ಅನುಕರಣ ಲಹರಿ

ಅರಮನೆ ವಿದ್ವಾಂಸ ಪಂಡಿತ ನರಹರಿ ಜಯರಾಯಾಚಾರ್ಯರವರು 1902ರಲ್ಲಿ ಮೈಸೂರಿನ ಗ್ರಾಡುಯೇಟ್ಸ್ ಟ್ರೇಡಿಂಗ್ ಅಸೋಸಿಯೇಷನ್ ಪ್ರೆಸ್ಸಿನಿಂದ ‘ಅನುಕರಣಗೀತಲಹರಿ’ ಎನ್ನುವ ಮಕ್ಕಳ ಕವಿತೆಗಳ ಸಂಕಲನವನ್ನು ಪ್ರಕಟಪಡಿಸಿದರು. ಹಲವಾರು ಆವೃತ್ತಿಗಳನ್ನು ಕಂಡ ಈ ಕೃತಿಯನ್ನು 1992ರಲ್ಲಿ ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ಅವರು ಸಂಪಾದಿಸಿ ಮೈಸೂರಿನ ಡಿ.ವಿ.ಕೆ.ಮೂರ್ತಿ ಅವರು ಪ್ರಕಟಿಸಿ ಕನ್ನಡಿಗರಿಗೆ ಉಪಕಾರ ಮಾಡಿರುತ್ತಾರೆ.

1846ರಿಂದ 1906ರವರೆಗೆ ಜೀವಿಸಿದ್ದ ಶ್ರೀ ಆಚಾರ್ಯರು ಮೈಸೂರು ಅರಮನೆಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದುದಲ್ಲದೆ ಮೈಸೂರಿನ ಮಹಾರಾಣಿ ಬಾಲಿಕಾ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಶ್ರೀಯುತರು ‘ಕನ್ನಡ ಚಂದ್ರಹಾಸ ನಾಟಕ’, ‘ನಾಡಿನಿಧಾನ-ವೈದ್ಯಗ್ರಂಥ’ (1897), ‘ಕರ್ಣಾಟಕ ಭಾಷಾಕರ’ (1819), 1902ರಲ್ಲಿ ‘ಅನುಕರಣಗೀತಲಹರಿ’, ‘ಕರ್ನಾಟಕ ವೇಣೀಸಂಹಾರ ನಾಟಕಂ’ (1907-2ನೇ ಮುದ್ರಣ),

‘ಕನ್ನಡ ಹರಿಶ್ಚಂದ್ರ ನಾಟಕಂ’, ‘ಕಲ್ಯಾಣ ಗೀತಾವಳಿ’, ‘ಚಂಡಕೌಶಿಕ ನಾಟಕ’, ‘ಕರ್ಣಾಟಕ ಪಾಕಶಾಸ್ತ್ರ’, ‘ಕರ್ಣಾಟಕ ಶೌಚನಿರ್ಣಯ’, ‘ಭವಿಷ್ಯೋತ್ತರ ಪುರಾಣಂ’, ‘ಮದಾಲಸಾ ಪರಿಣಯ ನಾಟಕಂ’ (1900), ‘ಮಹಾಬಧಿರಪ್ರಹಸನ’, ‘ರಾಮವರ್ಮಲೀಲಾವತೀ ಚರಿತ್ರೆ’, ‘ಪಾಂಚಾಲಿಕಾ ಪರಿಣಯಂ’, ‘ಕನ್ನಡ ಸಿರಿಯಾಳ ರಾಜನ ಚರಿತ್ರೆ’, ‘ನರಪತಿಚರಿತಂ’, ‘ಉತ್ಥಾನ ದ್ವಾದಶೀಕಥೆ’, ‘ಅನಸೂಯಾ ಚರಿತ್ರೆ’, ‘ಪದಮಾವತೀ ಕಲ್ಯಾಣ’, ‘ಕನಕಾಂಗಿ ಕಲ್ಯಾಣ’, ‘ಶೃಂಗಾರ ಜಾವಳಿಗಳು’, ‘ಮಹಾಬಧಿರ ಪ್ರಹಸನ’, ‘ಶಶಿರೇಖಾ ಕಲ್ಯಾಣ’, ‘ಕುಚೇಲೋಪಾಖ್ಯಾನ’, ‘ಶ್ರೀವರ ನಂದೀ ಕಲ್ಯಾಣಂ’ ಕೃತಿಗಳನ್ನಲ್ಲದೆ ಹಲವಾರು ಸಂಗೀತದ ಕೃತಿಗಳನ್ನು ರಚಿಸಿರುತ್ತಾರೆ.

ಇವರ ಒಟ್ಟು ಕೃತಿಗಳ ಸಂಖ್ಯೆ ಅವರ ಪುತ್ರರಾದ ರಘುಪತ್ಯಾಚಾರ್ಯರ ಪ್ರಕಾರ 32. ಇಷ್ಟೇ ಅಲ್ಲದೆ ಎಂ.ಆನಂದರಾಯ ಎನ್ನುವವನ ಷೇಕ್ಸ್‌ಪಿಯರ್ ನಾಟಕಾನುವಾದಗಳಿಗೆ ಇವರೇ ಅನೇಕ ಕಂದಪದ್ಯ, ವೃತ್ತಗಳನ್ನು ರಚಿಸಿ ಕೊಟ್ಟಿರುತ್ತಾರೆ. ಇವರ ‘ಕರ್ಣಾಟಕ ಪಾಕಶಾಸ್ತ್ರ’ ಕೃತಿಯು ತಮಿಳು–ತೆಲುಗು ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿಯಲ್ಲಿ 400 ರೀತಿಯ ಸೊಪ್ಪುಗಳ ವಿವರಣೆ, ಶುದ್ಧಿಯ ಕ್ರಮ ಹಾಗೂ ಅವುಗಳ ಸೇವನೆಯಿಂದ ನಿವಾರಣೆಯಾಗತಕ್ಕ ರೋಗಗಳು ಇತ್ಯಾದಿಗಳನ್ನು ವಿವರಿಸಿದೆ.

‘ಶ್ರೀ ನರಸಿಂರಾಜ ಕರ್ಣಾಟಕ ಛಂದೋರಾಜ’ ಎನ್ನುವ ಕನ್ನಡ ಛಂದೋಗ್ರಂಥ (1926), ‘ಶ್ರೀ ಕೃಷ್ಣರಾಜ ಕರ್ಣಾಟ ಭಾಷಾರತ್ನಾಕರಂ’ (1923), ‘ಶ್ರೀ ನರಸಿಂಹರಾಜ ಕರ್ಣಾಟ ಭಾಷಾಕರಂ’ (1926), ‘ಶ್ರೀಹಾರಬಂಧ’, ‘ನವರತ್ನ ಮಾಲಿಕೆ’ (1913) ಎನ್ನುವ ಕೃತಿಗಳನ್ನು ರಚಿಸಿದ ಪಂಡಿತ ಜೆ. ರಘುಪತ್ಯಾಚಾರ್ಯ ಅವರು ಅರಮನೆ ನರಹರಿ ಜಯರಾಯಾಚಾರ‍್ಯರ ಮಕ್ಕಳು ಎನ್ನುವ ಸಂಗತಿಯನ್ನು ಇಲ್ಲಿ ಪ್ರಾಸಂಗಿಕವಾಗಿ ತಿಳಿಸಬಹುದು.

ರಘುಪತ್ಯಾಚಾರ್ಯರು ‘ಧರ್ಮಪ್ರಿಯ ಚರಿತೆ’ ಎನ್ನುವ ನಾಟಕವನ್ನೂ, ಛಂದೋನಿಘಂಟೊಂದನ್ನೂ ಹಾಗೂ ‘ವೃಕ್ಷದೋಹದ ಶಾಸ್ತ್ರ’ ಎನ್ನುವ ಕೃತಿಯೊಂದನ್ನೂ ಬರೆದಿರುತ್ತಾರೆ. ಜಯರಾಯಾಚಾರ್ಯರವರ ತಂದೆಯವರಾದ ನರಹರ್ಯಾಚಾರ್ಯರು ಮೈಸೂರು ರಾಜಾಸ್ಥಾನದ ವಿದ್ವತ್ಕುಲ ಸಂಭವರಾಗಿದ್ದು, ಅರಮನೆಯ ಕೋಟೆಯಲ್ಲಿ ವಾಸವಾಗಿದ್ದು ಬಹುಮಂದಿ ಶಿಷ್ಯರಿಗೆ ತರ್ಕವೇದಾಂತಶಾಸ್ತ್ರ ಪಾಠವನ್ನು ಮಾಡುತ್ತಿದ್ದರು. ಹೀಗೆ ಜಯರಾಯಾಚಾರ್ಯರು ವಿದ್ವತ್‌ಕುಟುಂಬಕ್ಕೆ ಸೇರಿದವರಾಗಿದ್ದರು.

ರಘುಪತ್ಯಾಚಾರ್ಯರು ತಾವು ಜಯರಾಯಾಚಾರ್ಯರ ಪುತ್ರರು ಮತ್ತು ನರಹರ್ಯಾಚಾರ್ಯರ ಪ್ರಪೌತ್ರರು ಎಂಬುದನ್ನು ‘ಶ್ರೀ ನರಸಿಂಹರಾಜ ಕರ್ಣಾಟಕ ಛಂದೋರಾಜ’ ಕೃತಿಯ ಆರಂಭದ ಕಂದಪದ್ಯದಲ್ಲಿ ಹೇಳಿದ್ದಾರೆ. ಆ ಪದ್ಯ ಹೀಗಿದೆ:

‘ನರಪಾಸ್ಥಾನ ಸುಧೀನಿಧಿ|
ನರಹರ್ಯಾಚಾರ್ಯಸೂನು ಜಯಕವಿತನುಜಂ||
ಬರೆದರ್ಪಿಸಿ ಮುದ್ರಣಕಂ|
ಪರಮಪ್ರೋತ್ಸಾಹವನೆರೆವಂ ನೃಪರನವಂ||’.

ಜಯರಾಯಾಚಾರ್ಯರು 1902ರಷ್ಟು ಹಿಂದೆಯೇ ಚಿಕ್ಕಮಕ್ಕಳಿಗಾಗಿ ‘ಅನುಕರಣಗೀತಲಹರಿ’ ಎನ್ನುವ ಕವಿತಾ ಸಂಕಲನವನ್ನು ಪ್ರಕಟಿಸಿದರು. ಆ ಕಾಲಘಟ್ಟದಲ್ಲಿ ಶಿಶುಗಳಿಗಾಗಿ ರಚಿಸಿದ ಸ್ವತಂತ್ರ ಕೃತಿಗಳಲ್ಲಿ ಈ ಕೃತಿ ಮಹತ್ವದ ಸ್ಥಾನವನ್ನು ಪಡೆದಿದೆ. ಈ ಕೃತಿಯ ಉಪೋದ್ಘಾತದಲ್ಲಿ ಲೇಖಕರು ‘‘ಮಕ್ಕಳಲ್ಲಿ ಬಾಲ್ಯದಲ್ಲಿಯೇ ಕಂಡುಬರುವ ಸಹಜಸ್ವಭಾವಂಗಳನೆಲ್ಲಾ ಜಾಗರೂಕತೆಯಿಂದ ಪರೀಕ್ಷಿಸಿ, ಆಟಪಾಟಗಳ ಮೂಲಕವಾಗಿಯೇ ಅವುಗಳು ಪುರೋಭಿವೃದ್ಧಿಗೆ ಬರುವಂತೆ ಮಾರ್ಗವನ್ನು ಕಲ್ಪಿಸಿ ಪ್ರಖ್ಯಾತಿಗೊಂಡವರಲ್ಲಿ ಫ್ರೋಬೆಲ್ ಎಂಬ ಮಹಾಪಂಡಿತರು ಅಗ್ರಗಣ್ಯರಾಗಿರುವರು.

ಆ ಮಹನೀಯರು ಮಾಡಿರುವ ಏರ್ಪಾಡುಗಳು ಈಗಾಗಲೇ ಏಷ್ಯಾ, ಯೂರೋಪು, ಅಮೆರಿಕಾ ಖಂಡಗಳಲ್ಲಿ ಅಲ್ಲಲ್ಲಿ ಆಚರಣೆಗೆ ಬಂದಿರುವುವು. ಈಚೆಗೆ ನಮ್ಮ ದೇಶದಲ್ಲಿಯೂ ವಿದ್ಯಾಶಾಲೆಗಳಲ್ಲಿ ಆ ವಿಧವಾದ ಏರ್ಪಾಡುಗಳು ಉಪಕ್ರಮವಾಗಿರುವುವು. ಇದನ್ನೇ ಈಗ ಸಾಮಾನ್ಯವಾಗಿ ಕಿಂಡರ್‌ಗಾರ್ಟನ್ ಪಾಠವೆಂದು ಹೇಳುವರು. ಈ ‘ಅನುಕರಣಗೀತಲಹರಿ’ಯು ಕಿಂಡರ್‌ಗಾರ್ಟನ್ ಪಾಠದಲ್ಲಿ ಒಂದು ಭಾಗವೆಂದು ತಿಳಿಯಬೇಕಾಗಿದೆ.

ಪದಗಳಲ್ಲಿ ಕಂಡುಬರುವ ಲಯಭಾವಂಗಳಿಗೆ ಅನುಗುಣವಾಗಿ ಅಭಿನಯಿಸಿಕ್ಕೊಂಡು ಆ ಪದಂಗಳನ್ನು ಬಾಯಲ್ಲಿ ಹೇಳುವುದೇ ಇದರ ಮುಖ್ಯೋದ್ದೇಶವು’’ ಎಂದು ಈ ಕೃತಿ ರಚನೆಯ ಕಾರಣವನ್ನು ಕುರಿತು ಕಾರಣವನ್ನು ಹೇಳಿದ್ದಾರೆ. ಮುಂದುವರೆಸುತ್ತಾ ಅವರು ‘‘ಮಕ್ಕಳ ಈ ವಿಧವಾದ ನೈಜಸ್ವಭಾವವನ್ನು ಪ್ರೋತ್ಸಾಹಪಡಿಸುವುದಕ್ಕಾಗಿಯೇ ಕಿಂಡರ್‌ಗಾರ್ಟನ್ ಪಾಠಗಳಲ್ಲಿ ಅಂಗಸಾಧನೆಗೂ ಗಾನರಸಾನುಭವಕ್ಕೂ ಅನುಕೂಲಂಗಳಾದ ‘ಆಕ್ಷನ್‌ಸಾಂಗ್’ ಎಂದರೆ ‘ವಾಗನುಕರಣಗೀತ’ ಗಳನ್ನು ಸೇರಿಸಿ, ಮಕ್ಕಳಿಗೆ ಪಾಠವನ್ನು ಹೇಳುವುದು....

ಇದು ನಮ್ಮ ಮೈಸೂರು ಸಂಸ್ಥಾನದಲ್ಲಿಯೂ ಪ್ರಚಾರಕ್ಕೆ ಬರಬೇಕೆಂಬ ಉದಾರವಾದ ಉದ್ದೇಶದಿಂದ ಮೈಸೂರು ಸಂಸ್ಥಾನದ ವಿದ್ಯಾಭ್ಯಾಸದ ಇಲಾಖಾ ಇನ್‌ಸ್ಪೆಕ್ಟರ್ ಜನರಲ್ ಸಾಹೇಬರಾದ ಮೆ|| ಭಾಭಾ, ಎಂ.ಏ ಅವರು ಈ ಪದಂಗಳನ್ನು ಮಾಡಬೇಕೆಂದು ನನಗೆ ಪ್ರೋತ್ಸಾಹಪಡಿಸಿದುದಲ್ಲದೆ... ಅಪ್ಪಣೆ ಕೊಡಿಸಿದ ಕಾರಣ ಈ ಸಣ್ಣ ಪುಸ್ತಕವನ್ನು ಬರೆಯಲಾರಂಭಿಸಿದೆನು... ಇದರಲ್ಲಿರುವ ಪದಗಳ ಕೆಲವು ಅಭಿಪ್ರಾಯಂಗಳೂ ಕೆಲವು ಮಾತುಗಳೂ ನಮ್ಮ ನಮ್ಮ ಮನೆಗಳಲ್ಲಿ ಪೂರ್ವಾರಭ್ಯ ಹೆಂಗಸರು ಮಕ್ಕಳನ್ನು ಆಡಿಸುವಾಗಲೂ, ಕುಣಿಸುವಾಗಲೂ, ನಡೆಯಿಸುವಾಗಲೂ, ಜಗ್ಗು ಹಾಕಿಸುವಾಗಲೂ, ಚಪ್ಪಳೆ ಹಾಕಿಸುವಾಗಲೂ, ಮಲಗಿಸುವಾಗಲೂ, ರೂಢಿಯಾಗಿ ಹೇಳತಕ್ಕ ಪದರೂಪಗಳಾದ ಮಾತುಗಳಾಗಿಯೇ ಇರುವುವು.

ಈ ಪದ್ಧತಿಯನ್ನನುಸರಿಸಿ, ಮಕ್ಕಳಿಗೆ ಸುಲಭವಾಗಿ ತಿಳಿವಂತೆ, ಸಣ್ಣ ಸಣ್ಣ ಮಟ್ಟು, ರಾಗ, ತಾಳಂಗಳಿಂದ ಕಲಿವುದಕ್ಕೆ ಅತ್ಯಾಸಕ್ತಿಯುಂಟಾಗುವಂತೆ ಪದಂಗಳನ್ನು ಬರೆದು, ಆ ಹಾಡುಗಳಲ್ಲಿ ಕೆಲವನ್ನು 4-5 ವರ್ಷದ ಮಕ್ಕಳಿಗೆ ಕಲಿಸಿ, ಮೆ|| ಸಾಹೇಬರ ಮುಂದೆ ಹೇಳಿಸಿ, ಆಯಾ ಅನುಕರಣಂಗಳನ್ನೂ ಮಾಡಿಸಿದ ಬಳಿಕ, ಇದನ್ನು ಬೇಗ ಪೂರೈಸಬೇಕೆಂದು ಹುಕುಂ ಕೊಟ್ಟರು. ಎಂದು ಈ ಕೃತಿರಚನೆಗೆ ತಾವು ಹೇಗೆ ಹುಡುಗರನ್ನು ಒಂದಾಗಿಸಿಕೊಂಡು ಆಟಪಾಟಗಳ ಮೂಲಕ ಬರೆದೆನು’’ ಎಂಬುದನ್ನು ಹೇಳಿದ್ದಾರೆ.            

ಇಲ್ಲಿ ಅನುಕರಣಗೀತ ಎಂದರೆ ಬೇರೆ ಪದ್ಯಗಳ ಅನುಕರಣವಲ್ಲ; ಇಲ್ಲಿನ ಪದ್ಯಗಳನ್ನು ಹಾಡುವಾಗ ಅಂಗಾಂಗಗಳ ಸೂಕ್ತ ಅನುಕರಣ ಮಾಡಬೇಕು ಎಂಬುದೇ ಆಗಿದೆ. ಅದಕ್ಕೆ ಅನುಗುಣವಾಗಿ ಇಲ್ಲಿರುವ ಮೂವತ್ತು ಪದ್ಯಗಳಿಗೂ ಪದ್ಯಗಳ ಭಾಗಗಳ ಬಳಿಯೇ ಯಾವಯಾವ ಅಂಗಗಳನ್ನು ಹೇಗೆ ಅನುಕರಣ ಮಾಡಬೇಕೆಂಬುದರ ಸೂಚನೆ ಇದೆ. ನಿದರ್ಶನಕ್ಕಾಗಿ ‘ರೈಲುಗಾಡಿ’ ಎನ್ನುವ ಕವಿತೆಯನ್ನು ಗಮನಿಸಬಹುದು. ಈ ಗೀತವನ್ನು ದರ್ಬಾರು ರಾಗ ಹಾಗೂ ರೂಪಕ ತಾಳದಲ್ಲಿ (ಈ ವಧೂಮಣಿ ಧಾಟಿಯಲ್ಲಿ) ಹಾಡಬೇಕು.

ಇಲ್ಲಿ ಕವಿ ‘ಬಲಗೈಯನ್ನು ಮುಂದಕ್ಕೆ ನೀಡಿ ಆಡಿಸಬೇಕು’ ಎನ್ನುವ ಸೂಚನೆಯನ್ನು ನೀಡುತ್ತಾರೆ. ಹೀಗೆ ಕೈಗಳನ್ನು ಆಡಿಸುತ್ತಾ–

‘ಓಡುತಿರ್ಪುದು|ರೈಲು|| ಪಲ್ಲವಿ ||
ನೋಡು ಕೂಡಿರುವ ಜನರ|
ಗಾಡಿಯನೆಳಕೊಂಡು ಬೇಗ || ಅನುಪಲ್ಲವಿ ||’

ಎಂದು ಹಾಡಬೇಕು. 1900ರ ಆಸುಪಾಸಿನಲ್ಲಿ ಕನ್ನಡದ ಕವಿಯೊಬ್ಬರು ಶಿಶುಗಳಿಗಾಗಿ ಕಿಂಡರ್‌ಗಾರ್ಟನ್ ಮಾದರಿಯಲ್ಲಿ ಪದ್ಯರಚನೆ ಮಾಡಿರುವುದು ಕನ್ನಡಿಗರ ಪ್ರಯೋಗಶೀಲತೆಗೆ ನಿದರ್ಶನ.

ಇಲ್ಲಿ ‘ಟಿಕೆಟ್ಟು’ ಎನ್ನುವ ಇಂಗ್ಲಿಷು ಶಬ್ದವನ್ನು ಕವಿ ಬಳಸಿರುವುದು ಪ್ರಯೋಗಶೀಲತೆಯಲ್ಲಿ ಅವರ ಆಧುನಿಕತೆಗೆ ಸಾಕ್ಷಿ. ಕುತೂಹಲಕ್ಕಾಗಿ ಈ ಕವಿತೆಯೊಂದಿಗೆ ಎಸ್.ಜಿ. ನರಸಿಂಹಾಚಾರ್ಯರ ‘ಹೊಗೆಯ ಗಾಡಿ’ ಎಂಬ ಕವಿತೆಯನ್ನು ಹೋಲಿಸಿ ನೋಡಬಹುದು. ಎಸ್.ಜಿ.ಎನ್. ಅವರ ಕವಿತೆ: ‘ನೊಗವೆತ್ತಿನ ಕೊರಳೊಳಿಡುವ ಪಾಡಿಲ್ಲ | ಬಿಗಿದ ಕುದುರೆಯ ಹೂಡುವಾಯಸವಿಲ್ಲ || ಮಿಗೆ ಕಾದ ನೀರ ಹಬೆಯಿಂದ ಬಲುಬೇಗ | ಹೊಗೆಯ ಗಾಡಿಯು ನೋಡು ಹೋಗುತಿಹುದೀಗ ||’.

1900ರ ಕಾಲಘಟ್ಟದಲ್ಲಿನ ಕನ್ನಡ ಕವಿತೆಗಳಲ್ಲಿ ದ್ವಿತೀಯಾಕ್ಷರ ಪ್ರಾಸ ಇನ್ನೂ ಇತ್ತು ಎನ್ನುವುದಕ್ಕೆ ಈ ಪದ್ಯಗಳೇ ಸಾಕ್ಷಿ. ಜಯರಾಯಾಚಾರ್ಯರ ಈ ಕೃತಿಯಲ್ಲಿ ಒಟ್ಟು ೩೦ ಪದ್ಯಗಳಿವೆ. ಪ್ರತಿಯೊಂದು ಪದ್ಯಕ್ಕೂ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗ-ತಾಳಗಳ ಸೂಚನೆ ನೀಡಲಾಗಿದೆ. ಆ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ನಿರ್ದಿಷ್ಟ ಹಾಡುಗಳ ಮಟ್ಟುಗಳನ್ನೂ ಸೂಚಿಸಲಾಗಿದೆ.

‘ತೇರು’ ಎನ್ನುವ ಪದ್ಯವು ಜುಂಜೋಟಿ-ರಾಗ ಹಾಗೂ ರೂಪಕ ತಾಳದಲ್ಲಿರಬೇಕೆಂಬುದು ಕವಿಯ ಆಶಯ. ಹಾಗೆಯೇ ಆ ಗೀತವನ್ನು ‘ನಿಲ್ಲಲಾರೆ ನಲ್ಲನ’ ಎನ್ನುವ ಹಾಡಿನ ಧಾಟಿಯಲ್ಲಿ ಹೇಳಬೇಕೆಂಬ ಸೂಚನೆಯನ್ನೂ ನಿಡುತ್ತಾರೆ. ‘ರಾಗಿ ಬೀಸುವ ಹಾಡು’- ಇದನ್ನು ಪೀಲು ರಾಗ ಹಾಗೂ ಏಕತಾಳದಲ್ಲಿ ಹೇಳಬೇಕು. ಅದರ ಧಾಟಿ ‘ದೇವಿ ನಮ್ಮ ದ್ಯಾವರು ಬಂದರು | ಬಾವಿಕಟ್ಟೆಯ ಮೇಗೆ ಬಾವಾಜಿ ||’ ಹಾಡಿನ ಮಟ್ಟಿನಲ್ಲಿರಬೇಕು.

ಇದನ್ನು ಹಾಡುವಾಗ ಕೂತುಕ್ಕೊಂಡು ಬಲಗೈ ಮುಷ್ಟಿ ಹಿಡಿದು, ರಾಗಿ ಬಿಸುವಂತೆ ಗುಂಡಾಗಿ ಮುಷ್ಟಿಯನ್ನು ತಿರುಗಿಸಬೇಕು. ಪದ್ಯ ಹೀಗಿದೆ:

ರಾಗಿಯ ಬೀಸುವ ಬೇಗನೆ ಬಾರೆ |
ನಾಗಿ ಕೆಂಪಿ ಮರುನಂಜಿ || ಪಲ್ಲವಿ ||
ಬಾಗಿಲ ತೆಕ್ಕೊಂಡು | ಹೋಗವರೆ ಗೌಡರು |
ಬೇಗನೆ ಬರುವರೂಟಕ್ಕೆ || ಅನುಪಲ್ಲವಿ ||
ಹೊತ್ತಾಯಿತವ್ವ | ಅತ್ತೆಯು ದೆವ್ವ |
ಕತ್ತನು ಮಿಸುಕುವಳವ್ವವ್ವ ||
ಅತ್ತಿಗೆಯೀಯೋರೆ | ಗಿತ್ತಿಯರೆನ್ನ |
ಅತ್ತಿತ್ತ ನೋಡಗೊಡಿಸರು ||
1ನೆಯ ಚರಣ || ಹಿದುಕವರೆ ಬೇಳೆ |
ಯುದಕವ ಮಾಡಿ | ಮುದುಕಪ್ಪಗಿಕ್ಕಬೇಕಂತೆ ||
ತದಕಿದ ಮೆಣಸಿನು | ಪ್ಪುದಕವ ಮಾಡಿ |
ಮುದುಕವ್ವೆಗಿಕ್ಕಬೇಕಂತೆ ||’

ಪ್ರಾಸಂಗಿಕವಾಗಿ ಈ ಪದ್ಯ ಶರಷಟ್ಪದಿಯಲ್ಲಿದೆ ಎಂಬುದನ್ನು ಗಮನಿಸಿ.ಆಚಾರ್ಯರು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರನ್ನೂ ಗಮನದಲ್ಲಿರಿಸಿಕೊಂಡು ಪದ್ಯರಚನೆ ಮಾಡಿರುವುದೊಂದು ವಿಶೇಷ. ಅವರು ತಮ್ಮ ಕವಿತೆಗಳಲ್ಲಿ ಗ್ರಾಮೀಣ ಬದುಕಿನ ದಿನನಿತ್ಯದ ಗ್ರಾಮ್ಯ ಶಬ್ದಗಳನ್ನು ಮುಕ್ತವಾಗಿ ಬಳಸಲು ಹಿಂಜರಿದಿಲ್ಲ ಎನ್ನುವುದಕ್ಕೆ ಕೂಡ ಮೇಲಿನ ಪದ್ಯ ಉದಾಹರಣೆ. ಒಂದು ಶತಮಾನದ ಹಿಂದಿನ ಮಕ್ಕಳ ಸಾಹಿತ್ಯದ ಸ್ವರೂಪವು ಹೇಗಿತ್ತು ಎಂಬುದಕ್ಕೆ ಈ ‘ಅನುಕರಣಗೀತಲಹರಿ’ ಒಂದು ಉತ್ತಮ ಉದಾಹರಣೆಯಾಗಿದೆ.