ವಾಚಕ ಬೋಧಿನಿ

ಎಂ.ಬಿ. ಶ್ರಿನಿವಾಸಯ್ಯಂಗಾರ‌್ಯ ಅವರ ‘ವಾಚಕ ಬೋಧಿನಿ 60 ಪುಟಗಳ ಪುಟ್ಟ ವ್ಯಾಕರಣ ಕೃತಿ. ಲೇಖಕರ ಪೂರ್ಣ ಹೆಸರು ಮಂಡ್ಯಂ ಭೀಮರಾವ ಶ್ರಿನಿವಾಸ ಅಯ್ಯಂಗಾರ್. 10 ಸಾವಿರ ಪ್ರತಿಗಳು ಅಚ್ಚಾಗಿರುವ 17ನೇ ಆವೃತ್ತಿಯಾದ ಪ್ರಸ್ತುತ ಕೃತಿಯು 1928ರಲ್ಲಿ ಮೈಸೂರಿನ ಸರ್ಕಾರಿ ಮುದ್ರಣಾಲಯದಲ್ಲಿ ಮುದ್ರಿತವಾಗಿದೆ.

ಮೈಸೂರು ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಪ್ರಕಟಿಸಿದೆ. ಇದರ ಮೊದಲ ಮುದ್ರಣ 1894ರಲ್ಲಿ ಆಯಿತು. 1894-1935ರ ಅವಧಿಯಲ್ಲಿ ಈ ಕೃತಿ 25ಕ್ಕೂ ಹೆಚ್ಚು ಬಾರಿ ಬೆಳಕು ಕಂಡಿದೆ.

1915ರಲ್ಲಿ ನಿಧನರಾದ ಶ್ರಿನಿವಾಸ ಅಯ್ಯಂಗಾರ‌್ಯರು ಆ ಕಾಲಕ್ಕೆ ಎಂ.ಎ. ಪದವೀಧರರಾಗಿದ್ದರು. ಮೈಸೂರು ನಿವಾಸಿಗಳಾಗಿದ್ದ ಇವರು ಚಿತ್ರದುರ್ಗ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು, ನಂತರ ಮೈಸೂರು ಸರ್ಕಾರದ ವಿದ್ಯಾ ಇಲಾಖೆಯಲ್ಲಿ ಟ್ರಾನ್ಸ್‌ಲೇಟರ್ ಆಗಿದ್ದರು. ಮೈಸೂರಿನಿಂದ 1888ರಲ್ಲಿ ಬರುತ್ತಿದ್ದ ‘ಹಿತಬೋಧಿನಿ ಮಾಸಪತ್ರಿಕೆಯ ಸಂಸ್ಥಾಪಕರುಗಳಲ್ಲಿ ಇವರೂ ಒಬ್ಬರು. ಆ ಮಾಸ ಪತ್ರಿಕೆಯ ಬಹು ಮುಖ್ಯ ಬರಹಗಾರರು ಕೂಡ.

ಶೇಕ್ಸ್‌ಪಿಯರನ ‘ಸಿಂಬೆಲೈನ್ ನಾಟಕದ ಭಾಷಾಂತರ ‘ಜಯಸಿಂಹರಾಜ ಚರಿತೆ (1886), ತಮಿಳು ಗ್ರಂಥವೊಂದರ ಅನುವಾದ ‘ನಿತ್ಯಾನುಸಂಧಾನ ಟೀಕೆ, ಎಂ.ಎಸ್. ಪುಟ್ಟಣ್ಣ ಅವರೊಂದಿಗೆ ತಮಿಳಿನ ಕುರುಳ್ ಗ್ರಂಥದ ಅನುವಾದ ‘ನೀತಿಚಿಂತಾಮಣಿ (1884), ಕುಲಶೇಖರ ಆಳ್ವಾರರ ಸಂಸ್ಕೃತ ಗ್ರಂಥದ ಕನ್ನಡ-ಇಂಗ್ಲಿಷ್ ಭಾಷಾಂತರಗಳನ್ನೊಳಗೊಂಡ ‘ಮುಕುಂದಮಾಲಾ ಸ್ತೋತ್ರ (1907), ‘ಹಿಂದೂ ದೇಶದ ನಾಗರಿಕ ಹಾಗೂ ‘ಹೇಮರಾಜ ವಿಲಾಸ- ಇವು ಇವರ ಕನ್ನಡದ ಕೃತಿಗಳು. ಇವರ ತಮಿಳು ಕೃತಿಗಳು: ತಿರುಪಲ್ಲಾಂಡು, ಅಮಲಾಂದಿ ಪಿರನ್, ತಿರುಪಳ್ಳಿ ಎಲುಚಿ, ತಿರುಪ್ಪಾವೈ ಮತ್ತು ಕಣ್ಣಿಯುನ್ ಶಿರುತ್ತಂಬು.

ಗ್ರಂಥಕರ್ತರ ಪೀಠಿಕೆಯಲ್ಲಿ ‘ವ್ಯಾಕರಣಶಾಸ್ತ್ರವನ್ನು ಓದಿ ಅರ್ಥಗ್ರಹಣ ಮಾಡುವುದು ಯಾವ ಭಾಷೆಯಲ್ಲಿಯೂ ಸುಲಭವಲ್ಲ. ಇದನ್ನು ಬಾಲಕರಿಗೆ ಸುಲಭವಾಗಿ ತಿಳಿಸುವ ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಬಹುಸಾಧನಗಳುಂಟು. ಅಂಥವುಗಳು ಕನ್ನಡದಲ್ಲಿ ಬಹಳವಾಗಿಲ್ಲ.

ಬಾಲಕರ ಉಪಯೋಗಕ್ಕಾಗಿ ಈಗ ಪ್ರಚಾರದಲ್ಲಿರುವ ವ್ಯಾಕರಣದ ಪುಸ್ತಕಗಳಲ್ಲಿ ಹೇಳಿದ ಲಕ್ಷಣಗಳು ಬಾಲಕರಾದ ವಿದ್ಯಾರ್ಥಿಗಳಿಂದ ಸುಲಭವಾಗಿ ಗ್ರಹಿಸಲ್ಪಡಲು ಉದಾಹರಣೆಗಳೂ, ಅಭ್ಯಾಸಗಳೂ ಹೇರಳವಾಗಿಲ್ಲದ ಕಾರಣ ಈ ಶಾಸ್ತ್ರಾಭ್ಯಾಸವು ಅನೇಕ ವಿದ್ಯಾರ್ಥಿಗಳಿಗೆ ಕಷ್ಟ ತೋರಿ, ಇದರಲ್ಲಿ ಒಂದು ಜುಗುಪ್ಸೆಯುಂಟಾಗಿ, ಬಲವಂತದಿಂದ ಅವರು ಓದುವಂತೆ ಕಾಣಬರುವುದು.

ಈ ಕುಂದಕವನ್ನು ಕೈಯಲ್ಲಾದ ಮಟ್ಟಿಗೂ ನಿವಾರಣೆ ಮಾಡುವುದು ಎಲ್ಲಾ ಹಿತಚಿಂತಕರ ಕೆಲಸವಾಗಿದೆ. ಈ ಸ್ಥಿತಿಯನ್ನು ಸರಿ ಮಾಡಲು ಈ ಚಿಕ್ಕ ಪುಸ್ತಕವು ಒಂದು ಹೊಸರೀತಿಯಿಂದ ಬರೆಯಲ್ಪಟ್ಟಿದೆ ಎಂದು ಕೃತಿರಚನೆಯ ಹಿನ್ನೆಲೆಯನ್ನು ಹೇಳಲಾಗಿದೆ. ಈ ಪುಸ್ತಕವನ್ನು ಪರಿಷ್ಕರಿಸಿರುವುದು ಮೈಸೂರು ವಿದ್ಯಾ ಇಲಾಖೆಯ ‘ಟೆಕ್ಸ್ಟ್ ಬುಕ್ ಕಮಿಟಿ. ಆ ಸಮಿತಿಯ ಅಧ್ಯಕ್ಷರು ಬಿ.ಎಂ.ಶ್ರಿಕಂಠಯ್ಯನವರು.

ಈ ಕೃತಿಯ ವಿಷಯಸೂಚಿಯಂತೆ ಪೀಠಿಕೆ, ಪದಪ್ರಕರಣ, ವಾಕ್ಯ ಪ್ರಕರಣಗಳ ಶೀರ್ಷಿಕೆಯ ಅಡಿಯಲ್ಲಿ ನಾಮಪದ, ಕ್ರಿಯಾಪದ, ಅವ್ಯಯ, ಪದಸ್ವರೂಪ ಕಥನ, ವಾಕ್ಯರಚನೆ ಮತ್ತು ವಾಕ್ಯ ವಿಭಜನೆ- ಈ ವಿಷಯಗಳನ್ನು ಕುರಿತು ವಿವೇಚಿಸಲಾಗಿದೆ. ಪ್ರತಿ ಪಾಠಗಳ ಕೊನೆಯಲ್ಲಿ ‘ಅಭ್ಯಾಸಗಳನ್ನು ನೀಡಲಾಗಿದ್ದು ಒಟ್ಟು 25 ಅಭ್ಯಾಸಗಳಿವೆ. ಉದಾಹರಣೆಗಾಗಿ ‘ಅನ್ವಯ ವಾಕ್ಯಭೇದಗಳು ಎಂಬ ಪಾಠದ ಕೊನೆಯ 24ನೇ ಅಭ್ಯಾಸದಲ್ಲಿ ಕೆಲವನ್ನು ಗಮನಿಸಬಹುದು.

ಅನ್ವಯ ಎಂದರೇನು? ವಾಕ್ಯದಲ್ಲಿ ಅನ್ವಯಕ್ರಮ ಹೇಗೆ? ಅನ್ವಯಕ್ರಮದಿಂದ ಒಂದು ವಾಕ್ಯ ರಚಿಸಿ ತೋರಿಸಿ... ವಾಕ್ಯಗಳನ್ನು ಎಷ್ಟು ವಿಧವಾಗಿ ರಚಿಸಬಹುದು? ‘ಉಪವಾಕ್ಯ ಎಂದರೇನು? ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಅನ್ವಯಕ್ರಮ ಸರಿಯಾಗಿದೆಯೆ? ಅವು ಯಾವ ಬಗೆಯ ವಾಕ್ಯಗಳು? (ಈ ಪ್ರಶ್ನೆಯ ಜೊತೆಗೆ 12 ವಿವಿಧ ಮಾದರಿಯ ವಾಕ್ಯಗಳನ್ನು ನೀಡಲಾಗಿದೆ)- ಇದು ‘ಅಭ್ಯಾಸದ ಸ್ವರೂಪ.

ಲೇಖಕರ ಶಾಸ್ತ್ರ ನಿರೂಪಣಾ ಶೈಲಿ ಹೃದಯಂಗಮ ಹಾಗೂ ಸರಳವಾಗಿದೆ. ನಿದರ್ಶನಕ್ಕಾಗಿ ‘ಸರ್ವನಾಮ ಪಾಠದ ಕೆಲ ಅಂಶಗಳನ್ನು ಗಮನಿಸಬಹುದು:

ಇಬ್ಬರು ಸಂಭಾಷಣೆ ಮಾಡುತ್ತಿರುವಾಗ ‘ನಾನು ಎಂಬ ಸರ್ವನಾಮವು ಮಾತನಾಡುವವನನ್ನು ತಿಳಿಸುತ್ತದೆ. ‘ನಾವು ಎನ್ನುವುದು ಮಾತನಾಡುವವನ ಜೊತೆಗೆ ಇತರರನ್ನು ಸೇರಿಸಿ ಹೇಳುತ್ತದೆ. ‘ನಾನು, ‘ನಾವು ಇವೆರಡಕ್ಕೂ ಉತ್ತಮ ಪುರುಷ ಸರ್ವನಾಮವೆಂದು ಸಂಜ್ಞೆ.

ಯಾರೊಡನೆ ನಾವು ಮಾತಾಡುತ್ತಿದ್ದೇವೋ ಅವನನ್ನು ‘ನೀನು ಎನ್ನುವುದನ್ನು ಹೇಳುತ್ತದೆ. ‘ನೀವು ಎನ್ನುವುದು ಅವನ ಜೊತೆ ಇತರರನ್ನು ಸೇರಿಸಿ ಹೇಳುತ್ತದೆ. ‘ನೀನು, ‘ನೀವು ಇವೆರಡಕ್ಕೂ ಮಧ್ಯಮ ಪುರುಷ ಸರ್ವನಾಮವೆಂದು ಸಂಜ್ಞೆ ಮಾತನಾಡುವವರನ್ನು ಬಿಟ್ಟು ಮಿಕ್ಕ ಎಲ್ಲಾ ಜನರನ್ನೂ, ಸಂಭಾಷಣೆಗಳಿಗೆ ವಿಷಯವಾದ ಪದಾರ್ಥಗಳನ್ನೂ ‘ಅವನು, ಅವಳು, ಅದು ಮುಂತಾದುವುಗಳನ್ನು ಹೇಳುತ್ತದೆ. ಇವಕ್ಕೆ ಪ್ರಥಮ ಪುರುಷ ಸರ್ವನಾಮವೆಂದು ಸಂಜ್ಞೆ.

ಭಾಷೆಯ ಪ್ರಮುಖ ನೆಲೆಗಳು ಮೂರು- ಅಕ್ಷರ, ಪದ ಹಾಗೂ ವಾಕ್ಯ. ಈ ಕೃತಿಯಲ್ಲಿ ಪಠ್ಯವು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡಿರುವುದರಿಂದ ಅಕ್ಷರ ನೆಲೆಯ ವಿವೇಚನೆಯನ್ನು ಪೂರ್ತಿ ಕೈಬಿಟ್ಟು ಭಾಷೆಯ ನಾಲ್ಕು ಕೌಶಲಗಳಾದ ಆಲಿಕೆ, ಗ್ರಹಿಕೆ, ಮಾತನಾಡುವುದು ಮತ್ತು ಬರೆಯುವುದು- ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪದ ಹಾಗೂ ವಾಕ್ಯದ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆ. ಇದಕ್ಕೆ ಪೂರಕವಾಗಿ ಸಂಕ್ಷಿಪ್ತವಾಗಿ ಲೇಖನ ಚಿಹ್ನೆಗಳನ್ನು ಕುರಿತ ವಿವರಣೆ ನೀಡಿರುವುದು ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ.

‘ಪದಸ್ವರೂಪ ಕಥನ ಎಂಬ ಪಾಠದಲ್ಲಿ ಲೇಖಕರು ಒಂದು ವಾಕ್ಯವನ್ನು ತೆಗೆದುಕೊಂಡು ಅಲ್ಲಿನ ಪದಸ್ವರೂಪವನ್ನು ಹೇಳಿರುವ ಕ್ರಮ ಕುತೂಹಲಕರವಾಗಿದೆ. 

ವಾಕ್ಯ: ಮಳೆಗಾಲದಲ್ಲಿ ಮೋಡಗಳು ಕಪ್ಪಗೆ ಕಟ್ಟಿ, ಭೂಮಿಗೆ ಮಳೆಯನ್ನು ಹೊಯ್ಯುತ್ತದೆ. - ಈ ವಾಕ್ಯದಲ್ಲಿ ಏಳು ಪದಗಳಿವೆ.

  1. ಮಳೆಗಾಲದಲ್ಲಿ - ನಾಮಪದ, ಭಾವನಾಮ, ನಪುಂಸಕ ಲಿಂಗ, ಏಕವಚನ, ಸಪ್ತಮೀ ವಿಭಕ್ತಿ
  2. ಮೋಡಗಳು- ನಾಮಪದ, ವಸ್ತುವಾಚಕ, ನಪುಂಸಕ ಲಿಂಗ, ಬಹುವಚನ, ಪ್ರಥಮಾ ವಿಭಕ್ತಿ
  3. ಕಪ್ಪಗೆ- ಅವ್ಯಯ, ರೀತಿಯನ್ನು ಹೇಳುವ ಕ್ರಿಯಾ ವಿಶೇಷಣ
  4. ಕಟ್ಟಿ- ಅವ್ಯಯ, ಅಸಂಪೂರ್ಣ ಕ್ರಿಯಾರ್ಥಕ
  5. ಭೂಮಿಗೆ- ನಾಮಪದ, ವಸ್ತುವಾಚಕ, ನಪುಂಸಕ ಲಿಂಗ, ಏಕವಚನ, ಚತುರ್ಥೀ ವಿಭಕ್ತಿ
  6. ಮಳೆಯನ್ನು- ನಾಮಪದ, ವಸ್ತುವಾಚಕ, ನಪುಂಸಕ ಲಿಂಗ, ಏಕವಚನ, ದ್ವಿತೀಯಾ ವಿಭಕ್ತಿ
  7. ಹೊಯ್ಯುತ್ತದೆ- ಕ್ರಿಯಾಪದ, ವರ್ತಮಾನ ಕಾಲ, ಪ್ರಥಮ ಪುರುಷ, ನಪುಂಸಕ ಲಿಂಗ, ಬಹುವಚನ, ಸಕರ್ಮಕ ಧಾತು.

ಹೀಗೆ ಲೇಖಕರ ನಿರೂಪಣಾ ಶೈಲಿ ಸರಳವಾಗಿರುವುದರಿಂದ ಕೃತಿ ಸುಲಭಗ್ರಾಹ್ಯವಾಗಿದೆ. ನಾಲ್ಕು ದಶಕಗಳ ಕಾಲದಲ್ಲಿ 25ಕ್ಕೂ ಹೆಚ್ಚು ಬಾರಿ ಮುದ್ರಣ ಕಂಡ ಈ ವ್ಯಾಕೃತಿಯು ಕನ್ನಡ ವ್ಯಾಕರಣ ಗ್ರಂಥಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ.