ಸುವ್ರತ
-ಕೆ.ಎಸ್.ಮಧುಸೂದನ

ವಾಸ್ತವವಾಗಿ ಈ ಕಾದಂಬರಿಯು ವಿಷಮ ದಾಂಪತ್ಯ ಹಾಗೂ ಅಹಿಂಸೆಯ ಮಹತ್ವವನ್ನು ಚಿತ್ರಿಸುವ ಕವಿ ಜನ್ನನ ‘ಯಶೋಧರ ಚರಿತ್ರೆ ’ ಎಂಬ ಚಂಪೂಕಾವ್ಯವನ್ನು ಆಧರಿಸಿದ ಪರಿವರ್ತನಾರೂಪದ ಕಾದಂಬರಿಯಾಗಿದೆ.

ಸುವ್ರತ ಅಥವಾ ಕರ್ಮವಿಲಾಸ’ (suvratha, the child of karma ) ಎನ್ನುವುದು 1915ರಲ್ಲಿ ಪ್ರಕಟವಾದ ಮಂ.ಅ.ರಾಮಾನುಜಯ್ಯಂಗಾರ್ಯ ಅವರ ಕಾದಂಬರಿ. ಈ ಬಗ್ಗೆ ಲೇಖಕರೇ ಪುಸ್ತಕದ ಅರಿಕೆಯಲ್ಲಿ ಹೇಳಿಕೊಂಡಿದ್ದಾರೆ.ಈ ಪುಸ್ತಕವನ್ನು ಉಡುಪಿಯ ‘ಸದಾನಂದ’ ಮುದ್ರಾಶಾಲೆಯ ಮ್ಯಾನೇಜಿಂಗ್ ಪ್ರೊಪ್ರೈಟರ್ ಯು.ನರಸಿಂಹ ಮಲ್ಯ ಅವರು ಮುದ್ರಿಸಿದ್ದಾರೆ. ಕೃತಿಯ ಬೆಲೆಯನ್ನು ಎಲ್ಲಿಯೂ ನಮೂದಿಸಲಾಗಿಲ್ಲ. ಆರಂಭದ ರಕ್ಷಾಕವಚಪುಟದ ಮೇಲೆ ‘ಅರ್ಧನೇಮಿ ಪುರಾಣಂ’ ಕೃತಿಯಲ್ಲಿ ಬರುವ-

‘ಆರೇನಾದವರೆಂಬುದ 
ನಾರರಿವರೋ ಜಗದೊಳುಳ್ಳ ರೂಪುಗಳಂ ಸಂ
ಸಾರಿಯಘಸೂತ್ರಧಾರ 
ಪ್ರೇರಣೆಯಿಂ ಪೊತ್ತಿ, ಸುತ್ತಿ ಕುಣಿಯುತ್ತಿರ್ಪಂ’

ಎಂಬ ಕಂದಪದ್ಯವನ್ನು ಸೂತ್ರರೂಪದಲ್ಲಿ ಕೊಡಲಾಗಿದೆ. ಹಿಂಬದಿಯ ರಕ್ಷಾಪುಟದಲ್ಲಿ ನರಸಿಂಹ ಮಲ್ಯರ, 1911ರಲ್ಲಿ ಸ್ಥಾಪಿತವಾದ ‘ಸದಾನಂದ ಪ್ರಿಂಟಿಂಗ್ ವರ್ಕ್ಸ್ ಲಿಮಿಟೆಡ್, ಉಡುಪಿ’- ಇದರ ಜಾಹೀರಾತು ಅಚ್ಚಾಗಿದೆ. ಇದು ಒಂದು ಶತಮಾನದ ಹಿಂದಿನ ಜಾಹೀರಾತಿನ ಮಾದರಿಗೆ ಒಂದು ಒಳ್ಳೆಯ ನಿದರ್ಶನ. ಮಧ್ಯಮ ಗಾತ್ರದ ಆಕಾರದ ಈ ಕೃತಿಯು 196 ಪುಟಗಳನ್ನು ಹೊಂದಿದೆ.

ಕಥಾನಿಮಿತ್ತ, ರಾಣಿಯ ಮೋಹ, ಧರ್ಮಸಂಕಟ, ವೈರಾಗ್ಯ, ವಿಷಪ್ರಯೋಗ, ನವಿಲು-ನಾಯಿ, ಪರಿಣಾಮ, ಪುನರ್ಜನ್ಮ, ಆಡು-ಹೋತ, ಕೋಣ, ಕಾಳೆಗದ ಕೋಳಿ, ಗುಟ್ಟು ರಟ್ಟಾಯಿತು, ಸತಿ; ಅಸತಿ, ಸೂಚನೆ, ವನವಿಹಾರ, ಸುದರ್ಶನಾಚಾರ್ಯ, ಕರ್ಮಸಂಸರ್ಗ, ಧನುರ್ವಿದ್ಯಾಪ್ರದರ್ಶನ, ಪುತ್ರೋತ್ಸವ, ಜನ್ಮಾಟವಿ, ತಪೋವನಗಮನ, ಪ್ರಜ್ಞೆಯ ರಾಜ್ಯಭಾರ, ಅಭಯಮತಿ-ಅಭಯರುಚಿ ಮತ್ತು ಉಪಸಂಹಾರ- ಎಂಬ ಹೆಸರುಗಳ ಒಟ್ಟು 24 ಅಧ್ಯಾಯಗಳನ್ನು ಈ ಕಾದಂಬರಿ ಒಳಗೊಂಡಿದೆ.

ವಾಸ್ತವವಾಗಿ ಈ ಕಾದಂಬರಿಯು ವಿಷಮ ದಾಂಪತ್ಯ ಹಾಗೂ ಅಹಿಂಸೆಯ ಮಹತ್ವವನ್ನು ಚಿತ್ರಿಸುವ ಕವಿ ಜನ್ನನ ‘ಯಶೋಧರ ಚರಿತ್ರೆ ’ ಎಂಬ ಚಂಪೂಕಾವ್ಯವನ್ನು ಆಧರಿಸಿದ ಪರಿವರ್ತನಾರೂಪದ ಕಾದಂಬರಿಯಾಗಿದೆ. 

ಕನ್ನಡಕ್ಕೆ ಕಳೆದ ಶತಮಾನದ ಆರಂಭದಲ್ಲಿ ಕಾದಂಬರಿ ಎಂಬ ಹೊಸ ಪ್ರಕಾರವು ಇಂಗ್ಲಿಷ್ ಪ್ರಭಾವದಿಂದ ಬಂದ ಹೊಸತರಲ್ಲಿ ಕಾದಂಬರಿಯನ್ನು ಕುರಿತು ನಡೆಯುತ್ತಿದ್ದ ಪ್ರಯೋಗಗಳ ಸರಣಿಯಲ್ಲಿ ‘ಸುವ್ರತ’ ಒಂದು ಬಹುಮುಖ್ಯ ಕೊಂಡಿ. ಒಂದು ಭಾಷೆಯ ಸಾಹಿತ್ಯ ಸೃಜನಶೀಲವಾಗಿ ಮತ್ತು ಸಮೃದ್ಧವಾಗಿ ವಿಕಾಸಗೊಳ್ಳುವುದೇ ಹೀಗೆ. ಇದರ ಜೊತೆಗೆ ಇಂಗ್ಲಿಷ್, ಮರಾಠಿ, ಬಂಗಾಳಿ ಭಾಷಾ ಕಾದಂಬರಿಗಳ ಅನುವಾದಗಳೂ ಕೂಡ ಕನ್ನಡದಲ್ಲಿ ಬಂದಿವೆ.

ಲೇಖಕರು ಬರೆದಿರುವ ‘ಅರಿಕೆ’ಯಲ್ಲಿ- ‘ಈ ಕಾದಂಬರಿಯು ಕರ್ಮವಿಲಾಸವನ್ನು ನಿದರ್ಶಿಸುತ್ತದೆ. ಕರ್ಮಗತಿಯು ಅತಿಸೂಕ್ಷ್ಮವಾಗಿ ತಿಳಿಯಲು ಗಹನವಾಗಿರುವ ಪ್ರಯುಕ್ತ, ಜನಗಳ ಪ್ರವೃತ್ತಿ ಮೂಲಕವಾಗಿಯೇ ವಿವರಿಸಲ್ಪಡಬೇಕು; ಅದಕ್ಕಾಗಿ, ಒಬ್ಬ ಮಹಾಶಯನ ಚರಿತ್ರೆಯನ್ನು ಅವಲಂಬಿಸಲಾಯಿತು. ಲೋಕವು ಕರ್ಮಾಧೀನವಾಗಿದೆ; ಲೋಕದಲ್ಲಿ ನೆಲೆಯಾಗಿ ನಿಲ್ಲತಕ್ಕದ್ದು ಧರ್ಮವೇ- ಎಂಬ ಮರ್ಮವನ್ನು ತಿಳಿಯಿಸುವುದೇ ಈ ಗ್ರಂಥರಚನೆಗೆ ಮುಖ್ಯೋದ್ದೇಶವು’ ಎನ್ನುವ ಮಾತುಗಳಿವೆ. ಇದರಲ್ಲಿನ ಒಬ್ಬ ಮಹಾಶಯನ ಚರಿತ್ರೆ ಎಂದರೆ ‘ಯಶೋಧರ ಚರಿತ್ರೆ’.

ಹಾಗೆಯೇ ಇಂಗ್ಲಿಷ್‌ನಲ್ಲಿ ಬರೆದಿರುವ prefaceನಲ್ಲಿ ಧಾರ್ಮಿಕ ಹಾಗೂ ತಾತ್ವಿಕ ವಸ್ತುಗಳನ್ನು ಕಾದಂಬರಿ ಪ್ರಕಾರದಲ್ಲಿ ನಿರ್ವಹಿಸುವುದು ಎಷ್ಟು ಸೂಕ್ಷ್ಮ ಹಾಗೂ ಕ್ಲಿಷ್ಟ ಎಂಬ ವಿಚಾರದ ಚರ್ಚೆಯಿದೆ. ಪ್ರಾಯೋಗಿಕವಾಗಿ, ಈ ಕಾದಂಬರಿಕಾರರು ಆ ಕಾಲದಲ್ಲಿ ತಮಗಿದ್ದ  ಇತಿಮಿತಿಯೊಳಗೆ ಈ ಧಾರ್ಮಿಕ ಹಾಗೂ ತಾತ್ವಿಕ ವಸ್ತುವನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ.   ‘Of all the themes, religious, or philosophic ones are the most difficult of treatment in a novel and require the highest powers of imagination and analysis to be brought into play.’ ಎನ್ನುವುದು ಕೃತಿಕಾರರ ಅನಿಸಿಕೆ.

ಜನ್ನನ ಕಾವ್ಯದ ಕಾದಂಬರೀ ರೂಪದ ಅಳವಡಿಕೆಯಾದ ಈ ಕೃತಿಯಲ್ಲಿ ಲೇಖಕರು ಹೆಸರುಗಳಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಟು ಮಾಡಿಕೊಂಡಿರುತ್ತಾರೆ. ‘ಯಶೋಧರ ಚರಿತ್ರೆ’ ಸುವ್ರತ ಎಂದಾಗಿದೆ. ಜನ್ನನ ಮಾರಿದತ್ತ ಅರಿಷ್ಟಕರ್ಮ ಆಗಿ, ಯಶೌಘ ಸುಬಲನಾಗಿ, ಯಶೋಧರ ಸುವ್ರತನಾಗಿ, ಅಮೃತಮತಿ ಚಂದ್ರಾಳಿಯಾಗಿ, ಅಷ್ಟವಂಕ ಮಾವಟಿಗನಾಗಿ ಬದಲಾಗಿದ್ದಾರೆ.

‘ಸುವ್ರತ’ ಯಶೋಧರ ಚರಿತ್ರೆಯ ತದ್ವತ್ತಾದ ಗದ್ಯಾನುವಾದವೇನಲ್ಲ. ಅನೇಕ ಸ್ವತಂತ್ರ ಕಲ್ಪನೆಗಳು, ಔಚಿತ್ಯಪೂರ್ಣವಾಗಿ  ಬದಲಾವಣೆಗಳು ಈ ಕೃತಿಯಲ್ಲಿ ಕೆಲವೆಡೆ ಕಾಣಿಸಿಕೊಂಡಿದೆ. ಮೂಲ ಕಾವ್ಯದಲ್ಲಿರುವ ನಾಲ್ಕು ಅವತಾರಗಳನ್ನು 24 ಅಧ್ಯಾಯಗಳಿಗೆ ಹೊಂದಿಸಿಕೊಂಡು ಕಾದಂಬರಿಯೊಂದರ ಆಕೃತಿಗೆ ಅದನ್ನು ಅಳವಡಿಸಿರುವುದು ಗಮನಾರ್ಹ. ಕನ್ನಡದಲ್ಲಿ ಕಾದಂಬರಿ ಪ್ರಕಾರ ವಿಕಾಸವಾಗುತ್ತಿರುವುದರ ನಿದರ್ಶನವೆಂಬಂತೆ ವಸ್ತುನಿರ್ವಹಣೆಯನ್ನು ಮಾಡಿರುವುದು ಈ ಕೃತಿಯ ವಿಶೇಷ. ಐತಿಹಾಸಿಕವಾಗಿ ಮತ್ತು ಗುಣಾತ್ಮಕವಾಗಿ ಈ ಕೃತಿಗೆ ಕನ್ನಡ ಸಾಹಿತ್ಯಲೋಕದಲ್ಲಿ ಪ್ರಮುಖ ಸ್ಥಾನವಿದೆ. 

ಈ ಕೃತಿಯ ಒಂದು ವಾಕ್ಯವೃಂದ ಗಮನಿಸಿ:

‘ಸುವ್ರತನು ಬಂದ ವಿದ್ವಾಂಸರನ್ನು ಆದರಿಸಿ, ಅವರ ವಿದ್ಯೆಯನ್ನು ಪರಾಮರ್ಶಿಸಿ, ಅವರವರ ಯೋಗ್ಯತೆಗೆ ತಕ್ಕಂತೆ ಮರ್ಯಾದೆಯನ್ನು ಮಾಡುತ್ತಿದ್ದುದೂ ಅಲ್ಲದೆ, ಕೇವಲ ಪ್ರವೀಣರಾದವರನ್ನು ತನ್ನ ಆಸ್ಥಾನವನ್ನು ಬಿಟ್ಟು ಇತರ ಕಡೆಗೆ ಹೋಗಗೊಳಿಸದೆ, ತನ್ನಲ್ಲಿಯೇ ನಿಲ್ಲಿಸಿಕೊಳ್ಳುತ್ತಿದ್ದನು. ತನ್ನ ಹತ್ತಿರ ನಿಂತ ವಿದ್ವಾಂಸರಿಗೆ, ತನ್ನ ಆಸ್ಥಾನಕ್ಕೆ ಸಮೀಪದಲ್ಲಿದ್ದ ಉದ್ಯಾನವನದಲ್ಲಿ ಬೀಡಾರಗಳನ್ನು ಮಾಡಿಕೊಟ್ಟು ತನ್ನ ಮೋತೀಖಾನೆಯಿಂದ ಸಕಲ ಸಂಭಾರಗಳನ್ನೂ ಒದಗಿಸಿಕೊಡುತ್ತ, ನೋಡಿಕೊಳ್ಳುತ್ತಿದ್ದನು’.

ಈ ಕಾದಂಬರಿಯ ಇನ್ನೊಂದು ವಿಶೇಷವೆಂದರೆ ಕೆಲವೆಡೆ ಲೇಖಕರು ಯಶೋಧರ ಚರಿತ್ರೆ ಕಾವ್ಯದ ಹಲವು ಪದ್ಯಗಳನ್ನು ಹಾಗೆಯೇ ಉಲ್ಲೇಖ ಮಾಡಿರುವುದು ಹಾಗೂ ವರ್ಣನೆಗಳ ಸಂದರ್ಭದಲ್ಲಿ ಹಲವು ಸಂಸ್ಕೃತ ಕಾವ್ಯಗಳು, ಪಂಪರಾಮಾಯಣ, ತಿರುಮಲಾರ್ಯ ಮತ್ತು ಅನೇಕ ಕನ್ನಡ ಕವಿಗಳ ಕಾವ್ಯದ ಪದ್ಯಗಳನ್ನು ಬಳಸಿಕೊಂಡಿರುವುದು. 

ಸುಮಾರು ಇದೇ ಕಾಲದ ಆಸುಪಾಸಿನಲ್ಲಿ ಎಂ.ಟಿ.ವಲ್ಲಭಯ್ಯಂಗಾರ್ಯರಿಂದ ‘ರಘೂನಾಥಸಿಂಹ’ (1922, ಬಂಗಾಳಿ ಭಾಷೆಯಿಂದ ಅನುವಾದ) ಮತ್ತು ಎಸ್.ಜಿ.ಗೋವಿಂದರಾಜ ಅಯ್ಯಂಗಾರ್ಯರಿಂದ ‘ಪ್ರಿಂರೋಜವಿಜಯಂ’ (1913, ಗೋಲ್ಡ್‌ಸ್ಮಿತ್‌ನ ವಿಕಾರ್ ಆಫ್ ವೇಕ್ಫೀಲ್ಡ್‌ನ ಅನುವಾದ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿರುವುದು ಕನ್ನಡ ಕಾದಂಬರಿ ಪ್ರಕಾರವು ಗುಣಾತ್ಮಕವಾಗಿ ಬೆಳೆಯುವುದಕ್ಕೆ ಸಹಕಾರಿಯಾಯಿತು.