ಕರ್ಣಾಟ ಭಾಷಾಕರಂ
ಮುನ್ನುಡಿ

‘ಕರ್ಣಾಟ ಭಾಷಾಕರಂ ಎಂಬ ಅಕಾರಾದಿ ನಿಘಂಟು’ ಎನ್ನುವ ಈ ನಿಘಂಟನ್ನು ಶ್ರೀಮನ್ಮಹಾರಾಜ ಚಾಮರಾಜೇಂದ್ರ ಒಡೆಯರ್ ಬಹದೂರವರ ಅರಮನೆಯ ವಿದ್ವಾಂಸರಾದ ನರಹರಿ ಜಯರಾಯಾಚಾರ್ಯರಿಂದ ವಿರಚಿಸಲ್ಪಟ್ಟಿದೆ. 1891ನೆಯ ಏಪ್ರಿಲ್ ತಿಂಗಳಲ್ಲಿ ಈ ಕೃತಿಯು ಬೆಂಗಳೂರಿನ ಅಲ್‌ಬಿಯನ್ ಪ್ರೆಸ್ ಮುದ್ರಾಕ್ಷರ ಶಾಲೆಯಲ್ಲಿ ಮುದ್ರಣಗೊಂಡಿದೆ. ‘‌

12+228 ಪುಟಗಳ 1000 ಪ್ರತಿಗಳು ಮುದ್ರಣಗೊಂಡ ಈ ಕೃತಿಯ ಬೆಲೆ ಒಂದು ರುಪಾಯಿ ನಾಲ್ಕು ಆಣೆ. ಪುಸ್ತಕದ ಹಿಂಬದಿಯಲ್ಲಿ ‘ಗ್ರಂಥಕರ್ತೃಗಳ ಸ್ವಹಸ್ತಾಕ್ಷರದ ರುಜು ಇಲ್ಲದ ಪುಸ್ತಕವನ್ನು ಯಾರು ಪಡೆದಿದ್ದರೂ ಅವರು ಪುಸ್ತಕವನ್ನು ಕಳೆದುಕೊಳ್ಳುವರಲ್ಲದೇ, ಕಳವಿನ ಛಾರ್ಜಿಗೆ ಗುರಿಯಾಗುತ್ತಾರೆ’ ಎನ್ನುವ ಒಂದು ನೋಟೀಸು ಇದ್ದು, ಅದು ಅಂದಿನ ಕಾಲಘಟ್ಟದಲ್ಲಿಯೂ ಕಾಪಿರೈಟು ಕಾನೂನನ್ನು ಉಲ್ಲಂಘಿಸುವವರಿದ್ದರು ಎನ್ನುವುದಕ್ಕೆ ಸಾಕ್ಷಿಯಂತಿದೆ.

15ನೆಯ ಜೂನ್ 1905ರವರೆಗೆ ಜೀವಿಸಿದ್ದ ಜಯರಾಮಾಚಾರ್ಯರು ಮೈಸೂರು ಅರಮನೆಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು, ಮೈಸೂರಿನ ಮಹಾರಾಣಿ ಬಾಲಿಕಾ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದವರು. ಶ್ರೀಯುತರು ‘ಚಂದ್ರಹಾಸ’, ‘ನಾಡೀ ಪ್ರಕರಣ’, ‘ಅನುಕರಣಗೀತಲಹರಿ’, ‘ಕರ್ನಾಟಕ ವೇಣೀಸಂಹಾರ ನಾಟಕಂ’, ‘ಹರಿಶ್ಚಂದ್ರ ನಾಟಕಂ’, ‘ಕಲ್ಯಾಣ ಗೀತಾವಳಿ’, ‘ಚಂಡಕೌಶಿಕ ನಾಟಕ’, ‘ಕರ್ಣಾಟಕ ಪಾಕಶಾಸ್ತ್ರ’, ‘ಕರ್ಣಾಟಕ ಶೌಚನಿರ್ಣಯ’, ‘ಭವಿಷ್ಯೋತ್ತರ ಪುರಾಣಂ’, ‘ಮದಾಲಸಾ ಪರಿಣಯ’, ‘ಮಹಾಬಧಿರಪ್ರಹಸನ’, ‘ರಾಮವರ್ಮಲೀಲಾವತೀ ಚರಿತ್ರೆ’, ‘ಪಾಂಚಾಲಿಕಾ ಪರಿಣಯಂ’, ‘ಸಿರಿಯಾಳ ರಾಜ’, ‘ನರಪತಿಚರಿತಂ’, ‘ಶ್ರೀವರ ನಂದೀ ಕಲ್ಯಾಣಂ’ ಎನ್ನುವ ಕೃತಿಗಳನ್ನಲ್ಲದೆ ಹಲವಾರು ಸಂಗೀತದ ಕೃತಿಗಳನ್ನು ರಚಿಸಿರುತ್ತಾರೆ. ಎಂ. ಆನಂದರಾಯ ಎನ್ನುವವರ ಷೇಕ್ಸ್‌ಪಿಯರ್ ನಾಟಕಾನುವಾದಗಳಿಗೆ ಕಂದಪದ್ಯ, ವೃತ್ತಗಳನ್ನು ರಚಿಸಿಕೊಟ್ಟಿರುದ್ದಾರೆ. ಇವರ ‘ಕರ್ಣಾಟಕ ಪಾಕಶಾಸ್ತ್ರ’ ಕೃತಿಯು ತಮಿಳು–ತೆಲುಗು ಭಾಷೆಗಳಿಗೆ ಅನುವಾದಗೊಂಡಿದೆ.

‘ಶ್ರೀ ನರಸಿಂರಾಜ ಕರ್ಣಾಟಕ ಛಂದೋರಾಜ’,

‘ಶ್ರೀ ಕೃಷ್ಣರಾಜ ಕರ್ಣಾಟ ಭಾಷಾರತ್ನಾಕರಂ’,

‘ಶ್ರೀ ನರಸಿಂಹರಾಜ ಕರ್ಣಾಟ ಭಾಷಾಕರಂ‘, ‘ಶ್ರೀಹಾರಬಂಧ’, ‘ನವರತ್ನ ಮಾಲಿಕೆ’ ಎನ್ನುವ ಕೃತಿಗಳನ್ನು ರಚಿಸಿದ ಪಂಡಿತ ಜೆ. ರಘುಪತ್ಯಾಚಾರ್ಯ ಅವರು ಜಯರಾಯಾಚಾರ್ಯರ ಮಕ್ಕಳು ಎನ್ನುವ ಸಂಗತಿಯನ್ನು ಇಲ್ಲಿ ಪ್ರಾಸಂಗಿಕವಾಗಿ ತಿಳಿಸಬಹುದು. ಜಯರಾಯಾಚಾರ್ಯರ ತಂದೆಯವರಾದ ನರಹರ್ಯಾಚಾರ್ಯರು ಮೈಸೂರು ರಾಜಾಸ್ಥಾನದ ವಿದ್ವತ್ಕುಲ ಸಂಭವರಾಗಿದ್ದು ಅರಮನೆಯ ಕೋಟೆಯಲ್ಲಿ ವಾಸವಾಗಿದ್ದು ಬಹುಮಂದಿ ಶಿಷ್ಯರಿಗೆ ತರ್ಕವೇದಾಂತಶಾಸ್ತ್ರ ಪಾಠವನ್ನು ಮಾಡುತ್ತಿದ್ದರು. ಹೀಗೆ ಜಯರಾಯಾಚಾರ್ಯರು ವಿದ್ವತ್‌ ಕುಟುಂಬಕ್ಕೆ ಸೇರಿದವರಾಗಿದ್ದರು.

ಜಯರಾಯಾಚಾರ್ಯರು 1902ರಷ್ಟು ಹಿಂದೆಯೇ ಚಿಕ್ಕಮಕ್ಕಳಿಗಾಗಿ ‘ಅನುಕರಣಗೀತಲಹರಿ’ ಎನ್ನುವ ಕವಿತಾ ಸಂಕಲನವನ್ನು ಪ್ರಕಟಿಸಿದರು. ಅದರಲ್ಲಿನ ‘ರೈಲುಗಾಡಿ’ ಎನ್ನುವ ಕವಿತೆ ಹೀಗಿದೆ:

ಓಡುತಿರ್ಪುದು | ರೈಲು || ಪಲ್ಲವಿ ||
ನೋಡು ಕೂಡಿರುವ ಜನರ | ಗಾಡಿಯನೆಳಕೊಂಡು ಬೇಗ || ಅನುಪಲ್ಲವಿ ||
ಮುಂದಿನಿಂಜಿನಲ್ಲಿ ಬೆಂಕಿ | ಯೊಂದೆಡೆಯೊಳಗಾ ಬೆಂಕಿ ||
ಯಿಂದ ನೀರು ಕಾಯ್ದು ಹಬೆಯು | ಬಂದಪುದಾ ಹಬೆಯ ಬಲದಿ || ಚರಣ ||’

ಕುತೂಹಲಕ್ಕಾಗಿ ಈ ಕವಿತೆಯೊಂದಿಗೆ ಎಸ್.ಜಿ. ನರಸಿಂಹಾಚಾರ್ಯರ ‘ಹೊಗೆಯ ಗಾಡಿ’ ಎಂಬ ಕವಿತೆಯನ್ನು ಹೋಲಿಸಿ ನೋಡಬಹುದು.

ಎಸ್.ಜಿ.ಎನ್ ಅವರ ಕವಿತೆ:

‘ನೊಗವೆತ್ತಿನ ಕೊರಳೊಳಿಡುವ ಪಾಡಿಲ್ಲ |
ಬಿಗಿದ ಕುದುರೆಯ ಹೂಡುವಾಯಸವಿಲ್ಲ ||
ಮಿಗೆ ಕಾದ ನೀರ ಹಬೆಯಿಂದ ಬಲುಬೇಗ |
ಹೊಗೆಯ ಗಾಡಿಯು ನೋಡು ಹೋಗುತಿಹುದೀಗ ||’

1900ರ ಕಾಲಘಟ್ಟದಲ್ಲಿನ ಕನ್ನಡ ಕವಿತೆಗಳಲ್ಲಿ ದ್ವಿತೀಯಾಕ್ಷರ ಪ್ರಾಸ ಇನ್ನೂ ಇತ್ತು ಎನ್ನುವುದಕ್ಕೆ ಈ ಪದ್ಯಗಳು ಸಾಕ್ಷಿ.

ಇನ್ನು ಈ ಕೃತಿಗೆ ಬಂದರೆ ಈ ಕೃತಿಯ ಪೂರ್ತಿ ಹೆಸರು ‘ಕರ್ಣಾಟ ಭಾಷಾಕರಂ ಎಂಬ ಅಕಾರಾದಿ ನಿಘಂಟು’. ತಮಿಳು ಭಾಷೆಯಲ್ಲಿ ನಿಘಂಟು ಎನ್ನುವ ಶಬ್ದಕ್ಕೆ ಪರ್ಯಾಯವಾಗಿ ಅಕಾರಾದಿ ಎನ್ನುವ ಪದವನ್ನು ಬಳಸುತ್ತಾರೆ. ಉದಾಹರಣೆಗೆ 1882ರಲ್ಲಿ ತಮಿಳಿನಲ್ಲಿ M. Winslow ರಚಿಸಿದ ‘ವಿನ್‌ಸ್ಲೋವಿನ್ ತಮಿಳ್-ಆಂಗಿಲ ಅಕಾರಾದಿ’ ಎನ್ನುವ ನಿಘಂಟನ್ನು ಗಮನಿಸಬಹುದು. ಬಹುಶಃ ಕನ್ನಡದಲ್ಲಿಯೂ ಶತಮಾನದ ಹಿಂದೆ ಈ ಅಕಾರಾದಿ ಎನ್ನುವ ಶಬ್ದ ನಿಘಂಟು ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದ್ದಿರಬಹುದು. ಇಂಗ್ಲಿಷ್ ಶಿಕ್ಷಣ ಭಾರತದಲ್ಲಿ ಬೇರೂರಿದ ನಂತರ ದೇಶ ಭಾಷೆಗಳಲ್ಲಿ ಅಕಾರಾದಿ ಕ್ರಮ ಚಾಲನೆಗೆ ಬಂದದ್ದರಿಂದ ಲೇಖಕರು ಇದನ್ನು ಅಕರಾದಿ ನಿಘಂಟು ಎಂದು ಕರೆದಿರಬಹುದು. ಪೀಠಿಕೆಯಲ್ಲಿ ಲೇಖಕರು ತಮ್ಮ ಈ ಗ್ರಂಥರಚನೆಯ ಸಂದರ್ಭದಲ್ಲಿ ಬೇರೆ ಬೇರೆ ಮಜಲುಗಳಲ್ಲಿ ನೆರವು ನೀಡಿದ ಮುನಸೀಫ ಆನಂದರಾಯರು,ಶ್ರೀ ವೈಯಾಕರಣ ಭೀಮಾಚಾರ್ಯರು ಹಾಗೂ ಶ್ರೀ ಶಿಡಲೀಪುರದ ಲಕ್ಷ್ಮೀನರಸಿಂಹಾಚಾರ್ಯರು ಮುಂತಾದವರನ್ನು  ಸ್ಮರಿಸಿಕೊಂಡಿರುತ್ತಾರೆ.

ಸುಮಾರು 7500 ಕನ್ನಡ ಶಬ್ದಗಳಿಗೆ ಅರ್ಥವನ್ನು ನೀಡಿರುವ ಈ ನಿಘಂಟಿನ ಆರಂಭದ ಪೀಠಿಕೆಯಲ್ಲಿ ಜಯರಾಯಾಚಾರ್ಯರು ಈ ನಿಘಂಟಿನ ರಚನೆಗೆ ಕಾರಣವನ್ನು– ‘ಈಗ್ಗೆ ಸುಮಾರು ನೂರು ವರ್ಷಗಳ ಹಿಂದೆ ಅತ್ಯುತ್ತಮ ಸ್ಥಿತಿಯಲ್ಲಿ ಪ್ರಚಾರಗೊಂಡಿದ್ದ ಕರ್ಣಾಟ ಭಾಷೆಯು ಈಚೆಗೆ ಪ್ರೋತ್ಸಾಹಕರಿಲ್ಲದೆ ಮಾಲಿನ್ಯ ಸ್ಥಿತಿಗೆ ಬಂದಂತೆಯೇ ತದ್ಭಾಷಾ ಪರಿಚಯಸ್ಥರಾದ ವಿದ್ವಾಂಸರೂ ಪ್ರೋತ್ಸಾಹರಹಿತರಾಗಿ ದಿನೇ ದಿನೇ ಕಡಿಮೆಯಾಗುತ್ತಾ ಬಂದರು. ಆದಕಾರಣ ಪುರಾತನ ಕರ್ಣಾಟಕ ಗ್ರಂಥಗಳಲ್ಲಿ ಪ್ರಯೋಗಿಸಿ ಇರತಕ್ಕ ಕೆಲಕೆಲವು ಪದಗಳಿಗೆ ನಿಷ್ಕೃಷ್ಟಗಳಾದ ಅರ್ಥಗಳೇ ಗೊತ್ತಿಲ್ಲದೆ ಸಂದರ್ಭಾನುಸಾರವಾಗಿ ಅವರವರಿಗೆ ಅನುಕೂಲವಾಗುವಂತೆ ಅರ್ಥಗಳನ್ನು ಹೇಳುತ್ತಾರೆಯಾಗಿ ದೇಶಭಾಷಾ ಪ್ರಾಚುರ್ಯವು ಕಡಮೆಯಾಗುತ್ತಾ ಬಂತು.

ಈ ಸಂದರ್ಭವನ್ನು ತಿಳಿದು, ಈ ದೇಶಭಾಷೆಯನ್ನು ಚನ್ನಾಗಿ ಅಭಿವೃದ್ಧಿಗೆ ತರಬೇಕೆಂದು ಸಂಪೂರ್ಣಾಭಿಮಾನವುಳ್ಳ ನಮ್ಮ ಶ್ರೀಮನ್ಮಹಾರಾಜ ಚಾಮರಾಜೇಂದ್ರ ವಡೆಯುರ್ ಬಹದ್ದೂರರವರ ಅಭಿಪ್ರಾಯಾನುಸಾರವಾಗಿ ಲೇಟ್ ದಿವಾನರಾಗಿದ್ದ ರಂಗಾಚಾರ್ಯರವರೂ, ಮತ್ತು ದರ್ಬಾರ್ ಭಕ್ಷಿ ಮ|| ಅಂಬಿಲ್ ನರಸಿಂಹೈಯೈಂಗಾರರವರೇ ಮೊದಲಾದ ಮಹನೀಯರೂ ಕರ್ಣಾಟ ಭಾಷಾ ಪರಿಚಯವಿದ್ದ ವಿದ್ವಾಂಸರಿಗೂ, ಇತರರಿಗೂ ನಾನಾವಿಧವಾಗಿ ಪ್ರೋತ್ಸಾಹಿಸಿದ್ದಲ್ಲದೆ, ಕರ್ಣಾಟ ಭಾಷಾಭಿವೃದ್ಧಿಗೆ ತಕ್ಕ ಸಾಧನಗಳನ್ನೂ ಕಲ್ಪಿಸಿದರಾದ ಕಾರಣ ಕರ್ಣಾಟ ಭಾಷೆಯು ಮೈಸೂರು ದೇಶದಲ್ಲಿ ಪ್ರಕೃತದಲ್ಲಿ ಅತ್ಯುತ್ತಮವಾಗಿ ಪ್ರಚಾರಗೊಂಡಿರುವುದಕ್ಕೆ ಏತದ್ದೇಶೀಯರನೇಕರು ನೂತನವಾಗಿ ಮಾಡಿರತಕ್ಕ ಗ್ರಂಥಗಳು ಪ್ರಸಿದ್ಧಿಗೆ ಬಂದಿರುವುದೇ ದೃಷ್ಟಾಂತವಾಗಿರುವುದು....

ಈ ಗ್ರಂಥಗಳಲ್ಲಿ ಪ್ರಯೋಗಿಸಿರತಕ್ಕ ಪದಗಳಿಗೆ ಸರಿಯಾದ ಅರ್ಥಗಳನ್ನು ಇತರ ಸಹಾಯವಿಲ್ಲದೆ ತಿಳಿದುಕೊಳ್ಳುವುದು ವಿದ್ಯಾರ್ಥಿಗಳಿಗೆ ದುರ್ಘಟವಾಗಿರುವುದು. ಮತ್ತು ಈ ಪದಕ್ಕೆ ಇದೇ ಅರ್ಥವೆಂದು ನಿಸ್ಸಂದೇಹವಾಗಿ ಗೊತ್ತು ಮಾಡಿಕೊಳ್ಳುವುದಕ್ಕೂ ತಕ್ಕ ಸುಬದ್ಧವಾದ ನಿಘಂಟೂ ಇಲ್ಲವಾಗಿ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳು ಶ್ರಮ ಪಡುತ್ತಾರೆಂದು ತಿಳಿದು ಸಾಧ್ಯವಾದ ಮಟ್ಟಿಗೂ ಅವರಿಗೆ ಸ್ವಶಕ್ತ್ಯನುಸಾರವಾಗಿ ಸಹಾಯವನ್ನು ಮಾಡಬೇಕೆಂದು ನನಗೆ ಯೋಚನೆ ತೋರಿದ್ದರಿಂದಲೂ ಕೆಲವು ಮಹನೀಯರಾದ ಮಿತ್ರರು ನನಗೆ ಪ್ರೋತ್ಸಾಹಿಸಿದ್ದರಿಂದಲೂ ಈ ಕರ್ಣಾಟ ಭಾಷಾಕರ  ವೆಂಬ ಅಕಾರಾದಿ ನಿಘಂಟನ್ನು ಬರೆಯಲು ಯತ್ನಿಸಿ, ಶಬ್ದಮಂಜರಿ, ಕಬ್ಬಿಗರ ಕೈಪಿಡಿ, ಭಾರತ ನಿಘಂಟು, ಚತುರಾಸ್ಯ ನಿಘಂಟು, ಮಂಗರಸ ನಿಘಂಟು ಇವುಗಳ 1,2,3 ಪ್ರತಿಗಳನ್ನು ಬಹು ಶ್ರಮದಿಂದ ಸಂಗ್ರಹಿಸಿ... ಆ ಪದಗಳಿಗೆ ಹೊಸಗನ್ನಡದಲ್ಲಿ ಅರ್ಥಗಳನ್ನೂ... ಪ್ರಯೋಗವು ಅಲ್ಲೇ ಗೊತ್ತಾಗುವಂತೆಯೂ, ಈ ಪುಸ್ತಕವನ್ನು ಬರೆದಿರುತ್ತೇನೆ’. ಈ ಮಾತುಗಳು ನಿಘಂಟುಕಾರರು ಪಟ್ಟ ಅಪಾರ ಶ್ರಮವನ್ನು ತಿಳಿಸಿಕೊಡುತ್ತದೆ. ಆ ಕಾಲಘಟ್ಟದ ಹೊತ್ತಿಗೆ ಇನ್ನೂ ಕಿಟೆಲ್ ನಿಘಂಟು ಹೊರಬಂದಿರಲಿಲ್ಲ.

ಈ ನಿಘಂಟಿನಲ್ಲಿ ಲೇಖಕರೇ ಹೇಳುವಂತೆ ಹಳೆಯ ಕಾವ್ಯ ಪ್ರಯೋಗ, ತತ್ಸಮ, ತದ್ಭವ, ದೇಶ್ಯ ಶಬ್ದಗಳಿಗೆ ಹೊಸಗನ್ನಡದಲ್ಲಿ ಅರ್ಥವನ್ನು ನೀಡಲಾಗಿದೆ. ಪ್ರಕೃತಿ, ಪ್ರತ್ಯಯ, ಸಮಾಸಾದಿ ವಿಭಾಗಗಳನ್ನು ತಿಳಿದುಕೊಳ್ಳುವಂತೆಯೂ ಕೆಲವು ಪದಗಳಿಗೆ ಅಲ್ಲಿಯೇ ಪ್ರಯೋಗವು ಗೊತ್ತಾಗುವಂತೆಯೂ ಬರೆಯಲಾಗಿದೆ. ನಿಘಂಟು ತಜ್ಞರಾಗಿದ್ದ ಪ್ರೊ. ಎನ್. ಬಸವಾರಾಧ್ಯರು ಈ ನಿಘಂಟನ್ನು ತನ್ನ ಇತಿಮಿತಿಯೊಳಗೆ ಇದು ತಕ್ಕ ಒಳ್ಳೆಯ ನಿಘಂಟು ಎಂದು ಅಭಿಪ್ರಾಯಪಟ್ಟಿರುತ್ತಾರೆ. 1900ರ ಕಾಲಘಟ್ಟದಲ್ಲಿ ಕನ್ನಡ ಕಲಿಯುವ ವಿದ್ಯಾರ್ಥಿಗಳು ವಿಶೇಷವಾಗಿ ಬಳಸುತ್ತಿದ್ದ, ದೇಶಿಯ ವಿದ್ವಾಂಸರೊಬ್ಬರು ರಚಿಸಿದ ಈ ‘ಕರ್ಣಾಟ ಭಾಷಾಕರಂ  ನಿಘಂಟು’ ಕಿಟೆಲ್ ಪೂರ್ವ ನಿಘಂಟುಗಳಲ್ಲಿ ಗಮನ ಸೆಳೆದ ಒಂದು ನಿಘಂಟಾಗಿದೆ.