ರೆವರೆಂಡ್ ಜೆ. ಗ್ಯಾರೆಟ್ ಅವರು ಸಂಪಾದಿಸಿರುವ ‘ಕನ್ನಡದ ಮೊದಲ ಮುದ್ರಿತ ಭಗವದ್ಗೀತೆ ಹಾಗೂ ಅನುವಾದ’ (೧೮೪೬) ಒಂದು ಅಪೂರ್ವ ವಿರಳ ರೀತಿಯ ಪುಸ್ತಕ. ೧೮೪೬ರಲ್ಲಿ ಬೆಂಗಳೂರಿನ ದಿ ವೆಸ್ಲಿಯನ್ ಮಿಷನ್ ಮುದ್ರಣಾಲಯದಲ್ಲಿ B.Rungah ಎನ್ನುವವನರಿಂದ ಈ ಕೃತಿ ಮುದ್ರಣಗೊಂಡಿತು. ಪ್ರಾಯಶಃ ಅಂದಿನ ಕಾಲಘಟ್ಟದಲ್ಲಿದ್ದ ಕನ್ನಡದ ಅಕ್ಷರಗಳ ಮೊಳೆಗಳನ್ನು ಮುದ್ರಣಕ್ಕಾಗಿ ರೂಪಿಸಿದ ಬಿ.ರಂಗಯ್ಯನೇ ಈತನಿರಬೇಕು. ೩೦೨ ಪುಟಗಳನ್ನುಳ್ಳ ಈ ಕೃತಿಯ ೧೭೩ ಪುಟಗಳ ಕಿರಿಯ ೨ನೆಯ ಆವೃತ್ತಿಯು, ೧೮೭೦ರಲ್ಲಿ ಪ್ರಕಟವಾಯಿತು. ಇದರ ಬೆಲೆಯು ಎಲ್ಲಿಯೂ ನಮೂದಿತವಾಗಿಲ್ಲ. ಪ್ರಸ್ತುತ ಮೊದಲ ಮುದ್ರಣದ ಈ ಕೃತಿಯ ಪೂರ್ತಿ ಹೆಸರು– The BHAGAVAT-GEETA, or Dialogues of Krishna and Arjoon ; in Eighteen Lectures. SANSCRIT, CANARESE AND ENGLISH ; IN PARALLEL COLUMNS.
ಮೈಸೂರು ಸರ್ಕಾರದ ಕಮಿಷನರ್ ಆಗಿದ್ದ ಜನರಲ್ ಎಂ. ಕಬ್ಬನ್ ಅವರಿಗೆ ಈ ಕೃತಿಯನ್ನು ಸಮರ್ಪಿಸಲಾಗಿದೆ. ಆರಂಭದೊಳಗೆ ಗ್ಯಾರೆಟ್‌ರ ಸಂಪಾದಕೀಯವಿದೆ. ಭಾರತದ ಅಂದಿನ ಗವರ್ನಲ್ ಜನರಲ್ ಮಾನ್ಯ ವಾರನ್ ಹೇಸ್ಟಿಂಗ್ಸ್ ಇದಕ್ಕೆ ಪ್ರಸ್ತಾವನೆಯನ್ನು ರಚಿಸಿದ್ದಾರೆ. ಮುಂದೆ ಭಗವದ್ಗೀತೆಯನ್ನು ಕನ್ನಡ ಹಾಗೂ ಇಂಗ್ಲಿಷಿಗೆ ಅನುವಾದಿಸಿರುವ ಚಾರ್ಲ್ಸ್ ವಿಲ್ಕಿನ್ಸ್ ಅನುವಾದಕೀಯವಿದೆ. ನಂತರ ವಿಲ್ಕಿನ್ಸ್‌ನ ಕನ್ನಡಾನುವಾದ ಮತ್ತು ಅವನೇ ೧೭೮೪ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದಿಸಿದ ಅವತರಣಿಕೆಯ ಪಠ್ಯಗಳನ್ನು ಸಂಸ್ಕೃತದ ಮೂಲ ಶ್ಲೋಕಗಳೊಂದಿಗೆ ನೀಡಲಾಗಿದೆ. ಮುಂದೆ ಕ್ರಮವಾಗಿ ಗೀತೆಯ ವಿವಿಧ ಪಾಠಾಂತರಗಳು, ಮುದ್ರಣದ ತಿದ್ದುಪಾಠಗಳನ್ನು ನೀಡಿ ನಂತರ G.Weigle ಅವರು ಶೋಧಿಸಿ ಉತ್ತಮ ಪಡಿಸಿದ ಕೆಲವು ಶ್ಲೋಕಗಳ ಕನ್ನಡಾನುವಾದವಿದೆ.
ಅನುವಾದಕ ವಿಲ್ಕಿನ್ಸ್‌ರ ಕೆಲವು ಟಿಪ್ಪಣಿಗಳು, ಮಹಾಭಾರತದ ಒಂದು ಪ್ರಸಂಗ- ಇವುಗಳಾದ ಮೇಲೆ SREE-DHAR SWAMEE ಅವರ ಗಮನಿಕೆಯನ್ನು ನೀಡಿ ನಂತರ ಹೆಚ್ಚಿನ ಟಿಪ್ಪಣಿಗಳನ್ನು ಕೊಡಲಾಗಿದೆ. ಓದುಗರ ಅನುಕೂಲಕ್ಕಾಗಿ ೩೦.೦೬.೧೮೨೫ ಹಾಗೂ ೧೫.೦೬.೧೮೨೬ರಲ್ಲಿ ಬರ್ಲಿನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯಲ್ಲಿ W.D.Humboldt ಭಗವದ್ಗೀತೆಯನ್ನು ಕುರಿತು ನೀಡಿದ ಉಪನ್ಯಾಸಗಳನ್ನು ನೀಡಿದ್ದಾರೆ. A.G.A. Schlegel ಶೋಧಿಸಿ ಪ್ರಕಟಿಸಿದ್ದ ಅಧಿಕೃತ ಎಂದು ಭಾವಿಸಲಾಗಿರುವ ಭಗವದ್ಗೀತೆಯ ಪಠ್ಯವನ್ನು ದೇವನಾಗರ ಲಿಪಿಯಲ್ಲಿಯೇ ಮುದ್ರಿಸಲಾಗಿದೆ. ಇದೇ ವಿದ್ವಾಂಸನ ಗೀತೆಯ ಲ್ಯಾಟಿನ್ ಭಾಷಾನುವಾದವನ್ನು ಮುಂದೆ ಗಮನಿಸಬಹುದು. ಕೊನೆಯಲ್ಲಿ ವಿಶ್ವವಿಖ್ಯಾತ ವಿದ್ವಾಂಸ ಆರ್.ಡಿ. ಗ್ರಿಫಿತ್ ಗೀತೆಯನ್ನು ಕುರಿತು ಬರೆದಿರುವ ಪರಾಮರ್ಶೆಯನ್ನು ಕೊಟ್ಟಿದ್ದಾರೆ. ಅಂತಿಮವಾಗಿ ಸಂಪಾದಕ ಜೆ. ಗ್ಯಾರೆಟ್‌ರ ಟಿಪ್ಪಣಿಯಿದೆ. ಇದು ಈ ಅಮೂಲ್ಯ ಗ್ರಂಥದ ಸ್ವರೂಪ.
ಒಂದು ವಿಷಯವನ್ನು ಕುರಿತ ಅದರ ಎಲ್ಲ ಮಗ್ಗುಲುಗಳನ್ನು ಸಮಗ್ರವಾಗಿ ಅಧ್ಯಯನ ಮಾಡುವ ಸಂಶೋಧನ ದೃಷ್ಟಿಕೋನವನ್ನುಳ್ಳ ವಿದ್ವಾಂಸರಿಗೆ ಈ ಪುಸ್ತಕವು ಅತ್ಯಂತ ಉಪಯುಕ್ತವಾಗಿದೆ. ಕೇವಲ ಕಾಲದ ದೃಷ್ಟಿಯಿಂದ ಮಾತ್ರವಲ್ಲ, ಯೋಗ್ಯತೆಯ ದೃಷ್ಟಿಯಿಂದಲೂ ಈ ಗ್ರಂಥದ ಹಿರಿಮೆ ಮೇಲ್ಮಟ್ಟದ್ದು. ಗೀತೆಯನ್ನು ಕುರಿತು ಕನ್ನಡ, ಸಂಸ್ಕೃತ, ಇಂಗ್ಲಿಷ್, ಲ್ಯಾಟಿನ್, ಜರ್ಮನ್– ಈ ೫ ಭಾಷೆಗಳಲ್ಲಿ, ಭಾರತೀಯರನ್ನೂ ಒಳಗೊಂಡಂತೆ ಜಗತ್ತಿನ ವಿವಿಧ ವಿದ್ವಾಂಸರ ಪಠ್ಯ, ಅನುವಾದ, ಗಮನಿಕೆ, ವಿಮರ್ಶೆ, ಟೀಕುಗಳನ್ನು ಒಳಗೊಂಡಿರುವ ಈ ಗ್ರಂಥ ನಿಜಕ್ಕೂ ಕನ್ನಡದ ಒಂದು ಅಮೋಘ ಕೃತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬಹುಭಾಷಾ ಆವೃತ್ತಿಯ ಈ ಭಗವದ್ಗೀತೆಯು ಅಂದಿನ ಕಾಲಘಟ್ಟದಲ್ಲಿ ಅಖಿಲ ಭಾರತ ಹಾಗೂ ಯೂರೋಪಿಯನ್ ದೇಶಗಳಲ್ಲಿ ಪ್ರಚಾರ ಹಾಗೂ ಕೀರ್ತಿಯನ್ನು ಪಡೆದದ್ದು ಸಹಜವೇ ಆಗಿದೆ. ಈ ಗ್ರಂಥವನ್ನು ಕುರಿತು ಕನ್ನಡದ ವಿದ್ವಾಂಸರುಗಳಾದ ಮಾನ್ಯ ಶ್ರೀನಿವಾಸ ಹಾವನೂರು ಹಾಗೂ ಐ. ಮಾ. ಮುತ್ತಣ್ಣನವರು ಮುಕ್ತಕಂಠರಾಗಿ ಪ್ರಶಂಸಿಸಿದ್ದಾರೆ. ಈ ಪುಸ್ತಕದ ಇನ್ನೊಂದು ವಿಶೇಷವೆಂದರೆ ಚೆನ್ನಾಗಿ ಮುದ್ರಣಗೊಂಡು ಅಂದಚಂದವಾದ ರೂಪನ್ನು ಪಡೆದುಕೊಂಡಿರುವುದು ಹಾಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಅಕ್ಷರಗಳ ವಿವಿಧ ಆಕಾರಗಳನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿರುವುದು. ಈ ಎರಡು ಭಾಷೆಗಳ ಅಕ್ಷರಗಳ ಸೊಗಸಿಗಾಗಿಯೂ ಈ ಕೃತಿಯನ್ನು ಗಮನಿಸಬಹುದು. ಸ್ವರೂಪ, ಆಶಯ, ಮುದ್ರಣ, ಅಕ್ಷರಗಳ ಸೊಗಸು, ವಿಮರ್ಶೆ, ಸಂಪಾದನೆ– ಹೀಗೆ ಅನೇಕ ಆಯಾಮಗಳ ದೃಷ್ಟಿಯಿಂದ ಈ ಗ್ರಂಥವು ಆಳವಾದ ತಳಸ್ಪರ್ಶೀ ಅಧ್ಯಯನಕ್ಕೆ ಪಕ್ಕಾಗಬಹುದಾದ ಒಂದು ಅಚ್ಚುಕಟ್ಟಾದ ಕೃತಿಯಾಗಿದೆ.
ಈ ಗ್ರಂಥದ ಅನುವಾದದ ಭಾಗದಲ್ಲಿ ವಿಲ್ಕಿನ್ಸ್ ಮೊದಲು ಗೀತೆಯ ಸಂಸ್ಕೃತದ ಶ್ಲೋಕಗಳನ್ನು ಮೊದಲನೆಯ ಕಾಲಂನಲ್ಲಿ ಕನ್ನಡ ಲಿಪಿಯಲ್ಲಿ ಕೊಟ್ಟು, ಎರಡನೆಯ ಕಾಲಂನಲ್ಲಿ ಕನ್ನಡಾನುವಾದವನ್ನೂ ಮೂರನೆಯ ಕಾಲಂನಲ್ಲಿ ಇಂಗ್ಲಿಷಿನ ಅನುವಾದವನ್ನೂ ನೀಡುತ್ತಾನೆ. ಹೀಗಾಗಿ ಇದನ್ನು ದ್ವಿಭಾಷಿಕ ಅನುವಾದವೆಂದು ಹೇಳಬಹುದು. ಇನ್ನು ಈ ಗ್ರಂಥದಲ್ಲಿ ಬರುವ ಕೆಲವು ಅನುವಾದಗಳನ್ನು ಗಮನಿಸಬಹುದು. ನಾಲ್ಕನೆಯ ಅಧ್ಯಾಯದಲ್ಲಿ ಬರುವ ಎರಡು ಪ್ರಸಿದ್ಧ ಶ್ಲೋಕಗಳು ಇಂತಿವೆ :
ಅತ್ಯುಥ್ಥಾನಮಧರ್ಮಸ್ಯತದಾತ್ಮಾನಂಸೃಜಾಮ್ಯಹಂ || ೪-೭ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ || ೪-೮ ||
ಇದರ ಕನ್ನಡಾನುವಾದವನ್ನು ವಿಲ್ಕಿನ್ಸ್ : ‘‘೪-೭ : ಯೆಲೇ ಭಾರತನೇ ಯಾವ ಯಾವ ವೇಳೆಯಲ್ಲಿ ಧರ್ಮ ಕಡಿಮೆಯಾಗಿ ಅಧರ್ಮ ಹೆಚ್ಚುವುದೋ ಆಗಲು ನಾನು ನನ್ನ ಸ್ವರೂಪವನ್ನು ತೋರಿಸುವೆನು. ೪-೮ : ಸಜ್ಜನರನ್ನು ರಕ್ಷಿಸುವುದಕ್ಕೋಸ್ಕರವು, ದುರ್ಜನರನ್ನು ಶಿಕ್ಷಿಸುವುದಕ್ಕೋಸ್ಕರವು, ಮತ್ತು ಧರ್ಮವನ್ನು ಸ್ಥಾಪಿಸುವದಕ್ಕಾಗಿ ಪ್ರತಿಯುಗದಲ್ಲಿಯೂ ಹುಟ್ಟುವೆನು’ ಎಂದು ಮಾಡುತ್ತಾರೆ.
ಇದನ್ನೇ ಇಂಗ್ಲಿಷ್ ಭಾಷೆಯಲ್ಲಿ ಹೀಗೆ ಅನುವಾದ ಮಾಡಿರುತ್ತಾರೆ. And as often as there is a decline of virtue, and an insurrection of vice and injustice, in the world, I make myself evident ; and thus I appear, from age to age, for the preservation of the just, the destruction of the wicked, and the establishment of the virtue. ಹೀಗೆ ಬಹುಭಾಷಿಕರು ಓದಬಹುದಾದ ರೀತಿಯಲ್ಲಿ ಈ ಕೃತಿಯಿದೆ.
ಚಾರ್ಲ್ಸ್ ವಿಲ್ಕಿನ್ಸ್ ಗೀತೆಯ ೧೮ ಅಧ್ಯಾಯಗಳನ್ನು ಕ್ರಮವಾಗಿ ಇಂಗ್ಲಿಷ್‌ನಲ್ಲಿ ಅನುವಾದಿಸಿರುವ ಕ್ರಮ ಇಂತಿದೆ:
- ಅರ್ಜುನವಿಷಾದಯೋಗ – The grief of Arjoon
- ಸಾಂಖ್ಯಯೋಗ – Of the nature of the SOUL, and speculative Doctrines
- ಕರ್ಮಯೋಗ Of works
- ಜ್ಞಾನಕರ್ಮ ಸಂನ್ಯಾಸ ಯೋಗ– Of the forsaking of WORKS
- ಸಂನ್ಯಾಸಯೋಗ Of the forsaking of FRUITS of WORKS
- ಧ್ಯಾನಯೋಗ– Of the exercise of SOUL
- ಜ್ಞಾನವಿಜ್ಞಾನಯೋಗ– Of the principles of NATURE, and the vital SPIRIT
- ಅಕ್ಷರಬ್ರಹ್ಮಯೋಗ– Of POOROOSH
- ರಾಜವಿದ್ಯಾರಾಜಗುಹ್ಯಯೋಗ– Of the chief of secrets and prince of Science
- ವಿಭೂತಿ ಯೋಗ, Of the diversity of the DIVINE nature
- ವಿಶ್ವರೂಪಸಂದರ್ಶನಯೋಗ– Display of the DIVINE nature in the form of the UNIVERSE
- ಭಕ್ತಿಸೋಪಾನಯೋಗ– Of the serving the Deity in his visible and invisible forms
- ಕ್ಷೇತ್ರಕ್ಷೇತ್ರಜ್ಞಯೋಗ– Explanation of the terms kshetra and kshetra-gna
- ಗುಣತ್ರಯವಿಭಾಗಯೋಗ– Of the three GOON or QUALITIES
- ಪುರುಷೋತ್ತಮಯೋಗ– Of POORUSHOTTAMA
- ದೈವಾಸುರಸಂಪದ್ವಿಭಾಗಯೋಗ– Of good and evil destiny
- ಶ್ರದ್ಧಾತ್ರಯ ವಿಭಾಗಯೋಗ– Of faith divided into three species
- ಮೋಕ್ಷಸಂನ್ಯಾಸಯೋಗ– Of forsaking the fruits of action for obtaining eternal salvation.
ವಿಲ್ಕಿನ್ಸ್‌ನ ಈ ಅನುವಾದದ ತುಣುಕುಗಳನ್ನು ಗಮನಿಸಿದರೆ ಅವನು ಎಷ್ಟು ನಿರ್ದುಷ್ಟವಾಗಿ ನಿಖರವಾಗಿ ಅನ್ಯ ಧರ್ಮವೊಂದರ ಧಾರ್ಮಿಕ ಗ್ರಂಥವನ್ನು ತನ್ನ ಇಂಗ್ಲಿಷ್ ಭಾಷೆಗೆ ಮತ್ತು ದೂರದ ದೇಶದ ರಾಜ್ಯಭಾಷೆಯಾದ ಕನ್ನಡಕ್ಕೆ ಸೂಕ್ಷ್ಮವಾಗಿ ಅನುವಾದಿಸಿದ್ದಾನೆಂದು ತಿಳಿಯುತ್ತದೆ. ಹೊಸಗನ್ನಡದ ಅರುಣೋದಯ ಕಾಲದ ಧಾರ್ಮಿಕ ಗ್ರಂಥಗಳ ಅನುವಾದಕೃತಿಗಳ ಸರಣಿಯಲ್ಲಿ ಗ್ಯಾರೆಟ್ ಸಂಪಾದಿಸಿ, ಚಾರ್ಲ್ಸ್ ವಿಲ್ಕಿನ್ಸ್ ಅನುವಾದಿಸಿದ ’ಭಗವದ್ಗೀತ ಅಥವಾ ಕೃಷ್ಣಾರ್ಜುನ ಸಂವಾದ’ ಎನ್ನುವ ಈ ಕೃತಿ ಅನನ್ಯವಾಗಿ ಕಾಣುತ್ತದೆ.
Sun, 02/16/2014 - 01:00
ಕನ್ನಡದ ಮೊದಲ ಮುದ್ರಿತ ಭಗವದ್ಗೀತೆ ಹಾಗೂ ಅನುವಾದ, ಸಂ: ರೆವರೆಂಡ್ ಜೆ. ಗ್ಯಾರೆಟ್, ಪು: 302: ಬೆಲೆ ನಮೂದಾಗಿಲ್ಲ
ಮು: ಬೆಂಗಳೂರಿನ ದಿ ವೆಸ್ಲಿಯನ್ ಮಿಷನ್