‘ಹಕ್ಕಿ ಹಾರುತಿದೆ‘ 1930ರಲ್ಲಿ ಮೊದಲನೆಯ ಮುದ್ರಣ ಕಂಡ ‘ಗೆಳೆಯರ ಗುಂಪು ಪ್ರಕಟಿಸಿದ ಕವಿತಾ ಸಂಕಲನ. ಕನ್ನಡದ ನವೋದಯ ಕಾವ್ಯದ ಸಂದರ್ಭದಲ್ಲಿ ‘ಗೆಳೆಯರ ಗುಂಪು ಮಾಡಿರುವ ಸಾಧನೆ ಅಪಾರ. ಗೆಳೆಯರ ಗುಂಪಿನ ನೇತಾರರು ನಿಜವಾಗಿಯೂ ಬೇಂದ್ರೆಯವರು.
ಅವರ ಜೊತೆಗೆ ಮುಗಳಿ, ಗೋಕಾಕ್, ಬೆಟಗೇರಿ ಕೃಷ್ಣಶರ್ಮ, ಸಿಂಪಿ ಲಿಂಗಣ್ಣ, ಜಡಭರತ, ಶ್ರಿಧರ ಶಿವರಾಮ ಖಾನೋಳ್ಕರ, ಸಾಲಿ ರಾಮಚಂದ್ರ ರಾಯರು, ಧೂಲಾ ಸಾಹೇಬ, ನಾರಾಯಣ ಸಂಗಮ, ಬುರ್ಲಿ ಬಿಂದುಮಾಧವ, ಮಧುರ ಚೆನ್ನ ಮುಂತಾದ ಪ್ರಸಿದ್ಧ ಲೇಖಕರಿದ್ದರು. ‘ಗೆಳೆಯರ ಗುಂಪನ್ನು ಕುರಿತು ‘ವ್ಯವಸ್ಥಿತವಾದ ಅಭ್ಯಾಸ ನಡೆದುದು ಗುಂಪಿನ ನಡುವೆ ಎಂದು ಬೆಟಗೇರಿ ಕೃಷ್ಣಶರ್ಮರು ಹೇಳಿದರೆ, ಗೋಕಾಕರು ‘ಗುಂಪಿನ ಮೂಲಕ ಕರ್ನಾಟಕದ ಪರಿಚಯವು ನನಗಾಯಿತು ಎನ್ನುತ್ತಾರೆ.
‘ಗೆಳೆಯರ ಗುಂಪು ಒಂದು ಸ್ವಾಭಾವಿಕ ಬೆಳೆವಣಿಗೆಯಲ್ಲಿತ್ತು. ಅದು ಹೊರಗಣ್ಣಿಗೆ ಗುಂಪಾಗಿಯೂ ಒಳಗಣ್ಣಿಗೆ ಮೂರ್ತಿಶಿಲ್ಪಶಾಲೆಯಾಗಿಯೂ ರೂಪುಗೊಳ್ಳುತ್ತಿತ್ತು ಎಂದು ಸ್ವತಃ ಬೇಂದ್ರೆಯವರೇ ಗೆಳೆಯರ ಗುಂಪಿನ ಬಗ್ಗೆ ಬರೆಯುತ್ತಾರೆ.
ಆಲೂರ ವೆಂಕಟರಾಯರ ಸಂಪಾದಕತ್ವದ ‘ಜಯಕರ್ನಾಟಕ ಪತ್ರಿಕೆಯಲ್ಲಿ ಗೆಳೆಯರ ಗುಂಪಿನವರು ತಮ್ಮ ಕವಿತೆ, ವಿಮರ್ಶೆಗಳನ್ನು ಪ್ರಕಟಿಸಿದರು. ಮುಂದೆ ಆ ಗೆಳೆಯರೇ ‘ಮನೋಹರ ಗ್ರಂಥ ಮಾಲೆ ಪ್ರಕಾಶನ ಸಂಸ್ಥೆ ಮತ್ತು ‘ಜಯಂತಿ ಪತ್ರಿಕೆಗಳ ಸ್ಥಾಪನೆಗೆ ಕಾರಣರಾದರು.
ಬೇಂದ್ರೆಯವರು ಗೆಳೆಯರ ಗುಂಪಿನ ಪರವಾಗಿ ಸಂಪಾದಿಸಿದ ಕವನ ಸಂಕಲನ ‘ಹಕ್ಕಿ ಹಾರುತಿದೆ. ಈ ಸಂಕಲನವನ್ನು ‘ಜಯಕರ್ನಾಟಕ ಗ್ರಂಥಮಾಲೆಗಾಗಿ ಕುಲಕರ್ಣಿ ಶೇಷಗಿರಿ ರಾಯರು ಪ್ರಕಾಶಪಡಿಸಿದ್ದಾರೆ. ಅಷ್ಟ ಕಿರೀಟಾಕಾರದ 80+18 ಪುಟಗಳ ಈ ಕೃತಿ ಜಯಕರ್ನಾಟಕ ಗ್ರಂಥಮಾಲೆಯ ಪ್ರಥಮ ಪುಷ್ಪವಾಗಿ ಪ್ರಕಟವಾಗಿದೆ.
ಮಂಡಲದ ಕಡೆಗೆ;
ಕವಿತೆಗಳ ಒಡೆತನವು
ಬರೆದವರ ಕಡೆಗೆ
ಎಂದು ಈ ಗ್ರಂಥದ ಹಾಗೂ ಕವಿತೆಗಳ ಒಡೆತನದ ಬಗ್ಗೆ ಸೂಚನೆಯನ್ನು ಕವಿತೆಯ ಮೂಲಕವೇ ನೀಡಲಾಗಿದೆ. ಈ ಸಂಕಲನವು ಹೊಸಗನ್ನಡ ಕಾವ್ಯದ ಇತಿಹಾಸದ ದೃಷ್ಟಿಯಿಂದ ಮತ್ತು ನವೋದಯ ಕಾವ್ಯದ ಸಾಧನೆ ಹಾಗೂ ಗುಣಮಟ್ಟಗಳ ದೃಷ್ಟಿಯಿಂದ ಮಹತ್ವದ ಸಂಕಲನವಾಗಿದೆ.
ಈ ಸಂಕಲನದಲ್ಲಿ ಒಟ್ಟು 23 ಕವಿಗಳ 36 ಕವಿತೆಗಳಿವೆ. ಅಂಬಿಕಾತನಯ ದತ್ತರ ಐದು ಕವಿತೆಗಳೂ, ಆನಂದಕಂದರ ಎರಡು ಕವಿತೆಗಳೂ, ವಿನಾಯಕ ಗೋಕಾಕರ ಎರಡು ಕವಿತೆಗಳೂ, ಮಧುರ ಚೆನ್ನರ ಎರಡು ಕವಿತೆಗಳೂ, ಬುರ್ಲಿ ಬಿಂದು ಮಾಧವರ ಎರಡು ಕವಿತೆಗಳೂ, ನಾರಾಯಣ ಸಂಗಮರ ಎರಡು ಕವಿತೆಗಳೂ, ಸಾಲಿ ರಾಮಚಂದ್ರ ರಾಯರ ಎರಡು ಕವಿತೆಗಳೂ, ಶ್ರಿಧರ ಖಾನೋಳ್ಕರರ ಎರಡು ಕವಿತೆಗಳೂ ಮತ್ತು ಪ್ರಹ್ಲಾದ ನರೇಗಲ್ಲರ ಎರಡು ಕವಿತೆಗಳೂ ಸೇರಿವೆ.
ಇನ್ನುಳಿದ ಕವಿಗಳೆಂದರೆ ಗಂಗಾಪ್ರಸಾದ, ಗೋಪಾಲಕೃಷ್ಣ, ಚಿದಂಬರ, ಜಯಾಶ್ರಯೀ, ನಾರಾಯಣ ಶಾಸ್ತ್ರೀ, ರಂಗನಾಥ, ವಿನೀತ ರಾಮಚಂದ್ರ, ರಾಮದಾಸ, ರೇವಣ, ಸಿಂಪಿ ಲಿಂಗಣ್ಣ, ವನಮಾಲಿ, ಶೇಷ ಮತ್ತು ಶಿವರಾಮ.
ಇಲ್ಲಿನ ಶಿವರಾಮ ಅವರು ಶ್ರಿಧರ ಶಿವರಾಮ ಖಾನೋಳ್ಕರ ಅವರೇ ಇರಬೇಕು. ‘ಹಕ್ಕಿ ಹಾರುತಿದೆ, ಕನಸಿನೊಳಗೆ ‘ಕಣಸು, ‘ತುತ್ತಿನ ಚೀಲ ಮತ್ತು ಮೂವತ್ತು ಮೂರು ಕೋಟಿ- ಬೇಂದ್ರೆಯವರ ಈ ಮಹತ್ವದ ಕವಿತೆಗಳು ಸಂಕಲನದಲ್ಲಿ ಅಡಕವಾಗಿವೆ.
ಈ ಸಂಕಲನದ ವಿಶೇಷ ಎಂದರೆ ಇದರಲ್ಲಿ ಬೇಂದ್ರೆಯವರ ಛಾಪು ಎದ್ದು ಕಾಣುವುದು.
ಬೇಂದ್ರೆಯವರ ‘ನಾದಲೀಲೆ ಮುನ್ನುಡಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು, 1929ರ ಬೆಳಗಾವಿ ಕನ್ನಡ ಸಾಹಿತ್ಯ ಸಮ್ಮೇಲನದಲ್ಲಿ ಬೇಂದ್ರೆಯವರ ‘ಹಕ್ಕಿ ಹಾರುತಿದೆ ಕವಿತಾವಾಚನ ಜನರ ಮೇಲೆ ಮಾಡಿದ ಪ್ರಭಾವವನ್ನು ಕುರಿತು- ‘ಇವರನ್ನು ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೆ ಕಂಡೆನು.
ಈ ಸಮ್ಮೇಳನದಲ್ಲಿ ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ ಎಂಬ ತಮ್ಮ ಕವನವನ್ನು ಓದಿದರು. ಅದನ್ನು ಕೇಳಿದ ಜನ ಎಂಥ ಆನಂದವನ್ನು ಅನುಭವಿಸಿದರೆಂದು ಈಗ ಹೇಳಲು ಸಾಧ್ಯವಿಲ್ಲ. ಆ ಕವಿತೆಯ ಎಲ್ಲ ಅರ್ಥವನ್ನು ಅರಿಯುವುದಕ್ಕೆ ಆ ಒಂದು ಓದು ಸಾಕಲ್ಲವೇ ಅಲ್ಲ.
ಆದರೆ ಆ ಒಂದು ಓದಿನಿಂದ ಕಂಡಷ್ಟು ಕಾವ್ಯಗುಣದಿಂದಲೇ ಸಾವಿರ ಜನರ ಸಭೆ ಚಕಿತವಾಯಿತು... ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ. ಅಷ್ಟು ಪ್ರಸಿದ್ಧವಾದ ಕವಿತೆ ಇಲ್ಲಿನ ಬೇಂದ್ರೆಯವರ ‘ಹಕ್ಕಿ ಹಾರುತಿದೆ ಎಂಬ ಕವಿತೆ.
ನಾಡಿನ ಇತರ ಪ್ರಸಿದ್ಧ ಬರಹಗಾರರಾದ ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ), ಆನಂದಕಂದ (ಬೆಟಗೇರಿ ಕೃಷ್ಣಶರ್ಮ), ವಿನಾಯಕ ಗೋಕಾಕ, ರಂ.ಶ್ರಿ.ಮುಗಳಿ, ನಾರಾಯಣ ಸಂಗಮ, ಮಿಂಚಿನ ಬಳ್ಳಿ ಪ್ರಕಾಶನದ ಪ್ರಸಿದ್ಧಿಯ ಬುರ್ಲಿ ಬಿಂದು ಮಾಧವ ಮುಂತಾದ ಗಣ್ಯರ ಆರಂಭ ಕಾಲದ ಕವಿತೆಗಳು ಇರುವುದು ಈ ಸಂಕಲನದ ವಿಶೇಷ. 1920ರಿಂದ 1929ರವರೆಗೆ ರಚಿತವಾದ ಕವಿತೆಗಳು ಇಲ್ಲಿವೆ.
‘ಇಂಗ್ಲಿಷ್ ಗೀತಗಳು (1922)ಗಿಂತಲೂ ಮೊದಲು ಬರುತ್ತಿದ್ದ ‘ಪ್ರಭಾತ (1918) ಪತ್ರಿಕೆ ಸಂಚಿಕೆಗಳಲ್ಲಿ ಅಷ್ಟು ಹೊತ್ತಿಗಾಗಲೇ ಬೇಂದ್ರೆಯವರ ಕೆಲವು ಕವಿತೆಗಳು ಪ್ರಕಟವಾಗಿತ್ತು. 1922ರಲ್ಲಿ ಅವರ ‘ಕೃಷ್ಣಕುಮಾರಿ ಸಂಕಲನವೂ ಪ್ರಕಟವಾಗಿತ್ತು. ಆದರೂ 1930ರಲ್ಲಿ ಪ್ರಕಟವಾದ ಬೇಂದ್ರೆಯವರ ಈ ಸಂಪಾದಿತ ಸಂಕಲನ ಮುಂದಿನ ಹೊಸ ನವೋದಯ ಕವಿಗಳ ಮೇಲೆ ಬೀರಿದ ಪ್ರಭಾವ ಅನುಪಮವಾದದ್ದು.
ಬೇಂದ್ರೆಯವರನ್ನೂ ಒಳಗೊಂಡಂತೆ ಇಲ್ಲಿನ ಉಳಿದ ಕವಿಗಳ ಕವಿತೆಗಳಲ್ಲಿ ಭೋಗ ಷಟ್ಪದಿ, ವಾರ್ಧಕ ಷಟ್ಪದಿ, ದ್ವಿಪದಿ, ಸಾನೆಟ್, ಕಥನ ಕವನ ಇನ್ನೂ ಮುಂತಾದ ನಾನಾ ರೀತಿಯ ಮಾತ್ರಾಗಣಗಳ ಮಿಶ್ರಣ ಪ್ರಯೋಗಗಳನ್ನು ಕಾಣಬಹುದು.
ವಸ್ತುವಿನ ದೃಷ್ಟಿಯಿಂದಲೂ ಇಲ್ಲಿ ವೈವಿಧ್ಯವಿದೆ. ಜಗತ್ತಿನ ಯಾವುದೇ ಭಾಷೆಯ ಒಂದು ಕಾಲಘಟ್ಟದ ಕಾವ್ಯಮಾದರಿಯೊಂದು ಚಾಲನೆಗೆ ಬರುತ್ತಿರುವ ಕಾಲದಲ್ಲಿನ ಕವಿತೆಗಳ ಸೃಷ್ಟಿಯ ಸಂದರ್ಭದ ಸೂಕ್ಷ್ಮಗಳು ಎಷ್ಟು ಅಗಾಧವಾಗಿದ್ದಿರಬಹುದು ಎಂಬುದಕ್ಕೆ ‘ಹಕ್ಕಿ ಹಾರುತಿದೆ ಸಂಕಲನ ನಿದರ್ಶನವಾಗಿದೆ.