ಕಿರಿಯ ಕಾಣಿಕೆ
ಕಿರಿಯ ಕಾಣಿಕೆ, ಹಿರಿಯ ಕಾಣ್ಕೆ
cover
-ಕೆ.ಎಸ್.ಮಧುಸೂದನ
ಮುನ್ನುಡಿ

ಕನ್ನಡದ ಚತುರ್ಮುಖರ ಆರಂಭದ ಕವಿತೆಗಳಿರುವ ‘ಕಿರಿಯ ಕಾಣಿಕೆ’ ನಿಜಕ್ಕೂ ‘ಹಿರಿಯ ಕಾಣ್ಕೆ’ಯೇ ಸರಿ.

ಇದು 1928ರಲ್ಲಿ ಪ್ರಕಟವಾದ ಕವಿತೆಗಳ ಸಂಗ್ರಹ ‘ಕಿರಿಯ ಕಾಣಿಕೆ’. ಶ್ರೀಮನ್ಮಹಾರಾಜರವರ ಕಾಲೇಜಿನ ಕರ್ನಾಟಕ ಸಂಘದ ವಿದ್ಯಾರ್ಥಿಗಳು ಕೆಲವರು ರಚಿಸಿರತಕ್ಕ ಪುಸ್ತಕ.

ಇದರಲ್ಲಿ ತೀ.ನಂ. ಶ್ರೀಕಂಠಯ್ಯನವರ 8 ಕವಿತೆಗಳು, ಕೆ.ವಿ. ಪುಟ್ಟಪ್ಪನವರ 7 ಕವಿತೆಗಳು, ಎ.ಕೆ. ಪುಟ್ಟರಾಮು ಅವರ 3 ಕವಿತೆಗಳು, ಎಲ್.ಗುಂಡಪ್ಪ ಅವರ 8 ಕವಿತೆಗಳು, ಪಿ.ಟಿ. ನರಸಿಂಹಾಚಾರ್ ಅವರ 2 ಕವಿತೆಗಳು ಮತ್ತು ಡಿ.ಎಲ್. ನರಸಿಂಹಾಚಾರ್ ಅವರ 2 ಕವಿತೆಗಳು, ಹೀಗೆ ಒಟ್ಟು 30 ಕವಿತೆಗಳಿವೆ.

ಈ ಸಂಕಲನವನ್ನು ಮಹಾರಾಜರವರ ಕಾಲೇಜು, ಮೈಸೂರು, ಇಲ್ಲಿನ ಕರ್ನಾಟಕ ಸಂಘವು ಟಿ.ಎಸ್. ವೆಂಕಣ್ಣಯ್ಯನವರ ಉಪಾಧ್ಯಕ್ಷತೆಯಲ್ಲಿ ಪ್ರಕಟಿಸಿದೆ. ಇದನ್ನು ಮೇಲ್ಕಂಡ ವಿದ್ಯಾರ್ಥಿಗಳು-

ಗುರುವೆ, ನೀವು ಕಲಿಸಿದೆರಡು
ಚರಣಗಳನೆ ಮರಳಿ ಹಾಡಿ,
ಕಿರಿಯ ಕಾಣಿಕೆಯನು ತಂದೆ
ವಿದನು, ಸಲಿಸಲು-
ಹಿರಿಯರಾಡುವುದನೆ ಹಸುಳೆ
ತೊದಲಿ ನಲಿಯವೆ!

ಎಂದು ಹೇಳಿ ಅರ್ಪಣಾಭಾವದಿಂದ ಸಂಘದ ಅಧ್ಯಕ್ಷರಾದ ಬಿ.ಎಂ. ಶ್ರೀಕಂಠಯ್ಯನವರಿಗೆ ಅರ್ಪಿಸಿರುತ್ತಾರೆ.

ಈ ಕೃತಿಯು ಬಿ.ಎಂ.ಶ್ರೀಯವರ ‘ಇಂಗ್ಲಿಷ್ ಗೀತಗಳು’ ಕೃತಿಯ ವಿಸ್ತೃತ ಮುದ್ರಣ ಪ್ರಕಟವಾದ 1926ರ ನಂತರದ ಎರಡು ವರ್ಷಗಳಲ್ಲಿಯೇ ಬಂದಿರುವುದು ಗಮನಾರ್ಹ. ಬಿ.ಎಂ.ಶ್ರೀಯವರ ದಟ್ಟವಾದ ಪ್ರಭಾವ ಯುವ ಹಾಗೂ ವಿದ್ಯಾರ್ಥಿ ಕವಿಗಳ ಮೇಲೆ ಯಾವ ಪ್ರಮಾಣದಲ್ಲಿತ್ತು ಎಂಬುದಕ್ಕೆ ‘ಕಿರಿಯ ಕಾಣಿಕೆ’ ಒಂದು ಉದಾಹರಣೆ.

ಈ ಸಂಕಲನವನ್ನು ಕುರಿತು ಎಸ್.ಅನಂತನಾರಾಯಣ ಅವರು ತಮ್ಮ ‘ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ’ ಕೃತಿಯಲ್ಲಿ-

‘ಶ್ರೀ’ಯವರ ಶಿಷ್ಯರು ನಡೆಸಿದ ಪ್ರಯೋಗಗಳನ್ನು ‘ಕಿರಿಯ ಕಾಣಿಕೆ’ ಮತ್ತು ‘ತಳಿರು’ ಎಂಬ ಎರಡು ಕವನ ಸಂಕಲನಗಳಲ್ಲಿ ಕೂಡಿಸಿದರು. ‘ಕಿರಿಯ ಕಾಣಿಕೆ’ (1928)ಯಲ್ಲಿ ಹಲವು ಅನುವಾದಗಳೂ, ಕೆಲವು ಸ್ವತಂತ್ರ ಕವನಗಳೂ ಇವೆ. ‘ಶ್ರೀ’ಯವರು ಹೊಸ ಬಗೆಯ ಕಾವ್ಯದ ಸಂಗ್ರಹವನ್ನು ಪ್ರಕಟಿಸಿ ಇನ್ನೂ ಎರಡು ವರ್ಷಗಳಾಗಿದ್ದುವು. ಆದರೂ ಕನ್ನಡ ಕವಿಗಳು ಆಗಲೇ ಹೊಸ ರೀತಿಯ ಸಾಹಿತ್ಯದ ಸ್ಫೂರ್ತಿಯನ್ನು ಅರಗಿಸಿಕೊಂಡಿದ್ದರು.

‘ಕಿರಿಯ ಕಾಣಿಕೆ’ಯ ಕವಿತೆಗಳಲ್ಲಿ ಉತ್ತಮ ಸಿದ್ಧಿಯು ಕಾಣುತ್ತದೆ. ಎಲ್. ಗುಂಡಪ್ಪನವರ ‘ಚಟಾಕಿ’ಯಂತಹ ಉತ್ತಮವಾದ ಅಣಕವಾಡು, ಪುಟ್ಟಪ್ಪನವರ ರೂಪಾಂತರ ಕವಿತೆ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’, ಪು.ತಿ.ನ ಅವರ ಮನಮುಟ್ಟುವ ಕವಿತೆ ‘ನನ್ನ ನಾಯಿ’, ಮನದ ಒಳತೋಟಿಯನ್ನು ಸ್ಫುಟವಾಗಿ ತೋರುವ ತೀ.ನಂ.ಶ್ರೀ ಅವರ ‘ಎರಡು ದಾರಿ’ಯಂತಹ ಮಾರ್ಮಿಕ ಚಿತ್ರ ಇವೆಲ್ಲವೂ ಮುಂದೆ ಈ ಕವಿಗಳು ಪಡೆದ ಸಿದ್ಧಿಗುಣವನ್ನು ಸೂಚಿಸುವ ಗುರುತುಗಳಂತಿವೆ’ ಎಂದು ಅಭಿಪ್ರಾಯಪಟ್ಟಿರುತ್ತಾರೆ.

ಮುನ್ನುಡಿಯಲ್ಲಿ ಟಿ.ಎಸ್. ವೆಂಕಣ್ಣಯ್ಯನವರು ‘ಸಾಂಪ್ರದಾಯಿಕ ಕಾವ್ಯಗಳಲ್ಲಿ ಮಮತೆಯುಳ್ಳವರನೇಕರು ಈ ಹೊಸ ಕವನಗಳಲ್ಲಿನ ಸೌಂದರ್ಯವನ್ನೂ ಸ್ವಾರಸ್ಯವನ್ನೂ ಗ್ರಹಿಸಲಾರದವರಾಗಿ ಇವುಗಳು ಕಾವ್ಯಗಳೇ ಅಲ್ಲವೆನ್ನುವಷ್ಟು ದೂರ ಹೋಗುತ್ತಾರೆ. ಈ ವಿಧವಾದ ಅಭಿಪ್ರಾಯಕ್ಕೆ ಅನಭ್ಯಾಸವೇ ಮುಖ್ಯ ಕಾರಣ. ಅಭ್ಯಾಸ ಮಾಡಿದರೆ, ಪ್ರಯತ್ನಪಟ್ಟರೆ ಅವರೂ ಈ ಕವನಗಳ ಸ್ವಾರಸ್ಯವನ್ನು ಗ್ರಹಿಸಬಹುದು.

ಹಾಗೆ ಮಾಡುವುದರಿಂದ ಪ್ರಯೋಜನವುಂಟು. ‘ಹೊಸ ದಾರಿಯಲ್ಲಿ ಹೋಗಕೂಡದು. ಪ್ರಾಚೀನ ಸಂಪ್ರದಾಯವನ್ನೇ ಅನುಸರಿಸಬೇಕು’ ಎಂದು ಈ ಕಾಲದ ಕವಿಗಳನ್ನು ನಿರ್ಬಂಧಪಡಿಸುವುದು ನ್ಯಾಯವಲ್ಲವೆಂದು ತೋರುತ್ತದೆ’ ಎಂದು ಹೇಳಿರುವ ಮಾತುಗಳು ಅರ್ಥಪೂರ್ಣವಾಗಿವೆ. ಈ ಸಂಕಲನ ಮತ್ತು ಮುನ್ನುಡಿ ಹೊಸಗನ್ನಡ ಕಾವ್ಯಚರಿತ್ರೆಯಲ್ಲಿ ಚಾರಿತ್ರಿಕ ಹಾಗೂ ಗುಣಾತ್ಮಕ ಮಹತ್ವವನ್ನು ಹೊಂದಿವೆ.

ಇಲ್ಲಿನ ವಿದ್ಯಾರ್ಥಿ ಕವಿ ಕೆ.ವಿ.ಪುಟ್ಟಪ್ಪ ಮುಂದೆ ‘ಕುವೆಂಪು’ ಆಗಿ ಕನ್ನಡದ ಮಹಾಕವಿಯಾದದ್ದು ಈಗ ಇತಿಹಾಸ. ಹಾಗೆಯೇ ಇಲ್ಲಿನ ವಿದ್ಯಾರ್ಥಿ ಕವಿ ಪಿ.ಟಿ. ನರಸಿಂಹಾಚಾರ್ ಅವರು ‘ಪು.ತಿ.ನ’ ಕಾವ್ಯನಾಮದಿಂದ ಹೊಸಗನ್ನಡ ಕಾವ್ಯದ ರತ್ನತ್ರಯರಲ್ಲೊಬ್ಬರಾಗಿರುವುದೂ ಇತಿಹಾಸವೇ.

ಈ ಸಂಕಲನದ ಇನ್ನೊಂದು ವಿಶೇಷವೆಂದರೆ ಡಿ.ಎಲ್. ನರಸಿಂಹಾಚಾರ್ ಅವರ ಎರಡು ಕವಿತೆಗಳಿರುವುದು. ಮುಂದೆ ಅವರು ಕವಿತೆಗಳನ್ನು ರಚಿಸಲೇ ಇಲ್ಲ. ವಿದ್ವತ್ಪೂರ್ಣ ಸಂಶೋಧಕರಾದರು.

ಅವರ ‘ಬಿಡುಗಡೆ’ ಎಂಬ ಸಾನೆಟ್ ಅತ್ಯಂತ ಕುತೂಹಲಕಾರಿ ಪ್ರಯೋಗ. ಇದರಲ್ಲಿ ಒಂದು ದ್ವಿಪದಿ ಹಾಗೂ ಮೂರು ಚೌಪದಿಗಳಿದ್ದು ಪೆಟ್ರಾರ್ಕ್ ಅಥವಾ ಷೇಕ್ಸ್‌ಪಿಯರನ್ ಸಾನೆಟ್ ಮಾದರಿಗೆ ಸೇರದೆ ಹೊಸ, ಸ್ವತಂತ್ರ ಪ್ರಯೋಗವಾಗಿದೆ.

ದ್ವಿತೀಯಾಕ್ಷರ ಪ್ರಾಸವನ್ನುಳಿಸಿಕೊಂಡಿರುವ ಈ ಸಾನೆಟ್ ನಿಜಕ್ಕೂ ಒಂದು ಯಶಸ್ವೀ ಪ್ರಯೋಗ. ಮುಂದೆ ಸಾನೆಟ್ ಪ್ರಕಾರ ಕನ್ನಡದಲ್ಲಿ ಅಪೂರ್ವ ಸಾಧನೆ ಮಾಡಿದ್ದೂ ಇತಿಹಾಸವೇ.

ಕನ್ನಡದ ಅತ್ಯಂತ ಮಹತ್ವದ ಕವಿಗಳಾದ ಕುವೆಂಪು ಹಾಗೂ ಪು.ತಿ.ನ ಅವರೊಂದಿಗೆ ಅಪೂರ್ವ ಸಂಶೋಧಕದ್ವಯರಾದ ತೀ.ನಂ. ಶ್ರೀಕಂಠಯ್ಯ ಹಾಗೂ ಡಿ.ಎಲ್. ನರಸಿಂಹಾಚಾರ್- ಈ ಕನ್ನಡದ ಚತುರ್ಮುಖರ ಆರಂಭದ ಕವಿತೆಗಳಿರುವ ‘ಕಿರಿಯ ಕಾಣಿಕೆ’ ನಿಜಕ್ಕೂ ‘ಹಿರಿಯ ಕಾಣ್ಕೆ’ಯೇ ಸರಿ.