ಗರ್ಭಿಣೀ ಶಿಶು ಸಂರಕ್ಷಣ
ಕಿರಿಯ ಕಾಣಿಕೆ, ಹಿರಿಯ ಕಾಣ್ಕೆ
-ಎಂ.ಡಿ. ಶ್ರೀನಿವಾಸ ಅಯ್ಯಂಗಾರ್

ಮೈಸೂರು ಮೆಡಿಕಲ್ ಸರ್ವೀಸ್‌ಗೆ ಸೇರಿದ ಎಂ.ಡಿ. ಶ್ರೀನಿವಾಸ ಅಯ್ಯಂಗಾರ್ ಅವರ ‘ಗರ್ಭಿಣೀ ಶಿಶು ಸಂರಕ್ಷಣ’ ೧೮೯೬ರಲ್ಲಿ ಮೈಸೂರಿನ ಗ್ರಾಜುಯೇಟ್ಸ್ ಅಸೋಸಿಯೇಷನ್ ಮುದ್ರಣಾಲಯದಲ್ಲಿ ಮುದ್ರಣಗೊಂಡ ಕೃತಿ. ಬೆಲೆ ಎಲ್ಲಿಯೂ ನಮೂದಾಗದ, ೧೬+೧೪೪ ಪುಟಗಳ ಈ ಪುಸ್ತಕದಲ್ಲಿ ಗರ್ಭಿಣಿಯರಿಗೆ ತಿಳಿವಳಿಕೆ ಉಂಟು ಮಾಡುವುದಕ್ಕಾಗಿ ೯ ಚಿತ್ರಗಳನ್ನೂ ಒಂದು ಕೋಷ್ಟಕವನ್ನೂ ನೀಡಲಾಗಿದೆ. ಅಷ್ಟಮ ಡೆಮಿ ಆಕಾರದ ಈ ಕೃತಿಯ ಹೆಸರು ಕನ್ನಡದಲ್ಲಿ ‘ಗರ್ಭಿಣೀ ಶಿಶು ಸಂರಕ್ಷಣ’ ಹಾಗೂ ಇಂಗ್ಲಿಷ್‌ನಲ್ಲಿ A HAND BOOK 0f MIDWIFERY being  ADVICE TO A WIFE on the management of her health during pregnancy and confinement and on the  management of INFANTS.

ಈ ಕೃತಿಯನ್ನು ಅಂದಿನ ಮೈಸೂರು ಸರ್ಕಾರದ ಹಿರಿಯ ಸರ್ಜನ್ ಹಾಗೂ ಆರೋಗ್ಯ ಕಮಿಷನರ್ ಆಗಿದ್ದ Surgeon-Colonel T. J. McGANN, F.R.C.S.E. , D.P.H  ಇವರಿಗೆ ಕೃತಜ್ಞತೆಗಳಿಂದ ಅರ್ಪಿಸಲಾಗಿದೆ. ಪ್ರಸ್ತುತ ಲೇಖಕರು ಈ ಪುಸ್ತಕದ ಜೊತೆಗೆ ಶಿಶುವಿಗೆ ಸಾಮಾನ್ಯವಾಗಿ ಸಂಭವಿಸುವ ವ್ಯಾಧಿಗಳ ವಿಷಯವನ್ನು ಕುರಿತು ‘ಬಾಲವ್ಯಾಧಿ ಚಿಕಿತ್ಸೆ’ ಎನ್ನುವ ಕೃತಿಯನ್ನೂ, ಕಾಲರಾ ಸಂದರ್ಭದಲ್ಲಿ ಅನುಸರಿಸಬೇಕಾದ ಎಚ್ಚರಿಕೆಗಳನ್ನು ವಿವರಿಸುವ ‘ವಿಷೂಚಿ’ (೧೮೯೪) ಎನ್ನುವ ಪುಸ್ತಕವನ್ನೂ ರಚಿಸಿರುತ್ತಾರೆ. ೧೮೯೦ರಲ್ಲಿಯೇ ಬೋಧರಾಯಾಚಾರ್ಯ ಮಹಿಷೀ ಎನ್ನುವವರು ಪ್ರಸವ ವಿಷಯವನ್ನು ಕುರಿತು ‘ಗರ್ಭಿಣೀ ಶಿಶುಸಂಗೋಪನ’ ಎನ್ನುವ ಕೃತಿರಚನೆ ಮಾಡಿರುತ್ತಾರೆ ಎಂಬುದನ್ನು ಗಮನಿಸಬೇಕು.

ಪ್ರಸ್ತುತ ಪುಸ್ತಕದ ಆರಂಭಕ್ಕೆ ಪತ್ನಿಯ ಮಹತ್ವವನ್ನು ಸಾರುವ ಸಂಸ್ಕೃತದ ಕೆಲವು ಸುಭಾಷಿತಗಳನ್ನೂ, ಹೆಣ್ಣಿನ ಮಹತ್ವವನ್ನು ಕುರಿತ ಸಾವಿತ್ರಿಯ ನಡತೆಯನ್ನು ಹೇಳುವ ‘ಹಿತವಚನದಿಂ ಶಾಂತಿಗುಣದಿಂ | ಚತುರತೆಯೊಳಾಚರಿಪ ಸೇವೆಯಿ | ಅತಿಶಯಿತ ಸುಹಿತೋಪಚಾರಗಳಿಂದಲುಂ ತನ್ನಾ || ಪತಿಯ ಮನವನು ತೃಪ್ತಿಪಡಿಸುತ | ಸತಿ ಮನೋವಾಕ್ಕಾಯದೊಳಗುಂ | ಪತಿಯೆ ಗತಿಯೆಂದೆಣಿಸಿ ನಡೆದಳು ಜನಪ ಕೇಳೆಂದ ||’ ಎನ್ನುವ ಷಟ್ಪದಿ ಪದ್ಯ ಹಾಗೂ ಸರ್ವಜ್ಞನ ‘ನಾರಿಯಿಹಕುಪಕಾರಿ ನಾರಿ ಸ್ವರ್ಗಕೆ ದಾರಿ | ನಾರಿ ಸಕಲರಿಗೆ ಹಿತಕಾರಿ ಮುನಿದರೆ | ನಾರಿ ಹೆಮ್ಮಾರಿ ಸರ್ವಜ್ಞ ||’ ಎನ್ನವ ತ್ರಿಪದಿಯನ್ನೂ ನೀಡಿದ್ದಾರೆ. ಇದರ ಅರ್ಥ ಸ್ವಯಂಸಿದ್ಧ. ಸಂಸ್ಕೃತ ಸುಭಾಷಿತವಾದ ‘ಅರ್ಥಂ ಭಾರ್ಯಾ ಮನುಷ್ಯಸ್ಯ | ಭಾರ್ಯಾ ಶ್ರೇಷ್ಠ ತಮಸ್ಸಖಾ || ಭಾರ್ಯಾ ಮೂಲಂ ತ್ರಿವರ್ಗಸ್ಯ | ಭಾರ್ಯಾ ಮೂಲಂ ತರಿಷ್ಯತಃ || ಯಸ್ಯ ಭಾರ್ಯಾ ಗೃಹೇ ನಾಸ್ತಿ | ಸಾಧ್ವೀ ಚ ಪ್ರಿಯವಾದಿನೀ || ಅರಣ್ಯಂ ತೇನ ಗಂತವ್ಯಂ | ಯಥಾರಣ್ಯಂ ತಥಾಗೃಹಂ ||– ಸುಭಾಷಿತದಲ್ಲಿ ಗಂಡನಿಗೆ ಧರ್ಮ, ಅರ್ಥ, ಕಾಮಗಳಲ್ಲಿ ಅನುಕೂಲವಾಗಿದ್ದು ಮೋಕ್ಷಕ್ಕೆ ಅನುಕೂಲಕರಳಾದ ಪತ್ನಿ ಇಲ್ಲದಿದ್ದರೆ ಅಂತಹ ಪತಿಯು ಕಾಡಿಗೆ ಹೋಗಬೇಕು ಎಂದು ಹೇಳಿದೆ.

ಜೆರೆಮಿ ಟೇಲರ್ ಎನ್ನುವವನು ಹೆಣ್ಣನ್ನು ಕುರಿತು ಹೇಳಿರುವ A good wife is Heaven’s last, best gift to man... and her prayers, the ablest advocate of Heaven’s blessings on his head ಎನ್ನುವ ಮಾತುಗಳನ್ನು ಪ್ರಸ್ತಾಪಿಸಿರುತ್ತಾರೆ.

ಇಂತಹ ಹೆಣ್ಣಿನ ಪುಣ್ಯವಾದ ಗರ್ಭಿಣಿಯ ಅವಸ್ಥೆಯ ಸಂದರ್ಭದಲ್ಲಿ ಆಕೆ ಹೇಗೆ ಎಚ್ಚರಿಕೆಯಿಂದಿರಬೇಕೆಂಬುದರ ವಿವರಣೆಯೇ ಈ ಪುಸ್ತಕದ ವಸ್ತು. ಪ್ರಸ್ತಾವನೆಯಲ್ಲಿ ಶ್ರೀನಿವಾಸ ಅಯ್ಯಂಗಾರ್ ಅವರು ಈ ಕೃತಿ ರಚನೆಗೆ ಪ್ರೇರಣೆಯನ್ನು ಕುರಿತು: ‘ಸ್ತ್ರೀಯರು ಸಾಧಾರಣವಾಗಿ ತಮ್ಮ ವ್ಯಾಧಿಗಳನ್ನು ಇತರರಿಗೆ ತಿಳಿಸುವುದಕ್ಕೆ ನಾಚಿಕೊಳ್ಳುವರು. ಇದರಿಂದ ಕೆಲವು ವೇಳೆ ವಿಶೇಷ ಅಪಾಯ ಸಂಭವಿಸುವುದುಂಟು. ಆದ್ದರಿಂದ ಸ್ತ್ರೀಯರಿಗೆ ಋತುಕಾಲಗಳಲ್ಲಿಯೂ, ಗರ್ಭಿಣಿಯಾಗಿರುವಾಗಲೂ,

ಸಾಮಾನ್ಯವಾಗಿ ಬರತಕ್ಕ ವ್ಯಾಧಿಗಳನ್ನೂ; ವಿಶೇಷ ವ್ಯಯವಿಲ್ಲದೆ ಬಹಳ ಸುಲಭವಾಗಿ ತಾವೇ ಮಾಡಿಕೊಳ್ಳಬಹುದಾದ ತಕ್ಕ ಚಿಕಿತ್ಸೆಗಳನ್ನೂ; ಎಲ್ಲರೂ ತಿಳಿದಿರುವುದು ಒಳ್ಳೇದು. ಇದಲ್ಲದೆ ಪ್ರಸವ ಸಮಯದಲ್ಲಿ ಸೂಲಗಿತ್ತಿ ಮೊದಲಾದವರ ಸಹಾಯವು ಅನೇಕ ವೇಳೆ ಸಿಕ್ಕದೆ ಹೋಗುವದುಂಟು. ಅಂಥ ಸಂದರ್ಭದಲ್ಲಿ ಮಾಡಬೇಕಾದ ಕಾರ್ಯಗಳನ್ನೆಲ್ಲಾ ನಮ್ಮವರು ಚೆನ್ನಾಗಿ ತಿಳಿದಿದ್ದಲ್ಲಿ ಅನೇಕ ಕಷ್ಟಗಳು ನಿವಾರಣೆಯಾಗುವದಲ್ಲದೆ, ಅನೇಕ ವೇಳೆ ಪ್ರಾಣಹಾನಿಯಾಗದಂತೆಯೂ ನೋಡಿಕೊಳ್ಳಬಹುದು. ಸೂಲಗಿತ್ತಿಯರು ತಾವಾಗಿಯೇ  ಮಾಡಬಹುದಾದ ಕಾರ್ಯಗಳನ್ನೂ ವೈದ್ಯನನ್ನು ಕರೆಕಳುಹಿಸಬೇಕಾದ ಸಂದರ್ಭಗಳನ್ನೂ ತಿಳಿದಿರುವದು ಅವಶ್ಯವು. ಈ ವಿಷಯಗಳನ್ನೆಲ್ಲಾ ಮದ್ರಾಸ್ ಲೈಯಿಂಗ್ ಇನ್ ಹಾಸ್ಪಿಟಲ್ ಸೂಪರಿನ್‌ಟೆನ್‌ಡೆಂಟರಾದ ಡಾಕ್ಟರ್ ಬ್ರಾನ್‌ಫ್ರಟ್ ಸಾಹೇಬರವರ ಮಾರ್ಗವನ್ನನುಸರಿಸಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ವಿಷಯ ಸೂಚಿಕೆಯಲ್ಲಿ ಒಟ್ಟು ೧೫ ಅಧ್ಯಾಯಗಳಿದ್ದು ಅವು ಇಂತಿವೆ: ೧. ಋತು, ೨. ಗರ್ಭೋತ್ಪತ್ತಿ, ೩. ಗರ್ಭಲಕ್ಷಣ, ೪. ಗರ್ಭಿಣೀಕೃತ್ಯ, ೫. ಪ್ರಸವಕಾಲ ನಿರ್ಣಯ, ೬. ಗರ್ಭಿಣೀವ್ಯಾಧಿ, ೭. ಗರ್ಭಸ್ರಾವ, ೮. ಪ್ರಸವ ಸನ್ನಾಹ, ೯. ಕ್ರಮ ಪ್ರಸವ, ೧೦. ಕ್ರಮ ಪ್ರಸವ ನಿರ್ವಾಹ, ೧೧. ಅಕ್ರಮ ಪ್ರಸವ, ೧೨. ಸಂಕೀರ್ಣ ಪ್ರಸವ, ೧೩. ಪ್ರಸೂತ ಸ್ತ್ರೀ ಸಂರಕ್ಷಣ, ೧೪. ಸೂತಿಕಾವ್ಯಾಧಿ, ೧೫. ಶಿಶು ಸಂರಕ್ಷಣ. 

‘ಋತು’ ಎನ್ನುವ ಅಧ್ಯಾಯದಲ್ಲಿ ಮುಟ್ಟುಕಟ್ಟು, ಮುಟ್ಟುನೋವು ಹಾಗೂ ರಕ್ತಕುಸುಮ ವಿಚಾರಗಳನ್ನು ಹೇಳಿದ್ದರೆ, ಗರ್ಭಾಭಿವೃದ್ಧಿ ಹಾಗೂ ಗರ್ಭದಲ್ಲಿ ಶಿಶುವಿರುವ ರೀತಿಯನ್ನು ‘ಗರ್ಭೋತ್ಪತ್ತಿ’ ಪ್ರಕರಣದಲ್ಲಿ ವಿವರಿಸಲಾಗಿದೆ. ಗರ್ಭಲಕ್ಷಣ ಪ್ರಕರಣದಲ್ಲಿ ಹೆಣ್ಣಿಗೆ ತಿಂಗಳಗಟ್ಟಲೆ ಮುಟ್ಟು ನಿಲ್ಲುವದು, ಬೆಳಗಿನ ಹೊತ್ತಿನ ಓಕರಿಕೆ, ವಾಂತಿ, ಸ್ತನಗಳು ದೊಡ್ಡದಾಗಿ ತೊಟ್ಟಿನ ಸುತ್ತೂ ವ್ಯತ್ಯಾಸವುಂಟಾಗಿ, ಹಾಲು ಕಾಣಿಸಿಕೊಳ್ಳುವದು, ಹೊಟ್ಟೆಯು ದೊಡ್ಡದಾಗುವದು, ಶಿಶುವು ಕದಲುವದು, ಶಿಶುವಿನ ಎದೆಬಡಿತದ ಶಬ್ದ ಇತ್ಯಾದಿ ವಿಚಾರಗಳನ್ನು ಲೇಖಕರು ವಿವೇಚಿಸಿದ್ದಾರೆ. ಗರ್ಭಿಣಿಯ ಸ್ನಾನ, ಉಡುಪು, ಆಹಾರ, ನಿರ್ಮಲವಾಯು, ಗರ್ಭಿಣಿಯ ಕೆಲಸ ಮೊದಲಾದವುಗಳ ಸ್ವರೂಪ ಹೇಗಿರಬೇಕೆಂಬುದನ್ನು ‘ಗರ್ಭಿಣೀಕೃತ್ಯ’ ಎಂಬ ಅಧ್ಯಾಯದಲ್ಲಿ ತಿಳಿಸಿಹೇಳಲಾಗಿದೆ.

‘ಪ್ರಸವಕಾಲ ನಿರ್ಣಯ’ ಪ್ರಕರಣದಲ್ಲಿ ಗರ್ಭಿಣಿ ಸ್ತ್ರೀಗೆ ಮುಟ್ಟು ನಿಂತು ಸ್ನಾನವಾದ ದಿನವನ್ನು ಲೆಕ್ಕವಿಟ್ಟುಕೊಂಡು ಹೆರಿಗೆ ಆಗಬಹುದಾದ ದಿನವನ್ನು ತೋರಿಸುವ ಜನವರಿ ೧ರಿಂದ ಡಿಸೆಂಬರ್ ೩೧ನೇ ದಿನಾಂಕದವರೆಗಿನ ಒಂದು ವರ್ಷದ ಪ್ರಸವಕಾಲವನ್ನು ತೋರಿಸುವ ಪಟ್ಟಿಯ ಕೋಷ್ಟಕವನ್ನು ನೀಡಲಾಗಿದೆ.

‘ಗರ್ಭಿಣೀ ವ್ಯಾಧಿ’ ಪ್ರಕರಣದಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸಾಮಾನ್ಯವಾಗಿ ಬರಬಹುದಾದ ಓಕರಿಕೆ, ವಾಂತಿ, ಎದೆಯುರಿ, ಕಮರುತೇಗು, ಹೊಟ್ಟೆಯುಬ್ಬರ, ಮಲಬಂಧ, ಭೇದಿ, ಪಿತ್ತ ಕಾಮಾಲೆ, ಮೂಲವ್ಯಾಧಿ, ಬಾಯಲ್ಲಿ ನೀರು ಊರುವದು, ಹಲ್ಲು ನೋವು, ಮೇಲುಬ್ಬಸ, ಕೆಮ್ಮು, ಎದೆಯಲ್ಲಿ ದಡದಡಿಕೆ, ಮೂರ್ಛೆ, ತಲೆನೋವು, ನಿದ್ರೆ ಬಾರದಿರುವದು, ಮೂತ್ರಕಟ್ಟು, ಮೂತ್ರಜಿನುಗು, ಉರಿಮೂತ್ರ, ಬಿಳುಪು, ಮರ್ಮ ಸ್ಥಾನದಲ್ಲಿ ನವೆ, ಕಾಲುಬಾವು, ಕಾಲುಗಳಲ್ಲಿ ರಕ್ತನಾಳದ ಗಂಟು, ಸೆಳವು, ಪಕ್ಕೆ ಕಾಲು ಬೆನ್ನುಗಳಲ್ಲಿ ನೋವು ಹಾಗೂ ಸ್ತನಶೂಲೆ ಮುಂತಾದ ವ್ಯಾಧಿಗಳ ಸ್ವರೂಪ ಹಾಗೂ ಆಯಾ ವ್ಯಾಧಿಗಳ ಚಿಕಿತ್ಸೆಯನ್ನು ಕುರಿತು ಮಾಹಿತಿ ನೀಡಲಾಗಿದೆ.

ಇನ್ನು ಗರ್ಭಸ್ರಾವ ಅಧ್ಯಾಯದಲ್ಲಿ ಗರ್ಭಸ್ರಾವಕ್ಕೆ ಕಾರಣ, ಗರ್ಭವನ್ನು ಕರಗಿಸಿಕೊಳ್ಳುವದು, ಗರ್ಭಪಾತ ಚಿಹ್ನೆಗಳು, ಗರ್ಭಪಾತ ನಿವಾರಣೆಗೆ ಚಿಕಿತ್ಸೆ, ಅಕಾಲ ಪ್ರಸವ ಇತ್ಯಾದಿಗಳನ್ನು ಕುರಿತ ವಿವೇಚನೆಯಿದೆ. ಹೆರಿಗೆ ಮನೆ, ಹಾಸಿಗೆ, ಉಪಚಾರ ಮಾಡುವವಳು, ಸೂಲಗಿತ್ತಿ, ಹೆರಿಗೆಗೆ ಬೇಕಾದ ಸಲಕರಣೆಗಳು ಇವನ್ನು ಕುರಿತ ಉಪಯುಕ್ತ ಸಲಹೆ ಸೂಚನೆಗಳನ್ನು ‘ಪ್ರಸವ ಸನ್ನಾಹ’ ಪ್ರಕರಣದಲ್ಲಿ ಲೇಖಕರು ನಿರೂಪಿಸಿರುತ್ತಾರೆ. ‘ಕ್ರಮಪ್ರಸವ’ ಅಧ್ಯಾಯದಲ್ಲಿ ಪ್ರಸವ ಸಂದರ್ಭವನ್ನು ಲೇಖಕರು ಮೂರು ಕಾಲಾವಧಿಯನ್ನಾಗಿ ವಿಂಗಡಿಸಿಕೊಂಡು ಪ್ರಸವಚಿಹ್ನೆ, ಕಳ್ಳ ಬೇನೆ ಇತ್ಯಾದಿಗಳೊಂದಿಗೆ ಆ ಮೂರೂ ಕಾಲಾವಧಿಯ ವಿಶೇಷ ಹಾಗೂ ವಿವರಗಳನ್ನು ತಿಳಿಯಪಡಿಸುತ್ತಾರೆ.

ಕ್ರಮಪ್ರಸವ ನಿರ್ವಾಹ ಪ್ರಕರಣದಲ್ಲಿ ಗರ್ಭಿಣಿಗೆ ಆಗುವ ಸುಸೂತ್ರ ಪ್ರಸವದ ಸವಿವರಣೆಯಿದೆ. ಅಕ್ರಮ ಪ್ರಸವ ಪ್ರಕರಣದಲ್ಲಿ ಗರ್ಭಿಣಿಗೆ ಉಂಟಾಗುವ ದೀರ್ಘಕಾಲ ಪ್ರಸವ ವೇದನೆ, ಶೀಘ್ರ ಪ್ರಸವ, ಸಹಾಯಾವಶ್ಯಕ ಪ್ರಸವ, ಪೃಷ್ಟಾದಿ ಪ್ರಸವ, ಮುಖ ಪ್ರಸವ, ಹಸ್ತ ಪ್ರಸವ ಹಾಗೂ ಶಿಶು ಮೃತಿ ಮುಂತಾದ ವಿಚಾರಗಳನ್ನು ವೇದ್ಯಗೊಳಿಸಿದ್ದಾರೆ.

ಅವಳಿ ಮಕ್ಕಳ ಪ್ರಸವ, ಕುಡಿ ಮುಂದಾಗಿ ಬರುವದು, ಮಾಸು ಬೀಳದೆ ಇರುವದು, ರಕ್ತಸ್ರಾವ, ಗರ್ಭಕೋಶವು ಹರಿದು ಹೋಗುವದು, ಗರ್ಭಕೋಶವು ಒಳಹೊರಗಾಗುವದು, ಆಸನಕ್ಕೂ ಯೋನಿಗೂ ಮಧ್ಯದಲ್ಲಿರುವ ಪ್ರದೇಶವು ಹರಿದುಹೋಗುವದು, ಧನುರ್ವಾಯು ಮುಂತಾದ ಸಂಪೂರ್ಣ ವಿವರಗಳನ್ನು ಸಂಕೀರ್ಣ ಪ್ರಸವ ಪ್ರಕರಣದಲ್ಲಿ ಹೇಳಲಾಗಿದೆ.

ಗರ್ಭಿಣಿಯ ಪ್ರಸವಾನಂತರದ ಶುಶ್ರೂಷೆಯನ್ನು ಕುರಿತು ಪ್ರಸೂತ ಸ್ತ್ರೀ ಸಂರಕ್ಷಣ ಅಧ್ಯಾಯದಲ್ಲಿ ಸಲಹೆಗಳನ್ನು ನೀಡಲಾಗಿದೆ. ಸೂತಿಕಾ ವ್ಯಾಧಿ ಪ್ರಕರಣದಲ್ಲಿ ಮೊಲೆತೊಟ್ಟು ಅಣಗಿರುವದು, ಮೊಲೆತೊಟ್ಟು ಹುಣ್ಣಾಗಿರುವದು, ಎದೆಬಾವು, ಸ್ತನದಲ್ಲಿ ಕೀವು ಕಟ್ಟುವದು, ಹಾಲನ್ನು ಇಂಗಿಸುವದು, ಹಾಲು ಬೀಳದಂತೆ ಮಾಡುವದು, ಸ್ತನ್ಯವು ವಿಶೇಷವಾಗಿ ಬೀಳುವದು, ಹಾಲುಜ್ವರ, ಸನ್ನಿ ಜ್ವರ, ಪಿತ್ತ ಸನ್ನಿ, ಕಾಲು ಊದಿಕೊಳ್ಳುವದು ಮುಂತಾದ, ಸಾಮಾನ್ಯವಾಗಿ ಬಾಣಂತಿಗೆ ಬರಬಹುದಾದ ಕೆಲವು ಖಾಯಿಲೆಗಳ ಸ್ವರೂಪ ಹಾಗೂ ಅವಕ್ಕೆ ಚಿಕಿತ್ಸೆಗಳನ್ನು ಹೇಳಿರುತ್ತಾರೆ. ಶಿಶು ಸಂರಕ್ಷಣ ಪ್ರಕರಣದಲ್ಲಿ ಶಿಶುವಿಗೆ ಹಾಲೂಡಿಸುವ ವಿಧಾನ, ಕಾಲಾವಧಿ, ಅದಕ್ಕೆ ಮಾಡಿಸಬೇಕಾದ ಒಳ್ಳೆಯ ಅಭ್ಯಾಸಗಳು ಇತ್ಯಾದಿಗಳನ್ನು ಕುರಿತು ದೀರ್ಘವಾಗಿ ವಿವೇಚಿಸಲಾಗಿದೆ.

ನಮ್ಮ ಸಮಾಜದ ಸಾಮಾನ್ಯ ಪತ್ನಿಯೊಬ್ಬಳು ಗರ್ಭಿಣಿಯಾದಾಗ ಅನುಸರಿಸಬೇಕಾದ ರೀತಿರಿವಾಜುಗಳನ್ನು ಅತ್ಯಂತ ಸರಳವಾಗಿಯೂ ವೈದ್ಯಕೀಯವಾಗಿಯೂ ತುಂಬಾ ಉಪಯುಕ್ತವಾದ ರೀತಿಯಲ್ಲಿ ವೈದ್ಯರಾದ ಶ್ರೀನಿವಾಸ ಅಯ್ಯಂಗಾರ್ ಅವರು ಈ ಪುಸ್ತಕರೂಪದಲ್ಲಿ ತಿಳಿಸಿರುವದು ಅಂದಿನ ಕಾಲದ ಕುಟುಂಬಗಳಿಗೆ ತಂಬಾ ಪ್ರಯೋಜನವಾಗಿತ್ತು. ಪ್ರಸವವೈದ್ಯವಿಜ್ಷಾನಕ್ಕೆ ಸಂಬಂಧಿಸಿದಂತೆ ಒಂದೂಕಾಲು ಶತಮಾನದ ಹಿಂದೆಯೇ ಕನ್ನಡದಲ್ಲಿ ದೇಶೀಯ ವಿದ್ವಾಂಸರೋರ್ವರಿಂದ ಇಂತಹ ಒಂದು ಅಪೂರ್ವ ಕೃತಿ ಪ್ರಕಟವಾಗಿರುವುದು ಕನ್ನಡ ಸಾಹಿತ್ಯದ ವೈವಿಧ್ಯಕ್ಕೂ ಅಪಾರ ಸಾಧ್ಯತೆಗಳಿಗೂ ಉದಾಹರಣೆಯಂತಿದೆ.

ಪು: 160

ಬೆ: ನಮೂದಾಗಿಲ್ಲ

ಮು: ಮೈಸೂರಿನ ಗ್ರಾಜುಯೇಟ್ಸ್ ಅಸೋಸಿಯೇಷನ್ ಮುದ್ರಣಾಲಯ