ಕನ್ನಡದಲ್ಲಿ ವ್ಯಾಕರಣ ಗ್ರಂಥಗಳಿಗೆ ಕೊರತೆಯೇನಿಲ್ಲ. ನಾಗವರ್ಮ (1150) ಸಂಸ್ಕೃತದಲ್ಲಿ ರಚಿಸಿದ ‘ಕರ್ಣಾಟಕ ಭಾಷಾಭೂಷಣಂ ಮತ್ತು ಕನ್ನಡದಲ್ಲಿ ಬರೆದ ‘ಶಬ್ದಸ್ಮೃತಿ, ಕೇಶಿರಾಜನ (1275) ‘ಶಬ್ದಮಣಿ ದರ್ಪಣಂ, ಭಟ್ಟಾಕಳಂಕ (1600) ಸಂಸ್ಕೃತದಲ್ಲಿ ರಚಿಸಿದ ‘ಶಬ್ದಾನುಶಾಸನಂ ಇವು ಹಳಗನ್ನಡದ ಪ್ರಮುಖ ವ್ಯಾಕರಣಗಳು.
ಮುಖ್ಯವಾಗಿ 1810ರಿಂದ 1899ರವರೆಗೆ ಹತ್ತು ಮಂದಿ ದೇಶೀಯ ವಿದ್ವಾಂಸರು ಕನ್ನಡದಲ್ಲಿ ಮತ್ತು ಹತ್ತು ಜನ ಪಾಶ್ಚಾತ್ಯ ಪಂಡಿತರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ವ್ಯಾಕರಣ ಗ್ರಂಥಗಳನ್ನು ರಚಿಸಿರುತ್ತಾರೆ.
Hans Janeson ಎಂಬ ಪಾಶ್ಚಾತ್ಯ ವಿದ್ವಾಂಸ, 1850ರ ಸುಮಾರಿನಲ್ಲಿ ಜರ್ಮನ್ ಭಾಷೆಯ ‘Grammatic der canari’ ಎಂಬ ಕನ್ನಡ ವ್ಯಾಕರಣ ಗ್ರಂಥವೊಂದನ್ನು ರಚಿಸಿದ್ದು ವಿಶೇಷ. Rev.F.Kittel ಅವರೇ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ‘ಶಬ್ದಮಣಿ ದರ್ಪಣಂನ ಸಂಪಾದನೆಯನ್ನೊಳಗೊಂಡು 4 ವ್ಯಾಕರಣ ಗ್ರಂಥಗಳನ್ನು ರಚಿಸಿದ್ದಾರೆ.
ಕನ್ನಡದ ಮೊದಲ ಉಪಲಬ್ದ ಮುದ್ರಿತ ಪುಸ್ತಕವು 1817ರಲ್ಲಿ ಅಚ್ಚಾದ W.Carey, D.D. ಅವರ ‘Grammar of kurnata Language’ ಎಂಬ ವ್ಯಾಕರಣ ಗ್ರಂಥ. ಉಪಲಬ್ದವಿಲ್ಲದ, ಆದರೆ 1810ರಲ್ಲಿ ಮುದ್ರಣಗೊಂಡಿತೆಂದು ತಿಳಿದುಬಂದಿರುವ ಕೃಷ್ಣಮಾಚಾರ್ಯರ ‘ಧಾತುಮಂಜರಿ ಎಂಬುದೂ ಕನ್ನಡ ವ್ಯಾಕರಣ ಕೃತಿಯೇ ಆಗಿದೆ.
W.Carey ವ್ಯಾಕರಣದಲ್ಲಿನ ದೋಷಗಳನ್ನು ಪರಿಷ್ಕರಿಸಿ 1820ರಲ್ಲಿ ಜಾನ್ ಮೆಕ್ಕೆರೆಲ್ ‘ A Grammar of Karnata Language’ ಎಂಬ ಕೃತಿ ರಚಿಸಿದನು. ಇದನ್ನು ಪರಿಷ್ಕರಿಸಿ Thomas Hodson ಎಂಬ ವಿದ್ವಾಂಸ 1859ರಲ್ಲಿ ‘Elementary Grammar of The Kannada or Canarese Language’ ಎನ್ನುವ ಕೃತಿರಚನೆ ಮಾಡಿದನು. ಈ ಕೃತಿಯನ್ನು ಪರಿಷ್ಕರಿಸಿ, ‘Kanarese Grammar’ ಕೃತಿರಚನೆ ಮಾಡಿದ್ದು Herald Spencer, B.A. ಎಂಬಾತ.
ಪ್ರಸ್ತುತ ಈ ಕೃತಿಯು 1914ರಲ್ಲಿ ಮೈಸೂರಿನ ವೆಸ್ಲಿಯನ್ ಮಿಷನ್ ಪ್ರೆಸ್ಸಿನಲ್ಲಿ ಮುದ್ರಣಗೊಂಡಿದೆ. ಒಟ್ಟು 330 ಪುಟಗಳಿರುವ ಈ ಕೃತಿಯ ಬೆಲೆ ಎಲ್ಲೂ ನಮೂದಾಗಿಲ್ಲ. 1950ರಲ್ಲಿ ಈ ಕೃತಿಯನ್ನು ಪರಿಷ್ಕರಿಸಿ W.Peterson, B.D. ಮೈಸೂರಿನ ವೆಸ್ಲಿಯನ್ ಪ್ರೆಸ್ಸಿನಿಂದ ಪ್ರಕಟಗೊಳಿಸಿದನು.
ಹೀಗಾಗಿ W.carey ವ್ಯಾಕರಣ ಗ್ರಂಥವು ವಿಭಿನ್ನ ಕಾಲದಲ್ಲಿ ವಿಭಿನ್ನ ಲೇಖಕರಿಂದ ಪರಿಷ್ಕರಣೆಗೆ ಒಳಗಾಗಿದೆ. ಈ ಸರಣಿಯಲ್ಲಿನ ಮಹತ್ವದ ಕೃತಿ ಹೆರಾಲ್ಡ್ ಸ್ಪೆನ್ಸರ್‌ನ ಹಾಲಿ ಕೃತಿ‘Kanarese Grammar’ ಈ ಪುಸ್ತಕದ ಪ್ರಸ್ತಾವನೆಯಲ್ಲಿ ಕೃತಿಕಾರನು ಎಚ್.ಗುಲ್‌ಫೋರ್ಡ್, ಐ.ಫೀಲ್ಡರ್, ಈ.ಪಿ.ರೈಸ್, ಡಬ್ಲ್ಯೂ.ಎಚ್.ತೋರ್ಪ್, ಡಬ್ಲ್ಯೂ.ಈ.ಟಾಮ್ಲಿನ್ಸನ್, ಕೆ.ವೆಂಕಟಾಚಾರ್, ಹಾಸನ ಹಾಗೂ ಡಾ.ಕಿಟ್ಟೆಲ್ ಅವರು ತನ್ನ ಕೃತಿಗೆ ವಿವಿಧ ಹಂತಗಳಲ್ಲಿ ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡಿದ್ದಾನೆ.
ಈ ಕೃತಿಗೆ ಮೂಲ ಹಿಂದೆ ಹೇಳಿದಂತೆ 1859ರಲ್ಲಿ ರಚಿತವಾದ ಥಾಮಸ್ ಹಾಡ್ಸನ್ ಅವರ ಕೃತಿ. ಇದು 1864ರ ಹೊತ್ತಿಗೇನೆ 2ನೆಯ ಮುದ್ರಣ ಕಂಡಿತ್ತು. ಇಂತಹ ಜನಪ್ರಿಯವಾಗಿದ್ದ ಕೃತಿಯನ್ನು ಪರಿಷ್ಕರಿಸಿದ್ದು ಸ್ಪೆನ್ಸರನ ವಿಶೇಷ. ಸ್ಪೆನ್ಸರನ ಈ ಕೃತಿಯು ಇತರ ಪಾಶ್ಚಾತ್ಯ ವಿದ್ವಾಂಸರ ಕೃತಿಗಳಂತೆ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಲ್ಲೇ ಇದೆ. ಈ ಕೃತಿಯನ್ನು ಹೊರತರಲು ಕಾರಣ ಲೇಖಕನೇ ಹೇಳುವಂತೆ- ‘The first intension of the committee was that Mr,hodson’s book shall re-appear in a new and revised edition, amplified especially by the inclusion of graduated excercises.’ ಜೊತೆಗೆ ಪ್ರಕಾಶಕರ ಕೋರಿಕೆಯಂತೆ ಕನ್ನಡ ಪದಗಳು, ವಾಕ್ಯಗಳು ಹಾಗೂ ನಿದರ್ಶನಗಳಿಗೆ ಇಂಗ್ಲಿಷ್ ಭಾಷೆಯ ಲಿಪ್ಯಂತರವನ್ನು ಉಳಿಸಿಕೊಳ್ಳಲಾಗಿದೆ.
330 ಪುಟಗಳ ಈ ಪುಸ್ತಕದಲ್ಲಿ 4 ಅಧ್ಯಾಯಗಳೂ 31 ಪಾಠಗಳೂ ಇವೆ. The Alphabet ಎಂಬ ಮೊದಲ ಪಾಠದಲ್ಲಿ ಕನ್ನಡದ ವರ್ಣಮಾಲೆಯನ್ನು ಸಮಗ್ರವಾಗಿ ವಿವರಿಸಿರುವುದರ ಜೊತೆಗೆ ಕನ್ನಡ ಕಾಗುಣಿತದ ಸಂಪೂರ್ಣ ಪಟ್ಟಿಯನ್ನು ವಿವರಣೆಯೊಂದಿಗೆ ನೀಡಲಾಗಿದೆ. ಪ್ರತಿಯೊಂದು ಪಾಠಗಳ ಅಂತ್ಯದಲ್ಲಿಯೂ ವಿವರವಾದ ಅಭ್ಯಾಸಗಳನ್ನು ನೀಡಲಾಗಿದೆ.
ಈ ವ್ಯಾಕರಣ ಕೃತಿಯಲ್ಲಿ ಭಾಷೆಯ ಮೂರು ನೆಲೆಗಳಾದ ಅಕ್ಷರ, ಪದ ಮತ್ತು ವಾಕ್ಯ ವಿಷಯಗಳಲ್ಲಿ ಅಕ್ಷರ ಮತ್ತು ಪದ(ಶಬ್ದ) ಪ್ರಕರಣಗಳನ್ನು ವಿಶೇಷವಾಗಿ ಗಮನಿಸಲಾಗಿದೆ. ವಾಕ್ಯವಿಷಯಕ್ಕೆ ಕೃತಿಕಾರ ಪ್ರವೇಶಿಸಿಯೇ ಇಲ್ಲ.
ಇದು ಈ ಕೃತಿಯ ಒಂದು ಬಹು ದೊಡ್ಡ ಕೊರತೆ. ಏಕೆಂದರೆ ಭಾಷೆ ವ್ಯವಹಾರದಲ್ಲಿರುವುದೇ ವಾಕ್ಯರೂಪಗಳಲ್ಲಿ. ಇದು ಹಿಂದಿನ ಅನೇಕ ವ್ಯಾಕರಣ ಗ್ರಂಥಗಳ ದೋಷವೂ ಆಗಿದೆ.
ಅನುಬಂಧ 1ರಲ್ಲಿ ನೀಡಿರುವ ಸಂಬಂಧಾರ್ಥಕ ನಾಮಪದಗಳಲ್ಲಿ ಕನ್ನಡದ ಕೆಲವು ಸೂಕ್ಷ್ಮಗಳನ್ನು ಸ್ಪೆನ್ಸರ್ ಸವಿವರವಾಗಿ ಸ್ಪಷ್ಟೀಕರಿಸುತ್ತಾನೆ. ನಿದರ್ಶನಕ್ಕೆ ದೊಡ್ಡಪ್ಪ , ದೊಡ್ಡಮ್ಮ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಶಬ್ದಗಳಿಗೆ ಈ ರೀತಿ ವಿವರಿಸುತ್ತಾನೆ The father’s brothers and the mother’s sisters are accorded a place of honour second anly, and second by very little, to that of one’s own parents. while not called actually ಅಪ್ಪ appa and ಅಮ್ಮ amma, they are called ದೊಡ್ಡಪ್ಪ doddappa ಚಿಕ್ಕಪ್ಪ chikkappa ದೊಡ್ಡಮ್ಮ doddamma ಚಿಕ್ಕಮ್ಮ chikkamma. The wife of ದೊಡ್ಡಪ್ಪ doddappa is called ದೊಡ್ಡಮ್ಮ doddamma and the husband of a ದೊಡ್ಡಮ್ಮ doddamma is called ದೊಡ್ಡಪ್ಪ doddappa; similarly for the other terms.
ಸ್ಪೆನ್ಸರ್ ಸಮಾಸಗಳನ್ನು ಕುರಿತು ಹೇಳುವಾಗ ವೀಪ್ಸಾ ಸಮಾಸ ಎಂಬ ಒಂದು ಕುತೂಹಲಕಾರಿ ಸಂಗತಿಯನ್ನು ಹೇಳಿದ್ದಾನೆ. ಅದನ್ನು ಕುರಿತು The variouse kinds of reduplication, repetition, etc describes... are collected under the general name of Veepsaa Samaasa ವೀಪ್ಸಾ Veepsaa means repitition ಎನ್ನುತ್ತಾನೆ.
ಉದಾಹರಣೆಯಾಗಿ ಹೊತ್ತು ಹೊತ್ತಿಗೆ, ಮನೆಮನೆಗೆ, ಹೇಳಿಹೇಳಿ, ಏನೇನೂ, ಇದ್ದೇ ಇರುತ್ತದೆ, ವಿಧವಿಧ, ಇಷ್ಟಿಷ್ಟು ಇತ್ಯಾದಿ. ಹೀಗೆ ಈ ಕೃತಿಯು ಅನೇಕ ಅಪೂರ್ವ ಸಂಗತಿಗಳ ಆಗರವಾಗಿದೆ. ಆ ಕಾಲಕ್ಕೆ ಕನ್ನಡ ಭಾಷೆಯ ಪ್ರಯೋಗಗಳ ಸೂಕ್ಷ್ಮಾತಿಸೂಕ್ಷ್ಮಗಳನ್ನು ವಿವರಿಸುವಂತಹ ಒಂದು ಅಪೂರ್ವ ವ್ಯಾಕರಣ ಗ್ರಂಥ ಪ್ರಕಟವಾಗಿರುವುದು ವಿಶೇಷವೇ ಸರಿ.