ಭಾರ್ಗವ ಗರ್ವಭಂಗಂ
ಮುನ್ನುಡಿ

ಅಷ್ಟಾಂಶ ಕಿರೀಟಾಕಾರದ, ಒಂದು ರೂಪಾಯಿ ಒಂದು ಕ್ರಯದ, 114 ಪುಟಗಳ (ಪ್ರಥಮ ಮುದ್ರಣ) ‘ಭಾರ್ಗವ ಗರ್ವಭಂಗಂ ಎಂಬ ಬಾಲರಾಮ ಚರಿತಂ (ರೂಪಕ) ಎನ್ನುವ ಕೃತಿ ನಂಜನಗೂಡು ತಿರುಮಲಾಂಬ ಅವರದ್ದು. ಈ ಪುಸ್ತಕ ‘ಸತೀಹಿತೈಷಿಣೀ ಮಾತೃಮಂದಿರದಿಂದ 1928ರಲ್ಲಿ ಪ್ರಕಟವಾಗಿದೆ.ಅಂದಹಾಗೆ, ಹಿತೈಷಿಣೀ ಎನ್ನುವುದು ತಿರುಮಲಾಂಬ ಅವರ ಕಾವ್ಯನಾಮ ಕೂಡ.

 ‘ಭಾರ್ಗವ ಗರ್ವಭಂಗಂ ಕೃತಿಯನ್ನು ಶ್ರೀಪಾದರೇಣು ಎಂಬ ನಾಮಾಂಕಿತದಲ್ಲಿ ಶ್ರೀರಾಮಚಂದ್ರನಿಗೆ ಸಮರ್ಪಣೆ ಮಾಡಲಾಗಿದೆ. ಬಿನ್ನಹದಲ್ಲಿ ಲೇಖಕಿ- ‘ಈ ದೃಶ್ಯ ಪ್ರಬಂಧವು ನಾಲ್ಕು ವರ್ಷಗಳ ಹಿಂದೆಯೇ ಪ್ರಕಟವಾಗಬೇಕಾಗಿದ್ದಿತು ಎಂದಿರುವುದರಿಂದ ಇದರ ರಚನೆ 1924ರಲ್ಲಿಯೇ ಆಗಿದೆ ಎಂದು ಊಹಿಸಬಹುದು.

ಈ ಪುಸ್ತಕದ 5ರಿಂದ 100 ಪುಟಗಳವರೆಗೆ ಮೈಸೂರು ಶ್ರೀಕೃಷ್ಣಾ ಪ್ರೆಸ್ಸಿನಲ್ಲಿ ಮುದ್ರಣಗೊಂಡಿದ್ದು, ಉಳಿದ ಕೆಲವು ಭಾಗ ಬೆಂಗಳೂರು ಪ್ರೆಸ್ಸಿನಲ್ಲಿ ಮುದ್ರಿತಗೊಂಡಿದೆ.

ಪುಸ್ತಕದ ಆರಂಭದಲ್ಲಿರುವ ಪ್ರಾರ್ಥನೆ ಹೀಗಿದೆ:

ಪ್ರಾರ್ಥನೆ (ರಾಗ: ಮೋಹನ ನಲ್ಲ ಬಾರೋ ಎಂಬಂತೆ)

ಶ್ರೀ ರಘುರಾಮ ಬಾರೈ, ಪದವನ್ನು ತೋರೈ ಪ
ದಶರಥ ಪ್ರಿಯ ಬಾಲ, ದಶಮುಖಾಸುರ ಕಾಲ
ಕುಶಿಕಾತ್ಮಜ ಮಖಪಾಲ ಶಶಾಂಕನಿಭಪಾಲ ರಾಮ 
ಶತಪತ್ರಾಯತನೇತ್ರ, ಶತಪತ್ರಾಪ್ತಜ ಮಿತ್ರ
ಶತಮನ್ಯು ಸ್ತುತಿಪಾತ್ರ, ಶತಯಾಗಸಹಜಾತ ರಾಮ 
ವರಶೇಷಗಿರಿ ನಿಲಯ, ಶರಣರಕ್ಷಣಸದಯ
ಗಿರಿಜಾಧವಪ್ರಿಯ, ನುತಸುರ ಸಮುದಾಯ 
ಶ್ರೀ ರಘುರಾಮ ಬಾರೈ

ಆರಂಭದ ಪ್ರಾರ್ಥನೆಯ ಹಾಡಿನ ಜೊತೆಗೆ ಮೂರನೆಯ ಅಂಕದಲ್ಲಿ ಒಂದು ಭಾಮಿನೀ ಷಟ್ಪದಿಯೂ, 4, 5 ಮತ್ತು 6ನೇ ಅಂಕಗಳಲ್ಲಿ ಒಂದೊಂದು ಕಂದಪದ್ಯಗಳೂ ಹಾಗೂ 6ನೇ ಅಂಕದಲ್ಲಿ ಹಿಂದೂಸ್ತಾನಿ ರಾಗದ ಒಂದು ಹಾಡೂ, ಸಾಕೇಳಿ ದೂರು ರಾಗದ ಒಂದು ಹಾಡೂ ಮತ್ತು ನಾಟಕಾಂತ್ಯದಲ್ಲಿ ಒಂದು ಮಂಗಳದ ಹಾಡೂ ಇರುವುದು ವಿಶೇಷ. 

‘ಇದು ಅಕ್ಷರಸ್ಥಳಲ್ಲದ ಅಬಲೆಯ ಕೃತಿಯೆಂದೂ, ಅಬಲೆಯ ಅಲ್ಪಮತಿಗೆ ಒಳಪಡುವಷ್ಟು ವಿಚಾರಗಳು ಇದರಲ್ಲಿ ಬಂದಿರಬಹುದೆಂದು... ಎನ್ನುವ ಮಾತುಗಳು ಹಿತೈಷಿಣಿ ಅವರ ಬಿನ್ನಹದಲ್ಲಿವೆ. ಮುಂದೆ ನಾಟಕದಲ್ಲಿ ನಾಂದಿಯ ನಂತರ ಒಂದೆಡೆ, ‘ಅನಾಮಧೇಯ ವಿದ್ಯಾರ್ಥಿನಿಯೋರ್ವಳಿಂದ ಬರೆಯಲ್ಪಟ್ಟುದನ್ನು... ಎನ್ನುವ ಮಾತನ್ನು ನಟಿ ಹೇಳುತ್ತಾಳೆ.

‘ಬಾಲಿಶ ವಿದ್ಯಾರ್ಥಿನಿಯೋರ್ವಳು ಶ್ರೀರಾಮಚಂದ್ರನ ಬಾಲಚರಿತವನ್ನು ಭಕ್ತಿಭಾವದಿಂದ ಬಾಲಭಾಷೆಯಲ್ಲಿ ರಚಿಸಿರುವುದನ್ನು ಕೂಡ... ಎಂದು ಸೂತ್ರಧಾರ ನುಡಿಯುತ್ತಾನೆ. ಇವೆಲ್ಲ ಮಾತುಗಳು ಆ ಕಾಲದಲ್ಲಿ ಬರೆಯುತ್ತಿದ್ದ ಲೇಖಕಿಯರ ವಿನಯ ಹಾಗೂ ಹಿಂಜರಿಕೆಗಳನ್ನು ಸೂಚಿಸುತ್ತವೆ.

ನಾಟಕಾರಂಭಕ್ಕೆ ಮೊದಲು ಸತೀಹಿತೈಷಿಣೀ ಪ್ರಕಟಿಸಿದ ಕೃತಿಗಳನ್ನು ಕುರಿತು ಜೆ.ಎಸ್.ಚಕ್ರವರ್ತಿ ಅವರು ನವೆಂಬರ್ 8, 1916ರಲ್ಲಿ ಬರೆದ ಅಭಿಪ್ರಾಯಗಳು ಅಚ್ಚಾಗಿದೆ. ದಶರಥ, ವಸಿಷ್ಠ, ಜನಕ, ಶ್ರೀರಾಮ, ಭಾರ್ಗವರಾಮ ಮುಂತಾಗಿ ಇಪ್ಪತ್ತೊಂದು ಪ್ರಧಾನ ಪಾತ್ರಗಳಿರುವ ಈ ನಾಟಕ ಹಿಂದಿನ ಶತಮಾನದ ಇಪ್ಪತ್ತರ ದಶಕದಲ್ಲಿ ಮಹಿಳೆಯೋರ್ವರು ರಚಿಸಿದ ಗಮನಾರ್ಹ ರಚನೆಯಾಗಿದೆ.

ತಿರುಮಲಾಂಬ ತಮ್ಮ ಜೀವಿತಾವಧಿಯ ಕೊನೆಯವರೆಗೂ ತಪ್ಪದೆ ಮಾಡುತ್ತಿದ್ದ ರಾಮಾಯಣದ ಪಾರಾಯಣ ಈ ನಾಟಕ ರಚನೆಗೆ ಪ್ರೇರಣೆ. ರಾಮಾಯಣದ ಬಾಲಕಾಂಡದ ಕತೆಯನ್ನು ಸಂಗ್ರಹವಾಗಿ ಹೇಳಿ, ಅಯೋಧ್ಯೆಯ ದಶರಥನ ಅರಮನೆಗೆ ವಿಶ್ವಾಮಿತ್ರ ಆಗಮನ ಹಾಗೂ ರಾಮಲಕ್ಷ್ಮಣರ ವಿವಾಹದವರೆಗೆ, ನಂತರ ಭಾರ್ಗವರಾಮನು ತಪಸ್ಸಿಗೆ ಹೋಗುವವರೆಗೆ ನಾಟಕದ ಕಥಾವಸ್ತುವಿನ ಹರಹಿದೆ.

ನಾಟಕದ ನಿರ್ವಹಣೆ, ನಿರೂಪಣೆಯಲ್ಲಿ ಹೊಸತನವಿಲ್ಲದಿದ್ದರೂ ನಾಟಕದ ಶಿಲ್ಪ ಚೆನ್ನಾಗಿದೆ. ಮೂಲಕಥೆ ಯಾವುದೇ ಮಾರ್ಪಾಟಿಗೆ  ಒಳಗಾಗದೆ ಸಾಂಪ್ರದಾಯಿಕ ರೀತಿಯಲ್ಲೇ ಒಡಮೂಡಿ ಅಚ್ಚುಕಟ್ಟಾದ ಚೌಕಟ್ಟು ಹೊಂದಿರುವು ವಿಶೇಷ. ರಾಮಮಹಿಮೆಯ ಪ್ರಚಾರ ಮತ್ತು ಪ್ರಸಾರ ಆಸ್ತಿಕ ಜನರಲ್ಲಿ ಉಂಟಾಗಬೇಕೆಂಬುದು ಲೇಖಕಿಯ ಉದ್ದೇಶವಿದ್ದಂತಿದೆ. ಈ ನಾಟಕವನ್ನು ಕುರಿತು ವಿಮರ್ಶಕಿ ವಿಜಯಾ ದಬ್ಬೆಯವರು ವ್ಯಕ್ತಪಡಿಸಿರುವ ಕೆಳಗಿನ ಅನಿಸಿಕೆ (ಹಿತೈಷಿಣಿಯ ಹೆಜ್ಜೆಗಳು, 1992) ಸೂಕ್ತವಾಗಿಯೇ ಇದೆ:

‘ಈ ನಾಟಕಕ್ಕೆ ಕನ್ನಡ ನಾಟಕ ಸಾಹಿತ್ಯ ಚರಿತ್ರೆಯಲ್ಲಿ ಚಾರಿತ್ರಿಕ ಸ್ಥಾನವಿದೆ ಎನ್ನಬಹುದು. ಮಹಿಳೆಯರ ಸಾಹಿತ್ಯ ಕೃಷಿಯೇ ಇಲ್ಲದಿದ್ದ ಕಾಲದಲ್ಲಿ ಹೊಸಗನ್ನಡದ ಲೇಖಕಿಯರಲ್ಲಿ ಮೊದಲ ತಲೆಮಾರಿನವರಲ್ಲೊಬ್ಬರಾದ ತಿರುಮಲಾಂಬ ನಾಟಕ ಪ್ರಕಾರವನ್ನೂ ಬಳಸಿಕೊಂಡಿದ್ದಾರೆಂಬುದು ಗಮನಿಸಬೇಕಾದ ಅಂಶ.

ಪರಿಚಿತ ವಸ್ತುವನ್ನೇ ಆಯ್ದುಕೊಂಡರೂ, ಯಾವ ಹೊಸ ಮೌಲ್ಯಗಳ ಪ್ರತಿಪಾದನೆಯನ್ನು ಉದ್ದೇಶಿಸಿರದಿದ್ದರೂ ಸಾಹಿತ್ಯಕವಾಗಿ ಎದ್ದುಕಾಣುವಂಥ ರಚನೆಯಲ್ಲದಿದ್ದರೂ ಸ್ಪಷ್ಟ ಗ್ರಹಿಕೆ ಮತ್ತು ಅಚ್ಚುಕಟ್ಟಾದ ನಿರೂಪಣೆಯಿಂದ ಪ್ರಸ್ತುತ ನಾಟಕ ಓದುಗರ ಸಹಾನುಭೂತಿಯನ್ನು ಪಡೆಯುತ್ತದೆ. ನಾಟಕಕಾರ್ತಿಯ ವ್ಯತ್ಪತ್ತಿಯ ಹರಹನ್ನೂ ಈ ನಾಟಕ ಪ್ರತಿನಿಧಿಸುತ್ತದೆ.