ನಿವೇದನ

ಡಿ.ವಿ. ಗುಂಡಪ್ಪ ಅವರ ‘ನಿವೇದನ’ ಎನ್ನುವ ಈ ಕವಿತಾ ಸಂಕಲನವನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಏಪ್ರಿಲ್ 1924ರಲ್ಲಿ ಪ್ರಕಟಿಸಿದೆ.

ಅಷ್ಟಮ ಡೆಮಿ ಆಕಾರದ 60 ಪುಟಗಳ ಈ ಕೃತಿಯ ಎರಡನೆಯ ಮುದ್ರಣವನ್ನು 1933ರಲ್ಲಿ ಬೆಂಗಳೂರು ಸಿಟಿಯ ಕರ್ನಾಟಕ ಪ್ರಕಟನಾಲಯದವರು ಹೊರತಂದರು. ಮತ್ತೆ ಇದೇ ಪ್ರಕಟನಾಲಯದವರು 1956ರಲ್ಲಿ ಇದರ ಮೂರನೇ ಆವೃತ್ತಿಯನ್ನು ಹೊರತಂದರು. ನಂತರ ‘ನಿವೇದನ’ ಸಂಕಲನದ ಹಲವಾರು ಆವೃತ್ತಿಗಳು ಹೊರಬಂದಿವೆ.ಮೊದಲೆರಡು ಆವೃತ್ತಿಗಳಲ್ಲಿ 11 ಪದ್ಯಗಳೂ 6 ಹಾಡುಗಳೂ ಇವೆ. ಮೂರನೆಯ ಆವೃತ್ತಿಯಲ್ಲಿ 11 ಪದ್ಯಗಳೂ 7 ಹಾಡುಗಳೂ ಇವೆ. ಒಂದು, ಎರಡರ ಆವೃತ್ತಿಯಲ್ಲಿ ಪದ್ಯ ಹಾಡುಗಳಿಗೆ ಟಿಪ್ಪಣಿಗಳಿಲ್ಲ. ಮೂರನೆಯ ಆವೃತ್ತಿ ಮತ್ತು ನಂತರದ ಆವೃತ್ತಿಗಳಲ್ಲಿ ಕೃತಿಯನ್ನು ಅರ್ಥೈಸಿಕೊಳ್ಳಲು ಅನುವಾಗುವಂತೆ ವಿಸ್ತೃತ ಟಿಪ್ಪಣಿಗಳನ್ನು ಪದ್ಯಗಳು ಹಾಗೂ ಹಾಡುಗಳಿಗೆ ನೀಡಲಾಗಿದೆ. ಇದೇ ಡಿ.ವಿ.ಗುಂಡಪ್ಪನವರ ಕೃತಿಗಳ ವಿಶೇಷ. ಪುಸ್ತಕದ ನಂತರದ ಆವೃತ್ತಿಗಳಲ್ಲಿ ಹಿಂದಿನ ಆವೃತ್ತಿಗಳಿಗೆ ಗುಣಾತ್ಮಕ ಸೇರ್ಪಡೆಗಳೂ, ಹಿಂದಿನ ಆವೃತ್ತಿಗಳ ದೋಷಗಳ ತಿದ್ದುವಿಕೆಯೂ, ಮುದ್ರಣದ ಸೊಗಸಿನ ಅಂದಚಂದದ ಹೆಚ್ಚಳಗಳೂ ಇರುತ್ತವೆ. ಒಂದು ಹಾಗೂ ಎರಡನೆಯ ಆವೃತ್ತಿಗಳಲ್ಲಿ ಬೆಲೆಯ ನಮೂದಿಲ್ಲ. ಮೂರನೆಯ ಆವೃತ್ತಿಯ ಬೆಲೆ ಒಂದು ರುಪಾಯಿ ಹನ್ನೆರಡು ಆಣೆ.

‘ನಿವೇದನ’ ಡಿ.ವಿ.ಜಿ. ಅವರ ಎರಡನೆಯ ಕವನ ಸಂಕಲನ. 1922ರಲ್ಲಿ ಅವರ ಮೊದಲ ಕವನ ಸಂಗ್ರಹ ‘ವಸಂತ ಕುಸುಮಾಂಜಲಿ’ ಪ್ರಕಟವಾಯಿತು. ‘ನಿವೇದನ’ ಸಂಕಲನವನ್ನು ಕುರಿತ ಒಂದು ಸ್ವಾರಸ್ಯಕರ ಸಂಗತಿ ಸಾಹಿತ್ಯವಲಯದಲ್ಲಿ ಚಾಲ್ತಿಯಲ್ಲಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಒಮ್ಮೆ ಪ್ರೊ. ತೀ.ನಂ. ಶ್ರೀಕಂಠಯ್ಯ ಅವರು  ಬಿ.ಎ. ವಿದ್ಯಾರ್ಥಿಗಳಿಗೆ ಈ ಪಠ್ಯವನ್ನು ಪಾಠ ಮಾಡಬೇಕಿತ್ತು. ಶ್ರೀಯುತರು ತರಗತಿಗೆ ಬಂದು ಬೋರ್ಡನ್ನು ನೋಡಿದಾಗ ತುಂಟ ಹುಡುಗನೊಬ್ಬ ಬೋರ್ಡಿನ ಮೇಲೆ ಅಧ್ಯಾಪಕರನ್ನು ಕಿಚಾಯಿಸಲೆಂದು ‘ನೀವೇ ದನ’ ಎಂದು ಬರೆದಿದ್ದ.

ಆಗ ತೀ.ನಂ.ಶ್ರೀ ಅವರು ಜಾಣತನದಿಂದ ವಿದ್ಯಾರ್ಥಿಗಳನ್ನು ನಿರ್ದೇಶಿಸಿ ‘ನೀವೇ ದನ’ ಎಂದು ಗಟ್ಟಿಯಾಗಿ ಓದಿ ಆ ಚೇಷ್ಟೆ ವಿದ್ಯಾರ್ಥಿ ಬೇಸ್ತುಬೀಳುವಂತೆ ಮಾಡಿದರು. ಈ ಸಂಗತಿಯನ್ನು 1966ರಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಪಿ.ಯು.ಸಿ ವಿದ್ಯಾರ್ಥಿಗಳಾಗಿದ್ದಾಗ ಕನ್ನಡ ಅಧ್ಯಾಪಕಿಯಾಗಿದ್ದ ಹಾಗೂ ಚೇಷ್ಟೆ ಹುಡುಗನ ತಂಡದ, ತೀ.ನಂ.ಶ್ರೀ ಅವರ ವಿದ್ಯಾರ್ಥಿನಿ ಶ್ರೀಮತಿ ರಾ. ಗಿರಿಜ ಅವರು ಹೇಳಿದ್ದ ನೆನಪನ್ನು ನಾನು ಈಗಲೂ ಮರೆತಿಲ್ಲ.

ಈ ಕೃತಿಯ ಇನ್ನೊಂದು ವಿಶೇಷವೆಂದರೆ ಬೇಲೂರಿನ ಪ್ರತಿಮೆ, ಜೋಗದ ಜಲಪಾತ, ಶಿವನಸಮುದ್ರ ಮುಂತಾದ ೨೦ ಸುಂದರ ಛಾಯಾಚಿತ್ರಗಳನ್ನು ಆಯಾ ಕವಿತೆಗಳಿಗೆ ಪೂರಕವಾಗುವಂತೆ ನೀಡಿರುವುದು. ಡಿ.ವಿ.ಜಿ ಅವರ ಈ ಕೃತಿಯು ಬೇಂದ್ರೆಯವರ ‘ಕೃಷ್ಣಕುಮಾರಿ’ (1922), ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ‘ಬಿನ್ನಹ’ (1922), ಬಿ.ಎಂ.ಶ್ರೀ ಅವರ ‘ಇಂಗ್ಲಿಷ್ ಗೀತಗಳು’ (1926), ಪು.ತಿ.ನ. ಅವರ ‘ಹಣತೆ’ (1933) ಹಾಗೂ ಕುವೆಂಪು ಅವರ ‘ಕೊಳಲು’ (1933)– ಮುಂತಾದ ಕನ್ನಡ ನವೋದಯ ಕಾವ್ಯದ ಐತಿಹಾಸಿಕ ಕವನ ಸಂಗ್ರಹಗಳ ಸಾಲಿಗೆ ಸೇರುವಂತಹುದು.ಮೊದಲ ಮುದ್ರಣದ ಪೀಠಿಕೆಯಲ್ಲಿ ಆರಂಭದ ‘ಜ್ಞಾಪಕ’ ಎನ್ನುವ ಶೀರ್ಷಿಕೆಯ ಮುನ್ನುಡಿಯಲ್ಲಿ ಇಂತಿದೆ: ‘‘ತನ್ನ ದೇಶದಲ್ಲಿ ಪ್ರಕೃತಿ ನಿರ್ಮಿತಗಳಾಗಿಯೂ ಮನುಷ್ಯ ನಿರ್ಮಿತಗಳಾಗಿಯೂ ಖ್ಯಾತಿಗೊಂಡಿರುವ ದೃಶ್ಯವಿಶೇಷಗಳನ್ನು ಲೇಖಕನು ಮೊಟ್ಟಮೊದಲು ನೋಡಿದಾಗ ತನಗಾದ ಅನುಭವವು ಮರಳಿ ಆಗಾಗ ತನ್ನ ನೆನಪಿಗೆ ದೊರೆಯಲಾಗುವಂತೆ ಅವನ್ನು ಮಾತುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಮಾಡಿದ ಪ್ರಯತ್ನದ ಫಲವೇ ಈ ಪುಸ್ತಕದ ಪದ್ಯಗಳು... ಬೇಲೂರಿನ ವಿಗ್ರಹಗಳು ಕೀಟ್ಸ್ ಇಂಗ್ಲಿಷ್ ಕವಿಯ Ode on a Grecian Urn ಎಂಬ ಕಾವ್ಯದಲ್ಲಿಯ ಸೌಂದರ್ಯ ಪ್ರಶಂಸೆಯನ್ನು ಜ್ಞಾಪಕಕ್ಕೆ ತಂದವು. ಇಲ್ಲಿಯ ಒಂದೆರಡು ಪಂಕ್ತಿಗಳು ಆ ಮಹಾಕವಿಯ ಪ್ರಸಾದವಾಗಿವೆ’’.

ಕನ್ನಡದ ನವೋದಯ ಕಾವ್ಯವು ಚಾಲನೆಗೆ ಬರುವ ಪೂರ್ವದಲ್ಲಿನ ಅದರ ಸೂಚನೆಯನ್ನು ನಿಚ್ಚಳವಾಗಿ ನೀಡುವಂತಹ ಮನೋಭಾವವೊಂದು ಇಲ್ಲಿ ನಿಹಿತಗೊಂಡಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು. ಆ ಹೊಸ ಕಾಲದ ಕಾವ್ಯ ನಿರ್ಮಿತಿಯನ್ನು ವಿರೋಧಿಸುತ್ತಿದ್ದ ಸಾಂಪ್ರದಾಯಿಕ ಮನೋಧರ್ಮದವರ ನಡುವೆ ಹೊಸತನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರು ಹಾಗೂ ಟಿ.ಎಸ್. ವೆಂಕಣ್ಣಯ್ಯ ಇವರಿಬ್ಬರನ್ನು ಗುಂಡಪ್ಪನವರು ‘ಅಂಥ ಜನ ನಮ್ಮ ನಾಡಿನಲ್ಲಿ ಈಗಲೂ ಕೆಲವರಾದರೂ ಇದ್ದಾರಲ್ಲವೇ? ಹಾಗೆಂಬ ನಂಬಿಕೆ ಲೇಖಕನಿಗೆ ಈಗ ಇರುವ ಧೈರ್ಯ’ ಎಂದು ಮುಕ್ತಕಂಠದಿಂದ ಸ್ಮರಿಸಿಕೊಂಡಿದ್ದಾರೆ.

ಡಿ.ವಿ.ಜಿ ಅವರಿಗೆ ತಮ್ಮ ಪದ್ಯಗಳು ಉತ್ಕೃಷ್ಟ ಕಾವ್ಯವಲ್ಲವೇನೋ ಎನ್ನುವ ಒಂದು ಒಳ ಅಳುಕು ಇತ್ತೇನೋ ಎನ್ನುವ ಅನುಮಾನ ಅವರ ಕವಿತಾ ಸಂಕಲನಗಳ ಮುನ್ನುಡಿಗಳನ್ನು ಓದಿದಾಗ ಅರಿವಿಗೆ ಬರುತ್ತದೆ. ಈ ಸಂಕಲನದ ಹಲವು ಕವಿತೆಗಳು ಹಳಗನ್ನಡದ ಛಂದೋರೂಪಗಳನ್ನು ಒಳಗೊಂಡಿದ್ದು ಕಂದಪದ್ಯ ಹಾಗೂ ವೃತ್ತಗಳ ಬಳಕೆ ಅಧಿಕ ಸಂಖ್ಯೆಯಲ್ಲಿದೆ. ‘ಬೇಲೂರಿನ ಶಿಲಾ ಬಾಲಿಕೆಯರು’ ಕವಿತೆ ಕನ್ನಡದ ಮೊದಲ ಪ್ರಗಾಥ ಎನ್ನುವ ಕೀರ್ತಿಗೆ ಭಾಜನವಾಗಿದೆ. ಇದು ಸೀಸಪದ್ಯದ ರೂಪದಲ್ಲಿದ್ದು ಆರಂಭದಲ್ಲಿ ಒಂದು ಹೆಚ್ಚಿನ ಕಂದ ಪದ್ಯವಿದ್ದರೂ ಇದನ್ನು ನಿಯತ ಪ್ರಗಾಥ ಎನ್ನಬಹುದು. ಈ ಪ್ರಗಾಥಕ್ಕೆ ಎರಡು ಸ್ಫೂರ್ತಿಗಳಿವೆ. ಒಂದು ಸ್ಫೂರ್ತಿ ಬೇಲೂರಿನ ಚೆನ್ನಕೇಶವ ದೇವಾಲಯದ ಶಿಲಾಬಾಲಿಕೆಯರ ಚೆಲುವು.

ಆ ವಿಗ್ರಹಗಳ ಸೊಗಸು ‘ಸಂವೇದನೆ’ಯ  ರೂಪದಲ್ಲಿ ಕವಿಹೃದಯಕ್ಕೆ ಸ್ಫೂರ್ತಿಯನ್ನು ಕೊಟ್ಟಿತು. ಎರಡನೆಯದು ಕಾವ್ಯವೊಂದರಿಂದ ಒದಗಿ ಬಂದ ಸ್ಫೂರ್ತಿ. ‘ಶ್ರುತರಾಮಮಭಿರಾಮಮಾದೊಡಶ್ರುತಗಾನ | ಮಭಿರಾಮತರಮೆನುತೆ ರಸಿಕರೊಸೆವರ್’ ಎನ್ನುವ ಸಾಲುಗಳಿಗೆ ಪ್ರೇರೇಪಣೆ ನೀಡಿರುವುದು ಕೀಟ್ಸ್ ಕವಿಯ Ode on A Grecian Urn  ಪ್ರಗಾಥದಲ್ಲಿ ಬರುವ Heard melodies are sweet | But those unheard are sweeter  ಎಂಬ ಸಾಲುಗಳು.

ಸಂಗೀತ ಪ್ರಿಯರಾಗಿದ್ದ ಡಿ.ವಿ.ಜಿ ಅವರ ಈ ಸಂಕಲನದ ಎರಡನೆಯ ಭಾಗದಲ್ಲಿ ಏಳು ಹಾಡುಗಳಿವೆ. ‘ನಿನ್ನ ವಿಲಾಸ’ ಎನ್ನುವ ಹಾಡು ಮೋಹನ ರಾಗದಲ್ಲಿದ್ದರೆ ಡಿ.ವಿ.ಜಿ ಅವರ ಜೀವನ ಮೀಮಾಂಸೆಯನ್ನು ಪ್ರಸ್ತುತ ಪಡಿಸುವ ‘ವನಸುಮ’ ಹಾಡು ಅಠಾಣ ರಾಗದಲ್ಲಿದೆ.

ವನಸುಮದೊಲೆನ್ನ ಜೀ | ವನವು ವಿಕಸಿಸುವಂತೆ |
ಮನವನನುಗೊಳಿಸು ಗುರುವೇ-ಹೇ ದೇವ ||ಪ||
ಜನಕೆ ಸಂತಸವೀವ | ಘನನು ನಾನೆಂದೆಂಬ |
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ ||ಅ.ಪ||

ಎನ್ನುವುದು ಕವಿಯ ಜೀವನದ ಹಂಬಲವಾಗಿದೆ.

ಗುಂಡಪ್ಪನವರು ಅಂದಿನ ಮೈಸೂರು ರಾಜ್ಯದ ಸಾರ್ವಜನಿಕ ರಂಗ ಹಾಗೂ ರಾಜನೀತಿ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದವರು. ೨೦ನೇ ಶತಮಾನದ ಮೊದಲರ್ಧ ಶತಮಾನದ ಸಾಮಾಜಿಕ ಜೀವನದ ಸೂಕ್ಷ್ಮಗಳನ್ನು ಅರಿತಿದ್ದವರು. ನಮ್ಮವರ ಬದುಕು ಮೇಲ್ಮಟ್ಟದ್ದಾಗಿರ ಬೇಕು ಹಾಗೂ ಸಾರ್ವಜನಿಕ ಜೀವನ ಶುಚಿಯಾಗಿರಬೇಕು ಎಂಬ ಧೋರಣೆ ಅವರದಾಗಿತ್ತು. ಇದನ್ನು ಅವರ ಜ್ಞಾಪಕಚಿತ್ರ ಶಾಲೆ ಸಂಕಲನಗಳಲ್ಲಿ ಗಮನಿಸಬಹುದು. ಬದುಕಿನ ಎಲ್ಲ ಒಳಿತುಗಳ ಪರಿಣಾಮವಾದ ಸಂಸ್ಕೃತಿಯ ಒಂದು ಸುವರ್ಣ ಮಾಧ್ಯಮದ ಹದ ಹಾಗೂ ಸಂಸ್ಕಾರಗಳ ಪರಿಣಾಮದಿಂದ ಉಂಟಾದ ಒಂದು ಸದಭಿರುಚಿಯನ್ನು ನಾವು ಈ ಸಂಕಲನದಲ್ಲಿ ಸ್ಪಷ್ಟವಾಗಿ ಗಮನಿಸಬಹುದು.

ಈ ಕೃತಿಯ ಕೊನೆಯಲ್ಲಿನ ಅವರ ಟಿಪ್ಪಣಿಗಳು ಉಪಯುಕ್ತವಾಗಿದೆ. ‘ಶಬ್ದಕ್ಕೆ ಟಿಪ್ಪಣಿ ನಿಘಂಟುವಿನಿಂದ | ಭಾವಕ್ಕೆ ಟಿಪ್ಪಣಿ ಭಗವಂತನಿಂದ ||’ ಎನ್ನುವುದು ಟಿಪ್ಪಣಿಗಳನ್ನು ಕುರಿತ ಅವರ ನಿಲವು. 1931ರ ‘ವಿಶ್ವ ಕರ್ನಾಟಕ’ ಪತ್ರಿಕೆಯ ಉಗಾದಿ ವಿಶೇಷ ಸಂಚಿಕೆಯಲ್ಲಿ ‘ಆಧುನಿಕ ಕನ್ನಡ ವಾಙ್ಮಯ’ ಎಂಬ ತಮ್ಮ ಲೇಖನದಲ್ಲಿ ಡಿ.ವಿ.ಜಿ ಅವರ ಕವನಗಳನ್ನು ಕುರಿತು ಕೆ.ವಿ.ಪುಟ್ಟಪ್ಪ ಅವರು– ‘ಕನ್ನಡ ಕಬ್ಬವೆಣ್ಣು ಸನಾತನ ಮತ್ತು ನೂತನಗಳ ಮಧ್ಯೆ ಹೊಸ್ತಿಲ ಮೇಲೆ ನಿಂತಂತಿದೆ. ಅನೇಕ ಪದ್ಯಗಳು ವೃತ್ತ ಕಂದ ರೂಪವಾಗಿವೆ. ಆತ್ಮವು ನೂತನವಾದರೂ ವೇಷವು ಪುರಾತನವಾದದ್ದು’ ಎಂದು ಹೇಳಿರುವುದೂ, ವಿ. ಸೀತಾರಾಮಯ್ಯನವರು ‘ಗಹನ ಚಿಂತನದಿಂದ ತುಂಬಿದ್ದರೂ ಡಿ.ವಿ.ಜಿ ಅವರ ಪದ್ಯಗಳ ಅರ್ಥ ಯಾವಾಗಲೂ ಮಸಕಾಗುವುದಿಲ್ಲ’ ಎಂದಿರುವುದೂ ಉಚಿತವಾಗಿಯೇ ಇದೆ. ನವೋದಯ ಕಾಲಘಟ್ಟದ ಆರಂಭ ಕಾಲದಲ್ಲಿ ಪ್ರಕಟಗೊಂಡ ಈ ‘ನಿವೇದನ’ ಕವನ ಸಂಕಲನವು ಆಧುನಿಕ ಕನ್ನಡ ಸಾಹಿತ್ಯದ ಆರಂಭ ಕಾಲದ ಒಂದು ಮಹತ್ವದ ಕೃತಿಯಾಗಿದೆ.