ಫ್ರೆಡ್ರಿಕ್ ಜಿಗ್ಲರ್ ಅವರ ‘ಇಂಗ್ಲಿಷ್ ಮತ್ತು ಕನ್ನಡ ಶಾಲಾನಿಘಂಟು‘
ಮುನ್ನುಡಿ

ರೆವರೆಂಡ್ ಫ್ರೆಡ್ರಿಕ್ ಜಿಗ್ಲರ್ ಅವರ ‘ಇಂಗ್ಲಿಷ್ ಮತ್ತು ಕನ್ನಡ ಶಾಲಾನಿಘಂಟು‘ (An English and Canarese  SCHOOL-DICTIONARY)ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್‌ನಿಂದ 1876ರಲ್ಲಿ ಮುದ್ರಣಗೊಂಡಿದೆ. 1919ರ ಐದನೆಯ ಆವೃತ್ತಿಯಲ್ಲಿ ಈ ನಿಘಂಟನ್ನು ಕ್ರಿಸ್ಟಾನುಜ ವತ್ಸ ಎಂಬ ವಿದ್ವಾಂಸನು ಪರಿಷ್ಕರಿಸಿ ಪ್ರಕಟಿಸಿದನು. 1991ರಲ್ಲಿ ಇದರ 11ನೇ ಆವೃತ್ತಿಯು Ziegler’s English-Kannada Dictionaryಹೆಸರಿನಲ್ಲಿ ಹೊರಬಂದಿರುವುದು ಇದರ ಜನಪ್ರಿಯತೆ ಹಾಗೂ ಉಪಯುಕ್ತತೆಯನ್ನು ಸೂಚಿಸುವಂತಿದೆ.

1862ರಲ್ಲಿ ಜರ್ಮನಿಯಿಂದ ಭಾರತಕ್ಕೆ ಬಂದ ಜಿಗ್ಲರ್ 1895ರವರೆಗೆ ಮಂಗಳೂರು ಮತ್ತು ಉತ್ತರ ಕರ್ನಾಟಕವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಕನ್ನಡಕ್ಕಾಗಿ ದುಡಿದನು. ಶಿಕ್ಷಣ ಕ್ಷೇತ್ರದಲ್ಲಿ ಆತನದು ದೊಡ್ಡ ಹೆಸರು. ಜಿಗ್ಲರ್ ಆ ಕಾಲಕ್ಕೆ ಇತರ ತಜ್ಞರೊಂದಿಗೆ ಶಾಲೆಗಳಲ್ಲಿ ವೇಳಾಪಟ್ಟಿ ಸಿದ್ಧಪಡಿಸುವುದು, ಶಿಸ್ತಿನ ಅಳವಡಿಕೆ, ನಿರ್ದಿಷ್ಟ ಪಠ್ಯವಸ್ತು ಹಾಗೂ ವಿದ್ಯಾಕ್ರಮವನ್ನು ರೂಪಿಸಿಕೊಟ್ಟನು. ಧಾರವಾಡದ ಬಾಸೆಲ್ ಮಿಷನ್ ಕೇಂದ್ರದಲ್ಲಿ ಅಧಿಕಾರಿಯಾಗಿದ್ದ ಈತನ ಕನ್ನಡದ ಮೇಲಣ ವಿದ್ವತ್ತನ್ನು ಗುರುತಿಸಿ 1893-94ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಸಂಘದ ಅಧ್ಯಕ್ಷನನ್ನಾಗಿಸಿ ಗೌರವಿಸಿದರು.

ಜಿಗ್ಲರ್ ಸ್ವತಂತ್ರವಾಗಿ ಮತ್ತು ಇತರರೊಂದಿಗೆ ಒಟ್ಟು ಹನ್ನೊಂದು ಪುಸ್ತಕಗಳನ್ನು ರಚಿಸಿದ್ದಾನೆ. ಅವುಗಳೆಂದರೆ: ಕಾವ್ಯಮಾಲಿಕೆ, ಕನ್ನಡ ಶಾಲಾ ವ್ಯಾಕರಣ (ರೆವರೆಂಡ್ ಡಿ ಕೋಸ್ಟ ಅವರೊಂದಿಗೆ), ಗೀತಗಳು (ರೆವರೆಂಡ್ ಬಿ. ಗ್ರೇಟರನೊಂದಿಗೆ), ಪೂರ್ಣಾಂಕ ಗಣಿತಾಭ್ಯಾಸಕ್ಕೆ ತಕ್ಕ ಉದಾಹರಣೆಗಳು, ಗಣಿತನ್ಯಾಯ, A Practical Key to Canarese Language- (ಈ ಪುಸ್ತಕದ ವಿವರಣೆಯು ಇಂಗ್ಲಿಷ್, ಜರ್ಮನ್ ಹಾಗು ಫ್ರೆಂಚ್ ಭಾಷೆಗಳಲ್ಲಿದೆ), Hymn Book in Canarese-, ಇಂಗ್ಲಿಷ್ ಮತ್ತು ಕನ್ನಡ ಶಾಲಾ ನಿಘಂಟು, ಗಣಿತಾಭ್ಯಾಸದ ಉದಾಹರಣೆಗಳು, ಮಾರ್ಕನು ಬರೆದ ಸುವಾರ್ತೆ ಅಂದರೆ ಮುಕ್ತಿದಾಯಕನ ಚರಿತ್ರೆ ಹಾಗೂ ಲೂಕನು ಬರೆದ ಸುವಾರ್ತೆ ಅಂದರೆ ಜಗದ್ರಕ್ಷಕನ ಚರಿತ್ರೆ. 1895ರಲ್ಲಿ ಜರ್ಮನಿಗೆ ಮರಳಿದ ಜಿಗ್ಲರ್ ಅಲ್ಲಿ ಶಿಕ್ಷಕನಾಗಿ ಕೆಲಸ ಮಾಡಿ 1906ರಲ್ಲಿ ನಿಧನ ಹೊಂದಿದನು. ಜಿಗ್ಲರ್ ಕನ್ನಡದಲ್ಲಿ ಬೈಬಲ್, ನಿಘಂಟು, ವ್ಯಾಕರಣ ಮತ್ತು ಗಣಿತ ಶಾಸ್ತ್ರಗಳಲ್ಲಿ ಕೃತಿ ರಚನೆ ಮಾಡಿರುವುದು ವಿಶೇಷ. 

                                                                             

ನಿಘಂಟುಗಳಲ್ಲಿ ನಾನಾ ಬಗೆಗಳಿವೆ. ಅವುಗಳನ್ನು ಸ್ವರೂಪಾಧಾರಿತ ನಿಘಂಟು ಮತ್ತು ಬಳಕೆದಾರರನ್ನು ಗಮನದಲ್ಲಿರಿಸಿಕೊಂಡ ನಿಘಂಟುಗಳೆಂದು ವರ್ಗೀಕರಿಸಬಹುದು. ಸ್ವರೂಪಾಧಾರಿತ ನಿಘಂಟುಗಳಲ್ಲಿ- ಭಾಷಿಕ ನಿಘಂಟುಗಳು (ಏಕ ಭಾಷಿಕ, ದ್ವಿಭಾಷಿಕ, ಬಹುಭಾಷಿಕ), ಜ್ಞಾತಿಪದ ಕೋಶ, ಪಾರಿಭಾಷಿಕ ನಿಘಂಟುಗಳು, ವಿವಿಧ ವಿಷಯಕ ನಿಘಂಟುಗಳನ್ನು ಕಾಣಬಹುದು. ಬಳಕೆದಾರರನ್ನು ಗಮನದಲ್ಲಿರಿಸಿಕೊಂಡ ನಿಘಂಟುಗಳಲ್ಲಿ- ಶಾಲಾಕಾಲೇಜು ನಿಘಂಟುಗಳು, ವ್ಯತ್ಪತ್ತಿ ನಿಘಂಟುಗಳು, ತಿರುಗ ಮುರುಗ ನಿಘಂಟುಗಳನ್ನು ಗುರ್ತಿಸಬಹುದು. ಸಾಮಾನ್ಯ ನಿಘಂಟೊಂದು ಸಾಮಾನ್ಯವಾಗಿ ಎರಡು ಭಾಗಗಳನ್ನು ಒಳಗೊಂಡಿರುತ್ತದೆ. 1.‘ಕೋಷ್ಟಕ ರೂಪದಲ್ಲಿರುವ ನಿಘಂಟಿನಲ್ಲಿ‘ ಎಡಭಾಗದಲ್ಲಿ ಶಬ್ದಕೋಶ ಇರುತ್ತದೆ. 2.ಬಲಭಾಗದಲ್ಲಿ ಅರ್ಥಕೋಶವಿರುತ್ತದೆ. ಶಬ್ದಕೋಶದಲ್ಲಿ ಅಡ್ಡಪಾತಳಿಯಲ್ಲಿ ಶಬ್ದಗಳ ವಿವಿಧ ಪ್ರಾದೇಶಿಕ ರೂಪಗಳು ಹಾಗೂ ವಿವಿಧ ಕಾಲದ ಪರ್ಯಾಯಪದ ಹಾಗೂ ರೂಪಗಳಿರುತ್ತವೆ. ಅರ್ಥಕೋಶದಲ್ಲಿ ಆಯಾ ವಿವಿಧ ಶಬ್ದ ರೂಪಗಳಿಗೆ ಸಂಬಂಧಿಸಿದ ವಿವಿಧ ಅರ್ಥಗಳ ಮಾರ್ಗಾಂತರಗಳಿರುತ್ತವೆ.

ಭಾಷಿಕ ನಿಘಂಟುಗಳ ಸ್ವರೂಪವೇ ಬೇರೆ. ಎಡಭಾಗದ ಶಬ್ದಕೋಶದ ಭಾಷೆಯು ಆಕರಭಾಷೆ ((Source Language), ಲಭಾಗದ ಅರ್ಥಕೋಶದ ಭಾಷೆಯು ಗುರಿಭಾಷೆ (Target Language). ಕರ ಭಾಷೆ, ಗುರಿಭಾಷೆಗಳು ಒಂದೇ ಆಗಿದ್ದರೆ ಅದು ಏಕಭಾಷಿಕ ನಿಘಂಟು. ಬೇರೆ ಬೇರೆ ಭಾಷೆಗಳಾಗಿದ್ದರೆ ಭಾಷೆಗಳ ಸಂಖ್ಯೆಗಳನ್ನನುಸರಿಸಿ ದ್ವಿಭಾಷಿಕ ಅಥವಾ ಬಹುಭಾಷಿಕ ನಿಘಂಟು ಎಂದು ನಿರ್ದೇಶಿಸಬಹುದು.

ಬಹುಭಾಷಿಕ ನಿಘಂಟುಗಳಲ್ಲಿ ಕನ್ನಡದ ಭಾರತಿ ಸಂಪಂಗಿರಾಮಯ್ಯನವರ ‘ಭಾಷಾನಿಧಿ‘ ಎಂಬ ಒಂಬತ್ತು ಭಾಷೆಗಳ ನಿಘಂಟನ್ನು ಉಲ್ಲೇಖಿಸಬಹುದು. ಇದರಲ್ಲಿ ಆಕರಭಾಷೆಯಾದ ಕನ್ನಡ ವಾಕ್ಯಗಳಿಗೆ ಸಂವಾದಿಯಾದ ತಮಿಳು, ತೆಲುಗು, ಮಲಯಾಳ, ಗ್ರಂಥಸ್ಥ, ಸಂಸ್ಕೃತ, ಮರಾಥಿ, ಗುಜರಾತೀ, ಬಂಗಾಳೀ- ಮುಂತಾದ ಎಂಟು ಗುರಿಭಾಷೆಗಳ ವಾಕ್ಯಗಳಿವೆ.

(ಪ್ರಸ್ತುತ ಟಿಪ್ಪಣಿಕಾರನಿಗೆ ಇನ್ನೂ ಈ ಕೃತಿ ಲಭ್ಯವಾಗಿಲ್ಲ). ಇದನ್ನು ನವಭಾಷಾ ನಿಘಂಟು ಎನ್ನಬಹುದು. ಹಾಗೆಯೇ ಇಂಗ್ಲಿಷ್ ಭಾಷೆಯಲ್ಲಿ 1978ರಲ್ಲಿ ನ್ಯೂಯಾರ್ಕಿನ ಅವೆನ್ಯೂ ಬುಕ್ಸ್ ಪ್ರಕಟಿಸಿ ಡೇವಿಡ್ ಶುಮೇಕರ್ ಸಂಪಾದಿಸಿರುವ English, French, German, Hebrew, Italian, Portuguese, Russian, Spanish Language Dictionary ಅನ್ನು ಸ್ಮರಿಸಿಕೊಳ್ಳಬಹುದು. ಜ್ಞಾತಿಪದಕೋಶಗಳಲ್ಲಿ Dravidian Etymological Dictionaryಮುಖ್ಯವಾದದ್ದು.

ವಿಲಿಯಂ ರೀವ್, ಜಾನ್ ಗ್ಯಾರೆಟ್, ಡೇನಿಯಲ್ ಸೇಂಡರ‌್ಸನ್, ಜೆ.ಬುಚರ್- ಇವರುಗಳ ನಿಘಂಟುಗಳು ಕನ್ನಡ ಆಕರ ಭಾಷೆ ಮತ್ತು ಇಂಗ್ಲಿಷ್ ಗುರಿಭಾಷೆಯಾಗಿರುವ ಪ್ರಧಾನ ದ್ವಿಭಾಷಿಕ ನಿಘಂಟುಗಳು. ಕಿಟೆಲ್‌ರ ಕೋಶವು ಕನ್ನಡ ಆಕರ ಭಾಷೆ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಗುರಿಭಾಷೆಯಾಗಿರುವ ನಿಘಂಟು.

ಜಿಗ್ಲರ್‌ನ ಇಂಗ್ಲಿಷ್ ಮತ್ತು ಕನ್ನಡ ಶಾಲಾನಿಘಂಟು ಒಂದು ದ್ವಿಭಾಷಿಕ ನಿಘಂಟು. ಇಲ್ಲಿ ಆಕರ ಭಾಷೆ ಇಂಗ್ಲಿಷ್ ಆಗಿದ್ದರೆ ಗುರಿಭಾಷೆಯು ಕನ್ನಡ ಆಗಿದೆ. 19ನೇ ಶತಮಾನದಲ್ಲಿ ಹೆಸರಿಸಬಹುದಾದ ಐದಾರು ಇಂಗ್ಲಿಷ್-ಕನ್ನಡ ದ್ವಿಭಾಷಿಕ ನಿಘಂಟುಗಳಲ್ಲಿ ಪ್ರಸ್ತುತ ನಿಘಂಟು ಮಹತ್ವದ್ದು. ಜಿಗ್ಲರ್ ನಿಘಂಟಿಗೆ ಮೊದಲು ವಿಲಿಯಂ ರೀವ್, ಜಾನ್ ಗ್ಯಾರೆಟ್ ನಿಘಂಟುಗಳಿವೆ. ತದನಂತರದಲ್ಲಿ ಉಲ್ಲಾಳ ನರಸಿಂಗರಾವ ಅವರ ಇಂಗ್ಲಿಷ್-ಕನ್ನಡ ನಿಘಂಟಿದೆ. ಆದರೆ ಈ ನಿಘಂಟುಗಳ ಬಳಕೆದಾರರು ಸಾಮಾನ್ಯ ಓದುಗರಾದರೆ ಜಿಗ್ಲರ್‌ನ ನಿಘಂಟಿನ ಬಳಕೆದಾರರು ಶಾಲಾ ಕಾಲೇಜು ವಿದ್ಯಾರ್ಥಿಗಳು. 522 ಪುಟಗಳ ಈ ನಿಘಂಟಿನಲ್ಲಿ ಸುಮಾರು 27,000 ಇಂಗ್ಲಿಷ್ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ನೀಡಲಾಗಿದೆ.

ಕಿಟೆಲ್ಲರ ಕೋಶವು ಪ್ರಕಟವಾಗುವವರೆಗೆ ಮತ್ತು ನಂತರವೂ ಕೂಡ ಈ ಕೋಶವು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಈ ನಿಘಂಟಿನ ಸ್ವರೂಪವನ್ನು ನೋಡುವುದಾದರೆ ಮೊದಲಿಗೆ ಸೇರ್ಪಡೆ ಶಬ್ದದಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಉಚ್ಛಾರಣಾ ಘಟಕಗಳಾಗಿ ವಿಂಗಡಿಸಿ ನೀಡಲಾಗಿದೆ. ಉದಾಹರಣೆಗೆ- MULTIPLIABLE ಸೇರ್ಪಡೆ ಶಬ್ದವನ್ನು Mul-ti-pli-ea-ble ಎಂಬ ಐದು ಉಚ್ಛಾರಣಾ ಘಟಕಗಳನ್ನಾಗಿ ವಿಂಗಡಿಸಿ ನೀಡಲಾಗಿದೆ. ನಂತರ ಅದರ ಉಚ್ಛಾರಣಾ ಧ್ವನಿರೂಪ(ಇಲ್ಲಿ diacritical mark ) ಗಳನ್ನು ಬಳಸಲಾಗಿರುತ್ತದೆ. ಬಳಿಕ ಶಬ್ದದ ವ್ಯಾಕರಣೀಯ ಸ್ಥಾನಮಾನ (ನಾಮಪದವೇ, ಕ್ರಿಯಾಪದವೇ ಇತ್ಯಾದಿ). ಆ ಬಳಿಕ ಕನ್ನಡದಲ್ಲಿ ಅದರ ಒಂದು ಮತ್ತು ಅದಕ್ಕೆ ಇರುವ ನಾನಾರ್ಥಗಳನ್ನು ಕೊಡಲಾಗಿದೆ. ಮುಂದೆ ವಿವರಣೆಯೊಳಗೆ ಆದಿ ಪ್ರತ್ಯಯಗಳೊಂದಿಗೆ ಆ ಶಬ್ದ ಬಂದರೆ ಪಡೆಯುವ ಅರ್ಥಗಳು, ಆ ಶಬ್ದ ಉತ್ತರ ಪ್ರತ್ಯಯಗಳೊಂದಿಗೆ ಪಡೆದುಕೊಳ್ಳುವ ವಿವಿಧಾರ್ಥಗಳನ್ನು ನೀಡಲಾಗಿರುತ್ತದೆ.

ನಿದರ್ಶನಕ್ಕೆ-

High, (hi), a.1. ಎತ್ತರವಾದ. ಉದ್ದ, ಉನ್ನತ ; 2. (great), ದೊಡ್ಡ ; 3.(of noble birth), ಅಚ್ಚ, ಅಚ್ಚವಳಿ ;  4. (strong), ಬಲವಾದ, ಜೋರು, ಕಡು, ಬಿರು ; 5. (abstruse), ಗೂಢ ; 6. (costly), ತುಟ್ಟಿ ; . h. price ತುಟ್ಟಿ ಧಾರಣೆ ; 7. (arrogant)), ಸೊಕ್ಕಿನ, ಅಹಂಕಾರದ ; 8.(well seasoned), ಖಾರ ; 9. (deep as colour), ಅಚ್ಚ ; 10. (remote in time), ಬಹು ಪ್ರಾಚೀನ ; 11. (geog..), ಬಹಳ ಉತ್ತರ, -ದಕ್ಷಿಣ ;  . h. life ದೊಡ್ಡವರ ಬಾಳ್ವೆ ; . h. living ಮೇಲೋಗರ ಉಣ್ಣುವದು, ಇಷ್ಟಭೋಜನ ; . h. noon ಮಧ್ಯಾಹ್ನವೇ ;  . h. priest  ಪ್ರಧಾನ ಯಾಜಕ, ಮುಖ್ಯ ಪುರೋಹಿತ ; . h. tide ಭರತ ; . h. time ಹೊತ್ತು, ವೇಳೆ ; it is h. time ಹೊತ್ತಾಗಿದೆ ; . h. treason ರಾಜದ್ರೋಹ ;  . h. water ಭರತ ; the Most H. ಮಹೋನ್ನತನು, ಪರಮೇಶ್ವರ.

Bas-ket, n ಪುಟ್ಟಿ, ಗೂಡೆ, ಮಂಕ್ರಿ ;  a large b. ಹೆಡಿಗೆ, ಹೆಳಿಗೆ, ಜಲ್ಲೆ;  a large b. for storing corn ಗಳಿಗೆ ; ಆ ma-ker, n ಮೇದ.

ಇತ್ತೀಚಿನವರೆಗೂ ಪುನರ್ ಮುದ್ರಣಗೊಳ್ಳುತ್ತಲೇ ಬಂದಿರುವ ಜಿಗ್ಲರ್‌ನ ಶಾಲಾನಿಘಂಟು 19ನೇ ಶತಮಾನದ ಹತ್ತಾರು ಮಹತ್ವದ ನಿಘಂಟುಗಳ ಪೈಕಿ ತುಸು ಅನನ್ಯವಾಗಿಯೇ ಉಳಿದುಕೊಂಡಿದೆ.