ಬಾಲಕರ ವನಸ್ಪತಿ ಶಾಸ್ತ್ರ
ಮುನ್ನುಡಿ

1927ರಲ್ಲಿ ಕೊಯಮತ್ತೂರು ವ್ಯವಸಾಯ ಕಾಲೇಜಿನಲ್ಲಿದ್ದ ದಿವಾನ್ ಬಹದ್ದೂರ್ ಕೆ. ರಂಗಾಚಾರಿ ಅವರು ರಚಿಸಿದ ಪುಸ್ತಕ ‘ಬಾಲಕರ ವನಸ್ಪತಿ ಶಾಸ್ತ್ರ. ಈ ಪುಸ್ತಕವನ್ನು ಇಂಗ್ಲಿಷ್ ಭಾಷೆಯಲ್ಲಿ  angachariar’s Primer of Botany, Kanareseಎಂದು ಕೊನೆಯ ರಕ್ಷಾಪುಟದಲ್ಲಿ ಕರೆಯಲಾಗಿದೆ.

ಆ ಕಾಲಕ್ಕೆ ಸಸ್ಯವಿಜ್ಞಾನವನ್ನು ವನಸ್ಪತಿಶಾಸ್ತ್ರವೆಂದು ಕರೆಯಲಾಗುತ್ತಿತ್ತು. ಮ್ಯಾಕ್‌ಮಿಲನ್ ಅಂಡ್ ಕಂಪನಿ ಲಿಮಿಟೆಡ್- ಈ ಪುಸ್ತಕದ ಪ್ರಕಾಶಕರು. 50 ಪುಟಗಳ ಈ ಕೃತಿಯ ಅಂದಿನ ಕ್ರಯಬೆಲೆ 8 ಆಣೆ. ಮದ್ರಾಸಿನ ಮೆಥಾಡಿಸ್ಟ್ ಪುಬ್ಲಿಷಿಂಗ್ ಹೌಸಿನಿಂದ ಈ ಕೃತಿ ಮುದ್ರಣಗೊಂಡಿದೆ.

ಒಟ್ಟು 14 ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ನಿದರ್ಶನ ಹಾಗೂ ಸ್ಪಷ್ಟೀಕರಣಗಳಿಗಾಗಿ 109 ಚಿತ್ರಗಳನ್ನು ನೀಡಿರುವುದು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ. ಕೃತಿಯ ಕೊನೆಯ ರಕ್ಷಾಪುಟದಲ್ಲಿ ಆ ಕಾಲದ ಹೊತ್ತಿಗೆ ಮ್ಯಾಕ್‌ಮಿಲನ್ ಕಂಪನಿಯು ಪ್ರಕಟಿಸಿದ ಇತರ ಇಪ್ಪತ್ತು ಕನ್ನಡ ಪುಸ್ತಕಗಳ ವಿವರಗಳಿವೆ.

ಉಪೋದ್ಘಾತದಲ್ಲಿ ಪುಸ್ತಕದ ಉದ್ದೇಶವನ್ನು ಕುರಿತು ರಂಗಾಚಾರಿ ಅವರು ಹೀಗೆ ಅಭಿಪ್ರಾಯ ಪಡುತ್ತಾರೆ: ‘ಈ ಸಣ್ಣ ಪುಸ್ತಕವು ಪ್ರೈಮರಿ ಪಾಠಶಾಲೆಯ ಉಪಾಧ್ಯಾಯರ ಮತ್ತು ಕನ್ನಡವನ್ನು ಓದಬಲ್ಲ ಬಾಲಕರ ಉಪಯೋಗಕ್ಕಾಗಿ ಬರೆದಿದೆ.

‘ಬಾಲಕರು ತಮ್ಮ ಸುತ್ತಮುತ್ತಲೂ ಇರುವ ಗಿಡಮರಗಳು, ಹೂವುಗಳು, ಕಾಯಿಗಳು, ಪಕ್ಷಿಗಳು, ಮುಂತಾದವನ್ನು ಹುಡುಕಿಕೊಂಡು ಬಹಳ ಆನಂದದಿಂದ ತಿರುಗುವುದನ್ನು ನಾವು ಪ್ರತಿದಿನವೂ ನೋಡುತ್ತೇವೆ. ಬಾಲಕರಿಗೆ ಸ್ವಾಭಾವಿಕವಾಗಿರುವ ಈ ಮನೋಭಾವವನ್ನು ಯಾವ ವಿಧದಿಂದಲಾದರೂ ಹೆಚ್ಚಿಸಲು ತಮ್ಮ ಕರ್ತವ್ಯಗಳಲ್ಲಿ ಒಂದಾಗಿ ಉಪಾಧ್ಯಾಯರೂ ತಂದೆತಾಯಿಗಳೂ ಭಾವಿಸಬೇಕು.

ಇದರಿಂದ ಬಾಲಕರ ತಿಳಿವಳಿಕೆಯು ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ. ನಮ್ಮ ಸುತ್ತಲೂ ಬೆಳೆದು ಜೀವಿಸುತ್ತಿರುವ ಗಿಡಗಳನ್ನು ಕುರಿತು ವಿಷಯಗಳನ್ನು ತಿಳಿಯುವುದರಿಂದ ನಮಗೆ ಹಲವು ವಿಧಾನದಲ್ಲಿಯೂ ಒಳ್ಳೆಯದೇ ಆಗುವುದೆಂಬುದು ನಿಶ್ಚಯವೇ ಸರಿ.

ಇದೂ ಅಲ್ಲದೆ ನಮ್ಮ ದೇಶದಲ್ಲಿ ಅನೇಕರು ವ್ಯವಸಾಯವನ್ನೇ ತಮ್ಮ ಜೀವನೋಪಾಯದ ಮಾರ್ಗವೆಂದು ಕೈಗೊಂಡಿರುವುದರಿಂದ ಗಿಡಗಳ ಬಾಳ್ವಿಕೆ, ಬೆಳೆವಳಿಕೆ ಮುಂತಾದ ವಿಷಯಗಳನ್ನು ಬಾಲಕರಾಗಿರುವಾಗ ತಿಳಿಯಬೇಕಾದುದು ಅವಶ್ಯಕ. ಇಲ್ಲಿ ಸುತ್ತಲ ಪರಿಸರದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದ  ಅವಶ್ಯಕತೆ ಇದೆ ಎಂಬ ಲೇಖಕರ ಕಾಳಜಿ ಮೆಚ್ಚಬೇಕಾದ್ದು.

ತತ್ವ ಸಿದ್ಧಾಂತಗಳಿಗಿಂತ ಪ್ರಾಯೋಗಿಕ ತಿಳಿವಳಿಕೆ, ಪ್ರತ್ಯಕ್ಷಜ್ಞಾನ ಅಮೂಲ್ಯವಾದದ್ದು ಎಂಬ ಎಚ್ಚರವನ್ನು ಓದುಗರಿಗೆ ಮುಂದಿನ ವಾಕ್ಯವೃಂದದಲ್ಲಿ ಸೂಚಿಸಿದ್ದಾರೆ: ‘ಈ ಪುಸ್ತಕವನ್ನು ಸಾಧಾರಣ ಪಾಠಪುಸ್ತಕವನ್ನು ಓದುವಂತೆ ಓದಿ ವಿಷಯಗಳನ್ನು ಬಾಯಿಪಾಠ ಮಾಡಕೂಡದು. ಹಾಗೆ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಲಾರದು.

ಇದರಲ್ಲಿ ವಿವರಿಸಿರುವ ವಿಷಯಗಳನ್ನು, ಗಿಡಗಳನ್ನು ಶೇಖರಿಸಿ ಪ್ರತ್ಯಕ್ಷವಾಗಿ ಪ್ರತಿಯೊಬ್ಬರೂ ಪರಿಶೋಧಿಸಿ ತಿಳಿಯಬೇಕು.  ಈ ಕೃತಿಯ ವಿಷಯಾನುಕ್ರಮಣಿಕೆಯಲ್ಲಿ ಇರುವ ಅಧ್ಯಾಯಗಳು ಇಂತಿವೆ : ಸಸ್ಯಗಳೂ ಜೀವವುಳ್ಳವು, ಗಿಡಗಳೂ, ಅವುಗಳ ಅವಯವಗಳೂ, ಬೀಜ, ಮೊಳೆಯುವಿಕೆ ಮತ್ತು ಮೊಳೆಗಳು, ಬೇರು, ಪ್ರಕಾಂಡವೂ ಕೊಂಬೆಗಳೂ, ಎಲೆ, ಪುಷ್ಪಮಂಜರಿ, ಹೂವೂ ಅದರ ಭಾಗಗಳೂ, ಪುಷ್ಪರೇಣುಸ್ಪರ್ಷಣವೂ ಗರ್ಭಧಾರಣವೂ, ಕಾಯಿಯೂ, ಬೀಜವೂ, ನೀರು ಒಳಹೊಗುವುದೂ ಅದರ ಚಲನೆಯೂ, ಗಿಡಗಳ ಪೋಷಣೆ, ಗಿಡಗಳ ಬೆಳೆವಳಿಕೆ, ಉಸಿರಾಡುವುದು, ಮತ್ತು ಅವುಗಳ ಭಾಗಗಳ ಚಲನೆ ಹಾಗೂ ಗಿಡಗಳ ಜಾತಿಗಳು.

ಪುಸ್ತಕದಲ್ಲಿ ಒಂದು ಬೀಜವನ್ನು ಬಿತ್ತಿ ಅದು ಫಲ ನೀಡುವವರೆಗಿನ ವಿವಿಧ ಹಂತದ ಬೆಳೆವಣಿಗೆಗಳ ಎಲ್ಲ ರೀತಿಯ ಸ್ವರೂಪವನ್ನು ಸಮಗ್ರವಾಗಿ ಪ್ರತ್ಯಕ್ಷ ಪ್ರಮಾಣ, ಪ್ರಯೋಗಗಳ ಮೂಲಕ ಮೂಲತತ್ತ್ವ ಸಿದ್ಧಾಂತಗಳೊಂದಿಗೆ ತುಂಬಾ ಒಳ್ಳೆಯ ಕನ್ನಡದಲ್ಲಿ ನಿರೂಪಿಸಲಾಗಿದೆ.

ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಹೇಳುವುದಕ್ಕೆ ಸಾಧ್ಯವೇ ಇಲ್ಲ ಎಂಬುವವರಿಗೆ ಈ ‘ವನಸ್ಪತಿಶಾಸ್ತ್ರ ಕೃತಿಯ ಜೊತೆಗೆ ಗಣಿತಾರ್ಣವ, ಅಣುಭೌತ ವಿಜ್ಞಾನ, ಜ್ಯೋತಿರ್ವಿನೋದಿನಿ ಮುಂತಾದ 20ನೆಯ ಶತಮಾನದ ಪೂರ್ವಾರ್ಧ ಮತ್ತು 19ನೆಯ ಶತಮಾನಾವಧಿಯ ಹತ್ತಾರು ವಿಜ್ಞಾನ ಪುಸ್ತಕಗಳು ತಕ್ಕ ಉತ್ತರದೋಪಾದಿಯಲ್ಲಿವೆ.

ರಂಗಾಚಾರ‌್ಯರ ನಿರೂಪಣೆ ಸರಳವಾಗಿ ಮನದಟ್ಟುವಂತಿದೆ ಎಂಬುದಕ್ಕೆ ಒಂದು ಉದಾಹರಣೆ: ‘ಒಂದು ಗಿಡದಲ್ಲಿ ಭೂಮಿಯ ಮೇಲೆದ್ದು ಗಾಳಿಯೂ ಬೆಳಕೂ ತಗಲುವಂತೆ ಬೆಳೆಯುವ ಭಾಗವು ಪ್ರಕಾಂಡವೆನಿಸುವುದು. ಪ್ರಕಾಂಡದ ಭಾಗಗಳೂ ತಳಭಾಗದ ಮರವೂ ಅದರಿಂದ ಎಡೆಬಿಡದೆ ಎಲ್ಲಾ ಕಡೆಗಳಲ್ಲಿಯೂ ಹರಡಿಕೊಂಡು ಬೆಳೆಯುವ ಕೊಂಬೆಗಳಾಗಿರುವುವು.

ಒಂದು ಮರದ ಪ್ರಕಾಂಡವನ್ನು ದೂರದಿಂದ ನೋಡಿದಾಗ ಅದರಲ್ಲಿರುವ ಎಲೆಗಳು ಎಡಬಿಡದೆ ಒತ್ತಾಗಿ ಹಸುರಾಗಿ ಕಂಡುಬರುವುವು. ಅಲ್ಲದೆ ಎಲೆಗಳನ್ನು ವಹಿಸಿರುವ ಕಾಂಡಗಳಾಗಲಿ, ಕೊಂಬೆಗಳಾಗಲಿ ಕಾಣಿಸುವುದಿಲ್ಲ.

ಹತ್ತಿರಕ್ಕೆ ಹೋದ ಮೇಲೆ ಇವು ಚೆನ್ನಾಗಿ ಕಾಣಿಸುವವು. ಮರಗಳ ಕೊಂಬೆಗಳು, ಎಲೆಗಳು ಇವುಗಳ ಭಾರವನ್ನೆಲ್ಲಾ ಅಡಿಯ ಮರವು ಹೊರಬೇಕಾಗಿರುವುದರಿಂದ ಅದು ಸಾಧಾರಣವಾಗಿ ದಪ್ಪವಾಗಿಯೂ ಎತ್ತರವಾಗಿಯೂ ಇರುವುದು ಸ್ವಭಾವವಾಗಿದೆ. ದೊಡ್ಡ ಕೊಂಬೆಗಳೂ ಭಾರವನ್ನು ಹೊರಬೇಕಾಗಿರುವುದರಿಂದ ಅವು ಕೂಡಾ ದಪ್ಪವಾಗಿ ಗಟ್ಟಿಯಾಗಿಯೇ ಇರಬೇಕಾಗಿರುವುವು. 

  1895ರಲ್ಲಿ ಲಕ್ಕೂರ ಸುಬ್ಬರಾಯ ಅವರು ಬತ್ತ, ರಾಗಿ, ಗೋಧಿ, ಕಾಫಿ, ಟೀ, ಇತ್ಯಾದಿ 49 ಬಗೆಯ ಸಸ್ಯಗಳನ್ನು ಬೆಳೆಯುವ ಕ್ರಮ, ಉಪಯೋಗಗಳ ವಿವರಣೆ ಕುರಿತು ಬರೆದ ‘ಸಚಿತ್ರ ವನಸ್ಪತಿಶಾಸ್ತ್ರ ಪುಸ್ತಕದ ನಂತರದ ಸಸ್ಯವಿಜ್ಞಾನವನ್ನು ಕುರಿತ ಮಹತ್ವದ ಕೃತಿ ಇದು. ಇದೇ ಕೆ.ರಂಗಾಚಾರ‌್ಯರು 1909ರಲ್ಲಿ ‘ಓಷಧಿಶಾಸ್ತ್ರ ಎಂಬ ಮತ್ತು 1927ರಲ್ಲಿ ‘ಗ್ರಾಮ ಪಾಠಶಾಲೆಯ ವಾಚಕ ಪುಸ್ತಕ, ಪೈರುಗಿಡಗಳು (ಸಚಿತ್ರ) ಎಂಬ ಸಸ್ಯಶಾಸ್ತ್ರವನ್ನು ಕುರಿತ ಇನ್ನೆರಡು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

ಆ ಕಾಲಮಾನದಲ್ಲಿ ವಿವಿಧ ಜ್ಞಾನಶಾಖೆಗಳಲ್ಲಿ ಕನ್ನಡ ಭಾಷೆಯಲ್ಲಿ ಅನೇಕ ಶಿಸ್ತುಗಳನ್ನು ಕುರಿತ ಕೃತಿಗಳು ರಚನೆಯಾಗುತ್ತಿದ್ದವು ಎನ್ನುವುದಕ್ಕೆ ಇದೊಂದು ಉದಾಹರಣೆ. ಉಲ್ಲಾಸದಾಯಕವಾಗುವಂತೆ ಓದಿಸಿಕೊಂಡು ಹೋಗುವ ಗುಣವುಳ್ಳ ಇದು ಒಂದು ಅಪೂರ್ವ ಕೃತಿ.