ಡಯಲಾಗ್ಸ್

‘ವಿಲೇಜ್ ಡಯಲಾಗ್ಸ್’ ಹೆಸರಿನಲ್ಲಿ 1852ರಲ್ಲಿ ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್ಸಿ ನಿಂದ ಮೊದಲು ಮುದ್ರಣ ಹಾಗೂ ಪ್ರಕಾಶನಗೊಂಡ ಈ ಪುಸ್ತಕದ ಕರ್ತೃ ಮುನ್ಷಿ ಶ್ರೀನಿ ವಾಸಯ್ಯ ಎನ್ನುವ ದೇಸೀ ವಿದ್ವಾಂಸ.

226 ಪುಟಗಳ, ಬೆಲೆ ನಮೂದಾಗದ ಈ ಪುಸ್ತಕದ ಕನ್ನಡದ ಸಂವಾದಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದವನು ರಿಚರ್ಡ್ ಜಿ. ಹಾಡ್ಸನ್ ಎನ್ನುವ ವಿದೇಶಿ ವಿದ್ವಾಂಸ. ಇದರ ಎರಡನೆಯ ಆವೃತ್ತಿಯನ್ನು ಪರಿಷ್ಕರಣಗಳೊಂದಿಗೆ ಆಗಸ್ಟ್ 7, 1857 ರಂದು ಡೇನಿಯಲ್ ಸ್ಯಾಂಡರ್‌ಸನ್ ಪ್ರಕಟಿಸಿದನು. ಎರಡನೆಯ ಮುದ್ರಣದ ಇದರ ಹೆಸರು ‘ಡಯಲಾಗ್ಸ್ ಇನ್ ಕ್ಯಾನರೀಸ್’. 1865ರಲ್ಲಿ ಇದು ಮೂರನೇ ಮುದ್ರಣವನ್ನು ಕಂಡಿತು.

ಈ ಪುಸ್ತಕದ ಮುಖ್ಯ ಉದ್ದೇಶ ಆ ಕಾಲಘಟ್ಟದಲ್ಲಿನ ವಿದೇಶೀ ಅಧಿಕಾರಿಗಳು, ಭಾಷಾವಿಜ್ಞಾನಿ ಗಳು ಹಾಗೂ ವಿದ್ವಾಂಸರಿಗೆ ಕನ್ನಡ ಭಾಷೆಯನ್ನು ಅನೌಪಚಾರಿಕವಾಗಿ ಕಲಿಸಿಕೊಡುವುದೇ ಆಗಿದೆ. ಇದೇ ಉದ್ದೇಶಕ್ಕಾಗಿಯೇ ಆ ಆಸುಪಾಸಿನ ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಕನ್ನಡ ವ್ಯಾಕರಣ ಗ್ರಂಥಗಳು ಹಾಗೂ ಕನ್ನಡ-ಇಂಗ್ಲಿಷ್ ಮತ್ತು ಇಂಗ್ಲಿಷ್-ಕನ್ನಡ ನಿಘಂಟುಗಳು ಕೂಡ ಪ್ರಕಟಗೊಂಡವು.

1847ರ ಹೊತ್ತಿಗೇನೇ ಮುನ್ಷಿ ಶ್ರೀನಿವಾಸಯ್ಯ ಅವರು ವಿದೇಶೀಯರಿಗೆ ಕನ್ನಡ ಮಾತಿನ ರೀತಿ ಹೇಗಿದೆ ಎಂಬುದನ್ನು ತಿಳಿಸಿ ಕೊಡುವುದಕ್ಕೋಸ್ಕರ ‘ಹಿಂದೂ ದೇಶದ ಜನರು ಮಾತ ನಾಡುವ ಪದ್ಧತಿ’ ಕೃತಿ ರಚನೆ ಮಾಡಿದ್ದರು. 1860ರಲ್ಲಿ ಎಸ್.ಬಿ. ಕೃಷ್ಣಸ್ವಾಮಿ ಅಯ್ಯಂಗಾರ್ ‘ಡಯಲಾಗ್ಸ್ ಆನ್ ರೆವಿನ್ಯೂ ಮ್ಯಾಟರ್ಸ್’ ಎಂಬ ಕನ್ನಡ ಕಲಿಕೆಗೆ ಅನುಕೂಲವಾದ ಪುಸ್ತಕ ಬರೆದಿದ್ದರು. ಇದರಲ್ಲಿ ಜಮಾಬಂಧಿ, ಇಂಜಿನಿಯರಿಂಗ್, ನ್ಯಾಯಾಂಗಗಳಲ್ಲಿ ಬಳಸ ಬಹು ದಾದ ಸೂಕ್ತ ಕನ್ನಡ ಹಾಗೂ ಇಂಗ್ಲಿಷ್ ಶಬ್ದಗಳ ಉತ್ತಮ ಪ್ರಯೋಗಗಳಿವೆ. ಕನ್ನಡದ ಯಾವುದೇ ಗ್ರಂಥಸೂಚಿಗಳಲ್ಲಿಯೂ ಈ ಕೃತಿಗಳ ಉಲ್ಲೇಖವೇ ಇಲ್ಲ.

                                                       

ಮುನ್ಷಿ ಶ್ರೀನಿವಾಸಯ್ಯನವರನ್ನು ಕುರಿತು ಅವರು ವೆಸ್ಲಿಯನ್ನರ ಮಿಷನ್ನಿನಲ್ಲಿ ಬ್ರಿಟಿಷ್ ಹಾಗೂ ವಿದೇಶೀ ಅಧಿಕಾರಿಗಳಿಗೆ ಕನ್ನಡವನ್ನು ಕಲಿಸುವ ಗುರುಗಳಾಗಿದ್ದರು ಎನ್ನವ ವಿಷಯವನ್ನು ಹೊರತು ಪಡಿಸಿದರೆ ಇನ್ನಾವ ಮಾಹಿತಿಗಳೂ ದೊರೆಯುವುದಿಲ್ಲ. ವಿದೇಶಿ ದೊರೆಯೊಬ್ಬನು ಬೆಂಗಳೂರಿನಿಂದ ಸೇಲಂಗೆ ಹೊರಟಾಗ ದಾರಿಯಲ್ಲಿ ನಾನಾ ವರ್ಗಗಳ ಜನರನ್ನು ಭೇಟಿ ಯಾಗುತ್ತಾನೆ. ಅವರೆಂದರೆ ರೈತ, ಕುರುಬ, ವ್ಯಾಪಾರಿ, ರಾವುತ, ತೋಟಗಾರ ಮಾಲಿ, ಅಮಲ್ದಾರ ಹಾಗೂ ಹಲವು ಬ್ರಾಹ್ಮಣರು. ಅವರುಗಳೊಂದಿಗೆ ವಿದೇಶಿ ದೊರೆಯು ನಾನಾ ರೀತಿಯಲ್ಲಿ ಸಂವಾದ ಮಾಡುವ ಮಾದರಿಯ ತಂತ್ರವನ್ನು ಇಲ್ಲಿ ಶ್ರೀನಿವಾಸಯ್ಯ ನವರು ಅನುಸರಿಸಿರುತ್ತಾರೆ. ಈ ಸಂದರ್ಭದಲ್ಲಿನ ಸಮಾಜವನ್ನು ಕುರಿತ ಲೇಖಕರ ಒಳನೋಟ, ಸೂಕ್ಷ್ಮ ದೃಷ್ಟಿ ಹಾಗೂ ವಿನೋದ ಪ್ರವೃತ್ತಿಗಳು ಹೃದಯಂಗಮವಾಗಿ ಈ ಕೃತಿಯಲ್ಲಿ ಕಂಡು ಬರುತ್ತದೆ.

ಇವರಿಗೆ ಇಂಗ್ಲಿಷು ಬರುತ್ತಿರಲಿಲ್ಲವಾದ್ದರಿಂದ ಇವರ ಕನ್ನಡ ಸಂವಾದಗಳ ಇಂಗ್ಲಿಷು ಭಾಷಾಂತರಗಳನ್ನು ರಿಚರ್ಡ್ ಜಿ. ಹಾಡ್ಸನ್ ಮಾಡಿದನು. ದುರದೃಷ್ಟವಶಾತ್ ಈತನ ಬಗ್ಗೆ ಕೂಡ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಆದರೆ ಈ ಪುಸ್ತಕವನ್ನು 1857ರಲ್ಲಿ ಪರಿಷ್ಕರಿಸಿ ಮುದ್ರಿಸಿದ ಡೇನಿಯಲ್ ಸ್ಯಾಂಡರ್‌ಸನ್ ಕುರಿತು ಸಾಕಷ್ಟು ಮಾಹಿತಿಗಳು ಇವೆ. 1810ರಲ್ಲಿ ಜನಿಸಿದ ಸ್ಯಾಂಡರ್‌ಸನ್‌ನು ಬೆಂಗಳೂರು, ಜರ್ಮನಿ, ಲಂಡನ್ ಹಾಗೂ ವೆಸ್ಲಿಯನ್ ಮಿಷ ನರಿಗಳ ಪರವಾಗಿ ಮದ್ರಾಸ್ ಆಕ್ಸಿಲಿಯರಿ ಸೊಸೈಟಿಯಿಂದ ನಿಯಮಿತವಾದ ಬೈಬಲ್ ಪರಿಷ್ಕರಣ ಸಮಿತಿಯ ಸದಸ್ಯನಾಗಿದ್ದನು. ಅಸಾಧಾರಣ ಪ್ರತಿಭಾವಂತನಾದ ಸ್ಯಾಂಡರ್‌ ಸನ್ ‘ಕಥಾಸಂಗ್ರಹ’ (1863), ‘ಏಸುವಿನ ಬಳಿಗೆ ಬಾ’ (1868), ‘ಸತ್ಯವೇದ’ (1860), ‘ಜೈಮಿನಿ ಭಾರತದ ಹನ್ನೊಂದು ಅಧ್ಯಾಯಗಳ ಇಂಗ್ಲಿಷ್ ಅನುವಾದ’ (1852) ಹಾಗೂ ‘ಎ ಡಿಕ್ಷ್‌ನರಿ, ಕ್ಯಾನರೀಸ್ ಅಂಡ್ ಇಂಗ್ಲಿಷ್’ (1858) (ಹಳತುಹೊನ್ನು, ಅ.30, 2011)– ಮುಂತಾದ ಕೃತಿಗಳನ್ನು ರಚಿಸಿರುವುದಲ್ಲದೆ ಆ ಕಾಲಘಟ್ಟದ ಕರ್ನಾಟಕ ವಾಗ್ವಿಧಾಯಿನಿ ಹಾಗೂ ವೃತ್ತಾಂತ ಬೋಧಿನಿ ಎನ್ನುವ ಪತ್ರಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳನ್ನು ಬರೆಯು ತ್ತಿದ್ದನು. ಕನ್ನಡದ ಮುದ್ರಣಕ್ಕೆ ಸಂಬಂಧಿಸಿದಂತೆ ಮೊಳೆಗಳ ತಯಾರಿಕೆ, ಸುಧಾರಣೆ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಸ್ಯಾಂಡರ್‌ಸನ್, ಕನ್ನಡದ ಅಕ್ಷರದ ಮೊಳೆಗ ಳನ್ನು 10 ಪಾಯಿಂಟುಗಳಿಗೆ ರೂಪಿಸಿದ್ದು ವಿಶೇಷ. ಇವನು ಲಂಡನ್ನಿನಿಂದ ಸುಧಾರಿತ ಕನ್ನಡಾಕ್ಷರ ಮೊಳೆಗಳನ್ನು ತರಿಸಲು ವಿಫಲನಾದರೂ 1870ರ ಹೊತ್ತಿಗೆ ವೆಂಕಟ ರಂಗೋ ಕಟ್ಟಿಯವರು ಒಬ್ಬ ಕಂಚುಗಾರನ ನೆರವಿನಿಂದ ಬೆಳಗಾವಿಯಲ್ಲಿ ಸುಧಾರಿತ ಕನ್ನಡ ಅಕ್ಷರಗಳ ಮೊಳೆಗಳ ಮಾತೃಕೆಗಳನ್ನು ಪರಿಕಲ್ಪಿಸಿ ರೂಪಿಸುವಲ್ಲಿ ಯಶಸ್ವಿಯಾದರು.     

ಈ ಕೃತಿಯ PREFACE ಭಾಗದಲ್ಲಿ ಸ್ಯಾಂಡರ್‌ಸನ್– “The following Dialogues were written by an able munshi, unacquainted with English, but of long experience in teaching Europeans Canarese. They are a specimen of the daily spoken language  of the several classes of persons introduced. The variety of subject, purity of idiom, the vast number of words and the colloquial differences of pronunciation and expression, combine to make it the best work extant for acquiring a useful knowledge of the language. Commencing with simplest sentences, it becomes gradually more difficult, and requires close application. But any one who thouroughly masters the whole, will be well repaid.. . . . . A vein of good humour, characteristic of the author, runs through the whole book ; and much light is thrown upon the habits, opinions, the modes of thought, feeling, and expression of the people. As might be expected, the gentleman cuts a poor figure among the Brahmins! The translation . . . is neither slavishly literal nor vaguely free ; but such as to afford every needful aid to the student” ಎಂದು ಮುನ್ಷಿ ಶ್ರೀನಿವಾಸಯ್ಯ ಮತ್ತು ರಿಚರ್ಡ್ ಜಿ. ಹಾಡ್ಸನ್ ಇಬ್ಬರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.

ಈ ಪುಸ್ತಕದಲ್ಲಿ ಧೊರೆಗೂ ಆಳಿಗೂ ನಡೆದದ್ದು, ಕುದುರೆಯವನ ಸಂಗಡ, ತೋಟದವನ ಸಂಗಡ, ಭಂಡಿಯವನ ಸಂಗಡ, ರೈತನ ಸಂಗಡ, ಕುರುಬನ ಸಂಗಡ, ವರ್ತಕನ ಸಂಗಡ, ಅಮಲ್ದಾರರ ಸಂಗಡ, ಬ್ರಾಹ್ಮಣರ ಸಂಗಡ, ಮುದುಕನ ಸಂಗಡ– ಹೀಗೆ ಹತ್ತು ತೆರನಾದ ಸಂಭಾಷಣೆಗಳು ಇವೆ. ಎಲ್ಲ ಸಂಭಾಷಣೆಗಳಿಗೆ ಕ್ಲಿಷ್ಟವಾದ ಪದ, ಪರಿಕಲ್ಪನೆ, ವ್ಯುತ್ಪತ್ತಿಗಳಿಗೆ ಸಂಬಂಧಿಸಿದಂತೆ ಆಯಾ ಪುಟಗಳಲ್ಲಿಯೇ ಅಡಿಟಿಪ್ಪಣಿಗಳನ್ನು ನೀಡಿರುವುದು ಕಲಿಯುವವರಿಗೆ ಉಪಯುಕ್ತವಾಗಿವೆ. ಇದಕ್ಕೆ ನಿದರ್ಶನವಾಗಿ ಕೆಲವು ಭಾಗಗಳನ್ನು ಗಮನಿಸಬಹುದು:

ಕುರುಬನ ಸಂಗಡ ಸಂಭಾಷಣೆಯ ಒಂದು ತುಣುಕು ಹೀಗಿದೆ:

ಧೊರೆ-ಅಯ್ಯಾ, ಗೌಡಾ, ನೀನ್ಯಾರು? Gowda- Well Sir, Gowda, Who are you? ಕುರುಬ- ನಾನು ಕುರುಬ, ದ್ಯಾವರು. Shepherd-I am a shepherd, (my) Lord. ಧೊ-ನೀನು ಕುರುಬ ದ್ಯಾವರೋ? ನಿನ್ನ ಹೆಸರೇನು? G- Lord Shepherd are you? What is your name? ಕು- ನನ್ನ ಹೆಸರು ಬಿಟ್ಟರೆ ಶಿಕ್ಕನು, ಸೋಮಿ. S- My name (is) Bit-tare Shik-kanu, Sir. (The words mean, if you let him go, you won’t catch him again). ಧೊ- ಶಾಬಾಸು, ನಿನ್ನ ಹೆಸರು ಬಿಟ್ಟರೆ, ಶಿಕ್ಕಿಯೋ? ಆಗಲಿ. ನಿನ್ನ ದೇವರ ಹೆಸರೇನು? G- Bravo! If one let go your name, he won’t catch you again, eh? Well! What is your god’s name? ಕು- ನಮ್ಮ ದೇವರು ಬೀರಪ್ಪನು, ಬುದ್ದಿ. S- Sir, Bir-ap-pa is our god...

ಧೊ- ಅದೇಕಯ್ಯಾ? ಮನೆಗಳಲ್ಲಿ ದ್ಯಾವರು ಇರಬಾರದೇ? ಬಣಜಿಗರ ಎದೆಯ ಮೇಲೆ ದ್ಯಾವರು ಇರಬಹುದಂತೆ. ನಿಮ್ಮ ಮನೆಗಳಲ್ಲಿ ಇರುವುದಕ್ಕೆ ಏನು ಅಡ್ಡಿ?....

ವಿದೇಶಿ ವಿದ್ವಾಂಸರು ಅನೌಪಚಾರಿಕವಾಗಿ ಕನ್ನಡ ಕಲಿಯಲು ಮುಖ್ಯವಾದ ಆಕರ ಗ್ರಂಥವಾಗಿ ಮುನ್ಷಿ ಶ್ರೀನಿವಾಸಯ್ಯ ಮತ್ತು ರಿಚರ್ಡ್ ಜಿ. ಹಾಡ್‌ಸನ್ ಅವರ ಕನ್ನಡ ಸಂಭಾಷಣಾ ಸರಣಿ ಕೃತಿಯು ಕನ್ನಡ ಕಲಿಕಾ ಪುಸ್ತಕಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ.