ಸೋಕ್ರಟೀಸನ ಮರಣ
cover

ಇವರು ಮತ್ತೊಬ್ಬ ಕನ್ನಡ ವಿದ್ವಾಂಸ ಅಯ್ಯಾಶಾಸ್ತ್ರೀ ಗರಳಪುರಿಶಾಸ್ತ್ರೀ ಸೋಸಲೆ ನಾಮಾಂಕಿತ ವೆಂಕಟಸುಬ್ಬಶರ್ಮ (೧೮೫೪–೧೯೩೪) ಅವರ ಪುತ್ರ. ಈ ಶರ್ಮರಾದರೋ ದಮಯಂತಿ ಚರಿತ್ರೆ, ಕರ್ಣಾಟಕ ನಳಚರಿತ್ರ ನಾಟಕಂ, ಕರ್ಣಾಟಕ ಪ್ರತಾಪಸಿಂಹ ಚರಿತ್ರ ನಾಟಕಂ, ಮಹೀಶೂರ ಮಹಾರಾಜ ಚರಿತಂ, ಯಕ್ಷಪ್ರಶ್ನೆ, ರಾಜಭಕ್ತಿಲಹರಿ, ಕರ್ಣಾಟಕ ರಾಮಾಯಣ ನಾಟಕಂ, ಕರ್ಣಾಟಕ ವಿಕ್ರಮೋರ್ವಶೀಯ ನಾಟಕಂ, ಶೇಷರಾಮಾಯಣ, ಕರ್ಣಾಟಕ ಶಬ್ದಾನುಶಾಸನಂ, ಕರ್ಣಾಟಕ ಕಾದಂಬರಿ, ಕರ್ಣಾಟಕ ಭಗವದ್ಗೀತೆ, ಕರ್ಣಾಟಕ ಮಹಾಭಾರತ ಮುಂತಾದ ನಾಟಕ, ಕಾವ್ಯ ಹಾಗೂ ಸಂಪಾದಿತ ಕೃತಿಗಳನ್ನು ಕನ್ನಡ ಭಾಷೆಯಲ್ಲೂ ಮತ್ತು ಚಾಮರಾಜೇಂದ್ರ ಪಟ್ಟಾಭಿಷೇಕ ಹಾಗೂ ಕೃಷ್ಣಾಂಬಾ ಪರಿಣಯ ಎಂಬ ಕಾವಗಳನ್ನು ಸಂಸ್ಕೃತ ಭಾಷೆಯಲ್ಲೂ ರಚಿಸಿದವರು. ಕಾವ್ಯಶಾಸ್ತ್ರ ವಿನೋದಗಳ ವಿಚಾರದಲ್ಲಿ ಹಲವಾರು ಸಂಘಸಂಸ್ಥೆಗಳನ್ನು ಸಂಘಟಿಸಿದವರು. ಆ ಕಾಲಕ್ಕೆ ಪ್ರಸಿದ್ಧರಾಗಿದ್ದ ಕುಂಭಕೋಣಂ ಶೇಷಾಚಾರ್ಯರಲ್ಲಿ ಪಾಠ ಕಲಿತವರು.

ಎಂ.ಎ. ರಾಮಾನುಜೈಯಂಗಾರ್ಯರ ಕರ್ಣಾಟಕ ಕಾವ್ಯ ಕಲಾನಿಧಿ ಗ್ರಂಥಮಾಲೆಯಲ್ಲಿ ಪರಿಶೋಧಕರಾಗಿದ್ದರು.ತಂದೆಗೆ ತಕ್ಕ ಮಗನಾಗಿದ್ದ ಎಸ್.ಜಿ. ಶಾಸ್ತ್ರಿಯವರು ಹೆನ್ರಿಕ್ ಇಬ್ಸನ್‌ನ Warriors in Hegeland  ನಾಟಕವನ್ನು ‘ಆರ್ಯಕ’ ಎಂದೂ, A Doll’s House ನಾಟಕವನ್ನು ‘ಸೂತ್ರದ ಬೊಂಬೆ’ ಎಂದೂ, Count Maurice Maeterlinck ಅವರ Monna Vanna ನಾಟಕವನ್ನು ‘ಮೊನ್ನ ವನ್ನ’ ಎಂದೂ ಲಾರೆನ್ಸ್ ಹೌಸ್‌ಮನ್ನರ Death of Socrates ನಾಟಕವನ್ನು ‘ಸೋಕ್ರಟೀಸನ ಮರಣ’ ಎಂದೂ, ಬಯೋರ್‌ನ್‌ಸನ್‌ನ ಲಿಯೋನಾರ್ಡ ನಾಟಕವನ್ನು ಅದೇ ಹೆಸರಿನಿಂದಲೂ ಅನುವಾದಿಸಿದ್ದಾರೆ. ‘ಕಣ್ಣು ಬಿಚ್ಚಾಲೆ’ ಇವರ ಏಕಾಂಕ ನಾಟಕಗಳ ಸಂಗ್ರಹ.

‘ಇದ್ದರೂ ಇರಬಹುದು’ ಮತ್ತು ‘ಪರಪುರುಷ’ ಎಂಬುವು ಇವರ ಎರಡು ಕಥಾಸಂಗ್ರಹ. ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ ಗಳಿಸಿ ೧೯೧೩ರಲ್ಲಿ ಇಂಗ್ಲೆಂಡಿನಲ್ಲಿ ಎಂ.ಎಸ್‌ಸಿ ಪದವಿಯನ್ನು ಬಂಗಾರದ ಪದಕದೊಂದಿಗೆ ಪಡೆದರು. ಸೋಪು ಶಾಸ್ತ್ರಿಗಳೆಂದೇ ಪ್ರಸಿದ್ಧರಾದ ಶಾಸ್ತ್ರಿಗಳು ಮೈಸೂರು ಸರ್ಕಾರದ ಸಾಬೂನು ಕಾರ್ಖಾನೆಯ ಮುಖ್ಯಾಧಿಕಾರಿಗಳಾಗಿದ್ದರಲ್ಲದೆ ಮೈಸೂರು ಕಾಗದದ ಕಾರ್ಖಾನೆ, ಅರಗುಬಣ್ಣದ ಕಾರ್ಖಾನೆ ಮುಂತಾದ ಕಾರ್ಖಾನೆಗಳ ಸಂಸ್ಥಾಪಕರಾಗಿದ್ದರು. ೧೯೨೪ರಲ್ಲಿ ಲಂಡನ್ ಪಟ್ಟಣದಲ್ಲಿ ನಡೆದ ಬ್ರಿಟಿಷ್ ಸಾಮ್ರಾಜ್ಯದ ವಸ್ತುಪ್ರದರ್ಶನದಲ್ಲಿ ಎಸ್.ಜಿ. ಶಾಸ್ತ್ರಿಗಳು ಭಾರತವನ್ನು ಪ್ರತಿನಿಧಿಸಿದ್ದರು.

ಲಾರೆನ್ಸ್ ಹೌಸ್‌ಮನ್ ಅನೇಕ ಮಂದಿ ಲೋಕ ಭೋದಕರ ಜೀವಿತ ಸಂದರ್ಭಗಳನ್ನು ನಾಟಕರೂಪದಲ್ಲಿ ಚಿತ್ರಿಸಿದ್ದಾನೆ. ಇವನು ಭಾರತ ದೇಶದ ಬಗ್ಗೆ ವಿಶೇಷ ಆದರಾಭಿಮಾನ ಉಳ್ಳವನು. ಮಹಾತ್ಮ ಗಾಂಧಿಯವರು ೧೯೩೧ರಲ್ಲಿ ಇಂಗ್ಲೆಂಡಿಗೆ ಹೋಗಿದ್ದಾಗ ಅವರಿಗೆ ಸತ್ಕಾರ ಮಾಡಲು ಅಲ್ಲಿ ಏರ್ಪಟ್ಟಿದ್ದ ಸ್ವಾಗತ ಸಮಿತಿಗೆ ಹೌಸ್‌ಮನ್ನನು ಅಧ್ಯಕ್ಷನಾಗಿದ್ದು ಉದಾರಸೂಚಕವಾದ ಭಾಷಣವನ್ನು ಮಾಡಿದ್ದನ್ನು ಇಲ್ಲಿ ಸ್ಮರಣೆಗೆ ತಂದುಕೊಳ್ಳಬಹುದು. ಇಂತಹ ಲಾರೆನ್ಸ್ ಹೌಸ್‌ಮನ್ ಕವಿಯ ‘ಡೆತ್ ಆಫ್ ಸೋಕ್ರಟೀಸ್’ ಎಂಬ ಇಂಗ್ಲಿಷ್ ನಾಟಕದ ಅನುವಾದವಾದ ಈ ಪ್ರಸ್ತುತ ‘ಸೋಕ್ರಟೀಸನ ಮರಣ’ ನಾಟಕವನ್ನು ೧೯೩೨ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘದ ವತಿಯಿಂದ ಎ.ಆರ್. ಕೃಷ್ಣಶಾಸ್ತ್ರೀ ಅವರು ಪ್ರಕಟಿಸಿದರು.

1೦6 ಪುಟಗಳುಳ್ಳ ಅಷ್ಟಮ ಡೆಮಿ ಆಕಾರದ, ಬೆಂಗಳೂರಿನ ಬಿ.ಬಿ.ಡಿ. ಪವರ್ ಪ್ರೆಸ್ಸಿನಲ್ಲಿ ಯು.ನರಸಿಂಹ ಮಲ್ಯರಿಂದ ಅಚ್ಚಾದ ಈ ಪುಸ್ತಕದ ಬೆಲೆ ಒಂದು ರುಪಾಯಿ ನಾಲ್ಕು ಆಣೆ. ಗರಳಪುರಿ ಶಾಸ್ತ್ರಿಗಳು ತಮ್ಮ ಈ ಕೃತಿಯನ್ನು  ‘ಗುರುವರ್ಯ ವೃದ್ಧಪಿತಾಮಹ ಶ್ರೀಯುತ ಎಂ. ವೆಂಕಟಕೃಷ್ಣಯ್ಯನವರ ಸನ್ನಿಧಿಯಲ್ಲಿ ನಮಸ್ಕಾರಪೂರ್ವಕ ವಿಜ್ಞಾಪನೆಗಳು. ನಾನು ತಮ್ಮ ವಿದ್ಯಾರ್ಥಿಯಾಗಿದ್ದಾಗ್ಯೆ ಸೋಕ್ರಟಿಸನ ಕತೆಯನ್ನು ಹೇಳಿಕೊಟ್ಟಿರಿ. ಆ ಕತೆಯನ್ನು ಬೇರೆ ರೂಪವಾಗಿ ಬರೆದು ತಮಗೆ ಈಗ ಪಾಠವನ್ನು ಒಪ್ಪಿಸಿರುತ್ತೇನೆ. ಬಾಲಕನ ಮೇಲೆ ದಯೆಯಿಟ್ಟು ಪುಸ್ತಕವನ್ನು ಸ್ವೀಕರಿಸಬೇಕು, ತಮ್ಮ ಶಿಷ್ಯ, ಗರಳಪುರಿ, (ಎಸ್.ಜಿ.ಶಾಸ್ತ್ರಿ)’ ಎನ್ನುವ ಒಕ್ಕಣೆಯೊಂದಿಗೆ ತಮಗೆ ಪರಮ ಆಪ್ತರಾಗಿದ್ದ, ಮೈಸೂರು ದೇಶದಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಹೊಡೆದಾಡಿದ್ದ ತಾತಯ್ಯ ಎಂ.ವೆಂಕಟಕೃಷ್ಣಯ್ಯನವರಿಗೆ ಅರ್ಪಿಸಿರುತ್ತಾರೆ.

ಪ್ರಪಂಚದಲ್ಲಿ ಅಭಿಪ್ರಾಯ ಸ್ವಾತಂತ್ರ್ಯಕ್ಕೋಸ್ಕರ ಎಷ್ಟು ಕಷ್ಟ ಬಂದರೂ ಸಹಿಸಿಕೊಂಡು ಕೊನೆಗೆ ಜೀವವನ್ನೂ ದಾನ ಮಾಡಿದ ಸೋಕ್ರಟಿಸನ ವಿಷಯವೇ ಈ ನಾಟಕದ ವಸ್ತು. ಈ ಕೃತಿಗೆ ಆ ಕಾಲಘಟ್ಟದ ಮತ್ತೋರ್ವ ಧೀಮಂತ ಪತ್ರಕರ್ತ ಸಾಹಿತಿ ಡಿ.ವಿ.ಗುಂಡಪ್ಪ ಅವರು ೨೨ ಭಾಗಗಳಲ್ಲಿ ೩೦ ಪುಟಗಳಷ್ಟು ಸುದೀರ್ಘವಾದ ಸೊಗಸಾದ ಅತ್ಯಂತ ಉಪಯುಕ್ತವಾದ ಅವತರಣಿಕೆಯನ್ನು ಬರೆದಿರುತ್ತಾರೆ. ಈ ಪುಸ್ತಕ ಬಂದ ಎರಡು ವರ್ಷಗಳ ನಂತರ ಅಂದರೆ ೧೯೩೪ರಲ್ಲಿ ಶ್ರೀ ಎ.ಎನ್. ಮೂರ್ತಿ ರಾಯರು ಎಫ್.ಜೆ. ಚರ್ಚ್ ಗ್ರೀಕ್ ಭಾಷೆಯಿಂದ ಇಂಗ್ಲಿಷಿಗೆ ತರ್ಜುಮೆ ಮಾಡಿದ್ದ ‘ಸಾಕ್ರೆಟಿಸನ ವಿಚಾರಣೆ ಮತ್ತು ಮರಣ’ ಎನ್ನುವ ಕೃತಿಯನ್ನು ‘ಸಾಕ್ರೆಟಿಸನ ಕೊನೆಯ ದಿನಗಳು’ ಎಂದು ಅನುವಾದ ಮಾಡಿದರು ಎಂಬುದು ಗಮನೀಯ.

ವತರಣಿಕೆಯಲ್ಲಿ ಈ ಕೃತಿಯನ್ನು ಕುರಿತು ಡಿ.ವಿ.ಜಿ ಅವರು– ‘‘ಇಂತಹ ಚಿರಂತನಾಚಾರ್ಯನ ಅವಸಾನಸಮಯದ ಮರ್ಮಭೇದಕವಾದ ವರ್ತನೆಗಳನ್ನು ನನ್ನ ಮಾನ್ಯ ಮಿತ್ರರಾದ ಶ್ರೀಮಾನ್ ಸೋಸಲೆಯ ಗರಳಪುರಿ ಶಾಸ್ತ್ರಿಗಳವರು ಈ ಗ್ರಂಥದಲ್ಲಿ ಕನ್ನಡಿಗರ ಗೋಚರಕ್ಕೆ ತಂದಿದ್ದಾರೆ. ಇಂತಹ ತತ್ವಾನ್ವೇಷಿಯ, ಇಂತಹ ಸಂಪ್ರದಾಯ ಸಂಸ್ಥಾ ಪರೀಕ್ಷಕನ, ಇಂತಹ ಜೀವನಪರಿಶೋಧಕನ ಸಂತತಧ್ಯಾನವು ಈಗ ಕನ್ನಡಿಗರಿಗೆ-ಎಲ್ಲ ಭಾರತೀಯರಿಗೂ ಸಹ-ಕರ್ತವ್ಯವಾಗಿದೆ.

ಸಾಕ್ರೆಟೀಸನು ಅಥೆನ್ಸಿನಲ್ಲಿದ್ದಂತಹ ಸಂದರ್ಭ ಅಥವಾ ಅಸಂದರ್ಭಗಳು ಈಗ ನಮಗೊದಗಿವೆ; ಇಲ್ಲಿ ಈಗ ಅದೇ ತೆರದ ಪ್ರಜಾಪ್ರಾಬಲ್ಯದ ಪ್ರಾರಂಭ; ಅದೇ ಬಗೆಯ ರೂಢವಚನ ಕೈಂಕರ್ಯ; ಅದೇ ವಿಚಾರ ವರ್ಜಿತವಾದ ಆವೇಶಧೋರಣೆ; ಅದೇ ಗೊಂದಲ; ಅದೇ ಗಜಿಬಿಜಿ. ಇಂತಹ ಸಮಯದಲ್ಲಿ ಆ ಮಹಾನುಭಾವನ ಚರಿತವನ್ನು ಸ್ಮರಣೆಗೆ ತಂದುಕೊಡುವವರು ಮಬ್ಬಿನಲ್ಲಿ ಬಂದ ದೀವಟಿಕಾರರು. ಹಿಮವತ್ಪರ್ವತಕ್ಕೆ ಯಾತ್ರೆ ಮಾಡಲಾರದವರು ತಮಗೆ ಆ ಮಹಾದ್ಭುತದ ಒಂದೆರಡು ಪಕ್ಕಗಳನ್ನಾದರೂ ಫೋಟೋ ಹಿಡಿದು ತೋರಿಸುವವರಿಗೆ ಕೃತಜ್ಞರಾಗಿರುವರಲ್ಲವೇ?

ಇಲ್ಲಿ ಶ್ರೀಮಾನ್ ಗರಳಪುರಿ ಶಾಸ್ತ್ರಿಗಳವರು ನಮಗಾಗಿ ಅಂಥ ಉಪಕಾರವನ್ನು ಮಾಡಿದ್ದಾರೆ. ಸಾಹಿತ್ಯಸೇವೆಗೆ ಬೇಕಾದ ಅನೇಕ ತೆರದ ಅಧಿಕಾರ ಸಂಪತ್ತು ಅವರಲ್ಲಿ ಸೇರಿದೆ; ಸ್ವಾಭಾವಿಕವಾದ ಉತ್ಸಾಹ; ಅದಕ್ಕೆ ತಕ್ಕ ಸಂಕಲ್ಪನಿಷ್ಠೆ; ಅದಕ್ಕನುಗುಣವಾದ ಭಾಷಾನೈಪುಣ್ಯ ಮತ್ತು ಬುದ್ಧಿ ಚಾಕಚಕ್ಯ; ಅದಕ್ಕೆ ಪೋಷಕವಾದ ಪರಿಶ್ರಮ; ಎಲ್ಲಕ್ಕೂ ಕಳೆಕೊಡುವ ಲೋಕಪರಿಜ್ಞಾನ; ಎಲ್ಲಕ್ಕೂ ಭೂಷಣವಾದ ಕುಲಯಶಸ್ಸು. ಇಂಥವರಿಗೆ ಕನ್ನಡಿಗರ ಆದರಣೆಯೂ ಅಭಿನಂದನೆಯೂ ದೊರೆಯದೆ ಇದ್ದೀತೆ?’’ ಎಂದು ಸೂಕ್ತವಾಗಿಯೇ ಅಭಿಪ್ರಾಯ ಪಟ್ಟಿರುತ್ತಾರೆ. ಮತ್ತೊಂದೆಡೆ ಗುರುತ್ವವನ್ನು ಕುರಿತು ‘ಇನ್ನೊಬ್ಬರು ತನ್ನ ಕಿವಿಯಲ್ಲುಸಿರಿದುದನ್ನು ತಾನು ಇನ್ನೊಬ್ಬರ ಕಿವಿಯಲ್ಲುಸಿರಿದ ಮಾತ್ರದಿಂದ ಗುರುತ್ವವು ಸಿದ್ಧಿಸುವುದಿಲ್ಲ’ ಎಂದು ಔಚಿತ್ಯಪೂರ್ಣವಾಗಿ ಹೇಳಿರುತ್ತಾರೆ.

ಪೀಠಿಕೆಯಲ್ಲಿ ಗರಳಪುರಿ ಶಾಸ್ತ್ರಿಯವರು ಕೃತಿರಚನೆಯ ಕಾಲದಲ್ಲಿ ನೆರವು ನೀಡಿದ ತಮ್ಮ ಪತ್ನಿ ವೆಂಕಟಸುಬ್ಬಮ್ಮ ಅವರನ್ನು ಹಾಗೂ ಅನುವಾದಕ್ಕೆ ಅನುಮತಿ ಇತ್ತ ಲಾರೆನ್ಸ್ ಹೌಸ್ಮನ್ ಅವರನ್ನೂ ಸ್ಮರಿಸಿಕೊಂಡಿರುತ್ತಾರೆ. ತಾವು ಅಂದು ಬರೆಯುವಾಗ್ಗೆ ಸೋಕ್ರಟೀಸನನ್ನು ಕುರಿತು ಯಾವ ಕೃತಿಯೂ ಬಂದಿಲ್ಲವೆಂಬ ಕಾರಣಕ್ಕಾಗಿ ತಾನು ಈ ಕೃತಿರಚಿಸಬೇಕಾಯಿತೆಂದು ಕಾರಣ ನೀಡಿರುತ್ತಾರೆ. ಶಾಸ್ತ್ರಿಗಳವರ ಅನುವಾದವು ಪ್ರಸನ್ನವಾಗಿದ್ದು ಭಾಷೆಗೆ ಓದಿಸಿಕೊಳ್ಳುವ ಗುಣ ಪ್ರಾಪ್ತಿಯಾಗಿದೆ. ಎಲ್ಲಿಯೂ ಭಾಷೆ ಕೃತಕವಾಗಿಯಾಗಲಿ ಪೆಡಸಾಗಿಯಾಗಲಿ ಇಲ್ಲ. ನಿದರ್ಶನಕ್ಕಾಗಿ ಒಂದೆರಡು ಸಂವಾದದ ತುಣುಕುಗಳನ್ನು ಗಮನಿಸಬಹುದು–

ಸೋಕ್ರಟೀಸ್: ಕ್ರಿಟೊ, ನನ್ನಂತೆ ವಯಸ್ಸಾದ ಮೇಲೆ ಮನುಷ್ಯನು ಸಾವಿಗಂಜಬಾರದು.

ಕ್ರಿಟೊ: ನಿನಗಿಂತಲೂ ವಯಸ್ಸಾದವರು ಕೂಡ ಅಂಜುತ್ತಾರೆ.

ಸೋಕ್ರಟೀಸ್: ಹೌದು, ನನಗೆ ಗೊತ್ತು. ವಯಸ್ಸಾದರೆ ಅವಿವೇಕ ಹೋಗಿಯೇ ಹೋಗುತ್ತದೆಂದು ಹೇಳಲಾಗುವುದಿಲ್ಲ. ಅದು ಸರಿ, ನೀನು ಇಲ್ಲಿಗೆ ಏತಕ್ಕೆ ಬಂದೆ ಇಷ್ಟು ಹೊತ್ತಿಗೆ ಮುಂಚೆ?

ಕ್ರಿಟೊ: (ಆತುರದಿಂದ) ಸೋಕ್ರಟೀಸ್, ಇನ್ನೂ ಕಾಲವಿದೆ, ಬಂದೀಖಾನೆಯ ಯಜಮಾನನು ನನಗೆ ಕೊಟ್ಟ ಮಾತಿನಂತೆ ಕಾವಲುಗಾರನನ್ನು ಕಳುಹಿಸಿಬಿಟ್ಟಿದ್ದಾನೆ; ನಿನ್ನನ್ನು ಪುನಃ ಬೇಡಿಕೊಳ್ಳುತ್ತೇನೆ, ನಿನ್ನ ಸ್ನೇಹಿತರ ಮಾತನ್ನು ಕೇಳು; ಇಲ್ಲಿಂದ ತಪ್ಪಿಸಿಕೊಂಡು ಹೋಗು!

ಸಂಸ್ಕೃತ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಲ್ಲಿದರಾಗಿದ್ದ ಗರಳಪುರಿ ಶಾಸ್ತ್ರಿಗಳ ಈ ಅನುವಾದಿತ ನಾಟಕವು ಕನ್ನಡದ ಮಹತ್ವದ ಅನುವಾದಿತ ನಾಟಕಗಳಲ್ಲಿ ಪ್ರಧಾನ ಸ್ಥಾನವನ್ನು ಪಡೆದುಕೊಂಡಿದೆ ಎನ್ನಬಹುದು.

ಲೇ: ಎಸ್.ಜಿ. ಶಾಸ್ತ್ರಿ

ಬೆ: ಒಂದು ರುಪಾಯಿ ನಾಲ್ಕು ಆಣೆ.

ಪ್ರ: ಬೆಂಗಳೂರಿನ ಸೆಂಟ್ರಲ್ ಕಾಲೇಜು ಕರ್ಣಾಟಕ ಸಂಘಎಸ್.ಜಿ. ಶಾಸ್ತ್ರಿ ಎಂದು ಖ್ಯಾತನಾಮರಾಗಿದ್ದ ಸೋಸಲೆ ಗರಳಪುರಿ ಶಾಸ್ತ್ರೀ ಅಯ್ಯಾಶಾಸ್ತ್ರೀ (೧೮೯೦–೧೯೫೫) ತಮ್ಮ ಕಾಲದ ಪ್ರಸಿದ್ಧ ಭಾಷಾಂತರಕಾರರು.