ಡಾ. ಸಿ. ಎಸ್. ಯೋಗಾನಂದ ಅವರಿಂದ ಭಾಷಣ.
ಈ ವಿಷಯವನ್ನು ಎರಡು ದೃಷ್ಟಿಕೋನಗಳಿಂದ ನೋಡೋಣ. ಮೊದಲನೆಯದಾಗಿ ಯಾಂತ್ರಿಕ ದೃಷ್ಟಿಯಿಂದ ಕಂಪ್ಯೂಟರ್‍ನೊಂದಿಗೆ ಮತ್ತು ಅದರ ಮೂಲಕ ಕನ್ನಡದಲ್ಲಿ ವ್ಯವಹರಿಸಲು ಬೇಕಾಗಿರುವ ಸಿದ್ಧತೆಗಳು. ನಂತರ ಇದನ್ನು ಬಳಸಿ ಅಂತರ್ಜಾಲ ಮಾಧ್ಯಮದಲ್ಲಿ ಕನ್ನಡ ಬೆಳವಣಿಗೆಗೆ ಅವಕಾಶ.
ಒಂದು ಭಾಷೆಯ ಬೆಳವಣಿಗೆ ಅದರ ಸಮರ್ಥ ಬಳಕೆಯಿಂದ ಮಾತ್ರ ಸಾಧ್ಯ. ಸಮರ್ಥ ಬಳಕೆ ಆಗಬೇಕಾದರೆ ಸಂವಹನ ಕ್ಷೇತ್ರದಲ್ಲಿ ಹೊಸ ಹೊಸ ಯಂತ್ರ ಅಥವಾ ತಂತ್ರಜ್ಞಾನಗಳ ಆವಿಷ್ಕಾರವಾದಂತೆಲ್ಲಾ ಅವುಗಳನ್ನು ನಮ್ಮ ಭಾಷೆಗೆ ಅಳವಡಿಸಿಕೊಳ್ಳುವುದು ಅಗತ್ಯ.
ಉದಾಹರಣೆಗೆ: ಮುದ್ರಣ ಯಂತ್ರ, ಟೈಪ್‍ರೈಟರ್, ಟೆಲಿಫೋನ್, ರೇಡಿಯೋ, ಟಿವಿ, ಛಾಯಾಪ್ರತಿಯಂತ್ರ ಮತ್ತು ಕಂಪ್ಯೂಟರ್. ಈ ಯಂತ್ರಗಳಲ್ಲಿ ಎರಡು ಗುಂಪುಗಳನ್ನು ನೋಡಬಹುದು. ಒಂದು ಟೆಲಿಫೋನ್, ರೇಡಿಯೋ, ಟಿವಿ, ಛಾಯಾಪ್ರತಿಯಂತ್ರ ಮುಂತಾದವು ಹಾಗೂ ಇನ್ನೊಂದು ಟೈಪ್‍ರೈಟರ್ ಮತ್ತು ಕಂಪ್ಯೂಟರ್. ಟೆಲಿಫೋನ್, ರೇಡಿಯೋ, ಟಿವಿ ಇವುಗಳಲ್ಲಿ ಅವು ಯಂತ್ರಗಳು ಬಳಕೆಗೆ ಬಂದಾಗ ಆ ಮಾಧ್ಯಮಗಳಲ್ಲಿ ಕನ್ನಡವನ್ನು ಯಾವುದೇ ಬದಲಾವಣೆ ಇಲ್ಲದೇ ಬಳಸಬಹುದಾಗಿತ್ತು. ಆದರೆ ಟೈಪ್‍ರೈಟರ್ ಮತ್ತು ಕಂಪ್ಯೂಟರ್ ಹಾಗಿಲ್ಲ. ಅವುಗಳಲ್ಲಿ ಒಂದು ಭಾಷೆಯನ್ನು ಅಳವಡಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಹಾಗೆ ಮಾಡಲು ಆ ಭಾಷೆಯನ್ನು ಚೆನ್ನಾಗಿ ಬಲ್ಲ ಹಾಗೂ ಬೇಕಾದ ಪರಿಣತಿ ಹೊಂದಿರುವಂತಹ ತಂತ್ರಜ್ಞಾನಿಗಳ ಪರಿಶ್ರಮ ಅತ್ಯಗತ್ಯ. ಈ ದಿಸೆಯಲ್ಲಿ ಪ್ರಯತ್ನಗಳು ಸಾಗದಿದ್ದರೆ ಅದು ನಮ್ಮ ಭಾಷೆ ಮಾತ್ರವಲ್ಲದೆ ನಮ್ಮ ಸಂಸ್ಕೃ ತಿಯ ಮೇಲೆ ವಿಪರೀತ ಪರಿಣಾಮವನ್ನುಂಟುಮಾಡುತ್ತದೆ.
ಚಿಕ್ಕ ಉದಾಹರಣೆ: ಹಿಂದೆ ಮಕ್ಕಳು ಹೊರ ದೇಶಕ್ಕೆ ಹೋದಾಗ ಅವರುಗಳೊಡನೆ ಟೆಲಿಫೋನ್ ಮೂಲಕ ಕನ್ನಡದಲ್ಲೇ ಸಂಪರ್ಕವಿಟ್ಟುಕೊಳ್ಳಲು ತಂದೆತಾಯಿಯಂದಿರಿಗೆ ಏನೇನೂ ತೊಂದರೆ ಇರಲಿಲ್ಲ. ಆದರೆ ಈಗಿನ ಸಂದರ್ಭಕ್ಕನುಗುಣವಾಗಿ ಮಿಂಚಂಚೆ ಅಥವಾ ಇಮೇಲ್ ಮೂಲಕ ಕನ್ನಡದಲ್ಲೇ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಅದೂ ಅಲ್ಲದೆ ಈ ತಂತ್ರಾಂಶ ಸಾಂಪ್ರದಾಯಕ ಗಣಕ ಯಂತ್ರಗಳ ವ್ಯಾಪ್ತಿಯನ್ನು ಮೀರಿ ಮೊಬೈಲ್ ಫೋನ್ ಆದಿಯಾಗಿ ಹತ್ತು ಹಲವು ಉಪಕರಣಗಳನ್ನು ಒಳಗೊಂಡಿದೆ. ಈ ಕಾರಣಗಳಿಂದಾಗಿಯೇ ಶ್ರೀ ಪೂರ್ಣಚಂದ್ರತೇಜಸ್ವಿ ಅವರು ಹೇಳಿದ್ದು ಜಾಗತೀಕರಣದ ಈ ಸಂದರ್ಭದಲ್ಲಿ ಭಾರತದ ಎಲ್ಲಾ ದೇಶೀ ಭಾಷೆಗಳು ಅಪಾಯದ ಸ್ಥಿತಿಯಲ್ಲಿವೆ ಎಂಬುದು ನಿಸ್ಸಂಶಯ. ಈ ಹೇಳಿಕೆಗೆ ಪೂರಕವಾಗಿ ಶ್ರೀಮಾನ್ ನಿಟ್ಟೂರು ಶ್ರೀನಿವಾಸರಾಯರು ತಮ್ಮ ಆತ್ಮ ಚರಿತ್ರೆ `ನೂರರ ನೆನಪು' ಈ ಪುಸ್ತಕದಲ್ಲಿ ದಾಖಲಿಸಿರುವ ಸಂದರ್ಭ. ಅವರು ೧೯೨೦ರ ದಶಕದಲ್ಲಿ ತಮ್ಮ ವಕೀಲ ವೃತ್ತಿ ಆರಂಭಿಸಿದಾಗ ಕೋರ್ಟಿನ ವ್ಯವಹಾರಗಳು ಬಹುತೇಕ ಕನ್ನಡದಲ್ಲೇ ನಡೆಯುತ್ತಿದ್ದು ಕನ್ನಡದಲ್ಲಿಯೇ ದಾಖಲಾಗುತ್ತಿತ್ತು. ಆ ಸಮಯದಲ್ಲಿ ಚಲಾವಣೆಗೆ ಬಂದ ಟೈಪ್‍ರೈಟರ್ ಯಂತ್ರವು ಇಂಗ್ಲೀಷಿನಲ್ಲಿ ದಾಖಲಿಸುವುದನ್ನು ಬಹಳವಾಗಿ ಸರಳೀಕರಿಸಿ ಕಾಲಕ್ರಮೇಣ ಇಂಗ್ಲೀಷ್ ಭಾಷೆ ಕೋರ್ಟಿನಲ್ಲಿ ಕನ್ನಡ ಸ್ಥಾನವನ್ನು ಕಸಿಯಿತು. ಈಗ ನ್ಯಾಯಾಲಯಗಳಲ್ಲಿ ಕನ್ನಡದ ಬಳಕೆಗೆ ಹೋರಾಟ ನಡೆಸಬೇಕಾಗಿದೆ. ಆ ಸಮಯದ ಇನ್ನೊಂದು ಸಂಗತಿಯನ್ನೂ ಇಲ್ಲಿ ನೆನೆಯಬಹುದು. ಕನ್ನಡದ ಮುದ್ರಣ ಕಾರ್ಯದಲ್ಲಿ ಎದುರಾದ ಸಮಸ್ಯೆಗಳನ್ನು ಕಂಡು ಕನ್ನಡದ ಕಣ್ವ ಬಿ. ಎಂ. ಶ್ರೀ ಅವರು ಒತ್ತಕ್ಷರಗಳಿಲ್ಲದ ಲಿಪಿ ಸುಧಾರಣೆಯ ಪ್ರಸ್ತಾಪ ಮಾಡಿದರು. ಕನ್ನಡ ಅಕ್ಷರ ಮಾಲೆಯಲ್ಲಿ ರೂಢಿಯಾಗಿ ಬಂದಿರುವ ಕೆಲವು ಸಂಕೇತಗಳು ಅನಾವಶ್ಯಕವೆಂದೂ ಅವುಗಳನ್ನು ಬಿಟ್ಟುಬಿಟ್ಟರೆ ಅಥವಾ ಸುಧಾರಿಸಿದರೆ ಟೈಪ್‍ರೈಟರಿಗೂ ಮುದ್ರಣದ ಸಾಧನಗಳಿಗೂ ಅನುಕೂಲವಾಗುವುದೆಂದು ಅವರ ವಾದ. ಅವರ ಸುಧಾರಣೆಯನ್ನು ಕನ್ನಡ ಬಾವುಟದ ಒಂದು ಪುಟದಲ್ಲಿ ಸೂಚಿಸಿದರು. `ಏರಿಸಿ ಹಾರಿಸಿ ಕನ್ನಡದ ಬಾವುಟ' ಈ ಪದ್ಯ, ಇದು ಅನಾವಶ್ಯಕ ಮಾತ್ರವಲ್ಲದೆ ಅನಾನುಕೂಲವೆಂದು ಶ್ರೀಮಾನ್ ಡಿ. ವಿ. ಗುಂಡಪ್ಪನವರ ಪ್ರತಿವಾದ. ಬಹುಕಾಲದ ಅಭ್ಯಾಸವೇ ಒಂದು ಸೌಲಭ್ಯ ಅದನ್ನು ತಪ್ಪಿಸಿ ಬೇರೆ ಹೊಸದೊಂದು ಅಭ್ಯಾಸವನ್ನು ಮಾಡಿಸುವುದು ಸುಲಭವಾದ ಕೆಲಸವಲ್ಲ. ಟೈಪ್‍ರೈಟರ್, ಮಾನೋಟೈಪ್ ಮೊದಲಾದ ಯಂತ್ರಗಳಾದರೂ ಇಂಗ್ಲೀಷ್ ಶಿಲ್ಪಿಗಳಿಂದ ಅವರ ಭಾಷೆಗಳಿಗಾಗಿಯೇ ತಯಾರಾದವು. ಅಂತಹ ಯಂತ್ರ ಶಿಲ್ಪಿಗಳು ಕನ್ನಡಿಗರಲ್ಲಿ ಹುಟ್ಟಿ, ತಮ್ಮ ಚತುರಥೆಯನ್ನು ಕನ್ನಡಕ್ಕಾಗಿ ಉಪಯೋಗಿಸಿದರೆ ರೂಢಿಯಲ್ಲಿರುವ ಕನ್ನಡದ ಅಕ್ಷರ ರೂಪಗಳಿಗೆ ತಕ್ಕ ಯಂತ್ರಗಳನ್ನು ಅವರು ಅಳವಡಿಸಿಯಾರು ಎಂದು ಡಿ. ವಿ. ಜಿ. ಅವರು ಮನೋಜ್ಞವಾಗಿ ನುಡಿದರು. ಆದ್ದರಿಂದ ತಂತ್ರಜ್ಞಾನವು ನಾಗಾಲೋಟದಿಂದ ಓಡುತ್ತಿರುವ ಈ ಸಮಯದಲ್ಲಿ ನಮ್ಮ ದೇಶೀ ಭಾಷೆಗಳು ಹಿಂದುಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಮೊದಲ ಕೆಲಸ.
ನಿತ್ಯ ಜೀವನದಲ್ಲಿ ಕನ್ನಡದಲ್ಲಿ ವ್ಯವಹರಿಸಲು ನಮಗೆ ಬೇಕಾದ ತಂತ್ರಾಂಶಗಳು ಯಾವುವು? 1) ಕನ್ನಡ ಟೈಪ್ ಮಾಡಲು ವ್ಯವಸ್ಥೆ 2) ಟೈಪ್ ಮಾಡಿದ್ದನ್ನು ಇನ್ನೊಂದೆಡೆಗೆ ರವಾನಿಸಲು ಹಾಗೂ ಇತರ ಉಪಕರಣಗಳಲ್ಲಿ ನೋಡಲು ಬರುವ ಮಾದರಿಯಲ್ಲೇ ಉಳಿಸಲು ವ್ಯವಸ್ಥೆ. ಟೈಪಿಂಗ್ ತಂತ್ರಾಂಶದಲ್ಲಿ ಏನೆಲ್ಲಾ ಇರಬೇಕು, ಸುಲಭವಾಗಿ ಹಾಗೂ ವೇಗವಾಗಿ ಟೈಪ್ ಮಾಡಲು ಒಂದು ಸುವ್ಯವಸ್ಥಿತ ಕೀಲಿಮಣೆ, ಪಠ್ಯವನ್ನು ಪುಟದಲ್ಲಿ ಹೊಂದಿಸುವಾಗ ಅಂದರೆ Justification ಮಾಡುವಾಗ ಪದಗಳನ್ನು ಹೊಡೆಯಬೇಕಾದ ಅಗತ್ಯ ಬಿದ್ದಲ್ಲಿ ಆ ಪದವನ್ನು ಹೊಡೆಯ ಬಹುದಾದ ಸ್ಥಾನಗಳ ನಿರ್ವಹಣೆ ಇದರ ಅಗತ್ಯ ಡಿ. ಟಿ. ಪಿ. ಮಾಡಿಸಿದ ಪುಸ್ತಕಗಳ ಅಚ್ಚು ನೋಡುವವರಿಗೆ ಚೆನ್ನಾಗಿ ತಿಳಿದಿದೆ. ಅಲ್ಲದೆ ತಪ್ಪಾಗಿ ಟೈಪಿಸಿದ ಪದಗಳನ್ನು ಗುರುತಿಸಿ ಸರಿ ಮಾಡಲು ಒಂದು ನಿಘಂಟು. ಕನ್ನಡವನ್ನು ಟೈಪ್ ಮಾಡಲು ಮುಕ್ತವಾಗಿ ಸಿಗುವ ತಂತ್ರಾಂಶಗಳು ನುಡಿ, ಗೂಗಲ್ ಲಿಪ್ಯಂತರ ಯೋಜನೆ ಹಾಗೂ ಕಳೆದ ವರ್ಷ ಹೊರ ಬಂದ ಶ್ರೀ ಲೋಹಿತ್ ಶಿವಮೂರ್ತಿ ಅವರ ಪದ ಮುಂತಾದವು. ಆದರೆ ಇವುಗಳಲ್ಲಿ ಯಾಂತ್ರಿಕವಾಗಿ ವೇಗವಾಗಿ ಟೈಪಿಸಲು ತೊಡಕುಗಳಿದ್ದು, ಈ ದಿಸೆಯಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಡಿಜಿಟಲ್ ಪ್ರಪಂಚದಲ್ಲಿ ಕನ್ನಡದ ಬಳಕೆಯ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಬಹಳ ಕಡಿಮೆ ಇರುವುದಕ್ಕೆ ಇದೇ ಮುಖ್ಯ ಕಾರಣ.
ಅಲ್ಲದೇ ಒಂದು ದೊಡ್ಡ ಹಲವು ಭಾಗಗಳನ್ನೊಳಗೊಂಡ ಲೇಖನವನ್ನೋ ಅಥವಾ ಪುಸ್ತಕವನ್ನೋ ಡಿ. ಟಿ. ಪಿ. ಮಾಡಲು ಬರುವಂತಹ ತಂತ್ರಾಂಶಗಳು ಸಹ ಅಗತ್ಯ. ಈ ದಿಕ್ಕಿನಲ್ಲಿ `ಕನ್ನಡ ಟೆಕ್' ಎಂಬ ತಂತ್ರಾಂಶ ಲಭ್ಯವಿದೆ. ಇದೇ ತಂತ್ರಾಂಶವನ್ನು ಉಪಯೋಗಿಸಿ ಮೈಸೂರು ವಿಶ್ವವಿದ್ಯಾನಿಲಯದ ನಾಲ್ಕು ಸಂಪುಟಗಳ ಬೃಹತ್ ಇಂಗ್ಲೀಷ್ ಕನ್ನಡ ನಿಘಂಟನ್ನು ಸಿ.ಡಿ. ಯಲ್ಲಿ ಅಳವಡಿಸಲಾಗಿದೆ. ಇದರಿಂದ ಆ ಉತ್ತಮ ನಿಘಂಟಿನ ವ್ಯಾಪ್ತಿ ಬಹಳ ಪಟ್ಟು ಹೆಚ್ಚಿದೆ. ಈ ನಿಘಂಟನ್ನು ಮೈಸೂರು ವಿಶ್ವವಿದ್ಯಾನಿಲಯದ ಅಂತರ್ಜಾಲ ತಾಣದಲ್ಲಿ ಲಭ್ಯವಾಗುವ ಹಾಗೆ ಈಗ ಮಾಡಬೇಕಾಗಿದೆ. ಇನ್ನೂ ಮುಂದುವರೆದು ಡಿಜಿಟಲ್ ಮೂಲ ಪ್ರತಿಯನ್ನು ಸರಿಯಾದ ಶಿಷ್ಟತೆಗೆ ಅನುಗುಣವಾಗಿ ತಯಾರಿಸಿದಲ್ಲಿ ಅದನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ಉಪಯೋಗಿಸಬಹುದು. ಉದಾಹರಣೆಗೆ ಒಂದು ಪುಸ್ತಕವನ್ನು ಕಂಪ್ಯೂಟರ್‍ನಲ್ಲಿ ಮುದ್ರಣಕ್ಕಾಗಿ ತಯಾರಿಸಿದಾಗ ಅಲ್ಲಿಗೇ ಸೀಮಿತವಾಗದೆ ಆ ಡಿಜಿಟಲ್ ರೂಪವು ಹೈಪರ್ ಲಿಂಕ್‍ಗಳನ್ನೊಳಗೊಂಡು ಅಂತರ್ಜಾಲದಲ್ಲಿ ನೀಡಬಹುದಾದ ವ್ಯವಸ್ಥೆ ಹೊಂದಿರಬೇಕು. ಹಾಗಿದ್ದಲ್ಲಿ ಮುದ್ರಿತ ಪುಸ್ತಕ ಮಾತ್ರವಲ್ಲದೆ, ಅಂತರ್ಜಾಲದಲ್ಲಿ ಸಹ ಸಿಗುವ ಹಾಗೆ ಇರಿಸಿ ಅದರ ವ್ಯಾಪ್ತಿಯನ್ನು ಪ್ರಪಂಚದಾದ್ಯಂತ ಹೆಚ್ಚಿಸಬಹುದು. ವಿಶೇಷವಾಗಿ Ph. D. ಗಾಗಿ ಸಿದ್ಧಪಡಿಸುವ ಮಹಾಪ್ರಬಂಧಗಳನ್ನು ಈ ಮಾದರಿಯಲ್ಲಿ ಸಿದ್ಧಪಡಿಸಿದರೆ ಸಂಶೋಧನೆಗಳನ್ನು ಬಹಳ ವೇಗದಿಂದ ಪ್ರಪಂಚದಾದ್ಯಂತ ವಿದ್ವಾಂಸರ ಗಮನಕ್ಕೆ ತರಬಹುದು. ಟೈಪ್ ಮಾಡಿದ ಪಠ್ಯವನ್ನು ಉಳಿಸಲು ಈಗ ಸಾಕಷ್ಟು ಜನರು ಅಥವಾ ತಂತ್ರಾಂಶಗಳು ಯೂನಿಕೋಡ್ ಉಪಯೋಗಿಸುತ್ತಿದ್ದು ಅದೇ ಸರಿಯಾದ ಮಾರ್ಗವೆಂದೆನಿಸುತ್ತದೆ. ಈಗಾಗಲೇ ಪುಸ್ತಕ ರೂಪದಲ್ಲಿರುವ ಜ್ಞಾನ ಭಂಡಾರವನ್ನು ಇಂಟರ್‍ನೆಟ್ ಮೂಲಕ ಸಿಗುವ ಹಾಗೆ ಮಾಡುವುದು ಸಹ ಬಹಳ ಅಗತ್ಯ. ಈ ಭಂಡಾರದ ಗಾತ್ರ ಗಮನಿಸಿದಾಗ ಎಲ್ಲವನ್ನೂ ಹೊಸದಾಗಿ ಕಂಪ್ಯೂಟರ್‍ಗೆ ಉಣಿಸುವುದು ಅಸಾಧುವೆನಿಸುತ್ತದೆ. ಬದಲಾಗಿ ಆ ಪುಟಗಳನ್ನು ಸ್ಕ್ಯಾನ್ ಮಾಡಿ ಬಿಂಬ ರೂಪದಲ್ಲಿ ಉಳಿಸಿ ಇಂಟರ್‍ನೆಟ್‍ನಲ್ಲಿ ನೀಡುವುದು ಒಂದು ಉಪಾಯ. ಹಾಗೆ ಇರಿಸಿದ ಹಲವು ಸಾವಿರಾರು ಲಕ್ಷಾಂತರ ಪುಟಗಳನ್ನು ಗುರುತಿಸಲು ಹಾಗೂ ತಲುಪಲು ಅನೇಕ ಬಗೆಯ ತಂತ್ರಾಂಶ ಸಲಕರಣೆಗಳು ಅವಶ್ಯಕ. ಅವುಗಳಲ್ಲಿ ಬಹು ಮುಖ್ಯವಾದದ್ದು Optical Character Recognition ಅಥವಾ O.C.R. ಎಂಬ ತಂತ್ರಾಂಶ. ಇದು ನಮಗೆ ಪುಟ ಬಿಂಬ ರೂಪದಲ್ಲಿದ್ದರೂ ಅದರಲ್ಲಿರುವ ಪಠ್ಯವು ಹುಡುಕಾಟಕ್ಕೆ ಸಿಗುವ ಹಾಗೆ ಮಾಡುತ್ತದೆ. ಇಂತಹ ಕೆಲ ಗ್ರಂಥ ಸಂಗ್ರಹಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಅಂದರೆ ಸಿ.ಡಿ. ರೂಪದಲ್ಲಿ ಅಥವಾ ಅಂತರ್ಜಾಲ ತಾಣಗಳಲ್ಲಿ ನೋಡಬಹುದು. www.sirinudi.org ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದರೆ ಅಲ್ಲಿ ಅನೇಕ ಮಾದರಿಗಳು ನೋಡ ಸಿಗುತ್ತವೆ. ಉದಾಹರಣೆಗೆ ವಿಜ್ಞಾನ ಮಾಸ ಪತ್ರಿಕೆ, ಸಾಕ್ಷಿ ಪತ್ರಿಕೆ, ಗುರುಗೋಹಗಾನನಿಲಯದ ಸಂಗೀತ ಪ್ರಕಟಣೆಗಳು ಮತ್ತು ಪ್ರಜಾವಾಣಿ ಅಂಕಣ ಹಳತು ಹೊನ್ನುವಿನಲ್ಲಿ ಬರೆಯಲ್ಪಡುವ ಹಳೆಯ ಪುಸ್ತಕಗಳ ಸಂಗ್ರಹ. ವಿಜ್ಞಾನ ಮಾಸ ಪತ್ರಿಕೆ ಶ್ರೀ ಬೆಳ್ಳಾವೆ ವೆಂಕಟ ನಾರಾಯಣಪ್ಪರವರು ೧೯೧೭-೧೮ ಆ ಸಮಯದಲ್ಲಿ ವಿಜ್ಞಾನದ ಬೆಳವಣಿಗೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಆರಂಭಿಸಿ ಎರಡು ವರ್ಷ ನಡೆಸಿದ ಉತ್ತಮ ಪ್ರಯತ್ನ. ಈಗಲೂ ಅದರಲ್ಲಿರುವ ಲೇಖನಗಳು ಪ್ರಸ್ತುತವಾಗಿವೆ. ಶ್ರೀ ಗೋಪಾಲಕೃಷ್ಣ ಅಡಿಗರು ಸಂಪಾದಿಸಿ ಹಲವು ವರ್ಷಗಳು ಪ್ರಕಟಿಸಿದ ಸಾಕ್ಷಿ ಪತ್ರಿಕೆಯಲ್ಲಿ ಕನ್ನಡದ ಆ ಸಮಯದ ಅನೇಕ ಸಾಹಿತ್ಯ ಕೃತಿಗಳು ಮತ್ತು ಹಲವು ಆ ಸಮಯದ ವಿದ್ಯಮಾನಗಳ ಚರ್ಚೆಗಳು ಪ್ರಕಾಶಗೊಂಡಿದ್ದವು. ಆದರೆ ಪ್ರತಿಗಳು ಲಭ್ಯವಿರಲಿಲ್ಲ. ಸಾಕ್ಷಿಯ ಎಲ್ಲಾ ಸಂಪುಟಗಳು ಈಗ ಸಿರಿನುಡಿ ಅಂತರ್ಜಾಲ ತಾಣದಲ್ಲಿ ಸಿಗುತ್ತವೆ. ಶ್ರೀ ಮತ್ತೂರು ಕೃಷ್ಣಮೂರ್ತಿ ಅವರ ಅಣ್ಣ ಶ್ರೀ ಎಂ. ಆರ್. ಶಂಕರಮೂರ್ತಿ ಅವರು ಬಹಳ ಶ್ರಮ ವಹಿಸಿ ಅಚ್ಚುಕಟ್ಟಾಗಿ ಸಂಪಾದಿಸಿದ ಕರ್ನಾಟಕ ಸಂಗೀತದ ಅನೇಕ ಕೃತಿಗಳ ಸಂಗ್ರಹವು ಸಿರಿನುಡಿ ಜಾಲ ತಾಣದಲ್ಲಿ ಸಿಗುತ್ತದೆ. ಅಂತೆಯೆ ಶ್ರೀ ಕೆ. ಎಸ್. ಮಧುಸೂದನ ಅವರು ಹಳತು ಹೊನ್ನು ಅಂಕಣದಲ್ಲಿ ಪರಿಚಯಿಸುತ್ತಿದ್ದ ಅನೇಕ ಹಳೆಯ ಉತ್ತಮ ಪುಸ್ತಕಗಳು ಪೂರ್ಣವಾಗಿ ನೋಡಲು ಬರುತ್ತವೆ. ಶ್ರೀಮಾನ್ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರೋತ್ಸಾಹದಿಂದ ಹೊರಬಂದ ಶ್ರೀ ಜಯಚಾಮರಾಜೇಂದ್ರ ಗ್ರಂಥ ರತ್ನಮಾಲೆ ಎಂಬ ಪುಸ್ತಕ ಮಾಲಿಕೆಯ ಅಡಿಯಲ್ಲಿ ವೇದ, ಉಪನಿಷತ್ತು ಪುರಾಣ ಮುಂತಾದ ಅನೇಕ ವೈದಿಕ ಸಾಹಿತ್ಯದ ರತ್ನಗಳು ಅನೇಕ ವಿದ್ವಾಂಸರುಗಳ ಸಹಾಯದಿಂದ ಮೂಲ ಮತ್ತು ಕನ್ನಡ ಅನುವಾದಗಳೊಡನೆ ಹೊರ ಬಂದವು. ಹೆಚ್ಚು ಪ್ರತಿಗಳು ಮುದ್ರಣಗೊಳ್ಳದ ಕಾರಣದಿಂದ ಅವುಗಳು ಅಲಭ್ಯವಾಗಿದ್ದವು. ಈಗ ಈ ಗ್ರಂಥಗಳ ಸಂಗ್ರಹ ಸಿ.ಡಿ. ರೂಪದಲ್ಲಿ ಡಿಜಿಟಲ್ ಮಾಧ್ಯಮದ ಸೌಲಭ್ಯಗಳೊಡನೆ ಸಿಗುತ್ತದೆ. ಸುಪ್ರಸಿದ್ಧ ವೈದ್ಯ ಹಾಗೂ ಸಾಹಿತಿ ಡಾ|| ಎಂ. ಶಿವರಾಮು ರಾಶಿ ಅವರು ೧೯೪೨ರಲ್ಲಿ ಆರಂಭಿಸಿ ಇಪ್ಪತ್ತೈದು ವರ್ಷಗಳು ಪ್ರಕಟಿಸಿದ ಕೊರವಂಜಿ ಮಾಸ ಪತ್ರಿಕೆಯು ಸಿ.ಡಿ. ರೂಪದಲ್ಲಿ ಲಭ್ಯವಿದೆ. ಇದರಲ್ಲಿರುವ ಜಾಹೀರಾತುಗಳು ಆ ಕಾಲದ ಚಿತ್ರಣವನ್ನು ಕೊಡುತ್ತವೆ. ಅಲ್ಲದೇ ವಿಶ್ವವಿಖ್ಯಾತ ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರು ತಮ್ಮ ವೃತ್ತಿ ಜೀವನವನ್ನು ಕೊರವಂಜಿಯಿಂದಲೇ ಪ್ರಾರಂಭಿಸಿರುವುದು. ಅವರ ಮೊದಲ ವ್ಯಂಗ್ಯ ಚಿತ್ರಗಳು ಇದರಲ್ಲಿ ದಾಖಲಾಗಿವೆ. ಇನ್ನೊಂದು ಮಹತ್ವದ ಸಂಗ್ರಹ ಭಾರತೀಯ ವಿದ್ಯಾಭವನ ಪ್ರಕಟಿಸಿರುವ ಇಪ್ಪತ್ತೈದು ಸಂಪುಟಗಳ `ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ'. ಇದರಲ್ಲಿ ಕನ್ನಡ OCR ಉಪಯೋಗಿಸಿ ಪುಟಗಳಲ್ಲಿ ಬಂದಿರಬಹುದಾದ ಪದಗಳನ್ನು ಹುಡುಕುವ ಸೌಲಭ್ಯವಿದೆ. ಕರ್ನಾಟಕ ವಿಧಾನ ಪರಿಷತ್ತು ಹಾಗೂ ವಿಧಾನ ಸಭೆಯ ನಡವಳಿಕೆಗಳನ್ನು ಈ ಮಾದರಿಯಲ್ಲಿ ಹೊರತಂದು ಅಂತರ್ಜಾಲ ತಾಣದಲ್ಲಿ ಸಿಗುವ ಹಾಗೆ ಮಾಡಿದರೆ ಬಹಳ ಉಪಯೋಗವಿದ್ದು ಈ ಯೋಜನೆಯು ಸರ್ಕಾರದ ಮುಂದಿದೆ. ಹೊಸ ಮಾಧ್ಯಮಕ್ಕಾಗಿಯೇ ಹೊಸ ಮಾಧ್ಯಮದಲ್ಲಿಯೇ ಸೃಷ್ಟಿಯಾಗುತ್ತಿರುವ ಅನೇಕ ಉದಾಹರಣೆಗಳಿವೆ. ನಮಗೆ ಮಾಹಿತಿ ತಂತ್ರಜ್ಞಾನದ ಉಪಯೋಗದ ಒಂದು ಇಣುಕು ನೋಟವನ್ನು ನೀಡುತ್ತದೆ. ಈ ದಿಕ್ಕಿನಲ್ಲಿ ಮುಂದುವರಿಯಲು ಬಹಳ ಅವಕಾಶಗಳಿವೆ. ಅಮೇರಿಕೆಯ ಪ್ರಸಿದ್ಧ ಭಾಷಾಶಾಸ್ತ್ರಜ್ಞ, Professor Sheldon Pollock ಅವರು ಪ್ರಪಂಚದ ಹಲವು ಭಾಷೆಗಳ ಇತಿಹಾಸವನ್ನು ಗಮನಿಸಿ ಅತ್ಯಂತ ಸುವ್ಯವಸ್ಥಿತ ಆಧಾರ ಸಹಿತ ಇತಿಹಾಸವಿರುವ ಭಾಷೆಯೆಂದರೆ ಕನ್ನಡ ಮಾತ್ರ ಎಂದಿದ್ದಾರೆ. ಕನ್ನಡದ ಈ ಸುವ್ಯವಸ್ಥಿತ ಆಧಾರ ಸಹಿತ ಇತಿಹಾಸವನ್ನು ಸಮರ್ಥವಾಗಿ ಕಾಣಿಸಲು ಇಂಟರ್‍ನೆಟ್ ಉತ್ತಮವಾದ ಮಾಧ್ಯಮ. ಶಿಕ್ಷಣ ಕ್ಷೇತ್ರದಲ್ಲಂತು ಈ ಮಾಹಿತಿ ತಂತ್ರಜ್ಞಾನಾಧಾರಿತ ಸೌಲಭ್ಯಗಳು ಪ್ರಪಂಚದಾದ್ಯಂತ ಕ್ರಾಂತಿಯನ್ನೇ ಉಂಟು ಮಾಡಿವೆ. ಕಲಿಕೆಯನ್ನು ನಾಲ್ಕು ಗೋಡೆಗಳ ಮಧ್ಯದೊಳಗಿನಿಂದ ಬಿಡಿಸಿ ಮುಕ್ತವಾಗಿಸಿದೆ. ಒಬ್ಬ ಒಳ್ಳೆಯ ಶಿಕ್ಷಕಿಯಿಂದ ಇದುವರೆಗೆ ನೂರಿನ್ನೂರು ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುತ್ತಿದ್ದರೆ ಇನ್ನು ಮೇಲೆ ಆ ಅನುಕೂಲ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಿಗುವಂತೆ ಆಗಿದೆ. ಆದರೆ ಇವುಗಳನ್ನು ಕನ್ನಡ ಭಾಷೆಗೆ ಬಳಸಿಕೊಳ್ಳುವಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದು ಅವುಗಳನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ. ಇದರಿಂದ ಉತ್ತಮ ಶಿಕ್ಷಕರ ಉಪಯೋಗದ ವ್ಯಾಪ್ತಿಯನ್ನು ಅನೇಕ ಪಟ್ಟು ಹೆಚ್ಚಿಸಬಹುದು. ಮುದ್ರಿತ ಪುಸ್ತಕಗಳ ಪ್ರವೇಶದಿಂದ ಅನೇಕ ಹಿಂದಿನ ಪಂಪ, ರನ್ನ, ಕುಮಾರವ್ಯಾಸ ಇತ್ಯಾದಿ ಕವಿಗಳ ಸಾಹಿತ್ಯವನ್ನು ಬೆಳಕಿಗೆ ತೆರೆಯಲಾಯಿತು. ಆದರೆ ಇನ್ನೂ ಎಷ್ಟು ಕವಿಗಳ ತಾಳೆ ಗರಿ ಸಂಗ್ರಹಗಳು ಬೆಳಕಿಗೆ ಬರಬೇಕಾಗಿವೆ. ಪುಸ್ತಕ ಮುದ್ರಣಕ್ಕಿಂತ ಸಮಯ ಹಾಗೂ ವೆಚ್ಚದಲ್ಲಿ ಸುಲಭ ಸಾಧ್ಯವಾದ ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿ ಈ ಕೆಲಸವನ್ನು ತ್ವರಿತವಾಗಿ ಮುಂದುವರಿಸಬಹುದು. ತಾಳೆ ಗರಿಗಳನ್ನು ಅಂತರ್ಜಾಲ ತಾಣದಲ್ಲಿ ಸಿಗುವ ಹಾಗೆ ಮಾಡಿದರೆ ಅವುಗಳನ್ನು ಪರಿಷ್ಕರಿಸಿ ಸಂಪಾದಿಸುವ ಕಾರ್ಯವನ್ನು ಪ್ರಪಂಚದ ವಿವಿಧ ಭಾಗಗಳಿಂದ ಅನೇಕ ವಿದ್ವಾಂಸರು ಸೇರಿ ಕ್ಷಿಪ್ರಗತಿಯಲ್ಲಿ ಮಾಡಬಹುದು. ಈ ಅನೇಕ ಸಾಧ್ಯತೆಗಳ ಕಡೆಗೆ ಕರ್ನಾಟಕ ಸರ್ಕಾರ ಮಾತ್ರವಲ್ಲದೇ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕದಲ್ಲಿರುವ ಇತರ ವಿಶ್ವವಿದ್ಯಾನಿಲಯಗಳು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಹಲವು ಸರ್ಕಾರೇತರ ಸಂಸ್ಥೆಗಳು ಗಮನ ಹರಿಸಿ ಕಂಪ್ಯೂಟರ್‍ನಲ್ಲಿ ಕನ್ನಡದ ಬಳಕೆಯನ್ನು ಇಂಗ್ಲೀಷ್ ಭಾಷೆಯಲ್ಲಿ ನಡೆಯುವುದರ ಮಟ್ಟಕ್ಕೆ ಅಗತ್ಯವಾಗಿ ತ್ವರಿತವಾಗಿ ತರಬೇಕಾಗಿದೆ. ವಿಜ್ಞಾನದಲ್ಲಾಗಲೀ, ತಂತ್ರಜ್ಞಾನದಲ್ಲಾಗಲೀ ಉತ್ಕೃಷ್ಟ ಸಂಶೋಧನೆಗಳು ನಾವು ನಮ್ಮ ಸುತ್ತು ಮುತ್ತಲಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ಆಗುತ್ತದೆಂದು ನನ್ನ ದೃಢ ನಂಬಿಕೆ. ಆದುದರಿಂದ ಕನ್ನಡ ಕಂಪ್ಯೂಟರೀಕರಣದ ಸವಾಲುಗಳನ್ನು ಎದುರಿಸಿ ಪರಿಹರಿಸಿಕೊಂಡಲ್ಲಿ ಆ ಸಮಯದಲ್ಲೇ ಕೆಲ ಹೊಸ ಸಂಶೋಧನೆಗಳು ಕನ್ನಡಿಗರಿಂದ ಅನಾವರಣಗೊಳ್ಳುತ್ತವೆ ಎಂದು ಆಶಿಸುತ್ತೇನೆ.