ಅಯೋಧ್ಯಾಕಾಂಡವು
ಮುನ್ನುಡಿ

ಶ್ರೀ ಸಾಲಿ ರಾಮಚಂದ್ರರಾಯರ ‘ಅಯೋಧ್ಯಾಕಾಂಡವು’ (ಪೂರ್ವಾರ್ಧವು) ಎನ್ನುವ ಈ ಕೃತಿಯು 1935ರಲ್ಲಿ ಮೊದಲನೆಯ ಆವೃತ್ತಿಯಾಗಿ ಹೊರಬಂದಿದೆ. ಇದರ ಪ್ರಕಾಶಕರು ಧಾರವಾಡದ ಕರ್ನಾಟಕ ಹೈಸ್ಕೂಲ್‌ನ ಕಾರ್ಯದರ್ಶಿಯವರಾಗಿದ್ದ ವಾಮನ ರಾಮಚಂದ್ರ ಮುಧೋಳಕರ. ಧಾರವಾಡದ ಮೋಹನ ಮುದ್ರಣಾಲಯದ ಬಳವಂತ ನಾರಾಯಣ ಬಾಗಲವಾಡಿ ಅವರು ಈ ಕೃತಿಯ ಮುದ್ರಕರು.

ಅಷ್ಟಕಿರೀಟಾಕಾರದ 8+112 ಪುಟಗಳ ಈ ಕೃತಿಯ ಬೆಲೆ ನಮೂದಾಗಿಲ್ಲ. ನವೋದಯ ಕಾವ್ಯಾರಂಭದ ಕಾಲಘಟ್ಟದಲ್ಲಿ ಬಂದ ಈ ಕೃತಿ ಒಂದು ಖಂಡ ಕಾವ್ಯ. ಧಾರವಾಡದ ಕರ್ನಾಟಕ ಕಾಲೇಜಿನ ಶ್ರೀ ಎ. ಟಿ. ಸಾಸನೂರ ಎನ್ನುವವರು ಈ ಗ್ರಂಥಕ್ಕೆ ಮುನ್ನುಡಿಯನ್ನು ಬರೆದಿರುತ್ತಾರೆ. ‘ನನ್ನ ಪರಮಮಿತ್ರರಾದ ರಂಗಾಚಾರ್ಯ ಅಪ್ಪಾಚಾರ್ಯ ಜಹಾಗಿರದಾರ, ಎಮ್.ಎ; ಎಲ್.ಎಲ್.ಬಿ; ಅಡ್ವೊಕೇಟ, ಮುಂಬಯಿ, ಇವರಿಗೆ– ನೀವು ಸತಾಂ ಸದ್ಭಿಃ ಸಂಗಃ ಕಥಮಪಿ ಹಿ ಪುಣ್ಯೇನ ಭವತಿ ಎಂಬುದರ ತಿರುಳನ್ನು ನನಗೆ ತಿಳಿಹಿದಿರಿ, ಉಣಿಸಿದಿರಿ’ ಎಂಬ ನುಡಿಗಳೊಂದಿಗೆ ಈ ಕೃತಿ ಅರ್ಪಣೆಯಾಗಿದೆ.

1888ರಿಂದ 1978ರವರೆಗೆ ಬದುಕಿ ಬಾಳಿದ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯ ಪೂರ್ವ ಹಾಗೂ ನವೋದಯ ಸಾಹಿತ್ಯದ ಮಹತ್ವದ ಕನ್ನಡ ಸಾಹಿತಿ. ಸ್ವಾತಂತ್ರ್ಯ ಹೋರಾಟಗಾರರೂ ಶಿಕ್ಷಕರೂ ಆಗಿದ್ದ ಶ್ರೀಯುತರು ರಾಮದುರ್ಗದಲ್ಲಿ ಹುಟ್ಟಿದರು. ಇವರ ಮನೆತನದವರು ಶಿರಸಿಂಗಿ ದೇಸಾಯಿಯವರ ಮನೆಯವರಿಗೆ ವಿದ್ಯಾಗುರುಗಳಾಗಿದ್ದರಿಂದ ‘ಸಾಲಿ ಮನೆತನ’ ಎನ್ನುವ ಹೆಸರು ಬಂದಿತು. ಬಾಲ್ಯದಲ್ಲಿಯೇ ತಂದೆ ತಾಯಿಯರನ್ನು ಕಳೆದುಕೊಂಡ ಸಾಲಿಯವರು ಬಡತನದಲ್ಲಿ ಬೆಂದು ಪರಿಶ್ರಮದಿಂದ ಆಗಿನ ಮೆಟ್ರಿಚುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಕೆಲಕಾಲ ಅಂಚೆ ಇಲಾಖೆಯಲ್ಲಿದ್ದು, ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಪ್ರತಿಭಟನೆಯ ರೂಪವಾಗಿ ಕೆಲಸಕ್ಕೆ ರಾಜೀನಾಮೆ ಇತ್ತರು.

ಆ ಕಾಲಘಟ್ಟದಲ್ಲಿ ಧಾರವಾಡದಲ್ಲಿ ಸ್ಥಾಪಿತವಾದ ಕರ್ನಾಟಕ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಾಗಿದ್ದು 1940ರಲ್ಲಿ ನಿವೃತ್ತಿ ಹೊಂದಿದರು. ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯರು, ರೊದ್ದ ಶ್ರೀನಿವಾಸರಾಯರು ಮುಂತಾದ ಕನ್ನಡದ ದಿಗ್ಗಜಗಳ ಸಹವರ್ತಿಗಳಾಗಿದ್ದ ಸಾಲಿಯವರು ಸಂಸ್ಕೃತ, ಇಂಗ್ಲಿಷು, ಪಾಲಿ, ಮರಾಠಿ, ಹಿಂದಿ ಹಾಗೂ ಗುಜರಾತಿ ಭಾಷೆಗಳಲ್ಲಿ ಪರಿಣತಿ ಹೊಂದಿದ ಬಹುಶ್ರುತರಾಗಿದ್ದರು. ಒಟ್ಟು ಹದಿನೆಂಟು ಕೃತಿಗಳನ್ನು ರಚಿಸಿರುವ ರಾಯರು ಕಾವ್ಯ, ನೀಳ್ಗವಿತೆ, ಖಂಡಕಾವ್ಯ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ಅನುವಾದ ಪ್ರಕಾರಗಳಲ್ಲಿ ಮಾತ್ರವಲ್ಲದೆ ಸಂಸ್ಕೃತ ಭಾಷೆಯಲ್ಲಿಯೂ ಎರಡು ಕೃತಿಗಳನ್ನು ರಚಿಸಿರುತ್ತಾರೆ.

‘ಹಂಬಲು’, ‘ಕುಸುಮಾಂಜಲಿ’, ‘ಚಿಗುರೆಲೆ’, ‘ಚಿತ್ರಸೃಷ್ಟಿ’– ಇವು ಇವರ ಕವನ ಸಂಗ್ರಹಗಳಾದರೆ, ‘ಅಭಿಸಾರಿಕೆ’ ಹಾಗೂ ‘ತಿಲಾಂಜಲಿ’ ನೀಳ್ಗವಿತೆಗಳು. ‘ಬಾಲಕಾಂಡವು’ ಮತ್ತು ‘ಅಯೋಧ್ಯಾಕಾಂಡವು’ ಖಂಡಕಾವ್ಯಗಳು. ‘ಸುಕನ್ಯ’ ಸಾಲಿಯವರು ಬರೆದಿರುವ ಏಕೈಕ ನಾಟಕ. ‘ಯದುಪತಿ’ ಹಾಗೂ ‘ಜಯಗುರುದೇವ’ ಆವರ ಕಾದಂಬರಿಗಳು. ‘ಸಿಪಾಯಪ್ಪ ಮತ್ತು ಐದು ಜನ ಪ್ರಾಣಿಗಳು’ ಆವರು ರಚಿಸಿರುವ ಮಕ್ಕಳ ಸಾಹಿತ್ಯ. ‘ಸುದಾಮಚರಿತಂ ’ಮತ್ತು ಗ‘ದ್ಯರಾಮಾಯಣಂ’ ಸಾಲಿಯವರ ಸಂಸ್ಕೃತ ಕೃತಿಗಳು. ಹೀಗೆ ಅವರ ಸಾಹಿತ್ಯವು ವೈವಿಧ್ಯಮಯವೂ ವಿಫುಲವೂ ಆಗಿದೆ. ಇವರ ಸಾಹಿತ್ಯ ಸೇವೆಯನ್ನು ತಡವಾಗಿಯಾದರೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಗುರುತಿಸಿ ಅವರ ೮೦ನೆಯ ವಯಸ್ಸಿನಲ್ಲಿ, 1968ರಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತು.

‘ಅಯೋಧ್ಯಾಕಾಂಡವು’ ಖಂಡ ಕಾವ್ಯ – ಕಥನ ಕಾವ್ಯದಲ್ಲಿ ಹನ್ನೊಂದು ಅಧ್ಯಾಯಗಳಿಂದ ಒಟ್ಟು 520 ಚಿಕ್ಕಚಿಕ್ಕ ಕಿರುಚೌಪದಿಗಳಿವೆ. ಹನ್ನೊಂದೂ ಅಧ್ಯಾಯಗಳೂ ಶ್ರೀರಘುಕುಲಮಣಿ | ವೀರಶಿರೋಮಣಿ | ಕಾರುಣಿಕಾಗ್ರಣಿ | ತಾರಕ ಶರಣು || ಎಂಬ ಚೌಪದಿಯೊಂದಿಗೆ ಶ್ರೀರಾಮನಿಗೆ ಶರಣಾಗುವುದರೊಂದಿಗೆ ಆರಂಭವಾಗುತ್ತದೆ. ಛಂದೋಬಂಧದ ದೃಷ್ಟಿಯಿಂದ ಇಲ್ಲಿನ ಚೌಪದಿಗಳಲ್ಲಿ ಒಂದು ಹೊಸ ಪ್ರಯೋಗಶೀಲತೆಯಿದೆ. ಇಲ್ಲಿನ ಚೌಪದಿಗಳಲ್ಲಿ ಶರ ಷಟ್ಪದಿಯ ಲಯದ ಹಾಸು ಬೀಸು ಇದ್ದರೂ ಇವುಗಳು ಶರ ಷಟ್ಪದಿಗಳಲ್ಲ. ಮೊದಲ ಮೂರು ಸಾಲುಗಳಲ್ಲಿ ನಾಲ್ಕು ಮಾತ್ರೆಯ ಎರಡು ಗಣಗಳಿದ್ದು ಆ ಸಾಲುಗಳ ಓದಿನ ವ್ಯಾಪ್ತಿಯಲ್ಲಿ ಒಂದು ವೇಗದ ಓಟವಿದೆ. ಕೊನೆಯ ಸಾಲಿನಲ್ಲಿ ನಾಲ್ಕು ಮಾತ್ರೆಯ ಒಂದು ಗಣ ಹಾಗೂ ಅಂತಿಮ ಗಣವು ಮೂರು ಮಾತ್ರೆಯ ವ್ಯಾಪ್ತಿಗೆ ನಿಲ್ಲುವುದರಿಂದ ಕವಿತೆಗೆ ಒಂದು ಹಠಾತ್ತಾದ ನಿಲುಗಡೆ ದೊರೆತು ಅನಿರೀಕ್ಷಿತ ಆನಂದದ ಅನುಭವ ಉಂಟಾಗುತ್ತದೆ. ನಿದರ್ಶನಕ್ಕಾಗಿ ಪೂರ್ವೋಕ್ತ ಚೌಪದಿಯ ಜತೆಗೆ ಈ ಚೌಪದಿಯನ್ನು ಗಮನಿಸಿ:

ಏತಕೆ ತಂದಳೊ | ಶೋಕಾವಹೆಯನು | ಕೇಕಯಿ ತವರಿಂ | ದಾ ಕುಬ್ಜೆಯನು | –ಪ್ರತಿ ಚೌಪದಿಯಲ್ಲಿಯೂ ದ್ವಿತೀಯಾಕ್ಷರ ಪ್ರಾಸವಿರುವುದನ್ನು ಗಮನಿಸಬಹುದು. ದಶರಥನು ಶ್ರೀರಾಮನನ್ನು ರಾಜನನ್ನಾಗಿ ಮಾಡಲು ಮಹಾಜನತೆಯಿಂದ ಅನುಮತಿಯನ್ನು ಪಡೆಯುತ್ತಾನೆ. ಜನರು ‘ಅವನೀಶನೆ, ಮಾ | ಡುವುದೈ ಶ್ರೀರಾ | ಘವನನು ಬೇಗನೆ | ಯುವರಾಜನನು |’ ಎನ್ನಲು ದಶರಥನು ರಾಮನನ್ನು ಕರೆದು ಯುವರಾಜನು, ‘ರಾ- | ಘವ, ನಾಳೆಯೆ ಆ- | ಗುವೆ ತಳೆಯಲು ಭಾ- | ರವನು ಧರಣಿಯ |’ ಎಂದರುಹುತ್ತಾನೆ. ಅದಕ್ಕೆ ರಾಮನು, ‘ಇದು ವಚನವು ನ- | ನ್ನದು, ರಘುವಂಶಕೆ | ಒದಗದು ನನ್ನಿಂ- | ದೊದಗದು ಕೊರತೆ |’ ಎಂದು ವಾಗ್ದಾನ ಮಾಡಿ ತಾಯಿಯ ಬಳಿಗೆ ಹೋಗುತ್ತಾನೆ. ರಾಮನು ತಾಯಿಗೆ ಈ ವಾರ್ತೆಯನ್ನು ತಿಳಿಸುತ್ತಾನೆ. ಅದಕ್ಕೆ ಕೌಸಲ್ಯೆಯು ‘ಸಿರಿಯಿರಲಿರದಿರ | ಲಿರದು ಕೊರತೆ, ಸ- | ಚ್ಚರಿತವು ಬಾಳಿನ | ತಿರುಳೈ, ರಾಮ |’ ಎನ್ನಲು ರಾಮನು ‘ಇದು ಪಾವನವಾ- | ದುದು, ನೀವೆನಗೆಂ- |ದುದು, ನಡೆವೆನು ನಾ- | ನಿದನನುಸರಿಸಿ’ ಎಂದು ಆಶ್ವಾಸನೆ ನೀಡುತ್ತಾನೆ. ಆದರೆ ‘ಉರಿಯುರಿದಳು ಹ | ಲ್ಮೊರೆದಳು ಮಂಥರೆ | ಪರುಷಾಶಯೆ ಕಿಂ_ | ಕರಿ ಕೇಕಯಿಯಾ |’, ಮಂಥರೆಯು ಕೈಕೆಗೆ ‘ಸವತಿಯ ಮಗನಿಗೆ | ಯುವರಾಜತ್ವವು | ಬವಣೆಗೆ ಗುರಿ ನಿ- | ನ್ನವನು ಭರತನು |’ ಎನ್ನಲು’, ಕೈಕೆ ಅದಕ್ಕೆ ಒಪ್ಪದೆ ‘ಇದು ಭೀಷಣವಾ- | ದುದು ನುಡಿ ನೀನೆಂ | ದುದು, ನುಡಿದೈ ಭೇ- | ದದ ಮಾತನಲೆ’ ಎಂದು ನಿರಾಕರಿಸುತ್ತಾಳೆ. ತನಗೆ ‘ರಾಮನು ಪ್ರಿಯನೆನಗೆ ಶುಭಾ- | ಶ್ರಯನಾರಾಮನು | ಭಯವವನಿಂದೆ- | ಲ್ಲಿಯದೌ ಎನಗೆ |’ ಎಂದು ನಿರಾಳವಾಗಿರುತ್ತಾಳೆ. ‘ಉರಿಯೊಳಗೆಣ್ಣೆಯ- | ನೆರಚಿದವೊಲು ಮಂ- | ಥರೆಯ ಹೃದಯದುರಿ- | ಯುರಿದುದು ಮಸಗಿ |’ ಅವಳು ನಾನಾ ರೀತಿಯಲ್ಲಿ ಚಾಡಿ ಹೇಳಿ ರಾಮನ ಪಟ್ಟಾಭಿಷೇಕವನ್ನು ಕೈಕೆಯು ನಿಲ್ಲಿಸುವಂತೆ ಪ್ರೇರೇಪಿಸಿ ‘ಚತುರತೆಯಿಂದೀ- | ಪ್ಸಿತವನು ಸಾಧಿಸು | ಹಿತವನು, ಕೇಕಯಿ | ಸುತನಿಗೊದಗಿಸು |’ ಎಂದು ಹೇಳಲು ‘ಈ ನುಡಿ ಅದು ನೀರೊಳು ಕೆಸ- | ರದು ಹಾಲೊಳು ಹುಳಿ | ಅದು ಮಂಥರೆಯಾ- | ಡಿದ ಕೀಳುನುಡಿ  ಕೈಕೆ ಕೆರಳಿದ ಹಾವಿನ | ತೆರದಿಂದೆಡೆವಿಡ- | ದುರಿಯುರಿಯುತೆ ಫೂ- |ತ್ಕರಿಸುತಲಿಹಳು |’.

ಇಂತಹ ಕೈಕೆ ದಶರಥನಿಗೆ ಭರತನಿಗೆ ಪಟ್ಟ ಹಾಗೂ ಶ್ರೀರಾಮನಿಗೆ ವನವಾಸ ಎಂಬ ವರವನ್ನು ಕೇಳುತ್ತಾಳೆ. ‘ವನವಾಸವು ರಾ- | ಮನಿಗಾಗಲಿ ಭರ- | ತನಿಗೀರಾಜ್ಯವು | ಜನಪನೆ, ಬರಲಿ |’ ಎನ್ನುವ ಕೈಕೆಯ ಕೋರಿಕೆ ಐದನೆಯ ಅಧ್ಯಾಯದ ತಿರುಳು. ಆರನೆಯ ಅಧ್ಯಾಯದಲ್ಲಿ ಕೈಕೆ ರಾಮನಿಗೆ, ‘ತೊಡು ವಲ್ಕಲವನು | ನಡೆಯಡವಿಗೆ ನೀ- | ನೆಡೆಗುಡು, ಭರತನಿ- | ಗೊಡನೆ, ನರವರ |’ ಎನ್ನುವಳು. ಏಳು, ಎಂಟು  ಮತ್ತು ಒಂಬತ್ತನೆಯ ಅಧ್ಯಾಯಗಳಲ್ಲಿ ಶ್ರೀರಾಮನು ತಾಯಿಯಾದ ಕೌಸಲ್ಯೆಗೆ ‘ತಡೆಯೆನು, ತಾಯೇ | ನಡೆವೆನು, ನಾನಿ- | ನ್ನಡವಿಗೆ, ಹರಸೌ | ಅಡಿಗೆರಗುವೆನು’ ಎಂದು ನಮಿಸಿ ಲಕ್ಷ್ಮಣ ಹಾಗೂ ಸೀತೆಯರೊಂದಿಗೆ ಕಾಡಿಗೆ ಹೊರಡುತ್ತಾನೆ. ಅವರು ಕಾಡಿಗೆ ಹೋಗುವಾಗ ‘ಅಳಿದುದಯೋಧ್ಯೆಯ | ಬೆಳಕೆಲ್ಲಿಯು ಬಾ- | ಯಳಿದತ್ತಿತು ಬಲು | ಬಳಲಿತು ಜನವು || ತೊರೆದೆಮ್ಮನು ರಘು- | ವರ ಕರುಣಾಕರ | ತೆರಳುವುದೇ ಮೂ- |  ವರೆ ಕಾನನಕೆ? |’ ಎಂದು ಜನಸಮೂಹ ದುಃಖಿಸುತ್ತದೆ. ಅದಕ್ಕೆ ರಾಮನು ‘ಭರತನು ಧರ್ಮಿಗ | ಳರಸನು, ನೀವಿ- | ನ್ನಿರಿಸುವುದೀಯ- | ಳ್ಕರನಾತನಲಿ |’ ಎನ್ನುತ್ತಾನೆ. ಜನರು ‘ತೊರೆದೆಮ್ಮನು ಮಲ- | ಗಿರುವವರನು ರಘು- | ವರನು ವಿಪಿನದಲಿ | ತೆರಳಿದನಯ್ಯೋ || ಮರುಗಿದರಿಂತ- | ತ್ತರು, ಶೋಕದೆ ಪೌ- | ರರು ಸಾಕೇತಕೆ | ತಿರುಗಿ ನಡೆದರು ||’ ಎನ್ನುವಲ್ಲಿಗೆ ಈ ಖಂಡ ಕಾವ್ಯವು ಮುಗಿಯುತ್ತದೆ.

ಇಡೀ ಕಾವ್ಯದಲ್ಲಿ ಸುಖ ಸಂಭ್ರಮ ವೈಭವಗಳಿಂದ ಕೋಮಲವಾದ ವಾತಾವರಣದಿಂದ ಕಂಗೊಳಿಸುತ್ತಿದ್ದ ಅಯೋಧ್ಯೆ ಇದ್ದಕ್ಕಿದ್ದಂತೆ ದುರಂತ ಹಾಗೂ ವಿಷಾದದೆಡೆಗೆ ಹೊರಳುವ ಸಂದರ್ಭವನ್ನು ಕವಿ ಹೃದಯಂಗಮವಾಗಿ ಚಿತ್ರಿಸುತ್ತಾರೆ. ಕಾವ್ಯದ ಹೆಚ್ಚು ಭಾಗದಲ್ಲಿ ಕರುಣ ರಸವಿದೆ. ಹೊಸಗನ್ನಡ ನವೋದಯಾರಂಭದ ಕಾಲಘಟ್ಟದಲ್ಲಿ ಕನ್ನಡದ ಪ್ರಾಚೀನ ಛಂದೋರೂಪಗಳು ಹೊಸ ಮರುಹುಟ್ಟನ್ನು ಪಡೆದು ಆಧುನಿಕ ಭಾವನೆಗಳನ್ನು ಅಟಭಿವ್ಯಕ್ತಗೊಳಿಸಲು ಹೊಸ ಹೊಸ ಆಯಾಮಗಳನ್ನು ಪಡೆಯಿತು. ಕನ್ನಡ ಕಾವ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ  ಮಾಸ್ತಿ, ಡಿ.ವಿ.ಜಿ, ಪಂಜೆ, ಗೋವಿಂದ ಪೈ, ಕುವೆಂಪು, ಬೇಂದ್ರೆ, ಕಡೆಂಗೋಡ್ಲು ಮುಂತಾದವರ ಜತೆಗೆ ಸಾಲಿ ರಾಮಚಂದ್ರರಾಯರಂತಹವರೂ ತಮ್ಮ ಕೈ ಜೋಡಿಸಿದರು. ಅಂದಿನ ಕಾಲಘಟ್ಟದ ಮಹತ್ವದ ಕೃತಿಗಳಲ್ಲಿ ಸಾಲಿ ರಾಮಚಂದ್ರರಾಯರ ಕೃತಿಗಳೂ ಸ್ಥಾನವನ್ನು ಪಡೆದಿವೆ.