‘ಕನ್ನಡ ಪತ್ರವ್ಯವಹಾರ ಬೋಧಿನಿಯು ಅಥವಾ ವ್ಯವಹಾರಸಾಹಿತ್ಯ’ ದತ್ತಾಜೀರಾವ ಆಬಾಜೀರಾವ ಸಾವಂತ ಅವರ ಕೃತಿ. ಲೇಖಕರು ಬೆಳಗಾಂವದ ತಮ್ಮ ಶ್ರೀರಾಮತತ್ವ–ಪ್ರಕಾಶ ಮುದ್ರಾಲಯದಲ್ಲಿ ಮುದ್ರಿಸಿ ಪ್ರಸಿದ್ಧಿಪಡಿಸಿದರು ಎನ್ನುವ ಒಕ್ಕಣೆ ಪುಸ್ತಕದ ಮುಖಪುಟದಲ್ಲಿದೆ. ಪ್ರಸ್ತುತ ಆವೃತ್ತಿಯು ಸುಧಾರಿಸಿದ ೪ನೆಯದಾಗಿದ್ದು ೧೯೨೩ರಲ್ಲಿ ಪ್ರಕಾಶಗೊಂಡಿದೆ. ಇದರ ಅಂದಿನ ಕ್ರಯ ಒಂದು ರುಪಾಯಿ.
ಈ ಪುಸ್ತಕವನ್ನು ಸಿದ್ಧಪಡಿಸಿ ಕನ್ನಡದಲ್ಲಿ ೧, ೨, ೩ ಆವೃತ್ತಿಗಳನ್ನು ಮುದ್ರಿಸಲು ಆ ಪ್ರತಿಗಳೆಲ್ಲ ಕೂಡಲೇ ತೀರಿಹೋದವು. ಈ ಪುಸ್ತಕದ ವಿಷಯದಲ್ಲಿ ಜನರ ಮನಸ್ಸಿನಲ್ಲಿ ಈ ರೀತಿಯಾದ ಅತ್ಯಾದರವನ್ನು ಕಂಡು ನನಗಾದರೂ ಅತಿ ಸಂತೋಷವಾದದ್ದರಿಂದ ಅದೇ ಪುಸ್ತಕವನ್ನು ಈಗ್ಗೆ ನಾಲ್ಕನೇ ಆವೃತ್ತಿ ತೆಗೆದಿರುತ್ತೇನೆ ಎಂದು ಲೇಖಕರು ಹೇಳಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಈ ಪುಸ್ತಕವನ್ನು ಸಿದ್ಧಪಡಿಸಿ ಕನ್ನಡದಲ್ಲಿ ೧, ೨, ೩ ಆವೃತ್ತಿಗಳನ್ನು ಮುದ್ರಿಸಲು ಆ ಪ್ರತಿಗಳೆಲ್ಲ ಕೂಡಲೇ ತೀರಿಹೋದವು. ಈ ಪುಸ್ತಕದ ವಿಷಯದಲ್ಲಿ ಜನರ ಮನಸ್ಸಿನಲ್ಲಿ ಈ ರೀತಿಯಾದ ಅತ್ಯಾದರವನ್ನು ಕಂಡು ನನಗಾದರೂ ಅತಿ ಸಂತೋಷವಾದದ್ದರಿಂದ ಅದೇ ಪುಸ್ತಕವನ್ನು ಈಗ್ಗೆ ನಾಲ್ಕನೇ ಆವೃತ್ತಿ ತೆಗೆದಿರುತ್ತೇನೆ ಎಂದು ಲೇಖಕರು ಹೇಳಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಸಾವಂತರ ಕುಟುಂಬದಲ್ಲಿ ನಾಲ್ಕು ಜನ ಸಾವಂತರು– ಹರಿ ಸಾವಂತ, ಆಬಾಜಿ ರಾಮಚಂದ್ರ ಸಾವಂತ, ಶಿವಾಜಿರಾವ ಆಬಾಜಿರಾವ ಸಾವಂತ ಮತ್ತು ಪ್ರಸ್ತುತ ದತ್ತಾಜಿರಾವ ಆಬಾಜೀರಾವ ಸಾಮಂತ ಎನ್ನುವ ನಾಲ್ಕು ಲೇಖಕರಿದ್ದು, ಅಷ್ಟೂ ಜನ ಬೇರೆ ಬೇರೆ ಕಾಲಘಟ್ಟದಲ್ಲಿ ಕನ್ನಡದಲ್ಲಿ ವ್ಯವಹಾರ ಸಾಹಿತ್ಯವನ್ನು ಕುರಿತೇ ವಿವಿಧ ರೀತಿಯ ಒಂಬತ್ತು ಕೃತಿಗಳನ್ನು ರಚಿಸಿರುವುದು ವಿಶೇಷ.
೧೯೨೪ರಲ್ಲಿ ಪ್ರಸ್ತುತ ದತ್ತಾಜಿರಾವ ಆಬಾಜಿರಾವ ಸಾವಂತ ಅವರು ತಮಿಳು ಭಾಷೆಯಲ್ಲಿ ‘ಮುಸಲ್ಮಾನೀ ಶಿಕ್ಷಕ’ ಎನ್ನುವ ಕೃತಿರಚನೆ ಮಾಡಿರುತ್ತಾರೆ. ೧೮೭೭ರಲ್ಲಿಯೇ ಹರಿಸಾವಂತರು ‘ಅಕ್ಷರಾಂಕ ಲಿಪಿಯು’ ಎನ್ನುವ ಕೃತಿ ರಚಿಸಿದ್ದಾರೆ. ಆಬಾಜಿ ರಾಮಚಂದ್ರ ಸಾವಂತರು ೧೮೮೪ರಿಂದ ೧೯೦೯ರವರೆಗೆ ‘ಕನ್ನಡ ಲೇಖನ ಪದ್ಧತಿಯು’, ‘ಚಿತ್ರಬೋಧ ಅಥವಾ ವಿದ್ಯೋದಯ’ (ಸಚಿತ್ರ ಬಾಲಬೋಧೆ), ‘ಕನ್ನಡ ಕವಿತಾ ಪದ್ಧತಿ’, ‘ಮನೋರಂಜಕ ಮಂಜರಿ’, ‘ಲೌಕೋತ್ತರಿ ಹಾಗೂ ಲೇಖನ ಪದ್ಧತಿಯು’ ಎನ್ನುವ ಆರು ಪುಸ್ತಕಗಳನ್ನು ಬರೆದಿರುತ್ತಾರೆ.
ಶಿವಾಜಿ ರಾವ ಆಬಾಜಿರಾವ ಸಾವಂತರು ೧೯೩೯ರಲ್ಲಿ ಮರಾಠಿ ಭಾಷೆಯಲ್ಲಿ ‘ಕನ್ನಡ ಮತ್ತು ಮರಾಠಿ ಒಂದನೆಯ ಪುಸ್ತಕವು’ ಎನ್ನುವ ಕೃತಿ ರಚಿಸಿರುತ್ತಾರೆ. ಒಟ್ಟಿನಲ್ಲಿ ಆ ಕಾಲಘಟ್ಟದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಶೈಕ್ಷಣಿಕ ಪ್ರಚಾರ ಮತ್ತು ಪ್ರಸಾರದ ದೃಷ್ಟಿಯಿಂದ ಸಾವಂತ ಕುಟುಂಬದವರು ಮಾಡಿರುವ ಪುಸ್ತಕ ಸೇವೆ ಅಮೋಘ. ಪ್ರಸ್ತುತ ಪುಸ್ತಕ ಒಟ್ಟು 162 ಪುಟಗಳನ್ನೊಳಗೊಂಡಿದೆ. ಸಾವಂತರು ಪುಸ್ತಕದಲ್ಲಿ ಆರಂಭದಿಂದ ಸಮಾಪ್ತಿಯವರೆಗೆ ಒಂದೇ ತರದ ಅಕ್ಷರಗಳನ್ನು ಹಾಕದೇ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಕೈಬರಹವನ್ನು ಓದಲು ಸುಲಭವಾಗುವಂತೆ ಹಲವು ರೀತಿಯ ಅಕ್ಷರಗಳನ್ನು ಸೇರಿಸಿದ್ದಾರೆ.
ಪುಸ್ತಕದ ಮೊದಲನೇ ಭಾಗವನ್ನು ಕೇವಲ ಕೈಬರಹದ ಅಕ್ಷರಗಳಿಂದಲೇ ಪೂರ್ಣ ಮಾಡಿರುತ್ತದೆ ಎಂದು ಹೇಳಿರುವುದರಿಂದ ಈ ಪುಸ್ತಕವು ಕಲ್ಲಚ್ಚಿನ ಪ್ರತಿಯಾಗಿದ್ದು, ಕನ್ನಡದಲ್ಲಿ ಕಲ್ಲಚ್ಚಿನ ಮುದ್ರಣವು ಸಾಮಾನ್ಯವಾಗಿ ಸುಮಾರು ೧೮೮೦ರ ಆಸುಪಾಸಿನವರೆಗೆ ಆಗುತ್ತಿದ್ದುದರಿಂದ ಈ ಪುಸ್ತಕದ ಕಾಲವನ್ನು ತಾತ್ಪೂರ್ವಿಕವಾಗಿ ಸುಮಾರು ೧೮೮೫ ಎಂದು ಇಟ್ಟುಕೊಳ್ಳಬಹುದು. ಇದಕ್ಕೆ ಪೂರಕವಾಗಿ ಮುಂದೆ ನಿದರ್ಶನವಾಗಿ ಕೊಟ್ಟಿರುವ ಪತ್ರವೊಂದರಲ್ಲಿ ೫.೮.೧೮೮೧ನೆ ಇಸ್ವಿಯ ತಾರೀಕಿನ ಪ್ರಸ್ತಾಪ ಬರುತ್ತದೆ.
ವಿವಿಧ ರೀತಿಯ ಪತ್ರಗಳು, ಕೋರ್ಟುಕಚೇರಿಗಳಲ್ಲಿಯೂ ದರಬಾರದಲ್ಲಿಯೂ ಉಪಯೋಗಿಸತಕ್ಕ ವಿಷಯಗಳು, ಶಾಲಾಖಾತೆಯ ಸಂಬಂಧದ ಪತ್ರ ವ್ಯವಹಾರ, ಫೌಜದಾರಿ ಫಿರ್ಯಾದು, ಮುಲಕೀ ಪ್ರಕರಣದ ಪತ್ರ ವ್ಯವಹಾರ, ಫೌಜದಾರಿ ಕೋರ್ಟಿನಲ್ಲಿ ಕೆಲಸ ನಡಿಸುವ ನಮೂನೆಗಳು, ನಿಬಂಧ ಲೇಖನ ಪದ್ಧತಿಯು, ಜಮಾಖರ್ಚು ಬರೆಯುವ ಪದ್ಧತಿ, ವರ್ತಮಾನ ಪತ್ರಗಳಲ್ಲಿ ನೋಟೀಸು ಕೊಡತಕ್ಕ ರೀತಿ– ಈ ಮುಂತಾದ ವಿಷಯಗಳನ್ನು ಕುರಿತು ಅನುಕ್ರಮಣಿಕೆಯಿದೆ.
ಈ ಪುಸ್ತಕದ ಉಲ್ಲೇಖವು ಕನ್ನಡದ ಯಾವ ಗ್ರಂಥಸೂಚಿಗಳಲ್ಲಿಯೂ ಪ್ರಸ್ತಾಪವಾಗಿಲ್ಲ. ಈ ಪುಸ್ತಕದ ವಿಜ್ಞಪ್ತಿಯುವಿನಲ್ಲಿ ‘ಈ ಹಿಂದುಸ್ತಾನದ ರಾಜ್ಯವು ಇಂಗ್ಲೀಷರ ಸ್ವಾಧೀನವಾದಂದಿನಿಂದ ವಿದ್ಯಾಖಾತೆಯಲ್ಲಿ ದಿನೇದಿನೇ ಸುಧಾರಣೆಯಾಗುತ್ತ ನಡೆದದ್ದರಿಂದ ವಿದ್ಯಾವೃಕ್ಷಕ್ಕೆ ವಿಶೇಷವಾಗಿ ಫಲಪುಷ್ಪಗಳು ಅಭಿವೃದ್ಧಿ ಹೊಂದುತ್ತ ನಡೆದದ್ದನ್ನು ಕಂಡು ಈ ಹಿಂದುಸ್ಥಾನ ನಿವಾಸಿಗಳಲ್ಲಿ ಸಂತೋಷ ಪಡದೇಯಿದ್ದ ಮನುಷ್ಯನು ಯಾವನಿರುವನು!
ಇಂಥ ವಿದ್ಯಾವೃದ್ಧಿಯ ಶುಭಶಕುನಂಗಳಂ ಕಂಡು ಆನಂದೋದ್ರೇಕದಿಂದ ನಾನಾದರೂ ಮಹಾರಾಷ್ಟ್ರ ಲಿಪಿಯಲ್ಲಿ ಹೊರಟಂಥ ಅನೇಕ ಪುಸ್ತಕಗಳನ್ನು ಒತ್ತಟ್ಟಿಗೆ ಕೂಡಹಾಕಿ, ಅವುಗಳಲ್ಲಿರುವ ಅತ್ಯುಪಯುಕ್ತ ಮಾಹಿತಿಗಳನ್ನೆಲ್ಲ ಆರಿಸಿ ತೆಗೆದು ಸದ್ಯಕ್ಕೆ ಶಾಲೆಗಳಲ್ಲಿಯೂ ವ್ಯವಹಾರದಲ್ಲಿಯೂ ಕೋರ್ಟು–ಕಚೇರಿ ಮುಂತಾದ ಸ್ಥಳಗಳಲ್ಲಿಯೂ ಅವಶ್ಯವಾಗಿ ಉಪಯೋಗಕ್ಕೆ ಬರುವಂಥ ವಿಷಯಗಳನ್ನೆಲ್ಲ ಏಕೀಕರಣ ಮಾಡಿ ‘ಪತ್ರವ್ಯವಹಾರ ಬೋಧಿನಿ ಅಥವಾ ವ್ಯವಹಾರಸಾಹಿತ್ಯ’ ಎಂಬ ಈ ಪುಸ್ತಕವನ್ನು ಸಿದ್ಧಪಡಿಸಿ ಕನ್ನಡದಲ್ಲಿ ೧,೨,೩ ಆವೃತ್ತಿಗಳನ್ನು ಮುದ್ರಿಸಿರಲು ಆ ಪ್ರತಿಗಳೆಲ್ಲಾ ಕೂಡಲೇ ತೀರಿಹೋದವು’ ಎಂದು ತಮ್ಮ ಕೃತಿಯ ರಚನೆ ಹಾಗೂ ಸ್ವರೂಪವನ್ನು ಕುರಿತು ಹೇಳಿರುತ್ತಾರೆ.
ಆರಂಭದಲ್ಲಿ ಲೇಖ್ಯ ಹಾಗೂ ಲೇಖನ ಸಾಮಗ್ರಿಗಳನ್ನು ಕುರಿತ ವಿವರಗಳನ್ನು ನೀಡಿರುತ್ತಾರೆ. ಕೆಲವು ಸೂಚನೆಗಳನ್ನು ಇಲ್ಲಿ ಗಮನಿಸಬಹುದು: ಯಾವ ಬಾಲಕನು ಕಲಿಯಲಿಚ್ಛಿಸುವನೋ ಅವನು ತನ್ನ ಬದಿಯಲ್ಲಿ ಮೂರು ಅಕ್ಷರಗಳುಳ್ಳ ಕಿತ್ತೆ (=ಕಾಗದ, ಪುಸ್ತಕ), ತೆಳ್ಳಗಿರುವ ಮಸಿ, ಒಂದು ಲೇಖಣ ಇಷ್ಟು ಸಾಹಿತ್ಯವನ್ನು (=ವಸ್ತು) ಯಾವಾಗಲೂ ಇಡಲಿಕ್ಕೆ ಬೇಕು. ಬಾಲಕನು ಕಿತ್ತೆಯ ಕೆಳಭಾಗಕ್ಕೆ ದಪ್ಪನ್ನ ಮಷ್ಟೀಪತ್ರವನ್ನು ತೆಗೆದುಕೊಂಡು ತನ್ನ ಎಡಗಡೆಯ ತೊಡೆಯನ್ನು ನೆಲಕ್ಕೆ ಊರಿ, ಬಲಭಾಗದ ತೊಡೆಯನ್ನು (ಶಿಕ್ಷಕರು ಕೂತು ತೋರಿಸಬೇಕು) ಎಡಗಡೆಯ ತೊಡೆಯ ಮೇಲಿಟ್ಟು ಎಡಗಯ್ಯ ಅಂಗುಷ್ಠ ಮತ್ತು ತರ್ಜನಿಯ ಬೆರಳುಗಳನ್ನು ಕಿತ್ತೆಯ ಎಡಭಾಗದ ಮೇಲೆ ಇಟ್ಟು, ಅದೇ ಸ್ಥಳದ ಕೆಳಗೆ ಉಳಿದ ಮಧ್ಯಮ ಅನಾಮಿಕ ಮತ್ತು ಕನಿಷ್ಠಿಕಾ ಬೆರಳುಗಳಿಂದ ಹತ್ತಿಕ್ಕಿ ಹಿಡಿದು ಕಿತ್ತೆಯ ಮೇಲಿರುವ ಅಕ್ಷರಗಳೊಳಗಿಂದ ಲೇಖಣಿಯನ್ನು ಹೊರಭಾಗಕ್ಕೆ ಹೋಗಗೊಡದೆಚ್ಚರದಿಂದಿರಬೇಕು...
ಈ ರೀತಿಯಲ್ಲಿ ಲೇಖನಿಯನ್ನು ಹಿಡಿದುಕೊಳ್ಳುವ ಪ್ರಾಥಮಿಕ ಅಂಶಗಳನ್ನು ಕೂಡ ಇಲ್ಲಿ ಹೇಳಿಕೊಡಲಾಗಿದೆ. ಪತ್ರಪ್ರಕರಣದಲ್ಲಿ ಬಂಧು, ಮಿತ್ರ, ಸ್ವಜಾತಿ, ಅನ್ಯ ಜಾತಿ, ವಿವಿಧ ಧರ್ಮದ ಧಾರ್ಮಿಕ ಪೀಠಗಳ ಮುಖ್ಯಸ್ಥರು, ವಿವಿಧ ವೃತ್ತಿಯವರು-ಮುಂತಾದವರಿಗೆ ಪತ್ರ ಬರೆಯುವಾಗಿನ ಒಕ್ಕಣೆಯ ಕ್ರಮವನ್ನು ನಿರೂಪಿಸಿರುತ್ತಾರೆ. ಇಲ್ಲಿ ದೊಡ್ಡಪದವಿಯಲ್ಲಿರುವ ವಿಧವಾಸ್ತ್ರೀಯರಿಗೆ ಪತ್ರ ಬರೆಯುವ ನಮೂನೆಯನ್ನು ನೀಡಿರುವುದು ಕುತೂಹಲಕಾರಿಯಾಗಿದೆ. ದೊಡ್ಡ ಪದವಿಯ ವಿಧವಾ ಸ್ತ್ರೀಗೆ ಪತ್ರ ಬರೆಯುವಾಗ ಶ್ರೀಮಂತ ಗಂಗಾಜಲ ನಿರ್ಮಲ ಮಾತೋಶ್ರೀ ಸಮಾನರಾದ ರಾಜಮಾನ್ಯ ರಾಜಶ್ರೀ... ರವರಿಗೆ ...ಎಂಬ ಬಾಲಕನು ಮಾಡುವ ಸಾಷ್ಟಾಂಗ ಬಿನ್ನಹ ಎಂದಿರಬೇಕು ಎಂಬುದು ಲೇಖಕರ ಅಭಿಪ್ರಾಯ.
ಉತ್ತರ ಕರ್ನಾಟಕದ ಅಂದಿನ ಕಾಲಘಟ್ಟದಲ್ಲಿದ್ದ ದಿನನಿತ್ಯದ ವ್ಯವಹಾರದ ಬಳಕೆಯ ಕನ್ನಡದ ಜಾಯಮಾನವು ಈ ಪುಸ್ತಕದಿಂದ ಚೆನ್ನಾಗಿ ತಿಳಿಯುತ್ತದೆ. ಕಿತ್ತೆ, ದವತಿ, ಕರ್ಜಖತ, ಕಬಜಾ, ಗಹಾಣಖತ, ಯಾದಿ, ಸಾದಾದಸ್ತು, ಭರಪಾಯಿ, ಸಾಠೆ ಪತ್ರ, ಬಕ್ಷೀಸಪತ್ರ, ಹಪ್ತೆಬಂದಿದಸ್ತು, ನಿಖಾಲಸಾ, ಲಾವಣೀಚೀಟಿ, ಕತಬೆ, ಕಬುಲಾಯತಿ, ಪೋಟಗಿ, ಜುಲುಮೆ, ಹುಕುಮುನಾಮಾ, ಇರಸಾಲು, ಉತಾರು, ಸೋಡಪತ್ರ, ವತನೀ, ರೋಜಕಿರ್ದೀ, ಗಹಾಣಪತ್ರ, ವಾಟಣೀಪತ್ರ, ಪಗಾರದ ಜಂತ್ರಿ – ಇವೇ ಮುಂತಾದ, ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ಬಳಕೆಯಲ್ಲಿಲ್ಲದ ಆಡಳಿತ, ಕೋರ್ಟು ಕಚೇರಿಗಳಲ್ಲಿ ಬಳಸುವ ಅಪೂರ್ವ ದೇಶ್ಯ ಮತ್ತು ಅನ್ಯದೇಶ್ಯ ಶಬ್ದಗಳನ್ನು ಹೇರಳವಾಗಿ ಬಳಸಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು, ವಕೀಲರು, ವ್ಯಾಪಾರಿಗಳು– ಮುಂತಾದವರಿಗೆ ಬೇಕಾದ ಅವಶ್ಯ ವಿಚಾರಗಳನ್ನು ನಿದರ್ಶನಪೂರ್ವಕ ಇಲ್ಲಿ ವಿವರಿಸಿರುವುದರಿಂದ ಈ ಕೃತಿ ನಾಲ್ಕಾವೃತ್ತ ಮುದ್ರಣಗೊಳ್ಳಲು ಕಾರಣವಾಯಿತು.
೧೯ನೇ ಶತಮಾನದ ಕೊನೆಯ ಭಾಗದಲ್ಲಿ ಉತ್ತರ ಕರ್ನಾಟಕ ಪ್ರದೇಶದ ಜನತೆಗೆ ಅತ್ಯಂತೋಪಯುಕ್ತವಾದ ಈ ಪುಸ್ತಕವು ಕನ್ನಡದ ವ್ಯವಹಾರ ಹಾಗೂ ಪತ್ರಸಾಹಿತ್ಯ ಪ್ರಕಾರಕ್ಕೆ ಒಂದು ಅಪರೂಪದ ಹಾಗೂ ಮಹತ್ವದ ಸೇರ್ಪಡೆಯಾಗಿದೆ.