ಬೋಳಾರ ರಾಮಕೃಷ್ಣಯ್ಯನವರ ‘ನಾನಾರ್ಥ ಶಬ್ದಾವಳಿ ಮತ್ತು ಸಂಜ್ಞಾರ್ಥಗಳು’ (A kannada Vocabulary of Some Homonyms And Technical Words) ಅಷ್ಟಮ ಡೆಮಿ ಆಕಾರದ, ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ಸಿನಲ್ಲಿ ೧೮೯೫ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ನಿಘಂಟು. ಇದರ ಅಂದಿನ ಬೆಲೆ ೨ ರೂಪಾಯಿ ೮ ಆಣೆ. 16+೩೧೨ ಪುಟಗಳಿರುವ ಈ ಕೃತಿಯಲ್ಲಿ ಸುಮಾರು ೭೫೦೦ ಶಬ್ದಗಳಿಗೆ ನಾನಾರ್ಥಗಳನ್ನು ನೀಡಲಾಗಿದೆ (ಇವುಗಳಲ್ಲಿ ೩೦೦೦ ಕನ್ನಡ ಶಬ್ದಗಳು ಹಾಗೂ ೪೫೦೦ ಸಂಸ್ಕೃತ ಶಬ್ದಗಳು). ನಾನಾರ್ಥಗಳನ್ನು ನೀಡಿರುವುದಕ್ಕೆ ಪೂರಕವಾಗಿ ಚತುರೋಪಾಯ, ಅಣಿಮಾದ್ಯಷ್ಟ ಸಿದ್ಧಿಗಳು, ಪಂಚಭೂತಗಳು ಮುಂತಾದ ಶಬ್ದಗಳನ್ನೊಳಗೊಂಡ ಸಂಖ್ಯಾ ವಿಶಿಷ್ಟ ಕೋಶವನ್ನು ಸಂಜ್ಞಾರ್ಥಗಳು ಎಂಬ ನಾಮನಿರ್ದೇಶನದ ಶೀರ್ಷಿಕೆಯಡಿ ಪ್ರತ್ಯೇಕವಾಗಿ ನೀಡಲಾಗಿದೆ. ಇಲ್ಲಿ ಸಂಜ್ಞೆ ಎಂದರೆ ಸಂಖ್ಯೆ ಎಂದರ್ಥ. (ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ‘ಶ್ರೀವತ್ಸ ನಿಘಂಟು’ ಎಂಬ ಒಂದು ಸಂಖ್ಯಾ ವಿಶಿಷ್ಟ ಕೋಶವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು).
ರಾಮಕೃಷ್ಣಯ್ಯ (೧೮೫೦–೧೯೧೩) ಅವರು ಮಂಗಳೂರಿನ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಅವರ ‘ನವಗ್ರಹ ಶತಕ’ ೧೦೮ ಭಾಮಿನಿ ಷಟ್ಪದಿ ಪದ್ಯಗಳಿರುವ ನವಗ್ರಹ ಸ್ತುತಿಯ ಕೃತಿ. ಇದನ್ನು ಲೇಖಕರ ನಿಧನಾನಂತರ, ೧೯೧೯ರಲ್ಲಿ ಉಡುಪಿಯ ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯ ಪ್ರಕಟಿಸಿದೆ. ಸ್ತುತಿರೂಪದಲ್ಲಿರುವ, ೧೦೮ ಭಾಮಿನಿ ಷಟ್ಪದಿಗಳಿರುವ ‘ಚಂಡಿಕಾ ಶತಕ ಅಥವಾ ದೇವೀಸ್ತೋತ್ರ’ ಎನ್ನುವ ಕೃತಿಯನ್ನು ೧೯೨೩ರಲ್ಲಿ ಮಂಗಳೂರಿನ ಸದಾನಂದ ಕೋ ಆಪರೇಟಿವ್ ಪ್ರಿಂಟಿಂಗ್ ವರ್ಕ್ಸ್ ಅವರು ಹೊರತಂದಿರುತ್ತಾರೆ. ಇದರ ಜೊತೆಗೆ ಅವರು ಒಂದು ಕನ್ನಡ ವ್ಯಾಕರಣ ಗ್ರಂಥವನ್ನು ರಚಿಸಿರುವರೆಂಬ ಮಾಹಿತಿ ಇದೆ. ಇದು ಪದ್ಯರೂಪವಾದ ಒಂದು ವ್ಯಾಕರಣ ಗ್ರಂಥ ಎಂದು ಮಹಾಮಹೋಪಾಧ್ಯಾಯ, ಪ್ರಾಕ್ತನ ವಿಮರ್ಶ ವಿಚಕ್ಷಣ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರು ಅಭಿಪ್ರಾಯ ಪಡುತ್ತಾರೆ. ಆದರೆ ಆ ಕೃತಿಯು ಎಲ್ಲಿಯೂ ಕಂಡುಬರುತ್ತಿಲ್ಲ.
ಅರ್ಥನಿರ್ದೇಶಿತ ನಿಘಂಟುಗಳಲ್ಲಿ ಸಮಾನಾರ್ಥಕ/ಪರ್ಯಾಯಾರ್ಥಕ ನಿಘಂಟು (Dictionary of Synonyms), ನಾನಾರ್ಥಕ/ಭಿನ್ನಾರ್ಥಕ ನಿಘಂಟು (Dictionary of Homonyms) ಹಾಗೂ ವಿರುದ್ಧಾರ್ಥಕ/ಪ್ರತ್ಯರ್ಥಕ ನಿಘಂಟು (Dictionary of Antonyms) ಎನ್ನುವ ಮೂರು ಬಗೆಯ ನಿಘಂಟುಗಳಿವೆ. ಸರಳವಾಗಿ ನಿದರ್ಶನಪೂರ್ವಕವಾಗಿ ಹೇಳುವುದಾದರೆ– ಶರೀರ=ತನು, ಕಾಯ, ಮೈ, ಒಡಲು-ಎನ್ನುವ ಮಾದರಿಯ ಕೋಶವು ಸಮಾನಾರ್ಥಕ ನಿಘಂಟು. ಕರಿ– ಅ). ಎಣ್ಣೆಯಲ್ಲಿ ಬೇಯಿಸು; ಆ). ಕೂಗು; ಇ). ಕಪ್ಪು; ಈ). ಇದ್ದಿಲು– ಎನ್ನವ ಮಾದರಿಯ ಕೋಶವು ನಾನಾರ್ಥಕ ನಿಘಂಟು. ಅನುಕೂಲ x ಪ್ರತಿಕೂಲ, ಸೋಲು x ಗೆಲುವು– ಈ ಮಾದರಿಯ ನಿಘಂಟು ವಿರುದ್ಧಾರ್ಥಕ ನಿಘಂಟು. ಶಬ್ದ ಒಂದಕ್ಕೆ ಸಮಾನಾರ್ಥಕ ಹಾಗೂ ವಿರುದ್ಧಾರ್ಥಕ ಶಬ್ದಗಳನ್ನು ನೀಡಿದ್ದರೆ ಅದು ಒಂದು ಸರ್ವ ಶಬ್ದಾರ್ಥಕ ನಿಘಂಟು (Thesaurus). ಇಂತಹ ಒಂದು ಕನ್ನಡದ ತೆಸಾರಸ್ ಕೋಶವನ್ನು
ಡಿ.ವಿ. ಗುಂಡಪ್ಪ ಹಾಗೂ ನಿಟ್ಟೂರು ಶ್ರೀನಿವಾಸ ರಾವ್ ಅವರು ಆರಂಭಿಸಿದರೂ ಆ ಪ್ರಯತ್ನ ಮಧ್ಯದಲ್ಲಿಯೇ ನಿಂತುಹೋದದ್ದು ದುರದೃಷ್ಟ ಸಂಗತಿ.
ಬೋಳಾರ ರಾಮಕೃಷ್ಣಯ್ಯನವರ ಈ ನಿಘಂಟು ಒಂದು ನಾನಾರ್ಥ ನಿಘಂಟು. ಈ ನಾನಾರ್ಥಕ ಕೋಶಕ್ಕೂ ಮೊದಲು ಕನ್ನಡದಲ್ಲಿ ನಾಲ್ಕು ನಾನಾರ್ಥಕ ಕೋಶಗಳು ರಚನೆಗೊಂಡಿವೆ.
- ಕ್ರಿ. ಶ. ೧೬೦೦ರಲ್ಲಿ ಅನಾಮಿಕ ಕವಿಯೊಬ್ಬನಿಂದ ರಚನೆಗೊಂಡ, ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ನಾನಾರ್ಥಗಳನ್ನು ನೀಡಿರುವ ‘ಶಬ್ದರತ್ನಾಕರ’.
- ಮೂವತ್ತು ಕಂದ ಪದ್ಯಗಳಲ್ಲಿ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ನಾನಾರ್ಥಗಳನ್ನು ನೀಡಿರುವ, ಕಾಲ ಹಾಗೂ ಕರ್ತೃ ಗೊತ್ತಿಲ್ಲದ ಪದ್ಯನಾನಾರ್ಥ.
- ಸುಮಾರು ೧೬೦೦ರಲ್ಲಿದ್ದ ಚೆನ್ನಕವಿಯು ೧೬೦ ಕಂದಪದ್ಯಗಳಲ್ಲಿ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ನಾನಾರ್ಥಗಳನ್ನು ನೀಡಿರುವ ‘ನಾನಾರ್ಥಕಂದ’.
- ಕ್ರಿ.ಶ. ೧೬೦೦ರಲ್ಲಿ ದೇವೋತ್ತಮ ಎಂಬ ಕವಿಯು ೧೬೯ ವೃತ್ತಗಳಲ್ಲಿ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ನಾನಾರ್ಥಗಳನ್ನು ನೀಡಿರುವ ‘ನಾನಾರ್ಥ ರತ್ನಾಕರ’. ಹೀಗೆ ಕನ್ನಡದಲ್ಲಿ ಅಪರೂಪವಾಗಿರುವ ಮಾದರಿಯ ಕೆಲವೇ ನಾನಾರ್ಥಕ ನಿಘಂಟುಗಳಲ್ಲಿ ಒಂದನ್ನು ರಚಿಸಿರುವುದು ಬೋಳಾರ ರಾಮಕೃಷ್ಣಯ್ಯನವರ ವೈಶಿಷ್ಟ್ಯ. ಅದೂ ಹೊಸಗನ್ನಡದಲ್ಲಿ ಇದು ರಚಿತವಾಗಿರುವುದರಿಂದ ಇದರ ಮಹತ್ವ ಮತ್ತು ಉಪಯೋಗ ಇನ್ನೂ ಹೆಚ್ಚು. ಇದು ಒಂದು ಶತಮಾನದ ಹಿಂದಿನ ಕಾಲಘಟ್ಟದಲ್ಲಿ ಕನ್ನಡ ಲೇಖಕರು, ಪತ್ರಕರ್ತರು, ಶಾಲಾಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಗೂ ಕಾವ್ಯಪಕ್ಷಪಾತಿಗಳಾಗಿದ್ದ ಜನಸಾಮಾನ್ಯರು ವಿಶೇಷವಾಗಿ ಬಳಸುತ್ತಿದ್ದರೆನ್ನಲಾದ ಅಪರೂಪದ ನಿಘಂಟು.
ಇದರಲ್ಲಿ ರಾಮಕೃಷ್ಣಯ್ಯನವರು ಲಿಂಗಮಂತ್ರಿಯ ‘ಕಬ್ಬಿಗರ ಕೈಪಿಡಿ’ (೧೫೩೦), ಚೆನ್ನಕವಿಯ ‘ನಾನಾರ್ಥಕಂದ’ (೧೬೦೦), ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರ ‘ಧಾತುಮಂಜರಿ’ (೧೮೧೦), ತುರಮರಿ ಗಂಗಾಧರ ಮಡಿವಾಳೇಶ್ವರ ಅವರ ‘ಶಬ್ದಮಂಜರಿ’ (೧೮೬೯), ಹೆಸರುಘಟ್ಟದ ಹೊನ್ನಪ್ಪನವರ ‘ನಾನಾರ್ಥ ರತ್ನಾಕರ’ (೧೮೮೫) ಮುಂತಾದ ನಿಘಂಟು ಹಾಗೂ ವ್ಯಾಕರಣ ಗ್ರಂಥಗಳನ್ನು ಉಪಯೋಗಿಸಿಕೊಂಡಿದ್ದಾರೆ. ಇದರಿಂದ ಜೈಮಿನಿ ಭಾರತ, ಗದುಗು ಭಾರತ, ರಾಜಶೇಖರ ವಿಳಾಸ ಮುಂತಾದ ಹಳಗನ್ನಡ ನಡುಗನ್ನಡ ಕಾವ್ಯಗಳನ್ನು ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುವುದು.
‘ಸಾಧನ’ ಎನ್ನುವ ಸಂಸ್ಕೃತ ಶಬ್ದಕ್ಕೆ ಈ ನಿಘಂಟಿನಲ್ಲಿ ಅತಿ ಹೆಚ್ಚು ಸಂಖ್ಯೆಯ (37) ನಾನಾರ್ಥಗಳನ್ನು ನೀಡಲಾಗಿದೆ. ಉಪಾಯ, ಮುಟ್ಟು, ಸಾಮಾನು, ಸಹಾಯ, ಋಜುವಾತು, ಜಯಿಸುವಿಕೆ, ನಿವಾರಣ, ಗಮನ, ಪುರುಷ ಜನನೇಂದ್ರಿಯ, ಆಕಳ ಕೆಚ್ಚಲು– ಹೀಗೆ, ‘ಸಾಧನ’ ಪದದ ಅರ್ಥಗಳ ಪಟ್ಟಿ ಮುಂದುವರೆಯುತ್ತದೆ. ಯೋಗ ಎನ್ನುವ ಸಂಸ್ಕೃತ ಶಬ್ದಕ್ಕೂ ೩೭ ವಿವಿಧಾರ್ಥಗಳನ್ನು ನೀಡಲಾಗಿದೆ.
ಕನ್ನಡದ ಶಬ್ದಕ್ಕೆ ಅತಿ ಹೆಚ್ಚಿನ ಸಂಖ್ಯೆಯ ನಾನಾರ್ಥವೆಂದರೆ ೮ ಮಾತ್ರ. ಆ ಶಬ್ದ ಕಡುಪು. ಅದರ ನಾನಾರ್ಥಗಳು : ೧. ತುರಿ, ತುರಿಸಿದರ ಮೇಲೆ ಆಗುವ ಉರಿ; ೨. ಆತುರ, ಆಶೆ; ೩. ಕಳವಳ, ತತ್ತರ; ೪. ಕ್ರೂರ, ತೀಕ್ಷ್ಣ; ೫. ಜೋರು, ಒತ್ತಾಯ; ೬. ದುಡುಕು, ಕಡುಹು; ೭. ಬೆಬ್ಬರ, ಘಾಬರಿ; ೮. ಪಾರುಪತ್ಯ, ಆಡಳಿತೆ. ಇಲ್ಲಿ ಈ ಶಬ್ದಕ್ಕಿರುವ ಪ್ರಸಿದ್ಧ ಅರ್ಥ ‘ಪರಾಕ್ರಮ’ ಎನ್ನುವ ಅರ್ಥವನ್ನು ಲೇಖಕರು ನೀಡಿಲ್ಲ.
‘ಅಚ್ಚಿ’ ಎನ್ನುವ ಕನ್ನಡ ಶಬ್ದಕ್ಕೆ ಸ್ತನ, ಮೊಲೆ, ಮಲೆಯಾಳದ ಹೆಣ್ಣು ಎನ್ನುವ ಅರ್ಥಗಳನ್ನು ನೀಡಿ ಅದೇ ಶಬ್ದವನ್ನು ತದ್ಭವವೆಂದು ಭಾವಿಸಿದರೆ ಬರುವ ಅಕ್ಷಿ, ಕಣ್ಣು ಎನ್ನವ ಅರ್ಥ ನೀಡಿದ್ದಾರೆ. ಆದರೆ ‘ಕರಿ’ ಎನ್ನವ ಶಬ್ದಕ್ಕೆ ಅದರ ಕನ್ನಡಾರ್ಥಗಳನ್ನು ನೀಡಿ ಅದು ಸಂಸ್ಕೃತ ಕರಿ ಆದಾಗ ಬರುವ ‘ಆನೆ ’ ಎನ್ನುವ ಅರ್ಥವನ್ನು ನೀಡಿಲ್ಲ. ಮೆಟ್ಟು ಕನ್ನಡ ಶಬ್ದಕ್ಕೆ ಇರುವ ಏಣಿ, ಒದೆಯುವಿಕೆ ಎಂಬ ಅರ್ಥಗಳನ್ನು ಕೊಟ್ಟಿಲ್ಲ. ಅಮೃತ, ತೀರ್ಥ, ಧರ್ಮ, ಪರಿಗ್ರಹ, ವಸು, ಶಿವ– ಈ ಮುಂತಾದ ಸಂಸ್ಕೃತ ಶಬ್ದಗಳಿಗಿರುವ ೩೦ಕ್ಕಿಂತ ಹೆಚ್ಚಾದ ಅರ್ಥಗಳನ್ನು ನೀಡಲಾಗಿದೆ.
೩೨ ಪುಟಗಳಲ್ಲಿ ಪ್ರತ್ಯೇಕವಾಗಿ ‘ಸಂಜ್ಞಾರ್ಥಗಳು’ ಎನ್ನುವ ಒಂದು ಪುಟ್ಟ ಸಂಖ್ಯಾ ವಿಶಿಷ್ಟ ನಿಘಂಟು ಇದೆ. ಇದರಲ್ಲಿ ೩೩೫ ಸಂಖ್ಯಾ ವಿಶಿಷ್ಟ ಶಬ್ದಗಳಿಗೆ ಅರ್ಥ, ವಿವರ ಹಾಗೂ ಆಯಾ ಸಂಖ್ಯೆಗಳ ವ್ಯಕ್ತಿಗಳನ್ನೋ, ವಸ್ತುಗಳನ್ನೋ, ಪರಿಕಲ್ಪನೆಗಳನ್ನೋ ನೀಡಿರುತ್ತಾರೆ. ಪ್ರಾಚೀನ ಕನ್ನಡ ಹಾಗೂ ಸಂಸ್ಕೃತ ಕಾವ್ಯಗಳನ್ನು ಅರ್ಥೈಸಿಕೊಳ್ಳಲು ಈ ಪುಟ್ಟ ನಿಘಂಟು ನೆರವು ನೀಡುತ್ತದೆ. ಕನ್ನಡದ ಕೆಲವೇ ನಾನಾರ್ಥ ನಿಘಂಟುಗಳಲ್ಲಿ– ಕೆಲನ್ಯೂನತೆಗಳಿದ್ದಾಗ್ಯೂ– ಈ ‘ನಾನಾರ್ಥ ಶಬ್ದಾವಳಿ ಮತ್ತು ಸಂಜ್ಞಾರ್ಥಗಳು’ ಕೃತಿಯು ಅಗ್ರಸ್ಥಾನವನ್ನು ಪಡೆಯುತ್ತದೆ.
ಲೇ: ಬೋಳಾರ ರಾಮಕೃಷ್ಣಯ್ಯ
ಪು: 328; ಬೆ: 2 ರೂಪಾಯಿ 8 ಆಣೆ
ಪ್ರ: ಮಂಗಳೂರಿನ ಬಾಸೆಲ್ ಮಿಷನ್