ವೃತ್ತಪತ್ರಿಕೆ

ಡಿ.ವಿ. ಗುಂಡಪ್ಪ (1887–1975) ಅವರ ‘ವೃತ್ತಪತ್ರಿಕೆ’ ಎನ್ನುವ ಈ ಕೃತಿಯು 1928ರಲ್ಲಿ ಬೆಂಗಳೂರಿನ ‘ಕರ್ನಾಟಕ ಪಬ್ಲಿಷಿಂಗ್ ಹೌಸ್‌’ನ ಮೂಲಕ ಮೊದಲು ಮುದ್ರಿತವಾಯಿತು. ನಂತರ ಎರಡನೆಯ ವಿಸ್ತೃತ ಮುದ್ರಣವಾಗಿ ಮೈಸೂರಿನ ಕಾವ್ಯಾಲಯದಿಂದ ೧೯೬೮ರಲ್ಲಿ ಹೊರಬಂದಿತು. ದ್ವಿತೀಯ ಮುದ್ರಣವನ್ನು ಮೈಸೂರಿನ ವೆಸ್ಲಿ ಪ್ರೆಸ್‌ನವರು ಅಚ್ಚು ಹಾಕಿದರು.

ಎರಡನೆಯ ಮುದ್ರಣದ ಅದರ ಹೆಸರು- ‘ವೃತ್ತಪತ್ರಿಕೆ-ಅದರ ಚರಿತ್ರೆ, ಅದರ ಕರ್ತವ್ಯ, ಅದರ ಸ್ವಾತಂತ್ರ್ಯ’. ಇದುವರೆಗೆ ಡಿ.ವಿ.ಜಿ. ಕೃತಿ ಶ್ರೇಣಿ ಸಮಗ್ರ ಸಾಹಿತ್ಯದಲ್ಲಿ ಇನ್ನೂ ಮೂರು ಬಾರಿ ಮರುಮುದ್ರಣಗೊಂಡಿದೆ.

ಸ್ವತಂತ್ರ ಭಾರತದ ಪ್ರಥಮ ಸೆಕ್ರೆಟರಿ ಜನರಲ್ ಸಿ.ರಾಜಗೋಪಾಲಾಚಾರಿ ಅವರಿಗೆ ಆಪ್ತರಾಗಿದ್ದ ಡಿ.ವಿ. ಗುಂಡಪ್ಪನವರು ಹೊಸಗನ್ನಡ ಸಾಹಿತ್ಯಾರಂಭದ ಧೀಮಂತರಲ್ಲಿ ಅಗ್ರಗಣ್ಯರು. ಸಾರ್ವಜನಿಕ ಜನಜೀವದಲ್ಲಿ ರುಚಿ-ಶುಚಿಗಳಿರಬೇಕೆಂಬ ಹಂಬಲದ ಡಿ.ವಿ.ಜಿ. ಅದಕ್ಕಾಗಿ ದುಡಿದವರು. 1945ರಲ್ಲಿ ಬೆಂಗಳೂರಿನಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಪ್ರಾರಂಭಿಸಿ ಕೊನೆಯವರೆಗೂ ಸಂಸ್ಥಾಪಕ ಕಾರ್ಯದರ್ಶಿಯಾಗಿದ್ದರು.

1950ರ ದಶಕದಲ್ಲಿ ದೇಶದ ಅನೇಕ ಮಹನೀಯರು ಈ ಸಂಸ್ಥೆಗಾಗಿ ಸ್ವಪ್ರೇರಣೆಯಿಂದ ಚೆಕ್‌ಗಳ ಮೂಲಕ ವಂತಿಗೆ ನೀಡಿದ್ದರೂ ಡಿ.ವಿ.ಜಿ ಆ ಚೆಕ್ಕುಗಳನ್ನು ನಗದು ಮಾಡಿಸಲೇ ಇಲ್ಲ. 1974ರಲ್ಲಿ ಮೈಸೂರು ಸರ್ಕಾರ ಡಿ.ವಿ.ಜಿ. ಅವರಿಗೆ ತಿಂಗಳಿಗೆ 500 ರೂಪಾಯಿ ಮಾಸಾಶನ ನೀಡಿದ್ದನ್ನು ವಿನಮ್ರರಾಗಿ ಸದ್ದುಗದ್ದಲಗಳಿಲ್ಲದೆ ನಿರಾಕರಿಸಿದ್ದರು. ಭಾರತದ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ಸಾಹಿತ್ಯೇತರ ಕಾರಣಗಳಿಂದಾಗಿ ಡಿ.ವಿ.ಜಿ. ಅವರಿಗೆ ಕೈತಪ್ಪಿಹೋದದ್ದು ಕನ್ನಡಿಗರ ದುರದೃಷ್ಟ. ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಡಿ.ವಿ.ಜಿ ಅವರು ೬೬ ಕನ್ನಡ ಕೃತಿಗಳನ್ನೂ, ‘All About Mysore’ (ಅ.10, 2010ರ ಹಳತುಹೊನ್ನು), ‘The States & Their People In The Indian Constitution’ ಇತ್ಯಾದಿ ಇಂಗ್ಲಿಷ್ ಪುಸ್ತಕಗಳ ಜೊತೆಗೆ ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ.ಕೀತ್ ಹಾಗೂ ಸಿ.ಎಫ್.ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್.ಸತ್ಯಮೂರ್ತಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು ಮೆಚ್ಚಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ 11 ಸಂಪುಟಗಳ ಡಿ.ವಿ.ಜಿ. ಕೃತಿ ಶ್ರೇಣಿಯಲ್ಲಿ ಅವರ ಅನೇಕ ಲೇಖನಗಳು ಬಿಟ್ಟು ಹೋಗಿವೆ ಎನ್ನುವುದನ್ನು ವಿಷಾದದಿಂದ ಹೇಳಬೇಕಿದೆ. ಮೇಲಿನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಡಿವಿ.ಜಿ. ಅವರು ನಮ್ಮ ದೇಶದ ಹಲವಾರು ಮಹನೀಯರೊಂದಿಗೆ ಪತ್ರವ್ಯವಹಾರ ಮಾಡಿರುತ್ತಾರೆ. ಆ ಸಮಗ್ರ ಪತ್ರಗಳ ಪ್ರಕಟಣೆ ಅಗತ್ಯವಾಗಿ ಆಗಲೇಬೇಕಾದ ಪುಣ್ಯಕಾರ್ಯ. ಈ ಕುರಿತು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯು ತುರ್ತಾಗಿ ಗಮನ ಹರಿಸಬೇಕಾಗಿದೆ.

1912 ರಲ್ಲಿ ಶ್ರೀಯುತರು ಬೆಂಗಳೂರು ನಗರಸಭೆ ಸದಸ್ಯರಾಗಿಯೂ, 1926ರಿಂದ 1940ರವರೆಗೆ ಮೈಸೂರು ನ್ಯಾಯವಿಧಾಯಕ ಸಭೆ ಸದಸ್ಯರಾಗಿಯೂ, 1927ರಿಂದ 1943ರವರೆಗೆ ಮೈಸೂರು ವಿಶ್ವವಿದ್ಯಾ ನಿಲಯದ ಸೆನೆಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರು 1928ರಲ್ಲಿ ಬಾಗಲಕೋಟೆಯಲ್ಲಿ ನಡೆದ ಪ್ರಥಮ ಕರ್ನಾಟಕ ಪತ್ರಕರ್ತರ ಸಮ್ಮೇಳನಾಧ್ಯಕ್ಷರಾಗಿದ್ದರು. 1932ರಿಂದ1934ರವರೆಗೆ ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದರು. 1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದ ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ಇಂಗ್ಲಿಷ್-ಕನ್ನಡ ನಿಘಂಟು-ಕೃತಿಯ ಸಂಪಾದಕ ಸಮಿತಿಯಲ್ಲಿದ್ದು, ಅದರ ಕಾರ್ಯದಲ್ಲಿ ಡಿ.ವಿ.ಜಿ. ಅವರ ಸಲಹೆ-ಸಹಕಾರ ಚೆನ್ನಾಗಿ ಎದ್ದು ತೋರುತ್ತದೆ. ‘ಭಾರತಿ’ (1907), ‘ವೀರಕೇಸರಿ’ (ಮದ್ರಾಸು, 1908), ‘ಸೂರ್ಯೋದಯ ಪ್ರಕಾಶಿಕಾ’, ‘ಈವೆನಿಂಗ್ ಮೈಲ್’, ‘ಸುಮತಿ’ (1909), ‘ಮೈಸೂರು ಟೈಮ್ಸ್’ (1911), ‘ಕರ್ನಾಟಕ’ (ಇಂಗ್ಲಿಷ್ ಮತ್ತು ಕನ್ನಡ, 1913ರಿಂದ 1926), ‘ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್’ (1921–22), ‘ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಪತ್ರಿಕೆ’ (1923), ‘ಪಬ್ಲಿಕ್ ಅಫೇರ್ಸ್’ (1949ರಿಂದ 1975)– ಈ ಪತ್ರಿಕೆಗಳನ್ನು ನಡೆಸಿದ ಕೀರ್ತಿ ಗುಂಡಪ್ಪನವರದ್ದು.

ಪತ್ರಿಕೋದ್ಯಮ ಡಿ.ವಿ.ಜಿ. ಆಶಿಸಿದ್ದ ವೃತ್ತಿಯಲ್ಲ. ಉದರಂಭರಣ ಅಶನಾರ್ಥ ನಿರ್ವಹಣೆಯ ಕಾರಣ ಅವರು ಕೈಗೊಂಡ ವೃತ್ತಿ. ಆದರೆ ‘ವೃತ್ತಪತ್ರಿಕೆ’ಯಂತಹ ಪ್ರಬುದ್ಧ ಪುಸ್ತಕವನ್ನು ರಚಿಸುವಷ್ಟರ ಮಟ್ಟಿಗೆ ಅವರ ಪತ್ರಿಕಾ ಮನೋಧರ್ಮ ಬೆಳೆದಿತ್ತು. ಅವರು ಒಂದೆಡೆ ‘ನನ್ನದು ಮಸಿಕುಡಿಕೆಯ ಜೀವನ’ ಎಂದು ಬರೆದುಕೊಂಡಿದ್ದಾರೆ. ಸುಮಾರು ಹದಿನೆಂಟು ವರ್ಷಗಳಷ್ಟು ಕಾಲ ನಡೆದ ಅವರ ‘ಕರ್ನಾಟಕ’ ಪತ್ರಿಕೆಯನ್ನು ನಿಲ್ಲಿಸಿದಾಗ ಅವರು ‘‘ನಿರ್ದಾಕ್ಷಿಣ್ಯವೂ ಕಟುವೂ ಆದ ಟೀಕೆಯನ್ನು ಸಹಿಸಬಲ್ಲವರು ಸಮರ್ಥರಾದ ಅಧಿಕಾರಿಗಳು.

ಅಸಮರ್ಥರೂ ಸಣ್ಣ ಮನಸ್ಸಿನವರೂ ಅಧಿಕಾರ ಪದವಿಗೇರಿದ ಮೇಲೆ ಪತ್ರಿಕಾವೃತ್ತಿ ಸಂತೋಷವಿಲ್ಲದ್ದಾಗುತ್ತದೆ. ಮೈಸೂರಿನಲ್ಲಿ ಪ್ರಜಾಪಕ್ಷವೆಂಬ ಪಾರ್ಟಿ ಹೊರಟ ಮೇಲೆ ಕರ್ನಾಟಕ ಪತ್ರಿಕೆಯನ್ನು ನಿಲ್ಲಿಸತಕ್ಕದ್ದೆಂದು ನನಗೆ ತೋರಿತು’’ ಎಂದು ವಿಷಾದದೊಂದಿಗೆ ಬರೆದಿದ್ದಾರೆ. ಡಿ.ವಿ.ಜಿ. ಅವರ ಪ್ರಕಾರ ಜಗತ್ತಿನ ಮೊತ್ತಮೊದಲ ಪತ್ರಿಕೆ ಜರ್ಮನೀ ದೇಶದಲ್ಲಿ 1615ರಲ್ಲಿ ವಾರಕ್ಕೊಮ್ಮೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತಂತೆ. ಆದರೆ ಜಗತ್ತಿನ ಮೊದಲ ದಿನಪತ್ರಿಕೆ 1660ರಲ್ಲಿ ಹುಟ್ಟಿದ ಇಂಗ್ಲೆಂಡಿನ ‘ಪರ್ಫೆಕ್ಟ್ ಡಯರ್ನಲ್’. ಅದು 24 ದಿನಗಳು ಮಾತ್ರ ಪ್ರಕಟವಾಯಿತು. ಭಾರತದ ಮೊದಲ ವೃತ್ತಪತ್ರಿಕೆ ಕಲ್ಕತ್ತೆಯಲ್ಲಿ 1781ರಲ್ಲಿ ಹಿಕ್ಕೀ ಎಂಬಾತನು ಆರಂಭಿಸಿದ ‘ಹಿಕ್ಕೀಸ್ ಗೆಜೆಟ್’. ಕನ್ನಡದ ಮೊದಲ ಪತ್ರಿಕೆ ಎಂದರೆ 1ನೇ ಜೂಲೈ 1843ರಲ್ಲಿ ಎಚ್.ಮೋಗ್ಲಿಂಗ್ ಸಂಪಾದಿಸಿ ಪ್ರಕಟಿಸಿದ ‘ಮಂಗಳೂರು ಸಮಾಚಾರ’. ಇದು ಪ್ರತಿ ತಿಂಗಳ 1ನೇ ಹಾಗೂ 15ನೇ ದಿನಾಂಕಗಳಂದು ಪ್ರಕಟವಾಗುತ್ತಿದ್ದ ಪಾಕ್ಷಿಕ. 4 ಪುಟಗಳ ಈ ಪತ್ರಿಕೆಯ ಬೆಲೆ 1 ದುಡ್ಡು. ಈ ಪತ್ರಿಕೆಯ 16 ಸಂಚಿಕೆಗಳು ಪ್ರಕಟವಾಗಿ 15ನೇ ಫೆಬ್ರವರಿ 1844ರ ಸಂಚಿಕೆಯೇ ಕೊನೆಯದ್ದಾಯಿತು. ಮೈಸೂರು ಪ್ರಾಂತದ ಮೊದಲ ಪತ್ರಿಕೆ, ಡಿ.ವಿ.ಜಿ. ಹೇಳಿರುವಂತೆ 1874ರ ‘ಕರ್ಣಾಟಕ ಪ್ರಕಾಶಿಕೆ’.

ಬಾಯಿಮಾತಿನ ಉಪನ್ಯಾಸದ ಕೈಬರಹದ ಆಧಾರದ ಮೇಲೆ ಈ ಕೃತಿಯ ಹಸ್ತಪ್ರತಿ 1928ರಲ್ಲಿ ಸಿದ್ಧವಾಗಿ ನಂತರ ಪರಿಷ್ಕಾರಗೊಂಡು 1928ರ ಡಿಸೆಂಬರ್ ಮಾಸದಲ್ಲಿ ಮೊದಲಿಗೆ ಅಚ್ಚಾಯಿತು.  ಎಸ್. ವೆಂಕಟಾಚಲಪತಿ, ಎಸ್.ಆರ್. ರಾಮಸ್ವಾಮಿ, ಬಿ.ಎಸ್. ಸುಬ್ಬರಾಯ ಮತ್ತು ಡಿ.ಆರ್. ವೆಂಕಟರಮಣನ್– ಇವರುಗಳ ನೆರವಿನಿಂದ ಪರಿಷ್ಕರಣಗೊಂಡು 1968ರಲ್ಲಿ ಪುನರ್ಮುದ್ರಣಗೊಂಡ ಡೆಮಿ ದ್ವಾದಶ ಪತ್ರಾಕಾರದ 238 ಪುಟಗಳ 5 ಚಿತ್ರಗಳನ್ನೊಳಗೊಂಡ ಈ ಕೃತಿಯ ಬೆಲೆ ಸಾದಾ ಪ್ರತಿ 6 ರುಪಾಯಿ ಹಾಗೂ ಕ್ಯಾಲಿಕೋ ಪ್ರತಿ 8 ರುಪಾಯಿ 25 ಪೈಸೆ. ಒಳ ಆರಂಭದ ಪುಟ ಹಾಗೂ ಹೊರರಕ್ಷಾಪುಟದ ಹಿಂಪುಟಗಳಲ್ಲಿ ಮೈಸೂರು ಪ್ರಾಂತದ ಮೊದಲ ಪತ್ರಿಕೆ ‘ಕರ್ಣಾಟಕ ಪ್ರಕಾಶಿಕಾ ಪತ್ರಿಕೆ’ಯ 17 ನವೆಂಬರ್ 1884, ಸೋಮವಾರದ ಸಂಚಿಕೆಯ ಪ್ರತಿಯಚ್ಚನ್ನು ಮುದ್ರಿಸಲಾಗಿದೆ.

ಆರಂಭದ ಶಿರ್ಷಿಕಾ ಒಳಪುಟದಲ್ಲಿ ಸಿ.ಪಿ. ಸ್ಕಾಟ್‌ನ ‘ವಸ್ತು ಸಂಗತಿ ಪವಿತ್ರ ; ಟೀಕು ಸ್ವತಂತ್ರ’ (Fact is sacred ; Comment is free) ಎಂಬ ಪತ್ರಿಕಾ ಧರ್ಮದ ಪ್ರಸಿದ್ಧ ಧ್ಯೇಯ ವಾಕ್ಯದ ಉಲ್ಲೇಖವಿದೆ. ಈ ಕೃತಿಯಲ್ಲಿ ವೃತ್ತಪತ್ರಿಕೆಯ ಸ್ವರೂಪ, ವೃತ್ತ ಪತ್ರಿಕೆಯ ಕರ್ತವ್ಯ- ಅದಕ್ಕೆ ಸಹಾಯ, ವೃತ್ತ ಪತ್ರಿಕಾ ಸ್ವಾತಂತ್ರ್ಯ, ವೃತ್ತಪತ್ರಿಕೆ ಮತ್ತು ಶಾಸನಸಂಸ್ಥೆ, ಪತ್ರಿಕಾ ಸ್ವಾತಂತ್ರ್ಯದಲ್ಲಿ ಸ್ಥಾನಗೌರವ, ಪತ್ರಿಕೋದ್ಯೋಗಿಯ ಪ್ರತಿಜ್ಞೆ, ಪತ್ರಿಕಾವೃತ್ತಿ: ಆಗ-ಈಗ, ವಿಚಾರವೇ, ಪ್ರಚಾರವೇ?, ಪತ್ರಿಕೆಯ ಚತುರಂಗ, ಕಸಬು-ತಯಾರಿ, ಲಂಚಾವತಾರ, ಪ್ರೆಸ್ ಕಮಿಷನ್, ಪ್ರೆಸ್ ಕೌನ್ಸಿಲ್, ಆದರ್ಶ ಪತ್ರಿಕೆ ಹಾಗೂ ಉಪಸಂಹಾರ– ಹೀಗೆ ಒಟ್ಟು 15 ಅಧ್ಯಾಯಗಳಿವೆ. Laws affecting the Press, Statistics of Newspapers in India, Parliamentary Privilege  ಹಾಗೂ ಪತ್ರಿಕಾವೃತ್ತಿ ಮತ್ತು ಸಾಹಿತ್ಯ– ಎನ್ನುವ 3 ಅನುಬಂಧಗಳಿವೆ. ಕನ್ನಡ ವೃತ್ತಪತ್ರಿಕಾಲೋಕಕ್ಕೆ ಅಪಾರ ಸೇವೆ ಸಲ್ಲಿಸಿರುವ ಭಾಷ್ಯಂ ತಿರುಮಲಾಚಾರ್ಯರು, ಭಾಷ್ಯಂ ಭಾಷ್ಯಾಚಾರ್ಯರು, ಎಂ. ಶ್ರೀನಿವಾಸಯ್ಯಂಗಾರ್ಯರು, ಎಂ. ವೆಂಕಟಕೃಷ್ಣಯ್ಯನವರು ಹಾಗೂ ಡಬ್ಲ್ಯು.ಟಿ. ಸ್ಟೆಡ್– ಈ ಐವರ ಭಾವಚಿತ್ರಗಳೂ ಇವೆ. ಈ ಕೃತಿಯಲ್ಲಿ ಆ ಕಾಲಘಟ್ಟದವರೆಗಿನ ಪತ್ರಿಕಾ ಪ್ರಪಂಚದ ಯಾವೊಂದು ಸಣ್ಣಪುಟ್ಟ ಹಾಗೂ ಪ್ರಮುಖ ವಿಚಾರಗಳನ್ನೂ ಬಿಡದೆ ಹಿಡಿದಿಡಲಾಗಿದೆ. ಡಿ.ವಿ.ಜಿ. ಅವರ ಸುಮಾರು 70 ವರ್ಷಗಳ ಪತ್ರಿಕಾವ್ಯವಸಾಯದ ಅವಧಿಯಲ್ಲಿನ ಜ್ಞಾನಾನುಭವಗಳ ಸಾರ ಈ ಗ್ರಂಥದಲ್ಲಿ ಘನೀಭವಿಸಿದೆ.

ಲೇಖಕರ ನಿರೂಪಣೆಯ ಅವಲೋಕನಕ್ಕಾಗಿ, ಪತ್ರಿಕಾವೃತ್ತಿಯಲ್ಲಿ ಪ್ರತಿಮಾ ನಿರ್ಮಾಣಕ್ಕೆ (Building of Image) ಸಂಬಂಧಿಸಿದಂತೆ ವಿವಿಧ ಪತ್ರಿಕೆಗಳು ಗುಂಗಾಡಪುರದ ಗಂಗೇಶಯ್ಯನವರ ಪ್ರತಿಮಾ ನಿರ್ಮಾಣ ಹೇಗೆ ಮಾಡಿದವೆಂಬುದರ ಬಗ್ಗೆ ಲಂಚಾವತಾರ ಅಧ್ಯಾಯದ ಕೆಲವು ಸಾಲುಗಳನ್ನು ಗಮನಿಸಬಹುದು:

  1. ಗುಂಗಾಡಪುರದ ಮಹೋತ್ಸವದ ಏರ್ಪಾಟುಗಳು ಅಪೂರ್ವವಾಗಿದ್ದವು. ಗಂಗೇಶಯ್ಯನವರ ಭಾಷಣ ಅಮೋಘವಾಗಿತ್ತು -ಸುಪ್ರಭಾತ.
  2. ಗಂಗೇಶಯ್ಯನವರಂಥ ಜನೋಪಕಾರಿಯನ್ನು ಪಡೆದಿರುವ ಗುಂಗಾಡಪುರದ ಭಾಗ್ಯಕ್ಕೆ ಎಣೆಯುಂಟೆ?-ನಿಶೀಥಿನಿ.
  3. ಗುಂಗಾಡಪುರದ ಸಭೆಯಲ್ಲಿ ಗಂಗೇಶಯ್ಯನವರು ಎಂಥ ಸ್ಫೂರ್ತಿಪ್ರದರಾದ ವಾಗ್ಮಿಗಳು ಎಂಬುದು ಪ್ರಕಟವಾಯಿತು -ಮಧ್ಯಾಹ್ನ.
  4. ಗಂಗೇಶಯ್ಯನವರ ಧ್ವನಿ, ಅವರ ಶಬ್ದವೈಖರಿ, ಅವರ ಮುಖದ ಗಾಂಭೀರ್ಯ -ಇವು ಎಲ್ಲರ ಗಮನವನ್ನು ಸೆಳೆಯುತ್ತಿದ್ದವು -ದಿನಸ್ಮಾರಕ.
  5. ಗಂಗೇಶಯ್ಯನವರು ಸಂಗೀತದಲ್ಲಿಯೂ, ಕುಶಲ ಕಲೆಗಳಲ್ಲಿಯೂ ಪರಿಣತರಾದವರು. ಕರ್ಣಾಟಕ ರಾಗಗಳನ್ನು ಮಾತ್ರವೇ ಅಲ್ಲ, ಹಿಂದೂಸ್ಥಾನಿ ರಾಗಗಳನ್ನು ಸಹ ಬಹು ಸೊಗಸಾಗಿ ಹಾಡತಕ್ಕವರು -ಕಲಾಪ್ರಾಣಿ.
  6. ಗಂಗೇಶಯ್ಯನವರ ಚಿತ್ರಗಳು ಯಾವಾಗಲೂ ಹೃದಯಭೇದಕವಾಗಿರುತ್ತವೆ. -ತರ್ಕತಾಂಡವ.... ಒಂದೆರಡು ವರ್ಷಗಳೊಳಗಾಗಿ ಮಂತ್ರಿಯಾಗಿಯೇ ಆಗಿ ಮೀಸೆ ತಿರುವುತ್ತಾರೆ.... ‘‘ಇಂಥ ಕೃತಕ ಪೋಷಣೆಯಿಂದ ದೇಶಕ್ಕೆ ಆದದ್ದು ಉಪಕಾರವೋ ಅಪಕಾರವೋ ಅದನ್ನು ಎಲ್ಲರೂ ತಾವು ತಾವೇ ನಿಶ್ಚಯಿಸಿಕೊಂಡಾರು’’. ಇದು ಲೇಖಕರು ನೋವಿನಿಂದ ಹೇಳಿರುವ ಮಾತುಗಳು.

ಕನ್ನಡ ಸಾಹಿತ್ಯದಲ್ಲಿ ಪತ್ರಿಕೋದ್ಯಮ ಹಾಗೂ ವೃತ್ತಪತ್ರಿಕೆಗಳನ್ನು ಕುರಿತ ಮೊತ್ತಮೊದಲ ಕೃತಿಯಾದ ಈ ಗ್ರಂಥ ಮೇಲ್ಮಟ್ಟದ ಶ್ರೇಣಿಯದ್ದಾಗಿದೆ.