ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಜನರನ್ನು ಒಟ್ಟುಗೂಡಿಸುವಲ್ಲಿ ಮಹತ್ವದ ಸಾಂಕೇತಿಕ ಪಾತ್ರವನ್ನು ವಹಿಸಿದ್ದ ಚರಕವು ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳದೆ ಇಂದಿನ ಅಂತರ್ಜಾಲ ಯುಗದಲ್ಲೂ ಸಹ ಅಷ್ಟೇ ಮಹತ್ವದ ಸಾಂಕೇತಿಕ ಚೈತನ್ಯವಾಗಬಹುದು ಎಂಬ ಮಾತನ್ನು ನಿಮ್ಮ ಮುಂದಿಡುವುದು ಈ ಭಾಷಣದ ಉದ್ದೇಶ. ಈ ವಿಷಯದ ಆಯ್ಕೆಗೆ ಒಂದು ಮೂಲ ಕಾರಣ ಇತ್ತೀಚೆಗೆ ಹೊರಬಂದ `Music of the Spinning Wheel Mahatma Gandhi's Manifesto for the internet age' ಎಂಬ ಶ್ರೀ ಸುಧೀಂದ್ರ ಕುಲಕರ್ಣಿ ಅವರ ಪುಸ್ತಕ. ಅದರ ಜೊತೆಗೆ ರಂಗ ಕಲಾವಿದ ಶ್ರೀ ಪ್ರಸನ್ನ ಅವರು ರಚಿಸಿದ `ಯಂತ್ರಗಳನ್ನು ಕಳಚೋಣ ಬನ್ನಿ' ಪುಸ್ತಕವನ್ನು ಸಹ ಪರಿಶೀಲಿಸಲಾಗಿದೆ. ಮೊದಲಿಗೆ ನೂಲುವ ಚರಕವನ್ನು ನಮ್ಮೆಲ್ಲರನ್ನೂ ಒಂದುಗೂಡಿಸುವ ಶಕ್ತಿಯ ಸಂಕೇತವನ್ನಾಗಿ ಸ್ವೀಕರಿಸಿದ ಸಂದರ್ಭ ಮತ್ತು ಕಾರಣಗಳನ್ನು ಅವಲೋಕಿಸೋಣ. ಈಸ್ಟ್ ಇಂಡಿಯಾ ಕಂಪನಿಯವರು ನಮ್ಮ ದೇಶಕ್ಕೆ ವ್ಯಾಪಾರದ ಉದ್ದೇಶದಿಂದ ಬಂದ ಸಮಯದಲ್ಲಿ ಭಾರತದಲ್ಲಿ ತಯಾರದ ಹತ್ತಿ, ಉಣ್ಣೆ ಹಾಗೂ ರೇಷ್ಮೆ ಬಟ್ಟೆಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಇತ್ತು. ಬಟ್ಟೆಯ ತಯಾರಿಕೆಯ ಮೇಲೆ ಹಿಡಿತ ಗಳಿಸಿದ್ದ ಭಾರತವು ಕೈಮಗ್ಗ ಉದ್ದಿಮೆಯ ಕಾರಣದಿಂದಾಗಿ ಸಂಪದ್ಭರಿತವಾಗಿತ್ತು ಎನ್ನುವುದು ಸರ್ವವಿಧಿತ. ಅದರಲ್ಲೂ ನಮ್ಮಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಎಲ್ಲಾ ದೇಶಗಳಲ್ಲೂ ಬಹಳ ಬೇಡಿಕೆಯಿತ್ತು. ಈ ಕೈಮಗ್ಗ ಉದ್ದಿಮೆಯು ದೇಶದ ಎಲ್ಲೆಡೆಗಳಲ್ಲೂ ಸಮಾನವಾಗಿ ವ್ಯಾಪಿಸಿಕೊಂಡಿದ್ದು, ಹತ್ತಿ ನೇಕಾರಿಕೆ ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿತ್ತು. ಶ್ರೀ ಪ್ರಸನ್ನ ಅವರು ಹೇಳುವ ಹಾಗೆ ೧೮ನೇ ಶತಮಾನದಲ್ಲಿ ಸದ್ದಿರದ ಸ್ಥಿತ್ಯಂತರವೊಂದು ಎರಡು ಘಟ್ಟಗಳಲ್ಲಿ ನಡೆದು ಹೋಗಿತ್ತು.
ಕೈಗಾರಿಕಾ ಕ್ರಾಂತಿಯ ಮೊದಲ ಹಂತದಲ್ಲಿ ಇಂಗ್ಲೆಂಡಿನಲ್ಲಿ ನೂಲಿನ ಗಿರಣಿಗಳನ್ನು ಸ್ಥಾಪಿಸಲಾಗಿತ್ತು. ಮೊದಲು ಇಲ್ಲಿ ಬೆಳೆದ ಹತ್ತಿಯನ್ನು ಹೊರಕಳುಹಿಸಿ ಗಿರಣಿಯ ನೂಲನ್ನು ಇಲ್ಲಿನ ಮಗ್ಗಗಳಿಗೆ ಒದಗಿಸಲಾಯಿತು. ಹೀಗೆ ಖರೀದಿಸಿದ ಹತ್ತಿಯನ್ನು ಅಲ್ಲಿನ ಸ್ಪಿನ್ನಿಂಗ್ ಮಿಲ್ಲುಗಳಿಗೆ ಒದಗಿಸಿ ನೂಲಾಗಿ ಪರಿವರ್ತಿಸಿ ನಮ್ಮ ನೇಕಾರರಿಗೆ ಮಾರತೊಡಗಿದರು. ಅಷ್ಟರಲ್ಲಿ ರಾಜಕೀಯವಾಗಿ ಪ್ರಬಲಗೊಳ್ಳತೊಡಗಿದ್ದ ಬ್ರಿಟೀಷರು ನಮ್ಮ ಮೇಲೆ ನಿಯಂತ್ರಣ ಸಾಧಿಸಿದ್ದರು.
ಎರಡನೆಯ ಘಟ್ಟದಲ್ಲಿ ದೊಡ್ಡ ಯಾಂತ್ರಿಕ ಮಗ್ಗಗಳುಳ್ಳ ಕಾರ್ಖಾನೆಗಳಲ್ಲಿ ನೂಲಿನಿಂದ ಬಟ್ಟೆಯನ್ನೇ ತಯಾರಿಸಿ ಅದನ್ನು ಭಾರತದಲ್ಲಿ ಮಾರತೊಡಗಿದರು. ಹೀಗೆ ಮೊದಲ ಹಂತದಲ್ಲಿ ಚರಕಗಳಿಂದ ನೂಲು ತೆಗೆಯುತ್ತಿದ್ದ ಲಕ್ಷಾಂತರ ಮಹಿಳೆಯರು ಉದ್ಯೋಗ ವಂಚಿತರಾದರೆ ಎರಡನೆಯ ಘಟ್ಟದಲ್ಲಿ ಲಕ್ಷಾಂತರ ನೇಕಾರರು ತಮ್ಮ ಕೆಲಸ ಕಳೆದುಕೊಂಡರು. ಕೈಮಗ್ಗದ ಉದ್ದಿಮೆಯನ್ನು ಮಣಿಸುವುದು ಅಷ್ಟೊಂದು ಸರಳವಾದ ಕೆಲಸವಾಗಿರಲಿಲ್ಲ. ಅದರ ಸಫಲತೆಗೆ ತಂತ್ರಜ್ಞಾನವು ಎಷ್ಟರ ಮಟ್ಟಿಗೆ ಕಾರಣವೋ ಅದಕ್ಕಿಂತ ಹೆಚ್ಚು ಬ್ರಿಟಿಷರ ನೆರವಿಗೆ ಬಂದದ್ದು ಅವರ ವಸಾಹತುಶಾಹಿ ರಾಜಕೀಯ. ೧೮೧೩ರಲ್ಲಿ `British House of Commons' ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರಗಳ ಬಗ್ಗೆ ನಡೆಸಿದ ಒಂದು ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿ ನೀಡಿದ ಎಚ್. ಎಚ್. ವಿಲ್ಸನ್ ಎಂಬ ಮಹನೀಯರು ಹೀಗೆ ನುಡಿದಿದ್ದಾರೆ; ಭಾರತದ ನೇಕಾರನ ಉತ್ಪಾದನ ಸಾಮರ್ಥ್ಯವನ್ನು ಕುಗ್ಗಿಸಲೆಂದೇ ಕೈಮಗ್ಗದ ಬಟ್ಟೆಗಳ ಮೇಲೆ ಹೆಚ್ಚುವರಿ ಕರವನ್ನು ವಿಧಿಸಲಾಯಿತು. ಅವುಗಳ ಮಾರಾಟವನ್ನೇ ನಿರ್ಬಂಧಿಸಲಾಯಿತು. ಕೈಮಗ್ಗದ ಬಟ್ಟೆಗಳ ಮೇಲೆ ಹೆಚ್ಚುವರಿ ಕರವನ್ನು ವಿಧಿಸಲು ವಸಾಹತುಶಾಹಿ ರಾಜಕೀಯವನ್ನು ಬಳಸಿಕೊಂಡು ಈ ರೀತಿ ಮಾಡದೆ ಹೋಗಿದ್ದರೆ ಮ್ಯಾಂಚೆಸ್ಟರ್ ಹಾಗೂ ಹೊಯ್‍ಸ್ಲೇಗಳ ನಮ್ಮ ಮಿಲ್ಲುಗಳನ್ನೇ ಮುಚ್ಚಬೇಕಾಯಿತು. ಶಕ್ತಿಶಾಲಿಯಾದ ಉಗಿಯಂತ್ರಗಳು ಸಹ ನೇಕಾರರ ಕೈಗಳನ್ನು ಮಣಿಸುವುದು ಸಾಧ್ಯವಿರಲಿಲ್ಲ.
ಹೀಗೆ ಒಂದು ಕಾಲದಲ್ಲಿ ಭಾರತದ ಹೆಮ್ಮೆಗೆ ಕಾರಣರಾಗಿದ್ದ ಲಕ್ಷ ಲಕ್ಷಾಂತರ ಜನರು ನಿರುದ್ಯೋಗಿಗಳಾಗಬೇಕಾಗಿ ಬಂದಿತು. ಅದುವರೆಗೂ ಬ್ರಿಟೀಷರ ಆಕ್ರಮಣದ ಬಿಸಿ ಸಾಮಾನ್ಯ ಜನರಿಗೆ ತಟ್ಟಿರಲಿಲ್ಲ. ಸ್ವಾತಂತ್ರ್ಯದ ಬೆಲೆಯ ಅರಿವಾಗಿ ಜನಮಾನಸದಲ್ಲಿ ಅವರ ಹಿಡಿತದಿಂದ ಬಿಡುಗಡೆ ಹೊಂದಬೇಕೆಂಬ ಹಂಬಲ ಉಂಟಾಯಿತು. ಆದರೆ ಒಗ್ಗಟ್ಟಿನ ಅಭಾವದಿಂದಾಗಿ ಈ ಹೋರಾಟಗಳು ಫಲನೀಡುವುದರಲ್ಲಿ ವಿಳಂಬವಾಗಿ ಜನರನ್ನು ಒಗ್ಗೂಡಿಸುವುದೇ ಒಂದು ಮುಖ್ಯ ಕಾರ್ಯಕ್ರಮವಾಯಿತು. ಇಂತಹ ಕಾಲ ಘಟ್ಟದಲ್ಲಿ ಮಹಾತ್ಮ ಗಾಂಧಿ ಅವರ ಪ್ರವೇಶವಾಯಿತು. ಜನರನ್ನು ಒಂದುಗೂಡಿಸಲು ಒಂದು ಸಂಕೇತ ಅವಶ್ಯಕತೆಯನ್ನು ಅವರು ಬೇಗನೆ ಮನಕಂಡರು. ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಮುನ್ನವೇ ೧೯೦೮ರಲ್ಲಿ ಲಂಡನ್ನಿನಲ್ಲಿ ಸಂಗಾತಿಗಳೊಂದಿಗೆ ಭಾರತದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಚರಕದ ಪ್ರತಿಮೆ ಅವರಿಗೆ ಮಿಂಚಿನಂತೆ ಹೊಳೆಯಿತಂತೆ. ಅವರು ಹೇಳುತ್ತಾರೆ, ಕೋಲ್ಮಿಂಚು ಹೊಳೆದಂತೆ ನನಗೆ ಈ ವಿಚಾರ ಹೊಳೆಯಿತು. ಚರಕದ ಸಹಾಯವಿಲ್ಲದೆ ಸ್ವರಾಜ್ಯವೂ ಸಾಧ್ಯವಿಲ್ಲ, ಏನೂ ಸಾಧ್ಯವಿಲ್ಲ ಎಂದು ಅನ್ನಿಸಿಬಿಟ್ಟಿತು. ನನ್ನ ದೇಶದ ಪ್ರತಿಯೊಬ್ಬ ಪ್ರಜೆಯೂ ನೂಲು ತೆಗೆಯಬೇಕು, ಪ್ರತಿಯೊಬ್ಬ ಪ್ರಜೆಯೂ ಸಕ್ರಿಯನಾಗಬೇಕು, ಆಗ ಮಾತ್ರ ಸ್ವರಾಜ್ಯ ಸಾಧ್ಯ ಅನ್ನಿಸಿತು. ಹಾಗಾಗಿ ಮಹಾತ್ಮರು ಭಾರತಕ್ಕೆ ೧೯೧೪ರಲ್ಲಿ ಹಿಂತಿರುಗಿದಾಗ ಅವರು ಕೈಮಗ್ಗಗಳಿಂದ ತಯಾರಾದ ಖಾದಿ ಬಟ್ಟೆಯನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡರು. ಚರಕದ ಜೊತೆಗಿನ ಅವರ ಬಾಂಧವ್ಯ ಬೆಳೆಯುತ್ತಲೇ ಹೋಯಿತು. ಅವರೊಬ್ಬರಿಗೇ ಸಾಧ್ಯವಾದ ಅದ್ಭುತ ಕಲ್ಪನಾ ಸಾಮರ್ಥ್ಯದಿಂದ ಅವರು ಒಂದು ಸಾಮಾನ್ಯ ಉಪಕರಣವನ್ನು ಅವರ ಮನಸ್ಸಿನ ಆಳದ ಶೋಧನೆಗೂ ಹಾಗೂ ಬಾಹ್ಯ ರಾಜಕೀಯ ಕಾರ್ಯಕ್ರಮಗಳೆರಡಕ್ಕೂ ಒಂದು ದೃಶ್ಯ ಪ್ರಣಾಳಿಕೆಯನ್ನಾಗಿ ಮಾರ್ಪಡಿಸಿದರು. ಈ ಕಾರ್ಯಕ್ರಮದ ಬಗ್ಗೆ ಅವರಿಗೆ ಎಂತಹ ವಿಶ್ವಾಸವಿತ್ತೆಂದರೆ; ಅವರು ಹೇಳುತ್ತಾರೆ, `ನನ್ನ ರಾಜಕೀಯದಲ್ಲಿ ನಾನು ನೂರು ತಪ್ಪುಗಳನ್ನು ಮಾಡಿರಬಹುದು ನೂರು ಕಾರಣಗಳಿಗಾಗಿ ನನ್ನ ಹೆಸರು ಮುಕ್ಕಾಗಬಹುದು, ಆದರೆ ಚರಕವನ್ನು ಸೂಚಿಸಿದ ಒಂದು ಕಾರಣಕ್ಕಾದರೂ ನನ್ನ ಹೆಸರು ಖಂಡಿತವಾಗಿ ಉಳಿದು ಬರುತ್ತದೆ' ಎಂಬ ನಂಬಿಕೆ ನನಗಿದೆ. ನಾನು ನನ್ನೆಲ್ಲವನ್ನು ಪಣಕ್ಕಿಟ್ಟು ಚರಕದ ತಿರುಗಣೆಗೆ ಚಾಲನೆ ನೀಡ ಬಯಸುತ್ತೇನೆ. ಚರಕವು ಪ್ರತಿಯೊಮ್ಮೆ ಸುತ್ತಿ ಬಂದಾಗಲೂ ಸುಖ, ಶಾಂತಿ ಹಾಗೂ ಪ್ರೀತಿಯ ಫಲವನ್ನು ಅದು ನೀಡುತ್ತದೆ. ಚರಕವು ಅವಿರಥವಾಗಿ ಸುತ್ತುತ್ತಿರಲಿ. ಇನ್ನೂ ಮುಂದುವರೆದು ಅವರು ಚರಕದ ನಾದದ ಅಂದರೆ Music of the Spinning Wheel ಬಗ್ಗೆ ಮಾತನಾಡುತ್ತಾರೆ. ಈ ಪದಗುಚ್ಛ ಗಾಂಧಿ ಸಾಹಿತ್ಯದಲ್ಲಿ ಆನೇಕ ಕಡೆಗಳಲ್ಲಿ ಬರುತ್ತದೆ. ಉದಾಹರಣೆಗೆ ೧೯೪೭ರ ಆರಂಭದ ದಿನಗಳು ಆಗ ದೇಶದ ವಿಭಜನೆಯ ಸಂದರ್ಭ ಹಲವು ಎಡೆಗಳಲ್ಲಿ ರಕ್ತದ ಓಕುಳಿಯಾಗುತ್ತಿದ್ದ ಸಮಯ. ಅವರ ಚೀನೀ ಮಿತ್ರರೊಬ್ಬರು ಕೇಳುತ್ತಾರೆ, ಇಂತಹ ಭೀಕರ ಸಂದರ್ಭದಲ್ಲೂ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವುದು ಹೇಗೆ ಸಾಧ್ಯ?. ಅದಕ್ಕೆ ಮಹಾತ್ಮರ ಉತ್ತರ ಅವರ ಪದಗಳಲ್ಲೆ take to spinning the music of the spinning wheel will be as bomb to your soul. I believe that the yarn's spin is capable of mending the broken warp and woof of our life. The Charaka is the symbol of non-violence on which all life. If it is to be real life must the best. ಅಂದರೆ ಚರಕದಲ್ಲಿ ನೂಲುವುದನ್ನು ಆಚರಿಸು ಆ ಚರಕದ ನಾದ ನಿನ್ನ ಆತ್ಮಕ್ಕೆ ನೆಮ್ಮದಿಯನ್ನು ತರುವ ಔಷಧವಾಗಿದೆ. ನಾವು ಅದರಲ್ಲಿ ನೂಲುವ ದಾರವು ನಮ್ಮ ಹರಿದು ತುಂಡಾದ ಜೀವನವನ್ನು ಮತ್ತೆ ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಎಲ್ಲಾ ಜೀವವು ಅದು ನಿಜ ಜೀವವೇ ಆಗಿದ್ದಲ್ಲಿ ಅಹಿಂಸೆಯನ್ನು ಆಧರಿಸಿದ್ದು ಆ ಅಹಿಂಸೆಯ ಪ್ರತೀಕವೇ ಚರಕವಾಗಿದೆ. ಹಾಗಿದ್ದರೆ ಮಹಾತ್ಮರು ದೊಡ್ಡ ದೊಡ್ಡ ಯಂತ್ರಗಳ ವಿರುದ್ಧವೇ ಈ ಪ್ರಶ್ನೆಗೆ ಅವರ ಲೇಖನಗಳಲ್ಲೇ ಉತ್ತರ ಸಿಗುತ್ತದೆ. ಉದಾಹರಣೆಗಾಗಿ ಅವರು ಒಂದೆಡೆ ಒಂದೇ ಒಂದಾದರೂ ಆರೋಗ್ಯಕರ ಕೈಗಾರಿಕಾ ಕಾರ್ಯಕ್ರಮವನ್ನು ಕೈಮಗ್ಗಕ್ಕಾಗಿ ತಿರಸ್ಕರಿಸಬೇಕೆಂದು ನಾನು ಹೇಳುವುದರಲ್ಲಿ ಯೋಚನೆಯನ್ನೂ ಸಹ ಮಾಡಿಲ್ಲ. ಕೋಟ್ಯಾಂತರ ನಿರುದ್ಯೋಗಿ ಜನರಿದ್ದಾರೆಂಬುದೇ ಕೈಮಗ್ಗದ ಕೈಗಾರಿಕೆಯ ಅಡಿಪಾಯ. ಅಂತಹ ನಿರುದ್ಯೋಗಿಗಳು ಇಲ್ಲವಾದಲ್ಲಿ ಕೈಮಗ್ಗಕ್ಕೆ ಅವಕಾಶವೇ ಇರುವುದಿಲ್ಲ. ಹಾಗಿದ್ದಲ್ಲಿ ಕೋಟ್ಯಾಂತರ ಯುವಕ-ಯುವತಿಯರಿಗೆ ಕೆಲಸವನ್ನು ಅವರು ಇರುವ ಸ್ಥಳಗಳಲ್ಲೇ ನೀಡಲು ಚರಕವನ್ನು ಅಥವಾ ಕೈಮಗ್ಗವನ್ನು ಹೊರತುಪಡಿಸಿ ಇನ್ನಾವುದಾದರೂ ಮಾರ್ಗವಿದೆಯೆ ಎಂಬ ಪ್ರಶ್ನೆಗೆ ಶ್ರೀ ಸುಧೀಂದ್ರ ಕುಲಕರ್ಣಿಯವರ ಉತ್ತರ, ಅಂತರ್ಜಾಲ ಹಾಗೂ ಸಂವಹನ ತಂತ್ರಜ್ಞಾನಾಧಾರಿತ ಉತ್ಪನ್ನಗಳು. ಮಹಾತ್ಮಾ ಗಾಂಧೀಜಿ ಇದನ್ನು ಅನುಮೋದಿಸುತ್ತಿದ್ದರು ಎನ್ನುವುದಕ್ಕೆ ಶ್ರೀ ಕುಲಕರ್ಣಿಯವರು ೧೯೨೫ರಲ್ಲಿ ಗಾಂಧೀಜಿಯವರು ಬರೆದ ಲೇಖನವೊಂದರಿಂದ ಈ ವಾಕ್ಯಗಳನ್ನು ಉದಾಹರಿಸುತ್ತಾರೆ. ಹಲವು ಪದಾರ್ಥಗಳು ಅಸಾಧ್ಯ ಆದರೆ ಅವುಗಳಷ್ಟೇ ಅಗತ್ಯವಾದವುಗಳು. ಒಬ್ಬ ಸುಧಾರಕನ ಕೆಲಸವೇನೆಂದರೆ ಆ ಅಸಾಧ್ಯ ಕಾರ್ಯವನ್ನು ತನ್ನ ಸಾಮರ್ಥ್ಯ ಹಾಗೂ ಪರಿಶ್ರಮದಿಂದ ಸಾಧ್ಯವಾಗಿಸುವುದು. ಗ್ರಹಾಂಬೆಲ್‍ಗಿಂತಲೂ ಮುಂಚೆ ಯಾರು ತಾನೆ ದೂರದಲ್ಲಿರುವವರ ಜೊತೆ ಮಾತನಾಡಲು ಸಾಧ್ಯವಿತ್ತೆಂದು ಊಹಿಸಿದ್ದರು. ಮಾರ್ಕೋನಿಯು ಇನ್ನೂ ಒಂದು ಹೆಜ್ಜೆ ಮುಂದುವರೆದು ಆ ಕಾರ್ಯವನ್ನು ತಂತಿಗಳ ಸಹಾಯವಿಲ್ಲದೆ ಆಗಿಸಿದ ನಿನ್ನೆ ಅಸಾಧ್ಯವಾದವುಗಳು ಇಂದು ಸಾಧ್ಯವಾಗಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಸಂವಹನ ತಂತ್ರಜ್ಞಾನಾಧಾರಿತ ಉದ್ಯೋಗಗಳು ಜನರು ತಾವು ಇರುವಂತಹ ಜಾಗಗಳಿಂದಲೇ ತೀರಾ ಹೆಚ್ಚಲ್ಲದ ಹಣ ಹೂಡಿಕೆಯ ಸಹಾಯದಿಂದ ಸ್ವಂತ ಉದ್ದಿಮೆಗಳನ್ನು ನಡೆಸಬಹುದಾದಂತಹ ವಾತಾವರಣವನ್ನು ಸೃಷ್ಟಿಸಿವೆ. ಈ ರೀತಿ ನಿರುದ್ಯೋಗ ಸಮಸ್ಯೆ ಹಾಗೂ ಹಳ್ಳಿಗಳಿಂದ ನಗರಕ್ಕೆ ವಲಸೆಯ ಸಮಸ್ಯೆ ಈ ಎರಡೂ ಸಮಸ್ಯೆಗಳನ್ನು ಪರಿಹರಿಸಬಲ್ಲ ಶಕ್ತಿ ಅಂತರ್ಜಾಲವು ಸೃಷ್ಟಿಸಿರುವ ಅವಕಾಶಗಳಿಗೆ ಇದೆ. ಈಗಾಗಲೇ ಇಂತಹ ಪರಿಹಾರಗಳು ಸಣ್ಣ ಪ್ರಮಾಣಗಳಲ್ಲಿ ದೇಶದ ಅನೇಕ ಕಡೆಗಳಲ್ಲಿ ಅಸ್ಥಿತ್ವಕ್ಕೆ ಬಂದಿವೆ. ಈ ಚಿತ್ರಣ ಸಮಾಧಾನಕರವಾಗಿ ತೋರಿದರೂ ಇದನ್ನು ಭಾರಿ ಪ್ರಮಾಣದಲ್ಲಿ ಮುಂದುವರಿಸಲು ಅನೇಕ ತೊಡಕುಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಈ ಸಂವಹನ ತಂತ್ರಜ್ಞಾನ ಇಂಗ್ಲೀಷ್ ಭಾಷೆಯಲ್ಲಿ ಬಹಳವಾಗಿ ಅಭಿವೃದ್ಧಿಗೊಂಡಿದ್ದು, ನಮ್ಮ ದೇಶೀಯ ಭಾಷೆಗಳು ಈ ವಿಷಯದಲ್ಲಿ ಬಹಳ ಹಿಂದುಳಿದಿವೆ. ಇದರಿಂದಾಗಿ ಈಗಾಗಲೇ ಪ್ರಪಂಚದ ಬೇರೆಡೆಗಳಲ್ಲಿ ಉದ್ಯೋಗವನ್ನರಸುವ ಸಲುವಾಗಿ ಇಂಗ್ಲೀಷ್ ಭಾಷೆಯ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದ ಗುಂಪಿನ ಗಾತ್ರ ವೇಗವಾಗಿ ಬೆಳೆಯುತ್ತಿದ್ದು, ದೇಶೀಯ ಭಾಷೆಗಳ ಉಳಿವಿನ ಪ್ರಶ್ನೆಯನ್ನೇ ಹುಟ್ಟುಹಾಕಿದೆ. ಅಲ್ಲದೆ ನಮ್ಮ ದೇಶೀಯ ಭಾಷೆಗಳಲ್ಲಿ ವ್ಯವಹರಿಸಲು ಅನುಕೂಲವಾಗಿ ಈ ಸಂವಹನ ತಂತ್ರಜ್ಞಾನಾಧಾರಿತ ಉದ್ಯೋಗಗಳು ಬೆಳೆಯುವವರೆಗೆ ನಮ್ಮ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗೆ ಒಂದು ವಿಷವರ್ತುಲದಲ್ಲಿ ನಾವು ಸಿಲುಕಿರುವ ಹಾಗೆ ತೋರುತ್ತದೆ. ಸಂವಹನ ತಂತ್ರಜ್ಞಾನದ ಅಭಿವೃದ್ಧಿ ನಮ್ಮ ಭಾಷೆಗಳಲ್ಲಿ ಆಗುವವರೆಗೂ ನಾವು ಭಾರಿ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹಾಗೆಯೇ ಉನ್ನತ ಮಟ್ಟದಲ್ಲಿ ಸಂಶೋಧನೆ ನಡೆದು ಸ್ವದೇಶಿ ಭಾಷೆಗಳಲ್ಲಿ ಸಂವಹನ ತಂತ್ರಜ್ಞಾನದ ಅಭಿವೃದ್ಧಿಗೊಳಿಸಲು ಬೇಕಾದ ಇಚ್ಛಾಶಕ್ತಿ ಹಾಗೂ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವುದನ್ನು ಊಹಿಸುವ ವಿವೇಚನೆ ಇಲ್ಲದಿರುವುದು. ಈ ವಿಷವರ್ತುಲದಿಂದ ಹೊರಬರಲು ನಮ್ಮ ದೇಶದ ಯುವ ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳು ಪಣತೊಟ್ಟು ಇಂಗ್ಲೀಷ್ ಭಾಷೆಯಲ್ಲಿ ನಡೆಯುವ ಯಾಂತ್ರಿಕ ಸಂವಹನೆಯ ಮಟ್ಟದಲ್ಲಿ ನಮ್ಮ ದೇಶೀಯ ಭಾಷೆಗಳಲ್ಲೂ ನಡೆಯುವ ಹಾಗೆ ಸಾಧ್ಯಗೊಳಿಸಿದಾಗ ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿ ಆಗುವುದೆಂದು ನನ್ನ ನಂಬಿಕೆ. ಈ ದಿಕ್ಕಿನಲ್ಲಿ ನಾವು ತ್ವರಿತಗತಿಯಲ್ಲಿ ಸಾಗಿ ನಮ್ಮ ದೇಶವನ್ನು ಪ್ರಪಂಚದ ದೇಶಗಳ ಮೊದಲ ಸಾಲಿನಲ್ಲಿ ನಿಲ್ಲಿಸುವ ಕಾಲ ಬಹಳ ಮುಂದಿಲ್ಲವೆಂದು ಆಶಿಸುತ್ತೇನೆ.