ಎರಡು ಆಣೆ ಬೆಲೆಯ 60 ಪುಟಗಳ ಕಿರಿಯಾಕಾರದ ಹದಿನಾರು ಅಧ್ಯಾಯಗಳನ್ನೊಳಗೊಂಡಿರುವ ಕೇಂಬಲ್ ಅಯ್ಯನವರ (Colins Campbell ) ‘ಕನ್ನಡ ವ್ಯಾಕರಣ ಸಾರ’ ಕೃತಿಯು ಮೊದಲು ಮುದ್ರಣಗೊಂಡದ್ದು 1841ರಲ್ಲಿ; ಬೆಂಗಳೂರು ಟ್ರ್ಯಾಕ್ಟ್ ಮತ್ತು ಸ್ಕೂಲ್ ಬುಕ್ ಸೊಸೈಟಿಗಾಗಿ ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್‌ನಲ್ಲಿ. ಪ್ರಸ್ತುತ ಕೃತಿಯು ಆ ಕೃತಿಯ 4ನೆಯ ಆವೃತ್ತಿಯಾಗಿದ್ದು 1854ರಲ್ಲಿ ಮರು ಮುದ್ರಣ ಗೊಂಡಿದೆ.
13 ವರ್ಷಗಳಲ್ಲಿ 4 ಬಾರಿ ಮುದ್ರಣಗೊಂಡಿರುವುದು ಅಂದಿನ ಕಾಲಘಟ್ಟದಲ್ಲಿನ ಈ ಕೃತಿಯ ವ್ಯಾಪಕ ಬಳಕೆಗೆ ಪುರಾವೆಯಂತಿದೆ. 1893 ರಲ್ಲಿ ಇದೇ ಮುದ್ರಣಾಲಯದಿಂದ ಇದರ 11ನೆಯ ಮುದ್ರಣವೂ 1894ರಲ್ಲಿ 12ನೆಯ ಆವೃತ್ತಿಯೂ ಹೊರಬಂದಿದೆ. ಅಂದಿನ ಕಾಲಘಟ್ಟದಲ್ಲಿ ಮುಂಬಯಿಯಲ್ಲಿ ಶಿಕ್ಷಣಾಧಿಕಾರಿಯಾಗಿದ್ದ ಬಾಳಾಶಾಸ್ತ್ರಿ ಜಾಂಭೇಕರನು ‘ಕನ್ನಡ ವ್ಯಾಕರಣ ಸಾರವು’ ಕೃತಿಯ 200 ಪ್ರತಿಗಳನ್ನು ಖರೀದಿ ಮಾಡಿ ಮುಂಬಯಿ ಪ್ರಾಂತ ಭಾಗದ ಕನ್ನಡ ಶಾಲೆಗಳಿಗೆ ವಿತರಿಸುವಷ್ಟು ಇದರ ಮಹತ್ವವಿದ್ದಿತು.
ವಿಲಿಯಂ ಕ್ಯಾರಿಯ ‘ಎ ಗ್ರಾಮರ್ ಆಫ್ ದಿ ಕರ್ನಾಟ ಲ್ಯಾಂಗ್ವೇಜ್’ (1817), ಜಾನ್ ಮೆಕೆರಲ್‌ನು ರಚಿಸಿದ ‘ಎ ಗ್ರಾಮರ್ ಆಫ್ ದಿ ಕರ್ನಾಟಕ ಲ್ಯಾಂಗ್ವೇಜ್’ (1820ರ), ಥಾಮಸ್ ಹಾಡ್ಸನ್ ಬರೆದ ‘ಎನ್ ಎಲಿಮೆಂಟರಿ ಗ್ರಾಮರ್ ಆಫ್ ದಿ ಕ್ಯಾನರೀಸ್ ಲ್ಯಾಂಗ್ವೇಜ್ (1859), ಹೆರಾಲ್ಡ್ ಸ್ಪೆನ್ಸರನ ‘ಎ ಕ್ಯಾನರೀಸ್ ಗ್ರಾಮರ್ ವಿತ್ ಗ್ರಾಡುಯೇಟೆಡ್ ಎಕ್ಸರ್‌ಸೈಜಸ್’ (1859), ತ್ಸೀಗ್ಲರ್ ಪ್ರಕಟಿಸಿದ
‘ಎ ಪ್ರ್ಯಾಕ್ಟಿಕಲ್ ಕೀ ಟು ಕ್ಯಾನರೀಜ್ ಲ್ಯಾಂಗ್ವೇಜ್’ (1872) ಹಾಗೂ ಕಿಟ್ಟೆಲ್ ವಿರಚಿತ ‘ಎ ಗ್ರಾಮರ್ ಆಫ್ ದಿ ಕ್ಯಾನರೀಸ್ ಲ್ಯಾಂಗ್ವೇಜ್’ (1908)– ಈ ಕೆಲವು ಕೃತಿಗಳು ಪಾಶ್ಚಿಮಾತ್ಯ ವಿದ್ವಾಂಸರು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ ಕನ್ನಡ ವ್ಯಾಕರಣ ಕೃತಿಗಳು.
ಹಾಗೆಯೇ 1838ರ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರ ‘ಹೊಸಗನ್ನಡ ನುಡಿಗನ್ನಡಿ’, ಚ. ರಾಮಸ್ವಾಮಿ ಶಾಸ್ತ್ರಿಗಳ ‘ವಾಗ್ವಿಧಾಯಿನಿ’ (1854), ದಕ್ಷಿಣಾಮೂರ್ತಿ ಶಾಸ್ತ್ರಿಗಳ ‘ಶಬ್ದಭಾಸ್ಕರ’ (1869) ಹಾಗೂ ರಾ. ರಘುನಾಥರಾಯರ ‘ಕರ್ಣಾಟಕ ಭಾಷಾ ವ್ಯಾಕರಣೋಪನ್ಯಾಸ ಮನ್ಜರಿ’ (1894) ಮತ್ತು ಎಂ.ಬಿ. ಶ್ರೀನಿವಾಸ ಅಯ್ಯಂಗಾರ್ಯರ ‘ವಾಚಕ ಬೋಧಿನಿ’– ಈ ಕೆಲವು ಕೃತಿಗಳು ದೇಶೀಯ ವಿದ್ವಾಂಸರಿಂದ ಕನ್ನಡದಲ್ಲಿಯೇ ರಚನೆಗೊಂಡ ಕನ್ನಡ ವ್ಯಾಕರಣ ಗ್ರಂಥಗಳು. ಕೇಂಬಲ್ ಅಯ್ಯನವರ ಕೃತಿಯ ವಿಶೇಷವೆಂದರೆ, ಇದು ಪಾಶ್ಚಾತ್ಯ ವಿದ್ವಾಂಸ ನೊಬ್ಬನಿಂದ ಕನ್ನಡದಲ್ಲಿಯೇ ಸಂಪೂರ್ಣವಾಗಿ ರಚನೆಗೊಂಡ ಪ್ರಪ್ರಥಮ ಕನ್ನಡ ವ್ಯಾಕರಣ.
ಕರ್ನಾಟಕಕ್ಕೆ 1850ರಲ್ಲಿ ಕ್ರೈಸ್ತಮತ ಪ್ರಚಾರಕನಾಗಿ ಬಂದ ಕ್ಯಾಂಬೆಲ್ ಕನ್ನಡದಲ್ಲಿ ಬೈಬಲ್ ಕೃತಿಯ ಪರಿಷ್ಕರಣ ಕೈಕೊಂಡವರಲ್ಲಿ ಒಬ್ಬರು. ಇವರು ಕ್ರಿಸ್ಟಿಯನ್ ಧರ್ಮ ಹಾಗೂ ಬೈಬಲ್‌ಗೆ ಸಂಬಂಧಿಸಿದಂತೆ ದೊರೆಸಾನಿ ಮತ್ತು ದಾದಿಯರನ್ನು ಕುರಿತು, ‘ಡೈಲಿ ಬ್ರೆಡ್’ (1857), ‘ಬಾಲ್ಯೋಪದೇಶ’ (1852), ‘ಪಾಪ ಪರಿಹಾರವಾಗುವ ಮಾರ್ಗ’ ಎನ್ನುವ ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿರುತ್ತಾರೆ. ಮೈಸೂರು ಹಾಗೂ ಕನ್ನಡ ಮಾತಾಡುವ ಪ್ರಾಂತಗಳಲ್ಲಿ ಕನ್ನಡದಲ್ಲಿಯೇ ಆಡಳಿತ ನಡೆಸಬೇಕು ಎನ್ನುವುದು ಈ ಕನ್ನಡಾಭಿಮಾನಿಯ ಅಭಿಪ್ರಾಯವಾಗಿದ್ದಿತು. ಕ್ಯಾಂಬೆಲ್ ತುಂಬಾ ಪ್ರೀತಿಯಿಂದ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಕನ್ನಡವನ್ನು ಬೋಧಿಸುತ್ತಿದ್ದರು. ಇವರ ಪತ್ನಿ ಮಿಸೆಸ್ ಕ್ಯಾಂಬೆಲ್ ‘ದಿನದ ರೊಟ್ಟಿ’ (1852) ಎನ್ನವ ಕ್ರಿಸ್ಟಿಯನ್ನರು ನಿತ್ಯ ಪಠನ ಮಾಡಬಹುದಾದ ಬೈಬಲ್ ಉಕ್ತಿಗಳ ಸಂಗ್ರಹಿತ ಪುಸ್ತಕ ಒಂದನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಸ್ಥಾಪಿಸಿದ ಕೀರ್ತಿಗೆ ಭಾಜನರಾದ ಕ್ಯಾಂಬೆಲ್ ಮೈಸೂರಿನಲ್ಲಿ ಹಲವಾರು ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದವರು ಕೂಡ.
ಕ್ಯಾಂಬೆಲ್‌ರ ‘ಕನ್ನಡ ವ್ಯಾಕರಣ ಸಾರ’ವು ಹಲವು ದಶಕಗಳ ಕಾಲ ಶಾಲೆಗಳಲ್ಲಿ ಕನ್ನಡ ಪಠ್ಯವಾಗಿದ್ದಿತು. ಕನ್ನಡದ ಶಾಲಾವ್ಯಾಕರಣಗಳಲ್ಲಿ ಕೂಡ ಇದೇ ಮೊದಲನೆಯದು. Elements of Canarese Grammar ಎನ್ನವ ಇಂಗ್ಲಿಷ್ ಹೆಸರಿರುವ ಈ ಕೃತಿಯ ಹದಿನಾರು ಅಧ್ಯಾಯಗಳು ಇಂತಿವೆ. ಅಕ್ಷರ ಲಕ್ಷಣದ ಅಡಿಯಲ್ಲಿ ವರ್ಣ, ಶಬ್ದ ಹಾಗೂ ಸಂಧಿಗಳನ್ನು ಕುರಿತ ಮೂರು ಅಧ್ಯಾಯಗಳಿವೆ. ಶಬ್ದ ಲಕ್ಷಣದ ಅಡಿಯಲ್ಲಿ ನಾಮವಾಚಕ, ಗುಣವಾಚಕ, ಸರ್ವನಾಮ, ಕ್ರಿಯಾಪದ, ಕ್ರಮವಾದ ಕ್ರಿಯಾಪದ, ವಿಕಾರವಾದ ಕ್ರಿಯಾಪದ, ಉಪಪದ ಕ್ರಿಯಾಪದ, ಸ್ವಾರ್ಥ ಕ್ರಿಯಾಪದ, ಕರ್ಮಕ್ರಿಯಾಪದ, ಪ್ರೇರಣ ಕ್ರಿಯಾಪದ, ಅವ್ಯಯ, ಕ್ರಿಯಾವಾಚಕ ಹಾಗೂ ಸಮಾಸಗಳನ್ನು ಕುರಿತ ಹದಿಮೂರು ಅಧ್ಯಾಯಗಳಿವೆ.
‘ಕನ್ನಡ ವ್ಯಾಕರಣವು ಕನ್ನಡ ಭಾಷೆಯನ್ನು ಯುಕ್ತವಾಗಿಯೂ ಸ್ಪಷ್ಟವಾಗಿಯೂ ಮಾತನಾಡುವದಕ್ಕೂ ಬರೆಯುವದಕ್ಕೂ ತಿಳಿಸುತ್ತದೆ’ ಎಂದು ಸರಳವಾಗಿ ಕ್ಯಾಂಬೆಲ್ ಈ ವ್ಯಾಕರಣವನ್ನು ಆರಂಭಿಸಿರುತ್ತಾನೆ. ಈ ಕೃತಿಯಲ್ಲಿ 153 ನಿರ್ದಿಷ್ಠ ಅಂಶಗಳಿವೆ. ಕನ್ನಡ ವರ್ಣಮಾಲೆಯಲ್ಲಿ ಸಂಸ್ಕೃತದ ಲೃ ಹಾಗೂ ಅದರ ದೀರ್ಘ ಸ್ವರ ರೂಪವನ್ನು ಉಳಿಸಿ ಕ್ಷ ವನ್ನು ಸೇರಿಸಿ 53 ಅಕ್ಷರಗಳಿವೆ ಎಂದು ಕ್ಯಾಂಬೆಲ್ ಹೇಳಿದ್ದಾರೆ. ಇತರ ವೈಯಾಕರಣಿಗಳು ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳ ಬಗ್ಗೆ ತಿಳಿವಳಿಕೆಯನ್ನು ಕೊಟ್ಟಿದ್ದರೆ, ಕ್ಯಾಂಬೆಲ್ ಅವುಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಕನ್ನಡ ಸಂಧಿಗಳ ಬಗ್ಗೆ ಹೇಳಿದ್ದಾರೆ. ಅನೇಕ ಕಡೆ ವಿದ್ಯಾರ್ಥಿಗಳಿಗೆ ಸ್ಪಷ್ಟೀಕರಣಗಳನ್ನು ನೀಡುವುದಕ್ಕಾಗಿ ಹಲವಾರು ಕೋಷ್ಟಕಗಳನ್ನೂ ಪಟ್ಟಿಗಳನ್ನೂ ನೀಡಿರುತ್ತಾನೆ.
ಕ್ಯಾಂಬೆಲ್ ಕೆಲವು ಸೂಕ್ಷ್ಮಗಳನ್ನು ಗ್ರಹಿಸಿ ವಿಷಯಗಳನ್ನು ನಿರ್ದಿಷ್ಟವಾಗಿ ನಿರೂಪಿಸಿರುತ್ತಾನೆ. ನಿದರ್ಶನಕ್ಕೆ ಏನು ಎನ್ನುವ ಪ್ರಶ್ನೆ ಸರ್ವನಾಮವು ನಿತ್ಯ ಏಕವಚನವೆಂದು ಸೂಚಿಸಿ ಅದರ ಸಪ್ತವಿಭಕ್ತಿರೂಪಗಳನ್ನು ಕೊಟ್ಟಿರುತ್ತಾರೆ. ಹಾಗೆಯೇ ಧಾತುವನ್ನು ಕುರಿತು ಹೇಳುವಾಗ ಕ್ರಿಯಾಪದದ ಮೂಲಾಕ್ಷರಗಳು ಮಾತ್ರ ಇದ್ದರೆ, ಧಾತು ಎಂದು ಹೇಳಲ್ಪಡುವದು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ಅನೇಕ ಧಾತುಗಳ ಮೂರೂ ಲಿಂಗಗಳ, ಮೂರೂ ಪುರುಷಗಳ, ಎರಡು ವಚನಗಳ ಹಾಗೂ ಸಪ್ತವಿಭಕ್ತಿಗಳ ಬಹುರೂಪಗಳನ್ನು ನೀಡಿದ್ದಾರೆ. ಬಹಳ ಆಶ್ಚರ್ಯವೆಂದರೆ ತೀ.ನಂ.ಶ್ರೀ ರವರು ಕುರಿತು ಶಬ್ದಕ್ಕೆ ಹೇಳುವ ಹಲವು ರೂಪಗಳನ್ನು ಇವರು ಮೊದಲೇ ನೀಡಿರುವದು. ಕುರಿ, ಕುರಿತನು ( = ಕುರಿತು ಹೇಳಿದನು ಎಂಬರ್ಥ), ಕುರಿಯಿತು-ಎನ್ನುವವೇ ಆ ಶಬ್ದರೂಪಗಳು.
ಹಲವು ಸೂಕ್ಷ್ಮ ಒಳನೋಟಗಳನ್ನು ಪಡೆದುಕೊಂಡಿದ್ದ, ಕನ್ನಡವನ್ನು ಪ್ರೀತಿಸುತ್ತಿದ್ದ ರೆವರೆಂಡ್ ಕಾಲಿನ್ಸ್ ಕ್ಯಾಂಬೆಲ್‌ರ ‘ಕನ್ನಡ ವ್ಯಾಕರಣ ಸಾರವು’ ಕೃತಿಯು ಮುದ್ರಿತ ಕನ್ನಡ ವ್ಯಾಕರಣಗಳ ಸಾಲಿನಲ್ಲಿ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ.