ಪ್ರಿಂರೋಜವಿಜಯಂ
ಮುನ್ನುಡಿ

‘ಪ್ರಿಂರೋಜವಿಜಯಂ  ಎಸ್.ಜಿ. ಗೋವಿಂದರಾಜ ಅಯ್ಯಂಗಾರ‌್ಯ ಅವರ ಕಾದಂಬರಿ. ಇದರ ಮೊದಲ ಮುದ್ರಣ 1913ರ ಸೆಪ್ಟೆಂಬರ್‌ನಲ್ಲಿಯೂ, ಎರಡನೇ ಮುದ್ರಣ 1924ರ ಅಕ್ಟೋಬರ್‌ನಲ್ಲಿಯೂ ನಡೆದಿದೆ. 1926ರಲ್ಲಿ ಇದರ ಮೂರನೇ ಮುದ್ರಣವನ್ನು ಬೆಂಗಳೂರು ಸಿಟಿಯ ಬಿ.ಶ್ರೀನಿವಾಸ ಅಯ್ಯಂಗಾರ‌್ಯರು ಮುದ್ರಿಸಿದ್ದಾರೆ. 

ಈ ಕಾದಂಬರಿಯ ಮೂರನೆಯ ಆವೃತ್ತಿಯ ಬೆಲೆ 1 ರೂಪಾಯಿ 8 ಆಣೆ. ಒಂದನೇ ಅಷ್ಟ ಕಿರೀಟಾಕಾರದ ಈ ಕಾದಂಬರಿಯು 200 ಪುಟಗಳಿದ್ದು, 32ಅಧ್ಯಾಯಗಳನ್ನೊಳಗೊಂಡಿದೆ. ಕಾದಂಬರಿಯ ಆರಂಭಕ್ಕೆ, ಪುಸ್ತಕದ ಮೂಲಕ ಕರ್ತೃವಾದ ಇಂಗ್ಲೀಷ್ ಮಹಾಕವಿ ಆಲಿವರ್ ಗೋಲ್ಡ್‌ಸ್ಮಿತ್‌ನ ಸಂಕ್ಷಿಪ್ತ ಜೀವನಚರಿತ್ರೆ ಇದೆ. ಇದು ಔಚಿತ್ಯಪೂರ್ಣವಾಗಿದ್ದು ತುಂಬಾ ಉಪಯುಕ್ತವಾಗಿದೆ.

ಹೊಸಗನ್ನಡ ಕವಿತೆಯ ಹುಟ್ಟಿನ ಸಂದರ್ಭದ ಮಹತ್ವದ ಕವಿ ಎಸ್.ಜಿ.ನರಸಿಂಹಾಚಾರ್ಯರ ತಮ್ಮಂದಿರೇ ಈ ಎಸ್.ಜಿ. ಗೋವಿಂದಾಚಾರ್ಯರು. ಇವರಿಬ್ಬರೂ ‘ಕರ್ಣಾಟಕ ಕಾವ್ಯಮಂಜರಿ ಮತ್ತು ‘ಕಾವ್ಯಕಲಾನಿಧಿಯ ಪ್ರವರ್ತಕರೂ ಪ್ರೊಪ್ರೈಟರೂ ಆದ ರಾಮಾನುಜಯ್ಯಂಗಾರ‌್ಯ ಅವರ ಬಂಧುಗಳು, ಆಧುನಿಕಪೂರ್ವ ಕನ್ನಡ ಸಾಹಿತ್ಯ ನಿರ್ಮಿತಿಯ ಒಂದು ಕುಟುಂಬಕ್ಕೆ ಸೇರಿದವರು.

ಈ ಕಾದಂಬರಿಯು ಆಲಿವರ್ ಗೋಲ್ಡ್‌ಸ್ಮಿತ್ ಎಂಬ ಇಂಗ್ಲೀಷ್ ಕವಿಯ THE VICAR OF WAKEFIELD ಎಂಬ ಕಾದಂಬರಿಯ ಗದ್ಯಾನುವಾದ. ಪ್ರಥಮ ಮುದ್ರಣದ ಅವತಾರಿಕೆಯಲ್ಲಿ ಕೃತಿಕಾರರು ಹೀಗೆ ಹೇಳಿದ್ದಾರೆ:

‘ಇದು ಇಂಗ್ಲೀಷ್ ಭಾಷೆಯಲ್ಲಿ ಪ್ರಖ್ಯಾತವಾಗಿ, ನೀತಿಬೋಧಕವಾಗಿ, ಮೃದುಪದಪುಂಜರಂಜಿತವಾದ ಗೋಲ್ಡ್‌ಸ್ಮಿತ್ ಎಂಬ ಕವಿವರನ ‘ದಿ ವಿಕಾರ್ ಆಫ್ ವೇಕ್‌ಫೀಲ್ಡ್ (THE VICAR OF WAKEFIELD)) ಎಂಬ ಗ್ರಂಥದ ಗದ್ಯಾನುವಾದವು. ಇದನ್ನು ಕೂಡಿದ ಮಟ್ಟಿಗೆ ಶುದ್ಧವಾದ, ಸುಲಭವಾದ ಭಾಷೆಯಲ್ಲಿ ಬರೆದು, ತನ್ಮೂಲಕ ಮೂಲಗ್ರಂಥದಲ್ಲಿರುವ ಸಂದರ್ಭಗಳನ್ನೂ ಪಾತ್ರಗಳನ್ನೂ, ಯಥಾವತ್ತಾಗಿ ಇರಿಸಿ, ಆಂಗ್ಲೇಯರ ಮಧ್ಯಮಶ್ರೇಣಿಯವರ ನಡೆನುಡಿಗಳನ್ನು ಕನ್ನಡಿಗರೆಲ್ಲರಿಗೂ ತಿಳಿಸಲು ಪ್ರಯತ್ನಿಸಿರುವೆನು.

ಕಾದಂಬರಿಯ ಆರಂಭದಲ್ಲಿ, ಒಂದು ಕಂದಪದ್ಯದಲ್ಲಿ ಶ್ರೀಕೃಷ್ಣನ ಪ್ರಾರ್ಥನೆಯಿದೆ. ಮುಂದಿನ ಮತ್ತೇಭ ವಿಕ್ರೀಡಿತ ಛಂದೋರೂಪದ ವೃತ್ತ ಹೀಗಿದೆ:

ಜಗದೊಳೆ ಸತ್ಯಮೆ ಗೆಲ್ಗುಮೆಂದು ನುಡಿವಾ ತತ್ತ್ವಾರ್ಥಮಂ ಪೆಣ್ಗೆ ಬಾ
ಲಗಣಕ್ಕೊಯ್ಯನೆ ಬೋಧೆಗೆಯ್ಯಲೆಳಸುತ್ತಿಂಗ್ಲಿಷ್ ಕಥಾರೂಪದಿಂ 
ಸೊಗಮುಣ್ಮುತ್ತಿರೆ ಗೋಲ್ಡ್ ಸ್ಮಿದಾಖ್ಯಕವಿವರ್ಯಂ ಪೇಳ್ದನಾ ಗ್ರಂಥಮೇ 
ಸುಗುಣಜ್ಞರ್ ನೆರೆ ಮಚ್ಚುವಂತೆಸೆವುದೀ ಕರ್ಣಾಟಗದ್ಯೋಕ್ತಿಯೊಳ್

‘ಜಗತ್ತಿನಲ್ಲಿ ಸತ್ಯವೇ ಗೆಲ್ಲುತ್ತದೆ ಎಂದು ನುಡಿಯುವ ತತ್ತ್ವವನ್ನು ಹೆಂಗಸರಿಗೆ ಮಕ್ಕಳಿಗೆ ಸಾರುವ ಕಥಾರೂಪದಿಂದ ಸೊಗಸು ಹೊಮ್ಮುವಂತೆ ಗೋಲ್ಡ್‌ಸ್ಮಿತ್ ಕವಿಯು ಇಂಗ್ಲೀಷ್‌ನಲ್ಲಿ ರಚಿಸಿದನು. ಆ ಗ್ರಂಥವೇ ಕನ್ನಡ ಭಾಷೆಯಲ್ಲಿ ಗದ್ಯರೂಪದಲ್ಲಿ ಗುಣಗ್ರಾಹಿಗಳು ಚೆನ್ನಾಗಿ ಮೆಚ್ಚುವ ಹಾಗೆ ಶೋಭಿಸುತ್ತಿದೆ ಎಂಬುದು ಈ ಪದ್ಯದ ತಾತ್ಪರ್ಯ.

‘ಇಂಗ್ಲೀಷಿನಿಂದ ಕನ್ನಡದ ಭಂಡಾರವನ್ನು ತುಂಬಬೇಕು ಎನ್ನುವ ಆಕಾಂಕ್ಷೆ ಗೋವಿಂದರಾಜ ಅಯ್ಯಂಗಾರ‌್ಯರಲ್ಲಿ ಇತ್ತು ಎಂದು ಪ್ರೊ.ಎಸ್. ಅನಂತನಾರಾಯಣ ಅವರು ಅಭಿಪ್ರಾಯಪಡುವುದು ಸರಿಯಾಗಿಯೇ ಇದೆ ಎಂಬುದಕ್ಕೆ ಈ ಕೃತಿ ಮತ್ತು ಮೇಲಿನ ಈ ಪದ್ಯ ಒಳ್ಳೆಯ ನಿದರ್ಶನವಾಗಿದೆ. ಆ ಕಾಲದಲ್ಲಿ ಈ ಧೈರ್ಯ ಕನ್ನಡ ಸಾಹಿತ್ಯದ ಮುನ್ನಡೆಗೆ ಅಗತ್ಯವಾಗಿತ್ತು.

ಮೂಲಕೃತಿ ‘ದಿ ವಿಕಾರ್ ಆಫ್ ವೇಕ್‌ಫೀಲ್ಡ್ ಕೃತಿಯ ಪ್ರತಿ ಅಧ್ಯಾಯದ ಆರಂಭದಲ್ಲಿರುವಂತೆ ‘ಪ್ರಿಂರೋಜವಿಜಯಂ ಕನ್ನಡ ಅನುವಾದದಲ್ಲಿಯೂ ಪ್ರತಿ ಅಧ್ಯಾಯದ ಆರಂಭದಲ್ಲಿ ಆಯಾ ಅಧ್ಯಾಯದ ಇಡೀ ಸಾರಾಂಶವನ್ನು ಒಂದೆರಡು ವಾಕ್ಯಗಳಲ್ಲಿ ನೀಡಲಾಗಿದೆ. ಉದಾಹರಣೆಗೆ:

Chapter 4: A proof that even the humblest fortune may grant happiness, which depends not on circumstances, but constitution. (ನಾಲ್ಕನೆಯ ಅಧ್ಯಾಯ : ಮನುಷ್ಯನು ಎಂತಹ ದೀನದಶೆಯಲಿಯ್ಲೂ ಸುಖಪಡಬಹುದು. ಸುಖಕ್ಕೆ ಮನಸ್ಸೇ ಕಾರಣ).

ಇಂಗ್ಲೀಷ್ ಕೃತಿಯ ಎಂಟನೇ ಅಧ್ಯಾಯದಲ್ಲಿ 39 Quartret ಗಳಿರುವ A Ballad ಎಂಬ ಪದ್ಯಭಾಗವಿದೆ. ಇದಕ್ಕೆ ಸಂವಾದಿಯಾಗಿ ಕನ್ನಡ ಕೃತಿಯಲ್ಲಿ ಈ ಲಾವಣಿಯನ್ನು ಲೇಖಕರ ಅಣ್ಣಂದಿರಾದ ಎಸ್.ಜಿ.ನರಸಿಂಹಾಚಾರ್ಯರು ನಲವತ್ತು ಕಂದಪದ್ಯಗಳಲ್ಲಿ ಅನುವಾದಿಸಿರುವುದು ಕುತೂಹಲಕರವಾಗಿದೆ. ನಿದರ್ಶನಕ್ಕಾಗಿ ಒಂದು ಪದ್ಯಭಾಗ ಗಮನಿಸಬಹುದು.

For here forlorn and lost I tread,
With fainting steps and slow;
Where wilds, immeasurably spread,
Seem lengthening as I go.
ಆರುಮೊಡನಿಲ್ಲವಕ್ಕಟ 
ದಾರಿಯನರಿಯೆಂ ಬಳಲ್ದು ಮೆಲ್ಲನದೆನಿತಂ
ದೂರಮನೆಯ್ದುವೆನನಿತುಮ
ಪಾರಮೆನಿಪ್ಪಡವಿ ಬಳೆವ ತೆರದಿಂ

ಹೀಗೆಯೇ ಮೂಲದ 17ನೇ ಅಧ್ಯಾಯದಲ್ಲಿ On the death of a mad dog ಎಂಬ Elegy ಇದೆ. ಇದನ್ನು ಸ್ವತಃ ಲೇಖಕರೇ ಹದಿನಾರು ದ್ವಿಪದಿಗಳಿರುವ ‘ಹುಚ್ಚು ನಾಯ ಮರಣ ಎಂಬ  ಚರಮಗೀತೆಯಾಗಿ ಕನ್ನಡಕ್ಕೆ ತಂದಿದ್ದಾರೆ.

ಕನ್ನಡದಲ್ಲಿ ಕಾದಂಬರಿ ಪ್ರಕಾರ ಉಗಮಗೊಂಡು ವಿಕಾಸವಾಗುತ್ತಿದ್ದ ಘಟ್ಟದಲ್ಲಿ ಬಂದ ಕಾದಂಬರಿಗಳ ಸಾಲಿನಲ್ಲಿ ಗೋವಿಂದರಾಜ ಅಯ್ಯಂಗಾರ‌್ಯರ ‘ಪ್ರಿಂರೋಜವಿಜಯಂ ಕೃತಿಗೆ ಒಂದು ಐತಿಹಾಸಿಕ ಸ್ಥಾನವಿದೆ.