ಸಂಕುಲ
ಸೃಜನಶೀಲ ಕಲೆಗಳ ದ್ವೈಮಾಸಿಕ
ಕಲೆಯ ಎಲ್ಲ ಕ್ಷೇತ್ರಗಳು, ಇತರ ಶಾಸ್ತ್ರಗಳು ಒಟ್ಟಾಗಿ ಕೆಲಸಮಾಡುವ ಪ್ರಕ್ರಿಯೆಯ ಶೋಧ ಮತ್ತು ಅವುಗಳನ್ನು ಅನುಭವಿಸುವ, ಅರ್ಥೈಸುವ ಮಾರ್ಗವನ್ನು ಕಂಡುಕೊಳ್ಳುವುದು `ಸಂಕುಲ'ದ ಉದ್ದೇಶ.
ಚದುರಿಹೋದ, `ವೈಯಕ್ತಿಕ ದೂರ'ವನ್ನಪ್ಪಿಕೊಂಡು, ಜನಪ್ರಿಯತೆಯ ತಪ್ಪು ಅರ್ಥೈಕೆಯಲ್ಲಿ ಕೊಚ್ಚಿಹೋಗುತ್ತ ಅಗಾಧ ಅಂತರಗಳನ್ನು ಬೆಳೆಸಿಕೊಳ್ಳುತ್ತಿರುವ ಕಲಾಪ್ರಕಾರಗಳನ್ನು ಅವುಗಳ ಶ್ರೇಷ್ಟತೆಯನ್ನು ಗೌರವಿಸುತ್ತಲೇ, ಕಳಚಿದ ಕೊಂಡಿಗಳನ್ನು ಬೆಸೆಯುವ ಕ್ರಿಯೆಯಲ್ಲಿ ಆಸಕ್ತಿವಹಿಸುತ್ತದೆ `ಸಂಕುಲ.'
ಕಲೆಯ ಮೂಲಕ ವಸ್ತುವೊಂದು ಹೊರಡಿಸಬಹುದಾದ ಅನೇಕ ಧ್ವನಿಗಳನ್ನು ಗ್ರಹಿಸಲು ಕಲೆಯ ಸೃಷ್ಟಿ ವಿಧಾನದಲ್ಲಿ ಇರುವ ಹಲವು ಮಗ್ಗಲುಗಳತ್ತ ಗಮನ ಹರಿಸಬಯಸುತ್ತದೆ `ಸಂಕುಲ'.
ಕಲಾವಿಮರ್ಶೆಯ ಪರಿಭಾಷೆಯನ್ನು ಬಲ್ಲ ಬರಹಗಾರರ ಕೊರತೆಯನ್ನು ಇನ್ನೂ ತುಂಬಿಕೊಳ್ಳಲು ಆಗಿಲ್ಲ ಎಂಬ ಎಚ್ಚರ ನಮಗಿದೆ. ಅದಕ್ಕಾಗಿ ಕೊಂಚ ಕಾಯಬೇಕಾಗಬಹುದು. ಅಂಥ ಕಟ್ಟುವ ಕೆಲಸವನ್ನು `ಸಂಕುಲ' ಸಂತೋಷದಿಂದ ನಿರ್ವಹಿಸುತ್ತದೆ; ಪರಿಪೂರ್ಣವಲ್ಲದಿದ್ದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ.
ಜಾತಿ, ಮತ, ದ್ವೇಷ, ರಾಜಕೀಯ, ಆರ್ಥಿಕ ಏರುಪೇರುಗಳಿಂದಾಗಿ ಬದುಕು ಅಸಹನೀಯ, -ಭಯಾನಕ ಆಗಿದೆ; ಮತ್ತೊಂದೆಡೆ ಪ್ರಕೃತಿಯೇ ಮುನಿದು ನಿಂತಿದೆ. ಆತಂಕ ತುಂಬಿದ ಕ್ಷಣಗಳು, ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಅಪಾಯಗಳು... ಮನಸ್ಸುಗಳು ಗ್ರಸ್ತವಾಗುತ್ತಿವೆ. ಛಿದ್ರಗೊಂಡ ಮನಸ್ಸುಗಳನ್ನೆಲ್ಲ ಯಾವ ಕ್ಷುದ್ರತೆಯ ಸೋಂಕು ಇಲ್ಲದ ಶ್ರೇಷ್ಠ ಕಲೆಗಳು ಮಾತ್ರ ಕಟ್ಟಬಲ್ಲವು. ಇಂಥ ಒಂದು ಆರಂಭವಾಗಿ `ಸಂಕುಲ' ಪತ್ರಿಕೆ ನಿಮ್ಮ ಕೈಯಲ್ಲಿದೆ. ಒಪ್ಪಿಸಿಕೊಳ್ಳಿ.