆ. ಐದು ಸಾವಿರದಷ್ಟು ಪುಸ್ತಕಗಳ ಕಿರು ವಿಮರ್ಶೆ ಇದರಲ್ಲಿ ಪ್ರಕಟವಗಿದೆ. ಪ್ರಾರಂಭಿಕ ವರ್ಷಗಳಲ್ಲಿ ಡಾ. ಹಾ. ಮಾ. ನಾಯಕ ಅವರು ‘ತಿಂಗಳ ಪುಸ್ತಕ’ ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರತಿ ತಿಂಗಳು ತಮ್ಮ ಮನಸ್ಸಿಗೆ ಬಂದ ಪುಸ್ತಕವೊಂದನ್ನು ಕುರಿತು ರಸ ವಿಮರ್ಶೆ ಮಾಡುತ್ತಿದ್ದರು. ನಾಯಕರ ಈ ಬರಹ ಓದುಗರು ಕಾತರಿಸುವಂತೆ ಮಾಡಿತ್ತು. ಐವತ್ತು ತಿಂಗಳನಂತರ ನಾಯಕರ ಈ ಬರಹ ನಿಂತುಹೋಯಿತು. ಹೇಗಾದರೂ ಸರಿ ನಾಯಕರದೊಂದು ಲೇಖನ ಗ್ರಂಥಲೋಕದಲ್ಲಿ ಇದ್ದೇ ಇರಬೇಕೆಂದು ಸಂಕಲ್ಪಿಸಿದ ಸಂಪಾದಕರು ನಾಯಕರನ್ನು ಪುನರ್‍ ಪ್ರವೇಶ ಮಾಡಿಸುವಲ್ಲಿ ಯಶಸ್ವಿಯಾದರು. ಅಲ್ಲಿಂದ ಮುಂದೆ ‘ಗ್ರಂಥಲೋಕದ ಸುತ್ತಮುತ್ತ’ ಎನ್ನುವ ತಲೆ ಬರಹದಡಿಯಲ್ಲಿ ನಾಯಕರು ಬರೆಯಲು ಪ್ರಾರಂಭಿಸಿದರು. ಈ ಅಂಕಣದಲ್ಲಿ ನಾಯಕರು ಮುಖ್ಯವಾಗಿ ಪುಸ್ತಕೋದ್ಯಮದ ಚಟುವಟಿಕೆಗಳನ್ನು, ರಸಪ್ರಸಂಗಗಳನ್ನು ಕರಿತು ಬರೆಯುತ್ತಿದ್ದರು. . .ಗ್ರಂಥಲೋಕ ಮಾಡಿದ ಮತ್ತೊಂದು ಒಳ್ಳೆಯ ಕೆಲಸವೆಂದರೆ ಕನ್ನಡ ಪ್ರಕಾಶಕರು ಮತ್ತು ಪುಸ್ತಕ ವ್ಯಾಪಾರಿಗಳ ಪಟ್ಟಿಯ ಪ್ರಕಟಣೆ. ‘ಸಾಹಿತ್ಯ ಸಾಧಕರು’ ಮಾಲಿಕೆಯಲ್ಲಿ ಹೆಸರಾಂತ ಬರಹಗಾರರ ಸಿದ್ದಿ ಸಾಧನೆಗಳನ್ನು ಒರೆಗೆ ಹಚ್ಚಿದೆ. ಇವೆಲ್ಲಕ್ಕಿಂತ ಮಿಗಿಲಾದುದೆಂದರೆ ಪತ್ರಿಕೆ ಪ್ರಾರಂಭದ ವರ್ಷದಿಂದಲೂ ನಡೆಸಿಕೊಂಡು ಬಂದಿರುವ ವಾರ್ಷಿಕ ಸಮೀಕ್ಷೆ. ಒಂದು ಕ್ಯಾಲೆಂಡರ್‍ ವರ್ಷದಲ್ಲಿ ಪ್ರಕಟವಾಗುವ ಕನ್ನಡದ ಎಲ್ಲ ಪುಸ್ತಕಗಳನ್ನು ಸಂಕಲಿಸಿ, ವಿಷಯವಾರು ವಿಂಗಡಿಸಿ ವಿದ್ವಾಂಸರಿಂದ ಅವುಗಳ ಸಮೀಕ್ಷೆ ನಡೆಸುತ್ತಾ ಬಂದಿದೆ. ಇದುವರೆಗೆ ಪ್ರಸ್ತಾಪಿಸಿದ ಎಲ್ಲ ವಿಷಯಗಳಿಗೂ ಕಳಶವಿಟ್ಟಂತೆ ಗ್ರಂಥಲೋಕ ಹಮ್ಮಿಕೊಂಡಿರುವ ‘ವರ್ಷದ ಲೇಖಕ’ ಪ್ರಶಸ್ತಿ ಉಲ್ಲೇಖಾರ್ಹವಾದುದು.’ ಕನ್ನಡದಲ್ಲಿ ಹೊರಬರುವ ಎಲ್ಲಾ ಪುಸ್ತಕಗಳ ದಾಖಲೆಗೆ, ಪರಿಚಯಕ್ಕೆ ‘ಗ್ರಂಥಲೋಕ’ ವೇದಿಕೆಯಾಗಿತ್ತು. ೧೩ ವರ್ಷ ನಿರಂತರವಾಗಿ ನಡೆಯಿತು. ಆದರೆ ಚಂದಾದಾರರ ಕೊರತೆಯಿಂದಾಗಿ ಪತ್ರಿಕೆ ಆಗಾಗ ಸಂಕಷ್ಟಕ್ಕೀಡಾಗುತ್ತಿತ್ತು. ಡಾ. ಹಾ. ಮಾ. ನಾಯಕ, ಸಂತೋಷ ಕುಮಾರ ಗುಲ್ವಾಡಿ ಮುಂತಾದವರು ‘ಗ್ರಂಥಲೋಕ ಸಾಯಬೇಕೆ ?’ ಎಂದು ಕನ್ನಡ ಓದುಗರಿಗೆ ಚುಚ್ಚಿ, ಎಚ್ಚರಿಸಿ ಆಗಾಗ ಗ್ರಂಥಲೋಕವನ್ನು ಉಳಿಸುವ ಪ್ರಯತ್ನ ಮಾಡಿಯೂ ಗ್ರಂಥಲೋಕಕ್ಕೆ ಕನ್ನಡ ಓದುಗರ ನಿರಂತರ ಬೆಂಬಲ ದೊರೆಯದೇ ಪತ್ರಿಕೆ ನಿಂತಿತು.

ಆಲೋಕ -ಅಂಕಣ

ಬೆಂಗಳೂರಿನ ಸಾಹಿತ್ಯ ಪ್ರೇಮಿ ಅಧ್ಯಾಪಕರುಗಳಾದ ಚಿ. ಶ್ರೀನಿವಾಸರಾಜು. ಕೆ. ವಿ. ನಾರಾಯಣ, ಕಿ. ರಂ. ನಾಗರಾಜ ಮುಂತಾದವರು ಸೇರಿಕೊಂಡು ಆರಂಭಿಸಿದ ಪಿ. ಪಿ. ಗೆಳಯರ ಬಳಗದ ಪ್ರಕಟಣೆಗಳಲ್ಲಿ ‘ಆಲೋಕ ಮತ್ತು ಅಂಕಣ’ ಮುಖ್ಯವಾದವುಗಳು. ‘ಆಲೋಕ’ದ ಮೊದಲ ಸಂಚಿಕೆ ಪ್ರಾಯೋಗಿಕ ಸಂಚಿಕೆಯಾಗಿ ಹೊರ ಬಂದುದು ಮೇ ೧೯೭೯ರಲ್ಲಿ. ‘ಸಾಹಿತ್ಯಿಕ ವಿಚಾರ, ಆಲೋಚನೆಗಳಿಗೆ ಮುಕ್ತ ವೇದಿಕೆಯೊಂದನ್ನು ನಿರ್ಮಿಸುವುದು ಆಲೋಕದ ಈ ಪ್ರಾಯೋಗಿಕ ಸಂಚಿಕೆಯ ಉದ್ದೇಶ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಎಲ್ಲ ಶಿಸ್ತುಗಳು ಮತ್ತು ಅದರ ಆಂತರಿಕ ಸಂಬಂಧಗಳನ್ನು ಕುರಿತ ಅಭ್ಯಾಸ ಪೂರ್ಣ ಲೇಖನಗಳನ್ನು ಪ್ರಕಟಿಸುವ ಆಶಯವನ್ನು ಹೊಂದಿದ್ದೇವೆ. ಇದಕ್ಕಾಗಿ ಸಾಹಿತ್ಯಾಭ್ಯಾಸಿಗಳೆಲ್ಲರ ಒತ್ತಾಸೆಯನ್ನು ಪ್ರೀತಿಯಿಂದ ಬಯಸುತ್ತೇವೆ. . . ನಿಮ್ಮ ಕೈಲ್ಲಿರುವ ಈ ಸಂಚಿಕೆಯೇ ಆಲೋಕದ ಖಚಿತ ರೂಪ ಅಲ್ಲ. ಇಂಥ ಸಾಹಿತ್ಯ ಸಂಚಿಕೆಯ ರೂಪ ನಿರ್ಧಾರ ಅನೇಕ ಪ್ರಯೋಗಗಳ ಮೂಲಕ ಆಗಬೇಕಾಗಿದೆ ಎಂಬುದು ನಮ್ಮ ತಿಳುವಳಿಕೆ. ಅದಕ್ಕೆ ಓದುಗರ ಸಕ್ರಿಯ ಸಂವಾದದ ಅಗತ್ಯವಿದೆ. . . ಇಂಥದೊಂದು ಪತ್ರಿಕೆ ನಿಮಗೆ ಬೇಕೆ? ಪತ್ರಿಕೆಯ ಬಗೆಗೆ ನಿಮ್ಮ ಅನಿಸಿಕೆಗಳನ್ನು ಬರೆದು ತಿಳಿಸಿದರೆ ಸಂತೋಷ. ೧/೪ ಡೆಮಿ ಆಕಾರದ ೩೨ ಪುಟಗಳ ಆಲೋಕಕ್ಕೆ ಪಿ. ಪಿ. ಬಳಗದ ಗೆಳೆಯರಿಂದ ಪ್ರಕಾಶಿತ, ಎಂಬುದಾಗಿ ಸಾರಲಾಗಿತ್ತು. ಪಿ. ಪಿ. ಬಳಗ ಎಂದರೆ ಏನು, ಬಳಗದಲ್ಲಿ ಯಾರ್‍ಯಾರು ಇದ್ದಾರೆ ಎಂಬ ಬಗ್ಗೆ ವಿವರಗಳಿರಲಿಲ್ಲ. ಇದು ನಿಯತಕಾಲಿಕವೋ ಅನಿಯತಕಾಲಿಕವೋ, ಚಂದಾ ಹಣವೆಷ್ಟು ಎಂಬ ವಿವರಗಳೂ ಇರಲಿಲ್ಲ.ಆಲೋಕದ ಎರಡನೇ ಸಂಚಿಕೆಯು ಜುಲೈ ೭೯ರಲ್ಲೂ ಮೂರನೇ ಸಂಚಿಕೆ ಸೆಪ್ಟೆಂಬರ್‍ ೧೯೭೯ರಲ್ಲೂ ಬಂದಿರುವುದರಿಂದ ಇದು ದ್ವೈಮಾಸಿಕವಾಗಿತ್ತು ಎಂದು ಧಾರಾಳವಾಗಿ ಹೇಳಬಹುದು. ಮೂರನೇ ಸಂಚಿಕೆಯಲ್ಲಿ ‘ನೀವು ಆರು ರೂಪಾಯಿಗಳನ್ನು ನಮ್ಮ ವಿಳಾಸಕ್ಕೆ ಕಳುಹಿಸುವುದರ ಮೂಲಕ ಇದು ಸೇರಿದಂತೆ ಆರು ಸಂಚಿಕೆಗಳನ್ನು ಪಡೆಯುವಿರಿ. ಹಣವನ್ನು ಎಂ. ಒ. ಮೂಲಕವೇ ಕಳುಹಿಸಬೇಕು’ ಎಂಬುದಾಗಿ ಸೂಚನೆ ಇದೆ. ‘ಆಲೋಕ’ದ ಪ್ರಾಯೋಗಿಕ ಸಂಚಿಕೆ ೧ರಲ್ಲಿ ಪರಿವಿಡಿಯೇ ಇಲ್ಲ. ‘ಶಾಬ್ದಿಕ ಮಾಧ್ಯಮವನ್ನು ಕರಿತು. . .’ ಎಸ್. ಎನ್. ರಾಘವೇಂದ್ರರಾವ್ ಬರೆದ ಗಂಭೀರ ಲೇಖನ, ‘ಸಾಹಿತ್ಯ - ಸಾಹಿತ- ಸಮಾಜ’ದ ಬಗ್ಗೆ ಬಸವರಾಜ ಕಲ್ಗುಡಿಯವರ ಕೆಲವು ವಿಚಾರಗಳು, ‘ಜನಪ್ರಿಯ ಸಾಹಿತ್ಯ ಚರ್ಚೆಯ ನೆಲೆಗಳು’ ಎಂಬುದಾಗಿ ಕೆ. ವಿ ನಾರಾಯಣ ಅವರ ಬರಹ, ಕನ್ನಡ ಕವಿತೆ, ಓದುಗರ ಪ್ರತಿಕ್ರಿಯೆ ಇತ್ಯಾದಿ. . . ಎಂಬ ಕಿ. ರಂ. ನಾಗರಾಜರ ಲೇಖನ, ಟಿಪ್ಪಣಿಗಳು, ಪುಸ್ತಕ ಪರಿಚಯ ಇವಿಷ್ಟು ಮೊದಲ ಸಂಚಿಕೆಯಲ್ಲಿವೆ. ‘ಆಲೋಕ’ ೧೯೭೯ರಲ್ಲ ಆರಂಭಗೊಂಡಾಗ ನೋಂದಾವಣೆಗೊಂಡಿರುವ ಖಾಸಗಿ ಪ್ರಸಾರದ ಪತ್ರಿಕೆಯಾಗಿತ್ತು. ಪಿ. ಪಿ. ಗೆಳೆಯರ ಬಳಗ ತಮ್ಮ ದ್ವೈಮಾಸಿಕವನ್ನು ನೋಂದಾಣೆ ಮಾಡಿದಾಗ ‘ಅಂಕಣ’ ಎಂಬ ಹೆಸರು ದಾಖಲಾಯಿತು. ಹೀಗಾಗಿ ‘ಆಲೋಕ’ ಮೂರು ಸಂಚಿಕೆಗಳ ಬಳಿಕ ‘ಅಂಕಣ’ವಾಗಿ ಪ್ರಕಟಗೊಂಡು ಪಿ. ಪಿ. ಬಳಗದ ಗೆಳೆಯರಿಂದಲೇ ಪ್ರಕಾಶನಗೋಂಡಿತ್ತು. ಆಲೋಕದ ಮಾದರಿಯನ್ನೇ ಉಳಿಸಿಕೊಂಡ ‘ಅಂಕಣ’ಕ್ಕೆ ಎ. ಆರ್‍ ನೀರುಪಮ ಸಂಪಾದಕರು. ಚಿ. ಶ್ರೀನಿವಾಸರಾಜು ಪ್ರಕಾಶಕರು. ಹತ್ತು ವರ್ಷವನ್ನು ದಾಟಿ ಅಂಕಣ ಮುಂದವರಿದು ೧೯೮೯ರಲ್ಲಿ ನಿಂತಿತು. ಕನ್ನಡ ಸಾಹಿತ್ಯಕ್ಕೆ ಅಂಕಣದ ಮತ್ತೊಂದು ಕೊಡುಗೆ ಅಂಕಣ ಪ್ರಕಾಶನದ ಹೆಸರಿನಲ್ಲಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದು. ೧೯೮೪ರಲ್ಲಿ ಅಂಕಣದ ವಾರ್ಷಿಕ ಚಂದಾ ಹತ್ತು ರೂಪಾಯಿ. ಆಜೀವ ಚಂದಾ ಎಂದು ಕರೆಯದೇ ಅಂಕಣದ ಸ್ಥಾಯಿ ನಿಧಿ ಎಂಬುದಾಗಿ ನೂರು ರೂಪಾಯಿ ಸ್ವೀಕರಿಸುತ್ತಿದ್ದುದು ‘ಅಂಕಣ’ದ ವಿಶೇಷ.

ಲಹರಿ

ಮದ್ರಾಸಿನಲ್ಲಿ (ಈಗಿನ ಚೆನ್ನೈ) ಕನ್ನಡದ ಕೆಲಸ ಹಿಂದಿನ ಶತಮಾನದಲ್ಲೇ ನಡದಿದೆ. ‘ಕನ್ನಡ ನುಡಿಗನ್ನಡಿ’ ಪತ್ರಿಕೆ ಮದ್ರಾಸಿನಲ್ಲಿ ಹುಟ್ಟಿ ಸಾಹಿತ್ಯಿಕ ಕೈಂಕರ್ಯ ನಡೆಸಿದ್ದನ್ನು ನೋಡಿದ್ದೇವೆ. ೧೯೮೦ರಲ್ಲಿ ಮದ್ರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಕೃಷ್ಣಭಟ್ ಅರ್ತಿಕಜೆ ಅವರ ಸಂಪಾದಕತ್ವದಲ್ಲಿ ‘ಲಹರಿ’ ಎಂಬ ಮಾಸಪತ್ರಿಕೆ ಹೊರಬಂದಿತು. ಡೆಮಿ ೧/೮ ಆಕಾರದ ೩೨ ಪುಟಗಳ ‘ಲಹರಿ’ ಸೃಜನಶೀಲ ಸಾಹಿತ್ಯಕ್ಕಾಗಿ ಪುಟಗಳನ್ನು ಮೀಸಲಿರಿಸುತ್ತಿತ್ತು. ಉದಯೋನ್ಮುಖರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿತ್ತು. ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸುತ್ತಿತ್ತು. ಹೊರ ರಾಜ್ಯವೊಂದರಲ್ಲಿ ಕನ್ನಡತನವನ್ನು ಉಳಿಸುವ ಮಹದಾಸೆಯಿಂದ ಆರಂಭವಾದ ‘ಲಹರಿ’ ಹದಿನಾರು ಸಂವತ್ಸರಗಳನ್ನು ದಾಟಿ ಮುಂದುವರೆದಿದೆ. ಮಾಸಿಕ ಪತ್ರಿಕೆಯಾಗಿ ಆರಂಭವಾದ ಪತ್ರಿಕೆ ಕ್ರಮೇಣ ತ್ರೈಮಾಸಿಕವಾಗಿ, ಅನಂತರ ಕೆಲಕಾಲ ದ್ವೈಮಾಸಿಕವಗಿ ಮಾರ್ಪಾಡುಗೊಂಡಿತು. ೧೯೯೭ನೇಯ ರಾಜ್ಯೋತ್ಸವ ಸಂದರ್ಭದಲ್ಲಿ ‘ಲಹರಿ’ಯನ್ನು ಮತ್ತೆ ಮಾಸಿಕವಾಗಿ ಪರಿವರ್ತಿಸಲಾಗಿದೆ. ‘ಕನ್ನಡಿಗರಿಗೆ ತಾಯ್ನುಡಿಯ ಬಗೆಗೆ ಒಲವು ಇನ್ನಷ್ಟು ಹೆಚ್ಚಬೇಕು. ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಮುಂದಿನ ಪೀಳಿಗೆ ಕನ್ನಡವನ್ನು ಮರೆಯದಿರಲು ಹಿರಿಯರು ಮಾಡಬೇಕಾಗಿರುವ ಮುಖ್ಯ ಕರ್ತವ್ಯವೇನೆಂಬುದನ್ನು ಈ ಹಿಂದೆ ಇದೇ ಪತ್ರಿಕೆಯ ಮೂಲಕ ಹಲವಾರು ಬಾರಿ ತಿಳಿಸಲಾಗಿದೆ. ಮನೆಯ ಹೊರಗೆ ಕನ್ನಡ ಕಲಿಯಲು ಸೌಲಭ್ಯಗಳ ಕೊರತೆ ಇರಬಹುದು. ಆದರೆ ಮನೆಯೊಳಗೆ ಕನ್ನಡ ವಾತಾವರಣವನ್ನು ಉಳಿಸಿಕೊಳ್ಳಲು ಏನೂ ಶ್ರಮವಿಲ್ಲ. ಅದಕ್ಕೆ ಮನಸ್ಸಿರಬೇಕು ಎಂಬುದಾಗಿ ಲಹರಿಯ ಸಂಪಾದಕರು ಬಿನ್ನೈಸಿದ್ದಾರೆ. ೧೯೯೭ರಲ್ಲಿ ‘ಲಹರಿ’ಗೆ ಡಾ. ವಿ. ಗೋಪಾಲಕೃಷ್ಣ ಸಂಪಾದಕರು ಹಾಗೂ ಎಂ. ಎಂ. ಭಂಡಾರಿ ಸಹ ಸಂಪಾದಕರು. ಸಂಪಾದಕ ಸಲಹಾಮಂಡಲಿಯಲ್ಲಿ ಎ. ಎಚ್‌. ಕೇಸರಿ ಪ್ರಸಾದ್, ಡಾ. ಶ್ರೀ ಕೃಷ್ಣ ಭಟ್ ಅರ್ತಿಕಜೆ, ಎಸ್. ರಾಮಚಂದ್ರಭಟ್, ಶ್ರೀಮತಿ ಪ್ರಭಾ ಮಂಜುನಾಥ್ ಹಾಗೂ ನಾಗೇಂದ್ರ ಪ್ರಸಾದ್ ಅವರುಗಳಿದ್ದರು. ಕನ್ನಡ ನಾಡಿನಲ್ಲೇ ಕನ್ನಡ ಸಾಹಿತ್ಯ ಪತ್ರಿಕೆಗಳು ಕುಂಟುತ್ತ ಪ್ರಕಟಗೊಳ್ಳುವ ವೇಳೆ, ಹೊರ ರಾಜ್ಯದಲ್ಲಿ ಹದಿನೇಳು ವರ್ಷಗಳಿಂದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ‘ಲಹರಿ’ಯ ಸಾಧನೆ ಸಾಮಾನ್ಯವಲ್ಲ. ಕವನ, ಕಥೆ, ಲೇಖನಗಳ ಜೊತೆ ಕನ್ನಡ ಚಟುವಟಿಕೆಗಳ ವರದಿ ಮಾಡುತ್ತ ಸಾಗಿ ಬಂದಿರುವ ‘ಲಹರಿ’ಯಂಥ ಪುಟ್ಟ ಪತ್ರಿಕೆಗಳು ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗಗಳು.

ಸಂಚಯ

ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕಾ ಪಟ್ಟಣ ದಾಂಡೇಲಿಯಿಂದ ಸುರೇಂದ್ರ ರಾಮನ್ ಅವರು ೧೯೮೦ರಲ್ಲಿ ಸಂಚಯ ಎಂಬ ದ್ವೈಮಾಸಿಕ ಪ್ರಕಟಿಸಿದರು. ಇದು ವೈಚಾರಿಕ ಸಾಹಿತ್ಯಕ್ಕೆ ಮೀಸಲಾದ ಪ್ರತಿಕೆಯೊಂದು ಕರೆಸಿಕೊಂಡಿತ್ತು. ಕೆಲವು ಸಂಚಿಕೆಗಳು ಮಾತ್ರ ಪ್ರಕಟಗೊಂಡವು.

ಪ್ರೇಮಿ

೧೯೮೦ರಲ್ಲಿ ಪ್ರಕಟವಾದ ಇನ್ನೊಂದು ಮಾಸಪತ್ರಿಕೆ ‘ಪ್ರೇಮಿ’. ಇದು ಪ್ರೇಮಕಥೆಗಳಿಗಾಗಿಯೇ ಮೀಸಲಾದ ಮಾಸಿಕ. ಧಾರವಾಡ ಜಿಲ್ಲೆಯ ಸವಣೂರಿನಿಂದ ಪ್ರಕಟಗೊಂಡಿತು.

ರುಜುವಾತು

ಕನ್ನಡ ಸಾಹಿತ್ಯ ಪತ್ರಿಕೆಗಳ ಪೈಕಿ ವಿಶಿಷ್ಟ ಸ್ಥಾನ ಪಡೆದಿರುವ ತ್ರೈಮಾಸಿಕ ಪತ್ರಿಕೆ ‘ರುಜುವಾತು’. ಸೃಜನಶೀಲ ಹೊಸ ಪ್ರಯೋಗಗಳಿಗಾಗಿ, ಹೊಸದಿಕ್ಕನ ಹುಡುಕಾಟಕ್ಕಾಗಿ, ನಮ್ಮ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದ ಶೋಧಕ್ಕಾಗಿ’ ಎಂಬುದು ರುಜುವಾತಿನ ಘೋಷಣೆ. ಕನ್ನಡದ ಹೆಸರಾಂತ ಸಾಹಿತಿ, ಚಿಂತಕ ಡಾ. ಯು. ಆರ್‍. ಅನಂತಮೂರ್ತಿ ರುಜುವಾತಿನ ಸಂಪಾದಕರು. ಎಂಬತ್ತರ ದಶಕದಲ್ಲಿ (೧೯೮೨) ಆರಂಭವಾದ ‘ರುಜುವಾತು’ ಅನಿಯತವಾಗಿ ಬಂದರೂ ಬಂದ ಸಂಚಿಕೆಗಳು ಕನ್ನಡ ಸಾಹಿತ್ಯದಲ್ಲಿ ಅನೇಕ ಚರ್ಚೆಗಳಿಗೆ ಕಾರಣವಾಗುವುದು ರುಜುವಾತಿನ ಮಹತ್ತ್ವವನ್ನು ಸಾಬೀತುಪಡಿಸುತ್ತದೆ. ಕನಿಷ್ಠ ೨೫ ಸಂಚಿಕೆಗಳು ನಿಯತಕಾಲಿಕವಾಗಿಯೇ ರುಜುವಾತು ಬಂತು. ಆಗ ಸಹ ಸಂಪಾದಕರಾಗಿ ಚ. ಸರ್ವಮಂಗಳಾ ಹಾಗೂ ಎಚ್. ಪಟ್ಟಾಭಿರಾಮ ಸೋಮಯಾಜಿಯವರು ಕೆಲಸಮಾಡುತ್ತಿದ್ದರು. ವ್ಯವಸ್ಥಾಪಕ ಸಂಪಾದಕರಾಗಿ ಎನ್. ವಿದ್ಯಾಶಂಕರ್‍ ಹಾಗೂ ಸಹಾಯ, ಮೀನಾ ಮೈಸೂರು ಎಂದು ರುಜುವಾತಿನ ಸಂಪಾದಕ ಬಳಗ ಘೋಷಿತವಗಿತ್ತು. ೧೯೮೨ರಲ್ಲಿ ರುಜುವಾತಿನ ವಾರ್ಷಿಕ ಚಂದಾ ೨೦ ರೂಪಾಯಿಗಳು ಹಾಗೂ ಬಿಡಿಪ್ರತಿ ೬ ರೂಪಾಯಿ. ಅಜೀವ ಚಂದಾ ೨೫೦ ರೂಪಾಯಿಗಳಾದಲ್ಲಿ ೫೦ ರೂಪಾಯಿಗಳ ಐದು ಕಂತುಗಳಲ್ಲಿ ಕೊಡಬಹುದಾಗಿತ್ತು. ರುಜುವಾತುವಿನಲ್ಲಿ ಪ್ರಕಟವಾದ ಲೇಖನಗಳನ್ನು ಮಾತ್ರ ಆಯಾ ಸಂಚಿಕೆಯ ಮುಖಪುಟ, ಹಿಂಬದಿ ಪುಟಗಳ ಸಮೇತ ಬೈಂಡು ಮಾಡಿ ಲೇಖಕರಿಗೆ ಗೌರವ ಪತ್ರಿಕೆಯಾಗಿ ಕೊಡುವ ಸಂಪ್ರದಾಯವಿತ್ತು. ಸಂಪಾದಕ ಅನಂತಮೂರ್ತಿಯವರ ಭಿನ್ನ ದೃಷ್ಟಿಕೋನಗಳನ್ನು ದಾಖಲಿಸುತ್ತಾ ಗಂಭೀರ ಸ್ವರೂಪದ ಚರ್ಚೆಗೆ ಕಾರವಾಗುತ್ತಿತ್ತು.‘ರುಜುವಾತು ಸಂಚಿಕೆಯ ಪ್ರಾಮುಖ್ಯತೆ ಇರುವುದು ಅದು ಪ್ರಕಟಿಸಿದ ಕೆಲವು ಎಂ. ಎನ್. ರಾಯ್ ಕುರಿತು ತಂದಂಥ ವಿಶೇಷ ಸಂಚಿಕೆಗಳಿಂದ ಹಾಗೂ ಪಾಶ್ಚಿಮಾತ್ಯ ಲೇಖಕರ ವಿದ್ವಾಂಸರ ಅನುವಾದಿತ ಲೇಖನಗಳಿಂದ’ ಎನ್ನುವ ಹಂಚಿನಮನಿ ವೀರಭದ್ರಪ್ಪನವರ ಮಾತು ಒಪ್ಪುವಂತಹದು. ನವ್ಯ ಹಾಗೂ ನವ್ಯದ ಮುಂದಿನ ದಿನಗಳಲ್ಲಿ ಕನ್ನಡದ ಹೊಸ ಬರಹಗಾರರ ಪಡೆಯನ್ನು ನಿರ್ಮಿಸಲು ರುಜುವಾತಿನ ಪಾತ್ರವೂ ಇದೆ.೨೫ ಸಂಚಿಕೆಗಳನ್ನು ನಿಯತವಾಗಿ ತಂದ ಅನಂತಮೂರ್ತಿಯವರು ಮೈಸೂರು ವಿಶ್ವವಿದ್ಯಾನಿಲಯದಿಂದ ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಹೋದ ಮೇಲೆ ‘ರುಜುವಾತು’ ನಿಂತು ಪ್ರಕಟಗೊಳ್ಳುತೊಡಗಿತು. ಕೆಲವು ಕಾಲ ನಿಂತೇ ಹೋಯಿತು. ಅನಂತಮೂರ್ತಿಯವರು ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷರಾಗಿ, ನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು. ಅವರ ಕಾರ್ಯ ಬಾಹುಳ್ಯದಿಂದಾಗಿ ರುಜುವಾತು ಪ್ರಕಟಗೊಳ್ಳಲಿಲ್ಲ.ಈ ನಡುವೆ ಸಾಗರದ ಹೆಗ್ಗೂಡಿನ ಕವಿ-ಕಾವ್ಯದ ವತಿಯಿಂದ ರುಜುವಾತಿಗೆ ಮತ್ತೆ ಜೀವಕೊಡುವ ಪ್ರಯತ್ನವನ್ನು ನಾಟಕಕಾರ ಪ್ರಸನ್ನ ಮಾಡಿದರು. ಅವರ ಪ್ರಯತ್ನದ ಫಲವಾಗಿ ರುಜುವಾತು ೧೯೯೫ರಲ್ಲಿ ಮರುಜನ್ಮ ಪಡೆಯಿತು. ಈ ಹೊಸ ವ್ಯವಸ್ಥೆಯಲ್ಲಿ ಸಂಪಾದಕರಾಗಿ ಯು. ಆರ್‍. ಅನಂತಮೂರ್ತಿಯವರು ಮುಂದುವರೆದರು ಹಾಗೂ ವ್ಯವಸ್ಥಾಪಕ ಸಂಪಾದಕರಾಗಿ ಪ್ರಸನ್ನ, ಸಹಸಂಪಾದಕರುಗಳಾಗಿ ವಿಲಿಯಂ ಹಾಗೂ ಬಂದಗದ್ದೆ ರಾಧಾಕೃಷ್ಣ ಕೆಲಸ ಮಾಡಿದರು. ಕೆ. ಜಿ. ಸೋಮಶೇಖರ್‍ ಛಾಯಾಗ್ರಾಹಕರು. ಕಂಪ್ಯೂಟರೀಕೃತ ಅಕ್ಷರ ಜೋಡಣೆಯೊಂದಿಗೆ ಹೊಸ ವಿನ್ಯಾಸದಲ್ಲಿ ರುಜುವಾತು ಆಕರ್ಷಕವಾಗಿ ಬರತೊಡಗಿತು. ಕವಿ-ಕಾವ್ಯ ಆಶ್ರಯದಲ್ಲಿ ರುಜುವಾತು ಪ್ರಕಟಗೊಳ್ಳುವಾಗ ಬಿಡಿಪ್ರತಿಗೆ ೧೬ ರೂಪಾಯಿಗಳು ಹಾಗೂ ವಾರ್ಷಿಕ ಚಂದಾ ೪೦ ರೂಪಾಯಿಗಳು. ಠೇವಣಿ ಯೋಜನೆ ಎಂಬ ಹೊಸ ಯೋಜನೆಯನ್ವಯ ಓದುಗರು ೫೦೦ ರೂಪಾಯಿ ಠೇವಣಿ ಹಣ ಕಳಿಸಿ ರುಜುವಾತು ಪಡೆಯಬಹುದಿತ್ತು. ನಿಮಗೆ ಬೇಕಿನ್ನಿಸಿದಾಗ ಠೇವಣಿ ಹಣವನ್ನು ಇಡಿಯಾಗಿ ಹಿಂದೆ ಪಡೆಯಬಹುದು ಎಂಬುದು ರುಜುವಾತು ಓದುಗರಿಗೆ ನೀಡಿದ ಆಕರ್ಷಕ ಕೊಡುಗೆ.ಆದರೆ ಅನೇಕ ಕಾರಣಗಳಿಂದಾಗಿ ಏಕಾಏಕಿ ರುಜುವಾತು ಮತ್ತೆ ನಿಂತಿತು. ಪ್ರಸನ್ನ ಸ್ವೀಕರಿಸಿದ್ದ ಚಂದಾಹಣವನ್ನು ವಾಪಸ್ಸು ಮಾಡಿದರು ಹಾಗೂ ಠೇವಣಿ ಯೋಜನೆಯ ಹಣ ಅನಂತಮೂರ್ತಿಯವರೇ ಪಡೆದಿರುವುದರಿಂದ ಹಿಂತಿರುಗಿಸಲು ಅವರೇ ಭಾದ್ಯಸ್ಥರು ಎಂಬುದಾಗಿ ಓದುಗರಿಗೆ ವಿವರ ನೀಡಿದರು. ೧೯೯೬ರಿಂದ ಮುಂದಕ್ಕೆ ರುಜುವಾತು ಪ್ರಕಟಗೊಂಡಿಲ್ಲ ಹೊಸ ವ್ಯವಸ್ಥೆಯೊಂದಿಗೆ ರುಜುವಾತು ಮರಳಿ ಪ್ರಕಟಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.

ಲೋಚನ

ಕನ್ನಡದಲ್ಲಿ ದಲಿತ ಬಂಡಾಯ ಚಳವಳಿಗಳೂ ಚಲಾವಣೆಯಲ್ಲಿರುವ ಹಾಗೇ ಪ್ರಾಸಕ್ಕೆ ಜೋತು ಬಿದ್ದು ಕವನ ಬರೆವ ಕವಿಗಳೂ ಕೆಲವರಿದ್ದಾರೆ. ಶಾಸ್ತ್ರ ಹಾಗೂ ಪ್ರಾಚೀನ ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳು ಈಗಲೂ ನಡೆಯುತ್ತಿವೆ. ಇದಕ್ಕೆ ಸಹಕಾರಿಯಾಗಿ ಕನ್ನಡದಲ್ಲಿ ವಿದ್ವತ್ ಪ್ರಪಂಚಕ್ಕೆ ಮೀಸಲಾಗಿ ‘ಲೋಚನ’ ಎಂಬ ಷಣ್ಮಾಸಿಕ ಪತ್ರಿಕೆಯೊಂದು ೧೯೮೨ರಲ್ಲಿ ಹೊರಬಂದು ಇಂದಿಗೂ ನಿಯತವಾಗಿ ಬರುತ್ತಿರುವುದು ಕನ್ನಡ ಸಾಹಿತ್ಯದ ವೈವಿಧ್ಯಕ್ಕೆ ಸಾಕ್ಷಿ. ‘ಲೋಚನ ಬಿ. ಎಂ. ಶ್ರೀ ಪ್ರತಿಷ್ಠಾನದಿಂದ ಪ್ರಕಟವಾಗುವ ಷಾಣ್ಮಾಸಿಕ, ಸಂಶೋಧನಾತ್ಮಕ ಪಾಂಡಿತ್ಯ ಪೂರ್ಣ ಲೇಖನಗಳು ಹಾಗೂ ಹೊಸದಾಗಿ ಪ್ರಕಟವಾಗುವ ಉತ್ತಮ ಮಟ್ಟದ ಸಂಪಾದಿತ ಗ್ರಂಥಗಳು ಮತ್ತು ಶಾಸ್ತ್ರ ಸಾಹಿತ್ಯದ ಗ್ರಂಥಗಳು, ಇವುಗಳಿಗೆ ಸಂಬಂಧಿಸಿದ ಟೀಕೆ ಟಿಪ್ಪಣಿಗಳು ಇವುಗಳಿಗೆ ಮೀಸಲಾದ ವಿದ್ವತ್ ಪತ್ರಿಕೆಯನ್ನು ವರ್ಷಕ್ಕೆ ಎರಡು ಸಲ ಪ್ರಕಟಿಸಬಹುದೆಂದೂ (ಜೂನ್ ಮತ್ತು ಡಿಸೆಂಬರ್‍) ಈ ಪತ್ರಿಕೆಗೆ ಲೋಚನ ಎಂಬ ಹೆಸರನ್ನು ಇಡಬಹುದೆಂದೂ, ಪ್ರಾರಂಭದಲ್ಲಿ ಡೆಮಿ ೧/೮ ಆಕಾರದಲ್ಲಿ ೬೪ ಪುಟಗಳಷ್ಟು ಇರಬಹುದೆಂದೂ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನದ ಕಾರ್ಯಸಮಿತಿಯಲ್ಲಿ ೧೯-೧೨-೧೯೮೨ರಂದು ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದ ಆಧಾರವಾಗಿ ‘ಲೋಚನ’ ಹೊರಬರುತ್ತದೆ. ‘ಲೋಚನ’ ಒಂದು ಸಾಂಸ್ಥಿಕ ಪ್ರಯತ್ನ. ಹೀಗಾಗಿ ಲಾಭ, ನಷ್ಟಗಳು ಪತ್ರಿಕೆಗಳು ಪತ್ರಿಕೆಯ ಅಳಿವು ಉಳಿವನ್ನು ನಿರ್ಧರಿಸುವುದಿಲ್ಲ. ಸಂಪುಟ ೫, ಸಂಚಿಕೆ ೧ರಲ್ಲಿ ಈಗ ೫ನೆಯ ವರ್ಷಕ್ಕೆ ಬಂದಿರುವ ಲೋಚನ ಬಹಳ ಕಷ್ಟಸ್ಥಿತಿಯಲ್ಲಿ ನಡೆಯುತ್ತಿದೆ. ಪ್ರತಿ ಸಂಚಿಕೆಗೂ ಕನಿಷ್ಠಪಕ್ಷ ನಾಲ್ಕೈದು ಸಾವಿರ ರೂಪಾಯಿಗಳಾದರೂ ಬೇಕು ಎಂಬುದಾಗಿ ತೋಡಿಕೊಳ್ಳಲಾಗಿದೆ. ‘ಲೋಚನ’ದ ಖರ್ಚು, ವೆಚ್ಚಗಳನ್ನು ಸಂಸ್ಥಯೇ ಭರಿಸುತ್ತದೆ. ‘ಲೋಚನ’ವನ್ನು ಮಾರಾಟ ಮಾಡಲಾಗುವುದಿಲ್ಲ. ಬಿ. ಎಂ.ಶ್ರೀ ಪ್ರತಿಷ್ಠಾನದ ಸದ್ಯಸರಿಗೆ ಉಚಿತವಾಗಿ ನೀಡಲಾಗುತ್ತದೆ. ‘ಲೋಚನ’ ಚಂದಾದಾರರಾಗುವವರು ವಾರ್ಷಿಕ ಅಥವಾ ಅಜೀವ ಸದಸ್ಯತ್ವ ಪಡೆಯಬಹುದು. ರಿಯಾಯಿತಿ ದರದಲ್ಲಿ ಲೋಚನವನ್ನು ವಿತರಿಸಲಾಗುತ್ತದೆ. ‘ಲೋಚನ’ದಲ್ಲಿ ಪ್ರಕಟವಾಗುವ ಲೇಖನಗಳನ್ನು ಗಮನಿಸಿದರೆ ‘ಲೋಚನ’ ಇಂದಿನ ಇತರ ಸಾಹಿತ್ಯಿಕ ಪತ್ರಿಕೆಗಳಿಗಿಂತ ಹೇಗೆ ಭಿನ್ನ ಎಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ಜೂನ್ ೧೯೮೭ರ ಸಂಚಿಕೆಯಲ್ಲಿ ೧೫೦ ಪುಟಗಳಿವೆ. ೧೪ ಲೇಖನಗಳಿವೆ. ಅವುಗಳಲ್ಲಿ ಹನುಮಂತ ಕೀರ್ತನೆ ಪದ್ಯಗಳು, ಪ್ರಾಚೀನ ಕನ್ನಡ ವ್ಯಾಕರಣಗಳಲ್ಲಿ ಕಾರಕಗಳ ನಿರೂಪಣೆ, ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನ ಸಮಸ್ಯಗಳು, ಹಸ್ತಪ್ರತಿ ವಿಜ್ಞಾನ, ಕೆಲವು ಪಾರಿಭಾಷಿಕ ಪದಗಳು, ಅರ್ಧನೇಮಿ ಪುರಾಣದ ತ್ರಿಪದಿಯ ಪಾಠ ಮತ್ತು ಅರ್ಥ, ಭಾರತೀಯ ತತ್ವಶಾಸ್ತ್ರದ ಹಿನ್ನಲೆಯಲ್ಲಿ ಹ್ಯಾಮ್ಲೆಟ್ ಲೇಖನಗಳು ಸೇರಿವೆ. ಈ ಮೇಲಿನ ಲೇಖನಗಳು ಸಮಕಾಲೀನ ಇತರೇ ಸಾಹಿತ್ಯ ಪತ್ರಿಕೆಗಳಲ್ಲಿ ಸ್ಥಾನ ಪಡೆಯುತ್ತಿದ್ದವೆಂದು ಹೇಳಲಾಗದು. ಅದಕ್ಕೇ ‘ಲೋಚನ’ವನ್ನು ನಮ್ಮ ನಡುವಿನ ವಿಶಿಷ್ಟ ಸಾಹಿತ್ಯಿಕ ಪತ್ರಿಕೆಯೆನ್ನಬಹುದು.

ಬಂಡಾಯ ಸಾಹಿತ್ಯ

ನವೋದಯ, ನವ್ಯ ದಲಿತ, ಬಂಡಾಯ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಸಾಹಿತ್ಯ ಪತ್ರಿಕೆಗಳು ನೀರೆರೆದ ಬಗೆಯನ್ನು ಚರ್ಚಿಸುವಾಗ ‘ಬಂಡಾಯ ಸಾಹಿತ್ಯ’ ಎಂಬ ಹೆಸರನ್ನೇ ಇಟ್ಟುಕೊಂಡು ದ್ವೈಮಾಸಿಕವೊಂದು ಪ್ರಕಟಗೊಂಡ ವಿಷಯ ಗಮನ ಸೆಳೆಯುತ್ತದೆ. ‘ಬಂಡಾಯ ಸಾಹಿತ್ಯ’ವೆಂಬ ದ್ವೈಮಾಸಿಕ ಸಂಕಲನ ಪ್ರಥಮವಾಗಿ ಹೊರ ಬಂದುದು ಅಕ್ಟೋಬರ್‍, ನವೆಂಬರ್‍ ೧೯೮೩ರಲ್ಲಿ. ‘ಬಂಡಾಯ ಸಾಹಿತ್ಯ’ದ ಮುಂಚೂಣಿಯ ಲೇಖಕರಾದ ಬರಗೂರು ರಾಮಚಂದ್ರಪ್ಪನವರು ಈ ಪತ್ರಿಕೆಯ ಸಂಪಾದಕರು. ಬೆಂಗಳೂರಿನ ಬಂಡಾಯ ಸಾಹಿತ್ಯ ಸಂಘಟನಾ ಕೇಂದ್ರ ಸಮಿತಿಯ ಮುಖವಾಣಿ ‘ಬಂಡಾಯ ಸಾಹಿತ್ಯ’ ಪತ್ರಿಕೆಯಾದ್ದರಿಂದ ಈ ಪತ್ರಿಕೆ ಬಂಡಾಯ ಸಾಹಿತ್ಯದ ಪ್ರಣಾಳಿಕೆಯಾಗಿತ್ತೆನ್ನಬಹುದು. ಬರಗೂರು ರಾಮಚಂದ್ರಪ್ಪನವರು ಮೊದಲ ಸಂಚಿಕೆಯಲ್ಲಿ ಪತ್ರಿಕೆಯ ಉದ್ದೇಶಗಳ ಬಗ್ಗೆ ಹೀಗೆ ನುಡಿಯುತ್ತಾರೆ. ‘ಬಂಡಾಯ ಸಾಹಿತ್ಯ’ ದ್ವೈಮಾಸಿಕದ ಮೊದಲ ಸಂಚಿಕೆ ಹೊರಬರುತ್ತಿರುವ ಈ ಸಂದರ್ಭ ಬಂಡಾಯ ಸಾಹಿತ್ಯ ಚಳುವಳಿಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು. ನಮ್ಮ ಬದುಕಿನ ಭಾಗವಾದ ಬಂಡಾಯ ಸಾಹಿತ್ಯ ಚಳವಳಿ ಗಟ್ಟಿಗೊಳ್ಳುವ ದಿಟ್ಟ ಕ್ರಮವಾಗಿ ಈ ಸಂಚಿಕೆಯ ಪ್ರಕಟಣೆ ಪ್ರಾರಂಭವಾಗುತ್ತದೆ. ಈಗಾಗಲೇ ಗೊತ್ತಿರುವಂತೆ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಮುದ್ರೆಯೊತ್ತಿ ಹೊಸ ಆಯಾಮ ನಿರ್ಮಿಸಿರುವ ಈ ಸಾಹಿತ್ಯ ಚಳುವಳಿ ಈ ಪತ್ರಿಕೆಯ ಮೂಲಕ ಹೊಸ ಸಂವಾದಕ್ಕೆ, ತನ್ಮೂಲಕ ವೈಚಾರಿಕ ನೆಲೆಗಳ ಹೊಸ ಶೋಧನೆಗೆ ಸೂಕ್ತ ವೇದಿಕೆಯೊಂದನ್ನು ಸೃಷ್ಟಿಸುತ್ತದೆ... ಈ ಹಿನ್ನೆಲೆಯಲ್ಲಿ ನಮ್ಮನಾಡಿನ ವಿಚಾರವಂತರಿಗೆ ಮುಖ್ಯವಾಗಿ ಸಮಾಜ ಬದಲಾವಣೆಗೆ ಬದ್ಧರಾದ ಬರಹಗಾರರಿಗೆ ಈ ಪತ್ರಿಕೆ ಪ್ರಮುಖ ವೇದಿಕೆಯಾಗಲಿದೆ.ಬಂಡಾಯಸಾಹಿತ್ಯ ಪತ್ರಿಕೆ ೧/೮ ಡೆಮಿ ಆಕಾರದ ೪೮ ಪುಟಗಳ ಪತ್ರಿಕೆ, ೧೯೮೩ರಲ್ಲಿ ವಾರ್ಷಿಕ ಚಂದಾ ೧೨ ರೂಪಾಯಿ. ಬಿಡಿ ಪತ್ರಿಕೆಯ ಬೆಲೆ ೨ ರೂಪಾಯಿ. ಮೊದಲ ಸಂಚಿಕೆಯಲ್ಲಿ ಪ್ರಕಟಗೊಂಡ ಪ್ರತಿಯೊಂದು ಲೇಕನಗಳು ಬಂಡಾಯದ ಹಿಂದಿನ ನವ್ಯ ಮಾರ್ಗಕ್ಕೆ ವಿರುದ್ಧವಾಗಿ ಹೊಸ ಸಾಹಿತ್ಯ ರೀತಿ, ಶೈಲಿಗಳನ್ನು ಸಮರ್ಥಿಸುವಂತಿದೆ. ಬಂಡಾಯ ಸಾಹಿತ್ಯ ಚಳುವಳಿಗೆ ಇಂಥದೊಂದು ಪತ್ರಿಕೆ ಉಪಯುಕ್ತ ಮುಖವಾಣಿಯಾಗಬಹುದಾದರೂ ವ್ಯಾವಹಾರಿಕವಾಗಿ ಪತ್ರಿಕೆಗೆಬಲವಿಲ್ಲದುದರಿಂದ ಪತ್ರಿಕೆ ಒಂದೇ ವರ್ಷ ನಡೆಯಿತು.

ಸೃಜನವೇದಿ

‘ಎ ಪೊಯಟ್ರಿ ಮ್ಯಾಗಜೀನ್ ಇನ್ ಕನ್ನಡ’ ಎಂದು ತನ್ನನ್ನು ಕರೆದುಕೊಂಡು ಮುಂಬೈನಿಂದ ೧೯೮೪ರ ಏಪ್ರಿಲ್‌ನಲ್ಲಿ ಮೊದಲ ಸಂಚಿಕೆಯಾಗಿ ಪ್ರಕಟಗೊಂಡ ಚಾತುರ್ಮಾಸಿಕ ‘ಸೃಜನವೇದಿ’ ಡಾ. ಹೇಮಂತ ಕುಲಕರ್ಣಿ, ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಅರವಿಂದನಾಡಕರ್ಣಿಯವರನ್ನು ಸೃಜನವೇದಿಯ ಸಂಪಾದಕರನ್ನಾಗಿ ಹೆಸರಿಸಲಾಗಿತ್ತು. ಡೆಮಿ ಅಷ್ಟದಳ ಆಕಾರದ ೮೦ ಪುಟಗಳ ‘ಸೃಜನವೇದಿಕೆ’ಗೆ ೧೯೮೪ರಲ್ಲಿ ಮೂರು ಸಂಚಿಗೆ ೧೫ ರೂಪಾಯಿ ವಾರ್ಷಿಕ ಚಂದಾ ನಿಗದಿಪಡಿಸಲಾಗಿತ್ತು. ‘ಸೃಜನವೇದಿ,ಯ ಮೊದಲ ಸಂಪಾದಕೀಯದಲ್ಲಿ ಸಂಪಾದಕರುಗಳು ಹೀಗೆನ್ನುತ್ತಾರೆ. ಸಂಸೃಜಕ ಚೈತನ್ಯದ ಬಹಿರಂಗದ ಒಂದು ರೂಪವೆಂದರೆ ಕಾವ್ಯ. ಅದಕ್ಕೊಂದು ಒಳ್ಳೆಯ ವೇದಿಕೆಯನ್ನು ಕಲ್ಪಿಸುವುದೇ ನಮ್ಮ ಉದ್ದೇಶ. ಎಲ್ಲೆಲ್ಲಿ ಈ ಚೈತನ್ಯ ರೂಪತಾಳಿ ನಿಲ್ಲುವುದೋ ಅದನ್ನು ಗುರುತಿಸಿ, ವಿಶ್ಲೇಷಿಸಿ ಅದನ್ನು ನಮ್ಮ ಕಾವ್ಯ ಜೀವನದಲ್ಲಿ ತಂದು ಕೊಟ್ಟು, ಕನ್ನಡ ಸಂಪನ್ನವಾಗುವಂತೆ ಮಾಡುವುದೇ ನಮ್ಮ ಪ್ರಯತ್ನವಾದೀತು. ಇದರ ಬೆಳವಣಿಗೆಗೆ ಅವಶ್ಯಕವಾದ ವಿಮರ್ಶೆಯ ತತ್ವ ಸಾಧನೆಗಳನ್ನು ಹದಗೊಳಿಸಿ ಕಾವ್ಯ ನಿರ್ಮಿತಿಗೆ ಮಾರ್ಗದರ್ಶನವಾಗುವಂತೆ ನಾವು ಪ್ರಯತ್ನಶೀಲರಾಗುವೆವು. ಕಾವ್ಯ ಹಾಗೂ ಕಾವ್ಯ ವಿಮರ್ಶೆಗೆ ಮೀಸಲಾದ ಈ ಪತ್ರಿಕೆಯನ್ನು ನಾವು ತುಂಬ ಆಶೆ ಉತ್ಸಾಹಗಳಿಂದ ಪ್ರಾರಂಭಿಸಿದ್ದೇವೆ. ಇಲ್ಲಿ ಕಾವ್ಯದ ನಾವೀನ್ಯತೆಗೆ ಪ್ರಾಧಾನ್ಯ ಕೊಡಲಾಗುವುದು ; ವಿಷಯ ವಿಧಾನ, ಉಪಮೆ, ಪ್ರತಿಮೆಗಳಲ್ಲಿ ಹೊಸತನವನ್ನು ಅಪೇಕ್ಷಿಸಲಾಗುವುದು; ಅಮೂರ್ತವಾದ ಭಾವ ವಿಚಾರಗಳಿಗಿಂತ ಹೆಚ್ಚಾಗಿ ತಮ್ಮ ಕೃತಿಯ ಎಲ್ಲ ಅಂಗಗಳಿಗೂ ಮೂರ್ತ ಸ್ವರೂಪವನ್ನು ಕೊಡಬೇಕೆಂಬುದು ಸಂಪಾದಕರ ಆಗ್ರಹ. ಘೋಷಿಸಿಕೊಂಡ ಉದ್ದೇಶಕ್ಕೆ ತಕ್ಕಂತೆ ಕಾವ್ಯಾಸ್ವಾದನೆಗೆ ‘ಸೃಜನವೇದಿ’ ವೇದಿಕೆಯಾಯಿತು ಎಂಬುದಕ್ಕೆ ಸಾಕ್ಷಿಯಾಗಿ ಮೊದಲ ಸಂಚಿಕೆಯ ವಿಷಯಾನುಕ್ರಮಣಿಕೆಯನ್ನ ಗಮನಿಸಬಹುದು.

ವಿ. ಜಿ. ಭಟ್ಟ : ಮೂರು ಮದುಗವನಗಳು

ಅರವಿಂದ ನಾಡಕರ್ಣಿ : ಕಾವ್ಯ ವಿಮರ್ಶೆಯ ಗೊಂದಲಪುರ

ವಿಜಯಾ ದಬ್ಬೆ : ನಾಲ್ಕು ಕವನಗಳು

ಡಾ. ಎಸ್. ಎನ್. ಕುಲಕರ್ಣಿ : ಕಾವ್ಯ ಹಾಗೂ ಕಾವ್ಯಾಂತರ್ಗತ ಪ್ರಚಲಿತ ಪರಿಕಲ್ಪನೆಗಳು

ಬಸವರಾಜ ವಕ್ಕುಂದ : ಹತ್ತು ಕವನಗಳು

ಡಾ. ಹೇಮಂತ ಕುಲಕರ್ಣಿ : ನವ್ಯತೆಯ ಹಿನ್ನಲೆ ಭಾಗ ೧

ಸುಮತೀಂದ್ರ ನಾಡಿಗ : ಐದು ಕವನಗಳು

ಜಿ. ಎಂ. ಕುಲಕರ್ಣಿ : ಎಂಟು ಕವಿತೆಗಳು

ಈ ಮೇಲಿನ ವಿಷಾಯಾನುಕ್ರಮಣಿಕೆಯನ್ನು ಗಮನಿಸಿದರೆ ಸೃಜನವೇದಿ ಕಾವ್ಯಕ್ಕೆ ಹಾಗೂ ಅದಕ್ಕೆ ಸಂಬಂಧಿಸಿದ ವಸ್ತುವಿನ ಪ್ರಕಣಟೆಗೇ ಮೀಸಲಾಗಿದ್ದುದು ರುಜುವಾತಾಗಿತ್ತದೆ. ಆದರೆ ಸೃಜನವೇದಿ ಎರಡು ವರ್ಷಕ್ಕೆ ಮಿಕ್ಕಿ ಮುಂದುವರೆಯಲಿಲ್ಲ.

ಅನ್ವೇಷಣೆ

ಕಳೆದ ೧೯೮೪ರಿಂದ ಕನ್ನಡ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಮುಖ ಪತ್ರಿಕೆಯಾಗಿ, ಸಾಹಿತ್ಯದ ಚರ್ಚೆಗಳಿಗೆ ವೇದಿಕೆಯಾಗಿ, ಬಂಡಾಯ ಸಾಹಿತ್ಯವು ಕನ್ನಡದಲ್ಲಿ ನಡೆದು ಬಂದ ಹಾದಿಗೆ ಹಾಗೂ ಅದರ ಸಾಧನೆ, ಸಿದ್ಧಿಗಳಿಗೆ ದಾಖಲೆಯಾಗಿ ಈಗಲೂ ಪ್ರಕಟಗೊಳ್ಳುತ್ತಿರುವ ಪತ್ರಿಕೆ ‘ಅನ್ವೇಷಣೆ’ ಸಾಹಿತ್ಯ ಸಾಂಸ್ಕೃತಿಕ ಪತ್ರಿಕೆ. ಆರ್‍. ಜಿ. ಹಳ್ಳಿ ನಾಗರಾಜ ಇದರ ಸಂಪಾದಕರು. ಸರಜೂಕಾಟ್ಕರ್‍. ನಜೀರ ಚಂದಾವರ, ಬಿ. ಎನ್. ಮಲ್ಲೇಶ್ ಹಾಗೂ ಎಚ್. ಎಲ್ ಪುಷ್ಟ ಅವರನ್ನು ಸಂಪಾದಕ ಮಂಡಳಿಯ ಸದಸ್ಯರಾಗಿ ಹೆಸರಿಸಲಾಗಿದೆ. ಇದರೆಲ್ಲರೂ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕರ್ತರೇ ಆಗಿರುವುದು ಸಹಜವಾಗಿಯೇ ಅನ್ವೇಷಣೆ ಬಂಡಾಯ ಸಾಹಿತ್ಯಕ್ಕೆ ಒತ್ತು ಕೊಟ್ಟು ಪತ್ರಿಕೆಯಾಗಿ ಬೆಳೆದುಬಂದಿದೆ. ‘ಅನ್ವೇಷಣೆ’, ಸಾಹಿತ್ಯ ಸಾಂಸ್ಕೃತಕ್ಕೆ ಚಟುವಟಿಕೆಗಳಿಗೆ ಮೀಸಲಾದ ಪತ್ರಿಕೆ ಎನ್ನುತ್ತಲೇ ನವೋತ್ತರ ಕನ್ನಡ ಸಾಹಿತ್ಯದ ಮಹತ್ತ್ವದ ದಾಖಲೆಗಳಿಗೆ. ಪ್ರಗತಿಪರ ವಿಚಾರಗಳಿಗೆ, ಸೈದ್ಧಾಂತಿಕ ಹಿನ್ನಲೆಯ ಮುಕ್ತ ವಿಚಾರಗಳಿಗೆ ಹಿರಿ, ಕಿರಿ ಬರಹಗಾರರ ತಾತ್ವಿಕ ವಿಚಾರಗಳ ಸಂವಾದಕ್ಕೆ ಎಂಬುದಾಗಿ ಸಾರಲಾಗಿದೆ. ‘ಈ ಮೂಲಕ ‘ದಲಿತ, ಬಂಡಾಯದ’ ಒಲವನ್ನು ಅನ್ವೇಷಣೆ ಸ್ಪಷ್ಟಪಡಿಸುತ್ತಿದೆ. ಅನ್ವೇಷಣೆ ಸಹಾ ಸದಾ ಆರೋಗ್ಯಪರ ವಿಚಾರಗಳ ಚರ್ಚೆಯ ವೇದಿಕೆಯಾಗಿದ್ದು ಈ ಸಂಚಿಕೆಯಲ್ಲಿ ಇಬ್ಬರು ಬಂಡಾಯ ಗೆಳೆಯರಾದ ಆರ್‍ಕೆ ಮತ್ತು ಭಂಡಾರಿ ಅವರ ಚರ್ಚಾರ್ಹ ವಿಚಾರಗಳು ಇವೆ. ವಿಚಾರಗಳ ವೈಯಕ್ತಿಕತೆಗಿಂತ ಬಂಡಾಯ ಸಾಹಿತ್ಯ ಸೃಷ್ಟಿ ಮತ್ತು ಸಂಘಟನೆಗೆ ಸಂಬಂಧಿಸಿದ ವಿಚಾರಗಳ ವಿನಿಯಮಯ ಇದಾಗಿರುವುದರಿಂದ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಸಂದರ್ಭದಲ್ಲಿದ್ದೇವೆಂದು ಭಾವಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅನ್ವೇಷಣೆ ಕುರಿತು ಮುಂಬೈ ಕನ್ನಡ ಸಂಘದ ದ್ವೈಮಾಸಿಕ ಪತ್ರಿಕೆ ‘ಸಂಬಂಧ’ದಲ್ಲಿ ಬರೆದ ಮಾತುಗಳು ಗಮನಾರ್ಹ. ‘ಅನ್ವೇಷಣೆ ಪ್ರಗತಿಪರ ವಿಚಾರಗಳಿಗೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಾದ ದ್ವೈಮಾಸಿ, ಈಗಾಗಲೇ ೪೫ ಸಂಚಿಕೆಗಳನ್ನು ಹೊರತಂದದ್ದು ಏಳನೇ ವರ್ಷದಲ್ಲಿ ಮುಂದುವರೆಯುತ್ತಿದೆ. ಕರ್ನಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿರುವ ಆರ್‍. ಜಿ. ಹಳ್ಳಿ ನಾಗರಾಜ್ ಅವರು ಸಂಪಾದಕರಾಗಿದ್ದು ಸಾಹಿತ್ಯಾಸಕ್ತರಿಗೆ ಬಹು ಉಪಯುಕ್ತ ಲೇಖನಗಳನ್ನು ಈ ಪತ್ರಿಕೆಯಲ್ಲಿ ಕೊಡುತ್ತಿದ್ದಾರೆ. ನವ್ಯೋತ್ತರ ಕನ್ನಡ ಸಾಹಿತ್ಯದ ಮಹತ್ವದ ದಾಖಲೆಗಳಿಗೆ, ಸೈದ್ದಾಂತಿಕ ಹಿನ್ನೆಲೆಯಲ್ಲಿ ಮುಕ್ತ ವಿಚಾರಗಳಿಗೆ ಹಿರಿ, ಕಿರಿ, ಬರಹಗಾರರ ತಾತ್ವಿಕ ವಿಚಾರಗಳ ಸಂವಾದಕ್ಕೆ ಅಗತ್ಯವಾಗಿ ಈ ಪತ್ರಿಕೆಯನ್ನು ಓದಲೇ ಬೇಕಾಗಿದೆ. . . ನಾವು ಹೇಳಲು ಭಯಪಡುವ ಸಂಗತಿಗಳನ್ನು ಕೆಚ್ಚೆದೆಯಿಂದ ಹೇಳುವ ಆರ್‍. ಜಿ. ಹಳ್ಳಿ ನಾಗರಾಜರ ಪ್ರಯತ್ನಕ್ಕೆ ಸಾಹಿತ್ಯಾಸಕ್ತರು ಚಂದಾದಾರರಾಗುವ ಮೂಲಕ ಬೆಂಬಲ ಕೊಡುವುದು ತೀರಾ ಅಗತ್ಯವಿದೆ. ಡೆಮಿ ೧/೮ ಆಕಾರದ ಅನ್ವೇಷಣೆಯ ವಾರ್ಷಿಕ ಚಂದಾ ೧೯೯೦ರಲ್ಲಿ ೩೫ ರೂಪಾಯಿಯಾಗಿತ್ತು. ಆಜೀವ ಚಂದಾ ೪೦೦ ರೂಗಳು ೧೯೯೮ರಲ್ಲಿ. ಕನ್ನಡ ಸಾಹಿತ್ಯಕ್ಕೆ ಅನ್ವೇಷಣೆಯ ಕೊಡುಗೆಗಳಲ್ಲಿ ಉಪಯುಕ್ತವಾದ ಪುಸ್ತಕಗಳ ಪ್ರಕಟಣೆಯೂ ಒಂದು. ಪತ್ರಿಕೆ ಎಷ್ಟೇ ಕಷ್ಟದಲ್ಲಿ ನಡೆಯುತ್ತಿದ್ದರೂ ಪತ್ರಿಕೆಯ ಹೆಸರಿನಲ್ಲಿ ಪ್ರಕಾಶನದ ಸಾಹಸಕ್ಕೂ ಇಳಿದಿರುವುದು ಈ ಕಾಲದ ಬಂಡಾಯ ಮನೋಧರ್ಮದ ಅನೇಕ ಪತ್ರಿಕೆಗಳ ಹೆಗ್ಗಳಿಕೆ. ಅಂತೆಯೇ ಅನ್ವೇಷಣೆ ಪ್ರಕಾಶನದ ಹೆಸರಿನಲ್ಲಿ ಬಂಡಾಯ ಸಾಹಿತ್ಯ ಮೀಮಾಂಸೆ, ‘ಬಂಡಾಯ’, ‘ಹತ್ತು ವರ್ಷ’, ‘ಕ್ರಿಯೆ’, ‘ಪ್ರಿತಿಕ್ರಿಯೆ’, ‘ ಸ್ತ್ರೀವಾದ ವಿಮರ್ಶೆ’, ‘ ಬೇರು ಒಣಗಿದೆ ಪ್ರೀತಿ’ ಮೊದಲು ಗೊತ್ತಿರಲಿಲ್ಲ’, ‘ ಅಮೃತಮತ ಸ್ವಗತ’ ಮುಂತಾದ ಪುಸ್ತಕಗಳು ಪ್ರಕಟಗೊಂಡಿವೆ. ಸಾಹಿತ್ಯ ಪತ್ರಿಕೆ ಮಾಡುವ ಈ ತೆರನ ಸಾಹಿತ್ಯ ಸೇವೆಯೂ ಗಮನಾರ್ಹವಾದುದು.

ಚಂದನ - ಅನಿಕೇತನ

ಚಂದನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೊಟ್ಟಮೊದಲನೆಯ ತ್ರೈಮಾಸಿಕ. ಮೊದಲನೆಯ ಸಂಚಿಕೆ ೧೯೮೪ರ ಆಗಸ್ಟ್-ಅಕ್ಟೋಬರ್‍ ಅವಧಿಯಲ್ಲಿ ಪ್ರಕಟವಾಯಿತು. ಸಾಹಿತ್ಯ ಅಕಾಡಮಿಯ ಅಧ್ಯಕ್ಷರು ಪ್ರಧಾನ ಸಂಪಾದಕರು. ‘ಇದು ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಮೀಸಲಾದ ಪತ್ರಿಕೆ. ಕರ್ನಾಟಕದ ವೈಶಿಷ್ಟ್ಯವಾದ ಚಂದನಕ್ಕೆ ದೇಶ ವಿದೇಶದಲ್ಲೆಲ್ಲ ಪುರಸ್ಕಾರ. ಚಂದನವಿದ್ದ ಕಡೆ ಪರಿಸರವೆಲ್ಲ ಘಂ ಎನ್ನುತ್ತಿರುತ್ತದೆ. ಅದರ ಸುವಾಸನೆಯಿಂದ ಮನಸ್ಸು ಮುದಗೊಳ್ಳುತ್ತದೆ. ಸಾಹಿತ್ಯವೂ ಚಂದನದ ಹಾಗೆ ಪುರಸ್ಕಾರ ಯೋಗ್ಯ. ಕನ್ನಡ ಸಾಹಿತ್ಯದ ಕಂಪು ಎಲ್ಲ ಕಡೆಗೂ ಪಸರಿಸಲಿ ಎಂಬ ಸದುದ್ದೇಶದಿಂದ ತ್ರೈಮಾಸಿಕಕ್ಕೆ ಚಂದನ ಎಂದು ಹೆಸರಿಟ್ಟಿದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ ಮೊದಲಾದ ಕ್ಷೇತ್ರಗಳಲ್ಲಿ ಉತ್ತಮವಾದುದನ್ನು ಪರಿಚಯಿಸುವ ಆಸೆ ಚಂದನದ್ದು.ಕನ್ನಡದ ಪ್ರಾಚೀನ ವಾಙ್ಮಯದ ಪರಿಚಯ. ಪ್ರಾಚೀನ ಕಾವ್ಯಗಳ ಮುಖ್ಯ ಭಾಗಗಳ ಉದ್ಧರಣೆ, ಹಿಂದಿನ ಅಪರೂಪ ಕೃತಿಗಳ ಪುನರ್‌ಮುದ್ರಣ, ಕವಿತೆ, ಕತೆ, ಪ್ರಬಂಧ ಮೊದಲಾದ ಸೃಜನಶೀಲ ಸಾಹಿತ್ಯ ಬರಹಗಳ ಹಾಗೂ ಬರಹಗಾರರ ಪರಿಚಯ ಪತ್ರಿಕೆಯ ಮುಖ್ಯ ಉದ್ದೇಶ’ ಎಂಬುದಾಗಿ ಚಂದನದ ಮೊದಲ ಸಂಚಿಕೆಯಲ್ಲಿ ನುಡಿಯಲಾಗಿದೆ.ಚಂದನದ ಸಂಚಿಕೆಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಚಟುವಟಿಕೆ ವರದಿಗಳು ಹಾಗೂ ಸಾಹಿತ್ಯ ಲೇಖನಗಳು ಇರುತ್ತಿದ್ದವು. ಆಗ ಖಾಸಿಗಿ ಪ್ರಸಾರದ ಪತ್ರಿಕೆಯಾಗಿದ್ದ ಚಂದನಕ್ಕೆ ಮಾರಾಟದ ಬೆಲೆ ನಮೂದಿಸಿರಲಿಲ್ಲ. ಚಂದನಕ್ಕೆ ಸರಿಯಾದ ವಿತರಣಾ ವ್ಯವಸ್ಥೆ ಇರಲಿಲ್ಲ. ನಾಲ್ಕು ವರ್ಷ ಹೀಗೆ ಅಕಾಡೆಮಿಯ ಪತ್ರಿಕೆಯಾಗಿ ಚಂದನ ಪ್ರಕಟಗೊಂಡಿತ್ತು. ೧೯೮೮ ರಿಂದ ಚಂದನದ ಬದಲಾಗಿ ‘ಅನಿಕೇತನ’ವನ್ನು ಕರ್ನಾಟಕ ಸಾಹಿತ್ಯ ಅಕಾಡಮಿಯು ಆರಂಭಿಸಿತು. ಅನಿಕೇತನ ಅನುವಾದ ಸಾಹಿತ್ಯಕ್ಕೆ ಮೀಸಲಾದ ತ್ರೈಮಾಸಿಕ ಪತ್ರಿಕೆ. ಅಕಾಡೆಮಿಯ ಅಧ್ಯಕ್ಷರು ‘ಅನಿಕೇತನ’ದ ಪ್ರಧಾನ ಸಂಪಾದಕರು.

ಅಂತರ

‘ಅಂತರ’ ದ್ವೈಮಾಸಿಕ ಸಂಕಲನ ಮೇ-ಜೂನ್ ೧೯೮೬ರಲ್ಲಿ ಸಂಪುಟ ೧ರ ೩ನೇ ಸಂಚಿಕೆ ಹೊರಬಂದಿದೆ. ಡೆಮಿ ೧/೮ ಆಕಾರದ ೨೮ ಪುಟಗಳ ‘ಅಂತರ’ಕ್ಕೆ ವಸಂತ ಶೆಟ್ಟಿ ಬೆಳ್ಳಾರೆಯವರು ಸಂಪಾದಕರು. ಜಿ. ಯಂ. ವಿ. ಹಾಗೂ ಹಿಮಕರ ಎ. ಕೆ. ಅವರನ್ನು ಗೌರವ ಸಂಪಾದಕರನ್ನಾಗಿ ಹೆಸರಿಸಲಾಗಿದೆ. ಬಿಡಿ ಪ್ರತಿಗೆ ೨ ರೂಪಾಯಿ, ವಾರ್ಷಿಕ ಚಂದಾ ೧೦ ರೂಪಾಯಿಗಳು ಹಾಗೂ ಆಜೀವ ಚಂದಾ ೨೫೦ ರೂಪಾಯಿ ಆಗಿತ್ತು. ‘ಅಂತರ’ದ ಉದ್ದೇಶಗಳನ್ನೂ ಧ್ಯೇಯ ಧೋರಣೆಗಳನ್ನೂ ಸಂಪಾದಕರು ಹೀಗೆ ಸ್ಪಷ್ಟ ಪಡಿಸುತ್ತಾರೆ. ಸೋತವರೊಂದಿಗೆ, ದುರ್ಬಲರೊಂದಿಗೆ, ಶೋಷಿತರೊಂದಿಗೆ ಅಂತರ ಗುರುತಿಸುವಲ್ಲಿ, ಎರಗುವ ಅಂತರ ಯಾವುದೇ ಪರಿಣಾಮಕ್ಕೆ ಅಂತರ ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಹಿಂಜರಿಯದು. ‘ಅಂತರ’ ಬದುಕಿಗಾಗಿ ಹೋರಾಡುವಲ್ಲಿ ಗಾಯಗೊಂಡವರ ಪುಟ್ಟ ಆಯುಧ ಮಾತ್ರ, ಹಾಗಾಗಿ ಅದರ ತೀಕ್ಷ್ಣತೆಯನ್ನು ಉಳಿಸಿಕೊಳ್ಳುವುದು ಪ್ರಜ್ಞಾವಂತರ ಹೊಣೆಗಾರಿಕೆಯೂ ಕೂಡ. ಅಂತರದ ಮೌಲ್ಯ ನಿರ್ಧಾರವಾಗುವುದು ಅದಕ್ಕೆ ದೊರೆಯುವ ಬರಹಗಳ ಮೌಲ್ಯದ ಕಾರಣದಿಂದಲೇ. ಅದರ ಜವಾಬ್ದಾರಿ ಕೂಡ ನಿಮ್ಮದಾಗುತ್ತದೆ. ಹಾಗಾಗಿ ಉತ್ತಮ ಬರಹಗಳನ್ನು ಪ್ರೀತಿಯಿರಿಸಿ ಕಳುಹಿಸಿಕೊಡಿ. ‘ಅಂತರ’ ಕೆಲವೇ ಸಂಚಿಕೆಗಳಲ್ಲಿ ನಿಂತುಹೋಯಿತು.

ಸಂವಾದ

‘ಸಂವಾದ’ವು ಈಚಿನ ನಮ್ಮ ಸಾಹಿತ್ಯ ಪತ್ರಿಕೆಗಳ ಪೈಕಿ ವಿಶಿಷ್ಟ ಸ್ಥಾನ ಪಡೆದಿದೆ. ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿ ಹಳ್ಳಿಯಿಂದ ೧೯೮೬ರಿಂದ ಸುಮಾರು ಒಂದು ದಶಕ ನಡೆದು ಓದುಗರ ಮೇಲೆ ಭಿನ್ನ ಛಾಪು ಮೂಡಿಸಿದ ಪತ್ರಿಕೆ ‘ಸಂವಾದ’ ಯುವಕಥೆಗಾರ ರಾಘವೇಂದ್ರ ಪಾಟೀಲರು ‘ಸಂವಾದ’ದ ಮುಂದಾಳು. ಜಿ.ಪಿ. ಬಸವರಾಜು, ಚಂದ್ರಶೇಖರ ತಾಳ್ಯ ಹಾಗೂ ಸ. ಉಷಾ ಸಂವಾದದ ಪ್‌ಯತ್ನದಲ್ಲಿ ಭಾಗಿಯಾದವರು. ಮೊದಲ ಸಂಚಿಕೆಯ ಸಂಪಾದಕೀಯದಲ್ಲಿ ಸಂಪಾದಕರು ಹೀಗೆ ನುಡಿದಿದ್ದಾರೆ. “...ಸಂವಾದವು ರುಜುವಾತು, ಶೂದ್ರ, ಸಂಕ್ರಮಣ, ಅಂಕಣ ಮುಂತಾದ ಪತ್ರಿಕೆಗಳೊಂದಿಗೆ ಪೂರಕವಾಗಿ ಕೆಲಸ ಮಾಡುವ ಆಸೆ ಹೊಂದಿದೆ. ಹಳ್ಳಿಯ ಪ್ರಜ್ಞೆ ಮತ್ತು ಸಾಂಸ್ಕೃತಿಕ ಆವರಣಕ್ಕೆ ಅಭಿವ್ಯಕ್ತಿ ಕೊಡುವ ವಿಶೇಷ ಉದ್ದೇಶ ಹೊಂದಿದೆ. ಸಂವಾದ ಸಾಹಿತ್ಯಿಕ, ಸಾಂಸ್ಕೃತಿಕ ಸಂಕಲನ ಎಂಬುದಾಗಿ ಪತ್ರಿಕೆಯಲ್ಲಿ ಘೋಷಿಸಲಾಗಿದೆ. * ನಮ್ಮಸಾಹಿತ್ಯ, ಸಾಂಸ್ಕೃತಿಕ ಬದುಕಿನ ಸ್ಪಂದನಕ್ಕೆ ವಸ್ತು ನಿಷ್ಠ ಸತ್ಯದ ಆವಿಷ್ಕಾರಕ್ಕೆ ಎಂಬುದಾಗಿ ಪತ್ರಿಕೆಯಲ್ಲಿ ಉದ್ದೇಶವನ್ನು ಸ್ಪಷ್ಟಗೊಳಿಸಲಾಗಿದೆ. ಸಂವಾದದ ೨೬, ೨೭ನೇ ಸಂಚಿಕೆಗಳನ್ನು ಒಟ್ಟಾಗಿ ನೀಡಲಾಗಿದ್ದು ತಾರೀಖು, ತಿಂಗಳು ವರ್ಷವನ್ನು ನಮೂದಿಸುವುದು ವಿಶೇಷ. ಈ ಸಂಚಿಕೆಯ ಸಂಪಾದಕರ ಟಿಪ್ಪಣಿಗಳನ್ನು ಹೊಸ ಸಂಪಾದಕಿ ಸವಿತಾ ನಾಗಭೂಷನ ಬರೆದಿದ್ದಾರೆ. ‘ಇದೀಗ ಸಂವಾದದ ೨೬, ೨೭ನೇ ಸಂಚಿಕೆ ನಿಮ್ಮೊಂದಿಗಿದೆ. ಅದಷ್ಟು ಮೌಲಿಕ ಬರಹಗಳನ್ನು ಒಳಗೊಂಡ ಸಂಚಿಕೆಯನ್ನು ನಿಗದಿತ ಸಮಯದಲ್ಲಿ ನೀಡಬೇಕೆಂಬುದು ಸಂವಾದದ ಆಶೆ. ಈ ನೇಮವನ್ನು ಕಾಯ್ದುಕೊಳ್ಳಲು ಸತತವಾದ ಪ್ರಯತ್ನ ನಡೆದೇ ಇದೆ. ಆದರೂ ನಿರೀಕ್ಷೆಯಂತೆ ತರಲಾಗುತ್ತಿಲ್ಲವಲ್ಲ ಎಂಬ ಕೊರಗು ಹಾಗೆಯೇ ಉಳಿದಿದೆ. ಈ ನಿರೀಕ್ಷೆ ಕೊರಗುಗಳ ನಡುವೆ. . . ಸಂವಾದಕ್ಕೀಗ ಐದು ವರ್ಷ. . . ಈಗ ನಾನೇ ಅದರ ಕೈಹಿಡಿದಿದ್ದೇನೆ. ಇನ್ನೂ ಸ್ವಲ್ಪ ಕಾಲ ಅದರ ಲಾಲನೆ ಪಾಲನೆ ವರ್ಷ. . . ಈಗ ನಾನೇ ಅದರ ಕೈಹಿಡಿದಿದ್ದೇನೆ. ಇನ್ನೂ ಸ್ವಲ್ಪ ಕಾಲ ಅದರ ಲಾಲನೆ ಪಾಲನೆ ನನ್ನಿಂದ . . .ಸಂವಾದದ ಚಂದಾದಾರರ ಮತ್ತು ಲೇಖಕರ ಬಳಗದ ಸಲಹೆ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀರಿಕ್ಷಿಸುತ್ತೇನೆ. ಹತ್ತು ವಸಂತಗಳನ್ನು ಕಂಡ ಸಂವಾದಕ್ಕೆ ಹೆಚ್ಚು ಪ್ರಸಾರವಿದ್ದರೂ ಸಾಹಿತ್ಯಸಕ್ತರ ನಡುವೆ ಜನಪ್ರಿಯವಾಗಿತ್ತು. ಕನ್ನಡ ಸಂಸ್ಕೃತಿಯ ಬಹುಮುಖ ಅಭಿವ್ಯಕ್ತಿಯ ಸಾಧನವಾಗಿ. ಯಾವ ಪಕ್ಷ, ಪಂಗಡಗಳ ಮುಲಾಜಿಗೂ ಒಳಗಾಗದೇ ಸಂವಾದ ಪ್ರಕಟವಾಯಿತು. ಸಂವಾದದ ಇನ್ನೊಂದು ಬಹಳ ಮುಖ್ಯ ಕೊಡುಗೆ ಸಂವಾದ ಪ್ರಕಾಶನದ ಮೂಲಕ ಹತ್ತಕ್ಕೂ ಮಿಕ್ಕು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವುದು. ಸದ್ಯಕ್ಕೆ ಸಂವಾದ ಸ್ಥಬ್ದವಾಗಿದೆ. ಸಂವಾದದಂಥ ಪತ್ರಿಕೆ ಚಲನಶೀಲತೆಯನ್ನು ಕಳೆದು ಕೊಳ್ಳುವುದು ಒಟ್ಟೂ ಕನ್ನಡದ ಸಂದರ್ಭಕ್ಕೆ ಆದ ನಷ್ಟವೆನ್ನಬಹುದು.

ಭಾಷಾಲೋಕ

ಭಾಷಾವಿಜ್ಞಾನ, ಭಾಷಾಸಾಹಿತ್ಯಗಳಿಗೆ ಸಂಬಂಧಿಸಿದ ಲೇಖನಗಳನ್ನು ಪ್ರಕಟಿಸುವ ದ್ವೈಮಾಸಿಕ ಧಾರವಾಡದಿಂದ ೧೯೮೬ರಲ್ಲಿ ದಾಖಲಾಯಿತು. ಎ. ಮುರಿಗೆಪ್ಪ ಹಾಗೂ ಎಚ್. ಎಂ. ಮಹೇಶ್ವರಯ್ಯ ಅವರುಗಳು ಸಂಪಾದಕರಾಗಿದ್ದರು.

ಕವಿಮಾರ್ಗ

ಕವಿಮಾರ್ಗ ತ್ರೈಮಾಸಿಕ ಪತ್ರಿಕೆ ೧೯೮೭ರಲ್ಲಿ ಕಲಬುರ್ಗಿಯಲ್ಲಿ ಆರಂಭಗೊಂಡಿತು. ಡಾ. ವೀರಣ್ಣ ದಂಡೆ ಹಾಗೂ ಡಾ. ಜಯಶ್ರೀ ದಂಡೆಯವರು ‘ಕವಿಮಾರ್ಗ’ದ ಸಂಪಾದಕರು. ಡಾ. ವೀರಣ್ಣ ದಂಡೆಯವರು ಈ ಹಿಂದೆ ವಿಮರ್ಶೆ ಎಂಬ ಸಾಹಿತ್ಯ ಪತ್ರಿಕೆಯನ್ನು ೧೯೮೬ರಲ್ಲಿ ಆರಂಭಿಸಿ ೧೯೮೭ರಲ್ಲಿ ಕವಿಮಾರ್ಗ ಎಂಬುದಾಗಿ ನೋಂದಾಯಿಸಲಾಯಿತು. ಡೆಮಿ ೧/೮ ಆಕಾರದ ‘ಕವಿಮಾರ್ಗ’ಕ್ಕೆ ೧೯೯೨ ರಲ್ಲಿ ವಾರ್ಷಿಕ ಚಂದಾ ೨೫ ರೂಗಳು ಹಾಗೂ ಆಜೀವ ಚಂದಾ ೩೦೦ ರೂಪಾಯಿಗಳು. ‘೧೯೮೭ರಲ್ಲಿ ಪ್ರಾರಂಭವಾದ ಕವಿಮಾರ್ಗ ಪತ್ರಿಕೆ ಈ ಸಂಚಿಕೆಯೊಂದಿಗೆ ಐದು ವರ್ಷಗಳನ್ನು ಪೂರೈಸುತ್ತದೆ. ಅನೇಕ ಆತಂಕಗಳ ಮಧ್ಯೆ ಈ ಐದು ವರ್ಷ ದಾಟಿದ ಕವಿಮಾರ್ಗ ಮುಂದೆಯೂ ಓದುಗರ ಅಸಹಕಾರ ಮುಂದುವರೆದರೆ ಅದು ಎಲ್ಲಿಯೂ ನಿಂತು ಬಿಡಬಹದು. ಎಂಬುದಾಗಿ ಐದು ವರ್ಷ ತುಂಬಿದ ಸಂದರ್ಭದಲ್ಲಿ ಸಂಪಾದಕರು ಹೇಳಿದ ಮಾತು ನಿಜವಾಗಿ ಕವಿಮಾರ್ಗಕ್ಕೆ ಹತ್ತು ವರ್ಷ ತುಂಬಿ ಮುಂದುವರಿಯಬೇಕಾಗಿದ್ದ ಸಂದರ್ಭದಲ್ಲಿ ಪತ್ರಿಕೆ ಇಲ್ಲದಂತಾಗಿದೆ.ಕವಿಮಾರ್ಗ ಹೈದರಾಬಾದ್ ಕರ್ನಾಟಕದ ಸಾಹಿತ್ಯದ ಅಭಿವೃದ್ಧಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಉದಾಹರಣಾರ್ಥ ಒಂದು ಸಂಚಿಕೆ ನೋಡಬಹುದು. ೧೯೯೨ರ ಜುಲೈ ಡಿಸಂಬರ್‌ನಲ್ಲಿ ಐದನೇ ಸಂಪುಟದ ೩-೪ ಸಂಯುಕ್ತ ಸಂಚಿಕೆಗಳು ಬಂದವು. ಅದರಲ್ಲಿ ಇದ್ದ ಮೂರು ಮುಖ್ಯ ಲೇಖನಗಳೆಂದರೆ ಹೈದ್ರಾಬಾದ್ ಕರ್ನಾಟಕದ ಅಂತರಂಗ ಕಲಕಿದ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಗನ್ನಡ ಸಾಹಿತ್ಯಕ್ಕೆ ಹೈದ್ರಾಬಾದ್ ಕರ್ನಾಟಕದ ಕವಿಗಳ ಕೊಡುಗೆ, ಹಾಗೂ ಹೈದ್ರಾಬಾದ್ ಕರ್ನಾಟಕದ ಜನಪದ ಸಾಹಿತ್ಯ ಎಂಬವುಗಳು. ಲೇಖನಗಳು, ಕಥೆ-ಕವನಗಳು. ಚುಟುಕುಗಳು ‘ಕವಿಮಾರ್ಗ’ದ ಸಾಮಾನ್ಯ ಹೂರಣ.

ಸಂಚಯ

ಎಂಭತ್ತರ ದಶಕದಲ್ಲಿ ಛಾಪು ಮೂಡಿಸಿದ ಇನ್ನೊಂದು ಸಾಹಿತ್ಯ ಪತ್ರಿಕೆ ‘ಸಂಚಯ’ ೧೯೮೭ರಲ್ಲಿ ಹೊರಬಂತು. ‘ಸಂಚಯ’ಉತ್ಸಾಹಿ ಗೆಳೆಯರ ಗುಂಪು. ಇದರಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಇದ್ದಾರೆ ತೆರೆದ ಮನಸ್ಸಿನಿಂದ ಎಲ್ಲ ಮಾದರಿಯ ಬರಹಗಳನ್ನೂ ಪೋಷಿಸುವ ಹೆಬ್ಬಯಕೆಯಿಂದ ಹುಟ್ಟಿಕೊಂಡದ್ದು ಸಂಚಯ. ಯಾವುದೇ ಇಸಂಗಳ ಹಂಗಿಲ್ಲದೇ ಯಾವುದೇ ಪಕ್ಷ ಪಂಗಡಕ್ಕೆ ಸೇರದೇ ಶುದ್ಧ ಸಾಹಿತ್ಯಿಕ ಪತ್ರಿಕೆಯನ್ನು ನಡೆಸಬೇಕೆಂಬುದು ಸಂಚಯದ ಹುಡುಗರ ಕನಸು. ‘ಸಂಚಯ’ ದ್ವೈಮಾಸಿಕ ಸಾಂಸ್ಕೃತಿಕ ಸಂಕಲನದ ಪ್ರಕಟಣೆ ಸಂಚಯ ಬಳಗದ ವತಿಯಿಂದ. ಸಂಪಾದಕರುಗಳಾಗಿ ಡಿ. ವಿ. ಪ್ರಹ್ಲಾದ್, ರವಿಕುಮಾರ ಕಾಶಿ ಹಾಗೂ ಎನ್. ಎಸ್. ಶ್ರೀಧರಮೂರ್ತಿಯವರನ್ನು ಹೆಸರಿಸಲಾಗಿದೆ. ಸಂಚಯ ಬಳಗ ಸಾಹಿತ್ಯಿಕ ಚಟುವಟಿಕೆಗಳನ್ನು ಆಗಾಗ ಹಮ್ಮಿಕೊಳ್ಳುತ್ತದೆ. ಸಾಹಿತ್ಯಕ್ಕೆ ಸಂಬಂಧಿಸಿದ ಸಂಕಿರಣಗಳನ್ನು ಆಗಾಗ ಹಮ್ಮಿಕೊಳ್ಳುತ್ತದೆ. ಹಾಗೂ ಅಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಸಂಚಯದಲ್ಲಿ ಬಳಸಿಕೊಳ್ಳುವುದೂ ಇದೆ. ಕನ್ನಡ ಸಾಹಿತ್ಯ ಅಕಾಡೆಮಿ ಹೊರತಂದಿರುವ ‘ಕನ್ನಡ ಸಾಹಿತ್ಯ ಪತ್ರಿಕೆಗಳು: ಇತಿಹಾಸ-ವರ್ತಮಾನ’ ಪುಸ್ತಕ ಸಂಚಯ ಬಳಗವು ಅಕಾಡೆಮಿಯ ನೆರವಿನಿಂದ ಹಮ್ಮಿಕೊಂಡಿದ್ದ ಇಂಥ ಒಂದು ವಿಚಾರ ಸಂಕಿರಣದ ಫಲ. ‘ಸಂಚಯ’ ಪ್ರತಿವರ್ಷ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತದೆ. ಕಥೆ, ಕವನ, ಪ್ರಬಂಧ ಹಾಗೂ ಚುಟುಕು ಸಾಹಿತ್ಯ ಪ್ರಕಾರದಲ್ಲಿ ಬಹುಮಾನ ನೀಡಲಾಗುತ್ತಿದೆ. ಸಂಚಯ ಸಾಹಿತ್ಯ ಸ್ಪರ್ಧೆಗಳು ಪ್ರತಿಷ್ಠಿತವೆನಿಸಿಕೊಂಡಿದ್ದು ‘ಸಂಚಯ’ಕ್ಕೆ ಹೆಸರು ತಂದಿದೆ. ಸಂಚಯ ಈಗಲೂ ಪ್ರಕಟಣೆಯಲ್ಲಿದೆ. ಆದರೆ ನಿಯತವಾಗಿ ಹೊರಬರುತ್ತಿಲ್ಲ.

ಗಾಂಧಿಬಜಾರ್‍

ಈ ಹಿಂದೆ ೧೯೬೬ರಲ್ಲೇ ‘ಕವಿತಾ’ ಎಂಬ ಕಾವ್ಯ ಹಾಗೂ ಕಾವ್ಯ ಸಂಬಂಧೀ ವಿಮರ್ಶೆಗಳಿಗೆ ಮೀಸಲಾದ ತ್ರೈಮಾಸಿಕ ಪತ್ರಿಕೆ ಹೊರತಂದು ೧೯೭೯ರವರೆಗೆ ನಡೆಸಿ ನಿಲ್ಲಿಸಿದ್ದ ಕೆ. ನಾ. ಬಾಲಕೃಷ್ಣ ೧೯೮೮ರಲ್ಲಿ ಮತ್ತೊಂದು ಸಾಹಿತ್ಯ ಪತ್ರಿಕೆಯ ಸಾಹಸಕ್ಕಿಳಿದರು. ಅದುವೇ ‘ಗಾಂಧೀ ಬಜಾರ್‍’ ‘ಗಾಂಧೀ ಬಜಾರ್‍’ ಬೆಂಗಳೂರಿನ ಹೃದಯ ಭಾಗದ ನಗರಪ್ರದೇಶ. ಹಳೆಯ ಬೆಂಗಳೂರಿನ ಜನನಿಬಿಡಿ ವ್ಯಾಪಾರೀ ಪ್ರದೇಶ ಗಾಂಧೀ ಬಜಾರ್‍. ಅದೇ ಪತ್ರಿಕೆಯ ಹೆಸರು. ಕನ್ನಡದ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳಲ್ಲೊಂದಾದ ಲಿಪಿ ಪ್ರಕಾಶನದ ಒಡೆಯರೂ ಆಗಿರುವ ಕೆ. ನಾ. ಬಾಲಕೃಷ್ಣ ಕನ್ನಡ ಸಾಹಿತ್ಯ ಪ್ರಿಯರ ನಡುವೆ ಬಾ. ಕಿ. ನ. ಎಂತಲೇ ಪರಿಚಿತರು. ಬಾ. ಕಿ. ನ. ರವರ ‘ಕವಿತಾ’ ಗಂಭೀರ ಸಾಹಿತ್ಯ ಪತ್ರಿಕೆಯಾದರೆ ಗಾಂಧೀ ಬಜಾರ್‍ ವಸ್ತು ಮತ್ತು ವಿನ್ಯಾಸದಲ್ಲಿ ಭಿನ್ನವಾದುದು. ಕವನಗಳು, ವ್ಯಕ್ತಿ ಪರಿಚಯಗಳು, ಕೃತಿ ಪರಿಚಯಗಳು, ಮುಂತಾದ ಸಾಮಾನ್ಯ ಸಾಹಿತ್ಯ ವಿಶೇಷಗಳ ಜೊತೆಗೆ ‘ಚುರ್‍ ಚುರ್‍ ಬತ್ತಿ’ ಎಂಬ ವಿಡಂಬನಾತ್ಮಕ ಅಂಕಣವನ್ನು ಬಾ. ಕಿ. ನ ಅವರೇ ಬರೆಯುತ್ತಿದ್ದರು. ಲೇಖನಗಲ ನಡುವೆ ಚುರುಕಾದ ಹನಿಗವನಗಳೂ ಪ್ರಕಟಗೊಳ್ಳುತ್ತಿದ್ದವು. ಇಡೀ ಪತ್ರಿಕೆ ಓದಿದಾಗ ಓದುಗರ ಮನಸ್ಸು ಹಗುರವಾಗುವಂತೆ ‘ಜೋಕ್ಸಫಾಲ್ಸ್’ ‘ಗಾಂಧೀ ಬಜಾರ್‍’ ಪ್ರಕಟಣೆಯಲ್ಲಿತ್ತು. ರಾಯಲ್ ೧/೧೬ ಆಕಾರದ, ೩೨ ಪುಟಗಳ ಸಂಚಿಕೆ ‘ಗಾಂಧೀ ಬಜಾರ್‍’ ಓದುಗರಿಗೆ ಲಘು ಓದು ನೀಡುತ್ತಿತ್ತು.

ಸಾಹಿತ್ಯ ಸಂಗಾತಿ

‘ಕನ್ನಡ ಸಾಹಿತ್ಯ ಲೋಕಕ್ಕೊಂದು ಹೊಲಬಗೆಯ ದ್ವೈಮಾಸಿಕ ಪತ್ರಿಕೆ - ಖಾಸಗೀ ಪ್ರಸಾರಕ್ಕಾಗಿ’ ಎಂದು ಆರಂಭವಾದ ಪತ್ರಿಕೆ ‘ಸಾಹಿತ್ಯ ಸಂಗಾತಿ’, ಮಂಗಳೂರು ವಿಶ್ವವಿದ್ಯಾನಿಲಯದ ಆವರಣ, ಕೊಣಾಜೆಯ ಕನ್ನಡ ವಿಭಾಗದ ರೀಡರ್‍ ಆಗಿದ್ದ ಡಾ. ಅರವಿಂದ ಮಾಲಗತ್ತಿ ಈ ಪತ್ರಿಕೆಗೆ ಸಂಪಾದಕರು. ಪ್ರಾಯೋಗಿಕ ಸಂಚಿಕೆ ಧಾರವಾಡ, ಮಂಗಳೂರು, ಬೆಂಗಳೂರು ಮೈಸೂರು ಕಡೆಗಳಲ್ಲಿ ಬಿಡುಗಡೆಯಾದದು ೧೯೮೯ರ ಮಾರ್ಚ ತಿಂಗಳಲ್ಲಿ. ‘ಪತ್ರಿಕೆಯನ್ನು ಮೊದಲು ದ್ವೈಮಾಸಿಕವಾಗಿ ಹೊರತರಬೇಕು ಎನ್ನುವ ವಿಚಾರವಿತ್ತು. (ಹಾಗೆಂದೂ ಪ್ರಕಟಿಸಲಾಗಿತ್ತು) ಆದರೆ ಕೆಲ ಅನಿವಾಯ್ ಕಾರಣಗಳಿಂದ ಕೆಲ ಕಾಲ ಪತ್ರಿಕೆಯನ್ನು ತ್ರೈಮಾಸಿಕವಾಗಿ ಮುಂದುವರಿಸಿ ನಂತರ ದ್ವೈಮಾಸಿಕವಾಗಿ ತರುವುದು ಎಂದು ನಿರ್ಣಯಿಸಲಾಗಿದೆ. ಪ್ರಾಯೋಗಿಕ ಸಂಚಿಕೆಯ ಸಂಪಾದಕೀಯದಲ್ಲಿ ಪ್ರಗತಿಪರ ಧೋರಣೆಗಳೊಂದಿಗೆ ಹೊರಬರುವ ಈ ಪತ್ರಿಕೆ ಎಲ್ಲರ ಕೈಪಿಡಿಯಾಗಬೇಕು ಎಂಬುದೇ ನಮ್ಮ ಬಯಕೆ. ಸಾಹಿತ್ಯ ಕ್ಷೇತ್ರವನ್ನು ಆದಷ್ಟು ಹಸನಾಗಿಸಬೇಕು ಎಂಬುದೇ ನಮ್ಮ ಪ್ರಯತ್ನ. ಸಾಹಿತ್ಯ ಲೋಕದಲ್ಲಿ ಯಾರೊಬ್ಬರೂ ಸಾರ್ವಭೌಮರಲ್ಲ. ಅವರು ನುಡಿದದ್ದೇ ವೇದವಾಕ್ಯವಾಗಿರಬೇಕಾಗಿಲ್ಲ. ಅದನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಅಂತಹ ಹಕ್ಕು ಮತ್ತು ಚಿಂತನ ಪ್ರವೃತ್ತಿ ಓದುಗರಲ್ಲಿ ಬೆಳಸಬೇಕು ಎಂಬುದು ನಮ್ಮ ಉದ್ದೇಶಗಳಲ್ಲಿ ಒಂದು. ನಮ್ಮ ಉದ್ದೇಶಗಳು ಇವು. . . ಎಂದು ಹನುಮಂತನ ಬಾಲ ಬೆಳಸುವುದಕ್ಕೂ ನಾವು ಹೋಗುವುದಿಲ್ಲ. ಕರ್ನಾಟಕದ ಬೇರೆ ಬೇರೆ ಭಾಗದ ಏಳು ಜನ ಸೇರಿ ಈ ಪತ್ರಿಕೆಯನ್ನು ಪ್ರಾರಂಭಿಸಿದ್ದು ಸಾಹಿತ್ಯಸಂಗತಿಯ ವಿಶೇಷ. ಅರವಿಂದ ಮಾಲಗತ್ತಿಯವರು ಸಂಪಾದಕರಾದರೆ ಸಂಪಾದಕ ಮಂಡಳಿಯಲ್ಲಿ ಬಸವರಾಜ ಸರಬದ, ಗುಲಬರ್ಗಾ, ಕೆ. ಕೇಶವಶರ್ಮ, ಶಿವಮೊಗ್ಗ, ತೇಜಸ್ವಿ ಕಟ್ಟಿಮನಿ, ಧಾರವಾಡ, ಬಸವರಾಜ ವಕ್ಕುಂದ, ಬೆಂಗಳೂರು, ಸಬಿಹಾ ಭೂಮಿಗೌಡ ಮಂಗಳೂರು ಇವರುಗಳಿದ್ದರು. ಪ್ರಾಯೋಗಿಕ ಸಂಚಿಕೆಯಲ್ಲಿ ಸಂಪಾದಕ ಮಂಡಳಿಯಲ್ಲಿ ಮೈಸೂರಿನ ಸದಾಶಿವ ಎಣ್ಣೆಹೊಳೆಯವರ ಹೆಸರೂ ಇದ್ದು ಮುಂದಿನ ಸಂಚಿಕೆ ೪ ರ ಹೊತ್ತಿಗೆ ಇರಲಿಲ್ಲ. ಮೊದಲ ಮೂರು ಸಂಚಿಕೆಗಳು - ಕ್ರೌನ್ ಕ್ವಾರ್ಟೊ ಆಕಾರದಲ್ಲಿ ಬಂದ ಸಾಹಿತ್ಯ ಸಂಗಾತಿ, ಸಂಚಿಕೆ ನಾಲ್ಕರಲ್ಲಿ ಡೆಮಿ ೧/೮ ಆಕಾರದಲ್ಲಿ ಹೊರಬಂತು. ‘ನಿಮ್ಮಲ್ಲರ ಅಭಿಪ್ರಾಯದ ಮೇರೆಗೆ ನಮ್ಮ ಮೂಲದ ವಿಚಾರ ಉದ್ದೇಶಗಳೇನೇ ಇದ್ದರೂ ಸ್ವಲ್ಪ ಮಟ್ಟಿಗೆ ಬದಿಗಿಟ್ಟು ಪತ್ರಿಕೆಯ ವಸ್ತು ವಿನ್ಯಾಸದಲ್ಲಿ ಬದಲಾವಣೆಯನ್ನು ಮಾಡಿ ನಿಮ್ಮ ಕೈಗಿಡುತ್ತಿದ್ದೇವೆ. ಸಾಹಿತ್ಯ ಸಂಗಾತಿಯ ಮುನ್ನಲೆ-ಹಿನ್ನಲೆಯಲ್ಲಿರುವವರು ದಲಿತ-ಬಂಡಾಯ ಚಳುವಳಿಯ ಮುಂಚೂಣಿಯಲ್ಲಿದ್ದವರು. ಹೀಗಾಗಿ ಸಾಹಿತ್ಯ ಸಂಗಾತಿಯ ಸಂಚಿಕೆಗಳನ್ನು ತೆರೆದು ನೋಡಿದಾಗ ಕನ್ನಡ ಸಾಹಿತ್ಯದ ಒಟ್ಟು ಸ್ಥಿತಿಗತಿಗಳ ಬಗ್ಗೆ ಆಗ ತಾನೇ ಹತ್ತು ವರ್ಷ ತುಂಬಿದ್ದ ದಲಿತ-ಬಂಡಾಯ ಚಳುವಳಿಯ ಸಾಧನೆ ಸಿದ್ಧಿಗಳ ಬಗ್ಗೆ ಹೆಚ್ಚಿನ ಚರ್ಚೆಗಳು ಕಾಣುತ್ತವೆ. ‘ಸಂಗಾತಿ ಕಾವ್ಯ’ ‘ಇಲ್ಲಿವೆ ನಿಮ್ಮ ಪತ್ರಗಳು’, ‘ಹೀಗಿವೆ ಹೊಸ ಪುಸ್ತಕಗಳು’ ಇವು ಖಾಯಂ ಅಂಕಣಗಳು. ಈ ಮೊದಲೇ ಬರೆಯಬೇಕಿತ್ತು ಎಂಬುದು ಅರವಿಂದ ಮಾಲಗತ್ತಿಯವರ ಅಂಕಣಗಳು. ಈ ಮೊದಲೇ ಬರೆಯಬೇಕಿತ್ತು ಎಂಬುದು ಅರವಿಂದ ಮಾಲಗತ್ತಿಯವರ ಅಂಕಣ. ದಶಕದ ಬಂಡಾಯ ಸಾಹಿತ್ಯದ ಮಹತ್ವದ ಕೃತಿಗಳ ಸಮೀಕ್ಷೆಯನ್ನೂ ಸಾಹಿತ್ಯ ಸಂಗಾತಿ ಕೈಗೊಂಡಿತು. ಮೂರು ವರ್ಷ ೧೨ ಸಂಚಿಕೆಗಳನ್ನು ತಂದು ‘ಸಾಹಿತ್ಯ ಸಂಗಾತಿ’ ನಿಂತಿತು. ಸಂಶೋಧನ ವ್ಯಾಸಂಗ ಕನ್ನಡದಲ್ಲಿ ಸಂಶೋಧನೆಗೆ ಮೀಸಲಾಗಿ ಬಂದ ಪತ್ರಿಕೆಗಳು ಅಪರೂಪ.

‘ಸಂಶೋಧನಾ ವ್ಯಾಸಂಗ’ವೆಂಬುದು ಸಂಶೋಧನ ಚಟುವಟಿಕೆಗಳ ದ್ವೈಮಾಸಿಕ ಪತ್ರಿಕೆ. ಡಾ.ಸಂಗಮೇಶ ಸವದತ್ತಿಮಠ ಇದರ ಸಂಪಾದಕರು. ಗುಲಬರ್ಗಾ ಈ ಪತ್ರಿಕೆಯ ಪ್ರಕಟಣಾ ಕೇಂದ್ರ. ಈ ಮೊದಲು ‘ಶೋಧನೆ’ ಎಂಬ ಹೆಸರಿನಿಂದ ಇದೇ ಪತ್ರಿಕೆ ೧೯೮೯ರಿಂದ ಪ್ರಕಟಗೊಂಡಿತು. ಆಗ ಪತ್ರಿಕೆ ನೋಂದಣಿ ಆಗಿರಲಿಲ್ಲ. ನೋಂದಣಿಗೊಂಡಾಗ ‘ಸಂಶೋಧನ ವ್ಯಾಸಂಗ’ವೆಂಬ ಹೆಸರು ದಕ್ಕಿತು. ಕನ್ನಡ ಸಂಶೋಧನಾತ್ಮಕ ಲೇಖನಗಳು ಈ ಪತ್ರಿಕೆಯ ಹೂರಣ. ಕನ್ನಡ ಸಾಹಿತ್ಯ -ಚರಿತ್ರೆ-ಒಟ್ಟೂ ಸಾಂಸ್ಕೃತಿಕ ಸಂದರ್ಭದ ಲೇಖನಗಳು ಇಲ್ಲಿ ಪ್ರಕಟಗೊಳ್ಳುತ್ತಿವೆ. ಕನ್ನಡ ಮುಖ್ಯ ಸಂಶೋಧಕರುಗಳಿಗೆ ಈ ಪತ್ರಿಕೆ ಸೂಕ್ತ ವೇದಿಕೆ.

ಒಡಲಾಳ

ದ್ವೈಮಾಸಿಕ ಸಾಹಿತ್ಯಿಕ ಪತ್ರಿಕೆ ‘ಒಡಲಾಳ’ ತುಮಕೂರು ಜಿಲ್ಲೆಯ ತಿಪಟೂರಿನಿಂದ ೧೯೯೦ರಲ್ಲಿ ಆರಂಭಗೊಂಡಿತು. ಕೃಷ್ಣಮೂರ್ತಿ ಬಿಳಿಗೆರೆಯವರು ಇದರ ಸಂಪಾದಕರು. ತಿಪಟೂರಿನ ಅಭಿವ್ಯಕ್ತಿ ಬಲಗವನ್ನು ಪ್ರಕಾಶಕರೆಂದು ಹೆಸರಿಸಲಾಗಿದೆ. ೧೯೯೨ರಲ್ಲಿ ಒಡಲಾಳದ ವಾರ್ಷಿಕ ಚಂದಾ ೨೫ ರೂಪಾಯಿಯಿತ್ತು. ಡೆಮಿ ೧/೮ ಆಕಾರದ ೩೨ ಪುಟಗಳ ಪತ್ರಿಕೆಗೆ ಶುಭ ಹಾರೈಕೆಯಾಗಿ ಹಿಂಬದಿ ಪುಟಕ್ಕೆ ಮೂರು ಚಿಕ್ಕ ಜಾಹೀರಾತುಗಳು ದೊರೆತಿವೆ. ಸಂಪಾದಕ ಮಂಡಳಿಯಲ್ಲಿ ಕೆ. ಆರ್‍. ಬಸವರಾಜ, ಕೆ. ದೊರೈರಾಜು ಹಾಗೂ ಎನ್. ನಾಗಪ್ಪ ಅವರಿದ್ದಾರೆ. ಒಡಲಾಳ ಯಾವುದೇ ಚಳುವಳಿಗೆ ಮುಖವಾಣಿಯಾಗದೇ ತನ್ನ ಪಾಡಿಗೆ ತಾನು ಸಾಹಿತ್ಯ ಸೇವೆಗೈಯುವ ಪತ್ರಿಕೆಯೆಂದು ಅದರ ಸಂಚಿಕೆಗಳನ್ನು ನೋಡುವಾಗ ಅರ್ಥವಾಗುತ್ತದೆ. ಒಡಳಾಳವೀಗ ನಿಯತವಾಗಿ ಬರುತ್ತಿಲ್ಲ. ಇದೊಂದು ಖಾಸಗೀ ಪ್ರಸಾರದ ಪತ್ರಿಕೆ

ಅರಿವು-ಬರಹ

‘ಅರಿವು-ಬರಹ’ವೆಂಬುದು ೧೯೯೨ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಸ್ಥಾನ ಕೊಣಾಜೆಯಿಂದ ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರುಗಳ ಗುಂಪೊಂದು ಹುಟ್ಟು ಹಾಕಿದ ಪತ್ರಿಕೆ. ‘ಅರಿವು-ಬರಹ’ದ ಸಂಚಿಕೆಗಳನ್ನು ಒಂದು ಎರಡು ಎಂದು ಮುದ್ರಿಸಲಾಯಿತೇ ವಿನಾ ನಿಗದಿತ ನಿಯತಕಾಲಿಕತೆಯನ್ನು ಘೋಷಿಸಿಕೊಂಡಿರಲಿಲ್ಲ. ‘ಅರಿವು-ಬರಹ-೧ರ ಒಳಹೊದಿಕೆಯಲ್ಲ ‘ಮಂಗೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ ಪತ್ರಿಕೆ’ ಎಂಬುದಾಗಿ ಘೋಷಿಸಿ ಎರಡನೇ ಸಂಚಿಕೆಯಲ್ಲಿ ಅದಕ್ಕಾತಿ ವಿಷಾದ ಸೂಚಿಸಿ ಈ ಪತ್ರಿಕೆಗೂ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಸಂಬಂಧವಿಲ್ಲ ಎಂಬ ಘೋಷಣೆ ಹೊರಡಿಸಲಾಯಿತು. ‘ಅರಿವು-ಬರಹ’ವನ್ನು ಶುದ್ಧ ಸಾಹಿತ್ಯಿಕ ಪತ್ರಿಕೆಯೆಂದು ಗುರುತಿಸುವುದು ಕಷ್ಟ. ಇದು ಮುಖ್ಯವಾಗಿ ವೈಚಾರಿಕ ಸಾಹಿತ್ಯ ಪತ್ರಿಕೆ. ಇಲ್ಲಿಯ ಭಾಷೆ ಜನರಿಗೆ ಅರ್ಥವಾಗುವಂತಿರಲಿಲ್ಲ. ಅರಿವು ಬರಹ ಕನ್ನಡದ ಪ್ರಚಲಿತ ಭಾಷೆಗೆ ಅನ್ಯವಾಗದೆ ಎಂಬುದುದಾಗಿ ಓದುಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಅರಿವು ಬರಹ ಮೂರು ಸಂಚಿಕೆಗಳ ನಂತರ ಬರಲಿಲ್ಲ. ‘ಅರಿವು-ಬರಹ’ಕ್ಕೆ ‘ಎಂಟು ಮಂದಿ’ ಸಂಪಾದಕರುಗಳ ಹೆಸರಿದ್ದುದು. ಚ. ಏಕಾಕ್ಷರ ಪತ್ರಿಕೆ ಕಲಬುರ್ಗಿ ಜಿಲ್ಲೆಯ ಸೇಡಂನಿಂದ ೧೯೯೨ರ ಅಕ್ಟೋಬರ್‌ನಲ್ಲಿ ಮೊದಲ ಸಂಚಿಕೆ ಹೊರಬಂದ ‘ಚ ಏಕಾಕ್ಷರ ತ್ರೈಮಾಸಿಕ ಸಾಹಿತ್ಯ’ ಕನ್ನಡದಲ್ಲಿ ಹೆಸರಿನಿಂದಾಗಿಯೇ ಎಲ್ಲರ ಗಮನ ಸೆಳೆದ ವಿಶಿಷ್ಟ ಸಾಹಿತ್ಯ ಪತ್ರಿಕೆ. ಇದಕ್ಕೆ ಗೌರವ ಸಂಪಾದಕರು ಕೆರಳ್ಳಿ ಗುರುನಾಥ ರೆಡ್ಡಿ, ಸಂಪಾದಕರು ಕೆರಳ್ಳಿ ರಮೇಶರೆಡ್ಡಿ ಹಾಗೂ ಸಹ ಸಂಪಾದಕರು ಗುರುಶಾಂತಯ್ಯ ಮಠಪತಿಯವರು. ಡೆಮಿ ೧/೮ ಆಕಾರದ ೨೪ ಪುಟಗಳ ಚ. ಏಕಾಕ್ಷರ ಪತ್ರಿಕೆಯ ವಾರ್ಷಿಕ ಚಂದ ೧೯೯೨ರಲ್ಲಿ ೨೫ ರೂಪಾಯಿಗಳಾಗಿದ್ದವು. ಈ ಪತ್ರಿಕೆಗೆ ‘ಚ. . . ’ ಎಂದು ಹೆಸರಿಟ್ಟಿದ್ದೇಕೆಂಬುದಕ್ಕೆ ಸಂಪಾದಕರು ವಿವರಣೆ ನೀಡಿದ್ದು ಹೀಗೆ :

‘ಅನೇಕ ಗೆಳೆಯರು ‘ಚ’ ಏಕಾಕ್ಷರವೆಂದರೇನು ? ಎಂದು ಪ್ರಶ್ನಿಸಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ಪ್ರಸ್ತಾಪಿಸಬೇಕಾಗಿದೆ. ಅನ್ಯ ಭಾಷೆಗಳಾದ ಮರಾಠಿ, ತಮಿಳಿನಲ್ಲಿ ಇಂಥ ಪ್ರಯತ್ನಗಳು ಪ್ರಯೋಗಗಳು ನಡಿದಿವೆ. ಅವುಗಳ ಮಾದರಿಯಾಗಿ ಪತ್ರಿಕೆಯ ಹೆಸರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ‘ಚ’ ಎಂದರೆ ಸಂಸ್ಕೃತದಲ್ಲಿ "ಮತ್ತು" ಎಂದರ್ಥ. ‘ಚ’ ಎಂದರೆ ಚಕಾರ, ಚಕಾರವೆತ್ತಲಿಲ್ಲವೆಂದರೆ ಒಂದು ಮಾತಾಡಲಿಲ್ಲ. ಪ್ರತಿಕ್ರಿಯಿಸಲಿಲ್ಲ ಎಂದಾಗುತ್ತದೆ. ಅದಕ್ಕೆ ಗತಿ ಪ್ರಗತಿ ಎಂದು ನಾನಾರ್ಥಗಳು ಹುಟ್ಟಿಕೊಳ್ಳುತ್ತವೆ. ಮೂರು ವರ್ಷ ಖಾಸಗಿಯಾಗಿ ಸೀಮಿತ ಪ್ರಸಾರದಲ್ಲಿದ್ದ ಈ ಪತ್ರಿಕೆ ಇದೇ ವಿಶಿಷ್ಟ ಹಿಸರಲ್ಲಿ ನೋಂದಾವಣೆಗೊಂಡು ಪ್ರಕಟಣೆಯನ್ನಾರಂಭಿಸಿತು. ಕೆಲವು ಕಾಲ ನಿಯತವಾಗಿ ನಡೆಯಿತು. ಕವನ, ಕಥೆ, ಪುಸ್ತಕ ವಿಮರ್ಶೆಗಳಿಗೆ ಹೆಚ್ಚಿನ ಪುಟಗಳನ್ನು ಮೀಸಲಿಡಲಗುತ್ತಿತ್ತು. ಸದ್ಯಕ್ಕೆ ಪತ್ರಿಕೆ ನಿಂತಿದೆ.

ಸಾಹಿತ್ಯ ಸಂಘರ್ಷ

‘ಸಾಹಿತ್ಯ ಸಂಘರ್ಷ’ ಎಂಬ ಸಾಹಿತ್ಯಿಕ ತ್ರೈಮಾಸಿಕ ಪತ್ರಿಕೆ ೧೯೯೨ರಲ್ಲಿ ಪ್ರಕಟವಾಯಿತು. ಎಸ್. ಶಶಿಕಾಂತ ಇದರ ಸಂಪಾದಕರು.

ಉದಯೋನ್ಮುಖ ಬರಹಗಾರರ ಏಳಿಗೆಗಾಗಿ

ಪ್ರಗತಿಪರ ಸಾಹಿತ್ಯಿಕ ವಿಚಾರಧಾರೆಗಾಗಿ

ಕ್ರಾಂತಿಕಾರಿ ವೈಚಾರಿಕ ಲೇಖನಗಳಿಗಾಗಿ

ಉತ್ತಮ ಕಥೆ, ಕಾವ್ಯ, ಪ್ರಬಂಧ ಹಾಗೂ ವಿಮರ್ಶೆಗಾಗಿ

ಉದಯೋನ್ಮುಖರಿಗಾಗಿಯೇ ಮೀಸಲಾದ ಪತ್ರಿಕೆ

ಎಂಬುದಾಗಿ ಸಂಪಾದಕರು ಸಾಹಿತ್ಯ ಸಂಘರ್ಷವನ್ನು ಕರೆದಿದ್ದಾರೆ. ಕ್ರೌನ್ ಆಕಾರದ ೪೮ ಪುಟಗಳ ಸಾಹಿತ್ಯ ಸಂಘರ್ಷದ ಬಿಡಿ ಪ್ರತಿ ಬೆಲೆ ೧೯೯೨ರಲ್ಲಿ ೫ ರೂಪಾಯಿ. ವಾರ್ಷಿಕ ೨೦ ರೂಪಾಯಿ ಹಾಗೂ ಆಜೀವ ಚಂದಾ ೫೦೦ ರೂಪಾಯಿ ಆಗಿತ್ತು. ಕೆಲವೇ ಪ್ರತಿಗಳಲ್ಲಿ ‘ಸಾಹಿತ್ಯ ಸಂಘರ್ಷ’ ಕೊನೆಗೊಂಡಿತು.

ಹೊಸದಿಕ್ಕು

ಸಾಹಿತ್ಯಿಕ - ಸಾಂಸ್ಕೃತಿಕ ದ್ವೈಮಾಸಿಕ ಸಂಕಲನ ‘ಹೊಸದಿಕ್ಕು’ ಗುಲ್ಬರ್ಗಾ ಜಿಲ್ಲೆಯ ಸಣ್ಣ ಊರು ಶಹಾಪೂರದಿಂದ ೧೯೯೨ರಲ್ಲಿ ಹೊರಬಂದ ಖಾಸಗಿ ಪ್ರಸಾರದ ಪತ್ರಿಕೆ. ತಿಮ್ಮಯ್ಯ ಪುರ್‍ಲೆಯವರು ಇದರ ಸಂಪಾದಕರು. ಚಂದ್ರಕಾಂತ ಕರದಳ್ಳಿ, ಸಿದ್ಧರಾಮ ಹೊನ್ಕಲ್ ಹಾಗೂ ಸೂಗಯ್ಯ ಹಿರೇಮಠ ಅವರನ್ನು ಸಲಹೆಗಾರರನ್ನಾಗಿ ಹೆಸರಿಸಲಾಗಿದೆ. ‘ಬಹುದಿನಗಳ ಹಿಂದಿನಿಂದಲೂ ನಮ್ಮ ಹೈದ್ರಾಬಾದ್ ಕರ್ನಾಟಕದ ನೆಲದಿಂದಲೇ ಸಾಹಿತ್ಯಿಕ ಪತ್ರಿಕೆಯೊಂದನ್ನು ಹೊರತರುವ ಹಂಬಲ ನಮಗಿತ್ತು. ಇದೀಗ ನಮ್ಮ ಕನಸುಗಳಿಗೆ ರೂಪುಕೊಡಲು, ನಿಮ್ಮ ಭಾವನೆಗಳನ್ನು ಅರಳಿಸಲು ‘ಹೊಸದಿಕ್ಕು’ ಎನ್ನುವ ಸಾಹಿತ್ಯಿಕ ಪತ್ರಿಕೆಯೊಂದನ್ನು ಖಾಸಗಿ ಪ್ರಸಾರಕ್ಕಾಗಿ ಆರಂಭಿಸುತ್ತಿದ್ದೇವೆ ಎಂಬುದು ಸಂಪಾದಕರ ನಿವೇದನ ನಂತರ ಎರಡನೇ ವರ್ಷದ ಆರಂಭದಲ್ಲಿ ಸಂಪಾದಕರು ಹೇಳುವ ಮಾತು ಗಮನಾರ್ಹ. ‘ನಾವು ಬಲ್ಲ ಎಲ್ಲರಿಗೂ ಪತ್ರಿಕೆ ಕಳಿಸುತ್ತಾ ಬಂದೆವು. ಯಾರನ್ನೂ ಬಾಯಿಬಿಟ್ಟು ಚಂದಾ ಹಣ ಕೊಡಿ ಎಂದು ಕೇಳಲಿಲ್ಲ. ಕೊಟ್ಟವರಿಂದ ಗೌರವವಾಗಿ ಸ್ವೀಕರಿಸಿ ಪತ್ರಿಕೆಯನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದ್ದೇವೆ. ಆರಂಭದ ವರ್ಷವಾದ್ದರಿಂದ ಎಲ್ಲರಿಗೂ ಪರಿಚಯವಾಗಲಿ ಎಂದು ನಾವಾಗಿ ನಮಗೆ ಪರಿಚಯವಿದ್ದವರಿಗಲ್ಲಾ ಪತ್ರಿಕೆ ಕಳಿಸಿದೆವು. ಅದರಲ್ಲಿ ಸಾಕಷ್ಟು ಜನ ಹಣ ಕಳಿಸಿದರು. ಕೆಲವರು ಕಳಿಸಲಿಲ್ಲ. ಪತ್ರಿಕೆ ಬರುತ್ತಿದೆ ಎಂದಾದರೂ ಬರೆಯಲಿಲ್ಲ.

ಕನ್ನಡ ಸಾಹಿತ್ಯ ಲೋಕ

‘ಕನ್ನಡ ಸಾಹಿತ್ಯ ಸಂವರ್ಧನೆಗೆ ಮೀಸಲಾದ ಮಾಸಪತ್ರಿಕೆ’ ಎಂದು ಘೊಷಿಸಿಕೊಂಡು ‘ಕನ್ನಡ ಸಾಹಿತ್ಯ ಲೋಕ’ದ ಪ್ರಥಮ ಸಂಚಿಕೆ. ಡಿಸೆಂಬರ್‍ ೧೯೯೩ರಲ್ಲಿ ಬಿಡುಗಡೆ ಹೊಂದಿತು. ಒಂದೇ ಸಂಚಿಕೆಗೆ ಪತ್ರಿಕೆ ನಿಂತು ಹೋದುದು ಈ ಪತ್ರಿಕೆಯ ವಿಶೇಷ. ಜಿ. ವಿ. ಸತ್ಯನಾರಾಯಣರವರು ಈ ಪತ್ರಿಕೆಯ ಸಂಪಾದಕರು. " . . . ನಾನಾ ದೃಷ್ಟಿಕೋನಗಳಿಂದ, ವಿವಿಧ ಅಭಿರುಚಿಯ ಓದುಗರಿಗೆ ನಾನಾ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡಿರುವವರಿಗೆ, ಕನ್ನಡ ಪುಸ್ತಕ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳ ಪರಿಚಯ - ಪ್ರಕಟವಾಗುವ ಗ್ರಂಥಸಾಹಿತ್ಯ ಸಮಗ್ರ - ನೋಟಗಳು - ಪರಿಚಯ - ವಿಮರ್ಶೆ, ಕನ್ನಡ ಲೇಖಕ, ಪ್ರಕಾಶಕ, ಓದುಗರ ಸಮಸ್ಯೆಗಳ ವಿಚಾರಧಾರೆಗಳಿಗೆ ಮುಕ್ತವೇದಿಕೆ ಒದಗಿಸುವುದು - ಇವೇ ಮೊದಲಾದ ಕ್ಷೇತ್ರಗಳಲ್ಲಿ ಅಳಿಲು ಸೇವೆ ಸಲ್ಲಿಸುವ ಆಶಯದಿಂದ ‘ಕನ್ನಡ ಸಾಹಿತ್ಯ ಲೋಕ’ವನ್ನು ಪ್ರಕಟಿಸುವ ಸಾಹಸ ಮಾಡುತ್ತಿದ್ದೇವೆ, ಎಂಬುದಾಗಿ ಸಂಪಾದಕರು ಮೊದಲ ಸಂಪಾದಕೀಯದಲ್ಲಿ ನುಡಿದಿದ್ದರು. ಆದರೆ ‘ಕನ್ನಡ ಸಾಹಿತ್ಯಲೋಕ’ದ ಸಾಹಿತ್ಯ ಸೇವೆ ನಿಜಕ್ಕೂ ಅಳಿಲು ಸೇವೆಯೇ ಆಗಿ ಒಂದು ಸಂಚಿಕೆಗೆ ನಿಂತು ಹೋದುದು ಈಗ ಇತಿಹಾಸ.

ಪ್ರಜ್ಞೆ

ಜನವರಿ ೨೪, ೧೯೯೩ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರಿಂದ ‘ಪ್ರಜ್ಞೆ’ ಪತ್ರಿಕೆ ಬಿಡುಗಡೆಯಾಯಿತು. ಡಾ. ರಹಮತ್ ತರೀಕೆರೆ ಅತಿಥಿಗಳಾಗಿದ್ದರು. ‘ಪ್ರಜ್ಞೆ’ ಎಂಬುದು ಕನ್ನಡ ಸಾಹಿತ್ಯ ವಿಚಾರಗಳ ಮಾಸಿಕ. ಆರ್‍. ರಾಜಪ್ಪ ದಳವಾಯಿ, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವಾಗ ಈ ಖಾಸಗೀ ಪ್ರಸಾರದ ಮಾಸಪತ್ರಿಕೆಯನ್ನು ಹೊರಡಿಸಿದರು. ೧೯೯೩ರಲ್ಲಿ ಪ್ರಜ್ಞೆಯ ವಾರ್ಷಿಕ ಚಂದಾ ೫೦ ರೂಪಾಯಿ ಹಾಗೂ ಜೀವನ ಪೂರ್ತಿ ಚಂದಾ ೫೦೦ ರೂಪಾಯಿಗಳಾಗಿತ್ತು. ಸಂಪಾದಕರು ‘ನನ್ನ ಪುಟ’ವೆಂಬ ಅಂಕಣದಲ್ಲಿ ಮೊದಲ ಸಂಚಿಕೆಯಲ್ಲಿ ಬರೆದ ಮಾತುಗಳು ನಮ್ಮ ಸಾಹಿತ್ಯ ಪತ್ರಿಕೆಗಳ ಸ್ಥಿತಿ-ಗತಿ-ವೃತ್ತಿಪರತೆಗೆ ಭಾಷ್ಯ ಬರೆಯುವಂತಿದೆ. ‘ಕೇವಲ ೨ ಜನದ ಚಂದಾವನ್ನು ಖುದ್ದು ಪಡೆದಿರುವೆ. ಸುಮಾರು ೨೦೦ ಜನದಷ್ಟು ಕೊಡುವ ನೀರಿಕ್ಷೆಯಿಂದ ಈ ಪತ್ರಿಕೆಯನ್ನು ಆರಂಭಿಸಿದ್ದೇನೆ. ‘ಪತ್ರಿಕೆ ನಡೆಸೋದು ತುಂಬಾ ಕಷ್ಟರೀ ಆ ಕೆಲಸಕ್ಕೆ ಯಾಕೆ ಸಿಕ್ಕಿಕೊಳ್ತಿರಾ? ಎಂದು ನೂರಾರು ಜನ ಹೇಳಿದ್ದಾರೆ. ಹೀಗೆ ಹೇಳಿದವರು ಚಂದಾ ಕೊಟ್ಟರೆ ಸಾಕು ನಾನು ಆರಾಮವಾಗಿ ಪತ್ರಿಕೆ ನಡೆಸಬಲ್ಲಲಲಲೆ. ಇದೆಲ್ಲ ವ್ಯವಹಾರ ಬಿಡಿ. ಕನ್ನಡದ ಓದುಗರು ಯಾರು ಬಡವರಲ್ಲ ಇದು ಓದುವ, ಬರೆಯುವ, ಚಂದಾಕೊಟ್ಟು ಪ್ರೋತ್ಸಾಹಿಸುವ ಎಲ್ಲಾ ವಿಚಾರಗಳಲ್ಲೂ ಸಹ. ಚಂದಾವನ್ನು ಹೊರತು ಪಡಿಸಿದರೂ ಓದುವ, ಬರೆಯುವ ತೊಡುಗುವಿಕೆಗಾದರೂ ಮೆಚ್ಚಲೇಬೇಕು. ಹಲವಾರು ಸ್ನೇಹಿತರ ಒತ್ತಾಯದಿಂದ ಪತ್ರಿಕೆಯನ್ನು ಆರಂಭಿಸಿದ್ದೇನೆ. ಇದೊಂದು ಶಾಶ್ವತವಾದ ವೇದಿಕೆಯಾಗಬೇಕು. ನಾನು ಸತ್ತರೂ ಬೇರೆಯವರು ನಡೆಸಿಕೊಂಡು ಹೋಗುವಂತಿರಬೇಕೆಂಬ ಹಲವಾರು ಕನಸುಗಳನ್ನು ಇದರ ಬಗ್ಗೆ ಇಟ್ಟುಕೊಂಡಿರುವೆ. ಈ ಕನಸು ಸಿನಿಮಾ ಆಗದಿದರಷ್ಟೇ ಸಾಕು. ಆದರೆ ಸಂಪಾದಕರ ನೀರಿಕ್ಷೆಗಲ್ಲವು ಹುಸಿಯಾಗಿ ‘ಪ್ರಜ್ಞೆ’ ಕೆಲವೇ ಸಂಚಿಕೆಗಳ ನಂತರ ನಿಂತುಹೋಯಿತು. ನಂತರ ರಾಜಪ್ಪ ದಳವಾಯಿಯವರು ‘ಭೂಮಿ’ ಎಂಬ ಇನ್ನೊಂದು ಪತ್ರಿಕೆಯನ್ನು ಆರಂಭಿಸಿದರು. ಆದರೆ ‘ಭೂಮಿ’ ಪ್ರಕಟಗೊಂಡುದು ಒಂದೇ ಸಂಚಿಕೆ. ನಿಯತಕಾಲಿಕವಾಗಿ ಪ್ರಕಟಗೊಳ್ಳಲೇ ಇಲ್ಲ.

ಹೊಸಪುಸ್ತಕಗಳು

‘ಹೊಸ ಪುಸ್ತಕ’ಗಳು ಎಂಬುದೇ ಪುಸ್ತಕೋದ್ಯಮಕ್ಕೆ ಮೀಸಲಾಗಿ ೧೯೯೩ರಲ್ಲಿ ಹೊರ ಬಂದ ಮಾಸಪತ್ರಿಕೆ ಕೆಲವೇ ಸಂಚಿಕೆಗಳು ಬಂದು ನಿಂತುಹೊಯಿತು. ಈ ಪತ್ರಿಕೆಗೆ ವಾಣಿ. ಎ. ಕಾಂತನವರ ಎಂಬುವರು ಪ್ರಕಾಶಿಕ ಹಾಗೂ ಸಂಪಾದಕಿಯಾದರೆ ಅರುಣ ವಿ. ಕಾಂತನವರ ಅವರು ಗೌರವ ಸಂಪಾದಕರು, ಪತ್ರಿಕೆ ನೋಂದಾವಣಿಗೊಂಡಿತ್ತು. ೧೯೯೩ರಲ್ಲಿ ಬಿಡಿ ಪತ್ರಿಕೆಗೆ ರೂ ೧-೫೦ ಹಾಗೂ ವಾರ್ಷಿಕ ಚಂದಾ ೧೮ ರುಪಾಯಿ ಹಾಗೂ ಆಜೀವ ಸದಸ್ಯತ್ವ ಎಂಬುದಾಗಿ ೨೫೦ ರೂಗಳನ್ನು ಸ್ವಿಕರಿಸಲಾಗುತ್ತಿತ್ತು. ರಾಯಚೂರಿನಿಂದ ಪ್ರಕಟಗೊಂಡ ಈ ಪತ್ರಿಕೆ ಕ್ರೌನ್ ಆಕಾರದಲ್ಲಿದ್ದು ೧೨ ಪುಟಗಳಿವೆ. ‘ಕೆಲವೇ ಕೆಲವರು ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ೧೯೯೦ ರ ಅವಲೋಕನ (ತ್ರೈಮಾಸಿಕಕ್ಕಾಗಿ) ಚಂದಾ ರೂ. ೮ ಕೊಟ್ಟು ಒಂದೇ ಸಂಚಿಕೆ ಪಡೆದಿದ್ದರು. ಆಗ ಅವಲೋಕನದ ಇನ್ನುಳಿದ ಮೂರು ಸಂಚಿಕೆಗಳು ಪ್ರಕಟವಾಗಲಿಲ್ಲ. ಅದಕ್ಕೆ ಬದಲಾಗಿ ಈಗ ಪ್ರಕಟವಾಗುತ್ತಿರುವ ‘ಹೊಸ ಪುಸ್ತಕಗಳು’ ೩ ಸಂಚಿಕೆಗಳನ್ನು ಕಳಿಸಿ ಋಣಮುಕ್ತರಾಗಿದ್ದೇವೆ. ಅವರೂ ಇನ್ನೂ ಮುಂದಿನ ಸಂಚಿಕೆಗಳಿಗಾಗಿ ರೂ ೧೦-೦೦ ಕಳಿಸಿ ಉಪಕರಿಸಬೇಕೆಂದು ವಿಜ್ಞಾಪಿಸುತ್ತೇವೆ.

ಪುಸ್ತಕ ಮಾಹಿತಿ

‘ಪುಸ್ತಕೋದ್ಯಮದ ಸಮೃದ್ಧ ಸಂಚಿಕೆ’ ಪುಸ್ತಕ ಮಾಹಿತಿ’ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುವ ಮಾಸಿಕ. ಕನ್ನಡ ವಿಶ್ವವಿದ್ಯಾನಿಲಯದ ಲಾಂಛನವನ್ನು ಹೊತ್ತು ಪ್ರಕಟಗೊಳ್ಳುವ ಅನೇಕ ಮಾಸಿಕಗಳಲ್ಲಿ ಒಂದಾದ ‘ಪುಸ್ತಕ ಮಾಹಿತಿ’ಗೆ ಕನ್ನಡ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರು . ವಿಶ್ವವಿದ್ಯಾನಿಲಯದ ನಿಯಮಾನುಸಾರ ಸಂಪಾದಕರು ಬದಲಾಗುತ್ತಿರುತ್ತಾರೆ. ಕ್ರೌನ್ ೧/೪ ಆಕಾರದ ೧೬ ಪುಟಗಳ ಪುಸ್ತಕ ಮಾಹಿತಿ ಸರಳಸುಂದರವಾಗಿ ಅಚ್ಚುಕಟ್ಟಾಗಿ ಪ್ರಕಟಗೊಳ್ಳುತ್ತದೆ. ೧೯೯೩ರ ಆದಿಯಲ್ಲಿ ಪ್ರಕಟನೆಯನ್ನಾರಂಭಿಸಿದ ‘ಪುಸ್ತಕ ಮಾಹಿತಿ’ಯು ಕನ್ನಡ ಪುಸ್ತಕಗಳ ಹಾಗೂ ಪುಸ್ತಕ ಲೋಕದ ಸುದ್ದಿಗಳ ದಾಖಲೆಯಾಗಿ ಕೆಲಸ ಮಾಡುತ್ತಿದೆ. ‘ಪುಸ್ತಕ ಮಾಹಿತಿಯು ಕನ್ನಡ ಪುಸ್ತಕಗಳ ಸಮೃದ್ಧ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಹುಟ್ಟಿಕೊಂಡಿದೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ‘ಗ್ರಂಥಲೋಕ’ ಪತ್ರಿಕೆಯು ಹಿಂದೆ ಈ ಕೆಲಸವನ್ನು ನಿರ್ಮಹಿಸುತ್ತಿತ್ತು. ಅದು ಇದ್ದಕ್ಕಿದ್ದಂತೆ ನಿಂತುಹೋದಾಗ ಕನ್ನಡ ಪುಸ್ತಕ ಲೋಕದಲ್ಲಿ ಅಂತಹದ್ದೊಂದು ಪತ್ರಿಕೆ ಅಗತ್ಯವನ್ನು ಅನೇಕರು ಮನಗಂಡಿದ್ದರು. ಆದರೂ ಅದನ್ನು ಉಳಿಸಲಾಗಲಿಲ್ಲ. ಕನ್ನಡ ವಿಶ್ವವಿದ್ಯಾನಿಲಯ ಆರಂಭವಾದಾಗ ಅಂತಹ ಪತ್ರಿಕೆಯೊಂದರ ಕೆಲಸವನ್ನು ತುಂಬಿಕೊಡುವ ಪತ್ರಿಕೆಯನ್ನು ಪ್ರಕಟಿಸಬೇಕೆಂದು ಅನೇಕರು ಸೂಚಿಸಿದರು. ಕೊನೆಗೆ ಕನ್ನಡಿಗರ ನೀರೀಕ್ಷೆಗೆ ಅನುಗುಣವಾಗಿ ಕನ್ನಡ ವಿಶ್ವವಿದ್ಯಾಲಯ ‘ಪರಿವಿಡಿ’ ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಆರಂಭಿಸಿತು. ಬಳಿಕ ಅದು ‘ಪುಸ್ತಕ ಮಾಹಿತಿ’ ಎಂಬ ಹೆಸರಿನಲ್ಲಿ ಮುಂದುವರೆಯಿತು’ ಎಂಬುದಾಗಿ ‘ಪುಸ್ತಕ ಮಾಹಿತಿ’ಯ ಹುಟ್ಟಿನ ಹಿನ್ನೆಲೆಯನ್ನು ವಿವರಿಸಲಾಗಿದೆ. ಪುಸ್ತಕ ಮಾಹಿತಿಯ ಬಿಡಿ ಪತ್ರಿಕೆಗೆ ರೂ ೨..೫೦ ಹಾಗೂ ವಾರ್ಷಿಕ ಚಂದಾ ರೂ ೩೦ (೧೯೯೮) ಹೆಚ್ಚು ಜನರನ್ನು ತಲುಪಬೇಕು ಎಂಬ ದೃಷ್ಟಿಯಿಂದ ವಿಶ್ವವಿದ್ಯಾನಿಲಯವು ಸಬ್ಸಿಡಿ ನೀಡಿ ಪ್ರಕಟಿಸುತ್ತಿರುವುದರಿಂದ ಇಷ್ಟು ಕಡಿಮೆ ಬೆಲೆಗೆ, ಯಾವುದೇ ಜಾಹಿರಾತಿಲ್ಲದೇ ನಿಯತವಾಗಿ ಪತ್ರಿಕೆಯನ್ನು ನಡೆಸುವುದು ಸಾಧ್ಯವಾಗಿದೆ. ಪುಸ್ತಕ ಮಾಹಿತಿಯಲ್ಲಿ ಖಾಯಂ ಅಂಕಣಗಳಿವೆ. ‘ತಿಂಗಳ ಪುಸ್ತಕ’ ‘ಮೊದಲ ನೋಟ’ ‘ಹೊಸಬೆಳೆ’ ‘ನಮ್ಮವರ ಪ್ರಕಟಣೆಗಳು’ ಮುಂತಾಗಿ. ತಿಂಗಳ ಪುಸ್ತಕದಲ್ಲಿ ತಿಂಗಳಿಗೆ ಒಂದೊಂದು ಪುಸ್ತಕವನ್ನಾಯ್ದು ಪರಿಚಯಿಸಲಾಗುತ್ತದೆ. ‘ಹೊಸಬೆಳೆ’ ಈಚೆಗೆ ಬಂದ ಪುಸ್ತಕಗಳ ವಿವರಗಳನ್ನಷ್ಟ್‌ಏ ನೀಡಿದರೆ ‘ಮೊದಲ ನೋಟ’ ಈಚಿನ ಪುಸ್ತಕಗಳ ಕಿರು ಚಿತ್ರನವನ್ನೂ ನೀಡುತ್ತದೆ. ‘ಪುಸ್ತಕ ಮಾಹಿತಿ’ ನಿಯತವಾಗಿ ಬರುತ್ತಿರುವುದು ಗಮನಾರ್ಹ. ಇವಿಷ್ಟು ೧೫೦ ವರ್ಷಗಳ ಕನ್ನಡ ಪತ್ರಿಕೋದ್ಯಮ ಚರಿತ್ರೆಯಲ್ಲಿ ದಾಖಲೆಗೆ ಸೇರಬೇಕಾದ ಸಾಹಿತ್ಯ ಪತ್ರಿಕೆಗಳು.

ಟಿಪ್ಪಣಿಗಳು

  • ೧. ಶ್ರೀನಿವಾಸ ಹಾವನೂರ ‘ಹೊಸಗನ್ನಡದ ಅರುಣೋದಯ’ ಪೂರ್ವೋಕ್ತ ಪುಟ ೫.
  • ೨. ಐ.ಎಂ. ಮುತ್ತಣ್ಣ, ‘ಪಾಶ್ವಾತ್ಯ ವಿದ್ವಾಂಸರ ಕನ್ನಡ ಸೇವೆ’ ೧೯೬೯ ಪುಟ ೨೪೬ ಮತ್ತು ೨೬೬
  • ೩. ಶ್ರೀನಿವಾಸ ಹಾವನೂರ ‘ಹೊಸಗನ್ನಡದ ಅರುಣೋದಯ’ ಪೂರ್ವೋಕ್ತ ಪುಟ ೫೧೭.
  • ೪. ಐ.ಎಂ. ಮುತ್ತಣ್ಣ, ‘ಪಾಶ್ವಾತ್ಯ ವಿದ್ವಾಂಸರ ಕನ್ನಡ ಸೇವೆ’ ಪೂರ್ವೋಕ್ತ ಪುಟ ೪೪೫.
  • ೫.ಮೇಲಿನದೇ ಪುಟ
  • ೬. ಐ.ಎಂ. ಮುತ್ತಣ್ಣ, ‘ಪಾಶ್ವಾತ್ಯ ವಿದ್ವಾಂಸರ ಕನ್ನಡ ಸೇವೆ’ ಪೂರ್ವೋಕ್ತ ಪುಟ ೧೯.
  • ೭. ರಿಪೋರ್ಟ್ ಆನ್ ಪಬ್ಲಿಕೇಷನ್ಸ್ ಇಶ್ಯೂಡ್ ಎಂಡ್ ರಿಜಿಸ್ಟರ್‍ಡ್ ೧೮೯೩ ಪುಟ ೧೦೭
  • ೮. (ಸಂ) ಎಮ್. ವಿ. ಸೀತಾರಾಮಯ್ಯ : ಚಿನ್ನದ ಬೆಳಸು : ಕನ್ನಡ ಸಾಹಿತ್ಯ ಪರಿಷತ್ತಿನ ಚಿನ್ನದ ಹಬ್ಬದ ನೆನಪಿಗೆ ಹೊರತಂದ ಸ್ಮರಣ ಸಂಚಿಕೆ ಪುಟ ೧೩೭
  • ೯. ಆಧಾರ : ಡಾ. ಕೃಷ್ಣಮೂರ್ತಿ ಕಿತ್ತೂರ : ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ : ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ೧೯೭೫ ಪುಟ ೩೮-೩೯
  • ೧೦. ಶ್ರೀನಿವಾಸ ಹಾವನೂರ, ‘ಹೊಸಗನ್ನಡದ ಅರುಣೋದಯ’. ಪೂರ್ವೋಕ್ತ ಪುಟ ೫೧೨
  • ೧೧. ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ : ‘ಹೊಸಗನ್ನಡ ಸಾಹಿತ್ಯದ ಕೆಲವು ನೋಟುಗಳು’ : ೧೯೮೨ ಪುಟ ೨೭
  • ೧೨. ‘ವಾಗ್ಭೂಷಣ’ ಮೇ ೧೯೭೩ ರ ಸಂಚಿಕೆ ಒಳಪುಟ ೧
  • ೧೩. ಸುವಾಸಿನಿ : ಸಂಪುಟ ಸಂಚಿಕೆ ೧, ೧೯೦೦ ಸಂಪಾದಕೀಯ ಪುಟ ೧
  • ೧೪. ಸುವಾಸಿನಿ ಸಂಪುಟ ೧ ಸಂಚಿಕೆ ೧ ಪುಟ ೩೬
  • ೧೫. ಹಾ. ತಿ. ಕೃಷ್ಣೇಗೌಡ, ‘ಕೆರೋಡಿ ಸುಬ್ಬರಾಯರು ಜೀವನ ಮತ್ತು ಕೃತಿಗಳು’ ಪೂರ್ವೋಕ್ತ ಪುಟ ೧೭-೧೮
  • ೧೬. ಸುವಾಸಿನಿ : ಸಂಪುಟ ೨ ಸಂಚಿಕೆ ೧ ೧೯೦೨
  • ೧೭. ಕನ್ನಡ ನುಡಿಗನ್ನಡಿ ನವೆಂಬರ್‍ - ಡಿಸೆಂಬರ್‍ ೧೯೦೭ ಪುಟ ೩-೪
  • ೧೮. ‘ಆನಂದವನ’. ಸದ್ಬೋಧ ಚಂದ್ರಿಕೆಯ ವಜ್ರಮಹೋತ್ಸವ ಸ್ಮರಣ ಸಂಚಿಕೆ.
  • ೧೯. ‘ಸದ್ಭೋದ ಚಂದ್ರಿಕೆ’ : ಸಂಪುಟ ೮೮ ಸಂಚಿಕೆ ೧೧ ಫೆಬ್ರವರಿ ೧೯೯೬
  • ೨೦. ಕನ್ನಡ ನುಡಿಗನ್ನಡಿಯಲ್ಲಿ ವಿಕಟಪ್ರತಾಪ ಜಾಹೀರಾತು ಮೇ ೧೯೦೨ ರ ಸಂಚಿಕೆ ಪುಟ ೨೫,
  • ೨೧. ಕೆರೋಡಿ ಸುಬ್ಬರಾಯರು : ‘ಶ್ರೀಕೃಷ್ಣ ಸೂಕ್ತಿ’ : ಸಂಪುಟ ೧ ಸಂಚಿಕೆ ೩, ೧೯೦೬
  • ೨೨. ‘ಶ್ರೀ ಕೃಷ್ಣ ಸೂಕ್ತಿ’ : ಸಂಪುಟ ೧ ಸಂಚಿಕೆ ೧೨ ಡಿಸೆಂಬರ್‍ ೧೯೦೬
  • ೨೩. ‘ಚಿತ್ರಗುಪ್ತ ಸ್ಮರಣೆ’ ಪುಸ್ತಕದಲ್ಲಿ ಟಿ. ಕೆ. ಇಂದೂಬಾಯಿಯವರ ಲೇಖನ ‘ಮಾಸಪತ್ರಿಕೆಗಳು’ ಪೂರ್ವೋಕ್ತ : ಪುಟ ೩೧೨
  • ೨೪. ಹಾ. ತಿ. ಕೃಷ್ಣೇಗೌಡ : ಕೆರೋಡಿ ಸುಬ್ಬರಾಯರು, ಪೂರ್ವೋಕ್ತ ಪುಟ ೨೬
  • ೨೫. ಎಸ್. ವಿ. ಪಾಟೀಲ ಚಿನ್ನದ ಬೆಳಸು ಪುಸ್ತಕದಲ್ಲಿ ‘ವಾರ್ತಾ ಪತ್ರಿಕೆಗಳ ಪಾತ್ರ’ : ಲೇಖನ ಪುಟ ೨೨೬
  • ೨೬. ಡಾ. ಎಂ. ಎಸ್. ಸುಂಕಾಪುರ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ : ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ೧೯೭೫ ಪುಟ ೩೧೩
  • ೨೭. ಎನ್. ಅನಂತರಂಗಾಚಾರ್‍ : ‘ಸಾಹಿತ್ಯ ಭಾರತೀ’ : ಪ್ರಸಾರಂಗ, ಮೈಸೂರು ವಿಶ್ವವಿದ್ಯನಿಲಯ, ೧೯೭೦
  • ೨೮. ಕೆ. ಡಿ. ಕುರ್ತುಕೋಟಿ (ಸಂ) ‘ವಾಸುದೇವ ಪ್ರಶಸ್ತಿ’ : ವಾಸುದೇವ ವಿನೋದಿನಿ ನಾಟ್ಯಸಭಾ ಬಾಗಲಕೋಟೆ ೧೯೬೪
  • ೨೯. ಕರ್ನಾಟಕ ರಾಜ್ಯ ಗೆಜೆಟಿಯರ್‍ ಪೂರ್ವೋಕ್ತ ಪುಟ ೯೪೫
  • ೩೦. ‘ಧಾರವಾಡ ಜಿಲ್ಲೆಯಲ್ಲಿ ಪತ್ರಿಕೋದ್ಯಮದ ಹುಟ್ಟು ಮತ್ತು ಬೆಳವಣಿಗೆ’ ಕರ್ನಾಟಕ ವಿಶ್ವ ವಿದ್ಯಾನಿಲಯಕ್ಕೆ ಬಿ. ಎ. ಪದವಿ ಮಟ್ಟದಲ್ಲಿ ವಸಂತ ಭಟ್ ಎಂಬುವರು ಸಲ್ಲಿಸಿದ ಪ್ರಬಂಧ ೧೯೯೬
  • ೩೧. ‘ಪ್ರಭಾತ’ ಸಂಪುಟ ೧ ಸಂಚಿಕೆ ೨ :ಸೆಪ್ಟೆಂಬರ್‍ ೧೯೧೮
  • ೩೨. ರಾ.ಯ. ಧಾರವಾಡಕರ : ‘ಪ್ರಭಾತ ಮಾಸಪತ್ರಿಕೆ’ ಲೇಖನ, ವಾಗ್ಭೂಷಣ, ಮೇ ೧೯೭೩ ಪುಟ ೯೧
  • ೩೩. ‘ಕನ್ನಡ ಕೋಗಿಲೆ’ : ಸಿಂಹಾವಲೋಕನ ಮಾರ್ಚ್ ೧೯೧೮ ಪುಟ ೩೫೯
  • ೩೪. ವೆಂಕಟೇಶ ಸಾಂಗಲಿ : ಕೌಸ್ತುಭ - ವಜ್ರಮಹೋತ್ಸವ ಸ್ಮರಣ ಸಂಪುಟ ೧೯೭೭ ಪುಟ ೨
  • ೩೫. ಸಂಪಾದಕೀಯ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ-ಸಂಯುಕ್ತ ಸಂಪುಟ ೧೯೭೭
  • ೩೬. ಸಂಪಾದಕೀಯ, ‘ಪ್ರಬುದ್ಧ ಕರ್ನಾಟಕ’ : ಸಂಪುಟ ೧ ಸಂಚಿಕೆ ೧, ೧೯೧೮
  • ೩೭. ಎ.ಆರ್‍.ಕೃಷ್ಣಶಾಸ್ತ್ರಿ : ಭಾಷಣಗಳು ಮತ್ತು ಲೇಖನಗಳು ೧೯೬೪ ಪುಟ ೨೧೩-೨೧೪
  • ೩೮. ಮೇಲಿನದೇ ಪುಟ ೨೨೧-೨೨೨
  • ೩೯. ಡಾ. ಹಾ. ಮಾ. ನಾಯಕ : ಪ್ರಬುದ್ಧ ಕರ್ನಾಟಕ ಚಿನ್ನದ ಸಂಚಿಕೆ, ಮೈಸೂರು ವಿಶ್ವವಿದ್ಯಾನಿಲಯ ೧೯೬೯ ಪುಟ ೧೩೦೯
  • ೪೦. ಪ್ರಬುದ್ಧ ಕರ್ನಾಟಕ ಚಿನ್ನದ ಸಂಚಿಕೆಯಲ್ಲಿ ಉದ್ಧೃತ : ಪೂವೋಕ್ತ ಪುಟ ೧೩೧೦
  • ೪೧. ದೇ.ಜವರೇಗೌಡ : ಪ್ರಧಾನ ಸಂಪಾದಕೀಯ : ಚಿನ್ನದ ಸಂಚಿಕೆ ಪೂರ್ವೋಕ್ತ ಪುಟ : ೮ , ೧೯೬೯
  • ೪೨. ಮೇಲಿನ ಪುಟ
  • ೪೩. ವಸಂತ : ಸಂಪುಟ ೧ ಸಂಚಿಕೆ ೧೨ ನವೆಂಬರ್‍ ೧೯೨೪
  • ೪೪. ಚಿತ್ರಗುಪ್ತ ಸ್ಮರಣೆ ಪುಸ್ತಕದಲ್ಲಿ ಮಾಸಪತ್ರಿಕೆಗಳು ಲೇಖನ : ಸಂ. ಹ. ಕ. ರಾಜೇಗೌಡ ಪ್ರ. ಎಚ್. ಕೆ. ವೀರಣ್ಣಗೌಡ ಸ್ಮಾರಕ ಪ್ರಕಾಶನ ಸಮಿತಿ, ಮದ್ದೂರು ೧೯೯೪ ಪುಟ ೩೧೫ - ೩೧೬
  • ೪೫. ‘ಕನ್ನಡ ಸಾಹಿತ್ಯ ಪತ್ರಿಕೆಗಳು’ : ಪೋರ್ವೋಕ್ತ ಪುಟ ೧೦
  • ೪೬. ಅ. ನ. ಕೃಷ್ಣರಾಯ : ‘ಬರಹಗಾರನ ಬದುಕು’, ವಿಶ್ವಭಾರತಿ ಮಡಗಾಂವ್ ೧೯೭೨ ಪುಟು ೬೪-೬೫
  • ೪೭. ಸಂಪಾದಕೀಯ : ಕಥಾಂಜಲಿ ಸಂಪುಟ ೧ ಸಂಚಿಕೆ ೧ ಜುಲೈ ೧೯೨೯
  • ೪೮. ಕನ್ನಡ ವಿಶ್ವಕೋಶ ಸಂಪುಟ ೩, ಪುಟ ೬೫೪ರಲ್ಲಿ ಕಾಥಾಂಜಲಿಯ ಬಗ್ಗೆ ವಿವರಣೆ.
  • ೪೯. ‘ಅಂತರಂಗ’ ಪತ್ರಿಕೆ ಆಗಸ್ಟ್ ೧೩, ೧೯೩೯ ರ ಸಂಚಿಕೆಯಲ್ಲಿ ಜಾಹೀರಾತು ಪುಟ ೯
  • ೫೦. ಮೇಲಿನದೇ ಪುಟ
  • ೫೧. ಸಂಪಾದಕೀಯ ‘ಜೀವನ’ ಪತ್ರಿಕೆ ಸಂಪುಟ ೧ ಸಂಚಿಕೆ ೧ ೧೯೪೦
  • ೫೨. ಸಂಪಾದಕೀಯ ‘ಜೀವನ’ ಸಂಪುಟ ೫ ಸಂಚಿಕೆ ೧ ಮೇ ೧೯೪೪
  • ೫೩. ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಪತ್ರಿಕೆಯ ವಿಚಾರ’ ಎಂಬ ಬರಹ, ‘ಜೀವನ’ ಸಂಪುಟ ೧೩ ಸಂಚಿಕೆ ೩
  • ೫೪. ‘ಜೀವನ’ ಸಂಪಾದಕೀಯ ಜುಲೈ ೧೯೬೬ ಪುಟ ೪೩೮
  • ೫೫. ‘ಜೀವನ’ : ‘ಸಂಪಾದಕರ ಮಾತು’ ಸಂಪುಟ ೨೭ ಸಂಚಿಕೆ ೭ ಜುಲೈ ೧೯೬೬
  • ೫೬. ವಿಶ್ವಕೋಶ ಸಂಪುಟ ೭ರಲ್ಲಿ ಜಯಂತಿ ಪತ್ರಿಕೆಯ ವಿವರ, ಕನ್ನಡ ಅಧ್ಯಯನದ ಸಂಸ್ಥೆ ೧೯೭೪ ಪುಟ ೮೩೦
  • ೫೭. ಡಾ. ಬೆಟಗೇರಿ ಕೃಷ್ಣಶರ್ಮ, ‘ಕವಿಭೂಷಣ’ (ಸಂಭಾವನಾ) ಗ್ರಂಥ ಕಾಲಗಾತಿ ಪ್ರಕಾಶನ ರಾಯಭಾಗ, ೧೯೮೨ ಇದರಲ್ಲಿ ‘ಆತ್ಮಕಥನ’.
  • ೫೮. ಚಿತ್ರಗುಪ್ತ ಸ್ಮರಣೆ ಪುಸ್ತಕದಲ್ಲಿ ಎಸ್‌. ಚೆನ್ನಪ್ಪನವರ ಲೇಖನ ‘ಕನ್ನಡದಲ್ಲಿ ವಿನೋದ ಪತ್ರಿಕೆಗಳು’ ಪೂರ್ವೋಕ್ತ ಪುಟ ೨೦೮-೨೦೯.
  • ೫೯. ಚಿತ್ರಗುಪ್ತ ಸ್ಮರಣೆ ಪುಸ್ತಕದಲ್ಲಿ ‘ಉತ್ತರ ಕನ್ನಡ ಜಿಲ್ಲಾ ಪತ್ರಿಕೆಗಳ ಸಮೀಕ್ಷೆ’ ಪೂರ್ವೋಕ್ತ ಪುಟ ೪೯೨.
  • ೬೦. ಎಲ್. ವಿ. ಕಾವೇರಮ್ಮ. ಸಂಪಾದಕಿ ‘ಶಕ್ತಿ’ ಇವರ ಬಿನ್ನಹ : ‘ಶಕ್ತಿ’ ಸಂಪುಟ ೧ ಸಂಚಿಕೆ ೧ ೧೯೫೦
  • ೬೧. ಚಿತ್ರಗುಪ್ತ ಸ್ಮರಣೆ ಪುಸ್ತಕದಲ್ಲಿ ಎಸ್. ಚೆನ್ನಪ್ಪ, ‘ಕನ್ನಡದಲ್ಲಿ ವಿನೋದ ಪತ್ರಿಕೆಗಳು’ ಪೊರ್ವೋಕ್ತ ಪುಟ ೨೦೯
  • ೬೨. ತೇಸಿ ವಿಶ್ವೇಶ್ವರಯ್ಯ (ಸಂ) ‘ಹಂಸಗಮನ’, ಸ್ನೇಹಪ್ರಕಾಶನ ಕೆ. ಆರ್‍. ನಗರ ೧೯೯೮ ಪುಟ VI
  • ೬೩. ಮೇಲಿನದೇ ಪುಟ ೧೦೫
  • ೬೪. ಹಂಚಿಮನಿ ವೀರಭದ್ರಪ್ಪ, ‘ಇವತ್ತಿನ ಸಾಹಿತ್ಯ ಪತ್ರಿಕೆಗಳು, ಒಂದು ಸಮೀಕ್ಷೆ ‘ಕನ್ನಡ ಸಾಹಿತ್ಯ ಪತ್ರಿಕೆಗಳು, ಇತಿಹಾಸ ವರ್ತಮಾನ ಪುಸ್ತಕದಲ್ಲಿ ಪೂರ್ವೋಕ್ತ, ೧೯೯೩, ಪುಟ ೧೯.
  • ೬೫. ಸಾಕ್ಷಿ ಸಂಪಾದಕೀಯ, ಸಂಪುಟ ೧. ಸಂಚಿಕೆ ೧. ೧೯೬೨.
  • ೬೬. ಸಾಕ್ಷಿ ಸಂಪಾದಕೀಯ ಸಂಚಿಕೆ ೩೬, ಉದ್ಧೃತ, ಕನ್ನಡ ಸಾಹಿತ್ಯ ಪತ್ರಿಕೆಗಳು, ಇತಿಹಾಸ ವರ್ತಮಾನ, ಪೊರ್ವೋಕ್ತ, ಪುಟ ೨೦.
  • ೬೭. ಸಾಕ್ಷಿ ೧೩, ಶರತ್ ಸಂಚಿಕೆ, ಅಕ್ಟೋಬರ್‍ ೧೯೭೧, ಪುಟ ೫.
  • ೬೮. ‘ಮನ್ವಂತರ’, ಸಂಪುಟ ೧. ಸಂಚಿಕೆ ೧, ೧೯೬೨, ಪುಟ ೨.
  • ೬೯. ‘ವಿಮರ್ಶಾ ವಿಭಾಗ’ : ಕವಿತಾ : ಹೂವು ೧ ಎಸಳು ೨ ಪುಟ ೫೯.
  • ೭೦. ಮೇಲಿನದೇ.
  • ೭೧. ಬಾ.ಕಿ.ನ. ಕವಿತಾ, ೧ ಅಕ್ಟೋಬರ್‍ ೧೯೬೭, ಪುಟ ೩-೪.
  • ೭೨. ಕನ್ನಡ ಸಾಹಿತ್ಯ ಪತ್ರಿಕೆಗಳು, ಕಸಾಅ, ೧೯೯೩, ಪುಟ ೨೨.
  • ೭೩. ಚಂದ್ರಶೇಖರ : ಸಂಕ್ರಮಣ ಸಾಹಿತ್ಯ ಸಂಪುಟ ೧, ಸಂಪಾದಕರ ಮಾತು, ಸಂಕ್ರಮಣ ಪ್ರಕಾಶನ, ಧಾರವಾಡ ೧೯೯೨.
  • ೭೪ . ಸಂಪಾದಕರ, ‘ಎರಡು ಮಾತು’, ಸಮೀಕ್ಷಕ, ಸಂಚಿಕೆ ೧, ಸಂಪುಟ ೧, ಡಿಸೆಂಬರ್‍ ೧೯೬೫, ಪುಟ ಸಂಖ್ಯೆ ಇಲ್ಲ.
  • ೭೫. ಸಮನ್ವಯ ಘೋಷಣೆ, ಸಂಪುಟ ೧, ಸಂಚಿಕೆ ೧,
  • ೭೬. ಚಿತ್ರಗುಪ್ತ ಸ್ಮರಣೆಯಲ್ಲಿ ಮಂಡ್ಯ ಜಿಲ್ಲೆ ಪತ್ರಿಕೆಗಳ ಸಮೀಕ್ಷೆ. ಸಂ. ಹ. ಕ. ರಾಜೇಗೌಡ, ಪೂರ್ವೋಕ್ತ, ಪುಟ ೪೦೭.
  • ೭೭. ಚಿತ್ರಗುಪ್ತ ಸ್ಮರಣೇ ಪುಸ್ತಕದಲ್ಲಿ ಶಾಂತರಸರ ಲೇಖನ, ಪೂರ್ವೋಕ್ತ, ಪುಟ ೪೫೬, ೪೫೭.
  • ೭೮. ಮುಂಗಾರು, ಸಂಪುಟ ೧, ಸಂಚಿಕೆ ೧, ‘ನಮ್ಮ ಮಾತು’, ಆಗಸ್ಟ್ ೧೯೭೨.
  • ೭೯. ‘ಅಕಾವ್ಯ’, ‘ಅಕಾವ್ಯ ಮತ್ತು ನಾವು’ ಲೇಖನ, ಸಂಚಿಕೆ ೨, ವರ್ಷ ಇಲ್ಲ ಪುಟ ಇಲ್ಲ.
  • ೮೦. ನೇತಿ, ಸಂಚಿಕೆ ೧, ಏಪ್ರಿಲ್ ೧೯೭೩, ಪುಟ ೩.
  • ೮೧. ನೇತಿ, ಸಂಚಿಕೆ ೧, ಏಪ್ರಿಲ್ ೧೯೭೩ ಪುಟ ೪.
  • ೮೨. ಸಂಪಾದಕೀಯ, ‘ಮಣ್ಣಿನ ಬದುಕು’ ಸಂಪುಟ ೧, ಸಂಚಿಕೆ೧, ಜೂನ್ ೧೯೭೪, ಪುಟ ಸಂಖ್ಯೆ ಇಲ್ಲ.
  • ೮೩. ಒಡನಾಡಿ, ಸಂಚಿಕೆ ೨, ಹಿಂಬದಿ ಪುಟ ಜುಲೈ ಆಗಸ್ಟ್ ೧೯೭೫.
  • ೮೪. ಬದುಕು ಪತ್ರಿಕೆಯ ಸಂಪಾದಕರಾಗಿದ್ದ ಮಂಗ್ಳೂರು ವಿಜಯ ಸಂದರ್ಶನದ ವೇಳೆ ನುಡಿದದ್ದು.
  • ೮೫. ಸಿ. ವೀರಣ್ಣ, ‘ಕನ್ನಡ ಪ್ರತಿಭಟನೆ ಕಾವ್ಯ’ ಕನ್ನಡ ಸಾಹಿತ್ಯ ಪರಿಷತ್ ೧೯೮೧, ಪುಟ ೪೩, ೪೪
  • ೮೬. ಚಿತ್ರಗುಪ್ತ ಸ್ಮರಣೆ, ಪುಸ್ತಕದಲ್ಲಿ ಸದಾಶಿವ ಎಣ್ಣೆಹೊಳೆ, ಪೊರ್ವೋಕ್ತ ಪುಟ ೩೩೭.
  • ೮೭. ‘ಆಲೋಕ’ ಪ್ರಾಯೋಗಿಕ ಸಂಚಿಕೆಯಲ್ಲಿ ಕೆಲವು ಮಾತುಗಳು, ಮೇ, ೭೯, ಪುಟ ಸಂಖ್ಯೆ ಇಲ್ಲ.
  • ೮೮. ‘ಆಲೋಕ’ ಸಂಚಿಕೆ ೩, ಸೆಪ್ಟೆಂಬರ್‍ ೧೯೭೯, ಒಳ ಮುಖಪುಟದ ಸೂಚನೆ.
  • ೮೯. ಸಂಪಾದಕೀಯ ಲಹರಿ, ಸಂಪುಟ ೧೭, ಸಂಚಿಕೆ ೧, ನವೆಂಬರ್‍ ೧೯೯೭, ಪುಟ ಸಂಖ್ಯೆ ಇಲ್ಲ.
  • ೯೦. ಹಂಚಿನಮನಿ ವೀರಭದ್ರಪ್ಪನವರ ಲೇಖನ, ಕನ್ನಡ ಸಾಹಿತ್ಯ ಪತ್ರಿಕೆಗಳು ಇತಿಹಾಸ, ವರ್ತಮಾನ, ಕಸಾಅ ೧೯೯೩, ಪುಟ ೨೫.
  • ೯೧. ರುಜುವಾತು, ಸಂಚಿಕೆ ೪೨, ಪುಟ ೫೨.
  • ೯೨. ‘ಲೋಚನ’ ಸಂಪುಟ ೫, ಸಂಚಿಕೆ ೧, ಪುಟ ೧.
  • ೯೩. ಬಂಡಾಯ ಸಾಹ್ಯಿತ್ಯ, ಸಂಪುಟ ೧, ಸಂಚಿಕೆ ೧, ಅಕ್ಟೋಬರ್‍ ನವೆಂಬರ್‍ ೧೯೮೩. ಪುಟ ಸಂಖ್ಯೆ ಇಲ್ಲ.
  • ೯೪. ‘ಸೃಜನವೇದಿ’, ಸಂಪಾದಕೀಯ, ಸಂಚಿಕೆ ೧, ಏಪ್ರಿಲ್ ೧೯೮೪, ಪುಟ ೪-೫
  • ೯೫. ಅನ್ವೇಷಣೆ, ಸಂಪುಟ ೬, ಸಂಚಿಕೆ ೩೯, ಆಗಸ್ಟ್ ೧೯೯೦, ಹಿಂಬದಿ ಮುಖ ಪುಟ.
  • ೯೬. ಅನ್ವೇಷಣೆ, ಸಂಪುಟ ೬, ಸಂಚಿಕೆ ೩೯, ಸಂಪಾದಕೀಯ ಪುಟ ೧.
  • ೯೭. ‘ಸಂಬಂಧ’ ಮುಂಬೈ ಕನ್ನಡ ಸಂಘದ ಪತ್ರಿಕೆ, ಅಕ್ಟೋಬರ್‍ ೯೧.
  • ೯೮. ‘ಚಂದನ’ ಸಂಪಾದಕೀಯ, ಸಂಪುಟ ೧, ಸಂಚಿಕೆ ೧, ೧೯೮೪.
  • ೯೯. ‘ಅಂತರ’ ಸಂಪಾದಕೀಯ ಸಂಪುಟ ೧, ಸಂಚಿಕೆ ೩, ೧೯೮೬, ಪುಟ ೧
  • ೧೦೦. ‘ಸಂವಾದ’, ಸಂಪಾದಕರ ಟಿಪ್ಪಣಿ ಸಂಚಿಕೆ ೨೬, ೨೭, ಪುಟ ೩, ೪.
  • ೧೦೧. ‘ಸವಿತಾ ನಾಗಭೂಷಣ’,‘ಸಂವಾದ, ಸಂಪಾದಕರ ಟಿಪ್ಪಣಿ’, ಸಂಚಿಕೆ ೨೬, ೨೭ ಪುಟ ೩-೪.
  • ೧೦೨. ಕವಿಮಾರ್ಗ ಸಂಪುಟ ೫, ಸಂಚಿಕೆ ೩-೪ರಲ್ಲಿ ಸಂಪಾದಕರ ಹೇಳಿಕೆ.
  • ೧೦೩. ಸಂಪಾದಕೀಯ, ‘ಸಾಹಿತ್ಯ ಸಂಗಾತಿ’ ಸಂಪುಟ ೧, ಸಂಚಿಕೆ ೧, ಪುಟ ೧.
  • ೧೦೪. ಪ್ರಾಯೋಗಿಕ ಸಂಚಿಕೆ ‘ಸಾಹಿತ್ಯ ಸಂಗಾತಿ’ ಸಂಪಾದಕೀಯ ಪುಟ ೧ ತಿಂಗಳು ವರ್ಷ ಯಾವುದೂ ಇಲ್ಲ.
  • ೧೦೫. ಸಾಹಿತ್ಯ ಸಂಗಾತಿ, ಸಂಪುಟ ೧, ಸಂಚಿಕೆ ೪, ಸಂಪಾದಕೀಯ ಪುಟ ೨.
  • ೧೦೬. ‘ಅರಿವು ಬರಹ’ ಸಂಚಿಕೆ ೨, ೧೯೯೨ರಲ್ಲಿ ಕಂಡು ಬಂದ ‘ಗಮನಿಸಿ’ ಎಂಬ ಸ್ಪಷ್ಟನೆ.
  • ೧೦೭. ‘ಅರಿವು ಬರಹ’ ಸಂಚಿಕೆ ೨, ೧೯೯೨ರಲ್ಲಿ ಸಂಪಾದಕರ ಪ್ರಸ್ತಾವನೆ, ಪುಟ ೩.
  • ೧೦೮. ಚ. ಏಕಾಕ್ಷರ ಪತ್ರಿಕೆ. ಸಂಪುಟ ೧, ಸಂಚಿಕೆ ೧, ಪುಟ ೨೪.
  • ೧೦೯. ಹೊಸದಿಕ್ಕು ಸಂಪುಟ ೧, ಸಂಚಿಕೆ ೧. ೧೯೯೨
  • ೧೧೦. ಎರಡನೇ ವರ್ಷಕ್ಕೆ ಹೊಸದಿಕ್ಕು : ಮೇ ೧೯೯೩ ಪುಟ ೩.
  • ೧೧೧. ಕನ್ನಡ ಸಾಹಿತ್ಯ ಲೋಕ : ಪ್ರಥಮ ಸಂಚಿಕೆಯಲ್ಲಿ ನಮ್ಮ ಮಾತು ಪುಟ ೫ ಡಿಸೆಂಬರ್‍ ೧೯೯೩.
  • ೧೧೨. ‘ಪ್ರಜ್ಞೆ’ ಸಂಪುಟ ೧ ಸಂಚಿಕೆ ೧ ಒಳಪುಟ ೧ ಜನವರಿ ೧೯೯೩.
  • ೧೧೩. ‘ಪ್ರಜ್ಞೆ’ ಸಂಪುಟ ೧ ಸಂಚಿಕೆ ೧ ಹಿಂಬದಿ ಪುಟ ೧ ಜನವರಿ ೧೯೯೩.
  • ೧೧೪. ‘ಹೊಸ ಪುಸ್ತಕಗಳು’ : ಸಂಪಾದಕೀಯ ಮಾರ್ಚ ೧೯೯೩ ಪುಟ ೧.
  • ೧೧೫. ಪುಸ್ತಕ ಮಾಹಿತಿ : ಮುಖಪುಟ ಸಂಪಾದಕೀಯ, ಸಂಪುಟ ೬ ಸಂಚಿಕೆ ೫ ಆಗಸ್ಟ್ ೧೯೯೮ ಪ್ರ : ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕನ್ನಡ ಸಾಹಿತ್ಯ ಮತ್ತು ಸಾಹಿತ್ಯ ಪತ್ರಿಕೆಗಳ ಸಂಬಂಧ

ಕನ್ನಡ ಸಾಹಿತ್ಯ ಬೆಳವಣಿಗೆ

‘ಕನ್ನಡ ಪತ್ರಿಕೋದ್ಯಮವು ಕನ್ನಡದಷ್ಟು ಹಳತಲ್ಲ. ಕನ್ನಡ ಕಾವ್ಯಮಯವಾಗಿದ್ದ ತನ್ನ ಸ್ವರೂಪವನ್ನು ಮಾರ್ಪಡಿಸಿಕೊಂಡು ಜನವಾಣಿಯ ರೂಪ ಧರಿಸಿದ ಕಾಲದಲ್ಲಿ ಕನ್ನಡ ಪತ್ರಿಕೋದ್ಯಮ ಮುಂಗಾಲಿಡತೊಡಗಿತು. ಕನ್ನಡ ಪಳಗಿದ ಗೋವು, ಪತ್ರಿಕೋದ್ಯಮ ಅದರ ಒಂದು ಮುದ್ದಿನ ಕರು. ಕನ್ನಡ ಗೋವಿನ ಕೆಚ್ಚಲಿನಿಂದ ಜೀವರಸವನ್ನು ಸಾಧ್ಯವಾದಷ್ಟು ಪಡೆದುಕೊಂಡು ಬಲಗೊಳ್ಳುವ ಹವಣು ಕರುವಿನದು. ಅಂತೂ ಈ ಹಂತವನ್ನು ದಾಟಿದ್ದಾಗಿದೆ. ಎಳೆಗರು ಎತ್ತಾಗಿದೆ ಎಂಬ ಭಾವನೆಯಂತೂ ಮೂಡಿದೆ.’ ಕನ್ನಡ ನಾಡು ನುಡಿ ಎಂಟನೇ ಶತಮಾನಕ್ಕೂ ಮುಂಚೆಯೇ ಪ್ರಸಿದ್ಧವಾಗಿದ್ದರೂ ಕನ್ನಡ ಸಾಹಿತ್ಯ ಅದಕ್ಕೂ ಹಿಂದೆ ಶಿಷ್ಟರೂಪದಲ್ಲಿ ರಚನೆಗೊಂಡ ಬಗ್ಗೆ ದಾಖಲೆಗಳಿಲ್ಲ. ಈಜಿಪ್ಟ್ ದೇಶದ ಅಕ್ಸಿರಿಂಕಸ್ ಎಂಬ ಗ್ರಾಮದ ಬಳಿ ದೊರೆತ ಒಂದು ಪ್ರಾಚೀನವಲ್ಕ ಲೇಖದಲ್ಲಿ ಕೆಲವು ಕನ್ನಡ ಮಾತುಗಳು ಬಂದಿವೆಯೆಂದೂ, ಮೆಲ್ಪೆಯೆಂಬ ಬಂದರು ಪಟ್ಟಣದಲ್ಲಿ ಸೆರೆಸಿಕ್ಕಿದ್ದ ಗ್ರೀಕ್ ಹೆಂಗಸೊಬ್ಬಳನ್ನು ಬಿಡಿಸಿಕೊಂಡು ಹೋದ ಕಥೆ ಆ ಲೇಖದಲ್ಲಿದೆಯೆಂದೂ ಅದು ಕ್ರಿ. ಶ. ಎರಡನೆಯ ಶತಮಾನಕ್ಕೆ ಸೇರಿದ ಲೇಖವೆಂದೂ ತಜ್ಞರು ಹೇಳಿದ್ದಾರೆ. ಕ್ರಿಸ್ತ ಶಕದ ಆರಂಭದಲ್ಲಿಯೇ ಕನ್ನಡ ನಾಡು ವಿದೇಶಗಳೊಡನೆ ವ್ಯಾಪಾರ ನಡೆಸುವಷ್ಟು ಅಭಿವೃದ್ಧಿ ಹೊಂದಿದ್ದಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. . .ಚಂದ್ರಗುಪ್ತನ ಮೊಮ್ಮಗ ಅಶೋಕನು ಕನ್ನಡ ನಾಡಿನ ಹಲವು ಕಡೆಗಳಲ್ಲಿ ತನ್ನ ಶಾಸನಗಳನ್ನು ಹಾಕಿದ್ದಾನೆ. . . ಆದರೆ ಆ ಕಾಲದಲ್ಲಿ ಕನ್ನಡದಲ್ಲಿ ಕಾವ್ಯ ರಚನೆ ನಡೆದಂತೆ ಏನೂ ನಿದರ್ಶನವಿಲ್ಲ. ಕನ್ನಡದ ಲಿಪಿ ಯಾವ ಕಾಲದಲ್ಲಿ ರೂಪುಗೊಂಡಿತು ಎಂಬ ಬಗೆಗಾಗಲೀ ಮೂಲ ದ್ರಾವಿಡ ಭಾಷೆಯಿಂದ ಕನ್ನಡ ಎಂದು ಬೇರೆಯಾಯಿತು ಎಂಬ ಬಗೆಗಾಗಲೀ ವಿದ್ವಾಂಸರಿಗೆ, ಚರಿತ್ರೆಕಾರರಿಗೆ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಎಲ್ಲ ಭಾಷೆಗಳಲ್ಲಿ ಆಗುವ ಹಾಗೆ ಶಿಷ್ಟಸಾಹಿತ್ಯ ರಚನೆಯಾಗುವ ಮೊದಲೇ ಕನ್ನಡದಲ್ಲೂ ಜನಪದ ಸಾಹಿತ್ಯ ರಚನೆಯಾಗಿದ್ದರಬೇಕು. ಈಗ ಲಭ್ಯವಿರುವ ಆಧಾರಗಳಲ್ಲಿ ಕನ್ನಡದಲ್ಲೂ ಸಾಹಿತ್ಯ ರಚನೆ ಮೊದಲಾದುದು ಒಂಬತ್ತನೇ ಶತಮಾನದಲ್ಲಿ. ಕ್ರಿಸ್ತ ಶಕ ೮೧೭ರ ವೇಳೆಯಲ್ಲಿ ರಚಿತವಾದ ಕವಿರಾಜಮಾರ್ಗ ನಮಗೆ ಲಭಿಸಿರುವ ಅತ್ಯಂತ ಹಳೆಯ ಗ್ರಂಥ. ಈಗ ಶ್ರೀವಿಜಯ ಚಕ್ರವರ್ತಿ ಕವಿರಾಜಮಾರ್ಗದ ಕರ್ತೃವೆಂದು ನಂಬಲಾಗಿದೆ. ಆದರೆ ಕವಿರಾಜಮಾರ್ಗವು ಶುದ್ಧ ಸಾಹಿತ್ಯ ಕೃತಿಯಲ್ಲ. ಅದೊಂದು ಲಕ್ಷಣ ಗ್ರಂಥ. ಕಾವ್ಯ ರಚನೆಯೇ ನಡೆಯದೇ ಲಕ್ಷಣ ಗ್ರಂಥ ಬರುವುದು ಅಸಹಜ ಎಂಬ ನಂಬುಗೆಯಲ್ಲಿ ಕವಿರಾಜಮಾರ್ಗಕ್ಕಿಂತಲೂ ಪೂರ್ವದಲ್ಲಿ ಕನ್ನಡದಲ್ಲಿ ಸಾಹಿತ್ಯರಚನೆ ನಡೆದಿರಬೇಕೆಂದು ತರ್ಕಿಸಲಾಗಿದೆ. ಆದರೆ ಈ ವಾದವನ್ನು ಪುರಸ್ಕರಿಸುವಂತೆ ಕ್ರಿ. ಶ. ೮೧೭ಕ್ಕೂ ಪೂರ್ವದ ಯಾವುದೇ ಕನ್ನಡ ಕೃತಿ ನಮಗೆ ದೊರೆತುದಿಲ್ಲ.

೯ರಿಂದ ೧೨ನೇ ಶತಮಾನ

ಒಂಬತ್ತನೇ ಶತಮಾನವನ್ನು ಕನ್ನಡ ಸಾಹಿತ್ಯದ ಆರಂಭ ಕಾಲವೆಂದು ಸದ್ಯಕ್ಕೆ ನಂಬಿದರೆ ಹತ್ತನೇ ಶತಮಾನವನ್ನು ಕನ್ನಡ ಸಾಹಿತ್ಯದ ಸುವರ್ಣ ಯುಗವೆಂದು ನಿರ್ಭಿಡೆಯಿಂದ ಕರೆಯಬಹುದಾಗಿದೆ. ಅದು ಪಂಪಯುಗ, ಕನ್ನಡ ಸಾಹಿತ್ಯದಲ್ಲಿ ರತ್ನತ್ರಯರೆನಿಸಿರುವ ಪಂಪ, ಪೊನ್ನ, ರನ್ನ ಈ ಮೂವರು ಹತ್ತನೇ ಶತಮಾನದವರು. ಆಗಿನ ಲೇಖಕರಿಗೆ ಚಂಪೂ ಬಹಳ ಪ್ರಿಯವಾದ ಕಾವ್ಯ ಮಾಧ್ಯಮವಾಗಿದ್ದರಿಂದ ಈ ಯುಗವನ್ನು ಚಂಪೋಯುಗವೆಂದು ಕರೆಯಲಾಗಿದೆ. ಹತ್ತನೆ ಶತಮಾನ ಕನ್ನಡ ಸಾಹಿತ್ಯಕ್ಕೆ ಭರತ ಅಂದರೆ ಏರುವಿಕೆಯ ಕಾಲವಾದರೆ ಹನ್ನೊಂದನೇ ಶತಮಾನ ಇಳಿಕೆಯದು. ೧೧ನೇ ಶತಮಾನವನ್ನು ಕನ್ನಡ ಸಾಹಿತ್ಯದಲ್ಲಿ ಬೀಳುಗಾಲವೆಂದೇ ಗುರುತಿಸುತ್ತಾರೆ. ಮತ್ತೆ ೧೨ನೇ ಶತಮಾನ ಕನ್ನಡ ಸಾಹಿತ್ಯದ ಉಬ್ಬರದ ಕಾಲ. ಪ್ರವಾಹೋಪಾದಿಯಲ್ಲಿ ಸಾಹಿತ್ಯವಾಹಿನಿ ಝರಿ ಹರಿದು ಕಾಲ. ಈ ಅವಧಿಯಲ್ಲಿ ಹಳಗನ್ನಡದ ಚಂಪೂ ಶೈಲಿ ಪ್ರಚಲಿತ ಇರುವಂತೆಯೇ, ಜನಸಾಮಾನ್ಯರಿಗೆ ಒಗ್ಗುವ ರೀತಿಯಲ್ಲಿ ಸರಳ ಮಾತಿನಲ್ಲಿ ತತ್ತ್ವಗಳನ್ನು ಹೇಳುವ ವಚನ ಹಾಗೂ ರಗಳೆಯ ಪ್ರಕಾರದ ಸಾಹಿತ್ಯಗಳು, ಸಂಪ್ರದಾಯಗಳು ಬಳಕೆಯಲ್ಲಿ ಬಂದವು. ವಚನ ಸಾಹಿತ್ಯ ಈ ಶತಾಬ್ದದಲ್ಲಿ ಸಮೃದ್ಧಿಯಾಗಿ ಬೆಳದು ಬಂತು. ಜೇಡರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವೆ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಹೆಂಡದ ಮಾರಯ್ಯ ಮೊದಲಾದ ಹಿರಿಯ ವಚನಕಾರರು ಈ ಕಾಲದಲ್ಲಿ ವಚನಗಳನ್ನು ರಚಿಸಿ ಅದನ್ನು ಜನಪ್ರಿಯಗೊಳಿಸಿದರು. ವಚನಗಳಲ್ಲದೇ ತ್ರಿಪದಿ, ಷಟ್ಪದಿ, ರಗಳೆ ಮುಂತಾದ ದೇಶಿಯ ಛಂದಸ್ಸುಗಳಲ್ಲೂ ಈ ಶತಮಾನದಲ್ಲಿ ಅನೇಕ ಕಾವ್ಯಗಳು ಹುಟ್ಟಿದವು. ಹರಿಹರ ರಾಘವಾಂಕರು ಈ ಹೊಸ ಕಾವ್ಯ ಪದ್ಧತಿಯ ಎಂದರೆ ದೇಶಿ ಸಾಹಿತ್ಯ ಪ್ರಕಾರಗಳ ನೇತಾರರೂ ಪ್ರಚಾರಕರೂ ಆದರು.

ಹದಿಮೂರನೇ ಶತಮಾನ

ಹದಿಮೂರನೆಯ ಶತಮಾನ ಕನ್ನಡ ಸಾಹಿತ್ಯ ಸಮೃದ್ಧಿಯ ದೃಷ್ಟಿಯಿಂದ ಬೀಗುವಂತಹುದೇನಲ್ಲ. ಕಲ್ಯಾಣ ಪಟ್ಟಣ ಅವನತಿಹೊಂದಿದ ಪರಿಣಾಮವಾಗಿ ವೀರಶೈವ ಕವಿಗಳು ದಕ್ಷಿಣಕ್ಕೆ ಹೊರಟು ಚೆಲ್ಲಾಪಿಲ್ಲಿಯಾದರು. ಈ ಹೊತ್ತಿಗೆ ಕಲಚೂರ್ಯರ ಚಾಲುಕ್ಯರ ಆಧಿಪತ್ಯ ಕೊನೆಗೊಂಡು ಚೋಳರ ಪ್ರಾಬಲ್ಯವೂ ತಗ್ಗಿ ಹೊಯ್ಸಳರ ಪರಾಕ್ರಮದ ಏರುಗತಿ ಆರಂಭಗೊಳ್ಳುತ್ತದೆ. ಹೊಯ್ಸಳರ ಎರಡನೇ ನರಸಿಂಹನು (೧೨೧೭ರಿಂದ ೧೨೩೫) ಪರಾಕ್ರಮವನ್ನು ಮೆರೆದು ಶತ್ರು ನಿಗ್ರಹ ಮಾಡಿ ರಾಜ್ಯವನ್ನು ವಿಸ್ತರಿಸಿದನು. ಸಾಹಿತ್ಯ ಸಂಗೀತಕ್ಕೆ ಧಾರಾಳ ಪೋಷಣೆ ನೀಡಿದನು. ಜೈನ ಮತ್ತು ವೀರಶೈವ ಕವಿಗಳು ಹಲವಾರು ಗ್ರಂಥ ರಚನೆ ಮಾಡಿದ್ದಾರೆ. ಹಳೆಗನ್ನಡದ ಶ್ರೇಷ್ಠವಾದ ವ್ಯಾಕರಣಗ್ರಂಥ ರಚಿತವಾದದ್ದು ಈ ಶತಮಾನದಲ್ಲಿಯೇ. ಜನ್ನ (೧೧೯೧), ಪಾರ್ಶ್ವ ಪಂಡಿತ (೧೨೦೫), ನರಹರಿ ತೀರ್ಥ (೧೨೧೮) ಆಂಡಯ್ಯ (೧೨೩೫), ಗುಣವರ್ಮ (೧೨೩೫), ಮಲ್ಲಿಕಾರ್ಜುನ (೧೨೪೫), ಕೇಶಿರಾಜ (೧೨೬೦), ಕುಮುದೇಂದು (೧೨೭೫) ಮುಂತಾದವರು ಹದಿಮೂರನೆಯ ಶತಮಾನದಲ್ಲಿ ವೈವಿಧ್ಯಮಯವಾಗಿ ಕನ್ನಡ ಸಾಹಿತ್ಯವನ್ನು ಬೆಳಸಿದರು.

೧೪ನೆಯ ಶತಮಾನ

ಕನ್ನಡ ನಾಡಿನ ಇತಿಹಾಸದಲ್ಲಿ ಹದಿನಾಲ್ಕನೇಯ ಶತಮಾನ ಮಹತ್ತ್ವವಾದುದು. ಉತ್ತರ ಭಾರತದಿಂದ ಆರಂಭವಾದ ಮುಸಲ್ಮಾನ ದೊರೆಗಳ ದಾಳಿ ದಕ್ಷಿಣಕ್ಕೂ ಹಬ್ಬಿ ಕನ್ನಡ ನಾಡು ಪರಕೀಯರ ಆಕ್ರಮಣಕ್ಕೆ ಒಳಗಾದ ಕಾಲವಿದು. ಮಲ್ಲಿಕಾಫರನು ದ್ವಾರಸಮುದ್ರವನ್ನು ಈ ಶತಮಾನದ ಆರಂಭದಲ್ಲಿಯೇ ಹಾಳುಗೆಡವಿದನು. ಇಷ್ಟರಿಂದ ತೃಪ್ತಿಯಾಗದೇ ಮುಸಲ್ಮಾನರು ಕಾವೇರಿಯನ್ನು ದಾಟಿ ಹೋಗಿ ದಕ್ಷಿಣದ ಪಾಂಡ್ಯರನ್ನು ಗೆದ್ದು ಮಧುರೆಯನ್ನು ಆಕ್ರಮಿಸಿಕೊಂಡುರು. ಕರ್ನಾಟಕದ ಶಿಲ್ಪಕಲೆ ಸಂಸ್ಕೃತಿಗಳು ಪೋಷಣೆಯಿಲ್ಲದೇ ಅನಾಥವಾದವು. ಈ ಅವನತಿಯನ್ನು ಸಹಿಸದ ಕನ್ನಡ ಜನರ ಸ್ವಾಭಿಮಾನ ವಿದ್ಯಾರಣ್ಯರ ಮಾರ್ಗ ದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ೧೩೩೬ರ ವೇಳೆಗೆ. ಸಂಗಮ ವಂಶದ ಹಕ್ಕಬುಕ್ಕರು ದಕ್ಷಣ ಭಾರತಕ್ಕೆ ಆಶಾದೀಪವೆಂಬಂತೆ ವಿಜಯನಗರ ರಾಜ್ಯ ಸ್ಥಾಪಿಸಿದರು. ವಿಜಯನಗರವು ಬಹುಮನಿಯರಾಜ್ಯದ ಆಕ್ರಮಣಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತು. ಮುತ್ತು ರತ್ನಗಳನ್ನು ರಸ್ತೆಯ ಬದಿಯಲ್ಲಿಟ್ಟು ಮಾರುವ ಹಾಗೆ ಶ್ರೀಮಂತ ರಾಜ್ಯವಾಯಿತಷ್ಟೇ ಅಲ್ಲ ಕವಿಗಳಿಗೆ ಕಲಾವಿದರಿಗೆ ಪ್ರೋತ್ಸಾಹ ಸಿಕ್ಕು ಕನ್ನಡ ಸಾಹಿತ್ಯ ಮೆರೆಯಿತು. ಚೌಂಡರಸ (೧೩೧೦), ನಾಗರಾಜ (೧೩೩೧), ಮಂಗರಾಜ (೧೩೬೦), ವೃತ್ತ ವಿಲಾಸ (೧೩೬೦), ಭೀಮಕವಿ ೧೩೬೯), ಪದ್ಮಣಾಂಕ (೧೩೮೫) ಅಭಿನವ ಮಂಗರಾಜ (೧೩೯೮) ಮುಂತಾದವರು ಈ ಕಾಲದ ಪ್ರಸಿದ್ಧ ಸಾಹಿತ್ಯ ರಚನಕಾರರು.

೧೫ನೇ ಶತಮಾನ

ಹಳಗನ್ನಡ ಪ್ರಭಾವವು ಅಡಿಗಿ ನಡುಗನ್ನಡ ಉಚ್ಛ್ರಾಯ ಸ್ಥಿತಿಗೆ ಬಂದುದು ಹದಿನೈದನೆಯ ಶತಮಾನದಲ್ಲಿ. ಚಂಪೂ ಕಾವ್ಯಗಳ ಪ್ರಾಬಲ್ಲ್ಯವು ಅಡಗಿ ಷಟ್ಪದಿ, ಸಾಂಗತ್ಯ, ತ್ರಿಪದಿ ಛಂದಸ್ಸುಗಳೇ ಸಾಹಿತ್ಯ ರಚನೆಯ ಮಾಧ್ಯಮಗಳಾದವು. ಕನ್ನಡ ಸಾಹಿತ್ಯದ ಮೇರು ಪರ್ವತಗಳಲ್ಲೊಬ್ಬನೆನಿಸಿರುವ ಕುಮಾರವ್ಯಾಸ ಹುಟ್ಟಿದ್ದು, ಕಾವ್ಯರಚನೆ ಮಾಡಿದ್ದು ಈ ಶತಮಾನದಲ್ಲಿ. ‘ಪ್ರಭುಲಿಂಗಲೀಲೆ’ಯ ಖ್ಯಾತಿಯ ಚಾಮರಸನದೂ ಇದೇ ಶತಮಾನ. ಆ ಕಾಲದ ವಿಜಯನಗರದ ದೊರೆಗಳು ಸರ್ವಧರ್ಮ ಸಹಿಷ್ಣುಗಳಾಗಿದ್ದರು. ಕವಿ-ಕಲಾವಿದರಿಗೆ ಪೋಷಣೆ ನೀಡುತ್ತಿದ್ದರು. ಸ್ವತಃ ಕೃತಿರಚನಕಾರರೂ ಆಗಿದ್ದರು. ದೇವರಾಜ (೧೪೧೦), ಭಾಸ್ಕರ (೧೪೨೪), ಲಕ್ಕಣ ದಂಡೇಶ (೧೪೨೮), ಕುಮಾರವ್ಯಾ (೧೪೩೦), ಚಾಮರಸ (ಸು. ೧೪೩೦), ಜಕ್ಕಣಾರ್ಯ (೧೪೩೦), ಕಲ್ಯಾಣಕೀರ್ತಿ (೧೪೩೯), ಸಿದ್ಧೇಶ್ವರ (ಸು. ೧೪೭೦), ಗುಬ್ಬಿಯ ಮಲ್ಲಣ್ಣ (೧೪೭೫), ತೆರಕಣಾಂಬಿ ಬೊಮ್ಮರಸ (೧೪೮೫), ನೀಲಕಂಠಾಚಾರ್ಯ (೧೪೨೫), -ಈ ಕಾಲದ ಮಹತ್ತ್ವದ ಕವಿಗಳು.

೧೬ನೇ ಶತಮಾನ

ಕನ್ನಡಿಗರು ಹೆಮ್ಮ ಪಡುವ ವಿಜಯನಗರ ಸಾಮ್ರಾಜ್ಯ ಉನ್ನತಿ ಶಿಖರಕ್ಕೇರಿದ್ದೂ ನಂತರ ಅಧಃಪತನಕ್ಕಿಳಿದದ್ದೂ ೧೬ನೇ ಶತಮಾನದಲ್ಲಿ. ಕನ್ನಡ ನಾಡಿನ ಪರಮಶ್ರೇಷ್ಠ ರಾಜನೆನಿಸಿಕೊಂಡಿರುವ ಶ್ರೀ ಕೃಷ್ಣದೇವರಾಯನು ಈ ಶತಮಾನದ ೨-೩ನೇ ದಶಕಗಳಲ್ಲಿ ರಾಜ್ಯಭಾರಮಾಡಿದನು. ನಂತರ ಅಂತಃಕಲಹಗಳು ಹುಟ್ಟಿ ರಾಜ್ಯ ದುರ್ಬಲವಾಯಿತು. ರಕ್ಕಸತಂಗಡಿ ಯುದ್ಧದಲ್ಲಿ ಬಹುಮನಿ ಸುಲ್ತಾನರೊಂದಿಗೆ ಸೋಲಾಯಿತು. ಮೈಸೂರಿನ ಅರಸರು, ಮಧುರೆ, ತಂಜಾವೂರು ಮತ್ತು ಕೆಳದಿಗಳ ಪಾಳೆಯಗಾರರು ಸ್ವತಂತ್ರ ರಾಜ್ಯ ಕಟ್ಟಿದರು. ಕನ್ನಡ ನಾಡು ಅನೇಕ ಮನೆತನಗಳ ನಡುವೆ ಹರಿದು ಹಂಚಿಹೋಯಿತು. ಆದರೆ ಕನ್ನಡದಲ್ಲಿ ದಾಸ ಸಾಹಿತ್ಯ ಸಮೃದ್ಧವಾಗಿ ಬೆಳದುದೂ ಈ ಶತಮಾನದಲ್ಲಿ. ದಾಸಶ್ರೇಷ್ಠರಾದ ಪುರಂದರದಾಸ, ಕನಕದಾಸರು ಇದೇ ಅವಧಿಗೆ ಸೇರಿದವರು. ಸುರಂಗಕವಿ (೧೫೦೦), ಮಂಗರಸ III(೧೫೦೮), ಈಶ್ವರಿ ವಾಲ್ಮೀಕಿ (೧೫೧೦), ಶ್ರೀಪಾದಾರಾಯ (೧೫೧೦), ಗುಬ್ಬಿಯ ಮಲ್ಲಣಾರ್ಯ (೧೫೧೩), ಸಿಂಗಿರಾಜ (೧೫೧೫), ತಿಮ್ಮಣ್ಣ (೧೫೨೦), ವ್ಯಾಸರಾಯ (೧೫೨೦), ನಂಜುಂಡ (೧೫೨೫), ಚಾಟುವಿಠಲನಾಥ (೧೫೩೦), ಪುರಂದರದಾಸ (೧೫೩೦), ಲಿಂಗಮಂತ್ರ (೧೫೩೦), ವೀರಭದ್ರ (೧೫೩೦), ಅಭಿನವವಾದಿ ವಿದ್ಯಾನಂದ (೧೫೩೩), ಕನಕದಾಸ (೧೫೪೦), ಗುರುಲಿಂಗ ವಿಭು (೧೫೫೦), ವಿರಕ್ತ ತೋಂಟದಾರ್ಯ (೧೫೫೦), ವಿರೂಪಾಕ್ಷ ಪಂಡಿತ (೧೫೮೪)-ಈ ಶತಮಾನದ ಮಹತ್ತ್ವದ ಕವಿಗಳು.

೧೭ ಮತ್ತು ನಂತರದ ಶತಮಾನಗಳು

ವಿಜಯನಗರದ ಸಾಮ್ರಾಜ್ಯ ಒಡೆದು ಚೂರಾದ ಮೇಲೆ ಮೈಸೂರು ಅರಸರು ಪ್ರವರ್ಧಮಾನಕ್ಕೆ ಬಂದು ೧೬೧೯ರಲ್ಲಿ ರಾಜ ಒಡೆಯರು ಸ್ವತಂತ್ರ ಸಾಮ್ರಾಜ್ಯ ಕಟ್ಟಿದರು. ನಂತರ ಬಂದ ಒಡೆಯರುಗಳು ರಾಜ್ಯವನ್ನು ವಿಸ್ತರಿಸಿ ಆಳತೊಡಗಿದರು. ವಿಜಯನಗರದ ಪತನಾ ನಂತರ ಕನ್ನಡ ಕವಿಗಳಿಗೆ, ವಿದ್ವಾಂಸರಿಗೆ ತಪ್ಪಿಹೋಗಿದ್ದ ರಾಜಾಶ್ರಯ ಮೈಸೂರು ಒಡೆಯರಲ್ಲಿ ದೊರೆಯಲಾರಂಭಿಸಿತು. ಭಟ್ಟಾಕಳಂಕ (೧೬೦೪), ಚಿಕ್ಕದೇವರಾಜ (೧೬೨೭), ಗೋವಿಂದ ವೈದ್ಯ (೧೬೪೮), ಧರಣಿ ಪಂಡಿತ (೧೬೫೦), ಸಿದ್ಧನಂಜೇಶ (೧೬೫೦), ಷಡಕ್ಷರದೇವ (೧೬೫೫), ಹೊನ್ನಮ್ಮ (೧೬೮೦), ಲಕ್ಷ್ಮೀಶ (೧೬೯೧), ಸರ್ವಜ್ಞ (ಸು. ೧೭೦೦) ಇವರು ಹದಿನೇಳನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ದೀವಿತೆಯನ್ನು ಎತ್ತಿ ಹಿಡಿದರು. ಹದಿನೇಳನೇ ಶತಮಾನದ ತರುವಾಯ ಕನ್ನಡ ಸಾಹಿತ್ಯಕ್ಕೆ ಮಂಕು ಬಡಿಯಿತು. ಮುಂದಿನ ಎರಡು ಶತಮಾನಗಳು ಕನ್ನಡಸಾಹಿತ್ಯ ಚರಿತ್ರೆಯ ಕಪ್ಪು ದಿನಗಳು. ಇದಕ್ಕೆ ಕಾರವಣವೆಂದರೆ ಚಿಕ್ಕದೇವರಾಜ ಒಡೆಯರು ತರುವಾಯ ನಾಲ್ವರು ಮೈಸೂರು ದೊರೆಗಳು ಆಳಿದರೂ ತಂತಮ್ಮ ಸಿಂಹಾಸನವನ್ನೂ ಕಾಯ್ದುಕೊಳ್ಳುವುದರಲ್ಲೇ ಅವರ ಶಕ್ತಿ ವ್ಯಯವಾಗಿ ಲಲಿತಕಲೆಗಳಿಗೆ ರಾಜಾಶ್ರಯ ದೊರೆಯಲಿಲ್ಲ. ಹೈದರ್‍ ಹಾಗೂ ಟಿಪ್ಪೂ ಕಾಲದಲ್ಲೂ ಮೈಸೂರು ರಾಜ್ಯದಲ್ಲಿ ಹೇಳಿಕೊಳ್ಳವಂಥ ಸಾಹಿತ್ಯರಚನೆಯ ಕೆಲಸ ನಡೆಯಲಿಲ್ಲ. ‘೧೭೦೦ರ ಅನಂತರ ೧೯ನಯ ಶತಮಾನದ ಕೊನೆಯವರೆಗೆ ಕನ್ನಡದಲ್ಲಿ ಪ್ರೌಢಕಾವ್ಯದ ರಚನೆಯಾಗಲಿಲ್ಲವೆಂದು ಹೇಳಬಹುದು. ಇದನ್ನು ಕಾವ್ಯದ ದೃಷ್ಟಿಯಿಂದ ಬರಡುಗಾಲವೆಂದು ಕರೆದರೆ ತಪ್ಪಲ್ಲ’ ಎನ್ನುತ್ತಾರೆ ಎಸ್. ಅನಂತನಾರಾಣ. ತಂತಮ್ಮ ಸಿಂಹಾಸನ ಕಾಪಾಡಿಕೊಳ್ಳಲು ಪರಸ್ಪರ ಹಾಗೂ ಬೇರೆಬೇರೆಯಾಗಿ ಬ್ರಿಟಿಷರ ಜೊತೆ ಕಾದಾಡಬೇಕಾದ ತುಂಡರಸರು, ನಿಧಾನವಾಗಿ ಬ್ರಿಟಿಷರ ಕಪಿಮುಷ್ಟಿಗೆ ಬಂದ ಆಡಳಿತ, ಭಾಷೆ, ಸಂಸ್ಕೃತಿ, ಆಲೋಚನಾ ವಿಧಾನಗಳ ಮೇಲೆ ಆದ ಅನ್ಯಾಕ್ರಮಣ, ಭಾರತೀಯರಲ್ಲಿ ಮೊದಲೇ ಮನೆಮಾಡಿದ್ದ ಅನಕ್ಷರತೆ, ಮೂಡನಂಬಿಕೆಗಳು, ಇವುಗಳ ಮಧ್ಯೆ, ದೇಶ ಈ ೨ ಶತಮಾನಗಳಲ್ಲಿ ತನ್ನತನವನ್ನು ಪ್ರಕಟಿಸದಂಥ ಸ್ಥಿತಿಯಲ್ಲಿ ಬಸವಳಿಯಿತೆಂದರೆ ತಪ್ಪಿಲ್ಲ. ವಿಶೇವೆಂದರೆ ಯಾವ ಬ್ರಿಟಿಷರ ಆಳ್ವಿಕೆಯಿಂದ ದೇಶ ತನ್ನ ಅಂತಃಸತ್ತ್ವವನ್ನು ಮುಸುಕಾಗಿಸಿಕೊಂಡಿತೋ ಅದೇ ಬ್ರಿಟಿಷರ ಸಂಪರ್ಕದ ಪರಿಣಾಮವಾಗಿ ದೇಶಕ್ಕೆ ನವೋದಯ ಒದಗಿ ಬಂತು. ಪಾಶ್ಚಾತ್ಯ ಸಂಪರ್ಕ, ಹೊಸ ಶಿಕ್ಷಣ ಹಾಗೂ ಕ್ರೈಸ್ತ ಮಿಶನರಿಗಳ ಮುದ್ರಣ ವಿಧಾನದಿಂದಾಗಿ ಭಾರತ, ಆಲೂರು ವೆಂಕರಾಯರ ಭಾಷೆಯಲ್ಲಿ ಹೇಳುವುದಾದರೆ ‘ಕರ್ನಾಟಕಾಂತರ್ಗತ ಭಾರತ’ ಆಧುನಿಕತೆಯ, ನವೋದಯ ಅರುಣೋದಯವನ್ನು ಕಂಡಿತು. ಇದನ್ನೇ ಶ್ರೀನಿವಾಸ ಹಾವನೂರು ಹೀಗೆ ಹೇಳುತ್ತಾರೆ. ‘ನವೋದಯದ ಕಾಲವನ್ನು ಕ್ರಿ. ಶ. ೧೯೨೦ರಿಂದ ಆರಂಭಿಸುತ್ತೇವಷ್ಟೆ. ಅರುಣೋದಯದ ಕಾಲವು ಅದಕ್ಕಿಂತ ನೂರು ವರ್ಷ ಹಿಂದಿನದು. (೧೮೨೦ ರಿಂದ ೧೯೨೦) ಅರುಣೋದಯವು ನವೋದಯಕ್ಕಿಂತ ಮುಂಚಿನದು. ಹೊಸಗನ್ನಡ ಸಾಹಿತ್ಯ ಭಾಸ್ಕರನು ಅದೇ ತಾನೇ ಕಾಣಿಸಿಕೊಂಡ ಕಾಲ ಇದಾದ್ದರಿಂದ ಅರುಣೋದಯವೆಂದು ಹೆಸರಿಸಿದ್ದುದು ಅನ್ವರ್ಥಕವೇ’. ಹೀಗಾಗಿ ೧೮ನೇ ಶತಮಾನದ ಆರಂಭದಿಂದ ೨೦ನೇ ಶತಮಾನದ ಎರಡನೇ ದಶಕದ (೧೯೨೦) ವರೆಗೂ ಕನ್ನಡ ಸಾಹಿತ್ಯದಲ್ಲಿ ಮಹತ್ತರ ಸಾಧನೆಯೇನೂ ಆಗಲಿಲ್ಲ. ಮಹಾಕಾವ್ಯವಾಗಲಿ ಮಹಾನ್ ಎನ್ನುವ ಗದ್ಯಕೃತಿಯಾಗಲೀ ಬರಲಿಲ್ಲ. ಈ ಎರಡು ಶತಮಾನಗಳಲ್ಲಿ ಕನ್ನಡ ಸಾಹಿತ್ಯವು ಆಧುನಿಕ ಸಾಹಿತ್ಯವೆಂಬ ಮಹಾ ಪ್ರವಾಹವಾಗಿ ಹರಿಯಲು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿತ್ತು ಎನ್ನಬಹುದು. ಈ ಸಿದ್ಧತೆ ಸಾಮಾನ್ಯ ಸಿದ್ಧತೆಯಲ್ಲ. ವಸ್ತುವಿನಲ್ಲಿ, ಚಿಂತನೆಯಲ್ಲ, ಅಭಿವ್ಯಕ್ತಿಯಲ್ಲಿ, ಶೈಲಿಯಲ್ಲಿ ಪ್ರತಿಯೊಂದರಲ್ಲೂ ಹೊಸತನ, ಹೊಸ ಸಾಧನೆಯನ್ನು ದಾಖಲಿಸುವ ತಿರುವಿಗೆ ಕನ್ನಡ ಸಾಹಿತ್ಯ ಸಿದ್ದವಾಗುತ್ತಿತ್ತು. ೧೧-೧೨ ಶತಮಾನಗಳಿಂದ ಬೆಳೆಸಿಕೊಂಡು ಬಂದಿದ್ದ ಪದ್ಯ ಪ್ರಧಾನ ಸಾಹಿತ್ಯನಿರ್ಮಿತಿಯ ಹಾದಿಯನ್ನು ಬದಲಿಸಿ ಗದ್ಯ ಪ್ರಧಾನ ಯುಗ ಆರಂಭವಾಗಲು, ಪೌರಾಣಿಕ-ಧಾರ್ಮಿಕ-ಅಲೌಕಿಕ ವಿಷಯಗಳ ಸುತ್ತಲೆ ಬರೆಯುವುದು, ಮಾತ್ರ, ಗಣ-ಛಂದಸ್ಸುಗಳ ಬಂಧನವನ್ನು ಕಿತ್ತೆಸೆದು ಮುಕ್ತವಾಗಿ ಕನವ ರಚಿಸುವ ನವಯುಗಕ್ಕೆ, ನವೋದಯಕ್ಕೆ, ಹೊಸಗನ್ನಡ ಸಾಹಿತ್ಯಕ್ಕೆ ಈ ಎರಡು ಶತಮಾನಗಳಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿತ್ತು.

ಅರುಣೋದಯ ಗಮನಿಸಬೇಕಾದುದೆಂದರೆ ಈ ಅರುಣೋದಯ ಕಾಲದಲ್ಲೇ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ (೧೮೪೩) ಬೆಳಕು ಕಂಡಿತು. ಇದಾದನಂತರ ಮುಂದಿನ ೬೦-೮೦ ವರ್ಷಗಳವರೆಗೆ, ನಿರ್ದಿಷ್ಟವಾಗಿ ನುಡಿಯುವುದಾದರೆ ಕನ್ನಡ ಸಾಹಿತ್ಯದಲ್ಲಿ ನವೋದಯ ಆರಂಭವಾಗುವ ೧೯೨೦ರ ದಶಕದವರೆಗೆ ಅನೇಕ ಪತ್ರಿಕೆಗಳು ಬಂದವು. ವೈವಿಧ್ಯಮಯ ವಿಷಯ-ಆಸಕ್ತಿಗಳನ್ನು ಪೋಷಿಸಿದವು. ಕನ್ನಡ ಸಾಹಿತ್ಯದ ಅರುಣೋದಯದ ಕಾಲವೇ ಕನ್ನಡ ಪತ್ರಿಕೋದ್ಯಮದ ಅರುಣೋದಯದ ಕಾಲವೂ ಹೌದು. ೧೮೪೩ರಿಂದ ೧೯೨೦ರ ಅವಧಿಯಲ್ಲಿ ಕನ್ನಡ ಪತ್ರಿಕೋದ್ಯಮದ ಶಿಶು ಉದಯಗೊಂಡು, ಅಂಬೆಗಾಲಿಟ್ಟು ಮುದ್ದು ಮಾತನಾಡುತ್ತಾ ಎದ್ದು ನಿಲುವಷ್ಟು ಬೆಳಿದಿದ್ದಾನೆ. ಅದನ್ನೇ ಶ್ರೀನಿವಾಸ ಹಾವನೂರು ಇನ್ನೊಂದು ರೀತಿಯಲ್ಲಿ ವಿಂಗಡಿಸುತ್ತಾರೆ. ‘ಕನ್ನಡ ಪತ್ರಿಕೋದ್ಯಮದ ಅರುಣೋದಯ ಕಾಲದಲ್ಲಿ ೧೮೪೩ರಿಂದ ೧೮೮೦ ಮತ್ತು ೧೮೮೧ ರಿಂದ ೧೯೨೦ ಎಂದು ಎರಡು ಹಂತಗಳಾಗಿ ವಿಂಗಡಿಸಬಹುದು. ಮೊದಲಿನ ಹಂತದಲ್ಲಿ ಪತ್ರಿಕೆಗಳ ಮುಖ್ಯ ಉದ್ದೇಶ ಜನತೆಗೆ ಪ್ರಪಂಚದ ವಿವಿಧ ವಿಷಯಗಳನ್ನು ಪರಿಚಯಸಿಕೊಳ್ಳವುದಾಗಿತ್ತು. ಮುಂದಿನ ಹಂತದಲ್ಲಿ ವಿಷಯದ ವೈವಿಧ್ಯವನ್ನೂ ಮುಕ್ತ ರೀತಿಯ ಅಭಿವ್ಯಕ್ತಿಯನ್ನೂ ಹೆಚ್ಚಾಗಿ ಕಾಣುತ್ತೇವೆ.’ ಕನ್ನಡ ಸಾಹಿತ್ಯದ ಅರುಣೋದಯದ ಕಾಲದಲ್ಲಿ ಹಳೆಗನ್ನಡದಿಂದ ಹೊಸಗನ್ನಡಕ್ಕೆ ಹೊರಳುವುದನ್ನೂ ಪದ್ಯ ಪ್ರಧಾನದಿಂದ ಸಾಹಿತ್ಯವು ಗದ್ಯಕ್ಕೆ ತಿರುಗುವುದನ್ನೂ ಕಾಣುತ್ತೇವೆ. ಪತ್ರಿಕೋದ್ಯಮದ ಅರುಣೋದಯದಲ್ಲಿ ಹಳತರ ಗದ್ಯಕ್ಕೆ ಪ್ರಶ್ನೆಯೇ ಇಲ್ಲ. ೧೮೪೩ರಿಂದ ಮೊದಲು ಮಾಡಿ ಎಲ್ಲವೂ ಹೊಸತು. ಪತ್ರಿಕೋದ್ಯಮವೇ ನವೀನ ಪ್ರಯೋಗ. ಮೊದಲು ಮತ ಪ್ರಸಾರದ ವಾಹಕಗಳಾಗಿ ಹಾಗೂ ಸಾರ್ವಜನಿಕ ಕುತೂಹಲ ತಣಿಸುವ ವೇದಿಕೆಗಳಾಗಿ ಆರಂಭಗೊಂಡ ಪತ್ರಿಕೆಗಳು ನಿಧಾನವಾಗಿ ಸಾಮಾನ್ಯಸಕ್ತಿ ಹಾಗೂ ವಿಶೇಷಾಸಕ್ತಿ ನಿಯತಕಾಲಿಕಗಳಾಗಿ ವಿಂಗಡನೆಗೊಳ್ಳುತ್ತವೆ. ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ಸುದ್ದಿಗೆ-ಮನರಂಜನೆಗೆ ಒತ್ತುಕೊಟ್ಟು ಪ್ರಸಾರವನ್ನು ಹೆಚ್ಚಿಸಿಕೊಳ್ಳುತ್ತಾ ಮುನ್ನಡೆದರೆ ವಿಶೇಷಾಸಕ್ತಿಯ ನಿಯತಕಾಲಿಕಗಳು ಖಂಡಿತವಾದ ಸೀಮಿತ ವಿಷಯಗಳಿಗೆ ಮೀಸಲಾಗಿ ಕೆಲವೇ ಜನರನ್ನು ತಲುಪುತ್ತಾ ಆದರೆ ಪ್ರಭಾವದಲ್ಲಿ ಕಡಿಮೆ ಇಲ್ಲದೆ ಉಳಿದುಕೊಂಡಿರುತ್ತವೆ. ಇದು ಅರುಣೋದಯದ ಪತ್ರಿಕೋದ್ಯಮದ ಸ್ವರೂಪ.

ಅರುಣೋದಯ ಕಾಲದ ಸಾಹಿತ್ಯ ಪತ್ರಿಕೆಗಳು

ಕನ್ನಡ ಪತ್ರಿಕೋದ್ಯಮದ ಅರುಣೋದಯ ಕಾಲದಲ್ಲಿ ಸಾಹಿತ್ಯಕ್ಕೆ ಮೀಸಲೆಂದು ಘೋಷಿಸಿಕೊಂಡು ಪತ್ರಿಕೆಗಳು ಪ್ರಕಟಗೊಳ್ಳಲಿಲ್ಲ. ಆದರೆ ಮೌನವಾಗಿಯೇ, ಪರೋಕ್ಷವಾಗಿಯೇ ಸಾಹಿತ್ಯಕ್ಕೆ ಹೆಚ್ಚಿನ ಸ್ಥಾನ ನೀಡಿದವು. ಸಾಹಿತ್ಯವೆಂದರೆ ಕಾವ್ಯವೆ ಆಗಿದ್ದ ಆಕಾಲದಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಪ್ರಕಟಣೆ, ಪ್ರಚಾರದ ಉದ್ದೇಶದಿಂದ ಪತ್ರಿಕೆಗಳು ಹುಟ್ಟಿಕೊಂಡವು, ‘ಕಾವ್ಯಮಂಜರಿ’, ‘ಕಾವ್ಯ ಕಲಾ ನಿಧಿ’, ‘ಕಾವ್ಯ ಕಲ್ಪದ್ರುಮ’ ಈ ಮಾದರಿಯ ಪತ್ರಿಕೆಗಳು. ಈ ಪತ್ರಿಕೆಗಳಿಗೆ ನಿಯತಕಾಲಿಕತೆ ಇರಲಿಲ್ಲ. ಪತ್ರಿಕೆಗಳು ಪುಸ್ತಕ ರೂಪದಲ್ಲಿದ್ದವು. ಒಂದೊಂದು ಸಂಚಿಕೆಯಲ್ಲಿ ಒಂದೊಂದು ಪ್ರಾಚೀನ ಕಾವ್ಯವನ್ನು ಇಡಿಯಾಗಿ ಪ್ರಕಟಿಸಲಾಗುತ್ತಿತ್ತು. ಇವುಗಳ ಸಂಚಿಕೆಯ ಸಂಖ್ಯೆನ್ನು ಮಾತ್ರ ಕಾವ್ಯಕಲಾನಿಧಿ ೧,೨,೩. . . ಹೀಗೆ ಮುಂದುವರಿಸಲಾಗುತ್ತಿತ್ತು. ಆದರೆ ಇವು ಪತ್ರಿಕೆಗಳಾಗಿ ನೋಂದಾವಣೆಗೊಂಡಿದ್ದವು. ಇವು ಕನ್ನಡ ಸಾಹಿತ್ಯ ಪತ್ರಿಕೆಗಳ ಮೂಲ ಮಾದರಿಗಳು. ಆದಿರೂಪಗಳು. ಧಾರವಾಡದ ವಿದ್ಯಾವರ್ಧಕ ಸಂಪಘದಿಂದ ಪ್ರಕಟಿಸಲ್ಪಟ್ಟ ‘ವಾಗ್ಭೂಷಣ’ ಕನ್ನಡದ ಮೊದಲ ಪರಿಪೂರ್ಣ ಸಾಹಿತ್ಯ ಪತ್ರಿಕೆ. ಕನ್ನಡ ಸಾಹಿತ್ಯದಲ್ಲಿ ಹಳತು ಹೋಗಿ ಹೊಸತು ಬರುವುದರ ಸೂಚಕವಾದ ಸಮ್ಮಿಶ್ರ ಕಾವ್ಯವನ್ನು ‘ವಾಗ್ಭೂಷಣ’ದ ಸಂಚಿಕೆಗೆಳಲ್ಲಿ ಕಾಣುತ್ತೇವೆ. ‘ವಾಗ್ಭೂಷಣ’ಕ್ಕೆ ಘೋಷಿಸಲ್ಪಟ್ಟ ಸಂಪಾದಕೀಯ ನೀತಿಯಿತ್ತು. ಸಂಪುಟ, ಸಂಚಿಕೆಗಳ ಮುಂದುವರಿಕೆ ಇತ್ತು. ೧೯ನೇ ಶತಮಾನದ ಕೊನೆಯಲ್ಲಿ ಕನ್ನಡ ಸಾಹಿತ್ಯ ಪದ್ಯವೂ ಅಲ್ಲದ ಗದ್ಯವೂ ಅಲ್ಲದ ಸ್ಥಿತಿ ತಲುಪಿತ್ತು. ಎಂ. ಎಸ್. ಪುಟ್ಟಣ್ಣನವರ ‘ಹೇಮಚಂದ್ರ ರಾಜವಿಲಾಸ’ವು (೧೮೯೯) ಆ ಕಾಲದ ಸಾಹಿತ್ಯದ ಒಂದು ಮಾದರಿ. ಆಗಿನ ಕಾಲದ ಪತ್ರಿಕೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪತ್ರಿಕೆಗಳಲ್ಲಿ ಸಾಹಿತ್ಯವೆಂದು ಕರೆಯಬಹುದಾದದ್ದು ಬಂದರೆ ಪದ್ಯವೇ ಹೆಚ್ಚು. ಬಹುಶಃ ಎಲ್ಲವೂ ಹಳೆಯ ಕಾಲದ ಶೈಲಿ, ಪ್ರಾಸ ಪ್ರಿಯತೆಯಿಂದ ಬಂದವು. ಒಂದು ಉದಾಹರಣೆ ನೋಡಿ.

ಸೋದರಿಯರೊಂದುಗೊಡಿಯೇ
ಮೋದದೆ ಕನ್ನಡಿಗರಲ್ಲಿ ಪೆರ್ಚಿಸೆ ತಿಳಿವಂ ||
ಭೇದವ ತೊರೆದೊಡಗೂಡಿದ
ಸಾದರ ವಾರ್ತೆಯನೆ ಕೇಳ್ದು ಮೆಚ್ಚಿದರೊಳರೇ ?||

ಹಳೆಯ ರೀತಿಯ ಸೆಳವಿಗೆ ಕಾಲವು ಸಿಕ್ಕಿದ್ದರೂ ಅಲ್ಲಲ್ಲಿ ಹೊಸತನ ಈ ಉದಾಹರಣೆಯಲ್ಲಿ ಎದ್ದುಕಾಣುತ್ತದೆ. ಕನ್ನಡ ಸಾಹಿತ್ಯದ ಅರುಣೋದಯಕ್ಕೆ ಅಂದಿನ ಪತ್ರಿಕೆಗಳ ಕೊಡುಗೆಗಳನ್ನೂ ಮರೆಯುವಂತಿಚಲ್ಲ. ಇಂದು ಹೇಗೆ ಹೊಸ ಸಾಹಿತ್ಯ ಸೃಷ್ಟಿ, ಸಾಹಿತ್ಯದ ಹೊಸ ತಿರುವುಗಳು ಮೊದಲಿಗೆ ಪತ್ರಿಕೆಗಳ ಮೂಲಕವೇ ಪ್ರಕಟಗೊಳ್ಳುವುವೋ, ಅಂದಿನ ಕಾಲದಲ್ಲಿದ್ದ ವಾಗ್ಭೂಷಣಾದಿ ಕೆಲವೇ ಪತ್ರಿಕೆಗಳು ಕನ್ನಡ ಸಾಹಿತ್ಯದ ಮುಂಬೆಗಲನ್ನು ಹೊರ ಚೆಲ್ಲಿದವು. ೧೮೪೩ರಿಂದ ೧೯೨೦ರ ವರೆಗಿನ ಕನ್ನಡ ಸಂದರ್ಭದಲ್ಲಿ ಆಧುನಿಕ ಕನ್ನಡ ಸಾಹಿತ್ಯ ನಿಧಾನವಾಗಿ ಮೈದಳೆಯುವ ಕ್ರಿಯೆಯನ್ನು ಪತ್ರಿಕೆಗಳೇ ದಾಖಲಿಸಿದವು ಎಂದರೆ ತಪ್ಪಾಗಲಾರದು. ವಿಶೇಷಾಸಕ್ತಿ ಸಾಮಾನ್ಯ ಆಸಕ್ತಿಯ ಪತ್ರಿಕೆಗಳೆಂದು ಭೇದ ಮಾಡಲಾಗದ ಬೆಳವಣಿಗೆಯ ಹಂತದಲ್ಲಿದ್ದರೂ ಆಧುನಿಕ ಕನ್ನಡ ಕಂದನನ್ನು ಈ ಪತ್ರಿಕೆಗಳು ಮುದ್ದಾಡಿ ಬೆಳಸಿದ್ದನ್ನು ಮರೆಯುವಂತಿಲ್ಲ. ಸಾಹಿತ್ಯದಲ್ಲಿ ಪ್ರಾಸ ಕನ್ನಡ ಸಾಹಿತ್ಯದ ಅರುಣೋದಯದಲ್ಲಿ ಪತ್ರಿಕೆಗಳ ಪಾತ್ರವೇನೆಂಬುದನ್ನು ನಿರೂಪಿಸಲು ಒಂದು ಉದಾಹರಣೆ ನೀಡಬಹುದು. ಪ್ರಾಚೀನ ಕನ್ನಡ ಪದ್ಯದಲ್ಲಿ ಆದಿಪ್ರಾಸ ಬಿಡಬಾರದು ಕಟ್ಟಳೆಗಳಾಗಿದ್ದವು. ಪ್ರಾಸವಿಲ್ಲದ ಕವಿತೆ ಕವಿತೆಯೇ ಅಲ್ಲ ಎಂಬ ಭಾವನೆಯಿತ್ತು. " . . . ಯೋಗ್ಯತೆಯಿಲ್ಲದೆ ಬರೀ ಚಾಪಲ್ಯದಿಂದ ಛಂದಸ್ಸಿಗೆ ಸರಿಯಾಗಿ ಅಕ್ಷರಗಳನ್ನು ಕೂಡಿಸುವುದನ್ನು ಕಲಿತು, ಶಬ್ದದೊಷ, ಅರ್ಥದೋಷ, ವಾಕ್ಯದೋಷಗಳಿಗೆ ಜನ್ಮ ಭೂಮಿಯೆನಿಸುವ ಶುಷ್ಕ ಕವಿತೆಯನ್ನು ಮಾಡಿ ವಿದ್ವಾಂಸರ ಹಾಸ್ಯಕ್ಕೆ ಪಾತ್ರರಾಗುವುದಕ್ಕಿಂತಲೂ ವ್ಯಂಗ್ಯವಾಡುವುದನ್ನು ಅಂದಿನ ಪತ್ರಿಕೆಗಳಲ್ಲಿ ಕಾಣಬಹುದಿತ್ತು. ಶುಷ್ಕ ಕವಿತೆಗಳ ಬಗ್ಗೆ ಕಟುಟೀಕೆಗಳು ಪತ್ರಿಕೆಗಳಲ್ಲಿ ಬರುತ್ತಿದ್ದವು. ಹೊಸಗನ್ನಡ ಸಾಹಿತ್ಯದ ನಿರ್ಮಾತೃಗಳಲ್ಲಿ ಒಬ್ಬರಾದ ಗೋವಿಂದ ಪೈಗಳು ಆದಿಪ್ರಾಸವನ್ನು ಬಿಟ್ಟು ಬರೆಯಬೇಕೆಂದು ನಿರ್ಧರಿಸಿದ ಪ್ರಸಂಗವೂ ಆ ಕಾಲದ ಪತ್ರಿಕೆಗಳ ಮೂಲಕ ಸಾಹಿತ್ಯ ಮುನ್ನಡೆ ಪಡೆದುದನ್ನು ಸಮರ್ಥಿಸುತ್ತದೆ. ಅದನ್ನು ಗೋವಿಂದ ಪೈಗಳೇ ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ. ಅವರು ತಮ್ಮ ‘ಹೊಲೆಯನು ಯಾರು?’ ಎಂಬ ಕವಿತೆಯನ್ನು ‘ಸ್ವದೇಶಾಭಿಮಾನಿ ಪತ್ರಿಕೆ’ಯಲ್ಲಿ ಪ್ರಕಟಿಸಿದಾಗ "ಕನ್ನಡ ಕಾವ್ಯ ಮಾರ್ಗದಲ್ಲಿ ಹುಲಿ! ಹುಲಿ! ಎಂದು ನನ್ನ ಪ್ರಾಸತ್ಯಾಗವನ್ನು ಬಿರುಸಾಗಿ ಖಂಡಿಸಿ ಆ ಪತ್ರಿಕೆಯಲ್ಲಿ ಪತ್ರವ್ಯವಾರದ ಹೂಲಿ ಎಬ್ಬಿತು. ಅದಕ್ಕೆ ಪ್ರತಿಯಾಗಿ ಕನ್ನಡಕ್ಕೆ ಪ್ರಾಸವೇನೂ ವೇದ ವಾಕ್ಯವೂ ಅಲ್ಲ. ಶಾಶ್ವತವೂ ಅಲ್ಲ. . . ಇಂದು ಒಬ್ಬನೇ ನಡೆವ ಮೇಕೆ ದಾರಿಯೇ ಮುಂದೆ ತೇರು ಎಳೆವ ಹೆದ್ದಾರಿ ಎಂದು ಆ ಪತ್ರಿಕೆಯಲ್ಲಿ ಬರೆದೆ" ಎನ್ನುತ್ತಾರೆ. ಅದಕ್ಕೆ ಪ್ರತಿಯಾಗಿ ಪ್ರಾಸದ ಪರ-ವಿರೋಧವಾಗಿ ಆಗಿನ ಕಾಲದ ಪತ್ರಿಕೆಗಳಲ್ಲಿ ವಾದ ವಿವಾದ ಬಿರುಸಾಗಿ ನಡೆಯಿತೆನ್ನಲಾಗಿದೆ. ‘ಕರ್ನಾಟಕ ದೇಶದಲ್ಲಿ ಪ್ರಾಸವಿಲ್ಲದ ಪದ್ಯಗಳು ಪದ್ಯಗಳು ತ್ರಾಸಿಲ್ಲದೆ ಹಾರಾಡುವುದಾದರೆ ಕ್ರಾಸು ಹಾಕಿ ಪದ್ಯಗಳನ್ನೇಕೆ ನಿರ್ಮಿಸಬಾರದೆಂದು ಇದೂ ಒಂದು ಪ್ರಶ್ನೆ’ ಎಂದು ಒಬ್ಬರು ಕಟಕಿಯಾಡಿದರೆ,

ಪ್ರಾಸಮನಿಡುವೊಡೆ ನಿನಗಾ |
ಯಾಸಮದಪ್ಪೊಡೆ ಬಿಡುವುದು ಪದ್ಯರಚನೆಯಂ ||
ಸಾಸಮಿದಲ್ಲವೆ ? ಲೋಕದೋ |
ಳಾಶಿಸುವುದೆ ಮದುವೆಯಂ ನಪುಸಂಕನೂ ಪೇಳ್ ||

ಎಂದು ಪ್ರಾಸವಿಲ್ಲದೆ ಬರೆಯುವವರನ್ನು ನಪುಂಸಕರೆಂದು ಒರಟುತನದಲ್ಲಿ ಟೀಕಿಸುವವರೆಗೆ ಪತ್ರಿಕೆಗಳಲ್ಲಿ ಪ್ರಾಸದ ಬಗ್ಗೆ ವಾದ ವಿವಾದಗಳಾಗಿದ್ದನ್ನು ಎಸ್. ಅನಂತನಾರಾಯಣ ದಾಖಲಿಸುತ್ತಾರೆ. ಹೀಗೆ ಹೊಸ ಸಾಹಿತ್ಯ ಪ್ರವೃತ್ತಿಯೊಂದು ಕನ್ನಡದಲ್ಲಿ ಉದಯಿಸುವ ಸಂದರ್ಭದಲ್ಲಿ ಸನಾತನ ವಾದಿಗಳಿಗೂ ಪ್ರಯೊಗಶೀಲರಿಗೂ ವಾಗ್ವಾದಗಳು ನಡೆದವು. ಕನ್ನಡ ಸಾಹಿತ್ಯದ ಪ್ರತಿಒಂದು ತಿರುವಿನಲ್ಲೂ ಇಂಥ ವಾಗ್ವಾದವನ್ನು ಕಾಣುತ್ತೇವೆ. ಈ ಸಾಹಿತ್ಯಿಕ ವಾಗ್ವಾದಗಳಿಗೆ ಅಂದಿನ ಪತ್ರಿಕೆಗಳು ವೇದಿಕೆಗಳಾದವು. ಆ ಕಾಲದ ಪತ್ರಿಕೆಗಳಿಲ್ಲದೇ ಸಾಹಿತ್ಯದ ಈ ಬೆಳವಣಿಗೆಗಳನ್ನು ಪ್ರಚಲಿತಗೊಳಿಸಲಾಗುತ್ತಿರಲಿಲ್ಲ. ದಾಖಲಿಸಲೂ ಸಾಧ್ಯವಾಗುತ್ತಿರಲಿಲ್ಲ. ಅಂದರೆ ಕನ್ನಡ ಸಾಹಿತ್ಯದ ಅರುಣೋದಯವೂ ಕನ್ನಡ ಪತ್ರಿಕೋದ್ಯಮದ ಅರುಣೋದಯವೂ ಪರಸ್ಪರ ಪೂರಕವಾಗಿ, ಅವಿನಾಭಾವ ಸಂಬಂಧ ಹೊಂದಿ ಆವಿರ್ಭವಿಸಿದವೆಂದು ಹೇಳಬಹುದು. ನವೋದಯದ ಆರಂಭ ಅದು ೧೯೨೦ನೇ ಇಸ್ವಿ. ಇಲ್ಲಿಂದ ಕನ್ನಡ ಸಾಹಿತ್ಯ ನಿಶ್ಚಿತ ಹೊರಳನ್ನು ಸಂಪೂರ್ಣವಾಗಿ ಪಡೆದುಕೊಂಡಿತೆಂದು ಅನ್ನಬಹುದು. ೧೯೨೦ನೇ ಇಸ್ವಿಯನ್ನು ನವೋದಯದ ಆರಂಭವೆಂದು ಗುರುತಿಸಲಾಗುತ್ತದೆ. ನವೋದಯ ಆಧುನಿಕ ಕನ್ನಡ ಸಾಹಿತ್ಯದ ಮೊದಲ ಪಾದವಾದ್ದರಿಂದ ಕನ್ನಡಕ್ಕೆ ಆಧುನಿಕ ಸಾಹಿತ್ಯ ಪದಾರ್ಪಣೆ ಮಾಡಿದ್ದು ೧೯೨೦ರಲ್ಲಿ ಮುಂದಿನ ೩೦ ವರ್ಷಗಳು ನಿಶ್ಚಿತವಾಗಿ ನವೋದಯದ ಕಾಲ. ಕೊನೆಯ ೧೦ ವರ್ಷಗಳಲ್ಲಿ ಪ್ರಗತಶೀಲವೆಂಬ ಇನ್ನೊಂದು ಕವಲು ಕನ್ನಡ ಸಾಹಿತ್ಯಕ್ಕೆ ಸೇರಿಕೊಂಡಿತು. ಆದರೂ ೧೯೫೦ರವರೆಗೂ ನವೋದಯದ ಕಾವು ಆರಲಿಲ್ಲ. ಜನಪ್ರಿಯತೆ ಕುಗ್ಗಲಿಲ್ಲ. ಇಂದಿಗೂ ಮತ್ತೆ ನವೋದಯದ ಭಾವಗೀತಾತ್ಮಕ ಕವನಗಳು ಅಲ್ಲಲ್ಲಿ ಬಂದೇ ಬರುವುದು ನವೋದಯದ ಜನಪ್ರಿಯತೆಗೆ ಸಾಕ್ಷಿ. ನವೋದಯದವನ್ನು ಮುಖ್ಯವಾಗಿ ಕಾವ್ಯದೊಂದಿಗೆ ಗುರುತಿಸುತ್ತಾರೆ. ಈ ಸಂದರ್ಭದಲ್ಲಿ ನಾಟಕ, ಕಥೆ, ಕಾದಂಬರಿಗಳಂಥ ಇತರ ಪ್ರಕಾರಗಳಲ್ಲೂ ಸಾಹಿತ್ಯ ರಚನೆ ನಡೆದಿದೆ. ಆದರೆ ಕಾವ್ಯದಲ್ಲಿ ಸಶಕ್ತ ಕಸಬುದಾರಿಕೆ ಕಂಡುಬರುವುದರಿಂದ, ಆ ಕಾಲದ ‘ತ್ರಿಮೂರ್ತಿ’ ಕವಿಗಳಾದ ಕುವೆಂಪು, ಬೇಂದ್ರೆ, ಪುತಿನ ತಮ್ಮ ಯಶಸ್ಸಿನ ಉತ್ತುಂಗವನ್ನು ಪ್ರಕಟಗೊಳಿಸಿದ್ದು ಇದೇ ಅವಧಿಯಲ್ಲಿ ಆಗಿರುವುದರಿಂದ ನವೋದಯದ ಕಾಲವನ್ನು ಕಾವ್ಯದ ಜೊತೆಗೆ ತಳಕು ಹಾಕುವ ಸಂಪ್ರದಾಯವಿದೆ. ನವೋದಯ ಕಾವ್ಯ ಭಾವಗೀತಾತ್ಮಕವಾದುದು. ಗೇಯ ಗುಣವುಳ್ಳದ್ದು, ಇಂಗ್ಲೀಷಿನ ಲಿರಿಕ್‌ಗೆ ಸಂವಾದಿಯಾಗಿ ಕನ್ನಡದಲ್ಲಿ ಭಾವಗೀತೆಯನ್ನು ಬಳಸಲಾಗುತ್ತದೆ. ಭಾವಗೀತೆ ಎನ್ನುವುದು ಕವಿಯ ವ್ಯಕ್ತಿನಿಷ್ಟವಾದ ಅನುಭವದ ತೀವ್ರ ಸಂವೇದನ ರೂಪವಾದ ಕೆಲವು ರಸಕ್ಷಣಗಳ ಗೇಯರೂಪದ ಅತ್ಯಂತ ಸಂಗ್ರಹವಾದ, ಸಶಕ್ತವಾದ ಒಂದು ಅಭಿವ್ಯಕ್ತಿ ವಿಶೇಷ. ‘ಹೊಸ ಮಾದರಿಯ ಭಾವಗೀತ ಮಾತ್ರ ಕವಿಯ ವ್ಯಕ್ತಿತ್ವದ ಕುಲುಮೆಯಲ್ಲಿಯೇ ಹುಟ್ಟುವಂಥದ್ದು. ಮೂಲ ಭಾವದ ಕಾವು. ವೇಗ, ಬಣ್ಣ, ಬೆಳಕುಗಳ ಮೇಲೆಯೇ ಅಭಿವ್ಯಕ್ತಿಯ ವಿವರಗಳೆಲ್ಲ ಅವಲಂಬಿಸಿರುತ್ತವೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಕಾವ್ಯದ ಆವಿಷ್ಕಾರ ಹೆಚ್ಚು ಸಜೀವವಾಯಿತು’ ಎಂಬುದಾಗಿ ಭಾವಗೀತೆಯ ಉದಯದ ಬಗ್ಗ ಕೀರ್ತಿನಾಥೆ ಕುರ್ತುಕೋಟೆ ನುಡಿಯುತ್ತಾರೆ. ಈ ಹೊಸ ಮಾದರಿಯ ಕಾವ್ಯ ಪ್ರಕಾರ ಕನ್ನಡದಲ್ಲಿ ಧುತ್ತನೇ ಅವತರಿಸಲಿಲ್ಲ. ಎಸ್. ಜಿ. ನರಸಿಂಹಾಚಾರ್‍, ಹಟ್ಟಿಂಗಡಿ ನಾರಾಯಣರಾಯರು, ಪಂಜೆ ಮಂಗೇಶರಾಯರು, ಗೋವಿಂದ ಪೈಗಳು ‘ಸುತ್ತಲಿನ ವಾತವರಣಕ್ಕೆ ಪ್ರತಿಸ್ಪಂದಿಯಾಗಿ ಸ್ವಚ್ಛಂದವಾಗಿ ಹಾಡಬೇಕೆಂಬ ಮನೀಷೆಯಿಂದ’ ಹೊಸ ಪದ್ಯಗಳನ್ನು ರಚಿಸತೊಡಗಿದ್ದರು. ಪಂಜೆ ಮಂಗೇಶರಾಯರ ‘ನಾಗರ ಹಾವೇ ! ಹಾವೂಳು ಹೂವೆ ! ಬಾಗಿಲ ಬಿಲದಲಿ ನಿನ್ನಯ ಠಾವೇ’ ಅಥವಾ ‘ಬಂತೈ ಬಂತೈ ತೆಂಕಣ ಗಾಳಿ’ ಮುಂತಾದ ಕವನಗಳು ಈ ಮಾದರಿಯವು. ಸರಳಗನ್ನಡದ, ಮುಕ್ತ ಛಂದಸ್ಸಿನ ಹೊಸ ವಸ್ತು, ಭಾವಗಳ ಈ ಕವಿತೆಗಳ ಪ್ರಕಾರಕ್ಕೆ ನಿಶ್ಚಿತ ರೂಪ ಬಂದುದು ೧೯೨೧ರಲ್ಲಿ ಬಿ. ಎಂ. ಶ್ರೀ. ಯವರ ‘ಇಂಗ್ಲೀಷ್ ಗೀತೆಗಳು’ ಪ್ರಕಟವಾದಾಗ. ‘ಶ್ರೀಯವರ ಪ್ರತಿಯೊಂದು ಕವನವೂ ಒಂದು ಜೀವಂತ ಪ್ರಾಣಿಯಾಗಿ ಕನ್ನಡ ಕಾವ್ಯವನ್ನು ಹೊಸ ಬಗೆಯಲ್ಲಿ ರೂಪಿಸುವ ಶ್ರೇಯಸ್ಸನ್ನು ಪಡೆಯಿತು. ಕನ್ನಡ ಕಾವ್ಯವನ್ನು ಮುಂದುವರಿಸಿದುದರ ಶ್ರೇಯಸ್ಸು ಈ ಕವನ ಸಂಗ್ರಹಕ್ಕೆ ಸಲ್ಲಲೇಬೇಕಾಗಿದೆ.’ ಮೈಸೂರಿನಲ್ಲಿ ಬಿ. ಎಂ. ಶ್ರೀ.ಯವರು ‘ಇಂಗ್ಲೀಷ್ ಗೀತೆ’ಗಳನ್ನು ಬರೆದು ನವೋದಯದ ಹೊರ ಆಂದೋಲನಕ್ಕೆ ಕಾರಣರಾದರೆ ಧಾರವಾಡದಲ್ಲಿ ಬೇಂದ್ರೆಯವರು ಗೆಳೆಯರ ಗುಂಪನ್ನು ಕಟ್ಟಿ ಹೆಚ್ಚು ಕಡಿಮೆ ಇದೇ ಬಗೆಯ ಆಂದೋಲನಕ್ಕೆ ಕಾರಣರಾದರು. ಮಂಗಳೂರಿನಲ್ಲಿಯೂ ಹೊಸತನದ ಗಾಳಿ ಬೀಸಸೇ ಇರಲಿಲ್ಲ. ಗೋವಿಂದ ಪೈ, ಕಡಂಗೋಡ್ಲು ಶಂಕತಭಟ್ಟ ಮೊದಲಾದ ಕವಿಗಳು ಹೊಸ ಕಾವ್ಯವನ್ನು ರೂಪಿಸಿದರು. ಕನ್ನಡ ನವೋದಯ ಕಾವ್ಯ ‘ಮೂರು ಕಡೆಯಿಂದ ತನ್ನ ಪ್ರೇರಣೆಯನ್ನು, ಸಾಮಗ್ರಿಗಳನ್ನು ಎಳೆದುಕೊಂಡು ಬಳಸಿಕೊಂಡು ಬೆಳೆಯಿತು. ಆಂಗ್ಲ ಸಾಹಿತ್ಯದಿಂದ ಅಭಿವ್ಯಕ್ತಿಯ ವಿಶೇಷತೆಗಳನ್ನೂ, ಸಂಸ್ಕತದಿಂದ ಪರಂಪರೆಯನ್ನೂ, ಜಾನಪದ ಕಾವ್ಯದಿಂದ ಸತ್ತ್ವನ್ನೂ ಅದು ಮೈಗೂಡಿಸಿಕೊಮಡಿತು. ಕುವೆಂಪು, ಬೇಂದ್ರೆ, ಪುತಿನ, ರಾಜರತ್ನಂ, ಶ್ರೀನಿವಾಸ, ವಿನಾಯಕ, ಕೆ. ಎಸ್. ನರಸಿಂಹಸ್ವಾಮಿ, ಗೋಪಾಲಕೃಷ್ಣ ಅಡಿಗ, ಸುಬ್ಬಣ್ಣ ರಂಗನಾಥ ಎಕ್ಕುಂಡಿ, ಚನ್ನವೀರ ಕಣವಿ, ಜಿ. ಎಸ್. ಶಿವರುದ್ರಪ್ಪ ಮೊದಲಾದ ಇನ್ನೂ ಅನೇಕ ಕವಿಗಳಿಂದ ಕನ್ನಡದ ಭಾವಗೀತೆ ಸಾಹಿತ್ಯ ಸಮೃದ್ಧವಾಗಿ ಬೆಳೆದು ತಕ್ಕಷ್ಟು ಫಲವನ್ನು ಕೊಟ್ಟಿದೆ.’ನವೋದಯ ಕಾವ್ಯಕ್ಕೆ ಮೈಸೂರು ಬೆಂಗಳೂರು ಕಡೆಗಳಲ್ಲಿ ಬಿ. ಎಂ. ಶ್ರೀ.ಯವರು ನೇತಾರರು. ಕನ್ನಡ ಸಾಹಿತ್ಯದ ನವೋದಯದ ಸೂರ್ಯನಾಗಿ ಅವರು ಮೂಡಿಬಂದರು. ‘ಒಂದು ಮಾತಿನಲ್ಲಿ ಸಂಕ್ಷೇಪಿಸುವುದಾದರೆ ಈಗ ತಾನೆ ಮುಗಿದ ತಲೆಮಾರಿನ ಕರ್ನಾಟಕದ ಎಲ್ಲ ಪ್ರಗತಿ ಪ್ರಯತ್ನಗಳಿಗೂ ಅವರು ಚೈತನ್ಯದುಸಿರು, ಜೀವರಕ್ತ, ವಾಹಕ ಶಕ್ತಿಯಾಗಿದ್ದರು.’ ವೋದಯ ಕಾಲದಲ್ಲಿ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿ ಮಾಡಿದ ಈ ಭಾಗದ ಸೃಜನಶೀಲರೆಲ್ಲ ಒಂದೋ ‘ಶ್ರೀ’ಯವರ ಮಿತ್ರ ವರ್ಗಕ್ಕೆ ಸೇರಿದವರಾಗಿದ್ದರು ಅಥವಾ ಶಿಷ್ಯರಾಗಿದ್ದರು ಎಂಬುದು ವಿಶೇಷ.

ನವೋದಯ ಮತ್ತು ಸಾಹಿತ್ಯ ಪತ್ರಿಕೆಗಳು

ಕನ್ನಡದ ನವೋದಯಕ್ಕೆ ಮೈಸೂರಿನಲ್ಲಿ ಆಚಾರ್ಯ ಬಿ. ಎಂ. ಶ್ರೀ.ಯವರು ನೀರೆರೆದ ಸಂದರ್ಭದಲ್ಲಿ ಅಂದಿನ ಸಾಹಿತ್ಯ ಪತ್ರಿಕೆಗಳು, ಮುಖ್ಯವಾಗಿ 'ಪ್ರಬುದ್ಧ ಕರ್ಣಾಟಕ' ಹಾಗೂ 'ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ'ಗಳು ನವೋದಯದ ಪೋಷಣೆ ಪ್ರಗತಿಗಳಲ್ಲಿ ವಹಿಸಿದ ಪಾತ್ರವನ್ನು ಮರೆಯಬಾರದು. ಸಾವಿರದೊಂಬೈನೂರು ಇಪ್ಪತ್ತರ ವೇಳೆಗೆ ಕನ್ನಡದ ಕೆಲಸ ಮಾಡಲು ಸಿಕ್ಕ ಅಶ್ವಿನೀ ದೇವತೆಗಳೆಂದು ಮಾಸ್ತಿಯವರು ತಳುಕಿನ ವೆಂಣ್ಣಯ್ಯನವರನ್ನೂ ಎ. ಆರ್. ಕೃಷ್ಣಶಾಸ್ತ್ರಿಗಳನ್ನೂ ಕರೆದಿದ್ದಾರೆ. ಈ ಕೆಲಸಕ್ಕಾಗಿ ಒಂದು ತ್ರೈಮಾಸಿಕವನ್ನು ಎ.ಆರ್. ಕೃಷ್ಣಶಾಸ್ತ್ರಿಗಳು ಆರಂಭಿಸಿದರು.ಅದುವೇ 'ಪ್ರಬುದ್ಧ ಕರ್ಣಾಟಕ' ಎಂಬುದಾಗಿಯೂ ಮಾಸ್ತಿ ನುಡಿದಿದ್ದಾರೆ. 'ಹೊಸಕನ್ನಡದಲ್ಲಿನ ಪ್ರಾಯಃ ಎಲ್ಲ ಬರಹಗಾರರೂ ಪ್ರಬುದ್ಧ ಕರ್ಣಾಟಕದಲ್ಲಿ ಬರೆದಿರುವರೆಂಬುದೂ ಇದಕ್ಕೆ ಸಾಕ್ಷಿ. ಹೊಸ ಸಾಹಿತ್ಯವನ್ನು ಕಲಿತಂತೆ ಹೊಸ ವಿಮರ್ಶೆಯನ್ನು ನಾವು ಇಂಗ್ಲಿಷ್‌ನಿಂದ ಕಲಿಯಬೇಕಾದದ್ದಿತ್ತು. ಅದು ಪ್ರಬುದ್ಧ ಕರ್ಣಾಟಕದ ಮೂಲಕ ನಡೆಯಿತು' ಎಂದಿದ್ದಾರೆ ಮಾಸ್ತಿಯವರು. 'ಧಾರವಾಡದಲ್ಲಿ ಗೆಳೆಯರ ಗುಂಪು, ಜಯಕರ್ಣಾಟಕ ಹೇಗೋ ಹಾಗೆ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜ್ ಕರ್ನಾಟಕ ಸಂಘ ಮತ್ತು ಪ್ರಬುದ್ಧ ಕರ್ಣಾಟಕ ಇವುಗಳು ಮೂರ್ತ ಶಿಲ್ಪ ಶಾಲೆಗಳಾದವು. ನಡದಲ್ಲಿ ಬರಹಗಾರರೆನಿಸಿಕೊಂಡಿರುವವರೆಲ್ಲ ಪ್ರಬುದ್ಧ ಕರ್ಣಾಟಕ ಮತ್ತು ಜಯ ಕರ್ಣಾಟಕ ಇವುಗಳ ಆಶ್ರಯವನ್ನು ತಮ್ಮ ಕೃತಿಗಳಿಗೆ ಪಡೆದೇ ಇರುವರೆಂದರೆ ಮೇಲಿನ ಮಾತಿನ ಸತ್ಯದ ಅರಿವಾಗುತ್ತದೆ. ಪ್ರಬುದ್ಧ ಕರ್ಣಾಟಕ ಬೆಳೆಯಲು ಶ್ರೀಯವರು ತಮ್ಮ ಮಿತ್ರರು ಹಾಗೂ ಶಿಷ್ಯರೊಡನೆ ದುಡಿದಿದ್ದಾರೆ. ಶ್ರೀಯವರ ಮಿತ್ರರಾದ ಡಿ,ವಿ,ಜಿ.ಯವರು ಸಾಹಿತ್ಯ ಪರಿಷತ್ ಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡಶಾಸ್ತ್ರ ಗ್ರಂಥಗಳನ್ನು, ಪ್ರಾಚೀನ ಕಾವ್ಯಗಳನ್ನು ಬದುಕಿಸಿದ್ದು ಪರಿಷತ್ ಪತ್ರಿಕೆಯ ಘಮಕಾರ್ಯಗಳಲ್ಲಿ ಒಂದು. 'ಶ್ರೀಯವರ ಶಿಷ್ಯರಾದ ಮಾಸ್ತಿಯವರು 'ಜೀವನ' ಪತ್ರಿಕೆಯನ್ನು ಮೂರು ದಶಕ ನಡೆಸಿದರು. ನವೋದಯ ಉಚ್ಛ್ರಾಯ ಕಾಲದಲ್ಲೇ ಮಾಸ್ತಿಯವರು 'ಜೀವನ'ವನ್ನು ಸಂಪಾದಿಸುತ್ತಿದ್ದರು. ಅಂದಿನ ಸಾಹಿತ್ಯ ಸಂರಚನೆ ಪ್ರತೇಕ ಅಧ್ಯಯನಕ್ಕೆ ಒಳಪಡಬೇಕಾದ ವಸ್ತು. ಆರಂಭದಲ್ಲಿ ನೇರವಾಗಿ ಪತ್ರಿಕಾ ಸಂಪಾದಕರಾಗಿರದಿದ್ದರೂ 'ಪ್ರಬುದ್ಧ ಕರ್ಣಾಟಕ' ಮೈಸೂರು ವಿಶ್ವವಿದ್ಯಾನಿಲಯದ ಆಸ್ರಯದಲ್ಲಿ ಮೈದುಂಬಿಕೊಂಡು ಪ್ರಕಟಗೊಳ್ಳುವಲ್ಲಿ ಕುವೆಂಪುರವರ ಬೆಂಬಲವಿತ್ತು. ಇದು ಮೈಸೂರು ಪ್ರಾಂತ್ಯದ ಕಥೆಯಾದರೆ ಇತ್ತ ಮಂಗಳೂರು ಕಡೆಯೂ ನವೋದಯದ ಕಾವ್ಯಲತೆ ಸೊಂಪಾಗಿ ಬೆಳೆದಿತ್ತು. ಪಂಜೆ ಮಂಗೇಶರಾವ್, ಗೋವಿಂದ ಪೈ, ಕಡೆಂಗೋಡ್ಲು ಶಕರಭಟ್ಟ, ಮುಳಿಯ ತಿಮ್ಮಪ್ಪಯ್ಯ, ಉಗ್ರಾಣ ಮಂಗೇಶರಾಯರು, ಎಂ. ಎನ್.ಕಾಮತರು ಹೀಗೆ ಈ ಕಾಲದಲ್ಲಿ ಕೃತಿರಚನೆ ಮಾಡುತ್ತಿದ್ದವರ ಸಾಲು ದೀರ್ಘವಾಗಿದೆ. ಇವರಲ್ಲಿ ಕಡೆಂಗೋಡ್ಲು 'ಸ್ವದೇಶಾಭಿಮಾನಿ' ಪತ್ರಿಕೆಯ ಸಂಪಾದಕರು. ಮುಳಿಯ ತಿಮ್ಮಪ್ಪಯ್ಯನವರು 'ಕನ್ನಡ ಕೋಗಿಲೆ'. ಎಂ.ಎನ್. ಕಾಮತರ ಸಾಹಸ 'ಆನಂದ'. 'ಶ್ರೀ ಕೃಷ್ಣಸೂಕ್ತಿ' 'ಕರ್ನಾಟಕ ಕೇಸರಿ', ಮುಂತಾದ ಸಾಹಿತ್ಯ ಪತ್ರಿಕೆಗಳು ಆ ಕಾಲದ ಸಾಹಿತ್ಯಿಕ ರಚನೆಗಳುಮೊದಲಿಗೆ ಸಾರ್ವಜಿಕರ ಎದುರು ಪ್ರಕಟಗೊಳ್ಳಲು ವೇದಿಕೆಗಳಾದವು. ಇದೇ ಅವಧಿಯಲ್ಲಿ 'ಆನೆ ನಡೆದುದೇ ದಾರಿ'ಎಂಬ ಹಾಗೆ 'ವಸಂತ' ಪತ್ರಿಕೆಯನ್ನು ಶಿವರಾಮಕಾರಂತರು ಹೊರಡಿಸಿದರು. ಇತ್ತ ಧಾರವಾಡದಲ್ಲಿ 'ಹೊಸಕಾಲಕ್ಕನುಗುಣವಾಗಿ ಹೊಸ ಸಾಹಿತ್ಯವನ್ನು ನಿರ್ಮಿಸಲು ಸಮಾನ ಧರ್ಮದ ಉತ್ಸಾಹಿ ಗೆಳೆಯರ ಗುಪೊಂದು ಬೇಂದ್ರೆಯವರ ಮೂಲ ಸ್ಫೂರ್ತಿಯಿಂದ ಅವರ ಸುತ್ತ ನೆರೆಯಿತು. ಅವರೇ ಅದಕ್ಕೆ ಕೇಂದ್ರ ಬಿಂದುವಾಗಿ ನಿಂತರು. ಹೊಸಕನ್ನಡ ಸಾಹಿತ್ಯಕ್ಕೆ ನವೋದಯದ ಕಾಲ ಆಗಲೇ ಪ್ರಾರಭವಾಯಿತು.'ಗುಂಪಿನ ಉದ್ದೇಶ ಒಬ್ಬೊಬ್ಬರಲ್ಲಿಯೂ ಹುದುಗಿದ್ದ ಶಕ್ತಿ ವಿಕಾಸಕ್ಕೆ ಅನುವು, ಅನುಕೂಲ ಒದಗಿಸಿಕೊಡುವುದೇ ಆಗಿತ್ತು. ಸಾಹಿತ್ಯ ಸೃಷ್ಟಿ, ಸಾಹಿತ್ಯದ ಅಭ್ಯಾಸ, ಸಾಹಿತ್‌ಉ ವಿನೋದ, ಬರೆಯುವುದು, ಬರೆದದ್ದನ್ನು ರಸಿಕ ಗೆಳೆಯರಿಗೆ ಓದಿ ತೋರಿಸುವುದು, ಪ್ರಕಟಗೊಳಿಸುವುದು ಗೆಳೆಯರ ಗುಂಪಿನ ದೈನಂದಿನ ಚಟುವಟಿಕೆಗಳಾಗಿದ್ದವು. . . ಗೆಳೆಯರ ಗುಂಪಿನ ಪ್ರಥಮ ಕವನಸಂಕಲನ 'ಹಕ್ಕಿ ಹಾರುತಿದೆ' ಹೊಸಗನ್ನಡ ಕಾವ್ಯದ ನಾಂದಿಯಾಗಿದೆ. ಆದರೂ ಗುಂಪಿನ ಸಿದ್ಧಿಗಳನ್ನೆಲ್ಲ ಇತಿಹಾಸವಾಗಿ, ನಿರೂಪಿಸಲು ಒಂದು ಸಾಧನೆ ಬೇಕಾಗಿತ್ತು. ಅದಕ್ಕೇ 'ಸ್ವಧರ್ಮ', 'ಜಯಕರ್ಣಾಟಕ' ಪತ್ರಿಕೆಗಳನ್ನು ತೆಗೆದುಕೊಂಡು ಕೆಲವರ್ಷ ನಡೆಸಿದರು. ಜಯಕರ್ಣಾಟಕ ಗ್ರಂಥಮಾಲೆ'ಯ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದರು. 'ಜೀವನ' ಪತ್ರಿಕೆಯನ್ನುಆರಂಭದ ನಾಲ್ಕು ವರ್ಷ ಬೇಂದ್ರೆಯವರ ನೇತೃತ್ವದಲ್ಲಿ ಗೆಳೆಯರ ಗುಂಪು ನಡೆಸಿತು. ಗೆಳೆಯರ ಗುಪಿನ ಮೊದಲೂ ನಡೆದ ಸಾಹಿತ್ಯ ಕ್ರಿಯೆ ಸಣ್ಣದಲ್ಲ. ಇಲ್ಲಿ ಜನರಲ್ಲಿ ಕಾವ್ಯವನ್ನು ಹೆಚ್ಚು ಹೆಚ್ಚಾಗಿ ಬರೆಯುವ, ಓದುವ ಅಭ್ಯಾಸ ಬಂದಂತೆ, ಪದ್ಯಗಳಿಗಾಗಿಯೇ 'ಪ್ರಭಾತ'ಎಂಬ ಪತ್ರಿಕೆ ಹುಟ್ಟಿತು. ಈ ಪತ್ರಿಕೆ ಎರಡು ವರ್ಷ ನಡೆದು ೧೯೨೦ರ ಕೊನೆಯಲ್ಲಿ ನಿಂತುಹೋಯಿತು...ಪ್ರಭಾತದಲ್ಲಿ ಬರೆಯುತ್ತಿದ್ದವರ ಬಳಗವೇ ಮುಂದೆ ಗೆಳೆಯರ ಗುಂಪಿನ ಮೂಲ ಬೀಜವಾಯಿತು. ಈ ಗೆಳೆಯರ ಗುಂಪಿನ ಕವಿಗಳು ೧೯೩೦ರ ಒಳಗೆ ನಡೆಸಿದ ಸಾಹಿತ್ಯಿಕ ಚಟುವಟಿಕೆಗಳೆ ಧಾರವಾಡದ ಕಡೆಯಲ್ಲಿ ಕಾವ್ಯ ಸಾಮ್ರಾಜ್ಯದ ವಿಸ್ತಾರಕ್ಕೆ ಕಾರಣವಾಯಿತು. ಅಂತೆಯೇ ಅರುಣೋದಯ, ಸವೋದಯ ಕಾವ್ಯ ವಿಕಾಸನಕ್ಕೆ ಈ ಪತ್ರಿಕೆಗಳು ಚಾರಿತ್ರಿಕ ದಾಖಲೆ ಒದಗಿಸುವುವು. 'ಪ್ರಭಾತ'ದಲ್ಲಿ ಬಂದ ಕವನಗಳು ನವೋದಯದಪೂರ್ವದವು. ಅನಂತನಾರಾಯಣ ಹೇಳುವ ಹಾಗೆ ಪ್ರಭಾತದಲ್ಲಿ ಪ್ರಕಟವಾದ ಕವಿತೆಗಳಲ್ಲಿ ಮುಕ್ಕಾಲು ಪಾಲು ಷಟ್ಪದಿಗಳಲ್ಲಿವೆ. ವಸ್ತುವಿನ ವಿಷಯದಲ್ಲಿ ಮಾತ್ರ ಹೊಸದು, ಹಳೆಯದು ಎರಡರ ಸಮ್ಮಿಶ್ರಣವನ್ನು ಕಾಣಬಹುದು. ಜಯಕರ್ನಾಟಕದ ಆರಂಭದ ಸಂಚಿಕೆಗಳಲ್ಲಿ ಅಂದರೆ ೧೯೨೭ಕ್ಕೂ ಮೊದಲು ಬಂದ ಕವನಗಳೆಲ್ಲ ಹಳೇ ಮಾದರಿಯವು. ನಂತರ ಬಂದ ಕವಿತೆಗಳು ಅಪ್ಪಟ ಹೊಸಗನ್ನಡದ ರಮ್ಯಮಾರ್ಗದ ಪ್ರತಿನಿಧಿಗಳು. ಅಂದರೆ ನವೋದಯದ ವಿಕಸನದಲ್ಲಿ ಪತ್ರಿಕೆಗಳ ಪಾಲುದಾರಿಕೆಯನ್ನು ಗಮನಿಸಬಹುದು. ಮುಂದೆ ‘ಜಯಂತಿ’ ಪತ್ರಿಕೆ ಧಾರವಾಡ ಭಾಗದ ಸಾಹಿತ್ಯ ವಿಕಸನ, ಪ್ರಕಟನೆಗಳಿಗೆ ವೇದಿಕೆಯಾಗಿ ಬೆಳಗುತ್ತದೆ. ಈ ವೇಳೆಗೆ ಮತ್ತೆ ಹುಟ್ಟಿದ ‘ವಾಗ್ಭೂಷಣ’ವೂ ತನ್ನ ಕೊಡುಗೆಯನ್ನು ಕೊಟ್ಟಿತು. ಹೀಗೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಕಂಡುಬಂದ ನವೋದಕ್ಕೆ ಪತ್ರಿಕೆಗಳೂ ಕಾರಣವಾಗಿ, ವೇದಿಕೆಯಾಗಿ, ಸಮಸಮವಾಗಿ ಬೆಳದವು. ನವೋದಯ ಕಾವ್ಯವು ಚಲಾವಣೆಯಲ್ಲಿದ್ದಾಗಲೇ ೧೯೪೦ರ ಸುಮಾರಿಗೆ ಕನ್ನಡ ಸಾಹಿತ್ಯದಲ್ಲಿ ಕಂಡು ಬಂದ ಮತ್ತೊಂದು ಬೆಲವಣಿಗೆ ಪ್ರಗತಿಶೀಲರದು. ರಷ್ಯನ್ ಕ್ರಾಂತಿಯಿಂದ ಪ್ರೇರಿತರಾದವರು, ನವೋದಯದವರು ಚಂದ್ರ ತಾರೆಕೆಗಳ ಮೇಲೆಲ್ಲಾ ಕವನ ಬರೆದುಕೊಂಡು ಈ ಜೀವನದ ಕಟು ವಾಸ್ತವಗಳ ಬಗ್ಗೆ ಮುಖತಿರುವಿದವರೆಂದು ಸಿಡಿದೆದ್ದವರ ಬಗ್ಗೆ, ಕೂಲಿಕಾರರ ಬಗ್ಗೆ, ಶೋಷಿತರ ಬಗ್ಗೆ ಇವರು ಲೇಖನ ಹರಿಬಿಟ್ಟರು. ಹೀಗಾಗಿ ಕಾವ್ಯ ಅವರಿಗೆ ಹಿಡಿಸಲಿಲ್ಲ. ಕಥೆ ಕಾದಂಬರಿಗಳು ಪ್ರಗತಿಶೀಲರು ಬಹುವಾಗಿ ಮೆಚ್ಚಿ ಬಳಸಿದ ಮಾಧ್ಯಮಗಳು, ಸಾಹಿತ್ಯವನ್ನು ಜನರೆಡೆಗೆ ಕೊಂಡೊಯ್ದು ಹೆಗ್ಗಳಿಕೆ, ಕಥೆ, ಕಾದಂಬರಿಗಳಿಗೆ ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿದ ಹೆಗ್ಗೆಳಿಕೆ ಪ್ರಗತಿಶೀಲರಿಗೆ ಸೇರಬೇಕು. ಅ. ನ. ಕೃಷ್ಣರಾಯ, ತ.ರಾ. ಸು. ನಿರಂಜನ, ಬಸವರಜ ಕಟ್ಟೀಮನಿ, ಮುಂತಾದವರು ಪ್ರಗತಿಶೀಲರಲ್ಲಿ ಪ್ರಮುಖರೆನಿಸಿಕೊಂಡವರು. ೧೯೩೫ ರಿಂದ ೧೯೫೦ರವರೆಗೆ ಪ್ರಗತಿಶೀಲರೆನಿಸಿಕೊಂಡವರು ಕನ್ನಡದಲ್‌ಇ ವಿಪುಲವಾಗಿ ಬರೆದರು. ನವೋದಯದವರಿಗೆ ಸಾಂಸ್ಥಿಕ ಅಥವಾ ಗುಂಪಿನ ಹಿನ್ನಲೆಯಿರುವ ಪತ್ರಿಕೆಗಳು ವೇದಿಕೆ ಒದಗಿಸಿದರೆ ಪ್ರಗತಿಶೀಲರು ಎಲ್ಲ ದೃಷ್ಟಿಯಿಂದಲೂ ಏಕಾಂಗಿ ಹೋರಾಟಗಾರರು. ಆ ಕಾಲದಲ್ಲಿ ವೈಯಕ್ತಿಕ ಪ್ರಯತ್ನಗಳಿಗಾಗಿ ಅನೇಕ ಸಾಹಿತ್ಯ ಪತ್ರಿಕೆಗಳು ಬಂದವು. ಅವುಗಳಲ್ಲಿ ಹೆಚ್ಚಿನವು ಕಥೆಗಳಿಗೆ ಮೀಸಲಾಗಿದ್ದವು ಎಂಬುದು ಪ್ರಗತಿಶೀಲರ ಛಾಪನ್ನು ಧ್ವನಿಸುತ್ತದೆ. ಅಂಥವುಗಳಲ್ಲೆಲ್ಲಾ ಅ. ನ. ಕೃ. ಅವರ ಕಥಾಂಜಲಿ (೧೯೨೯-೩೦) ಮುಖ್ಯವಾದುದು. ಕಥಾಂಜಲಿ ಹಾಕಿಕೊಟ್ಟ ದಾರಿಯಲ್ಲಿ ನಡೆಯಲ್ಲಿ ನಡೆದ ಪತ್ರಿಕೆಗಳು ಕಥಾಕುಂಜ (೧೯೩೪) ಕಥಾ ಚಂದ್ರಿಕೆ (೧೯೪೨) ಕಥಾವಳಿ (೧೯೩೮) ಕಥಾಸಂಗ್ರಹ (೧೯೫೩) ಕತೆಗಾರ (೧೯೩೩) ಮುಂತಾದವುಗಳು. ಕಥಾ ಪ್ರಪಂಚಕ್ಕೆ ರಾಶಿ ರಾಶಿ ಕಥೆಗಳನ್ನು ಹೊಸೆದು ಹಾಕಿದ ಪ್ರಗತಿಶೀಲ ಸಾಹಿತಿಗಳಿಗೆ ವೇದಿಕೆಯಾಗಿ ಈ ಕಥಾ ಪತ್ರಿಕೆಗಳೇ ಸಹಾಯಕ್ಕೆ ಬಂದವು. ಮತ್ತೆ, ಸಾಹಿತ್ಯ ಮತ್ತು ಸಾಹಿತ್ಯ ಪತ್ರಿಕೆಗಳು ಪ್ರಗತಿಶೀಲರ ಅವಧಿಯಲ್ಲೂ ಪರಸ್ಪರ ಪೂರಕವಾಗಿ ಉಳಿದವು. ಅವಿನಾಭಾವ ಸಂಬಂಧವನ್ನು ಮುಂದುವರೆಸಿದವು.

ನವ್ಯ ಹಾಗೂ ಸಾಹಿತ್ಯ ಪತ್ರಿಕೆಗಳು

ಈ ಶತಮಾನದ ಮಧ್ಯಂತರದ ನಂತರ ಬಂದುದು ನವ್ಯ. ಆಂಗ್ಲ ಕವಿಗಳಾದ ಇಲಿಯಟ್, ಆ. ಡೆನ್, ಸ್ಪೆಂಡರ್, ಡಿಲಾನ್, ಥಾಮಸ್ ಮೊದಲಾದವರನ್ನು ಓದಿಕೊಂಡಿದ್ದ ಕಾಲೇಜು ಮೇಷ್ಟ್ರುಗಳೇ ಮುಂಚೂಣಿಯಲ್ಲಿದ್ದು ಕನ್ನಡದಲ್ಲಿ ನವ್ಯ ಸಂಪ್ರದಾಯವನ್ನು ಬೆಳೆಸಿದರೆಂದು ಧಾರಾಳವಾಗಿ ಹೇಳಬಹುದು. ಪೇಜಾವರ ಸದಾಶಿವರಾಯರು, ವಿ.ಜಿ.ಭಟ್ಟರು ತಮ್ಮ ಬಿಡಿಕವನಗಳಲ್ಲಿ ನವ್ಯತೆಯ ಲಕ್ಷಣಗಳನ್ನು ೧೯೫೦ಕ್ಕೂ ಮೊದಲೇ ಪ್ರಕಟಿಸಿದ್ದರಾದರೂ ನವ್ಯಮಾರ್ಗಕ್ಕೆ ತೋರುಗಂಬವಾಗಿ ನಿಂತ ಕೃತಿ ವಿನಾಯಕ ಕೃಷ್ಣ ಗೋಕಾಕರ ಸಮುದ್ರಗೀತೆಗಳು. ೧೯೫೦ರಲ್ಲಿ ನವ್ಯಕವಿತೆಗಳು ಎಂಬ ಸಂಕಲನ ಪ್ರಕಟವಾಗಿದೆ. ರೇಡಿಯೋ, ಕ್ಲೋರೋಫಾರ್ಮ ಮುಂತಾದ ವಿಷಯಗಳ ಮೇಲೂ ಮೊತ್ತಮೊದಲ ಬಾರಿಗೆ ಕವನಗಳು ಈ ಸಂಕಲನದಲ್ಲಿ ಬಂದಿವೆ. ನವ್ಯಕಾವ್ಯದ ಶ್ರೇಷ್ಠ ಪ್ರತಿನಿಧಿಯೆಂದು ಗೋಪಾಲಕೃಷ್ಣ ಅಡಿಗರನ್ನು ನಿರ್ಭಿಡೆಯಿಂದ ಗುರುತಿಸಬಹುದು. ಕಾವ್ಯದ ಹಾದಿ ಬದಲಾದಂತೆಲ್ಲ ಅಡಿಗರ ಕಾವ್ಯ ಸೃಷ್ಟಿಯೂ ಬದಲಾಗಿದೆ. ಭಾವತರಂಗದಿಂದ ಹಿಡಿದು ಚಂಡೆ ಮದ್ದಳೆಯವರೆಗೆ ಹಾಗೂ ಮುಂದೂ ಅಡಿಗರು ಸಂಕಲನ ದಿಂದ ಸಂಕಲನಕ್ಕೆ ಬದಲಾಗಿದ್ದಾರೆ, ಬೆಳೆದಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯಗಳ ಅಂತಸ್ಸತ್ವಗಳನ್ನೆಲ್ಲಾ ಹೀರಿಕೊಂಡು ಕೃತಿ ರಚಿಸಿದ್ದಾರೆ. ವಿಷಮ ಲಯ, ಬೆರಕೆಗೊಂಡ ಭಾಷೆ, ಅವತರಣಿಕೆಗಳು, ಪ್ರತಿಮಾನಿಷ್ಠತೆ, ತೋರಿಕೆಗೆ ಕಾಣುವ ಅಸಂಬದ್ಧತೆ ಆದರೆ ಒಳಗಿನ ತಿರುಳು ಅರ್ಥ ಮಾಡಿಕೊಂಡರೆ ಸುಸಂಬದ್ಧ ಸೂತ್ರ ಅಡಿಗರ ಕಾವ್ಯದ ಅನನ್ಯತೆ. ನವ್ಯರಲ್ಲಿ ಅಡಿಗರಿಗೆ ಸರಿಸಮಾನವಾಗಿ ಇತರರು ಕೃತಿರಚನೆ ಮಾಡಲಿಲ್ಲವಾದರೂ ನವ್ಯದ ಕಾವ್ಯರಚನೆ ಸಮೃದ್ಧವಾದುದು. ರಾಮಚಂದ್ರ ಶರ್ಮ, ಕ.ವೆಂ. ರಾಜಗೋಪಾಲ, ಲಂಕೇಶ, ತೇಜಸ್ವಿ, ಅನಂತಮೂರ್ತಿ ಮುಂತಾದವರು ನವ್ಯದ ಶ್ರೇಷ್ಠ ಫಲಗಳಾದರೆ ನವ್ಯದ ಇತರ ಸಾಹಿತಿಗಳ ಸಾಲು ಕನ್ನಡದಲ್ಲಿ ದೀರ್ಘವಾಗಿದೆ. ಇದೀಗ ನವ್ಯದ ಕಾಲ ಮುಗಿಯಿತೆಂದೇ ನಂಬಿದರೂ ಇತ್ತೀಚಿನ ಪೀಳಿಗೆಯ ಯುವಕರು ಮೊಗಳ್ಳಿ ಗಣೇಶ, ಅಬ್ದುಲ್ ರಷೀದ, ಅಶೋಕ ಹೆಗಡೆ ಮುಂತಾದವರ ಕೃತಿಗಳಲ್ಲೂ ನವ್ಯದ ಪ್ರಭಾವವನ್ನು ಗುರುತಿಸಬಹುದಾಗಿದೆ. ನವ್ಯಕಾವ್ಯ ಕನ್ನಡದಲ್ಲಿ ಪ್ರಥಮ ಪಂಕ್ತಿಯ ಪ್ರತಿಭೆಗಳನ್ನು ಹೊರಹಾಕಿತು. ಆದರೆ ನವ್ಯ ಕಥೆ, ಕಾದಂಬರಿ ವಿಮರ್ಶೆಗಳೂ ಶ್ರೀಮಂತವೇ. ಹೊಸಹೊಸ ಕಥೆ ಕಾದಂಬರಿಕಾರರನ್ನೂ ವಿಮರ್ಶಕರನ್ನೂ ನವ್ಯ ಕೊಟ್ಟಿತು. ನವೋದಯ, ಪ್ರಗತಿಶೀಲರಂತಲ್ಲ, ನವ್ಯದಲ್ಲಿ ಮಾತ್ರ ಎಲ್ಲಾ ಪ್ರಕಾರಗಳೂ ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟವು. ನವ್ಯ ಸಾಹಿತ್ಯವನ್ನು ಆ ಕಾಲದ ಸಾಹಿತ್ಯ ಪತ್ರಿಕೆಗಳು ಪ್ರಚುರ ಪಡಿಸಿದ ರೀತಿಯೂ ವಿಶೇಷವೇ. ಅಡಿಗರ 'ಸಾಕ್ಷಿ' ಚಂದ್ರಶೇಕರ ಪಾಟೀಲರ 'ಸಂಕ್ರಮಣ', ಮನೋಹರ ಗ್ರಂಥಮಾಲೆಯ 'ಮನ್ವಂತರ' ಅನಂತಮೂರ್ತಿಯವರ 'ರುಜುವಾತು', ನವ್ಯ ಸಾಹಿತ್ಯದ ಜೊತೆಗೇ ಬೆಳೆದ ಪತ್ರಿಕೆಗಳು, ತನ್ಮೂಲಕ ನವ್ಯ ಸಾಹಿತ್ಯವನ್ನು ಬೆಳೆಸಿದ ಪತ್ರಿಕೆಗಳು. ಈ ಸಾಲಿಗೆ ಸೇರುವ ಇನ್ನೂ ಅನೇಕ ಸಾಹಿತ್ಯ ಪತ್ರಿಕೆಗಳು ನವ್ಯದ ಸಂದರ್ಣದಲ್ಲಿ ಹೊರಬಂದು ಒದೆರಡು ವರ್ಷಗಳಲ್ಲಿ ಮುಚ್ಚಿಹೋಗಿವೆ. ನೇತಿ, ಬದುಕು, ಅಂಕಣ, ಲಹರಿ ಈ ಕೆಲವು ಉದಾಹರಣೆಗಳು. ನವ್ಯಸಾಹಿತ್ಯವನ್ನು ವಿಮರ್ಶಿಸುವವರು ಸಾಕ್ಷಿಯ ಕೊಡುಗೆಯನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ಕಾಲದ ಚರ್ಚೆ, ವಾಗ್ವಾದ, ಚಿಂತನ ಮಥನಗಳಿಗೆ ಸಾಕ್ಷಿ ವೇದಿಕೆಯಾಗಿತ್ತು. ಇಂಥ ಚರ್ಚೆಗಳಿಂಲೇ ನವ್ಯಕ್ಕೆ ತಾತ್ವಿಕ ರೂಪ ಬಂದುದು. ನವ್ಯ ಸಾಹಿತಿಗಳೇ ಸಂಪಾದಕರಾದ ಸಾಕ್ಷಿ, ರುಜುವಾತು, ಸಂಕ್ರಮಣಗಳ ಬಗ್ಗೆ ಇರುವ ಆರೋಪವೆಂದರೆ ಬರಬರುತ್ತಾ ಅವು ನವ್ಯದ ಮುಖವಾಣಿಗಳೇ ಆಗಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು ಎಂಬುದಾಗಿ. 'ಬಹಳ ಗಂಭೀರವಾದ ಉದ್ದೇದಿಂದ ಪ್ರಾರಂಭವಾದ ಸಾಕ್ಷಿ ಕ್ರಮೇಣ ತನ್ನ ಮೂಲದ ಉದ್ದೇಶವನ್ನೇ ಮರೆತು ನವ್ಯ ಚಳುವಳಿಯ ಗುಂಪುಗಾರಿಕೆಗೆ ಒಳಗಾಗಿ ನವ್ಯ ಚಳುವಳಿಯ ಮುಖವಾಣಿಯಾಗಿ ನವ್ಯ ಚಳುವಳಿಯ ಜೊತೆ ಜೊತೆಯೇ ಬೆಳೆಯಿತು. ಅದೇನೇ ಇದ್ದರೂ ಈ ಸಾಹಿತ್ಯ ಪತ್ರಿಕೆಗಳು ನವ್ಯ ಚಳುವಳಿಯಲ್ಲಿ ಹುಟ್ಟು ಹಾಕಿದ ಚರ್ಚೆಗಳು, ಹೊಸ ಪ್ರತಿಭೆಗಳಿಗೆ ಮಾಡಿಕೊಟ್ಟ ಅವಕಾಶಗಳು, ನವ್ಯ ಚಳುವಳಿಯ ಸಂಪದ್ಭರಿತ ಬೆಳೆಗೆ ತಮ್ಮ ಸಮರ್ಥ ಕಾಣಿಕೆ ನೀಡಿವೆ. ನವ್ಯದ ಸಂದರ್ಭದಲ್ಲಿ ಬಂದ ಪತ್ರಿಕೆಗಳ ಸಂಖ್ಯೆಯೂ ಹೆಚ್ಚು. ಸಾಹಿತಿಗಳ ನಡುವೆ ಉಂಟಾಗಿದ್ದ ತುರುಸು-ಬಿರುಸನ್ನು ಇದು ಎತ್ತಿ ತೋರಿಸಬಲ್ಲದು. ಹೀಗೆ ೧೯೭೫ರವರೆಗೂ ಸಾಗಿದ ನವ್ಯರ ಮೇಲುಗೈ ಇಡೀ ಸಾಹಿತ್ಯವನ್ನು ವ್ಯಾಪಿಸಿ ಕೊಂಡಿತು. ೧೯೭೫ರ ಜೂನ್ ೨೫ರಂದು ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಸ್ಥಿತಿ ಹೇರಿದರು. ಎರಡು ವರ್ಷ ಅಭಿವ್ಯಕ್ತಿ ಸ್ವಾತಂತ್ರ್ಯ ನಲುಗಿತು. ಪತ್ರಿಕೆಗಳು ಸೆನ್ಸಾರ್‌ಶಿಪ್‌ನ ಮುಷ್ಠಿಯಲ್ಲಿ ನರಳಿದವು ನಲುಗಿದವು. ಶುದ್ಧ ಸಾಹಿತ್ಯ ಪತ್ರಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ತುರ್ತು ಪರಿಸ್ಥಿತಿಯ ಬಗ್ಗೆ ಏನೊಂದನ್ನೂ ಬರೆಯುವಂತಿರಲಿಲ್ಲ. ಸಾಹಿತ್ಯದಲ್ಲೂ ಇಂದಿರಾಗಾಂಧಿಯನ್ನು ಟೀಕೆ ಮಾಡುವಂತಿರಲಿಲ್ಲ. ತುರ್ತು ಪರಿಸ್ಥಿತಿ ಘೋಷಣೆಯಾದುದು ೧೯೭೫ರ ಜೂನ್ ತಿಂಗಳಲ್ಲಿ. 'ಸಾಕ್ಷಿ'ಜುಲೈ ೧೯೭೫ರ ಸಂಚಿಕೆಯಲ್ಲಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯ ಸಾಧನೆ ಎಂಬುದಾಗಿ ವಾರ್ತಾ ಇಲಾಖೆ ಪ್ರಚಾರ ಪಡಿಸಿದ ಜಾಹೀರಾತನ್ನು ಮುಖಪುಟದ ಒಳ ಪುಟದಲ್ಲಿ ಪ್ರಕಟಿಸಗಿದೆ. ಅಡಿಗರಂಥ ಸ್ವಾತಂತ್ರ್ಯ ಪ್ರೇಮಿ ಸಂಪಾದಕರನ್ನು, ಕೆ.ವಿ.ಸುಬ್ಬಣ್ಣನಂಥ ವಿಚಾರವಾದಿ ಸಂಚಾಲಕರನ್ನು ಹೊಂದಿದ 'ಸಾಕ್ಷಿ' ತುರ್ತು ಪರಿಸ್ಥಿತಿಯ ವೇಳೆ, ಸಮರ್ಥಿಸಿ ಅದರ ಸಾಧನೆಗಳನ್ನು ವೈಭವೀಕರಿಸುವ ಜಾಹೀರಾತನ್ನು 'ಸಾಕ್ಷಿ'ಯಲ್ಲಿ ಪ್ರಕಟಿಸಿದ್ದು ಇಂದು ಆಶ್ಚರ್ಯಕರವಾಗಿ ಕಾಣುತ್ತದೆ. ಸಾಹಿತ್ಯ ಪತ್ರಿಕೆಗೆ ಜಾಹೀರಾತು ಸಿಗುವುದೇ ಕಡಿಮೆ. ಆದರ್ಶದ ನೆಪದಲ್ಲಿ ಸರ್ಕಾರದಿಂದ ಸಿಕ್ಕ ಈ ಜಾಹೀರಾತನ್ನು ಕಳೆದುಕೊಳ್ಳಲು ಸಾಕ್ಷಿ ಸಂಪಾದಕರು ಸಿದ್ಧವಿರಲಿಲ್ಲವೇನೋ ಎಂಬ ಅನುಮಾನ ಈ ಜಾಹೀರಾತನ್ನು ನೋಡಿದಾಗ ಅನ್ನಿಸುತ್ತದೆ. ಪತ್ರಿಕೆಯನ್ನು ಉಳಿಸಿಕೊಳ್ಳಲು ತತ್ತ್ವ ಬಿಡಬೇಕಾಗಿ ಬರುವ ಮತ್ತೊಂದು ಉದಾಹರಣೆಯಾಗಿ ಇದು ಕಾಣುತ್ತದೆ.

ದಲಿತ- ಬಂಡಾಯ ಸಾಹಿತ್ಯ ಮತ್ತು ಸಾಹಿತ್ಯ ಪತ್ರಿಕೆಗಳು

ತುರ್ತು ಸ್ಥಿತಿಯ ಬಳಿಕ ಕನ್ನಡ ಸಾಹಿತ್ಯ ಇನ್ನೊಂದು ತಿರುವನ್ನು ಪಡೆಯಿತು. ಅದಿವೇ ದಲಿತ-ಬಂಡಾಯ ಸಾಹಿತ್ಯ. ಈ ವರೆಗೂ ದಲಿತ ಲೋಕದ ಚಿತ್ರಣ ಕನ್ನಡ ಸಾಹಿತ್ಯದಲ್ಲಿ ಪ್ರಕಟಗೊಂಡಿತ್ತಾದರೂ ಅದು ಮುಂದುವರೆದ ಜನಾಂಗದಿಂದ ಬಂದ ಸಾಹಿತಿಗಳಿಂದ ರಚಿತವಾಗಿತ್ತು. ಈ ಚಿತ್ರಣ ನೋಡಿದ, ಕೇಳಿದ ಊಹಿಸಿದ್ದನ್ನು ಭಾವನೆಗಳು ಉಕ್ಕುವಂತೆ ಚಿತ್ರಿಸಿದ್ದೇ ಹೊರತು ಸ್ವಯಂ ಅನುಭವಿಸಿದವುಗಳಲ್ಲಿ. ಹೀಗಾಗಿ ದಲಿತ ಲೋಕದ ಅನುಭವದ ಚಿತ್ರಣಗಳು ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ದಕ್ಕುವಂತಾದುದು ದೇವನೂರು ಮಹದೇವ, ಸಿದ್ಧಲಿಂಯ್ಯ, ದೇವಯ್ಯ ಹರವೆ ಮುಂತಾದವರು ಬರೆಯಲಾರಂಭಿಸಿದಾಗ, ಅದು ೭೦ರ ದಶಕದ ಅಂತ್ಯದಲ್ಲಿ. ಹಾಗೆಯೇ 'ಖಡ್ಗವಾಗಲಿ ಕಾವ್ಯ ನೋವುಂಡ ಜನರ ಪ್ರಾಣಮಿತ್ರ' ಎನ್ನುವ ಘೋಷಣೆ ಯೊಂದಿಗೆ ನವ್ಯ ಸಾಹಿತ್ಯ ತುಳಿದ ಮಾರ್ಗಕ್ಕೆ ಭಿನ್ನವಾದ ಜನಪರ ಮಾರ್ಗ ಹುಟ್ಟಿಕೊಂಡಿದ್ದು ಬಂಡಾಯ. ನವ್ಯರ ಸಾಹಿತ್ಯ ಅಂತರ್ಮುಕಿಯಾಗಿ, ಆತ್ಮರತಿಯಲ್ಲಿ ತೊಡಗಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ಜನರಿಂದ ದೂರವೇ ಉಳಿಯತೊಡಗಿದಾಗ ಇದನ್ನೊಪ್ಪದ ಜನ ಬಂಡಾಯವೆದ್ದರು. ಬಂಡಾಯ, ವ್ಯವಸ್ಥೆಯ ವಿರುಧ, ವ್ಯವಸ್ಥೆಯನ್ನು ಲೇಖನಿಯಲ್ಲಿ ಚಿತ್ರಿಸಿ ನವ್ಯ ಸಂಪ್ರದಾಯದ ವಿರುದ್ಧ, ಸಾಂಪ್ರದಾಯಿಕತೆಯ ವಿರುದ್ಧ. ಕನ್ನಡ ಸಾಹಿತ್ಯದ ಮುನ್ನಡೆಯಲ್ಲಿ ಕಂಡು ಬಂದ ವಿನೂತನ ಬೆಳವಣಿಗೆಯೆಂದರೆ ೮೦ರ ದಶಕದಲ್ಲಿ ಕನ್ನಡ ಸಾಹಿತಿಗಳ ದಂಡು ಬಂಡಾಯಗಾರರು ಹಾಗೂ ಇತರರು ಎಂಬ ಎರಡು ಗುಂಪಾಗಿ ಒಡೆದ್ದು. ಬಂಡಾಯ ಸಾಹಿತ್ಯ ಸಮಾಜದ ಕೊನೆಯವನನ್ನೂ ತಲುಪಬೇಕು, ಅದಕ್ಕೇ ಯಾವುದೇ ಉಪಮೆ ಉಪಮೇಯಗಳ ಅಗತ್ಯವಿಲ್ಲದೇ ಜನರ ಭಾಷೆಯಲ್ಲಿ ಬರೆಯಬೇಕು, ಹೇಳುವುದನ್ನು ನೇರವಾಗಿ, ಖಡಾ ಖಂಡಿತವಾಗಿ ಹೇಳಬೇಕು, ಸಮಾಜದ ಶೋಷಣೆಯ ಸ್ಥಾನಗಳ ವಿರುದ್ಧ ಬಂಡೇಳಬೇಕು ಎಂಬುದು ಬಂಡಾಯದವರ ನಿಲುವು. ಕನ್ನಡವು ಹೊಸ ಅಭಿವ್ಯಕ್ತಿ ಪ್ರಕಾರಕ್ಕಾಗಿ ತಹತಹಿಸುತ್ತಿರುವ ಈ ಸಂದರ್ಭದಲ್ಲಿ ದಲಿತ ಬಂಡಾಯಗಳೂ ಬತ್ತಿದ ಶಕ್ತಿಗಳಂತೆ ಅನಿಸುತ್ತಿವೆ. ದಲಿತ ಲೋಕದ ಹಚ್ಚ ಹೊಸ ಕತೆಗಳು. ಈ ಒಂದೂವರೆ ದಶಕದ ಅವಧಿಯಲ್ಲಿ ದೇವನೂರು ಮಹದೇವ, ಮೊಗಳ್ಳಿ ಗಣೇಶ ಮುಂತಾದವರ ಲೇಖನಿಯಲ್ಲಿ ಒಡಮೂಡಿದವು. ಆದರೂ ವಸ್ತುವಿನ ಆಯ್ಕೆ, ನಿರೂಪಣೆಯಲ್ಲಿ ಬರೇ ಒಂದೂವರೆ ದಶಕದಲ್ಲೂ ಹೊಸ ಬರಹಗಳೂ, ಬರಹಗಾರರು ಬರುತ್ತಿಲ್ಲ, ಹಾಗೆಯೇ ಬಂಡಾಯ ಸಾಹಿತ್ಯವೂ ಘೋಷಣೆಯ ಮಟ್ಟದಲ್ಲೇ ಉಳಿದುಬಿಟ್ಟಿತೆಂಬ ಆರೂಪವಿದೆ. ಘೋಷಣೆಯನ್ನುಕಾವ್ಯವಾಗಿಸುವ ಕಲೆ ಅರಿತು ಕೇಲವೇ ಬಂಡಾಯದವರು ಮಾತ್ರ ನಾಲ್ಕು ಕಾಲ ನಿಲ್ಲಬಲ್ಲಂಥ ಸಾಹಿತ್ಯ ರಚಿಸಲು ಸಾಧ್ಯವಾಗಿರುವುದೂ ನಿಜ. ದಲಿತ ಬಂಡಾಯ ಸಂಪ್ರದಾಯ ಸಾಹಿತ್ಯಿಕವಾಗಿ ಭಾರೀ ಚಲಾವಣೆಯಲ್ಲಿದ್ದ ವೇಳೆಯಲ್ಲಿ ಸಾಹಿತ್ಯ ಪತ್ರಿಕೆಗಳೂ ಅರಳಿದವು. ಅಂತೆಯೇ ದಲಿತ ಬಂಡಾಯದವರ ಸೃಷ್ಟಿಯೂ ಮುಗಿಯಿತೆಂದು ಕಾಣುವ ಸಂದರ್ಭದಲ್ಲಿ ಬಂಡಾಯ ದಲಿತ ಸಾಹಿತ್ಯ ಪರ ಪತ್ರಿಕೆಗಳೂ ನಿಧಾನವಾಗಿ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ. ದಿನದಿಂದ ದಿನಕ್ಕೆ ಕ್ಷೀಣಿಸುವಂತೆ ತೋರುತ್ತಿವೆ. ನವ್ಯ ಕಾವ್ಯ ಬಿರುಸಾಗಿದ್ದ ಕಾಲದಲ್ಲಿ ಹುಟ್ಟಿ, ಒಂದು ರೀತಿಯಲ್ಲಿ ನವ್ಯಕ್ಕೆ ನೀರೆರೆದು, ನಂತರ ಅದರ ಸಂಪಾದಕರೇ ಬಂಡಾಯ ಚಳುವಳಿಯ ಮುಂಚೂಣಿಗೆ ಬಂದಾಗ ತಂತಾನೆ ಬಂಡಾಯ ಸಾಹಿತ್ಯದ ಮುಖವಾಣಿ ಎಂಬಂತೆ ಬದಲಾಗಿದೆ ಬೆಳೆದು ಇವತ್ತು ಪ್ರಬುದ್ಧ ಮಟ್ಟ ಮುಟ್ಟಿರುವ ಪತ್ರಿಕೆ 'ಸಂಕ್ರಮಣ'. ಚಂದ್ರಶೇಖರ ಪಾಟೀಲರು ಅದರ ಅಧ್ವರ್ಯ. ಬಂಡಾಯ ಚಳುವಳಿಗೆ ವೇದಿಕೆಯಾದ ಇತರ ಪತ್ರಿಕೆಗಳೆಂದರೆ, ಶೂದ್ರ, ಸಂವಾದ, ಅಂಕಣ, ಸೃಜನವೇದಿ, ಸಾಹಿತ್ಯ ಸಂಗಾತಿ, ಬಂಡಾಯ ಸಾಹಿತ್ಯ ಮುಂತಾದವು. ಹಾಗೆಯೇ ದಲಿತ , ದಲಿತ ಬಂಧೂ, ಪಂಚಮ, ವಿಮುಕ್ತಿ, ಶೋಷಿತ, ವಿಮರ್ಶಕ, ಕವಿಮಾರ್ಗ ಮುಂತಾದ ಅನೇಕ ಪತ್ರಿಕೆಗಳು ದಲಿತರ ಶೋಷಿತ ಸೃಜನಶೀಲರ ವೇದಿಕೆಗಳಾಗಿ ಕೆಲಸಮಾಡಿದವು. ಬಂಡಾಯದವರಿಗೆ ತಮ್ಮ ನಿಲವುಗಳನ್ನು ಸ್ಪಷ್ಟಪಡಿಸಿಕೊಳ್ಳಲಿಕ್ಕೂ ದಲಿತರಿಗೆ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿಕ್ಕೂ ಈ ಪತ್ರಿಕೆಗಳು ಸಹಕಾರಿಯಾದವು. ಹೀಗೆ ಕನ್ನಡದಲ್ಲಿ ಕಾಲಕಾಲಕ್ಕೆ ಕಂಡು ಬಂದ ಸಾಹಿತ್ಯಿಕ ತಿರುವುಗಳಿಗೆ ಪೂರಕವಾಗಿ ಹಾಗೂ ಪ್ರೇರಕವಾಗಿ ಸಾಹಿತ್ಯ ಪತ್ರಿಕೆಗಳು ಆಗಿಂದಾಗ್ಗೆ ಹುಟ್ಟಿ ಬೆಳೆದಿವೆ. ಆದುನಿಕ ಸಾಹಿತ್ಯದ ಬೆಳವಣಿಗೆಯ ಹಂತಗಳಿಗೂ ಸಾಹಿತ್ಯ ಪತ್ರಿಕೆಗಳಿಗೂ ಅವಿನಾಭಾವ ಸಂಬಂಧ ಬೆಳೆದಿದೆ.

ಟಿಪ್ಪಣಿಗಳು

  • ೧. ಎನ್.ಎಸ್. ರಾಮಪ್ರಸಾದ, ವಿಶ್ವಕನ್ನಡ, ಸಂಪುಟ ೧ರಲ್ಲಿ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆ ಲೇಖನದಲ್ಲಿ. ಪ್ರ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೮೬. ಪುಟ ೨೦೧.
  • ೨. ಕೆ. ವೆಂಕಟರಾಮಪ್ಪ, ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್ ೧೯೭೪, ಪುಟ ೧೫.
  • ೩. ಮೇಲಿನದೇ, ಪುಟ. ೧೩೯.
  • ೪. ಎಸ್. ಅನಂತನಾರಾಯಣ : ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ : ರಾಜಲಕ್ಷ್ಮೀ ಪ್ರಕಾಶನ, ಬೆಂಗಳೂರು -೫೩, ೧೯೬೨, ಪುಟ ೩.
  • ೫. ಶ್ರೀನಿವಾಸ ಹಾವನೂರರ ಲೇಖನ : ಹೊಸಗನ್ನಡ ವಾಙ್ಮಯದ ಅರಣೋದಯ, 'ವಿಶ್ವಕನ್ನಡ' ಸಂಪುಟ ೨ ಕನ್ನಡ ಸಂಸ್ಕೃತಿ ಇಲಾಖೆ, ೧೯೮೬, ಪುಟ ೧೯೬-೨೦೯.
  • ೬. ಮೇಲಿನದೇ, ಪುಟ ೧೯೬-೨೦೯.
  • ೭. ಮೇಲಿನದೇ.
  • ೮. ಎಂ ಸೀತಾರಾಮಶಾಸ್ತ್ರಿ, ಅನ್ಯಾಪದೇಶವು, ಶ್ರೀಕೃಷ್ಣಸೂಕ್ತಿ, ಸೆಪ್ಟೆಂಬರ್ ೧೯೧೦.
  • ೯. 'ಹಿತಬೋದಿನಿ' ಪತ್ರಿಕೆಯ ಸಪ್ಟೆಂಬರ್ ೧೮೮೬ರ ೪೫೮ನೇ ಪುಟದಲ್ಲಿ ಬಂದುದು ಎಸ್. ಅನಂತನಾರಾಯಣ ಉದ್ಧೃತ, ಪೂರ್ವೋಕ್ತ, ಪುಟ ೧೯.
  • ೧೦.'ಕಂನಾಡ ಸಾಹತ್ಯಜ್ಞರ' ಆತ್ಮಕಥನ, ಮಿಂಚಿನ ಬಳ್ಳಿ ಪ್ರಕಾಶನ, ೧೯೪೬, ಪುಟ ೪.
  • ೧೧. ಎಸ್.ಅನಂತನಾರಾಯಣ, ಮೇಲಿನದೇ, ಪುಟ ೩೯-೪೧.
  • ೧೨. ಕನ್ನಡ ವಿಶ್ವಕೋಶ, ಸಂಪುಟ ೩, ಮೈಸೂರುವಿಶ್ವವಿದ್ಯಾನಿಲಯ, ಕನ್ನಡದಲ್ಲಿ ಭಾವಗೀತೆ, ಪುಟ ೭೪೪.
  • ೧೩. ನಡೆದುಬಂದ ದಾರಿ, ಸಂಪುಟ ೧, ಮನೋಹರ ಗ್ರಂಥಮಾಲೆ, ೧೯೫೯, ಪುಟ ೪೧.
  • ೧೪. ಮೇಲಿನದೇ.
  • ೧೫. ಕನ್ನಡ ವಿಶ್ವಕೋಶ, ಸಂಪುಟ ೩, ಪುಟ ೭೪೪.
  • ೧೬. 'ಶ್ರೀ' 'ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ', ಎಸ್.ವಿ.ರಂಗಣ್ಣನವರ ಮುನ್ನುಡು, ೧೯೪೮, ಪುಟ ೮.
  • ೧೭. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರಬುದ್ಧ ಕರ್ನಾಟಕ, ಬೆಳ್ಳಿಯ ಸಂಚಿಕೆ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ೧೯೫೪, ಪುಟ ೩೦.
  • ೧೮. ಎಸ್. ಅನಂತನಾರಾಯಣ, ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ. ಪೂರ್ವೋಕ್ತ. ಪುಟ ೧೦೬.
  • ೧೯. ನಡೆದುಬಂದ ದಾರಿ, ಮೊದಲ ಮಾತು, ಆಗಸ್ಟ್ ೧೯೫೯, ಪುಟ ೪.
  • ೨೦. ಎಸ್. ಅನಂತನಾರಾಯಣ : ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ (೧೯೬೨) ಪುಟ ೧೪೫.
  • ೨೧. ಪಟ್ಟಿ, ಸಮಗ್ರವಲ್ಲ, ಉದಾಹರಣೆಗಾಗಿ ಮಾತ್ರ ಕೆಲವು ಹೆಸರುಗಳನ್ನು ದಾಕಲಿಸಲಾಗಿದೆ.
  • ೨೨. ಹಂಚಿಮನಿ ವೀರಭದ್ರಪ್ಪ, 'ಕನ್ನಡ ಸಾಹಿತ್ಯ ಪತ್ರಿಕೆಗಳು ಇತಿಹಾಸ, ವರ್ತಮಾನ' ಪುಸ್ತಕದ ಲೇಖನದಲ್ಲಿ ಪೂರ್ವೋಕ್ತ, ೧೯೯೩, ಪುಟ ೨೦.

ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಸ್ಥಿತಿಗತಿ ಮತ್ತು ವೃತ್ತಿಪರತರಯ ಸ್ಥೂಲ ನೋಟ

ಅಧ್ಯಯನದಲ್ಲಿ ವ್ಯಾಖ್ಯಾನಿಸಿದ ರೀತಿಯಲ್ಲಿ ಕನ್ನಡದಲ್ಲಿ ೧೮೪೩ರಿಂದ ೧೯೯೩ರವರೆಗೆ ೧೫೦ ವರ್ಷಗಳ ಅವಧಿಯಲ್ಲಿ ಪ್ರಕಟಗೊಂಡ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ವಿವರಗಳನ್ನು ಅಧ್ಯಾಯ ಮೂರು ಮತ್ತು ಅಧ್ಯಾಯ ನಾಲ್ಕರಲ್ಲಿ ನೀಡಲಾಗಿದೆ.

ಈ ಪತ್ರಿಕೆಗಳ ಬಗ್ಗೆ ಸಂಗ್ರಹಿಸಿದ ಮಾಹಿತಿ, ಸಂಪಾದಕರು, ಸಾಹಿತಿ ಕಲಾವಿದರುಗಳು ನೀಡಿದ ವಿವರಗಳ ಆಧಾರದ ಮೇಲೆ ಕನ್ನಡದ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಸ್ಥಿತಿಗತಿ ವೃತ್ತಿಪರತರಯ ಸ್ಥೂಲನೋಟವನ್ನು ಇನ್ನು ಮುಂದೆ ದಾಖಲಿಸಲಾಗಿದೆ.

ಕೈಎಣಿಕೆಯ ಕೆಲವು ಪತ್ರಿಕೆಗಳು ಇಲ್ಲಿಯ ಸಾಮನ್ಯೀಕರಣ ಪ್ರಕ್ರಿಯೆಯಿಂದ ಹೊರಗೆ ಅಪವಾದಗಳಾಗಿ ನಿಲ್ಲುವ ಸಾಧ್ಯತೆ ಇದೆ. ಆದರೆ ಕನ್ನಡದ ಕಲೆ/ಸಾಹಿತ್ಯ ಪತ್ರಿಕೆಗಳ ಒಟ್ಟೂ ಪರಿಸ್ಥಿತಿಯನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ. ವಸ್ತುನಿಷ್ಠ ಅಧ್ಯಯನ ಹಾಗೂ ನಿಷ್ಪಕ್ಷಪಾತ ವಿಮರ್ಶೆಯ ಆಧಾರದಲ್ಲಿ ಈ ಪತ್ರಿಕೆಗಳ ವರ್ತಮಾನವನ್ನು ಸಾದರಪಡಿಸಲಾಗಿದೆ.

ಕಲೆ ಸಾಹಿತ್ಯ ಪತ್ರಿಕೆಗಳ ಮಾಲಿಕತ್ವ

ಸಾಮಾನ್ಯವಾಗಿ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳಲ್ಲಿ ಇ ಕೆಳಗಿನ ಮಾಲಿಕತ್ವ ಪ್ರಕಾರಗಳನ್ನು ಗುರುತಿಸಲಾಗುತ್ತದೆ.

  • (ಅ) ವೈಯಕ್ತಿಕ ಮಾಲಿಕತ್ವ
  • (ಆ)ನೋಂದಾಯಿತ ಕಂಪನಿಗಳ ಮಾಲಿಕತ್ವ
  • (ಇ) ಸಹಕಾರೀ ಮಾಲಿಕತ್ವ
  • (ಈ) ಸಂಘ ಸಂಸ್ಥೆಗಳ ಮಾಲಿಕತ್ವ
  • (ಉ) ಸರ್ಕಾರಿ ಮಾಲಿಕತ್ವ
  • (ಊ) ಇತರೆ
  • ೧.ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಮಾಲಿಕತ್ವದ ವಿಧಗಳನ್ನು ಪರಿಶೀಲಿಸುವಾಗ ಕಂಡುಬರುವ ಅಂಶಗಳು ಈ ಕೆಳಗಿನಂತಿವೆ.
  • (ಅ) ವೈಯಕ್ತಿಕ ಮಾಲಿಕತ್ವ
  • (ಆ) ಗೆಳೆಯರ ಗುಂಪುಗಳ ಮಾಲಿಕತ್ವ
  • (ಇ) ಸಂಘಸಂಸ್ಥೆಗಳ ಮಾಲಿಕತ್ವ
  • (ಈ) ಮಠ ಪೀಠಗಳ ಮಾಲಿಕತ್ವ
  • (ಉ) ಸರ್ಕಾರಿ ಅನುದಾನಿತ ಸಂಸ್ಥೆಗಳ ಮಾಲಿಕತ್ವ
  • ೨. ನೋಂದಾಯಿತ ಕಂಪನಿಗಳ ಮಾಲಿಕತ್ವದಲ್ಲಿ ಅಥವಾ ಸಹಕಾರೀ ತತ್ತ್ವದ ಆಧಾರದಲ್ಲಿ ಕಲೆ ಅಥವಾ ಸಾಹಿತ್ಯ ಪತ್ರಿಕೆಗಳು ಪ್ರಕಟಗೊಂಡ ಉದಾಹರಣೆ ಇಲ್ಲ.
  • ೩. ಸರ್ಕಾರದ ಬೇರೆ ಬೇರೆ ಇಲಾಖೆಗಳು ನೇರವಾಗಿ ಕೆಲವು ನಿಯತಕಾಲಿಕಗಳನ್ನು ಹೊರಡಿಸುತ್ತಿದ್ದರೂ ಅವುಗಳಲ್ಲಿ ಕಲೆಗೆ ಹಾಗೂ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳಿಲ್ಲ.
  • ೪. ಸರ್ಕಾರದ ಅನುದಾನ ಪಡೆದ ಅಕಾಡೆಮಿಗಳು, ವಿಶ್ವವಿದ್ಯಾನಿಲಯಗಳು, ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳು ಕಲೆ ಹಾಗೂ ಸಾಹಿತ್ಯ ಪತ್ರಿಕೆಗಳನ್ನು ನಡೆಸುತ್ತಿವೆ.
  • ೫. ಕನ್ನಡದಲ್ಲಿ ಪ್ರಕಟವಾದ ಹಾಗೂ ಈಗ ಪ್ರಕಟಣೆಯಲ್ಲಿ ಇರುವ ಕಲೆ/ಸಾಹಿತ್ಯ ಪತ್ರಿಕೆಗಳಲ್ಲಿ ಹೆಚ್ಚಿನವು ಖಾಸಗೀ ಮಾಲಿಕತ್ವದಲ್ಲಿವೆ.
  • ೬. ಸಂಘ ಸಂಸ್ಥೆಗಳು ಅಥವಾ ಮಠ ಪೀಠಗಳು ಹೊರತರುವ ಪತ್ರಿಕೆಗಳಲ್ಲಿ ಸಾಹಿತ್ಯ ಅಥವಾ ಕಲೆಯ ಸಾಮಗ್ರಿಗಳ ಜೊತೆಗೆ ತಂತಮ್ಮ ಸಂಸ್ಥೆಗಳ ಚಟುವಟಿಕೆಯನ್ನು ದಾಖಲಿಸುವ ಹಾಗೂ ಆಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳಿರುತ್ತವೆ.
  • ೭. ಖಾಸಗೀ ವ್ಯಕ್ತಿಗಳು ಪತ್ರಿಕೆ ತಂದಾಗ ಸಂಪಾದಕನೇ ಪತ್ರಿಕೆಯ ಕೇಂದ್ರ ಬಿಂದು. ಸಂಪಾದಕನ ಸಮರ್ಥನೆಗೆ ಪತ್ರಿಕೆಯು ವೇದಿಕೆಯಾಗಿ ಬಳಕೆಯಾಗುವ ಸಾಧ್ಯತೆಗಳಿವೆ.
  • ೮. ಪತ್ರಿಕೆಗೆ ಸಾಂಸ್ಥಿಕ ಆಶ್ರಯವಿರುವಾಗ ಸಂಪಾದಕನ ಸ್ಥಾನ ಬದಲಾಗುತ್ತಿರುತ್ತದೆ. ಸಂಪಾದಕ ನಿಮಿತ್ತಮಾತ್ರವಾಗುವ ಸಾಧ್ಯತೆಗಳಿವೆ.
  • ೯. ಸಂಘಸಂಸ್ಥೆಗಳ ಅಂಗವಾಗಿ ಕಲೆ/ಸಾಹಿತ್ಯ ಪತ್ರಿಕೆಗಳು ಬಂದಿವೆ. ಆದರೆ ಕಲೆ ಅಥವಾ ಸಾಹಿತ್ಯ ಪತ್ರಿಕೆಗಳಿಗಾಗಿಯೇ ಸಂಸ್ಥೆ ನಡೆಸಲ್ಪಡುವ ಉದಾಹರಣೆಗಳು ಅಪರೂಪ.
  • ೧೦. ಸಾಮಾನ್ಯವಾಗಿ ಆಸಕ್ತಿಯ ಪತ್ರಿಕೆಗಳನ್ನು ನಡೆಸುವ ಮಾಲಿಕರುಗಳು ಸೋದರಿ ಪತ್ರಿಕೆಗಳನ್ನು ಸೇರಿಸುವ ಸಂಪ್ರದಾಯವಿರುವುದಾದರೂ ಈ ಸಂಪ್ರದಾಯ ಸಾಮಾನ್ಯ ಆಸಕ್ತಿ ಪತ್ರಿಕೆಗಳಿಗೆ ಸೀಮಿತವಾಗಿವೆ.

ಸಾಮಾನ್ಯ ಆಸಕ್ತಿ ಪತ್ರಿಕಾ ಮಾಲಿಕರುಗಳು ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಒಡೆಯರಾಗುವ ಉತ್ಸಾಹ ತೋರುವುದಿಲ್ಲ.

ಕಲೆ ಮತ್ತು ಸಾಹಿತ್ಯ ಪತ್ರಿಕೆಗಳಿಗಿರುವ ಸೀಮಿತ ಮಾರುಕಟ್ಟೆಯಿಂದ ತೃಪ್ತಿಹೊಂದದೇ ಸಾಮಾನ್ಯಾಸಕ್ತಿ ಪತ್ರಿಕೆಗಳತ್ತ ಆಕರ್ಷಿತರಾಗುವ ಮಾಲಿಕರುಗಳಿದ್ದಾರೆ.

ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ವರ್ಗೀಕರಣ

ಪತ್ರಿಕಾ ರೆಜಿಸ್ಟ್ರಾರ್ ಅವರು ಭಾರತದಲ್ಲಿ ಪ್ರಕಟವಾಗುವ ಪತ್ರಿಕೆಗಳನ್ನು

  • (ಅ) ದೊಡ್ಡ ಪತ್ರಿಕೆಗಳು
  • (ಆ) ಮಧ್ಯಮ ಪ್ರಮಾಣದ ಪತ್ರಿಕೆಗಳು
  • (ಇ) ಸಣ್ಣ ಪತ್ರಿಕೆಗಳು - ಎಂಬುದಾಗಿ ವಿಂಗಡಿಸುತ್ತಾರೆ. ೭೫ ಸಾವಿರಕಿಂತಲೂ ಹೆಚ್ಚು ಪ್ರಸಾರವಿರುವ ಪತ್ರಿಕೆಯನ್ನು ದೊಡ್ಡ ಪತ್ರಿಕೆ ಎಂತಲೂ ೨೫ ಸಾವಿರಕ್ಕೂ ಹೆಚ್ಚು ಆದರೆ ೭೫ ಸಾವಿರಕ್ಕಿಂತಲೂ ಕಡಿಮೆ ಪ್ರಸಾರವಿರುವ ಪತ್ರಿಕೆಗಳನ್ನು ಮಧ್ಯಮ ಪ್ರಮಾಣದ ಪತ್ರಿಕೆಗಳು ಎಂತಲೂ, ೨೫ ಸಾವಿರಕಿಂತ ಕಡಿಮೆ ಪ್ರಸಾರವಿರುವ ಪತ್ರಿಕೆಗಳನ್ನು ಸಣ್ಣ ಪತ್ರಿಕೆಗಳು ಎಂತಲೂ ವಿಭಾಗಿಸಲಾಗುತ್ತದೆ.
  • ೧. ಈ ವರ್ಗೀಕರಣದ ಆಧಾರದಲ್ಲಿ ಕನ್ನಡದ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳೆಲ್ಲವೂ ಸಣ್ಣ ಪತ್ರಿಕೆಗಳು.
  • ೨. ಕಲೆ/ಸಾಹಿತ್ಯ ಪತ್ರಿಕೆಗಳ ಪ್ರಸಾರದ ಬಗ್ಗೆ ಸಂಪಾದಕರು ಹೇಳುವುದೇ ಅಂತಿಮ.
  • ೩. ಪತ್ರಿಕಾ ಪ್ರಸಾರದ ಬಗ್ಗೆ ನಿಖರವಾದ ದೃಢೀಕರಣ ಪತ್ರ ನೀಡುವ 'ಆಡಿಟ್ ಬ್ಯುರೋ ಆಫ್ ಸರ್ಕ್ಯಲೇಶನ್'ನಂಥ ಅಧಿಕೃತ ಸಂಸ್ಥೆಯ ಸದಸ್ಯತ್ತ್ವ ಪಡೆಯುವುದು ಕನ್ನಡದ ಯಾವುದೇ ಕಲೆ ಅಥವಾ ಸಾಹಿತ್ಯ ಪತ್ರಿಕೆಗೆ ಸಾಧ್ಯವಾಗಿರುವುದು ಸಂಶೋಧಕನ ಗಮನಕ್ಕೆ ಬಂದಿಲ್ಲ.
  • ೪. ಕನ್ನಡದ ಕಲೆ ಮತ್ತು ಸಾಹಿತ್ಯ ಪತ್ರಿಕಾ ಪ್ರಸಾರ ಸಾಮಾನ್ಯವಾಗಿ ಒಂದು ಸಾವಿರಕಿಂತ ಕಡಿಮೆ. ಹೆಚ್ಚಿನ ಪತ್ರಿಕೆಗಳಿಗೆ ೨೦೦-೩೦೦ ಜನರೂ ಚಂದಾ ಹಣಕೊಟ್ಟು ಪತ್ರಿಕೆ ಪಡೆಯುವವರಿಲ್ಲ. ಹೀಗಾಗಿ ಈ ಪತ್ರಿಕೆಗಳನ್ನು ಸಾಮಾನ್ಯಾಸಕ್ತಿಯ ಸಣ್ಣ ಪತ್ರಿಕೆಗಳ ಯಾದಿಗೂ ಸೇರಿಸದೇ ಕಿರು (ಸಾಹಿತ್ಯ) ಪತ್ರಿಕೆಗಳು ಎಂದು ಕರೆಯುವುದೇ ಸೂಕ್ತವೆಂದು ಸಂಶೋಧಕನ ಅಭಿಪ್ರಾಯ.
  • ೫. ಪತ್ರಿಕೆಗಳಲ್ಲಿ ದಿನ ಪತ್ರಿಕೆಗಳು ಗಾಹೂ ನಿಯತಕಾಲಿಕಗಳೆಂಬ ಎರಡು ವಿಧ. ಆದರೆ ಕಲೆ-ಸಾಹಿತ್ಯ ಪತ್ರಿಕೆಗಳಲ್ಲಿ 'ಅನಿಯತಕಾಲಿಕ'ಗಳೂ ಇದ್ದು ಹಾಗೆಂದು ಗೋಷಿಸಿಕೊಳ್ಳುವ ಸಂಪ್ರದಾಯವೇ ಇದೆ. ಅನಿಯತಕಾಲಿಕತೆಯೇ ಅವುಗಳ ವಿಶೇಷ. ಹೀಗಾಗಿ ಕಲೆ-ಸಾಹಿತ್ಯ ಪತ್ರಿಕೆಗಳಲ್ಲಿ ನಿಯತಕಾಲಿಕ ಹಾಗೂ ಅನಿಯತಕಾಲಿಕ ಎಂಬ ಹೊಸ ವರ್ಗೀಕರಣವೂ ಅಗತ್ಯ.

ಕಲೆ-ಸಾಹಿತ್ಯ ಪತ್ರಿಕೆಗಳ ಆಡಳಿತ

ಒಂದು ಪತ್ರಿಕೆ ಯಶಸ್ವಿಯಾಗಿ ಪ್ರಕಟಗೊಳ್ಳಬೇಕಾದರೆ ವ್ಯವಸ್ಥಿತವಾಗಿ, ಯೋಜನಾ ಬದ್ಧವಾಗಿ ಸಂರಚನೆಗೊಂಡಿರಬೇಕು. ವೃತ್ತಿಪರವಾಗಿ ಸಡೆಸಲ್ಪಡುವ ದಿನಪತ್ರಿಕೆ ಅಥವಾ ನಿಯತಕಾಲಿಕವೋಂದರ ದೈನಂದಿನ ಆಡಳಿತವು ಹಲವು ವಿಭಾಗಗಳಾಗಿ ವಿಂಗಡಿಸಲ್ಪಟ್ಟು, ಒಂದಕ್ಕೊಂದು ಪರಸ್ಪರ ಪೂರಕವಾಗಿಕೆಲಸಮಾಡುತ್ತಾ ಪತ್ರಿಕೆಯ ಶಿಸ್ತುಬದ್ಧ ಪ್ರಕಟಣೆ ಹಾಗೂ ವಿತರಣೆಗೆ ಕಾರಣವಾಗುತ್ತದೆ. ಆಧುನಿಕ ದೊಡ್ಡ ದೈನಿಕವೊಂದರ ಆಡಳಿತ ಸಂರಚನೆಯನ್ನು ಈ ಕೆಳಗಿನಂತೆ ವಿವರಿಸ ಬಹುದು. (ರೇಖಾಚಿತ್ರ ನೋಡಿ)

ಆಡಳಿತ ಮಂಡಳಿ
ಪ್ರಧಾನ ಸಂಪಾದಕರು,
ಸಂಪಾದಕರು ಪ್ರಬಂಧಕರು
ಜಾಹೀರಾತು ಮುದ್ರಣ, ಪ್ರಸಾರ, ಸಿಬ್ಬಂದಿಆಡಳಿತ
ಸುದ್ದಿ ಸಂಪಾದಕರು
ವರದಿ ಇಲಾಖೆ,ಸಂಪಾದನಾ ಇಲಾಖೆ, ಕ್ರೀಡಾ ಇಲಾಖೆ, ವಿಶೇಷ ಪುರವಣಿ, ವಾಣಿಜ್ಯ ಪುರವಣಿ

ದೊಡ್ಡ ಪ್ರಮಾಣದ ನಿಯತಕಾಲಿಕದ ಕಛೇರಿಯ ಆಡಳಿತವು ಹೀಗೆ ಪ್ರತ್ಯೇಕ ವಿಭಾಗಗಳಾಗಿ ಸಂರಚನೆಗೊಂಡಿದ್ದು ಆಧುನಿಕ ಆಡಳಿತ ನಿರ್ವಹಣೆಯ ತಂತ್ರಗಳನ್ನು ಪಾಲಿಸುತ್ತವೆ. ಕನ್ನಡದ ಕಲೆ ಮತ್ತು ಸಾಹಿತ್ಯ ನಿಯತಕಾಲಿಕಗಳ ಆಡಳಿತ ಸಂರಚನೆಯನ್ನು ಆಧುನಿಕ ಪತ್ರಿಕಾಲಯವೊಂದರ ಆಡಳಿತ ಸಂರಚನೆಯೊಂದಿಗೆ ಹೋಲಿಸುವಂತಿಲ್ಲ. ಕನ್ನಡದ ಕಲೆ, ಸಾಹಿತ್ಯ ಪತ್ರಿಕೆಗಳ ಸಾಮಾನ್ಯ ಆಡಳಿತ ಸಂರಚನೆಯನ್ನು ಈ ಕೆಳಗಿನಂತೆ ವಿವರಿಸಬಹುದು.

  • ೧. ಸಾಮಾನ್ಯವಾಗಿ ಕಲೆ, ಸಾಹಿತ್ಯ ಪತ್ರಿಕೆಗಳು ಖಾಸಗೀ ಒಡೆತನದಲ್ಲಿದ್ದು, ಏಕವ್ಯಕ್ತಿಯ ಸಾಹಸಗಳು. ಇಲ್ಲಿ ಸಂಪಾದಕ ಪತ್ರಿಕೆಯ ಕೇಂದ್ರ ಬಿಂದು.
  • ೨. ಸಂಪಾದನೆ, ಜಾಹೀರಾತು, ಮುದ್ರಣ, ಪ್ರಸಾರ ಹಾಗೂ ಆಡಳಿತವೆಂಬ ಪ್ರತ್ಯೇಕ ವಿಭಾಗಗಳಿರುವುದಿಲ್ಲ. ಎಲ್ಲವೂ ಸಂಪಾದಕನೇ ಆಗಿರುತ್ತಾನೆ.
  • ೩.ಹೆಚ್ಚಿನ ಪತ್ರಿಕೆಗಳಿಗೆ ಪ್ರತ್ಯೇಕ ಕಛೇರಿಯೂ ಇಲ್ಲ. ಸಂಪಾದಕನ ಮನೆಯೇ ಪತ್ರಿಕೆಯ ಕಛೇರಿಯೂ ಆಗಿರುತ್ತದೆ.

ಕಲೆ, ಸಾಹಿತ್ಯ ಪತ್ರಿಕೆಗಳ ಸಾಮಾನ್ಯ ಆಡಳಿತ ಸಂರಚನೆಯ ರೇಖಾಚಿತ್ರದ ವಿವರಣೆ

  • ಕಲೆ ಸಾಹಿತ್ಯ ಪತ್ರಿಕೆಗಳ ಒಟ್ಟೂ ಜವಾಬ್ದಾರಿ ಸಂಪಾದಕರು. ಲೇಖನ ಸಾಮಗ್ರಿ, ಜಾಹೀರಾತು, ಮುದ್ರಣ ಕಾಗದ, ಮುದ್ರಣ ಏರ್ಪಾಡು, ಹಾಗೂ ನಂತರ ಮುದ್ರಿತ ಪತ್ರಿಕೆಗಳ ವಿಲೇವಾರಿಗೆ ಆತನೆ ನಾಯಕ.
  • ಈ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಸಂಪಾದಕನಿಗೆ ಸಹಾಯಕ್ಕೆ ಬರುವವರು ಮನೆಮಂದಿ, ಸ್ನೇಹಿತರು, ಸಹೋದ್ಯೋಗಿಗಳು, ಹಾಗೂ ಹಿತೈಷಿಗಳು. ಸಂಪಾದಕ ಮಾಡಬೇಕಾದ ಪ್ರತಿಯೊಂದು ಕೆಲಸವನ್ನೂ ಸಂಪಾದಕನ ಪ್ರತಿನಿಧಿಗಳಾಗಿ ಇವರು ಮಾಡಬೇಕು.
  • ಈ ಮಾದರಿಯ ಪತ್ರಿಕೆಗಳಿಗೆ ಲೇಖನ ಸಾಮಗ್ರಿಗಳು ಲೇಖಕರಿಂದ ಸ್ವಯಂ ಆಗಿ ಬರಬಹುದು. ಅಥವಾ ಸಂಪಾದಕನ ವಿಶ್ವಾಸಕ್ಕೆ ಕಟ್ಟುಬಿದ್ದು ಗೆಳೆಯರು, ಪರಿಚಿತರು ಬರೆದುಕೊಡಬೇಕಾಗಿ ಬರಬಹುದು.
  • ಹಾಗೆ ಬಂದ ಲೇಖನಗಳನ್ನು ಸಂಪಾದಕನೇ ಆಯ್ಕೆ ಹಾಗೂ ಉಪಸಂಪಾದನೆ ಮಾಡಿಯಾನು. ಬರಹಗಳೇ ಕಡಿಮೆ ಇರುವಾಗ ಆಯ್ಕೆಗೆ ಅವಕಾಶವೇ ಇಲ್ಲ. ಸಂಪಾದಕನಿಗೆ ಸಮಯಾಭಾವವಿದ್ದಲ್ಲಿ ಸ್ನೇಹಿತರು, ಹಿತೈಷಿಗಳೇ ಆಯ್ಕೆಯನ್ನೂ, ಸಂಪಾದನೆಯನ್ನೂ ಮಾಡಬೇಕು.
  • ಹಾಗೆ ಉಪಸಂಪಾದಿತ ಮುದ್ರಣ ಸಾಮಗ್ರಿ ಮುದ್ರಣಾಲಯ ತಲುಪಿ, ಅಕ್ಷರ ಜೋಡಣೆಗೊಂಡು ಮೊದಲ ಕರಡು ಬರುವುದೊಂದು ದೊಡ್ಡ ಸಾಧನೆ. ಒಂದೋ ಎರಡೋ ಬಾರಿ ಕರಡುಗಳನ್ನು ಸಂಪಾದಕರು ಅಥವಾ ಅವರ ಪ್ರತಿನಿಧಿಗಳು ತಿದ್ದಬೇಕು, ನಂತರ ಮುದ್ರಣಕ್ಕೆ ಒಪ್ಪಿಗೆ ನೀಡಬೇಕು.
  • ಹಾಗೆ ಮುದ್ರಿತ ಪ್ರತಿಗಳು ಮತ್ತೆ ಸಂಪಾದಕನ ಕಾಲು ಬುಡಕ್ಕೆ ಬಂದು ಬೀಳುತ್ತವೆ. ಅವುಗಳಿಗೆ ಅಂಚೇ ಚೀಟಿ ಅಂಟಿಸಿ, ವಿಳಾಸ ಬರೆದು ಅಂಚೆಗೆ ಹಾಕಬೇಕು, ಕೈಯಿಂದ ಕೈಗೆ ಕಳಿಸಬೇಕು. ಇನ್ನೂ ಪ್ರತಿಗಳು ಉಳಿದರೆ ಕೆಲವನ್ನು ಉಚಿತ ವಿಲೇವಾರಿ ಮಾಡಿ ಮತ್ತು ಉಳಿದವುಗಳನ್ನು ಉಗ್ರಾಣಕ್ಕೆ ಸೇರಿಸಬೇಕು. ಪ್ರತಿ ಸಂಚಿಕೆಯೂ ಪ್ರಕಟಗೊಳ್ಳುವುದು ಹೀಗೆ.
  • ೪. ಸಂಪಾದಕನ ಮನೆಯವರು, ಸ್ನೇಹಿತರು, ಹಿತೈಷಿಗಳು ಸಂಪಾದಕನ ಜವಾಬ್ದಾರಿಗಳನ್ನು ಅವನ ಪರವಾಗಿ ನಿರ್ವಹಿಸುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಸಂಪಾದಕನನ್ನು ಪ್ರತಿನಿಧಿಸುತ್ತಾರೆ.
  • ೫. ಹೆಚ್ಚಿನ ಸಂಪಾದಕರುಗಳಿಗೆ ಕಲೆ ಅಥವಾ ಸಾಹಿತ್ಯ ಕ್ಷೇತ್ರಗಳಲ್ಲಿ ಪರಿಣತಿ ಇರುವುದನ್ನು ಬಿಟ್ಟರೆ ಪತ್ರಿಕೆಯ ಆಡಳಿತ ನಿರ್ವಹಣಾ ತಂತ್ರದ ಪ್ರಾಥಮಿಕ ಜ್ಞಾನವಾಗಲೀ, ಅನುಭವವಾಗಲೀ ಇರುವುದಿಲ್ಲ.
  • ೬. ಆಡಳಿತದ ಖರ್ಚು, ವೆಚ್ಚಗಳನ್ನು ಸಂಪಾದಕನೇ ತನಗೆ ಸಾಧ್ಯವಿರುವ ಎಲ್ಲಾ ಮೂಲಗಳಿಂದ ಹಣ ತಂದು ಪೂರೈಸುತ್ತಾನೆ. ಕಲೆ, ಸಾಹಿತ್ಯ ಪತ್ರಿಕೆಗಳಿಗೆ ಸರ್ಕಾರದಿಂದ 'ಕರ್ನಾಟಕ ವಾರ್ತಾ', ಜಾಹೀರಾತು, ಉದ್ದಿಮೆಗಳಿಂದ ಶುಭಾಶಯ ಪೂರ್ವಕ ಜಾಹೀರಾತುಗಳು ಹಾಗೂ ಸ್ನೇಹಿತರು ಸಂಪಾದಕರ ಒತ್ತಾಯಕ್ಕೆ ಕಟ್ಟುಬಿದ್ದು ನೀಡುವ ಹಣಕಾಸು ನೇರವುಗಳು ಹರಿದುಬರುತ್ತದೆ.
  • ೭. ಪತ್ರಿಕೆಯ ಪ್ರಕಟಣೆಗೆ ಸಾಮಗ್ರಿಯ ಕೊರತೆಯೂ ಇಂಥ ಪತ್ರಿಕೆಗಳನ್ನು ಬಹುವಾಗಿ ಕಾಡುತ್ತವೆ. 'ಸಾಕ್ಷಿ'ಯಂಥ ಪತ್ರಿಕೆ ನಿಲ್ಲಲು ಪ್ರಕಟಣೆಗೆ ಯೋಗ್ಯವಾದ ಮಟ್ಟದ ಲೇಖನಗಳು ನಿಯತವಾಗಿ ಪೂರೈಕೆಯಾಗದಿರುವುದೇ ಕಾರಣವೆಂದು ಗೋಪಾಲಕೃರ್ಷಣ ಅಡಿಗರು ಒಂದೆಡೆ ನುಡಿದಿದ್ದಾರೆ. ಈ ಪತ್ರಿಕೆಗಳಿಗೆ ಪ್ರತ್ಯೇಕ ಸಂಪಾದನಾ ವಿಭಾಗಗಳಿರುವುದಿಲ್ಲ. ಲೇಖಕರಿಗೆ ಗೌರವ ಸಂಭಾವನೆ ದಕ್ಕುವ ಸಂಭವವಿಲ್ಲದಿರುವುದರಿಂದ ಲೇಖಕರು ತಾವಾಗಿ ಆಸಕ್ತಿ ವಹಿಸಿ ಲೇಖನ ಕಳಿಸುವ ಉದಾಹರಣೆಗಳೇ ಕಡಿಮೆ. ಹಾಗೆ ಸಂಪಾದಕರ ಒತ್ತಾಸೆಯಿಂದಾಗಿ ಬರೆಯುವ ಲೇಖಕರು, ಬರೆಯಬಲ್ಲ ಗೆಳೆಯರುಗಳು ಕಳಿಸಿದ ಬರಹಗಳನ್ನು ಸಂಪಾದಕರು ಸ್ವತಃ ಅಥವಾ ಅವರ ಪರವಾಗಿ ಇತರರು ಉಪಸಂಪಾದನೆ ಮಾಡುತ್ತಾರೆ.
  • ೮. ಕನ್ನಡ ಕಲೆ, ಸಾಹಿತ್ಯ ಪತ್ರಿಕೆಗಳ ಸಂಪಾದಕರು ಮುದ್ರಣಾಲಯಗಳ ಮಾಲಿಕರೂ ಆಗಿರುವುದು ತೀರ ಕಡಿಮೆ.ಹಾಗೆ ಸಂಪಾದಕರೇ ಮುದ್ರಕರಾಗುವ ಸಂದರ್ಭ ಪತ್ರಿಕೆಗೆ ಅನುಕೂಲಕರವಾಗಿ ಪರಿಣಮಿಸಿದೆ. ಸಂಪಾದಕರ ಸ್ನೇಹಿತ ವಲಯದ ಮುದ್ರಣಾಲಯದಲ್ಲೇ ಸಾಮಾನ್ಯವಾಗಿ ಪತ್ರಿಕೆ ಮುದ್ರಣಗೊಳ್ಳುತ್ತದೆ. ಸಂಪಾದಕರು ನೀಡಬೇಕಾದ ಬಾಕಿಯ ಮೊತ್ತ ಪ್ರತಿ ತಿಂಗಳೂ ಏರುತ್ತದೆ. ಯಾವಾಗ ಮುದ್ರಕರು ಬಾಕಿಯನ್ನು ತಾಳಿಕೊಳ್ಳುವುದು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ತಿಳಿಸುತ್ತಾರೋ ಆಗ ಪತ್ರಿಕೆ ನಿಲ್ಲುವ ಸಂಭವವಿರುತ್ತದೆ.
  • ೯. ಸಂಪಾದಕರ ಹಣಕಾಸು ಮೂಲ ಬತ್ತಿದಾಗ ಅಥವಾ ಮುದ್ರಕರ ಔದಾರ್ಯ ಕೊನೆಗೊಂಡಾಗ ಸಂಪಾದಕರೂ ಏಕಾಏಕಿ ಪತ್ರಿಕೆ ನಿಲ್ಲಿಸುತ್ತಾರೆ. ಏಕೆ ಹೀಗಾಯಿತೆಂದು ಚಂದಾದಾರರಿಗೆ ತಿಳಿಸುವ ವ್ಯವಧಾನವೂ, ಕೈಗೆಟಕುವ ಮಾಧ್ಯಮವೂ ಸಂಪಾದಕರಿಗಿರುವುದಿಲ್ಲ. ಕೆಲವು ಸಂಪಾದಕರು ಮಾತ್ರ ಓದುಗರಿಗೆ ತಿಳಿಸುವ ಪ್ರಯತ್ನ ಮಾಡುತ್ತಾರೆ.
  • ೧೦. ಪತ್ರಿಕರಯ ಖರ್ಚು, ವೆಚ್ಚಗಳ ನಿಖರ ದಾಖಲೆ, ಜಾಹೀರಾತುದಾರರಿಂದ ಹಾಗೂ ಚಂದಾದಾರರಿಂದ ಸಂದಾಯವಾಗುವ ಹಣದ ಸರಿಯಾದ ಲೆಕ್ಕ, ಕಲೆ, ಸಾಹಿತ್ಯ ಪತ್ರಿಕೆಗಳಲ್ಲಿ ಇರುವುದಿಲ್ಲ. ಹಾಗೆ ಲೆಕ್ಕವಿಡಬೇಕಾದ ಪ್ರತ್ಯೇಕ ಸಿಬ್ಬಂದಿಯೂ ಪತ್ರಿಕೆಗಳಿಗೆ ಇರುವುದಿಲ್ಲ. ಸಂಪಾದಕರು, ಅವರ ಸಹೋದ್ಯೋಗಿಗಳು, ಸ್ನೇಹಿತರೇ ಈ ಕೆಲಸ ಮಾಡುವವರು.

ಈ ಹಿನ್ನಲೆಯಲ್ಲಿ ಕಲೆ, ಸಾಹಿತ್ಯ ಪತ್ರಿಕೆಗಳ ಆಡಳಿತ ನಿರ್ವಹಣೆ ವೈಜ್ಞಾನಿಕವಾಗಿ ನಡೆಯುವ ಹಂತಕ್ಕೆ ಕನ್ನಡ ಪತ್ರಿಕೋದ್ಯಮ ಇನ್ನೂ ತಲುಪಿಲ್ಲವೆಂದು ಅಭಿಪ್ರಾಯಪಡಬಹುದು.ಕಲೆ, ಸಾಹಿತ್ಯ ಪತ್ರಿಕೆಗಳ ನೋಂದಾವಣೆ ಭಾರತದಲ್ಲಿ ಪ್ರಕಟಗೊಳ್ಳುವ ಪತ್ರಿಕೆಗಳೆಲ್ಲ ಭಾರತೀಯ ಪತ್ರಿಕಾ ರಿಜಿಸ್ಟ್ರಾರ್ ಬಳಿ ನೋಂದಾವಣೆಗೊಂಡಿರಬೇಕು. ನೋಂದಾವಣೆಯ ನಿಯಮಗಳ ಪ್ರಕಾರ ಪ್ರಕಟಿತ ಪ್ರತಿಯೊಂದನ್ನು ಪತ್ರಿಕಾ ರಿಜಿಸ್ಟ್ರಾರ್‌ರವರ ಪ್ರಾದೇಶಿಕ ಕಛೇರಿಗೆ ಕಳಿಸಬೇಕು. ಪ್ರತಿ ವರ್ಷವೂ ಬಳಸಿದ ಮುದ್ರಣ ಕಾಗದದ ಲೆಕ್ಕ ನೀಡಬೇಕು. ಆದಾಯ ವೆಚ್ಚಗಳ ವಿವರ ನೀಡಬೇಕು. ಪತ್ರಿಕಾ ರಿಜಿಸ್ಟ್ರಾರ್‌ರವರ ಬಳಿ ನೊಂದಾವಣೆಗೊಂಡ ಪತ್ರಿಕೆಗಳಿಗಷ್ಟೇ ಅಧಕೃತ ಮುದ್ರೆ ಬೀಳುತ್ತದೆ. ಅಂಚೆ ಸೇವೆಯಲ್ಲಿ ರಿಯಾಯಿತಿ ಪಡೆಯಲು ನೋಂದಾಯಿತ ಪತ್ರಿಕೆಗಳು ಅರ್ಹವಾಗುತ್ತವೆ. ಸರ್ಕಾರದಿಂದ ಮುದ್ರಣ ಕಾಗದ ಪಡೆಯಲಿಕ್ಕೂ ಜಾಹೀರಾತು ಪಡೆಯಲಿಕ್ಕೂ ಪತ್ರಿಕೆಯ ನೋಂದಾವಣೆ ಅಗತ್ಯವಾಗಿರುತ್ತದೆ. ನೋಂದಾವಣೆಯ ದೃಷ್ಟಿಯಿಂದ ಕಲೆ, ಸಾಹಿತ್ಯ ಪತ್ರಿಕೆಗಳ ಕುರಿತು ಈ ಕೆಳಗಿನ ಸಂಗತಿಗಳು ಅಧ್ಯಯನದ ವೇಳೆ ಕಂಡುಬಂದಿವೆ.

  • ೧. ಆಗಿ ಹೋದ ಕಲೆ, ಸಾಹಿತ್ಯ ಪತ್ರಿಕೆಗಳು ನೋಂದಾವಣೆಗೊಂಡಿದ್ದವೇ ಎಂಬ ಬಗ್ಗೆ ನಿಖರ ಮಾಹಿತಿ ದೊರೆಯುವುದಿಲ್ಲ.
  • ೨. ಪತ್ರಿಕೆಯ ನೋಂದಾವಣಿ ಮಾಡಿಸದೇ ಖಾಸಗೀ ಪ್ರಸಾರಕ್ಕಾಗಿ ಎಂದು ಘೋಷಿಸಿ ಕಲೆ, ಸಾಹಿತ್ಯ ಪತ್ರಿಕೆಗಳನ್ನು ಹೊರಡಿಸುವ ಸಂಪ್ರದಾಯವಿದೆ.
  • ೩. ಹೆಚ್ಚಿನ ಸಾಹಿತ್ಯ, ಕಲಾ ಪತ್ರಿಕೆಗಳು ನೋಂದಾವಣೆಗೊಳ್ಳುವ ಮೊದಲೇ ಪ್ರಕಟಣೆಯನ್ನಾರಂಭಿಸುತ್ತವೆ.ನೊಂದಾವಣೆಗೊಳ್ಳುವಾಗ ಮೂಲ ಹೆಸರು ನೊಂದಾವಣೆಗೊಳ್ಳದೇ ಬೇರೆ ಹೆಸರು ನೊಂದಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನಡುವೆ ಹೊಸ ಹೆಸರಿನಿಂದ ಪತ್ರಿಕೆ ಮುಂದುವರೆಯುತ್ತದೆ.
  • ೪. ಕೆಲವು ಪತ್ರಿಕೆಗಳು ನೋಂದಾವಣಿಗೊಳ್ಳುವ ಪೂರ್ವದಲ್ಲೇ ಸಾವನ್ನಪ್ಪುತ್ತವೆ.
  • ೫. ನೋಂದಾವಣೆಗೊಂಡಿರದ ಅಥವಾ ಮಾಸಪತ್ರಿಕೆಗಿಂತ ಹೆಚ್ಚಿನ ಅವಧಿಯ ನಿಯತಕಾಲಿಕತೆ (ದ್ವೈಮಾಸಿಕ, ತ್ರೈಮಾಸಿಕ ಮುಂತಾಗಿ ) ಹೊಂದಿರುವ ಪತ್ರಿಕೆಗಳಿಗೆ ಅಂಚೆಯಲ್ಲಿ ಕಳಿಸುವ ಪತ್ರಿಕೆಗಳಿಗೆ ಸಿಕ್ಕುವ ರಿಯಾಯಿತಿ ದೊರೆಯುವುದಿಲ್ಲ. ಹೀಗಾಗಿ ಚಂದಾದಾರರಿಗೆ ಪತ್ರಿಕೆ ಕಳಿಸುವುದು ಹಣಕಾಸಿನ ಹೊರೆಯಾಗುತ್ತದೆ.
  • ೬. ನೋಂದಾವಣಿ ಮಾಡಿಸಿದ ಪತ್ರಿಕೆಗಳು ವರ್ಷವರ್ಷವೂ ಲೆಕ್ಕ ಪತ್ರವನ್ನು ನೋಂದಾವಣಿ ಅಧಿಕಾರಿಗಳಿಗೆ ಒಪ್ಪಿಸಬೇಕು. ಹೀಗೆ ವ್ಯವಸ್ಥಿತವಾಗಿ ಲೆಕ್ಕಪತ್ರಗಳನ್ನಿರಿಸುವ ಪರಿಪಾಠ ಈ ಮಾದರಿಯ ಪತ್ರಿಕೆಗಳಲ್ಲಿ ಬೆಳೆದು ಬಂದಿಲ್ಲ. ಆದ್ದರಿಂದ ನೋಂದಾವಣೆ ಈ ಮಾದರಿಯ ಪತ್ರಿಕೆಗಳಿಗೆ ವ್ಯವಹಾರಿಕವಾದಂತಿಲ್ಲ.
  • ೭. ನೋಂದಾವಣಿಯಿಂದ ಪತ್ರಿಕೆಗಳಿಗೆ ದೊರೆಯುವ ಮುಖ್ಯ ಲಾಭವೆಂದರೆ ಮುದ್ರಣ ಕಾಗದವನ್ನು ರಿಯಾಯಿತಿ ದರದಲ್ಲಿ ಪಡೆಯುವ ಅರ್ಹತೆ ದೊರೆಯುವುದು. ಆದರೆ ಸದಕ್ಕಾಗಿ ಸಲ್ಲಿಸಬೇಕಾಗಿರುವ ಅಂಕಿ-ಅಂಶಗಳು ಹಾಗೂ ಸರ್ಕಾರಿ ಕಛೇರಿಗಳಿಗೆ ಅಲೆಯಬೇಕಾದ ಪ್ರಸಂಗಗಳು ಕಲೆ, ಸಾಹಿತ್ಯ ಪತ್ರಿಕಾ ಸಂಪಾದಕರುಗಳು ಮುದ್ರಣ ಕಾಗದ ಪಡೆಯುವ ಕ್ರಿಯೆಯಿಂದ ದೂರವಿರಲು ಕಾರಣವಾಗಿದೆ.
  • ೮. ಬಯಸದ ಹೆಸರು ನೋಂದಾವಣಿಯ ಸಂದರ್ಭದಲ್ಲಿ ದೊರೆಯದಿರುವ ಸಾಧ್ಯತೆ ಹಾಗೂ ನೋಂದಾವಣಿಯಿಂದ ಬೇರೆ ಏನೂ ಹೆಚ್ಚಿನ ವ್ಯಾವಹಾರಿಕ ಲಾಭವಿಲ್ಲ ಎಂಬ ನಂಬಿಕೆ ಈ ಪತ್ರಿಕೆಗಳ ಸಂಪಾದಕರುಗಳು ಪತ್ರಿಕೆಯನ್ನು ನೋಂದಾಯಿಸಲು ಅಷ್ಟೇನೂ ಉತ್ಸುಕತೆ ತೋರದಿರಲು ಕಾರಣವಾಗಿದೆ.

ಕಲೆ, ಸಾಹಿತ್ಯ ಪತ್ರಿಕೆಗಳ ಪ್ರಸಾರ

ದೊಡ್ಡ ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಪ್ರತ್ಯೇಕ ಪ್ರಸಾರ ವಿಭಾಗವಿರುತ್ತದೆ. ಅದು ಪತ್ರಿಕೆಯ ವಿತರಣೆಗೆ ಸಂಬಂಧ ಪಟ್ಟ ಎಲ್ಲ ಜವಾಬ್ದಾರಿಗಳನ್ನೂ ನಿರ್ವಹಿತ್ತದೆ. ದೊಡ್ಡ ದಿನಪತ್ರಿಕೆ ಹಾಗೂ ನಿಯತಕಾಲಿಕಗಳ ಪ್ರಸಾರವನ್ನು ನಿಖರವಾಗಿ ಅಳೆಯುವ ಸಾಧನಗಳಿವೆ. ಪ್ರತಿ ವರ್ಷ ಈ ಪತ್ರಿಕೆಗಳು ಪತ್ರಿಕಾ ರಿಜಿಸ್ಟ್ರಾರ್ ಅವರಿಗೆ ಪ್ರಸಾರದ ಮಾಹಿತಿ ನೀಡಬೇಕಾಗುತ್ತದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿಟ್ ಬ್ಯೂರೋ ಆಫ್‌ ಸಕ್ಯುಲೇಶನ್ (ಎ.ಬಿ.ಸಿ) ಪತ್ರಿಕೆಗಳ ಪ್ರಸಾರವನ್ನು ಪ್ರಮಾಣೀಕರಿಸುವ ಸಧಿಕೃತ ಸಂಸ್ಥೆಯಾಗಿದ್ದು ಎ.ಬಿ.ಸಿ.ಯ ಪ್ರಮಾಣಪತ್ರ ಹೊಂದುವುದು ಪತ್ರಿಕೆಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಪತ್ರಕೋದ್ಯಮದಲ್ಲಿ ಪ್ರಸಾರಕ್ಕೂ ಜಾಹೀರಾತಿಗೂ ನೇರ ಸಂಬಂಧವಿದ್ದು ಪ್ರಸಾರ ಹೆಚ್ಚಾದಂತೆಲ್ಲ ಪತ್ರಿಕೆಗೆ ಪ್ರಕಟಣೆಗಾಗಿ ದಕ್ಕುವ ಜಾಹೀರಾತಿನ ಪ್ರಮಾಣ ಹೆಚ್ಚುತ್ತದೆ. ಪ್ರಸಾರವಿಲ್ಲದೇ ಜಾಹೀರಾತೂ ಇಲ್ಲ ಎಂಬಂಥ ಪರಿಸ್ಥಿತಿ ಪತ್ರಿಕೆಗಳಿಗೆ ಬರುತ್ತದೆ. ದೊಡ್ಡ ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿರುವ ಪ್ರತೇಕ ಪ್ರಸಾರ ವಿಭಾಗಕ್ಕೆ ಪ್ರಸಾರವೃದ್ಧಿ ನಿರಂತರ ಸವಾಲು. ಪ್ರಸಾರ ವರ್ಧಸುವ ಯೋಜನೆಗಳನ್ನು ಕೈಗೊಂಡು ಅದನ್ನು ಆಂದೋಲನವಾಗಿ ಮುಂದುವರೆಸುತ್ತಾರೆ. ಅದಕ್ಕೆ ಬೇಕಾದ ಪ್ರತಿನಿಧಿಗಳನ್ನು ಊರೂರುಗಳಲ್ಲಿ ನೇಮಿಸಿ ಪ್ರಸಾರ ವೃದ್ಧಿಸುವ ಆಂದೋಲನವನ್ನು ವ್ಯವಸ್ಥಿತವಾಗಿ ಕೈ ಗೊಳ್ಳುತ್ತಾರೆ. ಸಾಮಾನ್ಯ ದಿನಪತ್ರಿಕೆ ಹಾಗೂ ನಿಯತಕಾಲಿಕಗಳ ವಿತರಣೆಗೆ ವ್ಯವಸ್ಥಿತ ಮಾರಾಟ ಜಾಲಗಳಿರುತ್ತವೆ. ಪ್ರಕಟಣೆಯ ನಗರದಿಂದ ದೂರದ ಊರುಗಳಿಗೆ ಪತ್ರಿಕೆಗಳನ್ನು ಸಾಗಿಸುವ ಜವಾಬ್ದಾರಿಯನ್ನು ಟೆಂಡರ್ ಕರೆದು, ಕಂಟ್ರಾಕ್ಟರುಗಳಿಗೆ ವಹಿಸಲಾಗುತ್ತದೆ. ದೊಡ್ಡ ನಗರ ಪಟ್ಟಣಗಳಲ್ಲಿ ಪ್ರದೇಶವಾರು ವಿತರಕರಿರುತ್ತಾರೆ. ವಿತರಕರು ಕೆಳಗೆ ಏಜಂಟರುಗಳು, ಏಜಂಟರುಗಳಿಂದ ಉಪ ಏಜಂಟರುಗಳು ಪತ್ರಿಕೆಗಳನ್ನು ಪಡೆದು ಪೇಪರ್ ಹುಡುಗರ ಮೂಲಕ ನಾಡಿನ ಮನೆಮನೆಗೆ ಪತ್ರಿಕೆ ಹಂಚುವ ಕೆಲಸ ನಡೆಯುತ್ತದೆ. ಹಳ್ಳಿಗಳಿಗಾದರೆ ಸಮೀಪದ ಪಟ್ಟಣಕ್ಕೆ ಸಾರಿಗೆ ಕಂಟ್ರಾಕ್ಟರುಗಳ ಮೂಲಕ ತಲುಪುವ ಪತ್ರಿಕೆ ಕಟ್ಟು ನಂತರ ಬಸ್ಸುಗಳ ಮೂಲಕ ಊರೂರು ತಲುಪುತ್ತವೆ. ಹಳ್ಳಿಗಳಲ್ಲಿರುವ ಏಜಂಟರುಗಳ ಮೂಲಕ ವಿತರಣೆಯಾಗುತ್ತದೆ. ಈ ರೀತಿ ಸಾಮಾನ್ಯ ದಿನಪತ್ರಿಕೆಗಳಿಗೂ ನಿಯತಕಾಲಿಕಗಳಿಗೂ ವ್ಯವಸ್ಥಿತ ಮಾರಾಟ ಜಾಲವಿದ್ದು ಅದು ಪ್ರಸಾರ ವಿಭಾಗದ ಮೂಲಕ ಸಂರಚನೆಗೊಂಡು ಚಾಲನೆಯಲ್ಲಿರುತ್ತದೆ. ದೊಡ್ಡ ದಿನಪತ್ರಿಕೆಗಳ ನಿಯತಕಾಲಿಕಗಳ ಪ್ರಸಾರದ ಈ ಮಾದರಿಯ ಜೊತೆ ಕನ್ನಡದ ಕಲೆ, ಸಾಹಿತ್ಯ ಪತ್ರಿಕೆಗಳ ಪ್ರಸಾರ ವ್ಯವಸ್ಥೆಯನ್ನು ಹೋಲಿಸಿದಾಗ ಕಂಡುಬರುವ ಅಂಶಗಳು ಈ ಕೆಳಗಿನಂತಿವೆ.

  • ೧. ಕಲೆ, ಸಾಹಿತ್ಯ ಪತ್ರಿಕೆಗಳಿಗೆ ಪ್ರತ್ಯೇಕ ಪ್ರಸಾರ ವಿಭಾಗವಿರುವುದಿಲ್ಲ. ಖಾಸಗೀ ಒಡೆತನದ ಪತ್ರಿಕೆಯಾದ ಸಂದರ್ಭದಲ್ಲಿ ಸಂಪಾದಕನಿಗೆ ಸಂಪಾದನಾ ವಿಭಾಗದಲ್ಲಿ ಸಹಾಯಮಾಡುವ ವ್ಯಕ್ತಿಗಳೇ ಪ್ರಸಾರದ ಕೆಲಸಗಳನ್ನೂ ಮಾಡುತ್ತಾರೆ.
  • ೨. ಸಂಘ, ಸಂಥೆಗಳ ಹೆಸರಲ್ಲಿ ಕಲೆ, ಸಾಹಿತ್ಯ ಪತ್ರಿಕೆಗಳು ಪ್ರಕಟಗೊಂಡ ಸಂದರ್ಭದಲ್ಲೂ ಸಂಸ್ಥೆಯ ಇತರ ಕಾರ್ಯಗಳನ್ನು ನಿರ್ವಹಿಸುವ ಸಿಬ್ಬಂದಿಯೇ ಪತ್ರಿಕೆಯ ವಿತರಣೆಯ ಜವಾಬ್ದಾರಿಯನ್ನೂ ಹೊರುತ್ತಾರೆ. ಪತ್ರಿಕೆಯ ಪ್ರಸಾರಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ ಹೀಗಾಗಿ ಆದ್ಯತೆಯ ಮೇಲೆ ನಡೆಯಬೇಕಾದ ಪತ್ರಿಕೆಯ ಪ್ರಸಾರಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ಹೀಗಾಗಿ ಆದ್ಯತೆಯ ಮೇಲೆ ನಡೆಯಬೇಕಾದ ಪತ್ರಿಕೆಯ ಕೆಲಸಗಳು ಕಾಲಕಾಲಕ್ಕೆ ಸರಿಯಾಗಿ ನಡೆಯುವುದಿಲ್ಲ.
  • ೩. ಕಲೆ, ಸಾಹಿತ್ಯ ಪತ್ರಿಕೆಗಳ ವಿತರಣೆಗಾಗಿ ವ್ಯವಸ್ಥಿತ ಮಾರಾಟ ಜಾಲವಿರುವುದಿಲ್ಲ. ಸಾಮಾನ್ಯಾಸಕ್ತಿ ಪತ್ರಿಕೆಗಳಲ್ಲಿ ಜಾರಿಯಲ್ಲಿರುವ ಏಜನ್ಸೀ ವ್ಯವಸ್ಥೆ ಕಲೆ, ಸಾಹಿತ್ಯ ಪತ್ರಿಕೆಗಳನ್ನು ತಲುಪಿಲ್ಲ.
  • ೪. ಈ ಪತ್ರಿಕೆಗಳನ್ನು ಪಡೆಯುವ ಏಕೈಕ ವಿಧಾನ ಚಂದಾ ಮೂಲಕ.
  • * ಸಾಮಾನ್ಯವಾಗಿ ಪತ್ರಿಕೆಗಳು ವಾರ್ಷಿಕ, ದ್ವೈವಾರ್ಷಿಕ, ಆಜೀವ ಚಂದಾದರಗಳನ್ನು ನಿಗದಿಮಾಡುತ್ತವೆ.
  • * ಪತ್ರಿಕೆಯ ಬಗ್ಗೆ ಹೇಗೋ ತಿಳಿದುಕೊಂಡ ಒದುಗ ತಾನಾಗಿ ಪತ್ರಿಕೆ ವಿಳಾಸ ಪತ್ತೆ ಹಚ್ಚಿ ಚಂದಾ ಹಣ ಕಳಿಸಬೇಕಾದ ಪರಿಸ್ಥಿತಿ ಇದೆ.
  • * ಸಾಮಾನ್ಯ ಆಸಕ್ತಿಯ ಪತ್ರಿಕೆಗಳು ಮಾರಾಟವಾಗುವ ಪೇಪರ್ ಅಂಗಡಿಗಳಲ್ಲಿ ಈ ಪತ್ರಿಕೆಗಳು ದೊರೆಯುವುದಿಲ್ಲ. ಪತ್ರಿಕೆಯನ್ನು ಪಡೆಯಲು ಯಾರನ್ನು ಸಂಪರ್ಕಿಸ ಬೇಕು. ಎಷ್ಟು ಹಣ ಕಳಿಸಬೇಕು ಮುಂತಾದ ಅಗತ್ಯ ವಿವರಗಳು ಓದುಗರಿಗೆ ಲಭ್ಯವಿಲ್ಲದೇ ಪತ್ರಿಕೆ ಹಾಗೂ ಓದುಗರ ಮಧ್ಯೆ ಕಂದಕವಿದೆ. ಹೀಗಾಗಿ ಕೊಂಡು ಕೊಳ್ಳಬಲ್ಲ ಗ್ರಾಹಕರನ್ನು ತಲುಪಲಿಕ್ಕೆ ಕಲೆ, ಸಾಹಿತ್ಯ ಪತ್ರಿಕೆಗಳು ವಿಫಲವಾಗುತ್ತವೆ.
  • * ಆಜೀವ ಚಂದಾ ಹಣವನ್ನು ಪಡೆಯುವ ಪತ್ರಿಕೆಗಳು ಅದು ಪತ್ರಿಕೆಯ ಜೀವವುಳಿಯುವವರೆಗೋ, ವ್ಯಕ್ತಿಯ ಜೀವವುಳಿಯುವವರೆಗೋ ಎಂಬುದನ್ನು ಸ್ಪಷ್ಟ ಪಡಿಸುವುದಿಲ್ಲ. ಆಜೀವ ಚಂದಾ ಪಡೆದ ಕೆಲವೇ ತಿಂಗಳಲ್ಲಿ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿದರೆ ಚಂದಾ ಹಣ ನೀಡಿದವರಿಗೆ ಹಾನಿಯಾಗುವುದಕ್ಕೆ ಪರಿಹಾರ ದಕ್ಕುವುದಿಲ್ಲ.
  • * ಕೆಲವು ಪತ್ರಿಕೆಗಳು ಆಜೀವ ಚಂದಾಹಣವನ್ನು ಎರಡು ಮೂರು ಕಂತುಗಳಲ್ಲಿ ಕೊಡುವ ಅವಕಾಶ ಮಾಡಿಕೊಟ್ಟಿವೆ. ಆದರೆ ಓದುಗರು ವಾರ್ಷಿಕ ಚಂದಾ ರೀತಿಯಲ್ಲಿ ಕೊಡುತ್ತಿದ್ದಾರೆಂದು ಈ ಪತ್ರಿಕೆಗಳು ಕೊರಗುತ್ತಿವೆ.
  • * ಸಂಪಾದಕರ ಒತ್ತಾಯಕ್ಕೆ ಸ್ನೇಹಕ್ಕೆ ಕಟ್ಟುಬಿದ್ದು ಕೆಲವು ಓದುಗರು ಆಜೀವ ಚಂದಾದಾರರಾಗುತ್ತಾರೆ. ತಾವಾಗಿ ಪತ್ರಿಕೆಗೆ ಆಜೀವ ಚಂದಾಹಣ ಕಳಿಸುವ ಉದಾಹರಣೆ ಕಡಿಮೆ.
  • * ಆಜೀವ ಚಂದಾ ಎಷ್ಷಿರಬೇಕು, ಪತ್ರಿಕೆ ನಿಂತರೆ ಏನು ಮಾಡಬೇಕು, ಅದು ಯಾರ ಜೀವಕ್ಕೆ ಸಂಬಂಧಪಟ್ಟಿದ್ದು ಎಂಬ ಬಗ್ಗೆ ಕಲೆ, ಸಾಹಿತ್ಯ ಪತ್ರಿಕಾವಲಯದಲ್ಲಿ ಚರ್ಚೆಯಾಗಿಲ್ಲ.
  • ೫. ಸಾಮಾನ್ಯವಾಗಿ ಈ ತರದ ಪತ್ರಿಕೆಗಳು ಚಂದಾದಾರರನ್ನು ಪಡೆದುಕೊಳ್ಳುವ ಸಾಮಾನ್ಯ ವಿಧಾನಗಳನ್ನು ಈ ಕೆಳಗಿನಂತೆ ಗುರುತಿಸಬಹುದು.
  • (ಅ) ಸಂಪಾದಕರು ಚಂದಾ ಪಟ್ಟಿಯನ್ನು ಹಿಡಿದುಕೊಂಡು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಜರಿರುತ್ತಾರೆ. ಗೊತ್ತಿರುವ ವ್ಯಕ್ತಿಗಳಿಗೆ ಪತ್ರಿಕೆಯ ಪ್ರತಿಯನ್ನು ಕೊಟ್ಟು ಚಂದಾ ಕೊಡುವಂತೆ ಬಿನ್ನೈಸುತ್ತಾರೆ. ಪತ್ರಿಕೆಗೆ ಅವರು ಈ ಮೊದಲಿನ ಓದುಗರಾಗಿದ್ದು ಅವರ ಚಂದಾ ಬಾಕಿಯಿಂದ್ದರೆ ಅದನ್ನೂ ವಸೂಲಿ ಮಾಡುತ್ತಾರೆ. ಆದರೆ ಚಂದಾ ಕೊಡಲಿಲ್ಲವೆಂಬ ಕಾರಣಕ್ಕೆ ಪತ್ರಿಕೆಯ ಸರಬರಾಜು ನಿಲ್ಲುವುದಿಲ್ಲ. ಇದು ಕಲೆ, ಸಾಹಿತ್ಯ ಪತ್ರಿಕೆಗಳಿಗೆ ಸೀಮಿತವಾದ ಅಂಶ ಹಾಗೆ ಚಂದಾ ಕೊಡದವರಿಗೆ ಪತ್ರಿಕೆ ಸರಬರಾಜು ನಿಲ್ಲಿಸುವುದಾದರೆ ಹೆಚ್ಚಿನ ಓದುಗರಿಗೆ ನಿಲ್ಲಿಸಬೇಕಾಗುತ್ತದೆ. ಮುಂದೆಂದಾದರೂ ಚಂದಾಹಣ ಕೊಡುತ್ತಾರೆಂಬ ನಂಬಿಕೆಯಿಂದ ಪ್ರಕಟಿತ ಸಂಚಿಕೆಗಳನ್ನು ಕಳಿಸುತ್ತಲೇ ಹೋಗುವುದು, ಸಾಹಿತ್ಯ ಕಲಾ ಪತ್ರಿಕೆಗಳ ಸಂಪ್ರದಾಯ. ಈ ಸಂಬಂಧ ಬದುಕು ಪತ್ರಿಕೆಯ ಸಂಪಾದಕರ ಹೇಳಿಕೆಯನ್ನು ಗಮನಿಸಬಹುದು.
  • (ಆ) ಸ್ನೇಹಿತರು, ಆಪ್ತರ ವಲಯದಲ್ಲಿ ಪತ್ರಿಕೆಯ ರಶೀದಿ ಪಟ್ಟಿಯನ್ನು ನೀಡಿ ತಂತಮ್ಮ ಸ್ನೇಹಿತವಲಯದಲ್ಲಿ ಚಂದಾದಾರರನ್ನು ಮಾಡಿಕೊಡುವಂತೆ ಕೋರಿಕೆ ಸಲ್ಲಿಸುವುದು.ಈ ಕ್ರಮದಲ್ಲಿ ಕಂಡುಬರುವ ಅಪಾಯವೆಂದರೆ ಚಂದಾಪಟ್ಟಿ ಪಡೆದವರು ಜವಾಬ್ದಾರಿಯುತವಾಗಿ ಚಂದಾಹಣ ಹಾಗೂ ಸದನ್ನು ನೀಡಿದವರ ವಿಳಾಸವನ್ನು ಪತ್ರಿಕೆಯ ಕಛೇರಿಗೆ ತಲುಪಿಸದಿದ್ದರೆ ಅವಾಂತರವಾಗುತ್ತದೆ. ಚಂದಾ ಹಣಕೊಟ್ಟವರಿಗೆ ಪತ್ರಿಕೆ ತಲುಪದೆ, ಪತ್ರಿಕೆಯವರಿಗೂ ಚಂದಾಹಣ ತಲುಪದೇ ಮದ್ಯವರ್ತಿಗಳಿಗೆ ಲಾಭವಾಗುವ ಸಾಧ್ಯತೆಗಳೂ ಇವೆ.
  • (ಇ) ಪತ್ರಿಕೆಗಳಿಂದ ಅಥವಾ ಕನ್ನಡ ಲೇಖಕರ ವಿಳಾಸಗಳು ಪುಸ್ತಕದಿಂದ ಸಾಹಿತಿ, ಕಲಾವಿದರ ಅಥವಾ ಈ ಕ್ಷೇತ್ರಗಳ ಆಸಕ್ತರ ವಿಳಾಸ ಪಡೆದು ತಾನಾಗಿ ಪತ್ರಿಕೆಯ ಪ್ರತಿಯನ್ನು ಅಂಥವರ ವಿಳಾಸಕ್ಕೆ ಕಳುಹಿಸುವುದು.ಪತ್ರಿಕೆ ತಲುಪಿದ ಮೇಲೆ ಓದುಗರು ತಾವಾಗಿ ಪ್ರತಿಕ್ರಿಯಿಸುವರೆಂಬುದು ಪತ್ರಿಕೆಯ ನಿರೀಕ್ಷೆ. ಕೆಲವು ಸಾರಿ ಈ ನೀರೀಕ್ಷೆ ಫಲಿಸುವುದಿಲ್ಲ. ಆಗ ಪತ್ರಿಕೆಯ ಸಂಪಾದಕರು ಒಂದೆರಡು ಸಂಚಿಕೆಗಳನ್ನು ಕಳಿಸಿದ ಬಳಿಕ ಒಂದು ಮನವಿ ಪತ್ರ ಕಳಿಸುತ್ತಾರೆ. ಪತ್ರಿಕೆಯ ಮೇಲೆ ಹಸ್ತಾಕ್ಷರದಲ್ಲಿ ಚಂದಾ ಕಳಿಸಿ ಉಪಕರಿಸಿ ಎಂಬ ಒಕ್ಕಣೆಯನ್ನು ಸೇರಿಸುತ್ತಾರೆ. ಅಷ್ಟಕ್ಕೂ ಜಗ್ಗದಿದ್ದರೆ ಸುಮ್ಮನಾಗಿ ಅಂಥವರಿಗೆ ಪತ್ರಿಕೆಯ ಸರಬರಾಜು ನಿಲ್ಲಿಸುತ್ತಾರೆ.
  • (ಈ) ಓದುಗರೇ ಪತ್ರಿಕೆಯ ಬಗ್ಗೆ ಯಾರಿಂಲೋ ತಿಳಿದು ಅಥವಾ ಎಲ್ಲಿಯೋ ಓದಿ ಪತ್ರಿಸುವ ಸಂದರ್ಭಗಳೂ ಅಪರೂಪಕ್ಕೆ ಜರಗುತ್ತವೆ. ಕಲೆ ಅಥವಾ ಸಾಹಿತ್ಯ ಕ್ಷೇತ್ರದ ಗಂಭೀರ ಓದುಗನಾಗಿದ್ದು ಸಮಕಾಲೀನ ವಿದ್ಯಮಾನಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವವರಷ್ಟೇ ಈ ಕೆಲಸ ಮಾಡುವರೆಂದು ನಿರೀಕ್ಷಿಸಬಹುದು.
  • (ಉ) ನಾಟಕ ಪತ್ರಿಕೆಗಳನ್ನು ನಾಟಕದ ಸಂದರ್ಭಗಳಲ್ಲಿ ಮಾರಾಟಕ್ಕೆ ಇಡುವ, ಅಥವಾ ಪ್ರೇಕ್ಷಕರಿಗೆ ಉಚಿತವಾಗಿ ನೀಡುವ ಸಂದರ್ಭಗಳೂ ಇವೆ.
  • ೬. ಕನ್ನಡದ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಪ್ರಸಾರ ಸಾಮಾನ್ಯವಾಗಿ ಒಂದು ಸಾವಿರವನ್ನು ದಾಟುವುದಿಲ್ಲ. ಪತ್ರಿಕೆಯನ್ನು ಮುದ್ರಿಸುವಾಗ ಒಂದು ಸಾವಿರ ಪ್ರತಿಯನ್ನು ಮುದ್ರಿಸುವುದು ರೂಢಿ. ಖಾಸಗೀ ಒಡೆತನದಲ್ಲಿ ಎರಡೂವರೆ ದಶಕಗಳಿಂದ ಪ್ರಕಟಣೆಯಲ್ಲಿರುವ ಸಂಕ್ರಮಣದ ಪ್ರಸಾರವೇ ಒಂದು ಸಾವಿರ ಮಾತ್ರ. ಸಾಂಸ್ಥಿಕ ಪತ್ರಿಕೆಗಳಲ್ಲಿ ದೀರ್ಘ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಚಂದಾದಾರರ ಸಂಖ್ಯೆ ೩೫೦ ಮಾತ್ರ. ಖಾಸಗೀ ಒಡೆತನದ ಹೆಚ್ಚಿನ ಪತ್ರಿಕೆಗಳೂ ಮಾರಾಟವಾಗುವುದೂ ೩೦೦/೩೫೦ ಮಾತ್ರ. ಉಳಿದ ಪತ್ರಿಕೆಗಳನ್ನು ಸಂಪಾದಕರು, ಕಲಾವಿದರು, ಸಾಹಿತಿಗಳ ವಲಯದಲ್ಲಿ ಉಚಿತವಾಗಿ ಹಂಚುವ ಸಂದರ್ಭಗಳೆ ಹೆಚ್ಚು. ಹೀಗೆ ಹಂಚಿಕೆಯೂ ಉಳಿವ ಪತ್ರಿಕೆಗಳು ಯಾರನ್ನೂ ತಲುಪದೇ ಸಂಪಾದಕರ ಮನೆಯಲ್ಲಿ ಅಥವಾ ಸಾಂಸ್ಥಿಕ ಪತ್ರಿಕೆಯಾದರೆ ಕಛೇರಿಯ ಉಗ್ರಾಣದಲ್ಲಿ ಕೊಳೆಯುತ್ತವೆ.
  • ೭. ಕಲೆ, ಸಾಹಿತ್ಯ ಪತ್ರಿಕೆಗಳ ನಿಜವಾದ ಪ್ರಸಾರವನ್ನು ದಾಖಲಿಸಲು ಸರಿಯಾದ ಮಾನದಂಡಗಳೇ ಇಲ್ಲ. ಸಂಪಾದಕರು ಹೇಳುವ ಪ್ರಸಾರವೇ ಅಂತಿಮ. ಕಲೆ, ಸಾಹಿತ್ಯ ಪತ್ರಿಕೆಗಳ ಬಂಡವಾಳ ಸಮಸ್ಯೆ ಸ್ವಾತಂತ್ರ್ಯ ಪೂರ್ವದಲ್ಲಿ ಸೇವೆಯೆನಿಸಿಕೊಂಡಿದ್ದ ಪತ್ರಿಕೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಉದ್ಯಮವಾಗಿ ಬೆಳೆಯಿತು. ೨೦ನೇ ಶತಮಾನದ ಅಂತಿಮ ಚರಣದಲ್ಲಿ ಪತ್ರಿಕೆಯೆಂಬುದು ಹಣ ಬಿತ್ತಿ ಹಣ ಬೆಳೆಯುವ ಉದ್ಯಮವಾಗಿದೆ. ದಿನಪತ್ರಿಕೆಯನ್ನಾಗಲೀ ನಿಯತಕಾಲಿಕವನ್ನಾಗಲೀ ಹುಟ್ಟುಹಾಕುವುದೆಂದರೆ ಸಾಮಾನ್ಯ ವಿಷಯವಲ್ಲ. ಕೋಟಿಗಂಟ್ಟಲೆ ರೂಪಾಯಿ ಬಂಡವಾಳಬೇಕು. ಕೆಲವು ವರ್ಷಗಳಾದರೂ ಪತ್ರಿಕೆಯನ್ನು ನಷ್ಟದಲ್ಲಿ ನಡೆಸುವ ವ್ಯವಧಾನ ಬೇಕು. ಆರಂಭಿಕ ಸಷ್ಟಗಳನ್ನು ಭರಿಸುವ ಸಾಧ್ಯತೆಯುಳ್ಳವರಿಗೆ ಪತ್ರಿಕೆ ನಂತರ ಲಾಭದಾಯಕ ಉದ್ಯಮವಾಗಿ ಬೆಳೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯಾಸಕ್ತಿಯ ದಿನಪತ್ರಿಕೆ ನಿಯತಕಾಲಿಕಗಳ ಮಾತು ಇದಾದರೆ ಕನ್ನಡದಲ್ಲಿ ಕಲೆ,ಸಾಹಿತ್ಯ ಪತ್ರಿಕೆಗಳ ಪರಿಸ್ಥಿತಿ ಭಿನ್ನವಾಗಿದೆ.
  • ೧. ಕಲೆ ಮತ್ತು ಸಾಹಿತ್ಯ ಪತ್ರಿಕೆಗಳನ್ನು ವೈಯಕ್ತಿಕ ನೆಲೆಯಲ್ಲಿ ಸ್ಥಾಪಿಸುವುದೆಂದರೆ ಈ ಪತ್ರಿಕೆಗಳು ಬಂಡವಾಳ ಬಯಸದ ಉದ್ದಿಮೆಗಳಾಗಿವೆ. ಕಲೆ ಅಥವಾ ಸಾಹಿತ್ಯ ಪತ್ರಿಕೆಗಳನ್ನು ಸ್ಥಾಪಿಸುವವರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಹುಮ್ಮಸ್ಸೇ ಬಂಡವಾಳವಾಗಿರುತ್ತದೆ.
  • ೨.ಈರೀತಿಯ ಪತ್ರಿಕೆ ನಡೆಸುವವರು ಕಛೇರಿಯನ್ನು ಸ್ಥಾಪಿಸುವ, ಮುದ್ರಣ ಯಂತ್ರಗಳನ್ನು ಕೊಂಡುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಒಮ್ಮೇಲೇ ಬೃಹತ್ ಗಾತ್ರದ ಮುದ್ರಣ ಕಾಗದವನ್ನು ಕೊಂಡುಕೊಳ್ಳಬೇಕಿಲ್ಲ. ಹೀಗಾಗಿ ಈ ಪತ್ರಿಕೆ ಸ್ಥಾಪಿಸುವವರು ದೊಡ್ಡ ಬಂಡವಾಳ ಹೂಡಬೇಕಾದ ಪ್ರಮೇಯವಿಲ್ಲ.
  • ೩. ಈ ಪತ್ರಿಕೆಗಳನ್ನು ನಡೆಸಲು ಇರುವ ಖರ್ಚು ಎಂದರೆ ಒಂದೊಂದು ಸಂಚಿಕೆ ಹೊರತರುವ ಸಂದರ್ಭದಲ್ಲೂ ತಗಲುವ ವೆಚ್ಚಗಳು. ಜಾಹೀರಾತು ಅಥವಾ ಚಂದಾದಾರರ ಹಣದಿಂದ ಈ ಖರ್ಚು, ವೆಚ್ಚಗಳನ್ನು ತೂಗಿಸುವ ಕಾಲ ಕನ್ನಡ ಕಲೆ, ಸಾಹಿತ್ಯ ಪತ್ರಿಕೆಗಳಿಗ್ಗಿನ್ನೂ ಬಂದಿಲ್ಲ. ಹೀಗಾಗಿ ಕೊರತೆ ಬೀಳುವ ಹಣವನ್ನು ಪ್ರತಿ ಸಂಚಿಕೆಗೂ ಸಂಪಾದಕನೇ ತುಂಬಿ ಕೊಳ್ಳಬೇಕಾಗುತ್ತದೆ.
  • ೪. ಸಂಪಾದಕ ಮಂಡಳಿಯಲ್ಲಿ ಹಲವರ ಹೆಸರುಗಳು ಇರುವ ಸಂದರ್ಭದಲ್ಲೂ ಪತ್ರಿಕೆಯ ಖರ್ಚು, ವೆಚ್ಚಗಳಿಗೆ ಪತ್ರಿಕೆ ಹುಟ್ಟುಹಾಕಿದ ಒಬ್ಬನೇ ಜವಾಬ್ದಾರನಾಗಿರುತ್ತಾನೆ.
  • ೫. ಸಂಪಾದಕನೆನಿಸಿಕೊಂಡವನು ಬೇರೆ ಕಡೆ ದುಡಿದ ಹಣವನ್ನು ತಂದು ಈ ಪತ್ರಿಕೆಗೆ ಸುರಿಯುವುದು ಅನಿವಾರ್ಯ. ಪತ್ರಿಕೆಗಾಗಿ ಸಾಲಮಾಡುವುದು, ಬರುವ ಸಂಬಳವನ್ನೆಲ್ಲಾ ಪತ್ರಿಕೆಗೆ ಹಾಕಿ ಸಂಸಾರದ ಖರ್ಚುಗಳಿಗಾಗಿ ತೊಳಲಾಡುವುದು ಸಾಮಾನ್ಯ. ಪತ್ರಿಕೆ ನಡೆಸಬೇಕಾದ ಅನಿವಾರ್ಯತೆಯಲ್ಲಿ ತಮ್ಮ ತತ್ವಗಳ ಜೊತೆ ಒಪ್ಪಂದ ಮಾಡಿಕೊಂಡು ರಾಜ ಕಾರಣಿಗಳ, ಬಂಡವಾಳಶಾಹಿಗಳ ಮೊರೆ ಹೋಗಬೇಕಾದ ಸಂದರ್ಭಗಳೂ ಬರುತ್ತವೆಯೆಂದು ಸಂಪಾದಕರು ಒಪ್ಪಿಕೊಳ್ಳುತ್ತಾರೆ.

ಕಲೆ, ಸಾಹಿತ್ಯ ಪತ್ರಿಕೆಗಳು ಮತ್ತು ಜಾಹೀರಾತು

ಜಾಹೀರಾತು ಪತ್ರಿಕೋದ್ಯಮದ ಜೀವಾಳ. ದಿನಪತ್ರಿಕೆ ಹಾಗೂ ನಿಯತಕಾಲಿಕಗಳಿಗೆ ಮುಖ್ಯ ಆದಾಯದ ಮೂಲವೇ ಜಾಹೀರಾತು. ಜಾಹೀರಾತಿಗೂ ಪ್ರಸಾರಕ್ಕೂ ನೇರ ಸಂಬಂಧವಿದೆ. ಪ್ರಸಾರ ಹೆಚ್ಚಿದ ಹಾಗೆ ಜಾಹೀರಾತು ದೊರೆಯುವ ಪ್ರಮಾಣವೂ ಹೆಚ್ಚುತ್ತದೆ. ಜಾಹೀರಾತುದಾರರಿಗೆ ಅತಿ ಹೆಚ್ಚಿನ ಸಂಖ್ಯೆಯ ಓದುಗರನ್ನು ತಲುಪುವ ಇರಾದೆ ಇರುವುದರಿಂದ ಸಹಜವಾಗಿಯೇ ಅತಿ ಹೆಚ್ಚು ಪ್ರಸಾರದ ಪತ್ರಿಕೆಗಳತ್ತ ಆಕರ್ಷಿತರಾಗುತ್ತಾರೆ. ಪ್ರಸಾರವು ಜಾಸ್ತಿ ಇಲ್ಲದ ಪತ್ರಿಕೆಗಳು ಅತ್ತ ಕೊಂಡು ಓದುವವದೂ ಇಲ್ಲದೇ, ಇತ್ತ ಜಾಹೀರಾತಿನ ಬೆಂಬಲವೂ ಇಲ್ಲದೇ ಸೊರಗುತ್ತವೆ. ದೊಡ್ಡ ಉದ್ದಿಮೆಗಳ ಜಾಹೀರಾತುಗಳು ದೊಡ್ಡ ಪತ್ರಿಕೆಗಳ ಪಾಲಾಗುವುದರಿಂದ ಸಣ್ಣ ಪತ್ರಿಕೆಗಳಿಗೆ ಸರ್ಕಾರವು ಜಾಹೀರಾತುಗಳನ್ನು ನೀಡಿ ಬೆಂಬಲಿಸುವ ಸಂಪ್ರದಾಯವಿದೆ. ಸರ್ಕಾರದ ಕಾನೂನುಗಳಿಗೆ ಅನುಗುಣವಾಗಿ ಪ್ರಕಟವಾಗುತ್ತಿದ್ದರೆ ಪತ್ರಿಕೆಗಳು ಈ ಜಾಹೀರಾತು ಪಡೆಯಲು ಅರ್ಹವಾಗುತ್ತವೆ. ಕಲೆ ಮತ್ತು ಸಾಹಿತ್ಯ ಪತ್ರಿಕೆಗಳಿಗೂ ಈ ಸಾಧ್ಯತೆ ಇದೆ.

  • (ಅ) ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳಿಗೆ ದೊರೆಯುವ ಜಾಹೀರಾತುಗಳ ಪ್ರಮಾಣ ಅತ್ಯಂತ ಕಡಿಮೆ. ಕಡಿಮೆ ಪ್ರಸಾರದ ಕಾರಣ ಜಾಹೀರಾತುದಾರರು ತಾವಾಗಿ ಈ ಪತ್ರಿಕೆಗಳತ್ತ ಆಕರ್ಷಿತರಾಗುವುದಿಲ್ಲ.
  • (ಆ) ಎರಡು ವರ್ಷಕ್ಕೂ ಹೆಚ್ಚಿನ ಬಾಳಿಕೆ ಹೊಂದಿರುವ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಏಕೈಕ ಜಾಹೀರಾತು ಕರ್ನಾಟಕ ವಾರ್ತೆಯದು.
  • (ಇ) ಕಲೆ ಮತ್ತು ಸಾಹಿತ್ಯ ಪತ್ರಿಕೆಗಳು ಜಾಹೀರಾತು ಎರಗಳನ್ನು ನಿಗದಿಮಾಡಿ ಘೋಷಣೆ ಮಾಡುವ ಸಂಪ್ರದಾಯವಿದೆ.
  • (ಈ) ತಾವಾಗಿ ಜಾಹೀರಾತುದಾರರು ಈ ಪತ್ರಿಕೆಗಳನ್ನು ಹುಡುಕಿಕೊಂಡು ಬರುವುದಿಲ್ಲವಾದ್ದರಿಂದ ಕಾಡಿಬೇಡಿ ಜಾಹೀರಾತುಗಳನ್ನು ಪಡೆಯುವ ಸ್ಥಿತಿಯಲ್ಲಿರುವ ಕಲೆ, ಸಾಹಿತ್ಯ ಪತ್ರಿಕೆಗಳು, ಜಾಹೀರಾತು ದರಗಳನ್ನು ಪುಟಕ್ಕೆ ಇಂತಿಷ್ಟೆಂದು ನಿಗದಿಗೊಳಿಸಿದ್ದರೂ, ಅಂತಿಮವಾಗಿ ಜಾಹೀರಾತುದಾರರು ನೀಡುವ ದರವನ್ನು ಒಪ್ಪಿಕೊಳ್ಳುವ ಸ್ಥಿತಿಯಿಂದೆ.
  • (ಉ) ಸಮಾಜದಲ್ಲಿ ಸಂಪಾದಕರ ಅಥವಾ ಪ್ರಕಾಶಕರ ಸ್ಥಾನ, ಮಾನ, ಸಂಪರ್ಕಗಳನ್ನು ಅವಲಂಬಿಸಿ ಕೆಲವು ಉದ್ದಿಮೆಗಳ ಅಥವಾ ಸ್ನೇಹಿತರ ಶುಭಾಶಯ ಮಾದರಿಯ ಜಾಹೀರಾತುಗಳು ಪತ್ರಿಕೆಗೆ ದೊರೆಯುತ್ತವೆ. ಈ ಮಾದರಿಯ ಜಾಹೀರಾತುಗಳು ದೊರೆಯುವುದು ಕೇವಲ ವೈಯಕ್ತಿಕ ಸಂಬಂಧಗಳ ಹಿನ್ನೆಲೆಯಲ್ಲಿ.
  • (ಊ) ಯಾವ ಕಲೆ, ಸಾಹಿತ್ಯ ಪತ್ರಿಕೆಗಳಲ್ಲೂ ವ್ಯವಸ್ಥಿತ ಜಾಹೀರಾತು ವಿಭಾಗ ಕೆಲಸ ಮಾಡುತ್ತಿಲ್ಲ. ಸಂಪಾದಕರು ಹಾಗೂ ಅವರಿಗೆ ನೆರವು ನೀಡುವವರೇ ಜಾಹೀರಾತಿನ ಪ್ರಕಟಣೆ, ಪ್ರಕಟಿತ ಜಾಹೀರಾತಿನ ಪ್ರತಿಯನ್ನು ಜಾಹೀರಾತುದಾರರಿಗೆ ತಲುಪಿಸುವ ಕೆಲಸ ಹಾಗೂ ರಶೀದಿ ನೀಡಿ ಹಣ ಪಡೆಯುವ ಕೆಲಸವನ್ನು ಮಾಡುತ್ತಾರೆ.
  • (ಋ) ಆರಂಭಿಕ ಸಾಹಿತ್ಯ ಪತ್ರಿಕೆಗಳಲ್ಲಿ ಕಂಡುಬರುತ್ತಿದ್ದ ವೈವಿಧ್ಯಮಯ ಜಾಹೀರಾತುಗಳು ಸ್ವಾತಂತ್ರ್ಯೋತ್ತರ ಸಾಹಿತ್ಯ ಪತ್ರಿಕೆಗಳಲ್ಲಿ ಕಾಣೆಯಾದಂತೆ ಕಂಡುಬರುತ್ತದೆ. ಹಿಂದೆ ಪತ್ರಿಕೆಯ ಚಂದಾದಾರರಿಗೆ ರಿಯಾಯಿತಿ ದರದಲ್ಲಿ ಆಭರಣಗಳನ್ನೋ ವಾಚುಗಳನ್ನೋ ನೀಡುವ ಸಂಪ್ರದಾಯ ಕಂಡುಬರುತ್ತಿತ್ತು. ೯೦ರ ದಶಕದಲ್ಲಿ ಪತ್ರಿಕೆಗಳಲ್ಲಿ ಈ ರೀತಿಯ ಒಪ್ಪಂದ ಪ್ರಕಟಗೊಂಡ ಉದಾಹರಣೆ ಇಲ್ಲ.

ಕಲೆ, ಸಾಹಿತ್ಯ ಪತ್ರಿಕೆಗಳು ಮತ್ತು ಬರಹಗಾರರು

ಸಾಹಿತ್ಯ ಪತ್ರಿಕೆಗಳಲ್ಲಿ ಸಾಹಿತಿಗಳೂ ಕಲಾಪತ್ರಿಕೆಗಳಲ್ಲಿ ಕಲಾವಿದರೂ ತಮ್ಮ ಲೇಖನಗಳನ್ನು ಬರೆದು ಪತ್ರಿಕೆಯ ಪುಟಗಳನ್ನು ತುಂಬಿಸಿಕೊಡಬೇಕೆಂದು ಸಂಪಾದಕರುಗಳ ನಿರೀಕ್ಷೇ. ಸಹಜವಾಗಿಯೇ ತಮ್ಮ ಪರಿಚಯದ ಸಾಹಿತಿಗಳನ್ನೂ ಕಲಾವಿದರನ್ನೂ ಸಂಪಾದಕರುಗಳು ಲೇಖನಗಳಿಗಾಗಿ ಪೀಡಿಸುತ್ತಾರೆ. 'ವಾಗ್ಭೂಷಣ', 'ಪ್ರಬುದ್ಧ ಕರ್ಣಾಟಕ', 'ಸಾಹಿತ್ಯ ಪರಿಷದ್ ಪತ್ರಿಕೆ' ಮುಂತಾದ ಆಧುನಿಕ ಕನ್ನಡ ಸಾಹಿತ್ಯದ ಒಟ್ಟಿಗೇ ಬೆಳೆದ ಪತ್ರಿಕೆಗಳಿಗೆ ಕನ್ನಡದ ಬಹು ಸಂಖ್ಯಾತ ಲೇಖಕರು ಬರೆದಿದ್ದಾರೆ. ಆಯಾ ಕಾಲದ ಸಾಂಸ್ಕೃತಿಕ ಸಾಹಿತ್ಯಿಕ ಬಿಕ್ಕಟ್ಟುಗಳನ್ನು ಚರ್ಚಿಸುವುದಕ್ಕೂ ಸಾಹಿತಿಗಳಿಗೆ ಸಾಹಿತ್ಯ ಪತ್ರಿಕೆಗಳೂ , ಕಲಾವಿದರಿಗೆ ಕಲಾ ಪತ್ರಿಕೆಗಳೂ ವೇದಿಕೆಯಾಗಿವೆ. ಆದರೂ ಸಾಹಿತಿ ಕಲಾವಿದರುಗಳಿಗೆ ಸಾಹಿತ್ಯ, ಕಲೆಗೆ ಮೀಸಲಾದ ಪತ್ರಿಕೆಗಳಿಗೆ ಬರೆಯುವುದು ಮಹತ್ವಾಕಾಂಕ್ಷೆಯ ವಿಷಯವೇನೂ ಆದಂತಿಲ್ಲ. ಸಂಪಾದಕರ ಒತ್ತಾಯಕ್ಕೆ ಕಟ್ಟುಬಿದ್ದು ಬರೆದುಕೊಡುವ ಸಂದರ್ಭಗಳೇ ಹೆಚ್ಚು. ಇದಕ್ಕೆ ಈ ಕೆಳಗಿನ ಕಾರಣಗಳನ್ನು ಸಂಶೋಧನೆಯ ವೇಳೆ ಗಮನಿಸಲಾಗಿದೆ. ಬರಹಗಾರರಿಗೆ ಗೌರವ ಪ್ರತಿಯನ್ನು ತಲುಪಿಸುವುದು ಹಾಗೂ ಗೌರವ ಸಂಭಾವನೆಯನ್ನು ನೀಡುವುದು ವೃತ್ತಿಪರ ಪತ್ರಿಕೋದ್ಯಮದ ಲಕ್ಷಣ. ನಂಜನಗೂಡು ತಿರುಮಲಾಂಬಾ ಈ ಸಂಪ್ರದಾಯವನ್ನು ಅರ್ಥಮಾಡಿಕೊಂಡಿದ್ದರು. ಪತ್ರಿಕೆ ನಷ್ಟದಲ್ಲಿದ್ದರೂ ಸರಿ, ಲೇಖಕರಿಗೆ ಕಿರು ಸಂಭಾವನೆಯನ್ನಾದರೂ ನೀಡುವ ಪದ್ಧತಿ ಇರಿಸಿಕೊಂಡಿದ್ದರು. ನಂಜನಗೂಡು ತಿರುಮಲಾಂಬಾ ಹಾಕಿಕೊಟ್ಟ ಸಂಪ್ರದಾಯವನ್ನು ವಿಶೇಷಾಸಕ್ತಿ ನಿಯತಕಾಲಿಕಗಳ ಸಂಪಾದಕರುಗಳು ಮುಂದುವರೆಸಲಿಲ್ಲ.

  • (ಅ) ಕಲೆ ಮತ್ತು ಸಾಹಿತ್ಯ ಪತ್ರಿಕೆಗಳಲ್ಲಿ ಬರಹಗಾರರಿಗೆ ಗೌರವ ಸಂಭಾವನೆಯನ್ನು ಕೊಡುವ ಪರಿಪಾಠ ಬೆಳೆದು ಬಂದಿಲ್ಲ.
  • (ಆ) ಇದಕ್ಕೆ ಪತ್ರಿಕೆಯ ಆರ್ಥಿಕ ದುಸ್ಥಿತಿಯನ್ನು ಸಂಪಾದಕರುಗಳು ಬೊಟ್ಟು ಮಾಡಿ ತೋರಿಸುತ್ತಾರೆ. ಲೇಖಕರಿಗೆ ಸಂಭಾವನೆ ಕೊಡುವುದು ಪತ್ರಿಕೆಯ ಖರ್ಚಿನ ಭಾಗವಾಗಿ ಪರಿಗಣಿತವಾಗುತ್ತಿಲ್ಲ.
  • (ಇ) ಪ್ರಸಾರದ ದೃಷ್ಟಿಯಿಂದ ಹೆಚ್ಚು ಓದುಗರನ್ನು ತಲುಪದ , ಬರೆದುದಕ್ಕೆ ಒಂದು ಪೈಸೆ ಸಂಭಾವನೆಯನ್ನು ತಾರದ ಈ ಪತ್ರಿಕೆಗಳಿಗೆ ಬರೆಯುವುದು ಪ್ರತಿಷ್ಠಿತ ಲೇಖಕರುಗಳಿಗೆ ಸಹಜವಾಗಿಯೇ ಆಕರ್ಷಕ ವಿಷಯವಾಗಿಲ್ಲ.
  • (ಈ) ಸಾಮಾನ್ಯಾಸಕ್ತಿಯ ಪತ್ರಿಕೆಗಳು ತಮ್ಮ ವಾರದ ಪುರವಣಿಗಳಲ್ಲಿ ವಿಶೇಷಾಂಕಗಳಲ್ಲಿ ಕಲೆ-ಸಾಹಿತಿಕ ಬರಹಗಳಿಗೆ ಆದ್ಯತೆ ನೀಡುತ್ತವೆ. ಹೆಚ್ಚಿನ ಸಂಭಾವನೆಯನ್ನು ನೀಡುತ್ತವೆ. ಕಲೆ, ಸಾಹಿತ್ಯ ಪತ್ರಿಕೆಗಳಿಗೆ ಈ ಸಾಧ್ಯತೆಯಿಲ್ಲದಿರುವುದರಿಂದ ಕನ್ನಡದ ಹೊಸ ಬರಹಗಾರರುಗಳಿಗೆ ಕಲೆ, ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳಿಗಿಂತ ಸಾಮಾನ್ಯಾಸಕ್ತಿ ಪತ್ರಿಕೆಯ ಪುರವಣಿಗಳೇ ಆಕರ್ಷಣೆಯ ಕೇಂದ್ರಗಳಾಗುತ್ತಿವೆ. ಅವುಗಳಲ್ಲಿ ಬರೆಯುವುದು ಪ್ರತಿಷ್ಠೆಯ ವಿಷಯವಾಗಿದೆ.

ಕನ್ನಡದಲ್ಲಿ ಪತ್ರಿಕೋದ್ಯಮದ ಆರಂಭದಲ್ಲಿ ದಿನಪತ್ರಿಕೋದ್ಯಮವಿನ್ನೂ ಚಾಲ್ತಿಗೆ ಬಾರದ ಸಂದರ್ಭದಲ್ಲಿ ಸಾಹಿತ್ಯ ಪತ್ರಿಕೆಗಳೆಂದು ಕರೆಯಬಹುದಾದ ನಿಯತಕಾಲಿಕಗಳಷ್ಟೇ ಇದ್ದವು. ಆಗ ಸಾಹಿತಿಗಳು ಪ್ರಕಟಗೊಳ್ಳಲಿಕ್ಕೂ ಇವೇ ಮಾಧ್ಯಮಗಳಾಗಿದ್ದವು. ಕನ್ನಡದ ಹಿರಿಯ ಸಾಹಿತಿಗಳೆಲ್ಲ ಕವನಗಳನ್ನೋ ಕಥೆ ಕಾದಂಬರಿಗಳನ್ನೋ ಬರೆದು ಪ್ರಸಿದ್ಧಿಗೆ ಬಂದುದು ವಾಗ್ಭೂಷಣ, ಸವಾಸಿನಿ, ಸಾಹಿತ್ಯ ಪರಿಷತ್ ಪತ್ರಿಕೆ, ಪ್ರಬುದ್ಧ ಕರ್ನಾಟಕದಂಥ ಪತ್ರಿಕೆಗಳಿಂದಲೇ ಎಂಬುದನ್ನು ಗಮನಿಸಬೇಕು. ಈಗ ದಿನಪತ್ರಿಕೆ ಅಥವಾ ವಾರಪತ್ರಿಕೆಗಳ ಸಾಹಿತ್ಯ ಪುರವಣಿಯ ಜೊತೆ, ಸಾಮಾನ್ಯ ಆಸಕ್ತಿಯ ನಿಯತಕಾಲಿಕಗಳೂ ಕೈಗೊಳ್ಳುವ ಸಾಹಿತ್ಯ, ಕಲೆ ಸೇವೆಗಳ ಜೊತೆ ಕಲಾ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳು ಸ್ಪರ್ಧೆಗಿಳಿಯ ಬೇಕಾಗಿದೆ. ಈ ಸ್ಪರ್ಧೆಯಲ್ಲಿ ಜನಮಾನಸದಲ್ಲಿ ಚಾಲ್ತಿಯಲ್ಲಿರುವ ಜನಪ್ರಿಯ ಪತ್ರಿಕೆಗಳೇ ಗೆಲ್ಲುತ್ತವೆ. ಕನ್ನಡದಲ್ಲಿ ಶ್ರೇಷ್ಠವೆನಿಸುವ ಹೊಸ ಕಥೆಗಳು, ಕವನಗಳು ಈಗ ಜನಪ್ರಿಯ ಪತ್ರಿಕೆಯಲ್ಲಿ ಪ್ರಕಟಕೊಳ್ಳುತ್ತವೆಯೇ ಹೊರತೂ ವಿರಣ ಸಂಖ್ಯೆಯ ಓದುಗರನ್ನು ಹೊಂದಿರುವ ಸಾಹಿತ್ಯ ಪತ್ರಿಕೆಗಳ ಮೂಲಕವಲ್ಲ. ಈಗ ನಮ್ಮ ದೊಡ್ಡ ಪತ್ರಿಕೆಗಳು ಏರ್ಪಡಿಸುವ ವರ್ಷಿಕ ಸಾಹಿತ್ಯ ಸ್ಪರ್ಧೇಗಳಲ್ಲಿ ಕನ್ನಡದ ಪ್ರತಿಭಾವಂತ ಹೊಸ ಕಥೆಗಾರರೂ ಕವಿಗಳೂ ಪ್ರಬಂಧಕಾರರೂ ಪ್ರಕಟಗೊಳ್ಳವುದನ್ನು ಕಾಣುತ್ತೇವೆ. ಪ್ರಜಾವಾಣಿಯ ಕಥಾಸ್ಟರ್ಧೆ, ಸುಧಾದ ಕಾದಂಬರಿ ಸ್ಪರ್ಧೆ, ಮಲ್ಲಿಗೆ, ಮಂಗಳಾ ಮುಂತಾದ ಪತ್ರಿಕೆಗಳ ಸಾಹಿತ್ಯ ಸ್ಪರ್ಧೆಗಳನ್ನು ಈ ಹಿನ್ನಲೆಯಲ್ಲಿ ಹೆಸರಿಸಬಹುದು. ಕನ್ನಡದ ಹೊಸ ತಲೆಮಾರಿನ ಕಥೆಗಾರರಾದ ಅಬ್ದುಲ್ಲ್ ರಶೀದ, ಮೊಗಳ್ಳಿ ಗಣೇಶ, ಅಮರೇಶ ನುಗುಡೋಣಿ ಮುಂತಾದವರೆಲ್ಲ ಪ್ರಜಾವಾಣಿಯ ಕಥಾಸ್ಪರ್ಧೆಯ ಮೂಲಕವೇ ಬೆಳಕಿಗೆ ಬಂದವರು. ಅಂದರೆ ಹಿಂದೆ ಪ್ರಬುದ್ಧ ಕರ್ನಾಟಕ, ಸಾಹಿತ್ಯ ಪರಿಷತ್ ಪತ್ರಿಕೆ, ಜೀವನ, ಜಯಕರ್ನಾಟಕದಂಥ ಪತ್ರಿಕೆಗಳು ಮಾಡುತ್ತಿದ್ದ ಕೆಲಸವನ್ನು ಇಂದು ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳೇ ಮಾಡುತ್ತಿವೆ. ಕಲಾ, ಸಾಹಿತ್ಯ ಪತ್ರಿಕೆಗಳು ಸೋಲುತ್ತಿವೆ.

ಕಲೆ, ಸಾಹಿತ್ಯ ಪತ್ರಿಕೆಗಳ ನಿಯತಕಾಲಿಕತೆ

ಘೋಷಿಸಿಕೊಂಡ ಅವಧಿಗೊಮ್ಮೆ ತಪ್ಪದೇ ಪ್ರಕಟಗೊಳ್ಳುವುದು ವೃತ್ತಿಪರ ಪತ್ರಿಕೋದ್ಯಮದ ಆಧಾರ ಸ್ತಂಭಗಳಲ್ಲಿ ಒಂದು. ದಿನಪತ್ರಿಕೆಗಳು ದಿನಕ್ಕೊಮ್ಮೆ ಪ್ರಕಟಗೊಳ್ಳುವವು. ನಿಯತಕಾಲಿಕಗಳಲ್ಲಿ ವಾರ ಪತ್ರಿಕೆಗಳು, ಪಕ್ಷ ಪತ್ರಿಕೆಗಳು, ಮಾಸಿಕಗಳು, ದ್ವೈಮಾಸಿಕಗಳು, ತ್ರೈಮಾಸಿಕಗಳು, ಷಾಣ್ಮಾಸಿಕಗಳು ಹಾಗೂ ವಾರ್ಷಿಕಗಳು ಎಂಬುದಾಗಿ ವಿಂಗಡಣೆ. ಪ್ರಕಟಗೊಳ್ಳಬೇಕಾದ ಅವಧಿಗೆ ಪ್ರಕಟಗೊಳ್ಳದಿರುವುದು ಪತ್ರಿಕೆಗೆ ಅವಮಾನ. ಓದುಗನ ನಿರೀಕ್ಷೆಗೆ ಹಾಗೂ ಅವನು ಕೊಡುವ ಚಂದಾಹಣಕ್ಕೆ ಮಾಡುವ ಮೋಸ. ಸಾಮಾನ್ಯಸಕ್ತಿ ದಿನಪತ್ರಿಕೆಗಳಾಗಲೀ ನಿಯತಕಾಲಿಕಗಳಾಗಲೀ ಘೋಷಿತ ಅವಧಿಗೆ ಪ್ರಕಟಗೊಳ್ಳವುದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಮಾಡಿಕೊಳ್ಳುವುದರಿಂದ ಹಾಗೂ ಓದುಗನಿಗೆ ಪತ್ರಿಕೆಯ ಬಾಧ್ಯತೆಯನ್ನಾಗಿ ಭಾವಿಸುವುದರಿಂದ ನಡುನಡುವೆ ಪ್ರಕಟಗೊಳ್ಳದಿರುವ, ತಡವಾಗಿ ಪ್ರಕಟಗೊಳ್ಳುವ ಸಂಭವವೇ ಇಲ್ಲವೆನ್ನಬಹುದು. ಕನ್ನಡ ಸಾಮಾನ್ಯ ದಿನಪತ್ರಿಕೆಗಳೂ ನಿಯತಕಾಲಿಕಗಳೂ ಈ ಶಿಸ್ತನ್ನು ಬೆಳೆಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.ಕಲೆ ಹಾಗೂ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ನಿಯತಕಾಲಿಕಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಅಂಶಗಳನ್ನು ದಾಖಲಿಸಬಹುದು.

  • (ಅ) ಕನ್ನಡದ ಕಲೆ, ಸಾಹಿತ್ಯ ಪತ್ರಿಕೆಗಳು ಹೆಚ್ಚಿನವು ನಿಯತಕಾಲಿಕಗಳಾಗಿ ಘೋಷಿಸಿಕೊಂಡಿವೆ ಅವುಗಳಲ್ಲಿ ಮಾಸಿಕಗಳು, ದ್ವೈಮಾಸಿಕ, ತ್ರೈಮಾಸಿಕ, ಷಾಣ್ಮಾಸಿಕಗಳು ಹಾಗೂ ವಾರ್ಷಿಕಗಳೂ ಇವೆ. ಹೆಚ್ಚಿನವು ಮಾಸಿಕಗಳು. ಕೆಲವೇ ವಾರಪತ್ರಿಕೆಗಳು, ಪಾಕ್ಷಿಕಗಳೂ ಇವೆ.
  • (ಆ) ಕನ್ನಡದಲ್ಲಿ ಅನಿಯತಕಾಲಿಕವೆಂದು ಘೋಷಿಸಿಕೊಂಡ ಸಾಹಿತ್ಯ ಪತ್ರಿಕೆಗಳೂ ಇವೆ.
  • (ಇ) ನಿಯತಕಾಲಿಕತೆಯ ದೃಷ್ಟಿಯಿಂದ ಕನ್ನಡದ ಕಲೆ, ಸಾಹಿತ್ಯ ಪತ್ರಿಕೆಗಳು ಸೋಲುತ್ತವೆ.
  • ನಿಗದಿತ ಅವಧಿಗಿಂತ ತಡವಾಗಿ ಪ್ರಕಟವಾಗುವುದು ಹಾಗೂ ಅದಕ್ಕಗಿ ವಿಷಾದ ಸೂಚಿಸುವುದು ಈ ಮಾದರಿಯ ಪತ್ರಿಕೆಗಳ ಸಾಮನ್ಯಗುಣವೆನ್ನಬಹುದು.
  • ಎರಡು, ಮೂರು ಸಂಚಿಕೆಗಳನ್ನು ಸೇರಿಸಿ ಒಂದೇ ಸಂಚಿಕೆ ತರುವ ಸಂಪ್ರದಾಯ ಮಾಮೂಲಿಯೆನಿಸುಂತಿದೆ.
  • ಪತ್ರಿಕೆಯ ಸಂಪುಟ, ಸಂಚಿಕೆಗಳ ಸಂಖ್ಯೆಯನ್ನು ಎಗರಿಸಬಾರದೆಂಬ ದೃಷ್ಟಿಯಿಂದ ವರ್ತಮಾನಕಾಲದಲ್ಲಿ ಭೂತಕಾಲದ ಸಂಚಿಕೆಗಳನ್ನು ಹೊರತರಲಾಗುತ್ತದೆ.
  • (ಈ) ಸಂಪಾದಕರುಗಳಿಗೆ ಪತ್ರಿಕೆ ಹೊರಡಿಸುವುದೇ ವೃತ್ತಿಯಲ್ಲವಾದ್ದರಿಂದ, ಬೇರೆಲ್ಲೋ ಕೆಲಸ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಪತ್ರಿಕೆಯ ಕೆಲಸ ಮಾಡಬೇಕಾಗುವುದು ಈ ರೀತಿ ಪತ್ರಿಕೆಗಳು ತಡವಾಗಿ ಪ್ರಕಟಗೊಳ್ಳಲು ಕಾರಣವೆಂದು ಸಂಪಾದಕರುಗಳ ಅಭಿಪ್ರಾಯ.
  • (ಉ) ಇಂಥ ಪತ್ರಿಕೆಗಳನ್ನು ಹೊರತರುವವರು ವೃತ್ತಿಪರರಲ್ಲವಾದುದರಿಂದ ಪತ್ರಿಕೆಯ ಪ್ರಕಟಣೆಗಳಲ್ಲಾಗುವ ಅವ್ಯವಸ್ಥೆ ಕ್ಷಮ್ಯವೆಂಬ ಅಭಿಪ್ರಾಯವೂ ಇದೆ.
  • (ಊ) ಈ ಪತ್ರಿಕೆಗಳು ಕಾಲಕಾಲಕ್ಕೆ ಪ್ರಕಟಗೊಳ್ಳದಿರಲು ಪ್ರಕಟಣೆಗೆ ಅರ್ಹವಾದ ಬರಹಗಳ ಕೊರತೆ ಮುಖ್ಯ ಕಾರಣವಾಗುತ್ತದೆ. ಹಣಕಾಸನ್ನು ಹೇಗೋ ಹೊಂದಿಸಿಕೊಂಡರೂ ಪ್ರಕಟಣೆಗೆ ಸೂಕ್ತವಾದ ಬರಹಗಳಿಲ್ಲದೇ ಕೈಚೆಲ್ಲುವಂತಾಗುತ್ತದೆಯೆಂಬುದು ಬಹಳ ಜನ ಸಂಪಾದಕರ ಅಳಲು.

ಗೋಪಾಲಕೃಷ್ಣ ಅಡಿಗರು ಸಾಕ್ಷಿಯ ಎರಡನೇ ಸಂಚಿಕೆಯಲ್ಲಿ ಪತ್ರಿಕೆಯ ವ್ಯವಹಾರವನ್ನೆಲ್ಲ ಹೇಗೋ ನಿಭಾಯಿಸಬಹುದು. ಆದರೆ ಮುದ್ರಣಕ್ಕೆ ಅರ್ಹವಾದ ಲೇಖನಗಳದೇ ಕೊರತೆಯೆಂದು ವಿಷಾದಿಸಿದ್ದಾರೆ. ಸಾಹಿತ್ಯ ಪತ್ರಿಕೆಯ ಮಟ್ಟವನ್ನು ಕಾಪಾಡಿಕೊಳ್ಳಲು ಲೇಖನಗಳ ಆಯ್ಕೆಯಲ್ಲಿ ಕಟ್ಟುನಿಟ್ಟಾಗಿ ಇರಬೇಕು. ಹಾಗಿದ್ದಾಗ ಪತ್ರಿಕೆಯ ಹಾಳೆಗಲನ್ನು ತುಂಬಿಸಬಲ್ಲ ಲೇಖನಗಳೇ ಸಿಗವು. ಬಂದ ಲೇಖನಗಳನ್ನೇ ಪ್ರಕಟಮಾಡಿದರೆ ಪತ್ರಿಕೆ ತನ್ನ ಮೌಲ್ಯವನ್ನು ಕಳಕೊಂಡಂತಾಗುತ್ತದೆ. ಈ ಸಮಸ್ಯೆ ಎಲ್ಲಾ ಕಲಾ, ಸಾಹಿತ್ಯಿಕ ಪತ್ರಿಕೆಗಳನ್ನು ಕಾಡುವ ಗಂಭೀರ ಸಮಸ್ಯೆ. ಈ ಬಗ್ಗೆ ಸಂಕುಲ ಪತ್ರಿಕೆಯ ಈಚಿನ ಸಂಚಿಕೆಯಲ್ಲಿ ಸಂಪಾದಕರು ಹೀಗೆನ್ನುತ್ತಾರೆ. 'ಸಂಕುಲ ೨೩ ನಿಮ್ಮ ಕೈಯಲ್ಲಿದೆ. ನಾವು ಪ್ರಾರಂಭದಲ್ಲಿ ಘೋಷಿಸಿದ್ದ ಹಾಗೆ ಕನಿಷ್ಠ ಐದು ವರ್ಷ ಅಥವಾ ಮೂವತ್ತು ಸಂಚಿಕೆಗಳನ್ನಂತೂ ಹೊರತರುತ್ತೇವೆ. ಅಲ್ಲಿಂದ ಮುಂದೆ ನಾವು ನೀವು ಯೋಚಿಸಿ ಇಂಥದೊಂದು ಪತ್ರಿಕೆಯ ಅಗತ್ಯ. ಹೊರತರುವಲ್ಲಿಯ ಸಾಹಸ ಕುರಿತು ಚರ್ಚಿಸಿ, ಪತ್ರಿಕೆ ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳೋಣ. ನಮಗಿರುವ ದೊಡ್ಡ ಸಮಸ್ಯೆ ಲೇಖನಗಳು ಸಕಾಲದಲ್ಲಿ ಸಿದ್ಧವಾಗಿ ಬರುತಿಲ್ಲ ಎಂಬುದು.' ಸಾಮಾನ್ಯ ಆಸಕ್ತಿಯ ಪತ್ರಿಕೆಗಳಿಗೆ ಈ ಸಮಸ್ಯೆ ಇರುವುದಿಲ್ಲ. ವಸ್ತುವಿನ ಆಯ್ಕೆಯಲ್ಲಿ ನಿಬಂಧನೆಗಳಿರುವುದಿಲ್ಲವಾದ್ದರಿಂದ ಯಾವ ರೀತಿಯ ಲೇಖನಗಳನ್ನು ಬೇಕಾದರೂ ಆಯ್ದು ಪ್ರಕಟಿಸಬಹುದು. ಸೂಕ್ತ ಲೇಖನಗಳು ಬಾರದಿದ್ದರೆ ಎಲ್ಲಿಂದಲೋ ಸಂಗ್ರಹಿಸಿಯಾದರೂ ಪ್ರಕಟಿಸಬಹುದು. ಆದರೆ ವಿಶೇಷಾಸಕ್ತಿ ಪತ್ರಿಕೆಯೊಂದಕ್ಕೆ ಆಯ್ಕೆಯಲ್ಲಿ ಈ ಸ್ವಾತಂತ್ರ್ಯವಿರುವುದಿಲ್ಲ. ಕಲೆಗೆ ಮೀಸಲೆಂದು ಘೋಷಿಸಿಕೊಂಡ ಪತ್ರಿಕೆಗೆ ಕಲೆಗೆ ಸಂಬಂಧಪಡುವ ಲೇಖನಗಳು ಬಾರದಿದ್ದಾಗ ಇಕಟ್ಟಿನ ಪರಿಸ್ಥಿತಿ. ಬೇರೆ ವಸ್ತುವನ್ನು ಹಾಕುವಂತಿಲ್ಲ. ಕಲೆಗೆ ಸಂಬಂಧಪಟ್ಟ ಲೇಖನಗಳು ಸಿಕ್ಕುವುದಿಲ್ಲ. ಈ ಮಾದರಿಯ ಪತ್ರಿಕೆಗಳು ನಿಯತಕಾಲಿಕತೆಯನ್ನು ಪಾಲಿಸಿದಿರಲು ಪ್ರಕಟಿಸಬಹುದಾದ ಮಟ್ಟದ ಲೇಖನಗಳ ಅಥವಾ ಸಾಮಗ್ರಿಯ ಕೊರತೆಯೂ ಕಾರಣವೆಂಬುದು ಸಂಶೋಧನೆಯ ನಡುವೆ ಕಂಡುಕೊಂಡ ಸತ್ಯ.

  • (ಋ) ಈ ಪತ್ರಿಕೆಗಳಿಗೆ ಸ್ವತಂತ್ರ ಮುದ್ರಣ ವ್ಯವಸ್ಥೆಗಳಿಲ್ಲಿದಿರುವುದೂ, ಪರಕೀಯ ಮುದ್ರಣಾಲಯಗಳ ಮೇಲೆ ಮುದ್ರಣ ಕಾರ್ಯ ನಿಂತಿರುವುದೂ ಪತ್ರಿಕೆಗಳು ತಡವಾಗಿ ಹೊರಬರಲು ಕಾರಣವಾಗುತ್ತದೆ.

ಸಾಧನೆ, ಸಿದ್ಧಿಗಳ ಸ್ಥೂಲನೋಟವನ್ನು

  • ಕನ್ನಡ ಪತ್ರಿಕೋದ್ಯಮದ ಹಾದಿಯಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳು ಪ್ರತ್ಯೇಕ ಕವಲುದಾರಿಯಾಗಿ ಬೆಳದಿರುವುದಂತೂ ನಿಚ್ಚಳವಾಗಿದೆ.
  • ೧೫೦ ವರ್ಷಗಳ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಸಂಖ್ಯೆಯಲ್ಲೂ ಸಾಧನೆಯಲ್ಲೂ ಕಲಾ ಪತ್ರಿಕೆಗಳಿಗಿಂತ ಸಾಹಿತ್ಯ ಪತ್ರಿಕೆಗಳು ಮುಂದಿರುವುದು ಮೇಲ್ನೋಟಕ್ಕೆ ಕಾಣುವ ಅಂಶ.
  • ಕನ್ನಡದಲ್ಲಿ ೧೯೯೩ರವರೆಗೆ ಒಂದು ನೂರಕ್ಕೂ ಹೆಚ್ಚು ಸಾಹಿತ್ಯ ಪತ್ರಿಕೆಗಳನ್ನು ಗುರುತಿಸಬಹುದಾದರೆ ಕಲಾ ಪತ್ರಿಕೆಗಳೆಂದು ಗಮನಿಸಬಹುದಾಗಿದ್ದು ಮೂವತ್ತು ನಲವತ್ತು ಮಾತ್ರ.
  • ಆಧುನಿಕ ಕನ್ನಡ ಸಾಹಿತ್ಯವನ್ನು ಬೆಳಸುವಲ್ಲಿ ಸಾಹಿತ್ಯ ಪತ್ರಿಕೆಗಳು ನೀಡಿದ ಕೊಡುಗೆ ಮಹತ್ತರವಾದುದು. ಕನ್ನಡಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟವಾದ ಕವನ, ಕಥೆ, ನಾಟಕ, ಧಾರಾವಾಹಿ ಮುಂತಾದ ಸೃಜನಶೀಲ ಬರಹಗಳೇ ಮುಂದೆ ಪುಸ್ತಕ ರೂಪದಲ್ಲಿ ಸಂಕಲನಗೊಂಡಾಗ ಕನ್ನಡಸಾಹಿತ್ಯದ ಅಮೂಲ್ಯ ಕೃತಿಗಳಾಗಿ ಬೆಳಗಿವೆ.
  • ಮುದ್ದಣ ಕವಿಯ ರಾಮಾಶ್ವಮೇಧಂ ಕೃತಿಯೇ ಇದಕ್ಕೆ ಒಳ್ಳೆಯ ಉದಾಹರಣೆಗೆ, ವ್ಯಾಯಾಮ ಶಿಕ್ಷಕನಾಗಿದ್ದ ಮುದ್ದಣ ಬರೆದ ಈ ಕಾವ್ಯವು ಮೊದಲಿಗೆ ಕಾವ್ಯಕಲಾನಿಧಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಮುಂದೆ ಅದುವೇ ಪುಸ್ತಕ ರೂಪದಲ್ಲಿ ಪ್ರಕಟಗೊಂಡು ಕನ್ನಡ ಸಾಹಿತ್ಯದಲ್ಲಿ ಮುದ್ದಣನಿಗೆ ಶಾಶ್ವತವಾದ ಸ್ಥಾನ ಕಲ್ಪಿಸಿತು.
  • ೧೯೭೦ರವರೆಗೆ 'ಕನ್ನಡ ಸಾಹಿತ್ಯ ಪರಿಷತ್' ಪತ್ರಿಕೆಯಲ್ಲಿ ೩೦೦ಕ್ಕೂ ಹೆಚ್ಚು ಲೇಖಕರ ೮೫೦ ಬರಹಗಳು ಪ್ರಕಟವಾಗಿದ್ದರೆ ಧಾರವಾಡದ ವಿದ್ಯಾವರ್ಧಕ ಸಂಘದಿಂದ ಪ್ರಕಟವಾಗುತ್ತಿದ್ದ 'ವಾಗ್ಭೂಷಣ' ಪತ್ರಿಕೆಗೆ ೮೫ ಗ್ರಂಥಗಳನ್ನು ಇಡಿಯಾಗಿ ಪ್ರಕಟಿಸಿದ ಹೆಮ್ಮೆ. ಮೈಸೂರು ವಿಶ್ವವಿದ್ಯಾನಿಲಯದ 'ಪ್ರಬುದ್ಧ ಕರ್ನಾಟಕ' ಪತ್ರಿಕೆಯಂತೂ ೫೦ ವರ್ಷಗಳಲ್ಲಿ ೫೬ ಲೇಖಕರ ೨೯೫೯ ಲೇಖನಗಳನ್ನು ಪ್ರಕಟಿಸಿರುವುದಾಗಿ ಪ್ರಬುದ್ಧ ಕರ್ಣಾಟಕ ಚಿನ್ನದಸಂಚಿಕೆ (೧೯೬೯ ಪುಟ ೧೩೧೦) ಯಲ್ಲಿ ತಿಳಿಸಲಾಗಿದೆ. ಅಲ್ಲಿಂದ ಮುಂದಿನ ಎರಡೂವರೆ ದಶಕಗಳಲ್ಲಿ ಪ್ರಬುದ್ಧ ಕರ್ಣಾಟಕದ ಸಾಹಿತ್ಯ ಸೇವೆ ನಿರಂತರವಾಗಿ ಮುಂದುವರೆದಿದೆ.
  • ಕನ್ನಡ ನವೋದಯ ಸಾಹಿತ್ಯ ಪರ್ವದಲ್ಲಿ 'ವಾಗ್ಭೂಷಣ', 'ಪ್ರಬುದ್ಧ ಕರ್ಣಾಟಕ' ಹಾಗೂ 'ಕನ್ನಡ ಸಾಹಿತ್ಯ ಪರಿಷತ್' ಪತ್ರಿಕೆಗಳು ಹಾಕಿಕೊಟ್ಟ ಮಾರ್ಗವನ್ನು ಮುಂದೆ ನವ್ಯ ಸಾಹಿತ್ಯ ಪರ್ವದಲ್ಲಿ 'ಸಾಕ್ಷಿ', 'ಸಂಕ್ರಮಣ', 'ಸಮನ್ವಯ', 'ರುಜುವಾತು' ಮುಂತಾದ ಪತ್ರಿಕೆಗಳೂ, ದಲಿತ ಬಂಡಾಯ ಕಾಲದಲ್ಲಿ 'ಸಂಕ್ರಮಣ', 'ಶೂದ್ರ', 'ಅನ್ವೇಷಣೆ', 'ಸಾಹಿತ್ಯ ಸಂಗಾತಿ', 'ಸಂವಾದ' ಮುಂತಾದ ಪತ್ರಿಕೆಗಳು ಮುಂದುವರೆಸಿದವು.
  • ಈ ಹಿನ್ನೆಲೆಯಲ್ಲಿ ಸಾಹಿತ್ಯ ಪತ್ರಿಕೆಗಳ ಕೊಡುಗೆಯನ್ನು ಅಧ್ಯಯನ ಮಾಡದಿದ್ದರೆ ಕನ್ನಡ ಸಾಹಿತ್ಯದ ಅಧ್ಯಯನವೇ ಅಪೂರ್ಣವಾಗುವ ಮಟ್ಟಿಗೆ ಕನ್ನಡ ಸಾಹಿತ್ಯ ಪತ್ರಿಕೆಗಳು ಸಾಹಿತ್ಯದ ಅವಿಭಾಜ್ಯ ಅಂಗವಾಗಿ ಬೆಳದು ನಿಂತಿವೆ.
  • ಸಂಕ್ರಮಣ, ಸಂವಾದ, ಅಂಕಣ, ಶೂದ್ರ ಮುಂತಾದ ಪತ್ರಿಕೆಗಳು ಬರೇ ಸಾಹಿತ್ಯ ಕೃತಿಗಳಿಗೆ
  • ಸಂಕ್ರಮಣ, ಸಂವಾದ, ಅಂಕಣ, ಶೂದ್ರ ಮುಂತಾದ ಪತ್ರಿಕೆಗಳು ಬರೇ ಸಾಹಿತ್ಯ ಕೃತಿಗಳಿಗೆ ವೇದಿಕೆಯಾಗುವ ಪತ್ರಿಕೆಗಳಾಗಿ ಉಳಿಯದೇ ಪ್ರಕಾಶನ ಸಂಸ್ಥೆಗಳೂ ಆಗಿವೆ. ಸಂಕ್ರಮಣ ಪ್ರಕಾಶನ, ಸಂವಾದ ಪ್ರಕಾಶನ, ಅಂಕಣ ಪ್ರಕಾಶನ, ಶೂದ್ರ ಪ್ರಕಾಶನದ ಹೆಸರಿನಲ್ಲಿ ಪ್ರಕಟಗೊಂಡಿರುವ ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ಇದೊಂದು ಸಾಹಿತ್ಯ ಪತ್ರಿಕೆಗಳ ವೈಶಿಷ್ಟ್ಯಪೂರ್ಣ ಸಾಹಿತ್ಯ ಸೇವೆ.
  • ಸಮಗ್ರವಾಗಿ ಸಾಹಿತ್ಯದ ಎಲ್ಲ ವಿಧಗಳನ್ನು ಪೋಷಿಸುವುದು ಸಾಹಿತ್ಯ ಪತ್ರಿಕೆಗಳ ಕ್ರಮವಾದರೆ ಕಾವ್ಯಕ್ಕಾಗಿ, ಕಥೆಗಾಗಿ, ಕಾದಂಬರಿ, ಪ್ರಬಂಧಗಳಿಗೆ ಮೀಸಲಾಗಿ ಪತ್ರಕೆಗಳೂ ಪ್ರಕಟಗೊಂಡಿವೆ. ವಿಶೇಷಾಸಕ್ತಿಯೊಳಗೇ ವಿಶೇಷಾಸಕ್ತಿಯನ್ನು ಆಯ್ದುಕೊಂಡು ವಿಕ್ರಮ ಈ ಪತ್ರಿಕೆಗಳದ್ದು.
  • ಕಲೆ, ಸಾಹಿತ್ಯ ಪತ್ರಿಕೆಗಳು ಗಮನಿಸಬೇಕಾದ ಇನ್ನೊಂದು ಕೊಡುಗೆ ಆರೋಗ್ಯಕರ ಚರ್ಚೆಗೆ ವೇದಿಕೆಯಾಗುವುದು. ಕಾವ್ಯದಲ್ಲಿ ಆದಿಪ್ರಾಸ ಅಂತ್ಯ ಪ್ರಾಸಗಳು ಇರಬೇಕೋ ಬೇಡವೋ ಎಂಬುದಾಗಿ ನಡೆದ ಸುದೀರ್ಘ ಚರ್ಚೆ ಒಂದು ಉದಾಹರಣೆ. ಹಾಗೆಯೇ ನವ್ಯ ಕವನಗಳ ಅತಿ ಭೌದ್ಧಿಕತೆಯ ಕುರಿತು, ಮುಂತಾಗಿ ಕಾಲಕಾಲಕ್ಕೆ ಸಾಹಿತ್ಯ ಚರ್ಚೆಗಳಿಗೆ ಸಾಹಿತ್ಯ ಪತ್ರಿಕೆಗಳು ಕಾರಣವಾಗಿವೆ. ವೇದಿಕೆ ನಿರ್ಮಿಸಿದೆ.
  • ಆಧುನಿಕ ಕನ್ನಡ ಸಾಹಿತ್ಯದ ಆರಂಭ ಕಾಲದಲ್ಲಿ ಕನ್ನಡ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಪ್ರಕ್ರಿಯೆಯಲ್ಲಿ ಕನ್ನಡ ಸಾಹಿತ್ಯ ಪತ್ರಿಕೆಗಳ ಪಾತ್ರವನ್ನು ಮರೆಯಲಾಗದು. ಗಳಗನಾಥರು ಕನ್ನಡ ಕಾದಂಬರಿಗಳ ಪಿತಾಮಹರೆಂದು ಜನಪ್ರಿಯಗೊಂಡಿದ್ದು 'ಸದ್ಭೋಧ ಚಂದ್ರಿಕೆ', 'ವಾಗ್ಭೂಷಣ' ಪತ್ರಿಕೆಗಳ ಮೂಲಕ ಎಂಬುದನ್ನು ಈ ನಿಟ್ಟಿನಲ್ಲಿ ನೆನೆಯಬಹುದು.
  • ಕನ್ನಡ ಸಾಹಿತ್ಯದ ಹಿರಿಯೆರಲ್ಲ ಒಂದಲ್ಲಾ ಒಂದು ಸಾಹಿತ್ಯ ಪತ್ರಿಕೆಯ ಸಂಪರ್ಕವಿಟ್ಟುಕೊಳ್ಳುವುದು ಕನ್ನಡದಲ್ಲಿ ಪರಂಪರೆಯಾಗಿ ಬೆಳದಿದೆ. ಈ ಪರಂಪರೆ ಮುಂದುವರಿಯುತ್ತಿದೆ. ಸೃಜನಾತ್ಮಕ ಸಾಹಿತಿಗಳಾದವರು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಸಂಪಾದಕೀಯ ಅಥವಾ ಲೇಖನಗಳ ರೂಪದಲ್ಲಿ ಬರೆಯುವ ವೈಚಾರಿಕ ಬರಹಗಳು ಆಯಾ ಕಾಲ ಘಟ್ಟದಲ್ಲಿ ಸಾಹಿತಿಯ ಪ್ರತಿಕ್ರಿಯೆಗಳಾಗಿ ಉಳಿಯುತ್ತವೆ. ಇಂಥ ದಾಖಲೆಗಳು ನಮ್ಮ ಸಾಮಾಜಿದ ಸಂದರ್ಭದ ಬಹುಮುಖ್ಯ ಆಕರಗಳು.
  • ಸಾಹಿತಿ ತನ್ನ ಬರಹದಲ್ಲಿ ಸಮಕಾಲೀನ ಸಮಾಜವನ್ನು ಬಿಂಬಿಸುವ ಆಶಯವನ್ನು ಹೊಂದಿರುವುದಿರಿಂದ ಸಾಹಿತ್ಯ ಪತ್ರಿಕೆಗಳು ಒಂದು ಸಮಾಜದ ಕನ್ನಡಿಗಳಾಗುತ್ತವೆ. ಮುಂದೊಂದು ದಿವಸ ಹಿಂದೆ ನಡೆದ ಸಾಹಿತ್ಯಿಕ ಸಾಂಸ್ಕೃತಿಕ ಘಟನಾವಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ. ಈ ನಿಟ್ಟಿನಲ್ಲಿ ೨೦ನೇ ಶತಮಾನದ ಕನ್ನಡ ಸಾಹಿತ್ಯ ಪತ್ರಿಕೆಗಳು ೨೧ನೇ ಶತಮಾನಕ್ಕೆ ಸಮರ್ಥ ಪ್ರತಿನಿಧಿಗಳಾಗಿ ನಿಲ್ಲುವ ಸಾಧ್ಯತೆ ಪಡೆದಿವೆ.
  • ಕನ್ನಡ ಸಾಹಿತ್ಯದ ಜೊತೆಜೊತೆಗೆ ಸಾಹಿತ್ಯ ಪತ್ರಿಕೆಗಳೂ ಬೆಳೆದ ಹಾಗೆ ಕನ್ನಡದಲ್ಲಿ ಕಲಾ ಪತ್ರಿಕೆಗಳು ಕಲೆಯ ಅವಿಭಾಜ್ಯ ಅಂಗಗಳಾಗಿ ಬೆಳದಿಲ್ಲ. ಪ್ರಸಾರದ ದೃಷ್ಟಿಯಿಂದಲೂ ಪ್ರಚಾರದ ದೃಷ್ಟಿಯಿಂದಲೂ ಕಲಾ ಪತ್ರಿಕೆಗಳು ಸಾಹಿತ್ಯ ಪತ್ರಿಕೆಗಳಿಗಿಂತ ಹಿಂದುಳಿದಿವೆ.
  • ಕಲಾ ಪತ್ರಿಕೆಗಳ ಪೈಕಿ ರಂಗಭೂಮಿಯ ಕುರಿತಾಗೇ ಹೆಚ್ಚು ಪತ್ರಿಕೆಗಳು ಪ್ರಕಟಗೊಂಡಿವೆ. ಸಂಗೀತ, ಚಿತ್ರಕಲೆ, ಶಿಲ್ಪಕಲೆ, ಮುಂತಾದ ವಿಶೇಷ ಕಲಾ ಪ್ರಕಾರಗಳಿಗೆ ಮೀಸಲಾಗಿ ಬಂದ ಪತ್ರಿಕೆಗಳು ಬೆರಳೆಣಿಕೆಯವು.
  • ಕಲೆ, ಸಾಹಿತ್ಯ ಪತ್ರಿಕೆಗಳ ಒಟ್ಟೂ ಪರಿಸ್ಥಿತಿಯನ್ನು ವಿಮರ್ಶಿಸುವಾಗಿ ಈ ತೆರನ ಪತ್ರಿಕೆಗಳನ್ನು ವೃತ್ತಿಪರವಾಗಿ ಲಾಭದಾಯಕವಾಗಿ ನಡೆಸುವ ಕಾಲವಿನ್ನೂ ಬಂದಿಲ್ಲವೆಂದು ಅಭಿಪ್ರಾಯ ಪಡಬಹುದು. ಸಂಸ್ಥೆಯ ಅಂಗಾಗಲಾಗಿ ಈ ಪತ್ರಿಕೆಗಳು ಪ್ರಕಟಗೊಂಡರೂ ಅದೇ ಉದ್ದೇಶಕ್ಕೆ ಸಂಸ್ಥೆ ನಡೆಸುವ ಕಾಲ ಕನ್ನಡದಲ್ಲಿ ಪ್ರಾಪ್ತವಾಗಿಲ್ಲ. ಸಂಸ್ಥೆಯ ಆಶ್ರಯ ಪಡೆದ ಪತ್ರಿಕೆಗಳು ಲಾಭ, ನಷ್ಟಗಳ ಚಿಂತೆಯಿಲ್ಲದೇ ನಡೆಯುವಂತಾದರೆ, ವೈಯಕ್ತಿಕ ಪ್ರಯತ್ನಗಳಾದ ಪತ್ರಿಕೆಗಳು ಸಂಪಾದಕರ ಜೇಬು ನಡೆಸುವವರೆಗೆ ನಡೆಯುತ್ತವೆ.
  • ಕಲೆ ಹಾಗೂ ಸಾಹಿತ್ಯ ಪತ್ರಿಕೆಗಳನ್ನು ಸಾಮಾನ್ಯವಾಗಿ ಹವ್ಯಾಸಕ್ಕಾಗಿ ಆರಂಭಿಸಲಾಗುವುದರಿಂದ ಈ ಪತ್ರಿಕೆಗಳಲ್ಲಿ ವೃತ್ತಿಪರತೆಯನ್ನು ನಿರೀಕ್ಷಿಸುವುದೇ ಕನ್ನಡ ಪತ್ರಿಕೋದ್ಯಮದ ಸದ್ಯದ ಸಂದರ್ಭದಲ್ಲಿ ಅತಿಯಾದ ನಿರೀಕ್ಷೆಯೆನ್ನಬಹುದು.
  • ಸಾಹಿತ್ಯ ಅಥವಾ ಕಲಾ ಪತ್ರಿಕೆಯನ್ನು ಹೊರತರುವ ಸಾಹಸಕ್ಕೆ ಇಳಿಯುವವರು ಸಾಹಿತಿಗಳೋ ಕಲಾವಿದರೂ ಆಗಿರುತ್ತಾರೆ. ಆದರೆ ಪತ್ರಕರ್ತರಾಗಿರುವುದಿಲ್ಲ. ಪತ್ರಿಕಾ ಬರಹಗಳನ್ನು ಬರೆದ ನಿಪುಣತೆ ಇರುವವರು ಸಂಪಾದಕರಾಗಿದ್ದಾಗಲೂ ಪತ್ರಿಕೆಗಳಿಗಾಗಿ ಹಣ, ಶ್ರಮ, ಆಸಕ್ತಯನ್ನು ಧಾರೆಯೆರೆದು ಕೈಸುಟ್ಟುಕೊಂಡು ಪತ್ರಿಕೆ ನಿಲ್ಲಿಸುವವರೇ ಹೆಚ್ಚು. ಕಲೆ, ಸಾಹಿತ್ಯ ಬೇರೆ, ಪತ್ರಿಕೆ ಬೇರೆ, ಪತ್ರಿಕೋದ್ಯಮ ಸಂಪೂರ್ಣ ಬೇರೆ ಎಂಬುದನ್ನು ಇಂಥ ಪತ್ರಿಕೆಗಳನ್ನು ತರಲಿಚ್ಛಿಸುವ ಉಮೇದುವಾರರು ಗಮನಿಸಬೇಕು.
  • ೩. ಉತ್ಸಾಹದಿಂದ ಆರಂಭಗೊಳ್ಳುವ ಕಲೆ, ಸಾಹಿತ್ಯ ಪತ್ರಿಕೆಗಳು ಮಧ್ಯೆ ನಿಲ್ಲಲು ಮುಖ್ಯಕಾರಣಗಳಲ್ಲಿ ಈ ಆಸಕ್ತಿಗೆ ಮೀಸಲಾಗಿ ಬರುವ ಲೇಖನಗಳ ಕೊರತೆಯೂ ಒಂದು. ನಮ್ಮ ಕಲೆ, ಸಾಹಿತ್ಯ ಪತ್ರಿಕೆಗಳಿಗೆ ಸಾಹಿತಿ, ಕಲಾವಿದರುಗಳಿಂದ ಲೇಖನ ಪಡೆಯಲು ಸಾಮಾನ್ಯಾಸಕ್ತಿ ಪತ್ರಿಕೆಗಳ ಜೊತೆ ಸ್ಪರ್ಧಿಸಬೇಕಿದೆ. ಸಾಮಾನ್ಯಸಕ್ತಿ ಪತ್ರಿಕೆಗಳು ಹೆಚ್ಚು ಓದುಗರನ್ನು ತಲುಪುವುದರಿಂದ ಹಾಗೂ ಹೆಚ್ಚು ಸಂಭಾವನೆ ನೀಡುವುದರಿಂದ ಬರಹಗಾರರು ಆ ಪತ್ರಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ನಿರಂತರವಾಗಿ ಒಳ್ಳೆಯ ಲೇಖನಗಳನ್ನು ಪಡೆಯುವಲ್ಲಿ ನಮ್ಮ ಕಲೆ, ಸಾಹಿತ್ಯ ಪತ್ರಿಕೆಗಳು ವಿಫಲವಾಗುವುದನ್ನು ಗಮನಿಸಬೇಕು.
  • ೪. ಕಲೆ, ಸಾಹಿತ್ಯಕ್ಕೆ ಮೀಸಲಾದ ಯಾವುದೇ ಕನ್ನಡ ಪತ್ರಿಕೆ ಸ್ವಂತ ಕಾಲ ಮೇಲೆ ನಿಲ್ಲುವ ಪರಿಸ್ಥಿತಿ ಇಂದು ಕನ್ನಡದಲ್ಲಿ ಇಲ್ಲದಿರುವುದಕ್ಕೆ ವ್ಯವಸ್ಥಿತ ಮಾರಾಟದ ಜಾಲದ ಕೊರತೆ ಬಹುಮುಖ್ಯ ಕಾರಣ. ಪತ್ರಿಕೆ ತರುವ ಉಮೇದುವಾರರು ಮೊದಲು ಮಾರಾಟಕ್ಕೆ ಸೂಕ್ತ ಜಾಲವನ್ನು ಸೃಷ್ಟಿಸಿಕೊಳ್ಳಬೇಕು. ಊರೂರಿನಲ್ಲಿ ಓದುಗರು ಕೇಳಿದಲ್ಲಿ ಪತ್ರಿಕೆ ದೊರೆಯುವ ಸ್ಥಿತಿ ಬಂದಾಗ ಕನ್ನಡದ ಕಲೆ, ಸಾಹಿತ್ಯದ ಪತ್ರಿಕೆಗಳ ಸ್ಥಿತಿ ಸುಧಾರಿಸಬಹುದು.
  • ೫. ಹೆಚ್ಚು ಹೆಚ್ಚು ಓದುಗರನ್ನು ಸೃಷ್ಟಿಸುವ ರೀತಿಯಲ್ಲಿ ಈ ತೆರನ ಪತ್ರಿಕೆಗಳ ಹೂರಣ ಇರುವುದು ಅವಶ್ಯಕ. ಸಾಹಿತ್ಯ, ಕಲೆಯ ಅಭಿರುಚಿಯನ್ನು ಜನರಲ್ಲಿ ಬೆಳೆಸುವುದು ಈ ಪತ್ರಿಕೆಗಳ ಹೊಣೆ. ಜನರಿಗೆ ಅರ್ಥವಾಗದ, ಸಾಮಾನ್ಯರ ಬದುಕಿಗೆ ವಿಮುಖವಾದ ಚರ್ಚೆ, ವಿವರಣೆಗಳಲ್ಲೇ ಪತ್ರಿಕೆಯ ಪುಟಗಳನ್ನು ತುಂಬಿಸಿದರೆ ಓದುಗರ ಅಭಿರುಚಿಯನ್ನು ವರ್ಧಿಸುವುದರತ್ತ ಕೆಲಸ ಮಾಡಬೇಕಿದೆ.
  • ೬. ಯಾವ ಕಾರಣಕ್ಕೂ ಪತ್ರಿಕೆಯನ್ನುತನ್ನನ್ನು ಸಮರ್ಥಿಸಿಕೊಳ್ಳಲು ಬಯಸುವ ಅಸ್ತ್ರವಾಗಬಾರದು. ಇದು ಓದುಗರ, ಚಂದಾದಾರರ ಅಸ್ತ್ರವೆಂಬುದನ್ನು ಮನಗಾಣಬೇಕು. ಸಾಹಿತ್ಯ, ಕಲಾ ಪತ್ರಿಕೆಗಳು ವೈಯಕ್ತಿಕ ಜಗಳಗಳ ತಿಕ್ಕಾಟಗಳ ವೇದಿಕೆಗಳಾಗಬಾರದು. ಆಯಾಯುಗಧರ್ಮಕ್ಕೆ ಹೊಂದುವ ಸಾಹಿತ್ಯ, ಸಾಂಸ್ಕೃತಿಕ ಚಳುವಳಿಯನ್ನು ಬೆಳಸುವ ಜವಾಬ್ದಾರಿ ಈ ಪತ್ರಿಕೆಗಳ ಮೇಲೆ ಇರುವುದಾದರೂ ಅದೆಲ್ಲೂ ಸಂಪಾದಕರ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಲು ಸೀಮಿತಗೊಳ್ಳಬಾರದು.
  • ೭. ಸಾಂಘಿಕ ಪ್ರಯತ್ನವಾಗಿ ಇಂಥ ಪತ್ರಿಕೆಗಳನ್ನು ಹೊರತರುವಾಗ ಸಂಘದಲ್ಲಿರುವ ಪ್ರತಿಯೊಬ್ಬರ ಜವಾಬ್ದಾರಿ, ಅಧಿಕಾರ ಹಾಗೂ ಮಿತಿಗಳನ್ನು ಮೊದಲೇ ಸ್ಪಷ್ಟಪಡಿಸಿಕೊಳ್ಳಬೇಕು. ಗುಂಪಿನ ಸದಸ್ಯರಲ್ಲಿ ಸಾಮಾರಸ್ಯ ಪತ್ರಿಕೆಯ ಉಳಿವಿಗೆ ಅನಿವಾರ್ಯ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಸಂಪಾದನೆಯಷ್ಟೇ ಪತ್ರಿಕೆಯೊಬ್ಬರು ಮನಗಾಣಬೇಕು. ಸಂಪಾದನೆಯಷ್ಟೇ ಪತ್ರಿಕೆಯ ವ್ಯವಸ್ಥಾಪನೆ ಹಾಗೂ ಮಾರಾಟವೂ ಮುಖ್ಯವೆಂಬುದು ಸಂಘದ ಎಲ್ಲರಿಗೂ ಅರಿವಿರಬೇಕು. ಯಾವುದೂ ಆರಂಭ ಶೂರತ್ತ್ವವಾಗದಂತೆ ಗುಂಪು ಎಚ್ಚರಿಕೆವಹಿಸಬೇಕು.
  • ೮. ಸಂಸ್ಥೆಯ ಅಂಗವಾಗಿ ಬರುವ ಪತ್ರಿಕೆಗೆ ಪರಿಪೂರ್ಣ ಜವಾಬ್ದಾರನಾದ ವ್ಯಕ್ತಿಯೊಬ್ಬನ ಹಿರಿತನ ಬೇಕು. ಈ ಪತ್ರಿಕೆಗಾಗಿ ಕೆಲಸ ಮಾಡುವವರಿಗೆ ಪತ್ರಿಕೆಗಾಗಿ ಕೆಲಸ ಮಾಡುವವರಿಗೆ ಪತ್ರಿಕೆ ತಮ್ಮದೆನ್ನುವ ಭಾವನೆ ಬೆಳೆಯಬೇಕು. ನಿಯತಕಾಲಿಕತೆಗೆ ಹೆಚ್ಚು ಒತ್ತಿರಬೇಕು. ಪತ್ರಿಕೆ ಸ್ವಂತಕಾಲ ಮೇಲೆ ನಿಲ್ಲುವಂತಾಗುವುದು ಸಾಂಸ್ಥಿಕ ಪತ್ರಿಕೆಯ ಹಿಂದಿರುವ ವ್ಯಕ್ತಿಗಳ ಮೊದಲಗುರಿಯಾಗಬೇಕು.
  • ೯. ಕನ್ನಡದಲ್ಲಿ ಕಲೆ ಸಾಹಿತ್ಯ ಪತ್ರಿಕೆಗಳ ಒಟ್ಟಾರೆ ಸ್ಥಿತಿ ಆಶಾದಾಯಕವಾಗಿಲ್ಲವಾದರೆ ಕನ್ನಡಿಗರಲ್ಲಿ ಕೊಂಡು ಓದುವ ಪ್ರವೃತ್ತಿಯ ಕೊರತೆಯೂ ಕಾರಣವೆಂಬುದನ್ನೂ ಮನಗಾಣಬೇಕು. ಈ ದಿಶೆಯಲ್ಲಿ ಸಾಹಿತಿ, ಕಲಾವಿದರು ಮಾಡಬಹುದಾದ ಕಾಯಕದ ಕುರಿತು ಚರ್ಚೆಯಾಗಬೇಕು.
  • ೧೦. ಕಲೆ, ಸಾಹಿತ್ಯ ಪತ್ರಿಕೆಗಳ ಪ್ರಸಾರ ಕಡಿಮೆಯಾದರೂ ಪ್ರಭಾವ ಕಡಿಮೆಯಲ್ಲ. ರಾಜ್ಯಸರ್ಕಾರದಿಂದ ಹೆಚ್ಚೆಂದರೆ ಕರ್ನಾಟಕ ವಾರ್ತೆಯ ಜಾಹೀರಾತು ಸಿಗುವುದು ಮಾತ್ರವೇ ಈ ತೆರೆನ ಪತ್ರಿಕೆಗಳಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹ. ಕೇಂದ್ರ ಸರ್ಕಾರದಿಂದ ಅಂಚೆರಿಯಾಯಿತಿ ಸಿಗುವುದು ಮಾತ್ರವೇ ಸಹಾಯ. ಯಾವುದೇ ಕನ್ನಡ ಸಾಹಿತ್ಯ, ಕಲೆ ಪತ್ರಿಕೆ ಸರ್ಕಾರದ ರಿಯಾಯಿತಿ ಪಡೆದು ಮುದ್ರಣ ಕಾಗದ ಪಡೆಯುವ ಸ್ಥಿತಿಯಿಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸಂದರ್ಭಕ್ಕೆ ಕಲೆ, ಸಾಹಿತ್ಯ ಪತ್ರಿಕೆಗಳು ನೀಡಬಹುದಾದ ಅಗಾಧ ಕೊಡುಗೆಯ ಸಾಧ್ಯತೆಯ ದೃಷ್ಟಿಯಿಂದ ಈ ಪತ್ರಿಕೆಗಳ ಸ್ಥಿತಿಗತಿ ವೃತ್ತಿಪರತೆಯನ್ನು ಉತ್ತಮ ಪಡಿಸಲು ಸರ್ಕಾರ ನೀಡಬಹುದಾದ ಸಹಾಯ ಹಸ್ತದ ಕುರಿತೂ ಚಿಂತನೆ ನಡೆಯಬೇಕು.

ಟಿಪ್ಪಣಿಗಳು

  • ೧. ನೋಡಿ ಅಧ್ಯಾಯ ಐದು. ಪುಟ ೨೩೧
  • ೨. 'ಸಂಕ್ರಮಣ' ಪ್ರಕಾಶನವು 'ಕನ್ನಡ ಲೇಖಕರ ವಿಳಾಸಗಳು' ಪುಸ್ತಕವನ್ನು ಈಗಾಗಲೇ ಮೂರು ಆವೃತ್ತಿಗಳನ್ನು ಪ್ರಕಟಿಸಿದ್ದು ಕನ್ನಡ ಲೇಖಕರ ಸಂಪರ್ಕಕ್ಕೆ ಅಮೂಲ್ಯ ಕೊಡುಗೆಯಾಗಿದೆ.
  • ೩. ನೀನಾಸಂ ಮಾತುಕತೆಗೆ ಎಚ್. ಎಂ. ಟಿ ಯವರು ನೀಡುವ ಜಾಹಿರಾತನ್ನು ಈ ರೀತಿಯಲ್ಲಿ ವ್ಯಾಖಾನಿಸಬಹುದು.
  • ೪. ಮಾದರಿಗಾಗಿ ಕನ್ನಡ ನುಡಿಗನ್ನಡಿಯ ೧೯೦೭ನೇ ಇಸ್ವಿ ಸಂಚಿಕೆಯ ಹಿಂಬದಿ ಪುಟವನ್ನು ಗಮನಿಸಬಹುದು.
  • ೫. ಬುದ್ದಣ್ಣ ಹಿಂಗಮಿರೆಯವರ 'ದಲಿತ' ಪತ್ರಿಕೆಯನ್ನು ಮಾದರಿಗಾಗಿ ನೋಡಬಹುದು.
  • ೬. ಪ್ರಬುದ್ಧ ಕರ್ನಾಟಕವು ಹಿಂದಿನ ಸಂಚಿಕೆಗಳನ್ನು ಪ್ರಕಟಿಸುವುದನ್ನು ಉದಾರಿಸಬಹುದು.
  • ೭. ಸಂಪಾದಕಿ ಡಾ. ವಿಜಯಾ, ಸಂಕುಲ ೨೪, ಸಂಪುಟ ೪, ಸಂಚಿಕೆ ೫ರಲ್ಲಿ ಬಿನ್ನಹ, ಪುಟ ೩.

೦೭. ಕನ್ನಡದಲ್ಲಿ ಕಲೆ ಮತ್ತು ಸಾಹಿತ್ಯ ಪತ್ರಿಕೆಗಳ ಪಟ್ಟಿ

ಕನ್ನಡದ ಕಲಾ ಪತ್ರಿಕೆಗಳು

ಕ್ರಮಸಂಖ್ಯೆ ಪತ್ರಿಕೆಯಹೆಸರು ಪ್ರಕಟಣೆಯವರ್ಷ ಊರು ಸಂಪಾದಕರು/ಪ್ರಕಾಶಕರು
ರಂಗಭೂಮಿ ೧೯೨೫ ಬೆಂಗಳೂರು ದ.ಕೃ.ಭಾರದ್ವಾಜ
ಕಲಾನಿವೇದನ ೧೯೨೯ ಬಳ್ಳಾರಿ ಕನ್ನಡ ನಾಟಕ ಕಲಾ ಪರಿಷತ್ತು
ಕಲಾ ೧೯೩೦ ಬೆಂಗಳೂರು ಅ.ನ. ಸುಬ್ಬರಾಯ
ಕಲಾಚಂದ್ರ ೧೯೩೩ ಕಾರ್ಕಳ ಆರ್. ಜಿ. ಶೆಣೈ
ತಮಾಷ್ ೧೯೪೨ ಮೈಸೂರು/ಗದಗ ಮಾಧವರಾಯರು
ಗಾನವಾಹಿನಿ ೧೯೫೦ ಮಂಡ್ಯ ಕೆ.ಎಸ್. ಚಂದ್ರಶೇಖರಯ್ಯ
ಗಾಯನಗಂಗಾ ೧೯೫೪ ಬೆಂಗಳೂರು ಆರ್. ಶೇಷಾದ್ರಿ ಗವಾಯಿ
ನೃತ್ಯಭಾರತಿ ೧೯೫೪ ಹಂಸಭಾವಿ ಮಲ್ಹಾರಿ ಎಂ. ಕುಲಕರ್ಣಿ
ನೃತ್ಯ ಭಾರತ ೧೯೫೪ ಧಾರವಾಡ ಶ್ರೀನಿವಾಸ ಕುಲಕರ್ಣಿ
೧೦ ಯಕ್ಷಗಾನ ೧೯೫೬ ತುಡಗುಣಿ, ಶಿಎಸಿ ಮಂಜುನಾಥ ಭಾಗವತ
೧೧ ಶೃಂಗಾರ ೧೯೬೨ ಹೊನ್ನಾವರ ಟಿ. ಎಸ್. ಶಾಸ್ತ್ರಿ
೧೨ ಇಂದ್ರಧನುಸ್ ೧೯೬೨ ಪುತ್ತೂರು ಕೆ. ರಾಮಕೃಷ್ಣ
೧೩ ನುಡಿಜೇನು ೧೯೬೯ ಅಂಕೋಲಾ ಬಿ.ಹೊನ್ನಪ್ಪ
೧೪ ನಾಟ್ಯ ಭಾರತೀ ೧೯೬೯ ಬೆಂಗಳೂರು ಅಸೋಸಿಯೇಟೆಡ್ ಅಮೆಚೂರ್ ಆರ್ಟಿಸ್ಟ್
೧೫ ಮೂಡಲಪಾಯ ಕೊನೆಹಳ್ಳಿ ಮೂಡಲಪಾಯ ಯಕ್ಷಗಾನ ಟ್ರಸ್ಟ್
೧೬ ಕಲಾದರ್ಶನ ೧೯೭೧ ಮಂಗಳೂರು ವಿ.ಬಿ.ಹೊಸಮನೆ
೧೭ ನಿಷಾದ ೧೯೭೨ ಬೆಂಗಳೂರು ಡಾ. ರವೀಶ್ ಜಿ. ಕಾಸರವಳ್ಲಿ
೧೮ ರಂಗಮಂಟಪ ೧೯೭೨ ಮೈಸೂರು ಬಿ.ಕೃಷ್ಣ
೧೯ ಜಾನಪದ ೧೯೭೫ ಮೈಸೂರು ಕರ್ನಾಟಕ ಜಾನಪದ ಪರಿಷತ್ತು
೨೦ ಕಲಾವಿಕಾಸ ೧೯೭೯ ಬೆಂಗಳೂರು ಅ.ಲ. ನರಸಿಂಹನ್
೨೧ ಸಮುದಾಯ ವಾರ್ತಾಪತ್ರ ೧೯೭೯ ಬೆಂಗಳೂರು ಸಮುದಾಯ(ರಿ)
೨೨ ಸೂತ್ರಧಾರ ೧೯೭೯ ಬೆಂಗಳೂರು ರಾಮಯ್ಯ
೨೩ ಜಾನಪದ ಜಗತ್ತು ೧೯೭೯ ರಾಮನಗರ ಎಚ್.ಎಲ್. ನಾಗೇಗೌಡ
೨೪ ರಂಗತೋರಣ ೧೯೮೫ ಧಾರವಾಡ ವಿರೂಪಾಕ್ಷ ನಾಯಕ
೨೫ ಮಾತುಕತೆ ೧೯೮೨ ಹೆಗ್ಗೋಡು ಯಶವಂತ ಜಾಧವ್
೨೬ ಜಾನಪದ ಗಂಗೋತ್ರಿ ೧೯೮೬ ಬೆಂಗಳೂರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ
೨೭ .ಪ್ರಸಂಗ ಉಡುಪಿ ಯಕ್ಷಗಾನ ಕೇಂದ್ರ
೨೮ ಕ್ಯಾಸ್ವಾಸ್ ೧೯೮೯ ಬೆಂಗಳೂರು ಎಂ. ಎಸ್. ಮೂರ್ತಿ
೨೯ ರಾಶಿ ೧೯೮೯ ಮಂಗಳೂರು ಗಣನಾಥ ಎಕ್ಕಾರು
೩೦ ಭರತರಂಗ ಚೇತನ ೧೯೯೨ ಮೈಸೂರು ಆರ್. ಜಯರಾಂ
೩೧ ಸಂಕುಲ ೧೯೯೩ ಬೆಂಗಳೂರು ಡಾ. ವಿಜಯಾ
೩೨ ತಿಲ್ಲಾನ ೧೯೯೩ ಮೈಸೂರು ಗಾನಭಾರತಿ (ರಿ)
೩೩ ಪರಿಕರ ೧೯೯೩ ಮೈಸೂರು ಪರಿಕರ ಪ್ರಕಾಶನ ಟ್ರಸ್ಟ್

ಸಾಹಿತ್ಯ ಪತ್ರಿಕೆಗಳು

ಕರ್ನಾಟಕ ಭಾಷಾ ಸೇವಕ ೧೮೯೧ ವಿಜಾಪುರ ಕೊಣ್ಣೂರ ಶೇಷಗಿರಿ ರಾವ್
ಕರ್ನಾಟಕ ಕಾವ್ಯಮಂಜರಿ ೧೮೯೭ ಬೆಂಗಳೂರು ರಾಮಾನುಜಯ್ಯಂಗಾರ್ ಎಂ.ಎ. ನರಸಿಂಹಾಚಾರ್ ಎಸ್. ಜಿ.
ಕರ್ನಾಟಕ ಗ್ರಂಥಮಾಲ ೧೮೯೩ ಮೈಸೂರು ಎಂ. ಶಾಮರಾವ್, ಇತರರು
ಕಾವ್ಯಕಲ್ಪ ದ್ರುಮ ೧೮೯೭ ಬೆಂಗಳೂರು ಕೊಮ್ಮಂದೂರು ಶ್ರೀನಿವಾಸ್ ಅಯ್ಯಂಗಾರ್
ವಾಗ್ಭೂಷಣ ೧೮೯೬ ಧಾರವಾಡ ಕರ್ನಾಟಕ ವಿಧ್ಯಾವರ್ಧಕ ಸಂಘ
ಸುವಾಸಿನಿ ೧೯೦೦ ಮಂಗಳೂರು ಬೆನಗಲ್ ರಾಮರಾವ್
ಕನ್ನಡ ನುಡಿಗನ್ನಡಿ ೧೯೦೩ ಚೆನ್ನೈ ಸಿದ್ಧಾಂತಿ ಶಿವಶಮಕರ ಶಾಸ್ತ್ರಿ
ಸದ್ಭೋಧ ಚಂದ್ರಿಕೆ ೧೯೦೪ ಗದಗ ಅಗಡಿ ಆನಂದವನ
ವೆಂಕಟಪ್ರತಾಪ ೧೯೦೫ ಬೆಂಗಳೂರು ಚನ್ನಕೇಶವಯ್ಯಂಗಾರ್
೧೦ ಶ್ರೀಕೃಷ್ಣಸೂಕ್ತಿ ೧೯೦೬ ಮಂಗಳೂರು ಕೆರೋಡಿ ಸುಬ್ಬರಾಯರು
೧೧ ಅವಕಾಶತೋಷಿಣಿ ೧೯೦೬ ಬೆಂಗಳೂರು ಬಿ. ವೆಂಕಟಾಚಾರ್ಯ
೧೨ ವಿಕಟವಿನೋದಿನಿ ೧೯೧೧ ಬೆಂಗಳೂರು ಎನ್. ಶಿವರಾಮಶಾಸ್ತ್ರಿ
೧೩ ಸಚಿತ್ರ ಭಾರತ ೧೯೧೩ ಧಾರವಾಡ ಕೆ. ವಾಸುದೇವಾಚಾರ್ಯ
೧೪ ಕಾದಂಬರೀ ಸಂಗ್ರಹ ೧೯೧೪ ಚಾಮರಾಜನಗರ ಕೆ. ವೆಂಕಟರಮಣ ಶಾಸ್ತ್ರಿ
೧೫ ಪ್ರಭಾತ ೧೯೧೮ ಧಾರವಾಡ ವಾಯ್.ಬಿ.ಜಾಥಾರ
೧೬ ಕವಿತಾ ೧೯೧೬ ಧಾರವಾಡ ವಾಯ್.ಬಿ.ಜಾಥಾರ>
೧೭ ಕನ್ನಡ ಕೋಗಿಲೆ ೧೯೧೬ ಮಂಗಳೂರು ಪಿ. ಭೋಜರಾವ್, ಮುಳಿಯ ತಿಮ್ಮಪ್ಪಯ್ಯ
೧೮ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ೧೯೧೬ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು
೧೯ ಪ್ರಬುದ್ಧ ಕರ್ನಾಟಕ ೧೯೧೮ ಬೆಂಗಳೂರು/ಮೈಸೂರು ಸೆಂಟ್ರಲ್ ಕಾಲೇಜು ಕನ್ನಡ ಸಂಘ
೨೦ ಪ್ರೇಮ ೧೯೨೩ ಹೊಸಪೇಟೆ ಪಂಡಿತ್ ತಾರಾನಾಥ್
೨೧ ವಸಂತ ೧೯೨೩ ಪುತ್ತೂರು/ಕುಂದಾಪುರ ಕೆ.ಶಿವರಾಮ ಕಾರಂತ
೨೨ ಜಯಕರ್ನಾಟಕ ೧೯೨೩ ಧಾರವಾಡ ಆಲೂರ ವೆಂಕಟರಾಯರು
೨೩ ಕರ್ನಾಟಕ ಕೇಸರಿ ೧೯೨೮ ಪುತ್ತೂರು ಎಂ. ಅನಂತರಾವ್
೨೪ ಕಥಾಂಜಲಿ ೧೯೨೯ ಬೆಂಗಳೂರು ಅ.ನ. ಕೃಷ್ಣರಾಯ
೨೫ ಕತೆಗಾರ ೧೯೩೨ ಬೆಂಗಳೂರು ಮಾ. ನಾ. ಗೋಪಾಲರಾವ್
೨೬ ನಗುವನಂದ ೧೯೩೩ ಬೆಂಗಳೂರು ಜಿ.ಎಸ್. ಕೃಷ್ಣರಾವ್
೨೭ ಭಾರತೀಯ ಇತಿಹಾಸ ಕಥಾವಳಿ ೧೯೩೩ ಬೆಂಗಳೂರು ಕೆ. ಆರ್. ಸೇತುರಾಮನ್
೨೮ ವಿಕಟಮಾವ ೧೯೨೪ ಹೊಳೆನರಸೀಪುರ
೨೯ ಕಥಾಂಜಲಿ ೧೯೩೪ ಹುಬ್ಬಳ್ಳಿ ಎಂ.ವಿ. ಕೃಷ್ಣಯ್ಯ
೩೦ ಗರಿಕೆ ೧೯೩೫ಮೈಸೂರು ಎಸ್.ಎಲ್. ಶ್ರೀಕಂಠಯ್ಯ
೩೧ ಕಥಾಕುಂಜ ೧೯೩೫ ಬೆಳಗಾವಿ ಪ್ಯಾಟಿ ಶಾಮರಾಯರು
೩೨ ಆರ್ಯಧರ್ಮ ಸಂಗ್ರಹ ೧೯೩೭ ಚಾಮರಾಜನಗರ ಸಿ. ವೆಂಕಟರಮಣ ಶಾಸ್ತ್ರಿ
೩೩ ಕಥಾವಳಿ ೧೯೩೭ ಬೆಂಗಳೂರು ವಿ. ಗುಪ್ತಾ
೩೪ ಕಥಾಕುಸುಮಾವಳಿ ೧೯೩೮ ಹುಬ್ಬಳ್ಳಿ ಸಿ. ಎಸ್. ಕುಲಕರರ್ಣಿ
೩೫ ವಿಚಾರವಾಹಿನಿ ೧೯೩೯ ತೀರ್ಥಹಳ್ಳಿ ಕೂಡಲಿ ಚಿದಂಬರಂ
೩೬ ಕಥಾಪ್ರೇಮಿ ೧೯೩೮ ಬೆಂಗಳೂರು ಬಿ. ಎಸ್. ಶರ್ಮ
೩೭ ಜಯಂತಿ ೧೯೩೮ ಧಾರವಾಡ ಬೆಟಗೇರಿ ಕೃಷ್ಣಶರ್ಮ
೩೮ ಕನ್ನಡನುಡಿ ೧೯೩೮ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತು
೩೯ ಜೀವನ ೧೯೪೦ ಧಾರವಾಡ/ಬೆಂಗಳೂರು ಬೇಂದ್ರೆ, ಮಾಸ್ತಿ ವೆಂಕಟೇಶಯ್ಯಂಗಾರ್
೪೦ ಕೊರವಂಜಿ ೧೯೪೨ ಬೆಂಗಳೂರು ಎಂ. ಶಿವರಾಂ
೪೧ ನವಚೇತನ ೧೯೪೪ ಸಿರ್ಸಿ ರಾ. ಪಿ. ವಾಲಗಳ್ಳಿ
೪೨ ನವಶಕ್ತಿ ೧೯೪೨ ಉಡುಪಿ ಪಿ. ಎನ್. ಬಿ. ರಾಮಾಚಾರ್ಯ
೪೩ ಕಥಾಚಂದ್ರಿಕೆ ೧೯೪೨ ಬೆಂಗಳೂರು ಜಿ.ಎಸ್. ಕೃಷ್ಣರಾವ್
೪೪ ಆನಂದಜ್ಯೋತಿ ೧೯೪೬ ಬೆಂಗಳೂರು ಎಂ ರಾಮಯ್ಯ
೪೫ ಶ್ರೀ ೧೯೪೬ ಬೆಂಗಳೂರು ಎಂ ರಾಮಯ್ಯ
೪೬ ಭಾರತೀ ೧೯೫೦ ಮುಂಬೈ ಕೆ.ಸಾವಿತ್ರಿ
೪೭ ಮಹಾವೀರ ೧೯೫೦ ಧಾರವಾಡ ನೆಗಳೂರು ರಂಗನಾಥ
೪೮ ಮಿತ್ರ ೧೯೫೦ ಗುಡ್ಡೇತೋಟ ಜಿ. ಎಸ್. ಭಟ್
೪೯ ಶೋಭಾ ೧೯೫೦ ಮಂಗಳೂರು ಎಸ್. ಪಿ. ಭಟ್
೫೦ ವೀಣಾ ೧೯೫೦ ಶಿರ್ವ ಶಂಕರನಾರಾಯಣರಾವ್
೫೧ ವಿಮರ್ಶಕ ೧೯೫೦ ಉಡುಪಿ ನಂದಳಿಕೆ ವಿಠಲರಾವ್
೫೨ ಶಕ್ತಿ ೧೯೫೦ ಮೈಸೂರು ಎಲ್. ವೈ. ಕಾವೇರಮ್ಮ
೫೩ ವಿನೋದ ೧೯೫೧ ಬೆಂಗಳೂರು ಜಿ. ನಾರಾಯಣ
೫೪ ಹಂಸ ೧೯೫೧ ಕೃಷ್ಣರಾಜನಗರ ರಾಮಕೃಷ್ಣ ಸೋಮಯಾಜಿ
೫೫ ಲೇಖಕ ೧೯೫೩ ಬೆಂಗಳೂರು ಶಾ. ಬಾಲೂರಾವ್
೫೬ ಪ್ರವಾಸಿ ೧೯೫೩ ಮಂಗಳೂರು ಬಿ. ಈಶ್ವರ ಭಟ್ಟ, ಕೆ.ಎಸ್. ಉಪಾಧ್ಯಾಯ
೫೭ ಪುಸ್ತಕ ಪ್ರಪಂಚ ೧೯೪೩ ಮೈಸೂರು ವಯಸ್ಕರ ಶಿಕ್ಷಣ ಸಮಿತಿ
೫೮ ಶಾರದಾ ೧೯೫೯ ಬೆಳಗಾವಿ ಪ್ರಭಾಕರ ಆನಗೋಳ
೫೯ ಹೊಂಬೆಳಗು ೧೯೬೧ ಬೆಂಗಳೂರು ಕೊ.ಶ್ರೀ. ಅಯ್ಯಂಗಾರ್
೬೦ ಮನ್ವಂತರ ೧೯೬೨ ಧಾರವಾಡ ಮನೋಹರ ಗ್ರಂಥಮಾಲೆ
೬೧ ಸಾಕ್ಷಿ ೧೯೬೭ ಸಾಗರ ಎಂ. ಗೋಪಾಲಕೃಷ್ಣ ಅಡಿಗ
೬೨ ಕವಿತಾ ೧೯೬೪ ಬೆಂಗಳೂರು ಕ.ನಾ. ಬಾಲಕೃಷ್ಣ
೬೩ ಕಾವೇರಿ ೧೯೬೪ ಬೆಂಗಳೂರು ಎ. ಆರ್. ಆಚಾರ್ಯ
೬೪ ಲಹರಿ ೧೯೬೪ ಮೈಸೂರು ಬಿ. ಎನ್. ಶ್ರೀರಾಮ
೬೫ ಜ್ಞಾನಭಾರತಿ ೧೯೬೫ ಧಾರವಾಡ ಮಳಗಿ ಮಾಂತೇಶ್ವರ
೬೬ ಸಂಕ್ರಮಣ ೧೯೬೫ ಧಾರವಾಡ ಚಂದ್ರಶೇಖರ ಪಾಟೀಲ ನೀಲಾ ಪಾಟೀಲ
೬೭ ಸಮೀಕ್ಷಕ ೧೯೬೫ ಮೈಸೂರು ಶ್ರೀಕೃಷ್ಣ ಆಲನಹಳ್ಳಿ
೬೮ ಸಂಕೀರ್ಣ ೧೯೬೯ ಬೆಂಗಳೂರು ಸೆಂಟ್ರಲ್ ಕಾಲೇಜು ಕನ್ನಡಸಂಘ
೬೯ ಅಜಂತ ೧೯೬೬ ಮಂಗಳೂರು ಎಂ. ವ್ಯಾಸ, ಶುಭಾಕರ ಶಾನುಭೋಗ
೭೦ ಆನಂದ ೧೯೬೬ ಬಂಟ್ವಾಳ ಎಂ.ಎನ್. ಕಾಮತ್
೭೧ ಜ್ಞಾನಸುಧಾ ೧೯೬೭ ಬೆಂಗಳೂರು ದೇವುಡು ಸದಾಶಿವ
೭೨ ಪ್ರಜ್ಞೆ ೧೯೬೮ ಧಾರವಾಡ ಮಾಧವ ಕುಲಕರರ್ಣಿ
೭೩ ಸಮನ್ವಯ ೧೯೬೮ ಬೆಂಗಳೂರು ವಿ. ಕೃ. ಗೋಕಾಕ ಮತ್ತಿತರರು
೭೪ ಚಿಗುರೆಲೆ ೧೯೬೯ ಮಂಡ್ಯ ಪಂಡಿತ ಮಲ್ಲಪ್ಪ
೭೫ ಪ್ರತೀಕ ೧೯೬೮ ರಾಯಚೂರು ಶಾಂತರಸ, ಮತ್ತಿತರರು
೭೬ ಮುಂಗಾರು ೧೯೭೨ ಮಂಗಳೂರು ಎಚ್.ಜೆ. ಲಕ್ಕಪ್ಪಗೌಡ
೭೭ ಪರಂಪರೆ ೧೯೭೨ ಮೈಸೂರು ಸಿ.ಪಿ.ಕೃಷ್ಣಕುಮಾರ
೭೮ ಸಾಧನೆ ೧೯೭೨ ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯ
೭೯ ಕರ್ನಾಟಕ ಭಾರತೀ ೧೯೭೨ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯ
೮೦ ಅಕಾವ್ಯ ೧೯೭೩ ಬೆಂಗಳೂರು ಚಂದ್ರಶೇಖರ ಕಂಬಾರ
೮೧ ನೇತಿ ೧೯೭೩ ಮೈಸೂರು ರಾಮಚಂದ್ರದೇವ
೮೨ ದಲಿತ ೧೯೭೪ ಧಾರವಾಡ ಬುದ್ದಣ್ಣ ಹಿಂಗಮಿರೆ
೮೩ ವರ್ತಮಾನ ೧೯೭೪ ಉಜಿರೆ ಜಿ.ಎಸ್.ಅವಧಾನಿ
೮೪ ಮಣ್ಣಿನ ಬದುಕು ೧೯೭೪ ಮೈಸೂರು ವಸಂತರಾಜಪ್ಪ
೮೫ ಶೂದ್ರ ೧೯೭೫ ಬೆಂಗಳೂರು ಶೂದ್ರ ಶ್ರೀನಿವಾಸ
೮೬ ಒಡನಾಡಿ ೧೯೭೫ ಮೈಸೂರು ಬಿ. ದಾಮೋದರ ರಾವ್
೮೭ ಕಾದಂಬರಿ ೧೯೭೭ ಬೆಂಗಳೂರು ಎಸ್. ರಾಮಸ್ವಾಮಿ
೮೮ ಕಾಲಗತಿ ೧೯೭೭ ರಾಯಭಾಗ ಶ್ರೀಜ್ಯೋತಿ ಹೊಸೂರು
೮೯ ಕಾವ್ಯಶ್ರೀ ೧೯೭೭ ಧಾರವಾಡ ರಾಜೇಂದ್ರ ಪಾಟೀಲ
೯೦ ಪುಸ್ತಕ ಪುರವಣಿ ೧೯೭೭ ಮೈಸೂರು ಡಿ. ವಿಜಯ ಮತ್ತಿತರರು
೯೧ ಬದುಕು ೧೯೭೭ ಚಿತ್ರದುರ್ಗ ಮಂಗ್ಳೂರ ವಿಜಯ
೯೨ ಗ್ರಥಲೋಕ ೧೯೭೮ ಮೈಸೂರು ಆರ್.ಎಲ್.ಅನಂತರಾಮಯ್ಯ
೯೩ ಆಲೋಕ/ಅಂಕಣ ೧೯೭೯ ಬೆಂಗಳೂರು ಪಿ.ಪಿ.ಗೆಳೆಯರ ಬಳಗ
೯೪ ಲಹರಿ ೧೯೮೦ ಚೆನ್ನೈ ಡಾ. ಕೃಷ್ಣಭಟ್ ಅರ್ತಿಕಜೆ
೯೫ ಸಂಚಯ ೧೯೮೦ ದಾಂಡೇಲಿ ಸುರೇಂದ್ರ ರಾಮನ್
೯೬ ಪ್ರೇಮಿ ೧೯೮೦ ಸವಣೂರ ಲಭ್ಯವಿಲ್ಲ
೯೭ ಆತ್ಮೀಯ ೧೯೮೨ ಧಾರವಾಡ ಅರವಿಂದ ಆರ್ಯಧರ್ಮ
೯೮ ರುಜುವಾತು ೧೯೮೨ ಮೈಸೂರು ಡಾ. ಯು.ಆರ್.ಅನಂತಮೂರ್ತಿ
೯೯ ಲೋಚನ ೧೯೮೨ ಬೆಂಗಳೂರು ಬಿ. ಎಂ. ಶ್ರೀ. ಪ್ರತೀಷ್ಠಾನ
೧೦೦ ಸೃಜನವೇದಿ ೧೯೮೪ ಮುಂಬೈ ಡಾ. ಹೇಮಂತ ಕುಲಕರ್ಣಿ
೧೦೧ ಬಂಡಾಯ ಸಾಹಿತ್ಯ ೧೯೮೩ ಬೆಂಗಳೂರು ಬರಗೂರು ರಾಮಚಂದ್ರಪ್ಪ
೧೦೨ ಅನ್ವೇಷಣೆ ೧೯೮೪ ಬೆಂಗಳೂರು ಆರ್.ಜಿ. ಹಳ್ಳಿನಾಗರಾಜ
೧೦೩ ಚಂದನ/ಅನಿಕೇತನ ೧೯೮೪ ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡಮಿ
೧೦೪ ಅಂತರ ೧೯೮೬ ಮಂಗಳೂರು ವಸಂತಶೆಟ್ಟಿ ಬೆಳ್ಳಾರೆ
೧೦೫ ಸಂವಾದ ೧೯೮೬ ಮಲ್ಲಾಡಿಹಳ್ಳಿ ರಾಘವೇಂದ್ರ ಪಾಟೀಲ
೧೦೬ ಭಾಷಾಲೋಕ ೧೯೮೬ ಧಾರವಾಡ ಎ.ಮರಿಗೆಪ್ಪ, ಎಚ್.ಎಂ.ಮಹೇಶ್ವರಯ್ಯ
೧೦೭ ಕವಿಮಾರ್ಗ ೧೯೮೭ ಗುಲ್ಚರ್ಗಾ ಡಾ.ವಿರಣ್ಣ ದಂಡೆ
೧೦೮ ಸಂಚಯ ೧೯೮೭ ಬೆಂಗಳೂರು ಸಂಚಯ ಬಳಗ
೧೦೯ ಗಾಂಧಿ ಬಜಾರ್ ೧೯೮೮ ಬೆಂಗಳೂರು ಕೆ.ನಾ.ಬಾಲಕೃಷ್ಣ
೧೧೦ ಸಾಹಿತ್ಯ ಸಂಗಾತಿ ೧೯೮೯ ಕೊಣಾಜೆ/ಮಂಗಳೂರು ಡಾ.ಅರವಿಂದ ಮಾಲಗತ್ತಿ
೧೧೧ ಸಂಶೋಧನಾವ್ಯಾಸಂಗ ೧೯೮೯ ಗುಲ್ಚರ್ಗಾ ಡಾ.ಸಂಗಮೇಶ್ವರಸವದತ್ತಿಮಠ
೧೧೨ ಒಡಲಾಳ ೧೯೯೦ ತಿಪಟೂರು ಕೃಷ್ಣಮೂರ್ತಿ ಬೆಳಗೆರೆ
೧೧೩ ಅರಿವು ಬರಹ ೧೯೯೨ ಕೊಣಾಜೆ ಅರಿವು ಬರಹ ಟ್ರಸ್ಟ್
೧೧೪ ಅಂತರ ೧೯೯೨ ಮಂಗಳೂರು ವಸಂತಶೆಟ್ಟಿ ಬೆಳ್ಳಾರೆ
೧೧೫ ಚ. ಏಕಾಕ್ಷರ ಪತ್ರಿಕೆ ೧೯೯೨ ಸೇಡಂ ಕೆರಳ್ಳಿ ಗುರುನಾಥ ರೆಡ್ಡಿ
೧೧೬ ಹೊಸದಿಕ್ಕು ೧೯೯೨ ಶಹಾಪೂರ ತಿಮ್ಮಯ್ಯ ಪುರ್ಲೆ
೧೧೭ ಕನ್ನಡ ಸಾಹಿತ್ಯ ಲೋಕ ೧೯೯೩ ಮೈಸೂರು ಜಿ.ವಿ.ಸತ್ಯನಾರಾಯಣ
೧೧೮ ಪ್ರಜ್ಞೆ ೧೯೯೩ ಮೈಸೂರು ರಾಜಪ್ಪ ದಳವಾಯಿ
೧೧೯ ಹೊಸಪುಸ್ತಕಗಳು ೧೯೯೩ ರಾಯಚೂರು ವಾಣಿ ಎ.ಕಾಂತನವರ
೧೨೦ ಪುಸ್ತಕ ಮಾಹಿತಿ ೧೯೯೩ ಹಂಪಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ

ಅನುಬಂಧ ೧ : ಪರಾಮರ್ಶನ ಸಾಹಿತ್ಯ

೧. ಗ್ರಂಥಗಳು

  1. ಅಣ್ಣಾರಾಯ ಮಿರ್ಜಿ, ಭಾರತೀಯ ಸಂಸ್ಕೃತಿಯ ಹೃದಯ : ಶಾಂತಿ ಸೇವಾ ಸದನ, ಸೇಡಬಾಳ, ೧೯೫೫.
  2. ಪ್ರೊ. ಅನಂತನಾರಾಯಣ. ಎಸ್., ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ : ರಾಜಲಕ್ಷ್ಮಿ ಪ್ರಕಾಶನ, ಬೆಂಗಳೂರು, ೧೯೬೨.
  3. ಅನಂತರಂಗಾಚಾರ್ ಎನ್, ಸಾಹಿತ್ಯ ಭಾರತೀ : ಪ್ರಸಾರಾಂಗ, ಮೈಸೂರು ೧೯೭೦.
  4. ಡಾ. ಕಲಬುರ್ಗಿ ಎಂ. ಎಂ., ಕನ್ನಡ ಸಂಶೋಧನಾ ಶಾಸ್ತ್ರ : ಸೌಜನ್ಯ ಪ್ರಕಾಶನ, ಧಾರವಾಡ, ೧೯೯೨.
  5. ಕಾರಂತ ಶಿವರಾಮ, ಸ್ಮೃತಿಪಟಲದಿಂದ : ರಾಜಲಕ್ಷ್ಮಿ ಪ್ರಕಾಶನ, ಬೆಂಗಳೂರು ೧೯೭೮.
  6. ಡಾ. ಕೃಷ್ಣಮೂರ್ತಿ ನಾಡಿಗ, ಭಾರತೀಯ ಪತ್ರಿಕೋದ್ಯಮ : ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೬೫.
  7. ಡಾ. ಕೃಷ್ಣಮೂರ್ತಿ ಕಿತ್ತೂರ, 'ಗಳಗನಾಥರು, ಅವರ ಕಾದಂಬರಿಗಳು', ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ, ೧೯೭೫.
  8. ಡಾ. ಕೃಷ್ಣೇಗೌಡ, ಹಾ. ತಿ, ಕೆರೋಡಿ ಸುಬ್ಬರಾಯರು, ಜೀವನ ಮತ್ತು ಕೃತಿಗಳು, ಚೈತ್ರಪಲ್ಲವಿ, ಮೈಸೂರು, ೧೯೮೯.
  9. ಕೃಷ್ಣರಾಯ ಅ. ನ., ಕನ್ನಡ ಕುಲರಸಿಕರು, ಆನಂದ ಬ್ರದರ್ಸ್, ಬೆಂಗಳೂರು, ೧೯೫೧.
  10. ಕೃಷ್ಣರಾಯ ಅ. ನ., ಬರಹಗಾರನ ಬದುಕು, ವಿಶ್ವಭಾರತಿ ಪ್ರಕಾಶನ, ಮಡಗಾಂ, ೧೯೭೨.
  11. ಕೃಷ್ಣರಾಯ ಶಾ. ಮಂ. (ಸಂ) ರಸಚೇತನ : ಗೌರವ ಗ್ರಂಥ, ಗೋವಾ ಕನ್ನಡ ಸಂಘ, ಮಡಗಾಂ, ೧೯೭೦.
  12. ಡಾ. ಕೃಷ್ಣಶರ್ಮ ಬೆಟಗೇರಿ, ಕವಿಭೂಷಣ : ಸಂಬಾವನಾ ಗ್ರಂಥ, ಕಾಲಗತಿ ಪ್ರಕಾಶನ, ರಾಯಭಾಗ, ೧೯೮೨.
  13. ಕೃಷ್ಣಶಾಸ್ತ್ರಿ ಎ. ಆರ್., ಭಾಷಣಗಳು ಮತ್ತು ಲೇಖನಗಳು : ಶಾರದಾ ಮಂದಿರ, ಮೈಸೂರು, ೧೯೬೦.
  14. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಸಾಹಿತ್ಯರಶ್ಮಿ, ಸುದರ್ಶನ ಪ್ರಕಾಶನ, ತಿಪಟೂರು, ೧೯೬೩.
  15. ಗುಂಡಪ್ಪ, ಡಿ. ವಿ. ಸಾಹಿತ್ಯ ಶಕ್ತಿ : ಕಾವ್ಯಾಲಯ ಪ್ರಕಾಶಕರು, ಮೈಸೂರು, ೧೯೫೦.
  16. ಚಂದ್ರಶೇಖರ ಪಾಟಿಲ, (ಸಂ) ಸಂಕ್ರಮಣ ಸಾಹಿತ್ಯ, ಸಂಪುಟ ೧, ಸಂಕ್ರಮಣ ಪ್ರಕಾಶನ, ಧಾರವಾಡ, ೧೯೯೨.
  17. ಚಂದ್ರಶೇಖರ ಪಾಟಿಲ, (ಸಂ) ಸಂಕ್ರಮಣ ಸಾಹಿತ್ಯ, ಸಂಪುಟ ೨, ಸಂಕ್ರಮಣ ಪ್ರಕಾಶನ, ಧಾರವಾಡ, ೧೯೯೩.
  18. ಚಂದ್ರಶೇಖರ ಪಾಟಿಲ, (ಸಂ) ಸಂಕ್ರಮಣ ಸಾಹಿತ್ಯ, ಸಂಪುಟ ೩, ಸಂಕ್ರಮಣ ಪ್ರಕಾಶನ, ಧಾರವಾಡ, ೧೯೯೪.
  19. ಡಾ. ಚಂದ್ರಶೇಖರ ಕಂಬಾರ, ನೆಲದ ಮರೆಯ ನಿದಾನ : ಕನ್ನಡ ವಿಶ್ವವಿದ್ಯಾನಿಲಯ ಹಂಪಿ, ೧೯೯೩.
  20. ಜೋಶಿ ಜಿ.ಬಿ. ಮತ್ತು ಕುರ್ತುಕೋಟಿ, ಕೆ.ಡಿ (ಸಂ.) ನಡೆದುಬಂದ ದಾರಿ, ಸಂಪುಟ ೧. ಮನೋಹರ ಗ್ರಂಥಮಾಲೆ, ಧಾರವಾಡ ೧೯೫೯.
  21. ಜೋಶಿ ಜಿ.ಬಿ. ಮತ್ತು ಕುರ್ತುಕೋಟಿ, ಕೆ.ಡಿ (ಸಂ.) ನಡೆದುಬಂದ ದಾರಿ, ಸಂಪುಟ ೨. ಮನೋಹರ ಗ್ರಂಥಮಾಲೆ, ಧಾರವಾಡ, ಸಮಿತಿ ೧೯೫೯.
  22. ಜೋಶಿ ಜಿ.ಬಿ. ಮತ್ತು ಕುರ್ತುಕೋಟಿ, ಕೆ.ಡಿ (ಸಂ.) ನಡೆದುಬಂದ ದಾರಿ, ಸಂಪುಟ ೩. ಮನೋಹರ ಗ್ರಂಥಮಾಲೆ, ಧಾರವಾಡ ೧೯೬೨.
  23. ಧಾರವಾಡಕರ, ರಾ.ಯ. ಹೊಸಗನ್ನಡ ಸಾಹಿತ್ಯದ ಉದಯಕಾಲ : ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾನಿಲಯ. ಧಾರವಾಡ, ೧೯೭೦.
  24. ನರಸಿಂಹಾಚಾರ್, ಪು.ತಿ. ಭಾರತೀಯ ಸಾಹಿತ್ಯ ಸಮೀಕ್ಷೆ : ಕೇಂದ್ರ ಸಾಹಿತ್ಯ ಅಕಾಡಮಿ ನವ ದೆಹಲಿ, ೧೯೬೮.
  25. ನಾಗರಾಜಯ್ಯ, ಹಂ.ಪ. ಅಧ್ಯಕ್ಷರ ಭಾಷಣಗಳು, ಸಂಪುಟ ೧, ೧೯೭೦, ಕನ್ನಡಸಾಹಿತ್ಯ ಪರಿಷತ್ತು.
  26. ನಾಗರಾಜಯ್ಯ, ಹಂ.ಪ. ಅಧ್ಯಕ್ಷರ ಭಾಷಣಗಳು, ಸಂಪುಟ ೨, ಕನ್ನಡಸಾಹಿತ್ಯ ಪರಿಷತ್ತು, ೧೯೭೨, ಬೆಂಗಳೂರು.
  27. ನಾಗರಾಜಯ್ಯ, ಹಂ.ಪ. ಅಧ್ಯಕ್ಷರ ಭಾಷಣಗಳು, ಸಂಪುಟ ೩, ಕನ್ನಡಸಾಹಿತ್ಯ ಪರಿಷತ್ತು, ೧೯೭೨.
  28. ನಾಗರಾಜಯ್ಯ, ಹಂ.ಪ. (ಸಂ)ಧರ್ಮಸ್ಥಳ ಸಾಹಿತ್ಯ ಸಮ್ಮೇಳನ :ಕನ್ನಡಸಾಹಿತ್ಯ ಪರಿಷತ್ತು, ಬೆಂಗಳೂರು.೧೯೭೨,
  29. ನಾಗರಾಜಯ್ಯ, ಹಂ.ಪ. (ಸಂ.) ಧರ್ಮಸ್ಥಳ ಸಾಹಿತ್ಯ ಸಮ್ಮೇಳನ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೯.
  30. ನಾಗರಾಜಯ್ಯ, ಹಂ.ಪ. (ಸಂ.) ಶಿರಸಿ ಸಾಹಿತ್ಯ ಸಮ್ಮೇಳನ : ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೯.
  31. ನಾಯಕ. ಹಾ.ಮಾ. (ಸಂ.) 'ಶ್ರೀ ಸಾಹಿತ್ಯ' ಶ್ರೀಕಂಠಯ್ಯ, ಬಿ. ಎಂ. ಸಮಗ್ರ ಕೃತಿ, ಪುಟ, ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು ೧೯೮೩.
  32. ಭರತನ ಹಳ್ಳಿ, ನಾ.ಸು. ಹೆಜ್ಜೆಗುರುತು : ಉತ್ತರ ಕನ್ನಡದಲ್ಲಿ ಸ್ವಾತಂತ್ರ್ಯ ಪೂರ್ವ ಪತ್ರಿಕೆಗಳ ಹೆಜ್ಜೆಗುರುತು, ಪತ್ರಕರ್ತರ ಬಳಗ, ಯಲ್ಲಾಪುರ, ೧೯೯೬.
  33. ಮರಳಸಿದ್ಧಯ್ಯ ಎಚ್. ಎಂ. ಸಂಶೋಧನೆಯ ಎರಡು ಹೆಜ್ಜೆಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೩.
  34. ಮಹಾಬಲೇಶ್ವರ ರಾವ್, ಸಂಶೋಧನಾ ಮಾರ್ಗ : ನವಕರ್ನಾಟಕ ಪ್ರಕಾಶನ, ಬೆಂಗಳೂರು ೧೯೯೬.
  35. ಮಾಳವಾಡ, ಸ. ಸ., ಸಾಹಿತ್ಯ ಸಂಗಮ : ಜಯಪ್ರಕಾಶನ, ಧಾರವಾಡ, ೧೯೭೦.
  36. ಮುತ್ತಣ್ಣ. ಐ.ಎಂ., ಹತ್ತೊಂಬತ್ತನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ, ಉಷಾ ಪ್ರೆಸ್, ಮೈಸೂರು, ೧೯೬೯
  37. ರಾಜೇಗೌಡ. ಹ.ಕ.(ಸಂ.), ಚಿತ್ರಗುಪ್ತ ಸ್ಮರಣೆ : ಕೆ.ಟಿ. ಚಂದು, ಎಚ್. ಕೆ. ವೀರಣ್ಣ ಗೌಡ, ಸ್ಮಾರಕ ಪ್ರಕಾಶನ ಮದ್ದೂರು, ೧೯೯೪.
  38. ಡಾ. ವಿಶ್ವನಾಥ ಕಾರ್ನಾಡ, ಸಂಚಯ : ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ, ೧೯೯೪.
  39. ವಿಶ್ವೇಶ್ವರಯ್ಯ, ತೇ.ಸಿ., (ಸಂ.) ಹಂಸ ಗಮನ : ಸ್ನೇಹ ಪ್ರಕಾಶನ, ಕೃಷ್ಣರಾಜನಗರ, ಮೈಸೂರು ಜಿಲ್ಲೆ, ೧೯೯೮.
  40. ವಿವಿಧ ಲೇಖಕರು, ಕನ್ನಡ ಸಾಹಿತ್ಯ ಪತ್ರಿಕೆಗಳು : ಇತಿಹಾಸ ವರ್ತಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು. ೧೯೯೩.
  41. ವೀರಣ್ಣ, ಸಿ., ಕನ್ನಡ ಪ್ರತಿಭಟನೆ ಕಾವ್ಯ : (ಸಂ.) ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ೧೯೮೧.
  42. ವೆಂಕಟೇಶ ಸಾಂಗಲಿ, ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶ : ಉಷಾ ಸಾಹಿತ್ಯಮಾಲೆ, ಮೈಸೂರು, ೧೯೬೦.
  43. ಡಾ ವೆಂಕಟಾಚಲ ಶಾಸ್ತ್ರಿ, ಟಿ.ವಿ. ಹೊಸಗನ್ನಡ ಸಾಹಿತ್ಯ ಕೆಲವು ನೋಟಗಳು : ಅಪರ್ಣಾ ಪ್ರಕಾಶನ, ಮೈಸೂರು ೧೯೮೨.
  44. ಶ್ರೀನಿವಾಸ ಹಾವನೂರ, ಹೊಸಗನ್ನಡ ಸಾಹಿತ್ಯದ : ಅರುಣೋದಯ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೭೩.
  45. ಡಾ. ಶಿವರುದ್ರಪ್ಪ, ಜಿ.ಎಸ್., ದಶವಾರ್ಷಿಕ ಸಾಹಿತ್ಯ ಸಮೀಕ್ಷೆ : ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು ೧೯೮೨.
  46. ಸಣ್ಣರಾಮೇಗೌಡ, ಎಂ.ಆರ್., ಲೇಖಕರ ಸೂಚಿ : ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ೧೯೬೭.
  47. ಡಾ. ಸರೋಜಿನಿ ಚವಲಾರ, ಪಾಶ್ಚಾತ್ಯ ಸಾಹಿತ್ಯ ಮಾರ್ಗ, ವಿವೇಕ ಪ್ರಕಾಶನ, ಹುಬ್ಬಳ್ಳಿ, ೧೯೯೧.
  48. ಸೀತಾರಾಮಶಾಸ್ತ್ರಿ, ಎನ್. ಎಸ್., ಕನ್ನಡ ಪತ್ರಿಕೋದ್ಯಮ : ಕರ್ನಾಟಕ ಪತ್ರಿಕಾ ಅಕಾಡಮಿ, ಬೆಂಗಳೂರು ೧೮೮೭.
  49. ಸೀತಾರಾಮಯ್ಯ, ಎಂ.ವಿ., (ಸಂ.) ಚಿನ್ನದ ಬೆಳಸು : ಕನ್ನಡ ಸಾಹಿತ್ಯ ಪರಿಷತ್, ಸುವರ್ಣ ಮಹೋತ್ಸವ ಸವಿ ನೆನಪಿನ ಸಂಪುಟ, ೧೯೭೦.
  50. ಡಾ. ಸುಂಕಾಪುರ, ಎಂ.ಎಸ್., ಕನ್ನಡಸಾಹಿತ್ಯದಲ್ಲಿ ಹಾಸ್ಯ : ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೫.

೨. ನಿಯತಕಾಲಿಕಗಳು

ಜುಲೈ ೧೯೨೭ಏಪ್ರಿಲ್ ೧೯೫೫
ಪತ್ರಿಕೆಯ ಹೆಸರು ಸಂಪುಟ ಸಂಚಿಕೆ ಗಮನಿಸಿದ ಪತ್ರಿಕೆ ಅವಧಿ
ಆಕಾವ್ಯಇಲ್ಲ
ಅಚಲಮೇ ೧೯೮೯
ಅನ್ವೇಷಣೆಮಾರ್ಚ್-ಏಪ್ರಿಲ್ ೧೯೮೯
ಅರಿವು-ಬರಹಗಾರನ೧೯೮೪
ಅರುಣೋದಯ೧೮೬೬
ಅಭಿನವ೩೦೧೯೯೮
ಅಂಕಣಜುಲೈ-ಆಗಸ್ಟ್ ೧೯೮೪
ಅಂತರ ಪ್ರಾಯೋಗಿಕ ಸಂಚಿಕೆ, ೧೯೮೬.
ಆನಂದ ಜ್ಯೋತಿ ಡಿಸೆಂಬರ್ ೧೯೫೦
ಆತ್ಮಾಹ್ಲಾದಿನೀ ಅಕ್ಟೋಬರ್ ೧೯೨೩
ಆಧ್ಯಾತ್ಮ ಪ್ರಕಾಶಕರು ರುಧಿರೋದ್ಗಾರಿ ಚೈತ್ರ
ಆಲೋಕಸೆಪ್ಪೆಂಬರ್ ೧೯೭೯
ಆಹಾರ ವಿಜ್ಞಾನ೧೨ಮಾರ್ಚ್ ೧೯೬೭
ಇಂಚರಫೆಬ್ರವರಿ ೧೯೯೮
ಇಂಡಿಯನ್ ಲಿಟ್ರೆಚರ್ ಇ ಜುಲೈ-ಆಗಸ್ಟ್ ೧೯೯೭
ಒಕ್ಕಲಿಗರೂ ಒಕ್ಕಲುತನವೂ ೧೧೧೧ಡಿಸೆಂಬರ್ ೧೯೨೧
ಒಕ್ಕಲುತನವೂ ಸಹಕಾರಿತನವೂಏಪ್ರಿಲ್ ೧೯೧೮ ತಿ
ಒಡನಾಡಿಜುಲೈ-ಆಗಸ್ಟ್ ೧೯೭೫
ಒಡಲಾಳ ಜುಲೈ-ಆಗಸ್ಟ್
ಕತೆಗಾರಆಗಸ್ಟ್೧೯೬೪
ಕಥಾಂಜಲಿ ನವೆಂಬರ್ ೧೯೩೦
ಕನ್ನಡ ನುಡಿಗನ್ನಡಿ ಮೇ ೧೮೯೭
ಕನ್ನಡ ಸಾಹಿತ್ಯ ಲೋಕ ಡಿಸೆಂಬರ್ ೧೯೯೩
ಕನ್ನಡ ಸಹಕಾರಿ ಏಪ್ರಿಲ್ ೧೯೧೯
ಕನ್ನಡ ಶಾಲಾ ಪತ್ರಿಕಾಪುಸ್ತಕ ೩೪೧೨ಡಿಸೆಂಬರ್೧೮೯೮
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ೧೬ ಜೂನ್ ೧೯೪೧
ಕನ್ನಡಿಗರ ಜ್ಞಾನ ದೀಪಿಕೆಮೇ ೧೯೨೨
ಕನ್ನಡ ಶಾಲಾ ಪತ್ರಿಕೆ ೩೪೧೨ಡಿಸೆಂಬರ್ ೧೮೯೮
ಕನ್ನಡ ಕೋಗಿಲೆ ಆಗಸ್ಟ್೧೯೧೭
ಕನಕಸ್ಫೂರ್ತಿಆಗಸ್ಟ್೧೯೧೭
ಕನ್ನಡ ನುಡಿ ೧೯೩೮
ಕರ್ನಾಟಕ ಕೇಸರಿ
ಕರ್ನಾಟಕ ಗ್ರಂಥಾಲಯ ಜನವರಿ ೧೯೭೦
ಕರ್ನಾಟಕ ಗ್ರಂಥಮಾಲೆ ಆಗಸ್ಟ್ ೧೮೯೬
ಕರ್ನಾಟಕ ನಂದಿನಿ ಶಕ ವರ್ಷ ೧೮೩೮ ನಳ ಸಂವತ್ಸರ
ಕರ್ನಾಟಕ ಕೇಸರಿ ಸೆಪ್ಪೆಂಬರ್ ೧೯೨೭
ಕರ್ನಾಟಕ ಜನಜೀವನಮತ್ತು ಅರ್ಧಸಾಧಕ ಪತ್ರಿಕೆ ಜನವರಿ ೧೯೨೩
ಕರ್ನಾಟಕ ಕಾವ್ಯ ಕಲಾನಿಧಿ ೧೯೧೦
ಕರ್ನಾಟಕ ಭಾರತಿ ನವೆಂಬರ್ ೧೯೭೫
ಕರ್ನಾಟಕ ಕಾವ್ಯ ಕಲಾನಿಧಿ ನಂ. ೨೬, ನವೆಂಬರ್ ೧೯೧೦
ಕರ್ನಾಟಕ ವಾಣೀವಿಲಾಸ ಫೆಬ್ರವರಿ ೧೮೯೯
ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ೧೬ ಜನವರಿ ೧೯೩೨
ಕರ್ನಾಟಕ ಶಂಕರ ವಿಜಯ ೧೨೧೯೩೧
ಕವಿಕಾವ್ಯ ಜೂನ್ ೧೯೯೬
ಕವಿಮಾರ್ಗ ಜನವರಿ-ಮಾರ್ಚ್‌ ೧೯೯೦
ಕಲಾದರ್ಶನ ಅಕ್ಟೋಬರ್ ೧೯೭೩
ಕಲಾ ನವೆಂಬರ್ ೧೯೩೦
ಕವಿತಾ೧೯೬೪
ಕವಿ ಕಾವ್ಯಜೂನ್- ಜುಲೈ-ಆಗಸ್ಟ್ ೧೯೯೬
ಕಾದಂಬರಿ ಸಂಗ್ರಹ ೨೦ ಏಪ್ರಿಲ್ ೧೯೩೩
ಕಿರಣಮಾಧ್ಯಮ ಜುಲೈ-ಸೆಪ್ಪೆಂಬರ್ ೧೯೮೯
ಕೋದಂಡಅಕ್ಟೋಬರ್ ೧೯೬೬
ಕೊರವಂಜಿ ಅಕ್ಟೋಬರ್ ೧೯೬೬
ಕಂದ ೧೯೫೭
ಕಾದಂಬರೀ ಸಂಗ್ರಹ೨೦ ಏಪ್ರಿಲ್ ೧೯೩೩
ಕ್ಯಾನ್ಟಾಸ್೨೩೪ಜುಲೈ-ಆಗಸ್ಟ್ ೧೯೯೧
ಕಾದಂಬರಿ ಸಪ್ಟೆಂಬರ್ ೧೯೭೮
ಖಾದಿಗ್ರಾಮೋದ್ಯೋಗ ಜುಲೈ ೧೯೬೮
ಗಡಿನಾಡುಜನವರಿ ೧೯೭೩
ಗ್ರಂಥಲೋಕ ೧೦ ೧-೭-೧೯೮೬
ಗ್ರಾಮ ಜೀವನ ಜೂನ್ ೧೯೫೭
ಗ್ರಾಮವಾಣಿ ಡಿಸೆಂಬರ್ ೧೯೯೩
ಗಾಯನಗಂಗಾ೨೬ ಜುಲೈ ೧೯೮೩
ಗಾನವಾಹಿನಿ ೧೨ಡಿಸೆಂಬರ್ ೧೯೫೬
ಗಾಂಧಿ ಬಜಾರ್ ಫೆಬ್ರವರಿ - ಮಾರ್ಚ್ ೧೯೯೧
ಚ ಏಕಾಕ್ಷರ ಸಾಹಿತ್ಯಅಕ್ಟೋಬರ್ ೧೯೯೨
ಚೇತನ ಕೈಬರಹ ೧೪ನವೆಂಬರ್ ೧೯೯೭
ಚೈತನ್ಯ ಶಕೆ ೧೮೫೨ ಪ್ರಮೋದೂಕ ಸಂವತ್ಸರ
ಚಂದನ ೧೯೮೪
ಚಂದಮಾಮ೨೧ಜೂನ್ ೧೯೫೯
ಛಂದಸ್ವತೀ ಸಂಸ್ಕೃತಪ್ರಥಮ ಸಂಚಿಕೆ, ೧೯೯೭
ಜಯಕರ್ನಾಟಕ೧೦ಆಂಗೀರಸ ಸಂವತ್ಸರ
ಜಯಂತಿ೨೧ಜೂನ್ ೧೯೫೯
ಜಾಗೃತಿಜನವರಿ-ಮಾರ್ಚ್ ೧೯೯೮
ಜಾನಪದ೧೯೭೮
ಜಾನಪದ ಜಗತ್ತು೧೬೪೦ಅಕ್ಟೋಬರ್-ಡಿಸೆಂಬರ್ ೧೯೯೫
ಜಾನಪದ ಸಮಾಚಾರ೩೪ ಡಿಸೆಂಬರ್ ೯೫, ಮಾರ್ಚ್ ೯೬
ಜೀವನಜನವರಿ ೧೯೭೪
ಜೀವನಶಿಕ್ಷಣ೧೩ ಫೆಬ್ರವರಿ ೧೯೯೭
ತರಳಬಾಳು ೫೬ಮೇ-ಜೂನ್-ಜುಲೈ ೧೯೮೯
ತಿಲ್ಲಾನ ೨೩ ಅಕ್ಟೋಬರ್-ನವೆಂಬರ್ ೧೯೯೩
ಧ್ವನ್ವಂತರಿ೨೪ ಫೆಬ್ರವರಿ ೧೯೬೪
ದಲಿತ ಅನಿಯತಕಾಲಿಕ೧೯೭೪
ದೀಪದಾನ ದೀಪಾವಳಿ ೧೯೫೨
ದಾಂಪತ್ಯ ಜೀವನಏಪ್ರಿಲ್ ೧೯೫೪
ನಗುವನಂದಏಪ್ರಿಲ್ ೧೯೫೮
ನಮ್ಮ ಪುಸ್ತಕ ೧೯೪೧
ನಾಟ್ಯ ಭಾರತಿಜನವರಿ ೧೯೬೯
ನಿಸರ್ಗ ಲೋಕ ಜೂನ್ ೧೯೯೮
ನೇತಿ ೧೯೭೩
ನೇಸರ ಅಕ್ಟೋಬರ್ ೧೯೯೮
ಪತಾಕೆ ಕೈಬರಹದ ಪತ್ರಿಕೆ ಸ್ಪಷ್ಟವಿಲ್ಲ
ಪರಂಪರೆ೧೯೭೨
ಪರಿಕರ ೧೯೯೩
ಪ್ರಜ್ಞೆ ೧೯೯೩
ಪುಸ್ತಕ ಪ್ರಪಂಚ ೪೮ಜನವರಿ ೧೯೯೮
ಪುಸ್ತಕಪುರವಣಿ೧೯೭೭
ಪುಸ್ತಕ ಮಾಹಿತಿ೧೦ ಜನವರಿ ೧೯೯೭
ಪ್ರಬುದ್ಧ ಕರ್ನಾಟಕ ೨೦ ೧೯೩೯
ಪ್ರಸಂಗ ೨೪ ಮಾರ್ಚ ೧೯೯೫
ಪುಟಾಣಿ ಜನವರಿ ೧೯೮೦
ಪ್ರಬೋಧಕ ನವೆಂಬರ್ ೧೯೩೦
ಪ್ರಭಾತ ಆಗಸ್ಟ್ ೧೯೧೮
ಪ್ರೇಮ೨೯-೯-೧೯೨೪
ಮಕ್ಕಳ ಮಂದಿರ ಏಪ್ರಿಲ್ ೧೯೯೬
ಮಾಹಿತಿ ೩೪ ಮಾರ್ಚ್ ೧೯೯೮
ಮಾತುಕತೆ ೧೦ ಫೆಬ್ರವರಿ ೧೯೯೬
ಮಲೆನಾಡು ಕಲಾ ಭಾರತಿ ೧೯೯೮
ಮುಂಗಾರು ೧೯೭೨
ಮನ್ವಂತರ ಅಕ್ಟೋಬರ್ ೧೯೬೨
ಮಣ್ಣಿನ ಬದುಕು ೧೯೭೪
ಬದುಕು ೧೯೭೭
ಬಳಕೆ ತಿಳುವಳಿಕೆ ಜುಲೈ ೧೯೯೦
ಬಸವ ಪಥ೧೬ ಆಗಸ್ಟ್ ೧೯೯೪
ಬಸವ ಬೆಳಗು ಏಪ್ರಿಲ್-ಮೇ-ಜೂನ್ ೧೯೯೨
ಬಂಡಾಯ ಸಾಹಿತ್ಯ ಅಕ್ಟೋಬರ್-ನವೆಂಬರ್ ೧೯೮೨
ಬಾಲಕ್ಷಿತಿಜ ಜುಲೈ ೧೯೯೬
ಬಾಲಚಂದ್ರ ಡಿಸೆಂಬರ್ ೧೯೪೨
ಭರತರಂಗ ಚೇತನ ೧೯೯೨
ಭಾಷಾಲೋಕಪ್ರಾಯೋಗಿಕ ಸಂಚಿಕೆ ನವೆಂಬರ್ ೧೯೮೫
ಭಾರತೀ ಫೆಬ್ರವರಿ ೧೯೫೩
ಮೇಟಿವಿದ್ಯೆಜುಲೈ-ಸೆಪ್ಪೆಂಬರ್ ೧೯೯೭
ಯಕ್ಷ ಪ್ರಭಾ ೧೧ ಜುಲೈ೧೯೯೬
ಯಕ್ಷಮೇಳ ಮೇ ೧೯೯೬
ರಜತರಂಗಜನವರಿ ೧೯೮೮
ರಾಶಿ ೧೨ ಮೇ ೧೯೯೦
ರುಜುವಾತು ೨೩ ಜುಲೈ ೧೯೮೬
ರಂಗಭೂಮಿ ೧೯೨೫
ರಂಗವೇಷ ಸೈಕ್ಲೋಸ್ಟೈಲ್ ಪತ್ರಿಕೆ ೧೯೬೨
ರಂಗಪತ್ರ ಫೆಬ್ರವರಿ ೧೯೮೬
ರಂಗತೋರಣ೧೧ ಜೂನ್ ೧೯೯೫
ರಂಗವಾಣಿ ೧೧ ಜುಲೈ ೧೯೯೬
ಲಹರಿ ಜೂನ್ ೧೯೬೪
ಲಹರಿ ಚೆನೈ ೧೭೧೯೯೭
ಲೋಚನ ಜೂನ್ ೧೯೮೭
ವಾಗ್ಭೂಷಣ ೩೩ ಸೆಪ್ಪೆಂಬರ್ ೧೯೨೯
ವಿಕಟಮಾವ ಫೆಬ್ರವರಿ ೧೯೩೫
ವಿಚಾರ ವಾಹಿನಿ ಸೆಪ್ಪೆಂಬರ್ ೧೯೪೦
ವಿಜ್ಞಾನ ದೀಪಿಕೆ೧೮೯೪
ವಿನೋದವಾಣಿ ಜುಲೈ ೧೯೨೫
ವಿಜಯ ೧೧ ಜುಲೈ ೧೯೫೬
ವಿಜ್ಞಾನ ೧೯೧೯
ವಿಜ್ಞಾನ ಜ್ಯೋತಿಷ್ಯ೧೧-೧೨
ವಿದ್ಯಾದ್ಯಾಯಿನಿ ಜನವರಿ ೧೮೯೫
ವಿನೋದಜನವರಿ ೧೯೬೬
ವೇದತರಂಗಅಕ್ಟೋಬರ್ ೧೯೯೮
ವ್ಯಂಗ್ಯ ತರಂಗ ೨೩ಅಕ್ಟೋಬರ್ ೧೯೯೮
ವೀರಮಾತೆ ೧೨ ೧೮೫೯ನೇ ಈಶ್ವರ ಸಂವತ್ಸರ
ಶಕ್ತಿ ಏಪ್ರಿಲ್ ೧೯೫೦
ಶರನ ಸಾಹಿತ್ಯ ಶಕ ೧೮೫೯ ಈಶ್ವರ ಸಂವತ್ಸರ
ಶಾಲಾಜಗತ್ತು ಮೇ ೧೯೯೬
ಶಿವಾನುಭವ ೧೯೨೭
ಶೃಂಗಾರ ಜನವರಿ ೧೯೬೨
ಶಂಕರ ಭಾಸ್ಕರ ಸೆಪ್ಪೆಂಬರ್ ೧೯೯೩
ಶ್ರೀಮನ್ವ ಸಿದ್ಧಾಂತ ಪ್ರಕಾಶಿನೀಸೆಪ್ಪೆಂಬರ್ ೧೯೧೯
ಶ್ರೀಕೃಷ್ಣಸೂಕ್ತಿ ೧೯೦೯
ಶೂದ್ರ ೨೫ ೫೬೭ ಜನವರಿ-ಫೆಬ್ರವರಿ-ಮಾರ್ಚ್ ೧೯೯೮
ಶೋಧನೆ ಮಾರ್ಚ್ ೧೯೮೯
ಸರಸ್ವತಿ ನವೆಂಬರ್ ೧೯೨೩
ಸಂವಾದ ೧೯೮೬
ಸಂಶೋಧನ ವ್ಯಾಸಂಗ ಮಾರ್ಚ್-ಏಪ್ರಿಲ್ ೧೯೮೯
ಸುಬೋಧ ಕುಸುಮಾಂಜಲೀ ಏಪ್ರಿಲ್ ೧೯೨೪
ಸಾಹಿತ್ಯ ಸಂಗಾತಿ ಏಪ್ರಿಲ್-ಮೇ-ಜೂನ್ ೧೯೯೦
ಸಾಹಿತ್ಯ ಸಮತಿ ಪತ್ರಿಕೆ ೧೯೪೧
ಸಾಧನೆ೨೫ ೧೨ ಜನವರಿ- ಜೂನ್ ೧೯೯೬
ಸುರಭಿಏಪ್ರಿಲ್ ೧೯೮೬
ಸ್ಲಂಸುದ್ಧಿಸೆಪ್ಪೆಂಬರ್ ೧೯೯೮
ಸಮರಸ ಮಾರ್ಚ್ ೧೯೯೬
ಸಮನ್ವಯ ನವೆಂಬರ್ ೧೯೯೭
ಸಮೀಕ್ಷಕ ಡಿಸೆಂಬರ್ ೧, ೧೯೬೫
ಸಂಚಯ ಮೇ ಜೂನ್ ೧೯೯೬
ಸದ್ಭೋಧ ಚಂದ್ರಿಕೆದೀಪಾವಳಿ ೧೯೮೦
ಸುರಭಿ ಏಪ್ರಿಲ್ ೧೮೯೬
ಸಂಕ್ರಮಣ೧೯೬೪
ಸಾಹಿತ್ಯ ಸಂಘರ್ಷ೧೯೯೨
ಸಂಶೋಧಕಫೆಬ್ರವರಿ ೧೯೮೮
ಸುವಾಸಿನಿಜುಲೈ ೧೯೦೦
ಹೊಸದಿಕ್ಕು ೧೯೯೨
ಹೊಸ ಪುಸ್ತಕಗಳು ಮಾರ್ಚ್ ೧೯೯೩
ಹೇಮಕೂಟ ನವೆಂಬರ್ ೧೯೮೦
ಸಾಹಿತ್ಯ ಸಮಿತಿ ಪತ್ರಿಕೆ ಏಪ್ರಿಲ್ ೧೯೯೩
ಸಂಕುಲ ೧೯೯೩
ಸೃಜನ ವೇದಿಕೆ೧೫ ಏಪ್ರಿಲ್ ೧೯೮೪
ಸಾಕ್ಷಿ ೧೯೬೨
ಸಮನ್ವಯಅಕ್ಟೋಬರ್ ೧೯೯೪
ಸರಸ್ವತಿ ನವೆಂಬರ್ ೧೯೨೩
ಸಚಿತ್ರ ಭಾರತ ೯೧೬
ಹಂಸ -ಕೈಬರಹದ ಪತ್ರಿಕೆ ೧೯೫೧

ಅನುಬಂಧ ೨ : ಕನ್ನಡದಲ್ಲಿ ವಿಶೇಷಾಸಕ್ತಿ ನಿಯತಕಾಲಿಕಗಳ ಅಧ್ಯಯನ ಪ್ರಶ್ನಾವಳಿ

ಪತ್ರಿಕೆಯ ಹೆಸರು :
ಸಾಮಾನ್ಯವಾಗಿ ಪೋಷಿಸುವ / :ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ
ಪೋಷಿಸುತ್ತಿದ್ದ ಆಸಕ್ತಿ : ರಂಗಭೂಮಿ, ಜನಪದ ಕಲೆಗಳು
ಪತ್ರಿಕೆಯ ಆರಂಭ ಯಾವಾಗ :
ಈಗ ಪ್ರಸಾರದಲ್ಲಿದೆ/ಇಲ್ಲ :
ಪತ್ರಿಕೆಯ ಘೋಷ ವಾಕ್ಯ :
ಪತ್ರಿಕೆಯ ಸ್ಥಾಪಕ ಸಂಪಾದಕರು:

ಪತ್ರಿಕೆ ಈಗ ಪ್ರಸಾರದಲ್ಲಿದ್ದರೆ ದಯಮಾಡಿ ಈ ಮಾಹಿತಿ ನೀಡಿ

ಸಂಪಾದಕರು :
ಪ್ರಕಟವಾಗುವ ಅವಧಿ: ಮಾಸಿಕ, ದ್ವೈಮಾಸಿಕ, ತ್ರೈಮಾಸಿಕ, ಷಾಣ್ಮಾಸಿಕ, ವಾರ್ಷಿಕ.
ಪತ್ರಿಕೆ ನಿಗದಿತ ಅವಧಿಗೆ ತಪ್ಪದೆ ಬರುತ್ತಿದೆಯೇ: ಹೌದು, ಇಲ್ಲ, ಕೆಲವೊನ್ನೆ ವಿಳಂಬವಾಗುತ್ತದೆ
ಪತ್ರಿಕೆಯ ಆಕಾರ : ಕ್ರೌನ್, ೧/೮ ಡೆಮಿ, ೧/೪ ಡೆಮಿ ಟ್ಯಾಬ್ಲಾಯ್ಡ್, ಡೆಮಿ, ಇತರೆ
ಚಂದಾದರ : ಬಿಡಿ ಪತಿ, ವಾರ್ಷಿಕ, ಆಜೀವ
ಸಾಮಾನ್ಯವಾಗಿ ಪುಟಗಳ ಸಂಖ್ಯೆ:
ಪ್ರಕಾಶಕರ ಹೆಸರು, ವಿಳಾಸ(ಸಂಪಾದಕರೇ ಪ್ರಕಾಶಕರಲ್ಲದಿದ್ದರೆ):
ಮುದ್ರಕರ ಹೆಸರು, ವಿಳಾಸ(ಸಂಪಾದಕರೇ ಮುದ್ರಕರಲ್ಲದಿದ್ದರೆ):
ಮುದ್ರಣ ವಿಧಾನ: ಲೆಟರ್ ಪ್ರೆಸ್, ಆಫ್ ಸೆಟ್, ಇತರೆ
ಜಾಹಿರಾತು ದರೆ: ಕಾಲಂ ಸೆಂ. ಮೀ.ಗೆ ಅರ್ಧಪುಟಕ್ಕೆ ಒಂದು ಪುಟಕ್ಕೆ
ಪತ್ರಿಕೆಯಲ್ಲಿರುವ ಪ್ರತ್ಯೇಕ ವಿಭಾಗಗಳು : ಸಂಪಾದಕೀಯ /ಜಾಹಿರಾತು / ಪ್ರಸಾರ ಮುದ್ರಣ/ ಎಲ್ಲಾ ಒಂದೆ
ಪತ್ರಿಕೆ ಆರಂಬಿಸುವಾಗ ಸಂಪಾದಕರಿಗೆ ಪತ್ರಿಕೋದ್ಯಮದ ಅನುಭವವಿತ್ತೇ : ಹೌದು / ಇಲ್ಲ
ಪತ್ರಿಕೆಯ ಪ್ರಸಾರ :
ಪ್ರಸಾರಕ್ಕೆ ಆಧಾರ : ಎ. ಬಿ.ಸಿ/ ಪತ್ರಿಕೆಆ ರೆಜಿಸ್ಟ್ರಾರ್/ ನಮ್ಮದೇ ಹೇಳಿಕೆ
ಪತ್ರಿಕೆ ನಿಮಗೊಂದು ಹವ್ಯಾಸವೋ ವೃತ್ತಿಯೋ :
ನಿಮ್ಮ ವಿಶೇಷಾಸಕ್ತಿ ನಿಯತಕಾಲಿಕದ ಓದುಗರು ಯಾರು: ಸಾಹಿತಿಗಳು ಕಲಾವಿದರು ಸಾಮಾನ್ಯರು
ನಿಮ್ಮ ಓದುಗರನ್ನು ತಲುಪುತ್ತಿರುವ ಬಗ್ಗೆ ಸಮಾಧಾನವಿದೆಯೇ: ಇದೆ/ಇಲ್ಲ
ಇಲ್ಲವಾದರೆ ಏಕೆ :
ಕನ್ನಡದಲ್ಲಿ ವಿಶೇಷಾಸಕ್ತಿ ನಿಯತಕಾಲಿಕಗಳ ಭವಿಷ್ಯದ ಬಗ್ಗೆ ನೀವು ಏನು ಹೇಳುತ್ತಿರಿ:
ಪ್ರತಿ ಸಂಚಿಕೆಯ ಸಾಮಾನ್ಯ ಆದಾಯ:
ಪ್ರತಿ ಸಂಚಿಕೆಯ ಸಾಮಾನ್ಯ ಖರ್ಚು:
ಪತ್ರಿಕೆಗೆ ಇತರೇ ಆದಾಯದ ಮೂಲವಿದೆಯೇ:ಸರ್ಕಾರದ ಸಹಾಯಧನ ಖಾಸಗಿ ಸಹಾಯ ಸಂಘಟನೆಗಳ ಸಹಾಯ
ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿರುವ: ನೌಕರರು, ಗೆಳಯರು, ನೌಕರರಾದರೆ ಅವರಿಗೆ ನೀಡುವ ಸಂಬಳ
ಪತ್ರಿಕೆಯನ್ನು ಮಾರಾಟ ಮಾಡುವ ವಿಧಾನ : ಏಜನ್ಸಿ ಮೂಲಕ, ಗೆಳೆಯರ ಮೂಲಕ, ಅಂಚೆ ಮೂಲಕ
ಸಂಪಾದಕರು ಹೇಳ ಬಯಸುವ ತಮ್ಮ ಪತ್ರಿಕೆಯ ವಿಶೇಷಗಳು:

ಪತ್ರಿಕೆ ನಿಂತು ಹೋಗಿದ್ದರೆ ದಯಮಾಡಿ ಈ ಮಾಹಿತಿನೀಡಿ

ಪತ್ರಿಕೆಯ ಸ್ಥಾಪಕ ಸಂಪಾದಕರು:
ಕೊನೆಯ ಸಂಪಾದಕರು:
ಪ್ರಕಟವಾಗುತ್ತಿದ್ದ ಅವಧಿ: ಮಾಸಿಕ, ದ್ವೈಮಾಸಿಕ, ಷಾಣ್ಮಾಸಿಕ, ವಾರ್ಷಿಕ
ಪತ್ರಿಕೆಯ ಆಕಾರ :
ಪುಟಗಳು:
ಚಂದಾದರ:
ಪ್ರಕಾಶಕರ ಹೆಸರು ವಿಳಾಸ(ಸಂಪಾದಕರೇ ಪ್ರಕಾಶಕರಲ್ಲದಿದ್ದರೆ):
ಮುದ್ರಕರ ಹೆಸರು ವಿಳಾಸ(ಸಂಪಾದಕರೇ ಮುದ್ರಕರಲ್ಲದಿದ್ದರೆ):
ಮುದ್ರಣ ವಿಧಾನ:
ಸಂಪಾದಕರಿಗೆ ಪತ್ರಿಕೋದ್ಯಮದ ಅನುಭವವಿತ್ತೇ:
ಪ್ರಸಾಎವೆಷ್ಟಿತ್ತು:
ಪ್ರತಿ ಸಂಚಿಕೆಯ ಆದಾಯ ಎಷ್ಟಿತ್ತು :
ಪತ್ರಿಕೆಗೆ ವ್ಯವಸ್ಥಿತ ಮಾರಾಟ ಜಾಲವಿತ್ತೇ:
ಪತ್ರಿಕೆ ಮಾರಾಟ ವಿಧಾನ: ಏಜನ್ಸಿ ಮೂಲಕ, ಗೆಳೆಯರ ಮೂಲಕ, ಅಂಚೆ ಮೂಲಕ
ಪತ್ರಿಕೆ ನಿಂತುಹೋದುದಕ್ಕೆ ಕಾರಣ : ಹಣಕಾಸಿನ ಅಭಾವ, ನಡೆಸುವವರಿಲ್ಲದೇ, ಓದುಗರ ಕೊರತೆ
ನಿಲ್ಲುವ ಮುಂಚಿನ ಚಂದಾದರ:
ನಿಲ್ಲುವ ಮುಂಚಿನ ಜಾಹೀರಾತು ದರ:
ಕೊನೆಯ ಸಂಚಿಕೆ ಬಂದದ್ದು ಯಾವಾಗ:
ಸಂಪಾದಕರು/ಮಾಹಿತಿದಾರರು ಹೇಳಬಯಸುವ ವಿಚಾರಗಳು-ವಿಶೇಷ ಸಮಾಚಾರಗಳು:
ಸಂಪಾದಕರು/ಮಾಹಿತಿದಾರರ ಸಹಿ:

ದಯಮಾಡಿ ಗಮನಿಸಿ : ದಯಮಾಡಿ ಪತ್ರಿಕೆಯ ಒಂದು ಮಾದರಿ ಪ್ರತಿಯನ್ನು, ಸಂಪಾದಕರ ಒಂದು ಭಾವಚಿತ್ರವನ್ನು ಈ ಉತ್ತರದೊಂದಿಗೆ ಕಳುಹಿಸಿಕೊಡಿ.

Table of Contents