ಶ್ರೀರಂಗಪಟ್ಟಣದ ಚರಿತ್ರ
ಮುನ್ನುಡಿ

ಬೆಳ್ಳಾವೆ ಸೋಮಪ್ಪ ಸೋಮನಾಥಯ್ಯ (1854–1914) ಅವರ ‘ಶ್ರೀರಂಗಪಟ್ಟಣ’ ಪುಸ್ತಕದ ಪ್ರಕಟಣೆಯ ಕಾಲ ಹಾಗೂ ಜೇಬಿನಾಕಾರದ 86 ಪುಟಗಳ. ಬೆಲೆ ನಮೂದಾಗದ ಈ ಕೃತಿಯ ಹೆಸರಿನ ಬಗ್ಗೆ ಕೂಡಾ ಜಿಜ್ಞಾಸೆಯಿದೆ. ಮಹಾಮಹೋಪಾಧ್ಯಾಯ

ರಾ. ನರಸಿಂಹಾಚಾರ್ಯರು ತಮ್ಮ ‘ಕವಿಚರಿತೆ- ಭಾಗ3’ರಲ್ಲಿ ಇದನ್ನು ‘ ಶ್ರೀರಂಗಪಟ್ಟಣದ ಚರಿತ್ರೆ’ ಎಂದು ಸೂಚಿಸಿದ್ದರೆ, ವೆಂಕಟೇಶ ಸಾಂಗಲಿಯವರು ತಮ್ಮ ‘ಸಿರಿಗನ್ನಡ ಗ್ರಂಥಕರ್ತರ ಚರಿತ್ರಕೋಶ’ದಲ್ಲಿ  ‘ಶ್ರೀರಂಗಪಟ್ಟಣವು ಹುಟ್ಟಿ ಬೆಳೆದ ಕಥೆ’ ಎಂದು ನಿರ್ದೇಶಿಸಿದ್ದಾರೆ.

ನನಗೆ ದೊರಕಿದ ಮುಖಪುಟವಿಲ್ಲದ ಈ ಪುಟ್ಟ ಪುಸ್ತಕದ ಆರಂಭದ ಪುಟದಲ್ಲಿ ಕೃತಿಯ ಹೆಸರು ‘ಶ್ರೀರಂಗಪಟ್ಟಣ’ ಎಂದೇ ಇದೆ. ಬಹುಶಃ ಈ ಪುಸ್ತಕದ ಮುಖಪುಟದೊಂದಿಗಿನ ಇನ್ನೊಂದು ಪ್ರತಿ ದೊರೆಯುವವರೆಗೆ ಇದೇ ಇದರ ಸರಿಯಾದ ಹೆಸರೆಂದು ಭಾವಿಸುತ್ತೇನೆ ಹಾಗೂ ಈ ಪುಸ್ತಕದ ಕಾಲ ಸುಮಾರು 1895 ಎಂದು ಊಹಿಸುತ್ತೇನೆ.

ಅದ್ವೈತ ಬ್ರಾಹ್ಮಣ ಪಂಗಡಕ್ಕೆ ಸೇರಿದ ಸೋಮನಾಥಯ್ಯನವರು ತುಮಕೂರು ಜಿಲ್ಲೆಯ ಬೆಳ್ಳಾವೆ ಊರಿನವರು. ಇವರು ಖ್ಯಾತ ಕನ್ನಡ ನಾಟಕಕಾರ ಬೆಳ್ಳಾವೆ ನರಹರಿಶಾಸ್ತ್ರಿಗಳ ದೊಡ್ಡ ಅಣ್ಣಂದಿರು. ಬೆಂಗಳೂರಿನ ವೆಸ್ಲಿಯನ್ ಮಿಶನ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ತೇರ್ಗಡೆ ಹೊಂದಿ ಎಫ್.ಎ. ತರಗತಿಯ ಅಭ್ಯಾಸವನ್ನು ಬಹುಶಃ ಬಡತನದ ಕಾರಣದಿಂದ ನಿಲ್ಲಿಸಬೇಕಾಯಿತು.

ಸ್ವತಂತ್ರ ಮನೋಭಾವದವರಾಗಿದ್ದ, ವಿದ್ವತ್ತು ಹಾಗೂ ಕಾರ್ಯಸಂಸ್ಕೃತಿಯುಳ್ಳ ಅವರು ದಿವಾನ್ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ನೆರವಿನಿಂದ 1874ರಷ್ಟು ಹಿಂದೆಯೇ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹೆಣ್ಣುಮಕ್ಕಳ ಶಾಲೆಯೊಂದನ್ನು ಸ್ಥಾಪಿಸಿ, ಅಂದಿನ ಮೈಸೂರು ಸಾಮ್ರಾಜ್ಯದಲ್ಲಿ ಸ್ತ್ರೀಶಿಕ್ಷಣಕ್ಕೆ ಬುನಾದಿಯನ್ನು ಹಾಕಿಕೊಟ್ಟರು. ಕೆಲಕಾಲ ಅಲ್ಲಿಯೇ ಅಧ್ಯಾಪಕರಾಗಿ ಸೇವೆಯನ್ನೂ ಸಲ್ಲಿಸಿದರು. ಚಿಕ್ಕಬಳ್ಳಾಪುರದ ಹೆಣ್ಣು ಮಕ್ಕಳ ಶಾಲೆಯಲ್ಲಿದ್ದಾಗ ಅಸ್ವಸ್ಥರಾಗಿ ಕೆಲಸಕ್ಕೆ ರಾಜಿನಾಮೆಯನ್ನು ಕೊಟ್ಟರು.

ಕನ್ನಡದ ಜತೆಗೆ ಸಂಸ್ಕೃತ, ಇಂಗ್ಲಿಷ್, ತೆಲುಗು ಭಾಷೆಗಳಲ್ಲಿ ಅಪಾರ ಪಾಂಡಿತ್ಯವಿದ್ದ ಸೋಮನಾಥಯ್ಯನವರು ಗಣಿತ ಶಾಸ್ತ್ರದಲ್ಲಿ ಕೂಡ ಬಲ್ಲಿದರಾದ ವಿದ್ವಾಂಸರೆಂದು ಖ್ಯಾತರಾಗಿದ್ದರು. ಹಲವಾರು ವಿದೇಶಿ ವಿದ್ವಾಂಸರು ಕೂಡ ಇವರೊಂದಿಗೆ ಗಣಿತ ಶಾಸ್ತ್ರವನ್ನು ಕುರಿತ ಪತ್ರವ್ಯವಹಾರವನ್ನಿರಿಸಿಕೊಂಡಿದ್ದರು.

ಬಹುಶ್ರುತ ವಿದ್ವಾಂಸರಾಗಿದ್ದ ಸೋಮನಾಥಯ್ಯನವರು ‘ಗೆದ್ದತ್ತೆ ಸೋತಳಿಯ’, ‘ಬೃಂದಾವನೋತ್ಸವ’, ‘ಶಂಕರಚರಿತ್ರ ಕಾಲವಿಚಾರ’, ‘ಶೃಂಗೇರಿ ಮಠದ ಚರಿತ್ರೆ’, ‘ವಿವೇಕ ಚಂದ್ರಿಕೆ’, ‘ರಾಜಶೇಖರ ಚರಿತೆ’, ‘ಗಯ್ಯಾಳಿಯನ್ನು ಸಾಧು ಮಾಡುವಿಕೆ’ ಹಾಗೂ ‘ಸತೀಮಣಿವಿಜಯ’ ಎನ್ನುವ ಕೃತಿಗಳನ್ನು ರಚಿಸಿರುತ್ತಾರೆ. ಇದರಲ್ಲಿ ‘ಗಯ್ಯಾಳಿಯನ್ನು ಸಾಧು ಮಾಡುವಿಕೆ’ ಹಾಗೂ ‘ಸತೀಮಣಿ ವಿಜಯ’ ಕೃತಿಗಳು ತೆಲುಗಿನ ವೀರೇಶ ಲಿಂಗಂ ಪಂತುಲು ಅವರು ತೆಲುಗಿಗೆ ತಂದಿದ್ದ ಷೇಕ್‌ಸ್ಪಿಯರ್‌ನ ಕೃತಿಗಳನ್ನು ಆಧರಿಸಿದ ಕನ್ನಡ ಅನುವಾದಗಳು.

1893ರಲ್ಲಿ ಆರಂಭವಾದ ‘ವಿಜ್ಞಾನ ದೀಪಿಕೆ’ ಎನ್ನುವ ಒಂದು ವಿಜ್ಞಾನ ಮಾಸಪತ್ರಿಕೆಗೆ ಅವರು ಕೆಲ ಕಾಲ ಸಂಪಾದಕರಾಗಿದ್ದರು ಎನ್ನುವ ಮಾಹಿತಿ ಇದೆ. ವಿಸ್ಮಯವಾದ ಸಂಗತಿ ಎಂದರೆ ಇವರ ‘ರಾಜಶೇಖರ ಚರಿತೆ’ಯು ಈ ವಿಜ್ಞಾನದ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡದ್ದು. ಒಟ್ಟಾರೆ, ಕನ್ನಡ ಸಾರಸ್ವತ ಲೋಕಕ್ಕೆ ಬೆಳ್ಳಾವೆ ಕುಟುಂಬ ಹಾಗೂ ಬೆಳ್ಳಾವೆ ಸೋಮನಾಥಯ್ಯನವರ ಕೊಡುಗೆ ಅಪಾರ.

‘ಶ್ರೀರಂಗಪಟ್ಟಣ’ ಪುಸ್ತಕದಲ್ಲಿ ಚರಿತ್ರೆ, ವರ್ಣನೆ ಹಾಗೂ ಸರ್ಕಾರಿ ಕಾಗದ ಪತ್ರಗಳು ಎನ್ನುವ ಮೂರು ಭಾಗಗಳಿವೆ. ‘ಚರಿತ್ರೆ’ ಶೀರ್ಷಿಕೆಯಡಿ– ಪುರಾಣಸಿದ್ಧ, ಐತಿಹ್ಯ, ಹೊಯಿಸಳ ಬಲ್ಲಾಳರ ಕಾಲ, ವಿಜಯನಗರದವರ ಕಾಲ, ಕರ್ತರ ಕಾಲ, ದೊಡ್ಡ ನವಾಬರ ಕಾಲ, ಟೀಪೂ ಸುಲ್ತಾನರ ಕಾಲ  ಹಾಗೂ ಈಚಿನ ಚರಿತ್ರೆ  ಎನ್ನುವ ವಿಷಯ ವಿಂಗಡಣೆ ಇದೆ.ಈ ಭಾಗದಲ್ಲಿ ಪುರಾಣಪ್ರಸಿದ್ಧವಾದ ಶ್ರೀರಂಗಪಟ್ಟಣದ ಚರಿತ್ರೆಯನ್ನು ಪುರಾಣ, ಐತಿಹ್ಯಗಳು ಮುಂತಾದ ನೆಲೆಯಲ್ಲಿ ವಿವರಿಸಿ ನಂತರ ಇತಿಹಾಸ ಕಾಲದ ವಿಚಾರಕ್ಕೆ ಬಂದು ಹೇಗೆ ಶ್ರೀರಂಗಪಟ್ಟಣದ ಚರಿತ್ರೆಯು ನವಾಬರಾದ ಹೈದರ್ ಆಲಿ ಹಾಗೂ ಟೀಪೂ ಸುಲ್ತಾನರ ಕಾಲದಲ್ಲಿ ಉತ್ತುಂಗಕ್ಕೆ ಏರಿತು ಎನ್ನುವುದನ್ನು ನಿದರ್ಶನಗಳೊಂದಿಗೆ ತಿಳಿಸುತ್ತಾರೆ.‘ವರ್ಣನೆ’ ಅಡಿಯಲ್ಲಿ– ಕಾವೇರಿ, ಶ್ರೀರಂಗಪಟ್ಟಣ, ಕೋಟೆ, ಕೋಟೆಯ ನೋಟ ಮತ್ತು ಕೋಟೆಯ ಹೊರಗಿನ ಸ್ಥಳಗಳು ಎನ್ನುವ ಐದು ಉಪ ಶೀರ್ಷಿಕೆಗಳಿವೆ. ‘ಕೋಟೆಯ ನೋಟ’ ಉಪಶೀರ್ಷಿಕೆಯಲ್ಲಿ ರಂಗಸ್ವಾಮಿ ಗುಡಿ, ಅಲಂಬತೇರಿ, ದೊಡ್ಡಬುರುಜು, ಆಳವಾದ ಕಂದಕ, ನೆಟ್ಟಿರುವ ಪಿರಂಗಿಗಳು, ವಾಡೇದಿಡ್ಡಿ, ಡಿಳ್ಳೀಸೇತುವೆ, ದೊಡ್ಡಗಿಡ್ಡಂಗಿ, ಕೃಷ್ಣದಿಡ್ಡಿ, ಸುಲ್ತಾನದ ಮಹಲು, ಹುಲ್ಲೇದಿಡ್ಡಿ, ಸುಲ್ತಾನರು ಸತ್ತ ಸ್ಥಳ, ಇನ್ನೊಂದು ಗಿಡ್ಡಂಗಿ, ದೊಡ್ಡಮಸೀದಿ, ಗಂಜಾಂದರ್ವಾಜ, ಕಾಳೇಗೌಡನ ಬತೇರಿ, ಮೈಸೂರು ದರ್ವಾಜ, ಬಮ್ಮೂರು ದಿಡ್ಡಿ, ದೊಡ್ಡಕಮಾನು, ದೊಡ್ಡ ಉಗ್ರಾಣ, ಗಂಗಾಧರೇಶ್ವರನ ಗುಡಿ, ನರಸಿಂಹಸ್ವಾಮಿ ಗುಡಿ, ಕರ್ತರ ಅರಮನೆ– ಇವುಗಳನ್ನು ಕುರಿತ ಖಚಿತ ವಿವರಣೆಗಳಿವೆ.

‘ಕೋಟೆಯ ಹೊರಗಿನ ಸ್ಥಳಗಳು’ ವಿಭಾಗದಲ್ಲಿ ದರ್ಯಾದೌಲತ್ ಬಾಗ್, ಸಬ್ಬಲ್‌ರಾಣಿ ತಿಟ್ಟು, ಷಹರ್ ಗಂಜಾಂ, ಸಂಗಮ, ಗುಂಬಜ್, ಬೇಲಿಸಾಹೇಬರ ಗೋರಿ, ಬಂಗಾರದೊಡ್ಡಿ ಕಾಲ್ವೆ, ಪಶ್ಚಿಮವಾಹಿನಿ, ಗೌತಮ ಕ್ಷೇತ್ರ– ಮುಂತಾದ ಸ್ಥಳಗಳ ವಿವರಣೆಗಳಿವೆ.

‘ಸರ್ಕಾರಿ ಕಾಗದ ಪತ್ರಗಳು’ ವಿಭಾಗದ ವಿಷಯಗಳು ಹೀಗಿವೆ:

  1. ಮೈಸೂರು ರಾಣಿ ಲಕ್ಷ್ಮಮ್ಮಣ್ಣಿಯವರು ಗವರ್ನರ್ ಜನರಲ್ ಲಾರ್ಡು ಮಾರ್ನಿಂಗ್ಟನ್ ಸಾಹೇಬರಿಗೂ, ಮದ್ರಾಸ್ ಗವರ್ನರ್ ಲಾರ್ಡ್ ಕ್ಲೈವು ಸಾಹೇಬರಿಗೂ ಬರೆಯಿಸಿ ಕಳುಹಿಸಿದ ಕಾಗದದ ನಕಲು. ಇದರ ಕಾಲ 3ನೇ ಫೆಬ್ರವರಿ 1798 ಭಾನುವಾರ- ಕಾಳಯುಕ್ತಿ ಸಂವತ್ಸರದ ಪುಷ್ಯ ಬಹುಳ ಚತುರ್ದಶಿ.
  2. ಈ ಪತ್ರಕ್ಕೆ ಜೆ. ವೆಬ್ ಸಡಾಹೇಬರಿಂದ ಬಂದ ಜವಾಬು- ತಾ|| 16ನೇ ಏಪ್ರಿಲ್ 1798
  3. ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಲು ಬಂದಿದ್ದ ಒಟ್ಟು ಫವುಜಿನ ತಪಸೀಲು.
  4. ಜನರಲ್ ಬೇರ್ಡು ಸಾಹೇಬರ ಜತೆಯಲ್ಲಿ ಕೋಟೆ ಹಲ್ಲಾಹತ್ತಿದ ಫವುಜು.

ಇನಾಂ ಹಣದ ತಪಸೀಲು. ಇದರಲ್ಲಿ  ಕೋಟೆ ಹಲ್ಲಾಹತ್ತಿದ ಫವುಜು ಹಾಗೂ ಇನಾಂ ಹಣದ ತಪಸೀಲುಗಳ ವಿವರಗಳ ಮಾಹಿತಿಯನ್ನು ಮದ್ರಾಸು ಪಟ್ಟಣದಲ್ಲಿ ಪ್ರಕಟಗೊಳ್ಳುತ್ತಿದ್ದ ‘ದಿ ಮದ್ರಾಸ ಕೊರಿಯರ್’ ಎನ್ನುವ ನಿಯತ ಕಾಲಿಕೆಯ ಜನವರಿ-ಜೂನ್ 1799ರ ಸಂಚಿಕೆಯಿಂದ ಲೇಖಕರು ಸ್ವೀಕರಿಸಿ ಆ ಪತ್ರಿಕೆಯನ್ನು ಸ್ಮರಿಸಿಕೊಂಡಿರುತ್ತಾರೆ. ಕುತೂಹಲಕ್ಕಾಗಿ 5 ನೆಯ ಅಂಶ-ಇನಾಂ ಹಣದ ತಪಸೀಲಿನ ವಿವರಣೆಯನ್ನು ಗಮನಿಸಬಹುದು. ಅದರ ಒಕ್ಕಣೆ ಹೀಗಿದೆ:

ಮೇ ಮಾಹೆ 5 ನೇ ತಾರೀಖಿನಿಂದ 22 ನೇ ತಾರೀಖಿನವರೆಗೂ ಸಿಕ್ಕಿದ ಒಟ್ಟು ಹಣ 25,35,804 ವರಹ, ಎಂದರೆ ಸುಮಾರು 88,50,000 ರುಪಾಯಿಗಳು. ಈ ಹಣವೆಲ್ಲವನ್ನೂ ಇಂಗ್ಲೀಷರ ಕಡೆ ಯುದ್ಧ ಮಾಡಿದ ಫವುಜಿಗೆ ಇನಾಮಾಗಿ ಜೂನ್ 26 ನೇ ತಾರೀಖಿನಲ್ಲಿ ಹಂಚಿಕೊಟ್ಟರು. ಇದರ ವಿಲೇವಾರಿ ಹೇಗೆಂದರೆ-

"ಕಮಾಂಡರಿನ್ ಚೀಫ್ ಸಾಹೇಬರಿಗೆ ೮ರಲ್ಲೊಂದು ಪಾಲು ಅಂದರೆ ರುಪಾಯಿಗಳು 11,00,000, ಮೇಜರ್ ಜನರಲ್ ಫ್ಲಾಯಿಡ್ ಸಾ|| ರೂ 1,25,000, ಸ್ಟಾಫಿನ ಜನರಲ್ ಆಫೀಸರುಗಳಿಗೆ ಇಸಂ 1ಕ್ಕೆ-1,01,000, ಕರ್ನಲ್‌ಗಳಿಗೆ ಇಸಂ 1ಕ್ಕೆ- 4.37,000, ಲೆಫ್ಟಿನೆಂಟು ಕರ್ನಲ್‌ಗಳಿಗೆ- 23,000, ಮೇಜರುಗಳಿಗೆ- 13,000, ಕೇಪ್ಟನ್‌ಗಳಿಗೆ, ಸರ್ಜನ್‌ಗಳಿಗೆ- 7,500, ಸಬಾಲ್ಟನ್‌ಗಳಿಗೆ, ಅ|| ಸರ್ಜನ್‌ಗಳಿಗೆ- 3,800, ಕ್ವಾರ್ಟರ್ ಮಾಷ್ಟರುಗಳಿಗೆ-1,300, ಸಾರ್ಜೆಂಟ್‌ಮೇಜರುಗಳಿಗೆ- 190, ಸಾರ್ಜೆಂಟುಗಳಿಗೆ- 129, ಕಾರ್ಪೊರಲ್‌ಗಳಿಗೆ- 63, ಕಮಾಂಡೆಂಟ್ ಸುಬೇದಾರರಿಗೆ ಇಸಂ 1ಕ್ಕೆ - 370, ಆಮಾದಾರರಿಗೆ, ಹವಾಲ್‌ದಾರರಿಗೆ- 63, ನಾಯಕ, ಶಿಪಾಯಿ, ಗನ್ ಕಲಾಸಿ, ಕಾಮಾಟಿ, ಹಕೀಮ, ಪಕಾಲಿವಾಲ, ಟ್ರಂಪಟರ್, ಡ್ರುಮ್ಮರ್, ಫೈನರಿಗೆ ಇಸಂ 1ಕ್ಕೆ- 42"

ಹಣವಿತರಣೆಗೆ ಸಂಬಂಧಿಸಿದ ಇಂತಹ ಅಪೂರ್ವ ಮಾಹಿತಿಗಳಿರುವುದು ಈ ಪುಟ್ಟ ಕೃತಿಯ ವಿಶೇಷ. ಅಷ್ಟೇ ಅಲ್ಲದೆ ಅಡಿಟಿಪ್ಪಣಿಗಳನ್ನು ನೀಡಿರುವುದಲ್ಲದೆ ಹೈದರ್ ಆಲಿ ಹಾಗೂ ಟೀಪೂ ಸುಲ್ತಾನರ 2 ಸುಂದರ ಛಾಯಾಚಿತ್ರಗಳ ಪಡಿಯಚ್ಚನ್ನು ಓದುಗರ ಅವಗಾಹನೆಗಾಗಿ ನೀಡಲಾಗಿದೆ. ಶ್ರೀರಂಗಪಟ್ಟಣದ ಇತಿಹಾಸದ ಅಧ್ಯಯನ ಮಾಡುವ ಸಂಶೋಧಕರಿಗೆ 19ನೇ ಶತಮಾನದ ಕೊನೆಯಲ್ಲಿ ಪ್ರಕಟವಾದ ಪ್ರಸ್ತುತ ಕೃತಿ ಒಂದು ಅಪೂರ್ವ ಆಕರ ಗ್ರಂಥವಾಗಿದೆ.