ಕರ್ನಾಟಕ ಕಾವ್ಯಮಾಲೆ
ಮುನ್ನುಡಿ

‘ಕರ್ನಾಟಕ ಕಾವ್ಯಮಾಲೆ‘ ರೆವರೆಂಡ್ ಎಫ್. ಕಿಟ್ಟಲ್ ಸಂಪಾದಿಸಿರುವ ಅಪೂರ್ವ ಕೃತಿ. ಇದರ ಮೊದಲ ಮುದ್ರಣವು 1868ರಲ್ಲಿ ಆಗಿದ್ದು, 1874ರಲ್ಲಿ ಎರಡನೇ ಆವೃತ್ತಿಯಾಗಿ ಪ್ರಕಟವಾಗಿದೆ. ಇಂಗ್ಲಿಷ್‌ನಲ್ಲಿ ಇದನ್ನು ‘ಕೆನರೀಸ್ ಪೊಯೆಟಿಕಲ್ ಆಂತಾಲಜಿ‘ ಎಂದು ಸಂಪಾದಕರು ಕರೆದಿದ್ದಾರೆ.

ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್‌ನಲ್ಲಿ ಮುದ್ರಣಗೊಂಡಿರುವ, ಡೆಮಿ ಅಷ್ಟಾಕಾರದ, ಒಟ್ಟು 423 ಪುಟಗಳಿರುವ ಈ ಸಂಕಲನದ ಅಂದಿನ ಬೆಲೆ ಒಂದು ರೂಪಾಯಿ.

ಏಪ್ರಿಲ್ 7, 1832ರಲ್ಲಿ ಜರ್ಮನಿಯ ವೆಸ್ಟರ್ ಹೋಲ್‌ನಲ್ಲಿ ಹುಟ್ಟಿದ ಫರ್ಡಿನೆಂಡ್ ಕಿಟ್ಟೆಲ್ ಅವರು ಅ.20, 1853ಕ್ಕೆ ಧಾರವಾಡ ಹುಬ್ಳಿ ಕಡೆ ಬಂದರು. ಮಂಗಳೂರು, ಮಡಿಕೇರಿ ಆಸುಪಾಸಿನ ಜಾಗಗಳು ಇವರ ಕಾರ್ಯಕ್ಷೇತ್ರ. 1903ರವರೆಗೆ ಬದುಕಿದ್ದ ಇವರು ಅನಾರೋಗ್ಯದ ಕಾರಣದಿಂದ ಮೂರು ಬಾರಿ ತಾಯ್ನಾಡಾದ ಜರ್ಮನಿಗೆ ಹಿಂದಿರುಗಿದರೂ ಅಪೂರ್ಣವಾದ ಕನ್ನಡದ ಕೆಲಸ ಪೂರೈಸಲು ಮತ್ತೆ ಮತ್ತೆ ಕರ್ನಾಟಕಕ್ಕೆ ಹಿಂದಿರುಗಿದರು. ಕನ್ನಡ ಸಾಹಿತ್ಯ, ಛಂದಸ್ಸು, ವ್ಯಾಕರಣ, ಗ್ರಂಥ ಸಂಪಾದನಾ ಶಾಸ್ತ್ರಗಳಲ್ಲಿ ಅವರು ಮಾಡಿದ್ದ ಕೆಲಸ ಈ ಕೃತಿಯ ಸಂಪಾದನೆಯ ಸಂದರ್ಭದಲ್ಲಿ ಕಾಣಿಸುತ್ತದೆ.

1894ರಲ್ಲಿ ಪ್ರಕಟವಾದ ಅವರ ಕನ್ನಡ-ಇಂಗ್ಲಿಷ್ ನಿಘಂಟಿಗಾಗಿ 1896ರಲ್ಲಿ ಜರ್ಮನಿಯ ಟ್ಯೂಬಿಂಜೆನ್ ವಿಶ್ವವಿದ್ಯಾನಿಲಯ ಕಿಟ್ಟೆಲ್ ಅವರಿಗೆ ಪಿಎಚ್.ಡಿ ಪದವಿಯನ್ನು ನೀಡಿತು. ಇವರೇ ಕನ್ನಡದ ಮೊದಲ ಪಿ.ಎಚ್‌ಡಿ ಪದವೀಧರರು. ಈ ‘ಕರ್ನಾಟಕ ಕಾವ್ಯಮಾಲೆ‘ಯನ್ನು ಸಂಪಾದಿಸುವುದಕ್ಕೆ ಮೊದಲು ಕಿಟ್ಟೆಲ್‌ರು 1864ರಲ್ಲಿ ‘ಪಂಚತಂತ್ರ‘ವನ್ನೂ 1866ರಲ್ಲಿ ‘ಕನ್ನಡ ಪಾಠಗಳ ಮೊದಲ ಪುಸ್ತಕ‘, ‘ಹಳಗನ್ನಡ ಸಂಕ್ಷೇಪ ವ್ಯಾಕರಣ ಸೂತ್ರಗಳು‘ ಹಾಗೂ ‘ಸಣ್ಣ ಕರ್ನಾಟಕ ಕಾವ್ಯಮಾಲೆ‘ ಕೃತಿಗಳನ್ನು ಪ್ರಕಟಿಸಿದ್ದರು. 1871ರಲ್ಲಿ ‘ಶಬ್ದಮಣಿದರ್ಪಣಂ‘ ವ್ಯಾಕರಣ ಗ್ರಂಥ ಹಾಗೂ ನಾಗವರ್ಮನ ‘ಛಂದೋಂಬುಧಿ‘ ಎಂಬ ಛಂದಸ್ಸಿನ ಗ್ರಂಥಗಳನ್ನು ಸಂಪಾದಿಸಿದ್ದರು. ಈ ಆಳವಾದ ಹಾಗೂ ಪಕ್ವವಾದ ಅನುಭವದ ಹಿನ್ನೆಲೆಯಲ್ಲಿ ‘ಕರ್ನಾಟಕ ಕಾವ್ಯಮಾಲೆ‘ ಸಂಕಲಿತವಾಗಿದೆ.

ಜಿ. ವುರ್ತ್ ಹಾಗೂ ಜಾನ್ ಗ್ಯಾರೆಟ್ ಸಂಪಾದಿಸಿದ ‘ಕರ್ಣಾಟ ಪ್ರಾಕ್ಕಾವ್ಯ ಮಾಲಿಕೆ‘ ಪ್ರಕಟವಾದ 1868ರಲ್ಲೇ  ‘ಕರ್ನಾಟಕ ಕಾವ್ಯಮಾಲೆ‘ ಪ್ರಕಟವಾಗಿರುವುದನ್ನು ನೋಡಿದರೆ ಕನ್ನಡ ಕಾವ್ಯಗಳು ಆ ಕಾಲಕ್ಕೆ ಎಷ್ಟು ಜನಾದರಣೆಗೆ ಪಾತ್ರವಾಗಿದ್ದವು ಎಂಬುದು ತಿಳಿಯುತ್ತದೆ. ಈ ಸಂಕಲನವು ಕನ್ನಡ ಕಾವ್ಯ ಪರಂಪರೆಯ ಎರಡನೆಯ ಕಾಲಘಟ್ಟದಲ್ಲಿ ಪ್ರಚುರವಾಗಿದ್ದ ನಡುಗನ್ನಡ ಅಥವಾ ಮಧ್ಯಕಾಲೀನ ಕನ್ನಡ ಕಾವ್ಯಗಳಿಂದಾರಿಸಿದ ಕವಿತಾಸಂಕಲನ. ಇದರಲ್ಲಿ 103 ವಿವಿಧ ಶೀರ್ಷಿಕೆಗಳ ಪಾಠದಡಿ, 12 ನಡುಗನ್ನಡ ಕವಿಗಳ ಕಾವ್ಯಗಳಿಂದ ಆರಿಸಿದ 619 ಕವಿತೆಗಳಿವೆ.

ಮಹಲಿಂಗನ ‘ಅನುಭವಾಮೃತ‘ದಿಂದ 2 ಪದ್ಯಗಳು, ಭೀಮಕವಿಯ ‘ಬಸವಪುರಾಣ‘ದಿಂದ 41 ಪದ್ಯಗಳು, ಸರ್ವಜ್ಞನ 35 ತ್ರಿಪದಿಗಳು, ಪುಲಿಗೆರೆ ಸೋಮೇಶ್ವರನ ‘ಸೋಮೇಶ್ವರ ಶತಕ‘ದಿಂದ 23 ಪದ್ಯಗಳು, ದಾಸರ 39 ಕೀರ್ತನೆಗಳು, ತೊರವೆ ನರಹರಿಯ ‘ತೊರವೆ ರಾಮಾಯಣ‘ದಿಂದ 28 ಪದ್ಯಗಳು, ಕುಮಾರವ್ಯಾಸನ ‘ಕರ್ನಾಟಕ ಭಾರತ ಕಥಾ ಮಂಜರಿ‘ಯಿಂದ 149 ಪದ್ಯಗಳು, ವಿರೂಪಾಕ್ಷ ಪಂಡಿತನ ‘ಚನ್ನಬಸವ ಪುರಾಣ‘ದಿಂದ 22 ಪದ್ಯಗಳು, ಲಕ್ಷ್ಮೀಶನ ‘ಜೈಮಿನೀ ಭಾರತ‘ದಿಂದ 151 ಪದ್ಯಗಳು, ಷಡಕ್ಷರಿಯ ‘ರಾಜಶೇಖರ ವಿಳಾಸ‘ದಿಂದ 192 ಪದ್ಯಗಳು, ಕೇಶಿರಾಜನ ‘ಶಬ್ದಮಣಿದರ್ಪಣಂ‘ನಿಂದ 3 ಪದ್ಯಗಳು ಹಾಗೂ ನಾಗವರ್ಮನ ‘ಛಂದೋಂಬುಧಿ‘ಯಿಂದ 15 ಪದ್ಯಗಳನ್ನು ಆಯ್ಕೆ ಮಾಡಿ ಸಂಕಲಿಸಲಾಗಿದೆ.

ಒಟ್ಟಿನಲ್ಲಿ ನಡುಗನ್ನಡ ಕಾವ್ಯಗಳನ್ನು ರಚಿಸಿರುವ 12 ಜನ -ಜೈನ, ವೀರಶೈವ ಹಾಗೂ ವೈದಿಕ ಧರ್ಮದ- ಕವಿಗಳ ಕಾವ್ಯಶಾಸ್ತ್ರಗಳಿಂದಾರಿಸಿದ, ವಿವಿಧ ಛಂದೋರೂಪಗಳಾದ ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ತ್ರಿಪದಿ, ವಿವಿಧ ವೃತ್ತ, ಕಂದ, ಕೀರ್ತನೆಗಳು ಮುಂತಾದ ಒಟ್ಟು 619 ಕವಿತೆಗಳು ಈ ಕೃತಿಯಲ್ಲಿ ಅಡಕವಾಗಿವೆ. ಕಾವ್ಯ ವಸ್ತುವಿನಲ್ಲಿಯೂ ಕಿಟ್ಟೆಲ್ ವೈವಿಧ್ಯ ಮೆರೆದಿದ್ದಾರೆ. ಸೂರ್ಯೋದಯ, ರಾತ್ರಿ, ಸಾಗರ, ನದಿ ಹಾಗೂ ಕಾಡು, ಅರಮನೆ, ಸರೋವರ, ಯುದ್ಧ, ವಸಂತ ಮಾಸ, ದೇಶ, ಸಂಧ್ಯಾಕಾಲ, ಸೂರ್ಯಾಸ್ತ ಮತ್ತು ಚಂದ್ರೋದಯ, ಉದ್ಯಾನ, ಚಳಿಗಾಲ ಮುಂತಾದ ಅಷ್ಟಾದಶ ವರ್ಣನೆಗಳು ಇಲ್ಲಿವೆ. ಇವುಗಳ ಜೊತೆಗೆ, ಬದುಕಿನಲ್ಲಿ ಬರುವ ತೀವ್ರವಾದ ಬಿಕ್ಕಟ್ಟಿನ ಸಂದರ್ಭಗಳು, ಮಾನಸಿಕ ತಲ್ಲಣ ಉಮ್ಮಳಗಳನ್ನು ಚಿತ್ರಿಸುವ ಸಂದರ್ಭದ ಕಾವ್ಯ ಭಾಗಗಳಿವೆ. ಉತ್ಕೃಷ್ಟ ಕಾವ್ಯಗಳಿಂದ ಅವುಗಳ ರಸಸ್ಥಾನಗಳಿಂದಾರಿಸಿದ ಕೆಲವು ಮನಕಲಕುವ ಸನ್ನಿವೇಶ ಭಾಗಗಳು ಇಲ್ಲಿ ಸ್ಥಾನ ಪಡೆದುಕೊಂಡಿವೆ. ಆದರೆ, ಶಿವಶರಣರ ಒಂದೂ ವಚನ ಇ್ಲ್ಲಲದಿರುವುದು ಈ ಗ್ರಂಥದ ಬಹು ಮುಖ್ಯ ಕೊರತೆಯಾಗಿದೆ.

ಒಂದೆರಡು ಕಡೆ ಕೆಲವು ತಪ್ಪು ಮಾಹಿತಿಗಳಿವೆ. ಉದಾಹರಣೆಗೆ ‘ದುರ್ಜನರ ಸಂಗ ಬಿಡಬೇಕು‘ ಎಂಬ 35ನೆಯ ಪಾಠವನ್ನು ರಗಳೆ ಛಂದಸ್ಸು ಎಂದು ನಮೂದಿಸಲಾಗಿದೆ. ವಾಸ್ತವವಾಗಿ ಅದು ದಾಸರ ಕೀರ್ತನೆ. ಕೀರ್ತನೆಗಳಲ್ಲಿ ಬರುವ ಎರಡು ಸಾಲುಗಳ ಪಲ್ಲವಿಯೂ ನಾಲ್ಕು ಸಾಲುಗಳ 3 ಚರಣಗಳೂ ಅಲ್ಲಿ ಬರುತ್ತದೆ. ರಗಳೆಗಳ ಹಾಗೆ ಸಾಲಿಗೆ ನಾಲ್ಕು ಗಣಗಳ ಹಾಗೂ ಎರಡೆರಡು ಸಾಲಿನ ಘಟಕದ ಆದಿ ಹಾಗೂ ಅಂತ್ಯಪ್ರಾಸಗಳಿಲ್ಲ.

ಈ ಸಂಕಲನಕ್ಕೆ ಕಿಟ್ಟೆಲ್ 16 ಪುಟಗಳಷ್ಟು ದೀರ್ಘವಾದ ಪಾಂಡಿತ್ಯಪೂರ್ಣ ಪ್ರಸ್ತಾವನೆಯನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಅದರಲ್ಲಿ ನಡುಗನ್ನಡ ಕಾವ್ಯದ ವೈಶಿಷ್ಟ್ಯಗಳನ್ನು ಗುರುತಿಸಿದ್ದಾರೆ. ಪ್ರಸ್ತಾವನೆಯಲ್ಲಿ ನೀಡಿರುವ ಹಲವಾರು ಅಡಿಟಿಪ್ಪಣಿಗಳು ಅನನ್ಯವೂ ಅಪೂರ್ವವೂ ಆದ ಸಂಶೋಧನೆಯ ಅಂಶಗಳನ್ನು ಒಳಗೊಂಡಿದೆ. ನಿದರ್ಶನಕ್ಕೆ: ಪುಲಿಗೆರೆಯ ಸೋಮೇಶ್ವರನ ಪುತ್ಥಳಿ ಪುಲಿಗೆರೆ ನಗರಿಯಲ್ಲಿ ಇತ್ತು, ಕ್ರಿ.ಶ. 1860ರಲ್ಲಿ ಮೋಗ್ಲಿಂಗ್ ಜರ್ಮನ್ ಭಾಷೆಯಲ್ಲಿ ‘ಲೀಡರ್ ಕ್ಯನರೀಸಿಶ್ಚರ್ ಸಿಂಗರ್‘ ಎಂಬ ಹೆಸರಿನಲ್ಲಿ ದಾಸರ ಪದಗಳನ್ನು ಅಚ್ಚು ಹಾಕಿಸಿದ್ದನು, ಎಂಬ ವಿವರಗಳನ್ನು ಗಮನಿಸಬಹುದು.

‘ಕರ್ನಾಟಕ ಕಾವ್ಯಮಾಲೆ‘ ಗ್ರಂಥದ ಸ್ವರೂಪವು ಇಂತಿದೆ: ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಂಕಲಿತ ಪಾಠದ ಶೀರ್ಷಿಕೆ, ಸ್ವೀಕೃತ ಕಾವ್ಯದ ವಸ್ತುಸೂಚಿ, ಛಂದಸ್ಸಿನ ಉಲ್ಲೇಖ, ಸ್ವೀಕೃತ ಪಠ್ಯ, ಪಾಠಾಂತರಗಳಿದ್ದ ಪಕ್ಷದಲ್ಲಿ ಪದ್ಯದ ಪಕ್ಕ ನಮೂದು, ಪದಚ್ಛೇದಂ, ಅನ್ವಯಂ  ಹಾಗೂ ಟೀಕು. 

ಒಂದೊಂದು ಪದ್ಯಕ್ಕೂ ಶೀರ್ಷಿಕೆ ಬಿಟ್ಟು ಉಳಿದ ಮೇಲಿನ ಏಳೂ ವಲಯಗಳನ್ನು ನೀಡುವುದರ ಮೂಲಕ ಬಿಡಿ ಪದ್ಯಗಳ ರಸಗ್ರಹಣಕ್ಕೆ ಈ ವಿಧಾನವು ಅನುವು ನೀಡಿದೆ ಹಾಗೂ ಕವಿತೆಯ ಸ್ವರೂಪ ಮತ್ತು ಆಂತರ್ಯಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಲು ಸಹಾಯಕವಾಗಿದೆ. ಕ್ಲಿಷ್ಟತೆಯಿಂದ ಕೂಡಿದ ಸಮಾಸಯುಕ್ತ ಪದಗಳನ್ನು ಬಿಡಿಸಿಕೊಟ್ಟಿರುವುದರಿಂದ ಸಹೃದಯರು ಕಾವ್ಯದ ರಸವನ್ನು ಆಸ್ವಾದಿಸಲು ಉಪಯುಕ್ತವಾಗಿದೆ.

ಕ್ರಿ.ಶ. 1853ರಿಂದ ಭಾರತಕ್ಕೆ ಬಂದ ಕಿಟ್ಟೆಲ್ 1903ರಲ್ಲಿ ತೀರಿಕೊಳ್ಳುವವರೆಗೂ ಕನ್ನಡ ಭಾಷೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ನೆಲೆಗಳಲ್ಲಿ ಅವರು ಸಲ್ಲಿಸಿದ ಸೇವೆ ಪ್ರಶಂಸನೀಯ. ‘ಕರ್ನಾಟಕ ಕಾವ್ಯಮಾಲೆ‘ ಕೃತಿಯಂತೂ ಮುಂದೆ ಅವರು ರಚಿಸಿದ ಕನ್ನಡ ಇಂಗ್ಲಿಷ್ ನಿಘಂಟಿಗೆ ವ್ಯಾಯಾಮಶಾಲೆಯ ಮಾದರಿಯಂತಿತ್ತು. ಕನ್ನಡದ ಆಂತಾಲಜಿಗಳ ಸರಮಾಲೆಯಲ್ಲಿ ‘ಕರ್ನಾಟಕ ಕಾವ್ಯಮಾಲೆ‘ ಒಂದು ಒಳ್ಳೆಯ ಆಣಿಮುತ್ತು ಎಂದು ಹೇಳಬಹುದು. ಆರೇ ವರ್ಷಗಳಲ್ಲಿ ಮರುಮುದ್ರಣವಾದದ್ದು ಈ ಕೃತಿ ಎಷ್ಟು ಜನಾದರಣೀಯವಾಗಿತ್ತು ಎಂಬುದಕ್ಕೆ ದ್ಯೋತಕ.