ಕನ್ನಡ-ಹಿಂದುಸ್ಥಾನಿ ಖಾಷಾ ಮಂಜರಿ
ಮುನ್ನುಡಿ

‘ಕನ್ನಡ-ಹಿಂದುಸ್ಥಾನಿ ಭಾಷಾಮಂಜರಿ’ ಬಾಸೆಲ್ ಮಿಷನ್ ಪ್ರೆಸ್ಸಿನಲ್ಲಿ ಎರಡನೇ ಆವೃತ್ತಿಯಾಗಿ (1904ರಲ್ಲಿ) ಮುದ್ರಣಗೊಂಡ ಕೃತಿ. ಇದರ ಲೇಖಕ ಟಿ.ಜಿ.ಎಂ ಎನ್ನುವವರು. ‘ಎರಡನೆಯ ಛಾಪೆ- ಬಹು ದೊಡ್ಡದು ಮಾಡಿಯದೆ’ ಎಂಬ ಒಕ್ಕಣೆಯು ಶೀರ್ಷಿಕೆಯ ಅಡಿಯಲ್ಲಿ ಅಚ್ಚಾಗಿದೆ.

ಮೊದಲನೇ ಮುದ್ರಣ ಆದದ್ದು ಯಾವಾಗ ಎನ್ನುವ ಸೂಚನೆ ಕೃತಿಯ ಯಾವುದೇ ಭಾಗದಲ್ಲೂ ಇಲ್ಲ. ಆದರೆ, ಎರಡನೇ ಮುದ್ರಣದ ಪೀಠಿಕೆಯಲ್ಲಿ ಬರುವ- ‘ಮೊದಲನೇ ಮುದ್ರಣವು ಬಹು ಬೇಗ ಖರ್ಚಾಗಿ ಹೋದ್ದರಿಂದ ಎರಡನೆಯ ಮುದ್ರಣ ಬೇಗನೆ ಮಾಡಿಸಬೇಕಂತಲೂ,  ಅದರಲ್ಲಿ ಊರ ಸಾಧಾರಣ ಮಾತುಗಳನ್ನು ಸಹ ಪ್ರಯೋಗಿಸಬೇಕಂತಲೂ ಅನೇಕರು ಅಪೇಕ್ಷಿಸಿದ ಕಾರಣ ಎರಡನೆಯ ಮುದ್ರಣವನ್ನು ಮಾಡಿಸಲಾಯಿತು; ಇದರಲ್ಲಿ ಹೆಚ್ಚು ಸಂಭಾಷಣಾವಾಕ್ಯಗಳನ್ನು ನಮ್ಮ ಊರ ಸಾಧಾರಣ ಮಾತುಗಳಿಂದ ರಚಿಸಿ ಕೂಡಿಸಲಾಗಿದೆ. ಕೆಲವು ಕಡೆಗಳಲ್ಲಿ ಹಳ್ಳೀ ಮಾತುಗಳೂ ಸಿಕ್ಕುವುವು’. ಲೇಖಕರ ಈ ಮಾತುಗಳಿಂದ, 1900ರ ಸುಮಾರಿಗೆ ಇದರ ಪ್ರಥಮ ಮುದ್ರಣ ಬಂದಿರಬಹುದೆಂದು ಊಹೆ ಮಾಡಬಹುದು.

ಲೇಖಕ ಟಿ.ಜಿ.ಎಂ ಎಂದರೆ ಯಾರು? ಅವರ ಉಳಿದ ಕೃತಿಗಳು ಯಾವುವು?- ಈ ಬಗ್ಗೆ ಮಾಹಿತಿಯಿಲ್ಲ. ಈ ಕೃತಿಯು ಚೊಕ್ಕವೂ ನಿರ್ದೋಷವೂ ಆಗುವಂತೆ ರಿಯಾಯಿತಿ ಬೆಲೆ ಇಟ್ಟ ಛಾಪಾಖಾನೆಯ ಯಜಮಾನರಾದ ಎ.ಬಯರ್ ಬಾಖ್ ದೊರೆ ಎನ್ನುವವರಿಗೆ ಲೇಖಕರು ಕೃತಜ್ಞತೆ ಅರ್ಪಿಸಿದ್ದಾರೆ. ಮಧ್ಯಮ ಗಾತ್ರದ, ಜೇಬಿನಾಕಾರ ವಿನ್ಯಾಸದ, 70 ಪುಟಗಳ ಈ ಪುಸ್ತಕದ ಆಗಿನ ರಿಯಾಯತಿ ಬೆಲೆ- ಕ್ರಯ ನಾಲ್ಕು ಆಣೆ. ಲೇಖಕ ಈ ಕೃತಿಯನ್ನು ಇಂಗ್ಲಿಷ್ ಭಾಷೆಯಲ್ಲಿ A canarese guide to Hindustani conversation ಎಂದು ನಿರ್ದೇಶಿಸಿದ್ದಾನೆ. ಇದರಲ್ಲಿ ಮುದ್ರಣವಾಗಿರುವ ಮೊದಲನೆಯ ಮುದ್ರಣದ ಪೀಠಿಕೆಯ ಮಾತುಗಳ ಪ್ರಕಾರ ಬಾಸೆಲ್ ಮಿಷನ್ ಛಾಪಾಖಾನೆಯ ಅಂದಿನ ಮಾಲಿಕರು ಜಿ.ಹಿರ್ನರ್ ದೊರೆ.

‘ಹಿಂದುಸ್ಥಾನಿ ಭಾಷೆಯು ಪ್ರಯಾಣ ವ್ಯಾಪಾರಾದಿಗಳಲ್ಲಿ ವಹಿವಾಟಿಗೆ ಉಪಯುಕ್ತ ಆದುದರಿಂದ ಅದನ್ನು ಒಂದಿಷ್ಟು ತಿಳಿಯಲಿಕ್ಕೂ ಮಾತಾಡಲಿಕ್ಕೂ ಕಲಿಯಬೇಕೆಂಬ ಆಶೆಯು ಶಹರುಗಳನ್ನು ನೋಡುವ ಸಮಸ್ತರಲ್ಲಿಯೂ ಹುಟ್ಟುತ್ತದೆ. ಆದ್ದರಿಂದ ವ್ಯಾಕರಣ ವಿದ್ಯೆ ತಿಳಿದವರಿಗೆ ಮಾತ್ರವಲ್ಲ, ತಿಳಿಯದವರಿಗೂ ಆ ಭಾಷೆಯನ್ನು ತಕ್ಕಷ್ಟು ಆಡುವಂತೆ ಸಹಾಯವಾಗಬೇಕೆಂಬ ಇರಾದೆಯಿಂದ ಈ ಸಣ್ಣ ಕೃತಿಯನ್ನು ಪ್ರಕಟಿಸಲಾಯಿತು’ ಎಂದು ಲೇಖಕರು ಕೃತಿಯ ಉದ್ದೇಶವನ್ನು ವಿವರಿಸಿದ್ದಾರೆ.

ಒಂದು ಒಳ್ಳೆಯ ವ್ಯಾಕರಣ ಕೃತಿ/ ನಿಘಂಟು/ ಭಾಷಾವಿಜ್ಞಾನದ ಪುಸ್ತಕವಾಗಬಹುದಾಗಿದ್ದ ಲಕ್ಷಣಗಳು ಈ ಕೃತಿಯಲ್ಲಿವೆ. ಆದರೆ ಕೃತಿಯ ಉದ್ದೇಶ ಒಂದು ಭಾಷೆಯನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವುದಷ್ಟೇ ಆಗಿದೆ. ತನ್ನ ಉದ್ದೇಶದ ಮಿತಿಯೊಳಗೆ ಇದು ಸಫಲ ಕೃತಿಯೇ ಸರಿ. ಈ ಪುಸ್ತಕದ ಉದ್ದೇಶಿತ ಭಾಷೆ ಹಿಂದುಸ್ಥಾನಿ, ಉಲ್ಲೇಖಿತ ಭಾಷೆ ಕನ್ನಡ. ಹಿಂದುಸ್ಥಾನಿ ಭಾಷೆಯ ಧ್ವನಿವಿಜ್ಞಾನ ಹಾಗೂ ವ್ಯಾಕರಣ ಪ್ರಕ್ರಿಯೆಗಳನ್ನು ಉಲ್ಲೇಖಿತ ಕನ್ನಡ ಭಾಷೆಯಲ್ಲಿ ಲೇಖಕರು ಸರಳವಾಗಿ ನಿರೂಪಿಸಿದ್ದಾರೆ.

ಮೂವತ್ತೊಂದು ಚಿಕ್ಕ ಚಿಕ್ಕ ಭಾಗಗಳಿರುವ ಈ ಕೃತಿಯಲ್ಲಿ ಪದದ ನೆಲೆ, ವಾಕ್ಯದ ನೆಲೆ ಮತ್ತು ವ್ಯಾಕರಣದ ವಿವಿಧಧ ಪ್ರಕ್ರಿಯೆಗಳ ನೆಲೆಯಲ್ಲಿ ಕನ್ನಡ-ಹಿಂದುಸ್ಥಾನಿ ದ್ವಿಭಾಷಿಕ ನಿಘಂಟಿನ ದ್ವೀಪಗಳಿವೆ. ವಾಕ್ಯದ ನೆಲೆಯ ನಿಘಂಟು ಭಾಷಾಂತರಕಾರರಿಗೆ ತುಂಬಾ ಉಪಯುಕ್ತವಾಗಿದೆ, ಮೊದಲನೇ ಭಾಗದಲ್ಲಿ ‘ಹಿಂದೂಸ್ಥಾನಿ ಭಾಷೆಯ ಕೆಲವು ಅಕ್ಷರಗಳ ವಿಶಿಷ್ಟ ಉಚ್ಚಾರಣೆಯ ವಿವರಗಳಿವೆ. ಉದಾ:

ಜ’ ಎಂಬುದಾಗಿ ಮೇಲೆ (’) ಈ ಗುರುತು ಕಾಣಿಸಿ ಬರೆದಲ್ಲಿ- ಇಂಗ್ಲಿಷ್‌ನ  z ಉಚ್ಚಾರ ಮಾಡಬೇಕು; ಅದಕ್ಕೆ ಸುಮಾರು ‘ದ್ಸ’ ಎಂಬ ಉಚ್ಚಾರ ಬರುತ್ತದೆ.

‘ಖ, ಫ, ಗ’ ಎಂಬವುಗಳ ಶುದ್ಧ ಉಚ್ಚಾರಣೆಯು ಕನ್ನಡದಲ್ಲಿ ಇಲ್ಲದ್ದರಿಂದ ಅದನ್ನು ಬರಹ ಬಲ್ಲ ಉರ್ದು ಮಾತೃಭಾಷಿಕರಿಂದ ಕೇಳಿ, ಕಲಿತುಕೊಳ್ಳುವುದು ಒಳ್ಳೇದು. ಉದಾ: ಮಗರಿಬ್, ಫಖ್ತ್, ಇತ್ಯಾದಿ. ವ್ಯಾಕರಣ ಪ್ರಕ್ರಿಯೆ ಕುರಿತು ಕನ್ನಡಕ್ಕೂ ಹಿಂದುಸ್ಥಾನಿ ಭಾಷೆಗೂ ಇರುವ ಸೂಕ್ಷ್ಮ ವ್ಯತ್ಯಾಸಗಳ ವಿವರಗಳೂ ಉದಾಹರಣೆಗಳೊಂದಿಗೆ ಪುಸ್ತಕದಲ್ಲಿವೆ. ದೇಹದ ಅವಯವಗಳು, ಮಸಾಲೆ ಜೀನಸುಗಳು, ಕಾಯಿಪಲ್ಯ, ಮೀನು, ಅಡುಗೆಮನೆ ಸಾಮಾನು ವಗೈರೆಗಳು- ಈ ಕನ್ನಡ ಪದಗಳ ಪರ್ಯಾಯ ಹಿಂದುಸ್ಥಾನಿ ರೂಪಗಳನ್ನು ನೀಡಲಾಗಿದೆ.

ಅಕ್ಷರ, ಪದ ಹಾಗೂ ವಾಕ್ಯಗಳ ನೆಲೆಯಲ್ಲಿ ಭಾಷಾವಿಜ್ಞಾನ, ವ್ಯಾಕರಣ ಮತ್ತು ನಿಘಂಟು- ಈ ಮೂರೂ ಶಿಸ್ತುಗಳನ್ನು ಗಮನದಲ್ಲಿರಿಸಿಕೊಂಡು ಕನ್ನಡ ಹಾಗೂ ಹಿಂದುಸ್ಥಾನಿ ಭಾಷೆಗಳ ಸೂಕ್ಷ್ಮಗಳನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಗ್ರಾಹ್ಯವಾಗುವಂತೆ ವಿವರಿಸಿರುವುದು ಈ ಪುಟ್ಟ ಕೃತಿಯ ವಿಶೇಷ. ಆ ಕಾಲಕ್ಕೆ ಅಗತ್ಯವಿದ್ದ ಎಲ್ಲ ಶಿಸ್ತುಗಳನ್ನು ಕುರಿತು ಹುಟ್ಟಿಕೊಂಡಿರುವ ಉಪಯುಕ್ತ ಪುಸ್ತಕಗಳ ಮಾಲಿಕೆಯಲ್ಲಿ ಈ ಭಾಷಾಮಂಜರಿ ಒಂದು ಒಳ್ಳೆಯ ಪ್ರಯತ್ನ.