ವಿದ್ಯಾಗುರು

ಶ್ರೀ ರಹಸ್ಯ ಬೋಧಾಮೃತ ಎಂಬ ವಿದ್ಯಾಗುರು’ ಎನ್ನುವ ಈ ಪುಸ್ತಕವನ್ನು ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿಯ ಭಾರತ ಜ್ಯೋತಿಷ್ಯ ವೈದ್ಯಾಲಯದ ಮೇನೇಜರ್ ಹಾಗೂ ಲೇಖಕ ಮತ್ತು ಪ್ರಚಾರಕ ಬಿ. ಹಯಾತ್ ಸಾಹೇಬ್, ಅವರು ೨ ಭಾಗಗಳಲ್ಲಿ ೧೯೨೭ರಲ್ಲಿ ಪ್ರಕಟಿಸಿರುತ್ತಾರೆ. ಇದು ಬೆಂಗಳೂರು ಸಿಟಿಯ ಪವರ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಿತವಾಗಿದೆ. ೨೦೦೦ ಪ್ರತಿಗಳು ಮುದ್ರಣಗೊಂಡ ಅಷ್ಟಮ ಡೆಮಿ ಆಕಾರದ ಈ ಆವೃತ್ತಿಯ ಬೆಲೆ ೨ ರುಪಾಯಿ.

ಲೇಖಕರು ಈ ಪುಸ್ತಕದ ೩ನೇ ಭಾಗವನ್ನೂ ರಚಿಸಿದ್ದು ಅದು ಸದ್ಯಕ್ಕೆ ಲಭ್ಯವಿಲ್ಲ. ಈ ಮೂರು ಪುಸ್ತಕಗಳನ್ನು ಕುರಿತು– ಕುಟುಂಬ ಸಂಜೀವಿನ ಕಲ್ಪ, ಲೋಕೋಪಕಾರ ಕಲ್ಪತರು, ಕಲಿಕಾಲ ಕಲ್ಪತರು, ಸಂಸಾರದುಃಖ ಮುಕ್ತ ಕಾಮಧೇನು, ಶಾಸ್ತ್ರಗಳ ಗುಪ್ತಮೂಲ, ಪಡೆಯುವವರ ಭಾಗ್ಯಕಾಲ ಎಂಬೆಲ್ಲ ಪ್ರಶಸ್ತಿಗಳು ಇವೆ. ನಿಖಿಲ ಭಾರತ ವೈದ್ಯ ಸಮ್ಮೇಲನದವರಿಂದಲೂ, ಪತ್ರಿಕಾಕರ್ತರಿಂದಲೂ, ಬಹುಜನ ಪಂಡಿತರಿಂದಲೂ ಪ್ರಶಸ್ತಿ ಪತ್ರಿಕೆಗಳನ್ನು ಪಡೆದಿದೆ.

ಬಿ. ಹಯಾತ್ ಸಾಹೇಬ್ ಅವರು ಈ ಮೂರು ಪುಸ್ತಕಗಳನ್ನಲ್ಲದೆ ಸುಮಾರು ಅದೇ ಕಾಲಘಟ್ಟದಲ್ಲಿ ‘ಮರ್ಮಕಲಾ ಬೋಧಿನಿ’, ‘ಪರಂಜ್ಯೋತಿ’ (ಆತ್ಮವೆಂದರೇನು? ಮಾಯೆ ಎಂದರೇನು? ಪ್ರಪಂಚವು ಬ್ರಹ್ಮ, ವಿಷ್ಣು, ಮಹೇಶ್ವರಾದಿ ದೇವತೆಗಳಿಂದ ಜರುಗುತ್ತವೆಂಬುದು ನಿಜವೇ? -ರಥೋತ್ಸವ, ಯಾತ್ರೆ ಇವುಗಳ ಅಂತರಂಗವೇನು?.. ವಿಭೂತಿ, ರುದ್ರಾಕ್ಷಿ, ಲಿಂಗ, ದೀಕ್ಷೆ, ಗುರು, ಜಂಗಮ, ಪಾದೋದಕ, ಪ್ರಸಾದ ಇವುಗಳ ಅಂತರಂಗವೇನು? ಮೌನವ್ರತ, ನಮಾಜು, ಕಲ್ಮ, ಜಕಾತ್ ಇವುಗಳ ರಹಸ್ಯವೇನು? ದ್ವೈತಾದ್ವೈತ ವಿಚಾರವೇನು? -ಇವೇ ಮೊದಲಾದ ಅನಂತಾನಂತ ಪ್ರಪಂಚ ಪಾರಮಾರ್ಥಿಕ ವಿಷಯಗಳನ್ನು ಸ್ಪಷ್ಟೀಕರಿಸಿರುವ ಅಧ್ಯಾತ್ಮ ಜಿಜ್ಞಾಸು ಗ್ರಂಥ), ‘ಜೀವರತ್ನ ಪ್ರದೀಪಿಕೆ’, ಸರ್ವರೋಗ ಸಂಜೀವಿನಿ’ ಎನ್ನುವ ನಾಲ್ಕು ಇನ್ನಿತರ ಕೃತಿಗಳನ್ನು ರಚಿಸಿರುತ್ತಾರೆ.

ಹಯಾತ್ ಸಾಹೇಬ್ ಅವರ ಎಲ್ಲ ಕೃತಿಗಳೂ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು ಎಲ್ಲ ಪುಸ್ತಕಗಳೂ ಹಲವಾರು ಮುದ್ರಣಗಳನ್ನು ಕಂಡಿವೆ. ಅವರು ಪ್ರಭವಾದಿ ಹಲವಾರು ಸಂವತ್ಸರಗಳ ವೈದಿಕ ಪಂಚಾಂಗಗಳನ್ನೂ ಕೂಡ ವರ್ಷಂಪ್ರತಿ ತಯಾರು ಮಾಡಿ ಪ್ರಚುರ ಪಡಿಸುತ್ತಿದ್ದರು. ಸಾಹೇಬರು ಸಿದ್ಧಪಡಿಸಿದ್ದ ಅಂದಿನ ಕಾಲದ ವಿಭವ ಸಂವತ್ಸರದ ಪಂಚಾಂಗವೊಂದನ್ನು ಕುರಿತು ಹೆಬ್ಬೂರಿನ ಜ್ಯೋತಿಷ್ಯದ ತಮ್ಮಯ್ಯ ಅವರೂ ಹರಿಹರಪುರದ ಅಂದಿನ ಜ್ಯೋತಿಷಿಗಳಾಗಿದ್ದ ಕೆ. ವೆಂಕಟರಾಮಭಟ್ಟ ಹಾಗೂ ಕೆ. ನಾಗಭಟ್ಟ ಇವರುಗಳು ಹಯಾತ್ ಸಾಹೇಬರಿಗೆ ಮೆಚ್ಚುಗೆ ಪತ್ರವನ್ನು ಕಳಿಸಿರುತ್ತಾರೆ. 

ಪುಸ್ತಕದ ಪೀಠಿಕೆಯಲ್ಲಿ ಹಯಾತ್ ಸಾಹೇಬರು ‘ಈ ನಮ್ಮ ಹಿಂದೂ ದೇಶದಲ್ಲಿ ಎಷ್ಟೋ ದಿನ ಗುರುಸೇವಾ ಮಾಡಿದರೂ ವಿದ್ಯಾಮರ್ಮಗಳು ಪ್ರಾಪ್ತಿಸುವುದು ದುರ್ಲಭವೆಂಬ ವಿಷಯವು ಪ್ರತಿಯೊಬ್ಬರಿಗೂ ತಿಳಿದೇ ಇರುತ್ತೆ. ವಿದ್ಯಾರಹಸ್ಯಗಳನ್ನು ಹೇಳುವ ವಿದ್ಯಾಗುರುಗಳು ಅಪೂರ್ವವಾಗಿರುವುದರಿಂದ ಈ ನಮ್ಮ ಭರತ ಭೂಮಿಯು ವಿದ್ಯೆಯಲ್ಲಿ ತೀರಾ ಹೀನಸ್ಥಿತಿಯಂ ಪಡೆದಿರುವುದು. ಆದ್ದರಿಂದ ಸರ್ವಜನೋಪಕಾರಕ್ಕಾಗಿ ಜ್ಯೋತಿಷ್ಯ, ರಮಲ ಮುಂತಾದ ೧೬ ಶಾಸ್ತ್ರಗಳ ರಹಸ್ಯಗಳನ್ನು ಬೊಧಿಸುವ ಈ ರಹಸ್ಯ ಬೋಧಾಮೃತವೆಂಬ ವಿದ್ಯಾಗುರು ಗ್ರಂಥದ ೧ನೇ ಭಾಗವನ್ನು ಬಾಲಬೋಧಾರ್ಥವಾಗಿ ಎಷ್ಟೋ ದಿನ ಗುರುಸೇವಾ ಮಾಡಿದರೂ ಹೇಳದಂಥ ಮರ್ಮಗಳೊಂದಿಗೆ ರಚಿಸಿ ಪ್ರಚಾರಪಡಿಸಿರುವುದಲ್ಲದೆ ಈ ಗ್ರಂಥದ ೨ನೇ ಭಾಗವನ್ನು ಸಹ ರಚಿಸಿರುತ್ತೇನೆ’ ಎಂದು ಹೇಳಿರುತ್ತಾರೆ.

೧ನೇ ಭಾಗದ ವಿಷಯ ಸೂಚಿಕೆಯಲ್ಲಿ– ಜ್ಯೋತಿಷ್ಯ ರಹಸ್ಯ, ರಮಲಪ್ರಶ್ನ ಶಾಸ್ತ್ರರಹಸ್ಯ, ಫ್ರಾನ್ಸು ದೇಶದ ನೆಪೋಲಿಯನ್ ಬೋನಪಾರ್ಟ್‌ರವರು ಅನುಮೋದಿಸಿದ ಷೋಡಶ ಪ್ರಶ್ನಶಾಸ್ತ್ರ, ಸ್ಮರಶಾಸ್ತ್ರ ರಹಸ್ಯ, ಶಕುನಶಾಸ್ತ್ರ ರಹಸ್ಯ, ಮಲೆಯಾಳ ಯಂತ್ರ ಪ್ರಕರಣ, ಮಲೆಯಾಳ ಮಂತ್ರ ರಹಸ್ಯ, ಯಕ್ಷಿಣಿ ಪ್ರಕರಣ, ಸ್ವಪ್ನಫಲ ಪ್ರಕರಣ, ಅದೃಷ್ಟ ರೇಖಾಶಾಸ್ತ್ರ, ವೈದ್ಯ ರಹಸ್ಯ, ಕೌತುಕ ರಹಸ್ಯ, ಮಹದ್ವಿದ್ಯಾ ರಹಸ್ಯ, ಅನಂಗರಂಗವೆಂಬ ಸ್ತ್ರೀ ಮರ್ಮಶಾಸ್ತ್ರ, ಕೈಗಾರಿಕೆ ರಹಸ್ಯ, ವಾದರಹಸ್ಯ, ಮತ್ತು ವೃಕ್ಷಶಾಸ್ತ್ರ– ಈ ೧೬ ವಿಷಯಗಳಿವೆ.

೨ ನೆಯ ಭಾಗದ ವಿಷಯ ಸೂಚಿಕೆಯಲ್ಲಿ– ಜ್ಯೋತಿಷ್ಯ ತರ್ಕರಹಸ್ಯ, ತಾಜೀಖ ಜ್ಯೋತಿಷ್ಯ ರಹಸ್ಯ, ಕ್ಷಣಿಕಗ್ರಹ ರಹಸ್ಯ, ಗಣಪತಿಪ್ರಶ್ನ ರಹಸ್ಯ, ಅಂಗವಿದ್ಯಾ ರಹಸ್ಯ, ಉದಕಾರ್ಗಳ ಶಾಸ್ತ್ರ, ವಾಸ್ತುವಿದ್ಯಾ ರಹಸ್ಯ, ಪಿಟಕ ಲಕ್ಷಣ, ಗೋಲಕ್ಷಣ, ಶ್ವಾನ ಲಕ್ಷಣ, ಅಶ್ವಲಕ್ಷಣ, ಛಾಗಲಕ್ಷಣ, ವಜ್ರಪರೀಕ್ಷೆ, ಮುಕ್ತಾಫಲ ಪರೀಕ್ಷೆ, ಪದ್ಮರಾಗ ಪರೀಕ್ಷೆ, ಔಪಾಸನ ರಹಸ್ಯ, ವೈದ್ಯರಹಸ್ಯ, ಪಶುವೈದ್ಯ ರಹಸ್ಯ ಹಾಗೂ ರತಿರಹಸ್ಯ– ಈ ೧೯ ವಿಷಯಗಳಿವೆ.  ೩ನೇ ಭಾಗದಲ್ಲಿ ಸಿದ್ಧಾಂತ ಮೂಲರಹಸ್ಯ, ಗ್ರಹಷಡ್ಬಲ ಸಾಧನಾ ಮೂಲರಹಸ್ಯ, ಪಂಚಾಂಗಸಾಧನಾ ಮೂಲರಹಸ್ಯ, ಪ್ರಶ್ನಮೂಲ ರಹಸ್ಯ, ದಶಾಂತರ್ದಶ ಫಲಮೂಲರಹಸ್ಯ, ಸಾಮುದ್ರಿಕಾ ಮೂಲರಹಸ್ಯ, ವೈದ್ಯ ಮೂಲರಹಸ್ಯ, ಮೆಸ್ಮರಿಜಂ, ಯೋಗಾಭ್ಯಾಸ, ಪ್ರಾಣಾಯಾಮ, ಯಂತ್ರ, ಮಂತ್ರ ಮೂಲರಹಸ್ಯ, ವೇದಾಂತ ಮೂಲರಹಸ್ಯ– ಎನ್ನುವ ೯ ವಿಷಯಗಳಿವೆ ಎಂದು ಆ ಪುಸ್ತಕವನ್ನು ಕುರಿತ ಜಾಹೀರಾತಿನಲ್ಲಿ ನೀಡಿದೆ.

ಪುಸ್ತಕದಲ್ಲಿ ಲೇಖಕರು ನಿರೂಪಿಸಿರುವ ಕೆಲವು ವಿಷಯಗಳನ್ನು ಈಗ ಗಮನಿಸಬಹುದು. ಭಾಗ-೧, ಕೈಗಾರಿಕ ರಹಸ್ಯ ಪ್ರಕರಣದಲ್ಲಿ– ಸನ್‌ಲೈಟ್ ಸೋಪನ್ನು ತಯಾರಿಸುವ ಕ್ರಮ ವಿವರಿಸಲಾಗಿದೆ. ‘ಎರಡು ಸೇರು ನೀರಿನಲ್ಲಿ ಒಂದು ಸೇರು ಕಾಸ್ಟಿಕ್ ಸೋಡವನ್ನು ಹಾಕಬೇಕು. ಇದು ಕರಗುವಾಗ ಬಿಸಿಯಾಗಿರುತ್ತೆ. ಕೈಯಿಂದ ಮುಟ್ಟಬಾರದು. ನಾಲ್ಕು ಸೇರು ಉತ್ತಮವಾದ ಕೊಬ್ಬರಿ ಎಣ್ಣೆಯಲ್ಲಿ ಉತ್ತಮವಾದ ತವಡಿಲ್ಲದ ಗೋಧಿಹಿಟ್ಟು ಒಂದು ಸೇರನ್ನು ಹಾಕಿ ಚೆನ್ನಾಗಿ ಕೈಯಿಂದ ಕಲಿಸಬೇಕು. ತರುವಾಯ ಕಾಸ್ಟಿಕ್ ಸೋಡದ ಮಿಶ್ರಣವು ಸಾಂಗ ಶೀತಲವಾದ ನಂತರ ಸ್ವಲ್ಪ ಸ್ವಲ್ಪ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಮಿಶ್ರ ಮಾಡುವಾಗ ಸ್ವಲ್ಪ ಸ್ವಲ್ಪ ನೀರನ್ನು ಸಹ ಹಾಕಬೇಕು. ನಂತರ ಈ ಮಿಶ್ರಣವನ್ನು ಬೇಕಾದ ಆಕೃತಿಗಳಲ್ಲಿ ಹಾಕಿ ಏಳು ಎಂಟು ಗಂಟೆ ಬಿಟ್ಟರೆ ಸನ್‌ಲೈಟ್ ಸೋಪು ತಯಾರಾಗುತ್ತೆ’ ಎನ್ನುವ ವಿವರವಿದೆ.  

ವೃಕ್ಷಶಾಸ್ತ್ರದಲ್ಲಿ ಪ್ರಕರಣದಲ್ಲಿ ‘ವೃಕ್ಷ ಚಿಕಿತ್ಸಾ ಕ್ರಮ’ವನ್ನು ಗಮನಿಸಬಹುದು. ‘ಬಿಸಿಲು, ಮಂಜು, ಘಾಳಿ ಅಧಿಕತೆಯಿಂದ ಎಲೆಗಳು ಬಿಳುಪಾಗೋಣ, ಕಾಯಿಗಳು ಬತ್ತೋಣ ಇವೇ ಮೊದಲಾದ ದುರ್ದೋಷಗಳು ಸಂಭವಿಸುವ ಕಾಲದಲ್ಲಿ ಆಯಾ ದೋಷಗಳಿರುವ ಸ್ಥಲಗಳನ್ನು ಕತ್ತಿಯಿಂದ ಕೊಯಿದು, ಹಾಲು ಮಿಶ್ರಿತವಾದ ನೀರನ್ನು ಹಾಕುತ್ತಾ ಬಂದರೆ ಚೆನ್ನಾಗಿ ವೃದ್ಧಿ ಹೊಂದುತ್ತವೆ. ಆಯಾ ವೃಕ್ಷಗಳ ಫಲಕಾಲದಲ್ಲಿ ಹುರುಳಿ, ಹೆಸರು, ಉದ್ದು, ಎಳ್ಳು ಈ ಧಾನ್ಯಗಳನ್ನು ಕಲಿಸಿ ನೀರುಹಾಕಿ ಕುದಿಸಿ ಈ ಕಷಾಯವನ್ನು ತಣ್ಣಗಾದ ನಂತರ ಗಿಡಿಗಳಿಗೆ ಹಾಕುತ್ತಾ ಬಂದರೆ ಚನ್ನಾಗಿ ಫಲಿಸುತ್ತವೆ’ ಎಂದು ಲೇಖಕರು ತಿಳಿಸಿದ್ದಾರೆ.

‘ಶ್ವಾನ ಲಕ್ಷಣ ಪ್ರಕರಣ’ದಲ್ಲಿ ಇರುವ ಶ್ವಾನ ಲಕ್ಷಣಗಳು ಹೀಗಿವೆ: ಮೂರು ಕಾಲುಗಳಲ್ಲಿ ಐದೈದು ನಖಗಳಿದ್ದು ಮುಂದಿನ ಬಲಗಾಲಿನಲ್ಲಿ ಆರು ನಖಗಳಿದ್ದರೆ, ಓಷ್ಠ ಮತ್ತು ನಾಸಿಕದ ಅಗ್ರಭಾಗ ತಾಂಬ್ರದ ವರ್ಣವಿದ್ದರೆ, ಬಾಲವು ವಿಶೇಷ ರೋಮಗಳಿಂದ ಯುಕ್ತವಾಗಿದ್ದರೆ, ಸಿಂಹತುಲ್ಯಗತಿಯಿದ್ದರೆ, ಭೂಮಿಯನ್ನು ಮೂಸಿನೋಡುತ್ತಾ ನಡೆಯುತ್ತಿದ್ದರೆ, ಎರಡು ಕಿವಿಗಳು ಕೋಮಲವಾಗಿಯೂ, ಉದ್ದನಾಗಿಯೂ ಇದ್ದರೆ ಇಂಥ ನಾಯಿಯನ್ನು ಪೋಷಿಸುವ ಯಜಮಾನನಿಗೆ ಸುಖಸೌಭಾಗ್ಯಗಳುಂಟಾಗುತ್ತವೆ. ಮೂರು ಪಾದಗಳಲ್ಲಿ ಐದು ನಖಗಳಿದ್ದು ಮುಂದಿನ ಎಡಪಾದದಲ್ಲಿ ಆರು ನಖಗಳಿದ್ದರೆ, ನೇತ್ರಗಳ ಕಡೆಯಲ್ಲಿ ಮಲ್ಲಿಗೆ ಪುಷ್ಪಕ್ಕಿಂತಲೂ ಶ್ವೇತರೇಖೆಯಿದ್ದರೆ, ಪಿಂಗಳ ವರ್ಣವಿದ್ದರೆ, ಬಾಲವು ಡೊಂಕಾಗಿದ್ದರೆ, ಉದ್ದವಾದ ಕಿವಿಗಳಿದ್ದರೆ ಇಂಥಾ ನಾಯಿಯು ತನ್ನ ಪೋಷಣಕರ್ತನ ರಾಜ್ಯವನ್ನು ರಕ್ಷಿಸುತ್ತದೆ. 

ವೈದ್ಯ ರಹಸ್ಯ ಪ್ರಕರಣದಲ್ಲಿ– ‘ತಲೆ ತಿರುಗೋಣ’ ಸಮಸ್ಯೆಯ ಬಗ್ಗೆ ವಿವರಿಸುತ್ತಾ, ‘ಇದು ಪಿತ್ಥಾಧಿಕ್ಯದಿಂದ ಉತ್ಪನ್ನವಾಗುತ್ತದೆ. ಸಕಲ ವಸ್ತುಗಳು ತಿರುಗುವಂತೆ ಕಾಣುತ್ತದೆ. ಕಣ್ಣಿನಲ್ಲಿ ಕತ್ತಲು ಕವಿದಂತಾಗುತ್ತದೆ. ಇದು ಮಸ್ತಕದೋಷ ಸಂಬಂಧವಾದದ್ದು. ೧. ಧನಿಯಾ, ನೆಲ್ಲಿಕಾಯಿ, ಇವೆರಡನ್ನು ಕುಟ್ಟಿ ರಾತ್ರಿ ನೀರಿನಲ್ಲಿ ನೆನೆಹಾಕಿ, ಬೆಳಿಗ್ಗೆ ಚೆನ್ನಾಗಿ ತಿಕ್ಕಿ ಸೋಸಿಕೊಂಡು ಸ್ವಲ್ಪ ಸಕ್ಕರಿಯನ್ನು ಮಿಶ್ರಮಾಡಿ ಕುಡಿಯಬೇಕು. ೨. ಸ್ವಲ್ಪ ಕಸಕಸಿ, ಸ್ವಲ್ಪ ಧನಿಯಾ ಇವುಗಳನ್ನು ನೀರಿನಲ್ಲಿ ಅರೆದು ಸ್ವಲ್ಪ ಸಕ್ಕರಿ ಮಿಶ್ರ ಮಾಡಿ ಸೇವಿಸಬೇಕು’ ಎಂದು ವಿವರಿಸಿದ್ದಾರೆ.

ಭಾಗ-೨ರ ೧೯ನೇ ಪ್ರಕರಣ ‘ರತಿರಹಸ್ಯ’ವು ಕೊಕ್ಕೋಕ ಋಷಿಗಳು ಸಂಸ್ಕೃತದಲ್ಲಿ ರಚಿಸಿರುವ ಕೃತಿಗೆ ಹಯಾತ್ ಸಾಹೇಬ್ ಅವರು ಕನ್ನಡದಲ್ಲಿ ಬರೆದ ಟೀಕು ಆಗಿದೆ. ಇದನ್ನು ಕುರಿತು ಅವರು–  ‘ಕರ್ನಾಟಕ ಮಹಾಶಯರ ಜ್ಞಾನಾರ್ಥವಾಗಿ ಕೊಕ್ಕೋಕ ಋಷಿಗಳಿಂದ ರಚಿಸಲ್ಪಟ್ಟ ಈ ರತಿರಹಸ್ಯದಲ್ಲಿ ಹೇಳಲ್ಪಡುವ ಪ್ರತಿ ಒಬ್ಬರಿಗುಪಯುಕ್ತವಾದ ವಿಷಯಗಳನ್ನೇ ಟೀಕುಸಹಿತ ಗವರ್ನಮೆಂಟಿನವರ ಉತ್ತರವನ್ನು ಪಡೆದು ಪ್ರಚಾರ ಪಡಿಸಿರುತ್ತೇನೆ. ದೇಶಾಭಿಮಾನಿಗಳು ಇದರಲ್ಲಿರುವ ರಸಾಮೃತವನ್ನು ಪರಿಗ್ರಹಿಸಿ, ಸಂಸಾರದಲ್ಲಿ ಸುಖವನ್ನು ಪಡೆಯಲೆಂದು ಈ ಅಲ್ಪಮತಿಯಾದ ಗ್ರಂಥಕರ್ತನ ಪ್ರಾರ್ಥನೆ’ ಎನ್ನುವ ಮಾತುಗಳೊಂದಿಗೆ ಟೀಕನ್ನು ಪ್ರಾರಂಭಿಸಿರುತ್ತಾರೆ.

೧೯೨೦ರ ದಶಕದಲ್ಲಿ ವಿವಿಧ ವಿಷಯಗಳಲ್ಲಿ ಬಂದ ಗ್ರಂಥಗಳಲ್ಲಿ ಹಯಾತ್ ಸಾಹೇಬ್ ಅವರ ‘ವಿದ್ಯಾಗುರು’ (ಭಾಗ 1, 2) ಕೃತಿಗಳು ಓದುಗರಲ್ಲಿ ಕುತೂಹಲವನ್ನು ಉಂಟುಮಾಡುವ ವಿರಳ ರೀತಿಯ ಪುಸ್ತಕವಾಗಿದೆ.

ಶ್ರೀ ರಹಸ್ಯ ಬೋಧಾಮೃತ ಎಂಬ ವಿದ್ಯಾಗುರು

ಹಯಾತ್ ಸಾಹೇಬ್

ಬೆ: ಎರಡು ರೂಪಾಯಿ

ಮು:ಬೆಂಗಳೂರಿನ ಸಿಟಿಯ ಪವರ್ ಪ್ರಿಂಟಿಂಗ್ ಪ್ರೆಸ್‘