ಶಿಶು ಮತ್ತು ಶಿಶು ಜನನದ ಪೂರ್ವೋತ್ತರಗಳು

‘ಶಿಶು ಮತ್ತು ಶಿಶು ಜನನದ ಪೂರ್ವೋತ್ತರಗಳು’ (All about the Baby-Kanarese) ಶೀರ್ಷಿಕೆ ಮತ್ತು ‘ಆದಿಯ ಅಗತ್ಯಗಳಿಂದ ಕೂಡಿದ ಮಾನವ ಜೀವನದ ಆದಿಗಳು’ ಎನ್ನುವ ಅಡಿ ಟಿಪ್ಪಣಿಯ ಈ ಪುಸ್ತಕದ ಕರ್ತೃ ಜೆ. ಬೆಲ್‌ವುಡ್ ಕಾಂಸ್ಟಾಕ್. ಇದು 1930ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡು 1944ಮತ್ತು 1954ರಲ್ಲಿ ಮರುಮುದ್ರಣಗೊಂಡಿದೆ. ಮೊದಲ ಮುದ್ರಣದಲ್ಲಿ 3000 ಪ್ರತಿಗಳನ್ನು ಅಚ್ಚು ಹಾಕಿಸಲಾಗಿದೆ. 424 ಪುಟಗಳ ಅಷ್ಟಮ ಡೆಮಿ ಆಕಾರದ ಒಳ್ಳೆಯ ಕ್ಯಾಲಿಕೋ ರಟ್ಟಿನ ಈ ಪುಸ್ತಕವನ್ನು ಓರಿಯೆಂಟಲ್ ವಾಚ್‌ಮನ್ ಪ್ರಕಟಣ ಸಂಸ್ಥೆ, ಪುಣೆ-ಇವರಿಗಾಗಿ O.A. SKAU ಅವರು ಮುದ್ರಿಸಿರುತ್ತಾರೆ. ಈ ಪುಸ್ತಕವನ್ನು ಇಂದಿನ ಶಿಶುಗಳಿಗೂ, ಮುಂದಿನ ಶಿಶುಗಳಿಗೂ ಪ್ರೇಮಪೂರ್ವಕವಾಗಿ ಸಮರ್ಪಿಸಲ್ಪಟ್ಟಿದೆ.

ಕನ್ನಡದಲ್ಲಿ ಮಕ್ಕಳ ಆರೋಗ್ಯ, ಪ್ರಸೂತಿಶಾಸ್ತ್ರ ಹಾಗೂ ಸಂತಾನ ನಿಯಂತ್ರಣ ವಿಷಯಗಳನ್ನು ಕುರಿತು ಆಧುನಿಕ ಪೂರ್ವಕಾಲದಿಂದಲೇ ಸಾಕಷ್ಟು ಒಳ್ಳೆಯ ಪುಸ್ತಕಗಳು ಪ್ರಕಟಗೊಂಡಿವೆ. 1895ರಲ್ಲಿ ಬೆಂಗಳೂರಿನ ಲಿಟರೇಚರ್ ಸೊಸೈಟಿ ಪ್ರಕಟಿಸಿದ ‘ಮಕ್ಕಳನ್ನು ಬೆಳೆಸತಕ್ಕ ವಿಧ’, 1894ರಲ್ಲಿ ಇದೇ ಸಂಸ್ಥೆಯ ‘ಮಕ್ಕಳು ಘಟ್ಟಿಮುಟ್ಟಾಗಿರುವುದು ಹ್ಯಾಗೆ’, 1940ರಲ್ಲಿನ ಗಿರಿಜಾದೇವಿ ಇಚ್ಚಂಗಿಮಠ ಅವರ ‘ಗರ್ಭರತ್ನಾಕರ’, 1890ರಲ್ಲಿನ ಬೋಧರಾಯಾಚಾರ್ಯ ಮಹಿಷಿಯವರ ‘ಗರ್ಭಿಣೀ ಶಿಶುಸಂಗೋಪನ’, ಶಿ.ಮಾ.ಶಿದ್ಧಲಿಂಗಾರ್ಯರ ‘ಗರ್ಭರತ್ನಾವಳೀ’, 1905ರಲ್ಲಿನ ಎಂ. ಗೋಪಾಲಕೃಷ್ಣರಾಯರ ‘ಸಚಿತ್ರ ಗರ್ಭನಿರೋಧ’, ದೇವರಾಜ್ ಸರ್ಕಾರ ಹಾಗೂ ಹಾಸನ ಬಸವರಾಜನ್ 1929ರಲ್ಲಿ ರಚಿಸಿದ ‘ಸಂತಾನೋತ್ಪತ್ತಿ ನಿಯಂತ್ರಣ’, 1896ರಲ್ಲಿ ಎಂ.ಡಿ. ಶ್ರೀನಿವಾಸ ಅಯ್ಯಂಗಾರ್ಯರು ಬರೆದ ‘ಗರ್ಭಿಣಿ ಶಿಶುಸಂರಕ್ಷಣ’, ಇದೇ ಲೇಖಕರ 1894ರ ‘ವಿಷೂಚಿ’, ‘ಬಾಲವ್ಯಾಧಿ ಚಿಕಿತ್ಸೆ’, 1924ರಲ್ಲಿ ಮಂಗಳೂರಿನ ಕೆನರಾ ಛಾಪಖಾನೆ ಪ್ರಕಟಿಸಿದ ‘ಮಿತಸಂತಾನ’, ದ.ಕೃ. ಭಾರದ್ವಾಜರು 1930ರಲ್ಲಿ ರಚಿಸಿದ ‘ಸಂತಾನ ವಿಜ್ಞಾನ’ ಮತ್ತು ಇವರೇ 1945ರಲ್ಲಿ ರಚಿಸಿದ ‘ಜನನ ನಿಯಂತ್ರಣ’ ಹಾಗೂ ರೇವಪ್ಪ ಸಿದ್ಧಗಿರಿಯಪ್ಪ ಸಬರದ ಅವರು ಸು. 1925ರಲ್ಲಿ ಬರೆದ ‘ಸಂತಾನ ಶಾಸ್ತ್ರ’ ಮುಂತಾದುವು ಕೆಲವು ಉದಾಹರಣೆಗಳು ಮಾತ್ರ. ಇಂತಹ ಉತ್ಕೃಷ್ಟ ಕೃತಿಗಳ ಸಾಲಿಗೆ ಪ್ರಸ್ತುತ ಪುಸ್ತಕವು ಸೇರುತ್ತದೆ.

ಬೆಲ್‌ವುಡ್ ಕಾಂಸ್ಟಾಕ್ ಅವರು ಈ ಕೃತಿಯನ್ನಲ್ಲದೆ ‘ಜೀವದ ಆದಿಗಳು‘, ‘ಮಕ್ಕಳಿಗಾಗಿ ಹರ್ಷದಾಯಕವಾದ ಅಭ್ಯಾಸಗಳು’, ‘ಶರೀರ ಶಾಸ್ತ್ರ’, ‘ಮಾನವ ಶರೀರ ಮತ್ತು ಅದನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ’ ಹಾಗೂ ‘ಆಹಾರ ಮತ್ತು ಆರೋಗ್ಯ’ ಮುಂತಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿರುತ್ತಾರೆ. ಇವರ ಈ ಕೃತಿಗಳ ಉಲ್ಲೇಖ ಕನ್ನಡದ ಯಾವುದೇ ಗ್ರಂಥಕೋಶಗಳಲ್ಲಿ ಇಲ್ಲದಿರುವುದು ಅಚ್ಚರಿಯನ್ನುಂಟುಮಾಡುತ್ತದೆ. ಬೆಲ್‌ವುಡ್ ಕಾಂಸ್ಟಾಕ್ ಅವರನ್ನು ಕುರಿತಾಗಲೀ ಅವರ ಕೃತಿಗಳನ್ನು ಕುರಿತಾಗಲೀ ಯಾವುದೇ ಮಾಹಿತಿಗಳೂ ದುರದೃಷ್ಟವಶಾತ್ ಎಲ್ಲಿಯೂ ದೊರಕುತ್ತಿಲ್ಲ. ಅನೇಕ ಉಪಯುಕ್ತ ಚಿತ್ರಗಳು, ಮುದ್ದಾದ ಮಕ್ಕಳ ಚಿತ್ರಗಳು ಹಾಗೂ ನಕ್ಷೆಗಳಿಂದ ಕೂಡಿದ ಪ್ರಸಕ್ತ ಪುಸ್ತಕದಲ್ಲಿ 12 ಭಾಗಗಳಿದ್ದು ಒಟ್ಟು ೪೮ ಅಧ್ಯಾಯಗಳಿವೆ. ಶಿಶುವಿನ ಹಿನ್ನೆಲೆ, ಶಿಶುವಿನ ಭವಿಷ್ಯ, ಶಿಶುವಿನ ತಂದೆ ತಾಯಿಗಳು, ಶಿಶುಜನನದ ಸಿದ್ಧತೆ, ಶಿಶು, ಸ್ಥಾಪನೆಗೊಳ್ಳುವುದು, ಶಿಶುವಿನ ಪ್ರಥಮ ವರ್ಷದ ಉತ್ತರಾರ್ಧ, ಶಿಶುತನದ ಅಗಲಿಕೆ, ಶಿಶುವಿನ ಉಣ್ಣುವ ಅಭ್ಯಾಸಗಳು, ಶಿಶುವಿನ ಆರೋಗ್ಯದ ಅಡಿಗಟ್ಟು, ಶಿಶುವಿನ ಅಭ್ಯಾಸಗಳು, ಶಿಕ್ಷಣದ ಮೂಲ ನಿಯಮಗಳು ಹಾಗೂ ಶಿಶುವಿನ ವಿದ್ಯಾಭ್ಯಾಸ ಎನ್ನುವ 12 ಭಾಗಗಳಲ್ಲಿ ಶಿಶುಜನನದ ಪೂರ್ವೋತ್ತರಗಳನ್ನು ಲೇಖಕರು ನಿದರ್ಶನಪೂರ್ವಕವಾಗಿ ವಿವರಿಸಿರುತ್ತಾರೆ. ಇವುಗಳ ಜೊತೆಗೆ ಅನುಬಂಧದಲ್ಲಿ ಈ ವಿಷಯದ ವ್ಯಾಸಂಗಕ್ಕೆ ಕೆಲವು ಸಾಮಾನ್ಯ ಸಲಹೆಗಳನ್ನು ನೀಡಲಾಗಿದೆ.

ಕೊನೆಯೊಳಗೆ ಈ ವಿಷಯವನ್ನು ಕುರಿತ ಕನ್ನಡ ಶಬ್ದಗಳಿಗೆ ಸಮಾನಾರ್ಥಕ ಇಂಗ್ಲಿಷ್ ಶಬ್ದಗಳನ್ನು ನೀಡಿರುವುದು ಸಮಂಜಸವಾಗಿದೆ. ಮೊದಲ ಆರು ಭಾಗಗಳಲ್ಲಿ ಶಿಶು ಜನನದ ಪೂರ್ವವನ್ನೂ ಅರ್ಥಾತ್ ಗರ್ಭಿಣಿಯ ಗರ್ಭದಲ್ಲಿ ಶಿಶು ಭ್ರೂಣರೂಪದಲ್ಲಿ ಅಸ್ತಿತ್ವ ಪಡೆದುಕೊಂಡ ಕ್ಷಣದಿಂದ ಪ್ರಸವದ ಕ್ಷಣದವರೆಗಿನ ಸಂಗತಿಗಳನ್ನು ವಿಧ್ಯುಕ್ತವಾಗಿ ನಿರೂಪಿಸಲಾಗಿದೆ. ನಂತರದ ಆರು ಭಾಗಗಳಲ್ಲಿ ಶಿಶುಜನನದ ಉತ್ತರ ಅರ್ಥಾತ್ ಶಿಶುವಿನ ಪ್ರಸವವಾದ ಕ್ಷಣದಿಂದ ಹಿಡಿದು ಶಿಶು ವಿದ್ಯಾಭ್ಯಾಸಕ್ಕೆ ಶಾಲೆಗೆ ಸೇರುವವರೆಗಿನ ವಿಚಾರಗಳನ್ನು ಸಾಂಗೋಪಾಂಗವಾಗಿ ವಿವರಿಸಲಾಗಿದೆ.

ಮುನ್ನುಡಿಯಲ್ಲಿ ಲೇಖಕರು– ‘‘ಲೋಕದಲ್ಲಿ ಅತ್ಯಂತ ಶ್ರೇಷ್ಠವಾದ ವಸ್ತು ಶಿಶು. ಅದರಿಂದಲೇ ಈ ಲೋಕವು ಉಂಟಾಗಿದೆ. ಅದು ಸೃಷ್ಟಿಯ ಹೆಣ್ಣು ಅಥವಾ ಗಂಡಾಗಿದ್ದು ಈ ಲೋಕದ ಸುಖಸಂತೋಷಗಳಿಗೂ, ದುಃಖಾದಿ ಉಪದ್ರವಗಳಿಗೂ ಕಾರಣಕರ್ತೃವಾಗಿದೆ. ನಾವೆಲ್ಲರೂ ಒಮ್ಮೆ ಶಿಶುವಾಗಿದ್ದೆವಷ್ಟೆ. ನಮ್ಮ ಪಾಲನೆ ಪೋಷಣೆಗಳಲ್ಲಿ ನಮಗೂ ಒಂದು ಕೈಯಿದ್ದಿದ್ದರೆ ನಾವು ಇನ್ನೂ ಮಿಗಿಲಾದ ಸುಖಸಂತೋಷಗಳಿಂದ ಯಶಸ್ವಿಯಾಗಿ ಬಾಳಿ ಬದುಕಬಹುದಾಗಿತ್ತಲ್ಲವೆ? ಗೃಹಸ್ಥನಾಗಲೀ, ಬ್ರಹ್ಮಚಾರಿಯಾಗಲೀ ಮಕ್ಕಳ ಲಾಲನೆ ಪಾಲನೆಗಳಲ್ಲಿ ಇತರರು ಮಾಡುವ ತಪ್ಪುಗಳನ್ನು ಕಡು ಸುಲಭವಾಗಿ ಕಂಡರಿಯಬಲ್ಲನು.  

ಶಿಶುಗಳ ಲಾಲನೆಪಾಲನೆಗಳಲ್ಲಿ ಪ್ರಮಾದವಾದ ತಪ್ಪುಗಳಾಗುತ್ತಿರುವುದನ್ನು ನಾವು ಪ್ರತಿನಿತ್ಯವೂ ನಮ್ಮ ಕಣ್ಣು ಮುಂದೆ ಕಾಣುತ್ತಿದ್ದೇವೆ. ತಂದೆ ತಾಯಿಗಳು ಮಾತ್ರ ಈ ತಪ್ಪುಗಳನ್ನು ಮಾಡುವುದಿಲ್ಲ.  ಅಜ್ಜ ಅಜ್ಜಿಯರು, ಚಿಕ್ಕಪ್ಪ ದೊಡ್ಡಪ್ಪಂದಿರು, ಕುಟುಂಬದ ಇಷ್ಟರು, ಮಿತ್ರರು, ಪರಿಚಿತರು ಮತ್ತು ಪ್ರೀತಿಪಾತ್ರರು – ಇವರುಗಳ ಕೈವಾಡವೂ ಶಿಶುವಿನ ಅವನತಿಗೆ ಬಹುಮಟ್ಟಿಗೆ ಕಾರಣವಾಗಿದೆ. ಮಕ್ಕಳ ಪೋಷಣೆಯು ಕೇವಲ ತಂದೆ ತಾಯಿಗಳಿಗೆ ಮಾತ್ರ-ಮುಖ್ಯವಾಗಿ ತಾಯಿಗೆ ಮಾತ್ರ ಸಂಬಂಧಿಸಿದ್ದೆಂದು ಅನೇಕರು ಭಾವಿಸಿದ್ದಾರೆ. ಇಂಥಾ ಭಾವನೆಯನ್ನು ಬದಿಗೊತ್ತಿ ಇತರ ಸಮೀಪವರ್ತಿಗಳಿಗೂ ಈ ಕಾರ್ಯದಲ್ಲಿ ತಮ್ಮ ಕರ್ತವ್ಯವುಂಟೆಂಬ ತಿಳುವಳಿಕೆಯು ಮೂಡಿ ಅವರು ಮಾತೆಯೊಡನೆ ಶಿಶುಪೋಷಣೆಯಲ್ಲಿ ಸಹಕಾರ ಹಸ್ತವನ್ನು ನೀಡಿದರೆ ನಮ್ಮ ನಿರೀಕ್ಷೆಯನ್ನು ಮುಟ್ಟುವ ಮತ್ತು ಲೋಕಕ್ಕೆ ಯೋಗ್ಯವಾಗುವ ಮಕ್ಕಳು ಉಂಟಾಗುವುದರಲ್ಲಿ ಸಂಶಯವಿಲ್ಲ.... ಒಂದು ಕುಟುಂಬದಲ್ಲಿ ಶಿಶುಪೋಷಣೆಯಲ್ಲಿ ಸಂತೋಷಪೂರ್ವಕವಾದ ಸಹಕಾರವಿದ್ದರೆ ಎಳೆತನದಲ್ಲಿ ಮಾತ್ರ ಸಂತೋಷವನ್ನು ಕೊಡತಕ್ಕ ಶಿಶುಗಳನ್ನು ಲೋಕಕ್ಕೆ ನೀಡುವುದು ಹಾಗಿರಲಿ– ಮುಂದೆಯೂ ತಮ್ಮ ಕುಟುಂಬಕ್ಕೂ, ಸೋದರ ವರ್ಗಕ್ಕೂ ಶ್ರೇಯಸ್ಸನ್ನುಂಟು ಮಾಡುವ ಶಿಶುಗಳನ್ನು ಕೊಡಬಹುದು’’ ಎಂದು ಶಿಶುಗಳ ಲಾಲನೆ ಪಾಲನೆಗಳ ಮಹತ್ವದ ಬಗ್ಗೆ ಹೇಳಿರುತ್ತಾರೆ.

ಆನುವಂಶಿಕತೆಯು ಒಂದು ಖಚಿತವಾದ ಸಂಗತಿ ಎನ್ನುವ ವಿಷಯವನ್ನು ನಿರೂಪಿಸುವಾಗ ಲೇಖಕರು ಹೀಗೆ ನಿರೂಪಿಸಿದ್ದಾರೆ: ‘‘ಆನುವಂಶಿಕತೆಯು ವಿಚಿತ್ರವೂ ಖಚಿತವೂ ಆದ ಅಂಶವೆಂದೂ ಅದು ಕೆಲವು ನಿರ್ದಿಷ್ಟವಾದ ನಿಯಮಗಳಿಗೊಳಪಟ್ಟಿದೆಯೆಂದೂ ವ್ಯಕ್ತವಾಗುತ್ತದೆ... ಮಾನವಜೀವಿಯ ವ್ಯಕ್ತಿತ್ವವನ್ನೂ ಅಸಂಖ್ಯಾತವಾದ ಗುಣಲಕ್ಷಣಗಳನ್ನೂ  ದೈಹಿಕ ಮತ್ತು ಮಾನಸಿಕ ರಚನೆಯನ್ನೂ ನಾವು ಯೋಚಿಸತೊಡಗಿದರೆ ಯಾವ ವೈಜ್ಞಾನಿಕ ಶೋಧನೆಯಿಂದಲೂ ಅದರ ಸಮಸ್ತ ವಿಚಾರಗಳನ್ನೂ ಕಂಡರಿಯುವುದು ಎಷ್ಟು ಅಸಾಧ್ಯವಾದ ಕಾರ್ಯವೆಂಬುದು ವ್ಯಕ್ತವಾಗುವುದು... ಒಬ್ಬ ವ್ಯಕ್ತಿಯ ರೂಪುಗೊಳ್ಳುವಿಕೆಯಲ್ಲಿ ಆತನ ಆನುವಂಶಿಕತೆಯು ಎಷ್ಟು ಪ್ರಾಮುಖ್ಯವೆಂಬುದನ್ನರಿತು ನಾವು ಆ ಆನುವಂಶಿಕತೆಯ ಹಿನ್ನೆಲೆಯನ್ನು ಶೋಧಿಸುವ ಉತ್ತಮ ಉದ್ಯಮದಲ್ಲಿ ತೊಡಗಿದ್ದೇವೆ. ಯೋಗ್ಯವಾದ ವಾತಾವರಣವನ್ನೂ ವಿದ್ಯಾಭ್ಯಾಸವನ್ನೂ ಒದಗಿಸಿದ ಪಕ್ಷದಲ್ಲಿ ದುರ್ಬಲವಾದ ಆನುವಂಶಿಕತೆಯನ್ನು ಸಬಲಗೊಳಿಸಬಹುದು’’. ಇದು ಲೇಖಕರ ನಿರೂಪಣೆಯ ಒಂದು ಮಾದರಿ.

ಬೆಲ್‌ವುಡ್ ಅವರು ಕೃತಿಯನ್ನು ಒಂದು ಪದ್ಯದೊಂದಿಗೆ ಮುಕ್ತಾಯಗೊಳಿಸಿದ್ದಾರೆ. ಆ ಪದ್ಯವು ಹೀಗಿದೆ:

ಪರಮೆಗಳು ಪಕ್ಕಿಗಳು ಪಾಡುತಿಹವು|
ಕುಮುದಗಳು ಅಂಚೆಗಳ ಲಾಲಿಸುತಿಹವು|| 
ಪೊದರುಗಳ ಪುಷ್ಪಗಳ ಮೇಲೆ ಪಾಡಿ| 
ತನ್ನಿನಿಯಳ ಕಿರುಮನೆಯ ಬಳಿಗೆ ಸಾರಿ| 
ಬೆಟ್ಟಗಳ ಗುಡ್ಡಗಳ ಬಯಲುಗಳ ಸೇರಿ|
ಬೇಸಗೆಯ ಚಾರುಕುಸುಮಗಳ ನಡುವೆ| 
ನಮ್ಮ ಮೆಚ್ಚಿನಾ ಮನೆಯು ಮೆರೆಯುತಿದೆಯೆಂದು|
ಕು-ಕು-ಕೂ ಎಂದು ಕೂಗಿದುದು ಗಂಡು ಹಕ್ಕಿ|| 
ಎಲ್ಲಿಯೋ ಪಾಡೊಂದು ಕೇಳುತಿದೆ ನಲ್ಲೆ| 
 ಎಂದಿಗೂ ಅದರಿಂಚರವು ಇರುವುದಿಲ್ಲೆ| 
ಆಗಸವು ಬೆಳ್ಗಿರಲು ಕೋಗಿಲೆಯ ಕೂಗು|
ಆಗಸವು ಕವಿದಿರಲು ಎಲ್ಲಿ ಆ ಕೂಗು||
ಪಕ್ಕಿಯದು ಪಾರುವಾಗ|
ಅದರ ಆನಂದಮಂ ಅರಿವರಾರು?| 
ಕುಸುಮವದು ತೂಗುವಾಗ|  
ಅದರ ಆನಂದಮಂ ಕಾಂಬರಾರು||

ಈ ಕ್ರಿಸ್ತಗೀತೆಯೊಂದಿಗೆ ಪುಸ್ತಕವು ಮುಗಿಯುತ್ತದೆ.

ಗರ್ಭಿಣಿಯರಿಗೆ ಮಾತೃತ್ವವನ್ನು ಕುರಿತ ತಿಳಿವಳಿಕೆಯನ್ನು ಉಂಟುಮೂಡಿಸುವುದರ ಜತೆಗೆ ತಾಯಿಯಾಗುವವಳ ಮನದ ಗಾಬರಿ ಹಾಗೂ ಆತಂಕಗಳನ್ನು ದೂರ ಮಾಡಿ ಪ್ರಸವ ಹಾಗೂ ಬಾಣಂತಿತನಕ್ಕೆ ಸೂಕ್ತವಾದ ರೀತಿಯಲ್ಲಿ ಮುಗ್ಧ ಸ್ತ್ರೀಯನ್ನು ಮನೋಜ್ಞವಾಗಿ ಸಿದ್ಧಗೊಳಿಸುವ ಈ ಕೃತಿಯು ಗರ್ಭಿಣಿ ಹಾಗೂ ಬಾಣಂತಿಯರು ಓದಬೇಕಾದ ಒಂದು ಅಪೂರ್ವ ಕೃತಿಯಾಗಿದೆ.