ಜಮಾಖರ್ಚಿನ ಪದ್ಧತಿ
ಮುನ್ನುಡಿ

ಅಷ್ಟಮ ಡೆಮಿ ಆಕಾರದ ‘ಜಮಾಖರ್ಚಿನ ಪದ್ಧತಿ’ ಪುಸ್ತಕದ ಕರ್ತೃ ಗುಬ್ಬಿ ಚಿ. ಲಕ್ಷ್ಮೀನಾರಣಯ್ಯನವರು. ೧೫೨ ಪುಟಗಳ ೧೨ ಆಣೆ ಕ್ರಯದ ಈ ಪುಸ್ತಕವನ್ನು ಬೆಂಗಳೂರು ಸಿಟಿಯ ಮೆಮೋರಿಯಲ್ ಮುದ್ರಾಲಯದವರು ಮುದ್ರಿಸಿರುತ್ತಾರೆ. ೧೯೧೩ರಲ್ಲಿ ಮೊದಲ ಆವೃತ್ತಿಯಾಗಿ ಮುದ್ರಣಗೊಂಡ ಬೆಂಗಳೂರು ಕಮರ್ಷಿಯಲ್ ಹೈಸ್ಕೂಲ್ ಪ್ರಿನ್ಸಿಪಾಲರಾದ ಲಕ್ಷ್ಮೀನಾರಣಯ್ಯನವರ ಈ ಪುಸ್ತಕದ ಮೊದಲ ಆವೃತ್ತಿಯಲ್ಲಿ ೧೦೦೦ ಪ್ರತಿಗಳು ಹೊರಬಂದಿವೆ.  ಈ ಕೃತಿಯನ್ನು ಕನ್ನಡದ ಯಾವ ಗ್ರಂಥಸೂಚಿಗಳಲ್ಲಿಯೂ ನಮೂದಿಸಿಲ್ಲ.

ಈ ಪುಸ್ತಕವನ್ನು ಪ್ರಚಾರ ಪಡಿಸಲು ತಮಗೆ ಪ್ರೋತ್ಸಾಹ ನೀಡಿದ ಅಂದಿನ ವಿದ್ಯಾಭ್ಯಾಸದ ಇಲಾಖಾ ಇನ್ ಸ್ಪೆಕ್ಟರ್ ಜನರಲ್ ಮ.ರಾ.ರಾ. ಎಂ. ಶಾಮರಾವ್ ಅವರನ್ನು ಲೇಖಕರು ಸ್ಮರಿಸಿಕೊಂಡಿರುತ್ತಾರೆ. ಅವತರಣಿಕೆಯಲ್ಲಿ ಲೇಖಕರು ‘ಮೈಸೂರು ಸರ್ಕಾರದವರು ಈಚೆಗೆ ಜಮಾ ಖರ್ಚಿನ ಪದ್ಧತಿಯನ್ನು ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆಯ ಪಾಠಗಳಲ್ಲಿ ಒಂದನ್ನಾಗಿ ಸೇರಿಸಿರುವರು. ಇದು ಅಪೇಕ್ಷಣೀಯವೇ ಸರಿ.

ಆದರೆ ಈ ಭಾಗದಲ್ಲಿ ತಕ್ಕ ಗ್ರಂಥಗಳು ಕನ್ನಡದಲ್ಲಿ ಇಲ್ಲವಾದುದರಿಂದಲೋ ಮತ್ತಾವ ಕಾರಣದಿಂದಲೋ ದೇಸೀಯ ಲೋವರ್ ಮತ್ತು ಅಪ್ಪರ್ ಸೆಕಂಡರಿ ಪರೀಕ್ಷೆಗಳ ಪಾಠಗಳಲ್ಲಿ ಇದನ್ನು ಒಂದಾಗಿ ಭಾವಿಸಿಲ್ಲ. ಇದು ಶೋಚನೀಯಾಂಶವು. ಏಕೆಂದರೆ ಇಂತಹ ವಿಷಯಗಳನ್ನು ಅಭ್ಯಾಸ ಮಾಡದಿದ್ದರೆ ವಿದ್ಯಾರ್ಥಿಗಳಲ್ಲಿ ಕೆಲವು ಗುಣಗಳು ಪ್ರಕಾಶಕ್ಕೆ ಬರದೆ ಲೋಪವುಂಟಾಗುವುದು... ನಮ್ಮ ವರ್ತಕರಲ್ಲಿ ಲೆಕ್ಕವಿಡುವ ಪದ್ಧತಿಯು ನಾನಾ ವಿಧವಾಗಿರುವುದಲ್ಲದೆ ಲೆಕ್ಕಾಚಾರದಲ್ಲಿ ಕ್ರಮವಾಗಿ ತಾಳೆ ನೋಡಿಕೊಳ್ಳುವ ಪದ್ಧತಿಯು ರೂಢಿಗೆ ಬಂದಿಲ್ಲ.

ವ್ಯಾಪಾರದಲ್ಲಿ ಲಾಭ ಬಂದಿರುವುದೇ, ನಷ್ಟವಾಗಿರುವುದೇ, ಯಾವ ಯಾವ ಸರಕಿನ ಮೇಲೆ ಎಷ್ಟು ಲಾಭ ಬಂದಿರುವುದು– ಎಂಬ ಸಂಗತಿಗಳನ್ನು ತಿಳಿಯಲು ಆಗುವುದಿಲ್ಲ. ಕೆಲವು ವೇಳೆ ಒಟ್ಟಿನಲ್ಲಿ ಲಾಭನಷ್ಟವನ್ನು ದಾಮಾಷಾ ತಿಳಿಯಬಹುದಾದರೂ, ಆ ತಿಳಿವಳಿಕೆಯಲ್ಲಿ ಲೋಪಗಳಿಲ್ಲವೆಂದು ದೃಢವಾಗಿ ಹೇಳಲಾಗುವುದಿಲ್ಲ. ಲೆಕ್ಕಾಚಾರವನ್ನು ನಿರ್ಣಯಿಸುವುದರಲ್ಲಿ ಅದ್ವಿತೀಯರೆಂದು ಸುಪ್ರಸಿದ್ಧರಾಗಿರುವ ಪ್ರಾಜ್ಞರು ಒಪ್ಪಿರುವ ಕ್ರಮಗಳನ್ನೇ ಈ ಪುಸ್ತಕದಲ್ಲಿ ತಿಳಿಸಲು ಪ್ರಯತ್ನಮಾಡಲಾಗಿದೆ’ ಎಂದು ಈ ಕೃತಿಯನ್ನು ತಾವು ಏಕೆ ಬರೆದೆ ಎಂಬುದಕ್ಕೆ ಕಾರಣವನ್ನು ನೀಡಿರುತ್ತಾರೆ.

ಈ ಪುಸ್ತಕದಲ್ಲಿ ಒಟ್ಟು ೨೧ ಅಧ್ಯಾಯಗಳಿದ್ದು ಅವುಗಳಲ್ಲಿ ಬರುವ ವಿಷಯವಾರು ವಿವರಣೆಗಳು ಇಂತಿವೆ. ಪೀಠಿಕಾ ಪ್ರಕರಣದಲ್ಲಿ ಆಮದು ಯಾ ಕೊಂಡ ಪುಸ್ತಕ, ಪೋಷಣ ಪುಸ್ತಕ ಹಾಗೂ ಅದಕ್ಕೆ ಸಂಬಂಧಿಸಿದ ಅಭ್ಯಾಸಗಳನ್ನು ನೀಡಲಾಗಿದೆ. ಮುಂದಿನ ಅಧ್ಯಾಯದಲ್ಲಿ ಕೊಂಡ ಪುಸ್ತಕಗಳ ವಿಚಾರದಲ್ಲಿ ಗೋಷ್ವಾರೆಯನ್ನು (>ಘೋಷಬಾರೆ = ಲೆಕ್ಕಪತ್ರಗಳ ಅಥವಾ ವರದಿಯ ವಿವರಗಳಿಂದ ಸಿದ್ಧಪಡಿಸಿದ ಹೇಳಿಕೆ, ತಃಖ್ತೆ) ಹಾಕುವ ವಿಧಾನಗಳನ್ನು ತಿಳಿಸಿಕೊಡಲಾಗಿದೆ. ಸಾಲ ಕೊಟ್ಟವರ ವಿವರಗಳ ಲೆಕ್ಕವಾದ ವರ್ಗ ಯಾ ಖಾತೆ, ಜಮೆ ಮತ್ತು ಖರ್ಚು, ಗೋಷ್ವಾರೆಯನ್ನು ಹಾಕುವ ವಿವಿಧ ವಿಧಾನಗಳನ್ನು ೩ನೆಯ ಅಧ್ಯಾಯದಲ್ಲಿ ನಿರೂಪಿಸಲಾಗಿದೆ.

ನಂತರ ವರ್ಗವನ್ನು ಬರೆಯುವ ವಿಧಾನ, ಪಾನು ದಾಖಲೆ ಹಾಕುವಿಕೆ, ವರ್ಗ ದೃಢೀಕರಣ, ಅನುಕ್ರಮಣಿಕೆ, ಅಭ್ಯಾಸಗಳು, ಪೋಷಣ ಪುಸ್ತಕವನ್ನು ವರ್ಗಕ್ಕೆ ಎತ್ತುವ ವಿಧಾನವನ್ನು ವಿವರಿಸುತ್ತಾರೆ. ೫ನೇ ಅಧ್ಯಾಯದಲ್ಲಿ ರಫ್ತು ಯಾ ಬಿಕರಿ ಪಟ್ಟಿಯನ್ನು ಕುರಿತ ವಿಚಾರಗಳನ್ನೂ, ಖರೀದಿ ಪಟ್ಟಿ ಹಾಗೂ ಬಿಕರಿ ಪುಸ್ತಕಗಳ ಬಗ್ಗೆ ಅಧ್ಯಾಯ ೬ರಲ್ಲಿ ತಿಳಿವಳಿಕೆಯನ್ನೂ ನೀಡಿ ೭ನೆಯ ಅಧ್ಯಾಯದಲ್ಲಿ ಖರೀದಿ ಪಟ್ಟಿಯಲ್ಲಿ ಹೆಚ್ಚು ಕಮ್ಮಿ ಹಾಗೂ ಜಿನಸಿ ವಾಪಸಾತಿಯ ವಿಷಯಗಳನ್ನು ಪ್ರಸ್ತುತಿ ಪಡಿಸುತ್ತಾರೆ. ೮, ೯ ಹಾಗೂ ೧೦ ನೆಯ ಪ್ರಕರಣಗಳಲ್ಲಿ ಕ್ರಮವಾಗಿ ನಗದೀ ಪುಸ್ತಕ ವಿಚಾರ, ಲಾಭ ನಷ್ಟ ವಿಷಯ, ನಗದೀ ಪುಸ್ತಕವನ್ನು ವರ್ಗಕ್ಕೆ ಎತ್ತುವ ಅಂಶ ಮತ್ತು ಚಿಲ್ಲರೆ ನಗದೀ ಪುಸ್ತಕ ಹಾಗೂ ಗೃಹಕೃತ್ಯದ ಲೆಕ್ಕಗಳ ಬಗ್ಗೆ ಸ್ಪಷ್ಟೀಕರಣಗಳಿವೆ.

ನಗದೀ ಪುಸ್ತಕದ ಬಗ್ಗೆ ಮತ್ತೆ ೧೧ ಹಾಗೂ ೧೩ ನೆಯ ಅಧ್ಯಾಯಗಳಲ್ಲಿ ಸಾಂಗೋಪಾಂಗವಾಗಿ ತಿಳಿಸಿರುತ್ತಾರೆ. ಅಧ್ಯಾಯ ಹನ್ನೆರಡರಲ್ಲಿ ಚಕ್ಕು, ಅದರ ಉಪಯೋಗ ಮತ್ತು ಚಕ್ಕಿನ ಪಾಟಿಯನ್ನು ತಿಳಿಸಿ, ೧೪ರ ಅಧ್ಯಾಯದಲ್ಲಿ ಪ್ರಾಮಿಸರಿ ನೋಟು, ಹುಂಡಿ, ಇವುಗಳನ್ನು ಜಮಾ ಖರ್ಚು ಮಾಡುವ ವಿಧಾನಗಳನ್ನು ಚರ್ಚಿಸಿ ೧೫ನೆಯ ಪ್ರಕರಣದಲ್ಲಿ ಜಮಾ ಖರ್ಚು ವಿಂಗಡಣೆಯನ್ನು ಕುರಿತು ಬರೆಯುತ್ತಾರೆ. ಬತಾವಣೆಯನ್ನು ಪೂರ್ತಿ ಮಾಡುವಿಕೆ, ಬತಾವಣೆಯಲ್ಲಿ ಬಾಕಿ ತೇಲಿಸುವ ವಿಧಾನ ಹಾಗೂ ಬಾಕಿ ಪಟ್ಟಿ ಯಾ ಅಢಾವೆ (ಬ್ಯಾಲೆನ್ಸ್ ಷೀಟು) – ಈ ವಿಚಾರಗಳನ್ನು ೧೬ ಮತ್ತು ೧೭ರ ಅಧ್ಯಾಯಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಪರೀಕ್ಷಣ ಪಟ್ಟಿ (ತಾಳೆ ಪಟ್ಟಿ), ಜಮಾ ಖರ್ಚಿನಲ್ಲಿ ತಪ್ಪನ್ನು ತಿದ್ದುವ ವಿಧಾನ – ಈ ಅಂಶಗಳನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಿ ಉಳಿದೆರಡು ಪ್ರಕರಣಗಳಲ್ಲಿ ಒಬ್ಬ ವ್ಯಾಪಾರಸ್ಥನ ಒಂದು ತಿಂಗಳ ಲೆಕ್ಕವನ್ನು ಜಮಾ ಖರ್ಚು ಮಾಡಿ ತೋರಿಸುವ ನಮೂನೆಯೊಂದರ ಕೋಷ್ಟಕ ನೀಡಲಾಗಿದೆ.

ಮುಂದೆ ವಾಡಿಕೆಯಲ್ಲಿರುವ ಜಮಾಖರ್ಚಿನ ಪದ್ಧತಿ ಹಾಗೂ ಮಿಕ್ಕಿರುವ ವಿವಿಧ ವಿಷಯಗಳನ್ನು ಕುರಿತ ಚರ್ಚೆಯನ್ನು ಮಾಡಲಾಗಿದೆ. ‘ವಿವಿಧ ವಿಷಯಗಳು’ ಎನ್ನುವ ಕೊನೆಯ ಅಧ್ಯಾಯದಲ್ಲಿ ಸ್ಥಿರ ಸ್ವತ್ತು, ಯಂತ್ರಗಳು, ಕಾಂಟ್ರಾಕ್ಟು (ಗುತ್ತಿಗೆ), ದಳ್ಳಾಳಿ ವ್ಯಾಪಾರ, ಮಾರಿಗೆಗೆ ಕಳುಹಿಸಿದ ಜಿನಸಿ ವರ್ಗ ಹಾಗೂ ಪಾಲು ವ್ಯಾಪಾರಗಳನ್ನು ಕುರಿತು ಚರ್ಚಿಸಲಾಗಿದೆ. ಹೀಗೆ ಲೇಖಕರು ೨೧ ಅಧ್ಯಾಯಗಳಲ್ಲಿ ಆ ಕಾಲಘಟ್ಟದಲ್ಲಿ ಜಮಾಖರ್ಚಿಗೆ ಸಂಬಂಧಿಸಿದ ಸಮಗ್ರಾಂಶಗಳನ್ನು ಈ ಕೃತಿಯಲ್ಲಿ ಆಮೂಲಾಗ್ರವಾಗಿ ಚಿಂತಿಸಿ ಅಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಸ್ತುತ ವಿಷಯವನ್ನು ಸರಳವಾಗಿ ಗ್ರಹಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಚಕ್ಕುಗಳು, ಅದರ ಉಪಯೋಗ ಎನ್ನುವ ೧೨ ನೆಯ ಅಧ್ಯಾಯದಿಂದ ಲೇಖಕರ ನಿರೂಪಣಾ ಕ್ರಮಕ್ಕೆ ನಿದರ್ಶನವನ್ನು ಗಮನಿಸೋಣ: ‘ಸಾಧಾರಣವಾಗಿ ಪಾಶ್ಚಮೀಕ (ಇಂಗ್ಲಿಷು ಮುಂತಾದ) ವರ್ತಕರು ಬ್ಯಾಂಕುಗಳಲ್ಲಿ ಹಣವನ್ನು ಥೇವಣಿ ಇಟ್ಟು ತಮಗೆ ಬೇಖಾದ ಕಾಲದಲ್ಲಿ ಚಕ್ಕುಗಳ ಮೂಲಕವಾಗಿ ಹಣವನ್ನು ತರಿಸಿಕೊಳ್ಳುವರು. ತಾವು ಯಾರಿಗಾದರೂ ಮೊಬಲಗು ಕೊಡಬೇಕಾದರೆ ರೊಕ್ಕಕ್ಕೆ ಬದಲಾಗಿ ಚಕ್ಕುಗಳನ್ನು ಕೊಡುವರು. ಇತರ ವರ್ತಕರಿಂದ ತಮಗೆ ಬಂದ ಚಕ್ಕುಗಳನ್ನು ವಸೂಲಾತಿ ಬಗ್ಗೆ ತಮ್ಮ ಬ್ಯಾಂಕಿಗೆ ಕಳಿಸುವರು.

ಬ್ಯಾಂಕಿನಲ್ಲಿ ಥೇವಣಿ ಇಡುವುದರಿಂದುಂಟಾಗುವ ಪ್ರಯೋಜನಗಳೇನೆಂದರೆ: 

  1. ಮನೆಯಲ್ಲಿ ಹೆಚ್ಚಾಗಿ ಹಣವಿದ್ದರೆ ಕಳ್ಳರು ಇಳೀಬಿದ್ದು ಅದನ್ನು ತೆಗೆದುಕೊಂಡು ಹೋಗುವರೆಂಬ ಭಯವಿರುವುದಿಲ್ಲ, ಇದಲ್ಲದೆ ಬ್ಯಾಂಕಿನವರು ಬಡ್ಡಿಯನ್ನು ಕೊಡುವುದಾದರೆ ಅವರಲ್ಲಿ ಇರತಕ್ಕ ಚಾಲ್ತಿ ಶಿಲ್ಕಿನ ಮೇಲೆ ಬಡ್ಡಿಯು ದೊರೆಯುವುದು. ಮನೆಯಲ್ಲಿ ಹಣವಿದ್ದರೆ ಈ ಬಡ್ಡಿಯು ದೊರೆಯುವುದಿಲ್ಲ.
  2. ಆಸಾಮಿಗಳಿಗೆ ಹಣವನ್ನು ಪಾವತಿ ಮಾಡಬೇಕಾಗಿದ್ದರೂ ಇಲ್ಲವೇ ನಮಗೆ ಬರಬೇಕಾಗಿದ್ದರೂ, ಮೊತ್ತವನ್ನು ಎಣಿಸುವ ತೊಂದರೆ ತಪ್ಪುವುದು. ಅಲ್ಲದೆ ಸಲ್ಲದ ನಾಣ್ಯಗಳು ಬರುವುದೆಂಬ ಭಯವಿಲ್ಲ. ಏತಕ್ಕೆಂದರೆ ಬ್ಯಾಂಕಿನವರು ನಮಗೆ ಜವಾಬುದಾರರಾಗಿರುವರು. ೩. ಆಸಾಮಿಗಳಿಗೆ ಬಾಕಿ ಕೊಡಬೇಕಾಗಿದ್ದರೆ ಚಕ್ಕಿನ ಮೂಲಕ ಬಾಕಿಯನ್ನು ಪಾವತಿ ಮಾಡಿದ್ದಾದರೆ ಸಮಯ ಬಂದಾಗ ಚಕ್ಕನ್ನು ಪಾವತಿಗೆ ರುಜುವಾತಾಗಿ ಹಾಜರುಪಡಿಸಬಹುದು’. ಇದು ೧೯೧೩ರ ಒಕ್ಕಣೆ ಎನ್ನುವುದನ್ನು ನೆನಪಿನಲ್ಲಿಡಬೇಕು.

ಜಮಾ ಖರ್ಚಿನ ಈ ಪುಸ್ತಕದಲ್ಲಿ ಒಂದು ಶತಮಾನದ ಹಿಂದೆ ಕನ್ನಡದಲ್ಲಿ ಬಳಕೆಯಲ್ಲಿದ್ದ ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದ ವಿಶೇಷ ಶಬ್ದಗಳನ್ನು ಗಮನಿಸಬಹುದು. ಗೊಷ್ವಾರೆ, ಪಾನು, ಬಿಕರಿ, ಪಾಟೆ, ಖತಾವಣೇ, ಅಢಾವೆ, ತಪ್ಸೀಲು, ರೋಜುಬುಕ್ಕು, ಕಿರಿಗೆ, ಶಿಲ್ಕು, ವಟ್ಟಾ, ಸಾದಿಲವಾರು, ಆಖೈರು, ಕಚ್ಚಾಬುಕ್ಕು, ಗುರ್ರೆ – ಮುಂತಾದ ಶಬ್ದಗಳು ಈಗ ಹೆಚ್ಚೂಕಮ್ಮಿ ಬಳಕೆಯಿಂದ ನಾಪತ್ತೆಯಾಗಿದೆ. ಜೊತೆಗೆ ಈ ಕೃತಿಯಲ್ಲಿ ನಗದು, ಆಯವ್ಯಯ ತಃಖ್ತೆ ಮುಂತಾದ ೫೦ ಕೋಷ್ಟಕಗಳನ್ನೂ ಚಕ್ಕು, ರಸೀತಿ ಮುಂತಾದ ೯ ನಮೂನೆಗಳನ್ನೂ ಅದರ ಮೂಲ ಸ್ವರೂಪದ ತಿಳಿವಳಿಕೆಗಾಗಿ ನೀಡಿರುವುದು ಉಪಯುಕ್ತವಾಗಿದೆ.

ಸ್ವರೂಪದ ದೃಷ್ಟಿಯಿಂದ ಸ್ವಯಂಬೋಧಿನಿಯಾಗಿರುವುದು ಈ ಪುಸ್ತಕದ ಇನ್ನೊಂದು ಪ್ರಯೋಜನ. ಲೇಖಕರೇ ಹೇಳುವಂತೆ, ‘ತಿಳಿದಿರುವ ಅಂಶಗಳಿಂದ ತಿಳಿಯದ ಅಂಶಗಳನ್ನು ಬೋಧಿಸಬೇಕು ಎಂಬ ನ್ಯಾಯಕ್ದಕನುಸಾರವಾಗಿ ಈ ಪುಸ್ತಕದಲ್ಲಿ ಕಾಣಿಸಿರುವ ಲೆಕ್ಕಾಚಾರ ವಿಷಯಗಳನ್ನೆಲ್ಲ ಸುಲಭ ಮಾರ್ಗದಲ್ಲಿ ಬೋಧಿಸಲು ಪ್ರಯತ್ನಿಸಿರುತ್ತೇನೆ. ಆದುದರಿಂದ ಈ ಪುಸ್ತಕವು ಇತರರ ಬೋಧನೆ ಅವಶ್ಯಕತೆ ಇಲ್ಲದೆ ಸ್ವತಃ ಅಭ್ಯಾಸ ಮಾಡಲಿಷ್ಟವುಳ್ಳ ವಿದ್ಯಾರ್ಥಿಗಳಿಗೂ ಬಹಳ ಉಪಯುಕ್ತವಾಗಿರುವುದರಲ್ಲಿ ಸಂದೇಹವಿಲ್ಲ’.