ನಾಗವರ್ಮನ ಕನ್ನಡ ಛಂದಸ್ಸು
ಮುನ್ನುಡಿ

ಕನ್ನಡ ಛಂದಸ್ಸನ್ನು ಕುರಿತ ಮೊದಲ ಮುದ್ರಿತ ಪುಸ್ತಕವಾದ ‘ನಾಗವರ್ಮನ ಕನ್ನಡ ಛಂದಸ್ಸು’ ಎನ್ನುವ ಈ ಕೃತಿಯನ್ನು 1875ರಲ್ಲಿ ರೆವರೆಂಡ್ ಎಫ್. ಕಿಟ್ಟೆಲ್ ಸಂಪಾದಿಸಿರುತ್ತಾರೆ. ಇದರ ಇಂಗ್ಲಿಷ್ ನಾಮಾಂತರ Nagavarma’s Canarese Prosody edited with an introduction to the work  ATURE. ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿಯು 1875ರಲ್ಲಿ ಈ ಕೃತಿಯನ್ನು ಪ್ರಕಟಿಸಿದೆ. 161 ಪುಟಗಳ ಈ ಪುಸ್ತಕದ ಬೆಲೆ ಎಲ್ಲಿಯೂ ನಮೂದಾಗಿಲ್ಲ.

ಏಪ್ರಿಲ್ 7, 1832ರಂದು ಜರ್ಮನಿಯ ವೆಸ್ಟರ್ ಹೋಲ್ಟ್‌ನಲ್ಲಿ ಜನಿಸಿದ ಕಿಟ್ಟೆಲ್‌ತ ತಮ್ಮ 21ನೇ ವಯಸ್ಸಿನಲ್ಲಿ –1853ರಲ್ಲಿ– ಭಾರತಕ್ಕೆ ಬಂದರು. ಭಾರತಕ್ಕೆ ಬಂದ ಅವರು ಧಾರವಾಡ, ಹುಬ್ಬಳ್ಳಿ, ಕೇಟಿ, ಆನಂದಪುರ, ಮಂಗಳೂರು ಮತ್ತು ಮಡಿಕೇರಿಗಳನ್ನು ತಮ್ಮ ಕಾರ್ಯಕ್ಷೇತ್ರಗಳನ್ನಾಗಿ ಮಾಡಿಕೊಂಡರು. ಸುಮಾರು 21 ಕೃತಿಗಳನ್ನೂ 25ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನೂ ಅವರು ರಚಿಸಿದ್ದಾರೆ.

1903ರಲ್ಲಿ ನಿಧನರಾದ ಕಿಟ್ಟೆಲ್– ಕನ್ನಡ ಸಾಹಿತ್ಯ, ದ್ರಾವಿಡ ಭಾಷೆಗಳು, ನಿಘಂಟು, ವೇದಗಳು ಹಾಗೂ ಬೈಬಲ್ ಮತ್ತು ಕ್ರಿಶ್ಚಿಯನ್ ಧರ್ಮಗಳನ್ನು ಕುರಿತು ಕನ್ನಡ, ಮಲಯಾಳಂ, ಇಂಗ್ಲಿಷ್ ಹಾಗೂ ಜರ್ಮನ್ ಭಾಷೆಗಳಲ್ಲಿ ಬರೆದಿರುತ್ತಾರೆ. ಪಂಚತಂತ್ರ (1864), ಶಬ್ದಮಣಿದರ್ಪಣಂ (1872), ನಾಗವರ್ಮನ ಕನ್ನಡ ಛಂದಸ್ಸು (1875) ಅವರ ಸಂಪಾದನೆಯ ಉತ್ಕೃಷ್ಠ ಕೃತಿಗಳು. A kannada-English Dictionary (1894), A Grammar of the Canarese Language (1903) ಅವರ ಮೇರು ಸಾಧನೆಗಳು. 1868ರಲ್ಲಿ ಕಿಟ್ಟೆಲ್ ಸಂಕಲಿಸಿದ ಆಂಥಾಲಜಿ-ಕರ್ನಾಟಕ ಕಾವ್ಯ ಮಾಲೆ, ಕಾವ್ಯಮಂಜರಿ (1877), ಸಣ್ಣ ಕರ್ನಾಟಕ ಕಾವ್ಯ ಮಾಲೆ (1866) ಹಾಗೂ 1889ರಲ್ಲಿ ರಚಿಸಿದ ಹಳಗನ್ನಡ ವ್ಯಾಕರಣ ಸೂತ್ರಗಳು ಅವರ ಇತರ ಜನಪ್ರಿಯ ಕೃತಿಗಳಾಗಿವೆ.

ತಮ್ಮ ಜೀವ ಸರ್ವಸ್ವವನ್ನೂ ಧಾರೆಯೆರೆದು 1894ರಲ್ಲಿ ಪ್ರಕಟಿಸಿದ ‘kannada-English Dictionary’ ಕೃತಿಯ ಕನ್ನಡ ಕೆಲಸವನ್ನು ಗುರುತಿಸಿ ಜರ್ಮನಿಯ ಟ್ಯೂಬಿಂಜೆನ್ ವಿಶ್ವವಿದ್ಯಾಲಯ ಕಿಟ್ಟೆಲ್‌ರಿಗೆ ಪಿಎಚ್.ಡಿ ಪದವಿ ನೀಡಿತು. ಋಷಿಸದೃಶರಾದ ಈ ಕಿಟ್ಟೆಲ್ ಮಹಾಶಯ ಸಂಪಾದಿಸಿರುವ ‘ನಾಗವರ್ಮನ ಕನ್ನಡ ಛಂದಸ್ಸು’ ಕೃತಿ ಇಂದಿಗೂ ತನ್ನ ಮಹತ್ವವನ್ನು ಕಳೆದುಕೊಂಡಿಲ್ಲ. ಕ್ರಿ.ಶ. 990ರಲ್ಲಿದ್ದ 1ನೆಯ ನಾಗವರ್ಮನ ‘ಛಂದೋಂಬುಧಿ’ ಗ್ರಂಥದ ಸಂಪಾದನಾ ರೂಪವೇ ಕಿಟ್ಟೆಲ್‌ರ ಈ ಕೃತಿ.

ಆರಂಭಕ್ಕೆ ಛಂದೋಬುಧಿಯ ಸಂಪಾದನೆಯನ್ನು ಹಾಗೂ ಕೃತಿಯನ್ನು ಕುರಿತ 23 ಪುಟಗಳಷ್ಟು ದೀರ್ಘವಾದ, ಹಲವಾರು ಒಳನೋಟಗಳನ್ನುಳ್ಳ ವಿದ್ವತ್ಪೂರ್ಣ ಲೇಖನವಿದೆ. ಕಿಟ್ಟೆಲ್‌ರು ಒಟ್ಟು 7 ಕಾಗದದ ಪ್ರತಿ ಹಾಗೂ ತಾಳೇಗರಿ ಪ್ರತಿಗಳಿಂದ ನಾಗವರ್ಮನ ಛಂದೋಂಬುಧಿಯನ್ನು ಗ್ರಂಥಸಂಪಾದನಾ ಶಾಸ್ತ್ರದ (Textual Criticism) ಆಧಾರದ ಮೇರೆಗೆ ಶಾಸ್ತ್ರೀಯವಾಗಿ ಸಂಪಾದಿಸಿರುತ್ತಾರೆ.

ಅವುಗಳೆಂದರೆ: ಬೆಟಗೆರೆ ಪ್ರದೇಶದಲ್ಲಿ ದೊರೆತ ದೋಷಪೂರಿತ ಕಾಗದದ ಪ್ರತಿ, ಧಾರವಾಡ ಪ್ರಾಂತ ಭಾಗದ 1865ರ ಕಲ್ಲಚ್ಚಿನ ಪ್ರತಿ, ಹುಬ್ಬಳ್ಳಿ ಪ್ರದೇಶದಲ್ಲಿ ದೊರೆತ, ಶಕಟ ರೇಫಾಕ್ಷರಗಳನ್ನೊಳಗೊಂಡಿರುವ ಕಾಗದದ ಪ್ರತಿ, ಮೈಸೂರು ಅರಮನೆಯ ಗ್ರಂಥಾಲಯದಲ್ಲಿದ್ದ ತಾಳೆಗರಿ ಪ್ರತಿ, ಕೊಡಗಿನ ಮಾದೇವಪುರದ ಲಿಂಗಾಯತ ಮಠದಲ್ಲಿದ್ದ ತಾಳೆಗರಿ ಪ್ರತಿ, ಮೈಸೂರು ಮಹಾರಾಜ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಬಿ. ಮಲ್ಲಪ್ಪನವರು ಎರವಲು ನೀಡಿದ್ದ ಕಾಗದ ಪ್ರತಿ ಹಾಗೂ ಮಡಿಕೇರಿ ಪ್ರಾಂತದಲ್ಲಿ ದೊರೆತ 27 ಪದ್ಯಗಳಿದ್ದ ನಾಗವರ್ಮನ ಛಂದಸ್ಸು ಎನ್ನುವ ಕಾಗದದ ಪ್ರತಿ. ಇವುಗಳಲ್ಲದೆ ಬಿ.ಎಲ್. ರೈಸ್‌ರವರು ನೀಡಿದ 4 ಕಾಗದದ ಪ್ರತಿಗಳನ್ನೂ ಮೈಸೂರಿನ ವೆಸ್ಲಿಯನ್ ಮಿಷನ್‌ನಲ್ಲಿ ಮುನ್ಷಿಯಾಗಿದ್ದ ತಿರುಮಲೈ ಶಾಮಣ್ಣನವರು ನೀಡಿದ್ದ ಮೂರು ತಾಳೆಯೋಲೆ ಪ್ರತಿಗಳನ್ನೂ ಕಿಟ್ಟೆಲ್ ಬಳಸಿಕೊಂಡಿದ್ದಾರೆ. 

ಛಂದೋಂಬುಧಿಯಲ್ಲಿರುವ 339 ಪದ್ಯಗಳನ್ನು ಕುರಿತು ಆಳವಾದ ಚಿಂತನೆ ನಡೆಸಿ ಪಿಂಗಳನ ಸಂಸ್ಕೃತ ಛಂದಸ್ಸಿನಿಂದ ನಾಗವರ್ಮ ಎಷ್ಟು ಪ್ರಭಾವಿತನಾಗಿದ್ದಾನೆಂಬುದನ್ನು ಕಿಟ್ಟೆಲ್ ದೀರ್ಘವಾಗಿ ಚರ್ಚಿಸಿದ್ದಾರೆ. ಹಾಗೆಯೇ ಇತರ ದ್ರಾವಿಡ ಭಾಷೆಗಳ ಛಂದೋಗ್ರಂಥಗಳ ಜೊತೆ ನಾಗವರ್ಮನನ್ನು ತುಲನೆ ಮಾಡಿರುತ್ತಾರೆ.

ಐವತ್ತೆಂಟಯ ಪುಟಗಳಷ್ಟು ದೀರ್ಘವಾದ An essay on Canarese Literature ಎನ್ನುವ ಲೇಖನವು The early period, from about 800 to 1300 A.D  ಹಾಗೂ The later period, from about 1300 to 1872 A.D. ಎನ್ನುವ ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲನೆಯ ಭಾಗದಲ್ಲಿ ಸ್ಥೂಲವಾಗಿ ಹಳಗನ್ನಡ ಸಾಹಿತ್ಯ ಚರಿತ್ರೆಯನ್ನೂ ಎರಡನೆಯ ಭಾಗದಲ್ಲಿ ನಡುಗನ್ನಡ ಹಾಗೂ ತುಸು ಹೊಸಗನ್ನಡದ ಸಾಹಿತ್ಯ ಚರಿತ್ರೆಯನ್ನೂ ಅನೇಕ ಮಹತ್ವದ ಮಾಹಿತಿಗಳೊಂದಿಗೆ ನಿರೂಪಿಸಲಾಗಿದೆ. ಪಂಪನನ್ನೂ ಒಳಗೊಂಡಂತೆ 37 ಜನ ಹಳಗನ್ನಡದ ಕವಿಗಳ ಪಟ್ಟಿಯನ್ನು ನೀಡಿ ಕೆಲವು ನಿರ್ದಿಷ್ಠ ಕವಿಗಳ ಬಗ್ಗೆ ಮೊದಲನೆಯ ಭಾಗದಲ್ಲಿ ಚರ್ಚೆ ನಡೆಸಿದ್ದಾರೆ. ಎರಡನೆಯ ಭಾಗದಲ್ಲಿ ನಡುಗನ್ನಡ ಮತ್ತು 1872ರವರೆಗಿನ ಹೊಸಗನ್ನಡದ 88 ಪ್ರಮುಖ ಕವಿಗಳ ಮತ್ತು ಕೃತಿಗಳ ಪ್ರಸ್ತಾಪ ಮಾಡಿರುತ್ತಾರೆ.

ಛಂದೋಂಬುಧಿಯ ಪಠ್ಯದ ಸಂಪಾದನೆಯ ವಿಷಯಕ್ಕೆ ಬಂದರೆ ಕಿಟ್ಟೆಲ್ ಮೊದಲು ಆಯಾ ಪದ್ಯದ ಸಾರಾಂಶವನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡಿದ್ದಾರೆ. ನಂತರ ಸಂಬಂಧ ಪಟ್ಟ ಪದ್ಯದ ಛಂದಸ್ಸಿನ ಹೆಸರನ್ನು ಶೀರ್ಷಿಕೆಯಾಗಿ ನೀಡಿ ಮುಂದೆ ಆ ಕಂದ ಪದ್ಯವನ್ನೋ ವೃತ್ತವನ್ನೋ ನೀಡಿದ್ದಾರೆ. ಆಯಾ ಪದ್ಯಗಳಲ್ಲಿ ವಿಶೇಷಾಂಶವೇನಾದರೂ ಇದ್ದಲ್ಲಿ ಅದನ್ನು ಅಡಿಟಿಪ್ಪಣಿಯಲ್ಲಿ ವಿವರಿಸಿದ್ದಾರೆ.  ಮೊದಲನೆಯ ಅಕ್ಷರಗಣಂಗಳ್ ಎಂಬುದನ್ನು The Syllable-feet ಎಂದೂ, ಸಮವೃತ್ತವಿವರಣಮೆಂಬ ದ್ವಿತೀಯಾಶ್ವಾಸಂ ಎಂಬುದನ್ನು The Sama vrittas ಎಂದೂ ಅನುವಾದಿಸಿದ್ದಾರೆ. ಇತರ ಸಮವೃತ್ತಂಗಳ್ ಎಂಬ ಪ್ರಕರಣವನ್ನು Further sama vrittas ಎಂದೂ ಮಾತ್ರಾಛಂದಂಗಳ್ ಪ್ರಕರಣವನ್ನು The Mora-Metres  ಎಂದೂ ತರ್ಜುಮೆ ಮಾಡಿರುತಾರೆ. ಹಾಗೆಯೇ ಕನ್ನಡ ಮಾತ್ರಾಗಣಂಗಳ್ The Canarese Mora-feet  ಆಗಿದ್ದರೆ ಷಟ್ಪ್ರತ್ಯಯಂಗಳ್ ಎನ್ನುವುದು The six solutions ಎಂದಾಗಿದೆ. ಅನುಬಂಧಗಳಲ್ಲಿ ಮೊದಲನೆಯದು Additions. ಈ ಭಾಗದಲ್ಲಿ ಸಂಪಾದಕ ಪುಟವಾರು ವಿಶೇಷ ಹಾಗೂ ಹೆಚ್ಚಿನ ಮಹತ್ವದ ಮಾಹಿತಿಗಳನ್ನು ಕೊಡುತ್ತಾರೆ. Index, for the Canarese text ಎಂಬ ಶೀರ್ಷಿಕೆಯಡಿ ಕನ್ನಡ ಶಬ್ದಗಳಿಗೆ ಇಂಗ್ಲಿಷ್‌ನ ಪರ್ಯಾಯ ಶಬ್ದಗಳನ್ನು ಕೊಟ್ಟು ಅವು ಯಾವ ಪುಟದಲ್ಲಿದೆ ಎನ್ನುವುದನ್ನು ಸೂಚಿಸಿರುತ್ತಾರೆ. ಪಠ್ಯಾರಂಭದಲ್ಲಿರುವ ನಾಗವರ್ಮನ ಛಂದಸ್ಸು ಹಾಗೂ ಕನ್ನಡ ಸಾಹಿತ್ಯ ಚರಿತ್ರೆಯ ಲೇಖನಕ್ಕೂ ಕೊನೆಯಲ್ಲಿ ಶಬ್ದಸೂಚಿ ನೀಡಿರುವುದು ವಾಚಕರಿಗೆ ತುಂಬಾ ಉಪಯುಕ್ತವಾಗಿದೆ. ನಿಶಿತಮತಿಯಾದ ಶಾಸ್ತ್ರಕಾರನ ಮನೋಧರ್ಮವನ್ನುಳ್ಳ ಕಿಟ್ಟೆಲ್ ಅವರ ಈ ‘ನಾಗವರ್ಮನ ಕನ್ನಡ ಛಂದಸ್ಸು’ ಕೃತಿ ಒಂದು ಶಾಸ್ತ್ರ ಗ್ರಂಥವನ್ನು ಹೇಗೆ ಸಂಪಾದಿಸಬೇಕು ಎನ್ನವುದಕ್ಕೆ ಮಾದರಿಯಾಗಿದೆ.

ಸಂ: ಕಿಟ್ಟೆಲ್

ಪು:161; ಬೆಲೆ ನಮೂದಿಸಿಲ್ಲ

ಪ್ರ:ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಮತ್ತು ಟ್ರ್ಯಾಕ್ಟ್ ಡೆಪಾಸಿಟರಿ