ಕೃಷ್ಣಮಹೀಶ್ವರೀ
ಮುನ್ನುಡಿ

‘ಕೃಷ್ಣಮಹೀಶ್ವರೀ’ ನಾಟಕ ಕೃತಿ ದಾವಣಗೆರೆಯ ಎ.ವಿ.ಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಎಚ್. ಚಿದಂಬರಯ್ಯ ಅವರ ರಚನೆ. ‘ಸುಶೀಲಾ ಪರಿಣಯ’, ‘ಸ್ತ್ರೀಧರ್ಮ ಸಂಗ್ರಹ’, ‘ನೀತಿಸಾರ’, ‘ತಾರಾನಾಥ’, ‘ಕಾಲಾಂತಕ’, ‘ಮಾಧವರಾವ್ ಸಿಂಧೆ’, ‘ಗುಣ ನಿರೂಪಣೆ’ ಮುಂತಾದ ಕೃತಿಗಳನ್ನು ಕೂಡ ಚಿದಂಬರಯ್ಯನವರು ಬರೆದಿದ್ದಾರೆ. ಹೊಳೇನರಸೀಪುರದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಪ್ರಸಿದ್ಧಿಯ ಹೊಸಕೆರೆ ಚಿದಂಬರಯ್ಯನವರು ಸುಮಾರು ಎಪ್ಪತ್ತು ಪುಸ್ತಕ ಹಾಗೂ ನೂರಾರು ಲೇಖನಗಳನ್ನು ಬರೆದವರು ಎನ್ನುವ ಮಾಹಿತಿ ಪುಸ್ತಕದಲ್ಲಿದೆ.

1910ರಲ್ಲಿ ಮಂಗಳೂರಿನ ‘ಧರ್ಮಪ್ರಕಾಶ’ ಮುದ್ರಾಲಯದಲ್ಲಿ ಮುದ್ರಣಗೊಂಡ ‘ಕೃಷ್ಣಮಹೀಶ್ವರೀ’ ಕೃತಿಯ ಬೆಲೆ 6 ಆಣೆ. 76 ಪುಟಗಳ ಪುಟ್ಟ ಪುಸ್ತಕವಿದು. ಕನ್ನಡದಲ್ಲಿ ಐತಿಹಾಸಿಕ ನಾಟಕಗಳನ್ನು ಬರೆದ ಸಂಸರಿಗಿಂತ ಸಾಕಷ್ಟು ಮುಂಚೆಯೇ ಚಿದಂಬರಯ್ಯನವರು ಈ ನಾಟಕವನ್ನು ಬರೆದಿರುವುದನ್ನು ನಾವು ಗಮನಿಸಬೇಕು.

ಐದು ಅಂಕಗಳ ಈ ನಾಟಕದ ಪೀಠಿಕೆಯಲ್ಲಿ ಗ್ರಂಥಕರ್ತರು- ‘ಪುರಾಣದ ಕಥೆಗಳಿಗಿಂತಲೂ, ಐತಿಹಾಸಿಕವಾದ ಸಂಗತಿಗಳೇ ಈಗಿನ ಜನರಿಗೆ ವಿಶೇಷವಾಗಿ ಆದರಣೀಯವಾಗಿಯೂ, ಜನಾಂಗದ ಅಭ್ಯುದಯಕ್ಕೆ ಅತ್ಯಗತ್ಯವಾಗಿಯೂ ಇರುವುವೆಂದು ಕಂಡುಬಂದುದರಿಂದ, ಅಂತಹ ಐತಿಹಾಸಿಕವಾದ ನಾಟಕವೊಂದನ್ನು ಬರೆಯಬೇಕೆಂದು ಅಪೇಕ್ಷಿಸಿ, ಮಾತೃಭೂಮಿಯಾದ ಮೈಸೂರು ದೇಶದ ಚರಿತ್ರಸೂಚಿತವಾದ ಸಂಗತಿಗಳನ್ನೆಲ್ಲಾ ಅಡಕಮಾಡಿ, ಹೊಸಬಗೆಯ ಸಂವಿಧಾನದಿಂದ ಸಾಲಂಕೃತವಾಗಿರುವಂತೆ, ಯಥಾಮತಿಯಾಗಿ ಈ ನಾಟಕವನ್ನು ವಿರಚಿಸಿರುತ್ತೇನೆ’ ಎಂದು ನಾಟಕರಚನೆಯ ಕಾರಣವನ್ನು ಹೇಳಿಕೊಂಡಿದ್ದಾರೆ. ಹೊಸಬಗೆಯ ಸಂವಿಧಾನ ಎನ್ನುವ ಮಾತು ಆ ಕಾಲದ ಲೇಖಕರ ಪ್ರಯೋಗಶೀಲತೆಯ ಹಂಬಲಕ್ಕೆ ಉದಾಹರಣೆಯಂತಿದೆ.

ಗದ್ಯಕೃತಿಯಾದ, 6 ವೃತ್ತಗಳು (ಇದರಲ್ಲಿ ಒಂದು ವೃತ್ತ ಸೋಮೇಶ್ವರ ಶತಕದ್ದು),  42 ಕಂದ ಪದ್ಯಗಳು ಹಾಗೂ 3 ಸಂಸ್ಕೃತ ಶ್ಲೋಕಗಳಿಂದ ಕೂಡಿರುವ ‘ಕೃಷ್ಣಮಹೀಶ್ವರೀ’ ನಾಟಕದ ಹಿಂಬದಿಯ ಪುಟಗಳಲ್ಲಿ ಇದೇ ಲೇಖಕರಿಂದ ರಚಿತವಾದ ಕೆಲವು ಕೃತಿಗಳನ್ನು ಕುರಿತ ಕೆಲವು ಯೋಗ್ಯತಾಪತ್ರಗಳು ಹಾಗೂ ಕಾಲಾಂತಕ, ಶಂಕರ ಕಥಾಮೃತ, ತಾರಾನಾಥ ಮತ್ತು ಮಾಧವರಾವ್ ಸಿಂಧ್ಯ ಕೃತಿಗಳನ್ನು ಕುರಿತ ಜಾಹೀರಾತುಗಳೂ ಪ್ರಕಟವಾಗಿವೆ.

ಸೂತ್ರಧಾರ, ನಟಿ, ಸಖಿ ಮುಂತಾದ ಪಾತ್ರಗಳೂ ಹಾಗೂ ನಾಂದಿ, ಪ್ರಸ್ತಾವನೆ, ಭರತವಾಕ್ಯ ಮುಂತಾದ ಪರಿಕಲ್ಪನೆಗಳು ಒರುವುದರಿಂದ ಚಿದಂಬರಯ್ಯನವರ ಕೃತಿಯಲ್ಲಿ ತಾಂತ್ರಿಕವಾಗಿ ಸ್ವಲ್ಪ ಮಟ್ಟಿಗೆ ಭಾಸನ ನಾಟಕಗಳ ಅನುಸರಣೆ ಇದ್ದಂತಿದೆ.ಯದುವಂಶದ ಮೂಲಪುರುಷನಾದ ಶ್ರೀಕೃಷ್ಣ ಈ ನಾಟಕದ ನಾಯಕ. ನಾಟಕದಲ್ಲಿ ಬರುವ ಮೈಸೂರರಸರಾದ ಯದುರಾಜ, ರಾಜೊಡೆಯರು, ಚಿಕ್ಕದೇವರಾಜೊಡೆಯರು, ಮುಮ್ಮಡಿಕೃಷ್ಣ ರಾಜೊಡೆಯರು, ಚಾಮರಾಜೊಡೆಯರು ಮತ್ತು ಕೃಷ್ಣರಾಜೊಡೆಯರು- ಈ ಆರು ಜನ ಕ್ರಮವಾಗಿ ಶ್ರೀಕೃಷ್ಣನ ಒಂದರಿಂದ ಆರು ಅವತಾರದ ಪುರುಷರು ಎಂಬ ಪರಿಕಲ್ಪನೆಯನ್ನು ಚಿದಂಬರಯ್ಯನವರು ಮಾಡಿಕೊಂಡಿದ್ದಾರೆ. ಇಲ್ಲಿ ನಾಯಿಕೆ ಮಹೇಶ್ವರಿ. ಈಕೆ ಮೈಸೂರು ರಾಜ್ಯದ ಅಭಿಮಾನಿ ದೇವಿ ಮತ್ತು ಭೂದೇವಿ. ಈಕೆಯ ಮತ್ತು ಮೈಸೂರರಸರ ಕುಲದೇವತೆ ಚಾಮುಂಡಿ. ಈ ಪಾತ್ರಗಳ ಜೊತೆಗೆ ಹೈದರಾಲಿ, ಟಿಪ್ಪು, ನಿಜಾಮ, ಪೂರ್ಣಯ್ಯ, ಬೇಲಿ, ಕಾರ್ನ್‌ವಾಲಿಸ್, ಖಂಡೇರಾಯ- ಮುಂತಾದ ಪ್ರಮುಖಪಾತ್ರಗಳು ನಾಟಕದಲ್ಲಿ ಬರುತ್ತವೆ. ನಾಟಕ ನಡೆಯುವುದು ಮೈಸೂರು ಮತ್ತು ಶ್ರೀರಂಗಪಟ್ಟಣಗಳಲ್ಲಿ.

ಹೈದರ್ - ಟಿಪ್ಪುಗಳ ಪತನ, ಮೈಸೂರು ರಾಜ್ಯ ಇಂಗ್ಲೀಷರ ವಶವಾಗಿ ಅವರ ಅಧೀನದಲ್ಲಿ ಮೈಸೂರರಸರು ಮೈಸೂರನ್ನು ಆಳಿದ್ದು, ಆ ಆಳ್ವಿಕೆಯಲ್ಲಿ ಪ್ರಜಾಪೀಡನ ಕಾರ್ಯಗಳು ಕಡಿಮೆಯಾಗಿ ಸರ್ವಜನಹಿತ ಕಾರ್ಯಗಳು ನಡೆದದ್ದು, ಅಂತಿಮವಾಗಿ ಚಾಮುಂಡಿಯ ಆಶೀರ್ವಾದದಿಂದ ಶ್ರೀಕೃಷ್ಣ ಮತ್ತು ಮಹೀಶ್ವರಿಯರಿಗೆ ಮದುವೆಯಾದದ್ದು- ಇದು ನಾಟಕದ ಕಥಾವಸ್ತು.

ಪ್ರಸ್ತಾವನೆಯಲ್ಲಿ ಬರುವ ಸೂತ್ರಧಾರ ನಟಿಯರ ಸಂವಾದದಲ್ಲಿ ಸ್ತ್ರೀ ಶಿಕ್ಷಣದ ಪ್ರಸ್ತಾಪ ಬರುವುದು ಕುತೂಹಲಕಾರಿಯಾಗಿದೆ. ನಟಿ ಸೂತ್ರಧಾರನಿಗೆ ಹೇಳುವ ಮಾತು ಹೀಗಿದೆ:

“ಮೈಸೂರು ದೇಶದಲ್ಲಿ ಸ್ತ್ರೀವಿದ್ಯಾಭ್ಯಾಸವು ಈಚೆಗೆ ಬಹಳ ಅಭಿವೃದ್ಧಿಗೆ ಬಂದು, ಅನೇಕ ಅಬಲೆರು ಬೀ.ಏ. ಪರೀಕ್ಷೆಯಲ್ಲಿ ಕೂಡ ಉತ್ತೀರ್ಣರಾಗಿರುವುದರಿಂದ, ಅನೇಕ ವಸ್ತುಗಳ ಬಳಕೆಯು ಸುಲಭವಾಗಿ ಅವರಿಗೆ ಉಂಟಾಗಿದೆ”.

ನಾಟಕದ ಐದನೆಯ ಹಾಗೂ ಕೊನೆಯ ಅಂಕದ ಕೊನೆಯಲ್ಲಿ ಮಹೀಶ್ವರೀದೇವಿಯ ಸಖಿ ಮತ್ತು ಮಂತ್ರಿಣಿಯಾದ ಸುಮಿತ್ರೆ ಹೇಳುವ ಮಾತು ಹೀಗಿದೆ-

“ಚಾಮರಾಜೊಡೆಯರವರ ಆಳ್ವಿಕೆಯಲ್ಲಿ, ಪ್ರಜಾಪ್ರತಿನಿಧಿ ಸಭೆಯು ಸಂಸ್ಥಾಪನೆಯಾಗಿ, ಪ್ರಜೆಗಳು ರಾಜ್ಯಾಧಿಕಾರಿಗಳಲ್ಲಿ ಕಷ್ಟನಿಷ್ಠುರಗಳನ್ನು ಹೇಳಿಕೊಂಡು ಯಥೋಚಿತವಾದ ನಿವೃತ್ತಿಗಳನ್ನು ಪಡೆಯುವುದಕ್ಕೆ ತಕ್ಕ ಪಥವೇರ್ಪಟ್ಟಿತು.

ವ್ಯವಸಾಯದ ಮತ್ತು ಕೈಗಾರಿಕೆಯ ವಸ್ತುಪ್ರದರ್ಶನವು ಮೊತ್ತ ಮೊದಲು ಮಾಡಿಸಲ್ಪಟ್ಟು, ದೇಶೀಯರ ಮೇಲಾಟದಿಂದ ಉತ್ತಮ ವಸ್ತುಗಳನ್ನು ಮಾಡಿ ಮಾರುವುದಕ್ಕೆ ಮಾರ್ಗವುಂಟಾುತು.

ಬಾಲ್ಯವಿವಾಹವು ನಿರೋಧಿಸಲ್ಪಟ್ಟು, ಕಾಯಪುಷ್ಟವಾದ ಪ್ರಜೆಗಳ ಸಂತತಿಗೆ ಮುಂದೆ ಮುಂದೆ ದಾರಿಯು ತೋರಿಸಲ್ಪಟ್ಟಿತು..... ಮೈಸೂರು ದೇಶವು ಈಗಲೀಗ ‘ಮಾದರಿ ರಾಜ್ಯ’ವೆಂದು ಹೆಸರುಗೊಂಡಿರುವುದು. ಶಿವಸಮುದ್ರದ ಕಾವೇರಿಯ ಜಲಪಾತದ ಮೂಲವಾಗಿ, ವಿಶೇಷವಾದ ವಿದ್ಯುಚ್ಛಕ್ತಿಯನ್ನು ಹುಟ್ಟಿಸಿ, ಅದರ ಬಲದಿಂದ ಕೋಲಾರದ ಬಂಗಾರದ ಗಣಿಗಳನ್ನು ಬೆಳಗುತ್ತಿದ್ದಾರೆ. ಮಾರೀಕಣಿವೆಯ ಕೆರೆಯನ್ನು ಕಟ್ಟಿಸಿ, ವ್ಯವಸಾಯವೃತ್ತಿಯನ್ನು ಉಜ್ಜೀವನಗೊಳಿಸಿದುದು; ಬಡವರಿಗೆಲ್ಲಾ ಆಧಾರವಾಗುವಂತೆ ಇನ್ಶೂರೆನ್ಸ್ ಕಂಪನಿಯನ್ನು ಮಾಡಿದುದು;ವ್ಯವಸಾಯವ್ಯಯದ ಮುಂಗಡಕ್ಕಾಗಿ ಬ್ಯಾಂಕುಗಳನ್ನು ಏರ್ಪಡಿಸಿದುದು- ಇವೆಲ್ಲಾ ಸಾಮಾನ್ಯವಾದ ರಾಜಕಾರ್ಯಗಳೇನು?”.

ಮೇಲಿನ ಮಾತುಗಳು ಆ ಕಾಲದ ಪರಿಸ್ಥಿತಿ ಹೇಳುವ ಜೊತೆಗೆ, ನಾಟಕಕಾರರ ರಾಜಭಕ್ತಿಯ ಅಭಿವ್ಯಕ್ತಿಯೂ ಆಗಿವೆ. ಒಂದು ಶತಮಾನದ ಹಿಂದೆ ಮೈಸೂರು ರಾಜ್ಯವು ಅರರಸರ ಆಳ್ವಿಕೆಯಲ್ಲಿ ತನ್ನನ್ನು ನವೋದಯಕ್ಕೆ ತೆರೆದುಕೊಂಡು ಪ್ರಗತಿಯತ್ತ ಸಾಗುತ್ತಿರುವುದರ ಚಿತ್ರವನ್ನು ‘ಕೃಷ್ಣಮಹೀಶ್ವರೀ’ ನಾಟಕ ಚಿತ್ರಿಸಿದೆ.