ರಘುನಾಥಸಿಂಹ
ಮುನ್ನುಡಿ

‘ರಘುನಾಥಸಿಂಹ ಎಂ.ಟಿ.ವಲ್ಲಭಯ್ಯಂಗಾರ್ಯ ಅವರ ಐತಿಹಾಸಿಕ ಕಾದಂಬರಿ. 1922ರಲ್ಲಿ ದ್ವಿತೀಯ ಆವೃತ್ತಿ ಪ್ರಕಟವಾದಾಗ, ಮುದ್ರಣಗೊಂಡ ಪ್ರತಿಗಳ ಸಂಖ್ಯೆ 1500. ಆಗಿನ ಇದರ ಕ್ರಯ 1 ರೂಪಾಯಿ 12 ಆಣೆ. ಕೋಟೆ ಸಿಟಿ ಮುದ್ರಣಾಲಯ, ಬೆಂಗಳೂರು- ಇಲ್ಲಿ ಅಚ್ಚಾದ ಈ ಕೃತಿ ನಂಜನಗೂಡು-ನಂದಿನೀ-ಹಿತೈಷಿಣೀ-ಮಾತೃಮಂದಿರದಿಂದ ಪ್ರಕಟಗೊಂಡಿದೆ. ಈ ಹಿತೈಷಿಣಿ ಬೇರೆ ಯಾರೂ ಅಲ್ಲ- ಆ ಕಾಲದ ಪ್ರಸಿದ್ಧ ಲೇಖಕಿ ನಂಜನಗೂಡು ತಿರುಮಲಾಂಬ.

ಕೃತಿಯ ಪ್ರಥಮ ಮುದ್ರಣದ ಕುರಿತ ಮಾಹಿತಿ ಎಲ್ಲೂ ದೊರಕುತ್ತಿಲ್ಲ. ಲೇಖಕರು 1913ರಲ್ಲಿ ಮತ್ತೊಂದು ಕಾದಂಬರಿಯನ್ನು ಬರೆದಿರುವುದರಿಂದ ಸುಮಾರು 1910ರಲ್ಲಿ ಇದು ಮೊದಲು ಮುದ್ರಣವಾಗಿರಬಹುದೆಂದು ಅಂದಾಜು ಮಾಡಲು ಅಡ್ಡಿಯಿಲ್ಲ. ಕೃತಿಯ ಹಿಂದಿನ ರಕ್ಷಾಪುಟದಲ್ಲಿ ‘ಹಿತೈಷಿಣೀ ಮಾತ್ರಮಂದಿರಂ, ನಂಜನಗೂಡು ಸಂಸ್ಥೆಯ ಜಾಹೀರಾತಿದೆ. ಆ ಕಾಲದ ಪುಸ್ತಕ ಪ್ರಕಟಣೆಯ ಜಾಹಿರಾತಿನ ಒಂದು ವಾಕ್ಯ ಗಮನಿಸಿ: ‘ಪ್ರಕೃತದಲ್ಲಿ ನಮ್ಮ ಕರ್ನಾಟಕನಂದಿನಿಯು ತನ್ನ ತೃತೀಯ ವರ್ಷದ ಒಂಬತ್ತನೆಯ ಸಂಚಿಕೆಯಲ್ಲಿ- ಅಂದು ತನ್ನ ಸೋದರಿಯರಿಗೆ ಕೊಟ್ಟಿದ್ದ ಆಶ್ವಾಸನದಂತೆ ಇಂದಿನ ಕರ್ನಾಟಕನಂದಿನಿಯೇ ಭಾರತನಂದಿನಿಯೆನಿಸುವಳು. ನಂದಕಂದನ ದಯೆಯಿಂದ ಭಾರತನಂದಿನಿಯೆನಿಸಿ ಮುಂದಿನ ವಿಜಯದಶಮಿಯಿಂದ ಮತ್ತೆ ಅಜ್ಞಾತವಾಸವನ್ನುಳಿದು ನಿಯಮವನ್ನು ಹಿಡಿದು, ಕಾಲಕ್ರಮವನ್ನು ಅನುಸರಿಸಿ, ಶುದ್ಧಭಾಷೆ, ಶುದ್ಧಭಾವನೆಗಳಿಂದ ಕೂಡಿ, ನಿಷ್ಪಕ್ಷಪಾತವಾಗಿಯೂ ನಿರ್ವಿವಾದವಾಗಿಯೂ ಇರತಕ್ಕ ಉದಾತ್ತ ವಿಚಾರಗಳನ್ನು ಪ್ರತಿಪಾದಿಸುವುದರಿಂದ ಸೋದರಿಯರನ್ನು ಆಪ್ಯಾಯಗೊಳಿಸುವುದನ್ನು ಮುಖ್ಯಗುರಿಯಾಗಿಟ್ಟುಕೊಂಡು ಹೊರಹೊರಡುವವಳಾಗಿರುವಳು.

ವಲ್ಲಭಯ್ಯಂಗಾರ್ಯರು 1913ರಲ್ಲಿ ‘ಮಾಲಿನೀ ಎಂಬ ಕಾದಂಬರಿಯನ್ನೂ, 1921ರಲ್ಲಿ ಆಧುನಿಕ ನ್ಯಾಯ ವಿಚಾರಣೆಯ ರೂಪದಲ್ಲಿ ಬರೆದ ಪೌರಾಣಿಕ ಕಥಾವಸ್ತುವನ್ನುಳ್ಳ ‘ಅಂಗದನ ಫಿರ್ಯಾದಿ ಎಂಬ ಕಾದಂಬರಿಯನ್ನೂ ರಚಿಸಿರುತ್ತಾರೆ. 

ಆರಂಭದ ಒಳಪುಟಗಳಲ್ಲಿ ಗ್ರಂಥಕರ್ತರು- ‘ಸಮರ್ಪಣೆ- ನನ್ನ ಪರಮಗುರುಗಳೂ ಹಿತಾಕಾಂಕ್ಷಿಗಳೂ ಆಗಿದ್ದು ಶ್ರಿಮದ್ರಾಮಾಯಣ ಪಾರಾಯಣ ಮಾಡುತ್ತಿರುವಾಗಲೇ ಶ್ರಿಮದಾಚಾರ್ಯರ ತಿರುವಡಿಯನ್ನೈದಿದ ನನ್ನ ತೀರ್ಥಪಾದರು ಮುಡುಂಬೆ ತಿರುಮಲಾಚಾರ್ಯರವರ ಜ್ಞಾಪಕಾರ್ಥವಾಗಿ ಈ ಗ್ರಂಥವು ಸಮರ್ಪಿಸಲ್ಪಟ್ಟಿದೆ ಎಂಬ ಒಕ್ಕಣೆಯಿದೆ.

ಈ ಕಾದಂಬರಿಗೆ ಮೂಲ ಆಕರ ಬಂಗಾಳಿ ಭಾಷೆಯ ಆ ಕಾಲದ ಪ್ರಸಿದ್ಧ ಲೇಖಕರಾದ ರಮೇಶ್‌ಚಂದ್ರ ದತ್ತರವರ ‘ಜೀವನ ಪ್ರಭಾತ ಎಂಬ ಐತಿಹಾಸಿಕ ಕಾದಂಬರಿ. ಪೀಠಿಕೆಯಲ್ಲಿ ಗ್ರಂಥಕರ್ತರು ಹೇಳಿರುವ ಈ ಮಾತುಗಳನ್ನು ಗಮನಿಸಿ: ‘ಇದು ವಂಗ ಭಾಷೆಯಲ್ಲಿ ಪ್ರಸಿದ್ಧ ಲೇಖಕರಾದ ಶ್ರಿಮಾನ್ ರೊಮೇಶಚಂದ್ರ ದತ್ತರವರಿಂದ ಬರೆಯಲ್ಪಟ್ಟ ‘ಜೀವನ ಪ್ರಭಾತವನ್ನು ಅನುಸರಿಸಿ ಬರೆಯಲಾಗಿದೆ. ಈ ಮಾತೃಕೆಯನ್ನು ಆಂಧ್ರಭಾಷೆಯಲ್ಲಿ ನನಗೆ ಒದಗಿಸಿಕೊಟ್ಟು, ಭಾಷಾಂತರಿಸಲು ಅನುಮತಿಯನ್ನಿತ್ತ ತೆನಾಲಿ ಆಖ್ಯಾಯಿಕಾನಿಲಯದ ವ್ಯವಸ್ಥಾಪಕರಾದ ಶ್ರಿಮಾನ್ ಶಿವಶಾಸ್ತ್ರಿಗಳವರಿಗೆ ತುಂಬ ಕೃತಜ್ಞನಾಗಿರುತ್ತೇನೆ.

ಅಚ್ಚಿನಲ್ಲಿ ತುಂಬಾ ದೋಷಗಳಿದ್ದು ಹಲವಾರು ಕಡೆ ಒಡೆದ ಅಕ್ಷರಗಳೂ ಕೆಲವೆಡೆ ಅಸ್ಪಷ್ಟವಾಗಿರುವ ಅಕ್ಷರಗಳೂ ಇವೆ. ಇವನ್ನು ‘ಹಿತೈಷಿಣಿಯವರು ಗುರುತಿಸಿ- ‘ಇನ್ನು ಮುಂದಿನ ಗ್ರಂಥಗಳಿಗೆ ಹೊಸ ಅಕ್ಷರಗಳನ್ನು ಉಪಯೋಗಿಸಿ, ಅಂದವಾಗಿಯೂ ಶುದ್ಧವಾಗಿಯೂ ಪ್ರಕಟಿಸಿ ಇದರಿಂದಾದ ಕೊರತೆಯನ್ನು ತುಂಬಿಸಿಕೊಡುವವೆಂದೂ ನಮ್ಮ ಸಹೃದಯವಾಚಕರಲ್ಲಿ ಸವಿನಯವಾಗಿ ನಿವೇದಿಸುವೆವು ಎಂದು ನಿವೇದಿಸಿಕೊಂಡಿದ್ದಾರೆ. ಕೊನೆಯಲ್ಲಿ 5 ಪುಟಗಳಷ್ಟು ದೀರ್ಘವಾದ ಶುದ್ಧಿಪತ್ರಿಕೆಯನ್ನು ನೀಡಲಾಗಿದೆ.

ಶಿವಾಜಿ ಮಹಾರಾಜನ ಆಳ್ವಿಕೆಯ ಸಂದರ್ಭದಲ್ಲಿ ಒಬ್ಬ ರಾಜಪುತ್ರನಾಗಿ ಹುಟ್ಟಿದರೂ ಕಡು ಕಷ್ಟಕ್ಕೆ ಗುರಿಯಾಗಿಯೂ ರಾಜಭಕ್ತಿಯನ್ನು ಮೆರೆದ ರಘುನಾಥಸಿಂಹ ಎಂಬ ಧೀರನೇ ಈ ಕತೆಯ ನಾಯಕ. ಅನುವಾದವಾಗಿದ್ದರೂ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಇಂತಹ ವಸ್ತುವನ್ನು ಒಳಗೊಂಡ ಕೃತಿ ಕನ್ನಡದಲ್ಲಿ ಆ ಕಾಲಕ್ಕೇ ಹುಟ್ಟಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ.

ಡೆಮ್ಮಿ ಅಷ್ಟದಳಾಕಾರದ, 196 ಪುಟಗಳನ್ನೊಳಗೊಂಡ ಈ ಕಾದಂಬರಿಯಲ್ಲಿ- ರಘುನಾಥಸಿಂಹ, ಸರಳಬಾಲೆ, ಷಾಯಿಸ್ಥಾಖಾನ, ಪುರೋಹಿತನು, ರಾಜಾ ಜಸವಂತಸಿಂಹ, ಶ್ರಿಶಿವಾಜಿ, ಶುಭಕಾರ್ಯವು, ರಾಜಗಡಕ್ಕೆ ಪ್ರಯಾಣ, ರಾಜಾಜಯಸಿಂಹ, ದುರ್ಗದವಿಜಯ, ಬಹುಮಾನ, ಚಂದ್ರರಾಯ, ಭವಾನೀಮಂದಿರ, ಗೋಸಾಯಿ ಸೀತಾಪತಿ, ರಾಮಸಿಂಹ, ದೆಹಲಿ ನಗರ, ಆಗಂತುಕ, ಔರಂಗಜೇಬ, ಅಸ್ವಸ್ಥತೆ, ಆರೋಗ್ಯ, ಪರಿವರ್ತನೆ, ಪುನರಾಗಮನ, ಆಗಮನ, ವಿಚಾರಣೆ, ಉಪಸಂಹಾರ- ಎಂಬ ಶೀರ್ಷಿಕೆಯ ಒಟ್ಟು 25 ಅಧ್ಯಾಯಗಳಿವೆ.

ಮಹಾದೇವಜೀ ನ್ಯಾಯಶಾಸ್ತ್ರಿ ಎಂಬ ಬ್ರಾಹ್ಮಣನ ವೇಷಾಂತರದಲ್ಲಿದ್ದ ಶಿವಾಜಿಯು ಷಾಯಿಸ್ತಾಖಾನನಿಗೆ ಒಂದೆರಡು ಕಡೆ ಸಂಸ್ಕೃತದ ಶ್ಲೋಕಗಳಲ್ಲಿ ಉತ್ತರ ನೀಡುವ ಸಂದರ್ಭ ಕುತೂಹಲಕಾರಿಯಾಗಿದೆ. ‘ಸಿಂಹಗಢದ ವಾರ್ತೆಯೇನು? ಎಂದಾಗ ಅದಕ್ಕುತ್ತರವಾಗಿ- ‘ಸನ್ತಿ ನದ್ಯೋದಂಡಕೇಷು ತಥಾ ಪಂಚವಟೀವನ ಸರಯೂವಿಚ್ಛೇದದುಃಖಂ ರಾಘವಸ್ತು ಕಥಂಸಹೇತ್‌ ಎಂದರೆ, ‘ಸಿಂಹಗಢ ಮೊದಲಾದ ಅನೇಕ ದುರ್ಗಗಳಿದ್ದರೂ ಪೂನಾ ನಿಮ್ಮ ಕೈಲಿ ಸಿಕ್ಕಿರುವುದು. ಶಿವಾಜೀ ಪ್ರಭುವು ತದ್ವಿಯೋಗ ಸಂತಾಪವನ್ನು ಹೇಗೆ ಮರೆಯುವನು ಎಂದು ಹೇಳುವನು. ಮತ್ತೊಂದು ಶ್ಲೋಕ: ‘ನವಿಜ್ಞಾಪಯಿತುಂ ಶಕ್ತಃ ಸ್ವಾಭಿಲಾಷಂಹಿಜಾತಕಃ ಜ್ಞಾತ್ವಾತು ತಂ ಜಲಧರ ಪರಿತೋಷಯತಿ ಯಾಚಕಂ (ಕೆಲವು ಪಟ್ಟಣಗಳನ್ನು ಕಳೆದುಕೊಂಡ ನಮ್ಮ ಪ್ರಭುಗಳು ಸಂಧಿ ಮಾಡಿಕೊಳ್ಳುವುದಕ್ಕೆ ಕೂಡ ಲಜ್ಜೆಪಡುವರು. ಅವರ ಮನೋರಥವನ್ನು ಗ್ರಹಿಸಿ ಅನುಗ್ರಹಪೂರ್ವಕವಾಗಿ ಯಾವುದನ್ನು ಕೊಟ್ಟರೂ ಅದನ್ನು ಅಂಗೀಕರಿಸುವರು).

19ನೇ ಶತಮಾನದ ಮೊದಲ ಪಾದದಲ್ಲಿ ಕನ್ನಡದಲ್ಲಿ ಕಾದಂಬರೀ ಪ್ರಕಾರ ಶಿಲ್ಪವಿನ್ಯಾಸದ ದೃಷ್ಟಿಯಿಂದ ಮತ್ತು ಗುಣಾತ್ಮಕವಾಗಿ ವಿಕಾಸಗೊಳ್ಳುತ್ತಿದ್ದ ಕಾಲಘಟ್ಟ. ಈ ಸಮಯದಲ್ಲಿ ಬಂದಂತಹ ಈ ಕಾದಂಬರಿಯು ಅಂದಿನ ಕನ್ನಡ ಕಾದಂಬರಿಗಳ ರಾಚನಿಕ ಸ್ವರೂಪವನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಐತಿಹಾಸಿಕ ಮಹತ್ವ ಹೊಂದಿದೆ.