ರಾ.ರಘುನಾಥರಾಯ ಅವರ ‘ಕರ‌್ಣಾಟಕ ಭಾಷಾ ವ್ಯಾಕರಣೋಪನ್ಯಾಸ ಮನ್ಜರಿ 1894ರಲ್ಲಿ ಮುದ್ರಣಗೊಂಡಿರುವ ಅಪರೂಪದ ಕೃತಿ. ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಭಾಷಾಸ್ವರೂಪ ನಿರೂಪಣೆ ಇದ್ದರೆ, ಎರಡನೇ ಭಾಗದಲ್ಲಿ ‘ನವೀನೋತ್ಪತ್ತಿ ವಿವರಣೆಯಿದೆ. ಪುಸ್ತಕ ಒಟ್ಟು 118 ಪುಟಗಳನ್ನೊಳಗೊಂಡಿದೆ. ಬೆಲೆಯನ್ನು ನಮೂದಿಸಿಲ್ಲ.ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕರ್ಣಾಟ ವ್ಯಾಕರಣವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಸಂದರ್ಭದಲ್ಲಿ, ಸುಮಾರು ಮೂರು ವರ್ಷಗಳ ಕೆಳಗೆ ಈ ಉಪನ್ಯಾಸಗಳ ಮುಖ್ಯಾಂಶಗಳನ್ನು ಬರೆದಿಟ್ಟೆನು.
ಪರಿಷ್ಕರಿಸಿ ಮುದ್ರಿಸುವುದಕ್ಕೆ ತಕ್ಕಷ್ಟು ಕಾಲ ದೊರೆಯದಿದ್ದುದರಿಂದಲೂ, ಅಲ್ಪಜ್ಞನಾದ ನಾನು ವ್ಯಾಕರಣಶಾಸ್ತ್ರ ಗ್ರಂಥಗಳನ್ನು ಬರೆವುದಕ್ಕೆ ಬದಲಾಗಿ ನನಗಿಂತಲೂ ಪ್ರಾಜ್ಞರಾದವರು ಬರೆವುದು ಉತ್ತಮವೆಂದು ತೋರಿದುದರಿಂದಲೂ ಇಷ್ಟೂ ಕಾಲ ಸುಮ್ಮನಿದ್ದುದಾಯಿತು.
ಶಬ್ದಾನುಶಾಸನಕ್ಕೆ ಮೆ ರೈಸ್ ಸಾಹೇಬರವರು ಬರೆದಿರುವ ಪೀಠಿಕೆಯಲ್ಲಿಯೇ ಆಗಲಿ, ಕನ್ನಡ - ಇಂಗ್ಲಿಷ್ ನಿಘಂಟಿಗೆ ರೆವರೆಂಡ್ ಕಿಟ್ಟೆಲ್ ಸಾಹೇಬರು ಬರೆದಿರುವ ಪೀಠಿಕೆಯಲ್ಲಿಯೇ ಆಗಲಿ, ಹೊಸಗನ್ನಡದ ನಿಜಸ್ಥಿತಿ ಪ್ರಕಟನೆಗೆ ಬಾರದಿರುವುದನ್ನು ನೋಡಿ, ಸುಮ್ಮಗಿರುವುದು ಸರಿಯಲ್ಲವೆಂದು ನಂಬಿ, ಧೈರ್ಯ ಮಾಡಿ, ಈ ಉಪನ್ಯಾಸಗಳನ್ನು ಮುದ್ರಿಸಿರುತ್ತೇನೆ ಎಂದು ಕೃತಿಕಾರರು ಪೀಠಿಕೆಯಲ್ಲಿ ಕೃತಿರಚನೆಗೆ ಕಾರಣ ನೀಡಿದ್ದಾರೆ.
ಕೃತಿಯ ಪ್ರಥಮ ಭಾಗದಲ್ಲಿ ಗೌಡದ್ರಾವಿಡ ಭಾಷಾವರ್ಗಗಳ ವಿಷಯ, ದ್ರಾವಿಡ ಭಾಷಾವರ್ಗದ ನಾನಾ ಭಾಷೆಗಳ ವಿವರ, ದ್ರಾವಿಡ ಭಾಷೆಗಳಲ್ಲಿ ಕಾಣಬರುವ ಪರಸ್ಪರ ಸಂಬಂಧಗಳು, ದ್ರಾವಿಡ ಭಾಷೆಗಳು ಸಂಸ್ಕೃತದಿಂದ ಹುಟ್ಟಿದವುಗಳಲ್ಲ ಎನ್ನುವುದಕ್ಕೆ ನಿದರ್ಶನ, ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಇರುವ ಸಂಬಂಧ, ಸಂಸ್ಕೃತಕ್ಕೂ ಕನ್ನಡಕ್ಕೂ ಇರುವ ಸಂಬಂಧ, ಹೊಸಗನ್ನಡ ಹಾಗೂ ಅನ್ಯದೇಶೀಯ ಭಾಷೆಗಳಿಗೂ ಇರುವ ಸಂಬಂಧ- ಇವುಗಳನ್ನು ಕುರಿತ ದೀರ್ಘ ವಿವರಣೆಗಳಿವೆ.
ಎರಡನೇ ಭಾಗದಲ್ಲಿ ಕನ್ನಡವು ಗ್ರಂಥಸ್ಥವಾಗಿ ನಿಂತ ಕಾಲ, ಕನ್ನಡದ ಕಾಲ ವಿಭೇದಗಳು, ಹಳಗನ್ನಡ ಹೊಸಗನ್ನಡಗಳೆಂಬ ವಿಭೇದಗಳಿಗೆ ಅರ್ಥನಿರ್ಣಯ, ಹೊಸಗನ್ನಡವು ಪ್ರಾಬಲ್ಯದಶೆಗೆ ಬಂದ ಸಂದರ್ಭ, ಹೊಸಗನ್ನಡಕ್ಕೂ ಹಳಗನ್ನಡಕ್ಕೂ ಇರುವ ಮುಖ್ಯ ಭೇದಗಳು, ಹೊಸಗನ್ನಡಕ್ಕೆಂದು ರಚಿಸಿರುವ ವ್ಯಾಕರಣ ಪುಸ್ತಕಗಳ ವಿಷಯ ಹಾಗೂ ಕರ್ಣಾಟಕ ವ್ಯಾಕರಣ ರಚನಾಕ್ರಮ- ಇವುಗಳನ್ನು ಕುರಿತ ಚರ್ಚೆ ಹಾಗೂ ವಿಶ್ಲೇಷಣೆಗಳಿವೆ.
ಲೇಖಕರು ವ್ಯಾಕರಣವೆಂದು ನಿರೂಪಿಸಿರುವ ಅನೇಕ ಅಭಿಪ್ರಾಯಗಳಲ್ಲಿ ಆಧುನಿಕ ಭಾಷಾವಿಜ್ಞಾನಿಯೊಬ್ಬನ ತಿಳಿವಳಿಕೆಯನ್ನು ಗಮನಿಸಬಹುದು. ಯಾವುದೇ ಪೂರ್ವಾಭಿಪ್ರಾಯಗಳಿಗೆ ಒಳಗಾಗದೆ ಸಮಚಿತ್ತದಿಂದ ತಮ್ಮ ಖಚಿತ ಅಭಿಪ್ರಾಯಗಳನ್ನು ನೀಡಿದ್ದಾರೆ. ಇದು ಶಾಸ್ತ್ರಗಳ ಬರಹಗಾರನೊಬ್ಬನಿಗೆ ಇರಬೇಕಾದ ಎಲ್ಲ ಶಿಸ್ತುಗಳನ್ನು ಅಳವಡಿಸಿಕೊಂಡಿರುವ ಬರವಣಿಗೆ.
ದೇಶೀಯ ಭಾಷೆಗಳನ್ನು ಕುರಿತು ವಿವರಿಸಿರುವ ಸಂದರ್ಭದಲ್ಲಿ ಲೇಖಕರು- ಅರಬ್ಬಿ, ಇಂಗ್ಲೀಷು ಮುಂತಾದ ಭಾಷೆಗಳು ಇಂಡಿಯಾ ದೇಶದಲ್ಲಿ ಅನೇಕರಿಂದ ಆಡಲ್ಪಟ್ಟಿದ್ದರೂ ಅವು ದೇಶೀಯ ಭಾಷೆಗಳಲ್ಲ ಎಂದು ನಿರ್ಣಯಿಸಿ, ಅದಕ್ಕೆ ಕಾರಣಗಳನ್ನು ನೀಡುತ್ತಾರೆ. ಈ ವಿವರಣೆಗಳಲ್ಲಿ ಆಧುನಿಕ ವಿಮರ್ಶಕನಿಗಿರುವ ಸೂಕ್ಷ್ಮ ಒಳನೋಟಗಳನ್ನು ಗಮನಿಸಬಹುದು.
ದ್ರಾವಿಡ ಭಾಷೆಗಳು ಸಂಸ್ಕೃತಜನ್ಯವಲ್ಲ ಮತ್ತು ದ್ರಾವಿಡ ಭಾಷೆಗಳು ಪರಸ್ಪರ ಸಂಬಂಧವುಳ್ಳ ಭಾಷೆಗಳು ಎಂಬುದನ್ನು ಲೇಖಕರು ನಿದರ್ಶನಪೂರ್ವಕವಾಗಿ ಖಚಿತಪಡಿಸಿರುವುದು ಈ ಕೃತಿಯ ವಿಶೇಷತೆ. ಜೊತೆಗೆ ಹಳಗನ್ನಡ ಹೊಸಗನ್ನಡಗಳೆಂಬ ಭೇದಗಳಿಗೆ ಅರ್ಥನಿರ್ಣಯ ಮಾಡುವಲ್ಲಿ ಕಾಲ್ಡ್‌ವೆಲ್, ರೈಸ್ ಮಕತ್ತು ಕಿಟ್ಟೆಲ್‌ರಿಗಿಂತ ಭಿನ್ನವಾದ ಆಲೋಚನಾ ಕ್ರಮವನ್ನು ಪ್ರತಿಪಾದಿಸುತ್ತಾರೆ. ಒಂದು ದೃಷ್ಟಿಯಿಂದ ಇಲ್ಲಿ ದೇಸಿ ಚಿಂತನೆಯ ಹೊಳಹುಗಳು ಇರುವುದನ್ನು ಮನಗಾಣಬಹುದು.
1820ರಲ್ಲಿ ಪ್ರಕಟವಾದ ‘A Grammer of the Karnatak Language’ ಎಂಬ ಜಾನ್ ಮೆಕರೆಲ್ ಅವರ ವ್ಯಾಕರಣವನ್ನೂ ಮತ್ತು 1838ರಲ್ಲಿ ಪ್ರಕಟವಾದ ಶ್ರೀರಂಗಪಟ್ಟಣದ ಕೃಷ್ಣಮಾಚಾರ‌್ಯರ ‘ಹೊಸಗನ್ನಡ ನುಡಿಗನ್ನಡಿ ಎಂಬ ಹೊಸಗನ್ನಡ ವ್ಯಾಕರಣವು ಎಂಬ ವ್ಯಾಕರಣಗಳನ್ನು ಕುರಿತು-
‘ಜಾನ್ ಮೆಕರೆಲ್ ಸಾಹೇಬರೊಬ್ಬರು ಗ್ರಾಮರ್ ಎಂಬೊಂದು ವ್ಯಾಕರಣ ಪುಸ್ತಕವನ್ನು ಮಾಡಿದರೆಂದು, ಹೊಸಗನ್ನಡ ನುಡಿಗನ್ನಡಿಯನ್ನು ಬರೆದ ಶ್ರೀರಂಗಪಟ್ಟಣದ ಕೃಷ್ಣಮಾಚಾರ‌್ಯರವರು ತಾವು ಬರೆದ ಗ್ರಂಥದ ಪೀಠಿಕೆಯಲ್ಲಿ ಹೇಳುತ್ತಾರೆ. ಇವರು ತಮ್ಮ ವ್ಯಾಕರಣ ಸೂತ್ರಗಳನ್ನು ಇಂಗ್ಲೀಷಿನಲ್ಲಿ ಬರೆದರಂತೆ.
ಇದನ್ನು ನೋಡಿದರೆ ತಮ್ಮ ಪುಸ್ತಕವನ್ನು ತಮ್ಮ ಯೂರೋಪಿಯನ್ ಸಹೋದರರಿಗೆ ಬರೆದಂತೆ ತೋರುತ್ತದೆ. ಇವರಿಗೆ ಕನ್ನಡವೆಷ್ಟು ತಿಳಿದಿತ್ತೋ ನಮಗೆ ತಿಳಿಯದು ಎಂದು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಅವರು ತಮ್ಮ ವಿಷಯಕ್ಕೆ ಸಂಬಂಧಪಟ್ಟ ಕೃತಿಯೊಂದು ಹೊರಬಂದಿರುವುದನ್ನು ಗುರುತಿಸಿ, ಅದನ್ನು ಗ್ರಹಿಸಲಾರದ ಸ್ಥಿತಿಯನ್ನು ಒಪ್ಪಿಕೊಂಡಿರುತ್ತಾರೆ.
ಮುಂದುವರೆಯುತ್ತಾ, ‘ಕರ್ಣಾಟಕ ದೇಶದಲ್ಲೆಗ ಹಿರಿಯರು ಮಾತನಾಡಿಕೊಳ್ಳುವ ಮಾತಿಗೆ ಕೃಷ್ಣಮಾಚಾರ‌್ಯರು ವ್ಯಾಕರಣವನ್ನು ಕಲ್ಪಿಸಿದರು; ಮತ್ತು ಅವರ ದಾರಿಯನ್ನು ಹಿಡಿದು ರಾಮಸ್ವಾಮಿ ಶಾಸ್ತ್ರಿಗಳು ಕನ್ನಡ ದೇಶದಲ್ಲಿ ಈಗಿನ ಜನರು ಮಾತನಾಡುವ ಮಾತಿಗೆ ವ್ಯಾಕರಣವನ್ನು ಕಲ್ಪಿಸಿದರೇ ಹೊರತು ಗ್ರಂಥದ ಪ್ರಯೋಗಗಳನ್ನು ಅನುಸರಿಸಿ ವ್ಯಾಕರಣವನ್ನು ಬರೆಯಲಿಲ್ಲ.
ಆದುದರಿಂದಲೇ ಇವರ ವ್ಯಾಕರಣಗಳಲ್ಲಿ ಗ್ರಂಥದ ಪ್ರಯೋಗಗಳ ಮಾತನ್ನೆತ್ತಿಲ್ಲ ಎಂದು ಹೇಳುತ್ತಾರೆ. ಈ ಮೂಲಕ, ಆ ಕಾಲಕ್ಕೆ ಪ್ರಚುರದಲ್ಲಿದ್ದ ಭಾಷೆ ಎಂದರೆ ಗ್ರಂಥಸ್ಥ ಭಾಷೆ, ಆಡುಭಾಷೆಯಲ್ಲ ಎಂಬ ಹಳೆಯ ಅಭಿಪ್ರಾಯವನ್ನೇ ಪುಷ್ಟೀಕರಿಸಿದ್ದಾರೆ.
ಭಾಷೆಯನ್ನು ಕುರಿತ ಸಾಂಪ್ರದಾಯಿಕ ಅಭಿಪ್ರಾಯಗಳನ್ನು ಲೇಖಕರು ಕೆಲವೆಡೆ ಪ್ರತಿಪಾದಿಸಿದರೂ, ಅಲ್ಲಲ್ಲಿ ಆಧುನಿಕ ವಿಚಾರಗಳನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ಕನ್ನಡ ವ್ಯಾಕರಣ ಮತ್ತು ಭಾಷಾವಿಜ್ಞಾನ ಶಾಸ್ತ್ರಗ್ರಂಥಗಳ ಸರಣಿಯಲ್ಲಿ ಈ ಕೃತಿಗೆ ಮಹತ್ವದ ಸ್ಥಾನವಿದೆ.