‘ಮೋಹಿನೀ’ ಅಥವಾ ‘ನಿಂದಕರ ನಡವಳಿ’ ಧಾರವಾಡದ ವಕೀಲ ಗದಿಗಯ್ಯಾ ಹುಚ್ಚಯ್ಯಾ ಹೊನ್ನಾಪುರಮಠ ಅವರು ಬರೆದಿರುವ ನಾಟಕ. ಮಾರ್ಚ್ ೧೯೧೧ರಲ್ಲಿ ಪ್ರಕಟವಾದ ಈ ಕೃತಿ ಪ್ರಸಿದ್ಧ ಆಂಗ್ಲನಾಟಕಾಚಾರ್ಯ ರಿಚರ್ಡ್ ಬ್ರಿನ್‌ಸ್ಲೇ ಷೆರಿಡನ್‌ನ ‘ದಿ ಸ್ಕೂಲ್ ಆಫ್ ಸ್ಕ್ಯಾಂಡಲ್’ ಎನ್ನುವ ಇಂಗ್ಲಿಷ್ ನಾಟಕದ ರೂಪಾಂತರವಾಗಿದೆ. ೧೯೨೦ರಲ್ಲಿ ಇವರು ಶೇಕ್ಸ್‌ಪಿಯರ್‌ನ The Taming of the Shrew ನಾಟಕವನ್ನು ‘ತ್ರಾಟಿಕಾನಾಟಕ’ ಎಂದು ರೂಪಾಂತರಿಸಿದರು.‘ಮೋಹಿನೀ’ ನಾಟಕವು ಮೊದಲಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ’ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ನಂತರ ೧೯೧೧ರಲ್ಲಿ ವಾಗ್ಭೂಷಣ ಗ್ರಂಥಮಾಲೆಯ ೫೩ನೆಯ ಪುಸ್ತಕವಾಗಿ ಧಾರವಾಡದ ಕರ್ನಾಟಕ ಬುಕ್ ಡಿಪೋವಿನಲ್ಲಿ ಮಿ.ಕೃಷ್ಣಾಜಿ ಹಣಮಂತ ಮುದುವೇಡಕರ ಅವರಿಂದ ಮುದ್ರಿತವಾಯಿತು. ಆಗಿನ ಈ ನಾಟಕದ ಕ್ರಯಬೆಲೆ ೧೨ ಆಣೆ. ಈ ನಾಟಕವು ಮತ್ತೆ ಶ್ರೀ ವಾಗ್ದೇವಿ ಗ್ರಂಥಮಾಲೆಯಿಂದ ೧೯೨೯ರಲ್ಲಿ ನಿಂದಾ ಪ್ರಭಾವ ನಾಟಕ ಅಥವಾ ಮುದುಕ ಗಂಡ ಚಿಕ್ಕ ಹೆಂಡತಿ ಎಂಬ ನಾಮಾಂತರದಿಂದ ಪರಿಷ್ಕರಣಗೊಂಡು ಪ್ರಕಟವಾಯಿತು. ಪ್ರಸ್ತುತ ಆವೃತ್ತಿಯು ೧೯೧೧ರ ಮೊದಲ ಆವೃತ್ತಿಯಾಗಿದ್ದು ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯ ಗ್ರಂಥಾಲಯದಲ್ಲಿದ್ದ ಡಿ.ವಿ.ಗುಂಡಪ್ಪ ಅವರ ಗ್ರಂಥಸಂಗ್ರಹದ ಪುಸ್ತಕವಾಗಿದೆ.
೧೮೭೦–೧೯೩೩ರವರೆಗೆ ಬಾಳಿದ ಹೊನ್ನಾಪುರಮಠರವರ ಮೊದಲಿನ ಹೆಸರು ಗದಿಗೆಯ್ಯಾ ಹುಚ್ಚಯ್ಯಾ ವಿಭೂತಿ. ವಕೀಲಿ ವೃತ್ತಿಯ ಅವರು ಪತ್ರಕರ್ತರಾಗಿ, ಸಂಘಟನೆಕಾರರಾಗಿ, ಸಮಾಜ ಸುಧಾರಕರಾಗಿ, ಹಲವು ಸಂಸ್ಥೆಗಳ ಸಂಸ್ಥಾಪಕರಾಗಿ ದುಡಿದವರು. ೧೯೩೩ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಇವರು ೧೯೦೬ರಲ್ಲಿ ‘ವಾಗ್ದೇವಿ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ೧೯೧೬ರಲ್ಲಿ ಅದು ‘ಚಂದ್ರೋದಯ’ ಹೆಸರಿನ ಮಾಸಪತ್ರಿಕೆಯಾಗಿ ರೂಪಾಂತರ ಹೊಂದಿತು.
ಒಟ್ಟಿನಲ್ಲಿ ಅಂದಿನ ಕಾಲಘಟ್ಟದಲ್ಲಿ ಹೊನ್ನಾಪುರಮಠ ಅವರು ಉತ್ತರ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಚೇತನಗಳಲ್ಲಿ ಒಬ್ಬರಾಗಿದ್ದರು. ಇವರು ವಿವಿಧ ವಿಷಯಗಳನ್ನು ಕುರಿತು ೩೩ ಕೃತಿಗಳನ್ನು ರಚಿಸಿದ್ದಾರೆ. ಕಾದಂಬರಿ, ನಾಟಕಗಳನ್ನಲ್ಲದೆ ವೈಚಾರಿಕ ಸಾಹಿತ್ಯವನ್ನೂ ರಚಿಸಿದ್ದಾರೆ. ೬ ಜನ ಪ್ರಸಿದ್ಧ ವ್ಯಕ್ತಿಗಳ ಚರಿತ್ರೆಯ ಜೊತೆಗೆ ಅಂದು ಸಾಮಾನ್ಯ ಜನರ ತಿಳಿವಳಿಕೆಗೆ ನಿಲುಕಬೇಕಾಗಿದ್ದ ಸಾಮಾಜಿಕ ಆಕ್ಟುಗಳನ್ನು ಕುರಿತು ದನಗಳ ಅತಿಕ್ರಮಣ ಆಕ್ಟು, ಕೊಂಡವಾಡೆ ಆಕ್ಟು, ಮಾಮಲೇದಾರ ಕೋರ್ಟು ಆಕ್ಟು ಮುಂತಾದ ಆಕ್ಟುಗಳನ್ನು ಕುರಿತ ಎಂಟು ಉಪಯುಕ್ತ ಕೃತಿಗಳನ್ನು ರಚಿಸಿರುತ್ತಾರೆ.
ತಮ್ಮ ಸಮಾಜದ ಸಾಮಾನ್ಯ ಜನರಿಗೆ ಅನುಕೂಲವಾಗಲೆಂದು ವೀರಶೈವ ಪೂಜಾವಿಧಿ ಮತ್ತು ಲಿಂಗಧಾರಣಾ ವಿಧಾನ ಹಾಗೂ ಶಿವಪೂಜಾ ವಿಧಿ ಎನ್ನುವ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಾಸಂಗಿಕವಾಗಿ ಹೇಳುವುದಾದರೆ ಸಮಕಾಲೀನ ಸಂದರ್ಭದಲ್ಲಿ ಕನ್ನಡದ ಲೇಖಕಿಯಾಗಿರುವ ಹೇಮಾ ಪಟ್ಟಣಶೆಟ್ಟಿ ಅವರು ಹೊನ್ನಾಪುರಮಠ ಅವರ ಮೊಮ್ಮಗಳು. ಬೆಟಗೇರಿ ಕೃಷ್ಣಶರ್ಮ, ಮುದವೀಡು ಕೃಷ್ಣರಾಯರು, ಆಲೂರು ವೆಂಕಟರಾಯರು, ರಾಮಚಂದ್ರ ಶೇಷಗಿರಿಯವರು, ಗಳಗನಾಥರು ಮುಂತಾದವರು ಅವರಿಗೆ ಆತ್ಮೀಯರಾಗಿದ್ದರು.
೮+೧೪೦ ಪುಟಗಳ ಈ ನಾಟಕದಲ್ಲಿ ಒಟ್ಟು ೫ ಅಂಕಗಳು ಹಾಗೂ ೧೪ ದೃಶ್ಯಗಳಿವೆ. ಮೂಲ ಇಂಗ್ಲಿಷ್ ನಾಟಕವನ್ನು ರೂಪಾಂತರಿಸಿರುವುದರ ಜೊತೆಗೆ ಪಾತ್ರಗಳನ್ನು ಕರ್ನಾಟಕೀಕರಣ ಹಾಗೂ ಭಾರತೀಕರಣಗೊಳಿಸಿರುವುದು ಇಲ್ಲಿಯ ವೈಶಿಷ್ಟ್ಯ. Lady Sneerwell ಇಲ್ಲಿ ಕುಚೇಷ್ಟಿತಾ. ಹಾಗೆಯೇ Snake, Mrs. Candour ಇಲ್ಲಿ ಕುಟಿಲಾ ಮತ್ತು ನಿಷ್ಕಪಟಿ ಎಂಬ ಗೆಳತಿಯರಾಗಿದ್ದಾರೆ. Crabtree ಕುಚೇಷ್ಟಿತೆಯ ಅಣ್ಣ ವಂಚಕರಾವ್ ಹಾಗೂ Snakebite ಅಣ್ಣನ ಮಿತ್ರನಾದ ಕ್ಷುದ್ರಕರಾವ್. Old Stanley ಇಲ್ಲಿ ನಿರ್ಧನ ರಾವ್ ಆಗಿದ್ದಾನೆ. ಹೀಗೆ ಪಾತ್ರಗಳ ನಾಮ ನಿರ್ದೇಶನದಲ್ಲಿ ಕೂಡ ಕೃತಿಕಾರರು ಇಂಗ್ಲಿಷ್ ಭಾಷೆಯಲ್ಲಿನ ನಾಟಕದಂತೆ ಹೆಸರುಗಳನ್ನು ರೂಪಕಗಳಾಗಿಸಿದ್ದಾರೆ. ಇದು ಸೂಕ್ತವೂ ಔಚಿತ್ಯಪೂರ್ಣವೂ ಆಗಿದ್ದು ನಾಟಕವು ಗುಣಾತ್ಮಕವಾಗಿ ಜೀವಂತವಾಗಿರುವುದಕ್ಕೆ ಅನುವಾಗಿದೆ.
ಉಳಿದ ಪಾತ್ರಗಳೆಂದರೆ ಲಾವಣ್ಯವತಿ, ಮೋಹಿನೀ, ಮನೋಹರರಾವ, ವಿಲಾಸರಾವ, ಪ್ರೇಮಚಂದ ಮುಂತಾದುವು. ಈ ಹೆಸರುಗಳೂ ಕೂಡಾ ರೂಪಕಗಳು. ಪ್ರಸ್ತಾವನೆಯಲ್ಲಿ ಕೃತಿಕಾರರು– ೧೯೧೧ರ ಹೊತ್ತಿಗೆ ಮರಾಠಿ ಭಾಷೆಗೆ ಈ ಇಂಗ್ಲಿಷ್ ನಾಟಕವು ಅನುವಾದವಾಗದೆ ಕನ್ನಡದಲ್ಲಿ ತಾನು ಮಾಡಿದ್ದನ್ನು ಒತ್ತಿ ಹೇಳಿದ್ದಾರೆ: ‘ಈ ಸಾಮಾಜಿಕ ನಾಟಕವನ್ನು ಇನ್ನೂವರೆಗೆ ಮಹಾರಾಷ್ಟ್ರದ ಭಾಷೆಯಲ್ಲಿ ಯಾರೂ ಬರೆದಿಲ್ಲ. ಆದ್ದರಿಂದ ಈ ನಾಟಕವನ್ನು ಮಹಾರಾಷ್ಟ್ರ ಬಂಧುಗಳಿಗಿಂತ ಮುಂಚಿತವಾಗಿಯೇ ಕನ್ನಡ ಭಾಷೆಯಲ್ಲಿ ಬರೆಯುವ ಸುದೈವವು ನನಗೆ ಅಕಸ್ಮಾತ್ತಾಗಿ ಒದಗಿದ್ದರಿಂದ ನಾನು ತುಂಬ ಸಂತೋಷಪಟ್ಟು, ಈ ನನ್ನ ಅಲ್ಪಕೃತಿಯನ್ನು ಕನ್ನಡ ವಾಚಕರಿಗೆ ಅತ್ಯಂತ ಪ್ರೇಮಪೂರ್ವಕವಾಗಿ ಅರ್ಪಿಸಿರುತ್ತೇನೆ’ ಎಂದಿದ್ದಾರೆ.
ಈ ಒಕ್ಕಣೆಯಿಂದ ಆ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷಾಕೃತಿಗಳ ಅನುವಾದಗಳಿಗೆ ಸಂಬಂಧಿಸಿದಂತೆ ದೇಶೀಯ ಭಾಷೆಗಳಲ್ಲಿ ಪೈಪೋಟಿ ಇದ್ದದ್ದರ ಸೂಚನೆಯನ್ನು ಗಮನಿಸಬಹುದು. ಷೆರಡನ್ನನ ದೃಷ್ಟಿಕೋನ ನಾಟಕದಲ್ಲಿ ವಿನೋದವಾದರೆ ಹೊನ್ನಾಪುರರ ಒತ್ತು ನೀತಿಪರತೆಯಾಗಿದೆ. ನವೋದಯ ಸಾಹಿತ್ಯಾರಂಭದ ಕನ್ನಡದ ಬಹುತೇಕ ಲೇಖಕರ ದೃಷ್ಟಿಕೋನದಲ್ಲಿ ನೀತಿಪರತೆ ಬಹು ಮುಖ್ಯವಾದದ್ದು.
ಮೂಲ ಇಂಗ್ಲಿಷ್ ನಾಟಕದ ತದ್ವತ್ತಾದ ಕನ್ನಡದ ತರ್ಜುಮೆ ಇದಲ್ಲ ಎಂಬುದು ವಿಶೇಷ. ಇಲ್ಲಿ ಬರುವ ಸಂವಾದಗಳು, ಜೀವನದ ಬಿಕ್ಕಟ್ಟುಗಳು, ಸಾಮಾಜಿಕ ಸಂದರ್ಭಗಳು ನಾಟಕೀಯವಾಗಿದ್ದು ಕನ್ನಡದ ಸಂದರ್ಭಕ್ಕೆ ಹೊಂದಿಕೊಂಡಿವೆ. ಚಿಕ್ಕ ಸುಂದರ ಹುಡುಗಿಯನ್ನು ಮದುವೆಯಾದ ವೃದ್ಧ ಶ್ರೀಪತಿರಾಯನ ಮನದ ತೊಳಲಾಟದ ಚಿತ್ರಣ ಅದ್ಭುತವಾಗಿ ಬಂದಿದೆ. ಇಲ್ಲಿನ ಒಟ್ಟು ನಾಟಕದ ಸ್ವರೂಪವು ಕಂಪನಿ ನಾಟಕಗಳ ಪರಂಪರೆಗೆ ಎರಕವಾಗುವಂತೆ ಇರುವುದರಿಂದಲೂ ಈ ನಾಟಕ ಸಾರ್ಥಕವಾಗಿದೆ. ನಾಟಕದ ಭಾಷೆಯು ಆಯಾ ಪಾತ್ರಗಳ ಗುಣ, ಶೀಲ, ಸ್ವಭಾವಗಳನ್ನು ಬಿಂಬಿಸುತ್ತದೆ. ಅಂದಿನ ಕಾಲಘಟ್ಟದ ಧಾರವಾಡ ಭಾಷೆಯ ಕಸುವು ಇಲ್ಲಿದೆ.
ಮಾರ್ವಾಡಿ ಪಾತ್ರವೊಂದು ಕನ್ನಡ ಮಿಶ್ರಿತ ಮಾರ್ವಾಡೀ ಭಾಷೆಯನ್ನು ಬಳಸುತ್ತದೆ. ಒಂದೆರಡು ಸಂಭಾಷಣೆ ತುಣುಕುಗಳನ್ನು ನಿದರ್ಶನಕ್ಕಾಗಿ ಗಮನಿಸಬಹುದು:
‘ವಂಚಕರಾವ್: ಆಕೆಯು ತಿದಿ ಉಬ್ಬಿದಂತೆ ಉಬ್ಬಿರುತ್ತಾಳೆ! ನಡೆಯಲಿಕ್ಕೆ ಹತ್ತಿದರೆ ಆಕೆಯ ಎರಡು ತೊಡೆಗಳೂ ಮಸೆಯುತ್ತವೆ! ಆಕೆಯ ಮಾತಂತೂ ಎಷ್ಟು ಸೊಕ್ಕಿನವು! ಸಂತೆಯಲ್ಲಿ ಮಂದಿಯನ್ನು ಕಾಣದವರಂತೆ ಜನರ ಮೈಮೇಲೆ ಕವಕ್ಕನೆ ಹೋಗುತ್ತಾಳೆ. ಮೋರೆಯು ಕುರೂಪ ವಿದ್ದಂತೆ ಆಕೆಯ ನಡತೆಗಳು ಸಹಾ ಇರುತ್ತವೆ’. ಶ್ರೀಪತರಾವ: ‘ಆ ಬಡವಿಯು ನಿಮ್ಮ ಉಸಾಬರಿಗೆ ಬಂದಿಲ್ಲ. ತನ್ನ ಮನೆಯಾಯಿತು, ತಾನಾಯಿತು, ಸುಮ್ಮನೆ ಕುಳಿತಿರುತ್ತಾಳೆ. ಅಂಥವಳನ್ನು ಯಾಕೆ ಜರಿಯುತ್ತೀರಿ?’.
ಲಾವಣ್ಯವತಿ: ‘ಸೌಜನ್ಯ ವಿನೋದ ಗಳು ಕೂಡಿರುವುದು ಅಸಾಧ್ಯ. ಯಾಕಂದರೆ ಅವುಗಳ ನಡುವೆ ಯಾವಾಗಲೂ ಸವತಿ ಮತ್ಸರವು ಕಂಡುಬರುತ್ತದೆ’. ಕ್ಷುದ್ರಕರಾವ: ‘ಛೇ, ತಪ್ಪಿದಿರಿ! ಸೌಜನ್ಯಕ್ಕೆ ಜರಠಪತಿಯೆಂತಲೂ ವಿನೋದಕ್ಕೆ ತರುಣಪತ್ನಿಯೆಂತಲೂ ಉಪಮೆಯನ್ನು ಕೊಡತಕ್ಕದ್ದಿತ್ತು!’.
ಗದಿಗೆಯ್ಯಾ ಅವರು ತೀರಿಕೊಂಡಾಗ (ಜನವರಿ 7, ೧೯೩೩) ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಅವರನ್ನು ಕುರಿತು– ‘ಉತ್ತರ ಕರ್ನಾಟಕದ ಹಳೆಯ ಹುಲಿಯದೊಂದು, ನಮ್ಮ ನಾಡು ಸಾಹಿತ್ಯ ನಿರ್ಮಾಣಕ್ಕೆ ಮರುಭೂಮಿಯಾಗಿದ್ದಾಗ ಹುಟ್ಟಿದ ಪಿಂಡಖರ್ಜೂರ ಗಿಡವಿದೊಂದು... ಪರಮಾತ್ಮನು ಈ ಕನ್ನಡರತ್ನವನ್ನು ಕೊರಳಿಗೆ ಹಾಕಿಕೊಂಡು, ಪುರಸ್ಕರಿಸಲೆಂಬುದೇ ನಮ್ಮ ಆಕಾಂಕ್ಷೆ’ ಎಂದು ಶ್ರದ್ಧಾಂಜಲಿ ಸಲ್ಲಿಸಿರುವುದು ಸಮಂಜಸವಾಗಿದೆ. ಆ ಕಾಲಘಟ್ಟದ ಕನ್ನಡ ಅನುವಾದಿತ ನಾಟಕಪರಂಪರೆಗೆ ‘ಮೋಹಿನಿ’ ಅಥವಾ ‘ನಿಂದಕರ ನಡವಳಿ’ ನಾಟಕವು ಒಂದು ಒಳ್ಳೆಯ ಕೊಡುಗೆ.
ರೂಪಾಂತರ: ಗದಿಗಯ್ಯಾ ಹುಚ್ಚಯ್ಯಾ ಹೊನ್ನಾಪುರಮಠ
ಪು: 148; ಬೆ: ರೂ. 12 ಆಣೆ
ಪ್ರ: ವಾಗ್ಭೂಷಣ ಗ್ರಂಥಮಾಲೆ, ಧಾರವಾಡದ ಕರ್ನಾಟಕ ಬುಕ್ ಡಿಪೋವಿನಿಂದ ಮುದ್ರಿತ