‘Carnataca Translation of Esop’s Fables’ ಎನ್ನುವ ಹೆಸರಿನ ಇಸೋಪನ ನೀತಿ ಕಥೆಗಳ ಅನುವಾದವಾದ ಈ ಕೃತಿಯನ್ನು ಸಿದ್ಧಪಡಿಸಿದವನು ಸರ್ ವಾಲ್ಟರ್ ಎಲಿಯಟ್ ಹೆಸರಿನ, ಮದ್ರಾಸು ಸಿವಿಲ್ ಸೇವಾ ಪರೀಕ್ಷೆ ಮಾಡಿಕೊಂಡಿದ್ದ ವಿದ್ವಾಂಸ. Prepared under the Superintendence of Walter Elliot, Esquire, of the Madras Civil Service ಎನ್ನುವ ಒಕ್ಕಣೆ ಮುಖಪುಟದಲ್ಲಿ ನಮೂದಿತವಾಗಿರುವುದರಿಂದ ಕನ್ನಡದಲ್ಲಿ ಈ ಅನುವಾದವನ್ನು ಯಾರೋ ದೇಶೀಯ ವಿದ್ವಾಂಸನು ಮಾಡಿರಬೇಕು.
ಆದರೆ ಅವರ ಹೆಸರು ಇಲ್ಲಿ ನಮೂದಿತವಾಗಿಲ್ಲ. ಮೊದಲನೆಯ ಆವೃತ್ತಿಯು 1840ರಲ್ಲಿ ಬಳ್ಳಾರಿಯಿಂದಲೂ ಎರಡನೆಯ ಆವೃತ್ತಿಯು ಮದ್ರಾಸಿನಿಂದಲೂ ಹಾಗೂ ಪ್ರಸ್ತುತ ಈ ಮೂರನೆಯ ಆವೃತ್ತಿಯು 1855ರಲ್ಲಿ ಮದ್ರಾಸಿನ ಪರೀಕ್ಷಾ ಮಂಡಲಿಗಾಗಿ
ಬಿ. ಜಗನ್ನಾಯಕುಲು ಚೆಟ್ಟಿಯಾರ್ ಅವರಿಂದ ಮದ್ರಾಸಿನ ವಿದ್ಯಾ ಕಲಾನಿಧಿ ಲಿಟರರಿ ಪ್ರೆಸ್ಸಿನಿಂದಲೂ ಮುದ್ರಿತವಾಗಿದೆ. ಆ ಕಾಲಘಟ್ಟದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಒಂದೇ ರೀತಿಯ ಅಚ್ಚುಮೊಳೆಗಳನ್ನು ಬಳಸಲಾಗುತ್ತಿತ್ತು. ಇಲ್ಲಿಯೂ ಅದೇ ಕ್ರಮವನ್ನು ಅನುಸರಿಸಲಾಗಿದೆ.
ಎಲಿಯಟ್ ಸ್ಕಾಟಿಷ್ ಮೂಲದವನಾಗಿದ್ದು 1803ರ ಜನವರಿ 16ರಂದು ಹುಟ್ಟಿ 1887ನೇ ಮಾರ್ಚ್ 1ನೆಯ ದಿನಾಂಕದವರೆಗೆ ಬದುಕಿ ಬಾಳಿದವನು. ಧಾರವಾಡದಲ್ಲಿ ಶಿಕ್ಷಣಾಧಿಕಾರಿಯೂ ಜಿಲ್ಲಾಧಿಕಾರಿಯೂ ಆಗಿದ್ದ ಆತ, ಕನ್ನಡ, ತಮಿಳು, ತೆಲುಗು, ಸಂಸ್ಕೃತ, ಮರಾಠಿ ಭಾಷೆಗಳನ್ನೂ ಸೇರಿದಂತೆ 28 ಭಾಷೆಗಳನ್ನು ಬಲ್ಲವನಾಗಿದ್ದನು.
ಕನ್ನಡವೇ ಆಡಳಿತ ಭಾಷೆಯಾಗಿರಬೇಕೆಂದು ವಾದಿಸುತ್ತಿದ್ದ ಎಲಿಯಟ್, ರೆವರೆಂಡ್ ಕಿಟ್ಟೆಲ್ ಹಾಗೂ ರಾಬರ್ಟ್ ಕಾಲ್ಡ್‌ವೆಲ್‌ಗಳಿಗೆ ದ್ವಾವಿಡ ಭಾಷೆಗಳಲ್ಲಿ ಬರೆಯಲು ಒತ್ತಾಸೆ ನೀಡಿದ್ದನು. ಸಾಹಿತ್ಯ ಮತ್ತು ಸಂಶೋಧನೆಗೆ ತನ್ನನ್ನು ಮುಡುಪಾಗಿಟ್ಟುಕೊಂಡಿದ್ದ ಈ ಧೀಮಂತ ಪುರಾತತ್ವ ಶಾಸ್ತ್ರ, ಭಾಷಾವಿಜ್ಞಾನ, ಪ್ರಕೃತಿ ಶಾಸ್ತ್ರ ಹಾಗೂ ಬುಡಕಟ್ಟು ಜನಾಂಗಗಳ ಅಧ್ಯಯನಗಳಲ್ಲಿಯೂ ತಜ್ಞನಾಗಿದ್ದನು. ದ್ರಾವಿಡ ಭಾಷೆಗಳನ್ನು ಕುರಿತ ಅವನ ಅಭಿಮಾನ ಅನುಪಮವಾದದ್ದು. ತಾನು ಸಾಯುವ ದಿವಸ 1ನೆಯ ಮಾರ್ಚ್ 1887 ರಂದು ತಮಿಳಿನ ತಿರುಕ್ಕುರಳಿನ ಪೋಪ್‌ರ ಭಾಷಾಂತರದ ಹೊಸ ಆವೃತ್ತಿಯ ಬಗ್ಗೆ ಉತ್ಸಾಹದಿಂದ ಪೋಪರ ಪತ್ರಕ್ಕೆ ಸಹಿ ಹಾಕಿದ್ದುದು ಇದಕ್ಕೆ ದ್ಯೋತಕ.
1847ರಷ್ಟು ಹಿಂದೆಯೇ Asiatic Researches ಪತ್ರಿಕೆಯಲ್ಲಿ ದ್ರಾವಿಡ ಭಾಷೆಗಳ ನುಡಿಗಟ್ಟುಗಳ ಪ್ರಯೋಗಗಳಲ್ಲಿ ಕಂಡುಬರುವ ಸಮಾನಾಂಶಗಳನ್ನು ಕುರಿತ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದನು. 1840ರಲ್ಲಿ ಎಂ. ಶ್ರೀನಿವಾಸರಾಯ ಎನ್ನವವರು ಬರೆದಿದ್ದ ಕನ್ನಡ ವ್ಯಾಕರಣವು ಕೃತಿಯನ್ನು 1846ರಲ್ಲಿ ಪರಿಷ್ಕರಿಸಿ ಹೊಸ ಆವೃತ್ತಿಯನ್ನು ಹೊರತಂದಿದ್ದನು.
ಆಗಿನ ಕಾಲಘಟ್ಟದ ಪಠ್ಯ ರಚನೆಗಳಲ್ಲಿ ಸಹಕಾರ ನೀಡಿದ ಎಲಿಯಟ್ ‘ಮಕ್ಕಳಿಗಾಗಿ ಸುಲಭ ಪಾಠಗಳು’ ಎಂಬ ಕೃತಿಯನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ರಚಿಸಿದ್ದನು. ಮೇಲ್ಮಟ್ಟದ ಸಂಶೋಧಕನಾಗಿದ್ದ ಎಲಿಯಟ್, ರಾಯಲ್ ಏಷಿಯಾಟಿಕ್ ಸೊಸೈಟಿಯ ಮದ್ರಾಸು ಶಾಖೆಯ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಮಾಡಿದುದರ ಜೊತೆಗೆ ಪ್ರಾಚೀನ ಕನ್ನಡ ಶಿಲಾಶಾಸನಗಳ ಗೂಢಲಿಪಿಗಳನ್ನು ಓದುವ ಕಲೆಯನ್ನು ಕರಗತಮಾಡಿಕೊಂಡಿದ್ದನು. 595 ಶಿಲಾಶಾಸನಗಳನ್ನು ಅವನು ಓದಿದ್ದನೆಂದು ಐ.ಮಾ. ಮುತ್ತಣ್ಣ ಅವರು ತಮ್ಮ ‘19ನೆಯ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ’ ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ಇವನ ಇತರ ಕೃತಿಗಳೆಂದರೆ Language of Gonds, Coins of India ಹಾಗೂ Canarese Vocabulary ಎಂಬ ಕನ್ನಡ ಶಬ್ದಮಂಜರಿ.
ಕನ್ನಡದಲ್ಲಿ ಪ್ರಾಚೀನ ಕಾಲದಿಂದಲೂ ಕತೆಗಳು ಜನಪ್ರಿಯವಾಗಿವೆ. ವಡ್ಡಾರಾಧನೆ, ಪಂಚತಂತ್ರಗಳಲ್ಲದೆ ಬೃಹತ್ಕತೆ, ಕಥಾಸರಿತ್ಸಾಗರ, ನೀತಿ ಪುರಾಣಕತೆಗಳ ಜೊತೆಗೆ 19ನೆಯ ಶತಮಾನದಲ್ಲಿ ವಿದೇಶೀ ಕೃತಿಗಳಾದ ಅರೇಬಿಯನ್ ನೈಟ್ಸ್, ಗಲಿವರನ ಪಯಣದ ಕತೆಗಳು ಕೂಡಾ ಪ್ರಕಟವಾದವು. 1841ರಲ್ಲಿ ಬೆಂಗಳೂರಿನ ವೆಸಲಿಯನ್ ಮಿಷನ್ ಪ್ರೆಸ್‌ಗಾಗಿ ಮುನ್ಷಿ ಗೊಪಾಲ ಆಚಾರೂವಿಗಾಗಿ ಮೈಸೂರು ಧಾಟೀಗೋಪಾಲಾಚಾರ್ಯರಿಂದ ಅಚ್ಚಾದ ‘ಕಥಾಮಂಜರಿ’ ಎನ್ನುವ ಇಂಗ್ಲಿಷ್ ಭಾಷೆಯ ಅನುವಾದಗಳನ್ನೂ ಒಳಗೊಂಡ ಕನ್ನಡದ ಕಥೆಗಳು ಪ್ರಕಟಗೊಂಡಿದೆ. 1842ರಲ್ಲಿ ಕೇಂಬಲ್ ಅಯ್ಯ (ಸಿ. ಕ್ಯಾಂಪ್‌ಬೆಲ್)ನವರು ‘ದೊರೆಸಾನಿಯನ್ನೂ ದಾದಿಯನ್ನೂ ಕುರಿತ ವಿಶೇಷಗಳು’ ಕೃತಿಯನ್ನು ವೆಸ್ಲಿಯನ್ ಮಿಷನ್ ಪ್ರೆಸ್ಸಿನಿಂದ ಪ್ರಕಟಿಸಿದರು. ೧೮೫೪ರ ಹೊತ್ತಿಗೆ ಶೆಟ್‌ಲೂರ್ ಬಿ. ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ರಾಬಿನ್ಸನ್ ಕ್ರೂಸೋ ಅವರ ‘ಆಶ್ಚರ್ಯಕರವಾದ ಸಂಚಾರಾದಿ ವೃತ್ತಾಂತಗಳು’ ಕೃತಿಯನ್ನು ಹೊರತಂದರು.
1857ರಲ್ಲಿ ವೆಸ್ಲಿಯನ್ ಮಿಷನ್ ಪ್ರೆಸ್ಸಿನಿಂದ ಪ್ರಕಟಗೊಂಡ ಎಪ್ಪತ್ತು ಕಥೆಗಳ ಪುಸ್ತಕವು ಒಂದು ಗಮನಾರ್ಹ ಕತಾಕೃತಿ. 1865ರಲ್ಲಿ ಜಾನ್ ಗ್ಯಾರೆಟ್ ಮಹಾಶಯನು ‘ಕನ್ನಡ ಪಂಚತಂತ್ರವು’ ಎನ್ನುವ ಪಂಚತಂತ್ರದ ಅನುವಾದಿತ ಕೃತಿಯನ್ನು ಪ್ರಕಟಿಸಿದನು. 1865ರಲ್ಲಿಯೇ ವೆಂಕಟ ರಂಗೋ ಕಟ್ಟಿಯವರ ‘ಅರೇಬಿಯನ್ ನೈಟ್ಸ್’ನ ಕನ್ನಡಾನುವದವು ಬಂದಿತು. 1920ರಲ್ಲಿ ಹೊರಬಂದ ಕುಮಾಂಡೂರು ರಾಮಸ್ವಾಮಯ್ಯಂಗಾರ್ ಅವರ ‘ಪಾರಶಿಯ ಹಗಲಿನ ವಿನೋದ ಕತೆಗಳು’ ಕೂಡ ಒಂದು ಪ್ರಮುಖ ಕೃತಿ. ಹೀಗಾಗಿ ಕನ್ನಡದಲ್ಲಿ ವಿಸ್ಮಯದ, ಆಶ್ಚರ್ಯಕರವಾದ ಕಥಾಪರಂಪರೆಗೆ ಕೊರತೆಯಿಲ್ಲ. ಅಂತಹ ಕೃತಿಗಳ ಸಾಲಿಗೆ ಸದರೀ ಸರ್ ವಾಲ್ಟರ್ ಎಲಿಯಟ್ ಸಿದ್ಧಪಡಿಸಿರುವ ‘ಇಸೋಪನ ನೀತಿ ಕಥೆಗಳು’ ಸೇರುತ್ತದೆ.
ಡೆಮಿ ಆಕಾರದ 220 ಪುಟಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ 188 ಕಥೆಗಳಿವೆ. ಪ್ರತಿಯೊಂದು ಕಥೆಗೂ ಸಂಖ್ಯೆಯ ಸೂಚನೆಯಿದ್ದು ಒಂದು ಹೆಸರಿನ ಶೀರ್ಷಿಕೆಯಿರುತ್ತದೆ. ನಂತರ ಅದರ ತಾತ್ಪರ್ಯವನ್ನು 5 ವಾಕ್ಯಗಳಿಂದ 15 ವಾಕ್ಯಗಳ ಪರಿಮಿತಿಯಲ್ಲಿ ನೀತಿಯ ರೂಪದಲ್ಲಿ ಹೇಳಲಾಗಿರುತ್ತದೆ. ಇದು ಸಾಮಾನ್ಯವಾಗಿ ಆ ಕಾಲಘಟ್ಟದಲ್ಲಿ ಬಂದ ಕಥಾಪುಸ್ತಕಗಳ ಸ್ವರೂಪ. ಯಾವ ಕತೆಯೂ ಒಂದು ಪುಟದ ವ್ಯಾಪ್ತಿಯನ್ನು ಮೀರದಿರುವುದು ಇದರ ವಿಶೇಷ. ಇದರಿಂದಾಗಿ ವಾಚಕರಿಗೆ ಬೇಕೆನಿಸಿದಾಗ ಒಂದಷ್ಟು ಕಥೆಗಳನ್ನು ಓದುವ ಅವಕಾಶ ಹಾಗೂ ಯಾವುದೇ ಕಥೆಗಳನ್ನು ಬಿಡಿಬಿಡಿಯಾಗಿ ಅಥವಾ ಎಲ್ಲ ಕಥೆಗಳನ್ನು ಇಡಿಯಾಗಿ ಓದಿಕೊಳ್ಳಬಹುದಾದ ಆಯ್ಕೆಯ ಸ್ವಾತಂತ್ರ್ಯವಿದೆ. ಇಲ್ಲಿನ ಕಥೆಗಳು ಬಹುಮಟ್ಟಿಗೆ ವಿಷ್ಣುಶರ್ಮನ ಸಂಸ್ಕೃತದ ಪಂಚತಂತ್ರದ ಕಥೆಗಳನ್ನು ಹೋಲುತ್ತವೆ. ಬಹು ಮಟ್ಟಿಗಿನ ಕಥೆಗಳಲ್ಲಿ ಮನುಷ್ಯರ ಪಾತ್ರಗಳೇ ಬರುವುದಿಲ್ಲ. ಹೆಚ್ಚಿನ ಕಥೆಗಳಲ್ಲಿ ಪ್ರಾಣಿ-ಪಕ್ಷಿ-ಕ್ರಿಮಿಕೀಟಗಳ ಪಾತ್ರಗಳು ಬರುತ್ತವೆ.
ಕ್ವಚಿತ್ತಾಗಿ ಗಿಡ-ಮರ-ಬಳ್ಳಿ-ಗುಲ್ಮ-ವೃಕ್ಷಾದಿಗಳ ಪಾತ್ರಗಳೂ ಬರುವುದುಂಟು. ಇದಕ್ಕೆ ಪೂರಕವಾಗಿ ಕೆಲವು ಕಥೆಗಳ ಶೀರ್ಷಿಕೆಗಳನ್ನು ನೋಡಬಹುದು. ‘ಆಡು ಸಾಕಿದ ಕುರೀಮರಿಯು’, ‘ಇಲಿಗೂ ಸಿಂಹಕ್ಕೂ ಮದುವೆ’, ‘ಸಾರಂಗಿಯ ಬಾರಿಸುವವನು’, ‘ವನದೇವತೆಯೂ ಮಾರ್ಗಸ್ಥನೂ’, ‘ಒಂಟಿಕಣ್ಣಿನ ಚಿಗರಿ’, ‘ಊರಿನ ಇಲಿಯೂ ಪಟ್ಟಣದ ಇಲಿಯೂ’, ‘ಇಂದ್ರನೂ ಗಣೇಶನೂ’, ‘ಎಡವಟ್ಟ ಹೋರಿ’, ಇತ್ಯಾದಿ. ಮನುಷ್ಯನ ಜಟಿಲವಾದ ಜೀವನದ ಎಲ್ಲ ರೀತಿಯ ಆಶೋತ್ತರಗಳು, ಮಾನಸಿಕ ತಲ್ಲಣಗಳು, ಆಕಾಂಕ್ಷೆಗಳು, ತಿಕ್ಕಲುತನಗಳು, ಔದಾರ್ಯ, ಔನ್ನತ್ಯ– ಇವೆಲ್ಲ ವಿಚಾರಗಳನ್ನು ನೀತಿಯ ಸಂದೇಶದ ರೂಪದಲ್ಲಿ ಈ ಕತೆಗಳು ಧ್ವನಿಸುತ್ತವೆ.
1840ರ ಕಾಲಘಟ್ಟದಲ್ಲಿ ಬಂದ ಅನುವಾದಿತ ಕಥೆಗಳಲ್ಲಿ ಹಾಗೂ ಕನ್ನಡದ ಮುದ್ರಿತ ಕಥಾಸಾಹಿತ್ಯದಲ್ಲಿ ಮೊತ್ತ ಮೊದಲನೆಯ ಕೃತಿ ಎನ್ನುವ ಅಗ್ಗಳಿಕೆಗೆ ಪಾತ್ರವಾಗಿರುವ ಈ ‘ಇಸೋಪನ ನೀತಿಕತೆಗಳು’ ಕನ್ನಡದಲ್ಲಿ ಚಾರಿತ್ರಕವಾಗಿ ಹಾಗೂ ಗುಣಾತ್ಮಕವಾಗಿ ಒಂದು ಮಹತ್ವದ ಕೃತಿಯಾಗಿದೆ.